Tag Archives: ಬಿಳಿ ಸಾಹೇಬನ ಭಾರತ

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-25)


– ಡಾ.ಎನ್.ಜಗದೀಶ್ ಕೊಪ್ಪ


1924ರ ಮೇ 16 ರಂದು ಜಿಮ್ ಕಾರ್ಬೆಟ್‌ನ ತಾಯಿ ಮೇರಿ ಕಾರ್ಬೆಟ್ ತೀರಿಕೊಂಡಾಗ ಇಡೀ ನೈನಿತಾಲ್ ಪಟ್ಟಣದಲ್ಲಿ ಆ ದಿನ ಶೋಕಾಚರಣೆಯನ್ನು ಆಚರಿಸಲಾಯಿತು. ಅಲ್ಲಿನ ಆಂಗ್ಲ ಸಮುದಾಯದಲ್ಲಿ ಅತ್ಯಂತ ಹಿರಿಯ ಹಾಗೂ ಗೌರವಾನ್ವಿತ ಮಹಿಳೆಯಾಗಿದ್ದ ಮೇರಿ ಕಾರ್ಬೆಟ್ ಎಲ್ಲರ ನೋವು, ನಲಿವುಗಳಿಗೆ ಸ್ಪಂದಿಸುವ ಹೃದಯವಂತ ಮಹಿಳೆಯಾಗಿದ್ದಳು. 1857ರ ಸಿಪಾಯಿ ದಂಗೆಯಲ್ಲಿ ತನ್ನ ಪತಿಯನ್ನು ಕಳೆದುಕೊಂಡು ತನ್ನ ಮೂವರು ಮಕ್ಕಳೊಂದಿಗೆ ಆಗ್ರಾ ಕೋಟೆಯನ್ನು ಹಾರಿ ಜೀವ ಉಳಿಸಿಕೊಳ್ಳುವ ಸಲುವಾಗಿ ನೈನಿತಾಲ್ ಸೇರಿದ ಈಕೆ, ನಂತರ ಕಾರ್ಬೆಟ್‌ನ ತಂದೆ ಕ್ರಿಷ್ಟೋಪರ್‌ನನ್ನು ಮರು ವಿವಾಹವಾಗಿ, ಕಾರ್ಬೆಟ್ ಕುಟುಂಬಕ್ಕೆ ಆಧಾರಸ್ಥಂಭವಾಗಿ ನಿಂತ ದಿಟ್ಟ ಮಹಿಳೆ ಮೇರಿ. ತನ್ನ ಬದುಕಿನುದ್ದಕ್ಕೂ ಎದುರಿಸಿದ ಹೋರಾಟಗಳು, ಸಂಕಷ್ಟಗಳ ಬಗ್ಗೆ ಪೂರ್ಣ ಅರಿವಿದ್ದ ಮೇರಿ ಸದಾ ಕುಟುಂಬದ ಭದ್ರತೆ ಮತ್ತು ಭವಿಷ್ಯದ ಜೀವನದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಆಕೆಯ ಇಂತಹ ದೃಢನಿರ್ಧಾರದಿಂದಾಗಿ ನೈನಿತಾಲ್ ಗಿರಿಧಾಮದಲ್ಲಿ ಕಾರ್ಬೆಟ್ ಕುಟುಂಬ ಪ್ರತಿಷ್ಟಿತ ಕುಟುಂಬವಾಗಿ ಬೆಳೆಯಲು ಸಾಧ್ಯವಾಯಿತು.

ಮೇರಿಯ ಸಾವು, ಕಾರ್ಬೆಟ್ ಹಾಗೂ ಅವಿವಾಹಿತರಾಗಿ ಉಳಿದುಹೋಗಿದ್ದ, ಸಹೋದರಿ ಮ್ಯಾಗಿ ಮತ್ತು ಮಲಸಹೋದರಿ ಡೊಯಲ್ ಪಾಲಿಗೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿತು. ವಯಸ್ಸಾಗಿದ್ದ ಮೇರಿಯ ಸಾವು ನಿರಿಕ್ಷೀತವಾದರೂ, 60 ವರ್ಷದ ಡೊಯಲ್, 50 ವಯಸ್ಸಿನ ಕಾರ್ಬೆಟ್ ಮತ್ತು 52 ವರ್ಷದ ಮ್ಯಾಗಿ ಇವರೆಲ್ಲರ ಪಾಲಿಗೆ ಆ ವಯಸ್ಸಿನಲ್ಲೂ ಅಕ್ಷರಶಃ ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಇವರೆಲ್ಲರೂ ಅವಿವಾಹಿತರಾಗಿ ಉಳಿದುಕೊಂಡ ಕಾರಣ, ಅವರ ಬೇಕು ಬೇಡಗಳನ್ನು ಪೂರೈಸುವ ಹೊಣೆಗಾರಿಕೆ ಮೇರಿಯದಾಗಿತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳು ವಿವಾಹವಾಗದಿದ್ದರೂ, ವಿಚಲಿತಲಾಗದ, ಆಕೆ ಅವರನ್ನು ಎಂದಿಗೂ ಅನೈತಿಕತೆಯ ಹಾದಿ ತುಳಿಯದಂತೆ ಎಚ್ಚರ ವಹಿಸಿ ಘನತೆಯಿಂದ ಬೆಳೆಸಿದ್ದಳು.

ತಾಯಿಯ ನಿಧನಾನಂತರ ನಿಧಾನವಾಗಿ ಚೇತರಿಸಿಕೊಂಡ ಕಾರ್ಬೆಟ್ ತಾನು ತನ್ನ ಕೆಲವು ಸೇವಕರೊಂದಿಗೆ ಮೌಂಟ್ ಪ್ಲೆಸೆಂಟ್ ಮೌಂಟೆನ್ ಎಂಬ ತಮ್ಮ ಕುಟುಂಬದ ಇನ್ನೊಂದು ಮನೆಯಲ್ಲಿ ವಾಸಿಸತೊಡಗಿದ. ತನ್ನಿಬ್ಬರು ಸಹೋದರಿಯರು ಗಾರ್ನಿ ಹೌಸ್ ಬಂಗಲೆಯಲ್ಲಿ ವಾಸಿಸತೊಡಗಿದರು. ಈ ನಡುವೆ ಕಾರ್ಬೆಟ್‌ಗೆ ತಾಯಿ ನಿಧನವಾದ ಒಂದು ತಿಂಗಳ ನಂತರ ವೈವಾಹಿಕ ಜೀವನದ ಬಗ್ಗೆ ಆಸಕ್ತಿ ಮೂಡತೊಡಗಿತು. ಅಕಸ್ಮಾತ್ತಾಗಿ ಅವನ ಎದೆಯೊಳೆಗೆ ಪ್ರೀತಿ ಮೊಳಕೆಯೊಡೆದು, ಅದು ಚಿಗುರುವ ಮುನ್ನವೇ ಬಾಡಿಹೋಯಿತು. ನಂತರ ಈ ಘಟನೆ ದುರಂತದಲ್ಲಿ ಅಂತ್ಯ ಕಂಡಿತು.

ಐವತ್ತು ವಯಸ್ಸಿನ ಕಾರ್ಬೆಟ್‌ಗೆ ಆ ಕಾಲದಲ್ಲಿ ವಿವಾಹವಾಗುವುದು ಕಷ್ಟದ ಸಂಗತಿಯಾಗಿರಲಿಲ್ಲ. ಬ್ರಿಟಿಷ್ ಆಳ್ವಿಕೆಯ ಆ ಸಮಯದಲ್ಲಿ ಉತ್ತರ ಭಾರತದಲ್ಲಿ ವಾಸವಾಗಿದ್ದ ಬಹುತೇಕ ಆಂಗ್ಲ ಸಮುದಾಯದ ವಿಧವೆಯರೂ, ವಿಧುರರು ಮರು ವಿವಾಹವಾಗುತ್ತಿದ್ದುದು ಸಾಮಾನ್ಯವಾಗಿತ್ತು. ವಾಸ್ತವವಾಗಿ ಕಾರ್ಬೆಟ್ ತಾಯಿ ಮೇರಿ ಕೂಡ ತನ್ನ ಮೊದಲ ಪತಿಯಿಂದ ಪಡೆದಿದ್ದ ಮೂರು ಮಕ್ಕಳ ಜೊತೆ ಕಾರ್ಬೆಟ್‌ನ ತಂದೆ ಕ್ರಿಷ್ಟೋಪರ್‌ನನ್ನು ಮದುವೆಯಾಗಿದ್ದಳು. ಕಾರ್ಬೆಟ್‌ಗೆ ಇಂತಹ ಅನೇಕ ಆಹ್ವಾನಗಳು ಬಂದರೂ ಕೂಡ ಅವನು ತಿರಸ್ಕರಿಸುತ್ತಾ ಬಂದಿದ್ದ.

ತನ್ನ ತಾಯಿಯ ಸಾವಿನ ನಂತರ ಒಂದು ತಿಂಗಳಲ್ಲೇ 19ರ ಹೆಲನ್ ಎಂಬ ಯುವತಿಯ ಮೋಹಕ್ಕೆ ಒಳಗಾಗಿ ಅವಳನ್ನು ಅಪಾರವಾಗಿ ಪ್ರೀತಿಸತೊಡಗಿದ. ಈಕೆ, ಕಾರ್ಬೆಟ್ ಸ್ನೇಹಿತನಾಗಿದ್ದ ಅರಣ್ಯಾಧಿಕಾರಿಯೊಬ್ಬನ ಹೆಂಡತಿಯ ತಂಗಿಯಾಗಿದ್ದಳು. ಹೆಲನ್ ಇಂಗ್ಲೆಂಡ್‌ನಿಂದ ತನ್ನ ತಂದೆ ತಾಯಿಯ ಜೊತೆ ಪ್ರವಾಸಕ್ಕಾಗಿ ಭಾರತಕ್ಕೆ ಬಂದಾಗ ನೈನಿತಾಲ್ ಗಿರಿಧಾಮದಲ್ಲಿದ್ದ ಅಕ್ಕನ ಮನೆಯಲ್ಲಿ ಕಾರ್ಬೆಟ್‌ನ ಪರಿಚಯ ಬೆಳೆಯಿತು. ನಂತರ ಅವನ ಜೊತೆ ಕಾಡು ಅಲೆಯುವುದು, ಮೀನು ಶಿಕಾರಿಮಾಡುವುದು, ಸಂಜೆ ವೇಳೆ, ಕ್ಲಬ್‌ನಲ್ಲಿ ಟೆನ್ನೀಸ್ ಕ್ರೀಡೆ ಹೀಗೆ ಮೂರು ತಿಂಗಳ ಇವರಿಬ್ಬರ ಒಡನಾಟ ನಿರಂತರ ಮುಂದುವರಿಯಿತು. ಹೆಲನ್‌ಳ ನಡೆ ನುಡಿಯಿಂದ ಆಕರ್ಷಿತನಾದ ಕಾರ್ಬೆಟ್‌ಗೆ ಈಕೆ ನನಗೆ ಸಂಗಾತಿಯಾಗಲು ಸೂಕ್ತ ಹೆಣ್ಣು ಮಗಳು ಎಂದು ಅನಿಸತೊಡಗಿತು. ಹೆಲೆನ್ ಕೂಡ. ಜಿಮ್ ಕಾರ್ಬೆಟ್‌ಗಿದ್ದ ಅಭಿರುಚಿ, ನೈನಿತಾಲ್ ಪಟ್ಟಣದಲ್ಲಿ ಅವನಿಗಿದ್ದ ಗೌರವ ಇವೆಲ್ಲವನ್ನು ಗಮನಿಸಿದ್ದ ಹೆಲನ್ ಮಾನಸಿಕವಾಗಿ ಅವನನ್ನು ಸ್ವೀಕರಿಸಲು ತಯಾರಿದ್ದಳು. ನೈನಿತಾಲ್‌ನ ಜನತೆ ಸಹ ಇವರಿಬ್ಬರ ಗೆಳೆತನ, ತಿರುಗಾಟ ಎಲ್ಲವನ್ನು ಗಮನಿಸಿ, ಅಂತಿಮವಾಗಿ ಜಿಮ್ ಕಾರ್ಬೆಟ್‌ಗೆ ಒಬ್ಬ ಸಂಗಾತಿ ಸಿಕ್ಕಳು ಎಂದು ಮಾತನಾಡಿಕೊಂಡರು. ಆದರೆ ಅವರೆಲ್ಲರ ನಿರೀಕ್ಷೆ ಹುಸಿಯಾಯಿತು. ಒಂದು ದಿನ ಕಾರ್ಬೆಟ್ ತನ್ನ ಗೆಳೆಯರ ಮೂಲಕ ಹೆಲನ್‌ಳನ್ನು ಮದುವೆಯಾಗುವ ಪ್ರಸ್ತಾಪವನ್ನು ಆಕೆಯ ತಂದೆ ತಾಯಿಗಳ ಮುಂದಿಟ್ಟ. ಆದರೆ, ವಯಸ್ಸಿನ ಕಾರಣಕ್ಕಾಗಿ ನೇರವಾಗಿ ಅವನ ಪ್ರಸ್ತಾಪವನ್ನು ತಿರಸ್ಕರಿಸಿದ ಆಕೆಯ ಪೋಷಕರು ಹೆಲನ್ ಜೊತೆ ಇಂಗ್ಲೆಂಡ್‌ಗೆ ತಕ್ಷಣವೇ ಹಿಂತಿರುಗಿಬಿಟ್ಟರು.

ಈ ಘಟನೆ ಮಾನಸಿಕವಾಗಿ ಕಾರ್ಬೆಟ್‌ನನ್ನು ತೀವ್ರ ಅಘಾತಕ್ಕೊಳಪಡಿಸಿತು. ಇದರಿಂದಾಗಿ ಅವನು ಹಲವು ತಿಂಗಳು ಕಾಲ ಮೌನಿಯಾಗಿಬಿಟ್ಟ. ನೋವನ್ನು ಮರೆಯಲು. ತಾಂಜೇನಿಯಾದ ಕೃಷಿತೋಟಕ್ಕೆ ತೆರಳಿ ಸ್ವಲ್ಪದಿನ ಇದ್ದು, ಆಫ್ರಿಕಾದ ಕಾಡುಗಳಲ್ಲಿ ಗೆಳೆಯರ ಜೊತೆ ಶಿಕಾರಿಯಲ್ಲಿ ತೊಡಗಿಕೊಂಡ. ಆದರೂ ಹೆಲನ್‌ಳನ್ನು ಮರೆಯಲು ಅವನಿಂದ ಸಾಧ್ಯವಾಗಲಿಲ್ಲ. ಅದೇ ವೇಳೆಗೆ ತಾಂಜೇನಿಯ ಕೃಷಿ ಪಾರ್ಮ್‌ಗೆ ಅವನ ಪಾಲುದಾರನಾಗಿದ್ದ ವಿಂದಮ್ ಕಿನ್ಯಾ ತ್ಯಜಿಸಿ, ಇಂಗ್ಲೆಂಡಿನ ತನ್ನ ಪೂರ್ವಿಕರ ಮನೆಯಲ್ಲಿ ನೆಲೆಸಿದ್ದ. ಅಂತಿಮವಾಗಿ ಹೆಲನ್ ಮುಂದೆ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಕಾರ್ಬೆಟ್ ನೇರವಾಗಿ ಇಂಗ್ಲೇಂಡ್‌ಗೆ ತೆರಳಿದ. ವಿಂದಮ್ ಮನೆಯಲ್ಲಿದ್ದುಕೊಂಡು ಆಕೆಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಅವನಿಗೊಂದು ಅಘಾತಕಾರಿ ಸುದ್ಧಿಯೊಂದು ಕಾದಿತ್ತು. ಎಡಿನ್‌ಬರೊ ನಗರದಲ್ಲಿ ವಾಸವಾಗಿದ್ದ ಹೆಲನ್‌ಗೆ ಆಕೆಯ ಕುಟುಂಬದವರು ವಿವಾಹ ನಿಶ್ಚಯ ಮಾಡಿ, ಸಿದ್ಧತೆಯಲ್ಲಿ ತೊಡಗಿರುವುದನ್ನು ಕಂಡು ನಿರಾಶನಾದ ಕಾರ್ಬೆಟ್, ವಾಪಸ್ ಭಾರತಕ್ಕೆ ಹಿಂತಿರುಗಿದ. ಈ ಘಟನೆಯ ನಂತರ ವಿವಾಹವಾಗುವ ವಿಚಾರವನ್ನು ಶಾಶ್ವತವಾಗಿ ಕಾರ್ಬೆಟ್ ತನ್ನ ಮನಸಿನಿಂದ ತೆಗೆದುಹಾಕಿಬಿಟ್ಟ. ಪ್ರಾಣಿ, ಪಕ್ಷಿ, ಪರಿಸರ, ಮತ್ತು ಈ ನೆಲದ ಸಂಸ್ಕೃತಿಯ ಎಳೆಯ ಮಕ್ಕಳು ಅವನ ಆರಾಧನೆಯ ಕೇಂದ್ರ ಬಿಂದುವಾದರು. ಯಾರಾದರೂ ವಿವಾಹವಾಗುವ ಪ್ರಸ್ತಾಪವನ್ನು ಕಾರ್ಬೆಟ್ ಮುಂದಿಟ್ಟರೆ, ಭಾರತವೇ ನನ್ನ ಪತ್ನಿ, ಇಲ್ಲಿನ ಈ ಮಕ್ಕಳು ನನ್ನ ಮಕ್ಕಳು ಎನ್ನುವುದರ ಮೂಲಕ ಆಹ್ವಾನವನ್ನು ನಿರಾಕರಿಸುತ್ತಿದ್ದ.

ಜಗತ್ತಿನ ಯಾವುದೇ ಧರ್ಮ, ಪುರಾಣಗಳು, ಅಥವಾ ವೇದ ಉಪನಿಷತ್ತುಗಳು ಏನೇ ಹೇಳಲಿ, ಲೌಕಿಕ ಜಗತ್ತಿನ ಮನುಷ್ಯನೊಬ್ಬ ಹಸಿವು, ಮತ್ತು ಕಾಮವನ್ನು ಗೆಲ್ಲುವುದು ಸಾಮಾನ್ಯ ಸಂಗತಿಯೇನಲ್ಲ. ಈ ಕಾರಣಕ್ಕಾಗಿ ಏನೊ? ನಮ್ಮ ಋಷಿಪುಂಗವರು ಅಂತಹ ಸಾಹಸ ಮಾಡಲಾರದೆ, ಪತ್ನಿಯರೊಡನೆ ಕಾಡಿನ ಆಶ್ರಮದಲ್ಲಿ ವಾಸವಾಗಿಬಿಟ್ಟರು. ಕಾರ್ಬೆಟ್‌ಗೆ ವಿಷಯದಲ್ಲೂ ಇಂತಹದ್ದೇ ಅನುಮಾನಗಳು ಕಂಡು ಬರುತ್ತವೆ ಆದರೆ, ಯಾವುದೇ ನಿಖರ ದಾಖಲೆಗಳು ಸಿಗುತ್ತಿಲ್ಲ. ರುದ್ರ ಪ್ರಯಾಗ ಪ್ರಾಂತ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಇಬ್ಸ್‌ಟನ್ ಪತ್ನಿ ಜೀನ್ ಜೊತೆ ಕಾರ್ಬೆಟ್‌ಗೆ ಸಂಬಂಧವಿತ್ತು ಎಂಬ ಅನುಮಾನಗಳು ಚರಿತ್ರೆಯಲ್ಲಿ ದಾಖಲಾಗಿವೆ. ಇಬ್ಸ್‌ಟನ್ ಕಾರ್ಯನಿಮಿತ್ತ ವಾರಗಟ್ಟಲೆ ಮನೆಯಿಂದ ಹೊರಗಿರುತ್ತಿದ್ದ ಸಮಯದಲ್ಲಿ ಜೀನ್, ದಿನಗಟ್ಟಲೆ ಹಗಲು ರಾತ್ರಿ ಎನ್ನದೆ ಕಾಡಿನಲ್ಲಿ ಶಿಕಾರಿಯ ನೆಪದಲ್ಲಿ ಕಾರ್ಬೆಟ್ ಜೊತೆ ಕಾಲ ಕಳೆಯುತ್ತಿದ್ದಳು. ಅವರಿಬ್ಬರ ನಡುವೆ ಗುಪ್ತವಾಗಿ ಪತ್ರ ವ್ಯವಹಾರ ಕೂಡ ನಡೆಯುತಿತ್ತು. ಆದರೆ, ಇವರಿಬ್ಬರ ಈ ಸಂಬಂಧ ಕೇವಲ ಭಾವನಾತ್ಮಕ ಸಂಬಂಧವೆ? ಅಥವಾ ಅದನ್ನೂ ಮೀರಿದ ದೈಹಿಕ ಆಕರ್ಷಣೆಯೆ? ಎಂಬುದರ ಬಗ್ಗೆ ಯಾವ ನಿಖರ ದಾಖಲೆಯೂ ಇಲ್ಲ. ಒಟ್ಟಾರೆ, ತನ್ನ ಪ್ರೀತಿಯ ವಿಫಲತೆಯ ನಂತರ ಕಾರ್ಬೆಟ್ ಪರಿಸರದತ್ತ ಮುಖ ಮಾಡಿ ಅದರ ರಕ್ಷಣೆಗೆ ಮುಂದಾದ. ಈವರೆಗೆ ಬಂದೂಕ ಹಿಡಿದು ಕಾಡು ಅಲೆಯುತ್ತಿದ್ದ ಕಾರ್ಬೆಟ್, ನಂತರದ ದಿನಗಳಲ್ಲಿ ಕ್ಯಾಮರಾ ಹಿಡಿದು ಕಾಡು ಅಲೆಯ ತೊಡಗಿದ.

1092 ಮತ್ತು 30 ರ ದಶಕದಲ್ಲಿ ಭಾರತದಲ್ಲಿ ಛಾಯಾಚಿತ್ರವಾಗಲಿ, ಅದರ ಬಳಕೆಯಾಗಲಿ ಹೇಳಿಕೊಳ್ಳುವಂತಹ ಪ್ರಸಿದ್ಧಿಗೆ ಬಂದಿರಲಿಲ್ಲ. ಕ್ಯಾಮರಾ ಕೂಡ ಜನಸಾಮಾನ್ಯರಿಗೆ ನಿಲುಕುತ್ತಿರಲಿಲ್ಲ. ಆದರೆ, ಕಾರ್ಬೆಟ್ ಕೊಲ್ಕತ್ತ ನಗರಕ್ಕೆ ತೆರಳಿ ಒಂದು ಸ್ಥಿರ ಚಿತ್ರ ತೆಗೆಯ ಬಹುದಾದ ಕ್ಯಾಮರಾ ಮತ್ತು 16 ಎಂ.ಎಂ.ನ ಚಲನಚಿತ್ರ ತೆಗೆಯಬಹುದಾದ ಕ್ಯಾಮರಾ ಮತ್ತು ಅವುಗಳಿಗೆ ಬೇಕಾದ ಕಪ್ಪು ಬಿಳುಪಿನ ಕಚ್ಛಾ ಫಿಲಂಗಳನ್ನು ಕೊಂಡುತಂದ. ಅಂದಿನ ದಿನಗಳಲ್ಲಿ ಬಳಕೆಯಲ್ಲಿದ್ದ  ಕ್ಯಾಮರಾಗಳಲ್ಲಿ ಜೂಂ ಲೆನ್ಸ್, ಆಗಲಿ, ಕ್ಲೋಸ್ ಅಪ್ ಚಿತ್ರ ತೆಗೆಯಬಹುದಾದ ಲೆನ್ಸ್‌ಗಳಾಗಲಿ ಇರುತ್ತಿರಲಿಲ್ಲ. ಯಾವುದೇ ಪ್ರಾಣಿಗಳ ಚಿತ್ರವನ್ನು ಹತ್ತಿರದಿಂದ ತೆಗೆಯಬೇಕಾದರೆ, ಪ್ರಾಣಿಗಳ ಹತ್ತಿರವೇ ನಿಂತು ತೆಗೆಯಬೇಕಾಗಿತ್ತು. ಹಾಗಾಗಿ ವನ್ಯಮೃಗ ಛಾಯಾಚಿತ್ರಣ ಎಂಬುದು ಅಪಾಯಕಾರಿ ಹವ್ಯಾಸವಾಗಿತ್ತು. ಅರಣ್ಯವನ್ನು, ಅಲ್ಲಿನ ಪ್ರಾಣಿಗಳ ಚಲನವಲನಗಳನ್ನು ಚೆನ್ನಾಗಿ ಅರಿತ್ತಿದ್ದ ಕಾರ್ಬೆಟ್, ನೀರಿನ ತಾಣವಿರುವ ಪ್ರದೇಶದಲ್ಲಿ ಪೊದೆಯ ಹಿಂದೆ ಅಡಗಿ ಪ್ರಾಣಿಗಳ ಚಿತ್ರಗಳನ್ನು ತೆಗೆಯುತ್ತಿದ್ದ. ಅಪಾಯಕಾರಿ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆಗಳ ಚಿತ್ರಗಳನ್ನು ತೆಗೆಯಲು ಕೆಲವೊಮ್ಮೆ ಆನೆಗಳ ಮೇಲೆ ಸವಾರಿ ಹೋಗಿ ಹತ್ತಿರದಿಂದ ತೆಗೆಯುವ ಹವ್ಯಾಸ ಬೆಳಸಿಕೊಂಡಿದ್ದ.

ಕೇವಲ ಐದಾರು ವರ್ಷಗಳಲ್ಲಿ ಬಗೆ ಬಗೆಯ ಪಕ್ಷಿಗಳು, ಪತಂಗ, ಜಿಂಕೆ, ನವಿಲು, ಸೇರಿದಂತೆ ಹುಲಿ, ಚಿರತೆ, ಸಿಂಹಗಳ ಸಾವಿರಾರು ಚಿತ್ರಗಳನ್ನು ತೆಗೆದು ದಾಖಲಿಸಿದ್ದ. ಅದೇ ರೀತಿ ಸಾವಿರಾರು ಅಡಿ ಉದ್ದದ 16 ಎಂ.ಎಂ. ನ ಚಿತ್ರೀಕರಣವನ್ನು ಮಾಡಿದ್ದ. (ಈ ಅಪರೂಪಪದ ಚಿತ್ರಗಳು ಈಗ ಲಂಡನ್ನಿನ ಬಿ.ಬಿ.ಸಿ. ಛಾನಲ್ ಸಂಗ್ರಹದಲ್ಲಿವೆ). ಚಿತ್ರಗಳ ಜೊತೆ ಜೊತೆಯಲ್ಲಿ ಪ್ರಾಣಿ ಪಕ್ಷಿಗಳ ಬದುಕನ್ನು ಸಂಗ್ರಹಿಸಿ, ಇವುಗಳ ಬಗ್ಗೆ ಕಾಲೇಜಿನಲ್ಲಿ, ಕ್ಲಬ್ಬುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ವಿದ್ಯಾರ್ಥಿ ಮತ್ತು ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕಾರ್ಬೆಟ್ ರೂಢಿಸಿಕೊಂಡ. ಅತ್ಯಂತ ಹುರುಪಿನಿಂದ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾರ್ಬೆಟ್. ತನ್ನ ಈ ಹೊಸ ಪ್ರವೃತ್ತಿಯಿಂದಾಗಿ ನಂತರದ ದಿನಗಳಲ್ಲಿ ಅಂದರೇ, 1932ರ ವೇಳೆಗೆ ಜಗತ್ ಪ್ರಸಿದ್ದ ಅರಣ್ಯ ಸಂರಕ್ಷಕನಾಗಿ ಪ್ರಖ್ಯಾತಿ ಹೊಂದಿದ.

                                                (ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 22)


– ಡಾ.ಎನ್.ಜಗದೀಶ್ ಕೊಪ್ಪ


 

ಚಿರತೆಯ ಆರ್ಭಟ ಮತ್ತು ಗುಂಡಿನ ಸದ್ದು ಕೇಳಿದ ರುದ್ರಪ್ರಯಾಗದ ಜನ ನರಭಕ್ಷಕ ಗುಂಡಿಗೆ ಬಲಿಯಾಗಿದೆ ಎಂದು ಭಾವಿಸಿ, ಲಾಟೀನು, ದೊಣ್ಣೆ ಸಮೇತ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಸ್ಥಳಕ್ಕೆ ಓಡೋಡಿ ಬಂದರು. ಹಳ್ಳಿಯ ಜನರೆಲ್ಲಾ ಬಂದಿದ್ದರಿಂದ ಧೈರ್ಯ ಮಾಡಿದ ಕಾರ್ಬೆಟ್ ಮರದಿಂದ ಕೆಳಗಿಳಿದು ಟಾರ್ಚ್‌ ಬೆಳಕಿನ ಸಹಾಯದಿಂದ ಹಳ್ಳದಲ್ಲಿ ಚಿರತೆಗಾಗಿ ತಡಕಾಡಿದ. ತನ್ನ ಮುಂಗಾಲುಗಳು ಕತ್ತರಿಯಲ್ಲಿ ಸಿಲುಕಿದ್ದ ಕಾರಣ ಚಲಿಸಲಾರದೆ, ಅದರಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದ ಚಿರತೆಯನ್ನು ಹಳ್ಳದಲ್ಲಿ ಕಂಡಾಕ್ಷಣ ತಡ ಮಾಡದೆ, ಕಾರ್ಬೆಟ್ ಅದರ ತಲೆಗೆ ಗುಂಡುಹಾರಿಸಿದ. ಅತ್ಯಂತ ಹತ್ತಿರದಿಂದ ಹಾರಿಸಿದ ಗುಂಡಿನ ಹೊಡೆತಕ್ಕೆ ಕ್ಷಣಾರ್ಧದಲ್ಲೇ ಚಿರತೆ ಸಾವನ್ನಪ್ಪಿತು.

ಕಗ್ಗತ್ತಲೆಯಲ್ಲಿ ಸತ್ತು ಮಲಗಿದ ಚಿರತೆಯನ್ನು ನೋಡಿದಾಕ್ಷಣ ಗ್ರಾಮಸ್ಥರ ಸಂತಸ ಎಲ್ಲೇ ಮೀರಿತು. ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರನ್ನು ಹೆಗಲ ಮೇಲೆ ಎತ್ತಿ ಕುಣಿದಾಡಿದರು. ಬಿದರಿನ ಗಳಕ್ಕೆ ಚಿರತೆಯನ್ನು ಕಟ್ಟಿ ಆ ರಾತ್ರಿಯಲ್ಲೇ ಪ್ರಯಾಗದ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು. ಕಾರ್ಬೆಟ್‌ನನ್ನೂ ಸಹ ಬಿಡದೆ, ಊರಿನ ಹೊರವಲಯದಿಂದ ಮೆರವಣಿಗೆಯಲ್ಲಿ ಹೊತ್ತು ತಂದರು. ಎಲ್ಲರೂ ನರಭಕ್ಷಕ ಗುಂಡಿಗೆ ಬಲಿಯಾಯಿತು ಎಂದು ನಂಬಿದ್ದರು. ಆದರೆ, ಕಾರ್ಬೆಟ್ ಅದನ್ನು ಖಚಿತ ಪಡಿಸಿಕೊಳ್ಳವ ತನಕ ನಂಬಲು ಸಿದ್ದನಿರಲಿಲ್ಲ. ಈ ಹಿಂದೆ ಶಿಕಾರಿಯ ಸಂದರ್ಭದಲ್ಲಿ ನೋಡಿದ್ದ ಚಿರತೆಗೂ, ಈಗ ಬಲಿಯಾಗಿರುವ ಚಿರತೆಯ ಮೈಬಣ್ಣದಲ್ಲಿನ ಅಲ್ಪ ವ್ಯತ್ಯಾಸ ಕಾರ್ಬೆಟ್‌ನನ್ನು ಗೊಂದಲದಲ್ಲಿ ದೂಡಿತ್ತು.

ಪ್ರವಾಸಿ ಮಂದಿರದ ಬಳಿಗೆ ಚಿರತೆಯ ಶವ ತಂದ ನಂತರ ಅದರ ಕುತ್ತಿಗೆ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದ. ಕೇವಲ ಎಂಟು ಹತ್ತು ದಿನಗಳ ಹಿಂದೆ ಕೂದಲೆಳೆಯ ಹಂತರದಿಂದ ಪಾರಾಗಿದ್ದ ನರಭಕ್ಷಕನಿಗೆ ಗುಂಡು ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿತ್ತು, ಅಲ್ಲದೇ ಆ ಭಾಗದಲ್ಲಿ ಅದರ ಕೂದಲುಗಳು ಉದುರಿಹೋಗಿದ್ದವು. ಆದರೆ, ಈ ಚಿರತೆಯಲ್ಲಿ ಅದರ ಯಾವ ಲಕ್ಷಣಗಳು ಕಾಣಲಿಲ್ಲ. ಹಾಗಾಗಿ ಇದು ನರಭಕ್ಷಕ ಚಿರತೆಯಲ್ಲ, ಬೇರೊಂದು ಗಂಡು ಚಿರತೆ ಎಂದು ಜಿಮ್ ಕಾರ್ಬೆಟ್ ನಿರ್ಧರಿಸಿದ. ಆದರೆ, ಇವನ ತೀರ್ಮಾನವನ್ನು ಇಬ್ಸ್‌ಟನ್ ಆಗಲಿ, ರುದ್ರಪ್ರಯಾಗದ ಜನರಾಗಲಿ ನಂಬಲು ಸಿದ್ಧರಿರಲಿಲ್ಲ. ಸದ್ಯಕ್ಕೆ ಯಾವುದೇ ವಾದವಿವಾದ ಬೇಡ, ಕನಿಷ್ಟ ಒಂದು ವಾರ ಮೊದಲಿನ ಹಾಗೆ ರಾತ್ರಿ ವೇಳೆ ಎಚ್ಚರ ವಹಿಸಿ ಎಂದು ಪ್ರಯಾಗದ ಜನರಿಗೆ ಕಾರ್ಬೆಟ್ ಮನವಿ ಮಾಡಿಕೊಂಡ.

ತಡರಾತ್ರಿ ಪ್ರವಾಸಿ ಮಂದಿರದಲ್ಲಿ, ಇಬ್ಸ್‌ಟನ್ ಅವನ ಪತ್ನಿ ಜೀನ್ ಜೊತೆ ಕುಳಿತು ಊಟ ಮಾಡುವಾಗ, ತಕ್ಣಣ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡುವುದು ಬೇಡ ಎಂದು ಕಾರ್ಬೆಟ್ ಇಬ್ಸ್‌ಟನಗೆ ಮನವಿ ಮಾಡಿದ. ಅದಕ್ಕೆ ಅವನು ಸಮ್ಮತಿ ಸೂಚಿಸಿದ. ಮಾರನೇ ದಿನ ಬೆಳಿಗ್ಗೆ ಪೌರಿಯಿಂದ ಬಂದಿದ್ದ ಕೆಲವು ಕಾಗದ ಪತ್ರಗಳನ್ನು ವಿಲೇವಾರಿ ಮಾಡುವುದರಲ್ಲಿ ಇಬ್ಸ್‌ಟನ್ ನಿರತನಾದ. ಕಾರ್ಬೆಟ್ ತನ್ನ ಸಹಾಯಕರಿಗೆ ಚಿರತೆಯ ಚರ್ಮ ಸುಲಿಯಲು ತಿಳಿಸಿ, ಮಂದಾಕಿನಿ ನದಿಯಲ್ಲಿ ಮೀನು ಬೇಟೆಯಾಡಲು ಹೊರಟ. ಕಾರ್ಬೆಟ್ ನರಭಕ್ಷಕನ ಸಾವಿನ ಬಗ್ಗೆ ಖಚಿತಪಡಿಸಿಕೊಳ್ಳಲು ಒಂದು ವಾರ ಸಮಯ ಕೇಳಿದ್ದ ಆದರೆ, ಕೇವಲ ಎರಡು ದಿನಗಳ ಅವಧಿಯಲ್ಲಿ ನರಭಕ್ಷಕ ನದಿಯಾಚೆಗಿನ ಹಳ್ಳಿಯಲ್ಲಿ ಪ್ರತ್ಯಕ್ಷವಾಗಿ ಒಬ್ಬ ಹೆಂಗಸನ್ನು ಬಲಿತೆಗೆದುಕೊಂಡ ವಿಷಯವನ್ನು ಹಳ್ಳಿಗರು ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದು ಕಾರ್ಬೆಟ್‌ಗೆ ಮುಟ್ಟಿಸಿದರು.

ಕಾರ್ಬೆಟ್‌ನ ಸಂಶಯ ಕಡೆಗೂ ನಿಜವಾಯಿತು. ಆ ವೇಳೆಗಾಗಲೇ ಇಬ್ಸ್‌ಟನ್ ವಾಪಸ್ ಪೌರಿಗೆ ಮತ್ತು ಕಾರ್ಬೆಟ್ ನೈನಿತಾಲ್‌ಗೆ ಹೋಗಿ ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಂಡು ಬರುವುದೆಂದು ನಿರ್ಧಾರವಾಗಿತ್ತು. ಇಬ್ಬರೂ ಎರಡು ದಿನಗಳ ಮಟ್ಟಿಗೆ ತಮ್ಮ ಕಾರ್ಯಕ್ರಮವನ್ನು ಮುಂದೂಡಿ, ಹೆಂಗಸು ಬಲಿಯಾಗಿದ್ದ ಹಳ್ಳಿಗೆ ಕುದುರೆಯೇರಿ ಹೊರಟರು. ಊರ ಹೊರ ವಲಯದಲ್ಲಿ ಹೆಂಗಸಿನ ಶವವಿದ್ದ ಜಾಗದಲ್ಲಿ ಆಕೆಯ ಸಂಬಂಧಿ ಕಾರ್ಬೆಟ್ ಬರುವಿಕೆಗಾಗಿ ಕಾಯುತ್ತಿದ್ದ. ಕಾರ್ಬೆಟ್‌ಗೆ ರಾತ್ರಿ ನಡೆದ ಘಟನೆಯನ್ನು ವಿವರಿಸಿದ. ಚಿರತೆಗೆ ಬಲಿಯಾದ ಹೆಂಗಸಿನ ಶವವಿದ್ದ ಜಾಗ ಮತ್ತು ಆಕೆಯ ಮನೆ ಎಲ್ಲವನ್ನು ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಸೂಕ್ಷ್ಮವಾಗಿ ಅವಲೋಕಿಸಿದರು.

ಹಿಂದಿನ ರಾತ್ರಿ ಮಳೆಯಾಗಿದ್ದ ಕಾರಣ ನರಭಕ್ಷಕನ ಹೆಜ್ಜೆ ಗುರುತು ಎಲ್ಲೆಡೆ ಸ್ಪಷ್ಟವಾಗಿ ಮೂಡಿದ್ದವು. ಮನೆಯಿಂದ ದೃಡವಾಗಿದ್ದ, ಐವತ್ತು ಕೆ.ಜಿ. ಗೂ ಹೆಚ್ಚು ತೂಕವಿದ್ದ ಹೆಂಗಸಿನ ಶವವನ್ನು ಎಲ್ಲಿಯೂ ಭೂಮಿಗೆ ತಾಗದಂತೆ ಬಾಯಲ್ಲಿ ಕಚ್ಚಿ ಹಿಡಿದು ಸಾಗಿದ್ದ ನರಭಕ್ಷಕ ಚಿರತೆಯ ಸಾಮರ್ಥ್ಯದ ಬಗ್ಗೆ ಕಾರ್ಬೆಟ್ ನಿಜಕ್ಕೂ ಬೆರಗಾದ. ಸಂಜೆ ನಾಲ್ಕು ಗಂಟೆಯ ವೇಳೆಗೆ ಶವವಿದ್ದ ಜಾಗದಿಂದ ಸುಮಾರು 60 ಅಡಿ ದೂರದಲ್ಲಿದ್ದ ಮರವೇರಿ ರಾತ್ರಿ ಹತ್ತು ಗಂಟೆಯವರೆಗೂ ಚಿರತೆಗಾಗಿ ಕಾಯಲು ಇಬ್ಬರೂ ನಿರ್ಧರಿಸಿದರು. ಕಾರ್ಬೆಟ್‌ನ ಸೇವಕರು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳಸಿದ್ದರಿಂದ ಅವರಿನ್ನೂ ಹಳ್ಳಿ ತಲುಪಿರಲಿಲ್ಲ. ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ಹಳ್ಳಿಯ ಮುಖಂಡನಿಗೆ ತಿಳಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಕೋವಿ, ಟಾರ್ಚ್ ಮತ್ತು ಪೆಟ್ರೋಮ್ಯಾಕ್ಸ್ ಜೊತೆ ಹೊರಟು ಮರವೇರಿ ಕುಳಿತರು.

ಗ್ರಾಮಸ್ಥರು ಚಿರತೆ ಉತ್ತರ ದಿಕ್ಕಿನ ಕಾಡಿನತ್ತ ಹೋಯಿತು ಎಂದು ತಿಳಿಸಿದ್ದರಿಂದ, ಎತ್ತರದ ಕೊಂಬೆಯೇರಿದ ಇಬ್ಸ್‌ಟನ್ ಉತ್ತರ ದಿಕ್ಕಿಗೆ ಮುಖಮಾಡಿ ಕೈಯಲ್ಲಿ ಬಂದೂಕ ಹಿಡಿದು ಕುಳಿತರೆ, ಕಾರ್ಬೆಟ್ ಇನ್ನೊಂದು ದಿಕ್ಕಿಗೆ ಮುಖಮಾಡಿ ಕುಳಿತ. ಪೆಟ್ರೋಮ್ಯಾಕ್ಸ್ ಮೇಲೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಮರದ ಬುಡದ ಪೊಟರೆಯಲ್ಲಿ ಇಟ್ಟರು. ಇಬ್ಬರ ಬಳಿ ಟಾರ್ಚ್ ಇತ್ತಾದರೂ ಅವುಗಳ ಬ್ಯಾಟರಿಗಳು ಶಕ್ತಿಗುಂದಿದ್ದವು. ಆದರೂ ನರಭಕ್ಷಕ ಬಂದರೆ, ಗುರಿಯಿಡುವ ಆತ್ಮವಿಶ್ವಾಸ ಇಬ್ಬರಿಗೂ ಇತ್ತು. ಆದರೆ, ಇವರ ನಿರೀಕ್ಷೆ ಮೀರಿ, ಉತ್ತರ-ದಕ್ಷಿಣ ದಿಕ್ಕುಗಳನ್ನು ಬಿಟ್ಟು ಪಶ್ಚಿಮ ದಿಕ್ಕಿನ ಪರ್ವತದಿಂದ ನರಭಕ್ಷಕ ಇಳಿದು ಬರುವುದನ್ನು ಕಾಡು ಕೋಳಿಗಳು ಕೂಗುವುದರ ಮೂಲಕ ಸೂಚನೆ ನೀಡಿದವು. ಇವರು ಕುಳಿತ್ತಿದ್ದ ಮರಕ್ಕೂ ಆ ಪಶ್ಚಿಮ ದಿಕ್ಕಿನ ನಡುವೆ ಕಲ್ಲು ಬಂಡೆ ಅಡ್ಡಿಯಾದ್ದರಿಂದ ಇಬ್ಬರೂ ಸರಸರನೆ ಮರದಿಂದ ಇಳಿದು ಕಲ್ಲು ಬಂಡೆ ಏರಲು ನಿರ್ಧರಿಸಿದರು. ಅದಕ್ಕಾಗಿ ಪೊಟರೆಯಲ್ಲಿ ಇಟ್ಟಿದ್ದ ಪೆಟ್ರೋಮ್ಯಾಕ್ಸ್ ತೆಗೆದು ಹತ್ತಿಸಿದರು. ಆದರೆ, ಇಬ್ಸ್‌ಟನ್ ಅದನ್ನು ಹಿಡಿದು ಬಂಡೆಯತ್ತ ಸಾಗುತ್ತಿರುವಾಗ, ನೆಲದ ಮೇಲಿನ ಕಲ್ಲೊಂದಕ್ಕೆ ತಾಗಿಸಿಬಿಟ್ಟ. ಇದರಿಂದಾಗಿ ಅದರ ಗಾಜು ಮತ್ತು ರೇಷ್ಮೆ ಬತ್ತಿ ಎರಡೂ ಉದುರಿಹೋದವು. ಆದರೂ ಅದರಿಂದ ಸಣ್ಣನೆಯ ನೀಲಿ ಜ್ವಾಲೆ ಹೊರಹೊಮ್ಮುತ್ತಿತ್ತು ಇದರ ಸಾಮರ್ಥ್ಯ ಕೇವಲ ಐದಾರು ನಿಮಿಷ ಎಂದು ಇಬ್ಸ್ ಹೇಳಿದ ಕೂಡಲೇ ಕಾರ್ಬೆಟ್, ಕತ್ತಲೆಯಲ್ಲಿ ಇಲ್ಲಿರುವುದು ಅಪಾಯಕಾರಿ ಎಂದು ನಿರ್ಧರಿಸಿ, ಹಳ್ಳಿಯತ್ತ ಹೆಜ್ಜೆ ಹಾಕಲು ಇಬ್ಸ್‌ಟನ್‌ಗೆ ಸೂಚಿಸಿದ.

ಇಬ್ಸ್ ಉರಿಯುತ್ತಿರುವ ಪೆಟ್ರೋಮ್ಯಾಕ್ಸ್‌ನ ಸಣ್ಣ ಜ್ವಾಲೆಯ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಕಾರ್ಬೆಟ್ ಅವನ ಹಿಂದೆ ಬಂದೂಕ ಹಿಡಿದು ಪ್ರತಿ ಎರಡು ಹೆಜ್ಜೆಗೆ ಒಮ್ಮೆ ಹಿಂತಿರುಗಿ ನೋಡಿ ಹೆಜ್ಜೆ ಹಾಕುತ್ತಿದ್ದ. ಕತ್ತಲೆಯಲ್ಲಿ ನರಭಕ್ಷಕ ಯಾವ ಕ್ಷಣದಲ್ಲಾದರೂ ನಮ್ಮ ಮೇಲೆ ದಾಳಿ ಮಾಡಬಹುದೆಂಬ ಅಂಜಿಕೆ ಆ ಕ್ಷಣದಲ್ಲಿ ಕಾರ್ಬೆಟ್‌ನನ್ನು ಬಲವಾಗಿ ಕಾಡಿತು ಕೊನೆಗೂ ಪೆಟ್ರೋಮ್ಯಾಕ್ಷ್ ಆರಿ ಹೋಗುವ ಮುನ್ನ ಊರಿನ ಹೊರಭಾಗದಲ್ಲಿದ್ದ ರೈತನ ಮನೆ ಬಾಗಿಲಿಗೆ ಮುಟ್ಟಿದ್ದರು. ಕಾರ್ಬೆಟ್ ಬಾಗಿಲು ಬಡಿದು ವಿನಂತಿಸಿಕೊಂಡ ಮೇಲೆ ರೈತ ಬಾಗಿಲು ತೆರೆದು, ಅವರಿಗೆ ಚಹಾ ಮಾಡಿಕೊಟ್ಟು, ಅವನ ಸೇವಕರು ಉಳಿದುಕೊಂಡಿದ್ದ ಮನೆಯ ಬಗ್ಗೆ ಮಾಹಿತಿ ನೀಡಿದ. ಅವನಿಂದ ಚಿಮಣಿ ಎಣ್ಣಿಯ ಒಂದು ಪುಟ್ಟ ಲಾಂಧ್ರವೊಂದನ್ನು ಪಡೆದು, ಅದರ ಮಂದ ಬೆಳಕಿನಲ್ಲಿ ಆ ಮನೆಯಲ್ಲಿದ್ದ ಕೆಲವು ಗಂಡಸರ ನೆರವಿನಿಂದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರು ಉಳಿದುಕೊಂಡಿದ್ದ ಮನೆ ತಲುಪಿದರು. ಮನೆಯ ಬಾಗಿಲಲ್ಲಿ ಮಲಗಿದ್ದ ಬೀದಿ ನಾಯಿ ಇವರನ್ನು ಕಾಲು ಮೂಸಿ ಸ್ವಾಗತಿಸಿತು. ಮನೆಯೊಳಗೆ ಹೋಗಿ, ಇಬ್ಬರೂ ಮಲಗಲು ಸಿದ್ಧರಾಗುವ ವೇಳೆಗೆ ನಾಯಿ ವಿಚಿತ್ರವಾಗಿ ಬೊಗಳತೊಡಗಿತು. ಅವರು ಉಳಿದು ಕೊಂಡಿದ್ದ ರಸ್ತೆಯಿಂದ ಹತ್ತು ಅಡಿ ಎತ್ತರದ ಪ್ರದೇಶದಲ್ಲಿದ್ದ ಕಾರಣ ಮೆಟ್ಟಲಿನ ಮೇಲೆ ನಿಂತಿದ್ದ ನಾಯಿ ಒಂದೇ ದಿಕ್ಕಿನಿತ್ತ ಮುಖ ಮಾಡಿ ಬೊಗಳುತ್ತಿತ್ತು. ನಾಯಿಯ ಈ ವರ್ತನೆಯಿಂದ ನರಭಕ್ಷಕ ನಮ್ಮನ್ನು ಮನೆಯವರಿಗೂ ಹಿಂಬಾಲಿಸಿಕೊಂಡು ಬಂದಿದೆ ಎಂಬ ಸೂಚನೆ ಕಾರ್ಬೆಟ್‌ಗೆ ಸಿಕ್ಕಿತು. ಮನೆಯ ಕಿಟಕಿ, ಬಾಗಿಲುಗಳನ್ನು ಮತ್ತಷ್ಟು ಭದ್ರಪಡಿಸಿ ಮಲಗಿದ ಜೊತೆಗೆ ನಾಯಿ ಬಾಗಿಲಲ್ಲಿ ಇದ್ದ ಕಾರಣ ಅವನಿಗೆ ಆತಂಕ ಮತ್ತು ಭಯ ಇಲ್ಲವಾಗಿತ್ತು.

ಬೆಳಿಗ್ಗೆ ಎದ್ದು ನೋಡಿದಾಗ, ಕಾರ್ಬೆಟ್‌ಗೆ ಚಿರಪರಿಚಿತವಾದ ಅದೇ ನರಭಕ್ಷಕನ ಹೆಜ್ಜೆಗುರುತುಗಳು ಮನೆಯ ಮುಂಭಾಗದಲ್ಲಿ ಮೂಡಿದ್ದವು. ಬೆಳಿಗ್ಗೆ ತಿಂಡಿ ಮುಗಿಸಿದ ಕಾರ್ಬೆಟ್ ಮತ್ತೆ ಹೆಂಗಸಿನ ಶವ ಇದ್ದ ಜಾಗಕ್ಕೆ ಹೋಗಿ ನೋಡಿ ಬಂದ. ಆ ರಾತ್ರಿ ಚಿರತೆ ಶವವನ್ನು ಮುಟ್ಟಿರಲಿಲ್ಲ. ಮಧ್ಯಾದ ವೇಳೆಗೆ ರುದ್ರಪ್ರಯಾಗದಲ್ಲಿದ್ದ ಜಿನ್ ಕತ್ತರಿಯನ್ನು ತರಿಸಿಕೊಂಡ ಕಾರ್ಬೆಟ್, ಸಂಜೆ ಮತ್ತೇ ಹೆಂಗಸಿನ ಶವವಿದ್ದ ಸ್ಥಳಕ್ಕೆ ತೆರಳಿ, agave ಬರುವ ಹಾದಿಯಲ್ಲಿ ಕತ್ತರಿಯನ್ನಿಟ್ಟು, ರುದ್ರಪ್ರಯಾಗದಲ್ಲಿ ಸಂಗ್ರಹಿಸಿದ್ದ ಸೈನೈಡ್ ವಿಷದ ಮಾತ್ರೆಗಳನ್ನು ಶವದ ಅಂಗಾಂಗಳ ನಡುವೆ ಹುದುಗಿಸಿ ಇಟ್ಟ. ಚಾಣಾಕ್ಷ ನರಭಕ್ಷಕ ಇವೆರಡರಲ್ಲಿ ಒಂದಕ್ಕೆ ಬಲಿಯಾಗುವುದು ಖಚಿತ ಎಂದು ಅವನು ನಂಬಿದ್ದ. ಆ ರಾತ್ರಿ ಕೂಡ ಅವನ ನಿರೀಕ್ಷೆ ಹುಸಿಯಾಯಿತು. ಇನ್ನು ಕಾಯುವುದು ಪ್ರಯೋಜವಿಲ್ಲ ಎಂದು ತೀರ್ಮಾನಿಸದ ಕಾರ್ಬೆಟ್, ಹೆಂಗಸಿನ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರ ಮಾಡಲು ತಿಳಿಸಿ, ನೈನಿತಾಲ್‌ಗೆ ಹೊರಡಲು ಅನುವಾದ.

ಇಬ್ಸ್‌ಟನ್‌ನ ಹದಿನೈದು ದಿನಗಳ ರಜೆ ಮುಗಿದ ಕಾರಣ ಅವನೂ ಕೂಡ ಪೌರಿಗೆ ವಾಪಸ್ ಹಿಂತಿರುಗಬೇಕಿತ್ತು. ತಮ್ಮ ತಮ್ಮ ಸಾಮಾನುಗಳನ್ನು ಪ್ರಯಾಣಕ್ಕೆ ಸಿದ್ಧಪಡಿಸುತ್ತಿದ್ದ ವೇಳೆಗೆ ನಾಲ್ಕು ಮೈಲಿ ದೂರದಲ್ಲಿ ನರಭಕ್ಷಕ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ಧಿ ಕಾರ್ಬೆಟ್‌ಗೆ ಮುಟ್ಟಿತು. ನೈನಿತಾಲ್‌ಗೆ ಹೋಗುವ ದಾರಿಯಲ್ಲಿ ಅದನ್ನು ಗಮನಿಸಿ ಹೋಗೋಣವೆಂದು ತನ್ನ ಸೇವಕರೊಂದಿಗೆ ಕಾರ್ಬೆಟ್ ಹಳ್ಳಿಯತ್ತ ಪ್ರಯಾಣ ಬೆಳಸಿದ. ಇಲ್ಲು ಕೂಡ ನರಭಕ್ಷಕ ಚಿರತೆ ಮನೆಗೆ ನುಗ್ಗಲುಯತ್ನಿಸಿ, ವಿಫಲವಾದ ನಂತರ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಕೊಂದು ಕೊಂಡೊಯ್ದಿತ್ತು. ಪ್ರಯಾಣ ಮತ್ತು ನಿರಂತರವಾಗಿ ಅನೇಕ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದು ಆಯಾಸಗೊಂಡಿದ್ದ ಕಾರ್ಬೆಟ್ ಹಸುವಿನ ಕಳೇಬರಕ್ಕೆ ವಿಷವನ್ನು ಬೆರಸಿ, ಜಿನ್ ಕತ್ತರಿಯನ್ನು ಸನೀಹದ ದಾರಿಯಲ್ಲಿ ಇರಿಸಿದ. ಕತ್ತಲಾಗುವ ಮುನ್ನವೇ ರಾತ್ರಿಯ ಊಟ ಮುಗಿಸಿ, ದೋರದ ಪೈನ್ ಮರದ ಮೇಲೆ ಕಟ್ಟಲಾಗಿದ್ದ ಮಚ್ಚಾನ್ ಮೇಲೆ ಬಂದು ಮಲಗಿ ನಿದ್ರಿಸಿದ.

ಕತ್ತರಿಗೆ ನರಭಕ್ಷಕ ಸಿಲುಕಿಕೊಂಡರೆ, ಹೋಗಿ ಗುಂಡು ಹಾರಿಸಿ ಕೊಲ್ಲುವುದು ಅವನ ಯೋಜನೆಯಾಗಿತ್ತು. ಆದರೆ, ಚಾಣಾಕ್ಷತನದ ನರಭಕ್ಷಕ ಅಡಕತ್ತರಿಯನ್ನು ದಾಟಿ ಹಸುವಿನ ಕಳೇಬರವನ್ನು ಬೇರೊಂದು ಜಾಗಕ್ಕೆ ಎಳೆದೊಯ್ದು ತಿಂದು ಮುಗಿಸಿತ್ತು. ಬೆಳಿಗ್ಗೆ ಎದ್ದು ನೋಡಿದ ಕಾರ್ಬೆಟ್, ಹಳ್ಳಿಯ ಜನರನ್ನು ಕರೆಸಿ ಸುತ್ತಮುತ್ತಲಿನ ಕಾಡನ್ನು ಜಾಲಾಡಿಸಿದ ಎಲ್ಲಿಯೂ ಚಿರತೆ ಸತ್ತು ಬಿದ್ದಿರುವ ಕುರುಹು ಕಾಣಲಿಲ್ಲ. ಸಾಮಾನ್ಯವಾಗಿ ಬೆಕ್ಕು ಮತ್ತು ಚಿರತೆಗಳು ವಿಷವನ್ನು ತಿಂದ ಸಮಯದಲ್ಲಿ ಗರಿಕೆ ಹುಲ್ಲನ್ನು ತಿಂದು ವಾಂತಿ ಮಾಡುತ್ತವೆ. ಇಲ್ಲಿಯೂ ಸಹ ನರಭಕ್ಷಕ ವಿಷ ತಿಂದರೂ ಸಾವಿನಿಂದ ಪಾರಾಗಿತ್ತು. ಈ ಘಟನೆಯಿಂದ ಒಂದು ರೀತಿಯಲ್ಲಿ ತೀವ್ರ ಹತಾಶನಾದಂತೆ ಕಂಡು ಬಂದ ಕಾರ್ಬೆಟ್ ಹಳ್ಳಿಯ ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಿ, ವಿಶ್ರಾಂತಿ ಪಡೆದು ಮತ್ತೆ ಮರಳಿ ಬರತ್ತೇನೆ ಎಂಬ ಭರವಸೆ ನೀಡಿ ನೈನಿತಾಲ್‌ನತ್ತ ಪ್ರಯಾಣ ಬೆಳಸಿದ.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 21)


– ಡಾ.ಎನ್.ಜಗದೀಶ್ ಕೊಪ್ಪ


ಪ್ರವಾಸಿ ಮಂದಿರದಲ್ಲಿ ತಂಗಿದ್ದ ಕಾರ್ಬೆಟ್ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ, ನರಭಕ್ಷಕ ಚಿರತೆ ರಾತ್ರಿ ಹಾರಿಸಿದ್ದ ಗುಂಡೇಟಿಗೆ ಬೆದರಿ ಅಲಕಾನಂದ ನದಿಯ ಸೇತುವೆ ದಾಟಿ ಹೋಗಿರಬಹುದೇ ಎಂದು ಸಂಶಯಿಸಿ, ಸೇತುವೆ ಬಳಿ ಬಂದು ಪರೀಕ್ಷಿಸಿದ. ಸೇತುವೆಯನ್ನು ಅವನ ಅಣತಿಯಂತೆ ಹಳ್ಳಿಗರು ಕಲ್ಲು ಮತ್ತು ಮುಳ್ಳಗಳಿಂದ ಮುಚ್ಚಿದ್ದ ಕಾರಣ ಅದು ಸೇತುವೆ ದಾಟಿ ಹೋಗಲು ಅಸಾಧ್ಯವಾಗಿತ್ತು. ಇನ್ನೊಂದು ಸೇತುವೆ ಸುಮಾರು 14 ಕಿಲೋಮೀಟರ್ ದೂರದ ಚಿಟ್ಪಾವಲ್ ಹಳ್ಳಿಯಲ್ಲಿ ಇದ್ದ ಕಾರಣ ಅಷ್ಟು ದೂರ ಹೋಗಿರಲಾರದು ಎಂದು ಕಾರ್ಬೆಟ್ ಊಹಿಸಿದ. ಸೇತುವೆ ಬಳಿ ಅದರ ಹೆಜ್ಜೆಯ ಗುರುತುಗಳು ಇರಲಿಲ್ಲವಾದರಿಂದ ಚಿರತೆ ಇಲ್ಲೇ ಕಾಡಿನಲ್ಲೆ ಅಡಗಿದೆ ಎಂಬ ತೀರ್ಮಾನಕ್ಕೆ ಬಂದ. ಏನೇ ಆಗಲಿ ಗುಂಡೇಟಿನಿಂದ ಗಾಬರಿಗೊಂಡಿರುವ ಚಿರತೆ ರಾತ್ರಿ ವೇಳೆ ಸೇತುವ ದಾಟುವ ಸಾಧ್ಯತೆ ಇದೆ ಎಂದುಕೊಂಡ ಕಾರ್ಬೆಟ್, ಅಲ್ಲಿ ಹಾಕಲಾಗಿದ್ದ ಕಲ್ಲು, ಮುಳ್ಳುಗಳನ್ನು ತೆಗೆಸಿ ರಾತ್ರಿ ವೇಳೆ ಕಾವಲು ಕಾಯಲು ಕುಳಿತ.

ಸೇತುವೆಯ ಒಂದು ಬದಿಯ ಗೋಪುರದಲ್ಲಿ ಸತತ 20 ದಿನಗಳ ರಾತ್ರಿ ಶೀತಗಾಳಿ, ತುಂತುರು ಮಳೆಯ ನಡುವೆ ಕಾರ್ಬೆಟ್ ಕಾದು ಕುಳಿತರೂ ಏನೂ ಪ್ರಯೋಜನವಾಗಲಿಲ್ಲ. ಒಂದು ದಿನ ಬೆಳಗಿನ ಜಾವ ನರಿಯೊಂದು ಸೇತುವೆಯನ್ನು ದಾಟಿದ್ದನ್ನು ಅವನು ಮೂಕಪ್ರೇಕ್ಷಕನಾಗಿ ನೋಡಬೇಕಾಗಿಬಂತು. ಇದೇ ವೇಳೆಗೆ ಜಿಲ್ಲಾಧಿಕಾರಿ ಇಬ್ಸ್‌ಟನ್ ತನ್ನ ಪತ್ನಿಯೊಂದಿಗೆ ಘರ್‌ವಾಲ್‌ಗೆ ‌ಬಂದ. ನರಭಕ್ಷಕನ ಬೇಟೆಯಲ್ಲಿ ತೊಡಗಿರುವ ಕಾರ್ಬೆಟ್ ಜೊತೆ ಪಾಲ್ಗೊಳ್ಳವ ಉದ್ದೇಶದಿಂದ ಕೆಲಸದ ನಡುವೆಯೂ ವಿರಾಮ ಮಾಡಿಕೊಂಡು ಬಂದಿದ್ದ. ಕಾರ್ಬೆಟ್‌ಗೆ ಕಂಪನಿ ಕೊಟ್ಟು ಅವನ ಏಕಾಂಗಿತನ ಹೋಗಲಾಡಿಸುವ ಉದ್ದೇಶ ಕೂಡ ಇದರಲ್ಲಿ ಅಡಗಿತ್ತು.

ಪ್ರವಾಸಿ ಮಂದಿರದಲ್ಲಿ ಕೇವಲ ಒಂದು ಕೊಠಡಿ ಇದ್ದ ಕಾರಣ ಕಾರ್ಬೆಟ್ ಅದನ್ನು ಇಬ್ಸ್‌ಟನ್ ದಂಪತಿಗಳಿಗೆ ಬಿಟ್ಟುಕೊಟ್ಟು ತನ್ನ ಸೇವಕರೊಡನೆ ಹೊರಗೆ ಟೆಂಟ್ ಹಾಕಿಕೊಂಡು ಮಲಗಲು ನಿರ್ಧರಿಸಿದ. ಅಂದು ಸಂಜೆ ತನ್ನ ಎಂಟು ಮಂದಿ ಸೇವಕರ ನೆರವಿನೊಂದಿಗೆ ಪ್ರವಾಸಿ ಮಂದಿರದ ಮುಂದೆ ಟೆಂಟ್ ಹಾಕಿಸಿ, ಸುತ್ತಲಿನ ಬೇಲಿಯನ್ನು ಭದ್ರಪಡಿಸಿದ. ಬೇಲಿಯ ನಡುವೆ ಒಂದು ಮರವಿದ್ದು ಅದರ ಕೊಂಬೆಗಳು ಒಳಕ್ಕೆ ಚಾಚಿದ್ದವು. ಅವುಗಳನ್ನು ಸಹ ಕಾರ್ಬೆಟ್ ಕಡಿಸಿಹಾಕಿದ. ಹಿಂದೊಂಮ್ಮೆ ನರಭಕ್ಷಕ ಕಾಡಿನಿಂದ ಪ್ರವಾಸಿ ಮಂದಿರದವರೆಗೂ ಕಾರ್ಬೆಟ್‌ನನ್ನು ಹಿಂಬಾಲಿಸಿ ಬಂದಿದ್ದರಿಂದ ಅವನು ಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದ.

ಕಡೆಗೂ ಕಾರ್ಬೆಟ್‌ನ ನಿರೀಕ್ಷೆ ನಿಜವಾಯಿತು. ಆದಿನ ತಡ ರಾತ್ರಿ ನರಭಕ್ಷಕ ಮರಹತ್ತಿ ಬೇಲಿ ನೆಗೆಯಲು ಪ್ರಯತ್ನಿಸಿತು. ಮರದ ಸಣ್ಣ ಸಣ್ಣ ರಂಬೆಗಳು ಚಿರತೆಯ ಭಾರ ತಾಳಲಾರದೆ, ಲಟಲಟನೆ ಮುರಿಯತೊಡಗಿದಾಗ, ಟೆಂಟ್‌ನಲ್ಲಿ ಮಲಗಿದ್ದ ಕಾರ್ಬೆಟ್‌ಗೆ ಎಚ್ಚರವಾಯಿತು. ಕೂಡಲೇ ಅವನು ತನ್ನ ಮಗ್ಗುಲಲ್ಲೆ ಇರಿಸಿದ್ದ ಕೋವಿ ತೆಗೆದುಕೊಂಡು ಟಾರ್ಚ್‌ಎತ್ತಿಕೊಂಡು ಹೊರಬಂದ. ಇದಾವುದರ ಪರಿವಿಲ್ಲದೆ ಅವನ ಸೇವಕರು ಮರದಕೆಳಗಿನ ಗುಡಾರದಲ್ಲಿ ಆರಾಮವಾಗಿ ಮಲಗಿದ್ದರು, ಮಾಧೂಸಿಂಗ್ ದೊಡ್ಡಧ್ವನಿಯ ಗೊರಕೆಯಲ್ಲಿ ಮುಳುಗಿಹೋಗಿದ್ದ. ಕಾರ್ಬೆಟ್ ಹೊರಬರುವುದು ಕೆಲವೇ ಕ್ಷಣ ತಡವಾಗಿದ್ದರೆ, ಅದು ಮಾಧೂಸಿಂಗ್ ಮೇಲೆ ನೆಗೆದು ಅವನನ್ನು ಬಲಿತೆಗೆದುಕೊಳ್ಳುತ್ತಿತ್ತು. ಮರದ ತುದಿಯ ಕೊಂಬೆಯೊಂದು ಸೇವಕರಿಗೆ ಎಟುಕದ ಕಾರಣ ಕಡಿಯದೇ ಹಾಗೇ ಬಿಟ್ಟಿದ್ದರು. ಆ ಕೊಂಬೆಯ ಮೇಲಿಂದ ಚಿರತೆ ನರಬಲಿಗೆ ಹೊಂಚು ಹಾಕಿತ್ತು. ಕಾರ್ಬೆಟ್ ಬಿಟ್ಟ ಟಾರ್ಚ್ ಬೆಳಕಿಗೆ ಗಾಬರಿಗೊಂಡ ಅದು ಮರದಿಂದ ಜಿಗಿದು ಓಡಿ ಹೋಗಿ ಪಕ್ಕದ ಕಾಡು ಸೇರಿಕೊಂಡಿತ್ತು.

ಮಾರನೇ ದಿನ ಬೆಳಿಗ್ಗೆ ಕಾರ್ಬೆಟ್ ಎದ್ದವನೇ ಮರದ ಕೊಂಬೆಗಳನ್ನು ಸಂಪೂರ್ಣವಾಗಿ ಕಡಿಸಿ ಹಾಕಿದ. ಬೇಲಿಯನ್ನು ಮತ್ತಷ್ಟು ಭದ್ರಪಡಿಸಿದ ನರಭಕ್ಷಕ ಇಲ್ಲೆ ಆಸು ಪಾಸಿನ ಪ್ರದೇಶದಲ್ಲಿ ಇರುವುದು ರಾತ್ರಿಯ ಘಟನೆಯಿಂದ ಖಚಿತವಾಯಿತು. ಇಬ್ಸ್‌ಟನ್ ಕೂಡ ಬಂದಿದ್ದರಿಂದ ಆದಿನ ಬೆಳಿಗ್ಗೆ ಕಾರ್ಬೆಟ್ ಅವನನ್ನು ಕರೆದುಕೊಂಡು ಹೋಗಿ ಅಲಕನಂದಾ ನದಿಯಲ್ಲಿ ತನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾದ ಮೀನು ಶಿಕಾರಿಯಲ್ಲಿ ತೊಡಗಿದ. ಸಂಜೆವೇಳೆಗೆ ಇಬ್ಬರೂ ಹಿಡಿದಿದ್ದ ಮೀನುಗಳನ್ನು ತಂದು ಸೇವಕರಿಗೆ ಕೊಟ್ಟು, ರಾತ್ರಿ ಪ್ರವಾಸಿ ಮಂದಿರದಲ್ಲಿ ವಿಸ್ಕಿ ಹೀರುತ್ತಾ ನರಭಕ್ಷಕನ ಬೇಟೆಗೆ ಯೋಜನೆ ರೂಪಿಸತೊಡಗಿದರು. ಬೆಳಗಿನ ಜಾವದ ವೇಳೆಗೆ ಪಕ್ಕದ ಹಳ್ಳಿಯಲ್ಲಿ ನರಭಕ್ಷಕ ಪ್ರತ್ಯಕ್ಷವಾಗಿ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಸುದ್ಧಿ ಕಾರ್ಬೆಟ್‌ಗೆ ತಲುಪಿತು. ಕೂಡಲೇ ಇಬ್ಸ್‌ಟನ್ ಜೊತೆ ಕಾರ್ಬೆಟ್ ಹಳ್ಳಿಗೆ ಹೊರಟ.

ಹಳ್ಳಿ ರೈತನ ಮನೆಗೆ ನುಗ್ಗಲು ವಿಫಲಯತ್ನ ನಡೆಸಿದ ಚಿರತೆ, ಮನೆಯ ಬಾಗಿಲನ್ನು ತನ್ನ ಉಗುರಿನಿಂದ ಕೆರೆದು ಮುರಿಯಲು ಪ್ರಯತ್ನಿಸಿತ್ತು. ಅದು ಸಾಧ್ಯವಾಗದೇ, ನಂತರ ಮನೆಯ ಹಿಂಭಾಗದ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಬಲಿ ತೆಗೆದುಕೊಂಡಿತ್ತು. ಕೊಂದ ಹಸುವನ್ನು ಕಚ್ಚಿ ಎಳೆದೊಯ್ಯಲು ಅದು ಪ್ರಯತ್ನಿಸಿತ್ತು ಆದರೆ, ಬಾಗಿಲು ಚಿಕ್ಕದಾಗಿದ್ದು, ಹಸುವಿನ ಕಳೇಬರ ಬಾಗಿಲಿಗೆ ಅಡ್ಡಲಾಗಿ ಸಿಕ್ಕಿ ಹಾಕಿಕೊಂಡ ಪರಿಣಾಮ ಅದನ್ನು ಅಲ್ಲೇ ಇರಿಸಿ ಅರ್ಧ ಭಾಗವನ್ನು ತಿಂದು ಹೋಗಿತ್ತು. ಸ್ಥಳವನ್ನು ಅವಲೋಕಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ರಾತ್ರಿ ಕೊಟ್ಟಿಗೆಗೆ ಬಂದು ಕಾವಲು ಕೂರಲು ನಿರ್ಧರಿಸಿದರು. ಮತ್ತೇ ರಾತ್ರಿ ಹಸುವಿನ ಕಳೇಬರವನ್ನು ತಿನ್ನಲು ಚಿರತೆ ಬರುತ್ತದೆ ಎಂಬುದು ಇಬ್ಬರ ನಿರೀಕ್ಷೆಯಾಗಿತ್ತು. ರಾತ್ರಿ ಊಟವಾದ ನಂತರ ಒಂದಿಷ್ಟು ಸ್ಯಾಂಡ್ವಿಚ್ ಮತ್ತು ಚಹಾ ಮತ್ತು ಬಂದೂಕುಗಳೊಂದಿಗೆ ರೈತನ ಮನೆಯ ಕೊಟ್ಟಿಗೆಗೆ ಬಂದು ಕಾವಲು ಕುಳಿತರು. ಆದರೆ, ನರಭಕ್ಷ ಆ ರಾತ್ರಿ ಹಸುವಿನ ಕಳೇಬರದತ್ತ ಸುಳಿಯಲೇ ಇಲ್ಲ. ಇದಾದ ಎರಡು ದಿನಗಳ ನಂತರ ಮತ್ತೊಂದು ಹಳ್ಳಿಯಲ್ಲಿ ನರಭಕ್ಷಕ ಮತ್ತೇ ಕೊಟ್ಟಿಗೆಯಲ್ಲಿ ಇದ್ದ ಹಸುವೊಂದನ್ನು ಬಲಿತೆಗೆದುಕೊಂಡಿತ್ತು.

ಈ ಬಾರಿ ಹಸುವನ್ನು ಬಾಗಿಲಿನ ಹೊರಭಾಗದವರೆಗೆ ಎಳೆದು ತಂದಿತ್ತು ಆದರೆ ಭಾರಿ ಗಾತ್ರದ ಹಸುವಿನ ಶವವನ್ನು ಕೊಂಡೊಯ್ಯಲು ಸಾಧ್ಯವಾಗದೆ, ಅಲ್ಲೆ ಕೆಲವು ಭಾಗಗಳನ್ನು ತಿಂದುಹೋಗಿತ್ತು. ಕೊಟ್ಟಿಗೆಯ ಮುಂಭಾಗದಲ್ಲಿ ಚಪ್ಪರವೊಂದನ್ನು ನಿರ್ಮಿಸಿ ಅದರ ಮೇಲೆ ಜಾನುವಾರುಗಳಿಗೆ ರೈತ ಹುಲ್ಲನ್ನು ಸಂಗ್ರಹಿಸಿ ಇಟ್ಟಿದ್ದ. ಇದನ್ನು ನೋಡಿದ ಕಾರ್ಬೆಟ್ ಹುಲ್ಲನ್ನು ತನ್ನ ಸೇವಕರಿಂದ ತೆಗೆಸಿ , ಚಪ್ಪರದ ಮೇಲೆ ಗೂಡನ್ನು ನಿರ್ಮಿಸಿದ, ಮತ್ತೇ ಕೆಲವು ಬಿದಿರಿನ ಬೊಂಬುಗಳನ್ನು ನೆಡಸಿ, ತನ್ನ ಗೂಡಿನ ಮೇಲೆ ಇನ್ನೊಂದು ಅಂತಸ್ತಿನ ಗೂಡನ್ನ ಇಬ್ಸ್‌ಟನ್‌ಗಾಗಿ ನಿರ್ಮಿಸಿದ. ರಾತ್ರಿ ಇಬ್ಬರೂ ಆರಾಮವಾಗಿ ಕುಳಿತುಕೊಳ್ಳಲು ಮರದ ಹಲಗೆಗಳನ್ನು ಚಪ್ಪರದ ಮೇಲೆ ಹಾಸಿಸಿದ್ದ. ಮತ್ತೆ ಆ ರಾತ್ರಿ ಕೂಡ ಇಬ್ಬರು ಕಾವಲು ಕುಳಿತರು. ಇಬ್ಸ್‌ಟನ್ ಕಾರ್ಬೆಟ್‌ಗಿಂತ ಕುಳ್ಳಗಿದ್ದ ಕಾರಣ ಅವನು ಮೇಲಿನ ಅಂತಸ್ತಿನ ಚಪ್ಪರದಲ್ಲಿ ಕುಳಿತರೆ, ಕಾರ್ಬೆಟ್ ನೆಲದಿಂದ ಹತ್ತು ಅಡಿ ಎತ್ತರವಿದ್ದ ಕೆಳ ಹಂತಸ್ತಿನ ಗೂಡಿನಲ್ಲಿ ಕುಳಿತ. ಇವರ ಸೂಚನೆಯಂತೆ ರಾತ್ರಿ ಎಂಟು ಗಂಟೆ ವೇಳೆಗೆ ಹಳ್ಳಿ ಗ್ರಾಮಸ್ಥರು ಊಟ ಮುಗಿಸಿ ತಮ್ಮ ಮನೆಗಳ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ ಮಲಗಿದರು.

ರಾತ್ರಿ ಹನ್ನೋಂದರ ವೇಳೆಗೆ ನರಭಕ್ಷಕ ಪರ್ವತದಿಂದ ಇಳಿದು ಹಳ್ಳಿಯತ್ತ ಬರುತ್ತಿರುವುದನನ್ನು ಕಾಡಿನ ಪ್ರಾಣಿ ಮತ್ತು ಪಕ್ಷಿ ಸಂಕುಲ ಕಾರ್ಬೆಟ್‌ಗೆ ಸೂಚನೆ ನೀಡಿದವು. ಇಬ್ಬರೂ ಮಾತು ನಿಲ್ಲಿಸಿ ತಮ್ಮ ತಮ್ಮ ಬಂದೂಕುಗಳನ್ನು ಕೈಗೆ ತೆಗೆದುಕೊಂಡು ನರಭಕ್ಷಕನಿಗಾಗಿ ಕಾಯತೊಡಗಿದರು. ಈ ಬಾರಿ ಕಾರ್ಬೆಟ್‌ನ ನಿರೀಕ್ಷೆಯನ್ನು ಹುಸಿ ಮಾಡದೇ ನರಭಕ್ಷಕ  ಹಸುವಿನ ಕಳೇಬರವಿದ್ದ ಸ್ಥಳದತ್ತ ಬರತೊಡಗಿತು ಆದರೆ, ಅದಕ್ಕೆ ಹತ್ತಿರ ಬರುತ್ತಿದ್ದಂತೆ ನರಮನುಷ್ಯನ ವಾಸನೆ ಮೂಗಿಗೆ ಬಡಿದ ಕಾರಣ ನೇರವಾಗಿ ಹಸುವಿದ್ದ ಜಾಗಕ್ಕೆ ಹೋಗದೆ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಚಪ್ಪರದಕೆಳೆಕ್ಕೆ ಬಂದು ಸುತ್ತ ಮುತ್ತ ಎಚ್ಚರಿಕೆಯಿಂದ ಗಮನಿಸತೊಡಗಿತು ಅಲ್ಲದೆ ಚಪ್ಪರಕ್ಕೆ ನೆಡಲಾಗಿದ್ದ ಬೊಂಬುಗಳಿಗೆ ತನ್ನ ಮೈಯನ್ನು ಸವರತೊಡಗಿತು. ಉಸಿರು ಬಿಗಿ ಹಿಡಿದು ಕುಳಿತ ಕಾರ್ಬೆಟ್ ನರಭಕ್ಷಕ ಚಪ್ಪರದ ಕೆಳಭಾಗದಿಂದ ಹೊರಬಂದ ಕೂಡಲೇ ಗುಂಡು ಹಾರಿಸಿ ಕೊಲ್ಲಬೇಕೆಂದು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಿದ್ದ ಅಷ್ಟರಲ್ಲಿ ಮೇಲಂತಸ್ತಿನ ಗೂಡಿನ ಮರದ ಹಲಗೆ ಲಟಾರನೆ ಮುರಿಯಿತು ಶಬ್ಧಕ್ಕೆ ಅಂಜಿದ ಚಿರತೆ ಮುಂಭಾಗದಲ್ಲಿ ಓಡಿ ಹೋಗದೆ, ಹಿಂಭಾಗದಿಂದ ಓಡಿಹೋಯಿತು. ಗೂಡಿನ ಸುತ್ತ ಹುಲ್ಲು ಹೊದಿಸಿದ್ದ ಕಾರಣ ಅದಕ್ಕೆ ಗುರಿಯಿಡಲು ಕಾರ್ಬೆಟ್‌ಗೆ ಸಾಧ್ಯವಾಗಲಿಲ್ಲ.

ಒಂದೇ ಸ್ಥಿತಿಯಲ್ಲಿ ಕುಳಿತ್ತಿದ್ದ ಇಬ್ಸ್‌ಟನ್ ಮೇಲಿನ ಗೂಡಿನಲ್ಲಿ ಮಗ್ಗುಲು ಬದಲಿಸುವಾಗ ಹಲಗೆ ಮುರಿದು ಶಬ್ಧಮಾಡುವುದರ ಮೂಲಕ ನರಭಕ್ಷಕನ ಪ್ರಾಣ ಉಳಿಸಿತ್ತು. ಇಬ್ಬರೂ ತಮ್ಮ ದುರಾದೃಷ್ಟವನ್ನು ಅಳಿದುಕೊಳ್ಳುತ್ತಾ ಪ್ರವಾಸಿ ಮಂದಿರಕ್ಕೆ ಹಿಂತಿರುಗಿದರು. ಈ ಘಟನೆ ನಡೆದ ಎರಡು ದಿನಗಳ ನಂತರ ನರಭಕ್ಷಕ ರುದ್ರಪ್ರಯಾಗದ ಪಟ್ಟಣದಲ್ಲೇ ಮನೆಯೊಂದರ ಮುಂಭಾಗದ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಅದನ್ನು ಕೊಂದು ಹೊರಭಾಗದ ಬಯಲಲ್ಲಿ ತಿಂದು ಹೋಗಿತ್ತು. ನಿರಂತರ ಘಟನೆಗಳಿಂದ ಹತಾಶರಾಗಿದ್ದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಈ ಸಾರಿ ನರಭಕ್ಷಕನ ಬೇಟೆಗೆ ಹೊಸತಂತ್ರವನ್ನು ರೂಪಿಸಿದ್ದರು. ಸರ್ಕಾರಕ್ಕೆ ಮನವಿ ಸಲ್ಲಿಸಿ ಸುಮಾರು ಎಂಬತ್ತು ಕೆ.ಜಿ. ಗಾತ್ರದ ಅಡಕತ್ತರಿಯೊಂದನ್ನು (ಜಿನ್ ಕತ್ತರಿ) ತರಿಸಿದ್ದರು ಇದನ್ನು ಮುರದಾಬಾದ್‌ನಲ್ಲಿ ವಿಶೇಷವಾಗಿ  ತಯಾರಿಸಲಾಗಿತ್ತು. ಅದರ ಎರಡು ಅಲಗುಗಳನ್ನು ಗರಗಸದ ಹಲ್ಲಿನಂತೆ ಮಾಡಲಾಗಿತ್ತು ಅದಕ್ಕೆ ಬಲವಾದ ಸ್ಪ್ರಿಂಗ್ ಜೋಡಿಸಿದ್ದ ಕಾರಣ ಇಬ್ಬರು ಅವುಗಳನ್ನು ಎಳೆದು ಅದರ ಬಾಯಿ ಬಿಡಿಸಬೇಕಾಗಿತ್ತು ಆ ಜಿನ್ ಕತ್ತರಿಯ ನಡುಭಾಗಕ್ಕೆ ಯಾವ ಪ್ರಾಣಿ ಕಾಲಿಟ್ಟ ತಕ್ಷಣ ಕತ್ತರಿಯ ಅಲುಗುಗಳು ಮುಚ್ಚಿಕೊಳ್ಳುತ್ತಿದ್ದವು. ಎಂತಹ ಪ್ರಾಣಿಯೂ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಹಸುವಿನ ಕಳೇಬರವಿದ್ದ ನೂರು ಅಡಿ ದೂರದಲ್ಲಿ ಒಂದು ಎತ್ತರದ ಬಲಿಷ್ಟವಾದ ಮರವಿತ್ತು ಅದರ ಮೇಲೆ ಇಬ್ಬರೂ ಕೂರಲು ನಿರ್ಧರಿಸಿದರು. ನರಭಕ್ಷಕ ಯಾವ ದಿಕ್ಕಿನಿಂದ ಕಾಡಿನತ್ತ ತೆರಳಿದೆ ಎಂಬುದನ್ನು ಅದರ ಹೆಜ್ಜೆ ಗುರುತುಗಳ ಮೂಲಕ ಗುರುತಿಸಿ ಆ ಹಾದಿಯಲ್ಲಿ ಅಡಕತ್ತರಿಯನ್ನು ಇರಿಸಿ, ಅದನ್ನು ತರಗೆಲೆಗಳಿಂದ ಮುಚ್ಚಿದರು. ನರಭಕ್ಷಕ ಸಿಕ್ಕಿಕೊಂಡಾಗ ಅದನ್ನು ಎಳೆದೊಯ್ಯಬಾರದು ಎಂದು ಅದಕ್ಕೆ ಸರಪಣಿ ಜೋಡಿಸಿ ಮರಕ್ಕೆ ಬಿಗಿಯಲಾಗಿತ್ತು. ಎಂದಿನಂತೆ ಆ ರಾತ್ರಿ ಕೂಡ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರ ಜೊತೆ ಮರದ ಬಳಿ ಬಂದು ಏಣಿ ಮುಖಾಂತರ ಮೇಲಕ್ಕೆ ಹತ್ತಿ ಕುಳಿತು, ಸೇವಕರನ್ನು ಪ್ರವಾಸಿ ಮಂದಿರಕ್ಕೆ ಕಳಿಸಿದರು. ಈ ಬಾರಿ ಅವರ ಬಳಿ ಸಕಾರ ಕಳಿಸಿದ್ದ ಭಾರೀ ಗಾತ್ರದ ಟಾರ್ಚ್ ಅವರ ಬಳಿ ಇದ್ದುದರಿಂದ ರಾತ್ರಿ ಶಿಕಾರಿಗೆ ಅನುಕೂಲವಾಗಿತ್ತು.

ರಾತ್ರಿ ಕತ್ತಲಾಗುತ್ತಿದ್ದಂತೆ ಒಂಬತ್ತರ ವೇಳೆಗೆ ಚಿರತೆಯ ಆರ್ಭಟ ಕೇಳತೊಗಿತು ಅದರ ಮುಂಗಾಲುಗಳರೆಡು ಅಡಕತ್ತರಿಗೆ ಸಿಲುಕಿಕೊಂಡು ಅದರಿಂದ ಬಿಡಿಸಿಕೊಲ್ಳಲು ಹೋರಾಡುತ್ತಾ ಭೀಕರವಾಗಿ ಸದ್ದುಮಾಡುತ್ತಿತ್ತು. ಕಾರ್ಬೆಟ್ ಟಾರ್ಚ್ ಮುಖಾಂತರ ಅದರತ್ತ ಬೆಳಕು ಹಾಯಿಸಿದಾಗ ಚಿರತೆ ಅಡಕತ್ತರಿಯನ್ನು ಎಳೆಯುತ್ತಾ ರೋಷಾವೇಷದಿಂದ ಘರ್ಜಿಸುತ್ತಿತ್ತು. ಇದೇ ಸುಸಮಯ ಎಂದುಕೊಂಡ ಕಾರ್ಬೆಟ್ ಅದರತ್ತ ಗುಂಡು ಹಾರಿಸಿದ ಆದರೆ, ಗುಂಡು ಚಿರತೆಗೆ ತಾಗುವ ಬದಲು ಸರಪಣಿಗೆ ತಗುಲಿ ಅದು ತುಂಡಾಯಿತು. ಕೂಡಲೇ ಇಬ್ಸ್‌ಟನ್ ಕೂಡ ಗುಂಡು ಹಾರಿಸದ ಆದರೆ, ಕತ್ತಲಿನಲ್ಲಿ ಎಲ್ಲವೂ ಗುರಿತಪ್ಪಿದ್ದವು ಇದರಿಂದಾಗಿ ತಪ್ಪಿಸಿಕೊಂಡ ಚಿರತೆ ಕತ್ತರಿಯನ್ನು ಎಳೆದುಕೊಂಡು ಮರಗಿಡಗಳ ನಡುವೆ ಕೆಳಗಿನ ಹಳ್ಳವೊಂದರಲ್ಲಿ ಮರೆಯಾಯಿತು.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 19)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ರುದ್ರಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿ ಕೊಲ್ಲಬೇಕು ಎಂದು ಅನಿಸಿದರೂ ಕೂಡ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದ ಕಾರಣ ಅವನು ಈ ಬಗ್ಗೆ ಮನಸ್ಸು ಮಾಡಿರಲಿಲ್ಲ. ಆ ವೇಳೆಗಾಗಲೇ ಐವತ್ತು ವರ್ಷವನ್ನು ದಾಟಿದ್ದ ಕಾರ್ಬೆಟ್ ಮೊದಲಿನಂತೆ, ನರಭಕ್ಷಕ ಹುಲಿ ಅಥವಾ ಚಿರತೆಗಳನ್ನು ಬೆನ್ನಟ್ಟಿ ವಾರಗಟ್ಟಲೇ ಸರಿಯಾದ ಊಟ ತಿಂಡಿಯಿಲ್ಲದೆ, ರಾತ್ರಿಗಳನ್ನು ಮರದ ಮೇಲೆ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಬಾರಿ ಸರ್ಕಾರದ ಪರವಾಗಿ ರುದ್ರಪ್ರಯಾಗದ ಚಿರತೆಯನ್ನು ಬೇಟೆಯಾಡಲು ಮನವಿ ಪತ್ರ ಬರೆದ, ಜಿಲ್ಲಾಧಿಕಾರಿ ವಿಲಿಯಮ್ ಇಬ್ಸ್‌ಟನ್ ಕಾರ್ಬೆಟ್‌ನ ಆತ್ಮೀಯ ಗೆಳೆಯನಾಗಿದ್ದ.

ಇಬ್ಸ್‌ಟನ್ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ತನ್ನ ಪತ್ನಿ ಸಮೇತನಾಗಿ ಅಲ್ಲಿಗೆ ಬಂದಿದ್ದ. ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಕಾಲೇಜಿನ ಪದವೀಧರನಾದ ಆತ 1909 ರಲ್ಲಿ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ, ಭಾರತಕ್ಕೆ ಬಂದಿದ್ದ. ವಯಸ್ಸಿನಲ್ಲಿ ಕಾರ್ಬೆಟ್‌‍ಗಿಂತ ಹತ್ತುವರ್ಷ ಚಿಕ್ಕವನಾದರೂ ಆತನಿಗಿದ್ದ, ಮೀನು ಶಿಕಾರಿ, ಕುದುರೆ ಸವಾರಿ, ಮತ್ತು ಬಿಡುವಾದಾಗ ಕಾಡು ಅಲೆಯುವ ಹವ್ಯಾಸ ಇವುಗಳಿಂದ ಕಾರ್ಬೆಟ್‌ಗೆ ತೀರಾ ಹತ್ತಿರದ ಸ್ನೇಹಿತನಾಗಿದ್ದ. ಅಧಿಕಾರಿಗಳಲ್ಲಿ ವಿಂಧಮ್‌ನನ್ನು ಹೊರತುಪಡಿಸಿ, ಇಬ್ಸ್‌ಟನ್‌ನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಕಾರ್ಬೆಟ್ ಅವನನ್ನು ಪ್ರೀತಿಯಿಂದ ಇಬ್ಬಿ ಎಂದು ಕರೆಯುತ್ತಿದ್ದ. ಈತ ಕೂಡ, ವಿಂದಮ್ ರೀತಿಯಲ್ಲಿ ಭಾರತೀಯರನ್ನು ತುಂಬು ಹೃದಯದಿಂದ ಕಾಣುತ್ತಿದ್ದುದ್ದು ಕಾರ್ಬೆಟ್‌ಗೆ ಆತನ ಬಗ್ಗೆ  ಪ್ರೀತಿ ಹೆಚ್ಚಾಗಲು ಕಾರಣವಾಗಿತ್ತು.

ಇಂತಹ ಸನ್ನೀವೇಶದಲ್ಲಿ ಇಬ್ಸ್‌ಟನ್ ಮನವಿಯನ್ನು ನಿರಾಕರಿಸಲಾರದೆ, ಚಿರತೆಯ ಬೇಟೆಗೆ ಹೊರಡಲು ಕಾರ್ಬೆಟ್ ನಿರ್ಧರಿಸಿದ. ಈ ಬಾರಿ ವಯಸ್ಸಿನ ಕಾರಣದಿಂದಾಗಿ ಬೇಟೆಗೆ ಹೋಗಲು ಅವನ ಸಹೋದರಿ ಮ್ಯಾಗಿ ಕೂಡ ಆಕ್ಷೇಪ ವ್ಯಕ್ತಪಡಿಸಿದಳು. ಅವಳನ್ನು ಸಮಾದಾನ ಪಡಿಸಿ. ಆರು ಮಂದಿ ಘರವಾಲ್ ಜನಾಂಗದ ಸೇವಕರು, ಹಾಗೂ ಬೇಟೆಯ ಸಂದರ್ಭದಲ್ಲಿ ತನ್ನ ಜೊತೆಯಿರಲು ನೆಚ್ಚಿನ ಭಂಟ ಮಾಧೂಸಿಂಗ್ ಜೊತೆ ಕಾರ್ಬೆಟ್ ಘರ್‍ವಾಲ್‌ನತ್ತ ಹೊರಟ. ಈ ಬಾರಿ ಜಿಲ್ಲಾಧಿಕಾರಿ ಇಬ್ಸ್‌‌‌ಟನ್ ಪ್ರಯಾಣಕ್ಕಾಗಿ ಕುದುರೆ ವ್ಯವಸ್ಥೆ ಮಾಡಿದ್ದರಿಂದ ಕಾರ್ಬೆಟ್ ಮತ್ತು ಅವನ ಸಂಗಡಿಗರ ಪ್ರಯಾಣ ತ್ರಾಸದಾಯಕವೆನಿಸಲಿಲ್ಲ.

ಕಾರ್ಬೆಟ್ ತನ್ನ ಸೇವಕರ ಜೊತೆ ಕುದುರೆ ಮತ್ತು ಕಾಲ್ನಡಿಗೆ ಮೂಲಕ ರಾಣಿಖೇತ್, ಅದ್‌ಬಾದ್ರಿ ಮತ್ತು ಕರ್ಣಪ್ರಯಾಗದ ಮೂಲಕ ರುದ್ರಪ್ರಯಾಗವನ್ನು ತಲುಪುವುದಕ್ಕೆ ಹತ್ತುದಿನಗಳು ಹಿಡಿಯಿತು. ಆ ವೇಳೆಗಾಗಲೇ ನರಭಕ್ಷಕ ಚಿರತೆ ಮತ್ತೊಬ್ಬನನ್ನು ಬಲಿತೆಗೆದುಕೊಂಡಿತ್ತು. ಕಮೇರ ಎಂಬ ಹಳ್ಳಿಯಲ್ಲಿ ಬದರಿನಾಥ್ ಯಾತ್ರಿಕರಿಗಾಗಿ ಹೊಟೇಲ್ ನಡೆಸುತ್ತಿದ್ದ ಪಂಡಿತನೊಬ್ಬನ ಮನೆಯಿಂದ ರಾತ್ರಿ ವೇಳೆ ಮಲಗಿದ್ದ ಓರ್ವ ಸಾಧುವನ್ನು ನರಭಕ್ಷಕ ಎಳೆದೊಯ್ದು ಕೊಂದುಹಾಕಿತ್ತು. ಆದಿನ ಸಂಜೆ ಇಪ್ಪತ್ತುಕ್ಕೂ ಹೆಚ್ಚು ಮಂದಿ ಇದ್ದ ಯಾತ್ರಿಕರು ಮಳೆಯ ಕಾರಣ ಪ್ರಯಾಣ ಮುಂದುವರಿಸಲಾರದೆ, ಪಂಡಿತನಲ್ಲಿ ವಸತಿ ವ್ಯವಸ್ಥೆಗೆ ಆಶ್ರಯ ಕೋರಿದ್ದರು. ಗುಡ್ಡಗಳ ಒರಟು ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ ಸುಮಾರು ಸುತ್ತಲೂ ಎಂಟು ಅಡಿ ಎತ್ತರದ ಗೋಡೆ ನಿರ್ಮಾಣ ಮಾಡಿ ತಗಡಿನ ಶೀಟ್ ಹೊದಿಸಿದ್ದ ಅವನ ಹೊಟೇಲ್ ಹಿಂಭಾಗದ ಕೋಣೆಯನ್ನು ಪಂಡಿತ ಆ ರಾತ್ರಿ ಯಾತ್ರಿಕರಿಗೆ ತಂಗಲು ನೀಡಿದ್ದ. ಕಿಟಕಿ ಬಾಗಿಲುಗಳಿಲ್ಲದ ಆ ಕೋಣೆಗೆ ಹಲವೆಡೆ ಬೆಳಕು ಬರಲು ಗೋಡೆಯಲ್ಲಿ ದೊಡ್ಡ ಮಟ್ಟದ ರಂಧ್ರಗಳನ್ನು ಹಾಗೇ ಬಿಡಲಾಗಿತ್ತು. ಬಾಗಿಲಿಗೆ ತಗಡಿನ ಒಂದು ಹೊದಿಕೆಯನ್ನು ಮುಚ್ಚಿ ಅದು ಗಾಳಿಗೆ ಬೀಳದಂತೆ ಕಲ್ಲನ್ನು ಅದಕ್ಕೆ ಒರಗಿಸಿ ಇಡಲಾಗಿತ್ತು. ನರಭಕ್ಷಕ ಆ ರಾತ್ರಿ ಯಾವ ಸುಳಿವು ಸಿಗದಂತೆ ಬಾಗಿಲಿನ ಕಲ್ಲನ್ನು ಪಕ್ಕಕ್ಕೆ ಸರಿಸಿ, ಒಳಗೆ ಪ್ರವೇಶ ಮಾಡಿ, ಕೋಣೆಯೊಳಗೆ ಮಲಗಿದ್ದ ಇಪ್ಪತ್ತು ಜನರ ಪೈಕಿ ಸಾಧುವಿನ ಕುತ್ತಿಗೆಗೆ ಬಾಯಿ ಹಾಕಿ ಅವನಿಂದ ಯಾವುದೇ ಶಬ್ಧ ಬರದಂತೆ ಮಾಡಿ ಎತ್ತೊಯ್ದಿತ್ತು. ಹೋಟೇಲ್‌ನ ಅನತೀ ದೂರದಲ್ಲಿ ಹರಿಯುತ್ತಿದ್ದ ನದಿ ತೀರದ ಬಳಿ ಆತನ ದೇಹವನ್ನು ಅರೆ ಬರೆ ತಿಂದು ಬಿಸಾಡಿ ಹೋಗಿತ್ತು.

ಈ ಘಟನೆಯಿಂದ ಎಚ್ಚೆತ್ತು ಕೊಂಡ ಜಿಲ್ಲಾಧಿಕಾರಿ ಇಬ್ಸ್‌ಟನ್ ಚಿರತೆ ಇಲ್ಲೆ ಕಾಡಿನಲ್ಲಿರಬಹುದೆಂದು ಊಹಿಸಿ ಆದಿನ ತೂಗು ಸೇತುವೆಯನ್ನು ಬಂದ್ ಮಾಡಿಸಿ ಎರಡು ಸಾವಿರ ಜನರೊಂದಿಗೆ ಸುತ್ತಮುತ್ತಲಿನ ಕಾಡನ್ನು ಜಾಲಾಡಿದ. ಸ್ವತಃ ನುರಿತ ಶಿಕಾರಿಕಾರನಾದ ಇಬ್ಸ್‌ಟನ್ ನರಭಕ್ಷಕ ಸೇತುವೆ ದಾಟಿ ಆಚೆಕಡೆಗಿನ ಕಾಡು ಸೇರಬಾರದು ಎಂದು ಮುನ್ನೆಚ್ಚರಿಕೆ ವಹಿಸಿದ್ದ. ಆದರೆ, ಅವನು ಒಂದು ವಿಷಯದಲ್ಲಿ ಎಡವಿದ್ದ. ಅದೆನೇಂದರೆ,ಸಾಮಾನ್ಯವಾಗಿ ಹಸಿವಾದಾಗ ಬೇಟೆಯಾಡುವ ನರಭಕ್ಷಕ ಚಿರತೆ ಅಥವಾ ಹುಲಿಗಳು ತಮ್ಮ ಬೇಟೆಯನ್ನು ದೂರದ ಕಾಡಿಗೆ ಒಯ್ದು ಗುಪ್ತ ಸ್ಥಳವೊಂದರಲ್ಲಿ ಇಟ್ಟು ಎರಡರಿಂದ ಮೂರು ದಿನ ತಿನ್ನುವುದು ವಾಡಿಕೆ ಅವುಗಳು ತಾವು ಬೇಟೆಯಾಡಿದ ಪ್ರಾಣಿಗಳನ್ನು ಅಲ್ಲೆ ತಿಂದು ಬಿಸಾಡಿ ಹೋಗಿದ್ದರೆ, ಅವುಗಳು ಆ ಸ್ಥಳಕ್ಕೆ ಮತ್ತೇ ವಾಪಸ್ ಬರುವುದಿಲ್ಲ ಎಂದೇ ಅರ್ಥ. ಇಲ್ಲಿ ಕೂಡ ಚಿರತೆ ಆ ರಾತ್ರಿಯೇ ಸಾಧುವಿನ ಕಳೆಬರವನ್ನು ಅರ್ಧತಿಂದು, ತೂಗುಸೇತುವೆಯನ್ನು ದಾಟಿ ಬಹು ದೂರದವರೆಗೆ ಸಾಗಿಬಿಟ್ಟಿತ್ತು.

ಕಾರ್ಬೆಟ್ ರುದ್ರಪ್ರಯಾಗದ ತಲುಪಿದ ನಂತರ ಅವನಿಗೆ ನರಭಕ್ಷಕ ಬೇಟೆಯಾಡುತ್ತಿರುವ ಪ್ರದೇಶಗಳ ನಕ್ಷೆಯ ಹೊರತಾಗಿ ಬೇರೆ ಯಾವುದೇ ಮಾಹಿತಿ ದೊರಕಲಿಲ್ಲ. ನಕ್ಷೆಯನ್ನು ಮುಂದೆ ಹರಡಿಕೊಂಡು ಜನವಸತಿ ಪ್ರದೇಶಗಳನ್ನು ಕಾರ್ಬೆಟ್ ಗುರುತು ಮಾಡತೊಡಗಿದ. ಅಲಕಾನದಿಗೆ ಎರಡು ತೂಗು ಸೇತುವೆಗಳಿದ್ದದನ್ನು ಅವನು ಗಮನಿಸಿದ. ನದಿಯ ಒಂದು ಬದಿಯಲ್ಲಿ ಯಾವುದೇ ಹಳ್ಳಿಗಳು ಇಲ್ಲದ ಕಾರಣ ಚಿರತೆ ತನ್ನ ಬೇಟೆಗಾಗಿ ಸೇತುವೆ ದಾಟಿ ಜನರಿರುವ ವಸತಿ ಪ್ರದೇಶಕ್ಕೆ ಬರುತ್ತಿದೆ ಎಂದು ಊಹಿಸಿದ. ಅವನ ಈ ಊಹೆಗೆ ಚಿಟ್ಪಾವಲ್ ಹಳ್ಳಿ ಸಮೀಪದ ತೂಗು ಸೇತುವೆಯ ಸಮೀಪದ ಪಂಡಿತನ ಮನೆಯಲ್ಲಿ ಸಾಧು ನರಭಕ್ಷನಿಗೆ ಬಲಿಯಾದದ್ದು ಬಲವಾದ ಕಾರಣ ವಾಗಿತ್ತು. ಈ ಕಾರಣಕ್ಕಾಗಿ ಚಿರತೆ ಜನವಸತಿ ಪ್ರದೇಶದ ಅಂಚಿನ ಕಾಡಿನಲ್ಲೇ ಇರಬೇಕೆಂದು ಅಂದಾಜಿಸಿದ. ಇದಕ್ಕಾ ಗೋಲಬಾರಿ ಎಂಬ ಹಳ್ಳಿ ಸಮೀಪದ ಹೊರವಲಯದ ಕಾಡಿನ ನಡುವೆ ಇದ್ದ ಪ್ರವಾಸಿ ಬಂಗಲೆಯಲ್ಲಿ ತನ್ನ ಸೇವಕರೊಡನೆ ಉಳಿಯಲು ನಿರ್ಧರಿಸಿದ.

ಚಿರತೆಯ ಜಾಡು ಕಂಡು ಹಿಡಿಯುವ ನಿಟ್ಟಿನಲ್ಲಿ ಎರಡು ಮೇಕೆಗಳನ್ನು ಕೊಂಡು ತಂದು ಅವುಗಳಲ್ಲಿ ಒಂದನ್ನು ದಟ್ಟ ಕಾಡಿನ ನಡುವೆ, ಮತ್ತೊಂದನ್ನು ಗೋಲಬಾರಿ ಹಳ್ಳಿಗೆ ಕಾಡಿನಿಂದ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ಮರಗಳಿಗೆ ಕಟ್ಟಿ ಹಾಕಿ ಬಂದ. ಮಾರನೇ ದಿನ ಮೇಕೆ ಕಟ್ಟಿ ಹಾಕಿದ ಸ್ಥಳಗಳಿಗೆ ಹೋಗಿ ನೋಡಿದಾಗ. ಕಾಡಿನಲ್ಲಿ ಕಟ್ಟಿ ಹಾಕಿದ್ದ ಮೇಕೆ ಚಿರತೆಗೆ ಬಲಿಯಾಗಿತ್ತು. ಆದರೆ, ಅದನ್ನು ತಿನ್ನದೇ ಹಾಗೆಯೇ ಉಳಿಸಿ ಹೋಗಿರುವುದು ಕಾರ್ಬೆಟ್‌ನ ಜಿಜ್ಙಾಸೆಗೆ ಕಾರಣವಾಯಿತು. ಬೇರೆ ಯಾವುದಾದರೂ ಪ್ರಾಣಿ ದಾಳಿ ಮಾಡಿರಬಹುದೆ? ಎಂಬ ಪ್ರಶ್ನೆಯೂ ಒಮ್ಮೆ ಅವನ ತಲೆಯಲ್ಲಿ ಸುಳಿದು ಹೋಯಿತು. ಆದರೂ ಪರೀಕ್ಷಿಸಿ ಬಿಡೋಣ ಎಂಬಂತೆ ಮೇಕೆಯ ಕಳೇಬರದ ಸ್ಥಳದಿಂದ ಸುಮಾರು ಐವತ್ತು ಅಡಿ ದೂರದಲ್ಲಿ ಮಧ್ಯಾಹದಿಂದ ಸಂಜೆ ಮಬ್ಬು ಕತ್ತಲೆ ಕವಿಯುವವರೆಗೂ ಬಂದೂಕ ಹಿಡಿದು ಕಾದು ಕುಳಿತ. ಆದರೆ, ಮೇಕೆಯ ಕಳೇಬರದ ಹತ್ತಿರಕ್ಕೆಯಾವ ಪ್ರಾಣಿಯೂ ಸುಳಿಯಲಿಲ್ಲ. ಕತ್ತಲು ಆವರಿಸುತಿದ್ದಂತೆ ಇಲ್ಲಿರುವುದು ಅಪಾಯ ಎಂದು ಭಾವಿಸಿದ ಕಾರ್ಬೆಟ್, ಪ್ರವಾಸಿ ಬಂಗಲೆಯತ್ತ ಹಿಂತಿರುಗಿದ. ಕಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಅಪಾಯಕಾರಿ ಪ್ರಾಣಿಗಳು ಇರುವ ಪ್ರದೇಶದಲ್ಲಿ ಎಡಬಲದ ಪ್ರದೇಶಗಳನ್ನು ಗಮನಿಸದೇ ನೇರವಾಗಿ ನಡೆಯುದು ಅಪಾಯಕಾರಿ ಎಂಬುದನ್ನು ಕಾರ್ಬೆಟ್ ಅರಿತ್ತಿದ್ದ. ಸಾಮಾನ್ಯವಾಗಿ ಹುಲಿ, ಚಿರತೆಗಳು ಹಿಂಬದಿಯಿಂದ ಆಕ್ರಮಣ ಮಾಡುವುದನ್ನು ಅರಿತ್ತಿದ್ದ ಅವನು ಪ್ರತಿ ಎರಡು ಮೂರು ಹೆಜ್ಜೆಗೊಮ್ಮೇ ನಿಂತು ಹಿಂತಿರುಗಿ ನೋಡುತ್ತಿದ್ದ. ನಡೆಯುವಾಗ ಕೂಡ ಎಡ ಬಲ ಗಮನ ಹರಿಸಿ ತನ್ನ ಇಡೀ ಶರೀರವನ್ನು ಕಣ್ಣು ಮತ್ತು ಕಿವಿಯಾಗಿಸಿಕೊಳ್ಳುತ್ತಿದ್ದ. ಅದೃಷ್ಟವೆಂದರೆ, ಅವನ ಈ ಎಚ್ಚರಿಕೆಯೇ ಅಂದು ಅವನನ್ನು ನರಭಕ್ಷಕ ಚಿರತೆಯ ದಾಳಿಯಿಂದ ಪಾರು ಮಾಡಿತ್ತು. ಆದಿನ ರಾತ್ರಿ ಪ್ರವಾಸಿ ಬಂಗಲೆಯಲ್ಲಿ ಮಲಗಿ ಬೆಳಿಗ್ಗೆ ಎದ್ದು ನೋಡುವಾಗ, ಚಿರತೆ, ದಾರಿಯುದ್ದಕ್ಕೂ ಕಾರ್ಬೆಟ್‌‍ನನ್ನು ಹಿಂಬಾಲಿಸಿಕೊಂಡು ಪ್ರವಾಸಿ ಮಂದಿರದವರೆಗೂ ಬಂದು ಇಡೀ ಕಟ್ಟಡವನ್ನು ಎರಡು ಮೂರು ಬಾರಿ ಸುತ್ತು ಹಾಕಿ ವಾಪಸ್ ಹೋಗಿರುವುದನ್ನು ಅದರ ಹೆಜ್ಜೆ ಗುರುತುಗಳು ಹೇಳುತ್ತಿದ್ದವು. ಚಿರತೆಯ ಹೆಜ್ಜೆ ಗುರುತು ಗಮನಿಸಿದ ಕಾರ್ಬೆಟ್ ಇದೊಂದು ಯವ್ವನ ದಾಟಿದ ವಯಸ್ಸಾದ ನರಭಕ್ಷಕ ಚಿರತೆ ಎಂಬುದನ್ನು ಖಚಿತಪಡಿಸಿಕೊಂಡ.

  (ಮುಂದುವರಿಯುವುದು)

 

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-18)


– ಡಾ.ಎನ್.ಜಗದೀಶ್ ಕೊಪ್ಪ


ನರಭಕ್ಷಕ ಹುಲಿಗಳ ಬೇಟೆಯಿಂದಾಗಿ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಖ್ಯಾತಿ ಹೊಂದಿದ ಜಿಮ್ ಕಾರ್ಬೆಟ್ ಮಾನಸಿಕವಾಗಿ ಪ್ರಾಣಿ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ. ತನ್ನ ಕಣ್ಣ ಮುಂದೆ ಅರಣ್ಯ ನಶಿಸಿ ಹೋಗುತ್ತಿರುವುದು ಮತ್ತು ಕಾಡಿನ ಪ್ರಾಣಿಗಳು ಶಿಕಾರಿಗಾರರ ತೆವಲಿಗೆ ಬಲಿಯಾಗುತ್ತಿರುವುದರ ಬಗ್ಗೆ ವೈಯಕ್ತಿಕವಾಗಿ ನೊಂದುಕೊಂಡಿದ್ದ. ಈ ಕಾರಣಕ್ಕಾಗಿ ನರಭಕ್ಷಕ ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪ್ರಾಣಿಗಳನ್ನು ಬೇಟೆಯಾಡುವುದನ್ನು ಅವನು ನಿಲ್ಲಿಸಿದ್ದ.

ಜಿಮ್ ಕಾರ್ಬೆಟ್ ಬದುಕಿನಲ್ಲಿ, ಹಾಗೂ ಅವನ ಶಿಕಾರಿಯ ಅನುಭವದಲ್ಲಿ ಅತಿ ದೊಡ್ಡ ಸವಾಲು ಎದುರಾದದ್ದು, ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲುವ ಸಂದರ್ಭದಲ್ಲಿ ಮಾತ್ರ. ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿ ಸುಮಾರು 800 ಚದುರ ಕಿ. ಮಿ. ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರ ಎಂಟು ವರ್ಷಗಳ ಕಾಲ ನರಮನುಷ್ಯರನ್ನು ಬೇಟೆಯಾಡುತ್ತಾ, ಸರ್ಕಾರವನ್ನು, ಸ್ಥಳೀಯ ಜನತೆಯನ್ನು ಆತಂಕದ ಮಡುವಿಗೆ ನೂಕಿದ್ದ ಈ ಚಿರತೆಯನ್ನು ಕೊಲ್ಲಲು ಜಿಮ್ ಕಾರ್ಬೆಟ್ ನಡೆಸಿದ ಸಾಹಸ, ಪಟ್ಟ ಪಾಡು ಒಂದು ಮಹಾ ಕಾವ್ಯದಂತೆ ರೋಮಾಂಚಕಾರಿಯಾದ ಕಥನ. ಈ ನರಭಕ್ಷಕನ ಬೇಟೆಗಾಗಿ ಅಂದಿನ ದಿನಗಳಲ್ಲಿ ಇಡೀ ಜಗತ್ತು ಎದುರು ನೋಡುತ್ತಿತ್ತು ಏಕೆಂದರೆ, ಪ್ರತಿದಿನ 50 ರಿಂದ 100 ಕಿ.ಮಿ. ದೂರ ಸಂಚರಿಸುತ್ತಾ ಇದ್ದ ಈ ಚಿರತೆಯ ಪ್ರತಿ ನರಬೇಟೆಯೂ ಜಗತ್ತಿನ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಸುದ್ಧಿಯಾಗಿತ್ತು. ಇಂಗ್ಲೆಂಡಿನ ಪಾರ್ಲಿಮೆಂಟ್‌‌‍ನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ವಿಚಾರದ ಬದಲಿಗೆ, ಈ ನರಭಕ್ಷಕ ಚಿರತೆಯ ಬಗ್ಗೆ ತೀವ್ರತರವಾದ ಚರ್ಚೆಗಳು ನಡೆಯುತ್ತಿದ್ದವು.

ಕಾಡಿನ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾದ ಚಿರತೆ ಸಾಮಾನ್ಯವಾಗಿ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವ ಸಾಧ್ಯತೆ ಬಹುತೇಕ ಕಡಿಮೆ. ಸಿಂಹ ಅಥವಾ ಹುಲಿ ಬೇಟೆಯಾಡಿ ತಿಂದು ಮುಗಿಸಿದ ಪ್ರಾಣಿಗಳ ಅವಶೇಷ ಅಥವಾ ವಯಸ್ಸಾಗಿ ಸತ್ತು ಹೋದ ಪ್ರಾಣಿಗಳ ಕಳೇಬರಗಳನ್ನು ತಿನ್ನುವುದು ಚಿರತೆಗಳ ಪವೃತ್ತಿ. ಆದರೆ, ರುದ್ರಪ್ರಯಾಗದ ಈ ನರಭಕ್ಷಕ ಚಿರತೆ ಆಕಸ್ಮಾತ್ತಾಗಿ ನರಭಕ್ಷಕ ಪ್ರಾಣಿಯಾಗಿ ಪರಿವರ್ತನೆ ಹೊಂದಿತ್ತು. ಇದಕ್ಕೆ ಸ್ಥಳೀಯ ಜನರ ಸಾಂಸ್ಕೃತಿಕ ಆಚರಣೆಗಳು ಕೂಡ ಪರೋಕ್ಷವಾಗಿ ಕಾರಣವಾಗಿದ್ದವು. ರುದ್ರಪ್ರಯಾಗ ಹಿಮಾಲಯದ ಪವಿತ್ರ ಕ್ಷೇತ್ರಗಳ ನಡುವಿನ ಸಂಗಮ ಕ್ಷೇತ್ರಗಳಲ್ಲಿ ಒಂದು. ಹಿಮಾಲಯದ ತಪ್ಪಲಲ್ಲಿ ಹುಟ್ಟಿ ಉತ್ತರದಿಂದ ದಕ್ಷಿಣ ದಿಕ್ಕಿಗೆ ಹರಿಯುವ ಮಂದಾಕಿನಿ ಹಾಗೂ ಅಲಕನಂದಾ ನದಿಗಳು ರುದ್ರಪ್ರಯಾಗದಲ್ಲಿ ಒಂದುಗೂಡಿ, ಮುಂದೆ ಗಂಗಾನದಿಯಾಗಿ ಹರಿದು, ಮುಂದೆ ಹೃಷಿಕೇಶ ಹರಿದ್ವಾರ, ವಾರಣಾಸಿ ಮುಂತಾದ ಪವಿತ್ರ ಕ್ಷೇತ್ರಗಳ ತಟದಲ್ಲಿ ಹರಿದು ಕೊಲ್ಕತ್ತಾ ಬಳಿ ಹೂಗ್ಲಿ ನದಿಯಾಗಿ ಹೆಸರು ಬದಲಿಸಿಕೊಂಡು ಬಂಗಾಳ ಕೊಲ್ಲಿ ಸೇರುತ್ತದೆ.

ಭಾರತದ ಹಿಂದೂ ಸಮುದಾಯದ ಪಾಲಿಗೆ ಗಂಗಾ ನದಿ ಪುಣ್ಯನದಿ. ಇದು ಇಲ್ಲಿ ಜನಗಳ ಧಾರ್ಮಿಕ ಮನೋಭೂಮಿಯಲ್ಲಿ ಒಂದು ಅಚ್ಚಳಿಯದ ಹೆಸರು. ಹಿಂದು ಭಕ್ತರ ಪಾಲಿಗೆ ಚಾರ್‌ಧಾಮ್ ಎಂದು ಕರೆಸಿಕೊಳ್ಳುವ ಹೃಷಿಕೇಶ, ಹರಿದ್ವಾರ, ಬದರಿನಾಥ್ ಹಾಗೂ ಕೇದಾರನಾಥ ಇವುಗಳನ್ನು ಸಂದರ್ಶಿಸುವುದು ಅವರ ಜೀವಮಾನದ ಕನಸು ಮತ್ತು ಹೆಬ್ಬಯಕೆ. ಹಾಗಾಗಿ ಈ ಸ್ಥಳಗಳು ವರ್ಷಪೂರ್ತಿ ದೇಶದ ವಿವಿಧೆಡೆಗಳಿಂದ ಬರುವ ಭಕ್ತರಿಂದ ತುಂಬಿ ತುಳುಕುತ್ತವೆ. ಹೃಷಿಕೇಶದಿಂದ ಹೊರಟ ಭಕ್ತರು ರುದ್ರಪ್ರಯಾಗದ ಬಳಿ ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಬೇರೆ ಬೇರೆ ದಾರಿ ಹಿಡಿದು ಸಾಗಬೇಕು. ಆ ಕಾಲದಲ್ಲಿ ಬಹುತೇಕ ಪ್ರಯಾಣವನ್ನು ಕಾಲು ನಡಿಗೆಯಲ್ಲೇ ಕ್ರಮಿಸಬೇಕಿತ್ತು ಇಂತಹ ಸಂದರ್ಭದಲ್ಲಿ ವಯಸ್ಸಾದ ಭಕ್ತರು ನಡುದಾರಿಯಲ್ಲಿ ಅಸುನೀಗಿದರೆ, ಅವರುಗಳ ಶವವನ್ನು ನದಿಯ ಕೊರಕಲು ಪ್ರದೇಶಕ್ಕೆ ನೂಕಿ ಮುಂದುವರಿಯುವುದು ಅನಿವಾರ್ಯವಾಗಿತ್ತು. ಜೊತೆಗೆ ಹಿಮಾಲಯದ ತಪ್ಪಲಿನ ಬಹುತೇಕ ಹಳ್ಳಿಗಳು ಪರ್ವತದ ಮೇಲಿದ್ದ ಕಾರಣ ಅಲ್ಲಿ ಜನರೂ ಸಹ ಸತ್ತವರ ಬಾಯಿಗೆ ಒಂದಿಷ್ಟು ಬೆಂಕಿಯ ಕೆಂಡವನ್ನು ಹಾಕಿ ಪರ್ವತದ ಮೇಲಿಂದ ಶವವನ್ನು ಹಳ್ಳಕ್ಕೆ ತಳ್ಳುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು. ಇಂತಹ ಒಂದು ಸಂದರ್ಭದಲ್ಲಿ ಸತ್ತ ಪ್ರಾಣಿಗಳ ಆಹಾರವನ್ನು ಅರಸುತ್ತಿದ್ದ ಚಿರತೆ ಮನುಷ್ಯರ ಶವಗಳನ್ನು ತಿನ್ನುವುದರ ಮೂಲಕ ನರಭಕ್ಷಕ ಪ್ರಾಣಿಯಾಗಿ ಅಲ್ಲಿನ ಜನರನ್ನು ಕಾಡತೊಡಗಿತ್ತು.

ಜಿಮ್ ಕಾರ್ಬೆಟ್ ನೈನಿತಾಲ್‌ನಲ್ಲಿ ಇರುವಾಗಲೇ ರುದ್ರಪ್ರಯಾಗದ ನರಭಕ್ಷಕ ಚಿರತೆಯು ಮನುಷ್ಯರನ್ನು ಬೇಟೆಯಾಡುತ್ತಿರುವುದನ್ನು ಪತ್ರಿಕೆಯಲ್ಲಿ ಓದಿ ತಿಳಿದಿದ್ದ, ಬ್ರಿಟಿಷ್ ಸರ್ಕಾರ ಕೂಡ ಇದನ್ನು ಕೊಂದು ಹಾಕಲು ಹವ್ಯಾಸಿ ಬೇಟೆಗಾರರಿಗೆ ಆಹ್ವಾನ ನೀಡಿ 10 ಸಾವಿರ ರೂಪಾಯಿ ಬಹುಮಾನ ಘೋಷಿಸಿತ್ತು, ಜೊತೆಗೆ ಆ ಪ್ರದೇಶದ ಜನರಿಗೆ ಮುಕ್ತವಾಗಿ ಬಂದೂಕಿನ ಪರವಾನಗಿ ನೀಡಿತ್ತು. ಹಿಮಾಲಯದ ಪರ್ವತದ ಪ್ರದೇಶಗಳಿಂದ ಬಂದ ಸೈನಿಕರಿಗೆ ರಜೆಯ ಮೇಲೆ ಊರಿಗೆ ತೆರಳುವಾಗ ಬಂದೂಕವನ್ನು ತೆಗೆದುಕೊಂಡು ಹೋಗಲು ಅನುಮತಿಯನ್ನು ಸಹ ನೀಡಿತು ನರಭಕ್ಷಕ ಚಿರತೆಯನ್ನು ಕೊಲ್ಲಲು ಸರ್ಕಾರ ಇಷ್ಟೇಲ್ಲಾ ವ್ಯವಸ್ಥೆ ಮಾಡಿರುವಾಗ ನಾನು ಮಾಡುವುದಾದರೂ ಏನು? ಎಂಬುದು ಕಾರ್ಬೆಟ್‌ನ ನಿಲುವಾಗಿತ್ತು. ಕಾರ್ಬೆಟ್‌ಗೆ ಈ ನರಭಕ್ಷಕಕನ ಬಗ್ಗೆ ಪ್ರಥಮಬಾರಿಗೆ ಸುದ್ಧಿ ತಿಳಿದಾಗ ಅವನು ನೈನಿತಾಲ್ ಸಿನಿಮಾ ಮಂದಿರದಲ್ಲಿ ಇಂಗ್ಲಿಷ್ ಸಿನಿಮಾವೊಂದನ್ನು ನೋಡುತ್ತಾ ಕುಳಿತಿದ್ದ. ಆರು ವರ್ಷಗಳ ನಂತರವೂ ಯಾರ ಕೈಗೂ ಸಿಗದೆ, ಸೆರೆ ಹಿಡಿಯಬಹುದಾದ ಎಲ್ಲಾ ವಿಧವಾದ ಉಪಾಯಗಳಿಗೂ ಜಗ್ಗದೆ ಚಿರತೆ ತನ್ನ ದಾಳಿಯನ್ನು ಮುಂದುವರಿಸಿತ್ತು. ಎರಡು ಬಾರಿ ಅದೃಷ್ಟವಶಾತ್ ಸಾವಿನ ಕುಣಿಕೆಯಿಂದ ಅದು ಪಾರಾಗಿತ್ತು.

ಒಮ್ಮೆ ರುದ್ರಪ್ರಯಾಗದ ಸಮೀಪದ ಹಳ್ಳಿಯ ಬಯಲಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ ಚಿರತೆ ಅವನನ್ನು ಕೊಂದು ಸಮೀಪದ ಹಳ್ಳವೊಂದಕ್ಕೆ ಕೊಂಡೊಯ್ದು ತಿನ್ನುತ್ತಿರುವಾಗ ಇದನ್ನು ಕಂಡ ಕೆಲವು ಗ್ರಾಮಸ್ಥರು ದೊಣ್ಣೆ, ಮಚ್ಚು, ಕೊಡಲಿಗಳಿಂದ, ನರಭಕ್ಷಕನನ್ನು ಬೆನ್ನಟ್ಟಿದ್ದರು. ಅದು ಭಯದಿಂದ ಮನುಷ್ಯನ ಶವದೊಂದಿಗೆ ಓಡಿ ಹೋಗಿ ಸಮೀಪದ ಗುಹೆಯನ್ನು ಹೊಕ್ಕಿತು. ಕೂಡಲೇ ಗ್ರಾಮಸ್ಥರು ಗುಹೆಯ ಬಾಗಿಲಿಗೆ ಮುಳ್ಳು ಕಂಟಿ, ಮರದಬೊಡ್ಡೆ ಹಾಗೂ ಕಲ್ಲುಗಳನ್ನು ಅಡ್ಡ ಇಟ್ಟು ಚಿರತೆ ಹೊರಬಾರದಂತೆ ಭದ್ರಪಡಿಸಿದರು. ಸತತ ಐದು ದಿನಗಳ ಕಾಲ ಗುಹೆಯ ಬಾಗಿಲಲ್ಲಿ ಅವರೆಲ್ಲಾ ಕಾದು ಕುಳಿತರೂ ಸಹ ಗುಹೆಯ ಒಳಗಿನಿಂದ ಯಾವ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಸಂಶಯಗೊಂಡ ಒಬ್ಬಾತ ಗುಹೆಬಾಗಿಲಿಗೆ ಅಡ್ಡಲಾಗಿರಿಸಿದ್ದ ಮುಳ್ಳು ಮತ್ತು ಕಲ್ಲುಗಳನ್ನು ತೆಗೆಯುತಿದ್ದಂತೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ಕ್ಷಣಾರ್ಧದಲ್ಲಿ ಹೊರಕ್ಕೆ ನೆಗೆದ ನರಭಕ್ಷಕ ಚಿರತೆ ಜನರ ನಡುವೆ ಓಡಿ ಹೋಗಿ ಕಾಡು ಹೊಕ್ಕಿತು. ಅನಿರೀಕ್ಷಿತವಾಗಿ ಜರುಗಿದ ಈ ಘಟನೆಯಿಂದ ಭಯ ಭೀತರಾದ ಅಷ್ಟೂ ಜನ ಗುಂಡಿನ ಶಬ್ಧಕ್ಕೆ ಬೆದರಿ ಮರದಿಂದ ಹಾರುವ ಹಕ್ಕಿಗಳಂತೆ ಚಲ್ಲಾಪಿಲ್ಲಿಯಾಗಿದ್ದರು.

ಇನ್ನೊಮ್ಮೆ ಇಬ್ಬರು ಬ್ರಿಟಿಷ್ ಅಧಿಕಾರಿಗಳ ಗುಂಡಿನ ದಾಳಿಯಿಂದ ಇದೇ ನರಭಕ್ಷಕ ಚಿರತೆ ಕ್ಷಣ ಮಾತ್ರದಲ್ಲಿ ಪಾರಾಗಿತ್ತು. ರುದ್ರಪ್ರಯಾಗ ಪಟ್ಟಣದಿಂದ ಕೇದಾರನಾಥಕ್ಕೆ ಹೋಗುವ ದಾರಿಯಲ್ಲಿ 24 ಕಿ.ಮಿ. ದೂರದಲ್ಲಿ ಕರ್ಣಪ್ರಯಾಗ ಎಂಬ ಜನವಸತಿ ಪ್ರದೇಶವಿದ್ದು ಈ ಎರಡು ಊರುಗಳ ನಡುವೆ ಅಲಕಾನಂದಾ ನದಿ ರಭಸದಿಂದ ಹರಿಯುತ್ತದೆ. ಪ್ರಯಾಣಿಕರು ನದಿ ದಾಟಲು ಅಡ್ಡಲಾಗಿ ತೂಗು ಸೇತುವೆಯೊಂದನ್ನು ಕಟ್ಟಲಾಗಿದೆ. ನರಭಕ್ಷಕ ರುದ್ರಪ್ರಯಾಗಕ್ಕೆ ಬರಬೇಕಾದರೆ, ಈ ಸೇತುವೆ ದಾಟಿ ಬರಬೇಕಿತ್ತು. ಏಕೆಂದರೆ, ಅತ್ಯಂತ ವೇಗವಾಗಿ ರಭಸದಲ್ಲಿ ಹರಿಯುವ ಅಲಕನಂದಾ ನದಿಯನ್ನು ಅದು ಈಜುವುದು ಸಾಧ್ಯವಿರಲಿಲ್ಲ. ಹಾಗಾಗಿ ಇಬ್ಬರೂ ಅಧಿಕಾರಿಗಳು ಸೇತುವೆಯ ಎರಡು ಬದಿಯಿದ್ದ ಗೋಪುರಗಳ ಮೇಲೆ ನಿರಂತರ 60 ದಿನಗಳ ರಾತ್ರಿ ಕಾವಲು ಕುಳಿತರು. ಕಡೆಗೂ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಒಂದು ದಿನ ತಡರಾತ್ರಿಯ ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ಸೇತುವೆ ಮೇಲೆ ನರಭಕ್ಷಕ ನಡೆದು ಬಂತು. ಸೇತುವೆಯ ಮಧ್ಯದವರೆಗೆ ಬರುವುದನ್ನೇ ಕಾಯುತ್ತಿದ್ದ ಅವರಲ್ಲಿ, ರುದ್ರಪ್ರಯಾಗದ ದಿಕ್ಕಿನ ಗೋಪುರದಲ್ಲಿ ಕುಳಿತಿದ್ದ ಅಧಿಕಾರಿ ತಡಮಾಡದೇ, ನರಭಕ್ಷಕನತ್ತ ಗುರಿಯಿಟ್ಟು ಗುಂಡುಹಾರಿಸಿದ. ಬಂದೂಕಿನಿಂದ ಸಿಡಿದ ಗುಂಡು ಚಿರತೆಗೆ ಬಡಿಯುವ ಬದಲು, ಅದರ ಮುಂಗಾಲಿನ ಸಮೀಪ ಸೇತುವೆಗೆ ಬಿಗಿಯಲಾಗಿದ್ದ ಮರದ ಹಲಗೆಗೆ ತಾಗಿತು. ಆದರೂ ಕೂಡ ಗುಂಡಿನಿಂದ ಸಿಡಿದ ಚೂರೊಂದು ಅದರ ಕಾಲನ್ನು  ಘಾಸಿಗೊಳಿಸಿತ್ತು. ಗುಂಡಿನ  ಶಬ್ಧಕ್ಕೆ ಬೆದರಿದ ಚಿರತೆ ತಾನು ಬಂದ ದಾರಿಯತ್ತ ಹಿಂತಿರುಗಿ ಶರವೇಗದಿಂದ ಓಡುತ್ತಿರುವಾಗ, ಅತ್ತ ಕರ್ಣಪ್ರಯಾಗದ ದಿಕ್ಕಿನ ಗೋಪುರದಲ್ಲಿದ್ದ ಅಧಿಕಾರಿ ತನ್ನ ಪಿಸ್ತೂಲಿಂದ ಆರು ಗುಂಡುಗಳನ್ನು ಹಾರಿಸಿದ ಆದರೆ, ಎಲ್ಲವೂ ಗುರಿತಪ್ಪಿ ನರಭಕ್ಷಕ ಸಾವಿನ ಬಾಯಿಂದ ಪಾರಾಗಿತ್ತು. ನಂತರ ಗೋಪುರದಿಂದ ಕೆಳಗಿಳಿದು ಬಂದ ಇಬ್ಬರೂ ಸ್ಥಳವನ್ನು ಅವಲೋಕಿಸಿ. ಗುಂಡಿನ ದಾಳಿಯಿಂದ ಚಿರತೆ ಗಂಭೀರವಾಗಿ ಗಾಯಗೊಂಡು ಸತ್ತಿರಬಹುದೆಂದು ನದಿಯ ಇಕ್ಕೆಲಗಳಲ್ಲಿ ಬೆಳಕರಿದ ಮೇಲ ಎಲ್ಲೆಡೆ ಜಾಲಾಡಿದರು. ಆದರೆ, ಚಿರತೆಯ ಯಾವ ಸುಳಿವು ಸಿಗಲಿಲ್ಲ. ಈ ಘಟನೆ ಸಂಭವಿಸಿದ ಐದು ತಿಂಗಳವರೆಗೆ ಎಲ್ಲಿಯೂ ನರಭಕ್ಷಕನ ದಾಳಿ ನಡೆಯಲಿಲ್ಲವಾದ್ದರಿಂದ ಎಲ್ಲರೂ ಅದು ಗುಂಡೇಟಿನಿಂದ ಅಸುನೀಗಿದೆ ಎಂದು ಭಾವಿಸಿ ನಿಟ್ಟುಸಿರು ಬಿಟ್ಟಿದ್ದರು, ಆದರೆ, ಐದು ತಿಂಗಳ ತರುವಾಯ ನರಬಲಿಯ ಬೇಟೆಯೊಂದಿಗೆ ನರಭಕ್ಷಕ ಚಿರತೆ ತಾನು ಇನ್ನೂ ಸತ್ತಿಲ್ಲವೆಂದು ಅಪಾಯದ ಸೂಚನೆಯನ್ನು ರುದ್ರಪ್ರಯಾಗದ ಪ್ರಾಂತ್ಯದ ಜನತೆಗೆ ರವಾನಿಸಿ, ಮತ್ತೆ ಎಲ್ಲರನ್ನು ಆತಂಕದ ಮಡುವಿಗೆ ನೂಕಿತು.

ಒಂದು ಸಂಜೆ ನೈನಿತಾಲ್‌ನ ಕ್ಲಬ್‌ನಲ್ಲಿ ಗೆಳೆಯರೊಂದಿಗೆ ವಿಸ್ಕಿ ಕುಡಿಯುತ್ತಾ ಕುಳಿತ್ತಿದ್ದ ಕಾರ್ಬೆಟ್, ನರಭಕ್ಷಕ ಚಿರತೆಯ ಬಗ್ಗೆ ಎಲ್ಲರೂ ಮಾತನಾಡುವುದನ್ನು ಸುಮ್ಮನೇ ಕೇಳಿಸಿಕೊಳ್ಳುತ್ತಾ ಕುಳಿತ್ತಿದ್ದ. ಶಿಕಾರಿ ಹವ್ಯಾಸವಿದ್ದ ಹಲವಾರು ಯೂರೋಪಿಯನ್ನರು ಅಲ್ಲಿದ್ದರು. ಸರ್ಕಾರ ನರಭಕ್ಷಕ ಬೇಟೆಗೆ ಸರ್ಕಾರ ಆಹ್ವಾನವಿತ್ತಿದ್ದರೂ ಯಾರೊಬ್ಬರೂ ಹೋಗಲು ಅಂಜುತ್ತಿದ್ದರು. ಚಿರತೆಯನ್ನು ಕೊಲ್ಲಲು ಸರ್ಕಾರ ಅಂತಿಮವಾಗಿ ಅದು ಬೇಟೆಯಾಡುತ್ತಿದ್ದ ಪ್ರಾಣಿಗಳು ಅಥವಾ ಮನುಷ್ಯರ ಶವಕ್ಕೆ ಸೈನೈಡ್ ಮತ್ತು ಇತರೆ ವಿಷಗಳನ್ನು ಹಾಕಿ ಕೊಲ್ಲಲು ಪ್ರಯತ್ನಿದರೂ ಇದರಿಂದ ಯಾವ ಪ್ರಯೋಜನವಾಗಲಿಲ್ಲ. ಈ ಎಲ್ಲಾ ಘಟನೆಗಳ ನಡುವೆ ಈ ನರಭಕ್ಷಕ ಚಿರತೆಗೆ ದೈವಿಶಕ್ತಿ ಇದೆ ಎಂಬ ಪುಕಾರು ಎಲ್ಲೆಡೆ ಹಬ್ಬಿದ ಪರಿಣಾಮ ಜನರಲ್ಲಿ ಭೀತಿ ಮತ್ತಷ್ಟು ಹೆಚ್ಚಾಯಿತು. ಅಂದು ರಾತ್ರಿ ಕಾರ್ಬೆಟ್ ಕ್ಲಬ್‌ನಿಂದ ಮನೆಗೆ ಬರುವುದರೊಳಗೆ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿ ಇಬ್ಸೋಟನ್‌ನಿಂದ ಕಾಗದದ ಲಕೋಟೆಯೊಂದು ಬಂದಿತ್ತು. ಸರ್ಕಾರದ ಪರವಾಗಿ ಇಬ್ಸೋಟನ್ ನರಭಕ್ಷ ಚಿರತೆಯನ್ನು ಬೇಟೆಯಾಡಲು ಜಿಮ್ ಕಾರ್ಬೆಟ್‌ನನ್ನು ವಿನಂತಿಸಿಕೊಂಡಿದ್ದ. ಈ ಪತ್ರ ಕಾರ್ಬೆಟ್‌ನನ್ನು ಇಕ್ಕಟ್ಟಿಗೆ ಸಿಲುಕಿಸಿತು.

                                                (ಮುಂದುವರಿಯುವುದು)