Category Archives: ನಕ್ಸಲ್ ಕಥನ

ಎಂದೂ ಮುಗಿಯದ ಯುದ್ಧ (ನಕ್ಸಲ್‍ ಕಥನ -1)


– ಡಾ.ಎನ್.ಜಗದೀಶ್ ಕೊಪ್ಪ


 

“ನಕ್ಸಲಿಯರು ಹಿಂಸೆಯ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಆಂತರೀಕ ಭದ್ರತೆಗೆ ಅತಿದೊಡ್ಡ ಸವಾಲಾಗಿದ್ದಾರೆ.” ಇದು ಪ್ರಧಾನ ಮಂತ್ರಿಯ ಮನದಾಳದ ಮಾತು. ಸ್ವತಃ ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿರುವ ಡಾ. ಮನಮೋಹನಸಿಂಗ್, ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಬಲ್ಲವರು. ಹಾಗಾಗಿ  ಅವರ ಈ ಮಾತು ನೂರರಷ್ಟು ಸತ್ಯಕೂಡ ಹೌದು.

ಸ್ವಾತಂತ್ರ್ಯ ನಂತರ ಭಾರತದ ಒಡಲೊಳಗೆ ಒಂದು ಗಾಯದ ಹುಣ್ಣಿನಂತೆ ಹುಟ್ಟಿಕೊಂಡು ಕ್ಯಾನ್ಸರ್ ರೋಗದಂತೆ ಎಲ್ಲೆಡೆ ಹಬ್ಬುತ್ತಿರುವ ನಕ್ಸಲ್ ಹಿಂಸಾಚಾರದ ಚಳವಳಿಯ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾದವರೆಂದರೆ, ಈ ದೇಶದ ಜನಪ್ರತಿನಿಧಿಗಳು, ಪೊಲೀಸರು, ಅಧಿಕಾರಿಗಳು, ಮತ್ತು ಜಮೀನುದಾರರು. ಇವರೆಲ್ಲರ ದಿವ್ಯ ನಿರ್ಲಕ್ಷ್ಯ, ಅಮಾನವೀಯತೆಯ ನಡುವಳಿಕೆ, ಹಾಗೂ ಬಡವರು ಮತ್ತು ಕೂಲಿಕಾರ್ಮಿಕರುಗಳ ಬಗ್ಗೆ ಇವರುಗಳು ಹೊಂದಿದ್ದ ತಿರಸ್ಕಾರ ಭಾವನೆಗೆ ಪ್ರತಿಯಾಗಿ ತಲೆ ಎತ್ತಿರುವ ಇವತ್ತಿನ ಹಿಂಸೆಗೆ ನಾವೆಲ್ಲಾ ಮೂಕ ಸಾಕ್ಷಿಯಾಗಬೇಕಿದೆ.

1967 ರ ಮಾರ್ಚ್ ತಿಂಗಳ ಮೂರರಂದು ಪಶ್ಚಿಮ ಬಂಗಾಳದ ಉತ್ತರಭಾಗದ ನಕ್ಸಲ್‍ಬಾರಿ ಎಂಬ ಪುಟ್ಟ ಹಳ್ಳಿಯಲ್ಲಿ ಸ್ಪೋಟಗೊಂಡ ಪ್ರತಿಭಟನೆಯ ಅಗ್ನಿಜ್ವಾಲೆ ಈಗ ನಕ್ಸಲ್ ಚಳವಳಿಯ ಹೆಸರಿನಲ್ಲಿ ಆರದೆ ಇಂದಿಗೂ ಉರಿಯುತ್ತ ದೇಶದೆಲ್ಲೆಡೆ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಈ ಅಗ್ನಿ ದೀವಿಗೆಯನ್ನು ಹೊತ್ತಿಸಿ ಎತ್ತಿ ಹಿಡಿದವರು ಚಾರು ಮುಜಂದಾರ್ ಮತ್ತು ಕನುಸನ್ಯಾಲ್ ಎಂಬ ಎಡಪಂಥೀಯ ವಿಚಾರೆಧಾರೆಗಳಿಂದ ಪ್ರಭಾವಿತರಾದ ಇಬ್ಬರು ನಾಯಕರು. ಉತ್ತರಕ್ಕೆ ನೇಪಾಳ. ಪೂರ್ವಕ್ಕೆ ಇಂದಿನ ಬಂಗ್ಲಾ ದೇಶಗಳ ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರಿದಿರುವ ನಕ್ಸಲ್‍ಬಾರಿ ಹಳ್ಳಿಯ ಕೃಷಿ ಕೂಲಿಕಾರ್ಮಿಕರಿಂದ ಪ್ರಾರಂಭವಾದ ಪ್ರತಿಭಟನೆ ಒರ್ವ ಪೋಲಿಸ್ ಅಧಿಕಾರಿ ಹಾಗೂ ಹತ್ತು ಮಂದಿ ಚಳವಳಿಗಾರರ ಸಾವಿನೊಂದಿಗೆ (ಇವರಲ್ಲಿ ಆರು ಮಂದಿ ಮಹಿಳೆಯರು) ಹಿಂಸೆಯ ಅಧ್ಯಾಯಕ್ಕೆ ನಾಂದಿ ಹಾಡಿತು. ನಕ್ಸಲ್ ಚಳವಳಿ ಭಾರತದಲ್ಲಿ ದಿಡೀರನೆ ಹುಟ್ಟಿಕೊಂಡ ಹಿಂಸಾತ್ಮಕ ಚಳವಳಿಯಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವಿದೆ.

ಈ ಹಿಂದೆ ನಡೆದ ಭಾರತದ ರೈತರ ಮತ್ತು ಕೃಷಿ ಕೂಲಿಕಾರ್ಮಿಕರ ಪ್ರತಿಭಟನೆಯ ಇತಿಹಾಸ ಇದರ ಬೆನ್ನುಲುಬಾಗಿದೆ. ನಕ್ಸಲ್ ಹೋರಾಟ ಎಂದರೆ, ಹಿಂಸೆಯ ಪ್ರತಿರೂಪ ಎಂಬ ಇಂದಿನ ಉಢಾಪೆ ಮಾತು ಮತ್ತು ಹೇಳಿಕೆಗಳ ನಡುವೆ ಅದರ ಇತಿಹಾಸವನ್ನು ಕೂಲಂಕುಷವಾಗಿ ಮುಕ್ತ ಮನಸ್ಸಿನಿಂದ ಪರಾಮರ್ಶಿಸುವ ಅಗತ್ಯವಿದೆ. ಭಾರತದ ಇದೇ ಪಶ್ಚಿಮ ಬಂಗಾಳದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ನೀಲಿ ಬೆಳೆ ಬೆಳೆಯಲು ನಿರಾಕರಿಸಿ ಪ್ರತಿಭಟಿಸಿದ ರೈತರು, ಕೇರಳದಲ್ಲಿ ಮಾಪಿಳ್ಳೆಗಳು ನಡೆಸಿದ ಹೋರಾಟ, ಆಂಧ್ರದ ತೆಲಂಗಾಣದಲ್ಲಿ ಸರ್ಕಾರ ಮತ್ತು ಜಮೀನುದಾರರ ವಿರುದ್ಧ ಸಿಡಿದೆದ್ದ ಕೂಲಿ ಕಾರ್ಮಿಕರ ಪ್ರತಿಭಟನೆ ಇವೆಲ್ಲವೂ ನಕ್ಸಲ್ ಚಳವಳಿಯ ಪೂರ್ವ ಇತಿಹಾಸದ ಭಾಗಗಳೇ ಆಗಿವೆ. ಹಾಗಾಗಿ ನಕ್ಸಲ್ ಚಳವಳಿಯ ಅಧ್ಯಯನಕ್ಕೆ 1919 ರಲ್ಲಿ ಕಾಲಿಟ್ಟ ಕಮ್ಯೂನಿಷ್ಟ್ ವಿಚಾರಧಾರೆಯಿಂದ ಹಿಡಿದು ಇಂದಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಅರಾಜಕತೆಯ ಕೂಲಂಕುಷ ಅಧ್ಯಯನದ ಅವಶ್ಶಕತೆ ಇದೆ.

ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಇಂಗ್ಲಿಷರ ವಸಾಹಿತುಶಾಹಿ ಆಳ್ವಿಕೆಯಲ್ಲಿ ಮೊದಲ ಬಾರಿಗೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸುಧಾರಣೆ ಮತ್ತು ಕ್ರಾಂತಿಯಾದದ್ದು ಪಶ್ಚಿಮ ಬಂಗಾಳದಲ್ಲಿ. ಹಾಗಾಗಿ ದುಡಿಯುವ ವರ್ಗದ ಆರಾಧ್ಯ ದೈವ ಕಾರ್ಲ್ ಮಾರ್ಕ್ಸ್‌ನ ವಿಚಾರಧಾರೆಯ ಬೀಜಗಳು ಇದೇ ನೆಲದಲ್ಲಿ  ಮೊಳಕೆ ಹೊಡೆದವು. ನಕ್ಸಲ್ ಹೋರಾಟದ ಇತಿಹಾಸ ಅರಿಯಲು, ಪಶ್ಚಿಮ ಬಂಗಾಳದಲ್ಲಿ ಸ್ವಾತಂತ್ರ್ಯ ಪೂರ್ವದ ಸುಧಾರಣಾವಾದಿಗಳ ಬದುಕು, ಮತ್ತು ಅವರ ಹೋರಾಟ, ಹಾಗೂ 1919 ರಲ್ಲಿ ತಳವೂರಿ ನಂತರ ಹಲವು ಸಂಘಟನೆಗಳಾಗಿ ವಿಭಜನೆಗೊಂಡ ಕಮ್ಯೂನಿಷ್ಟ್ ಪಕ್ಷದ ಇತಿಹಾಸವನ್ನು ನೋಡಬೇಕಾಗಿದೆ. ಅದೇ ರೀತಿ. ಆಂಧ್ರದಲ್ಲಿ ನಿಜಾಮನ ಆಳ್ವಿಕೆಯ ದೌರ್ಜನ್ಯ, ಅರಾಜಕತೆ, ಸ್ವಾತಂತ್ರ್ಯ ಪೂರ್ವದಲ್ಲಿ ಆಂಧ್ರದಲ್ಲಿ ಸೃಷ್ಟಿಯಾದ “ದೇಸಕೋಸಂ (ದೇಶಕೊಸ್ಕರ)”, “ಈ ದಾರಿ ಎಕ್ಕಡಿಕಿ (ಈ ದಾರಿ ಎಲ್ಲಿಗೆ)”, “ಜ್ವಾಲಾತೋರಣಂ (ಬೆಂಕಿಯ ತೋರಣ)”, “ಕೊಳ್ಳಮುಗಟ್ಟಿತೆ ಏಮಿ (ತುಂಡು ಉಡುಗೆ ಉಟ್ಟರೇನು?)” ಮುಂತಾದ ವೈಚಾರಿಕ ಕಾದಂಬರಿಗಳು, ಮತ್ತು ಈ ಕೃತಿಗಳು ಅಂದಿನ ತಲೆಮಾರಿನ ಯುವಕರ ಮೇಲೆ ಬೀರಿದ ಪ್ರಭಾವ, ಹಾಗೂ ಆಂಧ್ರ ಪ್ರದೇಶದ ಹೊಲೆ ಮಾದಿಗರ ದಾರುಣ ಬದುಕನ್ನು ತೆರೆದಿಡುವ ವೈ.ಬಿ. ಸತ್ಯನಾರಾಣರ “ನನ್ನ ಅಪ್ಪ ಬಲಿಯ” ಎಂಬ ಆತ್ಮ ಕಥನ, ಕೇರಳದ ತಿರುವಾಂಕೂರು ರಾಜನ ತಲೆತಿರುಕುತನದ ಇತಿಹಾಸ ಇವೆಲ್ಲವನ್ನು ನಾವು ಅರಿಯಬೇಕಾಗಿದೆ.

ಭಾರತದ ನಿಜವಾದ ಬಡತನದ ಮುಖವನ್ನು ಕಾಣಬೇಕಾದರೆ, ಫ್ರೆಂಚ್ ಲೇಖಕ ಡಾಮಿನಿಕ್ಯೂ ಲಾಪಿಯರ್ರೆ‍ರವರ “ಸಿಟಿ ಆಫ್ ‍ಜಾಯ್” ಕಾದಂಬರಿ, ಇಲ್ಲಿನ ಆದಿವಾಸಿಗಳ ನೋವಿನ ಜಗತ್ತನ್ನು ಅರಿಯಬೇಕಾದರೆ ಎಸ್.ಕೆ. ಚೌಧುರಿಯವರ “ಇಂಡಿಯನ್ ಟ್ರೈಬ್ಸ್ ಅಂಡ್ ಮೆಯಿನ್‍ಸ್ಟ್ರೀಮ್ ಹಾಗೂ ಟ್ರೈಬಲ್ ಐಡೆಂಟಿಟಿ” ಕೃತಿಗಳನ್ನು ಓದಬೇಕು. ಇವೆಲ್ಲಕ್ಕಿಂತ ಹೆಚ್ಚಾಗಿ ಈ ಭೂಮಿಯ ಬಹುಭಾಗವನ್ನು ಹಲವು ಶತಮಾನಗಳು ಆಕ್ರಮಿಸಿಕೊಂಡು ಆಳಿದ ಬ್ರಿಟಿಷರು ಈ ನೆಲದ ಅನಕ್ಷರಸ್ತ, ಅಮಾಯಕ ಜನರ ಮೇಲೆ ನಡೆಸಿದ ಮಾನಸಿಕ ಹಾಗೂ ಬೌದ್ಧಿಕ ದೌರ್ಜನ್ಯವನ್ನು ತಿಳಿಯಬೇಕಾದರೆ, ಫ್ರಾನ್ಸ್ ಮೂಲದ ವೈದ್ಯ ಪ್ರಾಂಟ್ಜ್ ಪಾನನ್ ಬರೆದ “ದ ವ್ರೆಚ್ಚಡ್ ಆಪ್ ದ ಅರ್ಥ್ (ಭೂಮಿಯ ವಿಕೃತಿ)” ಹಾಗೂ ಎಲ್ಲೆಕೆಬೊಯಿಚ್ಮಿರ್ ಬರೆದ “ಕಲೋನಿಯಲ್ ಅಂಡ್ ಪೋಸ್ಟ್ ಕಲೋನಿಯಲ್ ಲಿಟ್‌ರೇಚರ್” ಕೃತಿಗಳನ್ನು ನಾವು ಅವಲೋಕಿಸಬೇಕಾಗಿದೆ. ಏಕೆಂದರೆ, ಇವತ್ತಿನ ಭಾರತದ ಗರ್ಭಗುಡಿ ಸಂಸ್ಕೃತಿಯಿಂದ ಬಂದ ತಲೆ ಮಾಸಿದ ಕೆಲವರು ನಕ್ಸಲ್ ಚಳವಳಿಯ ಬಗ್ಗೆ ನೀಡುವ ಬೀಸು ಹೇಳಿಕೆಯನ್ನು ಗಮನಿಸಿದಾಗ ಈ ರಕ್ತಸಿಕ್ತ ಹೋರಾಟಕ್ಕೆ ಹಲವು ಮುಖಗಳಿವೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ.

ನಕ್ಸಲ್ ಚಳವಳಿಯನ್ನು ಹುಟ್ಟು ಹಾಕಿದ ಚಾರು ಮುಜಂದಾರ್, ಕನು ಸನ್ಯಾಲ್, ಮತ್ತು ಕೊಂಡಪಲ್ಲಿ ಸೀತರಾಮಯ್ಯ ಇವರುಗಳ ಬದುಕಿನ ಹೋರಾಟ ಮತ್ತು ದಾರುಣ ಅಂತ್ಯ, ನಕ್ಸಲ್ ಹೋರಾಟಕ್ಕೆ ಮನಸೋತು ಆತ್ಮಹತ್ಯೆಯ ದಾರಿ ಹಿಡಿದಿರುವ ಇಂದಿನ ಯುವಕರಿಗೆ ಎಚ್ಚರಿಕೆಯ ಗಂಟೆಯಾಗಬಲ್ಲದು. ನಕ್ಸಲ್ ಹೋರಾಟದ ಪಿತಾಮಹಾರೆಂದು ಗುರುತಿಸಿಕೊಂಡಿವ ಚಾರುಮುಜಂದಾರ್ ಮತ್ತು ಕನುಸನ್ಯಾಲ್ ಇವರ ಬದುಕು ಒಂದು ರೀತಿಯ ದುರಂತ ಕಥನವೆಂದರೆ ತಪ್ಪಾಗಲಾರದು. ಚಾರು ಮುಜಂದಾರ್ ಸಿಲಿಗುರಿಯ ಶ್ರೀಮಂತ ಜಮೀನ್ದಾರರ ಕುಟುಂಬದಲ್ಲಿ ಜನಿಸಿದವನು. (1918) ಅವನ ತಂದೆ ಬೀರೆಶ್ವರ್ ಮುಜಂದಾರ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಗತಿಪರ ಮನೋಭಾವವುಳ್ಳ ವ್ಯಕ್ತಿಯಾಗಿದ್ದರು.

ಬಾಲ್ಯದಿಂದಲೂ ಬಡವರು ಮತ್ತು ಬಡ ಕೂಲಿಕಾರ್ಮಿಕರ ಬಗ್ಗೆ ಅನುಕಂಪ ಹೊಂದಿದ್ದ ಚಾರುಮುಜಂದಾರ್ ಸಿಲಿಗುರಿಯಲ್ಲಿ ಪ್ರೌಢ ಶಿಕ್ಷಣ ಪಡೆದು ನಂತರ ಈಗ ಬಂಗ್ಲಾದೇಶಕ್ಕೆ ಸೇರಿಹೋಗಿರುವ ಪಾಬ್ನಾ ಪಟ್ಟಣದಲ್ಲಿನ ಎಡ್ವಡ್ ಕಾಲೇಜಿಗೆ ಸೇರ್ಪಡೆಯಾಗಿದ್ದ. ಆದರೆ, ತನ್ನ ಹರೆಯದಲ್ಲೇ ಕಾಲೇಜು ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಚಹಾ ತೋಟದ ಕಾರ್ಮಿಕರ ಬಗ್ಗೆ ದನಿಯೆತ್ತಿದ್ದ. ಕಾರ್ಲ್ ಮಾರ್ಕ್ಸ್ ದುಡಿಯುವ ವರ್ಗದ ಬಗ್ಗೆ ಹೊಂದಿದ್ದ ಕಾಳಜಿಯಿಂದ ಪ್ರೇರಿತನಾದ ಚಾರು ತನ್ನ ಕಣ್ಣ ಮುಂದೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಗಮನಿಸತೊಡಗಿದ. ಡಾರ್ಜಿಲಿಂಗ್ ಸುತ್ತ ಮುತ್ತ ಇದ್ದ ಆಂಗ್ಲರ ಚಹಾ ತೋಟಗಳಲ್ಲಿ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತಿತ್ತು. ಇದನ್ನು ಸಹಿಸಲಾಗದೆ, ಕಾರ್ಮಿಕರನ್ನು ಸಂಘಟಿಸಿ, ಅವರಿಗೆ ಗೌರಯುತವಾದ ಜೀವನ ಮತ್ತು ಶ್ರಮಕ್ಕೆ ತಕ್ಕಂತೆ ಕೂಲಿ ದೊರಕಿಸಿಕೊಡುವಲ್ಲಿ ಯಶಸ್ವಿಯಾದನು.

ಈ ಒಂದು ಹೋರಾಟದ ಯಶಸ್ವಿನ ನಂತರ ಬಡ ಗೇಣಿದಾರರ ಬವಣೆಯತ್ತ ಗಮನ ಹರಿಸಿದ ಚಾರು ಆ ಪ್ರಾಂತ್ಯದ ಶ್ರೀಮಂತ ಜಮೀನುದಾರರ ವಿರುದ್ಧ ಹೋರಾಟಕ್ಕೆ ಅಣಿಯಾದನು. ಶ್ರೀಮಂತರಿಂದ ಭೂಮಿಯನ್ನು ಗುತ್ತಿಗೆ ಪಡೆದ ಬಡ ರೈತರು ತಾವೇ ಬಿತ್ತನೆ ಬೀಜ, ಗೊಬ್ಬರ ತಂದು ಉತ್ತಿ ಬಿತ್ತಿ ಬೆಳೆ ತೆಗೆದ ನಂತರ ಮಾಲಿಕರಿಗೆ ಮೂರು ಭಾಗದ ಫಸಲು ನೀಡಿ ಉಳಿದ ಕಾಲು ಭಾಗ ಫಸಲನ್ನು ತಾವು ಪಡೆಯುತ್ತಿದ್ದರು. ಇದೊಂದು ರೀತಿಯಲ್ಲಿ ಕೂತು ಉಣ್ಣುವವರು ಬೇರೆ, ದುಡಿಯುವವರು ಬೇರೆ ಎಂಬಂತಾಗಿತ್ತು ಇಂತಹ ಅಸಮಾನತೆಯ ವಿರುದ್ಧ ಬಂಡೆದ್ದ ಚಾರು ಮುಜಂದಾರ್, ದುಡಿಯುವ ರೈತರಿಗೆ ಮೂರು ಭಾಗ ಫಸಲು ಸೇರಬೇಕೆಂದು 1942 ರಿಂದ 1946 ರವರೆಗೆ ನಿರಂತರವಾಗಿ ಪ್ರತಿಭಟಿಸಿ ಹಲವಾರು ಬಾರಿ ಜೈಲು ಸೇರಬೇಕಾಯಿತು. ಇಂತಹ ಒಂದು ಸಂದರ್ಭದಲ್ಲಿ ಚಾರುಗೆ ಕನುಸನ್ಯಾಲ್ ಭೇಟಿಯಾದನು.

ಕನುಸನ್ಯಾಲ್ ಕೂಡ ಸಿಲುಗುರಿ ಸಮೀಪದ ಸೆಪ್ತುಲ್ಲಜ್ಯೂಟ್ ಎಂಬ ಹಳ್ಳಿಯಲ್ಲಿ 1919 ರಲ್ಲಿ ಜನಿಸಿದವನು. ತನ್ನ ಹರೆಯದಲ್ಲಿ ಎಡಪಂಥೀಯ ವಿಚಾರಧಾರೆಗೆ ಒಲಿದು ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತನಾಗಿದ್ದಕೊಂಡು, ಕಾಲೇಜು ಶಿಕ್ಷಣದ ನಂತರ ಸಿಲುಗುರಿಯ ನ್ಯಾಯಾಲಯದಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತಿದ್ದವನು. ಒಮ್ಮೆ ಪಶ್ಚಿಮ ಬಂಗಾಳದ ಸರ್ಕಾರ ಕಮ್ಯೂನಿಷ್ಟ್ ಪಕ್ಷವನ್ನು ನಿಷೇಧಿಸಿದಾಗ ಸರ್ಕಾರದ ನಿಲುವನ್ನು ಪ್ರತಿಭಟಿಸಿ ಜೈಲು ಸೇರಿದ ಕನುಸನ್ಯಾಲ್, ಜಲುಪಗುರಿಯ ಸೆರೆಮನೆಯಲ್ಲಿ ಚಾರು ಮುಜಂದಾರ್‌ನನ್ನು ಭೇಟಿಯಾಗುವುದರ ಮೂಲಕ ನಕ್ಸಲ್ ಹೋರಾಟದ ಇತಿಹಾಸಕ್ಕೆ ಹೊಸ ಆಯಾಮವೊಂದನ್ನು ಒದಗಿಸಿದ.

(ಮುಂದುವರಿಯುವುದು)

 

ನಕ್ಸಲ್ ಕಥನಕ್ಕೊಂದು ಮುನ್ನುಡಿ

ಸ್ನೇಹಿತರೆ,

ಕನ್ನಡಕ್ಕೆ ಓದುಗರಿಗೆ ಅಷ್ಟೇನೂ ಪರಿಚಿತವಲ್ಲದ ಅಧ್ಯಾಯವೊಂದನ್ನು ಸಂಪೂರ್ಣವಾಗಿ ಪರಿಚಯಿಸಲು ನಮ್ಮ ಪ್ರೀತಿಯ ಜಗದೀಶ್ ಕೊಪ್ಪರವರು ಸಿದ್ಧವಾಗಿದ್ದಾರೆ. ಹಲವಾರು ತಿಂಗಳುಗಳ ಕರ್ನಾಟಕ ಮತ್ತು ಭಾರತದ ಹಲವು ಕಡೆಗಳ ಓಡಾಟ, ಅಧ್ಯಯನ, ಮಾತುಕತೆಗಳ ಫಲ ಇದು.

ನಕ್ಸಲ್ ಚಳವಳಿ ರಕ್ತಸಿಕ್ತ ಚಳವಳಿ. ಅದೊಂದು ಸಾಮಾಜಿಕ ಮತ್ತು ರಾಜಕೀಯ ಹೋರಾಟವೂ ಹೌದು. ಆದರೆ ಅದು ನಮ್ಮ ರಾಷ್ಟ್ರನಿರ್ಮಾತೃಗಳು ಒಪ್ಪಿಕೊಂಡ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಪೂರಕವಾಗಿಲ್ಲ. ಆದರೆ, ಭಾರತದಂತಹ ಅಸಮಾನ ಮತ್ತು ಶೋಷಣೆಯ ಸಮಾಜದಲ್ಲಿ, ಪ್ರಜಾಪ್ರಭುತ್ವ ಮತ್ತು ಆಧುನಿಕ ವಿಚಾರಧಾರೆಗಳು ಬೇರೂರದಂತಹ ಕಗ್ಗಾಡುಗಳಲ್ಲಿ, ಪಾಳೆಯಗಾರಿಕೆ ಪರಿಸರದಲ್ಲಿ, ಶೋಷಣೆ ಮತ್ತು ಅನ್ಯಾಯ ಮುಂದುವರೆಯುತ್ತಲೇ ಇದೆ. ಮಾನವ ಹಕ್ಕುಗಳ ದಮನವಾಗುತ್ತಲೇ ಇದೆ. ಜಮೀನ್ದಾರರ ಮತ್ತು ಶೋಷಕರ ವಿರುದ್ಧ ಸಿಗುವ ಕ್ಷಣಿಕ ಮತ್ತು ತಕ್ಷಣದ ನ್ಯಾಯವನ್ನೇ ನ್ಯಾಯ ಎಂದು ಭಾವಿಸುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಪಡೆದುಕೊಳ್ಳುವ ನ್ಯಾಯ ಮತ್ತು ಸುಧಾರಣೆಗಳೇ ದೀರ್ಘಕಾಲೀನವಾದವು; ಸಾರ್ವಕಾಲಿಕವಾದವು; ಮತ್ತು ಅಹಿಂಸಾತ್ಮಕವಾದವು.

ವರ್ತಮಾನದಲ್ಲಿ ಅಪ್ರಸ್ತುತವಾಗಬೇಕಿದ್ದ ಈ ನಕ್ಸಲ್ ಚಳವಳಿ ಭಾರತದಲ್ಲಿ ಹಬ್ಬುತ್ತಲೇ ಇದೆ. ಒಂದೆಡೆ ನಕ್ಸಲರ ಎನ್‌ಕೌಂಟರ್ ಆಗುತ್ತಿದ್ದರೆ ಮತ್ತೊಂದೆಡೆ ಅವರೂ ಸಹ ಅಪಹರಣ ಮತ್ತು ಕಗ್ಗೊಲೆಗಳಲ್ಲಿ ತೊಡಗಿದ್ದಾರೆ. ಒಡಿಶಾದಲ್ಲಿ ಒಬ್ಬ ಶಾಸಕ ಮತ್ತು ಒಬ್ಬ ವಿದೇಶಿ ಪ್ರಜೆ ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಕೊಪ್ಪರವರು ಈ ಚಳವಳಿಯ ಇತಿಹಾಸ ಮತ್ತು ವರ್ತಮಾನವನ್ನು ಅದರೆಲ್ಲ ಮಗ್ಗಲುಗಳೊಂದಿಗೆ ನಮಗೆ ಪರಿಚಯಿಸ ಹೊರಟಿದ್ದಾರೆ.

ಇಂದಿನಿಂದ ಈ ಮಾಲಿಕೆ ಪ್ರತಿ ಗುರುವಾರದಂದು ಪ್ರಕಟವಾಗುತ್ತದೆ.

ಈ ಮಾಲಿಕೆ ಆರಂಭಿಸುತ್ತಿರುವ ಕೊಪ್ಪರವರಿಗೆ ವರ್ತಮಾನದ ಬಳಗದಿಂದ ಪ್ರೀತಿಯ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಎಂದಿನಂತೆ ನಿಮ್ಮ ಅಭಿಪ್ರಾಯ ಮತ್ತು ಟಿಪ್ಪಣಿಗಳು ಬರುತ್ತಿರಲಿ.

– ರವಿ ಕೃಷ್ಣಾರೆಡ್ಡಿ



– ಡಾ.ಎನ್. ಜಗದೀಶ್ ಕೊಪ್ಪ  


ಇದು ಕಳೆದ ಎಂಟು ವರ್ಷದ ಹಿಂದಿನ ಒಂದು ಘಟನೆ, ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ನಾನು ಜಾಗತೀಕರಣ ಮತ್ತು ಗ್ರಾಮಭಾರತ ಎಂಬ ಶೀರ್ಷಿಕೆಯಡಿ ಡಾಕ್ಟರೇಟ್ ಪದವಿಗಾಗಿ ಜಾಗತೀಕರಣ ಕುರಿತಂತೆ ಅಧ್ಯಯನ ಕೈಗೊಂಡಿದ್ದ, ಸಂದರ್ಭದಲ್ಲಿ ದೆಹಲಿಯ ‘ಡೆಲ್ಲಿ ಸ್ಕೂಲ್ ಆಫ್ ಎಕಾನಾಮಿಕ್ಸ್’ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಗ್ರಂಥಾಲಯದಲ್ಲಿ ಕಾಶ್ಮೀರದ ಸ್ಥಿತಿ ಗತಿ ಬಗ್ಗೆ ಎಮ್.ಫಿಲ್. ಅಧ್ಯಯನ ಮಾಡಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ಸಂಶೋಧನಾ ಪ್ರಬಂಧದಲ್ಲಿ ಭಯೋತ್ಪಾದನೆ ಮತ್ತು ಬಡತನ ಕುರಿತು ಬರೆದಿದ್ದ ಒಂದು ಅಧ್ಯಾಯ ನನ್ನ ಗಮನ ಸೆಳೆಯಿತು.

ಕಾಶ್ಮೀರದ ಬಡ ಮುಸ್ಲಿಂ ಕುಟುಂಬಗಳ ಯುವಕರಿಗೆ ಪಾಕಿಸ್ತಾನದ ಐ.ಎಸ್,ಐ ಏಜೆಂಟರು ತಲಾ ಎರಡರಿಂದ ಮೂರು ಲಕ್ಷ ರೂ ಹಣ ನೀಡಿ, ಅವರಿಗೆ ಜೆಹಾದ್ ಹೆಸರಿನಲ್ಲಿ ಭಯೋತ್ಪಾದನೆ ಚಟುವಟಿಕೆ ಕುರಿತು ತರಬೇತಿ ನೀಡುವುದನ್ನು ದಾಖಲಿಸಿದ್ದಳು.

ಮನೆಯಲ್ಲಿ ಬೆಳೆದು ನಿಂತ ತಮ್ಮ ಸಹೋದರಿಯರ ಮದುವೆ ಖರ್ಚಿಗಾಗಿ ಕಾಶ್ಮೀರದ ಅಮಾಯಕ ಯುವಕರು ಇಂತಹ ಸಂಚಿಗೆ ಬಲಿಯಾಗುತ್ತಿರುವ ಬಗ್ಗೆ ಕ್ಷೇತ್ರ ಕಾರ್ಯದ ಮೂಲಕ ಸಮೀಕ್ಷೆ ಮಾಡಿ, ಪೋಲಿಸರಿಂದ ಬಂಧಿತರಾದ ಯುವಕರನ್ನು ಭೇಟಿಯಾಗಿ ಅಧಿಕೃತವಾಗಿ ಅಂಕಿ ಅಂಶಗಳನ್ನು ದಾಖಲಿಸಿದ್ದಳು. ಅಲ್ಲಿಯವರೆಗೆ ನಾನು ಬಡತನ ಮತ್ತು ಹಿಂಸೆ ಹಾಗೂ ಭಯೋತ್ಪಾದನೆ ನಡುವೆ ಹೀಗೊಂದು ಸಾವಯವ ಸಂಬಂಧ ಇದೆ ಎಂದು ಊಹಿಸಿರಲಿಲ್ಲ.

ಚಿಕ್ಕಂದಿನಿಂದಲೂ ದೇವರು, ಧರ್ಮ, ಮೂಢನಂಬಿಕೆ, ಕಂದಾಚಾರ ಇವುಗಳ ಆಚೆಗೆ ಬೆಳೆದು ಬಂದ ನಾನು. ಕಾಲೇಜು ದಿನಗಳಲ್ಲಿ ಎಡಪಂಥೀಯ ವಿಚಾರಗಳಿಂದ ಪ್ರಭಾವಿತನಾದವನು. ಇವುಗಳ ನಡುವೆಯೂ, ಅತಿಯಾದ ಎಡಪಂಥೀಯ ಅಥವಾ ಬಲಪಂಥೀಯ ವಿಚಾರಧಾರೆಗಳು ಮತೀಯವಾದದಷ್ಟೇ ಅಪಾಯಕಾರಿ ಎಂದು ನಂಬಿದವನು. ಹಾಗಾಗಿ ಗಾಂಧಿ ಮತ್ತು ಲೋಹಿಯಾ, ಅಂಬೇಡ್ಕರ್ ವಿಚಾರಗಳಲ್ಲಿ ನಂಬಿಕೆಯಿಟ್ಟುಕೊಂಡು ವರ್ತಮಾನದ ಎಲ್ಲಾ ವಿದ್ಯಾಮಾನಗಳನ್ನು ಈವರೆಗೆ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ.

ಮುಂದಿನ ವರ್ಷದ ಮೇ ತಿಂಗಳಿಗೆ 45 ವರ್ಷ ತುಂಬುವ ನಕ್ಸಲ್ ಚಳವಳಿಯ ಹೋರಾಟವನ್ನು 1978 ರಿಂದ ಅವಲೋಕಿಸುತ್ತಾ ಅವರ ಹಿಂಸೆಯ ಹಾದಿಯೊಂದನ್ನು ಹೊರತುಪಡಿಸಿ, ಹಲವು ಸಂದರ್ಭಗಳಲ್ಲಿ ಅವರ ವಿಚಾರಧಾರೆಗೆ ಪರೋಕ್ಷವಾಗಿ ಬೆಂಬಲಿಸುತ್ತಾ ಬಂದಿದ್ದೇನೆ ಆದರೆ, ನಕ್ಸಲ್ ಹೋರಾಟದ ಏಳು ಬೀಳಿನ ಇತಿಹಾಸ ದಾಖಲಿಸುವ ಯಾವುದೇ ಆಸೆಯಾಗಲಿ, ಕನಸಾಗಲೀ ಕಳೆದ ನವಂಬರ್‌ವರೆಗೆ ನನ್ನಲ್ಲಿ ಇರಲಿಲ್ಲ.

ಕಾಶ್ಮೀರದ ಹಾಗೆ ನಕ್ಸಲ್ ಚಳವಳಿಯಲ್ಲಿ ಬಡತನ ಮತ್ತು ಹಿಂಸೆಯ ನಡುವೆ ಸಂಬಂಧವಿರಬಹುದೇ ಎಂಬ ಕುತೂಹಲ ಮಾತ್ರ ನನ್ನಲ್ಲಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ದೆಹಲಿಯ ಜವಹರಲಾಲ್‍ನೆಹರೂ ವಿ.ವಿ. ಹಾಗೂ ಕೊಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ  ಕಾಣೆಯಾಗಿ ನಕ್ಸಲ್ ಚಳವಳಿಗೆ ಸೇರ್ಪಡೆಯಾಗುತ್ತಿರುವುದನ್ನು ಗಮನಿಸುತ್ತಾ ಬಂದಿದ್ದೆ. ಇವರಲ್ಲಿ ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳ ಮಕ್ಕಳು ಸೇರಿರುವುದು ನನ್ನ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ದೇಶಾದ್ಯಂತ ನಡೆಯುತ್ತಿದ್ದ ನಕ್ಸಲ್‍ರ ಹಿಂಸಾಚಾರ, ಪೋಲಿಸರ ಎನ್‍ಕೌಂಟರ್ ಇವುಗಳನ್ನು ಗಮನಿಸುತ್ತಿದ್ದ ನನಗೆ 2011 ರ ನವಂಬರ್ 24 ರಂದು ಪಶ್ಚಿಮ ಬಂಗಾಳದ ಪೋಲಿಸರು ನಕ್ಸಲಿಯರ ನಾಯಕ ಕಿಶನ್‍ಜಿಯನ್ನು ಬಲೆಗೆ ಕೆಡವಿ, ಕೊಂದುಹಾಕಿದ ಘಟನೆ ಮತ್ತು ಆನಂತರದ ಬೆಳವಣಿಗೆಗಳು ನನ್ನ ಈ ಕಥನಕ್ಕೆ ಪ್ರೇರಣೆಯಾದವು.

34 ವರ್ಷಗಳ ಹಿಂದೆ ಆಂಧ್ರದ ಕರೀಂನಗರ ಜಿಲ್ಲೆಯ ತನ್ನ ಹುಟ್ಟೂರನ್ನು ತೊರೆದ ಕಿಶನ್‍ಜಿ (ಮೂಲಹೆಸರು ಮಲ್ಲೋಜಲ ಕೋಟೇಶ್ವರರಾವ್) ನಂತರ ಆಂಧ್ರ, ಒಡಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್‍ಘಡ್, ಮಹಾರಾಷ್ಟ್ರ ರಾಜ್ಯಗಳ 16 ಸಾವಿರ ಹಳ್ಳಿಗಳನ್ನು ತನ್ನ ಮನೆಯನ್ನಾಗಿ ಮಾಡಿಕೊಂಡು ಮಾವೋವಾದಿ ನಕ್ಸಲರ ನಾಯಕನಾಗಿ ಬೆಳೆದು ನಿಂತವನು. ಈ ಎಲ್ಲಾ ರಾಜ್ಯಗಳ ಗುಡ್ಡಗಾಡು ಜನರ ಪ್ರೀತಿಯ ಆರಾಧ್ಯ ದೈವವಾಗಿದ್ದ ಕಿಶನ್‍ಜಿ, ಪೋಲಿಸರಿಗೆ ಮತ್ತು ಕೇಂದ್ರ ಸರ್ಕಾರದ ನಕ್ಸಲ್ ನಿಗ್ರಹ ಪಡೆಗೆ ತನ್ನ ಮೊಬೈಲ್ ನಂಬರ್ ನೀಡಿ ತನ್ನನ್ನು ಬಂಧಿಸುವಂತೆ ಸವಾಲೆಸೆದ ಸಾಹಸಿ ಈತ. ಇದು ಸಾಲದೆಂಬಂತೆ ಮಾಧ್ಯಮದವರನ್ನು ತನ್ನ ಅಡಗುದಾಣಕ್ಕೆ ಕರೆಸಿಕೊಂಡು ಪತ್ರಿಕಾಗೋಷ್ಠಿ ನಡೆಸುತ್ತಾ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಅಂತಿಮವಾಗಿ ಪೋಲಿಸರು ಆತನ ಸಹಚರರಾದ ನಕ್ಸಲಿಯರಿಗೆ ಹಣದ ಆಮಿಷ ಒಡ್ಡಿ ಕಿಶನ್‍ಜಿಯ ಚಲನವಲನದ ಮಾಹಿತಿ ಪಡೆದು ಕಳೆದ ನವಂಬರ್ 24 ರಂದು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಆರಣ್ಯ ಪ್ರದೇಶದ ಅಡಗು ತಾಣದಲ್ಲಿ ಅವನನ್ನು ಜೀವಂತ ಹಿಡಿದುದಲ್ಲದೆ, ಸ್ಥಳದಲ್ಲೇ ಕೊಂದು ಹಾಕಿ, ಇಡೀ ಘಟನೆಯನ್ನು ಎನ್‍ಕೌಂಟರ್ ಎಂದು ಪ್ರತಿಬಿಂಬಿಸಿದರು.

‘ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ’ (ಮಾವೋವಾದಿ) ಸಂಘಟನೆಯ ಪ್ರಮುಖ ನಾಯಕನಾಗಿದ್ದ ಕಿಶನ್‍ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನಜಿ ಕರೆ ನೀಡಿದ್ದ, ಶಾಂತಿಯುತ ಮಾತುಕತೆಗೆ ಒಲವು ತೋರಿದ್ದ. ಆದರೆ ತನ್ನ ಸಂಗಡಿಗರ ಕುತಂತ್ರಕ್ಕೆ ಬಲಿಯಾದ. ಐದು ದಿನಗಳ ನಂತರ ಆಂಧ್ರದ ಅವನ ಹುಟ್ಟೂರಿಗೆ ಶವವನ್ನು ತಂದಾಗ 34 ವರ್ಷಗಳ ನಂತರ ಶವವಾಗಿ ಬಂದ ಮಗನ ಮುಖವನ್ನು ನೋಡಿದ 89 ವರ್ಷದ ಅವನ ತಾಯಿ ಸದ್ದಿಲ್ಲದೆ ಕಣ್ಣೀರಿಟ್ಟಳು. ಕಿಶನ್‍ಜಿಯ ಅಂತ್ಯ ಸಂಸ್ಕಾರದ ದೃಶ್ಯಗಳನ್ನು ತೆಲುಗು ಸುದ್ಧಿ ಚಾನಲ್‍ಗಳು ನೇರ ಪ್ರಸಾರ ಮಾಡಿದವು. ಇದನ್ನು ವೀಕ್ಷಿಸುತ್ತಾ ಕುಳಿತ್ತಿದ್ದ ನಾನು. ಆಕೆ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯನ್ನು ನೋಡಿ ಆ ಕ್ಷಣಕ್ಕೆ ದಂಗಾಗಿ ಹೋದೆ.

“ಈ ದಿನ ನನ್ನ ಮಗ ಸತ್ತಿರಬಹುದು ಆದರೆ, ನನಗೆ ಈ ನೆಲದಲ್ಲಿ ಸಾವಿರಾರು ಕೋಟೇಶ್ವರರಾವ್‍ನಂತಹ (ಕಿಶನ್‍ಜಿ) ಮಕ್ಕಳಿದ್ದಾರೆ,” ಎನ್ನುವ ಆ ವೃದ್ಧೆಯ ಮಾತಿನ ಹಿಂದಿನ ಸಿಟ್ಟು ನೋವು, ಸಂಕಟ ಈ ಎಲ್ಲಾ ಭಾವನೆಗಳು ಏಕಕಾಲಕ್ಕೆ ಅನೇಕ ಅರ್ಥಗಳನ್ನು ಹೊರಹಾಕುತ್ತಿದ್ದವು. ಇಡೀ ನಕ್ಸಲ್ ಚಳವಳಿಯ ಇತಿಹಾಸವನ್ನು ಗಮನಿಸಿದರೆ, ಅದರ ನಾಯಕತ್ವ ವಹಿಸಿದ ಬಹುತೇಕ ನಾಯಕರು ಸಾಮಾನ್ಯ ವ್ಯಕ್ತಿಗಳಲ್ಲ, ನಮ್ಮ ಕರ್ನಾಟಕದ ಸಾಕೇತ್‍ರಾಜನ್‍ನಿಂದ ಹಿಡಿದು, ಕಿಶನ್‍ಜಿ, ಅಜಾದ್, ಚಾರುಮುಜಮ್ದಾರ್, ಕನುಸನ್ಯಾಲ್, ಸತ್ಯನಾರಾಯಣ, ಕೊಂಡಪಲ್ಲಿ ಸೀತಾರಾಮಯ್ಯ, ಗಣಪತಿ, ನಾಗಭೂಷಣ ಪಟ್ನಾಯಕ್, ಸುನೀತಿಘೋಷ್, ದತ್ತ ಸರೋಜ್, ಅಸೀಮ್ ಚಟರ್ಜಿ, ರಾಜೇಂದ್ರಕುಮಾರ್ ಇವರೆಲ್ಲಾ ಪದವೀಧರರು ಮತ್ತು ಇಂಜಿನಿಯರ್‍‍ಗಳು, ಇದಲ್ಲದೇ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಇವರುಗಳು ಸಮಾಜದ ಮುಖ್ಯ ವಾಹಿನಿಯಲ್ಲಿದ್ದರೆ ಈ ನಾಡಿಗೆ, ಈ ನೆಲಕ್ಕೆ ಆಸ್ತಿಯಾಗಬಲ್ಲವರಾಗಿದ್ದರು. ಇವೆರೆಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದ ಸಂಗತಿಯೆಂದರೆ, ಗುಡ್ಡಗಾಡಿನ ಬುಡಕಟ್ಟು ಜನಾಂಗವನ್ನು ಇನ್ನಿಲ್ಲದಂತೆ ಶೋಷಣೆ ಮಾಡಿದ ಜಮೀನುದಾರರು, ಅರಣ್ಯಾಧಿಕಾರಿಗಳು, ಮತ್ತು ಪೋಲಿಸರ ಅಮಾನುಷ ವರ್ತನೆ. ಬಾಯಿಲ್ಲದವರ ಶೋಷಿತರ ಸಂಘಟನೆಗೆ ಮುಂದಾಗಿ, ಅವರಿಗೆಲ್ಲಾ ನೆಮ್ಮದಿಯ ಬದುಕು ಕಟ್ಟಿಕೊಡಲು ಹೋಗಿ, ಅರಿವಿಲ್ಲದಂತೆ ತಮ್ಮ ಬದುಕನ್ನು ಬೀದಿಗೆ ಬಿಸಾಕಿ ಪೊಲೀಸರ ಗುಂಡಿಗೆ ಬಲಿಯಾಗಿ ಅನಾಥ ಹೆಣವಾದ ನತದೃಷ್ಟರು ಇವರು.

ಅಂದಿನ ದಿನಗಳ ಆ ಕಾಲಘಟ್ಟದಲ್ಲಿ ಇವರ ಹೋರಾಟ ನಿಜಕ್ಕೂ ಅತ್ಯಗತ್ಯವಾಗಿತ್ತು. ಆದರೆ, ಇವತ್ತಿನ ಈ ಸಂದರ್ಭಕ್ಕೆ ನಕ್ಸಲಿಯರ ಈ ಕದನ ಅಪ್ರಸ್ತುತ. ವರ್ತಮಾನದಲ್ಲಿ ನಾವು ಕಾಣುತ್ತಿರುವ ನಕ್ಸಲಿಯರ ಹೋರಾಟ ಏನಿದ್ದರೂ ತಮ್ಮ ಅಸ್ತಿತ್ವದ ಉಳಿವಿಗಾಗಿ ಎಂಬಂತಾಗಿದೆ. ಅಂದು ಅವರ ಕೈಯಲ್ಲಿ ಕೇವಲ ಬಿಲ್ಲು ಬಾಣಗಳಿದ್ದವು. ಈಗ ಅದೇ ಕೈಗಳಿಗೆ ಬಂದೂಕು, ಬಾಂಬುಗಳು ಬಂದಿವೆ.

1917 ರಲ್ಲಿ ರಷ್ಯಾ ಕ್ರಾಂತಿಗೆ ನಾಂದಿ ಹಾಡಿದ ಲೆನಿನ್ ಮತ್ತು ಚೀನಾದ ಸಾಮಾಜಿಕ ಕ್ರಾಂತಿಗೆ ಕಾರಣಕರ್ತನಾದ ಮಾವೋತ್ಸೆ ತುಂಗನ ವಿಚಾರಧಾರೆಗಳನ್ನು ನಂಬಿಕೊಂಡು ಭಾರತದಲ್ಲಿ ಕ್ರಾಂತಿ ಮಾಡುತ್ತೇವೆ ಎನ್ನುವುದು ನಕ್ಸಲಿಯರ ಭ್ರಮೆಯಷ್ಟೇ ಮಾತ್ರವಲ್ಲ, ಹುಚ್ಚುತನದ ಪರಮಾವಧಿ ಎಂದು ಕೂಡ ವಿಶ್ಲೇಷಿಸಬಹುದು. ಚೀನಾ ಮತ್ತು ರಷ್ಯಾ ಈ ಎರಡು ರಾಷ್ಟ್ರಗಳು ತಮ್ಮ ಕಮ್ಯೂನಿಷ್ಟ್ ಸಿದ್ಧಾಂತಗಳನ್ನು ಈಗಾಗಲೇ ಗಾಳಿಗೆ ತೂರಿ ಜಾಗತೀಕರಣವೆಂಬ ವಿಟ ಪುರುಷನಿಗೆ ಸೆರಗು ಹಾಸಿ ಮಲಗಿರುವಾಗ, ಭಾರತದಂತಹ ಬಹು ಸಂಸ್ಕೃತಿಯ ಈ ನೆಲದಲ್ಲಿ ಕ್ರಾಂತಿ ಸಾಧ್ಯವೆ? ಒಮ್ಮೆ ತಣ್ಣಗೆ ಕುಳಿತು ಯೋಚಿಸಿ ನೋಡಿ. ಆದರೆ, ನಕ್ಸಲಿಯರು ಇದನ್ನು ನಂಬುವುದಿಲ್ಲ. ಏಕೆಂದರೆ, ಅವರ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ನನಗೆ ಇವರು ಮೆದುಳು ತೊಳೆಸಿಕೊಂಡವರು (Brain washed people) ಎಂಬ ಭಾವನೆ ಗಟ್ಟಿಯಾಗಿದೆ.

ಸದ್ಯದ ಸ್ಥಿತಿಯಲ್ಲಿ ಸರ್ಕಾರ ಮತ್ತು ನಕ್ಸಲಿಯರ ಹೋರಾಟಕ್ಕೆ ಅಂತ್ಯವೆಂಬುದು ಕನಸಾಗಿದೆ ಹಾಗಾಗಿ ಎಂದೂ ಮುಗಿಯದ ಯುದ್ಧ ಎಂಬ ಶೀರ್ಷಿಕೆಯ ಈ ಹೋರಾಟದ ಕಥನಕ್ಕಾಗಿ ಕಳೆದ ಜನವರಿಯಲ್ಲಿ ನಾನು ಆಂಧ್ರ, ಪಶ್ಚಿಮಬಂಗಾಳ, ಒಡಿಸ್ಸಾ, ಮಹಾರಾಷ್ಟ್ರ ರಾಜ್ಯಗಳ ಹದಿನೆಂಟು ನಕ್ಸಲ್‍ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅವರ ಅಡಗು ತಾಣಕ್ಕೆ ಭೇಟಿ ನೀಡಿ, ಮಾಜಿ ನಕ್ಸಲಿಯರು ಮತ್ತು ಮಾವೋವಾದಿ ಕಮ್ಯೂನಿಷ್ಟರ ಜೊತೆ ಮಾತನಾಡಿ, ಅವರಿಂದ ಸಂಗ್ರಹಿಸಿದ ಅಂಕಿ ಅಂಶ, ಮಾಹಿತಿ ಇವೆಲ್ಲವನ್ನು ಕ್ರೂಢೀಕರಿಸಿ ನಕ್ಸಲರ ಇತಿಹಾಸವನ್ನು ಕಥನ ರೂಪದಲ್ಲಿ ಇಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದೀನಿ.

ನಕ್ಸಲಿಯರ ಹೋರಾಟಕ್ಕೆ ಹಲವಾರು ಮಗ್ಗಲುಗಳಿವೆ. ಇದಕ್ಕೆ ಕೇವಲ ಒಂದು ದೃಷ್ಟಿಕೋನ ಸಾಲದು ಎಂಬ ನಂಬಿಕೆಯ ಆಧಾರದ ಮೇಲೆ ಈ ವಯಸ್ಸಿನಲ್ಲಿ, ಅದೂ ದಿನಕ್ಕೆ ಎರಡು ಬಾರಿ ಇನ್ಸುಲಿನ್ ತೆಗೆದುಕೊಳ್ಳುವ ಮಧುಮೇಹಿ ರೋಗಿಯಾಗಿ ರಿಸ್ಕ್ ಎನ್ನುವಂತಹ ಪ್ರವಾಸ ಕೈಗೊಂಡೆ.

ಹೈದರಾಬಾದ್‍ನಗರದ ಪೊಟ್ಟಿ ಶ್ರಿರಾಮುಲು ತೆಲುಗು ವಿ.ವಿ.ಯ ಮುಖ್ಯದ್ವಾರದಿಂದ ನನ್ನನ್ನು ಕರೆದೊಯ್ದ ನಕ್ಸಲ್ ಮಿತ್ರರು ಆಂಧ್ರದ ಕರೀಂ ನಗರ, ನಲ್ಗೊಂಡ, ವಿಜಯವಾಡ, ರಾಜಮಂಡ್ರಿ, ಶ್ರೀಕಾಕುಳಂ ಜಿಲ್ಲೆ ಹಾಗೂ ಒಡಿಸ್ಸಾದ ಗಂಜಾಂ ಜಿಲ್ಲೆಗಳಲ್ಲಿ ತಿರುಗಾಡಿಸಿ ಅಂತಿಮವಾಗಿ ಚಿಲ್ಕಾ ಸರೋವರದ ಬಳಿಯ ರೈಲು ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿಸಿದರು. ಜೊತೆಗೆ ಪಶ್ಚಿಮ ಬಂಗಾಳದ ಹಾಗೂ ಮಹಾರಾಷ್ಟ್ರದ ಲಿಂಕ್ ದೊರಕಿಸಿಕೊಟ್ಟರು. ಇದೆಲ್ಲಾ ಸಾಧ್ಯವಾದದ್ದು, ಆಂಧ್ರದ ಪ್ರಮುಖ ದಿನಪತ್ರಿಕೆಯಲ್ಲಿ ಸುದ್ಧಿ ಸಂಪಾದಕನಾಗಿ ಸೇವೆ ಸಲ್ಲಿಸಿ ಈಗ ನಿವೃತ್ತನಾಗಿರುವ ನನ್ನ ಮಿತ್ರನಿಂದ. ಆತ ಮೂಲತಃ ಶ್ರೀಕಾಕುಳಂ ಜಿಲ್ಲೆಯ ಹಳ್ಳಿಯಿಂದ ಬಂದವನು, ಅವನ ಬಾಲ್ಯದ ಗೆಳೆಯರೆಲ್ಲಾ ನಕ್ಸಲ್ ಹೋರಾಟಗಾರರಾಗಿದ್ದವರು, ನಂತರದ ದಿನಗಳಲ್ಲಿ. ಭ್ರಮನಿರಶನಗೊಂಡವರು.

1967 ರಲ್ಲಿ ಪ್ರಪಥಮವಾಗಿ ಆಂಧ್ರದಲ್ಲಿ ಪೀಪಲ್ಸ್ ವಾರ್‍‌ಗ್ರೂಪ್ (ಪ್ರಜಾ ಸಮರಂ) ಎಂಬ ನಕ್ಸಲಿಯರ ಹೋರಾಟಕ್ಕೆ ನಾಂದಿ ಹಾಡಿದ ಪ್ರದೇಶವೆಂದರೆ,  ಶ್ರೀಕಾಕುಳಂ ಜಿಲ್ಲೆ. ಆದರೆ ಈಗ ಇಲ್ಲಿನ ಜನರಿಗೆ ಅದೊಂದು ಇತಿಹಾಸವೆನೋ ಎಂಬಾಂತಾಗಿದೆ. (ಈ ಬಗ್ಗೆ ಕಥನದಲ್ಲಿ ವಿವರಾಗಿ ಪ್ರಸ್ತಾಪಿಸಿದ್ದೇನೆ) ಕೊಲ್ಕತ್ತ ನಗರದಲ್ಲಿ ನಾನು ಉಳಿದಿದ್ದ ನಾಲ್ಕು ದಿನಗಳಲ್ಲಿ ಅಲ್ಲಿನ ಅನೇಕ ಕಮ್ಯೂನಿಷ್ಟ್ ಗೆಳೆಯರು ನನಗೆ ನಕ್ಸಲ್ ಇತಿಹಾಸ ಕುರಿತು ಸಮಗ್ರ ಮಾಹಿತಿ ಒದಗಿಸಿಕೊಟ್ಟರು, ಪ್ರತಿ ಗಂಟೆಗೊಮ್ಮೆ ಅವರ ಜೊತೆಗಿನ ಚಹಾ, ಸಿಗರೇಟು, ಮತ್ತು ರಾತ್ರಿಯ ಪಾರ್ಟಿಯಲ್ಲಿ ಅವರೊಂದಿಗೆ ನಡೆಸಿದ ಅಂತ್ಯವನ್ನೇ ಕಾಣದ ಚರ್ಚೆ ಇವೆಲ್ಲವೂ ನನ್ನ ಪಶ್ಚಿಮ ಬಂಗಾಳ ಒರಿಸ್ಸಾ ಪ್ರವಾಸವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿವೆ.

ಅಲ್ಲಿಂದ ಬಂದವನು ಮಾರ್ಚ್ ಮೊದಲವಾರ ಕರ್ನಾಟಕದ ನಕ್ಸಲ್ ಪೀಡಿತ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ಕಾಡುಗಳಲ್ಲಿ ಅಲೆದು ಬಂದೆ. ಕೇವಲ 20 ರಿಂದ 25 ಮಂದಿಯಷ್ಟು ಇರುವ ಕರ್ನಾಟಕದ ನಕ್ಸಲಿಯರು ಇವತ್ತು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಎಷ್ಟೋ ವೇಳೆ ಅಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಅನ್ನ ಸಂತರ್ಪಣೆಯಲ್ಲಿ ಭಕ್ತರಂತೆ ಭಾಗವಹಿಸಿ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಈ ಪ್ರದೇಶಗಳ ಗ್ರಾಮಸ್ಥರ ಸ್ಥಿ ತಿ ಹೇಳತೀರದಾಗಿದೆ. ಹಸಿದು ಬಂದು ಅನ್ನ ಕೇಳಿದವರಿಗೆ ಊಟ ಕೊಟ್ಟರೆ, ನಕ್ಸಲ್ ಬೆಂಬಲಿಗರೆಂಬ ಹಣೆಪಟ್ಟಿಯೊಂದಿಗೆ ಜೈಲು ಸೇರುವ ಸ್ಥಿತಿ, ಕೊಡದಿದ್ದರೆ, ನಕ್ಸಲಿಯರ ಬಂದೂಕಿನ ಭಯ ಅತ್ತ ಹಳ್ಳ, ಇತ್ತ ಹುಲಿ ಎಂಬಂತಿದೆ.

ನಾನು ಕರ್ನಾಟಕದ ಕಾಡುಗಳಲ್ಲಿ ಅಲೆಯುತ್ತಿದ್ದಾಗಲೇ ಪಶ್ಚಿಮ ಬಂಗಾಳದಲ್ಲಿ ತೀವ್ರತರವಾದ ಘಟನೆಗಳು ಜರುಗಿದವು. ಕಿಶನ್‍ಜಿ ನಂತರ ಸಂಘಟನೆಯ ಉಸ್ತುವಾರಿ ಹೊತ್ತಿದ್ದ ಆರ್,ಕೆ. ಹೆಸರಿನ ರಾಮಕೃಷ್ಣನನ್ನು ನಕ್ಸಲ್ ನಿಗ್ರಹ ಪಡೆ ಬಂಧಿಸಿದೆ. ಆಂಧ್ರ ಮೂಲದ ರಾಮಕೃಷ್ಣ ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, ಶಸ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣನಾಗಿದ್ದ. ಈತನ ಬಂಧನ ನಕ್ಸಲ್ ಹೋರಾಟದ ಬೆನ್ನು ಮೂಳೆಯನ್ನು ಮುರಿದಂತಾಗಿದೆ. ಇದಕ್ಕೆ ಪೂರಕವಾಗಿ ಹಲವು ಕಿಶನ್‍ಜಿ ಬೆಂಬಲಿಗರು ಇದೇ ಮಾರ್ಚ್ ಎಂಟರಂದು ಕೊಲ್ಕತ್ತ ನಗರದಲ್ಲಿ ಮಮತಾ ಬ್ಯಾನರ್ಜಿ ಎದುರು ಶರಣಾಗತರಾಗುವುದರ ಮೂಲಕ ಸಮಾಜದ ಮುಖ್ಯವಾಹಿನಿಯತ್ತ ಮುಖ ಮಾಡುತ್ತಿದ್ದಾರೆ. ಇದು ನಿಜಕ್ಕೂ ನೆಮ್ಮದಿಯ ಸಂಗತಿ.

(ಮುಂದುವರೆಯುವುದು)