Category Archives: ಸಿನೆಮಾ

ಸಿನೆಮಾ-ಕಿರುತೆರೆಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಪೋಲೀಸ್ ಪ್ರತಿಭಟನೆ : ಒಂದು ಬದಿಯಲ್ಲಿ ನಪುಂಸಕತ್ವ, ಮತ್ತೊಂದು ಬದಿಯಲ್ಲಿ ಪುರುಷತ್ವ

– ಬಿ.ಶ್ರೀಪಾದ ಭಟ್

ನವೀನ್ ಸೂರಂಜೆಯವರು ’ಪೋಲೀಸ್ ಪ್ರತಿಭಟನೆ’ ಕುರಿತಾಗಿ ಬರೆಯುತ್ತಾ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಅವರೇ ಸ್ವತ ತಮ್ಮ ಪ್ರಶ್ನೆಗಳ ಸುಳಿಗೆ ಬಲಿಯಾಗಿದ್ದಾರೆ. ನೋಡಿ ಅವರು ಪದೇ ಪದೇ ಪ್ರಭುತ್ವದ ಪದವನ್ನು ಬಳಸುತ್ತಾರೆ. ಆದರೆ ಈ ಪ್ರಭುತ್ವ ಮತ್ತು ಪ್ರಜೆ ಎನ್ನುವ ಸಂಘರ್ಷದ ಚರ್ಚೆ ತುಂಬಾ ಹಳೆಯದು ನಮ್ಮ ಮಿತಿಯ ಕಾರಣಕ್ಕಾಗಿ ಕ್ರಮೇಣ ಸವಕಲಾಗುತ್ತಿದೆ. ಏಕೆಂದರೆ ಪ್ರಭುತ್ವದ ಎಲ್ಲಾ ದೌರ್ಜನ್ಯಗಳನ್ನು ಮತ್ತು ಕ್ರೌರ್ಯವನ್ನು ಕ್ರಮೇಣ ವ್ಯವಸ್ಥೆಯು ಕೈಗೆತ್ತಿಕೊಳ್ಳುತ್ತದೆ. ಒಮ್ಮೆ ವ್ಯವಸ್ಥೆ ತನ್ನ ಹಾದಿಯಲ್ಲಿದೆ ಎಂದು ಗೊತ್ತಾದೊಡನೆ ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಹೆಣಿಗೆ ಊಹೆಗೂ ನಿಲುಕುವುದಿಲ್ಲ. ಇಲ್ಲಿ ನಾವು ಯುರೋಪಿಯನ್ ರಾಷ್ಟ್ರಗಳಿಂದ ಕಡತಂದ ಪ್ರಭುತ್ವದ ಪದಬಳಕೆಯನ್ನು KSP Recruitment 2015ಅದರ ಮೂಲ ಅರ್ಥದಲ್ಲಿ ಬಳಸಿದರೆ ಅಷ್ಟರಮಟ್ಟಿಗೆ ನಮ್ಮನ್ನು ಕತ್ತಲಲ್ಲಿ ಕೂಡಿ ಹಾಕಿಕೊಳ್ಳುತ್ತೇವೆ ಅಷ್ಟೆ. ಪಶ್ಚಿಮ ರಾಷ್ಟ್ರಗಳಲ್ಲಿ ಪ್ರಭುತ್ವದ ದೌರ್ಜನ್ಯಗಳು ವ್ಯವಸ್ಥೆಯ ಮನಸ್ಥಿತಿಯೊಂದಿಗೆ ಪರಸ್ಪರ ತಾಳೆಯಾಗುವ ರೀತಿಯೇ ಬೇರೆ ಅಥವಾ ಅನೇಕ ಬಾರಿ ಹೊಂದಿಕೊಂಡಿರುವುದಿಲ್ಲ. ಆದರೆ ಏಷ್ಯಾ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಂತಹ ದೇಶದಲ್ಲಿ ಪ್ರಭುತ್ವದ ಕಣ್ಸನ್ನೆಯನ್ನು ವ್ಯವಸ್ಥೆ ಪಾಲಿಸುತ್ತಿರುತ್ತದೆ ಅಥವಾ ವ್ಯವಸ್ಥೆ ಪ್ರಭುತ್ವದ ಬಹುಪಾಲು ಕೆಲಸಗಳನ್ನು ಸ್ವತಃ ತಾನೇ ಕೈಗೆತ್ತಿಕೊಳ್ಳುತ್ತದೆ. ನಾವು ಇಂಡಿಯಾದಲ್ಲಿ ಬದುಕುತ್ತಾ ಕೇವಲ ಪ್ರಭುತ್ವವನ್ನು ಹೊಣೆಗಾರಿಕೆ ಮಾಡುವುದು ಬೇಜವಬ್ದಾರಿತನವಷ್ಟೆ.

ರೋಹಿತ ವೇಮುಲನ ಹತ್ಯೆ ವ್ಯವಸ್ಥೆಯ ಮೂಲಕ ನಡೆದ ಹತ್ಯೆ. ಕೆಲ್ವಿನ್ ಮಣಿ, ಲಕ್ಷ್ಮಣಪುರ ಬಾತೆ, ಕರಂಚೇಡು, ಕಂಬಾಲಪಲ್ಲಿ, ಖೈರ್ಲಾಂಜಿಯಲ್ಲಿ ದಲಿತರ ಕೊಲೆ ಮತ್ತು ಹತ್ಯಾಕಾಂಡವನ್ನು ವ್ಯವಸ್ಥೆ ಮುಂಚೂಣಿಯಲ್ಲಿ ನಿಂತು ನಡೆಸಿತ್ತು. ಪ್ರಭುತ್ವ ತನ್ನ ಮೌನ ಬೆಂಬಲ ನೀಡಿತ್ತು. 1984ರ ಸಿಖ್‌ರ ಹತ್ಯಾಕಾಂಡ ವ್ಯವಸ್ಥೆ ನಡೆಸಿದ ಹತ್ಯಾಕಾಂಡ. ಪ್ರಭುತ್ವ ನೇರ ಬೆಂಬಲ ಸೂಚಿಸಿತ್ತು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಅಲ್ಲಿನ ವ್ಯವಸ್ಥೆ ಮುಂಚೂಣಿಯಲ್ಲಿದ್ದರೆ ಪ್ರಭುತ್ವವು ಅದರ ಬೆಂಬಲವಾಗಿ ಬೆನ್ನ ಹಿಂದಿತ್ತು. naveen-soorinjeಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಅಷ್ಟೇಕೆ ಸ್ವತಃ ನವೀನ್ ಸೂರಿಂಜೆಯವರನ್ನು ಹೋಮ್ ಸ್ಟೇ ಪ್ರಕರಣದಲ್ಲಿ ಬಂದಿಸಿದ್ದು ಪ್ರಭುತ್ವವಾದರೂ ಅವರನ್ನು ತಪ್ಪಿತಸ್ಥರೆಂದು ಅಪಪ್ರಚಾರ ಮಾಡಿದ್ದು ಅಲ್ಲಿನ ಮತೀಯವಾದಿ ವ್ಯವಸ್ಥೆ. ನಾವು ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಈ ಸಂಕೀರ್ಣ ಆದರೆ ಅಪಾಯಕಾರಿ ಹೊಂದಾಣಿಕೆಯ, ಬದಲಾಗುತ್ತಿರುವ ಹೊಣೆಗಾರಿಕೆಯ ಅರಿವಿಲ್ಲದೆ ಮಾತನಾಡಿದರೆ ಹಾದಿ ತಪ್ಪಿದಂತೆಯೇ.

ಏಕೆಂದರೆ ನವೀನ್ ಅವರು ನೇರವಾಗಿ ಪೋಲೀಸ್ ವ್ಯವಸ್ಥೆಯನ್ನು ಪ್ರಭುತ್ವದ ರೂಪದಲ್ಲಿ ನೋಡುತ್ತಾ ಅಲ್ಲಿನ ಶ್ರೇಣೀಕೃತ ವ್ಯವಸ್ಥೆಯಾದ ಕಮೀಷನರ್, ಇನ್ಸ್‍ಪೆಕ್ಟರ್ ಜನರಲ್, ಡಿಸಿಪಿ, ಎಸಿಪಿ ಜೊತೆಜೊತೆಗೆ ಕಾನ್ಸಟೇಬಲ್ ಮತ್ತು  ಆರ್ಡಲೀಗಳನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದೇ ತಕ್ಕಡಿಯಲ್ಲಿ ತೂಗಿರುವುದೇ ದೋಷಪೂರಿತವಾದದ್ದು. ಏಕೆಂದರೆ ಜೂನ್ 4ರಂದು ಪ್ರತಿಭಟನೆ ಮಾಡುತ್ತಿರುವವರು ಕೆಳ ಶ್ರೇಣಿಯ ಕಾನ್ಸಟೇಬಲ್ ಮತ್ತು  ಆರ್ಡಲೀಗಳು. ಅವರನ್ನು ಪ್ರಭುತ್ವವೆಂದು ನೋಡುವುದೇ ನಮಗೆ ನಾವು ಮಿತಿಯನ್ನು ಹಾಕಿಕೊಂಡಂತೆ. ಅವರಿಗೆ ಕೆಲಸಕ್ಕೆ ಸೇರುವಾಗ ಪೋಲೀಸ್ ವ್ಯವಸ್ಥೆಯ ನಿಯಮಗಳ ಅರಿವಿರಲಿಲ್ಲವೇ, ಅದು ಅನಿವಾರ್ಯವೆಂದು ಗೊತ್ತಿಲ್ಲವೇ ಎಂದು ನವೀನ್ ಪ್ರಶ್ನಿಸುತ್ತಾರೆಂದರೆ karnataka-policeನನಗೆ ಅಶ್ಚರ್ಯವಾಗುತ್ತದೆ. ಪ್ರೊಲಿಟರೇಯನ್ ಬದುಕು ಹೇಗೆ ಮತ್ತು ಯಾವ ರೀತಿ ರೂಪುಗೊಳ್ಳುತ್ತಾ ಹೋಗುತ್ತದೆ ಎಂದು ಗೊತ್ತಿದ್ದೂ ನವೀನ್ ಈ ಪ್ರಶ್ನೆ ಎತ್ತಿದ್ದು ದರ್ಪದಂತೆ ಕಾಣುತ್ತದೆ. ಏಕೆಂದರೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಳ್ಳುವ ಕಾರ್ಮಿಕರಿಗೂ ಅಲ್ಲಿನ ಬಂಡವಾಳಶಾಹಿ ಮಾಲೀಕನ ಎಲ್ಲಾ ದೌರ್ಜನ್ಯಗಳ, ಕ್ರೌರ್ಯದ ಪರಿಚಯವಿರುತ್ತದೆ. ಆದರೆ ಕಾರ್ಮಿಕರಿಗೆ ನಿನಗೆ ಗೊತ್ತಿದ್ದೂ ಹೇಗೆ ಸೇರಿಕೊಂಡೆ, ಅಲ್ಲಿ ಸೇರಿಕೊಂಡು ಮಾಲೀಕನ ವಿರುದ್ಧ ಪ್ರತಿಭಟಿಸುವುದೂ ಅನ್ಯಾಯ ಎನ್ನುವುದೇ ಅಮಾನವೀಯ. ಪ್ರೊಲಿಟೇರಿಯನ್‌ನ ಬದುಕು ಅವದಾಗಿರುವುದಿಲ್ಲ. ಅವನ ಆಯ್ಕೆ ಅವನದಾಗಿರುವುದಿಲ್ಲ. ಆವನ ನಡತೆ ಅವನದಾಗಿರುವುದಿಲ್ಲ. ವ್ಯವಸ್ಥೆ ಅವನಿಗೆ ಕನಿಷ್ಠ ಮಾನವಂತನಾಗಿ ಬದುಕಲು ಬಿಡಲಾರದಷ್ಟು ಕಟುವಾಗಿರುತ್ತದೆ. ನವೀನ್ ಹೇಳುವ ಹತ್ತನೇ ತರಗತಿ ಓದಿನ ಕಾನ್ಸಟೇಬಲ್‌ಗಳು ಮತ್ತು ಆರ್ಡಲೀಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಅನಿವಾರ್ಯ ಆಯ್ಕೆಗೆ ಬಲಿಯಾಗಿ ಪೋಲೀಸ್ ವ್ಯವಸ್ಥೆಗೆ ಸೇರಿಕೊಳ್ಳುತ್ತಾನೆ. ಅದರ ಭಾಗವಾಗುತ್ತಾನೆ. ಕ್ರೌರ್ಯಕ್ಕೆ ಬಲಿಯಾಗುತ್ತಾನೆ. ಕ್ರೌರ್ಯದ ಮುಖವಾಗುತ್ತಾನೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಗೋವಿಂದ ನಿಹಾಲನಿಯವರ “ಅರ್ಧಸತ್ಯ” ಸಿನಿಮಾವನ್ನು ನೋಡಲೇಬೇಕು. ಆ ಸಿನಿಮಾದಲ್ಲಿ ಬಳಸಿಕೊಂಡ ಖ್ಯಾತ ಮರಾಠಿ ಕವಿ ದಿಪೀಪ್ ಚಿತ್ರೆ ಬರೆದ ಕೆಲ ಸಾಲುಗಳು ಹೀಗಿವೆ:

ಚಕ್ರವ್ಯೂಹದ ಒಳಗಿದ್ದರೂ ಸಹಿತ
ಸಾಯುತ್ತೇನೆಯೋ ಅಥವಾ ಸಾಯಿಸುತ್ತೇನೆಯೋ
ಇದರ ಕುರಿತಾಗಿಯೂ ನಿರ್ಧರಿಸಲಾಗಲಿಲ್ಲ

ಒಂದು ಬದಿಯಲ್ಲಿ ನಪುಂಸಕತ್ವವನ್ನು
ಮತ್ತೊಂದು ಬದಿಯಲ್ಲಿ ಪುರುಷತ್ವದೊಂದಿಗೆ ಸಮವಾಗಿ ತೂಗುತ್ತ
ನ್ಯಾಯ ತಕ್ಕಡಿಯ ಈ ಮೊನೆಯು
ನಮಗೆ ಅರ್ಧಸತ್ಯದ ಕಡೆಗೆ ಬೆರಳು ತೋರಿಸುತ್ತದೆ

ಇಡೀ ಪೋಲೀಸ್ ವ್ಯವಸ್ಥೆ ಪ್ರಭುತ್ವದ ಅಡಿಯಲ್ಲಿ “ಒಂದು ಬದಿಯಲ್ಲಿ ನಪುಂಸಕತ್ವ ಮತ್ತೊಂದು ಬದಿಯಲ್ಲಿ ಪುರುಷತ್ವದೊಡನೆ ತೂಗುತ್ತಿರುತ್ತದೆ.” ಇದರ ಮೊದಲ ಮತ್ತು ನಿರಂತರ ಬಲಿಪಶುಗಳು ಪೋಲೀಸ್ ಪೇದೆಗಳು ಮತ್ತು ಕೆಳಹಂತದ ಅಧಿಕಾರಿಗಳು. ಅವರು ಠಾಣೆಯಲ್ಲಿ ನಿರಪರಾಧಿ ಕೈದಿಗಳ ಮೇಲೆ ನಡೆಸುವ ದೌರ್ಜನ್ಯ, ಲಾಕಪ್ ಡೆತ್, ಪ್ರತಿಭಟನೆಕಾರರ ಮೇಲೆ ನಡೆಸುವ ಹಲ್ಲೆಗಳು, ಗೋಲೀಬಾರು, ನಕಲಿ ಎನ್‌ಕೌಂಟರ್‌ಗಳು, Ardh_Satya,_1982_fimಎಲ್ಲವೂ ವ್ಯವಸ್ಥೆಯ ಪ್ರತಿನಿಧಿಯಾಗಿ ನಡೆಸುತ್ತಾರೆ ಹೊರತಾಗಿ ಪ್ರಭುತ್ವದ ಪ್ರತಿನಿಧಿಯಾಗಿ ಅಲ್ಲವೇ ಅಲ್ಲ. ನಂತರ ತಮ್ಮ ಕೃತ್ಯಗಳಿಗೆ ಪ್ರಭುತ್ವನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಾರೆ. ಇದನ್ನು ನಿಹಾಲನಿ ಅರ್ಧಸತ್ಯ ಸಿನಿಮಾದಲ್ಲಿ ಸಮರ್ಥವಾಗಿ ಕಟ್ಟಿದ್ದಾರೆ. ಇತ್ತೀಚೆಗೆ ಪತ್ರಕರ್ತೆ ರಾಣಾ ಅಯೂಬ್ ಅವರ “ಗುಜರಾತ್ ಫೈಲ್ಸ್” ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಅದರಲ್ಲಿ ಅವರು 2002 ರ ಮುಸ್ಲಿಂ ಹತ್ಯಾಕಾಂಡ, ಇಶ್ರಾನ್ ಎನ್‌ಕೌಂಟರ್, ಸೊಹ್ರಾಬುದ್ದೀನ್ ಎನ್‌ಕೌಂಟರ್‌ನ ಸಂದರ್ಭಗಳ ಮತ್ತು ಆ ನಂತರದ ದಿನಗಳ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅದು ನಿಜಕ್ಕೂ ಮೈ ನಡುಗಿಸುತ್ತದೆ. ಅಲ್ಲಿನ ಬಹುತೇಕ ಪೋಲೀಸ್ ಅಧಿಕಾರಗಳು ತಳ ಸಮುದಾಯದಿಂದ ಬಂದವರು. ವ್ಯವಸ್ಥೆಯ ಭಾಗವಾಗಿಯೇ ಗುಜರಾತ್ ಹತ್ಯಾಕಾಂಡ ಮತ್ತು ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಪ್ರಭುತ್ವದ ದಾಳವಾಗಿ ಬಳಕೆಯಾಗುತ್ತಾರೆ. ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಪುಸ್ತಕದಲ್ಲಿ ತಮ್ಮ ಪತ್ರಕರ್ತರ ಅನುಭವದ ಮೂಲಕ ರಾಣಾ ಅಯೂಬ್ ಸಮರ್ಥವಾಗಿ ತೋರಿಸಿದ್ದಾರೆ.

ಹೀಗಾಗಿ ನವೀನ್ ಅವರು ಪೋಲೀಸ್ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ಪ್ರಭುತ್ವದ ಸ್ಥಾನದಲ್ಲಿ ನಿಲ್ಲಿಸಿಕೊಂಡು ವಿಮರ್ಶಿಸತೊಡಗಿದೊಡನೆ ಸ್ವತ ತಮಗೆ ತಾವೇ ಲಕ್ಷ್ಮಣರೇಖೆಯನ್ನು ಎಳೆದುಕೊಂಡುಬಿಡುತ್ತಾರೆ. ಹೀಗಾಗಿಯೇ ಎಡಪಂಥೀಯರು ಪ್ರಭುತ್ವವನ್ನು ಸಂತ್ರಸ್ಥರ ಸ್ಥಾನದಲ್ಲಿ ನಿಲ್ಲಿಸುತ್ತಿದೆ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಮಸಲ ನಾಳೆ ಯು.ಟಿ.ಖಾದರ್‌ಗೆ ಅನ್ಯಾಯವಾದಾಗ ಅವರ ಪರವಾಗಿ ಸಮರ್ಥನೆಗೆ ನಿಂತಾಗ ನಾವು ಪ್ರಭುತ್ವವನ್ನು ಬೆಂಬಲಿಸಿದಂತಾಗುತ್ತದೆಯೇ? ಅಥವಾ ಮಂಗಳೂರಿನ ಡಿ.ಸಿ.ಇಬ್ರಾಹಿಂ ಅವರಿಗೆ ಆದ ಅನ್ಯಾಯವನ್ನು ಪ್ರತಿಭಟಿಸಿದರೆ ಅದು ಪ್ರಭುತ್ವವನ್ನು ಸಂತ್ರಸ್ಥರನ್ನಾಗಿಸುತ್ತದೆಯೇ?

ಇನ್ನು ಪೋಲೀಸರ ಬೇಡಿಕೆಗಳ ಕುರಿತಾಗಿ ಅವರ ಸಂಬಳದ ಕುರಿತಾಗಿ ಮಾತನಾಡುವುದು ಔಚಿತ್ಯವೇ ಅಲ್ಲ. ಅಲ್ಲರೀ ದಿನವಿಡೀ ಬಿಸಿಲಲ್ಲಿ ದುಡಿಯುವವನಿಗೆ ನಿನಗೆ 18000 ಸಂಬಳ ಸಾಕಲ್ವೇನಯ್ಯ ಎಂದು ನವೀನ್ ಹೇಳುತ್ತಾರೆಂದು ನಾನು ನೆನಸಿರಲಿಲ್ಲ.

ಕಡೆಯದಾಗಿ ಪೋಲೀಸ್ ವ್ಯವಸ್ಥೆಯಿಂದ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು,ದೌರ್ಜನ್ಯವನ್ನು,ಹತ್ಯಾಕಾಂಡಗಳನ್ನು ಈ ಪೇದೆಗಳು ಮತ್ತು ಆರ್ಡಲೀಗಳು ನಡೆಸುತ್ತಿರುವ ಪ್ರತಿಭಟನೆಗೆ ತಳುಕು ಹಾಕುವುದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಮಾನವೀಯ.

ವರ್ತಮಾನ.ಕಾಮ್‌ಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ…

ಮೊನ್ನೆ ಆಗಸ್ಟ್ 10, 2015 ಕ್ಕೆ ವರ್ತಮಾನ.ಕಾಮ್‌ಗೆ ನಾಲ್ಕು ತುಂಬಿತು. ಆದರೆ ಅದರ ಬಗ್ಗೆ ಇಲ್ಲಿಯವರೆಗೆ ಏನೊಂದೂ ಬರೆದಿರಲಿಲ್ಲ. ಕಾರಣ, ಗೊತ್ತಾಗದೇ ಹೋದದ್ದು. ಅಂದರೆ ಇದರ ಕೆಲವೊಂದು ಜವಾಬ್ದಾರಿಗಳನ್ನು ಹೊತ್ತಿರುವ ನಾನು ಅದನ್ನು ಯೋಗ್ಯವಾಗಿ ನಿಭಾಯಿಸುವಲ್ಲಿ ಈಗಾಗಲೆ ವಿಫಲವಾಗಿದ್ದೇನೆ ಎನ್ನುವುದು ಸಾಬೀತು. ಇತ್ತೀಚೆಗೆ ತಾನೆ ನಮ್ಮ ಬಳಗದ ಕೆಲವರು ಸೇರಿದ್ದಾಗ ನಾನು ಅಪ್ರಾಸ್ತವಿಕವಾಗಿ ನನ್ನ ಈಗಿನ ’ಸಂಪಾದಕ’ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಿದರೆ ಹೇಗೆ ಎಂದು ಪ್ರಸ್ತಾಪಿಸಿದ್ದೆ. ಈಗ ಅದನ್ನು ಗಂಭೀರವಾಗಿ ಯೋಚಿಸಿ Vartamana 4ತೀರ್ಮಾನಿಸಬೇಕಿದೆ.

ವರ್ತಮಾನ.ಕಾಮ್‌ನಂತಹ ಯಾವುದೇ ಒಂದು ವೆಬ್‌ಸೈಟ್ ಪ್ರತಿದಿನವೂ ಒಂದಲ್ಲ ಒಂದು ಲೇಖನಗಳನ್ನು ಪ್ರಕಟಿಸದಿದ್ದರೆ ತನ್ನ ಪ್ರಸ್ತುತೆಯನ್ನು ಮತ್ತು ಓದುಗರನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಮೊದಲಿನಿಂದಲೂ ನಾವು ನಮ್ಮ ಲೇಖನ ಪ್ರಕಟವಾದ ಕೂಡಲೆ ವರ್ತಮಾನದ ಫೇಸ್‌ಬುಕ್ ಗೋಡೆಯಲ್ಲಿ ಹಂಚಿಕೊಳ್ಳುವುದರಿಂದ ಅದಕ್ಕೆ ಸ್ನೇಹಿತರಾಗಿರುವ ಒಂದಷ್ಟು ಖಾಯಂ ಓದುಗರಿಗೆ ನಮ್ಮ ಹೊಸದಾಗಿ ಪ್ರಕಟಿತ ಲೇಖನದ ಮಾಹಿತಿ ತಲುಪತ್ತದೆ. ಆ ದೃಷ್ಟಿಯಿಂದ ಯಾವುದಾದರೂ ಹೊಸ ಲೇಖನ ಪ್ರಕಟವಾಗಿದೆಯೇ ಇಲ್ಲವೋ ಎಂದು ನೋಡಲು ನಮ್ಮ ಬಹುತೇಕ ಓದುಗರು ವೆಬ್‌ಸೈಟಿಗೇ ನೇರ ಭೇಟಿ ಕೊಡುವ ಅಗತ್ಯ ಇರುವುದಿಲ್ಲ. ಆದರೆ ನೇರ ವೆಬ್‌ಸೈಟಿಗೆ ಭೇಟಿ ಕೊಟ್ಟು ಗಮನಿಸುವ ನಮ್ಮ ಖಾಯಂ ಓದುಗರಿಗೆ ಇಲ್ಲಿ ಮೂರ್ನಾಲ್ಕು ದಿನಗಳ ಕಾಲವಾದರೂ ಹೊಸ ಲೇಖನ ಪ್ರಕಟವಾಗದೇ ಇದ್ದರೆ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾರೆ.

ಇಷ್ಟಾದರೂ, ಈಗಾಗಲೆ ಹಲವು ಬಾರಿ ಪ್ರಸ್ತಾಪಿಸಿರುವಂತೆ ನಮ್ಮ ಲೇಖನಗಳ ಓದುಗರು ಕೇವಲ ಅಂತರ್ಜಾಲದಲ್ಲಿ ಓದುವವರಷ್ಟೇ ಅಲ್ಲ. ಇಡೀ ರಾಜ್ಯದಾದ್ಯಂತ ಹಲವು ಪತ್ರಿಕೆ ಮತ್ತು ನಿಯತಕಾಲಿಕೆಗಳು ಇಲ್ಲಿಯ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಬರುತ್ತಿದ್ದಾರೆ. ಆ ದೃಷ್ಟಿಯಿಂದ ನಮ್ಮ ಬಹುತೇಕ ಲೇಖನಗಳಿಗೆ ಸಾವಿರಾರು ಇಲ್ಲವೆ ಲಕ್ಷಾಂತರ ಲೆಕ್ಕದಲ್ಲಿ ಓದುಗರಿದ್ದಾರೆ. ಆ ಮಟ್ಟಿಗೆ ನಮ್ಮ ಪ್ರಸ್ತುತತೆ ಮತ್ತು ಪ್ರಭಾವ ವ್ಯಾಪಿಸಿದೆ.

ಆದರೆ, ಮುಂದಕ್ಕೆ ಇದನ್ನು ಹೇಗೆ ತೆಗೆದುಕೊಂಡು ಹೋಗುವುದು ಎನ್ನುವ ಪ್ರಶ್ನೆ ಬೆಳೆಯುತ್ತಲೇ ಬರುತ್ತಿದೆ. ಉತ್ತರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರಿಗಿಂತ ನನ್ನ ಮೇಲೆಯೇ ಹೆಚ್ಚಿದೆ ಮತ್ತು ನಾನು ಸೋಲುತ್ತಿದ್ದೇನೆ. ಅಯೋಗ್ಯತೆಯೂ ಒಂದು ರೀತಿಯಲ್ಲಿ ಅನೈತಿಕತೆ ಮತ್ತು ಭ್ರಷ್ಟಾಚಾರ ಎಂದುಕೊಂಡವನು ನಾನು. ಭ್ರಷ್ಟನಾಗುವ ಅಗತ್ಯ ಅಥವ ಅನಿವಾರ್ಯತೆ ನನಗಿಲ್ಲ. ವರ್ತಮಾನ.ಕಾಮ್ ನಿರೀಕ್ಷಿತ ಮಟ್ಟದಲ್ಲಿ ತನ್ನ ಪ್ರಭಾವ ವಲಯವನ್ನು 4th-anniversaryವಿಸ್ತರಿಸಿಕೊಳ್ಳುತ್ತಿಲ್ಲ ಮತ್ತು ಅನಿಯಮಿತವಾಗುತ್ತಿದೆ ಎನ್ನುವುದು ಬಿಟ್ಟರೆ, ಮತ್ತು ಅದು ತನ್ನ ಪಾಡಿಗೆ ಸಾವಯವವಾಗಿ ಬೆಳೆಯಲಿ ಎನ್ನುವುದೂ ಒಂದು ಉದ್ದೇಶವಾಗಿರುವ ಕಾರಣದಿಂದ, ಮತ್ತು ಅದು ಯಾರಿಗೂ ಕೇಡು ಉಂಟು ಮಾಡುತ್ತಿಲ್ಲದ ಕಾರಣದಿಂದಾಗಿ, ಅನವಶ್ಯಕವಾಗಿ ಯಾರ ಮೇಲೂ ಆರ್ಥಿಕ ದುಷ್ಪರಿಣಾಮ ಅಥವ ಹೊರೆ ಆಗದೇ ಇರುವುದರಿಂದ ಅದು ಹೇಗಿದ್ದರೂ ನಡೆದೀತು ಎನ್ನುವ ಕಾರಣಕ್ಕೇ ನಾನೂ ಅಷ್ಟು ತೀಕ್ಷ್ಣವಾಗಬಾರದು ಎಂದೆನಿಸುತ್ತದೆ. ಆದರೆ ಆಗಾಗಲಾದರೂ ನಮಗೆ ನಾವೇ ಕಠೋರವಾಗದಿದ್ದರೆ ಕ್ರಮೇಣ ಅದು ಆತ್ಮವಂಚನೆಯೂ ಆಗುತ್ತದೆ.

ನಾಲ್ಕನೇ ವರ್ಷ ತುಂಬಿದ ಈ ಸಂದರ್ಭದಲ್ಲಿ ಹಿಂದಿನ ವರ್ಷಗಳಲ್ಲಿ ಹೇಳಿಕೊಂಡ ಹಾಗೆ, ’ಹಾಗೆ ಆಗಬಹುದು, ಹೀಗೆ ಆಗಬಹುದು’ ಎನ್ನುವುದೇನನ್ನೂ ಹೇಳದೆ, ಏನಾಗುತ್ತದೆಯೋ ಅದನ್ನು ಮಾಡೋಣ ಮತ್ತು ವರ್ತಮಾನ.ಕಾಮ್ ತನಗೆ ಬರುವ ಅದರ ಮೂಲಆಶಯಕ್ಕೆ ಬದ್ಧತೆ ಇರುವ ಲೇಖಕರ ಲೇಖನಗಳನ್ನು ಅವು ಬಂದಾಗಲೆಲ್ಲೆ ಪ್ರಕಟಿಸುತ್ತ ಹೋಗುತ್ತದೆ, ಒಂದೆರಡು ದಿನಗಳ ಅವಧಿಯೊಳಗೆ ಎಂದಷ್ಟೇ ಹೇಳಬಯಸುತ್ತೇನೆ.

ನಮಸ್ಕಾರ,
ರವಿ
ವರ್ತಮಾನ.ಕಾಮ್


ಹುಸಿ ಚಿಂತನೆಗಳ ಹೊಳೆ : ಆತ್ಮದ್ರೋಹವಾಗುತ್ತಿರುವ ಮಾತುಗಳು

ಬಿ.ಶ್ರೀಪಾದ ಭಟ್

***

ಆತ ಗ್ರೀಕ್ ಸಿನಿಮಾ ನಿರ್ದೇಶಕ. ಕಳೆದ 35 ವರ್ಷಗಳಿಂದ ತನ್ನ ದೇಶ ಗ್ರೀಕ್ ತೊರೆದು ಅಮೇರಿಕಾದಲ್ಲಿ ನೆಲೆಸಿದ್ದ. ಹಾಲಿವುಡ್‍ನಲ್ಲಿ ಸಿನಿಮಾಗಳನ್ನು ತಯಾರಿಸಿದ್ದ, ನಿರ್ದೇಶಿಸಿದ್ದ. ಆ ನಿರ್ದೇಶಕನ ಹೆಸರು ‘A’. 35 ವರ್ಷಗಳ ನಂತರ ತನ್ನ ಅತ್ಯಂತ ವಿವಾದಗ್ರಸ್ಥ ಸಿನಿಮಾದ ಪ್ರದರ್ಶನಕ್ಕಾಗಿ ತವರು ನೆಲ ಗ್ರೀಕ್‍ಗೆ ಮರಳಿದ್ದ.

ಆದರೆ ನಿರ್ದೇಶಕ ‘A’ನ ಉದ್ದೇಶ ಬೇರೆಯದಾಗಿತ್ತು. ಸಿನಿಮಾ ulyssesgazeಎನ್ನುವ ಮಾಂತ್ರಿಕತೆಯ ಪ್ರಾರಂಭದ ದಿನಗಳ ಸಂದರ್ಭದಲ್ಲಿ ಅಂದರೆ ಸುಮಾರು 1905ರಲ್ಲಿ ಛಾಯಾಗ್ರಾಹಕರಾದ ‘ಮನಕಿಯಾ’ ಸಹೋದರರು ಬಾಲ್ಕನ್ ಪ್ರದೇಶಕ್ಕೆ (ಪೂರ್ವ ಸೈಬೀರಿಯಾದ ಪರ್ವತ ಪ್ರದೇಶಗಳಿಂದ ಪೂರ್ವ ಬಲ್ಗೇರಿಯಾದ ಕಪ್ಪು ಸಮುದ್ರದವರೆಗೆ) ದೇಶಾಂತರ ಹೋಗಿ ಅಲ್ಲಿನ ಸಂಸ್ಕೃತಿ, ಜನಾಂಗದ ಆಚರಣೆಗಳು, ಮೂಲ ನಿವಾಸಿಗಳ ಬದುಕಿನ ಕುರಿತಾಗಿ 3 ರೀಲುಗಳ ಚಿತ್ರೀಕರಣ ಮಾಡಿಕೊಂಡಿದ್ದರು. ನಂತರ ಈ 3 ರೀಲುಗಳ ಸಿನಿಮಾ ಕಣ್ಮರೆಯಾಗಿತ್ತು. ಆದರೆ ಎಂದೂ ಬೆಳಕಿಗೆ ಬಾರದ ಈ ನಿಗೂಢ ರೀಲುಗಳ ತಲಾಶೆಗಾಗಿ ಗ್ರೀಕ್ ನಿರ್ದೇಶಕ ‘A’ ತನ್ನ ತಾಯ್ನಾಡಿಗೆ ಮರಳಿ ಬಂದಿದ್ದ.

‘ಮನಕಿಯಾ’ ಸೋದರರು ಚಿತ್ರೀಕರಿಸಿದ ಆ 3 ರೀಲುಗಳಲ್ಲಿ ಏನು ಅಡಗಿದೆ? ಅಂತಹ ಜನಾಂಗೀಯ ಘರ್ಷಣೆಗಳಿದ್ದ ಬಾಲ್ಕನ್ ಪ್ರದೇಶಕ್ಕೆ ಅಪಾಯಕಾರಿಯಾದ ಪಯಣವನ್ನು ಕೈಗೊಂಡಿರುವ ಉದ್ದೇಶ ಅಲ್ಲಿನ ಮೂಲನಿವಾಸಿಗಳ ಬದುಕನ್ನು ಚಿತ್ರೀಕರಿಸುವುದು ಮಾತ್ರವಾಗಿತ್ತೇ?

ಕಡೆಗೆ ಈ 3 ರೀಲುಗಳ ‘ಮನಕಿಯಾ ಸೋದರರ’ ಸಿನಿಮಾದ ಹುಡುಕಾಟಕ್ಕೆ ಹೊರಡುವ ನಿರ್ದೇಶಕ ‘A’ ಗ್ರೀಕ್‍ನಿಂದ ತನ್ನ ಪ್ರಯಾಣ ಆರಂಭಿಸುತ್ತಾನೆ. ಅಲ್ಲಿಂದ ಅಲ್ಬೇನಿಯಾದ ಗಡಿ ಭಾಗಕ್ಕೆ ತಲಪುತ್ತಾನೆ. ನಂತರ ಹಡಗಿನ ಮೂಲಕ ‘ಸರಜೀವೋ’ ಪ್ರಾಂತ್ಯಕ್ಕೆ ತಲುಪುತ್ತಾನೆ. UlyssesGaze-5ಆದರೆ ಅಲ್ಬೇನಿಯನ್, ಬೋಸ್ನಿಯನ್, ಬಲ್ಗೇರಿಯನ್, ಕ್ರೋಷಿಯನ್, ಗ್ರೀಕ್ಸ್, ಸ್ಲೋವಿಯನ್ಸ್, ಸೆರ್ಬಿಯನ್ಸ್, ರೊಮಾನಿಯನ್ಸ್ ಹೀಗೆ ವಿಭಿನ್ನ ಜನಾಂಗಗಳನ್ನೊಳಗೊಂಡ ಇಡೀ ಬಾಲ್ಕನ್ ಪೆನಿಸುಲಾ ಪ್ರಾಂತ್ಯವು ಜನಾಂಗೀಯ ಯುದ್ಧದಲ್ಲಿ ಮುಳುಗಿ ಹೋಗಿರುತ್ತದೆ. ಇಡೀ ಪ್ರಾಂತ್ಯವನ್ನೇ ಅಪಾಯಕಾರಿ ಪ್ರದೇಶವೆಂದು ಘೋಷಿಸಲಾಗಿರುತ್ತದೆ. ಇಂತಹ ಭೀಕರ ಜನಾಂಗೀಯ ಯುದ್ಧದ ಸಂದರ್ಭದಲ್ಲಿ, ಪ್ರತಿ ಕ್ಷಣಕ್ಕೂ ಪ್ರಾಣಪಾಯವಿರುವ ಪ್ರದೇಶಕ್ಕೆ ನಿರ್ದೇಶಕ ‘A’ ಬಂದು ತಲಪುತ್ತಾನೆ.

***

ಇದು ಗ್ರೀಕ್ ನಿರ್ದೇಶಕ ‘ಅಂಜೆಲೋಪೋಲಸ್’ ನ ನಿರ್ದೇಶನದ “Ulysses’ Gaze” ನ ಸ್ಥೂಲ ಕಥೆ. ಆದರೆ ಈ ನಿರ್ದೇಶಕ ‘A’ ಬಾಲ್ಕನ್ ಪ್ರದೇಶಕ್ಕೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಒಂದು ಫ್ಲಾಶ್‍ಬ್ಯಾಕ್ ಬರುತ್ತದೆ. ಅದು 1945ರ ಸಂದರ್ಭ. ನಿರ್ದೇಶಕ ‘A’ ನ ಬೆಲ್‍ಗ್ರೇಡ್ ಸ್ನೇಹಿತ ಹೇಳುತ್ತಾನೆ, ‘ನಾವು ಒಂದು ಜಗತ್ತಿನಲ್ಲಿ ಗಾಢ ನಿದ್ರೆಗೆ ಜಾರಿಕೊಳ್ಳುತ್ತೇವೆ ಮತ್ತು ಮತ್ತೊಂದು ಜಗತ್ತಿನಲ್ಲಿ ನಮ್ಮನ್ನು ಅತ್ಯಂತ ಒರಟಾಗಿ ಎಚ್ಚರಿಸಲಾಗುತ್ತದೆ’. ಇದು “Ulysses’ Gaze” ಸಿನಿಮಾದ ಭಾಷ್ಯೆಯನ್ನು ಹೇಳುತ್ತದೆ ಎAದೆನಿಸುತ್ತದೆ. ಏಕೆಂದರೆ ನಿರ್ದೇಶಕ ‘A’ ಯಾತಕ್ಕಾಗಿ ತನ್ನ ಜೀವದ ಹಂಗನ್ನು ತೊರೆದು ಕಳೆದು ಹೋದ ಆ ನಿಗೂಢ 3 ರೀಲುಗಳ ಸಿನಿಮಾದ ಹುಡುಕಾಟಕ್ಕೆ ಬರುತ್ತಾನೆ? ಆತನಿಗೆ 20ನೇ ಶತಮಾನದ ಆರಂಭದಲ್ಲಿ ಬದುಕಿದ್ದ ಇದೇ ಬಾಲ್ಕನ್ ಪ್ರಾಂತದ ಮೂಲ ನಿವಾಸಿಗಳ ಮನದ ಮಾತುಗಳನ್ನು ಅರಿತುಕೊಳ್ಳುವ ತವಕ. ಎಂಬತ್ತು ವರ್ಷಗಳ ನಂತರ ಇಂದು ವಿಭಿನ್ನ ಜನಾಂಗಗಳ ಪ್ರಾಂತವಾದ Ulysses'_Gaze_Posterಬಾಲ್ಕನ್ ಪೆನಿನ್ಸುಲಾದಲ್ಲಿ ಜನಾಂಗೀಯ ಘರ್ಷಣೆಗಳಾಗುತ್ತಿವೆ. ಪರಸ್ಪರ ಕಾದಾಡುತ್ತಿದ್ದಾರೆ. ಜನಾಂಗದ ಶ್ರೇಷ್ಟತೆಯ ಹೆಸರಿನಲ್ಲಿ ರಕ್ತಪಾತವಾಗುತ್ತಿದೆ. ಆದರೆ ಇವರ ಮೂಲ ನಿವಾಸಿಗಳು ಎಂಬತ್ತು ವರ್ಷಗಳ ಹಿಂದೆ ಏನು ಮಾತನಾಡಿದ್ದರು? ಇದು ಒಬ್ಬ ಕ್ರಿಯಾಶೀಲ ನಿರ್ದೇಶಕನ್ನು ಗಾಢವಾಗಿ ಕಾಡುತ್ತದೆ. ಹಾಗೆಯೇ ನಿರ್ದೇಶಕ ‘A’ ಗೂ ಕಾಡುತ್ತದೆ.

ಹೋಮರನ ಕಾವ್ಯದ ಓಡೆಶಿಯಸ್ ಟ್ರಾಯ್ ಯದ್ಧದ ಹತ್ತುವರ್ಷಗಳ ನಂತರ ತನ್ನ ತವರಿಗೆ ಮರಳುತ್ತಾನೆ. ಓಡೆಶಿಯಸ್‍ನ ಈ ಪಯಣವನ್ನು “Ulysses’ Gaze” ಸಿನಿಮಾದಲ್ಲಿ ಪ್ರತಿನಿಧಿಸುತ್ತಲೇ ನಿರ್ದೇಶಕ ‘ಅಂಜೆಲೋಪೋಲಸ್’ ಕೇವಲ ಗತಕಾಲದ ಹುಡುಕಾಟದಲ್ಲಿ ಮಾತ್ರ ತೊಡಗುವುದಿಲ್ಲ, ಬಾಲ್ಕನ್ ಪೆನಿಸುಲಾದ ಜನಾಂಗೀಯ ಗುಂಪುಗಳ ಮೂಲ ನಿವಾಸಿಗಳ ಮುಗ್ಧತೆ, ಅವರ ಸಂಸ್ಕೃತಿಯನ್ನು ಅರಿಯಲು ಆ 3 ರೀಲುಗಳ ಸಿನಿಮಾದ ಮೂಲಕ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ರಕ್ಷಣೆ ಇಲ್ಲದ ಅಪಾಯಕಾರಿ ಯುದ್ಧನಿರತ ಪ್ರಾಂತಕ್ಕೆ ತಲಪುತ್ತಾನೆ. ಸಿನಿಮಾದಲ್ಲಿ ನಿರ್ದೇಶಕ ‘A’ ತನ್ನ ಹುಡುಕಾಟದ ಕುರಿತಾಗಿ“ ಈ ಪ್ರಾಂತದ ಘರ್ಷಣೆಗಳು, ಸಂಧಿಗ್ಧತೆ, ತಲ್ಲಣಗಳು, ವಿರೋಧಾಭಾಸಗಳು ಮನಕಿಯಾ ಸೋದರರ 3 ರೀಲುಗಳ ಸಿನಿಮಾದಲ್ಲಿ ಹೇಳಲಾಗಿದೆ” ಎಂದು ಹೇಳುತ್ತಾನೆ. ಅಲ್ಬೇನಿಯಾ, ರೊಮೇನಿಯಾ, ಸ್ಲೋವಿಯಾ ಪ್ರಾಂತಗಳಲ್ಲಿ ಹಾದುಹೋಗುವಾಗ ಅಲ್ಲಿ ಯುದ್ಧದ ಸಾವುಗಳು, ಜನಾಂಗೀಯ ದಾಯಾದಿ ಕಲಹಗಳು ಅಲ್ಲಿನ ಮೂಲ ನಿವಾಸಿಗಳ ಕನಸುಗಳನ್ನು ನಾಶಗೊಳಿಸುತ್ತಿರಬಹುದೇ? ಆ ಮೂಲನಿವಾಸಿಗಳ ಕನಸುಗಳನ್ನು, ಬದುಕಿನ ಆಶಯಗಳನ್ನು ಅರಿಯಲು ಆ 3 ರೀಲಿನ ಸಿನಿಮಾಗಳ ಅವಶ್ಯಕತೆ ಇದೆ.

ಇಡೀ ಸಿನಿಮಾದ ಅವಧಿ ಸುಮಾರು 3 ತಾಸುಗಳು. ಇಡೀ ಸಿನಿಮಾದ ದಟ್ಟತೆಗೆ ಈ ಅವಧಿ ತುಂಬಾ ದೀರ್ಘವೆನಿಸುತ್ತದೆ. ಅನೇಕ ವೇಳೆ ಪ್ರೇಕ್ಷಕನ ಸಹನೆಯನ್ನು ಪರೀಕ್ಷಿಸುತ್ತದೆ. ಆದರೆ ಈ ಎಲ್ಲಾ ಬಿಡಿ ಬಿಡಿಯಾದ ಆಯಾಮಗಳನ್ನು ಒಂದೇ ಎಳೆಯಲ್ಲಿ ಜೋಡಿಸಲು ಹೊರಟ ನಿರ್ದೇಶಕ ‘ಅಂಜೆಲೋಪೋಲಸ್’ ಇದನ್ನು ಅತ್ಯಂತ ಕಾವ್ಯಾತ್ಮಕವಾಗಿ ಅನೇಕ ರೂಪಕಗಳಲ್ಲಿ ಹೇಳುತ್ತಾನೆ. ಒಂದು ದೃಶ್ಯದಲ್ಲಿ ದೇಹದಿಂದ ಬೇರ್ಪಟ್ಟ ಲೆನಿನ್‍ನ ವಿಗ್ರಹದ ತಲೆಯ ಭಾಗ ಮತ್ತು ದೇಹವನ್ನು ಹಡಗಿನಲ್ಲಿ ಮಲಗಿಸಿ ಸಾಗಿಸುತ್ತಾರೆ. ಎಲ್ಲಿಗೆ ಮತ್ತು ಯಾವ ದಿಕ್ಕಿಗೆ ಎಂದು ಗೊತ್ತಾಗುವುದಿಲ್ಲ. ಇದು ಸೋವಿಯತ್ ಛಿದ್ರಗೊಳ್ಳುತ್ತಿರುವ ಸಂದರ್ಭ. ಸೈಬೀರಿಯಾದ ಇಡೀ ಪ್ರಾಂತವೇ ಗಲಭೆಗ್ರಸ್ತವಾಗಿದೆ. UlyssesGaze-4ಭಗ್ನಗೊಂಡ ಲೆನಿನ್‍ನ ಭವ್ಯ ವಿಗ್ರಹವನ್ನು ಹಡಗಿನಲ್ಲಿ ಸಾಗಿಸುವ ದೃಶ್ಯ ಪರಿಣಾಮಕಾರಿಯಾಗಿದೆ.

ಗರುಕೆ ಹುಲ್ಲನ್ನೂ ಕೂಡ ಬೆಳೆಯಲು ಬಿಡದ ಮನುಷ್ಯ ಮೂಲಭೂತವಾಗಿ ‘ಈವಿಲ್’ ಎಂದು ಲಂಕೇಶ್ ಹೇಳಿದ್ದರು. ತನ್ನ ಸ್ವಾರ್ಥ ಮತ್ತು ಸ್ವಹಿತಾಸಕ್ತಿಗಾಗಿ ತನ್ನವರ ಕತ್ತನ್ನು ತಾನೇ ಸೀಳುವ ಹಂತಕ್ಕೆ ತಲಪುವ ಸ್ಥಿತಿಯನ್ನು ಸ್ವತಂತ್ರ ಪ್ರವೃತ್ತಿ ಎಂದು ಕರೆಯುವ ಚಿಂತಕ ಗ್ರಾಮ್ಷಿ ಮುಂದೆ ಇದನ್ನು ತನ್ನ ಮೂಲ ಹುಟ್ಟಿನ ನೆಲೆಯಿಂದ ಬಿಡುಗಡೆಗೊಂಡು ತಾನು ಮಾತ್ರ ಬಚಾವಾಗುವ ಪ್ರವೃತ್ತಿ ಎಂದು ಹೇಳುತ್ತಾನೆ. ಈ ಹುಟ್ಟಿನ ಮೂಲವನ್ನು ಹೇಳುವ ಮೂಲನಿವಾಸಿಗಳ ಮಾತುಗಳನ್ನು ಕೆಳುವ ವ್ಯವಧಾನ ನಮ್ಮಲ್ಲಿ ಎಲ್ಲಿದೆ? ತಳ ಸಮುದಾಯಗಳ ಪರವಾಗಿ ಅಕಡೆಮಿಕ್ ಭಾಷೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮೂಲನಿವಾಸಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನಮ್ಮ ಪಾಂಡಿತ್ಯದ ಪ್ರದರ್ಶನ ಮಾತ್ರ ಅನಾವರಣಗೊಳ್ಳುತ್ತಿರುತ್ತದೆ. ಈ ನೆಲದ ಮಕ್ಕಳ, ಇಲ್ಲಿನ ಮೂಲನಿವಾಸಿಗಳ ಒಳಗುದಿಯನ್ನು ಆಲಿಸಲು ಸದಾ ನಿರಾಕರಿಸುವ ನಾವೆಲ್ಲ ಕೇವಲ ವಿಶ್ವವಿದ್ಯಾಲಯಗಳ ಲೈಬ್ರೆರಿಗಳ ಮೂಲಕ ನಮ್ಮ ಪಾಂಡಿತ್ಯವನ್ನು ರೂಪಿಸಿಕೊಂಡಿರುತ್ತೇವೆ. ನವ ಉದಾರೀಕರಣದ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಫಲಾನುಭವಿಗಳಾದ ನಮ್ಮೆಲ್ಲರ ಸಂವೇದನೆಗಳು ಕ್ಷೀಣಿಸುತ್ತಾ ಹೋಗುತ್ತವೆ. ಸಂವಹನದ ಮಾರ್ಗಗಳುUlyssesGaze-2 ಕೈಕೊಡುತ್ತವೆ. ನಮ್ಮ ಪ್ರಸ್ತುತೆಯನ್ನು ಗಟ್ಟಿಗೊಳಿಸಿಕೊಳ್ಳಲು ಮೂಲನಿವಾಸಿಗಳನ್ನು ವಿಸ್ಮೃತಿಗೆ ತಳ್ಳಲು ಹೇಸದ ಸುಸಂಸ್ಕೃತ ನಾಗರಿಕ ಸಮಾಜವು ಅವರ ಸಂಸ್ಕೃತಿಯ ಪರವಾಗಿ ಕಿರುಚುವುದನ್ನು ನಿಲ್ಲಿಸುವುದಿಲ್ಲ. ಕಣ್ಣಿನ ಪಟ್ಟಿಯನ್ನು ಕಳಚಿಕೊಂಡಿದ್ದೇವೆ ಎನ್ನುವ ಭ್ರಮೆಯಲ್ಲಿರುವ ನಾವೆಲ್ಲ ನಿಮ್ಮ ಕತ್ತಲನ್ನು ಓಡಿಸುತ್ತೇವೆ ಎಂದು ವ್ಯವಸ್ಥೆಯಲ್ಲಿನ ಅವಮಾನಿತ ತಳ ಸಮುದಾಯಗಳಿಗೆ ಆಶ್ವಾಸನೆ ಕೊಡುತ್ತೇವೆ. ಆದರೆ ಸ್ವತಃ ಬೆಳಕನ್ನು ಹಿಡಿದು ನಿಂತ ಮೂಲನಿವಾಸಿಗಳನ್ನು ಒದ್ದು ಗೋಳೀಕರಣದ ಗ್ಲೋಬಲ್‍ಗೆ ಜಿಗಿಯುತ್ತೇವೆ. ಚಾರಿತ್ರಿಕ ದೃಷ್ಟಿಕೋನದಿಂದ ನೋಡಲು ನಿರಾಕರಿಸುವ ನಾವೆಲ್ಲ ಮೂಲ ನಿವಾಸಿಗಳ UlyssesGaze-3ಅಂತರಂಗದ ಹತ್ತಿರಕ್ಕೂ ಸುಳಿಯಲು ಸೋಲುತ್ತೇವೆ.

ನಮ್ಮೆಲ್ಲರಿಗೂ ಆ 3 ರೀಲುಗಳ ಸಿನಿಮಾದಲ್ಲಿ ಬಾಲ್ಕನ್ ಪ್ರಾಂತದ ಮೂಲನಿವಾಸಿಗಳು ಏನು ಮಾತನಾಡುತ್ತಿದ್ದಾರೆ, ಅವರ ಸಂವೇದನೆಗಳೇನು ಎಂದು ಅರಿಯುವ ವ್ಯವಧಾನವೇ ಇಲ್ಲ. 80 ವರ್ಷಗಳ ಹಿಂದೆ ಅವರ ಮಾತನಾಡುವ ನುಡಿಕಟ್ಟಿಗೂ ನಮ್ಮ ಇಂದಿನ ಸಂದರ್ಭಕ್ಕೂ ಇರುವ ಕನೆಕ್ಷನ್ ಕುರಿತಾದ ಸೋಜಿಗವೂ ನಮ್ಮಲ್ಲಿ ಉಳಿದಿಲ್ಲ. ಹೀಗಾಗಿಯೇ ನಿರ್ದೇಶಕ ‘A’ ದೇಶಭ್ರಷ್ಟನಾಗಿ, ಪ್ರಾಣವನ್ನು ಪಣಕ್ಕಿಟ್ಟು ಅ ಮೂಲನಿವಾಸಿಗಳ ಸಂವೇದನೆಯನ್ನು ಹೇಳುವ ಸಿನಿಮಾ ರೀಲುಗಳಿಗಾಗಿ ಯುದ್ಧಭೂಮಿಯಲ್ಲಿ ಅಲೆಯುವುದನ್ನು ನಮಗೆಲ್ಲ ಒಂದು ಹುಚ್ಚಾಟದಂತೆಯೇ ಭಾಸವಾಗುತ್ತದೆ. ಏಕೆಂದರೆ ನಾಗರಿಕ ಸಮಾಜಕ್ಕೆ ನಡೆಕಾರನ ನಡೆಗಳು ಮತ್ತು ಬದುಕು ಸದಾ ಅಪಥ್ಯ. ಎಲ್ಲವನ್ನು ತಲಸ್ಪರ್ಶಿಯಾಗಿಯೇ ನೋಡುತ್ತೇವೆ ಎನ್ನುವ ಭ್ರಮೆಯಲ್ಲಿರುವ ನಾವೆಲ್ಲ ಚಾರಿತ್ರಿಕ ಕುರೂಪಗಳನ್ನು ಅರ್ಥ ಮಾಡಿಕೊಂಡಿರುವುದಿಲ್ಲ ಅಥವಾ ನಮ್ಮ ಪ್ರಜ್ಞೆಯನ್ನು ವಿಸ್ಮೃತಿಗೆ ತಳ್ಳಿರುತ್ತೇವೆ.

ನನ್ನ ನೆನಪಿನಲ್ಲಿ ನೀನು ಕಣ್ಣೀರು ಹಾಕಬೇಡ, ಮನಸ್ಸು ನೋಯಿಸಿಕೊಳ್ಳಬೇಡ

– ಬಿ. ಶ್ರೀಪಾದ ಭಟ್

ಆತ ಲಖ್ನೋ ಬಾಯ್. ಹೆಸರು ತಲಾತ್ ಮಹಮೂದ್. ತನ್ನ ೧೬ನೇ ವಯಸ್ಸಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಸಾಧಿಸಿದ್ಧ ಈ ಲಖ್ನೋ ಬಾಯ್ ಗಝಲ್ ಹಾಡುವುದರಲ್ಲಿ ಜನಪ್ರಿಯನಾಗಿದ್ದ. ಆತನ ೧೭ನೇ ವಯಸ್ಸಿನಲ್ಲಿಯೇ ಎಚ್‌ಎಂವಿ ಮೂಲಕ ಗಝಲ್ talat_mahmoodಹಾಡುಗಳ ಡಿಸ್ಕ್ ಬಿಡುಗಡೆಯಾಗಿತ್ತು. ಆ ೪೦ರ ದಶಕದ ಪ್ರಖ್ಯಾತ ಗಝಲ್ ಹಾಡುಗಾರ ಉಸ್ತಾದ್ ಬರ್ಖಾತ್ ಅಲಿ ಖಾನ್ ನೊಂದಿಗೆ ಈ ಲಖ್ನೋ ಬಾಯ್ “ತಲಾತ್ ಮಹಮೂದ್”ನ ಹಾಡುಗಳನ್ನು ಗುನುಗುನಿಸುತ್ತಿದ್ದರು. ೪೦ರ ದಶಕದ ಮಧ್ಯ ಭಾಗದಲ್ಲಿ ಬಾಂಬೆಗೆ ಬಂದ ತಲಾತ್‌ಗೆ ಆಗಿನ ಹಿಂದಿ ಸಿನಿಮಾದ ಸಂಗೀತ ನಿರ್ದೇಶಕರು ತೀರಾ ತೆಳುವಾದ ಧ್ವನಿ, ಹಾಡುವಾಗ ಕಂಪಿಸುತ್ತದೆ ಎಂದು ಮೂದಲಿಸಿ ಅವಕಾಶಗಳನ್ನು ನಿರಾಕರಿಸಿದ್ದರು. ಕಡೆಗೆ ೧೯೪೯ರಲ್ಲಿ ಅನಿಲ್ ಬಿಶ್ವಾಸ್ ಸಂಗೀತ ನಿರ್ದೇಶನದ, ದಿಲೀಪ್ ಕುಮಾರ್ ಅಭಿನಯದ ’ಆರ್ಜೂ’ ಸಿನಿಮಾಗೆ ’ಐ ದಿಲ್ ಮುಜೆ ಐಸೆ ಜಗಾ ಲೇ ಚಲ್’ ಎನ್ನುವ ಹಾಡನ್ನು ಹಾಡುವ ಅವಕಾಶ ದೊರಕಿತು. ಮುಂದೆ ಸುಮಾರು ಮೂರು ದಶಕಗಳ ಕಾಲ ಹಾಡಿದ ತಲಾತ್ ಮಹಮೂದ್ ತುಂಬಾ ಸರಳ ಮತ್ತು ಸಹಜ ಗಾಯಕರಾಗಿದ್ದರು. ಇವರ ಧ್ವನಿ ಮತ್ತು ಮೃದು ವ್ಯಕ್ತಿತ್ವ ಶಾಸ್ತ್ರೀಯ ಸಂಗೀತಕ್ಕೆ ಸರಿ ಎಂದು ಟೀಕಿಸುವವರಿಗೆ ಅತ್ಯುತ್ತಮ ಹಿಂದಿ ಹಾಡುಗಳನ್ನು ಹಾಡಿ ಬಾಯಿ ಮುಚ್ಚಿಸಿದ್ದರು. ತಲಾತ್ ಮಹಮೂದ್ ಅವರು ಪದಗಳನ್ನು ಬಳಸಿಕೊಳ್ಳುವ ಶೈಲಿ, ಸ್ವರ ಪ್ರಯೋಗದ ಶೈಲಿ, ಧ್ವನಿಯ ಏರಿಳಿದ ಶೈಲಿ ೪೦, ೫೦ ರ ದಶಕದ ಹಿಂದಿ ಹಾಡುಗಳಿಗೆ ನಾವೀನ್ಯತೆಯನ್ನು ತಂದು ಕೊಟ್ಟವು.

೫೦ರ ದಶಕದ ಆರಂಭದಲ್ಲಿ ಬಿಡುಗಡೆಯಾದ ದಿಲೀಪ್ ಕುಮಾರ್ ಅಭಿನಯದ ’ದಾಗ್’ ಸಿನಿಮಾಗೆ ’ಐ ಮೇರಿ ದಿಲ್ ಕಹೀ ಔರ್ ಚಲ್, ಗಮ್ ದುನಿಯಾ ಸೆ ದಿಲ್ ಭರ್ ಗಯಾ’ ಎನ್ನುವ ಹಾಡನ್ನು ಭೈರವಿ ರಾಗದಲ್ಲಿ ಹಾಡಿದರೆ, ಅದೇ ಸಮಯದಲ್ಲಿ ದೇವ್ ಆನಂದ್ ಅಭಿನಯದ ’ಟಾಕ್ಸಿ ಡ್ರೈವರ್’ ಸಿನಿಮಾಗೆ ಹಾಡಿದ ’ಜಾಯೆತೊ ಜಾಯೆ ಕಹಾ, ಸಮ್ಜೇಗಾ ಕೌನ್ ಯಹಾ’ ಎನ್ನುವ ಹಾಡನ್ನು ಜಾನ್‌ಪುರಿ ರಾಗದಲ್ಲಿ ಹಾಡಿದ್ದರು. dilip-kumar-and-dev-anandಆದರೆ ಎರಡೂ ಹಾಡುಗಳನ್ನು ತಲಾತ್ ಮಹಮೂದ್ ಎಷ್ಟು ಆಳದಲ್ಲಿ ಮತ್ತು ಮಾಧುರ್‍ಯದಲ್ಲಿ ಹಾಡಿದರೆಂದರೆ ಎರಡೂ ಹಾಡುಗಳು ವಿಭಿನ್ನ ನಾಯಕರ ಉದಾಸ, ಆಲಸ್ಯದ ಮನಸ್ಥಿತಿಯನ್ನು ಒಂದೇ ಸ್ತರದಲ್ಲಿ ಕೇಳುಗರಿಗೆ ತಲುಪಿಸುತ್ತಿದ್ದವು. ದಿಲೀಪ್ ಕುಮಾರ್ ಮತ್ತು ದೇವ್ ಆನಂದ್ ಸಮಾನ ದುಖಿಗಳಾಗಿಯೇ ನಮಗೆ ಕಂಡು ಬರುತ್ತಿದ್ದರು. ತಲಾತ್‌ರ ಪ್ರತಿಭೆ ಮತ್ತು ಪರಿಪೂರ್ಣತೆ ಇದನ್ನು ಸಾಧ್ಯವಾಗಿಸಿತ್ತು. ೧೯೫೩ರಲ್ಲಿ ಬಿಡುಗಡೆಗೊಂಡ ’ಫುಟ್‌ಪಾತ್’ ಸಿನಿಮಾಗೆ ದಿಲೀಪ್ ಕುಮಾರ್ ಅಭಿನಯದ ಖಯ್ಯಾಮ್ ಸಂಗೀತ ನೀಡಿದ ’ಶಾಮ್ ಎ ಗಮ್ ಕಿ ಕಸಮ್, ಆಜ್ ಗಮ್‌ಗೀ ಹೈ ಹಮ್’ ಎನ್ನುವ ಹಾಡನ್ನು ತಲಾತ್ ಮಹಮೂದ್ ತಮ್ಮೊಳಗಿನ ಜೀವವನ್ನೇ ಬಳಸಿ ಹಾಡಿದ್ದರು. ಅದಕ್ಕೆ ದಿಲೀಪ್ ಕುಮಾರ್ ಅಭಿನಯವೂ ಸಹ ಅಷ್ಟೇ ಸರಿಸಾಟಿಯಾಗಿತ್ತು. ಇಂದಿಗೂ ಆ ಹಾಡು ಅತ್ಯುತ್ತಮ ಹಿಂದಿ ಸಿನಿಮಾ ಗಝಲ್‌ಗಳಲ್ಲಿ ಒಂದು. ಇಂದಿಗೂ ಶಾಮ್ ಎ ಗಮ್ ಕಿ ಕಸಮ್ ಹಾಡು, ತಲಾತ್ ದ್ವನಿ ನಮ್ಮನ್ನು ಕಾಡುತ್ತದೆ, ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಅದೇ ಕಾಲದ ರಾಜೇಂದ್ರ ಕ್ರಿಷ್ಣನ್ ಸಂಗೀತ ನೀಡಿದ ’ದೇಖ್ ಕಬೀರಾ ರೋಯಾ’ ಸಿನಿಮಾದಲ್ಲಿ ಹಾಡಿದ ’ಹಮ್‌ಸೆ ಆಯಾ ನ ಗಯಾ, ತುಮ್‌ಸೆ ಬುಲಾಯಾ ನ ಗಯಾ’ ಎನ್ನುವ ಹಾಡು ಹಗುರವಾದ ಮನಸ್ಥಿತಿಯಲ್ಲಿ, ನಿರುಮ್ಮಳ ಭಾವದಲ್ಲಿ ಪ್ರಾರಂಭವಾಗುತ್ತಾ ಕಡೆಗೆ ’ದಾಗ್ ಜೊ ತುಮ್ನೆ ದಿಯಾ, ದಿಲ್ ಸೆ ಮಿಠಾಯ ನ ಗಯಾ’ ಎಂದು ಭಾರವಾಗುತ್ತ ಕಳೆದುಕೊಂಡ, ಪಡೆದುಕೊಂಡಿದ್ದಾದರೂ ಏನು ಎನ್ನುವ ಮನಸ್ಥಿತಿಯೊಂದಿಗೆ ಮುಗಿಯುತ್ತದೆ. ಈ ಎರಡೂ ಭಾವಗಳನ್ನು ಪಡೆದುಕೊಂಡ, ಕಳೆದುಕೊಂಡ ಮನಸ್ಥಿತಿಯನ್ನು ತಲಾತ್ ಮಹಮೂದ್ ತನ್ನ ಧ್ವನಿಯಲ್ಲಿ, ಅದ್ಭುತವಾದ ಏರಿಳಿತಗಳ ಮೂಲಕ ನಮಗೆ ದಾಟಿಸುತ್ತಾ ಹೋಗುತ್ತಾರೆ. ಹೌದು ತಲಾತ್ ಧ್ವನಿ ನಮಗೆ ಎಲ್ಲಾ ಭಾವಗಳನ್ನು ದಾಟಿಸುತ್ತಾ ಹೋಗುತ್ತದೆ. ಅದೂ ಹೇಗೆ, ನಾವೂ ಅವರೊಂದಿಗೆ ಕಂಪಿಸುವ ಹಾಗೆ.

೧೯೫೫ ರಲ್ಲಿ ಬಿಡುಗಡೆಗೊಂಡ ’ಬಾರಾದರಿ’ ಸಿನಿಮಾದ ನಾಶಾದ್ ( ನೌಶಾದ್ ಅಲ್ಲ) ಸಂಗೀತ ನೀಡಿದ ’ತಸವೀರ್ ಬನಾತಾ ಹೂ, talat_mahmood_audio_cdತಸವೀರ್ ನಹೀ ಬನತೀ, ಎಕ್ ಖ್ವಾಬ್ ಸೆ ದೇಖಾ ಹೈ, ತಾಬೀರ್ ನಹೀ ಬನತೀ’ ಎನ್ನುವ ಹಾಡು ತಲಾತ್ ಮಹಮೂದ್ ಧ್ವನಿಯ ಒಂದು ಕ್ಲಾಸಿಕ್. ಅದನ್ನು ರೇಶ್ಮೆಯಂತಹ ನುಣುಪಿನ ಧ್ವನಿಯಲ್ಲಿ ಹಾಡಿದ ತಲಾತ್ ’ದಮ್ ಭರ್ ಕೆ ಲಿಯೆ ಮೇರಿ, ದುನಿಯಾ ಮೆ ಚಲೇ ಆವೋ’ ಎಂದು ಹಗುರ ಅಂದರೆ ಹಗುರ ಧ್ವನಿಯಲ್ಲಿ ಕರೆಯುವಾಗ ನಾವು ಆಗಲೇ ಆ ದುನಿಯಾದಲ್ಲಿ ಸೇರಿ ಹೋಗಿರುತ್ತೇವೆ.

ಛಾಯಾ ಸಿನಿಮಾದ ’ಇತನಾನ ಮುಜೆಸೆ ತು ಪ್ಯಾರ್ ಬಧಾ, ತೊ ಮೈ ಎಕ್ ಬಾದಲ್ ಆವಾರ’, ಸುಜಾತಾ ಸಿನಿಮಾದ ’ಜಲ್ತೇ ಹೈ ಜಿಸ್ಕೆ ಲಿಯೇ’, ಉಸ್ನೆ ಕಹಾ ಥಾ ಸಿನಿಮಾದ ’ಆಹಾ ರಿಮ್ ಜಿಮ್ ಕೆ ಯೆ ಪ್ಯಾರೆ ಪ್ಯಾರೆ ಗೀತ್ ಲಿಯೆ’, ಮಧೋಶ್ ಸಿನಿಮಾದ ’ಮೇರೆ ಯಾದ್ ಮೆ ತುಮ್ನಾ ಆಸೂ ಬಹಾ ನ, ನ ದಿಲ್ ಕೋ ಜಲಾನ, ಮುಜೇ ಭೂಲ್ ಜಾನಾ’, ಬಾಬುಲ್ ಸಿನಿಮಾದ ’ಮಿಲ್ತೆ ಹಿ ಆಂಖೇ, ದಿಲ್ ಹುವಾ ದೀವಾನಾ ಕಿಸಿ ಕಾ’ ಮತ್ತು ಮುಂತಾದ ಹಾಡುಗಳು ತಲಾತ್ ಮಹಮೂದ್ ಅವರ ಕ್ಲಾಸಿಕ್ ಹಾಡುಗಳು. ತಮ್ಮ ರೇಶ್ಮೆಯಂತಹಾ ನುಣುಪಾದ ಧ್ವನಿಯಲ್ಲಿ ಹತಾಶಗೊಂಡ ಮನಸ್ಸಿನ, ಮುರಿದ ಹೃದಯದ ಭಾವನೆಗಳನ್ನು ನಮ್ಮೊಳಗೆ ಆಳವಾಗಿ ತೇಲಿ ಬಿಡುವ ತಲಾತ್ ಒಬ್ಬ ಕ್ಲಾಸಿಕ್ ಹಾಡುಗಾರ. ಅವರ ಎಲ್ಲಾ ಹಾಡುಗಳಲ್ಲಿ ಉರ್ದು ಭಾಷೆಯನ್ನು ಬಳಸಿಕೊಂಡು,ಹೊರಹೊಮ್ಮಿಸುವ ಶೈಲಿ ಅನನ್ಯವಾದದ್ದು. ಉರ್ದು ಭಾಷೆ ತಲಾತ್ ಧ್ವನಿಯಲ್ಲಿ ತನ್ನ ಎಲ್ಲಾ ಗುಣಗಳೊಂದಿಗೆ ನಮ್ಮೊಳಗೆ ಇಳಿಯುತ್ತಾ ಹೋಗುತ್ತದೆ.

ಐವತ್ತರ ಆ ದಶಕದಲ್ಲಿ ಸಾಹಿರ್, ಕೈಫೀ ಅಜ್ಮಿ, ಖಯ್ಯಾಮ್, ನೌಶಾದ್, ಮಜರೂಹ್ ಸುಲ್ತಾನ್ ಪುರಿ, ಶೈಲೇಂದ್ರ, ಹಸರತ್ ಜೈಪುರಿ, ಮಹಮದ್ ರಫಿ, ಮುಖೇಶ್, ಶಕೀಲ್ ಬದಾಯೆ, ಸಿ.ರಾಮಚಂದ್ರ, ಮದನ್ ಮೋಹನ್, ಗುಲಾಮ್ ಮಹಮದ್, ಶಂಕರ್ ಜೈಕಿಶನ್, ಲತಾ ಮಂಗೇಶ್ಕರ್, talatmahmood1ಮನ್ನಾಡೆ ರಂತಹ ಮಹಾನ್ ಸಂಗೀತ ನಿರ್ದೇಶಕರು, ಕವಿಗಳೊಂದಿಗೆ ಹಾಡಿದ ತಲಾತ್ ಮಹಮೂದ್ ಮರೆಯಲಾಗದ ಹಾಡುಗಾರ. ಮನುಷ್ಯನ ಮನಸ್ಸು ಜೀವಂತಿಕೆಯಾಗಿರುವವರೆಗೂ ತಲಾತ್‌ರ velvety ಧ್ವನಿಗೆ ಮಾರು ಹೋಗುತ್ತಲೇ ಇರುತ್ತದೆ. ಲಿರಿಕ್ಸ್ ಅನ್ನು ಮತ್ತೊಂದು ಸ್ತರಕ್ಕೆ ಎತ್ತರಿಸುವ ತಲಾತ್ ಮಹಮೂದ್‌ರವರ ಧ್ವನಿ ನಮ್ಮನ್ನು ಕಾಡುತ್ತಲೇ ಇರುತ್ತದೆ.

ಈ ಲಖ್ನೋ ಬಾಯ್ ನಮ್ಮನ್ನು ಅಗಲಿ ೧೭ ವರ್ಷಗಳಾದವು. ಆದರೆ ತಲಾತ್ ಹಾಡಿದ “ಮನಸ್ಸಿನೊಳಗೆ ಆಸೆಗಳು ಬೇಯುತ್ತಿವೆ, ಕಣ್ಣಿನೊಳಗಡೆ ಕಣ್ಣೀರು ಬಾಕಿ ಇದೆ, ನಾನು ಮತ್ತು ನನ್ನ ಒಂಟಿತನ ಮಾತ್ರ ಇಲ್ಲಿದೆ” ಸಾಲುಗಳು ಸದಾ ನಮ್ಮೊಂದಿಗೆ…

pk : ನಾವು ನೋಡುವುದೆಲ್ಲ ಕೇವಲ ದೃಷ್ಟಿಕೋನಗಳನ್ನು ಮಾತ್ರ, ಸತ್ಯವನ್ನಲ್ಲ


– ಬಿ. ಶ್ರೀಪಾದ ಭಟ್


ಇತ್ತೀಚೆಗೆ ಬಿಡುಗಡೆಗೊಂಡ ಅಮೀರ್ ಖಾನ್ ನಟಿಸಿದ ‘ಪಿಕೆ’ ಎನ್ನುವ ಹಿಂದಿ ಸಿನಿಮಾ ನೋಡಿದಾಗ ಕೆಲವರು ಹೇಳಿದ ಹಾಗೆ ಅದು ಒಂದು ರೀತಿ ದೂರದರ್ಶನದಲ್ಲಿ ಅಮೀರ್ ಖಾನ್ ನಿರ್ಮಿಸಿ, ಪ್ರಸ್ತುತಪಡಿಸಿದ ’ಸತ್ಯಮೇವ ಜಯತೆ’ ಧಾರವಾಹಿಯ ಮುಂದುವರೆದ ಭಾಗದಂತೆಯೇ ಇದೆ. ಸತ್ಯಮೇವ ಜಯತೆ ಸರಣಿಯಲ್ಲಿ ತುಂಬಾ ಕುತೂಹಲದಿಂದ, ಕಣ್ಣರಳಿಸಿ ನೊಂದವರ ಮಾತುಗಳನ್ನು ಕೇಳುತ್ತ ಸ್ವತಃ ತಾನು ನೋವನ್ನು ಅನುಭವಿಸುವ ಅಮೀರ್ ಖಾನ್ ಅಲ್ಲಿ ವಾಸ್ತವ ಮತ್ತು ಭ್ರಮೆಗಳ ನಡುವೆ ಜಿಗಿದಾಡುತ್ತ ಸಮಯ ಸಿಕ್ಕಾಗಲೆಲ್ಲ ಭರಪೂರು ಉಪದೇಶಗಳನ್ನು ನೀಡುತ್ತಿರುತ್ತಾನೆ. ಅದೇ ಮಾದರಿಯಲ್ಲಿ ‘ಪಿಕೆ’ ಸಿನಿಮಾದಲ್ಲಿಯೂ ಸಹ ಉಪದೇಶಗಳ ಒಂದು ಪ್ರವಾಹವೇ ಹರಿದಿದೆ. ‘ಪಿಕೆ’ ಸಿನಿಮಾದಲ್ಲಿಯೂ ವ್ಯಕ್ತಿತ್ವ ಮತ್ತು ವ್ಯಕ್ತಿ ಎಂದು ಎರಡನ್ನು pk_aamir-khanವಿಭಜಿಸುತ್ತಾ, ಕೂಡಿಸುತ್ತಾ ಜಿಗಿದಾಡುವ ಅಮೀರ್ ಖಾನ್ ಪ್ರತಿ ದೃಶ್ಯಗಳಲ್ಲಿಯೂ ರಾಜಕಪೂರ್‌ನಂತೆ ಭ್ರಮೆಗಳ ಬಣ್ಣಗಳನ್ನು ತೇಲಿ ಬಿಡುತ್ತಲೇ ಇರುತ್ತಾನೆ. ಆ ಬಣ್ಣಗಳಿಗೆ ನಿರ್ದಿಷ್ಟ ಚೌಕಟ್ಟುಗಳನ್ನು ನಿರ್ಮಿಸಲು, ವೈಚಾರಿಕತೆಯ ಲೇಪನವನ್ನು ನೀಡಲು ನಿರ್ದೇಶಕ ರಾಜಕುಮಾರ್ ಹಿರಾನಿ ನಾಯಕಿ ಅನುಷ್ಕ ಶರ್ಮಳನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾನೆ. ಪ್ರೇಕ್ಷಕರೂ ಆ ಬಣ್ಣಗಳನ್ನು, ವೈಚಾರಿಕತೆಯ ಲೇಪನವನ್ನೂ ಆನಂದಿಸಿದ್ದಾರೆ.

’ಸತ್ಯಮೇವ ಜಯತೆ’ಯನ್ನು ನಿರ್ಮಿಸುವಾಗ ಅದು ತನ್ನ ಆಕ್ಟಿವಿಸಂನ ಭಾಗವೆಂದೇ ಅಮೀರ್ ಖಾನ್ ಕರೆದುಕೊಂಡಿದ್ದ. ಜನ ಅದನ್ನು ಅನುಮೋದಿಸಿದರು. ಅದು ತುಂಬಾ ಜನಪ್ರಿಯವೂ ಆಯಿತು. ಅಲ್ಲಿ ಅಮೀರ್ ಖಾನ್ ಭಾವುಕತೆಯಿಂದ ಪ್ರಸ್ತುತಪಡಿಸಿದ ಶತಮಾನಗಳಿಂದ ಚಾಲ್ತಿಯಲ್ಲಿದ್ದ ವ್ಯವಸ್ಥೆಯ ಕ್ರೌರ್ಯಕ್ಕೆ ಇಂಡಿಯಾದ ಮಧ್ಯಮವರ್ಗ ಸಹ ಅದು ಇದುವರೆಗೂ ತಮಗೆ ಗೊತ್ತೇ ಇರಲಿಲ್ಲವೆನ್ನುವಂತೆ, ಇದೇ ಮೊದಲ ಬಾರಿಗೆ ಅಮೀರ್ ಖಾನ್‌ನ ಮೂಲಕ ತಮಗೆ ದರ್ಶನವಾಗಿದೆಯೇನೋ ಎನ್ನುವಷ್ಟು ಬಾವುಕತೆಯಿಂದ ಸಮನಾಗಿ ಕಣ್ಣೀರಿಟ್ಟರು. ಸದ್ಯದ ಸಂದರ್ಭದಲ್ಲಿ ತನ್ನನ್ನು ಇಂಡಿಯಾದ Method Actor ಎಂದೇ ಬಿಂಬಿಸಿಕೊಳ್ಳುತ್ತಿರುವ ಅಮೀರ್ ವಾಸ್ತವದಲ್ಲೂ ಅದಕ್ಕೆ ಹತ್ತಿರವಿರುವಂತಹ pk-posterಪಾತ್ರಗಳನ್ನೂ ಆಯ್ದುಕೊಳ್ಳುತ್ತಿದ್ದಾನೆ. ಆದರೆ ಆ Method Actor ಆಯ್ಕೆಯನ್ನು ನಿಭಾಯಿಸಿಲಾಗದಂತೆ ತಡೆಯೊಡ್ಡುವ ಅನೇಕ ಜನಪ್ರಿಯವಾದ ಮಿತಿಗಳಲ್ಲಿ ಸಹ ಅಮೀರ್ ಬಂಧಿಯಾಗಿದ್ದಾನೆ. ಆದರೆ ಮತ್ತೊಂದೆಡೆ ಕಮಲ್ ಹಾಸನ್ ‘ಅನ್ಬೆ ಶಿವಂ, ವಿರುಮಾಂಡಿ’ ತರಹದ ಸಿನಿಮಾಗಳ ಮೂಲಕ ಇಲ್ಲಿನ ಕಮರ್ಷಿಯಲ್ ಮಿತಿಗಳನ್ನೂ ಮೀರುತ್ತ Method Actor ನ ಮಾದರಿಗೆ ಇಂಡಿಯಾದ ಮಟ್ಟದಲ್ಲಿ ಹೊಸ ರೂಪವನ್ನು ತಂದುಕೊಟ್ಟಿದ್ದಾನೆ. ಪಂಕಜ್ ಕಪೂರ್, ನಾಸಿರುದ್ದೀನ್ ಶಾ, ಇರ್ಫಾನ್ ಖಾನ್, ನವಾಜುದ್ದೀನ್ ಸಿದ್ದಕಿ ಯಂತಹ ನಟರು ಇಂದು Method Actor ನ ಅತ್ಯುತ್ತಮವಾದ, ಪ್ರತಿಭಾವಂತ ಉದಾಹರಣೆಯಾಗಿದ್ದಾರೆ. ಇವರಿಗೆ ಸಾಧ್ಯವಾಗಿದ್ದು ಅಮೀರ್ ಖಾನ್‌ಗೆ ಸಾಧ್ಯವಾಗುತ್ತಿಲ್ಲ.

ನಿರ್ದೇಶಕ ರಾಜಕುಮಾರ್ ಹಿರಾನಿ ಪ್ರಸ್ತುತ ಸಂದರ್ಭದಲ್ಲಿ ತಾನು ಇಂಡಿಯಾದ ಯಶಸ್ವೀ Show Man ಎಂದು ಈ ‘ಪಿಕೆ’ ಸಿನಿಮಾದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ಒಬ್ಬ ಯಶಸ್ವಿ Show Manಗೆ ಅತ್ಯವಶ್ಯಕವಾದ ಕತೆ ಹೇಳುವ ನೈಪುಣ್ಯತೆಯನ್ನು ಸಮರ್ಥವಾಗಿ ಮೈಗೂಡಿಸಿಕೊಂಡಿರುವ ಹಿರಾನಿ ಅದನ್ನು ಪ್ರೇಕ್ಷಕರು ತಲೆದೂಗುವಂತೆ ಫ್ರೇಮಿನಿಂದ ಫ್ರೇಮಿಗೆ ಕಟ್ಟುತ್ತಾ ಹೋಗುತ್ತಾನೆ. ಈತನ ಕಾಗಕ್ಕ, ಗುಬ್ಬಕ್ಕ ಕತೆಗಳನ್ನು ಸಿನಿಮಾದ ರೀಲುಗಳಲ್ಲಿ ಅಡಗಿಸಿಟ್ಟು ಅದಕ್ಕೆ ಬಣ್ಣಗಳನ್ನು ತುಂಬುತ್ತಾ ಪರದೆಯ ಮೇಲೆ ಹೊರ ಬಿಡುವಾಗ ಪ್ರೇಕ್ಷಕನೂ ಸಹ ಆ ಬಣ್ಣಗಳಲ್ಲಿ ಕಳೆದು ಹೋಗುವಂತಹ ಚಿತ್ರಕತೆಯನ್ನು ಹೆಣೆಯುವ ಹಿರಾನಿ, ಪ್ರತಿ ಸಿನಿಮಾದಲ್ಲೂ ಅದಕ್ಕೆ ವೈಚಾರಿಕತೆಯ, ನೈತಿಕತೆಯ, ಆದರ್ಶದ ಸ್ಲೋಗನ್‌ಗಳ ಹೊದಿಕೆಯನ್ನು ಸುತ್ತುತ್ತಾನೆ. ಹಿರಾನಿಯ ಈ ನೈತಿಕತೆಯ ಪಾಠಗಳು ಚಿಂತನೆಗೆ ಹಚ್ಚುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರೇಕ್ಷಕನನ್ನು ಮತ್ತಷ್ಟು ಉಲ್ಲಾಸಗೊಳಿಸುತ್ತವೆ. ಆತನಿಗೆ ಸಿನಿಮಾ ಭಾಷೆಯ ಮೇಲಿರುವ ಹಿಡಿತ ನಿಜಕ್ಕೂ ಬೆರಗುಗೊಳಿಸುತ್ತದೆ. ಆದರೆ ‘ಈ ನರಕ ಯಾತನೆಗೆ ಕೊನೆ ಎಂದು?’ ಎನ್ನುವ ಪ್ರಶ್ನೆಗಳನ್ನು ಹಿರಾನಿಯ ಪಾತ್ರಗಳೂ ಕೇಳುವುದಿಲ್ಲ. ಪ್ರೇಕ್ಷಕರೂ ಬಯಸುವುದಿಲ್ಲ. ಏಕೆಂದರೆ ಇಲ್ಲಿನ ಎಲ್ಲಾ ಭ್ರಷ್ಟತೆ, ಕ್ರೌರ್ಯಗಳ ನಿರೂಪಣೆಯು ಪ್ರೇಕ್ಷಕನಲ್ಲಿ ತಲ್ಲಣಗೊಳಿಸುವುದರ ಬದಲು, ನೋವನ್ನು ಉಂಟು ಮಾಡುವುದರ ಬದಲು ಅರೆ ಅದನ್ನೆಲ್ಲ ಎಷ್ಟು ಚೆಂದ ತೋರಿಸಿದ್ದಾನೆ ಈ ಹಿರಾನಿ ಎಂದು ಪ್ರೇಕ್ಷಕ ತಲೆದೂಗುವಂತೆ ಮಾಡುವದರಲ್ಲಿಯೇ rajkumar-hiraniಹಿರಾನಿಯ ನೈಪುಣ್ಯತೆ ಕರಗಿ ಹೋಗುವುದರಿಂದ ಮತ್ತು ಈ ಎಲ್ಲಾ ಪ್ರಶ್ನೆಗಳನ್ನೇ ಅನೇಕ ಬಾರಿ ಅಸಂಬದ್ಧ, ನೀವು ಸಿನಿಮಾ ನೋಡಲು ಬಂದಿದ್ದೀರಿ ಅದನ್ನು ಮಾಡಿ ಎಂದೇ ತಾಕೀತು ಮಾಡುವಂತಿರುತ್ತದೆ.

ಆದರೆ ಹಿರಾನಿ ತನ್ನ ಮೊದಲ ಸಿನಿಮಾ ‘ಮುನ್ನಾ ಭಾಯಿ ಎಂಬಿಬಿಎಸ್’ ಅನ್ನು ನಿದೇಶಿಸಿದಾಗ ಅಲ್ಲಿ ಕತೆಯ ಮೂಲಕ ಸಂದೇಶವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದ. ಆ ಸಿನಿಮಾದಲ್ಲಿ ಮಗುವಿನ ಮುಗ್ಧತೆ, ಅಂಬೆಗಾಲಿನ ಪ್ರಾಮಾಣಿಕ ನಡಿಗೆ ಪ್ರತಿ ಪ್ರೇಮಿನಲ್ಲಿ ನಮ್ಮನ್ನು ತಟ್ಟುತ್ತಿತ್ತು. ಇದಕ್ಕೆ ಮೂಲಭೂತ ಕಾರಣವೇನೆಂದರೆ ಅಲ್ಲಿ ಕತೆ ಹೇಳುತ್ತಲೇ ನ್ಶೆತಿಕತೆ, ಆದರ್ಶದ ಸಂದೇಶಗಳು ಪ್ರೇಕ್ಷಕನಿಗೆ ರವಾನೆ ಆಗುತ್ತಿದ್ದವು. ಈ ಸಂದೇಶಗಳು ತೀರಾ ಸರಳೀಕೃತ ರೂಪದಲ್ಲಿದ್ದರೂ ಸಹ ಅದರ ಪ್ರಮಾಣಿಕತೆಯಿಂದಾಗಿಯೇ ನಮ್ಮನ್ನೆಲ್ಲಾ ಗೆದ್ದುಬಿಟ್ಟಿತ್ತು. ಆದರೆ ನಂತರ ’ಲಗೇ ರಹೋ ಮುನ್ನಾಭಾಯ”, ಮತ್ತು ’ತ್ರೀ ಈಡಿಯಟ್ಸ್’ ನ ಅಭೂತಪೂರ್ವ ಯಶಸ್ಸಿನ ನಂತರ ಹಿರಾನಿಯ ಆ ಮುಗ್ಧತೆ ಮತ್ತು ಪ್ರೇಕ್ಷಕನ್ನು ತಟ್ಟುವ ಗುಣಗಳು ಈ ಪಿಕೆ ಸಿನಿಮಾದಲ್ಲಿ ಕಣ್ಮರೆಯಾಗಿ ಬೋಧನೆಯ ಸ್ವರೂಪ ಪಡೆದುಕೊಂಡಿವೆ ಮತ್ತು ಅದನ್ನು ಬೋಧಿಸುತ್ತಿರುವವರು ಪ್ರತಿ ನಾಯಕರಾದ, ನಮ್ಮ ನಡುವಿನ, ಪಕ್ಕದ ಮನೆಯ ಹುಡುಗರಾದ ಮುನ್ನಾಭಾಯಿ, ಸರ್ಕಿಟ್‌ಗಳಲ್ಲ, ಬದಲಾಗಿ ರ್‍ಯಾಂಚೋ, ಪಿಕೆ ಗಳಂತಹ ತಂತ್ರಜ್ಞಾನ ಪ್ರವೀಣರು, ಛಾಂಪಿಯನ್ನರು, ಯಾವುದೇ ಐಬಿಲ್ಲದ, ಕಲ್ಮಶಗಳಿಲ್ಲದ ಪರಿಪೂರ್ಣ ನಾಯಕರು. ಚಿತ್ರದಿಂದ ಚಿತ್ರಕ್ಕೆ ಬಲಗೊಳ್ಳುತ್ತ ಸಾಗಿದ ನಿರ್ದೆಶಕ ಹಿರಾನಿ ಆತ್ಮ ವಿಶ್ವಾಸವನ್ನು ಗಳಸಿಕೊಳ್ಳುತ್ತಾ, ಹೊಸ ನಿರ್ದೇಶನದ ಪಿಕೆ ಸಿನಿಮಾದಲ್ಲಿ ಸಂದೇಶಗಳೇ ಇಡೀ ಸಿನಿಮಾವನ್ನು ವ್ಯಾಪಿಸಿಕೊಂಡು ಪ್ರೇಕ್ಷಕ ’ಕತೆ ಎಲ್ಲಿದೆ?’ ಎಂದು ಪ್ರಶ್ನಿಸಿದಾಗ ನಿರ್ದೇಶಕ ಹಿರಾನಿ ’ನೀನೆ ನನ್ನ ಆ ಸಂದೇಶಗಳಲ್ಲಿ ಕತೆಯನ್ನು ಹುಡುಕಿಕೋ’ ಎಂದು ಉತ್ತರಿಸುತ್ತಾನೆ. ಆದರೆ ಅಲ್ಲಿ ಕತೆಯ ಹೊಳಹೂ ಸಹ ಸಿಗುವುದಿಲ್ಲ. ಮುನ್ನಾಭಾಯಿಯ ’ಒಮ್ಮೆ ನನ್ನನ್ನು ಅಪ್ಪಿಕೋ’ ಎನ್ನುವ ಮುಗ್ಧ ಸಂದೇಶ ತಂದುಕೊಟ್ಟ ಹುಮ್ಮಸ್ಸು, ಉತ್ಸಾಹ ಈ ಪಿಕೆಯ ’ರಾಂಗ್ ನಂಬರ್’ ಸಂದೇಶಕ್ಕೆ ಬಂದು ತಲುಪುವಷ್ಟರಲ್ಲಿ ಕಣ್ಮರೆಯಾಗುತ್ತವೆ.

ಹೀಗಾಗಿ ಪಿಕೆ ಸಿನಿಮಾದಲ್ಲಿ ಆದರ್ಶಗಳ ಸಂದೇಶಗಳಿವೆ, ಧಾರ್ಮಿಕ ಮೌಢ್ಯ, ಮೂಲಭೂತವಾದದ ವಿರುದ್ಧ ಪ್ರತಿಭಟನೆ ಇದೆ. pk-aamir-khan-anushka-sharmaಆಶಯಗಳ ಮಟ್ಟಿಗೆ ಈ ಸಿನಿಮಾ ನಿಜಕ್ಕೂ ಅತ್ಯುತ್ತಮ ಸಿನಿಮಾ. ಆದರೆ ಆ ಆಶಯಗಳು ಅದನ್ನು ಪ್ರೇಕ್ಷಕರಿಗೆ ರವಾನಿಸುವ ಸಂದರ್ಭದಲ್ಲಿ ಹೊಸ ಒಳನೋಟಗಳೊಂದಿಗೆ, ಮತ್ತಷ್ಟು ಆಳವಾದ ಪ್ರಶ್ನೆಗಳೊಂದಿಗೆ ಮೂಡಿ ಬರಲು ನಿರಾಕರಿಸುತ್ತವೆ. ಪಾತ್ರಗಳ ನಡುವೆ ಅತ್ಯಗತ್ಯವಾದ ಪರಸ್ಪರ ಪೂರಕವಾದ ಕೆಮಿಸ್ಟ್ರಿ ಕಣ್ಮರೆಯಾಗಿದೆ. ಹೀಗಾಗಿ ಪ್ರತಿಯೊಂದು ಪಾತ್ರವೂ ಕ್ಯಾಮಾರಾ ಕಡೆಗೆ ಮುಖ ಮಾಡಿ ನಿರ್ದೇಶಕ ಹಿರಾನಿಯ ಸಂದೇಶಗಳನ್ನು ಪ್ರೇಕ್ಷಕನಿಗೆ ಗಿಣಿಪಾಠದಂತೆ ಒಪ್ಪಿಸುತ್ತಿರುತ್ತವೆ ಅಷ್ಟೆ. ಯಾವುದೇ ಪಾತ್ರಗಳಲ್ಲಿಯೂ ಸಂಕೀರ್ಣತೆ ಕಂಡು ಬರುವುದಿಲ್ಲ. ಜಾನೇ ಭೀ ದೋ ಯಾರೋ ದಂತಹ ಅತ್ಯುತ್ತಮ ಹಾಸ್ಯ ಸಿನಿಮಾದ ಪಾತ್ರಗಳ ಸಂಕೀರ್ಣತೆಯು ಪ್ರೇಕ್ಷಕನಿಗೂ ಆಳವಾಗಿ ಮುಟ್ಟುತ್ತದೆ ಮತ್ತು ತಾನು ಹೇಳಬೇಕಾದದ್ದನ್ನು ಕೊಂಚವೂ ಅಳುಕಿಲ್ಲದೆ ನಿರೂಪಿಸುತ್ತಾ ಹೋಗುತ್ತದೆ. ಅದು ನಿಜದ ಯಶಸ್ಸು. ಕನಿಷ್ಠ ‘ಓಹ್ ಮೈ ಗಾಡ್’ ಸಿನಿಮಾದ ತಾಜಾತನವೂ ಇಲ್ಲಿ ಕಾಣಿಸುತ್ತಿಲ್ಲ. ಅಂದರೆ ನಿರ್ದೇಶಕ ಹಿರಾನಿ ತಾನು ಸ್ವತಃ ಅರಗಿಸಿಕೊಳ್ಳುವುದಕ್ಕೂ ಆಗದಷ್ಟು ಆಹಾರವನ್ನು ಅಗಿಯುತ್ತಿದ್ದಾನೆ. ಅಂದರೆ Art for the sale of art ನ ತತ್ವದಂತೆಯೇ ಪಿಕೆಯಲ್ಲಿ Messages for the sake of messages ತರಹ ತತ್ವಗಳು ರವಾನೆಯಾಗುತ್ತಿವೆ. ಈ ಸಿನಿಮಾದ ಕ್ಲೈಮಾಕ್ಸ್ ದೃಶ್ಯದಲ್ಲಿ ಡೋಂಗಿ ಬಾಬಾ ‘ತಪಸ್ವಿ’ ಮತ್ತು ‘ಪಿಕೆ’ ನಡುವಿನ ಚರ್ಚೆ ಮತ್ತು ಸಂವಾದದ ಆಶಯಗಳು ತುಂಬಾ ಮಾನವೀಯವಾಗಿದೆ. ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸುವ ಆ ಆಶಯಗಳು ಇಂದಿನ ಧಾರ್ಮಿಕ ಫೆನಟಿಸಂಗೆ ತಕ್ಕ ಉತ್ತರವಾಗಿದೆ. munna-bhai-mbbsಇದನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯಬೇಕಿದ್ದ ನಿರ್ದೇಶಕ ಹಿರಾನಿ ಆ ಇಡೀ ದೃಶ್ಯವನ್ನು ಹೈಸ್ಕೂಲ್‌ನ ಡಿಬೇಟ್ ಮಟ್ಟಕ್ಕೆ ಇಳಿಸಿದ್ದಾನೆ. ಕಡೆಗೆ ಅದು ವೀರ-ಜಾರ ಸಿನಿಮಾದ ಮಾದರಿಯಲ್ಲಿ ಅನುಷ್ಕ ಶರ್ಮ ಮತ್ತು ಅವಳ ಪಾಕಿಸ್ತಾನ ಪ್ರೇಮಿಯನ್ನು ಒಂದುಗೂಡಿಸುಲ್ಲಿಗೆ ಪರ್ಯಾವಸಾನಗೊಳ್ಳುತ್ತದೆ.

ಆದರೆ ಒಂದು ಸದುದ್ದೇಶದ, ಸೂಕ್ಷ್ಮತೆಯ, ಮೌಢ್ಯವನ್ನು ನೇರವಾಗಿ ಟೀಕಿಸುವ, ಜನಪರ ಆಶಯಗಳನ್ನುಳ್ಳ ಪಿಕೆ ಸಿನಿಮಾವನ್ನು ನೋಡಲು ಈ ಎಲ್ಲಾ ಪ್ರಶ್ನೆಗಳು ಬೇಕೆ ಸ್ವಾಮಿ ಎಂದು ಕೇಳಿದರೆ ಉತ್ತರವೂ ಇಲ್ಲ. ಏಕೆಂದರೆ ಆ ಪ್ರಶ್ನೆ ತುಂಬಾ ವಾಸ್ತವ. ಆದರೆ ಪಿಕೆ ನೋಡಿದ ನಂತರ ಮತ್ತೊಮ್ಮೆ ಗರಂ ಹವಾ, ರಾಮ್ ಕೆ ನಾಮ್, ತಣ್ಣೀರ್ ತಣ್ಣೀರ್, ಸದ್ಗತಿಯಂತಹ ಸಿನಿಮಾಗಳನ್ನು ಐದನೇ ಬಾರಿ, ಹತ್ತನೇ ಬಾರಿ ನೋಡಲು ಮನಸ್ಸು ತಹತಹಿಸುತ್ತದೆ. ಇದು ಸಹ ಅಷ್ಟೇ ಸತ್ಯ. ಆದರೆ ಸಿನಿಮಾ ಬಿಡುಗಡೆಯಾದ ಮೂರೇ ವಾರಗಳಲ್ಲಿ 300 ಕೋಟಿಗೂ ಮೇಲ್ಪಟ್ಟು ಗಳಿಸಿರುವುದೇ ಇದನ್ನೂ ಪ್ರೇಕ್ಷಕ ಸ್ವೀಕರಿಸಿದ್ದಾನೆ ಎನ್ನುವುದಕ್ಕೆ ಸಾಕ್ಷಿ. ಅಷ್ಟೇಕೆ ನಿರ್ಮಾಪಕರು ಈ ಸಿನಿಮಾವನ್ನು ಮತೀಯವಾದಿ ನಾಯಕ ಎಲ್.ಕೆ. ಅದ್ವಾನಿ, ಭ್ರಷ್ಟ, ಮತೀಯವಾದಿ, ಡೋಂಗಿ ಬಾಬಾ ಶ್ರೀ ಶ್ರೀ ರವಿಶಂಕರ್‌ಗೆ ಅರ್ಪಿಸಿದ್ದಾನೆ, ಇದಕ್ಕೇನು ಮಾಡುವುದು ಎಂದಾಗ ಇಂತಹ ಕ್ಷುಲ್ಲಕ ಸಂಗತಿಗಳನ್ನು ಎತ್ತಬೇಡಿ, ಸಿನಿಮಾದ ಸಂದೇಶಗಳನ್ನು ಗಮನಿಸಿ ಎಂದು ಹೇಳಿದರೆ ????

ಹೀಗಾಗಿಯೇ ಇಂದು ಹಿಂದಿ ಸಿನಿಮಾರಂಗದಲ್ಲಿ ಒಂದು ತುದಿಯಲ್ಲಿ ಸಲ್ಮಾನ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್‌ರಂತಹ ನಟರು ಮತ್ತು ಬಹುಪಾಲು ಹಿಂದಿ ನಿರ್ದೇಶಕರು ಅತ್ಯಂತ ಕಳಪೆ, ಮೂರನೆ ದರ್ಜೆಯ ಸಿನಿಮಾಗಳನ್ನು ನೀಡುತ್ತಿರುವುದರ ಫಲವಾಗಿ ಮತ್ತೊಂದು ತುದಿಯಲ್ಲಿ ಈ ಹಿರಾನಿ ಮತ್ತು PK_poster_burning_Jammuಅಮೀರ್ ಖಾನ್ ಜೋಡಿ ನಿರ್ಮಿಸುತ್ತಿರುವ ಸಿನಿಮಾಗಳು ನಿಜಕ್ಕೂ something better ಎನ್ನುಂತೆ ರೂಪಿತಗೊಂಡಿರುವುದೂ ನಿಜ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆರೆಸ್ಸಸ್ ಸರ್ಕಾರ ಕಳೆದ ಆರು ತಿಂಗಳಿಂದ ಸಮಾಜದಲ್ಲಿ ಹಿಂದೂಯಿಸಂನ ಫೆನಟಿಸಂ ಅನ್ನು ನಿರಂತರವಾಗಿ ಹುಟ್ಟು ಹಾಕುತ್ತಿದೆ, ಮೂಲಭೂತವಾದ ಮತ್ತು ಕೋಮುವಾದದ ಸ್ವರೂಪಗಳು ಹೆಡೆ ಎತ್ತುತ್ತಿವೆ. ಮತ್ತು ಈ ‘ಪಿಕೆ’ ಸಿನಿಮಾದ ವಿರುದ್ಧ ಮತೀಯವಾದಿ ಹಿಂದೂ ಸಂಘಟನೆಗಳು ಪ್ರತಿಭಟಿಸಿ ಹಿಂಸಾತ್ಮಕವಾಗಿ ವರ್ತಿಸುತ್ತಿವೆ. ಈ ಕಾರಣಗಳಿಂದಾಗಿಯೇ ಹಿರಾನಿ-ಅಮೀರ್ ಖಾನ್ ಜೋಡಿಯ ‘ಪಿಕೆ’ ಸಿನಿಮಾಗೆ ಒಂದು ಬಗೆಯ ಸೆಕ್ಯುಲರ್ ಅಯಾಮವೇ ದೊರಕಿಬಿಟ್ಟಿದೆ. ಇಂದು ಮೂಢ ನಂಬಿಕೆಗಳ ವಿರುದ್ಧದ ಹೋರಾಟಕ್ಕೆ ಶ್ರೇಷ್ಠವಾದ ಸಂಕೇತ ಈ ಪಿಕೆ ಸಿನಿಮಾ ಎನ್ನುವುದೇ ನಿಜವಾದಲ್ಲಿ, ಪ್ರಜ್ಞಾವಂತರು, ಪ್ರಗತಿಪರರು, ಜಾತ್ಯಾತೀತರು ತಮ್ಮ ಹೊಣೆಯನ್ನು ನಿಭಾಯಿಸಲು ಸೋತು ಅ ಹೊಣೆಗಾರಿಕೆಯನ್ನು ಈ ‘ಪಿಕೆ’ ಎನ್ನುವ ಅಮಾಯಕ, ಮುಗ್ಧ, ಸರಳ ಸಿನಿಮಾದ ಹೆಗಲಿಗೆ ವರ್ಗಾಯಿಸಿದ್ದೇವೆ ಅಷ್ಟೆ. ಮತ್ತೇನಿಲ್ಲ.