ನಟ ನಟಿಯರ ವಿವಾದಗಳು ಮತ್ತು ಮಾಧ್ಯಮ

Naveen Soorinje


ನವೀನ್ ಸೂರಿಂಜೆ


 

“ಪತ್ರಕರ್ತರ ಕತೆ ಹೇಗಿದೆ ಅಂದ್ರೆ, ಕಾವೇರಿ ವಿಷಯದಲ್ಲಿ ತುಟಿ ಬಿಚ್ಚದೇ ಇದ್ದ ಅಂಬರೀಷ್ ಪತ್ರಿಕಾಗೋಷ್ಠಿ ಮಾಡಿದ ತಕ್ಷಣ ಸುಮ್ನೆ ಬಿಟ್ಟು ಕಳ್ಸಿದ್ರಿ. ಅದೇ ಸಂಬಂಧವೇ ಪಡದ ಪ್ರಕಾಶ್ ರೈಗೆ ತರಾಟೆಗೆ ತಗೋತೀರಿ. ರಮ್ಯಾ ಪಾಕ್ ನಲ್ಲೂ ಒಳ್ಳೆಯವರಿದ್ದಾರೆ ಎಂದಿದ್ದಕ್ಕೆ ನೇಣಿಗೆ ಹಾಕಿದ್ರಿ. ನೀವು ಒಂದೋ ಜಾತಿ ಕಾರಣಕ್ಕೆ ಬೆನ್ನು ಬೀಳ್ತೀರಿ. ಅಥವಾ ಹೆಣ್ಣು ಅನ್ನೋ ಕಾರಣಕ್ಕೆ ಅಟ್ಟಾಡಿಸ್ತೀರಿ” ಎಂದು ಫೋನ್ ಮಾಡಿ ಬೈದ್ರು ಪ್ರಕಾಶಕರೂ ಆಗಿರುವ ಕವಿ ಅಕ್ಷತಾ ಹುಂಚದಕಟ್ಟೆ. ಅಕ್ಷತಾ ಅವರು ಹೇಳಿದ ಅಷ್ಟೂ ಮಾತುಗಳು ನಿಜ. ಆದರೆ ಅದಷ್ಟೇ ಸತ್ಯವಲ್ಲ. ಅಂಬರೀಷ್ ರನ್ನು ಬಚಾವ್ ಮಾಡುವ, ರಮ್ಯಾರನ್ನು ಬಲಿಪಶು ಮಾಡುವ, ಪ್ರಕಾಶ್ ರೈ ಕಾಂಟ್ರವರ್ಸಿ ಒಂದೇ ಚಾನೆಲ್ಲಿಗೆ ಸೀಮಿತವಾಗಿರೋ ಕಾರಣದ ಹಿಂದೆ ಆರ್ಥಿಕ ಕಾರಣಗಳೂ ಇವೆ.

ಹೌದು. ಸಿನೇಮಾ, ರಾಜಕೀಯ, ಮಾಧ್ಯಮದಲ್ಲಿರುವಷ್ಟು ಜಾತಿಗಳ ಜೊತೆಗಿನ ಕೊಂಡಿ ಬಹುಷಃ ಬೇರಾವ ಕ್ಷೇತ್ರದಲ್ಲೂ ಇರಲಿಕ್ಕಿಲ್ಲವೇನೋ?

ಅದರಲಿ. ಮಾಧ್ಯಮದಲ್ಲಿ ಸಿನೇಮಾ ಮಂದಿಯನ್ನು ನಿಜಜೀವನದಲ್ಲೂ ಹೀರೋ ಮಾಡುವುದು, ನಿರ್ಲಕ್ಷ್ಯ ಮಾಡುವುದು ಕೇವಲ ಜಾತಿ ಕಾರಣಕ್ಕಾಗಿ ಅಲ್ಲ. ಅದರ ಹಿಂದೆ ಆರ್ಥಿಕ ಕಾರಣವೂ ಕೆಲಸ ಮಾಡುತ್ತೆ.

ಈಗ ಅಂಬರೀಷ್ ವಿಚಾರವನ್ನೇ ತಗೊಳ್ಳಿ. ಕಾವೇರಿ ವಿವಾದ ಪ್ರಾರಂಭಕ್ಕೂ ಮುನ್ನವೇ ಅಂಬರೀಷ್ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಅಮೇರಿಕಾ ತೆರಳಿದ್ದರು. ಅಲ್ಲಿಂದಲೇ ಚಿಕಿತ್ಸೆ ಪಡೆದು ವಾಪಸ್ ಬರುವಷ್ಟರಲ್ಲಿ ಇಲ್ಲಿ ಕಾವೇರಿ ವಿಷಯ ಕಾವೇರಿತ್ತು. ಸರ್ವಪಕ್ಷ ಸಭೆ, ವಿಶೇಷ ಅಧಿವೇಶನಕ್ಕೆ ಬಂದಿಲ್ಲ. ಕನಿಷ್ಠ ಹೇಳಿಕೆಯನ್ನೂ ಕೊಟ್ಟಿಲ್ಲ ಎಂದು ರೈತರು ಪ್ರತಿಭಟಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಯ್ತು. ವಿಮಾನ ನಿಲ್ದಾಣದಿಂದ ನೇರವಾಗಿ ಬಂದ ಅಂಬರೀಷ್ ಪತ್ರಿಕಾಗೋಷ್ಠಿ ನಡೆಸಿ ಜನರ ಕ್ಷಮೆ ಕೇಳಿದ್ರು. ಮಾಧ್ಯಮಗಳು ಅಷ್ಟಕ್ಕೆ ಸುಮ್ಮನಾದ್ವು.

ಹಾಗಂತ ಅಂಬರೀಷ್ ಪತ್ರಿಕಾಗೋಷ್ಠಿ ಮಾಡಿ ಕ್ಷಮೆ ಕೇಳಿದ್ದು ಮಾಧ್ಯಮಗಳ ಹೆದರಿಕೆಯಿಂದ ಅಲ್ಲ. ಮಾದ್ಯಮಗಳ ಸಲಹೆಯಿಂದ. ಅಂಬರೀಷ್prakash ಅಭಿನಯದ ‘ದೊಡ್ಮನೆ ಹುಡುಗ’ ಸಿನೇಮಾ ರಿಲೀಸ್ ಆಗೋದಿತ್ತು. ಸಿನೇಮಾ ಪ್ರಮೋಶನ್ ಗಾಗಿ ಮಾಧ್ಯಮಗಳಿಗೆ ಲಕ್ಷಗಟ್ಟಲೆ ಸುರಿಯಲಾಗಿತ್ತು. ಅಷ್ಟರಲ್ಲಿ ಮಂಡ್ಯ ರೈತರು ದೊಡ್ಮನೆ ಹುಡುಗ ಸಿನೇಮಾದ ಬ್ಯಾನರ್ ನಲ್ಲಿ ಹಾಕಲಾಗಿದ್ದ ಅಂಬರೀಷ್ ಚಿತ್ರವನ್ನು ಹರಿಯಲಾರಂಬಿಸಿದ್ರು. ದೊಡ್ಮನೆ ಚಿತ್ರದ ಪ್ರಚಾರಕ್ಕಾಗಿ ಹಣ ಪಡೆದುಕೊಂಡರೂ ರೈತರ ಹೋರಾಟ ಈ ಸಂಧರ್ಭದಲ್ಲಿ ಮುಚ್ಚಿ ಹಾಕುವಂತಿರಲಿಲ್ಲ. ಅದಕ್ಕಾಗಿ ಪತ್ರಕರ್ತರನೇಕರ ಆತ್ಮೀಯ ಸಲಹೆಯಂತೆ ಅಂಬರೀಷ್ ಪತ್ರಿಕಾಗೋಷ್ಠಿ ನಡೆಸಿದ್ರು. ಪತ್ರಕರ್ತರು ಮತ್ತೆಂದೂ ಅವರ ರಾಜೀನಾಮೆ ಕೇಳಲಿಲ್ಲ. ರಾಜೀನಾಮೆಗೆ ಆಗ್ರಹಿಸುವಂತೆ ರೈತರನ್ನು ಪ್ರಚೋದಿಸಲಿಲ್ಲ. ಅಲ್ಲಿ ಜಾತಿ ಕಾರಣದ ಜೊತೆ ಜೊತೆಗೇ ಬಲವಾಗಿ ಹೆಜ್ಜೆ ಹಾಕಿದ್ದು ಆರ್ಥಿಕ ಕಾರಣ.

ರಮ್ಯಾ ವಿಚಾರವೂ ಇದಕ್ಕಿಂತ ಹೊರತಲ್ಲ. ಪಾಕಿಸ್ತಾನದಲ್ಲಿ ನಮ್ಮ ನಿಮ್ಮಂತೆಯೇ ಒಳ್ಳೆಯ ಜನರಿದ್ದಾರೆ. ಸ್ವರ್ಗ ನರಕ ಅಲ್ಲೂ ಇದೆ ಇಲ್ಲೂ ಇದೆ ಎಂದು ಹೇಳಿಕೆ ಕೊಟ್ಟಿದ್ದನ್ನು ಮಾದ್ಯಮಗಳು ಹಿಂದುತ್ವ ಅವಾಹಿಸಿಕೊಂಡು ಸುದ್ದಿ ಮಾಡಿದ್ದವು. ಕೆಲವು ಟಿವಿ ಚಾನೆಲ್ ಗಳಂತೂ ರಮ್ಯಾಗೆ ಪಾಕ್ ನಲ್ಲಿ ಸ್ವರ್ಗ ತೋರಿಸಿದವರು ಯಾರು ? ಎಂದು ಕೀಳಾಗಿ ಪ್ರಶ್ನಿಸಿದ್ರು. ರಮ್ಯಾ ಜಾತಿಯಲ್ಲಿ ಒಕ್ಕಲಿಗರಾದರೂ ಆಕೆ ಮಹಿಳೆ ಎಂಬ ಕಾರಣಕ್ಕೆ ಹೀಗೆ ಬೆನ್ನುಬಿದ್ದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಮಹಿಳೆಯೊಬ್ಬಳು ಇಷ್ಟು ನಿಷ್ಠುರವಾಗಿ ಮಾತಾಡುವುದನ್ನು ಒಂದು ವೇಳೆ ಸಮಾಜ ಸಹಿಸಿದ್ರೂ ಕನ್ನಡ ಮಾಧ್ಯಮಗಳು ಸಹಿಸುವಷ್ಟು ಪ್ರಬುದ್ದತೆಯನ್ನು ಬೆಳೆಸಿಕೊಂಡಿಲ್ಲ.

ಅದಿರಲಿ, ರಮ್ಯಾ ಇದೇ ಹೇಳಿಕೆ ಕೊಡುವಾಗ ರಮ್ಯಾ ಬಳಿ ಹೈ ಬಜೆಟ್ಟಿನ ಸಿನೀಮಾ ಒಂದಿದ್ದರೆ ಮಾದ್ಯಮಗಳ ವರ್ತನೆ ಹೇಗಿರುತ್ತಿತ್ತು? ಆ ಸಿನೇಮಾ ಪ್ರಮೋಶನ್ ಗುತ್ತಿಗೆ ಪಡೆದುಕೊಂಡವನ ಹಣ ದಿಕ್ಕರಿಸಿ ರಾಷ್ಟ್ರಪ್ರೇಮ ಮೆರೆಯುತ್ತಿದ್ದವಾ ? ಖಂಡಿತ ಇಲ್ಲ. ದರ್ಶನ್ ತನ್ನ ಹೆಂಡತಿಗೆ ಹೊಡೆದಾಗ ಎಕ್ಸ್ ಕ್ಲೂಸಿವ್ ನ್ಯೂಸ್ ಹಾಕುತ್ತಿದ್ದ ಚಾನೆಲ್ ಗಳು ನಿರ್ಮಾಪಕ ಕಡೆಯಿಂದ ಫೋನ್ ಬಂದ ತಕ್ಷಣ ಮೌನ ವಹಿಸಿದ ಉದಾಹರಣೆ ನಮ್ಮ ಮುಂದಿದೆ. ಶಾರುಕ್ ಖಾನ್ ಅಸಹಿಷ್ಣುತೆ ವಿವಾದವು ತಾರಕಕ್ಕೇರಲು ಮಾದ್ಯಮಗಳನ್ನು ಜಾಹೀರಾತು ಕಂಪನಿಗಳು, ಸಿನೇಮಾ ಪ್ರಮೋಶನ್ ಕಂಪನಿಗಳು ಬಿಡಲಿಲ್ಲ. ಕೈಯ್ಯಲ್ಲಿ ಜಾಹೀರಾತು ಇಲ್ಲದ, ಸಿನೇಮಾ ಇಲ್ಲದ ಶಾರೂಕ್ ಖಾನ್ ಅಸಹಿಷ್ಣುತೆಯ ಹೇಳಿಕೆ ನೀಡಿದ್ದರೆ ಮಾದ್ಯಮಗಳು ಆತನನ್ನು ಗಡಿಪಾರು ಮಾಡದೆ ಬಿಡುತ್ತಿರಲಿಲ್ಲವೇನೋ?

ಈಗ ಪ್ರಕಾಶ ರೈ ರಾಮಾಯಣದ ಮೂಲ ವಿಚಾರಕ್ಕೆ ಬರೋಣಾ. ಇದೊಳ್ಳೆ ರಾಮಾಯಣ ಎಂಬ ಚಿತ್ರದ ಪ್ರಮೋಶನ್ ಕಂಪನಿ ಆಹ್ವಾನದ ಮೇರೆಗೆ ಹೆಚ್ಚಿನ ಎಲ್ಲಾ ಚಾನೆಲ್ ಗಳು ಪ್ರಕಾಶ್ ರೈ ಸಂದರ್ಶನ ಮಾಡಿದ್ದವು. ಪ್ರಮೋಶನ್ ಕಂಪನಿಯಿಂದ ಚಾನೆಲ್ ಗಳಿಗೆ ಸಲ್ಲಿಕೆಯಾಗಿರೋ ಹಣಕ್ಕನುಗುಣವಾಗಿ ಅರ್ಧ ಗಂಟೆ, ಒಂದು ಗಂಟೆ ವಿಶೇಷ ಕಾರ್ಯಕ್ರಮ, ಸಂದರ್ಶನ ನಡೆಸುತ್ತಿದ್ದವು. ನಿಜ ಹೇಳಬೇಕೆಂದರೆ, ಲೋಗೋ ಬಳಸದೆ ಲ್ಯಾಪಲ್ ಹಾಕಿ ಇಂಟರ್ ವ್ಯೂ ಮಾಡುವುದರಿಂದ ಪ್ರಕಾಶ್ ರೈಗೆ ಯಾವ ಚಾನೆಲ್ ಗೆ ಸಂದರ್ಶನ ಕೊಡುತ್ತಿದ್ದೇನೆ ಎಂಬ ಅರಿವೂ ಇರುವುದಿಲ್ಲ!

ಜನಶ್ರಿ ಚಾನೆಲ್ ಅ್ಯಂಕರ್ ಕೇಳಬಾರದ್ದೇನೂ ಕೇಳಿರಲಿಲ್ಲ. ಇದೊಳ್ಳೆ ರಾಮಾಯಣ ಎಂಬ ಟೈಟಲ್ ನಂತೆಯೇ ಕಾವೇರಿ ಸಮಸ್ಯೆ ಇದೊಳ್ಳೆ ರಾಮಾಯಣ ಆಗಿದೆ.kannada-news-channels ಕಾವೇರಿ ಜಲವಿವಾದ ಕುರಿತು ನಿಮ್ಮ ಅಭಿಪ್ರಾಯ ಏನು? ಎಂದು ಕೇಳಿದ್ರು. ತನ್ನ ಸಿನೇಮಾದ ಬಗೆಗಿನ ಪೇಯ್ಡ್ ಕಾರ್ಯಕ್ರಮದಲ್ಲಿ ಈ ಅಂಶ ಬೇಡ ಎಂದರೆ ಅದನ್ನು ಸಂಸ್ಥೆಗೆ ಮನವಿ ಮಾಡಿದರಾಯ್ತು. ಕಾವೇರಿ ವಿಚಾರವಾಗಿ ಕನ್ನಡದ ನಟ ನಟಿಯರು ಬೀದಿಗಿಳಿದಿದ್ದ ಮಾಹಿತಿ ಹೊಂದಿದ್ದ ಅ್ಯಂಕರ್ ಅಮಾಯಕರಾಗಿ ಈ ಪ್ರಶ್ನೆ ಕೇಳಿದ್ದಿರಬಹುದು. ಪ್ರಶ್ನೆ ಬೇಡ ಎಂದರೆ ಅದನ್ನಷ್ಟೇ ಕಟ್ ಮಾಡಿ ಮುಂದಿನ ಪ್ರಶ್ನೆಗೆ ಹೋಗಬಹುದಿತ್ತು. ಆದರೆ ಪ್ರಕಾಶ್ ರೈ ಹಾಗೆ ಮಾಡಲಿಲ್ಲ. ಲ್ಯಾಪಲ್ ಮೈಕ್ ಕಿತ್ತೆಸೆದು “ಏನ್ರೀ, ನಿಮಗೆ ಕಾಂಟ್ರವರ್ಸಿ ಬೇಕಾ? ನಿಮ್ಮ ಬಗೆಗಿನ ಕಾಂಟ್ರವರ್ಸಿ ಹೇಳಬೇಕಾ” ಎಂದು ಸಿನೇಮಾ ವಾಯ್ಸ್ ತಂದುಕೊಂಡು ಬೊಬ್ಬೆ ಹಾಕಿದ್ರು. ಉದ್ದೇಶಪೂರ್ವಕವಾಗಿ ಕೇಳಿಲ್ಲ ಸರ್ ಎಂದು ಅ್ಯಂಕರ್ ಪದೇ ಪದೇ ಹೇಳಿದ್ರೂ ಕೇಳದಿದ್ದಾಗ ಕೊನೆಗೆ ಜವಾಬ್ದಾರಿಯುತ ವ್ಯಕ್ತಿ ಬಳಿ ಕೇಳಿದ್ದೀನಿ ಅಷ್ಟೆ ಅಂದುಕೊಂಡು ಅ್ಯಂಕರ್ ಹೊರನಡೆದ್ರು.

ಈ ವಿಡಿಯೋ ವೈರಲ್ ಆದ್ರೂ ಜನಶ್ರೀ ಹೊರತುಪಡಿಸಿ ಬೇರಾವ ಮಾಧ್ಯಮಗಳು ಇದನ್ನೆತ್ತಿಕೊಂಡು ಸುದ್ದಿ ಮಾಡಿಲ್ಲ. ಕಾರಣ, ಎಲ್ಲಾ ಮಾಧ್ಯಮಗಳಿಗೆ ಇದೊಳ್ಳೆ ರಾಮಾಯಣ ಚಿತ್ರದ ಪ್ರಮೋಶನ್ ಗೆ ಹಣ ಸಂದಾಯ ಆಗಿರುತ್ತದೆ.

ಹೀಗೆ ಜಾತಿ, ಧರ್ಮದ ಕಾರಣವನ್ನೇ ಟಿ ಆರ್ ಪಿ ಯನ್ನಾಗಿಸಿ ಸಿನೇಮಾ ಮಂದಿಯ ಬೆನ್ನು ಬೀಳುವ ಮಾಧ್ಯಮದ ಮಂದಿ ಹಣದ ವಿಷಯ ಬಂದಾಗ ತಮ್ಮ ಹುಸಿ ರಾಷ್ಟ್ರಪ್ರೇಮ, ನಾಡಪ್ರೇಮಕ್ಕೆ ಬೆನ್ನು ತಿರುಗಿಸುತ್ತಾರೆ. ಜಾತಿ, ಧರ್ಮ, ಲಿಂಗ ತಾರತಮ್ಯದ ತನ್ನದೇ ಮನಸ್ಥಿತಿಯನ್ನು ಹಣ ಸಂಪಾದಿಸುವ ಸರಕನ್ನಾಗಿ ಪರಿವರ್ತಿಸುವ ಕಲೆ ಗೊತ್ತಿರೋದು ಬಹುಷಃ ಪತ್ರಕರ್ತರಿಗೆ ಮಾತ್ರವೆಂದು ಕಾಣುತ್ತದೆ.

6 comments

  1. ಇಲ್ಲಿ ಪ್ರಕಾಶ್ ರೈ ಅಂತಹ ತಪ್ಪನ್ನೇನೂ ಮಾಡಿರಲಿಲ್ಲ. ಅವರಿಗೆ ಕೇಳಿದ ಪ್ರಶ್ನೆಯೇ ಅನಗತ್ಯವಾಗಿತ್ತು ಎಂದೆನಿಸುತ್ತಿದೆ. ಇದೊಂದು ಸೂಕ್ಷ್ಮ ವಿಚಾರವೆಂದು ಮೊದಲಿಗೆ ಮೃದುವಾಗಿಯೇ ವಿನಂತಿಸಿಕೊಂಡ ರೈ ಆನಂತರ ಸ್ವಲ್ಪ ಗರಂ ಆದರು. ಕನ್ನಡ ಹಾಗೂ ತಮಿಳು ಎರಡೂ ಭಾಷೆಯಲ್ಲಿ ಗಣನೀಯ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಪ್ರಕಾಶ್‌‌ರಂತಹ ನಟ ಕಾವೇರಿ ವಿವಾದದಂತಹ ಸೂಕ್ಷ್ಮ ವಿಚಾರದಲ್ಲಿ ಸಹಜವಾಗಿಯೇ ಜಾಗ್ರತೆಯಿಂದ ಮಾತನಾಡಬೇಕಾಗುತ್ತದೆ. ಸಂದರ್ಶಕರ ಪ್ರಶ್ನೆಗೆ ಕೊಡುವ ಉತ್ತರದಲ್ಲಿ ಸ್ವಲ್ಪ ಎಡವಟ್ಟಾದರೂ ಅಲ್ಲೊಂದು ವಿವಾದ ಹುಟ್ಟಿಕೊಳ್ಳುವ ಸಾಧ್ಯತೆ ಇದ್ದೇ ಇತ್ತು. ಇತರ ವಿಚಾರಗಳು ಏನೇ ಇರಲಿ ನಟನೆಯ ಹಾಗೂ ಮಾಧ್ಯಮಗಳೊಂದಿಗೆ ಮಾತಾಡುವ ವಿಚಾರದಲ್ಲಿ ಪ್ರಕಾಶ್ ರೈ ಸಾಕಷ್ಟು ಪ್ರಬುದ್ಧತೆಯನ್ನು ಹೊಂದಿದ್ದಾರೆ. ಇಲ್ಲಿ ಯಾಕೋ ಇಂತಹ ಪ್ರಬುದ್ಧತೆ ಸಂದರ್ಶಕಿಯಲ್ಲಿ ಇದ್ದಂತೆ ಕಂಡು ಬರಲಿಲ್ಲ. ಬದಲಾಗಿ ಟಿ‌ಆರ್‌ಪಿ ಹೆಚ್ಚಿಸುವ ತಂತ್ರದಂತೆ ನಮಗೆ ಕಾಣಿಸಿತ್ತು. ಜನಸಾಮಾನ್ಯರಾರೂ ಈ ವಿಚಾರದಲ್ಲಿ ಜನಶ್ರೀ ವಾರ್ತಾವಾಹಿನಿಯನ್ನು ಬೆಂಬಲಿಸುತ್ತಿಲ್ಲ. ಬದಲಾಗಿ ಉಗಿಯುತ್ತಿದ್ದಾರೆ. ವಾಹಿನಿಯ ಫೇಸ್‌ಬುಕ್‌ ಪುಟವನ್ನು ಗಮನಿಸಿದರೆ ಈ ವಿಚಾರ ತಿಳಿಯುತ್ತದೆ.

  2. ದಿನಾ ಪೂರ್ತಿ ಸುದ್ದಿಯನ್ನು ಕೊಡುವುದು(ಹೊಂಚುವುದು)ಕಷ್ಟ ಅದರೆ ಸುಮ್ಮನಿರಬೇಕು ಅದು ಬಿಟ್ಟು .ಸುದ್ದಿಗಾಗಿ ಕೆದಕಿ,ಕೆಣಕಿ ವಿಷ್ಯಾಂತರಮಾಡಬೇಕಾ

  3. Correct Prakash rai is correct. He is a multi language actor. You should not ask such a question to him. The issue can not be decided by an actor. He has achieved a lot in his field and has brought good name to our state. Dirty media….

  4. ಮಾಧ್ಯಮದವರಿಗೆ ಪ್ರೆಸ್ಟೀಟ್ಯೂಡ ಅಂತ ಸುಮ್ಮನೆ ಬಿರುದು ಕೊಟ್ಟದ್ದಲ್ಲ ಅದು ಅವರೇ ಪಡೆದದ್ದು.

  5. ಕೃಷ್ಣರಾಜಸಾಗರ ಆಣೆಕಟ್ಟು ಕಟ್ಟುವಾಗಲಿಂದ ಹಿಡಿದು ಇಲ್ಲಿಯತನಕ ನೂರು ವರ್ಷಗಳಿಗೂ ಮೀರಿ ಕಾವೇರಿ ನದಿ ನೀರಿನ ಹಂಚಿಕೆ ಮತ್ತಿತರ ವಿಷಯಗಳ ಗಲಾಟೆ ತಮಿಳುನಾಡು(ಅಂದಿನ ಮದ್ರಾಸ್ ರಾಜ್ಯ) ಮತ್ತು ನಮ್ಮ ನಡುವೆ ಇದೆ. ಶಾಸಕಾಂಗ,ನ್ಯಾಯಾಂಗ,ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ ಹೀಗೆ ಅನೇಕ ವಿಷಯಗಳು ಹೆಣೆದುಕೊಂಡಿರುವ ಒಂದು ಸಮಸ್ಯೆ ಸಿನಿಮಾನಟರ , ಬುದ್ಧಿಜೀವಿಗಳ,ಸಾಹಿತಿಗಳ ಮೆರವಣಿಗೆ,ಅಬ್ಬರದ,ಆಕ್ರೋಶದ ಒಂದು ಹೇಳಿಕೆಯಿಂದ ಬಗೆ ಹರಿಯುತ್ತವೆ ಎಂಬುದೇ ಹಾಸ್ಯಾಸ್ಪದ ಸಂಗತಿ. ಕೆಲವು ಪ್ರಚಾರಪ್ರಿಯ ಸಾಹಿತಿಗಳು ಗೋಕಾಕ್ ಚಳುವಳಿಯ ಉದಾಹರಣೆ ಕೊಟ್ಟು ಈಗಲೂ ಹಾಗೆ ಮಾಡಿದರೆ ರಾತ್ರಿ ಕಳೆದು ಬೆಳಗಾಗುವುದರವೊಳಗೆ ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂಬ ಹೇಳಿಕೆಕೊಡುತ್ತಿದ್ದಾರೆ. ಆದರೆ ಗೋಕಾಕ್ ವರದಿಯ ಅನುಷ್ಠಾನ ಕಟ್ಟುನಿಟ್ಟಾಗಿ ಜಾರಿಯಾಗಿದೆಯೇ? ಇತ್ತೀಚಿಗೆ ತಾನೇ ಸುಪ್ರೀಂ ಕೋರ್ಟಿನಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದು ತಪ್ಪು ಎಂದು ಹೇಳಿ ‘ಮಾತೃ ಭಾಷೆ’ಗೆ ನಮ್ಮ ಸಂವಿಧಾನದ ಪ್ರಕಾರ ಬೇರೆ ವ್ಯಾಖ್ಯಾನ ನೀಡಿದೆ. ಖಾಸಗಿ ಶಾಲೆಗಳ ಒಕ್ಕೂಟದ ವಾದಕ್ಕೆ ಜಯ ಸಿಕ್ಕಿದೆ. ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಖಾಲಿ ಹೊಡೆಯುತ್ತಿವೆ;ಮುಚ್ಚುತ್ತಿವೆ;ಅಥವಾ ಮೂರ್ನಾಲಕ್ಕು ಶಾಲೆಗಳನ್ನು ಒಟ್ಟುಗೂಡಿಸಿ ಹಾಗೂ ಹೀಗೂ ಉಸಿರಾಡುವಂತೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಕೊಡಬೇಕು ಎಂಬ ಮಹಿಷಿ ವರದಿಯ ಜಾರಿಯೂ ಪೂರ್ಣಪ್ರಮಾಣದಲ್ಲಿ ಜಾರಿಯಾಗಲು ಸಂವಿಧಾನ, ನ್ಯಾಯಾಂಗದ ವಿಧಿಗಳ ಪ್ರಕಾರ ಆಗುತ್ತಿಲ್ಲ. ಇದೇನು ನಮ್ಮನ್ನಾಳುತ್ತಿರುವ, ಆಳಿದ ಸರ್ಕಾರಗಳ ‘ರಾಜಕೀಯ ಇಚ್ಚಾಶಕ್ತಿ’ಯ ಕೊರತೆಯೋ ಅಥವಾ ಆ ವರದಿಗಳಲ್ಲಿನ ಕೊರತೆಯೋ ತಿಳಿಯದಾಗಿದೆ.
    ೨. ಇನ್ನು ಪ್ರಕಾಶ್ ರೈ ಅವರ ವಿಚಾರ- ರೈ ಅವರಂತಹವರನ್ನು ಕನ್ನಡ ಚಿತ್ರರಂಗದ ಅತಿರಥ ಮಹಾರಥರಂತಹ ನಿರ್ಮಾಪಕರು,ನಿರ್ದೇಶಕರು ಕಡೆಗಣಿಸಿದಾಗ ಅವರಿಗೆ ನೆಲೆ ಕೊಟ್ಟಿದ್ದು ತಮಿಳು ಮತ್ತು ತೆಲುಗು ಚಿತ್ರರಂಗ. ಅಲ್ಲಿ ಹೆಸರು ಮಾಡಿದ ಮೇಲೆ ಕನ್ನಡದಲ್ಲಿ ನಟನೆ ಜತೆಗೆ ಸಿನಿಮಾ ನಿರ್ಮಾಣ,ನಿರ್ದೇಶನಕ್ಕೆ ಬಂದರು. ಮಚ್ಚು,ಲಾಂಗು, ರಕ್ತದ ಕೋಡಿ ಹರಿಸುವ ಕನ್ನಡ ಚಿತ್ರಗಳ ಸಂತೆಯಲ್ಲಿ ಸದಭಿರುಚಿಯ ಉತ್ತಮ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅವರು ಕರ್ನಾಟಕದವರು ಎಂದ ಮಾತ್ರಕ್ಕೆ ಕಾವೇರಿ ಬಗ್ಗೆ ಪ್ರಶ್ನೆ ಕೇಳುವಾಗ ಆ ವಾಹಿನಿಯ ಪತ್ರಕರ್ತೆಗೆ ರೈ ಅವರ ಈ ಹಿನ್ನೆಲೆ ಗೊತ್ತಿರಬೇಕಿತ್ತು. ಆಕೆಗೆ ಗೊತ್ತಿಲ್ಲ, ಏನೋ ಆಯಿತು ಎಂದು ಆ ವಾಹಿನಿಯ ಸಂಪಾದಕರಿಗೆ ಅವಶ್ಯವಾಗಿ ಗೊತ್ತಿರಬೇಕು; ಗೊತ್ತಿದೆ. ಆದರೆ ತಮ್ಮ’ego’ ನ ಪ್ರದರ್ಶನಕ್ಕಾಗಿ ಪ್ಯಾನೆಲ್ ಚರ್ಚೆ ಮಾಡಿ ರೈ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಅವಶ್ಯಕತೆ ಇರಲಿಲ್ಲ.
    ೩. ಬಿ ಸಿ ಸಿ ಐ ನಂತಹ ಅತಿ ದೊಡ್ಡ ಸಂಸ್ಥೆಯೇ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಸಮಸ್ಯೆಯಿಂದ ಪಾಕ್ ಜೊತೆ ಪಾಕ್ ನೆಲದಲ್ಲಿ ಕ್ರಿಕೆಟ್ ಆಡುವುದನ್ನು ಬಿಟ್ಟು ಸುಮಾರು ವರ್ಷಗಳಾಯಿತು. ತಟಸ್ಥ ದೇಶದಲ್ಲಿ ಕ್ರಿಕೆಟ್ ಆಡುತ್ತಿದೆ. ಅಂತಹುದರಲ್ಲಿ ಮಾಜಿ ಸಂಸದೆಯೂ ಆಗಿರುವ ರಮ್ಯಾ ಅವರು ಆ ರೀತಿ ಹೇಳಿಕೆ ಕೊಡುವ ಅಗತ್ಯವಿತ್ತೆ ?.ವಿವಾದವೆದ್ದ ನಂತರ ನಾನು ಹಾಗೆ ಹೇಳಿರಲಿಲ್ಲ; ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದರು. ಆಡಿಯೋ,ವೀಡಿಯೋ ಇರುವಾಗ ಆ ರೀತಿ ಹೇಳಿದರೆ ಯಾರಾದರೂ ನಂಬುತ್ತಾರೆಯೇ? ವಾಹಿನಿಗಳು ಸಿಕ್ಕಿದೇ ಚಾನ್ಸ್ ಎಂದು ಎರಡು ಮೂರು ದಿನ ಆ ಸುದ್ದಿಯನ್ನು ಬಿತ್ತರಿಸಿದವು. ಎರಡು ದೇಶಗಳ ನಡುವೆ ಕೆಲವಾರು ಕಾರಣಗಳಿಂದ ರಾಜಕೀಯ ಪರಿಸ್ಥಿತಿ ಹದಗೆಟ್ಟ ಮಾತ್ರಕ್ಕೆ ಒಂದು ದೇಶ ನರಕ ಮತ್ತೊಂದು ಸ್ವರ್ಗ ಅಲ್ಲ. ಅಲ್ಲಿಯ ಜನಗಳೂ ನಮ್ಮಂತಹವರೇ. ಯಾರು ಅಲ್ಲವೆನ್ನುತ್ತಾರೆ? ಆದರೆ ಮಾತಾಡುವಾಗ ನಮಗೆ ಎಚ್ಚರ ಇರಬೇಕು. ರಮ್ಯಾ ಪ್ರಕರಣ ಮರೆತುಹೋದಂತೆ,ರೈ ಪ್ರಕರಣವೂ ಕಾಲ ಸರಿದಂತೆ ಮರೆಯುತ್ತದೆ.

  6. (ಈ ವಿಡಿಯೋ ವೈರಲ್ ಆದ್ರೂ ಜನಶ್ರೀ ಹೊರತುಪಡಿಸಿ ಬೇರಾವ ಮಾಧ್ಯಮಗಳು ಇದನ್ನೆತ್ತಿಕೊಂಡು ಸುದ್ದಿ ಮಾಡಿಲ್ಲ. ಕಾರಣ, ಎಲ್ಲಾ ಮಾಧ್ಯಮಗಳಿಗೆ ಇದೊಳ್ಳೆ ರಾಮಾಯಣ ಚಿತ್ರದ ಪ್ರಮೋಶನ್ ಹಣ ಸಂದಾಯ ಆಗಿರುತ್ತದೆ)- ಸರಿ ನವೀನ್ ಸೂರಿಂಜೆಯವರೇ ಆದರೆ ಪ್ರಕಾಶ್ ರೈ ಅವರಿಗೆ ಈ ಪ್ರಶ್ನೆ ಕೇಳುವ ಮೂಲಕ ತನ್ನ ಟಿಆರ್‌ಪಿಯನ್ನು ಹೆಚ್ಚಿಸುವ ಉದ್ದೇಶವೂ ಈ ಚಾನೆಲ್‌ಗೆ ಇದ್ದಿರಬಹುದೆಂಬ ಸಣ್ಣ ಸಂಶಯವೂ ಯಾಕೆ ನಿಮ್ಮತ್ರ ಸುಳಿಯಲಿಲ್ಲ ? ನಿಮ್ಮ ಆಲೋಚನಾ ಲಹರಿ ಹೀಗ್ಯಾಕೆ? ಬರೆಯುವ ಮೊದಲು ನೀವು ಎಲ್ಲಾ ಕಡೆಯಿಂದಲೂ ಯೋಚಿಸುವ ಪ್ರಯತ್ನ ಮಾಡಿ.

Leave a Reply

Your email address will not be published.