Category Archives: ಚಿದಂಬರ ಬೈಕಂಪಾಡಿ

ಬದುಕು ಕಸಿದುಕೊಂಡವನಿಗೆ ಬದುಕುವ ಹಕ್ಕು ಬೇಕೇ?


-ಚಿದಂಬರ ಬೈಕಂಪಾಡಿ


 

ರಾಷ್ಟ್ರದ ಶಕ್ತಿ ಕೇಂದ್ರ ದೆಹಲಿಯಲ್ಲಿ ನಡೆದಿರುವ ಎರಡು ಗ್ಯಾಂಗ್ ರೇಪ್ ಪ್ರಕರಣಗಳು ಜನರನ್ನು ಬೆಚ್ಚಿ ಬೀಳಿಸಿವೆ, ಭಯದ ವಾತಾವರಣದಲ್ಲಿ ಬದುಕು ಅದೆಷ್ಟು ಅಸುರಕ್ಷಿತ ಎನ್ನುವ ಚಿಂತೆ ಹುಟ್ಟು ಹಾಕಿವೆ. ಕೇವಲ ಐದು ದಿನಗಳ ಅಂತರದಲ್ಲಿ ರಾಜಧಾನಿಯಲ್ಲಿ ನಡೆದಿರುವ ಈ ಕುಕೃತ್ಯಗಳು ವಿಕೃತ ಮನಸ್ಸಿನ ಅಟ್ಟಹಾಸ ಎನ್ನುವುದರಲ್ಲಿ ಅನುಮಾನವಿಲ್ಲ.

ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಒಂಟಿ ಮಹಿಳೆಯ ಮೇಲೆ ಮನೆಗೆ ನುಗ್ಗಿ ನಡೆಸಿದ ಕ್ರೌರ್ಯ ಅಮಾನುಷ ಮಾತ್ರವಲ್ಲ ಹೇಯವಾದುದು. ಓರ್ವ ಹೆಣ್ಣು ಮಗಳು ಅಧಿಕಾರ ನಡೆಸುತ್ತಿರುವ ದೆಹಲಿಯಲ್ಲಿ ಹೆಣ್ಣು ಮಕ್ಕಳಿಗೇ ರಕ್ಷಣೆಯಿಲ್ಲ ಎನ್ನುವಂತಾಗಿರುವುದು ಕಾಕತಾಳೀಯ. ಹಾಗೆಂದು ಬೇರೆ ರಾಜ್ಯಗಳು ಇಂಥ ಘಟನೆಗಳಿಂದ ಹೊರತಾಗಿವೆ ಎನ್ನುವಂತಿಲ್ಲ. ಬೆಳಕಿಗೆ ಬಂದಿರುವ ಮತ್ತು ಮಾಧ್ಯಮಗಳ ಬೆಳಕಲ್ಲಿ ಗಮನ ಸೆಳೆದ ಪ್ರಕರಣಗಳು ಇವು ಹೊರತು ಇಡೀ ದೇಶದಲ್ಲಿ ನಿತ್ಯವೂ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ, ಆದರೆ ಅವುಗಳು ಬೆಳಕಿಗೆ ಬರುವುದಿಲ್ಲ; ಅನೇಕ ಕಾರಣಗಳಿಂದಾಗಿ.

ಒಂದು ಮಾಹಿತಿಯ ಪ್ರಕಾರ ದೇಶದಲ್ಲಿ ಪ್ರತೀ 20 ನಿಮಿಷಗಳಿಗೆ ಓರ್ವ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯುತ್ತಿದೆಯಂತೆ. ಕಳೆದ ಅಕ್ಟೋಬರ್ ಒಂದೇ ತಿಂಗಳಲ್ಲಿ ಹರ್ಯಾಣದಲ್ಲಿ 17 ಅತ್ಯಾಚಾರ ಪ್ರಕರಣಗಳು ನಡೆದಿವೆ. 2010 ರಲ್ಲಿ ದೇಶದಲ್ಲಿ 20,206 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬೆಳಕಿಗೆ ಬಂದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳು ಇಷ್ಟಿದ್ದರೆ ಬೆಳಕಿಗೆ ಬಾರದೆ ಅವಮಾನಕ್ಕೆ ಅಂಜಿ, ದಬ್ಬಾಳಿಕೆಗೆ ನಲುಗಿ ಬದುಕು ಕಳೆದುಕೊಂಡ ಪ್ರಕರಣಗಳು ಅದೆಷ್ಟಿರಬಹುದು? ನೀವೇ ಊಹಿಸಿಕೊಳ್ಳಿ.

ಇಂಥ ಕೃತ್ಯಗಳು ಯಾಕಾಗಿ ಘಟಿಸುತ್ತವೆ ಎನ್ನುವ ಪ್ರಶ್ನೆಗೆ ಉತ್ತರ ಇಂಥ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕೊಡುವ ಶಿಕ್ಷೆ ದುರ್ಬಲವಾಗಿರುವುದು. ಮಾನವಹಕ್ಕುಗಳನ್ನು ಪ್ರತಿಪಾದಿಸುವವರು ಮರಣ ದಂಡನೆಯಂಥ ಶಿಕ್ಷೆ ರದ್ಧು ಮಾಡಬೇಕು ಎನ್ನುತ್ತಾರೆ. rape-illustrationಆದರೆ ಕೀಚಕರ ಕೈಗೆ ಸಿಕ್ಕಿ ನಲುಗಿ ಬದುಕು ಕಳೆದುಕೊಂಡ ಹೆಣ್ಣು ಮಗಳಿಗೆ ನ್ಯಾಯ ಕೊಡುವ ವಿಧಾನ ಹೇಗೆ? ಅತ್ಯಾಚಾರಿಗೆ ಜೈಲು ಶಿಕ್ಷೆ ಅವನಿಂದ ಶೀಲ ಕಳೆದುಕೊಂಡವಳಿಗೆ ಮರಳಿ ಶೀಲ ತಂದುಕೊಡುವುದೇ? ಆಕೆ ಇತರರಂತೆ ಬದುಕು ಸಾಗಿಸಲು ಸಾಧ್ಯವೇ? ಈ ಸಮಾಜ ಆಕೆಯನ್ನು ಹೇಗೆ ನೋಡುತ್ತದೆ? ಕಾನೂನು, ಕೋರ್ಟ್ ಆಕೆಯನ್ನು ಹೇಗೆಲ್ಲಾ ಪ್ರಶ್ನೆ ಮಾಡುತ್ತದೆ? ಕಟಕಟೆಯಲ್ಲಿ ನಿಂತು ಆಕೆ ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಹೇಳಿಕೊಳ್ಳುವುದು ಸಾಧ್ಯವೇ? ಆಕೆ ಹೇಳಿಕೊಳ್ಳದಿದ್ದರೆ ಕಾನೂನು ಆಕೆಗೆ ರಕ್ಷಣೆ ಕೊಡುತ್ತದೆಯೇ? ಇಂಥ ನೂರೆಂಟು ಪ್ರಶ್ನೆಗಳು ಉತ್ತರ ಕೊಡುವುದಿಲ್ಲ, ಅವು ಪ್ರಶ್ನೆಗಳಾಗಿಯೇ ಉಳಿದು ಬಿಡುತ್ತವೆ. ಈ ದೌರ್ಬಲ್ಯವನ್ನು ಅತ್ಯಾಚಾರಿಗಳು ತಮ್ಮ ಬಂಡವಾಳ ಮಾಡಿಕೊಳ್ಳುತ್ತಾರೆ, ಕಾನೂನಿನ ನೆರವಿನಿಂದ ಅವನೂ ಪಾರಾಗಲು ಸಾಕಷ್ಟು ಅನುಕೂಲತೆಗಳಿವೆ ಎನ್ನುವುದನ್ನು ಮರೆಯಲು ಸಾಧ್ಯವೇ?

ಜಿದ್ದು, ಆಕರ್ಷಣೆ, ವಿಕೃತ ಕಾಮ, ಮನೋವಿಕೃತಿ, ದ್ವೇಷ, ದೌರ್ಬಲ್ಯ ಅತ್ಯಾಚಾರಕ್ಕೆ ಹಲವು ಕಾರಣಗಳು. ಅವಳು ಅಬಲೆ ಎನ್ನುವ ಪುರುಷನ ಬಹುಮುಖ್ಯ ನಂಬಿಕೆ ಹೇಯ ಕೃತ್ಯಕ್ಕೆ ಹೇತು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಸಮಾನಳು ಎನ್ನುವ ಅಥವಾ ಆಕೆಯೂ ಸರಿಸಮಾನಳು ಎನ್ನುವುದು ಇನ್ನೂ ನೆಲೆಗೊಂಡಿಲ್ಲ. ಆಕೆಯನ್ನು ಹಲವು ನಿರ್ಬಂಧಗಳು ಬಂಧಿಸಿಟ್ಟಿವೆ. ಓರ್ವ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಲು ಮುಗಿ ಬೀಳುವ ದಾಂಡಿಗರನ್ನು ಕಂಡು ಮನೆ ಮಂದಿ ತಮ್ಮ ಮನೆಯ ಬಾಗಿಲು ಭದ್ರಪಡಿಸಿಕೊಳ್ಳುವ ದೃಶ್ಯಗಳನ್ನು ಸಿನಿಮಾಗಳಲ್ಲಿ ತೋರಿಸುತ್ತಾರೆ. ಆಕೆ ನಡುಬೀದಿಯಲ್ಲಿ ಶೀಲಕಳೆದುಕೊಂಡು ರೋಧಿಸುವುದನ್ನು ಕಿಟಕಿ ಮರೆಯಲ್ಲಿ ಇಣುಕಿ ಜನ ನೋಡುತ್ತಾರೆ. ಅತ್ಯಾಚಾರಿಗಳು ತಮ್ಮ ಪೌರುಷವನ್ನು ಪ್ರದರ್ಶಿಸಿಕೊಂಡು ರಾಜಾರೋಷವಾಗಿ ಹೋಗುತ್ತಾರೆ. ಇಂಥ ದೃಶ್ಯಗಳು ಕೊಡುವ ಸಂದೇಶವಾದರೂ ಏನು? ಇದು ಕಾಲ್ಪನಿಕವಾದರೂ ದೆಹಲಿಯಲ್ಲಿ ಬಸ್‌ನಲ್ಲಿ ನಡೆದಿರುವ ರೇಪ್, ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಾಡಿದ ರೇಪ್ ವಾಸ್ತವಕ್ಕಿಳಿಯಲು ಪ್ರೇರಣೆ ಏನಿರಬಹುದು?

ಮಾನವ ಹಕ್ಕುಗಳ ರಕ್ಷಣೆಯ ನೆಪದಲ್ಲಿ ಇಂಥ ಅಮಾನವೀಯ ಕೃತ್ಯಗಳನ್ನು ಸಹಿಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಗ್ಯಾಂಗ್ ರೇಪ್ ಪ್ರಕರಣಗಳು ಉದಾಹರಣೆ. ಅಮಾನವೀಯತೆಯನ್ನು ಮಾನವೀಯತೆಯ ಬೆಳಕಲ್ಲಿ ನೋಡಿದರೆ ಬದುಕು ಕಳೆದುಕೊಂಡ ಹೆಣ್ಣು ಮಗಳ ಹಕ್ಕಿನ ನಿರಾಕರಣೆಯಾಗುವುದಿಲ್ಲವೇ?

ಇವೆಲ್ಲವೂ ನಗರಕೇಂದ್ರೀಕೃತ ವ್ಯವಸ್ಥೆಯ ಮೇಲಿನ ನೋಟವಾದರೆ ಹಳ್ಳಿ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಅರಣ್ಯರೋಧನ. ಹಾಲು ಕೊಡಲು ಹೋಗುವ ಬಾಲಕಿ, ಜಾನುವಾರು ಮೇಯಿಸಲು ಕಾಡಿಗೆ ಹೋಗುವ ಹೆಣ್ಣು ಮಕ್ಕಳು, ಹೊಲ, ಗದ್ದೆ ಕೆಲಸಗಳಿಗೆ ಹೋಗಿ ಬರುವ ಮಹಿಳೆಯರು ಅನುಭವಿಸುತ್ತಿರುವ ಯಾತನೆ ಬೆಳಕಿಗೆ ಬರುವುದೇ ಇಲ್ಲ.

ಹಾಗಾದರೆ “ಮುಂದೇನು?” ಎನ್ನುವ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಎಷ್ಟಿಡಬಹುದು? ದೆಹಲಿಯ ಪರಿಸ್ಥಿತಿ ಅವಲೋಕಿಸಿದರೆ ಈಗ ಭುಗಿಲೆದ್ದಿರುವ ಅಲ್ಲಿನ ಮಹಿಳೆಯರ ಆಕ್ರೋಶ ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡಿರುವುದರ ದ್ಯೋತಕ. ನೈತಿಕ ಪೊಲೀಸಿಂಗ್ ಪ್ರೋತ್ಸಾಹಿಸುವಂಥದ್ದಲ್ಲ. ಆದರೆ ಇಂಥ ಘಟನೆಗಳಿಗೆ ಕಡಿವಾಣ ಹಾಕಲು ಕಾನೂನನ್ನೇ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಆತ್ಮರಕ್ಷಣೆಗೆ ಅನಿವಾರ್ಯವೇನೋ ಅನ್ನಿಸದಿರದು. ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ, ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್, ಜಯಲಲಿತಾ, ಉಮಾಭಾರತಿ ತಮ್ಮ ರಾಜಕೀಯವನ್ನು ಪಕ್ಕಕ್ಕೆ ಸರಿಸಿ ಚಿಂತನೆಗೆ ಮುಂದಾಗುವುದು ಈ ಕ್ಷಣದ ತುರ್ತು.

ಸಾಮೂಹಿಕ ಅತ್ಯಾಚಾರದ ವಿರುದ್ಧ ಧ್ವನಿ ಎತ್ತುವುದು ಒಂದು ದಿನಕ್ಕೆ ಸೀಮಿತವಾಗಬಾರದು. ಅಬಲೆಯ ಬದುಕನ್ನು ಕಸಿದುಕೊಳ್ಳುವ ಅತ್ಯಾಚಾರಿಗೆ ಬದುಕುವ ಹಕ್ಕು ಬೇಕೆನ್ನುವುದು ಅಮಾನವೀಯ. ಗಲ್ಲು ಶಿಕ್ಷೆ ಅತ್ಯಾಚಾರಿಗೆ ಅತಿಯಾದ ಶಿಕ್ಷೆ ಎನ್ನುವುದು ಸಹಜ, ಆದರೆ ನಡುಬೀದಿಯಲ್ಲಿ ಬದುಕು ಕಳೆದುಕೊಂಡ ಅಬಲೆಗೆ ನ್ಯಾಯ ಸಿಗಬೇಕಾದರೆ, ಹೆಣ್ಣು ಮಕ್ಕಳು ನೆಮ್ಮದಿಯಿಂದ ಬದುಕಬೇಕಾದರೆ ಅತ್ಯಾಚಾರಿಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುವುದು ಅಪರಾಧವಾಗಲಾರದು, ಅಲ್ಲವೇ?

(ಚಿತ್ರಕೃಪೆ: ತೆಹೆಲ್ಕ)

ಮಡೆಸ್ನಾನದ ಮನಸ್ಸುಗಳು ಮಲಿನವಾಗಿವೆ


-ಚಿದಂಬರ ಬೈಕಂಪಾಡಿ


 

ಮಡೆ ಸ್ನಾನ ಈಗಾಗಲೇ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಕುಕ್ಕೆ ಕ್ಷೇತ್ರದಲ್ಲಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಮಡೆಸ್ನಾನ ಪದ್ಧತಿಗೆ ಈಗ ಜಾಗತಿಕವಾದ ಪ್ರಚಾರ ಸಿಕ್ಕಿದೆ. ಜನರ ಖಾಸಗಿ ಬದುಕಿಗೆ ಸಂಬಂಧಿಸಿದ ಈ ಆಚರಣೆ ಸಾರ್ವತ್ರಿಕವಾಗಿ ಚರ್ಚೆಯಾಗುತ್ತಿರುವುದು ಬದಲಾದ ಕಾಲಘಟ್ಟದ ಮನಸ್ಥಿತಿ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಲೌಕಿಕ ಜಂಜಡ, ಕಷ್ಟ ಕೋಟಲೆಗಳನ್ನು ಮಡೆಸ್ನಾನ ಹರಕೆ ಹೊತ್ತುಕೊಂಡು ಅಲೌಕಿಕ ಶಕ್ತಿಯ ಮೂಲಕ ಪರಿಹರಿಸಿಕೊಳ್ಳುವುದು ಸಾಧ್ಯ ಎನ್ನುವ ಬಲವಾದ ನಂಬಿಕೆಯನ್ನು ಪೋಷಿಸಿಕೊಂಡು ಬರಲಾಗಿದೆ. ಈ ಹರಕೆ ಹೇಳಿಕೊಳ್ಳುವವರು ಕೆಳವರ್ಗದ made-snanaಜನರು ಅದರಲ್ಲೂ ಅನಕ್ಷರತೆ, ಬಡತನಗಳ ಸುಳಿಯಲ್ಲಿ ನಲುಗಿದವರು ಎನ್ನುವುದು ಮುಖ್ಯ. ಯಾವೆಲ್ಲಾ ಸಮಸ್ಯೆಗಳಿಗೆ ಈ ಹರಕೆ ಹೊರುತ್ತಾರೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಗೆ ನಿಖರವಾಗಿ ಇಂಥ ಕಷ್ಟಗಳಿಗೇ ಎಂದೇನೂ ಹೇಳುವಂತಿಲ್ಲ. ಮಗಳಿಗೆ ಮದುವೆಯಾಗದಿದ್ದರೂ ಮಡೆಸ್ನಾನದ ಹರಕೆ, ಗುಣವಾಗದ ಕಾಯಿಲೆ ಎನ್ನುವುದು ಗೊತ್ತಾದರೂ ಇದೇ ಹರಕೆ, ಚರ್ಮ ರೋಗಗಳು ಗುಣವಾಗಲೆಂದು ಇದೇ ಹರಕೆ, ಉದ್ಯೋಗ ಸಿಗಲೆಂದೂ ಮಡೆಸ್ನಾನದ ಹರಕೆ ಹೀಗೆ ಪ್ರತಿಯೊಂದು ಕಷ್ಟಕ್ಕೂ ಮಡೆಸ್ನಾನದ ಹರಕೆ ಹೇಳಿಕೊಂಡರೆ ಪರಿಹಾರವಾಗುತ್ತದೆ ಎನ್ನಿಸಿದರೆ ಸಾಕು ಹರಕೆ ಹೊತ್ತುಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಸಿತು ಅಂತಾದರೆ ಹರಕೆ ತೀರಿಸುತ್ತಾರೆ, ಸಿದ್ಧಿಸದಿದ್ದರೆ ಹರಕೆ ತೀರಿಸಿದ ಮೇಲೆ ಸಿದ್ಧಿಸುತ್ತದೆ ಎನ್ನುವ ನಂಬಿಕೆಯಿಂದ ಮಡೆಸ್ನಾನ ಹರಕೆ ತೀರಿಸುವುದೂ ಇದೆ. ಆದ್ದರಿಂದ ಮಡೆಸ್ನಾನಕ್ಕೆ ಮಡೆಸ್ನಾನದ ಮೇಲಿನ ನಂಬಿಕೆಯೇ ಉತ್ತರ ಹೊರತು ಬೇರೇನೂ ಹೇಳುವಂತಿಲ್ಲ.

ಮಡೆಸ್ನಾನ ಹರಕೆಯಿಂದ ಸರ್ವರೋಗ ಗುಣವಾಗಿವೆ, ಬದುಕಿನಲ್ಲಿ ಕಷ್ಟಕೋಟಲೆಗಳೆಲ್ಲವೂ ಪರಿಹಾರವಾಗಿವೆ ಎನ್ನುವುದು ಯಾರೆಲ್ಲಾ ಹರಕೆ ಹೊತ್ತು, ಹರಕೆ ತೀರಿಸಿದ್ದಾರೆ ಅವರೇ ಹೇಳಬೇಕು. ಒಂದು ವೇಳೆ ಹೀಗಾಗಿದ್ದರೆ ನಿಜಕ್ಕೂ ಅದ್ಭುತ. ಈ ಜಗತ್ತಿನಲ್ಲಿ ಮನುಷ್ಯರಿಗೆ ಯಾವ ರೋಗರುಜಿನಗಳು ಬಾರದಂತೆ ತಡೆಗಟ್ಟುವ ಪದ್ಧತಿಯೆಂದು ಮಡೆಸ್ನಾನವನ್ನು ಜಾಗತೀಕರಣಗೊಳಿಸಬಹುದು. ಆಸ್ಪತ್ರೆಗಳು, ಔಷಧಿ, ವೈದ್ಯರು ಅನಗತ್ಯವೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವಂಥ ವ್ಯವಸ್ಥೆಗೂ ಮೊರೆ ಹೋಗಬಹುದು. ಈಗ ಇರುವ ವೈದ್ಯಕೀಯ ಕಾಲೇಜುಗಳನ್ನು ಮುಚ್ಚಿ ಮಡೆಸ್ನಾನದಂಥ ಪದ್ಧತಿಯನ್ನು ಹೇಗೆ ಆಚರಿಸಬೇಕು ಎನ್ನುವುದನ್ನು ಕಲಿಸಲು ಬಳಕೆ ಮಾಡಿಕೊಳ್ಳಬಹುದು. ದುರಂತವೆಂದರೆ ಮಡೆಸ್ನಾನ ಪದ್ಧತಿ ಬೇಕೆಂದು ಹೇಳುವ ಮನಸ್ಸುಗಳು ಮಡೆಸ್ನಾನ ಮಾಡಿ ಬದುಕು ರೂಪಿಸಿಕೊಂಡವುಗಳಲ್ಲ. ಮಡೆಸ್ನಾನ ಮಾಡುವುದನ್ನು ನೋಡಿಯೇ ಆನಂದಿಸಿದಂಥವು. ಎಂಜಲು ಎಲೆಗಳ ಮೇಲೆ ಉರುಳುತ್ತಿರುವಾಗ ಪಕ್ಕದಲ್ಲಿ ನಿಂತು ತಾವೇ ಉಂಡು ಬಿಸಾಡಿದ ಎಲೆಗಳು ಅದೆಷ್ಟು ಪವಿತ್ರವೆಂದು ಹೆಮ್ಮೆಪಟ್ಟುಕೊಂಡ ಮನಸ್ಸುಗಳು. ಈ ಪದ್ಧತಿ ಅನೂಚಾನವಾಗಿ ಆಚರಣೆಯಲ್ಲಿರಬೇಕು ಎಂದು ತುಡಿಯುವ ಮನಸ್ಸುಗಳು.

ಮಡೆಸ್ನಾನಕ್ಕೆ ದೈವೀಶಕ್ತಿಯನ್ನು ತುಂಬಿರುವ ಮನಸ್ಸುಗಳಿಗೆ ಯಾಕೆ ತಾವೂ ಈ ಪದ್ಧತಿಯನ್ನು ಆಚರಿಸಬೇಕು ಅನ್ನಿಸುವುದಿಲ್ಲ? ಬಡವರು, ಹಿಂದುಳಿದ ಸಮುದಾಯಗಳು ಮಾತ್ರ ಇದನ್ನು ಪೇಟೆಂಟ್ ಮಾಡಿಕೊಳ್ಳುವುದಕ್ಕೆ ಕಾರಣವೇನು? ಈ ಪ್ರಶ್ನೆಗಳಿಗೆ ಈ ಪದ್ಧತಿಯನ್ನು ಜೀವಂತವಾಗಿಡುವಂಥ ಮನಸ್ಸುಗಳು ಉತ್ತರ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ಪ್ರಶ್ನೆ ಕೇಳಿಯೇ ಗೊತ್ತು ಹೊರತು ಉತ್ತರ ಹೇಳುವ ಅನಿವಾರ್ಯತೆ ಬಂದಿಲ್ಲ. ಜೀತ ಮಾಡಿಸುವುದು, ಜಗಲಿಯ ಹೊರಗೆ ನಿಲ್ಲಿಸಿ ಅನ್ನ, ನೀರನ್ನು ತೆಂಗಿನ ಚಿಪ್ಪು, ಎಲೆಗಳಲ್ಲಿ ಕುಡಿಸಿ, madesnana-shivaram-beatenತಿನ್ನಿಸಿಯೇ ಗೊತ್ತು ಹೊರತು ಬೊಗಸೆಗೆ ನೀರು ಸುರಿಸಿಕೊಂಡು ಕುಡಿದ ನೋವು ಗೊತ್ತಿಲ್ಲ. ಹುಟ್ಟಿದ ಮಗುವಿಗೆ ನಾಮಕರಣ ಮಾಡಲು ರಾಮ, ಕೃಷ್ಣ, ಗೋವಿಂದ, ಹರಿಶ್ಚಂದ್ರ, ಸಾವಿತ್ರಿ, ಸೀತೆ, ರಾಧೆ ಎನ್ನುವ ಹೆಸರು ಹೇಳಿದ ಮನಸ್ಸುಗಳಲ್ಲ. ಕರಿಯ, ತಿಮ್ಮ, ಕೊರಗ, ನಿಂಗಿ ಮುಂತಾದ ಹೆಸರನ್ನೇ ಕರೆಯಲು ಹುಕುಂ ನೀಡಿದ ಮನಸ್ಸುಗಳು.

ಆದರೆ ಈಗ ಕಾಲ ಬದಲಾಗಿದೆ ಎನ್ನುವುದನ್ನು ಕರಿಯ, ತಿಮ್ಮ, ಕೊರಗ, ನಿಂಗಿಯ ಮೊಮ್ಮಕ್ಕಳು ಅರಿತಿದ್ದಾರೆ. ತನ್ನಜ್ಜ ಲಂಗೋಟಿಯಲ್ಲೇ ಕಾಲ ಕಳೆದರೂ ಅಪ್ಪ ಕೊನೆಗಾಲದಲ್ಲಿ ಪಂಚೆ ಹಾಕಿಕೊಳ್ಳುತ್ತಿದ್ದರು, ತಾನು ಪ್ಯಾಂಟ್ ಧರಿಸುತ್ತಿದ್ದೇನೆ, ಮಗನಿಗೆ ಮಾಡರ್ನ್ ಡ್ರೆಸ್ ಕೊಡಿಸುವುದು ಅದೆಷ್ಟು ಅನಿವಾರ್ಯ ಎನ್ನುವುದನ್ನು ಅರ್ಥಮಾಡಿಕೊಂಡಿದ್ದಾನೆ. ಆದ್ದರಿಂದಲೇ ಅವನಿಗೆ ಮಡೆಸ್ನಾನ ಹರಕೆ ಹೇಳುವುದರಲ್ಲಿ ನಂಬಿಕೆಯೂ ಇಲ್ಲ, ಅದು ಅವನಿಗೆ ಅನಿವಾರ್ಯವೂ ಆಗಿಲ್ಲ. ಒಂದು ಕಾಲದ ಅನಿವಾರ್ಯಭಾಗವಾಗಿ ಒಂದು ವರ್ಗ ಆಚರಿಸುತ್ತಿದ್ದ ಪದ್ಧತಿಯನ್ನೇ ಈಗಲೂ ಆಚರಿಸಬೇಕು ಎನ್ನುವುದು ನೀನು ಬದಲಾಗಬೇಡವೆಂದು ಕಟ್ಟಿ ಹಾಕುವಂಥ ಪ್ರಯತ್ನವೆಂದು ಯಾಕೆ ಭಾವಿಸಬಾರದು?

ಜಾಗತೀಕರಣ, ಉದಾರೀಕರಣವನ್ನು ಆವಾಹಿಸಿಕೊಂಡೇ ಬೆಳೆಯುತ್ತಿರುವಾಗ ಮತ್ತು ಅದು ಬದುಕಿನ ಅನಿವಾರ್ಯತೆಯಾಗಿರುವಾಗ ಆಚರಣೆಗಳು, ಪದ್ಧತಿಗಳು ಮಾತ್ರ ಯಾಕೆ ಇನ್ನೂ ಹೊಸತನ ಪಡೆದುಕೊಂಡಿಲ್ಲ? ಅಥವಾ ಹೊಸತನ ಪಡೆದುಕೊಳ್ಳಬಾರದು ಯಾಕೆ? ಮಡೆಸ್ನಾನ ಮಾಡದಿದ್ದರೆ
ಸಂಪ್ರದಾಯಕ್ಕೆ ಅಪಚಾರ ಮಾಡಿದಂತಾಗುತ್ತದೆ ಎನ್ನುವ ಮನಸ್ಸುಗಳಿಗೆ ತಾವೇ ಆ ಪದ್ಧತಿಯನ್ನು ಇನ್ನೂ ಶಾಸ್ತ್ರೋಕ್ತವಾಗಿ ಮಾಡಿದರೆ ಹೆಚ್ಚಿನ ಪುಣ್ಯ ಸಂಪಾದನೆ ಮಾಡಬಹುದಲ್ಲವೇ? ಹಣ, ಕೀರ್ತಿ ಬೇಕಾದರೆ ಇಂಥ ಪುಣ್ಯವನ್ನು ಯಾಕೆ ಬೇಡವೆನ್ನಬೇಕು?

ಬಹುಷ: ಕಾಲ ಅದೆಷ್ಟು ಬದಲಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಸರಿಯಾದೀತು. ಸಾಮಾನ್ಯವಾಗಿ ಕರಾವಳಿ ಭಾಗವನ್ನು ಮನಸ್ಸಿನಲ್ಲಿಟ್ಟು ಹೇಳುವುದಾದರೆ ಉತ್ತರಕ್ರಿಯೆಯಲ್ಲಿ ಪಿಂಡ ಬಿಡುವುದು, ಸಾರ್ವಜನಿಕರಿಗೆ ತಿಥಿ ಊಟ ಹಾಕುವುದು ಎಲ್ಲಾ ಕಡೆಗಳಂತೆಯೇ. ದೇಹತ್ಯಜಿಸಿದ ಆತ್ಮವನ್ನು ಉತ್ತರಕ್ರಿಯೆಯ ದಿನ ರಾತ್ರಿ ಮನೆಗೆ ಆಹ್ವಾನಿಸಿ ಮಾಂಸಾಹಾರ (ಇದು ಮಾಂಸಾಹಾರಿಗಳ ಕುಟುಂಬ) ಬಡಿಸಿ, ಮದ್ಯ ಸಹಿತ ಅವರ ಇಷ್ಟದ ತಿನಿಸುಗಳನ್ನು ಇಟ್ಟು ಎರಡು ನಿಮಿಷಗಳ ಕಾಲ ಮನೆಯವರೆಲ್ಲರೂ ಮನೆಯ ಬಾಗಿಲು ಭದ್ರಪಡಿಸಿಕೊಂಡು ಹೊರಗಿದ್ದು ನಂತರ ಬಾಗಿಲು ತೆರೆದು ಬಡಿಸಿದ್ದೆಲ್ಲವನ್ನೂ ಎಲ್ಲರಿಗೂ ಹಂಚಿ ಊಟ ಮಾಡುವ ಸಂಪ್ರದಾಯವಿದೆ.

ಈಗ ಯಾರಿಗೂ ಬಿಡುವಿಲ್ಲ, ಎಲ್ಲರಿಗೂ ಅರ್ಜೆಂಟ್, ಕೆಲಸದ ಒತ್ತಡ, ಆದರೆ ಸಂಪ್ರದಾಯವನ್ನು ಬಿಡುವಂತಿಲ್ಲ. ಆದರೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ. ಸಂಜೆಯೊಳಗೆ ಫ್ಲೈಟ್ ಹತ್ತಬೇಕು, ರಾತ್ರಿಯೊಳಗೆ ದುಬೈ ವಿಮಾನವನ್ನು ಮುಂಬೈನಲ್ಲಿ ಹತ್ತಬೇಕು. ಆದರೆ ಹಿರಿ ಮಗ ತಾನೇ ಆಗಿರುವುದರಿಂದ ಉತ್ತರಕ್ರಿಯೆಗೆ ಇರಲೇಬೇಕು, ರಾತ್ರಿಯೂ ಇರುವುದು ಕಡ್ಡಾಯ. ಆದರೆ ತನ್ನ ಕೆಲಸ, ಮೀಟಿಂಗ್, ಫ್ಯಾಮಿಲಿ ಜೊತೆ ರಾತ್ರಿಗೆ ಇರಲೇ ಬೇಕು. ಅಂಥ ಸಂದರ್ಭದಲ್ಲಿ ರಾತ್ರಿಯ ಕಾರ್ಯಕ್ರಮವನ್ನು ಮಧ್ಯಾಹ್ನವೇ ಉತ್ತರ ಕ್ರಿಯೆ ಜೊತೆಗೇ ಕ್ಲಬ್ ಮಾಡುವುದು. ನಾನ್ ವೆಜ್, ವೆಜ್ ಎರಡೂ ಇರಬೇಕು, ಕ್ಯಾಟರಿಂಗ್ ವ್ಯವಸ್ಥೆ, ಕುಳಿತು ಉಣ್ಣಲು ಕಷ್ಟ, ಬಫೆ ಸಿಸ್ಟಮ್. ರಾತ್ರಿ ಮಾಡಬೇಕಾದ ಸಂಪ್ರದಾಯಗಳನ್ನು ಮಧ್ಯಾಹ್ನವೇ ಮಾಡಿಬಿಡುವುದು. ಇದರಿಂದ ಎಲ್ಲರಿಗೂ ಅನುಕೂಲ. ಇದು ನಿಧಾನವಾಗಿ ಜನಪ್ರಿಯವಾಗುತ್ತಿದೆ, ಇದಕ್ಕೇನೆನ್ನುತ್ತೀರಿ?

ಈ ಬದಲಾವಣೆಯನ್ನು ಒಪ್ಪಿಕೊಳ್ಳಬೇಕೇ, ಒಪ್ಪಿಕೊಳ್ಳಬಾರದೇ? ಅಥವಾ ಬದಲಾವಣೆಯೊಂದಿಗೆ made-snanaಸಂಪ್ರದಾಯದಲ್ಲೂ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವೇ? ಮಡೆಸ್ನಾನದ ವಿವಾದದ ನಂತರ ಪತ್ತೆ ಹಚ್ಚಲಾದ ಎಡೆಸ್ನಾನ ಈ ಬದಲಾವಣೆಯ ಉತ್ಪನ್ನವಾಗಿರಬಹುದೇ?

ಮಡೆಸ್ನಾನ ಪದ್ಧತಿಯ ಆಚರಣೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರಂತೆ. ಪಟಾಕಿ ಸಿಡಿಸಿ ಸಂಭ್ರಮಿಸಿರುವುದಕ್ಕಿಂತಲೂ ಅಂಥ ಸಂಭ್ರಮಕ್ಕೆ ಕಾರಣವಾದ ಕಾಣದ ಮನಸ್ಸುಗಳ ಚಿತಾವಣೆಯನ್ನು ಅರ್ಥಮಾಡಿಕೊಳ್ಳಬೇಕು.

ಮಡೆಸ್ನಾನದ ಮನಸ್ಸುಗಳ ಮಲಿನತೆ ತೊಳೆಯಬೇಕು. ಅಂಥ ಪ್ರಕ್ರಿಯೆಗೆ ಈಗ ಕಾಲ ಪಕ್ವಗೊಂಡಿದೆ.

ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ನಿಜವಾದ ರಾಜಕೀಯ


-ಚಿದಂಬರ ಬೈಕಂಪಾಡಿ


 

ಬಿಜೆಪಿ, ಕೆಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಭಿನ್ನ ಅಂದುಕೊಂಡರೂ ಅವೆಲ್ಲವುಗಳ ನಡೆಗಳು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದೇ ಆಗಿರುತ್ತದೆ, ಅದೇ ಅವುಗಳ ಪರಮ ಗುರಿಯೂ ಆಗಿರುತ್ತದೆ.

ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ತೊರೆದಾಗಲೇ ಬಿಜೆಪಿ ಸರ್ಕಾರ ಮುಳುಗಿತು ಅಂದುಕೊಂಡಿದ್ದರು ಸಾಮಾನ್ಯ ಜನರು. ಯಾಕೆಂದರೆ ಯಡಿಯೂರಪ್ಪ ರಾಜೀನಾಮೆ ನೀಡಿ ತಮ್ಮವರಿಂದಲೂ ರಾಜೀನಾಮೆ ಕೊಡಿಸಿಬಿಡುತ್ತಾರೆ ಎನ್ನುವ ಸರಳ ಲೆಕ್ಕಾಚಾರ. ಇಂಥ ಲೆಕ್ಕಾಚಾರಗಳ ಹಿಂದೆ ಯಾವುದೇ ಗಹನವಾದ ವಿಚಾರವಿರುವುದಿಲ್ಲ. ಸಾಮಾನ್ಯ ಜನರು ಹೀಗೆಯೇ ಯೋಚಿಸಬೇಕೇ ಹೊರತು ಬೇರೆ ರೀತಿಯಲ್ಲಿ ಯೋಚಿಸುತ್ತಿದ್ದರೆ ಸಾಮಾನ್ಯರಾಗಿಯೇ ಉಳಿಯುತ್ತಿರಲಿಲ್ಲ ಎನ್ನುವ ಅರಿವು ರಾಜಕಾರಣಿಗಳಿಗಿದೆ.

ಬುದ್ಧಿವಂತರು ಹೇಗೆ ಸೂಕ್ಷ್ಮವಾಗಿ ಹೆಜ್ಜೆಗಳನ್ನಿಡುತ್ತಾರೆ ಎನ್ನುವುದಕ್ಕೆ ಯಡಿಯೂರಪ್ಪ ಅವರ ನಡೆಗಳನ್ನು ಗಮನಿಸಿ. yeddyurappa-kjpಬಿಜೆಪಿ ಸರ್ಕಾರವನ್ನು ಬೀಳಿಸುವುದು ಯಡಿಯೂರಪ್ಪ ಅವರಿಗೆ ಚಿಟಿಕೆ ಹೊಡೆದಷ್ಟು ಸುಲಭವಿತ್ತು. ಹಾಗೆ ಮಾಡಲಿಲ್ಲ, ಮಾಡುವುದೂ ಇಲ್ಲ. ಯಾಕೆಂದರೆ ಅವರಿಗೆ ನಾಳಿನ ಚಿಂತೆಯಿದೆ. ಜಾತಿಯ ಮತಗಳ ಗಂಟಿನ ಮೇಲೆ ನೋಟವಿದೆ. ಅನುಕಂಪದ ಅಲೆಯನ್ನು ಆವಾಹಿಸಿಕೊಂಡಿದ್ದಾರೆ. ಸರ್ಕಾರ ಉರುಳಿಸಿದರೆ ಸ್ವಾರ್ಥ ಎನ್ನುವ ಹಣೆಪಟ್ಟಿ ಹಚ್ಚುತ್ತಾರೆ ಎನ್ನುವ ಭಯ. ಇವೆಲ್ಲ ಆರೋಪಗಳು ತಮ್ಮನ್ನು ಸುತ್ತಿಕೊಳ್ಳಬಾರದು ಎನ್ನುವ ಮುಂದಾಲೋಚನೆ ಯಡಿಯೂರಪ್ಪ ಅವರಿಗಿದ್ದುದರಿಂದಲೇ ಪ್ರತೀ ಹಂತದಲ್ಲೂ ನನ್ನ ಬೆಂಬಲಿಗರ ತಂಟೆಗೆ ಬರಬಾರದು ಎನ್ನುವ ಎಚ್ಚರಿಕೆ ಕೊಡುತ್ತಲೇ ಬಂದರು.

ಯಡಿಯೂರಪ್ಪ ಅವರ ನಡೆಗಳನ್ನು ಅವರ ಗರಡಿಯಲ್ಲೇ ಪಳಗಿದ ಕೆ.ಎಸ್.ಈಶ್ವರಪ್ಪ ಅವರಿಗಿಂತ ಹೆಚ್ಚು ತಿಳಿದಿರುವುದು ಅನ್ಯರಿಗೆ ಸಾಧ್ಯವಿಲ್ಲ. ಮನೆಯ ವಾತಾವರಣದಲ್ಲೇ ಇಬ್ಬರೂ ರಾಜಕೀಯದಲ್ಲಿ ಅನೇಕ ದಾಳಗಳನ್ನು ಜೊತೆಯಾಗಿ ಉರುಳಿಸಿದ್ದವರು. ಒಬ್ಬರನ್ನೊಬ್ಬರು ರಾಜಕೀಯವಾಗಿ ಆಂತರಿಕವಾಗಿ ದ್ವೇಷಿಸುತ್ತಲೇ ಶಿವಮೊಗ್ಗವನ್ನು ಆವರಿಸಿಕೊಂಡು ಬೆಳೆದವರು. ಈ ಕಾರಣದಿಂದಲೇ ಯಡಿಯೂರಪ್ಪ ಅವರನ್ನು ‘ಪೇಪರ್ ಟೈಗರ್’ ಎಂದು ಕರೆದರು. ಸರ್ಕಾರವನ್ನು ಬೀಳಿಸಿ ಎನ್ನುವ ಪಂಥಾಹ್ವಾನ ನೀಡಿದರು.

ಹಾವೇರಿಯ ಕೆಜೆಪಿ ಸಮಾವೇಶದಲ್ಲಿ ಶಾಸಕರು ಭಾಗವಹಿಸಬಾರದು, ಯಡಿಯೂರಪ್ಪ ಅವರ ಬಲಕುಂದಿಸಬೇಕು shettar-yedi_eshwarಎನ್ನುವ ಸ್ಪಷ್ಟವಾದ ಗುರಿ ಬಿಜೆಪಿಗಿತ್ತು. ಈ ಕಾರಣದಿಂದಲೇ ಹಾವೇರಿ ಸಮಾವೇಶಕ್ಕೆ ಹೋದರೆ ಶಿಸ್ತು ಕ್ರಮ ಎನ್ನುವ ಬೆದರಿಕೆ ಬಿಜೆಪಿ ನಾಯಕರಿಂದ ಬಂದಿತ್ತು. ಸಜ್ಜನ್ ಅವರ ಮನೆಯಲ್ಲಿ ಆಯೋಜಿಸುವ ಉಪಹಾರ ಕೂಟದಲ್ಲೀ ಭಾಗವಹಿಸಿದರೂ ಕ್ರಮ ಜರಗಿಸುವ ಹೇಳಿಕೆ ಬಿಜೆಪಿಯಿಂದ ಬಂದಿತ್ತು.

ಯಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರನ್ನು ಸಾಮಾವೇಶಕ್ಕೆ ಬನ್ನಿ ಎಂದು ಬಹಿರಂಗವಾಗಿ ಕರೆದಿರಲಿಲ್ಲ, ಬರಬೇಡಿ ಎನ್ನುವ ಸಂದೇಶ ನೀಡಿದ್ದರು. ಉಪಹಾರ ಕೂಟದಲ್ಲಿ ಐದಕ್ಕೂ ಹೆಚ್ಚು ಸಚಿವರು ಭಾಗವಹಿಸಿ ಸಮಾವೇಶಕ್ಕೆ ಗೈರಾಗಿದ್ದರು.ಹದಿನಾಲ್ಕು ಮಂದಿ ಶಾಸಕರು, ಏಳು ಮಂದಿ ವಿಧಾನ ಪರಿಷತ್ ಸದಸ್ಯರು ಸಮಾವೇಶದ ವೇದಿಕೆ ಹತ್ತಿಸಿದರು. ಯಡಿಯೂರಪ್ಪ ಅವರೇ ಹೇಳಿಕೊಂಡಂತೆ ತಮಗಿರುವ 50 ಕ್ಕೂ ಹೆಚ್ಚು ಶಾಸಕರು ಸಮಾವೇಶದಿಂದ ದೂರ ಉಳಿದಿದ್ದರು.

ಹಾವೇರಿ ಸಮಾವೇಶ ನಡೆಯುತ್ತಿರುವಾಗಲೇ ಸಮಾವೇಶದ ವೇದಿಕೆ ಹತ್ತಿದವರ ವಿರುದ್ಧ ಕ್ರಮ ಎಂದು ಬಿಜೆಪಿ ನಾಯಕರು ಬ್ರೇಕಿಂಗ್ ನ್ಯೂಸ್ ಕೊಟ್ಟರು. ಈ ಹಂತದಲ್ಲಿ ಬಿಜೆಪಿ ಸರ್ಕಾರ ಮುಳುಗಿತು ಎಂದೇ ಜನ ಭಾವಿಸಿಬಿಟ್ಟಿದ್ದರು. ಯಾಕೆಂದರೆ ಕೆ.ಎಸ್.ಈಶ್ವರಪ್ಪ ಅವರು ಕೊಟ್ಟ ಹೇಳಿಕೆಯಲ್ಲಿ ಅಂಥ ಮೊನಚಿತ್ತು. ಸರ್ಕಾರ ಬಲಿಕೊಡಲೂ ಸಿದ್ಧವೆಂದು ಮಾಜಿಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಅಬ್ಬರಿಸಿದ್ದರು. ಡಿಸೆಂಬರ್ 10 ರಂದು ವಿಧಾನ ಸಭೆಯ ಅಧಿವೇಶನವೇ ನಡೆಯುವುದು ಅನುಮಾನ, ಎಲ್ಲರೂ ರಾಜೀನಾಮೆ ಕೊಡುತ್ತಾರೆ ಎನ್ನುವ ನಂಬಿಕೆ ಹುಟ್ಟಿಸಿದ್ದರು. ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಬಿಜೆಪಿ, ಕೆಜೆಪಿ ವಿರುದ್ಧ ಹರಿಹಾಯ್ದರು. ಅವರು ಪ್ರತಿಪಕ್ಷದ ನಾಯಕರಾಗಿದ್ದ ಕಾರಣ ಇದೆಲ್ಲವೂ ನಿರೀಕ್ಷಿತವೇ ಆಗಿತ್ತು. ಶೆಟ್ಟರ್ ರಾಜೀನಾಮೆಗೆ ಮಾಡಿದ ಒತ್ತಾಯವೂ ಸಾಂದರ್ಭಿಕ. ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿ ತಮಿಳುನಾಡಿಗೆ ನೀರು ಬಿಡುವುದಿಲ್ಲ, ಒಂದು ವೇಳೆ ಬಿಡುವುದಿದ್ದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಅಂದಿದ್ದರು. ಆದರೆ ಅದೇ ದಿನ ರಾತ್ರಿಯಿಂದಲೇ ತಮಿಳುನಾಡಿಗೆ ನೀರು ಹರಿಸಿ ದೆಹಲಿಯಲ್ಲಿ ಸಂಸದರ ಸಭೆ ನಡೆಸಿದರು. ಮಧ್ಯಾಹ್ನದ ವೇಳೆಗೆ ಕೆಜೆಪಿಯಲ್ಲಿ ಗುರುತಿಸಿಕೊಂಡ ಸಂಸದ ಬಸವರಾಜು ಮತ್ತು ಸಹಕಾರಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡುವ ಮಾಹಿತಿ ನೀಡಿದ್ದರು. ಇದು ಸಿದ್ಧರಾಮಯ್ಯ ಅವರ ಸಿಟ್ಟಿಗೆ ಕಾರಣ ಅಂತೇನೂ ಭಾವಿಸಬೇಕಾಗಿಲ್ಲ. ಜಗದೀಶ್ ಶೆಟ್ಟರ್ ರಾಜೀನಾಮೆ ಕೊಡಬೇಕೆಂದು ಪ್ರತಿಪಕ್ಷದ ನಾಯಕರ ಸಹಜ ಕರ್ತವ್ಯ ನಿಭಾಯಿಸಿದರು ಅಷ್ಟೇ.

ಕಾಂಗ್ರೆಸ್, ಜೆಡಿಎಸ್‌ಗೆ ಸರ್ಕಾರದ ವಿರುದ್ಧ ಅವಿಶ್ವಾಸ ತಂದು ತಾವೇ ಬಹಿರಂಗವಾಗಿ ಹೇಳಿದಂತೆ ಜನಹಿತ ಕಾಪಾಡದ, ಅಧಿಕಾರ ನಡೆಸಲು Siddaramaiahನೈತಿಕತೆ ಇಲ್ಲದ ಸರ್ಕಾರವನ್ನು ಉರುಳಿಸಿ ಜನರ ಮುಂದೆ ನ್ಯಾಯ ಕೇಳಬಹುದಿತ್ತು. ಕಾವೇರಿ ಧುಮ್ಮಿಕ್ಕಿ ಹರಿಯುತ್ತಿದ್ದಾಗ ಮಂಡ್ಯದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ಸರ್ಕಾರದ ವಿರುದ್ಧ ಅವಿಶ್ವಾಸ ತನ್ನಿ, ಈ ಸರ್ಕಾರ ತೊಲಗಬೇಕು, ಸಿದ್ಧರಾಮಯ್ಯ ಅವರೂ ಅವಿಶ್ವಾಸ ಮಂಡಿಸಬೇಕು ಎನ್ನುವ ಕರೆ ಕೊಟ್ಟರು. ಕಾವೇರಿ ತೀರದವರೇ ಆದ ಸಿದ್ಧರಾಮಯ್ಯ ಕಾವೇರಿ ಕೊಳ್ಳದ ಹೋರಾಟ ಸಮಿತಿಯ ಮುಖಂಡರ ಮಾತಿಗೆ ಮರುಳಾಗಲಿಲ್ಲ ಅಥವಾ ಆವೇಶಕ್ಕೆ ಒಳಗಾಗಿ ಹೇಳಿಕೆಯಲ್ಲೂ ಕೊಡಲಿಲ್ಲ. ಇದು ನುರಿತ ರಾಜಕಾರಣಿಯ ಅನುಭವದ ನಡೆ. ಸರ್ಕಾರ ಉರುಳಿಸಿದ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ ಎನ್ನುವ ಭಯ ಸಿದ್ಧರಾಮಯ್ಯ ಅವರನ್ನು ಕಾಡದಿರಲು ಹೇಗೆ ತಾನೇ ಸಾಧ್ಯ?.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮತ್ತವರ ನಾಯಕರ ವೀಕ್‌ನೆಸ್ ಅನ್ನಿ ಜಾಣತನವೆಂದಾದರೂ ಕರೆಯಿರಿ, ಅದೆಲ್ಲವೂ ಯಡಿಯೂರಪ್ಪ ಅವರಿಗೂ ಗೊತ್ತು, ಈಶ್ವರಪ್ಪ ಅವರಿಗೂ ಗೊತ್ತು. ಆದ್ದರಿಂದಲೇ ತಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುವುದಿಲ್ಲವೆಂದು ಶೆಟ್ಟರ್, ಈಶ್ವರಪ್ಪ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು.

ಈಗಿನ ಲೇಟೆಸ್ಟ್ ಸುದ್ದಿ ನೋಡಿ. ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದು ಹದಿನಾಲ್ಕು ಶಾಸಕರು, ಏಳು ಮಂದಿ ವಿಧಾನಪರಿಷತ್ ಸದಸ್ಯರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವ ನಿರ್ಧಾರ ಮಾಡಿದೆ. ಆದರೆ ಎರಡು ದಿನಗಳ ಬಳಿಕ ಬೆಂಗಳೂರಲ್ಲಿ ಮತ್ತೆ ಸಭೆ ಸೇರಿ ಬೆಳಗಾವಿ ನಿರ್ಣಯವನ್ನು ಜಾರಿ ಮಾಡುವುದು. ಅಷ್ಟೊತ್ತಿಗೆ ವಿಧಾನ ಮಂಡಲದ ಅಧಿವೇಶನ ಮುಗಿದಿರುತ್ತದೆ, ಯಾವ ಮುಜುಗರವೂ ಇರುವುದಿಲ್ಲ.

ಇಷ್ಟಕ್ಕೂ ಇದೆಲ್ಲವೂ ರಾಜಕೀಯದ ನಡೆಗಳು ಮಾತ್ರ, ಫಲಿತಾಂಶವಲ್ಲ. ಜನರು ಫಲಿತಾಂಶ ನಿರೀಕ್ಷಿಸುವುದು ಸಹಜ. ಇಂಥ ನಿರೀಕ್ಷೆಯನ್ನು ಗುಟ್ಟು ಹಾಕುತ್ತಲೇ ಅಧಿಕಾರ ಅನುಭವಿಸುವುದು, ಜನರನ್ನು ಕುತೂಹಲದ ಮಡುವಿನಲ್ಲಿಟ್ಟು ಮಾಡುವುದು ನಿಜವಾದ ರಾಜಕೀಯ. ಅದರಾಚೆಗೆ ನೀವೇನಾದರೂ ಯೋಚಿಸಿದರೆ ಅದು ಮೂರ್ಖತನ.

ಭ್ರಷ್ಟಾಚಾರ ಮಾಡಿ ಜೈಲು ಸೇರುವುದು ಅಪಮಾನವಲ್ಲವಾದರೆ…


-ಚಿದಂಬರ ಬೈಕಂಪಾಡಿ


 

ಜನ ನಿದ್ದೆಯ ಮಂಪರಿಗೆ ಜಾರುವ ಹೊತ್ತಲ್ಲಿ ಕಾವೇರಿ ತಮಿಳುನಾಡಿನತ್ತ ಧುಮ್ಮಿಕ್ಕಿ ಹರಿಯತೊಡಗಿದಳು. ಅವಳು ಈಗಲೂ ಹರಿಯುತ್ತಿದ್ದಾಳೆ. ಕಾವೇರಿಯನ್ನೇ ನಂಬಿ ಬದುಕುತ್ತಿರುವ ಜನ ಮುಂಜಾನೆ ಬೀದಿಗೆ ಇಳಿದಿದ್ದಾರೆ. ರಸ್ತೆ ತಡೆ, ಧರಣಿ, ಪ್ರತಿಭಟನೆ ಮುಂತಾದ ಪ್ರಲಾಪಗಳು ನಡೆಯುತ್ತಿವೆ. ಅತ್ತ ದೆಹಲಿಯ ಕರ್ನಾಟಕ ಭವನದಲ್ಲಿ ಅದೇ ಹೊತ್ತಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋಗಿರುವ ಕಾವೇರಿ ನೀರು ಕುಡಿದೇ ಬೆಳೆದವರೊಂದಿಗೆ ಸಭೆ ನಡೆಸುತ್ತಿದ್ದರು. ಇದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅಧಿಕಾರದ ಅನಿವಾರ್ಯತೆ. ಕಾವೇರಿ ನೀರು ಹರಿಸಿಕೊಂಡಿರುವುದು ತಮಿಳುನಾಡಿನ ಮುಖ್ಯಮಂತ್ರಿ ಓರ್ವ ಹೆಣ್ಣು ಮಗಳು ಕನ್ನಡತಿ ಜಯಲಲಿತಾ ಅವರ ರಾಜಕೀಯ ಪ್ರಬುದ್ಧತೆ ಮತ್ತು ಇಚ್ಛಾಶಕ್ತಿಯ ಅನಾವರಣ. ಹಾಗಾದರೆ ನಾವು, ನಮ್ಮ ಮುಖ್ಯಮಂತ್ರಿ, ನಮ್ಮ ಮಂತ್ರಿಗಳು, ಸಂಸದರು, ಶಾಸಕರು?

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಗುರುವಾರ ಸಂಜೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಧರಣಿ ನಿರತ ಕಾವೇರಿ ಪ್ರದೇಶದ ಶಾಸಕರ ಒತ್ತಡಕ್ಕೆ ಮಣಿದು ನೀಡಿದ ಹೇಳಿಕೆಯಲ್ಲೇ ತಮಿಳುನಾಡಿಗೆ ಕಾವೇರಿ ಹರಿದು ಹೋಗುವ ಎಳೆಗಳಿದ್ದವು. ತಮಿಳುನಾಡಿಗೆ ಕಾವೇರಿ ಹರಿಸದಿದ್ದರೆ ರೈತರ ಹಿತಕ್ಕೆ ಧಕ್ಕೆಯಾಗುತ್ತದೆ, ಹಿಂದೆಯೂ ಹೀಗೆಯೇ ಆಗಿತ್ತು ಎನ್ನುವ ಅವರ ಮಾತುಗಳನ್ನು ಅರ್ಥಮಾಡಿಕೊಂಡವರಿಗೆ ಜಗದೀಶ್ ಶೆಟ್ಟರ್ ರೈತರ ಹೆಸರಲ್ಲಿ ತಮ್ಮ ಹಿತ ಕಾಪಾಡಿಕೊಳ್ಳುತ್ತಾರೆ ಎನ್ನುವುದು ಸ್ಪಷ್ಟವಾಗಿತ್ತು, ಅದು ಹಾಗೆಯೇ ಆಯಿತು. ನಿಜಕ್ಕೂ ಜಗದೀಶ್ ಶೆಟ್ಟರ್ ತಮಿಳುನಾಡಿಗೆ ಕಾವೇರಿ ಹರಿಸಿ ತಪ್ಪು ಮಾಡಿದರು ಎನ್ನುವವರು ಅಧಿಕಾರವಿಲ್ಲದವರು. ಅಧಿಕಾರದಲ್ಲಿದ್ದಾಗ ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯೇ ಮುಖ್ಯವಾಗುತ್ತದೆ, ಈ ಮಾತಿಗೆ ಶೆಟ್ಟರ್ ಕೂಡಾ ಹೊರತಲ್ಲ ಎನ್ನುವುದು ಸಾಬೀತಾಗಿದೆ.

ಸುಪ್ರೀಂಕೋರ್ಟ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದಾಗ ಅದನ್ನು ಪಾಲಿಸಬೇಕೇ, ಬೇಡವೇ, ಎನ್ನುವ ಗೊಂದಲ ಮೂಡಿತ್ತು. ಕೋರ್ಟ್ ಆದೇಶ ಪಾಲನೆ ಮಾಡಿದರೆ ಮಾತ್ರ ಮತ್ತೆ ನಮ್ಮ ವಾದ ಮಂಡಿಸಲು ಅವಕಾಶವಾಗುತ್ತದೆ ಎನ್ನುವ ಕಾನೂನು ಪಂಡಿತರ ಸಲಹೆ ಸಮಯೋಚಿತವೇ ಆಗಿತ್ತು. ಆದೇಶವನ್ನು ಪಾಲನೆ ಮಾಡಿ ನಂತರ ತಮ್ಮ ಸಂಕಷ್ಟವನ್ನು ಮತ್ತೊಮ್ಮೆ ಕೋರ್ಟ್ ಮುಂದೆ ಹೇಳಿಕೊಳ್ಳಲು ಅನುವಾಗುತ್ತದೆ, ಇಲ್ಲವಾದರೆ ಮೊದಲು ಆದೇಶ ಪಾಲಿಸಿ, ನಂತರ ನಿಮ್ಮ ವಾದ ಮಂಡಿಸಿ ಎನ್ನುವ ಮಾತನ್ನು ಕೋರ್ಟ್ ಹೇಳುತ್ತದೆ, ಹಿಂದೆಯೂ ಹೇಳಿದೆ. ಕಾನೂನು, ಕೋರ್ಟ್ ತನ್ನ ಪರಿಧಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಅದನ್ನು ನಿರ್ವಹಿಸುವುದು ಅದರ ಜವಾಬ್ದಾರಿ. ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಬರಲು ಕಾರಣವಾದ ಅಂಶಗಳು ಕೂಡಾ ಅನೇಕ ಇವೆ, ಅದಕ್ಕೂ ಇತಿಹಾಸವಿದೆ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡ ರೀತಿ ಜನಮೆಚ್ಚುವಂಥದ್ದಲ್ಲ, ಇದನ್ನು ಜನ ನಿರೀಕ್ಷೆ ಮಾಡಿರಲಿಲ್ಲ. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರ್ವಪಕ್ಷಗಳ ಸಭೆ ನಡೆಸಿದಾಗಲೂ ಕಾವೇರಿ ನೀರು ಹರಿಸಲು ಯಾರೂ ಸಹಮತ ವ್ಯಕ್ತಪಡಿಸಿರಲಿಲ್ಲ. ನೀರು ಹರಿಸಬಾರದು ಎನ್ನುವುದೇ ಮುಖ್ಯವಾಗಿತ್ತು. ಈ ಕಾರಣದಿಂದಲೇ ವಿಧಾನ ಸಭೆಯ ಕಲಾಪ ಬೆಳಿಗ್ಗೆ ನಡೆಯಲಿಲ್ಲ. ಮಧ್ಯಾಹ್ನದ ನಂತರ ವಿಧಾನ ಸಭೆಯ ಕಲಾಪ ಆರಂಭವಾದಾಗ ಕಾವೇರಿ ಪ್ರದೇಶದ ಶಾಸಕರು ಪ್ರತಿಭಟನೆ ಮಾಡಿದ ನಂತರವೇ ಮುಖ್ಯಮಂತ್ರಿ ಸದನಕ್ಕೆ ಹಾಜರಾಗಿ ಶುಕ್ರವಾರ ಸಂಸದರ ನಿಯೋಗವನ್ನು ಪ್ರಧಾನಿ ಬಳಿಗೆ ಕೊಡೊಯ್ಯುವ ಭರವಸೆ ನೀಡಿದರು. ಜೊತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಧಾರ ತೆಗೆದುಕೊಳ್ಳುವ ವಚನ ನೀಡಿದ್ದರು ವಿಧಾನ ಸಭೆಗೆ. ಹೊರಗೆ ಬಂದು ಕಾವೇರಿಗೆ ಹರಿಯಲು ಹೇಳಿ ದೆಹಲಿ ವಿಮಾನ ಹತ್ತಿದರು. ಯಾಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೀಗೆ ಮಾಡಿದರು?

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ಕೋರ್ಟ್ ಆದೇಶವನ್ನು ಪಾಲನೆ ಮಾಡಿದೆ, ಕಾನೂನಿಗೆ ತಲೆ ಬಾಗಿದೆ ಎನ್ನುವ ಸಂತೃಪ್ತಿ ಹೆಮ್ಮೆ ಮುಖ್ಯಮಂತ್ರಿಯವರಿಗೆ ಇರಬಹುದು. ಆದರೆ ಕನ್ನಡಿಗರ ಆಶಯಕ್ಕೆ, ಅವರ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಂಡರು ಎನ್ನುವ ಕಳಂಕ ಅವರ ಮೈಗೆ ಅಂಟಿಕೊಂಡದ್ದೂ ಸತ್ಯ. ರಾಜಕೀಯದಲ್ಲಿ ಸಜ್ಜನಿಕೆಗೆ ಹೆಸರಾದ ಜಗದೀಶ್ ಶೆಟ್ಟರ್ ಹೀಗೇಕೆ ಮಾಡಿದರು ಎನ್ನುವುದಕ್ಕಿಂತಲೂ ಅವರಿಗೆ ಹಾಗೆ ಮಾಡುವ ಅನಿವಾರ್ಯತೆ ಇತ್ತು ಎನ್ನುವುದೇ ಲೇಸು.

ಒಂದು ವೇಳೆ ಕೋರ್ಟ್ ಆದೇಶದಂತೆ ನೀರು ಹರಿಸದೇ ಇದ್ದಿದ್ದರೆ ಕಾನೂನಿಗೆ ಅಗೌರವ ಸೂಚಿಸಿದಂತಾಗುತ್ತಿತ್ತು. ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಿತ್ತು, ಅಧಿಕಾರ ಕಳೆದುಕೊಳ್ಳುವ ಭೀತಿಯಿತ್ತು. ರಾಜಕೀಯದಲ್ಲಿ ಸಾಕಷ್ಟು ಹಾದಿ ಕ್ರಮಿಸಿರುವ ಜಗದೀಶ್ ಶೆಟ್ಟರ್ ಯೋಚಿಸುವ ವಿಧಾನದಲ್ಲಿ ಸೋತರು ಅನ್ನಿಸುತ್ತದೆ. ಯಾಕೆಂದರೆ ಈಗಲೂ ಅವರ ಸರ್ಕಾರ ಸುಭದ್ರವಾಗಿಲ್ಲ. ಅವರು ಅದೆಷ್ಟು ದಿನ ಇದೇ ಅಧಿಕಾರದಲ್ಲಿರುತ್ತಾರೆ ಎನ್ನುವುದು ನಮಗಿಂತಲೂ ಅವರಿಗೇ ಚೆನ್ನಾಗಿ ಗೊತ್ತು. ಭ್ರಷ್ಟಾಚಾರ ಮಾಡಿ ಜೈಲು ಸೇರುವುದು ಅಪಮಾನವಲ್ಲ ಎನ್ನುವುದಾದರೆ ಜನರಿಗಾಗಿ ಅಧಿಕಾರ ಕಳೆದುಕೊಳ್ಳುವುದು, ನ್ಯಾಯಾಂಗ ನಿಂದನೆಗೆ ಗುರಿಯಾಗುವುದು ಅಪಮಾನವೆಂದು ಯಾಕೆ ಭಾವಿಸಬೇಕು?

ಇಷ್ಟಕ್ಕೂ ಕಾವೇರಿ ನೀರು ಹರಿಸಿದ್ದರಿಂದ ಜಗದೀಶ್ ಶೆಟ್ಟರ್ ಕುರ್ಚಿ ಭದ್ರವಾಗಲಿಲ್ಲ ಅಥವಾ ಅವರಿಗಿರುವ ಅಧಿಕಾರದ ಅವಧಿ ವಿಸ್ತರಣೆಯಾಗಲಿಲ್ಲ. ಕಳಂಕ ರಹಿತವಾಗಿ ರಾಜಕೀಯ ನಡೆಸಿ ಸಂಭಾವಿತ ರಾಜಕಾರಣಿಯೆಂದೇ ಗುರುತಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ವಿಧಾನ ಮಂಡಲದ ಕಲಾಪ ನಡೆಯುತ್ತಿರುವಾಗಲೇ ಎಡವಿದ್ದು ಮಾತ್ರ ವಿಪರ್ಯಾಸ.

ಕಾವೇರಿ ನೀರು ಹರಿಸಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಅನೇಕ ಕಾರಣಗಳಿವೆ ನಿಜ. ಈ ಕಾರಣಗಳು ಜನರ ವಿಶ್ವಾಸವನ್ನು ಕಟ್ಟಿಕೊಡುವುದಿಲ್ಲ ಅಥವಾ ಹರಿದುಹೋದ ನೀರನ್ನು ಮರಳಿ ಪಡೆಯಲು ನೆರವಾಗುವುದಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಚಾಣಾಕ್ಷ ನಡೆಗಳನ್ನು ಕಡುವಿರೋಧಿಯೂ ಮೆಚ್ಚಿದರೆ ತಪ್ಪಲ್ಲ. ಅವರೂ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕಾವೇರಿ ಹರಿಸಿಕೊಂಡಿದ್ದರೂ ಅಲ್ಲಿನ ಜನ ಅವರಿಗೆ ಅವರಿಗೆ ಅಧಿಕಾರವನ್ನು ಗಟ್ಟಿಗೊಳಿಸಬಹುದು. ಆದರೆ ಜಗದೀಶ್ ಶೆಟ್ಟರ್ ಕಾನೂನಿನ ಹೆದರಿ ಜನರ ಹಿತಾಸಕ್ತಿಯನ್ನು ನಿರ್ಲಕ್ಷ್ಯ ಮಾಡಿದರು ಎನ್ನುವ ಅಪವಾದ ಅಳಿಸಿಹೋಗದು.

ಈಗ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ತಡವಾಗಿ ನೀರು ಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಶೆಟ್ಟರ್ ಈಗ ಎರಡು ತಪ್ಪು ಮಾಡಿದಂತಾಗಿದೆ. ನೀರು ಬಿಡಬಾರದೆಂದು ಜನರು, ಜನಪ್ರತಿನಿಧಿಗಳು ಒಕ್ಕೊರಲಿನಿಂದ ಒತ್ತಾಯ ಮಾಡಿದರೂ ನೀರು ಹರಿಸಿದರು, ಜೊತೆಗೆ ತಮಿಳುನಾಡಿನ ವಾದವನ್ನು ಗಮನಿಸಿದರೆ ತಡವಾಗಿ ನೀರು ಬಿಟ್ಟು ಕೋರ್ಟ್ ಆದೇಶ ಪಾಲನೆಯಲ್ಲಿ ವಿಳಂಬ ಮಾಡಿದರು. ಈ ಎರಡೂ ತಪ್ಪುಗಳ ಹೊರೆ ಹೊರುವ ಬದಲು ಸುಪ್ರೀಂ ಆದೇಶ ಹೊರಬಿದ್ದ ತಕ್ಷಣವೇ ನೀರು ಹರಿಸಿದ್ದರೆ ನ್ಯಾಯಾಂಗ ನಿಂದನೆಯಿಂದ ಪಾರಾಗುತ್ತಿದ್ದರು, ಕೇವಲ ನೀರು ಬಿಟ್ಟ ತಪ್ಪಿಗೆ ಗುರಿಯಾಗುತ್ತಿದ್ದರು.

ನಿರೀಕ್ಷೆಯಂತೆಯೇ ವಿಧಾನ ಮಂಡಲದಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ, ತಮ್ಮ ರಾಜಕೀಯ ಶಕ್ತಿಯನ್ನು ಹೆಚ್ಚಿಸಿಕೊಂಡಿವೆ. ಕಲಾಪ ಕಾವೇರಿ ನೀರಿನಲ್ಲಿ ಕೊಚ್ಚಿಹೋಯಿತು, ನೀರೂ ಹರಿದು ಹೋಯಿತು, ಕಳಂಕ ಮಾತ್ರ ಉಳಿಯಿತು.

ರಾಜ್ಯೋತ್ಸವ ಪ್ರಶಸ್ತಿ ಮತ್ತು ಆಯ್ಕೆಯ ಮಾನದಂಡ


-ಚಿದಂಬರ ಬೈಕಂಪಾಡಿ


 

ಕನ್ನಡ ರಾಜ್ಯೋತ್ಸವ ಆಚರಣೆಯ ಸಂಭ್ರಮ ಮುಗಿಯಿತು. ಮತ್ತೆ ಮುಂದಿನ ವರ್ಷ ನವೆಂಬರ್ 1 ರಂದು ಸಂಭ್ರಮ, ಅಲ್ಲಿಯ ತನಕ ಕಾಯುತ್ತಿರಬೇಕು. ಆದರೆ ಅಲ್ಲಲ್ಲಿ ಕನ್ನಡದ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅದು ಕನ್ನಡ ಅಭಿಮಾನಿಗಳ ಕಾಯಕ. ರಾಜ್ಯ ಸರ್ಕಾರ ಆಯೋಜಿಸುವ ಕನ್ನಡ ರಾಜ್ಯೋತ್ಸವದ ಬಗ್ಗೆ ಯಾರಿಗೆ ಅದೆಷ್ಟು ಉತ್ಸಾಹವಿದೆಯೋ ಗೊತ್ತಿಲ್ಲ, ಆದರೆ ರಾಜ್ಯೋತ್ಸವದ ಸಂದರ್ಭದಲ್ಲಿ ಕೊಡುವ ಪ್ರಶಸ್ತಿಗಳ ಬಗ್ಗೆ ಮಾತ್ರ ಅಪರಿಮಿತವಾದ ಉತ್ಸಾಹವಿರುವುದನ್ನು ಯಾರೂ ನಿರಾಕರಿಸುವಂತಿಲ್ಲ. ಜೀವಮಾನದಲ್ಲಿ ಈ ಪ್ರಶಸ್ತಿಯನ್ನು ಪಡೆಯಲೇಬೇಕು ಎನ್ನುವ ಹಠ ಪ್ರಶಸ್ತಿಗೆ ಅರ್ಹರಾದವರಿಗಿಂತಲೂ ಪ್ರಶಸ್ತಿಗಾಗಿಯೇ ಅರ್ಹತೆಯನ್ನು ದಾಖಲೆಗಳ ಮೂಲಕ ಸಾಬೀತು ಮಾಡುವ ಉತ್ಸಾಹಿಗಳಿಗಿರುತ್ತದೆ. ನೂರಾರು ಪುಟಗಳಷ್ಟು ತಮ್ಮ ಬಗ್ಗೆ ಬರೆಯಲಾದ, ಬರೆಸಲ್ಪಟ್ಟ ಪತ್ರಿಕೆಯ ತುಣುಕುಗಳ ಜೆರಾಕ್ಸ್ ಕಡತ, ಫೋಟೋಗಳು, ಶಿಫಾರಸುಗಳ ಜೆರಾಕ್ಸ್‌ಗಳನ್ನು ಪುಸ್ತಕದ ರೂಪದಲ್ಲಿ ಬೈಂಡಿಂಗ್ ಮಾಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕಚೇರಿ, ರಾಜ್ಯ ಕಚೇರಿ, ಶಾಸಕರು, ಮಂತ್ರಿಗಳು, ಅವರಿಗೆ ತೀರಾ ಪರಿಚಿತ ಪ್ರಭಾವಿಗಳ ಮೂಲಕ ರವಾನಿಸಿ ತಮ್ಮ ಹೆಸರು ಪ್ರಶಸ್ತಿಗೆ ಅಂತಿಮಗೊಳ್ಳುವ ಸುದ್ದಿ ತಿಳಿಯಲು ಹಗಲು ರಾತ್ರಿ ಕಾಯುತ್ತಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಹೇಳಿಕೆಯನ್ನು ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳುತ್ತಾರೆ. ಇಲಾಖೆಯಿಂದ ದೂರವಾಣಿ ಕರೆ ಬರಬಹುದೆಂದು ಕಾಯುತ್ತಾರೆ. ಅಂತಿಮವಾಗಿ ಪ್ರಶಸ್ತಿ ಬರದಿದ್ದಾಗ ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೆ ಮುಂದಿನ ವರ್ಷಕ್ಕೆ ಮತ್ತಷ್ಟು ಹೆಚ್ಚುವರಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುತ್ತಾರೆ. ಹೀಗೆ ಮರಳಿ ಯತ್ನವ ಮಾಡಿ ಅನೇಕ ಜನ ಫಲಕಂಡಿದ್ದಾರೆ ಎನುವುದರಲ್ಲಿ ಯಾವ ಅನುಮಾನವೂ ಬೇಡ. ಆದ್ದರಿಂದಲೇ ಪ್ರಶಸ್ತಿಗೆ ಅರ್ಹರಾದವರು ಸರ್ಕಾರದ ಪಟ್ಟಿಯಲ್ಲಿ ಶೇ.10 ಆಗಿದ್ದರೆ ಪ್ರಭಾವ ಬೀರಿ, ವಶೀಲಿ ಮಾಡಿ ಶೇ.90ರಷ್ಟು ಮಂದಿ ಅರ್ಹರಾಗಿಬಿಡುತ್ತಾರೆ, ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ, ಅದು ಅವರ ನಿಜವಾದ ಸಾಮರ್ಥ್ಯ, ಜೈ ಭುವನೇಶ್ವರಿ.

ಆದರೆ ಪ್ರಶಸ್ತಿ ಪಟ್ಟಿ ಪ್ರಕಟವಾದಾಗ ನಾಡು-ನುಡಿಯ ಬಗ್ಗೆ ತಿಳುವಳಿಕೆ ಇದ್ದವರಿಗೆ ಅರ್ಹರನ್ನು ಗುರುತಿಸುವುದು ಕಷ್ಟವಾಗುವುದಿಲ್ಲ. ಉದಾಹರಣೆಗೆ ಈ ಸಾಲಿನಲ್ಲಿ ಪ್ರಶಸ್ತಿ ಪಡೆದ ಬೊಳುವಾರು ಮಹಮ್ಮದ್ ಕುಂಞ ಇಷ್ಟು ವರ್ಷಗಳಿಂದ ಪ್ರಶಸ್ತಿ ಆಯ್ಕೆ ಸಮಿತಿಯ ಕಣ್ಣುತಪ್ಪಿಸಿಕೊಂಡಿದ್ದವರು ಕೊನೆಗೂ ಸಿಕ್ಕಿಬಿದ್ದರು ಎನ್ನುವ ಸಂತೃಪ್ತಿಯಾಗುತ್ತದೆ. ಇಂಥ ಅನೇಕ ಮಂದಿ ಈ ವರ್ಷದ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿದ್ದಾರೆ, ಅವರನ್ನು ಅಭಿನಂದಿಸಲೇಬೇಕು. ಸರ್ಕಾರದ ಆಯ್ಕೆ ಮಾರ್ಗದರ್ಶಿ ಸೂತ್ರವನ್ನು ಮೊದಲು ಸುಟ್ಟು ಹಾಕಬೇಕು. ಯಾಕೆಂದರೆ ಪ್ರಶಸ್ತಿ ಅವರ ಸಾಧನೆಯನ್ನು ಗುರುತಿಸಿಕೊಡುವಂಥದ್ದೇ ಹೊರತು ಜಾತಿ, ಭಾಷೆ, ಪ್ರಾದೇಶಿಕತೆಯನ್ನು ಆಧರಿಸಿ ಆಗಬಾರದು. ಪ್ರಶಸ್ತಿಗೂ ಮೀಸಲಾತಿ ಸೂತ್ರ ಜಾರಿಗೆ ತಂದರೆ ಅರ್ಹತೆ ಎನ್ನುವ ಮಾನದಂಡವನ್ನು ಕಸದಬುಟ್ಟಿಗೆ ಎಸೆಯಬೇಕಾಗುತ್ತದೆ. ಈಗ ಸರ್ಕಾರವೇ ಹೇಳಿರುವುದನ್ನು ಸರಿಯಾಗಿ ಕೇಳಿಸಿಕೊಂಡಿದ್ದರೆ ಜಿಲ್ಲೆ, ಪ್ರಾದೇಶಿಕತೆ ಮತ್ತು ಎಲ್ಲಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನುವ ನೀತಿಯೇ ಅಕ್ಷಮ್ಯ. ಇಂಥ ನೀತಿಯಿಂದಾಗಿಯೇ ಗಟ್ಟಿ ಕಾಳಿನ ಜೊತೆ ಅನಿವಾರ್ಯವಾಗಿ ಜೊಳ್ಳು ಸೇರಿಕೊಂಡುಬಿಡುತ್ತವೆ.

ಅರ್ಜಿ ಹಾಕದವರನ್ನೂ ಪ್ರಶಸ್ತಿಗೆ ಆಯ್ಕೆಮಾಡುವ ಸರ್ಕಾರದ ಕ್ರಮವನ್ನು ಮೆಚ್ಚಲೇ ಬೇಕು. ಮೊಟ್ಟಮೊದಲು ಪ್ರಶಸ್ತಿಗೆ ಅರ್ಜಿ ಹಾಕುವ ಪದ್ಧತಿಯನ್ನೇ ರದ್ಧುಮಾಡುವುದು ಸೂಕ್ತ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಪ್ರಶಸ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕಾಯಕ ಮಾಡುವುದಿಲ್ಲ. ಪ್ರವೃತ್ತಿಯಾಗಿ, ವೃತ್ತಿಯಾಗಿ, ವಂಶಪಾರಂಪರ್‍ಯವಾಗಿ ಮಾಡುತ್ತಾರೆ. ಇಂಥವರು ಅರ್ಜಿ ಹಾಕಿ ಪ್ರಶಸ್ತಿಯ ಭಿಕ್ಷೆ ಕೇಳುವಂಥ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಬಾರದು. ಅಕಾಡೆಮಿಗಳು ಈ ನಾಡಿನ ಕಲೆ, ಸಂಸ್ಕೃತಿ, ಭಾಷೆ, ಪರಂಪರೆಯನ್ನು ಪ್ರತಿನಿಧಿಸುವಂಥವು. ಇವುಗಳ ಅಧ್ಯಕ್ಷರುಗಳು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿರುತ್ತಾರೆ. ತಮ್ಮ ವ್ಯಾಪ್ತಿಯಲ್ಲಿರುವ ಅರ್ಹರನ್ನು ಆಯ್ಕೆ ಮಾಡುವುದು ಅವರಿಗೆ ಕಷ್ಟವೇನೂ ಆಗದು. ಇದು ನಿಜವಾದ ಸಾಧಕರನ್ನು ಗುರುತಿಸಲು ಸೂಕ್ತ ಮಾನದಂಡವಾಗುತ್ತದೆ.

ಅರ್ಜಿ ಹಾಕಿಸುವುದೆಂದರೆ ಪ್ರಶಸ್ತಿಯನ್ನು ಒಲಿಸಿಕೊಳ್ಳಲು ಮಾಡುವ ಕಸರತ್ತು ಮತ್ತೊಂದು ಅರ್ಥದಲ್ಲಿ ಭಿಕ್ಷೆ ಕೇಳುವುದಕ್ಕೆ ಸಮನಾದುದು. ಜಾತಿ, ಧರ್ಮ, ಭಾಷೆ, ವರ್ಣಗಳ ಮಾರ್ಗಸೂಚಿಯ ಮೂಲಕ ಅರ್ಹತೆಯನ್ನು ಅಳೆಯುವುದು ಅರ್ಹತೆಗೇ ಅವಮಾನ. ಇಂಥ ಅವಮಾನ ಮಾಡಿಸಿಕೊಂಡು ಪ್ರಶಸ್ತಿ ಸ್ವೀಕರಿಸಬೇಕೇ ಎನ್ನುವ ಪ್ರಶ್ನೆ.

ನಿಜವಾದ ಅರ್ಹರು ಹೇಗೆ ಪ್ರಶಸ್ತಿ ವಂಚಿತರಾಗುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಅನಕ್ಷರಸ್ಥ, ತುತ್ತು ಕೂಳಿಗಾಗಿ ನಿತ್ಯವೂ ತಲೆ ಮೇಲೆ ಬುಟ್ಟಿ ಹೊತ್ತುಕೊಂಡು ತಿರುಗಾಡಿ ಕಿತ್ತಳೆ ಹಣ್ಣು ಮಾರಾಟ ಮಾಡುತ್ತಾನೆ. ಒಂದು ದಿನ ಹಣ್ಣು ಮಾರಲು ಹೋಗದಿದ್ದರೆ ಅವನ ಮನೆಯವರಿಗೆ ಉಪವಾಸ. ಇಂಥ ಸ್ಥಿತಿಯಲ್ಲಿದ್ದರೂ ತನ್ನ ಹಳ್ಳಿಯ ಮಕ್ಕಳಿಗೆ ಓದು ಬರಹ ಕಲಿಯಲು ಶಾಲೆ ಬೇಕೆನ್ನುವ ಕನಸು ಕಾಣುತ್ತಾನೆ. ತಾನು ನಿತ್ಯವೂ ಕಿತ್ತಳೆ ಹಣ್ಣು ಮಾರಿ ಬಂದ ಹಣದಲ್ಲಿ ಒಂದಂಶವನ್ನು ಕೂಡಿಟ್ಟು ಶಾಲೆ ತೆರೆಯಲು ಬಾಡಿಗೆ ಕಟ್ಟಡ ಪಡೆಯುತ್ತಾನೆ. ಅಲ್ಲೇ ಸ್ಥಳೀಯ ಮಕ್ಕಳಿಗೆ ಪುಟ್ಟ ಶಾಲೆ ಆರಂಭಿಸುತ್ತಾನೆ. ಸರ್ಕಾರದ ಕಚೇರಿಗಳಿಗೆ ಅಲೆದು ಅಲೆದು, ಅರ್ಜಿ ಹಾಕಿ ಕಾಡಿ ಬೇಡಿ ಶಾಲೆಗೆ ಮಂಜೂರಾತಿ ಪಡೆದುಕೊಳ್ಳುತ್ತಾನೆ. ಒಂದು, ಎರಡು, ಮೂರು, ಹೀಗೆ ಪ್ರಾಥಮಿಕ ಶಾಲೆ ತರಗತಿಗಳು ಆರಂಭವಾಗುತ್ತವೆ. ಇದು ಮಂಗಳೂರು ಸಮೀಪದ ಹರೇಕಳ ಎನ್ನುವ ಹಳ್ಳಿಯಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಹತ್ತಿರ. ಈ ಕೆಲಸ ಮಾಡಿದವರು ಹರೇಕಳ ಹಾಜಬ್ಬ ಎನ್ನುವ ಅನಕ್ಷರಸ್ಥ. ಈ ಅಕ್ಷರ ಯೋಗಿಯ ಬಗ್ಗೆ ಗುರುವಪ್ಪ ಎನ್ನುವ ಸ್ಥಳೀಯ ಪತ್ರಿಕೆಯ ವರದಿಗಾರ ಪುಟ್ಟ ಬರಹ ಬರೆದಿದ್ದರು.

2004ರಲ್ಲಿ ‘ಕನ್ನಡಪ್ರಭ’ ದಿನಪತ್ರಿಕೆ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ವರ್ಷದ ವ್ಯಕ್ತಿ ಎಂದು ಒಂದು ಲಕ್ಷ ರೂಪಾಯಿ ಬಹುಮಾನ ನೀಡುವ ಯೋಜನೆ ಪ್ರಕಟಿಸಿತ್ತು. ಆಗ ಆ ಪತ್ರಿಕೆಯ ಪ್ರಧಾನ ವರದಿಗಾರನಾಗಿದ್ದ ನಾನು ಹರೇಕಳ ಹಾಜಬ್ಬ ಅವರನ್ನು ಸಾಧಕನೆಂದು ಗುರುತಿಸಿ ಟಿಪ್ಪಣಿಯೊಂದಿಗೆ ಆಯ್ಕೆಸಮಿತಿಗೆ ಕಳುಹಿಸಿದ್ದೆ. ಹಾಜಬ್ಬರ ಅರ್ಹತೆಯನ್ನು ಸಮಿತಿ ಗುರುತಿಸಿ 2004ರ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿತು. ಅಂದು ನಾಡಿನಾದ್ಯಂತ ಹಾಜಬ್ಬ ಸುದ್ದಿಯಾಗಿಬಿಟ್ಟರು. ಈ ಪ್ರಶಸ್ತಿಯಿಂದಾಗಿ ಜಿಲ್ಲಾಧಿಕಾರಿ ಕಚೇರಿ ಸಹಿತ ಯಾವುದೇ ಅಧಿಕಾರಿಗಳ, ಬ್ಯಾಂಕ್ ಅಧ್ಯಕ್ಷರುಗಳ ಕಚೇರಿಯ ಬಾಗಿಲು ಹಾಜಬ್ಬ ಅವರ ಪಾಲಿಗೆ ಮುಕ್ತವಾಯಿತು. ಯಾವುದೇ ಪೂರ್ವಾನುಮತಿಯಿಲ್ಲದೆ ಭೇಟಿ ಮಾಡುವ ಅವಕಾಶವನ್ನು ತಂದುಕೊಟ್ಟಿತು. ಅಂದಿನ ರಾಜ್ಯಪಾಲರು ಹಾಜಬ್ಬ ಅವರನ್ನು ರಾಜಭವನಕ್ಕೆ ಕರೆಸಿಕೊಂಡು ಸತ್ಕರಿಸಿ ಕಳುಹಿಸಿದರು. ಮುಂದೆ ಈ ಹಾಜಬ್ಬ ಅವರನ್ನು ಹಳ್ಳಿಯ ಸುತ್ತಮುತ್ತಲಿನ ಜನ ತಮ್ಮ ಸಮುದಾಯದ ಸಾಧಕನೆಂದು ಹೆಮ್ಮೆಪಟ್ಟುಕೊಂಡರು. ಪ್ರಾಥಮಿಕ ಶಾಲೆ ಪ್ರೌಢಶಾಲೆಯಾಯಿತು. ದಾನಿಗಳ ಮಹಾಪೂರವೇ ಹರಿದು ಬಂತು. ಸಿಎನ್‌ಎನ್ ಐಬಿಎನ್ ಅನಕ್ಷರಸ್ಥ ಹಾಜಬ್ಬರನ್ನು ವಿಮಾನದಲ್ಲಿ ಕರೆಸಿಕೊಂಡು ಐದು ಲಕ್ಷ ರೂಪಾಯಿ ಸಹಿತ ಪ್ರಶಸ್ತಿ ನೀಡಿ ಗೌರವಿಸಿತು. ‘ಕನ್ನಡಪ್ರಭ’ ಪತ್ರಿಕೆಯ ನಗದು ಹಣವನ್ನು ಬ್ಯಾಂಕಿನಲ್ಲಿ ಠೆವಣಿ ಇಡಬೇಕು, ನಿಮ್ಮ ಮಗಳ ಮದುವೆಗೆ ಖರ್ಚು ಮಾಡಲು ಬೇಕಾಗುತ್ತದೆ ಎಂದು ಸಲಹೆ ಕೊಟ್ಟಿದ್ದೆ, ಹಾಗೇಯೇ ಮಾಡಿದ್ದರು.

ಅವರನ್ನು ‘ಕನ್ನಡಪ್ರಭ’ ಪ್ರಶಸ್ತಿಗೆ ಆಯ್ಕೆ ಮಾಡಲು ಕಾರಣವಾದ ನನ್ನನ್ನು ನನ್ನ ಮನೆಗೆ ಬಂದು ಬೇಡವೆಂದರೂ ಕೇಳದೆ ಹಠಕ್ಕೆ ನಿಂತು ಒಂದು ವಾರ ತಿಂದರೂ ಮುಗಿಯದಷ್ಟು ಕಿತ್ತಳೆ ಹಣ್ಣು ಕೊಟ್ಟು ಅವರು ಹೇಳಿದ ಮಾತು: ‘ದೇವರು ನಿಮ್ಮನ್ನು ಸುಖ, ಸಂಪತ್ತು ಕೊಟ್ಟು ಸುಖವಾಗಿರಿಸಲಿ. ನನ್ನಂಥ ಬಡವನನ್ನು ಇಷ್ಟು ದೊಡ್ಡ ಜನ ಮಾಡಿಸಿದಿರಿ…’ ಹೀಗೆ ಹೇಳಿ ಕೈಮುಗಿದು ಹೋದರು.

ಈ ಅನಕ್ಷರಸ್ಥ ಹಾಜಬ್ಬ ಈಗ ಕುವೆಂಪು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲಿ ಪಾಠವಾಗಿದ್ದಾರೆ. ಆದರೆ ಹಾಜಬ್ಬ ಅವರ ಈ ಸಾಧನೆ, ಅವರ ಶಿಕ್ಷಣ ಪ್ರೇಮ ಕರ್ನಾಟಕ ಸರ್ಕಾರ ಅರ್ಹರನ್ನು ಹುಡುಕಿಕೊಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮಾತ್ರ ಸುಳಿದಿಲ್ಲ. ಸರ್ಕಾರದ ಪ್ರಶಸ್ತಿ ನೀಡುವ ಕ್ಷೇತ್ರಗಳಲ್ಲಿರುವ ಶಿಕ್ಷಣ ಕ್ಷೇತ್ರಕ್ಕೆ ಹಾಜಬ್ಬ ಅರ್ಹರು ಅನಿಸಿಲ್ಲ ಯಾಕೆ? ಉತ್ತರ ಅತ್ಯಂತ ಸರಳ ಅವರು ಹಳ್ಳಿಯ ಮಕ್ಕಳಿಗೆ ವಿದ್ಯೆ ಕಲಿಯಲು ಶಾಲೆ ಬೇಕೆಂದು ಅರ್ಜಿ ಹಾಕಿದ್ದರು ಹೊರತು ನಾನು ಶಾಲೆ ಮಾಡಲು ಶ್ರಮಪಟ್ಟಿದ್ದೇನೆ, ನನಗೆ ಪ್ರಶಸ್ತಿ ಕೊಡಿ ಎಂದೇನೂ ಅರ್ಜಿ ಹಾಕಿಲ್ಲವಲ್ಲಾ?

ಈಗ ತೀರ್ಮಾನ ನೀವು ಕೊಡಿ, ಹಾಜಬ್ಬ ಅವರಂಥ ಶಿಕ್ಷಣ ಪ್ರೇಮಿ ಪ್ರಶಸ್ತಿಗೆ ಅರ್ಹರಲ್ಲವೇ?