Category Archives: ಅಶೋಕ್. ಕೆ. ಆರ್.

ವಿಚಾರಗಳು ಹಿಂದಾಗಿ ಗದ್ದಲಗಳೇ ವಿಜೃಂಭಿಸುವ ಚುನಾವಣೆಯ ಸಮಯ


– ಡಾ. ಅಶೋಕ್ ಕೆ.ಆರ್.


 

ವರುಷದ ಹಿಂದಿನಿಂದಲೇ ಪ್ರಾರಂಭವಾಗಿದ್ದ ಚುನಾವಣಾ ತಯಾರಿಗಳು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ವೇಗೋತ್ಕರ್ಷಕ್ಕೊಳಗಾಗಿವೆ. ಚುನಾವಣಾ ತಯಾರಿಗಳು ಆರಂಭಗೊಂಡ ದಿನದಿಂದಲೂ ಈ ಬಾರಿಯ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ‘ಸಮರ’ ಎಂದೇ ಬಿಂಬಿಸಲಾಗುತ್ತಿದೆ. ಚುನಾವಣೆ ಘೋಷಣೆಯಾದ ನಂತರದಲ್ಲೂ ವಿಷಯಾಧಾರಿತ ಚರ್ಚೆಗಳು ಮುನ್ನೆಲೆಗೆ ಬರದಿರುವುದು ನಮ್ಮ ಪ್ರಜಾಪ್ರಭುತ್ವ ಹಿಡಿಯುತ್ತಿರುವ ಜಾಡನ್ನು ತೋರುತ್ತಿದೆಯೇ? ಈಗಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಭಾಷಣಗಳಲ್ಲಿ ಕಾಂಗ್ರೆಸ್ ಮತ್ತದರ ನಾಯಕರ ಬಗೆಗಿನ ಅವಹೇಳನಕಾರಿ ಮಾತುಗಳು ಮತ್ತು ಕಾಂಗ್ರೆಸ್ಸಿಗರ ಭಾಷಣಗಳಲ್ಲಿ ನರೇಂದ್ರ ಮೋದಿ ಬಗೆಗಿನ ವ್ಯಂಗ್ಯಮಿಶ್ರಿತ ಕೆಲವೊಮ್ಮೆ ಅಸಂಬದ್ಧ ಮಾತುಗಳೇ ವಿಜೃಂಭಿಸುತ್ತಿದೆಯೇ ಹೊರತು ಅಧಿಕಾರಕ್ಕೆ ಬಂದರೆ ತಾವು ನೀಡಬಹುದಾದ ಆಡಳಿತದ ಮಾದರಿಯ ಬಗೆಗಿನ ವಿಚಾರಗಳು ಚರ್ಚೆಗೊಳಪಡುತ್ತಲೇ ಇಲ್ಲ. ಇವತ್ತಿನ ಚುನಾವಣಾ ಮಾದರಿಯು ಪ್ರಜಾಪ್ರಭುತ್ವದ ಅಣಕವಾಡುತ್ತಿದೆ.

ಪ್ರಜೆಗಳಿಂದ ಆಯ್ದು ಬಂದ ನೇತಾರ ಅವರನ್ನು ಮುನ್ನಡೆಸುವವನಾದಾಗ ಪ್ರಜಾಪ್ರಭುತ್ವದ ನಿಜ ಅರ್ಥ ಸಾರ್ಥಕವಾಗುತ್ತದೆ. ಆದರೆ ಈಗಿನ ಪ್ರಜಾಪ್ರಭುತ್ವ ಪ್ರಜೆಗಳಿಂದ ಆರಿಸಿ ಬಂದಮೇಲೆ ಪ್ರಜೆಗಳ ಮೇಲೆ ಪ್ರಭುತ್ವ ಸಾಧಿಸುವುದಷ್ಟೇ ಆಗಿ ಹೋಗುತ್ತಿದೆ. ಈ ರೀತಿಯ ಸಿನಿಕತನವೂ ತಾತ್ಕಾಲಿಕವೆ? ಪ್ರತಿ ಬಾರಿಯ ಚುನಾವಣೆಯ ಸಂದರ್ಭದಲ್ಲೂ ಹಿಂದಿನ ಚುನಾವಣೆಯ ಸಂದರ್ಭ ಈಗಿನದಕ್ಕಿಂತ ಉತ್ತಮವಾಗಿತ್ತು ಎಂಬ ಭಾವ ಮೂಡಿಸುತ್ತದೆಯಾ? ಪ್ರತಿ ಬಾರಿ ಹೊಸತೊಂದು ಆಶಯದೊಂದಿಗೆ ಹೊಸ ಸರಕಾರಕ್ಕೆ1 ಅವಕಾಶ ಕೊಟ್ಟ ನಂತರ ಕೆಲವೇ ತಿಂಗಳುಗಳಲ್ಲಿ ಅಥವಾ ವರ್ಷ ಕಳೆಯುವಷ್ಟರಲ್ಲಿ ‘ಅಯ್ಯೋ ಹೋದ ಸರಕಾರವೇ ಪರವಾಗಿರಲಿಲ್ಲ’ ಎಂಬ ಭಾವನೆ ಮೂಡಲಾರಂಭಿಸುತ್ತದೆ! ಹತ್ತು ವರುಷದ ಮನಮೋಹನಸಿಂಗ್ ಆಡಳಿತದಿಂದ ಬೇಸತ್ತ ಜನ ಅಟಲ್ ಬಿಹಾರಿ ವಾಜಪೇಯಿಯ ಗುಣಗಾನ ಮಾಡುತ್ತಾರೆ. ಅಟಲ್ ಆಡಾಳಿತಾವಧಿಯಲ್ಲಿ ನಡೆದ ಹಗರಣಗಳು ನರಸಿಂಹ ರಾವ್ ಅವರೇ ವಾಸಿ ಕಣ್ರೀ ಎಂಬಂತೆ ಮಾಡಿಬಿಡುತ್ತವೆ! ಸಮ್ಮಿಶ್ರ ಸರಕಾರಗಳಿಂದ ಬೇಸತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಆರಿಸಿದ ನಂತರ ಬಿಜೆಪಿಯ ಆಡಳಿತ ವೈಖರಿಯಿಂದ ಸುಸ್ತೆದ್ದು ‘ಕಾಂಗ್ರೆಸ್ಸೇ ವಾಸಿ’ ಎಂದು ಬಿಜೆಪಿಯನ್ನು ಸೋಲಿಸುತ್ತಾರೆ ಜನ. ಇನ್ನು ಕೆಲವು ದಿನಗಳಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೂ ತನ್ನ ದೌರ್ಬಲ್ಯ, ನಿಷ್ಕ್ರಿಯತೆಗಳಿಂದ ಹಳೆಯ ಸರಕಾರವೇ ಒಳ್ಳೆಯದಿತ್ತು ಎಂಬ ಭಾವ ಮೂಡಿಸಿದರೆ ಅಚ್ಚರಿಪಡಬೇಕಿಲ್ಲ! ನಮ್ಮ ನಿರೀಕ್ಷೆಗೆ ತಕ್ಕಂತೆ ಸರಕಾರಗಳು ಕಾರ್ಯನಿರ್ವಹಿಸಲು ವಿಫಲವಾದಾಗ ಈಗಾಗಲೇ ಸೋತು ಮೂಲೆಯಲ್ಲಿರುವ ಕಳೆದ ಬಾರಿ ಆಡಳಿತ ನಡೆಸಿದ ಪಕ್ಷದ ಬಗೆಗೆ ಮೃದು ದೋರಣೆ ತಳೆದುಬಿಡಲಾಗುತ್ತದೆ. ಬಹುಶಃ ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಎಂದು ಎಷ್ಟೇ ದೊಡ್ಡ ದನಿಯಲ್ಲಿ ಕೂಗುತ್ತಿದ್ದರೂ ಯು.ಪಿ.ಎ 2ರ ಆಡಳಿತ ಜನರಲ್ಲಿ ಬೇಸರ ಮೂಡಿಸಿದೆ ಮತ್ತು ಬೇಸರ ಅಟಲ್ ನೇತೃತ್ವದ ಎನ್.ಡಿ.ಎ ವಾಸಿಯಿತ್ತು ಎನ್ನುವಂತೆ ಮಾಡುತ್ತಿರುವುದು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ 2009ರ ಚುನಾವಣೆಯಲ್ಲಿ ಎನ್.ಡಿ.ಎ ಉತ್ತಮ ಎಂಬ ಚರ್ಚೆಗಳು ನಡೆದಿರಲಿಲ್ಲ, ಕಾರಣ ಯು.ಪಿ.ಎ ತನ್ನ ಮೊದಲ ಆಡಳಿತಾವಧಿಯಲ್ಲಿ ಹೆಚ್ಚಿನ ಹಗರಣಗಳನ್ನೇನೂ ಮಾಡಿಕೊಂಡಿರಲಿಲ್ಲ. ಹಗರಣಗಳು, ಜಾಗತೀಕರಣಕ್ಕೆ ಒಡ್ಡಿಕೊಂಡ ಪರಿಣಾಮವಾಗಿ ಆರ್ಥಿಕ ಶಿಸ್ತು ದೇಶದ ಆಡಳಿತದ ಕೈಹಿಡಿತದಿಂದ ತಪ್ಪಿಸಿಕೊಂಡು ಜನರನ್ನು ಬವಳಿಕೆಗೆ ಒಳಪಡಿಸಿದ ರೀತಿ ಮತ್ತು ವರ್ಷದಿಂದ ವರ್ಷಕ್ಕೆ ತನ್ನ ಹಿಡಿತವನ್ನು ಬಲಗೊಳಿಸುಕೊಳ್ಳುತ್ತಲೇ ಸಾಗುತ್ತಿರುವ ಭ್ರಷ್ಟಾಚಾರ ಯು.ಪಿ.ಎಯನ್ನು 2014ರ ಚುನಾವಣೆಯಲ್ಲಿ ಸೋಲುವಂತೆ ಮಾಡುವುದು ಹೆಚ್ಚು ಕಡಿಮೆ ನಿಶ್ಚಯವಾಗಿದೆ.

ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸ್ವಯಂಕೃತ ತಪ್ಪುಗಳಿಂದ ಮತ್ತು ಮೋದಿ ಅಲೆಯಿಂದ ಸೋಲನುಭವಿಸುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಬಹುತೇಕ ಜನರಿಗೂ ಅದೇ ಭಾವನೆಯಿದೆ. ಆದರೆ ಕಾಂಗ್ರೆಸ್ಸನ್ನು ಕಡೆಗಣಿಸಿ ಉಳಿದ ಪಕ್ಷಗಳು ಚುನಾವಣೆ ತಯ್ಯಾರಿ ಮಾಡಿದರೆ ಮತ್ತೆ ಕಾಂಗ್ರೆಸ್ ಅನಿರೀಕ್ಷಿತ ಅಘಾತ ನೀಡಿಬಿಡಬಹುದು. ಈಗಿನ ಬಿ.ಜೆ.ಪಿ ಕೇವಲ ಒಬ್ಬ ವ್ಯಕ್ತಿಯ ಖ್ಯಾತಿಯ ಮೇಲೆ ಚುನಾವಣೆ ಎದುರಿಸಲು ಸನ್ನದ್ಧವಾಗಿದ್ದರೆ 2004ರಲ್ಲಿ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ‘ಇಂಡಿಯಾ ಶೈನಿಂಗ್’ ಎಂಬ ಘೋಷ ವಾಕ್ಯದೊಂದಿಗೆ ಈಗಿನದಕ್ಕಿಂತಲೂ ಹೆಚ್ಚಿನ ಅಬ್ಬರದೊಂದಿಗೆ ಪ್ರಚಾರವಾರಂಭಿಸಿತ್ತು. ಮಾಧ್ಯಮಗಳಲ್ಲೂ ‘ಇಂಡಿಯಾ ಶೈನಿಂಗ್’ನದ್ದೇ ಮಾತು. ಜನರಲ್ಲೂ ಅದೇ ಮಾತು. ಮಾತುಗಳ ಹಿಂದಿನ ಮೌನದಲ್ಲಿ ಹರಿಯುವ ವಿಚಾರಗಳ ಬಗ್ಗೆ ಪ್ರಚಾರದಬ್ಬರದಲ್ಲಿ ಯಾರೂ ಗಮನಹರಿಸದ ಕಾರಣ ಯಾವ ಹೆಚ್ಚಿನ ಪ್ರಚಾರವನ್ನೂ ಮಾಡದೆ ಮಾಧ್ಯಮಕ್ಕೆ ಪ್ರಿಯರೂ ಆಗದೆ ಕಾಂಗ್ರೆಸ್ ಎಲ್ಲರಿಗೂ ಅಚ್ಚರಿ ನೀಡುವ ರೀತಿಯಲ್ಲಿ ಗೆದ್ದು ಬಂದಿತ್ತು. 2009ರ ಚುನಾವಣೆಯಲ್ಲಿ ಸಹಿತ ಎನ್.ಡಿ.ಎ ಅಧಿಕಾರವಿಡಿಯುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವಾದರೂ ಕೊನೆಗೆ ಮತ್ತೆ ಗೆದ್ದು ಬಂದಿದ್ದು ಯು.ಪಿ.ಎ! ಎಲ್ಲೋ ಒಂದೆಡೆ ಜನರ ಮನಸ್ಥಿತಿಯನ್ನು ಅರಿಯಲು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ವಿಫಲವಾಗುತ್ತಿವೆಯಾ?

ಜನರ ಮನಸ್ಥಿತಿ ಅರಿಯುವುದಕ್ಕಿಂತ ಹೆಚ್ಚಾಗಿ ಜನರ ಯೋಚನಾ ಲಹರಿಯನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸುವ ಕಾರ್ಯದಲ್ಲಿ ಇಂದಿನ ರಾಜಕೀಯ ಪಕ್ಷಗಳ ನೇತಾರರು ನಿರತರಾಗಿದ್ದಾರೆ. ಈ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಖರೀದಿಸುತ್ತಾರೆ, ಮಾಧ್ಯಮಗಳ ಮಾಲೀಕತ್ವ ವಹಿಸುತ್ತಾರೆ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೋಗುತ್ತಿರುವ ಭ್ರಷ್ಟಾಚಾರವನ್ನು ಬಳಸಿಕೊಳ್ಳುತ್ತ ತಮ್ಮ ಪರವಾಗಿರುವ ವರದಿಗಳಷ್ಟೇ ಪ್ರಸಾರವಾಗುವಂತೆ ಮಾಡಿಬಿಡುತ್ತಾರೆ. 2014ರ ಚುನಾವಣೆಯ ಬಗೆಗೆ ಅನೇಕ ವಾಹಿನಿಗಳು ನಡೆಸಿದ ಸಮೀಕ್ಷೆಗಳ ಪ್ರಕಾರ ಬಿ.ಜೆ.ಪಿ ಏಕಾಂಗಿಯಾಗಲ್ಲದಿದ್ದರೂ ತನ್ನ ನೇತೃತ್ವದ ಎನ್.ಡಿ.ಎ ಮುಖಾಂತರ ಸರಕಾರ ನಿರ್ಮಿಸಲು ಅಗತ್ಯವಾದ ಸ್ಥಾನಗಳ ಸಮೀಪಕ್ಕೆ ಬರುತ್ತದೆ. ಎನ್.ಡಿ.ಎ ನಂತರದ ಸ್ಥಾನದಲ್ಲಿ ಇತರರು (ತೃತೀಯ ರಂಗ) ಬಂದರೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ನೂರರ ಹತ್ತಿರತ್ತಿರ ಬಂದರೆ ಅದೇ ಪುಣ್ಯ ಎಂಬ ಅಂಶ ಬಹುತೇಕ ವಾಹಿನಿಗಳ ಚುನಾವಣಾ ಸಮೀಕ್ಷೆಯ ಅಭಿಪ್ರಾಯ. ಈ ಸಮೀಕ್ಷೆಗಳ ಆಧಾರದ ಮೇಲೆ ಮಾಧ್ಯಮಗಳಲ್ಲಿ ಚರ್ಚೆಗಳು ಪ್ರಾರಂಭವಾಗಿತ್ತು. ಚರ್ಚೆಗಳು ಮತ್ತಷ್ಟು ಮುಂದುವರೆಯುತ್ತಿದ್ದವೋ ಏನೋ ನ್ಯೂಸ್ ಎಕ್ಸ್ ಪ್ರೆಸ್ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಮೀಕ್ಷೆಗಳನ್ನು ಹಣ ನೀಡುವ ಅಭ್ಯರ್ಥಿ – ಪಕ್ಷಗಳ ಅನುಕೂಲಕ್ಕೆ ತಿರುಚಲಾಗುತ್ತದೆ ಎಂಬ ಸಂಗತಿ ಹೊರಬಂದ ನಂತರ ಸಮೀಕ್ಷೆಗಳ ಬಗೆಗಿನ ಚರ್ಚೆಗಳು ಮಾಯವಾಗಿಬಿಟ್ಟಿವೆ! ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಮಾಧ್ಯಮಗಳ ಸಮೀಕ್ಷೆಗಳು ವಿಫಲವಾದುದಕ್ಕೂ ಇದೇ ಕಾರಣವಿರಬಹುದಾ?

ಚುನಾವಣೆಯ ಸಂದರ್ಭಗಳಲ್ಲಿ ಕಳೆದೊಂದು ದಶಕದಿಂದ ಹೆಚ್ಚು ಚರ್ಚೆಗೊಳಗಾಗುತ್ತಿರುವುದು “ಪೇಯ್ಡ್ ನ್ಯೂಸ್” ಎಂಬ ಅನಿಷ್ಟ ಸಂಪ್ರದಾಯ. ಹಣದಿಂದpaid-news ಮಾಧ್ಯಮಗಳ ಮುಖಪುಟವನ್ನು, ವಾಹಿನಿಗಳ ಸಮಯವನ್ನೇ ಖರೀದಿಸುವ ಸಂಪ್ರದಾಯ. ಪೇಯ್ಡ್ ನ್ಯೂಸನ್ನು ತಡೆಯಲು ಚುನಾವಣಾ ಆಯೋಗ ಕಾಳಜಿ ವಹಿಸುತ್ತಿದ್ದರೂ ಮತ್ತೊಂದು ಮಗದೊಂದು ಹೊಸ ಹೊಸ ರೂಪದಲ್ಲಿ ಪೇಯ್ಡ್ ನ್ಯೂಸ್ ಕಾಣಿಸಿಕೊಳ್ಳುತ್ತಲೇ ಇದೆ. ಇತ್ತೀಚೆಗಷ್ಟೇ ಪ್ರಜಾವಾಣಿಯಲ್ಲಿ ಧಾರವಾಡ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ತಮ್ಮ ಹಿಂಬಾಲಕರ ಮೂಲಕ ಅಲ್ಲಿನ ಸ್ಥಳೀಯ ಪತ್ರಕರ್ತರಿಗೆ ಉಡುಗೊರೆಗಳನ್ನು ನೀಡಿದ ವಿಚಾರ ಬಹಿರಂಗವಾಗಿತ್ತು. ‘ಜೋಶಿಯವರ ಪರವಾಗಿ ಬರೆಯಿರಿ, ಅದು ಸಾಧ್ಯವಾಗದಿದ್ದಲ್ಲಿ ಕಡೇ ಪಕ್ಷ ವಿರುದ್ಧ ವಿಚಾರಗಳನ್ನು ಬರೆಯಬೇಡಿ’ ಎಂಬುದವರ ಬೇಡಿಕೆಯಾಗಿತ್ತು! ಚುನಾವಣೆ ಸಂದರ್ಭದಲ್ಲಿ ಪತ್ರಕರ್ತರು ಲಕ್ಷಗಟ್ಟಲೆ ಹಣ ಮಾಡುವುದು ಈಗ ತೀರ ರಹಸ್ಯ ಸಂಗತಿಯಾಗೇನೂ ಉಳಿದಿಲ್ಲ. ಈ ರೀತಿಯ ಭ್ರಷ್ಟಾಚಾರವನ್ನೂ ತಡೆಗಟ್ಟಬಹುದೇನೋ. ಆದರೆ ರಾಜಕಾರಣಿಗಳೇ ವಾಹಿನಿಗಳ ಮಾಲೀಕರಾದ ಸಂದರ್ಭದಲ್ಲಿ ಪೇಯ್ಡ್ ನ್ಯೂಸ್ ಪಡೆಯುವ ಆಯಾಮವೇ ಬೇರೆ. ಕರ್ನಾಟಕದಲ್ಲಿ ಇದಕ್ಕೆ ಮೊದಲ ಉದಾಹರಣೆ ವಿಜಯ ಕರ್ನಾಟಕ ಪತ್ರಿಕೆ. ವಿಜಯ ಕರ್ನಾಟಕದ ಮಾಲೀಕತ್ವವನ್ನು ಹೊಂದಿದ್ದ ಸಂದರ್ಭದಲ್ಲಿ ವಿಜಯ ಸಂಕೇಶ್ವರ್ ಅವರದೇ ಪಕ್ಷವನ್ನೂ ಕಟ್ಟಿದ್ದರು. ಚುನಾವಣೆಯ ಸಮಯದಲ್ಲಿ ಇಡೀ ವಿಜಯ ಕರ್ನಾಟಕದ ತುಂಬಾ ಅವರ ಪಕ್ಷದ ಅಭ್ಯರ್ಥಿಗಳದೇ ಸುದ್ದಿ! ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಪಕ್ಷಕ್ಕೆ ಇವರ ಪಕ್ಷದವರದೇ ಪ್ರಬಲ ಪೈಪೋಟಿ! ಇಷ್ಟೆಲ್ಲ ಅಬ್ಬರದ ನಂತರವೂ ಅವರ ಪಕ್ಷ ಗೆಲುವು ಕಂಡಿದ್ದು ಕೆಲವೇ ಕೆಲವು ಸ್ಥಾನಗಳಲ್ಲಿ ಮಾತ್ರ. ಇತ್ತೀಚಿನ ಉದಾಹರಣೆಯಾಗಿ ಕಸ್ತೂರಿ, ಜನಶ್ರೀ ಮತ್ತು ಸುವರ್ಣ ವಾಹಿನಿಯನ್ನು ಗಮನಿಸಬಹುದು. ಕಸ್ತೂರಿಯಲ್ಲಿ ಸತತವಾಗಿ ಜೆ.ಡಿ.ಎಸ್ ಮುಖಂಡರ ವರಿಷ್ಟರ ಭಾಷಣಗಳ ಪ್ರಸಾರವಾಗುತ್ತದೆ. ಜನಶ್ರೀ ವಾಹಿನಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿ.ಎಸ್.ಆರ್ ಕಾಂಗ್ರೆಸ್ಸಿನ ಪರವಾಗಿ ಹೆಚ್ಚಿನ ಸುದ್ದಿಗಳನ್ನು ಪ್ರಸಾರ ಮಾಡುತಿತ್ತು. ಕಳೆದೊಂದು ವಾರದಿಂದ ಸುವರ್ಣದಲ್ಲಿ ‘ಆಧಾರ್’ ಕಾರ್ಡ್ ವಿರುದ್ಧವಾಗಿ ಅಭಿಯಾನವೇ ನಡೆಯುತ್ತಿದೆ. ದೇಶದ ಹಣ ಪೋಲಾಗುವ ಬಗ್ಗೆ ಕ್ರೋಧಗೊಂಡು ಈ ಅಭಿಯಾನ ನಡೆಸಿದ್ದರೆ ಬೆಂಬಲಿಸಬಹುದಿತ್ತೇನೋ. ಆದರೆ ಈ ಅಭಿಯಾನ ನಡೆಯುತ್ತಿರುವುದು ಆಧಾರ್ ಸಂಸ್ಥೆಯ ಮಾಜಿ ಮುಖ್ಯಸ್ಥ ನಂದನ್ ನಿಲೇಕಿಣಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾರಣದಿಂದ! ಮತ್ತು ಸುವರ್ಣ ವಾಹಿನಿ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿದೆ. ಮತ್ತವರು ಬಿಜೆಪಿಯ ಬೆಂಬಲಿಗರೆಂಬುದು ‘ಆಧಾರ್’ ವಿರುದ್ಧದ ಇಡೀ ಅಭಿಯಾನವನ್ನೇ ಅನುಮಾನದಿಂದ ನೋಡುವಂತೆ ಮಾಡಿಬಿಡುತ್ತದೆ. ಈ ರೀತಿಯ ಸುದ್ದಿ ಪ್ರಸಾರಗಳೂ ಕೂಡ ಪೇಯ್ಡ್ ನ್ಯೂಸಿನ ಅಡಿಯಲ್ಲಿ ಬರಬೇಕಲ್ಲವೇ?

ತೀರ ಜಯಪ್ರಕಾಶ ನಾರಾಯಣರ ಚಳುವಳಿಗೆ ಹೋಲಿಸುವುದಕ್ಕಾಗದಿದ್ದರೂ ಅರವಿಂದ ಕೇಜ್ರಿವಾಲ್ ನೇತೃತ್ವದ ‘ಆಮ್ ಆದ್ಮಿ ಪಕ್ಷ’ ದೇಶದಲ್ಲಿ ಮೂಡಿಸಿದ ಸಂಚಲನ ದೊಡ್ಡದು. ’ಅರವಿಂದ ಕೇಜ್ರಿವಾಲ್ ಮತ್ತವರ ಪಕ್ಷಕ್ಕೆ ಸೈದ್ಧಾಂತಿಕ ತಳಹದಿಯೇ ಇಲ್ಲ, ದೆಹಲಿಯಲ್ಲಿ ಆಡಳಿತ ನಡೆಸುವ ಅವಕಾಶ ಸಿಕ್ಕರೂ kejriwal_aap_pti_rallyಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗದ ಹೇಡಿ, ಅರಾಜಕತೆ ಸೃಷ್ಟಿಸುವ ಪ್ರತಿಭಟನೆಗಳನ್ನು ನಡೆಸುವುದರಲ್ಲಷ್ಟೇ ತೃಪ್ತ, ಕೇಜ್ರಿವಾಲ ಅಲ್ಲ ಕ್ರೇಜಿವಾಲ, ಅವರ ಪಕ್ಷಕ್ಕೆ ಒಂದು ನಿರ್ದಿಷ್ಟ ಉದ್ದೇಶ ಗುರಿ ಇಲ್ಲ, ಎಎಪಿ ಕಾಂಗ್ರೆಸ್ಸಿನ ಬಿ ಟೀಮ್, ಕಂಡವರನ್ನೆಲ್ಲ ಕಚ್ಚುವ ಅಭ್ಯಾಸ ಅರವಿಂದರಿಗೆ….’ ಇನ್ನೂ ಅನೇಕಾನೇಕ ಹೇಳಿಕೆಗಳು ಆಮ್ ಆದ್ಮಿ ಪಕ್ಷದ ಬಗ್ಗೆ ಕೇಳಿಬರುತ್ತಿದೆ. ಅಂದಹಾಗೆ ಆಮ್ ಆದ್ಮಿ ಪಕ್ಷ ಇನ್ನೂ ಬಾಲ್ಯಾವಸ್ಥೆಯಲ್ಲಿದೆ! ತೀರ ಇತ್ತೀಚೆಗೆ ಬಂದ ಒಂದು ಹೊಸ ರಾಜಕೀಯ ಪಕ್ಷದ ಬಗ್ಗೆ ದಶಕಗಳಿಂದ ರಾಜಕೀಯವನ್ನೇ ಅರೆದು ಕುಡಿಯುತ್ತಿರುವ ಪಕ್ಷಗಳ್ಯಾಕೆ ಇಷ್ಟೊಂದು ಮಾತನಾಡುತ್ತಿವೆ? ‘ಈ ಕಾಂಗ್ರೆಸ್ಸಿನವರು ಎಲ್ಲಿ ಹೋದರೂ ಮೋದಿ ಮೋದಿ ಅಂತ ಮಾತನಾಡುತ್ತಾರೆ. ಅಷ್ಟೇ ಸಾಕಲ್ಲವೇ ಮೋದಿ ಎಷ್ಟು ಖ್ಯಾತಿ ಹೊಂದಿದ್ದಾರೆ ಎಂದು ತಿಳಿಸಲು’ ಎಂದು ನಗುತ್ತಿದ್ದ ಬಿಜೆಪಿ ಮತ್ತದರ ಪ್ರಧಾನಿ ಅಭ್ಯರ್ಥಿ ನರೇಂದ್ರೆ ಮೋದಿ ಈಗ ಹೋದಬಂದಲ್ಲೆಲ್ಲ ಅರವಿಂದ್ ಕೇಜ್ರಿವಾಲರ ಬಗ್ಗೆ ಮಾತನಾಡುತ್ತಿದ್ದಾರೆ! ದೆಹಲಿಯಲ್ಲಿ ಒಂದಷ್ಟು ಸ್ಥಾನಗಳನ್ನಷ್ಟೇ ಗೆದ್ದಿದ್ದ ಆಮ್ ಆದ್ಮಿ ಪಕ್ಷದ ಬಗ್ಗೆ ಮತ್ತು ಅರವಿಂದ್ ಕೇಜ್ರಿವಾಲರ ಬಗ್ಗೆ ಇಷ್ಟೊಂದು ಭಯವ್ಯಾಕೆ? ತಮ್ಮೆಲ್ಲಾ ತಿಕ್ಕಲುತನ, ಅಪ್ರಬುದ್ಧ ನಿರ್ಧಾರಗಳ ನಡುವೆಯೂ ಅರವಿಂದ್ ಕೇಜ್ರಿವಾಲ್ ತಮ್ಮ ಅಮಾಯಕತೆಯನ್ನು ಕಳೆದುಕೊಂಡಿಲ್ಲ. ಅವರ ಅಮಾಯಕತೆಯೇ ಯಾವ ಅಂಜಿಕೆಯೂ ಇಲ್ಲದೆ ಸತ್ಯವನ್ನು ಹೇಳಿಸಿಬಿಡುತ್ತಿದೆ. ಎಲ್ಲ ಸತ್ಯಗಳಿಗೂ ಸಾಕ್ಷ್ಯಗಳನ್ನೊದಗಿಸುವುದು ಅಸಾಧ್ಯ ಎಂಬ ಸಂಗತಿ ಗೊತ್ತಿದ್ದರೂ ಸತ್ಯವನ್ನು ನಿರ್ಬಿಡೆಯಿಂದ ಹೇಳುವುದಕ್ಕೆ ಹಿಂಜರಿಯುತ್ತಿಲ್ಲ. ಮತ್ತು ಆ ಸತ್ಯಕ್ಕೆ ಉಳಿದ ಪಕ್ಷಗಳು ಭಯಭೀತರಾಗುತ್ತಿದ್ದಾವೆ! ಎಲ್ಲಿಯವರೆಗೆ ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರೋ ಅಲ್ಲಿಯವರೆಗೆ ಬಿ.ಜೆ.ಪಿ, ಅದರ ಅಂಗಸಂಸ್ಥೆಗಳು ಮತ್ತು ಬಿ.ಜೆ.ಪಿ ಬೆಂಬಲಿಗರು ಕೇಜ್ರಿವಾಲರನ್ನು ಬೆಂಬಲಿಸುತ್ತಿದ್ದರು. ಇದಕ್ಕೆ ಕಾರಣ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಆ ಪ್ರತಿಭಟನೆ ಕೇಂದ್ರೀಕ್ರತವಾಗಿತ್ತು. ಆಮ್ ಆದ್ಮಿ ಪಕ್ಷ ಕಟ್ಟುವಾಗಲೂ ಅವರ ಬೆಂಬಲ ಮುಂದುವರೆದಿತ್ತು. ದೆಹಲಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮತಗಳನ್ನು ಆಮ್ ಆದ್ಮಿ ಪಕ್ಷ ಸೆಳೆದುಕೊಂಡು ತಮಗೆ ಬಹುಮತ ದೊರೆಯುವುದು ನಿಶ್ಚಿತ ಎಂಬ ನಿರ್ಣಯಕ್ಕೆ ಬಂದಿತ್ತು ಬಿ.ಜೆ.ಪಿ. ಆದರೆ ಯಾವಾಗ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ಸಿನ ಮತಗಳ ಜೊತೆಜೊತೆಗೆ ಬಿ.ಜೆ.ಪಿಯ ಮತಗಳನ್ನೂ ಸೆಳೆಯಲಾರಂಭಿಸಿತೋ ಬಿ.ಜೆ.ಪಿ ಮತ್ತದರ ಬೆಂಬಲಿಗರ ಪ್ರೀತಿ ಕಡಿಮೆಯಾಯಿತು. ಉದ್ದಿಮೆಗಳು ಪಕ್ಷಗಳನ್ನು ಮತ್ತು ಪಕ್ಷಗಳ ಸರಕಾರಗಳನ್ನು ನಿಯಂತ್ರಿಸುವ ಬಗೆಯನ್ನು ಘಂಟಾಘೋಷವಾಗಿ ಸಾರುತ್ತ ನರೇಂದ್ರ ಮೋದಿ ಕೂಡ ಅದಾನಿ ಅಂಬಾನಿಗಳ ಕೈಗೊಂಬೆ ಎಂಬ ಕಟುಸತ್ಯವನ್ನು ತಿಳಿಸಲಾರಂಭಿಸಿದ ಮೇಲೆ ಅರವಿಂದ ಕೇಜ್ರಿವಾಲರ ಬಗೆಗಿನ ಅಪಸ್ವರಗಳು ಹೆಚ್ಚುತ್ತಾ ಸಾಗಿದವು. ಉದ್ಯಮಪತಿಗಳನ್ನು ಎದುರಿಹಾಕಿಕೊಂಡು ಎಷ್ಟರ ಮಟ್ಟಿಗೆ ಮುಂದುವರೆಯಬಲ್ಲರು ಕೇಜ್ರಿವಾಲ್?

ಪ್ರಜಾಪ್ರಭುತ್ವದ ಆರೋಗ್ಯ ಸುಧಾರಿಸಲು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ತರಹದ ಪಕ್ಷಗಳು ಅವಶ್ಯಕವಾದರೂ ಎಷ್ಟರ ಮಟ್ಟಿಗೆ ಅವರು ಸುಧಾರಣೆ ತರಲು ಸಾಧ್ಯ ಎಂದು ಗಮನಿಸಿದರೆ ಈಗಲೇ ನಿರಾಶೆಯಾಗಿಬಿಡುತ್ತದೆ. ತಮ್ಮದಿನ್ನೂ ಹೊಸ ಪಕ್ಷ, ಪ್ರತಿಭಟನೆ, ಭಾಷಣಗಳ ಜೊತೆಜೊತೆಗೆ ಪಕ್ಷ ಸಂಘಟನೆಗೂ ಒತ್ತು ಕೊಡಬೇಕು ಎಂಬ ವಿಚಾರ ಮರೆತುಬಿಟ್ಟಿದ್ದಾರೆ. ಆತುರಾತುರದಲ್ಲಿ ಸಾಧ್ಯವಾದಷ್ಟೂ ಕಡೆ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಆತುರದ ಕಾರಣದಿಂದ ಉಳಿದ ರಾಜಕೀಯ ಪಕ್ಷಗಳು ಮಾಡುವಂತೆ ಸಿನಿಮಾದವರಿಗೆ ಟಿಕೇಟು ಕೊಟ್ಟಿದ್ದಾರೆ. ಟಿಕೇಟು ನೀಡಲು ಅವರು ಸಿನಿಮಾದವರು ಎಂಬುದಷ್ಟೇ ಮಾನದಂಡ. ಸಿನಿಮಾ ಕ್ಷೇತ್ರದವರಿಗೆ ಟಿಕೇಟು ಹಂಚಲು ಬಹುತೇಕ ಎಲ್ಲ ಪಕ್ಷಗಳೂ ತುದಿಗಾಲಲ್ಲಿ ನಿಂತಿವೆ. ಸಿನಿಮಾದ ನಂತರ ಹೆಚ್ಚು ಪ್ರಚಾರ ಪಡೆಯುವ ಕ್ರಿಕೆಟ್ ಆಟಗಾರರನ್ನೂ ಚುನಾವಣಾ ಅಖಾಡಕ್ಕೆ ಇಳಿಸಲಾಗಿದೆ. ವಿವಿಧ ಕ್ಷೇತ್ರದವರು ರಾಜಕೀಯಕ್ಕೆ ಬರುವುದು ಉತ್ತಮ ಸಂಗತಿಯೇನೋ ಹೌದು. ಆದರೆ ಭಾರತದಲ್ಲಿ ಸಿನಿಮಾ – ಕ್ರಿಕೆಟ್ಟಿನಲ್ಲಿ ಪಡೆದ ಖ್ಯಾತಿಯಿಂದ ರಾಜಕೀಯಕ್ಕೆ ಪ್ರವೇಶ ಮಾಡಿರುವವರಲ್ಲಿ ಎಷ್ಟು ಜನ ಸಾಮಾಜಿಕ ಮನೋಭಾವದಿಂದ ಕೆಲಸ ನಿರ್ವಹಿಸಿದ್ದಾರೆ ಎಂದು ಗಮನಿಸಿದರೆ ನಿರಾಶೆಯಾಗುವುದೇ ಹೆಚ್ಚು.

ಮೋದಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲರ ಗದ್ದಲದಲ್ಲಿ ಮುಖ್ಯವಾಹಿನಿಗಳು ಬಹುಶಃ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ತೃತೀಯ ರಂಗದ ಶಕ್ತಿಯನ್ನು. ರಾಷ್ಟ್ರೀಯ ಪಕ್ಷಗಳು ಎಂಬ ಪದವೇ ಬಹಳಷ್ಟು ರಾಜ್ಯಗಳಲ್ಲಿ ಸವಕಲಾಗಿ ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ರಾಷ್ಟ್ರೀಯ ಪಕ್ಷಗಳು ಉಸಿರಾಡುವಂತಹ ಪರಿಸ್ಥಿತಿ ಇದೆ. ಹರ್ ಹರ್ ಮೋದಿ, ಘರ್ ಘರ್ ಮೋದಿ ಎಂದರಚುತ್ತಾ ಇನ್ನೂ ಅನೇಕಾನೇಕ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಲೇವಡಿ ಮಾಡುತ್ತಿರುವ “ಮೋದಿ ಬ್ರಿಗೇಡ್”ಗೆ ಕೂಡ ಸತ್ಯದ ಅರಿವಿದೆ. ಎಷ್ಟೇ ಮೋದಿ ಅಲೆ ಎಂದಬ್ಬರಿಸಿದರೂ ಕೊನೆಗೆ ರಾಜ್ಯಗಳ ‘ಸಣ್ಣ’ ಪಕ್ಷಗಳ ನೆರವಿಲ್ಲದೆ ಬಿಜೆಪಿ ಕೂಡ ಅಧಿಕಾರಕ್ಕೆ ಬರಲಾರದು, ಮೋದಿ ಪ್ರಧಾನಿಯಾಗಲಾರರು ಎಂದು. ತೃತೀಯ ರಂಗಕ್ಕೆ ಚಾಲನೆ ನೀಡುವ ಪ್ರಯತ್ನ ನಡೆಯಿತಾದರೂ ಹತ್ತಾರು ಪಕ್ಷಗಳಲ್ಲಿ ಅನೇಕರು ಪ್ರಧಾನಿ ಸ್ಥಾನದ ಆಕಾಂಕ್ಷಿಗಳಾಗಿರುವುದರಿಂದ ಚುನಾವಣಾ ಪೂರ್ವ ಹೊಂದಾಣಿಕೆ ಎಂಬುದು ಇನ್ನೂ ಸಾಧ್ಯವಾಗಿಲ್ಲ. ಬಿ.ಜೆ.ಪಿ, ಕಾಂಗ್ರೆಸ್ಸಿನಂತಹ ಪಕ್ಷದೊಳಗೇ ಟಿಕೇಟ್ ಹಂಚಿಕೆಯ ಸಂದರ್ಭದಲ್ಲಿ ಅಸಮಾಧಾನ ಭುಗಿಲೆದ್ದು ಪಕ್ಷಾಂತರ ಮಾಡುವವರು, ಪಕ್ಷೇತರರಾಗಿ ಸ್ಪರ್ಧಿಸುವವರ ಸಂಖೈ ಹೆಚ್ಚಿರುವಾಗ ಪ್ರಾದೇಶಿಕ ಪಕ್ಷಗಳ ನಡುವಿನ ಕಿತ್ತಾಟಗಳು ಅನಿರೀಕ್ಷಿತವೇನಲ್ಲ. ಇನ್ನೆರಡು ತಿಂಗಳಿನಲ್ಲಿ ಹದಿನಾರನೇ ಲೋಕಸಭೆಯ ಚುಕ್ಕಾಣಿ ಹಿಡಿಯುವವರಾರು ಎಂಬುದು ನಿಕ್ಕಿಯಾಗುತ್ತದೆ. ಮಾಧ್ಯಮಗಳ ಸಮೀಕ್ಷೆಗಳು, ನಮ್ಮ ವೈಯಕ್ತಿಕ ಅಭಿಪ್ರಾಯಗಳು, ಪೇಯ್ಡ್ ನ್ಯೂಸುಗಳೆಲ್ಲ ಏನೇ ಹೇಳಿದರೂ ಕೊನೆಗೆ ಚುನಾವಣೆಯ ದಿನ ಮತ ಹಾಕುವವನ ಮನಸ್ಥಿತಿಯ ಮೇಲೆ ರಾಜಕೀಯ ಪಕ್ಷಗಳ ರಾಜಕಾರಣಿಗಳ ಭವಿಷ್ಯ ನಿರ್ಧರಿತವಾಗುತ್ತದೆ. ಯಾರೇ ಅಧಿಕಾರಕ್ಕೆ ಬಂದರೂ ವರುಷ ಕಳೆಯುವದರೊಳಗೆ ‘ಅಯ್ಯೋ ನಮ್ಮ ಮನಮೋಹನಸಿಂಗೇ ವಾಸಿಯಿದ್ದ ಕಣ್ರೀ. ಇದೇನ್ರೀ ಇವರದು ಇಂತಹ ಕರ್ಮ’ ಎನ್ನುವ ಪರಿಸ್ಥಿತಿ ಬಾರದಿರಲಿ ಎಂದು ಆಶಿಸೋಣ.

ವೈದ್ಯಕೀಯ ನಿರ್ಲಕ್ಷ್ಯ ಮತ್ತು ಕೋರ್ಟ್ ತೀರ್ಪಿನ ಸುತ್ತಮುತ್ತ


– ಡಾ. ಅಶೋಕ್ ಕೆ.ಆರ್.


 

ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಅಬ್ಬಬ್ಬಾ ಎನ್ನಿಸುವ 6 ಕೋಟಿ ಪರಿಹಾರ ಘೋಷಿಸಿದೆ. ಪ್ರಕರಣ ದಾಖಲಾದ ದಿನದಿಂದ ಬಡ್ಡಿಯನ್ನೂ ಸೇರಿಸಿ ಕೊಡಬೇಕಿರುವುದರಿಂದ ಈ ಪರಿಹಾರದ ಮೊತ್ತ ಹನ್ನೊಂದು ಕೋಟಿಯನ್ನು ದಾಟಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಹದಿನೈದು ವರುಷಗಳ ಹಿಂದೆ ಮರಣಹೊಂದಿದ ಡಾ.ಅನುರಾಧಾ ಸಹಾರ ಪತಿ ಡಾ.ಕುನಾಲ್ ಸಹಾ ನಡೆಸಿದ ದೀರ್ಘ ಹೋರಾಟಕ್ಕೆ ಜಯ ಸಂದಿದೆ. ತಪ್ಪು ಮಾಡಿದ ವೈದ್ಯರಿಂದ medical-malpracticeಲಕ್ಷಗಳ ಲೆಕ್ಕದಲ್ಲಿ ಮತ್ತು ಆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದ ಕೋಲ್ಕತ್ತಾದ ಎ.ಎಮ್.ಆರ್.ಐ ಆಸ್ಪತ್ರೆ (ಇದೇ ಗುಂಪಿನ ಆಸ್ಪತ್ರೆಗೆ ಇತ್ತೀಚೆಗೆ ಬೆಂಕಿ ಬಿದ್ದು ತೊಂಬತ್ತು ರೋಗಿಗಳು ಅಸುನೀಗಿದ್ದರು) ಕೋಟಿಗಳ ಲೆಕ್ಕದಲ್ಲಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ದಿನವಹಿ ನಡೆಯುವ ನೂರಾರು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಅಪರೂಪಕ್ಕೆ ಒಂದರಲ್ಲಿ ಪರಿಹಾರ ಘೋಷಣೆಯಾಗಿದೆ. ಆದರೀ ಪ್ರಕರಣದಲ್ಲಿ ಗಮನಿಸಬೇಕಾದದ್ದೆಂದರೆ ಪರಿಹಾರಕ್ಕಾಗಿ ಕೋರ್ಟಿನ ಮೊರೆಹೊಕ್ಕವರೂ ಕೂಡ ವೈದ್ಯರೇ ಆಗಿರುವುದು. ತನ್ನ ಪತ್ನಿಗೆ ಯಾವ ರೀತಿ ತಪ್ಪು ಚಿಕಿತ್ಸೆಯನ್ನು ನೀಡಲಾಯಿತು ಎಂಬುದನ್ನು ಅರಿಯಲು ತಾವು ಕೂಡ ವೈದ್ಯರಾಗಿದ್ದು ಅವರಿಗೆ ಅನುಕೂಲವಾಯಿತು. ಕೊಟ್ಟಿರುವುದು ತಪ್ಪು ಚಿಕಿತ್ಸೆಯೋ ಅಲ್ಲವೋ ಎಂಬುದನ್ನು ಅರಿಯಲಾಗದ ಜನಸಾಮಾನ್ಯರ ಪಾಡೇನು?

ವೈದ್ಯಕೀಯ ನಿರ್ಲಕ್ಷ್ಯವೆಂಬುದು ಭಾರತದಲ್ಲಿ ಸರ್ವೇ ಸಾಮಾನ್ಯವೆಂಬಂತೆ ನಡೆಯುತ್ತದೆ. ಬಹುತೇಕ ಪ್ರಕರಣಗಳಲ್ಲಿ ನಿರ್ಲಕ್ಷ್ಯ ನಡೆದಿರುವ ಕುರುಹೂ ಕೂಡ ರೋಗಿ ಮತ್ತವರ ಸಂಬಂಧಿಕರಿಗಿರುವುದಿಲ್ಲ. ವೈದ್ಯರ ಅಜಾಗರೂಕ ಮನೋಭಾವ, ಎಲ್ಲವೂ ನನಗೇ ಗೊತ್ತು ಎಂಬ ಅತಿಯಾದ ಆತ್ಮವಿಶ್ವಾಸ, ಮತ್ತು ಬಹಳಷ್ಟು ಸಲ ರೋಗಿಗೆ ಕೊಡುತ್ತಿರುವ ಔಷಧಿಯ ಬಗ್ಗೆ ಸ್ವತಃ ವೈದ್ಯರಿಗೇ ಸರಿಯಾದ ತಿಳುವಳಿಕೆ ಇರದಿರುವುದು ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣ. ಇಂಥಹುದೊಂದು ನಿರ್ಲಕ್ಷ್ಯ ಮನೋಭಾವ ಎಲ್ಲ ವೃತ್ತಿಯಲ್ಲಿರುವವರಲ್ಲಿಯೂ ಇರುತ್ತದಾದರೂ ವೈದ್ಯಕೀಯ ವೃತ್ತಿ ಒರ್ವ ವ್ಯಕ್ತಿಯ ಜೀವದ ಜೊತೆಗೆ ಸಂವಹನ ನಡೆಸುವುದರಿಂದ ಚಿಕ್ಕದೊಂದು ತಪ್ಪೂ ಪ್ರಾಣಹರಣಕ್ಕೆ ಕಾರಣವಾಗಿಬಿಡಬಹುದು. ವೈದ್ಯರೂ ಕೂಡ ಮನುಷ್ಯಜಾತಿಗೇ ಸೇರಿರುವುದರಿಂದ ವೈಯಕ್ತಿಕ ತೊಂದರೆಗಳು, ಅವರ ಮನಸ್ಥಿತಿ, ಕೊಡುತ್ತಿರುವ ಚಿಕಿತ್ಸೆಯ ಬಗೆಗಿನ ಅಜ್ಞಾನ Surgery at Apollo Private Hospitalಅವರ ಕೆಲಸದ ಮೇಲೂ ಪರಿಣಾಮ ಬೀರಿ ತಪ್ಪು ಚಿಕಿತ್ಸೆಯನ್ನು ನೀಡುವಂತೆ ಮಾಡಿಬಿಡಬಹುದು. ಗೊತ್ತಿಲ್ಲದೆ ಮಾಡಿಬಿಡುವ ತಪ್ಪಿನಿಂದ ರೋಗಿಯ ಪ್ರಾಣಹರಣವಾಗಿಬಿಟ್ಟಲ್ಲಿ ಕೋರ್ಟಿನಿಂದ ರೋಗಿಯ ಸಂಬಂಧಿಗಳಿಗೆ ಪರಿಹಾರ ದೊರಕಬಹುದು ಆದರೆ ವೈದ್ಯರ ಎಲ್ಲ ತಪ್ಪುಗಳೂ ಅವರಿಗೆ ಗೊತ್ತಿಲ್ಲದಂತೆಯೇ ನಡೆದುಬಿಡುತ್ತವೆಯೇ?

ಯಾವಾಗ ಶಿಕ್ಷಣವೆಂಬುದು ಸರಕಾರದ ಹತೋಟಿ ಮೀರಿ ಖಾಸಗೀಕೊರಣಗೊಂಡು ಮತ್ತದಕ್ಕಿಂತ ಹೆಚ್ಚಾಗಿ ವ್ಯಾಪಾರೀಕರಣಗೊಂಡಿತೋ ವೈದ್ಯವೃತ್ತಿ ಕೂಡ ಸೇವಾವಲಯದಿಂದ ಹೊರಬಂದು ಉದ್ಯಮವಲಯಕ್ಕೆ ಸೇರಿಬಿಟ್ಟಿತು. ಇವತ್ತು ವೈದ್ಯ ವೃತ್ತಿಯೆಂಬುದು ಪಕ್ಕಾ ಬ್ಯುಸಿನೆಸ್. “ನಾನಿಷ್ಟು ಹಣ ಹೂಡಿಕೆ ಮಾಡಿದ್ದೀನಿ, ಇದು ನನ್ನ ಬಂಡವಾಳ, ತಿಂಗಳಿಗೆ ಇಷ್ಟು ಲಕ್ಷದ ಖರ್ಚಿದೆ ಆಸ್ಪತ್ರೆ ಸಾಗಿಸಲು, ಹಾಗಾಗಿ ನನಗೆ ದಿನಕ್ಕಿಷ್ಟು ಬ್ಯುಸಿನೆಸ್ ನಡೆಯಬೇಕು” ಇದು ಇಂದಿನ ಬಹುತೇಕ ಖಾಸಗಿ ಆಸ್ಪತ್ರೆಯ ಮೀಟಿಂಗುಗಳಲ್ಲಿ ಕೇಳಿ ಬರುವ ಮಾತು! ಮುಂಚಿನಿಂದಲೂ ವೈದ್ಯಕೀಯ ವೃತ್ತಿಯಲ್ಲಿ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದವಾದರೂ ಅದಕ್ಕೊಂದು ಉದ್ಯಮದ ರೂಪ ಬಂದಿದ್ದು ಕಾರ್ಪೋರೇಟ್ ಉದ್ಯಮ ಆಸ್ಪತ್ರೆಗಳಲ್ಲಿ ಬಂಡವಾಳ ಹೂಡಲಾರಂಭಿಸಿ ದೊಡ್ಡ ಮತ್ತು ಸಣ್ಣ ಊರುಗಳಲ್ಲಿ ಸರಣಿ ಆಸ್ಪತ್ರೆಗಳನ್ನು ತೆರೆಯಲಾರಂಭಿಸಿದ ಮೇಲೆ. ಹಳೆಯ ಸರಕಾರಿ ಹಾಗೂ ಖಾಸಗೀ ಆಸ್ಪತ್ರೆಗಳ ಒಳಗೆ ಹೋಗುತ್ತಿದ್ದಂತೆ ಬರುತ್ತಿದ್ದ ‘ಆಸ್ಪತ್ರೆ’ ವಾಸನೆ ಈ ನವ ಉದ್ಯಮದ ಆಸ್ಪತ್ರೆಗಳಲ್ಲಿಲ್ಲ! ಹವಾನಿಯಂತ್ರಿತ ಕಟ್ಟಡ, ಮೇಲ್ನೋಟಕ್ಕೆ ಅಚ್ಚುಕಟ್ಟು ವ್ಯವಸ್ಥೆ, ಅತ್ಯಾಧುನಿಕ ಸೌಲಭ್ಯವಿರುವ wockhardthospitalbgtbangaloreಈ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಧಿಸುವ ವೆಚ್ಚವೂ ಅಧಿಕ. ನಾವು ಕೊಡುವ ಸೇವೆಗೆ ಈ ವೆಚ್ಚ ಕಡಿಮೆಯೆಂಬುದು ಆಸ್ಪತ್ರೆಯವರ ಅನಿಸಿಕೆ. ರೋಗಿಗಳಿಗೆ ತಿಳಿಯದ, ಹೊರಪ್ರಪಂಚಕ್ಕೆ ಗೊತ್ತಾಗದ ಅತಿ ಹೆಚ್ಚು ವೈದ್ಯಕೀಯ ನಿರ್ಲಕ್ಷ್ಯ ನಡೆಯುವುದು ಇಂತಹ ಆಸ್ಪತ್ರೆಗಳಲ್ಲೇ. ಹಳೆಯ ಸರಕಾರಿ – ಹಳೆಯ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸೀಮಿತ ಸೌಕರ್ಯಗಳಲ್ಲೇ ಚಿಕಿತ್ಸೆ ನೀಡಬೇಕಾದ ಕರ್ಮ. ಒಂದಿದ್ದರೆ ಹಲವಿಲ್ಲ ಎಂಬ ಪರಿಸ್ಥಿತಿ. ಮೇಲಾಗಿ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯೂ ಇದ್ದು ತಮಗಿರುವ ಜ್ಞಾನದಲ್ಲೇ ಎಲ್ಲ ರೋಗಗಳಿಗೂ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯೂ ಇದೆ. ನಗರಗಳ ಝಗಮಗಿಸುವ ಆಸ್ಪತ್ರೆಗಳಲ್ಲಿ ಈ ಯಾವ ಕೊರತೆಯೂ ಇರುವುದಿಲ್ಲ, ಉನ್ನತಾನಿಉನ್ನತ ಶಿಕ್ಷಣ ಪಡೆದಿರುವ ತಜ್ಞರ ಉಪಸ್ಥಿತಿಯಲ್ಲೂ ಇಂಥ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ನಡೆದುಬಿಡುವುದಾದರೂ ಯಾಕೆ? ರೋಗಿಗಳನ್ನು ದುಡ್ಡು ಕೊಡುವ ಮಿಷಿನ್ನುಗಳು ಎಂಬ ಈ ಆಸ್ಪತ್ರೆಗಳ ಆಡಳಿತವರ್ಗದ ಮನಸ್ಥಿತಿಯೇ ಇದಕ್ಕೆ ಕಾರಣ.

ಅದು ಮೈಸೂರಿನ ಖ್ಯಾತ ಖಾಸಗಿ ಕಾರ್ಪೋರೇಟ್ ಆಸ್ಪತ್ರೆ. ಬಹುತೇಕ ಎಲ್ಲ ಖಾಸಗಿ ಕಾರ್ಪೋರೇಟ್ ಆಸ್ಪತ್ರೆಯ ಆಡಳಿತ ವರ್ಗ ತನ್ನಲ್ಲಿ ಕೆಲಸಕ್ಕಿರುವ ವೈದ್ಯರಿಗೆ ಥೇಟ್ ಸಾಫ್ಟ್‌ವೇರ್ ಕಂಪನಿಗಳಂತೆಯೇ ಟಾರ್ಗೆಟ್ ನೀಡುತ್ತದೆ! ತಿಂಗಳಿಗಿಷ್ಟು ಆಪರೇಷನ್ ನಡೆಸಬೇಕು, ತಿಂಗಳಿಗಿಷ್ಟು ಡಯಾಲಿಸಿಸ್ ಮಾಡಿಸಬೇಕು, ತಿಂಗಳಿಗಿಷ್ಟು ಎಂ.ಆರ್.ಐ, ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂಬ ಟಾರ್ಗೆಟ್ ವಿಧಿಸುತ್ತದೆ! ಸತತವಾಗಿ ಟಾರ್ಗೆಟ್ ಮುಟ್ಟಿಸದ ವೈದ್ಯರಿಗೆ ‘ಪಿಂಕ್ ಸ್ಲಿಪ್’ ನೀಡುವ ಪದ್ಧತಿಯೂ ಉಂಟು! ಇದೇ ರೀತಿಯ ಟಾರ್ಗೆಟ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿಯೂ ಇದೆ. ಜನರೆಲ್ಲ ಆರೋಗ್ಯದಿಂದಿದ್ದು ಅವರ ಕಿಡ್ನಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ತಿಂಗಳಿಗಿಷ್ಟು ಡಯಾಲಿಸಿಸ್ ಮಾಡಿ ಟಾರ್ಗೆಟ್ ತಲುಪಿ ಆಡಳಿತವರ್ಗದಿಂದ ಶಹಬ್ಬಾಸ್ಗಿರಿ ಪಡೆಯುವುದು ಹೇಗೆ ಸಾಧ್ಯ? ಲ್ಯಾಸಿಕ್ಸ್ ಎಂಬ ದೇಹದ ನೀರು ಹೆಚ್ಚು ಹೊರ ಹೋಗುವಂತೆ ಮಾಡುವ ಇಂಜೆಕ್ಷನ್ ನೀಡಿ ದೇಹದ ಖನಿಜಾಂಶಗಳಲ್ಲಿ ಏರುಪೇರು ಸೃಷ್ಟಿಸಿ ಅದರ ಲ್ಯಾಬ್ ರಿಪೋರ್ಟನ್ನು ಪಡೆದು ತದನಂತರ ರೋಗಿಯಲ್ಲಿ ತಾನೇ ಸೃಷ್ಟಿಸಿದ ರೋಗವನ್ನು ಮತ್ತಷ್ಟು ಭಯಭೀತ ದನಿಯಲ್ಲಿ ‘ಕಿಡ್ನಿ ಹೋಗಿಬಿಟ್ಟಿದೆ’ ಎಂದು ವಿವರಿಸಿ ಡಯಾಲಿಸಿಸ್ ಮಾಡಲಾಗುತ್ತದೆ! ತನಗಿದ್ದ “ಭಯಂಕರ” ರೋಗ ವಾಸಿಯಾದ ಖುಷಿಯಲ್ಲಿ ರೋಗಿ, ಟಾರ್ಗೆಟ್ ತಲುಪಿದ ಖುಷಿಯಲ್ಲಿ ವೈದ್ಯ, ಹೂಡಿದ ಬಂಡವಾಳಕ್ಕೆ ತಕ್ಕಂತೆ ಲಾಭ ಮಾಡುತ್ತಿರುವ ಖುಷಿಯಲ್ಲಿ ಆಸ್ಪತ್ರೆಯ ಆಡಳಿತ ವರ್ಗ…… ಇದು ಇಂದಿನ ಬಹುತೇಕ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಸಂಗತಿ. ಇದನ್ನು ವೈದ್ಯಕೀಯ ನಿರ್ಲಕ್ಷ್ಯವೆನ್ನಬೇಕೋ ಅಥವಾ ದಂಧೆಯೆಂದು ಕರೆಯಬೇಕೋ? ವೈದ್ಯಕೀಯ ನಿರ್ಲಕ್ಷ್ಯಕ್ಕೆ ಹಣದ ರೂಪದ, ನಿಷೇಧದ ರೂಪದ ದಂಡ ವಿಧಿಸಬಹುದು, ಆದರೀ ದಂಧೆಗೆ?

ಡಾ ಅನುರಾಧ ಸಹಾ ಪ್ರಕರಣ ನ್ಯಾಯಲಯದ ಮೆಟ್ಟಿಲೇರಿದ್ದು ಅವರ ಪತಿ ಕೂಡ ವೈದ್ಯರಾಗಿದ್ದರಿಂದ. ಮತ್ತದು ಗೆಲುವು ಕಂಡಿದ್ದು ಡಾ ಕುನಾಲ್ Supreme_court_of_indiaಸಹಾ ಹಲವು ಸಲ ತಾವೇ ವಾದ ಮಾಡಿದ್ದರಿಂದಾಗಿ. ಎಷ್ಟು ಜನಸಾಮಾನ್ಯರಿಗೆ ಇದು ಸಾಧ್ಯವಿದೆ? ಅಲ್ಲದೆ ಈ ಪ್ರಕರಣ ಇತ್ಯರ್ಥವಾಗಲು ಹದಿನೈದು ವರುಷಗಳು ಹಿಡಿದವು. ಎಷ್ಟು ಜನರಿಗೆ ಅಷ್ಟು ವರುಷಗಳ ಕಾಲ ಹೋರಾಡಲು ಸಾಧ್ಯವಿದೆ? ಈ ಪ್ರಕರಣದಿಂದ ವೈದ್ಯಕೀಯ ನಿರ್ಲಕ್ಷ್ಯ ಕಡಿಮೆಯಾಗುತ್ತದಾ? ಬಹುಶಃ ಇಲ್ಲ. ಕೋರ್ಟಿನ ಭಯದಿಂದ ಮತ್ತಷ್ಟು ಮಗದಷ್ಟು ಅನವಶ್ಯಕ ಲ್ಯಾಬ್ ಪರೀಕ್ಷೆಗಳನ್ನು ಅನಿವಾರ್ಯವೆಂಬಂತೆ ಬಿಂಬಿಸಿ ರೋಗಿಗಳಿಂದ ಇನ್ನಷ್ಟು ಹಣ ವಸೂಲು ಮಾಡಲು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಮತ್ತು ವೈದ್ಯರಿಗೆ ಅನುಕೂಲವಾಗುತ್ತದೆಯಷ್ಟೇ.

ಸುಭದ್ರ ಸರಕಾರದ ನಿರೀಕ್ಷೆಯಲ್ಲಿ. . . .

– ಡಾ. ಅಶೋಕ್. ಕೆ. ಆರ್.

ಮತ್ತೊಂದು ಚುನಾವಣೆ ಮುಗಿದಿದೆ. ಹತ್ತು ವರುಷದ ನಂತರ ಕಾಂಗ್ರೆಸ್ ಸಂಪೂರ್ಣ ವಿಜಯ ಸಾಧಿಸಿದೆ. ಧರ್ಮಸಿಂಗ್ ಸರಕಾರದ ಪತನದ ನಂತರ ಜೆಡಿಎಸ್ ಮತ್ತು ಬಿಜೆಪಿ ಜೊತೆಗೂಡಿ ಸರಕಾರ ರಚಿಸಿದಾಗಿನಿಂದಲೂ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿತ್ತು. ಇಪ್ಪತ್ತು ತಿಂಗಳ ಕುಮಾರಸ್ವಾಮಿ ನೇತೃತ್ವದ ಸರಕಾರ, ತದನಂತರ ಕೆಲವೇ ದಿನಗಳ ಯಡಿಯೂರಪ್ಪ ಸರಕಾರ; ವಚನಭಂಗದ ನೆಪದಲ್ಲಿ ಬಹುಮತದ ಸಮೀಪಕ್ಕೆ ಬಂದ ಬಿಜೆಪಿ. ಪಕ್ಷೇತರರ ನೆರವಿನಿಂದ ಬಿಜೆಪಿ ಯಡಿಯೂರಪ್ಪನವರ ಮುಖ್ಯಮಂತ್ರಿತ್ವದ ಅಡಿಯಲ್ಲಿ ಸರಕಾರ ರಚಿಸಿತು. ನಂತರ ನಡೆದಿದ್ದು ಕರ್ನಾಟಕ ಇದುವರೆಗೂ ಕಂಡರಿಯದ ರಾಜಕೀಯ ನೈತಿಕತೆಯ ಅಧಃಪತನ.

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನವನ್ನೋದಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತೀರ ಈ ಮಟ್ಟಿಗೆ ಆಡಳಿತ ನಡೆಸುತ್ತದೆಂಬುದನ್ನು ಬಿಜೆಪಿಯ ಕಡುವೈರಿಗಳೂ ಊಹಿಸಿರಲಿಲ್ಲ! ದಶಕಗಳ ಕಾಲ ವಿರೋಧ ಪಕ್ಷದ ನಾಯಕನಾಗಿ ಬೆಳೆದು, ಹತ್ತು ಹಲವು ಆಡಳಿತ ಪಕ್ಷಗಳ ವಿರುದ್ಧದ ಹೋರಾಟಗಳ ಮುಂಚೂಣಿಯಲ್ಲಿದ್ದವರು ಯಡಿಯೂರಪ್ಪ. ಹಿಂದಿ ಭಾಷಿಕ ಪ್ರದೇಶಗಳ ಪಕ್ಷ ಎಂಬ ಹಣೆಪಟ್ಟಿಯನ್ನು ಪಡೆದಿದ್ದ ಬಿಜೆಪಿ ಪಕ್ಷ, ನಗರಗಳಿಗಷ್ಟೇ ಸೀಮಿತವಾದ ಪಕ್ಷ ಎಂಬ ಹಣೆಪಟ್ಟಿ ಪಡೆದಿದ್ದ ಬಿಜೆಪಿ ಪಕ್ಷ ದಕ್ಷಿಣ ಭಾರತದ ಹಿಂದಿಯೇತರ ರಾಜ್ಯವೊಂದರಲ್ಲಿ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು ಸಾಧನೆಯೇ ಸರಿ. ಈ ಗೆಲುವಿನ ಹಿಂದೆ ಕುಮಾರಸ್ವಾಮಿ ಮತ್ತವರ ಜೆಡಿಎಸ್ ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದೂ ಕಾರಣವಾಗಿತ್ತೆಂಬುದರಲ್ಲಿ ಸಂಶಯವಿಲ್ಲ. ಜೊತೆಗೆ ಸಹವರ್ತಿಗಳ ಕಾಲೆಳೆಯುತ್ತಲೇ ಕಾಲಹರಣ ಮಾಡಿದ ಕಾಂಗ್ರೆಸ್ ಧುರೀಣರ ಪಾಲೂ ಸಾಕಷ್ಟಿತ್ತು. ಗೆಲುವಿಗೆ ಕಾರಣಗಳೇನೆ ಇದ್ದರೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ನೊಗವಿಡಿದ ಬಿಜೆಪಿ ಕನಿಷ್ಟ ದಕ್ಷಿಣದ ಇತರ ರಾಜ್ಯಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲಾದರೂ ಅತ್ಯುತ್ತಮವಲ್ಲದಿದ್ದರೂ ಕೊನೇ ಪಕ್ಷ ಸಾಧಾರಣ ಮಟ್ಟದ ಆಡಳಿತವನ್ನಾದರೂ ನೀಡಬಹುದು ಎಂಬ ನಿರೀಕ್ಷೆಯಿತ್ತು.

ಆದರೆ ಕಳೆದ ಐದು ವರ್ಷಗಳಲ್ಲಿ ನಡೆದಿದ್ದು ನೈತಿಕತೆಯ ಮೇಲಿನ ರಾಜಕೀಯ ಅತ್ಯಾಚಾರ. ಏಕಪಕ್ಷವೇ ಅಧಿಕಾರದಲ್ಲಿದ್ದಾಗ್ಯೂ ಮೂರು ಬಾರಿ ಮುಖ್ಯಮಂತ್ರಿಯ ಬದಲಾವಣೆ. yeddyurappa-SirigereTaralabaluಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರ ಜೈಲುವಾಸ – ಭ್ರಷ್ಟಾಚಾರದ ಕಾರಣದಿಂದ. ತತ್ವ ಸಿದ್ಧಾಂತಗಳು ಮರೆಯಾಗಿ ಹಣದ ರುದ್ರನರ್ತನ ಹೆಚ್ಚಾಗಿ ನಡೆದಿದ್ದೂ ಈ ಅವಧಿಯಲ್ಲೇ. ಆಪರೇಷನ್ ಕಮಲದಂತ ಅನೈತಿಕ ದಂಧೆಗೆ ಅಧಿಕೃತ ರೂಪುರೇಷೆಗಳನ್ನು ನಿರ್ಮಿಸಿದ ಕೀರ್ತಿ “ವಿಭಿನ್ನ ಪಕ್ಷ”ವೆಂದೇ ಪ್ರಚಾರ ಗಿಟ್ಟಿಸುವ ಬಿಜೆಪಿಗೆ ಸೇರಬೇಕು. ಇದರೊಟ್ಟಿಗೆ ಯಥಾ ರಾಜ ತಥಾ ಮಂತ್ರಿಯೆಂಬಂತೆ ಯಡಿಯೂರಪ್ಪನವರ ಹಿಂದೆ ಮುಂದೆ ಅನೇಕ ಮಂತ್ರಿ ಶಾಸಕರು ಜೈಲುವಾಸಿಗಳಾದರು. ಕೆಲವರು ಇನ್ನೂ ಜೈಲಿನಲ್ಲೇ ಇದ್ದಾರೆ. ವೈಯಕ್ತಿಕ ನೆಲೆಯಲ್ಲೂ ಬಿಜೆಪಿಯ ಶಾಸಕರನೇಕರು ಅನೈತಿಕತೆಯಲ್ಲೇ ಶ್ರೇಷ್ಟತೆ ಕಂಡುಕೊಂಡರು. ಅತ್ಯಾಚಾರ, ಮಡದಿಯ ನಿಗೂಢ ಸಾವು, ಸದನದಲ್ಲೇ ಪೋಲಿ ಚಿತ್ರಗಳ ವೀಕ್ಷಣೆ, ನರ್ಸ್ ಪ್ರಕರಣ, ಸಿಡಿ ಪ್ರಕರಣ …. ಸಂಸ್ಕೃತಿ ರಕ್ಷಿಸುವ ಪಕ್ಷದಲ್ಲಿ ಅಸಂಸ್ಕೃತರೇ ಹೆಚ್ಚಾಗಿ ಬಿಟ್ಟಿದ್ದರು. ಕಾಂಗ್ರೆಸ್ ಐವತ್ತು ಚಿಲ್ಲರೆ ವರುಷಗಳಲ್ಲಿ ಮಾಡಿದ ಭ್ರಷ್ಟಾಚಾರವನ್ನು ಐದೇ ವರ್ಷದಲ್ಲಿ ಮಾಡಿ ತೋರಿಸಿದ್ದು ಬಿಜೆಪಿಯ ನಿಜವಾದ “ಸಾಧನೆ”!! ಕರ್ನಾಟಕದ ರಾಜಕೀಯ ಪ್ರಹಸನ ರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗುವಂತೆ ಮಾಡಿದ್ದೂ ಸಾಧನೆಯೇ ಸರಿ!

ಇನ್ನು ಸಾಮಾಜಿಕವಾಗಿಯೂ ಬಹಳಷ್ಟು ಹಾನಿಯುಂಟುಮಾಡುವಲ್ಲಿ ಬಿಜೆಪಿ ಹಿಂದೆ ಬೀಳಲಿಲ್ಲ! ಹಿಂದುತ್ವವನ್ನಷ್ಟೇ ಮುಖ್ಯ ಅಜೆಂಡವನ್ನಾಗಿರಿಸಿಕೊಂಡ ಬಿಜೆಪಿ ತಾನು ನಂಬಿದ “ಹಿಂದುತ್ವ”ದ ಮಾದರಿಯನ್ನು ನೇರವಾಗಲ್ಲದಿದ್ದರೂ ಹತ್ತಲವು ಹಿಂದೂ ಸಂಘಟನೆಗಳ ಮುಖಾಂತರ ಸಮಾಜದ ಮೇಲೆ ಹೇರುವ ದುಸ್ಸಾಹಸ ಮಾಡುವುದರಲ್ಲಿ ಅನುಮಾನವಿರಲಿಲ್ಲ. ಹಿಂದೂ ಧರ್ಮದ ಒಳಗಿನ ಹುಳುಕಗಳೇ ಹಿಂದೂ ಧರ್ಮದ ನಿಜವಾದ ವೈರಿ ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಈ ಹಿಂದುತ್ವ ಮಾದರಿ ಮುಸ್ಲಿಂ, ಕ್ರಿಶ್ಚಿಯನ್ನರಿಂದಷ್ಟೇ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬುದನ್ನು ಹರಡುತ್ತ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದಕ್ಕೆ ಮುಂದಾಯಿತು. ಹಿಂದೂ ಧರ್ಮದ ಜಾತಿ ವ್ಯವಸ್ಥೆಯಲ್ಲಿ ನಲುಗಿದ ಜನರನ್ನೇ ತನ್ನ ಅಸ್ತ್ರಗಳನ್ನಾಗಿ ಬಳಸಿಕೊಂಡು ಅನ್ಯಧರ್ಮೀಯರ ಮೇಲೆ ಹಲ್ಲೆ ನಡೆಸಿದ ಕೀರ್ತಿ ಈ ಹಿಂದುತ್ವ ಮಾದರಿಯದು. ಈ ಹಿಂದುತ್ವ ಮಾದರಿ ಅತಿ ಹೆಚ್ಚು ಪ್ರಯೋಗಕ್ಕೊಳಗಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ. ಸಹಪಾಠಿಗಳೊಂದಿಗೆ ಸಹೋದ್ಯೋಗಿಗಳೊಂದಿಗೆ ಮಾತನಾಡಲೂ ಭಯವಾಗುವಂತಹ ವಾತಾವರಣ ಈ ಜಿಲ್ಲೆಗಳಲ್ಲಿ ಸೃಷ್ಟಿಯಾಗಿರುವುದು ಸುಳ್ಳಲ್ಲ. ಕೆಲವೊಂದು ಪ್ರಕರಣಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸವೂ ಇತ್ತು. ಮುಸ್ಲಿಂ ಮತ್ತು ಹಿಂದೂ ಮೂಲಭೂತವಾದಿಗಳ ಮುಖ್ಯ ಉದ್ದೇಶ ಎರಡೂ ಕೋಮಿನ ಜನತೆ ಮಾನಸಿಕವಾಗಿ ದೂರವಾಗಬೇಕು, ಅನ್ಯ ಮತದ ಜನರ ಬಗ್ಗೆ ಅಸಮಾನ್ಯ ದ್ವೇಷ ಕಾರಬೇಕು. ಆ ಉದ್ದೇಶ “ಬುದ್ಧಿವಂತರ” ಜಿಲ್ಲೆಗಳಲ್ಲೇ ಅತ್ಯಂತ ಯಶಸ್ವಿಯಾಗಿದ್ದು ನಮ್ಮ ಶೈಕ್ಷಣಿಕ ವಿಧಾನದ ಸೋಲೆಂದರೆ ತಪ್ಪಿಲ್ಲ. ಅದೃಷ್ಟವಶಾತ್ ಇತರ ಜಿಲ್ಲೆಗಳಲ್ಲಿ ಈ “ಪ್ರಯೋಗ”ಗಳಿಗೆ ಜನಬೆಂಬಲ ಹೆಚ್ಚಾಗಿ ಸಿಗಲಿಲ್ಲ. ಬ್ರಹ್ಮಾಂಡದಂಥ ಕಾರ್ಯಕ್ರಮಗಳು, ಜ್ಯೋತಿಷ್ಯ, ವಾಸ್ತು, ಕಂದಾಚಾರ ಇದೇ ಸಮಯದಲ್ಲಿ ಹೆಚ್ಚಾಗಿದ್ದು ಕಾಕತಾಳೀಯವಾ?! ಮುಖ್ಯಮಂತ್ರಿಯ ವರ್ತನೆ ಇಡೀ ರಾಜ್ಯದ ಜನರ ಮೇಲೆ ಪರಿಣಾಮ ಬೀರಿದ ಕಾರಣಕ್ಕೆ ಇವೆಲ್ಲವೂ ಹೆಚ್ಚಾದವಾ ಎಂಬುದರ ಸಾಮಾಜಿಕ ಅಧ್ಯಯನ ನಡೆದರೆ ಆಸಕ್ತಿಕರ ಅಂಶಗಳು ಹೊರಬೀಳಬಹುದು!

ತನ್ನದೇ ಸಾವಿರ ತಪ್ಪುಗಳಿಂದ ಚುನಾವಣೆಯಲ್ಲಿ ಸೋಲುಂಡಿರುವ ಬಿಜೆಪಿ ಈಗ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯಲಾಗದ ಸ್ಥಿತಿಗೆ ತಲುಪಿದೆ. ಯಡಿಯೂರಪ್ಪ, ಶ್ರೀರಾಮುಲು ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದಲೇ ಹೊಸಪಕ್ಷವನ್ನು ಕಟ್ಟಿ ತಮ್ಮ ಉದ್ದಿಶ್ಯದಲ್ಲಿ ತಕ್ಕಮಟ್ಟಿಗಿನ ಯಶಸ್ಸು ಗಳಿಸಿದ್ದಾರೆ. ಅವರು ಪಕ್ಷ ತೊರೆಯದಿದ್ದರೆ ಸೋಲನ್ನು ತಪ್ಪಿಸಿಕೊಳ್ಳಲಾಗದಿದ್ದರೂ ಇನ್ನೊಂದಷ್ಟು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿತ್ತು. ಜೆಡಿಎಸ್ ಪಡೆದಷ್ಟೇ ಸ್ಥಾನಗಳನ್ನು (40) ಪಡೆದಿರುವ ಬಿಜೆಪಿ ಗಿಟ್ಟಿಸಿದ ಮತಗಳ ಸಂಖ್ಯೆಯ ಆಧಾರದಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಪಡೆವ ಸಾಧ್ಯತೆ ಕಡಿಮೆ.

ರಾಜಕೀಯ ಅನಿಶ್ಚಿತತೆ ಅನೈತಿಕತೆ ಶಿಖರ ತಲುಪಿ ಕುಳಿತಿದೆ. ಬಿಜೆಪಿಯಿಂದ ರೋಸತ್ತ ಜನ ಮತ್ಯಾವುದೇ ಪಕ್ಷವೂ ಇಲ್ಲದ ಕಾರಣ ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತ ನೀಡಿದ್ದಾರೆ. Siddaramaiahಈ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ಸಿಗರ ಶ್ರಮ ಕಡಿಮೆಯೆಂದೇ ಹೇಳಬೇಕು. ಕಳೆದ ಐದು ವರ್ಷದಲ್ಲಿ ಅಧಿಕೃತ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ತನ್ನ ಕರ್ತವ್ಯವನ್ನು ನಿಭಾಯಿಸಲೇ ಇಲ್ಲ. ಅಧಿಕೃತ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿದ್ದು ಜೆಡಿಎಸ್. ಅದರ ಕಾರ್ಯ ಯಡಿಯೂರಪ್ಪನವರ ಪತನದ ನಂತರ ಅಚಾನಕ್ಕಾಗಿ ನಿಂತು ಹೋಗಿದ್ದು ಅದರ ಉದ್ದೇಶಗಳ ಬಗ್ಗೆ ಅನುಮಾನ ಮೂಡಿಸುತ್ತದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಸೊಲ್ಲೆತದಿದುದಕ್ಕೆ ಕಾರಣ ಅದರದೇ ನೇತೃತ್ವದ ಯುಪಿಎ ಸರಕಾರ ನಡೆಸುತ್ತಿರುವ ಅಗಾಧ ಹಗರಣಗಳು! ಉತ್ತರ ಕರ್ನಾಟಕದಲ್ಲಿ ಮತ್ತೆ ತನ್ನ ಅಸ್ತಿತ್ವ ಕಂಡುಕೊಳ್ಳುವಲ್ಲಿ “ವಿಶೇಷ ಸ್ಥಾನಮಾನ” ನೀಡಿದ್ದು ನೆರವಿಗೆ ಬಂತು. “ಹಿಂದುತ್ವದ ಪ್ರಯೋಗಶಾಲೆ” ಬಿಜೆಪಿಯ ಶಕ್ತಿಕೇಂದ್ರದಂತಿದ್ದ ಕರಾವಳಿ ಜಿಲ್ಲಿಯ ಬಹುತೇಕ ಕಡೆ ಬಿಜೆಪಿಗೆ ಸೋಲುಂಟಾಗಿದ್ದು ಧರ್ಮಾಧಾರಿತವಾಗಿ ಪಕ್ಷ ಕಟ್ಟಲೊರಡುವ ಎಲ್ಲರಿಗೂ ಒಂದು ಎಚ್ಚರಿಕೆಯ ಪಾಠ. ಧರ್ಮಾಂಧರು ಹೆಣ್ಣು ಮಕ್ಕಳ ಮೇಲೆ ಕೈಮಾಡಿದ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚೆಚ್ಚು ನಡೆದಷ್ಟೂ ಬಿಜೆಪಿಯಿಂದ ಮತಗಳು ದೂರವಾದವು. ಸುಳ್ಯ ಹೊರತು ಪಡಿಸಿ ಮತ್ಯಾವುದೇ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಕಾಣಲಿಲ್ಲ. ಭ್ರಷ್ಟಾಚಾರ, ಅನೈತಿಕತೆಯಲ್ಲೇ ಮುಳುಗಿಹೋಗಿದ್ದ ಅನೇಕರು ಈ ಚುನಾವಣೆಯಲ್ಲಿ ಸೋಲುಂಡಿದ್ದು ಆರೋಗ್ಯಕರ ಬೆಳವಣಿಗೆ.

ಕಾಂಗ್ರೆಸ್ ಸುಭದ್ರ, ಸ್ವಚ್ಛ ಆಡಳಿತ ನೀಡುವಲ್ಲಿ ಯಶ ಕಾಣಬಲ್ಲದೆ? ಇತಿಹಾಸದ ಪುಟಗಳನ್ನು ನೋಡಿದರೆ ಆಶಾದಾಯಕ ಭವಿಷ್ಯವೇನೂ ಕಾಣುವುದಿಲ್ಲ. ರಾಜಕೀಯ ಅನಿಶ್ಚಿತತೆ, ಅನೈತಿಕತೆ, ಭ್ರಷ್ಟಾಚಾರಕ್ಕೆ ಕರ್ನಾಟಕದ ಜನತೆ ಕೊಡುವ ಉತ್ತರವೆಂತದೆಂಬುನ್ನು ಈ ಚುನಾವಣೆ ಮಗದೊಮ್ಮೆ ಸಾಬೀತುಪಡಿಸಿದೆ. ಈ ಐದು ವರುಷಗಳ ಪಾಠದಿಂದ ಕಾಂಗ್ರೆಸ್ ಏನಾದರೂ ಕಲಿತಿದೆಯಾ? ಆ ಕಲಿಕೆಯ ಆಧಾರದಲ್ಲಿ ಮುನ್ನಡೆಯುತ್ತದೆಯಾ? ಕಾದು ನೋಡಬೇಕಷ್ಟೇ.

ಕನ್ನಡ ಸುದ್ದಿ ವಾಹಿನಿಗಳ ತನಿಖಾ ವರದಿಗಳ ನೈತಿಕತೆಯೆ ಪ್ರಶ್ನಾರ್ಹವಾದಾಗ…


– ಡಾ.ಅಶೋಕ್. ಕೆ.ಆರ್.


 

ಮಹಾಲಯ ಅಮಾವಾಸೆಗೆಂದು ಶನಿವಾರ ಊರು ತಲುಪಿ ಕನ್ನಡದ ಸುದ್ದಿವಾಹಿನಿಗಳನ್ನು ನೋಡೋಣವೆಂದು ಚಾನೆಲ್ಲನ್ನು ಬದಲಿಸುತ್ತ ಕುಳಿತಾಗ ನಟಿ ಹೇಮಾಶ್ರಿಯ ಸಾವಿನ ಸುತ್ತ ಗೋಜಲು–ಗೊಂದಲಗಳನ್ನು ನಿರ್ಮಿಸುವಲ್ಲಿ ಎಲ್ಲಾ ವಾಹಿನಿಗಳೂ ಪೈಪೋಟಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದವು. ‘ಅಯ್ಯೋ! ಮೂರು ದಿನದಿಂದ ಎಲ್ಲಾ ಚಾನೆಲ್ಲಿನಲ್ಲೂ ಇದೇ ಸುದ್ದಿ. ಸತ್ತೋಳ ಬಗ್ಗೆ ನಿಜವೋ–ಸುಳ್ಳೋ ಬೇಡದ ಮಾತನ್ನೆಲ್ಲಾ ಆಡುತ್ತಿದ್ದಾರೆ’ ಎಂದರು ಮನೆಯವರು. ಈ ಸುದ್ದಿ ವಾಹಿನಿಗಳ ಗೋಳೇ ಇಷ್ಟು ಎಂದುಕೊಳ್ಳುತ್ತಾ ಚಾನೆಲ್ ಬದಲಿಸಿದೆ. ಮಾರನೇ ದಿನ ಮತ್ತೊಂದು ‘ಪ್ರಹಸನಕ್ಕೆ’ ಕನ್ನಡ ವಾಹಿನಿಗಳು ಸಿದ್ಧಗೊಳ್ಳುತ್ತಿರಬಹುದೆಂಬ ಯಾವುದೇ ಸೂಚನೆಯಿಲ್ಲದೆ ಭಾನುವಾರ ’ಪಬ್ಲಿಕ್ ಟಿವಿ’  ’ಸ್ಟಿಂಗ್’ ಮಾಡಿತು!!

ಸ್ವಾಮಿಯ ಕಳ್ಳ ಹೋರಾಟದ ಕಥೆ:
ಯಾವುದೇ ಚಳುವಳಿಯಲ್ಲಿ ಪಾಲ್ಗೊಂಡ ಹೋರಾಟಗಾರರ ನಡುವೆ ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಯನ್ನೇ ಪ್ರಮುಖವಾಗಿಸಿಕೊಂಡವರು ಇದ್ದೇ ಇರುತ್ತಾರೆ. ಅವರನ್ನು ಗುರುತಿಸಿ ಚಳುವಳಿಯಿಂದ ಅವರನ್ನು ಹೊರಹಾಕುವ ಅಥವಾ ಅವರನ್ನು ಸರಿದಾರಿಗೆ ತರುವ ಜವಾಬುದಾರಿ ಆ ಚಳುವಳಿಯ ಮುಖಂಡರದು. ಮುಖಂಡರೇ ಲೋಭಿಯಾಗಿಬಿಟ್ಟಿದ್ದರೆ? ಆ ಮುಖಂಡನ ಹಿಂದಿರುವ ಜನರೇ ಮುಖಂಡನನ್ನು ಚಳುವಳಿಯಿಂದ ದೂರ ಸರಿಸಿ ಹೋರಾಟ ಮುಂದುವರಿಸಬೇಕಷ್ಟೇ. ತತ್ವಾಧಾರಿತ ಹೋರಾಟಗಾರರ ಉಪಸ್ಥಿತಿಯಲ್ಲಿ ಮುಖಂಡನೊಬ್ಬನ ಆಗಮನ – ನಿರ್ಗಮನದಿಂದ ಚಳುವಳಿ ವಿಚಲಿತಗೊಳ್ಳಲಾರದು; ಕೊಂಚ ಹಿನ್ನಡೆ ಅನುಭವಿಸುವುದು ಸ್ವಾಭಾವಿಕವಾದರೂ ಮಂದಡಿಯಿಡಲು ಹೆಚ್ಚು ಸಮಯ ತೆಗೆದುಕೊಳ್ಳಲಾರದು. ನಿತ್ಯಾನಂದನ ವಿರುದ್ಧದ ಹೋರಾಟದ ಮೂಲಕ ದೃಶ್ಯ ಮಾಧ್ಯಮಗಳ ಮುಖಾಂತರವೇ ಪ್ರಸಿದ್ಧಿಗೆ ಬಂದ ಕಾಳಿ ಸ್ವಾಮಿ[ಋಷಿಕುಮಾರ ಸ್ವಾಮಿ] ತನ್ನ ಮಾಜಿ ‘ಶಿಷ್ಯ’ರ ಮೂಲಕ ತನ್ನ ನಿಜರೂಪದ ದರ್ಶನ ಮಾಡಿಸಿದ್ದಾನೆ! ಮಾಜಿ ಶಿಷ್ಯರು ಪಬ್ಲಿಕ್ ಟಿವಿಯನ್ನು ವೇದಿಕೆಯಾಗಿ ಉಪಯೋಗಿಸಿಕೊಂಡು ಕಪಟ ಸ್ವಾಮಿಯೊಬ್ಬನ ಅಸಲಿ ಮುಖವನ್ನು, ಆತನ ಧನದಾಹವನ್ನು ಅನಾವರಣಗೊಳಿಸಿ ಸ್ವಾಮೀಜಿಯ ‘ಸಮಾಜ ಪರ’ ಕಾಳಜಿಗಳನ್ನು ನೈಜವೆಂದೇ ನಂಬಿದ್ದ ಸಹಚರರಿಗೆ, ಹಿಂಬಾಲಕರಿಗೆ ಅಘಾತವುಂಟುಮಾಡಿದ್ದಾರೆ.

ಮಾಜಿ ಶಿಷ್ಯರು ಸ್ವಾಮೀಜಿಯ ದುರುಳ ಮುಖವನ್ನು ಅನಾವರಣಗೊಳಿಸಲು ಪಟ್ಟ ಶ್ರಮ ಮತ್ತು ಪಬ್ಲಿಕ್ ವಾಹಿನಿ ಅದನ್ನು ಪ್ರಸಾರ ಮಾಡಿದ್ದು ಎರಡೂ ಶ್ಲಾಘನೀಯವೇ. ಚಳುವಳಿಗಳನ್ನು ಅನೀತಿವಂತರ ದೆಸೆಯಿಂದ ಹಾಳಾಗುವುದನ್ನು ತಪ್ಪಿಸಲು ಸಹಕಾರಿಯಾಗುವಂತಹ ಸಂಗತಿಯೂ ಹೌದು. ಆದರೆ ಇಂಥದೊಂದು ವರದಿ ಮತ್ತದರ ಪ್ರಸಾರದ ವಿಷಯದಲ್ಲಿ ದೃಶ್ಯಮಾಧ್ಯಮಗಳು ನಡೆದುಕೊಂಡ ರೀತಿ ಸರಿಯೇ? ಮಾಧ್ಯಮದವರೇ ಉತ್ತರಿಸಬೇಕು. ಇಂಥಹ ವರದಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಬೇಕಾದ ಮಾಧ್ಯಮ ಮುಖ್ಯಸ್ಥರೇ ಎಡವುತ್ತಿದ್ದಾರೆಯೇ? ಒಂದು ಘಂಟೆಯ ಚರ್ಚೆಯಲ್ಲಿ, ನಂತರ ದಿನಕ್ಕತ್ತು ನಿಮಿಷ ಆ ಘಟನೆಯ ಫಾಲೋಅಪ್ ನಲ್ಲಿ ಮುಗಿಯಬೇಕಿದ್ದ ವರದಿಯನ್ನು ಒಂದಲ್ಲ ಎರಡಲ್ಲ ಮೂರು ದಿನ ಸತತವಾಗಿ ಜಗ್ಗಾಡಿದ ಉದ್ದಿಶ್ಯವೇನು ಎಂಬ ಸಂಶಯ ನೋಡುಗನಲ್ಲಿ ಮೂಡುವುದು ಸಹಜವಲ್ಲವೇ?

ಮೊದಲ ದಿನ ಪಬ್ಲಿಕ್ ಟಿವಿಯಲ್ಲಿ, ನಂತರ ಇತರ ವಾಹಿನಿಗಳಲ್ಲಿ ಸತತವಾಗಿ ಸ್ವಾಮಿಯ ಬಗ್ಗೆಯೇ ಚರ್ಚೆ ನಡೆಯಿತು. ಹೋಗಲಿ, ಕರ್ನಾಟಕದಲ್ಲಿ ಯಾವ ರೀತಿಯ ಸಾಮಾಜಿಕ ಸಮಸ್ಯೆಗಳೂ ಇಲ್ಲ, ಇರುವುದಿದೊಂದೇ ಸಮಸ್ಯೆ ಎಂಬ ಭಾವನೆ ಮಾಧ್ಯಮದವರಿಗಿದ್ದರೆ ಕೊನೇ ಪಕ್ಷ ಚರ್ಚೆಯ ಸ್ವರೂಪವನ್ನಾದರೂ ಸರಿದಿಕ್ಕಿನಲ್ಲಿಡಬೇಕಿತ್ತಲ್ಲವೇ? ಈ ಕಳ್ಳ ಸ್ವಾಮಿಯ ‘ಡೀಲ್’ ಚಳುವಳಿಗಳ ನೆಪದಲ್ಲಿ ದೇಶದಲ್ಲಿ – ರಾಜ್ಯದಲ್ಲಿ ಸ್ವಸ್ವಾರ್ಥದಿಂದಾಗಿ ಕುಗ್ಗಿ ಹೋದ ಚಳುವಳಿಗಳ ವಿಮರ್ಶೆ ನಡೆದಿದ್ದರೆ ನೈಜ ಕಳಕಳಿಯ ಇಂದಿನ ಹೋರಾಟಗಾರರು ತಮ್ಮ ಸಂಗಡಿಗರ ಬಗ್ಗೆ ಮುಖಂಡರ ಬಗ್ಗೆ ಎಚ್ಚರವಹಿಸಿ ಚಳುವಳಿಗಳ ಬಲ ಕುಗ್ಗದಂತೆ ಜಾಗ್ರತವಹಿಸಲು ಸಹಕಾರಿಯಾಗುತ್ತಿತ್ತೇನೋ? ಆದರೆ ನಡೆದ ಚರ್ಚೆಗಳು ಸ್ವಾಮಿಯ ‘ಪೂರ್ವಜನ್ಮದ’ ವೈಯಕ್ತಿಕ ವಿಷಯಗಳೆಡೆಗೇ ಹೆಚ್ಚೆಚ್ಚು ಕೇಂದ್ರೀಕೃತಗೊಳ್ಳುತ್ತಾ ಸಾಗಿ ಸ್ವಾಮೀಜಿಯ ವಿರುದ್ಧ ದೋಷಾರೋಪಣೆ ಮಾಡಿದವರಲ್ಲೂ ಯಾವುದೋ ವೈಯಕ್ತಿಕ ಹಿತಾಸಕ್ತಿ ಇದ್ದಿರಬಹುದು ಎಂಬ ಅನುಮಾನ ಮೂಡಿಸುವಲ್ಲಿ ಮಾಧ್ಯಮಗಳು ಯಶಸ್ವಿಯಾಗಿವೆ. ಸ್ವಾಮೀಜಿಯ ಮದುವೆ – ಮಕ್ಕಳು, ನಾಟ್ಯ, ನಾಟಕ, ಸಿನಿಮಾದ ಸಂಗತಿಗಳನ್ನೇ ಅಗತ್ಯಕ್ಕಿಂತ ಹೆಚ್ಚಾಗಿ ವೈಭವೀಕರಿಸಿದ ಮಾಧ್ಯಮಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಸಂಶಯ ಹುಟ್ಟುತ್ತದೆ. ಕೆಲವು ಮಾಧ್ಯಮಗಳು ವಿರುದ್ಧವಾಗಿ, ಕೆಲವು ಮಾಧ್ಯಮಗಳು ಸ್ವಾಮಿಯ ಪರವಾಗಿ ನಡೆಸಿದ ಕಾರ್ಯಕ್ರಮಗಳು ಪ್ರತಿಯೊಂದೂ ವಾಹಿನಿಗೂ ಅಥವಾ ಅದರ ಒಡೆಯರಿಗೂ ‘ಹಿಡನ್ ಅಜೆಂಡಾ’ ಇರಬಹುದೆಂಬ ಭಾವ ಮೂಡಿಸುತ್ತದೆ.

ಸುದ್ದಿ ಸಂಗ್ರಹ, ಅದರ ನೈಜತೆಯ ಜೊತೆಜೊತೆಗೆ ಅದನ್ನು ಪ್ರಸ್ತುತಪಡಿಸುವ ವಿಧಾನವೂ ಮುಖ್ಯವೆಂಬ ಅಂಶ ಪತ್ರಿಕೋದ್ಯಮದಲ್ಲೇ ಈಸುತ್ತಿರುವವರಿಗೆ ತಿಳಿಯಲಿಲ್ಲವೇ? ಇಂಥ ಕೆಟ್ಟ ಪ್ರಸ್ತುತಿಯ ವರದಿಗಳನ್ನು ನಾಟಕದಂತೆ, ಸಿನಿಮಾದಂತೆ ನೋಡುತ್ತ ‘ಆನಂದಿಸುವ’, ವಾಹಿನಿಗಳ ಟಿಆರ್‌ಪಿ ಹೆಚ್ಚಿಸಿ ಇಂಥಹುದೇ ಕಾರ್ಯಕ್ರಮಗಳು ಮೂಡಿಬರಲು ತನ್ನ ಕೊಡುಗೆ ನೀಡುತ್ತಿರುವ ನೋಡುಗನ ಪಾತ್ರವನ್ನೂ ಇಲ್ಲಿ ಮರೆಯಬಾರದು. ಸಾಮಾಜಿಕ ಪ್ರಾಮುಖ್ಯತೆಯ ವರದಿಯೊಂದನ್ನು ವೈಯಕ್ತಿಕ ಟೀಕೆಯ ಮಟ್ಟಕ್ಕೆ ಇಳಿಸಿಬಿಡುವ ಇಂಥ ವರದಿಗಾರಿಕೆಗಳು ದೃಶ್ಯ ಮಾಧ್ಯಮದ ಮೇಲೆ ನಿಯಂತ್ರಣ ಹೇರಬೇಕೆಂಬ ಧ್ವನಿಗೆ ಮತ್ತಷ್ಟು ಬಲ ನೀಡುವುದರಲ್ಲಿ ಸಂಶಯವಿಲ್ಲ.

ಅಣುಸ್ಥಾವರಗಳ ಬಗೆಗಿನ ಭಯಾತಂಕಗಳು ಗುಂಡೇಟಿಗೆ ಅರ್ಹವೇ?


– ಡಾ. ಅಶೋಕ್. ಕೆ.ಆರ್.


 

ಕೂಡುಂಕುಳಂ ಅಣುಸ್ಥಾವರದಲ್ಲಿ ಮೊನ್ನೆ [10/09/1012] ಯುರೇನಿಯಂ ಇಂಧನವನ್ನು ತುಂಬುವುದರ ವಿರುದ್ಧ ನಡೆದ ಪ್ರತಿಭಟನೆ ಆ್ಯಂಟನಿ ಜಾನ್ ಎಂಬ ಮೀನುಗಾರನ ಹತ್ಯೆಯಿಂದ ಹೊಸ ತಿರುವು ಪಡೆದಿದೆ. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ತೂತ್ತುಕುಡಿಯಲ್ಲಿ ಪೋಲೀಸ್ ಠಾಣೆ ಮತ್ತು ಚೆಕ್ ಪೋಸ್ಟ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಪೋಲೀಸರು ಗುಂಡು ಹಾರಿಸಿದ್ದಾರೆ ಎಂಬುದು ಅಲ್ಲಿನ ಹಿರಿಯ ಪೋಲೀಸ್ ಅಧಿಕಾರಿಗಳ ಹೇಳಿಕೆ. ಇಷ್ಟಕ್ಕೂ ಪ್ರತಿಭಟನಾಕಾರರನ್ನು ಪ್ರತಿಭಟನೆಗೆ ಪ್ರಚೋದಿಸಿದ ಕಾರಣಗಳಾದರೂ ಯಾವುವು? ಅವುಗಳಿಗೆ ಸರ್ಕಾರ ಹಿಂಸೆ ಮತ್ತು ನಿರಾಕರಣೆ ಮೂಲಕವೇ ಉತ್ತರಿಸಬೇಕೆ?

ಮಾರ್ಚ್ 2011ರಲ್ಲಿ ಸುನಾಮಿ ಹೊಡೆತಕ್ಕೆ ತತ್ತರಿಸಿದ ಜಪಾನಿನಲ್ಲಿ ಫುಕುಶಿಮಾ ಅಣುಸ್ಥಾವರದ ದುರಂತವೂ ಸೇರಿಹೋಯಿತು. ಉತ್ಕೃಷ್ಟ ತಂತ್ರಜ್ಞಾನ, ಯಾವ ಭೂಕಂಪಕ್ಕೂ ಜಗ್ಗಲಾರದೆಂದೇ ನಂಬಲಾಗಿದ್ದ ಅಲ್ಲಿನ ಅಣುಸ್ಥಾವರ ವಿಜ್ಞಾನಿಗಳ ನಂಬುಗೆಯನ್ನು ತಲೆಕೆಳಗು ಮಾಡಿ ಸುನಾಮಿಯ ಹೊಡೆತಕ್ಕೀಡಾಗಿ ಪರಿಸರಕ್ಕೆ ವಿಷಾಣುಗಳನ್ನು ಬಿಡುಗಡೆ ಮಾಡಿ ವಿಶ್ವದೆಲ್ಲೆಡೆ ಅಣುಸ್ಥಾವರಗಳ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ನೀಡಿತು. ಬಹುತೇಕ ವಿದ್ಯುತ್ತನ್ನು ಅಣುಸ್ಥಾವರಗಳಿಂದಲೇ ಉತ್ಪಾದಿಸುವ ಜರ್ಮನಿಯಂಥ ದೇಶಗಳೂ ಸಹ ‘ಇನ್ನು ಮುಂದೆ ಹೊಸ ಅಣುಸ್ಥಾವರಗಳನ್ನು ನಿರ್ಮಿಸುವುದಿಲ್ಲ. ಬದಲಿ ಇಂಧನ ಮೂಲಗಳು ಅವಶ್ಯವಿರುವ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿದ್ದ ಹಾಗೆ ಈಗ ಚಾಲ್ತಿಯಲ್ಲಿರುವ ಅಣುಸ್ಥಾವರಗಳನ್ನೂ ಸ್ಥಗಿತಗೊಳಿಸಲಾಗುವುದು’ ಎಂದು ಘೋಷಿಸುವ ಹಾಗೆ ಮಾಡಿದ್ದು ಫುಕುಶಿಮಾ ದುರಂತ. ಈ ಮಧ್ಯೆ ಸಮುದ್ರ ತೀರದಲ್ಲೇ ನಿರ್ಮಿಸಲಾಗುತ್ತಿದ್ದ ಕೂಡುಂಕುಳಂ ಸ್ಥಾವರದ ವಿರುದ್ಧವೂ ಪ್ರತಿಭಟನೆ ಹೆಚ್ಚಾಗುತ್ತ ಸಾಗಿತು. ಅಣುಸ್ಥಾವರದ ವಿರುದ್ಧ ಈ ಮಟ್ಟಿಗಿನ ಭಯ ಅವಶ್ಯಕವೇ? ಅಭಿವೃದ್ಧಿ ಹೊಂದಿದ ದೇಶಗಳೆಲ್ಲ ಅಣುಸ್ಥಾವರ ವಿದ್ಯುತ್ತನ್ನೇ ನೆಚ್ಚಿಕೊಂಡಿರುವಾಗ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಅಣುಸ್ಥಾವರ ವಿರೋಧಿಸುವುದು ಸರಿಯೇ?

ವಿದ್ಯುಚ್ಛಕ್ತಿ ಇಂದಿನ ಅನಿವಾರ್ಯತೆ. ನಾನಿದನ್ನು ಟೈಪಿಸುವುದಕ್ಕೂ ನೀವಿದನ್ನು ಓದುವುದಕ್ಕೂ ವಿದ್ಯುತ್ ಬೇಕೇ ಬೇಕು. ಭಾರತದಲ್ಲಿಂದು ವಿದ್ಯುತ್ ನ ಪ್ರಮುಖ ಮೂಲ ಕಲ್ಲಿದ್ದಲು ಆಧಾರಿತ ಥರ್ಮಲ್ ಪ್ಲ್ಯಾಂಟ್ ಗಳು ಮತ್ತು ಹೈಡ್ರೋ ಪವರ್ ಪ್ರಾಜೆಕ್ಟುಗಳು. ಮೊದಲನೆಯದು ಇವತ್ತಲ್ಲ ನಾಳೆ ಖಾಲಿಯಾಗುವ ಇಂಧನ ಮೂಲ, ಎರಡನೆಯದು ಮಳೆಯಾಧಾರಿತ. ಸೋಲಾರ್ ಮತ್ತು ವಾಯು ವಿದ್ಯುತ್ ಉತ್ಪಾದನಾ ಘಟಕಗಳು ಇನ್ನೂ ಶೈಶಾವಸ್ಥೆಯಲ್ಲಿವೆ ಮತ್ತು ಇವತ್ತಿಗೆ ಭಾರತದಲ್ಲಿ ಲಭ್ಯವಿರುವ ತಂತ್ರಜ್ಞಾನದಲ್ಲಿ ದುಬಾರಿಯೂ ಹೌದು. ಮೇಲಿನ ಅನಿಶ್ಚಿತ ಘಟಕಗಳಿಗೆ ಹೋಲಿಸಿದರೆ ವರ್ಷದ ಎಲ್ಲ ದಿನವೂ ಅನಿಯಮಿತವಾಗಿ ವಿದ್ಯುತ್ ಉತ್ಪಾದಿಸಿ ಕೊಡಬಲ್ಲ ಅಣುಸ್ಥಾವರಗಳು ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಕಾಣುವುದು ಸತ್ಯ. ಅಣೆಕಟ್ಟೆ ಕಟ್ಟಿ ಊರು ಮುಳುಗಿಸುವ ಅವಶ್ಯಕತೆಯಿಲ್ಲ, ಕಲ್ಲಿದ್ದಲು ಸ್ಥಾವರಗಳಿಂದ ಟನ್ನುಗಟ್ಟಲೆ ಹೊರಬಂದು ಗಾಳಿ – ನೀರನ್ನು ಕಲುಷಿತಗೊಳಿಸುವ ಹಾರುಬೂದಿಯ ಸಮಸ್ಯೆಯೂ ಇಲ್ಲ. ಅಣುಸ್ಥಾವರದ ಬೆಂಬಲಿಗರು ಹೇಳುವಂತೆ ಅಣು ವಿದ್ಯುತ್ ‘ಕಡಿಮೆ ದರದ ಸ್ವಚ್ಛ ವಿದ್ಯುತ್’.

ಇದಷ್ಟೇ ಸತ್ಯವಾಗಿದ್ದರೆ ಇಷ್ಟರಮಟ್ಟಿಗಿನ ಪ್ರತಿಭಟನೆ ವಿಶ್ವವ್ಯಾಪಿಯಾಗಿ  ನಡೆಯುತ್ತಿರಲಿಲ್ಲ. ಅಣುಸ್ಥಾವರದ ಬಗೆಗಿನ ಮೂಲಭಯ ಅಣು ವಿಕಿರಣದ್ದು. ಅಣು ವಿಕಿರಣಗಳು ಹೆಚ್ಚುಹೆಚ್ಚು ವಾತಾವರಣಕ್ಕೆ ಸೇರಿದಲ್ಲಿ ಆಗುವ ಅನಾಹುತಗಳಿಗೆ ನಾಗಾಸಾಕಿ ಮತ್ತು ಹಿರೋಷಿಮಾದ ಉದಾಹರಣೆ ಸಾಕೇನೋ? ಸಣ್ಣಪುಟ್ಟ ಚರ್ಮದ ಸಮಸ್ಯೆ, ಕ್ಯಾನ್ಸರಿನಿಂದ ಹಿಡಿದು ಮನುಷ್ಯ, ಪ್ರಾಣಿ – ಪಕ್ಷಿಗಳ ವಂಶವಾಹಿನಿಯನ್ನೇ ಬದಲಿಸಿಬಿಡುವ ಶಕ್ತಿ ಈ ಅಣು ವಿಕಿರಣಗಳಿಗಿದೆ. 1979 ರಲ್ಲಿ ಪೆನಿಸಿಲ್ವೇನಿಯಾದ ಥ್ರೀ ಮೈಲ್ ದ್ವೀಪದಲ್ಲಿ, 1986ರಲ್ಲಿ ಉಕ್ರೇನಿನ ಚರ್ನೋಬೈಲಿನಲ್ಲಿ ನಡೆದ ಅಣುಸ್ಥಾವರ ದುರಂತಕ್ಕೆ ಅಂದಿನ ಕಳಪೆ ತಂತ್ರಜ್ಞಾನವನ್ನು ದೂರಲಾಯಿತು. ಆದರೆ ಜಪಾನಿನಲ್ಲಿ ನಡೆದಿದ್ದು? ಇಲ್ಲಿಯವರೆಗೂ ಅಣುಸ್ಥಾವರ ದುರಂತಗಳು ಎಂದು ಕರೆಯಬಹುದಾದ ಘಟನೆಗಳು ಮೂರೇ ಮೂರಾದರೂ ಒಂದೊಮ್ಮೆ ಇಂಥ ದುರಂತ ನಡೆದುಹೋದರೆ ಎಂಬ ಭೀತಿ ಅಣುಸ್ಥಾವರ ವಿರೋಧಿಗಳದ್ದು. ಅಣುಸ್ಥಾವರಕ್ಕಿಂತ ಹೆಚ್ಚಾಗಿ ಸ್ಥಾವರದಿಂದ ಉತ್ಪತ್ತಿಯಾಗುವ ತ್ಯಾಜ್ಯದ ವಿಲೇವಾರಿಗೆ ಇನ್ನೂ ಸರಿಯಾದ ಪರಿಹಾರ ಕಂಡುಹಿಡಿಯಲಾಗಿಲ್ಲ. ಇದೇ ರೀತಿಯ ಭಯ ಕೂಡುಂಕುಳಂನ ಜನರನ್ನೂ ಕಾಡಿದ್ದರೆ ಅದನ್ನು ತಪ್ಪೆನ್ನಲಾದೀತೆ? ಮೇಲಾಗಿ ಸ್ಥಾವರದಿಂದ ಸಮುದ್ರಕ್ಕೆ ಸೇರುವ ಬಿಸಿ ನೀರಿನಿಂದ ಜಲಚರಗಳು ಸಾವನ್ನಪ್ಪಿ ತಮ್ಮ ಜೀವನೋಪಾಯವೂ ಕೈತಪ್ಪುವುದೆಂಬ ಭಯ ಅಲ್ಲಿನ ಮೀನುಗಾರರಿಗೆ.

ಕೂಡುಂಕುಳಂನಲ್ಲಿ ಸ್ಥಾವರ ವಿರೋಧಿ ಚಳುವಳಿ ಇವತ್ತು ನಿನ್ನೆ ಹುಟ್ಟಿದ್ದಲ್ಲ. ವರುಷಗಳ ಹಿಂದೆ ಆರಂಭವಾದ ಚಳುವಳಿ ಹೆಚ್ಚು ಪ್ರಖರವಾಗಿದ್ದು ಜಪಾನ್ ಅಣು ದುರಂತದ ನಂತರ. ಜನರ ಭೀತಿಯನ್ನು ಹೋಗಲಾಡಿಸಲು ವಿಫಲವಾದ ಸರಕಾರಗಳು ಗೋಲಿಬಾರಿನಿಂದ ಚಳುವಳಿಯನ್ನು ಹತ್ತಿಕ್ಕಲು ಹೊರಟಿವೆ. ಅಣುಸ್ಥಾವರವೊಂದೇ ಅಲ್ಲ, ದೇಶದ ಯಾವ ಮೂಲೆಯಲ್ಲೂ ದೊಡ್ಡ ವಿದ್ಯುತ್ ಸ್ಥಾವರ, ದೊಡ್ಡ ಅಣೆಕಟ್ಟೆಗಳನ್ನು ಕಟ್ಟುವಾಗಲೂ ಕೂಡ ಜನರ ವಿರೋಧ ಪ್ರಬಲವಾಗೇ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಹಿಂದಿನ ಬೃಹತ್ ಯೋಜನೆಗಳಲ್ಲಿ ಆ ಯೋಜನಾಸ್ಥಳದ ಸುತ್ತಮುತ್ತಲಿನ ಜನರಿಗಾದ ಅನ್ಯಾಯಗಳು. ಸರಿಯಾದ ಪುನರ್ವಸತಿ ಕಲ್ಪಿಸುವಲ್ಲಿ ವಿಫಲಗೊಳ್ಳುವ, ಯೋಜನೆಗಳಿಂದ ಸುತ್ತಮುತ್ತಲಿನ ಪರಿಸರದ ಮೇಲಾಗುವ ದುಷ್ಟರಿಣಾಮಗಳ ಬಗ್ಗೆ ನಿರ್ಲಕ್ಷ್ಯ ತೋರುವ ಸರಕಾರಗಳನ್ನು ಜನ ನಂಬುವುದಾದರೂ ಹೇಗೆ? ಅಣುಸ್ಥಾವರಗಳ ವಿಷಯದಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿನ ನಿಗೂಢತೆ ಕಾಯ್ದುಕೊಳ್ಳುವ ಸರಕಾರದ ನೀತಿ ಕೂಡ ಜನರಲ್ಲಿ ಭೀತಿಯುಂಟುಮಾಡುತ್ತದೆ.

ಸುಳ್ಯದಿಂದ ಮೂವತ್ತು ಕಿಮಿ ದೂರದಲ್ಲಿರುವ ಉರುಳುಗುಂಡಿ ಜಲಪಾತಕ್ಕೆ ಭೇಟಿನೀಡಿದ್ದಾಗ ಜಲಪಾತದ ಮೇಲ್ಬಾಗದಿಂದ ಪೈಪುಗಳನ್ನೆಳೆದು ಮನೆಗಳ ಬಳಿಯೇ ವರುಷದ ಎಲ್ಲ ಕಾಲದಲ್ಲೂ ವಿದ್ಯುತ್ ಉತ್ಪಾದಿಸಿ ನಾಲ್ಕಾರು ಮನೆಗಳಿಗೆ ಬಳಸಿಕೊಳ್ಳುವ ವಿಧಾನವನ್ನು ಕಂಡಿದ್ದೆ. ಅರ್ಧ ಹಣವನ್ನು ಸರಕಾರದಿಂದ ಸಹಾಯಧನವಾಗಿ ಪಡೆದು ಅಲ್ಲಿನ ಜನರೇ ಅಳವಡಿಸಿಕೊಂಡ ವಿಧಾನವದು. ಹೆಚ್ಚೇನೂ ಖರ್ಚಾಗದ, ಪರಿಸರಕ್ಕೆ ಯಾವ ರೀತಿಯಿಂದಲೂ ಹಾನಿಯುಂಟುಮಾಡದ ಇಂಥ ಸರಳ ಯೋಜನೆಗಳ್ಯಾಕೆ ಹೆಚ್ಚಿನ ಅಧಿಕಾರಸ್ಥರಲ್ಲಿ ಆಸ್ಥೆ ಮೂಡಿಸುವುದಿಲ್ಲ? ಮಲೆನಾಡಿನ ಇಂಥ ಜಲಪಾತಗಳು, ಉತ್ತರ ಕರ್ನಾಟಕದ ಯಥೇಚ್ಛ ಬಿಸಿಲು ಯಾಕೆ ಶಕ್ತಿ ಮೂಲದಂತೆ ಕಾಣುವುದಿಲ್ಲ? ಹತ್ತಿರದಲ್ಲೋ ದೂರದಲ್ಲೋ ಪರಿಸರಕ್ಕೆ ಮಾರಕವಾಗಿ ಪರಿಣಮಿಸುವ ಕೋಟ್ಯಾಂತರ ರುಪಾಯಿ ಬೇಡುವ ಬೃಹತ್ ಯೋಜನೆಗಳೆಡೆಗೆ ತೋರಿಸುವ ಆಸಕ್ತಿಯ ಕೊಂಚ ಪಾಲು ಬದಲಿ ವಿದ್ಯುತ್ ತಂತ್ರಜ್ಞಾನದ ಅಭಿವೃದ್ಧಿಗೂ ತೋರಿಸಿದರೆ ಆ್ಯಂಟನಿಯಂಥ ಅಮಾಯಕರ ಹತ್ಯೆಯನ್ನಾದರೂ ತಪ್ಪಿಸಬಹುದಲ್ಲವೇ? ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಕೂಡುಂಕುಳಂ ಗಲಭೆಯ ಬಗ್ಗೆ ಪ್ರತಿಕ್ರಯಿಸುತ್ತ ‘ಈ ಪ್ರತಿಭಟನೆ ವಿದೇಶಿ ಎನ್ ಜಿ ಒ.ಗಳ ಕೈವಾಡ’ ಎಂದು ಹೇಳಿದ್ದಾರೆ! ತಿಂಗಳುಗಳ ಹಿಂದೆ ಪ್ರಧಾನಿಯವರೂ ಇದೇ ತೆರನಾದ ಹೇಳಿಕೆ ಕೊಟ್ಟಿದ್ದರು. ಅಣುಸ್ಥಾವರಕ್ಕೆ ಸರಬರಾಜಾಗುವ ಯುರೇನಿಯಂ ಕೂಡ ವಿದೇಶದ್ದೇ ಅಲ್ಲವೇ? ಪ್ರತಿಭಟನೆಯ ಹಿಂದೆ ವಿದೇಶಿ ಕೈವಾಡವಿರುವುದು ನಿಜವೇ ಆದಲ್ಲಿ ವಿದೇಶಿ ಶಕ್ತಿಗಳು ‘ಕೈ’ಯಾಡಿಸುವುದಕ್ಕೆ ಅವಕಾಶ ಮಾಡಿಕೊಟ್ಟವರ್ಯಾರು? ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಲಾಠಿ ಏಟು, ಗುಂಡಿನೇಟು ತಿಂದವರು ನಮ್ಮ ದೇಶದವರೇ ಅಲ್ಲವೇ? ಮೀನುಗಾರನ ಹತ್ಯೆಯಿಂದ ಪ್ರತಿಭಟನೆ ಹೆಚ್ಚಾದಲ್ಲಿ ‘ಇದರ ಹಿಂದೆ ಮಾವೋವಾದಿಗಳ ಕೈವಾಡವಿದೆ’ ಎಂದು ಹೇಳಲೂ ಇವರು ಹಿಂಜರಿಯಲಾರರು. ಪೋಲೀಸರ ಜಾಗದಲ್ಲಿ ಅರೆಸೇನಾ ಪಡೆಗಳನ್ನು ಕರೆಸಿ ‘ದೇಶರಕ್ಷಣೆಯ’ ಹೆಸರಿನಲ್ಲಿ ಮೀನುಗಾರರನ್ನು ‘ಮಾವೋವಾದಿಗಳೆಂದು’ ಹತ್ಯೆಗೈದು ಅಣುಸ್ಥಾವರ ನಿರ್ಮಿಸಲು ಆಗ ಸುಲಭವಾಗುತ್ತದೆಯಷ್ಟೇ!