Category Archives: ಪರಮೇಶ್ ಕುಂದೂರು

ಶಕ್ತಿಪ್ರದರ್ಶನ ಸಮಾವೇಶಗಳಿಗೆ ಜನರು ಮಣೆ ಹಾಕುವುದು ಬೇಡ

– ಪರಮೇಶ್ ಕುಂದೂರು

ಸಮಾವೇಶಗಳು ಜನಶಕ್ತಿಯ ಪ್ರದರ್ಶನ ಮಾಧ್ಯಮಗಳು. ಜನರ ಸಮಾವೇಶ ಮಾಡುವುದು ಸುಲಭದ ಮಾತಲ್ಲ. ಅಂತಿಂಥವರಿಂದ ಸಾಧ್ಯವೂ ಇಲ್ಲ. ಸುಲಭವಾಗಿ ಸಮಾವೇಶ ಮಾಡಬೇಕೆಂದರೆ ಅದು ರಾಜಕೀಯ ಪಕ್ಷಗಳು, ದೊಡ್ಡ ದೊಡ್ಡ ರಾಜಕಾರಣಿಗಳಿಂದ ಮಾತ್ರ ಸಾಧ್ಯ. ಆ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಾಗಾರಗಳ ಸಮಾವೇಶ ಸಂಘಟಿಸುವುದು ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.

ಬೃಹತ್ ಸಮಾವೇಶ ಸಂಘಟಿಸಿದರೆ, ಜನರು ಅಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಸೇರುತ್ತಾರೆ. ಹೆಚ್ಚಿನ ಜನ ಸೇರುವುದರಿಂದ ವಾಹನ ದಟ್ಟಣೆ ಹೆಚ್ಚಿ, sonia-rally-congressಸಾರಿಗೆ ವ್ಯವಸ್ಥೆ ಅಸ್ಥವ್ಯಸ್ಥಗೊಳ್ಳುತ್ತದೆ. ಒಂದು ವೇಳೆ ಅಂದು ದುರ್ಘಟನೆಗಳೇನಾದರೂ ಸಂಭವಿಸಿದರೆ, ಅಲ್ಲಿ ಉಂಟಾಗುವ ನಷ್ಟ, ನೋವುಗಳ ಸ್ಥಿತಿ ಲೆಕ್ಕಕ್ಕೆ ನಿಲುಕುವುದಿಲ್ಲ. ಈ ರೀತಿ ಇದ್ದಾಗ್ಯೂ ರಾಜಕಾರಣಿಗಳು, ಪಕ್ಷಗಳು ಪದೇ ಪದೇ ಜನಸಮಾವೇಶ ನಡೆಸುವುದು ಎಷ್ಟು ಸರಿ?

ಇಂದಿನ ದಿನಗಳಲ್ಲಿ ಸಮಾವೇಶಗಳು ಜನರಿಗೆ ಮೋಜು, ಮಸ್ತಿ ತಂದುಕೊಡುವ ಸಾಧನಗಳೂ ಆಗಿದ್ದು, ಅವರನ್ನು ದಾರಿ ತಪ್ಪಿಸುತ್ತಿರುವುದು ವಿಪರ್ಯಾಸ. ಬೃಹತ್ ಸಮಾವೇಶ ಸಂಘಟಿಸಲು ಕೋಟ್ಯಂತರ ರೂಪಾಯಿಗಳ ಖರ್ಚು ಬರುತ್ತದೆ. ಸಂಘಟಕರು ಈ ಹಣವನ್ನು ಕೂಡಿಸುವುದಾದರೂ ಎಲ್ಲಿಂದ? ಪ್ರಾಮಾಣಿಕವಾಗಿ ದುಡಿದು ಸಂಪಾದಿಸುವ ಹಣದಲ್ಲಿ ಈ ರೀತಿ ಹಣವನ್ನು ಮನಸಾ ಇಚ್ಛೆ ಖರ್ಚು ಮಾಡಲು ಸಾಧ್ಯವಿಲ್ಲ. ಹಾಗಾದರೆ ಅವರಿಗೆ ಹಣ ಬರುವುದಾದರೂ ಎಲ್ಲಿಂದ? ಅಷ್ಟಕ್ಕೂ ಪಕ್ಷಗಳು, ರಾಜಕಾರಣಿ ನಾಯಕರುಗಳು ಸೇರಿಸುವ ಬೃಹತ್ ಜನ ಸಮಾವೇಶಗಳಿಂದ ಸಮಾಜದಲ್ಲಿ ಆಗುವ ಬದಲಾವಣೆಗಳಾದರೂ ಏನು? ಯಶಸ್ಸು ಕಾಣುವ ಸಮಾವೇಶಗಳಲ್ಲಿ ಭಾಗಿಯಾಗುವ ಎಲ್ಲಾ ನಾಗರೀಕರೂ ಆ ನಾಯಕರಿಗೇಕೆ ಮತ ನೀಡುವ ಮೂಲಕ ತಮ್ಮ ಮನ್ನಣೆ ನೀಡಿ, ಬಹುಮತದಿಂದ ಗೆಲ್ಲಿಸುವುದಿಲ್ಲ?

ಅದೇನೇ ಇದ್ದರೂ ಈ ರೀತಿ ಪಕ್ಷಗಳು, ರಾಜಕೀಯ ನಾಯಕರೆನಿಸಿಕೊಂಡವರು ಸಂಘಟಿಸುವ ಸಮಾವೇಶದಲ್ಲಿ ಭಾಗಿಯಾಗಿ ಪ್ರದರ್ಶನಕ್ಕೆ ಬೆಂಬಲಿಸಿದರೆ ಆ ನಾಯಕರು ಮುಂದೆ ನಡೆಸಬಹುದಾದ ಭ್ರಷ್ಟಾಚಾರಕ್ಕೆ ನಾವು ಹಾದಿ ಮಾಡಿಕೊಟ್ಟಂತಾಗುವುದಿಲ್ಲವೆ?

ಹಲವಾರು ಪಕ್ಷಗಳು, ಪಕ್ಷಗಳಿಗೊಂದಿಷ್ಟು ನಾಯಕರುಗಳು, ಬಂಡೆದ್ದು ಬರುವ ನಾಯಕರುಗಳಿಗೆ ಹೊಸ ಪಕ್ಷಗಳು ಹೀಗೆ ಪ್ರಜಾಪ್ರಭುತ್ವದ ಪ್ರತಿನಿಧಿಗಳಾಗಲು ಹವಣಿಸುವ ನಾಯಕರುಗಳಿಗೇನೂ ಕಮ್ಮಿ ಇಲ್ಲ. ಇಂತಹ ನಾಯಕರು ತಮ್ಮ ಪ್ರತಿಷ್ಠೆ ಮೆರೆಯಲು, ಒಂದು ದಿನದ ಮಟ್ಟಿಗಾದರೂ ಜನರನ್ನು busstand-Blr-passengers-strandedಸಂಘಟಿಸಿ ಸಂಘಟನಾ ಶಕ್ತಿ ಪ್ರದರ್ಶಿಸುವ ಕಾರ್ಯ ನಡೆಸುತ್ತಲೇ ಇರುತ್ತಾರೆ.

ಇಂತಹ ಸಮಾವೇಶ ಸಂಘಟನೆ ಮಾಡುವುದು ರಾಜ್ಯಮಟ್ಟದ ಪ್ರಭಾವಿ ನಾಯಕರಾದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸಮಾವೇಶದ ಸೇವೆಗಾಗಿ ಮೀಸಲಾಗಿಬಿಡುತ್ತದೆ. ಇದರಿಂದ ಬಸ್ಸುಗಳು ಓಡಾಡುವ ಪ್ರದೇಶಗಳಲ್ಲಿ ಅಂದು ಬಸ್ ಸೌಲಭ್ಯ ಇಲ್ಲವಾಗುತ್ತದೆ. ಆ ಮಾರ್ಗದ ಜನರ ಪಾಡು ದೇವರಿಗೇ ಪ್ರೀತಿ.

ಇಂತಹ ದುಂದುವೆಚ್ಚದ ಬದಲು, ರಚನಾತ್ಮಕ ಕಾರ್ಯಗಳನ್ನು ಕೈಗೊಂಡರೆ ಸಮಾಜದಲ್ಲಿ ಒಳ್ಳೆಯ ಕೆಲಸಗಳಾದರೂ ಆಗುತ್ತವೆ. ಬಡ ಬಗ್ಗರಿಗಾಗಿ ಸರಳ ಯೋಜನೆಗಳನ್ನು ರೂಪಿಸಿದರೆ, ಸೀಮಿತ ವ್ಯಾಪ್ತಿಯಲ್ಲಿ ಜನ ಕಲ್ಯಾಣವನ್ನಾದರೂ ಮಾಡಬಹುದು.

ಕಳೆದ ಬಿಜೆಪಿ ಸರ್ಕಾರದ ಸಮಯದಲ್ಲಿ ಉಪಮುಖ್ಯ ಮಂತ್ರಿಗಳಾಗಿದ್ದ ಕೆ.ಎಸ್. ಈಶ್ವರಪ್ಪನವರು ಶಿವಮೊಗ್ಗದಲ್ಲಿ ನಡೆದ ಸಭೆಯೊಂದರಲ್ಲಿ ಕೆರೆಗಳ ಅಭಿವೃದ್ಧಿಗೆ ಒಂದು ವರ್ಷದ ಕ್ರಿಯಾಯೋಜನೆ ರೂಪಿಸಲು ಬೇಕಾಗುವ ಮೊತ್ತವನ್ನು ಕೇಳಿದ್ದರು. ಅಧಿಕಾರಿಗಳು 50 ಕೋಟಿ ರೂ. ಬೇಕಾಗಬಹುದು ಎಂದು ಹೇಳಿದಾಗ, ಅಷ್ಟು ಕಡಿಮೆ ಮೊತ್ತವಾದರೆ ನನ್ನ ಖಾತೆ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್)ಯಿಂದ ತೆಗೆದು ಯೋಜನೆ ರೂಪಿಸಿ ಎಂದು ಸಹಜವಾಗಿ ಅಧಿಕಾರಿಗಳಿಗೆ ಸೂಚಿಸಿದ್ದರು. ಪರಿಸ್ಥಿತಿ ಈ ರೀತಿ ಇರುವಾಗ, ಕೇವಲ ಒಂದು ದಿನದ ಶಕ್ತಿ ಪ್ರದರ್ಶನಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚುಮಾಡುವುದು ನ್ಯಾಯವಲ್ಲ. ಮೇಲಾಗಿ ಪ್ರಜೆಗಳು ಪ್ರಜ್ಞಾವಂತರಾಗಿದ್ದು, ಅವರಿಗೆ ನಾಗರೀಕ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ಸಾಮಾಜಿಕ ಕೆಲಸಗಳನ್ನು modi-bjp-rallyಕೈಗೊಂಡರೆ ಮತ್ತಷ್ಟು ಜಾಗೃತಿ ಮೂಡಿಸಿದಂತಾಗುತ್ತದೆ. ಜೊತೆಗೆ ಅಂತಹ ಸೇವೆ ನೀಡುವ ನಾಯಕರು ನಿಜವಾದ ನಾಯಕರಾಗಿ ಕಂಗೊಳಿಸುತ್ತಾರೆ.

ಸಮಾವೇಶ ಸಂಘಟನಾ ನಾಯಕರು ನೀಡುವ ಕರೆಯ ಮಾತ್ರಕ್ಕೆ ಜನರು ಸಮಾವೇಶಕ್ಕೆ ಬರುವುದು ಸುಳ್ಳು. ಅದಿರಲಿ, ತಮ್ಮ ತಮ್ಮ ಊರುಗಳಲ್ಲಿಯೇ ಜರುಗುವ ಜನ ಜಾಗೃತಿ, ಮಾಹಿತಿ ಪೂರ್ಣ ಸಭೆಗಳು, ಗ್ರಾಮಸಭೆಗಳಿಗೂ ಭಾಗವಹಿಸಲು ಆಗದ ನಮ್ಮ ಜನರು ಮಹಾನಗರ ಪ್ರದೇಶಗಳಲ್ಲಿ ಜರುಗುವ ಸಮಾವೇಶಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ನಾಯಕರು ಹೇಳುವ ಮಾತುಗಳನ್ನು ಕೇಳುತ್ತಾರೆಂದರೆ ಅದಕ್ಕಿಂತ ಆಶ್ಚರ್ಯ ಬೇರೊಂದಿರಲಾರದು.

ಜನರು ಕೆಲಸಕಾರ್ಯಗಳನ್ನು ಬಿಟ್ಟು, ಸಂಘಟಕರು ನೀಡುವ ಎಂಜಲು ಕಾಸಿಗೆ ಆಸೆಪಟ್ಟು ಇಂತಹ ಸಂಘಟನೆಗಳಲ್ಲಿ ಸೇರದೇ, ಅದನ್ನು ತಿರಸ್ಕರಿಸಬೇಕು. ಅಂತಹವರ ಕರೆಯನ್ನು ಮನ್ನಿಸಿ, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಮಾವೇಶಗಳಿಗೆ ಸೇರಿ, ಅವರನ್ನು ಬೆಂಬಲಿಸುವುದು ಭ್ರಷ್ಟಾಚಾರವನ್ನು ಬೆಂಬಲಿಸಿದಂತಾಗುತ್ತದೆಯಲ್ಲವೇ? ಅನಗತ್ಯ ಕೆಲಸ ಮಾಡಿ ನಾಯಕರಾಗಲು ಹವಣಿಸುವ ಮುಖಂಡರ ಮಾತಿಗೆ ಮಾನ್ಯ ಮಾಡದೇ, ಧಿಕ್ಕರಿಸಿದರೆ ಅಂತಹವರಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ. ಅವರು ಸರಿ ದಾರಿಗೆ ಬರಲು ಮಾರ್ಗಹಾಕಿಕೊಟ್ಟಂತಾಗುತ್ತದೆ.