ಗಾಂಧಿ ಜಯಂತಿ ಕಥಾ ಸ್ಪರ್ಧೆ -2013 : ತೀರ್ಪುಗಾರರ ಟಿಪ್ಪಣಿ


– ಡಾ.ರಾಮಲಿಂಗಪ್ಪ ಟಿ. ಬೇಗೂರು


 

ಸ್ಪರ್ಧೆಗೆ ಬಂದಿದ್ದ 50 ಕ್ಕು ಹೆಚ್ಚು ಕಥೆಗಳನ್ನು ಮೊದಲ ಸುತ್ತಿನಲ್ಲಿ ಕೇರಿ, ತೂರಿ ಅಂತಿಮವಾಗಿ 39 ಕಥೆಗಳನ್ನು ಪರಿಶೀಲನೆಗೆ ನೀಡಿದ್ದರು. ಇವುಗಳಲ್ಲಿ ಒಂದೆ ಓದಿನಲ್ಲೆ ಸಾಧಾರಣ ಎನಿಸಿದ್ದರಿಂದ 22 ಕಥೆಗಳನ್ನು ಪಕ್ಕಕ್ಕಿಡುವುದು ಸುಲಭವಾಯಿತು. ಆದರೆ ಉಳಿದ ಹದಿನೇಳು ಕಥೆಗಳು ಸರಿಸಮಾ ಪೈಪೋಟಿಯ ಕಥೆಗಳಾಗಿದ್ದವು. ಮಿತ್ರ ರವಿ ಕೃಷ್ಣಾರೆಡ್ಡಿ ನನ್ನ ಕೋರಿಕೆಯ ಮೇರೆಗೆ ಕಥೆಗಾರರ ಹೆಸರುಗಳನ್ನು ತೆಗೆದು ಬರಿ ಕಥೆಗಳನ್ನು ಮಾತ್ರ ನೀಡಿದ್ದರು. ಇದರಿಂದ ಮಿತ್ರರ ಕಥೆಗಳು ಇಲ್ಲವೆ ಪ್ರಖ್ಯಾತರ ಕಥೆಗಳು ಎಂಬ ಮುಲಾಜಿಲ್ಲದೆ ನಿರುಮ್ಮಳವಾಗಿ ಕಥೆಗಳನ್ನು ಓದಲು ಸಾಧ್ಯವಾಯಿತು. ಅಂತಿಮವಾಗಿ ಆಯ್ಕೆಯಾದ ೫ ಕಥೆಗಳನ್ನು ನಂತರ ಯಾರು ಬರೆದಿದ್ದಾರೆ ಎಂದು ನೋಡಿದಾಗ ಅವರೆಲ್ಲ ಹೊಸಬರೆ ಆಗಿದ್ದರು. ಬರೆದವರಿಗಿಂತ ಕಥೆಯೇ ಮುಖ್ಯ ಅಲ್ಲವೆ?

ಬಹುಮಾನ ಪಡೆಯದ ಕಥೆಗಳೆಲ್ಲ ಒಳ್ಳೆಯವಲ್ಲ ಎಂದಲ್ಲ. ಅಷ್ಟೆ ಅಲ್ಲ ಯಾರಾದರೂ ಒಟ್ಟಿಗೇ ಇಲ್ಲಿನ ಐದೂ ಕಥೆಗಳನ್ನು ಓದಿದರೆ ಅರೆ! katha-sprade-2013ಸಮಾಧಾನಕರ ಬಹುಮಾನ ಕೊಟ್ಟಿರುವ ಕಥೆಗೆ ಮೊದಲ ಬಹುಮಾನವನ್ನೆ ಕೊಡಬಹುದಿತ್ತಲ್ಲ, ಮೊದಲ ಬಹುಮಾನದ ಕಥೆಗೆ ಸಮಾಧಾನಿತ ಬಹುಮಾನ ನೀಡಿದ್ದರೆ ಸಾಕಿತ್ತಲ್ಲ ಅನ್ನಿಸಬಹುದು. ನಾವೇನೇ ವಸ್ತುನಿಷ್ಠವಾದ ಓದು ಎಂದು ಹೇಳಿದರೂ ನಮ್ಮ ಓದುಗಳೆಲ್ಲ ವ್ಯಕ್ತಿನಿಷ್ಠವಾದ ಓದುಗಳೇ ಅಲ್ಲವೆ? ಹಾಗಾಗಿ ಒಂದು ಓದಿಗೆ ಇಲ್ಲಿನ ಈ ಕಥೆಗಳು ಬಹುಮಾನ ಪಡೆದಿವೆ. ಇನ್ನೊಂದು ಓದಿಗೆ ಬೇರೆಯದೆ ಕಥೆಗಳು ಬಹುಮಾನಕ್ಕೆ ಅರ್ಹ ಎನ್ನಿಸಬಹುದು. ತೀರ್ಪುಗಾರರ ಸಂವೇದನೆ, ದೃಷ್ಟಿಕೋನಗಳೆ ಇಂಥ ಕಡೆ ಪ್ರಧಾನ ಎನ್ನುವುದು ನಮಗೆಲ್ಲ ತಿಳಿದ ಸಂಗತಿಯೆ ಅಲ್ಲವೆ?

ಮೊದಲು, ಎರಡನೆ, ಮೂರನೆ ಹೀಗೆ ಕಥೆಗಳನ್ನು ಶ್ರೇಣಿ ಮಾಡಿ ಬಹುಮಾನ ನೀಡುವುದನ್ನು ನಾವು ಒಪ್ಪಬೇಕಿಲ್ಲ; ಹತ್ತು ಒಳ್ಳೆಯ, ಸಶಕ್ತ ಕಥೆಗಳನ್ನು ಓದುವಾಗ ಅವುಗಳಲ್ಲಿ ಒಂದು ಕಥೆಯನ್ನು ಇದು ಶ್ರೇಷ್ಠ ಎಂದೂ ಮತ್ತೊಂದನ್ನು ಕಡಿಮೆ ಎಂದೂ ಶ್ರೇಣಿ ಮಾಡುವ ಸ್ಪರ್ಧಾ ಪರಿಯನ್ನು ನಾವು ಸರಿಯಾದದ್ದು ಎಂದೇನೂ ಭಾವಿಸಬೇಕಿಲ್ಲ. ಒಂದೊಂದು ಕಥೆಗಳೂ ತಮ್ಮ ವಸ್ತು ಸಾಮಗ್ರಿ, ನಿರೂಪಣಾ ಕ್ರಮ ಇತ್ಯಾದಿಗಳಿಂದಾಗಿ ಭಿನ್ನ ಆಗಿ ಇರುತ್ತವೆ. ಹಾಗಿರುವಾಗ ಶ್ರೇಣೀಕರಣ ಮಾಡಿ ಇದು ಮೊದಲ ಬಹುಮಾನಕ್ಕೆ ಅರ್ಹ, ಇದು ಎರಡನೆ ಬಹುಮಾನಕ್ಕೆ ತಕ್ಕುದು ಎಂದು ಸಾಹಿತ್ಯ ಕಥನವನ್ನು ಸ್ಥಾನೀಕರಣ ಮಾಡುವುದು ಅಷ್ಟು ಒಳ್ಳೆಯದೇನೂ ಅಲ್ಲ. ಇಂಥ ಸಮಸ್ಯೆ ಎಲ್ಲ ಸ್ಪರ್ಧೆಗಳಲ್ಲು ಎದುರಾಗುತ್ತದೆ. ಇಲ್ಲೂ ಎದುರಾಗಿತ್ತು. ಆದಾಗ್ಯೂ ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಇಲ್ಲಿ ಬಹುಮಾನ ನೀಡಲಾಗಿದೆ.

ಸ್ಪರ್ಧೆಗೆ ಬಂದಿದ್ದ ಮಹಾಂತೇಶ ನವಲಕಲ್ ಅವರ ಡಿಪ್ರೆಶನ್ ಕಥೆ, ಹನುಮಂತ ಹಾಲಿಗೇರಿ ಅವರ ಮಠದ ಹೋರಿ, ಎಸ್.ಬಿ.ಜೋಗುರ ಅವರ ಹೊತ್ತಿಗೊದಗಿದ ಮಾತು, ಕೆ.ಈಶ್ವರ್ ಭಟ್ ಅವರ ಪುಷ್ಪ ಕತೆ, ವೀರನ್ನಾರಾಯಣ ಅವರ ಗುಲಾಬಿ ಚೀಟಿ, ಆನಂದ ಕುಂಚನೂರ ಅವರ ಕೃಷ್ಣ ತುಳಸಿ, ಸೈಫ್ ಜಾನ್ಸ್ ಅವರ ಅಯ್ಯಕ್ಕ, ಬಸು ಬೇವಿನಗಿಡದ ಅವರ ಹಳೇ ಟ್ರಂಕು, ಶಿರೋಳ ಸೋಮಯಾಜಿ ಅವರ ಪದ್ದಕ್ಕನ ಅರಮನೆ, ಶ್ರೀನಾಥ ರಾಯಸಂ ಅವರ ಉಮಿಯೊಳಗಿನ ಬೆಂಕಿ, ಎಚ್.ಎನ್. ಅಪರ್ಣಾ ಅವರ ಹುಡುಕಾಟ ಈ ಎಲ್ಲ ಕಥೆಗಳೂ ತಮ್ಮದೆ ವಿಶಿಷ್ಟತೆ ಇರುವ ಕಥೆಗಳು. ಶಕ್ತ ಕಥೆಗಳು. ಇವುಗಳಲ್ಲಿ ಕೆಲವು ಕಥೆಗಳು ವಿಚಾರವೆ ಮುನ್ನೆಲೆಗೆ ಬಂದು ಕಥನ ಹಿನ್ನೆಲೆಗೆ ಸರಿದಿರುವುದರಿಂದ, ಕೆಲವೆಡೆ ಕಥನ ಲಂಬಿತ ಆಗಿದೆ ಎನ್ನಿಸುವುದರಿಂದ, ಕೆಲವು ಕಥೆಗಳು ಬಂಧ ಮತ್ತು ವಿಚಾರ ಹಾಗೂ ನಿರೂಪಣೆ ಮೂರೂ ನೆಲೆಗಳಲ್ಲಿ ಅಂತಹ ಹೊಸತೇನನ್ನೂ ಅಭಿವ್ಯಕ್ತಿಸುತ್ತಿಲ್ಲ ಎನ್ನಿಸುವುದರಿಂದ ಈ ಕಥೆಗಳಿಗೆ ಬಹುಮಾನ ಕೊಟ್ಟಿಲ್ಲ ಅಷ್ಟೆ. ಆದರೆ ಈ ಎಲ್ಲ ಕಥೆಗಳೂ ತಮ್ಮದೆ ರೀತಿಯಲ್ಲಿ ಕನ್ನಡ ಕಥನ ಪರಂಪರೆಯಲ್ಲಿ ಸಲ್ಲುತ್ತವೆ; ಆದ್ದರಿಂದ ಇವೆಲ್ಲವೂ ನನ್ನ ಪ್ರಕಾರ ಪುರಸ್ಕಾರಕ್ಕೆ ಅರ್ಹ ಕಥೆಗಳೇ. ರವಿ ಕೃಷ್ಣಾರೆಡ್ಡಿ ಅವರು ಈ ಕಥೆಗಳಿಗೆ ಬಹುಮಾನ ಬರದಿದ್ದರೂ ಇವುಗಳನ್ನು ಕ್ರಮವಾಗಿ ತಮ್ಮ “ವರ್ತಮಾನ”ದಲ್ಲಿ ಪ್ರಕಟಿಸಿದರೆ ಓದುಗರಿಗೆ ತೌಲನಿಕವಾಗಿ ತಮ್ಮದೇ ಓದುಗಳನ್ನು ಹೊಂದಲು ಸಾಧ್ಯವಾದೀತು.

ಕನ್ನಡ ಕಥನ ಲೋಕಕ್ಕೆ ಇದುವರೆಗೆ ಬಂದಿಲ್ಲದ ಲೋಕದ ಏನಾದರೂ ಹೊಸತನ್ನು ತಂದು ಹೇಳುವ ಗುಣ ಅಂದರೆ ನವೀನ ವಸ್ತು ಸಾಮಗ್ರಿಯ ಕಥನ, ನವೀನ ನಿರೂಪಣೆಯ ಕ್ರಮ, ನವೀನ ಭಾಷೆಯ ಬಳಕೆ, ಕಥನದಲ್ಲಿನ ಬಿಗಿತನ, ಬೋರಾಗದಂತೆ ಓದಿಸಿಕೊಂಡು ಹೋಗುವ ಗುಣ, ಓದುಗನ ಮೇಲೆ ಬೀರುವ ಪರಿಣಾಮ ಅಥವಾ ಓದಿದ ನಂತರ ಕಾಡುವ, ಡಿಸ್ಟರ್ಬ್ ಮಾಡುವ ಗುಣ, ಕಥನದ ವಿಚಾರ ಮತ್ತು ಭಾವತೀವ್ರತೆಯ ಗುಣಗಳು ಇವೆಲ್ಲವನ್ನೂ ಮುಖ್ಯವಾಗಿ ಪರಿಗಣಿಸಿ ಇಲ್ಲಿನ ಕಥೆಗಳನ್ನು ಓದಲಾಗಿದೆ.

ಬಹುಮಾನ ಪಡೆದಿರುವ ಇಲ್ಲಿನ ಐದೂ ಕಥೆಗಳೂ ಒಂದಕ್ಕೊಂದು ಭಿನ್ನ. ಮಹಾತ್ಮ ಕಥೆ ಮಹಾತ್ಮ ಗಾಂಧಿಯೊಂದಿಗೆ ಒಂದು ಮುಖಾಮುಖಿಯನ್ನು ನಡೆಸುತ್ತದೆ. ನಮ್ಮಲ್ಲಿ ಸದಾ ಮಹಾತ್ಮರಲ್ಲಿನ ಹುಳುಕುಗಳನ್ನು ಹೆಕ್ಕಿ ತೆಗೆಯುವುದು ಅಥವಾ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿ ಮತ್ತೆ ಮತ್ತೆ ಅವರನ್ನು ಬದುಕಿಸಿ ಕರೆದು ತಮ್ಮದೇ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಪಾಟೀಸವಾಲು ಮಾಡುವುದು ಯಾವತ್ತಿನ ರೂಢಿ. ಮಹಾತ್ಮರೆಂದು ನಾವು ಕರೆದುಕೊಳ್ಳುವ ‘ಮಹಾತ್ಮ’ರನ್ನು ನಾವು ನಮ್ಮಂತೆಯೆ ಅವರೂ ಮನುಷ್ಯರಾಗಿದ್ದರು ಎಂದು ಭಾವಿಸುವುದೇ ಕಡಿಮೆ. ಇಂಥ ಒಂದು ಚಿಂತನೆಯನ್ನು ಮಹಾತ್ಮ ಕಥೆ ಒಳಗೊಂಡಿದೆ ಮತ್ತು ನಮ್ಮಲ್ಲು ಅದು ಹುಟ್ಟುವಂತೆ ಮಾಡುತ್ತದೆ.

ಬೆಂದಕಾಳೂರು ಕಥೆ ಬೆಂಗಳೂರೆಂಬ ಮಹಾನಗರದ ಮೂರು ಚಿತ್ರಗಳನ್ನು ನೀಡುತ್ತದೆ. ಇವೆಲ್ಲ ಒಂದೊಂದು ಸ್ವತಂತ್ರ ಕಥೆ ಆಗಬಲ್ಲ ಚಿತ್ರಗಳು. ಇಲ್ಲಿನ ಮೂರೂ ಚಿತ್ರಗಳೂ ಪರಸ್ಪರ ಸಿಂಕಾಗುವುದಿಲ್ಲ; ಪ್ರತ್ಯೇಕ ಆಗಿಯೆ ಉಳಿಯುತ್ತವೆ. ನಮ್ಮಲ್ಲಿ ನಗರವೆಂದರೆ ನರಕ; ಪಾಪಕೂಪ; ಎಲ್ಲ ಕೇಡುಗಳೂ ಸಂಭವಿಸುವುದು ಇಲ್ಲೆ ಎಂಬ ನಂಬುಗೆಯೊಂದು ಇದೆ. ಇಂತಹ ನಂಬುಗೆಯಿಂದಲೆ ಈ ಕಥೆ ಹುಟ್ಟಿದೆ. ಆದಾಗ್ಯೂ ಬೆಂದಕಾಳೂರು ಲೋಕದ ಎಲ್ಲ ಮಹಾನಗರಗಳ ರೂಪಕ ಆಗಬಲ್ಲ ಸಾಧ್ಯತೆ ಇರುವ ಕಥೆ. ದುಃಖ, ಬಿಕ್ಕಟ್ಟು, ಅವ್ಯವಸ್ಥೆಗಳನ್ನು ಸ್ಪೋಟಿಸುವುದೆ ಸಾಹಿತ್ಯದ ಕಾಳಜಿ ಆಗಬೇಕಲ್ಲವೆ? ನಮಗೆ ಮನರಂಜನೆ ನೀಡುವುದು ಅಥವಾ ಸಂತೋಷ ನೀಡುವುದಷ್ಟೆ ಸಾಹಿತ್ಯ ಕಥನದ ಜವಾಬ್ದಾರಿಯೊ?

ಬೆಂದಕಾಳೂರು ನಗರದ ಗಲೀಜನ್ನು ತೆರೆದು ತೋರಿದರೆ, ಗಲೀಜು ಕಥೆ ಗಾಮಗಳ ಗಲೀಜನ್ನು ತೆರೆದು ತೋರುತ್ತದೆ. ಗಲೀಜು ಕಥೆಯಲ್ಲಿನ ಶಣಿಯಾರ, ಕಜ್ಜಿ, ಚಿಕ್ಕವ್ವೋರು, ದೊಡ್ಡ ಯಜಮಾನ, ಪೂಜಾರಪ್ಪ, ಸಾವುತ್ರ ಹೀಗೆ ಎಲ್ಲ ಪಾತ್ರಗಳೂ ಒಂದಲ್ಲ ಒಂದು ರೀತಿ ದೌರ್ಬಲ್ಯಗಳ ಪ್ರತಿನಿಧೀಕರಣಗಳೇ. ಅಂಚಿನ ಜನತೆಯ ಪ್ರತಿನಿಧಿ ಆದ ಕಜ್ಜಿ ಅಂತಿಮವಾಗಿ ಇಲ್ಲಿ ದೌರ್ಜನ್ಯಕ್ಕೆ ಬಲಿಯಾಗುತ್ತಾನೆ. ಗ್ರಾಮೀಣ ಊಳಿಗಮಾನ್ಯ ವ್ಯವಸ್ಥೆಯಲ್ಲಿನ ಕ್ರೌರ್‍ಯಗಳು (ಜಾತಿ, ವರ್ಗ, ಜ್ಞಾನಗಳ) ಅಸಮಾನತೆಯಿಂದ ಮತ್ತಷ್ಟು ಉಗ್ರವಾಗಿ ಇಲ್ಲಿ ಪ್ರಕಟಗೊಂಡಿವೆ. ಜೈವಿಕ ಪ್ರವೃತ್ತಿಯಾದ ಲೈಂಗಿಕತೆಯನ್ನು ಮಾನವ ಮಾನಸಿಕ ವ್ಯಸನವನ್ನಾಗಿ ಮಾರ್ಪಡಿಸಿಕೊಂಡಾಗ ಮತ್ತು ಲೈಂಗಿಕತೆಯ ಸುತ್ತ ತನ್ನದೆ ವಿಧಿನಿಷೇಧಗಳನ್ನು ಹೇರಿಕೊಂಡಾಗ ಆಗುವ ಅಲವಾಟುಗಳು ಈ ಕಥೆಯಲ್ಲಿ ತೀವ್ರವಾಗಿ ಪ್ರಕಟವಾಗಿವೆ.

ಮುಗಿಲ ಮಾಯೆಯ ಕರುಣೆ ಮತ್ತು ಹುಲಿ ಸಾಕಣೆ ಕಥೆಗಳು ತಮ್ಮ ಪರಿಣಾಮಕ್ಕಿಂತಲೂ ಅವು ಮಂಡಿಸುವ ವಿಚಾರದ ಕಾರಣಕ್ಕೆ ಹೆಚ್ಚು ಆಪ್ತವಾಗುತ್ತವೆ. ಹಳ್ಳಿಯಲ್ಲಿನ ಮೌಢ್ಯ; ಅಲ್ಲಿನ ವೈರ-ದೋಪಾರ್ಟಿ ಸ್ಥಿತಿಗಳನ್ನು ಮುಗಿಲ ಮಾಯೆಯ ಕರುಣೆ ಚೆನ್ನಾಗಿ ಅಭಿವ್ಯಕ್ತಿಸಿದೆ. ಹೊಲೇರ ಶರಣನೊಬ್ಬ ಮಳೆ ತರಿಸುವ ಇಚ್ಛಾಶಕ್ತಿ ಪ್ರಕಟಿಸುವುದು ಈ ಕಥೆಯ ಶಕ್ತಿ. ಹುಲಿ ಸಾಕಣೆ ಎನ್.ಜಿ.ಒ.ಗಳ ದಗಲಬಾಜಿತನ ಮತ್ತು ಬೆಪ್ಪುತನ ಎರಡನ್ನೂ ಒಟ್ಟಿಗೇ ಪ್ರಕಟಿಸುತ್ತದೆ. ಸಣ್ಣ ಮೀನನ್ನು ದೊಡ್ಡ ಮೀನು ನುಂಗುವ ನಮ್ಮ ಬಂಡವಾಳಶಾಹಿ ಧೋರಣೆ, ಪರಿಸರವಾದ-ಕೃಷಿ ವಲಯಗಳನ್ನೂ ಪ್ರವೇಶಿಸಿರುವ ಕೈಗಾರಿಕೀಕರಣದ ದುಸ್ಥಿತಿಯನ್ನು ಹುಲಿಸಾಕಣೆ ಕತೆ ಹೇಳುತ್ತದೆ.

ಇಲ್ಲಿ ಬಹುಮಾನಕ್ಕೆ ಆರಿಸಿರುವ ಎಲ್ಲ ಕಥೆಗಳೂ ಒಂದಿಲ್ಲೊಂದು ಬಗೆಯಲ್ಲಿ ನಮ್ಮ ವ್ಯವಸ್ಥೆಯೊಳಗೆ ಇರಬಹುದಾದ ತಪ್ಪುನಡೆಗಳನ್ನು ವಂಗ್ಯ, katha-sprade-2013ವಿಶಾದ, ತಲ್ಲಣಗಳಿಂದ ಬಯಲು ಮಾಡುತ್ತವೆ. ನಮ್ಮ ಬದುಕನ್ನು ಹಸನುಗೊಳಿಸುವ ಕಾಳಜಿ ಇಲ್ಲಿನ ಎಲ್ಲ ಕಥೆಗಳಲ್ಲೂ ಅಂತಸ್ಥವಾಗಿದೆ. ಮಹಾತ್ಮ, ಬೆಂದಕಾಳೂರು ಮತ್ತು ಹುಲಿಸಾಕಣೆ ಮೂರೂ ಕಥೆಗಳು ವೈಚಾರಿಕತೆಯನ್ನೆ ಕಥೆಯನ್ನಾಗಿ ಮಾರ್‍ಪಡಿಸುವ ಭರದಲ್ಲಿ ಕಲಾತ್ಮಕತೆಯನ್ನು ಹಿನ್ನೆಲೆಗೆ ದೂಡುತ್ತವೆ. ಆದರೆ ಗಲೀಜು ಮತ್ತು ಮುಗಿಲ ಮಾಯೆಯ ಕರುಣೆ ಅಂಥವಲ್ಲ. ಇವುಗಳಲ್ಲಿ ವೈಚಾರಿಕ ಆಕೃತಿಗೆ ಒಗ್ಗಿಸಲು ಆಗದ ಕಥನಗಾರಿಕೆ ಇದೆ. ಇಲ್ಲಿ ಕಥನ ಮುನ್ನೆಲೆಗೆ ಬಂದು ವಿಚಾರ ಹಿನ್ನೆಲೆಗೆ ಸರಿದಿದೆ.

ವಿಶೇಷವೆಂದರೆ ಸ್ಪರ್ಧೆಗೆ ಬಂದ ಎಲ್ಲ ಕಥೆಗಳನ್ನು ಲೇಖಕರ ಹೆಸರುಗಳನ್ನು ತೆಗೆದು ಓದಿದಾಗ ಉತ್ತರ ಕನ್ನಡದ ಭಾಶೆ ಮತ್ತು ಶೈಕ್ಷಣಿಕ ಭಾಶೆ ಎಂಬ ವ್ಯಾತ್ಯಾಸಗಳನ್ನು ಬಿಟ್ಟರೆ ಮಿಕ್ಕಂತೆ ಒಬ್ಬರೇ ಬರೆದ ಕಥೆಗಳನ್ನು ಓದುತ್ತಿದ್ದೇವೇನೋ ಎಂಬ ಭಾವನೆ ಉಂಟಾಗುತ್ತದೆ. ಕೆಲವು ಕಥೆಗಳಂತು ತೀರಾ ಸಿನಿಮ್ಯಾಟಿಕ್ ಮತ್ತು ಇನ್ಸಿಡೆಂಟಲ್ ಆಗಿ ಇವೆ. ನಿಸರ್ಗದ ಮತ್ತು ಮನುಷ್ಯರ ಒಳ ಮನಸ್ಸಿನ ಅಗೆಯುವಿಕೆ ಬಹುಪಾಲು ಕಥೆಗಳಲ್ಲಿ ಕಡಿಮೆ. ಘಟನಾತ್ಮಕ ನಿರೂಪಣೆಯೆ ಹೆಚ್ಚು! ಏಕೆ ಹೀಗೆ? ಸಾಮಾಜಿಕ ಹೊಣೆಗಾರಿಕೆ, ಕಾಳಜಿಗಳಲ್ಲಿ ಸಾಮ್ಯತೆ ಇದ್ದರೆ ಅದು ಆರೋಗ್ಯದ ಲಕ್ಷಣ. ಆದರೆ ಅಭಿವ್ಯಕ್ತಿ ಕ್ರಮದಲ್ಲಿ ಏಕತಾನತೆ ಇದ್ದರೆ? ಈ ಸ್ಪರ್ಧೆಯ ಕಥೆಗಳನ್ನು ಓದುತ್ತಿದ್ದರೆ ಇಂದಿನ ಹೊಸ ಪೀಳಿಗೆಯಲ್ಲಿ ಕನ್ನಡ ಸಣ್ಣ ಕಥೆಯ ಬಂಧ-ಚೌಕಟ್ಟು-ರೂಪ ಮತ್ತು ಅದು ನಿರೂಪಿತ ಆಗುವ ಕ್ರಮಗಳು ಏಕತಾನತೆಗೆ ಗುರಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭಾಷಿಕ ವೈವಿದ್ಯತೆ ಮಾತ್ರವೆ ಕಥನದ ಭಿನ್ನತೆಯ ಗುಣವಲ್ಲ. ಇನ್ನಾದರೂ ನಮ್ಮ ಹೊಸ ಪೀಳಿಗೆಯು ತನ್ನ ನಿರೂಪಣಾ ಕ್ರಮಗಳು, ಗಮ್ಯತೆ ಮತ್ತು ಸಣ್ಣ ಕಥೆಯ ಚೌಕಟ್ಟುಗಳನ್ನು ಕ್ರಾಂತಿಕಾರಕವಾಗಿ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಇದೆಯಲ್ಲವೆ?

ಸ್ಪರ್ಧೆಯ ಹೆಸರಲ್ಲಿ ಹೊಸ ಪೀಳಿಗೆಯವರು ಬರೆದ ಹಲವಾರು ಕಥೆಗಳನ್ನು ಒಮ್ಮೆಗೆ ಓದಲು ಮತ್ತು ಆ ಮೂಲಕ ಹೊಸಬರ ಸಂವೇದನೆಗಳನ್ನು ಅರಿಯಲು ಅನುವು ನೀಡಿದ್ದಕ್ಕಾಗಿ ಮಿತ್ರ ರವಿ ಕೃಷ್ಣಾರೆಡ್ಡಿ ಅವರಿಗೆ ಮತ್ತು ವರ್ತಮಾನ ಬಳಗಕ್ಕೆ ನನ್ನ ಧನ್ಯವಾದಗಳು.

2 thoughts on “ಗಾಂಧಿ ಜಯಂತಿ ಕಥಾ ಸ್ಪರ್ಧೆ -2013 : ತೀರ್ಪುಗಾರರ ಟಿಪ್ಪಣಿ

Leave a Reply

Your email address will not be published. Required fields are marked *