Author Archives: editor

“ನನ್ನ ಮಕ್ಕಳು ವಿಧಾನಸೌಧದ ಕಡೆ ತಲೆಹಾಕಲಿಲ್ಲ” – ಗೋವಿಂದ ಗೌಡರು

– ಸ್ವಾಮಿ ದುರ್ಗ

ಮಾಜಿ ಮಂತ್ರಿ ಎಚ್.ಜಿ.ಗೋವಿಂದ ಗೌಡರು ನಿನ್ನೆ (ಬುಧವಾರ) ಪಯಣ ಮುಗಿಸಿದರು. ಅನೇಕ ಮಾಜಿ ಮಂತ್ರಿ, ಶಾಸಕರು ಸಾವನ್ನಪ್ಪಿರುವ ಸುದ್ದಿ ಆಗಾಗ ಪತ್ರಿಕೆಗಳ ಮೂಲೆಯಲ್ಲಿ ಅಥವಾ ತಳದಲ್ಲಿ ನಿಧನ ವಾರ್ತೆಯಾಗಿ ಬರುವುದುಂಟು. ಆದರೆ, ಗೋವಿಂದ ಗೌಡರದು ಹಾಗಲ್ಲ. ಅವರು ರಾಜಕೀಯ ನಿವೃತ್ತಿ ಪಡೆದ ಹದಿನೇಳು ವರ್ಷಗಳ ನಂgovindagowdaತರವೂ, ಅವರನ್ನು ತಂಪು ಹೊತ್ತಲ್ಲಿ ನೆನಪಿಸಿಕೊಳ್ಳುವ ಬಹುದೊಡ್ಡ ವರ್ಗ ನಮ್ಮ ಮಧ್ಯೆ ಇದೆ. ಅವರೆಲ್ಲರೂ ಇಂದು ತಪ್ಪದೇ ಈ ಮಾಜಿ ಶಿಕ್ಷಣ ಮಂತ್ರಿಯನ್ನು ನೆನಪಿಸಿಕೊಳ್ಳುತ್ತಾರೆ. ಕೊಪ್ಪ ಸುತ್ತ ಮುತ್ತಲಿನ ನೂರಾರು ಶಿಕ್ಷಕರು ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದು ಸುಖಾ ಸುಮ್ಮನೆ ಬಂದ ಮನ್ನಣೆ ಅಲ್ಲ.
ಕೊಪ್ಪದ ಮುಖ್ಯರಸ್ತೆಯನ್ನು ತೋರಿಸಿ, ಆ ಊರಿನ ಒಬ್ಬರು ಒಮ್ಮೆ ಹೇಳುತ್ತಿದ್ದರು, “ನೋಡಿ ಈ ರಸ್ತೆ ಗೋವಿಂದ ಗೌಡರ ಕಾಲದ್ದು. ಅದು ಈಗಲೂ ಗಟ್ಟಿ ಮುಟ್ಟಾಗಿದೆ, ಆದರೆ ಈಗಿನವರು ಮೊನ್ನೆಯಷ್ಟೆ ಮಾಡಿಸಿದ್ದು ಈಗಾಗಲೇ ಗುಂಡಿ ಕಂಡಿದೆ”. ಪ್ರಾಮಾಣಿಕತೆ ಮತ್ತು ಬದ್ಧತೆ ಇರುವ ವ್ಯಕ್ತಿ ಆಡಳಿತಕ್ಕೆ ಬಂದರೆ ಏನಾಗಬಹುದು ಎನ್ನುವುದಕ್ಕೆ ಆ ಊರಿನ ಅದೊಂದು ಸಣ್ಣ ರಸ್ತೆಯ ಉದಾಹರಣೆ ಸಾಕು.
1926 ರಲ್ಲಿ ಜನಿಸಿದ ಗೌಡರು ಹರೆಯದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ನಂತರ ಮೈಸೂರು ಚಲೋ. ಸ್ವತಂತ್ರ ಭಾರತದಲ್ಲಿ ರಾಜಕೀಯ ಅವರನ್ನು ಆಕರ್ಷಿಸಿತು. 1952 ರಲ್ಲಿ ಮೊದಲ ಬಾರಿಗೆ ಅವರು ಕೊಪ್ಪ ಪುರಸಭೆಗೆ ಆಯ್ಕೆಯಾದರು. ನಂತರ ಅವರು ಶಾಸಕರಾಗಿದ್ದು 1983 ರಲ್ಲಿ. ಮೂರು ಬಾರಿ ಶಾಸಕರಾಗಿ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ ಹಾಗೂ ಜೆ.ಎಚ್.ಪಟೇಲರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ಶಿಕ್ಷಣ ಇಲಾಖೆಯಲ್ಲಿನ ಬಹುಚರ್ಚಿತ ಹಾಗೂ ಅಪಾರ ಮನ್ನಣೆ ಗಳಿಸಿದ ಕಾರ್ಯಕ್ರಮಗಳ ಮೂಲಕ ಅವರು ಅಪಾರ ಜನಪ್ರಿಯತೆ ಹೊಂದಿದ ಸಂದರ್ಭದಲ್ಲಿಯೇ ಅವರು ರಾಜಕಾರಣಕ್ಕೆ ವಿದಾಯ ಹೇಳಿದರು. ಹಾಗೆ ಹೇಳಿದ ಅನೇಕರು ತಮ್ಮ ಮನೆ ಮಕ್ಕಳನ್ನು ರಾಜಕೀಯಕ್ಕೆ ತಂದಿರುತ್ತಾರೆ. ಆದರೆ, ಇವರು ಹಾಗೂ ಮಾಡಲಿಲ್ಲ. ಹಾಗಾಗಿ ಅವರು ಅಪರೂಪದ ರಾಜಕಾರಣಿ.
ಅವರು ಮೈಸೂರಿಗೆ ಭೇಟಿ ನೀಡಿದಾಗೊಮ್ಮೆ ಕೆಲ ವಿದ್ಯಾರ್ಥಿಗಳು ಭೇಟಿ ನೀಡಿ, ತಾವು ಅಂದಾಜಿಸಿದ್ದಕ್ಕಿಂತ ಕಡಿಮೆ ಅಂಕಗಳು ಬಂದಿವೆ ಎಂದು ದೂರಿದರು. ಸಚಿವರು ತಕ್ಷಣ ಅಂದಿನ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಹಾಗೂ ಹಿರಿಯ ಅಧಿಕಾರಿ ಹರೀಶ್ ಗೌಡರನ್ನು ಸಂಪರ್ಕಿಸಿ ಇದಕ್ಕೊಂದು ಪರಿಹಾರವೆಂಬಂತೆ ಉತ್ತರ ಪತ್ರಿಕೆಗಳ ಛಾಯಾಪ್ರತಿ ನೀಡುವ ವ್ಯವಸ್ಥೆ ಜಾರಿಗೆ ತಂದರು. ಅದು ಇಂದು ಅನೇಕ ಸಂಸ್ಥೆ, ವಿಶ್ವ ವಿದ್ಯಾನಿಲಯಗಳಿಗೆ ಅನುಕರಣನೀಯವಾಗಿದೆ.
ಮೊದಲು ಶಿಕ್ಷಕರನ್ನು ನೇಮಿಸಲು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳಿರುತ್ತಿದ್ದವು. ಸಮಿತಿಗಳಲ್ಲಿ ಕೆಲವೊಮ್ಮೆ ಪ್ರಾಮಾಣಿಕವಾಗಿ ನೇಮಕಾತಿ ಆದರೂ, ಬಹುತೇಕ ಸಂದರ್ಭಗಳಲ್ಲಿ ಜಾತಿ, ಹಣ, ಪ್ರಭಾವಗಳು ಕೆಲಸ ಮಾಡುತ್ತಿದ್ದವು. ಗೌಡರು ಆ ಪದ್ಧತಿಗೆ ಇತಿಶ್ರೀ ಹಾಡಿ, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನೇಮಕ ಮಾಡುವ ವ್ಯವಸ್ಥೆ ಜಾರಿಗೆ ತಂದರು. ಆ ಮೂಲಕ ಪರಿಶ್ರಮದಿಂದ ಅಭ್ಯಾಸ ಮಾಡಿದ್ದ ಅಭ್ಯರ್ಥಿಗಳಿಗೆ ಯಾವುದೇ ಲಂಚ, ಪ್ರಭಾವಗಳ ಅಗತ್ಯ ಬೀಳದೆ ಕೆಲಸ ಸಿಗುವಂತಾಯ್ತು.
ಸಚಿವರಾಗಿ ಉತ್ತಮ ಆಡಳಿತ ಅಂದ್ರೇನು ಎನ್ನುವುದನ್ನೂ ತೋರಿಸಿದರು. ಯಾವುದೇ ವ್ಯಕ್ತಿ, ಅಧಿಕಾರಿ ತಪ್ಪು ಮಾಡಿದ್ದಾರೆ ಎಂದು ಗೊತ್ತಾದರೆ, ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದರು. ಹತ್ತಿರದ ಸಂಬಂಧಿ ಎಂದೋ, ಪ್ರಭಾವಿ ಸಚಿವರಿಗೆ ಬೇಕಾದವರೆಂದೋ ಸುಮ್ಮನಾದವರಲ್ಲ.
ಅವರು ಒಮ್ಮೆ ಹೇಳಿದ್ದ ನೆನಪು, “ನಾನು ವಿಧಾನಸೌಧದಲ್ಲಿರುವ ತನಕ, ನನ್ನ ಆರು ಮಕ್ಕಳಲ್ಲಿ ಯಾರೊಬ್ಬರೂ ಒಮ್ಮೆಯೂ ಆಕಡೆ ತಲೆ ಹಾಕಲಿಲ್ಲ”. ಈಗಿನ ಯಾವುದೇ ಮಂತ್ರಿ ಇಂತಹ ಮಾತನ್ನು ವಿಶ್ವಾಸದಿಂದ ಹೇಳಲು ಸಾಧ್ಯವಿದೆಯೇ?
ಮೂರು ವರ್ಷಗಳ ಹಿಂದೆ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ ಚೌತಾಲ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿಗಳಾಗಿ ಜೈಲಿಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಗೌಡರು ಮಾತನಾಡುತ್ತಾ, “ನಾನು ಇಂದು ನೆಮ್ಮದಿಯಾಗಿ ನನ್ನ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಅದರರ್ಥ, ನಾನು ನನಗೆ ಸಿಕ್ಕ ಅಧಿಕಾರವನ್ನು ತಪ್ಪಾಗಿ ಎಲ್ಲಿಯೂ ಬಳಸಿಕೊಂಡಿಲ್ಲ”.

ರಿಯಾಲಿಟಿ ಶೋ ಪ್ರಧಾನಿ!

ಗುರು, ಚಿಕ್ಕಮಗಳೂರು

ವಿಪರ್ಯಾಸ ಎಂದರೆ ಇದೇ ಇರಬೇಕು. ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಗೆ ಮೈಸೂರಿಗೆ ಬಂದ ಪ್ರಧಾನಿ ಸ್ವಾಮೀಜಿಯ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಿ ಬುದ್ಧಿಜೀವಿಗಳನ್ನು ಹೀಗಳೆಯುತ್ತಾರೆ. ತಾನು ಅದೇ ಊರಲ್ಲಿ ಭಾಗವಹಿಸುತ್ತಿರುವ ಇನ್ನೊಂದು ಕಾರ್ಯಕ್ರಮದಲ್ಲಿ ಎದುರು ನೋಡುತ್ತಿರುವುದು ಬುದ್ದಿಜೀವಿ ವಲಯವನ್ನು ಪ್ರತಿನಿಧಿಸುವ ವಿಜ್ಞಾನಿಗಳನ್ನು ಎನ್ನುವ ಪ್ರಜ್ಞೆಯೂ ಅವರಿಗಿರುವುದಿಲ್ಲ.

ಮಾರನೇ ದಿನ ಬೆಂಗಳೂರಿನಲ್ಲಿ ಯೋಗ ಕ್ಯಾಂಪ್ ಉದ್ಘಾಟಿಸುತ್ತಾರೆ. ಅದೇ ಹೊತ್ತಿಗೆ ಪಠಾಣಕೋಟ್ ನಲ್ಲಿ ಈ ದೇಶದ ಸೈನಿಕರು ಭಯೋತ್ಪಾದಕರ ಗುಂಡಿಗೆ ಅಸುನೀಗುತ್ತಿದ್ದಾರೆ, ಅಷ್ಟೇ ಅಲ್ಲ ಸೂಕ್ತ ರಕ್ಷಣಾತ್ಮಕ ವ್ಯವಸ್ಥೆ ಇಲ್ಲದೆ ಗ್ರನೇಡ್ ನಿಷ್ಕ್ರಿಯ ಗೊಳಿಸಲು ಹೋದ ವೀರನೂ ಮೃತಪಡುತ್ತಾನೆ. ಸಾವಿರಾರು modi-in-biharಭಕ್ತರನ್ನು ಹೊಂದಿರುವ ಈ ವ್ಯಕ್ತಿಗೆ ಮಾತ್ರ ಏನೂ ಅನ್ನಿಸುವುದಿಲ್ಲ. (ಈ ಘಟನೆಯೊಂದಿಗೆ ತಕ್ಷಣ ನೆನಪಾಗುವುದು 2009 ರಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೆರೆಯಿಂದ ಜಲಾವೃತಗೊಂಡಿದ್ದಾಗ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಮಂತ್ರಿಗಳು ಮೈಸೂರಿನ ಮಠವೊಂದರ ಆವರಣದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪಿ.ಮಹಮ್ಮದ್ ಬರೆದ ಪರಿಣಾಮಕಾರಿ ಕಾರ್ಟೂನ್ ಇನ್ನೂ ಅನೇಕರಿಗೆ ನೆನಪಿರಬಹುದು).

ದೇಶವೊಂದರ ನಾಯಕ, ಆತನ ಮನಸ್ಥಿತಿ, ಬುದ್ದಿವಂತಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನೇ ಪ್ರತಿನಿಧಿಸುತ್ತಿರುತ್ತವೆ. ದುರಂತವೆಂದರೆ ಸದ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಮನುಷ್ಯ ಪ್ರಚಾರದ ಹುಚ್ಚಿಗೆ ಮರುಳಾಗಿ ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳ ಸ್ಪರ್ದಿಗಳಂತೆ ವರ್ತಿಸುತ್ತಿರುವುದು. ಆ ಸ್ಪರ್ದಿಗಳಿಗೆ ಇರುವ ದೊಡ್ಡ ಮಟ್ಟದ ಚಾಲೆಂಜ್ ತಾವು ಸದಾ ಟಿ.ಆರ್.ಪಿ ಪುಲ್ಲರ್ಸ್ ಆಗಿರಬೇಕು. ಅಂತಹದೊಂದು ಪ್ರಯತ್ನದಲ್ಲಿ ಯಶಸ್ವಿಯಾದರೆ ಎಲಿಮಿನೇಟ್ ಆಗದಂತೆ ಬಹಳ ಕಾಲ ಉಳಿಯಬಹುದು. ಪ್ರಸ್ತುತ ಪ್ರಧಾನ ಮಂತ್ರಿಗೂ ಇಂತಹದೇ ಗೀಳು ಹತ್ತಿದಂತಿದೆ.

ನಮ್ಮಲ್ಲಿ ಬಹುತೇಕರು ಕೈಗಳ ಮೇಲೆ ಹಚ್ಚೆ ಹಾಕಿಸುತ್ತಾರೆ. ಹಾಗೆ ಹಾಕಿಸುವರಾರೂ ತಮ್ಮ ಹೆಸರನ್ನು ಬರೆಸಿಕೊಳ್ಳುವುದಿಲ್ಲ, ಬದಲಿಗೆ ತಮ್ಮ ಪ್ರೀತಿಪಾತ್ರರ ಹೆಸರನ್ನು ಸದಾ ಹಸಿರಾಗಿರಿಸಲು ಬರೆಸಿಕೊಳ್ಳುತ್ತಾರೆ. ಈಗ ಟಾಟ್ಟೂ ಕಾಲದಲ್ಲೂ ಅದೇ ಮನೋಭಾವ ಮುಂದುವರಿದಿದೆ. (ಇಲ್ಲಿ ಹೆಸರಿಗಿಂತ ಚಿತ್ರ ಮುನ್ನೆಲೆಗೆ ಬಂದಿರಬಹುದು). ಆದರೆ ತನ್ನ ಹೆಸರನ್ನೇ ಅಚ್ಚಾಗಿಸಿರುವ ಅಂಗಿಯನ್ನು ಪ್ರಮುಖ ರಾಜತಾಂತ್ರಿಕ ಮಾತುಕತೆ (ಒಬಾಮಾ ಭೇಟಿ) ಸಂದರ್ಭದಲ್ಲಿ ಹಾಕಿಕೊಂಡ ಪ್ರಧಾನಿ ಮನಸ್ಥಿತಿ ನೆನಸಿಕೊಂಡರೆ ರೇಜಿಗೆ ಹುಟ್ಟುತ್ತೆ.

ಮೊನ್ನೆ ಮೊನ್ನೆವರೆಗೆ ಪಾಕಿಸ್ತಾನಕ್ಕೆ ‘ಲವ್ ಲೆಟರ್ಸ್ ಬರೆಯುವುದನ್ನ ನಿಲ್ಲಿಸಬೇಕು’ ಎಂದು ಗುಟುರು ಹಾಕುತ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ಪಾಕ್ ಗೆ ಭೇಟಿ ನೀಡುತ್ತಾರೆ. ಸೌಹಾರ್ದ ವಾತಾವರಣಕ್ಕೆ ಅಂತಹದೊಂದು ಪ್ರಯತ್ನ ಶ್ಲಾಘನೀಯವೇ, ಆದರೆ, ಅದರ ಹಿಂದಿನ ಬದ್ಧತೆ ಪ್ರಶ್ನಾರ್ಹ. ಸಂಗೀತಗಾರರು, ಕ್ರಿಕೆಟಿಗರು ಎರಡೂ ದೇಶಗಳಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ವಿರೋಧ ವ್ಯಕ್ತ ಪಡಿಸುವ ಪರಿವಾರಕ್ಕೆ ನಿಷ್ಠನಾಗಿರುವ ವ್ಯಕ್ತಿಯ ಬದ್ಧತೆ ಪ್ರಶ್ನಿಸುವುದು ಸಹಜ. ಅದರಾಚೆಗೆ, ಇದು ಕೇವಲ ಪ್ರಚಾರಕ್ಕೆ ಜೋತು ಬಿದ್ದವರ ಸ್ಟ್ರಾಟಜಿಯಾಗಿದ್ದರೆ (ಮತ್ತದೇ ಬಿಗ್ ಬಾಸ್ ಸ್ಪರ್ಧಿಯಂತೆ) ನಾಚಿಕೆಗೇಡು.
ಇವರ ಪ್ರಚಾರದ ಗೀಳಿಗೆ ಇನ್ನೊಂದು ಉದಾಹರಣೆ ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿ ನಡೆಸುವ ಎನ್.ಆರ್.ಐ ಸಭೆಗಳು. ಬಿಹಾರದಲ್ಲಿ ಸೋತು ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾದಾಗ, ಇಲ್ಲಿ ಕಳೆದುಕೊಂಡದ್ದನ್ನು ಹುಡುಕಲು ಲಂಡನ್ ನಲ್ಲಿ ಪ್ರಯತ್ನಿಸುತ್ತಾರೆ.

ಭಾರತಕ್ಕೆ ಹೂಡಿಕೆ ತರುವ ಪ್ರಯತ್ನವಾಗಿ ಅವರು ಅನೇಕ ಗ್ಲೋಬಲ್ ನಾಯಕರನ್ನು ಭೇಟಿ ಮಾಡುತ್ತಿರುವ ಸುದ್ದಿಗಳು ವಿದೇಶಿ ಪ್ರವಾಸದ ಹೊತ್ತಿನಲ್ಲಿ ಬಂದಿವೆ. ಗೂಗಲ್, ಮೈಕ್ರೋಸಾಫ್ಟ್ ಫೇಸ್ ಬುಕ್..ಹೀಗೆ ಹಲವು ಸಂಸ್ಥೆಗಳ ಮುಖ್ಯಸ್ಥರನ್ನು ಅವರು ಭೇಟಿ ಮಾಡಿದ್ದಾರೆ. ಅದರ ಹಿಂದೆಯೂ ಕೂಡ ದೂರದೃಷ್ಟಿಗಿಂತ ಪ್ರಚಾರದ ಗೀಳೇ ಪ್ರಮುಖವಾಗಿ ಕಾಣುತ್ತಿದೆ. ಮೇಲೆ ಹೇಳಿರುವ ಯಾವ ಕಂಪನಿಗಳೂ, ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಸಮಾಧಾನಕಾರ ಪರಿಹಾರ ನೀಡಲಾರವು. ಅವರು ಇಲ್ಲಿಯ ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಅಳವಡಿಸಬಹುದು, ಫ್ರೀ-ಬೇಸಿಕ್ಸ್ ಹೆಸರಿನಲ್ಲಿ ಮಂಗಮಾಡಬಹುದು. ಆದರೆ ನಿರುದ್ಯೋಗ ಸಮಸ್ಯೆ ನೀಗಬಲ್ಲವಂತಹವು ದೊಡ್ಡ ದೊಡ್ಡ ಉದ್ದಿಮೆಗಳು.

ಲಕ್ಷ್ಮಿ ಮಿತ್ತಲ್ ಬಳ್ಳಾರಿ ಸಮೀಪ ಸ್ಟೀಲ್ ಪ್ಲಾಂಟ್ ಹಾಕುವ ಯೋಜನೆ ಬಹಳ ದಿನಗಳಿಂದ ಪೂರ್ಣಗೊಂಡಿಲ್ಲ. ಅಂತಹದೊಂದು ಉದ್ದಿಮೆ ಬಂದರೆ, ನೂರಾರು ಕೈಗಳಿಗೆ ಕೆಲಸ ಸಿಗುತ್ತೆ. ಫೇಸ್ ಬುಕ್ ನವರು ಬಂದು ಇಲ್ಲಿ ಕನಿಷ್ಟ ಪಕ್ಷ ಒಂದು ಪುಸ್ತಕ ಅಂಗಡಿಯನ್ನೂ ಇಡುತ್ತಾರೆಂದು ನಿರೀಕ್ಷಿಸಲಾಗದು. ಹೀಗಿರುವಾಗ ಕೇವಲ ಪ್ರಚಾರ ಪ್ರೇರಿತ ಸ್ಟ್ರಾಟಜಿಗಳನ್ನು ಅನುಸರಿಸಿ ಬಿಗ್ ಬಾಸ್ ಸ್ಪರ್ಧಿಯೊಬ್ಬ ಟಿ.ಆರ್.ಪಿ ರೇಸ್ ನಲ್ಲಿ ಕೊನೆತನಕ ಉಳಿದುಕೊಂಡು ದುಡ್ಡು ಗೆಲ್ಲಬಹುದು. ಆದರೆ ಪ್ರಜಾಪ್ರಭುತ್ವದಲ್ಲಿ ಹಾಗಾಗುವುದಿಲ್ಲ. ಜನರನ್ನು ಮರಳು ಮಾಡಲಾಗದು. ಬ್ಯಾಂಕ್ ಅಕೌಂಟ್ ತೆರೆದಿರುವ ಮಂದಿ ಆಗಾಗ ಬ್ಯಾಂಕ್ ಗಳಿಗೆ ಭೇಟಿ ನೀಡಿ 15 ಲಕ್ಷ ರೂ ಯಾವಾಗ ಬರುತ್ತೆ ಎಂದು ಕೇಳುತ್ತಿದ್ದಾರೆ.

ಜನನುಡಿಗಾಗಿ ಮಂಗಳೂರಿಗೆ…

ಅಭಿಮತ ಮಂಗಳೂರು ಮತ್ತೊಂದು ‘ಜನನುಡಿ’ ಯೊಂದಿಗೆ ಸಜ್ಜಾಗಿದೆ. ಬದುಕನ್ನೇ ನುಡಿಯಾಗಿಸಿಕೊಂಡವರು ಮಾತು, ಹರಟೆ, ಹಾಡು, ಕತೆ, ಕವಿತೆ ಎಂದು ಎರಡು ದಿನಗಳ ಕಾಲ ಮಂಗಳೂರಿನಡೆಗೆ ನಡೆಯುತ್ತಿದ್ದಾರೆ. ಹಿಂದಿನ ವರ್ಷಗಳಂತೆ ಈ ಬಾರಿಯೂ ವರ್ತಮಾನ ಬಳಗದ ಅನೇಕ ಗೆಳೆಯರು ಅಲ್ಲಿರುತ್ತಾರೆ. ನೆನಪಿರಲಿ ಕಾರ್ಯಕ್ರಮ ಡಿಸೆಂಬರ್ 19 ಮತ್ತು 20 (ಶನಿವಾರ ಮತ್ತು ಭಾನುವಾರ). ಮಂಗಳೂರು ನಗರದ ಶಾಂತಿಕಿರಣದಲ್ಲಿ.
ದೇವನೂರು ಮಹದೇವ ಉದ್ಘಾಟಿಸಿ ಮಾತನಾಡಲಿದ್ದಾರೆ. ಎಚ್.ಎಸ್.ಅನುಪಮ, ಕಡಿದಾಳ್ ಶಾಮಣ್ಣ, ಜಾನ್ ಫರ್ನಾಂಡಿಸ್, ಶ್ರೀನಿವಾಸ ಕಕ್ಕಿಲಾಯ, ಬಾನು ಮುಷ್ತಾಕ್, ಡಿ.ಉಮಾಪತಿ, ಬಿ.ಟಿ.ಜಾಹ್ನವಿ, ಸಂವರ್ಥ, ಡಾ.ಸಿ.ಎಸ್.ದ್ವಾರಕಾನಾಥ್, ಡಾ.ಮುಜಾಫರ್ ಅಸಾದಿ, ಪೀರ್ ಬಾಷ, ಕೆ.ಷರೀಫ, ಲಕ್ಷ್ಮಣ್ ಹೂಗಾರ್, ಕೆ.ವೈ.ನಾರಾಯಣಸ್ವಾಮಿ, ಟಿ.ಕೆ.ದಯಾನಂದ್, ಪ್ರೊ.ಕೆ.ಚಂದ್ರ ಪೂಜಾರಿ, ಆರ್. ಸುನಂದಮ್ಮ, ಎಚ್.ವಿ.ವಾಸು, ಕೋಟಿಗಾನಹಳ್ಳಿ ರಾಮಯ್ಯ, ಶಶಿಧರ್ ಭಟ್, ಕೆ.ಎಸ್.ವಿಮಲಾ, ಹುಲಿಕುಂಟೆ ಮೂರ್ತಿ, ದಿನೇಶ್ ಅಮೀನ್ ಮಟ್ಟು, ರಹJananudi-4Jananudi-2ಮತ್ ತರೀಕೆರೆ, ನರೇಂದ್ರ ನಾಯಕ್, ಇಂದಿರಾ ಕೃಷ್ಣಪ್ಪ..ಮತ್ತಿತJananudi-3ರರು ಅಲ್ಲಿರುತ್ತಾರೆ.

ಡಾ. ಬರಗೂರು ರಾಮಚಂದ್ರಪ್ಪರಿಗೆ ಬಹಿರಂಗ ಪತ್ರ – ಎಸ್.ಐ.ಒ. ಇಸ್ಲಾಂ ಬ್ರಾಹ್ಮಣ್ಯದ ನಿಜವಾದ ಗುರಿ ಸೂಫಿ ಸಂತರ ಪಠ್ಯ

– ಇರ್ಷಾದ್ ಉಪ್ಪಿನಂಗಡಿ

ಪ್ರಾಥಮಿಕ ಮತ್ತು ಪ್ರೌಢಶಾಲಾ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾದ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ,
ಪಠ್ಯ ಕೇಸರಿಕರಣದ ವಿರುದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಡಾ ಬರಗೂರು ರಾಮಚಂದ್ರಪ್ಪಗೆ ಮನವಿ ಸಲ್ಲಿಸಿರುವ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆ ಮೂಲಕ ಪಠ್ಯದಲ್ಲಿ ಇಸ್ಲಾಂ ಬ್ರಾಹ್ಮಣ್ಯವನ್ನು ಹೇರಲು ಒತ್ತಾಯ ಪಡಿಸಿದೆ.
ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೆಷನ್ (ಎಸ್.ಐ.ಓ) ಜಮಾತೇ-ಇಸ್ಲಾಮೀ-ಹಿಂದ್ ಮೂಲಭೂತವಾದಿ ಸಂಘಟನೆಯ ವಿದ್ಯಾರ್ಥಿ ಘಟಕ. ಕೇಸರೀಕರಣಗೊಂಡಿರುವ ಪಠ್ಯ ಪರಿಷ್ಕರಣೆಯಾಗಬೇಕು ಎಂಬುದು ನಿಜ. ಆದರೆ ಈ ಪರಿಷ್ಕರಣೆಗೆ ಆಗ್ರಹಿಸುವವರು ಯಾರು ? ಮತ್ತು ಅವರ ಹಿಡನ್ ಅಜೆಂಡಾಗಳು ಏನು ಎಂಬುದರ ಮೇಲೆ ಆಗ್ರಹದ ಸಾಧಕ ಭಾದಕಗಳು ಚರ್ಚೆಗೊಳಪಡಬೇಕು. ಪಠ್ಯದಲ್ಲಿ ಕೇಸರೀಕರಣದ ಕೆಲವೊಂದು ಉದಾಹರಣೆಗಳನ್ನು ಮುಂದಿಟ್ಟುಕೊಂಡು ಎಸ್ ಐ ಒ ತಮ್ಮ ಮೂಲಭೂತವಾದಿ ಸಿದ್ಧಾಂತಕ್ಕೆ ಪಠ್ಯದಲ್ಲಿ ಸ್ಥಾನದೊರಕಿಸಿಕೊಡಲು ಯತ್ನ ನಡೆಸಿದೆ. ಅದಕ್ಕಾಗಿ ಕೆಲವೊಂದು ಪ್ರಗತಿಪರರು ಎತ್ತಬಹುದಾದ ವಿಷಯಗಳBaraguruನ್ನು ಮೊದಲಿಗೆ ಎತ್ತಿ ತೋರಿಸಿ ನಂತರ ತನ್ನ ಸಿದ್ಧಾಂತವನ್ನು ಪಠ್ಯದಲ್ಲಿ ಸೇರಿಸಲು ಆಗ್ರಹಿಸುವ ಪ್ರಯತ್ನ ನಡೆಸಿದೆ.

 

ಐದನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ಯಕ್ಷ ಪ್ರಶ್ನೆ ಎಂಬ ಪಾಠವಿದೆ. ಅದರಲ್ಲಿ ಯಕ್ಷ ಮತ್ತು ಧರ್ಮರಾಯನ ಸಂಭಾಷಣೆ ನೀಡಲಾಗಿದೆ. ಸಂಭಾಷಣೆಯಲ್ಲಿ ಮಾನವನಿಗೆ ತಾಯಿ ರೂಪಿ ಯಾರು ? ಎಂಬ ಪ್ರಶ್ನೆಗೆ ಗೋವು ಎಂಬ ಉತ್ತರವನ್ನು ಧರ್ಮರಾಯ ನೀಡುತ್ತಾನೆ. ಈ ಮೂಲಕ ಪರೋಕ್ಷವಾಗಿ ನಿಮ್ಮ ತಾಯಿಯ ಹತ್ಯೆ ಮಾಡುತ್ತಿದ್ದೀರಿ ಎಂದು ಮುಸ್ಲಿಮರಿಗೆ ಹೇಳುವಂತಿದೆ. ಎಂಟನೇ ತರಗತಿಯ ದ್ವಿತೀಯ ಭಾಷೆ ತಿಳಿಕನ್ನಡದ 10 ನೇ ಪಾಠ ಕರಾಳ ರಾತ್ರಿಯಲ್ಲಿ, ಜಿಹಾದಿಗಳು ಜನರನ್ನೇಕೆ ಕೊಲ್ಲುತ್ತಾರೆ ? ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ಜಿಹಾದಿ ಎನ್ನುವುದು ಉಗ್ರಗಾಮಿ ಸಂಘಟನೆ. ಇವರದ್ದು ಮತೀಯ ಸಂಘಟನೆ. ಬೇರೆ ಧರ್ಮದವರನ್ನು ಕೊಂದರೆ ನಮ್ಮ ದೇವರಿಗೆ ಪ್ರೀತಿ ಎಂದು ನಂಬಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಇದು ಇಸ್ಲಾಂ ಧರ್ಮವನ್ನು ಅವಮಾನಿಸುವ ಉದ್ದೇಶದಿಂದಲೇ ಹೀಗೆ ಬರೆಯಲಾಗಿದೆ ಅನ್ನೋದು ಎಸ್.ಐ.ಓ ಆಕ್ಷೇಪವಾಗಿದೆ. ಆದರೆ ಎಸ್ ಐ ಒ ಮನವಿಯ ಉದ್ದೇಶ ಕೇಸರಿಕರಣವನ್ನು ವಿರೋಧಿಸುವುದಕ್ಕಿಂತಲೂ ತಮ್ಮ ಮೂಲಭೂತವಾದಿ ಅಜೆಂಡಾವನ್ನು ಪಠ್ಯದಲ್ಲಿ ತೂರಿಸುವುದಾಗಿದೆ.

 

ಶಾಲಾ ಪಠ್ಯ ಪುಸ್ತಕಗಳು ಕೇಸರಿಕರಣಗೊಳಿಸುವ ಸಂಘಪರಿವಾರದ ಪ್ರಯತ್ನದ ಭಾಗವಾಗಿ ಈಗಾಗಲೇ ಪಠ್ಯಗಳಲ್ಲಿ ಇಂಥ ಅನೇಕ ಬದಲಾವಣೆಗಳಾಗಿವೆ. ಪಾಠಗಳ ಮೂಲಕ ಮಕ್ಕಳ ಎಳೆಯ ಏನು ಅರಿಯದೆ ಅಗ ತಾನೆ ಕಲಿಯಲು ಬಂದಂಥ ಮುಗ್ಧ ಮನಸ್ಸಿನಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತ ಸಮುದಾಯಗಳ ಕುರಿತಾಗಿ ವಿಷ ಬೀಜ ಬಿತ್ತುವ ಕಾರ್ಯವನ್ನು ಸಂಘಪರಿವಾರ ವ್ಯವಸ್ಥಿತವಾಗಿ ನಡೆಸುತ್ತಲೇ ಬಂದಿದೆ.

 

ಎಸ್.ಐ.ಓ ವ್ಯಕ್ತಪಡಿಸಿರುವ ಆಕ್ಷೇಪಗಳು ಹೊಸ ವಿಚಾರವೇನಲ್ಲ. ಈ ಹಿಂದಿನಿಂದಲೂ ಕೂಡ ಅನೇಕ ಪ್ರಗತಿಪರರು ಶಿಕ್ಷಣ ಕೇಸರೀಕರಣದ ಕುರಿತಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಶಾಲಾ ಪಠ್ಯಪುಸ್ತಕಗಳನ್ನು ಸಂಘಪರಿವಾರ ಕೇಸರಿಕರಣಗೊಳಿಸುತ್ತಿರುವುದು, ಪಠ್ಯ ಪುಸ್ತಕದಲ್ಲಿ ಏಕ ಸಂಸ್ಕೃತಿಯನ್ನು ಹೇರಲಾಗ್ತಿರೋದು ಹಾಗೂ ಹಿಂದೂIrshad-2 ಧರ್ಮದ ಸಂಸ್ಕೃತಿ ಆಚರಣೆಗಳಿಗೆ ಸಂಬಂಧಪಟ್ಟ ಪಾಠಗಳನ್ನೇ ಹೆಚ್ಚು ಅಳವಡಿಸಲಾಗುತ್ತಿರುವುದು ಆತಂಕಕಾರಿ ಹಾಗೂ ಖಂಡನೀಯ. ಪ್ರಾಥಮಿಕ ಮತ್ತು ಪ್ರೌಢಶಾಲಾ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆದರೆ ಅದನ್ನು ಮುಸ್ಲಿಂ ಮೂಲಭೂತವಾದಿ, ಕೋಮುವಾದಿ ವಿದ್ಯಾರ್ಥಿ ಸಂಘಟನೆಗೆ ಆಗ್ರಹಿಸುವ ನೈತಿಕತೆ ಇಲ್ಲ.
ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆಯ ಮನವಿಗಳಲ್ಲಿ ಪಠ್ಯ ಕೇಸರೀಕರಣದ ಆರೋಪಗಳ ಜೊತೆಗೆ ಇನ್ನೂ ಕೆಲವೊಂದು ಪ್ರಮುಖ ಅಂಶಗಳಿವೆ. 9 ನೇ ತರಗತಿಯ ದ್ವಿತೀಯ ಭಾಷೆ ಕನ್ನಡದ ಪ್ರೊ.ಕರೀಮುದ್ದೀನ್ ಸಾಬ್ ಪಾಠದಲ್ಲಿ ರಾಜ್ಯ ಭತ್ಯೆ ನೀಡುವುದಕ್ಕಿಂತ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಮತ್ತು ಹೈದರಾಲಿ ಸಮಾಧಿಗಳಿಗೆ ಸೇವೆ ಸಲ್ಲಿಸೋದೇ ಮೇಲು ಎಂಬ ಸಾಲು ಬರುತ್ತದೆ. ಇದೇ ಪಠ್ಯದಲ್ಲಿ ಬುಡ್ಡು ಸಾಹೇಬರು, ಬೆಟ್ಟ ಹತ್ತಿದರು ಎಂಬ ಪಾಠದಲ್ಲಿ ದರ್ಗಾ ಎಂಬುವುದು ಮುಹಮ್ಮದೀಯರ, ಸಾಧು-ಸಂತರ ಸಮಾಧಿ ಸ್ಥಳ, ಅದು ಪವಿತ್ರ ಸ್ಥಳವಾಗಿದೆ ಎಂದಿದೆ. ಬಹುಸಂಸ್ಕೃತಿ ಪರವಾಗಿ ಪಠ್ಯ ಕೇಸರಿಕರ ಣವನ್ನು ವಿರೋಧಿಸುವ ಎಸ್.ಐ.ಓ, ಅದೇ ಮನವಿಯಲ್ಲಿ ಬಹುಸಂಸ್ಕೃತಿಯ ಪ್ರಬಲ ಪ್ರತಿಪಾದಕರಾಗಿರುವ ಸೂಫಿ ಸಂತರ ಕಲ್ಪನೆಯೇ ಇಸ್ಲಾಂನಲ್ಲಿ ಇಲ್ಲ. ದರ್ಗಾ ಸಂಸ್ಕೃತಿ ಅನ್ನೋದು ಇಸ್ಲಾಂ ಬಗ್ಗೆ ನೈಜ ತಿಳುವಳಿಕೆ ಇಲ್ಲದವರು ಮಾಡಿಕೊಂಡ ಆರಾಧನೆ ಎಂದು ಜರಿದಿದೆ. ದರ್ಗಾ ಹಾಗೂ ಸೂಫಿ ಚಿಂತನೆ ಇಸ್ಲಾಂ ಸಿದ್ಧಾಂತಕ್ಕೆ ವಿರುದ್ಧ. ಹಾಗಾಗಿ ಇದನ್ನು ಪಠ್ಯದಿಂದ ತೆಗೆದುಹಾಕಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಒತ್ತಾಯಿಸಿದೆ.

 

ಪಠ್ಯ ಕೇಸರಿಕರಣ ಬಹುಸಂಸ್ಕೃತಿಗೆ ಹೇಗೆ ಮಾರಕವೋ ಅಷ್ಟೇ ಮಾರಕವಾಗಿರೋದು, ಸೂಫಿ ಸಂತರ ಬಗ್ಗೆ ಬೆಳಕು ಚೆಲ್ಲುವ ವಿಚಾರವನ್ನು ಪಠ್ಯದಿಂದ ಕೈ ಬಿಡಬೇಕೆಂಬ ಎಸ್.ಐ.ಓ ವಾದ. ಈ ನಾಡಿನ ಬಹುಸಂಸ್ಕೃತಿ ಹಾಗೂ ಧಾರ್ಮಿಕ ಸೌಹಾರ್ದತೆಗೆ ಅಪಾರ ಕೊಡುಗೆ ಸಲ್ಲಿಸಿದವರು ಸೂಫಿಗಳು. ಸರ್ವಧರ್ಮ, ಸಮಭಾವ, ಜೀವಪರತೆ, ಸ್ನೇಹ-ಪ್ರೀತಿ-ಮಮತೆಯನ್ನು ಜನಸಮೂಹದಲ್ಲಿ ಬಿತ್ತುವ ಮೂಲಕ ಧರ್ಮ ಪರಿಪಾಲನೆ ಮಾಡುತ್ತಾ ಶಾಂತಿಯ ಸಂದೇಶವನ್ನು ಸಾರುತ್ತಾ ಬಂದವರು ಇವರು. ಈ ಸೂಫಿಗಳು ನಡೆದ ಹಾದಿಯ ಮೇಲೆ ಸಾಗುವ ಅಗತ್ಯತೆ ಪ್ರಸಕ್ತ ಮುಸ್ಲಿಮ್ ಸಮುದಾಯಕ್ಕಿದೆ. ಭ್ರಾತೃತ್ವ ಸಂದೇಶ ಸಾರಿದ, ಎಲ್ಲರನ್ನು ಸಮಾನವಾಗಿ ಕಂಡ, ಪ್ರತಿಯೊಬ್ಬರನ್ನು ಪ್ರೀತಿಸಿ, ಪೋಷಿಸಿದ , ಅಹಿಂಸಾತ್ಮಕವಾಗಿ ನಡೆದ ಸೂಫಿಗಳ ಚಿಂತನೆಯನ್ನು ನಾಶ ಮಾಡೋ ಪ್ರಯತ್ನ ಇಸ್ಲಾಂ ಮೂಲಭೂತವಾದಿಗಳಿಂದ ಇಂದು ನಡೆಯುತ್ತಿರೋದು ಆತಂಕಕಾರಿ. ಈ ವಿಷವರ್ತುಲ ಬೀಜವನ್ನು ಬಿತ್ತುವಂತಹ ಕೆಲಸ ವಹಾಬಿವಾದಿಗಳು ಹಾಗೂ ಜಮಾತೇ-ಇಸ್ಲಾಮೀ-ಹಿಂದ್ನಂಥ ಮೂಲಭೂತವಾದಿಗಳು ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ.

 

ದರ್ಗಾ ಹಾಗೂ ಸೂಫಿ ಸಂಸ್ಕೃತಿಯನ್ನು ಮೂಢನಂಬಿಕೆ ಎಂದು ಬಿಂಬಿಸೋ ಈ ಮೂಲಭೂತವಾದಿಗಳು, ವಹಾಬಿ ಹಾಗೂ ಮೌದೂದಿಯ ಅಪಾಯಕಾರಿ-ಅಸಹಿಷ್ಣುತ ಸಿದ್ಧಾಂತವೇ ನೈಜ ಇಸ್ಲಾಮ್ ಎನ್ನೋದು ಇವIrshad-3ರ ವಾದ ಹಾಗೂ ಈ ಮೂಲಕ ಭಾರತೀಯ ಮುಸ್ಲಿಮರನ್ನು ಸೂಫಿಸಂನಿಂದ ವಿಮುಖರನ್ನಾಗಿಸುವುದೇ ಇದರ ಹಿಂದಿರೋ ಉದ್ದೇಶ. ದರ್ಗಾ ಸೂಫಿಸಂನ್ನು ಮೌಢ್ಯ ಎಂದು ವಾದಿಸುವ ಜಮಾತೇ ಇಸ್ಲಾಮೀಗಳು ಈ ಮೂಲಕ ಇಸ್ಲಾಂ ಬ್ರಾಹ್ಮಣ್ಯವನ್ನು ಹೇರುತ್ತಿದ್ದಾರೆ. ಈ ಪ್ರಯತ್ನದ ಮುಂದುವರಿದ ಭಾಗವಾಗಿ ಪಠ್ಯ ಪುಸ್ತಕಗಳಲ್ಲಿ ಸೂಫಿ ಸಂತರ ಹಾಗೂ ಅವರ ದರ್ಗಾಗಳ ಕುರಿತಾದ ಉಲ್ಲೇಖಗಳನ್ನು ನಾಶಪಡಿಸೋಕೆ ಮುಂದಾಗಿದ್ದಾರೆ. ಇದು ತೀರಾ ಅಪಾಯಕಾರಿ ಬೆಳವಣಿಗೆ.
ಪ್ರಸಕ್ತ ಸಮಯದಲ್ಲಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಂಘ ಪರಿವಾರದ ಹಿಂದೂತ್ವವಾಗಲೀ, ವಹಾಬಿ-ಜಮಾತೇ-ಇಸ್ಲಾಮಿಯಾಗಲೀ ಅಥವಾ ತಬ್ಲೀಗಿಗಳ ಮೂಲಭೂತವಾದಿ ಇಸ್ಲಾಂ ಆಗಲೀ ಅಗತ್ಯವಿಲ್ಲ. ಆ ಮನಸ್ಸುಗಳಿಗೆ ಬೇಕಾಗಿರೋದು, ಎಲ್ಲರೊಂದಿಗೆ ಬೆರೆತು ಬಾಳುವ ಸಮಾನತೆ, ಮನುಷ್ಯ ಪ್ರೀತಿಯಲ್ಲಿ ಬದುಕು ಕಟ್ಟಿಕೊಳ್ಳುವ ಸಂದೇಶ, ಸಹಿಷ್ಣುತೆ ಸಾರುವ ಮನೋಭಾವ. ಇಂತಹ ಬುನಾದಿ ಕಟ್ಟಿಕೊಳ್ಳಲು ಸಮಾಜಕ್ಕೆ ಇವೆಲ್ಲವನ್ನು ತೋರಿಸಿಕೊಟ್ಟ, ಸಾಮರಸ್ಯದ ಇತಿಹಾಸ ಹೊಂದಿರುವ ಸೂಫಿ ಸಂತರು, ದಾಸರು, ವಚನಕಾರರು ಸೇರಿದಂತೆ ಸಮಾಜ ಸುಧಾರಣೆಗೆ ಮುಂದಾದ ಮಹಾನ್ ಆದರ್ಶಗಳ ಸಂದೇಶದ ಕುರಿತಾದ ಪಠ್ಯ ಅತ್ಯಗತ್ಯ.

 

ಈ ನಿಟ್ಟಿನಲ್ಲಿ ಪಠ್ಯ ಪುಸ್ತಕದಲ್ಲಿ ಸೂಫಿಸಂ-ದರ್ಗಾ ಸಂಸ್ಕೃತಿಯ ಕುರಿತಾದ ಪಾಠವನ್ನು ಕೈಬಿಡಬೇಕೆಂದ ಜಮಾತೇ ಇಸ್ಲಾಮಿ-ಹಿಂದ್ ಸಂಘಟನೆಯ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಮನವಿಯನ್ನು ಪರಿಗಣಿಸಬಾರದೆಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾದ ಡಾ ಬರಗೂರು ರಾಮಚಂದ್ರಪ್ಪ ಅವರಲ್ಲಿ ನಮ್ಮ ಕಳಕಳಿಯ ವಿನಂತಿ.

ಹೊಲ ಮೇಯ್ದ ಬೇಲಿ ಜಾಗ ಖಾಲಿ ಮಾಡಿತು

ಕೃಷ್ಣಮೂರ್ತಿ. ಕೆ

ಅಲ್ಲಲ್ಲಿ ಗುಸು-ಗುಸು ಮೂಲಕ ಆರಂಭವಾದ ಸುದ್ದಿಯೊಂದು ಮೊನ್ನೆ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಅವರ ರಾಜೀನಾಮೆಯೊಂದಿಗೆ ಒಂದು ಹಂತಕ್ಕೆ ಬಂದಿದೆ. ಎಂ.ಎಸ್ ಬಿಲ್ಡಿಂಗ್ ನ ಕಾರಿಡಾರ್ ಗಳಲ್ಲಿ, ಮೀಡಿಯಾ ಕಚೇರಿಗಳಲ್ಲಿ ಹಾಗೂ ಅಧಿಕಾರಗಳ ಖಾಸಬಾತ್ ನಲ್ಲಿ ಲೋಕಾಯುಕ್ತ ಹಗರಣದ ಸುದ್ದಿ ಹರಿದಾಡುತ್ತಿತ್ತು.

 

ಕೃಷ್ಣಮೂರ್ತಿ ಎಂಬುವವರು Lok-1ದೂರು ಕೊಟ್ಟಿದ್ದಾರೆ ಎಂದಾಗಲೂ, ಅನೇಕರು ವಿಷಯ ಇಷ್ಟೊಂದು ಗಂಭೀರ ಇದೆ ಎಂದು ಪರಿಗಣಿಸಿರಲಿಲ್ಲ. ಆದರೆ, ಕೆಲ ಸುದ್ದಿ ಮಾಧ್ಯಮಗಳ ಆಸಕ್ತಿ ಜೊತೆಗೆ ಈ ವಿಚಾರದ ಕಾವನ್ನು ಹಾಗೇ ಕಾಪಾಡಿಕೊಂಡು ಬಂದವರು ಸಮಾಜ ಪರಿವರ್ತನ ಸಂಸ್ಥೆಯ ಎಸ್.ಆರ್. ಹಿರೇಮಠ ಹಾಗೂ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಾಯಕರು. ಈ ಪಕ್ಷದಲ್ಲಿ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಗೆದ್ದುಬಂದ ಒಬ್ಬೇ ಒಬ್ಬ ಜನಪ್ರತಿನಿಧಿ ಇಲ್ಲದಿದ್ದರೂ, ವಿಚಾರವನ್ನು ಜನರಿಗೆ ರವಾನಿಸಿ, ಲೋಕಾಯುಕ್ತ ಸಂಸ್ಥೆಯಲ್ಲಿ ನಡೆಯುತ್ತಿರುವ ಭಾನಗಡಿಗಳ ಬಗ್ಗೆ ಒಂದು ಅಭಿಪ್ರಾಯ ರೂಪಿಸುವಲ್ಲಿ ಶ್ರಮ ಪಟ್ಟರು. ಹಲವರು ಬಂಧನಕ್ಕೊಳಗಾದರು.
ಇಷ್ಟೆಲ್ಲಾ ಆದ ನಂತರ ಭಾಸ್ಕರ್ ರಾವ್ ರಾಜೀನಾಮೆ ನೀಡಿದರು. ಅದಕ್ಕಿಂತ ಮುಖ್ಯವಾದದ್ದು ಈ ಪ್ರಕರಣದ ತನಿಖೆ ಆರಂಭವಾಗಿ ಕೆಲವರಾದರೂ ಜೈಲುಪಾಲಾಗಿದ್ದು. ನ್ಯಾಯಾಂಗ ಬಂಧನದಲ್ಲಿರುವವರು ಜಾಮೀನಿಗಾಗಿ ಸುಪ್ರಿಂ ಕೋರ್ಟ್ ಗೆ ಮೊರೆ ಇಡುತ್ತಿದ್ದಾರೆ. ಮಾಧ್ಯಮ ಹಾಗೂ ಸಮಾಜದ ಬಗ್ಗೆ ಕಳಕಳಿ ಇರುವ ಕೆಲವರು ನಿಯಮಿತವಾಗಿ ಈ ಬಗ್ಗೆ ದನಿ ಎತ್ತದೇ ಹೋಗಿದ್ದರೆ ವಿಷಯ ಈ ಹಂತ ತಲುಪುತ್ತಿರಲಿಲ್ಲ.

 

 

ರಾಜೀನಾಮೆ ಅಂಗೀಕಾರ ಆದ ತಕ್ಷಣ ಕೆಲವೆಡೆ ರಾಹುಕಾಲ ಮುಗಿಯಿತು, ರಾಜ್ಯಕ್ಕೆ ಅಂಟಿದ್ದ ಭ್ರಷ್ಟ ಕಳಂಕ ತೊಲಗಿತು..ಎಂಬರ್ಥದ ಹೇಳಿಕೆಗಳು ಕೇಳಿಬಂದವು. ಆ ಕ್ಷಣಕ್ಕೆ catchy ಆಗಿರಲೆಂದು ಕೊಟ್ಟ ತಲೆಬರಹಗಳಿರಬಹುದು ಇವು. ಆದರೆ, ಅಂತLok-3ಹ ಮಹತ್ವದ್ದೇನೂ ಆಗಿಲ್ಲ ಎನ್ನುವುದು ಅಷ್ಟೇ ಸತ್ಯ. ಭ್ರಷ್ಟಾಚಾರ ನಿಗ್ರಹಕ್ಕೆಂದು ಇರುವ ಸಂಸ್ಥೆಗೆ ರಾಜಕಾರಣಿಗಳು ದುಡ್ಡು ಪಡೆದು ನೇಮಕ ಮಾಡುತ್ತಾರೆ. ಹಾಗೆ ನೇಮಕ ಆದವರಿಂದ ಆದಷ್ಟು ಲಾಭ ಪಡೆದು, ಅವರನ್ನು ರಕ್ಷಿಸಲು ಕೆಲವರು ಹೊರಡುತ್ತಾರೆ.

 

ಇಡೀ ಸಂಚಿನಲ್ಲಿ ಪಾಲ್ಗೊಂಡ ಪ್ರಮುಖರನ್ನು ಹೊರತು ಪಡಿಸಿ, ಸಣ್ಣ ಪುಟ್ಟವರಷ್ಟೆ ಕೇಸು ಹಾಕಿಸಿಕೊಂಡು ಜೈಲು ಸೇರುತ್ತಾರೆ. ಇಷ್ಟೆಲ್ಲಾ ಗೊತ್ತಾದ ಮೇಲೆ, ಎಂಥ ಮೂಢನಿಗೂ ಅನ್ನಿಸುವ ಸತ್ಯವೆಂದರೆ, ಅಶ್ವಿನ್ ರಾವ್ ಗಿಂತ ಅವರಪ್ಪ ಈ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ಆದರೆ ಅಶ್ವಿನ್ ರಾವ್ ಮಾಡಿದ ತಪ್ಪಿಗೆ ಅವರಪ್ಪ ಸಾಕ್ಷಿಯಂತೆ, ಹಾಗಾಗಿ ಅವರು ರಾಜಿನಾಮೆ ಕೊಟ್ಟರಷ್ಟೆ ಸಾಕು!
ಇಂತಹ ಭ್ರಷ್ಟನನ್ನು ತಂದು ಈ ಸ್ಥಾನಕ್ಕೆ ಕೂರಿಸಿದವರಲ್ಲಿ ಹಲವರ ಪಾತ್ರವಿದೆ. ಹಿಂದಿನ ಸರಕಾರದಲ್ಲಿದ್ದವರು, ಅವರ ಮೇಲೆ ಕೂತಿದ್ದ ಮತ್ತೊಬ್ಬ ತೂಕದ (ಅಲ್ಲಲ್ಲ..’ಭಾರ’ದ) ವ್ಯಕ್ತಿ, ನಂತರ ತಮ್ಮ ಅನುಕಾಲಕ್ಕಾಗಿ ಬಳಸಿಕೊಂಡ ಈಗಿನವರು -ಎಲ್ಲರದೂ ಪಾತ್ರವಿದೆ. ಆದರೆ, ಇವಾರಾರೂ ಜೈಲುಪಾಲಾಗಲಿಲ್ಲ. ಈ ನ್ಯಾಯಮೂರ್ತಿಯವರೂ ಜೈಲುಪಾಲಾಗುತ್ತಾರೇನೋ ಎಂಬ ಬಗ್ಗೆ ಖಾತ್ರಿಯಿಲ್ಲ.
ಇದುವರೆಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತಿತ್ತು. ಈ ಪ್ರಕರಣದಿಂದ ನ್ಯಾಯಾಂಗ ಹಾಗೂ ಪತ್ರಿಕೋದ್ಯಮದಲ್ಲಿನ ಭ್ರಷ್ಟತೆ ಬಗ್ಗೆ ಚರ್ಚೆ ಒಂದಿಷ್ಟು ವಿಸ್ತಾರ ಪಡೆದುಕೊಂಡಿತು. ಹೀಗೆ ಹಿಂದೆ ಬಳ್ಳಾರಿ ಗಣಿ ಬಗ್ಗೆ ವರದಿಗಳು ಬಂದಾಗ, ಲೋಕಾಯುಕ್ತ ತನಿಖೆ ಸಂದರ್ಭದಲ್ಲಿ ಗಣಿ ಉದ್ಯಮಿಗಳಿಂದ ಕೆಲ ಮಾಧ್ಯಮದವರಿಗೆ ನಿಯಮಿತವಾಗಿ ಹಣ ರವಾನೆಯಾಗಿದ್ದು ಸುದ್ದಿಯಾಗಿತ್ತು. ಆ ನಂತರ ಅದು ಚರ್ಚೆಯಾಗಲಿಲ್ಲ. ಲೋಕಾಯುಕ್ತ ವ್ಯಾಪ್ತಿಯಲ್ಲಿ ಪತ್ರಿಕೋದ್ಯಮ, ಪತ್ರಕರ್ತರು ಬರುವುದಿಲ್ಲ ಎಂಬ ಕಾರಣಕ್ಕೆ, ಆ ವಿಚಾರ ಅಲ್ಲಿಗೇ ನಿಂತಿತು. ಆ ಬಗ್ಗೆ ಆಗಲೇ ಒಂದು ವಿಚಾರಣೆ ನಡೆದು ತಪ್ಪಿತಸ್ಥರ ಮೇಲೆ ಕ್ರಮ ಬೇಡ, ಕನಿಷ್ಟ ಅಂತಹವರ ಬಗ್ಗೆ ಸಮಾಜದಲ್ಲಿ ಅಸಹ್ಯ ಹುಟ್ಟಿದ್ದರೆ ಸಾಕಿತ್ತು. ಅಂತಹದೊಂದು ಪ್ರಯತ್ನ ಈಗಲಾದರೂ ಆದರೆ ಒಳ್ಳೆಯದು.

 

ಅದರೊಟ್ಟಿಗೆ ನ್ಯಾಯಮೂರ್ತಿ ಎಂಬ ಕಾರಣಕ್ಕೆ ಭಾಸ್ಕರ್ ರಾವ್ ಯಾವುದೋ ನೆಪ ಮಾಡಿಕೊಂಡು ಪ್ರಕರಣದಲ್ಲಿ ಕೇವಲ ಸಾಕ್ಷಿಯಾಗಿ ಉಳಿದರೆ, ನ್ಯಾಯದಾನ ಪ್ರಕ್ರಿಯೆ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತದೆ.

Lok-2
ಜೊತೆಗೆ ಮುಂದೆ ಇಂತಹ ಪ್ರಮುಖ ಸ್ಥಾನಗಳಿಗೆ ಬರುವವರು ಎಂತಹವರಿರುತ್ತಾರೋ ಎಂಬ ಬಗ್ಗೆ ಅನುಮಾನಗಳಿವೆ. ಈಗಿನ “ಘನ” ಸರಕಾರ ಒಂದೇ ಹೆಸರನ್ನು ಪದೇ ಪದೇ ಕಳುಹಿಸಿ ಒತ್ತಾಯ ಹಾಕಿದ್ದು ಗೊತ್ತೇ ಇದೆ. ತಮ್ಮ ರಾಜಕೀಯ ಲಾಭಕ್ಕಾಗಿ ನೇಮಕ ಮಾಡುವುದಾದರೆ, ಅದರಿಂದ ಅನಾಹುತಗಳೇ ಹೆಚ್ಚು. ಆ ಕಾರಣಕ್ಕೆ ನ್ಯಾಯಾಂಗದ ಭ್ರಷ್ಟ ವ್ಯವಸ್ಥೆ ಬಗ್ಗೆಯೂ ಮುಕ್ತವಾಗಿ ಚರ್ಚೆಯಾಗಲಿ. ಯಾರೂ ಪ್ರಶ್ನಾತೀತರಾರಿ ಉಳಿಯಬಾರದು.