Category Archives: ಚಿದಂಬರ ಬೈಕಂಪಾಡಿ

ಮಾಧ್ಯಮದವರ ಆತ್ಮವಂಚನೆ ಮತ್ತು ಆತ್ಮಶೋಧನೆ


-ಚಿದಂಬರ ಬೈಕಂಪಾಡಿ


 

ಯಾರೂ ತೆಗಳಿಕೆಯನ್ನು ಇಷ್ಟಪಡುವುದಿಲ್ಲ, ಹಾಗೊಂದು ವೇಳೆ ತೆಗಳಿಕೆಯನ್ನೇ ಬಯಸುತ್ತೇನೆ ಎಂದು ಹೇಳುವುದು ಆತ್ಮವಂಚನೆಯಾಗುತ್ತದೆ. ತೆಗಳಿಸಿಕೊಳ್ಳಲು ಹೆಚ್ಚು ಪರಿಶ್ರಮ ಬೇಕಾಗಿಲ್ಲ, ಹೊಗಳಿಸಿಕೊಳ್ಳಲು ಪರಿಶ್ರಮ ಹಾಗೂ ಕಾಲಾವಕಾಶ ಅತಿಯಾಗಿ ಬೇಕಾಗುತ್ತದೆ. ಆದ್ದರಿಂದ ತೆಗಳಿಕೆಯನ್ನು ಯಾರೂ ಬಯಸುವುದಿಲ್ಲ. ನಾನು ಬರೆದ ಸಾಹಿತ್ಯವನ್ನು ಓದುಗರು ಮೆಚ್ಚಿಕೊಳ್ಳಬೇಕು ಎನ್ನುವ ತುಡಿತ ಸಹಜವಾಗಿ ಇರುತ್ತದೆ, ಆದರೆ ಹಾಗೆ ಮೆಚ್ಚಿಕೊಳ್ಳಬೇಕಾದರೆ ಅವರಿಗೆ ನಾನು ಬರೆದದ್ದು ಅವರ ಗ್ರಹಿಕೆಗೆ ಹತ್ತಿರವಾಗಿರಬೇಕು ಎನ್ನುವ ಕಾಳಜಿಯೂ ನನಗಿರಬೇಕಾಗುತ್ತದೆ. ಅಂಥ ಕಾಳಜಿಗೆ ಕೊರತೆಯಾದಾಗ ಬರವಣಿಗೆ ನನಗೆ ಮಾತ್ರ ಆಪ್ಯಾಯಮಾನವಾಗುತ್ತದೆ ಹೊರತು ಓದುಗರಿಗಲ್ಲ. ಅಂತೆಯೇ ಓದುಗ ಕೂಡಾ ಬರಹಗಾರನ ಮೇಲೆ ಕಾಳಜಿ ಹೊಂದಿರಬೇಕಾಗುತ್ತದೆ ಎನ್ನುವ ನಿರೀಕ್ಷೆ ಸಹಜವಾದುದೇ ಆದರೂ ಬರಹಗಾರ ನಿರೀಕ್ಷಿಸುವಷ್ಟರಮಟ್ಟಿಗೆ ಓದುಗ ಪ್ರತಿಕ್ರಿಯಿಸುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಓದುಗನ ನಿರೀಕ್ಷೆಗೆ ವಿರುದ್ಧವಾಗಿ ಅಥವಾ ಬರಹಗಾರ ತಪ್ಪಾಗಿ ಬರೆದಿದ್ದರೆ ಅವನ ಪ್ರತಿಕ್ರಿಯೆ ಆ ಕ್ಷಣಕ್ಕೆ ವ್ಯಕ್ತವಾಗುತ್ತದೆ, ಒಂದು ವೇಳೆ ಓದುಗನ ಗ್ರಹಿಕೆಗೆ ಅದು ತಾಳೆಯಾಗುವಂತಿದ್ದರೆ ಅವನಿಗೆ ಪ್ರತಿಕ್ರಿಯಿಸಬೇಕು ಅನ್ನಿಸುವುದಿಲ್ಲ. ಆದ್ದರಿಂದಲೇ ಓದುಗನ ಪ್ರತಿಕ್ರಿಯೆ ಬಹುತೇಕ ಮೌನವಾಗಿರುತ್ತದೆ, ಆದರೆ ಅದು ಬರಹಗಾರನ ಪರವಾಗಿದೆ ಎಂದೇ ಅರ್ಥ.

ಮಾಧ್ಯಮಗಳ ಜಾಲ ಈಗ ವಿಸ್ತಾರಗೊಂಡಿರುವುದರಿಂದ ಓದುಗ ಅಥವಾ ವೀಕ್ಷಕರ ಜಾಲವೂ ವಿಸ್ತಾರಗೊಂಡಿದೆ. ಮುದ್ರಣ ಮಾಧ್ಯಮವೊಂದೇ ಇದ್ದಾಗ ಮುದ್ರಣ ಮಾಧ್ಯಮದಲ್ಲಿ ಅದರಲ್ಲೂ ಪತ್ರಕರ್ತನಾಗಿದ್ದವರಿಗೆ ಅತಿಯಾದ ಜವಾಬ್ದಾರಿಯಿತ್ತು ಮತ್ತು ಅಂಥ ಜವಾಬ್ದಾರಿಯುತ ವೃತ್ತಿಪರತೆಯನ್ನೇ ಓದುಗರು ಬಯಸುತ್ತಿದ್ದರು. ಒಂದು ಸುದ್ದಿಯನ್ನು ಬರೆಯುವಾಗ ಬಳಸುವ ಪದಗಳ ಬಗ್ಗೆಯೂ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿತ್ತು. ಪತ್ರಕರ್ತನಿಗೆ ಬರೆಯುವ ಪೂರ್ಣಸ್ವಾತಂತ್ರ್ಯವಿತ್ತಾದರೂ ಅದನ್ನು ಓದುಗರು ಪ್ರಶ್ನೆ ಮಾಡುತ್ತಾರೆ ಎನ್ನುವ ಎಚ್ಚರ ಅವನಲ್ಲಿ ಜಾಗೃತ ಸ್ಥಿತಿಯಲ್ಲಿತ್ತು.

‘ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಎಸೆಯಿರಿ’ ಎನ್ನುವ ಒಂದು ವಾಕ್ಯದಿಂದಾಗಿ ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ತಮ್ಮ ಕುರ್ಚಿ ಕಳೆದುಕೊಂಡರು ಅಂದರೆ ಹೊಸತಲೆಮಾರಿನ ಪತ್ರಕರ್ತರಿಗೆ ನಂಬುವುದು ಕಷ್ಟ, ಆದರೆ ವಾಸ್ತವ. ಅಂದು ಪತ್ರಿಕೆಯ ಪ್ರಭಾವ ಅಷ್ಟಿತ್ತು ಮತ್ತು ಅಂಥ ಸುದ್ದಿ ಬರೆದ ಪತ್ರಕರ್ತನಿಗೆ ಅಂಥ ಕ್ರೆಡಿಬಿಲಿಟಿ ಇತ್ತು. ಓದುಗರೂ ಅಷ್ಟೇ ವಿಶ್ವಾಸವನ್ನು ಸುದ್ದಿ ಹಾಗೂ ಆ ಸುದ್ದಿ ಬರೆದ ಪತ್ರಕರ್ತನ ಮೇಲೆ ಇಟ್ಟಿರುತ್ತಿದ್ದರು. ಈ ಮಾತುಗಳು ಈಗಿನ ಪತ್ರಕರ್ತರಿಗೆ ರುಚಿಸದೇ ಹೋಗಬಹುದು ಅಥವಾ ಇದು ನಂಬುವಂಥದ್ದಲ್ಲ ಎನ್ನುವ ಅಭಿಪ್ರಾಯವೂ ಇರಬಹುದು, ಮೆಚ್ಚಲೇಬೇಕೆನ್ನುವ ಒತ್ತಾಸೆಯೂ ಇಲ್ಲ. ಅದಕ್ಕೆ ಕಾರಣಗಳೂ ಅನೇಕಾನೇಕ.

80ರ ದಶಕದಲ್ಲಿ ಪತ್ರಿಕೆಯೊಂದು ಒಬ್ಬ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಇಳಿಸುವಷ್ಟು ಸಾಮರ್ಥ್ಯ ಹೊಂದಿದ್ದರೆ ಈಗ ನಿತ್ಯವೂ ಒಬ್ಬೊಬ್ಬರು ರಾಜೀನಾಮೆ ಕೊಡುತ್ತಿರಬೇಕಿತ್ತಲ್ಲ ಎನ್ನುವ ಪ್ರಶ್ನೆ ಮೂಡಿದರೆ ಅಚ್ಚರಿಯಿಲ್ಲ. ಈಗ ಪ್ರತ್ಯೇಕ ರಾಜ್ಯ ಕೇಳುತ್ತಾರೆ, ತಮಗಾಗಿಯೇ ಜಿಲ್ಲೆ ಬೇಕೆನ್ನುತ್ತಾರೆ, ಮನೆ ಮಂದಿಯ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡುತ್ತಾರೆ, ಜಾತಿಯ ಹೆಸರಲ್ಲಿ ಮಠ-ಮಂದಿರ ಕಟ್ಟುತ್ತಾರೆ, ಸರ್ಕಾರದ ಬೊಕ್ಕಸದಿಂದ ಕೋಟಿ ಕೋಟಿ ದಾನ ಮಾಡುತ್ತಾರೆ. ಧಾರಾವಾಹಿಗಳಾಗಿ ಇವೆಲ್ಲವುಗಳ ಬಗ್ಗೆ ಮುದ್ರಣ ಮಾಧ್ಯಮದಲ್ಲಿ ಲೇಖನಗಳು ಪ್ರಕಟವಾಗುತ್ತವೆ. ದೃಶ್ಯಮಾಧ್ಯಮಗಳಲ್ಲಿ ದಿನಪೂರ್ತಿ ಚರ್ಚೆಗಳಾಗುತ್ತವೆ. ಓದುಗ, ವೀಕ್ಷಕ ಇವೆಲ್ಲಕ್ಕೂ ಸಾಕ್ಷಿಯಾಗುತ್ತಾರೆ. ಇಂಥ ವಿವಾದಕ್ಕೆ ಕಾರಣರಾದವರು ದಿನ ಬೆಳಗಾಗುವುದರೊಳಗೆ ಹೀರೋ ಆಗಿಬಿಡುತ್ತಿದ್ದಾರೆ ಹೊರತು ಗುಂಡೂರಾವ್ ಅವರಂತೆ ಅಧಿಕಾರ ಕಳೆದುಕೊಂಡು ಮೂಲೆಗುಂಪಾಗುವುದಿಲ್ಲ. ಇಂಥ ಸುದ್ದಿಗಳನ್ನು ಬರೆದ ಪತ್ರಕರ್ತ ಹಿಂದೆ ಹೀರೋ ಆಗುತ್ತಿದ್ದ ಈಗ ‘ವಿಲನ್’ ಅನ್ನಿಸಿಕೊಳ್ಳುತ್ತಿದ್ದಾನೆ (ಈ ಮಾತಿಗೆ ಅಪವಾದಗಳಿರಬಹುದು).

ಶತಮಾನಗಳ ಇತಿಹಾಸವುಳ್ಳ, ಮಹಾಕಾವ್ಯ ಪರಂಪರೆಯಿರುವ ಕನ್ನಡ ಸಾಹಿತ್ಯವನ್ನು ಬಸವಲಿಂಗಪ್ಪ ‘ಬೂಸಾ’ ಅಂದದ್ದು ಹೊಸ ಸಾಹಿತ್ಯ ಚಳವಳಿಗೆ ಪ್ರೇರಣೆಯಾಯಿತು ಅಂದರೆ ಈಗ ನಂಬುವುದು ಕಷ್ಟ. ಇದು ಇತಿಹಾಸದಲ್ಲಿರುವ ಸತ್ಯ. ಆರ್ಥಿಕ ಪರಿಣತರಾಗಿದ್ದ ಅರುಣ ಶೌರಿ 1980ರಲ್ಲಿ ಬಾಗಲ್ಪುರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಕೊಡುತ್ತಿದ ಹಿಂಸೆ, ಕಣ್ಣುಗಳಿಗೆ ಸೂಜಿಯಿಂದ ಚುಚ್ಚುವುದು, ಆ್ಯಸಿಡ್ ಹಾಕುವುದನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಸರಣಿ ಲೇಖನ ಬರೆದು ಜಗತ್ತಿನ ಗಮನ ಸೆಳೆದ ಪತ್ರಕರ್ತರಾದರು. ಸರ್ಕಾರದ ವಿರುದ್ಧ ತನಿಖಾ ವರದಿ ಬರೆದು ಸುಮಾರು 300 ಕೇಸುಗಳನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ಮೇಲೆ ಜಡಿಯಲು ಕಾರಣರಾದರು. ಇದನ್ನು ಕೂಡಾ ಈಗ ನಿರಾಕರಿಸಲಾಗದು. ಆಗ ಸರ್ಕಾರ, ರಾಜಕಾರಣಿಗಳು ನಡುಗಿದ್ದೂ ಕೂಡಾ ಸತ್ಯ. ಆದರೆ ಈಗ ಇಂಥ ಬರವಣಿಗೆಗಳಿಗೇನೂ ಕೊರತೆಯಾಗಿಲ್ಲ. ಅಂದಿಗಿಂತ ಇಂದು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಪ್ರಬಲವಾಗಿವೆಯಾದರೂ ಅಂದಿನಂತೆ ಫಲಿತಾಂಶಗಳು ಬರುತ್ತಿಲ್ಲ ಯಾಕೆ? ಎನ್ನುವುದು ಪ್ರಶ್ನೆ.

ಇದಕ್ಕೆ ಉತ್ತರ ಹುಡುಕುವ ಅಗತ್ಯ ಮಾಧ್ಯಮಗಳು ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರೇ ಮಾಡಬೇಕಾಗಿದೆ, ಆತ್ಮಶೋಧನೆಯನ್ನು ನಾವೇ ಮಾಡಿಕೊಳ್ಳಬೇಕಾಗಿದೆ. ಪ್ರಾಮಾಣಿಕತೆಯನ್ನು ಸುದೀರ್ಘ ಕಾಲದವರೆಗೆ ಉಳಿಸಿಕೊಳ್ಳುವುದು ಈಗ ಕಷ್ಟ ಎಂದು ಮಾಧ್ಯಮಗಳಿಗೆ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅನ್ನಿಸುತ್ತಿದೆ. ಚುನಾವಣೆ ಕಾಲದಲ್ಲಿ ಮಾಧ್ಯಮಗಳು ಕಂಡುಕೊಂಡಿರುವ ‘ಪೇಯ್ಡ್ ನ್ಯೂಸ್’ ಮಾಡುವ ಅವಾಂತರಗಳ ಗಂಭೀರತೆಯ ಅರಿವು ಇರಬೇಕಾಗುತ್ತದೆ. ಲೋಕಾಯುಕ್ತರು ಅಧಿಕಾರಿಗಳ, ರಾಜಕಾರಣಿಗಳ ಮನೆಗಳ ಮೇಲೆ ದಾಳಿ ಮಾಡಿ ಕೋಟಿ ಕೋಟಿ ಅಕ್ರಮ ಆಸ್ತಿ ಜಪ್ತಿ ಮಾಡಿದಾಗ ಆ ಸುದ್ದಿಯನ್ನು ಬರೆಯುವ ನಾವು, ನಮ್ಮ ಮಾಧ್ಯಮಗಳು ನಾವಿರುವ ಸ್ಥಿತಿಯ ಬಗ್ಗೆಯೂ ಎದೆಮುಟ್ಟಿ ನೋಡಿಕೊಳ್ಳಬೇಕೆನಿಸುವುದಿಲ್ಲವೇ?

ಮಾಧ್ಯಮ ಪ್ರಬಲವಾಗಿದ್ದರೆ, ಅದರ ಜಾಲ ವಿಸ್ತಾರವಾಗಿದ್ದರೆ ಅದರ ಪತ್ರಕರ್ತನೂ ಪ್ರಭಾವಿಯಾಗಿತ್ತಾನೆ. ಅವನು ಹೇಳಿದ್ದೇ ನೀತಿಯಾಗುತ್ತದೆ. ಮಾಧ್ಯಮ ದುರ್ಬಲವಾಗಿದ್ದರೆ ಪ್ರಬಲ ಪತ್ರಕರ್ತನಾಗಿದ್ದರೂ ಅವನು ಅಭಿಪ್ರಾಯ ರೂಪಿಸಲು ಸಾಧ್ಯವಿಲ್ಲ. ಮಾಧ್ಯಮದಿಂದ ಪತ್ರಕರ್ತ ಬೆಳೆಯುವಷ್ಟರಮಟ್ಟಿಗೆ ಮಾಧ್ಯಮವನ್ನು ಒಬ್ಬ ಪತ್ರಕರ್ತ ಬೆಳೆಸುವುದು ಸಾಧ್ಯವಿಲ್ಲ. ತಾನು ಮಾತ್ರ ಮಾಧ್ಯಮದ ಪ್ರಭಾವದಲ್ಲಿ ಬೆಳೆಯಬಲ್ಲ. ತಾನು ಬೆಳೆಯಬೇಕೆನ್ನುವ ತಹತಹಿಕೆಯಲ್ಲಿ ಬೆಳೆದ ಹಿನ್ನೆಲೆಯನ್ನು ಮರೆತುಬಿಟ್ಟರೆ ಒಂದು ಸುದ್ದಿ ಮುಖ್ಯಮಂತ್ರಿಯ ಕುರ್ಚಿ ಕಸಿಯಲಾರದು ಅಥವಾ ಒಂದು ಚಳವಳಿಯನ್ನು ಹುಟ್ಟು ಹಾಕಲಾರದು.

ಕರ್ನಾಟಕದ ಕಾಂಗ್ರೆಸ್ ಮನೆ ರಿಪೇರಿಗೆ ಎಸ್.ಎಂ.ಕೃಷ್ಣ


-ಚಿದಂಬರ ಬೈಕಂಪಾಡಿ


 

ಕರ್ನಾಟಕದ ಕಾಂಗ್ರೆಸ್ ಪಾಳೆಯದಲ್ಲೀಗ ಏನೋ ಒಂಥರಾ. ಈ ‘ಒಂಥರಾ’ ಎನ್ನುವ ಪದವನ್ನು ಹಲವು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು, ಅರ್ಥ ಹುಡುಕಿಕೊಳ್ಳಬಹುದು. ಇದರಲ್ಲಿ ಪುಳಕವಿದೆ, ಆತಂಕವಿದೆ, ರೋಮಾಂಚನವಿರಬಹುದು, ಕಳೆದುಕೊಂಡದ್ದು ಮರಳಿ ಸಿಕ್ಕಿದಂತಿರಬಹುದು, ಹೇಳಲಾಗದಂಥ ಅನುಭವ ಆಗುತ್ತಿರಬಹುದು. ಆದ್ದರಿಂದಲೇ ಅದು ‘ಒಂಥರಾ’.

ಕರ್ನಾಟಕದಲ್ಲಿ ಕಾಂಗ್ರೆಸ್ ಗುಂಪುಗಳು ಎಷ್ಟಿವೆ ಎನ್ನುವುದನ್ನು ನಿಮ್ಮಷ್ಟಕ್ಕೆ ನೀವೇ ಲೆಕ್ಕ ಮಾಡಿ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕೋಶಾಧಿಕಾರಿ ಶ್ಯಾಮನೂರು ಶಿವಶಂಕರಪ್ಪ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ; ಇವರ ಬೆನ್ನಹಿಂದೆ ತಮ್ಮದೇ ಆದ ಬೆಂಬಲಿಗರ ಗುಂಪಿದೆ. ಸಿ.ಎಂ.ಇಬ್ರಾಹಿಂ, ತೇಜಸ್ವಿನಿ, ಧರಂ ಸಿಂಗ್ ಇವರೂ ತಮ್ಮ ನಿಷ್ಠಾವಂತರನ್ನು ಹೊಂದಿದ್ದಾರೆ. ಇದು ಕರ್ನಾಟಕದ ಕಾಂಗ್ರೆಸ್ ಪಕ್ಷದ ಸ್ಥೂಲ ನೋಟ. ಇವರೆಲ್ಲರೂ ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿದ್ದರೂ ಒಬ್ಬರನ್ನೊಬ್ಬರು ಅತಿಯಾಗಿ ದ್ವೇಷಿಸದಿದ್ದರೂ ಮುಕ್ತವಾಗಿ ಪ್ರೀತಿಸುವುದಿಲ್ಲ. ಇವರಿಗೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾತ್ರ ನಾಯಕರು. ಅವರು ಹೇಳಿದ್ದನ್ನು ಮಾತ್ರ ಕೇಳುತ್ತಾರೆ ಹೊರತು ಅನ್ಯರು ಯಾರೇ ಹೇಳಿದರೂ ಕೇಳುವ ಜಾಯಮಾನ ಇವರದ್ದಲ್ಲ. ಆದ್ದರಿಂದಲೇ ಕಾಂಗ್ರೆಸ್ ಹಿಡಿತ ಈಗಲೂ ನೆಹರೂ ಕುಟುಂಬದಲ್ಲೇ ಇದೆ ಎನ್ನುವ ವಾದಕ್ಕೆ ಇದು ಪುಷ್ಠಿ ನೀಡುತ್ತದೆ.

ಈ ಎಲ್ಲಾ ನಾಯಕರೂ ಒಂದಾಗಿದ್ದರೆ, ಪರಸ್ಪರ ನಂಬಿಕೆಯಿಂದ ಕೆಲಸ ಮಾಡಿದರೆ ಸೋನಿಯಾ ಅಥವಾ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸವೇ ಇಲ್ಲವಾಗುತ್ತಿತ್ತು ಇನ್ನೊಂದರ್ಥದಲ್ಲಿ ಖಾತೆಯಿಲ್ಲದ ಮಂತ್ರಿಯಂತಿರುತ್ತಿದ್ದರು. ಅವರು ಚುನಾವಣೆ ಕಾಲಕ್ಕೆ ಪ್ರಚಾರಕ್ಕೆ ಬರುವ ಅಗತ್ಯವೂ ಇರಲಾರದು. ಇಲ್ಲಿಯ ತನಕ ಇವರೆಲ್ಲರೂ ಪರಸ್ಪರ ಅಪನಂಬಿಕೆಯಿಂದ ಇರುತ್ತಾರೋ ಅಲ್ಲಿಯ ತನಕ ಸೋನಿಯಾ ಮತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಕ್ರಿಯಾಶೀಲರಾಗಿರುವುದು ಅನಿವಾರ್ಯ ಮತ್ತು ಇವರಿಂದಾಗಿ ಅವರು ಕ್ರಿಯಾಶೀಲರಾಗಿರುತ್ತಾರೆ. ರಾಜೀವ್ ಗಾಂಧಿ ನಂತರ ಪಿ.ವಿ.ನರಸಿಂಹರಾವ್ ಕಾಂಗ್ರೆಸ್ ಮುನ್ನಡೆಸಿದಾಗ ಪ್ರಣಬ್ ಮುಖರ್ಜಿ, ಶರದ್ ಪವಾರ್, ಪಿ.ಎ.ಸಂಗ್ಮಾ ಮುಂತಾದವರು ಅಧಿಕಾರಕ್ಕಾಗಿ ತಹತಹಿಸದೇ ಇರುತ್ತಿದ್ದರೆ ಕಾಂಗ್ರೆಸ್ ಪಕ್ಷ ನೆಹರೂ ಕುಟುಂಬದ ಹಿಡಿತದಿಂದ ಸುಲಭವಾಗಿ ಕಳಚಿಕೊಳ್ಳುತ್ತಿತ್ತು. ಮತ್ತೆ ಆ ಕುಟುಂಬದ ಹಿಡಿತಕ್ಕೆ ಕಾರಣರಾದವರು ಇವರೇ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು.

ಇಂಥ ವಾಸ್ತವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅವಲೋಕಿಸಿದರೆ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸೋನಿಯಾ ಮತ್ತು ರಾಹುಲ್ ಕನಸು ಕಾಣುತ್ತಿರುವುದು ಅಸಹಜವಂತೂ ಅಲ್ಲ. ಆದ್ದರಿಂದಲೇ ಕೇಂದ್ರ ಸಚಿವರಾಗಿದ್ದ ಎಸ್.ಎಂ.ಕೃಷ್ಣರನ್ನು ಸೋನಿಯಾ ಮತ್ತು ರಾಹುಲ್ ಕರ್ನಾಟಕಕ್ಕೆ ಹಿಂದಕ್ಕೆ ಕಳುಹಿಸಿದ್ದಾರೆ. ಈಗಾಗಲೇ ಡಜನ್ ನಾಯಕರು ಕರ್ನಾಟಕದಲ್ಲಿದ್ದರೂ ಸೋನಿಯಾ ಹಾಗೂ ರಾಹುಲ್ ಕೃಷ್ಣ ಅವರನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಕೃಷಿಗೆ ಹಚ್ಚಿರುವುದಕ್ಕೆ ಕಾರಣ ಇದೇ ಡಜನ್ ನಾಯಕರು.

ಆಸ್ಕರ್ ಫೆರ್ನಾಂಡಿಸ್ ಕಾಂಗ್ರೆಸ್ ಪಕ್ಷದಲ್ಲಿ ಜನನಾಯಕರಲ್ಲ ಎನ್ನುವುದು ಸೋನಿಯಾ ಗಾಂಧಿಗೂ ಗೊತ್ತಿರುವ ಸತ್ಯ. ಆದರೆ ಉಳಿದವರು ತಮ್ಮ ಬೆನ್ನಿಗಂಟಿಕೊಂಡು ಬಂದಿರುವ ಜಾತಿಯ ಹಗ್ಗದಿಂದ ಒಂದಷ್ಟು ಜನರನ್ನು ಕಟ್ಟಿಕೊಂಡಿದ್ದರೆ ವೀರಪ್ಪ ಮೊಯ್ಲಿಯಂಥವರು ತಮ್ಮ ಪ್ರಭಾವಿ ವಲಯದಿಂದ ಚಲಾವಣೆಯಲ್ಲಿದ್ದಾರೆ ಹೊರತು ಜಾತಿಯ ಬಲದಿಂದ ಅಲ್ಲ. ಆದರೂ ಎಸ್.ಎಂ.ಕೃಷ್ಣರಲ್ಲಿ ಸೋನಿಯಾ ಮತ್ತು ರಾಹುಲ್ ಗುರುತಿಸಿರುವ ಗುಣ ಯಾವುದು ?.

ಎಸ್.ಎಂ.ಕೃಷ್ಣ ಒಕ್ಕಲಿಗ ಸಮುದಾಯದವರು ನಿಜ. ಆದರೆ ಅವರು ಎಂದು ತಮ್ಮ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಬುದ್ಧಿವಂತಿಕೆ ಮತ್ತು ಚಾಣಾಕ್ಷತೆ ಕೃಷ್ಣ ಅವರನ್ನು ರಾಜಕಾರಣದಲ್ಲಿ ಎತ್ತರದ ಸ್ಥಾನಕ್ಕೆ ಒಯ್ದಿರುವುದೇ ಹೊರತು ಅವರ ಹಣಬಲವಾಗಲೀ, ಜಾತಿಯ ಅಸ್ತ್ರವಾಗಲೀ ನೆರವಿಗೆ ಬಂದಿಲ್ಲ, ಅವರ ರಾಜಕೀಯ ಜೀವನದಲ್ಲಿ ಅದು ಅನಿವಾರ್ಯವಾಗಲಿಲ್ಲ. ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯನ್ನು ಸಕಾಲದಲ್ಲಿ ಮಿತವಾಗಿ ಬಳಸುವುದರಲ್ಲಿ ಕೃಷ್ಣ ನಿಪುಣರು. ಆದ್ದರಿಂದಲೇ ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗಲೂ ಅಧಿಕಾರ ಉಳಿಸಿಕೊಳ್ಳುವುದು ಸಾಧ್ಯವಾಯಿತು.

ಮಹಾಭಾರತದಲ್ಲಿ ಕೃಷ್ಣ ಜಾತಿಯ ಬಲದಿಂದ ಗುರುತಿಸಿಕೊಳ್ಳಲಿಲ್ಲ ಅಥವಾ ಯುದ್ಧ ಗೆಲ್ಲಲು ಸಾರಥಿಯಾಗಲಿಲ್ಲ. ತನ್ನ ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯಿಂದ ಅಂದುಕೊಂಡದ್ದನ್ನು ಸಾಧಿಸಿದ. ಈ ಕೃಷ್ಣ ಕೂಡಾ ಕಾಂಗ್ರೆಸ್ ಅಧಿಕಾರಕ್ಕೇರಲು ಸಾಧ್ಯವೇ ಇಲ್ಲ ಎನ್ನುವ ಕಾಲಘಟ್ಟದಲ್ಲಿ ಪಾಂಚಜನ್ಯ ಊದಿ ಅಧಿಕಾರಕ್ಕೆ ತರುವಲ್ಲಿ ಸಮರ್ಥರಾಗಿದ್ದರು. ಅದರ ಪುನರಾವರ್ತನೆ ಈಗ ಆಗಬೇಕು ಎನ್ನುವುದು ಸೋನಿಯಾ ಮತ್ತು ರಾಹುಲ್ ಕನಸಿಗೆ ಕಾರಣವಿರಬೇಕು.

ಕರ್ನಾಟಕದ ಕಾಂಗ್ರೆಸ್ ಪಕ್ಷದೊಳಗಿರುವ ಡಜನ್ ನಾಯಕರು ಆತ್ಮಪೂರ್ವಕವಾಗಿ ಕೃಷ್ಣರನ್ನು ಒಪ್ಪದಿರಬಹುದು ಆದರೆ ಸರಾಸಗಟಾಗಿ ನಿರಾಕರಿಸಲಾರರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಎನ್ನುವುದೇ ಡಜನ್ ನಾಯಕರ ಚಿಂತೆಯಾಗಿದೆ ಹೊರತು ಅಧಿಕಾರಕ್ಕೆ ಬೇಕಾದಷ್ಟು ಸಂಖ್ಯೆಯ ಶಾಸಕರನ್ನು ಗೆಲ್ಲಿಸುವ ತಂತ್ರಗಾರಿಕೆಯ ಚಿಂತನೆಯಿಲ್ಲ. ತಾನು ಬೇಕಾದರೆ ಮುಖ್ಯಮಂತ್ರಿಯಾಗದಿದ್ದರೂ ಪರವಾಗಿಲ್ಲ ಅವನು ಮಾತ್ರ ಆಗಬಾರದು, ಅದನ್ನು ಸಾಧಿಸುವುದು ಹೇಗೆ ಎನ್ನುವುದೇ ಚಿಂತೆ. ಆದರೆ ಎಸ್.ಎಂ.ಕೃಷ್ಣರಿಗೆ ಇಂಥ ಯಾವ ಚಿಂತೆಗಳೂ ಇಲ್ಲ. ಸ್ಪೀಕರ್, ಉಪಮುಖ್ಯಮಂತ್ರಿ, ಕೇಂದ್ರ ಮಂತ್ರಿ, ರಾಜ್ಯಪಾಲ ಹುದ್ದೆಗಳನ್ನು ಅನುಭವಿಸಿದ್ದಾರೆ, ಜಗತ್ತನ್ನು ಬೇಸರಬರುವಷ್ಟು ಸುತ್ತಿದ್ದಾರೆ. ಈಗ ಅವರೇ ಹೇಳಿಕೊಂಡಂತೆ ವಿಶ್ರಾಂತಿ ಬೇಕಾಗಿದೆ. ವಿಶ್ರಾಂತ ಜೀವನ ಬುದ್ಧಿವಂತಿಕೆ ಮತ್ತು ಚಾಣಾಕ್ಷತೆ ಬಳಕೆಗೆ ಅಡ್ಡಿಯಾಗದು. ಆದ್ದರಿಂದಲೇ ಆಸೆಯಿಲ್ಲದ, ವೈರಾಗಿಯೂ ಅಲ್ಲದ ಆದರೆ ಚಲನಶೀಲ ಮನಸ್ಸಿನ ಕೃಷ್ಣರನ್ನು ಸೋನಿಯಾ ಮತ್ತು ರಾಹುಲ್ ಅವರು ಕರ್ನಾಟಕದ ಕಾಂಗ್ರೆಸ್ ಮನೆ ರಿಪೇರಿಗೆ ಕಳುಹಿಸಿದ್ದಾರೆ. ವಾಸಕ್ಕೆ ಮನೆ ಯೋಗ್ಯವಾದರೆ ಸೂಕ್ತರಾದವರನ್ನು ಅವರೇ ವಾಸಕ್ಕೆ ಬಿಡುತ್ತಾರೆ!

ಕಡಿವಾಣ ಹಾಕದೆ ಕುದುರೆಗೆ ಓಟ ಕಲಿಸಿದರೆ?


-ಚಿದಂಬರ ಬೈಕಂಪಾಡಿ


ಬಿಜೆಪಿಗೆ ಇಂಥ ಸ್ಥಿತಿ ಬರುತ್ತದೆಂದು ಬಹುಷ: ಯಾರೂ ಊಹಿಸಿರಲಿಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿ ಒಂದು ರಾಜ್ಯ ಘಟಕವನ್ನು ತನ್ನ ಅಂಕಿತದಲ್ಲಿಟ್ಟುಕೊಳ್ಳಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿದೆ ಹೈಕಮಾಂಡ್ ಎನ್ನುವುದು ಸಾಮಾನ್ಯ ಸಂಗತಿಯಲ್ಲ. ಸಂಘಪರಿವಾರದ ಶಿಸ್ತು, ಬದ್ಧತೆ, ಸಾಮಾಜಿಕ ಕಾಳಜಿಯನ್ನು ಬಿಜೆಪಿಯಿಂದ ಜನರು ನಿರೀಕ್ಷೆ ಮಾಡಿದ್ದರೆ ಅದು ಅಪರಾಧವೆನಿಸುವುದಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆ, ಕುಟುಂಬ ರಾಜಕಾರಣ ಅಥವಾ ಅರಸೊತ್ತಿಗೆಯನ್ನೇ ಒಪ್ಪಿಕೊಂಡು ಸದಾಕಾಲ ಹೈಕಮಾಂಡ್ ಮುಂದೆ ಮಂಡಿಯೂರಿ ಕುಳಿತುಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಗೌಡರ ಕುಟುಂಬದ ಹಿಡಿತದಲ್ಲೇ ಇರುವುದರಿಂದ, ಪ್ರಜಾಪ್ರಭುತ್ವ ಎನ್ನುವುದು ಗೌಡರ ಇಶಾರೆಯಲ್ಲೇ ಇರುವುದರಿಂದ ಅದೂ ಕೂಡಾ ಸುಲಭವಾಗಿ ಜೀರ್ಣವಾಗುವುದಿಲ್ಲ. ಇಂಥ ಕಾಲಘಟ್ಟದಲ್ಲಿ ಹಿಂದುತ್ವದ ಆಕರ್ಷಣೆಗೆ ಒಳಗಾದ ಯುವಕರು ಬಿಜೆಪಿಯನ್ನು ಆವಾಹಿಸಿಕೊಂಡದ್ದು ವಾಸ್ತವ.

ರಾಮಜನ್ಮಭೂಮಿ, ದತ್ತಪೀಠ, ಈದ್ಗಾ ಮೈದಾನ; ಈ ಮೂರು ವಿಚಾರಗಳು ಈ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದ ದಡ ಮುಟ್ಟಿಸಲು ಕಾರಣವಾಯಿತು ಎನ್ನುವುದನ್ನು ಇತಿಹಾಸ ಅವಲೋಕಿಸಿ ಅರಿತುಕೊಳ್ಳಬಹುದು. ಕಳೆದ ಒಂದು ದಶಕದಲ್ಲಿ ಬಿಜೆಪಿ ಒಂದು ಪ್ರಬಲ ವಿರೋಧಪಕ್ಷವಾಗಿ ಕಾಣಿಸಿಕೊಂಡಿದ್ದರೆ ಅದಕ್ಕೆ ಶಿಕಾರಿಪುರದ ಸಿಡಿಲಮರಿ ಬಿ.ಎಸ್.ಯಡಿಯೂರಪ್ಪ ಅವರ ಕಾಣ್ಕೆಯೂ ಕಾರಣ. ನಿರಂತರವಾಗಿ ಬಿಜೆಪಿಯನ್ನು ಚಲಾವಣೆಯಲ್ಲಿಡುವ ಮೂಲಕ ಗಟ್ಟಿಯಾದ ನಾಯಕತ್ವ ಕೊಟ್ಟರು ಎನ್ನುವುದರಲ್ಲಿ ಅನುಮಾನಗಳಿಲ್ಲ.

ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಕರಂಬಳ್ಳಿ ಸಂಜೀವ ಶೆಟ್ಟಿ, ಡಾ.ದತ್ತಾತ್ರಿ, ಕೆ.ರಾಮ್ ಭಟ್, ಡಾ.ವಿ.ಎಸ್.ಆಚಾರ್ಯ, ಡಿ.ಎಚ್.ಶಂಕರಮೂರ್ತಿ, ಬಿ.ಎಸ್.ಯಡಿಯೂರಪ್ಪ, ಹೀಗೆ ಕರ್ನಾಟಕದ ಬಿಜೆಪಿಯನ್ನು ಬೆಳೆಸಿದವರ ಹಿರಿತನದ ಪಟ್ಟಿ ಬೆಳೆಯುತ್ತದೆ. ಎ.ಕೆ.ಸುಬ್ಬಯ್ಯ ಅವರ ಸಿಡಿಲಬ್ಬರದ ಭಾಷಣ, ಅವರ ಭಾಷಣಕ್ಕೆ ವಸ್ತುವಾಗುತ್ತಿದ್ದ ಇಂದಿರಾ ಗಾಂಧಿ ಅವರ ರಾಜಕೀಯ ನಡೆಗಳು ಜನರ ಮನಸ್ಸಿನಲ್ಲಿ ಬಿಜೆಪಿಯತ್ತ ಹೊರಳಿನೋಡುವುದಕ್ಕೆ ಅವಕಾಶವಾಯಿತು. ಬದಲಾದ ರಾಜಕೀಯ ಸ್ಥಿತ್ಯಂತರಗಳಲ್ಲಿ ಕರಂಬಳ್ಳಿ ಸಂಜೀವ ಶೆಟ್ಟಿ, ಸುಬ್ಬಯ್ಯ, ಶಿವಪ್ಪ, ಕೆ.ರಾಮ್ ಭಟ್ ಯುಗಮುಗಿದು ಯಡಿಯೂರಪ್ಪ ಭರವಸೆಯ ನಾಯಕರಾಗಿ ಬೆಳೆದರು, ಹೈಕಮಾಂಡ್ ಬೆಳೆಸಿತು ಕೂಡಾ.

ಅನಂತ್ ಕುಮಾರ್ ಮತ್ತು ವಿ.ಧನಂಜಯ ಕುಮಾರ್ ದೆಹಲಿ ವರಿಷ್ಠರೊಂದಿಗೆ ಅದರಲ್ಲೂ ಎಲ್.ಕೆ.ಅಡ್ವಾಣಿ ಅವರೊಂದಿಗೆ ನೇರಸಂಪರ್ಕ ಹೊಂದಿ ಕರ್ನಾಟಕದ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವರು. ಆದರೆ ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಅವರು ಉಳಿದವರೆಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದರು ಎನ್ನುವುದು ಅತಿಶಯೋಕ್ತಿಯಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ತುಡಿತ ಹೈಕಮಾಂಡ್‌ಗೆ ಇತ್ತಾದರೂ ಸ್ವಂತ ಬಲದ ಮೇಲೆ ಬರಬೇಕೆನ್ನುವ ಅತಿಯಾದ ವ್ಯಾಮೋಹವಿತ್ತು.

ಡಿ.ವಿ.ಸದಾನಂದ ಗೌಡ ಮತ್ತು ಬಿ.ಎಸ್.ಯಡಿಯೂರಪ್ಪ ಉರುಳಿಸಿದ ದಾಳಕ್ಕೆ ಜೆಡಿಎಸ್‌ನ ಅಂದಿನ ಭರವಸೆಯ ನಾಯಕ ಎಚ್.ಡಿ.ಕುಮಾರಸ್ವಾಮಿ ಕೈಜೋಡಿಸಿ 20-20 ಅಧಿಕಾರಕ್ಕೆ ಮುಂದಾದರು. ಇಂಥ ಅನಿರೀಕ್ಷಿತ ಬೆಳವಣಿಗೆಯಿಂದ ರಾಜಕೀಯ ಪಕ್ಷಗಳು ಕಂಗೆಟ್ಟದ್ದೂ ನಿಜ. ಯಾಕೆಂದರೆ ಬಿಜೆಪಿಯನ್ನು ಎಂದೂ ಒಪ್ಪಿಕೊಳ್ಳದಿದ್ದ ದೇವೇಗೌಡರ ಮನಸ್ಥಿತಿಯನ್ನು ಅರಿತಿದ್ದರೂ ಅವರ ಪುತ್ರ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡದ್ದು ರಾಜಕೀಯದ ಅಚ್ಚರಿಯೇ ಸರಿ. ಮೂರುದಶಕಗಳ ನಿರಂತರ ಹೋರಾಟ ಮಾಡಿಕೊಂಡೇ ಬಂದ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಟ್ರೆಜರಿಬೆಂಚ್‌ನಲ್ಲಿ ಕಾಣಿಸಿಕೊಂಡಾಗ ಬಿಜೆಪಿ ಹೈಕಮಾಂಡ್ ಕೂಡಾ ಅವರ ರಾಜಕೀಯ ಚತುರತೆಗೆ ಭೇಷ್ ಎಂದಿತ್ತು. ಆ ಕಾಲಕ್ಕೆ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದ ಡಿ.ವಿ.ಸದಾನಂದ ಗೌಡರು ನಡೆದುಕೊಂಡ ರೀತಿ ಕೂಡಾ ಮುಖ್ಯವೆನಿಸುತ್ತದೆ.

ಹೀಗೆ ಅಧಿಕಾರದ ದಡಸೇರಿದ ಬಿಜೆಪಿ, ಅದಕ್ಕೆ ನಾಯಕತ್ವ ಕೊಟ್ಟ ಯಡಿಯೂರಪ್ಪ ಮತ್ತು ಸದಾನಂದ ಗೌಡರು ಅದೇ ಅಧಿಕಾರದ ಸುಳಿಗೆ ಸಿಲುಕಿ ಒಬ್ಬರನ್ನೊಬ್ಬರು ದ್ವೇಷಿಸುವಂತಾಗಿರುವುದೂ ಕೂಡಾ ರಾಜಕೀಯದ ವಿಪರ್ಯಾಸ. ಕುಮಾರಸ್ವಾಮಿ ಮಾತಿನಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ರಾಜಕೀಯದ ಗತಿಯೇ ಬದಲಾಗುತ್ತಿತ್ತು. ಬಿಜೆಪಿಯನ್ನು ಮಣಿಸಲು ಕುಮಾರಸ್ವಾಮಿ ಉರುಳಿಸಿದ ದಾಳಗಳು ಯಡಿಯೂರಪ್ಪ ಅವರಿಗೆ ವರವಾದವು. ರೆಡ್ಡಿ ಬ್ರದಸರ್ ನೆರವಿನಲ್ಲಿ ನಡೆದ `ಆಪರೇಷನ್ ಕಮಲ’ ರಾಜಕೀಯವನ್ನು ಅಲ್ಲೋಲಕಲ್ಲೋಲಗೊಳಿಸಿತು.

ಇದೆಲ್ಲವೂ ಬಿಜೆಪಿಯ ಇತಿಹಾಸವಾದರೆ ವರ್ತಮಾನ ಮಾತ್ರ ದುರಂತಮಯವಾಗಿರುವುದು ಯಡಿಯೂರಪ್ಪ ಅವರ ಪ್ರಾರಾಬ್ಧವೋ, ಹೈಕಮಾಂಡ್‌ನ ದುರ್ದೈವವೋ, ಎನ್ನುವಂತಾಗಿದೆ. ಯಡಿಯೂರಪ್ಪ ಅವರೇ ಹೇಳಿಕೊಂಡಿರುವಂತೆ ಅವರು ಬಿಜೆಪಿಯಿಂದ ಬಹಳ ದೂರ ಸಾಗಿದ್ದಾರೆ. ಹಿಂದಕ್ಕೆ ಬರಲಾಗದಷ್ಟು ಹೆಜ್ಜೆಗಳನ್ನು ಮುಂದಿಟ್ಟಿದ್ದಾರೆ. ಈಗ ಬಿಜೆಪಿ ಹೈಕಮಾಂಡ್ ಮೈಕೊಡವಿಕೊಳ್ಳುತ್ತಿರುವುದು ಅದರ ನಾಯಕರ ಮುತ್ಸದ್ದಿತನದ ಕೊರತೆ ಎನ್ನಲೇ ಬೇಕಾಗಿದೆ. ಕಡಿವಾಣ ಹಾಕದೆ ಕುದುರೆಗೆ ಓಟ ಕಲಿಸಿದರೆ ಅದು ಓಡುತ್ತಲೇ ಇರುತ್ತದೆ, ಅದಕ್ಕೆ ಆಯಾಸವಾದಾಗ ಮಾತ್ರ ತಾನಾಗಿಯೇ ನಿಲ್ಲುತ್ತದೆ. ಇದೇ ಸ್ಥಿತಿ ಯಡಿಯೂರಪ್ಪ ಅವರದೂ ಕೂಡಾ. ಹೈಕಮಾಂಡ್ ಪೂರ್ಣಸ್ವಾತಂತ್ರ್ಯ ನೀಡಿ ಕೈಕಟ್ಟಿ ಕುಳಿತು ದಕ್ಷಿಣ ಭಾರತದ ಮೊಟ್ಟ ಮೊದಲ ಸರ್ಕಾರದ ಕಾರ್ಯವೈಖರಿಯನ್ನು ನೋಡಿ ಆನಂದಿಸಿ ಮೈಮರೆಯಿತೇ ಹೊರತು ಕಾಲಕಾಲಕ್ಕೆ ಕಿವಿಹಿಂಡಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎನ್ನುವುದನ್ನು ಹೇಳಲು ರಾಜಕೀಯ ಪಂಡಿತರೇ ಆಗಬೇಕಾಗಿಲ್ಲ.

ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಅನ್ನಿಸಲು ಅವರು ಪಕ್ಷ ಬಿಡುವುದಾಗಿ ಬಾಯಿಬಿಟ್ಟು ಹೇಳಬೇಕಾಯಿತು. ಈ ಹಂತದಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡುವಂತೆ ರಾಜ್ಯ ಬಿಜೆಪಿ ಪಾಳೆಯದಿಂದ ಒತ್ತಡ ಹಾಕುತ್ತಿರುವುದು ಕೂಡಾ ರಾಜಕೀಯದ ಎಳಸುತನವೆನಿಸುತ್ತದೆ. ಬಿಜೆಪಿಯ ಮನಸ್ಥಿತಿ ಯಾವ ಹಂತ ತಲುಪಿದೆ ಎನ್ನುವುದಕ್ಕೆ ಒಂದೇ ಒಂದು ಉದಾಹರಣೆ ವಿ.ಧನಂಜಯ ಕುಮಾರ್ ಅವರನ್ನು ಪಕ್ಷದಿಂದ ಹೊರಹಾಕಿದ್ದು ಮತ್ತು ಯಡಿಯೂರಪ್ಪ ಅವರನ್ನು ಎದುರಿಸಲು ತಡಬಡಾಯಿಸುತ್ತಿರುವುದು.

ಧನಂಜಯ ಕುಮಾರ್ 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದವರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸೂತ್ರ ಹಿಡಿದಾಗ ಕೇಂದ್ರ ಮಂತ್ರಿಯಾದವರು. ಯಡಿಯೂರಪ್ಪ 1983ರಲ್ಲಿ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದವರು. ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದವರು.

ಒಂದೇ ಒಂದು ಬಾರಿ ಧನಂಜಯ ಕುಮಾರ್ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದು. ಯಡಿಯೂರಪ್ಪ ಹಲವು ಸಲ ರಾಜ್ಯ, ಕೇಂದ್ರ ನಾಯಕರನ್ನು ವಾಚಾಮಗೋಚರವಾಗಿ ಟೀಕಿಸಿದ್ದಾರೆ. ಆದರೆ ಒಂದೇ ಬಾರಿಗೆ ಧನಂಜಯ ಕುಮಾರ್ ಪಕ್ಷ ವಿರೋಧಿಯಾಗುತ್ತಾರೆ, ಅವರನ್ನು ಪಕ್ಷದಿಂದ ವಜಾಮಾಡಲಾಗುತ್ತದೆ. ಇದಕ್ಕೆ ಹೋಲಿಸಿದರೆ ಯಡಿಯೂರಪ್ಪ ಅವರನ್ನು ಮುಟ್ಟುವ ಧೈರ್ಯವಿಲ್ಲ ಎನ್ನುವುದೋ, ಅಥವ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕೆಂದು ಯತ್ನಿಸುತ್ತಿರುವುದನ್ನು ಅಸಹಾಯಕತೆ ಎನ್ನುವುದೋ?

ಕೊನೆಯದಾಗಿ ಹೇಳಲೇಬೇಕಾದ ಮಾತು, ಯಡಿಯೂರಪ್ಪ ತಾವಾಗಿಯೇ ಪಕ್ಷ ಬಿಟ್ಟು ಹೋದರೆ ಆಗುವ ಅನಾಹುತ ಕಡಿಮೆ ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಅಂತೆಯೇ ತಾನಾಗಿ ಹೋದರೆ ಜನರಿಂದ ಸಿಗುವ ಸಿಂಪಥಿ ಕಡಿಮೆ, ಹೈಕಮಾಂಡ್ ತಾನಾಗಿಯೇ ಹೊರದಬ್ಬಿದರೆ ಬಂಪರ್ ಎನ್ನುವ ಮುಂದಾಲೋಚನೆ ಯಡಿಯೂರಪ್ಪ ಅವರದು.

ಆದರೆ, ಜನರ ಲೆಕ್ಕಾಚಾರ ಏನಿದೆ?

ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಇದೆಯೇ?


-ಚಿದಂಬರ ಬೈಕಂಪಾಡಿ


ರಾಷ್ಟ್ರೀಯ ಪಕ್ಷಗಳು ಅನಿವಾರ್ಯವೇ? ಪ್ರಾದೇಶಿಕ ಪಕ್ಷಗಳಿಗೆ ನೆಲೆಯಿಲ್ಲವೇ? ಮೈತ್ರಿ ಸರ್ಕಾರಗಳು ಅದೆಷ್ಟು ಸುಭದ್ರ? ಈ ಎಲ್ಲಾ ಪ್ರಶ್ನೆಗಳು ಅತ್ಯಂತ ಮುಖ್ಯವಾದವುಗಳು. ಯಾಕೆಂದರೆ ಚುನಾವಣೆಗಳ ನಂತರ ಹೊರ ಬೀಳುವ ಫಲಿತಾಂಶ ಜನರ ಮೇಲೆ ಉಂಟು ಮಾಡುವ ಪರಿಣಾಮಗಳು ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರೇರಣೆಯಾಗುತ್ತಿವೆ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಇವುಗಳ ನಡುವೆ ತಿಕ್ಕಾಟವಿದೆ. ಪ್ರತ್ಯೇಕತೆಯಯತ್ತ ಒಲವು ಹೆಚ್ಚಾಗುತ್ತಿದೆ. ಸಮಗ್ರತೆಯನ್ನು ವಿಶಾಲ ಮನೋಭಾವದಿಂದ ಅರ್ಥಮಾಡಿಕೊಳ್ಳಬೇಕು ಎನ್ನುವ ಮಾತು ಬರೀ ಕ್ಲೀಷೆಯೆನಿಸುತ್ತಿದೆ. ರಾಜಕಾರಣಿಗಳು ತಮ್ಮ ತೆವಲಿಗೆ ಜನರನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚುನಾವಣೆಗಳನ್ನು ಹಣ ಆಳುತ್ತಿದೆ. ಜನರೂ ಇದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಆಯ್ಕೆ ಎನ್ನುವುದು ಕಷ್ಟವಾಗುತ್ತಿದೆ. ಈ ಕಾರಣಕ್ಕಾಗಿಯೇ ಪಕ್ಷ ರಾಜಕಾರಣದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ನಡುವೆ ಸಂಘರ್ಷ.

ಈ ದೇಶದ ರಾಜಕಾರಣವನ್ನು ಅವಲೋಕಿಸಿದರೆ ಅಸ್ಪಷ್ಟತೆ ಗೋಚರಿಸುತ್ತದೆ. ನಿರ್ಧಿಷ್ಟ ಸಂಖ್ಯಾಬಲದ ಕೊರತೆಯಿಂದಾಗಿ ಸರ್ಕಾರಗಳನ್ನು ಅಸ್ಥಿರತೆ ಕಾಡುತ್ತಿದೆ. ಇಡೀ ದೇಶದ ರಾಜಕಾರಣವನ್ನು ಅವಲೋಕಿಸಿದರೆ 10 ರಾಜ್ಯಗಳಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರ ಮಾಡುತ್ತಿದ್ದರೆ, 6 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. 5 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಆಡಳಿತ ಮಾಡುತ್ತಿವೆ. ಉಳಿದ ಏಳು ರಾಜ್ಯಗಳಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಅಂದರೆ 12 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವವನ್ನು ಖಾತ್ರಿ ಪಡಿಸಿಕೊಂಡಿವೆ. 16 ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳ ಬೇರುಗಳು ಇನ್ನೂ ಭದ್ರವಾಗಿವೆ.

ಈ ಲೆಕ್ಕಾಚಾರವನ್ನು ಮತ್ತಷ್ಟು ಅವಲೋಕಿಸಿದರೆ ರಾಷ್ಟ್ರೀಯ ಪಕ್ಷಗಳು ಇನ್ನೆಷ್ಟು ಕಾಲ ಏಕಾಂಗಿಯಾಗಿ ಅಧಿಕಾರ ನಡೆಸುವ ಶಕ್ತಿಯನ್ನು ಉಳಿಸಿಕೊಳ್ಳಲಿವೆ ಎನ್ನುವುದು ಒಂದು ಪ್ರಶ್ನೆಯಾದರೆ, ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಾಬಲ್ಯ ಮೆರೆಯಲು ಕಾರಣಗಳೇನು? ಎನ್ನುವುದು ಮತ್ತೊಂದು ಪ್ರಶ್ನೆ. ಪಶ್ಚಿಮ ಬಂಗಾಳದಲ್ಲಿ ಹಲವು ದಶಕಗಳಿಂದ ನಿರಂತರವಾಗಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡೇ ಇದ್ದ ಎಡಪಕ್ಷಗಳನ್ನು ತೃಣಮೂಲ ಕಾಂಗ್ರೆಸ್ ಧೂಳೀಪಟ ಮಾಡಿತು. ಇದೊಂದು ದಾಖಲೆ. ಆದರೆ ಈ ದಾಖಲೆ ಬರೆದವರು ಮತ್ತು ಹಿಂದಿನ ದಾಖಲೆ ಅಳಿಸಿ ಹಾಕಿದವರು ಆ ರಾಜ್ಯದ ಜನರು. ಅದೇ ಜನ ಎಡಪಕ್ಷವನ್ನು ಅಧಿಕಾರಕ್ಕೆ ತರುತ್ತಿದ್ದರು, ಈಗ ಅದೇ ಜನ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇರಿಸಿದರು. ಇಲ್ಲಿ ಜನರ ಆಶೋತ್ತರಗಳು ಮುಖ್ಯವಾದವು. ರಾಷ್ಟ್ರೀಯ ಪಕ್ಷವಾಗಿದ್ದ ಎಡಪಕ್ಷ ಜನರ ಭಾವನೆಗಳನ್ನು ಘಾಸಿಗೊಳಿಸಿತು. ಜನರು ಅದನ್ನು ಬಹಳ ಕಾಲದ ನಂತರ ಅರ್ಥಮಾಡಿಕೊಂಡು ಅಧಿಕಾರದಿಂದ ಕಿತ್ತೊಗೆದರು.

ಹಾಗೆ ನೋಡಿದರೆ ಭಾರತದಲ್ಲಿ ಪೊಲಿಟಿಕಲ್ ಅವೇರ್ನೆಸ್ ಕಡಿಮೆಯೇನಲ್ಲ. ರಾಜಕೀಯ ತಿಳುವಳಿಕೆ ಕಡಿಮೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾದರೆ ಈ ದೇಶದ ರಾಜ್ಯಗಳನ್ನು ರಾಷ್ಟ್ರೀಯ ಪಕ್ಷಗಳೇ ಆಳಬೇಕಿತ್ತು. 1976ಕ್ಕೂ ಮೊದಲು ದೇಶದಲ್ಲಿ ನೆಹರೂ ಕುಟುಂಬ ಅದರಲ್ಲೂ ಇಂದಿರಾ ಗಾಂಧಿ ಅವರನ್ನು ಬಿಟ್ಟರೆ ಬೇರೆ ರಾಜಕಾರಣಿಗಳಿದ್ದಾರೆ, ರಾಜಕೀಯ ಪಕ್ಷಗಳೂ ಇವೆ ಎನ್ನುವುದು ಗೊತ್ತೇ ಇರಲಿಲ್ಲ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರದೇ ಇರುತ್ತಿದ್ದರೆ ಪ್ರಾದೇಶಿಕ ಪಕ್ಷಗಳು ಜನ್ಮ ತಳೆಯುತ್ತಿರಲಿಲ್ಲ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಗಳು ಉದಿಸುತ್ತಿರಲಿಲ್ಲ. ಕಾಂಗ್ರೆಸ್ ವಿರುದ್ಧ ಧ್ವನಿಯೆತ್ತುತ್ತಿದ್ದವರು ಇಂದಿರಾ ಅವರಿಂದಾಗಿ ಜೈಲು ಸೇರದೇ ಇರುತ್ತಿದ್ದರೆ ಅವರಿಗೆ ಬಲ ಬರುತ್ತಿರಲಿಲ್ಲ ಮತ್ತು ಹೊಸ ರಾಜಕೀಯ ಚಿಂತನೆಗಳು ಜೀವಪಡೆಯುತ್ತಿರಲಿಲ್ಲ. ಈ ಮಟ್ಟಿಗೆ ಕಾಂಗ್ರೆಸ್ಯೇತರ ಪಕ್ಷಗಳು, ಅವುಗಳ ಮುಖಂಡರು ಇಂದಿರಾ ಗಾಂಧಿಗೆ ಚಿರಋಣಿಯಾಗಿರಬೇಕು.

ಎಂಭತ್ತರ ದಶಕದಲ್ಲಿ ಪಂಜಾಬ್, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ ಏಕಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾದ ಅಲೆಗಳು ಎದ್ದವು. ಅಲ್ಲಿ ಪ್ರಾದೇಶಿಕ ಪಕ್ಷಗಳು ಜನ್ಮ ತಳೆದು ಚುನಾವಣೆಯ ಅಖಾಡಕ್ಕಿಳಿದವು. ಕರ್ನಾಟಕದಲ್ಲಿ ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಬಂಗಾರಪ್ಪ ಮುಂತಾದವರು ಕಾಂಗ್ರೆಸ್ ವಿರುದ್ಧ ಸೆಟೆದುನಿಂತರು. ಆಂಧ್ರದಲ್ಲಿ ಎನ್.ಟಿ.ಆರ್, ತಮಿಳುನಾಡಲ್ಲಿ ಈ ಹೊತ್ತಿಗೆ ಎಂ.ಜಿ.ಆರ್, ಕರುಣಾನಿಧಿ ಬಹಳ ಬೆಳೆದಿದ್ದರು. ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್, ಅಸ್ಸಾಂನಲ್ಲಿ ಪ್ರಫುಲ್ಲ ಕುಮಾರ್ ಮೊಹಂತ್ ಹೀಗೆ ಕಾಂಗ್ರೆಸ್ ಪಕ್ಷದ ಹಿಡಿತವನ್ನು ಕುಗ್ಗಿಸಬಲ್ಲ ಶಕ್ತಿಗಳು ಪುಟಿದವು.

ಹರ್ಯಾಣದಲ್ಲಿ ದೇವಿಲಾಲ್ ಕಾಂಗ್ರೆಸ್ ವಿರುದ್ಧ ಸಿಡಿದು ಅಧಿಕಾರ ನಡೆಸಿದರು. ಉತ್ತರ ಪ್ರದೇಶದಲ್ಲಿ ಚರಣ್ ಸಿಂಗ್ 1967ರಲ್ಲಿ ಭಾರತೀಯ ಲೋಕದಳ ಮೂಲಕ ಕಾಂಗ್ರೆಸ್ ಹಿಮ್ಮೆಟ್ಟಿಸಿದ್ದರು. ಒರಿಸ್ಸಾದಲ್ಲಿ 1967ರಲ್ಲೇ ಸ್ವತಂತ್ರ ಪಾರ್ಟಿ ಮತ್ತು ಒರಿಸ್ಸಾ ಜನಕಾಂಗ್ರೆಸ್ ಸರ್ಕಾರವನ್ನು ರಾಜೇಂದ್ರ ನಾರಾಯಣ್ ಸಿಂಗ್ ಮುನ್ನಡೆಸಿದ್ದರು.

ಹೀಗೆ ಉತ್ತರದಲ್ಲಿ 70ರ ದಶಕದಲ್ಲಿ ಕಾಂಗ್ರೆಸ್ಗೆ ವಿರುದ್ಧವಾಗಿ ಪ್ರಾದೇಶಿಕ ಪಕ್ಷಗಳು ಜನ್ಮ ತಳೆದು ಅಧಿಕಾರ ಸೂತ್ರ ಹಿಡಿದ ಇತಿಹಾಸವಿದ್ದರೆ ದಕ್ಷಿಣದಲ್ಲಿ 80ರ ದಶಕದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸಲು ಮುಂಚೂಣಿಗೆ ಬಂದವು. ಈ ಎಲ್ಲಾ ರಾಜ್ಯಗಳಲ್ಲಿ ಅಂದು ಕಾಂಗ್ರೆಸ್ ವಿರೋಧಿ ಅಲೆಗಳು ಹುಟ್ಟಿಕೊಳ್ಳಲು ನೆಹರೂ ಕುಟುಂಬ ರಾಜಕಾರಣ ಮತ್ತು ಇಂದಿರಾ ಅವರ ಸರ್ವಾಧಿಕಾರಿ ಧೋರಣೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

ಹಾಗಾದರೆ ಅಂದು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಜನ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದ್ದರೆ ಈಗ ಯಾಕೆ ಹಿನ್ನಡೆಯಾಗುತ್ತಿದೆ ಅಥವಾ ಕಳೆಗುಂದುತ್ತಿವೆ? ಎನ್ನುವ ಪ್ರಶ್ನೆ ಸಹಜವಾಗಿ ಮೂಡಬಹುದು. ಅಧಿಕಾರದ ಲಾಲಸೆ ಮತ್ತು ಸ್ವಾರ್ಥ ಪ್ರಾದೇಶಿಕ ಪಕ್ಷಗಳನ್ನು ಜನ ನಂಬದಿರಲು ಕಾರಣವೆನ್ನಬಹುದು. ಯಾವೆಲ್ಲಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಂದು ತಲೆಯೆತ್ತಿ ನಿಂತವೋ ಅಲ್ಲೆಲ್ಲಾ ಪಕ್ಷಗಳ ನಾಯಕರೊಳಗೆ ಕಚ್ಚಾಟ ನಡೆದಿವೆ. ತಮ್ಮೊಳಗಿನ ಅಹಂಗಾಗಿ ಪಕ್ಷಗಳನ್ನು ಬಲಿಗೊಟ್ಟಿದ್ದಾರೆ. ಕರ್ನಾಟಕದಲ್ಲಿ ಜನತಾ ಪಕ್ಷ, ಜನತಾದಳ, ಸಂಯುಕ್ತ ಜನತಾ ದಳ ಹೀಗೆ ಅದೆಷ್ಟು ಹೋಳುಗಳಾದವು? ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಬಂಗಾರಪ್ಪ ತುಳಿದ ಹಾದಿಯನ್ನು ಅವಲೋಕಿಸಿ. ಆಂಧ್ರದಲ್ಲಿ ಎನ್.ಟಿ.ಆರ್, ಚಂದ್ರಬಾಬು ನಾಯ್ಡು, ಹರ್ಯಾಣದಲ್ಲಿ ದೇವಿಲಾಲ್, ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಅಸ್ಸಾಂನಲ್ಲಿ ಪ್ರಫುಲ್ಲ್ ಕುಮಾರ್ ಮೊಹಂತ, ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್ ಈ ನಾಯಕರನ್ನು ನಡೆಗಳನ್ನು ಅವಲೋಕಿಸಿದರೆ ಯಾಕೆ ಜನರು ಪ್ರಾದೇಶಿಕ ಪಕ್ಷಗಳಿಂದ ವಿಮುಖರಾದರು ಎನ್ನುವುದು ಅರ್ಥವಾಗುತ್ತದೆ.

ಪ್ರಾದೇಶಿಕ ಪಕ್ಷಗಳಿಗಿರುವಷ್ಟು ಅವಕಾಶಗಳು ಈಗ ರಾಷ್ಟ್ರೀಯ ಪಕ್ಷಗಳಿಗಿಲ್ಲ. ಜನರು, ಈಗ ತಮ್ಮ ಸುತ್ತಲಿನ ಪರಿಸರ, ನೆಲ, ಜಲ, ಭಾಷೆಯನ್ನು ಹೆಚ್ಚು ಭಾವನಾತ್ಮಕವಾಗಿ ಕಾಣುತ್ತಾರೆ. ತೆಲಂಗಾಣ ಹೋರಾಟವನ್ನು ಕುತೂಹಲಕ್ಕಾಗಿ ಅವಲೋಕಿಸಿದರೆ ಈ ಸತ್ಯದ ದರ್ಶನವಾಗುತ್ತದೆ. ಪ್ರಾದೇಶಿಕವಾದ ಜನರ ಆಶೋತ್ತರಗಳನ್ನು ಈಡೇರಿಸುವುದು ರಾಷ್ಟ್ರೀಯ ಪಕ್ಷಗಳ ಮುಖ್ಯ ಅಜೆಂಡವಾಗಲು ಸಾಧ್ಯವಿಲ್ಲ. ಸಮಗ್ರ ರಾಷ್ಟ್ರವನ್ನು ಕಲ್ಪನೆಯಲ್ಲಿಟ್ಟುಕೊಂಡು ರಾಷ್ಟ್ರೀಯ ಪಕ್ಷಗಳು ರೂಪಿಸುವ ನೀತಿಗಳು ಪ್ರಾದೇಶಿಕವಾದ ಸಿಕ್ಕುಗಳನ್ನು ಬಿಡಿಸಲಾರವು.

ಈ ಎಲ್ಲಾ ಕಾರಣಗಳಿಂದಾಗಿ ಪ್ರಾದೇಶಿಕ ಪಕ್ಷಗಳಿಗೆ ಜನ ಮಾರುಹೋಗುವ ಅವಕಾಶಗಳು ನಿಚ್ಚಳವಾಗಿವೆ. ಜನರ ವಿಶ್ವಾಸವನ್ನು ಪ್ರಾದೇಶಿಕ ಪಕ್ಷಗಳ ನಾಯಕರು ಮೊದಲು ಗಳಿಸಬೇಕು. ಆತ್ಮವಂಚನೆ ರಾಜಕಾರಣದಿಂದ ಬೇಸತ್ತಿರುವುದರಿಂದಲೇ ಮತಗಟ್ಟೆಯಿಂದಲೇ ಜನ ದೂರ ಉಳಿಯುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಮತಗಟ್ಟೆಗೆ ಜನ ಸಾಗರೋಪಾದಿಯಲ್ಲಿ ಹರಿದು ಬರುವಂತೆ ಮಾಡಬಲ್ಲ ಸಾಮರ್ಥ್ಯವಿರುವುದು ಪ್ರಾದೇಶಿಕ ಪಕ್ಷಗಳಿಗೆ ಮಾತ್ರ.

ಯಡಿಯೂರಪ್ಪ ಮತ್ತು ಅವರ ಮನಸ್ಥಿತಿ?


-ಚಿದಂಬರ ಬೈಕಂಪಾಡಿ


 

ಅಧಿಕಾರ ಅನುಭವಿಸುತ್ತಿದ್ದ ವ್ಯಕ್ತಿ ಏಕಾಏಕಿ ಅಧಿಕಾರವಿಲ್ಲದೇ ಹೋದಾಗ ಮನಸ್ಸು ಏನೆಲ್ಲಾ ಮಾಡಬಹುದು, ಯಾವ ರೀತಿಯ ವರ್ತನೆ ಕಾಣಬಹುದು ಎನ್ನುವುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಿಂತ ತಾಜಾ ಉದಾಹರಣೆಗೆ ಬೇರೆ ಯಾರನ್ನು ಹೋಲಿಸಬಹುದು? ಖಂಡಿತಕ್ಕೂ ಸಾಧ್ಯವೇ ಇಲ್ಲ ಮತ್ತೊಬ್ಬರನ್ನು ಹೋಲಿಸಲು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಿಂದೆ ಮಂತ್ರಿಯಾಗಿದ್ದಾಗ, ಸ್ಪೀಕರ್ ಆಗಿದ್ದಾಗ ಅವರ ಮುಖದಲ್ಲಿ ಇದ್ದ ಕಳೆಗೂ ಈಗ ಮುಖ್ಯಮಂತ್ರಿಯಾದ ಮೇಲೆ ಅವರ ಮುಖದಲ್ಲಿ ರಾರಾಜಿಸುತ್ತಿರುವ ಕಳೆಗೂ ಅಜಗಜಾಂತರ ವ್ಯತ್ಯಾಸವಿದೆ. ಯಡಿಯೂರಪ್ಪ ಅವರ ಈಗಿನ ಮುಖದ ಕಳೆಯನ್ನು ಅವಲೋಕಿಸಿದರೆ ಅಲ್ಲಿ ಕಾಣಿಸುವುದು ಹತಾಶೆ, ರೋಷ, ಸಿಟ್ಟು. ಈಗ ಅವರ ನಗುವಿನಲ್ಲಿ ಆಕರ್ಷಣೆಯಿಲ್ಲ, ಮಾತಿನಲ್ಲಿ ಮಾಧುರ್ಯವಿಲ್ಲ. ಅದೇ ಜಗದೀಶ್ ಶೆಟ್ಟರ್ ಅವರ ಮುಖದಲ್ಲಿ ಮಂದಹಾಸ. ಸಂತೃಪ್ತಿಯಿದೆ. ಇದು ಅಧಿಕಾರ ಇದ್ದಾಗ ಮತ್ತು ಅಧಿಕಾರ ಇಲ್ಲದಿದ್ದಾಗ ಮನುಷ್ಯನ ಮೇಲೆ, ಅವನ ಮನಸ್ಸಿನ ಮೇಲೆ ಉಂಟಾಗುವ ಸ್ಥೂಲಪರಿಣಾಮಗಳು.

ಯಡಿಯೂರಪ್ಪ ಈಗ ಅಧಿಕಾರ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ. ಅವರಲ್ಲೀಗ ಕಾಯುವ ತಾಳ್ಮೆಯಾಗಲೀ, ಮನಸ್ಸಿನಲ್ಲಾಗುತ್ತಿರುವ ಪ್ರಕ್ಷುಬ್ಧತೆಯನ್ನು ಅದುಮಿಟ್ಟುಕೊಳ್ಳುವ ಸಹನೆಯಾಗಲೀ ಇಲ್ಲ. ಪ್ರತಿಯೊಂದು ಕ್ಷಣವೂ ಅಸಹನೀಯ ಎನ್ನುವ ಸ್ಥಿತಿ, ಚಡಪಡಿಕೆ. ಇದು ಅಸಹಜವೇನಲ್ಲ.

ಒಂದು ವೇಳೆ ಮಾಜಿ ಪ್ರಧಾನಿಯಾಗಿರುವ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗದೇ ಇರುತ್ತಿದ್ದರೆ ಕೂಡಾ ಇದೇ ಮನಸ್ಥಿತಿಯಿರುತ್ತಿತ್ತು. ನೀವು ಎರಡು ದಶಕಗಳಷ್ಟು ಹಿಂದಕ್ಕೆ ಹೋದರೆ ದೇವೇಗೌಡರ ಮನಸ್ಥಿತಿ ಹೇಗಿತ್ತು ಎನ್ನುವುದು ಮನವರಿಕೆಯಾಗುತ್ತದೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದ ಆ ಒಂದು ದಿನದ ಬೆಳವಣಿಗೆ ದೇವೇಗೌಡರನ್ನು ಅದೆಷ್ಟು ಹಿಂಸಿಸಿರಬಹುದು ಎನ್ನುವುದನ್ನು ಯೋಚಿಸಿ (ದೇವೇಗೌಡರು ತಮ್ಮ ಆತ್ಮಚರಿತ್ರೆಯಲ್ಲಿ ಖಂಡಿತಕ್ಕೂ ಇದನ್ನು ಬರೆದೇ ಬರೆಯುತ್ತಾರೆ). 1983ರಲ್ಲಿ ಅದೆಂಥಾ ನಾಟಕೀಯ ಬೆಳವಣಿಗೆ ನಡೆದುಹೋಯಿತು. ಬಂಗಾರಪ್ಪ, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಅಬ್ದುಲ್ ನಜೀರ್ ಸಾಬ್, ಎಂ.ಪಿ.ಪ್ರಕಾಶ್, ಸಿದ್ಧರಾಮಯ್ಯ, ಎ.ಲಕ್ಷ್ಮೀಸಾಗರ್, ಸಿ.ಭೈರೇಗೌಡ, ಡಾ.ಜೀವರಾಜ್ ಆಳ್ವ, ಪಿ.ಜಿ.ಆರ್.ಸಿಂಧ್ಯಾ ಹೀಗೆ ಅನೇಕ ಮಂದಿ ಜನತಾ ಪಕ್ಷ ಮತ್ತು ಕರ್ನಾಟಕ ಕ್ರಾಂತಿರಂಗ ಜೊತೆಯಾಗಿ ಕಾಂಗ್ರೆಸೇತರ ಅಧಿಕಾರವನ್ನು ಕರ್ನಾಟಕಕ್ಕೆ ತರಲು ಸಮರ್ಥರಾದರು. ಆಗ ಕಾಂಗ್ರೆಸ್ ಪಕ್ಷ 82 ಸ್ಥಾನಗಳಿಸಿದ್ದರೆ, ಜನತಾ ಪಕ್ಷ ಮತ್ತು ಕ್ರಾಂತಿರಂಗ ಒಗ್ಗೂಡಿ 95 ಸ್ಥಾನಗಳಲ್ಲಿ ಗೆದ್ದಿದ್ದವು. ಬಿಜೆಪಿ ಆಗ 18 ಸ್ಥಾನಗಳಲ್ಲಿ ಜಯದಾಖಲಿಸಿತ್ತು, ಇದು ಬಿಜೆಪಿಯ ಮಹಾನ್ ಸಾಧನೆಯಾಗಿತ್ತು ಕೂಡಾ. ಈಗಿನ ಯಡಿಯೂರಪ್ಪ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು ಆಗ. ರಾಮಕೃಷ್ಣ ಹೆಗಡೆ ಅವರು ಶಾಸಕಾಂಗ ಪಕ್ಷದ ನಾಯಕರಾಗುವಲ್ಲಿ ಚಾಣಾಕ್ಷತೆ ಮೆರೆದರು. ಕಾಂಗ್ರೆಸ್ ಪಕ್ಷ ತ್ಯಜಿಸಿ ಕ್ರಾಂತಿರಂಗದ ಬಾವುಟ ಹಾರಿಸಿದ್ದ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಹೆಗಡೆ ಮುಂದೆ ಅವರ ಚತುರತೆ ವಿಫಲವಾಯಿತು. ಈ ಸಂದರ್ಭದಲ್ಲಿ ದೇವೇಗೌಡ, ಬಂಗಾರಪ್ಪ, ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು. ಇಂಥ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆ ದಕ್ಕದಿದ್ದಾಗ ಬಂಗಾರಪ್ಪ ಅವರ ಮನಸ್ಥಿತಿ ಹೇಗಿರಬಹುದು ಯೋಚಿಸಿ?

ದೇವೇಗೌಡರೂ ಉನ್ನತ ಹುದ್ದೆಯ ಅವಕಾಶ ವಂಚಿತರಾದರು, ಜೊತೆಗೆ ಬೊಮ್ಮಾಯಿ ಕೂಡಾ. ಆದರೆ ಆಕಸ್ಮಿಕವಾಗಿ ಮತ್ತು ಅನಾಯಾಸವಾಗಿ ಮುಖ್ಯಮಂತ್ರಿ ಹುದ್ದೆ ದಕ್ಕಿಸಿಕೊಂಡ ಚತುರ ರಾಜಕಾರಣಿ ಹೆಗೆಡೆಯವರ ಆ ಸಂದರ್ಭದ ಮನಸ್ಥಿತಿ ಅದೆಷ್ಟು ಉಲ್ಲಸಿತವಾಗಿರಬೇಕಲ್ಲವೇ? ಯಾವ ಅಧಿಕಾರದ ಬೆನ್ನುಹತ್ತಿ ಕಾಂಗ್ರೆಸ್ ತೊರೆದರೋ ಬಂಗಾರಪ್ಪ ಮತ್ತೆ ಕಾಂಗ್ರೆಸ್ ಮನೆ ಸೇರಿಕೊಂಡರು ಅದೇ ಅಧಿಕಾರದ ನಿರೀಕ್ಷೆಯಲ್ಲಿ. 1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಅಥವಾ ಕ್ರಾಂತಿರಂಗ ಕಾಂಗ್ರೆಸ್ ಹಿಮ್ಮೆಟ್ಟಿಸಿ ಅಧಿಕಾರದ ಗದ್ದುಗೆ ಏರುತ್ತೇವೆ ಎನ್ನುವ ನೂರಕ್ಕೆ ನೂರು ವಿಶ್ವಾಸ ಹೊಂದಿರಲಿಲ್ಲವಾದ ಕಾರಣವೇ ಮುಖ್ಯಮಂತ್ರಿ ಹುದ್ದೆ ಯಾರಿಗೆ ಎನ್ನುವುದನ್ನು ತೀರ್ಮಾನಿಸಿಕೊಂಡಿರಲಿಲ್ಲ. ಅಲಿಖಿತ ಒಪ್ಪಂದವೆಂದರೆ ಬಂಗಾರಪ್ಪ ಅವರಿಗೇ ಪಟ್ಟ ಎನ್ನುವುದು. ಆದರೆ ರಾಮಕೃಷ್ಣ ಹೆಗಡೆ ಅವರು ಶಾಸಕರನ್ನು ಮ್ಯಾನೇಜ್ ಮಾಡಿದ ಕಾರಣ ಬಂಗಾರಪ್ಪ ಅವಕಾಶ ಮಿಸ್ ಮಾಡಿಕೊಂಡರು.

1983ರಲ್ಲಿ ಬಹಳವಾಗಿ ನೊಂದುಕೊಂಡವರು ಬಂಗಾರಪ್ಪ ಮತ್ತು ದೇವೇಗೌಡರು. ಖುಷಿಯಿಂದ ಬೀಗಿದವರು ರಾಮಕೃಷ್ಣ ಹೆಗಡೆ. ಈಗ ಯಡಿಯೂರಪ್ಪ ತೋರುವ ಅಸಹನೆ, ಸಿಟ್ಟು ಆಗ ಬಂಗಾರಪ್ಪ ಅವರಲ್ಲಿತ್ತು. ರಾಮಕೃಷ್ಣ ಹೆಗಡೆಯವರನ್ನು ಕಡುವೈರಿಯೆಂದೇ ಭಾವಿಸಿದ್ದರು ಬಂಗಾರಪ್ಪ. ಆದರೆ ದೇವೇಗೌಡರಲ್ಲಿ ಅಸಹನೆಯಿತ್ತಾದರೂ ಮತ್ತೊಂದು ಅವಕಾಶಕ್ಕಾಗಿ ಕಾಯುವ ತಾಳ್ಮೆಯಿತ್ತು. ಇದೇ ಮನಸ್ಥಿತಿ ಬೊಮ್ಮಾಯಿ ಅವರಿಗೂ ಆಗ.

ಮತ್ತೆ 1985ರಲ್ಲಿ ಎಸ್.ಬಂಗಾರಪ್ಪ ಕಾಂಗ್ರೆಸ್ ಮೂಲಕ ಕಣಕ್ಕಿಳಿದು ಗೆದ್ದರಾದರೂ ರಾಮಕೃಷ್ಣ ಹೆಗಡೆಯವರು ಕರ್ನಾಟಕವನ್ನು ಆವರಿಸಿಕೊಂಡುಬಿಟ್ಟಿದ್ದರು, ಸ್ವಂತ ಬಲದಲ್ಲಿ ಅಧಿಕಾರಕ್ಕೇರಿದರು. ಎರಡನೇ ಅವಧಿಗೂ ರಾಮಕೃಷ್ಣ ಹೆಗಡೆಯವರೇ ಮುಖ್ಯಮಂತ್ರಿಯಾದಾಗ ಕೊತ ಕೊತನೆ ಕುದಿದವರು ಎಚ್.ಡಿ.ದೇವೇಗೌಡರು. ನೀರಾವರಿ ಇಲಾಖೆಗೆ ನೀಡಿದ ಅನುದಾನ ಸಾಕಾಗುವುದಿಲ್ಲವೆಂದು ಪ್ರತಿಭಟಿಸಿ ರಾಮಕೃಷ್ಣ ಹೆಗಡೆ ಅವರ ಸಂಪುಟದಿಂದ ಹೊರಬರುವ ನಿರ್ಧಾರಕ್ಕೆ ಅಂಟಿಕೊಂಡು ರಾಜೀನಾಮೆ ಕೊಟ್ಟಿದ್ದರು.

ಮೂರನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ದೇವೇಗೌಡರನ್ನು ದೂರಸರಿಸಿದ ಹೆಗಡೆ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಆಗ ರಂಪಾಟವೇ ನಡೆದುಹೋಯಿತು. ಪಕ್ಷದೊಳಗೆ ಭಿನ್ನಮತ, ಹೊಡೆದಾಟ, ಚಪ್ಪಲಿ ತೂರಾಟ ಘಟಿಸಿದವು. ಈ ಸನ್ನಿವೇಷ ಕೂಡಾ ದೇವೇಗೌಡರ ರಾಜಕೀಯ ಬದುಕಿನಲ್ಲಿ ಮಹತ್ವದ ಕ್ಷಣ. ಮುಂದೆ ಗೌಡರನ್ನೇ ಪಕ್ಷದಿಂದ ದೂರಸರಿಸಿದ್ದ ಹೆಗಡೆ ಉರುಳಿಸಿದ ದಾಳಗಳಿಂದಾಗಿ ದೇವೇಗೌಡರು ಏಕಾಂಗಿಯಾಗಿ ಹೋಗಿದ್ದರು. ಆದಿನಗಳು ಹೇಗಿರಬಹುದು? ಅವರ ಅಂದಿನ ಮನಸ್ಥಿತಿ, ಅಸಹಾಯಕತೆ, ಆಕ್ರೋಶ ಅವರು ಮಾತ್ರ ಹೇಳಿಕೊಳ್ಳಬಲ್ಲರು.

ಈ ಮನಸ್ಥಿತಿಯಿಂದ ಹೊರಬರಬೇಕಾದರೆ ದೇವೇಗೌಡರು ಮುಖ್ಯಮಂತ್ರಿಯಾಗಬೇಕಾಯಿತು. ಅದೇ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ದೇವೇಗೌಡರು ಮಾಡುತ್ತಿದ್ದ ಪ್ರಚಾರ ಭಾಷಣದಲ್ಲಿ ‘ನೀವು ನನ್ನ ಕೈಗೆ 28 ಸಂಸದರನ್ನು ಆರಿಸಿಕೊಡಿ, ನೀವು ಹೇಳಿದವರನ್ನೇ ಪ್ರಧಾನಿ ಮಾಡಿಸುತ್ತೇನೆ’ ಎಂದು ಹೇಳಿಕೊಂಡು ರಾಜ್ಯ ಸುತ್ತಾಡಿದರು. 1996ರಲ್ಲಿ ಪಿ.ವಿ.ನರಸಿಂಹರಾವ್ ಸೋತು ಸಂಯುಕ್ತರಂಗ ಗರಿಷ್ಠ ಸ್ಥಾನಗಳನ್ನು ಗೆದ್ದಾಗ ಪ್ರಧಾನಿಯಾಗುವ ಅದೃಷ್ಟ ದೇವೇಗೌಡರಿಗೇ ಒಲಿಯಿತು. ಇಂಥ ಹುದ್ದೆಯನ್ನು ನಿರೀಕ್ಷೆ ಮಾಡಿರದಿದ್ದ ದೇವೇಗೌಡರು ತಮ್ಮ ನಿರೀಕ್ಷೆಗೆ ತಕ್ಕ ಪ್ರಧಾನಿ ಆಯ್ಕೆಯಲ್ಲಿ ಮುಖ್ಯಪಾತ್ರ ವಹಿಸಲು ಹೋಗಿ ತಾವೇ ಪ್ರಧಾನಿಯಾದರು. ಹೇಗೆ ರಾಮಕೃಷ್ಣ ಹೆಗಡೆ ಸರ್ವಸಮ್ಮತ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡಲು ಸಾರಥ್ಯ ವಹಿಸಿ ತಾವೇ ಮುಖ್ಯಮಂತ್ರಿಯಾದರೋ ಹಾಗೆಯೇ ದೇವೇಗೌಡರು ಕೂಡಾ ಸಂಯುಕ್ತರಂಗ ಸಭೆಯಲ್ಲಿ ಅನಿರೀಕ್ಷಿತವಾಗಿ ಪ್ರಧಾನಿಯಾದರು. ಈ ಸಂದರ್ಭದಲ್ಲಿ ಅವರ ಮನಸ್ಥಿತಿ ಹೇಗಿರಬಹುದು? ಅಂತೆಯೇ ಹನ್ನೊಂದು ತಿಂಗಳುಗಳ ಕಾಲ ಪ್ರಧಾನಿಯಾಗಿ ನಿರ್ಗಮಿಸುವ ಸನ್ನಿವೇಶದ ಮನಸ್ಥಿತಿ ಹೇಗಿರಬಹುದು?

ಹಿಂದುಳಿದವರಿಗೆ ಹೊಸ ಬದುಕುಕೊಟ್ಟ ಡಿ.ದೇವರಾಜ ಅರಸು ಇಂದಿರಾ ಗಾಂಧಿಯವರಿಂದ ದೂರವಾಗಿ ತಾವೇ ಅರಸು ಕಾಂಗ್ರೆಸ್ ಪಕ್ಷ ಕಟ್ಟಿದರು. ಈ ನಾಡಿನ ಜನರಿಗಾಗಿ ಕೆಲಸ ಮಾಡಿದ್ದೇನೆ, ಅವರು ಕೈಹಿಡಿಯುತ್ತಾರೆ ಅಂದುಕೊಂಡಿದ್ದ ಅರಸು ಹೀನಾಯವಾಗಿ ಸೋತು ಮತ್ತೆ ರಾಜಕೀಯದತ್ತ ಮುಖಮಾಡದೆ ಸ್ಮಶಾನಕ್ಕೆ ನಿರ್ಗಮಿಸಿದರಲ್ಲಾ ಅವರ ಅಂದಿನ ಮನಸ್ಥಿತಿ ಹೇಗಿರಬೇಡ? ಪ್ರತೀ ವರ್ಷ ಅರಸು ಅವರ ಸ್ಮರಣೆ ಮಾಡುವ ನಾಡಿನ ಜನರ ಮನಸ್ಥಿತಿಯಲ್ಲವೇ ಅವರನ್ನು ಅಧಿಕಾರದಿಂದ ದೂರಕ್ಕೆ ತಳ್ಳಿದ್ದು?

ವೀರೇಂದ್ರ ಪಾಟಿಲ್ ಮುಖ್ಯಮಂತ್ರಿಯಾಗಿದ್ದಾಗ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ದೇಹಾರೋಗ್ಯ ವಿಚಾರಣೆಗೆಂದು ಬಂದಿದ್ದ ರಾಜೀವ್ ಗಾಂಧಿ ಅವರು ದೆಹಲಿಗೆ ವಾಪಸಾಗುವ ಸಂದರ್ಭದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪಾಟೀಲ್ ಅವರನ್ನು ಕೆಳಗಿಳಿಸುವ ನಿರ್ಧಾರ ಪ್ರಕಟಿಸಿದರು. ಇದನ್ನು ಕೇಳಿ ಕುಸಿದ ಪಾಟೀಲ್ ಮತ್ತೆ ಚೇತರಿಸಿಕೊಳ್ಳಲಿಲ್ಲ. ಚಾಣಾಕ್ಷ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದವರು. ಆದರೆ ದೇವೇಗೌಡರು ಪ್ರಾಬಲ್ಯಕ್ಕೆ ಬಂದಮೇಲೆ ಅವರ ರಾಜಕೀಯ ಮಂಕಾಯಿತು, ಮಾತ್ರವಲ್ಲಾ ಪಕ್ಷದಿಂದಲೇ ಹೊರದಬ್ಬಿಸಿಕೊಂಡರು. ಆಗ ಅವರ ಮನಸ್ಥಿತಿ ಹೇಗಿರಬಹುದು?

ಬಿಜೆಪಿಯ ಹಿರಿಯ ಜೀವ ಎಲ್.ಕೆ.ಅಡ್ವಾಣಿ ಅವರ ಮನಸ್ಸಿನ ವೇದನೆ, ತೊಳಲಾಟ ಅದೆಷ್ಟಿರಬಹುದು? ಅವರು ಉಪಪ್ರಧಾನಿಯಾಗಿದ್ದವರು. ಅವರಿಗೆ ಅಧಿಕಾರದ ಆಸೆ ಇಲ್ಲವೆಂದು ಹೇಳಿದರೆ ಅದು ಆತ್ಮವಂಚನೆಯಾಗುತ್ತದೆ. ಈಕ್ಷಣದಲ್ಲೂ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಅವರು ಮುಕ್ತರಾಗಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಲು ತುಡಿಯುತ್ತಿರುವುದು ಅವರ ಕಾರ್ಯವೈಖರಿಯಿಂದಲೇ ಅರ್ಥವಾಗುತ್ತದೆ.

ಹೀಗೆ ಅಧಿಕಾರ ಇದ್ದಾಗ ಮತ್ತು ಇಲ್ಲದಿದ್ದಾಗ ಮನುಷ್ಯನ ಮನಸ್ಸಿನಲ್ಲಿ ತಾಕಲಾಟಗಳು ಇದ್ದೇ ಇರುತ್ತವೆ. ಅಧಿಕಾರವಿದ್ದಾಗ ತಾನಾಗಿಯೇ ಬರುವ ವರ್ಚಸ್ಸು ಅಧಿಕಾರದಿಂದ ನಿರ್ಗಮಿಸುವಾಗ ಕಳೆಗುಂದುತ್ತದೆ. ನಿಮ್ಮ ಕೈಯಲ್ಲಿರುವ ಅಧಿಕಾರ ಕಳಚಿಬಿದ್ದರೆ ನಿಮಗಾಗುವ ಮನಸ್ಥಿತಿಯನ್ನು ಊಹಿಸಿಕೊಂಡರೆ ಯಡಿಯೂರಪ್ಪ ಅವರ ಮನಸ್ಥಿತಿಯನ್ನೂ ಊಹಿಸಿಕೊಳ್ಳಬಲ್ಲಿರಿ, ಅರ್ಥಮಾಡಿಕೊಳ್ಳಬಲ್ಲಿರಿ.

ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಅಧಿಕಾರ ಶಾಶ್ವತವಲ್ಲ ಮತ್ತು ಅದು ನಮ್ಮ ಖಾಸಗಿ ಆಸ್ತಿಯಲ್ಲ ಎನ್ನುವ ಪ್ರಬುದ್ಧತೆಯನ್ನು ನಮ್ಮ ರಾಜಕಾರಣಿಗಳು ಪಡೆದುಕೊಂದರೆ ಈ ಮಾನಸಿಕ ಅಸ್ವಸ್ಥತೆಯನ್ನು ಸ್ವಲ್ಪಮಟ್ಟಿಗೆ ಘನತೆಯಿಂದ ನಿಭಾಯಿಸಬಹುದು.