Category Archives: ಬಿ.ಜಿ.ಗೋಪಾಲಕೃಷ್ಣ

ಮೂಢನಂಬಿಕೆ ಪ್ರತಿಬಂಧಕ ಮಸೂದೆ – ಆತಂಕದಲ್ಲಿ ಮೌಢ್ಯದ ಫಲಾನುಭವಿಗಳು

– ಬಿ.ಜಿ.ಗೋಪಾಲಕೃಷ್ಣ ಹಾಸನ

ಮಾನವನ ನಾಗರಿಕತೆಯ ಪ್ರಾರಂಭದ ಹಂತವನ್ನು ಆದಿಸಮತಾ ಸಮಾಜ ಎಂದು ಕರೆಯಬಹುದು. ಆ ಒಂದು ಕಾಲಘಟ್ಟದಲ್ಲಿ ಯಾವುದೇ ಆಧಿಕಾರ, ಅಂತಸ್ತು, ಜಾತಿ ಮತ್ತು ಲಿಂಗ ಭೇದಗಳ ತಾರತಮ್ಯ ಇಲ್ಲದೆ ಮಾನವರೆಲ್ಲರೂ ಸಮಾನ ಮನಸ್ಕ, ದ್ವೇಷ ಅಸೂಯೆ ರಹಿತ ನಿಷ್ಕಳಂಕ ಪರಿಪೂರ್ಣ ವ್ಯಕ್ತಿತ್ವದವರಾಗಿದ್ದರು. ಅಂದು ಮುಂದಿನ ದಿನಗಳಿಗೆ ಕೂಡಿಡುವ ಕ್ರಮವಾಗಲಿ, ಕೊಳ್ಳುಬಾಕ ಸಂಸ್ಕೃತಿಗಳ ಪರಿಕಲ್ಪನೆಗಳಾಗಲಿ ಇರಲಿಲ್ಲ.

ತದನಂತರದ ಕಾಲಘಟ್ಟದ ಬೆಳವಣಿಗೆಯೇ ಪಾಳೇಗಾರಿಕೆ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಇಡೀ ಸಮಾಜವೇ ದುಡಿಯುವವರ ವರ್ಗ ಮತ್ತು ದುಡಿಸಿಕೋಳ್ಳುವವರ ವರ್ಗ ಎಂದು ಎರಡು ಭಾಗಗಳಾಗಿ ವಿಂಗಡಣೆಯಾದ ಕಾಲವದು. made-snanaದುಡಿಯುವ ವರ್ಗ ಸಂಖ್ಯೆಯಲ್ಲಿ ಬಹುಸಂಖ್ಯೆಯಲ್ಲಿದ್ದು, ಭೌತಿಕವಾಗಿ ಸಶಕ್ತರಾಗಿದ್ದರೂ ಭೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಾದರು. ಆದರೆ ದುಡಿಸಿಕೋಳ್ಳುವ ವರ್ಗ ಇದಕ್ಕೆ ತದ್ವಿರುದ್ದ. ಸಂಖ್ಯೆಯಲ್ಲಿ ಕಡಿಮೆ ಇದ್ದು ಭೌತಿಕವಾಗಿ ಅಶಕ್ತರಾಗಿರದಿದ್ದರೂ ಭೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದವರಾದರು.

ಇದೇ ಪರಿಸ್ಥಿತಿಯನ್ನು ಮುಂದುವರೆಸುವುದು ದುಡಿಸಿಕೊಳ್ಳುವ ವರ್ಗಕ್ಕೆ ಅನಿವಾರ್ಯವಾಗಿತ್ತು. ಪ್ರಕೃತಿಯನ್ನೇ ದೇವರೆಂದು ಪೂಜಿಸುತಿದ್ದ ಆ ಸಂದರ್ಭದ ಜನಮಾನಸದಲ್ಲಿ ಭೇದಭಾವಗಳ ವಿಷಬೀಜ ಬಿತ್ತಲು ಜಾತಿ, ಧರ್ಮ ಮತ್ತು ದೇವರುಗಳನ್ನು ಸೃಷ್ಟಿಸಿ ಅಸ್ತ್ರಗಳನ್ನಾಗಿ ಬಳಸಿ ತಮ್ಮ ತಮ್ಮುಗಳಲ್ಲೇ ಭೇದಭಾವಗಳ ಜೊತೆ ಜೊತೆಯಲ್ಲಿ ದ್ವೇಶ, ತಾರತಮ್ಯ ಅಸ್ಪೃಶ್ಯತೆ ಬೆಳೆಸಿದುದರಿಂದ, ಮೇಲ್ವರ್ಗದವರೆಂದು ಬಿಂಬಿತರಾದ ದುಡಿಸಿಕೊಳ್ಳುವ ವರ್ಗದ ಹಾದಿ ಸುಗಮವಾಯಿತು.

ಆದರೆ ಕಾಲಾನಂತರ ದುಡಿಯುವ ವರ್ಗದಲ್ಲೂ ಹಂತಹಂತವಾಗಿ ಪ್ರಜ್ಞೆಮೂಡಲು, ಆ ಪ್ರಜ್ಞೆಯನ್ನು ನಿರ್ಲಿಪ್ತಗೂಳಿಸಲು ಪೂರ್ವಜನ್ಮ, ಪುನರ್‌ಜನ್ಮ , ಕರ್ಮಸಿದ್ದಾಂತಗಳಂತಹ ಹೊಸ ಹೊಸ ಸಿದ್ಧಾಂತಗಳನ್ನು ಪ್ರಕಟಿಸಲೇಬೇಕಾಯಿತು. ಆ ಸಿದ್ಧಾಂತಗಳನ್ನು ಸಾಕ್ಷಾತ್ ಸೃಷ್ಟಿಕರ್ತನ ಸಂದೇಶಗಳೆಂದು, ಅವನ ಬಾಯಿಂದಲೇ ಹೇಳುತ್ತಿರುವಂತೆ ಪ್ರಚುರ ಪಡಿಸಿದರು. ಈ ಕರ್ಮಸಿದ್ಧಾಂತಗಳಿಕೆ ಪೂರಕವಾಗಿ ಮೂಡಿಬಂದವುಗಳೇ ಮೂಢನಂಬಿಕೆಗಳು. ನಂಬಿದವರ ಕತ್ತುಕುಯ್ಯಲು ಸಹಜವಾಗೇ ಮೂಢನಂಬಿಕೆಗಳಂತಹ ನಯವಂಚಕ ಅಸ್ತ್ರಗಳಿಗಿಂತ ಮತ್ತಾವುದು ಪ್ರಬಲ ಅಸ್ತ್ರವಾಗಲಾರದು.

ಹಿಂದುಳಿದವರಲ್ಲೂ ಪ್ರಜ್ಞೆಮೂಡಿ ಆರ್ಥಿಕವಾಗಿ ಸಬಲನಾದರೆ ನಮ್ಮ ಮನೆಯ ಕಕ್ಕಸ್ಸನ್ನು ನೂರು ರೂಪಾಯಿ ಕೂಲಿಗೆ ಸ್ವಚ್ಚಗೊಳಿಸಿಯಾನೇ? Manual_scavanging1[1]ಆಥವಾ ಶಿಕ್ಷಣ ಕಲಿತ ಆರ್ಥಿಕವಾಗಿ ಸಬಲನಾದ ಪ್ರಜ್ಞಾವಂತರು ಹತ್ತರಷ್ಟು ಕೂಲಿ ಕೊಟ್ಟರೂ ಕಕ್ಕಸ್ಸು ಸ್ವಚ್ಚಗೊಳಿಸುವ ಕೆಲಸ ಮಾಡಿಯಾರೇನು? ಆ ಸಂದರ್ಭಗಳಲ್ಲಿ ತಾವುಗಳೇ ಕಾರ್ಯಪ್ರವೃತ್ತರಾಗ ಬೇಕಾಗುತ್ತದೆ ಎಂಬ ಸರಳ ಸಮೀಕರಣ ತಿಳಿಯದೇ ಅವರುಗಳಿಗೇ. ಸಮಾಜದಲ್ಲಿ ಮೌಢ್ಯತೆ, ಆಂಧಾನುಕರಣೆ, ಅಂಧಶ್ರದ್ಧೆ, ಮೂಢನಂಬಿಕೆಗಳಿರುವವರೆಗೆ ತಮ್ಮುಗಳ ಶ್ರಮರಹಿತ ಬದುಕಿಗೇನು ಅಡ್ಡಿಯಿಲ್ಲ ಎಂಬ ಸರಳ ವಸ್ತು ಸ್ಥಿತಿಯನ್ನು ತಳಿಯದಷ್ಟು ಮುಟ್ಠಾಳರೇ ಈ ಮೌಢ್ಯದ ಫಲಾನುಭವಿಗಳುಸ.

ಪ್ರಸ್ತುತ ಅಂಧಶ್ರದ್ದೆಗಳು ಮನುಷ್ಯನ ಹುಟ್ಟಿನಿಂದ ಪ್ರಾರಂಭಗೊಂಡು, ಜೀವಿತ ಅವಧಿಯಲ್ಲಿ ಜೊತೆ ಜೊತೆಯಲ್ಲೇ ಪರಾವಲಂಬಿಗಳಂತೆ ರಕ್ತವನ್ನು ಹೀರಿ ಬದುಕುತ್ತಾ, ನಮ್ಮ ಸಾವಿಗೆ ಮೊದಲೇ ಇತರರಿಗೂ ರಕ್ತ ಬೀಜಾಸುರನಂತೆ ದ್ವಿಗುಣಗೊಳ್ಳುತ್ತಾ ಇತರ ಮನುಜ ದೇಹಗಳನ್ನು ಮಾತ್ರ (ಇತರೆ ಪ್ರಾಣಿಗಳನ್ನು ದೇಹಗಳನ್ನು ಪ್ರವೇಶಿಸದೆ) ಪ್ರವೇಶಿಸಿ ವಾಸಮಾಡಲು ಪ್ರಾರಂಭಿಸುತ್ತವೆ, ಮೇಲ್ವರ್ಗದವರು ನೀರು ಗೊಬ್ಬರ ಹಾಕಿ ಪೋಷಿಸಲು ಮುಂದಾಗುತ್ತಾರೆ.

ಈ ಭೂಮಿಯ ಮೇಲೆ ವಾಸಿಸುವು ಪ್ರತಿಯೂಂದು ಜೀವಿಯೂ ಸಮಾನ ಎನ್ನುವುದಾದರೆ. ಬುದ್ದಿವಂತ ಜೀವಿಯಾಗಿರುವ ಮನುಷ್ಯನೇಕೆ ಮೌಢ್ಯತೆಯ ಅಂಧಕಾರದಲ್ಲಿ ತನ್ನನ್ನೇ ತಾನು ಬಂಧಿಸಿಕೊಂಡು ತೋಳಲಾಡುತ್ತಾನೆ ಅಥವ ಬೇರೆಯವರ ತೋಳಲಾಟದಲ್ಲಿ ತನ್ನ ಹೋಟ್ಟೆ ತುಂಬಿಸಿ ಕೊಳ್ಳುತ್ತಾನೆ.

ಮೂಢನಂಭಿಕೆಗಳ ಪ್ರಕಾರ ಮತ್ತು ಆಯಾಮಗಳನ್ನು ತಿಳಿಯುವುದೇ ಕಷ್ಟ ಸಾಧ್ಯವಾಗಿದೆ. ಮನುಜನ ಜೀವಿತ ಅವಧಿಯ ಪ್ರತಿ ಹಂತದಲ್ಲೂ ಹಾಸುಹೊಕ್ಕಾಗಿವೆ. ಅಂಧಶ್ರದ್ದೆಗೆ ಹೆಚ್ಚು ಬಲಿಯಾಗುವರು ಈ ಸಮಾಜದ ಅರ್ಧ ಭಾಗವೇ ಆಗಿರುವ ಮಹಿಳೆಯರು. KPN photoಅವಳು ಶಿಕ್ಷಣ ಪಡೆಯುವುದೆ ಒಂದು ಅಪವಾದ. ಅವಳು ಮನೆಯಿಂದ ಹೊರ ಹೋಗಕೂಡುದು. ಅವಳು ಮುಟ್ಟಾದಾಗ ಮತ್ತು ಬಾಣಂತನವಾದಾಗ ಊರ ಹೊರಗೆ ಪಶುಗಳಂತೆ ಇರಿಸುವುದು, ಬಾಲ್ಯ ವಿವಾಹದಂತಹ ಶಿಕ್ಷೆ ಇವಳೆಗೇ ಹೆಚ್ಚು. ಊರಿಗೆ ಕಷ್ಟ ಬಂದರೆ ಇವಳದೇ ಬಲಿ ಬೇಕು. ಸತಿ ಪದ್ಧತಿ, ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ. ವರದಕ್ಷಣೆ ನೆಪದಲ್ಲಿ ಜೀವಂತ ಸುಡುವುದು, ಹೆಣ್ಣು ಮಗುವಿನ ಹುಟ್ಟಿಗೆ ತಾಯಿಯೇ ಕಾರಣ ಎಂಬ ಅಪವಾದ, ತಾನು ಅನುಭವಿಸಿದ ಕಷ್ಟಗಳನ್ನು ನನ್ನ ಹೆಣ್ಣು ಮಗು ಅನುಭವಿಸಬಾರದೆಂದು ತನ್ನ ಕರುಳಕುಡಿಯು ಭ್ರ್ರೂಣ ಹಂತದಲ್ಲಿರುವಾಗಲೇ ಹತ್ಯೆಗೆ ಸಹಕರಿಸಬೇಕಾದ ಅನಿವಾರ್ಯತೆ. ದೇವಸ್ಥಾನಗಳಿಗೆ ಪ್ರವೇಶದ ನಿರಾಕರಣೆ. ಒಂದೇ ಎರಡೇ ಇದು ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಸಮಾಜದ ಕೊಡಿಗೆ.

ಅಂಧಶ್ರದ್ಧೆಗಳಿಂದ ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುವ ದಲಿತರ ಸ್ಥಿತಿ ಹೇಳತೀರದು. ಅಸ್ಪೃಶತೆ, ಅವರುಗಳಿಗೇ ಒಂದು ಕೇರಿ, ದೇಸ್ಥಾನಗಳಿಗೆ ಪ್ರವೇಶವಿಲ್ಲ, ಜಮೀನಿನ ಒಡತನವಿಲ್ಲ, ಮೇಲ್ವರ್ಗದವರು ಹೇಳಿದಾಗ ಪ್ರತಿಫಲ ಅಪೇಕ್ಷಿಸದೆ ಅವರುಗಳ ಮನೆಯಲ್ಲಿ ಬಂದು ದುಡಿಯಬೇಕು ಕೊಟ್ಟಷ್ಟು ಕೂಲಿ ಪಡೆದು ತೊಲಗಬೇಕು. ಒಟ್ಟಿನಲ್ಲಿ ಸ್ವತಂತ್ರದ ಬದುಕೆ ಇಲ್ಲದೆ ಬದುಕು ಅವರದು.

ಮಡೆಸ್ನಾನದ ಮುಂದುವರೆದ ಭಾಗವಾಗಿ ಎಡೆಸ್ನಾನ, ಗುಪ್ತವಾಗಿ ಬೆತ್ತಲೆ ಸೇವೆಯ ಮುಂದುವರೆದ ಭಾಗವಾಗಿ ಮೈಗೆ ಸೊಪ್ಪು ಕಟ್ಟಿಕೊಳ್ಳುವುದು. ದೇವದಾಸಿ ಪದ್ದತಿ, ಪಾದಪೂಜೆಗಳು, ಪಾಪ ಪರಿಹಾರಕ್ಕೆ ಅಥವಾ ಶಾಂತಿಗಾಗಿ ಪೂಜೆಗಳು, ಕ್ಷುದ್ರ ಶಕ್ತಿಗಳನ್ನು yellamma-neem-leaves-devadasiಒಲಿಸಿಕೊಳ್ಳಲು ನರಬಲಿ, ಪ್ರಾಣಿಬಲಿ, ಮನೆಗಳಲ್ಲಿ ಶೌಚಾಲಯಗಳನ್ನು ಹೊಂದದೇ ಇರುವುದು. ತೆರೆಮರೆಯಲ್ಲಿ ಹುಣ್ಣಿಮೆಯ ದಿನ ಸವದತ್ತಿಯಲ್ಲಿ ಮುತ್ತು ಕಟ್ಟುವುದು. ಶಾಂತಿ ಹೋಮ ಹವನಗಳನ್ನು ಮಾಡಿಸುವುದು. ಪಂಕ್ತಿ ಭೇದ, ಅಜಲು ಪದ್ದತಿ. ಉಳ್ಳವರು ತಮ್ಮ ಆನಾಚಾರಗಳ ವಿರುದ್ದ ಧ್ವನಿ ಎತ್ತಿದವರನ್ನು ಭಾನಾಮತಿ ಮಾಡುತ್ತಿದ್ದಾರೆಂದು ಆಪಾದಿಸಿ ಜೀವಂತ ಸುಡುವುದು. ನಿಧಿ ತೆಗೆಯಲು ಮಕ್ಕಳನ್ನು ಬಲಿ ಕೂಡುವುದು. ಶ್ರೀಮಂತ ಪುರುಷರು ಚಿಕ್ಕವರೊಂದಿಗೆ ಸಂಭೋಗ ಮಾಡಿದರೆ ಹರೆಯ ಹೆಚ್ಚುತ್ತದೆಯಂದು ಮತ್ತು ಗುಪ್ತರೋಗಗಳು ವಾಸಿಯಾಗುತ್ತವೆಯಂದು, ಹೀಗೆ ಹೇಳುತ್ತಾ ಹೊದರೆ ಮಾಹಾನ್ ಗ್ರಂಥಗಳನ್ನೇ ರಚಿಸಬಹುದು.

ಮೂಲಭೂತವಾದಿಗಳು, ಪುರೋಹಿತಶಾಹಿಗಳು, ಅವಕಾಶವಾದಿ ಪಾಳೇಗಾರಿಕೆ ವ್ಯವಸ್ಥೆಯ ನಾಯಕರುಗಳು, ಬಂಡವಾಳಶಾಹಿಗಳು, ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ರಾಜಕೀಯ ನಡೆಸುವವರು, ಜನರ ನಂಬಿಕೆಯ ಹೆಸರಿನಲ್ಲಿ ಪ್ರಜ್ಞಾಪೂರ್ವಕವಾಗಿಯೇ ಮೌಢ್ಯತೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅವರುಗಳ ಅಸ್ತಿತ್ವದ ಪ್ರಶ್ನೆ. ಸೈದ್ದಾಂತಿಕ ಸಿದ್ಧಾಂತ, ನೈತಿಕತೆ , ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಇಲ್ಲದವರುಗಳಿಗೆ ಅಂಧಶ್ರದ್ದೆಗಳೆ ಮೂಲಾಧಾರ. ಇವರುಗಳ ಅಭಿವೃದ್ದಿ ಅಂಧಶ್ರದ್ಧೆಯ ಅಭಿವೃದ್ದಿಯ ಮೇಲೆ ಅವಲಂಬಿತವಾಗಿರುತ್ತವೆ. ಅವರುಗಳಿಗೆ ಮೂಢನಂಬಿಕೆ ಪ್ರತಿಬಂಧಕ ಮಸೂದೆ ಅಘಾತಕಾರಿ ಮತ್ತು ಅತಂಕದ ಮಸೂದೆಯಾಗಿದೆ.

ಪಾಪಪ್ರಜ್ಞೆಯ ಚಿತ್ತ, ಅಂಧಶ್ರದ್ದೆಯ ಸರಳ ವಾಸ್ತುವಿನತ್ತ..

– ಬಿ.ಜಿ. ಗೋಪಾಲಕೃಷ್ಣ, ಹಾಸನ

ವಾಸ್ತುಶಾಸ್ತ್ರ, ಇತ್ತೀಚಿನ ದಿನಗಳಲ್ಲಿ ಸರಳ ವಿಶೇಷಣದೊಂದಿಗೆ ದುಬಾರಿಯ ಮೌಢ್ಯವನ್ನು ಬಿತ್ತುತ್ತಾ ಸರಳ ವಾಸ್ತುಶಾಸ್ತ್ರವಾಗಿ ಬದಲಾಗಿದೆ. ಮನುಷ್ಯನಿಗೆ ರೋಗ-ರುಜಿನಗಳು ಅವನ ಶ್ರೀಮಂತಿಕೆಯ ವೈಭವವನ್ನು ತಿಳಿದು ಬರುವುದಿಲ್ಲ. ಅವನ ಐಷಾರಾಮಿತನದ ಸೋಮಾರಿತನ, ಒತ್ತಡದ ಜೀವನ ಶೈಲಿಗಳಿಗೆ ಓಗೊಟ್ಟು ಸಖ್ಯ ಬಯಸಿ ಬರುತ್ತವೆ. ಆದರೆ ಸರಳ ವಾಸ್ತುವಿನ ವಿಷಯವೇ ಬೇರೆ, ಶ್ರೀಮಂತಿಕೆಯ ಅಂಧಕಾರದ ಮೌಢ್ಯತೆಯನ್ನು ಅನುಸರಿಸಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತದೆ.

‘ಭಯವೇ ಭಕ್ತಿಯ ಮೂಲವಯ್ಯ’ ಎಂಬಂತೆ, ಭಯ ಇದ್ದೆಡೆ ಅಂಧಕಾರ, ಮೌಢ್ಯತೆ, ಮೂಢನಂಬಿಕೆ, ಅಂಧಶ್ರದ್ಧೆಗಳ sarala-vaastuಭಕ್ತಿ ಮನೆಮಾಡುವುದರಲ್ಲಿ ಎರಡನೆಯ ಮಾತಿಲ್ಲ. ಭಯದ ಮೂಲ, ತಿಳಿವಳಿಕೆಯ ಕೊರತೆ ಇರಬಹುದೇ ಹೊರತು, ಸಾಕ್ಷರತೆಯ ಕೊರತೆ ಇರಲಾರದು. ಏಕೆಂದರೆ ಇತ್ತೀಚಿನ ದಿನಳಲ್ಲಿ ಅಕ್ಷರ ಜ್ಞಾನವಿಲ್ಲದವರಿಗಿಂತ ಅಕ್ಷರ ತಿಳಿದ ಮತ್ತು ನಗರವಾಸಿಗಳೇ ಇಂತಹ ಮೌಢ್ಯತೆಗೆ ಹೆಚ್ಚು ಹೆಚ್ಚು ಬಲಿಯಾಗತ್ತಿದ್ದಾರೆ.

ಪಠ್ಯಕ್ರಮದಲ್ಲಿ ಅಭ್ಯಸಿಸುವುದೇ ಒಂದು, ನಿಜ ಜೀವನದಲ್ಲಿ ಅಳವಡಿಸಿಕೂಳ್ಳುವುದೇ ಮತ್ತೊಂದಾಗಿದೆ. ಓದಿನಿಂದ ಅಕ್ಷರಸ್ತರಾಗುತ್ತಿದ್ದಾರೆಯೇ ವಿನಃ, ಜ್ಞಾನವಂತರಾಗುತ್ತಿರುವವರ ಸಂಖ್ಯೆ ವಿರಳ. ಇದಕ್ಕೆ ಪೂರಕ ಎಂಬಂತೆ ನಮ್ಮ ಸುತ್ತಮುತ್ತಲಿನ ಸಮಾಜಘಾತುಕ ಪಟ್ಟಭದ್ರ ಹಿತಾಸಕ್ತಿಗಳು, ಮೂಲಭೂತವಾದಿಗಳು ನಮ್ಮ ಜೀವನಕ್ಕೆ ವ್ಯವಸ್ಥಿತ ಸಂಚಿನೊಡನೆ ಜನಮಾನಸದಲ್ಲಿ ಮೌಢ್ಯವನ್ನು ಬಿತ್ತುತ್ತಾ ತಮ್ಮ ಹಾದಿಯನ್ನು ಸುಗಮಗೊಳಿಸಿಕೂಳ್ಳುತ್ತಿವೆ.

ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ, ಜಾಗತೀಕರಣ, ಉದಾರಿಕರಣ ಫಲಶೃತಿಯಿಂದ ಮಾನವನ ಜೀವನವನ್ನು ಸುಲಭೀಕರಿಸುವುದರೊಂದಿಗೆ ಸುಖ ಭೋಗದ ಜೀವನಕ್ಕೆ ದಾರಿಯಾಗಿವೆ. ಐಷಾರಾಮಿ ಜೀವನಕ್ಕೆ ಮಾರುಹೋಗುವ ಮನಸ್ಸು, ತನ್ನ ಮನಸ್ಸಾಕ್ಷಿಗೆ ವಿರುದ್ದವಾಗಿ ಗಳಿಸಿ, ತನ್ನ ಅವಶ್ಯಕತೆ, ಅನಾವಶ್ಯಕತೆಗಳನ್ನು ಯೋಚಿಸದೇ ಪರರನ್ನು ಹಿಂಬಾಲಿಸುತ್ತಾ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿ ಪುಟ್ಟ ಸಂಸಾರಕ್ಕೆ ಭೌವ್ಯ ಭಂಗಲೆಯೊಂದನ್ನು ನಿರ್ಮಿಸಿ ’ನೆಮ್ಮದಿಯ ಗುಡಿಸಲು’ ಎಂದು ನಾಮಕರಣ ಮಾಡಿ ವಾಸ್ತವ್ಯ ಹೂಡಿದರೆ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವೇ? ಪಾಪಪ್ರಜ್ಞೆ ಕಾಡದಿರಲು ಸಾಧ್ಯವೇ?

ಸರ್ಕಾರಕ್ಕೆ ತೆರಿಗೆ ಸರಿಯಾದ ರೀತಿ ಸಂದಾಯ ಮಾಡಿ, ಭ್ರಷ್ಟಾಚಾರದಲ್ಲಿ ತೊಡಗದೆ, ಪರರನ್ನು ಆಥವಾ ಸಂಬಂಧಿಕರನ್ನುsarala-vastu ವಂಚಿಸದೆ ತಮ್ಮ ನಿಜವಾದ ನ್ಯಾಯಯುತ ಗಳಿಕೆಯಿಂದ ಜೀವನ ಸಾಗಿಸುವವರಿಗೆ ಪಾಪಪ್ರಜ್ಞೆ ಕಾಡಲು ಹೇಗೆ ಸಾಧ್ಯ ಈ ಪಾಪಪ್ರಜ್ಞೆಯ ಮುಂದುವರೆದ ಭಾಗವಾಗಿ ಆಂಧಕಾರ ಮೌಢ್ಯತೆ ಮನೆಮಾಡುತ್ತದೆ. ನೆಮ್ಮದಿಯ ಬದುಕು ದೂರವಾಗುತ್ತದೆ. ಇದ್ದ ನೆಮ್ಮದಿಯನ್ನು ಹಾಳು ಮಾಡಿಕೂಂಡು ಇಲ್ಲದ ನೆಮ್ಮದಿಯನ್ನು ಅರಸುತ್ತಾ ತಮ್ಮ ಪಾಪದ ಫಲಶೃತಿಗಳಿಗೆ ಪರಿಹಾರ ಹುಡುಕುತ್ತಾ ಮೌಢ್ಯತೆಗಳಲ್ಲೊಂದಾದ ವಾಸ್ತುವಿನ ಮರೆ ಹೋಗುತ್ತಾರೆ.

ಸರಳ ವಾಸ್ತುವಿನಲ್ಲಿ ಅಲ್ಪ-ಸ್ವಲ್ಪ ವಿಜ್ಞಾನ ಅಡಗಿರಬಹುದು. ಆ ವಿಜ್ಞಾನ ನಮ್ಮ ಕುಗ್ರಾಮದ ಕಟ್ಟಡ ಕಾರ್ಮಿಕನ ಜ್ಞಾನಕಿಂತ ಹೆಚ್ಚಿನದೇನೂ ಇರಲು ಸಾಧ್ಯವಿಲ್ಲ. ಇರುವ ಸ್ಥಳದಲ್ಲಿ ವ್ಯವಸ್ಥಿತವಾಗಿ, ಕಲಾತ್ಮಕವಾಗಿ ಕಟ್ಟಡ ನಿರ್ಮಿಸಲು ವಾಸ್ತುಶಿಲ್ಪಿಯ ಅವಶ್ಯಕತೆ ಇರುವುದೇ ಹೊರತು. ಸರಳ ವಾಸ್ತುಶಾಸ್ತ್ರದ ಪಂಡಿತನ ಸಲಹೆ ಸೂಚನೆಗಳಲ್ಲ.

ಇಂದಿನ ಜಾಗತೀಕರಣದ, ಉದಾರೀಕರಣ ಮತ್ತು ರಾಜಕೀಯ ನೀತಿಗಳು ’ಹಳ್ಳಕ್ಕೇ ನೀರು ಹರಿಯುವಂತೆ’ ಉಳ್ಳವರನ್ನು ಹೆಚ್ಚು ಉಳ್ಳವರನ್ನಾಗಿಸುತ್ತಾ, ಬಡವರನ್ನು ಅತೀ ಬಡವರನ್ನಾಗಿಸುತ್ತಾ, ಬಡವ-ಬಲ್ಲಿದರ ನಡುವಿನ ಅಂತರ ಹೆಚ್ಚಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮಗಳ ನಡುವೆಯೇ ನಾಗರಿಕ ಯುದ್ದ ಸಂಭವಿಸುವ ಸಮಯ ದೂರವೇನಿಲ್ಲ.

ಹಿಂದಿನ ದಿನಗಳಲ್ಲಿ ಮತ್ತು ಇಂದೂ ಮುಂದುವರೆದಂತೆ ಹಸಿವಿನಿಂದ ಬಳಲುತ್ತಿರುವವರ ಸಮ್ಮುಖದಲ್ಲೇ ಮೌಢ್ಯತೆಯ ಹೆಸರಿನಲ್ಲಿ ಆಥವಾ ಶ್ರೀಮಂತಿಕೆಯ ತೋರಿಕೆಯ ಅಹಂನ ಮಧದಲ್ಲಿ ಆಹಾರಧಾನ್ಯಗಳನ್ನು ಅಪವ್ಯಯಮಾಡುವುದು, ಧನದಾಹಿ ವ್ಯಾಪಾರಸ್ಥರು ಅಹಾರಧಾನ್ಯಗಳ ಕೃತಕ ಅಭಾವ ಸೃಷ್ಟಿಸಿ house-plansಹಣಗಳಿಸುವುದು, ಹಣವಂತರು ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿಸಿಕೊಳ್ಳುವುದು, ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗುವುದು. ಅವಶ್ಯಕತೆ ಇಲ್ಲದಿದ್ದರೂ ಹೆಚ್ಚು ಹೆಚ್ಚು ಸೈಟುಗಳನ್ನು ಖರೀದಿಸುವುದು ಅಥವಾ ಹಣ ಹೆಚ್ಚಾಗಿರುವವರು ಸುಸ್ಥಿತಿಯಲ್ಲೇ ಇರುವ ಮನೆಯನ್ನು ನವೀಕರಿಸಲು ಪ್ರಾರಂಭಿಸಿ ಮೂಲ ಮನೆಯ ಆಕೃತಿಯನ್ನೇ ಇಲ್ಲವಾಗಿಸಿಕೊಳ್ಳುವುದು. ಇವುಗಳೆಲ್ಲಾ ನೇರವಾಗಿ ಅಥವಾ ಪರೋಕ್ಷವಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವ ಸನ್ಮಂಗಳ ಕಾರ್ಯಗಳೇ ಆಗಿವೆ. ಇಂಥವರಿಗೆ ಪಾಪಪ್ರಜ್ಞೆ ಕಾಡದಿರಲು ಸಾಧ್ಯವೇ?

ನಮ್ಮ ಜೀವಿತಾವಧಿಯಲ್ಲಿ ಸಾವು, ನೋವು ಆಥವಾ ಯಾವುದಾದರೊಂದು ಅವಘಡ ಸಂಭವಿಸಿದ ಪಕ್ಷದಲ್ಲಿ ನಮ್ಮ ಮನೆಯ ವಾಸ್ತುವಿಗೂ ಸಂಭವಿಸಿದ ಘಟನೆಗಳಿಗೂ ಸಂಬಂಧವಿರಲು ಸಾಧ್ಯವೇ? ನಮ್ಮ ಮನೆಗಳಲ್ಲಿ ನಡೆದ ಅಶುಭಗಳಿಗೆ ಪಾಪಪ್ರಜ್ಞೆ ಕಾಡಿ ಕಾರಣ ಹುಡುಕಿ ಜ್ಯೋತಿಷಿಯನ್ನು ಸಂಪರ್ಕಿಸಿದರೆ ಮುಗಿಯಿತು. ಆ ಜ್ಯೋತಿಷಿಯೇನು ಆಜ್ಞಾನಿಯಾಗಿರುವುದಿಲ್ಲ, ಅಲ್ಪ-ಸ್ವಲ್ಪ ಪ್ರಸಕ್ತ ಸಮಾಜಿಕ ಸ್ಥಿತಿಗತಿಯನ್ನು ಅರಿತು ಮನೋತಜ್ಞನೂ ಆಗಿರುತ್ತಾನೆ. ಅವನ ಕಸುಬಿನ ಸಲಹೆ ಸೂಚನೆಗಳನ್ನು ಅರಸಿ ಅವನನ್ನು ಸಂಪರ್ಕಿಸುವ ಜನಸಾಮಾನ್ಯರಿಂದ ಮತ್ತು ಅನುಭವದಿಂದ ಈ ಜ್ಞಾನವನ್ನು ಮೈಗೂಡಿಸಿಕೊಂಡಿರುತ್ತಾನೆ. ನಮ್ಮ ಪೂರ್ವಪರವನ್ನು ಸವಿವರವಾಗಿ ವಿಚಾರಿಸಿ, ಕುಲಂಕುಷವಾಗಿ ಚರ್ಚಿಸಿ. ನಮ್ಮ ಶ್ರೀಮಂತಿಕೆಗೆ ಅನುಗುಣವಾಗಿ ಪರಿಹಾರವನ್ನು ಸೂಚಿಸುತ್ತಾನೆ.

ಮಾತಿನ ಮಧ್ಯೆ ಮನೆಯ ವಿನ್ಯಾಸದ ಬಗ್ಗೆ ಚಕಾರವೆತ್ತಿದರೆ ಮುಗಿಯಿತು. ವಾಸ್ತು ಪರಿಶೋಧಕರು, ಸರಳ ವಾಸ್ತು ವಿನ್ಯಾಸಕರು, model-houseಗುತ್ತಿಗೆದಾರರು, ಕಟ್ಟಡ ಕಾರ್ಮಿಕರು, ವಾಸ್ತುವಿನ ಅನುಸಾರವಾಗಿ ಬಣ್ಣಮಾರುವವರು, ಅದಕ್ಕನುಸಾರವಾಗಿ ಬಣ್ಣಬಳಿಯುವವರು. ಅದಕ್ಕೂಂದು ಪೂಜೆ ಹೋಮ ಹವನ ಹೀಗೆ ಮುಂದುವರೆಯುತ್ತದೆ. ಪ್ರಜ್ಞಾವಂತರು ಪ್ರಜ್ಞಾಪೂರ್ವಕವಾಗಿ ಮಾಡಿದ ಪಾಪಕರ್ಮದ ಪೂಜಾಫಲ ಪ್ರಾಯಶ್ಚಿತ್ತ.

ಈ ವಿಷವರ್ತುಲವನ್ನು ಪ್ರವೇಶಿಸುವುದು ಸುಲಭ ಮತ್ತು ಸರಳವಾದರೂ ಹೊರ ಬರುವುದರೊಳಗೆ ನಮ್ಮ ಆಯಸ್ಸಿನ ಕಡೆಯ ಹಂತ ತಲುಪಿರುತ್ತದೆ. ನಮಗೆ ತಿಳುವಳಿಕೆ ಮೂಡುವುದರೊಳಗಾಗಿ ಇದೇ ನಂಬಿಕೆಗಳು ನಮ್ಮ ಮುಂದಿನ ಪೀಳಿಗೆಗಳಿಗೂ ಸಾಂಕ್ರಾಮಿಕ ರೋಗದಂತೆ ಹರಡಿರುತ್ತವೆ.

ಪಾಪ, ಪುಣ್ಯಗಳಿಲ್ಲದ ಮನುಜನಾಗಿ ಜನಿಸಿದ ಮೇಲೆ, ನಮ್ಮ ನ್ಯಾಯಯುತ ಗಳಿಕೆಯ ಬದುಕಿಗೇಕೆ ಬೇಕು ಸರಳ ವಾಸ್ತುವಿನ ಪರಿಹಾರ?

ಮಾಟ-ಮಂತ್ರ ನಿಷೇಧಿಸುವ ಜೊತೆ ಜೊತೆಗೆ ವೈಚಾರಿಕತೆ ಬೆಳಸಿ!

– ಬಿ.ಜಿ.ಗೋಪಾಲಕೃಷ್ಣ

ಮಾಟ-ಮಂತ್ರ ನಿಷೇಧಿಸುವ ಕಾನೂನು ಜಾರಿಮಾಡುವ ಜೊತೆ ಜೊತೆಯಲ್ಲಿ, ಸಮಾಜದಲ್ಲಿ ವೈಚಾರಿಕತೆಯನ್ನೂ ಬೆಳಸಬೇಕಾಗಿದೆ. ಮಾನಸಿಕ ಖಿನ್ನತೆಯಿಂದ ಹೂರ ಬರಲು ದೆವ್ವ, ಭೂತ ಬಿಡಿಸುವವರ ಮೂರೆ ಹೋಗುತ್ತಿದ್ದವರು, ಆ ದಾರಿಯೂ ಮುಚ್ಚಿದಾಗ ಮತ್ತಷ್ಟು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.

ಅಕ್ಷರದಿಂದ ವಂಚಿತರಾಗಿ ಪ್ರಾಪಂಚಿಕ ಜ್ಞಾನವಿಲ್ಲದೇ ಅಂಧಾಕಾರದಯಲ್ಲಿರುವ ಮುಗ್ಧ, ಬಡ ಜನರಲ್ಲಿ ಅಂಧಶ್ರದ್ಧೆಯನ್ನು ಬಿತ್ತಿ dhabolkarಭಯಭೀತರನ್ನಾಗಿಸಿ ಅವರ ತೊಳಲಾಟದಲ್ಲಿ ತಮ್ಮ ಹೊಟ್ಟೆ ಹೊರೆಯುತ್ತಿರುವ ಸ್ವಯಂಘೋಷಿತ ದೇವಮಾನವರ ಉಪಟಳಕ್ಕೆ ಕಡಿವಾಣ ಹಾಕಲು ಹೊರಟಿರುವ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹ.

ಭಾರತೀಯರನ್ನು ತಲತಲಾಂತರದಿಂದ ಕಾಡುತ್ತಿರುವ ಅಂಧಶ್ರದ್ಧೆ , ಬಾನಾಮತಿ, ಮಾಟ-ಮಂತ್ರ , ಪವಾಡ, ವಶೀಕರಣ, ಜ್ಯೋತಿಷ್ಯ, ಮೂಢನಂಬಿಕೆಗಳು, ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳಲು ನರಬಲಿ, ಪ್ರಾಣಿಬಲಿ, ದೇವಸ್ಥಾನಗಳಿಗೆ ಶೂದ್ರರಿಗೆ, ದಲಿತರಿಗೆ ಮತ್ತು ಸ್ತ್ರೀಯರಿಗೆ ಪ್ರವೇಶ ನಿರಾಕರಣೆ, ಪಾದಪೂಜೆ, ಪಾಪ ಪರಿಹಾರಕ್ಕೆ ಅಥವಾ ಶಾಂತಿಗಾಗಿ ಪೂಜೆಗಳು, ಸ್ತ್ರೀಯರ ನೈಸರ್ಗಿಕ ಕ್ರಿಯೆಗಳಿಗಾಗಿ ಊರಾಚೆ ಇರಿಸುವುದು. ಹೀಗೆ ಹತ್ತು ಹಲವು ಅನಿಷ್ಟ ಪದ್ಧತಿಗಳು ಜನಮಾನಸದಲ್ಲಿ ಮನೆ ಮಾಡಿ, ಕುಬ್ಜ ಮಾನವನನ್ನು ಮತ್ತಷ್ಟು ಕುಬ್ಜನನ್ನಾಗಿಸುತ್ತಿವೆ.

ಜನಸಾಮಾನ್ಯರನ್ನು ಮೌಢ್ಯತೆಯಿಂದ ಹೊರತರಲು ಅನೇಕ ಸಂಘ ಸಂಸ್ಥೆಗಳು ಶ್ರಮಿಸುತ್ತಿವೆಯಾದರೂ ರಾಜಕೀಯ ಇಚ್ಛಾಶಕ್ತಿಯ ಮುಂದೆ ಎಲ್ಲವೂ ಶೂನ್ಯವೇ ಸರಿ. ಈ ಒಂದು ನಿಟ್ಟಿನಲ್ಲಿ ಸರ್ಕಾರವೇ ಮುಂದಾಗಿ ಕಾನೂನು ರೂಪಿಸುತ್ತಿರುವುದು ಪ್ರಶಂಸನೀಯ ಸಂಗತಿ.

ಅಕ್ಷರಸ್ಥರೂ ಅಂಧಶ್ರದ್ಧೆಯ ಮೊರೆ ಹೋಗುತ್ತಾರೆಂದರೆ ಅದು ಪಾಪಪ್ರಜ್ಞೆಯಿಂದಲೇ ಹೊರತು ಬೇರೇನೂ ಇರಲಾರದು. ಒಬ್ಬ ಮನುಜ ಈ ಜಗತ್ತಿನಲ್ಲಿ ಹುಟ್ಟಿದಾಗ ಅವನೊಬ್ಬ ಪಾಪ-ಪುಣ್ಯಗಳಿಲ್ಲದ ಪರಿಪೂರ್ಣ ವ್ಯಕ್ತಿತ್ವದವನಾಗೇ ಇರುತ್ತಾನೆ. ನಂತರದ ದಿನಗಳಲ್ಲಿ ಅವನಲ್ಲಿ ಪಾಪಪ್ರಜ್ಞೆ ಕಾಡುತ್ತಿದೆ ಎಂದರೆ, ಆ ಪಾಪದ ಕೆಲಸವನ್ನು ಈ ಭೂಮಿಯ ಮೇಲೆ ಅವತರಿಸಿದ ನಂತರವಷ್ಟೇ ಮಾಡಿರಲು ಸಾಧ್ಯ. ಅವನ ಕರ್ಮದ ಫಲವೇ ಅವನಲ್ಲಿ ಪಾಪಪ್ರಜ್ಞೆ ಕಾಡಲು ಆರಂಭಿಸುತ್ತದೆ. ಅದರ ಪ್ರತಿಫಲವೇ ಅಂಧಶ್ರದ್ಧೆಯ ಮೂರೆ ಹೋಗುತ್ತಾನೆ. ಇಲ್ಲವಾದಲ್ಲಿ ಈ ಸಮಾಜ ಅಥವಾ superstitionsನಮ್ಮ ಸುತ್ತಮುತ್ತಲಿನ ಬಂಧು-ಮಿತ್ರರು ಅವನ/ಅವಳನ್ನು ನಡೆಸಿಕೊಂಡ ರೀತಿ ಅಥವಾ ಹೇರಿದ ಮಾನಸಿಕ ಒತ್ತಡಗಳೂ ಕಾರಣವಾಗಿರುವ ಸಾಧ್ಯತೆ ಇದೆ. ಅಂತಹವರಿಗೆ ಮಾನಸಿಕ ತಜ್ಞರ ಸಲಹೆ ಸೂಚನೆ ಅಥವಾ ಚಿಕಿತ್ಸೆಗಳು ಅವಶ್ಯಕತೆ ಇರುತ್ತದೆಯೇ ಹೊರತು, ದೆವ್ವ-ಭೂತ ಬಿಡಿಸುವ ದುಷ್ಟ ರಾಕ್ಷಸರ ಚಿಕಿತ್ಸೆಯಲ್ಲ.

ಇಂದಿನ ವಿದ್ಯಾರ್ಥಿಗಳು ವಿಜ್ಞಾನವನ್ನು ಒಂದು ಪಠ್ಯಕ್ರಮವನ್ನಾಗಿ ಆಭ್ಯಾಸಿಸುತ್ತಿದ್ದಾರೆಯೇ ಹೊರತು, ವಸ್ತುನಿಷ್ಠವಾಗಿ ಆಭ್ಯಾಸಿಸದೇ ಇರುವುದು ಜನಮಾನಸದಲ್ಲಿ ಮೌಢ್ಯತೆ ಮನೆ ಮಾಡಲು ಕಾರಣವಾಗಿದೆ. ವಿಜ್ಞಾನ ಮತ್ತು ಸಾಮಾಜಿಕ ಬದುಕಿನ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ವಿಜ್ಞಾನದ ವಿಧ್ಯಾರ್ಥಿಗಳು ಸಮಾಜಿಕ ವ್ಯವಸ್ಥೆಯ ಇತಿಹಾಸ ವ್ಯಾಸಂಗ ಮಾಡುತ್ತಿಲ್ಲ. ಕಲಾ ವಿದ್ಯಾರ್ಥಿಗಳು ವಿಜ್ಞಾನ ತಿಳಿಯತ್ತಿಲ್ಲ. ಈ ಸಮನ್ವಯದ ಕೊರತೆ ಸಾಮಾಜಿಕ ಆಂಧಕಾರಕ್ಕೆ ಮತ್ತೊಂದು ಪರ್ಯಾಯ ಕಾರಣೀಭೂತವಾಗಿದೆ.

ದೆವ್ವ-ಭೂತ ಬಿಡಿಸುವುದು ವೈಜ್ಞಾನಿಕವೊ ಅವೈಜ್ಞಾನಿಕವೊ ಬೇರೆಯದೇ ವಿಚಾರ, ಮಾನಸಿಕ black-magic-indiaಆಯಾಸದಿಂದ ಬಳಲುತ್ತಿರುವವರನ್ನು ಬೇವಿನಸೊಪ್ಪು ಅಥವಾ ಚಾವಟಿಗಳಿಂದ ಹೊಡೆಯುವುದು, ಕಾದ ಹಲಿಗೆಗಳ ಮೇಲೆ ನಡೆಸುವುದು, ಅರೆಬೆತ್ತಲೆಗೊಳಿಸುವುದು, ಕೊಠಡಿಯ ತುಂಬ ಧೂಮಹಾಕಿ ಉಸಿರಾಟಕ್ಕೆ ತೊಂದರೆ ನೀಡುವುದು, ಮುಖ / ಕಣ್ಣುಗಳ ಮೇಲೆ ಕೈಗೆ ಸಿಕ್ಕಸಿಕ್ಕ ಬೂಧಿ, ಅರಿಷಿಣ, ಕುಂಕುಮ ಎರಚುವುದು, ಈ ಎಲ್ಲಾ ದೈಹಿಕ ಹಿಂಸೆಗಳನ್ನು ಸಹಿಸಲು ಸಾಧ್ಯವಾಗದೆ, ಅಲ್ಲಿಗೆ ಹೋಗಿಬಂದ ಮಾನಸಿಕ ರೋಗಿ ಸಾಮಾನ್ಯ ಸ್ಥಿತಿಗೆ ಬಂದಂತೆ ಕಂಡರೂ ಅದು ಶಾಶ್ವತ ಪರಿಹಾರವಾಗಿರದೆ ಮುಂದಿನ ದಿನಗಳಲ್ಲಿ ಪುನರಾವರ್ತನೆಯಾಗುವ ಅಥವಾ ಶಾಶ್ವತವಾಗಿ ಮನೊರೋಗಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದಕ್ಕೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರವೆಂದರೆ ಮನೊವೈದ್ಯರನ್ನು ಕಂಡು ಚಿಕಿತ್ಸೆಕೊಡಿಸಿ, ಆ ರೋಗಿಯ ಪರಿಸರವನ್ನು ಬದಲಾಯಿಸಬೇಕು, ಆ ಪರಿಸರ ನಾವೇ ಆಗಿದ್ದ ಪಕ್ಷದಲ್ಲಿ ನಾವುಗಳು ಬದಲಾಗಬೇಕು.

ಅದ್ಧೂರಿ ಮದುವೆಗೂ ಮುನ್ನ ಚಿಂತಿಸಿ

– ಬಿ.ಜಿ. ಗೋಪಾಲ ಕೃಷ್ಣ

ಒಂದು ಕ್ಷಣ ಏಕಾಂತದಲ್ಲಿ ಕುಳಿತು ಕಣ್ಣು ಮುಚ್ಚಿ ಯೋಚಿಸಿ ನೋಡಿ, ಮಾಸಿದ ಹರಕಲು ಬಟ್ಟೆ, ಕೆದರಿದ ಕೂದಲು, ಸ್ನಾನ ಕಂಡು ಅದೆಷ್ಟೋ ದಿನಗಳಾದ ದೇಹ, ಪಿಳಿಪಿಳಿ ಕಣ್ಣುಗಳು, ಮುಗ್ಧ ಮನಸ್ಸಿನ ಪುಟ್ಟ ಪುಟ್ಟ ಕೈ ಚಿಂದಿಯನ್ನು ಅರಸುತ್ತಾ ನಗರಸಭೆಯ ತೊಟ್ಟಿ ಸ್ಥಳಕ್ಕೆ ಬಂದಾಗ, ಅಲ್ಲಿ ನಾವು ಬಿಸಾಡಿದ ಅನ್ನ ಸಿಕ್ಕಾಗ, ಆ ಮುಗ್ಧ ಮನಸ್ಸಿನ ಸಂತೋಷಕ್ಕೆ ಆಕಾಶವೇ ಮೂರು ಗೇಣು! ಇಂತಹ ಸಮಾಜದಲ್ಲಿ ನಮಗೆ ಅದ್ಧೂರಿ ಮದುವೆ ಬೇಕೆ !?

ಅತಿವೃಷ್ಠಿ, ಅನಾವೃಷ್ಠಿಯಿಂದ ಬಳಲಿ ಬೆಂಡಾದ ರೈತಾಪಿವರ್ಗ, ಗುಳೆ ಹೋಗುತ್ತಿರುವ ಕೂಲಿ ಕಾರ್ಮಿಕ ಬಂಧುಗಳು, ಓದು ಬರಹ ಕಲಿತು ಸ್ವಉದ್ಯೋಗಕ್ಕಾಗಿ ಬಂಡವಾಳವಿಲ್ಲದೆ ಆಕಾಶ ನೋಡುತ್ತ ಕುಳಿತ ಯುವಕರು, ಬೆಳೆದು ನಿಂತ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಬಡ ತಂದೆ ತಾಯಂದಿರು ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿರುವ ಭಾರತ ಮಾತೆಯ ಮಡಿಲಲ್ಲಿ, ನಿಮಗೆ ಅದ್ಧೂರಿ ಮದುವೆ ಬೇಕೆಂದೆನಿಸಿದರೆ, ಇದು ನಿಮ್ಮ ತಪ್ಪಲ್ಲ. ನಿಮ್ಮ ಅಂತಸ್ತಿನದು.

ಸಾಲದಲ್ಲಿ ಅದ್ಧೂರಿ ಮದುವೆಯಾಗಿ, ನಂತರ ಸಾಲ ತೀರಿಸಲು ಮಾನಸಿಕ, ಭೌತಿಕವಾಗಿ ಪಡಬಾರದ ಕಷ್ಟಪಡುತ್ತಾ ದಾಂಪತ್ಯದ ಮಧುರ ಕ್ಷಣಗಳನ್ನು ಕಳೆದು ಕೋಂಡವರು ನಮ್ಮೊಂದಿಗಿದ್ದಾರೆ. ಅಕ್ಕ ಅಥವಾ ತಂಗಿಯ ಮದುವೆಯ ಸಾಲ ತೀರಿಸಲು ತಮ್ಮ ಅಥವಾ ಅಣ್ಣನ ವಿದ್ಯಾಭ್ಯಾಸ ಮೊಟಕುಗೊಳಿಸಿರುವವರನ್ನು ನಾವು ನೋಡಿದ್ದೇವೆ.

ಒಂದು ಅಂದಾಜಿನ ಪ್ರಕಾರ ಮಧ್ಯಮ ವರ್ಗದವರ ಮದುವೆಗೆ 5 ರಿಂದ 15 ಲಕ್ಷ ರೂ ಬೇಕಾಗುತ್ತದೆ. expensive-wedding-banquetsಮಧ್ಯಮ ವರ್ಗದಿಂದ ಕೆಳಗಿರುವವರ ಮದುವೆ ಖರ್ಚು 1 ರಿಂದ 3 ಲಕ್ಷ ರೂ. ಅತಿ ಶ್ರೀಮಂತರ ಮದುವೆಯಲ್ಲಿ ಊಹೆಗೂ ನಿಲುಕದ ಆಡಂಬರದ ಅದ್ಧೂರಿತನ. ಕೋಟಿ ಕೋಟಿ ಹಣದ ಮಾರಣ ಹೋಮ. ಭಾರತ ಮೂಲದ ಉಕ್ಕಿನ ಉದ್ಯಮಿ ಮಿತ್ತಲ್ ತನ್ನ ಮಗಳ ಮದುವೆಗೆ ಮಾಡಿದ ಖರ್ಚು 600 ಲಕ್ಷ ಡಾಲರ್‌ಗಳು (ಆಗ ಸುಮಾರು 240 ಕೋಟಿ ರೂಪಾಯಿಗಳು). ಅದೂ ಕೇವಲ 1000 ( ಒಂದು ಸಾವಿರ) ಆಮಂತ್ರಿತರಿದ್ದ ವಿವಾಹ, 6 ದಿನಗಳ ಮದುವೆ. ಆಮಂತ್ರಣ ಪತ್ರಿಕೆ ಇದ್ದದು ಬೆಳ್ಳಿಯ ಡಬ್ಬಿಯಲ್ಲಿ. ಜೊತೆಯಲ್ಲಿ ವಿಮಾನದ ಟಿಕೇಟ್, ಸ್ಟಾರ್ ಹೋಟಲ್ ಒಂದರಲ್ಲಿ ವಾಸ್ತವ್ಯದ ಮುಂಗಡ ಟಿಕೇಟ್.

ನಮ್ಮ ದೇಶದ 15% ತರಕಾರಿ, ದವಸ ಧಾನ್ಯಗಳು ಮದುವೆ ಮುಂಜಿಗಳಿಗಾಗಿ ವಿನಿಯೋಗವಾಗುತ್ತಿದೆ. ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ವರ್ಷಕ್ಕೆ 2 ಕೋಟಿ ಯುವಕ ಯುವತಿಯರ ಮದುವೆಗಳು ನೆಡೆಯುತ್ತವೆ. ಆ ಮದುವೆಗೆ ಖರ್ಚಾಗುವ ಮೊತ್ತ 2 ಲಕ್ಷ ಕೋಟಿ ರೂ ನಿಂದ 6 ಲಕ್ಷ ಕೋಟಿ ರೂಪಾಯಿಗಳು.

ವಿವಾಹಗಳಿಂದ ಬದುಕು ನೆಡೆಸುತ್ತಿರುವ ಕಂಪನಿಗಳು, ಕೇಟರರ್‌ಗಳು ಹೀಗೆ ಹಲವಾರು ಕುಟುಂಬಗಳು ಇದ್ದಾರೆ ನಿಜ. ಆದರೆ ಒಂದು ವರ್ಗದ ಸಮಾಜ ಮಾತ್ರ ಇದರಿಂದ ಬದುಕು ನಡೆಸಲು ಸಾಧ್ಯ. ಬಡವರ, ಹಸಿದವರ, ಜಮೀನಿದ್ದೂ ವ್ಯವಸಾಯ ಮಾಡಲಾಗದ ರೈತಾಪಿ ವರ್ಗದವರ ಕಣ್ಣೀರು ನಮಗ್ಯಾರಿಗೂ ಕಾಣಿಸುತ್ತಿಲ್ಲ.

ಹಸಿದ ಜನರಿರುವ 118 ರಾಷ್ಟ್ರ್ಟಗಳ ಸಾಲಿನಲ್ಲಿ 94 ನೇ ಸ್ಥಾನ ದಲ್ಲಿ ನಾವಿದ್ದೇವೆ. ಮದುವೆ, ಮುಂಜಿ, ಸಮಾರಂಭಗಳಲ್ಲಿ ಆಹಾರವನ್ನು ಅಪವ್ಯಯ ಮಾಡುವುದು ಶಿಕ್ಷಾರ್ಹ ಅಪರಾದ ಎಂದು ಆಹಾರ ಮಂತ್ರಿ ಕೆ.ವಿ. ಥಾಮಸ್ ಹೇಳಿದ್ದು ಸಮಂಜಸವಾಗೇ ಇದೆ.

‘ನನ್ನಲ್ಲಿ ಸಾಕಷ್ಟು ಹಣವಿದೆ, ಮದುವೆಯಾಗುವುದು ಒಂದೇ ಸಲ. ಆದುದರಿಂದ ಆಡಂಬರದ ಅದ್ಧೂರಿ ಮದುವೆಯಾಗಲು ಬಯಸುತ್ತೇನೆ’ ಎನ್ನುವುದಾದರೆ ಮತ್ತೊಮ್ಮೆ ಯೋಚಿಸಿ. ಮನಸ್ಸು ಬದಲಾಯಿಸಿ ಸರಳ ವಿವಾಹವಾಗಿ. ಉಳಿದ ಹಣವನ್ನು ನಿಮ್ಮದೇ ಉತ್ತಮ ಭವಿಷ್ಯಕ್ಕಾಗಿ ಕೂಡಿಡಿ ಅಥವಾ ನಿಮ್ಮದೇ ಹೆಸರಿನಲ್ಲಿ ಸಮಾಜದ ಸೇವೆಗಾಗಿ ಸದ್ವಿನಿಯೋಗ ಮಾಡಿ. ಬಡವರ, ದೀನ ದಲಿತರ ಕಣ್ಣೀರನ್ನು ಒರೆಸಲು ಸಹಾಯ ಮಾಡಿ. ಸರಳ ವಿವಾಹ ಮಾಡಲು ಇಷ್ಟವಿದ್ದರೂ, ಸಮಾಜಕ್ಕೆ ಅಂಜಿ ಸಾಧಿಸಲಾಗದವರಿಗೆ ನೀವು ಪ್ರೇರಕರಾಗಿ.

ಮದುವೆಯಾಗುವುದು ವಧು ಮತ್ತು ವರನ ಒಪ್ಪಿಗೆಯ ಮೇರೆಗಾದರೂ ಮದುವೆ ಎಲ್ಲಿ, ಯಾವಾಗ, ಹೇಗೆ ನೆಡೆಯಬೇಕು ಎಂಬುವುದು ಹಿರಿಯರು ನಿರ್ಧರಿಸುತ್ತಾರೆ. ಸಮಾಜ ಬದಲಾಗಿದೆ, ವಸ್ತುಸ್ಥಿತಿ ಬದಲಾಗಿದೆ. ಸಂದರ್ಭಕ್ಕನುಸಾರವಾಗಿ ನಿರ್ಧರಿಸುವ ಸಾಮರ್ಥ್ಯ ಮಕ್ಕಳನ್ನು ಹೆತ್ತವರಿಗಿರುವುದಿಲ್ಲವೆ? ಸ್ವಲ್ಪ ನಮ್ಮ ಕುರುಡು ಸಮಾಜದ ಅಂತಸ್ತನ್ನು ಕಡೆಗಣಿಸಿ ಯೋಚಿಸಿದರಾಯಿತು.

ಜ್ಯೋತಿಷ್ಯಕ್ಕೆ ಭವಿಷ್ಯ ಉಂಟೆ? ಅದು ವಿಜ್ಞಾನವೇ?

– ಬಿ.ಜಿ.ಗೋಪಾಲಕೃಷ್ಣ

ಹಿಂದಿನ ದಿನಗಳಲ್ಲಿ ಜ್ಯೋತಿಷ್ಯವನ್ನು ಕೇಳಿ ಅದರ ಫಲಾಫಲಗಳನ್ನು ಒರೆಹಚ್ಚಿ ನೋಡದೆ ಮರೆತು ಬಿಡುತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇಳಿದ ಜ್ಯೋತಿಷ್ಯವನ್ನು ಕಾಲದ ಆಗುಹೋಗುಗಳೊಡನೆ ತಾಳೆಹಾಕಿ ನೋಡುವ ಪ್ರವೃತ್ತಿ ಬೆಳೆಯುತ್ತಿದೆ. ಈ ಪ್ರವೃತ್ತಿಯೇ ಮುಂದೊಂದು ದಿನ ಜ್ಯೋತಿಷ್ಯಕ್ಕೆ ಚ್ಯುತಿಯಾಗಲಿದೆ. ಜ್ಯೋತಿಷ್ಯ ನಿಜವಾಗಿಯೂ ವಿಜ್ಞಾನದ ರೀತಿ ಕರಾರುವಾಕಾಗಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲ್ಲಿಲ್ಲವೇನೊ.

ಜ್ಯೋತಿಷ್ಯ ಒಂದು ರೀತಿ ಕೆಟ್ಟು ನಿಂತ ಗಡಿಯಾರದಂತೆ. ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರೆಡು ಬಾರಿ ಸರಿಯಾದ ಸಮಯ ತೋರುವಂತೆ. ಜ್ಯೋತಿಷಿಗಳು ಹೇಳಿದ ಭವಿಷ್ಯಗಳಲ್ಲಿ ಅಗೂಂದು ಈಗೂಂದು ಕಾಕತಾಳಿಯವೆಂಬಂತೆ ನಿಜವಾಗಿ ಬಿಡಬಹುದು. ಇದೇ ವಿಷಯ ಊರೆಲ್ಲಾ ಪ್ರಚಾರ ಪಡೆದು ಆ ಜ್ಯೋತಿಷಿಯೇ ಪ್ರಖ್ಯಾತಿ ಹೊಂದಿ ಅವಿದ್ಯಾವಂತ ಮುಗ್ಧ ಅಸಹಾಯಕರನ್ನು ಶೋಷಣೆಮಾಡಲು ಪ್ರಾರಂಬಿಸಿಯೇ ಬಿಡುತ್ತಾರೆ. ನಿಜ ಬಣ್ಣ ಬಯಲಾಗುವುದರೊಳಗೆ ಅವರ ಅಂತಸ್ತು ಬೇರೆಯದೇ ಆಗಿರುತ್ತದೆ.

ಜ್ಯೋತಿಷಿಗಳ ಪ್ರಕಾರ ಬ್ರಹ್ಮ ಬರೆದ ಹಣೆಬರಹidiotic-brahmanda ಬದಲಾಯಿಸಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಜ್ಯೋತಿಷ್ಯವನ್ನೇಕೆ ಕೇಳಬೇಕು? ಜ್ಯೋತಿಷ್ಯ ಕೇಳಿ ಭಯದಿಂದ ಶಾಂತಿ, ಹೋಮ ಹವನಗನ್ನೇಕೆ ಮಾಡಿಸಬೇಕು? ಶಾಂತಿ, ಹೋಮ ಹವನಗಳಿಗೆ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಿದೆಯೆ? ಅಥವಾ ಹೋಮ, ಹವನ ಯಾರನ್ನು ಸಂಪ್ರೀತಿಗೊಳಿಸುವ ಸಲುವಾಗಿ? ದೇವರು ನಮ್ಮನ್ನು ಅದು ಬೇಕು, ಇದು ಬೇಕೆಂದು ಕೇಳುವನೇ? ಜ್ಯೋತಿಷ್ಯ ದುರ್ಬಲ ಮನಸ್ಸುನ್ನು ಮತ್ತಷ್ಟು ದುರ್ಬಲಗೊಳಿಸಿ ಭಯವನ್ನು ಹೆಚ್ಚಿಸುತ್ತದೆಯೇ ಹೊರತು ಮತ್ತೇನನ್ನೂ ಮಾಡಲು ಸಾಧ್ಯವಿಲ್ಲಾ.

ಜ್ಯೋತಿಷ್ಯಶಾಸ್ತ್ರ ಗಣಿತದ ಲೆಕ್ಕಾಚಾರಗಳನ್ನು ಹೊಂದಿರುವ ವಿಜ್ಞಾನವೆಂದು ಪ್ರತಿಪಾದಿಸಲು ಸಾಧ್ಯವೇ? ಜ್ಯೋತಿಷ್ಯ ಶಾಸ್ತ್ರದಲ್ಲಿ ಗಣಿತವನ್ನು ಬಳಸಿದ ಮಾತ್ರಕ್ಕೆ ಅದು ವಿಜ್ಞಾನವಾಗುವುದಿಲ್ಲಾ. ವಿಜ್ಞಾನವೆಂದರೆ ಪಂಚೇಂದ್ರಿಯಗಳ ಅನುಭವಕ್ಕೆ ಬರುವಂತಿರಬೇಕು. ನಮ್ಮ ಅನುಭವಗಳನ್ನು ಬೇರೆಯವರ ಮುಂದೆ ಪ್ರಕಟಪಡಿಸಿ, ಅವರ ಅನುಭವಕ್ಕೂ ಬರುವಂತಿದ್ದು ನೂರಲ್ಲಾ ಸಾವಿರ ಬಾರಿ ಬೇರೆ ಬೇರೆಯವರು ಪ್ರಯತ್ನಿಸಿದರೂ ಒಂದೇ ಫಲಿತಾಂಶವಿರಬೇಕು. ಇದುವೇ ವಿಜ್ಞಾನ.

ಆದರೆ ಇಬ್ಬರು ಬೇರೆ ಬೇರೆ ಜ್ಯೋತಿಷಿಗಳು ಹೇಳುವ ಒಂದೇ ವ್ಯಕ್ತಿಯ ಜ್ಯೋತಿಷ್ಯದ ಫಲಾಫಲಗಳು ಬೇರೆ ಬೇರೆಯದೇ ಹಾದಿಯಲ್ಲಿರುತ್ತವೆ. ಅಂದ ಮೇಲೆ ಜ್ಯೋತಿಷ್ಯ ಶಾಸ್ತ್ರ ವಿಜ್ಞಾನದೊಂದಿಗೆ ತಳುಕು ಹಾಕಿಕೊಳ್ಳಲು ಪ್ರಯತ್ನಿಸುವುದೇಕೆ? ಅದೇ ಒಂದು ಸ್ವತಂತ್ರ ಶಾಸ್ತ್ರವಾಗಿ ಮುಂದುವರಿಯಬಾರದೇಕೆ? ಅಥವಾ ವಿಜ್ಞಾನವೇ ಅಂತಿಮ ಸತ್ಯವಾಗಿರುವುದರಿಂದಲೇ?

ವಿಜ್ಞಾನದಲ್ಲಿ ಅಂದುಕೊಂಡಿದ್ದು ಸಂಭವಿಸಿಯೇ ತೀರುತ್ತದೆಯೇ ಹೋರತು, 2012ರ ಪ್ರಳಯದ ರೀತಿ ಹೆದರಿ ಮುಂದೆ ಹೋಗುವುದಾಗಲೀ, ಸಂಭವಿಸದೇ ಇವುದಾಗಲೀ ಸಾಧ್ಯವಿಲ್ಲ. ವಿಜ್ಞಾನದ ಪ್ರಸಕ್ತ ಕಲ್ಪನೆಗೆ ನಿಲುಕದ ಅನೇಕ ನೈಸರ್ಗಿಕ ವಿಸ್ಮಯಗಳು ನೆಡೆಯುತ್ತಿವೆ, ಆದುದರಿಂದಲೇ ಪ್ರತಿದಿನ, ಪ್ರತಿಕ್ಷಣ ಸಂಶೋಧನೆಗಳು ನಡೆಯುತ್ತಿರುವುದು.

ತಮ್ಮ ಭವಿಷ್ಯವನ್ನೇ ತಿಳಿಯದ ಜ್ಯೋತಿಷಿಗಳು, ಅಸ್ತಿತ್ವದಲ್ಲಿ ಇರದವುಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು (ಉದಾಹರಣೆಗೆ ರಾಹು ಮತ್ತು ಕೇತು), jyotishaಕೆಲವನ್ನು ತಪ್ಪಾಗಿ ಗ್ರಹಿಸಿ (ನಕ್ಷತ್ರವಾದ ಸೂರ್ಯ ಮತ್ತು ಭೂವಿಯ ಉಪಗ್ರಹ ಚಂದ್ರನನ್ನು ಗ್ರಹಗಳೆಂದು ಪರಿಗಣಿಸಿ), ಗ್ರಹಗಳ ಚಲನೆಯನ್ನು ಲೆಕ್ಕಾಚಾರ ಮಾಡಿ, ಪ್ರಾಣಿಗಳ (ಮನುಷ್ಯ ಸಹ ಒಂದು ಪ್ರಾಣಿ) ಅಥವಾ ದೇಶದ ಭವಿಷ್ಯವನ್ನು ಹೇಳಲು ಸಾಧ್ಯವೇ? ಗ್ರಹಗತಿಗಳ ಅಧ್ಯಯನ ಕರಾರುವಾಕ್ಕಾಗಿ ಖಗೋಳ ವಿಧ್ಯಮಾನಗಳನ್ನು ತಿಳಿಸಬಹುದೇ ಹೋರತು. ಯಾವುದೇ ಪ್ರಾಣಿಯ ಭವಿಷ್ಯವನ್ನಲ್ಲ.

‘ಗುರು ಆ ಮನೆಗೆ ಬಂದರೆ, ಶುಕ್ರ ಈ ಮನೆಗೆ ಬಂದರೆ’ ಎಂಬ ಸಂಭವನೀಯತೆಗಳ ಮೇಲೆ ಭವಿಷ್ಯ ಹೇಳುವುದಾದರೆ. ನಿಮ್ಮ ಗ್ರಹಗತಿಗಳ ಲೆಕ್ಕಾಚಾರದಲ್ಲಿ ಮಾಡಿದ್ದೇನು? ನೀವೇ ಹೇಳಿದ ಭವಿಷ್ಯದ ಗತಿಯೇನು? ಹೇಳಿದ ಭವಿಷ್ಯ ತಪ್ಪಾದರೆ. ಪೂರ್ವಜನ್ಮದ ಕರ್ಮ ಸಿದ್ಧಾಂತದ ಹೆಚ್ಚುವರಿ ಇತಿಹಾಸ ಬೇರೆ. ಹಾಗಾದರೆ ಸ್ವರ್ಗ ಅಥವಾ ನರಕಗಳ ಪರಿಕಲ್ಪನೆಗಳು ನಮ್ಮ ಪೂರ್ವಜನ್ಮದ ಪಾಪವನ್ನು ತೊಳೆಯದೆ ಮಾಡಿದ್ದೇನನ್ನು?

ಜಾತಕ ಫಲ , ರಾಶಿ, ನಕ್ಷತ್ರ , ಹೆಸರುಬಲಗಳೆಲ್ಲವನ್ನು ನೋಡಿ ಸರಿಯಾದ ಮುಹರ್ತದಲ್ಲೇ ಮದುವೆಯಾದ ಪತಿಪತ್ನಿಯರು ಮನಸ್ತಾಪವಿಲ್ಲದೆ ಅಥವಾ ಸಮಸ್ಯೆಗಳಿಲ್ಲದೆ ಬದುಕಿ ಬಾಳಿದ್ದಾರೆಯೇ? ಸಂಸಾರವೆಂದ ಮೇಲೆ ವಿರಸ, ಮನಸ್ತಾಪ ಸಮಸ್ಯೆ ಸಾಮಾನ್ಯವೆಂದಾದರೆ ಜಾತಕ ನೊಡೇನು ಉಪಯೋಗ? ವಧು-ವರರ ಕುಟುಂಬಗಳ ನಡುವೆ ಒಪ್ಪಿಗೆಯಾದ ಮದುವೆಗೆ ವಧು-ವರರ ಗಣಕೂಟ ಕೂಡಿಬರಲಿಲ್ಲಾವಾದಲ್ಲಿ ಹೆಸರು ಬದಲಾಯಿಸಿ ಕೂಡಿಸಿದರೆ ಹಟ್ಟಿದ ನಕ್ಷತ್ರಗಳು ಬದಲಾಗುತ್ತವೆಯೇ?

ಜ್ಯೋತಿಷಿಗಳ ಭವಿಷ್ಯ ನಿಜವೇ ಆಗುವುದಾದರೆ, ನಮ್ಮ ದೇಶದ ಅವಘಡಗಳ ಭವಿಷ್ಯ ಈಗಲೇ ಹೇಳಿಬಿಡಿ! ಈ ವರ್ಷ ಏಲ್ಲೆಲ್ಲಿ ಸಾರಿಗೆ ಅಪಘಾತಗಳು ಸಂಭವಿಸುತ್ತವೆ? ಭೂಕಂಪವಾಗುವ ಸ್ಥಳಗಳಾವುವು? ಜ್ಯಾಲಾಮುಖಿಗಳು ಎಲ್ಲೆಲ್ಲಿ ಬಾಯ್ದೆರೆಯುತ್ತವೆ? ಯಾವ ಯಾವ ಪ್ರದೇಶಗಳಲ್ಲಿ ಬರಗಾಲ ಬರಲಿದೆ? ಸುನಾಮಿ ಅಪ್ಪಳಿಸಲಿರುವ ಕರಾವಳಿ ತೀರಗಳಾವುವು? ಎಂಬುದನ್ನು ಒಮ್ಮೆಲೇ ಹೇಳಿಬಿಡಿ.

ಸಾಧ್ಯವಾಗದಿದ್ದಲ್ಲಿ 2012ರ ಪ್ರಳಯದಂತೆ ಮುಗ್ಧ, ಬಡ ಜನರಲ್ಲಿ ಅಂಧಶ್ರದ್ಧೆಯನ್ನು ಬಿತ್ತಿ ಅವರ ಗೋಳಾಟದಲ್ಲಿ ನಿಮ್ಮ ಹೊಟ್ಟೆ ಹೊರೆಯಬೇಡಿ, ಪ್ಲೀಸ್.