Daily Archives: November 19, 2015

ಸಾಮಾಜಿಕ ಜಾಲತಾಣ ಹಾಗೂ ಮುಸ್ಲಿಮ್ ಮಹಿಳೆಯರ ಪ್ರಾತಿನಿಧ್ಯ


-ಇರ್ಷಾದ್ ಉಪ್ಪಿನಂಗಡಿ


ಅಲ್ಲಾರಿ, ನಿಮ್ಮ ಮುಸ್ಲಿಮ್ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾ ಆಕ್ಟ್ವೀವ್ ಆಗಿ ಗುರುತಿಸಿಕೊಳ್ತಾರೆ, ಆದ್ರೆ ಮುಸ್ಲಿಮ್ ಮಹಿಳೆಯರು ಇಲ್ಲಿ ಯಾಕೆ ಕಾಣಿಸಿಕೊಳ್ತಿಲ್ಲ?  ನನ್ನ ಜೊತೆ ಮಾತನಾಡುವ ಅನೇಕ ಸ್ನೇಹಿತರು ನನ್ನಲ್ಲಿ ಕೇಳುವ ಸಹಜ ಪ್ರೆಶ್ನೆ. ಹೌದಲ್ವಾ, ಅಂತinidan-muslim-woman ಕುತೂಹಲಕ್ಕಾಗಿ ನಾನು ನನ್ನ ಫೇಸ್ ಬುಕ್ ಖಾತೆಯಲ್ಲಿ ಎಷ್ಟು ಮುಸ್ಲಿಮ್ ಮಹಿಳೆಯರು ಸ್ನೇಹಿತರಾಗಿದ್ದಾರೆ ಎಂದು ಚೆಕ್ ಮಾಡಿದೆ. ನನ್ನ ಸುಮಾರು ಮೂರು ಸಾವಿರ ಸ್ನೇಹಿತರ ಪೈಕಿ ಮುಸ್ಲಿಮ್ ಮಹಿಳೆಯರ ಸಂಖ್ಯೆ ಕೇವಲ ಆರು! ಈ ಪೈಕಿ ಎಷ್ಟು ಖಾತೆಗಳು ಅಸಲಿ ಅಥವಾ ಎಷ್ಟು ಖಾತೆಗಳು ನಕಲಿ ಎಂಬುವುದನ್ನು ನನಗೆ ಇದುವರೆಗೂ ಕಂಡುಹಿಡಿಯೋದಕ್ಕೆ ಸಾಧ್ಯವಾಗಿಲ್ಲ. ಕಾರಣ, ಖಾತೆ ಹೊಂದಿದವರ ಪ್ರೊಫೈಲ್ ಫೋಟೋವಾಗಲಿ ಇತರ ಮಾಹಿತಿಗಳಾಗಲಿ ಅಲ್ಲಿಲ್ಲ. ಆದ್ರೆ ನನ್ನ ಫೇಸ್ ಬುಕ್ ಖಾತೆಯ ಸ್ನೇಹಿತರಲ್ಲಿ ಇತರ ಧರ್ಮೀಯ ಮಹಿಳೆಯರ ಸಂಖ್ಯೆ ಬರೋಬ್ಬರಿ 400 ಕ್ಕೂ ಅಧಿಕ!

ಹಿಂಗ್ಯಾಕೆ ಅಂತ ನೀವು ತಲೆಕೆಡೆಸಿಕೊಂಡಿರಬಹುದು. ಆದ್ರೆ ನನಗೆ ಇದ್ರಲ್ಲಿ ಆಶ್ವರ್ಯ ಏನೂ ಅನ್ನಿಸೋದಿಲ್ಲ. ಬದಲಾಗಿ ಖೇಧ ಅನ್ನಿಸುತ್ತದೆ. ಕೆಲವು ತಿಂಗಳ ಹಿಂದೆ ಒಬ್ಬರು ಮುಸ್ಲಿಮ್ ಮಹಿಳೆ ನನ್ನ ಫೇಸ್ ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಲುಹಿಸಿದ್ದರು. ಅವರ ಹೆಸರು ಉಮ್ಮು ರವೂಫ್ ರಹೀನಾ. ಅವರ ಮುಖಪುಟವನ್ನು ಗಮನಿಸಿದಾಗ ನನಗೆ ತುಂಬಾನೆ ಆಶ್ವರ್ಯವಾಯಿತು. ನನ್ನ ಫೇಸ್ ಬುಕ್ 6 ಮುಸ್ಲಿಮ್ ಗೆಳತಿಯರ ಪೈಕಿ ಇವರೊಬ್ಬರೇ ತಮ್ಮ ಪ್ರೊಫೈಲ್ ಫೋಟೋವನ್ನು ಹಾಕಿದ್ದರು. ಅವರ ಎಫ್.ಬಿ ವಾಲ್ ನೋಡ್ತಾ ಹೋದಂತೆ ಸಾಕಷ್ಟು ಪ್ರಗತಿಪರ ಬರಹಗಳು ಅಲ್ಲಿ ಕಂಡುಬಂದವು. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಮೂಲಭೂತವಾದ, ಕೋಮುವಾದ, ಮಹಿಳಾ ಶೋಷಣೆಯ ವಿರುದ್ಧ ಧೈರ್ಯವಾಗಿ, ಲಾಜಿಕ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ರಹೀನಾ. ಕುತೂಹಲಕಾರಿ ವಿಚಾರವೆಂದರೆ ಇವರ ಸ್ಟೇಟಸ್ಗೆ ಬರುತ್ತಿರುವ ಕಾಮೆಂಟ್ಗಳು ಮಾತ್ರ ಅಸಹನೀಯ.

ಅಲ್ಲಿರುವ ಮುಸ್ಲಿಮ್ ಯುವಕರ ಬಹುತೇಕ ಕಾಮೆಂಟ್ಗಳು ರಹೀನಾ ತಮ್ಮ ಪ್ರೊಫೈಲ್ನಲ್ಲಿ ಫೋಟೋ ಹಾಕಿದಕ್ಕಾಗಿ. ಜೊತೆಗೆ ಅವರ ಪ್ರಗತಿಪರ ಲಾಜಿಕ್ ಅಭಿಪ್ರಾಯಗಳಿಗೆ ಉತ್ತರ ನೀಡಲು ಸಾಧ್ಯವಾಗದಾಗ ಕೋಪದಿಂದ ಅವರ ಮೇಲೆ ಮುಗಿಬೀಳುತ್ತಿದ್ದರು. ಬಹುತೇಕ ಕಾಮೆಂಟ್ಗಳ ಒತ್ತಾಯ ಒಂದೇ ಮುಸ್ಲಿಮ್ ಮಹಿಳೆಯಾಗಿ ಫೇಸ್ ಬುಕ್ ಪ್ರೊಫೈಲ್ನಲ್ಲಿ ನಿನ್ನ ಫೋಟೋ ಹಾಕಿರೋದು ಧರ್ಮ ಬಾಹಿರ  ಎಂದು. ಫೋಟೋ ಹಾಕಿರೋದು ಅಲ್ಲದೆ ಧರ್ಮದ ಬಗ್ಗೆ ಮೂಲಭೂತವಾದದ ಕುರಿತಾಗಿ ಪ್ರಶ್ನಿಸಿದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂಬ ಬೆದರಿಕೆಗಳು. ಹೀಗೆ ರಹೀನಾ ಮೇಲೆ ಮುಗಿಬಿದ್ದ ಯುವಕರ ಪ್ರೋಫೈಲ್ಗಳನ್ನು ನಾನು ಕುತೂಹಲಕ್ಕಾಗಿ  ಗಮನಿಸುತ್ತಿದ್ದೆ. ಅಬ್ಬಬ್ಬಾ,  ಅದೆಷ್ಟು ಅಂದ ಚೆಂದದ ಫೋಟೋಗಳು, ನಿಂತು ಕುಂತು, ಬೈಕ್ ಮೇಲೆ ಕೂತು, ಕಾರ್ ಮುಂದೆ ನಿಂತು ಬೇರೆ, ಹೀಗೆ ಭಿನ್ನ ವಿಭಿನ್ನ ಪೋಸುಗಳಿಂದ ಕೂಡಿದ ಪೋಟೋಗಳು ಅಲ್ಲಿ ರಾರಾಜಿಸುತ್ತಿದ್ದವು. ಇದಕ್ಕೆಲ್ಲಾ ನಿನ್ನ ಧರ್ಮ ಅನುಮತಿ ಕೊಡುತ್ತಾ ಎಂದು ಪ್ರಶ್ನಿಸಿದರೆ ಅವರಲ್ಲಿ ಉತ್ತರವೇ ಇಲ್ಲ. ಮುಸ್ಲಿಮ್ ಮಹಿಳೆಯೊಬ್ಬಳು ಹೀಗೆ ಬಹಿರಂಗವಾಗಿ ಪ್ರೆಶ್ನೆ ಮಾಡ್ತಿದ್ದಾರಲ್ಲಾ ಅಂತ ನಾನು ಖುಷಿ ಪಟ್ರೆ, ಕೊನೆಗೊಂದು ದಿನ ರಹೀನಾ ಫೇಸ್ ಬುಕ್ ಎಕೌಂಟ್ ಇದ್ದಕ್ಕಿದಂತೆ ನಾಪತ್ತೆಯಾಗೋದಾ!

ಮುಸ್ಲಿಮ್ ಮಹಿಳೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೀವು ಮಿಂಚಿದಾಗ ಆದಂತಹಾ ಅನುಭವಗಳೇನು ಎಂದು ರಹೀನರಲ್ಲಿ ಮಾತನಾಡಿದಾಗ  ನನ್ನ ಇನ್ ಬಾಕ್ಸ್ ಗೆ ಕೆಟ್ಟ ಕೆಟ್ಟ ಬೆದರಿಕೆಯ ಮೆಸೇಜ್ಗಳು ಬರುತ್ತಿದ್ದವು. ಫೋಟೋ ಯಾಕೆ ಹಾಕ್ತಿಯಾ ಅಂತ ಮುಗಿಬೀಳುತ್ತಿದ್ದರು. ಹೀಗೆ ಫೋಟೋ ಹಾಕೋದು, ಧರ್ಮದ ಬಗ್ಗೆ ಪ್ರಶ್ನಿಸೋದನ್ನು ಮುಂದುವರಿಸಿದ್ರೆ ಪರಿಣಾಮ ನೆಟ್ಟಗಿರೋದಿಲ್ಲ, ಮಹಿಳೆ ಹೇಗಿರಬೇಕು ಹಾಗೆಯೇ ಇರಬೇಕೆಂಬ ಬೆದರಿಕೆ ಕರೆಗಳೂ ಸಾಮಾನ್ಯವಾಗಿದ್ದವು. ಅನಿವಾರ್ಯವಾಗಿ ಖಾತೆಯ ಪ್ರೊಫೈಲ್ನಿಂದ ನನ್ನ ಪೋಟೋವನ್ನು ಡಿಲಿಟ್ ಮಾಡಬೇಕಾಗಿ ಬಂತು.  ಕೊನೆಗೊಂದು ದಿನ ನನ್ನ ಫೇಸ್ ಬುಕ್ ಖಾತೆ ಇದ್ದಕಿದ್ದಂತೆ ಬ್ಲಾಕ್ ಆಗೋಯ್ತು.

ರಹೀನಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ  ಸನ್ಮಾರ್ಗ ವಾರ ಪತ್ರಿಕೆಗೆ ಲೇಖನಗಳನ್ನುsocial_media ಬರೆದು ಕಳುಹಿಸುತ್ತಿದ್ದರು. ಜಮಾತೇ ಇಸ್ಲಾಮಿ ಹಿಂದ್ ಎಂಬ ಮುಸ್ಲಿಂ ಸಂಘಟನೆಯ ಅಧೀನದಲ್ಲಿರುವ ವಾರ ಪತ್ರಿಕೆಯಿದು. ಆರಂಭದಲ್ಲಿ ಇವರು ಬರೆದ ಲೇಖನಗಳು ಸನ್ಮಾರ್ಗದಲ್ಲಿ ಪ್ರಕಟವಾಗುತಿತ್ತು. ಆದರೆ ಯಾವಾಗ ರಹೀನಾ ಧರ್ಮದ ಹುಳುಕುಗಳನ್ನು ಬಹಿರಂಗವಾಗಿ ಪ್ರಶ್ನಿಸಲು ಶುರುಮಾಡಿದ್ರೋ, ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ವಿರೋಧ ವ್ಯಕ್ತವಾಗತೊಡಗಿದ್ವೋ, ಪ್ರಗತಿಪರ ಎಂದು ಬಿಂಬಿಸಿಕೊಳ್ಳೋ ಪ್ರಯತ್ನ ಮಾಡುತ್ತಿರುವ ಜಮಾತೇ ಇಸ್ಲಾಮೀಯ ವಾರ ಪತ್ರಿಕೆ ಸನ್ಮಾರ್ಗದಲ್ಲಿ ರಹೀನಾ ಲೇಖನ ಪ್ರಕಟನೆಗೆ ಅವಕಾಶ ನಿರಾಕರಿಸಲಾಯಿತು. ಇನ್ನು ದಲಿತ ಪರ, ಅಲ್ಪಸಂಖ್ಯಾತರ ಪರ, ಅಭಿವ್ಯಕ್ತಿಯ ಪರ ಹಾಗೂ ಮಹಿಳಾ ಪರ ಧ್ವನಿ ಎಂದು ಬಿಂಬಿಸಿಕೊಳ್ಳುವ ಕನ್ನಡ ದಿನಪತ್ರಿಕೆಯೊಂದರಲ್ಲೂ ರಹೀನಾ ಕೆಲಸ ಕಳೆದುಕೊಳ್ಳಬೇಕಾಯಿತು.

ಜೋಹಾ ಕಬೀರ್. ಎಂಜಿನಿಯರ್ ಪಧವೀಧರೆ ಮುಸ್ಲಿಮ್ ಯುವತಿ. ಈಕೆಯ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಖಾತೆಹೊಂದಲು, ತನ್ನ ಪ್ರೋಫೈಲ್ನಲ್ಲಿ  ಭಾವಚಿತ್ರ ಹಾಕಿಕೊಳ್ಳಲು ಹಾಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಇವರಿಗೆ ಪೋಷಕರ-ಪತಿಯ ವಿರೋಧವೇನಿಲ್ಲ. ಆದರೆ  ಸಾಮಾಜಿಕ ಜಾಲತಾಣಗಳಲ್ಲಿರುವ ಮುಸ್ಲಿಮ್ ಯುವಕರಿಗೆ ಸಮುದಾಯದ ಹೆಣ್ಣುಮಕ್ಕಳ ಮೇಲೆ ಎಲ್ಲಿಲ್ಲದ ಕಾಳಜಿ! ಪ್ರೋಫೈಲ್ ಫೋಟೋ ಹಾಕಿದಕ್ಕಾಗಿಯೇ ಇವರಿಗೂ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ. ಒತ್ತಡ ಹೆಚ್ಚಾಗಿ ಇವರೂ ತಮ್ಮ ಪ್ರೋಫೈಲ್ ಪೋಟೋವನ್ನು ಕಿತ್ತುಹಾಕಬೇಕಾಗಿ ಬಂತು. ಇನ್ನು ತನ್ನ ಪತಿಯ ಜೊತೆ ಮದುವೆ ದಿನದ ಪೋಟೋವನ್ನು ಫೇಸ್ ಬುಕ್ ಖಾತೆಯಲ್ಲಿ ಹಾಕಿದಾಗ ಅದಕ್ಕೂ ವಿರೋಧ. ತನ್ನ ಪತಿಯ ಜೊತೆ ನಿಂತ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಸ್ವಾತಂತ್ಯ್ರವೂ ನನಗಿಲ್ಲ. ನನ್ನಂತೆಯೇ ಅನೇಕ ಗೆಳತಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತಾರೆ, ಆದರೆ ಅದಕ್ಕೆ ಎದುರಾಗುತ್ತಿರುವ ವಿರೋಧ ನಮ್ಮೆನ್ನೆಲ್ಲಾ ಸೋಷಿಯಲ್ ಮಿಡಿಯಾಗಳಿಂದ ದೂರ ಉಳಿದುಕೊಳ್ಳುವಂತೆ ಮಾಡಿದೆ ಅಂತಿದ್ದಾರೆ ಜೋಹಾ ಕಬೀರ್. ಜೋಹಾರದ್ದೇ ಕಥೆ ಆಕೆಯ ಇತರ ಮುಸ್ಲಿಮ್ ಗೆಳತಿಯರದ್ದು.

ನಾಲ್ಕು ವರ್ಷಗಳ ಹಿಂದೆ ಮುಬೀನಾ (ಹೆಸರು ಬದಲಾಯಿಸಲಾಗಿದೆ) ಎಂಬ  ವೈದ್ಯಕೀಯ ಶಿಕ್ಷಣ ಓದುತ್ತಿದ್ದUpload-Facebook-photo ಮುಸ್ಲಿಮ್ ಯುವತಿ ಫೇಸ್ ಬುಕ್ ನಲ್ಲಿ ತುಂಬಾ ಆಕ್ವೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರೊಫೈಲ್ ನಲ್ಲಿ ತಮ್ಮ ಪೋಟೋವನ್ನು ಹಾಕಿಕೊಂಡಿದ್ದರು. ಮುಕ್ತವಾಗಿ ಮೂಲಭೂತವಾದ, ನೈತಿಕ ಪೊಲೀಸ್ ಗಿರಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಸುತ್ತಿದ್ದರು. ಆದ್ರೆ ಕೆಲವೇ ದಿನಗಳಲ್ಲಿ ಮೂಲಭೂತವಾದಿಗಳ ಕೆಂಗಣ್ಣಿಗೆ ಅವರು  ಗುರಿಯಾಗಬೇಕಾಯಿತು. ಇಷ್ಟಾದರೂ, ಸಾಮಾಜಿಕ ಜಾಲತಾಣಗಳ ಬೆದರಿಕೆಗೆ ಜಗ್ಗದ ಮುಬೀನಾ ಮನೆಗೆ ಮೂಲಭೂತವಾದಿ ಪುಂಡರ ಗುಂಪು ಹೋಗಿ ಎಚ್ಚರಿಕೆ ನೀಡಿ ಫೇಸ್ ಬುಕ್ ಖಾತೆಯನ್ನೇ ಸ್ಥಗಿತಗೊಳಿಸಿಬಿಟ್ಟರು ಅಂತಾರೆ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ. ಮುನೀರ್ ಕಾಟಿಪಳ್ಳ ಸಾಮಾಜಿಕ ಜಾಲ ತಾಣಗಳಲ್ಲೂ ತುಂಬಾನೇ ಆಕ್ಟೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿರುವ ವ್ಯಕ್ತಿ. ವರ್ಷದ ಹಿಂದೆ ಅವರು ಪತ್ನಿ ಶಬಾನಾ ಜೊತೆಗಿದ್ದ ಪೋಟೋವನ್ನು ಫೇಸ್ ಬುಕ್ ನಲ್ಲಿ  ಹಾಕೊಂಡಿದ್ದರು. ತಮಾಷೆಯಂದ್ರೆ ಮುಸ್ಲಿಮ್ ಮೂಲಭೂತವಾದಿ ಹುಡುಗರು ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನು ಮೀರಿ ಮುಸ್ಲಿಮ್ ಹೆಣ್ಣುಮಕ್ಕಳು ಸೋಷಿಯಲ್ ಮೀಡಿಯಾಗಳಲ್ಲಿ ಮುಂದುವರಿದರೆ, ಅವರ ಹೆಸರಲ್ಲಿ ಫೇಕ್ ಖಾತೆಗಳನ್ನು ತೆರೆದು ಅಶ್ಲೀಲ ವಿಡಿಯೋಗಳನ್ನು ಟ್ಯಾಗ್ ಮಾಡಲಾಗುತ್ತದೆ. ಅಥವಾ ಕೆಟ್ಟ ಮೆಸೇಜ್ಗಳನ್ನು ಹರಿಯಬಿಡಲಾಗುತ್ತದೆ. ಇಂಥಹಾ ಅನೇಕ ಕೀಳುಮಟ್ಟದ ಕಿರುಕುಳದ ಅನುಭವಗಳು ಈ ಮೇಲಿನ ಎಲ್ಲಾ ಮಹಿಳೆಯರಿಗಾಗಿದೆ. ಈ ಮೂಲಕ ಸಾಮಾಜಿಕ ಜಾಲ ತಾಣಗಳಿಂದ ಅವರನ್ನು ಹೊರದಬ್ಬುವ ಪ್ರಯತ್ನವನ್ನು ಮೂಲಭೂತವಾದಿಗಳು ಮಾಡ್ತಿದ್ದಾರೆ. ಇನ್ನೊಂದೆಡೆ ಹಿಂದೂ ಪರ ಸಂಘಟನೆಗಳು ಲವ್ ಜಿಹಾದ್ ಭಯಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿರುವ ಹಿಂದೂ ಹೆಣ್ಣುಮಕ್ಕಳನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಿರುವುದು ಕೂಡಾ ಗಮನಿಸಬೇಕಾದ ವಿಚಾರ.

ಈ ಹಿಂದೆ ಮುಸ್ಲಿಮ್ ಹೆಣ್ಣುಮಕ್ಕಳಿಗೆ ವಿದ್ಯಾಬ್ಯಾಸ ಪಡೆಯಲೂ ಅವಕಾಶವಿರಲಿಲ್ಲ. ಸಾರಾ ಅಬೂಬಕ್ಕರ್ ಅಂತಹಾ ಅನೇಕ ದಿಟ್ಟ ಮಹಿಳೆಯರ ಹೋರಾಟದ ಫಲವೆಂಬುವಂತೆ ಇಂದು ಮುಸ್ಲಿಮ್ ಹೆಣ್ಣುಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಏನೂ ಸಾಧನೆ ಮಾಡಬೇಕಾದ್ರೂ ಅದು ಬುರ್ಖಾದೊಳಗಡೆಗೆ ಮಾತ್ರ ಸೀಮಿತ ಎಂಬ ವಾದದಲ್ಲಿ ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಮೀರಿ ಕೆಲವೊಂದು ಮುಸ್ಲಿಮ್ ಮಹಿಳೆಯರು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಅಭಿವ್ಯಕ್ತಿಯ ಹಕ್ಕನ್ನು ಪಡೆದುಕೊಳ್ಳುವ ಪ್ರಯತ್ನ ಅಲ್ಲೊಂದು ಇಲ್ಲೊಂದರಂತೆ ನಡೆಯುತ್ತಿದೆ. ಧರ್ಮದ ಹೆಸರಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುವುದನ್ನು ಮುಸ್ಲಿಮ್ ಸಮಾಜದ ಪ್ರಜ್ಞಾವಂತರು ಗಮನಿಸಬೇಕಿದೆ.