Category Archives: ಚಿದಂಬರ ಬೈಕಂಪಾಡಿ

ಗಾಂಧೀಜಿ, ನಮ್ಮನ್ನು ಕ್ಷಮಿಸಿ ಬಿಡಿ


-ಚಿದಂಬರ ಬೈಕಂಪಾಡಿ


 

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ದೇಶದ ಜನರು ತೇಲಾಡುತ್ತಿದ್ದಾರೆ. ಬ್ರಿಟೀಷರ ದಾಸ್ಯದಿಂದ ಮುಕ್ತಗೊಂಡು ಅಹಿಂಸಾ ಚಳುವಳಿಯ ಮೂಲಕ ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು ಎಂದು ಗುಣಗಾನ ಮಾಡುತ್ತೇವೆ. ಎಲ್ಲಿ ನೋಡಿದರೂ ಸಭೆ, ಸಮಾರಂಭ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಕೆ, ಸನ್ಮಾನ ಹೀಗೆ ಚಟುವಟಿಕೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಗಾಂಧೀಜಿ ನೆನಪಾಗುವಷ್ಟು ಬೇರೆ ಯಾರೂ ನೆನಪಾಗುವುದಿಲ್ಲ. ಯಾಕೆಂದರೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದವರು ಎನ್ನುವುದಕ್ಕಿಂತಲೂ ಅಹಿಂಸಾತ್ಮಕ ಹೋರಾಟದ ಮೂಲಕವೂ ಗೆಲ್ಲಬಹುದು ಎನ್ನುವುದನ್ನು ಜಗತ್ತಿಗೇ ತೋರಿಸಿಕೊಟ್ಟಿರುವ ಕಾರಣಕ್ಕೆ.

ಬಂದೂಕಿನಿಂದ ಚಿಮ್ಮುವ ಗುಂಡುಗಳು, ಹರಿತವಾದ ಚೂರಿ, ಚಾಕು, ಲಾಂಗು, ಮಚ್ಚು, ದೊಣ್ಣೆಗಳು ಬಹುಬೇಗ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುತ್ತವೆ ಎನ್ನುವ ನಂಬಿಕೆಯಿದ್ದವರು ಆಗಲೂ ಇದ್ದರು. ಆದರೆ ಗಾಂಧೀಜಿ ಮಾತ್ರ ಇವುಗಳಿಗೆ ಒಪ್ಪಿರಲಿಲ್ಲ. ಉಪವಾಸ, ಅಸಹಕಾರ, ಧರಣಿ ಮುಂತಾದ ಸರಳ ಸೂತ್ರಗಳನ್ನು ಮುಂದಿಟ್ಟುಕೊಂಡು ಬ್ರಿಟೀಷರನ್ನು ಮಣಿಸಿದರು. ಅಂಥ ಅಹಿಂಸಾವಾದಿಯ ನೆಲದಲ್ಲಿ ಈಗ ನೆತ್ತರಿನ ಕೋಡಿ ಹರಿಯುತ್ತಿದೆ. ಲಾಟಿ, ಬೂಟುಗಳು ಮಾತನಾಡುತ್ತವೆ. ಲಾಂಗು, ಮಚ್ಚು, ಪಿಸ್ತೂಲುಗಳು ಹೋರಾಟದ ಮುಂಚೂಣಿಯಲ್ಲಿವೆ. ಬಿಳಿ ಉಡುಪು ಧರಿಸುತ್ತಿದ್ದ ಅಂದಿನ ಸ್ವಾತಂತ್ರ್ಯ ಹೋರಾಟಗಾರರ ನೈತಿಕತೆಯೂ ಅವರು ಧರಿಸುತ್ತಿದ್ದ ಉಡುಪಿನಷ್ಟೇ ಬಿಳುಪಾಗಿತ್ತು. ಈಗ ಏನಾಗಿದೆ?

ಅಂದು ಗಾಂಧಿ ‘ಬ್ರಿಟೀಷರೇ, ದೇಶಬಿಟ್ಟು ತೊಲಗಿ ’ ಎಂದು ಕರೆ ನೀಡಿದ್ದರು. ದೇಶದ ಜನರಲ್ಲೂ ಈ ಸಂದೇಶವನ್ನು ಬೆಳೆಸಿದ್ದರು. ಆಗ ಗಾಂಧಿ ಯಾವುದನ್ನು ವಿರೋಧಿಸಿದ್ದರೋ ಅದನ್ನೇ ಈಗ ನಾವು ಬೆಂಬಲಿಸುತ್ತಿದ್ದೇವೆ. ವಿದೇಶಿಗರನ್ನು ದೇಶದಿಂದ ಹೊರದಬ್ಬಿದ ನಮ್ಮ ಹಿರಿಯರನ್ನು ನೆನಪಿಸಿಕೊಂಡು ನಾವು ವಿದೇಶಿಗರೇ ಬನ್ನಿ ಭಾರತಕ್ಕೆ, ನೆಲ, ನೀರು ಕೊಡುತ್ತೇವೆ ಹೂಡಿಕೆ ಮಾಡಿ ಬಂಡವಾಳ ಎಂದು ರತ್ನಗಂಬಳಿ ಹಾಸಿ ವಿದೇಶಗಳನ್ನು ಆಹ್ವಾನಿಸುತ್ತಿದ್ದೇವೆ. ಇದಕ್ಕೆ ನಾವು ಕೊಟ್ಟುಕೊಳ್ಳುವ ಸಮರ್ಥನೆಯೂ ನಾಜೂಕಾಗಿದೆ.

ನಾವು ಅನುಭವಿಸುತ್ತಿರುವುದು ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ. ಆರ್ಥಿಕ ಸಮಾನತೆ ಸಿಕ್ಕಿಲ್ಲ. ಆರ್ಥಿಕ ಶಕ್ತಿ ಬಲಪಡಿಸಿಕೊಳ್ಳಲು ಜಾಗತೀಕರಣ, ಉದಾರೀಕರಣಗಳ ಬಾಗಿಲುಗಳನ್ನು ತೆರೆದಿಟ್ಟಿದ್ದೇವೆ. ಅದು ಅನಿವಾರ್ಯ ಎನ್ನುವ ವಾದ ಮಂಡಿಸಿ ಸಮಾಧಾನಪಟ್ಟುಕೊಳ್ಳುತ್ತೇವೆ. ವಿದೇಶಿ ಬಂಡವಾಳದ ಹೊಳೆ ಹರಿಸಲು ರಾಜ್ಯಗಳು ಫಲವತ್ತಾದ ಭೂಮಿಯನ್ನು ಮುಂದಿಟ್ಟುಕೊಂಡು ವಿದೇಶಗಳಿಗಾಗಿ ಕಾಯುತ್ತಿರುವುದು ವಿಪರ್ಯಾಸವೇ ಸರಿ. ಸ್ವದೇಶಿ ವಸ್ತುಗಳನ್ನೇ ಬಳಸಿ ಎನ್ನುವ ಸಂದೇಶ ಕೊಟ್ಟಿದ್ದ ಗಾಂಧೀಜಿ ವಿದೇಶಿ ವಸ್ತುಗಳಿಗೆ ಬೆಂಕಿ ಹಚ್ಚಿಸಿದ್ದರು. ಆದರೆ ನಾವು ಈಗೇನು ಮಾಡುತ್ತಿದ್ದೇವೆ?

ಜಪಾನ್, ಚೀನಾ, ಥೈವಾನ್, ಸಿಂಗಾಪುರ, ಅಮೇರಿಕಾದಲ್ಲಿ ತಯಾರಾದ ಉತ್ಪನ್ನಗಳನ್ನೇ ಬಯಸುತ್ತಿದ್ದೇವೆ. ಮಾನಮುಚ್ಚುವ ಒಳಉಡುಪಿನಿಂದ ಹಿಡಿದು ತಿನ್ನುವ ಆಹಾರದವರೆಗೆ ವಿದೇಶಿ ಉತ್ಪನ್ನಗಳೇ ಆಗಬೇಕು ಎನ್ನುವಷ್ಟರಮಟಿಗೆ ಅವುಗಳ ದಾಸರಾಗಿಬಿಟ್ಟಿದ್ದೇವೆ. ನಮ್ಮ ಸುತ್ತಮುತ್ತಲೂ ಸಿಗುವ ಕಚ್ಛಾವಸ್ತುಗಳನ್ನೇ ಬಳಕೆ ಮಾಡಿಕೊಂಡು ವಿದೇಶಿ ಕಂಪೆನಿಗಳು ತಯಾರಿಸುವ ಸರಕೆಂದರೆ ನಮಗೆ ಆಪ್ಯಾಯಮಾನ. ನಮ್ಮತನವನ್ನು ನಾವು ಕಳೆದುಕೊಂಡಿದ್ದೇವೆ ಎನ್ನುವ ಕಲ್ಪನೆಯೂ ಬರದಂಥ ಸ್ಥಿತಿಯಲ್ಲಿದ್ದೇವೆ. ವಿದೇಶಿ ಕಲೆ, ಸಂಸ್ಕೃತಿಯೆಂದರೆ ಸೂಜಿಗಲ್ಲಿನಂತೆ ಆಕರ್ಷಿತರಾಗುತ್ತಿದ್ದೇವೆ. ದೇಸಿ ಕಲೆಗಳು, ಸಂಸ್ಕೃತಿಯೆಂದರೆ ಅಲರ್ಜಿ. ನಮ್ಮದಲ್ಲದ ಚಿಂತನೆಗಳು ನಮ್ಮ ತಲೆ ತುಂಬಿಕೊಳ್ಳುತ್ತಿವೆ.

ಇಷ್ಟಾದರೂ ನಾವು ಎಚ್ಚೆತ್ತುಕೊಂಡಿಲ್ಲ ಅಥವಾ ಎಚ್ಚೆತ್ತುಕೊಳ್ಳಬೇಕೆಂಬ ಅನಿವಾರ್ಯತೆ ಕಾಡುತ್ತಿಲ್ಲ. ಇಲ್ಲಿ ಗಳಿಸಿದ್ದನ್ನೆಲ್ಲಾ ವಿದೇಶಗಳಲ್ಲಿ ಹೂಡಿಕೆ ಮಾಡಿಯೋ, ಠೇವಣಿ ಇರಿಸಿಯೋ ಹಾಯಾಗಿದ್ದೇವೆ. ಅದನ್ನೇ ಕಪ್ಪು ಹಣವೆಂದು ಹೆಸರಿಸಿ ಒಂದು ಹೋರಾಟಕ್ಕೂ ಕಾರಣವಾಗಿದ್ದೇವೆ. ಗಾಂಧಿ, ನೆಹರೂ ಮೈದಾನಗಳು ಹೋರಾಟಕ್ಕೆ ಸೀಮಿತವಾಗಿವೆ ಹೊರತು ಅವರ ಹೋರಾಟವನ್ನು ಸ್ಮರಿಸುವುದಕ್ಕಾಗಿ ಅಲ್ಲ ಎನ್ನುವುದು ದುರಂತ. ಭ್ರಷ್ಟಾಚಾರ ಸ್ವಾತಂತ್ರ್ಯ ಬಂದ ಮೇಲೆ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ. ನೆಲ, ಜಲ ಮಾರಾಟದಲ್ಲೂ ನಮ್ಮನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ.

ಭಯೋತ್ಪಾದನೆ ನಾವು ಬದುಕುವ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದೆ. ಹೆಣ್ಣುಮಕ್ಕಳು ದಾರಿಯಲ್ಲಿ ಹಗಲು ಹೊತ್ತು ನಿರ್ಭಯವಾಗಿ ನಡೆದಾಡುವಂಥ ಅದೆಷ್ಟು ಸುರಕ್ಷಿತ ನಗರಗಳಿವೆ?

ಗಾಂಧೀಜಿ ಮಲಹೊರುವುದು ಅನಿಷ್ಟವೆಂದರು. ಪಂಕ್ತಿಭೇದ ಅಸಮಾನತೆಯ ಪ್ರತಿರೂಪವೆಂದರು. ಈಗಲೂ ಮಲಹೊರುವುದಿಲ್ಲವೇ? ಮಲದ ಗುಂಡಿಗಿಳಿದು ಕೊಳಚೆ ಬಾಚುವ ಕೈಗಳಿಂದಲೇ ಅವರು ಆಹಾರ ತಿನ್ನುತ್ತಿಲ್ಲವೇ? ದೇವಸ್ಥಾಗಳು ಸಹಭೋಜನ, ಸಮಾನತೆಯನ್ನು ಪ್ರೋತ್ಸಾಹಿಸುತ್ತಿವೆಯೇ? ಧಾರ್ಮಿಕ ಮುಖಂಡರು, ಸನ್ಯಾಸಿಗಳು ವರ್ಣವ್ಯವಸ್ಥೆಯನ್ನು ಪಾಲನೆ ಮಾಡುತ್ತಿಲ್ಲವೇ?

ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಚಳುವಳಿಗಾಗಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಸ್ವಾತಂತ್ರ್ಯ ಬಂದ ನಂತರವೂ ವಿಸರ್ಜನೆಯಾಗದೆ ಉಳಿದುಕೊಂಡಿತಲ್ಲಾ, ಅದರ ಮೂಲ ಸ್ವರೂಪ ಉಳಿದಿದೆಯೇ?. ಅಣ್ಣಾ ಹಜಾರೆ ಸ್ವಾತಂತ್ರ್ಯ ಸಿಕ್ಕಿದ ನಂತರ ಮಾಡಿದ ಭಾಷಣದ ಹಿಂದಿ ಪ್ರತಿಯನ್ನು ತಮ್ಮ ಬೆಂಬಲಿಗರಿಗೆ ಹಂಚಿ ಅಣ್ಣಾ ತಂಡವೂ ವಿಸರ್ಜನೆಯಾಗಬೇಕೆಂದು ಹೇಳಬೇಕಾಯಿತು. ಆದರೆ ತಂಡ ವಿಸರ್ಜನೆಯಾಯಿತು, ರಾಜಕೀಯ ಪಕ್ಷವಾಗಿ ರೂಪತಳೆಯಿತು,್. ಗಾಂಧಿವಾದಿ ಹೇಳಲಾಗದೆ ತಳಮಳಗೊಳ್ಳುತ್ತಿರುವುದು ವಾಸ್ತವ ಅಲ್ಲವೇ?

ಗಾಂಧೀಜಿ ಅವರ ಕಲ್ಪನೆಯ ಸ್ವಾತಂತ್ರ್ಯ ನಾವು ಈಗ ಅನುಭವಿಸುತಿರುವುದಲ್ಲ. ಇದು ನಮ್ಮದೇ ಸ್ವಾತಂತ್ರ್ಯ. ಗಾಂಧೀಜಿ ಈಗ ನಮ್ಮ ನಡುವೆ ಬದುಕಿದ್ದರೆ ನಿಜಕ್ಕೂ ವ್ಯಥೆ ಪಡುತ್ತಿದ್ದರು ನಮ್ಮ ಸ್ವಾತಂತ್ರ್ಯದ ಸುಖಕಂಡು. ಗಾಂಧಿ ಮಹಾತ್ಮಾ ನಮ್ಮನ್ನು ಕ್ಷಮಿಸಿ ಬಿಡು ಎನ್ನುವ ಕೋರಿಕೆ. ಯಾಕೆಂದರೆ ಅವರು ಹೇಳಿದ್ದು ಅದನ್ನೇ, ಆದ್ದರಿಂದಲೇ ನಮ್ಮನ್ನು ಕ್ಷಮಿಸುತ್ತಾರೆ ಎನ್ನುವ ವಿಶ್ವಾಸವಿದೆ.

ಸದನದ ಕಲಾಪಗಳೇಕೆ ಈಗ ಹೀಗೆ?


-ಚಿದಂಬರ ಬೈಕಂಪಾಡಿ


 

ಮೌಲ್ಯಗಳು ಎಲ್ಲಾ ರಂಗಗಳಲ್ಲೂ ಇಳಿಮುಖವಾಗುತ್ತಿವೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಚರ್ಚೆಯಾಗುತ್ತಿರುವ ಅಂಶ. ನಂಬಿಕೆ, ನಡವಳಿಕೆ, ಆಚಾರ, ವಿಚಾರಗಳಿರಬಹುದು, ಸಾಮಾಜಿಕ, ಆರ್ಥಿಕ, ಔದ್ಯಮಿಕ ಕ್ಷೇತ್ರವೇ ಆಗಿರಬಹುದು ಒಂದು ರೀತಿಯಲ್ಲಿ ಬದಲಾವಣೆಯ ಬಿರುಗಾಳಿಗೆ ಸಿಕ್ಕಿ ಥರಗುಟ್ಟುತ್ತಿವೆಯೇನೋ ಅನ್ನಿಸುತ್ತಿದೆ. ಹಾಗೆಂದು ಎಲ್ಲವೂ ನಿಂತ ನೀರಾಗಿರಬೇಕು ಎನ್ನುವ ವಾದವಲ್ಲ ಅಥವಾ ಬದಲಾವಣೆಯೇ ಬೇಡ ಎನ್ನುವ ಸಂಕುಚಿತ ದೃಷ್ಟಿಯೂ ಅಲ್ಲ.

ಉದಾಹರಣೆಗೆ ವಿಧಾನ ಮಂಡಲ, ಸಂಸತ್ತಿನ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ನಿಜಕ್ಕೂ ಹೀಗಾಗುತ್ತಿರುವುದು ಆತಂಕಕಾರಿ ಸಂಗತಿ. ಆದರೆ ಯಾಕೆ ಹೀಗಾಗುತ್ತಿದೆ ಎಂದು ಪ್ರಶ್ನೆ ಮಾಡುವುದು ಖಂಡಿತಕ್ಕೂ ಅಪರಾಧವಲ್ಲ. ಹಾಗೆ ನೋಡಿದರೆ ವಿಧಾನ ಮಂಡಲವಿರಬಹುದು, ಸಂಸತ್ತೇ ಆಗಿರಬಹುದು ಹಿಂದಿಗಿಂತಲೂ ಹೆಚ್ಚು ವಿದ್ಯೆ ಕಲಿತವರು ಆಯ್ಕೆಯಾಗಿ ಬರುತ್ತಿದ್ದಾರೆ. ಉದ್ಯಮಿಗಳು, ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದವರು ಕೂಡಾ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಹಿಂದಿಗಿಂತ ಈಗ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ, ವಿಚಾರಗಳ ಚರ್ಚೆ ಆಗುತ್ತಿಲ್ಲ. ಮೊದಲಿನಂತೆ ಚಿಂತನೆಗಳು ಸದಸ್ಯರ ಮಾತುಗಳಲ್ಲಿ, ವಾದ ಮಂಡನೆಯಲ್ಲಿ ಇಲ್ಲ. ಹರಿತವಾದ ಪ್ರಶ್ನೆಗಳು, ಮೊನಚಾದ ಉತ್ತರಗಳು ಕಂಪನ ಉಂಟುಮಾಡುತ್ತಿಲ್ಲ ಇತ್ಯಾದಿ ಕೊರತೆಗಳನ್ನು ಪಟ್ಟಿ ಮಾಡುತ್ತಾರೆ.

ಇದು ಎಷ್ಟರ ಮಟ್ಟಿಗೆ ನಿಜ ಮತ್ತು ಯಾಕೆ ಹೀಗೆ ಎನ್ನುವ ಕುರಿತು ಚಿಂತನೆ ಮಾಡುವುದು ಯೋಗ್ಯ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮವೊಂದರಲ್ಲಿ ಸದನದೊಳಗೆ ಚರ್ಚೆಯ ಗುಣಮಟ್ಟ ಕುಸಿಯುತ್ತಿದೆ. ವಾಟಾಳ್ ನಾಗರಾಜ್ ಅವರಂಥವರು ಸದನ ಪ್ರವೇಶಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಳೆದ ಮೂರು ದಶಕಗಳಿಂದ ಸದನದೊಳಗೆ-ಹೊರಗೆ ಜನಪ್ರತಿನಿಧಿಯಾಗಿ ಹೋರಾಟ ಮಾಡುತ್ತಲೇ ಬಂದ ಯಡಿಯೂರಪ್ಪ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ ಎಂದರು ಎನ್ನುವ ಕಾರಣಕ್ಕಾಗಿಯಲ್ಲ, ವಾಸ್ತವವಾಗಿ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ ಎನ್ನುವುದನ್ನು ಒಪ್ಪಲೇಬೇಕು.

ಇಲಾಖೆಗಳ ಬೇಡಿಕೆಯ ಮೇಲಿನ ಚರ್ಚೆಯಾಗುವ ಸಂದರ್ಭದಲ್ಲಿ ಮಾತನಾಡುವ ಸದಸ್ಯ, ಒಂದಷ್ಟು ಮಂದಿ ಆ ಇಲಾಖೆಯ ಕುರಿತು ಆಸಕ್ತಿ ಇರುವವರು ಮಾತ್ರ ಸದನದಲ್ಲಿರುವುದು ಇತ್ತೀಚಿನ ದಿನಗಳ ವಾಸ್ತವ ಸ್ಥಿತಿ. ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯ ವೇಳೆ ಸಂಬಂಧಪಟ್ಟ ಸಚಿವರೂ ಹಾಜರಾಗದಿರುವ ಉದಾಹರಣೆಗಳಿವೆ. ಪ್ರತಿಪಕ್ಷದ ಸದಸ್ಯ ಸರ್ಕಾರದ ಮೇಲೆ ಸವಾರಿ ಮಾಡುತ್ತಿದ್ದರೆ ಅದನ್ನು ಪ್ರತಿಭಟಿಸುವ ಅಥವಾ ಆ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಆಸಕ್ತಿಯೂ ಇಲ್ಲದೆ ತೂಕಡಿಸುವವರನ್ನೂ ಕಾಣುವುದಿದೆ. ಈ ಹಿನ್ನೆಲೆಯಲ್ಲಿ ಸದನದ ಕಲಾಪಗಳಲ್ಲಿ ಹಿಂದಿನಂತೆ ಚರ್ಚೆಗಳು ನಡೆಯುತ್ತಿಲ್ಲ ಎನ್ನುವುದನ್ನು ಇಂದಿನ ದಿನಗಳಿಗೆ ಹೋಲಿಸಿದರೆ ಒಪ್ಪಲೇಬೇಕು.

ಎಂಭತ್ತರ ದಶಕದಲ್ಲಿ ವಿಧಾನ ಮಂಡಲದ ಕಲಾಪಗಳನ್ನು ಪತ್ರಕರ್ತನಾಗಿ ವರದಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈಗಿನ ಕಲಾಪವನ್ನು ವಿಶ್ಲೇಷಿಸುವುದಾದರೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹೇಳಿದ ಮಾತುಗಳು ಕಟು ಸತ್ಯ. ಕನ್ನಡ ಚಳವಳಿಯ ವಾಟಾಳ್ ನಾಗರಾಜ್ ಸದನದಲ್ಲಿದ್ದರೆ ಕಲಾಪಕ್ಕೆ ರಂಗಿರುತ್ತಿತ್ತು. ತಮಾಷೆ, ಕೀಟಲೆ, ಲೇವಡಿ ಮೂಲಕವೇ ಸರ್ಕಾರ, ಮಂತ್ರಿಗಳ ಮೇಲೆ ಅವರು ಬೀಸುತ್ತಿದ್ದ ಮಾತಿನ ಚಾಟಿಯನ್ನು ಈಗ ಕಾಣಲು ಸಾಧ್ಯವಾಗುತ್ತಿಲ್ಲ (ಇವರೊಬ್ಬರಿಗೇ ಈ ಮಾತು ಸೀಮಿತವಲ್ಲ, ಬೇರೆಯವರೂ ಇದ್ದರು). ಮುಖ್ಯಮಂತ್ರಿಯಾಗಿ ರಾಮಕೃಷ ಹೆಗ್ಡೆ, ವೀರೇಂದ್ರ ಪಾಟೀಲ್, ಸ್ಪೀಕರ್ ಆಗಿ ಎಸ್.ಎಂ.ಕೃಷ್ಣ, ಡಿ.ಬಿ.ಚಂದ್ರೇಗೌಡ, ರಮೇಶ್ ಕುಮಾರ್, ಸಚಿವರಾಗಿ ಎಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಎಂ.ವೀರಪ್ಪ ಮೊಯ್ಲಿ, ಜೆ,ಎಚ್.ಪಟೇಲ್, ಕೆ.ಎಚ್.ರಂಗನಾಥ್, ಟಿ.ಎನ್.ನರಸಿಂಹಮೂರ್ತಿ, ಎಸ್.ಬಂಗಾರಪ್ಪ, ಎಂ.ಸಿ.ನಾಣಯ್ಯ, ಡಾ.ಜೀವರಾಜ್ ಆಳ್ವ, ಸಿ.ಭೈರೇಗೌಡ, ಪ್ರತಿಪಕ್ಷದ ಸಾಲಿನಲ್ಲಿ ಯಡಿಯೂರಪ್ಪ, ವಾಟಾಳ್ ನಾಗರಾಜ್ ಹೀಗೆ ಪಟ್ಟಿ ಮಾಡುತ್ತಾ ಸಾಗಬಹುದು. ಇವರೆಲ್ಲರ ಅಂದಿನ ವಿಚಾರ ಮಂಡನೆ, ವಾದ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ವಿಧಾನ, ಸಚಿವರುಗಳು ಪ್ರತಿಪಕ್ಷಗಳನ್ನು ನಿಭಾಯಿಸುತ್ತಿದ್ದ ಚಾಕಚಕ್ಯತೆ ಈಗಿನ ಕೊರತೆ ಎನ್ನುವುದು ವಾಸ್ತವ.

ಬಿ.ಎಂ.ಇದಿನಬ್ಬರಂಥ ಕೆಲವು ಮಂದಿ ಶಾಸಕರು ಬೆಳಿಗ್ಗೆ ಹತ್ತು ಗಂಟೆಗೆ ಸದನಕ್ಕೆ ಹಾಜರಾದರೆ ಮಧ್ಯರಾತ್ರಿವರೆಗೂ ಕಲಾಪದಲ್ಲಿ ಕುಳಿತಿರುತ್ತಿದ್ದರು. ಆಗ ಸದನಗಳಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ ರಾಜ್ಯದ ಸಮಗ್ರ ಚಿತ್ರಣ ಕೊಡುತ್ತಿದ್ದವು, ಸಮಸ್ಯೆಗಳನ್ನು ಬಿಡಿಸಲು ಮುಖ್ಯ ಅಸ್ತ್ರವಾಗುತ್ತಿದ್ದವು. ಪ್ರತಿಪಕ್ಷಗಳ ಸದಸ್ಯರಂತು ಹಸಿದ ಹೆಬ್ಬುಲಿಯಂತೆ ಸರ್ಕಾರದ ವಿರುದ್ಧ ಘರ್ಜಿಸುತ್ತಿದ್ದರು. ಸದನಕ್ಕೆ ಬರುವ ಮುನ್ನ ಸಚಿವರುಗಳು ಮಾತ್ರವಲ್ಲ, ಶಾಸಕರೂ ಕೂಡಾ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡು ಬರುತ್ತಿದ್ದುದನ್ನು ಹತ್ತಿರದಿಂದ ಕಂಡಿದ್ದೇನೆ. ಆದಿನಗಳಲ್ಲಿ ಸದನ ಸಮೀಕ್ಷೆಯನ್ನು ಮಾಧ್ಯಮಗಳು ಅತ್ಯಂತ ಗಂಭೀರವಾಗಿ ಮಾಡುತ್ತಿದ್ದವು. ಸದನ ಸಮೀಕ್ಷೆಯನ್ನು ಓದಿದರೆ ಕಲಾಪದಲ್ಲಿ ಕುಳಿತು ನೋಡಿದಂಥ ಅನುಭವ ಆ ಬರವಣಿಗೆಯಲ್ಲಿರುತ್ತಿತ್ತು.

ಸದನದಲ್ಲಿ ಚರ್ಚೆಯಾಗಬೇಕಾಗಿದ್ದ ಜನರ ಸಮಸ್ಯೆಗಳ ಸ್ಥಾನವನ್ನು ಈಗ ಪಕ್ಷ ರಾಜಕಾರಣ ಆಕ್ರಮಿಸಿಕೊಂಡಿದೆ. ರಾಜಕೀಯ ವಿಚಾರಧಾರೆಗಳನ್ನು, ಪರಸ್ಪರ ಟೀಕೆ ಮಾಡಿಕೊಳ್ಳುವುದನ್ನೇ ಕಾಣಬಹುದೇ ಹೊರತು ಯೋಜನೆಗಳ ಅನುಷ್ಠಾನದ ಬಗ್ಗೆ ಅಷ್ಟೇನೂ ಗಂಭೀರವಾಗಿ ಚರ್ಚೆಗಳಾಗುತ್ತಿಲ್ಲ ಎನ್ನಲೇಬೇಕು. ಹೀಗೆಂದ ಮಾತ್ರಕ್ಕೇ ಸದನದ ಕಲಾಪವನ್ನೇ ಋಣಾತ್ಮಕವಾಗಿ ನೋಡಲಾಗುತ್ತಿದೆ ಎಂದುಕೊಳ್ಳಬೇಕಾಗಿಲ್ಲ. ವಾಸ್ತವಾಂಶವನ್ನು ಅವಲೋಕಿಸುವ ಅಗತ್ಯವಿದೆ.

ಈಗಿನ ಕಲಾಪದಲ್ಲಿ ರಾಜಕೀಯದ ಜಿದ್ದು ಕಣ್ಣಿಗೆ ರಾಚುತ್ತದೆ. ನಿಂದನೆಯಲ್ಲೂ ಅದೇನೋ ಸುಖ ಅನುಭವಿಸುವ ಸ್ಥಿತಿ. ಉದಾಹರಣೆಗೆ ರಾಜ್ಯಸಭೆಯಲ್ಲಿ ಗುರುವಾರ ನಡೆದ ಒಂದು ಘಟನೆ ಈಗಿನ ಸಂಸತ್ ಕಲಾಪ ಸಾಗುತ್ತಿರುವ ದಿಕ್ಕನ್ನು ಪುಷ್ಠೀಕರಿಸಬಲ್ಲುದು. ಅಸ್ಸಾಂ ದಳ್ಳುರಿಯ ಬಗ್ಗೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಉತ್ತರಿಸುತ್ತಿದ್ದ ಸಂದರ್ಭ ಸದಸ್ಯೆ ಜಯಾ ಬಚ್ಚನ್ ಮಧ್ಯೆಪ್ರವೇಶಿಸಿದಾಗ ಅತ್ಯಂತ ಜವಾಬ್ದಾರಿಯುತ ಹುದ್ದೆಯಲ್ಲಿರುವ ಶಿಂಧೆ ’ಮೇಡಂ ಇದು ಸಿನಿಮಾದ ವಿಚಾರವಲ್ಲ’ ಎನ್ನುವ ಮೂಲಕ ಕ್ಷಮೆಯಾಚಿಸಬೇಕಾಯಿತು. ರಾಜ್ಯಸಭೆ ಪ್ರವೇಶಿಸಿರುವ ಆಕೆ ಈ ದೇಶದ ಓರ್ವ ಕಲಾವಿದೆ. ಆಕೆ ಅತ್ಯಂತ ಗಂಭೀರವಾದ ಅಸ್ಸಾಂ ಗಲಭೆಯ ಕುರಿತು ಪ್ರತಿಕ್ರಿಯೆಸಲು ಮುಂದಾದಾಗ ಶಿಂಧೆ ಆಡಿದ ಮಾತು ಕಲಾವಿದೆಗೆ ಮಾಡಿದ ಅವಮಾನ. ಓರ್ವ ಸಿನಿಮಾ ನಟಿ ಸಿನಿಮಾ ಬಗ್ಗೆಯೇ ಮಾತನಾಡಬೇಕು ಎನ್ನುವ ಚೌಕಟ್ಟು ಹಾಕಿನೋಡುವ ಪ್ರವೃತ್ತಿಯೇ ಆತಂಕಕಾರಿ. ಗೃಹ ಸಚಿವರೇ ಕ್ಷಮೆಯಾಚಿಸಬೇಕಾಗಿ ಬಂದದ್ದು ದುರಂತವೇ ಸರಿ.

ಬಿಜೆಪಿಯ ಹಿರಿಯ ತಲೆ, ಅತ್ಯುತ್ತಮ ಸಂಸದೀಯಪಟು ಎಲ್.ಕೆ.ಅಡ್ವಾಣಿ ಅವರು ಲೋಕಸಭೆಯಲ್ಲಿ ಯುಪಿಎ ವಿರುದ್ಧ ಹರಿಹಾಯ್ದು ಬಳಕೆ ಮಾಡಿದ ಪದ ಕೋಲಾಹಲಕ್ಕೆ ಕಾರಣವಾಯಿತು. ಆರು ದಶಕಗಳನ್ನು ರಾಷ್ಟ್ರರಾಜಕಾರಣದಲ್ಲಿ ಕಳೆದಿರುವ ಅಡ್ವಾಣಿ ಅವರು ’ಅನೈತಿಕ’ ಎನ್ನುವ ವ್ಯಾಖ್ಯಾನಕೊಟ್ಟದ್ದು ಆಘಾತಕಾರಿ ಕೂಡಾ. ಬೇರೆ ಬೇರೆ ಕಾರಣಗಳಿಗಾಗಿ ಆ ಪದವನ್ನು ಸಮರ್ಥಿಸಿಕೊಳ್ಳಬಹುದು ಎನ್ನುವುದು ಬೇರೆ ವಿಚಾರ. ಆದರೆ ಕಲಾಪದಲ್ಲಿ ಕೇಳಿಬರುತ್ತಿರುವ ಟೀಕೆಗಳಿಗೆ ಇಂಥ ಘಟನಾವಳಿಗಳು ಪೂರಕವಾಗುತ್ತವೆ ಅನ್ನಿಸುವುದಿಲ್ಲವೇ?. ಹಾಗಾದರೆ ಈಗ ಹೇಳಿ ಕಲಾಪಗಳ ಗುಣಮಟ್ಟ ಕುಸಿಯುತ್ತಿಲ್ಲವೇ? ಹೀಗಾಗದಂತಾಗಲು ಮುಂದೇನು ಮಾಡಬೇಕು? ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಇದು ಚರ್ಚೆಗೆ ಒಳಪಡಬೇಕು.

ಅಣ್ಣಾ, ನಿಮ್ಮ ಅಖಾಡ ಅದಾಗಿರಲಿಲ್ಲ!


-ಚಿದಂಬರ ಬೈಕಂಪಾಡಿ


ಥಿಯರಿಯಲ್ಲಿ ಅತ್ಯುತ್ತಮ ಅಂಕ ಪಡೆಯುವ ವಿದ್ಯಾರ್ಥಿ ಪ್ರಾಕ್ಟಿಕಲ್‌ನಲ್ಲೂ ಅದಕ್ಕೆ ಸರಿಸಮನಾದ ಅಂಕ ಪಡೆಯಬೇಕು, ಅದು ನಿರೀಕ್ಷೆ. ಆದರೆ ಅದೆಷ್ಟೋ ಸಂದರ್ಭದಲ್ಲಿ ಹಾಗೆ ಆಗುವುದಿಲ್ಲ. ಥಿಯರಿಯಲ್ಲಿ ಕನಿಷ್ಠ ಅಂಕ ಪಡೆದವ ಪ್ರಾಕ್ಟಿಕಲ್‌ನಲ್ಲಿ ಗರಿಷ್ಠ ಅಂಕ ಪಡೆಯುವ ಸಾಧ್ಯತೆಗಳಿರುತ್ತವೆ. ಒಬ್ಬನೇ ವಿದ್ಯಾರ್ಥಿಯಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್‌ನಲ್ಲಿ ಯಾಕೆ ಇಂಥ ವ್ಯತ್ಯಾಸಗಳಾಗುತ್ತವೆ? ಥಿಯರಿ ಪುಸ್ತಕದಿಂದ ಪಡೆಯುವ ಅನುಭವ. ಬರೆದಿಟ್ಟ ಅನುಭವವನ್ನು ಓದಿಕೊಂಡು ಹಾಗೆಯೇ ಬರೆದುಬಿಡುತ್ತಾನೆ. ಅದರಲ್ಲಿ ಅವನ ಹೂಡಿಕೆ ಬೌದ್ಧಿಕ ಬಂಡವಾಳ ಮಾತ್ರ. ಪ್ರಾಕ್ಟಿಕಲ್ ಅಂದರೆ ಬೌದ್ಧಿಕ ಬಂಡವಾಳದ ಜೊತೆಗೆ ತನ್ನ ಗೆಯ್ಮೆಯನ್ನೂ ಹೂಡಬೇಕಾಗುತ್ತದೆ.

ಒಂದು ಶಿಲ್ಪವನ್ನು ಕಡೆಯುವ ಕುರಿತು ಥಿಯರಿ ಓದಿ ಬರೆದು ಬಿಡಬಹುದು. ಆದರೆ ಅದೇ ಶಿಲ್ಪವನ್ನು ಅವನಿಗೆ ಕೆತ್ತಲು ಕೊಟ್ಟರೆ ಖಂಡಿತಕ್ಕೂ ಕೆತ್ತಲಾರ. ಮನಸ್ಸಿನಲ್ಲಿ ಅವನು ಮೂಲಶಿಲ್ಪಕ್ಕಿಂತಲೂ ಸುಂದರವಾದ ಶಿಲ್ಪವನ್ನು ಕೆತ್ತಿನಿಲ್ಲಿಸಿಬಿಡುತ್ತಾನೆ. ಆದರೆ ಅದು ಅವನ ಒಳಗಣ್ಣಿಗೆ ಮಾತ್ರ ಕಾಣುತ್ತದೆ, ಹೊರಗಿನವರ ಕಣ್ಣಿಗೆ ಕಾಣಲು ಹೇಗೆ ತಾನೇ ಸಾಧ್ಯ? ಥಿಯರಿ ಮತ್ತು ಪ್ರಾಕ್ಟಿಕಲ್ ಎರಡರಲ್ಲೂ ಏಕರೂಪದ ಸಾಧನೆ ಸಾಧ್ಯವಿಲ್ಲದ ವಿದ್ಯಾರ್ಥಿಯ ಸ್ಥಿತಿ ಅಣ್ಣಾ ಮತ್ತವರ ತಂಡದ್ದು. ಅಣ್ಣಾ ಮತ್ತು ಅವರ ತಂಡ ಥಿಯರಿ ಹೇಳುತ್ತಲೇ ಹದಿನೆಂಟು ತಿಂಗಳು ದೇಶದ ಜನಮಾನಸದಲ್ಲಿ ನೆಲೆಯೂರಿದರು.

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದು ಸಹಜವಾಗಿತ್ತು ಮತ್ತು ಅದು ಅಣ್ಣಾ ತಂಡದ ಥಿಯರಿ ಮಾತ್ರವಲ್ಲಾ ದೇಶದ ಶೇ.90ರಷ್ಟು ಜನರ ನಿಜವಾದ ಅನುಭವ ಕೂಡಾ. ಆದರೆ ಥಿಯರಿಯನ್ನು ಪ್ರಾಕ್ಟಿಕಲ್ ಹಂತಕ್ಕೆ ತರುವುದು ಅದೆಷ್ಟು ಕಠಿಣ ಎನ್ನುವುದಕ್ಕೆ ಛಿದ್ರವಾದ ಅಣ್ಣಾ ತಂಡವೇ ಸಾಕ್ಷಿ. ಪ್ರಬಲ ಲೋಕಪಾಲ್ ಜಾರಿಯಾಗಬೇಕು ಎನ್ನುವುದು ಥಿಯರಿ. ಜಾರಿಗೆ ಮಾಡುವುದು ಪ್ರಾಕ್ಟಿಕಲ್. ಥಿಯರಿಯಲ್ಲಿ ಅಣ್ಣಾ ತಂಡ ಅತ್ಯುತ್ತಮ ಸಾಧನೆ ಮಾಡಿತು, ಆದರೆ ಪ್ರಾಕ್ಟಿಕಲ್‌ನಲ್ಲಿ ಪರಾಭವಗೊಂಡಿತು. ಜಾರಿ ಮಾಡಬೇಕಾಗಿದ್ದವರು ಪ್ರಾಕ್ಟಿಕಲ್‌ನಲ್ಲಿ ಗೆದ್ದರು.

ಹಾಗೆ ನೋಡಿದರೆ ಅಣ್ಣಾ ಭ್ರಷ್ಟಾಚಾರದ ವಿರುದ್ಧ ಎತ್ತಿದ ಧ್ವನಿ ಈಗಲೂ ಸಮಂಜಸ, ಅವರ ಆರಂಭದ ಹೆಜ್ಜೆಯೂ ಸಮರ್ಪಕ. ಆದರೆ ಅವರು ಎಡವಿದ್ದು ಎಲ್ಲಿ ಎನ್ನುವುದು ಈಗಿನ ಸ್ಥಿತಿಯಲ್ಲಿ ಚರ್ಚೆಗೆ ಯೋಗ್ಯ. ತುತ್ತು ಕೂಳು ತಿನ್ನಲು ಅನುವಾಗುವಂತೆ ಕೂಲಿಗಾಗಿ ಕಾಳು ಯೋಜನೆಯಿಂದ ಹಿಡಿದು ದೇಶವನ್ನು ರಕ್ಷಿಸಲು ಖರೀದಿಸುವ ರಕ್ಷಣಾ ಸಲಕರಣೆಗಳ ಖರೀದಿ ತನಕ ಭ್ರಷ್ಟಾಚಾರದ ಕಮಟುವಾಸನೆ ಮೂಗಿಗೆ ಬಡಿಯುತ್ತದೆ. ಸತ್ತ ಹೆಣದ ಶವಪರೀಕ್ಷೆಯಿಂದ ಹಿಡಿದು ಉಸಿರಾಡಿಸುವ ಜೀವರಕ್ಷಕ ಔಷಧಿಯ ತನಕ ಭ್ರಷ್ಟಾಚಾರವಿದೆ ಅಂದ ಮೇಲೆ ಇದರ ಬೇರುಗಳ ಆಳ ಅದೆಷ್ಟು ಎನ್ನುವುದು ಗೋಚರವಾಗುತ್ತದೆ. ಇಂಥ ಬೇರುಗಳನ್ನು ಕೀಳಬೇಕಾದರೆ ಅದಕ್ಕೆ ಬೇಕಾದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳ ಬೇಕಾಗಿತ್ತು. ಪಾರ್ಥೇನಿಯಮ್ ಗಿಡದಂತೆ ಬೆಳೆದು ನಿಂತಿರುವ ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತು ಹಾಕಬೇಕೆನ್ನುವ ಸಂಕಲ್ಪ ಅಣ್ಣಾ ಅವರ ಮಾನಸಿಕ ಥಿಯರಿ ಹೊರತು ಅದು ಪುಸ್ತಕ ಥಿಯರಿ ಆಗಿರಲಿಲ್ಲ.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮಹಾನ್ ಕ್ರಾಂತಿಗೆ ನಾಂದಿ ಹಾಡಿದರು. ಶೋಷಣೆ, ಸಾಮಾಜಿಕ ಅಸಮಾನತೆಯ ವಿರುದ್ಧ ಸೆಟೆದು ನಿಲ್ಲುವ ಮುನ್ನ ಅವುಗಳ ಕ್ರೌರ್ಯವನ್ನು ತುಂಬಾ ಹತ್ತಿರದಿಂದ ನೋಡಿದ್ದರು. ರಾಜನ ಆಡಳಿತದ ಭಾಗವಾಗಿದ್ದ ಬಸವಣ್ಣ ಅದರ ವಿರುದ್ಧವೇ ಹೋರಾಟಕ್ಕಿಳಿದು ಯಶಸ್ಸು ಕಂಡರು. ಒಬ್ಬ ಕಳ್ಳನ ಕೈಚಳಕವನ್ನು ಮತ್ತೊಬ್ಬ ಕಳ್ಳ ಗ್ರಹಿಸುವಷ್ಟು ಸುಲಭವಾಗಿ ಕಳ್ಳನಲ್ಲದಿದ್ದವನು ಗ್ರಹಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರಿ ಮತ್ತು ಭ್ರಷ್ಟಾಚಾರದ ಅರಿವಿರದ ವ್ಯಕ್ತಿಗಳ ನಡುವಿನ ವ್ಯತ್ಯಾಸವೂ ಇದೇ ಆಗಿದೆ.

ಅಣ್ಣಾ ಭ್ರಷ್ಟಾಚಾರ ಮಾಡಿದವರಲ್ಲ. ಆದರೆ ಭ್ರಷ್ಟಾಚಾರದ ಬಗ್ಗೆ ಒಳನೋಟವಿದೆ. ಅಣ್ಣಾ ತಂಡದಲ್ಲಿದ್ದವರು ಭ್ರಷ್ಟ ವ್ಯವಸ್ಥೆಯ ಅರಿವಿದ್ದವರು. ಆಡಳಿತ ಯಂತ್ರದ ಒಳಗಿದ್ದು ಹೊರಬಂದವರು. ಆದ್ದರಿಂದಲೇ ಅವರಿಗೆ ಭ್ರಷ್ಟಾಚಾರದ ಬೇರುಗಳ ಸ್ಪಷ್ಟ ಕಲ್ಪನೆಯಿತ್ತು. ಈ ಕಾರಣಕ್ಕಾಗಿ ಅಣ್ಣಾ ಮತ್ತವರ ತಂಡ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಮತೋಲನದ ತಂಡವಾಗಿ ಜನರಿಗೆ ಗೋಚರವಾಗಿತ್ತು. ಈ ತಂಡದಲ್ಲಿ ಬೌದ್ಧಿಕವಾದ ಅನುಭವ ಧಾರಾಳವಾಗಿತ್ತು, ಜೊತೆಗೆ ಯಾರ ಬೌದ್ಧಿಕತೆ ಹೆಚ್ಚು ಎನ್ನುವ ಆಂತರಿಕ ಮೇಲಾಟವೂ ಇತ್ತು. ತಮ್ಮದೇ ಆಂತರಿಕ ತುಡಿತ ಅಣ್ಣಾತಂಡದ ಧ್ವನಿಯಾಗಬೇಕು ಎನ್ನುವ ಹಂಬಲವೂ ಇಣುಕತೊಡಗಿತು. ಇಂಥ ಒಳತುಡಿತದ ತಾಕಲಾಟಗಳು ಮಾಧ್ಯಮಗಳ ಮೂಲಕ ಅಣ್ಣಾತಂಡದ ಒಡೆದ ಸ್ವರಗಳಾಗಿ ಕೇಳಿಸತೊಡಗಿದ್ದವು. ಇವೆಲ್ಲವನ್ನೂ ಅಣ್ಣಾ ಗ್ರಹಿಸಲಾಗದಷ್ಟು ದಡ್ಡರೆಂದು ಆ ತಂಡದಲ್ಲಿದ್ದ ಕೆಲವರು ಸ್ವಯಂ ನಿರ್ಧಾರಕ್ಕೆ ಬಂದದ್ದು ದುರ್ದೈವ.

ಅಣ್ಣಾತಂಡದ ಸಾಮೂಹಿಕ ನಿರ್ಧಾರ ತಂಡದ ವೇದಿಕೆಯಲ್ಲಿ ಆಗುವ ಬದಲು ಅವರವರ ಮನೆಗಳಲ್ಲಾಗತೊಡಗಿತು. ತಂಡದ ಬುದ್ಧಿವಂತರು ಹೇಳುವ ಮಾತು ಅಣ್ಣಾ ಅವರ ಬಾಯಿಯಿಂದ ಬರುವಂತಾಯಿತು. ಅಣ್ಣಾ ಅವರಿಗೆ ಆಂಗ್ಲಭಾಷೆಯ ಅರಿವಿಲ್ಲದ ಕಾರಣ ಅತ್ಯಂತ ಗಂಭೀರ ವಿಚಾರಗಳು ಮತ್ತು ಅಣ್ಣಾ ಅವರಿಗೆ ಗೊತ್ತಿಲ್ಲದ ಅಂಶಗಳು ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬಂದು ಎಡವಟ್ಟು ಉಂಟುಮಾಡಿದವು. ಇದನ್ನೂ ಅಣ್ಣಾ ಸಹಿಸಿಕೊಂಡರು. ಇಡೀ ಹೋರಾಟದ ದಿಕ್ಕು ಕವಲು ದಾರಿಹಿಡಿದದ್ದು ಬಾಬಾ ರಾಮ್‌ದೇವ್ ಅಖಾಡಕ್ಕಿಳಿದಾಗ ಎನ್ನುವುದನ್ನು ಮರೆಯುವಂತಿಲ್ಲ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹೋರಾಟದ ದಾರಿ ಹಿಡಿದು ಜನರ ಚಳವಳಿಯನ್ನಾಗಿ ರೂಪಿಸುತ್ತಿದ್ದರೆ ಅದೇ ಹೊತ್ತಿಗೆ ಬಾಬಾ ರಾಮ್‌ದೇವ್ ಕಪ್ಪು ಹಣವನ್ನು ಭಾರತಕ್ಕೆ ತರುವ ಹೋರಾಟಕ್ಕಿಳಿದರು. ಈ ಮೂಲಕ ಜಂತರ್ ಮಂತರ್, ರಾಮಲೀಲಾ ಮೈದಾನದಲ್ಲಿ ಸೇರುತ್ತಿದ್ದ ಜನರು ಇಬ್ಬರು ಹೋರಾಟಗಾರರ, ಎರಡು ಭಿನ್ನಮುಖಗಳನ್ನು ಕಾಣತೊಡಗಿದರು. ಇದು ಒಂದು ನೆಲೆಯ ಗುರಿ ಹಿಡಿದು ಸಾಗುತ್ತಿದ್ದ ಚಳವಳಿ ಕವಲು ದಾರಿಯಲ್ಲಿ ಸಾಗಲು ಕಾರಣವಾಯಿತು.

ಅಣ್ಣಾ ಅವರನ್ನು ಜನರು ನೋಡುತ್ತಿದ್ದ ವಿಧಾನ, ಜನರು ಅಣ್ಣಾ ಅವರನ್ನು ಗ್ರಹಿಸುತ್ತಿದ್ದ ರೀತಿಗೂ ರಾಮ್‌ದೇವ್ ಅವರು ಜನರನ್ನು ನೋಡುತ್ತಿದ್ದ ವಿಧಾನ, ಜನರು ಅವರನ್ನು ಗ್ರಹಿಸುತ್ತಿದ್ದ ರೀತಿ ಭಿನ್ನವಾಗಿತ್ತು. ಅಣ್ಣಾ ಸಾಮಾಜಿಕ ಹೋರಾಟಗಾರರಾಗಿ ಕಾಣಿಸಿದರೆ ರಾಮ್‌ದೇವ್ ಅವರ ಕಾವಿಯೊಳಗೆ ಸುಪ್ತವಾಗಿದ್ದ ನಾಯಕತ್ವದ ಹಂಬಲ ವ್ಯಕ್ತವಾಗುತ್ತಿತ್ತು. ಏಕಕಾಲದಲ್ಲಿ ಧುತ್ತನೆ ಬಿದ್ದ ಎರಡು ಚಳವಳಿಗಳನ್ನು ಆಯ್ಕೆ ಮಾಡುವ ಸಂದಿಗ್ಧತೆ ಜನರಿಗಾಯಿತು. ಇದನ್ನೂ ಜನರು ಸಮಚಿತ್ತದಿಂದಲೇ ನೋಡಿದರು.

ಈ ಎರಡೂ ಹೋರಾಟಗಳ ಟಾರ್ಗೆಟ್ ದೇಶದ ಶಕ್ತಿಕೇಂದ್ರ ಸಂಸತ್ ಎನ್ನುವುದು ಅತ್ಯಂತ ಮುಖ್ಯ. ದೇಶ, ಭಾಷೆ, ಸಂಸ್ಕೃತಿ, ಹಕ್ಕು, ಕರ್ತವ್ಯ ಹೀಗೆ ನಮ್ಮನ್ನು ಆಳುವ ಅಧಿಕಾರ ಸ್ಥಾನ. ಮತ್ತೊಂದು ರೀತಿಯಲ್ಲಿ ಈ ಕೇಂದ್ರ ನಮ್ಮ ಪ್ರತಿಬಿಂಬ. ನಮ್ಮೆಲ್ಲರ ಪರವಾಗಿ ಅವರಿದ್ದಾರೆ. ನಮ್ಮಿಂದಾಗಿ ಅವರು ಅಲ್ಲಿದ್ದಾರೆ. ಅವರಿಗೆ ಅವರದ್ದೇ ಆದ ಸ್ಥಾನಮಾನ, ಪರಮಾಧಿಕಾರವನ್ನು ಸಂವಿಧಾನ ಕೊಟ್ಟಿದೆ. ಆ ಶಕ್ತಿ ಕೇಂದ್ರದೊಳಗೆ ನಮಗೆ ಬೇಕಾದ ಕಾನೂನನ್ನು ಅವರು ಮಾಡಬೇಕು. ನಾವು ಹೊರಗಿನಿಂದ ಹೇಳುವುದು ಕಾನೂನಾಗುವುದಿಲ್ಲ. ಇದು ವ್ಯತ್ಯಾಸ ನಮಗೆ ಮತ್ತು ಅದರೊಳಗಿರುವವರಿಗೆ. ನಮ್ಮ ಪರವಾಗಿ ಕಾನೂನು ಮಾಡದವರನ್ನು ಮತ್ತೆ ಆ ಕೇಂದ್ರದೊಳಗೆ ಕಾಲಿಡದಂತೆ ಮಾಡುವ ಪರಮಾಧಿಕಾರ ನಮಗಿದೆ ಹೊರತು ಅವರ ಪರಮಾಧಿಕಾರದೊಳಗೆ ಹಸ್ತಕ್ಷೇಪಮಾಡುವ ಅಧಿಕಾರ ನಮಗಿಲ್ಲ. ಇದು ಓರ್ವ ಸಾಮಾನ್ಯವಾಗಿ ನಾನು ಗ್ರಹಿಸಿದ ವಿಧಾನ, ಇದಕ್ಕಿಂತಲೂ ಭಿನ್ನವಾಗಿ ಹಕ್ಕು, ಕರ್ತವ್ಯಗಳನ್ನು ವ್ಯಾಖ್ಯಾನಿಸುವುದೂ ಸಾಧ್ಯವಿದೆ.

ಇಂಥ ವಾಸ್ತವ ಸ್ಥಿತಿಯಲ್ಲಿ ಸಂಸತ್ತನ್ನು ಹೈಜಾಕ್ ಮಾಡುವಂಥ ಅಥವಾ ಶಕ್ತಿಕೇಂದ್ರದ ಅವಗಣನೆಯನ್ನು ಯಾವುದೇ ಚಳವಳಿ ಮಾಡಬಾರದು. ಅಣ್ಣಾ ತಂಡ ಜನಬೆಂಬಲವನ್ನು ಮತಗಳಾಗಿ ಪರಿವರ್ತಿಸುವ ಬದಲು ಆ ಶಕ್ತಿಕೇಂದ್ರದೊಳಗಿರುವವರಿಗೆ ಹೊರಗಿದ್ದೇ ಪರ್ಯಾಯವೆನ್ನುವಂತೆ ವರ್ತಿಸಿದ್ದು ಅತಿಯಾಯಿತು ಎನ್ನುವ ಅನಿಸಿಕೆ ಶಕ್ತಿಕೇಂದ್ರದೊಳಗಿನವರನ್ನು ವಿರೋಧಿಸುವವರಲ್ಲೂ ಮೂಡುವಂತಾದದ್ದು ದುರಾದೃಷ್ಟ. ಇದು ಚಳವಳಿಗಾದ ಮೊದಲ ಹಿನ್ನಡೆ.

ಅಣ್ಣಾ ಅವರು ಒಬ್ಬ ವ್ಯಕ್ತಿಯಾಗಿ ಚಳವಳಿಯ ಹಾದಿ ಹಿಡಿದಾಗ, ಉಪವಾಸ ಕುಳಿತಾಗ ಶಕ್ತಿಕೇಂದ್ರದೊಳಗೆ ತಲ್ಲಣ ಉಂಟಾಗಿತ್ತು. ಅಂಥ ಶಕ್ತಿ ಅಣ್ಣಾ ಅವರ ಮೊದಲ ಹೆಜ್ಜೆಯಲ್ಲಿತ್ತು. ಆದರೆ ಅಣ್ಣಾ ತಂಡವಾಗಿ ಕಾಣಿಸಿಕೊಂಡಮೇಲೆ, ಅದರಲ್ಲೂ ಒಡಕುಗಳು ಬೆಳಕಿಗೆ ಬಂದ ಮೇಲೆ ಶಕ್ತಿಕೇಂದ್ರ ಇಳಿವಯಸ್ಸಿನ ಅಣ್ಣಾ ಉಪವಾಸಕ್ಕೆ ಕುಳಿತಾಗ ನಿರ್ಲಿಪ್ತವಾಗಿಬಿಡುತ್ತದೆ. ಅಂದರೆ ಉಪವಾಸ ಎನ್ನುವುದು ಅಹಿಂಸಾತ್ಮಕ ಚಳವಳಿಯ ಕೊನೆಯ ಅಸ್ತ್ರ ಮತ್ತು ಅದು ಅತ್ಯಂತ ನಿರ್ಣಾಯಕವಾದ ಅಸ್ತ್ರವೂ ಹೌದು.

ಗಾಂಧೀಜಿಯವರು ಬ್ರಿಟಿಷ್ ಸಾಮ್ರಾಜ್ಯವನ್ನೇ ಹಿಮ್ಮೆಟ್ಟಿಸಿದ್ದು ಕೂಡಾ ಇಂಥ ಅಹಿಂಸಾ ಚಳವಳಿಯ ಮೂಲಕವೇ. ಅಂಥದ್ದೇ ಚಳವಳಿಯನ್ನು ಹೂಡಿದ ಅಣ್ಣಾ ಯಾವುದೇ ಫಲವಿಲ್ಲದೆ ತಾವಾಗಿಯೇ ಶಸ್ತ್ರತ್ಯಾಗಮಾಡಿದಂತೆ ಉಪವಾಸ ನಿಲ್ಲಿಸಿದ್ದೂ ಕೂಡಾ ಚಳವಳಿಯಲ್ಲಿ ಶಕ್ತಿ ಇರಲಿಲ್ಲ ಎನ್ನುವುದಕ್ಕೆ ಸಾಕ್ಷಿ. ಪ್ರತಿಕ್ರಿಯೆ ಎನ್ನುವುದು ಕ್ರಿಯೆಯನ್ನು ಅವಲಂಬಿಸಿರುತ್ತದೆ. ನಿರಂತರವಾದ ಕ್ರಿಯೆಗೆ ನಿರಂತರವಾದ ಪ್ರತಿಕ್ರಿಯೆ ನಿರೀಕ್ಷಿಸಬಹುದು, ಆದರೆ ಅದು ಬರಲೇಬೇಕೆಂದಿಲ್ಲ. ಅಣ್ಣಾ ಉಪವಾಸದಲ್ಲೂ ಇದೇ ಆಗಿದ್ದು. ಉಪವಾಸ ಅಣ್ಣಾ ಅವರ ನಿರಂತರ ಅಸ್ತ್ರ ಎನ್ನುವಂತಾಯಿತು. ಒಂದು ರೀತಿಯಲ್ಲಿ ಅಣ್ಣಾ ಅವರ ಉಪವಾಸವನ್ನು ಶಕ್ತಿಕೇಂದ್ರ ನಿರ್ಲಕ್ಷ್ಯಕ್ಕೆ ಯೋಗ್ಯ ಎನ್ನುವಂತೆ ಗ್ರಹಿಸಿತು ಮಾತ್ರವಲ್ಲ ಹಾಗೆಯೇ ನಡೆದುಕೊಂಡಿತು.

ಈ ಘಟನೆವರೆಗೂ ಅತ್ಯಂತ ಸಹನೆಯಿಂದಲೇ ಇದ್ದ ಅಣ್ಣಾ ತಂಡದ ಕೆಲವರಲ್ಲಿ ವ್ಯಕ್ತವಾಗುತ್ತಿದ್ದ ಶಕ್ತಿಕೇಂದ್ರ ಪ್ರವೇಶಮಾಡುವ ಮಾನಸಿಕ ತುಡಿತವನ್ನು ಗ್ರಹಿಸಿ ಜರ್ಝರಿತರಾದರು. ತಾವೇ ಶಕ್ತಿಕೇಂದ್ರ ಪ್ರವೇಶ ಮಾಡಬೇಕೆನ್ನುವ ತುಡಿತ ಜನರಲ್ಲಿ ಹುಟ್ಟುವ ಮುನ್ನವೇ ತಾವೇ ಪ್ರವೇಶಿಸಬೇಕೆನ್ನುವ ತುಡಿತವನ್ನು ಅದುಮಿಟ್ಟುಕೊಳ್ಳಲಾಗದ ಮತ್ತು ಅದೇ ಮೂಲ ಉದ್ದೇಶವಾಗಿದ್ದ ತನ್ನವರ ಆಶಯವನ್ನು ಗ್ರಹಿಸಿದರು ಅಣ್ಣಾ. ಆದರೆ ಆ ತುಡಿತಕ್ಕೆ ಅವರು ಭಾವೋದ್ವೇಗಗೊಂಡದ್ದು ಮಾತ್ರ ಅಚ್ಚರಿಯೆನಿಸಿತು. ಪರ್ಯಾಯ ಶಕ್ತಿ ರೂಪಿಸುವ ಅಣ್ಣಾ ಆಶಯ ತಂಡದ ಕೆಲವರಲ್ಲಿ ಪರ್ಯಾಯ ರಾಜಕೀಯ ಪಕ್ಷವಾಗಿ ಅಂಕುರಿಸಿತು. ಈ ಹಂತದಲ್ಲಿ ನಿಜಕ್ಕೂ ಅಣ್ಣಾ ಎಚ್ಚೆತ್ತುಕೊಂಡರು. ಅಣ್ಣಾ ತಂಡವನ್ನು ವಿಸರ್ಜಿಸಿ ನಿರುಮ್ಮಳರಾದರು. ಇದು ಅವರು ಇಟ್ಟ ಸರಿಯಾದ ಹೆಜ್ಜೆ. ತಂಡವಾಗಿ ಅಣ್ಣಾ ಮತ್ತಷ್ಟು ದಿನ ಮುಂದುವರಿದಿದ್ದರೆ ಅವರಿಗೆ ಗೊತ್ತಿಲ್ಲದಂತೆಯೇ ಮತ್ತೊಂದು ತಪ್ಪಿಗೆ ನಾಂದಿಯಾಗುತ್ತಿದ್ದರು. ಪಕ್ಷ ರಾಜಕಾರಣ, ಅಣ್ಣಾ, ನಿಮ್ಮ ಅಖಾಡವಲ್ಲ. ಹೆಸರಿಲ್ಲದ ಪಕ್ಷಕ್ಕೆ ನೀವೇ ನಾಯಕ. ಪಕ್ಷದ ನಾಯಕಗೆ ಕಾಲಮಿತಿಯಿದೆ. ಜನರ ನಾಯಕ ತಾನೇ ಕಾಲ ನಿರ್ಧರಿಸುತ್ತಾನೆ. ನಿಮ್ಮ ಹಿಂದೆ ಜನರಿರಬೇಕು. ಶಕ್ತಿಕೇಂದ್ರದ ಮುಂದೆ ಉಪವಾಸ ಮಾಡಿ ದೇಹದಂಡಿಸುವುದು ಮುಖ್ಯವಲ್ಲ. ಶಕ್ತಿಕೇಂದ್ರವೇ ಜನರ ಮುಂದೆ ಮಂಡಿಯೂರುವಂತೆ ಮಾಡುವುದು ನಿಮ್ಮ ಗುರಿಯಾಗಬೇಕು ಎಂದು ಅನ್ನಿಸುವುದಿಲ್ಲವೇ?

Anna_Hazare

ಅಣ್ಣಾ, ನಿಮ್ಮ ಮನಸ್ಸು ಮಲಿನವಾಯಿತೇಕೆ?


-ಚಿದಂಬರ ಬೈಕಂಪಾಡಿ


ಒಬ್ಬ ವ್ಯಕ್ತಿಗಿರಬಹುದಾದ ವ್ಯಾಮೋಹಗಳಲ್ಲಿ ಮಹತ್ವಾಕಾಂಕ್ಷೆಯೂ ಒಂದು. ಹಣ, ಕೀರ್ತಿ, ಆಸ್ತಿಗಳ ವ್ಯಾಮೋಹದಂತೆಯೇ ಮಹತ್ವಾಕಾಂಕ್ಷೆಯೂ ಹೊರತಲ್ಲ. ಸನ್ಯಾಸಿಯೆಂದರೆ ಸರ್ವಸಂಗ ಪರಿತ್ಯಾಗಿ. ಅವನಿಗೆ ಅಧಿಕಾರ ಬೇಡ, ಹಣ, ಕೀರ್ತಿ, ಪ್ರಚಾರ, ಲೌಕಿಕವಾದ ಯಾವುದೇ ಸುಖಭೋಗಗಳೂ ಬೇಡ. ಪಾರಮಾರ್ಥಿಕದ ಸುಖಕ್ಕಾಗಿ ಹಂಬಲಿಸುವುದು, ಅದರಲ್ಲೇ ಸಂತೃಪ್ತನಾಗುವುದು. ಆದರೆ ಈಗ ಇದು ಸಾಧ್ಯವಾಗುತ್ತಿಲ್ಲ. ಸನ್ಯಾಸಿಗಳಿಗೂ ತಮ್ಮದೇ ಆದ ಮಠ, ಪೀಠಗಳು ಬೇಕು. ಕೋಶ ತುಂಬಿರಬೇಕು. ಆಸ್ತಿ ಅಪಾರವಿರಬೇಕು. ಇವೆಲ್ಲವೂ ಸಮಾಜಕ್ಕಾಗಿ ಮಾಡುವ ಸೇವೆಗಾಗಿ, ಭಕ್ತರ ಅಭೀಷ್ಠೆ ಈಡೇರಿಸುವುದಕ್ಕಾಗಿ. ಸರ್ಕಾರಗಳು ಮಾಡಬೇಕಾದ ಕೆಲಸವನ್ನು ಕೆಲವು ಮಠ ಮಾನ್ಯಗಳು ಮಾಡುತ್ತಿವೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’  ಎನ್ನುವಂತೆ ಭಕ್ತರಿಂದ ಸಂಗ್ರಹಿಸಿದ ಸಂಪತ್ತನ್ನು ಭಕ್ತರ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿವೆ.

ಖರ್ಚು ಮಾಡಿದರೂ ಭಂಡಾರ ಭರ್ತಿಯಾಗಿಯೇ ಇರುವಂತೆ ಸದಾ ನೋಡಿಕೊಳ್ಳುತ್ತಿರಬೇಕು. ಇದು ಅವರ ಕಾಳಜಿಯೂ ಹೌದು. ಆದರೇ ಈ ನಾಡಿನ ಎಲ್ಲಾ ಮಠ ಮಾನ್ಯಗಳೂ ಮಾಡುತ್ತಿಲ್ಲ. ಎಲ್ಲಾ ಮಠಗಳೂ ಈ ಕಾಯಕಕ್ಕೆ ಮುಂದಾದರೆ ಸರ್ಕಾರಕ್ಕೇನು ಕೆಲಸ ಉಳಿದೀತು? ಎನ್ನುವ ಕಾರಣಕ್ಕೆ ಅಂದುಕೊಳ್ಳಬೇಕಾಗಿಲ್ಲ. ಅದು ಅವರವರ ಇಚ್ಛೆಗೆ ಬಿಟ್ಟ ವಿಚಾರ. ಮಠಗಳು ರಾಜಕೀಯ ಮಾಡಬಾರದು, ರಾಜಕೀಯ ಸೇರಬಾರದು. ಈಗ ಬಹುತೇಕ ಮಠಾಧೀಶರು ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವಿ ವಲಯವನ್ನು ನಿರ್ಮಿಸಿಕೊಂಡಿದ್ದಾರೆ, ರಾಜಕೀಯದಿಂದ ದೂರ ಇರುವವರೂ ಇದ್ದಾರೆ. ಧರ್ಮದ ಹೆಸರಲ್ಲಿ ಅಥವಾ ಧರ್ಮ ಉಳಿಸುವವರ ಹೆಸರಲ್ಲಿ ಕೆಲಸ ಮಾಡುವ ಸಂಘಟನೆ, ಪಕ್ಷಗಳಿಗೆ ರಾಜಗುರುಗಳಾಗಿ ಕೆಲಸ ಮಾಡುತ್ತಿದ್ದಾರೆ. ರಾಜನಿಗೆ ರಾಜಧರ್ಮದ ನೀತಿಯನ್ನು ಹಿಂದೆ ಹೇಳುತ್ತಿರಲಿಲ್ಲವೇ ಹಾಗೆ ಎಂದು ಈಗ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ.

ಅವರ ಸಮರ್ಥನೆಯನ್ನು ಚರ್ಚೆ ಮಾಡುವುದು ಅನಗತ್ಯ. ರಾಜಕಾರಣಿಗಳಿಗೆ ಗುರುಗಳು ಆಶೀರ್ವಾದ ಮಾಡುವುದು ತಪ್ಪಲ್ಲ, ತಿದ್ದಿಬುದ್ಧಿ ಹೇಳುವುದೂ ಅಪರಾಧವಲ್ಲ. ಆದರೆ ಅವರ ಕಾವಿಯೊಳಗಿರುವ ರಾಜಕೀಯದ ತುಡಿತ, ಮನಸ್ಸು, ಮಾತು ಒಬ್ಬ ವೃತ್ತಿಪರ ರಾಜಕಾರಣಿಗಿಂತಲೂ ಪರಿಪಕ್ವವಾಗಿರುವ ಉದಾಹರಣೆಗಳೂ ಇವೆ. ಕಾವಿಯ ಮರೆಯಲ್ಲಿರುವ ವ್ಯಾಮೋಹ ದೇಹವನ್ನು ಮಾತ್ರವಲ್ಲಾ ಮನಸನ್ನೂ ಆವರಿಸಿಕೊಂಡುಬಿಟ್ಟರೇ?. ನೇರವಾಗಿ ರಾಜಕೀಯ ಪಕ್ಷದ ಮೂಲಕ ಜನರ ಮುಂದೆ ದೇಹ ನಿಂತಿರದಿದ್ದರೂ ಮನಸ್ಸು ನಿಂತಿರುತ್ತದೆ. ಕಣದಲ್ಲಿ ನಿಂತವನಲ್ಲೇ ಲೀನವಾಗಿ ಅವನೇ ತಾನಾಗಿ ಕಾಣಿಸಿಕೊಳ್ಳುವ ವ್ಯಾಮೋಹವನ್ನು ನಿರಾಕರಿಸಲು ಸಾಧ್ಯವೇ? ಈ ವ್ಯಾಮೋಹಕ್ಕಿರುವ ಶಕ್ತಿಯೇ ಅಂಥದ್ದು ಅಂದುಕೊಂಡು ಸುಮ್ಮನಿರಬಹುದಿತ್ತು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಹಾಗೆ ಮಾಡುವುದು ಸಾಧ್ಯವಿಲ್ಲ ಮತ್ತು ಸಾಧುವೂ ಅಲ್ಲ ಎನ್ನುವುದಕ್ಕೆ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಉದಾಹರಣೆಯಾಗುತ್ತಾರೆ.

ಅಣ್ಣಾ ಈ ದೇಶಕಂಡ ಅಪ್ಪಟ ಗಾಂಧಿವಾದಿ. ಗಾಂಧೀಜಿಯವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಾರ್ಯಕರ್ತರಾಗಿ ಜನಸೇವೆ ಮಾಡುತ್ತಾ ಬಂದ ಅವರ ಕಾಳಜಿ ಶ್ಲಾಘನೀಯ. ಕಳೆದು ಹೋಗುತ್ತಿರುವ ಗಾಂಧಿವಾದಿಗಳ ನಡುವೆ ಕೊಂಡಿಯಾಗಿರುವ ಅಣ್ಣಾ ಪ್ರಚಾರದ ಬೆಳಕಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದ್ದಾರೆ. ಜಡತ್ವದ ಹೊದಿಕೆಯೊಳಗೆ ಸುಖನಿದ್ದೆಯಲ್ಲಿದ್ದ ನಿರ್ಲಿಪ್ತ ಮನಸ್ಸುಗಳನ್ನು ಎಚ್ಚರಗೊಳಿಸಿದ್ದಾರೆ. ಎಲ್ಲವನ್ನೂ ಸಹಿಸಿಕೊಳ್ಳುವುದೇ ಬದುಕು, ಅದೇ ನೀತಿ, ಧರ್ಮ ಎನ್ನುವಂತೆ ಪ್ರಶ್ನೆ ಮಾಡುವುದನ್ನೇ ಮರೆತು ಬಿಟ್ಟವರಿಗೆ ಪ್ರಶ್ನೆ ಮಾಡಬೇಕು ಎನ್ನುವ ಅರಿವು ಮೂಡಿಸಿದ್ದಾರೆ. ಸಮಾಜಕ್ಕೆ ಎಲ್ಲರೂ ಬದ್ಧರು ಎನ್ನುವುದರ ಜೊತೆಗೇ ಅಧಿಕಾರ ಶಾಹಿ ಮತ್ತು ಪ್ರಭುತ್ವದ ಕೋಟೆಯೊಳಗೆ ಲಗ್ಗೆ ಹಾಕುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಣ್ಣಾ ತಾನು ತೊಡುವ ಬಿಳಿ ವಸ್ತ್ರದಷ್ಟೇ ಮಡಿಯಾಗಿ ಮನಸ್ಸನ್ನು ಇಟ್ಟುಕೊಂಡಿದ್ದರು ಅಂದ ಮೇಲೆ ಕೈಬಾಯಿ ಶುದ್ಧವೆಂದು ಹೇಳಬೇಕಾಗಿಲ್ಲ.

ಅವರ ಸಾಮಾಜಿಕ ಹೋರಾಟಗಳು ಗಾಂಧಿಗಿರಿಯಷ್ಟೇ ಮೊನಚಾಗಿದ್ದವು, ಜನಾಕರ್ಷಣೆಗೊಳಪಡುತ್ತಿದ್ದವು. ಆದರೆ ಪ್ರಚಾರದ ಪ್ರಖರತೆಯ ಬೆಳಕು ಅಣ್ಣಾ ಅವರನ್ನು ಆವರಿಸಿಕೊಂಡ ಮೇಲೆ ಅಣ್ಣಾ ಕೋಟೆ ನಿರ್ಮಾಣವಾಯಿತು. ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ ಅಣ್ಣಾ ದೇಶದ ಶಕ್ತಿಕೇಂದ್ರದಲ್ಲಿ ಕಾಣಿಸಿಕೊಂಡರು. ಈಗ ಅಣ್ಣಾ ಇಲ್ಲದ ಹೋರಾಟವನ್ನು ಊಹಿಸಿಕೊಳ್ಳುವುದೇ ಕಷ್ಟ ಎನ್ನುವಷ್ಟರಮಟ್ಟಿಗೆ ಬೆಳೆದುನಿಂತಿದ್ದಾರೆ. ಅಣ್ಣಾ ಹಳ್ಳಿಗಾಡಿನಿಂದ ಬಂದು ಹೈಪ್ರೊಫೈಲ್‌ಗಳನ್ನು ಕಾಡುತ್ತಿದ್ದ ನಾಯಕತ್ವದ ಕೊರತೆಯನ್ನು ನೀಗಿಸಿದ್ದಾರೆ. ಸಾಮಾಜಿಕವಾಗಿ ಉನ್ನತ ಸ್ಥಾನಮಾನ, ಹಣ, ಅಂತಸ್ತು ಇದ್ದವರ ಕಾಲಬುಡದಲ್ಲಿ ರಾಜಕಾರಣ ಮಂಡಿಯೂರುತ್ತದೆ ಅನಿವಾರ್ಯವಾದಾಗ ಮಾತ್ರ. ಸಾಮಾನ್ಯ ವರ್ಗ ಸದಾ ಅಧಿಕಾರ ಮತ್ತು ರಾಜಕಾರಣದ ಸುತ್ತಲೂ ಗಿರಕಿಹೊಡೆಯುತ್ತಿರುತ್ತದೆ.

ಆದ್ದರಿಂದ ಸಾಮಾನ್ಯವರ್ಗದ ಮುಂದೆ ರಾಜಕಾರಣ ಮಂಡಿಯೂರಿದಂತೆ ಕಾಣಿಸಿದರೂ ಅದು ನಿಜವಲ್ಲ, ನಿಜದಂತೆ ಕಾಣುವುದು ಸಾಮಾನ್ಯವರ್ಗದ ಮನಸ್ಸಿನ ಭ್ರಮೆ. ಇದನ್ನು ಚೆನ್ನಾಗಿ ಅರಿತಿರುವ ಹೈಪ್ರೊಫೈಲ್ ವರ್ಗ ರಾಜಕಾರಣಿಗಳನ್ನು ನಾಯಕರೆಂದು ಒಪ್ಪಿಕೊಳ್ಳಲು ಬಯಸುವುದಿಲ್ಲ. ಅಂಥವರ್ಗದ ಕಣ್ಣಿಗೆ ನಾಯಕರಾಗಿ ಕಾಣಿಸಿಕೊಂಡಿರುವವರು ಅಣ್ಣಾ. ಆದರಿಂದಲೇ ನೀವು-ನಾವೂ ಊಹಿಸಲು ಸಾಧ್ಯವಿಲ್ಲದವರು ಅಣ್ಣಾ ಅವರ ಬೆನ್ನಿಗೆ ನಿಲ್ಲುವುದನ್ನು ಕಾಣಬಹುದು. ನಿಜವಾದ ಕಾಳಜಿಯ ಸಾಮಾನ್ಯವರ್ಗ ಅಣ್ಣಾ ಅವರಲ್ಲಿ ಗಾಂಧಿಯನ್ನು ಕಾಣುತ್ತಿದ್ದಾರೆ. ಗಾಂಧೀಜಿಯವರನ್ನು ನೋಡಿರದಿದ್ದವರೇ ಈಗ ಈ ದೇಶದ ನಿರ್ಣಾಯಕ ಶಕ್ತಿಯಾಗಿರುವುದರಿಂದ ಸಹಜವಾಗಿಯೇ ಆಕರ್ಷಿತರಾಗಿದ್ದಾರೆ. ಇದನ್ನು ಚೆನ್ನಾಗಿ ಗುರುತಿಸಿದವರು ಕೆಲವೇ ಕೆಲವು ಜನರು. ಅಣ್ಣಾ ಅವರ ಮೂಲಕ ವೇದಿಕೆ ನಿರ್ಮಿಸಿಕೊಂಡು ತಾವೇ ಚೌಕಟ್ಟು ಹಾಕಿ ಕೊಂಡರು. ಅಣ್ಣಾತಂಡ ಅಸ್ತಿತ್ವಕ್ಕೆ ಬಂತು. ಆಗ ಅಣ್ಣಾ ಮಾತ್ರ ಏಕಸೂತ್ರಧಾರಿಯಾಗಿದ್ದರು. ತಂಡ ಬಂದಮೇಲೆ ಅಣ್ಣಾ ನಿಧಾನವಾಗಿ ಸೂತ್ರವನ್ನು ಕಳೆದುಕೊಂಡು ಕೇವಲ ಪಾತ್ರಧಾರಿಯಾಗಿಬಿಟ್ಟರು ಅನ್ನಿಸಿದರೆ ತಪ್ಪಲ್ಲ.

ಸ್ವಾತಂತ್ಯ್ರ ಹೋರಾಟಕ್ಕೆ ಗಾಂಧೀಜಿ ನಾಯಕತ್ವ ಕೊಟ್ಟರು. ಗಾಂಧಿಗಿರಿಯೇ ನಡೆಯುತ್ತಿದ್ದರೂ ಈ ಹೋರಾಟಕ್ಕೆಂದೇ ವೇದಿಕೆ ರೂಪಿಸಿದರು. ಅದರ ಹೆಸರೇ ಕಾಂಗ್ರೆಸ್. ಈ ಹೆಸರಿನಡಿಯಲ್ಲಿಯೇ ಸ್ವಾತಂತ್ರ್ಯ ಹೋರಾಟ ನಡೆದವು. ಸ್ವಾತಂತ್ರ್ಯ ಸಿಕ್ಕಿದ ಮೇಲೆ ಗಾಂಧಿ ಕಾಂಗ್ರೆಸ್ ವಿಸರ್ಜನೆ ಮಾಡಲು ಸಲಹೆ ಮಾಡಿದ್ದರು. ಈ ವೇದಿಕೆಯ ಅವಶ್ಯಕತೆ ಇನ್ನಿಲ್ಲ ಎನ್ನುವುದು ಅವರು ಆಗ ಕೊಟ್ಟ ಕಾರಣ. ಆದರೆ ಗಾಂಧೀಜಿಯವರ ಸಲಹೆ ಅನುಷ್ಠಾನವಾಗಲಿಲ್ಲ. ಆ ಕಾರಣಕ್ಕೆ ಈಗಲೂ ಕಾಂಗ್ರೆಸ್ ಉಳಿದುಕೊಂಡಿದೆ. ಅವರವರ ಅನುಕೂಲ, ಆಸಕ್ತಿಗೆ ಪೂರಕವಾಗುವ ಪಕ್ಷಗಳನ್ನು ನಾಯಕರುಗಳು ಕಟ್ಟಿಕೊಂಡರು. ಈಗ ನಮ್ಮ ಸುತ್ತಲೂ ಇರುವ ಪಕ್ಷಗಳು ಅವುಗಳ ಮುಂದುವರಿಕೆ. ಆದರೆ ಹಳೆತಲೆಮಾರಿನ ಆದರ್ಶಗಳು ಮಾತ್ರ ಉಳಿದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಉತ್ಸಾಹವನ್ನು ಅಣ್ಣಾ ಈ ಇಳಿವಯಸ್ಸಿನಲ್ಲೂ ಉಳಿಸಿಕೊಂಡಿರುವುದೇ ಸೋಜಿಗ. ದಿಲ್ಲಿಯಲ್ಲಿ ಉಪವಾಸ ಹೂಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಎತ್ತಿದ ಕೂಗು ದೇಶದ ಸಾಮಾನ್ಯ ಜನರ ಕೂಗಾಯಿತು. ಅಣ್ಣಾ ಹೋರಾಟಕ್ಕೆ ಸಾಗರೋಪಾದಿಯಲ್ಲಿ ಜನರು ಹರಿದು ಬಂದರು. ಹೈಪ್ರೊಫೈಲ್ ವ್ಯಕ್ತಿಗಳು ಉಪವಾಸ ಸ್ಥಳದಲ್ಲಿ ಕಾಣಿಸಿಕೊಂಡಾಗ ಸಹಜವಾಗಿಯೇ ಅಣ್ಣಾ ಪುಳಕಗೊಂಡರು. ಅಣ್ಣಾ ಹಮ್ಮಿಕೊಂಡ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಹೋರಾಟವೆಂದು ಮಾಧ್ಯಮಗಳು ಬಣ್ಣಿಸಿದ್ದು ವಾಸ್ತವ ಕೂಡಾ. ಪ್ರಚಾರ ಎನ್ನುವುದು ಅತ್ಯಂತ ಅಪಾಯಕಾರಿ ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ. ಪ್ರಾಮಾಣಿಕನನ್ನು ಬಹುಬೇಗ ಅಪ್ರಾಮಾಣಿಕನನ್ನಾಗಿಸುವ ಶಕ್ತಿ ಪ್ರಚಾರಕ್ಕಿದೆ. ಹಾಗೆಂದು ಭಯಪಡಬೇಕಾಗಿಲ್ಲ. ಸ್ವಯಂನಿಯಂತ್ರಣವಿದ್ದರೆ ಯಾವ ಪ್ರಚಾರವೂ ಹಾನಿಮಾಡಲು ಸಾಧ್ಯವಿಲ್ಲ. ಆದರೆ ಇಂಥ ಪ್ರಚಾರಗಳ ಸುಳಿಗೆ ಸಿಲುಕಿದರೆ ಆಗಬಹುದಾದ ಅನಾಹುತವೇನು ಎನ್ನುವುದಕ್ಕೆ ಅಣ್ಣಾ ತಂಡದೊಳಗಿರುವ ಭಿನ್ನಾಭಿಪ್ರಾಯ ಉದಾಹರಣೆಯಾಗಬಲ್ಲುದು. ಒಂದೇ ಮಾತಿನಲ್ಲಿ ಹೇಳಬೇಕಾದರೆ ಈಗ ಅಣ್ಣಾತಂಡ ಏಕಸ್ವರವಾಗಿಲ್ಲ.

ಪ್ರಬಲ ಲೋಕಪಾಲ್ ಜಾರಿಗೆ ಬರಬೇಕು ಎನ್ನುವುದು ಅಣ್ಣಾ ತಂಡದ ಪೇಟೆಂಟ್ ಎಂಬರ್ಥದಲ್ಲಿ ನೋಡಲಾಗುತ್ತಿದೆ. ವಾಸ್ತವವಾಗಿ ಇದು ಈ ದೇಶದ ಶೋಷಿತರ, ದಲಿತರ, ಅನಕ್ಷರಸ್ಥರ ಮತ್ತು ಬಲಿಷ್ಠ ಭಾರತದ ಕನಸು ಕಾಣುವ ಎಲ್ಲರ ಕನಸು. ಅವರಿಗೆ ಹೇಳಲು ಅಸಾಧ್ಯವಾಗಿತ್ತು, ಅಣ್ಣಾ ತಂಡ ಹೇಳಲು ಶಕ್ತವಾಯಿತು. ಅಂಥ ಶಕ್ತಿ ಕೊಟ್ಟವರು ಮೇಲೆ ಹೇಳಿದ ಜನಶಕ್ತಿ. ಆದರೆ ಪ್ರಬಲ ಲೋಕಪಾಲ್ ಜಾರಿ ಸುಲಭವಾಗಿ ಬರುವುದಿಲ್ಲ. ಯಾಕೆಂದರೆ ಅದನ್ನು ಜಾರಿಗೆ ತರಬೇಕಾದವರು ಜನಶಕ್ತಿಯ ಪ್ರತಿನಿಧಿಗಳು. ಅದು ಜಾರಿಗೆ ಬಂದರೆ ಅವರು ಮತ್ತೆ ಪ್ರತಿನಿಧಿಗಳಾಗಿ ಆರಿಸಿಬರಲು ಕಷ್ಟವಾಗಬಹುದು. ಆ ಕಷ್ಟದ ಅಂಶವನ್ನು ನಿವಾರಿಸಿಕೊಂಡು ಜಾರಿಗೆ ತರಲು ಅವರದೂ ಅಭ್ಯಂತರವಿರಲ್ಲಿಲ್ಲ. ಅಣ್ಣಾ ಹೇಳುವಂಥ ಲೋಕಪಾಲ್ ಜಾರಿಗೆ ಬಂದರೆ ಶಕ್ತಿಕೇಂದ್ರದೊಳಗೆ ಈಗ ಇರುವ ಬಹುತೇಕ ಮಂದಿಗೆ ಎಂಟ್ರಿ ಸಾಧ್ಯವಿಲ್ಲ. ದೇಶದ ಮೊದಲ ಆದ್ಯತೆ ವಸತಿ ಕಲ್ಪಿಸುವುದಲ್ಲ, ಜೈಲು ನಿರ್ಮಿಸುವುದು ಎನ್ನುವುದು ಅವರಿಗೂ ಗೊತ್ತು.

ಈ ಎಲ್ಲವೂ ಅಣ್ಣಾ ಅವರಿಗೂ ಗೊತ್ತು. ಒಂದು ವ್ಯವಸ್ಥೆಗೆ ವಿರುದ್ಧವಾದ ಪರ್ಯಾಯ ವ್ಯವಸ್ಥೆಯನ್ನು ಸುಲಭವಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಪ್ರತಿರೋಧಗಳಿರುತ್ತವೆ. ಸ್ವಾತಂತ್ರ್ಯ ಗಾಂಧೀಜಿಯವರ ಒಂದೇ ಬೈಠಕ್ ಹೋರಾಟಕ್ಕೆ ಸಿಗಲಿಲ್ಲ. ಅನೇಕ ವರ್ಷಗಳ ನಿರಂತರ ಹೋರಾಟದ ಫಲ. ಪ್ರಬಲ ಲೋಕಪಾಲ್ ಜಾರಿಗೂ ಗಾಂಧೀಜಿ ಅವರ ಹೋರಾಟ ಮಾದರಿಯಾಗಬೇಕಿತ್ತು. ಸ್ವಯಂ ಜನರೇ ಹೋರಾಟಕ್ಕಿಳಿಯಬೇಕಲ್ಲದೇ ಹೋರಾಟಕ್ಕಿಳಿಯಲು ಒತ್ತಾಯಮಾಡುವಂತಾಗಬಾರದು. ಅಣ್ಣಾ ಹಮ್ಮಿಕೊಂಡ ಹೋರಾಟಕ್ಕೆ ಸಹಜವಾದ ಕಾರಣವಿತ್ತು, ಅನಿವಾರ್ಯವೂ ಆಗಿತ್ತು. ಆದರೆ ಹೋರಾಟಕ್ಕೆ ಕಾವುಬಂದಿರಲಿಲ್ಲ. ಈ ಕಾರಣದಿಂದಾಗಿಯೇ ಉಪವಾಸ ಸತ್ಯಾಗ್ರಹ ಪ್ರಹಸನದ ರೂಪತಳೆಯಿತು. ಇದು ಹೋರಾಟಕ್ಕೆ ಆದ ಹಿನ್ನಡೆ ಹೊರತು ಹೊಸ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕಲು ನಿಜವಾದ ಪ್ರೇರಣೆ ಅಲ್ಲ. ಆದರೆ ಅಣ್ಣಾ ಯಾಕೆ ಹಾಗೆ ಭಾವಿಸಿದರು ಎನ್ನುವುದು ಅಚ್ಚರಿಯಂತೂ ಅಲ್ಲ. ಅಣ್ಣಾ ಅದೆಷ್ಟೇ ಪ್ರಾಮಾಣಿಕತೆಯನ್ನು ತಮ್ಮ ತಂಡದ ಬಗ್ಗೆ ವ್ಯಕ್ತಪಡಿಸಿದರೂ ಸಂಶಯದ ಬೇರುಗಳು ಮಾತ್ರ ಚಿಗುರುತ್ತಲೇ ಇರುತ್ತವೆ. ಅಂಥ ಸಂಶಯಗಳಲ್ಲಿ ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುವ ಯೋಚನೆ ಬಂದದ್ದು. ಈ ಯೋಚನೆಯ ಹೊಣೆಯನ್ನು ಅಣ್ಣಾ ಅವರ ತಲೆಗೆ ಕಟ್ಟಲು ಸಾಧ್ಯವಿಲ್ಲ. ಅಣ್ಣಾ ಮನಸ್ಸು ಮಾಡಿದ್ದರೆ ಬಹಳ ಹಿಂದೆಯೇ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸುತ್ತಿದ್ದರು. ಅಂಥವರು ಲೋಕಸಭೆ ಪ್ರವೇಶಿಸಲು ಉತ್ಸುಕರಾಗಿದ್ದಾರೆ ಅಂದುಕೊಳ್ಳುವುದು ಮೂರ್ಖತನವಾಗುತ್ತದೆ.

ಅಣ್ಣಾರಂತೆ ಅವರ ತಂಡದಲ್ಲಿದ್ದವರೆಲ್ಲರೂ ವ್ಯಾಮೋಹ ಮುಕ್ತರೆಂದು ಭಾವಿಸಬೇಕಾಗಿಲ್ಲ. ವ್ಯಾಮೋಹ ಅನೇಕರಲ್ಲಿ ಅನೇಕ ಕಾರಣಗಳಿಗಾಗಿ ಇರಬಹುದು, ಇಲ್ಲದಿರಬಹುದು. ಈ ವ್ಯಾಮೋಹ ಅಣ್ಣಾ ಅವರನ್ನು ಆವರಿಸಿಕೊಳ್ಳುವಂತೆ ಮಾಡುವ ಪ್ರಯತ್ನದ ಮೊದಲ ಹಂತ ಈಗಿನದ್ದು. ಈ ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಹುಟ್ಟು ಅನಿವಾರ್ಯ. ಅಂಥ ಶಕ್ತಿಯನ್ನು ಹುಟ್ಟು ಹಾಕಲು ಅಣ್ಣಾ ಸಮರ್ಥರು. ಆದರೆ ಅಧಿಕಾರದ ಚುಕ್ಕಾಣಿ ಹಿಡಿಯಬಲ್ಲಷ್ಟು ಸಮರ್ಥವಾದ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವುದು ಸುಲಭವಲ್ಲ ಎನ್ನುವುದನ್ನು ಇತಿಹಾಸದಿಂದ ಕಲಿಯಬೇಕಾಗುತ್ತದೆ. ಅಣ್ಣಾ ಅವರ ಹೊಸ ಸಾಹಸವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದಾಗ ತಟ್ಟನೆ ನೆನಪಾದವರು ಮಹೇಂದ್ರ್ ಸಿಂಗ್ ಟಿಕಾಯತ್. ಅಷ್ಟು ದೊಡ್ಡ ರೈತಶಕ್ತಿಯಾಗಿದ್ದ ಟಿಕಾಯತ್ ಈಗ ಇತಿಹಾಸ.

ಅಣ್ಣಾ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾಗ, ಉಪವಾಸಕ್ಕೆ ಕುಳಿತುಕೊಳ್ಳುತ್ತಿದ್ದಾಗ ಆಗುತ್ತಿದ್ದ ರೋಮಾಂಚನ ಅವರು ತಂಡಕಟ್ಟಿಕೊಂಡ ಮೇಲೆ ಆಗುತ್ತಿರಲಿಲ್ಲ. ಆ ತಂಡದವರು, ಅವರ ಮಾತುಗಳನ್ನು ಕೇಳಿಸಿಕೊಂಡಾಗಲೆಲ್ಲಾ ಕೆಲವು ರಾಜಕಾರಣಿಗಳು ಕಣ್ಣಮುಂದೆ ಬಂದಂತಾಗುತ್ತಿತ್ತು. ಸದಾ ಪ್ರಚಾರ ಬಯಸುವ ರಾಜಕಾರಣಿಗಳಿಗಿಂತೇನು ಕಡಿಮೆಯಿಲ್ಲ, ಅಂಥ ಸುದ್ದಿಮೂಲಗಳು ಅನ್ನಿಸತೊಡಗಿತು. ಅಣ್ಣಾ ಜಂತರ್ ಮಂತರ್‌ನಲ್ಲಿ ಉಪವಾಸಕ್ಕೆ ಕುಳಿತದ್ದು ಮತ್ತು ಅವರು ಉಪವಾಸ ಕೈಬಿಟ್ಟು ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕುವ ಘೋಷಣೆ ಮಾಡಿದ್ದಂತೂ ಅಚ್ಚರಿಮೂಡಿಸಲಿಲ್ಲ. ಆದರೆ ಆತುರವಾಯಿತು ಅನ್ನಿಸಿತು ಮತ್ತು ಇದು ನಿಮ್ಮ ಅಖಾಡ ಅಲ್ಲ ಅಣ್ಣಾ ಅನ್ನಬೇಕೆನಿಸಿತು. ನಿರ್ಮಲವಾಗಿದ್ದ ಅಣ್ಣಾ ಮನಸ್ಸು ರಾಜಕೀಯ ಶಕ್ತಿಯ ಕನಸಿನೊಂದಿಗೆ ಮಲಿನವಾಯಿತು ಅನ್ನಬೇಕೇ? ಇನ್ನಷ್ಟು ದಿನ ಹೀಗೆಯೇ ತಂಡ ಉಳಿದರೆ ಅಣ್ಣಾ ನಿಮ್ಮ ಮೈಕೈಯನ್ನೂ ಮಲಿನ ಮಾಡಿಬಿಡುತ್ತಾರಲ್ಲ ಎನ್ನುವ ಆತಂಕವಾಗುತ್ತಿದೆ.

ನೀವೇ ಮಾಧ್ಯಮದ ಮೇಲೆ ಚಾಟಿ ಬೀಸಿದರೆ ಹೇಗೆ ?


-ಚಿದಂಬರ ಬೈಕಂಪಾಡಿ


 

ಮಂಗಳೂರಲ್ಲಿ ‘ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ’ಘಟನೆಯ ಕುರಿತು ಪೊಲೀಸರ ವಕ್ರದೃಷ್ಟಿ ಮಾಧ್ಯಮದವರ ಮೇಲೆ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳು. ದಕ್ಷ ಪೊಲೀಸ್ ಅಧಿಕಾರಿ ಎನ್ನುವ ಖ್ಯಾತಿ ಪಡೆದಿದ್ದ ಹಾಲಿ ಮಂಗಳೂರು ಪೊಲೀಸ್ ಆಯುಕ್ತರು ಹೀಗೇಕಾದರು? ಈ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೇನೆ. ಅವರು ಈ ಹಿಂದೆ ದಕ್ಷಿಣ ಕನ್ನಡ ಪೊಲೀಸ್ ಅಧಿಕಾರಿಯಾಗಿದ್ದವರು. ಕೋಮುಗಲಭೆ ನಿಯಂತ್ರಿಸುವುದರಲ್ಲಿ ಪಳಗಿದವರು. ಅತ್ಯಂತ ಸೂಕ್ಷ್ಮ ಸಂದರ್ಭದಲ್ಲೂ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿದವರು. ಪತ್ರಕರ್ತನಾಗಿ ಅವರನ್ನು ಹತ್ತಿರದಿಂದ ಬಲ್ಲವನಾದ ನಾನೇ ಈಗ ಕಕ್ಕಾಬಿಕ್ಕಿಯಾಗುವಂತಾಗಿದೆ.

ದಾಳಿ ನಡೆದ ವಿಚಾರವನ್ನು ಪೊಲೀಸರಿಗೆ ತಿಳಿಸಲಿಲ್ಲ ಎನ್ನುವ ಆರೋಪದ ಮೇಲೆ ಇಬ್ಬರು ಮಾಧ್ಯಮ ಸ್ನೇಹಿತರ ಮೇಲೆ ಕೇಸು ಜಡಿದು ಸಮಾಧಾನಪಟ್ಟುಕೊಳ್ಳುವ ಮನಸ್ಥಿತಿ ಸೀಮಂತ್ ಕುಮಾರ್ ಅವರಿಗೆ ಬಂದದ್ದು ನಿಜಕ್ಕೂ ಬೇಸರದ ಸಂಗತಿ. ಮಾಧ್ಯಮದವರ ಹೇಳಿಕೆಯನ್ನು ನಂಬುವುದಾದರೆ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದಾರೆ, ಆದರೆ ಸ್ವೀಕರಿಸಿಲ್ಲವಂತೆ.(ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಿದರೆ ಗೊತ್ತಾಗುತ್ತದೆ ಎನ್ನುವುದು ಅವರಿಗೂ ಗೊತ್ತು). ಮಾಹಿತಿಯನ್ನು ಮಾಧ್ಯಮದವರೇ ಕೊಡಬೇಕೆಂದು ನಿರೀಕ್ಷೆ ಮಾಡಿದ್ದೇ ಮೊದಲ ತಪ್ಪು, ಹಾಗಾದರೆ ಇಂಟೆಲ್‌ಜೆನ್ಸಿ ಬರ್ಖಾಸ್ತ್ ಆಗಿದೆಯೇ? ಅಥವಾ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂದುಕೊಳ್ಳೋಣವೇ?

ಇಂಥ ಘಟನೆಗಳು ಇಲ್ಲಿಗೇ ಅಂತ್ಯವಾಗಬೇಕು ಎನ್ನುವುದು ಎಲ್ಲರ ಹಾರೈಕೆಯಾದರೂ, ಪೊಲೀಸರು ಮಾಧ್ಯದವರತ್ತ ನೆಟ್ಟಿರುವ ನೋಟ ನೋಡಿದರೆ ದಾಳಿ ಹತ್ತಿಕ್ಕುವುದಕ್ಕಿಂತಲೂ ಮಾಧ್ಯಮದ ಮಂದಿಯ ಬಾಯಿಗೆ ಬೀಗ ಹಾಕುವಂಥ ಯತ್ನಕ್ಕೆ ಹಾತೊರೆಯುವಂತಿದೆ.

ಪೊಲೀಸರು ಅನೈತಿಕ ಚಟುವಟಿಕೆ (ಮಾರ್ನಿಂಗ್ ಮಿಸ್ಟ್ ಘಟನೆಯ ಬಗ್ಗೆ ಅಲ್ಲ) ಅಥವಾ ಮಾದಕ ವಸ್ತು ಮಾರಾಟ ದಂಧೆಯ ಬಗ್ಗೆ ದೂರು ನೀಡಿದರೆ ಸ್ಪಂದಿಸುತ್ತಿಲ್ಲ ಎನ್ನುವುದು ಹತಾಶೆಯಾದವರ ಮಾತು. ಇದನ್ನು ಇಲಾಖೆ ನೊದಲು ಅರ್ಥ ಮಾಡಿಕೊಳ್ಳಬೇಕು. ಇಂಥ ಹತಾಶೆಯಿಂದಾಗಿಯೇ ನೈತಿಕ ಪೊಲೀಸ್ ಕಾರ್ಯಾಚರಣೆಗಳು ಆರಂಭವಾದವು. ಇಲಾಖೆ ಸರಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದರೆ ಜನ ಸ್ವಯಂಪ್ರೇರಣೆಯಿಂದ ದೂರುಕೊಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಅನಿವಾರ್ಯವಾಗಿ ಸಣ್ಣಪುಟ್ಟ ರಾಜಿಪಂಚಾಯಿತಿಗಳಿಗೆ, ವಸೂಲಿಗೆ ಭೂಗತ ಲೋಕದ ಸಂಪರ್ಕ ಇದ್ದವರ ಮೊರೆಹೋಗುತ್ತಿದ್ದಾರೆ. ಅದೂ ಭೂಮಾಫಿಯಾ ಬಂದ ಮೇಲೆ ಮಂಗಳೂರಿನ ಚಿತ್ರಣವೇ ಬದಲಾಗಿದೆ. ಹತ್ತು-ಹದಿನೈದು ವರ್ಷಗಳ ಹಿಂದೆ ಯಾಕೆ ಇಂಥ ಕಾರ್ಯಾಚರಣೆ ಮಂಗಳೂರಲ್ಲಿ ನಡೆಯುತ್ತಿರಲಿಲ್ಲ? ದಾಳಿಯ ಸುದ್ದಿ ಮಾಧ್ಯಮದವರಿಗೆ ಮೊದಲು ಮುಟ್ಟಿದೆ ಎನ್ನುವುದರ ಅರ್ಥ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಡಿಮೆಯಾಗಿದೆ ಎನ್ನುವುದೇ ಹೊರತು ಬೇರೆ ಅಲ್ಲ. ಈ ವಿಚಾರವನ್ನು ಅತ್ಯಂತ ತಾಳ್ಮೆಯಿಂದ ಯೋಚಿಸಿ.

ಹಾಸಟ್ಟಿ ಎನ್ನುವ ಪೊಲೀಸ್ ಅಧಿಕಾರಿಯನ್ನು ರೌಡಿಗಳು ಹತ್ಯೆ ಮಾಡಿದಾಗ ಈ ಜಿಲ್ಲೆಯ ಜನ, ಮಾಧ್ಯಮಗಳು (ಆಗ ಟಿವಿ ಚಾನೆಲ್‌ಗಳಿರಲಿಲ್ಲ)  ಪೊಲೀಸರಿಗೆ ಕೊಟ್ಟ ಬೆಂಬಲವನ್ನು ಅವಲೋಕಿಸಿ. ಆಗ ಜಾತಿ, ಮತ, ಧರ್ಮ, ಭಾಷೆ ಇಂಥ ಅಡ್ಡಗೋಡೆಗಳಿರಲಿಲ್ಲ. ಕಸ್ತೂರಿರಂಗನ್, ರೇವಣ್ಣ ಸಿದ್ಧಯ್ಯ, ಕೆಂಪಯ್ಯ, ನೀಲಂ ಅಚ್ಚುತರಾವ್, ಎಂ.ಆರ್.ಪೂಜಾರ್, ಭಾಸ್ಕರ್ ರಾವ್, ಸುರೇಶ್ ಬಾಬು ಮುಂತಾದ ಪೊಲೀಸ್ ಅಧಿಕಾರಿಗಳಿದ್ದಾಗ ಯಾಕೆ ಮಾಧ್ಯಮಗಳ ಮೇಲೆ ಕೆಂಗಣ್ಣು ಬಿದ್ದಿರಲಿಲ್ಲ? ರಿಪ್ಪರ್ ಚಂದ್ರನ್ ದಂಡುಪಾಳ್ಯ ಗ್ಯಾಂಗಿಗಿಂತೇನೂ ಕಡಿಮೆ ಅಪರಾಧ ಮಾಡಿದವನಲ್ಲ. ಅವನ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾದರೆನ್ನುವ ಇತಿಹಾಸವಿದೆ. ಈ ಮಾತುಗಳನ್ನು ಹೇಳಿದ ಕಾರಣವೆಂದರೆ ದಾಳಿ ಮಾಡಿದವರು ಯಾರು, ಅದು ಸರಿಯೇ, ತಪ್ಪೇ? ಸ್ಟೇ ಹೋಮ್‌ನಲ್ಲಿ ನಡೆದಿದ್ದೇನು? ಎನ್ನುವ ಕುರಿತು ಕಾಳಜಿ ಮಾಡುವುದಕ್ಕಿಂತಲೂ ಮಾಧ್ಯಮದಲ್ಲಿ ದಾಳಿ ಸುದ್ದಿ ಹರಿದಾಡಿತೆನ್ನುವ ಸಿಟ್ಟಿಗೆ ಮಾಧ್ಯಮಗಳ ಮಂದಿಗೆ ಬರೆ ಹಾಕಲು ಹೊರಟದ್ದು ಸರಿಯಲ್ಲ. ಕ್ಷಣಕ್ಕೆ ಸಿಟ್ಟು ಮತ್ತು ಹತಾಶೆಯಿಂದ ಹಾಗೆ ಮಾಡಿದರೆ ಭವಿಷ್ಯದ ದಿನಗಳಲ್ಲಿ ಇಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ.

ಪೊಲೀಸ್ ಇಲಾಖೆ ಯಾವಾಗಲೂ ಮಾಹಿತಿ ಕಲೆ ಹಾಕಲು ಮುಂಚೂಣಿಯಲ್ಲಿರಬೇಕು. ಮಾಹಿತಿ ಮೂಲಗಳನ್ನು ಇಲಾಖೆ ಹೊಂದಿದ್ದರೆ ಮಾತ್ರ ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯ. ಪೊಲೀಸ್ ಮತ್ತು ಮಾಧ್ಯಮಗಳ ಮಂದಿಯ ನಡುವೆ ಸಂಪರ್ಕ ಇರಬೇಕಾಗುತ್ತದೆ. ಅದು ಹಿಂದೆ ಇತ್ತು, ಈಗ ಇಲ್ಲ. ಆದರೆ ಅಂಥ ಸಂಪರ್ಕ ವೃತ್ತಿಧರ್ಮವನ್ನು ಮೀರುವಂತಿರಬಾರದು.

ಇದಕ್ಕೊಂದು ಉದಾಹರಣೆ ಅಂದುಕೊಳ್ಳಬಹುದು. ಉಡುಪಿಯಲ್ಲಿ ದನದ ವ್ಯಾಪಾರಿಯನ್ನು ಸಂಘಟನೆಯವರು ಬೆತ್ತಲೆ ಮಾಡಿದ ಘಟನೆ ನೆನಪಿರಬಹುದು. ಆಗ ನಾನು ಪತ್ರಿಕೆಯ ಪ್ರಧಾನ ವರದಿಗಾರನಾಗಿದ್ದೆ. ಉಡುಪಿಯಿಂದ ಬೆತ್ತಲೆ ಪ್ರಕರಣದ ಸುದ್ದಿ ಮತ್ತು ಫೋಟೋಗಳು ಕಚೇರಿಗೆ ಬಂದಿದ್ದವು, ಇಲ್ಲಿಂದ ಬೆಂಗಳೂರಿನ ಪ್ರಧಾನ ಕಚೇರಿಗೆ ರವಾನೆಯಾಗಿದ್ದವು. ಈ ಸುದ್ದಿಯನ್ನು ಫೋಟೋ ಸಹಿತ ಮುಖಪುಟದಲ್ಲಿ ಪ್ರಕಟಿಸಲು ಕಾರ್ಯನಿರ್ವಾಹಕ ಸಂಪಾದಕರು ನಿರ್ಧರಿಸಿ ರಾತ್ರಿ ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ (ರಾತ್ರಿ 1 ಗಂಟೆ ಹೊತ್ತಿಗೆ) ಮತ್ತೊಮ್ಮೆ ಘಟನೆಯ ಮಾಹಿತಿಯನ್ನು ನನ್ನಿಂದ ಪಡೆದುಕೊಂಡರು. ಪತ್ರಿಕೆಯಲ್ಲಿ ಆ ಸುದ್ದಿ ಫೋಟೋ ಸಹಿತ ಪ್ರಕಟವಾಗಿತ್ತು. ಆಗ ಧರಂ ಸಿಂಗ್ ಮುಖ್ಯಮಂತ್ರಿ. ಉಡುಪಿಯಲ್ಲಿ ಮುರುಗನ್ ಎಸ್ಪಿಯಾಗಿದ್ದರು. ಪಶ್ಚಿಮ ವಲಯದ ಡಿಐಜಿಯಾಗಿ ಸತ್ಯನಾರಾಯಣ ರಾವ್ ಇದ್ದರು. ಮುಂಜಾನೆ ಈ ಸುದ್ದಿ ಓದಿದ ಧರಂ ಸಿಂಗ್ ಕೆಂಡಾಮಂಡಲರಾಗಿದ್ದಾರೆ. ನೇರವಾಗಿ ಎಸ್ಪಿಗೆ ದೂರವಾಣಿ ಕರೆ ಮಾಡಿ ಉಡುಪಿಯಲ್ಲಿ ಏನು ನಡೆದಿದೆ? ಎಂದು ಕೂಲ್ ಆಗಿ ಕೇಳಿದ್ದಾರೆ. ‘ಲಾ ಅಂಡ್ ಆರ್ಡರ್ ಓಕೆ ಸಾರ್’ ಅಂದಿದ್ದಾರೆ. ಆದರೆ ಉಡುಪಿ ಬೀದಿಯಲ್ಲಿ ಜನರ ಮುಂದೆ ರಾತ್ರಿ ಹತ್ತು ಗಂಟೆ ಹೊತ್ತಿಗೆ ವ್ಯಕ್ತಿಯನ್ನು ಬೆತ್ತಲೆ ಮಾಡಿರುವುದು ಎಸ್ಪಿಯವರಿಗೇ ಗೊತ್ತಿರಲಿಲ್ಲವಂತೆ. ಆಗ ಧರಂ ಸಿಂಗ್ ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ.

ಆ ನಂತರ ಮುರುಗನ್ ತಮ್ಮ ಕೆಳಗಿನವರನ್ನು ಕೇಳಿದ್ದಾರೆ. ಆಗ ಅವರು ಕೊಟ್ಟ ಉತ್ತರ ಬೆತ್ತಲೆ ನಡೆದ ಘಟನೆ ನಿಜ, ಅದು ಸಣ್ಣ ವಿಚಾರ ಎನ್ನುವ ಕಾರಣಕ್ಕೆ ನಿಮಗೆ ತಿಳಿಸಿರಲಿಲ್ಲ ಅಂದರಂತೆ. ಈ ಉತ್ತರ ಕೇಳಿ ಕೆಂಡಾಮಂಡಲರಾದ ಮುರುಗನ್ ತಮಗೆ ಮಾಹಿತಿ ಕೊಡದವರ ಬೆವರಿಳಿಸಿದ್ದಾರೆ. ಎರಡು ದಿನಗಳ ನಂತರ ಮುರುಗನ್ ನನಗೆ ಫೋನ್ ಮಾಡಿ ನಿಮ್ಮೊಂದಿಗೆ ಮಾತನಾಡಬೇಕು ಉಡುಪಿಗೆ ಬರುವಿರಾ? ಅಂದರು. ಅವರು ಮಂಗಳೂರಲ್ಲಿ ಟ್ರೈನಿಂಗ್ ಮಾಡುತ್ತಿದ್ದಾಗ ಪರಿಚಯವಿತ್ತು. ಆದರೆ ಉಡುಪಿಗೆ ಹೋಗಬೇಕಲ್ಲ ಎಂದುಕೊಂಡು ಸಾಧ್ಯವಾದರೆ ಬರುತ್ತೇನೆ ಅಂದೆ. ನಿಮಗೆ ಕಾರು ಕಳುಹಿಸುತ್ತೇನೆ, ಬಂದು ಹೋಗಿ, ಮಾತನಾಡಬೇಕು, ಅಂದರು. ಒಪ್ಪಿದೆ. ಕಾರು ಮತ್ತು ನನಗೂ ಪರಿಚಿತರಾಗಿದ್ದ ಪೊಲೀಸ್ ಅಧಿಕಾರಿಯೂ ಬಂದಿದ್ದರು. ನೇರವಾಗಿ ಅವರ ಮನೆಗೆ ಹೋದೆ. ಕಾಫಿ ಕೊಟ್ಟರು. ಸೌಜನ್ಯದ ಮಾತುಗಳ ನಂತರ ಬೆತ್ತಲೆ ಪ್ರಕರಣದ ಸುದ್ದಿ, ಫೋಟೋ ಕುರಿತು ಧರಂ ಸಿಂಗ್ ಅವರ ಸಿಟ್ಟಿಗೆ ಕಾರಣವಾದ ಘಟನೆಯನ್ನು ವಿವರಿಸಿದರು. ಇಷ್ಟೇ ಆಗಿದ್ದರೆ ಫೋನ್ ಮೂಲಕ ಮಾತನಾಡುತ್ತಿದ್ದರು. ಆದರೆ ಅವರಿಗೆ ಹೇಳಬೇಕಾಗಿದ್ದನ್ನು ಖುದ್ದು ಹೇಳಿದರು. ‘ನೀವು ಪರಿಚಿತರು. ಈ ಘಟನೆ ಬಗ್ಗೆ ನನಗೆ ಒಂದು ಮಾತು ಹೇಳಿದ್ದರೆ ಮುಜುಗರ ಪಡುವಂತಿರಲಿಲ್ಲ. ಇನ್ನು ಮುಂದೆ ಆಗಾಗ ನಾನೇ ನಿಮಗೆ ಫೋನ್ ಮಾಡ್ತೀನಿ, ಸಹಕಾರ ಕೊಡಿ,’ ಅಂದರು. ಮುರುಗನ್ ಅವರ ಮಾತಿನಲ್ಲಿ ಸುದ್ದಿ, ಫೋಟೋ ಪ್ರಕಟವಾಗಿರುವುದಕ್ಕೆ ಆಕ್ಷೇಪವಿರಲಿಲ್ಲ. ಬದಲಾಗಿ ತಮಗೆ ಮಾಹಿತಿ ಸಿಗಲಿಲ್ಲ ಎನ್ನುವ ಕೊರಗಿತ್ತು. ಆ ಹೊಣೆಯನ್ನು ಅವರು ನನ್ನ ಮೇಲೆ ಹೊರಿಸಲಿಲ್ಲ. ತಮ್ಮ ಸಹೋದ್ಯೋಗಿಗಳು ಆ ಘಟನೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೆ ಅವಗಣನೆ ಮಾಡಿದರು ಎನ್ನುವುದು ಗೊತ್ತಿತ್ತು. ಐಪಿಎಸ್ ಅಧಿಕಾರಿಯಾಗಿದ್ದ ಮುರುಗನ್ ಮಾಹಿತಿಯ ಕೊರತೆಯಿಂದಾಗಿ ಎಡವಟ್ಟು ಮಾಡಿಕೊಂಡ ನೋವನ್ನು ತೋಡಿಕೊಂಡರೇ ಹೊರತು ಬೆದರಿಕೆ ಹಾಕಲಿಲ್ಲ ಎನ್ನುವುದು ಮುಖ್ಯ.

ಈ ಘಟನೆಗೂ, ಮಂಗಳೂರಿನ ಈಗಿನ ಘಟನೆಗೂ ಅದೆಷ್ಟು ಅಂತರ? ಮಂಗಳೂರಲ್ಲಿ ಪೊಲೀಸ್ ಅಧಿಕಾರಿಗಳಿಂದ ಇಂಥ ಸೌಜನ್ಯವನ್ನು ಮಾಧ್ಯಮಗಳು ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ಮಾಧ್ಯಮ ಮಂದಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೆ ಪರಿಣಾಮ ಏನಾಗಬಹುದು? ಯಾರು ಆ ಕೆಲಸ ಮಾಡುತ್ತಾರೋ ಅವರೇ ಸೋಲನ್ನು ಒಪ್ಪಿಕೊಂಡಂತಾಗುತ್ತದೆ. ತಪ್ಪು ಮಾಡಿದ್ದರೆ ಅವರಿಗಿರುವ ಕಾನೂನು ದತ್ತವಾದ ಅಧಿಕಾರವನ್ನು ಮುಲಾಜಿಲ್ಲದೆ ಮಾಧ್ಯಮದವರ ಮೇಲೆಯೂ ಪ್ರಯೋಗಿಸಬಹುದು.

ಅಧಿಕಾರಿಗಳ ವಿರೋಧ ಕಟ್ಟಿಕೊಂಡರೆ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡಿ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವುದು ವಾಸ್ತವ. ಅಂತೆಯೇ ಮಾಧ್ಯಮಗಳನ್ನು ಹೆಡೆಮುರಿಕಟ್ಟುವಂಥ ಪ್ರಯತ್ನಗಳು ಬುದ್ಧಿವಂತರು ಮಾಡುವ ಕೆಲಸವಲ್ಲ. ಅಧಿಕಾರದ ಆಚೆಗೂ ಒಂದು ಲೋಕವಿರುತ್ತದೆ. ಅದರಲ್ಲಿ ಸಿಗುವ ಅನುಭವ ಅಮೂಲ್ಯವಾದುದು. ಸಾರ್ವಜನಿಕ ಸಂಪರ್ಕ, ಸಂವಹನ ದೊಡ್ಡ ಗಂಡಾಂತರವನ್ನು ಸುಲಭವಾಗಿ ಪರಿಹಾರ ಮಾಡಬಲ್ಲದು. ಇಲಾಖೆಗೆ ಕಳಂಕ ಬಂತು ಎನ್ನುವ ಕಾರಣಕ್ಕಾಗಿಯೇ ಮಾಧ್ಯಮಗಳ ಮೇಲೆ ಹರಿಹಾಯ್ದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಪ್ರತೀ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ ಮಾಡುವುದು ಕಡ್ಡಾಯವಲ್ಲವೇ? ಅಂಥ ಸಭೆಗಳು ನಡೆಯುತ್ತಿವೆಯೇ? ಗಲಭೆಯಾದಾಗ ಮಾತ್ರವಲ್ಲವಲ್ಲವೇ ಸಭೆ ನಡೆಸುವುದು? ತಿಂಗಳಿಗೆ ಅರ್ಧ ಗಂಟೆ ಠಾಣೆಯಲ್ಲಿ ಕುಳಿತು ಆಯುಕ್ತರು ಜನಸಂಪರ್ಕ ಸಭೆ ನಡೆಸಿದರೆ ಎಲ್ಲಾ ಅಪನಂಬಿಕೆಗಳು ದೂರವಾಗುತ್ತವೆ, ಮಾಹಿತಿ ನೀವು ಇರುವಲ್ಲಿಗೇ ಬರುತ್ತವೆ. ಪ್ರಯೋಗ ಮಾಡಿದರೆ ಫಲ ಸಿಗುತ್ತದೆ.