Category Archives: ರೂಪ ಹಾಸನ

ಪ್ರಕೃತಿ ಕೇಂದ್ರಿತ ಅಭಿವೃದ್ಧಿ ನಮ್ಮದಾಗಲಿ


– ರೂಪ ಹಾಸನ


 

ಯಾವುದೇ ಪರಿಸರ ಸಂಬಂಧಿ ಯೋಜನೆಗಳ ಕುರಿತು ಸರ್ಕಾರದಿಂದ ಚರ್ಚೆ ಪ್ರಾರಂಭವಾದೊಡನೆ ಪರಿಸರವಾದಿಗಳು ಅದು ಸಲ್ಲದು ಎಂದು ತಮ್ಮ ಗಲಾಟೆ ಪ್ರಾರಂಭಿಸುತ್ತಾರೆ. ಅಭಿವೃದ್ಧಿವಾದಿಗಳು ಯೋಜನೆಯ ಅವಶ್ಯಕತೆಯನ್ನು ಪ್ರತಿಪಾದಿಸಿ ತಮ್ಮ ವಾದ ಮುಂದಿಡುತ್ತಾರೆ. ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರು ಪರ-ವಿರೋಧ ಚರ್ಚೆ ನಡೆಸುತ್ತಾರೆ. ಎಲ್ಲರಿಗೂ ಅವರವರದೇ ಒಂದೊಂದು ಸಿದ್ಧಾಂತ. ಮತ್ತೆ ಯೋಜನೆ ಕಾರ್ಯರೂಪಕ್ಕೆ ಬರದೇ ನೆನೆಗುದಿಗೆ ಬೀಳುತ್ತದೆ. ಆಗೀಗ ಪ್ರಸ್ತಾಪಗೊಂಡು ಮತ್ತೆ ಮರೆತೂ ಹೋಗುತ್ತದೆ. ಆದರೆ ಮೂಲ ಸಮಸ್ಯೆ? ಅದು ಒಂದಿಂಚೂ ಕದಲದೇ ಹಾಗೇ ಇರುತ್ತದೆ. ಜೊತೆಗೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಾ ಹೋಗುತ್ತದೆ. ಇದರ ಮಧ್ಯೆ ಸಿಕ್ಕಿಕೊಳ್ಳುವ ಸಾಮಾನ್ಯ ಜನರು ಪರಿತಪಿಸುತ್ತಲೇ ಇರಬೇಕಾಗುತ್ತದೆ.

ಇದೆಲ್ಲಾ ಮತ್ತೆ ನೆನಪಾದದ್ದು ಎತ್ತಿನಹೊಳೆ ತಿರುವು ಯೋಜನೆಯ ಕುರಿತು ವರದಿ, ಪೂರ್ವ-ಪರ ಚರ್ಚೆಗಳು ಪ್ರಕಟವಾಗುತ್ತಿರುವುದನ್ನು ಕಂಡಾಗ. p3-24 city.inddಈ ಹಿಂದೆ ನೇತ್ರಾವತಿ ತಿರುವು ಯೋಜನೆಯ ಕುರಿತು ಹೀಗೇ ಪೂರ್ವ-ಪರ ಚರ್ಚೆಗಳಾಗಿ ನಿಂತು ಹೋಗಿತ್ತು. ಈಗ ಹೆಸರು ಬದಲಾದ, ಅದೇ ಉದ್ದೇಶ ಹೊಂದಿದ ಮತ್ತೊಂದು ಯೋಜನೆಯ ಚರ್ಚೆ. ಯೋಜನೆಯ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ ಪಶ್ಚಿಮಘಟ್ಟದ ಒಡಲೊಳಗೆ ಮೈಲಿಗಟ್ಟಲೆ ನಡೆಯಬೇಕಿರುವ ಇದರ ಕಾರ್ಯಾಚರಣೆಯಲ್ಲಿ ಒಡ್ಡು ನಿರ್ಮಾಣಕ್ಕೆ, ಪೈಪ್‌ಲೈನ್ ಅಳವಡಿಕೆಗೆ, ಪಂಪಿಂಗ್ ಮೋಟರ್ ಸ್ಥಾಪನೆಗೆ, ಜಲ ಸಂಗ್ರಹಣೆಗೆ, ಕಾಲುವೆ, ಅಣೆಕಟ್ಟೆ ನಿರ್ಮಾಣಕ್ಕೆ,…. ಹೀಗೆ ಪಶ್ಚಿಮಘಟ್ಟದಲ್ಲಿ ಏನೆಲ್ಲಾ ಅಲ್ಲೋಲಕಲ್ಲೋಲ ಆಗಬಹುದೆಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿದೆ. ಈ ಇಡೀ ಕಾರ್ಯಾಚರಣೆ ನಡೆವ ಅರಣ್ಯ, ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಮತ್ತೆ ಎಲ್ಲಾದರೂ ಸ್ಥಳಾಂತರಿಸಲು, ಪುನರ್ ಸೃಷ್ಟಿಸಲು ಸಾಧ್ಯವೇ? ಮನುಷ್ಯನನ್ನು ಸೃಷ್ಟಿಸುವುದು ಸುಲಭ. ಹೀಗೆಂದೇ ಮನುಷ್ಯ ಸಂತತಿ ಮಿತಿಮೀರಿ ಬೆಳೆಯುತ್ತಿದೆ. ಅವನ ಅಗಾಧ ಹಸಿವು ಹಿಂಗಿಸಲು ಪ್ರಕೃತಿಯ ಒಡಲು ಲೂಟಿಯಾಗುತ್ತಿದೆ. ಆದರೆ ವೈವಿಧ್ಯಮಯವಾದ ಪ್ರಕೃತಿಯನ್ನು ಸೃಷ್ಟಿಸುವುದು ಹೇಗೆ? ಒಂದು ಮರವನ್ನು ಸೃಷ್ಟಿಸಲು ಹತ್ತೆಂಟು ವರ್ಷಗಳೇ ಬೇಕು. ಒಂದು ಕಾಡು ಸೃಷ್ಟಿಯಾಗಲು ಶತಮಾನವೇ ಬೇಕಾಗಬಹುದು. ಅದೂ ಸೃಷ್ಟಿಸುವ ಮನಸ್ಸು ಮತ್ತು ಜಾಗವಿದ್ದರೆ ಮಾತ್ರ!

ಮುಖ್ಯವಾಗಿ ನಾವು ಗಮನಿಸಬೇಕಿರುವುದು ಅಭಿವೃದ್ಧಿಗಾಗಿ ನಾವು ತೆರುತ್ತಿರುವ ಬೆಲೆ ಏನು? ಹಾಗೂ ಪರಿಸರ ಸಂರಕ್ಷಣೆಗಾಗಿ ನಾವು ತೆರಬೇಕಿರುವ ಬೆಲೆ ಏನು? ಎಂಬುದು. ಪರಿಸರವನ್ನು ನಾಶಮಾಡದೇ ಕಟ್ಟಿಕೊಳ್ಳುವ ಅಭಿವೃದ್ಧಿ ಹಾಗೂ ಅಭಿವೃದ್ಧಿಗೆ ಪೂರಕವಾಗುವಂತೆ ಉಳಿಸಿಕೊಳ್ಳುವ ಪರಿಸರ ಎರಡೂ ನಮಗಿಂದು ಮುಖ್ಯವಾಗಬೇಕು. ಏಕೆಂದರೆ ಪರಿಸರ ಹಾಗೂ ಅಭಿವೃದ್ಧಿ ಎರಡೂ ಯಾವುದೇ ಒಂದು ಪ್ರದೇಶದ ಜನರಿಗೆ ಸೇರಿದ ವಿಷಯವಲ್ಲ. ಅದು ಸಾರ್ವತ್ರಿಕವಾದುದು ಹಾಗು ಸಾರ್ವಕಾಲಿಕವಾದುದು. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿದ್ದಾಗ ಅದು ಮಾನವೀಯವೂ, ಸಕಲ ಜೀವಪರವೂ ಆಗಿರುತ್ತದೆ. ಆದರೆ ನಾವಿಂದು ಮಾಡುತ್ತಿರುವ ಅಭಿವೃದ್ಧಿ ಮನುಷ್ಯ ಕೇಂದ್ರಿತವಾಗಿರುವುದರಿಂದ ರೂಕ್ಷವೂ, ಅಮಾನವೀಯವೂ ಆಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ, ಅಸೂಕ್ಷ್ಮವಾಗಿ ಕೈಗೊಳ್ಳುವ ಯಾವುದೇ ಯೋಜನೆಯಿಂದ ದೀರ್ಘಕಾಲೀನ, ಹಲವು ಬಾರಿ ಶಾಶ್ವತ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪಶ್ಚಿಮಘಟ್ಟದಲ್ಲಿ ಇದುವರೆಗೆ ನಡೆದ ರಸ್ತೆಮಾರ್ಗ, ರೈಲುಮಾರ್ಗ, ವಿದ್ಯುತ್‌ಮಾರ್ಗ, ಪೆಟ್ರೋಲಿಯಂ ಪೈಪ್‌ಲೈನ್, ಅಣೆಕಟ್ಟೆ, ಜಲವಿದ್ಯುತ್ ಘಟಕಗಳ ನಿರ್ಮಾಣ ಕಾರ್ಯದಲ್ಲಿ ತೋರಿದ ಇಂತಹ ದುಡುಕುತನಗಳು ಶಾಶ್ವತ ಪಶ್ಚಾತ್ತಾಪಕ್ಕೆ ಕಾರಣವಾಗಿವೆ. ಅನೇಕ ನದಿ ಹಾಗೂ ಜಲಮೂಲಗಳು ಬತ್ತಿ ಹೋಗುವಂತೆ ಅವೈಜ್ಞಾನಿಕವಾಗಿ ನಡೆಸಿದ ಅಭಿವೃದ್ಧಿ ಕಾರ್ಯಗಳು, ದಕ್ಷಿಣ ಭಾರತದ ಹೆಚ್ಚಿನ ನದಿಗಳಿಗೆ ಜನ್ಮಸ್ಥಳವಾದ ಪಶ್ಚಿಮಘಟ್ಟವನ್ನು ಬರಡಾಗಿಸುತ್ತಿದೆ. ಮೊದಲಿಗೆ ಇಲ್ಲೀಗ ಆ ಜಲಮೂಲಗಳನ್ನು ಪುನರ್ ಸೃಷ್ಟಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಪರಿಸರವಾದಿಗಳು ಪಶ್ಚಿಮಘಟ್ಟಗಳ ಕಾಡು, ಅನನ್ಯ ಬೆಲೆಬಾಳುವ ಗಿಡ-ಮರ, ಅಮೂಲ್ಯ ಜೀವವೈವಿಧ್ಯ, heritage_western_ghatsಅಸಂಖ್ಯಾತ ಪ್ರಾಣಿಪಕ್ಷಿ ಪ್ರಭೇದಗಳು, ನೈಸರ್ಗಿಕ ನದಿ-ಝರಿ-ಜಲಪಾತಗಳ ಕುರಿತು ಭಾವುಕರಾಗಿ ಮಾತ್ರ ಮಾತನಾಡುತ್ತಿಲ್ಲ. ಮುಖ್ಯವಾಗಿ ಒಮ್ಮೆ ನಾಶವಾದರೆ ಇಂತಹ ಪ್ರಕೃತಿಯದ್ಭುತಗಳನ್ನು ನಾವು ಮರುಸೃಷ್ಟಿಸಲು ಸಾಧ್ಯವಿಲ್ಲ ಎಂಬ ಎಚ್ಚರ ಸದಾ ಅವರನ್ನು ಕಾಡುತ್ತಿದೆ. ಇದರ ಜೊತೆಗೆ ಪಶ್ಚಿಮಘಟ್ಟದ ಸಮೀಪದಲ್ಲಿ ವಾಸಿಸುತ್ತಿರುವ ನಮ್ಮಂಥ ಜನರಿಗೆ ಬೇರೆಯದೇ ಆದ ಸಮಸ್ಯೆಗಳು ಕಾಡುತ್ತಿರುತ್ತವೆ. ಪ್ರಮುಖವಾಗಿ ಆನೆ ಹಾಗೂ ಚಿರತೆಯಂಥಾ ವನ್ಯಜೀವಿಗಳು ಕಾಡು ನಾಶವಾದಂತೆಲ್ಲಾ ನಾಡಿಗೆ ನುಗ್ಗಿ ಬೆಳೆ, ಮನೆ-ಮಠಗಳನ್ನು, ಜನರು ಕಟ್ಟಿಕೊಂಡ ಬದುಕನ್ನು ನಾಶಮಾಡುವ ಕೆಲಸಕ್ಕೆ ತೊಡಗಿಕೊಳ್ಳುತ್ತವೆ. ಅವುಗಳನ್ನು ಹಿಡಿಯುವ, ಅಥವಾ ಕೊಂದು ಮನುಷ್ಯರ ಪ್ರಾಣ ರಕ್ಷಿಸಲೆಂದೇ ಅರಣ್ಯ ಇಲಾಖೆಯ ಸಿಬ್ಬಂದಿ ತಾವು ಮಾಡುವ ಕೆಲಸ ಬಿಟ್ಟು, ಹಲವು ಬಾರಿ ವನ್ಯಜೀವಿ ರಕ್ಷಣೆಯ ಕಾನೂನನ್ನು ಮೀರಿ ತಿಪ್ಪರಲಾಗ ಹಾಕಬೇಕಾಗಿದೆ. ಇದರಿಂದ ಈಗಾಗಲೇ ಕೋಟ್ಯಾಂತರ ರೂಪಾಯಿಗಳಷ್ಟು ಸರ್ಕಾರಿ ಹಣ ಹಾಗೂ ರೈತರ, ಬೆಳೆದು ನಿಂತ ಫಸಲು ನಷ್ಟವಾಗುವುದರೊಂದಿಗೆ, ಗಣನೀಯ ಪ್ರಮಾಣದಲ್ಲಿ ಜೀವ ಹಾನಿಯೂ, ವನ್ಯಜೀವಿ ಹತ್ಯೆಯೂ ಆಗುತ್ತಿದೆ. ಇದರೊಂದಿಗೆ ಕಾಡಿನಿಂದ ನಾಡಿಗೆ ವಲಸೆ ಬರುವ ಸಣ್ಣ-ಪುಟ್ಟ ಪ್ರಾಣಿ, ಪಕ್ಷಿ, ಕೀಟ, ಕ್ರಿಮಿಗಳ ದಾಳಿ ನಿರಂತರವಾಗಿ ಮಲೆನಾಡಿನ ಜನರನ್ನು ಕಾಡುತ್ತಿದೆ. ಇದು ಕಾಡಿನಲ್ಲೇ ತಮ್ಮ ಪಾಡಿಗೆ ತಾವು ವಾಸಿಸುತ್ತಾ ಬಂದಿರುವ ವನ್ಯಜೀವಿಗಳ, ಕ್ರಿಮಿ-ಕೀಟಗಳ ತಪ್ಪಲ್ಲ. ಪ್ರಕೃತಿಯ ಸಂಪತ್ತೆಲ್ಲಾ ತನಗಾಗಿ ಮಾತ್ರವೇ ಇರುವುದೆಂಬಂತೆ ಅದನ್ನು ಅಮಾನವೀಯವಾಗಿ ಲೂಟಿ ಮಾಡುತ್ತಿರುವ ಮನುಷ್ಯನ ಪರಮ ಸ್ವಾರ್ಥದ ಮಹಾಪರಾಧದ ಫಲ. ಇದು ಕಣ್ಣಿಗೆ ಕಾಣುವ ವಾಸ್ತವದ ಒಂದು ಮುಖ. ತಕ್ಷಣಕ್ಕೆ ಕಾಣದಂತಾ ಸೃಷ್ಟಿ ವೈಪರೀತ್ಯಗಳು ಲೆಕ್ಕವಿಲ್ಲದಷ್ಟಿರಬಹುದು.

ಹಾಗೇ ಬಯಲುಸೀಮೆಯ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿ ಜನರು ಬಳಲುತ್ತಿರುವುದು, ದಿನಬಳಕೆಯ ಅಗತ್ಯತೆಗಳಿಗೆ, ವ್ಯವಸಾಯಕ್ಕೆ ನೀರಿಲ್ಲದೇ ಕಂಗಾಲಾಗಿರುವುದು, ವಾಸ್ತವದ ಇನ್ನೊಂದು ಮುಖ.

ಆದರೆ ಆ ವಾಸ್ತವ ಹಾಗೂ ಈ ವಾಸ್ತವ ಒಂದಕ್ಕೊಂದು ಮುಖಾಮುಖಿಯಾಗಿ ನಿಂತು ಯುದ್ಧವಾಡುವುದಾದರೆ ಪರಿಹಾರ ಹೇಗೆ ಸಾಧ್ಯ? ಈ ವೈರುಧ್ಯದ ನಡುವೆಯೇ ನಾವೊಂದು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ನಮಗಿಂದು ಸುಲಭದ, ತಕ್ಷಣದ, ದುಬಾರಿಯಾದ ಪರಿಹಾರಗಳ ಕಡೆಗೆ ಗಮನವೇ ಹೊರತು, ನೈಸರ್ಗಿಕವಾದ, ಕಡಿಮೆ ಖರ್ಚಿನ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ ಪರಿಹಾರಗಳ ಕಡೆಗೆ ಹೆಚ್ಚಿನ ಗಮನವಿಲ್ಲ. ಈ ದಿಕ್ಕಿನಲ್ಲಿ ಪ್ರಯತ್ನಗಳು ಆಗುತ್ತಿವೆಯಾದರೂ ಅದು ಅತ್ಯಲ್ಪ ಪ್ರಮಾಣದ್ದು. ಅಂಥಹ ಕೆಲವು ಮಾದರಿಗಳು ಇಲ್ಲಿವೆ.

ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ರಾಜಸ್ಥಾನದ ಆಳ್ವಾರ್‌ನ ರಾಜೇಂದ್ರಸಿಂಗ್ ಅವರ ಭಗೀರಥ ಪ್ರಯತ್ನ ಪ್ರಕೃತಿಯಿಂದಲೇ rajendra-singh-check-damಪ್ರಕೃತಿಯನ್ನು ಸೃಷ್ಟಿಸುವ ಒಂದು ಮಾದರಿ. ಅವರು ತರುಣ ಭಾರತ ಸಂಘವೆಂಬ ಸ್ವಯಂ ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಿ, ಮಳೆ ನೀರನ್ನು ಸಂಗ್ರಹಿಸಲು ಹಳ್ಳಿ ಹಳ್ಳಿಗಳಲ್ಲಿ 4500 ಜೋಹಡ್‌ಗಳನ್ನು [ಮಣ್ಣಿನ ತಡೆಗೋಡೆಗಳು] ನಿರ್ಮಿಸಿ, ಬತ್ತಿ ಹೋಗಿದ್ದ 5 ನದಿಗಳನ್ನು ಪುನರುತ್ಥಾನಗೊಳಿಸಿ, ಪೂರ್ವ ರಾಜಸ್ಥಾನದ ಮರುಭೂಮಿಯಿಂದ ಆವೃತವಾದ 850 ಹಳ್ಳಿಗಳಲ್ಲಿ ಯತೇಚ್ಛ ನೀರು ಉಕ್ಕಿಸಿ ಹಸಿರು ಸೃಷ್ಟಿಸಿದ ಹರಿಕಾರರಾಗಿದ್ದಾರೆ. ನೀರುಸಂತ, ನೀರುಸಂರಕ್ಷಕನೆಂಬ ಬಿರುದಿಗೆ ಪಾತ್ರರಾಗಿ ಮಳೆ ನೀರಿನ ಕೊಯ್ಲಿಗೆ ಹೊಸ ಭಾಷ್ಯ ಬರೆದ ಆಧುನಿಕ ಕ್ರಾಂತಿ ಭಗೀರಥ ಅವರಾಗಿದ್ದಾರೆ. ಅವರ ತಾಳ್ಮೆ, ಸಂಘಟನಾ ಕೌಶಲ್ಯ, ಪ್ರಕೃತಿ ಸೂಕ್ಷ್ಮತೆಯನ್ನೊಳಗೊಂಡು, ಕಡಿಮೆ ವೆಚ್ಚದಲ್ಲಿ ನಮ್ಮ ದೇಸೀ ಪರಂಪರಾಗತ ಜಾಣ್ಮೆಯನ್ನು ಬಳಸಿ ಮಾಡಿದ ಈ ಸಾಧನೆ, ನಮ್ಮ ಶೈಕ್ಷಣಿಕ ಶಿಸ್ತಿನ ಪಾಂಡಿತ್ಯಕ್ಕಿಂಥಾ ಸಮರ್ಥವಾದುದೆಂದು ಸಾಬೀತಾಗಿದೆ.

ಅದೇ ಉತ್ತರ ರಾಜಸ್ಥಾನದ ಲಾಪೋಡಿಯಾದ ಲಕ್ಷ್ಮಣಸಿಂಗ್ ಅವರದು ಬರಕ್ಕೇ ಬೇಲಿ ಹಾಕಿದ ಇನ್ನೊಂದು ನೀರಿನ ಗಾಥೆ. ರಾಜಸ್ಥಾನದ ಈ ಅವಿದ್ಯಾವಂತ ರೈತ ಊರವರನ್ನು ಸಂಘಟಿಸಿ ಬರಡು ಮರುಭೂಮಿಯ ಹಳ್ಳಿಯಲ್ಲಿ ಹಸಿರು ಸೃಷ್ಟಿಸಿದ್ದು, ಅಕ್ಕಪಕ್ಕದ 20 ಗ್ರಾಮಗಳ 31 ಕೆರೆಗಳನ್ನು ಜೋಡಿಸಿ, ಬರ ಹಾಗೂ ನೆರೆಗಳನ್ನು ಏಕಕಾಲಕ್ಕೆ ನಿಯಂತ್ರಿಸಿ, ಸುತ್ತಲ 350 ಹಳ್ಳಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿರುವುದು ಈಗ ಒಂದು ಇತಿಹಾಸ. ಈ ಭಾಗದ ಹಳ್ಳಿಗಳಿಗೆ ಸೂಕ್ತವಾಗುವ ನೆಲ-ಜಲ ಸಂರಕ್ಷಣೆಯ OLYMPUS DIGITAL CAMERAಮಾದರಿಯೊಂದನ್ನು ಲಕ್ಷ್ಮಣ್ ಅಭಿವೃದ್ಧಿಪಡಿಸಿದ್ದಾರೆ. ಅದು ಚೌಕ ವಿಧಾನವೆಂದೇ ಜನಪ್ರಿಯವಾಗಿದೆ. ಹುಲ್ಲುಗಾವಲಿನಲ್ಲಿ ಚೌಕಗಳನ್ನು ನಿರ್ಮಿಸಿ ನೀರನ್ನು ಇಂಗಿಸಿ, ಸಂಗ್ರಹಿಸುವ ವಿಧಾನ ಇದಾಗಿದೆ. ಇಲ್ಲೂ ಗ್ರಾಮೀಣ ವಿಕಾಸ ನವ್ ಯುವಕ್ ಮಂಡಲ್ ಎಂಬ ಸಂಘಟನೆಯಿಂದಲೇ ಇಷ್ಟೆಲ್ಲಾ ಸಾಧ್ಯವಾಗಿದ್ದು ಎಂಬುದು ಗಮನಾರ್ಹ. ಮಳೆ ನೀರನ್ನು ಶೇಖರಿಸಿ, ಇಂಗಿಸಿ ಅಂತರ್ಜಲ ಮರುಪೂರಣಕ್ಕಾಗಿ ಕೆರೆಗಳನ್ನು ನಿರ್ಮಿಸಿ ಇವರು ದಾಖಲೆ ಬರೆದಿದ್ದಾರೆ. ಇದಾವುದೂ ಪವಾಡಗಳಲ್ಲ. ಪ್ರಕೃತಿಯಲ್ಲೇ ಇರುವ ಉತ್ತರಗಳು. ಅದನ್ನು ಕಂಡುಕೊಳ್ಳುವ ಸೂಕ್ಷ್ಮತೆಯಷ್ಟೇ ನಮಗಿಂದು ಬೇಕಿರುವುದು. ನಿಸರ್ಗದ ಒಂದೊಂದೇ ಗುಟ್ಟುಗಳನ್ನರಿತು ನಮ್ಮ ಸೋಲಿನ ಮೂಲ ಎಲ್ಲಿದೆ ಎಂದು ಅರಿತೆ ಎನ್ನುವ ಲಕ್ಷ್ಮಣ್ ಅವರ ಮಾತು ನಮಗೆಲ್ಲರಿಗೂ ಪ್ರೇರಣೆಯಾಗಬೇಕಿದೆ.

ಇದು ದೂರದ ರಾಜಸ್ಥಾನದ ಮಾತಾಯ್ತು. ನಮ್ಮಲ್ಲಿ ಇಂಥ ಪ್ರಯತ್ನಗಳು ಆಗಿಯೇ ಇಲ್ಲವೇ? ಎಂದು ಹುಡುಕಲು ಹೊರಟರೆ, ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ನೀರಿನಜೋಗಿ ಎಂದೇ ಹೆಸರು ಮಾಡಿರುವ ಕೃಷಿ ಪಂಡಿತ ಶಿವಕುಮಾರ ಸ್ವಾಮೀಜಿ, ಬರದ ನಾಡಿನಲ್ಲೂ ಮಳೆ ನೀರು ಸಂಗ್ರಹ ಮಾಡಿ, ಹಸಿರು ಸೃಷ್ಟಿಸಿ ಸುತ್ತಲಿನ ಹಳ್ಳಿಗಳಿಗೆ ಜೀವ ಚೈತನ್ಯ ತುಂಬಿದ್ದಾರೆ.

ಮಳೆಕುಯ್ಲು ಹಾಗೂ ಸಂಗ್ರಹಣಾ ವಿಧಾನವನ್ನು ಸಮರ್ಥವಾಗಿ ಅಳವಡಿಸಿಕೊಂಡರೆ ನಮ್ಮ ಬಹಳಷ್ಟು ನೀರಿನ ಸಮಸ್ಯೆ ನೀಗಿಹೋಗುತ್ತದೆ ಎನ್ನುತ್ತಾರೆ ನಮ್ಮ ನೀರಿನ ತಜ್ಞರು. ಸರ್ಕಾರದ ಸುವರ್ಣ ಜಲ ಯೋಜನೆ ಈಗಾಗಲೇ 23683 ಸರ್ಕಾರಿ ಶಾಲೆಗಳಲ್ಲಿ ಅಳವಡಿಕೆಯಾಗಿ ಸಮರ್ಥ ಮಳೆಕೊಯ್ಲು ವಿಧಾನದಿಂದ ನೀರಿನ ಕೊರತೆ ನೀಗಿಕೊಂಡಿದೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮಳೆನೀರಿನ ಒಟ್ಟು ಸಂಗ್ರಹಣಾ ಸಾಮರ್ಥ್ಯ 8000 ದಿಂದ 15000 ಲೀಟರ್‌ಗಳಷ್ಟಿವೆ. water-harvestingಮನೆ, ಶಾಲೆ, ಯಾವುದೇ ಬೃಹತ್ ಕಟ್ಟಡದ ಮೇಲ್ಚಾವಣಿಗಳಿಂದ ಮಳೆ ನೀರು ಸಂಗ್ರಹಿಸಿ, ಅದರ ಪುನರ್ ಬಳಕೆಯ ಮೂಲಕ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಈ ಕುರಿತು ಒಂದು ಆಂದೋಲನದ ರೀತಿಯಲ್ಲಿ, ಸಾರ್ವತ್ರಿಕವಾಗಿ ಜನರಲ್ಲಿ ಜಲ ಜಾಗೃತಿಯನ್ನೂ, ಅದನ್ನು ಪ್ರತಿಯೊಂದು ಕಟ್ಟಡದಲ್ಲೂ ಅಳವಡಿಸುವ ಕುರಿತು ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಂಡಾಗ ನಮ್ಮ ಜನರಲ್ಲೂ ಅದರ ಅರಿವು ಮೂಡುತ್ತದೆ. ಬೆಂಗಳೂರು ಜಲಮಂಡಳಿ ಈಗಾಗಲೇ ಮಳೆನೀರು ಕೊಯ್ಲು ಮಾದರಿ ಉದ್ಯಾನವನವನ್ನು ರೂಪಿಸಿ ಪ್ರಚಾರ ಕಾರ್ಯ ಆರಂಭಿಸಿರುವುದೂ ಒಂದು ಗಮನಾರ್ಹ ಪ್ರಯತ್ನ. ಇದಲ್ಲದೇ ಹಳ್ಳಿಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಮಳೆ ನೀರಿನ ಸಮರ್ಥ ಬಳಕೆ ಕುರಿತು ಕೃಷಿ ಹಾಗೂ ಪರಿಸರ ತಜ್ಞರು ಜಾಗೃತಿ ಮೂಡಿಸುತ್ತಿದ್ದಾರೆ.

ಇಂತಹ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ, ಪ್ರಕೃತಿ ಕೇಂದ್ರಿತ ನೈಸರ್ಗಿಕ ಪ್ರಯತ್ನಗಳು ಭೂಮಿಯ ಮೇಲೆ ಮನುಷ್ಯ ಇನ್ನಷ್ಟು ವರ್ಷ ನೆಮ್ಮದಿಯಾಗಿ ಬದುಕಲು ಅನುವು ಮಾಡಿಕೊಡುತ್ತವೆ. ಅದಿಲ್ಲದೇ ಪ್ರಕೃತಿಯ ವಿರುದ್ಧವಾಗಿ ನಾವಿಡುವ ಪ್ರತಿ ಹೆಜ್ಜೆಯೂ ನಮ್ಮ ನಾಶಕ್ಕೆ ಕಂದಕವನ್ನು ನಾವೇ ತೋಡಿಕೊಳ್ಳುವಂತಾ ಮೂರ್ಖತನವಾದೀತು. ಸಹನಾಮಯಿ ಧರಿತ್ರಿ ತನ್ನ ಮೇಲಿನ ಅತ್ಯಾಚಾರಗಳಿಗೆ, ವರ್ತಮಾನವಷ್ಟೇ ಮುಖ್ಯ, ಎಂಬ ನಮ್ಮ ಹುಂಬತನಕ್ಕೆ, ಈಗಾಗಲೇ ನಾವು ಚೇತರಿಸಿಕೊಳ್ಳಲಾಗದಂತಾ ಪೆಟ್ಟುಗಳನ್ನು ಕೊಡುತ್ತಿದ್ದಾಳೆ. ಅವಳೊಂದಿಗಿನ ಪ್ರೀತಿಯ ಅನುಸಂಧಾನದಿಂದ ಮಾತ್ರ ನಾವು ನೆಮ್ಮದಿಯ ನಾಳೆಗಳನ್ನು ಕಾಣಲು ಸಾಧ್ಯ.

“ಸಮಾನ ಶಿಕ್ಷಣ ದಿನ”ವಾಗಿ ತಾಯಿ ಸಾವಿತ್ರಿಬಾಯಿ ಫುಲೆ ಜನ್ಮದಿನ

– ರೂಪ ಹಾಸನ

“ನಿಜವಾಗಿ ನೋಡಿದರೆ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆ ಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವೆ. ಅದರಿಂದಾಗಿ ಬಂದಂತಹ ಬಹುಪರಿಯ ದುಃಖಗಳನ್ನು ನುಂಗಿಕೊಳ್ಳುತ್ತಾ ಪ್ರತಿಯೊಂದು ಶಾಲೆಗೂ ಹೊಸ ರೂಪ ಮತ್ತು ಚೈತನ್ಯವನ್ನು ತುಂಬಿರುವೆ. ಅದಕ್ಕಾಗಿ ಇದೋ ನನ್ನ ಮನಃಪೂರ್ವಕ ಅಭಿನಂದನೆಗಳು” ಎನ್ನುತ್ತಾ ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ ತಮಗೆ, ಬ್ರಿಟಿಷ್ ಸರ್ಕಾರ ಹೊದಿಸಿ ಗೌರವಿಸಿದ ಶಾಲನ್ನು ಮಹಾತ್ಮ ಜ್ಯೋತಿಬಾ ಫುಲೆ ತಮ್ಮ ಮಡದಿಗೆ ನೀಡಿದಾಗ, ಇಡೀ ಸಭೆಗೆ ಸಭೆಯೇ ಎದ್ದು ನಿಂತು, ಸಮರ್ಥ ಶಿಕ್ಷಕಿ, ದೇಶದ ಮೊದಲ ಮಹಿಳಾ ಶಿಕ್ಷಣತಜ್ಞೆಗೆ ಕರತಾಡನದೊಂದಿಗೆ ಗೌರವ ಸೂಚಿಸಿತು.
[‘ಸಾಮಾಜಿಕ ಕ್ರಾಂತಿ ಜ್ಯೋತಿ ಮಹಾತ್ಮ ಜ್ಯೋತಿಬಾ ಫುಲೆ’- ಲೇ; ರವಿ ರಾ. ಅಂಚನ್]

ಹೀಗೆ ಪತಿಯಿಂದ ಸಾಮಾಜಿಕವಾಗಿ ಪ್ರಶಂಸೆ ಮತ್ತು ಗೌರವವನ್ನು ಪಡೆದ ಧೀಮಂತ ಮಹಿಳೆ, ತಾಯಿ ಸಾವಿತ್ರಿಬಾಯಿ ಫುಲೆ!

ತಳಸಮುದಾಯ ಹಾಗೂ ಹೆಣ್ಣುಮಕ್ಕಳು ಮೇಲ್ಜಾತಿಗೆ ಸಮಾನವಾದ ಶಿಕ್ಷಣ ಪಡೆಯಬೇಕೆಂಬ ಕನಸನ್ನು 19 1998-savitribai_phule[1]ನೇ ಶತಮಾನದ ಪ್ರಾರಂಭದಲ್ಲೇ ಕಂಡು ಅದರ ಸಾಕಾರಕ್ಕಾಗಿ ಅನೇಕ ನೋವು, ಅಪಮಾನ, ಸಂಕಟಗಳನ್ನು ಅನುಭವಿಸಿದ ಮೊತ್ತ ಮೊದಲ ಮಹಿಳೆ, ನಾವ್ಯಾರೂ ಮರೆಯಬಾರದ- ತಾಯಿ ಸಾವಿತ್ರಿಬಾಯಿ ಫುಲೆ. ಇಂದು ತಳ ಸಮುದಾಯಗಳು ಹಾಗೂ ಮಹಿಳೆಯರು ಒಂದಿಷ್ಟಾದರೂ ಮುಕ್ತವಾಗಿ ವಿದ್ಯಾಭ್ಯಾಸ ಪಡೆಯುವಂತಾಗಿರುವುದರ ಹಿಂದೆ ಬಹು ದೊಡ್ಡ ಹೋರಾಟವೇ ಇದೆ. ಒಂದೆಡೆ ಬ್ರಿಟಿಷ್ ಸಾಮ್ರಾಜ್ಯದ ಪ್ರಾಬಲ್ಯ, ಇನ್ನೊಂದೆಡೆ ತಲೆತಲಾಂತರದಿಂದ ಬಂದ ಪರಂಪರೆಯಂತೆ, ಹಿಂದೂ ಮೇಲ್ಜಾತಿಗಳು ಜಾತಿ-ದೇವರುಗಳ ಹೆಸರಿನಲ್ಲಿ ತಳಸಮುದಾಯಗಳನ್ನು ತುಳಿಯುತ್ತಿದ್ದ ಕಾಲ. ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕಿಲ್ಲದಂತಾ, ವಿದ್ಯೆ ಪಡೆಯುವುದೇ ಮಹಾ ಪಾಪವೆಂಬಂತಿದ್ದ ಸಂದರ್ಭ. ಹೆಣ್ಣಿಗೆ ಮದುವೆಯೊಂದೇ ಅಂತಿಮ. ಅವಳೇನೂ ಹೇಳುವಂತಿಲ್ಲ. ಕೇಳುವಂತಿಲ್ಲ. ಯಾವುದನ್ನೂ ನಿರಾಕರಿಸದಂತಾ ಸ್ಥಿತಿ. ಇಂತಹ ಸಂದರ್ಭದಲ್ಲಿ ಅವರಲ್ಲಿ, ಜ್ಯೋತಿಬಾ ಫುಲೆ ದಂಪತಿಗಳು ಹತ್ತಿಸಿದ ಶಿಕ್ಷಣದ ಅರಿವಿನ ಕಿಡಿ ಇಂದು ಬೆಳಕಾಗಿ ಪಸರಿಸುತ್ತಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ 3ನೇ ಜನವರಿ 1831ರಲ್ಲಿ ತಳಸಮುದಾಯದ ಕುಟುಂಬವೊಂದರಲ್ಲಿ ಜನಿಸಿದ ಸಾವಿತ್ರಿಬಾಯಿಗೆ 9 ವರ್ಷವಾಗಿದ್ದಾಗಲೇ ಜ್ಯೋತಿಬಾ ಅವರೊಂದಿಗೆ ವಿವಾಹವಾಗಿ ಪುಣೆಗೆ ಬಂದರು. ಹಸುಗೂಸಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ಜ್ಯೋತಿಬಾ ಅವರ ವಿದ್ಯಾಭ್ಯಾಸ ಅನೇಕ ಜಾತಿ ತಾರತಮ್ಯದ ವಿಘ್ನಗಳೊಂದಿಗೆ ಕುಂಟುತ್ತಾ ಸಾಗಿತ್ತು. ತಾಯಿಯ ದೂರದ ಸಂಬಂಧಿಯಾಗಿದ್ದ ಬಾಲವಿಧವೆ ಸಗುಣಾಬಾಯಿ ಇವರ ಸಾಕುತಾಯಿಯೂ ಆಗಿದ್ದು, ಅವರಿಗೆ ಶಿಕ್ಷಣದ ಬಗ್ಗೆ ಅಪರಿಮಿತ ಆಸಕ್ತಿ ಇತ್ತು. ಇವರು ಸಂಪ್ರದಾಯ, ಕಟ್ಟುಕಟ್ಟಲೆಗಳ ಕುರಿತು ಆಳದಲ್ಲಿ ಪ್ರತಿಭಟನಾತ್ಮಕ ಮನೋಭಾವ ಹೊಂದಿದ್ದರು. ಹೀಗೆಂದೇ ಸಾವಿತ್ರಿಬಾಯಿ ಹಾಗೂ ತಮಗೆ ಪಾಠವನ್ನು ಹೇಳಿಕೊಡಲು ಜ್ಯೋತಿಬಾ ಅವರನ್ನೇ ಒಪ್ಪಿಸಿದರು! ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯೆಯನ್ನು ದಕ್ಕಿಸಿಕೊಂಡ ಈ ಇಬ್ಬರು ಹೆಣ್ಣುಮಕ್ಕಳು ಜ್ಯೋತಿಬಾ ಅವರೊಡಗೂಡಿ, ಬಹುಜನರಿಗೆ ಅಕ್ಷರವನ್ನು ನಿರಾಕರಿಸಿದ್ದ ರೋಗಗ್ರಸ್ತ ಸಮಾಜವನ್ನು ಎದುರು ಹಾಕಿಕೊಂಡು ಹೆಣ್ಣುಮಕ್ಕಳಿಗೆ ಹಾಗೂ ತಳ ಸಮುದಾಯದವರಿಗೆ ಶಿಕ್ಷಣದ ಬಾಗಿಲನ್ನು ತೆರೆದರು!

1847 ರಲ್ಲಿ ನಾರ್‍ಮನ್ ಶಾಲೆಯಲ್ಲಿ ಕೇವಲ 17 ವರ್ಷದೊಳಗೆ ಶಿಕ್ಷಕಿ ತರಬೇತಿಯನ್ನು ಪಡೆದ ಸಾವಿತ್ರಿಬಾಯಿಯವರು ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲಿಂದ ಮುಂದೆ 1848 ರಲ್ಲಿ Jyotirao Phuleಜ್ಯೋತಿಬಾ ಅವರು ಪುಣೆಯಲ್ಲಿ ತೆರೆದ ಮೊಟ್ಟಮೊದಲ ಹೆಣ್ಣುಮಕ್ಕಳ ಶಾಲೆಗೆ [ಭಾರತದಲ್ಲಿ ಎರಡನೆಯದು, ಮೊದಲನೆಯದು ಅದಾಗಲೇ ಕಲ್ಕತ್ತಾದಲ್ಲಿ ಜನ್ಮತಾಳಿತ್ತು] ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಪ್ರಾರಂಭಿಸಿದರು. ಮೊದಲ ದಿನವೇ ಮೇಲ್ಜಾತಿಗೆ ಸೇರಿದ ಹೆಣ್ಣುಮಕ್ಕಳೂ ಸೇರಿದಂತೆ ತಳಸಮುದಾಯಕ್ಕೆ ಸೇರಿದ ಕೇವಲ 9 ಜನ ಹೆಣ್ಣುಮಕ್ಕಳಿಂದ ಪ್ರಾರಂಭವಾದ ಶಾಲೆ, ಮುಂದೆ ಅನೇಕ ಬಾಲೆಯರಿಗೆ ವಿದ್ಯಾದಾನದ ಕೇಂದ್ರವಾಯ್ತು. ಆದರೆ ಆ ಕಾಲದಲ್ಲಿ ಬ್ರಾಹ್ಮಣ ಪುರುಷರ ಹೊರತಾಗಿ ಬೇರೆಯವರಿಗೆ ಅಕ್ಷರ ಕಲಿಯುವ ಅವಕಾಶ ತೀರಾ ಕಡಿಮೆ ಇತ್ತು. ಅಂಥಹ ಸಂದರ್ಭದಲ್ಲಿ ಹೆಣ್ಣೊಬ್ಬಳು ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾಗಿ, ಉಚಿತ ವಿದ್ಯಾದಾನ ನೀಡಲಾರಂಭಿಸಿದ್ದು ಸಂಪ್ರದಾಯಸ್ಥ ಮೇಲ್ಜಾತಿಯವರಿಗೆ ನುಂಗಲಾರದ ತುತ್ತಾಯ್ತು. ಸಾವಿತ್ರಿಬಾಯಿಯವರು ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಿ ಕಲ್ಲು, ಕೆಸರು, ತೊಪ್ಪೆಗಳನ್ನೆಸೆದು ಹೆದರಿಸಿ, ಕೊಲೆ ಬೆದರಿಕೆ ಹಾಕಿದರು. ಇವರು ಯಾವುದಕ್ಕೂ ಬಗ್ಗದಿದ್ದಾಗ, ಇವರ ಶಾಲೆಗೆ ಸೇರಿದ್ದ ಹೆಣ್ಣುಮಕ್ಕಳಿಗೆ ಜಾತಿ ಹಾಗೂ ಸಮಾಜ ಬಹಿಷ್ಕಾರದ ಬೆದರಿಕೆಯನ್ನು ಹಾಕತೊಡಗಿದರು. ಸಾವಿತ್ರಿಬಾಯಿ ಮನೆ ಮನೆಗಳಿಗೆ ಹೋಗಿ ಪೋಷಕರ ಮನವೊಲಿಸಿ, ಶಿಕ್ಷಣದ ಔನತ್ಯವನ್ನು ತಿಳಿ ಹೇಳಿ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ನೀಡಿದರು. ಹೀಗೆ ನಿಜವಾದ ಅರ್ಥದಲ್ಲಿ ಆಧುನಿಕ ಭಾರತದ ಶಿಕ್ಷಣ ಮಾತೆಯಾದರು.

ಇದೇ ಕಾರಣಕ್ಕೆ ಜ್ಯೋತಿಬಾ ತಮ್ಮ ಸ್ವಂತ ಮನೆ ತೊರೆದು ಹೊರಬೀಳಬೇಕಾದ, ಸಾವಿತ್ರಿಬಾಯಿಯವರು ತವರಿನಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾದ ಪ್ರಸಂಗಗಳು ಎದುರಾದರೂ ಇದನ್ನೆಲ್ಲಾ ಕೆಲವು ಪ್ರಗತಿಪರ ಸ್ನೇಹಿತರೊಡಗೂಡಿ ದಿಟ್ಟವಾಗಿ ಎದುರಿಸಿದ ದಂಪತಿಗಳು 1848 ರಿಂದ 1852 ರವರೆಗೆ ಹದಿನೆಂಟಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ತೆರೆದು ಸಾವಿರಾರು ಹೆಣ್ಣುಮಕ್ಕಳು ಹಾಗೂ ತಳಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಿದ ದಾಖಲೆಗಳಿವೆ. ಈ ಎಲ್ಲ ಶಾಲೆಗಳ ಆಡಳಿತ ಜವಾಬ್ದಾರಿಯನ್ನು ಹೊತ್ತು, ನಿರಂತರವಾದ ಸಾಮಾಜಿಕ ಸಂಘರ್ಷಕ್ಕೆ ಈಡಾಗಿಯೂ ಉತ್ತಮ ಶಿಕ್ಷಣತಜ್ಞೆಯಾಗಿ, ಯಶಸ್ವಿ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿದ್ದು ಇತಿಹಾಸ ಗರ್ಭದಲ್ಲಿ ಹೂತುಹೋಗಿದೆ. ಕ್ರಾಂತಿಕಾರಿ ಕವಿಯಾಗಿ ಹೋರಾಟದ ಹಾಡುಗಳನ್ನು ರಚಿಸಿದ ಸಾವಿತ್ರೀಬಾಯಿಯವರ ತೀವ್ರವಾದ ತುಡಿತ ಸಮಾನ ಶಿಕ್ಷಣದ ಕಡೆಗಿದ್ದುದು ಅವರ ಈ ಕವಿತೆಯಿಂದ ಗೋಚರವಾಗುತ್ತದೆ.

ನಡೆ! ಶಿಕ್ಷಣ ಪಡೆ! ನಿಲ್ಲು! ನಿನ್ನ ಕಾಲ ಮೇಲೆ ನೀನು ನಿಲ್ಲು ಪಡೆ ವಿವೇಕ! ಪಡೆ ಸಂಪತ್ತು! ಇದಕಾಗಲಿ ನಿನ್ನಯ ದುಡಿಮೆ
ಅರಿವಿಲ್ಲದವರಾಗಿ ನಮಗೆ ಕೈ ಜಾರಿತು ಸಕಲವೂ ಪಶುವಾದೆವು, ಇಲ್ಲದಾಗಿ ವಿವೇಕವೂ ಸಾಕಿನ್ನು ಈ ಜಡತೆ ಸಾಕು ನಡೆನಡೆ ಶಿಕ್ಷಣ ಪಡೆ! ಆಗಲಿ ಕೊನೆ, ದಮನಿತರ ಕಣ್ಣೀರ ಸಂಕಟಕ್ಕೂ ಕೊನೆ
ಇದೊ ಇಲ್ಲಿದೆ! ನಿಮ್ಮ ಕಣ್ಮುಂದೆಯೆ ಬಿದ್ದಿದೆ ಶಿಕ್ಷಣದ ರೂಪದಲಿ ಚಿನ್ನದ ಗಣಿಯು ತಡವೇಕೆ? ನಡೆನಡೆ ಶಿಕ್ಷಣ ಪಡೆ! ಜಾತಿಯ ಸಂಕೋಲೆ ಕತ್ತರಿಸಿ ನಡೆ. ವೈದಿಕ ಶಾಸ್ತ್ರದ ಕಾಲ್ತೊಡರ ಕಿತ್ತೆಸೆದು ನಡೆ ನಡೆ!

ಅನಕ್ಷರತೆಯ ವಿರುದ್ಧ ಮಾತ್ರವಲ್ಲದೇ ಅನೇಕ ಸಾಮಾಜಿಕ ಅನಿಷ್ಟಗಳ ಎದುರಿಗೂ ಫುಲೆ ದಂಪತಿಗಳು ಉಗ್ರ ಹೋರಾಟ ನಡೆಸಿದರು. Savitribai-Phuleಹೆಣ್ಣುಮಕ್ಕಳೆಡೆಗೆ ಒಂದು ಸರ್ಕಾರ ವಹಿಸಬಹುದಾದಂಥಾ ಸೂಕ್ಷ್ಮ ಎಚ್ಚರ, ಕಾಳಜಿಗಳನ್ನು ಅವರು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಿದರು. ಹೆಣ್ಣುಮಕ್ಕಳ ಶಿಕ್ಷಣದ ಜೊತೆಗೆ, ವಿಧವೆಯರ ಕೇಶಮುಂಡನವನ್ನು ವಿರೋಧಿಸಿ, ಅವರ ಪುನರ್ ವಿವಾಹಗಳನ್ನು ಏರ್ಪಡಿಸಿದರು. ಕಾಮುಕ ಪುರುಷರಿಗೆ ಬಲಿಯಾಗಿ ಗರ್ಭಧರಿಸುವ ವಿಧವೆಯರಿಗಾಗಿ, ಅವರಿಗೆ ಹುಟ್ಟುವ ಮಕ್ಕಳಿಗಾಗಿ 1863 ರಲ್ಲಿ “ಬಾಲಹತ್ಯೆ ಪ್ರತಿಬಂಧಕ ಗೃಹ”ಗಳನ್ನು ತೆರೆದರು. ಅನಾಥ ವಿಧವೆಯರ ಸುರಕ್ಷಿತ ಹೆರಿಗೆಗಾಗಿ “ಗುಪ್ತ ಪ್ರಸೂತಿ ಗೃಹ”ಗಳನ್ನು ಸ್ಥಾಪಿಸಿದರು. ಅನೇಕ ಅನಾಥಾಶ್ರಮಗಳೂ ಸ್ಥಾಪನೆಯಾದವು. ಸ್ವಂತ ಮಕ್ಕಳನ್ನು ಹೊಂದದೇ ಈ ದಂಪತಿಗಳು ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಬೆಳೆಸಿದರು. ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರು ರೂಪಿಸಿದ “ಸತ್ಯಶೋಧಕ ಚಳವಳಿ” ಸಾಮಾಜಿಕ ಪಿಡುಗುಗಳ ವಿರುದ್ಧದ ಒಂದು ಅಸ್ತ್ರವೇ ಆಗಿತ್ತು. ದೇಶದಲ್ಲೇ ಅದೇ ಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಸಾವಿತ್ರಿಬಾಯಿಯವರ ನಾಯಕತ್ವದಲ್ಲಿ ಸ್ಥಾಪಿಸಿದ್ದೂ ಒಂದು ದಾಖಲೆ.

ಪತಿ ಜ್ಯೋತಿಬಾ ಫುಲೆಯವರ ಮರಣದ ನಂತರವೂ ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ದಿಟ್ಟೆ ಸಾವಿತ್ರಿಬಾಯಿ ಫುಲೆಯವರನ್ನು ನಾವಿಂದು ಮರೆತು ಹೋಗಿದ್ದೇವೆಂಬುದೇ ವಿಪರ್ಯಾಸ. ಮಹಿಳೆ ಹಾಗೂ ದಲಿತ ಶಿಕ್ಷಣದ ಕಿಡಿಯೊಂದಿಗೆ ಪ್ರಾರಂಭಿಸಿ ಅನೇಕ ಸಾಮಾಜಿಕ ಅನಿಷ್ಟಗಳ ವಿರುದ್ಧದ ಪ್ರಬಲ ದನಿಯಾಗಿ ಹೊರಹೊಮ್ಮಿದ ಸಾವಿತ್ರಿಬಾಯಿಯವರ ಅಂತಃಶಕ್ತಿಯ ಧೀಮಂತಿಕೆಗೆ ನಾವವರಿಗೆ ಇಂದಿಗೂ ತಲೆ ಬಾಗಲೇಬೇಕು. ಅವರಿಗೆ ಇದೆಲ್ಲವೂ ಸಾಧ್ಯವಾಗಿದ್ದು ಶಿಕ್ಷಣದ ಅರಿವು ಮತ್ತು ಪತಿಯ ಸಹಯೋಗದಿಂದ ಎಂಬುದನ್ನು ನೆನಪಿಸಿಕೊಳ್ಳುವುದು ಯೋಗ್ಯವೆನ್ನಿಸುತ್ತದೆ.

ವ್ಯಾಪಕವಾಗಿ ಹರಡಿದ್ದ ಪ್ಲೇಗ್ ಕಾಯಿಲೆಗೆ ತುತ್ತಾದ ರೋಗಿಗಳ ಸೇವೆಯಲ್ಲಿ ಸಾವಿತ್ರಿಬಾಯಿಯವರು ನಿಸ್ವಾರ್ಥವಾಗಿ ತೊಡಗಿಕೊಂಡು, ನಿರ್ಗತಿಕರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು. ಕ್ಷಾಮದ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೇಹ ಮಾರಿಕೊಳ್ಳುವುದನ್ನು ತಪ್ಪಿಸಿ ಘನತೆಯಿಂದ ಬದುಕಲು ದಾರಿಗಳನ್ನು ಹುಡುಕಿಕೊಟ್ಟರು. ಕೊನೆಗೆ ಈ ನಮ್ಮ ಶಿಕ್ಷಣದ ತಾಯಿ ತೀವ್ರ ಪ್ಲೇಗ್ ಖಾಯಿಲೆಗೆ ತುತ್ತಾಗಿ ತಮ್ಮ 66 ನೇ ವಯಸ್ಸಿನಲ್ಲಿ, 10 ಮಾರ್ಚ್ 1897 ರಲ್ಲಿ ಸಾವನ್ನಪ್ಪಿದರು.

ಸಮಾನ ಶಿಕ್ಷಣ, ಸಮ ಸಮಾಜದ ಕನಸು ಕಂಡ ಫುಲೆ ದಂಪತಿಗಳು ಇನ್ನಿಲ್ಲವಾಗಿ phuleಶತಮಾನವೇ ಕಳೆದುಹೋದರೂ ಅವರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ! ಜಾಗತೀಕರಣದ ಬಿರುಗಾಳಿ ಮತ್ತು ಉಳ್ಳವರ ಪರವಾದ ಶೈಕ್ಷಣಿಕ ನೀತಿಗಳಿಂದಾಗಿ ಮಹಿಳೆ ಮತ್ತು ತಳ ಸಮುದಾಯ ಇಂದಿಗೂ ಸಮಾನ ಶಿಕ್ಷಣವನ್ನು ಪಡೆಯಲಾಗದೇ ಶಿಕ್ಷಣದ ಹಕ್ಕಿನಿಂದ ವಂಚನೆಗೊಳಗಾಗುತ್ತಾ ಅಂಚಿಗೆ ಒತ್ತರಿಸಲ್ಪಡುತ್ತಿದೆ. ಸಮಾನತೆಯನ್ನು ಸಾಧಿಸಲು ಸಮಾನ ಶಿಕ್ಷಣ ವ್ಯವಸ್ಥೆಯೊಂದು ಪ್ರಬಲ ಅಸ್ತ್ರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದು “ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ”ಯನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ಹೆಮ್ಮೆಪಡುತ್ತಿವೆ. ಆದರೆ ಸಮಾನ ಶಿಕ್ಷಣದ ಜಾರಿಗೆ ಬೇಕಾದಂತಾ ಇಚ್ಛಾಶಕ್ತಿಯ ಕೊರತೆಯಿಂದ ಮನ ಬಂದಂತೆ ಶಿಕ್ಷಣ ನೀತಿಯನ್ನು ರೂಪಿಸಿಕೊಂಡು, ಶಿಕ್ಷಣ ಖಾಸಗೀಕರಣಕ್ಕೆ ತನ್ನನ್ನು ಒತ್ತೆ ಇಟ್ಟುಕೊಂಡು, ವಿದ್ಯೆಯೆಂಬ ಮೂಲಭೂತ ಹಕ್ಕನ್ನೂ ಮಾರಾಟದ ಸರಕಾಗಿಸಿದೆ. ತಾಯ್ತನದ ತುಡಿತವಿರದ ಲಾಭಕೋರ ಸರ್ಕಾರ, ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಶಾಲೆಗಳನ್ನೇ ಮುಚ್ಚುತ್ತಿದೆ. ಕೊಳ್ಳುವ ಬಲವಿರುವವರಿಗೆ ಒಳ್ಳೆಯ ಶಿಕ್ಷಣ. ಇಲ್ಲದವರು ಬೀದಿಪಾಲು ಎಂಬುದು ಸರ್ಕಾರದ ಗೋಪ್ಯ ಕಾರ್ಯಸೂಚಿಯೇ? ಎಂದು ಗಾಬರಿಯಾಗುತ್ತಿದೆ.

ಸಾವಿತ್ರಿಬಾಯಿಯವರ ಅಂದಿನ ಶ್ರಮ ಸಾರ್ಥಕವಾಗಬೇಕಾದರೆ ಪ್ರಾದೇಶಿಕ ಭಾಷೆಯನ್ನು ಪ್ರಾಥಮಿಕ ಹಂತದಲ್ಲಾದರೂ ಮಾಧ್ಯಮವಾಗುಳ್ಳ ಸಮಾನ ಶಾಲೆ, ಸಮಾನ ಪಠ್ಯಕ್ರಮ, ಸಮಾನ ಮೂಲಭೂತ ಸೌಕರ್ಯಗಳಿರುವ ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ಅದರ ಮೊದಲ ಭಾಗವಾಗಿ ಸರ್ಕಾರ, ಸಾವಿತ್ರಿಬಾಯಿಯವರು ಜನಿಸಿದ ಜನವರಿ 3 ನ್ನು ರಾಷ್ಟ್ರೀಯ ಸಮಾನ ಶಿಕ್ಷಣ ದಿನವೆಂದು ಘೋಷಿಸಬೇಕು. ಈ ಘೋಷಣೆ ಭಾರತದ ಕಗ್ಗತ್ತಲೆಗೆ ಬೆಳಕಾದ ತಾಯಿಯೊಬ್ಬಳ ದಿನಾಚರಣೆಯಾಗಿಬಿಡುತ್ತದೆ. ಧೀಮಂತ ಐತಿಹಾಸಿಕ ಮಹಿಳೆಯೊಬ್ಬಳ ಹೆಸರಿನಲ್ಲಿ ಒಂದೇ ಒಂದು ದಿನಾಚರಣೆಯಿಲ್ಲದ ಭಾರತಕ್ಕೆ ತಾಯಿ ಸಾವಿತ್ರಿಬಾಯಿ ಫುಲೆ ಹುಟ್ಟಿದ ದಿನವು ಸಮಾನತೆಯ ತಾಯ್ತನದ ತುಡಿತವನ್ನು ನೆನಪಿಸಿಕೊಳ್ಳದ ನಮ್ಮ ಪುರುಷಪ್ರಧಾನದ ಅಹಂಗೆ ಮದ್ದಾಗಬಹುದು. ಅಂದು ಮಾಮೂಲಿನಂತೆ ಸಾರ್ವತ್ರಿಕ ರಜೆಯನ್ನೇನೂ ಸರ್ಕಾರ ನೀಡುವುದು ಬೇಡ. ರಜೆಯ ಹೆಸರಿನಲ್ಲಿ ಆರಾಮ, ಮೋಜು-ಮಜ ಮಾಡಿ ಕಾಲಹರಣ ಮಾಡುವುದೂ ಬೇಡ. [ಹೆಣ್ಣುಮಕ್ಕಳಿಗೆ ಯಾವ ರಜಾ ದಿನಗಳಲ್ಲೂ, ನಿವೃತ್ತಿಯ ನಂತರವೂ ಬಿಡುವೆಂಬುದಿರುವುದೇ ಇಲ್ಲ!] ಅದರ ಬದಲು ಆ ದಿನದಲ್ಲಿ “ಸಮಾನ ಶಿಕ್ಷಣ”ದ ಕುರಿತು ಸರ್ಕಾರ ಮತ್ತು ಇತರ ಪ್ರಗತಿಪರ ಸಂಸ್ಥೆಗಳವತಿಯಿಂದ, ಚರ್ಚೆ, ಕಾರ್ಯಾಗಾರ, ಸಂವಾದ, ವಿಚಾರ ಸಂಕಿರಣಗಳು, ಪ್ರಚಾರ ನಡೆಸುವಂತಾಗಬೇಕಾಗಿದೆ. ಇದರ ಫಲಶ್ರುತಿಯನ್ನು ಪಡೆದು, ಸರ್ಕಾರ ಸಮಿತಿಯೊಂದನ್ನು ರಚಿಸಿ ಮುಂದಿನ ವರ್ಷಗಳಲ್ಲಿ ಅದರ ಯಶಸ್ವಿ ಅಳವಡಿಕೆಯಾದರೆ ಮಾತ್ರ ಸಂವಿಧಾನದ ಸಮಾನತೆಯ ಆಶಯಕ್ಕೆ ಜೀವಂತಿಕೆ ಬರಬಹುದೇನೋ?

ಯುವ ರಾಜೇಂದ್ರಸಿಂಗ್ ಕಂಡ ನೀರಿನ ಕನಸು

– ರೂಪ ಹಾಸನ

2001 ರ ಮ್ಯಾಗೆಸ್ಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್, ‘ವಾಟರ್ ಮ್ಯಾನ್ ಆಫ್ ರಾಜಸ್ಥಾನ್’ ಎಂದೇ ಪ್ರಸಿದ್ಧರು. ರಾಜಸ್ಥಾನದ ನೀರಿನ ಮನುಷ್ಯ! 1959 ರಲ್ಲಿ ಉತ್ತರಪ್ರದೇಶದಲ್ಲಿ ಹುಟ್ಟಿ ಬೆಳೆದ ಜಮೀನ್ದಾರೀ ಮನೆತನದ ರಾಜೇಂದ್ರಸಿಂಗ್‌ಗೂ, rajendra-singh1ನೀರಿಲ್ಲದ ಮರುಭೂಮಿ ರಾಜಸ್ಥಾನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ! ಖಂಡಿತಾ ಯುವಜನರು ಕನಸು ಕಂಡರೆ, ಆ ಕನಸನ್ನು ನನಸು ಮಾಡಲು ಸತತ ಪರಿಶ್ರಮ, ಶ್ರದ್ಧೆಯಿಂದ ಭೂಮಿ ಮುಟ್ಟಿ ಪ್ರಯತ್ನಿಸಿದರೆ…….ಎಲ್ಲವೂ ಸಾಧ್ಯ ಎನ್ನುತ್ತಾರೆ ರಾಜಸ್ಥಾನದ ನೀರಿನ ಹರಿಕಾರ ರಾಜೇಂದ್ರಸಿಂಗ್.

1974 ರ ಒಂದು ದಿನ ರಾಜೇಂದ್ರಸಿಂಗ್ ಅವರಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಅವರ ಮನೆಗೆ ಬಂದ ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ರಮೇಶ್ ಶರ್ಮ ಅವರ ಭೇಟಿ, ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ತಮ್ಮೊಂದಿಗೆ ಹಳ್ಳಿಯ ಶುಚಿತ್ವದ ಮತ್ತು ಮದ್ಯವ್ಯಸನ ಮುಕ್ತಿಗಾಗಿ ನಡೆಸುತ್ತಿದ್ದ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದ ರಮೇಶ್ ಶರ್ಮ ಅವರು, ರಾಜೇಂದ್ರ ಅವರ ಎಳೆಯ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದರು. ಇದರೊಂದಿಗೆ 1975 ರಲ್ಲಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾದ ಪ್ರತಾಪ್‌ಸಿಂಗ್ ತಮ್ಮ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳು, water-man-rajendra-singhಜೊತೆಗೇ ಅದೇ ಸಂದರ್ಭದಲ್ಲಿ ಬಂದ ತುರ್ತುಪರಿಸ್ಥಿತಿ, ತರುಣ ರಾಜೇಂದ್ರ ಅವರು ತೀವ್ರವಾಗಿ ಮತ್ತು ಸ್ವತಂತ್ರವಾಗಿ ಪ್ರಜಾಪ್ರಭುತ್ವದ ವಿವಿಧ ಆಯಾಮಗಳ ಕುರಿತು ಯೋಚಿಸುವಂತಹ ಪ್ರಭಾವವನ್ನು ಬೀರಿದವು. ತದನಂತರ ಆಯುರ್ವೇದ ವೈದ್ಯನಾಗಿ ಪದವಿ ಪಡೆದರೂ, ಜಯಪ್ರಕಾಶ್ ನಾರಾಯಣ್ ಅವರು ಯುವಕರಿಗಾಗಿ ಪ್ರಾರಂಭಿಸಿದ್ದ ‘ಛಾತ್ರ ಯುವ ಸಂಘರ್ಷ ವಾಹಿನಿ’ ಎಂಬ ವಿದ್ಯಾರ್ಥಿ ಹೋರಾಟ ಸಂಘಟನೆಗೆ ಸೇರಿ ಯುವಶಕ್ತಿಯಿಂದ ಸಮಾಜ ಬದಲಾವಣೆಯ ತುರ್ತನ್ನು ರೂಢಿಸಿಕೊಳ್ಳತೊಡಗಿದರು.

ಸಮಾಜ ಸೇವೆಯ ಧ್ಯೇಯದೊಂದಿಗೆ, 1980 ರಲ್ಲಿ ರಾಷ್ಟ್ರೀಯ ಶಿಕ್ಷಣಪ್ರಚಾರ ಸಮಿತಿಯ ಸ್ವಯಂಸೇವಕನಾಗಿ ಸರ್ಕಾರಿ ಕೆಲಸಕ್ಕಾಗಿ ಸೇರಿಕೊಂಡರು. ಅದರದ್ದೇ ಭಾಗವಾಗಿ ವಯಸ್ಕರಿಗೆ ಶಿಕ್ಷಣ ನೀಡುವ ಸಲುವಾಗಿ ರಾಜಸ್ಥಾನದ ದೌಸಾ ಜಿಲ್ಲೆಗೆ ಹೋಗಬೇಕಾಯ್ತು. ಆಗಲೇ ‘ತರುಣ ಭಾರತ ಸಂಘ’ಕ್ಕೆ ಸೇರಿ, ಅದರ ಸಕ್ರಿಯ ಕಾರ್ಯದರ್ಶಿಯಾಗಿ ಯುವಕರಿಗೆ ಮತ್ತು ಸಂಘಕ್ಕೆ ಸ್ಪೂರ್ತಿದಾಯಕವಾಗಿ ಹಲವಾರು ಆಮೂಲಾಗ್ರ ಬದಲಾವಣೆಗಳನ್ನು ತಂದರು. ಯುವಕರ ಸಂಘಟನೆಗಾಗಿ ಹಳ್ಳಿಯಿಂದ ಹಳ್ಳಿಗೆ ಪ್ರವಾಸ ಮಾಡಿದ್ದು ಅವರ ಬದುಕಿನ ಒಂದು ಮಹತ್ವದ ಮೈಲಿಗಲ್ಲು ಎನ್ನಬಹುದು. ಇದು ಅವರು ಜನಪರವಾಗಿ ಯೋಚಿಸಲು ಮತ್ತು ಯೋಜಿಸಲು ಸಹಕಾರಿಯಾಯ್ತು. ಜನರ ನೆಲಮೂಲದ ಸಮಸ್ಯೆಗಳ ಅರಿವು ಯುವ ರಾಜೇಂದ್ರರ ಮನಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ಆದರೆ ತಾವಿರುವ ಸರ್ಕಾರಿ ಹುದ್ದೆ ತಮ್ಮ ಮುಕ್ತ ಮನಸ್ಥಿತಿಗೆ, ಚಟುವಟಿಕೆಗೆ ಸರಿಹೊಂದುವುದಿಲ್ಲವೆಂದೆನಿಸಿ 1984 ರಲ್ಲಿ ಕೆಲಸವನ್ನು ಬಿಟ್ಟು, ತಮ್ಮ ಬಳಿಯಿದ್ದ ವಸ್ತುಗಳನ್ನೆಲ್ಲಾ ಮಾರಿ, ತಮ್ಮ ನಾಲ್ಕು ಮಿತ್ರರೊಡಗೂಡಿ ಬಸ್ ಏರಿ ರಾಜಸ್ಥಾನದ ಮೂಲೆಯ ಆಳ್ವಾರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಬಂದು ತಲುಪಿದಾಗ ಅವರಿಗೆ ಕೇವಲ 26 ವರ್ಷ! rajendra-singh-check-damಅಲ್ಲಿ ಅವರು ಆಯುರ್ವೇದ ವೈದ್ಯವೃತ್ತಿ ಆರಂಭಿಸಿದರು. ಅವರ ಗೆಳೆಯರು ಸಾಕ್ಷರತಾ ಪ್ರಚಾರವನ್ನು ಆರಂಭಿಸಿದರು. ರಾಜೇಂದ್ರಸಿಂಗ್ ಅವರ ಜೊತೆಗೇ ಜನಪರ ಕೆಲಸಗಳನ್ನೂ!

ಆಳ್ವಾರ್ ಜಿಲ್ಲೆ ಒಂದೊಮ್ಮೆ ಹಸಿರಿನಿಂದ ಕೂಡಿ, ಧಾನ್ಯಗಳ ಮಾರಾಟಕ್ಕೆ ಪ್ರಸಿದ್ಧವಾಗಿತ್ತು. ಆದರೆ ರಾಜೇಂದ್ರಸಿಂಗ್ ಇಲ್ಲಿಗೆ ಬಂದ ಕಾಲದಲ್ಲಿ ಅದೊಂದು ಶುಷ್ಕವಾದ ಮರುಭೂಮಿಯಾಗಿತ್ತು. ಅರಣ್ಯನಾಶ ಮತ್ತು ಗಣಿಗಾರಿಕೆ ನೀರಿನ ಮೂಲಗಳನ್ನೇ ನಾಶಮಾಡಿತ್ತು. ಅಂತರ್ಜಲ ಭೂಮಿಯಾಳಕ್ಕೆ ಇಳಿದುಹೋಗಿತ್ತು. ಪಾರಂಪರಿಕ ಚೆಕ್ ಡ್ಯಾಂ [ಜೋಹಡ್] ವ್ಯವಸ್ಥೆಗಳನ್ನು ನಿರ್ಲಕ್ಷಿಸಿದ್ದ ಜನರು ಆಧುನಿಕ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದರು. ನೀರಿನ ತೀವ್ರ ಕೊರತೆಯಿಂದ ಇಡೀ ಜಿಲ್ಲೆಯನ್ನು ‘ಡಾರ್ಕ್ ಝೋನ್’ [ಕಪ್ಪು ಪ್ರದೇಶ]ವೆಂದು ಘೋಷಿಸಲಾಗಿತ್ತು. ರಾಜೇಂದ್ರಸಿಂಗ್ ಅವರಿಗೆ ನೀರಿನ ಸಮಸ್ಯೆಯ ತೀವ್ರತೆ ಅರ್ಥವಾಯ್ತು. ಇದೇ ಸಂದರ್ಭದಲ್ಲಿ ಹಳ್ಳಿಯೊಂದರ ಮುಖ್ಯಸ್ಥ ಮಂಗೂಲಾಲ್ ಪಟೇಲ್ ‘ರಾಜಾಸ್ಥಾನದಲ್ಲಿ ಶಿಕ್ಷಣಕ್ಕಿಂತಾ ನೀರಿನ ಸಮಸ್ಯೆ ತುಂಬಾ ದೊಡ್ಡದು’ ಎಂದು ಹೇಳಿದ ಮಾತು ಇವರ ಬದುಕಿನ ಮಹತ್ವದ ತಿರುವಿಗೆ ಕಾರಣವಾಯ್ತು.

ವಿದ್ಯಾವಂತನೆಂಬ ಹಮ್ಮಿನಿಂದ ಬದಲಾವಣೆಯ ಉಪದೇಶ ಕೊಡುವುದಕ್ಕಿಂತಾ ಮಣ್ಣು ಮುಟ್ಟಿ ಜನರ ಜೊತೆಗೆ ಬೆರೆತು ಕೆಲಸ ಮಾಡುವುದರಿಂದ ಮಾತ್ರ ಆಮೂಲಾಗ್ರ ಬದಲಾವಣೆ ಸಾಧ್ಯ ಎಂದು ನಿಶ್ಚಯಿಸಿ ಜೋಹಡ್‌ಗಳ ಮರು ನಿರ್ಮಾಣದಲ್ಲಿ ತೊಡಗಿದರು. ಇವರ ನಾಲ್ಕು ಗೆಳೆಯರು ಈ ಕೆಲಸ ತಮ್ಮಿಂದ ಸಾಧ್ಯವಿಲ್ಲವೆಂದು ಇವರನ್ನು ಬಿಟ್ಟು ಹೋದರು. ಇದರಿಂದ ಎದೆಗುಂದದ ರಾಜೇಂದ್ರ ಅವರು ಹಳ್ಳಿ ಹಳ್ಳಿಗಳಲಿ ಯುವಜನರನ್ನು ಸಂಘಟಿಸಿ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿದರು. ಚೆಕ್ ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಿದರು. ಮಳೆ ನೀರು ಸಂಗ್ರಹ ಮತ್ತು ಅದರ ವ್ಯವಸ್ಥಿತ ಬಳಕೆಯಿಂದ water-man-singhಕೇವಲ 3 ವರ್ಷಗಳಲ್ಲಿ ಪ್ರತಿಫಲ ಕಾಣತೊಡಗಿ, ಕೆಲವೇ ವರ್ಷಗಳಲ್ಲಿ ಅದು ‘ವೈಟ್ ಝೋನ್’ [ಶ್ವೇತ ಪ್ರದೇಶ]ವಾಗಿ ಮಾರ್ಪಟ್ಟಿತು. ಅಂದಿನಿಂದ ಇಲ್ಲಿಯವರೆಗೂ ಆ ಪ್ರದೇಶಗಳಲ್ಲಿ ಎಂದಿಗೂ ನೀರಿನ ಕೊರತೆಯಾಗದಿರಲು ಸಾಧ್ಯವಾಗಿದ್ದು ನೀರಿನ ವ್ಯವಸ್ಥಿತ ನಿರ್ವಹಣೆಯಿಂದ! ಅದಕ್ಕೆ ಬೇಕಿರುವುದು ಒಂದಿಷ್ಟು ಶ್ರಮ, ಯುವಶಕ್ತಿಯ ಸಂಘಟನೆ ಮತ್ತು ಸಾಧಿಸುವ ಛಲ. ‘ಮಣ್ಣು ಮತ್ತು ನೀರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ’ ಎನ್ನುವ ರಾಜೇಂದ್ರಸಿಂಗ್ ಮಾತು ನಮಗೆ ಸರಿಯಾಗಿ ಅರ್ಥವಾದರೆ ಬಹುಶಃ ಪ್ರವಾಹ ಮತ್ತು ಬರ ಎರಡನ್ನೂ ಸಮರ್ಥವಾಗಿ ಎದುರಿಸಲು ಸಾಧ್ಯವಿದೆ.

ಇತ್ತೀಚೆಗಿನ ವರದಿಯಂತೆ ಕರ್ನಾಟಕ, ದೇಶದ ಎರಡನೆಯ ದೊಡ್ಡ ಮರುಭೂಮಿಯಾಗಿ ಪರಿವರ್ತನೆಯಾಗುತ್ತಿದೆ. 13 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಂತರ್ಜಲ ಬತ್ತಿ, ಕೃಷಿಗಿರಲಿ ಕುಡಿಯಲೂ ನೀರಿಲ್ಲದೇ ಜನ ತತ್ತರಿಸುತ್ತಿದ್ದಾರೆ. ಇನ್ನೊಂದೆಡೆ ಪ್ರವಾಹದಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಹಾಗಿದ್ದರೆ ಮಳೆಯ ಪ್ರಮಾಣ ಕಡಿಮೆಯಾಗಿಲ್ಲ, ಮಳೇ ಮಾರುತಗಳು ದಿಕ್ಕನ್ನು ಬದಲಿಸಿವೆಯಷ್ಟೇ! ಮಳೆಯನ್ನು ಸೆಳೆಯಲು, ಅಂತರ್ಜಲ ಪ್ರಮಾಣ ಹೆಚ್ಚಿಸಲು ಈಗಲಾದರೂ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿದ್ದರೆ ಮುಂದಿನ ಪರಿಣಾಮಗಳು ಇನ್ನಷ್ಟು ಘೋರವಾಗಬಹುದು. ಬಯಲುಸೀಮೆಯ ಜನರ ದಾಹ ತಣಿಸಲು ಎತ್ತಿನಹೊಳೆ ಯೋಜನೆ, ನೇತ್ರಾವತಿ ತಿರುವು ಯೋಜನೆ, ಪರಮಶಿವಯ್ಯ ವರದಿಯ ಅನುಷ್ಠಾನ….. ಹೀಗೆ ಸಾವಿರಾರು ಕೋಟಿಗಳ, ಅಪಾರ ಪ್ರಮಾಣದ ಕಾಡು ನಾಶದ, ಹಲವಾರು ವರ್ಷಗಳ ಕಾಮಗಾರಿಯ ಯೋಜನೆಗಳ ಪ್ರಸ್ತಾವನೆಗಳನ್ನು ತರಾತುರಿಯಾಗಿ ಪರಿಶೀಲಿಸಿ, ಸರ್ಕಾರ ಹಣವನ್ನು ಬಿಡುಗಡೆ ಮಾಡಲು ಕಾತುರವಾಗಿದೆ.

ಆದರೆ ಈ ಯೋಜನೆಗಳ ಕಾರಸ್ಥಾನವಾದ ಪಶ್ಚಿಮಘಟ್ಟದಲ್ಲಿ ಈಗಾಗಲೇ ನಡೆದಿರುವ ಹಲವಾರು ಅವೈಜ್ಞಾನಿಕ ಅಭಿವೃದ್ಧಿ water-manಕೆಲಸಗಳಿಂದ ಅಪಾರ ಪ್ರಮಾಣದ ಕಾಡು ನಾಶವಾಗಿದೆ. ಅಪರೂಪದ ಸಸ್ಯರಾಶಿ, ವನ್ಯಜೀವಿಗಳು ನಾಶವಾಗಿದ್ದರೆ, ಇನ್ನೂ ಕೆಲವು ಅಳಿವಿನ ಅಂಚಿನಲ್ಲಿವೆ. ಒತ್ತುವರಿಯಿಂದಾಗಿ ವನ್ಯಮೃಗಗಳು ಕಾಡಿನಂಚಿನ ನಾಡಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಹಾನಿಯೂ ಆಗುತ್ತಿದೆ. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿರದೇ ಮನುಷ್ಯ ಕೇಂದ್ರಿತವಾಗಿದ್ದರೆ ಇಂತಹ ಪ್ರಮಾದಗಳಾಗುತ್ತವೆ. ಅಂತರ್ಜಲ ಮರುಪೂರಣಕ್ಕೆ ರಾಜಸ್ಥಾನದ ಮರುಭೂಮಿಯಲ್ಲಿ ರಾಜೇಂದ್ರಸಿಂಗ್, ಲಕ್ಷ್ಮಣಸಿಂಗ್ ನಡೆಸಿದ ಪರ್ಯಾಯ ನೀರು ಸಂಗ್ರಹಣೆಯ, ಮಳೆಯ ಮರುಸೃಷ್ಟಿಯ, ಪ್ರಕೃತಿಯಿಂದಲೇ ಪ್ರಕೃತಿಯನ್ನು ಹುಟ್ಟಿಸುವ ನೈಸರ್ಗಿಕ ಮತ್ತು ಶಾಶ್ವತ ಪ್ರಯೋಗಗಳು ಬಯಲುಸೀಮೆಯಲ್ಲಿ ಆಗಬೇಕೇ ಹೊರತು ಉಳಿದಿರುವ ಕಾಡನ್ನು ಛಿದ್ರಮಾಡಿಯಲ್ಲ ಎಂಬುದನ್ನು ಯುವಶಕ್ತಿಯೇ ಮನದಟ್ಟು ಮಾಡಿಕೊಡುವ ಸಂದರ್ಭ ಈಗ ಬಂದಿದೆ.

ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯೇ

– ರೂಪ ಹಾಸನ

ನಮ್ಮ ಸಮಾಜದಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗುವವರು ಮಕ್ಕಳು. ಲೈಂಗಿಕ ಕಿರುಕುಳಕ್ಕೆ-ಅತ್ಯಾಚಾರಕ್ಕೆ ಒಳಗಾಗುವ, ಪರಿತ್ಯಜಿಸಲ್ಪಡುವ, ಬಾಲಕಾರ್ಮಿಕರಾಗುವ, ಶಾಲೆಯ ಮೆಟ್ಟಿಲನ್ನೇ ಹತ್ತದ, ಕುಟುಂಬ ಮತ್ತು ಪೋಷಕರಿಂದ ದುರುಪಯೋಗಕ್ಕೆ ಒಳಗಾಗುವ, ದತ್ತು ಹೋಗುವ, ಮಕ್ಕಳ ಸಾಗಣೆಗೆ ಒಳಗಾಗುವ, ಮೋಸ ಹೋಗುವ, ಕಳೆದು ಹೋದ, ಪೊಲೀಸರಿಗೆ ಸಿಕ್ಕಿರುವ, ಮಾದಕ ವಸ್ತುಗಳಿಗೆ, ಹೆಚ್.ಐ.ವಿ, ಏಡ್ಸ್ ಮುಂತಾದ ಭೀಕರ ರೋಗಕ್ಕೆ ತುತ್ತಾಗುವ…….. ಇಂತಹ ಅಸಂಖ್ಯ ಮಕ್ಕಳನ್ನು ನಮ್ಮ ಸುತ್ತ ನೋಡುತ್ತಲೇ ಇರುತ್ತೇವೆ. ಈ ಎಲ್ಲ ವಿಷಮ ಪರಿಸ್ಥಿತಿಗೂ ಅವರ ಮುಗ್ಧತೆ ಹಾಗೂ ಅಸಹಾಯಕತೆಯೇ ಮುಖ್ಯ ಕಾರಣ. ತೀರಾ ಇತ್ತೀಚೆಗಷ್ಟೇ ನಾವು ಮಕ್ಕಳನ್ನೂ ವ್ಯಕ್ತಿಗಳಂತೆ ಕಾಣಬೇಕು, ಅವರಿಗೂ ಹಿರಿಯರಿಗಿರುವಂತೆಯೇ ಸಂವಿಧಾನಾತ್ಮಕವಾದ ಹಕ್ಕುಗಳಿವೆ ಎಂದು ಅರಿಯಲು ಪ್ರಾರಂಭಿಸಿದ್ದೇವೆ. ಬೆಳಕಿಗೇ ಬರದೇ, ಎಲ್ಲಿಯೂ ದಾಖಲಾಗದೇ ಹೋಗುತ್ತಿದ್ದ ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ ಕೆಲವಾದರೂ, ಇಂದು ನ್ಯಾಯಕ್ಕಾಗಿ ಕೋರ್ಟಿನ ಮೆಟ್ಟಿಲೇರುತ್ತಿವೆ. ಆದರೆ ದೊಡ್ಡವರ ಈ ಪ್ರಪಂಚದಲ್ಲಿ ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 2448 ಮಕ್ಕಳ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 714 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಮಕ್ಕಳಿಗೆ ತುರ್ತು ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಕ್ಕಳಿಗಾಗಿಯೇ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಇತ್ತೀಚೆಗೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ. ಇದೊಂದು ಸ್ವಾಗತಾರ್ಹವಾದ ವಿಚಾರವೇ. ಸ್ಕಾಟ್‌ಲ್ಯಾಂಡ್‌ನಲ್ಲಿ 1996 ರಲ್ಲಿ ಪ್ರಥಮ ಮಕ್ಕಳ ನ್ಯಾಯಾಲಯ ಸ್ಥಾಪನೆಯಾದ ನಂತರ ಅನೇಕ ದೇಶಗಳಲ್ಲಿ ಇಂತಹ ವಿಶೇಷ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಕೇಂದ್ರ ಸರ್ಕಾರವು 2005 ರಲ್ಲೇ ಮಕ್ಕಳ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಆದರೆ ಈ ಆದೇಶವನ್ನು ಎಲ್ಲ ರಾಜ್ಯಗಳೂ ಕಳೆದ ಐದು ವರ್ಷಗಳಿಂದ ಉಲ್ಲಂಘಿಸುತ್ತಲೇ ಬಂದಿವೆ! ಹೋದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್, ತುರ್ತಾಗಿ ದೆಹಲಿಯಲ್ಲಿ ಮಕ್ಕಳ ನ್ಯಾಯಾಲಯ ಸ್ಥಾಪಿಸಲು ಆದೇಶ ನೀಡಿತ್ತು. ಅದೇನಾದರೂ ಕಾರ್ಯಗತಗೊಂಡಿದ್ದರೆ, ದೇಶದಲ್ಲೇ ಮೊದಲ ಮಕ್ಕಳ ನ್ಯಾಯಾಲಯ ಅಲ್ಲಿ ಸ್ಥಾಪನೆಯಾಗುತ್ತಿತ್ತು. ಆದರೆ ನಮ್ಮ ದೇಶಕ್ಕೇ ಹೊಸದಾಗಿರುವ ಈ ಮಕ್ಕಳ ನ್ಯಾಯಾಲಯದ ಪರಿಕಲ್ಪನೆಯ ನೀಲಿ ನಕಾಶೆಯೇ ಈವರೆಗೆ ಸಿದ್ಧಗೊಂಡಿಲ್ಲ!

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು 2011-12 ನೇ ವರ್ಷವನ್ನು ‘ಮಕ್ಕಳ ಹಕ್ಕುಗಳ ವರ್ಷ’ ಎಂದು ಘೋಷಿಸಿದೆ. Streetchildrenಈಗಾಗಲೇ ದೇಶದಲ್ಲಿ ಮಕ್ಕಳ ನ್ಯಾಯ [ಮಕ್ಕಳ ಪೋಷಣೆ ಮತ್ತು ರಕ್ಷಣೆ] ಕಾಯ್ದೆ 2000 ದಲ್ಲಿಯೇ ರಚನೆಗೊಂಡಿದೆ. ಈ ಕಾಯ್ದೆ ಕುರಿತು ಕರ್ನಾಟಕ ರಾಜ್ಯ 2002 ರಲ್ಲಿಯೇ ನಿಯಮವನ್ನು ಜಾರಿಗೆ ತಂದು, ಮಕ್ಕಳ ರಕ್ಷಣೆಗೆ ಬದ್ಧವಾಗಿರುವ ಸಂಕಲ್ಪ ಮಾಡಿದೆ. ಇದರ ಒಂದು ಭಾಗವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು 2009 ರ ಜುಲೈನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರಚಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗಗಳು ಕಾಯಿದೆ 2005 ರಡಿಯಲ್ಲಿನ ಸ್ವತಂತ್ರ ಶಾಸನಬದ್ಧ ಅಂಗಸಂಸ್ಥೆಯಾಗಿರುವ ಈ ಆಯೋಗವು ಭಾರತ ಸಂವಿಧಾನ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989 ರಲ್ಲಿ ಸ್ಪಷ್ಟಪಡಿಸಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಬೆಂಬಲ ನೀಡಲೆಂದೇ ರೂಪುಗೊಂಡಿದೆ.

ಇದರ ಜೊತೆಗೆ ಈಗಾಗಲೇ, ಮಕ್ಕಳ ಪೋಷಣೆ, ರಕ್ಷಣೆ ಮತ್ತು ಕಾನೂನಿನ ನೆರವಿನ ಹಿತದೃಷ್ಟಿಯಿಂದ ಶಾಸನಬದ್ಧವಾದ ನ್ಯಾಯವನ್ನು ಒದಗಿಸಲು ಕರ್ನಾಟಕ ಸರ್ಕಾರ ‘ಮಕ್ಕಳ ಕಲ್ಯಾಣ ಸಮಿತಿ’ಗಳನ್ನು 2003 ರಲ್ಲೇ ನೇಮಿಸಿದೆ. ಈ ಸಮಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪ್ರತಿ ಜಿಲ್ಲೆಯಲ್ಲಿಯೂ ನೇಮಕವಾಗಿದೆ. ಇದರಲ್ಲಿ 0-18 ವರ್ಷದವರೆಗಿನ ಮಕ್ಕಳು ಯಾವುದೇ ತಾರತಮ್ಯವಿಲ್ಲದಂತೆ ಪೋಷಣೆ, ರಕ್ಷಣೆ ಮತ್ತು ನ್ಯಾಯದ ನೆರವನ್ನು ಪಡೆಯುವ ಅವಕಾಶವಿದೆ. ಈ ಮಕ್ಕಳ ನ್ಯಾಯ ಮಂಡಳಿಯು ಮಕ್ಕಳ ನ್ಯಾಯ ಕಾಯ್ದೆಯ ಒಂದು ಅಂಗವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಇದರ ಮುಖ್ಯಸ್ಥರು ನ್ಯಾಯಾಧೀಶರಾಗಿದ್ದು, ಪ್ರಕರಣಗಳನ್ನು ನಡೆಸಲು ಇಬ್ಬರು ಸಮಾಜಸೇವಾ ಕಾರ್ಯಕರ್ತರಿರುತ್ತಾರೆ. ಜೊತೆಗೆ ಪದವಿ ಹೊಂದಿದ ಒಬ್ಬ ಅಧ್ಯಕ್ಷರು ಹಾಗೂ ಐದು ಜನ ಸದಸ್ಯರನ್ನೊಳಗೊಂಡ ಸಮಿತಿಯೂ ಕಾರ್ಯನಿರ್ವಹಿಸಬೇಕಿದೆ.

ಮಕ್ಕಳ ಹಿತರಕ್ಷಣೆಗಾಗಿಯೇ ಈ ಎಲ್ಲಾ ಸರ್ಕಾರಿ ಇಲಾಖೆ, ಆಯೋಗ, ಸಮಿತಿಗಳು ಇರುವಾಗ ಮತ್ತೆ ಪ್ರತ್ಯೇಕ, ವಿಶೇಷ ನ್ಯಾಯಾಲಯದ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆ ಹಲವರದು. ಆದರೆ ಇವುಗಳೆಲ್ಲದರ ಮಧ್ಯೆ ಕೂಡ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. childlaboursಇದಕ್ಕೆ ಒಂದು ಉದಾಹರಣೆಯನ್ನು ನೋಡುವುದಾದರೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದು 25 ವರ್ಷಗಳೇ ಆಗಿದ್ದರೂ ಕರ್ನಾಟಕದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿನ ಬಾಲಕಾರ್ಮಿಕರಿರುವರೆಂದು ಬೆಂಗಳೂರಿನ ‘ಬಾಲ ಕಾರ್ಮಿಕ ವಿರೋಧಿ ಆಂದೋಲನ’ದ ವರದಿ ತಿಳಿಸುತ್ತದೆ. ಆದರೆ ಕಾಯ್ದೆಯಡಿ ಇದುವರೆಗೆ ದಾಖಲಾಗಿರುವುದು ಕೇವಲ 446 ಪ್ರಕರಣಗಳು! ಅದರಲ್ಲಿ ಶಿಕ್ಷೆಗೆ ಒಳಗಾದವರು ಒಬ್ಬರು ಮಾತ್ರ! ಇದು ನಮ್ಮ ನ್ಯಾಯ ವ್ಯವಸ್ಥೆಗೆ ಹಿಡಿದ ಕನ್ನಡಿ.

ಮಕ್ಕಳ ದೌರ್ಜನ್ಯದ ಕ್ಷೇತ್ರ ಅತ್ಯಂತ ವಿಸ್ತಾರವಾದುದು. ಈ ಎಲ್ಲ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ರೂಪುಗೊಂಡಿರುವ ವ್ಯವಸ್ಥೆಯ ಪರಿಧಿಯಾಚೆಗೇ ಇಂದಿಗೂ ಅಸಂಖ್ಯಾತ ಮಕ್ಕಳು ನಿತ್ಯ ಶೋಷಣೆಗೆ, ಸಂಕಷ್ಟಗಳಿಗೆ ಊಹಿಸಲೂ ಸಾಧ್ಯವಿಲ್ಲದ ರೀತಿಗಳಲ್ಲಿ ಗುರಿಯಾಗುತ್ತಲೇ ಇದ್ದಾರೆ. ಮಕ್ಕಳ ಸಂಬಂಧಿತ ಈ ಎಲ್ಲ ಸಂಸ್ಥೆಗಳು ಕ್ರಿಯಾಶೀಲವಾಗದೇ, ವಿಕೇಂದ್ರಿಕರಣಗೊಳ್ಳದೇ, ಅಧಿಕಾರಿಗಳ, ಸಿಬ್ಬಂದಿಯ ನಿರ್ಲಕ್ಷ್ಯ, ನಿಷ್ಕ್ರಿಯತೆಗೆ ಒಳಗಾಗಿ ಮತ್ತು ಎಲ್ಲಕ್ಕಿಂತಾ ಮುಖ್ಯವಾಗಿ ಮಕ್ಕಳೊಂದಿಗಿನ ನೇರ ಸಂಪರ್ಕದ ಕ್ಷೇತ್ರಕಾರ್ಯ ಮಾಡದೆ, ಮಕ್ಕಳ ಮನಸ್ಸಿನ ಸೂಕ್ಷ್ಮಗಳನ್ನರಿಯದೇ ನಿರೀಕ್ಷಿತ ಪ್ರಮಾಣದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬಹಳಷ್ಟು ಬಾರಿ ಜಾತಿ ಹಾಗೂ ಸ್ಥಳೀಯ ರಾಜಕಾರಣದ ಪ್ರಭಾವ ಮತ್ತು ಒತ್ತಡದಲ್ಲಿ ಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ತಾರತಮ್ಯ ಹಾಗೂ ಲೋಪ ಉಂಟಾಗುತ್ತಿದೆ. ಪ್ರಕರಣ ದಾಖಲಾಗಿದ್ದರೂ, ಆಗದಿದ್ದರೂ ತೊಂದರೆಯಲ್ಲಿರುವ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ, ಅದನ್ನು ಅತ್ಯಂತ ಸೂಕ್ಷ್ಮವಾಗಿ ಇತ್ಯರ್ಥಗೊಳಿಸಿ ನ್ಯಾಯ ನೀಡುವ ವ್ಯವಸ್ಥೆಯನ್ನು ತುರ್ತಾಗಿ ಪುನರ್‌ರೂಪಿಸಬೇಕಿದೆ.

ಈ ಬಾಲಕಿಯರ ಮೌನ ರೋದನ ಕೇಳುವವರಾರು?

– ರೂಪ ಹಾಸನ

ಈಗ್ಗೆ ಕೆಲ ವರ್ಷದ ಹಿಂದೆ ವಸತಿಯುತ ಅಂಧ ಮಕ್ಕಳ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಹೆಣ್ಣು ಮಗಳೊಬ್ಬಳು ಗರ್ಭಿಣಿಯಾಗಿದ್ದಳು. ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಸಹಶಿಕ್ಷಣ ನೀಡುವ ಆ ಶಾಲೆಯಲ್ಲಿ ಇಂತಹ ನೀಚ ಕೆಲಸ ಮಾಡಿದವರು ಯಾರು ಎಂಬುದನ್ನು ಕಂಡು ಹಿಡಿಯಲು ಗುಟ್ಟಾಗಿ ಪತ್ತೆ ಹಚ್ಚುವ ಪ್ರಯತ್ನ ನಡೆಯಿತಾದರೂ ಕಾಮುಕನ ಪತ್ತೆಯಾಗಿರಲಿಲ್ಲ. ಕೊನೆಗೆ ತನ್ನದಲ್ಲದ ತಪ್ಪಿಗೆ ಆ ಹುಡುಗಿ ಶಿಕ್ಷಣವನ್ನು ಅರ್ಧದಲ್ಲೇ ಮೊಟುಕುಗೊಳಿಸಿ ಬಡ ತಂದೆ-ತಾಯಿಯರ ಜೊತೆಗೆ ಮನೆಗೆ ತೆರಳಿದ್ದಳು. ತಾನು ಉಪಯೋಗಿಸಲ್ಪಟ್ಟದ್ದಕ್ಕೆ ಆ ಹುಡುಗಿಯ ಬಳಿ ಯಾವ ಸಾಕ್ಷ್ಯವೂ ಇರಲಿಲ್ಲ. rape-illustrationಈ ಅನ್ಯಾಯವನ್ನು ಕಾನೂನುರೀತ್ಯ ಎದುರಿಸುವ ಆರ್ಥಿಕ ಚೈತನ್ಯವಾಗಲೀ, ಸಮಾಜವನ್ನು ಎದುರಿಸುವ ನೈತಿಕ ಶಕ್ತಿಯಾಗಲೀ ಇಲ್ಲದ ಪೋಷಕರು ಆ ಹೆಣ್ಣುಮಗುವಿನ ಬಸಿರು ತೆಗೆಸಿ, ತಮ್ಮ ಹಣೆಬರಹವನ್ನು ಬೈಯ್ದುಕೊಳ್ಳುತ್ತಾ ಹುಡುಗಿಯನ್ನು ಸಾಕುತ್ತಿದ್ದಾರೆ. ಈ ವಿಷಯ ಸಂಸ್ಥೆಯಿಂದ ಹೊರಬರದೇ, ಎಲ್ಲಿಯೂ ಸುದ್ದಿಯೂ ಆಗದೇ ಅಲ್ಲೇ ಸತ್ತು ಹೋಯಿತು.

ಕಳೆದ ವರ್ಷದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರಾದ ಎಚ್.ಆರ್. ಭಾರದ್ವಾಜ್ ಅವರು ತಮಗಾಗಿ ರಚಿತವಾಗಿರುವ ಕಾನೂನುಗಳ ಪ್ರಯೋಜನವನ್ನು ಅಂಗವಿಕಲರು ಪಡೆದುಕೊಳ್ಳುವಂತಾಗಬೇಕು. ಇಂತಹ ಕಾನೂನುಗಳು ಇದುವರೆಗೂ ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ ಅವರಿಗೆ ಮೀಸಲಾಗಿರುವ ಸೌಲಭ್ಯ ದಕ್ಕುತ್ತಿಲ್ಲ ಎಂದು ವಿಷಾದಿಸಿದ್ದರು. ಆದರೆ ಅಂಗವಿಕಲ ಮಕ್ಕಳು, ಮುಖ್ಯವಾಗಿ ಬಡ ಹೆಣ್ಣುಮಕ್ಕಳು ಕಾನೂನಿನ ಸೌಲಭ್ಯ ಪಡೆಯುವುದಿರಲಿ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲೂ ಸಾಧ್ಯವಾಗದೇ ಲೈಂಗಿಕ ದೌರ್ಜನ್ಯಕ್ಕೆ, ಶೋಷಣೆಗೆ ಗುರಿಯಾಗುತ್ತಿರುವುದನ್ನು ಕಾಣುವಾಗ ಅಂಗವಿಕಲತೆ ಶಾಪವಲ್ಲ ಎಂದು ನಾವು ಬಿಗಿಯುವ ಭಾಷಣ ಅವರನ್ನು ಅಪಹಾಸ್ಯ ಮಾಡಿದಂತೆನಿಸುತ್ತದೆ.

ಕರ್ನಾಟಕದ ಜನಸಂಖ್ಯೆಯ ಶೇಕಡಾ 5 ರಿಂದ 6 ರಷ್ಟಿರುವ ಅಂಗವಿಕಲರ ಅಭ್ಯುದಯಕ್ಕಾಗಿ ಅಂಗವಿಕಲರ ಕಲ್ಯಾಣ ಇಲಾಖೆ 1988 ರಿಂದಲೇ ಕೆಲಸ ಮಾಡುತ್ತಿದೆ. ಅಂಗವಿಕಲರ ಅಧಿನಿಯಮ 1995 ರ ಅನ್ವಯ ಅಂಗವಿಕಲ ವ್ಯಕ್ತಿಗಳಿಗೆ ವಿದ್ಯಾಭ್ಯಾಸ, ತರಬೇತಿಗಳೊಂದಿಗೆ ಉತ್ತಮ ಅವಕಾಶವನ್ನು ಕಲ್ಪಿಸಿ ಸೌಲಭ್ಯ ನೀಡಿದಲ್ಲಿ ಅವರು ಕೂಡ ದೇಶದ ಆರ್ಥಿಕ ಅಭಿವೃದ್ಧಿಗೆ ಸಮನಾದ ಪಾಲನ್ನು ನೀಡುತ್ತಾರೆ ಎಂದು ಹೇಳಿ ಅಂಗವಿಕಲ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಯನ್ನು ಎತ್ತಿಹಿಡಿಯಲಾಗಿದೆ. ಇದಕ್ಕಾಗಿ ಸರ್ಕಾರ ಹಲವು ಕೋಟಿಗಳನ್ನು ವಿನಿಯೋಗಿಸುತ್ತಿದೆ.

ದೃಷ್ಟಿದೋಷ, ಶ್ರವಣದೋಷ, ಮಾನಸಿಕ ಅಸ್ವಸ್ಥತೆ, ಬುದ್ಧಿಮಾಂದ್ಯತೆಗಳನ್ನು ವಿಶೇಷ ಅಂಗವೈಕಲ್ಯವೆಂದು ಗುರುತಿಸಲಾಗುತ್ತದೆ. ಇಂತಹ ಮಕ್ಕಳಿಗೆ ಪ್ರತ್ಯೇಕವಾಗಿಯೇ ಶಿಕ್ಷಣ ನೀಡಬೇಕಾದ ಅನಿವಾರ್ಯತೆಯೂ ಇದೆ. ಹೀಗೆಂದೇ ರಾಜ್ಯದಲ್ಲಿ, ದೃಷ್ಟಿದೋಷವಿರುವ ಮಕ್ಕಳಿಗಾಗಿ ಸರ್ಕಾರದ ವತಿಯಿಂದ ನಾಲ್ಕು ವಿಶೇಷ ವಸತಿಶಾಲೆಗಳನ್ನು, ಹಾಗೇ ಶ್ರವಣದೋಷವುಳ್ಳ ಮಕ್ಕಳಿಗಾಗಿ ನಾಲ್ಕು ವಿಶೇಷ ವಸತಿಶಾಲೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಒಂದೊಂದು ಶಾಲೆ ಪ್ರತ್ಯೇಕವಾಗಿ ಹೆಣ್ಣುಮಕ್ಕಳಿಗಾಗಿಯೇ ಇರುವಂತದ್ದು.

ಇವುಗಳಲ್ಲದೇ ವಿಶೇಷ ಅಂಗವೈಕಲ್ಯತೆಯುಳ್ಳ ಮಕ್ಕಳಿಗಾಗಿಯೇ ಕರ್ನಾಟಕದಾದ್ಯಂತ 150 ಕ್ಕೂ ಹೆಚ್ಚು ಅನುದಾನಿತ-ಅನುದಾನರಹಿತ, ವಸತಿಯುತ-ವಸತಿರಹಿತ ಶಾಲೆಗಳು, ಸ್ವಯಂಸೇವಾ ಸಂಸ್ಥೆಗಳಿಂದ ನಡೆಸಲ್ಪಡುತ್ತಿವೆ. ಹಾಗೆ ಪ್ರತ್ಯೇಕ ಹೆಣ್ಣುಮಕ್ಕಳ ಶಾಲೆಗಳಲ್ಲಿ ಮಹಿಳಾ ಮೇಲ್ವಿಚಾರಕಿಯರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಸಹಶಿಕ್ಷಣ ನೀಡುವ ಈ ವಿಶೇಷ ಶಾಲೆಗಳಲ್ಲಿ ಮಹಿಳಾ ಮೇಲ್ವಚಾರಕಿಯರ ಹುದ್ದೆಯನ್ನು ಕಡ್ಡಾಯಗೊಳಿಸಿಲ್ಲ. ಜೊತೆಗೆ ಇರುವೊಬ್ಬರು ರಜೆಯ ಮೇಲೆ ತೆರಳಿದರೆ, ಆ ಕೆಲಸವನ್ನು ನಿರ್ವಹಿಸಲು ಮತ್ತೊಬ್ಬ ಮಹಿಳಾ ಮೇಲ್ವಿಚಾರಕಿಯ ಹುದ್ದೆಯನ್ನೂ ನಿಗದಿಗೊಳಿಸಿಲ್ಲ. ಇಂತಹ ವಸತಿಶಾಲೆಗಳಲ್ಲಿ ಹೆಣ್ಣುಮಕ್ಕಳು ಸುಲಭವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ಈ ಅಸಹಾಯಕ ಮಕ್ಕಳಿಗೆ ಶಿಕ್ಷಣದೊಂದಿಗೆ, ವಿಶೇಷ ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ಧಾರಿಯೂ ಇಂತಹ ಸಂಸ್ಥೆಗಳ ಮೇಲಿರುತ್ತದೆ. girl-harassementಅದರಲ್ಲೂ ಹೆಣ್ಣು ಮಕ್ಕಳಿಗೆ ಅಂಗವೈಕಲ್ಯತೆ ಒಂದು ಶಾಪವಾದರೆ, ಅವರ ದೇಹವೇ ಅವರಿಗೆ ಇನ್ನೊಂದು ಶಾಪವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸುಲಭವಾಗಿ ಸಿಕ್ಕಿಹಾಕಿಕೊಳ್ಳುವ, ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಇಂಥಹ ಮಕ್ಕಳಿಗೆ ಬದುಕೇ ನರಕವೆನಿಸಿ, ಮನುಷ್ಯ ಪ್ರಪಂಚದ ಬಗೆಗೇ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಅವರ ಮುಗ್ಧತೆ, ಅಸಹಾಯಕತೆ, ಅಂಗವೈಕಲ್ಯ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಬಹು ದೊಡ್ಡ ಜವಾಬ್ದಾರಿಯಾಗಿರುತ್ತದೆ.

ಪುರುಷ ಶಿಕ್ಷಕರು, ಮೇಲ್ವಿಚಾರಕರು, ಸಿಬ್ಬಂದಿಯಿಂದ ಲೈಂಗಿಕ ಕಿರುಕುಳಕ್ಕೆ ಇಂತಹ ಹಲವು ಹೆಣ್ಣುಮಕ್ಕಳು ಗುರಿಯಾಗುತ್ತಿದ್ದರೂ ಆಡಲಾಗದೇ ಅನುಭವಿಸಲಾಗದೇ ಅವರು ಪಡುತ್ತಿರುವ ಮಾನಸಿಕ ಯಾತನೆ ಕರುಳು ಹಿಂಡುವಂತದ್ದು. ಹೆಚ್ಚಿನ ಮಕ್ಕಳು ತಮ್ಮ ಪೋಷಕರೊಂದಿಗೂ ಇದನ್ನು ಹಂಚಿಕೊಳ್ಳದೇ ಹಿಂಸೆ ಅನುಭವಿಸುತ್ತಾರೆ. ಹಾಗೊಮ್ಮೆ ಹೇಳಿಕೊಂಡರೂ ಅವರೂ ಅಸಹಾಯಕರೇ. ಒಂದೋ ಶಾಲೆ ಬಿಡಿಸಿ ಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳಬೇಕು ಇಲ್ಲವೇ ಅಲ್ಲೇ ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಮಕ್ಕಳಿಗೆ ಸೂಚಿಸಬೇಕು. ಇಂತಹ ಶಾಲೆಗಳು ಜಿಲ್ಲೆಗೊಂದರಂತೆ ಕೂಡ ಇಲ್ಲದಿರುವುದರಿಂದ, ಇರುವುದರಲ್ಲಿ ಹತ್ತಿರದ ಶಾಲೆ ಬಿಡಿಸಿ ದೂರದ ಶಾಲೆಗೆ ಮಗುವನ್ನು ಕಳಿಸುವ ಆರ್ಥಿಕ ಸಾಮರ್ಥ್ಯವೂ ಅವರಲ್ಲಿರುವುದಿಲ್ಲ. ಇಂತಹ ಹೆಚ್ಚಿನ ಮಕ್ಕಳು ಬಡತನ ರೇಖೆಗಿಂತ ಕೆಳಗಿರುವವರೇ ಆಗಿರುತ್ತಾರೆ. ಅಸಹಾಯಕ ಮಕ್ಕಳು ಲೈಂಗಿಕ ಕಿರುಕುಳವನ್ನು ಮೌನವಾಗಿ ಸಹಿಸಿ, ಗೌಪ್ಯವಾಗಿಯೇ ನೋವನುಭವಿಸುತ್ತಾರೆ.

ಮಕ್ಕಳಿಗೆ ಆಗುತ್ತಿರುವ ಲೈಂಗಿಕ ಹಿಂಸೆ ತಿಳಿದಿರುವ ಸಾಮಾಜಿಕ ಕಾರ್ಯಕರ್ತರೂ ಇಂತಹ ಸೂಕ್ಷ್ಮ ವಿಷಯವನ್ನು ಹೇಗೆ ನಿರ್ವಹಿಸುವುದೆಂದು ತಿಳಿಯದೇ ಅಸಹಾಯಕರಾಗುವ ಪರಿಸ್ಥಿತಿ ಇದೆ. ಆಪ್ತರಾಗಿರುವವರಲ್ಲಿ ಮಕ್ಕಳು ಮನ ಬಿಚ್ಚಿ ತಮ್ಮ ಸಂಕಟ ಹೇಳಿಕೊಂಡರೂ ಯಾವುದೇ ಕಾರಣಕ್ಕೂ ಶಾಲೆಯವರಿಗೆ, disabled-girlsಪೋಷಕರಿಗೆ ತಿಳಿಸಬಾರದೆಂದು ಬೇಡಿಕೊಳ್ಳುತ್ತಾರೆ. ಕಾನೂನಿನ ನೆರವು ಪಡೆಯಲು ವಿಷಯವನ್ನು ಬಹಿರಂಗ ಪಡಿಸುವುದು, ಮಗುವಿನೊಂದಿಗೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರತ್ಯೇಕವಾಗಿ ದಾಖಲಿಸುವುದು ಅನಿವಾರ್ಯವಾಗಿರುತ್ತದೆ. ಇಂತಹ ವಿಷಯಗಳನ್ನು ಬಹಳಷ್ಟು ಬಾರಿ ಅಸೂಕ್ಷ್ಮವಾಗಿ ನಿರ್ವಹಿಸುವ ಸಂಬಂಧಪಟ್ಟ ಅಧಿಕಾರಿಗಳು ಮಗುವಿನ ಭವಿಷ್ಯಕ್ಕೆ ಅನುಕೂಲಕ್ಕಿಂಥಾ ತೊಂದರೆ ಮಾಡುವುದೇ ಹೆಚ್ಚು. ನಿರ್ದಿಷ್ಟ ವ್ಯಕ್ತಿಯನ್ನು ಗುರಿ ಮಾಡಿ ದೂರು ದಾಖಲಿಸಲೂ ಯಾವುದೇ ಸಾಕ್ಷ್ಯಾಧಾರಗಳೂ ಇರುವುದಿಲ್ಲ. ಹಾಗೆ ಅವರ ವಿರುದ್ಧ ಪ್ರತಿಭಟನೆ ಮಾಡಲೂ, ಮಕ್ಕಳಪರ ಹೋರಾಟದ ಗಟ್ಟಿ ದನಿ ಇನ್ನೂ ರೂಪುಗೊಂಡಿಲ್ಲ. ಹಲವು ಸಂದರ್ಭದಲ್ಲಿ ಏಕಾಂಗಿಯಾಗಿ ಇಂತಹ ಅನಿಷ್ಟದ ವಿರುದ್ಧ, ಮಕ್ಕಳ ಪರವಾಗಿ ಹೋರಾಡುವಾಗ ಸಾಮಾಜಿಕ ಕಾರ್ಯಕರ್ತರೇ ತೊಂದರೆಗೆ ಸಿಲುಕುವ ಪ್ರಸಂಗಗಳು ಹೆಚ್ಚುತ್ತಿವೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆಯೂ ಗಮನ ಹರಿಸಬೇಕೆಂಬ ಜಾಗೃತಿ ನಮ್ಮ ಸಾಮಾಜಿಕ ಹೋರಾಟಗಾರರಿಗೂ ಇನ್ನೂ ಬಂದಿಲ್ಲ!

ಇಂತಹ ಸಂದರ್ಭದಲ್ಲಿ ಈ ವಿಶೇಷ ಅಂಗವೈಕಲ್ಯ ಹೊಂದಿರುವ ಹೆಣ್ಣುಮಕ್ಕಳು ಸುರಕ್ಷಿತವಾಗಿರಲು, ನೆಮ್ಮದಿಯಿಂದ ಶಿಕ್ಷಣವನ್ನು ಪಡೆಯಲು ಬೇಕಾದಂತಾ ಅನುಕೂಲಗಳನ್ನು ಅಂಗವಿಕಲ ಕಲ್ಯಾಣ ಇಲಾಖೆಯೇ ಸೂಕ್ಷ್ಮವಾಗಿ ವಿವೇಚಿಸಿ ಕೈಗೊಳ್ಳಬೇಕಿದೆ. ಮುಖ್ಯವಾಗಿ ಸಹ ಶಿಕ್ಷಣ ನೀಡುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಟ ಇಬ್ಬರಾದರು ಮಹಿಳಾ ಮೇಲ್ವಿಚಾರಕಿಯರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕಿದೆ. ಜೊತೆಗೆ ವಸತಿಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದಿಸುವ ಮೂಲಕ ಅರಣ್ಯರೋದನವಾಗಿರುವ ಇಂತಹ ಹೆಣ್ಣುಮಕ್ಕಳ ಗಂಭೀರ ಸಮಸ್ಯೆಯೆಡೆಗೆ ತುರ್ತಾಗಿ ಗಮನಹರಿಸಬೇಕಿದೆ.