Category Archives: ರೂಪ ಹಾಸನ

ಅವಳ ಅವ್ಯಕ್ತ ಪ್ರಪಂಚ

– ರೂಪ ಹಾಸನ

‘ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನಾದ್ರೂ ಅಳೆಯಬಹುದು ಹೆಣ್ಣಿನ ಮನಸಿನ ಆಳವನ್ನು ಅರಿತವರಿಲ್ಲ’ ಎಂದು ಯಾರು ಹೇಳಿದರೋ ತಿಳಿದಿಲ್ಲ. ಈ ಸುಂದರ ಸುಳ್ಳನ್ನು ನಂಬಿ ‘ಅವಳ’ನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಿದ್ದೇ ಕಡಿಮೆ ನಮ್ಮ ಸಮಾಜ. ‘ಹೆಣ್ಣು ಸ್ವಾತಂತ್ರ್ಯಕ್ಕೆ ಅನರ್ಹ’ಳೆಂದ ಮನು, ‘ಹೆಣ್ಣು ಸುಕೋಮಲೆ ಅವಳನ್ನು ರಕ್ಷಿಸು ಕಾಪಾಡು’ ಎಂದು ಕಟ್ಟಳೆ ಬರೆದಿಟ್ಟ ಶಾಸ್ತ್ರಗಳು, ಹೆಣ್ಣೆಂದರೆ ‘ಕ್ಷಮಯಾಧರಿತ್ರಿ, ಸಹನಾಮಯಿ, ಮಾಯೆ, ಶಕ್ತಿ, ಪ್ರಕೃತಿ ದೇವತೆ, …….’ ಎಂದೆಲ್ಲಾ ವರ್ಣಿಸುವ ಕವಿಗಳ ಅತಿ ವೈಭವೀಕರಣಗಳ ಮಧ್ಯೆ ಸಿಕ್ಕು ತನ್ನದಲ್ಲದ ನೂರಾರು ಮುಖವಾಡಗಳನ್ನು ಹೊತ್ತು ನಿಜಕ್ಕೂ ನಾನೆಂದರೆ ಏನು? ಮನುಷ್ಯಳಲ್ಲವೇ? ಎಂಬ ಗೊಂದಲ ಸ್ವತಹ ಹೆಣ್ಣಿಗೇ ಮೂಡಿ, ಕಾಡಿ ಚಡಪಡಿಸುತ್ತಿದ್ದಾಳೆ.

ಅವಳ ತೀವ್ರ ಸಂವೇದನಾ ಶೀಲ ಸ್ವಭಾವ ಮತ್ತು ಪ್ರವೃತ್ತಿ ಪುರುಷನದಕ್ಕಿಂತ ಭಿನ್ನವಾದದ್ದು ಮಾತ್ರವಲ್ಲ ಸೂಕ್ಷ್ಮತರವಾದದ್ದೂ ಹೌದು, woman-insightಗಾಢವಾದದ್ದೂ ಹೌದು. ವಸ್ತು, ವಿಷಯ, ಘಟನೆ ಮತ್ತು ಸಂಬಂಧಗಳನ್ನು ಪುರುಷನಿಗಿಂತಾ ಭಿನ್ನವಾದ ಭಾವನಾತ್ಮಕ ನೆಲೆಯಲ್ಲಿ ಹಿಡಿಯಬಲ್ಲ ಇಂದ್ರೀಯ ಸಂವೇದನೆ ಮತ್ತು ಸಂವಹನತೆ ಸರಳ, ಸೂಕ್ಷ್ಮವಾಗಿರುವುದರ ಜೊತೆಗೇ ಸಂಕೀರ್ಣವಾದದ್ದೂ ಆಗಿದೆ. ಆದರೆ ಇವೆಲ್ಲವೂ ಅವಳ ಅವ್ಯಕ್ತ ಭಾವನಾ ಪ್ರಪಂಚದ ಒಳಗೆ ವ್ಯಕ್ತವಾಗದೇ ಹಾಗೆಯೇ ಉಳಿದುಬಿಡುವುದೇ ಹೆಚ್ಚು. ಅವಳ ಮೌನ ಪ್ರಪಂಚದೊಳಗೆ ಒಂದು ಸುತ್ತು ಬಂದರೆ ಹಲವು ವಿಸ್ಮಯಗಳ ಅದ್ಭುತ ಲೋಕವೊಂದು ತೆರೆದುಕೊಳ್ಳಲು ಸಾಧ್ಯವಿದೆ.

ನಮ್ಮ ಪುರುಷ ಪ್ರಧಾನ ವ್ಯವಸ್ಥೆ, ಹೆಣ್ಣೆಂದರೆ ಯಶಸ್ವೀ ಪುರುಷನ ಹಿಂದೆ ನಿಂತು ಅವನೆಲ್ಲಾ ಕಾರ್ಯಗಳಿಗೂ ಸಹಕರಿಸಿ, ಕೃತಜ್ಞತಾ ಭಾವದಿಂದ ಬೀಗುವ ದಾಸಿಯಾಗಿರಬೇಕೆಂದೇ ಬಯಸುವುದು ಹಲವು ಬಾರಿ ಢಾಳಾಗಿಯೇ ಗೋಚರಿಸುತ್ತಿರುತ್ತದೆ. ಇಂದು ಹೆಣ್ಣು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಿದ್ದಾಳೆ. ಸ್ತ್ರೀ ವಿದ್ಯಾಭ್ಯಾಸ ಹಾಗೂ ಉದ್ಯೋಗ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿರುವುದು ದಾಖಲಾಗಿದ್ದರೂ ಉನ್ನತ ಅಧಿಕಾರ ಸ್ಥಾನಗಳಲ್ಲಿ, ಮಹತ್ವದ ನಿರ್ಧಾರ-ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ ಸ್ಥಾನಗಳಲ್ಲಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿ ಅವಳಿಗಿನ್ನೂ ಗಮನಾರ್ಹವಾದ ಸ್ಥಾನ ದೊರಕಬೇಕಿದೆ. ಅವಳ ಬುದ್ಧಿವಂತಿಕೆ, ಸಾಮರ್ಥ್ಯ, ಪ್ರತಿಭೆ, ಜಾಣ್ಮೆಗಳೆಲ್ಲವೂ ಹಿಂಬದಿಯಿಂದ ಉಪಯೋಗಿಸಲ್ಪಟ್ಟು ಶೋಷಣೆಗೊಳಪಡುವುದೇ ಹೆಚ್ಚು. ಹೀಗಾಗದಂತೆ ಎಚ್ಚರವಹಿಸಬೇಕಾದ ಅವಶ್ಯಕತೆ ಅವಳ ಮುಂದಿದೆ.

ಹೆಣ್ಣೆಂದರೆ ಹೀಗೇ……. ಅವಳೆಂದರೆ ಇಷ್ಟೇ ಎಂದು ಅವಳ ಗುಣ ಸ್ವಭಾವಗಳಿಗೆ ಕವಚ ತೊಡಿಸಿ ಇರಿಸಿದ್ದಾಗಲೂ ಹೆಣ್ಣಿನ ಅಭಿವ್ಯಕ್ತಿಗಳು ಚೌಕಟ್ಟನ್ನೂ ಮೀರಿ ದಿಟ್ಟವಾಗಿ ಹೊರಬಿದ್ದಿವೆ. ಹಾಗೇ ಸಂಘರ್ಷಕ್ಕೂ ಗುರಿಯಾಗಿವೆ. ‘ಗಿಡವೆಂದು ತಿಳಿದೆಯೋ ಹೆಣ್ಣು ಜನ್ಮದ ಒಡಲ, ಫಲಗಳನು ಮನಬಂದಂತೆ ಸೃಜಿಸುವುದಕೆ?’ ಎಂದು ಪ್ರಶ್ನಿಸಿದ ಬೆಳಗೆರೆ ಜಾನಕಮ್ಮ, ‘ಹೊಟ್ಟೆಯ ಈ ಕಿಚ್ಚು ಮುಟ್ಟಲಾಗದ ಬೆಂಕಿ ನನ್ನ ಸಿಟ್ಟೋಗಿ ತಟ್ಟಲಿ ಆ ಪರಶಿವನ ಮಡದಿಗೆ’ ಎಂದು ಶಪಿಸಿದ ಜಾನಪದ ಕವಯಿತ್ರಿ ‘ಆರೂ ಇಲ್ಲದವಳೆಂದು ಅಳಿಗೊಳಲು ಬೇಡ ಕಂಡಯ್ಯ, ಏನ ಮಾಡಿದಡೆಯೂ ನಾನಂಜುವಳಲ್ಲ, ತರಗೆಲೆಯ ಮೆಲಿದು ನಾನಿಹೆನು, ಸುರಗಿಯ ಮೇಲೆರಗಿ ನಾನಿಹೆನು ಚೆನ್ನಮಲ್ಲಿಕಾರ್ಜುನಯ್ಯ ಕರಕರ ಕಾಡಿ ನೋಡಿದರೆ ಒಡಲನೂ ಪ್ರಾಣವನು ನಿಮಗೊಪ್ಪಿಸಿ ಶುದ್ಧಳಿಹೆನು’ ಎಂದು ದಿಟ್ಟವಾಗಿ ಹೇಳಿದ ಅಕ್ಕಮಹಾದೇವಿ ತಮ್ಮ ಕಾಲಗಳಲ್ಲಿ ನಿಜ ಸಂಘರ್ಷಕ್ಕೆ ಗುರಿಯಾಗಿದ್ದಾರೆ. ಅವರು ಆತ್ಮಚರಿತ್ರೆಗಳನ್ನು ಬರೆದಿಟ್ಟಿದ್ದರೆ ಅವುಗಳು ಈಗ ದಾಖಲೆಗಳಾಗುತ್ತಿದ್ದವು. ಮಹಿಳೆಯ ಇತಿಹಾಸ ಅವಳಿಂದಲೇ ಬರೆಯಲ್ಪಟ್ಟಿದ್ದರೆ ಇಂದಿನವರೆಗಿನ ಹಾದಿಯಲ್ಲಿನ ಹೋರಾಟ, ನೋವು, ನಲಿವುಗಳು ಸ್ಪಷ್ಟವಾಗಿ ಅಭಿವ್ಯಕ್ತಿಗೊಳ್ಳುತ್ತಿದ್ದವು.

ಇತ್ತೀಚಿನ ದಿನಗಳಲ್ಲಿ ಸ್ತ್ರೀ ಸಂವೇದನೆಗಳಿಗೆ ಹೆಚ್ಚಿನ ಮಹತ್ವ ಬಂದಿರುವುದು ಒಂದು ಆರೋಗ್ಯಕರ ಬೆಳವಣಿಗೆ. ಅವಳೇನೆನ್ನುತ್ತಾಳೆ? ಎಂಬ ಕುತೂಹಲ, woman-abstractಅವಳೂ ನಮ್ಮಂತೆಯೇ ನಮಗೆ ಸಮಾನಳು, ಅವಳೂ ಮಾತಾಡಲಿ ಸಾಮಾಜಿಕವಾಗಿ ಪಾಲ್ಗೊಳ್ಳಲಿ ಎಂಬ ಸಮನ್ವಯ ಭಾವ, ಅವಳ ವಿಚಾರಕ್ಕೂ ಬೆಲೆಕೊಡಬೇಕೆಂಬ ಗೌರವದ ನಿಲುವುಗಳು ಒಂದಿಷ್ಟಾದರೂ ಕಾಣುತ್ತಿರುವುದು ಅವಳ ಭವಿಷ್ಯದ ಬಗೆಗೆ ಕೊಂಚ ಆಶಾದಾಯಕವಾದ ದೃಷ್ಟಿ ಇರಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಆದರೆ ಇಂದಿಗೂ ಹೆಣ್ಣಿಗೆ ತನ್ನ ಮನಸ್ಸಿನ ಎಲ್ಲ ಮುಖಗಳನ್ನೂ ಪ್ರಪಂಚದೆದುರು ಮುಕ್ತವಾಗಿ ತೆರೆದಿಡಲು ಸಾಧ್ಯವಾಗಿಲ್ಲ. ಅವಳು ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಪ್ರಬುದ್ಧಳಾಗುವಷ್ಟು ವೇಗದಲ್ಲಿ ನಮ್ಮ ಪುರುಷ ಪ್ರಧಾನ ಸಮಾಜ ಬದಲಾಗಲು ಸಾಧ್ಯವಿಲ್ಲ. ಇವೆರಡರ ನಡುವಿನ ಅಂತರವನ್ನು ಗಮನದಲ್ಲಿಟ್ಟುಕೊಂಡು ಇಂದಿನ ಮಹಿಳೆ ತನ್ನ ನಿಲುವುಗಳನ್ನು ಅತ್ಯಂತ ಎಚ್ಚರಿಕೆಯಿಂದ, ಘನತೆಯಿಂದ ಮಂಡಿಸಬೇಕಿರುವುದು ಇಂದಿನ ಅನಿವಾರ್ಯತೆ. ಜೊತೆಗೆ, ತನ್ನ ನಿಗೂಢ ಅವ್ಯಕ್ತ ಲೋಕದ ವಿಶಿಷ್ಟತೆಯನ್ನು ದಿಟ್ಟತನದಿಂದ ಪ್ರತಿಪಾದಿಸಲು ಹೊರಟಾಗಲೆಲ್ಲಾ ಸೂಕ್ಷ್ಮ ಗ್ರಹಿಕೆಗಳಿಲ್ಲದ ಸಮಾಜದಿಂದ ವಿವಾದಗಳು ಸಂಘರ್ಷಗಳು ಉಂಟಾಗುತ್ತವೆ. ಹೀಗಾಗಿ ಅವಳು ಪುರುಷ ನಿರ್ಮಿತ ಪೂರ್ವಗ್ರಹಗಳ ಗೋಡೆಯನ್ನು ಒಡೆಯುತ್ತಾ, ಮೊದಲು ತನಗೆ ತಾನು ಸರಿಯಾಗಿ ಅರ್ಥವಾಗಿ ನಂತರ ಹೊರಜಗತ್ತಿಗೆ ತೆರೆದುಕೊಳ್ಳುವುದು ಮುಖ್ಯ.

ಈ ಹಿನ್ನೆಲೆಯಲ್ಲಿಯೇ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಅನಿಯಂತ್ರಿತವಾಗಿ, ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಂತಾ ಮಹಿಳೆಯರ ಆತ್ಮಕಥೆಗಳು ಹೆಚ್ಚು ಸ್ವಾಗತಾರ್ಹವಾದುವು. ತನ್ನ ಬದುಕಿನ ಎಲ್ಲ ಸೂಕ್ಷ್ಮಗಳನ್ನು ಅವಳೇ ಯಾವುದೇ ಒತ್ತಡ, ನಿರ್ಬಂಧವಿಲ್ಲದೇ ಮುಕ್ತವಾಗಿ ತೆರೆದಿಡುವ ಸಾಮಾಜಿಕ ಸ್ಥಿತಿ ಇಂದಿಗೂ ನಿರ್ಮಾಣಗೊಂಡಿಲ್ಲವಾದರೂ ಈ ರೀತಿಯ ದಾಖಲೆಗಳು ಮಹಿಳೆಯ ಹಾಗೂ ಸಾಮಾಜಿಕ ಬದಲಾವಣೆಯ ಮೈಲಿಗಲ್ಲುಗಳಾಗುತ್ತವೆ. ಅವಳ ಸಂಘರ್ಷಗಳು ಅವಳದೇ ದಾಖಲೆಗಳ ಮೂಲಕ ಬಿಂಬಿಸಲ್ಪಟ್ಟಾಗ ನಿಧಾನವಾಗಿಯಾದರೂ ಸಮಾಜ, ಅಂತರ್ಮುಖಿಯಾಗಿರುವ ಅವಳ ಬಹುಮುಖೀ ಭಾವಗಳನ್ನು, ವಿಚಾರಗಳನ್ನು ಸ್ವಾಗತಿಸುತ್ತದೆ.

ಆತಂಕದಲ್ಲಿ ತಲ್ಲಣಿಸುತ್ತಿದೆ ಹೆಣ್ಣುಜೀವ

– ರೂಪ ಹಾಸನ

ಹಳ್ಳಿಯ ಬಡಕುಟುಂಬವೊಂದರ 11 ವರ್ಷಗಳ ಎಳೆಬಾಲೆ ಅವಳು. ಋತುಮತಿಯಾಗಿ ಆರು ತಿಂಗಳೂ ಕಳೆದಿಲ್ಲ. ಲೈಂಗಿಕತೆ ಎಂದರೇನೆಂದು ಇರಲಿ, ಪ್ರೀತಿ-ಪ್ರೇಮವೆಂದರೆ ಏನೆಂದೂ ಅರಿಯದ ಮುಗ್ಧಳು. ಶಾಲೆಗೆ ಬಿಡಲು ಕರೆದುಕೊಂಡು ಹೋದ ಸಂಬಂಧಿಯಿಂದಲೇ ಕಳೆದ ವಾರವಷ್ಟೇ ಅವಳ ಅತ್ಯಾಚಾರವಾಗಿದೆ. ಮೈಮನಸುಗಳೆರಡೂ ಜರ್ಜರಿತವಾಗಿ ನಡುಗುತ್ತಿರುವ ಆ ಕಂದಮ್ಮ ಇದನ್ನು, ಅವನು ಕೊಟ್ಟ ಶಿಕ್ಷೆ ಎಂದೇ ಭಾವಿಸಿದ್ದಾಳೆ. rape-illustration‘ನಾನೇನೂ ತಪ್ಪು ಮಾಡಿಲ್ಲದಿದ್ದರೂ, ಮಾಮ ನನಗೆ ಈ ಶಿಕ್ಷೆ ಯಾಕೆ ಕೊಟ್ಟರು?’ ಎಂಬ ಪ್ರಶ್ನೆಗೆ ಏನು ಉತ್ತರಿಸುವುದೆಂಬ ಅರಿವಿಲ್ಲದೇ ಕಂಗಳು ತುಂಬುತ್ತವೆ. ಆ ವ್ಯಕ್ತಿಗೆ ರಾಜಕೀಯ ಪ್ರಮುಖರ ನಿಕಟ ಸಂಪರ್ಕವಿರುವುದರಿಂದ ಕೇಸು ದಾಖಲು ಮಾಡಿಕೊಳ್ಳಲೇ ಪೊಲೀಸರು ಹಿಂದೆಗೆದಿರುವುದರಿಂದ ಮಗುವನ್ನು ಒಳಗೊಂಡು ಕುಟುಂಬದವರು ಇನ್ನೂ ಆತಂಕದಿಂದ ತಲ್ಲಣಿಸುತ್ತಿದ್ದಾರೆ. ಈಗ ಆ ಮಗು ಅನುಭವಿಸಿದ ವಿನಾ ಕಾರಣದ ಮಾನಭಂಗದ ಶಿಕ್ಷೆಗೆ ನ್ಯಾಯ ಯಾರು ಕೊಡುತ್ತಾರೆ?

ವೈದ್ಯಕೀಯ ನಿಯತಕಾಲಿಕವೊಂದರಲ್ಲಿ ವೈದ್ಯರೊಬ್ಬರು ಬರೆದುಕೊಂಡ ಸ್ವಾನುಭವದಂತೆ, 12 ವರ್ಷದ ಹೆಣ್ಣು ಮಗುವೊಂದು ಆಕಸ್ಮಿಕವಾಗಿ, ಅಕ್ರಮ ಮಾರಾಟದ ದಂಧೆಗೆ ಸಿಕ್ಕು ನಾಲ್ಕು ವರ್ಷ ಕಳೆಯುವುದರೊಳಗೆ ಅನೇಕ ಮಾರಕ ಲೈಂಗಿಕ ರೋಗಗಳಿಗೆ ತುತ್ತಾಗಿ ನಿತ್ರಾಣಳಾಗಿ, ವೈದ್ಯರೊಂದಿಗೆ, ಆ ‘ಭಾಗವನ್ನೇ’ ದೇಹದಿಂದ ತೆಗೆದು ಹಾಕಿ ಬಿಡಿ ಡಾಕ್ಟರ್, ಅದಿದ್ದರೆ ತಾನೇ ಏನೆಲ್ಲ ಹಿಂಸೆ ಅನುಭವಿಸಬೇಕು ಎಂದುದನ್ನು ಕೇಳಿದ ನಂತರವೂ, ಹೆಣ್ಣು ತನ್ನದೇ ದೇಹದ ಬಗೆಗೆ ಹೇಸುವಂತೆ ಮಾಡಿರುವ ಈ ವ್ಯವಸ್ಥೆಯನ್ನು ಹೇಗೆ ಕ್ಷಮಿಸುವುದು?

ಅವಳು 14 ವರ್ಷದ ಬಡ ಅಂಧ ಬಾಲೆ. ವಸತಿಯುತ ಶಾಲೆಯಲ್ಲಿ ಓದುತ್ತಿರುವ ಆ ಮಗುವಿನ ಮೇಲೆ ಮತ್ತೆ ಮತ್ತೆ ನಡೆದ ಬಲಾತ್ಕಾರದಿಂದಾಗಿ, ಎರಡು ಬಾರಿ ಗರ್ಭಪಾತಮಾಡಿಸಿದಾಗ, ವೈದ್ಯ ಮಹಾಶಯ ‘ಗರ್ಭಕೋಶವನ್ನೇ ತೆಗೆಸಿಬಿಡಿ, ಹೇಗೋ ಉಪಯೋಗ ಆಗ್ತಾಳೆ. ಇವೆಲ್ಲ ಮಾಮೂಲು. ಸುಮ್ಮನೆ ಪದೇ ಪದೇ ರಗಳೆ ಯಾಕೆ ಅನುಭವಿಸ್ತೀರಾ?’ ಎಂದರೆ, ರೋಗಿಯನ್ನು ರಕ್ಷಿಸುವ ದಯಾಳುವಾಗಿರಬೇಕೆಂದು ನಾವು ಭಾವಿಸುವ ವೈದ್ಯನೂ, ಅಸಹಾಯಕ ಹೆಣ್ಣುಮಕ್ಕಳ ಅತ್ಯಾಚಾರವನ್ನು ಜನಸಾಮಾನ್ಯರು ಇಂದು ‘ಮಾಮೂಲು’ ಎಂದು ತಿಳಿದುಬಿಟ್ಟಿರುವಂತೆ ಇವರೂ ಭಾವಿಸುವುದಾದರೆ, ನಂಬಿಕೆ ಎಂಬ ಪದಕ್ಕೆ ಅರ್ಥವುಳಿದೀತೆ?

ಜಾಗತೀಕರಣದೊಂದಿಗೆ ಭಾರತವನ್ನು ಪ್ರವೇಶಿಸಿರುವ ವಿದೇಶಿ ಮಾರುಕಟ್ಟೆಯು, ಹೆಣ್ಣಿನ ದೇಹವನ್ನೇ ‘ಸರಕ’ನ್ನಾಗಿ ವಿಜೃಂಭಿಸಲು ನಮ್ಮ ಮಾಧ್ಯಮಗಳನ್ನು ಯಶಸ್ವಿಯಾಗಿ ಅನುವು ಗೊಳಿಸಿದೆ. ಅದರ ಪ್ರಭಾವದಿಂದಾಗಿ, ಹೆಣ್ಣಿನ ದೇಹದ ಮೇಲೆ ‘ಪ್ರಭುತ್ವ’ ಸ್ಥಾಪಿಸಲು, ಅದನ್ನು ‘ಉಪಯೋಗಿಸಿಕೊಳ್ಳಲು’ ಅನೇಕ ಅನೈತಿಕ ಮಾರ್ಗಗಳನ್ನು ನಮ್ಮ ಪುರುಷ ಪ್ರಧಾನ ವ್ಯವಸ್ಥೆ, ತನ್ನ ಮೂಗಿನ ನೇರಕ್ಕೆ ರೂಪಿಸಿಕೊಳ್ಳುತ್ತಿದೆ. sowjanya-rape-murderಹೆಣ್ಣಿನ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಬಲಾತ್ಕಾರದ ಜೊತೆಗೆ ಕಣ್ಮರೆ, ಮಾರಾಟದ ಪ್ರಮಾಣದ ಸೂಚಿ ದಿನದಿಂದ ದಿನಕ್ಕೆ ಏರುತ್ತಿರುವುದೇ ಇದಕ್ಕೆ ಸಾಕ್ಷಿ. ‘ಹೆಣ್ಣುಮಕ್ಕಳ ಮೇಲೆ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆಯೆಂಬ ಅಧ್ಯಯನ ವರದಿ ಸುಳ್ಳಾಗಲಿ’ ಎಂದು ನಾವೆಷ್ಟು ಬೇಡಿಕೊಂಡರೂ, ಇನ್ನೂ ದಾಖಲಾಗದ ಪ್ರಮಾಣವನ್ನು ನೆನೆದು ಉಸಿರು ಕಟ್ಟಿ, ಜೀವ ನಡುಗುತ್ತದೆ. ಭಾರತ ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೊನೆಯಿಂದ ಎರಡನೆಯ ಸ್ಥಾನವನ್ನು ಪಡೆದಿರುವ, ವಿಶ್ವ ಮಟ್ಟದಲ್ಲಿ 80 ದೇಶಗಳಲ್ಲಿ ನಡೆದ ಅಧ್ಯಯನ ವರದಿಯನ್ನಂತೂ ನಾವು ಸುಳ್ಳೆನ್ನುವುದು ಸಾಧ್ಯವಿಲ್ಲವಲ್ಲ!

ವಿಶ್ವವಿದ್ಯಾಲಯವೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ ‘ಸಾರ್ವಜನಿಕ ಗಣ್ಯ’ರೋರ್ವರು, ‘ಪತ್ನಿಯಾದವಳು ಯಾವ ಸಮಾನತೆ, ಸ್ವಾತಂತ್ರ್ಯವನ್ನಾದರೂ ಪಡೆಯಲಿ ಆದರೆ ಗಂಡ ಬಯಸಿದಾಗ ಅವನ ಬಯಕೆ ಪೂರೈಸಬೇಕು’ ಎನ್ನುತ್ತಾರೆ! ಪತ್ನಿಗೆ ಇಷ್ಟವಿಲ್ಲದಿದ್ದಾಗ ಕಾಮ ತೃಪ್ತಿಗಾಗಿ ಪೀಡಿಸುವುದನ್ನೂ ಅತ್ಯಾಚಾರವೆನ್ನುತ್ತದೆ ನಮ್ಮ ಕಾನೂನು. ಹೆಣ್ಣಿಗೂ ಒಂದು ಮನಸ್ಸಿದೆ. ಅದಕ್ಕೂ ತನ್ನದೇ ಇಷ್ಟಾನಿಷ್ಟಗಳಿವೆ ಎಂದು ಗೌರವಿಸದ ಯಾವನೇ ಮಹಾನ್ ಪುರುಷನಾದರೂ ಅವನು ಹೆಣ್ಣಿನ ಕಣ್ಣಲ್ಲಿ ಅನಾಗರಿಕನೇ! ವಿವಾಹ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ಇಂಥಹ ಅಸಂಖ್ಯ ಅತ್ಯಾಚಾರಗಳನ್ನು ಇಂದಿಗೂ ಯಾವ ಹೆಣ್ಣುಮಗಳೂ ಕೇಸು ದಾಖಲಿಸಿ ಪ್ರಶ್ನಿಸಿಲ್ಲ. ಇದಕ್ಕೆ ವಿರುದ್ಧವಾಗಿ ಸರಸ್ವತಿಯಿಂದ ಸಮ್ಮಾನಿತರೆಂದು ಬಿರುದು ಪಡೆದ ನಮ್ಮ ಮಹಾನ್ ಸಾಹಿತಿಗಳೊಬ್ಬರು ಮಾತ್ರ, ಭಾರತದ ಯಾವ ಮೂಲೆಯಲ್ಲೂ ಇಂತಹ ದಾಖಲೀಕರಣ ನಡೆದಿರದಿದ್ದರೂ, ಅಸಲಿಗೆ ಇಂತಹದೊಂದು ಕಾನೂನಿದೆ ಎಂದೂ 99% ಹೆಣ್ಣುಮಕ್ಕಳಿಗೆ ತಿಳಿದಿಲ್ಲದಿರುವಾಗ, ತಮ್ಮ ಕಾದಂಬರಿಯಲ್ಲಿ ಹೆಂಡತಿಯು ಗಂಡ ತನ್ನ ಕಾಮತೃಷೆ ತೀರಿಸಲಿಲ್ಲವೆಂದು ಅವನ ವಿರುದ್ಧವಾಗಿ ನ್ಯಾಯಾಲಯದ ಮೊರೆ ಹೋದ ಘಟನೆಯನ್ನು ವಿಜೃಂಭಿಸಿ ಚಿತ್ರಿಸುವಂತಾ ವಿಕೃತಿಯನ್ನು ಹೊಂದಿದ್ದಾರೆಂದರೆ ಅವರಿಗೆ ಯಾವ ಸನ್ಮಾನ ಮಾಡಿ ಗೌರವಿಸಬೇಕೋ ಅರ್ಥವಾಗುತ್ತಿಲ್ಲ!

ಯೂನಿಸೆಫ್‌ನ ಸ್ಟೇಟ್ ಆಫ್ ದಿ ವರ್ಲ್ಡ್ ಚಿರ್ಲ್ಡನ್-2009 ರ ವರದಿ, ‘47% ಭಾರತೀಯ ಹೆಣ್ಣುಮಕ್ಕಳ ವಿವಾಹ, ಕಾನೂನಿಗೆ ವಿರುದ್ಧವಾಗಿ 18 ವರ್ಷದೊಳಗೇ ನಡೆಯುತ್ತಿದೆ. ಇದರಲ್ಲಿ 56% ರಷ್ಟು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಮತ್ತು ವಿಶ್ವದಲ್ಲಿ ನಡೆಯುವ ಬಾಲ್ಯ ವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುತ್ತವೆ’ ಎಂದು ಹೇಳುತ್ತದೆ. ಬಾಲ್ಯ ವಿವಾಹ ಕಾನೂನಿನ ಕಣ್ಣಿನಲ್ಲಿ ಅಪರಾಧ. IndiaRapeಏಕೆಂದರೆ ಹೆಣ್ಣಿನ ದೇಹ ಆ ವಯಸ್ಸಿಗೆ ಲೈಂಗಿಕ ಕ್ರಿಯೆಗಾಗಲಿ, ಬಸಿರು, ತಾಯ್ತನದ ಬಲವಂತದ ಹೊರೆಗಳನ್ನು ಹೊರಲು ಸಮರ್ಥವಾಗಿರುವುದಿಲ್ಲ. ಹೀಗಿದ್ದೂ ನಮ್ಮ ದೇಶದಲ್ಲಿ ಈ ಪ್ರಮಾಣದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದರೆ ಈ ಪ್ರಮಾಣದ ‘ಸಾಮಾಜಿಕ ಅತ್ಯಾಚಾರ’ಗಳು ನಮ್ಮ ದೇಶದಲ್ಲಿ ಅತ್ಯಂತ ಸಹಜವಾಗಿ ನಡೆಯುತ್ತಿವೆ! ಈ ಅಪರಾಧ ಕಾನೂನಿನಡಿ ದಾಖಲಾಗಿರುವುದೇ ವಿರಳಾತಿ ವಿರಳ! ಹಾಗಿದ್ದ ಮೇಲೆ ನಾವು ನಮ್ಮ ಹೆಣ್ಣುಮಗುವಿನ ದೇಹವನ್ನು ಏನೆಂದು ಭಾವಿಸಿದ್ದೇವೆ ಎಂದು ವಿವರಿಸುವ ಅಗತ್ಯವಿಲ್ಲ ಅಲ್ಲವೇ?

ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿದಂತೆ ಇದುವರೆಗೆ ಧಾರ್ಮಿಕ ಕಟ್ಟು ಪಾಡುಗಳ ಸಂಕೋಲೆಯೊಳಗೆ ನಿಕೃಷ್ಟವಾಗಿ ನರಳುತ್ತಿದ್ದ ಹೆಣ್ಣು ದೇಹ, ಇಂದು ಶೋಷಣೆಯ ಅನೇಕ ಹೊಸ ರೂಪಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಹೊರಟಿರುವುದಕ್ಕಿಂಥಾ ಘೋರ ದುರಂತ ಮತ್ತಿನ್ನೇನಿದೆ? ಇಂದು ದೇವದಾಸಿ ಪದ್ಧತಿ, ಬಸವಿ, ಬೆತ್ತಲೆ ಸೇವೆ, ಜೋಗತಿಯಂಥಾ ಅನಿಷ್ಟ ಪದ್ಧತಿಗಳು ನಿಧಾನಕ್ಕೆ ಕಣ್ಮರೆಯಾಗುತ್ತಿವೆ ಎನ್ನುತ್ತಿರುವಾಗಲೇ, ಅದರ ಅವಳಿ ರೂಪವಾಗಿ ವೇಶ್ಯಾವಾಟಿಕೆಯ ಜಾಲ ವಿಸ್ತೃತವಾಗಿ ನಗರ-ಪಟ್ಟಣವೆನ್ನದೇ ವ್ಯಾಪಕವಾಗಿ ಹಬ್ಬುತ್ತಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ವಿವರಣೆಯಂತೆ ಸಧ್ಯಕ್ಕೆ ದೇಶದಲ್ಲಿ 6.8 ಲಕ್ಷ ‘ದಾಖಲಾದ’ ಲೈಂಗಿಕ ಕಾರ್ಯಕರ್ತೆಯರಿದ್ದಾರೆಂದು ಭಾರತ ಸರ್ಕಾರ ವಿವರಣೆ ನೀಡಿದೆ. ಇದರಲ್ಲಿ ಶೇಕಡ 40 ರಷ್ಟು ಅಪ್ರಾಪ್ತ ಹೆಣ್ಣುಮಕ್ಕಳು! ‘ದಾಖಲಾಗದೇ’ ಹೊರಗುಳಿದವರ ಸಂಖ್ಯೆ ಇದರ ಮೂರರಷ್ಟಿದೆ ಎಂಬ ಅಂದಾಜಿದೆ. ಇದರಲ್ಲಿ ಕಾಲ್‌ಗರ್ಲ್‌ಗಳು, ಹೈಟೆಕ್ ವೇಶ್ಯಾವಾಟಿಕೆ, ವ್ಯಾಪಾರಿಕರಣದ ಲೇಬಲ್ ಇಲ್ಲದ ‘ಸಭ್ಯ-ನಾಗರಿಕ’ ವ್ಯಭಿಚಾರವೂ ಸೇರುತ್ತದೆ.

ಎಳೆಯ ಬಾಲೆಯರನ್ನು, ಹದಿಹರೆಯದವರನ್ನು, ಮಹಿಳೆಯರನ್ನು ಅಪಹರಿಸಿ ಅವರನ್ನು ಅವರ ದೇಹ ಸಂಬಂಧಿ ವ್ಯಾಪಾರಗಳಲ್ಲಿ ತೊಡಗಿಸುವ ದಂಧೆ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ಈ ದಂಧೆಗೆ ಇಂತಹುದೇ ಎಂದು ನಿರ್ದಿಷ್ಟ ಹೆಸರಿಲ್ಲ. ಇದಕ್ಕೆ ಸೇವೆ, ಮನೆಗೆಲಸ, ಪಬ್, ಬಾರ್, ಡಾನ್ಸ್‌ಬಾರ್, ಮಸಾಜ್‌ಪಾರ್ಲರ್, ಪ್ರವಾಸೋದ್ಯಮ ಇತ್ಯಾದಿಗಳ ಮುಖವಾಡವಿದ್ದರೂ ಕೊನೆಗಿದು ವೇಶ್ಯಾವಾಟಿಕೆಯ ದಂಧೆ! ಬೇರೆ ಬೇರೆ ಹೆಸರಿದ್ದರೂ ಸೇವೆಯ ಸ್ವರೂಪ ಮಾತ್ರ ಲೈಂಗಿಕ ಸೇವೆ! ಭಾರತದ ಆರು ಮಹಾನಗರಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಅಪ್ರಾಪ್ತ ಬಾಲೆಯರು ವೇಶ್ಯಾವಾಟಿಕೆಯಲ್ಲಿ ತೊಡಗಬೇಕಾಗಿ ಬಂದಿರುವುದು ನಮ್ಮ ಕಾನೂನು, ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ವಿಶ್ವದಲ್ಲಿ ಮೂರನೆ ಅತಿ ಹೆಚ್ಚು ವ್ಯಾಪಾರಿ ವಹಿವಾಟನ್ನು ಹೊಂದಿರುವ ದಂಧೆ ಎಂದರೆ ಸೆಕ್ಸ್ ದಂಧೆ! [ಮೊದಲನೆಯದು ಮಾರಕಾಸ್ತ್ರ, ಎರಡನೆಯದು ಮಾದಕದ್ರವ್ಯ.] ಈ ಆದ್ಯತೆಗಳೇ ಮನುಷ್ಯ ಸಂಕುಲ ಎತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿಯಾಗಿದೆ. ನಾವು ‘ಮಾನವ ಹಕ್ಕುಗಳ ರಕ್ಷಣೆ’ಯ ಬಗ್ಗೆ ಹೆಣ್ಣನ್ನು ಪಕ್ಕಕ್ಕಿಟ್ಟು, ಗಂಟಲು ಹರಿಯುವಂತೆ ಭಾಷಣ ಮಾಡುತ್ತಿದ್ದೇವೆ. ಹೆಣ್ಣುಮಕ್ಕಳ ದೇಹ ಸದ್ದಿಲ್ಲದೇ ಬಿಕರಿಗೆ ಬಿದ್ದಿದೆ!

ಒಂದೆಡೆ ವೇಶ್ಯಾವಾಟಿಕೆ ಕಾನೂನುಬಾಹಿರವಾದರೂ ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೇ ನಡೆಯುತ್ತಿರುವ ಅಡ್ಡಾಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಮಿತಿಮೀರಿ ಏರುತ್ತಿದೆ. ವೃತ್ತಿನಿರತ ಲೈಂಗಿಕ ಕಾರ್ಯಕರ್ತೆಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಕಾಂಡೊಂಗಳ ವಿತರಣೆ, ಹೆಚ್‌ಐವಿ, ಏಡ್ಸ್, ಇತರ ಲೈಂಗಿಕ ಗುಪ್ತ ರೋಗಗಳ ಕುರಿತು ತಿಳಿವಳಿಕೆ ನೀಡಿ ಸಮಾಜಕ್ಕೆ ಈ ಸೋಂಕು ಹರಡದಂತೆ ‘ಸುರಕ್ಷಿತ ಲೈಂಗಿಕತೆ’ಯ ಪಾಠ ಕಲಿಸಲು ಜಿಲ್ಲಾ ಆರೋಗ್ಯ ಇಲಾಖೆಯಡಿ ದಾಖಲಿಸಿಕೊಳ್ಳಲಾಗುತ್ತಿದೆ. ಸರ್ಕಾರದ ದಾಖಲಿಸುವ ಈ ಕ್ರಮವೇ ಪ್ರಶ್ನಾರ್ಹವಾದುದು! ಅಸಹಾಯಕತೆಗೆ, ಅನಿವಾರ್ಯತೆಗೆ, ಆಕಸ್ಮಿಕಕ್ಕೆ, ವಂಚನೆಯ ಜಾಲಕ್ಕೆ, ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಬಡ-ಗ್ರಾಮೀಣ ಪ್ರದೇಶದ ಮಹಿಳೆಯರು ಬೇರೆ ದಾರಿಯಿಲ್ಲದೇ ವೇಶ್ಯಾವಾಟಿಕೆಗೆ ಇಳಿಯಬೇಕಾಗಿ ಬಂದಿರುವುದು, ನಮ್ಮ ರೋಗಿಷ್ಟ ಸಮಾಜದ ದ್ಯೋತಕವಲ್ಲದೇ ಮತ್ತಿನ್ನೇನು? ಮೋಜಿಗಾಗಿ ಸ್ವಇಚ್ಛೆಯಿಂದ ಈ ದಂಧೆಗೆ ಇಳಿಯುತ್ತಿರುವವರದು ಬೇರೆಯದೇ ಕಥೆ.

ಲೈಂಗಿಕ ಕಾರ್ಯಕರ್ತೆಯರ ಹಿತಾಸಕ್ತಿಗಾಗಿ ದುಡಿಯುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಕೆಲವು ಎನ್‌ಜಿಒಗಳು prostitution-indiaವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸುತ್ತಿವೆ. ‘ನನ್ನ ದೇಹ ನನ್ನ ಹಕ್ಕು’ ಎಂಬ ಕಲ್ಪನೆಯನ್ನು ಬಿತ್ತುತ್ತಿವೆ. ಈಗಾಗಲೇ ಹೆಣ್ಣುಮಕ್ಕಳ ಅಕ್ರಮ ಮಾರಾಟದ ದಂಧೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು, ವ್ಯಾಪಕವಾಗಿರುವ ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ಎತ್ತಿ ತೋರುತ್ತಿವೆ. ಅದರಲ್ಲೂ ತನ್ನ ದೇಹವನ್ನು ಗೌರವಿಸಿಕೊಳ್ಳುವ ಯಾವ ಹೆಣ್ಣು, ಅದು ಮಾರಾಟದ ಸರಕಾಗಬೇಕು ಎಂದು ಬಯಸುತ್ತಾಳೆ? ಬಯಸುವುದೇ ಆದರೆ ಅದಕ್ಕೆ ಕಾರಣ ಅವಳನ್ನು ಹಾಗೆ ರೂಪಿಸಿದ ವ್ಯವಸ್ಥೆಯದೇ ಹೊರತು ಹೆಣ್ಣಿನದಲ್ಲ ಅಲ್ಲವೇ? ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಸಾಧ್ಯತೆಗಳ ಕುರಿತು ಉನ್ನತ ಆರೋಗ್ಯ ಅಧಿಕಾರಿಯೊಡನೆ ಚರ್ಚಿಸುತ್ತಿದ್ದಾಗ, ‘ಎಲ್ಲಿಯವರೆಗೆ ಡಿಮ್ಯಾಂಡ್ ಇರುತ್ತದೋ ಅಲ್ಲಿಯವರೆಗೆ ಸಪ್ಲೈ ಇರಲೇಬೇಕು’ ಎನ್ನುತ್ತಾ ಪುನರ್ವಸತಿ ಎಂಬ ಪರಿಕಲ್ಪನೆಯನ್ನೇ ಅಲ್ಲಗಳೆದುಬಿಟ್ಟರು! ಇದು ನಮ್ಮ ವ್ಯವಸ್ಥೆಯ ರಕ್ಷಣೆಯ ನೀತಿಗೊಂದು ಉದಾಹರಣೆ!

ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳನ್ನು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೆಣ್ಣುಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಅವರನ್ನು ‘ಹದ್ದುಬಸ್ತಿನಲ್ಲಿಡುವುದು’ ಮಾತ್ರ ಅವರ ಮೇಲಿನ ಎಲ್ಲ ರೀತಿಯ ದೌರ್ಜನ್ಯ ತಡೆಗೆ ಪರಿಹಾರ ಎಂದು ಹೇಳಿ ಕೈ ತೊಳೆದುಕೊಂಡು ಬಿಟ್ಟರು! ‘ಗಂಡ ಹೆಂಡತಿಗೆ ಎರಡೇಟು ಕೊಡುವುದು ವೈವಾಹಿಕ ಬದುಕಿನಲ್ಲಿ ಸಾಮಾನ್ಯ, ಅದು ದೌರ್ಜನ್ಯವಲ್ಲ’ ಎಂದು ನಮ್ಮ ಕಾರವಾರದ ತ್ವರಿತ ನ್ಯಾಯಾಲಯವೊಂದು ಮೊನ್ನೆಯಷ್ಟೇ ಆದೇಶದಲ್ಲಿ ಉಲ್ಲೇಖಿಸಿದೆ! ‘ಭೂಗತ ಜಗತ್ತಿನ ಮುಖಂಡರೂ ಮಹಿಳೆಯರನ್ನು ಗೌರವದಿಂದ ಕಾಣಲು ಬಯಸುತ್ತಾರೆ. ಗೌರವಯುತ ಮಹಿಳೆ ಮೇಲೆ ಅತ್ಯಾಚಾರ ನಡೆಯುವುದಿಲ್ಲ’ ಇದು ದೆಹಲಿ ಸಾಮೂಹಿಕ ಅತ್ಯಾಚಾರದ ಪಾತಕಿಗಳ ಪರ ವಕಾಲತ್ತು ವಹಿಸಿರುವ ನ್ಯಾಯವಾದಿ ಮನೋಹರಲಾಲ್ ಶರ್ಮಾ ಅವರ ಹೇಳಿಕೆ. ಇಂತಹ ಅಸೂಕ್ಷ್ಮ ಹೇಳಿಕೆಗಳು, ಯಾರ್‍ಯಾರಿಂದಲೋ! ಅದಿನ್ನೆಷ್ಟೋ! ಖಾಪ್ ಪಂಚಾಯಿತಿ, ಮತೀಯವಾದಿ ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರ ಹೇಳಿಕೆಗಳಿಗೂ, ಇವುಗಳಿಗೂ ಹೆಚ್ಚು ವ್ಯತ್ಯಾಸವೇನಾದರೂ ಇದೆಯೇ? ಅವರಂತೂ ನಮ್ಮ ಸಂವಿಧಾನದ ಆಶಯಗಳಿಗೆ ಬದ್ಧರಾಗಿಲ್ಲದವರು, ವಸ್ತುಸ್ಥಿತಿಯನ್ನು ವೈಚಾರಿಕವಾಗಿ ವಿವೇಚಿಸಲರಿಯದ ಮೂರ್ಖರು ಎಂದು ನಿರ್ಲಕ್ಷಿಸಿ ಪಕ್ಕಕ್ಕಿಟ್ಟುಬಿಡಬಹುದು. ಆದರೆ……..

ಇಂದು ಕಾನೂನು, ಪೊಲೀಸ್, ಆರೋಗ್ಯ……ಹೀಗೆ ರಕ್ಷಣೆ ನೀಡಬೇಕಾದ ಎಲ್ಲ ವ್ಯವಸ್ಥೆಗಳೂ ಯಥಾಸ್ಥಿತಿಯನ್ನು ನಾಜೂಕಾಗಿ ಕಾಯ್ದುಕೊಳ್ಳುತ್ತಾ, police-atrocity-womenಒಂದೆಡೆ ಹೆಣ್ಣನ್ನು ಸರಕೆಂಬಂತೆ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತಾ, ಇನ್ನೊಂದೆಡೆ ಅವಳಿಗೆ ನೈತಿಕತೆಯ ಬೋಧೆ ನೀಡುತ್ತಾ, ಮತ್ತೊಂದೆಡೆ ಅವಳನ್ನು ಉದ್ಧರಿಸುವ, ರಕ್ಷಿಸುವ ನಾಟಕವಾಡುತ್ತಿರುವಾಗ, ಈ ವ್ಯವಸ್ಥೆಯ ಕಣ್ಣು ತೆರೆಸುವುದು ಹೇಗೆ? ‘ಮಹಿಳಾ ಸ್ನೇಹಿ’ ಹಾಗೂ ‘ಲಿಂಗ ಸೂಕ್ಷ್ಮತೆ’ಯ ಎಚ್ಚರವನ್ನು ಸಮಾಜ ಕಲಿತುಕೊಳ್ಳುವ ಮೂಲಕ ಮಾತ್ರ ಮಹಿಳಾ ಸಮಾನತೆಯ ಕನಸಿನೆಡೆಗೆ ಮೊದಲ ಹೆಜ್ಜೆಯನ್ನು ಇಡಲು ಸಾಧ್ಯ ಎಂದು ನಂಬಿರುವ ಎಚ್ಚೆತ್ತ ಹೆಣ್ಣುಮಕ್ಕಳಿಂದು, ಮೊದಲಿಗೇ ಸಂವಿಧಾನಬದ್ಧವಾದ ಆಶಯಗಳಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ನಮ್ಮ ನ್ಯಾಯಾಂಗಕ್ಕೆ, ಮಾಧ್ಯಮಕ್ಕೆ, ಸರ್ಕಾರಿ ಆಡಳಿತ ಯಂತ್ರಕ್ಕೆ ಈ ಪಾಠವನ್ನು ಹೇಳಿಕೊಡಬೇಕಾಗಿ ಬಂದಿರುವುದನ್ನು ಯಾವ ಕರ್ಮವೆನ್ನೋಣ? ನಾವು ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಪಡೆದಿರುವ ಪ್ರಜಾಪ್ರಭುತ್ವವಾದಿ ದೇಶದಲ್ಲಿರುವ ಪ್ರಜೆಗಳೆಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತಿದೆ! ಇಂತಹುದ್ದೊಂದು ವ್ಯವಸ್ಥೆಯ ಬಗ್ಗೆ ಹೆಣ್ಣುಮಕ್ಕಳು ಸಂಪೂರ್ಣವಾಗಿ ‘ನಂಬಿಕೆ’ ಕಳೆದುಕೊಳ್ಳುವ ಮೊದಲು ಸಮಾಜ ಎಚ್ಚೆತ್ತುಕೊಳ್ಳುವುದೇ?

ಗರ್ಭಕ್ಕೇ ದಾಳಿಯಿಟ್ಟ ವೈದ್ಯಕೀಯ ಕ್ರೌರ್ಯ!

ಹೊರಗಿನ ಅತ್ಯಾಚಾರ ಕಣ್ಣಿಗೆ ಕಾಣುವಂತದ್ದು. ಆದರೆ ಆಧುನಿಕ ವೈದ್ಯಕೀಯ ಆವಿಷ್ಕಾರಗಳು ಹೆಣ್ಣಿನ ಗರ್ಭಕ್ಕೇ ನೇರವಾಗಿ ದಾಳಿಯಿಟ್ಟು ಹೆಣ್ಣು ಸಂತತಿಯನ್ನು ಬೇರು ಸಹಿತ ನಾಶ ಮಾಡುವ ಅಮಾನುಷ ಅತ್ಯಾಚಾರದಲ್ಲಿ ನಿರತವಾಗಿರುವ ವೈದ್ಯಕೀಯ ಅಪರಾಧದಲ್ಲಿ ತೊಡಗಿರುವವರು ಮುಗ್ಧರೋ, ಮೂಢರೋ ಅಲ್ಲ. ನಾವು ದೇವರ ಸಮಾನವೆಂದು ನಂಬಿರುವ ಸಾಕ್ಷಾತ್ ವೈದ್ಯರು! ಈ ಕೃತ್ಯದ ನೇರ ಹೊಣೆಗಾರರು ಅವರೇ. ಜೀವ ರಕ್ಷಕನೇ, ಹೆಣ್ಣನ್ನು ಭ್ರೂಣದಲ್ಲೇ ಹೊಸಕಿ ಕೊಲೆ ಮಾಡಲು ನಿಂತರೆ ಅಸಹಾಯಕ ಹೆಣ್ಣು ಜೀವವನ್ನು ಇನ್ನಾರು ರಕ್ಷಿಸಬೇಕು?

ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳಲು ಗಂಡು ಸಂತತಿಗಿಂತ ಹೆಣ್ಣು ಸಂತತಿಯ ಪ್ರಮಾಣವನ್ನು ಹೆಚ್ಚಾಗಿ ಸೃಷ್ಟಿಸಿರುತ್ತದೆ. ಏಕೆಂದರೆ ವಂಶಾಭಿವೃದ್ಧಿ ಮಾಡುವ ಜವಾಬ್ದಾರಿ ಹೆಣ್ಣು ಜೀವದ ಮೇಲಿರುತ್ತದೆ. ಇದು ಎಲ್ಲ ಪ್ರಾಣಿ ಸಂತತಿಗೂ ಅನ್ವಯವಾಗುತ್ತದೆ. ಮನುಷ್ಯ ಶಿಕ್ಷಿತನೂ ನಾಗರಿಕನೂ ಆದಷ್ಟೂ ತನ್ನ ಸಹಜೀವಿಯೊಂದಿಗಿನ ಸಹೃದಯತೆ ಹೆಚ್ಚಾಗಬೇಕು. ಪ್ರಕೃತಿಯ ಈ ಆಶಯವನ್ನು ಅರ್ಥಮಾಡಿಕೊಳ್ಳಬೇಕು. ಆದರೆ ಆಗುತ್ತಿರುವುದೇನು? ‘ಹೆಣ್ಣು ಸಂಗಾತಿಯಾಗಿ ಬೇಕು. ಆದರೆ ಮಗಳಾಗಿ ಬೇಡ.’ ಎಂಬ ಮನೋಭಾವ ಸಮಾಜದಲ್ಲಿ ಹೆಚ್ಚುತ್ತಾ ಸಾಗಿದಂತೆ ವರ್ಷದಿಂದ ವರ್ಷಕ್ಕೆ ಹೆಣ್ಣುಮಕ್ಕಳ ಸಂತತಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಅದರಲ್ಲೂ 0-6 ವರ್ಷದ ಹೆಣ್ಣುಮಕ್ಕಳು 2011 ರಲ್ಲಿ ದೇಶದಲ್ಲಿ ಪ್ರತಿ 1000 ಪುರುಷರಿಗೆ 914 ಕ್ಕೆ ಇಳಿದಿದ್ದು, foeticideಕರ್ನಾಟಕದಲ್ಲಿ 943 ಕ್ಕೆ ಇಳಿದಿದ್ದಾರೆ. ಅಂದರೆ ಒಂದು ವರ್ಷದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಭೂಮಿಗೇ ಬರದೇ ಕಣ್ಮರೆಯಾಗುತ್ತವೆ. ಒಂದು ಅಂದಾಜಿನಂತೆ ಪ್ರತಿ ವರ್ಷ 6 ಲಕ್ಷ ಹೆಣ್ಣು ಜೀವಗಳು ಭ್ರೂಣದಲ್ಲೇ ಹತವಾಗುತ್ತಿವೆ. ಈ ಅಗಾಧ ಪ್ರಮಾಣದ ಗಂಡು ಹೆಣ್ಣಿನ ನಡುವಿನ ವ್ಯತ್ಯಾಸದಿಂದ ಸಂಗಾತಿಯಾಗಿ ಹೆಣ್ಣು ದೊರಕದೇ, ಈಗಾಗಲೇ ರಾಜಸ್ಥಾನ, ಹರಿಯಾಣ ಮುಂತಾದ ರಾಜ್ಯಗಳು ಹೆಣ್ಣು ವಧುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಒಂದೇ ಹೆಣ್ಣು ಹಲವು ಪುರುಷರ ಕಾಮನೆಗಳನ್ನು ತಣಿಸುವ ‘ವಸ್ತು’ವಾಗಿ ಬಳಸುವಂತಾ ಸ್ಥಿತಿ ನಿರ್ಮಾಣವಾಗುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಭ್ರೂಣ ಹತ್ಯೆಯೂ ಒಂದು ಮುಖ್ಯ ಕಾರಣವೆಂದು ಸಮಾಜ ವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಹೆಣ್ಣಿನ ಹೊರ ದೇಹದ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಈಗ ಗರ್ಭಕ್ಕೇ ಇಳಿದು, ಅನೈಸರ್ಗಿಕವಾಗಿ ಅವಳ ಸಂತತಿಯನ್ನು ಹೊಸಕಿ ಸಾಯಿಸುತ್ತಿದೆ!

ಗರ್ಭಧಾರಣೆ ಮತ್ತು ಪ್ರಸವ ಪೂರ್ವ ರೋಗ ನಿದಾನ ತಂತ್ರಗಳ [ಲಿಂಗ ಆಯ್ಕೆ ನಿಷೇಧ] ಅಧಿನಿಯಮ 1994 ಕಾಯ್ದೆ ಇದ್ದರೂ, ಅದರ ಪರಿಣಾಮಕಾರಿ ಜಾರಿಯಾಗದೇ, ಅಕ್ರಮ ಹೆಣ್ಣು ಭ್ರೂಣ ಹತ್ಯೆಗೆ ತಡೆ ಒಡ್ಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಇಂದು ರಾಜ್ಯಾದ್ಯಂತ ಸುಮಾರು 4000 ಅಲ್ಟ್ರಾಸೌಂಡ್ ಸ್ಕ್ಯಾಂನಿಗ್ ಮೆಷಿನ್‌ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರೊಂದರಲ್ಲೇ ಈಗ 1200 ಇಂತಹ ಮೆಷಿನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಕಳೆದ 2-3 ದಶಕಗಳಿಂದ ಅವ್ಯಾಹತವಾಗಿ ಸಾಗಿರುವ ಈ ಭ್ರೂಣಹತ್ಯೆಯ ‘ಸಾಂಸ್ಕೃತಿಕ ಅತ್ಯಾಚಾರ’ ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಸಂಪೂರ್ಣ ವಿಫಲವಾಗಿವೆ. ಈಗ ಅವಳನ್ನು ಇನ್ಯಾರು ರಕ್ಷಿಸುವವರು?

ಬಹುಶಃ ಹೆಣ್ಣುಮಕ್ಕಳೇ ಎಚ್ಚೆತ್ತು ತಮ್ಮ ಸಂತತಿಯನ್ನು ಉಳಿಸಿಕೊಳ್ಳುವ ದೃಢ ಸಂಕಲ್ಪ ಮಾಡದಿದ್ದರೆ, ‘ಅವಳ’ನ್ನು ಉಳಿಸಲು ಯಾವ ದೇವರಿಗೂ ಸಾಧ್ಯವಿಲ್ಲವೇನೋ!

ಮಹಿಳಾ ಸಬಲೀಕರಣದ ಅರ್ಥ ವ್ಯಾಪ್ತಿ

– ರೂಪ ಹಾಸನ

ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣದ ಮಾತು ಮತ್ತೆ ಮತ್ತೆ ಕೇಳಿಬರುತ್ತಿದೆ. 70ರ ದಶಕದಲ್ಲಿ ಸ್ತ್ರೀವಾದದ ಅಲೆ ಬೀಸತೊಡಗಿದಾಗ ಆರ್ಥಿಕ ಸ್ವಾತಂತ್ರ್ಯವೇ ಮಹಿಳಾ ಸಮಾನತೆಯ, ಸಬಲೀಕರಣದ ಪ್ರಮುಖ ಅಸ್ತ್ರ ಎಂಬಂತೆ ಬಿಂಬಿತವಾಗಿತ್ತು. ಆ ಕಾಲಕ್ಕೆ ಅದು ನಿಜವೂ ಆಗಿತ್ತು. ಅನಾದಿ ಕಾಲದಿಂದಲೇ ಹೆಣ್ಣು ಕೃಷಿ, ಹೈನುಗಾರಿಕೆ, ಗೃಹಕೃತ್ಯ, ಗುಡಿಕೈಗಾರಿಕೆಗಳಲ್ಲಿ ತೊಡಗಿಕೊಂಡು ಆರ್ಥಿಕ ಉತ್ಪಾದನೆಯಲ್ಲಿ ಸಹಾಯಕಿ ಎನ್ನುವ ರೀತಿ ಪಾಲ್ಗೊಳ್ಳುತ್ತಲೇ ಬಂದಿದ್ದಾಳೆ. ಆದರೆ ಅವಳ ಕೆಲಸವನ್ನು, ಶ್ರಮವನ್ನು ಸೇವೆ ಎಂಬ ಸೀಮಿತ ಚೌಕಟ್ಟಿಗೆ ಸಿಲುಕಿಸಿ ಅದನ್ನು ಆರ್ಥಿಕ ಮೌಲ್ಯದ ಲೆಕ್ಕಾಚಾರದಲ್ಲಿ ಗಣನೆಗೇ ತೆಗೆದುಕೊಳ್ಳದೇ ಇರುವಂತಾ ದುರಂತ ಇವತ್ತಿಗೂ ನಡೆದೇ ಇದೆ. ಹೀಗೆಂದೇ ಮೊನ್ನೆಯ ನಮ್ಮ ಜನಗಣತಿಯ ಲೆಕ್ಕಾಚಾರವೂ ಇಂತಹ ಮಹಿಳೆಯರನ್ನು ಅನುತ್ಪಾದಕರು ಎಂದು ಅಮಾನವೀಯವಾಗಿ women-empowermentವಿಂಗಡಿಸಿ ಪಕ್ಕಕ್ಕಿಟ್ಟುಬಿಡುತ್ತದೆ! ಆದರೆ ಅವರ ಸೇವೆ ಬೆಲೆಕಟ್ಟಲಾಗದಂತದ್ದು ಎಂಬುದೂ ಅಷ್ಟೇ ಮುಖ್ಯವಾದುದು. ಮಹಿಳೆಯರನ್ನು ಆರ್ಥಿಕ ಉತ್ಪಾದನೆಯಡಿ ಲೆಕ್ಕಹಾಕಲು ಸಾಧ್ಯವಾಗದುದಕ್ಕೆ ಮುಖ್ಯ ಕಾರಣ ಮಹಿಳೆಯರ ಆರ್ಥಿಕ ಚಟುವಟಿಕೆಯ ಪ್ರಾರಂಭ ಮತ್ತು ಗೃಹ ಕೆಲಸದ ಅಂತ್ಯ ಎಲ್ಲಿ ಎಂದು ವಿಂಗಡಿಸುವುದೇ ಸಾಧ್ಯ ಆಗದೇ ಇರುವಂಥದು. ಮಹಿಳೆ ಮಾಡುವಂತಾ ಮನೆಗೆಲಸ, ಮಕ್ಕಳ ಲಾಲನೆ-ಪಾಲನೆ, ಕುಟುಂಬ ನಿರ್ವಹಣೆ ಇತ್ಯಾದಿಗಳಿಗೆ ತಗುಲುವ ಶ್ರಮ ಮತ್ತು ಸಮಯಗಳು ಎಲ್ಲಿಯೂ, ಎಂದಿಗೂ ದಾಖಲಾಗುವುದೇ ಇಲ್ಲ. ಅದಕ್ಕೆ ಆರ್ಥಿಕ ಮೌಲ್ಯ, ಉತ್ಪಾದನಾ ಸಾಮರ್ಥ್ಯ ಇಲ್ಲದಿರುವುದೇ ಕಾರಣ ಎಂದು ಅರ್ಥಶಾಸ್ತ್ರ್ಞರು ಪ್ರತಿಪಾದಿಸುತ್ತಾರೆ. ಈ ಕಾರಣದಿಂದಾಗಿಯೇ ಹಲವು ಬಾರಿ ಮಹಿಳೆಯ ಬಹಳಷ್ಟು ಸಾಮರ್ಥ್ಯಗಳೂ ಪರಿಗಣನೆಗೇ ಬಾರದೇ ಹೋಗುತ್ತಿರುವುದು ದುರಂತವಲ್ಲವೇ?

ಸಬಲೀಕರಣವನ್ನು ನಾವು ಹಲವು ಬಾರಿ ನಗರ ಕೇಂದ್ರಿತವಾಗಿ ಮಾತ್ರ ಚರ್ಚಿಸುತ್ತಿರುತ್ತೇವೆ. ವಿದ್ಯೆ ಕಲಿತ, ಬಿಳಿ ಕಾಲರಿನ ಕೆಲಸದಲ್ಲಿ ತೊಡಗಿಕೊಂಡ, ನಯಗಾರಿಕೆಯ ತಿಳಿವಳಿಕೆ ಇರುವ ಮಹಿಳೆಯರು ಮಾತ್ರ ಸಬಲೆಯರು, ಮನೆವಾರ್ತೆ ನೋಡಿಕೊಳ್ಳುವ ಗೃಹಿಣಿಯರು, ಗ್ರಾಮೀಣ, ಕೃಷಿ ಹಾಗೂ ಅದನ್ನಾಧಾರಿತ ಕೆಲಸಗಳಲ್ಲಿ ತೊಡಗಿಕೊಂಡಿರುವ, ಕಚ್ಚಾ ಸಾಮರ್ಥ್ಯವನ್ನು ಹೊಂದಿರುವ ಅಸಂಘಟಿತ ವಲಯದ ಮಹಿಳೆಯರು ಸಬಲೆಯರಲ್ಲ ಎನ್ನುವ ಒಂದು ತಪ್ಪು ತಿಳಿವಳಿಕೆ ನಮ್ಮನ್ನಾವರಿಸಿರುತ್ತದೆ. ಆದರೆ ಎಷ್ಟೋ ಬಾರಿ ವಿದ್ಯೆ ಕಲಿತು, ಉದ್ಯೋಗಸ್ಥೆಯಾಗಿದ್ದರೂ ಸಮಯಾಭಾವದಿಂದ ತನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿರದ ವಿದ್ಯಾವಂತ ಹೆಣ್ಣು ಮಕ್ಕಳ ಸಂಖ್ಯೆ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದೂ ಗಮನಾರ್ಹ.

ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಆರ್ಥಿಕ ಚಟುವಟಿಕೆಗಳನ್ನು ಅಳೆಯುವುದು ಮತ್ತು ಅದನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸುವುದೇ ಕಷ್ಟದ ಕೆಲಸ. ಅದರಲ್ಲೂ ಅವರ ಕೆಲಸಗಳು ವೈವಿಧ್ಯಮಯವಾಗಿರುವುದರಿಂದ ಅದು ಇನ್ನೂ ಕ್ಲಿಷ್ಟ. ಅವರ ಕೆಲಸ ಪದೇ ಪದೇ ಬದಲಾಗುತ್ತಿರುತ್ತದೆ. ಅವರು ಉತ್ಪಾದಿಸಿದ ವಸ್ತುಗಳು ಮಾರುಕಟ್ಟೆಯನ್ನು ಪ್ರವೇಶಿಸುವುದೇ ಇಲ್ಲ. ಅಥವಾ ಕೆಲವು ಪ್ರಮಾಣದಲ್ಲಿ ಮಾತ್ರ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಜೊತೆಗೆ ಅವರ ಉತ್ಪಾದನೆ ಕೆಲವು ಪ್ರಮುಖ ಉತ್ಪಾದನೆಗೆ ಪೂರಕವಾಗಿ ಮಾತ್ರ ಇರಬಹುದು. ಅಂದರೆ ಮಹಿಳೆಯರ ಶ್ರಮವನ್ನು ಇಲ್ಲೆಲ್ಲಾ ಸ್ವತಂತ್ರವಾಗಿ ಬೆಲೆ ಕಟ್ಟಲಾಗ್ತಾ ಇಲ್ಲ. ಈ ಎಲ್ಲ ಕಾರಣಗಳಿಂದ ಮಹಿಳೆಯರ ಆರ್ಥಿಕ ಪಾತ್ರವನ್ನು ನಿರ್ಧರಿಸುವಲ್ಲಿ ಈಗಿರುವಂತಾ ವ್ಯಾಖ್ಯೆ ಮತ್ತು ಮಾಹಿತಿ ಅಸಮರ್ಪಕವಾಗಿದೆ ಎಂಬುದು ಮುಖ್ಯವಾದ ಅಂಶವಾಗಿದೆ. ಈ ಕಾರಣಗಳಿಂದಾಗಿ ಸಬಲೀಕರಣದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕಾದ ಅವಶ್ಯಕತೆ ಹೆಚ್ಚಾಗಿದೆ.

ಸಬಲೀಕರಣದ ಭಾಗವಾಗಿ 20ನೇ ಶತಮಾನದಲ್ಲಿ ಅಧಿಕಾರವನ್ನೂ ಸೇರಿಸುತ್ತಾ ಬಂದಿದ್ದೇವೆ. ಅಂದರೆ ಆರ್ಥಿಕತೆ ಹಾಗೂ ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವುದೇ ಮಹಿಳಾ ಸಬಲೀಕರಣದ ಗುರಿ ಎನ್ನುವ ಸೀಮಿತ ಅರ್ಥವನ್ನೇ ಇತ್ತೀಚೆಗೆ ಎತ್ತಿಹಿಡಿಯಲಾಗುತ್ತಾ ಇದೆ. woman-unchainedಆದರೆ ಹಣ ಹಾಗೂ ಅಧಿಕಾರವನ್ನು ಹೇಗಾದರೂ ಸರಿ ಸ್ವಾಧೀನಪಡಿಸಿಕೊಳ್ಳುವುದೇ ಮುಖ್ಯ ಎಂದಾದಾಗ ಅದರ ಮಾರ್ಗಗಳ ಕಡೆ ಹೆಚ್ಚಿನ ಗಮನ ಕೊಡದೆ, ಅದನ್ನು ಪಡೆದ ನಂತರ ಉಪಯೋಗಿಸುವ ವಿಧಾನ, ಕ್ರಮಗಳ ಅರಿವಿಲ್ಲದಾಗ ಬೇರೆಯವರು ಇಂತಹ ಹೆಣ್ಣುಮಕ್ಕಳ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅದಕ್ಕೆ ಹಲವಾರು ಉದಾಹರಣೆಗಳು ಇಂದು ನಮ್ಮ ಕಣ್ಣ ಮುಂದೆಯೇ ಇದೆ.

ಹೀಗೆಂದೇ ಸಬಲೀಕರಣ ಎನ್ನುವುದು ಹೊರಗಿನ ಐಹಿಕ ವಸ್ತುಗಳ ಸ್ವಾಧೀನ ಪಡಿಸಿಕೊಳ್ಳುವಿಕೆ ಮಾತ್ರವಾಗಿರದೇ ಮುಖ್ಯವಾಗಿ ಮಾನಸಿಕ, ಬೌದ್ಧಿಕ ಹಾಗೂ ಭೌತಿಕ ಗಟ್ಟಿತನದ, ಸಬಲತೆಯ ಸಂಕೇತವಾಗಿ ಮೂಡಿಬರಬೇಕು. ಮಹಿಳೆ ತಾನು ಒಳಗಾಗಬಹುದಾದ ಎಲ್ಲ ರೀತಿಯ ಶೋಷಣೆಗಳಿಂದ ಮುಕ್ತಳಾಗುವುದು, ಸಂತೋಷದಿಂದ, ಸಮಾಧಾನದಿಂದ ತಾನೂ ಒಬ್ಬ ವ್ಯಕ್ತಿ ಅದಕ್ಕೆ ಗೌರವ ದೊರಕಬೇಕು ಎಂಬ ಅರಿವಿನಿಂದ ಬದುಕುವುದೇ ಅವಳು ಸ್ವತಂತ್ರಳಾಗುವ, ಪುರುಷನಿಗೆ ಸಮಾನಳಾಗುವ, ಒಳಮುಖಗಳಿಂದ ಸಬಲಳಾಗುವ ಸಂಕೇತ. ಇವುಗಳನ್ನು ಪಡೆಯಲು ತನ್ನ ಅರಿವಿನ ಪರಿಧಿಯನ್ನು ಹಿಗ್ಗಿಸಿಕೊಳ್ಳಬೇಕಿರುವುದು ತುಂಬಾ ಮುಖ್ಯ. ಈ ಅರಿವು ಬರುವುದು ಶಿಕ್ಷಣದಿಂದ. ಶಿಕ್ಷಣ ಅಂದರೆ ತರಗತಿಯ ಓದು-ಬರಹ ಮಾತ್ರ ಅಲ್ಲ. ಅದು ಹೊರಗಿನ ಪ್ರಪಂಚದಲ್ಲಿ ದಿನನಿತ್ಯದ ವ್ಯಾವಹಾರಿಕ ಆಗು ಹೋಗಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಪ್ರತಿಯೊಬ್ಬ ನಾಗರಿಕನೂ ತಿಳಿದಿರಲೇ ಬೇಕಾದಂತಾ ಮೂಲಭೂತ ತಿಳಿವಳಿಕೆಯನ್ನೂ ಒಳಗೊಂಡಿರುತ್ತದೆ. ಈ ತಿಳಿವಳಿಕೆ ಕಾನೂನಿಗೆ ಸಂಬಂಧಿಸಿದ್ದಾಗಿರಬಹುದು, ಆರೋಗ್ಯಕ್ಕೆ ಸಂಬಂಧಿಸಿದ್ದಾಗಿರಬಹುದು, ಕುಟುಂಬ ಯೋಜನೆಗೆ ಸಂಬಂಧಿಸಿದ್ದಾಗಿರಬಹುದು, ಗ್ರಾಮ ಹಾಗು ವೈಯಕ್ತಿಕ ಸ್ವಚ್ಛತೆಯನ್ನ ಒಳಗೊಂಡಿರಬಹುದು, ಬ್ಯಾಂಕ್ ವ್ಯವಹಾರ, ಸಾಲ ಸೌಲಭ್ಯ, ಸಂಚಾರಿ ನಿಯಮ, ಸರ್ಕಾರಿ ಯೋಜನೆಗಳು, ಅದರಿಂದ ದೊರಕುವ ಸೌಲಭ್ಯ, ಅನುಕೂಲಗಳು ಹೀಗೆ… ನಾಗರಿಕ ಬದುಕಿಗೆ ಸಂಬಂಧಿಸಿದಂತಾ ಎಲ್ಲದರ ಬಗ್ಗೆ ಮಹಿಳೆಯರು ಅರಿವನ್ನು ಮೂಡಿಸಿಕೊಳ್ಳುತ್ತಾ ಹೋದಾಗ ಮಾತ್ರ ಸಬಲೀಕರಣಕ್ಕೆ ನಿಜವಾದ ಅರ್ಥ ಬರುತ್ತದೆ. ಮಹಿಳೆಯ ಸರ್ವತೋಮುಖ ಸಬಲೀಕರಣವಾಗಬೇಕೆಂದರೆ ಮಹಿಳೆ ತಳಮಟ್ಟದಿಂದ ಉನ್ನತಮಟ್ಟದವರೆಗೆ ಸಾಮಾಜಿಕವಾಗಿ ಪಾಲ್ಗೊಳ್ಳಬೇಕು. ಹೀಗೆಂದೇ ಅಂತಹ ಸಾಧ್ಯತೆಗಳನ್ನು ವಿಸ್ತರಿಸುವ ಪ್ರಯತ್ನವೇ ಮಹಿಳಾ ಸಬಲೀಕರಣದೆಡೆಗಿನ ಮೊದಲ ಪ್ರಯತ್ನವೆನಿಸುತ್ತದೆ.

ಕನ್ನಡದಲ್ಲಿ ಮಕ್ಕಳ ಪತ್ರಿಕೆಗಳು

– ರೂಪ ಹಾಸನ

ನಮ್ಮ ಸಮಾಜದಲ್ಲಿ ಅತ್ಯಂತ ನಿರ್ಲಕ್ಷಿತರು ಎಂದರೆ ಮಕ್ಕಳು. ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿವಳಿಕೆ, ಸಂಘಟನೆ ಹಾಗೂ ದನಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ಸಮಾಜದ ಕೆಳವರ್ಗ, ತಳಸಮುದಾಯ, ರೈತ, ಕಾರ್ಮಿಕ, ಮಹಿಳೆ ಹಾಗೂ ಅಸಹಾಯಕ ವರ್ಗಕ್ಕೆ ಇವತ್ತು ತಮ್ಮ ಹಕ್ಕುಗಳ ಬಗ್ಗೆ ಒಂದಿಷ್ಟಾದರೂ ತಿಳಿವಳಿಕೆ, ಜಾಗೃತಿ ಮೂಡಿರುವುದರಿಂದ ಅವರು ಅದಕ್ಕಾಗಿ ದನಿಯೆತ್ತಿ ಕೇಳುವಂತಾ, ಸಂಘಟಿತರಾಗುವಂತಾ, ಹೋರಾಟ ಮಾಡುವಂತಾ ಹಂತವನ್ನು ತಲುಪಿದ್ದಾರೆ. ಆದರೆ ಮಕ್ಕಳು ಮುಗ್ಧರು ಮತ್ತು ಅಸಹಾಯಕರು ಆಗಿರುವುದರಿಂದ ಅವರು ಸಮಾಜದಲ್ಲಿ ಇನ್ನೂ ನಿರ್ಲಕ್ಷಿತರಾಗೇ ಉಳಿದಿದ್ದಾರೆ. ಮಕ್ಕಳ ಕುರಿತಾಗಿ ಈ ಎಲ್ಲ ಮಾತುಗಳನ್ನ ಯಾಕೆ ಹೇಳುತ್ತಿದ್ದೇನೆ ಎಂದರೆ ಮಕ್ಕಳು ನಿರ್ಲಕ್ಷಿತರಾಗಿರುವುದರಿಂದ ಮಕ್ಕಳ ಸಾಹಿತ್ಯವೂ ನಿರ್ಲಕ್ಷಿತವಾಗಿದೆ. ಹಾಗೇ ಮಕ್ಕಳ ಪತ್ರಿಕೆಗಳ ಬಗೆಗೆ, ಪತ್ರಿಕೆಗಳಲ್ಲಿ ಮಕ್ಕಳ ಬಗೆಗೆ ನಮ್ಮ ಗಮನ ಕೂಡ ಕಡಿಮೆ ಇದೆ. ನಮ್ಮಲ್ಲಿ ಮಕ್ಕಳ ಪತ್ರಿಕೋದ್ಯಮ ಎನ್ನುವಂತಾ ವಿಚಾರವೇ ಇನ್ನೂ ಜಾಗೃತಗೊಂಡಿಲ್ಲ ಎಂದರೆ ತಪ್ಪಾಗಲಾರದು.

ಇವತ್ತಿಗೂ ನಮ್ಮಲ್ಲಿ ಮಕ್ಕಳ ಸ್ವತಂತ್ರ ಲೋಕದ ಬಗ್ಗೆ ನಮಗೆ ಅನುಮಾನ ಇದೆ. ನಮ್ಮಲ್ಲಿ ಬಾಲ್ಯ ಎಂದರೆ ಒಟ್ಟು ಬದುಕಿನ ತಯಾರಿ ಎಂದೇ ನೋಡುವುದರಿಂದ ಧಾರ್ಮಿಕ ಚೌಕಟ್ಟಿನಲ್ಲಿಯೇ, ನೈತಿಕತೆಯ ಹಿನ್ನೆಲೆಯಲ್ಲಿಯೇ ಮಕ್ಕಳನ್ನ ಬೆಳೆಸುವ ಪರಿಪಾಠವಿದೆ. ಹಿರಿಯರೇ ಮಕ್ಕಳ ಎಲ್ಲವನ್ನೂ ನಿರ್ಧರಿಸುವಂತಾ, ಅವರ ಭವಿಷ್ಯದ ಬಗ್ಗೆ ಗೊತ್ತುಪಡಿಸುವಂತದ್ದನ್ನ ನಾವು ಕಾಣುತ್ತೇವೆ. ಹಾಗಾಗೇ ನೀತಿಕಥೆಗಳು, ಪುರಾಣದ ಕಥೆಗಳು, ಆದರ್ಶ ಪುರುಷರ, ಸಾಧಕರ ಕಥೆಗಳು, ಧಾರ್ಮಿಕ ನಡವಳಿಕೆ, ವಿಧೇಯತೆಯ ಪಾಠಗಳಿಗೆ ಬಾಲ್ಯದಲ್ಲಿ ಆದ್ಯತೆ ನೀಡಲಾಗುತ್ತದೆ. ಹಾಗೆ ನೋಡಿದರೆ ನಮ್ಮ ಜಾನಪದ ಸಾಮಗ್ರಿ ಅದ್ಭುತವಾದುದ್ದು. ಅದು ಕಲ್ಪನೆಯ ಮಾನವ ಸಹಜ ತುಡಿತವನ್ನ ಹೊತ್ತುಕೊಂಡಿದೆ. ಇದನ್ನ ಬಳಸಿಕೊಂಡೇ ನಮ್ಮ ಕಾಮಿಕ್‌ಗಳು ರೂಪುಗೊಂಡಿರುವುದು.

ಮಕ್ಕಳ ಕಲ್ಪನಾಶಕ್ತಿಯನ್ನು, ಜ್ಞಾನ, ಅನುಭವಗಳನ್ನು ವಿಸ್ತರಿಸುವ, ಅವರ ಮನಸ್ಸನ್ನು ಅರಳಿಸುವ ನಿಟ್ಟಿನಲ್ಲಿ, ರಂಜನೆ, ಮಾಹಿತಿ, ಶಿಕ್ಷಣ, ಸಮಸ್ಯೆಗಳ ಅರಿವಿನ ವಿಸ್ತರಣೆ ಮತ್ತು ಸಂತೋಷದ ಸಮಯ ಕಂಡುಕೊಳ್ಳುವಲ್ಲಿ ಪತ್ರಿಕೆ ಅತ್ಯಂತ ಅನಿವಾರ್ಯವಾದದ್ದು. ದೊಡ್ಡವರ ಪತ್ರಿಕೆ ರೂಪುಗೊಂಡ ಅನೇಕ ದಶಕಗಳ ನಂತರ ಮಕ್ಕಳ ಮಾಧ್ಯಮ ಸಾಧ್ಯತೆಯ ಬಗ್ಗೆ ಹಿರಿಯರು ಯೋಚಿಸಿದರು. ಬ್ರಿಟೀಷರ ಪ್ರಭಾವದಿಂದ, ಕ್ರಿಶ್ಚಿಯನ್ ಮಿಷಿನರಿಗಳ ಆಗಮನದಿಂದ 19ನೇ ಶತಮಾನದ ಕೊನೆಯಲ್ಲಿ ಹಾಗೂ 20ನೇ ಶತಮಾನದ ಪ್ರಾರಂಭದಲ್ಲಿ ದೇಶದ ಅನೇಕ ಭಾಗಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ಮಕ್ಕಳ ಪತ್ರಿಕೆಗಳು ಪ್ರಾರಂಭವಾಗಿದ್ದಕ್ಕೆ ನಮಗೆ ದಾಖಲೆಗಳು ಸಿಗುತ್ತವೆ.

ಮೊದಲ ಹಂತದಲ್ಲಿ ಮಕ್ಕಳ ಪತ್ರಿಕೆಗಳು, ಮಕ್ಕಳಿಗೆ ಅಗತ್ಯವಾದುದನ್ನು ಹಿರಿಯರೇ ಗುರುತಿಸಿ, ತಮ್ಮ ಕಲ್ಪನೆಯಲ್ಲಿ ರೂಪಿಸಿದಂತಹುದೇ ಆಗಿತ್ತು. ಅದರಲ್ಲಿ ಮಕ್ಕಳಿಗೆ ತೋರಿಸಬೇಕಾದ ಅಕ್ಕರೆ, ಆಸಕ್ತಿ, ಅವರ ಬಾಲ್ಯದ ತುಂಟಾಟ, ಆರೋಗ್ಯ, ಅವರ ಭವಿಷ್ಯವನ್ನು ಸರಿಯಾಗಿ ರೂಪಿಸಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕುರಿತು ಹಿರಿಯರಿಗೆ ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮಾಹಿತಿಗಳೇ ಹೆಚ್ಚಾಗಿ ಇರುತ್ತಿದ್ದವು. ಹಾಗೂ ಮುಖ್ಯವಾಗಿ ಬೇರೆ ಬೇರೆ ಭಾಷೆಯ ಹಿರಿಯ ಸಾಹಿತಿಗಳೇ ಮಕ್ಕಳಿಗಾಗಿ ಪತ್ರಿಕೆಯನ್ನು ಮೊದಲು ಪ್ರಾರಂಭಿಸಿದರು ಎಂಬುದು ಗಮನಾರ್ಹವಾದುದು.

1928 ರಲ್ಲಿ ಬೆಂಗಳೂರಿನಲ್ಲಿ ನೆಲೆ ನಿಂತವರಾದ ಆಂಧ್ರಪ್ರದೇಶ ಮೂಲದ ಸಿ. ಅಶ್ವಥ್ ನಾರಾಯಣರಾವ್ ಎಂಬುವವರ ಪ್ರಕಾಶನದಡಿಯಲ್ಲಿ, ದೇವುಡು ಅವರ ಸಂಪಾದಕತ್ವದಲ್ಲಿ ಬೆಂಗಳೂರಿನಿಂದ “ಮಕ್ಕಳ ಪುಸ್ತಕ” ಎಂಬ ಮಕ್ಕಳ ಪತ್ರಿಕೆ ಪ್ರಾರಂಭಗೊಂಡು ಎರಡು ವರ್ಷಗಳ ಕಾಲ ನಡೆಯಿತು. ಇದೇ ಕನ್ನಡದ ಮೊದಲ ಮಕ್ಕಳ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ 1935ರ ಸುಮಾರಿಗೆ ದೇವುಡು ಅವರು ಸ್ವತಂತ್ರವಾಗಿ ಪ್ರಾರಂಭಿಸಿ 25 ವರ್ಷಗಳಿಗೂ ಹೆಚ್ಚು ಕಾಲ ನಡೆಸಿದ “ನಮ್ಮ ಪುಸ್ತಕ” ಎಂಬ ಪತ್ರಿಕೆ ಕನ್ನಡದಲ್ಲಿ ಅತಿ ದೀರ್ಘಕಾಲ ಹಾಗೂ ನಿರಂತರವಾಗಿ ನಡೆದ ಮೊದಲ ಮಕ್ಕಳ ಪತ್ರಿಕೆ ಎಂಬ ವಿಶೇಷಕ್ಕೆ ಪಾತ್ರವಾಗಿದೆ. ಮೊದಲು ನಾಲ್ಕಾಣೆಯಿಂದ ಪ್ರಾರಂಭವಾಗಿ ಆ ಕಾಲದಲ್ಲಿಯೇ 3 ರೂಪಾಯಿವರೆಗೆ ನಿಗದಿ ಪಡಿಸಿದ ಮಾಸಿಕವಾಗಿ ಅವರು ಮಕ್ಕಳನ್ನು ರಂಜಿಸಲು, ಅವರ ಜ್ಞಾನವೃದ್ಧಿಗಾಗಿ, ಸನ್ನಡತೆಗೆ ಪ್ರೇರೇಪಿಸಲು ವಿಶೇಷ ಕಾಳಜಿಯಿಂದ ಪತ್ರಿಕೆಯನ್ನು ರೂಪಿಸಿದ್ದು ಗೋಚರಿಸುತ್ತದೆ. ಚಿತ್ರಕಥೆ, ಚಿತ್ರಲಿಪಿ, ಚುಕ್ಕಿಚಿತ್ರ, ವಿಜ್ಞಾನದ ವಿಷಯಗಳು, ವ್ಯಕ್ತಿ ಪರಿಚಯ, ಪೋಷಕರಿಗೆ, ಶಿಕ್ಷಕರಿಗೆ ಸಲಹೆಗಳು ಹೀಗೆ ಪತ್ರಿಕೆ ಆ ಕಾಲಕ್ಕೆ ಸಮೃದ್ಧವಾಗಿಯೇ ಹೊರಬರುತ್ತಿತ್ತು ಎನ್ನಬಹುದು. ಪತ್ರಿಕೆಯಲ್ಲಿ ಫೋಟೋಗಳನ್ನು, ಚಿತ್ರಗಳನ್ನು ಮುದ್ರಿಸಲು ಪ್ರಾರಂಭಿಸಿದ್ದೂ ವಿಶೇಷ. ಅವರು ಪತ್ರಿಕೆಯನ್ನು ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಬೇರೆ ಬೇರೆ ಜಿಲ್ಲೆಗೂ ವಿಸ್ತರಿಸಿದ್ದರು.

ಆರ್. ಕಲ್ಯಾಣಮ್ಮನವರು ಪ್ರಕಟಿಸುತ್ತಿದ್ದ “ಸರಸ್ವತಿ” ಎಂಬ ಪ್ರಥಮ ಮಹಿಳಾ ಪ್ರತಿಕೆಯಲ್ಲಿ ಮಕ್ಕಳಿಗಾಗಿಯೇ ಕೆಲ ಪುಟಗಳನ್ನು ಮೀಸಲಾಗಿಟ್ಟಿದ್ದರು. ನಂತರ ಅವರು ಮಕ್ಕಳ ಕೂಟದ ರೂವಾರಿಯಾಗಿ “ಮಕ್ಕಳ ಬಾವುಟ” ಪತ್ರಿಕೆ ಪ್ರಾರಂಭಿಸಿದರು. ಅನೇಕ ಹಿರಿಯ ಸಾಹಿತಿಗಳು ಇದರಲ್ಲಿ ಮಕ್ಕಳಿಗಾಗಿ ಸೃಜನಶೀಲ ಬರಹಗಳನ್ನು ಬರೆದರು. ಹಾಗೇ ಸಿಸು ಸಂಗಮೇಶರ “ಬಾಲ ಭಾರತಿ” ಉತ್ತರ ಕರ್ನಾಟಕದಲ್ಲಿ ಮಕ್ಕಳ ಪರವಾದ ಒಂದಿಷ್ಟು ಒಳ್ಳೆಯ ವಾತಾವರಣ ನಿರ್ಮಿಸಿತು. ಇದು ನಾಲ್ಕು ವರ್ಷಗಳ ಕಾಲ ನಡೆಯಿತು. ಧಾರವಾಡದ ಮಕ್ಕಳ ಮನೆಯ ಈಶ್ವರ ಕಮ್ಮಾರ ಅವರು “ಮಕ್ಕಳ ಮಂದಿರ” ಪತ್ರಿಕೆಯನ್ನು ಸುಮಾರು 3 ವರ್ಷಗಳ ಕಾಲ ಆಸಕ್ತಿಯಿಂದ ನಡೆಸಿದರು. ರಾಮದುರ್ಗದಿಂದ ನಾಗಕಲಾಲ್ ಅವರು “ಚಿಣ್ಣರ ಲೋಕ” ಎಂಬ ಪತ್ರಿಕೆಯನ್ನು 2 ವರ್ಷಗಳ ಕಾಲ ನಡೆಸಿದರು, ಬೆಂಗಳೂರಿನಿಂದ “ಚಿಗುರು” ಪತ್ರಿಕೆ ಅಂದವಾಗಿ ಮುದ್ರಣಗೊಂಡು ಒಳ್ಳೆಯ ಮುಖಪುಟದೊಂದಿಗೆ ಕೆಲ ಸಮಯ ಬಂತು. ಒಳ ಪುಟಗಳೂ ಒಳ್ಳೆಯ ಆಸಕ್ತರಿಂದ ಸೊಗಸಾಗಿ ಸಂಯೋಜನೆಗೊಂಡು ಬರುತ್ತಿತ್ತು. ಹೀಗೇ ಪುಟಾಣಿ, ಪಾಪಚ್ಚಿ, ಅಂಗಳ ಎನ್ನುವ ಮಕ್ಕಳ ಪತ್ರಿಕೆಗಳು ಭರವಸೆ ಹುಟ್ಟಿಸಿ ಅಲ್ಪ ಕಾಲಕ್ಕೆ ಕಣ್ಮರೆಯಾದವು. “ಅಂಗಳ” ಬಲು ದೊಡ್ಡ ಆಕಾರದಲ್ಲಿ ಅಂದವಾಗಿ ಹಲವಾರು ಹೊಸತುಗಳಿಗೆ ಹೊಸಗಾಲದ ಅಗತ್ಯಗಳಿಗೆ ತುಡಿಯುವ ಎಲ್ಲ ಸಾಧ್ಯತೆಗಳನ್ನು ತೋರಿಸಿದ್ದ ಪತ್ರಿಕೆ. ಕುಮಾರ ಪಟ್ಟಣದಿಂದ ಪ್ರಕಾಶ್ ರಾವ್ ಅವರು “ಅಮೃತವರ್ಷಿಣಿ” ಎನ್ನುವ ಪತ್ರಿಕೆಯನ್ನು ಕಳೆದ 7-8 ವರ್ಷದಿಂದ ತರುತ್ತಿದ್ದಾರೆ. ಇದು ಹಾವೇರಿ ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ಶೈಕ್ಷಣಿಕ ಹಿನ್ನಲೆಯಲ್ಲಿ ಹೊರಬರುತ್ತಿದೆ. ಹಾಗೇ ಭಾರತ ಸಂಸ್ಕೃತಿ ವಿದ್ಯಾಲಯದವರು “ವಿವೇಕ” ಎಂಬ ಪತ್ರಿಕೆಯನ್ನು ತರುತ್ತಿದ್ದಾರೆ. ಚಳ್ಳಕೆರೆಯ ಯರ್ರಿಸ್ವಾಮಿಯವರು ಕಳೆದ 15 ವರ್ಷಗಳಿಂದ ವಿಜ್ಞಾನಕ್ಕೆ ಸಂಬಂದಿಸಿದ ವಿಷಯಗಳನ್ನು ಮಕ್ಕಳಿಗೆ ತಲುಪಿಸಲಿಕ್ಕಾಗಿಯೇ “ಪುಟಾಣಿ ವಿಜ್ಞಾನ” ಎಂಬ ಪತ್ರಿಕೆ ತರುತ್ತಿದ್ದಾರೆ.

ಹೀಗೆ ಅಲ್ಲಲ್ಲಿ ಪ್ರಯತ್ನಗಳು ನಡೆದಿವೆ. ಇನ್ನೂ ಅಲ್ಲಲ್ಲಿ ನಡೆದಿರಬಹುದು. ಶಿವಮೊಗ್ಗದಲ್ಲಿ “ಮಕ್ಕಳ ಮಂಟಪ” ಎನ್ನುವ ಪತ್ರಿಕೆ ಬರುತ್ತಿದೆ. ಹಾಗೇ ದಕ್ಷಿಣ ಕನ್ನಡದ ಬಿ.ಸಿ ರೋಡ್‌ನಿಂದ ವಾಣಿಯೆನ್ನುವವರು “ಸಿಂಫನಿ” ಎನ್ನುವ ಪತ್ರಿಕೆ ನಡೆಸುತ್ತಿದ್ದಾರೆ. ಹೊನ್ನಾವರದ ಸೇಂಟ್ ಇಗ್ನೇಶಿಯಸ್ ಶಿಕ್ಷಣ ಸಂಸ್ಥೆಯಿಂದ ಬರುತ್ತಿರುವ “ಸಂಜೀವಿನಿ” ಎನ್ನುವ ಪತ್ರಿಕೆ ದಶಕಗಳನ್ನು ದಾಟಿ ಮುಂದುವರೆದಿದ್ದು ಆ ಭಾಗದಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ. ರಾಣೀಬೆನ್ನೂರಿನಿಂದ ಬರುತ್ತಿರುವ “ಯಶಸ್ವಿನಿ” ಆದಷ್ಟೂ ಶೈಕ್ಷಣಿಕವಾಗಿ ಕಾಣಿಸಿಕೊಂಡಿದ್ದರೂ ನಿರಂತರವಾಗಿ ಬರುತ್ತಿದೆ.

ಈ ನಿಟ್ಟಿನಲ್ಲಿ ಧಾರವಾಡದ ಶಂಕರ ಹಲಗತ್ತಿಯವರು ತರುತ್ತಿರುವ “ಗುಬ್ಬಚ್ಚಿಗೂಡು” ಈಗ ಬಹುಶಃ ಕನ್ನಡದಲ್ಲಿ, ಕನ್ನಡದವರ ಪ್ರಯತ್ನವಾಗಿ ಎದ್ದು ಕಾಣುವಂತಿದೆ. ಈಗಾಗಲೇ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನೆಡೆದಿದೆ. ಆದಷ್ಟೂ ಶೈಕ್ಷಣಿಕವಾಗಿಯೇ ಕಾಣಿಸಿಕೊಳ್ಳುತ್ತಿರುವ ಪತ್ರಿಕೆ ಶಾಲಾ ಸಂಸ್ಥೆಗಳನ್ನೇ ನೆಚ್ಚಿಕೊಂಡರೆ ಅದೇ ಮಾರ್ಗದಲ್ಲಿ ಹೆಜ್ಜೆ ಇಡಬೇಕಾಗಬಹುದು. ಇದರೊಂದಿಗೇ ಪತ್ರಿಕೆ ಸೃಜನಶೀಲವಾದ ಹಲವಾರು ಪ್ರಯತ್ನಗಳನ್ನು ಹೊಸಕಾಲದ ಮಕ್ಕಳಿಗಾಗಿ ಮಾಡುತ್ತಿರುವುದು ಗಮನಾರ್ಹ. ಹಿರಿಯ ಮಕ್ಕಳ ಸಾಹಿತಿಗಳ ಬರಹಗಳ ಜೊತೆಗೆ ಮಕ್ಕಳ ಕಲ್ಪನೆ, ಸೃಜನಶೀಲತೆಗೂ ಹೆಚ್ಚಿನ ಒತ್ತು ನೀಡಿದೆ. ಗುಣಮಟ್ಟದ ದೃಷ್ಟಿಯಿಂದ ಉತ್ತಮವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ, ವ್ಯಾವಹಾರಿಕವಾಗಿ ಪೈಪೋಟಿಯನ್ನು ಎದುರಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಾಗಿ ಯೋಚಿಸಿಲ್ಲ. ಮಕ್ಕಳ ಕುರಿತು ನೈಜ್ಯ ಕಾಳಜಿಯಿರುವುದು ಪತ್ರಿಕೆಯಲ್ಲಿ ಗೋಚರಿಸುವುದರಿಂದ ಆಶಾಭಾವನೆ ಇಟ್ಟುಕೊಳ್ಳುವುದಕ್ಕೆ ಕಾರಣವಾಗಿದೆ. [ಮಕ್ಕಳ ಪತ್ರಿಕೆಗಳ ಕುರಿತ ಈ ಎಲ್ಲ ಮಾಹಿತಿಗಳನ್ನು ಖ್ಯಾತ ಮಕ್ಕಳ ಸಾಹಿತಿಗಳಾದ ಡಾ.ಆನಂದ ಪಾಟೀಲರು ವಿಸ್ತೃತವಾಗಿ ಅಧ್ಯಯನ ನಡೆಸಿ ದಾಖಲಿಸಿದ್ದಾರೆ.]

ಹಾಗೇ ಮಕ್ಕಳೇ ನಡೆಸುವ ಪತ್ರಿಕೆಗಳು ಈಗ ನಮ್ಮ ನಡುವೆ ಕೆಲವಿವೆ. ತೀರ್ಥಹಳ್ಳಿಯ ಮುದ್ದು ನಡೆಸುವ “ಮಂದಾನಿಲ” ಅಲ್ಪ ಕಾಲದಲ್ಲಿಯೇ ಗಮನಿಸುವಂತಾ ಸಾಧನೆ ಮಾಡಿದೆ. ಹಾಗೇ ಹಾಸನದಲ್ಲಿ ಪ್ರೇರಣಾ ವಿಕಾಸ ವೇದಿಕೆಯ ಕೆಲವು ಮಕ್ಕಳು ಸೇರಿ “ಪ್ರೇರಣಾ” ಎನ್ನುವ ಪತ್ರಿಕೆ ನಡೆಸುತ್ತಿದಾರೆ. ಇದರ ಸಂಪಾದಕಿ ಅನಘ. ಸಮಾಜಮುಖಿ ಒಲವುಗಳುಳ್ಳ ದಿಟ್ಟ ಪತ್ರಿಕೆಯಾಗಿ ಇದು ರೂಪುಗೊಂಡಿದೆ. ಮಕ್ಕಳಿಗಾಗಿ ಹಿರಿಯರು ಬರೆಯುವುದಕ್ಕೂ ಮಕ್ಕಳೇ ನೇರವಾಗಿ ತಮ್ಮ ಪತ್ರಿಕೆಯನ್ನು ತರುವುದಕ್ಕೂ ಇರುವ ವ್ಯತ್ಯಾಸವನ್ನು ಇದರಿಂದ ಗುರುತಿಸಬಹುದಾಗಿದೆ.

ಈ ಬಗೆಯ ಎಲ್ಲಾ ಪ್ರಯತ್ನಗಳನ್ನು ಗಮನಿಸಿದಾಗ ಸಾಹಿತ್ಯಾಸಕ್ತರೇ ಇಂಥ ಪತ್ರಿಕೆಯ ಹಿಂದೆ ಇರುವುದು ಗೋಚರಿಸುತ್ತದೆ. ಆದರೆ ಅವರ ಮುಖ್ಯವಾದ ಸಮಸ್ಯೆ ಎಂದರೆ ಆರ್ಥಿಕ ಸಬಲತೆ ಇಲ್ಲದಿರುವುದು. ಕೇವಲ ಉತ್ಸಾಹ, ಆಸಕ್ತಿಯೇ ಇಲ್ಲಿನ ಬಂಡವಾಳ. ಕೇವಲ ಚಂದಾ ಹಣದ ಮೇಲೆ ಅವಲಂಬಿಸುವ ಇವು ಪತ್ರಿಕೆಯ ಮಾರಾಟ ಜಾಲವನ್ನು ವ್ಯವಸ್ಥಿತವಾಗಿ ತೂಗಿಸಲಾಗದೇ ಅಲ್ಪ ಕಾಲದಲ್ಲೇ ಕೊನೆಯುಸಿರೆಳೆಯುತ್ತವೆ. ಅಥವಾ ನಷ್ಟದಲ್ಲಾದರೂ ಸರಿ ಪ್ರಯತ್ನವನ್ನು ಕೈ ಬಿಡಬಾರದೆಂದು ಆಸಕ್ತರು ತಾವೇ ಹಣ ಹಾಕಿ ಆಗುವವರೆಗೂ ಮುಂದುವರೆಸುತ್ತಾರೆ. ಕನ್ನಡದಲ್ಲಿ ಇದುವರೆಗೆ ನಡೆದ ಪ್ರಯತ್ನಗಳೆಲ್ಲಾ ಈ ಬಗೆಯವೇ ಆಗಿವೆ. ಹಾಗೇ ಇವಾವುವೂ ಉದ್ಯಮವಾಗಿ ತಮ್ಮನ್ನು ಗುರುತಿಸಿಕೊಳ್ಳುವಲ್ಲಿ ಮುನ್ನೆಡೆದಿಲ್ಲ ಎಂಬುದು ಗಮನಾರ್ಹ. ಈ ಎಲ್ಲ ಪತ್ರಿಕೆಗಳಿಗೆ ಹಿನ್ನೆಲೆಯಾಗಿ ಉದ್ಯಮಿಗಳ ಬೆಂಬಲವಿಲ್ಲದಿರುವುದೂ ಕನ್ನಡ ಮಕ್ಕಳ ಪತ್ರಿಕೆಗಳು ಸೋಲನುಭವಿಸುತ್ತಿರುವುದಕ್ಕೆ ಮುಖ್ಯ ಕಾರಣವಾಗಿವೆ. ನಮ್ಮ ಯಾವ ಪ್ರತಿಷ್ಟಿತ ಪತ್ರಿಕಾ ಸಂಸ್ಥೆಯವರು ಮಕ್ಕಳ ಪತ್ರಿಕೆಯನ್ನು ಮಾಡುವ ಸಾಹಸಕ್ಕೆ ಹೋಗಲಿಲ್ಲ. ಎಲ್ಲರಿಗೂ ಆಗುವ ಮಾಸಿಕ, ಪಾಕ್ಷಿಕ, ವಾರಪತ್ರಿಕೆಗಳು ಮಕ್ಕಳಿಗಾಗಿ ಒಂದಿಷ್ಟು ಪುಟಗಳನ್ನು ಮೀಸಲಿರಿಸಿ ತೃಪ್ತಿಕಂಡಿವೆ. ಅಲ್ಲೇ ಕೆಲವರು ಹೊಸತಿಗೆ ತುಡಿದುದು, ಉತ್ಸಾಹ ತೋರಿದುದು ಕಾಣುತ್ತದೆ. ಹಾಗೆ ಇನ್ನಷ್ಟು ಆಸಕ್ತಿಯಿಂದ ಗಂಭೀರ ಪ್ರಯತ್ನ ಮಾಡಿ “ಪುಟಾಣಿ ವಿಜಯ” ದ ಹೆಸರಲ್ಲಿ 2 ವರ್ಷಗಳ ಕಾಲ ಮೊದಲಿಗೆ ಮಕ್ಕಳ ಪುರವಣಿ ತಂದವರೆಂದರೆ ವಿಜಯ ಕರ್ನಾಟಕದವರು. ಹಾಗೇ ಸಂಯುಕ್ತ ಕರ್ನಾಟಕದವರು ಮಕ್ಕಳಿಗಾಗಿ ತರುತ್ತಿರುವ “ಕಿಂದರ ಜೋಗಿ” ಪುರವಣಿ ಗಮನಿಸುವಂತಾ ಪ್ರಯತ್ನ ಮಾಡುತ್ತಿದೆ. ಇದನ್ನು ಮೀರಿ ಹೊಸ ಪ್ರಯತ್ನಗಳೇನೂ ಪತ್ರಿಕಾ ಮಾಧ್ಯಮದಲ್ಲಿ ಆಗಿಲ್ಲ.

ಇದಕ್ಕೆ ಅಪವಾದವೆನ್ನುವಂತೆ ಕೇವಲ ಉದಯವಾಣಿ ಪತ್ರಿಕಾ ಸಮೂಹದವರು ತರುತ್ತಿರುವ “ತುಂತುರು” ಒಂದು ಕನ್ನಡದ ಎಣಿಸಬಹುದಾದ ಗಟ್ಟಿಯಾದ ಪ್ರಯತ್ನ. ಇದರ ಸಂಪಾದಕರು ಸಂಧ್ಯಾ ಪೈ ಅವರು. ಪತ್ರಿಕಾರಂಗದ ಅನುಭವ ಸಾಕಷ್ಟಿರುವ, ಆರ್ಥಿಕ ಬೆಂಬಲ ಗಟ್ಟಿಯಾಗಿರುವ ಈ ಸಂಸ್ಥೆಯ ಪ್ರಯತ್ನ, ಸಮರ್ಥ ವಿತರಣಾ ಜಾಲದಿಂದಾಗಿ 10 ವರ್ಷಗಳನ್ನು ದಾಟಿ ಮುನ್ನೆಡೆದಿದೆ. “ತುಂತುರು” ಬಣ್ಣ ಬಣ್ಣವಾಗಿ ಅಂದವಾಗಿ ಬರುತ್ತಿದ್ದು ಕರ್ನಾಟಕದಲ್ಲಿ ಈ ರೀತಿಯ ಬೇರೆ ಮಕ್ಕಳ ಪತ್ರಿಕೆಯ ಸ್ಪರ್ಧೆಯ ಭಯ ಅನುಭವಿಸಿಲ್ಲ. ಈಗ ಮಕ್ಕಳ ಲೋಕದಲ್ಲಿರುವ ಎಲ್ಲಾ ಗಿಮಿಕ್‌ಗಳನ್ನೂ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪಾಕ್ಷಿಕವಾಗಿ 10-12 ರ ವಯಸ್ಸಿನ ಮಕ್ಕಳಿಗಾಗಿ ಅತ್ಯಂತ ಸುಂದರವಾಗಿ ಬರುತ್ತಿರುವುದು ಶ್ಲಾಘನೀಯ ಪ್ರಯತ್ನವಾಗಿದೆ.

ಹಾಗೇ ಕನ್ನಡದ ಮಕ್ಕಳಿಗಾಗಿ ಹೊರ ರಾಜ್ಯದಿಂದ ಬರುತ್ತಿರುವ ಪತ್ರಿಕೆಗಳು ಅನೇಕವಿವೆ. ಭಾರತದಲ್ಲಿ ಬಹುಶಃ ಚಂದಮಾಮದಷ್ಟು ಜನಪ್ರಿಯವಾದ ಮಕ್ಕಳ ಪತ್ರಿಕೆ ಇನ್ನೊಂದಿರಲಿಕ್ಕಿಲ್ಲ. 1947ರಲ್ಲಿ ಪ್ರಾರಂಭಗೊಂಡ ಇದು ನಿರಂತರವಾಗಿ 60 ವರ್ಷಗಳನ್ನು ಯಶಸ್ವಿಯಾಗಿ ದಾಟಿ ನಡೆದುಬರುತ್ತಿದೆ. 2008 ರಿಂದ ಈ ಪತ್ರಿಕೆಗೆ ಹೊಸ ಆಯಾಮ ನೀಡಲಾಗಿದೆ. ಭಾಷೆ, ಪ್ರಸ್ತುತಿ, ಚಿತ್ರ, ದೃಶ್ಯ, ಸಂವಹನ, ವಸ್ತು ಎಲ್ಲ ರೀತಿಯಲ್ಲೂ ಹೊಸತನ ಸಾಧಿಸಿದೆ. ಸಮಕಾಲೀನ ಸ್ಪಂದನೆಯ ಕತೆ, ಸಾಹಸ ಸರಣಿ, ಕ್ರೀಡಾ ಸಮಾಚಾರ, ತಾಂತ್ರಿಕ ರಂಗದ ಸುದ್ದಿಗಳು, ವಿಜ್ಞಾನ ಹೀಗೆ ಇವತ್ತಿನ ಮಕ್ಕಳ ನಿರೀಕ್ಷೆಯನ್ನು ಅಚ್ಚರಿಪಡುವಷ್ಟು ಸಮರ್ಥವಾಗಿ ತುಂಬಿಕೊಡುತ್ತಿದೆ. ಸಂವೇದನಾಶೀಲ ಸಾಮಗ್ರಿ ಹಾಗೂ ಶೈಕ್ಷಣಿಕ ಸಾಮಗ್ರಿ ಎಲ್ಲವನ್ನೂ ನೀಡಲು ಈಗ ಪತ್ರಿಕೆ ಸಜ್ಜಾಗಿದೆ. ಈಗ ಸ್ವಲ್ಪ ದೊಡ್ಡ ಮಕ್ಕಳಿಗಾಗಿಯೇ ಪತ್ರಿಕೆಯನ್ನು ಅಚ್ಚುಕಟ್ಟಾಗಿ ರೂಪಿಸಲಾಗುತ್ತಿದೆ. ಈಗ ಇಂಗ್ಲೀಷಲ್ಲದೇ, ಕನ್ನಡವನ್ನೂ ಒಳಗೊಂಡಂತೆ ಭಾರತದ ಇತರ ೧೨ ಭಾಷೆಗಳಲ್ಲಿ ಚಂದಮಾಮ ಬರುತ್ತಿದೆ.

ಹಾಗೇ ಹೊರರಾಜ್ಯದಿಂದ ಕನ್ನಡದ ಮಕ್ಕಳಿಗಾಗಿ ಬರುತ್ತಿದ್ದ ಬಾಲಮಿತ್ರ, ಬೊಂಬೆಮನೆ, ಪುಟಾಣಿ ಮುಂತಾದ ನಿಯತಕಾಲಿಕಗಳು champaka2ಈಗ ಉಸಿರು ಕಳೆದುಕೊಂಡಿವೆ. ಆದರೆ ಮೂಲ ಕೇರಳದ ಮಂಗಳಂ ಪಬ್ಲಿಕೇಷನ್ಸ್ ಕನ್ನಡದಲ್ಲಿ “ಬಾಲಮಂಗಳ” ಮತ್ತು “ಬಾಲಮಂಗಳ ಚಿತ್ರಕಥಾ” ಎಂಬ ಎರಡು ಪಾಕ್ಷಿಕವನ್ನು ಹತ್ತಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಇತ್ತೀಚೆಗಿನ ಕೆಲ ವರ್ಷಗಳಿಂದ ಪುಟಾಣಿ ಮಕ್ಕಳಿಗಾಗಿ “ಗಿಳಿವಿಂಡು” ಎಂಬ ಮಾಸಿಕವನ್ನು ತರುತ್ತಿದ್ದಾರೆ. ಇದು ವ್ಯಾಪಾರಿ ಉದ್ದೇಶವನ್ನೂ ಮೀರಿದ ಒಂದು ಒಳ್ಳೆಯ ಪ್ರಯತ್ನ. ಹಾಗೇ “ಚಂಪಕ” ಕೂಡ ಮಕ್ಕಳಿಗೆ ಇಷ್ಟವಾಗುವ ಒಳ್ಳೆಯ ಪತ್ರಿಕೆ.

ಈ ಎಲ್ಲಾ ಪತ್ರಿಕೆಗಳನ್ನು ಹಾಗೇ ಗಮನಿಸಿದರೆ ಇವುಗಳಲ್ಲಿನ ಸಾಮಾನ್ಯವಾದ ಸೂತ್ರವನ್ನು ಕಂಡುಕೊಳ್ಳಬಹುದು. ಇವು ಮಕ್ಕಳ ಭಾವನಾತ್ಮಕ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಗುರಿಯಾಗಿಟ್ಟುಕೊಂಡು ಸಾಮಾನ್ಯವಾದ ಒಂದಿಷ್ಟು ಫಾರ್ಮುಲಾಗಳನ್ನು ಅನುಸರಿಸುತ್ತಿವೆ. ಕಾಮಿಕ್ಸ್ ಎಲ್ಲ ಮಕ್ಕಳ ಪತ್ರಿಕೆಗಳ ಮುಖ್ಯ ಆಕರ್ಷಣೆ. ಹಾಗೇ ರಂಜನೆ, ಮಾಹಿತಿ, ಶಿಕ್ಷಣವೇ ಇವುಗಳ ಮುಖ್ಯ ಗುರಿ. ಸಾಮಾನ್ಯವಾಗಿ ಮಕ್ಕಳು ಎಂದರೆ ನಿರ್ದಿಷ್ಟ ವಯೋವರ್ಗವನ್ನು ಗುರುತಿಸಲಾಗದಿದ್ದರೂ 7 ವರ್ಷದಿಂದ 10-12 ವರ್ಷದವರೆಗಿನ ಮಕ್ಕಳನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಆದರೆ ಹೈಸ್ಕೂಲ್ ಮಕ್ಕಳಿಗೆ ಇಷ್ಟವಾಗುವ, ಅವರ ಸಮಸ್ಯೆಗಳನ್ನು ಕುರಿತು ಚರ್ಚಿಸುವಂತಾ ವಾಸ್ತವ ಲೋಕದ ಗಂಭೀರ ಸಾಮಗ್ರಿ ಇಲ್ಲಿ ಅಷ್ಟಾಗಿ ಕಾಣುವುದಿಲ್ಲ. ಸುಮಾರಾಗಿ ಹೈಸ್ಕೂಲಿಗೆ ಬಂದ ಮಕ್ಕಳ ಗ್ರಹಿಕೆ ಹಿಗ್ಗುತ್ತಿರುತ್ತದೆ. ಸುತ್ತಲಿನ ಅನೇಕ ಸಂಗತಿಗಳು ಅವರನ್ನು ದಿಗಿಲುಗೊಳಿಸುತ್ತವೆ. ಮನೆ, ಶಾಲೆ, ಗೆಳೆಯರ ನಡುವೆ, ಸಮಾಜದಲ್ಲಿ ಕಾಣುವ ಅನಪೇಕ್ಷಿತ ಎಂದುಕೊಳ್ಳುವ ಎಷ್ಟೋ ಸಂಗತಿಗಳಾಗಬಹುದು. ಎಲ್ಲವನ್ನೂ ಮಕ್ಕಳು ನೋಡುತ್ತಾರೆ, ಅನುಭವಿಸುತ್ತಾರೆ. ತಮ್ಮೊಳಗೇ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿಕೊಳ್ಳುತ್ತಾರೆ. ಇಂಥದ್ದಕ್ಕೆಲ್ಲಾ ಸ್ಪಂದಿಸುವ ಸಂವೇದನಾಶೀಲ ಬರವಣಿಗೆ ನಮ್ಮ ಈ ಮಕ್ಕಳ ಪತ್ರಿಕೆಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.

ಮಕ್ಕಳು ಎಂದರೆ ನಿರ್ದಿಷ್ಟವಾಗಿ 5 ರಿಂದ 8, 8 ರಿಂದ 12, 12 ರಿಂದ 16 ವರ್ಷದವರನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕವಾಗಿಯೇ ಮಕ್ಕಳ ಪತ್ರಿಕೆಗಳು ರೂಪುಗೊಂಡರೆ ಅದರ ಉದ್ದೇಶ ಸಫಲವಾಗುತ್ತದೆ. ರಂಜನೆಯ ಹಾಗೆಯೇ ಮಕ್ಕಳಿಗೆ ಬೌದ್ಧಿಕ ಕಸರತ್ತು ಮುಟ್ಟಿಸುವ ಆಟದ ಹೊಸ ಬಗೆಗಳ ಪ್ರಯತ್ನವೂ ಇತ್ತೀಚೆಗೆ ಆಗಿಲ್ಲ. ಅವರ ಬೇರೆ ಬೇರೆ ತಲ್ಲಣ, ಕಳವಳ, ಸಮಸ್ಯೆಗಳ ಕುರಿತು ವಿಶ್ಲೇಷಿಸುವ ಪ್ರಯತ್ನಗಳೂ ಆಗಿಲ್ಲ. ಪತ್ರಿಕೆಯನ್ನು ಆಸಕ್ತಿಯುತವಾಗಿ, ಆಕರ್ಷಕವಾಗಿ ರೂಪಿಸುವುದಷ್ಟೇ ಅಲ್ಲ ಅದನ್ನು ಮಕ್ಕಳಿಗೆ ಯಶಸ್ವಿಯಾಗಿ ಮುಟ್ಟಿಸುವ ಪ್ರಯತ್ನವೂ ಆಗಬೇಕು. ಜಾಹಿರಾತಿನ ಹೊಸ ಹೊಸ ಸಾಧ್ಯತೆಗಳನ್ನು ಬಳಸಿಕೊಂಡರೂ ತಪ್ಪಿಲ್ಲ. ಪತ್ರಿಕೆ ಮಕ್ಕಳಿಗೆ ತಲುಪಿ ಅವರದನ್ನು ಆಸ್ವಾದಿಸುವಂತಾಗಬೇಕು. ಅವರ ಕಲ್ಪನಾಶಕ್ತಿ, ವಿವೇಕ, ಜ್ಞಾನ, ಅನುಭವ ಇದರಿಂದ ವಿಸ್ತರಿಸಲು ಮತ್ತು ಅವರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಮಾನಸಿಕವಾಗಿ ಸಬಲರಾಗಲು ಅನುಕೂಲ ಆಗಬೇಕು.

ಮಕ್ಕಳಿಗೆ ಮಾಹಿತಿಯಾಧಾರಿತವಾಗಿ ಇತಿಹಾಸ, ವಿಜ್ಞಾನ, ಪ್ರಾದೇಶಿಕ ವಿಶೇಷತೆ, ಪ್ರಾಣಿ-ಪಕ್ಷಿ ವೈಶಿಷ್ಟ್ಯ, ರೋಚಕ ಸಂಗತಿಗಳು ಹೀಗೆ ನಾನಾ ಬಗೆಯಲ್ಲಿ ಮಾಹಿತಿಯನ್ನೂ ರಂಜನೀಯವಾಗಿ ಕೊಡುವ ಪ್ರಯತ್ನಗಳು ಮತ್ತಷ್ಟು ಹೆಚ್ಚಾಗಬೇಕಿದೆ. ಯಾವ ಮಕ್ಕಳ ಪತ್ರಿಕೆಯೂ ನಮ್ಮ ಸುದ್ದಿ ಮಾಧ್ಯಮಗಳು ದೊಡ್ಡವರಿಗಾಗಿ ನೀಡುವಂತದ್ದನ್ನು ಸೂಕ್ಷ್ಮವಾಗಿಯಾದರೂ ಮಕ್ಕಳಿಗೆ ನೀಡಲು ಪ್ರಯತ್ನಿಸಿಲ್ಲ. ಇವು ನಿಯತಕಾಲಿಕಗಳು ಎಂಬ ಒಂದು ಮಿತಿಯಿದ್ದರೂ ಪ್ರಚಲಿತ ಸುದ್ದಿಯನ್ನು ಮಕ್ಕಳ ಮಟ್ಟಕ್ಕೆ ಇಳಿದು ಅಗತ್ಯವಾದುದನ್ನು ನೀಡುವ ಪ್ರಯತ್ನ ಮಾಡಬಹುದು. ಹಾಗೇ ಇವತ್ತಿನ ಮಕ್ಕಳ ಜ್ವಲಂತ ಸಮಸ್ಯೆಗಳನ್ನು ಮುಖ್ಯವಾಹಿನಿಯಲ್ಲಿ ಚರ್ಚಿಸುವಂತಾ ಕೆಲಸಗಳೂ ಆಗುತ್ತಿಲ್ಲ ಎಂಬುದೂ ಒಂದು ಪ್ರಮುಖ ಆರೋಪವೇ.

ಮಕ್ಕಳೇ ಬರೆದ ಕಥೆ, ಕವಿತೆ, ಚಿತ್ರಕ್ಕೆ ಪತ್ರಿಕೆಗಳಲ್ಲಿ ಜಾಗವಿರುತ್ತದೆ. ಆದರೆ ವಿಶಿಷ್ಟ ಸಾಧನೆ ಮಾಡಿದ ಮಕ್ಕಳ ವ್ಯಕ್ತಿಚಿತ್ರ, ಮಕ್ಕಳ ಪರ ಸಂಘ ಸಂಸ್ಥೆಗಳ ಪರಿಚಯ, ಅಂಗವಿಕಲ ಶಾಲಾಸಂಸ್ಥೆಯ ಪರಿಚಯ, ಅಂತಹ ಮಕ್ಕಳ ವಿಶೇಷ ಸಂದರ್ಶನಗಳು ಕಾಣಸಿಗುವುದಿಲ್ಲ. ಇಂದಿನ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗೆ ತಜ್ಞರಿಂದ ಉತ್ತರ, ಮಕ್ಕಳ ಸ್ವಾರಸ್ಯದ ಅನುಭವಗಳಿಗೆ ಜಾಗ, ಒಂದು ವಿಷಯ ನೀಡಿ ಮಕ್ಕಳ ಅಭಿಪ್ರಾಯ ಆಹ್ವಾನಿಸುವುದು ಇಂಥವನ್ನು ಮಾಡಿದಾಗ ಮಕ್ಕಳಿಗೆ ತಾವೇ ತಮ್ಮದೊಂದು ಅನನ್ಯತೆಯನ್ನು, ಅಭಿಪ್ರಾಯವನ್ನು ರೂಪಿಸಿಕೊಳ್ಳಲು ತನ್ಮೂಲಕ ಪ್ರತ್ಯೇಕ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ.

ಮಕ್ಕಳ ಪತ್ರಿಕೆಯ ಆಕಾರ, ಅದರ ದೃಶ್ಯ, ಪ್ರಸ್ತುತಿ, ಅದು ಒಳಗೊಳ್ಳಬಹುದಾದ ವಿಷಯ, ಸಾಮಗ್ರಿ ಎಲ್ಲ ವಿಶೇಷವೂ, champakaವಿಶಿಷ್ಟವೂ ಆಗಿದ್ದು ಪತ್ರಿಕಾರಂಗ ಇದಕ್ಕೆ ಪ್ರತ್ಯೇಕವಾಗಿಯೇ ತೊಡಗಿಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಹಿರಿಯರ ದಿನಪತ್ರಿಕೆಗೆ ನೀಡುವಷ್ಟು ಮಹತ್ವವನ್ನು ಇಂಥಹ ಮಕ್ಕಳ ನಿಯತಕಾಲಿಕಗಳಿಗೆ ನೀಡುವುದಿಲ್ಲ. ಪತ್ರಿಕೋದ್ಯಮದ ಪಠ್ಯದಲ್ಲೂ ಮಕ್ಕಳ ಪತ್ರಿಕೆಯ ಕುರಿತು ವಿಶೇಷ ಅಧ್ಯಾಯಗಳು ಕಾಣುವುದಿಲ್ಲ. ಇದೆಲ್ಲ ಆಗಬೇಕಾದ ಕೆಲಸ. ಮಕ್ಕಳ ಪತ್ರಿಕಾರಂಗದಲ್ಲಿ ತೊಡಗಿಕೊಳ್ಳುವವರು ಪ್ರತ್ಯೇಕವಾದ ವರ್ಗ. ಅವರಿಗೆ ಮಕ್ಕಳ ಮನಃಶಾಸ್ತ್ರ ಕಡ್ಡಾಯವಾಗಿ ಗೊತ್ತಿರಬೇಕು. ಮಕ್ಕಳ ಪತ್ರಿಕೆ ಅಥವಾ ಪತ್ರಿಕೆಯಲ್ಲಿ ಮಕ್ಕಳ ಪುಟಗಳನ್ನು ನೋಡಿಕೊಳ್ಳುವುದು ‘ಹೇಗೋ ಒಂದು’ ಎಂಬ ಕಾಟಾಚಾರದ ವಿಷಯವಾಗಬಾರದು. ಹಾಗೆ ಪತ್ರಕರ್ತರಿಗೆ ತರಬೇತಿ, ಮಾರ್ಗದರ್ಶನ ಸಿಗಬೇಕು. ಮಕ್ಕಳ ಪತ್ರಿಕೆಯ ಬಗೆಗೆ ಮುಖ್ಯವಾಗಿ ಮಕ್ಕಳನ್ನು ಸಂದರ್ಶಿಸಿ, ಸಮೀಕ್ಷಿಸಿ ಅವರಿಗೆ ಬೇಕಾದಂತೆಯೇ ಪತ್ರಿಕೆಯನ್ನು ರೂಪಿಸಬೇಕು. ಹಿರಿಯರು ಎಷ್ಟೇ ತಿಳಿವಳಿಕೆಯುಳ್ಳವರಾದರೂ ಮಕ್ಕಳು ಪ್ರತಿ ಕ್ಷಣ ಇವತ್ತಿನ ಸಂದರ್ಭಕ್ಕೆ ತಕ್ಕಂತೆ ಅಪ್ ಡೇಟ್ ಆಗುತ್ತಿರುತ್ತಾರೆ. ಅವರ ಹೊಸತನದ ಮುಂದೆ ಹಿರಿಯರು ಸದಾ ಔಟ್ ಡೇಟೆಡ್! ಹೀಗಾಗಿ ಮಕ್ಕಳ ಪತ್ರಿಕೆಯನ್ನು ರೂಪಿಸುವವರು ಹಿರಿಯರಾದರೂ ಅದು ಮಕ್ಕಳ ಮನಸ್ಸನ್ನು ಹೊಂದಿರಬೇಕು. ಅಂದರೆ ಮಕ್ಕಳಿಗೆ ಎಲ್ಲ ರೀತಿಯಲ್ಲೂ ಇಷ್ಟ ಆಗಬೇಕು. ಅವರಿಗೆ ಅದು ನೇರವಾಗಿ ಸಂಬಂಧಿಸಿದ್ದಾಗಬೇಕು.

ಮಕ್ಕಳನ್ನು ಹೇಗೆಲ್ಲಾ ಆಕರ್ಷಕವಾಗಿ ತಲುಪಬೇಕು? ಮಕ್ಕಳಿಗೆ ಇಂದು ಏನೆಲ್ಲಾ ಅಗತ್ಯವಿದೆ? ಮಕ್ಕಳಿಗೆ ವಿಭಿನ್ನವೂ, ವಿಶೇಷವೂ ಆದ ಹೊಸತೇನನ್ನು ಕೊಡಬಹುದು? ಅವಗಣನೆಗೊಳಗಾದ ಮಕ್ಕಳ ಸಮಸ್ಯೆಗಳು ಯಾವುವು? ಎಂದು ಪ್ರತಿಕ್ಷಣ ತುಡಿಯುವ, ಮಕ್ಕಳ ಲೋಕದ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಅವಲೋಕಿಸುವ, ಅನುಭವಿಸುವ, ಮಕ್ಕಳ ಮನಸ್ಸನ್ನು ಪರಕಾಯ ಪ್ರವೇಶ ಮಾಡಿ ಅರಿತುಕೊಳ್ಳಬಲ್ಲ ವಿಶಿಷ್ಟ ಮನೋಧರ್ಮದವರೇ ಮಕ್ಕಳ ಪತ್ರಿಕೆಗಳನ್ನು ಮಾಡಬೇಕು. ಹಾಗೇ ಒಟ್ಟು ಪತ್ರಿಕಾ ಕ್ಷೇತ್ರದಲ್ಲಿ ಮಕ್ಕಳ ಪತ್ರಿಕಾರಂಗ ತನ್ನ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವ ಮೂಲಕ ವಿಭಿನ್ನವೂ, ಅನನ್ಯವೂ ಆದುದನ್ನು ಸಾಧಿಸಬೇಕಿದೆ. ಸಮಾಜ ಮಕ್ಕಳ ಜಗತ್ತಿನೆಡೆಗೆ ಒಂದಿಷ್ಟು ಗಮನ ಕೇಂದ್ರೀಕರಿಸಿದರೆ ಮಕ್ಕಳ ಪತ್ರಿಕಾ ಕ್ಷೇತ್ರದಲ್ಲಿ ಹೊಸಬೆಳಕು ಮೂಡಲು ಸಾಧ್ಯವಿದೆ.

[ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿವತಿಯಿಂದ ಧಾರವಾಡದಲ್ಲಿ ಅಕ್ಟೋಬರ್ 28 ಮತ್ತು 29, 2010 ರಂದು ಪತ್ರಕರ್ತರಿಗಾಗಿ ನಡೆದ ಮಕ್ಕಳು ಮತ್ತು ಮಾಧ್ಯಮಗಳು ಎಂಬ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದ್ದು.]

ತನ್ನದಲ್ಲದ ತಪ್ಪಿಗಾಗಿ ಅಪರಾಧಿಯಾಗುವ ಹೆಣ್ಣು ಜೀವ

– ರೂಪ ಹಾಸನ

ಈ ಸಮಾಜಕ್ಕೆ ನಿಜವಾಗಿಯೂ ಕರುಳಿದೆಯೇ? ಅಥವಾ ಅದು ಮಿದುಳಿನಿಂದ ಮಾತ್ರ ವ್ಯವಹರಿಸುತ್ತದೆಯೇ? ಎಂದು ಪ್ರಶ್ನಿಸಿಕೊಂಡರೆ ಕರುಳು ಇಲ್ಲ ಎಂಬ ಉತ್ತರ ಮಾತ್ರ ಬರಲು ಸಾಧ್ಯ. ನಮ್ಮ ಸುತ್ತಲ ಸಮಾಜ ಮತ್ತು ವ್ಯವಸ್ಥೆ ತನಗೆ ಬೇಕೆಂದಂತೆ ಹೆಣ್ಣನ್ನು ರೂಪಿಸುತ್ತ, ಬಳಸಿಕೊಳ್ಳುತ್ತ, ಕೊನೆಗೆ ತಪ್ಪುಗಳನ್ನೆಲ್ಲಾ ಅವಳ ಮೇಲೇ ಹೇರಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಲೇ ಇರುವಾಗ, ಕೊನೆಗೆ ಕಾನೂನುರೀತ್ಯವೂ ಅನಿವಾರ್ಯವಾಗಿ ಹೆಣ್ಣೇ ಶಿಕ್ಷೆಗೂ ಒಳಗಾಗುತ್ತಿರುವುದನ್ನು ಕಾಣುವಾಗ ಈ ಸಮಾಜಕ್ಕೆ ಕರುಳಿದೆ ಎಂದು ನಂಬುವುದಾದರೂ ಹೇಗೆ?

ನಮ್ಮ ಕಣ್ಣ ಮುಂದೆ ಇದಕ್ಕೆ ಉದಾಹರಣೆಯಾಗಿ ಹಲವು ಹೃದಯವಿದ್ರಾವಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಮೊನ್ನೆಯಷ್ಟೇ, ಹಾಸನದಲ್ಲಿ ಕೆಲ ಗಂಟೆಗಳ ಹಿಂದಷ್ಟೇ ಜನಿಸಿದ್ದ ಹಸುಗೂಸೊಂದನ್ನು ಹೆಣ್ಣುಮಗಳೊಬ್ಬಳು ಆಸ್ಪತ್ರೆಯಿಂದ ಕದ್ದೊಯ್ದಿದ್ದಳು. ಮಾರನೇ ದಿನವೇ ಸಿಕ್ಕಿಬಿದ್ದು, ಪೊಲೀಸ್‌ನವರ ವಶವಾಗಿದ್ದು ಅವರು ಸ್ವಂತ ತಾಯಿಗೆ ಮಗುವನ್ನು ಹಿಂದಿರುಗಿಸಿದ ಸುದ್ದಿಯೂ ಬಂತು. ಆದರೆ ಆಗಷ್ಟೇ ಹುಟ್ಟಿದ ಮಗುವನ್ನು ಕದ್ದೊಯ್ಯುವಂಥಾ ಅನಿವಾರ್ಯತೆ ಆ ಹೆಣ್ಣುಮಗಳಿಗೇನಿತ್ತು? newborn-babyಎಂಬ ವಿವರಗಳನ್ನು ಹುಡುಕಿದಾಗ ಎರಡು ಬಾರಿ ಗರ್ಭಪಾತವಾಗಿ ಮೂರನೆ ಬಾರಿ ಬಸಿರಾದಾಗ ಅದನ್ನಾದರೂ ಉಳಿಸಿಕೊಳ್ಳಬೇಕೆಂಬ ಆಶಯ ಈಡೇರದೇ ಅದೂ ಬಸಿದು ಹೋದಾಗ, ಮಗುವಿಗಾಗಿ ಅತ್ತೆ-ಮಾವ, ಸಮಾಜ ನೀಡುತ್ತಿದ್ದ ಮಾನಸಿಕ ಹಿಂಸೆ, ಒತ್ತಡ, ಪೀಡನೆಗಳಿಂದ ಖಿನ್ನತೆಗೊಳಗಾಗಿದ್ದ ಆ ಹೆಣ್ಣುಮಗಳು ಇಂಥಹ ಕೃತ್ಯಕ್ಕೆ ಕೈ ಹಾಕಿದ್ದು ಬೆಳಕಿಗೆ ಬಂತು. ಇಲ್ಲಿ ತಪ್ಪು ಯಾರದ್ದು? ಆ ಹೆಣ್ಣುಮಗಳದ್ದೇ ಅಥವಾ ಅವಳಿಂದ ಇಂಥಹ ಕೆಲಸ ಮಾಡುವಂತೆ ಪ್ರಚೋದನಾತ್ಮಕ ಒತ್ತಡ ತಂದ ಸಮಾಜದ್ದೇ? ಈಗ ಶಿಕ್ಷೆ ಮಾತ್ರ ಆ ಹೆಣ್ಣುಮಗಳಿಗೆ! ಬಂಜೆ ಎಂಬ ಅಪವಾದದಿಂದ ತಪ್ಪಿಸಿಕೊಂಡು ತಾಯಿ ಎನಿಸಿಕೊಳ್ಳಬೇಕೆಂಬ ಹಂಬಲಕ್ಕೆ ಬಿದ್ದು ಒಮ್ಮೆ ಮಾತ್ರ ಮಾಡಿದ ತಪ್ಪಿಗೆ ಸಮಾಜದಿಂದ “ಮಕ್ಕಳ ಕಳ್ಳಿ” ಎಂಬ ಶಾಶ್ವತ ಬಿರುದು. ಕುಟುಂಬದವರಿಂದಲೂ ನಿರ್ಲಕ್ಷ್ಯದವಮಾನ!

ಮತ್ತೊಂದು ಘಟನೆಯಲ್ಲಿ ಮಾನಸಿಕ ಅಸ್ವಸ್ಥ ಅವಿವಾಹಿತ ಅಕ್ಕನಿಗೆ ಹುಟ್ಟಿದ ಮಗುವನ್ನು ತಂಗಿಯೊಬ್ಬಳು ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಮನೆಯಲ್ಲಿ ವೃದ್ಧ ತಾಯಿ, ಅಂಧ ತಮ್ಮ, ಮತ್ತು ಈ ಬುದ್ಧಿಮಾಂದ್ಯ ಅಕ್ಕನನ್ನು ಸಾಕುವ ಜವಾಬ್ದಾರಿಯಿಂದ ಮೊದಲೇ ಜರ್ಝರಿತಳಾಗಿರುವ ಆ ಹುಡುಗಿಗೆ ಈ ಮಗುವನ್ನೂ ಅನಿವಾರ್ಯವಾಗಿ ಸಾಕಬೇಕಾದಂತಾ ಹೊಣೆಗಾರಿಕೆ. ಅದು ಸಾಧ್ಯವಿಲ್ಲವೆನಿಸಿ ಮಾರಾಟ ಮಾಡಲೆತ್ನಿಸಿದ್ದಕ್ಕೆ ಈಗವಳು ಅಪರಾಧಿ! ಹಸುಗೂಸನ್ನೂ ಮಾರಾಟ ಮಾಡಲು ಹೊರಟ ಕ್ರೂರಿ ಎಂದು ಸಮಾಜದ ಭರ್ಜಿಯ ಇರಿತ. ಬದುಕು ಸಾಗಿಸಲು ಸಾಧ್ಯವಾಗದೇ ಅನೈತಿಕ ಮಾರ್ಗಕ್ಕೋ ಆತ್ಮಹತ್ಯೆಗೋ ಇಳಿದರೆ ಅದೂ ಅಪರಾಧವೇ! ಇನ್ನು ಇಂತಹವರಿಗೆ ಬದುಕಲು ಸಭ್ಯ ಮಾರ್ಗ ಎಲ್ಲಿದೆ?

ಕೆಲ ತಿಂಗಳ ಹಿಂದಷ್ಟೇ ಐದು ವರ್ಷದ ಕಂದಮ್ಮನ ಮೇಲೆ ಇಲ್ಲಿ ಅತ್ಯಾಚಾರ ನಡೆದಿದೆ. ಅತ್ಯಾಚಾರಿ ಕ್ಷೇಮವಾಗಿ ಸೆರೆಮನೆಯಲ್ಲಿದ್ದಾನೆ! ಶಿಕ್ಷೆಯಿಂದ ತಪ್ಪಿಸಿಕೊಳ್ಳಲೂ ಬೇಕಾದಷ್ಟು ಅವಕಾಶಗಳಿವೆ. ಆದರೆ ಮಾನಸಿಕ ಹಿಂಸೆಗೆ ಗುರಿಯಾಗಿರುವುದು ಮಾತ್ರ ಆ ಮಗು ಮತ್ತವರ ಕುಟುಂಬ. ತಮ್ಮದಲ್ಲದ ತಪ್ಪಿಗೆ ಸಮಾಜದ ಕುತೂಹಲ, ಕೊಂಕು ಮಾತು-ನೋಟವನ್ನು ಎದುರಿಸುವ ಅನಿವಾರ್ಯ ಶಿಕ್ಷೆ. ಅದಕ್ಕೆಂದೇ ಮನೆ ಬದಲಿಸಿ, ಮಗುವಿನ ಶಾಲೆ ಬದಲಿಸಿ…… ಏನೆಲ್ಲ ಬದಲಿಸಿದರೂ ಹೇಗೋ ಸುದ್ದಿ ಹಬ್ಬಿ ಮಾನಸಿಕ ಸಂಕಟ ನೀಡುವ ಸಮಾಜ. ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುವ, ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ ಒಳಗಾಗಿ ಅದು ಬಹಿರಂಗವಾಗುವ ಎಲ್ಲ ಪ್ರಸಂಗಗಳಲ್ಲೂ ಹೆಣ್ಣನ್ನೇ ಅನುಮಾನಿಸುವ, ಅವಮಾನಿಸುವ ಇಂತಹ ಹೃದಯಹೀನ ಸಮಾಜದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಇಂತಹ ಮುಗ್ಧರಿಗೆ ನ್ಯಾಯ ಕೊಡುವವರ್‍ಯಾರು? ಸಭ್ಯತೆಯ ಸೋಗಿನಲ್ಲಿ ಇಂತಹ ಹೀನ ಕೃತ್ಯಗಳನ್ನು ಮಾಡಿಯೂ ತೆರೆಮರೆಯಲ್ಲೇ ಉಳಿಯುವ ಕಾಮುಕರಿಗೆ ಶಿಕ್ಷೆ ಎಲ್ಲಿದೆ?

ಇತ್ತೀಚೆಗಿನ ಕೆಲ ವರ್ಷಗಳಿಂದ ಆಗಷ್ಟೇ ಹುಟ್ಟಿದ ಹಸುಗೂಸುಗಳನ್ನು ಪೊದೆಗಳಲ್ಲಿ ಬೀದಿಯಲ್ಲಿ ಬಿಸುಟು ಹೋಗುವುದೂ ಆಗಿಂದಾಗ್ಗೆ ನಡೆಯುತ್ತಿದೆ. baby-abandoned-in-bushಇದರ ಹೊಣೆಯೂ ನೇರವಾಗಿ ಹೆಣ್ಣಿನ ಮೇಲೆಯೇ! ಆಧುನಿಕ ಕುಂತಿಯರು, ನಿರ್ದಯಿ ತಾಯಂದಿರು, ಕೆಟ್ಟ ತಾಯಿ ಇರಲಾರಳೆಂಬುದಕ್ಕೆ ಅಪವಾದಗಳು………. ಹೀಗೆ ಹೆಣ್ಣನ್ನಷ್ಟೇ ಕೇಂದ್ರೀಕರಿಸಿ ದೂಷಿಸುವ ಸಮಾಜ ಇನ್ನೊಂದು ಬದಿಯಿಂದಲೂ ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಹೆಣ್ಣನ್ನು ಈ ಸ್ಥಿತಿಗೆ ತಂದು ಅವಳು ಅನಿವಾರ್ಯವಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದ ಪುರುಷೋತ್ತಮ ಯಾವ ನಾಚಿಕೆಯೂ ಇಲ್ಲದೇ ಹೀಗೇ ಇನ್ನೊಂದು ಹೆಣ್ಣನ್ನು ಬಲೆಗೆ ಬೀಳಿಸಲು ಹೊಂಚು ಹಾಕುತ್ತಿರುತ್ತಾನೆ! ಅವನಿಗೆ ಶಿಕ್ಷೆ ನೀಡುವವರ್‍ಯಾರು?

ತನ್ನ ತಪ್ಪಿಲ್ಲದೆಯೂ ಸಮಾಜ ಅಥವಾ ವ್ಯವಸ್ಥೆಯ ಕ್ರೌರ್ಯಕ್ಕೆ ಸಿಕ್ಕು ತಲ್ಲಣಿಸುವ ಇಂತಹ ಹೆಣ್ಣು ಮಕ್ಕಳಿಗೆ ನ್ಯಾಯ ಎಲ್ಲಿದೆ? ಕೆಲವು ಮಾಧ್ಯಮಗಳೂ ಪೂರ್ವಪರ ಯೋಚಿಸದೇ ಹೆಣ್ಣುಮಕ್ಕಳ ಕುರಿತು ವಿಪರೀತದ ತಪ್ಪುಕಲ್ಪನೆ ಬರುವಂತೆ ಚಿತ್ರಿಸಿದರೆ ಅವಳು ಇನ್ನೆಲ್ಲಿಗೆ ಹೋಗಬೇಕು? ನಿಧಾನಕ್ಕೆ ವಿವೇಚಿಸಿದಾಗ ಇಂತಹ ಘಟನೆ ಅಥವಾ ತಪ್ಪುಗಳ ಹಿಂದೆ ಸಮಾಜ ಅಥವಾ ವ್ಯವಸ್ಥೆಯ ಬಿಗಿಯಾದ ಕಪಿಮುಷ್ಠಿ ಇರುವುದು ಗೋಚರಿಸುತ್ತದೆ. ಆ ಕ್ಷಣದ ಒತ್ತಡ, ಅನಿವಾರ್ಯತೆ ಅಥವಾ ದಿಕ್ಕುತೋಚದ ಸ್ಥಿತಿಯಲ್ಲಿ ಇಂತಹ ಅಸಹಾಯಕ ಹೆಣ್ಣುಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಸೂಕ್ಷ್ಮತೆಯಿಂದಲೂ ಅನುಕಂಪದಿಂದಲೂ ನೋಡಿದಾಗ ಮಾತ್ರ ಅವರಿಗೆ ಒಂದಿಷ್ಟಾದರೂ ಮಾನವೀಯ ಅಂತಃಕರಣದ ನ್ಯಾಯವನ್ನು ನೀಡಲು ನಮ್ಮ ಮಾಧ್ಯಮಗಳಿಗೆ ಸಾಧ್ಯವಾದೀತೇನೋ? ತನ್ಮೂಲಕ ಸಮಾಜವನ್ನೂ ಸರಿಯಾದ ದಿಕ್ಕಿನಲ್ಲಿ ಯೋಚನೆಗೂ ಹಚ್ಚಬಹುದು ಅಲ್ಲವೇ? ಅಂತಹ ಅಂತಃಕರಣದ ಕಣ್ಣು ಎಲ್ಲರಿಗೂ ದಕ್ಕಲಿ ಎಂದು ಹಾರೈಸೋಣ.