Author Archives: admin

ಕಥೆ : ಆಚಾರವಿಲ್ಲದ ನಾಲಿಗೆ..

– ಡಾ.ಎಸ್.ಬಿ.ಜೋಗುರ

ಖರೆ ಅಂದ್ರ ಅಕಿ ಹೆಸರು ಶಿವಮ್ಮ. ಓಣ್ಯಾಗಿನ ಮಂದಿ ಮಾತ್ರ ಅಕಿನ್ನ ಕರಿಯೂದು ಹರಕ ಶಿವಮ್ಮ ಅಂತ. ಬಾಯಿ ತಗದರ ಸಾಕು ಅಂತಾ ರಂಡೇರು..ಇಂಥಾ ಸೂಳೇರು ಅಕಿದೇನು ಕೇಳ್ತಿ ಹುಚ್ ಬೋಸ್ಡಿ ಅಂತ ಬೈಯ್ಯೋ ಶಿವಮ್ಮ ಗಂಡಸರ ಪಾಲಿಗೂ ಒಂದಿಷ್ಟು ಬೈಗುಳ ಯಾವತ್ತೂ ಸ್ಟಾಕ್ ಇಟಗೊಂಡಿರತಿದ್ದಳು. ಹಾಲು ಕೊಡುವ ಗುರಲಿಂಗನ ಸಂಗಡ ಅವತ್ತ ಮುಂಜಮುಂಜಾನೆನೇ ಕಾಲ ಕೆರದು ಜಗಳಕ್ಕ ನಿಂತಿದ್ದಳು. ‘ಯಾವ ಪಡಸಂಟನನ್ ಹಾಟಪ್ಪನೂ ಪುಗ್ಸಟ್ಟೆ ಹಾಲ ಕೊಡಲ್ಲ, ಕೊಡತಿದ್ದರ ಚುಲೋ ಹಾಲು ಕೊಡು, ಇಲ್ಲಾಂದ್ರ ಬಿಡು.’ ಅಂತ ಮನಿಮುಂದ ನಿಂತು ಒಂದು ಸವನ ಗಂಟಲ ಹರಕೋತಿದ್ದಳು. ಗಂಡ ಶಂಕ್ರಪ್ಪ ‘ಹೋಗಲಿ ಬಿಡು, ಅದೇನು ಹಚಗೊಂಡು ಕುಂತಿ..? ಮುಂಜಮುಂಜಾನೆ’ ಅಂದಿದ್ದೇ ಶಿವಮ್ಮ ಮತ್ತಷ್ಟು ನೇಟ್ ಆದಳು. ‘ನೀವು ಕೊಟ್ಟ ಸಲಿಗೆನೇ ಇವರೆಲ್ಲಾ ಹಿಂಗಾಗಿದ್ದು. ಇಂವೇನು ಪುಗ್ಸಟ್ಟೆ ಕೊಡ್ತಾನಾ..ಹಾಂಟಪ್ಪ ? ಐತವಾರಕ್ಕೊಮ್ಮ ಬಂದು ರೊಕ್ಕಾ ತಗೊಳಂಗಿಲ್ಲಾ..’? ಅಂದದ್ದೇ ಶಂಕ್ರಪ್ಪಗ ಹೆಂಡತಿ ಅಟಾಪಾಗಲಾರದ ಹೆಣಮಗಳು ಅಂತ ಗೊತ್ತಿತ್ತು. ಅಕಿ ಒಂಥರಾ ಖರೆಖರೆ ಮುಂಡೆರಿದ್ದಂಗ. ಗಂಟೀ ಚೌಡೇರಂಗ ಗಲಗಲ ಅಂತ ಬಾಯಿ ಮಾಡಿ ತಂದೇ ಖರೆ ಮಾಡವಳು ಅಂತ ಅಂವಗ ಯಾವಾಗೋ ಗೊತ್ತಾಗೈತಿ.

ಪಾಪ ಶಂಕ್ರಪ್ಪ ಅಕಿ ಎದುರಿಗಿ ಬಾಯಿ ಸತ್ತ ಮನುಷ್ಯಾ ಅನ್ನೋ ಬಿರುದು ತಗೊಂಡು ಬದುಕುವಂಗ ಆಗಿತ್ತು. ಪಡಶಂಟ..ಹಾಟ್ಯಾ..ಬಾಯಾಗ ಮಣ್ಣ ಹಾಕಲಿ ಇವೆಲ್ಲಾ ಅಕಿ ಬಾಯಾಗ ಏನೂ ಅಲ್ಲ ಸಿಟ್ಟ ನೆತ್ತಿಗೇರಿ ಖರೆಖರೆ ಬೈಗುಳದ ಶಬ್ದಕೋಶ ತಗದಳಂದ್ರ ಕಿವಿ ಮುಚಕೊಂಡು ಕೇಳುವಂಥಾ ಸೊಂಟದ ಕೆಳಗಿನ ಎಲ್ಲಾ ಬೈಗುಳನೂ ಅಕಿ ಬಳಿ ಸ್ಟಾಕ್ ಅದಾವ. ಹಂಗಾಗೇ ಓಣ್ಯಾಗಿನ ಮಂದಿ ಹೋಗಿ ಹೋಗಿ ಆ ಹರಕ ಬಾಯಿಗಿ ಯಾಕ ಹತ್ತೀರಿ ಮಾರಾಯಾ.? ಅಂತಿದ್ದರು. ಈ ಶಿವಮ್ಮಗ ಮಕ್ಕಳಾಗಿ..ಮೊಮ್ಮಕ್ಕಳಾಗಿ ಅವರು ಲಗ್ನಕ್ಕ ಬಂದರೂ ಅಕಿ ಬಾಯಿ ಮಾತ್ರ ಬದಲಾಗಿರಲಿಲ್ಲ.

ಇಂಥಾ ಶಿವಮ್ಮಗ ತನ್ನ ತವರಿಮನಿ ಮ್ಯಾಲ ವಿಪರೀತ ಮೋಹ. ಲಗ್ನ ಆಗಿ ದೇವರ ಹಿಪ್ಪರಗಿಯ ಪಾಟೀಲ ರುದ್ರಗೌಡನ ಮನಿತನಕ ನಡೀಲಾಕ ಬಂದ ದಿನದಿಂದ ಹಿಡದು ಇಲ್ಲೀಮಟ ಬರೀ ತನ್ನ ಅಣ್ಣ ತಮ್ಮದೇರು..ಅಕ್ಕ ತಂಗಿದೇರು ಅವರ ಮಕ್ಕಳು.. ಉದ್ದಾರ ಆಗೊದೇ ನೋಡತಿದ್ದಳು. ಈ ಶಿವಮ್ಮ ಬಾಗೇವಾಡಿ ತಾಲೂಕಿನ ಸಾಲವಡಗಿಯವಳು. ವಾರಕ್ಕೊಮ್ಮ ..ತಿಂಗಳಿಗೊಮ್ಮ ಅಕಿ ಅಣ್ಣ ತಮ್ಮದೇರು ಹಿಪ್ಪರಗಿ ಸಂತಿಗಿ ಬರವರು. ಅವರ ಕೈಯಾಗ ಅಕಿ ಉಪ್ಪ ಮೊದಲಮಾಡಿ ಕಟ್ಟಿ ಕಳಸೂವಕ್ಕಿ. ಇದೇನು ಕದ್ದಲೆ ನಡಿಯೂ ಕೆಲಸಲ್ಲ ಗಂಡ ಶಂಕ್ರಪ್ಪನ ಕಣ್ಣ ಎದುರೇ ಹಂಗ ಸಕ್ಕರಿ, ಅಕ್ಕಿ, ಗೋದಿ ಕಡ್ಲಿಬ್ಯಾಳಿ ಎಲ್ಲಾ ಕಟ್ಟಿ ಕಳಿಸುವಕ್ಕಿ. ಶಿವಮ್ಮಳ ಗಂಡ ಶಂಕ್ರಪ್ಪ ದೇವರಂಥಾ ಮನುಷ್ಯಾ ಒಂದೇ ಒಂದು ದಿನ ಅದ್ಯಾಕ ನೀನು ಇವೆಲ್ಲಾ ಕೊಟ್ಟು ಕಳಸ್ತಿ ಅಂತ ಕೇಳ್ತಿರಲಿಲ್ಲ. ಹಿಂಗಿದ್ದ ಮ್ಯಾಲೂ ಶಿವಮ್ಮ ಜಿಗದ್ಯಾಡಿ ಮತ್ತ ಗಂಡ ಶಂಕ್ರಪ್ಪನ ಮ್ಯಾಲೇ ಠಬರ್ ಮಾಡತಿದ್ದಳು. ತನ್ನ ತಂಗಿ ಇಂದಿರಾಬಾಯಿ ಲಗ್ನದೊಳಗ ಒಂದು ತೊಲಿ ಬಂಗಾರ ಆಯೇರಿ ಮಾಡ್ರಿ ಅಂತ ಗಂಡಗ ಹೇಳಿದ್ದಳು. ಶಂಕ್ರಪ್ಪ ಅರ್ಧ ತೊಲಿದು ಒಂದು ಉಂಗುರ ತೊಡಿಸಿ ಕೈ ತೊಳಕೊಂಡಿದ್ದ. ತಾ ಹೇಳಿದ್ದು ಒಂದು ತೊಲಿ ಅಂತ ಗಂಡನ ಜೋಡಿ ಜಗಳಾ ತಗದು, ತಿಂಗಳಾನುಗಟ್ಟಲೆ ಮಾತು ಬಿಟ್ಟ ಶಿವಮ್ಮ ಮುಂದ ‘ಕುಬಸದೊಳಗ ಮತ್ತರ್ಧ ತೊಲಿ ಹಾಕದರಾಯ್ತು ತಗೊ’ ಅಂದಾಗ ಮಾತಾಡಿದ್ದಳು.

ಅಂಥಾ ಶಿವಮ್ಮಳ ಹೊಟ್ಟೀಲೇ ಎರಡು ಗಂಡು ಮೂರು ಹೆಣ್ಣು. ಅವರ ಹೊಟ್ಟೀಲೇ ಮತ್ತ ಎರಡೆರಡು, ಮೂರ್ಮೂರು ಮಕ್ಕಳಾಗಿ ಶಿವಮ್ಮ ಮೊಮ್ಮಕ್ಕಳನ್ನೂ ಕಂಡಾಗಿತ್ತು. ಇಬ್ಬರು ಗಂಡು ಹುಡುಗರ ಪೈಕಿ ಹಿರಿ ಮಗ ರಾಚಪ್ಪ ಲಗ್ನ ಆದ ವರ್ಷದೊಳಗ ಬ್ಯಾರಿ ಆಗಿದ್ದ. ಕಿರಿ ಮಗ ಚನಬಸು ಮಾತ್ರ ಅವ್ವ-ಅಪ್ಪನ ಜೋಡಿನೇ ಇದ್ದ. ರಾಚಪ್ಪ ಕನ್ನಡ ಸಾಲಿ ಮಾಸ್ತರ ಆಗಿ ಬಿಜಾಪೂರ ಸನ್ಯಾಕ ಇರೋ ಕವಲಗಿಯಲ್ಲಿ ನೌಕರಿಗಿದ್ದ. ಮನಿ ಮಾತ್ರ ಬಿಜಾಪೂರದೊಳಗೇ ಮಾಡಿದ್ದ. ಕಿರಿ ಮಗ ಚನಬಸು ಪಿ.ಯು.ಸಿ ಮಟ ಓದಿ ಮುಂದ ನೀಗಲಾರದಕ್ಕ ದೇವರಹಿಪ್ಪರಗಿಯೊಳಗ ಒಂದು ಕಿರಾಣಿ ಅಂಗಡಿ ಹಾಕಿದ್ದ. ವ್ಯಾಪಾರನೂ ಚುಲೊ ಇತ್ತು. ಶಂಕ್ರಪ್ಪ ಆಗಿನ ಕಾಲದೊಳಗ ಮುಲ್ಕಿ ಪರೀಕ್ಷೆ ಪಾಸಾದವನು. ಮನಿಮಟ ನೌಕರಿ ಹುಡಕೊಂಡು ಬಂದರೂ ಹೋಗಿರಲಿಲ್ಲ. ಈಗ ಅಂಗಡಿ ದೇಖರೇಕಿಯೊಳಗ ಮಗನ ಜೋಡಿ ಕೈಗೂಡಿಸಿದ್ದ. ಚನಬಸುಗ ಎರಡು ಮಕ್ಕಳು ಒಂದು ಗಂಡು ಒಂದು ಹೆಣ್ಣು. ಗಂಡ ಹುಡುಗ ಸಂಗಮೇಶ ಬಿಜಾಪೂರ ಸರಕಾರಿ ಕಾಲೇಜಲ್ಲಿ ಬಿ.ಎ. ಓದತಿದ್ದ. ಹೆಣ್ಣು ಹುಡುಗಿ ಅನಸೂಯಾ ಹಿಪ್ಪರಗಿಯೊಳಗೇ ಪಿ.ಯು.ಸಿ ಮೊಅಲ ವರ್ಷ ಓದತಿದ್ದಳು.

ಶಂಕ್ರಪ್ಪನ ತಂಗಿ ಶಾರದಾಬಾಯಿ ಮಗಳು ಕಸ್ತೂರಿ ಓದಲಿಕ್ಕಂತ ಇವರ ಮನಿಯೊಳಗೇ ಬಂದು ಇದ್ದಳು. ತನ್ನ ತಂಗಿಗಿ ಕೈ ಆಡೂ ಮುಂದ ಏನೂ ಮಾಡಲಿಲ್ಲ. ಅಕಿಗಿ ಲಕ್ವಾ ಹೊಡದು ಹಾಸಿಗೆ ಹಿಡದ ಮ್ಯಾಲೂ ಅವಳಿಗೆ ಏನೂ ತಾ ಆಸರಾಗಲಿಲ್ಲ. ಕದ್ದು ಮುಚ್ಚಿ ಏನರೇ ಸಹಾಯ ಮಾಡೋಣ ಅಂದ್ರ ಎಲ್ಲಾ ಕಾರಬಾರ ಹೆಂಡತಿ ಶಿವಮ್ಮಂದು ಹಿಂಗಾಗಿ ಓಳಗೊಳಗ ಶಂಕ್ರಪ್ಪಗ ತನ್ನ ತಂಗಿಗಿ ಹೊತ್ತಿಗಾಗಲಿಲ್ಲ ಅನ್ನೂ ಸಂಗಟ ಇದ್ದೇ ಇತ್ತು. ತನ್ನ ತಂಗೀ ಮಗಳು ಕಸ್ತೂರಿ ಓದೂದರೊಳಗ ಬಾಳ ಹುಷಾರ್ ಹುಡುಗಿ. ಅಕಿ ಇನ್ನೂ ಎಂಟು ವರ್ಷದವಳು ಇದ್ದಾಗೇ ಅಕಿ ಅಪ್ಪ ಹೊಲದಾಗ ನೀರ ಹಾಯ್ಸೂ ಮುಂದ ಹಾವು ಕಡದು ತೀರಕೊಂಡ. ಅವ್ವಗ ಇದ್ದಕ್ಕಿದ್ದಂಗ ಲಕ್ವಾ ಹೊಡದು ಹಾಸಗಿಗಿ ಹಾಕ್ತು. ಮನಿಯೊಳಗ ಮಾಡವರೂ ಯಾರೂ ಇರಲಿಲ್ಲ. ಕಸ್ತೂರಿ ಅಜ್ಜಿ ಶಾವಂತ್ರವ್ವಳೇ ಅಡುಗಿ ಕೆಲಸಾ ಮಾಡವಳು. ಅಲ್ಲಿರೋಮಟ ಕಸ್ತೂರಿ ಅಕಿ ಕೈ ಕೈಯೊಳಗ ಕೆಲ್ಸಾ ಮಾಡುವಕ್ಕಿ. ಅಕಿ ಓದಾಕಂತ ಹಿಪ್ಪರಗಿಗಿ ಬಂದ ಮ್ಯಾಲ ಆ ಮುದುಕಿ ಶಾವಂತ್ರವ್ವಗೂ ಮನಿ ಕೆಲಸಾ ಬಾಳ ಆಗಿತ್ತು. ಕಸ್ತೂರಿ ಮೆಟ್ರಿಕ್ ಮಟ ತನ್ನೂರು ಇಂಗಳಗಿಯೊಳಗೇ ಓದಿ ತಾಲೂಕಿಗೇ ಫ಼ಸ್ಟ್ ಬಂದಿದ್ದಳು. ಆವಾಗ ಶಂಕ್ರಪ್ಪಗ ಬಾಳ ಖುಷಿ ಆಗಿತ್ತು. ಫ಼ೇಡೆ ಹಂಚಲಾಕಂತ ಅವನೇ ಖುದ್ದಾಗಿ ಕಸ್ತೂರಿ ಕೈಯೊಳಗ ಐದು ನೂರು ರೂಪಾಯಿ ಕೊಟ್ಟಿದ್ದ. ಅದು ಹೆಂಗೋ ಹೆಂಡತಿ ಶಿವಮ್ಮಗ ಗೊತ್ತಾಗಿ ಬೆಳ್ಳಬೆಳತನಕ ಒದರಾಡಿದ್ದಳು. ಗಂಡ ಶಂಕ್ರಪ್ಪ ‘ನಾ ಬರೀ ಐದು ನೂರು ರೂಪಾಯಿ ಕೊಟ್ಟಿದ್ದಕ ಹಿಂಗ ಮಾಡ್ತಿ, ನೀ ನನ್ನ ಎದುರೇ ಉಪ್ಪು ಮೊದಲ ಮಾಡಿ ಕಟ್ಟಿ ಕಳಸ್ತಿದಿ ನಾ ಏನರೇ ಅಂದೀನಾ..?’ ಅಂದಾಗ ಶಿವಮ್ಮಳ ಬಳಿ ಮರುಮಾತಿರಲಿಲ್ಲ. ಆ ಹುಡಗಿಗೆರೆ ಯಾರು ಅದಾರ ನಮ್ಮನ್ನ ಬಿಟ್ಟರೆ, ಪಾಪ ನಮ್ಮ ತಂಗಿ ನೋಡದರ ಹಂಗ.. ಅಪ್ಪಂತೂ ಇಲ್ಲ ನಾವೂ ಅಕಿಗೆ ಆಸರಾಗಲಿಲ್ಲ ಅಂದ್ರ ಯಾರು ಆಗ್ತಾರ ಅಂದದ್ದೇ ಶಿವಮ್ಮ ಮೂಗ ನಿಗರಿಸಿ ಆ ಆಸ್ತಿ ನಮ್ಮ ಮೊಮ್ಮಗನ ಹೆಸರಿಗಿ ಮಾಡ್ಲಿ ಇಲ್ಲೇ ಬಂದು ಇರಲಿ ತಾಯಿ ಮಗಳನ್ನ ನಾವೇ ನೋಡಕೋತೀವಿ ಅಂದಾಗ ಶಂಕ್ರಪ್ಪ ಸಿಟ್ಟೀಲೇ ಹೆಂಡತಿನ್ನ ದಿಟ್ಟಿಸಿ ನೋಡಿದ್ದ.

ತಂಗೀ ಮಗಳು ಕಸ್ತೂರಿಯನ್ನ ಇಲ್ಲಿ ಓದಲಿಕ್ಕ ತಂದು ಇಟಗೋತೀನಿ ಅಂದಿದ್ದಕ್ಕೂ ಶಿವಮ್ಮ ದೊಡ್ಡದೊಂದು ಜಗಳಾನೇ ತಗದಿದ್ದಳು. ತನ್ನ ತಮ್ಮನ ಮಗ ರಮೇಶನ್ನೂ ಕರಕೊಂಡು ಬರ್ರಿ ಅವನೂ ಓದಲಿ ಅಂತ ಪಂಟ ಹಿಡದಳು. ‘ಅಂವಾ ಉಡಾಳ ಕುರಸಾಲ್ಯಾ ಮೆಟ್ರಿಕ್ ಎರಡು ಸಾರಿ ಫ಼ೇಲ್ ಆದಂವ. ಅವನ್ನ ತಗೊಂಡು ಬಂದು ಏನು ಮಾಡ್ತಿ..? ಹುಚ್ಚರಂಗ ಮಾತಾಡಬ್ಯಾಡ ಕಸ್ತೂರಿ ಫ಼ಸ್ಟ್ ಕ್ಲಾಸ್ ಹುಡುಗಿ, ಅಂಥ ಹುಡುಗರನ್ನ ಓದಸದರ ನಮಗೂ ಹೆಸರು’ ಅಂದಾಗ ‘ಹೆಸರಿಲ್ಲ ಏನೂ ಇಲ್ಲ, ನಿಮ್ಮ ತಂಗಿ ಮಗಳು ಅಂತ ಅಷ್ಟೇ’ ಅಂದಿದ್ದಳು. ’ಹುಚಗೊಟ್ಟಿ ಹಳಾ ಹುಚಗೊಟ್ಟಿ.. ಹಂಗ ಮಾತಾಡಬ್ಯಾಡ. ಮುದುಕಿ ಆಗಲಿಕ್ಕ ಬಂದರೂ ನಿನ್ನ ಸಣ್ಣ ಬುದ್ದಿ ಬದಲ್ ಆಗಲಿಲ್ಲ ನೋಡು. ಬ್ಯಾರೇ ಯಾರಿಗರೆ ಕಲಸ್ತೀವಾ..? ಅದೂ ಅಲ್ಲದೇ ಆ ಹುಡುಗಿ ಮನಿ ಕೆಲಸಾ ಮಾಡಕೊಂಡು ಓದತಾ” ಅಂದಾಗ ಶಿವಮ್ಮ ಸುಮ್ಮ ಆಗಿದ್ದಳು. ಕಸ್ತೂರಿ ಬಂದ ದಿನದಿಂದಲೂ ಮನೀದು ಅರ್ದ ಕೆಲಸಾ ಅವಳೇ ಮಾಡಕೊಂಡು ಹೋಗತಿದ್ದಳು. ಅಷ್ಟರ ಮ್ಯಾಲೂ ಶಿವಮ್ಮಗ ಆ ಹುಡುಗಿ ಮ್ಯಾಲ ಒಂಚೂರೂ ಕರುಣೆ ಇರಲಿಲ್ಲ. ದಿನಕ್ಕ ಒಮ್ಮೆರೆ ಬಿರಸ್ ಮಾತಲಿಂದ ಕಸ್ತೂರಿಯನ್ನ ನೋಯಿಸದಿದ್ದರ ಅಕಿಗಿ ತಿಂದ ಕೂಳ ಕರಗ್ತಿರಲಿಲ್ಲ.

ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಒಂದೇ ಕ್ಲಾಸಲ್ಲಿ ಓದತಿದ್ದರು. ಸಂಗಮೆಶ ಕಾಲೇಜಿಗೇನೋ ಬರತಿದ್ದ ಆದರೆ ಕ್ಲಾಸಿಗೆ ಕೂಡ್ತಿರಲಿಲ್ಲ. ಅದೆಲ್ಲಿ ಹೋಗತಿದ್ದ ಏನು ಮಾಡತಿದ್ದ ಅಂತ ಕಸ್ತೂರಿ ಒಟ್ಟಾರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮೊದಮೊದಲ ಮನ್ಯಾಗ ತನ್ನ ಮಾವ ಶಂಕ್ರಪ್ಪನ ಮುಂದ ಹೇಳತಿದ್ದಳು. ಯಾವಾಗ ಅತ್ತೆ ಶಿವಮ್ಮ ಚಾಡಿ ಚುಗಲಿ ಹೇಳೂದು ಕಲತರ ನಿನ್ನ ಸ್ವಾಟೀನೇ ಹರೀತೀನಿ ಅಂತ ವಾರ್ನಿಂಗ್ ಮಾಡದ್ಲೋ ಅವಾಗಿನಿಂದ ಅಕಿ ಸಂಗಮೇಶನ ಚಟುವಟಿಕೆಗಳನ್ನೆಲ್ಲಾ ಕಂಡೂ ಕಾಣಲಾರದಂಗ ಇರತಿದ್ದಳು.

ಒಂದಿನ ತರಗತಿಯಲ್ಲಿ ಈ ಸಂಗಮೆಶ ಹೆಡ್ ಪೋನ್ ಹಾಕೊಂಡು ಮೊಬೈಲ್ ಸಾಂಗ್ ಕೇಳ್ತಾ ಇದ್ದಾಗ ಇಂಗ್ಲಿಷ ಅಧ್ಯಾಪಕರೊಬ್ಬರು ಎಬ್ಬಿಸಿ ನಿಲ್ಲಿಸಿ ಎಲ್ಲರೆದುರೇ ಹಿಗ್ಗಾ ಮಿಗ್ಗಾ ಬೈದು ಮೊಬೈಲ್ ಕಸಿದುಕೊಂಡಿರುವದಿತ್ತು. ಇದೆಲ್ಲಾ ಕಸ್ತೂರಿಯ ಕಣ್ಣೆದುರೇ ನಡೆದಿದ್ದರೂ ಆಕೆ ಮನೆಯಲ್ಲಿ ಬಾಯಿ ಬಿಟ್ಟಿರಲಿಲ್ಲ. ತಾನಾಯಿತು ತನ್ನ ಓದಾಯ್ತು ಎಂದಿದ್ದ ಕಸ್ತೂರಿ ಆ ವರ್ಷ ಕಾಲೇಜಿಗೆ ಪ್ರಥಮವಾಗಿ ಪಾಸಾಗಿದ್ದಳು. ಮಾವ ಶಂಕ್ರಪ್ಪ ಇಡೀ ಊರ ತುಂಬಾ ತನ್ನ ತಂಗಿ ಮಗಳು ಫ಼ಸ್ಟ್ ಕ್ಲಾಸ್ ಲ್ಲಿ ಪಾಸಾಗಿದ್ದಾಳೆ ಎಂದು ಹೇಳಿದ್ದ. ಮಗನ ಬಗ್ಗೆ ಕೇಳಿದಾಗ ಬೇಸರದ ಮೌನ ತಾಳಿದ್ದ. ಶಿವಮ್ಮಗಂತೂ ಕಸ್ತೂರಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಒಂದು ಬಗೆಯ ಸಂಕಟಕ್ಕೆ ಕಾರಣವಾಗಿತ್ತು. ಈ ಕಸ್ತೂರಿ ಓದುವದರಲ್ಲಿ ತುಂಬಾ ಜಾಣ ಹುಡುಗಿ ಇವಳು ಮುಂದೊಂದು ದಿನ ನೌಕರಿ ಹಿಡಿಯೋದು ಗ್ಯಾರಂಟಿ ಎನ್ನುವದು ಶಿವಮ್ಮಳಿಗೆ ಗೊತ್ತಾಯ್ತು. ಹೇಗಾದರೂ ಮಾಡಿ ಈ ಹುಡುಗಿಯನ್ನ ಮೊಮ್ಮಗ ಸಂಗಮೇಶಗೆ ತಂದುಕೊಂಡು ಬಿಟ್ಟರೆ ಮುಗೀತು ಅಲ್ಲಿಗೆ ಅವಳಿಗೆ ಬರೋ ಆಸ್ತಿಯೆಲ್ಲಾ ಮೊಮ್ಮಗನ ಹೆಸರಿಗೆ ಬಂದಂಗೆ. ಜೊತೆಗೆ ಇಕಿ ನೌಕರಿ ಮಾಡದರೂ ಸಂಬಳವೆಲ್ಲಾ ಮೊಮ್ಮಗನ ಕೈಗೆ ಎಂದೆಲ್ಲಾ ಯೋಚನೆ ಮಾಡಿ ಶಿವಮ್ಮ ಆ ದಿನ ರಾತ್ರಿ ಮಲಗುವಾಗ ಗಂಡನ ಮುಂದೆ ಕಸ್ತೂರಿ ಬಗ್ಗೆ ತಾನು ಯೋಚನೆ ಮಾಡಿರುವದೆಲ್ಲಾ ಹೇಳಿದಳು. ಶಂಕ್ರಪ್ಪ ಅಷ್ಟೊಂದು ಕುತೂಹಲದಿಂದ ಹೆಂಡತಿ ಮಾತನ್ನ ಕೇಳಲಿಲ್ಲ. ಬರೀ ಹಾಂ..ಹುಂ.. ಎನ್ನುತ್ತಲೇ ಮಲಗಿಬಿಟ್ಟ.

ಕಸ್ತೂರಿಯ ತಂದೆ ಮುರಗೆಪ್ಪನ ಸಹೋದರಿ ಗಂಗಾಬಾಯಿಯ ಮಗ ರಾಜಶೇಖರ ಗೋಲಗೇರಿಯಲ್ಲಿ ಹೈಸ್ಕೂಲ್ ಮಾಸ್ತರ್ ಆಗಿದ್ದ. ತನ್ನ ಮಗನಿಗೆ ಅಣ್ಣನ ಮಗಳನ್ನೇ ತಂದುಕೊಳ್ಳುವದೆಂದು ಮೊದಲಿನಿಂದಲೂ ಗಂಗಾಬಾಯಿ ಎಲ್ಲರೆದುರು ಹೇಳುತ್ತಲೇ ಬಂದಿದ್ದಳು. ಹೀಗಾಗಿ ಮತ್ತೆ ಬೇರೆ ಹುಡುಗನನ್ನು ಹುಡುಕುವ ಅವಶ್ಯಕತೆಯೇ ಇರಲಿಲ್ಲ. ರಾಜಶೇಖರ ಪ್ರತಿ ತಿಂಗಳಿಗೆ ಕಸ್ತೂರಿಯ ಓದಿನ ಖರ್ಚಿಗೆಂದು ಐದು ನೂರು ರೂಪಾಯಿಗಳನ್ನು ಕಳುಹಿಸುತ್ತಿದ್ದ. ಆ ವಿಷಯವನ್ನು ಕಸ್ತೂರಿ ತನ್ನ ಮಾವ ಶಂಕ್ರಪ್ಪನ ಮುಂದೆ ಮಾತ್ರ ಹೇಳಿರುವದಿತ್ತು. ಬೇರೆ ಯಾರ ಮುಂದೆಯೂ ಹೇಳದಿರುವಂತೆ ಶಂಕ್ರಪ್ಪನೇ ಆಕೆಗೆ ತಿಳಿಸಿದ್ದ. ಕಸ್ತೂರಿಗೆ ಒಳಗಿನ ಸಂಬಂಧದಲ್ಲಿಯೇ ಒಬ್ಬ ಹುಡುಗನಿದ್ದಾನೆ ಆ ಹುಡುಗ ತನ್ನ ಮಗನಿಗಿಂತಲೂ ನೂರು ಪಾಲು ಉತ್ತಮ ಎನ್ನುವದನ್ನು ಶಂಕ್ರಪ್ಪ ಹೇಳಿರಲಿಲ್ಲ. ಕಸ್ತೂರಿಗಂತೂ ತನ್ನ ಮದುವೆಗಿಂತಲೂ ಮುಖ್ಯವಾಗಿ ತಾನು ಏನಾದರೂ ಮಹತ್ತರವಾದುದನ್ನು ಸಾಧಿಸಬೇಕು ಎನ್ನುವ ಹಟವಿತ್ತು. ಪ್ರತಿ ವರ್ಷವೂ ಆಕೆ ಫ಼ಸ್ಟ್ ಕ್ಲಾಸಲಿಯೇ ತೇರ್ಗಡೆಯಾಗುತ್ತಾ ನಡೆದಳು. ಕಸ್ತೂರಿ ಮನೆಯಲ್ಲಿ ತನಗೆ ಒಪ್ಪಿಸುವ ಎಲ್ಲ ಕೆಲಸಗಳನ್ನು ಅತ್ಯಂತ ಚಮಕತನದಿಂದ ಮಾಡುತ್ತಿದ್ದಳು. ರಾತ್ರಿ ಎಲ್ಲರ ಊಟ ಮುಗಿದಾದ ಮೇಲೆಯೂ ಆಕೆ ಎಲ್ಲ ಪಾತ್ರೆಗಳನ್ನು ತೊಳೆದು ಮಲಗುತ್ತಿದ್ದಳು. ಬೆಳಿಗ್ಗೆ ಮತ್ತೆ ಎಲ್ಲರಿಗಿಂತಲೂ ಮುಂಚೆಯೇ ಎದ್ದು ವತ್ತಲಿಗೆ ಪುಟು ಹಾಕಿ ಓದುತ್ತಾ ಕೂಡುವ ಕಸ್ತೂರಿ ಬಗ್ಗೆ ಶಂಕ್ರಪ್ಪನಿಗೆ ತೀರಾ ಅಕ್ಕರೆ. ’ಇಷ್ಟು ಬೇಗ ಯಾಕವ್ವಾ ಏಳ್ತಿ..? ಇನ್ನೂ ನಸುಕೈತಿ ಮಲಕೊಬಾರದಾ.’ ಎಂದರೆ ’ಮಾವಾ ಇಡೀ ಜೀವನದಲ್ಲಿ ಅರ್ಧ ಭಾಗ ಬರೀ ನಿದ್ದೆಯಲ್ಲೇ ಹೋಗತೈತಿ. ಇನ್ನಿರೋ ಅರ್ಧ ಭಾಗದೊಳಗ ನಮ್ಮ ಎಲ್ಲಾ ಚಟುವಟಿಕೆ ನಡೀಬೇಕು,’ ಅಂದಾಗ ತನ್ನ ಸೊಸಿ ಹೇಳೂದು ಖರೆ ಐತಿ ಅನಿಸಿ ಕೈಯಲ್ಲಿ ತಂಬಗಿ ಹಿಡದು ಬಯಲಕಡೆಗೆ ನಡೆದಿದ್ದ. ಶಂಕ್ರಪ್ಪಗೂ ತನ್ನ ಮೊಮ್ಮಗ ಸಂಗಮೇಶಗೆ ಕಸ್ತೂರಿ ಚುಲೋ ಜೋಡಿ ಆಗ್ತಿತ್ತು. ಕಿವಿ ಹಿಂಡಿ ಅವನ್ನ ದಾರಿಗಿ ತರತಿದ್ದಳು. ಆದರ ಏನು ಮಾಡೋದು ಕಸ್ತೂರಿನ್ನ ಕರಕೊಂಡು ಬರಾಕ ಇಂಗಳಗಿಗೆ ಹೋದಾಗ ಮುದುಕಿ ಶಾವಂತ್ರವ್ವ ಗಂಗಾಬಾಯಿ ಮತ್ತ ಅಕಿ ಮಗ ರಾಜಶೇಖರನ ಕತಿ ಹೇಳಿದ್ದಳು. ಕಸ್ತೂರಿಯಂಥಾ ಹುಡುಗಿಗೆ ಆ ಹುಡುಗನೇ ಚುಲೋ. ಈಗಾಗಲೇ ಅಂವಾ ನೌಕರಿ ಮಾಡಾಕತ್ತಾನ ಇಂದಲ್ಲಾ ನಾಳೆ ಇಕಿಗೂ ನೌಕರಿ ಹತ್ತೂದು ಗ್ಯಾರಂಟಿ ಆಗ ಇವರ ಮುಂದ ಯಾರು..? ಎಂದೆಲ್ಲಾ ಯೋಚನೆ ಮಾಡತಾ ಶಂಕ್ರಪ್ಪ ನಡದಿದ್ದ. ಹಿಂದಿನ ರಾತ್ರಿ ಹೆಂಡತಿ ಶಂಕ್ರವ್ವ ಎತ್ತಿದ್ದ ಪ್ರಶ್ನೆ ಹಂಗೇ ಉಳದಿತ್ತು. ಅಕಿ ಬಿಡೂ ಪೈಕಿ ಅಲ್ಲ ಮತ್ತ ಆ ಪ್ರಶ್ನೆ ಎತ್ತೇ ಎತ್ತತಾಳ ಅವಾಗ ಎಲ್ಲಾ ಹೇಳಿಬಿಡಬೇಕು ಇಲ್ಲಾಂದ್ರ ಸುಳ್ಳೆ ನಾಳೆ ಜಗಳಾ ತಕ್ಕೊಂಡು ಕೂಡ್ತಾಳ. ತಂಗಿ ಶಾರದಾಬಾಯಿ ಬಾಳ ಚುಲೊ ಹೆಣಮಗಳು. ಅಕಿ ನಸೀಬದೊಳಗ ಇದಿ ಅದ್ಯಾಕೋ ಕೆಟ್ಟದ್ದು ಬರದು ಆಟ ಆಡಸ್ತು. ಯಾರಿಗೂ ಒಂದೇ ಒಂದಿನ ಕೆಟ್ಟದ್ದು ಬಯಸದವಳಲ್ಲ..ಲಗ್ನಕಿಂತಾ ಮೊದಲೂ ತನಗ ಇಂಥಾದು ಬೇಕು ಅಂತ ಬಯಸದವಳಲ್ಲ. ಅಂಥಾ ಹೆಣಮಗಳಿಗೆ ಲಕ್ವಾ ಹೊಡಿಯೂದಂದ್ರ ಹ್ಯಾಂಗ..? ಆ ದೇವರು ಅನ್ನವರೇ ಎಟ್ಟು ಕಠೋರ ಅದಾನ ಅಂತೆಲ್ಲಾ ಬಯಲುಕಡಿಗೆ ಕುಳಿತಲ್ಲೇ ಯೋಚನೆ ಮಾಡೂ ವ್ಯಾಳೆದೊಳಗ ಇದ್ದಕ್ಕಿದ್ದಂಗ ಎದಿಯೊಳಗ ಏನೋ ಚುಚ್ಚದಂದಾಗಿ ಶಂಕ್ರಪ್ಪ ಅಲ್ಲೇ ಉರುಳಿಬಿದ್ದಿದ್ದ. ಅವನ ಜೀವ ಅಲ್ಲೇ ಬಯಲಾಗಿತ್ತು.

ಆ ದಿವಸ ಮನಿಯೊಳಗ ಹತ್ತಾರು ಮಂದಿ ನೆರೆದಿದ್ದರು. ಚನಬಸು ಇನ್ನೂ ಅಂಗಡಿ ಬಾಗಿಲ ತಗದಿರಲಿಲ್ಲ. ಇಂಗಳಗಿಯಿಂದ ಕಸ್ತೂರಿಯ ಅಜ್ಜಿ ಶಾವಂತ್ರವ್ವ ಬಂದಿದ್ದಳು. ಸಾಲವಡಗಿಯಿಂದ ಶಿವಮ್ಮಳ ತಮ್ಮ ಸಿದ್ದಪ್ಪನೂ ಬಂದಿದ್ದ. ಕಸ್ತೂರಿ ಕಂಬದ ಮರಿಗೆ ನಿಂತಗೊಂಡಿದ್ದಳು. ಸಂಗಮೇಶ ಅಲ್ಲೇ ಜೋಳದ ಚೀಲದ ಮ್ಯಾಲ ಕುತಗೊಂಡಿದ್ದ. ಶಾವಂತ್ರವ್ವ ಶಿವಮ್ಮ ಇದರಾಬದರ ಕುತಗೊಂಡು ಮಾತಾಡಾಕ ಸುರು ಮಾಡದರು. ’ನೋಡವಾ ಯಕ್ಕಾ, ಕಸ್ತೂರಿ ನಿನಗ ಹ್ಯಾಂಗ ಮೊಮ್ಮಗಳೊ ನನಗೂ ಹಂಗೇ.. ಅವರಿಗಂತೂ ಅಕಿ ಮ್ಯಾಲ ಬಾಳ ಕಾಳಜಿ ಇತ್ತು. ಅದಕ್ಕೇ ಅವರು ಮತ್ತ ಮತ್ತ ಅಕಿ ನಮ್ಮ ಮನಿ ಸೊಸಿ ಆದರ ಚುಲೊ ಆಗತೈತಿ ಅಂತ ಬಾಳ ಸೇರಿ ಹೇಳಿದೈತಿ. ಈಗ ಅನಾಯಸ ನೀನೂ ಬಂದೀದಿ ಮನಿಗಿ ಹಿರಿ ಮನುಷ್ಯಾಳು ಬ್ಯಾರೆ, ನಮ್ಮ ಹುಡುಗ ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಕೂಡೇ ಕಲತವರು. ಕಸ್ತೂರಿ ಮ್ಯಾಲ ಅವನೂ ಬಾಳ ಜೀಂವ ಅದಾನ. ಅದಕ್ಕ ಅವನಿಗೆ ಕಸ್ತೂರಿನ್ನ ತಂದುಕೊಂಡ್ರ ಹ್ಯಾಂಗ..?’ ಅಂತ ಕೇಳಿದ್ದೇ ಶಾವಂತ್ರವ್ವ ಮೌನ ಮುರಿಲೇ ಇಲ್ಲ. ಹಿಂದೊಮ್ಮ ಈ ವಿಷಯ ತಗದು ಮಾತಾಡೂ ಮುಂದ ತನ್ನ ಗಂಡನೂ ಹಿಂಗೇ ಗಪ್ ಚುಪ್ ಆಗೇ ಇದ್ದ. ಈಗ ನೋಡದರ ಶಾವಂತ್ರವ್ವನೂ.. ಅಂತ ಯೋಚನೆ ಮಾಡಿ” ನೀ ಮಾತಾಡು.. ಏನರೇ ಹೇಳು, ಹಿಂಗ ಸುಮ್ಮ ಕುಂತರ ಹ್ಯಾಂಗ..?’
’ಅಯ್ಯ ಯಕ್ಕಾ ನಾ ಏನು ಮಾತಾಡ್ಲಿ..? ನಿನ್ನ ಗಂಡ ಏನೂ ಹೇಳಿಲ್ಲನೂ.’
’ಎದರ ಬಗ್ಗೆ’
’ಅದೇ ಕಸ್ತೂರಿ ಲಗ್ನದ ಬಗ್ಗೆ’
’ಇಲ್ಲ.. ಏನೂ ಹೇಳಲಿಲ್ಲ’
’ಅದ್ಯಾಂಗದು..’
’ಇಲ್ಲ ಖರೆನೇ ಏನೂ ಹೇಳಿಲ್ಲ.’
’ತಂಗೀ.. ಕಸ್ತೂರಿನ್ನ ತನ್ನ ತಂಗೀ ಮಗನಿಗೇ ತಂದುಕೊಳ್ಳಬೇಕು ಅಂತ ಕಸ್ತೂರಿ ಅಪ್ಪ ಸಾಯೂ ಮೊದಲೇ ಮಾತಾಗಿತ್ತು. ಕಸ್ತೂರಿ ಅತ್ತಿ ಗಂಗಾಬಾಯಿ ಕಸ್ತೂರಿನ್ನ ಯಾವಾಗಲೋ ತನ್ನ ಮನಿ ಸೊಸಿ ಅಂತ ಒಪಗೊಂಡಾಳ. ಅಕಿ ಅಣ್ಣ ಮುರಗೇಶಪ್ಪಗ ಸಾಯೂ ಮುಂದ ಮಾತು ಕೊಟ್ಟಾಳ. ಆವಾಗ ಕಸ್ತೂರಿ ಇನ್ನೂ ಬಾಳ ಸಣ್ಣದು. ಕಸ್ತೂರಿ ಅವ್ವಗ ಇದೆಲ್ಲಾ ಗೊತ್ತದ ನಿನ್ನ ಗಂಡ ಶಂಕ್ರಪ್ಪನ ಮುಂದೂ ಇದೆಲ್ಲಾ ನಾ ಹೇಳಿದ್ದೆ,’ ಅಂದದ್ದೇ ಶಿವಮ್ಮಳ ಮುಖ ಗಂಟಗಂಟಾಗಿತ್ತು.
’ನನ್ನ ಮ್ಮೊಮ್ಮಗನಿಗೆ ಏನು ಕಡಿಮೆ ಆಗೈತಿ..”
’ಕಡಿಮಿ,..ಹೆಚ್ಚ ಅಂತಲ್ಲ.. ಮಾತು ಕೊಟ್ಟ ಮ್ಯಾಲ ಮುಗೀತು.’ ಶಿವಮ್ಮ ಗರಂ ಆದಳು.’
’ಇಷ್ಟು ದಿವಸ ಹೇಳಾಕ ನಿಮಗೇನಾಗಿತ್ತು..ಧಾಡಿ?’
’ನೀ ಕೇಳಿರಲಿಲ್ಲ..ನಾವು ಹೇಳಿರಲಿಲ್ಲ.
ಚನಬಸು ಅವ್ವನ ಸನ್ಯಾಕ ಬಂದು, ’ಹೋಗಲಿ ಬಿಡವಾ, ಅವರವರ ಋಣಾನುಬಂಧ ಹ್ಯಾಂಗಿರತೈತಿ ಹಂಗಾಗಲಿ.’ ಶಿವಮ್ಮ ಕಸ್ತೂರಿ ಕಡೆ ನೋಡಿ, ’ಇವಳರೇ ಹೇಳಬೇಕಲ್ಲ ಬುಬ್ಬಣಚಾರಿ,’ ಅಂದಾಗ ಶಾವಂತ್ರವ್ವ ಅಜ್ಜಿ, ’ಅಕಿಗ್ಯಾಕ ಎಲ್ಲಾ ಬಿಟ್ಟು ಪಾಪ..!’
’ನೀವು ನೀವು ಖರೆ ಆದ್ರಿ’
’ಯಾಕ ಹಂಗ ಮಾತಾಡ್ತಿ..? ನಿನ್ನ ಮೊಮ್ಮಗ ಏನು ಕುಂಟೊ..ಕುರುಡೊ..?’
’ಅವೆಲ್ಲಾ ಬ್ಯಾಡ..’ ಅಂದಾಗ ಶಾವಂತ್ರವ್ವ ದೊಡ್ದದೊಂದು ನಿಟ್ಟುಸಿರನ್ನು ಬಿಟ್ಟು
’ಆಯ್ತು ನಾ ಇನ್ನ ಬರ್ತೀನಿ, ಸಾಡೆ ಬಾರಾಕ ಒಂದು ಬಸ್ಸೈತಿ,’ ಅಂದಾಗ ಶಿವಮ್ಮ ಅಕಿಗೆ ಹುಂ… ನೂ ಅನಲಿಲ್ಲ.. ಹಾಂ.. ನೂ ಅನಲಿಲ್ಲ. ಶಾವಂತ್ರವ್ವ ಕಸ್ತೂರಿ ಕಡೆ ನೋಡಿ, ’ಪರೀಕ್ಷೆ ಮುಗಿದದ್ದೇ ಬಂದು ಬಿಡವ. ನಿಮ್ಮವ್ವ ನಿನ್ನನ್ನ ಬಾಳ ನೆನಸತಿರತಾಳ,’ ಅಂದಾಗ ಕಸ್ತೂರಿ ಕಣ್ಣಲ್ಲಿಯ ನೀರು ದಳದಳನೇ ಕೆಳಗಿಳಿದವು. ಶಾವಂತ್ರವ್ವ ಹೊಂಟು ನಿಂತಾಗ, ಮುದುಕಿ ಶಿವಮ್ಮ ’ಹೋಗಿ ಬಾ’ ಅಂತ ಒಂದು ಮಾತ ಸೈತಾ ಆಡಲಿಲ್ಲ. ಕಸ್ತೂರಿಗೆ ಬಾಳ ಕೆಟ್ಟ ಅನಿಸಿತ್ತು. ತನ್ನ ಅಜ್ಜಿಗೆ ಚಾ ಮಾಡಿ ಕೊಡ್ತೀನಿ ಇರು ಅಂತ ಹೇಳೂವಷ್ಟು ಸೈತ ತನಗಿಲ್ಲಿ ಹಕ್ಕಿಲ್ಲ ಅಂತ ಒಳಗೊಳಗ ನೊಂದುಕೊಂಡಳು. ಶಿವಮ್ಮ ಗಂಡ ಸತ್ತು ಇನ್ನೂ ತಿಂಗಳು ಸೈತ ಕಳದಿಲ್ಲ ತನ್ನ ಮೊಮ್ಮಗನ ಲಗ್ನದ ಬಗ್ಗೆ ಯೋಚನೆ ಮಾಡ್ತಿರೋದು ಕಸ್ತೂರಿಗೆ ಅಸಹ್ಯ ಅನಿಸಿತ್ತು. ಮೊಮ್ಮಗ ಸಂಗಮೇಶ ಮತ್ತ ಮತ್ತ ’ನಾ ಅಕಿನ್ನ ಮದುವಿ ಆಗುವಂಗಿಲ್ಲ.. ನನಗ ಒಳಗಿನ ಸಂಬಂಧ ಬೇಕಾಗಿಲ್ಲ,’ ಅಂತ ಕಡ್ಡೀ ಮುರದಂಗ ಹೇಳಿದ ಮ್ಯಾಲೂ ಅಕಿ ಕೇಳಿರಲಿಲ್ಲ. ಒಂದೇ ಹುಡುಗಿ ಚುಲೋ ತೋಟ ಪಟ್ಟಿ ಲಗ್ನ ಆದರ ಸೀದಾ ಬಂದು ಮೊಮ್ಮಗನ ಉಡಿಯೊಳಗೇ ಬೀಳತೈತಿ ಹ್ಯಾಂಗರೆ ಮಾಡಿ ಈ ಸಂಬಂಧ ಮಾಡಬೇಕು ಅಂತ ಜಪ್ಪಿಸಿ ಕಾಯ್ಕೊಂಡು ಕುಂತಿದ್ದಳು. ಯಾವಾಗ ಇಕಿ ತಿಪ್ಪರಲಾಗಾ ಹಾಕದರೂ ಕಸ್ತೂರಿ ಲಗ್ನ ಬ್ಯಾರೆ ಹುಡುಗನ ಜೋಡಿ ನಡಿಯೂದೈತಿ ಅಂತ ಗೊತ್ತಾಯ್ತೋ ಆವಾಗಿಂದ ಶಿವಮ್ಮಳ ಮಾತ ಬಾಳ ಬಿರಸ್ ಆದ್ವು. ಕಸ್ತೂರಿ ಮುಖ ನೋಡಿ ಮಾತಾಡಲಾರದಷ್ಟು ಆಕಿ ಕಠೋರ ಆದಳು. ಕಸ್ತೂರಿಗೂ ಯಾವಾಗ ಪರೀಕ್ಷೆ ಮುಗದಿತ್ತು.. ಯಾವಾಗ ಊರಿಗೆ ಹೋಗ್ತೀನಿ ಅನಿಸಿತ್ತು. ಪರೀಕ್ಷೆ ಇನ್ನೊಂದೆರಡು ದಿನ ಇತ್ತು. ಮನೆಯಲ್ಲಿರೋ ಹಾಸಿಗೆಗಳನ್ನೆಲ್ಲಾ ಗುಡ್ದೆ ಹಾಕಿ ಹೋಗಿ ತೊಳಕೊಂಡು ಬರಲಿಕ್ಕ ಹೇಳಿದಳು. ಹೊತ್ತು ಹೊಂಟರೆ ಪರೀಕ್ಷೆ. ಕಸ್ತೂರಿ ಹೆದರಕೋಂತ ಅಜ್ಜಿ.. ಪರೀಕ್ಷೆ ಮುಗಿದ ದಿನಾನೇ ಎಲ್ಲಾ ಕ್ಲೀನ್ ಮಾಡ್ತೀನಿ ಅಂದಾಗ ’ಬಾಳ ಶಾಣೆ ಆಗಬ್ಯಾಡ ಹೇಳದಷ್ಟು ಕೇಳು’ ಅಂತ ರಂಪಾಟ ಮಾಡಿ ಕ್ಲೀನ್ ಮಾಡಿಸಿದ್ದಳು. ಶಿವಮ್ಮಳಿಗೆ ಕಮ್ಮೀತಕಮ್ಮಿ ಎಪ್ಪತ್ತು ವರ್ಷ. ಈ ವಯಸ್ಸಲ್ಲೂ ಈ ತರಹದ ಕೊಂಕು ಬುದ್ದಿ ಕಂಡು ಕಸ್ತೂರಿಗೆ ಅಚ್ಚರಿ ಎನಿಸಿತ್ತು. ಇನ್ನೇನು ಹೆಚ್ಚಂದರೆ ಹದಿನೈದು ದಿನ, ಸುಮ್ಮನೇ ಯಾಕ ಒಣಾ ಲಿಗಾಡು ಅಂದುಕೊಂಡು ಶಿವಮ್ಮ ಹೇಳೋ ಎಲ್ಲಾ ಕೆಲಸಗಳನ್ನ ಮರು ಮಾತಾಡದೇ ಮಾಡುತ್ತಿದ್ದಳು.

ಅದಾಗಲೇ ನಾಲ್ಕು ಪೇಪರ್ ಮುಗಿದಿದ್ದವು. ಅದು ಕೊನೆಯ ಪೇಪರ್. ಆ ದಿನ ಬೆಳ್ಳಂಬೆಳಿಗ್ಗೆ ಆ ಮನೆಯಲ್ಲಿ ಒಂದು ರಂಪಾಟ ಶುರುವಾಗಿತ್ತು. ’ಮನಿ ಒಳಗಿನವರೇ ಕಳ್ಳರಾದರ ಹ್ಯಾಂಗ ಮಾಡೂದು..? ಅಪ್ಪ ಇಲ್ಲ ಅವ್ವ ಹಾಸಗಿ ಹಿಡದಾಳ ಅಂತ ಓದಾಕ ಕರಕೊಂಡು ಬಂದ್ರ ಇಂಥಾ ಲಪುಟಗಿರಿ ಮಾಡದರ ಏನು ಹೇಳಬೇಕು..? ದುಡ್ಡಲ್ಲ ಎರಡದುಡ್ಡಲ್ಲ. ನಾಕು ತೊಲಿ ಬಂಗಾರದ ಕಾಸಿನ ಸರ ಇಲ್ಲೇ ಇದ್ದದ್ದು ಅದು ಹ್ಯಾಂಗ ಮನಿ ಬಿಟ್ಟು ಓಡಿ ಹೋಗತೈತಿ..? ನನಗ ಗೊತೈತಿ ಅದ್ಯಾರು ತಗೊಂಡಾರ ಅಂತ ನಾ ಹೇಳೋದಕಿಂತ ಮೊದಲೇ ಕೊಟ್ಟರ ಚುಲೋ.. ಇಲ್ಲಾಂದ್ರ ಪೋಲಿಸ್ ಕಂಪ್ಲೇಂಟ್ ಕೊಡಬೇಕಾಗತೈತಿ,’ ಅಂತ ಶಿವಮ್ಮ ಒಂದು ಸವನ ಚೀರಾಡತಿದ್ದಳು. ಸಂಗಮೇಶ, ಕಸ್ತೂರಿ, ಚನಬಸು ಮತ್ತವನ ಹೆಂಡತಿ, ಮಗಳು ಅನಸೂಯಾ, ಸಿದ್ದಪ್ಪನ ಮಗ ರಮೇಶ ಎಲ್ಲರೂ ದಂಗಾಗಿ ನಿಂತಿದ್ದರು. ಶಿವಮ್ಮಜ್ಜಿ ಯಾರನ್ನ ಟಾರ್ಗೆಟ್ ಆಗಿ ಮಾತಾಡಾಕತ್ತಾಳ ಅಂತ ಎಲ್ಲರಿಗೂ ಗೊತ್ತಿತ್ತು. ಚನಬಸು ’ಅವ್ವಾ ನೀ ನೋಡಿದ್ದರ ಮಾತಾಡು ಸುಮ್ಮನೇ ಆರೋಪ ಬ್ಯಾಡ.’ ಎಂದ.
’ಆರೋಪ ಯಾಕೋ.. ಇಲ್ಲಿ ನಿಂತಾಳಲ್ಲ ಮಳ್ಳೀಯಂಗ ಇಕಿನೇ ಕದ್ದಿದ್ದು.’
’ಅಕಿನೇ ಅಂತ ಹ್ಯಾಂಗ ಹೇಳ್ತಿ?’
’ಪರೀಕ್ಷೆ ಮುಗದು ಊರಿಗೆ ಹೊಂಟವರು ಯಾರು..?’
ಸಂಗಮೇಶ, ’ಅಜ್ಜಿ ಸುಮ್ ಸುಮ್ನೇ ಏನೇನೋ ಮಾತಾಡಬ್ಯಾಡ.’ ಎಂದ.
’ಯಾಕ ಮಾತಾಡಬಾರದು.? ಹಂಗಿದ್ದರ ನನ್ನ ಕಾಸಿನ ಸರ ಎಲ್ಲಿ ಹೋಯ್ತು..?’
’ನಮಗೇನು ಗೊತ್ತು..’
’ನನಗ ಗೊತೈತಿ ಅಕಿನೇ.. ಆ ಕಚ್ಚವ್ವನೇ ತಗೊಂಡಾಳ ಅದ್ಕೇ ಹಂಗ ಗುಮ್ಮನ ಗುಸಕ್ ನಿಂತಂಗ ನಿಂತಾಳ.’

ಕಸ್ತೂರಿ ಒಳಗೊಳಗೆ ತಾಪ ಆದರೂ ಮೌನ ಮುರಿಲಾರದೇ ನಿಂತಿದ್ದಳು. ಮುದುಕಿ ಶಿವಮ್ಮ ಕಸ್ತೂರಿ ಅಳು ನುಂಗಿ ನಿಂತದ್ದನ್ನ ನೋಡಿ ಮತ್ತ ಬೈಯಾಕ ಸುರು ಮಾಡಿದ್ದಳು.
’ನಮ್ಮ ಮನಿಯೊಳಗ ಬೇಕು ಬೇಕಾದ್ದು, ಬೇಕು ಬೇಕಾದಲ್ಲಿ ಬಿದಿರತೈತಿ, ಯಾರೂ ಮುಟ್ಟೂದಿಲ್ಲ. ಇಲ್ಲೀಮಟ ಒಂದೇ ಒಂದು ರೂಪಾಯಿ ಕಳುವಾಗಿದ್ದಿಲ್ಲ. ಇವತ್ತ ಲಕ್ಷ ರೂಪಾಯಿದು ಕಾಸಿನ ಸರ ಹಡಪ್ಯಾರಂದ್ರ ಹೊಟ್ಟಿ ಉರಿಯೂದಿಲ್ಲನೂ..? ಯಾರದರೇ ಮನಿ ನುಂಗವರು ಸೂಳೇರು.. ಹಳಾ ಸೂಳೇರು.’

ಇಕಿ ಬೈಯೂದು ಕೇಳಿ ಕೋಲಿಯೊಳಗಿರೋ ಶಿವಮ್ಮಳ ತಮ್ಮನ ಮಗ ರಮೇಶ ಹಲ್ಲು ಕಿಸಿತಿದ್ದ. ಇಷ್ಟು ಮಂದಿ ಮುಂದ ಕದಿಲಾರದೇ ಕವಕವ ಅಂತ ಅನಸಕೊಂಡು ಸುಮ್ಮ ನಿಂತಿರೋ ಕಸ್ತೂರಿನ್ನ ಬೇಕಂತಲೇ ಕೆದಕಿ ’ಸುಮ್ಮ ಅದನ್ನ ಎಲ್ಲಿಟ್ಟಿದಿ ಕೊಟ್ಟಿ ಚುಲೊ.. ಇಲ್ಲಾಂದ್ರ ಪೋಲಿಸರಿಗೇ ಕೊಡ್ತೀನಿ,’ ಅಂದಾಗ ಕಸ್ತೂರಿ ಹೆದರಿಬಿಟ್ಟಳು.
’ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ.’
’ಆ ಆಣಿ ಗೀಣಿ ಬ್ಯಾಡ, ಮೊದಲ ಆ ಕಾಸಿನ ಸರ ಕೊಡು.’
’ನನಗ ಗೊತ್ತಿಲ್ಲ.. ನಾ ತಗೊಂಡಿಲ್ಲ.’
’ತಗೊಂಡವರು ಯಾರರೇ ತಗೊಂಡೀನಿ ಅಂತಾರಾ..?’
’ನನ್ನ ಬ್ಯಾಗ ಚೆಕ್ ಮಾಡ್ರಿ.’
’ಅದೆಲ್ಲಾ ಬೇಕಾಗಿಲ್ಲ, ನಿನ್ನ ಲಗೇಜ್ ಪ್ಯಾಕ್ ಮಾಡ್ಕೊ, ನೀ ಇಲ್ಲಿರುದು ಬ್ಯಾಡ ನಡಿ ನಿಮ್ಮ ಊರಿಗಿ,’ ಅಂದಾಗ ಸಂಗಮೇಶ
’ಅಜ್ಜೀ ನಾಳೆ ಒಂದು ದಿನ ಲಾಸ್ಟ್ ಪೇಪರ್.’
’ಅದೆಲ್ಲಾ ಬ್ಯಾಡ ಮತ್ತ ನಾ ಪೋಲಿಸರಿಗೆ ಕರಿಯುವಂಗ ಆಗಬಾರದು ಹೋಗಲಿ ಪೀಡಾ.. ಒಂದು ಸರ ಹೋಯ್ತು ಅಷ್ಟೇ.’

ಕಸ್ತೂರಿಗೆ ತಾನು ಕಳ್ಳಿ ಅನ್ನುವ ಬಿರುದು ಹೊತಗೊಂಡು ಈ ಮನಿಯಿಂದ ಹೊರಬೀಳಬೇಕಾಯ್ತಲ್ಲ..! ಅನ್ನೋ ನೋವಿತ್ತು. ತನ್ನ ಬಟ್ಟೆ ಬರೆ, ಪುಸ್ತಕ ಎಲ್ಲವನ್ನು ತಂದು ಶಿವಮ್ಮಳ ಎದುರಲ್ಲಿಯೇ ಒಂದೊಂದಾಗಿ ಝಾಡಿಸಿ, ತನ್ನ ಬ್ಯಾಗಲ್ಲಿಟ್ಟುಕೊಂಡು ಕಣ್ಣೀರು ಸುರಿಸುತ್ತಲೇ ಮೆಲ್ಲಗೆ ನಡೆದಳು. ಹೊರಳಿ ಅಲ್ಲಿರುವ ಎಲ್ಲರನ್ನು ಒಂದು ಸಾರಿ ಗಮನಿಸಿದಳು. ಅವರೆಲ್ಲರೂ ಕಲ್ಲಿನ ಗೊಂಬೆಯಂತಾಗಿದ್ದರು. ಆಕೆ ಹೊಸ್ತಿಲು ದಾಟುತ್ತಿರುವಂತೆ ಶಿವಮ್ಮಳ ತಮ್ಮನ ಮಗ ರಮೇಶ ದೇವರ ಕೊಣೆಯಿಂದ ಹಲ್ಲುಕಿಸಿಯುತ್ತ ಹೊರಬಂದ. ಶಿವಮ್ಮಜ್ಜಿ ಅವನ ನಗುವನ್ನು ಕಂಡು ಗಡಬಡಿಸಿ ಕಣ್ಣು ಚಿವುಟುತ್ತಿದ್ದಳು. ಆ ಕಣ್ಣು ಮುಚ್ಚಾಲೆಯ ಆಟ ಉಳಿದವರ ಪಾಲಿಗೆ ನಿಗೂಢವಾಗಿತ್ತು.

ಇಲ್ಲಿ ನಂಬಿಕೆಗಳೇ ಕಾನೂನು.

-ಡಾ. ಸಿದ್ದಲಿಂಗಯ್ಯ.

ಈಗ ನಾವು ನಡೆಸುತ್ತಿರುವ ಸಾಮಾಜಿಕ ನ್ಯಾಯದ ಚಿಂತನೆಗೆ ಶತಮಾನಗಳ ಇತಿಹಾಸವಿದೆ. ಆಧುನಿಕ ಕಾಲದಲ್ಲಿ ಈ ಚಿಂತನೆಗೆ ಒಂದಿಷ್ಟು ಬಲ, ವ್ಯಾಪಕತೆ ಬಂದಿದ್ದರೂ ಅದು ಸಣ್ಣ ಪ್ರಮಾಣದ ಕೆಲವು ಗುಂಪುಗಳಲ್ಲಿ ಮಾತ್ರ ಉಳಿದಿದೆ. ಕೆಲವು ಸಲ ಈ ಚಿಂತನಾ ಕ್ರಮ ಗೌಣವಾಗಿದ್ದೂ ಉಂಟು. ದಲಿತರು ಹಾಗೂ ಮೇಲ್ವರ್ಗದವರ ನಡುವಿನ ಅಂತರ ಸುಮಾರು 64 ಅಡಿ ಎಂದು ಶಾಸ್ತ್ರಗಳು ಹೇಳುತ್ತವೆ. ಬದಲಾಗಿರುವ ಇವತ್ತಿನ ಚಿಂತನಾ ಕ್ರಮದ ಪರಿಣಾಮದಿಂದ ದಲಿತರು ಮೇಲ್ವರ್ಗದವರ ಎದುರು ಹೆಚ್ಚೆಂದರೆ ಒಂದು ಅಡಿ ಸಮೀಪ ಬಂದಿರಬೇಕು, ಅಷ್ಟೇ. ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವೆ ದೈಹಿಕ ಅಂತರ ಕಡಿಮೆಯಾಗಿ ಮಾನಸಿಕ ಅಂತರ ಹೆಚ್ಚಾಗಿದೆ. ನಮ್ಮ ಪುರಾತನ ಸಾಮಾಜಿಕ ವ್ಯವಸ್ಥೆ ನ್ಯಾಯ ತೀರ್ಮಾನಗಳನ್ನು ಮಾಡುವಾಗ ಯಾರನ್ನು ದೂರ ಇಟ್ಟಿತ್ತೋ, ಈಗ ಅದೇ ವರ್ಗದ ಜನರು ದೇಶದ  ಸರ್ವೊಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಸ್ಥಾನದಲ್ಲಿ ಕೂತದ್ದು ಚರಿತ್ರೆಯ ಸೋಜಿಗ. ಈ ನೆಲದ  ಪೂರ್ವಿಕರು ಸಂಬಂಧದಿಂದ ಸಮಾಜದ ಕಟ್ಟಕಡೆಯ ಮನುಷ್ಯರಾಗಿ ನಿಲ್ಲಬೇಕಾಗಿತ್ತು. ಹಾಗೆ ದೂರ ನಿಂತ ವ್ಯಕ್ತಿಯೇ ಭಾರತದ ಮೊದಲ ಪ್ರಜೆಯಾಗಿದ್ದು ಕೂಡ ಚರಿತ್ರೆಯ ಸೋಜಿಗ.

1856ರ ಜೂನ್ ತಿಂಗಳಿನಲ್ಲಿ ಮುಂಬಯಿ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಧಾರವಾಡದ ಒಬ್ಬ ದಲಿತ ವಿದ್ಯಾರ್ಥಿ ಸರ್ಕಾರಿ ಶಾಲೆಯೊಂದರಲ್ಲಿ ಸೀಟು ಬೇಕೆಂದು ಅರ್ಜಿ ಸಲ್ಲಿಸಿದ. ಇದು ದೇಶಾದ್ಯಂತ ಕೋಲಾಹಲಕ್ಕೆ ಕಾರಣವಾಯಿತು. ಭವಿಷ್ಯದಲ್ಲಿ ಸಮಾಜ ನಮ್ಮನ್ನು ಗುರುತಿಸಬೇಕು, ಗೌರವಿಸಬೇಕು, ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ಅಂತರಂಗದ ಹಂಬಲಕ್ಕೆ ಈ ಅರ್ಜಿ ಸಾಕ್ಷಿಯಾಯಿತು. ಇದಾದ 80 ವರ್ಷಗಳ ನಂತರ 1936 ರ ಅಕ್ಟೋಬರ್‌‌‌‌‌‌‌ನಲ್ಲಿ, ಮೈಸೂರು ದಾರ್ಬಾರ್‌‌‌‌‌‌‌ನಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಲಾಯಿತು. ಮೈಸೂರು ಅರಮನೆ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಿದ್ದನ್ನು ಕಂಡು ಬ್ರಿಟಾನಿಯಾ ವಿಶ್ವಕೋಶ ಇದೊಂದು ಕ್ರಾಂತಿಕಾರಕ ಕ್ರಮ ಎಂದು ಶ್ಲಾಘಿಸಿ ಬರೆದಿತ್ತು.

ಊರಿನ ಅಂಚಿನಲ್ಲಿದ್ದ ಶೋಷಿತ ವರ್ಗದವರು ಅನೇಕ ಸಂದರ್ಭಗಳಲ್ಲಿ ಊರಿನ ನಡುವೆ ಬಂದಿರುವುದು ನಮ್ಮೆಲ್ಲರ ಗಮನದಲ್ಲಿದೆ. ಇದಕ್ಕೆ ಕಾರಣ ಸಾಮಾಜಿಕ ವ್ಯವಸ್ಥೆಯ ಉದಾರವಾದಿ ಧೋರಣೆ. ಬುದ್ಧ, ಬಸವಣ್ಣ, ಗೋಪಾಲಸ್ವಾಮಿ ಅಯ್ಯರ್, ಕಾಕಾ ಕಾರ್ಕಾನಿಸ್, ಕುದ್ಮುಲ್ ರಂಗರಾಯರಂತಹ ವ್ಯಕ್ತಿಗಳಿಂದ ಹಿಡಿದು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಗಾಂಧೀಜಿಯವರ ಹೋರಾಟಗಳು ಕೂಡ ದಲಿತರ ವಿಮೋಚನೆಗೆ ಕಾರಣವಾಗಿವೆ. ಅಸ್ಪೃಷ್ಯತೆ ನಿಷೇಧ ಕಾಯ್ದೆ ಸಂಸತ್ತಿನಲ್ಲಿ ಪಾಸಾದ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಕರ್ತೃಗಳಾಗಿ ಅಲ್ಲಿ ಇದ್ದರೂ ಕೂಡ, ನೆರದಿದ್ದ ಜನ ‘ಮಹಾತ್ಮ ಗಾಂಧೀಜಿಗೆ ಜಯವಾಗಲಿ’ ಎಂದು ಹೇಳಿದರು. ಬಾಬಾಸಾಹೇಬ್ ಅಂಬೇಡ್ಕರ್‌ರವರ ಸಂಘರ್ಷ, ಗಾಂಧೀಜಿಯವರ ದಲಿತಪರ ಧೋರಣೆ ಇಂಥದ್ದೊಂದು ಕಾಯ್ದೆ ಜಾರಿಯಾಗಲು ಸಾಧ್ಯವಾಗಿಸಿತೆಂಬುದನ್ನು ನಾವು ಗಮನಿಸಬೇಕು.

ನಾಲ್ಕೈದು ವರ್ಷಗಳ ಹಿಂದೆ ಚಿತ್ರದುರ್ಗದ ಗ್ರಾಮವೊಂದರ ಊರ ಹಬ್ಬದ ರಥೋತ್ಸವದ ಕಾರ್ಯಕ್ರಮ ನಡೆಯುತ್ತಿದ್ದಾಗ ಅಚಾತುರ್ಯದಿಂದ ರಥದ ಮೇಲಿನಿಂದ ಕೆಲ ಜನರು ಕೆಳಗೆ ಬಿದ್ದರು. ಅವರನ್ನು ತಕ್ಷಣವೇ ಕೆಳಗಿದ್ದ ಜನ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದರು. ಕೆಳಗೆ ಬಿದ್ದ ತಮ್ಮನ್ನು ಮುಟ್ಟಿ ಆಸ್ಪತ್ರೆಗೆ ಸೇರಿಸಿದ್ದು ದಲಿತರು ಎಂದು ತಿಳಿದ ಗಾಯಗೊಂಡ ಮೇಲ್ವರ್ಗದವರು ದಲಿತರ ಮೇಲೆ ಹಲ್ಲೆ ಮಾಡಲು ಮುಂದಾದರು. ಹಾಗೆ ದಲಿತರನ್ನು ಮುಟ್ಟಿಸಿಕೊಳ್ಳುವುದಕ್ಕಿಂತ ಪರಲೋಕವೇ ವಾಸಿ ಎಂದು ಅವರು ಏಕೆ ಭಾವಿಸಿಕೊಂಡರೋ?. ಇದು ನನ್ನನ್ನು ಬಹುಕಾಲ ಕಾಡಿತು. ಇಂತಹ ಮೇಲ್ವರ್ಗದ ಜನರಿಗೆ ತಗುಲಿರುವ ಮೌಢ್ಯದಿಂದ ಹೊರತರಲು ಮಾನವೀಯ ಶಿಕ್ಷಣದ ಹೊರತು ಬೇರಾವ ಶಿಕ್ಷಣದಿಂದಲೂ ಸಾಧ್ಯವಿಲ್ಲವೆನಿಸಿತು.

26.06.2004 ರಂದು ಪಿ.ಟಿ.ಐ. ಒಂದು ಘಟನೆಯನ್ನು ವರದಿ ಮಾಡಿತು. ತಮಿಳುನಾಡಿನ ಕುಂಭಕೋಣಂನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ದಲಿತರು ಗಂಡುನಾಯಿಗಳನ್ನು ಸಾಕಬಾರದು ಎಂಬ ನಿಯಮವನ್ನು ಮೇಲ್ಜಾತಿಯ ಜನ ಮಾಡಿದರಂತೆ. ದಲಿತರ ಗಂಡುನಾಯಿ ಆಕಸ್ಮಾತ್ ಮೇಲ್ವರ್ಗದವರ ಹೆಣ್ಣು ನಾಯಿಯ ಸಂಪರ್ಕಕ್ಕೆ ಬಂದು ವರ್ಣಸಂಕರವಾಗಿ ಏನಾದರೂ ಅಪಾಯವಾಗಬಹುದು ಎಂದು ಆ ನಿಯಮ ಮಾಡಿದರಂತೆ. ಇದರ ಫಲವಾಗಿ ದಲಿತರು ಗಂಡುನಾಯಿ ಸಾಕಬಾರದು ಎಂಬ ನಿಯಮ ಅಲ್ಲಿ ಜಾರಿಗೆ ಬಂತು. ಈ ಬಗೆಯ ಮೌಢ್ಯದ ಪರಮಾವಧಿಯನ್ನು ಎದುರಿಸುವುದಾದರೂ ಹೇಗೆ? ಶತಮಾನಗಳಿಂದ ಉಳಿದುಕೊಂಡು ಬಂದಿರುವ ಈ ತರಹದ ಜಡ್ಡುಗಟ್ಟಿದ ನಂಬಿಕೆಗಳನ್ನು ಪ್ರಶ್ನೆ ಮಾಡಿದರೆ ಸಂಘರ್ಷಕ್ಕೆ ದಾರಿಯಾಗುತ್ತದೆ, ಸಾವುನೋವುಗಳಿಗೂ ಕಾರಣವಾಗುತ್ತದೆ.

ಮತ್ತೊಂದು ಘಟನೆ ಕುರಿತು ಹೇಳುವೆ: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಅರಳಾಳು ಎನ್ನುವ ಗ್ರಾಮದ 30 ಜನ ದಲಿತರನ್ನು ಒಂದು ತಿಂಗಳ ಮಟ್ಟಿಗೆ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು. ಆ ಮೂವತ್ತು ಮಂದಿಯಲ್ಲಿ ಹೆಂಗಸರು, ಮಕ್ಕಳು, ವೃದ್ಧರು ಎಲ್ಲರೂ ಇದ್ದರು. ದಲಿತರನ್ನು ಜೈಲಿನಲ್ಲಿ ಇಟ್ಟಿರುವುದರ ಕುರಿತು ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು: ‘ಈ ಗ್ರಾಮದ ದಲಿತರ ಮೇಲೆ ಇಲ್ಲಿನ ಬಲಾಢ್ಯರಿಂದ ಹಲ್ಲೆಯಾಗುವ ಸಂಭವವಿದೆ. ಇವರಿಗೆ ರಕ್ಷಣೆ ಕೊಡಬೇಕಾದರೆ ಸೆಂಟ್ರಲ್ ಜೈಲೇ ಸೂಕ್ತವಾದ ಸ್ಥಳ, ಹೀಗಾಗಿ ಅವರನ್ನೆಲ್ಲಾ ಸೆಂಟ್ರಲ್ ಜೈಲಿನಲ್ಲಿ ಇಟ್ಟಿದ್ದೇವೆ.’ ಆ ಅಧಿಕಾರಿಗೆ ಏಕೆ ಈ ಭಾವನೆ ಬಂತೋ ಗೊತ್ತಿಲ್ಲ. ಬಹುಶಃ  ಅಧಿಕಾರಿಯಲ್ಲಿದ್ದ ಅತ್ಯುತ್ಸಾಹ, ಜೊತೆಗೆ ದಲಿತರನ್ನು ಸವರ್ಣೇಯರ ಹಲ್ಲೆಗಳಿಂದ ರಕ್ಷಿಸಲು ಬೇರಾವ ದಾರಿಗಳಿಲ್ಲವೆಂಬ ನಂಬಿಕೆ ಸೆಂಟ್ರಲ್ ಜೈಲೇ ವಾಸಿಯೆಂದು ಆಯ್ಕೆ ಮಾಡಿಕೊಂಡಿರಲು ಕಾರಣವಾಗಿರಬಹುದೇನೋ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಜಲು ಪದ್ಧತಿ ಈಗಲೂ ಜೀವಂತವಾಗಿದೆ. ಕೊರಗ ಜನಾಂಗದವರು ಮೇಲ್ವರ್ಗದ ರೋಗಪೀಡಿತ ವ್ಯಕ್ತಿಗಳ  ಉಗುರು ಮತ್ತು ಕೂದಲುಗಳನ್ನು ಅನ್ನದಲ್ಲಿ ಕಲಸಿ ತಿಂದರೆ ಅವರ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಈ ಪದ್ಧತಿಯ ಹಿಂದಿದೆ. ಜಗತ್ತಿನಲ್ಲಿ ಇದಕ್ಕಿಂತಲೂ ಅಮಾನವೀಯವಾದ ಪದ್ಧತಿ ಇನ್ನೊಂದು ಇರಲಿಕ್ಕಿಲ್ಲ. ಜಾತ್ರೆಗಳಲ್ಲಿ ಜೀವದ ಹಂಗುತೊರೆದು ಅಪಾಯಕಾರಿ ಸಿಡಿಮದ್ದನ್ನು ಸಿಡಿಸುವುದು ಈ ಜನಾಂಗದವರ ಕೆಲಸವೇ. ನಾನು ವಿಧಾನ ಪರಿಷತ್ತಿನ ಸದಸ್ಯನಾಗಿದ್ದಾಗ ಈ ಕುರಿತ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟೆ. ಸರ್ಕಾರಕ್ಕೂ ಅಜಲು ಪದ್ಧತಿಯ ಕ್ರೌರ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಕ್ಕಿದ್ದವು. ಆಗ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಲಿಖಿತ ರೂಪದಲ್ಲಿ ಉತ್ತರ ಕೊಟ್ಟರು: ‘ಕೊರಗ ಜನಾಂಗದವರಿಗೆ ಈ ಪದ್ಧತಿ ಇಷ್ಟವಿಲ್ಲದಿದ್ದರೆ ನಿಲ್ಲಿಸಬಹುದು.’ ಸರ್ಕಾರ ನೀಡಿದ ಉತ್ತರ ಹೇಗಿದೆಯೆಂದರೆ ಪ್ರಾಣ ರಕ್ಷಣೆಯನ್ನು ಕೇಳಿದ ಒಬ್ಬನಿಗೆ  ‘ನಿನಗೆ ಸಾಯಲು ಇಷ್ಟವಿಲ್ಲದೇ ಇದ್ದರೆ ರಕ್ಷಣೆಯನ್ನು ಕೊಡುತ್ತೇವೆ’ ಎಂದು ಹೇಳಿದಂತಾಯಿತು. ಆದರೆ ಜನಪರ ಚಳವಳಿಗಳ ಹೋರಾಟದಿಂದ ಕೆಲದಿನಗಳಲ್ಲಿಯೇ ಸರ್ಕಾರ ಅಜಲು ಪದ್ಧತಿ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು.

ಅಮೆರಿಕಾದ ಕಪ್ಪುಜನ ಅನುಭವಿಸಿರುವ ಶೋಷಣೆಗೆ ಹೋಲಿಸಿದರೆ, ಭಾರತದಲ್ಲಿ ಅಸ್ಪೃಶ್ಯರ ಮೇಲೆ ಎಸಗಿರುವ ಶೋಷಣೆ ಹೆಚ್ಚು ಭೀಕರ ಅನ್ನಿಸುತ್ತದೆ. ಕಪ್ಪು ಜನರನ್ನು ತಮ್ಮ ಅಡಿಗೆಯವರನ್ನಾಗಿ ನೇಮಿಸಿಕೊಳ್ಳುವ ಮೂಲಕ ತಮ್ಮ ಅಡಿಗೆ ಮನೆಗಳಿಗೆ ಬಿಟ್ಟುಕೊಂಡ ಅಮೆರಿಕಾದ ಸವರ್ಣೇಯರು ಅಷ್ಟಿಷ್ಟಾದರೂ ಮಾನವೀಯತೆಯನ್ನು ಅಲ್ಲಿನ ಶೋಷಿತರ ಮೇಲೆ ತೋರಿದರು. ಇಲ್ಲಿ ಅಸ್ಪೃಶ್ಯರನ್ನು ಮನೆ, ಮನಸ್ಸು ಎರಡರಿಂದಲೂ ದೂರವಿಡಲಾಗುತ್ತಿದೆ. ಹಳ್ಳಿಯ ಹೋಟೆಲ್‍ಗಳಲ್ಲಿ ಈಗಲೂ ದಲಿತರಿಗೆ ಪ್ರವೇಶ ನೀಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ದೇವಸ್ಥಾನದ ಗರ್ಭಗುಡಿಗೆ ದಲಿತರ ಪ್ರವೇಶ ಕನಸಿನಂತೆ ಕಾಣುತ್ತಿದೆ. ಜನಿವಾರ, ಶಿವದಾರಗಳೇ ಈಗ  ದೇವಸ್ಥಾನ ಪ್ರವೇಶದ ಮಾನದಂಡಗಳು. ಬಹಳ ಹಿಂದೆ ಸ್ವಾತಂತ್ರ್ಯಪೂರ್ವದಲ್ಲಿ ಸಿದ್ದಪ್ಪ ಎನ್ನುವ ದಲಿತ ವ್ಯಕ್ತಿಯೊಬ್ಬರು ನಂಜನಗೂಡಿನ ನಂಜುಂಡೇಶ್ವರನ ದರ್ಶನಕ್ಕೆಂದು ಹೋದರು. ಆ ದೇವಸ್ಥಾನದಲ್ಲಿ ಅವರಿಗೆ ಪ್ರವೇಶವನ್ನು ನೀಡಲಿಲ್ಲ. ಅವರು ದೇವಸ್ಥಾನದ ಹೊರಗಡೆ ನಿಂತು ಹೇಳಿದರು: “ನನಗೆ ನಂಜುಂಡೇಶ್ವರನ ದರ್ಶನ ಭಾಗ್ಯವಿಲ್ಲ, ನಂಜುಂಡೇಶ್ವರನಿಗೂ ನನ್ನ ದರ್ಶನ ಭಾಗ್ಯವಿಲ್ಲ.”  ಆ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಯಾವ ಎತ್ತರದಲ್ಲಿ ಕಂಡುಕೊಂಡರು ಎಂಬುದು ಇಲ್ಲಿ ಮುಖ್ಯ. ಈ ತರಹ ಆತ್ಮ ಗೌರವದ ಪರಿಜ್ಞಾನ ದಲಿತರಲ್ಲಿ ಮೂಡಬೇಕಾಗಿದೆ.

ನಾನು ಬಾಲ್ಯದಲ್ಲಿರಬೇಕಾದರೆ ನನ್ನ ತಂದೆ ತಾಯಿ ಬೆಂಗಳೂರಿನ ನಗರ ಭಾಗದ ಮನೆಯೊಂದರಲ್ಲಿ ಕೆಲಸಕ್ಕಿದ್ದರು. ಆ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಶಾಲೆ ಮುಗಿಸಿಕೊಂಡು ಅಲ್ಲಿಗೆ ಹೋಗಿದ್ದೆ. ನನ್ನ ತಾಯಿ ಹಿಂಬಾಗಿಲ ಮೂಲಕ ಅಲ್ಲಿಗೆ ಬರುವಂತೆ ಸೂಚನೆ ಕೊಟ್ಟಿದ್ದರು. ಮನೆಯ ಹಿಂದೆ ಹಿಂಬಾಗಿಲ ಮೂಲೆಯೊಂದರಲ್ಲಿ ನಾವೆಲ್ಲ ಕೂತು ಊಟ ಮಾಡುತ್ತಿದ್ದಾಗ ಆ ಮನೆಯ ಮಾಲೀಕರು ನಮ್ಮತ್ತ ಬಂದರು. ಅವರು ನಮ್ಮತ್ತ ಬರುವುದನ್ನು ಕಂಡು ನಮ್ಮ ತಾಯಿ ಸ್ವಲ್ಪ ಆತಂಕಗೊಂಡರು, ನಾನು ಕೂಡ ಗೊಂದಲಗೊಂಡೆ. ಅವರು ಬಂದವರೇ ‘ನಿಮ್ಮನ್ನು ಒಳಮನೆಗೆ ಕರೆದು ಊಟ ಮಾಡಿಸಬಹುದಿತ್ತು, ಆದರೆ ಈ ಸಂಪ್ರದಾಯ, ಜಾತಿ ಪದ್ಧತಿ ನನ್ನ ಕೈಗಳನ್ನು ಕಟ್ಟಿಹಾಕಿದೆ. ನಿಮ್ಮನ್ನು ಇಲ್ಲಿ ಕೂರಿಸಿ ಊಟ ಕೊಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿಬಿಡಿ’ ಎಂದು ತುಂಬಾ ದುಃಖಪಟ್ಟರು. ಆ ಅಸಹಾಯಕತೆಯಲ್ಲೂ ಅವರು ನನಗೆ ಮಹಾಮಾನವರಂತೆ ಕಂಡರು. ಆ ವ್ಯಕ್ತಿಯ ಮೇಲೆ ಅಪಾರ ಗೌರವ ಮೂಡಿ ನನಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗಿದ್ದವು. ಒಮ್ಮೆ ಗೆಳೆಯ ಅಗ್ರಹಾರ ಕೃಷ್ಣಮೂರ್ತಿ ಅವರ ಬಂಧುಗಳ ಮನೆಗೆ ಊಟಕ್ಕೆಂದು ನನ್ನನ್ನು ಕರೆದರು. ನಾನು ಜಾತಿಯಲ್ಲಿ ದಲಿತ ಎಂದು ಅಗ್ರಹಾರ ಅವರ ಬಂಧುಗಳಿಗೆ ಮೊದಲೇ ಹೇಳಿ ನಾವಿಬ್ಬರು ಸಂಜೆ ಊಟಕ್ಕೆ ಬರುತ್ತಿದ್ದೇವೆ ಎಂದು ಹೇಳಿದರಂತೆ. ಅವರು ಬಂಧುಗಳು ನೀವೊಬ್ಬರೆ ಬನ್ನಿ, ನಿಮ್ಮ ಸ್ನೇಹಿತರು ಬರುವುದು ಬೇಡ ಎಂದರಂತೆ. ಅಗ್ರಹಾರ ಅವತ್ತಷ್ಟೆ ಅಲ್ಲ ಮತ್ತೆಂದೂ ಅವರ ಬಂಧುಗಳ ಮನೆಗೆ ಕಾಲಿಡಲಿಲ್ಲ ಎಂಬುದು ಗೊತ್ತಾಯಿತು.

ಈ ಮಣ್ಣಿನ ಅಸ್ಪೃಶ್ಯರನ್ನು ನಾಯಿ ನರಿಗಳಿಗಿಂತ ಕೀಳಾಗಿ ಕಂಡಿರುವುದನ್ನು ನಾವು ಇತಿಹಾಸದ ಪಾಠಗಳಲ್ಲಿ ಓದಿದ್ದೇವೆ. ಮನುಸ್ಮೃತಿಯ ಎಲ್ಲ ನಿಯಮಗಳನ್ನು ಜಾರಿಮಾಡಿದ್ದ ಕಾಲದಲ್ಲಿ ಈ ಅಸ್ಪೃಶ್ಯರ ಬದುಕು ಹೇಗಿತ್ತೆಂಬುದನ್ನು ಈ ಕಾಲದಲ್ಲಿ ನಿಂತು ಸುಲಭವಾಗಿ ಊಹಿಸಿಬಹುದು. ತಮ್ಮ ಮುಖ ನೋಡಿದರೆ ಅಶುಭವೆಂದು ತಿಳಿದಿದ್ದ ಸವರ್ಣೇಯರ ಬೀದಿಗಳಿಗೆ ದಲಿತರು ಕಾಲಿಡುವಾಗ ಸೊಂಟಕ್ಕೆ ಪರಕೆ ಕಟ್ಟಿಕೊಂಡು, ಎಂಜಲು ನೆಲಕ್ಕೆ ಬೀಳದಂತೆ ತಡೆಯಲು ಕತ್ತಿಗೆ ಮಡಕೆ ಕಟ್ಟಿಕೊಂಡು ಬರಬೇಕಾಗಿತ್ತು. ಸವರ್ಣೇಯರ ಎಲ್ಲ ಕ್ರೌರ್ಯಗಳಿಗೆ ಸಿಕ್ಕಿ ದಲಿತರು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬಹುದಿತ್ತು ಇಲ್ಲವೇ ಸಿಡಿದು ತಿರುಗಿ ಬೀಳಬಹುದಿತ್ತು. ಆದರೆ ಅವಮಾನದಲ್ಲಿ ಬೆಂದ ದಲಿತರು ಪ್ರತಿಪುರಾಣ, ಪ್ರತಿಸಂಸ್ಕೃತಿ ಕಟ್ಟುವ ಹೊಸ ಮಾರ್ಗಗಳನ್ನು ಆರಿಸಿಕೊಂಡರು. ಸವರ್ಣೇಯರ ಕ್ರೌರ್ಯಗಳಿಗೆ ಅಂಜದೆ ಗಟ್ಟಿಯಾಗಿ ನಿಂತು ಹೊಸ ಸಾಹಿತ್ಯ ಪರಂಪರೆಗಳನ್ನು ಸೃಷ್ಟಿಸಿದ ದಲಿತರ ಜಾನಪದ ಮಹಾಕಾವ್ಯಗಳನ್ನು ಇವತ್ತಿಗೂ ಮರಾಠಿಯಲ್ಲಿ ಹೇರಳವಾಗಿ ಕಾಣಬಹುದು. ಅವಮಾನವನ್ನು ಮೀರುವ ದಲಿತರ ಪ್ರಯತ್ನಗಳೆಲ್ಲ ಹೊಸ ಸಾಹಿತ್ಯ ಮಾರ್ಗ ಸೃಷ್ಟಿಸಲು ಕಾರಣವಾಗಿದೆ. ಆದರೂ ಅಮೆರಿಕಾ, ಆಫ್ರಿಕಾದಂತಹ ದೇಶಗಳಲ್ಲಿ ಘಟಿಸಿದ ಕಪ್ಪುಜನರ ದಂಗೆಯಂತೆ ದಲಿತರ ವಿಮೋಚನೆಗೆ ಯಾವ ದಂಗೆಯೂ ಇಲ್ಲಿ ಜರುಗಲಿಲ್ಲ. ಅವಮಾನ, ಶೋಷಣೆಯ ನೆರಳಿನಲ್ಲಿ ಬದುಕುವುದನ್ನು ರೂಢಿಮಾಡಿಕೊಂಡಿದ್ದ ನಮ್ಮ ಪೂರ್ವಿಕರು ಪ್ರತಿಸಂಸ್ಕೃತಿ  ಕಟ್ಟುವುದರಲ್ಲಿ ತಮ್ಮ ವಿಮೋಚನೆಯ ದಾರಿಗಳನ್ನು ಕಂಡುಕೊಂಡರು. ದಲಿತರ ದೈವವನ್ನು ಅವಮಾನಿಸಿದರೆ ದಲಿತರನ್ನು ಸುಲಭವಾಗಿ ಹಣಿಯಬಹುದೆಂಬುದನ್ನು ಸವರ್ಣೇಯರು ಕಂಡುಕೊಂಡಿದ್ದರು. ಹೀಗಾಗಿ ದಲಿತರ ದೈವಗಳು ವರ-ಶಾಪಕೊಡದೆ, ಮೇಲ್ವರ್ಗದ ದೇವತೆಗಳ ಕಾವಲಿಗೆ ನಿಂತಂತೆ ಕಾಣುತ್ತವೆ. ವರ್ತಮಾನದಲ್ಲೂ ಕೂಡ ದಲಿತರ ದೈವಗಳು ತೀರಾ ದುರ್ಬಲವಾಗಿ ಕಾಣುತ್ತವೆ.

ಸಮಾಜದ ವ್ಯಂಗ್ಯ ಹೇಗಿದೆ ನೋಡಿ: ಯಾವ ಮೇಲ್ವರ್ಗದಿಂದ ದಲಿತರ ಮೇಲೆ ಅಮಾನವೀಯ ಶೋಷಣೆ, ಕ್ರೌರ್ಯಗಳು ನಡೆದವೋ ಅದೇ ಮೇಲ್ವರ್ಗದಿಂದ ದಲಿತರ ಉದ್ಧಾರಕ್ಕೆಂದು ದೊಡ್ಡ ನಾಯಕರು ಬಂದರು. ಗೋಪಾಲಸ್ವಾಮಿ ಅಯ್ಯರ್, ಕುದ್ಮುಲ್ ರಂಗರಾಯರು, ಕಾಕಾ ಕಾರ್ಕಾನಿಸ್, ತಗಡೂರು ರಾಮಚಂದ್ರರಾಯರು ಇವರೆಲ್ಲ ದಲಿತರ ಆತ್ಮಗೌರವಕ್ಕಾಗಿ ಬೀದಿಗೆ ಬಂದು ತಮ್ಮ ಸಮುದಾಯಗಳಿಂದಲೇ ಬಹಿಷ್ಕಾರಕ್ಕೆ ಒಳಗಾದರು. ನಾಲ್ವಡಿ ಕೃಷ್ಣರಾಜ ಒಡೆಯರು ದಲಿತರಿಗೆಂದೇ ‘ಪಂಚಮ ಬೊರ್ಡಿಂಗ್ ಸ್ಕೂಲ್’ ತೆರೆದಾಗ, ದಲಿತರಿಗೆ ಪಾಠಮಾಡಲು ಕರ್ನಾಟಕದಿಂದ ಒಬ್ಬೇ ಒಬ್ಬ ಶಿಕ್ಷಕ ಮುಂದೆ ಬರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರು ಎದೆಗುಂದದೆ ಕೇರಳದಿಂದ ಶಿಕ್ಷಕರನ್ನು ಕರೆಸಿದರು. ತಮ್ಮ ಜನಾಂಗದಿಂದ ಎದುರಾದ ಎಲ್ಲ ವಿರೋಧವನ್ನು ಮೆಟ್ಟಿ ಮಳವಳ್ಳಿಯಿಂದ ತಲಕಾಡು ಚಿಕ್ಕರಂಗೇಗೌಡರು ದಲಿತರಿಗೆ ಪಾಠಮಾಡಲು ಮುಂದೆ ಬಂದರು. ಇವತ್ತಿಗೂ ಮಳವಳ್ಳಿ ತಾಲ್ಲೂಕಿನಲ್ಲಿ ಮನೆಗೊಬ್ಬೊಬ್ಬ ದಲಿತ ಸರ್ಕಾರಿ ನೌಕರ ಸಿಗಲು ತಲಕಾಡು ಚಿಕ್ಕರಂಗೇಗೌಡರಂತಹ ದೊಡ್ಡ ಅಂತಃಕರಣದ ಶಿಕ್ಷಕರು ಕಾರಣ. ಇವತ್ತು ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಸಾಮಾಜಿಕ ಹೋರಾಟಗಳು ಕಣಿಯನ್ ಜನಾಂಗದ ಶೋಷಣೆಯ ವಿಮೋಚನೆಗೆ ತಗಡೂರು ರಾಮಚಂದ್ರರಾಯರು ನಡೆಸಿದ ಹೋರಾಟದ ಮುಂದುವರೆದ ಭಾಗದಂತೆಯೇ ಕಾಣುತ್ತಿವೆ.

ನಮ್ಮ ನೆಲದ ಕಾನೂನುಗಳು ಅತ್ಯಂತ ಜನಪರವಾಗಿ, ಮಾನವೀಯವಾಗಿ ಮತ್ತು ಕ್ರಾಂತಿಕಾರಕವಾಗಿ ಇವೆ. ಇಂತಹ ಕಾನೂನುಗಳನ್ನು ಅನೇಕ ಸಂದರ್ಭದಲ್ಲಿ ಈ ಸಮಾಜ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದಾಗ ಸಂಘರ್ಷಗಳು ಹುಟ್ಟಿಕೊಂಡಿವೆ. ಇನ್ನು ನೂರು ವರ್ಷಗಳ ನಂತರ ಬರಬೇಕಾದ ಕಾನೂನು ಈಗಲೇ ಬಂದಿದೆ ಎನ್ನುವವರನ್ನು ನಾವು ಕಾಣುತ್ತಿದ್ದೇವೆ. ಈಗ ನಂಬಿಕೆಗಳೂ ಕಾನೂನುಗಳಾಗುತ್ತಿವೆ. ಸಾಮಾಜಿಕ ಸಂಘರ್ಷ ಉಂಟಾದಾಗ ನಂಬಿಕೆಯೇ ಗೆಲ್ಲುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ದುರಂತವೆಂದರೆ  ನಮ್ಮ ಸಾಮಾಜಿಕ ವ್ಯವಸ್ಥೆ ಶೋಷಣೆಯ ಪರವಾದ ಜನವಿರೋಧಿ ನಂಬಿಕೆಯನ್ನು ಬಲಪಡಿಸುತ್ತ ಉದಾರವಾದಿ ಚಿಂತನೆಯ ಬೆಳವಣಿಗೆಗೆ ಪೆಟ್ಟು ನೀಡುತ್ತಿದೆ. ನಂಬಿಕೆ ಮತ್ತು ಕಾನೂನುಗಳ ನಡುವಿನ ಸಂಘರ್ಷದಲ್ಲಿ ನಂಬಿಕೆಗೆ ಜಯ ಸಿಗುತ್ತಿರುವುದು, ಅದರಲ್ಲೂ ಜನವಿರೋಧಿ ಸಾಂಪ್ರದಾಯಿಕ ನಂಬಿಕೆಗಳಿಗೆ ಜಯ ಸಿಗುತ್ತಿರುವುದು ಭಯ ಹುಟ್ಟಿಸುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಕಾನೂನುಗಳು ಹೇಗೆ ರಾಷ್ಟ್ರದ ಹಿತಕ್ಕೆ ಪೂರಕವಾಗಿವೆ ಹಾಗೂ ಕಾನೂನಿನ ಹಿಂದಿನ ಸದುದ್ದೇಶ ಏನೆಂಬುದನ್ನು ನಾವು ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ.

ನಮ್ಮೂರಿನ “ಯೆತ್ನಳ್ಳ” ಹೊಳೆಯಾದದ್ದು

– ಪ್ರಸಾದ್ ರಕ್ಷಿದಿ

ನಮ್ಮೂರಿನ ರಂಗ ಚಟುವಟಿಕೆಗಳು ಮತ್ತು ಆಮೂಲಕ ನಾವು ಕಟ್ಟಿಕೊಂಡ ಬದುಕು, ಹೋರಾಟಗಳು ದುಖಃ-ಸಂಭ್ರಮಗಳು, ಅದರ ಮೂಲಕ ಹೊರಜಗತ್ತಿನೊಡನೆ ನಾವು ನಡೆಸುತ್ತಿರುವ ಸಂವಾದ, ಈ ಎಲ್ಲದರ ಜೊತೆ ಎತ್ತಿನ ಹಳ್ಳದ ಸಂಬಂಧವಿದೆ. ಸಂಬಂಧ ಅನ್ನುವುದು ಯಾವಾಗಲೂ ದೊಡ್ಡದೇ.

“ಲಕ್ಷಯ್ಯ” ಎಂಬ ಅನಕ್ಷರ ಕೂಲಿಕಾರ್ಮಿಕನೊಬ್ಬ, ಸ್ವಾಭಿಮಾನಿಯಾಗಿ, ಸ್ವಾಧ್ಯಾಯಿಯಾಗಿ ಅಕ್ಷರಕಲಿತು, ತಲೆಯೆತ್ತಿ ನಿಲ್ಲುವ ಘಟನೆ (ನೋಡಿ: ಇದೇ ಲೇಖಕನ ‘ಬೆಳ್ಳೇಕೆರೆ ಹಳ್ಳಿ ಥೇಟರ್’) ಮುಂದೆ ನಮ್ಮೂರಿನ ರಾತ್ರಿ ಶಾಲೆಗೆ, ಆ ಶಾಲೆಯ ಅಕ್ಷರದಾಹಿಗಳ ಮೂಲಕ ನಮ್ಮೆಲ್ಲ ಸಾಂಸ್ಕøತಿಕ ಸಾಹಸಗಳಿಗೆ ಕಾರಣವಾಯಿತು. “ಲಕ್ಷ್ಮಯ್ಯ”ನ ಸ್ವಾಧ್ಯಾಯದ ಹಿನ್ನೆಲೆಯಲ್ಲಿ ಎತ್ತಿನ ಹಳ್ಳದ ಸಂಗೀತವಿದೆ. ಆತ ನನ್ನಿಂದ ಕಾಗುಣಿತವನ್ನು ಹೇಳಿಸಿಕೊಂಡು ಗುಟ್ಟಾಗಿ ಯಾರಿಗೂ ತಿಳಿಯದಂತೆ ರಾಗವಾಗಿ ಹಾಡಿ ಬಾಯಿಪಾಠ ಮಾಡಿಕೊಂಡದ್ದು ಇದೇ ಎತ್ತಿನ ಹಳ್ಳದಲ್ಲಿ ಸ್ನಾನ ಮಾಡುತ್ತ, ಈಜಾಡುತ್ತ. ಎತ್ತಿನ ಹಳ್ಳದ ನೀರಿನಲ್ಲಿ ಗುಣಿತಾಕ್ಷರಗಳು ಅನುರಣಗೊಂಡಿವೆ.

ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿರುವ ಮೂರ್ಕಣ್ಣು ಗುಡ್ಡ ಬೆಟ್ಟಸಾಲಿನಲ್ಲಿ ಎತ್ತಿನ ಹಳ್ಳ ಹುಟ್ಟುತ್ತದೆ. ಅಲ್ಲಿ ಮೂರು ತೊರೆಗಳು ಹುಟ್ಟುತ್ತವೆ. ಎತ್ತಿನಹಳ್ಳ, ಚಿಟ್ಟನಹಳ್ಳ ಮತ್ತು ಜಪಾವತಿ. yettinahole_streamಉಳಿದೆರಡು ತೊರೆಗಳು ಪೂರ್ವಕ್ಕೆ ಹರಿದು ಹೇಮಾವತಿಯ ಮಡಿಲಿಗೆ ಬಿದ್ದರೆ, ಎತ್ತಿನಹಳ್ಳ ಪಶ್ಚಿಮಾಭಿಮುಖಿ. ಇದರ ಹರಿವು, ಎಂಟ್ಹತ್ತು ಕಿಲೋಮೀಟರುಗಳು ಅಷ್ಟೆ. ನಂತರ ಶಿರಾಡಿ ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಲೀನವಾಗುತ್ತದೆ.

ನಾವೆಲ್ಲ ಚಿಕ್ಕವರಿದ್ದಾಗ ಬೇಸಗೆಯ ರಜಾದಿನಗಳಲ್ಲಿ ಕಾಲ ಕಳೆಯುತ್ತಿದ್ದುದು, ಈಜು ಕಲಿತದ್ದು ಎತ್ತಿನ ಹಳ್ಳದಲ್ಲೇ ಆ ಕಾಲದಲ್ಲಿ ಮಧ್ಯಾಹ್ನದ ವೇಳೆಗೆ ನೂರಾರು ದನಕರುಗಳನ್ನು ನೀರಿಗಾಗಿ ಎತ್ತಿನಹಳ್ಳಕ್ಕೆ ತರುತ್ತಿದ್ದರು. ಆಗ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಗೋಮಾಳವೂ ಇತ್ತು. ದನಕಾಯುವ ಹುಡುಗರ ದಂಡೇ ಅಲ್ಲಿ ನೆರೆಯುತ್ತಿತ್ತು. ಬುಗುರಿ, ಚಿಣ್ಣಿಂದಾಡು ಆಡುತ್ತಾ, ಬೀಡಿ ಸೇದುತ್ತ, ನಿತ್ಯ ಜಲಕ್ರೀಡೆಯ ವೈಭೋಗದಲ್ಲಿದ್ದ ಆ ಹುಡುಗರನ್ನು ಕಂಡಾಗ. ಶಾಲೆಗೆ ಹೋಗಲೇಬೇಕಾದ ಶಿಕ್ಷೆಗೊಳಗಾಗಿದ್ದ ನಮ್ಮಂತವರಿಗೆ, ದನಕಾಯುವವರು ಪರಮ ಸುಖಿಗಳೆಂದು ಅನ್ನಿಸಿ ಬುಗುರಿ, ಚಿಣ್ಣಿದಾಂಡಿಗಾಗಿ ಅವರ ಸ್ನೇಹಕ್ಕೆ ಹಾತೊರೆಯುತ್ತಿದ್ದೆವು. ಹರಕು ಬಟ್ಟೆ ತೊಟ್ಟು ಒಪ್ಪೊತ್ತಿನ ಊಟದ ಶ್ರೀಮಂತಿಕೆಯಲ್ಲಿದ್ದ ಆ ದನಗಾಹಿಗಳಿಗೆ, ಸಾಲೆ ಕಲಿಯುತ್ತಿದ್ದ ನಮ್ಮಂತವರ ಬಗ್ಗೆ ವಿಶೇಷ ಗೌರವವೇನೂ ಇರಲಿಲ್ಲ. ಅವರೆಲ್ಲ ನಮ್ಮನ್ನು ಕೈಲಾಗದ ‘ಹೇತ್ಲಾಂಡಿ’ಗಳಂತೆ ಕಾಣುತ್ತಿದ್ದರಲ್ಲದೆ, ತಾವುಗಳು ಮಹಾನ್ ವೀರಾಧಿವೀರರಂತೆ ನಡೆದುಕೊಳ್ಳುತ್ತಿದ್ದರು. ಅವರಲ್ಲಿ ಅವರದ್ದೇ ಆದ ಅನೇಕ ತರದ ಸಾಹಸದ ರೋಚಕ ಕತೆಗಳಿರುತ್ತಿದ್ದವು. ಅವುಗಳಲ್ಲಿ ಮಾಮುಬ್ಯಾರಿಯ ಅಂಗಡಿಯಿಂದ ಕದ್ದ ಬೀಡಿ ಬಂಡಲಿನ ಕತೆ, ಇನ್ಯಾರದೋ ತೋಟದಲ್ಲಿ ಬೈನೆ ಬಿಚ್ಚಿ ಸೇಂದಿ ಕುಡಿದು ಏಟುತಿಂದದ್ದು ಮುಂತಾದ ಸಾಹಸಗಳಿರುತ್ತಿದ್ದವು.

ಎತ್ತಿನಹಳ್ಳದ ಎರಡೂ ದಡಗಳ ಉದ್ದಕ್ಕೂ ಸೊಂಪಾಗಿ ಬೆಳೆದ ವಾಟೆ ಮೆಳೆಗಳಿದ್ದವು. ಸುತ್ತಲಿನ ಗ್ರಾಮಗಳ ಸಮಸ್ತ ಕೃಷಿ ಚಟುವಟಿಕೆಗಳಿಗೆ ಪೂರಕ ಸಾಮಗ್ರಿಗಳಾದ ಅಂದರೆ ಕುಕ್ಕೆ, ಮಂಕರಿ, ಪಾತಿ-ಚಪ್ಪರಗಳಿಗೆ , ಮಳೆಗಾಲಕ್ಕೆ ಗೊರಗ, ಗುಡಿಸಲುಗಳ ಮಾಡಿಗೆ ಹುಲ್ಲು ಹೊದೆಸಲು ಅಡ್ಡಗಳು, ಗೋಡೆಗೆ ನೆರಿಕೆ, ತಟ್ಟಿ, ಎಲ್ಲಕ್ಕೂ ಎತ್ತಿನ ಹಳ್ಳದ ವಾಟೆಯೇ ಆಧಾರ. ಎಲ್ಲ ದನಗಾಹಿಗಳ ಕೈಯಲ್ಲೂ ದನಗಳನ್ನು ಅಟ್ಟುವ ಕೋಲಿನೊಂದಿಗೆ ವಾಟೆಯಿಂದ ತಯಾರಿಸಿದ ಕೊಳಲೂ ಇರುತ್ತಿತ್ತು. ದನಗಾಹಿಗಳು ದಾರಿಯುದ್ದಕ್ಕೂ ಯಾವುದಾದರೂ ಸಿನಿಮಾ ಹಾಡಿನ ಅಥವಾ ಜಾನಪದ ಗೀತೆಗಳ ದಾಟಿಯನ್ನು ನುಡಿಸುತ್ತ ಸಾಗುತ್ತಿದ್ದರು, ಇದು ಬಹಳ ದೂರದವರೆಗೆ ಕೇಳುತ್ತಿತ್ತು. ಅವರಲ್ಲೂ ಅನೇಕರು ಸುಶ್ರಾವ್ಯವಾಗಿ ನುಡಿಸುತ್ತಿದ್ದು ಮಾರ್ಗದರ್ಶನ ದೊರೆತಿದ್ದರೆ ಉತ್ತಮ ಕೊಳಲು ವಾದಕರಾಗುವ ಸಾಧ್ಯತೆ ಇತ್ತು. ಎತ್ತಿನ ಹಳ್ಳದ ಬಳಿ ಮೇಳೈಸಿರುತ್ತಿದ್ದ ನೂರಾರು ದನಕರುಗಳ ಹಿಂಡು ವಾಪಸ್ ಹೋಗುವಾಗ ತಮ್ಮ ಒಡೆಯನ ಕೊಳಲಿನ ದನಿಯನ್ನನುಸರಿಸಿ ತಮ್ಮತಮ್ಮ ಗುಂಪನ್ನು ಸೇರಿಕೊಳ್ಳುತ್ತಿದ್ದವು.

ಹಿಂದಿನ ಕಾಲದಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಎತ್ತಿನ ಗಾಡಿಗಳು, ಇದೇ ಎತ್ತಿನ ಹಳ್ಳದ ಬಳಿ ತಂಗುತ್ತಿದ್ದವಂತೆ. ಎತ್ತುಗಳನ್ನು ತೊಳೆದು, ನೀರು ಕುಡಿಸಿ ದಣಿವಾರಿಕೊಳ್ಳುತ್ತಿದ್ದ ಈ ಸ್ಥಳವನ್ನು ಎತ್ತಿನ ಹಳ್ಳವೆಂದು ಕರೆದಿರಬೇಕು. ಮುಂದೆ ಇದೇ ಹೆಸರು ರೂಡಿಗೆ ಬಂತು. ಜನರ ಬಾಯಲ್ಲಿ “ಯೆತ್ನಳ್ಳ”ವಾಯಿತು. (ಸಕಲೇಶಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸ್ಥಳಕ್ಕೆ “ಎತ್ತಿನಹಳ್ಳ” ಎಂದೇ ಹೆಸರು. ಇದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನದಿತಿರುವು ಯೋಜನೆಯ ಅಣೆಕಟ್ಟೊಂದು ನಿರ್ಮಾಣವಾಗುತ್ತಿದೆ).

ಹೀಗೆ ಹಾಡುತ್ತ, ಕುಣಿಯುತ್ತ, ಮಳೆಗಾಲದಲ್ಲಿ ಆರ್ಭಟಿಸುತ್ತ, ಭೋರ್ಗರೆಯುತ್ತ, ತಣ್ಣಗೆ ಹರಿಯುತ್ತಿದ್ದ, ಎತ್ತಿನ ಹಳ್ಳಕ್ಕೆ ಶುಕ್ರ, ಶನಿಯೋ ಅಂತೂ ಒಂದು ದೆಸೆ ಪ್ರಾರಂಭವಾದದ್ದು, ಮೂರೂವರೆ ದಶಕಗಳ ಹಿಂದೆ. ಸಕಲೇಶಪುರ yettinahole_streamನಗರಕ್ಕೆ ಪೂರೈಕೆಯಾಗುತ್ತಿರುವ ಹೇಮಾವತಿ ನದಿಯ ನೀರು ಕಲುಷಿತವಾಗಿದೆ, ಕುಡಿಯಲು ಯೋಗ್ಯವಾಗಿಲ್ಲ ಎಂದು ಕೆಲವರು ಅದಕ್ಕೆ ಪರಿಹಾರವನ್ನು ಹುಡುಕತೊಡಗಿದರು. ಅಂದಿನ ರಾಜಕಾರಣಿಗಳು, ಸಕಲೇಶಪುರ ಪುರಸಭೆಯ ಹಿರಿಯರೂ ಸೇರಿ ಎತ್ತಿನ ಹಳ್ಳದ ನೀರನ್ನು ಸಕಲೇಶಪುರ ನಗರಕ್ಕೆ ತಂದರೆ ಶುದ್ಧವಾದ ನೀರು ಸಿಗುತ್ತದೆಂದು ಭಾವಿಸಿದರು. ಇದಕ್ಕೆ ಅಂದಿನ ಹಿರಿಯ ರಾಜಕಾರಣಿಗಳಲ್ಲೊಬ್ಬರಾದ ಎನ್.ಕೆ.ಗಣಪಯ್ಯನವರೂ ದನಿಗೂಡಿದರು. ಗಣಪಯ್ಯನವರ “ಹಾರ್ಲೆ ಎಸ್ಟೇಟ್” ಕೂಡಾ ಎತ್ತಿನ ಹಳ್ಳದ ಪಕ್ಕದಲ್ಲೇ ಇತ್ತು. ಹಾರ್ಲೆ ಎಸ್ಟೇಟಿನ ಪಕ್ಕದಲ್ಲಿ ಸಣ್ಣ ಕಟ್ಟೆಯೊಂದನ್ನು ಕಟ್ಟಿ ನೀರನ್ನು ಆರು ಕಿ.ಮೀ ದೂರದ ಸಕಲೇಪುರಕ್ಕೆ ತರುವ ಸಣ್ಣಯೋಜನೆ ಇದಾಗಿತ್ತು. ಆದರೆ ಬಹಳ ಬೇಗ ಈ ಯೋಜನೆಯ ಮೇಲೆ ಅಧಿಕಾರಿಗಳ, ರಾಜಕಾರಣಿಗಳ ಗಮನ ಹರಿಯಿತು. ಎತ್ತಿನಹಳ್ಳದ ನೀರನ್ನು ಬರಿಯ ಸಕಲೇಶಪುರ ನಗರಕ್ಕೆ ತರುವುದರೊಂದಿಗೆ, ಸ್ವಲ್ಪ ದೊಡ್ಡ ಯೋಜನೆಯನ್ನಾಗಿ ಮಾಡಿ ಹೇಮಾವತಿ ನದಿಗೆ ಸೇರಿಸಿದರೆ ನೀರಾವರಿಗೂ ಮತ್ತಷ್ಟು ನೀರು ದೊರೆಯುವುದೆಂಬ ಮಾತು ಕೇಳಿಬರತೊಡಗಿತು. ಇದನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದವರು ಅಂದಿನ ನೀರಾವರಿ ಮಂತ್ರಿಗಳಾಗಿದ್ದ ಹೆಚ್.ಸಿ. ಶ್ರೀಕಂಠಯ್ಯ. ಆಗಲೇ ಮುಂದಾಗಲಿರುವ ಅನಾಹುತವನ್ನು ಗ್ರಹಿಸಿ ಎನ್.ಕೆ.ಗಣಪಯ್ಯ ಈ ಯೋಜನೆಯನ್ನು ವಿರೋಧಿಸತೊಡಗಿದರು. ಆಗ ಕೆಲವರು “ಈಗ ಗಣಪಯ್ಯ ತನ್ನ ಕಾಫಿತೋಟ ಮುಳುಗಡೆ ಆಗುತ್ತೆ ಅಂತ ವಿರೋಧ ಮಾಡ್ತಾರೆ, ಮೊದ್ಲು ಶುರು ಮಾಡಿದ್ದೂ ಇವರೇ” ಎಂದು ದೂರತೊಡಗಿದರು. ವಾಸ್ತವದ ಸಂಗತಿಯೆಂದರೆ, ಈ ಯೋಜನೆಯಿಂದ ಗಣಪಯ್ಯನವರ ತೋಟ ಮುಳಗಡೆಯಾಗುತ್ತಿರಲಿಲ್ಲ, ಬದಲಿಗೆ ಅಕ್ಕ ಪಕ್ಕದ ಕೆಲವು ಕಾಫಿ ತೋಟಗಳು ಭಾಗಶಃ ಮುಳುಗಡೆಯಾಗುತ್ತಿದ್ದವು.

ಆ ನಂತರದ ದಿನಗಳಲ್ಲಿ ಇದಕ್ಕಾಗಿ ಸರ್ವೆ ಇತ್ಯಾದಿ ಕಾರ್ಯಗಳು ಪ್ರಾರಂಭವಾದವು. ಪ್ರತಿನಿತ್ಯ ನೀರಿನ ಹರಿವನ್ನು ಅಳೆಯಲು ಒಬ್ಬ ನೌಕರನ ನೇಮಕವೂ ಆಯ್ತು. ಹಾರ್ಲೆ ಎಸ್ಟೇಟಿನ ಬಳಿ ಎತ್ತಿನ ಹಳ್ಳಕ್ಕೆ, ಅಬ್ಬಿ ಹಳ್ಳ ಎನ್ನುವ ಪುಟ್ಟ ತೊರೆಯೊಂದು ಸೇರುವ ಜಾಗವಿದೆ. ಅಲ್ಲಿ ಕಟ್ಟೆಯೊಂದನ್ನು ಕಟ್ಟಿ ನಾಲೆಯಮೂಲಕ, ಹೆಬ್ಬಸಾಲೆ, ಮಾವಿನಕೂಲು, ಗ್ರಾಮಗಳನ್ನು ಹಾದು, ಸಕಲೇಶಪುರ ಮೂಡಿಗೆರೆ ರಸ್ತೆಯನ್ನು ಹಾರ್ಲೆಕೂಡಿಗೆ ಎನ್ನುವ ಸ್ಥಳದಲ್ಲಿ ದಾಟಿ, ಗಾಣದಹೊಳೆ ಗ್ರಾಮವನ್ನು ಸೇರಿ ಅಲ್ಲಿಂದ ಹೇಮಾವತಿ ನದಿಗೆ ನೀರನ್ನು ಸಾಗಿಸುವ ಯೋಜನೆಯೂ ಸುದ್ದಿಯಾಯಿತು. ಯಾರ ಜಮೀನು ಹೋಗಬಹುದು, ಪರಿಹಾರವೆಷ್ಟು ಸಿಕ್ಕೀತು ಎನ್ನುವ ಲೆಕ್ಕಾಚಾರಗಳು ಪ್ರಾರಂಭವಾದವು. ಇದೆಲ್ಲ ಆಗಲು ಇನ್ನೂ ಇಪ್ಪತ್ತು ವರ್ಷವಾದರೂ ಬೇಕು. ಆವಾಗ ನೋಡೋಣ ಎನ್ನುವವರೂ ಇದ್ದರು.

ಆಗಿನ ಅಂದಾಜಿನ ಪ್ರಕಾರ, ಹಾರ್ಲೆ ಎಸ್ಟೇಟಿನ ಬಳಿ ಕಟ್ಟೆಯನ್ನು ಕಟ್ಟಿ ನೀರನ್ನು ತಿರುಗಿಸಿದರೆ,ಎತ್ತಿನ ಹಳ್ಳದಿಂದ ದೊರೆಯುವ ನೀರಿನ ಪ್ರಮಾಣ ಸುಮಾರು ಒಂದೂವರೆ ಟಿ.ಎಮ್.ಸಿ ಎಂದು ನೀರಾವರಿ ಇಲಾಖೆ ಪ್ರಕಟಿಸಿತ್ತು.

ನಂತರದ ವರ್ಷಗಳಲ್ಲಿ ಈ ನೀರು ತಿರುಗಿಸುವ ಯೋಜನೆ ಗುಪ್ತಗಾಮಿನಿಯಾಗಿ ಹರಿಯುತ್ತಲೇಇತ್ತು.

ಎತ್ತಿನ ಹಳ್ಳಕ್ಕೆ ಈ ಕಟ್ಟೆಯನ್ನು ಕಟ್ಟಲು ಯೋಜಿಸಿದ್ದ ಜಾಗ ಪೂರ್ಣ ಚಂದ್ರ ತೇಜಸ್ವಿಯವರ ಮೆಚ್ಚಿನ ತಾಣಗಳಲ್ಲಿ ಒಂದು. tejasviಅವರು ಎಪ್ಪತ್ತರ ದಶಕದಲ್ಲಿ ಹಲವು ಬಾರಿ ಇಲ್ಲಿಗೆ ಮೀನು ಹಿಡಿಯಲು ಬರುತ್ತಿದ್ದರು. ಆಗ ನಮ್ಮ ಸುತ್ತಮುತ್ತಲಿನ ಗ್ರಾಮಗಳ ಕೆಲವರು ಯುವಕರೂ ಅವರೊಂದಿಗೆ ಹೋಗುವುದಿತ್ತು. ಆಗಿನ್ನೂ ಈ ಎತ್ತಿನ ಹಳ್ಳದ ನೀರನ್ನು ಸಕಲೇಶಪುರಕ್ಕೆ ಸಾಗಿಸುವ ಮಾತಷ್ಟೆ ಪ್ರಚಾರದಲ್ಲಿತ್ತು. ನನ್ನ ಗೆಳೆಯರು ಯಾರೋ ತೇಜಸ್ವಿಯವರಿಗೆ. ಈ ವಿಚಾರವನ್ನು ತಿಳಿಸಿದ್ದರು. ಅದಕ್ಕೆ ತೇಜಸ್ವಿ “ಹೇಮಾವತಿ ನೀರು ಕ್ಲೀನಿಲ್ಲ ಅಂದ್ರೆ ಅದನ್ನ ಕೆಡಸಿದವ್ರು ಯಾರು, ನಾವೇ ಅಲ್ವೆ, ಈಗೆಲ್ಲ ಏನೇನೋ ವಿಧಾನಗಳು ಬಂದಿವೆ, ಅದೇ ನೀರನ್ನು ಕ್ಲೀನ್ ಮಾಡಿ ಬಳಸಬೇಕು, ಮನೆಬಾಗಲ ನೀರು ಕೆಡಸಿ ಇನ್ನೊಂದು ಕಡೆಯಿಂದ ನೀರು ತರ್ತೀನಿ ಅನ್ನೋದು ಮೂರ್ಖತನ ಕಣ್ರೀ ನೀವೆಲ್ಲಾ ವಿರೋಧಿಸಬೇಕು” ಎಂದಿದ್ದರಂತೆ. ನಂತರದ ದಿನಗಳಲ್ಲಿ ತೇಜಸ್ವಿಯವರೂ ಇತ್ತ ಬರುವುದನ್ನು ಕಡಿಮೆ ಮಾಡಿದರು. (ಇತ್ತೀಚೆಗೆ ಖಾಸಗಿ ಟಿ.ವಿ ಛಾನಲ್ ಒಂದಕ್ಕೆ ತೇಜಸ್ವಿಯವರ ಬಗ್ಗೆ ನಾವೊಂದಷ್ಟು ಜನ ಗೆಳೆಯರು ಸೇರಿ, ಸಾಕ್ಷ್ಯ ಚಿತ್ರವೊಂದನ್ನು ಮಾಡಿದೆವು, ಆಗ ಇದೇ ಸ್ಥಳದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎತ್ತಿನ ಹೊಳೆಯೋಜನೆ ಪೂರ್ಣಗೊಂಡರೆ ಈ ಸ್ಥಳಗಳೆಲ್ಲ ನೆನಪು ಮಾತ್ರವಾಗಲಿದೆ)

ಎತ್ತಿನಹಳ್ಳ ಹುಟ್ಟಿ ಹರಿಯುವ ಮೂರ್ಕಣ್ಣುಗುಡ್ಡ ಸಾಲಿನ ತಪ್ಪಲಿನಲ್ಲೇ ನಮ್ಮ ರಂಗ ತಂಡವೂ ಹುಟ್ಟಿ ಬೆಳೆದಿದೆ. ಎಪ್ಪತ್ತರ ದಶಕದ ಕೊನೆಯಭಾಗದಲ್ಲಿ ಹುಟ್ಟಿದ ನಮ್ಮ ರಂಗಬಳಗದ ಗೆಳೆಯರೆಲ್ಲ ಸೇರಿ, ಹತ್ತು ವರ್ಷಗಳ ಚಟುವಟಿಕೆಯ ನಂತರ ಪ್ರಥಮ ಬಾರಿಗೆ ರಂಗ ತರಬೇತಿ ಶಿಬಿರವೊಂದನ್ನು ಆಯೋಜಿಸಿದ್ದೆವು. ಅದರ ಉದ್ಘಾಟನೆಯನ್ನು ತೇಜಸ್ವಿಯವರೇ ನಡೆಸಿಕೊಟ್ಟರು. ಆ ದಿನ ನಮ್ಮೂರ ಶಾಲಾಮಕ್ಕಳಿಂದ ನಾಟಕ ಪ್ರದರ್ಶನವಿತ್ತು. ನಾಟಕವನ್ನು ನಾನೇ ಬರೆದು ನಿರ್ದೇಶಿಸಿದ್ದೆ. ನಾಟಕದ ಹೆಸರು “ಮೂರ್ಕಣ್ಣು ಗುಡ್ಡ”. ನಾಟಕದ ವಸ್ತುವೂ ಪರಿಸರ ನಾಶದಿಂದಾಗುವ ಹಾನಿಯ ಬಗ್ಗೆ ಇತ್ತು. ಮಕ್ಕಳ ಅಭಿನಯವನ್ನು ತೇಜಸ್ವಿಯವರು ತುಂಬಾ ಮೆಚ್ಚಿಕೊಂಡರು. ಮುಂದೆ ನಮ್ಮ ರಂಗ ತಂಡಕ್ಕೆ. “ಪ್ರಕೃತಿ ರಂಗ ಮಂಚ” ಎಂದೇ ಹೆಸರಿಟ್ಟೆವು.

ಈಗ ನಮ್ಮೆಲ್ಲ ರಂಗ ಚಟುವಟಿಕೆಗಳು ನಡೆಯುತ್ತಿರುವ, ಇನ್ನೂ ನಿರ್ಮಾಣ ಹಂತದಲ್ಲಿರುವ ರಂಗ ಮಂದಿರಕ್ಕೆ ‘ಪೂರ್ಣಚಂದ್ರ ತೇಜಸ್ವಿ ರಂಗಮಂದಿರ’ ವೆಂದು ಕರೆದಿದ್ದೇವೆ. ಇಲ್ಲಿ ನಿಂತು ನೋಡಿದರೆ, ಪೂರ್ವ ದಿಕ್ಕಿಗೆ ಸಕಲೇಶಪುರದ ಮಂಜ್ರಾಬಾದ್ ಕೋಟೆಯೂ, ದಕ್ಷಿಣದಲ್ಲಿ ಬಾನಿನಂಚಿಗೆ ಕುಮಾರ ಪರ್ವತವೂ ಪಶ್ಚಿಮದಲ್ಲಿ ಮೂರ್ಕಣ್ಣು ಗುಡ್ಡ ಸಾಲೂ, ವಾಯುವ್ಯದಲ್ಲಿ ದೂರದಲ್ಲಿ ಬಾಬಾಬುಡನ್ ಗಿರಿಶಿಖರಗಳೂ ಗೋಚರಿಸುತ್ತವೆ. ರಂಗಮಂದಿರದಲ್ಲಿ ನಿಂತು, ಅಲ್ಲಿಂದಲೇ ಸಂಪೂರ್ಣ ಎತ್ತಿನ ಹಳ್ಳದ ಜಲಾನಯನ ಪ್ರದೇಶವನ್ನು ವೀಕ್ಷಿಸಬಹುದು.

ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಹಾಗೂ ಕಾಡುಮನೆ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳು ಪ್ರಾರಂಭವಾದ್ದರಿಂದ, ಎತ್ತಿನ ಹಳ್ಳವನ್ನು ತಿರುಗಿಸುವ ಯೋಜನೆಯ ಮಾತು ಹಿನ್ನೆಲೆಗೆ ಸರಿಯಿತು. ಈ ನೀರನ್ನು ತಿರುಗಿಸಿದರೆ ಕೆಳಭಾಗದಲ್ಲಿ ಸ್ಥಾಪಿಸಿರುವ ಜಲವಿದ್ಯುತ್ ಯೋಜನೆಗಳಿಗೆ ನೀರಿನ ಕೊರತೆ ಉಂಟಾಗುವುದರಿಂದ ಇದನ್ನು ಕೈಬಿಡಲಾಗುವುದೆಂದೇ ಎಲ್ಲರೂ ನಂಬಿದರು. ಈ ವಿದ್ಯುತ್ ಯೋಜನೆಗಳಲ್ಲಿ ಕೆಲವು ಆನೆದಾರಿಯಲ್ಲೇ ಅಡ್ಡವಾಗಿ ಸ್ಥಾಪಿತವಾದವು. ಇದರಿಂದಾಗಿ ಸುತ್ತಲಿನ ಗ್ರಾಮಗಳಲ್ಲಿ ಆನೆ ಮತ್ತಿತರ ಕಾಡುಪ್ರಾಣಿಗಳಿಂದ ತೊಂದರೆಯೂ ಆರಂಭವಾದವು. ಆದರೆ ಈ ಜಲ ವಿದ್ಯುತ್ ಯೋಜನೆಗಳಿಂದ ನಮ್ಮೂರು ಬೆಳಕಾದೀತೆಂತು ಕಾದು ಕುಳಿತವರಿಗೆ ನಿರಾಸೆಯಾದದ್ದು ಈ ವಿದ್ಯುತ್ ಆಂದ್ರದ ಪಾಲಾಗಿದೆಯೆಂದು ತಿಳಿದಾಗ.

ಇದೊಂದಿಗೆ ಮಲೆನಾಡಿನ ಅತ್ಯಂತ ಸೂಕ್ಷ್ಮ ಹಾಗೂ ಸುಂದರ ಅರಣ್ಯಪ್ರದೇಶಗಳಾದ ಬಿಸಲೆ, ಕಾಗಿನಹರೆ, ಹೊಂಗಡಹಳ್ಳ ಪ್ರದೇಶಗಳನ್ನೆಲ್ಲ ಮುಳುಗಿಸಿ ವಿದ್ಯುತ್ ತಯಾರಿಸುವ ‘ಗುಂಡ್ಯಜಲ ವಿದ್ಯುತ್‍ಯೋಜನೆ’ಯೂ ಪ್ರಕಟವಾಯ್ತು. yettinahole-projectನಂತರ ನಡೆದ ಹೋರಾಟದ ವಿವರಗಳು ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.

ಗುಂಡ್ಯ ಜಲ ವಿದ್ಯುತ್ ಯೋಜನೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಯಿತು. ಸುಂದರಲಾಲ ಬಹುಗುಣ ಅವರೂ ಬಂದು ಈ ಹೋರಾಟದಲ್ಲಿ ಭಾಗಿಯಾದರು. ನಮ್ಮೂರಿನಲ್ಲೂ ಒಂದು ರಾತ್ರಿ ಉಳಿದರು. ನಮ್ಮ ರಂಗಮಂದಿರದಲ್ಲಿ ಕುಳಿತು ಜನರನ್ನು ಭೇಟಿಯಾದರು ಮಾತನಾಡಿದರು. ಅವರೂ ಕೂಡಾ ರಂಗಕರ್ಮಿಗಳೆಂದು ನಮಗೆ ತಿಳಿದ್ದು ಆಗಲೇ. ಪೂರ್ಣಚಂದ್ರ ತೇಜಸ್ವಿ ರಂಗಮಂದಿರದ ಅಹ್ಲಾದಕರ ಪರಿಸರದಿಂದ ಖುಷಿಗೊಂಡಂತಿದ್ದ ಬಹುಗುಣ ಲಹರಿಬಂದಂತೆ ಮಾತನಾಡುತ್ತ ಹೋದರು. ಚಿಪ್ಕೊ ಚಳಿವಳಿಯಿಂದ ಆರಂಭಿಸಿದ ಅಜ್ಜನ ಮಾತು ಹೆಚ್ಚಾಗಿ ರಂಗಭೂಮಿಯ ಸುತ್ತಲೇ ತಿರುಗಿತು. ಬೀದಿ ನಾಟಕ, ಹಾಡುಗಳ ಮೂಲಕ ಜನ ಸಂಘಟನೆ ಮಾಡಿದ ದಿನಗಳನ್ನು ನೆನಪಿಸಿಕೊಂಡು ಉತ್ಸಾಹದಿಂದ ಮಾತನಾಡಿದರು. ‘ಭಾಷಣಕ್ಕೆ ಬಾಯಿ ಮಾತ್ರ ಇದೆ, ಆದರೆ ರಂಗಭೂಮಿಗೆ ಬಾಯಿ, ಕಣ್ಣು, ಕಿವಿ ಎಲ್ಲವೂ ಇವೆ ಹಾಗಾಗಿ ಯಾವುದೇ ಚಳುವಳಿಗೂ ರಂಗಭೂಮಿ ಅತ್ಯಂತ ಶಕ್ತ ಮಾಧ್ಯಮ ನಾಟಕಗಳನ್ನು ನೋಡಲು ಮಕ್ಕಳು ದೊಡ್ಡವರು ಮಹಿಳೆಯರು,ಎಲ್ಲರೂ ಬರುತ್ತಾರೆ ಅದರಲ್ಲೂ ಮಹಿಳೆಯರು ಸ್ವಾಭಾವಿಕವಾಗಿ ಹೆಚ್ಚು ಕರುಣಾಮಯಿಗಳು, ನಾಟಕ ನೇರವಾಗಿ ಹೃದಯಕ್ಕೆ ತಟ್ಟುವುದರಿಂದ ಅದರ ಪರಿಣಾಮ ಮಹಿಳೆಯರಲ್ಲಿ ಹೆಚ್ಚಿನದಾಗಿರುತ್ತದೆ. ಅದರಿಂದ ಚಳುವಳಿಗೂ ಹೆಚ್ಚಿನ ಬಲ ಬರುತ್ತದೆ’ ಎಂದ ಅವರು, ನೀವು ಈ ಪರಿಸರ ಕಾಳಜಿಯ ಯಾತ್ರೆಯನ್ನು ರಂಗಕ್ರಿಯೆಗಳ ಮೂಲಕವೂ ಮುಂದುವರಿಸಿ, ಈ ಕೆಲಸವನ್ನು ಯಾವ ಭಾಷಣಕಾರರಾಗಲೀ ಸರ್ಕಾರವಾಗಲೀ ಮಾಡಲಾಗದು, ಎಂದರು. ಪರಿಸರ ಯಾತ್ರೆಯ ಕಾರ್ಯಕ್ರಮದಬಗ್ಗೆ ಮಾತನಾಡುತ್ತ ನಾವು ಮಾಡುವ ಈ ಕೆಲಸ ಮನುಷ್ಯರಿಗೆ ಮಾತ್ರವಲ್ಲ ಇಡೀ ಭೂಮಂಡಲದ ಉಳಿವಿಗೆ ಆ ಮೂಲಕ ಸಕಲ ಜೀವರಾಶಿಯ ಉಳಿವಿಗೆ ಅಗತ್ಯ ಆದರೆ ನಮಗೆ ಹಿರಿಯರಿಗೆ ಇನ್ನು ಹೆಚ್ಚು ಕಾಲಾವಕಾಶ ಉಳಿದಿಲ್ಲ. ನಮ್ಮ ಮುಂದಿರುವ ಈ ಎಳೆಯರಿಗೆ ಸಾಕಷ್ಟು ಅವಕಾಶವಿದೆ ಆದ್ದರಿಂದ ಮಕ್ಕಳೇ ನಮ್ಮ ಮುಂದಿನ ಭರವಸೆ, ಎಂದ ಅವರು, ನಿಮ್ಮ ಪರಿಸರ ಯಾತ್ರೆಗೆ ನಾನೇನು ಕೊಡಬಲ್ಲೆ ಒಂದು ಧ್ಯೇಯವಾಕ್ಯ ನೀಡುತ್ತೇನೆ, “ಥಿes ಣo ಐiಜಿe, ಓo ಣo ಆeಚಿಣh” ಇದು ನಿಮ್ಮ ಚಿಂತನೆಯಲ್ಲಿರಲಿ, ಇದೇ ಪರಿಸರದ ಉಳಿವಿಗೆ ದಾರಿ ತೋರುತ್ತದೆ ಎಂದರು.

ನಿಧಾನವಾಗಿ ಗುಂಡ್ಯ ಜಲವಿದ್ಯುತ್ ಯೋಜನೆ ಹಿನ್ನೆಲೆಗೆ ಸರಿಯಿತು.

ಆ ಸಂದರ್ಭದಲ್ಲಿ “ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ” ಎಂಬ ಬೀದಿ ನಾಟಕವನ್ನು ನಾವು (ಜೈಕರ್ನಾಟಕ ಸಂಘ ಬೆಳ್ಳೇಕೆರೆ) ಸಿದ್ಧಪಡಿಸಿಕೊಂಡು ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿದೆವು. ಮೈಸೂರಿನ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲೂ ಇದನ್ನು ಪ್ರದರ್ಶಿಸಿದೆವು. ಸ್ವಲ್ಪ ಸಮಯದ ಹಿಂದಷ್ಟೇ ಮೈಸೂರು ನಗರಕ್ಕೇ ಕಾಡಾನೆ ನುಗ್ಗಿ ಬಂದು ಇಬ್ಬರು ಆನೆ ತುಳಿತಕ್ಕೆ ಬಲಿಯಾಗಿದ್ದರು.

ಮಲೆನಾಡಿನಲ್ಲಿ ಆನೆಗಳು ಅನೇಕ ವರ್ಷಗಳಿಂದಲೂ ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿ. ಮಲೆನಾಡಿನ ಜನ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನುyettinahole-project-diverting-west-flowing-water-to-an-arid-land ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದುಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ. ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ.

ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತವು, ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸಿದರು. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋದವು. ಪರಂಪರಾಗತ ಆನೆದಾರಿಗಳು ತುಂಡರಿಸಿಹೋದವು. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯೆತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ, ಕೆಲವೊಮ್ಮೆ ಮೋಟಾರ್ ರ್ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಗಾಂಜಾ ಬೆಳೆ ಮತ್ತು ಕಳ್ಳನಾಟಾದಂದೆಯಂತಹ ಕಾನೂನುಬಾಹಿರ ಕೃತ್ಯಗಳು ಕೂಡಾ ಪಶ್ಚಿಮಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳಿಗೆ ದೊಡ್ಡಪ್ರಮಾಣದಲ್ಲಿ ತೊಂದರೆಯನ್ನುಂಟುಮಾಡಿವೆ.

ಇಷ್ಟೆಲ್ಲ ಆಗುವಾಗಲೂ ನಮ್ಮ “ಯೆತ್ನಳ್ಳ” ತಣ್ಣಗೆ ಹರಿಯುತ್ತಲೇಇತ್ತು.

ಕೋಲಾರ- ತುಮಕೂರು ಪ್ರದೇಶಗಳಿಗೆ ನೀರೊದಗಿಸುವ ಪ್ರಸ್ತಾಪ ಬಂದಾಗಲೂ ಮೊದಲಿಗೆ ರಾಜಕಾರಣಿಗಳು ಹೇಳಿದ್ದು ಪಶ್ಚಿಮಕ್ಕೆ ಹರಿದು ‘ವ್ಯರ್ಥ’ವಾಗುತ್ತಿರುವ ನೇತ್ರಾವತಿ ನದಿಯ ಬಗ್ಗೆಯೇ. ಆದರೆ ಜನರ ವಿರೋಧದ ಸುಳಿವು ಸಿಕ್ಕಿದೊಡನೆಯೇ ಅವರ ಭಾಷೆ ನುಡಿಕಟ್ಟುಗಳು ಬದಲಾದವು. ನೇತ್ರಾವತಿ ನದಿಯ ಬದಲಾಗಿ ಘಟ್ಟದ ಮೇಲ್ಭಾಗದಲ್ಲಿ ಪಶ್ಚಿಮದತ್ತ ಹರಿಯುವ ಎತ್ತಿನ ಹಳ್ಳದಂತಹ ಸಣ್ಣ ಸಣ್ಣ ಹೊಳೆಗಳನ್ನು ಒಗ್ಗೂಡಿಸಿ, ಬಯಲು ಸೀಮೆಯ ಜನರಿಗೆ ಕುಡಿಯುವ ನೀರೊದಗಿಸುವ ಅತ್ಯಂತ ಅಗತ್ಯದ ಯೋಜನೆಯಿದೆಂದು ಬಿಂಬಿಸಿದರು. ಮಲೆನಾಡಿನ ಮತ್ತು ಕರಾವಳಿಯ ಜನರಿಗೆ ಹೀಗೆ ಹೇಳಿ, ಬಯಲು ಸೀಮೆಯ ಜನರ ಮುಂದೆ ಇಪ್ಪತ್ತನಾಲ್ಕು ಟಿ.ಎಮ್.ಸಿ ನೀರಿನ ಚಿತ್ರಣ ನೀಡಿದರು. ಇಷ್ಟು ನೀರೊದಗಿಸುವ ಜಲಮೂಲ ಸಣ್ಣ “ಹಳ್ಳ”ವಾಗಿರಲು ಸಾಧ್ಯವಿಲ್ಲ ಎಂದೋ ಎನೋ. “ಎತ್ತಿನ ಹಳ್ಳ” ಮೊದಲು ರಾಜಕಾರಣಿಗಳ ಬಾಯಲ್ಲಿ ನಂತರ ವ್ಯಾಪಕವಾಗಿ ಮಾಧ್ಯಮಗಳಲ್ಲಿ “ಎತ್ತಿನಹೊಳೆ” ಯೋಜನೆಯಾಯಿತು.

ಹೀಗೆ ನಮ್ಮ “ಯೆತ್ನಳ್ಳ” ಎತ್ತಿನಹೊಳೆಯಾಗಿ ಲೋಕವಿಖ್ಯಾತವಾಯಿತು.

ಕಳೆದ ಮೂರು ದಶಕಗಳಲ್ಲಿ ಬೇರೆ ಕಡೆಗಳಂತೆ ಮಲೆನಾಡಿನಲ್ಲೂ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇಲ್ಲಿನ ಯುವಜನರು ವಿದ್ಯಾವಂತರಾಗಿ, ಕುಶಲಕರ್ಮಿಗಳಾಗಿ ಬೇರೆಡೆಗೆ ಹೋಗಿದ್ದರೂ, ಗದ್ದೆ ಬೇಸಾಯವನ್ನುಳಿದು ಇತರ ಕಾಫಿ, ಮೆಣಸು, ಶುಂಠಿ ಮುಂತಾದ ವಾಣಿಜ್ಯ ಬೆಳೆಗಳ ಕೃಷಿ ಹೆಚ್ಚಾಗಿದೆ. ಯಂತ್ರೋಪಕರಣಗಳ ಬಳಕೆ, ನೀರಾವರಿ ಎರಡೂ ಹೆಚ್ಚಳವಾಗಿದ್ದು ನೀರಿನ ಬಳಕೆ ಗಣನೀಯವಾಗಿ ಹೆಚ್ಚಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಾಫಿ ತೋಟಗಳು, ವ್ಯಾಪಕವಾಗಿ ಕಾರ್ಪೊರೇಟ್ ಧನಿಗಳ ಕೈಸೇರುತ್ತಿದೆ. ಇವರು ದೊಡ್ಡ ಪ್ರಮಾಣದಲ್ಲಿ ಹೊರರಾಜ್ಯಗಳಿಂದ ಕೂಲಿಕಾರ್ಮಿಕರನ್ನು ಕರೆತರುತ್ತಿರುವುದರಿಂದ, ಜನವಸತಿ ಹೆಚ್ಚಾಗುತ್ತಿದೆ. ಇದರೊಂದಿಗೆ ಸರ್ಕಾರದ ಅನೇಕ ಯೋಜನೆಗಳ ಮೂಲಕ ಸ್ವಂತ ನಿವೇಶನ-ಮನೆ ಹೊಂದಿದವರೂ ಹೆಚ್ಚಾಗಿದ್ದಾರೆ. ಇವೆಲ್ಲವೂ ಸೇರಿ ಮಲೆನಾಡಿನಲ್ಲೂ ಕೃಷಿ ಮಾತ್ರವಲ್ಲ ಕುಡಿಯುವ ನೀರಿನ ಬೇಡಿಕೆಯೂ ಹೆಚ್ಚಿದೆ. ಕಳೆದೆರಡು ದಶಕಗಳಲ್ಲಿ ಕೊರೆದ ಕೊಳವೆಬಾವಿಗಳು ನಿರುಪಯುಕ್ತವಾಗಿವೆ. ಆದ್ದರಿಂದ ಇಲ್ಲೂ ಸಹ ಹಳ್ಳ-ಹೊಳೆಗಳ ನೀರನ್ನೇ ಜನರು ಬಳಸತೊಡಗಿದ್ದಾರೆ.

ಎತ್ತಿನಹಳ್ಳದ ಜಲಾನಯನ ಪ್ರದೇಶದಲ್ಲೇ ಸುಮಾರು ಏಳೆಂಟು ಸಾವಿರ ಎಕರೆಗಳಷ್ಟು, ಕಾಫಿ ತೋಟಗಳಿವೆ. ಏಲಕ್ಕಿ ಮೆಣಸು, ಅಡಿಕೆ ಬೆಳೆಯೂ ಸಾಕಷ್ಟಿದೆ. ಈ ಪ್ರದೇಶದಲ್ಲೇ ಬರುವ ಹೆಗ್ಗದ್ದೆ, ದೋಣಿಗಾಲ್, ಕುಂಬರಡಿ, ನಡಹಳ್ಳಿ, ಹೆಬ್ಬಸಾಲೆ, yettinahole_works-ringsಮಾವಿನಕೂಲು, ಗಾಣದಹೊಳೆ, ರಕ್ಷಿದಿ. ಕ್ಯಾಮನಹಳ್ಳಿ, ಅಗಲಟ್ಟಿ ಮುಂತಾದ ಗ್ರಾಮಗಳಿವೆ. ಇವುಗಳಲ್ಲಿ ಹೆಚ್ಚಿನ ಗ್ರಾಮಗಳಿಗೆ ಕುಡಿಯುವ ನೀರಿಗೂ ಇಂದು ಎತ್ತಿನಹಳ್ಳದ ನೀರೇ ಆಧಾರ. ಈ ಎಲ್ಲಾ ಗ್ರಾಮಪಂಚಾಯತಿಗಳು ಕುಡಿಯುವನೀರಿನ ಯೋಜನೆಯಲ್ಲಿ ಎತ್ತಿನಹಳ್ಳದ ನೀರನ್ನು ಬಳಸುತ್ತಿವೆ. ಈ ಎಲ್ಲ ಕಾರಣಗಳಿಂದ ಕಡು ಬೇಸಗೆಯಲ್ಲಿ ಎತ್ತಿನಹಳ್ಳ ಸಂಪೂರ್ಣ ಬರಿದಾಗುವ ಹಂತ ತಲಪಿರುತ್ತದೆ.

ರಕ್ಷಿದಿ, ಅಗಲಟ್ಟಿ ಗ್ರಾಮಗಳಲ್ಲಿ ಹಾಗೂ ನಮ್ಮ ರಂಗಮಂದಿರದಲ್ಲಿ ಬಳಸುತ್ತಿರುವುದೂ ಎತ್ತಿನಹಳ್ಳದ ನೀರನ್ನೇ. ವೇದಿಕೆಗಳಿಂದ ಮಾತನಾಡುವಾಗೆಲ್ಲ ನಾವು ‘ನಮಗಿದೇ ಗಂಗೆ, ಕಾವೇರಿ, ಗೋದಾವರಿ’ ಎನ್ನುತ್ತೇವೆ.

ಇಷೆಲ್ಲ ಇದ್ದರೂ ಗುಂಡ್ಯಜಲವಿದ್ಯುತ್ ಯೋಜನೆ ಅಥವಾ ಎತ್ತಿನಹೊಳೆ ತಿರುವು ಯೋಜನೆಗೆ ಸ್ಥಳೀಯರ ವಿರೋಧ ಕಡಿಮೆ. ಹೋರಾಟ-ಹಾರಾಟವೇನಿದ್ದರೂ ಹೊರಗಿನವರದ್ದು ಎಂಬ ಮಾತು ಆಗಾಗ, ಮಾಧ್ಯಮಗಳಲ್ಲಿ, ಮತ್ತು ಮುಖ್ಯವಾಗಿ ರಾಜಕಾರಣಿಗಳ ಮಾತಿನಲ್ಲಿ ಕೇಳಿಬರುತ್ತದೆ.

ಆದರೆ ಇವರೆಲ್ಲ ಹೇಳುತ್ತಿರುವಷ್ಟು ಸರಳವಾಗಿ ಈ ಸಮಸ್ಯೆ ಖಂಡಿತ ಇಲ್ಲ. ಮೊದಲನೆಯದಾಗಿ ಪರಿಸರವನ್ನು ಉಳಿಸಬೇಕೆನ್ನುವವರಲ್ಲೂ ಹಲವು ಅಭಿಪ್ರಾಯಗಳಿವೆ. ಇವರೆಲ್ಲರೂ ಪರಿಸರದ ಬಗ್ಗೆ ನಿಜವಾದ ಕಾಳಜಿಯನ್ನು ಇಟ್ಟುಕೊಂಡಿರುವವರೇ, ಆದರೆ ಆಧುನಿಕ ಜೀವನ ಕ್ರಮವನ್ನು ಒಪ್ಪಿಕೊಂಡ ಮೇಲೆ ಸ್ವಲ್ಪ ಮಟ್ಟಿನ ರಾಜಿ ಅನಿವಾರ್ಯ ಎನ್ನುವವರಿದ್ದಾರೆ. ನಮಗೆ ರಸ್ತೆ, ವಿದ್ಯುತ್, ಮುಂತಾದವು ಬೇಕೇಬೇಕು ಎಂದಮೇಲೆ ಅರಣ್ಯನಾಶವೂ ಅನಿವಾರ್ಯವಾದ್ದರಿಂದ ಮರಗಿಡಗಳನ್ನು ಬೆಳೆದರಾಯ್ತು ಎಂದುಕೊಂಡವರಿದ್ದಾರೆ. ನೀರಿಲ್ಲದವರಿಗೆ ನೀರು ನೀಡುವುದು, ಪುಣ್ಯಕಾರ್ಯ ಎನ್ನುವವರಿದ್ದಾರೆ. ಹಾಗೇ ಪರಿಸರದ ವಿಚಾರದಲ್ಲಿ ಯಾವದೇ ರಾಜಿಗೂ ಸಿದ್ಧವಿಲ್ಲದವರೂ ಇದ್ದಾರೆ.

ಈ, ಎಲ್ಲ ವಿಚಾರಗಳನ್ನು ಬಿಟ್ಟು ಯೋಚನೆ ಮಾಡಿದರೂ ಕೂಡಾ ಈ ಜಲವಿದ್ಯುತ್ ಯೋಜನೆಗಳಿಗಾಗಲೀ, ನದೀತಿರುವು ಯೋಜನೆಗಳಿಗಾಗಲೀ, ಪಶ್ಚಿಮ ಘಟ್ಟಗಳ ಜೀವ ವೈವಿದ್ಯವನ್ನು ನಾಶ ಮಾಡುವ ಯಾವುದೇ ಯೋಜನೆಗೆ ಸ್ಥಳೀಯ ಕೃಷಿಕರಿಂದ ಅಥವಾ ಕೃಷಿಕಾರ್ಮಿಕರಿಂದ ಯಾಕೆ ವ್ಯಾಪಕವಾದ ವಿರೋಧ ಬರುತ್ತಿಲ್ಲ ?. ಇದಕ್ಕೆ ಹಲವು ಕಾರಣಗಳಿವೆ. ಪರಿಸರವಾದಿಗಳ ಸಂಘಟನಾತ್ಮಕ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಾರಣವಿದ್ದರೆ. ಇನ್ನಿತರೆ ಕಾರಣಗಳು ಹಲವಿವೆ. ಮುಖ್ಯವಾಗಿ ಇಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ. ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿ ಹೋಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನ ಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಆ ಪ್ರದೇಶದ ಪಾರಂಪರಿಕ ಬೆಳೆಗಳನ್ನು ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಇದರೊಂದಿಗೆ ಈಗಾಗಲೇ ಅನುಷ್ಠಾನಕ್ಕೆ ಬಂದಿರುವ ಹಲವು ಯೋಜನೆಗಳಿಂದಾಗಿ ನಡೆದ ಅರಣ್ಯಪ್ರದೇಶದ ಅತಿಕ್ರಮಣದಿಂದಾಗಿ ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೃಷಿಗೆ ಕೆಲಸಗಾರರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ. ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ಕೃಷಿಕ ನಿರಾಶನಾಗಿ ಕುಳಿತಿದ್ದಾನೆ. (ಈ ಭಾಗದ ಜಮೀನನ್ನು ಕಾರ್ಪೊರೇಟ್ ವಲಯದವರೂ ಸಹ ಖರೀದಿಸುತ್ತಿಲ್ಲ). ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ. ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿಪಡೆಯಬಹುದು, ಇಲ್ಲವೇ ಯೋಜನೆಗಳಿಂದಾಗಿ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುವುದರಿಂದ ಬೇರೇನಾದರೂ ಕೆಲಸವೋ ವ್ಯಾಪಾರವೋ ಮಾಡಬಹುದೆಂಬ ಹವಣಿಕೆಯಲ್ಲಿದ್ದಾನೆ. ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಸಾಧ್ಯವಿದ್ದವರು ಈಗಾಗಲೇ ತಮ್ಮ ಕಾಫಿ ತೋಟಗಳನ್ನು ಉದ್ಯಮಿಗಳಿಗೆ ಮಾರಿದ್ದಾರೆ. ಅಲ್ಲೆಲ್ಲ ರೆಸಾರ್ಟುಗಳು ಪ್ರಾರಂಭವಾಗಿವೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು.

ದೊಡ್ಡ ಕೈಗಾರಿಕೆಗಳಿಗೆ ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು. ಯಾವುದೇ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರವಾಗಿರುತ್ತದೆ.

ಇನ್ನು ಇಲ್ಲಿರುವ ಹಳೆಯ ತಲೆಮಾರಿನ ಸ್ಥಳೀಯ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿ ದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.

ಇದಕ್ಕಿಂತ ಶಕ್ತಿಶಾಲಿ, ಪ್ರಭಾವಶಾಲಿ ಗುಂಪೊಂದಿದೆ. ಇವರಲ್ಲಿ ಕೆಲವರು ನೇರವಾಗಿ ಅಭಿವೃದ್ಧಿಯ ಹರಿಕಾರರಂತೆ ಮಾತನಾಡುತ್ತ ಈ ಎಲ್ಲ ಯೋಜನೆಗಳನ್ನು ನೇರವಾಗಿ ಸಮರ್ಥಿಸುತ್ತ ಈ ಮೊದಲು ತಿಳಿಸಿದ, ಸ್ವಲ್ಪ ಮಟ್ಟಿಗೆ ರಾಜಿ ಅನಿವಾರ್ಯ ಎನ್ನುವ, ಪ್ರಗತಿಪರರ ಹಾಗೂ ಬುದ್ಧಿಜೀವಿಗಳ ಮಾತನ್ನು ತಮ್ಮ ಸಮರ್ಥನೆಗಾಗಿ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ಇವರಿಗಿಂತಲೂ ಹೆಚ್ಚು ಅಪಾಯಕಾರಿಗಳು. ಇವರು ಈ ಯೋಜನೆಗಳನ್ನು ವಿರೋಧಿಸುವವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾ, ಈ ಎಲ್ಲ ಯೋಜನೆಗಳ ಅನುಷ್ಟಾನವಾದರೆ ತಮಗೆ ದೊರೆಯಬಹುದಾದ ಲಾಭದ ಲೆಕ್ಕಾಚಾರದಲ್ಲಿರುತ್ತಾರೆ.

ಇವರುಗಳು ಮಾತ್ರವಲ್ಲ, ಈ ಎಲ್ಲ ಯೋಜನೆಗಳಿಂದ ಲಾಭಪಡೆಯುವವರು, ಇನ್ನೂ ಅನೇಕರಿದ್ದಾರೆ. ಇವರಲ್ಲಿ ಗುತ್ತಿಗೆದಾರರದು, ಮರದ ವ್ಯಾಪಾರಿಗಳು, ಮರಳು ದಂಧೆಯವರು, ಗ್ರಾನೈಟ್ ಗಣಿಗಾರಿಕೆಯವರು, ರಿಯಲ್ ಎಸ್ಟೇಟ್ ದಳ್ಳಾಳಿಗಳು, yettinahole-ringsಮತ್ತು ಇವರಿಂದ ಲಾಭ ಪಡೆಯುತ್ತಿರುವ ಅನೇಕ ಸ್ಥಳೀಯರು ಮತ್ತು ಕೆಲವರು ಪರ್ತಕರ್ತರೂ ಇದ್ದಾರೆ. ಇವರಿಗೆ ಜಲವಿದ್ಯುತ್ ಯೋಜನೆಯಾಗಲೀ, ನದೀ ತಿರುವು ಯೋಜನೆಯಾಗಲೀ, ರಸ್ತೆ ನಿರ್ಮಾಣವಾಗಲೀ ಯಾವ ವೆತ್ಯಾಸವೂ ಇಲ್ಲ. ಯಾವುದೇ ಯೋಜನೆ ಇವರ ಪಾಲಿಗೆ ಹಿಂಡುವ ಹಸುವಾಗಬಲ್ಲದು. ಇವರುಗಳು ಬಹಳ ಸಮರ್ಥವಾಗಿ ಸ್ಥಳೀಯ ಜನರಲ್ಲಿ ಹೊಸ ಆಸೆ-ಆಕಾಂಕ್ಷೆಗಳನ್ನು ತುಂಬಬಲ್ಲರು. ಈ ಕಾರಣಗಳಿಂದಾಗಿ ಈ ಎಲ್ಲ ಯೋಜನೆಗಳ ವಿರೋಧವಾಗಿ ಸಭೆ, ಜಾತಾ, ಸತ್ಯಾಗ್ರಹ, ಜನಾಭಿಪ್ರಾಯ ಸಂಗ್ರಹ ಸಭೆ ಏನೇ ನಡೆಯಲಿ, ಸ್ಥಳೀಯ ಕೃಷಿಕ-ಕಾರ್ಮಿಕರಿಂದ ದೊಡ್ಡ ಪ್ರಮಾಣದ ಬೆಂಬಲ ಸಿಗುತ್ತಿಲ್ಲ, ಆದ್ದರಿಂದ ಈ ಕಾರ್ಯಕ್ರಮಗಳಲ್ಲಿ ಹೊರಗಿನವರ ಸಂಖ್ಯೆಯೇ ಹೆಚ್ಚಾಗಿ ಕಾಣಸಿಗುತ್ತದೆ ಇದರಿಂದಾಗಿ ಈ ಯೋಜನೆಗಳಿಗೆ ಸ್ಥಳೀಯರ ವಿರೋಧವಿಲ್ಲ, ಈ ಪರಿಸರವಾದಿಗಳು ಹೊರಗಿನವರು, ಹೊಟ್ಟೆ ತುಂಬಿದ ಸುಶಿಕ್ಷಿತರು, ಮೇಲ್ವರ್ಗದ ಜನ, ಇತ್ಯಾದಿ ವಾದಗಳು ಹುಟ್ಟಿಕೊಳ್ಳುತ್ತಿವೆ.

ಕೆಲವು ತಿಂಗಳ ಹಿಂದೆ ತುಮಕೂರಿನ ಶಾಲೆಯೊಂದರ ಮಕ್ಕಳು ಎತ್ತಿನಹೊಳೆ ಯೋಜನೆಯ ಬಗ್ಗೆ ಮತ್ತು ಎತ್ತಿನಹೊಳೆ ಪರಿಸರದ ಅಧ್ಯಯನಕ್ಕಾಗಿ ಬಂದಿದ್ದರು ಮೂರುದಿನಗಳಕಾಲ ನಮ್ಮ ರಂಗ ಮಂದಿರದಲ್ಲಿ ಉಳಿದು, ಎತ್ತಿನಹಳ್ಳ ಹುಟ್ಟುವಲ್ಲಿಂದ ಕೆಂಪೊಳೆ ಸೇರುವ ತನಕದ ಒಟ್ಟು ಜಲಾನಯನ ಪ್ರದೇಶದಲ್ಲಿ ತಿರುಗಾಡಿದರು. ಜೀವ ವೈವಿದ್ಯವನ್ನೆಲ್ಲ ನೋಡಿದರು. ದಾಖಲಿಸಿದರು. ಪೋಟೋತೆಗೆದುಕೊಂಡರು. ಇಲ್ಲಿಯ ನೆಲದ ವಿಸ್ತೀರ್ಣ, ಹಾಗೂ ಅದೇಸ್ಥಳದ ಮೇಲ್(ಏರಿಯಲ್)ವಿಸ್ತೀರ್ಣ, ಮಳೆಮಾಪನ ವಿಧಾನಗಳು, (ಕಾಫಿ ತೋಟಗಳಲ್ಲಿ ಪ್ರತಿದಿನ ಮಳೆಮಾಪನ ಮಾಡುವುದು ಬ್ರಿಟಿಷರ ಕಾಲದಿಂದಲೂ ನಡೆದು ಬಂದಿದೆ). ಒಂದು ಟಿ.ಎಮ್.ಸಿ ನೀರೆಂದರೆ ಎಷ್ಟು?. ವರ್ಷಕ್ಕೆ ಸರಾಸರಿ ನೂರರಿಂದ ನೂರಿಪ್ಪತ್ತು ಇಂಚುಗಳಷ್ಟು ಮಳೆಬೀಳುವ ಈ ಜಲಾನಯನ ಪ್ರದೇಶದಲ್ಲಿ ಒಂದು ಮಳೆಗಾಲದಲ್ಲಿ ಭೂಮಿಗೆ ಬೀಳುವ ನೀರಿನ ಒಟ್ಟು ಮೊತ್ತ. ಅದರಲ್ಲಿ ಆವಿಯಾಗುವ ಪ್ರಮಾಣ, ಭೂಮಿಯಲ್ಲಿ ಇಂಗುವ ಪ್ರಮಾಣ, ಈ ಪ್ರದೇಶದ ಜೀವರಾಶಿಗೆ ಬಳಕೆಗೆ ಬೇಕಾದ ನೀರು ಇವೆಲ್ಲವನ್ನೂ ಕಳೆದು, ಹೆಚ್ಚುವರಿಯಾಗಿ ಸಿಗಬಹುದಾದ ನೀರು ಹೀಗೆ ಎಲ್ಲವನ್ನೂ ತಾವೇ ಪ್ರಾಯೋಗಿಕವಾಗಿ ನೋಡಿ ಕಲಿತು, ಕೊಳವೆಗಳ ಮೂಲಕ ಸಾಗಿಸಬಹುದಾದ ನೀರು ಎತ್ತಿನ ಹಳ್ಳದಲ್ಲಿ ದೊರಕುವುದು ಕೇವಲ ಮೂರರಿಂದ ಮೂರೂವರೆ ಟಿ.ಎಮ್.ಸಿ. ಮಾತ್ರ ಎಂದು ಲೆಕ್ಕಹಾಕಿದರು. ಎತ್ತಿನಹಳ್ಳವಲ್ಲದೆ, ಸರ್ಕಾರ ಹೇಳುವ ಕಾಡುಮನೆಹಳ್ಳ, ಕೆಂಕೇರಿಹಳ್ಳ, ಮಂಜನಹಳ್ಳ ಸೇರಿದರೂ ಒಟ್ಟು ನೀರಿನ ಮೊತ್ತ ಎಂಟರಿಂದ ಒಂಭತ್ತು ಟಿ.ಎಮ್.ಸಿ ಮೀರಲಾರದೆಂದು ತೀರ್ಮಾನಿಸಿದರು. ಅಂದರೆ ಈಗಾಗಲೇ ತಯಾರಿಸಿಟ್ಟಿರುವ ಬೃಹತ್ ಗಾತ್ರದ ಕೊಳವೆಗಳಿಗೂ ಇಲ್ಲಿರುವ ನೀರಿನ ಪ್ರಮಾಣಕ್ಕೂ ತಾಳೆಯಾಗುವುದಿಲ್ಲವೆಂದು. ಅವರಿಗೂ ಅರಿವಾಯ್ತು. ಇಪ್ಪತ್ತನಾಲ್ಕು ಟಿ.ಎಮ್.ಸಿ. ನೀರು ದೊರೆಯಬೇಕಾದರೆ ಘಟ್ಟದ ಕೆಳಗಿನ ನೇತ್ರಾವತಿಯನ್ನೋ ಕುಮಾರಧಾರೆಯನ್ನೋ ತಿರುಗಿಸುವುದು ಅನಿವಾರ್ಯವೆಂದು, ಅದರಿಂದ ಅಲ್ಲಿನ ಪರಿಸರಕ್ಕೆ ಇನ್ನೂ ಹೆಚ್ಚಿನ ಹಾನಿ ಆಗಲಿದೆ ಎಂದು ಮಕ್ಕಳು ಅಭಿಪ್ರಾಯಪಟ್ಟರು.

ಈ ಮಕ್ಕಳೆಲ್ಲ ಎತ್ತಿನಹೊಳೆ ಯೋಜನೆಯ ಫಲಾನುಭವಿ ಪ್ರದೇಶಗಳ ಮಕ್ಕಳು, ಇವರೊಂದಿಗೆ ನಮ್ಮೂರ ಶಾಲೆಯ ಅದೇ ವಯಸ್ಸಿನ ಮಕ್ಕಳೊಂದಿಗೆ ಮಾತನಾಡಲು ಬಿಟ್ಟೆವು. ಮಕ್ಕಳು ಅವರವರೇ ಮಾತಾಡಿ ಕೊನೆಗೆ ತೀರ್ಮಾನಿಸಿದ್ದೆಂದರೆ “ತುಮಕೂರಿನ ನೀರಿನ ಸಮಸ್ಯೆ ಅಲ್ಲಿಯ ಜನರು ಅಲ್ಲೇ ಪರಿಹಾರ ಕಂಡುಕೊಳ್ಳಬೇಕು… ಹಾಗೇ ಮಲೆನಾಡಿನ ಜನ ತಮ್ಮ ಪ್ರಾಣಿಗಳಕಾಟ ಇತ್ಯಾದಿ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು”ಎಂದು.

ಇವರೆಲ್ಲ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು. ಆ ಮಕ್ಕಳಿಗಿರುವ ಅರಿವು- ಕಾಳಜಿ ನಮಗಿದ್ದಿದ್ದರೆ……….

ಕೇಂದ್ರ ಸರ್ಕಾರವೀಗ ಹಸಿರುನಾಶಕ್ಕೆ ಹಸಿರು ನಿಶಾನೆ ತೋರಿದೆ. ನಮ್ಮ ರಂಗತಂಡ “ಎತ್ತಿನ ಹೊಳೆ” ಎಂಬ ನಾಟಕವನ್ನು ರಚಿಸಿಕೊಂಡು ತಾಲೀಮಿನಲ್ಲಿ ತೊಡಗಿದೆ.

ಕರ್ನಾಟಕದ ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣ

– ರವಿ ಕೃಷ್ಣಾರೆಡ್ಡಿ

[ಇದೇ ತಿಂಗಳ 9 ರಂದು (09-07-2016) ಧಾರವಾಡದಲ್ಲಿ ನಡೆದ “ಜನಪರ್ಯಾಯ” ಸಮಾವೇಶದಲ್ಲಿ ಮಂಡಿಸಿದ ವಿಷಯದ ಲೇಖನ ರೂಪ.]

ಭಾರತ ದೇಶದಲ್ಲಿ ಕರ್ನಾಟಕ ಭೌಗೋಳಿಕವಾಗಿ ಏಳನೇ ದೊಡ್ಡ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ಎಂಟನೆಯದು. ದಕ್ಷಿಣ ಭಾರತದಲ್ಲಿ ಇಂದು ಭೌಗೋಳಿಕವಾಗಿ ಅತಿದೊಡ್ಡ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ತಮಿಳುನಾಡಿನ ನಂತರದ ಸ್ಥಾನದಲ್ಲಿದೆ. ಅಪಾರ ವೈವಿಧ್ಯತೆ ಮತ್ತು ಸಂಕೀರ್ಣತೆಗಳಿಂದ ಕೂಡಿದ ರಾಜ್ಯ ಇದು.

ಇದೇ ರಾಜ್ಯದಲ್ಲಿಯೆ, ಇಲ್ಲಿಂದ ಅಷ್ಟೇನೂ ದೂರವಿರದ ಬಿಜಾಪುರ ಮತ್ತು ಬೀದರ್ ಜಿಲ್ಲೆಯ ಕಲ್ಯಾಣದಲ್ಲಿ ಸುಮಾರು ಎಂಟು-ಒಂಬತ್ತು ನೂರು ವರ್ಷಗಳ ಹಿಂದೆ ಭಾರತದಲ್ಲಿಯೇ ಅಪರೂಪವಾದ ಸಾಮಾಜಿಕ ಕ್ರಾಂತಿ ನಡೆದಿತ್ತು. rkr-janaparyaya-dharwad-09072016ಆ ಕ್ರಾಂತಿಯ ನೆರಳು ಮತ್ತು ಪ್ರಭಾವ ಇಂದೂ ಸಹ ಕರ್ನಾಟಕದಲ್ಲಿ ಗಾಢವಾಗಿದೆ. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಯಂತಹ ನೂರಾರು ಶರಣರು ಸಾಮೂಹಿಕ ನೆಲೆಗಟ್ಟಿನಲ್ಲಿ ಅಂದಿನ ಅಸಮಾನತೆ, ಜಾತಿವ್ಯವಸ್ಥೆ, ಶೋಷಣೆಯ ವಿರುದ್ಧ ಕಟ್ಟಿದ ಹೋರಾಟ, ಬಂಡಾಯ, ಚಳವಳಿ ಅದು. ಅಂದು ಕಲ್ಯಾಣದಲ್ಲಿ ರಕ್ತಪಾತವಾಗಿ ನೂರಾರು-ಸಾವಿರಾರು ಕಗ್ಗೊಲೆಗಳಾಗಿ, ಬಸವಣ್ಣನೇ ಅಕಾಲಿಕ ಸಾವಿಗೆ ಈಡಾದರೂ, ಇಂದಿಗೂ ಆ ಕ್ರಾಂತಿ ಚಾಲ್ತಿಯಲ್ಲಿರುವುದು ಈ ನಾಡಿನ ಹೆಮ್ಮೆಯೂ ಹೌದು, ದುರಂತವೂ ಹೌದು.

ಅದೇ ರೀತಿ ಈ ನಾಡಿಗೆ ಕಳೆದ ಶತಮಾನದಲ್ಲಿ ವೈಚಾರಿಕ ದೀಕ್ಷೆ ಕೊಟ್ಟವರು ಕುವೆಂಪು. “ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ” ಎಂದು ಹೇಳಿದ ಆ ದಾರ್ಶನಿಕ ಕವಿ “ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಸೇರಿರೈ ಮನುಜ ಮತಕೆ” ಎಂದು ಆಹ್ವಾನ ಕೊಡುವ ಮೂಲಕ ಸರ್ವೋದಯ, ಸಹಕಾರ, ಸಹಬಾಳ್ವೆ, ಸಮಭಾಗಿತ್ವ, ಸಮತ್ವ, ಸಮಾನತೆಯ ದಾರಿದೀಪ ತೋರಿಸಿದವರು.

ಇಲ್ಲಿಯ ರಾಜಕಾರಣ ಜಾತಿ ಮತ್ತು ಹಣದ ಪ್ರಭಾವಕ್ಕೆ ಸಿಲುಕುತ್ತಿದ್ದಂತಹ ಸಂದರ್ಭದಲ್ಲಿ 50-60 ರ ದಶಕದಲ್ಲಿಯೇ “ಒಂದು ವೋಟು, ಒಂದು ನೋಟು” ಘೋಷಣೆಯ ಮೂಲಕ ಜನಸಾಮಾನ್ಯರ ಸಹಭಾಗಿತ್ವದಲ್ಲಿ, ಜನರ ದುಡ್ಡಿನಲ್ಲಿಯೇ ಬಲಾಢ್ಯರ ಹಣ ಮತ್ತು ಜಾತಿಯ ಪ್ರಭಾವವನ್ನು ಹಿಮ್ಮೆಟ್ಟಿಸಿ ಈ ರಾಜ್ಯದಲ್ಲಿ ಮುಂದಿನ ದಿನಗಳ ಸಾಮಾಜಿಕ ನ್ಯಾಯ ಮತ್ತು ಭೂಸುಧಾರಣೆಯ ಹೋರಾಟಗಳಿಗೆ ಜನಪರ್ಯಾಯ ಮಾರ್ಗ ತೋರಿಸಿದವರು ಶಾಂತವೇರಿ ಗೋಪಾಲ ಗೌಡರು.

ಹೀಗೆ ದೇಶದ ಯಾವುದೇ ಭಾಗದ ಆದರ್ಶ ಮತ್ತು ಕನಸುಗಳಿಗೂ ಕಡಿಮೆಯಿಲ್ಲದ ರೀತಿ ಈ ರಾಜ್ಯ, ಅಂದರೆ ಇಲ್ಲಿಯ ಜನ, ತಮ್ಮ ಜೀವನವನ್ನು ಹಲವಾರು ಸವಾಲುಗಳನ್ನು ಎದುರಿಸುತ್ತಾ ಕಟ್ಟಿಕೊಳ್ಳುತ್ತಾ ಬಂದಿದ್ದಾರೆ,

ಆದರೆ, ಈಗ?

ಇದೇ ಧಾರವಾಡದ ಅವಿಭಜಿತ ಜಿಲ್ಲೆಯಲ್ಲಿ ಮತ್ತು ಪಕ್ಕದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಕುಡಿಯುವ ಮತ್ತು ನೀರಾವರಿ ಸೌಲಭ್ಯಕ್ಕಾಗಿ ರೈತರು ಕಳೆದ ಒಂದು kalasabanduri-mapವರ್ಷದಿಂದ ನಿರಂತರ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ನರಗುಂದ ಮತ್ತು ನವಲಗುಂದದಲ್ಲಿ ರೈತರು ಸ್ವಯಂಪ್ರೇರಣೆಯಿಂದ ಪ್ರತಿದಿನ ಧರಣಿಯ ಸ್ಥಳದಲ್ಲಿ ಹಾಜರಿದ್ದು ಹೋರಾಟವನ್ನು ಜೀವಂತ ಇಟ್ಟಿದ್ದಾರೆ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿಯೂ ನೂರಕ್ಕೂ ಹೆಚ್ಚು ದಿನ ಬಯಲುಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೋರಾಟ ಮಾಡಿತು. ಮಂಡ್ಯ ಜಿಲ್ಲೆ ಒಂದರಲ್ಲಿಯೇ 2015 ರಲ್ಲಿ ನೂರು ರೈತರು ಆತ್ಮಹತ್ಯೆ ಮಾಡಿಕೊಂಡರು; ರಾಜ್ಯದಲ್ಲಿ ಆ ಸಂಖ್ಯೆ ಒಂದೂವರೆ ಸಾವಿರಕ್ಕಿಂತ ಹೆಚ್ಚು. 2015-16 ರಲ್ಲಿ ಸರ್ಕಾರಿ ಅಂಕಿಅಂಶಗಳ ಪ್ರಕಾರ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 817. ರಾಜ್ಯದಲ್ಲಿ ಆರೇಳು ತಿಂಗಳ ಹಿಂದೆ ಸುಮಾರು ನಾಲ್ಕೂವರೆ ಸಾವಿರ FDA/SDA ಹುದ್ದೆಗಳಿಗೆ KPSC ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯೇ ಸೋರಿಕೆ ಆಗಿತ್ತು. ಅದು ಮತ್ತು ಅಂತಹ ಅಕ್ರಮಗಳು ನಮ್ಮ ರಾಜ್ಯದಲ್ಲಿ ಆಗುತ್ತಲೇ ಇರುತ್ತವೆ. ನಮ್ಮ ರಾಜ್ಯಕ್ಕೆ ಅದು ದೊಡ್ದ ವಿಷಯವೇ ಅಲ್ಲ. ಆದರೆ ಅದಕ್ಕಿಂತ ದೊಡ್ಡ ವಿಷಯ ಅಥವ ದುರಂತ ಎಂದರೆ ಆ ನಾಲ್ಕೂವರೆ ಸಾವಿರ ನೌಕರಿಗಳಿಗೆ ಪರೀಕ್ಷೆ ಬರೆದವರು ಮಾತ್ರ ರಾಜ್ಯದ ಕೇವಲ 19 ಲಕ್ಷ ಬಡ ನಿರುದ್ಯೋಗಿ ಯುವಕರು!

ಈಗ ಎಲ್ಲದಕ್ಕಿಂತ ದೊಡ್ಡ ದುರಂತ ಯಾವುದು?

ತೀರಾ ಇತ್ತೀಚೆಗೆ, ಮೂರ್ನಾಲ್ಕು ತಿಂಗಳ ಹಿಂದೆ, ತಾಲ್ಲೂಕು-ಜಿಲ್ಲಾ ಪಂಚಾಯತ್ ಚುನಾವಣೆಗಳಾದವು. ಈ ಮೇಲಿನ ಯಾವುವೂ ಚುನಾವಣೆ ವಿಷಯಗಳಾಗಲಿಲ್ಲ.

ಇದೇ ಬಸವಣ್ಣನ ನಾಡಿನಲ್ಲಿ ಇಂದು ಮರ್ಯಾದಾಹತ್ಯೆಗಳಾಗುತ್ತಿವೆ. ಜಾತಿಯ ಕಾರಣಕ್ಕೆ ತಲೆ ಕಡಿಯುತ್ತಿದ್ದಾರೆ. ಈ ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜಾತಿಜಾತಿಗೇ ಸ್ಮಶಾನ ಮೀಸಲೀಡುತ್ತದೆ. ಸರ್ಕಾರದ ಸಮುದಾಯ ಭವನಗಳು ಅಧಿಕೃತವಾಗಿ ಜಾತಿ ಸಮುದಾಯ ಭವನಗಳಾಗಿವೆ. ಜಾತಿಗಳಿಗಷ್ಟೇ ಮೀಸಲಾದ ರಾಜಕೀಯ ಪಕ್ಷಗಳಿವೆ; ಜಿಲ್ಲೆಗಳಿವೆ.

ಇದೇ ನೆಲದಲ್ಲಿ, garments-workers-2016ಯಾರದೇ ಚಿತಾವಣೆ ಇಲ್ಲದೆ ಲಕ್ಷಾಂತರ ಮಹಿಳಾ ಕಾರ್ಮಿಕರು ಇಡೀ ದೇಶದ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಾರೆ.

ಭ್ರಷ್ಟ ಬಿಜೆಪಿಯನ್ನು ಆಚೆಗಟ್ಟಿ ಅಪಾರ ನಿರೀಕ್ಷೆ ಮತ್ತು ಆಶಾಕಿರಣದೊಂದಿಗೆ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ನೈತಿಕವಾಗಿ ನೆಲಕಚ್ಚಿದೆ. ಅಧಿಕಾರ ಸ್ವೀಕರಿಸುತ್ತಲೇ ಅನ್ನಭಾಗ್ಯ ಹಾಗು ಇತರೆ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಇಂದು ಸಿದ್ಧರಾಮಯ್ಯ ಅವರ ಸರ್ಕಾರ ಸ್ವಜನ ಪಕ್ಷಪಾತ ಹಾಗು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ, ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾದಯಾತ್ರೆ ಮಾಡಿದ್ದರು. ಆದರೆ ಇಂದು ಅಕ್ರಮ ಗಣಿಗಾರಿಕೆ ಮಾಡಿರುವವರು ಅವರ ಸಚಿವ ಸಂಪುಟದಲ್ಲಿದ್ದಾರೆ ಮತ್ತು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ವಿಸ್ತೃತವಾಗಿ ಬಯಲಿಗೆಳೆದ ಲೋಕಾಯುಕ್ತ ಸಂಸ್ಥೆಯನ್ನೇ ಇಂದು ಮೂಲೆಗುಂಪು ಮಾಡಿ ಸರ್ಕಾರದ ಕೈಗೊಂಬೆಯಂತಿರುವ ಮತ್ತು ಭ್ರಷ್ಟರನ್ನು ರಕ್ಷಿಸುವ ಎಸಿಬಿಯನ್ನು ಆರಂಭಿಸಿದ್ದಾರೆ. ಲೋಕಾಯುಕ್ತದಲ್ಲಿ ಹತ್ತಾರು ಮೊಕದ್ದಮೆಗಳಿರುವ ಮತ್ತು ಸರ್ಕಾರಿ ಅಧಿಕಾರಿಗಳ ಭ್ರಷ್ಟತೆಗೆ ಸಂಕೇತವಾಗಿರುವ ಶ್ಯಾಮ್ ಭಟ್ಟರನ್ನು ರಾಜ್ಯದ ಮುಂದಿನ ಸರ್ಕಾರಿ ಅಧಿಕಾರಿಗಳ ನೇಮಕಾತಿ ನಡೆಸುವ ಕೆಪಿಎಸ್‌ಸಿಗೆ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ. lokayukta_karnatakaಸ್ವತಃ ಸಿದ್ಧರಾಮಯ್ಯನವರೇ ಸ್ವಜನ ಪಕ್ಷಪಾತದಲ್ಲಿ ಸಿಲುಕಿಕೊಂಡಿದ್ದಾರೆ. ದುಬಾರಿ ವಾಚ್ ಪ್ರಕರಣದಿಂದ ಹಿಡಿದು ತಮ್ಮ ಮಗನಿಗೆ ಆಸ್ಪತ್ರೆ ಕಾಂಟ್ರಾಕ್ಟ್ ನೀಡುವಿಕೆಯಲ್ಲಿ ಸೇರಿ ಹಲವಾರು ಅಕ್ರಮಗಳಲ್ಲಿ ಸಿಲುಕಿದ್ದಾರೆ. ಯಾವ ವ್ಯಕ್ತಿಯನ್ನು ಕಳಂಕಿತ ಎಂದು ಸಚಿವ ಸಂಪುಟದಿಂದ ಹೊರಗಿಟ್ಟಿದ್ದರೊ, ಯಾವ ವ್ಯಕ್ತಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಡಿನೋಟಿಫಿಕೇಷನ್ ಹಗರಣದ ಫಲಾನುಭವಿಯಾಗಿದ್ದರೋ, ಆ ಡಿ.ಕೆ.ಶಿವಕುಮಾರ್‌ರನ್ನು ಈಗ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಮತ್ತು ಅವರ ಉಸ್ತುವಾರಿಯಲ್ಲಿ ಆ ಪಕ್ಷ ಮುಂದಿನ ಚುನಾವಣೆ ನಡೆಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯದ ಇತಿಹಾಸದಲ್ಲೇ ಜೈಲಿಗೆ ಹೋದ ಮುಖ್ಯಮಂತ್ರಿ ಎಂಬ ಅಪಖ್ಯಾತಿ ಪಡೆದ ಬಿ. ಎಸ್. ಯಡಿಯೂರಪ್ಪನವರನ್ನೇ ಇಂದು ಬಿಜೆಪಿಯು ಅಧಿಕಾರ ಹಿಡಿಯುವ ಸಲುವಾಗಿ ಮತ್ತು ಜಾತಿಯ ಬೆಂಬಲಕ್ಕಾಗಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದೆ. ತಮ್ಮ ಐದೂ ವರ್ಷದ ಆಡಳಿತಾವಧಿಯಲ್ಲಿ ಅಪಾರ ಭ್ರಷ್ಟಾಚಾರ ಮತ್ತು ’ಆಪರೇಷನ್ ಕಮಲ’ದಂತಹ ಅನೈತಿಕ ಚುನಾವಣಾ ರಾಜಕಾರಣ ಮಾಡಿದ್ದು ಬಿಜೆಪಿ. ಕಳ್ಳತನ ಮತ್ತು ಭ್ರಷ್ಟಾಚಾರವನ್ನು ಕದ್ದುಮುಚ್ಚಿ ಮಾಡದೇ ಬಹಿರಂಗವಾಗಿ ಮತ್ತು ಪಾರದರ್ಶಕವಾಗಿ ಮಾಡಿದ ಕೀರ್ತಿ ಅವರದು. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದ್ದು, ಜಾತೀಯತೆಯನ್ನು ಪೋಷಿಸುವ ಜಾತಿ ಸಂಘಗಳಿಗೆ ಹುಡುಕಿಹುಡುಕಿ ಹಣ ಕೊಟ್ಟಿದ್ದು, ಬೆಳಗ್ಗೆ ಸರ್ಕಾರಿ ಆದೇಶಕ್ಕೆ ಸಹಿ ಮಾಡಿ ಸಂಜೆಗೆ ಚೆಕ್‌ನಲ್ಲಿ ಲಂಚದ ಹಣ ಪಡೆದದ್ದು, ಗೊತ್ತಿದ್ದೂ ಗೊತ್ತಿದ್ದು ಭಾಸ್ಕರ್ ರಾವ್‌ರಂತಹ ಭ್ರಷ್ಟನನ್ನು ಲೋಕಾಯುಕ್ತರನ್ನಾಗಿ ನೇಮಿಸಿದ್ದು, ಶ್ಯಾಮ್ ಭಟ್‌ರನ್ನು ಬಿಡಿಎ ಯಂತಹ ಅಕ್ರಮ ಕೂಪಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದು; ಅಕ್ರಮ ಗಣಿಗಾರಿಕೆಯಲ್ಲಿ ಸಚಿವರೇ ಪಾಲುದಾರರಾಗಿದ್ದದ್ದು, ಅಕ್ರಮ ಡಿನೋಟಿಫಿಕೇಷನ್‌ಗಳನ್ನು ಮಾಡಿ ಮಾಡಿ ಮಂತ್ರಿ-ಮುಖ್ಯಮಂತ್ರಿಗಳಾಗಿದ್ದವರೇ ಪ್ರತಿದಿನ ಕೋರ್ಟ್‍ಗೆ ಅಲೆದಿದ್ದು, ಮೂರು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳಾಗಿದ್ದು, ಒಂದು ಸಂದರ್ಭದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ, ನಾಲ್ವರು ಮಾಜಿ ಮಂತ್ರಿಗಳು, ಒಬ್ಬ ಶಾಸಕ ವಿಚಾರಣಾಧೀನ ಕೈದಿಗಳಾಗಿದ್ದದ್ದು, ಸಚಿವರೇ ಸದನದಲ್ಲಿ ಬ್ಲೂಫಿಲ್ಮ್ ನೋಡುತ್ತ ಕಾಲಕಳೆದದ್ದು; ಒಂದೇ ಎರಡೇ ಆ ಐದು ವರ್ಷಗಳಲ್ಲಿ ಘಟಿಸಿದ್ದು?

ಇನ್ನು, ಜಾತ್ಯತೀತ ಪಕ್ಷ ಎಂದು ತಮ್ಮ ಹೆಸರಿಗೆ ಸೇರಿಸಿಕೊಂಡಿರುವ ಜಾತ್ಯತೀತ ಜನತಾದಳ ತನ್ನ ಜಾತೀವಾದವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಜಿ ಪ್ರಧಾನ ಮಂತ್ರಿಗಳ ತವರು ಜಿಲ್ಲೆ ಹಾಸನದ ಸಿಗರನಹಳ್ಳಿಯ ಪ್ರಸಂಗ ಜಗಜ್ಜಾಹಿರು ಮಾಡಿದೆ. ಆ ಊರಿನಲ್ಲಿರುವ ಸರ್ಕಾರಿ ಸಮುದಾಯ ಭವನ ಒಂದು ನಿರ್ದಿಷ್ಟ ಜಾತಿಯ ಸಮುದಾಯ ಭವನ ಎಂಬ ಬೋರ್ಡ್ ಹಾಕಿಕೊಂಡಿತ್ತು. ಜನರ ಹೋರಾಟದ ಫಲವಾಗಿ ಮತ್ತು ಮಾಧ್ಯಮಗಳಲ್ಲಿ sigaranahalli-hassanರಾಜ್ಯ-ರಾಷ್ಟ್ರ ಮಟ್ಟದಲ್ಲಿ ವರದಿಯಾದ ಕಾರಣ ಇಂದು ಆ ನಾಮಫಲಕ ಬದಲಾಗಿದೆ. ಅಂದ ಮಾತ್ರಕ್ಕೆ ದಲಿತರಿಗೆ ಪ್ರವೇಶವೇನೂ ಸಿಕ್ಕಿಲ್ಲ. AC/DySP/ತಹಸೀಲ್ದಾರ್ ಹುದ್ದೆಗಳನ್ನು ಕೋಟಿಗಳಿಗೆ ಹರಾಜು ಹಾಕಿದ ಭ್ರಷ್ಟ ವ್ಯಕ್ತಿಯನ್ನು ದೇವೇಗೌಡರು ಇತ್ತೀಚೆಗೆ ಯಾವ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಎನ್ನುವುದು ನಮ್ಮ ಮುಂದೆಯೇ ಇದೆ. ಅನುಕೂಲಸಿಂಧು ರಾಜಕಾರಣಕ್ಕೆ ಉತ್ತಮ ಉದಾಹರಣೆಯಾಗಿರುವ ಈ ಜೆಡಿಎಸ್ ಜೊತೆಗೆ ಸ್ಥಳೀಯವಾಗಿ ನಗರಸಭೆ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಹೊಂದಾಣಿಕೆ ಮಾಡಿಕೊಂಡಿವೆ. ಇದರಲ್ಲಿ ಜೆಡಿಎಸ್‌ದು ಮಾತ್ರ ಅನೈತಿಕ ರಾಜಕಾರಣ ಎಂದರೆ ಅದು ನಮ್ಮ ಅಪ್ರಾಮಾಣಿಕ ಮಾತಾಗುತ್ತದೆ.

ಇತ್ತೀಚೆಗೆ ತಾನೆ ವಿಧಾನಪರಿಷತ್ತು ಮತ್ತು ರಾಜ್ಯಸಭೆಗೆ ಶಾಸಕರಿಂದ ಚುನಾವಣೆ ನಡೆಯಿತು. ದೇಶದ ಪ್ರಮುಖ ಮಾಧ್ಯಮಗಳಲ್ಲಿ ರಾಜ್ಯದ ಹೆಸರು ಹರಾಜಾಯಿತು. ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಂದ ಚುನಾವಣೆ ನಡೆಯಿತು. ಶಿಕ್ಷಕರು ಮತ್ತು ಪದವೀಧರರಿಗೂ ಹಣ ಮತ್ತು ಗಿಫ್ಟ್‌ಗಳನ್ನು ಹಂಚಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಮೂರೂ ಒಂದೇ ತರಹದ ಕಾರ್ಯಾಚರಣೆ, ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿವೆ. ಆಯಾಯಾ ಕ್ಷೇತ್ರಕ್ಕೆ ಯಾರ ಹಣ ಹೆಚ್ಚಾಗಿ ಖರ್ಚಾಗುತ್ತಿದೆಯೋ, ಅಥವ ಯಾವ ಜಾತಿ/ಒಳಜಾತಿ ಲೆಕ್ಕಾಚಾರ ಕೆಲಸ ಮಾಡುತ್ತದೆಯೋ ಅದಕ್ಕೆ ಅನುಗುಣವಾಗಿ ಫಲಿತಾಂಶ ಬರುತ್ತಿದೆ.

ಹೀಗೆ ನೈತಿಕವಾಗಿ ದಿವಾಳಿಯಾಗಿರುವ ಪಕ್ಷಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ರಾಜ್ಯದ ನೈಸರ್ಗಿಕ ಸಂಪತ್ತುಗಳಾದ ಮರಳು, ಅರಣ್ಯ, ಗ್ರಾನೈಟ್, ಭೂಮಿ ಯಾವುದೇ ನಿಯಂತ್ರಣವಿಲ್ಲದೆ dharwad-janaparyaya-09072016ಪಟ್ಟಭದ್ರರ ಪಾಲಾಗುತ್ತಿದೆ. ಇದಾವುದೂ ಅವರುಗಳ ಗಮನಕ್ಕೆ ಬರದಂತೆಯೇ ವರ್ತಿಸುತ್ತಿದ್ದಾರೆ. ಈ ಪಟ್ಟಭದ್ರರು ಇಂದಿನ ಮತ್ತು ಹಿಂದಿನ ಸರ್ಕಾದಲ್ಲಿ ಇದ್ದವರೇ ಆಗಿದ್ದಾರೆ. ಇಂತಹವರಿಂದ ಜನ ಸಾಮಾನ್ಯರ ಹಕ್ಕು ಮತ್ತು ಆಸ್ತಿಗಳ ರಕ್ಷಣೆಯನ್ನು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ?

ನೈಸರ್ಗಿಕ ಸಂಪತ್ತುಗಳು ಕೆಲವೇ ಕೆಲವು ಮಂದಿಯ ಸ್ವತ್ತಾಗುವುದರ ಜೊತೆಗೆ, ಸಾಮಾಜಿಕ ನ್ಯಾಯ ಅರ್ಹ ವರ್ಗಗಳಿಗೆ ತಲುಪುತ್ತಿಲ್ಲ.

ಶೋಷಣೆ, ತಾರತಮ್ಯ, ದೇವರು-ದೆವ್ವ-ನಂಬಿಕೆ ಹೆಸರಿನಲ್ಲಿ ಅಮಾನವೀಯ ಆಚರಣೆಗಳು ಮುಂದುವರೆಯುತ್ತಲೇ ಇವೆ.

ಎಂಟು ನೂರು ವರ್ಷಗಳ ಹಿಂದೆ ಬಸವಣ್ಣ ಹೇಳಿದ್ದು ಇಂದಿಗೂ ಪ್ರಸ್ತುತ, ಏಕೆಂದರೆ ಇಂದಿಗೂ ಆವತ್ತಿನ ಸಮಸ್ಯೆಗಳು ಮುಂದುವರೆಯುತ್ತಿವೆ.

ಇದು ಕರ್ನಾಟಕದ ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣ.

ಪೋಲೀಸ್ ಪ್ರತಿಭಟನೆ : ಒಂದು ಬದಿಯಲ್ಲಿ ನಪುಂಸಕತ್ವ, ಮತ್ತೊಂದು ಬದಿಯಲ್ಲಿ ಪುರುಷತ್ವ

– ಬಿ.ಶ್ರೀಪಾದ ಭಟ್

ನವೀನ್ ಸೂರಂಜೆಯವರು ’ಪೋಲೀಸ್ ಪ್ರತಿಭಟನೆ’ ಕುರಿತಾಗಿ ಬರೆಯುತ್ತಾ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಅವರೇ ಸ್ವತ ತಮ್ಮ ಪ್ರಶ್ನೆಗಳ ಸುಳಿಗೆ ಬಲಿಯಾಗಿದ್ದಾರೆ. ನೋಡಿ ಅವರು ಪದೇ ಪದೇ ಪ್ರಭುತ್ವದ ಪದವನ್ನು ಬಳಸುತ್ತಾರೆ. ಆದರೆ ಈ ಪ್ರಭುತ್ವ ಮತ್ತು ಪ್ರಜೆ ಎನ್ನುವ ಸಂಘರ್ಷದ ಚರ್ಚೆ ತುಂಬಾ ಹಳೆಯದು ನಮ್ಮ ಮಿತಿಯ ಕಾರಣಕ್ಕಾಗಿ ಕ್ರಮೇಣ ಸವಕಲಾಗುತ್ತಿದೆ. ಏಕೆಂದರೆ ಪ್ರಭುತ್ವದ ಎಲ್ಲಾ ದೌರ್ಜನ್ಯಗಳನ್ನು ಮತ್ತು ಕ್ರೌರ್ಯವನ್ನು ಕ್ರಮೇಣ ವ್ಯವಸ್ಥೆಯು ಕೈಗೆತ್ತಿಕೊಳ್ಳುತ್ತದೆ. ಒಮ್ಮೆ ವ್ಯವಸ್ಥೆ ತನ್ನ ಹಾದಿಯಲ್ಲಿದೆ ಎಂದು ಗೊತ್ತಾದೊಡನೆ ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಹೆಣಿಗೆ ಊಹೆಗೂ ನಿಲುಕುವುದಿಲ್ಲ. ಇಲ್ಲಿ ನಾವು ಯುರೋಪಿಯನ್ ರಾಷ್ಟ್ರಗಳಿಂದ ಕಡತಂದ ಪ್ರಭುತ್ವದ ಪದಬಳಕೆಯನ್ನು KSP Recruitment 2015ಅದರ ಮೂಲ ಅರ್ಥದಲ್ಲಿ ಬಳಸಿದರೆ ಅಷ್ಟರಮಟ್ಟಿಗೆ ನಮ್ಮನ್ನು ಕತ್ತಲಲ್ಲಿ ಕೂಡಿ ಹಾಕಿಕೊಳ್ಳುತ್ತೇವೆ ಅಷ್ಟೆ. ಪಶ್ಚಿಮ ರಾಷ್ಟ್ರಗಳಲ್ಲಿ ಪ್ರಭುತ್ವದ ದೌರ್ಜನ್ಯಗಳು ವ್ಯವಸ್ಥೆಯ ಮನಸ್ಥಿತಿಯೊಂದಿಗೆ ಪರಸ್ಪರ ತಾಳೆಯಾಗುವ ರೀತಿಯೇ ಬೇರೆ ಅಥವಾ ಅನೇಕ ಬಾರಿ ಹೊಂದಿಕೊಂಡಿರುವುದಿಲ್ಲ. ಆದರೆ ಏಷ್ಯಾ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಂತಹ ದೇಶದಲ್ಲಿ ಪ್ರಭುತ್ವದ ಕಣ್ಸನ್ನೆಯನ್ನು ವ್ಯವಸ್ಥೆ ಪಾಲಿಸುತ್ತಿರುತ್ತದೆ ಅಥವಾ ವ್ಯವಸ್ಥೆ ಪ್ರಭುತ್ವದ ಬಹುಪಾಲು ಕೆಲಸಗಳನ್ನು ಸ್ವತಃ ತಾನೇ ಕೈಗೆತ್ತಿಕೊಳ್ಳುತ್ತದೆ. ನಾವು ಇಂಡಿಯಾದಲ್ಲಿ ಬದುಕುತ್ತಾ ಕೇವಲ ಪ್ರಭುತ್ವವನ್ನು ಹೊಣೆಗಾರಿಕೆ ಮಾಡುವುದು ಬೇಜವಬ್ದಾರಿತನವಷ್ಟೆ.

ರೋಹಿತ ವೇಮುಲನ ಹತ್ಯೆ ವ್ಯವಸ್ಥೆಯ ಮೂಲಕ ನಡೆದ ಹತ್ಯೆ. ಕೆಲ್ವಿನ್ ಮಣಿ, ಲಕ್ಷ್ಮಣಪುರ ಬಾತೆ, ಕರಂಚೇಡು, ಕಂಬಾಲಪಲ್ಲಿ, ಖೈರ್ಲಾಂಜಿಯಲ್ಲಿ ದಲಿತರ ಕೊಲೆ ಮತ್ತು ಹತ್ಯಾಕಾಂಡವನ್ನು ವ್ಯವಸ್ಥೆ ಮುಂಚೂಣಿಯಲ್ಲಿ ನಿಂತು ನಡೆಸಿತ್ತು. ಪ್ರಭುತ್ವ ತನ್ನ ಮೌನ ಬೆಂಬಲ ನೀಡಿತ್ತು. 1984ರ ಸಿಖ್‌ರ ಹತ್ಯಾಕಾಂಡ ವ್ಯವಸ್ಥೆ ನಡೆಸಿದ ಹತ್ಯಾಕಾಂಡ. ಪ್ರಭುತ್ವ ನೇರ ಬೆಂಬಲ ಸೂಚಿಸಿತ್ತು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಅಲ್ಲಿನ ವ್ಯವಸ್ಥೆ ಮುಂಚೂಣಿಯಲ್ಲಿದ್ದರೆ ಪ್ರಭುತ್ವವು ಅದರ ಬೆಂಬಲವಾಗಿ ಬೆನ್ನ ಹಿಂದಿತ್ತು. naveen-soorinjeಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಅಷ್ಟೇಕೆ ಸ್ವತಃ ನವೀನ್ ಸೂರಿಂಜೆಯವರನ್ನು ಹೋಮ್ ಸ್ಟೇ ಪ್ರಕರಣದಲ್ಲಿ ಬಂದಿಸಿದ್ದು ಪ್ರಭುತ್ವವಾದರೂ ಅವರನ್ನು ತಪ್ಪಿತಸ್ಥರೆಂದು ಅಪಪ್ರಚಾರ ಮಾಡಿದ್ದು ಅಲ್ಲಿನ ಮತೀಯವಾದಿ ವ್ಯವಸ್ಥೆ. ನಾವು ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಈ ಸಂಕೀರ್ಣ ಆದರೆ ಅಪಾಯಕಾರಿ ಹೊಂದಾಣಿಕೆಯ, ಬದಲಾಗುತ್ತಿರುವ ಹೊಣೆಗಾರಿಕೆಯ ಅರಿವಿಲ್ಲದೆ ಮಾತನಾಡಿದರೆ ಹಾದಿ ತಪ್ಪಿದಂತೆಯೇ.

ಏಕೆಂದರೆ ನವೀನ್ ಅವರು ನೇರವಾಗಿ ಪೋಲೀಸ್ ವ್ಯವಸ್ಥೆಯನ್ನು ಪ್ರಭುತ್ವದ ರೂಪದಲ್ಲಿ ನೋಡುತ್ತಾ ಅಲ್ಲಿನ ಶ್ರೇಣೀಕೃತ ವ್ಯವಸ್ಥೆಯಾದ ಕಮೀಷನರ್, ಇನ್ಸ್‍ಪೆಕ್ಟರ್ ಜನರಲ್, ಡಿಸಿಪಿ, ಎಸಿಪಿ ಜೊತೆಜೊತೆಗೆ ಕಾನ್ಸಟೇಬಲ್ ಮತ್ತು  ಆರ್ಡಲೀಗಳನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದೇ ತಕ್ಕಡಿಯಲ್ಲಿ ತೂಗಿರುವುದೇ ದೋಷಪೂರಿತವಾದದ್ದು. ಏಕೆಂದರೆ ಜೂನ್ 4ರಂದು ಪ್ರತಿಭಟನೆ ಮಾಡುತ್ತಿರುವವರು ಕೆಳ ಶ್ರೇಣಿಯ ಕಾನ್ಸಟೇಬಲ್ ಮತ್ತು  ಆರ್ಡಲೀಗಳು. ಅವರನ್ನು ಪ್ರಭುತ್ವವೆಂದು ನೋಡುವುದೇ ನಮಗೆ ನಾವು ಮಿತಿಯನ್ನು ಹಾಕಿಕೊಂಡಂತೆ. ಅವರಿಗೆ ಕೆಲಸಕ್ಕೆ ಸೇರುವಾಗ ಪೋಲೀಸ್ ವ್ಯವಸ್ಥೆಯ ನಿಯಮಗಳ ಅರಿವಿರಲಿಲ್ಲವೇ, ಅದು ಅನಿವಾರ್ಯವೆಂದು ಗೊತ್ತಿಲ್ಲವೇ ಎಂದು ನವೀನ್ ಪ್ರಶ್ನಿಸುತ್ತಾರೆಂದರೆ karnataka-policeನನಗೆ ಅಶ್ಚರ್ಯವಾಗುತ್ತದೆ. ಪ್ರೊಲಿಟರೇಯನ್ ಬದುಕು ಹೇಗೆ ಮತ್ತು ಯಾವ ರೀತಿ ರೂಪುಗೊಳ್ಳುತ್ತಾ ಹೋಗುತ್ತದೆ ಎಂದು ಗೊತ್ತಿದ್ದೂ ನವೀನ್ ಈ ಪ್ರಶ್ನೆ ಎತ್ತಿದ್ದು ದರ್ಪದಂತೆ ಕಾಣುತ್ತದೆ. ಏಕೆಂದರೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಳ್ಳುವ ಕಾರ್ಮಿಕರಿಗೂ ಅಲ್ಲಿನ ಬಂಡವಾಳಶಾಹಿ ಮಾಲೀಕನ ಎಲ್ಲಾ ದೌರ್ಜನ್ಯಗಳ, ಕ್ರೌರ್ಯದ ಪರಿಚಯವಿರುತ್ತದೆ. ಆದರೆ ಕಾರ್ಮಿಕರಿಗೆ ನಿನಗೆ ಗೊತ್ತಿದ್ದೂ ಹೇಗೆ ಸೇರಿಕೊಂಡೆ, ಅಲ್ಲಿ ಸೇರಿಕೊಂಡು ಮಾಲೀಕನ ವಿರುದ್ಧ ಪ್ರತಿಭಟಿಸುವುದೂ ಅನ್ಯಾಯ ಎನ್ನುವುದೇ ಅಮಾನವೀಯ. ಪ್ರೊಲಿಟೇರಿಯನ್‌ನ ಬದುಕು ಅವದಾಗಿರುವುದಿಲ್ಲ. ಅವನ ಆಯ್ಕೆ ಅವನದಾಗಿರುವುದಿಲ್ಲ. ಆವನ ನಡತೆ ಅವನದಾಗಿರುವುದಿಲ್ಲ. ವ್ಯವಸ್ಥೆ ಅವನಿಗೆ ಕನಿಷ್ಠ ಮಾನವಂತನಾಗಿ ಬದುಕಲು ಬಿಡಲಾರದಷ್ಟು ಕಟುವಾಗಿರುತ್ತದೆ. ನವೀನ್ ಹೇಳುವ ಹತ್ತನೇ ತರಗತಿ ಓದಿನ ಕಾನ್ಸಟೇಬಲ್‌ಗಳು ಮತ್ತು ಆರ್ಡಲೀಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಅನಿವಾರ್ಯ ಆಯ್ಕೆಗೆ ಬಲಿಯಾಗಿ ಪೋಲೀಸ್ ವ್ಯವಸ್ಥೆಗೆ ಸೇರಿಕೊಳ್ಳುತ್ತಾನೆ. ಅದರ ಭಾಗವಾಗುತ್ತಾನೆ. ಕ್ರೌರ್ಯಕ್ಕೆ ಬಲಿಯಾಗುತ್ತಾನೆ. ಕ್ರೌರ್ಯದ ಮುಖವಾಗುತ್ತಾನೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಗೋವಿಂದ ನಿಹಾಲನಿಯವರ “ಅರ್ಧಸತ್ಯ” ಸಿನಿಮಾವನ್ನು ನೋಡಲೇಬೇಕು. ಆ ಸಿನಿಮಾದಲ್ಲಿ ಬಳಸಿಕೊಂಡ ಖ್ಯಾತ ಮರಾಠಿ ಕವಿ ದಿಪೀಪ್ ಚಿತ್ರೆ ಬರೆದ ಕೆಲ ಸಾಲುಗಳು ಹೀಗಿವೆ:

ಚಕ್ರವ್ಯೂಹದ ಒಳಗಿದ್ದರೂ ಸಹಿತ
ಸಾಯುತ್ತೇನೆಯೋ ಅಥವಾ ಸಾಯಿಸುತ್ತೇನೆಯೋ
ಇದರ ಕುರಿತಾಗಿಯೂ ನಿರ್ಧರಿಸಲಾಗಲಿಲ್ಲ

ಒಂದು ಬದಿಯಲ್ಲಿ ನಪುಂಸಕತ್ವವನ್ನು
ಮತ್ತೊಂದು ಬದಿಯಲ್ಲಿ ಪುರುಷತ್ವದೊಂದಿಗೆ ಸಮವಾಗಿ ತೂಗುತ್ತ
ನ್ಯಾಯ ತಕ್ಕಡಿಯ ಈ ಮೊನೆಯು
ನಮಗೆ ಅರ್ಧಸತ್ಯದ ಕಡೆಗೆ ಬೆರಳು ತೋರಿಸುತ್ತದೆ

ಇಡೀ ಪೋಲೀಸ್ ವ್ಯವಸ್ಥೆ ಪ್ರಭುತ್ವದ ಅಡಿಯಲ್ಲಿ “ಒಂದು ಬದಿಯಲ್ಲಿ ನಪುಂಸಕತ್ವ ಮತ್ತೊಂದು ಬದಿಯಲ್ಲಿ ಪುರುಷತ್ವದೊಡನೆ ತೂಗುತ್ತಿರುತ್ತದೆ.” ಇದರ ಮೊದಲ ಮತ್ತು ನಿರಂತರ ಬಲಿಪಶುಗಳು ಪೋಲೀಸ್ ಪೇದೆಗಳು ಮತ್ತು ಕೆಳಹಂತದ ಅಧಿಕಾರಿಗಳು. ಅವರು ಠಾಣೆಯಲ್ಲಿ ನಿರಪರಾಧಿ ಕೈದಿಗಳ ಮೇಲೆ ನಡೆಸುವ ದೌರ್ಜನ್ಯ, ಲಾಕಪ್ ಡೆತ್, ಪ್ರತಿಭಟನೆಕಾರರ ಮೇಲೆ ನಡೆಸುವ ಹಲ್ಲೆಗಳು, ಗೋಲೀಬಾರು, ನಕಲಿ ಎನ್‌ಕೌಂಟರ್‌ಗಳು, Ardh_Satya,_1982_fimಎಲ್ಲವೂ ವ್ಯವಸ್ಥೆಯ ಪ್ರತಿನಿಧಿಯಾಗಿ ನಡೆಸುತ್ತಾರೆ ಹೊರತಾಗಿ ಪ್ರಭುತ್ವದ ಪ್ರತಿನಿಧಿಯಾಗಿ ಅಲ್ಲವೇ ಅಲ್ಲ. ನಂತರ ತಮ್ಮ ಕೃತ್ಯಗಳಿಗೆ ಪ್ರಭುತ್ವನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಾರೆ. ಇದನ್ನು ನಿಹಾಲನಿ ಅರ್ಧಸತ್ಯ ಸಿನಿಮಾದಲ್ಲಿ ಸಮರ್ಥವಾಗಿ ಕಟ್ಟಿದ್ದಾರೆ. ಇತ್ತೀಚೆಗೆ ಪತ್ರಕರ್ತೆ ರಾಣಾ ಅಯೂಬ್ ಅವರ “ಗುಜರಾತ್ ಫೈಲ್ಸ್” ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಅದರಲ್ಲಿ ಅವರು 2002 ರ ಮುಸ್ಲಿಂ ಹತ್ಯಾಕಾಂಡ, ಇಶ್ರಾನ್ ಎನ್‌ಕೌಂಟರ್, ಸೊಹ್ರಾಬುದ್ದೀನ್ ಎನ್‌ಕೌಂಟರ್‌ನ ಸಂದರ್ಭಗಳ ಮತ್ತು ಆ ನಂತರದ ದಿನಗಳ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅದು ನಿಜಕ್ಕೂ ಮೈ ನಡುಗಿಸುತ್ತದೆ. ಅಲ್ಲಿನ ಬಹುತೇಕ ಪೋಲೀಸ್ ಅಧಿಕಾರಗಳು ತಳ ಸಮುದಾಯದಿಂದ ಬಂದವರು. ವ್ಯವಸ್ಥೆಯ ಭಾಗವಾಗಿಯೇ ಗುಜರಾತ್ ಹತ್ಯಾಕಾಂಡ ಮತ್ತು ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಪ್ರಭುತ್ವದ ದಾಳವಾಗಿ ಬಳಕೆಯಾಗುತ್ತಾರೆ. ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಪುಸ್ತಕದಲ್ಲಿ ತಮ್ಮ ಪತ್ರಕರ್ತರ ಅನುಭವದ ಮೂಲಕ ರಾಣಾ ಅಯೂಬ್ ಸಮರ್ಥವಾಗಿ ತೋರಿಸಿದ್ದಾರೆ.

ಹೀಗಾಗಿ ನವೀನ್ ಅವರು ಪೋಲೀಸ್ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ಪ್ರಭುತ್ವದ ಸ್ಥಾನದಲ್ಲಿ ನಿಲ್ಲಿಸಿಕೊಂಡು ವಿಮರ್ಶಿಸತೊಡಗಿದೊಡನೆ ಸ್ವತ ತಮಗೆ ತಾವೇ ಲಕ್ಷ್ಮಣರೇಖೆಯನ್ನು ಎಳೆದುಕೊಂಡುಬಿಡುತ್ತಾರೆ. ಹೀಗಾಗಿಯೇ ಎಡಪಂಥೀಯರು ಪ್ರಭುತ್ವವನ್ನು ಸಂತ್ರಸ್ಥರ ಸ್ಥಾನದಲ್ಲಿ ನಿಲ್ಲಿಸುತ್ತಿದೆ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಮಸಲ ನಾಳೆ ಯು.ಟಿ.ಖಾದರ್‌ಗೆ ಅನ್ಯಾಯವಾದಾಗ ಅವರ ಪರವಾಗಿ ಸಮರ್ಥನೆಗೆ ನಿಂತಾಗ ನಾವು ಪ್ರಭುತ್ವವನ್ನು ಬೆಂಬಲಿಸಿದಂತಾಗುತ್ತದೆಯೇ? ಅಥವಾ ಮಂಗಳೂರಿನ ಡಿ.ಸಿ.ಇಬ್ರಾಹಿಂ ಅವರಿಗೆ ಆದ ಅನ್ಯಾಯವನ್ನು ಪ್ರತಿಭಟಿಸಿದರೆ ಅದು ಪ್ರಭುತ್ವವನ್ನು ಸಂತ್ರಸ್ಥರನ್ನಾಗಿಸುತ್ತದೆಯೇ?

ಇನ್ನು ಪೋಲೀಸರ ಬೇಡಿಕೆಗಳ ಕುರಿತಾಗಿ ಅವರ ಸಂಬಳದ ಕುರಿತಾಗಿ ಮಾತನಾಡುವುದು ಔಚಿತ್ಯವೇ ಅಲ್ಲ. ಅಲ್ಲರೀ ದಿನವಿಡೀ ಬಿಸಿಲಲ್ಲಿ ದುಡಿಯುವವನಿಗೆ ನಿನಗೆ 18000 ಸಂಬಳ ಸಾಕಲ್ವೇನಯ್ಯ ಎಂದು ನವೀನ್ ಹೇಳುತ್ತಾರೆಂದು ನಾನು ನೆನಸಿರಲಿಲ್ಲ.

ಕಡೆಯದಾಗಿ ಪೋಲೀಸ್ ವ್ಯವಸ್ಥೆಯಿಂದ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು,ದೌರ್ಜನ್ಯವನ್ನು,ಹತ್ಯಾಕಾಂಡಗಳನ್ನು ಈ ಪೇದೆಗಳು ಮತ್ತು ಆರ್ಡಲೀಗಳು ನಡೆಸುತ್ತಿರುವ ಪ್ರತಿಭಟನೆಗೆ ತಳುಕು ಹಾಕುವುದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಮಾನವೀಯ.