Tag Archives: ಪತ್ರಿಕೋದ್ಯಮ

ಅಸಹಜ ನಿರೀಕ್ಷೆಗಳ ಮಧ್ಯೆ ಜನಶ್ರೀ

-ಭೂಮಿ ಬಾನು

ಸದ್ಯದ ಮಟ್ಟಿಗೆ ಒಂದಿಷ್ಟು ಸೆನ್ಸಿಬಲ್ ಚಾನೆಲ್ ಎನ್ನಬಹುದಾದ ಜನಶ್ರೀ ಸುದ್ದಿ ವಾಹಿನಿ ಇಂದು (ಫೆಬ್ರವರಿ 18) ಒಂದು ವರ್ಷ ಪೂರೈಸಿದೆ. ಚಾನೆಲ್‌ನ ಕ್ರಿಯಾಶೀಲ ಹಾಗೂ ಸೂಕ್ಷ್ಮ ಮನಸ್ಸಿನ  ಸಿಬ್ಬಂದಿಗೆ ಅಭಿನಂದನೆಗಳು.

ಹೇಳಿ ಕೇಳಿ ಚಾನೆಲ್ ಅನ್ನು ಆರಂಭಿಸಿದ್ದು ಗಣಿ ವ್ಯವಹಾರದಲ್ಲಿ ಹಣ ಗಳಿಸಿದ್ದ ಜನಾರ್ಧನ ರೆಡ್ಡಿ. ಅವರಿಗೆ ಜ್ಯೋತಿಷ್ಯದ ಬಗ್ಗೆಯಾಗಲಿ, ವೈಜ್ಞಾನಿಕ ಚಿಂತನೆಯ ಅಗತ್ಯತೆಯಾಗಲಿ, ಸ್ಪಷ್ಟ ಆಲೋಚನೆಗಳೇನೂ ಇರಲಿಲ್ಲ. ದೈವದ ಬಗ್ಗೆ ಅತೀವ ಭಕ್ತಿ ಇತ್ತು, ಆದರೆ ಸಾರ್ವಜನಿಕ ಸಂಪತ್ತಿನ ದುರಪಯೋಗದ ಬಗ್ಗೆ ಮುಜುಗರ ಇರಲಿಲ್ಲ. ಇಂತಹವರಿಂದ ಒಂದು ಮೂಢನಂಬಿಕೆ ವಿರೋಧಿ ಸುದ್ದಿವಾಹಿನಿಯೊಂದನ್ನು ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. ಅದರಲ್ಲೂ ಪೈಪೋಟಿಯಲ್ಲಿರುವ ಇತರೆ ಚಾನೆಲ್ ಗಳು ಜ್ಯೋತಿಷ್ಯ, ಅಂಧ ಶ್ರದ್ಧೆಗಳನ್ನು ಢಾಳಾಗಿ ತೋರಿಸಿ ನೋಡುಗರನ್ನು ಆಕರ್ಷಿಸುತ್ತಿರುವಾಗ ಒಂದು ವರ್ಷದ ಹಿಂದೆ ಆರಂಭವಾದ ಚಾನೆಲ್  ಭಿನ್ನವಾಗಿರಬೇಕೆಂಬ ನಿರೀಕ್ಷೆಯೇ ಅಸಹಜವಾಗಿತ್ತು.

ಆದರೆ ಚಾನೆಲ್ ಭಿನ್ನವಾಗಿಯೇ ಹೊರಬಂತು. ಅದಕ್ಕೆ ಕಾರಣ ಮಾಲಿಕರಲ್ಲ, ಕ್ರಿಯಾಶೀಲ ಸಿಬ್ಬಂದಿ. ರಾಶಿ ಭವಿಷ್ಯ, ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ.…ತಲೆದಂಡದಂತಹ ಕಾರ್ಯಕ್ರಮಗಳನ್ನು ಇವರು ಪ್ರಸಾರ ಮಾಡಲಿಲ್ಲ. ಗ್ರಹಣದ ಸಂದರ್ಭಗಳಲ್ಲೂ ಜ್ಯೋತಿಷ್ಯದ ಜೊತೆ ವೈಜ್ಞಾನಿಕ ಚಿಂತನೆಯನ್ನು ಮುಖಾಮುಖಿಯಾಗಿಸಿದರು. ನಿನ್ನೆ (ಫೆ.17) ಕೂಡ ರೈಸ್ ಪುಲ್ಲಿ ಯಿಂದ ಮೋಸ ಹೋಗುವವರನ್ನು ಎಚ್ಚರಗೊಳಿಸಲು ಒಂದು ಉತ್ತಮ ಕಾರ್ಯಕ್ರಮ ಮಾಡಿದ ಹೆಗ್ಗಳಿಕೆ ಜನಶ್ರೀಗೆ ಸೇರುತ್ತದೆ.

ಟಿ.ಆರ್.ಪಿ ಗಳಿಕೆಯಲ್ಲಿ ಜನಶ್ರೀ ಯಾವ ಸ್ಥಾನದಲ್ಲಿದೆಯೋ ಹೊರ ಜಗತ್ತಿಗೆ ಅದು ಗೊತ್ತಾಗುವುದಿಲ್ಲ. ಗೊತ್ತಾದರೂ, ಅದು ಕೆಲವೇ ವರ್ಗಗಳಿಗೆ ಸೀಮಿತವಾದ ಮಾಹಿತಿಯಾಗಿ ಉಳಿದುಬಿಡುತ್ತದೆ. ವಿಭಿನ್ನ, ವಿಶಿಷ್ಟವಾದ ಅನೇಕ ಕಾರ್ಯಕ್ರಮಗಳು ಈ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿವೆ. ಒಂದು ಸಿನಿಮಾ ಕತೆ, ಈಗ ನಾನು, ಒಂದೊಳ್ಳೆ ಕೆಲಸ, ಜನಶ್ರೀ ತನಿಖೆ, ಡೆಡ್ ಲೈನ್… ಕೆಲವು ಉದಾಹರಣೆಗಳಷ್ಟೆ.

ಹಾಗಂತ ಚಾನೆಲ್ ಎಲ್ಲಾ ಲೋಪಗಳಿಂದ ಮುಕ್ತ ಎಂದೇನಲ್ಲ. ಬಳ್ಳಾರಿ ಗಣಿ ಸುದ್ದಿಗಳು ಗೌಣವಾಗಿ ಬಿತ್ತರಗೊಳ್ಳುತ್ತವೆ. ಚಾನೆಲ್ ಮಾಲಿಕರು ಜೈಲಿಗೆ ಹೋದದ್ದು ಸುದ್ದಿಯಾದರೂ, ಯಡಿಯೂರಪ್ಪನ ಜೈಲು ಸಹವಾಸ ಅಥವಾ ಶ್ರೀರಾಮುಲು ಗೆಲುವಿನ ಸುದ್ದಿಯಷ್ಟಲ್ಲ.

ಗುಂಡಿಗಳಿರುವ ರಸ್ತೆ, ಹಾಳಾದ ಸೇತುವೆ, ತಲುಪದ ಪಿಂಚಣಿ, ಅನರ್ಹರಿಗೆ ವಿಶ್ವವಿದ್ಯಾನಿಲಯಗಳು ಹಾಕಿದ ಮಣೆ…ಹೀಗೆ ಅನೇಕ ಸುದ್ದಿಗಳಾಗುತ್ತವೆ. ಆದರೆ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನಿಂತು ನೋಡಿದಾಗ ಇನ್ನೂ ಶೋಷಣೆ ಇದೆ. ಜಾತಿ ಜಾತಿಗಳ ನಡುವಿನ ಸೇತುವೆ ಶಿಥಿಲಗೊಂಡಿದೆ. ದಲಿತರು, ಹಿಂದುಳಿದವರು ಸಾಗಬೇಕಾದ ಪ್ರಗತಿ ಪಥದಲ್ಲಿ ಗುಂಡಿಗಳೇ ಹೆಚ್ಚು. ಅತ್ತ ಕಡೆಯೂ ಒಂದಿಷ್ಟು ಗಮನ ಹರಿಸಬೇಕಿದೆ. ಅಥವಾ ಈ ನಿಟ್ಟಿನಲ್ಲಿ ಎಷ್ಟೇ ಗಮನ ಹರಿಸಿದರೂ ಕಡಿಮೆಯೇ.

ಕೃಷ್ಣ ಪಾಲೇಮಾರ್ ಮತ್ತು ಮಂಗಳೂರಿನ ಪತ್ರಕರ್ತರು

– ಸದಾನಂದ ಕೋಟ್ಯಾನ್

ಮಂಗಳೂರಿನಲ್ಲಿ ಪತ್ರಿಕಾ ಭವನದ ಮೂರನೇ ಮಹಡಿ ಉದ್ಘಾಟನೆ ಆಗಿದೆ. ಕರಾವಳಿಯವರೇ ಆದ ಮುಖ್ಯಮಂತ್ರಿ ಸದಾನಂದ ಗೌಡರು ಭವನ ಉದ್ಘಾಟಿಸಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ರಾಜ್ಯಾಂಗಕ್ಕೆ ದಾಸನಾಗಿರುವುದಕ್ಕೆ ಇಡೀ ಉದ್ಘಾಟನಾ ಸಮಾರಂಭವೇ ಸಾಕ್ಷಿ ಎಂಬಂತೆ ಕಾರ್ಯಕ್ರಮ ನಡೆಯಿತು. ವೇದಿಕೆಯ ತುಂಬ ರಾಜಕಾರಣಿಗಳು. ಅವರ ಅಕ್ಕಪಕ್ಕದಲ್ಲಿ ರಾಜಕಾರಣಿಗಳು ನೀಡಿದ ಕೊಡುಗೆಯನ್ನು ಪ್ರಶಂಸಿಸುವ ಆಸ್ಥಾನ ಭಟರ ಪಾತ್ರಧಾರಿಗಳಾಗಿ ಪರಿವರ್ತನೆ ಹೊಂದಿದ ಪತ್ರಕರ್ತರು. ಇಡೀ ಸಮಾರಂಭ ಮಂಗಳೂರಿನಲ್ಲಿ ಮಾಧ್ಯಮ ಎತ್ತ ಸಾಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುವಂತಿತ್ತು.

ಸೋರುತ್ತಿರುವ ಸ್ಥೈರ್ಯ, ರಾಜ್ಯಾಂಗ ಮತ್ತು ಕಾರ್ಯಾಂಗವನ್ನು ತರಾಟೆಗೆ ತೆಗೆದುಕೊಳ್ಳುವ, ವಿಮರ್ಶಿಸುವ ಸಾಮರ್ಥ್ಯ ಕಳೆದುಕೊಂಡ ಲೇಖನಿಗಳಿಗೆ ಪ್ರಸ್ತುತ ಅಗತ್ಯವಾಗಿ ಶಕ್ತಿ ತುಂಬಬೇಕಾಗಿದೆ. ಪತ್ರಿಕಾ ಭವನದಲ್ಲಿ ಅಪಾರ ಹಣವಿದೆ. ದೇಶದಲ್ಲಿ ಅಪಾರ ಸಾಧನೆಗಳನ್ನು ಮಾಡಿದ ಪತ್ರಕರ್ತರು ಇದ್ದಾರೆ. ಅವರ ಸ್ಫೂರ್ತಿಯ ಗೊಡವೆಗೆ ಹೋಗದ, ಲೋಕಲ್ ದಾಸ್ಯಕ್ಕೆ ಶರಣಾದ ಪತ್ರಕರ್ತರು ಭವನದ ನೆಪದಲ್ಲಿ ಮತ್ತಷ್ಟು ಕೆಳಗಿಳಿದರು. ಅದಕ್ಕೆ ಪಕ್ಕಾ ಸಾಕ್ಷಿ ಉದ್ಘಾಟನಾ ಆಹ್ವಾನ ಪತ್ರದಲ್ಲಿರುವ ಕಳಂಕಿತ ಶಾಸಕರೊಬ್ಬರ ಹೆಸರು.

ಹಾಗೆ ನೋಡಿದರೆ ಮಂಗಳೂರಿನ ಪತ್ರಕರ್ತ ಗೆಳೆಯರಿಗೆ ಈಗ ಕಡು ಕಷ್ಠದ ಕಾಲ. ಅವರನ್ನು ಕಷ್ಟದಿಂದ ಪಾರು ಮಾಡುವ ಕೃಷ್ಣಣ್ಣ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದ ಪತ್ರಿಕೆಗಳು ವಿದ್ಯುನ್ಮಾನ ಮಾಧ್ಯಮಗಳು ಈ ನೀಲಿಚಿತ್ರದ ಪೊಲೀ ಹುಡುಗನ ಕೃಷ್ಣ ಲೀಲೆಗಳನ್ನು ವರದಿ ಮಾಡುತ್ತಾ ಛೀ ಥೂ ಎಂದು ಉಗಿಯುತ್ತಿದ್ದರೆ ಮಂಗಳೂರಿನ ಮಾಧ್ಯಮದ ಗೆಳೆಯರು ತಮ್ಮ ಪತ್ರಕರ್ತರ ಸಂಘದ ಮೂರನೇ ಮಹಡಿಯ ಸಭಾಂಗಣದ ಉದ್ಘಾಟಣೆಗೆ ಕೃಷ್ಣ ಲೀಲೆ ಬಹಿರಂಗಗೊಂಡ ಮರು ದಿವಸವೇ ಕಾರ್‍ಯಕಾರಿ ಸಮಿತಿಯ ಸಭೆ ಸೇರಿ ಆಹ್ವಾನಿಸಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಬಹಳ ನೋವಿನಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಂದು ಕೃಷ್ಣ ಪಾಲೇಮಾರ್ ಹೆಸರಿನ ಕೆಳಗೆ ನಮೂದಿಸಿದ್ದಾರೆ. ನೀಲಿಚಿತ್ರ ಸರಬರಾಜುದಾರ ಎಂದು ಇಡೀ ರಾಜ್ಯ ಮತ್ತು ದೇಶದ ಜನತೆ ಟೀಕಿಸುತ್ತಿದ್ದರೆ ಮಂಗಳೂರಿನ ಕಾರ್‍ಯನಿರತ ಪತ್ರಕರ್ತರಿಗೆ ಕೃಷ್ಣ ಜೆ ಪಾಲೇಮಾರ್ “ಮುಖ್ಯ ಅತಿಥಿ”. ಅಷ್ಟು ಮಾತ್ರವಲ್ಲದೆ ತಾವು ಕೆಲಸ ಮಾಡುವ ಮಾಧ್ಯಮಗಳಲ್ಲಿ ತಮ್ಮ ಋಣ ತೀರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷ್ಣಣ್ಣನಿಗೆ ಮೊಬೈಲ್ ಬಳಸಲೇ ಗೊತ್ತಿಲ್ಲ, ಯಾರೋ ಅಪಾಪೋಲಿಗಳು ಕಳುಹಿಸಿರುವ ಎಂಎಂಎಸ್ ಎಂದು ವೈಭವೀಕರಿಸಿ ಬರೆಯುವುದರ ಜೊತೆಗೆ ಕೃಷ್ಣಣ್ಣ ನೈತಿಕ ಹೊಣೆ ಹೊತ್ತು (ಹಿಂದೆ ರೈಲು ಅಪಘಾತವಾದಾಗ ಲಾಲ್ ಬಹುದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದಂತೆ) ರಾಜೀನಾಮೆ ನೀಡಿದ್ದಾರೆ ಎಂದು ಹುತಾತ್ಮ ಪಟ್ಟವನ್ನು ಕಟ್ಟಲು ಹೆಣಗಾಡಿ ನಗೆಪಾಟೀಲಿಗೀಡಾಗುತ್ತಿದ್ದಾರೆ.

ಹೀಗೆ ಮಂಗಳೂರು ಪತ್ರಕರ್ತರ ಕಾರುಬಾರು ಪಟ್ಟಿ ಮಾಡುವುದಾದರೆ :

  • ಇಡೀ ಕರ್ನಾಟಕ ರಾಜ್ಯದಲ್ಲಿ ಕೆಐಎಡಿಬಿ ಹಗರಣಗಳು ಹೊರಬೀಳುತ್ತಿದ್ದರೆ ಮಂಗಳೂರಿನ ಪತ್ರಕರ್ತರು ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ.
  • ವರದಿಗಾರಿಕೆಯಲ್ಲಿ ಪ್ರಾಯೋಜಕರತ್ತಲೇ ನಿಷ್ಠೆ ಹೊರತು ಸ್ಥಳೀಯ ಸಮಸ್ಯೆಗಳತ್ತ ಗಮನ ಹರಿಸಿಲ್ಲ
  • ನೈತಿಕ ಪೊಲೀಸ್‌ಗಿರಿಗೆ ಸದಾ ಬೆಂಬಲಿಸುತ್ತಿದ್ದ ಮಾಧ್ಯಮ, ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಆರಂಭಿಸಿದ ನಂತರವಷ್ಟೇ ಬಹಿರಂಗ ಬೆಂಬಲವನ್ನು ನಿಲ್ಲಿಸಿ, ನಿಜವಾದ ಸುದ್ದಿಯತ್ತ ಪ್ರಾಮುಖ್ಯತೆ ಕೊಟ್ಟರು.
  • ಬ್ರಹ್ಮಕಲಶ, ನಾಗಮಂಡಲಗಳ ಜಾಹೀರಾತಿಗೇ ಕಾಯುವ ಪತ್ರಿಕೆಗಳು ದೇವರ ಆರಾಧನೆಗಿಂತಲೂ ಜಾಹೀರಾತು ಆರಾಧನೆಗೇ ಒತ್ತು ಕೊಡುತ್ತಿರುವುದು ಇಂದಿಗೂ ವಾಸ್ತವ.

ಇನ್ನು  ಕೃಷ್ಣ ಜೆ. ಪಾಲೇಮಾರ್ ಕೃಪಾಪೋಷಿತ ಮಾಫಿಯಾಗಳ ವಿಚಾರ ಕೇಳಬೇಕೇ? ನಗರದಲ್ಲಿರುವ ಅಕ್ರಮ ಮಾಲ್ ಒಂದರ ಪಾಲುದಾರರೊಬ್ಬರಿಗೆ ಪಾಲೇಮಾರ್ ಪರವಾದ ಪ್ರತಿಭಟನೆ ಮಾಡಲು ಐಡಿಯಾ ಕೊಟ್ಟವರೂ ಪತ್ರಕರ್ತರು. ನಾವೇ ನಮ್ಮಷ್ಟಕ್ಕೆ ಬರೆದರೆ ಜನ ತಪ್ಪು ತಿಳಿದುಕೊಳ್ಳುತ್ತಾರೆ, ನಮ್ಮ ವರದಿಗೆ ಪೂರಕವಾಗಿ ನಿಮ್ಮ ದ್ವನಿಯೂ ಇದ್ದರೆ ಚೆನ್ನ ಎಂಬ ಅಭಿಪ್ರಾಯ ಪತ್ರಕರ್ತರದ್ದು. ಬಳ್ಳಾರಿಯಿಂದ ಗಣಿ ಮಂಗಳೂರು ಬಂದರು ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದ ಮಾಫಿಯಾದ ಹಿಂದೆ ಬಂದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಕೈ ಕೆಲಸ ಮಾಡಿತ್ತು. ಆದರೆ ಮಂಗಳೂರಿನ ಪತ್ರಕರ್ತರು ಈ ಬಗ್ಗೆ ವರದಿಗಳನ್ನು ಮಾಡಿದ್ದೇ ಇಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ರಾಜೀನಾಮೆಗೆ ಪಾಲೇಮಾರ್ ಕಾರಣರಾಗಿದ್ದ ಸಂಧರ್ಭ ಬೆಂಗಳೂರು ಮತ್ತು ಕಾರವಾರದಿಂದ ಪಾಲೇಮಾರ್ ವಿರುದ್ಧ ವರದಿಗಳು ಪ್ರಕಟಗೊಂಡವು. ಆದರೆ ಮಂಗಳೂರಿನ ಶಾಸಕ, ಸಚಿವರಾಗಿದ್ದ ಪಾಲೇಮಾರ್ ಬಗ್ಗೆ ಪತ್ರಕರ್ತರು ಆಸಕ್ತಿ ವಹಿಸಿ ಪ್ರಕರಣವನ್ನು ಫಾಲೋ ಮಾಡಲೇ ಇಲ್ಲ. ಕೆಐಎಡಿಬಿ ಹಗರಣ ರಾಜ್ಯಾಧ್ಯಂತ ಸುದ್ಧಿಯಾದಾಗ ಮಂಗಳೂರು ಕೆಐಎಡಿಬಿ ಹಗರಣಗಳ ಹೂರಣವನ್ನು ಕೆದಕಲು ಹೋಗಲೇ ಇಲ್ಲ. ಕೆಐಎಡಿಬಿ ಕಡತಗಳ ಯಾವುದೋ ಒಂದು ಮೂಲೆಯಲ್ಲಿ ಪಾಲೇಮಾರ್ ಹೆಸರು ಇರಲೇ ಬೇಕು ಎಂಬುದು ಕರಾವಳಿಯ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇರುವ ಸರಕಾರಿ ಜಮೀನುಗಳನ್ನು ಅತಿಕ್ರಮಿಸಿ ಫ್ಲ್ಯಾಟು, ಲೇಔಟ್, ಮಾಲ್, ಬಹುಮಹಡಿ ಕಟ್ಟಡಗಳ ನಿರ್ಮಾಣದ ಹಿಂದೆ ಪಾಲೇಮಾರ್ ಪಾಲುದಾರಿಕೆ ಇದೆ. ಪಾಲೇಮಾರ್ ಜಮೀನಿನಲ್ಲಿ ಪತ್ತೆಯಾದ ಅಕ್ರಮ ಮರಳು ಶೇಖರಣೆಗೆ ಜಿಲ್ಲಾಧಿಕಾರಿ ತಂಡ ದಾಳಿ ಮಾಡಿದಾಗಲೂ ಮಂಗಳೂರಿನ ಕೆಲವೊಂದು ಪತ್ರಿಕೆಗಳಿಗೆ ಅದು ಸುದ್ಧಿಯೇ ಆಗಿರಲಿಲ್ಲ. ಸಚಿವರೊಬ್ಬರ ವ್ಯವಹಾರಕ್ಕೆ ಅಧಿಕಾರಿಗಳು ತಂಡ ದಾಳಿ ಮಾಡಿ ಮರಳನ್ನು ವಶಪಡಿಸಿಕೊಳ್ಳುವುದು ಸುದ್ಧಿಯೇ ಅಲ್ಲ ಎಂಬುದು ಪಾಲೇಮರ್ ಮತ್ತು ಪತ್ರಕರ್ತರ ಮಧ್ಯದ ಸಂಬಂಧವನ್ನು ಎತ್ತಿ ತೋರಿಸುತ್ತದೆ.

ಬೇಜವಾಬ್ದಾರಿ ಟಿವಿ ನಿರೂಪಕರು…


– ರವಿ ಕೃಷ್ಣಾರೆಡ್ಡಿ  


ನೆನ್ನೆ ರಾತ್ರಿ (30/1/12) ಸುವರ್ಣ ನ್ಯೂಸ್ 24×7 ನಲ್ಲಿ ನಿರೂಪಕ ರಂಗನಾಥ್ ಭಾರದ್ವಾಜ್ ಪಕ್ಷೇತರ ಶಾಸಕ ನರೇಂದ್ರಸ್ವಾಮಿಯವರನ್ನು ಸಂದರ್ಶಿಸುತ್ತಿದ್ದರು. ವಿಷಯ, ನೆನ್ನೆ ಸದನದಲ್ಲಿ ನಾಲ್ವರು ಪಕ್ಷೇತರ ಶಾಸಕರು ಸ್ಪೀಕರ್ ವಿರುದ್ಧ ಘೋಷಣೆ ಕೂಗಿದ್ದು.

ನಾನು ಆಗ ತಾನೆ ಟಿವಿ ಹಾಕಿದ್ದೆ. ಹಾಗಾಗಿ ಆ ಸುದ್ದಿ ನೋಡಿದ್ದೆ ಎರಡು ನಿಮಿಷ. ಆ ಎರಡು ನಿಮಿಷದಲ್ಲಿ ರಂಗನಾಥ್ ಭರದ್ವಾಜ್ ನರೇಂದ್ರಸ್ವಾಮಿಯರ ಹಿತಚಿಂತಕ, ಪೀಡಕ, ಮತ್ತು ಜನರಂಜಕ, ಕಮೀಡಿಯನ್, ಎಲ್ಲವೂ ಆಗಿಹೋದರು.

ಒಂದು ಪ್ರಶ್ನೆ, “ಇವತ್ತು ನೀವು ಮಾಡಿದ ಪ್ರತಿಭಟನೆ ಯಾರನ್ನು ಮೆಚ್ಚಿಸಲು?” ಎಂದಾಗಿತ್ತು.

ಸರಿಯಾದ ಪ್ರಶ್ನೆಯೇ. ಕರ್ನಾಟಕದ ಈ ಬಾರಿಯ ಪಕ್ಷೇತರ ಶಾಸಕರು ನಡೆದುಕೊಂಡಿರುವುದೇ ಹಾಗೆ. ಅಧಿಕಾರದ ಹಿಂದೆ ಬಿದ್ದು ಸದನದಲ್ಲಿ ಸ್ವತಂತ್ರ ಧ್ವನಿಗಳೇ ಇಲ್ಲದಂತೆ ನಡೆದುಕೊಂಡರು. ಹಾಗಾಗಿ ನೆನ್ನೆಯ ಪ್ರತಿಭಟನೆಯೂ ಯಾವುದೋ ಲಾಭಕ್ಕಾಗಿ ಅಥವ ಮುಂದಿನ ದಿನಗಳ ಅನುಕೂಲಕ್ಕಾಗಿ ಎಂದು ಭಾವಿಸಬಹುದು.

ಆದರೆ, ಒಬ್ಬ ಟಿವಿ ನಿರೂಪಕನಾಗಿ ವಿಷಯದ ಹಿನ್ನೆಲೆ ಮತ್ತು ಗಾಂಭೀರ್ಯ ಅರಿಯದೆ ಕೇಳಬಹುದಾದ ಪ್ರಶ್ನೆಯೇ ಅದು? ಸ್ಪೀಕರ್‌ಗೆ ಸುಪ್ರೀಮ್‌ಕೋರ್ಟ್ ಹಾಕಿರುವ ಛೀಮಾರಿಗೆ ಈ ಶಾಸಕರು ಪ್ರತಿಕ್ರಿಯಿಸುತ್ತಿದ್ದಾರೆ. ಅವರು ಸ್ವಾರ್ಥಿಗಳೇ ಇರಬಹುದು. ಜನಪ್ರತಿನಿಧಿಗಳಾಗಲು ವೋಟು ಗಳಿಸುವ ದೃಷ್ಟಿ ಹೊರತುಪಡಿಸಿ ಅಯೋಗ್ಯರೇ ಇರಬಹುದು. ಆದರೆ ನೆನ್ನೆಯದು ಬಹಳ ಗಂಭೀರ ವಿಷಯ. ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸಂಬಂಧಿಸಿದ್ದು. ಹಾಗಾಗಿ ಶಾಸಕರ ಆ ಪ್ರತಿಕ್ರಿಯೆಯನ್ನು ಈ ರೀತಿ ಅವಹೇಳನೆ ಅಥವ ನಗೆಪಾಟಲು ಮಾಡುವ ಮೂಲಕ ಸ್ಪೀಕರ್‌ರ ದೋಷ ಮತ್ತು ಅನ್ಯಾಯವನ್ನು ತೆಳು ಮಾಡಿ ಜನರ ಮುಂದೆ ಇಡುತ್ತಿದ್ದೇನೆ ಎನ್ನುವ ಪ್ರಜ್ಞೆ ಈ ನಿರೂಪಕರಿಗೆ ಬೇಡವೆ? ನಗುಮುಖದಿಂದ ಕೂಡಿದ್ದ ಆ ಪ್ರಶ್ನೆ ಕುಚೇಷ್ಟೆಯಿಂದ ಕೂಡಿದ್ದಷ್ಟೇ ಅಲ್ಲ, ಬೇಜವಾಬ್ದಾರಿಯದ್ದೂ ಸಹ.

ಇಷ್ಟಕ್ಕೂ ಇವರು ಸುದ್ದಿಮಾಧ್ಯಮದಲ್ಲಿ ಇದ್ದಾರೊ, ಅಥವ Late Night ಮನರಂಜನೆಯ ಉದ್ಯಮದಲ್ಲಿ ಇದ್ದಾರೊ?

ಇದಕ್ಕಿಂತ ಕೆಟ್ಟ ಪ್ರಶ್ನೆ, “ಈ ಪ್ರತಿಭಟನೆ ಮಾಡದೇ ಇದ್ದಿದ್ದರೆ ನಿಮಗೆ ಮುಂದಕ್ಕೆ ಏನಾದರೂ ಲಾಭ ಆಗುತ್ತಿತ್ತೊ ಏನೊ. ಅದೇನೋ ಹೇಳುತ್ತಾರಲ್ಲ, ಸುಮ್ಮನೆ ಇರಲಾರದೆ ಚಡ್ಡಿಯಲ್ಲಿ.. ಅದೇನೊ ಇರುವೆ ಬಿಟ್ಟುಕೊಂಡರಂತೆ, ಹಾಗೆ. ಯಾಕೆ ಮಾಡೋದಿಕ್ಕೆ ಹೋದ್ರಿ?”

ಇದು ಎಂತಹ ಅಪ್ರಬುದ್ಧ ಭಾಷೆ ನೋಡಿ. ಈ ನರೆಂದ್ರಸ್ವಾಮಿ ರಂಗನಾಥ್‌ಗೆ ಯಾವ ರೀತಿಯ ಸ್ನೇಹಿತ? ಹೀಗೆಲ್ಲ ಜನಪ್ರತಿನಿಧಿಗಳನ್ನು ಕೇವಲವಾಗಿ ಮಾತನಾಡಿಸಿದರೆ ನಮ್ಮ ಶಾಸಕಾಂಗದ ಗೌರವ ಏನು ಉಳಿಯಿತು? ನಮ್ಮ ಶಾಸಕರು ಇವತ್ತು ಇಂತಹುದನ್ನೆಲ್ಲ ಕೇಳಿಸಿಕೊಳ್ಳುವುದಕ್ಕೆ ಯೋಗ್ಯರೇ ಇರಬಹುದು. ಆದರೆ, ಒಬ್ಬ ಜವಾಬ್ದಾರಿಯುತ ಪತ್ರಕರ್ತ, ನಿರೂಪಕ, ಆಡುವ ಮಾತೇ ಇದು? ಬೀದಿಯಲ್ಲಿ ಮಾತನಾಡುವ ಸಲಿಗೆಯ ಕುಚೇಷ್ಟೆಯ ಭಾಷೆ.

ಇಬ್ಬರಿಗೂ ನಾಚಿಕೆಯಾಗಬೇಕು.

ಇಂತಹ ನಡವಳಿಕೆ ರಂಗನಾಥ್ ಭಾರದ್ವಾಜ್ ಒಬ್ಬರಿಗೇ ಸೀಮಿತವಾಗಿಲ್ಲ. ನಮ್ಮ ಅನೇಕ ಟಿವಿ ನಿರೂಪಕರು ರಾಜಕಾರಣಿಗಳ ಜೊತೆ ಅತಿಸಲಿಗೆ ಬೆಳೆಸಿಕೊಂಡು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನೇ ಕುಗ್ಗಿಸುತ್ತಿದ್ದಾರೆ. ಎಷ್ಟೋ ಸಲ ನಮ್ಮ ಪತ್ರಕರ್ತರು ರಾಜಕಾರಾಣಿಗಳಿಗಿಂತ ಹೆಚ್ಚಿಗೆ ಓದಿಕೊಂಡಿರುತ್ತಾರೆ. ಸಿದ್ಧಾಂತ, ಸಭ್ಯನಡವಳಿಕೆ, ಭಾಷಾಪ್ರಯೋಗದ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಅದ್ಯಾವುದೂ ಅವರ ನಡವಳಿಕೆ ಮತ್ತು ಭಾಷೆಯಲ್ಲಿ ಕಾಣಿಸುತ್ತಿಲ್ಲ.

ರಾಜಕಾರಣಿಗಳ ಜೊತೆ ಅತಿಸಲಿಗೆಯಿಂದ ಮತ್ತು ಅತಿ ಬೇಜವಾಬ್ದಾರಿಯಿಂದ ವರ್ತಿಸುವ ಕನ್ನಡದ ಟಿವಿ ನಿರೂಪಕರು ವಿನೋದ್ ಮೆಹ್ತಾರ ಈ ಮಾತುಗಳನ್ನು ಕೇಳಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಯ ಕೆಲವು ಪ್ರಾಥಮಿಕ ಪಾಠಗಳನ್ನಾದರೂ ಕಲಿಯಬೇಕು.

ಟಿವಿ ನಿರೂಪಕರು ಇನ್ನೊಬ್ಬರ ಘನತೆಯನ್ನು ಹೆಚ್ಚು ಮಾಡದಿದ್ದರೂ ಪರವಾಗಿಲ್ಲ, ಕನಿಷ್ಟ ತಮ್ಮ ವೃತ್ತಿಘನತೆಯನ್ನಾದರೂ ಉಳಿಸಿಕೊಳ್ಳಲಿ.

ಈಗಾಗಲೆ ಅವರ ಘನತೆ ರಾಜಕಾರಣಿಗಳ ತರಹವೇ ಭ್ರಷ್ಟಾಚಾರದ ವರದಿಗಳಲ್ಲಿ, ಮಾಧ್ಯಮ ಕುರಿತಾದ ಸೆಮಿನಾರ್‌ಗಳಲ್ಲಿ. ಟ್ಯಾಬ್ಲಾಯ್ಡುಗಳಲ್ಲಿ,  ಹಾದಿಬೀದಿಯಲ್ಲಿ, ಹರಾಜಾಗುತ್ತಿದೆ.

ಪತ್ರಿಕೋದ್ಯಮದ ಪರಿಪಾಟಲು

-ಡಾ. ಎನ್. ಜಗದೀಶ್ ಕೊಪ್ಪ

ಮಿತ್ರರೆ, ಈ ದಿನ ಅಂದರೆ, ದಿನಾಂಕ 15-12-11ರ ಕನ್ನಡಪ್ರಭ ಪತ್ರಿಕೆಯ ಸಂಪಾದಕೀಯವನ್ನು ನೀವು ಓದಿರಬಹುದೆಂದು ಭಾವಿಸಿದ್ದೇನೆ. ಬೆಳಿಗ್ಗೆ ಅದನ್ನು ಓದಿದ ಮೇಲೆ ನಮ್ಮಿಬ್ಬರ ನಡುವೆ ಅಂತಹ ಗಾಢ ಸಂಬಂದ ಇಲ್ಲದಿದ್ದರೂ ಕೂಡ ಹಲವು ಭೇಟಿ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣದಲ್ಲಿ ಒಟ್ಟಾಗಿ ವೇದಿಕೆ ಹಂಚಿಕೊಂಡ ಪರಿಣಾಮ  ನನಗೆ ಮಿತ್ರರೇ ಆಗಿರುವ ವಿಶ್ವೇಶ್ವರ ಭಟ್ ಇದನ್ನು ಬರೆಯಬಾರದಿತ್ತು ಎಂದು ಆ ಕ್ಷಣದಲ್ಲಿ ನನಗನಿಸಿತು.

ಏಕೆಂದರೆ, ಮೂರು ದಶಕಗಳ ಕಾಲ ಪತ್ರಿಕೋದ್ಯಮಕ್ಕೆ ಮಣ್ಣು ಹೊತ್ತಿರುವ ನಾನು, ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷವಿಲ್ಲದೆ ನಿರ್ಭಾವುಕತನದಿಂದ ನಡೆದುಕೊಳ್ಳುವುದೇ ಪತ್ರಕರ್ತನ ಮೂಲಭೂತ ಕರ್ತವ್ಯ ಎಂದು ನಂಬಿದವನು.

ಕಳೆದ 15 ದಿನಗಳ ಹಿಂದೆ ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ದಲಿಂಗ ಪಟ್ಟಣಶೆಟ್ಟಿ ಭಟ್ಟರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಗ್ಗೆ ಅವರು ತಮ್ಮ ಕನ್ನಡಪ್ರಭದ ಸಂಪಾದಕೀಯದಲ್ಲಿ ಆಕ್ರೋಶವನ್ನು ಹೊರಚೆಲ್ಲಿದ್ದಾರೆ. ಅದು ಎಲ್ಲಿಯವರೆಗೆ ಸಾಗಿದೆ ಎಂದರೆ, ಪಟ್ಟಣಶೆಟ್ಟಿಯವರ ಮೊದಲ ಪತ್ನಿ ಬೀದಿಯಲ್ಲಿ ಅಟ್ಟಾಡಿಸಿಕೊಂಡು ಚಪ್ಪಲಿಯಲ್ಲಿ ಹೊಡೆದ ಪ್ರಸಂಗ ಕೂಡ ದಾಖಲಾಗಿದೆ. ಕನ್ನಡ ಸಾಹಿತ್ಯವನ್ನು, ಅದರಲ್ಲೂ ವಿಶೇಷವಾಗಿ ಮಾಲತಿ ಪಟ್ಟಣಶೆಟ್ಟಿಯವರ ಕಾವ್ಯವನ್ನು ಓದಿಕೊಂಡಿರುವ ಎಲ್ಲರೂ ಸಿದ್ದಲಿಂಗ ಪಟ್ಟಣಶೆಟ್ಟಿಯವರ ದಾಂಪತ್ಯದ ಕಹಿನೆನಪುಗಳನ್ನು ಬಲ್ಲರು. ಹಲವುಕಡೆ ಇದನ್ನು ಸ್ವತಃ ಅವರೇ ದಾಖಲಿಸಿದ್ದಾರೆ. ನನ್ನ ಪ್ರಶ್ನೆ ಇದಲ್ಲ, ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಸಂಪಾದಕನೊಬ್ಬ ಸಂಪಾದಕೀಯ ಪುಟವನ್ನ ಹೀಗೆ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದೆ? ಜಿಲ್ಲಾ ಮಟ್ಟದಲ್ಲಿ ಸಂಪಾದಕನೇ ಪ್ರಕಾಶಕ, ಮುದ್ರಕ, ಕಡೆಗೆ ಓದುಗ ಕೂಡ ಆಗಿರುವುದರಿಂದ ಇಂತಹ ಘಟನೆಗಳು ಸಾಮಾನ್ಯ.

ಇಡೀ ಘಟನೆಯಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟರ ತಪ್ಪು ಎದ್ದು ಕಾಣುತಿದೆ ನಿಜ. ಅವರನ್ನು ತರಾಟೆಗೆ ತೆಗೆದುಕೊಳ್ಳಲು ಭಟ್ಟರಿಗೆ ಅವರದೇ ಆದ ಬ್ಲಾಗ್, ವೆಬ್‌ಸೈಟ್, ಫೇಸ್‌ಬುಕ್ ತಾಣವಿದ್ದದ್ದರಿಂದ ಅಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬಹುದಿತ್ತು. ನಮ್ಮಂತಹ ಸಾರ್ವಜನಿಕರ ಜೊತೆ ಒಡನಾಡುವ ಪತ್ರಕರ್ತರಿಗೆ ಇಂತಹ ಆಪಾದನೆ, ಟೀಕೆ ಎಲ್ಲವೂ ಸಾಮಾನ್ಯ. ಇವುಗಳಿಗೆ ನಾವು ಗುರಿಯಾಗದೆ, ನಾಲ್ಕು ಗೋಡೆಯ ನಡುವೆ ಇರುವ ನಮ್ಮ ಪತ್ನಿ ಅಥವಾ ಮಕ್ಕಳು ಗುರಿಯಾಗಲು ಸಾಧ್ಯವಿಲ್ಲ. ನಾವು ತಪ್ಪು ಮಾಡದಿದ್ದಾಗ ಇಲ್ಲವೆ ಅನಾವಶ್ಯಕಕವಾಗಿ ನಮ್ಮ ಮೇಲೆ ಆರೋಪ ಹೊರಿಸಿದಾಗ ಮುಖಾ ಮುಖಿಯಾಗಿ ನಿಂತು ಝಾಡಿಸುವುದು ಉತ್ತಮ ಮಾರ್ಗವೇ ಹೊರತು ಪರೋಕ್ಷವಾಗಿ ಪತ್ರಿಕೆಯ ಮೂಲಕ ಬೆಂಕಿ ಕಾರುವುದು ಉತ್ತಮ ಬೆಳವಣಿಗೆಯಲ್ಲ.

ಕೆಲವೆಡೆ ಭಟ್ಟರ ಸಂಪಾದಕೀಯ ಸಾಲುಗಳು ಅವರ ಟೀಕಾಕಾರಿಗೆ ಎಚ್ಚರಿಕೆ ನೀಡುವಂತಿವೆ. ಇಡೀ ರಾಜ್ಯಾದ್ಯಂತ ನನ್ನ ಪತ್ರಿಕೆ, ಛಾನಲ್‌ನ ವರದಿಗಾರರಿದ್ದಾರೆ, ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಮಿತ್ರರಿದ್ದಾರೆ, ಅವರ ಮೂಲಕ ಕ್ಷಣ ಮಾತ್ರದಲ್ಲಿ ವಿಷಯ ಸಂಗ್ರಹಿಸಬಲ್ಲೆ ಎಂಬುದರ ಮೂಲಕ ಭಟ್ಟರು ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮಕ್ಕೆ ಇಳಿಯುತಿದ್ದಾರೆನೋ ಎಂಬ ಸಂಶಯ ಆತಂಕ ಕಾಡತೊಡಗಿದೆ.

ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುತ್ತಾ ಬದುಕು ಕಟ್ಟಿಕೊಂಡಿರುವ ನಾನು ಭಟ್ಟರು ಅನುಭವಿಸಿದಂತಹ ನೂರಾರು ಅಪಮಾನ, ಯಾತನೆಗಳನ್ನು ಅನುಭವಿಸಿದ್ದೇನೆ. ಎದುರಿಗೆ ಸಿಕ್ಕಾಗ ಮುಖ ಮುಸುಡಿ ನೋಡದೆ ಎದೆಗೆ ಒದ್ದ ಹಾಗೆ ಮಾತನಾಡಿದ್ದೇನೆ. ಆದರೆ, ನನ್ನನ್ನು ಟೀಕಿಸುವವರ ಬಗ್ಗೆ ದ್ವೇಷಿಸುವವರ ಬಗ್ಗೆ ಅಕ್ಷರ ರೂಪದಲ್ಲಿ ನಾನೆಂದು ಸೇಡು ತೀರಿಸಿಕೊಳ್ಳಲಾರೆ. ಏಕೆಂದರೆ, ಅಕ್ಷರ ದಾಖಲಾಗುವ ಮಾಧ್ಯಮ. ಅಲ್ಲಮನ ಈ  ವಚನದ ಸಾಲು ನಾನು ಸಿಟ್ಟಿಗೆದ್ದಾಗಲೆಲ್ಲಾ ನನ್ನನ್ನು ತಡೆಯುತ್ತದೆ. “ಬರೆಯಬಾರದು ನೋಡಾ ಅಳಿಸಬಾರದ ಲಿಪಿಯ”. ನಾವು ಬರೆದ ಲಿಪಿ ಶಾಶ್ವತವಾಗಿ ಉಳಿಯುವಂತಿರಬೇಕು. ಹಾಗಾಗ ಬೇಕೆಂದರೆ, ಲೇಖಕ, ಪತ್ರಕರ್ತನಾದವನು ಬರವಣಿಗೆಯಲ್ಲಿ ಸಂಯಮ ಕಾಪಾಡಿಕೊಳ್ಳಬೇಕು. ಇದು ನನ್ನ ನಂಬಿಕೆ.

ಮಾಧ್ಯಮ ಅಕಾಡೆಮಿಗೆ ಮಂಗಳಾರತಿ

-ಡಾ. ಎನ್. ಜಗದೀಶ್ ಕೊಪ್ಪ

ಕಳೆದ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು, ಪತ್ರಕರ್ತರು ತಮ್ಮ ವೃತ್ತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾತನಾಡಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಅಕಾಡೆಮಿಯ ನಿಷ್ಕ್ರಿಯತೆಯ ಬಗ್ಗೆ ಅಧ್ಯಕ್ಷರು ಮತ್ತು ಸದಸ್ಯರ ಮರ್ಮಕ್ಕೆ ತಾಗುವಂತೆ ಮಾತನಾಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಸ್ತಿತ್ವದಲ್ಲಿದೆ ಎಂದು ನನಗೆ ಗೊತ್ತಾಗಿದ್ದು ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಮಾತ್ರ. ಸರ್ಕಾರ ಕೊಟ್ಟ ಅನುದಾನವನ್ನು ಪರಿಣಾಮಾಕಾರಿಯಾಗಿ ಬಳಸಲಾರದಕ್ಕೆ, ಹಾಗೂ ಅಕಾಡೆಮಿಯ ಭವಿಷ್ಯದ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಸಿದ್ಧ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದರೂ ಸಹ ಪ್ರಸ್ತಾವನೆಯನ್ನ ಸಲ್ಲಿಸಲಾರದ ಸೋಮಾರಿತನದ ಬಗ್ಗೆ ನೇರವಾಗಿ ಮುಖ್ಯಮಂತ್ರಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಪಾಪ ನಿಷ್ಕ್ರಿಯತೆ ಮತ್ತು ಅಬ್ಬೆಪಾರಿತನದ ಪ್ರತಿರೂಪದಂತಿರುವ ಅಧ್ಯಕ್ಷ ಪರಮೇಶ್ ತಾನೆ ಏನು ಮಾಡಬಲ್ಲರು?

ಇದರಲ್ಲಿ ಸರ್ಕಾರದ ಪಾತ್ರವೂ ಇದೆ. ಇತ್ತೀಚೆಗಿನ ದಿನಗಳಲ್ಲಿ ಮಾಧ್ಯಮ ಅಕಾಡೆಮಿಗೆ ಸದಸ್ಯರನ್ನ, ಅಧ್ಯಕ್ಷರನ್ನ ನೇಮಕ ಮಾಡುವ ಪ್ರಕ್ರಿಯೆ ಗಮನಿಸಿದರೆ, ಅಕಾಡೆಮಿಯೆಂಬುದು, ನಿಶ್ಯಕ್ತ ಪತ್ರಕರ್ತರ ನಿರಾಶ್ರಿತರ ಶಿಬಿರವೇನೊ ಎಂಬಾಂತಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಮಾಧ್ಯಮಗಳ ಬಗ್ಗೆ ಗಂಭೀರ ಚರ್ಚೆ ನಡೆಯುತಿದ್ದು, ಮಾದ್ಯಮಗಳ ಭಾಷೆ, ಕಾರ್ಯವೈಖರಿ ಮುಂತಾದ ವಿಷಯಗಳ ಬಗ್ಗೆ ಪ್ರಜ್ಞಾವಂತ ಓದುಗರು, ವೀಕ್ಷಕರು ಧ್ವನಿ ಎತ್ತಿದ್ದಾರೆ. ಎತ್ತುತ್ತಿದ್ದಾರೆ. ಮಾಧ್ಯಮ ಮತ್ತು ಜನಸಾಮಾನ್ಯರ ನಡುವೆ ಸಂವಹನದ ಸೇತುವೆಯಾಗಬೇಕಿದ್ದ ಅಕಾಡಮಿ ಈ ನಿಟ್ಟಿನಲ್ಲಿ ಏನು ಕೆಲಸ ಮಾಡಿದೆ? ಈ ಕ್ಷೇತ್ರಕ್ಕೆ ಬರುತ್ತಿರುವ ಹೊಸಬರಿಗೆ ಅನುಕೂಲವಾಗುವಂತೆ ಇತ್ತೀಚೆಗೆ ಯಾವ ಕೃತಿ ಪ್ರಕಟಿಸಿದೆ? ಯಾವ ವಿಚಾರ ಸಂಕಿರಣ ಏರ್ಪಡಿಸಿದೆ? ಹಾಗೆ ನೋಡಿದರೆ, ಪ್ರೆಸ್‌ಕ್ಲಬ್ ಪುಸ್ತಕಗಳ ಪ್ರಕಟಣೆಯಲ್ಲಿ ಅಕಾಡೆಮಿಗಿಂತ ಸಾವಿರ ಪಾಲು ವಾಸಿ. ಕಳೆದ ಮೂರು ವರ್ಷಗಳಲ್ಲಿ ಅದರ ಪ್ರಕಟಣೆಗಳ ಸಂಖ್ಯೆ ಐವತ್ತು ದಾಟಿದೆ.

ಇವತ್ತು ಮಾಧ್ಯಮ ಪ್ರಶಸ್ತಿಗಳ ಮೌಲ್ಯ ಕೂಡ ಚರ್ಚೆಗೆ ಒಳಪಟ್ಟಿದೆ. ಕಳೆದ ವಾರ ಮಂಡ್ಯದಲ್ಲಿ ನಡೆದ ಪತ್ರಿಕೋದ್ಯಮ ವಿಚಾರ ಸಂಕಿರಣದ ಸಂದರ್ಭದಲ್ಲಿ ಮಾತನಾಡಿದ ಗೆಳೆಯ ದಿನೇಶ್ ಅಮಿನ್‌ಮಟ್ಟು ಪ್ರಶಸ್ತಿ ಸ್ವೀಕಾರದ ಬಗ್ಗೆ ತಮ್ಮ ಅಸಹಾಯಕತೆಯನ್ನು ಹೊರಹಾಕಿದರು. “ಪ್ರಶಸ್ತಿ ಸ್ವೀಕರಿಸದಿದ್ದರೆ, ಅಹಂಕಾರ ಎನ್ನುತ್ತಾರೆ, 25 ವರ್ಷಕ್ಕೂ ಹೆಚ್ಚು ಕಾಲ ಪತ್ರಕರ್ತನಾಗಿ ದುಡಿದ ನಾನು ಕೇವಲ ಎರಡು ವರ್ಷದಲ್ಲಿ ಪತ್ರಿಕೋದ್ಯಮಕ್ಕೆ ಬಂದು ಲಾಭಿ ಮೂಲಕ ಪ್ರಶಸ್ತಿ ಪಡೆಯುವವನ ಜೊತೆ ಕುಳಿತು ಅಕಾಡೆಮಿ ಗೌರವವನ್ನು ಹೇಗೆ ಸ್ವೀಕರಿಸಲಿ? ನನಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಿಂತ ಈಗಾಗಲೇ ಪಡೆದಿರುವ ಖಾದ್ರಿ ಶಾಮಣ್ಣ ಪ್ರಶಸ್ತಿ, ಮತ್ತು ಬೆಂಗಳೂರಿನ ಸಂಬುದ್ಧ ಟ್ರಸ್ಟ್ ನೀಡಿರುವ ಗೌರವ ಹೆಚ್ಚು ತೃಪ್ತಿ ನೀಡಿವೆ.” ಇದು ದಿನೇಶ್ ಅಮಿನ್ ಒಬ್ಬರ ಮಾತಲ್ಲ, ತನ್ನ ವೃತ್ತಿಯ ಬಗೆಗಿನ ಬದ್ಧತೆ, ಘನತೆ, ಕಾಳಜಿ ಇಟ್ಟುಕೊಂಡಿರುವ ಪ್ರತಿಯೊಬ್ಬ ಪತ್ರಕರ್ತನ ಮಾತು ಕೂಡ ಹೌದು. ಪ್ರಶಸ್ತಿಗೆ ನಾಲ್ಕು ಜನ ಯೋಗ್ಯರನ್ನ ಆಯ್ಕೆ ಮಾಡಿ, ಅವರ ಜೊತೆ ರಾಜಕಾಣಿಗಳಿಗೆ ಬಕೆಟ್ ಹಿಡಿದ ಎಂಟು ಜನ ಭಟ್ಟಂಗಿಗಳನ್ನು ಆಯ್ಕೆ ಮಾಡಿದರೆ ಪ್ರಶಸ್ತಿಯ ಮೌಲ್ಯ ವೃದ್ಧಿಸುವುದಿಲ್ಲ ಎಂಬ ವಾಸ್ತವ ಸತ್ಯವನ್ನ ಅಕಾಡೆಮಿ ಅರಿಯ ಬೇಕಾಗಿದೆ. ಬಹುತೇಕ ಪ್ರಶಸ್ತಿಗಳು ನಗರ ಕೇಂದ್ರಿತವಾಗಿದ್ದು, ವಿಶೇಷವಾಗಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕವನ್ನು ಕಡೆಗಣಿಸಲಾಗಿದೆ, ನಾನು ದಕ್ಷಿಣ ಕರ್ನಾಟಕದ ಮಂಡ್ಯದವನಾಗಿದ್ದು ಪ್ರಜ್ಞಾಪೂರ್ವಕವಾಗಿ ಈ ಮಾತನ್ನು ಹೇಳುತಿದ್ದೇನೆ. ಕಳೆದ ಹತ್ತು ವರ್ಷದ ಪ್ರಶಸ್ತಿ ಪಟ್ಟಿಯನ್ನ ಅಕಾಡೆಮಿ ಪ್ರಕಟಿಸಿದರೆ, ಸತ್ಯಾಂಶ ಹೊರಬೀಳಲಿದೆ.

ಪ್ರಶಸ್ತಿಯ ಈ ಅಧ್ವಾನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪಾಲು ಕೂಡ ಇದೆ. ಇಂದು ಆ ಸಂಘದಲ್ಲಿ ಕಾರ್ಯನಿರತ ಪ್ರತ್ರಕರ್ತರಿಗಿಂತ ಕಾರ್ಯ ಮರೆತ ಪತ್ರಕರ್ತರು ಶೇ.90 ಮಂದಿ ಇದ್ದಾರೆ. ಎಂದೋ, ಯಾವ ದಶಕದಲ್ಲೋ, ಒಂದೆರಡು ವಾರ ಅಥವಾ ತಿಂಗಳು ಪತ್ರಿಕೆ ನಡೆಸಿ ಸಂಪಾದಕ ಎಂಬ ಮುದ್ರೆಯನ್ನ ಹಣೆಗೆ ಮತ್ತು ಎದೆಗೆ ಒತ್ತಿಕೊಂಡು ಒಡಾಡುವವರೆ ಸಂಘದಲ್ಲಿ ಹೆಚ್ಚು ಮಂದಿ ಇದ್ದಾರೆ, ಏಕೆಂದರೆ, ಈ ದೇಶದಲ್ಲಿ ರಾಜಕಾರಣಿಗೆ ಮತ್ತು ಪತ್ರಕರ್ತನಿಗೆ ನಿವೃತ್ತಿಯೇ ಇಲ್ಲ, ಅವರೆಲ್ಲರೂ ಸಾಯುವವರೆಗೂ ರಾಜಕಾರಣಿಗಳು ಮತ್ತು ಪತ್ರಕರ್ತರು. ಈ ಕುರಿತಂತೆ ಅಧ್ಯಕ್ಷರಾಗಿರುವ ಮಿತ್ರ ಗಂಗಾಧರ್ ಮೊದಲಿಯಾರ್‌ಗೆ ನಿರಂತರ ಪ್ರಕಟಣೆಯಲ್ಲಿರುವ ಹಾಗೂ ಮಾಧ್ಯಮ ಪಟ್ಟಿಯಲ್ಲಿರವ ಪತ್ರಿಕೆಗಳ ಪತ್ರಕರ್ತರಿಗೆ ಮಾತ್ರ ಸದಸ್ಯತ್ವ ನೀಡುವ ಕುರಿತು ಸಂಘದ ನಿಯಾಮಾವಳಿಗಳನ್ನು ಬದಲಿಸುವಂತೆ ನಾನೇ ಸಲಹೆ ನೀಡಿದ್ದೆ. ಈ ರೀತಿ ಪರಿಷ್ಕರಿಸಿದಾಗ ಮಾತ್ರ ನಿಜವಾದ ಪತ್ರಕರ್ತರು ವೃತ್ತಿಯಲ್ಲಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಜಿಲ್ಲಾ ಘಟಕಗಳು ಶಿಪಾರಸ್ಸು ಮಾಡುವ ಅನೇಕ ಅಪಾತ್ರರು ಪ್ರಶಸ್ತಿಗೆ ಪಾತ್ರರಾಗುತ್ತಾರೆ. ಈಗ ನಡೆಯುತ್ತಿರುವುದು ಅದೇ ಆಗಿದೆ.

ನನ್ನ ಈ ಲೇಖನದ ಉದ್ದೇಶ ಯಾರನ್ನೂ ಗುರಿಮಾಡಿಕೊಂಡು ಟೀಕಿಸುವುದಲ್ಲ. ಅಕಾಡೆಮಿಯ ಅವಧಿ ಅಂತ್ಯಗೊಳ್ಳುತಿದ್ದು, ಮುಂಬರುವ ಅಧ್ಯಕ್ಷರು, ಸದಸ್ಯರು ಈ ಅಂಶಗಳತ್ತ ಗಮನ ಹರಿಸಲಿ ಎಂಬುದೇ ನನ್ನ ಆಶಯ ಮತ್ತು ಕಾಳಜಿ. ಕಳೆದ ವಾರ ಕನ್ನಡ ಭಾಷೆಯ ವಿರೋಧಿಯಾದ ಮರಾಠಿ ಪತ್ರಿಕೆಯೊಂದರ ಹುಬ್ಬಳ್ಳಿ ವರದಿಗಾರನೊಬ್ಬ ಧಾರವಾಡ ಜಿಲ್ಲಾಧ್ಯಕ್ಷರ ಶಿಪಾರಸ್ಸು ಪತ್ರ ತೆಗೆದುಕೊಂಡು ಮಾಧ್ಯಮ ಅಕಾಡೆಮಿ ಸದಸ್ಯತ್ವಕ್ಕೆ ಸಚಿವರು, ಶಾಸಕರನ್ನು ಹಿಡಿದುಕೊಂಡು ಓಡಾಡುತ್ತಿದ್ದಾನೆ. ಸದಸ್ಯರ ಗಮನಕ್ಕೆ ಬಾರದೆ ಈ ಕೃತ್ಯ ನಡೆದಿದ್ದು ಈಗ ಈ ಇಬ್ಬರ ರಾಜೀನಾಮೆಗೆ ಒತ್ತಾಯಿಸಲಾಗಿದೆ. ಇಂತಹ ಅವಾಂತರಗಳು ನಡೆಯದಂತೆ ಸರ್ಕಾರ ಕೂಡ ಎಚ್ಚರಿಕೆ ವಹಿಸಬೇಕಾಹಿದೆ.