Category Archives: ಶಿವರಾಮ್ ಕೆಳಗೋಟೆ

ಇದು ಕೇವಲ ಕೊಲೆಯಲ್ಲ!

– ಶಿವರಾಮ್ ಕೆಳಗೋಟೆ

ಕಳೆದ ನವೆಂಬರ್ ಅಮಾವಾಸ್ಯೆಯಂದು ರಾಣೆಬೆನ್ನೂರು ತಾಲೂಕಿನ ತಿರುಮಲದೇವರ ಕೊಪ್ಪದಲ್ಲಿ ನಡೆದು ಹೋದ ದಲಿತ ಯುವಕನ ನರಬಲಿ ಪ್ರಕರಣ ತೆರೆಯ ಹಿಂದೆ ಸರಿದು ಹೋಗಿದೆ. ಪ್ರಕರಣವನ್ನು ಒಂದು ಸಾಧಾರಣ ಕೊಲೆ ಎಂದು ಬಣ್ಣಿಸಲು ಹೊರಟ ಪೊಲೀಸರು ಅವಸರದಲ್ಲಿ ಅಮಾಯಕ ಯುವತಿ ಮುಖಕ್ಕೆ ಮಸಿ ಬಳಿದಿದ್ದಾರೆ. ಔಟ್‍ಲುಕ್‍ನ ಹಿರಿಯ ಸಹಾಯಕ ಸಂಪಾದಕ, ಕನ್ನಡಿಗರು ಹೆಮ್ಮೆ ಪಡುವಂತಹ ಬರಹಗಾರ, ಪತ್ರಕರ್ತ ಸುಗತ ಶ್ರೀನಿವಾಸರಾಜು ಹಾವೇರಿ, ರಾಣೆಬೆನ್ನೂರು ಅಲೆದಾಡಿ ವಿಸ್ತೃತವಾದ ತನಿಖಾ ವರದಿ ಮಾಡದೇ ಹೋಗಿದ್ದರೆ, ಈ ಹೊತ್ತಿಗೂ ಈ ಪ್ರಕರಣ ಸ್ಟಷ್ಟವಾಗಿ ಹೊರಬರುತ್ತಿರಲಿಲ್ಲ.

ಬಸವರಾಜ ಕಡೇಮನಿ ಎಂಬ ಯುವಕ ಹತ್ಯೆಯಾಗುತ್ತಾನೆ. ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆ ವರದಿ ಹೇಳುವಂತೆ ‘ಬಸವರಾಜನ ಮುಖ ಚಪ್ಪಟೆಯಾಗಿದೆ. ಎರಡೂ ಕಡೆಯಿಂದ ಬಲವಾಗಿ ಒತ್ತಲಾಗಿದೆ. ಹಣೆಯ ಮೇಲೆ 5 ಸೆಂಟಿಮೀಟರ್ ನಷ್ಟು ಆಳದ ಗಾಯವಿದೆ. ಬಲಗಣ್ಣು ಅಪ್ಪಚ್ಚಿಯಾಗಿದೆ. ರುಂಡ ಹಾಗೂ ಮುಖದ ಎಲ್ಲಾ ಮೂಳೆಗಳು ತುಂಡಾಗಿವೆ. ಮೆದುಳು ಒಂದು ಮಾಂಸದ ಮುದ್ದೆಯಂತಾಗಿದೆ. ಬಲ ಮತ್ತು ಎಡ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿವೆ. ಹೃದಯ ಖಾಲಿ (ಕಾಣೆಯಾಗಿದೆ ಎಂದು ಓದಿಕೊಳ್ಳಬೇಕು). ತೀವ್ರ ಆಘಾತ ಮತ್ತು ಮೆದುಳಿನ ರಕ್ತಸ್ರಾವದಿಂದ ವ್ಯಕ್ತಿಯ ಸಾವು ಸಂಭವಿಸಿದೆ’.

ಬಸವರಾಜನ ಹೆಣ ಬೇಲಿಯಲ್ಲಿ ಕಂಡಾಗ ಅದನ್ನು ಮೊದಲು ನೋಡಿದವರ ಪ್ರಕಾರ ಅವನ ದೇಹದ ತುಂಬೆಲ್ಲಾ ಅರಿಶಿನ ಮತ್ತು ಕುಂಕುಮ ಸವರಲಾಗಿತ್ತು. ಅವನ ತಲೆಗೂದಲಿಗೆ ಎಣ್ಣೆ ಹಚ್ಚಲಾಗಿತ್ತು. ಬಾಯಿಗೆ ಹತ್ತಿ ತುರುಕಿದ್ದರು. ಹಣೆ ಭಾಗದಲ್ಲಿ ಮೊಳೆಯೊಂದನ್ನು ಸುತ್ತಿಗೆಯಿಂದ ಹೊಡೆದಿರಬಹುದೇನೋ ಎಂಬ ಸಂಶಯಕ್ಕೆ ಕಾರಣವಾಗುವಂತೆ ಒಂದು ರಂಧ್ರವಿತ್ತು. ಬಲಗಣ್ಣು ಅಪ್ಪಚ್ಚಿಯಾಗಿದ್ದು ಸ್ಪಷ್ಟವಾಗಿತ್ತು. ಕಿವಿ, ತುಟಿ ಹರಿದಿದ್ದವು ಮತ್ತು ಕೆಲ ಹಲ್ಲುಗಳನ್ನೂ ಕಿತ್ತಿದ್ದರು. ಮುಖ ಅದೆಷ್ಟು ವಿಕಾರಗೊಂಡಿತ್ತೆಂದರೆ, ಅವನು ಬಸವರಾಜನೇ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತಿರಲಿಲ್ಲ.

ಆದದ್ದಿಷ್ಟು: ಬಸವರಾಜನ ಕುಟುಂಬ ಮೇಲ್ಜಾತಿಯ ಜಮೀನ್ದಾರ ಬಸವನಗೌಡನ ಮನೆ ಮತ್ತು ಜಮೀನಿನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು. ಜಮೀನ್ದಾರ ಇತ್ತೀಚೆಗಷ್ಟೆ ಕಟ್ಟಿಸಿದ್ದ ಮನೆಯ ವಾಸ್ತು ಸಮಸ್ಯೆಗೆ ಪರಿಹಾರಕ್ಕಾಗಿ ಸ್ಥಳೀಯ ಮಂತ್ರವಾದಿ ನಿಜಲಿಂಗಸ್ವಾಮಿಯನ್ನು ಸಂಪರ್ಕಿಸಿದ. ಮಂತ್ರವಾದಿ ಹೇಳಿದ್ದು ನರಬಲಿಯ ಪರಿಹಾರ! ಹೀಗೆ ಒಬ್ಬ ದಲಿತ ಯುವಕ ಹತನಾದ. ಇದು ‘ಕೇವಲ ಕೊಲೆಯಲ್ಲ’ ಎಂದು ನಿರ್ಧಾರಕ್ಕೆ ಬರಲು ಮರಣೋತ್ತರ ಪರೀಕ್ಷೆ ವರದಿಯಷ್ಟೇ ಸಾಕು. ಆದರೆ ಪೊಲೀಸರು, ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಎಂ. ಉದಾಸಿ ಇದು ‘ನರಬಲಿ’ಅಲ್ಲ ಕೇವಲ ಕೊಲೆ ಅಂದರು. ಪೊಲೀಸರು ಹೇಳ್ತಾರೆ, ಈ ಹದಿನೇಳು ವರ್ಷದ ಯುವಕ ಜಮೀನ್ದಾರನ ಮಗ ನಿಂಗನಗೌಡನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಆ ಕಾರಣ ಸಿಟ್ಟಿಗೆದ್ದ ನಿಂಗನಗೌಡ ಬಸವರಾಜನನ್ನು ಕೊಂದ.

ವಿಚಿತ್ರ ನೋಡಿ. ನಿಂಗನಗೌಡನಿಗೆ ಮದುವೆಯಾಗಿ ಆ ಹೊತ್ತಿಗೆ ಕೇವಲ ಎಂಟು ತಿಂಗಳು ಆಗಿರುತ್ತೆ. ವಧು ದಾವಣಗೆರೆ ಮೂಲದವಳು. ಮದುವೆಯಾಗಿ ಗಂಡನ ಮನೆಗೆ ಬಂದು ಆಕೆ ಉಳಿದುಕೊಂಡದ್ದು ಹೆಚ್ಚೆಂದರೆ 20 ದಿನ ಮಾತ್ರ, ಅದೂ ಎರಡು ಕಂತಿನಲ್ಲಿ. ಪೊಲೀಸರು ನರಬಲಿ ಪ್ರಕರಣ ಮುಚ್ಚಿ ಹಾಕಿ ಕೇವಲ ಕೊಲೆ ಎಂದು ಸಾಬೀತು ಮಾಡಲು ಇಂತಹ ಕತೆ ಕಟ್ಟಿರುವುದು ಸ್ಪಷ್ಟ. ಆ ನವವಿವಾಹಿತೆ ಮತ್ತು ಅವರ ಪೋಷಕರು ಇಂತಹ ಹೇಳಿಕೆಯಿಂದ ಅದೆಷ್ಟು ನೊಂದಿದ್ದಾರೋ. ಅವರ ಪೋಷಕರು ಒಮ್ಮೆ ಜೈಲಿನಲ್ಲಿದ್ದ ಅಳಿಯನನ್ನು ಭೇಟಿಯಾಗಿ ಮಗಳ ಬಗ್ಗೆ ಹೀಗೇಕೆ ಹೇಳಿದೆ ಎಂದು ಕೇಳಿದ್ದಾರೆ. ಅವನು ಉತ್ತರಿಸಿದನಂತೆ, “ಇದು ನನಗೆ ಗೊತ್ತಿಲ್ಲ. ಪೊಲೀಸರನ್ನು ಕೇಳಿ’. ಒಬ್ಬ ದಲಿತ ಸತ್ತ. ಯುವತಿಗೆ ಆ ಹುಡುಗನೊಂದಿಗೆ ಕಲ್ಪಿಸಿ ಅವಳನ್ನೂ ಅವಮಾನಿಸಿತು ಈ ವ್ಯವಸ್ಥೆ.

ಜಿಲ್ಲಾ ರಕ್ಷಣಾಧಿಕಾರಿ ಚೇತನ್ ಸಿಂಗ್ ರಾಥೋಡ್ ಹೇಳುವಂತೆ, “ಇದು ನರಬಲಿ ಪ್ರಕರಣ ಅಲ್ಲ. ಸಾಮಾನ್ಯ ಕೊಲೆ ಪ್ರಕರಣ. ಏನೇ ಇರಲಿ, ನರಬಲಿ ಕೂಡಾ ಕಾನೂನು ಅಡಿಯಲ್ಲಿ ಒಂದು ಕೊಲೆಯಷ್ಟೇ. ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ”. ಕೇಸು ದಾಖಲಿಸುವಾಗ ನರಬಲಿ – ಕೊಲೆ ಎರಡೂ ಒಂದೇ ಆಗಬಹುದು. ಆದರೆ ತನಿಖೆ, ವಿಚಾರಣೆ ಮತ್ತು ನ್ಯಾಯಾಲಯ ತೀರ್ಪು ನೀಡುವಾಗ ಎರಡೂ ಭಿನ್ನವಾಗಿ ನಿಲ್ಲುತ್ತವೆ. ತೀರ್ಪು ನೀಡುವಾಗ ನ್ಯಾಯಾಧೀಶರಿಗೆ ‘ಹೆಂಡತಿ ಜೊತೆ ಸಂಬಂಧ ಇಟ್ಟುಕೊಂಡ ಕಾರಣ ಸಿಟ್ಟಿಗೆದ್ದು ಗಂಡ ಹತ್ಯೆ ನಡೆಸಿದ್ದಾನೆ’ ಎನ್ನುವುದಕ್ಕಿಂತ ‘ಮನೆಯ ವಾಸ್ತು ದೋಷ ಪರಿಹಾರಕ್ಕಾಗಿ ಒಬ್ಬ ದಲಿತನನ್ನು ಕ್ರೂರವಾಗಿ ಬಲಿಕೊಟ್ಟ’ ಎನ್ನುವ ತನಿಖಾ ವರದಿ ತುಂಬಾ ಭೀಕರವಾಗಿ ಕಾಣಬಹುದು.

ದಲಿತನ ನರಬಲಿ ಎನ್ನುವಾಗ ಜನರಲ್ಲಿರುವ ಮೌಢ್ಯ, ಅಂಧಾಚರಣೆ ಮತ್ತು ಮೇಲ್ಜಾತಿ ಜಮೀನ್ದಾರನ ದರ್ಪ ಎಲ್ಲವೂ ಬಯಲಿಗೆ ಬರುತ್ತದೆ. ಅಷ್ಟೇ ಅಲ್ಲ, ನರಬಲಿ ಎಂದರೆ, ಆರೋಪಿಗಳ ಪಟ್ಟಿಯಲ್ಲಿ ಮಂತ್ರವಾದಿ ಮತ್ತು ಪೂಜೆಯಲ್ಲಿ ಭಾಗಿಯಾದ ಎಲ್ಲರೂ ಸೇರುತ್ತಾರೆ. ಏಕೆ, ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ? ಜನಶ್ರೀ ವಾಹಿನಿ ತನ್ನ “ಜನಶ್ರೀ ತನಿಖೆ” ಕಾರ್ಯಕ್ರಮದಲ್ಲಿ ಸುಗತ ಶ್ರೀನಿವಾಸರಾಜು ಅವರ ವರದಿಯನ್ನು ಆಧರಿಸಿ ವಿಸ್ತೃತವಾಗಿ ನರಬಲಿ ಪ್ರಕರಣದ ಮೇಲೆ ಬೆಳಕು ಚೆಲ್ಲಿತು. ಈ ನಾಡಿನ ದಲಿತ ಮುಖಂಡರು, ವಿರೋಧ ಪಕ್ಷದ ನಾಯಕರು, ಪ್ರಜ್ಞಾವಂತ ಚಿಂತಕರು ಈ ಬಗ್ಗೆ ಒಂದಿಷ್ಟು ದನಿ ಎತ್ತಬೇಕಿದೆ. ಈ ನಾಡಿನ ಮುಖ್ಯಮಂತ್ರಿ, ಮಂತ್ರಿ ಎಲ್ಲರೂ ವಾಸ್ತು ಬಗ್ಗೆ ನಂಬಿಕೆ ಉಳ್ಳವರೇ. ಅವರು ಹೊಸ ಮನೆ ಪ್ರವೇಶಿಸುವಾಗ ಯಾವುದೋ ಪ್ರಾಣಿಯನ್ನು ಬಲಿ ಕೊಟ್ಟರು ಎಂದು ಆಗಾಗ ಸುದ್ದಿ ಓದುತ್ತಲೇ ಇರುತ್ತೇವೆ. ಹಾಗಿರುವಾಗ, ಈ ನೆಲದ ಜನಸಾಮಾನ್ಯನಿಗೆ ಮನೆಯ ವಾಸ್ತು ದೋಷ ಪರಿಹಾರಕ್ಕೆ ನರಬಲಿ ಕೊಡುವುದು ವಿಶೇಷ ಎನ್ನಿಸದಿರಬಹುದು. ಈ ಬಗ್ಗೆ ವಿಸ್ತೃತ ಚರ್ಚೆ ಆಗಬೇಕಿದೆ. ಒಂದಿಷ್ಟು ಜಾಗೃತಿ ಆಗಬೇಕಿದೆ.

(ಚಿತ್ರಕೃಪೆ: ಔಟ್‌ಲುಕ್)