ಎರಡು ಹೀಬ್ರೂ ಕತೆಗಳು

ಹೀಬ್ರೂ ಮೂಲ: ಎಟ್ಗರ್ ಕೆರೆಟ್
ಹೀಬ್ರೂ ಭಾಷೆಯಿಂದ ಇಂಗ್ಲಿಷ್‌ಗೆ : ಮಿರಿಯಮ್ ಶ್ಲೆಸಿಂಗರ್
ಇಂಗ್ಲಿಷ್‌ನಿಂದ ಕನ್ನಡಕ್ಕೆ: ಜೆ.ವಿ.ಕಾರ್‍ಲೊ

 

ಹ್ಯಾಟ್ ಟ್ರಿಕ್

“ಅಲ್ಲಾ ಕಜೀಮ್.. ಅಲ್ಲಾ ಕಜಂ!” ಎಂದಾಗಲೇ ಅದು ಹೊರ ಬರುತ್ತಿತ್ತು.

ಸಾಮಾನ್ಯವಾಗಿ ಕಾರ್ಯಕ್ರಮದ ಕೊನೆಯಲ್ಲೇ ನಾನು ಮೊಲವನ್ನು ಹ್ಯಾಟಿನಿಂದ ಹೊರ ತೆಗೆಯುವುದು. ಏಕೆಂದರೆ, ಮಕ್ಕಳಿಗೆ ಪ್ರಾಣಿಗಳೆಂದರೆ ಬಲು ಇಷ್ಟ. ಆ ಗಳಿಗೆ ಮಕ್ಕಳಲ್ಲಿ ಒಂದು ಬಗೆಯ ಸಂಚಲನವನ್ನು ಉಂಟು ಮಾಡುತ್ತದೆ. ಮಕ್ಕಳಿಗೆ ಮೊಲವನ್ನು ಮುದ್ದಿಸಲು, ಹುಲ್ಲು ತಿನ್ನಿಸಲು ನಾನು ಅವಕಾಶ ಮಾಡಿಕೊಡುತ್ತೇನೆ. ಹಿಂದೊಮ್ಮೆ ಈ ರೀತಿ ನಡೆಯುತ್ತಿತ್ತೆಂದು ಹೇಳಿದರೆ ಸರಿಯಾಗಬಹುದೇನೋ? ಈಗಿನ ಮಕ್ಕಳಿಗೆ ತೃಪ್ತಿಪಡಿಸುವುದು ತ್ರಾಸದ ಕೆಲಸ. ಈಗಿನ ಮಕ್ಕಳು ಅಷ್ಟು ಬೇಗ ಉತ್ತೇಜಿತರಾಗುವುದಿಲ್ಲ. ಆದರೂ, ಮೊಲದ ಕಾರ್ಯಕ್ರಮವನ್ನು ನಾನು ಈಗಲೂ ಕೊನೆಯಲ್ಲೇ ತೊರಿಸುವುದು. ನನಗೆ ಬಹಳ ಖುಷಿ ಕೊಡುವ ಅಥವಾ ಕೊಡುತ್ತಿದ್ದ ಯಕ್ಷಿಣಿಯೆಂದರೆ ಹ್ಯಾಟಿನಿಂದ ಮೊಲವನ್ನು ಹೊರ ತೆಗೆಯುವುದು. ನನ್ನ ಕೈ ಯಾಂತ್ರಿಕವಾಗಿ ಕಜಮನ ಕಿವಿಗಳಿಗೆ ತಡಕಾಡುತ್ತಿದ್ದರೆ, ನನ್ನ ಕಣ್ಣುಗಳು ಮಕ್ಕಳ ಮೇಲೆ ನೆಟ್ಟರುತ್ತಿದ್ದವು.

“ಅಲ್ಲಾ ಕಜೀಮ್, ಅಲ್ಲಾ ಕಜಮ್!” ಅದು ಹೊರ ಬರುತ್ತಿತ್ತು. ಯಾವತ್ತಿಗೂ ಇದು ಮಕ್ಕಳಲ್ಲಿ ಅಚ್ಚರಿ ಹುಟ್ಟಿಸುತ್ತಿತ್ತು. ಮಕ್ಕಳಿಗಷ್ಟೇ ಅಲ್ಲ, ನನಗೂ ಕೂಡ! ನನ್ನ ಕೈಗಳಿಗೆ ಅದರ ಉದ್ದನೆ ಕಿವಿಗಳು ಸೋಕಿದಾಗಲೇ ನಾನೊಬ್ಬ ಯಕ್ಷಿಣಿಕಾರನೆಂದು ಭಾಸವಾಗುತ್ತಿತ್ತು. ವಾಸ್ತವವಾಗಿ ಇದೊಂದು ಕೈಚಳಕವೆಂದು ನನಗೆ ಗೊತ್ತಿದ್ದರೂ, ಎಲ್ಲೋ, ಇದೊಂದು ನೈಜ ವಾಮಾಚಾರವೆಂದು ಭಾಸವಾಗುತ್ತಿತ್ತು.

ಅದೊಂದು ಶನಿವಾರ. ಉಪನಗರವೊಂದರಲ್ಲಿ ಮಗುವಿನ ಹುಟ್ಟು ಹಬ್ಬದ ಪ್ರಯುಕ್ತ ಯಕ್ಷಿಣಿ ಕಾರ್ಯಕ್ರಮವನ್ನು ಕೊಡಲು ನನ್ನನ್ನು ಕರೆಸಲಾಗಿತ್ತು. ಎಂದಿನಂತೆ “ಹ್ಯಾಟ್” ಟ್ರಿಕ್ ನನ್ನ ಕೊನೆಯ ಐಟಂ. ಹುಟ್ಟುಹಬ್ಬಕ್ಕೆಂದು ನೆರೆದಿದ್ದ ಮಕ್ಕಳಿಗೆ ನನ್ನ ಯಕ್ಷಿಣಿಯನ್ನು ನೋಡುವ ಕುತೂಹಲವಾಗಲಿ, ಆಸಕ್ತಿಯಾಗಲಿ ಇದ್ದಂತೆ ಕಾಣಿಸಲಿಲ್ಲ. ಬಹಳಷ್ಟು ಹುಡುಗರು ನನ್ನ ಕಡೆಗೆ ಬೆನ್ನು ಹಾಕಿ ಟಿ.ವಿ.,ಯಲ್ಲಿ ಶ್ವಾಜರ್‌ನೆಗ್ಗರನ ಸಿನೆಮಾ ನೋಡುವುದರಲ್ಲಿ ಮಗ್ನರಾಗಿದ್ದರು. ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಹುಡುಗನಂತೂ ಕೊಠಡಿಯಲ್ಲೇ ಇರಲಿಲ್ಲ. ಅವನು ಬೇರೆಲ್ಲೋ ತನ್ನ ಹೊಸ ವಿಡಿಯೊ ಗೇಮ್ ಆಡುವುದರಲ್ಲಿ ತಲ್ಲೀನನಾಗಿದ್ದ. magic-trick-pulling-rabbit-out-of-top-hatಕೇವಲ ನಾಲ್ಕು ಹುಡುಗರು ಆಕಳಿಸುತ್ತಾ ಯಾವುದೇ ಕುತೂಹಲವಿಲ್ಲದ ಮುಖಗಳನ್ನು ಹೊತ್ತು ನನ್ನ ಕಡೆಗೆ ನೋಡುತ್ತಿದ್ದರು. ಗಾಳಿಯಾಡದ ಆ ದಿನದಂದು ನನ್ನ ಯಕ್ಷಿಣಿಕಾರನ ಸೂಟಿನೊಳಗೆ ನಾನು ಒಂದೇ ಸಮನೆ ಬೆವರುತ್ತಿದ್ದೆ. ಯಾವಾಗ ನನ್ನ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವೆನೆಂದು ಆತುರದಿಂದ ಒಂದೆರಡು ಹಗ್ಗದ ಟ್ರಿಕ್ಸ್‌ಗಳನ್ನು ತೋರಿಸುವ ಗೋಜಿಗೆ ಹೋಗಲೇ ಇಲ್ಲ. ಕೊನೆಯ ಹ್ಯಾಟ್ ಟ್ರಿಕ್ಸ್‌ಗೆ ನೆಗೆದೆ. ನನ್ನ ಕೈ ಹ್ಯಾಟಿನಾಳಕ್ಕೆ ಇಳಿದಂತೆ, ನನ್ನ ದೃಷ್ಟಿ ಗುಂಡಗೆ ದಪ್ಪಗಿದ್ದು ಕನ್ನಡಕ ಹಾಕಿದ ಬಾಲೆಯ ಮೇಲೆ ಹರಿಯಿತು. ಕಜಮನ ಕಿವಿಗಳ ಮೃದು ಸ್ಪರ್ಶ ಎಂದಿನಂತೆ ಇವತ್ತೂ ನನಗೆ ರೋಮಾಂಚನಗೊಳಿಸಿತು. “ಅಲ್ಲಾ ಕಜೀಮ್, ಅಲ್ಲಾ ಕಜಮ್!” ಇನ್ನು ಕೆಲವೇ ನಿಮಿಷಗಳು. ನನ್ನ ಪಾಲಿನ ಮುನ್ನೂರು ’ಶೆಕೆಲ” (ಇಸ್ರೇಲಿ ಹಣ) ಪಡೆದು ನಾನು ಈ ಕೂಪದಿಂದ ಹೊರಬೀಳುವೆ. ಕಜಮನ ಎರಡು ಕಿವಿಗಳನ್ನು ಜೊತೆಗೂಡಿಸಿ ಮೇಲೆತ್ತಿದೆ. ಕಜಮ್ ಇಂದು ಯಾಕೋ ಎಂದಿನಂತಿಲ್ಲ. ಬಹಳ ಹಗುರನಾಗಿರುವವನಂತೆ ಭಾಸವಾಗುತ್ತಿದೆ. ಅಚ್ಚರಿಯಾಯಿತು. ನನ್ನ ಕೈಯನ್ನು ಹ್ಯಾಟಿನೊಳಗಿಂದ ನಾಟಕೀಯವಾಗಿ ಗಾಳಿಯಲ್ಲಿ ಮೇಲೆತ್ತಿದೆ. ನನ್ನ ಕಣ್ಣುಗಳು ಸಭಿಕರ ಮೇಲೆಯೇ ನೆಟ್ಟಿದ್ದವು. ನನ್ನ ಕೈಯ ಮಣಿಗಂಟಿನಿಂದ ಕೆಳಗೆ ಏನೋ ಹರಿದು ಬರುತ್ತಿರುವಂತೆ ಭಾಸವಾಯಿತು. ಅಷ್ಟರಲ್ಲಿ, ಕನ್ನಡಕ ಧರಿಸಿದ್ದ ಗುಂಡು ಗುಂಡು ಹುಡುಗಿ ದೆವ್ವ ಮೆಟ್ಟಿದಂತೆ ಕಿರುಚತೊಡಗಿದಳು. ನಾನು ನೋಡಿದೆ. ನನ್ನ ಬಲಗೈಯಲ್ಲಿ ಕಜಮನ ರುಂಡ ಮಾತ್ರ ನೇತಾಡುತ್ತಿತ್ತು. ಕಣ್ಣುಗಳು ಅಗಲವಾಗಿ ತೆರೆದಿದ್ದವು. ರಕ್ತ ಜಿನುಗುತ್ತಲೇ ಇತ್ತು. ಹುಡುಗಿ ಇನ್ನೂ ಕಿರಿಚುತ್ತಲೇ ಇದ್ದಳು. ನನಗೆ ಬೆನ್ನು ತಿರುಗಿಸಿ ಟಿ.ವಿ., ನೋಡುತ್ತಿದ್ದ ಹುಡುಗರೆಲ್ಲ ನನ್ನತ್ತ ತಿರುಗಿ ಚಪ್ಪಾಳೆ ತಟ್ಟುತ್ತಿದ್ದರು. ಹುಟ್ಟು ಹಬ್ಬ ಆಚರಿಸುತ್ತಿದ್ದ ಹುಡುಗ ಗದ್ದಲ ಕೇಳಿ ತನ್ನ ವಿಡಿಯೋ ಗೇಮಿನ ಜೊತೆ ಒಳ ಬಂದ. ನನ್ನ ಕೈಯಲ್ಲಿ ನೇತಾಡುತ್ತಿದ್ದ ಮುಂಡವಿಲ್ಲದ ಮೊಲವನ್ನು ನೋಡಿ ಅವನು ಖುಷಿಯಿಂದ ಶಿಳ್ಳು ಹಾಕಿ ಕೇಕೆ ಹಾಕತೊಡಗಿದ. ನನಗೆ ಹೊಟ್ಟೆ ತೊಳೆಸಿದಂತಾಗಿ ನನ್ನ ಯಕ್ಷಿಣಿ ಹ್ಯಾಟಿನಲ್ಲೇ ವಾಂತಿ ಮಾಡಿಕೊಂಡೆ. ವಾಂತಿ ಹ್ಯಾಟಿನ ತೂತಿನೊಳಗಿನಿಂದ ಮೇಜಿನೊಳಗೆ ಕೊರೆದಿದ್ದ ತೂತದೊಳಗೆ ಮಾಯವಾಯಿತು. ಮಕ್ಕಳಿಗೆ ತುಂಬಾ ಖುಷಿಯಾಯ್ತು.

ಅಂದು ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ನನ್ನ ಯಕ್ಷಿಣಿ ಪರಿಕರಗಳನ್ನು ಮತ್ತೆ ಮತ್ತೆ ಪರೀಕ್ಷಿಸಿದೆ. ಏನೂ ಗೊತ್ತಾಗಲಿಲ್ಲ. ಕಜಮನ ಮುಂಡವೂ ಪತ್ತೆಯಾಗಲಿಲ್ಲ. ಬೆಳಿಗ್ಗೆ ಎದ್ದು ಯಕ್ಷಿಣಿ ಶಾಪಿಗೆ ಹೋದೆ. ಅವರಿಗೂ ಅಚ್ಚರಿಯಾಯ್ತು. ನಾನು ಮತ್ತೊಂದು ಮೊಲವನ್ನು ಖರೀದಿಸಿದೆ. ಅಂಗಡಿಗಾರ ನನಗೆ ಮೊಲದ ಬದಲು ಆಮೆಯನ್ನು ಕೊಳ್ಳಲು ಒತ್ತಾಯಿಸಿದ. “ಈಗ್ಯಾರೂ ಮೊಲಗಳನ್ನು ಉಪಯೋಗಿಸುವುದಿಲ್ಲ. ಈಗ ಆಮೆಗಳ ಕಾಲ. ಈಗಿನ ಮಕ್ಕಳು ಆಮೆಯನ್ನು ಇಷ್ಟಪಡುತ್ತವೆ!” ನಾನು ಮೊಲವನ್ನೇ ಕೊಂಡೆ. ನಾನು ಮನೆಗೆ ಬಂದಾಗ ಯಕ್ಷಿಣಿ ಪ್ರದರ್ಶನಕ್ಕೆಂದು ಐದು ಆಹ್ವಾನಗಳು ಕಾಯುತ್ತಿದ್ದವು. ಎಲ್ಲವೂ ನನ್ನ ಕೊನೆಯ ಪ್ರದರ್ಶನವನ್ನು ನೋಡಿದ ಮಕ್ಕಳ ಮನೆಯಿಂದ! ಒಬ್ಬ ಹುಡುಗನಂತೂ, ಕೊನೆಯ ಪ್ರದರ್ಶನದಂತೆಯೇ ಮೊಲದ ರುಂಡವನ್ನು ಅಲ್ಲಿಯೇ ಬಿಟ್ಟು ಹೋಗಬೇಕೆಂದು ಸೂಚಿಸಿದ್ದ. ಕಜಮನ ರುಂಡವನ್ನು ನಾನು ಅಲ್ಲಿಯೇ ಬಿಟ್ಟು ಬಂದಿದ್ದೆನೆಂದು ಈಗ ಅರಿವಾಯ್ತು.

ನನ್ನ ಮುಂದಿನ ಪ್ರದರ್ಶನ ಬುಧವಾರಕ್ಕೆ ನಿಗದಿಯಾಗಿತ್ತು. ಶ್ರೀಮಂತರ ಬಡಾವಣೆಯೊಂದರಲ್ಲಿ ಹತ್ತು ವರ್ಷದ ಹುಡುಗನೊಬ್ಬ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಲಿದ್ದ. ಪ್ರದರ್ಶನದುದ್ದಕ್ಕೂ ನಾನು ಮಾನಸಿಕವಾಗಿ ವ್ಯಗ್ರನಾಗಿದ್ದೆ. ಮನಸ್ಸು ಒಂದೆಡೆ ನೆಲೆ ನಿಲ್ಲುತ್ತಿರಲಿಲ್ಲ. ಮಧ್ಯದಲ್ಲಿ ಕೆಲವು ಪ್ರದರ್ಶನಗಳನ್ನು ಕೊಡುವುದನ್ನು ಮರೆತುಬಿಟ್ಟೆ. ನನ್ನ ಧ್ಯಾನವೆಲ್ಲಾ ಕೊನೆಯ ಪ್ರದರ್ಶನದಲ್ಲಿತ್ತು. ಕೊನೆಗೂ ಆ ಕ್ಷಣ ಬಂದಿತು. “ಅಲ್ಲಾ ಕಜೀಮ್, ಅಲ್ಲಾ ಕಜಮ್!” ಪುಟಾಣಿ ಸಭಿಕರೆಡೆಗೆ ತೀಕ್ಷ್ಣ ನೋಟ ಬೀರುತ್ತಾ ನನ್ನ ಬಲಗೈಯನ್ನು ಹ್ಯಾಟಿನೊಳಗೆ ತೂರಿಸಿದೆ. ಮೊಲದ ಕಿವಿಗಳು ನನಗೆ ಸಿಗಲಿಲ್ಲ. ತಲೆಯನ್ನೇ ಹಿಡಿದು ಎತ್ತಿದೆ. ಮೊಲದ ದೇಹದ ತೂಕದಲ್ಲಿ ಅಂತ ವ್ಯತ್ಯಾಸವೇನು ಕಾಣಿಸಲಿಲ್ಲ. ಮತ್ತೊಮ್ಮೆ ಯಾರೋ ಕಿರುಚಿದ ಸದ್ದು. ಜೊತೆಗೆ ಕಿವಿಗಡಚ್ಚಿಕ್ಕುವ ಚಪ್ಪಾಳೆಯ ಸದ್ದು. ನಾನು ಕೈಯಲ್ಲೆತ್ತಿದ್ದು ಮೊಲವಾಗಿರಲಿಲ್ಲ. ಸತ್ತ ಹಸುಳೆ!

ನನಗ್ಯಾಕೋ ಇತ್ತಿಚಿಗೆ ಈ ’ಹ್ಯಾಟ” ಟ್ರಿಕ್ಕನ್ನು ಮಾಡಲಾಗುತ್ತಿಲ್ಲ. ನಾನು ಅದನ್ನು ಬಹಳ ಇಷ್ಟಪಡುತ್ತಿದ್ದೆ. ಆದರೆ, ಈಗ ಅದರ ಬಗ್ಗೆ ನೆನೆದರೂ ಕೈಗಳು ಕಂಪಿಸುತ್ತವೆ. ಮುಂದೆ ಹ್ಯಾಟಿನೊಳಗಿನಿಂದ ಏನು ಹೊರಬರಲಿದೆಯೆಂದು ನೆನೆದು ಕಂಪಿಸುತ್ತೇನೆ. ನಿನ್ನೆ ರಾತ್ರಿ ನಾನೊಂದು ಕನಸು ಕಂಡೆ. ಹ್ಯಾಟಿನೊಳಗೆ ಕೈಯಾಕಿದ್ದೇ ತಡ, ಯಾವುದೋ ಪೆಡಂಭೂತ ನನ್ನ ಕೈಯನ್ನೇ ಕಡಿದುಹಾಕಿದಂತಾಯಿತು.

ನಾನು ಯಕ್ಷಿಣಿ ಪ್ರದರ್ಶನಗಳನ್ನು ಕೊಡುವುದನ್ನು ನಿಲ್ಲಿಸಿದ್ದೇನೆ. ಇದರ ಬಗ್ಗೆ ನನಗೆ ವಿಷಾದವಿಲ್ಲ. ನಾನೀಗ ದುಡಿಯುತ್ತಿಲ್ಲವಾದರೂ ಪರವಾಯಿಲ್ಲಾ. ಕೆಲವೊಮ್ಮೆ, ಹಳೆಯ ನೆನಪುಗಳು ಕಾಡಿದಾಗ, ಯಕ್ಷಿಣಿ ಸೂಟನ್ನು ಧರಿಸುತ್ತೇನೆ. ಹ್ಯಾಟಿನೊಳಗಿನಿಂದ ಮೇಜಿನೊಳಗಿರುವ ಗುಪ್ತ ಖಾಲಿ ಜಾಗವನ್ನು ತಡಕಾಡುತ್ತಿರುತ್ತೇನೆ. ಅಷ್ಟೇ. ನನಗೆ ಇದೊಂದು ಒಗಟಿನಂತೆ ಕಾಣುತ್ತದೆ. ನನ್ನ ಕಣ್ಗಳ ಮುಂದೆ ಸತ್ತ ಮೊಲ, ಹಸುಳೆ ತೇಲಿ ಬರುತ್ತದೆ. ಇದು ಮೊಲಗಳ, ಹಸುಳೆಗಳ ಕಾಲವಲ್ಲ! ಯಕ್ಷಿಣಿಕಾರರದೂ ಅಲ್ಲಾ!


ಅಡಿಡಾಸ್ ಶೂಗಳು

ನನ್ನ ಅಡಿಡಾಸ್ ಶೂಗಳ ಹೊರ ಪಟ್ಟಿಗಳನ್ನು ಸ್ಪರ್ಶಿಸುತ್ತಿದ್ದಂತೆ ನನಗೆ ಅಜ್ಜನ ನೆನಪಾಯಿತು.

ಹೋಲೋಕಾಸ್ಟ್ (ಹಿಟ್ಲರನ ಯೆಹೂದಿ ನರಮೇಧದ) ನೆನಪಿನಾಚರಣೆಯ ದಿನದಂದು ನಮ್ಮ ಶಿಕ್ಷಕಿ ಸಾರಾ ನಮ್ಮನ್ನು ನಂ.57 ಬಸ್ಸಿನಲ್ಲಿ ವ್ಹೊಲಿನ್ ಮೆಮೋರಿಯಲ್ ಮ್ಯೂಸಿ‌ಯಮ್‌ಗೆ ಕರೆದೊಯ್ದಾಗ ನಾನೊಬ್ಬ ದೊಡ್ಡ ಮನುಷ್ಯನೆಂದು ಭಾಸವಾಯಿತು. ನನ್ನ ತರಗತಿಯಲಿದ್ದ್ಲ SCHWAB 118427ಬಹಳಷ್ಟು ಮಕ್ಕಳ ತಂದೆ ತಾಯಂದಿರು; ನಾನು, ನನ್ನ ಮಲತಮ್ಮ ಮತ್ತು ಇನ್ನೊಬ್ಬನನ್ನು ಬಿಟ್ಟರೆ, ಇರಾಕಿನಿಂದ ಬಂದವರಾಗಿದ್ದರು. ಇಡೀ ತರಗತಿಯಲ್ಲಿ ಹೋಲೊಕಾಸ್ಟಿನಲ್ಲಿ ಸತ್ತವರ ಸಂಬಂಧಿ ಎಂದರೆ ನನ್ನ ಅಜ್ಜನೊಬ್ಬನೇ! ಕಪ್ಪು ಮಾರ್ಬಲ್ ಕಲ್ಲುಗಳಿಂದ ಕಟ್ಟಿದ ವ್ಹೊಲಿನ್ ಮ್ಯೂಸಿಯಂ ಒಂದು ಬೃಹತ್ ಕಟ್ಟಡ. ಹಳೆಯ ದುಃಖದಾಯಕ ನೆನಪುಗಳನ್ನು ಕೆದಕುವ ಕಪ್ಪು-ಬಿಳುಪು ಛಾಯಚಿತ್ರಗಳು, ಅದೆಷ್ಟೋ ದೇಶಗಳ ಜೀವತೆತ್ತ ಅಮಾಯಕರ ಹೆಸರುಗಳನ್ನು ಇಲ್ಲಿ ನೋಡಬಹುದು. ನಮಗೆ ಇಬ್ಬಿಬ್ಬರನ್ನಾಗಿ ಜೊತೆಗೂಡಿಸಿ ಗೋಡೆಯ ಅಂಚಿನಲ್ಲಿ ಚಿತ್ರಗಳನ್ನು ನೋಡುತ್ತಾ ಸಾಲಾಗಿ ಹೋಗಬೇಕೆಂದು ಸಾರಾ ಮೇಡಂ ಹೇಳಿದ್ದರು. ಚಿತ್ರಗಳನ್ನು ಮುಟ್ಟಬಾರದೆಂದು ಮೊದಲೇ ಎಚ್ಚರಿಸಿದ್ದರಾದರೂ ನಾನು ಮುಟ್ಟಿದೆ. ಅದೊಂದು, ಕೈಯಲ್ಲಿ ಸ್ಯಾಂಡ್‌ವಿಚ್ ಹಿಡಿದುಕೊಂಡು ಅಳುತ್ತಿದ್ದ ಸುಕ್ಕುಗಟ್ಟಿದ್ದ ಮುದುಕನ, ಕಾರ್ಡ್‌ಬೋರ್ಡ್ ರಟ್ಟಿನ ಮೇಲೆ ಅಂಟಿಸಿದ ಕಪ್ಪು-ಬಿಳುಪು ಚಿತ್ರವಾಗಿತ್ತು. ನನ್ನ ಜೊತೆಗಿದ್ದ ಹುಡುಗಿ ಒರಿಟ್ ಸಾಲೆಂ ನಾನು ಚಿತ್ರ ಮುಟ್ಟಿದ್ದು ಸಾರಾ ಟೀಚರಿಗೆ ಹೇಳುತ್ತೇನೆಂದಳು.

“ಟೀಚರಿಗಷ್ಟೇ ಅಲ್ಲ, ಬೇಕಿದ್ದರೆ ಪ್ರಿನ್ಸಿಪಾಲರಿಗೂ ಹೇಳು. ನಾನು ಮುಟ್ಟಿದ್ದು ನನ್ನ ತಾತನ ಫೋಟೊ. ನಾನು ಯಾರಿಗೂ ಹೆದರುವುದಿಲ್ಲ.” ಎಂದೆ.

ನಂತರ ನಮ್ಮನ್ನು ಒಂದು ದೊಡ್ಡ ಹಾಲಿಗೆ ಕರೆದುಕೊಂಡು ಹೋದರು. ಅಲ್ಲಿ ನಮಗೆ ಚಿಕ್ಕಮಕ್ಕಳನ್ನು ಒಂದು ಲಾರಿಗೆ ತುಂಬಿಸುತ್ತಿರುವ ದೃಶ್ಯದ ಚಲನಚಿತ್ರವನ್ನು ತೋರಿಸಲಾಯಿತು. ಕೊನೆಯಲ್ಲಿ ಅ ಮಕ್ಕಳಿಗೆ ಗ್ಯಾಸ್ ಹಾಯಿಸಿ ಸಾಯಿಸಲಾಯಿತು. ಮುಂದಿನ ದೃಶ್ಯದಲ್ಲಿ ನರಪೇತಲ ಮುದುಕನೊಬ್ಬ ಬಂದು ನಾಜಿಗಳು ಕೊಲೆಗಡುಕರು, ಕ್ರಿಮಿಗಳು ಎಂದು ಮುಂತಾಗಿ ಹೇಳಿ ತಾನು ಹೇಗೆ ಒಬ್ಬ ನಾಜಿಯನ್ನು ಬರಿಗೈಯಲ್ಲೇ ಸಾಯಿಸಿದೆ ಎಂದು ಕೊಚ್ಚಿಕೊಳ್ಳತೊಡಗಿದ.

ನನ್ನ ಪಕ್ಕದಲ್ಲಿ ಕುಳಿತಿದ್ದ ಜೆರ್‍ಬಿ ಎಂಬ ಹುಡುಗ ಮುಸಿ ಮುಸಿ ನಗತೊಡಗಿದ. “ಈ ಮುದುಕ ಒಬ್ಬ ಸೈನಿಕನನ್ನು ಸಾಯಿಸುವುದೆಂದರೇನು! ಇವನ ಕೈಯಲ್ಲಿ ಒಂದು ಜಿರಲೆಯನ್ನೂ ಕೊಲ್ಲಲಾಗುವುದಿಲ್ಲ! ಭೂಸಿ ಬಿಡುತ್ತಿದ್ದಾನೆ.” ಎಂದ. ನಾನು ಮುದುಕನ ಕಣ್ಣುಗಳನ್ನೇ ದಿಟ್ಟಿಸಿದೆ. ನನಗೆ ಅವನು ಹೇಳುತ್ತಿರುವುದು ಸತ್ಯವೆನಿಸಿತು. ಅವನ ಕಣ್ಣುಗಳಲ್ಲಿ ಅಷ್ಟೊಂದು ರೋಷವಿತ್ತು.

ಹೋಲೋಕಾಸ್ಟಿನ ಬಗ್ಗೆ ಹೇಳಿ ಮುಗಿಸಿದ ಬಳಿಕ ಅವನು ತಾನು ಮುಂದೆ ಹೇಳಲಿರುವುದು ಬಹಳ ಮುಖ್ಯವಾದ ವಿಚಾರ ಎಂದ. ಮುಂದುವರೆಸಿ, ಜರ್ಮನರು ಈವಾಗಲೂ ಇದ್ದಾರೆ, ಅವರದೇ ದೇಶವಿದೆ. ತಾನೆಂದಿಗೂ ಅವರನ್ನು ಕ್ಷಮಿಸುವುದಿಲ್ಲ, ನೀವೂ ಕೂಡ ಹಾಗೇ ಮಾಡಿ. ಅವರ ದೇಶಕ್ಕೆ ಎಂದೂ ಕಾಲಿಡಬೇಡಿ. ಜನ ಕೆಟ್ಟ ಅನುಭವಗಳನ್ನು, ಬೇಕೆಂದೇ ಬೇಗ ಮರೆಯುತ್ತಾರೆ. ನೀವು ಖಂಡಿತ ಹಾಗೆ ಮರಿಬೇಡಿ. ಒಬ್ಬ ಜರ್ಮನನನ್ನು ಕಂಡಾಗ ನಾನು ಹೇಳಿದ ಸಂಗತಿಗಳು ನೆನಪಿರಲಿ. ಅವರು ತಯಾರಿಸಿದ ವಸ್ತುಗಳಿಗೆ, ಎಲ್ಲೆಡೆ ಕಾಣುವಂತೆ ಟಿ.ವಿ.ಗಳು, ಮಾರುಹೋಗಬೇಡಿ. ಹೊರಗೆ ಕಾಣುವ ಥಳುಕು ಬಳುಕು ಟಿ.ವಿ.ಯೊಳಗೆ ಇರುವ ಪಿಕ್ಚರ್ ಟ್ಯೂಬ್ ಮತ್ತಿತರ ಸಾಮಾನುಗಳು ಯೆಹೂದಿಯರ ಮೂಳೆ, ಮಜ್ಜೆ, ಚರ್ಮದಿಂದ ತಯಾರಾದವು!

ಹೊರಗೆ ಬರುವಾಗ, ಸದ್ಯ, ನಮ್ಮನೆ ಫ್ರಿಜ್ಜು ಇಸ್ರೇಲಿನದೇ ಎಂದು ಖುಷಿ ಪಟ್ಟೆ.

***

ಹೊರ ದೇಶಕ್ಕೆ ಸುತ್ತಾಡಲು ಹೋಗಿದ್ದ ನನ್ನ ತಂದೆ ಮತ್ತು ತಾಯಿ ವಾಪಸ್ಸು ಬರುವಾಗ ನನಗೊಂದು ಜೊತೆ ಸ್ಪೋರ್ಟ್ಸ್ ಶೂಗಳನ್ನು ತಂದಿದ್ದರು. ನನಗೆ ಶೂಗಳನ್ನು ತರಲು ಹೇಳಿದವನು ನನ್ನ ಅಣ್ಣ. ನನ್ನ ತಾಯಿ ಅತ್ಯುತ್ತಮ ಶೂಗಳನ್ನೇ ಆರಿಸಿ ತಂದಿದ್ದಳು. ಅವುಗಳನ್ನು ನನಗೆ ಕೊಡುವಾಗ ಅವಳ ಮುಖದ ಮೇಲೆ ಸಂತೃಪ್ತಿಯ ನಗುವಿತ್ತು. ನನಗೆ ಗೊತ್ತಿಲ್ಲವೆಂದು ಅವಳು ತಿಳಿದುಕೊಂಡಿದ್ದಳಾದರೂ, ನಾನು ಪ್ಯಾಕೆಟ್ ಮೇಲಿನ ಅಡಿಡಾಸ್ ಲಾಂಛನ ಅರಿಯಲಾರದಷ್ಟು ಮುಗ್ಧನಾಗಿರಲಿಲ್ಲ. ಶೂಗಳ ಬಾಕ್ಸ್ ಶವ ಪೆಟ್ಟಿಗೆಯಂತೆ ಆಯತಾಕಾರದಲ್ಲಿತ್ತು. ಒಳಗೆ ಒಂದು ಜೊತೆ ಶುಭ್ರ ಬಿಳೀ ಶೂಗಳು, ಅಂಚಿನಲ್ಲಿ ಮೂರು ನೀಲಿ ಪಟ್ಟಿಗಳು. ಕೆಳಗೆ “ಅಡಿಡಾಸ್ ರೋಮ್” ಹೆಸರು. “ಎಲ್ಲಿ, ನಿನ್ನ ಕಾಲುಗಳಿಗೆ ಫಿಟ್ ಆಗ್ತಾವೋ ನೋಡೋಣ?” ತಾಯಿಯ ಮುಖದ ಮೇಲಿನ ಮಂದಹಾಸ ಹಾಗೇ ಇತ್ತು.

“ಈ ಶೂಗಳು ಜರ್ಮನಿಯವು ಕಣಮ್ಮ?” ಅವಳ ಹಸ್ತವನ್ನು ಸ್ವಲ್ಪ ಜೋರಾಗಿಯೇ ಅದುಮಿದೆ.

“ನಂಗೊತ್ತು ಮಗನೇ! ಜಗತ್ತಿನಲ್ಲೇ ಅತ್ಯುತ್ತಮ ಶೂಗಳು”.

“ತಾತನೂ ಜರ್ಮನಿಯವನಲ್ಲವೇನಮ್ಮಾ?” ಅವಳಿಗೆ ಅರ್ಥವಾಗಬಹುದೆಂದುಕೊಂಡೆ.

“ನಿನ್ನ ತಾತ ಪೋಲೆಂಡಿನವನು.” ಅವಳು ಕ್ಷಣಕಾಲ ವಿಚಲಿತಳಾದಳಾದರೂ, ಸಾವರಿಸಿ, ನನ್ನ ಕಾಲಿಗೆ ಒಂದು ಶೂ ಅನ್ನು ಸಿಕ್ಕಿಸಿ ಲೇಸ್ ಕಟ್ಟತೊಡಗಿದಳು. ನಾನು ಸುಮ್ಮನಾದೆ. ನನ್ನ ಪ್ರತಿಭಟನೆಗೆ ಯಾವುದೇ ಬೆಲೆಯಿಲ್ಲವೆಂದು ನನಗೆ ಅರಿವಾಯ್ತು. ತಾಯಿಗೆ ಇದೆಲ್ಲಾ ಅರ್ಥವಾಗುವಂತಿರಲಿಲ್ಲ. ಅವಳೆಂದೂ ವ್ಹೊಲಿನ್ ಮೆಮೋರಿಯಲ್ ಮ್ಯೂಸಿಯಮ್‌ಗೆ ಹೋಗಿರಲಿಲ್ಲ. ಅವಳ ಪಾಲಿಗೆ ಶೂಗಳೆಂದರೆ ಯಕಃಶ್ಚಿತ್ ಶೂಗಳು. ಜರ್ಮನಿಯೆಂದರೆ ಪೋಲೆಂಡ್! ನಾನು ಅವಳಿಗೆ ಅಡ್ಡಿಪಡಿಸಲಿಲ್ಲ. ಸುಮ್ಮನಾದೆ. ಅವಳನ್ನು ದುಃಖಕ್ಕೀಡುಮಾಡುವುದು ನನಗೆ ಬೇಕಿರಲಿಲ್ಲ.

ನಾನು ಮತ್ತೊಮ್ಮೆ ಅವಳಿಗೆ ಧನ್ಯವಾದಗಳನ್ನು ಅರ್ಪಿಸಿ ಕೆನ್ನೆಗೊಂದು ಮುತ್ತು ಕೊಟ್ಟು, “ನಾನು ಆಟಕ್ಕೋಗಿ ಬರ್‍ತೀನಮ್ಮಾ.” ಎಂದು ಹೊರಡಲಣಿಯಾದೆ. “ಜೋಪಾನ ಕಣಪ್ಪಾ!” ಆರಾಮ ಕುರ್ಚಿಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದ ತಂದೆ ನಗೆಯಾಡಿದರು. ನಾನು ಮತ್ತೊಮ್ಮೆ ನನ್ನ ಶೂಗಳನ್ನು ನೋಡಿದೆ. An_Adidas_shoeವ್ಹೊಲಿನ್ ಮ್ಯೂಸಿಯಂನಲ್ಲಿನ ನಾಜಿ ಸೈನಿಕನನ್ನು ಸಾಯಿಸಿದ ಮುದುಕ ನಾವು ಏನು ಮರೆಯಬಾರದೆಂದು ಹೇಳಿದ್ದನೋ ಅವೆಲ್ಲಾ ನೆನಪಿಗೆ ಬಂದವು. ನನ್ನ ಅಡಿಡಾಸ್ ಶೂಗಳ ಪಟ್ಟಿಗಳನ್ನು ಸ್ಪರ್ಶಿಸುತ್ತಾ ಕಾರ್ಡ್‌ಬೋರ್ಡ್ ರಟ್ಟಿನ ಮೇಲೆ ಅಂಟಿಸಿದ ತಾತನ ಛಾಯಾಚಿತ್ರದ ನೆನಪಾಯಿತು. “ಶೂಗಳು ಹಾಕ್ಕೊಳ್ಳಕ್ಕೆ ಆರಾಮ ಅನಿಸ್ತದೇನಪ್ಪಾ?” ತಾಯಿ ಕೇಳಿದಳು. “ಆಗದೇ ಏನಮ್ಮಾ? ಅವು ಅಂತಿಂಥ ಶೂಗಳಲ್ಲ, ಅಡಿಡಾಸ್ ಕಂಪೆನಿಯವು!” ನನ್ನ ಬದಲಿಗೆ ಅಣ್ಣ ಉತ್ತರಿಸಿದ. ಶೂಗಳ ಮೇಲೆ ಒತ್ತಡ ಬೀಳದಂತೆ ನಾನು ಹಗುರವಾದ ಹೆಜ್ಜೆಗಳನ್ನಿಡುತ್ತಾ ಹೊರನಡೆದೆ. ಹಾಗೆಯೇ ಇಂಡಿಪೆಂಡೆನ್ಸ್ ಪಾರ್ಕಿನೆಡೆಗೆ ಹೆಜ್ಜೆ ಹಾಕುತ್ತಾ ನಡೆದೆ. ಹೊರಗೆ, ಬೊರೊಚೊವ್ ಎಲಿಮೆಂಟರಿ ಶಾಲೆಯ ಹುಡುಗರು ಹಾಲೆಂಡ್, ಅರ್ಜೆಂಟಿನಾ ಮತ್ತು ಬ್ರೆಜಿಲ್ ಎಂದು ಮೂರು ತಂಡಗಳನ್ನು ಕಟ್ಟಿ ಫುಟ್‌ಬಾಲ್ ಆಡಲಣಿಯಾಗುತ್ತಿದ್ದರು. ಹಾಲೆಂಡ್ ತಂಡದಲ್ಲಿ ಒಬ್ಬ ಆಟಗಾರನ ಕೊರತೆಯಿದ್ದಿದ್ದರಿಂದ ನನ್ನನ್ನು ಸೇರಿಸಿಕೊಂಡರು. ಸಾಮಾನ್ಯವಾಗಿ ಬೇರೆ ಶಾಲೆಯ ಹುಡುಗರನ್ನು ಅವರು ತಮ್ಮೊಂದಿಗೆ ಸೇರಿಸಿಕೊಳ್ಳುತ್ತಿರಲಿಲ್ಲ.

ಆಟದೊಳಗೆ ಕಾವು ಏರುತ್ತಿದ್ದಂತೆ ನಾನು ವ್ಹೊಲಿನ್ ಮ್ಯೂಸಿಯಮಿನ ಮುದುಕ ಹೇಳಿದಂತೆ ಅವನನ್ನು ಮತ್ತು ನನ್ನ ತಾತನನ್ನು ಸಂಪೂರ್ಣವಾಗಿ ಮರೆತುಬಿಟ್ಟೆ. ಟೈಬ್ರೇಕರ್‌ನಲ್ಲಿ ಹೊಸ ಶೂಗಳಿಂದ ಒಂದು ಗೋಲನ್ನೂ ಹೊಡೆದೆ. ಆಟ ಮುಗಿದ ನಂತರ ಶೂಗಳನ್ನೊಮ್ಮೆ ನೋಡಿದೆ. ಅವು ಎಷ್ಟೊಂದು ಆರಾಮದಾಯಕವಾಗಿದ್ದವೆಂದರೆ ಕಾಲುಗಳಿಗೆ ಹೊಸದಾಗಿ ಬಲ ಬಂದಂತಾಗಿತ್ತು. “ಎಂತಾ ಶಾಟ್ ಗೊತ್ತಾ ತಾತ? ಗೋಲಿಯೇ ತಬ್ಬಿಬ್ಬಾಗಿ ಬಿಟ್ಟ!” ವಾಪಾಸ್ಸಾಗುತ್ತಾ ತಾತನ ನೆನಪು ಬಂದು ಹೇಳಿದೆ. ತಾತ ಉತ್ತರಿಸಲಿಲ್ಲ. ನನ್ನ ನಡಿಗೆಯೊಳಗೆ ಪುಟಿಯುತ್ತಿದ್ದ ಉತ್ಸಾಹ ಅವನಿಗೂ ತಟ್ಟಿರಬೇಕು! ಅವನೂ ಸಂತೋಷ ಪಟ್ಟಂತೆ ಭಾಸವಾಯಿತು.

ಪೂರ್ವ-ಪಶ್ಚಿಮಗಳ ನಡುವಿನ ಅಂತರದ ಅಳಿವು-ಉಳಿವು


– ಡಾ.ಎಸ್.ಬಿ. ಜೋಗುರ


 

ಎಲ್ಲ ಕಾಲಘಟ್ಟಗಳಲ್ಲಿಯೂ ಪಶ್ಚಿಮದ ನೆಲೆಗಳನ್ನು ಬೆರಗುಗಣ್ಣಿನಿಂದ ಈಗಾಗಲೇ ಪ್ರಚಲಿತವಿರುವ ಅದೇ ಸ್ಥಾಪಿತ ನಂಬುಗೆಯಿಂದ ನೋಡುವ, ಎದುರುಗೊಳ್ಳುವ ಅವಶ್ಯಕತೆ ಸದ್ಯದ ಸಂದರ್ಭದಲ್ಲಂತೂ ಇಲ್ಲ. ಸಾಂಸ್ಥಿಕವಾಗಿ ಅವು ಬಲು ಗಟ್ಟಿಯಾದವುಗಳು ಎಂದು ಹೇಳಿಕೊಳ್ಳುವ ಪೂರ್ವದ ಪರಂಪರೆಯ ಪ್ರಮುಖ ನೆಲೆಗಳೇ ಇಂದು ಬದಲಾವಣೆಯ ಹೊಡೆತಕ್ಕೆ ಸಿಲುಕಿ ಬೆಂಡಾಗುತ್ತಿವೆ. ಇನ್ನು ನಾಗರಿಕತೆ ಮತ್ತು ಬದಲಾವಣೆಯ ತೀವ್ರತೆಯನ್ನೇ ತಿಂದು ಅದನ್ನೇ ಉಸಿರಾಡುವ ಪಶ್ಚಿಮದ ರಾಷ್ಟ್ರಗಳು ಅನೇಕ ಬಗೆಯ ಸ್ಥಿತ್ಯಂತರಗಳನ್ನು ಕಂಡುಕೊಂಡಿರುವದು ಒಂದು ಕಟು ವಾಸ್ತವ. ಒಂದು ಕಾಲದಲ್ಲಿ ಆರ್ಥಿಕ ವಿಷಯಗಳಲ್ಲಿ ಬಲಾಢ್ಯರು ಎಂದು ಖ್ಯಾತನಾಮವಾದ ರಾಷ್ಟ್ರಗಳು ಇಂದು ವಿದೇಶಿ ಸಾಲದ ವಿಷಯದಲ್ಲಿ ಟಾಪ್ ಟೆನ್ ಪಟ್ಟಿಯಲ್ಲಿವೆ. ಅಮೇರಿಕಾ, ಇಂಗ್ಲಂಡ್, ಫ಼್ರಾನ್ಸ್, ಜರ್ಮನಿ, ಇಟಲಿಯಂಥಾ ಪಶ್ಚಿಮದ ರಾಷ್ಟ್ರಗಳು ಋಣಭಾರದ ವಿಷಯವಾಗಿ ಟಾಪ್ ಟೆನ್ ರಾಷ್ಟ್ರಗಳಲ್ಲಿ ಮೊದಲ ಐದು ಸ್ಥಾನಗಳನ್ನು ಅಲಂಕರಿಸಿರುವದಿದೆ. ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಪಶ್ಚಿಮದ ರಾಷ್ಟ್ರಗಳು ಒಂದು ಬಗೆಯ ಆರ್ಥಿಕ ಜಿಗುಟುತನದ ಸ್ಥಿತಿಯನ್ನು ಹೊಂದುವಂತಾಗಿದೆ. ಕಡಿಮೆ ಖರ್ಚು ಮಾಡಿ, ಹೆಚ್ಚು ಉಳಿತಾಯ ಮಾಡುವ ಅನಿವಾರ್ಯತೆಗಳು ಅವರಿಗೀಗ ಎದುರಾಗಿವೆ. 2012 ರ ಸಂದರ್ಭದಲ್ಲಿ ವಿಶ್ವ ಬ್ಯಾಂಕ್ ಮಾಡಿದ ವರದಿಯಂತೆ ಅಮೇರಿಕೆಯ ಆರ್ಥಿಕತೆಗಿಂತಲೂ ಚೈನಾ ಮತ್ತು ಭಾರತದ ಆರ್ಥಿಕ ಸ್ಥಿತಿಗತಿ ಚೆನ್ನಾಗಿತ್ತು. ಭಾರತ ಅಮೇರಿಕೆಯ ಮೂರು ಪಟ್ಟು ಆರ್ಥಿಕ ಪ್ರಗತಿಯನ್ನು ಹೊಂದಿರುವ ಬಗ್ಗೆ ವಿಶ್ವ ಬ್ಯಾಂಕ್ ವರದಿ ಮಾಡಿರುವದಿತ್ತು. ಕೇವಲ ಆರ್ಥಿಕ ಹೊಯ್ದಾಟಗಳು ಮಾತ್ರ ಪಶ್ಚಿಮದ ನೆಲೆಗಳನ್ನು ಬಾಧಿಸದೇ ಸಾಂಸ್ಥಿಕ ಮೂಲಗಳು ಕೂಡಾ ಅಧ:ಪತನದ ದಾರಿಯಲ್ಲಿವೆ ಎನ್ನುವದನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ಇತಿಹಾಸದ ಅಧ್ಯಾಪಕ ನೀಲ್ ಪರ್ಗ್ಯುಸನ್ ಎನ್ನುವವರು ತಮ್ಮ ಕೃತಿಯಾದ ’ದ ಗ್ರೇಟ್ ಡಿthegreatdegenerationಜನರೇಶನ್’ ಎನ್ನುವದರಲ್ಲಿ ಅತ್ಯಂತ ಸ್ಥೂಲವಾಗಿ, ಮಾರ್ಮಿಕವಾಗಿ ಚರ್ಚಿಸಿರುವರು. ಆರ್ಥಿಕ ವಿಷಯವಾಗಿ ಪಶ್ಚಿಮದ ಕೆಲವು ರಾಷ್ಟ್ರಗಳಲ್ಲಿ ಮೇಲ್ಮುಖ ಸಂಚಲನೆಯ ಬದಲಾಗಿ ಕೆಳಮುಖ ಇಲ್ಲವೇ ಸಮಾನಾಂತರ ಸಂಚಲನೆ ಮಾತ್ರ ಸಾಧ್ಯವಾದಂತಾಗಿದೆ.

ಪಶ್ಚಿಮದ ರಾಷ್ಟ್ರಗಳಲ್ಲಿ ಅದರಲ್ಲೂ ಯುರೋಪಿನ ನೆಲೆಗಳಲ್ಲಿ ಒಂದು ಬಗೆಯ ರಭಸದ ಬದಲಾವಣೆ ಆರಂಭವಾಗಿದೆ. ಸರಿ-ತಪ್ಪುಗಳ ಲೆಕ್ಕಾಚಾರವನ್ನು ಮೀರಿದ ಈ ಬದಲಾವಣೆ ತನ್ನ ತೆಕ್ಕೆಗೆ ಸಿಕ್ಕಿದ್ದೆಲ್ಲವನ್ನೂ ಕೊಚ್ಚಿಕೊಂಡು ಹೋಗುವಷ್ಟು ಸಶಕ್ತವಾಗಿದೆ. ಹಿಂದೊಮ್ಮೆ ಅಮೇರಿಕೆಯ ರಕ್ಷಣಾ ಕಾರ್ಯದರ್ಶಿಯಾಗಿದ್ದ ಡೊನಾಲ್ಡ್ ರಮ್ಸ್ ಫ಼ೀಲ್ಡ್ ಎನ್ನುವವರು ಮೂರು ಪ್ರಮುಖ ಜನ ಸಮೂಹಗಳನ್ನು ಗುರುತಿಸಿರುವದಿತ್ತು. ಒಂದನೆಯದು ಎಲ್ಲವೂ ಗೊತ್ತಿರುವವರು ಆದರೂ ನಿರ್ಲಿಪ್ತ ಭಾವನೆ ಹೊಂದಿರುವರು. ಎರಡನೆಯವರು ಗೊತ್ತಿದ್ದೂ ಗೊತ್ತಿಲ್ಲದಂತಿರುವವರು. ಮೂರನೆಯವರು ನಿಜವಾಗಿಯೂ ಯಾವುದೇ ವಿದ್ಯಮಾನಗಳ ಬಗೆಗೆ ಸರಿಯಾದ ಗ್ರಹಿಕೆ ಇಲ್ಲದವರು, ಅಂದರೆ ಏನೂ ಗೊತ್ತಿಲ್ಲದವರು. ಇಲ್ಲಿ ಮೊದಲ ಮತ್ತು ಎರಡನೆಯವರು ಅಪಾಯಕಾರಿ. ಇಂಥವರೇ ಸಾಂಸ್ಥಿಕ ಮೌಲ್ಯಗಳು ಕುಸಿಯಲು ಕಾರಣರಾಗುವವರು. ಆದರೆ ನೀಲ್ ಪರ್ಗ್ಯುಸನ್ ಹೊಸಬಗೆಯ ನಾಲ್ಕನೆಯ ಪ್ರಕಾರದ ಜನ ಸಮುದಾಯವನ್ನು ಗುರುತಿಸಿದ್ದಾರೆ. ಇವರು ಗೊತ್ತಿಲ್ಲದಿದ್ದರೂ ಗೊತ್ತಿರುವಂತೆ ನಟಿಸುವವರು. ಇವರು ಇನ್ನಷ್ಟು ಅಪಾಯಕಾರಿ. ಈ ಸಂದರ್ಭದಲ್ಲಿ ಈಟ್ಸ್ ನ ಮಾತು ನೆನಪಾಗುತ್ತದೆ. “ಉತ್ತಮರಿಗೆ ಬಲವಾದ ಆಶೋತ್ತರಗಳಿಲ್ಲ, ಆಶೋತ್ತರಗಳಿರುವವರು, ಅಗಾಧ ಶಕ್ತಿ ಇರುವವರು ನೆಟ್ಟಗಿಲ್ಲ.” ನೀಲ್ ಪರ್ಗ್ಯುಸನ್ ಹೇಳುವಂತೆ ಪಶ್ಚಿಮದ ನೆಲೆಗಳು ಸಾಂಸ್ಥಿಕ ಸುಭದ್ರತೆಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿವೆ. ಅದರಲ್ಲೂ ವಿಶೇಷವಾಗಿ ಪ್ರಜಾಪ್ರಭುತ್ವ, ಬಂಡವಾಳವಾದ, ನಾಗರಿಕ ಸಮಾಜ ಮತ್ತು ಶಾಸನೀಯ ಸತ್ತೆ, ಈ ನಾಲ್ಕೂ ಸಂಸ್ಥೆಗಳ ಒಳಹರವು ಅತ್ಯಂತ ಸಂಕೀರ್ಣವಾದುದು. ಅತ್ಯಾಧುನಿಕವಾದ ಕಂಪ್ಯುಟರ್ ಒಂದರಲ್ಲಿಯ ತೀರಾ ಡೆಲಿಕೇಟ್ ಆಗಿರುವ ಸಣ್ಣ ಸಣ್ಣ ತಂತಿಗಳ ಸಂಯೋಜನೆಯಂತೆ ಅದು ಕ್ಲಿಷ್ಟವಾಗಿದೆ. ಅದರಲ್ಲಿಯ ಕಾರ್ಯಕ್ಷಮತೆಯ ಅದಕ್ಷತೆಗೆ ಕೇವಲ ಹೊರನೋಟದ ಗ್ರಹಿಕೆ ಸಾಲುವುದಿಲ್ಲ. ಸೂಕ್ಷ್ಮ ಒಳನೋಟದ ಅವಶ್ಯಕತೆಯ ಜರೂರತ್ತಿದೆ. ಪ್ರಜಾಪ್ರಭುತ್ವದಂತಹ ಸಾಂಸ್ಥಿಕ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ ಅದರಲ್ಲಿ ಅಂತರ್ಗತವಾಗಬಹುದಾದ ಚುನಾವಣೆ, ಚುನಾಯಿತ ಪ್ರತಿನಿಧಿ, ಸರಕಾರ, ನಿಯಮಗಳು, ನಿರ್ಬಂಧಗಳ ಬಗ್ಗೆಯೂ ಅರಿವಿರಬೇಕಾದುದು ತೀರಾ ಅಗತ್ಯ.

ಇಂದು ವಿಶ್ವದ ಯಾವುದೇ ರಾಷ್ಟ್ರದಲ್ಲಿಯೂ ಸಾಂಸ್ಥಿಕ ರೂಪರೇಷೆಗಳು ಮೂಲ ಸ್ಥಿತಿಯಲ್ಲಿ ಉಳಿದಿಲ್ಲ. ಭಾರತದಂತಹ ಸಾಂಪ್ರದಾಯಿಕ, ಸಾಂಸ್ಥಿಕ ಪ್ರಧಾನ ಹಿನ್ನೆಲೆಯುಳ್ಳ ನೆಲದಲ್ಲಿಯೂ ಅನೇಕ ಜಿಗುಟುತನದ ಸಂಸ್ಥೆಗಳು ತಮ್ಮ ರಚನೆ ಮತ್ತು ಕಾರ್ಯ ಸ್ವರೂಪದಲ್ಲಿ ಬದಲಾವಣೆಯನ್ನು ಕಂಡುಕೊಂಡಿವೆ. east-meets-westಬೇರುಗಳು ಸಡಿಲುಗೊಂಡಿವೆ. ವಿವಾಹ, ಜಾತಿ, ಧರ್ಮದಂತಹ ಸಂಸ್ಥೆಗಳು ಈಗ ಮೇಲ್ಮುಖ ಹಾಗೂ ಕೆಳಮುಖ ಸಂಚಲನೆಗೂ ಸಿಲುಕಿರುವದಿದೆ. ಪಶ್ಚಿಮದ ರಾಷ್ಟ್ರಗಳಲ್ಲಿ ಸಾಂಸ್ಥಿಕ ಮೂಲಗಳಲ್ಲಿ ಈ ಬಗೆಯ ಭರಾಟೆಯ ಬದಲಾವಣೆಗೆ ನಾರ್ಥ್ ಡೌಗ್ಲಾಸ್, ಜಾನ್ ವಲ್ಲಿಸ್ ಮತ್ತು ಬ್ಯಾರಿ ವೈನ್ ಗಾಸ್ಟ್ ಎನ್ನುವ ಚಿಂತಕರು ಕೆಲವು ಪ್ರಮುಖ ಕಾರಣಗಳನ್ನು ಸೂಚಿಸುವದಿದೆ. ತೀವ್ರತರವಾದ ಆರ್ಥಿಕ ಸ್ಥಿತ್ಯಂತರಗಳು, ಶ್ರೀಮಂತ ನಾಗರಿಕತೆಯ ಭರಾಟೆ, ಅಪಾರ ಸಂಖ್ಯೆಯ ಹಿಂದೆಂದೂ ಕಾಣಲಾರದ ಸಂಖ್ಯೆಯ ಸಂಘಟನೆಗಳು, ಬೃಹತ್ ಪ್ರಮಾಣದ ವಿಕೇಂದ್ರೀಕೃತ ನೌಕರಶಾಹಿ ವ್ಯವಸ್ಥೆ, ಅವೈಯಕ್ತಿಕ ಸಾಮಾಜಿಕ ಸಂಬಂಧಗಳು, ಈ ಮುಂತಾದ ಸಂಗತಿಗಳೇ ಪಶ್ಚಿಮದ ರಾಷ್ಟ್ರಗಳಲ್ಲಿಯ ಸಂಸ್ಥೆಗಳು ತಮ್ಮ ಮೂಲ ರಚನೆಯಲ್ಲಿ ಮಾರ್ಪಾಡುಗಳನ್ನು ಹೊಂದುವಲ್ಲಿ ಮತ್ತು ಸಾಮಾಜಿಕ ಅನುಮತಿಗಳ ವಿಷಯದಲ್ಲಿ ಸಡಿಲುಗೊಳ್ಳಲು ಕಾರಣಗಳಾಗಿ ಕೆಲಸ ಮಾಡಿವೆ. ಇವುಗಳನ್ನು ಹೊರತು ಪಡಿಸಿ ಆಧುನೀಕರಣ, ನಗರೀಕರಣ, ಜಾಗತೀಕರಣ, ಆಧುನಿಕ ಶಿಕ್ಷಣ, ಅಂತರರಾಷ್ಟ್ರೀಯ ವಲಸೆ ಮುಂತಾದ ಬಾಹ್ಯ ಸಂಗತಿಗಳು ಕೂಡಾ ಸಂಸ್ಥೆಗಳ ಮೂಲ ಸ್ವರೂಪದಲ್ಲಿಯ ಮಾರ್ಪಾಡುಗಳಿಗೆ ಕಾರಣಗಳಾಗಿವೆ.

ಒಟ್ಟಾರೆ ಪೂರ್ವ ಮತ್ತು ಪಶ್ಚಿಮದ ಮಧ್ಯೆ ಇದ್ದ ಮೇಲರಿಮೆ-ಕೀಳರಿಮೆಯ ಗೆರೆಗಳು ಈಗೀಗ ಮಸುಕಾಗತೊಡಗಿವೆ. ಅಲ್ಲಿ ಹೇಳಿಕೊಳ್ಳಬಹುದಾದ ಅಂತರಗಳು ಈಗ ಗೋಚರವಾಗುತ್ತಿಲ್ಲ. ಪೂರ್ವ- ಪಶ್ಚಿಮಗಳ ಟಕ್ಕಾಟಿಕ್ಕಿ ಈಗ ಮೊದಲಿನಷ್ಟು ನಿಚ್ಚಳವಾಗಿಲ್ಲ. ಅದೇನಿದ್ದರೂ ಈಗ ಮಸುಕು ಮಸುಕಾಗಿದೆ. ಮುಂಬರುವ ದಿನಗಳಲ್ಲಿ ಕಣ್ಣಿಗೆ ಕಾಣದಷ್ಟು ಆ ಅಂತರ ಅಮೂರ್ತವಾಗಲಿದೆ ಎನ್ನುವ ಭವಿಷ್ಯವನ್ನು ಪಶ್ಚಿಮದ ರಾಷ್ಟ್ರಗಳ ಸಮಕಾಲಿನ ಸಂದರ್ಭದಲ್ಲಿಯ ವಿದ್ಯಮಾನಗಳೇ ನುಡಿಯುತ್ತಿವೆ.

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ.. : ಭಾಗ – 1

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1

ಅಭಿಮಾನದಿಂದ ಹೇಳುತ್ತೇನೆ ನಾನು ಆಸ್ಪತ್ರೆಯಲ್ಲಿ ಹುಟ್ಟಿಲ್ಲ. ಆಸಾಡಿ ತಿಂಗಳ ಬಿರುಮಳೆಯ ನಡುವೆಯೂ ಮೂರು ದಿನಗಳ ತನಕ ನೋವು ತಿನ್ನುತ್ತಾ ನನ್ನವ್ವ ನನ್ನನ್ನು ನಮ್ಮ ದನಕಟ್ಟುವ ಕೊಟ್ಟಿಗೆಯಲ್ಲಿಯೇ ನೆಲಕ್ಕೆ ತಂದಳಂತೆ. ನನ್ನ ಹೊಕ್ಕಳಬಳ್ಳಿಯನ್ನು ಹೊಂದಿದ ಅಮೆಕಸವನ್ನು ಹಟ್ಟಿಯಣೆಗೆ ತಾಗಿಕೊಂಡಂತೆ ಇದ್ದ ಬಸಲೆ ಚಪ್ಪರದಡಿಯೇ ಹೂಳಲಾಯಿತಂತೆ. ಇದು ನನ್ನೊಬ್ಬನ ಕತೆಯಲ್ಲ. ನನ್ನನ್ನೂ ಒಳಗೊಂಡಂತೆ ನಮ್ಮೂರಿನಲ್ಲಿ ಬಹುತೇಕರ ಹುಟ್ಟು ಹಟ್ಟಿಯಣೆಯಲ್ಲಿ ನಡೆದುದು. ತುಂಬಿದ ಬಸುರಿಯರಿಗೆ ಹೆರಿಗೆ ನೋವು ಶುರುವಾದ ತಕ್ಷಣ ಅವರನ್ನು ವರ್ಗಾಯಿಸುತ್ತಿದ್ದುದು ಹಸು ಎಮ್ಮೆಗಳನ್ನು ಕಟ್ಟುವ ಜಾಗಕ್ಕೆ ತಾಗಿಕೊಂಡೇ ಇರುತ್ತಿದ್ದ ಕೊಟ್ಟಿಗೆಗಳಿಗೆ. ದನದ ಕಲಗಚ್ಚು ಕಾಯಿಸುವ ಬಾಯರು ಒಲೆ, ಭತ್ತಕುಟ್ಟಲು ಬಳಸುತ್ತಿದ್ದ ಕುಟ್ಟೊಒರಲು, Indian-Cow-calfಸ್ನಾನಕ್ಕಾಗಿ ಇಡುತ್ತಿದ್ದ ನೀರು ಕಾಯಿಸುವ ವ್ಯವಸ್ಥೆಯಲ್ಲವನ್ನೂ ಹೊಂದಿರುತ್ತಿದ್ದ ಹಟ್ಟಿಯಣೆಗಳೇ ನಮ್ಮ ತಾಯಂದಿರು ನಮ್ಮನ್ನು ಭೂಮಿಗೆ ಇಳಿಬಿಡುವ ತಾಣಗಳಾಗಿದ್ದವು. ಹಾಗಾಗಿ ಹುಟ್ಟಿದ ಮಕ್ಕಳನ್ನು ತಂದೆ ಮನೆಯ ಕಡೆಯವರು ನಮ್ಮ ಹಟ್ಟಿಯಣೆಗಳಲ್ಲಿ ಹುಟ್ಟಿದವನಲ್ವಾ? ಎಂದೇ ಸಂಭೋಧಿಸುತ್ತಿದ್ದುದುಂಟು. ಇಂತಹ ಹಟ್ಟಿಯಣೆಗಳಲ್ಲಿ ಹುಟ್ಟುವುದು ಮಾತ್ರವಲ್ಲದೆ ಅದೇ ಕರುಮರಿಗಳ ಜತೆಗೆ ಜನನೋತ್ತರವಾದ ಬಾಲ್ಯವನ್ನು ಕಳೆಯುವ ಬದುಕಿನ ಸುಖವನ್ನು ಕೈತುಂಬ ಚಾಚಿಕೊಂಡೇ ಬೆಳೆದ ಆನಂದ ನನ್ನೊಂದಿಗಿದೆ. ಇದಲ್ಲದೆ ಈ ನಾಲ್ಕು ಕಾಲಿನ ಹಸು-ಕೋಣ-ಎಮ್ಮೆ-ಎತ್ತುಗಳೆಂಬ ಪಶುಲೋಕ ಭಾಷಿಕವಾಗಿಯೂ ನುಡಿಗಟ್ಟು, ಗಾದೆ, ಕಥೆ ಇತ್ಯಾದಿಗಳ ಮೂಲಕವೂ ನನ್ನ ಮಾನಸಿಕ ವಲಯವನ್ನು ಹೊಕ್ಕು ಗಟ್ಟಿಯಾಗಿ ಕುಂತು ಬಿಟ್ಟಿವೆ.

ಅಕ್ಷರವೆಂಬ ಶಿಕ್ಷಣ ಕ್ರಮಕ್ಕೆ ಒಡ್ಡಿಕೊಳ್ಳುವ ಮೊದಲೇ ಹಾಡಿಹಕ್ಕಲುಗಳಲ್ಲಿರುವ ಛಿದ್ರವಾದ ದೇವರ ಲಿಂಗಗಳಿಗೊ, ಮೂರ್ತಿಗಳಿಗೋ ಸಂಬಂಧಿಸಿದಂತೆ ಕೇಳುತ್ತಿದ್ದ ಕಥೆಗಳಲಿ, ಹಾಗೆಯೇ ಜಾನಪದ ಲೋಕದ ಅನಾಥ ನಾಯಕ ನಾಯಕಿಯರಿಗೆ ಸಂಬಂಧಿಸಿದ ಕಥೆಗಳಲ್ಲಿ ಈ ಹಸುಗಳ ಲೋಕದ ಅಂಶಿಕ ಪರಿಚಯ ನಿರಂತರವಿತ್ತು. ಅದೇ ತೆರನಾಗಿ ಅಕ್ಷರ ಜಗತ್ತಿನ ಶಿಕ್ಷಣ ಕ್ರಮಕ್ಕೆ ತೆರೆದುಕೊಳ್ಳುತ್ತಿದ್ದಂತೆ, ಅನ್ನದಾತನ ಒಡನಾಡಿಯಾದ ಜಾನುವಾರುಗಳು ಮತ್ತೆ ಎದುರಾಗುತ್ತಿದ್ದವು. ಈ ಹಂತದಲ್ಲಿ ನನಗೆ ಸ್ಪಷ್ಟವಾಗಿ ನೆನಪಿರುವ ಹಾಗೆ ಮೂರನೇ ತರಗತಿಯಲ್ಲಿ ನನಗೆ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರು ಉಳಿದ ಯಾವ ಪಾಠವನ್ನೂ ನೆಟ್ಟಗೆ ಮಾಡದೆ ಇದ್ದಾಗಲೂ “ಧರಣಿ ಮಂಡಲ ಮಧ್ಯದೊಳಗೆ…” ಎಂಬ ಗೋವಿನ ಹಾಡನ್ನು ರಾಗಬದ್ಧವಾಗಿ ಹಾಡಿ ಹೇಳುವುದನ್ನು ಮರೆತವರಲ್ಲ. ಆಗಿನ್ನೂ ಒಂಭತ್ತರ ಹರೆಯದ ಆಸುಪಾಸಿನ ನಾನು ಈ ಪಠ್ಯದ ಜತೆಗೆ ಮೂಡುತ್ತಿರುವ ಲಿಂಗಗಳಿಗೋ, ಬೆಳೆಯುತ್ತಿರುವ ಹುತ್ತಗಳಿಗೋ, ತಾಯಿಯಿಲ್ಲದ ತಬ್ಬಲಿ ಮಕ್ಕಳಿಗೋ, indian_buffaloತಾಯ್ತನದ ಅನುಬಂಧದಲ್ಲಿ ಹಾಲು ಸೂಸುವ ಕಥೆಗಳನ್ನು ಕೇಳಿದವನಿದ್ದೆ. ಹುಟ್ಟಿದಾರಭ್ಯದಿಂದ ತೊಡಗಿ ಆಕ್ಷರಿಕವಲ್ಲದ ಮತ್ತು ಅಕ್ಷರ ಜಗತ್ತಿನ ಪಠ್ಯಗಳೆರಡರ ಮೂಲಕವೂ ನಾನು ಕೇಳಿದ ಬಹುಪಾಲು ಕಥೆಗಳು ಕೈಲೂತಿಯಂತಹ ವರ್ಣ ಶ್ರೇಷ್ಠವೋ, ಗಂಗೆ ಗೌರಿಯರಂತಹ ನಾಮ ಶ್ರೇಷ್ಠವೋ ಆಗಿದ್ದ ಹಸುಗಳಿದ್ದು, ಅಂತಹ ಕಥೆಗಳಲ್ಲಿ ನನ್ನ ಮುದ್ದಿನ ಎಮ್ಮೆಗಳಾಗಲೀ, ಕೋಣಗಳಾಗಲೀ, ಎತ್ತುಗಳಾಗಲೀ, ಕರುಹಡೆಯದ ಒಂದೇ ಕಾರಣಕ್ಕೆ “ಗೊಡ್ಡು”ಗಳೆನಿಸಿಕೊಳ್ಳುತ್ತಿದ್ದ ಬಂಜೆಹಸುಗಳಾಗಲೀ ಇರುತ್ತಿರಲಿಲ್ಲ! ಕಥೆಗಳಲ್ಲಿ ಇರುತ್ತಿದ್ದ ಬಹುಪಾಲು ಹಸುಗಳು ತುಂಬಿದ ಕೆಚ್ಚಲನ್ನು ಹೊತ್ತುಕೊಂಡು ಹಾಲು ಸುರಿಯಲು ತಯಾರಾಗಿಯೇ ನಿಂತವುಗಳು! ಯಾರೂ ಕಾಣದಂತೆಯೇ ಹುತ್ತದ ಮೇಲೆ ಹಾಲು ಸುರಿಯುವ, ಕಾಳಿಂಗನಂತಹ ಗೊಲ್ಲ ಕರೆದ ತಕ್ಷಣ ಬಂದು ಅವನ ತಂಬಿಗೆಯನ್ನು ತುಂಬುವಂತೆ ಚಲ್ಲಿ ಸೂಸಿ ಹಾಲು ಕರೆಯುತ್ತಿದ್ದ ಹಸುಗಳೇ. ಪ್ರಾಯಶಃ ಈ ಹಸುಗಳಿಗಿಂತ, ತಂಬಿಗೆ ತುಂಬುವ ಹಾಲೇ ಅತಿಮುಖ್ಯ ವಸ್ತುವೆನಿಸುತ್ತದೆ. ತುಂಬಿದ ಕೆಚ್ಚಲು, ಕರೆದಾಕ್ಷಣ ಬರುವ ಸಿಪಾಯಿ ಶಿಸ್ತು, ತಪ್ಪೇ ಮಾಡಲಾರದ ಸಾತ್ವಿಕ ಮುಖಗಳು, ಜತೆಗೆ ಬಹುಮಟ್ಟಿಗೆ ಎಲ್ಲವೂ ತಾಯಂದಿರುಗಳು. ತಮ್ಮ ಹೆಸರು (ಗಂಗೆ, ಗೌರಿ, ತುಂಗಭದ್ರೆ, ಪುಣ್ಯಕೋಟಿ), ಬಗೆ ಇತ್ಯಾದಿಗಳಲ್ಲಿ ಸ್ವಚ್ಛತೆಯನ್ನು ಮೈಗೂಡಿಸಿಕೊಂಡಿರುವ ಜತೆಗೆ ಪ್ರವೃತ್ತಿಯಲ್ಲೂ ಕನಿಷ್ಠತೆಯ ಸೋಂಕಿನಿಂದ ಮುಕ್ತವಾದಂತೆಯೇ ಇರುವ ಈ ಕೊಟ್ಟಿಗೆಯ ಕಪಿಲೆಯರನ್ನು ಅಕ್ಷರ ಮತ್ತು ಮೌಖಿಕ ಪಠ್ಯಗಳೆರಡೂ ಅಚ್ಚುಹಾಕಿ ಕೊಡುತ್ತಾ ಹೋಗುತ್ತವೆ.

ಗಂಟಿಗಳು ಮತ್ತು ಗಂಟಿ ಮೇಯಿಸುವುದು:
ನಾವು ಗಂಟಿಗಳು ಹುಟ್ಟುವ ಜಾಗದಲ್ಲಿ ಹುಟ್ಟಿದವರು. ಅವುಗಳನ್ನೇ ಬದುಕಿನ ಆಧಾರವಾಗಿ ಅವಲಂಬಿಸಿದವರು. ಹಸುವಿನ ಕುರಿತಾಗಿ ಲೋಕ ಕೊಡುವ ನಿರೂಪಣೆ ಹೇಗೇ ಇರಲಿ, ಹಸುಗಳ ಜೊತೆಗಿನ ನಮ್ಮ ಅನುಭವವೇ ಬೇರೆ. ನಮಗೊ ಹಟ್ಟಿಯಣೆಯಲ್ಲಿ ಹುಟ್ಟಿದಂದಿನಿಂದ ತಗುಲಿಕೊಂಡ ಹಸುಕರುಗಳ ಜೊತೆಗಿನ ನಂಟು, ಅವುಗಳನ್ನೇ ಬಯಲಿಗೆ ಬಿಟ್ಟು ಮೇಯಿಸುವ ಹೊಣೆಗಾರಿಕೆಯಾಗಿಯೇ ಮುಂದುವರೆಯುತ್ತದೆ. ಆದರೆ ನಾವಿದನ್ನು ಮನರಂಜನೆಯಾಗಿಯೇ ಬದಲಿಸಿಕೊಂಡವರು. ಇವುಗಳನ್ನು ಬಯಲಿಗೆ ಬಿಟ್ಟು ಅಲ್ಲಿಯೇ ಆಟದಂಗಣವನ್ನು ಅಣಿಗೊಳಿಸಿಕೊಳ್ಳುತ್ತಿದ್ದವರು. ಕಾಯಕದ ಜೊತೆಗೆ ಮನರಂಜನೆಯ ಅವಕಾಶವೂ ಆಗುತ್ತಿದ್ದ ಈ ಗಂಟಿಹಿಂಡಿನಲ್ಲಿ ಆಡುತ್ತಿದ್ದ ಲಗೋರಿ, ಚಿಣ್ಣಿದಾಂಡು, ಬೆನ್ಚೆಂಡುಗಳೆಂಬ ಬಗೆಬಗೆಯ ಆಟಗಳು ಬೇರೆಲ್ಲಿ ಸಾಧ್ಯ? ಬೆಳ್ಳಂಬೆಳಿಗ್ಗೆ ಹೊತ್ತು ಮೂಡುತ್ತಿದ್ದಂತೆ ಅವುಗಳ ಕೊರಳಹಗ್ಗವನ್ನು ತಪ್ಪಿಸಿ, ಬಾಲಹಿಡಿದು ಬಯಲಿಗೆ ಹೊಂಟೆವೆಂದರೆ ನಮಗೆ ಲೋಕ ಮರೆತು ಹೋಗುತ್ತಿತ್ತು. ಶಾಲೆ, ಮನೆ, ಊಟ ಇವೆಲ್ಲವನ್ನೂ ಮರೆತು ಹೊತ್ತೇರುವ ತನಕ ಅವುಗಳನ್ನು ಕಾಯುವ ಎಚ್ಚರದ ಜೊತೆಗೆ ಮೈಮರೆತು ಆಡುತ್ತಿದ್ದೆವು. ಹೀಗೆ ಆಡುತ್ತಾ ಹಸು-ಎತ್ತುಗಳೆಂಬ ಕಡಗಂಟಿಗಳನ್ನೂ, ಕೋಣ-ಎಮ್ಮೆಗಳೆಂಬ “ಹೋರೆಮ್ಮೆ”ಗಳನೂ ಕಾಡು-ಬಯಲುಗಳಲ್ಲಿ ಮೇಯಿಸಿಕೊಂಡು ಬೆಳೆದ ಅನುಭವವೇ ಬೇರೆ. ಅವುಗಳ ಒಡನಾಟದ ಫಲದಿಂದಾಗಿ ನಮ್ಮೊಳಗೆ ಅಚ್ಚಾದ ಜಾನುವಾರುಗಳ ಜಗತ್ತಿನಲ್ಲಿ ಲಿಂಗ-ವರ್ಗ-ಗುಣ ವೈವಿದ್ಯಗಳು ಸಹಜವಾಗಿಯೇ ಇವೆ. ಪಠ್ಯದ ಹಸು ಹಾಗೂ ಅವುಗಳು ಅಳವಡಿಸಿಕೊಂಡ ಮಿಲಿಟರಿ ಶಿಸ್ತುಗಳು, ನಾವೇ ಸ್ವಯಂ ಮೇಯಿಸಿ ಹಟ್ಟಿಗೆ ಕಟ್ಟುತ್ತಿದ್ದ ವೇಳೆ ನನಗಂತೂ ಬಹುಮಟ್ಟಿಗೆ ಕಂಡಿಲ್ಲ. ಅವು ನಮ್ಮ ಕಣ್ಣು ತಪ್ಪಿಸಿ ನಮ್ಮ ಆಟಗಳಿಗೆ ಬ್ರೇಕ್ ಕೊಡುವಂತೆ ಯಾರ್‍ಯಾರದೋ ಗದ್ದೆಗಳಿಗೆ ನುಗ್ಗುತ್ತಿದ್ದವು. ನಮ್ಮ ಅಪ್ಪಣೆ ಪಡೆಯದೇ ಅವುಗಳ ಕರುಗಳಿಗೆ ಕದ್ದುಮುಚ್ಚಿ (?) ಹಾಲೂಡುಸಿ ನಮ್ಮಿಂದ ಶಿಸ್ತಿನ ಪಾಠದ ಭಾಗವಾಗಿ ದೊಣ್ಣೆ/ಬಡ್ತಿಗೆಗಳ ಹೊಡೆತ ತಿನ್ನುತ್ತಿದ್ದವು. ಇನ್ನು ಕೆಲವೊಮ್ಮೆ ಹಾಗೆ ಬಿಟ್ಟುದಕ್ಕಾಗಿ ಅಮ್ಮಂದಿರ ಕೈಯಲ್ಲಿ ನಮಗೆ ಹೊಡೆತ ತಿನ್ನಿಸುತ್ತಿದ್ದವು. ಹೋರೆಮ್ಮೆಗಳ ಪಜೀತಿ ಇನ್ನೂ ಹೆಚ್ಚಿನದು. ಅವುಗಳಿಗೆ ನೀರಿನ ಭಯವಿಲ್ಲ. ಮಳೆಗಾಳಿಯ ನಡುವೆ ದಿಕ್ಕಾಪಾಲಾಗುವ ಅವಕಾಶವನ್ನೇ ಬಳಸಿಕೊಂಡು ತುಂಬಿದ ಹೊಳೆಯಲ್ಲಿ ಈಜಿ ಮರಾತೂರು, ಕೈಲ್ಕೆರೆ, ಕೊರಾಳವೆಂಬ ಹೊಳೆಯ ಆಚೆ ದಡದ ಊರುಗಳಲ್ಲಿ ಯಾರ್‍ಯಾರಿಗೋ ಸೇರಿದ ಬಯಲುಗಳಿಗೆ ನುಗ್ಗಿ ದಾಂದಲೆಮಾಡಿ ಕೇಂದ್ರೀಯ ಕಾರಾಗೃಹಕ್ಕೆ ರವಾನಿಸಲ್ಪಡುವಂತೆ ದೊಡ್ಡಿಗೆ ಕಟ್ಟಲ್ಪಡುತ್ತಿದ್ದವು. ಇನ್ನು ಕಡಗಂಟಿಗಳೆನಿಸಿದ ಎತ್ತು-ದನಗಳದ್ದು ಬೇರೆಯೇ ಕಥೆ. ಇವು ಬಾಲವನ್ನು ಸುರುಳಿಸುತ್ತಿ ಓಡಲು ಹಿಡಿದರೆ ಹಿಡಿಯುವುದು ಹಟ್ಟಿಯ ದಾರಿಯನ್ನಲ್ಲ. ಅವುಗಳ ಸ್ವ್ವಾತಂತ್ರ್ಯಘೋಷಣೆಗೆ ಯಾವುದು ಸರಿಯೋ ಆ ದಾರಿಯನ್ನು. ಇವುಗಳು ಹೀಗೆ ಕಂಡ ದಾರಿಹಿಡಿದು ಹಟ್ಟಿಗೆ ನೇರವಾಗಿ ಬಾರದೇ, ಯಾರದೋ ಗದ್ದೆಗಳಿಗೆ ನುಗ್ಗಿ ಮನೆಮಂದಿಗೆ ಬೈಗುಳದ ಉಡುಗೊರೆ ತರುತ್ತಿದ್ದವು. ನಮಗೋ ಮೂರ್ಖಾಸಿನ ಬೆಲೆಯಿರದ ದನಕಾಯಲೂ ಲಾಯಕ್ಕಲ್ಲದ ದುಸ್ಥಿತಿ ತರುವ ಜೊತೆಗೆ ಬಾಸುಂಡೆ ಬರುವಂತೆ ಹೊಡೆತ ಹಾಕಿಸುತ್ತಿದ್ದವು. ಮನೆಮಂದಿಯಿಂದಲೂ ಬೈಗುಳ, ಪಕ್ಕದ ಮನೆಯವರಿಂದಲೂ ಅದೇ ಆರತಿ. ಯಾತಕ್ಕೂ ಪ್ರಯೋಜನಕ್ಕಿರದವ ಎಂಬರ್ಥದ “ಎರ್‍ಡ್‌ಬಾಲ್ ಗಂಟೀನ್ನೂ ಮೇಯಿಸಲಾರ”ದವ ಎನ್ನುವ ಹೆತ್ತವರ ಹತಾಶೆಯ ಮಾತು ಬೇರೆ. ಪರೀಕ್ಷಾ ಫಲಿತಾಂಶದಲ್ಲಿ ಫೇಲಾಗುವುದಾದರೂ ಬೇಕು, ಆದರೆ ಈ ಗಂಟಿಮೇಯಿಸಲೂ ಆಗದ ನಾಪಾಸು ಸರ್ಟಿಫಿಕೇಟು ಖಂಡಿತಾ ಬೇಡ. ಅವುಗಳ ನಿಯಮೋಲ್ಲಂಘನೆ ಗದ್ದೆಗೆ ದಾಳಿಯಿಟ್ಟು ಬೈಯಿಸುವುದಕ್ಕಷ್ಟೇ ಸೀಮಿತವಾಗುವುದಿಲ್ಲ. ಕೆಲವಂತೂ ಉಗ್ರಪ್ರತಾಪಿಗಳು ಬೇರೆ. ಕಂಡವರನ್ನಷ್ಟೇ ಅಲ್ಲ ಮನೆಮಂದಿಗೂ ರಿಯಾಯಿತಿ ಕೊಡದೆ ಕೋಡುಮಂಡೆ ಬಳಸಿ ಎತ್ತ್ಹಾಕಿಕೊಂಡು ಪೌರುಷ ತೋರುತ್ತಿದ್ದವು.

ಇಂತಹ ಹಸು-ಕರು-ಎಮ್ಮೆಗಳನ್ನು ಬೇಸಿಗೆಯ ಕಾಲದಲ್ಲಿ ಬಯಲಿನಲ್ಲಿ ಬಿಟ್ಟುಕೊಂಡು “ಅಕ್ಕಿಹುರಿದು” indian-cowತಿಂದು ಆಟವಾಡುವಾಗ ಒಂದು ತರದ ಫಜೀತಿಯಾದರೆ ಮಳೆಗಾಲದ ಕಥೆ ಬೇರೆಯದೇ. ಮಳೆಗಾಲದಲ್ಲಿ ಇವುಗಳ ಮೇವಿಗಾಗಿ ಬಯಲಿಗೆ ಎಬ್ಬುವಂತಿರಲಿಲ್ಲ. ಎಲ್ಲಾ ಗದ್ದೆಗಳು ನೇಜಿಗೊಂಡು ಸಾಗುವಳಿಗೆ ಒಳಪಟ್ಟಿರುತ್ತಿದ್ದುದರಿಂದ ಹುಲ್ಲಿನೊಂದಿಗೆ ಹಸಿರೆಲೆಗಳನ್ನು ಹೊಂದಿರುವ ಹಾಡಿ-ಗುಡ್ಡೆಗಳೆ ಅವಗಳ ಆಡುಂಬೊಲವಾಗುತ್ತಿತ್ತು. ಹಾಡಿ-ಗುಡ್ಡೆಗಳಲ್ಲಿ ಮೇಯಿಸುವಾಗ ನಮಗೆ ಆಟದ ಬಯಲು ಸಿಕ್ಕುವುದಿಲ್ಲ. ಆದರೆ ಆಟ ನಿಲ್ಲಬೇಕಲ್ಲ. ಚಿಕ್ಕಚಿಕ್ಕ ಕಲ್ಲುಗಳನ್ನು ಬಳಸಿ ಹೆಮ್ಮಕ್ಕಳ ಜೊತೆಗೆ ಗುಡ್ನಾಡುತ್ತಿದ್ದೆವು. ನೆಲದ ಕಿರುಜಾಗಗಳನ್ನೇ ಬಳಸಿ ಜುಬಲಿ(ಬೆಟ್ಟಾ) ಆಡುತ್ತಿದ್ದೆವು.ನೆಲದಲ್ಲಿಯೇ ಚನ್ನೆಮನೆಗಳನ್ನು ಮಾಡಿಕೊಂಡು ಚನ್ನೆಯಾಟಗಳನ್ನಾಡುತಿದ್ದೆವು. ಇದರ ಜೊತೆಗೆ ಬಹುವಿಧದ ಕಾಡುಹಣ್ಣುಗಳನ್ನು ಒಟ್ಹಾಕಿಕೊಂಡು ತಿನ್ನುತಿದ್ದುದು ಮಾಮೂಲಿಯಾಗಿತ್ತು. ನಮ್ಮ ಈ ಸುಖಕ್ಕಾಗಿ ಆಟ ಮತ್ತು ಹಣ್ಣು ಹುಡುಕಾಟದಲ್ಲಿ ಬೀಳುವ ಹೊತ್ತಿನಲ್ಲಿಯೇ ನಮ್ಮ ಕಣ್‌ತಪ್ಪಿಸಿಕೊಳ್ಳುವ ಅವುಗಳ ಮರಾಣಿ೧ ಸದ್ದೂ ಕೇಳಿಸದಂತಾದಾಗ ನಾವು ಗಾಬರಿ ಬೀಳುತ್ತಿದ್ದೆವು. ಮನೆಗೆ ಹೋಗುವ ಮುನ್ನವಾದರೂ ಕಣ್ಣಿಗೆ ಬಿದ್ದರೆ ಸಾಕು ಎಂದು ಹೊಳೆಕಡು, ಯಾರ್‍ಯಾರದೋ ಗದ್ದೆಕಡುವುಗಳನ್ನು ಹುಡುಕಿ ಎಲ್ಲಿಯೂ ಕಾಣದಂತಾದಾಗ ಹರಕೆಯ ಮೊರೆಹೋಗುತ್ತಿದ್ದೆವು. ನಮಗೆ ಸುಲಭದಲ್ಲಿ ಸಾಧ್ಯವಾಗುತ್ತಿದ್ದುದು ಮತ್ತು ಗುಟ್ಟಾಗಿ ಮನೆಯವರ ನೆರವಿಲ್ಲದೆ ಗೇರುಬೀಜ ಮಾರಿದ ದುಡ್ಡಿನಲ್ಲಿಯೇ ಒಂದೆರಡು ಲಾಡು,ಜಿಲೇಬಿಗಳ ತ್ಯಾಗ ಮಾಡುವಷ್ಟಕ್ಕೇ ಪೂರೈಸಬಹುದಾಗಿದ್ದ ಹರಕೆಯೆಂದರೆ ಸ್ವಾಮಿಮನೆಯ ನಿಂಗಮ್ಮನಿಗೆ ಕಪ್ಪುಬಳೆ ಹಾಕುವುದು. ಇಲ್ಲಾ ಗಣಪತಿ ದೇವರ ಡಬ್ಬಿಗೆ ೨-೩ಪೈಸೆ ಕಾಣಿಕೆ ಹಾಕುವುದು. ಇನ್ನೂ ಸ್ವಲ್ಪ ಜಾಸ್ತಿ ಗಾಬರಿಯಾದರೆ ದುಬಾರಿ ಹರಕೆಯಾಗಿ ಗಣಪತಿಗೆ ಒಂದು ರೂಪಾಯಿ ಪಂಜಕಜ್ಜಾಯ ಮಾಡಿಸುವುದು. ಈ ಹರಕೆಗಳಿಗೂ ಕೆಲವೊಮ್ಮೆ ದನಗಳು ದಕ್ಕದೇ ಇದ್ದಾಗ ಇದ್ದೇ ಇದೆ ದೇವರಿಗೆ ಹಿಡಿಶಾಪಹಾಕುವುದು ಮತ್ತು ಕೊನೆಗೆ ಮನೆಯಲ್ಲಿ ಬೆನ್ನಿಗೆ ಎಣ್ಣೆ ಉಜ್ಜಿಸಿಕೊಳ್ಳುವುದು. ಇವೆಲ್ಲವೂ ಅಂದಿನ ಹಸಿರಾದ ನೆನಪುಗಳು. ಈ ಗಂಟಿಕರುಗಳನ್ನು ಮೇಯಿಸುತ್ತಾ, ಮಳೆ ಬಂದಾಗ ಕಂಬ್ಳಿಕುಪ್ಪೆ ಹಾಕಿಕೊಂಡು ಓಡಾಡುವ ಸಂಕಟ ಪರಿಹಾರವಾಗಲಿ ಎಂಬ ಆಶಯದಿಂದ,-“ಹಾರ್‍ಮಳೆ ಬೋರ್‍ಮಳೆ ಬೋಳ್‌ಗುಡ್ಡೆಗ್ ನಾ ಕೂತಿದಿ ಹಾರಿಯೇ……..ಹೋಗ್, ಕೂರಿಯೇ……….ಬಾ” ಎಂಬಂತೆ ಮಳೆದೂರಾಗಬಯಸಿ ಹಾಡುತ್ತಿದ್ದ ಅಹವಾಲಿನ ಸೊಲ್ಲಾಗಲೀ; ತನ್ನ ಬಾಯಿಪತ್ತಿ(ಆಹಾರ)ಯನ್ನು ಬಯಸಿ

ಹನಿಹನಿ ಮಳಿ ಬರುತಿರಬೇಕು
ವಾಂಟಿಕೊಳಾಲ್ ಉರಿಯಲೆಬೇಕು
ಗಂಟಿಕರಾಳ್ ಮೇಯ್ತಿರಬೇಕು
ನನಗೊಂದ್ ಬಡ್ಕಟಿ ಸಿಕ್ಕಲೆಬೇಕು

ಎಂಬಂತೆ ಹುಲಿರಾಯ ಹಾಡಿಕೊಳ್ಳುವ ಸೊಲ್ಲೆಂಬಂತೆ ಗುನುಗುಡುತ್ತಿದ್ದ ಸೊಲ್ಲುಗಳಾಗಲೀ ನನ್ನ ನೆನಪಿನ ಬುತ್ತಿಯಲ್ಲಿ ಖಾಲಿಯಾಗದೇ ಉಳಿದಿವೆ. ಈ ಹಾಡುಗಳು, ಅವುಗಳ ಕೊರಳಿಗೆ ಕಟ್ಟುವ ಮರಾಣಿಗಳ ಸದ್ದು ಹಾಗೂ ದನಕಾಯುತ್ತಾ ನಾವು ಕೇಳಿಸಿಕೊಳ್ಳುತ್ತಿದ್ದ ಕಥೆಗಳು, ಮೆಂದು ಹೊಟ್ಟೆ ತುಂಬಿಸಿಕೊಂಡ ಹಸು-ಎಮ್ಮೆಗಳ ಹೊಟ್ಟೆ ಮುಟ್ಟಿ ಅನುಭವಿಸುತ್ತಿದ್ದ ಖುಷಿಗಳು ಎಲ್ಲವೂ ನೆನಪಿನ ಬುತ್ತಿಯ ಸರಕುಗಳೇ. ಯಾವ್ಯಾವುದೋ ಗಿಡದ ಎಲೆ,ಬೇರುಗಳನ್ನು ಕಿತ್ತು ಅವುಗಳ ಬಾಯಿಗಿಕ್ಕಿ ಪ್ರೀತಿತೋರಿಸುತ್ತಲೇ ನಮ್ಮ ದನಿಕೇಳಿದ ತಕ್ಷಣ ಹತ್ತಿರಕ್ಕೆ ಬರುವಂತೆ ಮಾಡಿಕೊಳ್ಳುತ್ತಿದ್ದ ವಶೀಕರಣದ ತಂತ್ರಗಳು, ಮೈಮೇಲಿನ ಉಣ್ಣೆ ಎತ್ತಿ, ಮೈತೊಳೆದು ತೋರುತ್ತಿದ್ದ ಆತ್ಮೀಯತೆಗೆ ನಮ್ಮ ಕೈಮೈಗಳನ್ನು ನೆಕ್ಕಿ ಅವು ನೀಡುತ್ತಿದ್ದ ಕಚಗುಳಿಯ ವಿಶಿಷ್ಠ ಅನುಭವ ಕಳೆದು ಹೋದ ಮಾಯಾಲೋಕವೊಂದರಂತೆ ಭಾಸವಾಗುತ್ತದೆ. ಈ ಆತ್ಮೀಯತೆಯಿದ್ದೂ ಅವುಗಳನ್ನು ನಂಬಿ ನಿರುಮ್ಮಳವಾಗಿ ಕೂರುವಂತಿರಲಿಲ್ಲ. ನಂಬಿ ಕೂತಲ್ಲಿ ಪ್ರಮಾಣಪತ್ರಗಳು ಸಿದ್ಧಗೊಳ್ಳುತ್ತಿದ್ದುವು!

ಹಾಗಾಗಿ ಕಾಳಿಂಗನೆಂಬ ಗೊಲ್ಲನ ಹಸುಗಳಿಗಿದ್ದ ಸಿಪಾಯಿ ಶಿಸ್ತಿರದ ನಮ್ಮ ಹಸುಗಳ ಲೋಕವೇ ಒಂದಿದೆ ಎನಿಸುತ್ತದೆ. ಈ ಲೋಕದೊಳಗಡೆ ಹಸು ಎಂದಾಗಲೇ ನನಗೆ ಹಸಿವು-ಹಸುವುಗಳೆರಡನ್ನೂ ಕೇಳಿದೆಂತೆನಿಸುತ್ತದೆ. ನನಗನಿಸುವ ಹಾಗೆ ಈ ಎರಡರ ಅನುಬಂಧವಿಲ್ಲದಿದ್ದಲ್ಲಿ ನನ್ನವರ ಹಟ್ಟಿಗಳಿಗೆ ಅರ್ಥವೇ ಇರಲಿಲ್ಲ. ಹಟ್ಟಿ ಮತ್ತು ಹೊಟ್ಟೆಯ ನಡುವೆ ಬಹಳ ಅಂತರವೇನೂ ಇಲ್ಲ. ಹಾಗಾಗಿಯೇ ಏನೋ ಈ ಹಟ್ಟಿಗಳು ಇರುತ್ತಿದ್ದುದೇ ಮನೆಗೆ ತಾಗಿಕೊಂಡು. ನೆಲದ ಜತೆಗೆ ಗುದ್ದಾಡುತ್ತ ಬದುಕನ್ನು ಕಟ್ಟಿಕೊಳ್ಳುವ ನನ್ನವರ ಲೋಕದ (ಉದ್ಯೋಗದ ಹಸಿವು, ಹೊಟ್ಟೆಯ ಹಸಿವು, ಬೆಳೆಯ ಹಸಿವು, ಬಂಡವಾಳದ ಹಸಿವುಗಳೆಂಬ) ಹಸಿವಿನ ಹಲವು ಬಗೆಗಳಿಗೆ ಸುತ್ತಿಕೊಂಡಿರುವ ಹಸು ಕೇವಲ ಒಂದು ಸಂಗತಿಯಲ್ಲ, ಬದಲಾಗಿ ಬದುಕಿನ ಬಹುಮುಖ್ಯ ಭಾಗ. ಹುಲ್ಲು ಮಾಡುಗಳಿಗೋ, ಮರದಡಿಗೋ ಇರುತ್ತಿದ್ದ ದೈವದ ಹೆಸರಿನ ಕಲ್ಲುಚಕ್ಕೆ/ಮುಂಡಿಗೆ/ಉರಗಳ ಎದುರು ಹರಕೆಯ ಸರಕುಗಳಾಗಿ ಪ್ರತಿಬಾರಿಯ ತಿಂಗೋಡು ಪೂಜೆಗಳಲ್ಲಿ ಇರಿಸುತ್ತಿದ್ದುದು ಚಿನ್ನ ಬೆಳ್ಳಿಯ ಕಿರೀಟಗಳನ್ನಾಗಿರಲಿಲ್ಲ. ಬದಲಾಗಿ ಕಂಚು, ಹಿತ್ತಾಳೆಯಿಂದ ಮಾಡಿದ ಈ ಹಸು,ಕೋಣ,ಕರುಗಳ ರೂಹುಗಳನ್ನ! ನಾಕ್ಕಾಲ್‌ಮುಂಬು ಆಗಿ ಪರಿಭಾವಿತವಾಗಿದ್ದ ಈ ಜಾನುವಾರುಗಳನ್ನ ಹುಲಿಗಳಿಂದ, ಕಾಯಿಲೆಗಳಿಂದ ಕಾಪಾಡಿಕೊಟ್ಟ ದೈವಕ್ಕೆ ನೀಡಿದ ಕುರುಹುಗಳಿವು. ಹಾಗೆಯೇ ಕಟ್ಟೆವಸಂತ ಮಾಡಿ ಕಾಳಭೈರವನನ್ನು ಕೂಗಿ ಕರೆದು ಹರಕೆಯ ಹುಂಡಿಗಳಿಗೆ ಕಾಣಿಕೆ ಹಾಕಿ “ಪಾವುತೀರ್ಥ, ಪಾವುಕಡ್ಲೆಯನ್ನ ಮಂದಾಲಗಿರಿಗೆ ಸೇರಿಸಿಕೊಂಡು ಗಂಟಿಕರು, ಎತ್ತು-ಬೀಜ, ಮಕ್ಕಳು ಮರಿಗಳನ್ನು ತಲೆಕಾದು, ಹೋದಲ್ಲಿ ಬಂದಲ್ಲಿ ಒಳ್ಳೇದು ಕೊಡು” ಎಂದು ಮಾಡುತ್ತಿದ್ದ ಏಕಮುಖೀ ಕೇಳಿಕೆಯಲ್ಲೂ ಜಾಗಪಡೆಯುತ್ತಿದ್ದದ್ದು ಈ ಎತ್ತು ಕರುಗಳೇ. ಜೀವನ ಭದ್ರತೆಯ ಸಾಧನವಾಗಿ ನೇಲ್ (ನೇಗಿಲು), ನೊಗ, ಎತ್ತು, ಬೀಜಗಳನ್ನು ಸಮಾನವಾಗಿ ಗೌರವಿಸುವ ಕೃಷಿಲೋಕ ನೇಗಿಲು-ನೊಗಗಳಿಗೆ ಕದಿರುಕಟ್ಟಿ, ಬೀಜಕ್ಕೆ ಹತ್ರಾವದಿಯ ಪೂಜೆಮಾಡಿ, ಎತ್ತು ಕೋಣಗಳಿಗೆ ಆರ್‍ಹೂಡಿ ಬರುವ ದಿನ ಕಾಲು ತೊಳೆದು, ಕರು ದನ-ಎತ್ತುಗಳಿಗೆ ದೀಪಾವಳಿಯ ದೀಪತೋರಿಸಿ, ಕೊಡಿಹಬ್ಬದಂದು ಹುಂಡುಹಾಕಿ, ರೊಟ್ಟಿ ಕಟ್ಟಿ – ಹೀಗೆ ಎಲ್ಲವನ್ನೂ ಪೂಜೆಯ ವರ್ತುಲದೊಳಗೆ ತಂದು ಪೂಜಿಸಿ ಗೌರವಿಸುವ ಜತೆಗೆ ಬಳಕೆಯ ಸಾಧನ ಪಳೆಯುಳಿಕೆಯಾದಾಗ ಸಂಗ್ರಹಾಲಯದಲ್ಲಿರಿಸುವುದಿಲ್ಲ. “ಮ್ಯೂಸಿಯಂ ಸಂಸ್ಕೃತಿ”ಯ ಮಾದರಿಯದಲ್ಲದ ಈ “ಪ್ರೀತಿಯ” ಲೌಖಿಕ ಜಗತ್ತು ನಿರುಪಯುಕ್ತ ನೇಗಿಲನ್ನು ಬೂದುನೀರ ಒಲೆಗೆ ಹಾಕಿ ಎಣ್ಣೆನೀರ ಸ್ನಾನದ ಸರಕಾಗಿಸಬಲ್ಲದು. ಹಾಗೆಯೇ ಅನುಪಯುಕ್ತ ಸರಕಾದ ಹಸು-ಕರುಗಳನ್ನು ಅಷ್ಟೇ ಸಹಜವಾಗಿ ವಿಕ್ರಯಮಾಡಿ ಹೊಸ ಹಸು ಕರುಗಳ ವರ್ತುಲವನ್ನು ಮುಂದುವರೆಸಬಲ್ಲದು. ಕುಟುಂಬಯೋಜನೆಯನ್ನು ದಿಕ್ಕರಿಸಿಯೂ, ಹಟ್ಟಿಯ ಗಾತ್ರವನ್ನು ವಿಸ್ತರಿಸದೆ ಅದೇ ಅವಕಾಶದಲ್ಲಿ ಪ್ರೀತಿಯನ್ನು ಧಾರೆಯೆರೆದು, ಹಸುವನ್ನು ಸಾಕಿ ಹಸಿವಿಂಗಿಸಿಕೊಳ್ಳಬೇಕಲ್ಲವೇ?. ಇಂತಹ ಹಸು ಕೋಣಗಳ ಮೈತೊಳೆದು ಕೋಡ ಇಡುಕಿನಲ್ಲಿರುವ ಕೊಳೆ ತೆಗೆಯಲು ಬೀಳು/ಹುಲ್ಲಿನ ಕೋಡಶೆಳೆ೫ಹಾಕಿ ಸ್ವಚ್ಛಗೊಳಿಸಿ, ಮೈಮೇಲೆ, ಬಾಲದ ಗೊಂಚಿನಲ್ಲಿ ಮೆತ್ತಿಕೊಂಡಿರುತ್ತಿದ್ದ ಒಣಗು(ಉಣ್ಣೆ), ಚಟ್ಟ್‌ಒಣಗು, ಹೇನು-ಚೀರುಗಳನ್ನು ಎಳೆದು ತೆಗೆದು ಅವುಗಳ ಜತೆಗೇ ಹೊಳೆಯಲ್ಲಿ ಮಿಂದು ಬರುತ್ತಿದ್ದ ನಮ್ಮೊಳಗೆ ಆ ಹಸು-ಹಸಿವುಗಳೆರಡೂ ನೆನಪಾಗಿ ಕೂತುಬಿಟ್ಟಿವೆ.

ಹಟ್ಟಿಯಣೆಯಲ್ಲಿ ಹುಟ್ಟಿ ಬಹುಕಾಲದ ಬದುಕನ್ನು ಅದರ ಸುತ್ತಲೇ ಕಳೆದು ಅಲ್ಲಿಯೇ ಬದುಕಿರುವಲ್ಲಿಯವೆರೆಗೆ ನಮ್ಮದೇ ಎಮ್ಮೆ,ದನಗಳು ಕರೆದ ಹೊಚ್ಚ ಹೊಸ ಅಪ್ಪಟ ಹಾಲನ್ನು ಕುಡಿಯುವ ಅವಕಾಶವಿತ್ತು. ಆದರೆ ನಗರ ಸೇರಿಕೊಂಡ ಮೇಲೆ ದೇವಲೋಕದ ಹಸು ನಂದಿನಿಯ ಹೆಸರು ಹೊತ್ತ ಲಕೋಟೆಯಿಂದ ಸೋರುವುದನ್ನೇ ಹಾಲು ಅಂತ ಕುಡಿಯಬೇಕಾಗಿದೆ. ಬೆಳ್ಳಂಬೆಳಿಗ್ಗೆ ಓದೋ ಪೇಪರ್ ಜೊತೆಗೆ ಮನೆಯಂಗಣಕ್ಕೆ ಬಂದು ಬೀಳುವ ಹಾಲಿನ ಲಕೋಟೆಯಲ್ಲಿ ಹಾಲೇನೋ ಇರುತ್ತದೆ. ಆದರೆ ಅದರ ಜೊತೆಗೆ ನನ್ನ ಕೆಂಪಿ,ಚಿಕ್ಕು, ಬೆಳ್ಳಿಯರ ಕೆಚ್ಚಲ ವಾಸನೆಯಿಲ್ಲ. ಹೋಗಲಿ ಕನಿಷ್ಟ ಒಂದು ಎಮ್ಮೆಯ ಚಿತ್ರವಾದರೂ ಇತ್ತೇ ಅಂದರೆ ಅದೂ ಇಲ್ಲ. ಇರುವುದು ದೇವಲೋಕದ ನಂದಿನಿಯ ಹೆಸರಲ್ಲಿ ಹೈಬ್ರೀಡ್ ಹಸುವೊಂದರ ಚಿತ್ರ. ಹಾಲು ಕುಡಿಯುವುದು ಬೇರೆ, ಹಾಲು ಕೊಡುವ ಹಸುಗಳೊಂದಿಗೆ ಬದುಕುವುದು ಬೇರೆ. ನನ್ನ ಮನೆಯೊಳಗೆ ನಂದಿನಿಯ ಪ್ಯಾಕೇಟ್ ಬಂದು ಬಿದ್ದಾಗ ಆ ಹೈಬ್ರೀಡ್ ತಳಿಯ ಹಸುವಿನ ಚಿತ್ರಣ ಕಂಡಾಗಲೆಲ್ಲಾ ನನ್ನೊಳಗೆ ಅತೀವ ಸಂಕಟವಾಗುವುದುಂಟು. ಉದ್ಯೋಗದ ಬೇಟೆಯಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತಾ ಊರು ಬಿಟ್ಟವರು ನಾವುಗಳು. ಹೀಗಿದ್ದು ನಾನು ಬದುಕಿದ ಮನೆ ಇರುವಲ್ಲಿಯೇ ಇದೆ. ಹಸು ಕಟ್ಟುತ್ತಿದ್ದ ಹಟ್ಟಿಯೂ ಇದೆ. ಆದರೆ ಈಗ ಆ ಹಟ್ಟಿಯಲ್ಲಿ ನನ್ನ ಕೆಂಪಿ, ಬುಡ್ಡಿ, ಕರಿಯಮ್ಮನಾಗಲಿ, ಕರಿಯ, ನೀಲ ಕೆಂಪಣ್ಣ್ಣನಾಗಲೀ, ಚಿಕ್ಕು, ಬೆಳ್ಳಿ ಎಮ್ಮೆಯಾಗಲೀ, ಬೆಳ್ಳು, ಕಾಳುಗಳೆಂಬ ದೀರ್ಘಕಾಯದ ಕೋಣಗಳಾಗಲೀ ಇಲ್ಲದಂತಾಗಿ ಖಾಲಿಯಂತಿದೆ. ಈಗ ಅಲ್ಲಿರುವುದೂ ನಂದಿನಿ ಪ್ಯಾಕೇಟ್ ಮೇಲೆ ಮುದ್ರಿತವಾದ kamadenu(ಆದರೆ ಜೀವಂತವಾದ) ಬೂಸಾ ತಿಂದು ಹಾಲು ಕರೆಯುವ ಯಂತ್ರ! ಬೆದೆಗೆ ಬಂದಾಗ ಪಶುವೈದ್ಯನ ಸೂಜಿಯ ಮೂಲಕ ಗರ್ಭಕಟ್ಟುವ, ಗಂಡುಕರುಗಳಾದರೆ ಹಾಲು ಕೊಡದೇ ಕೊಲ್ಲಲ್ಪಡುವ, ಏನೇನೊ ರೋಗದ ರೂಢಿಯಲ್ಲಿ ಮತ್ತೆ ಮತ್ತೆ ವ್ಯಾಕ್ಷಿನ್ ಪಡೆಯುವ ಈ ಪರದೇಶಿ ಹಸುವಿನೆದುರು ದೀಪಾವಳಿಯ ರಾತ್ರಿ ಗದ್ದೆಗೆ ಹಿಟ್ಟು ಬಡಿಸಿ ಬಂದ ಮೇಲೆ “ಆಸಾಡಿ ಹಬ್ಬದ ಆಸಿ ಕಂಡೆ, ದೀಪೋಳಿ ಹಬ್ಬದ ದೀಪ ಕಂಡೆ, ಮುಂದ್ ಬತ್ತ್ ಕೊಡಿ ಕಾಣ್” ಎಂದು ಹಾಡು ಹಾಡುತ್ತಾ ಹಿಟ್ಟು ನೀಡುವ ಅಮ್ಮ ಬದಲಾಗಲಿಲ್ಲ. ಅಮ್ಮನ ಸಿಕ್ಕ (ಮಜ್ಜಿಗೆ ತೂಗಿಡುವ ಸಾಧನ), ಕಿರ್‍ಗಾಲು, ಕಡಾಲು (ಕಡೆಗೋಲು)ಗಳು ಅಟ್ಟ ಹತ್ತಿವೆ/ಕಣ್ಮರೆಯಾಗಿವೆ. ಅಮ್ಮನ ಹಾಗೆಯೇ ಅಚ್ಚೊತ್ತಿ ನಿಂತ ನನ್ನ ಒಟ್ಟು ಹಸು ಕರುಗಳೆಂಬ ಸಂಗತಿಗಳ ಜತೆಗಿನ ಬಾಲ್ಯ ನನ್ನವರ ಹಸುವಿನ ಲೋಕದ ಪರಿಚಿತ ಮುಖವಾಗಿಯೇ ಉಳಿದುಕೊಂಡಿದೆ. ಹಾಗೆಯೇ ಇವತ್ತು ನಮ್ಮ ಹಟ್ಟಿಗಳಲ್ಲಿ ಅವತರಿಸಿರುವ ದೇವಲೋಕದ ನಂದಿನಿಯೆಂಬ ಹಾಲುಯಂತ್ರಗಳು ಅವುಗಳ ಗಂಡುಕರುಗಳ ಉದ್ದೇಶಿತ ಕೊಲೆಗಳು ನಮ್ಮ ಹಸಿಯಾದ ಹಸಿವೆಯ ಭಾಗವೇ ಆಗಿವೆ. ಹಾಗಾಗಿ ನಮ್ಮ ಪಾಲಿಗೆ ಹಸುವೆಂದರೆ ಕ್ಯಾಲೆಂಡರ್‌ಗಳಲ್ಲಿಯೋ, ವರ್ಣಚಿತ್ರಗಳಲ್ಲಿಯೋ ಮಮತೆಯ ಪೋಸ್‌ನಲ್ಲಿ ಅಂಟಿಸಲ್ಪಟ್ಟ ನಾಲ್ಕು ಕಾಲಿನ ಹುಲ್ಲು ತಿನ್ನುವ ದೇವರಲ್ಲ್ಲ. ಅಥವಾ ಹಸುಸಾಕದೇ ಪ್ಯಾಕೇಟ್ ಹಾಲು ಕುಡಿಯುವವರು ಕಲ್ಪಿಸಿಕೊಟ್ಟಿರುವ ಕಾಮಧೇನುವೊ, ಪುಣ್ಯಕೋಟಿಯೊ ಅಲ್ಲ. ಅದೊಂದು ಆಪ್ತವಾದ ಜೀವ. ಪ್ರೀತಿಗೆ ಕಾರಣವಾಗುತ್ತಾ ಬದುಕಿಗೆ ಆಧಾರವಾಗಬೇಕೆಂದು ಸಹಜ ಮನುಷ್ಯರಾದ ರೈತರು, ದನಗಾಹಿಗಳು ಇಲ್ಲಿಯವರೆಗೆ ಮತ್ತು ಇನ್ನು ಮುಂದು ಕೂಡ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರತ್ಯೇಕವಾದ ಲೋಕ. ಆ ಲೋಕದೊಳಗೆ ಪ್ರವೇಶ ಕಾಣದೆ ಮತ್ತು ಪ್ರವೇಶ ಬಯಸದ ಶುಭ್ರವಸನ ದಾರಿಗಳು ಭಾವಿಸುವಂತೆ ಒಂದೇ ಏಟಿಗೆ ಆರಾಧನೆ ಮಾಡಿಯೋ, ಪೂಜ್ಯತೆಯ ಸರಕಾಗಿ ಮ್ಯೂಸಿಯಂನಲ್ಲಿಟ್ಟೋ ಕೂರುವ ಜಗತ್ತಲ್ಲ ಅದು. ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳಲಾರದೆ ಬಾಳಿನ ಬವಣೆಯಿಂದ ಬೇಯುವ ನೈಜ ಅನುಭವದ ಆ ಲೋಕದಲ್ಲಿ ಭಾವನೆಯಿದೆ, ಬದುಕಿದೆ, ವ್ಯವಹಾರವಿದೆ, ಬಳಕೆಯಿದೆ. ಇಂತಹ ಸಂಕೀರ್ಣ ಆಯಾಮದಲ್ಲಿ ನಿಜಗೊಳ್ಳುವ ಹಸುವಿನ ಲೋಕವನ್ನು ಯಾವುದೋ ಒಂದು ಚಿತ್ರಕ್ಕ್ಕೆ/ಪ್ರತಿಮೆಗೆ ಜೋತುಹಾಕಲಾಗದು. ಕಾಳಿಂಗನೆಂಬ ಗೊಲ್ಲನ ಲೋಕದಲ್ಲಿಯ ಗಂಗೆ, ಗೌರಿ, ತುಂಗೆಯರೂ ಅಲ್ಲಿದ್ದಾರೆ. ಹಾಗೆಯೇ (ಗೊಡ್ಡು) ಅಹಲ್ಯಾನಂತವರೂ ಅಲ್ಲಿದ್ದಾರೆ. ಅಂತಹ ಲೋಕದಲ್ಲಿ ದನ ಕಟ್ಟುವ ಹಟ್ಟಿಗಳು ದೇವಾಲಯವೂ ಆಗುತ್ತವೆ.(ತಾತ್ಕಾಲಿಕವಾಗಿ) ಕೆಲಹೊತ್ತಿನ ನಿಲ್ದಾಣಗಳೂ ಆಗುತ್ತವೆ. ಹಾಗೆಯೇ ಜೀತದ ಮನೆಯೂ ಆಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಹಟ್ಟಿಯಲ್ಲಿರುವುದು “ಕೊರಳಿಗೆ ಕಟ್ಟುವ ಹಗ್ಗಗಳೇ ವಿನಃ ಮಲ್ಲಿಗೆಯ ದಂಡೆಯಲ್ಲ.”

ಹಸು, ಎಮ್ಮೆ, ಎತ್ತುಗಳ ಕೊರಳಿಗೆ ಹಗ್ಗ ಕಟ್ಟಿ, ಬೆನ್ನು ಸವರಿ, ಸರಿಯೆನಿಸಿದಾಗ ಬಾಸುಂಡೆ ಬರುವಂತೆ ಬಾರಿಸಿ, ಮಾನ ತೆಗೆಯದಂತೆ ನಿಯಂತ್ರಿಸಲು ಒದ್ದಾಡಿ, ಮಳೆಗಾಲದ ಉಳುಮೆಗೆ ಜೋಡಿಲ್ಲದವರ ಪಾಡನ್ನು ಕಂಡು ಅನುಭವಿಸಿದ ನನಗೆ ಇತ್ತೀಚಿಗಿನ ದಿನಗಳಲ್ಲಿ ಅವುಗಳನ್ನು ಸಾಕುವುದೇ ಒಂದು ಶಿಕ್ಷೆಯಾಗುತ್ತಿರುವುದು ಆತಂಕದಾಯಕವೆನಿಸುತ್ತಿದೆ. ಹಿಂದೆಂದೂ ಕಂಡುಕೇಳರಿಯದ ಹಾಗೆ ದಿಡೀರ್ ಆಗಿ ಗೋವಿನ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿರುವ ಈ ಗಳಿಗೆಯಲ್ಲಿ ಅದೊಂದು ಜೀವವೆಂಬುದಕ್ಕಿಂತ ಹೆಚ್ಚಾಗಿ ಲಾಂಛನವಾಗುತ್ತಿರುವುದು ಕಳವಳಕಾರಿ ಸಂಗತಿ. ಹಸುವೆಂಬುದನ್ನು ಒಂದು ಏಕರೂಪಿ ಅಚ್ಚಿನಲ್ಲಿ ನಿರೂಪಿಸುತ್ತಿರುವ ಈ ಹೊತ್ತಿನಲ್ಲಿ ನಾನು ಕಂಡ “ಹಸುವಿನ ಲೋಕ”, ಅದರ ಪಾಡು, ಅನಿವಾರ್ಯತೆಗಳನ್ನು ಈ ಮೂಲಕ ಹಂಚಿಕೊಂಡು ಹಗುರಾಗ ಬಯಸುತ್ತೇನೆ.

(ಮುಂದುವರೆಯುತ್ತದೆ…)

ಏಕಾಂತ ದೀಪದ ಬಿಸಿ ಮತ್ತು ಬೆಳಕು


– ಡಾ.ಎಸ್.ಬಿ. ಜೋಗುರ


 

ಇಂದಿನ ಸಾಹಿತ್ಯಕ ಸಂದರ್ಭ ಬಿಕ್ಕಟ್ಟುಗಳ, ತಲ್ಲಣಗಳ ಸಂದರ್ಭ. ಎಲ್ಲ ಬಗೆಯ ಸಾಂಸ್ಕೃತಿಕ ಧಾಳಿಗಳ ನಡುವೆ ನಿರುಮ್ಮಳನಾಗಿ ಕಾವ್ಯ ಬರೆಯುವದು ಇನ್ನೂ ದುಸ್ತರ. ಬರವಣಿಗೆಗೆ ಅಣಿಮಾಡಿಸುವ ಯಾವ ಆಹ್ಲಾದಕರ ಪ್ರಸಂಗಗಳೂ ನಮ್ಮ ಸುತ್ತ ಮುತ್ತ ಸುಳಿಯುವದಿಲ್ಲ. ಲಕ್ಕೂರ ಆನಂದ ಅವರ ಕವಿತೆಗಳಿಗೂ ಈ ಬಗೆಯ ಸಂಕೀರ್ಣತೆಯ ಕಿರಿಕಿರಿ ಇದ್ದೇ ಇದೆ. ಇಲ್ಲದಿರೆ ಉರಿವ ಏಕಾಂತ ದೀಪ ಬಿಸಿ ಮತ್ತು ಬೆಳಕು ಹರಿಸುವದಾದರೂ ಹೇಗೆ..? ಬೇರು ಕಿತ್ತಿಕೊಂಡು ಬುಡಮೇಲಾಗುತ್ತಿರುವ ಮನುಷ್ಯ ಸಂಬಂಧಗಳು, ಆಗಾಧವಾದ ನಾಗರಿಕನೊಬ್ಬನ ಅನಾಗರಿಕ ಚಹರೆ, ಅಸಮಾನತೆಯ ಗೋಡೆಗಳು, ಜಾತೀಯತೆಯ ಜಡತ್ವ ಇನ್ನಷ್ಟು ಸೂಕ್ಷ್ಮ ಮತ್ತು ಗಾಢವಾಗುತ್ತಿರುವ ಸಂದರ್ಭದಲ್ಲಿ ಉರಿವ ಏಕಾಂತ ದೀಪದ ಕಾವು ಅನಿವಾರ್ಯ ಮತ್ತು ಸಹಜ. ಹಾಗೆಂದು ಕವಿಯೊಬ್ಬ ಬದುಕಿನ ಸಂದಿಗ್ದಗಳಿಗೆ ಬೆನ್ನು ತೋರದೇ ವಾಸ್ತವದೊಂದಿಗೆ ಮುಖಾಮುಖಿಯಾದಾಗ ಮಾತ್ರ ಹರಕತ್ತಾದ, ಬರಕತ್ತಾದ ಬರವಣಿಗೆಯನ್ನು ಮಾಡಲು ಸಾಧ್ಯ. ಲಕ್ಕೂರು ಆನಂದ ಅವರ ಕವಿತೆಯೊಳಗಿನ ಕಾವು ಮತ್ತು ನಕ್ಕವರ ತುಟಿಯ ಮೇಲೆಯೂ ತನ್ನ ಋಣವನರಿಸುವ ಹಕ್ಕುದಾರಿಕೆ ಅವಾಸ್ತವವಂತೂ ಅಲ್ಲ.

ಲಂಕೇಶರ ‘ಅವ್ವ’ ಕವಿತೆಯ ನಂತರ ಅವ್ವ ಹೆಸರಿನ ನೂರಾರು ಕವಿತೆಗಳು ಬಂದಿವೆ. ಕೆಲ ಕವಿತೆಗಳು ಲಂಕೇಶರ ಅವ್ವ ನ ಹತ್ತಿರವೂ ಹೋಗಿರುವದಿರಬಹುದು ಆದರೆ ಲಂಕೇಶರ ‘ಅವ್ವ’ಳನ್ನು ಮೀರಲಾಗಿಲ್ಲ. ಹಾಗೆಂದು ಮಿಕ್ಕವರ ಅವ್ವಂದಿರು ತೂಕ ಕಡಿಮೆಯಿದ್ದವರಲ್ಲ. ಲಕ್ಕೂರ ಆನಂದರ ‘ಅವ್ವ’, ಗಂಜಿಗಾಗಿ ಹುಚ್ಚಿಯಂತೆ ಒದ್ದಾಡಿದವಳು, ಹೊಲಗದ್ದೆಗಳ ನಡುವೆ ಶಿಲೆಯಾದವಳು, ಬೊಗಸೆ ನೀರು ಕುಡಿದರೆ ಜುಲ್ಮಾನೆ ಹಾಕುವವಳು, ನಾಲ್ಕಾಣೆ ಫ಼ೀಜು ಕೂಡಾ ಕಟ್ಟದ ಬಡ ತಾಯಿ… ಮನುಷ್ಯಳಲ್ಲದೇ ಮತ್ತೇನೂ ಆಗದ ನನ್ನವ್ವನ ಕುರಿತು ಹೇಳಬೇಕೆಂದರೆ ಈ ಭಾಷೆ, ಕಾವ್ಯ, ಸಾಕಾಗುವದಿಲ್ಲ. ಎಂದು ಕವಿ ಯಥಾರ್ಥವಾಗಿ ಉಚ್ಚರಿಸಿದರೂ ಅಲ್ಲೊಂದು ‘ಅವ್ವ’ತನದ ಮೌಲ್ಯವಿದೆ ಎನ್ನುವದನ್ನು ಮರೆಯಲಾದೀತೆ..?

‘ಒಂದು ಕಪ್ ಕಾಫಿ’ ಎಂಬ ಕವಿತೆಯಲ್ಲಿ ಮನುಷ್ಯ ಸಂಬಂಧಗಳು ಸ್ಥಾಪನೆಗೊಂಡು ಗಟ್ಟಿಗೊಳ್ಳುವ ಮೊದಲೇ ಹಳಸಬಹುದಾದlakkur-anand ಸಾಧ್ಯತೆಯನ್ನು ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ. ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ ದು:ಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ ಎನ್ನುವ ದುಗುಡವನ್ನು ಕವಿ ಅನಾವರಣಗೊಳಿಸುವದಿದೆ. ‘ಕತ್ತೆ’ ಎನ್ನುವ ಇನ್ನೊಂದು ಕವಿತೆಯಲ್ಲಿ ‘ಶಾಂತಿದೂತರಿಗೆ ಸಮಾನರಾದ ವೈದ್ಯರೇ ದಯವಿಟ್ಟು ಬನ್ನಿ ನನಗೆ ಗರ್ಭಪಾತ ಮಾಡಿಸಿ ಅದು ಪವಿತ್ರವಾಗಿ ಹುಟ್ಟುವದಕ್ಕಿಂತ ಅಪವಿತ್ರವಾಗಿ ಹೊಟ್ಟೆಯಲ್ಲಿಯೇ ಸತ್ತು ಬಿಡಲಿ’ ಎಂದು ಹಂಬಲಿಸುವ, ತುಡಿಯುವ ಮನ:ಸ್ಥಿತಿಯ ಹಿಂದೆ ಸಾವಿರಾರು ವರ್ಷಗಳ ತುಳಿತದ ಹೆಜ್ಜೆಗಳ ಭಾರವಡಗಿದೆ. ‘ಇನ್ನು ದಾಹವಾಗುವದಿಲ್ಲ ಬಿಡು’ ಎಂಬ ಕವಿತೆಯಲ್ಲಿ ಜಾತಿಯ ಸ್ತರಗಳು ಹೇಗೆ ಅಂತರಗಳನ್ನು ನಿರ್ಮಿಸಿ, ನೈಸರ್ಗಿಕವಾಗಿರುವ ಅವಕಾಶಗಳನ್ನು ವಂಚಿಸಿವೆ ಎನ್ನುವದನ್ನು

ನೀನು ಮುಟ್ಟಿದರೆ ಸಾಕು
ಇಲ್ಲಿ ದಿನವೂ ಹರಿವ ನದಿಗಳು ಒಣಗಿಬಿಡುತ್ತವೆಯಂತೆ
ಹುಲುಸಾಗಿ ಬೆಳೆದ ನಿಂತ ಕಾಡುಗಳೂ
ಮರಭೂಮಿಗಳಾಗಿ ಬಿಡುತ್ತವಂತೆ

ಸಾಮಾಜಿಕ ಅಸಮಾನತೆಯನ್ನು ಪುರಷ್ಕರಿಸುತ್ತಾ, ಪೊರೆಯುತ್ತಾ ಅದನ್ನೇ ತಿಂದುಂಡು ತೇಗುವವರ ನಡುವೆ ನಿಂತು ಕವಿ ‘ಲೆಕ್ಕ ನೋಡಲು ಇನ್ನೂ ಯಾರೂ ಬರಲೇ ಇಲ್ಲ’ ಎಂದು ವಿಷಾದದಿಂದ ನುಡಿಯುತ್ತಾನೆ. ಪಾದಗಳೂರಲು ಸಿಗದೇ ಇರುವ ನೆಲದ ಬಗೆಗಿನ ಹುಡುಕಾಟದ ತವಕ ಇಲ್ಲಿದೆ. ಹಾಗೆಯೇ ಪಾದಗಳು ಕಾಲೂರಲು ಪಾಲು ಕೇಳುವದು ಸಾಮಾಜಿಕ ನ್ಯಾಯವೂ ಕೂಡಾ ಆಗಿದೆ. ‘ಏನು ಬೇಕಿದೆ’ ಎಂಬ ಇನ್ನೊಂದು ಕವಿತೆಯಲ್ಲಿ ಮನುಷ್ಯ- ಮನುಷ್ಯರನು, ಮನುಷ್ಯರಂತೆ ಕಾಣಬೇಕೆಂಬ ಉತ್ಕಟತೆಯಿದೆ. ಈ ಬಯಕೆ ನಮ್ಮ ಶಿಕ್ಷಣ, ಸಂಸ್ಕೃತಿ ಮತ್ತು ನಾಗರಿಕತೆಯ ಬಹುದೊಡ್ಡ ಅಣಕವೂ ಹೌದು.

ಈ ಕಗ್ಗತ್ತಲು ಕರಗಬೇಕಿದೆ
ಈ ಗೊಡೆಗಳು ಉರುಳಬೇಕಿದೆ
ಈ ಮೌನ ಮಾತಾಗಬೇಕಿದೆ

ಹೀಗೆ ಜೀವ-ಜೀವಗಳ ನಡುವಿನ ಕಂದಕ ಅಳಿಯಬೇಕಿದೆ, ಮನಸುಗಳನ್ನು ಬೆಸೆಯಬೇಕಿದೆ ಎಂದು ಕವಿ ಹೃದಯ ಹಾತೊರೆಯುತ್ತದೆ. ಸ್ವತ: ಸಾಯದೇ ಸುಡಗಾಡು ಸಿಗದು ಎಂಬ ಮಾತಿನಂತೆ ‘ಉರಿವ ಏಕಾಂತ ದೀಪ’ ಎಂಬ ಕವಿತೆಯಲ್ಲಿ

ಎಲ್ಲವನ್ನು ಇಷ್ಟೂ ದಿನ
ದೂರದಿಂದ ಮಾತ್ರ ನೋಡಿದ್ದೇನೆ
ಈಗಲಾದರೂ ನಾನದನ್ನು ಅನುಭವಿಸಬೇಕು
ದು:ಖವೊಂದು ಅರ್ಥವಾಗುವದು
ದು:ಖದಲ್ಲಿರುವವನಿಗೆ ಮಾತ್ರ
ಕಣ್ಣೀರ ಹನಿಯೊಂದನ್ನು ಒರೆಸಲು
ಇನ್ನೊಂದು ಕಣ್ಣೀರ ಹನಿಯೇ ಬೇಕು

‘ನಿನ್ನೊಳಗೆ ಹರಿವ ತಣಿವ ಸಾಲೇ’ ಎಂಬ ಕವಿತೆಯಲ್ಲಿಯೂ ಮನುಜನನ್ನು ಮನುಜನಂತೆ ಕಾಣಿ. ಶತಶತಮಾನಗಳಿಂದಲೂ ನಾವು ಬಸವಳದಿದ್ದೇವೆ. ಈಗಲಾದರೂ ಈ ನೆಲದ ಕಾವಾದವರ ಬಗ್ಗೆ ಕರುಣೆಯಿರಲಿ ಎಂಬ ಕವಿಯ ಕೋರಿಕೆ ನಮ್ಮ ಸಾಂಸ್ಕೃತಿಕ ವ್ಯಾಪಾರಗಳಲ್ಲಿಯ ವಿಷಾದವನ್ನು ಮತ್ತೆ ಮತ್ತೆ ಅನುರಣಿಸುವಂತಿದೆ.

ಇನ್ನಾದರೂ ಹಗಲ ಕೊನೆಯಲ್ಲಿರುವ
ಕತ್ತಲ ಕೊನರನ್ನು ಕಿತ್ತು ನೆಲಕ್ಕೆ ಮುಡಿಸು ತಂದೆಯೇ
ಈ ನೆಲದ ಕಾವಾದರೂ ಕರುಣೆಯಾಗಿ ಹರಿಯಲಿ
ಪ್ರತಿ ತೆನೆಯ ಕೊನೆಯಲ್ಲೂ
ಅನ್ನದಗಳುಗಳು ನಗಲಿ

ಹೀಗೆ ಲಕ್ಕೂರು ಆನಂದ ಅವರ ಕವಿತೆಗಳಲ್ಲಿ ಒಂದು ಬಗೆಯ ಹತಾಶೆ, ನೋವು, ರೊಚ್ಚು ಜೊತೆಗೆ ಏಕಾಂತ ದೀಪವಾದರೂ ಉರಿವ ಕಾವು ಮತ್ತು ಬೆಳಕು ಪಸರಿಸಿದಂತಿದೆ. ಎಲ್ಲ ಬರಹಗಾರರನ್ನು ಕಾಡುವಂತೆ ಲಕ್ಕೂರು ಆನಂದ ಅವರನ್ನು ಸಮಕಾಲಿನ ಸಾಂಸ್ಕೃತಿಕ ಬಿಕ್ಕಟ್ಟುಗಳು ಕಾಡಿರುವದಿದೆ. ಕೊನೆಗೂ ಉರಿವ ಏಕಾಂತ ದೀಪಕ್ಕೆ ಚೂರು ಪಾರು ಭರವಸೆಯ ಅವಶ್ಯಕತೆಯೂ ಇದೆ ಎನಿಸುತ್ತದೆ.


ಕವನ ಸಂಕಲನ : ಉರಿವ ಏಕಾಂತ ದೀಪ
ಕವಿ : ಲಕ್ಕೂರು ಆನಂದ
ಲಡಾಯಿ ಪ್ರಕಾಶನ
ಪುಟಗಳು-84 ಬೆಲೆ-ರೂ.60

ಪ್ರಜಾಪ್ರಭುತ್ವದ ಸಡಿಲ ಕೊಂಡಿಗಳು ಮತ್ತು ಜೀವವಿರೋಧಿ ರಾಜಕೀಯ ಭಾಷೆ?

– ಬಿ. ಶ್ರೀಪಾದ ಭಟ್

“ನಾನು ಈಗ ಬರೆಯುತ್ತಿರುವಂತಹ ಸಂದರ್ಭದಲ್ಲಿ ಆಧುನಿಕ, ಶಿಕ್ಷಿತ ನಾಗರಿಕರು ನನ್ನನ್ನು ಕೊಲ್ಲುವುದಕೋಸ್ಕರವಾಗಿಯೇ ನನ್ನ ತಲೆಯ ಮೇಲೆ ಹಾರಾಡುತ್ತಿದ್ದಾರೆ,” ಎಂದು ಒಂದು ಕಡೆ ಅರ್ವೆಲ್ ಬರೆಯುತ್ತಾನೆ ( ಸುಮಾರು 1940). ಮುಂದುವರೆದು, “ರಾಜಕೀಯ ಭಾಷೆಯನ್ನು ಹಸಿಯಾದ ಸುಳ್ಳುಗಳು ಎಲ್ಲರೂ ನಂಬುವಂತಹ ಸತ್ಯವನ್ನಾಗಿ ಮಾರ್ಪಡಿಸಿ ಹಾಗೆಯೇ ಮುಂದೊಂದು ದಿನ ಕೊಲೆಗಾರನನ್ನಾಗಿ ರೂಪಿತಗೊಳ್ಳುವಂತೆ ಡಿಸೈನ್ ಮಾಡಲಾಗುತ್ತದೆ. ಅದು ಹೀಗೆಯೇ ಮುಂದುವರೆದು ಒಂದು ನಿರ್ದಿಷ್ಟ ಬಗೆಯ, ಸಂಬಂಧಪಟ್ಟ ಜನಾಂಗದ ಸಾಲಿಡಾರಿಟಿ ಶಕ್ತಿಯಾಗಿ ತಯಾರಾಗುತ್ತದೆ,” George_Orwellಎಂದು ಮಾರ್ಮಿಕವಾಗಿ ನುಡಿಯುತ್ತಾನೆ. ಅರ್ವೆಲ್‌ನ “1984” ಕಾದಂಬರಿಯಲ್ಲಿ ಭಾಷಾತಜ್ಞ ಸಿಮೆ “ನಾವು ನೂರಾರು ಶಬ್ದಗಳನ್ನು ನಾಶಪಡಿಸುತ್ತಿದ್ದೇವೆ. ನಾವು ಶಬ್ದಗಳನ್ನು ಮೂಳೆಯ ಹಂದರಗಳ ಮಟ್ಟಕ್ಕೆ ಇಳಿಸುತ್ತಿದ್ದೇವೆ. ಅಂದರೆ ನಮ್ಮೆಲ್ಲೆರ ಮಾತುಗಾರಿಕೆಯೆಂದರೆ ಆಲೋಚನೆಯ ವ್ಯಾಪ್ತಿಯನ್ನೇ ಸಂಕುಚಿತಗೊಳಿಸುವುದು,” ಎಂದು ಗೊಣಗುತ್ತಾನೆ. ಹಾಗೆಯೇ ಮತ್ತೊಂದು ಕಡೆ ಸಿಮೆ “ರಾಜಕೀಯ ಭಾಷೆಯು ಸಮರ್ಪಕವಾಗಿ, ಮೌಲ್ಯಾಧರಿತವಾಗಿ ಪರಿಪೂರ್ಣವಾಗಿದ್ದಾಗ ಮಾತ್ರ ಕ್ರಾಂತಿಯ ಉದ್ದೇಶ ಈಡೇರುತ್ತದೆ” ಎಂದು ಉದ್ಗರಿಸುತ್ತಾನೆ. ಅರ್ವಲ್‌ನ ಪ್ರಕಾರ “ರಾಜಕೀಯ, ಸ್ವಾತಂತ್ರ್ಯ ಮತ್ತು ಭಾಷೆಯು ಒಂದಕ್ಕೊಂದು ಅವಲಂಬಿತಗೊಂಡಿರುತ್ತವೆ. ಅವನ್ನು ಬೇರ್ಪಡಿಸಲಾಗುವುದಿಲ್ಲ. ಒಂದು ವೇಳೆ ಅವೇನಾದರೂ ಬೇರ್ಪಟ್ಟರೆ ಅವುಗಳ ಸಾವು ನಿಶ್ಚಿತ. ಇಲ್ಲಿ ಭಾಷೆಯು ಚಿಂತನೆಯನ್ನು ಭ್ರಷ್ಟಗೊಳಿಸಿದೆಯೆಂದರೆ, ಚಿಂತನೆಯೂ ಸಹ ಭಾಷೆಯನ್ನು ಭ್ರಷ್ಟಗೊಳಿಸುವಷ್ಟು ಶಕ್ತವಾಗಿದೆಯೆಂದರ್ಥ.”

ದುರ್ಬಲರ, ಬಡವರ, ನಿರ್ಗತಿಕರ ರಕ್ಷಣೆಯ ಗುರಾಣಿಯಾಗಬೇಕಾಗಿದ್ದ ರಾಜಕೀಯ ಭಾಷೆಯು ಇಂದು ಇಂಡಿಯಾದಲ್ಲಿ ರಾಜಕಾರಣಿಗಳು ಮತ್ತು ಪೋಲೀಸರ ಕೈಯಲ್ಲಿ ಪೂರ್ವ ನಿರ್ಧರಿತ ಶತ್ರುಗಳನ್ನು ನಾಶಪಡಿಸಲು, ಕೊಲೆ ಮಾಡಲು ಬಳಕೆಯಾಗುತ್ತಿದೆ. ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಕೆಲವೇ ರಾಜ್ಯಗಳಲ್ಲಿ ಸೀಮಿತಗೊಂಡಿದ್ದ ಈ ಮಾದರಿಯ ಕೊಲೆಗಾರಿಕೆಯು ಇಪ್ತತ್ತೊಂದನೇ ಶತಮಾನದಲ್ಲಿ ದೇಶವ್ಯಾಪಿ ಹರಡಿಕೊಂಡಿದೆ. ನಕಲಿ, ಮೋಸದ ಅಭಿವೃದ್ಧಿಯ ನೇತಾರ ನರೇಂದ್ರ ಮೋದಿಯ ಹತ್ತು ವರ್ಷಗಳ ಸರ್ವಾಧಿಕಾರದ ಅವಧಿಯ ಗುಜರಾತ್‌ಲ್ಲಿ 2002 ರಲ್ಲಿ ಸಾವಿರಾರು ಮುಸ್ಲಿಂರ ಹತ್ಯೆಯಾಯಿತು. 2002-2006 ರ ಅವಧಿಯಲ್ಲಿ ಮೋದಿ ಆಳ್ವಿಕೆಯಲ್ಲಿ ಗುಜರಾತ್‌ನಲ್ಲಿ ಜರುಗಿದ 22 ನಕಲಿ ಎನ್‌ಕೌಂಟರ್‌ಗಳ ಕುರಿತಾಗಿ ತನಿಖೆ ನಡೆಸಲು ಸುಪ್ರೀಂ ಕೋರ್ಟ ಆದೇಶಿಸಿದೆ. ಅವುಗಳಲ್ಲಿ ಇಶ್ರಾತ್ ಜಹಾನ್, ಸೊಹ್ರಾಬುದ್ದೀನ್, ಪ್ರಜಾಪತಿ ನಕಲಿ ಎನ್‌ಕೌಂಟರ್‌ಗಳು ಇಂದು ತೀವ್ರ ಸ್ವರೂಪದಲ್ಲಿ ಚರ್ಚೆಗೊಳಗಾಗುತ್ತಿದೆ. Modiಹಲವಾರು ಪೋಲೀಸ್ ಅಧಿಕಾರಿಗಳು ಬಂಧನಕ್ಕೊಳಗಾಗಿದ್ದಾರೆ. ಗುಜರಾತ್ ರಾಜ್ಯದಲ್ಲಿ ಮೋದಿಯ ಕುಪ್ರಸಿದ್ದ ಹತ್ತು ವರ್ಷಗಳ ಸರ್ವಾಧಿಕಾರದ ಅವಧಿಯಲ್ಲಿ ಈ ಮಟ್ಟದಲ್ಲಿ ನಡೆದ ಸಾಮಾಜಿಕ, ರಾಜಕೀಯ ಹತಕಾಂಡಗಳು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹೊಸ ದಾಖಲೆ. ಒಂದು ರಕ್ತ ಚರಿತ್ರೆ. ಈ ಹತ್ಯೆಗಳ ಸಂಚನ್ನು ಮೋದಿ ಮತ್ತವರ ಸಹಚರರು ರಾಜಕೀಯ ಭಾಷೆ ಮತ್ತು ಸ್ವಾತಂತ್ರ್ಯವನ್ನು ಅತ್ಯಂತ ಋಣಾತ್ಮಕ ಮಟ್ಟದಲ್ಲಿ, ಭ್ರಷ್ಠತೆಯ ನೆಲೆಯಲ್ಲಿ ಬಳಸಿಕೊಂಡು ರೂಪಿಸಿದರು. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆಂದು ಬಿಂಬಿತಗೊಂಡಿರುವ ಇಂಡಿಯಾದಲ್ಲಿ ಇಂದು ಈ ರಾಜಕೀಯ ಹತ್ಯೆಗಳ ಕುರಿತಾದ ವಿಚಾರಣೆ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿದೆ. ಭಾರತವು ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವವಾದ್ದರಿಂದ ಮೇಲಿನ ಕೊಲೆಗಳ ಸಂಚನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಆಪಾದನೆಗೊಳಗಾಗಿರುವ ಮೋದಿಯು ಇಂದು ಈ ದೇಶದ ಭವಿಷ್ಯದ ಪ್ರಧಾನಿ ಅಭ್ಯರ್ಥಿ. ಇದನ್ನು ಸಾಧ್ಯವಾಗಿಸಿದ್ದು ನಮ್ಮ ಪ್ರಜಾಪ್ರಭುತ್ವದ ಸಡಿಲ ಕೊಂಡಿಗಳನ್ನು ದುರ್ಬಳಕೆ ಮಾಡಿಕೊಂಡ ಸಂಘ ಪರಿವಾರವು ಕಳೆದ ಇಪ್ಪತ್ತೈದು ವರ್ಷಗಳಿಂದ ರಾಜಕೀಯ ಭಾಷೆಯನ್ನು ಕೊಲೆಗಾರನ ಮಟ್ಟಕ್ಕೆ ಇಳಿಸಿ ಇದನ್ನು ಒಂದು ಜನಾಂಗದ ಸಾಲಿಡಾರಿಟಿ ಶಕ್ತಿಯನ್ನಾಗಿ ಪರಿವರ್ತಿಸಿರುವುದರಿಂದ.

ಇತಹುದೇ ಮಾದರಿಯ ಸಾಲಿಡಾರಿಟಿಯ ಶಕ್ತಿಯ ಬಲದಿಂದಲೇ ಇಂದು ಪ್ರಭಾವಿ ಬಲಿಷ್ಠ ಜಾತಿಗೆ ಸೇರಿದ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು “ಒಕ್ಕಲಿಗರ ಸಮುದಾಯವನ್ನು ಅಗೌರವದಿಂದ ನಡೆಸಿಕೊಂಡರೆ ಮೌನಕ್ಕೆ ಶರಣಾಗಿ ಸುಮ್ಮನೆ ಕೂರುವುದಿಲ್ಲ,” vokkaliga-meet-hinduಎಂದು ಹಿಂದುಳಿದ ಜಾತಿಗೆ ಸೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗುಡುಗಿದ್ದಾರೆ. ( ಪ್ರಜಾವಾಣಿ : 9 ಜುಲೈ 2013).

ಇದೇ ಮಾದರಿಯ ಸಾಲಿಡಾರಿಟಿ ಶಕ್ತಿಯ ಬಲದಿಂದಲೇ ತಮಿಳುನಾಡಿನ ಪಿಎಂಕೆ ಪಕ್ಷದ ಸ್ಥಾಪಕ ಮತ್ತು ಬಲಿಷ್ಠ ವಣ್ಣಿಯಾರ್ ಜಾತಿಯ ಸ್ವಘೋಷಿತ ನೇತಾರ ಎಸ್. ರಾಮದಾಸ್ “ದಲಿತರು ಇಂದು ಜೀನ್ಸ್ ಪ್ಯಾಂಟ್, ಟೀ ಷರ್ಟ್, ತಂಪು ಕನ್ನಡಕಗಳನ್ನು ಧರಿಸುತ್ತಿದ್ದಾರೆ. ಬೈಕುಗಳಲ್ಲಿ ಅಡ್ಡಾಡುತ್ತಿದ್ದಾರೆ,” ಎಂದು ಗುಡುಗಿದ್ದು. ಈ ಗುಡುಗಿನ ಫಲವಾಗಿ ಧರ್ಮಪುರಿ ಜಿಲ್ಲೆಯಲ್ಲಿ 250 ದಲಿತರ ಮನೆಗಳನ್ನು ಸುಡಲಾಯಿತು. ದಲಿತರು ವಣ್ಣಿಯಾರ್ ಹೆಣ್ಣು ಮಕ್ಕಳನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆ ಎನ್ನುವ ರಾಜಕೀಯ ಭಾಷೆಯಿಂದಾಗಿ ಜುಲೈ 4, 2013 ರಂದು ದಲಿತ ಯುವಕ ಇಲವರಸನ್‌ನ ಕೊಲೆಯಾಯ್ತು. ಏಕೆಂದರೆ ಇಲವರಸನ್ ಮತ್ತು ವಣ್ಣಿಯಾರ್ ಜಾತಿಗೆ ಸೇರಿದ ದಿವ್ಯ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

ಈ ರಾಜಕೀಯ ಭಾಷೆ ಮತ್ತು ಬಲಿಷ್ಠ ಜಾತಿಗಳ ಸಾಲಿಡಾರಿಟಿಯ ಮಾದರಿಯಿಂದಾಗಿ ಖೈರ್ಲಾಂಜಿಯಲ್ಲಿ, ಕಂಬಾಲಪಲ್ಲಿಯಲ್ಲಿ ದಲಿತರ ಕುಂಟುಂಬಗಳ ಹತ್ಯೆಯಾಯ್ತು. ಇಂದಿಗೂ ಉತ್ತರ ಭಾರತದ ರಾಜ್ಯಗಳಲ್ಲಿ ಖಾಪ್ ಪಂಚಾಯ್ತಿಯ ಹೆಸರಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳನ್ನು ನಾಶಪಡಿಸಲಾಗುತ್ತಿದೆ ಮತ್ತು ಹುಡುಗರನ್ನು ಹತ್ಯೆಗೈಯಲಾಗುತ್ತಿದೆ.

1990 ರ ನಂತರ ರಾಜಕೀಯವಾಗಿ ಮತ್ತು ಜಾತೀಯವಾಗಿ ಬಲಿಷ್ಠಗೊಂಡ ಮಂಡಲ್ ಮತ್ತು ಮಂದಿರದ ಶಕ್ತಿಗಳು ತಮ್ಮ ಸಾಲಿಡಾರಿಟಿಯ ಹಿರಿಮೆಗಾಗಿ ಈ ಬಗೆಯ ಹತ್ಯಾಕಾಂಡಗಳನ್ನು ರೂಪಿಸಿದ್ದು ಮಾತ್ರ ಅತ್ಯಂತ ದುರಂತ. ಏಕೆಂದರೆ ಮಂಡಲ್ ಶಕ್ತಿಗಳು ಬಲಗೊಂಡರೆ ಮಂದಿರದ ಮತೀಯವಾದಿ ಫೆನೆಟಿಸಂ ಗುಂಪನ್ನು ಮತ್ತಷ್ಟು ಸಶಕ್ತವಾಗಿ ಎದುರಿಸಬಹುದೆಂದು ನಂಬಿದ್ದ ಈ ದೇಶದ ಪ್ರಜ್ಞಾವಂತ ಜನತೆಗೆ ಇಂದು ಇದೇ ಮಂಡಲ್ ಗುಂಪಿನ ಇಂದಿನ ನವ ಬ್ರಾಹ್ಮಣಶಾಹೀ ವ್ಯಕ್ತಿತ್ವದ ಧೋರಣೆಗಳು ಮರೆಯಲಾಗದಂತಹ ಪೆಟ್ಟನ್ನು ನೀಡಿದೆ. ಧರ್ಮಪುರಿಯ ದಲಿತ ಇಲವರಸನ್‌ನ ಕೊಲೆ ಮುಂದಿನ ದಿನಗಳ ಕರಾಳತೆಯ ಮುನ್ಸೂಚನೆ. ಕಾನೂನು ನೀಡಿದ ಸಮಾನತೆಯನ್ನು ಧಿಕ್ಕರಿಸುವ ಶಕ್ತಿಗಳ ಅಪಾಯಕಾರಿ ಚಲನಶೀಲತೆಗೆ ಆತ್ಮವಂಚನೆಗೆ ಬಲಿಯಾದ ನಾವೆಲ್ಲ ಸಾಕ್ಷಿಯಾಗಬೇಕಾಗಿದೆ.

ಧರ್ಮವನ್ನು ಕೇವಲ ಆಧ್ಯಾತ್ಮಿಕ ಮಟ್ಟದಲ್ಲಿ, ವೈಯಕ್ತಿಕ ಹಿನ್ನೆಲೆಯಲ್ಲಿ ನೋಡುವುದನ್ನು ಕೈಬಿಟ್ಟು ಅದನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಸಾರ್ವಜನಿಕವಾಗಿ ಸಂಭ್ರಮದಿಂದ ಆಚರಿಸಿದ ಇಂಡಿಯಾದ ಶಿಕ್ಷಿತ ಜನರ ಬೌದ್ಧಿಕ ದಿವಾಳಿತನ ಈ ಅಮಾನವೀಯ ವ್ಯವಸ್ಥೆಗೆ ಮೂಲಭೂತ ಕಾರಣ. ಪ್ರಜಾಪ್ರಭುತ್ವವು ಬಹುಸಂಖ್ಯಾತ ಪದ್ಧತಿಯ ಮೇಲೆ ನಿಂತಿದ್ದರು ಸಹ ಆ ಬಹುಸಂಖ್ಯಾತ ಪರಿಕಲ್ಪನೆಯು ಯಾರನ್ನು ಹೆಚ್ಚಾಗಿ ಓಲೈಸುತ್ತದೆ ಎactivism-alice-walkerನ್ನುವುದನ್ನು ಸಹ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸಬಹುದು. ಪ್ರಜಾಪ್ರಭುತ್ವವೆಂದರೆ ಪ್ರಜೆಗಳು ಅಜ್ಞಾನದಿಂದ, ಪರಸ್ಪರ ಸಂಬಂಧವಿಲ್ಲದಂತೆ ಬದುಕುವುದಲ್ಲ. ಬದಲಾಗಿ ಅಪಾರ ತಿಳುವಳಿಕೆಯನ್ನು, ಪ್ರಶ್ನಿಸುವ ಮನೋಭೂಮಿಕೆಯನ್ನು ಹೊಂದಬೇಕಾಗುತ್ತದೆಂದು ಜನತೆಗೆ ವಿವರಿಸಬೇಕಾಗುತ್ತದೆ. ಈ ಕಾರ್ಯವನ್ನು ನಮ್ಮ ಸಮಾಜ ವಿಜ್ಞಾನಿಗಳು ಮತ್ತು ಅಕಡೆಮಿಕ್ ಬುದ್ಧಿಜೀವಿಗಳು ತಮ್ಮ ದಂತಗೋಪುರದಿಂದ ಹೊರಬಂದು ಭೌತಿಕ ಆಕ್ಟಿವಿಸಂನಿಂದ (physical activism) ತಲೆಮಾರುಗಳನ್ನು ರೂಪಿಸಬೇಕಾದಂತಹ ಇಂದಿನ ತುರ್ತಿನ ಸಂದರ್ಭದಲ್ಲಿ ತಮ್ಮ ಪ್ರಚಂಡ ಪ್ರಬಂಧಗಳು, ಅಸ್ಖಲಿತ ಪಾಂಡಿತ್ಯಪೂರ್ಣ ಭಾಷಣಗಳು ತಂದು ಕೊಟ್ಟ ಜನಪ್ರಿಯತೆಯ ರೋಮಾಂಚನಕ್ಕೆ ತಾವೇ ಮೈಮರೆತು ಈ ಜನಪ್ರಿಯತೆ ತಂದುಕೊಡುವ ವೇದಿಕೆಗಳು, ಖ್ಯಾತಿಯ ಕನವರಿಕೆಗಳಲ್ಲಿ ಮುಳುಗಿದ್ದು ನಮ್ಮ ವ್ಯವಸ್ಥೆಯಲ್ಲಿ ವೈಚಾರಿಕತೆ ಮತ್ತು ಮಾನವೀಯತೆಯ ಸೋಲಿಗೆ ಕಾರಣ. ನಮ್ಮ ಬುದ್ಧಿಜೀವಿಗಳು ಭೌತಿಕ ಆಕ್ಟಿವಿಸಂಗೆ ತಿಲಾಂಜಲಿ ನೀಡಿದ್ದು ದಿಗ್ಭ್ರಮೆ ಮೂಡಿಸುತ್ತದೆ. ಇವರು ಮೌಲಿಕವಾದ ರಾಜಕೀಯ ಭಾಷೆಯನ್ನು ಮಾತನಾಡುವುದನ್ನು ಸಹ ಕೈಬಿಟ್ಟಿದ್ದಾರೆ.

ನಮಗೆಲ್ಲ ಇನ್ನು ಮುಂದಿರುವುದು ಪೆರಿಯಾರ್, ಅಂಬೇಡ್ಕರ್, ಗಾಂಧಿ ಮಾರ್ಗಗಳು. ಸಮಾನಮನಸ್ಕರು ಅಸಂಘಟಿತರಾಗಿ ಪರಸ್ಪರ ಸಂಬಂಧವಿಲ್ಲದಂತೆ ಬದುಕುವುದನ್ನು ಕೈ ಬಿಟ್ಟು ಹೊಸ ಮೌಲ್ಯಗಳ ರಚನೆಗೆ ಪರಸ್ಪರ ಕೈ ಜೋಡಿಸಬೇಕಾದಂತಹ ಕಾಲವಿದು.