Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಕಥೆ : ಆಚಾರವಿಲ್ಲದ ನಾಲಿಗೆ..

– ಡಾ.ಎಸ್.ಬಿ.ಜೋಗುರ

ಖರೆ ಅಂದ್ರ ಅಕಿ ಹೆಸರು ಶಿವಮ್ಮ. ಓಣ್ಯಾಗಿನ ಮಂದಿ ಮಾತ್ರ ಅಕಿನ್ನ ಕರಿಯೂದು ಹರಕ ಶಿವಮ್ಮ ಅಂತ. ಬಾಯಿ ತಗದರ ಸಾಕು ಅಂತಾ ರಂಡೇರು..ಇಂಥಾ ಸೂಳೇರು ಅಕಿದೇನು ಕೇಳ್ತಿ ಹುಚ್ ಬೋಸ್ಡಿ ಅಂತ ಬೈಯ್ಯೋ ಶಿವಮ್ಮ ಗಂಡಸರ ಪಾಲಿಗೂ ಒಂದಿಷ್ಟು ಬೈಗುಳ ಯಾವತ್ತೂ ಸ್ಟಾಕ್ ಇಟಗೊಂಡಿರತಿದ್ದಳು. ಹಾಲು ಕೊಡುವ ಗುರಲಿಂಗನ ಸಂಗಡ ಅವತ್ತ ಮುಂಜಮುಂಜಾನೆನೇ ಕಾಲ ಕೆರದು ಜಗಳಕ್ಕ ನಿಂತಿದ್ದಳು. ‘ಯಾವ ಪಡಸಂಟನನ್ ಹಾಟಪ್ಪನೂ ಪುಗ್ಸಟ್ಟೆ ಹಾಲ ಕೊಡಲ್ಲ, ಕೊಡತಿದ್ದರ ಚುಲೋ ಹಾಲು ಕೊಡು, ಇಲ್ಲಾಂದ್ರ ಬಿಡು.’ ಅಂತ ಮನಿಮುಂದ ನಿಂತು ಒಂದು ಸವನ ಗಂಟಲ ಹರಕೋತಿದ್ದಳು. ಗಂಡ ಶಂಕ್ರಪ್ಪ ‘ಹೋಗಲಿ ಬಿಡು, ಅದೇನು ಹಚಗೊಂಡು ಕುಂತಿ..? ಮುಂಜಮುಂಜಾನೆ’ ಅಂದಿದ್ದೇ ಶಿವಮ್ಮ ಮತ್ತಷ್ಟು ನೇಟ್ ಆದಳು. ‘ನೀವು ಕೊಟ್ಟ ಸಲಿಗೆನೇ ಇವರೆಲ್ಲಾ ಹಿಂಗಾಗಿದ್ದು. ಇಂವೇನು ಪುಗ್ಸಟ್ಟೆ ಕೊಡ್ತಾನಾ..ಹಾಂಟಪ್ಪ ? ಐತವಾರಕ್ಕೊಮ್ಮ ಬಂದು ರೊಕ್ಕಾ ತಗೊಳಂಗಿಲ್ಲಾ..’? ಅಂದದ್ದೇ ಶಂಕ್ರಪ್ಪಗ ಹೆಂಡತಿ ಅಟಾಪಾಗಲಾರದ ಹೆಣಮಗಳು ಅಂತ ಗೊತ್ತಿತ್ತು. ಅಕಿ ಒಂಥರಾ ಖರೆಖರೆ ಮುಂಡೆರಿದ್ದಂಗ. ಗಂಟೀ ಚೌಡೇರಂಗ ಗಲಗಲ ಅಂತ ಬಾಯಿ ಮಾಡಿ ತಂದೇ ಖರೆ ಮಾಡವಳು ಅಂತ ಅಂವಗ ಯಾವಾಗೋ ಗೊತ್ತಾಗೈತಿ.

ಪಾಪ ಶಂಕ್ರಪ್ಪ ಅಕಿ ಎದುರಿಗಿ ಬಾಯಿ ಸತ್ತ ಮನುಷ್ಯಾ ಅನ್ನೋ ಬಿರುದು ತಗೊಂಡು ಬದುಕುವಂಗ ಆಗಿತ್ತು. ಪಡಶಂಟ..ಹಾಟ್ಯಾ..ಬಾಯಾಗ ಮಣ್ಣ ಹಾಕಲಿ ಇವೆಲ್ಲಾ ಅಕಿ ಬಾಯಾಗ ಏನೂ ಅಲ್ಲ ಸಿಟ್ಟ ನೆತ್ತಿಗೇರಿ ಖರೆಖರೆ ಬೈಗುಳದ ಶಬ್ದಕೋಶ ತಗದಳಂದ್ರ ಕಿವಿ ಮುಚಕೊಂಡು ಕೇಳುವಂಥಾ ಸೊಂಟದ ಕೆಳಗಿನ ಎಲ್ಲಾ ಬೈಗುಳನೂ ಅಕಿ ಬಳಿ ಸ್ಟಾಕ್ ಅದಾವ. ಹಂಗಾಗೇ ಓಣ್ಯಾಗಿನ ಮಂದಿ ಹೋಗಿ ಹೋಗಿ ಆ ಹರಕ ಬಾಯಿಗಿ ಯಾಕ ಹತ್ತೀರಿ ಮಾರಾಯಾ.? ಅಂತಿದ್ದರು. ಈ ಶಿವಮ್ಮಗ ಮಕ್ಕಳಾಗಿ..ಮೊಮ್ಮಕ್ಕಳಾಗಿ ಅವರು ಲಗ್ನಕ್ಕ ಬಂದರೂ ಅಕಿ ಬಾಯಿ ಮಾತ್ರ ಬದಲಾಗಿರಲಿಲ್ಲ.

ಇಂಥಾ ಶಿವಮ್ಮಗ ತನ್ನ ತವರಿಮನಿ ಮ್ಯಾಲ ವಿಪರೀತ ಮೋಹ. ಲಗ್ನ ಆಗಿ ದೇವರ ಹಿಪ್ಪರಗಿಯ ಪಾಟೀಲ ರುದ್ರಗೌಡನ ಮನಿತನಕ ನಡೀಲಾಕ ಬಂದ ದಿನದಿಂದ ಹಿಡದು ಇಲ್ಲೀಮಟ ಬರೀ ತನ್ನ ಅಣ್ಣ ತಮ್ಮದೇರು..ಅಕ್ಕ ತಂಗಿದೇರು ಅವರ ಮಕ್ಕಳು.. ಉದ್ದಾರ ಆಗೊದೇ ನೋಡತಿದ್ದಳು. ಈ ಶಿವಮ್ಮ ಬಾಗೇವಾಡಿ ತಾಲೂಕಿನ ಸಾಲವಡಗಿಯವಳು. ವಾರಕ್ಕೊಮ್ಮ ..ತಿಂಗಳಿಗೊಮ್ಮ ಅಕಿ ಅಣ್ಣ ತಮ್ಮದೇರು ಹಿಪ್ಪರಗಿ ಸಂತಿಗಿ ಬರವರು. ಅವರ ಕೈಯಾಗ ಅಕಿ ಉಪ್ಪ ಮೊದಲಮಾಡಿ ಕಟ್ಟಿ ಕಳಸೂವಕ್ಕಿ. ಇದೇನು ಕದ್ದಲೆ ನಡಿಯೂ ಕೆಲಸಲ್ಲ ಗಂಡ ಶಂಕ್ರಪ್ಪನ ಕಣ್ಣ ಎದುರೇ ಹಂಗ ಸಕ್ಕರಿ, ಅಕ್ಕಿ, ಗೋದಿ ಕಡ್ಲಿಬ್ಯಾಳಿ ಎಲ್ಲಾ ಕಟ್ಟಿ ಕಳಿಸುವಕ್ಕಿ. ಶಿವಮ್ಮಳ ಗಂಡ ಶಂಕ್ರಪ್ಪ ದೇವರಂಥಾ ಮನುಷ್ಯಾ ಒಂದೇ ಒಂದು ದಿನ ಅದ್ಯಾಕ ನೀನು ಇವೆಲ್ಲಾ ಕೊಟ್ಟು ಕಳಸ್ತಿ ಅಂತ ಕೇಳ್ತಿರಲಿಲ್ಲ. ಹಿಂಗಿದ್ದ ಮ್ಯಾಲೂ ಶಿವಮ್ಮ ಜಿಗದ್ಯಾಡಿ ಮತ್ತ ಗಂಡ ಶಂಕ್ರಪ್ಪನ ಮ್ಯಾಲೇ ಠಬರ್ ಮಾಡತಿದ್ದಳು. ತನ್ನ ತಂಗಿ ಇಂದಿರಾಬಾಯಿ ಲಗ್ನದೊಳಗ ಒಂದು ತೊಲಿ ಬಂಗಾರ ಆಯೇರಿ ಮಾಡ್ರಿ ಅಂತ ಗಂಡಗ ಹೇಳಿದ್ದಳು. ಶಂಕ್ರಪ್ಪ ಅರ್ಧ ತೊಲಿದು ಒಂದು ಉಂಗುರ ತೊಡಿಸಿ ಕೈ ತೊಳಕೊಂಡಿದ್ದ. ತಾ ಹೇಳಿದ್ದು ಒಂದು ತೊಲಿ ಅಂತ ಗಂಡನ ಜೋಡಿ ಜಗಳಾ ತಗದು, ತಿಂಗಳಾನುಗಟ್ಟಲೆ ಮಾತು ಬಿಟ್ಟ ಶಿವಮ್ಮ ಮುಂದ ‘ಕುಬಸದೊಳಗ ಮತ್ತರ್ಧ ತೊಲಿ ಹಾಕದರಾಯ್ತು ತಗೊ’ ಅಂದಾಗ ಮಾತಾಡಿದ್ದಳು.

ಅಂಥಾ ಶಿವಮ್ಮಳ ಹೊಟ್ಟೀಲೇ ಎರಡು ಗಂಡು ಮೂರು ಹೆಣ್ಣು. ಅವರ ಹೊಟ್ಟೀಲೇ ಮತ್ತ ಎರಡೆರಡು, ಮೂರ್ಮೂರು ಮಕ್ಕಳಾಗಿ ಶಿವಮ್ಮ ಮೊಮ್ಮಕ್ಕಳನ್ನೂ ಕಂಡಾಗಿತ್ತು. ಇಬ್ಬರು ಗಂಡು ಹುಡುಗರ ಪೈಕಿ ಹಿರಿ ಮಗ ರಾಚಪ್ಪ ಲಗ್ನ ಆದ ವರ್ಷದೊಳಗ ಬ್ಯಾರಿ ಆಗಿದ್ದ. ಕಿರಿ ಮಗ ಚನಬಸು ಮಾತ್ರ ಅವ್ವ-ಅಪ್ಪನ ಜೋಡಿನೇ ಇದ್ದ. ರಾಚಪ್ಪ ಕನ್ನಡ ಸಾಲಿ ಮಾಸ್ತರ ಆಗಿ ಬಿಜಾಪೂರ ಸನ್ಯಾಕ ಇರೋ ಕವಲಗಿಯಲ್ಲಿ ನೌಕರಿಗಿದ್ದ. ಮನಿ ಮಾತ್ರ ಬಿಜಾಪೂರದೊಳಗೇ ಮಾಡಿದ್ದ. ಕಿರಿ ಮಗ ಚನಬಸು ಪಿ.ಯು.ಸಿ ಮಟ ಓದಿ ಮುಂದ ನೀಗಲಾರದಕ್ಕ ದೇವರಹಿಪ್ಪರಗಿಯೊಳಗ ಒಂದು ಕಿರಾಣಿ ಅಂಗಡಿ ಹಾಕಿದ್ದ. ವ್ಯಾಪಾರನೂ ಚುಲೊ ಇತ್ತು. ಶಂಕ್ರಪ್ಪ ಆಗಿನ ಕಾಲದೊಳಗ ಮುಲ್ಕಿ ಪರೀಕ್ಷೆ ಪಾಸಾದವನು. ಮನಿಮಟ ನೌಕರಿ ಹುಡಕೊಂಡು ಬಂದರೂ ಹೋಗಿರಲಿಲ್ಲ. ಈಗ ಅಂಗಡಿ ದೇಖರೇಕಿಯೊಳಗ ಮಗನ ಜೋಡಿ ಕೈಗೂಡಿಸಿದ್ದ. ಚನಬಸುಗ ಎರಡು ಮಕ್ಕಳು ಒಂದು ಗಂಡು ಒಂದು ಹೆಣ್ಣು. ಗಂಡ ಹುಡುಗ ಸಂಗಮೇಶ ಬಿಜಾಪೂರ ಸರಕಾರಿ ಕಾಲೇಜಲ್ಲಿ ಬಿ.ಎ. ಓದತಿದ್ದ. ಹೆಣ್ಣು ಹುಡುಗಿ ಅನಸೂಯಾ ಹಿಪ್ಪರಗಿಯೊಳಗೇ ಪಿ.ಯು.ಸಿ ಮೊಅಲ ವರ್ಷ ಓದತಿದ್ದಳು.

ಶಂಕ್ರಪ್ಪನ ತಂಗಿ ಶಾರದಾಬಾಯಿ ಮಗಳು ಕಸ್ತೂರಿ ಓದಲಿಕ್ಕಂತ ಇವರ ಮನಿಯೊಳಗೇ ಬಂದು ಇದ್ದಳು. ತನ್ನ ತಂಗಿಗಿ ಕೈ ಆಡೂ ಮುಂದ ಏನೂ ಮಾಡಲಿಲ್ಲ. ಅಕಿಗಿ ಲಕ್ವಾ ಹೊಡದು ಹಾಸಿಗೆ ಹಿಡದ ಮ್ಯಾಲೂ ಅವಳಿಗೆ ಏನೂ ತಾ ಆಸರಾಗಲಿಲ್ಲ. ಕದ್ದು ಮುಚ್ಚಿ ಏನರೇ ಸಹಾಯ ಮಾಡೋಣ ಅಂದ್ರ ಎಲ್ಲಾ ಕಾರಬಾರ ಹೆಂಡತಿ ಶಿವಮ್ಮಂದು ಹಿಂಗಾಗಿ ಓಳಗೊಳಗ ಶಂಕ್ರಪ್ಪಗ ತನ್ನ ತಂಗಿಗಿ ಹೊತ್ತಿಗಾಗಲಿಲ್ಲ ಅನ್ನೂ ಸಂಗಟ ಇದ್ದೇ ಇತ್ತು. ತನ್ನ ತಂಗೀ ಮಗಳು ಕಸ್ತೂರಿ ಓದೂದರೊಳಗ ಬಾಳ ಹುಷಾರ್ ಹುಡುಗಿ. ಅಕಿ ಇನ್ನೂ ಎಂಟು ವರ್ಷದವಳು ಇದ್ದಾಗೇ ಅಕಿ ಅಪ್ಪ ಹೊಲದಾಗ ನೀರ ಹಾಯ್ಸೂ ಮುಂದ ಹಾವು ಕಡದು ತೀರಕೊಂಡ. ಅವ್ವಗ ಇದ್ದಕ್ಕಿದ್ದಂಗ ಲಕ್ವಾ ಹೊಡದು ಹಾಸಗಿಗಿ ಹಾಕ್ತು. ಮನಿಯೊಳಗ ಮಾಡವರೂ ಯಾರೂ ಇರಲಿಲ್ಲ. ಕಸ್ತೂರಿ ಅಜ್ಜಿ ಶಾವಂತ್ರವ್ವಳೇ ಅಡುಗಿ ಕೆಲಸಾ ಮಾಡವಳು. ಅಲ್ಲಿರೋಮಟ ಕಸ್ತೂರಿ ಅಕಿ ಕೈ ಕೈಯೊಳಗ ಕೆಲ್ಸಾ ಮಾಡುವಕ್ಕಿ. ಅಕಿ ಓದಾಕಂತ ಹಿಪ್ಪರಗಿಗಿ ಬಂದ ಮ್ಯಾಲ ಆ ಮುದುಕಿ ಶಾವಂತ್ರವ್ವಗೂ ಮನಿ ಕೆಲಸಾ ಬಾಳ ಆಗಿತ್ತು. ಕಸ್ತೂರಿ ಮೆಟ್ರಿಕ್ ಮಟ ತನ್ನೂರು ಇಂಗಳಗಿಯೊಳಗೇ ಓದಿ ತಾಲೂಕಿಗೇ ಫ಼ಸ್ಟ್ ಬಂದಿದ್ದಳು. ಆವಾಗ ಶಂಕ್ರಪ್ಪಗ ಬಾಳ ಖುಷಿ ಆಗಿತ್ತು. ಫ಼ೇಡೆ ಹಂಚಲಾಕಂತ ಅವನೇ ಖುದ್ದಾಗಿ ಕಸ್ತೂರಿ ಕೈಯೊಳಗ ಐದು ನೂರು ರೂಪಾಯಿ ಕೊಟ್ಟಿದ್ದ. ಅದು ಹೆಂಗೋ ಹೆಂಡತಿ ಶಿವಮ್ಮಗ ಗೊತ್ತಾಗಿ ಬೆಳ್ಳಬೆಳತನಕ ಒದರಾಡಿದ್ದಳು. ಗಂಡ ಶಂಕ್ರಪ್ಪ ‘ನಾ ಬರೀ ಐದು ನೂರು ರೂಪಾಯಿ ಕೊಟ್ಟಿದ್ದಕ ಹಿಂಗ ಮಾಡ್ತಿ, ನೀ ನನ್ನ ಎದುರೇ ಉಪ್ಪು ಮೊದಲ ಮಾಡಿ ಕಟ್ಟಿ ಕಳಸ್ತಿದಿ ನಾ ಏನರೇ ಅಂದೀನಾ..?’ ಅಂದಾಗ ಶಿವಮ್ಮಳ ಬಳಿ ಮರುಮಾತಿರಲಿಲ್ಲ. ಆ ಹುಡಗಿಗೆರೆ ಯಾರು ಅದಾರ ನಮ್ಮನ್ನ ಬಿಟ್ಟರೆ, ಪಾಪ ನಮ್ಮ ತಂಗಿ ನೋಡದರ ಹಂಗ.. ಅಪ್ಪಂತೂ ಇಲ್ಲ ನಾವೂ ಅಕಿಗೆ ಆಸರಾಗಲಿಲ್ಲ ಅಂದ್ರ ಯಾರು ಆಗ್ತಾರ ಅಂದದ್ದೇ ಶಿವಮ್ಮ ಮೂಗ ನಿಗರಿಸಿ ಆ ಆಸ್ತಿ ನಮ್ಮ ಮೊಮ್ಮಗನ ಹೆಸರಿಗಿ ಮಾಡ್ಲಿ ಇಲ್ಲೇ ಬಂದು ಇರಲಿ ತಾಯಿ ಮಗಳನ್ನ ನಾವೇ ನೋಡಕೋತೀವಿ ಅಂದಾಗ ಶಂಕ್ರಪ್ಪ ಸಿಟ್ಟೀಲೇ ಹೆಂಡತಿನ್ನ ದಿಟ್ಟಿಸಿ ನೋಡಿದ್ದ.

ತಂಗೀ ಮಗಳು ಕಸ್ತೂರಿಯನ್ನ ಇಲ್ಲಿ ಓದಲಿಕ್ಕ ತಂದು ಇಟಗೋತೀನಿ ಅಂದಿದ್ದಕ್ಕೂ ಶಿವಮ್ಮ ದೊಡ್ಡದೊಂದು ಜಗಳಾನೇ ತಗದಿದ್ದಳು. ತನ್ನ ತಮ್ಮನ ಮಗ ರಮೇಶನ್ನೂ ಕರಕೊಂಡು ಬರ್ರಿ ಅವನೂ ಓದಲಿ ಅಂತ ಪಂಟ ಹಿಡದಳು. ‘ಅಂವಾ ಉಡಾಳ ಕುರಸಾಲ್ಯಾ ಮೆಟ್ರಿಕ್ ಎರಡು ಸಾರಿ ಫ಼ೇಲ್ ಆದಂವ. ಅವನ್ನ ತಗೊಂಡು ಬಂದು ಏನು ಮಾಡ್ತಿ..? ಹುಚ್ಚರಂಗ ಮಾತಾಡಬ್ಯಾಡ ಕಸ್ತೂರಿ ಫ಼ಸ್ಟ್ ಕ್ಲಾಸ್ ಹುಡುಗಿ, ಅಂಥ ಹುಡುಗರನ್ನ ಓದಸದರ ನಮಗೂ ಹೆಸರು’ ಅಂದಾಗ ‘ಹೆಸರಿಲ್ಲ ಏನೂ ಇಲ್ಲ, ನಿಮ್ಮ ತಂಗಿ ಮಗಳು ಅಂತ ಅಷ್ಟೇ’ ಅಂದಿದ್ದಳು. ’ಹುಚಗೊಟ್ಟಿ ಹಳಾ ಹುಚಗೊಟ್ಟಿ.. ಹಂಗ ಮಾತಾಡಬ್ಯಾಡ. ಮುದುಕಿ ಆಗಲಿಕ್ಕ ಬಂದರೂ ನಿನ್ನ ಸಣ್ಣ ಬುದ್ದಿ ಬದಲ್ ಆಗಲಿಲ್ಲ ನೋಡು. ಬ್ಯಾರೇ ಯಾರಿಗರೆ ಕಲಸ್ತೀವಾ..? ಅದೂ ಅಲ್ಲದೇ ಆ ಹುಡುಗಿ ಮನಿ ಕೆಲಸಾ ಮಾಡಕೊಂಡು ಓದತಾ” ಅಂದಾಗ ಶಿವಮ್ಮ ಸುಮ್ಮ ಆಗಿದ್ದಳು. ಕಸ್ತೂರಿ ಬಂದ ದಿನದಿಂದಲೂ ಮನೀದು ಅರ್ದ ಕೆಲಸಾ ಅವಳೇ ಮಾಡಕೊಂಡು ಹೋಗತಿದ್ದಳು. ಅಷ್ಟರ ಮ್ಯಾಲೂ ಶಿವಮ್ಮಗ ಆ ಹುಡುಗಿ ಮ್ಯಾಲ ಒಂಚೂರೂ ಕರುಣೆ ಇರಲಿಲ್ಲ. ದಿನಕ್ಕ ಒಮ್ಮೆರೆ ಬಿರಸ್ ಮಾತಲಿಂದ ಕಸ್ತೂರಿಯನ್ನ ನೋಯಿಸದಿದ್ದರ ಅಕಿಗಿ ತಿಂದ ಕೂಳ ಕರಗ್ತಿರಲಿಲ್ಲ.

ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಒಂದೇ ಕ್ಲಾಸಲ್ಲಿ ಓದತಿದ್ದರು. ಸಂಗಮೆಶ ಕಾಲೇಜಿಗೇನೋ ಬರತಿದ್ದ ಆದರೆ ಕ್ಲಾಸಿಗೆ ಕೂಡ್ತಿರಲಿಲ್ಲ. ಅದೆಲ್ಲಿ ಹೋಗತಿದ್ದ ಏನು ಮಾಡತಿದ್ದ ಅಂತ ಕಸ್ತೂರಿ ಒಟ್ಟಾರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮೊದಮೊದಲ ಮನ್ಯಾಗ ತನ್ನ ಮಾವ ಶಂಕ್ರಪ್ಪನ ಮುಂದ ಹೇಳತಿದ್ದಳು. ಯಾವಾಗ ಅತ್ತೆ ಶಿವಮ್ಮ ಚಾಡಿ ಚುಗಲಿ ಹೇಳೂದು ಕಲತರ ನಿನ್ನ ಸ್ವಾಟೀನೇ ಹರೀತೀನಿ ಅಂತ ವಾರ್ನಿಂಗ್ ಮಾಡದ್ಲೋ ಅವಾಗಿನಿಂದ ಅಕಿ ಸಂಗಮೇಶನ ಚಟುವಟಿಕೆಗಳನ್ನೆಲ್ಲಾ ಕಂಡೂ ಕಾಣಲಾರದಂಗ ಇರತಿದ್ದಳು.

ಒಂದಿನ ತರಗತಿಯಲ್ಲಿ ಈ ಸಂಗಮೆಶ ಹೆಡ್ ಪೋನ್ ಹಾಕೊಂಡು ಮೊಬೈಲ್ ಸಾಂಗ್ ಕೇಳ್ತಾ ಇದ್ದಾಗ ಇಂಗ್ಲಿಷ ಅಧ್ಯಾಪಕರೊಬ್ಬರು ಎಬ್ಬಿಸಿ ನಿಲ್ಲಿಸಿ ಎಲ್ಲರೆದುರೇ ಹಿಗ್ಗಾ ಮಿಗ್ಗಾ ಬೈದು ಮೊಬೈಲ್ ಕಸಿದುಕೊಂಡಿರುವದಿತ್ತು. ಇದೆಲ್ಲಾ ಕಸ್ತೂರಿಯ ಕಣ್ಣೆದುರೇ ನಡೆದಿದ್ದರೂ ಆಕೆ ಮನೆಯಲ್ಲಿ ಬಾಯಿ ಬಿಟ್ಟಿರಲಿಲ್ಲ. ತಾನಾಯಿತು ತನ್ನ ಓದಾಯ್ತು ಎಂದಿದ್ದ ಕಸ್ತೂರಿ ಆ ವರ್ಷ ಕಾಲೇಜಿಗೆ ಪ್ರಥಮವಾಗಿ ಪಾಸಾಗಿದ್ದಳು. ಮಾವ ಶಂಕ್ರಪ್ಪ ಇಡೀ ಊರ ತುಂಬಾ ತನ್ನ ತಂಗಿ ಮಗಳು ಫ಼ಸ್ಟ್ ಕ್ಲಾಸ್ ಲ್ಲಿ ಪಾಸಾಗಿದ್ದಾಳೆ ಎಂದು ಹೇಳಿದ್ದ. ಮಗನ ಬಗ್ಗೆ ಕೇಳಿದಾಗ ಬೇಸರದ ಮೌನ ತಾಳಿದ್ದ. ಶಿವಮ್ಮಗಂತೂ ಕಸ್ತೂರಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಒಂದು ಬಗೆಯ ಸಂಕಟಕ್ಕೆ ಕಾರಣವಾಗಿತ್ತು. ಈ ಕಸ್ತೂರಿ ಓದುವದರಲ್ಲಿ ತುಂಬಾ ಜಾಣ ಹುಡುಗಿ ಇವಳು ಮುಂದೊಂದು ದಿನ ನೌಕರಿ ಹಿಡಿಯೋದು ಗ್ಯಾರಂಟಿ ಎನ್ನುವದು ಶಿವಮ್ಮಳಿಗೆ ಗೊತ್ತಾಯ್ತು. ಹೇಗಾದರೂ ಮಾಡಿ ಈ ಹುಡುಗಿಯನ್ನ ಮೊಮ್ಮಗ ಸಂಗಮೇಶಗೆ ತಂದುಕೊಂಡು ಬಿಟ್ಟರೆ ಮುಗೀತು ಅಲ್ಲಿಗೆ ಅವಳಿಗೆ ಬರೋ ಆಸ್ತಿಯೆಲ್ಲಾ ಮೊಮ್ಮಗನ ಹೆಸರಿಗೆ ಬಂದಂಗೆ. ಜೊತೆಗೆ ಇಕಿ ನೌಕರಿ ಮಾಡದರೂ ಸಂಬಳವೆಲ್ಲಾ ಮೊಮ್ಮಗನ ಕೈಗೆ ಎಂದೆಲ್ಲಾ ಯೋಚನೆ ಮಾಡಿ ಶಿವಮ್ಮ ಆ ದಿನ ರಾತ್ರಿ ಮಲಗುವಾಗ ಗಂಡನ ಮುಂದೆ ಕಸ್ತೂರಿ ಬಗ್ಗೆ ತಾನು ಯೋಚನೆ ಮಾಡಿರುವದೆಲ್ಲಾ ಹೇಳಿದಳು. ಶಂಕ್ರಪ್ಪ ಅಷ್ಟೊಂದು ಕುತೂಹಲದಿಂದ ಹೆಂಡತಿ ಮಾತನ್ನ ಕೇಳಲಿಲ್ಲ. ಬರೀ ಹಾಂ..ಹುಂ.. ಎನ್ನುತ್ತಲೇ ಮಲಗಿಬಿಟ್ಟ.

ಕಸ್ತೂರಿಯ ತಂದೆ ಮುರಗೆಪ್ಪನ ಸಹೋದರಿ ಗಂಗಾಬಾಯಿಯ ಮಗ ರಾಜಶೇಖರ ಗೋಲಗೇರಿಯಲ್ಲಿ ಹೈಸ್ಕೂಲ್ ಮಾಸ್ತರ್ ಆಗಿದ್ದ. ತನ್ನ ಮಗನಿಗೆ ಅಣ್ಣನ ಮಗಳನ್ನೇ ತಂದುಕೊಳ್ಳುವದೆಂದು ಮೊದಲಿನಿಂದಲೂ ಗಂಗಾಬಾಯಿ ಎಲ್ಲರೆದುರು ಹೇಳುತ್ತಲೇ ಬಂದಿದ್ದಳು. ಹೀಗಾಗಿ ಮತ್ತೆ ಬೇರೆ ಹುಡುಗನನ್ನು ಹುಡುಕುವ ಅವಶ್ಯಕತೆಯೇ ಇರಲಿಲ್ಲ. ರಾಜಶೇಖರ ಪ್ರತಿ ತಿಂಗಳಿಗೆ ಕಸ್ತೂರಿಯ ಓದಿನ ಖರ್ಚಿಗೆಂದು ಐದು ನೂರು ರೂಪಾಯಿಗಳನ್ನು ಕಳುಹಿಸುತ್ತಿದ್ದ. ಆ ವಿಷಯವನ್ನು ಕಸ್ತೂರಿ ತನ್ನ ಮಾವ ಶಂಕ್ರಪ್ಪನ ಮುಂದೆ ಮಾತ್ರ ಹೇಳಿರುವದಿತ್ತು. ಬೇರೆ ಯಾರ ಮುಂದೆಯೂ ಹೇಳದಿರುವಂತೆ ಶಂಕ್ರಪ್ಪನೇ ಆಕೆಗೆ ತಿಳಿಸಿದ್ದ. ಕಸ್ತೂರಿಗೆ ಒಳಗಿನ ಸಂಬಂಧದಲ್ಲಿಯೇ ಒಬ್ಬ ಹುಡುಗನಿದ್ದಾನೆ ಆ ಹುಡುಗ ತನ್ನ ಮಗನಿಗಿಂತಲೂ ನೂರು ಪಾಲು ಉತ್ತಮ ಎನ್ನುವದನ್ನು ಶಂಕ್ರಪ್ಪ ಹೇಳಿರಲಿಲ್ಲ. ಕಸ್ತೂರಿಗಂತೂ ತನ್ನ ಮದುವೆಗಿಂತಲೂ ಮುಖ್ಯವಾಗಿ ತಾನು ಏನಾದರೂ ಮಹತ್ತರವಾದುದನ್ನು ಸಾಧಿಸಬೇಕು ಎನ್ನುವ ಹಟವಿತ್ತು. ಪ್ರತಿ ವರ್ಷವೂ ಆಕೆ ಫ಼ಸ್ಟ್ ಕ್ಲಾಸಲಿಯೇ ತೇರ್ಗಡೆಯಾಗುತ್ತಾ ನಡೆದಳು. ಕಸ್ತೂರಿ ಮನೆಯಲ್ಲಿ ತನಗೆ ಒಪ್ಪಿಸುವ ಎಲ್ಲ ಕೆಲಸಗಳನ್ನು ಅತ್ಯಂತ ಚಮಕತನದಿಂದ ಮಾಡುತ್ತಿದ್ದಳು. ರಾತ್ರಿ ಎಲ್ಲರ ಊಟ ಮುಗಿದಾದ ಮೇಲೆಯೂ ಆಕೆ ಎಲ್ಲ ಪಾತ್ರೆಗಳನ್ನು ತೊಳೆದು ಮಲಗುತ್ತಿದ್ದಳು. ಬೆಳಿಗ್ಗೆ ಮತ್ತೆ ಎಲ್ಲರಿಗಿಂತಲೂ ಮುಂಚೆಯೇ ಎದ್ದು ವತ್ತಲಿಗೆ ಪುಟು ಹಾಕಿ ಓದುತ್ತಾ ಕೂಡುವ ಕಸ್ತೂರಿ ಬಗ್ಗೆ ಶಂಕ್ರಪ್ಪನಿಗೆ ತೀರಾ ಅಕ್ಕರೆ. ’ಇಷ್ಟು ಬೇಗ ಯಾಕವ್ವಾ ಏಳ್ತಿ..? ಇನ್ನೂ ನಸುಕೈತಿ ಮಲಕೊಬಾರದಾ.’ ಎಂದರೆ ’ಮಾವಾ ಇಡೀ ಜೀವನದಲ್ಲಿ ಅರ್ಧ ಭಾಗ ಬರೀ ನಿದ್ದೆಯಲ್ಲೇ ಹೋಗತೈತಿ. ಇನ್ನಿರೋ ಅರ್ಧ ಭಾಗದೊಳಗ ನಮ್ಮ ಎಲ್ಲಾ ಚಟುವಟಿಕೆ ನಡೀಬೇಕು,’ ಅಂದಾಗ ತನ್ನ ಸೊಸಿ ಹೇಳೂದು ಖರೆ ಐತಿ ಅನಿಸಿ ಕೈಯಲ್ಲಿ ತಂಬಗಿ ಹಿಡದು ಬಯಲಕಡೆಗೆ ನಡೆದಿದ್ದ. ಶಂಕ್ರಪ್ಪಗೂ ತನ್ನ ಮೊಮ್ಮಗ ಸಂಗಮೇಶಗೆ ಕಸ್ತೂರಿ ಚುಲೋ ಜೋಡಿ ಆಗ್ತಿತ್ತು. ಕಿವಿ ಹಿಂಡಿ ಅವನ್ನ ದಾರಿಗಿ ತರತಿದ್ದಳು. ಆದರ ಏನು ಮಾಡೋದು ಕಸ್ತೂರಿನ್ನ ಕರಕೊಂಡು ಬರಾಕ ಇಂಗಳಗಿಗೆ ಹೋದಾಗ ಮುದುಕಿ ಶಾವಂತ್ರವ್ವ ಗಂಗಾಬಾಯಿ ಮತ್ತ ಅಕಿ ಮಗ ರಾಜಶೇಖರನ ಕತಿ ಹೇಳಿದ್ದಳು. ಕಸ್ತೂರಿಯಂಥಾ ಹುಡುಗಿಗೆ ಆ ಹುಡುಗನೇ ಚುಲೋ. ಈಗಾಗಲೇ ಅಂವಾ ನೌಕರಿ ಮಾಡಾಕತ್ತಾನ ಇಂದಲ್ಲಾ ನಾಳೆ ಇಕಿಗೂ ನೌಕರಿ ಹತ್ತೂದು ಗ್ಯಾರಂಟಿ ಆಗ ಇವರ ಮುಂದ ಯಾರು..? ಎಂದೆಲ್ಲಾ ಯೋಚನೆ ಮಾಡತಾ ಶಂಕ್ರಪ್ಪ ನಡದಿದ್ದ. ಹಿಂದಿನ ರಾತ್ರಿ ಹೆಂಡತಿ ಶಂಕ್ರವ್ವ ಎತ್ತಿದ್ದ ಪ್ರಶ್ನೆ ಹಂಗೇ ಉಳದಿತ್ತು. ಅಕಿ ಬಿಡೂ ಪೈಕಿ ಅಲ್ಲ ಮತ್ತ ಆ ಪ್ರಶ್ನೆ ಎತ್ತೇ ಎತ್ತತಾಳ ಅವಾಗ ಎಲ್ಲಾ ಹೇಳಿಬಿಡಬೇಕು ಇಲ್ಲಾಂದ್ರ ಸುಳ್ಳೆ ನಾಳೆ ಜಗಳಾ ತಕ್ಕೊಂಡು ಕೂಡ್ತಾಳ. ತಂಗಿ ಶಾರದಾಬಾಯಿ ಬಾಳ ಚುಲೊ ಹೆಣಮಗಳು. ಅಕಿ ನಸೀಬದೊಳಗ ಇದಿ ಅದ್ಯಾಕೋ ಕೆಟ್ಟದ್ದು ಬರದು ಆಟ ಆಡಸ್ತು. ಯಾರಿಗೂ ಒಂದೇ ಒಂದಿನ ಕೆಟ್ಟದ್ದು ಬಯಸದವಳಲ್ಲ..ಲಗ್ನಕಿಂತಾ ಮೊದಲೂ ತನಗ ಇಂಥಾದು ಬೇಕು ಅಂತ ಬಯಸದವಳಲ್ಲ. ಅಂಥಾ ಹೆಣಮಗಳಿಗೆ ಲಕ್ವಾ ಹೊಡಿಯೂದಂದ್ರ ಹ್ಯಾಂಗ..? ಆ ದೇವರು ಅನ್ನವರೇ ಎಟ್ಟು ಕಠೋರ ಅದಾನ ಅಂತೆಲ್ಲಾ ಬಯಲುಕಡಿಗೆ ಕುಳಿತಲ್ಲೇ ಯೋಚನೆ ಮಾಡೂ ವ್ಯಾಳೆದೊಳಗ ಇದ್ದಕ್ಕಿದ್ದಂಗ ಎದಿಯೊಳಗ ಏನೋ ಚುಚ್ಚದಂದಾಗಿ ಶಂಕ್ರಪ್ಪ ಅಲ್ಲೇ ಉರುಳಿಬಿದ್ದಿದ್ದ. ಅವನ ಜೀವ ಅಲ್ಲೇ ಬಯಲಾಗಿತ್ತು.

ಆ ದಿವಸ ಮನಿಯೊಳಗ ಹತ್ತಾರು ಮಂದಿ ನೆರೆದಿದ್ದರು. ಚನಬಸು ಇನ್ನೂ ಅಂಗಡಿ ಬಾಗಿಲ ತಗದಿರಲಿಲ್ಲ. ಇಂಗಳಗಿಯಿಂದ ಕಸ್ತೂರಿಯ ಅಜ್ಜಿ ಶಾವಂತ್ರವ್ವ ಬಂದಿದ್ದಳು. ಸಾಲವಡಗಿಯಿಂದ ಶಿವಮ್ಮಳ ತಮ್ಮ ಸಿದ್ದಪ್ಪನೂ ಬಂದಿದ್ದ. ಕಸ್ತೂರಿ ಕಂಬದ ಮರಿಗೆ ನಿಂತಗೊಂಡಿದ್ದಳು. ಸಂಗಮೇಶ ಅಲ್ಲೇ ಜೋಳದ ಚೀಲದ ಮ್ಯಾಲ ಕುತಗೊಂಡಿದ್ದ. ಶಾವಂತ್ರವ್ವ ಶಿವಮ್ಮ ಇದರಾಬದರ ಕುತಗೊಂಡು ಮಾತಾಡಾಕ ಸುರು ಮಾಡದರು. ’ನೋಡವಾ ಯಕ್ಕಾ, ಕಸ್ತೂರಿ ನಿನಗ ಹ್ಯಾಂಗ ಮೊಮ್ಮಗಳೊ ನನಗೂ ಹಂಗೇ.. ಅವರಿಗಂತೂ ಅಕಿ ಮ್ಯಾಲ ಬಾಳ ಕಾಳಜಿ ಇತ್ತು. ಅದಕ್ಕೇ ಅವರು ಮತ್ತ ಮತ್ತ ಅಕಿ ನಮ್ಮ ಮನಿ ಸೊಸಿ ಆದರ ಚುಲೊ ಆಗತೈತಿ ಅಂತ ಬಾಳ ಸೇರಿ ಹೇಳಿದೈತಿ. ಈಗ ಅನಾಯಸ ನೀನೂ ಬಂದೀದಿ ಮನಿಗಿ ಹಿರಿ ಮನುಷ್ಯಾಳು ಬ್ಯಾರೆ, ನಮ್ಮ ಹುಡುಗ ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಕೂಡೇ ಕಲತವರು. ಕಸ್ತೂರಿ ಮ್ಯಾಲ ಅವನೂ ಬಾಳ ಜೀಂವ ಅದಾನ. ಅದಕ್ಕ ಅವನಿಗೆ ಕಸ್ತೂರಿನ್ನ ತಂದುಕೊಂಡ್ರ ಹ್ಯಾಂಗ..?’ ಅಂತ ಕೇಳಿದ್ದೇ ಶಾವಂತ್ರವ್ವ ಮೌನ ಮುರಿಲೇ ಇಲ್ಲ. ಹಿಂದೊಮ್ಮ ಈ ವಿಷಯ ತಗದು ಮಾತಾಡೂ ಮುಂದ ತನ್ನ ಗಂಡನೂ ಹಿಂಗೇ ಗಪ್ ಚುಪ್ ಆಗೇ ಇದ್ದ. ಈಗ ನೋಡದರ ಶಾವಂತ್ರವ್ವನೂ.. ಅಂತ ಯೋಚನೆ ಮಾಡಿ” ನೀ ಮಾತಾಡು.. ಏನರೇ ಹೇಳು, ಹಿಂಗ ಸುಮ್ಮ ಕುಂತರ ಹ್ಯಾಂಗ..?’
’ಅಯ್ಯ ಯಕ್ಕಾ ನಾ ಏನು ಮಾತಾಡ್ಲಿ..? ನಿನ್ನ ಗಂಡ ಏನೂ ಹೇಳಿಲ್ಲನೂ.’
’ಎದರ ಬಗ್ಗೆ’
’ಅದೇ ಕಸ್ತೂರಿ ಲಗ್ನದ ಬಗ್ಗೆ’
’ಇಲ್ಲ.. ಏನೂ ಹೇಳಲಿಲ್ಲ’
’ಅದ್ಯಾಂಗದು..’
’ಇಲ್ಲ ಖರೆನೇ ಏನೂ ಹೇಳಿಲ್ಲ.’
’ತಂಗೀ.. ಕಸ್ತೂರಿನ್ನ ತನ್ನ ತಂಗೀ ಮಗನಿಗೇ ತಂದುಕೊಳ್ಳಬೇಕು ಅಂತ ಕಸ್ತೂರಿ ಅಪ್ಪ ಸಾಯೂ ಮೊದಲೇ ಮಾತಾಗಿತ್ತು. ಕಸ್ತೂರಿ ಅತ್ತಿ ಗಂಗಾಬಾಯಿ ಕಸ್ತೂರಿನ್ನ ಯಾವಾಗಲೋ ತನ್ನ ಮನಿ ಸೊಸಿ ಅಂತ ಒಪಗೊಂಡಾಳ. ಅಕಿ ಅಣ್ಣ ಮುರಗೇಶಪ್ಪಗ ಸಾಯೂ ಮುಂದ ಮಾತು ಕೊಟ್ಟಾಳ. ಆವಾಗ ಕಸ್ತೂರಿ ಇನ್ನೂ ಬಾಳ ಸಣ್ಣದು. ಕಸ್ತೂರಿ ಅವ್ವಗ ಇದೆಲ್ಲಾ ಗೊತ್ತದ ನಿನ್ನ ಗಂಡ ಶಂಕ್ರಪ್ಪನ ಮುಂದೂ ಇದೆಲ್ಲಾ ನಾ ಹೇಳಿದ್ದೆ,’ ಅಂದದ್ದೇ ಶಿವಮ್ಮಳ ಮುಖ ಗಂಟಗಂಟಾಗಿತ್ತು.
’ನನ್ನ ಮ್ಮೊಮ್ಮಗನಿಗೆ ಏನು ಕಡಿಮೆ ಆಗೈತಿ..”
’ಕಡಿಮಿ,..ಹೆಚ್ಚ ಅಂತಲ್ಲ.. ಮಾತು ಕೊಟ್ಟ ಮ್ಯಾಲ ಮುಗೀತು.’ ಶಿವಮ್ಮ ಗರಂ ಆದಳು.’
’ಇಷ್ಟು ದಿವಸ ಹೇಳಾಕ ನಿಮಗೇನಾಗಿತ್ತು..ಧಾಡಿ?’
’ನೀ ಕೇಳಿರಲಿಲ್ಲ..ನಾವು ಹೇಳಿರಲಿಲ್ಲ.
ಚನಬಸು ಅವ್ವನ ಸನ್ಯಾಕ ಬಂದು, ’ಹೋಗಲಿ ಬಿಡವಾ, ಅವರವರ ಋಣಾನುಬಂಧ ಹ್ಯಾಂಗಿರತೈತಿ ಹಂಗಾಗಲಿ.’ ಶಿವಮ್ಮ ಕಸ್ತೂರಿ ಕಡೆ ನೋಡಿ, ’ಇವಳರೇ ಹೇಳಬೇಕಲ್ಲ ಬುಬ್ಬಣಚಾರಿ,’ ಅಂದಾಗ ಶಾವಂತ್ರವ್ವ ಅಜ್ಜಿ, ’ಅಕಿಗ್ಯಾಕ ಎಲ್ಲಾ ಬಿಟ್ಟು ಪಾಪ..!’
’ನೀವು ನೀವು ಖರೆ ಆದ್ರಿ’
’ಯಾಕ ಹಂಗ ಮಾತಾಡ್ತಿ..? ನಿನ್ನ ಮೊಮ್ಮಗ ಏನು ಕುಂಟೊ..ಕುರುಡೊ..?’
’ಅವೆಲ್ಲಾ ಬ್ಯಾಡ..’ ಅಂದಾಗ ಶಾವಂತ್ರವ್ವ ದೊಡ್ದದೊಂದು ನಿಟ್ಟುಸಿರನ್ನು ಬಿಟ್ಟು
’ಆಯ್ತು ನಾ ಇನ್ನ ಬರ್ತೀನಿ, ಸಾಡೆ ಬಾರಾಕ ಒಂದು ಬಸ್ಸೈತಿ,’ ಅಂದಾಗ ಶಿವಮ್ಮ ಅಕಿಗೆ ಹುಂ… ನೂ ಅನಲಿಲ್ಲ.. ಹಾಂ.. ನೂ ಅನಲಿಲ್ಲ. ಶಾವಂತ್ರವ್ವ ಕಸ್ತೂರಿ ಕಡೆ ನೋಡಿ, ’ಪರೀಕ್ಷೆ ಮುಗಿದದ್ದೇ ಬಂದು ಬಿಡವ. ನಿಮ್ಮವ್ವ ನಿನ್ನನ್ನ ಬಾಳ ನೆನಸತಿರತಾಳ,’ ಅಂದಾಗ ಕಸ್ತೂರಿ ಕಣ್ಣಲ್ಲಿಯ ನೀರು ದಳದಳನೇ ಕೆಳಗಿಳಿದವು. ಶಾವಂತ್ರವ್ವ ಹೊಂಟು ನಿಂತಾಗ, ಮುದುಕಿ ಶಿವಮ್ಮ ’ಹೋಗಿ ಬಾ’ ಅಂತ ಒಂದು ಮಾತ ಸೈತಾ ಆಡಲಿಲ್ಲ. ಕಸ್ತೂರಿಗೆ ಬಾಳ ಕೆಟ್ಟ ಅನಿಸಿತ್ತು. ತನ್ನ ಅಜ್ಜಿಗೆ ಚಾ ಮಾಡಿ ಕೊಡ್ತೀನಿ ಇರು ಅಂತ ಹೇಳೂವಷ್ಟು ಸೈತ ತನಗಿಲ್ಲಿ ಹಕ್ಕಿಲ್ಲ ಅಂತ ಒಳಗೊಳಗ ನೊಂದುಕೊಂಡಳು. ಶಿವಮ್ಮ ಗಂಡ ಸತ್ತು ಇನ್ನೂ ತಿಂಗಳು ಸೈತ ಕಳದಿಲ್ಲ ತನ್ನ ಮೊಮ್ಮಗನ ಲಗ್ನದ ಬಗ್ಗೆ ಯೋಚನೆ ಮಾಡ್ತಿರೋದು ಕಸ್ತೂರಿಗೆ ಅಸಹ್ಯ ಅನಿಸಿತ್ತು. ಮೊಮ್ಮಗ ಸಂಗಮೇಶ ಮತ್ತ ಮತ್ತ ’ನಾ ಅಕಿನ್ನ ಮದುವಿ ಆಗುವಂಗಿಲ್ಲ.. ನನಗ ಒಳಗಿನ ಸಂಬಂಧ ಬೇಕಾಗಿಲ್ಲ,’ ಅಂತ ಕಡ್ಡೀ ಮುರದಂಗ ಹೇಳಿದ ಮ್ಯಾಲೂ ಅಕಿ ಕೇಳಿರಲಿಲ್ಲ. ಒಂದೇ ಹುಡುಗಿ ಚುಲೋ ತೋಟ ಪಟ್ಟಿ ಲಗ್ನ ಆದರ ಸೀದಾ ಬಂದು ಮೊಮ್ಮಗನ ಉಡಿಯೊಳಗೇ ಬೀಳತೈತಿ ಹ್ಯಾಂಗರೆ ಮಾಡಿ ಈ ಸಂಬಂಧ ಮಾಡಬೇಕು ಅಂತ ಜಪ್ಪಿಸಿ ಕಾಯ್ಕೊಂಡು ಕುಂತಿದ್ದಳು. ಯಾವಾಗ ಇಕಿ ತಿಪ್ಪರಲಾಗಾ ಹಾಕದರೂ ಕಸ್ತೂರಿ ಲಗ್ನ ಬ್ಯಾರೆ ಹುಡುಗನ ಜೋಡಿ ನಡಿಯೂದೈತಿ ಅಂತ ಗೊತ್ತಾಯ್ತೋ ಆವಾಗಿಂದ ಶಿವಮ್ಮಳ ಮಾತ ಬಾಳ ಬಿರಸ್ ಆದ್ವು. ಕಸ್ತೂರಿ ಮುಖ ನೋಡಿ ಮಾತಾಡಲಾರದಷ್ಟು ಆಕಿ ಕಠೋರ ಆದಳು. ಕಸ್ತೂರಿಗೂ ಯಾವಾಗ ಪರೀಕ್ಷೆ ಮುಗದಿತ್ತು.. ಯಾವಾಗ ಊರಿಗೆ ಹೋಗ್ತೀನಿ ಅನಿಸಿತ್ತು. ಪರೀಕ್ಷೆ ಇನ್ನೊಂದೆರಡು ದಿನ ಇತ್ತು. ಮನೆಯಲ್ಲಿರೋ ಹಾಸಿಗೆಗಳನ್ನೆಲ್ಲಾ ಗುಡ್ದೆ ಹಾಕಿ ಹೋಗಿ ತೊಳಕೊಂಡು ಬರಲಿಕ್ಕ ಹೇಳಿದಳು. ಹೊತ್ತು ಹೊಂಟರೆ ಪರೀಕ್ಷೆ. ಕಸ್ತೂರಿ ಹೆದರಕೋಂತ ಅಜ್ಜಿ.. ಪರೀಕ್ಷೆ ಮುಗಿದ ದಿನಾನೇ ಎಲ್ಲಾ ಕ್ಲೀನ್ ಮಾಡ್ತೀನಿ ಅಂದಾಗ ’ಬಾಳ ಶಾಣೆ ಆಗಬ್ಯಾಡ ಹೇಳದಷ್ಟು ಕೇಳು’ ಅಂತ ರಂಪಾಟ ಮಾಡಿ ಕ್ಲೀನ್ ಮಾಡಿಸಿದ್ದಳು. ಶಿವಮ್ಮಳಿಗೆ ಕಮ್ಮೀತಕಮ್ಮಿ ಎಪ್ಪತ್ತು ವರ್ಷ. ಈ ವಯಸ್ಸಲ್ಲೂ ಈ ತರಹದ ಕೊಂಕು ಬುದ್ದಿ ಕಂಡು ಕಸ್ತೂರಿಗೆ ಅಚ್ಚರಿ ಎನಿಸಿತ್ತು. ಇನ್ನೇನು ಹೆಚ್ಚಂದರೆ ಹದಿನೈದು ದಿನ, ಸುಮ್ಮನೇ ಯಾಕ ಒಣಾ ಲಿಗಾಡು ಅಂದುಕೊಂಡು ಶಿವಮ್ಮ ಹೇಳೋ ಎಲ್ಲಾ ಕೆಲಸಗಳನ್ನ ಮರು ಮಾತಾಡದೇ ಮಾಡುತ್ತಿದ್ದಳು.

ಅದಾಗಲೇ ನಾಲ್ಕು ಪೇಪರ್ ಮುಗಿದಿದ್ದವು. ಅದು ಕೊನೆಯ ಪೇಪರ್. ಆ ದಿನ ಬೆಳ್ಳಂಬೆಳಿಗ್ಗೆ ಆ ಮನೆಯಲ್ಲಿ ಒಂದು ರಂಪಾಟ ಶುರುವಾಗಿತ್ತು. ’ಮನಿ ಒಳಗಿನವರೇ ಕಳ್ಳರಾದರ ಹ್ಯಾಂಗ ಮಾಡೂದು..? ಅಪ್ಪ ಇಲ್ಲ ಅವ್ವ ಹಾಸಗಿ ಹಿಡದಾಳ ಅಂತ ಓದಾಕ ಕರಕೊಂಡು ಬಂದ್ರ ಇಂಥಾ ಲಪುಟಗಿರಿ ಮಾಡದರ ಏನು ಹೇಳಬೇಕು..? ದುಡ್ಡಲ್ಲ ಎರಡದುಡ್ಡಲ್ಲ. ನಾಕು ತೊಲಿ ಬಂಗಾರದ ಕಾಸಿನ ಸರ ಇಲ್ಲೇ ಇದ್ದದ್ದು ಅದು ಹ್ಯಾಂಗ ಮನಿ ಬಿಟ್ಟು ಓಡಿ ಹೋಗತೈತಿ..? ನನಗ ಗೊತೈತಿ ಅದ್ಯಾರು ತಗೊಂಡಾರ ಅಂತ ನಾ ಹೇಳೋದಕಿಂತ ಮೊದಲೇ ಕೊಟ್ಟರ ಚುಲೋ.. ಇಲ್ಲಾಂದ್ರ ಪೋಲಿಸ್ ಕಂಪ್ಲೇಂಟ್ ಕೊಡಬೇಕಾಗತೈತಿ,’ ಅಂತ ಶಿವಮ್ಮ ಒಂದು ಸವನ ಚೀರಾಡತಿದ್ದಳು. ಸಂಗಮೇಶ, ಕಸ್ತೂರಿ, ಚನಬಸು ಮತ್ತವನ ಹೆಂಡತಿ, ಮಗಳು ಅನಸೂಯಾ, ಸಿದ್ದಪ್ಪನ ಮಗ ರಮೇಶ ಎಲ್ಲರೂ ದಂಗಾಗಿ ನಿಂತಿದ್ದರು. ಶಿವಮ್ಮಜ್ಜಿ ಯಾರನ್ನ ಟಾರ್ಗೆಟ್ ಆಗಿ ಮಾತಾಡಾಕತ್ತಾಳ ಅಂತ ಎಲ್ಲರಿಗೂ ಗೊತ್ತಿತ್ತು. ಚನಬಸು ’ಅವ್ವಾ ನೀ ನೋಡಿದ್ದರ ಮಾತಾಡು ಸುಮ್ಮನೇ ಆರೋಪ ಬ್ಯಾಡ.’ ಎಂದ.
’ಆರೋಪ ಯಾಕೋ.. ಇಲ್ಲಿ ನಿಂತಾಳಲ್ಲ ಮಳ್ಳೀಯಂಗ ಇಕಿನೇ ಕದ್ದಿದ್ದು.’
’ಅಕಿನೇ ಅಂತ ಹ್ಯಾಂಗ ಹೇಳ್ತಿ?’
’ಪರೀಕ್ಷೆ ಮುಗದು ಊರಿಗೆ ಹೊಂಟವರು ಯಾರು..?’
ಸಂಗಮೇಶ, ’ಅಜ್ಜಿ ಸುಮ್ ಸುಮ್ನೇ ಏನೇನೋ ಮಾತಾಡಬ್ಯಾಡ.’ ಎಂದ.
’ಯಾಕ ಮಾತಾಡಬಾರದು.? ಹಂಗಿದ್ದರ ನನ್ನ ಕಾಸಿನ ಸರ ಎಲ್ಲಿ ಹೋಯ್ತು..?’
’ನಮಗೇನು ಗೊತ್ತು..’
’ನನಗ ಗೊತೈತಿ ಅಕಿನೇ.. ಆ ಕಚ್ಚವ್ವನೇ ತಗೊಂಡಾಳ ಅದ್ಕೇ ಹಂಗ ಗುಮ್ಮನ ಗುಸಕ್ ನಿಂತಂಗ ನಿಂತಾಳ.’

ಕಸ್ತೂರಿ ಒಳಗೊಳಗೆ ತಾಪ ಆದರೂ ಮೌನ ಮುರಿಲಾರದೇ ನಿಂತಿದ್ದಳು. ಮುದುಕಿ ಶಿವಮ್ಮ ಕಸ್ತೂರಿ ಅಳು ನುಂಗಿ ನಿಂತದ್ದನ್ನ ನೋಡಿ ಮತ್ತ ಬೈಯಾಕ ಸುರು ಮಾಡಿದ್ದಳು.
’ನಮ್ಮ ಮನಿಯೊಳಗ ಬೇಕು ಬೇಕಾದ್ದು, ಬೇಕು ಬೇಕಾದಲ್ಲಿ ಬಿದಿರತೈತಿ, ಯಾರೂ ಮುಟ್ಟೂದಿಲ್ಲ. ಇಲ್ಲೀಮಟ ಒಂದೇ ಒಂದು ರೂಪಾಯಿ ಕಳುವಾಗಿದ್ದಿಲ್ಲ. ಇವತ್ತ ಲಕ್ಷ ರೂಪಾಯಿದು ಕಾಸಿನ ಸರ ಹಡಪ್ಯಾರಂದ್ರ ಹೊಟ್ಟಿ ಉರಿಯೂದಿಲ್ಲನೂ..? ಯಾರದರೇ ಮನಿ ನುಂಗವರು ಸೂಳೇರು.. ಹಳಾ ಸೂಳೇರು.’

ಇಕಿ ಬೈಯೂದು ಕೇಳಿ ಕೋಲಿಯೊಳಗಿರೋ ಶಿವಮ್ಮಳ ತಮ್ಮನ ಮಗ ರಮೇಶ ಹಲ್ಲು ಕಿಸಿತಿದ್ದ. ಇಷ್ಟು ಮಂದಿ ಮುಂದ ಕದಿಲಾರದೇ ಕವಕವ ಅಂತ ಅನಸಕೊಂಡು ಸುಮ್ಮ ನಿಂತಿರೋ ಕಸ್ತೂರಿನ್ನ ಬೇಕಂತಲೇ ಕೆದಕಿ ’ಸುಮ್ಮ ಅದನ್ನ ಎಲ್ಲಿಟ್ಟಿದಿ ಕೊಟ್ಟಿ ಚುಲೊ.. ಇಲ್ಲಾಂದ್ರ ಪೋಲಿಸರಿಗೇ ಕೊಡ್ತೀನಿ,’ ಅಂದಾಗ ಕಸ್ತೂರಿ ಹೆದರಿಬಿಟ್ಟಳು.
’ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ.’
’ಆ ಆಣಿ ಗೀಣಿ ಬ್ಯಾಡ, ಮೊದಲ ಆ ಕಾಸಿನ ಸರ ಕೊಡು.’
’ನನಗ ಗೊತ್ತಿಲ್ಲ.. ನಾ ತಗೊಂಡಿಲ್ಲ.’
’ತಗೊಂಡವರು ಯಾರರೇ ತಗೊಂಡೀನಿ ಅಂತಾರಾ..?’
’ನನ್ನ ಬ್ಯಾಗ ಚೆಕ್ ಮಾಡ್ರಿ.’
’ಅದೆಲ್ಲಾ ಬೇಕಾಗಿಲ್ಲ, ನಿನ್ನ ಲಗೇಜ್ ಪ್ಯಾಕ್ ಮಾಡ್ಕೊ, ನೀ ಇಲ್ಲಿರುದು ಬ್ಯಾಡ ನಡಿ ನಿಮ್ಮ ಊರಿಗಿ,’ ಅಂದಾಗ ಸಂಗಮೇಶ
’ಅಜ್ಜೀ ನಾಳೆ ಒಂದು ದಿನ ಲಾಸ್ಟ್ ಪೇಪರ್.’
’ಅದೆಲ್ಲಾ ಬ್ಯಾಡ ಮತ್ತ ನಾ ಪೋಲಿಸರಿಗೆ ಕರಿಯುವಂಗ ಆಗಬಾರದು ಹೋಗಲಿ ಪೀಡಾ.. ಒಂದು ಸರ ಹೋಯ್ತು ಅಷ್ಟೇ.’

ಕಸ್ತೂರಿಗೆ ತಾನು ಕಳ್ಳಿ ಅನ್ನುವ ಬಿರುದು ಹೊತಗೊಂಡು ಈ ಮನಿಯಿಂದ ಹೊರಬೀಳಬೇಕಾಯ್ತಲ್ಲ..! ಅನ್ನೋ ನೋವಿತ್ತು. ತನ್ನ ಬಟ್ಟೆ ಬರೆ, ಪುಸ್ತಕ ಎಲ್ಲವನ್ನು ತಂದು ಶಿವಮ್ಮಳ ಎದುರಲ್ಲಿಯೇ ಒಂದೊಂದಾಗಿ ಝಾಡಿಸಿ, ತನ್ನ ಬ್ಯಾಗಲ್ಲಿಟ್ಟುಕೊಂಡು ಕಣ್ಣೀರು ಸುರಿಸುತ್ತಲೇ ಮೆಲ್ಲಗೆ ನಡೆದಳು. ಹೊರಳಿ ಅಲ್ಲಿರುವ ಎಲ್ಲರನ್ನು ಒಂದು ಸಾರಿ ಗಮನಿಸಿದಳು. ಅವರೆಲ್ಲರೂ ಕಲ್ಲಿನ ಗೊಂಬೆಯಂತಾಗಿದ್ದರು. ಆಕೆ ಹೊಸ್ತಿಲು ದಾಟುತ್ತಿರುವಂತೆ ಶಿವಮ್ಮಳ ತಮ್ಮನ ಮಗ ರಮೇಶ ದೇವರ ಕೊಣೆಯಿಂದ ಹಲ್ಲುಕಿಸಿಯುತ್ತ ಹೊರಬಂದ. ಶಿವಮ್ಮಜ್ಜಿ ಅವನ ನಗುವನ್ನು ಕಂಡು ಗಡಬಡಿಸಿ ಕಣ್ಣು ಚಿವುಟುತ್ತಿದ್ದಳು. ಆ ಕಣ್ಣು ಮುಚ್ಚಾಲೆಯ ಆಟ ಉಳಿದವರ ಪಾಲಿಗೆ ನಿಗೂಢವಾಗಿತ್ತು.

ಕಲ್ಯಾಣ ಕರ್ನಾಟಕದಲ್ಲೊಂದು ಜ್ಞಾನ ದಾಸೋಹ

-ಶ್ರೀಧರ ಪ್ರಭು

ಈಗಿನ ದಿನಮಾನದಲ್ಲಿ ಒಂದೊಳ್ಳೆ ಮೌಲಿಕ ಕಾರ್ಯಕ್ರಮ ಸಂಘಟಿಸುವುದಕ್ಕಿಂತ ಹೆಚ್ಚು ಕಷ್ಟದ ಕೆಲಸ ಇನ್ನೊಂದಿಲ್ಲ. ನೂರು ಜನ ಬರಬಹುದು ಎಂದುಕೊಂಡ ಕಡೆ ಇಪ್ಪತ್ತು ಜನ ಬಂದಿರುತ್ತಾರೆ. ಸರಕಾರದ ಕಾರ್ಯಕ್ರಮವಾಗಿದ್ದರಂತೂ ಹೆಚ್ಚಿನ ಜನ ಬರುವುದು ಪ್ರಯಾಣ ಭತ್ಯೆಗಾಗಿ. ಒಂದು ಬಾರಿ ಹೆಸರು ನೋಂದಾಯಿಸಿ ಹೋದವರು ಗೋಷ್ಠಿಗಳ ಕಡೆಗೆ ತಲೆಯಿಟ್ಟೂ ಮಲಗುವುದಿಲ್ಲ. ಇನ್ನು ಈ ಗೋಷ್ಠಿಗಳು ಬಿಸಿಲು ನಾಡಿನಲ್ಲಿದ್ದರಂತೂ ಯಾವ ನರಪಿಳ್ಳೆಯೂ ಇತ್ತ ಸುಳಿಯುವುದಿಲ್ಲ.

ಇದೆಲ್ಲ ನನಗೆನಿಸಿದ್ದು ಮೊನ್ನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿಯ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ೮ ಮತ್ತು ೯ ನೇ ತಾರೀಕು ಬಾಬಾ ಸಾಹೇಬರ ವಿಚಾರಗಳ ಕುರಿತು ಎರಡು ದಿನಗಳ ವಿಚಾರ ಗೋಷ್ಠಿಗೆ ನನ್ನನ್ನು ಆಹ್ವಾನಿಸಿದಾಗ.

ಹೆಚ್ಚೆಂದರೆ ಹತ್ತಿಪ್ಪತ್ತು ಜನ ಕಾಟಾಚಾರಕ್ಕೆಂದು ಸೇರಿರುತ್ತಾರೆ. ಆದರೂ ಅವರ ಉತ್ಸಾಹಕ್ಕೆ ಭಂಗ ಬರಬಾರದು ಎಂದುಕೊಂಡು ಸ್ವಲ್ಪ ಮಟ್ಟಿನ ಅನಾರೋಗ್ಯವನ್ನೂ ಕಡೆಗಣಿಸಿ ರಣ ಬಿಸಿಲಿನ ಹೆದರಿಕೆಯನ್ನೂ ಮೆಟ್ಟಿನಿಂತು ಜೇವರ್ಗಿಗೆ ಬಂದಿಳಿದಿದ್ದೆ.

ಜೇವರ್ಗಿಯ ಯುವ ಪ್ರಾಧ್ಯಾಪಕರಾದ ಡಾ. ಕರಿಗುಳೇಶ್ವರ ಮತ್ತು ಅಲ್ಲಿನ ಗ್ರಂಥಾಲಯದ ವಿಜ್ಞಾನದ ಮುಖ್ಯಸ್ಥರಾದ ವಿನೋದ್ ಕುಮಾರ್ ಮತ್ತಿತರರ ಯುವಜನರ ತಂಡ ಜೇವರ್ಗಿಯಲ್ಲಿ ವಿಚಾರ ಸಂಕಿರಣವನ್ನು ನಿಜವಾಗಲೂ ರಾಷ್ಟ್ರ ಮಟ್ಟಕ್ಕೇರಿಸಿದ್ದರು. ಪ್ರತಿನಿಧಿಗಳ ಪ್ರಯಾಣ ವ್ಯವಸ್ಥೆ, ಊಟ, ಉಪಚಾರ, ವಸತಿsridhar prabhuಯಿಂದ ಮೊದಲ್ಗೊಂಡು ವಿಷಯ ಮಂಡನೆಯವರೆಗೆ ಯಾವ ವಿಚಾರದಲ್ಲಿ ಪರಿಗಣಿಸಿದರೂ ಇದನ್ನೊಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣವೆಂದು ಖಚಿತವಾಗಿ ಹೇಳಬಹುದಿತ್ತು.

ಎರಡು ದಿನ ಮುಂಚಿತವಾಗಿ ಸ್ವಯಂ ಚಾಲಿತ ಎಸ್ ಎಂ ಎಸ್ ಅಲರ್ಟ್ ವ್ಯವಸ್ಥೆ ಮಾಡಲಾಗಿ ಎಲ್ಲರಿಗೂ ಏಕ ಕಾಲಕ್ಕೆ ಸಂಕಿರಣದ ವೇಳಾಪಟ್ಟಿ ಲಭ್ಯವಿತ್ತು. ಹಾಗೆಯೆ, ಒಂದು ವೆಬ್ಸೈಟಿಗೆ ಸಹ ಚಾಲನೆ ನೀಡಿ ಆನ್ಲೈನ್ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಪ್ರಿಂಟರ್, ಪ್ರೊಜೆಕ್ಟರ್ ಮತ್ತು ಧ್ವನಿಮುದ್ರಕ ವ್ಯವಸ್ಥೆ ಜೊತೆಗೆ ವಾತಾನುಕೂಲ ಪಂಖೆಗಳು ನಮ್ಮ ಸ್ವಾಗತಕ್ಕೆ ಕಾದಿದ್ದವು. ಪ್ರಮುಖವಾಗಿ, ಯಾವ ಗೋಷ್ಠಿಯೂ ಸಮಯವನ್ನು ಮೀರಲಿಲ್ಲ. ಎಲ್ಲಾ ಗೋಷ್ಠಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಪಾಲ್ಗೊಂಡು ಪ್ರಬಂಧ ಮಂಡಿಸಿದರು.

ಪ್ರಬಂಧಮಂಡನೆಯಿಂದ ಮೊದಲ್ಗೊಂಡು ಇಡೀ ವಿಚಾರಗೋಷ್ಠಿಯನ್ನು ಆಂಗ್ಲಭಾಷೆಯಲ್ಲೇ ನಡೆಸಿಕೊಡಲಾಗಿತ್ತು. ನನ್ನಂಥವರು ಕೆಲವರು ಕನ್ನಡದಲ್ಲಿ ಮಾತಾಡಿದ್ದು ಬಿಟ್ಟರೆ ಹೈದರಾಬಾದ್ ಕರ್ನಾಟಕ ಹಳ್ಳಿಗಾಡಿನಿಂದ ಬಂದ ಬಹುತೇಕ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುಲಲಿತ ಇಂಗ್ಲಿಷ್ ಭಾಷೆಯಲ್ಲೇ ಪ್ರಬಂಧ ಮಂಡಿಸಿದರು. ನಾನಿಲ್ಲಿ ಹೇಳಿದ್ದು ಕೇವಲ ೩೦-೪೦% ವಿಚಾರಗಳನ್ನು ಮಾತ್ರ. ಹೆಚ್ಚಿನದನ್ನೂ ನಾನೇ ಕಣ್ಣಾರೆ ನೋಡಿದ್ದೆನಾದರೂ ನಂಬಿಸಿಕೊಳ್ಳಲು ನನಗೇ ಸಾಧ್ಯವಾಗುತ್ತಿಲ್ಲ! ಹೆಚ್ಚು ಹೇಳಲು ಹೋದರೆ ನೀವು ಉತ್ಪ್ರೇಕ್ಷೆಯೆಂದುಕೊಂಡು ಬಿಡುವ ಸಂಭವವಿದೆ!

ಜೇವರ್ಗಿಯ ಜನಸಂಖ್ಯೆ ಹೆಚ್ಚೆಂದರೆ ಇಪ್ಪತ್ತೈದು ಸಾವಿರವಿರಬಹುದು. ಇಲ್ಲಿನ ಈ ಸರಕಾರಿ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಕಾಲೇಜಿನ ಅತ್ಯುನ್ನತ ಗುಣಮಟ್ಟದಿಂದಾಗಿ ಇಲ್ಲಿ ಯಾವುದೇ ಖಾಸಗಿ ಕಾಲೇಜು ಸಹ ನಡೆಯುತ್ತಿಲ್ಲ. ಯಾರೂ ಖಾಸಗಿ ಕಾಲೇಜುಗಳತ್ತ ಮೂಸಿಯೂ ನೋಡುತ್ತಿಲ್ಲ. ಅತ್ಯಂತ ಕಡಿಮೆ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನಿಟ್ಟುಕೊಂಡು ಕಾಲೇಜು ನಡೆಸುತ್ತಿರುವ ಪ್ರಾಚಾರ್ಯರು ಸಿಬ್ಬಂದಿಗೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾರೆ. ಸಿಬ್ಬಂದಿಯಲ್ಲಿ ಈರ್ಷೆ ಮತ್ತು ಕೀಳು ಭಾವನೆಗಳಿಲ್ಲ. ಎಲ್ಲರೂ ಒಂದು ತಂಡವಾಗಿ ಕೆಲಸಮಾಡುತ್ತಿದ್ದಾರೆ. ಬಾಬಾ ಸಾಹೇಬರ ಕಾರ್ಯಕ್ರಮಗಳಲ್ಲಿ ಎಲ್ಲಾ ಜಾತಿ ಮತ್ತು ಧರ್ಮಗಳವರು ಆಸಕ್ತಿಯಿಂದ ಪಾಲ್ಗೊಂಡು ದುಡಿಯುತ್ತಿದ್ದಾರೆ

ಹೈದರಾಬಾದ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಮಿಯನ್ ಆದಿತ್ಯ ಬಿಸ್ವಾಸ್ ಸಾಕಷ್ಟು ಆರ್ಥಿಕ ಸಹಕಾರ ನೀಡಿದ್ದಾರೆ ಮತ್ತು ಸ್ಥಳೀಯ ಮುಖಂಡರು ಊಟದ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ. ಇವೆಲ್ಲವಕ್ಕೂ ಹೆಚ್ಚಾಗಿ ಅಲ್ಲಿನ ವಿದ್ಯಾರ್ಥಿಗಳು ಹಗಲಿರುಳೂ ದುಡಿದು ವಿಚಾರ ಸಂಕಿರಣಕ್ಕೆ ಅದ್ಭುತ ಯಶಸ್ಸು ದೊರಕಿಸಿದ್ದಾರೆ.

ಇದೆಲ್ಲವನ್ನೂ ನೋಡಿದರೆ ಕಲ್ಯಾಣ ಕರ್ನಾಟದ ಕನಸು ಇಲ್ಲಿಂದಲೇ ನಿಜವಾಗುವಂತೆ ಭಾಸವಾಗುತ್ತದೆ!

ಅಂದ ಹಾಗೆ ನಿಮಗೊಂದು ವಿಶೇಷ ಗೊತ್ತಿರಲಿ. ಕಲಬುರಗಿ ಮತ್ತು ಜೇವರ್ಗಿಯ ದಾರಿಯಲ್ಲಿರುವ ಕಿರಣಗಿ ಎಂಬ ಪುಟ್ಟ ಗ್ರಾಮದ ಬಗ್ಗೆ ೧೯೬೨ ರಲ್ಲಿ ನಮ್ಮ ದೇಶದ ಮೇಲೆ ಚೀನಾ ಅಕ್ರಮಣವಾದಾಗ ನಿಜಲಿಂಗಪ್ಪನವರ ಸರಕಾರದಲ್ಲಿದ್ದ ಯುವ ಸಚಿವ ವೀರೇಂದ್ರ ಪಾಟೀಲರು ಈ ಗ್ರಾಮಕ್ಕೆ ಭೇಟಿಯಿತ್ತು ದೇಶಕ್ಕೆ ಸಹಾಯ ಮಾಡುವಂತೆ ಗ್ರಾಮಸ್ಥರನ್ನು ಕೋರಿದಾಗ, ಈ ಗ್ರಾಮದ ಪ್ರತಿಯೊಬ್ಬರೂ ತಮ್ಮ ಬಳಿಯಲ್ಲಿದ್ದ ಚಿನ್ನವೆಲ್ಲವನ್ನೂ ದೇಶಕ್ಕೆ ಧಾರೆಯೆರೆದು ಕೊಟ್ಟಿದ್ದರು!! ಹೀಗೆ ಈ ಒಂದೇ ಗ್ರಾಮದಿಂದ ನೂರು ತೊಲ ಬಂಗಾರವನ್ನು ದೇಶಕ್ಕಾಗಿ ನೀಡಿದ ಕೀರ್ತಿಗಾಗಿ ಕಿರಣಗಿಯನ್ನು ಅಂದಿನಿಂದ ಹೊನ್ನ ಕಿರಣಗಿ ಎಂದು ಕರೆಯಲಾಗುತ್ತದೆ!

ಅಣ್ಣ ಬಸವಣ್ಣನ ಅನುಭವ ಮಂಟಪದ ಖನಿ, ಬಂದೇನವಾಜರ ಕಾರುಣ್ಯದ ಬೀಡು, ವಿಜ್ಞಾನೇಶ್ವರನ ಜ್ಞಾನಸ್ಥಾನ, ಅಮೋಘವರ್ಷರ ವೈಭವದ ನಾಡು ಇನ್ನೆಷ್ಟು ಅದ್ಭುತಗಳನ್ನು ತನ್ನ ಗರ್ಭದಲ್ಲಿಟ್ಟು ಸಲಹುತ್ತಿದೆಯೋ ಬಲ್ಲವರ್ಯಾರು!!

ವಾಟ್ಸಾಪ್ ನಲ್ಲಿ ಜೊತೆಯಾದವರು ಒಟ್ಟಿಗೆ ಕುಳಿತು ಸಿನಿಮಾ ನೋಡಿದರು

  • – ಶಿವರಾಂ ಕೆಳಗೋಟೆ

‘ಚೋಮನ ದುಡಿ’ ಸಿನಿಮಾ ಪ್ರದರ್ಶನ ಮುಗಿಯಿತು. ಅಭಿಪ್ರಾಯ ಹಂಚಿಕೊಳ್ಳುವ ಸಮಯ. ಹೊಸಪೇಟೆ ಮೂಲದ ವಿದ್ಯಾರ್ಥಿನಿ ಮಾತನಾಡುತ್ತಾ, “ಈ ಸಿನಿಮಾ ನಾನು ಎರಡು-ಮೂರು ಬಾರಿ ನೋಡಿದ್ದೇನೆ. ಚೋಮನನ್ನು ನೋಡಿದಾಗಲೆಲ್ಲಾ ನನಗೆ ನನ್ನೂರಲ್ಲಿರುವ ದೊಡ್ಡಪ್ಪ ನೆನಪಾಗುತ್ತಾರೆ. ನಾನು ಚಿಕ್ಕಂದಿನಿಂದ ನೋಡುತ್ತಿದ್ದೇನೆ, ಅವರು ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಾರೆ. ತುಂಡು ಭೂಮಿಯನ್ನು ಹೊಂದುವ ಅವರ ಕನಸು ಇಂದಿಗೂ ಈಡೇರಿಲ್ಲ. ಈ ಸಿನಿಮಾ ನಮ್ಮದೇ ಕತೆ ಅನ್ನಿಸುತ್ತೆ” ಎಂದರು.

 

ನೆನಪಿರಲಿ – ಶಿವರಾಮ ಕಾರಂತರುwhatsapp-image-2016-09-24-at-10-35-50 ಚೋಮನ ದುಡಿ ಕಾದಂಬರಿ ಬರೆದದ್ದು 1930 ರ ದಶಕದಲ್ಲಿ. ಅದು ಬಿ.ವಿ.ಕಾರಂತರ ನಿರ್ದೇಶನದಲ್ಲಿ ಸಿನಿಮಾ ಆದದ್ದು 1975 ರಲ್ಲಿ. ಮೊನ್ನೆಯಷ್ಟೆ ಮಂಗಳೂರಲ್ಲಿ ಈ ಸಿನಿಮಾ ಪ್ರದರ್ಶನ ನಡೆಯಿತು. ಈ ಸುದೀರ್ಘ ಕಾಲಾವಧಿಯಲ್ಲಿ ನೇತ್ರಾವದಿ ಸಾಕಷ್ಟು ಹರಿದಿದ್ದಾಳೆ, ಚೋಮನಂತಹವರ ಬದುಕಲ್ಲಿ ಬದಲಾವಣೆ ಆದದ್ದು ಕಡಿಮೆ. ಅದೇ ಚೋಮನದುಡಿ ಕಾದಂಬರಿ ಬರೆದು, ಚೋಮನ ಭೂಮಿ ಹೊಂದುವ ಕನಸನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟ ಶಿವರಾಮ ಕಾರಂತರು 1970 ರ ದಶಕದ ಭೂಸುಧಾರಣೆ ಕಾಯಿದೆ ಜಾರಿ ಹೊತ್ತಿಗೆ ಬದಲಾಗಿದ್ದಂತೆ ಕಾಣುತ್ತಾರೆ. ಅವರು ‘ಒಬ್ಬರಿಂದ ಕಿತ್ತು ಮತ್ತೊಬ್ಬರಿಗೆ ಭೂಮಿ ಕೊಡುವ’ ಬಗ್ಗೆ ಟೀಕೆಯ ಧಾಟಿಯಲ್ಲಿ ಮಾತನಾಡಿದ್ದರು ಎಂದು ಉಡುಪಿಯ ಉಪನ್ಯಾಸಕಿ ನೆನಪಿಸಿಕೊಂಡರು.

ಈ ಮೇಲಿನ ಸಂದರ್ಭ ನಡೆದದ್ದು ಕಳೆದ ಶನಿವಾರ ಮತ್ತು ಭಾನುವಾರ (ಸೆ.24-25) ಮನುಜಮತ ವಾಟ್ಸಾಪ್ ಗುಂಪು ಮತ್ತು ಮಂಗಳೂರಿನ ಸಹಮತ ಫಿಲ್ಮ್ ಸೊಸೈಟಿ ಒಟ್ಟಿಗೆ ಆಯೋಜಿಸಿದ್ದ ಸಿನಿ ಉತ್ಸವದಲ್ಲಿ. ಸೋಷಿಯಲ್ ಮೀಡಿಯಾದ ಫೇಸ್ ಬುಕ್, ವಾಟ್ಸಾಪ್ ಗಳ ಬಗ್ಗೆ ಅಲ್ಲಲ್ಲಿ ನೆಗೆಟಿವ್ ಕಾಮೆಂಟುಗಳನ್ನು ಕೇಳುತ್ತಿರುತ್ತೇವೆ. ಆದರೆ ಪಾಸಿಟಿವ್ ಬೆಳವಣಿಗೆಗಳೂ ಈ ಸೋಷಿಯಲ್ ಮೀಡಿಯಾ ಟೂಲ್ ಗಳಿಂದ ಸಾಧ್ಯವಾಗಿದೆ ಎನ್ನುವುದಕ್ಕೆ ಮನುಜಮತ ಗುಂಪೂ ಒಂದು ಸಾಕ್ಷಿ. 2015 ರಲ್ಲಿ ಸಮಾನ ಮನಸ್ಕರು ಎಂಬ ಕಾರಣಕ್ಕೆ ಒಂದು ಗುಂಪು ರೂಪ ಪಡೆಯಿತು. ಅದರ ಕರ್ತೃ ಬರಹಗಾರ ಹರ್ಷಕುಮಾರ್ ಕುಗ್ವೆ. ನಾಡಿನಾದ್ಯಂತ ಬೇರೆ ಬೇರೆ ಹಿನ್ನೆಲೆಯ ಜನರನ್ನು ಒಂದೆಡೆ ಸೇರಿಸಿದರು. ಚರ್ಚೆಗಳು ಬಿರುಸಾಗಿ ನಡೆದವು. ಕೆಲ ಹಿರಿಯರಂತೂ ರಾತ್ರಿಯೆಲ್ಲಾ ಹಲವು ವಿಚಾರಗಳ ಚರ್ಚೆಗಳಲ್ಲಿ ಪಾಲ್ಗೊಂಡ ಉದಾಹರಣೆಗಳು ಬೇಕಾದಷ್ಟಿವೆ. ಅಲ್ಲಲ್ಲಿ ಈ ಗುಂಪಿನ ಚಟುವಟಿಕೆಗಳು ಚರ್ಚೆಗೆ ಬರುತ್ತಿದ್ದವು. ಆ ಬಗ್ಗೆ ಕೇಳಿ ತಿಳಿದಿದ್ದ ಹಲವwhatsapp-image-2016-09-25-at-20-02-00ರಂತೂ ಹೇಗಾದರೂ ಮಾಡಿ ಈ ಗುಂಪಿಗೆ ಸೇರಿಕೊಳ್ಳಬೇಕೆಂದು ನಾನಾ ಪ್ರಯತ್ನ ಮಾಡಿದರು. ಕೆಲವರು ಅಡ್ಮಿನ್ ಗಳಿಗೆ ಬೇರೆಯವರ ಮೂಲಕ ಶಿಫಾರಸ್ಸು ಮಾಡಿಸಿದಂತಹ ಸಂದರ್ಭಗಳೂ ಇದ್ದವು.

ಈ ಗುಂಪಿನ ವಿಶೇಷ ಎಂದರೆ, ಇಲ್ಲಿಯವರು ಮೊಬೈಲ್ ಆಚೆಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿದ್ದು. ಬೆಂಗಳೂರು ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಎಂ.ಬಿ.ರಾಮಮೂರ್ತಿಯವರೂ ಈ ಗುಂಪಿನ ಆಕ್ಟಿವ್ ಸದಸ್ಯ. ಅವರಿಗೆ ಸೇರಿದ್ದ ಭೂಮಿಯಲ್ಲಿ ಸದಸ್ಯರೆಲ್ಲಾ ಸೇರಿ ವನಮಹೋತ್ಸವ ಕಾರ್ಯಕ್ರಮ ಮಾಡಿದರು. ಸದಸ್ಯರು ಖುದ್ದು ಹೋಗಿ ನೆಟ್ಟ ಗಿಡಗಳ ಬಗ್ಗೆ ಆಗಾಗ ಅಪ್ ಡೇಟ್ ಈ ಗುಂಪಿನಲ್ಲಿರುತ್ತೆ. ಸುಂದರ ಮಲೆಕುಡಿಯ ಎಂಬ ಕಾರ್ಮಿಕನನ್ನು ಮಾಲೀಕ ಹೀನಾಯವಾಗಿ ಹಿಂಸಿಸಿದಾಗ, ಮಾನವೀಯ ನೆಲೆಯಲ್ಲಿ ಈ ಗುಂಪಿನ ಸದಸ್ಯರು ಹಣ ಸಂಗ್ರಹಿಸಿ ಕೊಟ್ಟರು. ದೀನ ದಲಿತರ ಶೋಷಣೆಯಂತ ಪ್ರಕರಣಗಳು ನಡೆದಾಗ ಇಲ್ಲಿಯ ಸದಸ್ಯರು ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡಿದ್ದಾರೆ.whatsapp-image-2016-09-25-at-21-30-38

 

ಈ ಚಟುವಟಿಕೆಗಳ ಮುಂದುವರಿದ ಭಾಗವೇ ಸಿನಿ ಉತ್ಸವಗಳು. ಮೊದಲ ಬಾರಿಗೆ ಶಿವಮೊಗ್ಗ ಹತ್ತಿರದ ಸದಸ್ಯರು ಕುಪ್ಪಳಿಯಲ್ಲಿ ಎರಡು ದಿನದ ಸಿನಿ ಉತ್ಸವ ಮಾಡಿದರು. ನಂತರ ಸಿನಿ ತೇರು ಹಾಸನ ತಲುಪಿತು. ಕಳೆದ ಮೇ ತಿಂಗಳಲ್ಲಿ ಉಡುಪಿಯಲ್ಲಿಯೂ ಉತ್ಸವ ಇತ್ತು. ಸದ್ಯ ಮಂಗಳೂರಿನಲ್ಲಿ ನಡೆದದ್ದು ನಾಲ್ಕನೆಯದು. ಹರ್ಷ ಕುಮಾರ್ ಕುಗ್ವೆ, ಕಿರಣ್ ಕುಮಾರ್ ಮಾರಶೆಟ್ಟಿಹಳ್ಳಿ, ಪ್ರತಿಭಾ ಸಾಗರ, ಹಿರಿಯರಾದ ಕೆ.ಫಣಿರಾಜ್, ಸುಮಾ, ಉಡುಪಿಯ ಬಲ್ಲಾಳ್ ಅವರು, ಸುಮಾ, ಹಾಸನದ ರೋಹಿತ್ ಇಂತಹ ಅನೇಕ ಮಂದಿ (ಕೆಲವರ ಹೆಸರು ಇಲ್ಲಿ ಬಿಟ್ಟಿರಬಹುದು) ಈ ಹಬ್ಬಗಳನ್ನು ಯಶಸ್ವಿಯಾಗಿ ಆಯೋಜಿಸುವುದರಲ್ಲಿ ಪರಿಶ್ರಮ ಪಟ್ಟಿದ್ದಾರೆ.

whatsapp-image-2016-09-25-at-09-40-35

ನಾಲ್ಕೂ ಹಬ್ಬಗಳಲ್ಲಿ ಸರಾಸರಿ 50-60 ಮಂದಿ ಪಾಲ್ಗೊಂಡರು. ಹಾಗಂತ ಇಲ್ಲಿ ಬರುವವರೆಲ್ಲಾ ಸಿನಿ ಪ್ರಿಯರು ಅಥವಾ ಸಿನಿಮಾ ಬಗ್ಗೆ ಆಸಕ್ತಿ ಉಳ್ಳವರು ಎಂದಷ್ಟೇ ಹೇಳಿದರೆ ನ್ಯಾಯ ಸಲ್ಲಿಸಿದಂತಾಗುವುದಿಲ್ಲ. ಎಲ್ಲಾ ಜನಪರ ಮನಸುಗಳು ಬಯಸುವ ಬದಲಾವಣೆಗೆ ಸಿನಿಮಾಗಳು ಬಹುಮುಖ್ಯ ಮಾಧ್ಯಮ ಎಂದು ನಂಬಿರುವವರು ಹಾಗೂ ಗೆಳೆಯರೊಂದಿಗೆ ಸಿನಿಮಾ ನೋಡುವ ಕ್ರಿಯೆಯೇ ಒಂದು ವಿಶೇಷ ಎಂದು ತಿಳಿದುಕೊಂಡವರು.

ಮಲಯಾಳಂನ ಜಯನ್ ಚೇರಿಯನ್ ನಿರ್ದೇಶಿದಿ ಪಾಪಿಲಾನ್ ಬುದ್ಧ ಸಿನಿಮಾ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು. ಸಿನಿಮಾ ಒಂದು ವಿಷಾದದ ನಿಶಬ್ದದೊಂದಿಗೆ ಮುಗಿಯುತ್ತದೆ. ನಿರ್ದೇಶಕನ ಯಶಸ್ಸು ಎಂದರೆ, ಪ್ರೇಕ್ಷಕರು ಕೂಡ ಅದೇ ನಿಶಬ್ದವನ್ನು ಮತ್ತಷ್ಟು ಕಾಲ ಕೊಂಡೊಯ್ಯುತ್ತಾರೆ. ಸಿನಿಮಾ ನೋಡಿ ಮಲಗಿದವರಿಗೆ ರಾತ್ರಿ ಅಸ್ಪಷ್ಟ ಕನಸುಗಳಲ್ಲಿ ಅದೇ ಸಿನಿಮಾದ ದೃಶ್ಯಗಳು ಬಂದಿದ್ದೂ ಸುಳ್ಳಲ್ಲ. ಮರಾಠಿ ಸಿನಿಮಾ ಸೈರಟ್ ನಿರ್ದೇಶಕ ನಾಗರಾಜ್ ಮಂಜುಳೆಯವರ ಈ ಮೊದಲ ಚಿತ್ರ ಫಂಡ್ರಿ ಕೂಡಾ ನೋಡುಗರನ್ನು ಹಿಡಿದಿಟ್ಟಿದ್ದು ಮಾತ್ರವಲ್ಲ, ಆwhatsapp-image-2016-09-25-at-09-12-17ತ್ಮಾವಲೋಕನ ಮಾಡಿಕೊಳ್ಳಿರೋ ಎಂಬಂತೆ ‘ಕಲ್ಲಲ್ಲಿ ಹೊಡೆದು’ ಹೇಳಿತು. To Kill a Mocking Bird, The Day after Everyday, Never Judge People by their Appearance – ಇವು ಭಾಗವಹಿಸಿದವರು ನೋಡಿದ ಇತರ ಚಿತ್ರಗಳು. ಜಾತಿ, ಲಿಂಗ ಹಾಗೂ ಬಣ್ಣದ ಕಾರಣಗಳಿಗಾಗಿ ಶೋಷಣೆಗೆ ತುತ್ತಾದವರ ಕತೆಗಳನ್ನು ಆಧರಿಸಿದ ಸಿನಿಮಾಗಳಿವು. ಕಾರ್ಯಕ್ರಮ ಆರಂಭವಾಗಿದ್ದು ನಂಗೇಲಿ ನಾಟಕದೊಂದಿಗೆ. ಚಿಂತಕ ಚಂದ್ರ ಪೂಜಾರಿ ಆರಂಭದ ಮಾತುಗಳನ್ನಾಡಿದರು.

ಮಂಗಳೂರು ಸಹಮತದ ಐವಾನ್ ಡಿಸಿಲ್ವಾ, ನಾದ, ವಾಣಿ, ಕಿಟ್ಟಣ್ಣ ಮತ್ತಿತರರು ಉತ್ಸಾಹದಿಂದ ಕಾರ್ಯಕ್ರಮ ಆಯೋಜಿಸಿದ್ದರು. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಮಾಡುವ ಉದ್ದೇಶ ಈ ಬಳಗದ ಸದಸ್ಯರದು.

ಫೋಟೋಗಳು: ಐವಾನ್ ಡಿಸಿಲ್ವಾ.

ನಮ್ಮೂರಿನ “ಯೆತ್ನಳ್ಳ” ಹೊಳೆಯಾದದ್ದು

– ಪ್ರಸಾದ್ ರಕ್ಷಿದಿ

ನಮ್ಮೂರಿನ ರಂಗ ಚಟುವಟಿಕೆಗಳು ಮತ್ತು ಆಮೂಲಕ ನಾವು ಕಟ್ಟಿಕೊಂಡ ಬದುಕು, ಹೋರಾಟಗಳು ದುಖಃ-ಸಂಭ್ರಮಗಳು, ಅದರ ಮೂಲಕ ಹೊರಜಗತ್ತಿನೊಡನೆ ನಾವು ನಡೆಸುತ್ತಿರುವ ಸಂವಾದ, ಈ ಎಲ್ಲದರ ಜೊತೆ ಎತ್ತಿನ ಹಳ್ಳದ ಸಂಬಂಧವಿದೆ. ಸಂಬಂಧ ಅನ್ನುವುದು ಯಾವಾಗಲೂ ದೊಡ್ಡದೇ.

“ಲಕ್ಷಯ್ಯ” ಎಂಬ ಅನಕ್ಷರ ಕೂಲಿಕಾರ್ಮಿಕನೊಬ್ಬ, ಸ್ವಾಭಿಮಾನಿಯಾಗಿ, ಸ್ವಾಧ್ಯಾಯಿಯಾಗಿ ಅಕ್ಷರಕಲಿತು, ತಲೆಯೆತ್ತಿ ನಿಲ್ಲುವ ಘಟನೆ (ನೋಡಿ: ಇದೇ ಲೇಖಕನ ‘ಬೆಳ್ಳೇಕೆರೆ ಹಳ್ಳಿ ಥೇಟರ್’) ಮುಂದೆ ನಮ್ಮೂರಿನ ರಾತ್ರಿ ಶಾಲೆಗೆ, ಆ ಶಾಲೆಯ ಅಕ್ಷರದಾಹಿಗಳ ಮೂಲಕ ನಮ್ಮೆಲ್ಲ ಸಾಂಸ್ಕøತಿಕ ಸಾಹಸಗಳಿಗೆ ಕಾರಣವಾಯಿತು. “ಲಕ್ಷ್ಮಯ್ಯ”ನ ಸ್ವಾಧ್ಯಾಯದ ಹಿನ್ನೆಲೆಯಲ್ಲಿ ಎತ್ತಿನ ಹಳ್ಳದ ಸಂಗೀತವಿದೆ. ಆತ ನನ್ನಿಂದ ಕಾಗುಣಿತವನ್ನು ಹೇಳಿಸಿಕೊಂಡು ಗುಟ್ಟಾಗಿ ಯಾರಿಗೂ ತಿಳಿಯದಂತೆ ರಾಗವಾಗಿ ಹಾಡಿ ಬಾಯಿಪಾಠ ಮಾಡಿಕೊಂಡದ್ದು ಇದೇ ಎತ್ತಿನ ಹಳ್ಳದಲ್ಲಿ ಸ್ನಾನ ಮಾಡುತ್ತ, ಈಜಾಡುತ್ತ. ಎತ್ತಿನ ಹಳ್ಳದ ನೀರಿನಲ್ಲಿ ಗುಣಿತಾಕ್ಷರಗಳು ಅನುರಣಗೊಂಡಿವೆ.

ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿರುವ ಮೂರ್ಕಣ್ಣು ಗುಡ್ಡ ಬೆಟ್ಟಸಾಲಿನಲ್ಲಿ ಎತ್ತಿನ ಹಳ್ಳ ಹುಟ್ಟುತ್ತದೆ. ಅಲ್ಲಿ ಮೂರು ತೊರೆಗಳು ಹುಟ್ಟುತ್ತವೆ. ಎತ್ತಿನಹಳ್ಳ, ಚಿಟ್ಟನಹಳ್ಳ ಮತ್ತು ಜಪಾವತಿ. yettinahole_streamಉಳಿದೆರಡು ತೊರೆಗಳು ಪೂರ್ವಕ್ಕೆ ಹರಿದು ಹೇಮಾವತಿಯ ಮಡಿಲಿಗೆ ಬಿದ್ದರೆ, ಎತ್ತಿನಹಳ್ಳ ಪಶ್ಚಿಮಾಭಿಮುಖಿ. ಇದರ ಹರಿವು, ಎಂಟ್ಹತ್ತು ಕಿಲೋಮೀಟರುಗಳು ಅಷ್ಟೆ. ನಂತರ ಶಿರಾಡಿ ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಲೀನವಾಗುತ್ತದೆ.

ನಾವೆಲ್ಲ ಚಿಕ್ಕವರಿದ್ದಾಗ ಬೇಸಗೆಯ ರಜಾದಿನಗಳಲ್ಲಿ ಕಾಲ ಕಳೆಯುತ್ತಿದ್ದುದು, ಈಜು ಕಲಿತದ್ದು ಎತ್ತಿನ ಹಳ್ಳದಲ್ಲೇ ಆ ಕಾಲದಲ್ಲಿ ಮಧ್ಯಾಹ್ನದ ವೇಳೆಗೆ ನೂರಾರು ದನಕರುಗಳನ್ನು ನೀರಿಗಾಗಿ ಎತ್ತಿನಹಳ್ಳಕ್ಕೆ ತರುತ್ತಿದ್ದರು. ಆಗ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಗೋಮಾಳವೂ ಇತ್ತು. ದನಕಾಯುವ ಹುಡುಗರ ದಂಡೇ ಅಲ್ಲಿ ನೆರೆಯುತ್ತಿತ್ತು. ಬುಗುರಿ, ಚಿಣ್ಣಿಂದಾಡು ಆಡುತ್ತಾ, ಬೀಡಿ ಸೇದುತ್ತ, ನಿತ್ಯ ಜಲಕ್ರೀಡೆಯ ವೈಭೋಗದಲ್ಲಿದ್ದ ಆ ಹುಡುಗರನ್ನು ಕಂಡಾಗ. ಶಾಲೆಗೆ ಹೋಗಲೇಬೇಕಾದ ಶಿಕ್ಷೆಗೊಳಗಾಗಿದ್ದ ನಮ್ಮಂತವರಿಗೆ, ದನಕಾಯುವವರು ಪರಮ ಸುಖಿಗಳೆಂದು ಅನ್ನಿಸಿ ಬುಗುರಿ, ಚಿಣ್ಣಿದಾಂಡಿಗಾಗಿ ಅವರ ಸ್ನೇಹಕ್ಕೆ ಹಾತೊರೆಯುತ್ತಿದ್ದೆವು. ಹರಕು ಬಟ್ಟೆ ತೊಟ್ಟು ಒಪ್ಪೊತ್ತಿನ ಊಟದ ಶ್ರೀಮಂತಿಕೆಯಲ್ಲಿದ್ದ ಆ ದನಗಾಹಿಗಳಿಗೆ, ಸಾಲೆ ಕಲಿಯುತ್ತಿದ್ದ ನಮ್ಮಂತವರ ಬಗ್ಗೆ ವಿಶೇಷ ಗೌರವವೇನೂ ಇರಲಿಲ್ಲ. ಅವರೆಲ್ಲ ನಮ್ಮನ್ನು ಕೈಲಾಗದ ‘ಹೇತ್ಲಾಂಡಿ’ಗಳಂತೆ ಕಾಣುತ್ತಿದ್ದರಲ್ಲದೆ, ತಾವುಗಳು ಮಹಾನ್ ವೀರಾಧಿವೀರರಂತೆ ನಡೆದುಕೊಳ್ಳುತ್ತಿದ್ದರು. ಅವರಲ್ಲಿ ಅವರದ್ದೇ ಆದ ಅನೇಕ ತರದ ಸಾಹಸದ ರೋಚಕ ಕತೆಗಳಿರುತ್ತಿದ್ದವು. ಅವುಗಳಲ್ಲಿ ಮಾಮುಬ್ಯಾರಿಯ ಅಂಗಡಿಯಿಂದ ಕದ್ದ ಬೀಡಿ ಬಂಡಲಿನ ಕತೆ, ಇನ್ಯಾರದೋ ತೋಟದಲ್ಲಿ ಬೈನೆ ಬಿಚ್ಚಿ ಸೇಂದಿ ಕುಡಿದು ಏಟುತಿಂದದ್ದು ಮುಂತಾದ ಸಾಹಸಗಳಿರುತ್ತಿದ್ದವು.

ಎತ್ತಿನಹಳ್ಳದ ಎರಡೂ ದಡಗಳ ಉದ್ದಕ್ಕೂ ಸೊಂಪಾಗಿ ಬೆಳೆದ ವಾಟೆ ಮೆಳೆಗಳಿದ್ದವು. ಸುತ್ತಲಿನ ಗ್ರಾಮಗಳ ಸಮಸ್ತ ಕೃಷಿ ಚಟುವಟಿಕೆಗಳಿಗೆ ಪೂರಕ ಸಾಮಗ್ರಿಗಳಾದ ಅಂದರೆ ಕುಕ್ಕೆ, ಮಂಕರಿ, ಪಾತಿ-ಚಪ್ಪರಗಳಿಗೆ , ಮಳೆಗಾಲಕ್ಕೆ ಗೊರಗ, ಗುಡಿಸಲುಗಳ ಮಾಡಿಗೆ ಹುಲ್ಲು ಹೊದೆಸಲು ಅಡ್ಡಗಳು, ಗೋಡೆಗೆ ನೆರಿಕೆ, ತಟ್ಟಿ, ಎಲ್ಲಕ್ಕೂ ಎತ್ತಿನ ಹಳ್ಳದ ವಾಟೆಯೇ ಆಧಾರ. ಎಲ್ಲ ದನಗಾಹಿಗಳ ಕೈಯಲ್ಲೂ ದನಗಳನ್ನು ಅಟ್ಟುವ ಕೋಲಿನೊಂದಿಗೆ ವಾಟೆಯಿಂದ ತಯಾರಿಸಿದ ಕೊಳಲೂ ಇರುತ್ತಿತ್ತು. ದನಗಾಹಿಗಳು ದಾರಿಯುದ್ದಕ್ಕೂ ಯಾವುದಾದರೂ ಸಿನಿಮಾ ಹಾಡಿನ ಅಥವಾ ಜಾನಪದ ಗೀತೆಗಳ ದಾಟಿಯನ್ನು ನುಡಿಸುತ್ತ ಸಾಗುತ್ತಿದ್ದರು, ಇದು ಬಹಳ ದೂರದವರೆಗೆ ಕೇಳುತ್ತಿತ್ತು. ಅವರಲ್ಲೂ ಅನೇಕರು ಸುಶ್ರಾವ್ಯವಾಗಿ ನುಡಿಸುತ್ತಿದ್ದು ಮಾರ್ಗದರ್ಶನ ದೊರೆತಿದ್ದರೆ ಉತ್ತಮ ಕೊಳಲು ವಾದಕರಾಗುವ ಸಾಧ್ಯತೆ ಇತ್ತು. ಎತ್ತಿನ ಹಳ್ಳದ ಬಳಿ ಮೇಳೈಸಿರುತ್ತಿದ್ದ ನೂರಾರು ದನಕರುಗಳ ಹಿಂಡು ವಾಪಸ್ ಹೋಗುವಾಗ ತಮ್ಮ ಒಡೆಯನ ಕೊಳಲಿನ ದನಿಯನ್ನನುಸರಿಸಿ ತಮ್ಮತಮ್ಮ ಗುಂಪನ್ನು ಸೇರಿಕೊಳ್ಳುತ್ತಿದ್ದವು.

ಹಿಂದಿನ ಕಾಲದಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಎತ್ತಿನ ಗಾಡಿಗಳು, ಇದೇ ಎತ್ತಿನ ಹಳ್ಳದ ಬಳಿ ತಂಗುತ್ತಿದ್ದವಂತೆ. ಎತ್ತುಗಳನ್ನು ತೊಳೆದು, ನೀರು ಕುಡಿಸಿ ದಣಿವಾರಿಕೊಳ್ಳುತ್ತಿದ್ದ ಈ ಸ್ಥಳವನ್ನು ಎತ್ತಿನ ಹಳ್ಳವೆಂದು ಕರೆದಿರಬೇಕು. ಮುಂದೆ ಇದೇ ಹೆಸರು ರೂಡಿಗೆ ಬಂತು. ಜನರ ಬಾಯಲ್ಲಿ “ಯೆತ್ನಳ್ಳ”ವಾಯಿತು. (ಸಕಲೇಶಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸ್ಥಳಕ್ಕೆ “ಎತ್ತಿನಹಳ್ಳ” ಎಂದೇ ಹೆಸರು. ಇದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನದಿತಿರುವು ಯೋಜನೆಯ ಅಣೆಕಟ್ಟೊಂದು ನಿರ್ಮಾಣವಾಗುತ್ತಿದೆ).

ಹೀಗೆ ಹಾಡುತ್ತ, ಕುಣಿಯುತ್ತ, ಮಳೆಗಾಲದಲ್ಲಿ ಆರ್ಭಟಿಸುತ್ತ, ಭೋರ್ಗರೆಯುತ್ತ, ತಣ್ಣಗೆ ಹರಿಯುತ್ತಿದ್ದ, ಎತ್ತಿನ ಹಳ್ಳಕ್ಕೆ ಶುಕ್ರ, ಶನಿಯೋ ಅಂತೂ ಒಂದು ದೆಸೆ ಪ್ರಾರಂಭವಾದದ್ದು, ಮೂರೂವರೆ ದಶಕಗಳ ಹಿಂದೆ. ಸಕಲೇಶಪುರ yettinahole_streamನಗರಕ್ಕೆ ಪೂರೈಕೆಯಾಗುತ್ತಿರುವ ಹೇಮಾವತಿ ನದಿಯ ನೀರು ಕಲುಷಿತವಾಗಿದೆ, ಕುಡಿಯಲು ಯೋಗ್ಯವಾಗಿಲ್ಲ ಎಂದು ಕೆಲವರು ಅದಕ್ಕೆ ಪರಿಹಾರವನ್ನು ಹುಡುಕತೊಡಗಿದರು. ಅಂದಿನ ರಾಜಕಾರಣಿಗಳು, ಸಕಲೇಶಪುರ ಪುರಸಭೆಯ ಹಿರಿಯರೂ ಸೇರಿ ಎತ್ತಿನ ಹಳ್ಳದ ನೀರನ್ನು ಸಕಲೇಶಪುರ ನಗರಕ್ಕೆ ತಂದರೆ ಶುದ್ಧವಾದ ನೀರು ಸಿಗುತ್ತದೆಂದು ಭಾವಿಸಿದರು. ಇದಕ್ಕೆ ಅಂದಿನ ಹಿರಿಯ ರಾಜಕಾರಣಿಗಳಲ್ಲೊಬ್ಬರಾದ ಎನ್.ಕೆ.ಗಣಪಯ್ಯನವರೂ ದನಿಗೂಡಿದರು. ಗಣಪಯ್ಯನವರ “ಹಾರ್ಲೆ ಎಸ್ಟೇಟ್” ಕೂಡಾ ಎತ್ತಿನ ಹಳ್ಳದ ಪಕ್ಕದಲ್ಲೇ ಇತ್ತು. ಹಾರ್ಲೆ ಎಸ್ಟೇಟಿನ ಪಕ್ಕದಲ್ಲಿ ಸಣ್ಣ ಕಟ್ಟೆಯೊಂದನ್ನು ಕಟ್ಟಿ ನೀರನ್ನು ಆರು ಕಿ.ಮೀ ದೂರದ ಸಕಲೇಪುರಕ್ಕೆ ತರುವ ಸಣ್ಣಯೋಜನೆ ಇದಾಗಿತ್ತು. ಆದರೆ ಬಹಳ ಬೇಗ ಈ ಯೋಜನೆಯ ಮೇಲೆ ಅಧಿಕಾರಿಗಳ, ರಾಜಕಾರಣಿಗಳ ಗಮನ ಹರಿಯಿತು. ಎತ್ತಿನಹಳ್ಳದ ನೀರನ್ನು ಬರಿಯ ಸಕಲೇಶಪುರ ನಗರಕ್ಕೆ ತರುವುದರೊಂದಿಗೆ, ಸ್ವಲ್ಪ ದೊಡ್ಡ ಯೋಜನೆಯನ್ನಾಗಿ ಮಾಡಿ ಹೇಮಾವತಿ ನದಿಗೆ ಸೇರಿಸಿದರೆ ನೀರಾವರಿಗೂ ಮತ್ತಷ್ಟು ನೀರು ದೊರೆಯುವುದೆಂಬ ಮಾತು ಕೇಳಿಬರತೊಡಗಿತು. ಇದನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದವರು ಅಂದಿನ ನೀರಾವರಿ ಮಂತ್ರಿಗಳಾಗಿದ್ದ ಹೆಚ್.ಸಿ. ಶ್ರೀಕಂಠಯ್ಯ. ಆಗಲೇ ಮುಂದಾಗಲಿರುವ ಅನಾಹುತವನ್ನು ಗ್ರಹಿಸಿ ಎನ್.ಕೆ.ಗಣಪಯ್ಯ ಈ ಯೋಜನೆಯನ್ನು ವಿರೋಧಿಸತೊಡಗಿದರು. ಆಗ ಕೆಲವರು “ಈಗ ಗಣಪಯ್ಯ ತನ್ನ ಕಾಫಿತೋಟ ಮುಳುಗಡೆ ಆಗುತ್ತೆ ಅಂತ ವಿರೋಧ ಮಾಡ್ತಾರೆ, ಮೊದ್ಲು ಶುರು ಮಾಡಿದ್ದೂ ಇವರೇ” ಎಂದು ದೂರತೊಡಗಿದರು. ವಾಸ್ತವದ ಸಂಗತಿಯೆಂದರೆ, ಈ ಯೋಜನೆಯಿಂದ ಗಣಪಯ್ಯನವರ ತೋಟ ಮುಳಗಡೆಯಾಗುತ್ತಿರಲಿಲ್ಲ, ಬದಲಿಗೆ ಅಕ್ಕ ಪಕ್ಕದ ಕೆಲವು ಕಾಫಿ ತೋಟಗಳು ಭಾಗಶಃ ಮುಳುಗಡೆಯಾಗುತ್ತಿದ್ದವು.

ಆ ನಂತರದ ದಿನಗಳಲ್ಲಿ ಇದಕ್ಕಾಗಿ ಸರ್ವೆ ಇತ್ಯಾದಿ ಕಾರ್ಯಗಳು ಪ್ರಾರಂಭವಾದವು. ಪ್ರತಿನಿತ್ಯ ನೀರಿನ ಹರಿವನ್ನು ಅಳೆಯಲು ಒಬ್ಬ ನೌಕರನ ನೇಮಕವೂ ಆಯ್ತು. ಹಾರ್ಲೆ ಎಸ್ಟೇಟಿನ ಬಳಿ ಎತ್ತಿನ ಹಳ್ಳಕ್ಕೆ, ಅಬ್ಬಿ ಹಳ್ಳ ಎನ್ನುವ ಪುಟ್ಟ ತೊರೆಯೊಂದು ಸೇರುವ ಜಾಗವಿದೆ. ಅಲ್ಲಿ ಕಟ್ಟೆಯೊಂದನ್ನು ಕಟ್ಟಿ ನಾಲೆಯಮೂಲಕ, ಹೆಬ್ಬಸಾಲೆ, ಮಾವಿನಕೂಲು, ಗ್ರಾಮಗಳನ್ನು ಹಾದು, ಸಕಲೇಶಪುರ ಮೂಡಿಗೆರೆ ರಸ್ತೆಯನ್ನು ಹಾರ್ಲೆಕೂಡಿಗೆ ಎನ್ನುವ ಸ್ಥಳದಲ್ಲಿ ದಾಟಿ, ಗಾಣದಹೊಳೆ ಗ್ರಾಮವನ್ನು ಸೇರಿ ಅಲ್ಲಿಂದ ಹೇಮಾವತಿ ನದಿಗೆ ನೀರನ್ನು ಸಾಗಿಸುವ ಯೋಜನೆಯೂ ಸುದ್ದಿಯಾಯಿತು. ಯಾರ ಜಮೀನು ಹೋಗಬಹುದು, ಪರಿಹಾರವೆಷ್ಟು ಸಿಕ್ಕೀತು ಎನ್ನುವ ಲೆಕ್ಕಾಚಾರಗಳು ಪ್ರಾರಂಭವಾದವು. ಇದೆಲ್ಲ ಆಗಲು ಇನ್ನೂ ಇಪ್ಪತ್ತು ವರ್ಷವಾದರೂ ಬೇಕು. ಆವಾಗ ನೋಡೋಣ ಎನ್ನುವವರೂ ಇದ್ದರು.

ಆಗಿನ ಅಂದಾಜಿನ ಪ್ರಕಾರ, ಹಾರ್ಲೆ ಎಸ್ಟೇಟಿನ ಬಳಿ ಕಟ್ಟೆಯನ್ನು ಕಟ್ಟಿ ನೀರನ್ನು ತಿರುಗಿಸಿದರೆ,ಎತ್ತಿನ ಹಳ್ಳದಿಂದ ದೊರೆಯುವ ನೀರಿನ ಪ್ರಮಾಣ ಸುಮಾರು ಒಂದೂವರೆ ಟಿ.ಎಮ್.ಸಿ ಎಂದು ನೀರಾವರಿ ಇಲಾಖೆ ಪ್ರಕಟಿಸಿತ್ತು.

ನಂತರದ ವರ್ಷಗಳಲ್ಲಿ ಈ ನೀರು ತಿರುಗಿಸುವ ಯೋಜನೆ ಗುಪ್ತಗಾಮಿನಿಯಾಗಿ ಹರಿಯುತ್ತಲೇಇತ್ತು.

ಎತ್ತಿನ ಹಳ್ಳಕ್ಕೆ ಈ ಕಟ್ಟೆಯನ್ನು ಕಟ್ಟಲು ಯೋಜಿಸಿದ್ದ ಜಾಗ ಪೂರ್ಣ ಚಂದ್ರ ತೇಜಸ್ವಿಯವರ ಮೆಚ್ಚಿನ ತಾಣಗಳಲ್ಲಿ ಒಂದು. tejasviಅವರು ಎಪ್ಪತ್ತರ ದಶಕದಲ್ಲಿ ಹಲವು ಬಾರಿ ಇಲ್ಲಿಗೆ ಮೀನು ಹಿಡಿಯಲು ಬರುತ್ತಿದ್ದರು. ಆಗ ನಮ್ಮ ಸುತ್ತಮುತ್ತಲಿನ ಗ್ರಾಮಗಳ ಕೆಲವರು ಯುವಕರೂ ಅವರೊಂದಿಗೆ ಹೋಗುವುದಿತ್ತು. ಆಗಿನ್ನೂ ಈ ಎತ್ತಿನ ಹಳ್ಳದ ನೀರನ್ನು ಸಕಲೇಶಪುರಕ್ಕೆ ಸಾಗಿಸುವ ಮಾತಷ್ಟೆ ಪ್ರಚಾರದಲ್ಲಿತ್ತು. ನನ್ನ ಗೆಳೆಯರು ಯಾರೋ ತೇಜಸ್ವಿಯವರಿಗೆ. ಈ ವಿಚಾರವನ್ನು ತಿಳಿಸಿದ್ದರು. ಅದಕ್ಕೆ ತೇಜಸ್ವಿ “ಹೇಮಾವತಿ ನೀರು ಕ್ಲೀನಿಲ್ಲ ಅಂದ್ರೆ ಅದನ್ನ ಕೆಡಸಿದವ್ರು ಯಾರು, ನಾವೇ ಅಲ್ವೆ, ಈಗೆಲ್ಲ ಏನೇನೋ ವಿಧಾನಗಳು ಬಂದಿವೆ, ಅದೇ ನೀರನ್ನು ಕ್ಲೀನ್ ಮಾಡಿ ಬಳಸಬೇಕು, ಮನೆಬಾಗಲ ನೀರು ಕೆಡಸಿ ಇನ್ನೊಂದು ಕಡೆಯಿಂದ ನೀರು ತರ್ತೀನಿ ಅನ್ನೋದು ಮೂರ್ಖತನ ಕಣ್ರೀ ನೀವೆಲ್ಲಾ ವಿರೋಧಿಸಬೇಕು” ಎಂದಿದ್ದರಂತೆ. ನಂತರದ ದಿನಗಳಲ್ಲಿ ತೇಜಸ್ವಿಯವರೂ ಇತ್ತ ಬರುವುದನ್ನು ಕಡಿಮೆ ಮಾಡಿದರು. (ಇತ್ತೀಚೆಗೆ ಖಾಸಗಿ ಟಿ.ವಿ ಛಾನಲ್ ಒಂದಕ್ಕೆ ತೇಜಸ್ವಿಯವರ ಬಗ್ಗೆ ನಾವೊಂದಷ್ಟು ಜನ ಗೆಳೆಯರು ಸೇರಿ, ಸಾಕ್ಷ್ಯ ಚಿತ್ರವೊಂದನ್ನು ಮಾಡಿದೆವು, ಆಗ ಇದೇ ಸ್ಥಳದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎತ್ತಿನ ಹೊಳೆಯೋಜನೆ ಪೂರ್ಣಗೊಂಡರೆ ಈ ಸ್ಥಳಗಳೆಲ್ಲ ನೆನಪು ಮಾತ್ರವಾಗಲಿದೆ)

ಎತ್ತಿನಹಳ್ಳ ಹುಟ್ಟಿ ಹರಿಯುವ ಮೂರ್ಕಣ್ಣುಗುಡ್ಡ ಸಾಲಿನ ತಪ್ಪಲಿನಲ್ಲೇ ನಮ್ಮ ರಂಗ ತಂಡವೂ ಹುಟ್ಟಿ ಬೆಳೆದಿದೆ. ಎಪ್ಪತ್ತರ ದಶಕದ ಕೊನೆಯಭಾಗದಲ್ಲಿ ಹುಟ್ಟಿದ ನಮ್ಮ ರಂಗಬಳಗದ ಗೆಳೆಯರೆಲ್ಲ ಸೇರಿ, ಹತ್ತು ವರ್ಷಗಳ ಚಟುವಟಿಕೆಯ ನಂತರ ಪ್ರಥಮ ಬಾರಿಗೆ ರಂಗ ತರಬೇತಿ ಶಿಬಿರವೊಂದನ್ನು ಆಯೋಜಿಸಿದ್ದೆವು. ಅದರ ಉದ್ಘಾಟನೆಯನ್ನು ತೇಜಸ್ವಿಯವರೇ ನಡೆಸಿಕೊಟ್ಟರು. ಆ ದಿನ ನಮ್ಮೂರ ಶಾಲಾಮಕ್ಕಳಿಂದ ನಾಟಕ ಪ್ರದರ್ಶನವಿತ್ತು. ನಾಟಕವನ್ನು ನಾನೇ ಬರೆದು ನಿರ್ದೇಶಿಸಿದ್ದೆ. ನಾಟಕದ ಹೆಸರು “ಮೂರ್ಕಣ್ಣು ಗುಡ್ಡ”. ನಾಟಕದ ವಸ್ತುವೂ ಪರಿಸರ ನಾಶದಿಂದಾಗುವ ಹಾನಿಯ ಬಗ್ಗೆ ಇತ್ತು. ಮಕ್ಕಳ ಅಭಿನಯವನ್ನು ತೇಜಸ್ವಿಯವರು ತುಂಬಾ ಮೆಚ್ಚಿಕೊಂಡರು. ಮುಂದೆ ನಮ್ಮ ರಂಗ ತಂಡಕ್ಕೆ. “ಪ್ರಕೃತಿ ರಂಗ ಮಂಚ” ಎಂದೇ ಹೆಸರಿಟ್ಟೆವು.

ಈಗ ನಮ್ಮೆಲ್ಲ ರಂಗ ಚಟುವಟಿಕೆಗಳು ನಡೆಯುತ್ತಿರುವ, ಇನ್ನೂ ನಿರ್ಮಾಣ ಹಂತದಲ್ಲಿರುವ ರಂಗ ಮಂದಿರಕ್ಕೆ ‘ಪೂರ್ಣಚಂದ್ರ ತೇಜಸ್ವಿ ರಂಗಮಂದಿರ’ ವೆಂದು ಕರೆದಿದ್ದೇವೆ. ಇಲ್ಲಿ ನಿಂತು ನೋಡಿದರೆ, ಪೂರ್ವ ದಿಕ್ಕಿಗೆ ಸಕಲೇಶಪುರದ ಮಂಜ್ರಾಬಾದ್ ಕೋಟೆಯೂ, ದಕ್ಷಿಣದಲ್ಲಿ ಬಾನಿನಂಚಿಗೆ ಕುಮಾರ ಪರ್ವತವೂ ಪಶ್ಚಿಮದಲ್ಲಿ ಮೂರ್ಕಣ್ಣು ಗುಡ್ಡ ಸಾಲೂ, ವಾಯುವ್ಯದಲ್ಲಿ ದೂರದಲ್ಲಿ ಬಾಬಾಬುಡನ್ ಗಿರಿಶಿಖರಗಳೂ ಗೋಚರಿಸುತ್ತವೆ. ರಂಗಮಂದಿರದಲ್ಲಿ ನಿಂತು, ಅಲ್ಲಿಂದಲೇ ಸಂಪೂರ್ಣ ಎತ್ತಿನ ಹಳ್ಳದ ಜಲಾನಯನ ಪ್ರದೇಶವನ್ನು ವೀಕ್ಷಿಸಬಹುದು.

ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಹಾಗೂ ಕಾಡುಮನೆ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳು ಪ್ರಾರಂಭವಾದ್ದರಿಂದ, ಎತ್ತಿನ ಹಳ್ಳವನ್ನು ತಿರುಗಿಸುವ ಯೋಜನೆಯ ಮಾತು ಹಿನ್ನೆಲೆಗೆ ಸರಿಯಿತು. ಈ ನೀರನ್ನು ತಿರುಗಿಸಿದರೆ ಕೆಳಭಾಗದಲ್ಲಿ ಸ್ಥಾಪಿಸಿರುವ ಜಲವಿದ್ಯುತ್ ಯೋಜನೆಗಳಿಗೆ ನೀರಿನ ಕೊರತೆ ಉಂಟಾಗುವುದರಿಂದ ಇದನ್ನು ಕೈಬಿಡಲಾಗುವುದೆಂದೇ ಎಲ್ಲರೂ ನಂಬಿದರು. ಈ ವಿದ್ಯುತ್ ಯೋಜನೆಗಳಲ್ಲಿ ಕೆಲವು ಆನೆದಾರಿಯಲ್ಲೇ ಅಡ್ಡವಾಗಿ ಸ್ಥಾಪಿತವಾದವು. ಇದರಿಂದಾಗಿ ಸುತ್ತಲಿನ ಗ್ರಾಮಗಳಲ್ಲಿ ಆನೆ ಮತ್ತಿತರ ಕಾಡುಪ್ರಾಣಿಗಳಿಂದ ತೊಂದರೆಯೂ ಆರಂಭವಾದವು. ಆದರೆ ಈ ಜಲ ವಿದ್ಯುತ್ ಯೋಜನೆಗಳಿಂದ ನಮ್ಮೂರು ಬೆಳಕಾದೀತೆಂತು ಕಾದು ಕುಳಿತವರಿಗೆ ನಿರಾಸೆಯಾದದ್ದು ಈ ವಿದ್ಯುತ್ ಆಂದ್ರದ ಪಾಲಾಗಿದೆಯೆಂದು ತಿಳಿದಾಗ.

ಇದೊಂದಿಗೆ ಮಲೆನಾಡಿನ ಅತ್ಯಂತ ಸೂಕ್ಷ್ಮ ಹಾಗೂ ಸುಂದರ ಅರಣ್ಯಪ್ರದೇಶಗಳಾದ ಬಿಸಲೆ, ಕಾಗಿನಹರೆ, ಹೊಂಗಡಹಳ್ಳ ಪ್ರದೇಶಗಳನ್ನೆಲ್ಲ ಮುಳುಗಿಸಿ ವಿದ್ಯುತ್ ತಯಾರಿಸುವ ‘ಗುಂಡ್ಯಜಲ ವಿದ್ಯುತ್‍ಯೋಜನೆ’ಯೂ ಪ್ರಕಟವಾಯ್ತು. yettinahole-projectನಂತರ ನಡೆದ ಹೋರಾಟದ ವಿವರಗಳು ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.

ಗುಂಡ್ಯ ಜಲ ವಿದ್ಯುತ್ ಯೋಜನೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಯಿತು. ಸುಂದರಲಾಲ ಬಹುಗುಣ ಅವರೂ ಬಂದು ಈ ಹೋರಾಟದಲ್ಲಿ ಭಾಗಿಯಾದರು. ನಮ್ಮೂರಿನಲ್ಲೂ ಒಂದು ರಾತ್ರಿ ಉಳಿದರು. ನಮ್ಮ ರಂಗಮಂದಿರದಲ್ಲಿ ಕುಳಿತು ಜನರನ್ನು ಭೇಟಿಯಾದರು ಮಾತನಾಡಿದರು. ಅವರೂ ಕೂಡಾ ರಂಗಕರ್ಮಿಗಳೆಂದು ನಮಗೆ ತಿಳಿದ್ದು ಆಗಲೇ. ಪೂರ್ಣಚಂದ್ರ ತೇಜಸ್ವಿ ರಂಗಮಂದಿರದ ಅಹ್ಲಾದಕರ ಪರಿಸರದಿಂದ ಖುಷಿಗೊಂಡಂತಿದ್ದ ಬಹುಗುಣ ಲಹರಿಬಂದಂತೆ ಮಾತನಾಡುತ್ತ ಹೋದರು. ಚಿಪ್ಕೊ ಚಳಿವಳಿಯಿಂದ ಆರಂಭಿಸಿದ ಅಜ್ಜನ ಮಾತು ಹೆಚ್ಚಾಗಿ ರಂಗಭೂಮಿಯ ಸುತ್ತಲೇ ತಿರುಗಿತು. ಬೀದಿ ನಾಟಕ, ಹಾಡುಗಳ ಮೂಲಕ ಜನ ಸಂಘಟನೆ ಮಾಡಿದ ದಿನಗಳನ್ನು ನೆನಪಿಸಿಕೊಂಡು ಉತ್ಸಾಹದಿಂದ ಮಾತನಾಡಿದರು. ‘ಭಾಷಣಕ್ಕೆ ಬಾಯಿ ಮಾತ್ರ ಇದೆ, ಆದರೆ ರಂಗಭೂಮಿಗೆ ಬಾಯಿ, ಕಣ್ಣು, ಕಿವಿ ಎಲ್ಲವೂ ಇವೆ ಹಾಗಾಗಿ ಯಾವುದೇ ಚಳುವಳಿಗೂ ರಂಗಭೂಮಿ ಅತ್ಯಂತ ಶಕ್ತ ಮಾಧ್ಯಮ ನಾಟಕಗಳನ್ನು ನೋಡಲು ಮಕ್ಕಳು ದೊಡ್ಡವರು ಮಹಿಳೆಯರು,ಎಲ್ಲರೂ ಬರುತ್ತಾರೆ ಅದರಲ್ಲೂ ಮಹಿಳೆಯರು ಸ್ವಾಭಾವಿಕವಾಗಿ ಹೆಚ್ಚು ಕರುಣಾಮಯಿಗಳು, ನಾಟಕ ನೇರವಾಗಿ ಹೃದಯಕ್ಕೆ ತಟ್ಟುವುದರಿಂದ ಅದರ ಪರಿಣಾಮ ಮಹಿಳೆಯರಲ್ಲಿ ಹೆಚ್ಚಿನದಾಗಿರುತ್ತದೆ. ಅದರಿಂದ ಚಳುವಳಿಗೂ ಹೆಚ್ಚಿನ ಬಲ ಬರುತ್ತದೆ’ ಎಂದ ಅವರು, ನೀವು ಈ ಪರಿಸರ ಕಾಳಜಿಯ ಯಾತ್ರೆಯನ್ನು ರಂಗಕ್ರಿಯೆಗಳ ಮೂಲಕವೂ ಮುಂದುವರಿಸಿ, ಈ ಕೆಲಸವನ್ನು ಯಾವ ಭಾಷಣಕಾರರಾಗಲೀ ಸರ್ಕಾರವಾಗಲೀ ಮಾಡಲಾಗದು, ಎಂದರು. ಪರಿಸರ ಯಾತ್ರೆಯ ಕಾರ್ಯಕ್ರಮದಬಗ್ಗೆ ಮಾತನಾಡುತ್ತ ನಾವು ಮಾಡುವ ಈ ಕೆಲಸ ಮನುಷ್ಯರಿಗೆ ಮಾತ್ರವಲ್ಲ ಇಡೀ ಭೂಮಂಡಲದ ಉಳಿವಿಗೆ ಆ ಮೂಲಕ ಸಕಲ ಜೀವರಾಶಿಯ ಉಳಿವಿಗೆ ಅಗತ್ಯ ಆದರೆ ನಮಗೆ ಹಿರಿಯರಿಗೆ ಇನ್ನು ಹೆಚ್ಚು ಕಾಲಾವಕಾಶ ಉಳಿದಿಲ್ಲ. ನಮ್ಮ ಮುಂದಿರುವ ಈ ಎಳೆಯರಿಗೆ ಸಾಕಷ್ಟು ಅವಕಾಶವಿದೆ ಆದ್ದರಿಂದ ಮಕ್ಕಳೇ ನಮ್ಮ ಮುಂದಿನ ಭರವಸೆ, ಎಂದ ಅವರು, ನಿಮ್ಮ ಪರಿಸರ ಯಾತ್ರೆಗೆ ನಾನೇನು ಕೊಡಬಲ್ಲೆ ಒಂದು ಧ್ಯೇಯವಾಕ್ಯ ನೀಡುತ್ತೇನೆ, “ಥಿes ಣo ಐiಜಿe, ಓo ಣo ಆeಚಿಣh” ಇದು ನಿಮ್ಮ ಚಿಂತನೆಯಲ್ಲಿರಲಿ, ಇದೇ ಪರಿಸರದ ಉಳಿವಿಗೆ ದಾರಿ ತೋರುತ್ತದೆ ಎಂದರು.

ನಿಧಾನವಾಗಿ ಗುಂಡ್ಯ ಜಲವಿದ್ಯುತ್ ಯೋಜನೆ ಹಿನ್ನೆಲೆಗೆ ಸರಿಯಿತು.

ಆ ಸಂದರ್ಭದಲ್ಲಿ “ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ” ಎಂಬ ಬೀದಿ ನಾಟಕವನ್ನು ನಾವು (ಜೈಕರ್ನಾಟಕ ಸಂಘ ಬೆಳ್ಳೇಕೆರೆ) ಸಿದ್ಧಪಡಿಸಿಕೊಂಡು ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿದೆವು. ಮೈಸೂರಿನ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲೂ ಇದನ್ನು ಪ್ರದರ್ಶಿಸಿದೆವು. ಸ್ವಲ್ಪ ಸಮಯದ ಹಿಂದಷ್ಟೇ ಮೈಸೂರು ನಗರಕ್ಕೇ ಕಾಡಾನೆ ನುಗ್ಗಿ ಬಂದು ಇಬ್ಬರು ಆನೆ ತುಳಿತಕ್ಕೆ ಬಲಿಯಾಗಿದ್ದರು.

ಮಲೆನಾಡಿನಲ್ಲಿ ಆನೆಗಳು ಅನೇಕ ವರ್ಷಗಳಿಂದಲೂ ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿ. ಮಲೆನಾಡಿನ ಜನ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನುyettinahole-project-diverting-west-flowing-water-to-an-arid-land ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದುಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ. ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ.

ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತವು, ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸಿದರು. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋದವು. ಪರಂಪರಾಗತ ಆನೆದಾರಿಗಳು ತುಂಡರಿಸಿಹೋದವು. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯೆತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ, ಕೆಲವೊಮ್ಮೆ ಮೋಟಾರ್ ರ್ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಗಾಂಜಾ ಬೆಳೆ ಮತ್ತು ಕಳ್ಳನಾಟಾದಂದೆಯಂತಹ ಕಾನೂನುಬಾಹಿರ ಕೃತ್ಯಗಳು ಕೂಡಾ ಪಶ್ಚಿಮಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳಿಗೆ ದೊಡ್ಡಪ್ರಮಾಣದಲ್ಲಿ ತೊಂದರೆಯನ್ನುಂಟುಮಾಡಿವೆ.

ಇಷ್ಟೆಲ್ಲ ಆಗುವಾಗಲೂ ನಮ್ಮ “ಯೆತ್ನಳ್ಳ” ತಣ್ಣಗೆ ಹರಿಯುತ್ತಲೇಇತ್ತು.

ಕೋಲಾರ- ತುಮಕೂರು ಪ್ರದೇಶಗಳಿಗೆ ನೀರೊದಗಿಸುವ ಪ್ರಸ್ತಾಪ ಬಂದಾಗಲೂ ಮೊದಲಿಗೆ ರಾಜಕಾರಣಿಗಳು ಹೇಳಿದ್ದು ಪಶ್ಚಿಮಕ್ಕೆ ಹರಿದು ‘ವ್ಯರ್ಥ’ವಾಗುತ್ತಿರುವ ನೇತ್ರಾವತಿ ನದಿಯ ಬಗ್ಗೆಯೇ. ಆದರೆ ಜನರ ವಿರೋಧದ ಸುಳಿವು ಸಿಕ್ಕಿದೊಡನೆಯೇ ಅವರ ಭಾಷೆ ನುಡಿಕಟ್ಟುಗಳು ಬದಲಾದವು. ನೇತ್ರಾವತಿ ನದಿಯ ಬದಲಾಗಿ ಘಟ್ಟದ ಮೇಲ್ಭಾಗದಲ್ಲಿ ಪಶ್ಚಿಮದತ್ತ ಹರಿಯುವ ಎತ್ತಿನ ಹಳ್ಳದಂತಹ ಸಣ್ಣ ಸಣ್ಣ ಹೊಳೆಗಳನ್ನು ಒಗ್ಗೂಡಿಸಿ, ಬಯಲು ಸೀಮೆಯ ಜನರಿಗೆ ಕುಡಿಯುವ ನೀರೊದಗಿಸುವ ಅತ್ಯಂತ ಅಗತ್ಯದ ಯೋಜನೆಯಿದೆಂದು ಬಿಂಬಿಸಿದರು. ಮಲೆನಾಡಿನ ಮತ್ತು ಕರಾವಳಿಯ ಜನರಿಗೆ ಹೀಗೆ ಹೇಳಿ, ಬಯಲು ಸೀಮೆಯ ಜನರ ಮುಂದೆ ಇಪ್ಪತ್ತನಾಲ್ಕು ಟಿ.ಎಮ್.ಸಿ ನೀರಿನ ಚಿತ್ರಣ ನೀಡಿದರು. ಇಷ್ಟು ನೀರೊದಗಿಸುವ ಜಲಮೂಲ ಸಣ್ಣ “ಹಳ್ಳ”ವಾಗಿರಲು ಸಾಧ್ಯವಿಲ್ಲ ಎಂದೋ ಎನೋ. “ಎತ್ತಿನ ಹಳ್ಳ” ಮೊದಲು ರಾಜಕಾರಣಿಗಳ ಬಾಯಲ್ಲಿ ನಂತರ ವ್ಯಾಪಕವಾಗಿ ಮಾಧ್ಯಮಗಳಲ್ಲಿ “ಎತ್ತಿನಹೊಳೆ” ಯೋಜನೆಯಾಯಿತು.

ಹೀಗೆ ನಮ್ಮ “ಯೆತ್ನಳ್ಳ” ಎತ್ತಿನಹೊಳೆಯಾಗಿ ಲೋಕವಿಖ್ಯಾತವಾಯಿತು.

ಕಳೆದ ಮೂರು ದಶಕಗಳಲ್ಲಿ ಬೇರೆ ಕಡೆಗಳಂತೆ ಮಲೆನಾಡಿನಲ್ಲೂ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇಲ್ಲಿನ ಯುವಜನರು ವಿದ್ಯಾವಂತರಾಗಿ, ಕುಶಲಕರ್ಮಿಗಳಾಗಿ ಬೇರೆಡೆಗೆ ಹೋಗಿದ್ದರೂ, ಗದ್ದೆ ಬೇಸಾಯವನ್ನುಳಿದು ಇತರ ಕಾಫಿ, ಮೆಣಸು, ಶುಂಠಿ ಮುಂತಾದ ವಾಣಿಜ್ಯ ಬೆಳೆಗಳ ಕೃಷಿ ಹೆಚ್ಚಾಗಿದೆ. ಯಂತ್ರೋಪಕರಣಗಳ ಬಳಕೆ, ನೀರಾವರಿ ಎರಡೂ ಹೆಚ್ಚಳವಾಗಿದ್ದು ನೀರಿನ ಬಳಕೆ ಗಣನೀಯವಾಗಿ ಹೆಚ್ಚಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಾಫಿ ತೋಟಗಳು, ವ್ಯಾಪಕವಾಗಿ ಕಾರ್ಪೊರೇಟ್ ಧನಿಗಳ ಕೈಸೇರುತ್ತಿದೆ. ಇವರು ದೊಡ್ಡ ಪ್ರಮಾಣದಲ್ಲಿ ಹೊರರಾಜ್ಯಗಳಿಂದ ಕೂಲಿಕಾರ್ಮಿಕರನ್ನು ಕರೆತರುತ್ತಿರುವುದರಿಂದ, ಜನವಸತಿ ಹೆಚ್ಚಾಗುತ್ತಿದೆ. ಇದರೊಂದಿಗೆ ಸರ್ಕಾರದ ಅನೇಕ ಯೋಜನೆಗಳ ಮೂಲಕ ಸ್ವಂತ ನಿವೇಶನ-ಮನೆ ಹೊಂದಿದವರೂ ಹೆಚ್ಚಾಗಿದ್ದಾರೆ. ಇವೆಲ್ಲವೂ ಸೇರಿ ಮಲೆನಾಡಿನಲ್ಲೂ ಕೃಷಿ ಮಾತ್ರವಲ್ಲ ಕುಡಿಯುವ ನೀರಿನ ಬೇಡಿಕೆಯೂ ಹೆಚ್ಚಿದೆ. ಕಳೆದೆರಡು ದಶಕಗಳಲ್ಲಿ ಕೊರೆದ ಕೊಳವೆಬಾವಿಗಳು ನಿರುಪಯುಕ್ತವಾಗಿವೆ. ಆದ್ದರಿಂದ ಇಲ್ಲೂ ಸಹ ಹಳ್ಳ-ಹೊಳೆಗಳ ನೀರನ್ನೇ ಜನರು ಬಳಸತೊಡಗಿದ್ದಾರೆ.

ಎತ್ತಿನಹಳ್ಳದ ಜಲಾನಯನ ಪ್ರದೇಶದಲ್ಲೇ ಸುಮಾರು ಏಳೆಂಟು ಸಾವಿರ ಎಕರೆಗಳಷ್ಟು, ಕಾಫಿ ತೋಟಗಳಿವೆ. ಏಲಕ್ಕಿ ಮೆಣಸು, ಅಡಿಕೆ ಬೆಳೆಯೂ ಸಾಕಷ್ಟಿದೆ. ಈ ಪ್ರದೇಶದಲ್ಲೇ ಬರುವ ಹೆಗ್ಗದ್ದೆ, ದೋಣಿಗಾಲ್, ಕುಂಬರಡಿ, ನಡಹಳ್ಳಿ, ಹೆಬ್ಬಸಾಲೆ, yettinahole_works-ringsಮಾವಿನಕೂಲು, ಗಾಣದಹೊಳೆ, ರಕ್ಷಿದಿ. ಕ್ಯಾಮನಹಳ್ಳಿ, ಅಗಲಟ್ಟಿ ಮುಂತಾದ ಗ್ರಾಮಗಳಿವೆ. ಇವುಗಳಲ್ಲಿ ಹೆಚ್ಚಿನ ಗ್ರಾಮಗಳಿಗೆ ಕುಡಿಯುವ ನೀರಿಗೂ ಇಂದು ಎತ್ತಿನಹಳ್ಳದ ನೀರೇ ಆಧಾರ. ಈ ಎಲ್ಲಾ ಗ್ರಾಮಪಂಚಾಯತಿಗಳು ಕುಡಿಯುವನೀರಿನ ಯೋಜನೆಯಲ್ಲಿ ಎತ್ತಿನಹಳ್ಳದ ನೀರನ್ನು ಬಳಸುತ್ತಿವೆ. ಈ ಎಲ್ಲ ಕಾರಣಗಳಿಂದ ಕಡು ಬೇಸಗೆಯಲ್ಲಿ ಎತ್ತಿನಹಳ್ಳ ಸಂಪೂರ್ಣ ಬರಿದಾಗುವ ಹಂತ ತಲಪಿರುತ್ತದೆ.

ರಕ್ಷಿದಿ, ಅಗಲಟ್ಟಿ ಗ್ರಾಮಗಳಲ್ಲಿ ಹಾಗೂ ನಮ್ಮ ರಂಗಮಂದಿರದಲ್ಲಿ ಬಳಸುತ್ತಿರುವುದೂ ಎತ್ತಿನಹಳ್ಳದ ನೀರನ್ನೇ. ವೇದಿಕೆಗಳಿಂದ ಮಾತನಾಡುವಾಗೆಲ್ಲ ನಾವು ‘ನಮಗಿದೇ ಗಂಗೆ, ಕಾವೇರಿ, ಗೋದಾವರಿ’ ಎನ್ನುತ್ತೇವೆ.

ಇಷೆಲ್ಲ ಇದ್ದರೂ ಗುಂಡ್ಯಜಲವಿದ್ಯುತ್ ಯೋಜನೆ ಅಥವಾ ಎತ್ತಿನಹೊಳೆ ತಿರುವು ಯೋಜನೆಗೆ ಸ್ಥಳೀಯರ ವಿರೋಧ ಕಡಿಮೆ. ಹೋರಾಟ-ಹಾರಾಟವೇನಿದ್ದರೂ ಹೊರಗಿನವರದ್ದು ಎಂಬ ಮಾತು ಆಗಾಗ, ಮಾಧ್ಯಮಗಳಲ್ಲಿ, ಮತ್ತು ಮುಖ್ಯವಾಗಿ ರಾಜಕಾರಣಿಗಳ ಮಾತಿನಲ್ಲಿ ಕೇಳಿಬರುತ್ತದೆ.

ಆದರೆ ಇವರೆಲ್ಲ ಹೇಳುತ್ತಿರುವಷ್ಟು ಸರಳವಾಗಿ ಈ ಸಮಸ್ಯೆ ಖಂಡಿತ ಇಲ್ಲ. ಮೊದಲನೆಯದಾಗಿ ಪರಿಸರವನ್ನು ಉಳಿಸಬೇಕೆನ್ನುವವರಲ್ಲೂ ಹಲವು ಅಭಿಪ್ರಾಯಗಳಿವೆ. ಇವರೆಲ್ಲರೂ ಪರಿಸರದ ಬಗ್ಗೆ ನಿಜವಾದ ಕಾಳಜಿಯನ್ನು ಇಟ್ಟುಕೊಂಡಿರುವವರೇ, ಆದರೆ ಆಧುನಿಕ ಜೀವನ ಕ್ರಮವನ್ನು ಒಪ್ಪಿಕೊಂಡ ಮೇಲೆ ಸ್ವಲ್ಪ ಮಟ್ಟಿನ ರಾಜಿ ಅನಿವಾರ್ಯ ಎನ್ನುವವರಿದ್ದಾರೆ. ನಮಗೆ ರಸ್ತೆ, ವಿದ್ಯುತ್, ಮುಂತಾದವು ಬೇಕೇಬೇಕು ಎಂದಮೇಲೆ ಅರಣ್ಯನಾಶವೂ ಅನಿವಾರ್ಯವಾದ್ದರಿಂದ ಮರಗಿಡಗಳನ್ನು ಬೆಳೆದರಾಯ್ತು ಎಂದುಕೊಂಡವರಿದ್ದಾರೆ. ನೀರಿಲ್ಲದವರಿಗೆ ನೀರು ನೀಡುವುದು, ಪುಣ್ಯಕಾರ್ಯ ಎನ್ನುವವರಿದ್ದಾರೆ. ಹಾಗೇ ಪರಿಸರದ ವಿಚಾರದಲ್ಲಿ ಯಾವದೇ ರಾಜಿಗೂ ಸಿದ್ಧವಿಲ್ಲದವರೂ ಇದ್ದಾರೆ.

ಈ, ಎಲ್ಲ ವಿಚಾರಗಳನ್ನು ಬಿಟ್ಟು ಯೋಚನೆ ಮಾಡಿದರೂ ಕೂಡಾ ಈ ಜಲವಿದ್ಯುತ್ ಯೋಜನೆಗಳಿಗಾಗಲೀ, ನದೀತಿರುವು ಯೋಜನೆಗಳಿಗಾಗಲೀ, ಪಶ್ಚಿಮ ಘಟ್ಟಗಳ ಜೀವ ವೈವಿದ್ಯವನ್ನು ನಾಶ ಮಾಡುವ ಯಾವುದೇ ಯೋಜನೆಗೆ ಸ್ಥಳೀಯ ಕೃಷಿಕರಿಂದ ಅಥವಾ ಕೃಷಿಕಾರ್ಮಿಕರಿಂದ ಯಾಕೆ ವ್ಯಾಪಕವಾದ ವಿರೋಧ ಬರುತ್ತಿಲ್ಲ ?. ಇದಕ್ಕೆ ಹಲವು ಕಾರಣಗಳಿವೆ. ಪರಿಸರವಾದಿಗಳ ಸಂಘಟನಾತ್ಮಕ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಾರಣವಿದ್ದರೆ. ಇನ್ನಿತರೆ ಕಾರಣಗಳು ಹಲವಿವೆ. ಮುಖ್ಯವಾಗಿ ಇಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ. ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿ ಹೋಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನ ಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಆ ಪ್ರದೇಶದ ಪಾರಂಪರಿಕ ಬೆಳೆಗಳನ್ನು ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಇದರೊಂದಿಗೆ ಈಗಾಗಲೇ ಅನುಷ್ಠಾನಕ್ಕೆ ಬಂದಿರುವ ಹಲವು ಯೋಜನೆಗಳಿಂದಾಗಿ ನಡೆದ ಅರಣ್ಯಪ್ರದೇಶದ ಅತಿಕ್ರಮಣದಿಂದಾಗಿ ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೃಷಿಗೆ ಕೆಲಸಗಾರರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ. ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ಕೃಷಿಕ ನಿರಾಶನಾಗಿ ಕುಳಿತಿದ್ದಾನೆ. (ಈ ಭಾಗದ ಜಮೀನನ್ನು ಕಾರ್ಪೊರೇಟ್ ವಲಯದವರೂ ಸಹ ಖರೀದಿಸುತ್ತಿಲ್ಲ). ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ. ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿಪಡೆಯಬಹುದು, ಇಲ್ಲವೇ ಯೋಜನೆಗಳಿಂದಾಗಿ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುವುದರಿಂದ ಬೇರೇನಾದರೂ ಕೆಲಸವೋ ವ್ಯಾಪಾರವೋ ಮಾಡಬಹುದೆಂಬ ಹವಣಿಕೆಯಲ್ಲಿದ್ದಾನೆ. ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಸಾಧ್ಯವಿದ್ದವರು ಈಗಾಗಲೇ ತಮ್ಮ ಕಾಫಿ ತೋಟಗಳನ್ನು ಉದ್ಯಮಿಗಳಿಗೆ ಮಾರಿದ್ದಾರೆ. ಅಲ್ಲೆಲ್ಲ ರೆಸಾರ್ಟುಗಳು ಪ್ರಾರಂಭವಾಗಿವೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು.

ದೊಡ್ಡ ಕೈಗಾರಿಕೆಗಳಿಗೆ ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು. ಯಾವುದೇ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರವಾಗಿರುತ್ತದೆ.

ಇನ್ನು ಇಲ್ಲಿರುವ ಹಳೆಯ ತಲೆಮಾರಿನ ಸ್ಥಳೀಯ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿ ದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.

ಇದಕ್ಕಿಂತ ಶಕ್ತಿಶಾಲಿ, ಪ್ರಭಾವಶಾಲಿ ಗುಂಪೊಂದಿದೆ. ಇವರಲ್ಲಿ ಕೆಲವರು ನೇರವಾಗಿ ಅಭಿವೃದ್ಧಿಯ ಹರಿಕಾರರಂತೆ ಮಾತನಾಡುತ್ತ ಈ ಎಲ್ಲ ಯೋಜನೆಗಳನ್ನು ನೇರವಾಗಿ ಸಮರ್ಥಿಸುತ್ತ ಈ ಮೊದಲು ತಿಳಿಸಿದ, ಸ್ವಲ್ಪ ಮಟ್ಟಿಗೆ ರಾಜಿ ಅನಿವಾರ್ಯ ಎನ್ನುವ, ಪ್ರಗತಿಪರರ ಹಾಗೂ ಬುದ್ಧಿಜೀವಿಗಳ ಮಾತನ್ನು ತಮ್ಮ ಸಮರ್ಥನೆಗಾಗಿ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ಇವರಿಗಿಂತಲೂ ಹೆಚ್ಚು ಅಪಾಯಕಾರಿಗಳು. ಇವರು ಈ ಯೋಜನೆಗಳನ್ನು ವಿರೋಧಿಸುವವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾ, ಈ ಎಲ್ಲ ಯೋಜನೆಗಳ ಅನುಷ್ಟಾನವಾದರೆ ತಮಗೆ ದೊರೆಯಬಹುದಾದ ಲಾಭದ ಲೆಕ್ಕಾಚಾರದಲ್ಲಿರುತ್ತಾರೆ.

ಇವರುಗಳು ಮಾತ್ರವಲ್ಲ, ಈ ಎಲ್ಲ ಯೋಜನೆಗಳಿಂದ ಲಾಭಪಡೆಯುವವರು, ಇನ್ನೂ ಅನೇಕರಿದ್ದಾರೆ. ಇವರಲ್ಲಿ ಗುತ್ತಿಗೆದಾರರದು, ಮರದ ವ್ಯಾಪಾರಿಗಳು, ಮರಳು ದಂಧೆಯವರು, ಗ್ರಾನೈಟ್ ಗಣಿಗಾರಿಕೆಯವರು, ರಿಯಲ್ ಎಸ್ಟೇಟ್ ದಳ್ಳಾಳಿಗಳು, yettinahole-ringsಮತ್ತು ಇವರಿಂದ ಲಾಭ ಪಡೆಯುತ್ತಿರುವ ಅನೇಕ ಸ್ಥಳೀಯರು ಮತ್ತು ಕೆಲವರು ಪರ್ತಕರ್ತರೂ ಇದ್ದಾರೆ. ಇವರಿಗೆ ಜಲವಿದ್ಯುತ್ ಯೋಜನೆಯಾಗಲೀ, ನದೀ ತಿರುವು ಯೋಜನೆಯಾಗಲೀ, ರಸ್ತೆ ನಿರ್ಮಾಣವಾಗಲೀ ಯಾವ ವೆತ್ಯಾಸವೂ ಇಲ್ಲ. ಯಾವುದೇ ಯೋಜನೆ ಇವರ ಪಾಲಿಗೆ ಹಿಂಡುವ ಹಸುವಾಗಬಲ್ಲದು. ಇವರುಗಳು ಬಹಳ ಸಮರ್ಥವಾಗಿ ಸ್ಥಳೀಯ ಜನರಲ್ಲಿ ಹೊಸ ಆಸೆ-ಆಕಾಂಕ್ಷೆಗಳನ್ನು ತುಂಬಬಲ್ಲರು. ಈ ಕಾರಣಗಳಿಂದಾಗಿ ಈ ಎಲ್ಲ ಯೋಜನೆಗಳ ವಿರೋಧವಾಗಿ ಸಭೆ, ಜಾತಾ, ಸತ್ಯಾಗ್ರಹ, ಜನಾಭಿಪ್ರಾಯ ಸಂಗ್ರಹ ಸಭೆ ಏನೇ ನಡೆಯಲಿ, ಸ್ಥಳೀಯ ಕೃಷಿಕ-ಕಾರ್ಮಿಕರಿಂದ ದೊಡ್ಡ ಪ್ರಮಾಣದ ಬೆಂಬಲ ಸಿಗುತ್ತಿಲ್ಲ, ಆದ್ದರಿಂದ ಈ ಕಾರ್ಯಕ್ರಮಗಳಲ್ಲಿ ಹೊರಗಿನವರ ಸಂಖ್ಯೆಯೇ ಹೆಚ್ಚಾಗಿ ಕಾಣಸಿಗುತ್ತದೆ ಇದರಿಂದಾಗಿ ಈ ಯೋಜನೆಗಳಿಗೆ ಸ್ಥಳೀಯರ ವಿರೋಧವಿಲ್ಲ, ಈ ಪರಿಸರವಾದಿಗಳು ಹೊರಗಿನವರು, ಹೊಟ್ಟೆ ತುಂಬಿದ ಸುಶಿಕ್ಷಿತರು, ಮೇಲ್ವರ್ಗದ ಜನ, ಇತ್ಯಾದಿ ವಾದಗಳು ಹುಟ್ಟಿಕೊಳ್ಳುತ್ತಿವೆ.

ಕೆಲವು ತಿಂಗಳ ಹಿಂದೆ ತುಮಕೂರಿನ ಶಾಲೆಯೊಂದರ ಮಕ್ಕಳು ಎತ್ತಿನಹೊಳೆ ಯೋಜನೆಯ ಬಗ್ಗೆ ಮತ್ತು ಎತ್ತಿನಹೊಳೆ ಪರಿಸರದ ಅಧ್ಯಯನಕ್ಕಾಗಿ ಬಂದಿದ್ದರು ಮೂರುದಿನಗಳಕಾಲ ನಮ್ಮ ರಂಗ ಮಂದಿರದಲ್ಲಿ ಉಳಿದು, ಎತ್ತಿನಹಳ್ಳ ಹುಟ್ಟುವಲ್ಲಿಂದ ಕೆಂಪೊಳೆ ಸೇರುವ ತನಕದ ಒಟ್ಟು ಜಲಾನಯನ ಪ್ರದೇಶದಲ್ಲಿ ತಿರುಗಾಡಿದರು. ಜೀವ ವೈವಿದ್ಯವನ್ನೆಲ್ಲ ನೋಡಿದರು. ದಾಖಲಿಸಿದರು. ಪೋಟೋತೆಗೆದುಕೊಂಡರು. ಇಲ್ಲಿಯ ನೆಲದ ವಿಸ್ತೀರ್ಣ, ಹಾಗೂ ಅದೇಸ್ಥಳದ ಮೇಲ್(ಏರಿಯಲ್)ವಿಸ್ತೀರ್ಣ, ಮಳೆಮಾಪನ ವಿಧಾನಗಳು, (ಕಾಫಿ ತೋಟಗಳಲ್ಲಿ ಪ್ರತಿದಿನ ಮಳೆಮಾಪನ ಮಾಡುವುದು ಬ್ರಿಟಿಷರ ಕಾಲದಿಂದಲೂ ನಡೆದು ಬಂದಿದೆ). ಒಂದು ಟಿ.ಎಮ್.ಸಿ ನೀರೆಂದರೆ ಎಷ್ಟು?. ವರ್ಷಕ್ಕೆ ಸರಾಸರಿ ನೂರರಿಂದ ನೂರಿಪ್ಪತ್ತು ಇಂಚುಗಳಷ್ಟು ಮಳೆಬೀಳುವ ಈ ಜಲಾನಯನ ಪ್ರದೇಶದಲ್ಲಿ ಒಂದು ಮಳೆಗಾಲದಲ್ಲಿ ಭೂಮಿಗೆ ಬೀಳುವ ನೀರಿನ ಒಟ್ಟು ಮೊತ್ತ. ಅದರಲ್ಲಿ ಆವಿಯಾಗುವ ಪ್ರಮಾಣ, ಭೂಮಿಯಲ್ಲಿ ಇಂಗುವ ಪ್ರಮಾಣ, ಈ ಪ್ರದೇಶದ ಜೀವರಾಶಿಗೆ ಬಳಕೆಗೆ ಬೇಕಾದ ನೀರು ಇವೆಲ್ಲವನ್ನೂ ಕಳೆದು, ಹೆಚ್ಚುವರಿಯಾಗಿ ಸಿಗಬಹುದಾದ ನೀರು ಹೀಗೆ ಎಲ್ಲವನ್ನೂ ತಾವೇ ಪ್ರಾಯೋಗಿಕವಾಗಿ ನೋಡಿ ಕಲಿತು, ಕೊಳವೆಗಳ ಮೂಲಕ ಸಾಗಿಸಬಹುದಾದ ನೀರು ಎತ್ತಿನ ಹಳ್ಳದಲ್ಲಿ ದೊರಕುವುದು ಕೇವಲ ಮೂರರಿಂದ ಮೂರೂವರೆ ಟಿ.ಎಮ್.ಸಿ. ಮಾತ್ರ ಎಂದು ಲೆಕ್ಕಹಾಕಿದರು. ಎತ್ತಿನಹಳ್ಳವಲ್ಲದೆ, ಸರ್ಕಾರ ಹೇಳುವ ಕಾಡುಮನೆಹಳ್ಳ, ಕೆಂಕೇರಿಹಳ್ಳ, ಮಂಜನಹಳ್ಳ ಸೇರಿದರೂ ಒಟ್ಟು ನೀರಿನ ಮೊತ್ತ ಎಂಟರಿಂದ ಒಂಭತ್ತು ಟಿ.ಎಮ್.ಸಿ ಮೀರಲಾರದೆಂದು ತೀರ್ಮಾನಿಸಿದರು. ಅಂದರೆ ಈಗಾಗಲೇ ತಯಾರಿಸಿಟ್ಟಿರುವ ಬೃಹತ್ ಗಾತ್ರದ ಕೊಳವೆಗಳಿಗೂ ಇಲ್ಲಿರುವ ನೀರಿನ ಪ್ರಮಾಣಕ್ಕೂ ತಾಳೆಯಾಗುವುದಿಲ್ಲವೆಂದು. ಅವರಿಗೂ ಅರಿವಾಯ್ತು. ಇಪ್ಪತ್ತನಾಲ್ಕು ಟಿ.ಎಮ್.ಸಿ. ನೀರು ದೊರೆಯಬೇಕಾದರೆ ಘಟ್ಟದ ಕೆಳಗಿನ ನೇತ್ರಾವತಿಯನ್ನೋ ಕುಮಾರಧಾರೆಯನ್ನೋ ತಿರುಗಿಸುವುದು ಅನಿವಾರ್ಯವೆಂದು, ಅದರಿಂದ ಅಲ್ಲಿನ ಪರಿಸರಕ್ಕೆ ಇನ್ನೂ ಹೆಚ್ಚಿನ ಹಾನಿ ಆಗಲಿದೆ ಎಂದು ಮಕ್ಕಳು ಅಭಿಪ್ರಾಯಪಟ್ಟರು.

ಈ ಮಕ್ಕಳೆಲ್ಲ ಎತ್ತಿನಹೊಳೆ ಯೋಜನೆಯ ಫಲಾನುಭವಿ ಪ್ರದೇಶಗಳ ಮಕ್ಕಳು, ಇವರೊಂದಿಗೆ ನಮ್ಮೂರ ಶಾಲೆಯ ಅದೇ ವಯಸ್ಸಿನ ಮಕ್ಕಳೊಂದಿಗೆ ಮಾತನಾಡಲು ಬಿಟ್ಟೆವು. ಮಕ್ಕಳು ಅವರವರೇ ಮಾತಾಡಿ ಕೊನೆಗೆ ತೀರ್ಮಾನಿಸಿದ್ದೆಂದರೆ “ತುಮಕೂರಿನ ನೀರಿನ ಸಮಸ್ಯೆ ಅಲ್ಲಿಯ ಜನರು ಅಲ್ಲೇ ಪರಿಹಾರ ಕಂಡುಕೊಳ್ಳಬೇಕು… ಹಾಗೇ ಮಲೆನಾಡಿನ ಜನ ತಮ್ಮ ಪ್ರಾಣಿಗಳಕಾಟ ಇತ್ಯಾದಿ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು”ಎಂದು.

ಇವರೆಲ್ಲ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು. ಆ ಮಕ್ಕಳಿಗಿರುವ ಅರಿವು- ಕಾಳಜಿ ನಮಗಿದ್ದಿದ್ದರೆ……….

ಕೇಂದ್ರ ಸರ್ಕಾರವೀಗ ಹಸಿರುನಾಶಕ್ಕೆ ಹಸಿರು ನಿಶಾನೆ ತೋರಿದೆ. ನಮ್ಮ ರಂಗತಂಡ “ಎತ್ತಿನ ಹೊಳೆ” ಎಂಬ ನಾಟಕವನ್ನು ರಚಿಸಿಕೊಂಡು ತಾಲೀಮಿನಲ್ಲಿ ತೊಡಗಿದೆ.

ಮಾಜಿ ಮಂತ್ರಿ ಸುರೇಶ್ ಕುಮಾರ್ ಅವರಿಗೆ ಬಹಿರಂಗ ಪತ್ರ

ಸಹೃದಯರಾದ ಶ್ರೀ ಸುರೇಶ್ ಕುಮಾರ್ ಅವರಿಗೆ

ಪ್ರೀತಿಯ ನಮಸ್ಕಾರಗಳು.

ಈ ಬಹಿರಂಗ ಪತ್ರದ ಉದ್ದೇಶ ತಾವು ಆಗಸ್ಟ್ 30ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆದ ಎರಡು ಪ್ರತ್ಯೇಕ ಸ್ಟೇಟಸ್ಗಳು. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದು ಕೆಲವೇ ಸಮಯದಲ್ಲಿ ಅಳಿಸಿ ಹಾಕಿದ ಒಂದು ಸಾಲು ಮಾತಿನ ಕುರಿತು ಆ ನಡುರಾತ್ರಿಯಲ್ಲಿ ತಾವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೀರಿ. ನಿಮ್ಮ ಕನ್ನಡದ ಸ್ಟೇಟಸ್ ಹೀಗೆ ಹೇಳುತ್ತದೆ: ತನ್ನ ಶತ್ರುವಿಗೂ ಈ ರೀತಿ ಅವಹೇಳನಾಕಾರಿ ಮಾತುಗಳನ್ನು ಹೇಳಬಾರದಲ್ಲವೇ ದಿನೇಶ್. ಪ್ರತಾಪ್ ಸಿಂಹರ ಪತ್ನಿಯವರ ದುರದೃಷ್ಟಕರ ದೈಹಿಕ ಸ್ಥಿತಿಯನ್ನು ಉಪಯೋಗಿಸಿ ಪ್ರತಾಪಸಿಂಹರ ಮೇಲೆ ನಿಮ್ಮ ಬೌದ್ಧಿಕ(?) ಹಲ್ಲೆ ನಿಮ್ಮ ಬಗ್ಗೆಯೇ ಕನಿಕರ ಹುಟ್ಟಿಸುತ್ತಿದೆ. ಇದು ಬೌದ್ಧಿಕ ವಿಕಾರತೆಯ ಅನಾವರಣ.

ಅದೇ ರೀತಿ ನೀವು ಇಂಗ್ಲಿಷ್ ನಲ್ಲಿ ಬರೆದ ಸಾಲುಗಳು ಹೀಗಿವೆ: It is crass crudity of the Media Advisor to CM of Karnataka to ridicule a woman’s unfortunate physical condition sureshto attack her husband.

ಈ ಕುರಿತು ನಿಮ್ಮ ವಾಲ್ ನಲ್ಲಿ ಕಮೆಂಟ್ ಮಾಡಬಹುದಿತ್ತು. ಆದರೆ ಹೇಳಬೇಕಾದ ವಿಷಯಗಳು ತುಸು ಹೆಚ್ಚೇ ಇರುವುದರಿಂದ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮ ಸ್ಟೇಟಸ್ಗಳ ವಿಷಯಕ್ಕೆ ಮತ್ತೆ ಬರುತ್ತೇನೆ. ಈಗ ಹಿಂದೆ ನಡೆದ ಎರಡು ಘಟನೆಗಳನ್ನು ನೆನಪಿಸಲು ಬಯಸುತ್ತೇನೆ.

ಮೊದಲನೆಯ ಘಟನೆ ನಡೆದಿದ್ದು 2014ರ ನವೆಂಬರ್ 8ರಂದು. ತೀರ್ಥಹಳ್ಳಿಯ ನಂದಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲವದು. ನಿಮ್ಮ ಪಕ್ಷದ ನೇತಾರರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಒಂದು ಹೇಳಿಕೆ ನೀಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಪುತ್ರಿಯರ ಮೇಲೆ ಅತ್ಯಾಚಾರವಾಗುವವರೆಗೆ ಇವರಿಗೆ ಬುದ್ಧಿಬರಲ್ಲ ಎಂದು ಹೇಳಿದ್ದರು ನಿಮ್ಮ ಈಶ್ವರಪ್ಪನವರು. ಕುತೂಹಲಕ್ಕೆ ನಿಮ್ಮ ಟೈಮ್ ಲೈನ್ಗೆ ಹೋಗಿ ಆ ದಿನಗಳಲ್ಲಿ ಈ ಕುರಿತು ನೀವು ಏನನ್ನಾದರೂ ಬರೆದಿದ್ದೀರಾ ಎಂದು ಪರೀಕ್ಷಿಸಿದೆ. ನಿಮ್ಮ ಮೌನವಷ್ಟೇ ಕಣ್ಣಿಗೆ ರಾಚಿತು. ಇದು ಈಶ್ವರಪ್ಪನವರ ಬೌದ್ಧಿಕ ವಿಕಾರತೆಯ ಅನಾವರಣ ಎಂದು ನೀವು ಬರೆದಿರಬಹುದು ಅಥವಾ It is crass crudity of the former DCM ಎಂದು ಬರೆದಿರಬಹುದು ಎಂದು ನಿರೀಕ್ಷೆ ಮಾಡಿದ್ದೆ. ನನ್ನ ನಿರೀಕ್ಷೆ ಸುಳ್ಳಾಯಿತು.

ಇನ್ನೊಂದು ಘಟನೆ ಇನ್ನೊಂದು ವರ್ಷದ ನಂತರ ನಡೆದದ್ದು. 2015ರ ಅಕ್ಟೋಬರ್ 17ರಂದು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಮಲ್ಲಾಪುರಕ್ಕೆ ಇದೇ ನಿಮ್ಮ ಕೆ.ಎಸ್ ಈಶ್ವರಪ್ಪನವರು ತೆರಳಿದ್ದರು. ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಹೆಚ್ಚಾಗುತ್ತಿದೆ, ವಿರೋಧ ಪಕ್ಷದ ಮುಖಂಡರಾದ ನಿಮ್ಮ ಪ್ರತಿಕ್ರಿಯೆ ಏನು ಎಂದು ಚಾನಲ್ ಒಂದರ ಮಹಿಳಾ ವರದಿಗಾರರು ಈಶ್ವರಪ್ಪನವರನ್ನು ಪ್ರಶ್ನಿಸಿದ್ದರು. ನಿಮ್ಮ ಮುಖಂಡರ ಉತ್ತರ ಹೀಗಿತ್ತು: ಅಲ್ಲಮ್ಮಾ, ನಿನ್ನನ್ನು ಯಾವನೋ ಕರೆದುಕೊಂಡು ಹೋಗಿ ರೇಪ್ ಮಾಡಿದರೆ ನಾವೇನು ಮಾಡಕ್ಕಾಗುತ್ತೆ. ನಾನು ಎಲ್ಲೋ ಇರ್ತೀನಿ.

ಈ ವಿಷಯಕ್ಕೆ ಸಂಬಂಧಿಸಿದಂತೆಯೂ ನೀವು ಏನನ್ನಾದರೂ ಬರೆದಿರಬಹುದು ಎಂಬ ಕುತೂಹಲದಿಂದ ನಿಮ್ಮ ಟೈಮ್ ಲೈನ್ ತಡಕಾಡಿದೆ. ಅಲ್ಲಿ ಅಕ್ಟೋಬರ್ 18ರಂದು ಸಿಕ್ಕಿದ್ದು ಇಷ್ಟು, ನೀವು ಬರೆದಿರೋದೇ ಇಷ್ಟು: ಮಾತನಾಡಲು ಕಲಿಯಲು – ಪ್ರಾರಂಭಿಸಲು ಬಾಲ್ಯದಲ್ಲಿ 3 ಮೊದಲ ವರ್ಷಗಳು ಬೇಕು. ಏನು ಮಾತನಾಡಬೇಕು – ಏನು ಮಾತನಾಡಬಾರದು ಎಂಬುದನ್ನು ಅರಿಯಲು ಇಡೀ ಜೀವಮಾನವೇ ಸಾಲದು.

ನೀವು ಈಶ್ವರಪ್ಪನವರ ಕುರಿತೇ ಈ ಸ್ಟೇಟಸ್ ಹಾಕಿದ್ದೀರೆಂಬುದು ಗೊತ್ತಾಗಿದ್ದು ಅಲ್ಲಿ ನಿಮ್ಮ ಸ್ನೇಹಪಟ್ಟಿಯಲ್ಲಿರುವವರು ಮಾಡಿರುವ ಕಮೆಂಟುಗಳಿಂದ! ಏನನ್ನು ಮಾತನಾಡಬೇಕು, ಏನನ್ನು ಮಾತನಾಡಬಾರದು ಎಂಬುದನ್ನು ಅರಿಯಲು ಇಡೀ ಜೀವಮಾನವೇ ಸಾಲದು ಎಂಬ ಈ ಆತ್ಮವಿಮರ್ಶೆಯ ಮಾತುಗಳು ಈಶ್ವರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆಯಾ ಎಂದೆನಿಸಿ ಆಶ್ಚರ್ಯವೆನಿಸಿತು.

ಮುಖ್ಯಮಂತ್ರಿ, ಗೃಹಸಚಿವರ ಪುತ್ರಿಯರು,dinesh ಚಾಲನ್ ಒಂದರ ವರದಿಗಾರ್ತಿಯ ಕುರಿತು ಅತ್ಯಾಚಾರದಂಥ ಅತಿಸೂಕ್ಷ್ಮ ವಿಷಯಗಳನ್ನು ಇಟ್ಟುಕೊಂಡು ಆಡಿದ ಮಾತುಗಳು ತಮಗೆ ಬೌದ್ಧಿಕ ವಿಕಾರತೆ ಎನಿಸದೇ ಹೋಗಿದ್ದು ನಿಜಕ್ಕೂ ಆಶ್ಚರ್ಯ. ಅಥವಾ ಅತಿ ಸುಲಭವಾಗಿ ಒಂದು ನಿರ್ಣಯಕ್ಕೆ ಬರಬಹುದು. ನಿಮ್ಮ ಪಕ್ಷದವರು ಮಾಡಿದರೆ ಅದು ಆತ್ಮಾವಲೋಕನಕ್ಕೆ ದಾರಿ, ಬೇರೆಯವರು ಮಾಡಿದರೆ ಮಾತ್ರ ತೀವ್ರ ಸ್ವರೂಪದ ಟೀಕೆ-ವಿಮರ್ಶೆಗಳಿಗೆ ಅವಕಾಶ. ಇಂಥ ವಿಷಯಗಳಲ್ಲೂ ನೀವು ಎಷ್ಟು ಸೆಲೆಕ್ಟಿವ್ ಆಗಿರಲು ಬಯಸುತ್ತೀರಿ ನೋಡಿ. ರಾಜಕೀಯ ಅಂದರೆ ಇಷ್ಟೇನಾ ಸರ್? ಅಥವಾ ಸುರೇಶ್ ಕುಮಾರ್ ಅವರನ್ನು ಈ ಕೊಳಕು ರಾಜಕಾರಣದಿಂದ ಹೊರತಾಗಿರುವ ಮನುಷ್ಯ ಎಂದು ನಾವು ಭಾವಿಸಿದ್ದೇ ತಪ್ಪಾ?

ಈಗ ಮುಖ್ಯವಾದ ವಿಷಯಕ್ಕೆ ಬಂದುಬಿಡುತ್ತೇನೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಮೈಸೂರಿನ ಸಂಸದ ಪ್ರತಾಪ ಸಿಂಹ ಅವರನ್ನು ಕುರಿತು ಬರೆಯುವಾಗ “ಮನೆಯಲ್ಲೇ ಅಂಗವಿಕಲ ಪತ್ನಿ ಇರುವಾಗ ಬೇರೆಯವರ ಬೋಳುಮಂಡೆಯಲ್ಲಿ ಕೂದಲು ಹುಡುಕುವಾತ ಎಂದು ಬರೆದಿದ್ದರು, ನಂತರ ಒಬ್ಬ ಹೆಣ್ಣುಮಗಳು ಈ ಉಲ್ಲೇಖ ಸರಿಯಿಲ್ಲವೆಂದು ಹೇಳಿದ ನಂತರ ಆ ಸಾಲನ್ನು ಕೂಡಲೇ ಡಿಲೀಟ್ ಮಾಡಿದ್ದರು. ಕನ್ನಡ ಬಲ್ಲ ಯಾರಿಗೇ ಆದರೂ ಅರ್ಥವಾಗುವುದು ಏನೆಂದರೆ ಮನೆಯಲ್ಲೇ ಅಂಗವೈಕಲ್ಯದ ಸಮಸ್ಯೆಯನ್ನು ಎದುರಿಸುತ್ತಿರುವವರ ಬೇರೆಯವರ ದೇಹದ ವೈಕಲ್ಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ, ಏಕೆಂದರೆ ಬೇರೆಯವರನ್ನು ಮೂದಲಿಸುವಾಗ ಅದೇ ಸ್ಥಿತಿಯಲ್ಲಿರುವ ಮನೆಯವರು ಏನೆಂದುಕೊಂಡಾರು ಎಂಬ ಬಗ್ಗೆ ಕನಿಷ್ಟ ಪ್ರಜ್ಞೆ ಇರಬೇಕು – ಎಂಬುದು. ಆದರೂ ಇಲ್ಲಿ `ಅಂಗವಿಕಲ ಪತ್ನಿ ಎಂಬ ಉಲ್ಲೇಖ ಬಹಳಷ್ಟು ಜನರಿಗೆ ಇಷ್ಟವಾಗಲಿಲ್ಲ, ದಿನೇಶ್ ಅವರು ಅದನ್ನು ಕೂಡಲೇ ಸರಿಪಡಿಸಿದರು ಕೂಡ.

ಈಗ ಬೋಳುಮಂಡೆ ವಿಷಯಕ್ಕೆ ಬರೋಣ ಸರ್. ಇದರ ಹಿನ್ನೆಲೆಗಳನ್ನು ಸ್ವಲ್ಪ ವಿವರವಾಗಿಯೇ ನಿಮಗೆ ಹೇಳಬೇಕು. ಪ್ರತಾಪಸಿಂಹ ಅವರು ಪತ್ರಿಕೆಯೊಂದರ ಅಂಕಣದಲ್ಲಿ ದಿನೇಶ್ ಅಮೀನ್ ಮಟ್ಟು ಅವರನ್ನು ಕುಟುಕುವ ಸಲುವಾಗಿ ಮೊದಲು ಈ `ಬೋಳುಮಂಡೆ’ ಪದವನ್ನು ಬಳಸಿದ್ದರು. ಅದನ್ನೂ ಒಂದು ವೈಕಲ್ಯ ಎಂದಿಟ್ಟುಕೊಳ್ಳೋಣ. ದಿನೇಶ್ ಅವರನ್ನು ಟೀಕಿಸಲು ಪ್ರತಾಪ್ ಅವರಿಗೆ ಎಲ್ಲ ಹಕ್ಕುಗಳೂ ಇವೆ. ಅವರು ಟೀಕಿಸಲಿ, ಅವರ ದೇಹದ ಊನದ ಕುರಿತು ಮಾತನಾಡುವ ಅಗತ್ಯವೇನಿತ್ತು? ಪ್ರತಾಪಸಿಂಹ ಅವರು ಹೀಗೆ ಬರೆದ ನಂತರ ಅವರನ್ನು ಅನುಸರಿಸುವ ನೂರಾರು ಮಂದಿ ಬಲಪಂಥೀಯರು ಸಾಮಾಜಿಕ ಜಾಲತಾಣಗಳಲ್ಲಿ ಈ `ಬೋಳುಮಂಡೆ ಪದವನ್ನು ಪದೇಪದೇ ಬಳಸಿ ಅಣಕಿಸಿದರು, ಈಗಲೂ ಅಣಕಿಸುತ್ತಲೇ ಇದ್ದಾರೆ.

ದಿನೇಶ್ ಅವರನ್ನು ಹೀಗೆ `ಬೋಳುಮಂಡೆ ಎಂದು ಟ್ರಾಲ್ ಮಾಡಲು ಒಂದು ಕಾರಣವಿದೆ ಸರ್. ಅದು ಬಹುಶಃ ನಿಮಗೆ ಗೊತ್ತಿಲ್ಲದೆಯೇ ಇರಬಹುದು. ಸ್ವತಃ ನಿಮ್ಮ ಪಕ್ಷದ ದೊಡ್ಡ ನಾಯಕರಾದ ಎಲ್.ಕೆ.ಅಡ್ವಾನಿ, ವಿಎಚ್ಪಿ ಮುಖಂಡರಾದ ಪ್ರವೀಣ್ ತೊಗಾಡಿಯಾ ಅಂಥವರಿಗೂ ತಲೆಯಲ್ಲಿ ಕೂದಲಿಲ್ಲ. ಇದು ಗೊತ್ತಿದ್ದೂ ದಿನೇಶ್ ಅವರನ್ನು `ಬೋಳುಮಂಡೆ ಎಂದು ಕರೆಯಲು ಕಾರಣವಿದೆ. ದಿನೇಶ್ ಅಮೀನ್ ಮಟ್ಟು ಅವರು ಕ್ಯಾನ್ಸರ್ ಎಂಬ ಭೀಕರ ಕಾಯಿಲೆಯಿಂದ ನರಳಿದವರು. ಪ್ರಜಾವಾಣಿಯಲ್ಲಿ ಅವರು ಕಾರ್ಯನಿರ್ವಹಿಸುವಾಗಲೇ ಅವರಿಗೆ ಈ ರೋಗವಿತ್ತು. ಸತತ ಔಷಧೋಪಚಾರಗಳ ನಂತರ ಅವರು ಗುಣಮುಖರಾದರು. ಕ್ಯಾನ್ಸರ್ನಿಂದ ಪಾರಾಗಲು ಇರುವ ಐದುವರ್ಷಗಳ `ಅಪಾಯಕಾರಿ ಅವಧಿಯನ್ನು ಅವರು ದಾಟಿದ್ದಾರೆ. ಇದು ಗೊತ್ತಿದ್ದೇ ನಾವೆಲ್ಲ ಭಕ್ತರೆಂದು ಕರೆಯುವ ಬಲಪಂಥೀಯ ಶಕ್ತಿಗಳು `ಕ್ಯಾನ್ಸರ್ನಿಂದ ಈತನ ತಲೆ ಬೋಳಾಗಿದೆ, ಆದರೂ ಬುದ್ಧಿಬಂದಿಲ್ಲ ಎಂದು ಬರೆದರು. ಅದಕ್ಕೆ ಸಾಕ್ಷಿಗಳನ್ನು ಒದಗಿಸಬಲ್ಲೆ.

ಕ್ಯಾನ್ಸರ್ ಕುರಿತು ತಮಗೆ ವಿವರವಾಗಿ ಹೇಳಬೇಕಾಗಿ ಇಲ್ಲ ಸರ್. ಆದರೂ ಇದು ಬಹಿರಂಗ ಪತ್ರವಾದ್ದರಿಂದ ಗೊತ್ತಿಲ್ಲದವರಿಗೆ ಒಂದಷ್ಟು ವಿಷಯಗಳು ತಿಳಿಯಲಿ ಎಂಬ ಕಾರಣಕ್ಕೆ ಒಂದೆರಡು ಸಾಲುಗಳನ್ನು ಹೇಳಿಬಿಡುತ್ತೇನೆ. ಇಡೀ ಜಗತ್ತಿನಲ್ಲಿ ಕ್ಯಾನ್ಸರ್ನಷ್ಟು ಭೀಕರವಾದ ಖಾಯಿಲೆ ಇನ್ನೊಂದಿಲ್ಲ. ಅದನ್ನು ಜಯಿಸುವುದು ಅಷ್ಟು ಸುಲಭವೂ ಅಲ್ಲ. ಅದಕ್ಕೆ ಈಗಲೂ ಇರುವ ಸಾಂಪ್ರದಾಯಿಕ ಚಿಕಿತ್ಸೆಗಳೆಂದರೆ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ರೇಡಿಯೋಥೆರಪಿಗಳು ಮಾತ್ರ. ಕ್ಯಾನ್ಸರ್ ರೋಗದ ಹಾಗೆಯೇ ಈ ಚಿಕಿತ್ಸೆಗಳೂ ಸಹ ರೋಗಿಯನ್ನು ಜೀವಂತ ಶವ ಮಾಡಿಬಿಡುತ್ತವೆ. ಕ್ಯಾನ್ಸರ್ ಬಹುತೇಕ ರೋಗಿಗಳನ್ನು ಕೊಲ್ಲುತ್ತದೆ, ಆದರೆ ಈ ಕೊಲ್ಲುವ ಮಾದರಿಯೂ ಭೀಕರ. ದೇಹದ ಒಂದೊಂದೇ ಅವಯವಗಳನ್ನು ಅದು ನಿಷ್ಕ್ರಿಯಗೊಳಿಸುತ್ತ ಇಂಚುಇಂಚಾಗಿ ಮನುಷ್ಯನನ್ನು ಕೊಲ್ಲುತ್ತದೆ.

ನೀವು ಒಮ್ಮೆ ಕಿದ್ವಾಯಿ ಆಸ್ಪತ್ರೆಗೋ ಅಥವಾ ಶೃಂಗೇರಿ ಶಂಕರಮಠದವರು ನಡೆಸುವ ಶಂಕರ ಕ್ಯಾನ್ಸರ್ ಆಸ್ಪತ್ರೆಗೋ ಒಮ್ಮೆ ಹೋಗಿಬನ್ನಿ. ಅಲ್ಲಿ ಸಾವಿರ ಸಾವಿರಗಟ್ಟಲೆ ಕ್ಯಾನ್ಸರ್ ರೋಗಿಗಳನ್ನು ನೋಡಬಹುದು. ಎಲ್ಲರ ತಲೆಯೂ ಕೀಮೋಥೆರಪಿ ಎಂಬ ಭಯಾನಕ ಚಿಕಿತ್ಸೆಗೆ ಒಳಗಾಗಿ ಬೋಳಾಗಿರುತ್ತದೆ. ಬಹುಶಃ ನಿಮ್ಮ ಸಂಸದರ ಭಾಷೆಯಲ್ಲಿ ಹೇಳುವುದಾದರೆ ಇವರೆಲ್ಲರೂ ಬೋಳುಮಂಡೆಗಳೇ. ಕ್ಯಾನ್ಸರ್ ಕಣಗಳನ್ನು ಸಾಯಿಸಲೆಂದೇ ದೇಹಕ್ಕೆ ವಿಷವನ್ನು ಹರಿಸುವ ಚಿಕಿತ್ಸೆಯೇ ಕೀಮೋಥೆರಪಿ. ಅದು ಕ್ಯಾನ್ಸರ್ ಕಣಗಳ ಜತೆ ಗುದ್ದಾಡುವುದರ ಜತೆಗೆ ದೇಹದ ಇನ್ನಿತರ ಜೀವಕಣಗಳನ್ನೂ ಘಾಸಿಗೊಳಿಸುತ್ತದೆ. ಅದರ ಪರಿಣಾಮವಾಗಿಯೇ ಕ್ಯಾನ್ಸರ್ ರೋಗಿಗಳು ತಮ್ಮ ಕೂದಲು ಕಳೆದುಕೊಳ್ಳುತ್ತಾರೆ. ಕೂದಲು ಮಾತ್ರವಲ್ಲ, ಅವರ ದೇಹದ ಇಮ್ಯುನಿಟಿಯನ್ನೇ ಅದು ಕೊಲ್ಲುತ್ತ ಬರುತ್ತದೆ.

ಕೂದಲು ಕಳೆದುಕೊಳ್ಳುವುದೇನು ದೊಡ್ಡ ವಿಷಯವಲ್ಲ ಬಿಡಿ ಸರ್, ಜೀವ ಉಳಿಯಬೇಕಲ್ಲ. ಅದಕ್ಕಾಗಿ ಕೋಟ್ಯಂತರ ಕ್ಯಾನ್ಸರ್ ರೋಗಿಗಳು ಬಡಿದಾಡುತ್ತಲೇ ಇರುತ್ತಾರೆ. ಕಂಡಕಂಡ ಕಡೆ ಚಿಕಿತ್ಸೆಗೆ ಹೋಗುತ್ತಾರೆ. ಇದೊಂಥರ ಸಾವಿನ ಜತೆಗಿನ ಯುದ್ಧ. ಇಂಥ ಜೀವಗಳನ್ನು `ಬೋಳುಮಂಡೆಗಳು ಎಂದು ಕರೆಯಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಾ ಸರ್? ಇದೊಂದು ಪ್ರಶ್ನೆಗೆ ನೀವು ಉತ್ತರ ಕೊಟ್ಟರೆ ಸಾಕು, ಈ ಸುದೀರ್ಘ ಪತ್ರ ಬರೆದಿದ್ದೂ ಸಾರ್ಥಕವಾಗುತ್ತದೆ.

ದಿನೇಶ್ ಅವರು ಕ್ಯಾನ್ಸರ್ ಜತೆ ಗುದ್ದಾಡಿ, ನಂತರ ಅದರಿಂದ ಪಾರಾದ ನಂತರ ನನಗೆ ಗೊತ್ತಿರುವಂತೆ ವಾರಕ್ಕೆ ಇಬ್ಬರು ಕ್ಯಾನ್ಸರ್ ರೋಗಿಗಳು, ಸಂಬಂಧಿಗಳ ಜತೆಗಾದರೂ ಮಾತನಾಡುತ್ತಾರೆ. ಗಂಟೆಗಟ್ಟಲೆ ಅವರ ಅನುಭವವನ್ನು ಹೇಳುತ್ತ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ವೈದ್ಯರ ಜತೆ ಮಾತನಾಡಿ ರೋಗಿಗಳಿಗೆ ಸಹಾಯ ಮಾಡಲು ಮನವಿ ಮಾಡುತ್ತಾರೆ. ಸಕರ್ಾರದಿಂದ ಚಿಕಿತ್ಸಾ ವೆಚ್ಚವನ್ನು ಕೊಡಿಸಲು ಯತ್ನಿಸುತ್ತಾರೆ. ಇದೆಲ್ಲವನ್ನೂ ಅವರು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ನೊಂದ ನೋವು ನೋಯದವರಿಗೇನು ಗೊತ್ತು ಅಲ್ವಾ ಸರ್?

ಇದೆಲ್ಲ ವಿಷಯ ಒಂದೆಡೆ ಇರಲಿ, ಈಗ ಇಷ್ಟೆಲ್ಲ ವಿವರವಾಗಿ ಹೇಳಿದ ಮೇಲೂ ನೀವು ನಿಮ್ಮ ಸಂಸದರಿಂದ ಈ `ಬೋಳುಮಂಡೆ ಪ್ರಯೋಗದ ಬಗ್ಗೆ ಒಂದು ವಿಷಾದದ ಹೇಳಿಕೆ ಕೊಡಿಸುವಿರಾ? ಅದು ನಿಮ್ಮಿಂದ ಸಾಧ್ಯವಾ? ದಿನೇಶ್ ಅವರೇನೋ ತಾವು ಬರೆದ ಸಾಲಿನ ಧ್ವನಿ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡು ಅದನ್ನು ಡಿಲೀಟ್ ಮಾಡಿದರು. ಪ್ರತಾಪ್ ಸಿಂಹ ಅವರಿಂದ ಇದೇ ಕೆಲಸ ಮಾಡಿಸಲು ಸಾಧ್ಯವೇ ನಿಮ್ಮಿಂದ?

ಅದೆಲ್ಲ ಹೋಗಲಿ, ನೀವಾದರೂ ಬಲಪಂಥೀಯ ಹುಡುಗರು ತೀರಾ ಕೆಟ್ಟಾಕೊಳಕಾಗಿ ದಿನೇಶ್ ಅವರ ಕುರಿತು ಬರೆಯುವುದನ್ನು ನಿಲ್ಲಿಸಿ ಎಂದು ಒಂದು ಮನವಿ ಮಾಡಬಲ್ಲಿರಾ? ಖಂಡಿತಾ ಇಲ್ಲ. ನಿಮ್ಮ ಸ್ಟೇಟಸ್ಗೆ ಒಬ್ಬಾತ ದಿನೇಶ್ ಅವರ ದೇಹವನ್ನು ಸೀಳಿ, ಸಿದ್ಧರಾಮಯ್ಯ ಅವರ ಕೊರಳಿಗೆ ನೇತುಹಾಕಬೇಕು ಎಂದು ಕಮೆಂಟು ಬರೆಯುತ್ತಾನೆ. ನೀವು ಅದನ್ನು ಡಿಲೀಟ್ ಮಾಡುವ ಗೋಜಿಗೂ ಹೋಗುವುದಿಲ್ಲ. ಹೀಗೆಲ್ಲ ಬರೀಬೇಡ್ರಪ್ಪ ಎಂದು ನೀವು ಮನವಿ ಮಾಡಿದರೆ, ರಾಕೇಶ್ ಸಿದ್ಧರಾಮಯ್ಯ ತೀರಿಕೊಂಡಾಗ ಸಾವಿನ ಸಂಭ್ರಮ ಕೂಡದು ಎಂದು ಬರೆದ ಮಾಜಿ ಮುಖ್ಯಮಂತ್ರಿ ಶ್ರೀ ಸದಾನಂದಗೌಡರ ಮೇಲೆ ನಡೆದ ಅಕ್ಷರದಾಳಿಯೇ ನಿಮ್ಮ ಮೇಲೂ ನಡೆಯುತ್ತದೆ. ಯಾಕೆಂದರೆ ಈ ಹುಚ್ಚುಪಡೆಯ ವಿಕಾರಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಲೇ ಇದೆ. ಈ ಪಡೆಗೆ ಇವತ್ತು ಅಮೀನ್ ಮಟ್ಟು ಅವರು ಗುರಿ, ನಾಳೆ ಸ್ವತಃ ನರೇಂದ್ರ ಮೋದಿಯವರೇ ಆದರೂ ಆಶ್ಚರ್ಯವಿಲ್ಲ. ನಮಗೆ ಕನಿಕರ ಹುಟ್ಟಬೇಕಿರುವುದು ನಮ್ಮ ಬಗ್ಗೆಯೇ ಸರ್. ಇಂಥ ವಿಷವನ್ನು ಸಮಾಜದಲ್ಲಿ ಹರಡುತ್ತ ಹೋದ ನಮ್ಮ ಬೇಜವಾಬ್ದಾರಿಯ ಕುರಿತು.

ನಮ್ಮ ಮೌDinesh-1ನವೇ ನಮ್ಮಲ್ಲಿ ಅಸಹ್ಯವನ್ನು ಹುಟ್ಟಿಸಬೇಕು ಸರ್. ಡಾ.ಯು.ಆರ್.ಅನಂತಮೂರ್ತಿ, ಡಾ.ಎಂ.ಎಂ.ಕಲ್ಬುರ್ಗಿ, ರಾಕೇಶ್ ಸಿದ್ಧರಾಮಯ್ಯ ಅವರುಗಳು ತೀರಿಕೊಂಡಾಗ ಈ ವಚರ್ುಯಲ್ ಜಗತ್ತಿನಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಬರಬರುತ್ತ ಇದೊಂದು ಟ್ರೆಂಡ್ ಖಾಯಂ ಆಗಿ ಜಾರಿಯಲ್ಲಿರಲಿದೆ. ನಿಮ್ಮಂಥವರು ಇಂಥ ಸಂದರ್ಭಗಳಲ್ಲಿ ಮೌನಕ್ಕೆ ಶರಣಾಗುತ್ತೀರಿ, ಯಾಕೆಂದರೆ ನೀವೂ ಕೂಡ ಸದಾನಂದಗೌಡರ ಹಾಗೆ ದಾಳಿಗೆ ಒಳಗಾಗುವ ಭೀತಿಯಲ್ಲಿರಬಹುದು. ಆದರೂ ನನ್ನದೊಂದು ಮನವಿ. ಈ ವಿಕಾರಗಳ ಕುರಿತು ಯಾವಾಗಲಾದರೂ ಮಾತನಾಡಿ ಸರ್; ಪಕ್ಷ-ಸಂಸ್ಥೆ-ಸಿದ್ಧಾಂತಗಳಿಂದ ಆಚೆ ಬಂದು.

ನೀವು ರಾಜಕಾರಣದಲ್ಲಿ ಇದ್ದರೂ ಮಾನವೀಯ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಬಲ್ಲವರು ಎನ್ನುವ ಕಾರಣಕ್ಕೆ ಇಷ್ಟನ್ನು ಬರೆದಿದ್ದೇನೆ. ಉತ್ತರಿಸುತ್ತೀರಿ ಎಂಬ ನಿರೀಕ್ಷೆಗಳೇನೂ ಇಲ್ಲ.

ಸಾವಿತ್ರಿ ಮೇಡಂಗೆ ನನ್ನ ನಮಸ್ಕಾರಗಳನ್ನು ತಿಳಿಸಿ.

ಪ್ರೀತಿಯಿಂದ
ದಿನೇಶ್ ಕುಮಾರ್ ಎಸ್.ಸಿ. (ದಿನೂ)