Author Archives: Aniketana

ಕಬೀರ್ ಸಾವು ಮತ್ತು ಪ್ರಗತಿಪರರ ಮಾರ್ಗದರ್ಶನದ ಸರಕಾರ

Naveen Soorinje


– ನವೀನ್ ಸೂರಿಂಜೆ


 

ದನ ಸಾಗಾಟ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ನಕ್ಸಲ್ ನೆಪದಲ್ಲಿ ಪೊಲೀಸರು ಅಮಾಯಕ ಮುಸ್ಲಿಂ ಯುವಕನನ್ನು ಚಿಕ್ಕಮಗಳೂರಿನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಭಜರಂಗದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಂತೆ ಈ ಘಟನೆ ಕಂಡು ಬರುತ್ತಿದ್ದು ಸಮಗ್ರ ತನಿಖೆಯಾಗಬೇಕಿದೆ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಭಜರಂಗದಳದ ಕೆಲಸವನ್ನು ಪೊಲೀಸರೇ ನಿರ್ವಹಿಸುತ್ತಿದ್ದು,  ಈ ರೀತಿಯ ಹಲವಾರು ಘಟನೆಗಳ ಕುರಿತಂತೆ ಅಮೂಲಾಗ್ರವಾದ ತನಿಖೆ ಆಗಬೇಕಿದೆ. ಆದರೆ ತನಿಖೆ ನಡೆಸಲು ಆಗ್ರಹಿಸಬೇಕಾದ ನಮ್ಮ ”ಸಾಕ್ಷಿ ಪ್ರಜ್ಞೆ”ಗಳು ಕಾಂಗ್ರೆಸ್ ಸರಕಾರಕ್ಕೆ ಬಹುಪರಾಕ್ ಕೂಗುವಲ್ಲಿ ನಿರತವಾಗಿವೆ.

ದನವನ್ನು ಅಧಿಕೃತವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆಗಟ್ಟಿದ ಹಿಂದುತ್ವವಾದಿ ಪೊಲೀಸರು ಕಬೀರ್ ನನ್ನು ಕೊಲೆ ಕಬೀರ್ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಗುಂಡೇಟಿಗೆ ಒಳಗಾಗಿ ಕೊಲೆಯಾದ ಕಬೀರ್ ನ ಕುಟುಂಬ ವಂಶಪರಂಪರ್ಯವಾಗಿ ದನದ ವ್ಯಾಪಾರವನ್ನು ನಡೆಸುತ್ತಿದೆ. ಇವರ ಮೇಲೆ ಈವರೆಗೆ ದನ ಕಳ್ಳತನದ ಆರೋಪವಿಲ್ಲ. ಮೂಲತಃ  ಜೋಕಟ್ಟೆಯ ಕಬೀರ್ ಕುಟುಂಬ ಇತ್ತೀಚೆಗಷ್ಟೇ ಸುರತ್ಕಲ್ ಸಮೀಪದ ಕೃಷ್ಣಾಪುರಕ್ಕೆ ತಮ್ಮ ನಿವಾಸವನ್ನು ಸ್ಥಳಾಂತರಿಸಿತ್ತು. ಅಧಿಕೃತ ದನದ ವ್ಯಾಪಾರವನ್ನು ಮಾಡುತ್ತಿದ್ದ ಕಬೀರ್ ಚುನಾವಣೆಯ ನೀತಿ ಸಂಹಿತೆ ಘೋಷಣೆಯ ನಂತರ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಅಧಿಕೃತ ದನದ ವ್ಯಾಪಾರವಾದರೂ ಕೂಡಾ ಅಲ್ಲಲ್ಲಿ ಚೆಕ್ಕಿಂಗ್ ಮಾಡುವ ಪೊಲೀಸರಿಗೆ ಮಾಮೂಲು ಕೊಟ್ಟು ಲಾಭವೇನೂ ಉಳಿಯುವುದಿಲ್ಲ ಎಂಬ ಕಾರಣಕ್ಕೆ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ನಿನ್ನೆ ಸಂಜೆಯವರೆಗೂ ಕೃಷ್ಣಾಪುರದಲ್ಲಿ ಕ್ರಿಕೆಟ್ ಆಡಿಕೊಂಡಿದ್ದ ಕಬೀರ್ ನಿನ್ನೆ ರಾತ್ರಿ ವ್ಯಾಪಾರಕ್ಕೆ ತೆರಳಿದ್ದ.

ತೀರ್ಥಹಳ್ಳಿಯಲ್ಲಿ ದನ ಖರೀದಿ ಮಾಡಿ, ಅಲ್ಲಿಂದ ಶ್ರಂಗೇರಿಗೆ ಬಂದ ಕಬೀರ್ ಇದ್ದಂತಹ ವ್ಯಾಪಾರಿ ತಂಡ ಶ್ರಂಗೇರಿಯಲ್ಲೂ ದನ ಖರೀದಿ ಮಾಡಿದೆ. ತೀರ್ಥ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಮಾಮೂಲು ನೀಡಿ ಚೀಟಿಯೊಂದನ್ನು ತೋರಿಸಿ ಶ್ರಂಗೇರಿಗೆ ಬಂದಿದ್ದಾರೆ. ಶ್ರಂಗೇರಿಯಲ್ಲೂ ಪೊಲೀಸರಿಗೆ ಮಾಮೂಲು ನೀಡಿ ಖರೀದಿಯ ಚೀಟಿ ತೋರಿಸಿ ಕಾರ್ಕಳ ಮಾರ್ಗವಾಗಿ ಬರುತ್ತಿದ್ದರು. ಆ ಸಂಧರ್ಭದಲ್ಲಿ ಮಾರ್ಗ ಮಧ್ಯೆ ಎಎನ್ಎಫ್ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸಿದ ಕಬೀರ್ ತಂಡ ಎಎನ್ಎಫ್ ಪೊಲೀಸರಿಗೆ ಮಾಮೂಲು ನೀಡಲು ಇಳಿದಿದ್ದಾರೆ. ವಾಹನದಲ್ಲಿ ದನ ಇರುವುದನ್ನು ಗುರುತಿಸಿದ ಪೊಲೀಸನೊಬ್ಬ ಹಿಂಬದಿಯಲ್ಲಿ ಕುಳಿತಿದ್ದ ಕಬೀರನನ್ನು ಇಳಿಯುವಂತೆ ಸೂಚಿಸಿದ್ದಾನೆ. ಕಬೀರ ವಾಹನದಿಂದ ಇಳಿದ ತಕ್ಷಣ ಗುಂಡಿನ ಶಬ್ದ ಕೇಳಿದೆ. ಗುಂಡಿನ ಶಬ್ದ ಕೇಳಿ ಮೂವರು ಪರಾರಿಯಾಗಿದ್ದಾರೆ. ಒಬ್ಬ ಪೊಲೀಸ್ ವಶವಾಗಿದ್ದಾನೆ. ಕಬೀರ ಶವವಾಗಿದ್ದಾನೆ

ಭಜರಂಗದಳ-ಪೊಲೀಸ್ ಜಂಟಿ ಕಾರ್ಯಾಚರಣೆ ?

ಈ ಗುಂಡು ಹಾರಾಟ ಮತ್ತು ಕಬೀರ್ ಸಾವಿನ ಹಿಂದೆ ಹಿಂದುತ್ವವಾದಿ ಸಂಘಟನೆಗಳು ಮತ್ತು ಪೊಲೀಸರ ನಂಟಿನ ವಾಸನೆ ಬರುತ್ತಿದೆ. 10246275_688721334522490_5291328350701068876_nಎಎನ್ಎಫ್ ಸಿಬ್ಬಂದಿಗಳು ವಾಹನ ನಿಲ್ಲಿಸಲು ಹೇಳಿದಾಗ ವಾಹನ ನಿಲ್ಲಿಸಿಲ್ಲ ಎಂಬ ವಾದ ಪೊಲೀಸರದ್ದು. ಮೂವರು ತಪ್ಪಿಸಿಕೊಂಡಿದ್ದು ವಾಹನ ನಿಲ್ಲಿಸಿದ್ದರಿಂದಲೇ ಸಾಧ್ಯವಾಗಿದೆ. ವಾಹನ ನಿಂತ ನಂತರವೂ ಗುಂಡು ಹಾರಿಸುವ ಅಗತ್ಯ ಇರಲಿಲ್ಲ. ಪರಾರಿಯಾಗುತ್ತಿದ್ದ ಆರೋಪಿಗಳ ಬಳಿ ಬಂದೂಕುಗಳು ಕಂಡು ಬಂದಲ್ಲಿ ಗುಂಡು ಹಾರಿಸಿದ್ದನ್ನು ಸಮರ್ಥಿಸಬಹುದಿತ್ತು. ಆದರೆ ಇಂತಹ ಯಾವ ಸಮರ್ಥನೆಗಳಿಗೂ ಇಲ್ಲಿ ಅವಕಾಶವಿಲ್ಲ. ಪೊಲೀಸರು ತಪ್ಪು ಕಲ್ಪನೆಗೆ ಒಳಗಾಗಿ ಶೂಟ್ ಮಾಡಿದರು ಎಂದಿಟ್ಟುಕೊಂಡರೂ ನಂತರ ನಡೆದ ವಿದ್ಯಾಮಾನಗಳು ತೀರಾ ಅಮಾನವೀಯವಾದುದ್ದು.

ಮಾಡದ ತಪ್ಪಿಗೆ ಸಾವನ್ನಪ್ಪಿದ ಹರೆಯದ ಯುವಕ ಕಬೀರ್ ನ ಸಾವಿನಿಂದ ಕಂಗಟ್ಟ ಕುಟುಂಬಕ್ಕೆ ಅವನ ಶವವನ್ನು ಕೊಂಡೊಯ್ಯಲು ಭರಂಗದಳದವರು ಅಡ್ಡಿಪಡಿಸಿದರು. ಕನಿಷ್ಠ ಶವ ಕೊಂಡೊಯ್ಯಲು ಬಂದ ದುಃಖತಪ್ತ ಕಟುಂಬದವರು ಎನ್ನುವ ಕನಿಕರವೂ ಇಲ್ಲದೆ ಶ್ರಂಗೇರಿ ಶವಾಗಾರದಲ್ಲಿರುವ ಶವವನ್ನು ಕೊಂಡೊಯ್ಯಲು ಮಂಗಳೂರಿನಿಂದ ಹೊರಟ ಹೆತ್ತವರ ವಾಹನವನ್ನು ಪುಡಿ ಮಾಡಲಾಯಿತು. ಇವೆಲ್ಲವನ್ನೂ ನೋಡಿದಾಗ ಭಜರಂಗದಳದ ಅಜೆಂಡಾದ ಭಾಗವಾಗಿಯೇ ಶೂಟೌಟ್ ನಡೆದಿರುವಂತೆ ಕಾಣುತ್ತಿದೆ.

ಹೆಚ್ಚುತ್ತಿರುವ ಮುಸ್ಲಿಂ-ದಲಿತ-ಮಹಿಳೆಯರ ಮೇಲಿನ ದಾಳಿ

ಕಾಂಗ್ರೆಸ್ ಸರಕಾರ ಬಂದ ನಂತರ ಮುಸ್ಲೀಮರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿಗಳು ಹೆಚ್ಚಾಗಿವೆ. ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ನಡೆದ ನೈತಿಕ ಪೊಲೀಸ್ ಗಿರಿಗಿಂತಲೂ ಅಧಿಕ ನೈತಿಕ ಪೊಲೀಸ್ ಗಿರಿಗಳು ಕಳೆದ ಒಂದು ವರ್ಷದಲ್ಲಿ ನಡೆದಿವೆ. ಅಲ್ಪಂಖ್ಯಾತರ ಮೇಲೆ ದಾಳಿಗಳು ನಡೆದಿವೆ. ಇಷ್ಟೆಲ್ಲಾ ಆದರೂ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ದನಿಯೆತ್ತುತ್ತಿಲ್ಲ. ಕೇಳಿದರೆ “ಕಾನೂನು ಅದರ ಕ್ರಮ ಕೈಗೊಳ್ಳುತ್ತದೆ. ನಾವು ಅದರಲ್ಲಿ ಕೈ ಹಾಕುವುದಿಲ್ಲ” ಎನ್ನುತ್ತಾರೆ. ಈ ಮಾತು ಕೇಳಲು ಅಂದವಾಗಿದ್ದರೂ ಅಮಾನವೀಯವಾಗಿದೆ. ಈ ರೀತಿಯ ದೌರ್ಜನ್ಯ ಮತ್ತು ಸಂವೇದನಾ ರಹಿತ ಜನಪ್ರತಿನಿಧಿಗಳನ್ನು ವಿರೋಧಿಸಿಯೇ ಜನರು ಕಾಂಗ್ರೆಸ್ ಗೆ ಮತ ಹಾಕಿದ್ದು ಎಂಬುದನ್ನು ಸರಕಾರ ಮರೆತಂತಿದೆ.

ಒಂದೆಡೆ ಹೆಚ್ಚುತ್ತಿರುವ ನೈತಿಕ ಪೊಲೀಸ್ ಗಿರಿ ಮತ್ತೊಂದೆಡೆ ಭಜರಂಗಿಗಳ ಕೆಲಸವನ್ನು ಮಾಡುತ್ತಿರುವ ಪೊಲೀಸರು. ಮಂಗಳೂರಿನ ಹಲವಾರು ಪ್ರಕರಣಗಳನ್ನು ಅವಲೋಕಿಸಿದಾಗ  ಇವರು ಪೊಲೀಸರೋ ಭಜರಂಗಿಗಳೋ ಎಂಬ ಅನುಮಾನ ಮೂಡುವಂತಿದೆ. ಜನವರಿ-ಫೆಬ್ರವರಿ- ಮಾರ್ಚ್ ಈ ಮೂರು ತಿಂಗಳಲ್ಲಿ 15ಕ್ಕೂ ಅಧಿಕ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕರಾವಳಿಯಲ್ಲಿ ದಾಖಲಾಗಿದೆ. ಇನ್ನು ಪೊಲೀಸರು ಪ್ರಕರಣ ದಾಖಲಿಸದೆ ಪ್ರೇಮಿಗಳಿಗೇ ಎಚ್ಚರಿಕೆ ಕೊಟ್ಟು, ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸಿದ ಉದಾಹರಣೆಗಳು ಅವೆಷ್ಟೋ ಇವೆ. ಇದಲ್ಲದೆ ನಿರಾತಂಕವಾಗಿ ನಡೆಯುತ್ತಿರುವ ದೇವದಾಸಿ ಪದ್ದತಿ, ಸಿಡಿ ಆಚರಣೆ, ದಲಿತ ದೌರ್ಜನ್ಯ ಪ್ರಕರಣಗಳು… ಇವೆಲ್ಲದರ ಮಧ್ಯೆ ಮುಸ್ಲೀಮರ ಮೇಲಿನ ದಾಳಿ.

ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದ ಸಂಧರ್ಭ ನಾನು ನೂರಾರು ನೈತಿಕ ಪೊಲೀಸ್ ಗಿರಿ, ಅಲ್ಪಸಂಖ್ಯಾತರ ಮೇಲಿನ ದಾಳಿ, ದಲಿತರ ಮೇಲಿನ ದಾಳಿಯನ್ನು ಸುದ್ದಿ ಮಾಡಿದ್ದೆ. artists-campainingಆ ಸಂಧರ್ಭದಲ್ಲಿ ಸುಮಾರು 45 ಜನ ಕೋಮುವಾದಿ ಕಾರ್ಯಕರ್ತರು ಮಂಗಳೂರು ಜೈಲಿನಲ್ಲಿದ್ದರು. ಕೆಲವರು ಒಂದು ವರ್ಷಕ್ಕಿಂತಲೂ ಅಧಿಕ ಜೈಲುವಾಸವನ್ನು ಅನುಭವಿಸಿದರು. ನೀವು ನಂಬಲೇ ಬೇಕು. ಈಗ ಇಷ್ಟೆಲ್ಲಾ ದಾಳಿಯಾಗುತ್ತಿದ್ದರೂ ಒಬ್ಬನೇ ಒಬ್ಬ ಕೋಮುವಾದಿ ಮಂಗಳೂರು ಜೈಲಿನಲ್ಲಿ ಇಲ್ಲ. ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ನಡೆಸಿದ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದ ಹಲವು ಕೋಮುವಾದಿಗಳ ಮೇಲೆ ಒಂದಕ್ಕಿಂತಹ ಅಧಿಕ ಕೊಲೆ ಪ್ರಕರಣಗಳಿವೆ. ಆದರೂ ಒಂದೋ ಬಂಧಿಸಿದ ಎರಡೇ ದಿನದಲ್ಲಿ ಜಾಮೀನು ದೊರೆಯುತ್ತದೆ. ಇಲ್ಲವೇ ಬಂಧನಕ್ಕೊಳಗಾಗುವ ಮೊದಲೇ ಜಾಮೀನು ದೊರೆಯುತ್ತದೆ. ಅಷ್ಟೊಂದು ಕಠಿಣ ಕ್ರಮಗಳನ್ನು ಕಾಂಗ್ರೆಸ್ ಸರಕಾರ ಕೈಗೊಂಡಿದೆ!!

”ಏನ್ ಸಾರ್ ನೀವು… ಆಡಳಿತಗಾರರ ಜೊತೆ ಸೇರ್ಕೊಂಡ್ರಲ್ಲಾ ” ಎಂದು ಕಾಂಗ್ರೆಸ್ ಸರಕಾರ ರಚನೆಯಾದ ಸಂಧರ್ಭ ಪ್ರಗತಿಪರರೊಬ್ಬರನ್ನು ಕೇಳಿದಾಗ ”ನೋಡ್ರಿ ಈ ಚಳುವಳಿಗಳನ್ನೇ ಮಾಡುತ್ತಾ ಕೂರುವುದಲ್ಲ. ಅವಕಾಶ ಸಿಕ್ಕಿದಾಗ ಆಡಳಿತಗಾರರ ಹತ್ತಿರ ಹೋಗಿ ವ್ಯವಸ್ಥೆಯನ್ನು ಸರಿ ಮಾಡುವ ಕೆಲಸ ಮಾಡಬೇಕು” ಎಂದಿದ್ದರು. ಈಗ ನಮ್ಮ ಬಹಳಷ್ಟು ಪ್ರಗತಿಪರರು ಆಡಳಿತಗಾರರ ಅಕ್ಕಪಕ್ಕ ಕಾಣಸಿಗುತ್ತಾರೆ. ಇದೇ ಧೈರ್ಯದಲ್ಲಿ ಪೊಲೀಸರು ಅಲ್ಪಸಂಖ್ಯಾತರು-ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಪ್ರೇಮಿಗಳ ಮೇಲೆ ದಾಳಿ ನಡೆಸಿದ ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸುತ್ತಾರೆ. ಅದೇ ಪ್ರಗತಿಪರರ ಧೈರ್ಯದಲ್ಲಿ ಇಂದು ನಮ್ಮ ಕಬೀರನನ್ನು ಕೊಂದು ಹಾಕಿದ್ದಾರೆ.

ಫ್ಯಾಸಿಸಂ ಶೈಲಿ – ಸೆಕ್ಯುಲರಿಸಂ ಅಥವಾ ಅಭಿವೃದ್ಧಿ ಇವೆರಡರಲ್ಲಿ ಯಾವುದು ಬೇಕು ?


-ಬಿ. ಶ್ರೀಪಾದ್ ಭಟ್


ಲೇಖಕಿ ಅನನ್ಯ ವಾಜಪೇಯಿಯವರು ರಾಜಕೀಯ ವಿಶ್ಲೇಷಣೆ ಮಾಡುತ್ತಾ “ಇತ್ತೀಚಿನ ದಿನಗಳಲ್ಲಿ ಬಹುಪಾಲು ಮಾಧ್ಯಮಗಳು ಮತ್ತು ಚಿಂತಕರು ಸ್ವಯಂಪ್ರೇರಿತರಾಗಿ ಮೋದಿ ಬದಲಾಗಿದ್ದಾರೆ, ಒಂದು ಕಾಲದ ಹಿಂದುತ್ವದ ಪ್ರತಿಪಾದಕ, ಕಟ್ಟಾ ಬಲಪಂಥೀಯರಾಗಿದ್ದ ಮೋದಿ ಇಂದು rightist centre  ಕಡೆಗೆ ವಾಲುತ್ತಿದ್ದಾರೆ ಎಂದು ಹೇಳಿಕೆ ಕೊಡುತ್ತಿದ್ದಾರೆ.  ಮೋದಿ ಭೂತಕಾಲದಲ್ಲಿ ವರ್ತಿಸಿದಂತೆ ಇನ್ನುಮುಂದೆ ಭವಿಷ್ಯದಲ್ಲಿ ವರ್ತಿಸುವುದಿಲ್ಲ ಎಂದು ನಂಬಿಸಲು ಹರಸಾಹಸಪಡುತ್ತಿದ್ದಾರೆ. ಇಂದಿನ ಮತ್ತು ಭವಿಷ್ಯದ ನರೇಂದ್ರ ಮೋದಿ ಧಾರ್ಮಿಕ ಮತ್ತು ಕೋಮುವಾದದ ರಾಜಕಾರಣವನ್ನು ಕೈಬಿಟ್ಟು ಅಭಿವೃದ್ಧಿ ಮತ್ತು ಆರ್ಥಿಕ ರಾಜಕಾರಣವನ್ನು ಮಾಡಲಿದ್ದಾರೆ ಎಂದೂ ಸಹ ಹೇಳುತ್ತಿದ್ದಾರೆ. ಒಂದು ಕಾಲದ ಮೋದಿಯ ಕ್ರೆಡಿಬಲಿಟಿಯನ್ನು ಶಂಕಿಸುವವರೂ ಇಂದು ಬಹಿರಂಗವಾಗಿ ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ರಾಜಕೀಯ ಅಭಿಮತಗಳನ್ನು, ವಿಶ್ಲೇಷಣೆಗಳನ್ನು ರಾಜಕೀಯ ನಿರ್ಣಯಗಳು ಸಂಪೂರ್ಣವಾಗಿ ಹೈಜಾಕ್ ಮಾಡಿವೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಕೋಮುವಾದಿ ನಡೆಗಳನ್ನು ಅಪಾಯಕಾರಿಯಲ್ಲದ ಬಲಪಂಥೀಯ ಮಾರ್ಗಗಳೆಂದು ನಂಬಿಸಲಾಗುತ್ತಿದೆ. ಮೌನವನ್ನು ವಿರೂಪಗೊಳಿಸಿ ಮುಗ್ಧತೆಗೆ ಸಾಕ್ಷಿಯಾಗಿ ಬಳಸಲಾಗುತ್ತಿದೆ. ಕಲ್ಪಿತ, ಊಹಪೋಹದ, ಕಟ್ಟುಕತೆಯ ಅಂಕಿಸಂಖ್ಯೆಗಳನ್ನು, ಹುಸಿಯಾದ ಅಭಿವೃದ್ಧಿ ಮಾದರಿಗಳನ್ನು ಬಳಸುತ್ತಾ ಇವೆಲ್ಲವೂ ಅಲ್ಪಸಂಖ್ಯಾತರ ಓಲೈಕೆಗೆ, ಸೂಡೋ ಸೆಕ್ಯುಲರಿಸಂಗೆ ಪರ್ಯಾಯ ಶಕ್ತಿಗಳು ಎಂದು ಪದೆ ಪದೇ ಸಮರ್ಥಿಸಿಕೊಳ್ಳುತ್ತಿದ್ದಾರೆ” ಎಂದು ಬರೆದಿದ್ದಾರೆ. ಇದು ಗೋಬೆಲ್ಸ್ ತಂತ್ರ. ಫ್ಯಾಸಿಸಂ ಅನ್ನು ವ್ಯವಸ್ಥೆಯೊಳಗಡೆ ಪ್ರಜೆಗಳ ಅನುಮತಿಯೊಂದಿಗೇ ಪ್ರತಿಷ್ಠಾಪಿಸುವ ಅಥವಾ ಹಾಗೆಂದು ನಂಬಿಸುವ ತಂತ್ರ.

ಆದರೆ ವಾಸ್ತವದಲ್ಲಿ  ಮೋದಿಯ ನವ ಸಮರ್ಥಕರು ಎಷ್ಟೇ ಸಮಜಾಯಿಷಿ ನೀಡಿದರೂ ಹುಲಿ ತನ್ನ ಪಟ್ಟೆಗಳನ್ನು ಬದಲಿಸುತ್ತಿಲ್ಲ. ಮತ್ತೆ ಮತ್ತೆ ಫ್ಯಾಸಿಸಂನ ಕೋಮುವಾದಿ ಶೈಲಿಗೆ ಮೋದಿ ಮರಳುತಿದ್ದಾರೆ. ಒಂದೆಡೆ ನಿಜವಾದ ಸರ್ಕಾರವೆಂದರೆ ಅದು ಧರ್ಮವೆಂದೂ, ಸಂವಿಧಾನವು ಪವಿತ್ರ ಗ್ರಂಥವೆಂದೂ, ಸಾರ್ವಜನಿಕ ಸೇವೆಯನ್ನು ಪೂಜೆಯೆಂದೂ ವೈಭವೀಕರಿಸಿ ಮಾತನಾಡಿದರೆ ಇನ್ನೊಂದೆಡೆ  ‘ಹೌದು ನಾನು ಹಿಂದೂ ರಾಷ್ಟ್ರೀಯವಾದಿ’ ಎಂದು ಘೋಷಿಸುತ್ತಾರೆ. ಅವರ ಇತ್ತೀಚಿನ ಭಾಷಣಗಳಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುವಾಗಲೂ ಮೋದಿ ಸಂಭೋದಿಸುವುದು ‘ಭಾರತ ಭಾಗ್ಯವಿಧಾತರೇ’ ಎಂದೇ. ಅವರ ಹಿಂಬಾಲಕರು ಆಗಲೇ ವಾರಣಾಸಿಯಲ್ಲಿ ‘ಹರ ಹರ ಮೋದಿ’ ಮತ್ತು ‘ನಮೋ ನಮೋ’ ಎನ್ನುವ ಸ್ಲೋಗನ್ ಗಳನ್ನು ಬೀದಿ ಬೀದಿಗಳಲ್ಲಿ ತೇಲಿಬಿಡುತ್ತಿದ್ದಾರೆ. ತಮ್ಮನ್ನು ಸೇರಿಸಿಕೊಂಡು ಸಂಘ ಪರಿವಾರವನ್ನು ಹಿಂದೂ ಧಾರ್ಮಿಕ ಹಿನ್ನೆಲೆಯಲ್ಲಿ ಗುರುತಿಸಿಕೊಳ್ಳುವುದು ಮತ್ತು ಸಂಘ ಪರಿವಾರವು ಅಧಿಕಾರಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಹಿಂದುತ್ವವನ್ನೇ ಇಂಡಿಯಾದ ಜೀವನಕ್ರಮವನ್ನಾಗಿಯೇ ರೂಪಿಸುವುದು ಇವರೆಲ್ಲರ ಇಂದಿನ ನಡುವಳಿಕೆಗಳಿಂದ ಬಹಿರಂಗವಾಗಿದೆ.

ಆದರೆ ತಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸುವಾಗ ಮೋದಿಯು ಬಳಸುವ ಭಾಷೆ ಮತ್ತು ಸಂಕೇತಗಳು ಮತ್ತು rhetoric ಮಾತ್ರ ಬೇರೆ ಧರ್ಮಗಳದ್ದಾಗಿರುತ್ತವೆ. ರಾಹುಲ್ ಗಾಂಧಿಯವರನ್ನು ‘ಶೆಹಜಾದ’ ಎಂದು ಸಂಬೋಧಿಸುವುದು, ಸೋನಿಯಾಗಾಂಧಿಯವರನ್ನು ‘ಸುಲ್ತಾನ’ ಎಂದು ಸಂಬೋಧಿಸುವುದರ ಮೂಲಕ ಒಂದು ಸುಳ್ಳನ್ನು ನೂರು ಸಲ ಹೇಳುವ ಗೋಬೆಲ್ಸ್ ಸಿದ್ಧಾಂತವನ್ನು ಬಳಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಇಂದಿಗೂ ಪರಕೀಯರೆನ್ನುವ ಭಾವವನ್ನು ಸಾರ್ವಜನಿಕವಾಗಿ ಬಿತ್ತುತ್ತಾರೆ. ಲೇಖಕಿ ಅನನ್ಯ ವಾಜಪೇಯಿಯವರು “2002ರ ಹತ್ಯಾಕಾಂಡದ ನಂತರದಲ್ಲಿ ಸ್ಥಾಪಿಸಲ್ಪಟ್ಟ ಮುಸ್ಲಿಂ ನಿರಾಶ್ರಿತ ಶಿಬಿರಗಳನ್ನು ಉದ್ದೇಶಿಸಿ ಮೋದಿಯು ಆ ಶಿಬಿರಗಳು ಮಕ್ಕಳನ್ನು ಹುಟ್ಟಿಸುವ ಶಿಬಿರಗಳೆಂದು ವ್ಯಂಗವಾಡಿದ್ದರು; ಅರವಿಂದ್ ಕೇಜ್ರಿವಾಲ್ ಅವರನ್ನು ಎಕೆ 49 ಎಂದು ಟೀಕಿಸುವುದರ ಮೂಲಕ ಒಂದು ರೀತಿಯಲ್ಲಿ ಭಯೋತ್ಪಾದನೆಗೆ ಸಂಕೇತವಾಗಿರುವ ಎಕೆ 47 ಗೆ ಹೋಲಿಸಿ ಅವರನ್ನು ಪ್ರತ್ಯೇಕತಾವಾದಿ ಎಂದು ಪರೋಕ್ಷವಾಗಿ ಚಿತ್ರಿಸುತ್ತಾರೆ” ಎಂದು ದಾಖಲಿಸುತ್ತಾರೆ. ಇದು ಭವ್ಯ ಭಾರತದ ಭವಿಷ್ಯದ ಪ್ರಧಾನಿ ಎಂದು ಬಿಂಬಿತಗೊಂಡಿರುವ ನರೇಂದ್ರ ಮೋದಿಯ ಸಾರ್ವಜನಿಕ ನಡುವಳಿಕೆ ಶೈಲಿಯ ಒಂದೆರೆಡು ಉದಾಹರಣೆ ಮಾತ್ರ.

ಮೋದಿಯ ಸಾರ್ವಜನಿಕ ಭಾಷಣಗಳು ಎದುರಾಳಿಗಳನ್ನು ಹೆಚ್ಚೂ ಕಡಿಮೆ ಯುದ್ಧಕ್ಕೆ ಆಹ್ವಾನಿಸುವ ಮಟ್ಟದಲ್ಲಿರುತ್ತವೆ. ತೊಡೆ ತಟ್ಟುವುದು, ತಮ್ಮ 56 ಇಂಚಿನmodi_bjp_conclave ಎದೆ ತಟ್ಟುವುದು!! ಇದು ಅಪ್ಪಟ ಫ್ಯಾಸಿಸಂ ಶೈಲಿ. ಈ ಫ್ಯಾಸಿಸಂನ ಮೂಲಭೂತ ಲಕ್ಷಣವೇ ಸಾರ್ವಜನಿಕವಾಗಿ ಸಜ್ಜನಿಕೆಯ ನಡುವಳಿಕೆಯನ್ನೇ ಧ್ವಂಸಗೊಳಿಸುವುದಾಗಿರುತ್ತದೆ. ಕಳೆದ ಹತ್ತು ವರ್ಷಗಳಿಂದಲೂ ಮೋದಿಯ ಸಾರ್ವಜನಿಕ ನಡುವಳಿಕೆಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ‘ಮಿಯ್ಯಾ ಮುಶ್ರಫ’ನಿಂದ ಮೊದಲುಗೊಂಡು ಇಂದಿನ  ‘ಎಕೆ49’ ವರೆಗಿನ ಅವರ ಸಾರ್ವಜನಿಕ ನಡುವಳಿಕೆಗಳು ಭವ್ಯ ಭಾರತದ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳಿಗೆ ಪೆಟ್ಟು ಕೊಡುತ್ತವೆ. ಇಂತಹ ವ್ಯಕ್ತಿಯ ಭಾಷೆ ಮತ್ತು ನಡಾವಳಿ ಇನ್ನು ಅಧಿಕಾರಕ್ಕೆ ಬಂದ ನಂತರ ಯಾವ ಸ್ವರೂಪ ತಾಳಬಹುದು? ಆಗ ಇವರ ರಾಜಕೀಯ ವಿರೋಧಿಗಳ ಅಂತ್ಯ ಹರೇನ್ ಪಾಂಡ್ಯರಂತಾಗುವುದಿಲ್ಲವೆಂಬುದಕ್ಕೆ ಯಾವುದೇ ಸಮರ್ಥನೆಗಳಿಲ್ಲ. ಏಕೆಂದರೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಗುಜರಾತ್ ಹತ್ಯಾಕಾಂಡವನ್ನು ಕಾರು ಕೆಳಗೆ ಸಿಕ್ಕಿಕೊಂಡ ನಾಯಿಮರಿಗೆ ಹೋಲಿಸಿ ತಿಪ್ಪೆ ಸಾರಿಸಿದ್ದರು. ತಮ್ಮ ಬಾಹ್ಯ ನಡುವಳಿಕೆಗಳಲ್ಲಿ, ಸಾರ್ವಜನಿಕ ಭಾಷಣಗಳಲ್ಲಿ ಒಂದು ಬಗೆಯ ನಿರಂತರ ಹಗೆತನವನ್ನೇ ಮೈವೆತ್ತಂತೆ ವರ್ತಿಸುವ ನರೇಂದ್ರ ಮೋದಿ ಆ ಮೂಲಕ ಯಾವುದನ್ನು ಅಧಿಕೃತವಾಗಿ ಜಾರಿಗೊಳಿಸುತ್ತಿದ್ದಾರೆ ಎನ್ನುವುದಕ್ಕೆ ಹೆಚ್ಚಿನ ವಿವರಣೆಗಳು ಬೇಕಿಲ್ಲ.

ಇದು ಸಂಘ ಪರಿವಾರದ ನಾಯಕ ಮೋದಿಯ ಫ್ಯಾಸಿಸಂ ಕತೆಯಾದರೆ ಆವರ ಹಿಂಬಾಲಕರ ಮತೀಯವಾದಿ ವರ್ತನೆಗಳಿಂದ ನೂರಾರು ಗೋಬೆಲ್ಸ್ ಗಳು ಇಂದು ನಮ್ಮ ನಡುವೆ ಇರುವಂತೆ ಅನುಭವವಾಗುತ್ತದೆ. ಮೊನ್ನೆಯಷ್ಟೇ ಮೋದಿಯ ಬಲಗೈ ಬಂಟ ಅಮಿತ್ ಷಾ ಉತ್ತರ ಪ್ರದೇಶದಲ್ಲಿ ಜಾಟ್ ಪಂಗಡದವರನ್ನು ಉದ್ದೇಶಿಸಿ ಮಾತನಾಡುತ್ತಾ ‘ಮುಜಫರ್ ನಗರದ ಗಲಭೆಗಳಿಗೆ ಪ್ರತೀಕಾರವಾಗಿ ಈ 2014ರ ಚುನಾವಣೆಗಳನ್ನು ಬಳಸಿಕೊಳ್ಳಿ’ ಎಂದು ಕರೆ ನೀಡಿದ್ದಾರೆ. ಇದನ್ನು ಅಮಿತ್ ಷಾ ನಿರಾಕರಿಸಲೂ ಇಲ್ಲ. ಬದಲಾಗಿ ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದು ಕಡೆ ‘ಇನ್ನು ಮುಂದೆ ನಾನು ಪ್ರತೀಕಾರದ ನಡಾವಳಿಗಳಿಂದ ಆಡಳಿತ ನಡೆಸುವುದಿಲ್ಲ’ ಎಂದು ಸ್ವತಃ ಸ್ವಯಂಪ್ರೇರಿತನಾಗಿ ಹೇಳಿಕೆ ನೀಡಿದ್ದ ಮೋದಿ ತಮ್ಮ ಬಲಗೈ ಬಂಟನ ಈ ನೆತ್ತರ ದಾಹದ ಹೇಳಿಕೆಗಳನ್ನು ಮಾತ್ರ ಇದುವರೆಗೂ ಖಂಡಿಸಿಲ್ಲ ಅಥವಾ ನಿರಾಕರಿಸಿಲ್ಲ. ಲೇಖಕಿ ಅನನ್ಯ ವಾಜಪೇಯಿಯವರು “ಇತ್ತೀಚಿನ ದಿನಗಳಲ್ಲಿ ನಿಮಗೆ ಸೆಕ್ಯುಲರ್ ಅಥವಾ ಅಭಿವೃದ್ಧಿ ಇವೆರಡರಲ್ಲಿ ಯಾವುದು ಬೇಕು ಎನ್ನುವಂತಹ ಒಂದು ವಿಲಕ್ಷಣ, ಅಸಂಗತ ಆಯ್ಕೆಯನ್ನು ಸಂಘ ಪರಿವಾರದ ಗುಂಪುಗಳು ಇಂಡಿಯಾದ ಜನತೆಯ ಮುಂದಿಡುತ್ತಿದ್ದಾರೆ. ಇದು ತುಂಬಾ ಸರಳವಲ್ಲವೇ !! ಅಭಿವೃದ್ಧಿ ಬೇಕೆಂದರೆ ಸೆಕ್ಯುಲರಿಸಂ ಅನ್ನು ಮರೆತುಬಿಡಿ ಎಂದಷ್ಟೇ ಅಲ್ಲವೇ ?? ಇದೇ ಸಂದರ್ಭದಲ್ಲಿ ಮುಸ್ಲಿಂ ಮತ್ತು ಹಿಂದೂಗಳ ಕುರಿತಾಗಿ ಮಾತನಾಡುವಾಗ ಮತ್ತೆ ಆಕ್ರಮಣಕಾರರು ಮತ್ತು ಸ್ವದೇಶಿಗಳು ಎಂದೇ ಸಂಬೋಧಿಸುತ್ತಿದ್ದಾರೆ, ಈಗ ನಾವು  ಮೋದಿ ಮತ್ತು ಸಂಘ ಪರಿವಾರದ ಈ ಫ್ಯಾಸಿಸಂ ಶೈಲಿಯನ್ನು ಮರೆಯಬೇಕೆ? ನಿರ್ಲಕ್ಷಿಸಬೇಕೆ? ಅಥವಾ  ಕೆಲವು ಪ್ರತಿಷ್ಠಿತ ಮಾಧ್ಯಮಗಳು ಮತ್ತು ಮೋದಿಯ ನಡುವೆ ಏರ್ಪಟ್ಟ ಗುಪ್ತವಾದ ಒಳ ಒಪ್ಪಂದದ ಭಾಗವಾಗಬೇಕೆ? ಅಥವಾ ಲೇಡಿ ಮ್ಯಾಕ್ ಬೆತ್ ಸಿಂಡ್ರೋಮ್ ಗೆ ಬಲಿಯಾಗಿ ನಾವೆಲ್ಲ ಸ್ವತಃ ಮುಂದಾಗಿ  ಸಂಘ ಪರಿವಾರದ ರಕ್ತಸಿಕ್ತ ಕೈಗಳನ್ನು ಪದೇ ಪದೇ ತೊಳೆಯುತ್ತಾ ಆ ಗುಂಪಿಗೆ ಅಧಿಕಾರವನ್ನು ಬಿಟ್ಟುಕೊಡಬೇಕೆ? ದುರಂತವೆಂದರೆ ಇಂದಿನ ಬೌದ್ಧಿಕತೆಯ ಎಲ್ಲಾ ನೆಲೆಗಳೂ ಮೌನ ಭಾಷೆಯ ಅನುಸಂಧಾನದ ಮಾರ್ಗಕ್ಕೆ ಶರಣಾಗಿವೆ. ಆದರೆ ಇನ್ನೂ ಕಾಲ ಮಿಂಚಿಲ್ಲ, ನಾವು ಕಂಡದ್ದನ್ನು ಕಂಡ ಹಾಗೆ ನಿರ್ಭೀತಿಯಿಂದ ಹೇಳಲೇಬೇಕಾಗಿದೆ” ಎಂದು ಬರೆದಿದ್ದಾರೆ.

ಸ್ವಘೋಷಿತ ವಿಕಾಸಪುರುಷ ನರೇಂದ್ರ ಮೋದಿ ತಮ್ಮ ರಕ್ತಸಿಕ್ತ ಕೈಯನ್ನು ತೊಳೆದುಕೊಳ್ಳಲು ಜಗತ್ತಿನ ಎಲ್ಲಾ ಸುಗಂಧ ದ್ರವ್ಯಗಳನ್ನು ಬಳಸಿ ವಿಫಲಗೊಂಡಿದ್ದರೂ malnutrion factಇಂದಿನ ದಿನಗಳಲ್ಲಿ  ಉದಾರೀಕರಣ ಮತ್ತು ಅಭಿವೃದ್ಧಿ ಎನ್ನುವ ಹೊಸದಾದ ಸುಗಂಧ ದ್ರವ್ಯವನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಈ ಸುಗಂಧದ್ರವ್ಯಕ್ಕೆ ‘ಮೋದಿಮಂತ್ರ’, ‘ಮೋದಿಫೆಸ್ಟೋ’ ಎಂದು ಹೆಸರಿಡಲಾಗಿದೆ.  ಮೋದಿಫೆಸ್ಟೋ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಲೇ ಮಾದರಿಯಾಗಿ ಗುಜರಾತ್ ಮಾಡಲ್ ಅನ್ನು ಮುಂದಿಡುತ್ತದೆ. ಅಲ್ಲಿ ಮತ್ತೆ ದ್ವಿವಿಧ ನೀತಿ. ಗುಜರಾತ್ ಮಾಡಲ್ ಎಂದರೆ ಮತ್ತದೇ ಹಿಂದುತ್ವದ ಕೋಮುವಾದ ಮತ್ತು ಹುಸಿ ಅಭಿವೃದ್ಧಿ. ಗುಜರಾತ್ ಅಭಿವೃದ್ಧಿಯ ಹುಸಿತನವನ್ನು ಕುರಿತು, ಅಲ್ಲಿನ ಅಪೌಷ್ಟಿಕತೆಯ ಕುರಿತು, ಅಲ್ಲಿನ ಭ್ರಷ್ಟಾಚಾರದ ಕುರಿತು, ಅಲ್ಲಿನ ನೆಲಕಚ್ಚಿದ ಮಾನವ ಸಂಪನ್ಮೂಲದ ಕುರಿತು, ನೂರಾರು ಸಣ್ಣ ಕೈಗಾರಿಕೆಗಳ ನಾಶಗಳನ್ನು ಕುರಿತು, ರೈತರ ಬದುಕೇ ಧ್ವಂಸಗೊಂಡಿದ್ದರ ಕುರಿತು ನೂರಾರು ವರದಿಗಳು, ಅಂಕಿಸಂಖ್ಯೆಗಳು, ವಿಶ್ಶ್ಲೇಷಣೆಗಳನ್ನು ಆಧಾರಸಹಿತ ಮಂಡಿಸಿದರೂ ಸಹ ಬಹುತೇಕ ಮಾಧ್ಯಮಗಳು, ಮೋದಿ ಸಮರ್ಥಕರು ಮತ್ತು ಹಿಂಬಾಲಕರು ಅದನ್ನು ಕಣ್ಣೆತ್ತಿ ನೋಡಲೂ ನಿರಾಕರಿಸುತ್ತಿದ್ದಾರೆ. 2002ರ ಹತ್ಯಾಕಾಂಡ, ಅಲ್ಲಿನ ಫ್ಯಾಸಿಸಂನ ಕೋಮುವಾದೀ ಸಮಾಜದ ಕುರಿತು ಸಂವಾದವನ್ನು ನಡೆಸಲು ನಿರಾಕರಿಸುವ ಈ ಸಮರ್ಥಕರು ಅದೆಲ್ಲಾ ಮುಗಿದ ಕತೆ ಎನ್ನುತ್ತಾರೆ. ಹಾಗಿದ್ದರೆ ಉಳಿದದ್ದೇನು ??

 ಬಿಜೆಪಿಯ ಪ್ರಣಾಳಿಕೆಯಲ್ಲಿ ಹಾಡಿದ್ದೇ ಹಾಡೋ ಕಿಸಬಾಯಿ ಎನ್ನುವಂತೆ ರಾಮಜನ್ಮಭೂಮಿಯ ಪ್ರಸ್ತಾಪವಿದೆ; ಕಲಮು 370ರ ಕುರಿತು ಪ್ರಸ್ತಾಪವಿದೆ, ಸಮಾನ ನಾಗರಿಕ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲು ಪಣತೊಡಲಾಗಿದೆ, ನೂರು ಸುಸಜ್ಜಿತ ನಗರಗಳನ್ನು ಕಟ್ಟುತ್ತೇವೆ ಎಂದು ಹೇಳಲಾಗಿದೆ (ಅಂದರೆ ಹಳ್ಳಿಗಳು ನಾಮಾವಶೇಷವಾಗಲಿವೆಯೇ?) ಇಲ್ಲಿ ಬ್ರಾಂಡ್ ಇಂಡಿಯಾ ಕಟ್ಟುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಅಂದರೆ ಫ್ಯಾಸಿಸಂ ಭಾರತ ಜಾಗತಿಕವಾಗಿ ಬ್ರಾಂಡ್ ಆಗಲಿದೆಯೇ? ವಿದೇಶಿ ಬಂಡವಾಳ ಹೂಡಿಕೆಯನ್ನು ಸಮರ್ಥಿಸಲಾಗಿದೆ (ಚಿಲ್ಲರೆ ವಲಯದಲ್ಲಿಲ್ಲ ಎನ್ನುವುದು ಕಣ್ಣೊರೆಸುವ ತಂತ್ರ), ಮುಸ್ಲಿಂರಿಗಾಗಿ ಮೊಸಳೆ ಕಣ್ಣೀರು ಸುರಿಸಲಾಗಿದೆ. ಆದರೆ ಯಾವುದೇ ಮಾನಿಫೆಸ್ಟೋಗಳೂ ಕೇವಲ ಕಣ್ಣೊರೆಸುವ ತಂತ್ರಗಳಾಗಿರುವಾಗ ಅದರ ಸಾಧಕಬಾಧಕಗಳ ಕುರಿತು ಯಾರಿಗೂ ಅಂತಹ ಆಸಕ್ತಿಯಿರುವುದಿಲ್ಲ.

ಆದರೆ ಸಂಘಪರಿವಾರವು ಸಿದ್ಧಾಂತಗಳನ್ನು ನಂಬಿದ ಸಂಘಟನೆ ಎನ್ನುವ ಸರ್ವಕಾಲಿಕ ಸತ್ಯವನ್ನು ಎಲ್ಲರೂ ಜಾಣತನದಿಂದ ಮರೆಯುತ್ತಾರೆ. ದ ಹಿಂದೂ ಪತ್ರಿಕೆಯ ಎನ್.ರಾಮ್ ಅವರು ತಮ್ಮ ಲೇಖನದಲ್ಲಿ “ಬಿಜೆಪಿಯ ವೆಬ್ಸೈಟಿನ ಇತಿಹಾಸ ವಿಭಾಗದಲ್ಲಿ ಈ ರೀತಿಯಾಗಿ ಬರೆದಿದ್ದಾರೆ ‘ ಸಂಘ ಪರಿವಾರದ ಮುಖ್ಯ ಸದಸ್ಯನಾಗಿರುವ ಭಾರತೀಯ ಜನತಾ ಪಕ್ಷ ಆರೆಸ್ಸೆಸ್ ನ ಸಿದ್ಧಾಂತಗಳನ್ನು ಪಾಲಿಸುತ್ತದೆ. ಸಂಘ ಪರಿವಾರಕ್ಕೆ ಭಾರತದ ಇತಿಹಾಸದ ಕುರಿತಾಗಿ ಸ್ಪಷ್ಟತೆಯಿದೆ. ಹಿಂದೂ ಐಡೆಂಟಿಟಿ ಮತ್ತು ಸಂಸ್ಕೃತಿ ಭಾರತ ಸಮಾಜದ ಮುಖ್ಯಧಾರೆಯಾಗಬೇಕೆಂಬುದೇ ನಮ್ಮ ಆಶಯ. ಸನಾತನ ಧರ್ಮವು ಹಿಂದೂ ರಾಷ್ಟ್ರೀಯತೆಯೊಂದಿಗೆ ಬೆಸದುಕೊಂಡಿದೆ.’ ಎಂದು ಬರೆದಿದ್ದಾರೆ.

ಇಟಲಿಯ ಮಸಲೋನಿ, ಜರ್ಮನಿಯ ಹಿಟ್ಲರ್, ಸ್ಪೇಯ್ನ್ ದೇಶದ ಫ್ರಾಂಕೋ ಅವರ ಫ್ಯಾಸಿಸ್ಟ್ ಆಡಳಿತವನ್ನು ಅವಲೋಕಿಸಿದಾಗ, ಅಲ್ಲಿ ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ದೇಶದ ತುಂಬಾ ಧ್ವಜಗಳ ಹಾರಾಟ, ದಿನನಿತ್ಯ ರಾಷ್ಟ್ರೀಯವಾದದ ಗೀತೆಗಳ, ಸ್ಲೋಗನ್ ಗಳ ಪ್ರಸಾರ ಇವು ಮೇಲ್ನೋಟಕ್ಕೆ ಕಂಡು ಬರುವ ಪ್ಯಾಸಿಸಂನ ಸಂಕೇತಗಳು. ಕಳೆದ ಇಪ್ಪತ್ತೈದು ವರ್ಷಗಳ ಇಂಡಿಯಾದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸವನ್ನು ಅವಲೋಕಿಸಿದಾಗ ಸಂಘ ಪರಿವಾರದ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಭಗವಧ್ವಜಗಳು ಇಡೀ ಊರಿನ ತುಂಬಾ ಹಾರಾಡುತ್ತಿರುವುದನ್ನು ನಾವು ಕಂಡಿದ್ದೇವೆ. ಇದು ತನ್ನ ಉಗ್ರ ಸ್ವರೂಪ ಪಡೆದುಕೊಳ್ಳುವುದು ಫ್ಯಾಸಿಸಂ ಅಧಿಕಾರಕ್ಕೆ ಬಂದಾಗ. ಈಗಾಗಲೇ ‘ಸೌಗಂಧ್’ ಗೀತೆ ಫ್ಯಾಸಿಸಂನ ಸ್ವರೂಪ ಪಡೆದುಕೊಂಡಾಗಿದೆ. ಇನ್ನು ಮೋದಿಯ ಘೋಷಣೆಗಳ ಕುರಿತು ಹೆಚ್ಚಿನದೇನನ್ನೂ ಹೇಳುವುದು ಉಳಿದಲ್ಲ. ಮೊನ್ನೆ ತಾನೆ ಬಿಹಾರಿನಲ್ಲಿ ಯಾದವರನ್ನು ಉದ್ದೇಶಿ ಮಾತನಾಡುತ್ತ ಗೋವುಗಳನ್ನು ಪಾಲಿಸುವ, ಪೋಷಿಸುವ ನೀವೆಲ್ಲ ಗೋಹಂತಕರನ್ನು ಬೆಂಬಲಿಸುತ್ತೀರಾ ಎಂದು ಪ್ರಚೋದಿಸಿದ್ದಾರೆ. ಇಂತಹ ನೂರಾರು ಘಟನೆಗಳು ಈ ಹಿಂದೆ ದಾಖಲಾಗಿವೆ.

ಯುರೋಪಿಯನ್ ಫ್ಯಾಸಿಸ್ಟ್ ಆಡಳಿತದಲ್ಲಿ ಕಂಡುಬಂದ ಮತ್ತೊಂದು ಲಕ್ಷಣವೆಂದರೆ ಅಲ್ಲಿ ಎಡಪಂಥೀಯರು, ಕಪ್ಪುವರ್ಣೀಯರು, ಯಹೂದಿಗಳು, ಅಲ್ಪಸಂಖ್ಯಾತರು, ಲಿಬರಲ್, ಸಮಾಜವಾದಿಗಳು ಮುಂತಾದವರನ್ನು ಶತ್ರುಗಳೆಂದು ಪರಿಗಣಿಸಿ ಆ ಶತ್ರುಗಳನ್ನು ಹುಡುಕಿ ಹೆಕ್ಕುತ್ತಾ ಅವರನ್ನು ಮುಗಿಸುವುದು. ಇದಕ್ಕಾಗಿ ಇಡೀ ಪೋಲೀಸ್ ವ್ಯವಸ್ಥೆಯನ್ನೇ ಬಳಸಿಕೊಳ್ಳಲಾಗುತ್ತದೆ. ಇದೇ ಮೋದಿ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಬಿಹಾರ್ ರಾಜ್ಯದಲ್ಲಿ ಭಾಷಣ ಮಾಡುತ್ತಾ ‘ಹಮ್ ಚುನ್ ಚುನ್ ಕೆ ಸಬಕ್ ಸಿಖಾಯೇಂಗೇ’ ( ನಾವು ಹುಡುಕಿ ಹುಡುಕಿ ಪಾಠ ಕಲಿಸುತ್ತೇವೆ) ಎಂದು ಹೇಳಿದ್ದಾರೆ. ಇದು ಅಪ್ಪಟ ಫ್ಯಾಸಿಸ್ಟ್ ಶೈಲಿ. 2002ರ ಹತ್ಯಾಕಾಂಡದ ಸಂಧರ್ಭದಲ್ಲಿ ಇಂತಹ ವರ್ತನೆಗಳನ್ನು ದೇಶ ನೋಡಿದೆ. ಮೋದಿ ಆಡಳಿತದ ಹತ್ತು ವರ್ಷಗಳಲ್ಲಿ ಗುಜರಾತ್ ರಾಜ್ಯದಲ್ಲಿ ಪೋಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಹುಡುಕಿ ಹುಡುಕಿ ಹದಿಮೂರು ನಕಲಿ ಎನ್ ಕೌಂಟರುಗಳನ್ನು ನಡೆಸಲಾಗಿದೆ. ಇಂದಿಗೂ ತನಿಖೆಗಳು ಜಾರಿಯಲ್ಲಿವೆ. ಮಹಿಳೆಯ ಮೇಲೆ ಬೇಹುಗಾರಿಕೆ ನಡೆಸಲಾಗಿದೆ. ಹುಡುಕಿ ಹುಡುಕಿ ತೆಗೆದು ಪಾಠ ಕಲಿಸುವ ಇವರ ಭರಾಟೆ ನೆನಸಿಕೊಂಡರೆ ಕರಾಳ ಚಿತ್ರವಷ್ಟೇ ಕಣ್ಣ ಮುಂದೆ ಬರುತ್ತದೆ.

ಯುರೋಪಿಯನ್ ಫ್ಯಾಸಿಸ್ಟ್ ಶೈಲಿಯ ಮತ್ತೊಂದು ಲಕ್ಷಣ ಮೀಡಿಯಾಗಳನ್ನು ಹತೋಟಿಗೆ ತೆಗೆದುಕೊಳ್ಳುವುದು. ಇಂದು ಇಂಡಿಯಾದಲ್ಲಾಗಲೇ ದೃಶ್ಯ ಮಾಧ್ಯಮಗಳು ಮತ್ತು modi_ambani_tata_kamathಬಹುಪಾಲು ಮುದ್ರಣ ಮಾಧ್ಯಮಗಳು ಮೋದಿಯ ಹತೋಟಿಯಲ್ಲಿವೆ. ಫ್ಯಾಸಿಸ್ಟ್ ಆಡಳಿತದಲ್ಲಿ ಈ ಮುಷ್ಟಿ ಮತ್ತು ಬಿಗಿಗೊಳ್ಳುತ್ತದೆ. ಮೂವತ್ತು ಮತ್ತು ನಲವತ್ತರ ದಶಕದುದ್ದಕ್ಕೂ ಜರ್ಮನಿಯಲ್ಲಿ ಹಿಟ್ಲರನನ್ನು ವಿಕಾಸಪುರುಷನೆಂದೇ ಕರೆಯುತ್ತಿದ್ದರು. ಫ್ಯಾಸಿಸಂನ ಆ ಕಾಲಘಟ್ಟದಲ್ಲಿ ಜರ್ಮನಿಯ ಇಡೀ ಕಾರ್ಪೋರೇಟ್ ವಲಯ ಹಿಟ್ಲರನನ್ನು ಬೆಂಬಲಿಸಿತ್ತು. ಪರಸ್ಪರ ಹೊಂದಾಣಿಕೆಯ ಮೂಲಕ ಹಿಟ್ಲರ್ ಮತ್ತು ಅಲ್ಲಿನ ಕಾರ್ಪೋರೇಟ್ ವಲಯದ ನಡುವಿನ ಸಂಬಂಧ ಅಭೂತಪೂರ್ವವಾಗಿತ್ತು. ಇಂದಿನ ಇಂಡಿಯಾದಲ್ಲಿ ಇಡೀ ಕಾರ್ಪೋರೇಟ್ ಗುಂಪು ಮೋದಿಯ ಬೆನ್ನ ಹಿಂದಿದೆ. ಮೋದಿ ಮತ್ತು ಇಂಡಿಯಾದ ಕಾರ್ಪೋರೇಟ್ ವಲಯದ ನಡುವಿನ ಸಮನ್ವಯ ಮತ್ತು ಸೌಹಾರ್ದಯುತ ಸಂಬಂಧ ಮತ್ತು ಕೊಡುಕೊಳ್ಳುವಿಕೆಯನ್ನು ಆಗಿನ ಹಿಟ್ಲರ್ ಕಾಲಕ್ಕೆ ಹೋಲಿಸಬಹುದು. ಅನೇಕ ಸಾಮ್ಯತೆಗಳಿವೆ. ರಾಷ್ಟ್ರೀಯ ಸುರಕ್ಷತೆಯ ಕುರಿತಾಗಿ ಹಿಟ್ಲರ್ ಮತ್ತು ಮಸಲೋನಿ ಹುಟ್ಟು ಹಾಕಿದ ಗದ್ದಲಗಳು ಎರಡನೇ ಮಹಾಯುದ್ಧಕ್ಕೆ ಕಾರಣವಾದವು. ಫ್ಯಾಸಿಸಂ ಆಡಳಿತದಲ್ಲಿ  ರಾಷ್ಟ್ರೀಯ ಸುರಕ್ಷತೆ ತನ್ನ ಖುಣಾತ್ಮ ನೆಲೆಯಲ್ಲಿ ಹೂತುಹೋಗಿರುತ್ತದೆ. ನಮ್ಮ ಸಂಘ ಪರಿವಾರದ ಯುದ್ಧದ ಕುರಿತಾದ ದಾಹ ಬೆಚ್ಚಿಬೀಳಿಸುವಂತದ್ದು. ಇನ್ನು ಫ್ಯಾಸಿಸಂ ಆಡಳಿತದಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ ವಲಯಗಳ ಕುರಿತಾಗಿ ಬರೆದಷ್ಟೂ ಮುಗಿಯದು.

ಕಳೆದ ಶತಮಾನದ ಇಪ್ಪತರ ದಶಕದ ಕೊನೆಯಲ್ಲಿ ಇಟಲಿಯಲ್ಲಿ “ಸುಧಾರಣವಾದಿಗಳು ಸೋತಿದ್ದಾರೆ, ನಮ್ಮನ್ನೆಲ್ಲಾ ಮೋಸಗೊಳಿಸಿದ್ದಾರೆ” ಎಂದು ಪ್ರತಿಭಟಿಸುತ್ತಿದ್ದ ಜನತೆಯ ಆಕ್ರೋಶವನ್ನು ಬಳಸಿಕೊಂಡು ಫ್ಯಾಸಿಸಂ ಜನ್ಮ ತಾಳಿತು. ಇಂದು ಸುಧಾರಣಾವಾದಿಗಳಾದ ಯುಪಿಎ ಸರ್ಕಾರದವರು ಸೋತಿದೆ. ನಮ್ಮನ್ನೆಲ್ಲಾ ಮೋಸಗೊಳಿಸಿದ್ದಾರೆ ಎನ್ನುವ ಭಾವನೆ ಬಹುಪಾಲು ಮದ್ಯಮವರ್ಗ ಮತ್ತು ಮೇಲ್ವರ್ಗಗಳ ಮನದಲ್ಲಿದೆ. ಮತ್ತೊಂದು ಕಡೆ ಮೋದಿ ನೇತೃತ್ವದಲ್ಲಿ ಈ ಜನರ ಅಸಹನೆಯನ್ನು ಬಳಸಿಕೊಂಡು ಅಧಿಕಾರಕ್ಕೆ ಏರಲು ಫ್ಯಾಸಿಸ್ಟ್ ಸಂಘಪರಿವಾರ ಕಾಯುತ್ತಿದೆ. ಇನ್ನು ಕೇವಲ ಮತಗಟ್ಟೆ ಕಾಯುತ್ತಿದೆ ಎಂಬುದು ಅವರ ಭಾವನೆ. ಅದರೆ ಇಂಡಿಯಾದ ಮತದಾರ ಇವೆಲ್ಲವನ್ನೂ ಮೀರಿದ್ದಾನೆ ಎಂಬುದು ಪ್ರಜ್ಞಾವಂತರ ಆಶಯ. ಏಕೆಂದರೆ 2004ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ‘ಇಂಡಿಯಾ ಶೈನಿಂಗ್’ ಅಬ್ಬರ ಇದೇ ಮಟ್ಟದಲ್ಲಿತ್ತು. ಆದರೆ ವಿವೇಚನೆಯಿಂದ ವರ್ತಿಸಿದ ಮತದಾರ ಫ್ಯಾಸಿಸ್ಟರನ್ನು ಸೋಲಿಸಿದ್ದ. ಹತ್ತು ವರ್ಷಗಳ ನಂತರ ಇಂದೂ ಸಹ ಅದು ಪುನರಾವರ್ತನೆಯಾಗುವ ಎಲ್ಲಾ ಸಾಧ್ಯತೆಗಳಿವೆ.

‘ಸಾಹಿತಿಗಳಾದವರು ರಾಜಕೀಯ ಮಾಡಬಾರದು’ ಎಂಬ ಕುತರ್ಕ


– ಡಾ.ಎಸ್.ಬಿ. ಜೋಗುರ


 

ಸಾಹಿತಿಗಳಾದವರು ರಾಜಕೀಯ ಮಾಡಬಾರದು ಎಂಬುವುದು ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಕೇಳಿ ಬರುವ ಅಸಂಬದ್ಧ ಕೂಗು. ಸಾಹಿತಿಗಳು ರಾಜಕಾರಣದಲ್ಲಿ ಕ್ರಿಯಾಶೀಲರಾಗುವುದು, ಈ ಪಕ್ಷ ಆ ಪಕ್ಷ ಎಂದು ಮಾತಾಡುವುದು ಹೊಸ ವರಸೆಯಂತೂ ಅಲ್ಲ. ಅಷ್ಟಕ್ಕೂ ಸಾಹಿತಿಗಳು ರಾಜಕಾರಣ ಮಾಡಬಾರದು ಅಂತ ಯಾವ ವಿಧಿ ಅಥವಾ ಶಾಸನವಿದೆ ಹೇಳಿದೆ? ನಮ್ಮದು ಬಹುದೊಡ್ಡ ಪ್ರಜಾಸತ್ತಾತ್ಮಕ ವ್ಯವಸ್ಥೆ. ಹಾಗೆಂದು ಸ್ವಘೋಷಿತ ನಿರ್ಬಂಧಗಳನ್ನು ಹೇರುವ ಮೂಲಕ ಪ್ರಜಾಸತ್ತಾತ್ಮಕ ಅರ್ಥವಂತಿಕೆಯನ್ನು ಯಾಕೆ ಕಸಿಯಬೇಕು? ವಾಸ್ತವದಲ್ಲಿ ‘ಸಾಹಿತಿಗಳೂ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಅರಚುವವರು ಏನೋ ಘಟಿಸಬಾರದ್ದು ಘಟಿಸುತ್ತಿದೆ ಎನ್ನುವಂತೆ ಮಾತಾಡುತ್ತಿರುವುದೇ ಪ್ರಜಾಪ್ರಭುತ್ವದ ಬಹುದೊಡ್ದ ಅಣಕ.

ಚುನಾವಣೆಯ ಸಂದರ್ಭದಲ್ಲಿ ಹೀಗೆ ಕೆಲವು ಸಾಹಿತಿಗಳು ಸೊಲ್ಲೆತ್ತುವುದು ಮುಂಚಿನಿಂದಲೂ ಇದ್ದೇ ಇದೆ. ಹಾಗೆಯೇ ಆಯಾ ಕಾಲದ ಟೀಕೆ, ಪ್ರತಿಕ್ರಿಯೆಗಳೂ ಇದ್ದೇ ಇವೆ. artists-campainingಶಿವರಾಮ ಕಾರಂತ, ದಿನಕರ ದೇಸಾಯಿಯಂಥಾ ಕೆಲವು ಸಾಹಿತಿಗಳು ಖುದ್ದಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದೂ ಇದೆ. ಗ್ರೀಕ್ ದೇಶದ ಚಿಂತಕ ಪ್ಲೇಟೋ ನುಡಿದ ’ರಾಜ್ಯವನ್ನಾಳುವವರು ತತ್ವಜ್ಞಾನಿಗಳಾಗಿರಬೇಕು, ಇಲ್ಲವೇ ತತ್ವಜ್ಞಾನಿಗಳು ರಾಜಕೀಯವನ್ನು ಆಳಬೇಕು’ ಎನ್ನುವ ಮಾತಿನ ತಾತ್ಪರ್ಯವೂ ಕೂಡಾ ರಾಜಕೀಯದಲ್ಲಿ ಬುದ್ದಿ ಜೀವಿಗಳ ಪಾತ್ರವನ್ನು ನಗಣ್ಯವೆಂದು ಪರಿಗಣಿಸದೇ ಮುಖ್ಯ ಎಂದು ತಿಳಿಯಬೇಕು ಎಂಬುವುದಾಗಿದೆ. ‘ರಾಜಕೀಯದ ಗಂಧ -ಗಾಳಿ ಇಲ್ಲದೇ ಇರುವ ತೀರಾ ಕನಿಷ್ಟ ವಿದ್ಯಾರ್ಹತೆಯೂ ಇಲ್ಲದ ಯಾರೂ ರಾಜಕಾರಣ ಮಾಡಬಹುದು, ಆ ಬಗ್ಗೆ ಮಾತಾಡಬಹುದು. ಆದರೆ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಸಾಕಷ್ಟು ಅರಿತಿರುವ ಸಾಹಿತಿಗಳು, ಕಲಾಕಾರರು ಮಾತ್ರ ರಾಜಕಾರಣ ಮಾಡಬಾರದು; ಮಾತನಾಡಬಾರದು’. ಅದೇಕೆ ಎನ್ನುವುದೇ ಒಂದು ಬಹುದೊಡ್ದ ಚರ್ಚೆಯ ವಿಷಯವಾಗಬೇಕು. ಅಷ್ಟಕ್ಕೂ ಸಾಹಿತಿಗಳು ರಾಜಕಾರಣಕ್ಕೆ ಬರಬಾರದು. ಅವರು ಪ್ರಚಾರ ಮಾಡಬಾರದು ಎನ್ನುವಷ್ಟರ ಮಟ್ಟಿಗೆ ನಮ್ಮ ದೇಶದ ರಾಜಕೀಯ ಸನ್ನಿವೇಶ ಪರಿಶುದ್ಧವಾಗಿ ಉಳಿದಿಲ್ಲ. ಇನ್ನು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಹೀಗೆ ಸಾಹಿತಿಗಳು ತಮ್ಮ ತಮ್ಮ ಒಲವಿನ ಮನೋಧೋರಣೆಯ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ ಎಂದಲ್ಲ, ಬೇರೆ ಬೇರೆ ರಾಜ್ಯಗಳಲ್ಲಿಯೂ ಈ ಬಗೆಯ ಪ್ರಕ್ರೀಯೆ ಇದ್ದೇ ಇದೆ. ಅಷ್ಟೇ ಯಾಕೆ ಚರಿತ್ರೆಯುದ್ದಕ್ಕೂ ಸಾಹಿತಿಗಳು ಮತ್ತು ರಾಜಾಶ್ರಯದ ನಡುವಿನ ನಂಟನ್ನು ಮರೆತು ಮಾತಾಡಲು ಸಾಧ್ಯವೇ?

ಅತಿ ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಸಾಹಿತಿಯಾದವನು ಯಕ್ಷ ಲೋಕದ ಅಪರಾವತಾರವಲ್ಲ, ಅವನೂ ನಮ್ಮ ನಡುವೆಯೇcidananda-murthy ಬದುಕಿರುವ ಒಬ್ಬ ಲೇಖಕ. ಅವನನ್ನು ಲೇಖಕನಾಗಿ ರೂಪಿಸುವಲ್ಲಿಯೂ ಅವನ ಸುತ್ತಮುತ್ತಲಿನ ಇದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುತ್ತದೆ. ಹಾಗಿರುವಾಗ ತಾನು ಹುಟ್ಟಿ, ಬೆಳೆದ ಪರಿಸರಕ್ಕೆ ಆತ ಆಗಾಗ ಪ್ರತಿಕ್ರಿಯಿಸದೇ ಹೋದರೆ ಆತನ ಬರವಣಿಗೆಗೂ ಒಂದು ಮೌಲ್ಯವಿದೆ ಎನಿಸುವುದಿಲ್ಲ. ಪ್ರತಿಯೊಬ್ಬನಿಗೂ ಮುಕ್ತವಾದ ಅಭಿಪ್ರಾಯಗಳಿವೆ ಎಂದು ಹೇಳುವಾಗ ಈ ಸಾಹಿತಿಗಳನ್ನು ಅದರಿಂದ ಹೊರಗಿಡುವುದು ಸರಿಯೆ? ಅವರಿಗೆ ದಕ್ಕುವ ಎಲ್ಲ ಬಗೆಯ ಪ್ರಶಸ್ತಿಗಳನ್ನು ಮೀರಿಯೂ ಅವರಲ್ಲೊಬ್ಬ ಈ ನೆಲದ ಮನುಷ್ಯನಿದ್ದಾನೆ, ಅವನಿಗೂ ಒಂದಷ್ಟು ಕನಸುಗಳಿವೆ, ಕನವರಿಕೆಗಳಿವೆ. ಅವು ಬಯಲಾಗುವುದೇ ಬೇಡ ಎನ್ನುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಹುದೊಡ್ಡ ಅಣಕವಾಗಿಬಿಡುತ್ತದೆ.

ಮೋದಿಯನ್ನು ಬೆಂಬಲಿಸುವ ಸಾಹಿತಿಗಳಿರುವಂತೆ, ರಾಹುಲ್ ಗಾಂಧಿಯನ್ನು ಬೆಂಬಲಿಸುವ Bhyrappaಸಾಹಿತಿಗಳೂ ಇದ್ದಾರೆ. ಹಾಗೆಯೇ ಕೇಜ್ರಿವಾಲ್ ಅವರನ್ನು ಬೆಂಬಲಿಸುವವರು ಇರುವಂತೆ ಮಾಯಾವತಿಯನ್ನು ಬೆಂಬಲಿಸುವವರೂ ಇದ್ದಾರೆ. ಆಯಾ ರಾಜಕೀಯ ಪಕ್ಷಗಳಿಗೆ ಅದು ಅವರವರ ವ್ಯಕ್ತಿಗತ ಆಯ್ಕೆ ಎನ್ನುವ ಸತ್ಯ ತಿಳಿದಿರಬೇಕು. ಒಬ್ಬ ಸಾಹಿತಿ ಉತ್ತಮವಾದ ಕತೆ, ಕಾದಂಬರಿ, ಲೇಖನ, ಕವಿತೆ ಬರೆಯಬೇಕೆಂದು ನಿರೀಕ್ಷಿಸುವ ಸಮಾಜ, ಅವನಿಂದ ಸೂಕ್ತ ಸಲಹೆ ಸೂಚನೆಗಳು ದೊರೆಯುವದಾದರೆ ಸ್ವೀಕರಿಸಬಾರದು ಎನ್ನುವುದು ಕುತರ್ಕವಾಗುತ್ತದೆ. ಪ್ರಾಜ್ಞರಾದವರು ಎಲ್ಲ ಸಂದರ್ಭಗಳಲ್ಲಿಯೂ ಮೌನ ತಾಳುವುದು ಒಳ್ಳೆಯದಲ್ಲ. ವ್ಯಕ್ತಿಗತ ನಿಂದನೆ ಆಪಾದನೆಗಳೇ ಪ್ರತಿಕ್ರಿಯೆಗಳು ಎನ್ನುವ ಮಟ್ಟಕ್ಕೆ ಇಳಿಯಬಾರದು. ಎಲ್ಲ ರೀತಿಯಿಂದಲೂ ಸ್ವತಂತ್ರವಾಗಿರುವ ಸಾಹಿತಿಗಳಿಗೂ ಕೂಡಾ ತಮ್ಮ ಅಭಿಪ್ರಾಯವನ್ನು ಹೊರ ಹಾಕುವ ಅವಕಾಶವಿದೆ. ಆ ಅವಕಾಶದ ಇತಿಮಿತಿಗಳ ಅರಿವಿನೊಳಗೆ ಮಾತ್ರ ಅದು ನಡೆಯಬೇಕು.

ಈಗಾಗಲೇ ರಾಜಕೀಯ ಪರಿಸರ ಎಷ್ಟು ಕಲುಷಿತವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂತದ್ದು. ಹೀಗಿರುವಾಗ ಒಂದು ಅರ್ಥ ಪೂರ್ಣವಾದ ರೀತಿಯಲ್ಲಿ karnad-campaining-for-nilekani.jpg-mediumಸಾಹಿತಿಗಳು, ಚಿಂತಕರು ರಾಜಕೀಯ ಮಾರ್ಗದರ್ಶನ ಮಾಡುವುದನ್ನು ತಪ್ಪಾಗಿ ಕಾಣಬಾರದು. ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರುವಂಥ ವಾತಾವರಣವನ್ನು ರೂಪಿಸುವಲ್ಲಿ ಸಾಹಿತಿಗಳು, ಚಿಂತಕರು, ಬುದ್ದಿ ಜೀವಿಗಳ ಮಾತು, ಬರವಣಿಗೆ, ವಿಚಾರಗಳು ನೆರವಾಗಲಿ. ಅಂತಿಮವಾಗಿ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿತವಾದ ಸಮೈಕ್ಯದಿಂದ ಕೂಡಿ ಬದುಕುವ ಜಾತ್ಯಾತೀತ ರಾಷ್ಟ್ರ ನಿರ್ಮಾಣವೇ ನಮ್ಮೆಲ್ಲರ ಗುರಿಯಾಗಿರಬೇಕು. ಅದನ್ನು ಕೇವಲ ಮಾತಾಡಿಯೇ ಮಾಡಬೇಕು. ಸಾಧಿಸಬೇಕು ಎಂದೇನೂ ಇಲ್ಲ. ಹಾಗೆ ಮಾತಾಡದೆಯೂ ಮಾಡಿ ತೋರಿಸುವುದು ಸಾಧ್ಯವಿದೆ. ಇನ್ನು ಮಾತಾಡುವುದು ಎಂದೊಡನೆ ಪರಸ್ಪರ ಕೆಸರನ್ನು ಎರಚುವ ಹಾಗೆ ವ್ಯವಹರಿಸುವದಲ್ಲ. ಟೀಕೆ ಮಾಡುವಲ್ಲಿಯೂ ಒಂದು ಬಗೆಯ ಗತ್ತಿರಬೇಕು. ಸಾಧ್ಯವಾದಷ್ಟು ತೀರಾ ಖಾಸಗಿಯಾದ ವಿಷಯಗಳನ್ನು ಎತ್ತಿಕೊಂಡು ಟೀಕಿಸಬಾರದು. ಕೆಲ ಬಾರಿ ನಾಗರಿಕ ಸಮಾಜ ಬೆಚ್ಚಿ ಬೀಳುವ ರೀತಿಯಲ್ಲಿ ನಮ್ಮ ನೇತಾರರು ಭಾಷೆಯನ್ನು ಬಳಸುವುದಿದೆ. ಇದು ಆರೋಗ್ಯಯುತ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸಾಹಿತಿಗಳಾದವರು ಈ ವಿಷಯವಾಗಿ ತುಂಬಾ ಎಚ್ಚರದಿಂದ ವ್ಯವಹರಿಸಬೇಕು, ಭಾಷೆಯನ್ನು ಬಳಸಬೇಕು. ಯಾಕೆಂದರೆ ಇವರ ಭಾಷಾ ಬಳಕೆಯ ಕೌಶಲ್ಯ ಮತ್ತು ಸೃಜನಶೀಲತೆಯ ಗುಣವನ್ನು ಗಮನಿಸಿಯೇ ಇವರಲ್ಲಿ ಕೆಲವರಿಗೆ ಶ್ರೇಷ್ಟ ಪ್ರಶಸ್ತಿಗಳೂ ಬಂದಿವೆ. ನಾಜೂಕಾಗಿ ಭಾಷೆಯನ್ನು ಬಳಸುವ ಕಲೆಗಾರಿಕೆಯಿರುವವರೇ ಹಗುರವಾಗಿ ಮಾತನಾಡುವ, ಹೇಳಿಕೆಕೊಡುವ ಪರಿಪಾಠವನ್ನು ಬೆಳೆಸಬಾರದು. ಅಂಥಾ ಮಾತು ಆಡುವವರಿಗೂ ಒಳ್ಳೆಯದಲ್ಲ, ಕೇಳುವವರಿಗೂ. ಹಾಗೆಯೇ ಕೆಲ ಸಾಹಿತಿಗಳು ಮೋದಿಯನ್ನು ಬೆಂಬಲಿಸಿ ಮಾತನಾಡುವಾಗ ಮೌನ ವಹಿಸುವ ರಾಜಕಾರಣಿಗಳು, ರಾಹುಲ ಗಾಂಧಿಯನ್ನು ಬೆಂಬಲಿಸಿ ಮಾತನಾಡುವಾಗ ಇದ್ದಕ್ಕಿದ್ದಂತೆ ಆವೇಷಭರಿತರಂತೆ ಆಡುವದು ಕೂಡಾ ಸಮಚಿತ್ತದ ನಡುವಳಿಕೆಯಲ್ಲ ಎನ್ನುವುದನ್ನು ಅರಿಯಬೇಕು.

‘ಬಿಜೆಪಿ ಆತ್ಮಹತ್ಯೆ’ ಇತ್ಯಾದಿ – ಒಂದು ಪ್ರತಿಕ್ರಿಯೆ

ವಸಂತ ಕಡೆಕಾರ್

ಪ್ರಜಾವಾಣಿಯ ಅತಿಥಿ ಅಂಕಣದಲ್ಲಿ ಪ್ರಕಟವಾದ  ದೇವನೂರು ಮಹಾದೇವ ಅವರ  ಬಿಜೆಪಿ ತನ್ನ ಆತ್ಮಹತ್ಯೆಗೆ ತಾನೇ ಸಜ್ಜಾಗುತ್ತಿದೆಯೇ?   ಲೇಖನದಲ್ಲಿ ‘ಭಾರತತ್ವ, ಪ್ರಜಾಪ್ರಭುತ್ವ, ಮಾನವತ್ವ’ಕ್ಕೆ ಮೋದಿ ಫ್ಯಾಸಿಸ್ಟ್ ಸರ್ವಾಧಿಕಾರದ ಅಪಾಯದ ವಿಶ್ಲೇಷಣೆ ಹಾಗೂ ಮೋದಿಯ ‘ಗುಜರಾತ ಮಾದರಿ ಅಭಿವೃದ್ಧಿ’ಯ ಮೇಲಣ ಟೀಕೆಯೂ ಶಕ್ತಿಯುತವಾಗಿ ಮೂಡಿ ಬಂದಿದೆ. ಕರ್ನಾಟಕದಲ್ಲೂ ಮಾಧ್ಯಮಗಳು ಮತ್ತು ಸಂಘ ಪರಿವಾರದ ಗೊಬೆಲ್ ಗಳು ‘ಮೋದಿ ಅಲೆ’ ಎಬ್ಬಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ದೇವನೂರು ಅವರ ಲೇಖನ ಅತ್ಯಂತ ಸಕಾಲಿಕವೂ ಆಗಿದೆ. ಆದರೆ ಒಟ್ಟಾರೆ ಲೇಖನ ಅಭಿವ್ಯಕ್ತಿಸುವುದು ಅರ್ಧ ಸತ್ಯನಷ್ಟೇ ಎಂಬುವುದು ನನ್ನ ಅನ್ನಿಸಿಕೆ. ಸಮಾನತೆ-ಪ್ರಜಾಪ್ರಭುತ್ವಗಳ ಹೋರಾಟದ ಬಗ್ಗೆ ದೇವನೂರು ಅವರ ಅಪಾರ ಕಾಳಜಿಯ ಬಗ್ಗೆ ಅತ್ಯಂತ ಗೌರವದೊಂದಿಗೆ ಅವರ ಪ್ರಸ್ತುತ ಲೇಖನದ ಬಗ್ಗೆ ನನ್ನಲ್ಲಿ ಮೂಡಿದ ಕೆಲವು ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ.

ಲೇಖನದ ತಲೆಬರಹದಿಂದ ಆರಂಭಿಸಿ ಇಡೀ ಲೇಖನದಲ್ಲಿ ಕೇವಲ ಮೋದಿಯ ‘ವೈಯಕ್ತಿಕ ಸರ್ವಾಧಿಕಾರಿ ಮನೋಭಾವ’ದ ಬಗ್ಗೆ ಒತ್ತು ಇದೆ. ಹಾಗೆಯೇ ಬಿಜೆಪಿ ಒಂದು ಪಕ್ಷವಾಗಿ ಮತ್ತು Narendra_Modiಅಡ್ವಾಣಿ ಮತ್ತಿತರ ನಾಯಕರು ಅಷ್ಟೇನೂ ಅಪಾಯಕಾರಿಯಲ್ಲವೇನೋ ಎಂಬ ಭಾವನೆ ಪರೋಕ್ಷವಾಗಿಯಾದರೂ ಇದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಮೋದಿ ಅಥವಾ ಬಿಜೆಪಿ ಫೆನೋಮಿನಾಗಳ ಹಿಂದಿನ ‘ರಿಮೋಟ್ ಕಂಟ್ರೊಲ್’ ಆದ ಆರೆಸ್ಸೆಸ್ ಬಗ್ಗೆ ಏನೂ ಹೇಳದಿರುವುದು ಬಹಳ ಆಶ್ಚರ್ಯಕರ. ಏಕೆಂದರೆ 2004 ಮತ್ತು 2009ರಲ್ಲಿ ಅಡ್ವಾಣಿಯನ್ನು ನಾಯಕನಾಗಿ ಬಿಂಬಿಸಿದ್ದೂ, ಈಗ ಮೋದಿಯ ಪಟ್ಟಾಭಿಷೇಕ ಮಾಡಿದ್ದು ಇದೇ ಆರೆಸ್ಸೆಸ್. ಇಬ್ಬರನ್ನೂ ‘ಲೋಹ ಪುರುಷ’ ಎಂದು ಮೆರೆದಾಡಿದ್ದೂ ಸಂಘ ಪರಿವಾರವೇ. ಭಾರತದ ಸಂವಿಧಾನವನ್ನು ತಿರಸ್ಕರಿಸಿ ಮನು ಸ್ಮೃತಿಯನ್ನು ಎತ್ತಿ ಹಿಡಿಯುವ, ಮತ್ತು ಹಿಟ್ಲರ್-ಮುಸೊಲಿನಿ ಫ್ಯಾಸಿಸ್ಟ್ ಚಳುವಳಿಯಿಂದ ಸ್ಪೂರ್ತಿ ಪಡೆದ ಆರೆಸ್ಸೆಸ್ ಮತ್ತು ಬಿಜೆಪಿ ಸೇರಿದಂತೆ ಅದರ ಪರಿವಾರ ಎಂದೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿಲ್ಲ. ಬಿಜೆಪಿ ಒಪ್ಪಿಕೊಂಡಿದ್ದರೆ ಅದು ತಂತ್ರಗಾರಿಕೆ ಮಾತ್ರ. ಅದರ ನಿಜವಾದ ಉದ್ದೇಶ ‘ಹಿಂದೂ ರಾಷ್ಟ್ರ’. ಅದು ಸರ್ವಾಧಿಕಾರ ಮತ್ತು ಒಬ್ಬ ನಾಯಕ (ಫ್ಯೂರರ್) ಮೇಲೆ ಆಧರಿಸಿದ್ದು. ಅವರ ಮೂಲ ಘೋಷಣೆ ‘ಒಂದು ದೇಶ, ಒಂದು ಧರ್ಮ, ಒಬ್ಬ ನಾಯಕ’. ಇಲ್ಲಿ ಬಿಜೆಪಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಬದಲಾಗಿ, ಅಧಿಕಾರ ಹಿಡಿಯಲು, ತನ್ನ ಮೂಲ ಗುರಿ ಸಾಧನೆಗೆ ಇದು ಒಂದೇ ದಾರಿ ಎಂದು ಅದು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮೋದಿಯನ್ನು ಬಿಜೆಪಿ, ಆರೆಸ್ಸೆಸ್ ಸಂಘಪರಿವಾರಗಳಿಂದ ಪ್ರತ್ಯೇಕವಾಗಿ, ಆಶಿಶ್ ನಂದಿಯವರ ಮನೋವಿಶ್ಲೇಷಣೆ ಯ ಆಧಾರದ ಮೇಲೆ ನೋಡುವುದು ಹಲವು ಗೊಂದಲಗಳಿಗೆ ಮತ್ತು ರಾಜಕೀಯ ತಪ್ಪು ನಡೆಗಳಿಗೆ ಕಾರಣವಾಗುತ್ತದೆ.

‘ದೇಶಕ್ಕೆ ನಿರ್ಣಾಯಕ ನಾಯಕ ಮೋದಿ’ ಎಂಬ ‘ಅಲೆ’ ಅಥವಾ ‘ಘೋಷಣೆ’ಯ ವಿದ್ಯಮಾನ ‘ಮೋದಿಯ ವೈಯಕ್ತಿಕ ಸರ್ವಾಧಿಕಾರಿ ಮನೋಭಾವ’ದಿಂದ ಉಗಮವಾದದ್ದು ಎಂಬ ನಿಲುವು, ಅದರ ವಿರುದ್ಧ ಹೋರಾಟದ ವ್ಯೂಹ-ತಂತ್ರಗಳ ಬಗ್ಗೆ ತಪ್ಪುಗಳಿಗೆ ಹಾದಿ ಮಾಡಿಕೊಡುತ್ತದೆ. ಆಗ ”ಮೋದಿ ಎಂಬ ಒಬ್ಬ ವ್ಯಕ್ತಿಯ ವಿರುದ್ಧ ಹೋರಾಡಬೇಕು. ಆತ ಪ್ರಧಾನಿಯಾಗದಿದ್ದರೆ ಸಾಕು. ಅಡ್ವಾಣಿ ಅಥವಾ ಬೇರೆ ಯಾರಾದರೂ ಎನ್.ಡಿ.ಎ. ಪ್ರಧಾನಿಯಾದರೂ ಪರವಾಗಿಲ್ಲ, ಅದೇ ಸರ್ವಾಧಿಕಾರ ಕಾಂಗ್ರೆಸಿನಂತಹ ಇತರ ಪಕ್ಷ ತಂದರೂ ಪರವಾಗಿಲ್ಲ” – ಇತ್ಯಾದಿ ಆಘಾತಕಾರಿ ತಾತ್ವಿಕ ನೆಲೆಗಳನ್ನು ತಲುಪಬೇಕಾಗುತ್ತದೆ.

‘ಮೋದಿ ವಿದ್ಯಮಾನ’ದ ಉಗಮದ ನಿಜವಾದ ಕಾರಣ ಬೇರೆಯೇ. ನಮ್ಮ ಆಳುವ ಆಳುವ ವರ್ಗಗಳಿಗೆ ಅತ್ಯಂತ ಅನುಕೂಲಕರವಾಗಿರುವ (1991ರಿಂದ ಆರಂಭವಾಗಿ ಈಗ ತುತ್ತತುದಿಗೆ ಏರಿರುವ) ನವ-ಉದಾರವಾದಿ ನೀತಿಗಳನ್ನು ಜಾರಿ ಮಾಡಬೇಕಾದರೆ ಪ್ರಜಾಪ್ರಭುತ್ವವನ್ನು ಮೊಟಕುಗೊಳಿಸುತ್ತಾ ಹೋಗಲೇಬೇಕು. ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕತ್ವದ ಸರಕಾರಗಳು ಪೈಪೋಟಿಯಿಂದ ಮಾಡುತ್ತಾ ಬಂದಿವೆ. ಏಕೆಂದರೆ ನವ-ಉದಾರವಾದಿ ನೀತಿಗಳ ಬಗ್ಗೆ ಇವರೆಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹಾಗೆಯೇ ಪ್ರಜಾಪ್ರಭುತ್ವವನ್ನು ಮೊಟಕುಗೊಳಿಸುವುದರ ಬಗೆಗೂ ಭಿನ್ನಾಭಿಪ್ರಾಯವಿಲ್ಲ. ಆಳುವ ವರ್ಗಗಳ ಸೇವೆಗೆ ಇವೆರಡೂ ಕಟಿಬದ್ಧವಾಗಿರುವುದರಿಂದ ಇದರಲ್ಲೂ ಇವೆರಡರ ನಡುವೆ ವ್ಯತ್ಯಾಸ ಇಲ್ಲ. ಪ್ರಜಾಪ್ರಭುತ್ವವನ್ನು ‘ಸಸ್ಪೆಂಡ್’ ಮಾಡಿ ತುರ್ತು ಪರಿಸ್ಥಿತಿ ತಂದಿದ್ದು ಕಾಂಗ್ರೆಸ್ ಎಂಬುದನ್ನು ಮರೆಯಲಾದೀತೇ? ಆಗಲೂ ಇಂದಿರಾ ಗಾಂಧಿಯವರ ‘ವೈಯಕ್ತಿಕ ಸರ್ವಾಧಿಕಾರಿ ಮನೋಭಾವ’ಕ್ಕೆ ಅತಿಯಾದ ಮಹತ್ವವನ್ನು ಕೊಟ್ಟವರು ಇದ್ದರು.

ಆಳುವ ವರ್ಗಗಳಿಗೆ ಇಂದು ಕಾಂಗ್ರೆಸಿಗಿಂತ ಮೋದಿ ನಾಯಕತ್ವದ ಬಿಜೆಪಿ ಹೆಚ್ಚು ಆಕರ್ಷಕವಾಗಿ ಕಾಣಲು ಕಾರಣಗಳಿವೆ. ’ಕಾಂಗ್ರೆಸ್ ಬಿಜೆಪಿಗಿಂತ ಕಮ್ಮಿ ಕಾರ್ಪೋರೇಟ್-ಪರ’ modi_ambani_tata_kamathಎಂಬುದು ಖಂಡಿತ ಅಲ್ಲ. ಅಂಬಾನಿ ಮತ್ತು ಆತನ ಸಹ-ಬಿಲಿಯಾಧಿಪತಿಗಳು ಕಾಂಗ್ರೆಸ್ ಆಡಳಿತದಲ್ಲಿ ಕೊಬ್ಬುತ್ತಲೇ ಇದ್ದರು. ಬಹುಶಃ ಮನಮೋಹನ್ ಸಿಂಗರ ಕಾರ್ಪೋರೇಟ್-ಪರ ಸೇವೆಯ ದಾಖಲೆ ಮುರಿಯಲು ಮೋದಿ ಸಹ ಹರಸಾಹಸ ಪಡಬೇಕಾದೀತು! ಕಳೆದ 10 ವರ್ಷಗಳ ಕಾಂಗ್ರೆಸ್ ನಾಯಕತ್ವದ ಜನ-ವಿರೋಧಿ (ಕಾರ್ಪೋರೇಟ್-ಪರ) ನೀತಿಗಳು ಮತ್ತು ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. ಆದ್ದರಿಂದ ದೇಶದಲ್ಲಿ ಕಾಂಗ್ರೆಸ್-ವಿರೋಧಿ ಅಲೆ ಎದ್ದಿದೆ. ಬಿಜೆಪಿ ಈ ಎರಡರಲ್ಲೂ ಏನೂ ಕಡಿಮೆ ಇಲ್ಲದಿದ್ದರೂ, ‘ಬೇರೆ ಆಯ್ಕೆ ಇಲ್ಲ’ ಎಂದು ಜನರನ್ನು ನಂಬಿಸಿದರೆ ಬಿಜೆಪಿಯನ್ನು ಜನ ಆಯ್ಕೆ ಮಾಡಬಹುದು ಎಂಬುದು ಆಳುವ ಕಾರ್ಪೋರೇಟ್ ಲೆಕ್ಕಾಚಾರ. ಇದಲ್ಲದೆ ಬಿಜೆಪಿಯ ಅದರಲ್ಲೂ ಮೊದಿಯ ಕಾರ್ಪೋರೇಟ್-ಪರ ಮತ್ತು ಹಿಂದುತ್ವದ ಅಪೂರ್ವ ’ಕಾಕ್ ಟೈಲ್’ಕೊಡುವ ನಿರ್ಣಾಯಕ ನಾಯಕತ್ವ’ ಆಳುವ ಕಾರ್ಪೋರೇಟ್ ಗಳಿಗೆ ಇನ್ನಷ್ಟು ಆಕರ್ಷಕ. ಯಾಕೆಂದರೆ ಕಾರ್ಪೋರೇಟ್-ಪರ ನೀತಿಗಳಿಂದ ಹುಟ್ಟಬಹುದಾದ ಜನತೆಯ ಆಕ್ರೋಶವನ್ನು ವಿಭಜನಕಾರಿ ಹಾದಿಗಳಿಗೆ ತಿರುಗಿಸುವುದರಲ್ಲಿ ಬಿಜೆಪಿಯ ಹಿಂದಿರುವ ಸಂಘಪರಿವಾರ ಕಾಂಗ್ರೆಸಿಗಿಂತ ಗಮನಾರ್ಹವಾಗಿ ಹೆಚ್ಚು ‘ಕ್ಷಮತೆ’ ಮತ್ತು ‘ದಕ್ಷತೆ’ ಹೊಂದಿದೆ. ಆದರೂ ಇಲ್ಲೂ ಕಾಂಗ್ರೆಸ್ ಪಕ್ಷದ ‘ಕ್ಷಮತೆ’ ಮತ್ತು ದೀರ್ಘ ‘ಅನುಭವ’ವನ್ನು ತೀರಾ ಕಡೆಗಣಿಸುವಂತಿಲ್ಲ.

ಮೋದಿಯ ‘ಸರ್ವಾಧಿಕಾರದತ್ತ ಯಾತ್ರೆ’ಯ ಹಿಂದಿರುವುದು ಕಾರ್ಪೋರೇಟ್ -ಹಿಂದುತ್ವ ಕೂಟ. ಇದಕ್ಕೆ ಪ್ರತಿರೋಧ ಒಡ್ಡಲು ಕಾಂಗ್ರೆಸಿಗೆ ಸಾಧ್ಯವಿಲ್ಲ. ಯಾಕೆಂದರೆ bhagvat-gadkari-modiಅದಕ್ಕೆ ಕಾರ್ಪೋರೇಟ್ -ವಿರೋಧ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅದು ಕಾರ್ಪೋರೇಟ್ -ಸಂಪ್ರೀತಿಗೆ ಬಿಜೆಪಿಯ ಜತೆ ಪೈಪೋಟಿ ಮಾಡಬಲ್ಲುದು ಅಷ್ಟೇ. ಮಾತ್ರವಲ್ಲ, ಕಳೆದ 10 ವರ್ಷಗಳಲ್ಲಿ ಕಾರ್ಪೋರೇಟ್ -ಹಿಂದುತ್ವ ಕೂಟದ ರಚನೆಗೆ ಪೂರಕ ಸನ್ನಿವೇಶ ನಿರ್ಮಾಣ ಮಾಡಿರುವುದೂ ಮನಮೋಹನ್ ಸರ್ಕಾರವೇ. ಭಾರತದಲ್ಲಿ ಫ್ಯಾಸಿಸ್ಟ್ ಸರ್ವಾಧಿಕಾರ ತರುವ ವಾಹನವಾಗಬಲ್ಲ ಕೋಮುವಾದದ ವಿರುದ್ಧ ಹೋರಾಡಲು ಕಾಂಗ್ರೆಸ್ ಅಸಮರ್ಥ ಎಂದು ಪದೇ ಪದೇ ಸಾಬೀತಾಗಿದೆ. ಹಾಗೆ ನೋಡಿದರೆ ಕೋಮುವಾದ ಮತ್ತು ನವ-ಉದಾರವಾದಿ ನೀತಿಗಳ ಏರುಗತಿಗೂ ನೇರ ಸಂಬಂಧವಿದೆ. 1991ರಿಂದ ಆರಂಭವಾದ ನವ-ಉದಾರವಾದಿ ನೀತಿಗಳ ಪರಿಣಾಮಗಳ ವಿರುದ್ಧ ಜನತೆಯ ಆಕ್ರೋಶ ಬೇರೆಡೆಗೆ ತಿರುಗಿಸಲೆಂದೇ ಪಿ.ವಿ.ನರಸಿಂಹ ರಾವ್ ಕಾಂಗ್ರೆಸ್ ಸರ್ಕಾರ, ಬಾಬ್ರಿ ಮಸೀದಿ ನಾಶ ಮತ್ತು ಆ ಮೇಲಿನ ಕೋಮುದಳ್ಳುರಿಗೆ ಬಿಜೆಪಿಗೆ ‘ಅವಕಾಶ’ ಮಾಡಿಕೊಟ್ಟಿದ್ದು. ಇವೆಲ್ಲದರ ಬಗ್ಗೆ ದೇವನೂರು ಅವರ ಮೌನ ಮತ್ತು ಅವರ ವಾದಸರಣಿ ‘ಮೊದಿ ವಿದ್ಯಮಾನ’ದ ಹಿಂದೆ ನವ-ಉದಾರವಾದಿ ನೀತಿ-ಪರ ಕಾರ್ಪೋರೇಟ್ -ಹಿಂದುತ್ವ ಕೂಟವನ್ನು ಗುರುತಿಸದೆ, ‘ಮೋದಿ ಭೂತ’ ಹೋಗಲಾಡಿಸಲು ‘ಕಾಂಗ್ರೆಸ್ ಪಿಶಾಚಿ’ಯನ್ನು ಹೊರಬೇಕೆಂಬ ತಪ್ಪು ರಾಜಕೀಯ ನಿಲುವಿಗೆ ಹಾದಿ ಮಾಡಿ ಕೊಡುತ್ತದೆ. ‘ಮೋದಿ ಭೂತ’ ಹೋಗಲಾಡಿಸಲು ಸಾಧ್ಯವಿರುವುದು ನವ-ಉದಾರವಾದಿ ನೀತಿಗಳ ವಿರುದ್ಧ ದೃಢವಾಗಿ ನಿಲ್ಲಬಲ್ಲ, ಬದಲಿ ನೀತಿ ಕೊಡಬಲ್ಲ ರಾಜಕೀಯ ಶಕ್ತಿಗಳಿಗೆ ಮಾತ್ರ.

ಕೊನೆಯದಾಗಿ, ಸರ್ವಾಧಿಕಾರದ ‘ಮೊದಲ ಬಲಿ’ಯಾದ ಮಾಧ್ಯಮಗಳಿಗೆ ತಮ್ಮ ‘ಸಾವಿನ ಸುಳಿವು’ ಸಿಗದ್ದರ ಬಗ್ಗೆ ದೇವನೂರು ಅಚ್ಚರಿ ಪಡುತ್ತಾರೆ. ಇದು ಸ್ವಲ್ಪ ಆಶ್ಚರ್ಯಕರ ಹೇಳಿಕೆಯೇ. ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ಕಾರ್ಪೋರೇಟ್ -ಒಡೆತನ ಮತ್ತು ಅದರ ರಾಜಕೀಯ ಪರಿಣಾಮಗಳ ಬಗ್ಗೆ ಅರಿವು ಇರುವವರಿಗೆ, ಈ ಮಾಧ್ಯಮಗಳ ಬಗ್ಗೆ ಇಂತಹ ಭ್ರಮೆಗಳಿರಬಾರದು. ಬದಲಾಗಿ ಅಂತಹ ವಿಷವರ್ತುಲದ ವಿರುದ್ಧ ಹೋರಾಡುವ ರಾಜಕೀಯ ಶಕ್ತಿಗಳು ಬದಲಿ ಮಾಧ್ಯಮಗಳನ್ನು ಕಟ್ಟಬೇಕು ಎಂಬ ಅರಿವು ಇರಬೇಕು. ಕಾರ್ಪೋರೇಟ್ -ಒಡೆತನದ ಅಥವಾ ಅದರ ಬೆಂಬಲ ಅವಲಂಬಿಸಿರುವ ಮಾಧ್ಯಮಗಳು ಸ್ವಾಭಾವಿಕವಾಗಿಯೇ ತಮ್ಮ ಒಡೆಯರಿಗೆ ಬೇಕಾದ ನಿರ್ಣಾಯಕ ನಾಯಕ ಮೋದಿ’ಯ ಅಲೆಯ ಬಗ್ಗೆ ಗೊಬೆಲ್  ನಾಚಿಸುವ ಅಬ್ಬರದ ಪ್ರಚಾರ ಕೈಗೊಂಡಿವೆ.

ಹಿಂದುತ್ವ ಮಾದರಿಯ ನವ ಉದಾರೀಕರಣ

– ಇಂಗ್ಲೀಷ್ ಮೂಲ : ವರ್ಗೀಸ್ ಕೆ.ಜಾರ್ಜ
– ಅನುವಾದ : ಬಿ.ಶ್ರೀಪಾದ ಭಟ್

‘ಯಾರು ಹಿಂದೂಗಳ ಪರವಾಗಿ ಮಾತನಾಡುತ್ತಾರೋ ಅವರೇ ಈ ದೇಶವನ್ನು ಆಳುತ್ತಾರೆ’ ಎಂಬ ಘೋಷಣೆ ಹಾಗೂ ಮೋದಿಯ  ಮೋದಿಯ ಮುಖಪುಟವನ್ನು ಹೊತ್ತಂತmodi_bjp_conclave ದೊಡ್ಡ ಭಿತ್ತಿಪತ್ರಗಳು 2007 ರಲ್ಲಿ ಗುಜರಾತ್ ನಲ್ಲಿ ರಾರಾಜಿಸುತ್ತಿದ್ದವು. ಈ ಭಿತ್ತಿಪತ್ರಗಳನ್ನು 2007ರ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ ಅದರ ಪಕ್ಷದ ಕಛೇರಿಯ ಮುಂದೆ ಪ್ರಚಾರಕ್ಕಾಗಿ ಅಂಟಿಸಲಾಗಿತ್ತು. 2012ರ ಮೂರನೇ ಗೆಲುವಲ್ಲ; 2007ರ ಗುಜರಾತ್ ವಿಧಾನ ಸಭಾ ಚುನಾವಣೆಯ ಎರಡನೇ ಗೆಲುವೇ ಮೋದಿ ಮಾದರಿಯ ಹಿಂದುತ್ವದ ಪಥಕ್ರಮಣದ ಮುನ್ನುಡಿಯಾಗಿತ್ತು. ಈ ಮುನ್ನುಡಿಯು ಮೂಲ ಹಿಂದುತ್ವದ ಮುಂದುವರೆದ ಅವತರಿಣಿಕೆಯಾಗಿತ್ತು. ರಾಜಕೀಯ ವ್ಯಾಖ್ಯಾನಕಾರರು ಇಂದಿನ 2014ರ ಚುನಾವಣೆಯ ಚರ್ಚೆಯನ್ನಾಗಿರಿಸಿಕೊಂಡಿರುವ ‘ಹಿಂದುತ್ವದ ಮೇಲೆ ಅಭಿವೃದ್ಧಿಯು ಮೇಲುಗೈ ಸಾಧಿಸಿದೆ’  ಎನ್ನುವ ಚಿಂತನೆ ಮತ್ತೇನಲ್ಲದೆ ಹಿಂದುತ್ವ 2.0 ಅಷ್ಟೇ. ಬಹುಪಾಲು ವ್ಯಾಖ್ಯಾನಕಾರರು ಮೋದಿ ಮಾದರಿಯ ರಾಜಕೀಯ ಎನ್ನುವುದು ಇದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈ ಮಾದರಿಯನ್ನು ಅರ್ಥ ಮಾಡಿಕೊಂಡಿಲ್ಲ. ಕಳೆದ ಕೆಲವು ವರ್ಷಗಳಿಂದ  ನರೇಂದ್ರ ಮೋದಿಯ ರಾಜಕೀಯ ಮಾತುಗಳು ಮತ್ತು ನಡೆಗಳನ್ನು ಗಮನಿಸಿದರೆ ಧಾರ್ಮಿಕ ರಾಷ್ಟ್ರೀಯತೆಯನ್ನು ಆರ್ಥಿಕ ಅಭಿವೃದ್ಧಿಯೊಂದಿಗೆ ಬೆರೆಸುವುದೇ ಈ ಹಿಂದುತ್ವ 2.0ರ ಹೊಸ ಸಿದ್ಧಾಂತ ಎಂಬ ಅಂಶ ತಿಳಿಯುತ್ತದೆ.

ಇಂಡಿಯಾದಲ್ಲಿ ಹಿಂದುತ್ವದ ಬಲಪಂಥೀಯ ಸಿದ್ಧಾಂತದ ಬೆಳವಣಿಗೆ ಕುಂಠಿತಗೊಳ್ಳುತ್ತಿರುವುದಕ್ಕೆ ಮೂರು ಪ್ರಮುಖ ಸಂಧಿಗ್ಧತೆಗಳು ಮುಖ್ಯ ಕಾರಣಗಳಾಗಿವೆ. ಮೊದಲನೆಯದು ಹಿಂದು ಸಂಪ್ರದಾಯವಾದಿಗಳು ಮತ್ತು ಮಧ್ಯಮವರ್ಗಗಳ ನಡುವಿನ ಕಂದಕ. ಹಿಂದೂ ಧರ್ಮದ ಶ್ರೇಣೀಕೃತ ಸಮಾಜದ ಜಾತಿ ಪದ್ಧತಿಯಲ್ಲಿ ಅಲ್ಪಸಂಖ್ಯಾತರಾದ ಮೇಲ್ಜಾತಿಗಳ ಅಧಿಕಾರವನ್ನು ಇಂದಿನ ಪ್ರಜಾಪ್ರಭುತ್ವದ ಗಟ್ಟಿಯಾದ ನೆಲೆಯಲ್ಲಿ ನಿರಂತರವಾಗಿ ವಿರೋಧಿಸುತ್ತಿರುವ ಬಹುಸಂಖ್ಯಾತ ತಳ ಸಮುದಾಯಗಳು. ಮೂರನೆಯದು ತನ್ನ ಇಂದಿನ ಸಂಘಟನೆಯನ್ನು ಬಿಜೆಪಿಯ ರಾಜಕೀಯದೊಂದಿಗೆ ಬೆರೆಸುವುದು ಹೇಗೆ ಎನ್ನುವ ಜಿಜ್ಞಾಸೆಯಲ್ಲಿರುವ ಆರೆಸ್ಸೆಸ್.

ಕಳೆದ ಕೆಲವು ವರ್ಷಗಳ ರಾಜಕೀಯವನ್ನು ಗಮನಿಸಿದರೆ ಬಿಜೆಪಿಯ ಬೆಳವಣಿಗೆ ಭೌಗೋಳಿಕವಾಗಿ ಅಲ್ಲಲ್ಲಿ ತೇಪೆ ಹಚ್ಚಿದಂತಿದ್ದರೆ, ಚುನಾವಣಾ ಸಂಧರ್ಭದಲ್ಲಿ ಒಂದು ಎಪಿಸೋಡಿನಂತಿದೆ. ಇಂಡಿಯಾದಲ್ಲಿನ ಹಿಂದೂ ರಾಷ್ಟ್ರೀಯತೆಯ ಇತಿಹಾಸವನ್ನು ಗಮನಿಸಿದಾಗ ರಾಜಕೀಯ ವಿಶ್ಲೇಷಕರು ಮೋದಿಯು ತನ್ನ ಹಿಂದಿನ ತಲೆಮಾರಿನ ನಾಯಕರಾದ ವಾಜಪೇಯಿ ಮತ್ತು ಅಡ್ವಾಣಿನಿಗಿಂತಲೂ ಭಿನ್ನವಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ವಾಜಪೇಯಿಯವರನ್ನು ನಾವು ಸೋಲಿಸಿದ್ದೇವೆ; ಇನ್ನು ಈ ಮೋದಿ ಯಾವ ರೀತಿಯಲ್ಲಿಯೂ ವಾಜಪೇಯಿಯವರಿಗೆ ಸಮಾನರಲ್ಲ’ ಎಂದು ಕಾಂಗ್ರೆಸ್ ಪಕ್ಷದ ಜೈರಾಮ್ ರಮೇಶ್ ಹೇಳುತ್ತಾರೆ.

ಇತಿಹಾಸವು ಭವಿಷ್ಯದ ಮುನ್ಸೂಚಿ ಎನ್ನುವುದೇನೋ ನಿಜ. ಆದರೆ ಮೊದಲನೇ ಬಾರಿ ಎನ್ನುವ ಸಂಗತಿಯೂ ಇರುತ್ತದೆ ಎಂಬ ಪಾಠವನ್ನೂ ನಮಗೆ ಇತಿಹಾಸವು middleclass-indiaಕಲಿಸುತ್ತದೆ. ಕಳೆದ ಒಂದು ದಶಕದಲ್ಲಿ ಗುಜರಾತ್ ನಲ್ಲಿ ಜರುಗಿದ ಈ ಹಿಂದುತ್ವ  2.0 ದ ಸಾಮಾಜಿಕ ಲ್ಯಾಬೋರೇಟರಿಯು ಮೇಲಿನ ಮೂರು ಸಂಧಿಗ್ಧತೆಗಳನ್ನು ಮೀರಲು ಸಹಕಾರಿಯಾಗುತ್ತದೆ ಎನ್ನುವುದು ಸಣ್ಣ ವಿಷಯವೇನಲ್ಲ. ಈ ಆಧುನಿಕತೆಯ ಅಭಿವೃದ್ಧಿ ಮತ್ತು ಹಿಂದುತ್ವದ ಸಂಪ್ರದಾಯವನ್ನು ಒಂದಕ್ಕೊಂದು ಬೆರಸುವುದರಲ್ಲಿ ಮೋದಿ ನಿಪುಣ. ಟಾಟಾ ಕಂಪನಿಯ ನ್ಯಾನೋ ಕಾರಿನ ಕಾರ್ಖಾನೆ ಪಶ್ಚಿಮ ಬಂಗಾಳದಿಂದ ಗುಜರಾತ್ ಗೆ ಸ್ಥಳಾಂತರಗೊಂಡಾಗ ಮೋದಿಯು ಇದನ್ನು ಕ್ರಷ್ಣ ಪರಮಾತ್ಮನು ಉತ್ತರ ಪ್ರದೇಶದ ಮುಥುರಾದಲ್ಲಿ ಹುಟ್ಟಿ ದ್ವಾರಕೆಯಲ್ಲಿ ಬೆಳೆದದ್ದಕ್ಕೆ ಹೋಲಿಸಿದ್ದರು.

ಒಂದು ದಶಕದ ಹಿಂದೆ ಸಂಘಪರಿವಾರವು ವಾಜಪೇಯಿಯವರ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯನ್ನು ತೀವ್ರವಾಗಿ ವಿರೋಧಿಸಿತ್ತು. ಇದಕ್ಕಾಗಿ ತನ್ನ ಅಂಗ ಸಂಸ್ಥೆ ಸ್ವದೇಶಿ ಜಾಗರಣ ಮಂಚವನ್ನು ಬಳಸಿಕೊಂಡಿತ್ತು. ಆದರೆ ಮೋದಿಯು ಈ ಸ್ವದೇಶಿ ಜಾಗರಣ ಮಂಚವನ್ನು ಗುಜರಾತ್ ರಾಜ್ಯದಿಂದಲೇ ಓಡಿಸಿಬಿಟ್ಟರು. ಬಲಪಂಥೀಯರ ಬಂಡವಾಳಶಾಹಿ ವಿರೋಧಿ ಧ್ವನಿಯು ಇಂದು ಕಾಣಿಸುತ್ತಿಲ್ಲ ಮತ್ತು ಕೇಳಿಸುತ್ತಿಲ್ಲ. ಆದರೆ ಸಾಂಪ್ರದಾಯಿಕತೆಯನ್ನು ಬಿಟ್ಟುಕೊಟ್ಟಿಲ್ಲ. ಎಪ್ರಿಲ್ ೨ ರಂದು ತನ್ನ ಬಿಹಾರಿನ ಚುನಾವಣಾ ಭಾಷಣದಲ್ಲಿ ಈ ಜನ್ಮಭೂಮಿಯು ಗೋವುಗಳನ್ನು ಪೂಜಿಸುವವರ ದೇಶ. ಹಾಗಾಗಿ ಗೋವು ಹತ್ಯೆ ಮಾಡುವವರನ್ನು ನೀವು ಹೇಗೆ ಬೆಂಬಲಿಸುತ್ತೀರಿ? ಎಂದು ಮೋದಿಯು ಸಭಿಕರನ್ನು ಪ್ರಶ್ನಿಸುತ್ತಾರೆ. ಆ ಮೂಲಕ ಕಳೆದ ಒಂದು ಶತಮಾನದ ಹಿಂದುತ್ವ ರಾಜಕೀಯದ ಫೇವರಿಟ್ ವಿಷಯವನ್ನು ಮರಳಿ ಎತ್ತಿಕೊಂಡು ಪ್ರಚೋದಿಸುತ್ತಾರೆ.

ಮತ್ತೊಂದೆಡೆ ಮೋದಿಯ ಹಿಂದುಳಿದ ವರ್ಗದ ಹಿನ್ನೆಲೆಯು ತಳ ಸಮುದಾಯಗಳು ಈ ಹಿಂದುತ್ವದ ಕುರಿತಾದ ಗುಮಾನಿಗಳನ್ನು ಕಳಚಿಕೊಳ್ಳಲು ಸಹಾಯ ಮಾಡುತ್ತಿದೆ. ರಾಜಕೀಯ ಪಕ್ಷವೊಂದು ತನ್ನ ಮಾತೃಪಕ್ಷದ ಸಿದ್ಧಾಂತ ಮತ್ತು ನಿಯಂತ್ರಣಕ್ಕೆ ಆದ್ಯತೆ ಕೊಡಬೇಕೆ ಅಥವಾ ಹೊಂದಾಣಿಕೆ ಮತ್ತು ಮುಕ್ತ ತತ್ವಗಳಿಗೆ ದಾರಿ ಮಾಡಿಕೊಡಬೇಕೆ ಎನ್ನುವ ಜಿಜ್ಞಾಸೆ ಸಂಘ ಪರಿವಾರದಲ್ಲಿ ಕಳೆದ ದಶಕದಿಂದಲೂ ನಡೆಯುತ್ತಿದೆ. 2009ರಲ್ಲಿನ ಸೋಲಿನ ನಂತರ ಈ ವಿಷಯಗಳು ಮತ್ತೆ ಚರ್ಚೆಗೆ ಬಂದವು. ಅರುಣ್ ಜೇಟ್ಲಿಯಂತವರು ಎರಡನೆಯದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕೆಂದು ವಾದಿಸುತ್ತಿದ್ದಾರೆ. ಸ್ವತಃ ಮೋದಿಯೇ 2012ರವರೆಗೂ ಅನೇಕ ಬಾರಿ ತನ್ನ ಮಾತೃಪಕ್ಷ ಆರೆಸ್ಸೆಸ್ ನ ಹುಕುಂಗಳನ್ನು ಉಲ್ಲಂಘಿಸಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ತನ್ನದೇ ನೆಲೆಗಟ್ಟನ್ನು ಕಂಡುಕೊಳ್ಳಲು ಸೋತಿದ್ದ ಬಿಜೆಪಿ ಪಕ್ಷವು ದಯನೀಯವಾಗಿ ಆರೆಸ್ಸೆಸ್ ಗೆ ಶರಣಾಗತವಾಯಿತು. ಹಳೆ ತಲೆಮಾರಿನವರು ಇಂದಿಗೂ ಸಂಘ ಪರಿವಾರದಲ್ಲಿ ಪ್ರಾಮುಖ್ಯತೆ ಹೊಂದಿದ್ದಾರೆ ಎಂದು ಪರಸ್ಪರ ಮೋಸಗೊಳಿಸುವ ವಿಚಿತ್ರವಾದ ಹೊಂದಾಣಿಕೆ ಸಧ್ಯಕ್ಕೆ ಈ ಆರೆಸಸ್-ಬಿಜೆಪಿಯ ನಡುವೆ ಏರ್ಪಟ್ಟಿದೆ.ಆದರೆ ಇವರಿಬ್ಬರೂ ಮಾಡುತ್ತಿರುವ ಏಕೈಕ ಕೆಲಸವೆಂದರೆ ಮೋದಿಯನ್ನು ಪೈಪೋಟಿಯಲ್ಲಿ ಓಲೈಸುವುದು.

ಆರೆಸ್ಸೆಸ್ ನ ಸಂಚಾಲಕ ರಾಮ ಮಾಧವ ಅವರು “ಇಲ್ಲಿ ಎರಡು ವಿಷಯಗಳಲ್ಲಿ ನಮ್ಮಲ್ಲಿ ಸಹಭಾಗಿತ್ವವಿದೆ. ಮೊದಲನೆಯದು ನಾವೆಲ್ಲರೂ ನಂಬಿರುವ, ಒಪ್ಪಿರುವ narender_modi_rssನಮ್ಮ ಹಿಂದುತ್ವದ ಸಿದ್ಧಾಂತ. ಎರಡನೆಯದು ಮಾನವ ಸಂಪನ್ಮೂಲವನ್ನು ಹಂಚಿಕೊಳ್ಳುವುದು. ಈ ಎರಡೂ ವಿಷಯಗಳಲ್ಲಿಯೂ ಆರೆಸಸ್ ಮತ್ತು ಬಿಜೆಪಿಯ ನಡುವೆ ಮೊದಲಿನಿಂದಲೂ ಇರುವ ಸೌಹಾರ್ದಯುತವಾದ ಮತ್ತು ಸಾಂಪ್ರದಾಯಿಕವಾದ ಸಂಬಂಧಗಳನ್ನು ಮುಂದುವರೆಸುತ್ತೇವೆ.” ಎಂದು ಹೇಳುತ್ತಾರೆ. ಮೋದಿಯನ್ನು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಏಕೈಕ ನಾಯಕನೆಂದು ಬಿಂಬಿಸುವುದರ ಅಗತ್ಯತೆಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ “ಆರೆಸಸ್ ಒಬ್ಬ ವ್ಯಕ್ತಿಯನ್ನು ನಾಯಕನನ್ನಾಗಿ ಬಿಂಬಿಸಲು ಎಂದಿಗೂ ವಿರೋಧಿಸುವುದಿಲ್ಲ. ನಿಜಕ್ಕೂ ಹೇಳಬೇಕೆಂದರೆ ಅದು ಇಂದು ಅಗತ್ಯವಾಗಿದೆ. 2009ರ ನಮ್ಮ ’ಅಡ್ವಾಣಿ ನಮ್ಮ ಪ್ರಧಾನ ಮಂತ್ರಿ’ ಸ್ಲೋಗನ್ ಅನ್ನು ಜನ ಮರೆತಿದ್ದಾರೆ.  ಹೀಗಾಗಿ ಮೋದಿಯವರ ಏಕೈಕ ನಾಯಕನೆಂದು ಓಲೈಸುವುದರಲ್ಲಿ ಅಂತಹ ಅಭೂತಪೂರ್ವವಾದದ್ದೇನು ಇಲ್ಲ” ಎಂದು ವಿವರಿಸಿದರು. ಇಂದು ಮೋದಿಯ ವ್ಹಿಪ್ ಅನ್ನು ಈಡೇರಿಸಲು ಆರೆಸಸ್ ತನ್ನ ವ್ಹಿಪ್ ಅನ್ನು ಬಳಸುತ್ತಿದೆ.

ಆರ್ಥಿಕ ಸುಧಾರಣೆಯ ಸಂಬಂಧದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಕೆಲವು ಸಾಮ್ಯತೆಗಳಿದ್ದರೂ ಅನೇಕ ಭಿನ್ನತೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಹಿಂದೂಗಳ ಒಳಗೊಳ್ಳುವಿಕೆಯೇ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯ ಮೂಲ ಉದ್ದೇಶವಾಗಿರಬೇಕೆಂಬುದು ಹಿಂದುತ್ವ 2.0ದ ಮೂಲಭೂತ ಆಶಯ. ಇಂದಿನ ಗುಜರಾತ್ ರಾಜ್ಯ ಸರಕಾರವು ಮುಸ್ಲಿಂಮರಿಗೆ ಸ್ಕಾಲರ್ಶಿಪ್ ಸೌಲಭ್ಯವನ್ನು ವಿರೋಧಿಸಿ ಸುಪ್ರೀಂ ಕೋರ್ಟನಲ್ಲಿ ಕೇಸ್ ನಡೆಸುತ್ತಿದೆ. ಬಡವರಿಗಾಗಿ ಹಮ್ಮಿಕೊಳ್ಳಲಾಗುವ ಕಲ್ಯಾಣ ಕಾರ್ಯಕ್ರಮಗಳನ್ನು ಒಂದು ವ್ಯರ್ಥವಾದ, ಹಣ ಪೋಲು ಮಾಡುವ ಕಾರ್ಯಕ್ರಮವೆಂದು ಮೋದಿ ಖಂಡಿಸಿದ್ದಾರೆ.  ‘ಆಹಾರ ಭದ್ರತೆ ಕಾಯ್ದೆ’ಯನ್ನು ಕೇವಲ ಒಂದು ಕಾಗದದ ತುಂಡು ಮಾತ್ರ ಎಂದು ಟೀಕಿಸಿದ್ದಾರೆ. ಅಲ್ಲದೆ  ಕೊಳ್ಳುಬಾಕುತನದ ಆರ್ಥಿಕ ಅಭಿವೃದ್ಧಿಯ ಜೊತೆ ಜೊತೆಗೆ ಹಿಂದೂಗಳ ಅಭಿವೃದ್ಧಿಯೂ ಸಹ ಆದ್ಯತೆಯಾಗಿ ಪರಿಗಣಿತವಾಗಿದೆ.

ಮೋದಿಯ ಹೇಳಿಕೆಗಳನ್ನು Deconstruct ಮಾಡಬಯಸುವವರು ಕೆಲವು ಸಾದೃಶ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ. ಮೋದಿಗಾಗಿ ‘ಗುಜರಾತ್  2002’ ಅನ್ನು cut off point ಆಗಿ ಪರಿಗಣಿಸುತ್ತಾರೆ. ಎಲ್ಲಾ ಹೋಲಿಕೆಗಳನ್ನು 2002ರ ಮುಂಚೆ ಮತ್ತು ನಂತರ ಎಂದು ಚರ್ಚಿಸಲಾಗುತ್ತದೆ. “2002 ರ ಮುಂಚೆ ಇಷ್ಟೊಂದು ಶಾಲೆಗಳು, ಇಷ್ಟೊಂದು ನೀರಾವರಿ ಯೋಜನೆಗಳು; 2002ರ ನಂತರ ಎಷ್ಟೊಂದು ಶಾಲೆಗಳು ಹಾಗೂ ಇನ್ನೂ ಎಷ್ಟೊಂದು ಯೋಜನೆಗಳು.” ಹಾಗೆಯೇ ಕೋಮು ಗಲಭೆಗಳು ಸಹ. “2002ರ ಮುಂಚೆ ಎಷ್ಟೊಂದು ಕೋಮು ಗಲಭೆಗಳು; 2002ರ ನಂತರ ಒಂದೂ ಕೋಮು ಗಲಭೆಗಳಿಲ್ಲ.”

ಆಮೆ ವೇಗದ ಆರ್ಥಿಕ ಪ್ರಗತಿಯನ್ನು ‘ಹಿಂದೂ ಮಾದರಿಯ ಪ್ರಗತಿ’ ಎನ್ನುವ ಅಪಹಾಸ್ಯಕ್ಕೆ ವ್ಯತಿರಿಕ್ತವಾಗಿ ಹಿಂದೂ ಪ್ರತಿಪಾದನೆ, ಕೊಳ್ಳು ಬಾಕುತನದ ಉತ್ಕರ್ಷ, ಆರ್ಥಿಕ ಅಭಿವೃದ್ಧಿ ಎನ್ನುವ ಅಂಶಗಳು ಹಿಂದುತ್ವದ ಬೆಳವಣಿಗೆಯ ದಿಕ್ಸೂಚಿ ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ‘ಹಿಂದೂ ಪುಕ್ಕಲುತನ’ ಎನ್ನುವ ಅಪಮಾನದ ಸ್ಥಿತಿಗೆ ಈ ದೇಶವೆಲ್ಲಿ ಮರಳುತ್ತೇವೆಯೋ ಎನ್ನುವ ಆತಂಕ ಇಂಡಿಯಾದ ಮಧ್ಯಮವರ್ಗಗಳಲ್ಲಿ ಮನೆಮಾಡಿದೆ. ಈ ಆತಂಕವನ್ನು ಮೀರುವ ಪ್ರಕ್ರಿಯೆಯೇ ಹಿಂದುತ್ವ 2.0ದ ಹುಟ್ಟಿಗೆ ಕಾರಣವಾಗಿದೆ.

 ಹಿಂದುತ್ವ 2.0 ದ ಸಹಾಯದಿಂದ ತನ್ನೆಲ್ಲ ದೌರ್ಬಲ್ಯಗಳನ್ನು ಮೀರಿ ಬೆಳೆಯಲು ಹಿಂದೂ ರಾಷ್ಟ್ರೀಯವಾದಿ ರಾಜಕಾರಣವು ತವಕಿಸುತ್ತಿದೆ.

( ಕೃಪೆ : ದ ಹಿಂದೂ, 4,ಎಪ್ರಿಲ್, 2014)