Category Archives: ಆನಂದ ಪ್ರಸಾದ್

ಕಪ್ಪು ಹಣ – ಅಧಿಕಾರಕ್ಕೇರುವ ಏಣಿ

– ಆನಂದ ಪ್ರಸಾದ್

ಬಾಬಾ ರಾಮದೇವ ಎಂಬ ಯೋಗ ಗುರು ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ವಾಪಾಸ್ ತರುವ ಬಗ್ಗೆ, ಲೋಕಪಾಲ್ ವಿಧೇಯಕ ತರುವ ಬಗ್ಗೆ, ಸಿಬಿಐ ಅನ್ನು ಕೇಂದ್ರ ಸರ್ಕಾರದ ನಿಯಂತ್ರಣಮುಕ್ತಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಮುಗಿದಿದೆ. ಸರ್ಕಾರ ಅವರ ಯಾವ ಬೇಡಿಕೆಗಳ ಬಗ್ಗೆಯೂ ಸ್ಪಂದಿಸಿಲ್ಲ. ಆರಂಭದಲ್ಲಿ ತಮ್ಮದು ರಾಜಕೀಯರಹಿತ ಹೋರಾಟ ಎಂದು ಹೇಳಿಕೊಳ್ಳುತ್ತಿದ್ದ ಬಾಬಾ ಅವರು ಉಪವಾಸದ ಮೂರನೆಯ ದಿನ ಎನ್.ಡಿ.ಎ. ಮೈತ್ರಿಕೂಟದ ಪಕ್ಷಗಳನ್ನು ತಮ್ಮ ಜೊತೆ ಸೇರಿಸಿಕೊಂಡು ತಮ್ಮದು ರಾಜಕೀಯ ಹೋರಾಟ ಎಂಬುದನ್ನು ಸಾಬೀತುಪಡಿಸಿದರು. ಒಂದೇ ಸಮನೆ ಕಾಂಗ್ರೆಸ್ ಪಕ್ಷದ ವಿರುದ್ಧ ಚಾಟಿ ಬೀಸುತ್ತಿರುವ ಬಾಬಾ ರಾಮದೇವರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಈಗ ಜಗಜ್ಜಾಹೀರಾಗಿದೆ. ಈ ರೀತಿ ರಾಜಕೀಯ ಹೋರಾಟಗಳಿಗೆ ಸತ್ಯಾಗ್ರಹವನ್ನು ಬಳಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ. ನೇರವಾಗಿಯೇ ಎನ್.ಡಿ.ಎ. ಮೈತ್ರಿಕೂಟದ ಮುಖ್ಯ ಘಟಕವಾದ ಬಿಜೆಪಿ ಪಕ್ಷಕ್ಕೆ ಸೇರಿ ರಾಮದೇವ್ ತನ್ನ ಹೋರಾಟವನ್ನು ಕೈಗೊಳ್ಳುವುದು ಉತ್ತಮ.

ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ಕಾಂಗ್ರೆಸ್ ಪಕ್ಷದಂತೆಯೇ ದುರುಪಯೋಗಪಡಿಸಿಕೊಂಡ ಬಿಜೆಪಿ ಆಗ ಸಿಬಿಐ ಅನ್ನು ಸರ್ಕಾರದ ನಿಯಂತ್ರಣಮುಕ್ತಗೊಳಿಸಲು ಪ್ರಯತ್ನಿಸಲಿಲ್ಲ. ರಾಜ್ಯಪಾಲರ ಹುದ್ಧೆಯನ್ನು ಕಾಂಗ್ರೆಸ್ ದುರುಪಯೋಗಪದಿಸಿಕೊಳ್ಳುತ್ತದೆ ಎಂದು ಹೇಳುವ ಬಿಜೆಪಿ ತಾನು ಅಧಿಕಾರದಲ್ಲಿದ್ದಾಗ ರಾಜ್ಯಪಾಲರ ಹುದ್ಧೆಯನ್ನು ದುರುಪಯೋಗಪಡಿಸಿಕೊಂಡಿದೆ. ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಬಿಜೆಪಿಯ ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿರುವಾಗಲೂ ಅದನ್ನು ನಿಯಂತ್ರಿಸಲು ಸಾಧ್ಯವಾಗದ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಲೋಕಪಾಲ್ ವಿಧೇಯಕ ತರುತ್ತದೆ ಎಂದು ಜನ ನಂಬುವ ಸಾಧ್ಯತೆ ಇದೆ ಎನಿಸುವುದಿಲ್ಲ. ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಲೋಕಾಯುಕ್ತ ಹುದ್ಧೆ ಖಾಲಿಯಾಗಿದ್ದರೂ ಅದನ್ನು ತುಂಬದೆ ಖಾಲಿ ಬಿಟ್ಟಿರುವ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರ ನಿಯಂತ್ರಿಸುವ ಇಚ್ಛಾಶಕ್ತಿ ಇಲ್ಲ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಗಣಿ ಅಕ್ರಮಗಳ ಬಗ್ಗೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿದ ವರದಿಯ ಬಗ್ಗೆ ಯಾವ ಕ್ರಮವನ್ನೂ ಕರ್ನಾಟಕದ ಸರ್ಕಾರ ತೆಗೆದುಕೊಳ್ಳದೆ ಭ್ರಷ್ಟರಿಗೆ ರಕ್ಷಣೆ ಒದಗಿಸಿದೆ. ಅದೇ ರೀತಿ ಅಕ್ರಮ ಸರ್ಕಾರೀ ಭೂಮಿ ಒತ್ತುವರಿ ಕುರಿತು ರಾಮಸ್ವಾಮಿ ಕಮಿಟಿ ನೀಡಿದ ವರದಿಯ ಬಗ್ಗೆಯೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯನ್ನು ಕಂಡೂ ಕಾಣದಂತೆ ವರ್ತಿಸಿ ಬಿಜೆಪಿ ಹೈಕಮಾಂಡ್ ಪ್ರೋತ್ಸಾಹಿಸಿತು. ಇಂಥ ಹಿನ್ನೆಲೆ ಇರುವ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಲೋಕಪಾಲ್ ವಿಧೇಯಕ ತರುತ್ತದೆ ಎಂದು ಯಾರಾದರೂ ನಂಬಿದರೆ ಅದು ಅವರ ಮುಗ್ಧತೆಯನ್ನು ತೋರಿಸುತ್ತದೆ ಅಷ್ಟೇ.

ದೇಶದ ಮಠ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಇರುವ ಕಪ್ಪು ಹಣದ ಕುರಿತು ಬಾಬಾ ರಾಮದೇವ್ ಚಕಾರ ಎತ್ತುವುದಿಲ್ಲ. ಸ್ವತ: ರಾಮದೇವ್ ಮೇಲೆ ತೆರಿಗೆ ವಂಚನೆ ಇತ್ಯಾದಿ ಆರೋಪಗಳೂ ಇವೆ. ಹೀಗಾಗಿ ರಾಜಕೀಯ ಉದ್ಧೇಶದ ಬಾಬಾ ರಾಮದೇವರ ಹೋರಾಟದಿಂದ ದೇಶದಲ್ಲಿ ದೊಡ್ಡ ಸಂಚಲನೆ ಉಂಟಾಗಲಿಲ್ಲ. ಧಾರ್ಮಿಕ ಮುಖವಾಡ ಇರುವ ಕಾರಣ ಅವರ ಅನುಯಾಯಿಗಳು ಮತ್ತು ಸಂಘ ಪರಿವಾರದ ಸಂಘಟನೆಗಳ ಕೆಲವರು ಇಂಥ ಹೋರಾಟದಲ್ಲಿ ಭಾಗವಹಿಸಿದ್ದಾರೆಯೇ ವಿನಃ ದೇಶದ ಎಲ್ಲ ವರ್ಗಗಳ ಜನತೆ ಇದರಲ್ಲಿ ಪಾಲುಗೊಂಡಿಲ್ಲ. ಬಿಜೆಪಿಯಂಥ ಭ್ರಷ್ಟ ಹಾಗೂ ಕೋಮುವಾದಿ ಪಕ್ಷಕ್ಕೆ ಅಧಿಕಾರಕ್ಕೇರಲು ನೆರವಾಗುವ ನಿಟ್ಟಿನಲ್ಲಿ ಹೋರಾಟದ ವೇಷ ತೊಟ್ಟ ರಾಮದೇವರ ಹೋರಾಟ ಯಶಸ್ವಿಯಾಗುವ ಸಾಧ್ಯತೆ ಇಲ್ಲ. ಇಂಥ ಹೋರಾಟಗಳ ಹಿಂದಿನ ಉದ್ಧೇಶ ಬಿಜೆಪಿಯು ಅಧಿಕಾರದಲ್ಲಿರುವಾಗ ವರ್ತಿಸಿದ ರೀತಿ ಮತ್ತು ಅದು ಈಗ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ನೋಡಿದರೆ ಎಂಥವರಿಗೂ ಅರ್ಥವಾಗುತ್ತದೆ. ಬಾಬಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮುಲಾಯಂ ಸಿಂಗ್, ಮಾಯಾವತಿ, ಚಂದ್ರಬಾಬು ನಾಯ್ಡು ಮೊದಲಾದವರ ಮೇಲೆ ಭ್ರಷ್ಟಾಚಾರದ ಆರೋಪಗಳು ಇವೆ. ಹೀಗಾಗಿ ಇವರು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರೂ ಇದನ್ನು ಜನ ಗಂಭೀರವಾಗಿ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲ. ಇದು ಅಧಿಕಾರಕ್ಕೆ ಏರಲು ನಡೆಸುವ ಸಾಮಾನ್ಯ ಕಸರತ್ತು ಹೊರತು ಮತ್ತೇನೂ ಅಲ್ಲ ಎಂಬುದನ್ನು ತಿಳಿಯಲು ಹೆಚ್ಚಿನ ಪಾಂಡಿತ್ಯ ಬೇಕಾಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವುಗಳ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಇವೆರಡರಲ್ಲಿ ಬಿಜೆಪಿ ಹೆಚ್ಚು ಕೋಮುವಾದಿ ಹಾಗೂ ಧಾರ್ಮಿಕ ಮೂಲಭೂತವಾದಿ ಎಂಬುದಷ್ಟೇ ವ್ಯತ್ಯಾಸ. ಭ್ರಷ್ಟಾಚಾರದಲ್ಲಿಯೂ ಬಿಜೆಪಿಯೇ ಮುಂದೆ ಎಂಬುದು ಕರ್ನಾಟದ ಪರಿಸ್ಥಿತಿಯನ್ನು ನೋಡಿದರೆ ಎಂಥ ಮೂರ್ಖನಿಗೂ ಗೊತ್ತಾಗುತ್ತದೆ. ಏಕೆಂದರೆ ಕಾಂಗ್ರೆಸ್ಸಿನ ಪ್ರಥಮ ಸರ್ಕಾರವು ಇಷ್ಟು ಭ್ರಷ್ಟವಾಗಿರಲಿಲ್ಲ. ಬಿಜೆಪಿಯು ಕರ್ನಾಟಕದ ತನ್ನ ಪ್ರಥಮ ಸರ್ಕಾರದಲ್ಲಿಯೇ ಕರ್ನಾಟಕದ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಪರೇಷನ್ ಕಮಲ ಎಂಬ ಹೊಸ ಭ್ರಷ್ಟ ವಿಧಾನವನ್ನು ಪರಿಚಯಿಸಿ ಇಡೀ ವ್ಯವಸ್ಥೆಯನ್ನೇ ಕುಲಗೆಡಿಸಿದೆ. ಇಂಥ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದರೆ ಅದನ್ನು ತಲೆಯಲ್ಲಿ ಮೆದುಳು ಇರುವ ಯಾರಾದರೂ ನಂಬಲು ಸಾಧ್ಯವೇ? ಶಿಸ್ತು ಹಾಗೂ ದೇಶಪ್ರೇಮಿ ಸಂಘಟನೆ ಎಂದು ಹೇಳಿಕೊಳ್ಳುವ ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವ ವ್ಯಕ್ತಿಗಳೇ ಇಂಥ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವಾಗ ಇಂಥ ಶಿಸ್ತು ಹಾಗೂ ದೇಶಪ್ರೇಮಿ ಸಂಘಟನೆಯ ಹಿನ್ನೆಲೆಯಿಲ್ಲದ ಕಾಂಗ್ರೆಸ್ ಪಕ್ಷದವರು ಮಾಡುವ ಭ್ರಷ್ಟಾಚಾರ ದೊಡ್ಡದು ಎನಿಸುವುದಿಲ್ಲ. ಹೀಗಾಗಿಯೇ ಜನ ಕಾಂಗ್ರೆಸ್ಸಿನ ಭ್ರಷ್ಟತನವನ್ನು ನೋಡಿಯೂ ಕೇಂದ್ರದಲ್ಲಿ ಎರಡನೆಯ ಬಾರಿಗೆ ಅದರ ಮೈತ್ರಿಕೂಟಕ್ಕೆ ಬಹುಮತ ಕೊಟ್ಟಿರುವಂತೆ ಕಾಣುತ್ತದೆ.

ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಉದ್ಧೇಶ, ತಾಳ್ಮೆ, ಇಚ್ಛಾಶಕ್ತಿ ಇಂಥ ಹೋರಾಟಗಳಲ್ಲಿ ಕಾಣುವುದಿಲ್ಲ. ಅಂಥ ಉದ್ಧೇಶ ಇದ್ದಿದ್ದರೆ ಬಿಜೆಪಿಯಂಥ ಪಕ್ಷಗಳನ್ನು ಅಥವಾ ಭ್ರಷ್ಟಾಚಾರದ ಆರೋಪ ಇರುವ ಕುಟುಂಬ ಕೇಂದ್ರಿತ ಅಥವಾ ವ್ಯಕ್ತಿಕೇಂದ್ರಿತ ಪಕ್ಷಗಳನ್ನು ತಮ್ಮ ವೇದಿಕೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಇಂಥ ಆಂದೋಲನಗಳಿಂದ ವ್ಯವಸ್ಥೆಯಲ್ಲಿ ಯಾವ ಸುಧಾರಣೆಯೂ ಆಗುವ ಲಕ್ಷಣ ಕಾಣುವುದಿಲ್ಲ. ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ರೂಪಿಸುವ ನಾಯಕತ್ವ ಯಾರಲ್ಲಿಯೂ ಇಲ್ಲ. ಹೀಗಾಗಿ ದೇಶವು ಇಂದು ಅನಾಥವಾಗಿರುವಂತೆ ಕಾಣುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿ, ನೆಹರೂ, ಪಟೇಲ್, ಸುಭಾಷಚಂದ್ರ ಬೋಸ್, ಭಗತ್ ಸಿಂಗ್ ಮೊದಲಾದ ಪ್ರಗತಿಪರ ನಿಲುವಿನ ನಾಯಕರಿದ್ದರು. ಇಂದು ದೇಶವ್ಯಾಪಿ ಪ್ರಭಾವ ಬೀರಬಲ್ಲ ಪ್ರಗತಿಪರ ನಾಯಕರೇ ದೇಶದಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಪ್ರತಿಗಾಮಿ ಮೂಲಭೂತವಾದಿಗಳೇ ಮಹಾನ್ ನಾಯಕರಂತೆ ಫೋಸು ಕೊಡುತ್ತಿದ್ದಾರೆ.

ಉಪವಾಸ ಸತ್ಯಾಗ್ರಹ – ಭ್ರಮನಿರಸನಗೊಂಡ ಜನತೆ

– ಆನಂದ ಪ್ರಸಾದ್

ಅಣ್ಣಾ ಹಜಾರೆ ತಂಡದ ಉಪವಾಸ ಸತ್ಯಾಗ್ರಹಕ್ಕೆ ದೇಶದ ಜನರಿಂದ ಈ ಬಾರಿ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವಂತೆ ಕಂಡು ಬರುತ್ತಿಲ್ಲ.  ಟಿವಿ ವಾಹಿನಿಗಳಲ್ಲಿ ಹಾಗೂ ಪತ್ರಿಕೆಗಳಲ್ಲಿಯೂ ಈ ಬಾರಿ ಹೆಚ್ಚಿನ ಪ್ರಚಾರ ಕಂಡುಬರುತ್ತಿಲ್ಲ.  ಹೆಚ್ಚಿನ ಜನಬೆಂಬಲ ವ್ಯಕ್ತವಾಗದ ಕಾರಣ ಮಾಧ್ಯಮಗಳೂ ಇದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲು ಹೋಗುತ್ತಿಲ್ಲ.  ಅಣ್ಣಾ ತಂಡವು ಹಿಂದಿನ ಬಾರಿ ಒಂದು ಪಕ್ಷದ ವಿರುದ್ಧ ಚುನಾವಣೆಗಳಲ್ಲಿ ಪ್ರಚಾರ ಮಾಡಲು ಹೋಗಿ ತಮ್ಮ ಜನಪ್ರಿಯತೆಯನ್ನು ಇನ್ನೊಂದು ಪಕ್ಷಕ್ಕೆ ರಾಜಕೀಯ ಲಾಭ ಮಾಡಿಕೊಡಲು ಬಳಸಿದುದು ಇದಕ್ಕೆ ಪ್ರಧಾನ ಕಾರಣ.  ಅವರು ಪರೋಕ್ಷವಾಗಿ ರಾಜಕೀಯ ಲಾಭ ಮಾಡಿಕೊಡಲು ಪ್ರಯತ್ನಿಸಿದ ಪಕ್ಷವೂ ಭ್ರಷ್ಟಾಚಾರ, ಕೋಮುವಾದಗಳಲ್ಲೇ ಮುಳುಗಿರುವುದರಿಂದ ಅಣ್ಣಾ ಅವರ ಮೇಲೆ ಜನರ ವಿಶ್ವಾಸ ಕಡಿಮೆಯಾಗಿದೆ.  ಒಮ್ಮೆ ಜನತೆಯ ವಿಶ್ವಾಸ ಕಳೆದುಕೊಂಡರೆ ಅದನ್ನು ಮತ್ತೆ ಗಳಿಸುವುದು ಬಹಳ ಕಷ್ಟ. ಹೀಗಾಗಿಯೇ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಗಂಭೀರ ಚಿಂತನೆ ಮಾಡಿಯೇ ಇಡಬೇಕು.

ಅಣ್ಣಾ ಅವರಿಗೆ ಸ್ಪಷ್ಟವಾದ ಸೈದ್ಧಾಂತಿಕ ನಿಲುವು ಇರುವಂತೆ ಕಾಣುವುದಿಲ್ಲ.  ಸ್ಪಷ್ಟವಾದ ಪ್ರಗತಿಪರ ನಿಲುವು ಅಣ್ಣಾ ಅವರಲ್ಲಿ ಕಾಣುವುದಿಲ್ಲ.  ಓರ್ವ ರಾಷ್ಟ್ರ ನಾಯಕನಿಗೆ ಸ್ಪಷ್ಟವಾದ ಪ್ರಗತಿಪರ ನಿಲುವು ಇರಬೇಕು.  ತನ್ನ ನಿಲುವನ್ನು ಆಗಾಗ ಬದಲಿಸುತ್ತಾ ಹೋದರೆ ಜನರ ವಿಶ್ವಾಸ ಉಳಿಯಲಾರದು.  ಹೀಗಾಗಿ ಬಹುತೇಕ ಪ್ರಗತಿಶೀಲ ಜನರ ವಿಶ್ವಾಸವನ್ನು ಗೆಲ್ಲಲು ಅಣ್ಣಾ ಅವರಿಗೆ ಸಾಧ್ಯವಾಗಲಿಲ್ಲ.  ಬಂಡವಾಳಶಾಹಿಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಲ್ಲ.  ಕಾರ್ಪೋರೆಟ್ ಭ್ರಷ್ಟಾಚಾರದ ಬಗ್ಗೆ ಅಣ್ಣಾ ತಂಡ ಯಾವುದೇ ನಿಲುವನ್ನು ತೆಗೆದುಕೊಳ್ಳಲಿಲ್ಲ.  ಬಹಳ ದೊಡ್ಡ ಭ್ರಷ್ಟಾಚಾರ ನಡೆಯುತ್ತಿರುವುದು ಕಾರ್ಪೋರೆಟ್ ವಲಯದಲ್ಲೇ ಆದುದರಿಂದ ಇದನ್ನು ನಿಯಂತ್ರಿಸಲು ಲೋಕಪಾಲ್ ಮಸೂದೆಯಲ್ಲಿ ಪ್ರಧಾನ ಆದ್ಯತೆ ಕೊಡಬೇಕಾಗಿತ್ತು.  ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಅಣ್ಣಾ ತಂಡ.  ಅಣ್ಣಾ ಅವರ ಹೋರಾಟವನ್ನು ಪ್ರಾಯೋಜಿಸಿರುವುದು ಕಾರ್ಪೋರೆಟ್ ವಲಯವೇ ಆದುದರಿಂದ ಈ ಬಗ್ಗೆ ಧ್ವನಿ ಎತ್ತುವ ಸಾಹಸವನ್ನು ಅಣ್ಣಾ ತಂಡ ಮಾಡಲಿಲ್ಲ.   ಒಮ್ಮೆ ತೀವ್ರವಾದ ಜನ ಬೆಂಬಲವನ್ನು ಮುರಿಯಲು ಸರ್ಕಾರ ಏನೋ ಆಶ್ವಾಸನೆ ಕೊಟ್ಟು ನಂತರ ನುಣುಚಿಕೊಂಡಿತು.  ಪದೇ ಪದೇ ತಮ್ಮ ದೈನಂದಿನ ಕೆಲಸ ಬಿಟ್ಟು ಹೋರಾಟಕ್ಕೆ ಹೋಗುವುದು ಜನತೆಗೂ ಸಾಧ್ಯವಾಗುವುದಿಲ್ಲವಾದ ಕಾರಣ ಹೋರಾಟ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ.   ಮೂರ್ನಾಲ್ಕು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಇಂದು ದೇಶದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ.  ಹೀಗಾಗಿ ಜನರಿಗೆ ಜೀವಿಸಲು ಅಸಾಧ್ಯ ಎಂಬ ಸ್ಥಿತಿ ದೇಶದಲ್ಲಿ ಇಲ್ಲ.  ಹೇಗೋ ಲಂಚವೋ ಮತ್ತೊಂದೋ ಕೊಟ್ಟು ಜೀವನ ಸಾಗಿಸುವ ಸ್ಥಿತಿ ದೇಶದಲ್ಲಿ ಇದೆ.  ಹೀಗಾಗಿ ಹೋರಾಟಕ್ಕೆ ಹೋಗುವ ಮನೋಸ್ಥಿತಿ ಜನರಲ್ಲಿಯೂ ಕಂಡುಬರುವುದಿಲ್ಲ.  ಸ್ವಾತಂತ್ರ್ಯ ಪೂರ್ವದಲ್ಲಾದರೆ ಪರಕೀಯರು ನಮ್ಮನ್ನು ಆಳುತ್ತಿದ್ದಾರೆ, ನಮ್ಮನ್ನು ನಾವೇ ಆಳಿಕೊಳ್ಳಬೇಕು ಎಂಬ ತುಡಿತ ಜನರನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿತ್ತು.  ಇಂದು ನಾವೇ ಆರಿಸಿದ ಸರಕಾರ ಇದೆ.  ಹೀಗಾಗಿ ಹೋರಾಟಕ್ಕೆ ಹೋಗುವ ತೀವ್ರ ತುಡಿತ ಜನಮಾನಸದಲ್ಲಿ ಕಂಡುಬರುತ್ತಿಲ್ಲ.

ಇಂದು ಎಲ್ಲ ರಾಜಕೀಯ ಪಕ್ಷಗಳೂ ಭ್ರಷ್ಟವೂ, ಸ್ವಜನಪಕ್ಷಪಾತಿಗಳೂ ಆಗಿರುವಾಗ ಉತ್ತಮ ಲೋಕಪಾಲ್ ಮಸೂದೆ ಲೋಕಸಭೆಯಲ್ಲಿ ಪಾಸಾಗಿ ಬರುವ ಸಂಭವ ಇಲ್ಲ.  ಏನೋ ಒಂದು ಕಣ್ಣೊರೆಸುವ ಮಸೂದೆ ಬಂದರೂ ಬರಬಹುದು.  ಅದರಿಂದ ಹೆಚ್ಚಿನ ಪ್ರಯೋಜನ ಆಗಲಾರದು.  ದೇಶದಲ್ಲಿ ತೀವ್ರ ಜನಬೆಂಬಲ ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವನ್ನು ಸರ್ಕಾರ ಬಲಾತ್ಕಾರವಾಗಿ ನಿಲ್ಲಿಸುವ ಸಂಭವವಿದೆ ಅಥವಾ ತತ್ಕಾಲಕ್ಕೆ ಏನೋ ಒಂದು ಕಣ್ಣೊರೆಸುವ ಆಶ್ವಾಸನೆ ನೀಡಿ ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಮಾಡಬಹುದು.  ಉತ್ತಮವಾದ ಲೋಕಪಾಲ ಮಸೂದೆ ಬರಬೇಕಾದರೆ ದೇಶದಲ್ಲಿ ಹೊಸ ರಾಜಕೀಯವ್ಯವಸ್ಥೆ ಬರದೆ ಸಾಧ್ಯವಿಲ್ಲ.  ಅಂಥ ವ್ಯವಸ್ಥೆ ರೂಪಿಸಬೇಕಾದರೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ಅದು ಚುನಾವಣೆಗಳಲ್ಲಿ ಗೆದ್ದು ಮಸೂದೆ ಪಾಸು ಮಾಡುವ ಬಹುಮತ ಪಡೆದರೆ ಮಾತ್ರ ಸಾಧ್ಯ.  ಅಂಥ ಹೊಸ ರಾಜಕೀಯ ವ್ಯವಸ್ಥೆ ಸ್ಥಾಪಿಸುವ ಯಾವುದೇ ಆಲೋಚನೆ ಅಣ್ಣಾ ತಂಡಕ್ಕೆ ಇದೆ ಎನಿಸುವುದಿಲ್ಲ.  ಅಂಥ ವ್ಯವಸ್ಥೆ ಸ್ಥಾಪಿಸಿ ಬೆಳೆಸಬೇಕಾದರೆ ಸ್ಪಷ್ಟವಾದ ಸೈದ್ಧಾಂತಿಕ ನಿಲುವು ಇರಬೇಕಾಗುತ್ತದೆ ಹಾಗೂ ದೇಶಕ್ಕಾಗಿ ದುಡಿಯುವ ನಿಸ್ವಾರ್ಥಿ ಜನರ ಪಡೆಯನ್ನೇ ಬೆಳೆಸಬೇಕಾಗುತ್ತದೆ.  ಇದು ಬಹಳ ವರ್ಷಗಳನ್ನು ತೆಗೆದುಕೊಳ್ಳುವ ಕ್ರಿಯೆ.  ನಿಸ್ವಾರ್ಥಿ ಜನರ ಪಡೆಯನ್ನು ದೇಶದಲ್ಲಿ ಮೊದಲು ಬೆಳೆಸಿ ನಂತರ ಅದು ರಾಜಕೀಯ ಪಕ್ಷವಾಗಿ ಮಾರ್ಪಾಡುಗೊಂಡು ಚುನಾವಣೆಗಳಲ್ಲಿ ಸ್ಪರ್ಧಿಸಿ ಹಂತ ಹಂತವಾಗಿ ಗೆಲುವನ್ನು ಸಾಧಿಸಿ ಬದಲಾವಣೆಗಳನ್ನು ತರಬೇಕಾಗುತ್ತದೆ.  ಇಂಥ ಚಿಂತನೆಯಾಗಲಿ, ಮುನ್ನೋಟವಾಗಲೀ ಅಣ್ಣಾ ಅವರ ತಂಡದಲ್ಲಿ ಕಾಣುವುದಿಲ್ಲವಾದ ಕಾರಣ ಉಪವಾಸ ಸತ್ಯಾಗ್ರಹಗಳಿಂದ ಹೆಚ್ಚಿನ ಪ್ರಯೋಜನ ಆಗುವ ಸಂಭವ ಕಾಣುವುದಿಲ್ಲ.  ಅಣ್ಣಾ ತಂಡದ ಪರೋಕ್ಷ ರಾಜಕೀಯ ನಿಲುವು ಕೂಡ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಒಂದು ಪ್ರತಿಗಾಮಿ, ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ತರುವ ಅಜೆಂಡಾ ಹೊಂದಿದೆಯೇನೋ ಎಂಬ ರೀತಿಯಲ್ಲಿ ಅವರ ನಡವಳಿಕೆಗಳು ಕಾಣುತ್ತವೆ.  ಹೀಗೆ ಮಾಡಿದರೆ ಜನಬೆಂಬಲ ಸಿಗುವುದಾದರೂ ಹೇಗೆ?  ಬಾಬಾ ರಾಮದೇವ ಎಂಬ ಯೋಗ ಗುರುವಿನ ಉದ್ಧೇಶವೂ ಇದೇ ಆಗಿರುವಂತೆ ಕಾಣುತ್ತದೆ.  ವಿದೇಶಗಳಲ್ಲಿ ಇರುವ ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ಹೋರಾಟ ರಾಮಮಂದಿರದಂತೆ ಪ್ರತಿಗಾಮಿಗಳನ್ನು  ಅಧಿಕಾರಕ್ಕೆ ಏರಿಸಲು ಬಳಸಿ ನಂತರ ಬಿಸಾಡುವ ಏಣಿಯಂತೆ ಕಾಣುತ್ತದೆ.   ಇಂಥ ನಿಲುವುಗಳಿಂದ ಉಪವಾಸ ಸತ್ಯಾಗ್ರಹ ತನ್ನ ಅರ್ಥವನ್ನು ಕಳೆದುಕೊಂಡು ಜನರನ್ನು ಸಿನಿಕರಾಗುವಂತೆ ಮಾಡುತ್ತದೆ.  ಪರ್ಯಾಯ ರಾಜಕೀಯ ವ್ಯವಸ್ಥೆಗಳನ್ನು ರೂಪಿಸುವ ದೀರ್ಘಕಾಲೀನ ಹೋರಾಟ ರೂಪಿಸದೆ ದೇಶದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯವಾಗುವ ಸಂಭವ ಕಾಣಿಸುವುದಿಲ್ಲ.

ಕೃಷಿಕರ ಸರ್ಕಾರ ಬರಬೇಕು

-ಆನಂದ ಪ್ರಸಾದ್

ನಮ್ಮ ದೇಶ ಹಾಗೂ ರಾಜ್ಯದಲ್ಲಿ ಅತ್ಯಂತ ದೊಡ್ಡ ಸಮುದಾಯ ಇಂದಿಗೂ ಕೃಷಿಕ ಸಮುದಾಯವೇ ಆಗಿದೆ. ಕೃಷಿಕರ ಹಾಗೂ ಕೃಷಿ ಕಾರ್ಮಿಕರೆಲ್ಲರ ಸಂಖ್ಯೆ ದೇಶದ ಜನಸಂಖ್ಯೆಯ ಶೇಕಡಾ 60ರ ಆಸುಪಾಸು ಇಂದಿಗೂ ಇದೆ. ಪರಿಸ್ಥಿತಿ ಹೀಗಿರುವಾಗ ಕೃಷಿಕ ಹಾಗೂ ಕೃಷಿ ಕಾರ್ಮಿಕರೆಲ್ಲರೂ ಒಂದು ಸಮುದಾಯವಾಗಿ ತಮ್ಮದೇ ಆದ ಒಂದು ಪಕ್ಷಕ್ಕೆ ವೋಟು ಹಾಕಿದರೆ ಕೃಷಿಕರ ಸರ್ಕಾರವೊಂದನ್ನು ತರಲು ಸಾಧ್ಯವಾಗಬೇಕಲ್ಲವೆ? ಇಂಥ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ದೇಶದಲ್ಲಿ ಜನಪರವಾದ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಸಾಧ್ಯವಿದೆಯಲ್ಲವೇ? ಜನ ಜಾತಿ ಆಧಾರಿತವಾಗಿ ಓಟು ಹಾಕುವ ಬದಲು ಉದ್ಯೋಗಾಧಾರಿತವಾಗಿ ಓಟು ಹಾಕಿದರೆ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬಂದು ಕೃಷಿಕರಿಗೆ ಬೇಕಾದ ಕ್ರಾಂತಿಕಾರಕ ನೀತಿಗಳನ್ನು ಜಾರಿಗೆ ತರಬಹುದು. ಇಂಥ ಪರಿಕಲ್ಪನೆ ಏಕೆ ದೇಶದಲ್ಲಿ ಅಥವಾ ರಾಜ್ಯದಲ್ಲಿ ಮೂಡುವುದಿಲ್ಲ?

ದೇಶವು ಸ್ವಾತಂತ್ರ್ಯ ಪಡೆದು 65 ವರ್ಷಗಳು ಕಳೆದರೂ ಪ್ರತಿಯೊಬ್ಬ ವಯಸ್ಕ ಪ್ರಜೆಗೂ ಮತದಾನದ ಹಕ್ಕಿರುವಾಗ ದೇಶದ ಅತ್ಯಂತ ದೊಡ್ಡ ಸಮುದಾಯವಾದ ಕೃಷಿಕರ ಸರ್ಕಾರ ಒಮ್ಮೆಯೂ ಬರಲಿಲ್ಲ. ಒಮ್ಮೆ ಇಂಥ ಸರ್ಕಾರ ಬಂದಿದ್ದರೂ ದೇಶದಲ್ಲಿ ಮಹತ್ತರ ನೀತಿಗಳ ಮಾರ್ಪಾಡು ತರಲು ಸಾಧ್ಯವಾಗುತ್ತಿತ್ತು. ಭಾರತವು ನಿಜವಾದ ಪ್ರಜಾಪ್ರಭುತ್ವ ದೇಶ ಎಂದೆನಿಕೊಳ್ಳಬೇಕಾದರೆ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಕೃಷಿಕನೇ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬೇಕು. ಹೀಗಾಗಬೇಕಾದರೆ ಕೃಷಿಕರು ಎಚ್ಚೆತ್ತುಕೊಳ್ಳಬೇಕು, ತಮ್ಮ ಮತಾಧಿಕಾರವನ್ನು ಒಂದು ಸಮುದಾಯವಾಗಿ ಒಟ್ಟಿಗೆ ತಮ್ಮದೇ ಆದ ಒಂದು ಪಕ್ಷಕ್ಕೆ ಚಲಾಯಿಸುವ ಅಗತ್ಯವನ್ನು ಮನಗಾಣಬೇಕು. ಇದಕ್ಕಾಗಿ ದೇಶಾದ್ಯಂತ ಒಂದೇ ರೈತ ಸಂಘಟನೆ ಹಾಗೂ ಒಂದೇ ರೈತ ಪಕ್ಷ ಇರಬೇಕು. ಕೃಷಿಕರ ನಡುವೆ ಜಾತಿ, ಮೇಲು ಕೀಳು, ಬಡವ ಬಲ್ಲಿದ ಮೊದಲಾದ ಭೇದಭಾವ ಬರದಂತೆ ಎಚ್ಚರ ಮೂಡಬೇಕು.

ಕೃಷಿಕ ಹಾಗೂ ಕೃಷಿ ಕಾರ್ಮಿಕರು ಒಗ್ಗಟ್ಟಿನ ಸಂಘಟನೆ ರೂಪಿಸಿದರೆ ನಿಜವಾದ ಅರ್ಥದಲ್ಲಿ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬಂದು ಪ್ರಜಾಪ್ರಭುತ್ವ ಯಶಸ್ವಿಯಾಗಬಹುದು. ಈಗ ಕೃಷಿಕರು ಒಂದು ಸಮುದಾಯವಾಗಿ ಓಟು ಹಾಕುವುದನ್ನು ಕಲಿತಿಲ್ಲ. ಕೃಷಿಕರು ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಹಾಗೂ ಬೇರೆ ಬೇರೆ ರಾಜಕೀಯ ಪಕ್ಷಗಳ ರೈತ ಘಟಕಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಹೀಗಾಗಿ ಕೃಷಿಕರು ದೇಶದ ಅತ್ಯಂತ ದೊಡ್ಡ ಸಮುದಾಯವಾದರೂ ಅವರ ಮಾತಿಗೆ, ಅವರ ಬೇಡಿಕೆಗಳಿಗೆ, ಅವರ ಹಿತಾಸಕ್ತಿ ಪೂರೈಕೆಗೆ ಸರ್ಕಾರದ ಮಟ್ಟದಲ್ಲಿ ಮೂರು ಕಾಸಿನ ಬೆಲೆಯೂ ಇಲ್ಲವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹಳ ದೊಡ್ಡ ವ್ಯಂಗ್ಯ ಹಾಗೂ ನಮ್ಮ ನಾಗರೀಕತೆಗೆ ನಾಚಿಕೆಗೇಡಿನ ವಿಚಾರವಾಗಿದೆ. ಸರ್ಕಾರದ ನೀತಿ ನಿರ್ಧಾರಗಳು ಬೃಹತ್ ಬಂಡವಾಳಗಾರರ ಲಾಭ ಹೆಚ್ಚಿಸುವ ರೀತಿ ರೂಪುಗೊಳ್ಳುತ್ತವೆಯೇ ಹೊರತು ಕೃಷಿಕರ ಉತ್ಪನ್ನಗಳಿಗೆ ಅವರ ಶ್ರಮಕ್ಕೆ ತಕ್ಕ ದರ ದೊರಕಿಸುವಂತೆ ರೂಪುಗೊಳ್ಳುವುದಿಲ್ಲ.

ಕೃಷಿಕರ ಬಳಿ ತಮ್ಮದೇ ಆದ ಮಾಧ್ಯಮಗಳಿಲ್ಲ, ತಮ್ಮದೇ ಆದ ಟಿವಿ ಚಾನೆಲ್ ಇಲ್ಲ. ಹೀಗಾಗಿ ಕೃಷಿಕರ ನಡುವೆ ಎಚ್ಚರ, ಜಾಗೃತಿ ತಿಳುವಳಿಕೆ ಮೂಡುತ್ತಿಲ್ಲ. ಇರುವ ಮಾಧ್ಯಮಗಳು, ಟಿವಿ ವಾಹಿನಿಗಳು ಕೃಷಿಕರು ದೇಶದ ಅತ್ಯಂತ ದೊಡ್ಡ ಸಮುದಾಯವಾಗಿದ್ದರೂ ಕೃಷಿಕರಿಗೆ ಮೂರು ಕಾಸಿನ ಆದ್ಯತೆಯನ್ನೂ ನೀಡುತ್ತಿಲ್ಲ. ಇದನ್ನು ತಪ್ಪಿಸಬೇಕಾದರೆ ಕೃಷಿಕರು ದೇಶಾದ್ಯಂತ ಒಂದು ಘಟಕವಾಗಿ ಒಗ್ಗಟ್ಟಾಗಬೇಕು. ತಮ್ಮದೇ ಆದ ಒಂದು ಸಣ್ಣ ಕರಪತ್ರದಂಥ ಹೆಚ್ಚು ವೆಚ್ಚವಿಲ್ಲದ ಪತ್ರಿಕೆಯನ್ನು ತರಬೇಕು. ಅದನ್ನು ದೇಶದ ಎಲ್ಲ ಭಾಷೆಗಳಲ್ಲೂ ಪ್ರಕಟವಾಗುವಂತೆ ಮಾಡಿ ದೇಶದ ಪ್ರತಿ ಕೃಷಿಕನಿಗೂ ಅದು ತಲುಪುವಂತೆ ಮಾಡಬೇಕು. ದೇಶದ ಪ್ರತಿಯೊಬ್ಬ ಕೃಷಿಕನೂ ಅದಕ್ಕೆ ಚಂದಾದಾರನಾಗುವಂತೆ ಮಾಡಬೇಕು. ಹೀಗೆ ಮಾಡುವುದರಿಂದ ಕೃಷಿಕರ ನಡುವೆ ಒಗ್ಗಟ್ಟು, ಅರಿವು ಬೆಳೆದು ಅವರದೇ ಆದ ಒಂದು ಸರ್ಕಾರ ತರಲು ಸಾಧ್ಯವಿದೆ. ಹೀಗಾದರೆ ದೊಡ್ಡ ಬಂಡವಾಳಶಾಹಿ ಪತ್ರಿಕೆಗಳು, ಟಿವಿ ವಾಹಿನಿಗಳ ಹಾಗೂ ಜಾಹೀರಾತುಗಾರರ ಹಂಗಿಲ್ಲದೆ ಜಾಗೃತಿ ಮೂಡಿಸಲು ಸಾಧ್ಯ.

ಹೀಗಾಗಬೇಕಾದರೆ ದೇಶದ ಪ್ರತಿ ಕೃಷಿಕನೂ ಸದಸ್ಯನಾಗಿರುವ ಒಂದೇ ರೈತ ಸಂಘಟನೆ ರೂಪುಗೊಳ್ಳಬೇಕು. ಸಂಘಟನೆಯ ಮೂಲಕ ಸಂದೇಶಗಳು ದೊಡ್ಡ ಪತ್ರಿಕೆಗಳು, ಟಿವಿ ವಾಹಿನಿಗಳ ಹಂಗಿಲ್ಲದೆ ಒಬ್ಬರಿಂದೊಬ್ಬರಿಗೆ ರವಾನೆಯಾಗಬೇಕು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೊಡ್ಡ ಪತ್ರಿಕೆಗಳು, ಟಿವಿ ವಾಹಿನಿಗಳು ಇಲ್ಲದೆ ಇದ್ದ ಕಾಲದಲ್ಲಿ ನಾಯಕರ ಸಂದೇಶಗಳು ಹೀಗೆ ರವಾನೆಯಾಗುತ್ತಾ ಇದ್ದವು ಹಾಗೂ ಇಡೀ ದೇಶದಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು. ಗಾಂಧೀಜಿಯವರ ‘ಹರಿಜನ’, ‘ಯಂಗ್ ಇಂಡಿಯಾ’ದಂಥ ಸಣ್ಣ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಂದೇಶಗಳು ಇಡೀ ದೇಶದಲ್ಲಿ ಜನರಿಂದ ಜನರಿಗೆ ದಾಟಿ ದೇಶವ್ಯಾಪಿಯಾಗಿ ಪ್ರಸಾರವಾಗುತ್ತಿದ್ದವು. ಇಂದಿನ ದೊಡ್ಡ ಬಂಡವಾಳಶಾಹಿ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳ ಅಟ್ಟಹಾಸವನ್ನು ಮಟ್ಟಹಾಕಬೇಕಾದರೆ ಹಿಂದೆ ಯಶಸ್ವಿಯಾದ ಇಂಥದೇ ಸೂತ್ರಗಳನ್ನು ರೈತ ಸಂಘಟನೆಗಳು ದೇಶಾದ್ಯಂತ ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ.

ಕೃಷಿಕರ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ಜನಸ್ನೇಹಿಯಾದ ಗಣಿಗಾರಿಕೆ ನೀತಿ ತಂದು ದೇಶದ ನೈಸರ್ಗಿಕ ಸಂಪತ್ತಿನ ಲೂಟಿ ತಡೆದು ಅದರ ಪ್ರಯೋಜನ ಎಲ್ಲರಿಗೂ ಲಭ್ಯವಾಗುವಂತೆ ನೀತಿ ರೂಪಿಸಬಹುದು. ಕೃಷಿಕರ ಬೆಳೆಗಳಿಗೆ ನ್ಯಾಯೋಚಿತ ಬೆಲೆ ನಿಗದಿ ನೀತಿ ಜಾರಿಗೆ ತರಬಹುದು. ಬಂಡವಾಳಶಾಹಿ ಲಾಭಕೋರ ನೀತಿಯನ್ನು ಹತ್ತಿಕ್ಕಿ ಜನಪರ ನೀತಿಯನ್ನು ಜಾರಿಗೆ ತರಬಹುದು. ಉದಾಹರಣೆಗೆ ಇಂದು ಔಷಧ ಕಂಪನಿಗಳು ಕೆಲವು ಔಷಧಿಗಳನ್ನು ಅವುಗಳ ಉತ್ಪಾದನಾ ವೆಚ್ಚಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರುವ ನೀತಿ ಅನುಸರಿಸುತ್ತಿವೆ. ಕೃಷಿಕರ ಸರ್ಕಾರವೊಂದು ಬಂದರೆ ಇಂಥ ಅನ್ಯಾಯ ಹಾಗೂ ಅಧರ್ಮಗಳನ್ನು ತಡೆಯಲು ಸಾಧ್ಯವಿದೆ. ಇಂಥ ಬಂಡವಾಳಶಾಹಿ ಲಾಭಕೋರತನ, ಅಧರ್ಮ ಹಾಗೂ ಅನ್ಯಾಯಗಳು ಸರ್ಕಾರದ ಅಸಮರ್ಪಕ ನೀತಿಗಳ ಫಲವಾಗಿಯೇ ರೂಪುಗೊಂಡು ಬೆಳೆದಿವೆ. ಕೃಷಿಕರ ಸರ್ಕಾರ ಬಂದರೆ ವಿಷಕಾರಿ ಕೀಟನಾಶಕಗಳ ನಿಯಂತ್ರಣಕ್ಕೆ ಸೂಕ್ತ ನೀತಿ ರೂಪಿಸಲು ಸಾಧ್ಯ. ಬಂಡವಾಳಗಾರರ ಹಿತ ಕಾಯುವ ಇಂದಿನ ಸರ್ಕಾರಗಳಿಂದ ಇಂಥ ದಿಟ್ಟ ನಿರ್ಧಾರ ರೂಪುಗೊಳ್ಳಲು ಸಾಧ್ಯವಿಲ್ಲ.

ದೇಶದಲ್ಲಿ ಹಲವಾರು ಜನಸ್ನೇಹಿ ಸುಧಾರಣೆಗಳು, ಕಾನೂನುಗಳು ಬರಬೇಕಾದ ಅಗತ್ಯವಿದ್ದು ಅವನ್ನು ಇಂದು ಅಧಿಕಾರದಲ್ಲಿರುವ ಅಥವಾ ಮುಂದೆ ಬರುವ ಬಂಡವಾಳಗಾರರ ಬೆಂಬಲದ ಯಾವುದೇ ಸರ್ಕಾರಗಳೂ ತರುವ ಸಂಭವ ಇಲ್ಲ. ಇಂಥವುಗಳನ್ನು ತರಬೇಕಾದರೆ ಕೃಷಿಕರ ಸರ್ಕಾರ ದೇಶದಲ್ಲಿ ರೂಪುಗೊಳ್ಳಬೇಕಾಗಿರುವುದು ಅಗತ್ಯ. ಇದೇ ರೀತಿ ವಿದೇಶಗಳಲ್ಲಿ ನಮ್ಮ ದೇಶದ್ರೋಹಿ ಭ್ರಷ್ಟ ರಾಜಕಾರಣಿಗಳು ಹಾಗೂ ಬಂಡವಾಳಶಾಹಿಗಳು ಇಟ್ಟಿರುವ ಕಪ್ಪು ಹಣ ವಾಪಸು ತರುವ ಬಗ್ಗೆ ಹಾಗೂ ವಿದೇಶಗಳಿಗೆ ಕಪ್ಪು ಹಣದ ಹರಿವನ್ನು ನಿಯಂತ್ರಿಸುವ ಸೂಕ್ತ ಕಾನೂನು ತರುವುದು, ಚುನಾವಣಾ ಸುಧಾರಣೆಗಳನ್ನು ತರುವುದು, ನ್ಯಾಯಾಂಗಕ್ಕೆ ಸೂಕ್ತ ಸುಧಾರಣೆಗಳನ್ನು ತರುವುದು, ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಸ್ವತಂತ್ರ ಲೋಕಪಾಲ್ ವ್ಯವಸ್ಥೆ ತರುವುದು, ನಿಷ್ಪಕ್ಷಪಾತ ತನಿಖೆ ನಡೆಸಲು ಸ್ವತಂತ್ರ ರಾಷ್ಟ್ರೀಯ ತನಿಖಾ ಸಂಸ್ಥೆಯ ಸ್ಥಾಪನೆ ಮೊದಲಾದ ಮಹತ್ವದ ಕೆಲಸಗಳನ್ನು ಮಾಡಲು ಜನಪರವಾದ ಕೃಷಿಕರ ಸರ್ಕಾರವೊಂದು ಅಸ್ತಿತ್ವಕ್ಕೆ ಬರಬೇಕಾದ ಅಗತ್ಯ ಇದೆ. ಈಗ ಅಸ್ತಿತ್ವದಲ್ಲಿರುವ ಭ್ರಷ್ಟ ರಾಜಕಾರಣಿಗಳ ಹಾಗೂ ಬಂಡವಾಳಗಾರರ, ಲೂಟಿಕೋರರ ಸರ್ಕಾರದಿಂದಾಗಲಿ ಅಥವಾ ಇನ್ನು ಮುಂದೆ ಬರುವ ಇಂಥದೇ ಇನ್ನೊಂದು ಪಕ್ಷದ ಸರ್ಕಾರದಿಂದಾಗಲೀ ಯಾವುದೇ ಸುಧಾರಣೆಗಳು ಸಾಧ್ಯವಾಗುವ ಸಂಭವ ಕಾಣುವುದಿಲ್ಲ.

 

 

ನರೇಂದ್ರ ಮೋದಿ ವರ್ಸಸ್ ನಿತೀಶ್ ಕುಮಾರ್ : ಯಾರು ಹಿತವರು?

– ಆನಂದ ಪ್ರಸಾದ್

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಸಂಘ ಪರಿವಾರ ಬಿಂಬಿಸಲು ಪ್ರಯತ್ನಿಸುತ್ತಿದ್ದು ಇದನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧಿಸುತ್ತಿದ್ದಾರೆ. ಸಂಘ ಪರಿವಾರ ಮಾತ್ರವಲ್ಲದೆ ಸ್ವತಃ ನರೇಂದ್ರ ಮೋದಿಯೇ ತನ್ನನ್ನು ತಾನೇ ಮುಂದಿನ ಪ್ರಧಾನಮಂತ್ರಿ ಅಭ್ಯಥಿಯಾಗಿ ಬಿಂಬಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಸಂಘದ ಬೆಂಬಲಕ್ಕಿರುವ ಮುಖ್ಯವಾಹಿನಿಯ ಕೆಲವು ಪತ್ರಿಕೆಗಳೂ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿರುವುದನ್ನು ನಾವು ಕಾಣಬಹುದು. ಗುಜರಾತಿನಲ್ಲಿ ನರೇಂದ್ರ ಮೋದಿ ಅಪಾರ ಅಭಿವೃದ್ಧಿಯನ್ನು ಸಾಧಿಸಿದ್ದಾರೆ ಎಂದು ಸಂಘಮುಖೀ ಪತ್ರಿಕೆಗಳು ಭಾರೀ ಪ್ರಚಾರವನ್ನು ಕೈಗೊಳ್ಳುತ್ತಿವೆ. ನರೇಂದ್ರ ಮೋದಿ ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ಗೋಧ್ರಾ ಗಲಭೆಗಳ ನಂತರ ನಡೆದ ಕೋಮುಗಲಭೆಗಳನ್ನು ನಿಯಂತ್ರಿಸದೆ ಅದರ ರಾಜಕೀಯ ಲಾಭ ಪಡೆದ ಕಳಂಕ ಅವರನ್ನು ಎಂದಿಗೂ ಪ್ರಧಾನ ಮಂತ್ರಿ ಪಟ್ಟಕ್ಕೆ ಹೋಗಲು ಬಿಡಲಾರದು. ಮೋದಿಗೆ ಅಂಟಿರುವ ತೀವ್ರಗಾಮಿ ಹಿಂದುತ್ವವಾದಿ ಇಮೇಜ್ ಅವರನ್ನು ಪ್ರಧಾನಿಯಾಗುವುದನ್ನು ತಡೆಯುವುದು ಖಚಿತ. ಈ ಮೊದಲು ಇಂಥ ತೀವ್ರಗಾಮಿ ಹಿಂದುತ್ವವಾದಿ ಇಮೇಜ್ ಅಡ್ವಾಣಿಯವರಿಗೆ ಇತ್ತು. ಹೀಗಾಗಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದಾಗ ಬಿಜೆಪಿ ಹಿನ್ನಡೆ ಅನುಭವಿಸಿತು. ಹಿಂದಿನ 50 ವರ್ಷಗಳಲ್ಲಿ ಆಗದ ಪ್ರಗತಿ ಬಿಜೆಪಿ ಆಡಳಿತದ 5 ವರ್ಷಗಳ ಆಡಳಿತದಲ್ಲಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಮಾಡಿದರೂ ಅಡ್ವಾಣಿಯವರ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರದೆ ಇರಲು ಅಡ್ವಾಣಿಯವರಿಗೆ ಇದ್ದ ಉಗ್ರ ಹಿಂದುತ್ವವಾದಿ ಇಮೇಜ್ ಕಾರಣ. ಹೀಗಾಗಿ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮುಂದೊಡ್ಡಿ ಚುನಾವಣೆಗೆ ಹೋದರೆ ಎನ್. ಡಿ. ಎ. ಮೈತ್ರಿಕೂಟಕ್ಕೆ ಹಿನ್ನಡೆ ಆಗುವ ಸಂಭವ ಅಧಿಕ.

ಭಾರತವು ಒಂದು ಬಹುಸಂಸ್ಕೃತಿಗಳ ದೇಶವಾಗಿರುವುದರಿಂದ ಇಲ್ಲಿ ಉಗ್ರವಾದಿ ಹಿಂದುತ್ವ ಪ್ರತಿಪಾದಿಸುವ ಪಕ್ಷಗಳು ಬಹುಮತದಿಂದ ಅಧಿಕಾರಕ್ಕೆ ಬರುವ ಸಂಭವ ಇಲ್ಲ. ಇದನ್ನರಿತೇ ಉಗ್ರಹಿಂದುವಾದಿ ಪಕ್ಷವಾದ ಬಿಜೆಪಿ ತನ್ನ ಉಗ್ರ ಹಿಂದೂವಾದವನ್ನು ಪಕ್ಕಕ್ಕೆ ಇಟ್ಟು ಇತರ ಸಮಯಸಾಧಕ ಅಧಿಕಾರದಾಹೀ ಪಕ್ಷಗಳೊಂದಿಗೆ ಮೈತ್ರಿಕೂಟವನ್ನು ಏರ್ಪಡಿಸಿಕೊಂಡು ಅಧಿಕಾರಕ್ಕೆ ಏರಿತು. ಇಂಥ ಮೈತ್ರಿಕೂಟವನ್ನು ರಚಿಸಲು ಸೌಮ್ಯವಾದಿ ನಾಯಕ ಅಟಲ ಬಿಹಾರಿ ವಾಜಪೇಯಿಯವರ ಇಮೇಜ್ ಬಹಳಷ್ಟು ಸಹಾಯ ಮಾಡಿತು. ಸಂಘ ಪರಿವಾರದ ವ್ಯಕ್ತಿ ಎಂದು ಬಿಜೆಪಿ ಅಧ್ಯಕ್ಷಗಿರಿಗೆ ಗಡ್ಕರಿ ಬಂದ ನಂತರ ಬಿಜೆಪಿಯ ವಿಶ್ವಾಸಾರ್ಹತೆ ಕಡಿಮೆಯಾಯಿತು. ಸಂಘ ಪರಿವಾರಕ್ಕೆ ಉಗ್ರ ಹಿಂದುತ್ವವಾದಿ ಇಮೇಜ್ ಇರುವುದೇ ಇದಕ್ಕೆ ಕಾರಣ. ಗಡ್ಕರಿ ಬಿಜೆಪಿ ಅಧ್ಯಕ್ಷರಾದ ನಂತರ ಸಂಘವು ತನ್ನ ನಿಲುವುಗಳನ್ನು ಪಕ್ಷದ ಮೇಲೆ ಬಲಪಡಿಸುವ ಸಾಧ್ಯತೆ ಹೆಚ್ಚಿರುವುದರಿಂದ ಬಿಜೆಪಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತಾ ಬಂದಿದೆ.

ಈ ಹಿನ್ನೆಲೆಯಲ್ಲಿಯೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದು ಸಮಂಜಸವಲ್ಲ ಎಂದು ಹೇಳಿರುವಂತೆ ಕಾಣುತ್ತದೆ. ಮೋದಿಯವರು ಗುಜರಾತಿನಲ್ಲಿ ಸಾಧಿಸಿದ ಅಭಿವೃದ್ಧಿಯನ್ನು ಹಾಗೂ ನಿತೀಶ್ ಬಿಹಾರದಲ್ಲಿ ಸಾಧಿಸಿದ ಅಭಿವೃದ್ಧಿಯನ್ನು ಹೋಲಿಸಿದಾಗ ನಿತೀಶ್ ಸಾಧಿಸಿದ ಅಭಿವೃದ್ಧಿ ಮಹತ್ತರವಾದುದು. ಗುಜರಾತ್ ಮೊದಲಿನಿಂದಲೇ ಉದ್ಯಮಶೀಲರ ನಾಡು. ಹೀಗಾಗಿ ಗುಜರಾತಿನಲ್ಲಿ ಅಭಿವೃದ್ಧಿ ಸಾಧಿಸುವುದು ಬಹಳ ದೊಡ್ಡ ವಿಷಯ ಅಲ್ಲ. ಆದರೆ ಬಿಹಾರ ಕಾನೂನು ಸುವ್ಯವಸ್ಥೆ ಹದಗೆಟ್ಟ ಒಂದು ಗೂಂಡಾರಾಜ್ ವ್ಯವಸ್ಥೆ ಹೊಂದಿತ್ತು. ಇದನ್ನು ತಹಬಂದಿಗೆ ತಂದು ಬಿಹಾರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವುದು ಮಹತ್ವದ ಸಾಧನೆ ಎನ್ನಲು ಅಡ್ಡಿ ಇಲ್ಲ. ಗುಜರಾತಿನಲ್ಲಿ ಮೋದಿಗೆ ಕೋಮುಗಲಭೆಗಳ ಪರಿಣಾಮವಾಗಿ ಅನಾಯಾಸವಾಗಿ ಬಹುಮತ ಲಭಿಸಿತ್ತು. ಹೀಗಾಗಿ ಏಕಪಕ್ಷದ ಆಡಳಿತದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು. ಆದರೆ ಬಿಹಾರದಲ್ಲಿ ನಿತೀಶ್ ಅವರು ಸೈದ್ಧಾಂತಿಕವಾಗಿ ವಿರೋಧಿ ನಿಲುವಿನ ಬಿಜೆಪಿ ಪಕ್ಷದ ಜೊತೆ ಮೈತ್ರಿ ಸರ್ಕಾರದಲ್ಲಿ ಏಗುತ್ತಾ ಬಿಹಾರವನ್ನು ಅಭಿವೃದ್ಧಿ ಪಥದೆಡೆಗೆ ಮುನ್ನಡೆಸುತ್ತಿರುವುದು ಸಾಧನೆ ಎನ್ನಬೇಕಾಗುತ್ತದೆ. ಸಮಾಜವಾದಿ ಹಿನ್ನೆಲೆಯ ನಿತೀಶ್ ಅನಿವಾರ್ಯವಾಗಿ ಬಿಜೆಪಿಯಂಥ ಕೋಮುವಾದಿ ಪಕ್ಷದೊಂದಿಗೆ ಹೋಗಿರುವಂತೆ ಕಾಣುತ್ತದೆ. ಹೀಗಾಗಿಯೇ ನಿತೀಶ್ ಅವರು ಎನ್. ಡಿ. ಎ. ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯಂಥ ತೀವ್ರ ಹಿಂದುವಾದಿಯನ್ನು ವಿರೋಧಿಸುತ್ತಿರುವಂತೆ ಕಾಣುತ್ತದೆ.

ಮೋದಿಗೆ ಹೋಲಿಸಿದರೆ ನಿತೀಶ್ ಪ್ರಧಾನಿ ಅಭ್ಯರ್ಥಿಯಾಗಲು ಸಾವಿರ ಪಟ್ಟು ಉತ್ತಮ ರಾಜಕಾರಣಿ. ಏಕೆಂದರೆ ನಿತೀಶ್ ಮೇಲೆ ಮೋದಿಯವರ ಮೇಲೆ ಇರುವಂತೆ ಕಳಂಕ ಇಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟಿ ಚುನಾವಣೆಗಳಲ್ಲಿ ಗೆಲ್ಲುವ ಹಾದಿ ಮೋದಿ, ಅಡ್ವಾಣಿಯವರಂಥ ಸಂಘದ ಹಿನ್ನೆಲೆಯ ರಾಜಕಾರಣಿಗಳಿಗೆ ಸುಲಭವಾಗಿ ಲಭ್ಯವಾಗುವ ಹಾದಿ. ಈ ರೀತಿಯಾಗಿ ಗೆಲ್ಲುವುದು ಶ್ರೇಷ್ಠ ಹಾದಿಯೇನೂ ಅಲ್ಲ ಮತ್ತು ಈ ರೀತಿ ಗೆಲ್ಲಲು ಹೆಚ್ಚಿನ ಶ್ರಮವೂ ಬೇಕಾಗುವುದಿಲ್ಲ. ಆದರೆ ಇಂಥ ಹಾದಿ ಆರಿಸಿಕೊಂಡವರು ಇತಿಹಾಸದಲ್ಲಿ ಶಾಶ್ವತವಾಗಿ ಕಳಂಕವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಅಡ್ವಾಣಿಯವರು ತನ್ನ ಇಮೇಜ್ ಅನ್ನು ಸೌಮ್ಯವಾದಿಯಾಗಿ ಬದಲಾಯಿಸಿದರೂ ಜನ ನಂಬದಂತೆ ಆಗಿದೆ ಹಾಗೂ ಅವರ ನೇತೃತ್ವದ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಗಿದೆ. ಇದು ಮೋದಿಯವರಿಗೂ ಅನ್ವಯಿಸುತ್ತದೆ. ಮೋದಿಯವರೂ ಈಗ ಅಭಿವೃದ್ಧಿಯ ಹರಿಕಾರ ಎಂಬ ಇಮೇಜ್ ಧರಿಸಿ ಹೋದರೂ ಜನ ಅವರ ಉಗ್ರ ಹಿಂದೂವಾದಿ ಇಮೇಜ್ ಅನ್ನು ಮರೆಯುವ ಸಾಧ್ಯತೆ ಇಲ್ಲವಾಗಿರುವುದರಿಂದ ಸದ್ಯ ಮುಂದಿನ ಚುನಾವಣೆಗಳಲ್ಲಿ ದೇಶಕ್ಕೆ ಉಗ್ರ ಕೋಮುವಾದದ ಅಪಾಯ ಎದುರಾಗಲಾರದು ಎಂದು ಕಾಣುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಪಕ್ಷದ ಮೇಲೆ ಸಂಘ ಪರಿವಾರ ಹೆಚ್ಚಿನ ಹಿಡಿತ ಸಾಧಿಸುತ್ತಿರುವ ಕಾರಣ ಜನ ಅದನ್ನು ನಂಬದಂತೆ ಆಗಿದೆ. ಹೀಗಾಗಿಯೇ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಬಹಳ ಬೊಬ್ಬೆ ಹಾಕಿದರೂ ಅದು ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಈ ಕಾರಣದಿಂದಾಗಿ ದೇಶಕ್ಕೆ ಪರ್ಯಾಯ ತೃತೀಯ ರಂಗವೊಂದರ ಅವಶ್ಯಕತೆ ಇದೆ. ಆದರೆ ದುರದೃಷ್ಟವಶಾತ್ ದೇಶದಲ್ಲಿ ತೃತೀಯ ರಂಗದ ನಾಯಕತ್ವ ವಹಿಸಿಕೊಳ್ಳಬಲ್ಲ ಉತ್ತಮ ಪಕ್ಷವೊಂದರ ಕೊರತೆ ಇದೆ. ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬಂದರೂ ತನ್ನ ಹಳೆಯ ಚಾಳಿಯನ್ನು ಬಿಟ್ಟು ಅಭಿವೃದ್ಧಿ ರಾಜಕೀಯದೆಡೆಗೆ ಚಲಿಸುವ ದಿಟ್ಟ ನಿಲುವನ್ನು ತೆಗೆದುಕೊಂಡಂತೆ ಕಾಣುವುದಿಲ್ಲ. ಅಖಿಲೇಶ್ ಯಾದವರಂಥ ಯುವ ನಾಯಕ ಸಮಾಜವಾದಿ ಪಕ್ಷದಲ್ಲಿ ಇದ್ದರೂ ಈ ಕುರಿತು ಮಾರ್ಗದರ್ಶನ ಹಾಗೂ ದೂರದೃಷ್ಟಿ ಅವರಲ್ಲಿ ಇರುವಂತೆ ಕಾಣುವುದಿಲ್ಲ. ಎಡ ಪಕ್ಷಗಳು ತೃತೀಯ ರಂಗದ ಸಾಧ್ಯತೆಗಳ ಬಗ್ಗೆ ಸಂಭವನೀಯ ರಾಜಕೀಯ ಪಕ್ಷಗಳಿಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯ ಇದೆ. ಉತ್ತಮ ಆಡಳಿತ ನೀಡುವಲ್ಲಿ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಯಶಸ್ವಿಯಾದರೆ ಇದು ತೃತೀಯ ರಂಗದ ರಚನೆಗೆ ನಾಯಕತ್ವ ವಹಿಸಿಕೊಳ್ಳಲು ಸಾಧ್ಯ.

ಮಧ್ಯಂತರ ಚುನಾವಣೆ ಪರಿಹಾರವೇ?

– ಆನಂದ ಪ್ರಸಾದ್

ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ನಾಯಕತ್ವಕ್ಕಾಗಿ ನಿರಂತರವಾಗಿ ನಡೆಯುತ್ತಿರುವ ಕಿತ್ತಾಟ ನೋಡಿ ಬೇಸತ್ತಿರುವ ಜನ ಇದಕ್ಕೆ ಮಧ್ಯಂತರ ಚುನಾವಣೆಯೇ ಪರಿಹಾರ ಎಂಬ ಅಭಿಪ್ರಾಯವನ್ನು ಬಹಳ ಹಿಂದಿನಿಂದಲೇ ಹೇಳುತ್ತಾ ಬಂದಿದ್ದಾರೆ. ಆದರೆ ಇಂದಿನ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕಂಡುಬರುತ್ತಿರುವ ಗುಂಪುಗಾರಿಕೆಯನ್ನುನೋಡಿದರೆ ಮಧ್ಯಂತರ ಚುನಾವಣೆಯೂ ಪರಿಹಾರ ನೀಡುವ ಸಂಭವ ಇದೆ ಎನಿಸುವುದಿಲ್ಲ. ಈಗ ಚುನಾವಣೆ ನಡೆದರೂ ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಬರುತ್ತದೆ ಎಂಬ ನಂಬಿಕೆ ಯಾರಲ್ಲಿಯೂ ಉಳಿದಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರುತ್ತದೆ ಎಂದು ಇಟ್ಟುಕೊಂಡರೂ ಏನಾದರೂ ಪರಿಸ್ಥಿತಿ ಬದಲಾವಣೆ ಆಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಕಾರಣ ಕಾಂಗ್ರೆಸ್ ಪಕ್ಷದಲ್ಲಿಯೂ ಇರುವ ಬಣ ರಾಜಕೀಯ. ಕಾಂಗ್ರೆಸ್ ಪಕ್ಷದಲ್ಲಿ ಎಸ್. ಎಂ. ಕೃಷ್ಣ ಗುಂಪಿನ ಬಣ, ಮೊಯಿಲಿ ಬಣ, ಸಿದ್ಧರಾಮಯ್ಯ ಬಣ, ಖರ್ಗೆ ಬಣ ಇತ್ಯಾದಿ ಬಣಗಳ ಮೇಲಾಟದಲ್ಲಿ ಪರಿಸ್ಥಿತಿ ಈಗಿರುವ ಬಿಜೆಪಿಗಿಂತ ಉತ್ತಮವಾಗಿದ್ದೀತು ಎಂದು ನಿರೀಕ್ಷಿಸುವುದು ಹೇಗೆ? ಭ್ರಷ್ಟಾಚಾರದ ವಿಷಯಕ್ಕೆ ಬಂದರೂ ಅಷ್ಟೇ. ಕಾಂಗ್ರೆಸ್ ಪಕ್ಷದಲ್ಲಿಯೂ ಘಟಾನುಘಟಿ ಭ್ರಷ್ಟ ನಾಯಕರಿದ್ದಾರೆ. ಇಂಥ ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಕಾಂಗ್ರೆಸ್ ಹೈಕಮಾಂಡಿಗೆ ಇಲ್ಲ. ಅಲ್ಲದೆ ಕೆಲವು ಕಾಂಗ್ರೆಸ್ಸಿಗರು ಇನ್ನೂ ಕೆಲವು ಮಹಾಭ್ರಷ್ಟರನ್ನು ಇತರ ಪಕ್ಷಗಳಿಂದ ಜಾತಿಯ ಆಧಾರದಲ್ಲಿ ತಮ್ಮ ಪಕ್ಷಕ್ಕೆ ತರಬೇಕೆಂಬ ಚಿಂತನೆಯಲ್ಲಿಯೂ ಇದ್ದಾರೆ. ಹೀಗಿರುವಾಗ ಬಿಜೆಪಿ ಹೋಗಿ ಕಾಂಗ್ರೆಸ್ ಬಂದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆದೀತು ಎಂದು ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.

ಮೂರನೇ ಅತಿ ದೊಡ್ಡ ಪಕ್ಷವಾದ ಜೆಡಿಎಸ್ ಪಕ್ಷ ತನ್ನ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ಶಕ್ತಿಯನ್ನು ಸಿದ್ಧರಾಮಯ್ಯ ಹಾಗೂ ಇನ್ನಿತರ ನಾಯಕರು ಆ ಪಕ್ಷವನ್ನು ತ್ಯಜಿಸಿದಾಗಲೇ ಕಳೆದುಕೊಂಡಿದೆ. ಹೀಗಾಗಿ ಅದು ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಅಲ್ಲದೆ ಜೆಡಿಸ್ ನಾಯಕ ಕುಮಾರಸ್ವಾಮಿಯ ಮೇಲೂ ಭ್ರಷ್ಟಾಚಾರದ ಆಪಾದನೆಗಳಿವೆ ಹಾಗೂ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಬೇನಾಮಿ ಆಸ್ತಿ ಗಳಿಸಿರುವ ಗುಸುಗುಸು ರಾಜ್ಯಾದ್ಯಂತ ಕೇಳಿಬರುತ್ತಿದೆ. ಅಲ್ಲದೆ ಜೆಡಿಎಸ್ ಪಕ್ಷವು ತಂದೆ ಮಕ್ಕಳ ಪಕ್ಷ ಎಂಬ ಬಿರುದನ್ನೂ ಪಡೆದುಕೊಂಡಿದೆ. ಹೀಗಾಗಿ ಈ ಪಕ್ಷವು ಮುಂದೆಯೂ ರಾಜ್ಯದಲ್ಲಿ ಬೆಳೆಯುವ ಸಾಧ್ಯತೆ ಇಲ್ಲ. ಅಕ್ರಮ ಗಣಿಗಾರಿಕೆಯ ದೇಶದ್ರೋಹದ ದುಡ್ಡಿನಿಂದ ಜನ್ಮ ತಾಳಿದ ಶ್ರೀರಾಮುಲು ನೇತೃತ್ವದ ಪಕ್ಷವೂ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ. ಅಕ್ರಮ ಗಣಿ ದುಡ್ಡನ್ನು ಚೆಲ್ಲಿದರೂ ಹತ್ತಿಪ್ಪತ್ತು ಸ್ಥಾನಗಳಿಗಿಂಥ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ. ಶ್ರೀರಾಮುಲು ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದರೂ ಇವೆರಡೇ ಪಕ್ಷಗಳು ಅಧಿಕಾರಕ್ಕೆ ಬರುವಷ್ಟು ಸ್ಥಾನ ಪಡೆಯುವ ಸಾಧ್ಯತೆ ಇಲ್ಲ. ಇನ್ನೊಂದು ಸಾಧ್ಯತೆ ಎಂದರೆ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷವು ಚುನಾವಣೋತ್ತರ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂಬಹುದು. ಇದರಿಂದ ಕರ್ನಾಟಕದ ರಾಜಕೀಯ ಅಕ್ರಮ ಗಣಿಗಾರಿಕೆಯ ದುಡ್ಡಿನಿಂದ ಮತ್ತೆ ಕುಲಗೆಡುವ ಪರಿಸ್ಥಿತಿ ಬರಬಹುದು. ಚುನಾವಣೋತ್ತರ ಪರಿಸ್ಥಿತಿಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮತ್ತೆ ಕೈಜೋಡಿಸಿ ಸಮಯ ಸಾಧಕ ರಾಜಕಾರಣ ತೋರಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಬಿಜೆಪಿ ಒಂದು ಪಕ್ಷವಾಗಿ ಅಧಿಕಾರ ಹಿಡಿದಿರುವಾಗಲೆ ಅಧಿಕಾರಕ್ಕಾಗಿ ಭೀಕರ ಕಚ್ಚಾಟ ನಡೆಯುತ್ತಿರುವಾಗ ಎರಡು ಸಮಯಸಾಧಕ, ತಾತ್ವಿಕವಾಗಿ ವಿರೋಧಿ ನಿಲುವಿನ ಪಕ್ಷಗಳು ಜೊತೆ ಸೇರಿದರೆ ಅಧಿಕಾರಕ್ಕಾಗಿ ಇನ್ನೆಂಥ ಕಚ್ಚಾಟ ನಡೆಯಬಹುದು ಎಂಬುದನ್ನು ಊಹಿಸುವುದು ಕಷ್ಟವಲ್ಲ. ಇಂಥ ನಿರ್ವಾತದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಬದಲಾವಣೆ ಉಂಟಾಗುವ ಸಾಧ್ಯತೆ ಕಂಡುಬರುತ್ತಿಲ್ಲ. ಹೀಗಿರುವಾಗ ಮಧ್ಯಂತರ ಚುನಾವಣೆಯಿಂದ ಪರಿಹಾರ ದೊರೆತೀತು ಎಂಬುದು ಕನಸಿನ ಮಾತಾಗುತ್ತದೆ.

ಶೇಕಡಾ 75 ಅಕ್ಷರಸ್ಥರನ್ನು ಹೊಂದಿರುವ ಕರ್ನಾಟಕದಲ್ಲಿ ಆರೋಗ್ಯಕರ ರಾಜಕೀಯವನ್ನು ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ವಿಚಾರವಾಗಿದೆ. ಕರ್ನಾಟಕದ ಮಾಧ್ಯಮಗಳಲ್ಲಿ ಆರೋಗ್ಯಕರ ಪರ್ಯಾಯ ರಾಜಕೀಯವನ್ನು ಕಟ್ಟಬೇಕಾಗಿರುವುದರ ಅವಶ್ಯಕತೆಯನ್ನು ಕುರಿತು ಯಾವುದೇ ಚರ್ಚೆ ನಡೆಯುತ್ತಾ ಇಲ್ಲ. ಎಲ್ಲ ಮಾಧ್ಯಮಗಳೂ ಸೇರಿ ಇಂಥ ಒಂದು ಚರ್ಚೆಯನ್ನು ನಿರಂತರವಾಗಿ ನಡೆಸುತ್ತ ಬಂದರೆ ಈ ಕುರಿತು ರಾಜ್ಯದಲ್ಲಿ ಇಂಥ ಒಂದು ಜಾಗೃತಿ ಆಗಿಯೇ ಆಗುತ್ತದೆ. ಆದರೆ ಯಾವ ಮಾಧ್ಯಮಗಳಿಗೂ ಇದು ಮುಖ್ಯ ಎನಿಸುತ್ತಿಲ್ಲ. ಒಂದು ಕನ್ನಡ ವಾಹಿನಿಗೆ ನಿತ್ಯಾನಂದನ ವಿಷಯವೇ ರಾಜ್ಯವನ್ನು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಯಾಗಿರುವಂತೆ ಕಂಡುಬರುತ್ತದೆ. ಯಾವುದೇ ಮುಖ್ಯ ವಾಹಿನಿಯ ಮಾಧ್ಯಮಗಳಿಗೂ ಕರ್ನಾಟಕದ ಪ್ರಸಕ್ತ ನಿರ್ವಾತ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸಲು ತಾವು ಕೊಡುಗೆ ಕೊಡಬಹುದು ಎಂಬ ಒಂದು ಚಿಂತನೆಯೇ ಇರುವಂತೆ ಕಾಣುತ್ತಿಲ್ಲ. ಹೀಗಾಗಿ ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಒಂದು ಪ್ರಹಸನ ಮಾತ್ರ ಆಗಿ ಉಳಿದಿದೆ. ವ್ಯವಸ್ಥೆಯನ್ನು ಬದಲಾಯಿಸಬಹುದು, ಅದಕ್ಕಾಗಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಎಂಬ ಪ್ರಜ್ಞೆ ನಮ್ಮ ಜನರಲ್ಲಿ ಇರುವಂತೆ ಕಾಣುವುದಿಲ್ಲ. ಇಂಥ ಪ್ರಜ್ಞೆಯನ್ನು ಜನರಲ್ಲಿ ತರಬೇಕಾಗಿರುವ ಮಹತ್ತರ ಜವಾಬ್ದಾರಿ ಇರುವ ಮಾಧ್ಯಮಗಳು ಇದು ತಮಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿವೆ. ಹೀಗಾಗಿಯೇ ನಮ್ಮ ಯೋಗ್ಯತೆಗೆ ಅನುಗುಣವಾದ ಭ್ರಷ್ಟ ರಾಜಕೀಯ ವ್ಯವಸ್ಥೆ ರೂಪುಗೊಂಡಿದೆ. ಇದನ್ನು ಬದಲಾಯಿಸಬಹುದು, ಬದಲಾಯಿಸಬೇಕು ಎಂಬ ಅಶಾವಾದವೇ ನಮ್ಮಲ್ಲಿ ಕಂಡುಬರುತ್ತಿಲ್ಲ. ಎಲ್ಲೆಲ್ಲೂ ನಿರಾಶಾವಾದ ಕಂಡುಬರುತ್ತಿದೆ. ನಮ್ಮ ಪ್ರಖ್ಯಾತ ಸಾಹಿತಿಗಳು, ಕಲಾವಿದರು, ಸಿನಿಮಾ ನಟರು, ವಿಜ್ಞಾನಿಗಳು, ಚಿಂತಕರು, ವಿವಿಧ ಕ್ಷೇತ್ರಗಳ ಸಾಧಕರು, ಪ್ರಮುಖ ಸಂಘಟನೆಗಳು ಪರ್ಯಾಯ ರಾಜಕೀಯದ ಅವಶ್ಯಕತೆಯ ಬಗ್ಗೆ ಧ್ವನಿ ಎತ್ತುತ್ತಾ ಇಲ್ಲ. ಎಲ್ಲರೂ ಸೇರಿ ದನಿ ಎತ್ತಿದರೆ ಈ ಬಗ್ಗೆ ನಿಧಾನವಾಗಿಯಾದರೂ ಏನಾದರೂ ಬೆಳವಣಿಗೆ ಆದೀತು. ಆದರೆ ನಮ್ಮ ಜನರಿಗೆ ಕವಿದ ನಿರಾಶವಾದ ಯಾವುದೇ ಧನಾತ್ಮಕ ಚಿಂತನೆಯೇ ಮಾಡದಂತೆ ತಡೆದಿರುವಂತೆ ಕಾಣುತ್ತದೆ. ಇಂಥ ಸ್ಥಿತಿಯಲ್ಲಿ ಬೆಳಕನ್ನು ತೋರುವವರು ಯಾರು?