Category Archives: ಮಂಜುಳ ಹುಲಿಕುಂಟೆ

ಕಡಲ ಊರಿನ ಕಣ್ಣೀರ ಕಥೆಗಳು

– ಮಂಜುಳ ಹುಲಿಕುಂಟೆ
ಬದುಕು ಕಮ್ಯುನಿಟಿ ಕಾಲೇಜು

ಕರಾವಳಿ ಮಹಿಳಾ ಲೋಕ ಕುರಿತಾಗಿ ನಮ್ಮ (ಬೆಂಗಳೂರಿನ “ಬದುಕು ಕಮ್ಯುನಿಟಿ ಕಾಲೇಜು” ವಿದ್ಯಾರ್ಥಿಗಳ) ಸಂಶೋಧನಾ ಪಯಣದಲ್ಲಿ ಒಂದೊಂದು ಹೆಣ್ಣಿನ ಒಡಲಾಳದಲ್ಲೂ ನೋವಿನ ಕಿಚ್ಚು ಬೆಸೆದ ಆಕ್ರೋಶದ ಧ್ವನಿ, ಗುಡುಗು-ಮಿಂಚುಗಳಂತೆ, ನೋವುಂಡವರ ಧ್ವನಿ ಎತ್ತರದ್ದು ಎಂಬುದು ಅರ್ಥವಾಗಿದ್ದು ಮಂಗಳೂರಿನಲ್ಲೇ.

ಕರಾವಳಿಯ ಮಹಿಳೆಯರ ಬಗ್ಗೆ ಒಂದಿಷ್ಟು ಕರುಣೆ ಕುತೂಹಲ ಹೊಂದಿದ್ದ ನಾವು, ಅವರಾಳದ ಬದುಕನ್ನು ಹತ್ತಿರದಿಂದ ನೋಡುವ ತವಕದಿಂದ ಅಲ್ಲಿಗೆ ಹೋಗಿದ್ದೆವು.

ಮೊದಲ ದಿನವೇ ನಾವು ಹೋಗಿದ್ದು “ಜನ ನುಡಿ”ಗೆ. ಅಲ್ಲಿ ಮಹಿಳೆಯರ ಮಾತು, ಅವರ ಧೈರ್‍ಯ, abhimatha-mangalooru-jananudi“ನಾವು ನೋವುಂಡವರು ಎಲ್ಲರಿಗಿಂತ ಶಕ್ತಿವಂತರು” ಎಂದು ನುಡಿದ ಮಾತುಗಳ ಕೇಳಿ ನಮ್ಮಗಳ ಬಗ್ಗೆಯೇ ಮರುಕ ಹುಟ್ಟಿತು. ನಮ್ಮಲ್ಲಿ (ಬಯಲುಸೀಮೆಯಲ್ಲಿ) ಒಂದು ಮಾತನ್ನಾಡಲೂ ಹಿಂದು ಮುಂದು ನೋಡುವ ಮಹಿಳೆಯರನ್ನು ನೋಡಿದ್ದ ನಮಗೆ ಮಂಗಳೂರಿನ ಮಹಿಳೆಯರ ಸವಾಲು ತುಂಬಿದ್ದ ಮಾತುಗಳು ನಮ್ಮ ಜಡ ಆತ್ಮಗಳಿಗೆ ಜೀವ ತುಂಬಿದಂತಾಗಿತು. ಕೋಮುವಾದ, ಜಾಗತೀಕರಣ ಭೂತಕ್ಕೆ ಬಲಿಯಾಗಿರುವ ತುಳುನಾಡ ಸಂಸ್ಕೃತಿಯ ಕುರಿತಾಗಿ ಹಲವಾರು ಮಹಿಳೆಯರನ್ನು, ಶ್ರೇಷ್ಟ ಬರಹಗಾರ್ತಿಯರನ್ನು ಮಾತನಾಡಿಸಿದೆವು. ಕೋಮುವಾದದ ವಿಷಬೀಜದ ಕರಾಳತೆ ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಬೀರಿರುವ ದುಷ್ಪರಿಣಾಮದ ಕುರಿತಾಗಿ ಅನೇಕ ಕಡೆ ಚರ್ಚಿಸಿದೆವು. ಲೇಖಕಿ ಸಾರಾ ಅಬೂಬಕರ್, “ಮಂಗಳೂರಿನಲ್ಲಿ ಕೋಮುವಾದ ಇತ್ತೀಚಿನದು ನಾವು ಇಂದಿಗೂ ಹಿಂದೂ-ಮುಸಲ್ಮಾನರು ಒಟ್ಟಿಗೆ ಬದುಕುತ್ತೇವೆ. ನಮ್ಮ ಹೆಣ್ಣು ಮಕ್ಕಳು ವಿದ್ಯಾವಂತೆಯರು. ಇಲ್ಲಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ಇದೆ, ಇದು ಉತ್ತರ ಭಾರತಕ್ಕಿಂತ ಸ್ವಲ್ಪ ಮಟ್ಟಿಗೆ ಮಹಿಳೆಯರಿಗೆ ಹೆಚ್ಚು ಮಾನ್ಯತೆ ನೀಡುವ ಪ್ರದೇಶ. ಆದರೆ ಉತ್ತರ ಪ್ರದೇಶದಲ್ಲಿ ೧೮ ವರ್ಷ ತುಂಬುವ ಮೊದಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಬಿಡುತ್ತಾರೆ, ಶಾಲೆಗೆ ಕಳಿಸುವುದಿಲ್ಲ. ನಮ್ಮಲ್ಲಿ ಅಂತ ಪದ್ಧತಿ ಇಲ್ಲ. ಮಹಿಳೆಯರು ಶಿಕ್ಷಿತರು, ಅಧಿಕಾರ ರಂಗದಲ್ಲೂ ಅವರೇ ಸ್ವತಹ ಆಡಳಿತ ನಿರ್ವಹಿಸುವಷ್ಟು ಸಬಲರು. ಅನೇಕ ಕಡೆ, ಸ್ಥಾನ ಹೆಂಡತಿಯದ್ದು ಆದರೆ ಗಂಡ ಅಧಿಕಾರ ನೆಡೆಸುತ್ತಾನೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ,” ಎಂದು ಅವರ ಹಲವಾರು ಅನುಭವಗಳನ್ನು ಹಂಚಿಕೊಂಡರು. ಅಲ್ಲಿನ ವಾತಾವರಣ ಗಮನಿಸಿದ ನನಗೆ ಅದು ಸತ್ಯವೆನಿತು.

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಮುಟ್ಟಿದ್ದು ಅತ್ರಾಡಿ ಅಮೃತಾ ಶೆಟ್ಟಿಯವರ ನುಡಿಗಳು. “ನಾವು ತುಳುನಾಡಿನವರು, ಸೂಕ್ಷ್ಮ ಮನಸ್ಸಿನವರು, ಧರ್ಮದಿಂದ ಬಂದವರಿಗೆ ನಮ್ಮ ಎದೆಯಲ್ಲಿ ಜಾಗ ಕೊಡುತ್ತೇವೆ. ಅಧರ್ಮದಿಂದ ಬಂದವರಿಗೆ ಕತ್ತಿಯ ಮೊನೆಯಲ್ಲಿ ಉತ್ತರ ನೀಡುತ್ತೇವೆ. ತುಳುನಾಡ ಸಂಸ್ಕೃತಿ ಮಾತೃ ಪ್ರಧಾನವಾದದ್ದು. athradi-amrutha-shettyಹೆಣ್ಣನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಇಲ್ಲಿ ಹೆಣ್ಣುಮಕ್ಕಳಾಗಲಿ ಎಂದು ಹರಕೆ ಹೊರುತ್ತಾರೆ, ಇಲ್ಲಿ ಹೆಣ್ಣು ಭ್ರೂಣ ಹತ್ಯೆಗಳಿರಲಿಲ್ಲ. ಇದು ಮಹಿಳೆಯರನ್ನು ಪೂಜಿಸುವ ನಾಡು. ಇಂತಹ ನಾಡಲ್ಲಿ ಸೌಜನ್ಯ ಕೊಲೆ ಪ್ರಕರಣ, ಒಂದು ಅವಮಾನಕರವಾದ ಪ್ರಕರಣ. ಇದಕ್ಕೆ ನ್ಯಾಯ ದೊರಕುವವರೆಗೂ ಈ ಪ್ರಕರಣವನ್ನು ಜೀವಂತವಾಗಿಡುತ್ತೇವೆ. ಬೇರಾವ ಹೆಣ್ಣು ಮಕ್ಕಳಿಗೂ ಇಂತ ಸಾವು-ನೋವು ಬರದಂತೆ ನೋಡಿಕೊಳ್ಳುತ್ತೇವೆ,” ಎಂದು ಶಪಥ ಮಾಡಿದರು. “ಕರಾವಳಿ ಕೆಲವು ವರ್ಷಗಳ ಹಿಂದೆ ಮಾನಸಿಕವಾಗಿ ಸಮೃದ್ಧವಾಗಿತ್ತು. ಆದರೆ ಇಂದು ಕೋಮುವಾದ, ಬಂಡವಾಳಶಾಹಿ ವ್ಯವಸ್ಥೆ, ಆಧುನಿಕರಣ ಮತ್ತು ರಾಜಕಾರಣದಿಂದ ಕಲುಷಿತವಾಗಿದೆ. ತುಳುನಾಡಿನವರಾದ ನಾವು ಸದಾ ತಲ್ಲಣಗಳೊಂದಿಗೆ, ಮತ್ತು ವೈರುಧ್ಯಗಳೊಂದಿಗೆ ಬದುಕುವವರು. ನಾವು ಗಟ್ಟಿಜನ. ಹೆಣ್ಣನ್ನು ಗೌರವಿಸುವ ಇಂತಹ ಪ್ರದೇಶದಲ್ಲಿ, ಸೌಜನ್ಯಳ ಮೇಲೆ ಆದ ಭೀಕರ ಅತ್ಯಾಚಾರ ಇಡೀ ತುಳುನಾಡಿನ ತಾಯಿ ಮನಸ್ಸುಗಳಿಗೆ ಆದ ಅತ್ಯಾಚಾರ. ಇಂತಹ ಎಷ್ಟೋ ಪ್ರಕರಣಗಳು ಆಗಿ ಹೋಗಿವೆ. ನೇತ್ರಾವತಿ ನದಿಯಲ್ಲಿ ಹರಿಯುವ ನೀರು ಇಲ್ಲಿನ ಹೆಣ್ಣಿನ ರಕ್ತ ಮತ್ತು ಕಣ್ಣೀರು” ಎಂದು ತಿಳಿಸಿದ ಅವರು, “ನಾವು ಸದಾ ತಲ್ಲಣ್ಣಗಳೊಂದಿಗೇ ಬದುಕುವವರು. ಯಾವ ಹೋರಾಟಗಳಿಗೂ ಸಿದ್ಧರಿರುತ್ತೇವೆ,” ಎಂದರು.

ನನಗನ್ನಿಸಿದಂತೆ ಮಂಗಳೂರು ಒಂದು ಬೃಹತ್ ವ್ಯಾಪಾರ ಕ್ಷೇತ್ರ. ವ್ಯಾಪಾರದಲ್ಲಿ ಮೊಗವೀರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಸಹ ಆರ್ಥಿಕವಾಗಿ ಸ್ವತಂತ್ರಳಾಗಿರುತ್ತಾಳೆ. ಬೀಡಿ ಕಟ್ಟುವುದರ ಮೂಲಕವಾದರೂ ದುಡಿಯುತ್ತಾಳೆ. ಆದ್ದರಿಂದ ಇಲ್ಲಿ ಮಹಿಳೆಯನ್ನು ಕಟ್ಟಿಹಾಕುವ ಹುನ್ನಾರದಲ್ಲಿ ಇಂತಹ ಬೆದರಿಕೆ, ಅತ್ಯಾಚಾರ, ಕೋಮುಗಲಭೆಗಳೂ ಒಂದು ಭಾಗವಾಗಿ ಸದಾ ನೆಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಮಂಗಳೂರು ಹಿಂದುತ್ವದ ಪ್ರಯೋಗಶಾಲೆಯಾಗಿ ಮಾರ್ಪಾಡಾಗುತ್ತಿದ್ದು, ಇದರ ಕರಾಳಬಾಹು ಕರಾವಳಿಯ ಮಹಿಳೆಯರ ಮೇಲೆ ಭೀಕರವಾಗಿ ಚಾಚುತ್ತಿದೆ. mangalore-women-protestಬಾಯಲ್ಲಿ ಮಂಗಳೂರು ಮಹಿಳಾ ಪ್ರಾಧಾನ್ಯತೆಯ ನಾಡಾಗಿದ್ದರೂ, ಅದು ಆ ರೀತಿ ಉಳಿದಿಲ್ಲ. ಜೊತೆಗೆ ಆಧುನಿಕತೆಯ ಭೂತ ಕೆಲವು ಸಾಂಸ್ಕೃತಿಕ ಕುಲ-ಕಸುಬುಗಳನ್ನು ಬಲಿತೆಗೆದುಕೊಳ್ಳುತ್ತಿರುವುದರಿಂದ ಅದರಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರನ್ನು ಬಲಹೀನರನ್ನಾಗಿಸಿ ಬಂಧನದಲ್ಲಿಡುತ್ತಿದೆ.

ನಾವು ಹಲವಾರು ಮಹಿಳೆಯರನ್ನು ಮಾತನಾಡಿಸಿದಾಗಲೂ, ಅವರೆಲ್ಲರ ಅಳಲು ಇದೇ ಆಗಿತ್ತು.

ಕರಾವಳಿಯ ಇಂದಿನ ಮಹಿಳೆಯರ ಬದುಕಿನ ಬಗ್ಗೆ ಮಾತನಾಡುತ್ತಾ ಗುಲಾಬಿ ಬಿಳಿಮಲೆಯವರು, “ಇಂದು ಕರಾವಳಿಯಲ್ಲಿಯೂ ಸಹ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿದೆ. ಕಾರಣ ಇತ್ತೀಚೆಗೆ ಇಲ್ಲೂ ಹೆಣ್ಣು ಭ್ರೂಣಹತ್ಯೆಗಳು ನೆಡೆಯುತ್ತಿವೆ. ಆದರೆ ವಿದ್ಯಾವಂತರಿರುವುದರಿಂದ ಇದು ಮೇಲ್ಮಟ್ಟಕ್ಕೆ ಕಾಣಿಸುವುದಿಲ್ಲ. ಹಾಗು ಮಂಗಳೂರು ಒಂದು ಕೃಷಿನಾಡು, ಕೃಷಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಬೃಹತ್ ಕೈಗಾರೀಕರಣದಿಂದಾಗಿ ಮಹಿಳೆಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಲ್ಲದೆ ಹೆಚ್ಚುತ್ತಿರುವ ಕೋಮುವಾದ ನೇರವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಇಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಷ್ಟೇ ಆಗುತ್ತಿಲ್ಲ, ಅವರ ಸಾಗಾಣಿಕೆ ಕೂಡ ನಡೆಯುತ್ತಿದೆ. ಇದು ನಮ್ಮ ನಾಡಿಗೆ ತುಂಬ ಅವಮಾನಕರವಾದದ್ದು. ಆದರೆ ಸರ್ಕಾರ ಈಗಲೂ ಸಹ ಇದರ ಕುರಿತು ಸರಿಯಾದ ಕ್ರಮ ಕೈಗೊಂಡಿಲ್ಲ,” ಎಂದು ಹೇಳಿದ್ದು ಕೇವಲ ಅವರ ಅನುಭವ ಮಾತ್ರ ಆಗಿರಲಿಲ್ಲ. ಅದು ಅವರ ಒಡಲಾಳದ ನೋವಾಗಿತ್ತು.

ಕರಾವಳಿ ಮಾತೃಪ್ರಾಧಾನ್ಯತೆಯ ನಾಡಾಗಿದ್ದರೂ, ಅಲ್ಲಿಯೂ ಸಹ ಮಹಿಳೆಯರ ಮೇಲೆ ನೆಡೆಯುವ ಶೋಷಣೆಗೆ ಮಿತಿ ಇಲ್ಲ. ಇಂದು ಮಾತೃಪ್ರಾಧಾನ್ಯತೆ ಎಂಬುದು ಬರಿಯ ಹೆಸರಿಗೆ ಉಳಿದಿರುವುದು ಎಂಬುದು ಅಲ್ಲಿನ ಮಹಿಳಾ ಚಿಂತಕರ ಅಭಿಪ್ರಾಯವಾಗಿದೆ. ಸಾಂಸ್ಕೃತಿಕ ಮತ್ತು ವಿದ್ಯಾವಂತರ ನಾಡು ಎಂದೇ ಪ್ರಖ್ಯಾತವಾಗಿರುವ ತುಳುನಾಡು ಇಂದು ಕೋಮುವಾದ, ಜಾಗತೀಕರಣ, ಮತ್ತು ಬಂಡವಾಳಶಾಹಿಗಳ ವಿಕೃತ ಹಿಡಿತದಿಂದ ನಲುಗುತ್ತಿದೆ ಎಂಬುದು ಸತ್ಯ.