Tag Archives: Corruption

ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ

– ರವಿ ಕೃಷ್ಣಾರೆಡ್ಡಿ

ನೆನ್ನೆ (27/5/12) ಸಂಜೆಗೆಲ್ಲ ಬಹುಶಃ ದೇಶದ ಬಹಳಷ್ಟು ಜನರಿಗೆ ಐಪಿಎಲ್ ‌ಫೈನಲ್ ಪಂದ್ಯದ ಸಾಂಕ್ರಾಮಿಕ ಜ್ವರ ಹಬ್ಬಿತ್ತು. ಆಟವೂ ಸಹ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿತ್ತು. ಕೊನೆಯ ಚೆಂಡಿನ ತನಕವೂ ಹೋರಾಟ ಬಿಡದ ಧೋನಿ ಈ ಪಂದ್ಯದಲ್ಲೂ ಅಂತಹುದೇ ಅಂತ್ಯ ಕಾಣಿಸಬಹುದೇ ಎನ್ನುವುದು ಬಹುಶಃ ಬಹುತೇಕ ಎಲ್ಲರಲ್ಲೂ ಇದ್ದ ಕುತೂಹಲ. ಇನ್ನು, ಟಿವಿಯಲ್ಲಿ ಕಂಡ ಕೆಲವು ದೃಶ್ಯಗಳಂತೂ ಚಿತ್ರವಿಚಿತ್ರವಾಗಿದ್ದವು. ತಲೆಯ ಮೇಲೆ ಕೈಇಟ್ಟುಕೊಂಡಿದ್ದವರು ಹಲವರಾದರೆ ದೇವರಿಗೆ ಮೊರೆ ಇಡುತ್ತಿದ್ದವರೂ ಹಲವರಿದ್ದರು. ಭಾವನಾತ್ಮಕವಾಗಿ ಇದು ನಮ್ಮನ್ನು ಚಲಿಸಬೇಕು ಎನ್ನಲು ಇದು ದೇಶದೇಶಗಳ ನಡುವೆ ನಡೆದ ಪಂದ್ಯವಲ್ಲ. ದೇಶದೊಳಗಿನ ರಾಜ್ಯಗಳೊಳಗಿನ ಪಂದ್ಯ ಎನ್ನುವ ಹಾಗೂ ಇಲ್ಲ. ಬೆಂಗಳೂರಿನ ರಾಹುಲ್ ದ್ರಾವಿಡ್ ದೂರದ ರಾಜಸ್ಥಾನ ತಂಡದ ನಾಯಕ. ಕೊಲ್ಕತ್ತದ ಗಂಗೂಲಿ ಪುಣೆ ತಂಡದ ನಾಯಕ. ನೆನ್ನೆ ನಡೆದ ಪಂದ್ಯದಲ್ಲಿಯೇ ದೆಹಲಿಯ ಗೌತಮ್ ಗಂಭೀರ್ ಕೊಲ್ಕತ್ತ ತಂಡವನ್ನು ನಡೆಸಿದರೆ ಜಾರ್ಖಂಡ್‌ನ ಧೋನಿ ಚೆನ್ನೈ ತಂಡದ ನಾಯಕ. ಆಟಗಾರರ ಮತ್ತು ತಂಡದ ನಾಯಕರ ಒತ್ತಡವನ್ನು ಅರ್ಥ ಮಾಡಿಕೊಳ್ಳಬಹುದು. ಅವರಿಗೆ ಈ ಆಟಗಳು ಕೇವಲ ಆಟ ಎನ್ನುವುದಕ್ಕಿಂತ ಹೆಚ್ಚು ಮಹತ್ವದ್ದವು. ತಮ್ಮ ಭವಿಷ್ಯದ ಸ್ಥಾನ ಮತ್ತು ಹಣದ ಹರಿವಿನ ಯೋಚನೆಯೇ ಅವರಿಗೆ ಬಹುಶಃ ಎಲ್ಲಕ್ಕಿಂತ ಹೆಚ್ಚು ಇರುತ್ತದೆ. ಆದರೆ, ಅಲ್ಲಿದ್ದ ಪ್ರೇಕ್ಷಕರ ಕಾತರಗಳು ಮತ್ತು ದಿಗಂತದೆಡೆಗಿನ ಮೊರೆಗಳು ಅತಾರ್ಕಿಕವಾದವುಗಳು. ಆಟವನ್ನು ಸವಿಯಲಾರದ ಮೂಢರು. ಬದುಕು ತೀರಾ ವೈಯಕ್ತಿಕವಾಗುತ್ತಿದೆ ಮತ್ತು ಅಸಹ್ಯವಾಗುತ್ತಿದೆ.

ಆದರೂ, ಈ ಐಪಿಎಲ್ ಪಂದ್ಯಗಳ ಒಂದು ಸೊಗಸು ಎಂದರೆ ಅದು ಒಂದು ರೀತಿಯಲ್ಲಿ ಎರಡು ವಿಶ್ವತಂಡಗಳ ಆಟ. ಪ್ರಾಂತ್ಯಗಳ, ಭಾಷೆಗಳ, ದೇಶದ ಗಡಿ ದಾಟಿ ಈ ತಂಡಗಳು ರೂಪುಗೊಂಡಿವೆ. ಆಸ್ಟ್ರೇಲಿಯದ ಆಕ್ರಮಣಕಾರಿ ಆಟಗಾರನಿಗೆ ಜೊತೆಯಾಗಿ ನ್ಯೂಜಿಲೆಂಡ್‌ನ ಜಂಟಲ್‌ಮನ್, ವೆಸ್ಟ್ ಇಂಡೀಸ್‌ನ ದೈತ್ಯಶಕ್ತಿಯ ಕಪ್ಪು ಆಟಗಾರನಿಗೆ ಹೆಗಲುಕೊಟ್ಟು ಆಡುವ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಅಂತ್ಯದ ನಂತರ ಆಡಲು ಇಳಿದ ಬಿಳಿಯ ದೈತ್ಯ, ಈಗಾಗಲೆ ದಂತಕತೆಯಾಗಿರುವ ಶತಕೋಟ್ಯಾಧಿಪತಿ ಆಟಗಾರನೊಂದಿಗೆ ಭಾರತದ ಯಾವುದೊ ಮೂಲೆಯ ಚಿಕ್ಕ ಪಟ್ಟಣದಿಂದ ಬಂದ ಬಡಯುವಕ; ನಿಜಕ್ಕೂ ಇದೊಂದು ಒಳ್ಳೆಯ ಜಾಗತೀಕರಣದ ಸುಂದರ ಉದಾಹರಣೆ. ದೇಶ-ಪ್ರಾಂತ್ಯ-ಭಾಷೆ-ಜನಾಂಗಗಳ ಗಡಿ ಮೀರಿ ಏಕ-ತಂಡವಾಗಿ ಆಡುತ್ತಿರುವ ಬಹುಶಃ ವಿಶ್ವದ ಏಕೈಕ ಕ್ರೀಡಾಕೂಟ. (ಇದರ ಜೊತೆಗೆ ಈ ಕ್ರೀಡಾಕೂಟದಿಂದ ಸಾಧ್ಯವಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನೂ—ಗುಣಾತ್ಮಕವಾದವುಗಳನ್ನು, ನಿರಾಕರಿಸುವಂತಿಲ್ಲ.)

ದೇಶ ನೆನ್ನೆ ಈ ಆಟದ ಕುತೂಹಲದಲ್ಲಿ ಮತ್ತು ಭಾನುವಾರದ ಸಂಜೆಯ ರಜೆಯ ವಿರಾಮದಲ್ಲಿದ್ದಾಗ ಆಂಧ್ರಪ್ರದೇಶದಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ ಗಂಭೀರವಾದ ಘಟನೆ ಜರುಗಿತು. ಮೂರು ದಿನದಿಂದ ಪ್ರತಿದಿನವೂ ಜಗನ್‍ಮೋಹನ್ ರೆಡ್ಡಿಯನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ ಸಂಸ್ಥೆ ನೆನ್ನೆ ಸಂಜೆಗೆ ರೆಡ್ಡಿಯನ್ನು ಬಂಧಿಸುವ ನಿರ್ಧಾರ ತೆಗೆದುಕೊಂಡಿತು. ಈಗ ಜಗನ್‌ಮೋಹನ್ ರೆಡ್ಡಿ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

ಕೆರಳ ಹೊರತುಪಡಿಸಿ ದಕ್ಷಿಣದ ಇತರ ಮೂರೂ ರಾಜ್ಯಗಳಲ್ಲಿ ಭ್ರಷ್ಟಾಚಾರ ಎನ್ನುವುದು ಕಳೆದ ಒಂದೂವರೆ ದಶಕದಿಂದ ಅತಿ ಸಾಮಾನ್ಯವಾಗಿ ಹೋಗಿದೆ. ತಮಿಳುನಾಡಿನ ಜಯಲಲಿತ ದಶಕದ ಹಿಂದೆಯೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಜೈಲಲ್ಲಿ ಕುಳಿತಿದ್ದರು. ಅವರ ನಂತರ ಬಂದ ಕರುಣಾನಿಧಿ ಸರ್ಕಾರದ ಭ್ರಷ್ಟತೆಯೂ ಕಮ್ಮಿ ಇರಲಿಲ್ಲ. ರಾಜ, ಕನಿಮೊಳಿಗಳು ದೆಹಲಿ ಮಟ್ಟದಲ್ಲಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಕರುಣಾನಿಧಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರು ಇಂದು ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಕೇಸುಗಳಲ್ಲಿ ಬಂಧನಕ್ಕೊಳಗಾಗುತ್ತಿರುವುದು ಹೊರಗೆ ಹೆಚ್ಚಿಗೆ ಗೊತ್ತಾಗಿಲ್ಲ. ಸ್ಟ್ಯಾಲಿನ್ ಮತ್ತವರ ಮಗನ ಮೇಲೆಯೂ ಆಪಾದನೆಗಳಿವೆ. ಜಯಲಲಿತರಂತಹ ಜಯಲಲಿತರವರೇ ಇಂದು ತಮಿಳುನಾಡಿನಲ್ಲಿ ಸಂತಳಂತೆ ಕಾಣಿಸುತ್ತಿದ್ದಾರೆ ಎಂದರೆ ಕರುಣಾನಿಧಿಯವರ ಪಕ್ಷದ ಭ್ರಷ್ಟಾಚಾರ ಯಾವ ಹಂತಕ್ಕೆ ಹೋಗಿರಬಹುದು ಎನ್ನುವುದನ್ನು ಊಹಿಸಬಹುದು.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅವರ ಕುಟುಂಬ ಮಾಡಿದ ಆಸ್ತಿ ಮತ್ತು ದುಡ್ಡಿನ ಬಗ್ಗೆ ಅನೇಕ ಆರೋಪ ಮತ್ತು ಊಹಾಪೋಹಗಳಿವೆ. ನಾಯ್ಡು‌ರವರ ಪತ್ನಿಯ ಒಡೆತನದ ಹೆರಿಟೇಜ್ ಡೈರಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ರಾಜ್ಯದ ಕೆ‍ಎಂ‌ಎಫ್‌ಗೆ ಸೆಡ್ಡು ಹೊಡೆದಿತ್ತು. ಈ ಡೈರಿ ಆರಂಭವಾಗಿರುವುದೇ ಭ್ರಷ್ಟಾಚಾರದ ಹಣದಿಂದ ಎಂಬ ಆಪಾದನೆಗಳಿತ್ತು. ಸಾಮಾನ್ಯ ಬಡರೈತನ ಮಗ ಚಂದ್ರಬಾಬು ನಾಯ್ಡುರವರ ಕುಟುಂಬದ ಆಸ್ತಿ ಸಾವಿರಾರು ಕೋಟಿಗಳಲ್ಲಿ ಇದೆ ಎಂದು 2004ರಲ್ಲಿಯೇ ಅಲ್ಲಿಯ ಅವರ ರಾಜಕೀಯ ವಿರೋಧಿಗಳು ಆರೋಪಗಳನ್ನು ಮಾಡುತ್ತಿದ್ದರು. ಆದರೆ ಅವರ ನಂತರ ಬಂದ ವೈಎಸ್‌ಆರ್ ಆಡಳಿತ ಮತ್ತು ಅವರ ಮನೆಯವರ ಭ್ರಷ್ಟತೆ ಇಂದು ನಾಯ್ಡುರವರನ್ನು ಅಲ್ಲಿ ಸಂತನನ್ನಾಗಿ ಮಾಡಿದೆಯೇನೊ.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇಂದು ಇಡೀ ದೇಶದಲ್ಲಿ ತಮ್ಮ ಕುಟುಂಬದ ರಾಜಕೀಯ ಅಧಿಕಾರ ದುರುಪಯೋಗಪಡಿಸಿಕೊಂಡು ಅತಿ ಹೆಚ್ಚು ಹಣ ಮತ್ತು ಬೇನಾಮಿ ಆಸ್ತಿ ಸಂಪಾದಿಸಿದ ರಾಜಕಾರಣಿ ಇದ್ದರೆ ಅದು ಜಗನ್‌ಮೋಹನ್ ರೆಡ್ಡಿ. ತನ್ನ ತಂದೆ ಮುಖ್ಯಮಂತ್ರಿಯಾಗಿದ್ದ ಕೇವಲ ಐದೂವರೆ ವರ್ಷಗಳಲ್ಲಿ ಈ ಮಟ್ಟದ ಅಕ್ರಮ ಆಸ್ತಿ ಮತ್ತು ರಾಜಕೀಯ ಬಲವನ್ನು ದೇಶದ ಇನ್ನೊಂದು ರಾಜಕೀಯ ಕುಟುಂಬ ಮಾಡಿರುವ ಸಾಧ್ಯತೆ ಕಮ್ಮಿ. ನಮ್ಮ ರಾಜ್ಯದ ಯಡ್ಡಯೂರಪ್ಪನವರಿಗಿಂತ ಹೆಚ್ಚಿನ ಮಟ್ಟದ ನಿರಂಕುಶತೆ ಮತ್ತು ಇನ್ನೂ ಹೆಚ್ಚಿನ ಸರ್ವಾಧಿಕಾರತ್ವ ಇದ್ದ ವ್ಯಕ್ತಿ ರಾಜಶೇಖರ ರೆಡ್ಡಿ. 2009ರಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋತಿದ್ದರೆ ಅದಕ್ಕೆ ಕಾರಣ ಅಲ್ಲಿ  ಕಾಂಗ್ರೆಸ್‌ನ ಹಣಕಾಸು ಸಂಪನ್ಮೂಲಗಳನ್ನು ಸರಿಗಟ್ಟಲಾಗದೆ ಹೋದದ್ದು. ರಾಜಶೇಖರ ರೆಡ್ಡಿ ಬದುಕಿದ್ದರೆ ಅವರು ಇಂದು ಎದುರಿಸಬಹುದಿದ್ದ ಸ್ಥಿತಿ ಬಹುಶಃ ನಮ್ಮ ರಾಜ್ಯದಲ್ಲಿ ಇಂದು ಯಡ್ಡಯೂರಪ್ಪ ಎದುರಿಸುತ್ತಿರುವ ಸ್ಥಿತಿಗಿಂತ ಭಿನ್ನವಿರುತ್ತಿರಲಿಲ್ಲ. ಮಗನ ಸ್ಥಾನದಲ್ಲಿ ಅಪ್ಪ-ಮಗ ಇಬ್ಬರೂ ಇರುತ್ತಿದ್ದರು. (ಇದನ್ನು ಅಷ್ಟು ಖಚಿತವಾಗಿ ಹೇಳಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಜನಾರ್ದನ ರೆಡ್ಡಿ, ರಾಜಶೇಖರ ರೆಡ್ಡಿ, ಜಗನ್‌ಮೋಹನ್ ರೆಡ್ಡಿ ಇವರ ಮೇಲೆಲ್ಲ ಸಿಬಿಐ ಈ ರೀತಿ ಎರಗಿ ಬೀಳುತ್ತಿತ್ತು ಎಂದು ಅಷ್ಟೇನೂ ಸ್ವಾಯತ್ತವಲ್ಲದ, ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷದ ಒಲವುಗಳನ್ನು ಅರಿತು ಕೆಲಸ ಮಾಡುವ ಸಿಬಿಐ ಸಂಸ್ಥೆಯ ಇತಿಹಾಸ ಅರಿತವರು ಹೇಳಲಾರರು. ಆದರೆ, ಸಿಬಿಐ ಇವೆಲ್ಲವನ್ನೂ ಮೀರಿ ಕಾರ್ಯ ನಿರ್ವಹಿಸಬೇಕಾದ ಸಂದರ್ಭಗಳು ಬರುತ್ತವೆ.  ಉದಾಹರಣೆಗೆ, ಸುಪ್ರೀಮ್‌ಕೋರ್ಟ್ ಆದೇಶದ ಮೇರೆಗೆ, ಮತ್ತು ನಮ್ಮ ನ್ಯಾಯಾಂಗ ಭ್ರಷ್ಟವಾಗಿಲ್ಲದ ಸಂದರ್ಭದಲ್ಲಿ.)

ಇನ್ನು ನಮ್ಮ ರಾಜ್ಯದಲ್ಲಿ 2000 ದಿಂದೀಚೆಗೆ ನಡೆದಿರುವ ಭ್ರಷ್ಟಾಚಾರ ಗೊತ್ತಿರುವುದೆ. ಪ್ರತಿ ಮಂತ್ರಿ-ಮುಖ್ಯಮಂತ್ರಿಯೂ ಹಿಂದಿನ ಮಂತ್ರಿ-ಮುಖ್ಯಮಂತ್ರಿಯನ್ನು ಮೀರಿಸುತ್ತ ಬಂದರು. ಈ ಸ್ವಚ್ಛಂದ ಭ್ರಷ್ಟಾಚಾರದ ಪ್ರಯುಕ್ತವಾಗಿಯೇ ಒಮ್ಮೆ ರಾಜ್ಯದ ಐದು ಜನ ಶಾಸಕರು ಜೈಲಿನಲ್ಲಿ ಇದ್ದರು. ರಾಜ್ಯದ ಪುಣ್ಯವೋ ಪಾಪವೋ ಈಗ ಎಲ್ಲರೂ ಹೊರಗಿದ್ದಾರೆ. (ಇನ್ನೂ ಒಳಗಿರುವವರ ಶಾಸಕತ್ವ ಈಗಾಗಲೆ ಮುಗಿದಿದೆ, ಇಲ್ಲವೆ ಕೆಲವೇ ದಿನಗಳಲ್ಲಿ ಮುಗಿಯಲಿದೆ.)

ಒಂದು ರೀತಿಯಲ್ಲಿ ತಮಿಳುನಾಡಿನ ಜನರಿಗಿಂತ ನಮ್ಮ ರಾಜ್ಯದ ಮತ್ತು ಆಂಧ್ರಪ್ರದೇಶದ ಜನ ಕಮ್ಮಿ ನ್ಯಾಯವಂತಿಕೆ ತೋರಿಸುತ್ತಿದ್ದಾರೆ. ಅವರ ನ್ಯಾಯಾನ್ಯಾಯ ವಿವೇಚನೆಗೆ ರೋಗ ಬಡಿದಿರುವುದು ಜಾತಿ ಎಂಬ ಕ್ಷುದ್ರ ಆಲೋಚನೆಯಿಂದ. ಆಂಧ್ರದಲ್ಲಿ ಕೇವಲ  ಐದಾರು ಪ್ರತಿಶತ ಇರುವ ರೆಡ್ಡಿ ಜಾತಿಯ “ಜಾತಿವಾದಿ” ಜನ ಜಗನ್‌ಮೋಹನ್ ರೆಡ್ಡಿಯ ಪರ ನಿಂತಿರುವ ಹಾಗಿದೆ. ಅವರಿಗೆ ಎಲ್ಲಕ್ಕಿಂತ ಜಾತಿ ಮುಖ್ಯವಾಗಿದೆ. ಜಗನ್ ಬಂಧನ ಮುಂದಿನ ದಿನಗಳಲ್ಲಿ ಆತನಿಗೆ ಇನ್ನೂ ಹೆಚ್ಚಿನ ರಾಜಕೀಯ ಮತ್ತು ಜಾತಿ ಬಲ ತಂದುಕೊಟ್ಟರೂ ಆಶ್ಚರ್ಯಪಡುವ ಹಾಗೆ ಇಲ್ಲ. ಇನ್ನು ಒಂದೆರಡು ವಾರದಲ್ಲಿ ಅಲ್ಲಿ ನಡೆಯಲಿರುವ 18 ವಿಧಾನಸಭೆ ಮತ್ತು ಒಂದು ಲೋಕಸಭೆ ಉಪಚುನಾವಣೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಆತನ ವೈಕಾಪಾ (ವೈಎಸ್‍ಆರ್ ಕಾಂಗ್ರೆಸ್ ಪಾರ್ಟಿ) ಗೆದ್ದರೆ ಆಶ್ಚರ್ಯಪಡುವಂತಹುದ್ದೇನೂ ಇಲ್ಲ. ಕರ್ನಾಟಕದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಸುಮಾರು 14-15 ಪ್ರತಿಶತ ಇರುವ ಲಿಂಗಾಯತ ಜಾತಿಯ “ಜಾತಿವಾದಿ” ಜನ ಯಡ್ಡಯೂರಪ್ಪನವರ ಪರ ಇರುವಂತೆ ತೋರಿಸುತ್ತಿದ್ದಾರೆ. ಉಗಿಸಿಕೊಳ್ಳಲೂ ಯೋಗ್ಯರಲ್ಲದ, ಬಸವಣ್ಣನ ಹೆಸರು ಹೇಳಲೂ ಅರ್ಹರಲ್ಲದ ಕೆಲವು ಹೀನ ಮಠಾಧೀಶರಂತೂ ಈ ಸಮುದಾಯದ ಸಾಂಘಿಕ ಮತ್ತು ಸಮಷ್ಟಿ ನ್ಯಾಯಪ್ರಜ್ಞೆಯನ್ನೇ ಅವಮಾನ ಮಾಡುತ್ತಿದ್ದಾರೆ. ಕೆಲವು ನಿವೃತ್ತ ನ್ಯಾಯಾಧೀಶರೂ ಜಾತಿ ಕಾರಣಕ್ಕೆ ತಮ್ಮ ನ್ಯಾಯದ ಪರಿಕಲ್ಪನೆಯನ್ನೇ ಬದಲಾಯಿಸಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ರುಜುವಾತಾದರೂ ಹಲವು ಕ್ಷೇತ್ರಗಳಲ್ಲಿ ಯಡ್ಡಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಜಾತಿವಾದಿಗಳು ಗೆಲ್ಲಿಸುವ ಮತ್ತು ಅವರ ವಿರೋಧಿಗಳನ್ನು ಸೋಲಿಸುವ ಎಲ್ಲಾ ಸಾಧ್ಯತೆಗಳೂ ಇವೆ.  ಜಾತಿವಾದಿಗಳಿಗೆ ತಮ್ಮ ಜಾತಿಯ ಮುಖಂಡನೊಬ್ಬ ಮಾಡಿದ ಭ್ರಷ್ಟಾಚಾರ ಭ್ರಷ್ಟಾಚಾರ ಅಲ್ಲವೇ ಅಲ್ಲ. ಬೇರೆ ಜಾತಿಯವನು ಮಾಡಿದರೆ ಮಾತ್ರ ಅದು ಭ್ರಷ್ಟಾಚಾರ.

ನೆನ್ನೆಯ ಬಂಧನ ನನ್ನನ್ನೂ ಒಳಗೊಂಡಂತೆ ದೇಶದ ಅನೇಕ ಪ್ರಜಾಪ್ರಭುತ್ವ ಪ್ರೇಮಿಗಳಲ್ಲಿ ಒಂದಿಷ್ಟು ಸಂತಸ ತಂದಿರಬಹುದು. ಆದರೆ, ಈಗಾಗಲೆ ಇಂತಹ ಹಲವಾರು ಬಂಧನಗಳು ಆಗಿಹೋಗಿವೆ. ಇವರು ಜೈಲಿನಿಂದ ಹೊರಗೆ ಬಂದಾಗ ಆರತಿ ಬೆಳಗಿ ವೀರೋಚಿತ ಸ್ವಾಗತಗಳು ಸಿಗುತ್ತವೆ. ಈ ನೆನಪು ಮತ್ತು ವಾಸ್ತವವೇ ನಮ್ಮೆಲ್ಲರನ್ನು ಒಂದೆಡೆಗೆ ಕಾರ್ಯೋನ್ಮುಖರಾಗಲು ಎಳೆಯಬೇಕು. ಆದರೆ ಎಲ್ಲಕ್ಕಿಂತ ಸುಲಭವಾಗಿ ಇದು ನಮ್ಮನ್ನು ಸಿನಿಕರನ್ನಾಗಿ ಮಾಡುತ್ತಿದೆ.

ಏನಾಗಬೇಕು ಎಂದು ಗೊತ್ತಿರುವವರು ಇಲ್ಲಿ ಅನೇಕರಿದ್ದಾರೆ. ಹೇಗೆ ಮಾಡಬೇಕು ಎಂದು ತೋರಿಸಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ದೇಶದ ಪ್ರಜೆಗಳಲ್ಲಿ ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ ಬೆಳೆಯದ ಹೊರತು ಇಲ್ಲಿ ಗುಣಾತ್ಮಕ ಪರಿಣಾಮಗಳು ಮತ್ತು ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಅಂತಹ ಪರಿವರ್ತನೆಯನ್ನು ಸಾಧ್ಯವಾಗಿಸಿಕೊಳ್ಳುವುದು ಹೇಗೆ?

ಬೆತ್ತಲಾದರು, ನಮ್ಮ ಕರ್ನಾಟಕದ ನಕಲಿ ಬಸವಣ್ಣ


– ಡಾ.ಎನ್. ಜಗದೀಶ್ ಕೊಪ್ಪ


 

ನಮ್ಮ ಕರ್ನಾಟಕ ಸರ್ಕಾರದ ಘನವೆತ್ತ ಅಬಕಾರಿ ಸಚಿವರಾದ ಸಿ.ರೇಣುಕಾಚಾರ್ಯರಿಂದ, ಬಾಡಿಗೆ ಜನರ ಸಮಾವೇಶಗಳಲ್ಲಿ, ದೇವರಾಜ ಅರಸುವಿನಿಂದ ಹಿಡಿದು, ಗಾಂಧಿ, ಬುದ್ಧ, ಅಂಬೇಡ್ಕರ್‌ವರೆಗೆ ಹೋಲಿಕೆಯಾಗಿ, ನಂತರ ಒಮ್ಮೊಮ್ಮೆ ಒಳಗಿರುವ ಪರಮಾತ್ಮ ಹೆಚ್ಚಾದಾಗ, ಕರ್ನಾಟಕದ ಬಸವೇಶ್ವರ ಎಂದೆಲ್ಲಾ ಹಾಡಿ ಹೊಗಳಿಸಿಕೊಂಡಿದ್ದ, ಲಿಂಗಾಯತ ಸಮುದಾಯದ ಮಹಾನ್ ನಾಯಕ(?) ಯಡಿಯೂರಪ್ಪಗೆ ಸಿ.ಬಿ.ಐ. ನೇಣಿನ ಕುಣಿಕೆ ಹತ್ತಿರವಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ಸಿ.ಇ.ಸಿ. ತನ್ನ ವರದಿಯನ್ನ ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸುತ್ತಿದ್ದಂತೆ, ಯಡಿಯೂರಪ್ಪನವರ ರಾಜಕೀಯದ ಅಂತಿಮ  ಅಧ್ಯಾಯ ಆರಂಭಗೊಂಡಿದೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂತಹ ಅಧ್ವಾನದ, ಭ್ರಷ್ಟಾಚಾರದ ಶಿಖರದಂತಿರುವ ಮುಖ್ಯಮಂತ್ರಿಯನ್ನು ಯಾರೂ ನೋಡಿರಲಿಲ್ಲ. ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಯಾವ ಅಳುಕು ಇಲ್ಲದೆ, ಭಂಡತನದಿಂದ ಜಾತಿ ಮತ್ತು ಧರ್ಮದ ರಾಜಕೀಯ ಮಾಡಿದ ಮುಖ್ಯಮಂತ್ರಿ ಎಂದರೆ, ಅದು ಯಡಿಯೂರಪ್ಪ ಮಾತ್ರ.

ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡು ಜೈಲು ಸೇರಿದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಒಳಗಾದ ಈ ವ್ಯಕ್ತಿಗೆ ಇನ್ನಾದರೂ ಬುದ್ಧಿ ಬರಬಹುದು ಎಂದು ಜನತೆ ನಿರೀಕ್ಷಿಸಿದ್ದರು. ಆದರೆ, ಈ ಮನುಷ್ಯ ಮಾಡಿದ್ದೇನು? ಜೈಲಿನಿಂದ ಹೊರಬರುವಾಗಲೇ, ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಜೈಲು ಸೇರಿ ನಂತರ ಬಿಡುಗಡೆಗೊಂಡಂತೆ ತನ್ನ ಎರಡು ಬೆರಳು ಎತ್ತಿ ತೋರಿಸಿಕೊಂಡು ಹೊರಬಂದ ಬಗೆಯನ್ನು ಗಮನಿಸಿದ ಕರ್ನಾಟಕದ ಜನತೆ ಅಂದೇ ತೀರ್ಮಾನಿಸಿಬಿಟ್ಟಿತು, ಇದೊಂದು ಅವಿವೇಕತನದ ಪರಕಾಷ್ಟೆ ಮತ್ತು ರಿಪೇರಿಯಾಗದ ಗಿರಾಕಿ  ಎಂದು.

ಪರಪ್ಪನ ಅಗ್ರಹಾರದ ಜೈಲು ಪಾಲಾಗುತಿದ್ದಂತೆ, ಇಲ್ಲಸಲ್ಲದ ರೋಗದ ನೆಪದಲ್ಲಿ ಜಯದೇವ ಆಸ್ಪತ್ರೆ, ನಂತರ ಬೆಡ್‌ಶೀಟ್ ಮರೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸೇರಿ ನಾಟಕವಾಡಿದ ಇದೇ ಯಡಿಯೂರಪ್ಪ, ಬಿಡುಗಡೆಯ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ, ಇಡೀ ದೇಶ ಮತ್ತು ರಾಜ್ಯವನ್ನು ಹುಚ್ಚುನಾಯಿ ಕಡಿದ ವ್ಯಕ್ತಿಯಂತೆ ತಿರುಗುವುದನ್ನು ಗಮನಿಸಿದರೆ, ಈ ವ್ಯಕ್ತಿಯ ಆಕಾಂಕ್ಷೆ, ಅಧಿಕಾರದ ಲಾಲಸೆ ಯಾವ ಮಟ್ಟದಲ್ಲಿದೆ ಎಂಬುದನ್ನ ನೀವೇ ಊಹಿಸಬಹುದು.

ಅಧಿಕಾರದ ಚುಕ್ಕಾಣಿ ಹಿಡಿದ ಯಾವುದೇ ನಾಯಕನ ಸುತ್ತ ಒಳ್ಳೆಯ ಅಧಿಕಾರಿಗಳ ವರ್ಗ, ಅಥವಾ ಸಹೋದ್ಯೋಗಿಗಳು ಇರಬೇಕು. ಆದರೆ, ಯಡಿಯೂರಪ್ಪನವರ ಬಳಿ ಇದ್ದವರ ಪಟ್ಟಿಯನ್ನ ಒಮ್ಮೆ ಹಾಗೇ ಗಮನಿಸಿ ನೋಡಿ, ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ಯಮಣ್ಯ ನಾಯ್ಡು, ಹರತಾಳು ಹಾಲಪ್ಪ, ಲಕ್ಷಣ ಸವಡಿ, ಸಿ.ಸಿ.ಪಾಟೀಲ್, ಕೃಷ್ಣ ಪಾಲೇಮರ್, ಜನಾರ್ಧನ ರೆಡ್ಡಿ,… ಇವರುಗಳ ಪುರಾಣವನ್ನು ನಿಮಗೆ ಬಿಡಿಸಿ ಹೇಳಬೇಕಿಲ್ಲ. ಹೋಗಲಿ ಒಳ್ಳೆಯ ರಾಜಕೀಯ ಸಲಹೆಗಾರರು ಇದ್ದರೆ? ಅದೂ ಇಲ್ಲ. ಯಡ್ಡಿಯ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಿ.ಜೆ. ಪುಟ್ಟಸ್ವಾಮಿ ಎಂಬ ಆಸಾಮಿ ತನ್ನ ಹುದ್ದೆಯ ಜವಾಬ್ದಾರಿಯನ್ನು ಮರೆತು ಯಡಿಯೂರಪ್ಪನ ಪರವಾಗಿ ದೇವೇಗೌಡರ ಕುಟುಂಬದ ವಿರುದ್ಧ ಬೊಗಳುವ ನಾಯಿಯಾಗಿ ಕೆಲಸ ಮಾಡಿದ್ದೇ ಹೆಚ್ಚು. ಈತನ ಪುರಾಣ ಕೂಡ ರೋಚಕವಾದುದು, ಜೊತೆಗೆ ಅದೊಂದು ದೊಡ್ಡ ಅಧ್ಯಾಯ.

ಈತ ಮಂಡ್ಯ ಜಿಲ್ಲೆ ಮದ್ದೂರು ತಾಲೋಕಿನ ಪ್ರಮುಖ ಹೋಬಳಿ ಕೇಂದ್ರವಾದ ನನ್ನೂರಾದ ಕೊಪ್ಪ ಗ್ರಾಮದಿಂದ ಐದು ಕಿ.ಮಿ. ದೂರವಿರುವ ಬೆಕ್ಕಳಲೆ ಗ್ರಾಮದವನು. ಮಂಡ್ಯ ಹಾಗೂ ತುಮಕೂರು ಜಿಲ್ಲೆಯನ್ನು ಬೇರ್ಪಡಿಸುವ ಶಿಂಷಾ ನದಿ ತೀರದ ಕಟ್ಟಕಡೆಯ ಆ ಗ್ರಾಮದಿಂದ ಬಂದ ಈ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದು, 1966ರಲ್ಲಿ ಬೆಂಗಳೂರಿನ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ( ಈಗಿನ ಬಿ.ಡಿ.ಎ.) ನಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆಗೆ ಸೇರಿದವನು. 1976ರಲ್ಲಿ ತಾನೇ ನಾಯಕನಾಗಿ ನಟಿಸಿ, ನಿರ್ಮಿಸಿದ ಕನ್ನಡ ಚಿತ್ರವೊಂದರ ಮೂಲಕ ಬರೋಬ್ಬರಿ 36 ಲಕ್ಷ ಕಳೆದುಕೊಂಡವನು (ಜಯಂತಿ ಈ ಚಿತ್ರದ ನಾಯಕಿ). ನಿವೃತ್ತಿಯ ದಿನ ಹತ್ತಿರವಾಗುತಿದ್ದಂತೆ ತನ್ನ ಗಾಣಿಗ ಜಾತಿಸಮುದಾಯವನ್ನು ರಾಜ್ಯಾದ್ಯಂತ ಸಂಘಟಿಸಿ, ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣರ ಬೆಂಬಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು  ಎಂ.ಎಲ್.ಸಿ. ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷನಾಗಿ ಅಧಿಕಾರದ ರುಚಿ ಕಂಡವನು. ಹತ್ತು ವರ್ಷದ ಹಿಂದೆ ಬೃಹತ್ ಉದ್ದಿಮೆದಾರನಾಗಲು ಹೊರಟು, ಮೈಸೂರಿನ ವಿಮಾನ ನಿಲ್ದಾಣದ ಎದುರು (ನಂಜನಗೂಡು ರಸ್ತೆಯ ಮಂಡಕಳ್ಳಿ ಬಳಿ) ಪ್ಲಾಸ್ಟಿಕ್ ಚೀಲ ತಯಾರಿಸುವ ಫ್ಯಾಕ್ಟರಿ ತೆಗೆದು ಮುಚ್ಚಿದವನು ( ಬಿ.ಜೆ.ಪಿ. ಸ್ಯಾಕ್ಸ್ ಪ್ರೈ ಲಿಮಿಟೆಡ್). ಇದಕ್ಕಾಗಿ ಕೆ.ಎಸ್.ಎಫ್.ಸಿ.ಯಿಂದ ಮಾಡಿದ ಸಾಲ ಒಂದೂವರೆ ಕೋಟಿ ರೂಪಾಯಿಗೂ ಅಧಿಕ. ಈಗ ಅಂದಾಜು ಮೂರು ಕೋಟಿ ರೂ ದಾಟಿರಬಹುದು. ಸಾಲ ತೀರಿಸಲಾಗದೇ, ಯಡಿಯೂರಪ್ಪನ ಮೊರೆ ಹೊಕ್ಕ ಈತ ಸುದ್ದಿಗೋಷ್ಟಿಯಲ್ಲಿ ಸತ್ಯ ಹರಿಶ್ಚಂದ್ರನ ತುಂಡಿನಂತೆ ಮಾತನಾಡುವುದನ್ನು ನೀವೆಲ್ಲಾ ಗಮನಿಸಿದ್ದೀರಿ.

ಈವರೆಗೆ ಯಡಿಯೂರಪ್ಪ ಮಾಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಕೇವಲ ಕರ್ನಾಟಕದಲ್ಲಿ ಮಾತ್ರ ಸುದ್ಧಿಯಾಗುತಿತ್ತು. ಈಗ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿ ರಾಷ್ಟ್ರಮಟ್ಟದ ಚರ್ಚೆಯಾಗಿ ಮಾರ್ಪಟ್ಟು ಕರ್ನಾಟಕದ ಜನತೆ ತಲೆತಗ್ಗಿಸುವಂತಾಗಿದೆ. ಇಷ್ಟೆಲ್ಲಾ ಅಪರಾಧ ಮಾಡಿಯೂ, ಯಡಿಯೂರಪ್ಪ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವ ದಾಟಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹನ್ನೆರೆಡು ವರ್ಷ ಅನ್ನ ಕಾಣದ ವ್ಯಕ್ತಿ ಭಕ್ಷಭೋಜನದ ತಟ್ಟೆಯ ಎದರು ಕುಳಿತು ತಿನ್ನುವಂತೆ, ಮುಖ್ಯಮಂತ್ರಿಯ ಗಾದಿಯಲ್ಲಿ ಕುಳಿತು, ದೇಣಿಗೆ ಹೆಸರಿನಲ್ಲಿ, ತಾನು, ತನ್ನ ಮಕ್ಕಳು, ಅಳಿಯ ಸೇರಿ ಎಂಜಲು ಕಾಸಿಗೆ ಕೈಯೊಡ್ಡಿದ ರೀತಿ ನಿಜಕ್ಕೂ ಸಾರ್ವಜನಿಕವಾಗಿ ಅಸಹ್ಯ ಮೂಡಿಸುವಂತಹದ್ದು.

ಇಡೀ ಯಡಿಯೂರಪ್ಪನವರ ಕುಟುಂಬವನ್ನು ದಾರಿ ತಪ್ಪಿಸಿದ್ದು ಮಾಲೂರಿನ ಶಾಸಕ ಕೃಷ್ಣಯ್ಯ ಶೆಟ್ಟಿ ಎಂಬಾತ. ಸದಾ ತಿರುಪತಿ ತಿಮ್ಮಪ್ಪನ ಧ್ಯಾನದಲ್ಲಿರುವ ಈತ ಕೈಯಲ್ಲಿ ಉಂಡೆನಾಮ ಹಿಡಿದು ತಿರುಗುವ ಆಸಾಮಿ. ನೀವು ಯಾಮಾರಿದರೆ, ಹಣೆಗೆ ಮಾತ್ರವಲ್ಲ, ಮುಕುಳಿಗೂ ನಾಮ ಬಳಿಯುವಲ್ಲಿ ನಿಸ್ಸೀಮ.

ತನ್ನ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ಪಡೆದರೆ ತಪ್ಪೇನು ಎಂದು ವಾದಿಸುವ ಯಡಿಯೂರಪ್ಪನವರಿಗೆ ನಮ್ಮ ಪ್ರಶ್ನೆ ಇಷ್ಟೆ: ನಲವತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು, ಶಾಸಕನಾದಾಗ, ವಿರೋಧಪಕ್ಷದ ನಾಯಕನಾದಾಗ, ಅಥವಾ ಉಪಮುಖ್ಯಮಂತ್ರಿಯಾಗಿದ್ದಾಗ ಬಾರದ ದೇಣಿಗೆ ಮುಖ್ಯಮಂತ್ರಿಯಾದಾಗ ಹೇಗೆ ಬಂತು?

ದೇಣಿಗೆ ಪಡೆದದ್ದು ಸತ್ಯವೇ ಆಗಿದ್ದರೆ, ಸುದ್ದಿ ಬಹಿರಂಗವಾಗುತಿದ್ದಂತೆ ರಾತ್ರೋರಾತ್ರಿ ಬೆಂಗಳೂರಿನ ರಾಜಮಹಲ್ ವಿಲಾಸ ಬಡಾವಣೆಯ ಮೈಸೂರು ಬ್ಯಾಂಕಿನಿಂದ 20 ಕೋಟಿ ಹಣವನ್ನು ತೆಗೆದು ಖಾತೆ ಮುಚ್ಚಿದ್ದು ಏಕೆ? ಅಕ್ರಮಗಳ ಕುರಿತು ಧಾರವಾಡದ ಎಸ್.ಆರ್. ಹಿರೇಮಠ ಸಿ.ಇ.ಸಿ.ಗೆ ದಾಖಲೆ ಸಲ್ಲಿಸುತಿದ್ದಂತೆ ಗಣಿ ಉದ್ಯಮಿ ಪ್ರವೀಣ್ ಚಂದ್ರ ಎಂಬುವರಿಂದ ಪಡೆದ ಐದು ಕೋಟಿ ದೇಣಿಗೆ ಹಣವನ್ನು ಈಗ ಸಾಲ ಎಂದು ವಾದಿಸುತ್ತಿರುವುದಾದರು ಏಕೆ? 

ಕರ್ನಾಟಕದ ಜನತೆಯನ್ನು ಯಡಿಯೂರಪ್ಪ ಕಿವಿಗೆ ಹೂ ಮುಡಿಯುವ ಗಿರಾಕಿಗಳು ಎಂದು ಭಾವಿಸಿದಂತಿದೆ.

ತಾನು ಹಂಚಿದ ಎಂಜಲು ಪ್ರಸಾದ ತಿಂದು, ಬಹುಪರಾಕು ಹೇಳುವ ಕೆಲವು ಮಾನಗೆಟ್ಟ ಮಠಾಧೀಶರು ಮತ್ತು ಲಿಂಗಾಯುತ ನಾಯಕರಿಂದ ಆಧುನಿಕ ಬಸವೇಶ್ವರ ಎಂದು ಹಾಡಿ ಹೊಗಳಿಸಿಕೊಳ್ಳುವ ಯಡಿಯೂರಪ್ಪ ಒಮ್ಮೆ ಗಾಲಿ ಜನಾರ್ಧನ ರೆಡ್ಡಿಯನ್ನು ನೆನಪಿಸಿಕೊಳ್ಳುವುದು ಒಳಿತು. ತಾನು ಅಪ್ಪಟ 24 ಕ್ಯಾರೆಟ್ ಚಿನ್ನ ಎಂದು ಘೋಷಿಸಿಕೊಂಡಿದ್ದ ಈ ಗಣಿಕಳ್ಳ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಾ, ತುಕ್ಕುಹಿಡಿಯುವ ಕಬ್ಬಿಣವಾಗಿದ್ದಾನೆ. ಈತನ ಅಮೇದ್ಯ ತಿಂದು ಬಳ್ಳಾರಿಯ ಬೀದಿ, ಬೀದಿಯಲ್ಲಿ ಆಧುನಿಕ ಕೃಷ್ಣದೇವರಾಯ ಎಂದು ಹಾಡಿ ಹೊಗಳಿದ ನಾಯಿ ನರಿಗಳೆಲ್ಲಾ ಈಗ ಚೆಲ್ಲಾಪಿಲ್ಲಿಯಾಗಿವೆ.

ತಾನು ಎಸಗಿರುವ ಅಕ್ಷಮ್ಯ ಅಪರಾಧಗಳಿಗೆ ಯಾವ ಯಜ್ಞವಾಗಲಿ, ದೇವರಾಗಲಿ ರಕ್ಷಣೆಗೆ ಬರಲಾರವು. ಈ ಸತ್ಯವನ್ನು ಅರಿತು, ಕಾನೂನಿನ ಮುಂದೆ ತಲೆಬಾಗಿ, ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ನಿವೃತ್ತಿಯಾಗುವುದೊಂದೇ ಈಗ ಯಡಿಯೂರಪ್ಪನವರ ಪಾಲಿಗೆ ಉಳಿದಿರುವ ಏಕೈಕ ಮಾರ್ಗ. ಅದನ್ನು ಹೊರತು ಪಡಿಸಿ, ನನ್ನ ಈ ಅವಸ್ಥೆಗೆ ವಿರೋಧ ಪಕ್ಷಗಳು ಕಾರಣ, ನನ್ನ ಪಕ್ಷದ ಹಿತಶತ್ರುಗಳು ಕಾರಣ ಎಂದು ಬೊಬ್ಬಿರಿದರೆ, ಅದನ್ನು ಜಾಣತನವೆಂದು ಕರೆಯುವುದಿಲ್ಲ. ಬದಲಿಗೆ, ಹುಚ್ಚುತನ ಎಂದು ಕರೆಯಲಾಗುತ್ತದೆ.


ಕಳೆದ ಶುಕ್ರವಾರ Central Empowered Committee ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿ ನಮ್ಮ ಓದುಗರಿಗೆ ಇಲ್ಲಿ ಲಭ್ಯವಿದೆ.

ಮತ್ತೆ ಕೋಮಾ ಸ್ಥಿತಿಯಲ್ಲಿ ಲೋಕಪಾಲ ಮಸೂದೆ

-ಡಾ.ಎಸ್.ಬಿ.ಜೋಗುರ

ಕಳೆದ ವರ್ಷವಿಡೀ  ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟ ಜನಲೋಕಪಾಲ್ ಮಸೂದೆ ಸಿಡಿಯದಿರುವ ಪಟಾಕಿಯಂತೆ ಟುಸ್… ಎಂದದ್ದು ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಮಾತನಾಡುವವರಿಗೆ ಕೊಂಚ ನಿರಾಶೆಯನ್ನುಂಟು ಮಾಡಿರುವುದು ಸ್ವಾಭಾವಿಕವೇ ಆದರೂ ರಾಜಕೀಯ ಶಕ್ತಿಗಳು ಹಗ್ಗ ಕೊಟ್ಟು ಕೈ ಕಟ್ಟಿಕೊಳ್ಳಲು ತಯಾರಿಲ್ಲ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ. ಅವೇನಿದ್ದರೂ ಬಾಯಿ ಮಾತಿನ ಮೂಲಕವೇ ರಾಜಕೀಯ ವಿಪ್ಲವಗಳನ್ನು ಹುಟ್ಟುಹಾಕಬಲ್ಲವೇ ಹೊರತು ಕಾರ್ಯಾತ್ಮಕವಾಗಿ ಅಲ್ಲ. ಹಾಗಾಗಿಯೇ ರಾಜ್ಯಸಭೆಯಲ್ಲಿ ಅದಕ್ಕೆ ಗ್ರೀನ್ ಸಿಗ್ನಲ್ ಸಿಗದಿರುವುದು ನಿರೀಕ್ಷಿತವೇ ಎನ್ನುವಂತಿದೆ. ಆಳುವ ಮತ್ತು ವಿರೋಧ ಪಕ್ಷಗಳೆರಡೂ ಚುನಾವಣೆಯ ಸಂದರ್ಭದಲ್ಲಿ ಕೋಮಾ ಸ್ಥಿತಿಯಲ್ಲಿರುವ ಈ ಲೋಕಪಾಲ್ ಮಸೂದೆಯ ಬಗ್ಗೆ ತಮಗೆ ತಿಳಿದಂತೆ ಮತದಾರನ ಎದುರು ವಿವರಿಸಿ ಲಾಭ ಗಿಟ್ಟಿಸಿಕೊಳ್ಳುವ ಕಸರತ್ತಿನಲ್ಲಿದ್ದಾರೆ. ಈ ಲೋಕಪಾಲ ಬಿಲ್ ರಾಜ್ಯಸಭೆಯವರೆಗೂ ಬಂದು ಅಟಕಾಯಿಸಿಕೊಂಡಿರುವುದು ಇದೇ ಮೊದಲಂತೂ ಅಲ್ಲ. ಈ ಮುಂಚೆ ಸುಮಾರು ಹನ್ನೊಂದು ಬಾರಿ ಈ ಮಸೂದೆಯು ಸದ್ಯದ ಹಂತದವರೆಗೆ ಬಂದು ತಲುಪಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿರುವುದಿದೆ. 1968 ರಿಂದಲೂ ಈ ಬಗೆಯ ಮರಳಿ ಯತ್ನವ ಮಾಡುವ ಕೆಲಸ ನಿರಂತರವಾಗಿ ನಡದೇ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಅದು ಜಾರಿಯಾಗಲಿದೆ ಎಂದೆನ್ನುವಾಗಲೇ ಅದು ಕೋಮಾ ಹಂತವನ್ನು ತಲುಪುವ ಸ್ಥಿತಿ ಮಾಮೂಲಾಗಿದೆ.

ಭ್ರಷ್ಟಾಚಾರ ವಿರೋಧಿ ಆಂದೋಲನ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ದೇಶವ್ಯಾಪಿಯಾದ ಒಂದು ದೊಡ್ಡ ಚಳವಳಿಯನ್ನೇ ರೂಪಿಸಿತ್ತಾದರೂ ಅವರ ಅಂತಿಮ ಉದ್ದೇಶ ಮಾತ್ರ ಸಾಕಾರಗೊಳ್ಳದಿರುವುದು ವಿಷಾದನೀಯವೇ ಹೌದು. ಜಾರಿಗೊಳಿಸುವುದಿದ್ದರೆ ಬಲಿಷ್ಟ ಜನಲೋಕಪಾಲ ಜಾರಿಗೊಳಿಸಿ, ಇಲ್ಲದಿದ್ದರೆ ಬೇಡ ಎಂದು ಪಟ್ಟು ಹಿಡಿದ ಅಣ್ಣಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿಯೂ ಹೋರಾಟ, ಸತ್ಯಾಗ್ರಹವನ್ನು ಆರಂಭಿಸಿರುವುದಿತ್ತು. ಅಣ್ಣಾನ ಹೋರಾಟಕ್ಕೆ ಸಿಕ್ಕ ಬೆಂಬಲ ಆಳುವ ಪಕ್ಷದ ಸಾಮರ್ಥ್ಯವನ್ನೇ ಕೆಣಕಿದಂತಿತ್ತು. ಹೀಗಾಗಿ ಅಣ್ಣಾನನ್ನು ಬಂಧಿಸಿ ಬಿಡುಗಡೆ ಮಾಡಿಯೂ ಆಯಿತು. ನಂತರ ಬಿಡುಗಡೆ ಮಾಡಿ ಅವರ ಸತ್ಯಾಗ್ರಹಕ್ಕೆ ರಾಮಲೀಲಾದಂತಹ ಚಾರಿತ್ರಿಕವಾದ ಸ್ಥಳವನ್ನೇ ನೀಡಿತು.

ಅಣ್ಣಾ ಒಡ್ಡುವ ಶರತ್ತುಗಳನ್ನು ಒಪ್ಪಿಕೊಂಡು ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಸರ್ಕಾರ ರಾಜ್ಯಸಭೆಯಲ್ಲಿ ಜನಲೋಕಪಾಲ ಮಸೂದೆಯನ್ನು ಒಪ್ಪಿಕೊಳ್ಳುವುದರಿಂದ ಹಿಂದೆ ಸರಿಯುವುದರಲ್ಲಿ ಅದರದೇಯಾದ ಕೆಲ ರಾಜಕೀಯ ಕಾರಣಗಳು ಇರಬಹುದಾದರೂ ಆ ಮೂಲಕ ಪರೋಕ್ಷವಾಗಿ  ಅಣ್ಣಾ ಹೋರಾಟದ ಸತ್ವ ಕಡಿಮೆ ಮಾಡುವಲ್ಲಿಯೂ ಅವರ ರಾಜಕೀಯ ಧೋರಣೆ ಕಾರಣವಾಯಿತು. ಅದೇ ವೇಳೆಗೆ ಈ ಜನಲೋಕಪಾಲ ಮಸೂದೆಯನ್ನು ಯಾರು ವಿರೋಧಿಸಿದರು ಎನ್ನುವುದಕ್ಕಿಂತಲೂ ರಾಜಕೀಯ ಹಿತಾಸಕ್ತಿಗಳ ಗಮನವೇ ಇಲ್ಲಿ ಮುಖ್ಯವಾಗಿ ಬಲಿಷ್ಟ ಲೋಕಪಾಲ ಮಸೂದೆ ಸೊರಗುವಂತಾಯಿತು. ಅದೇ ವೇಳೆಗೆ ಅಣ್ಣಾ ಬಳಗದಲ್ಲಿಯ ಕೆಲವರ ಮಾತುಗಳಲ್ಲಿ ಗೊಂದಲಗಳು, ರಾಜಕೀಯ ಪಕ್ಷವೊಂದರ ಪರವಾದ ಮಾತುಗಳಂತೆ ಕೇಳಬರತೊಡಗಿದವು. ಪರಿಣಾಮವಾಗಿ ಕಳೆದ ಜನವರಿಯಲ್ಲಿ ಅಣ್ಣಾ ಟೀಮಿಗೆ ಇದ್ದ ನಾಯಕತ್ವದ ರಭಸ ವರ್ಷದ ಅಂತ್ಯದಲ್ಲಿ ತನ್ನ ಗಡುಸುತನವನ್ನು ಕಳೆದುಕೊಳ್ಳತೊಡಗಿತು.

ಜನತೆಗೆ ಅದರಲ್ಲೂ ದುಡಿದು ಬದುಕುವ ಸಾಮಾನ್ಯರಿಗೆ ಈ ಲೋಕಪಾಲ ಮಸೂದೆಯ ಜಾರಿಗೊಳ್ಳುವಿಕೆ, ಜಾರಿಯಾಗದಿರುವಿಕೆ ಎರಡೂ ಅಷ್ಟಾಗಿ ಬಾಧಿಸುವುದಿಲ್ಲ. ಹಾಗೆಯೇ ಭ್ರಷ್ಟಾಚಾರದ ವಿರೋಧಿ ಆಂದೋಲನವನ್ನು ನಿರಂತರವಾಗಿ ನೆನಪಿಟ್ಟು ಆ ದಿಶೆಯಲ್ಲಿ ನಡೆಯಬೇಕಾದ ನಿರಂತರ ಹೋರಾಟವನ್ನು ರೂಪಿಸುವಷ್ಟು ಇವರ ಬದುಕು ಸುಭದ್ರವಾಗಿಲ್ಲ. ಈಗ ಅದೇ ಅಣ್ಣಾ ಮತ್ತೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದರೆ ಸಾಮಾನ್ಯ ಮಧ್ಯಮವರ್ಗದ ಜನ ಮೊದಲಿನ ಹುರುಪಿನಲ್ಲಿಯೇ ಅಣ್ಣಾ ಕೂಗಿಗೆ ಸ್ಪಂದಿಸುತ್ತಾರೆ ಎಂದು ಹೇಳುವಂತಿಲ್ಲ. ಯಾಕೆಂದರೆ ಸಾಮಾನ್ಯನ ಬದುಕೇ ಹಾಗಿದೆ. ಆತ ಯಾವುದನ್ನೂ ತುಂಬಾ ದೀರ್ಘ ಕಾಲದವರೆಗೆ ನೆನಪಿಟ್ಟುಕೊಳ್ಳಲಾರ. ಜೊತೆಗೆ ಅತ್ಯಂತ ಬೇಗ ಆತ ಒಂದು ವ್ಯವಸ್ಥೆಯ ಬಗ್ಗೆ ಸಿನಿಕತನವನ್ನು ಹೊಂದುವುದೂ ಇದೆ.

ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ತಮ್ಮ ಕರಾಳ ವ್ಯವಹಾರಗಳಿಗೆ ಕುತ್ತು ಬರುವಂತಹ ಯಾವ ನಿಯಮಗಳನ್ನೂ ಇಲ್ಲಿಯವರೆಗೆ ಒಪ್ಪಿಕೊಂಡಿರುವುದು ತೀರಾ ಅಪರೂಪ. ಅಂತಹದರಲ್ಲಿ ಪ್ರಧಾನಮಂತ್ರಿಯನ್ನೊಳಗೊಂಡು ಎಲ್ಲರೂ ಲೋಕಪಾಲ ಮಸೂದೆಗೆ ಒಳಪಡಬೇಕು ಎನ್ನುವ ಅಣ್ಣಾನ ಒತ್ತಾಸೆ ಈಡೇರುವದಾದರೂ ಹೇಗೆ..?

ಅಣ್ಣಾ ಜನಲೋಕಪಾಲ ಮಸೂದೆಯ ವಿಷಯದಲ್ಲಿ ತನ್ನ ಮಿತಿಗಳನ್ನೂ ಮೀರಿ ಹೋರಾಟ ಮಾಡಿದ. ಹಾಗೆಯೇ ಹಿಂದೆಂದೂ ಯಾರಿಗೂ ಸಿಗದ ಅಪಾರ ಪ್ರಮಾಣದ ಜನಬೆಂಬಲವೂ ಅವನಿಗೆ ದೊರೆಯಿತು. ಅಂತಿಮವಾಗಿ ಆಗಬೇಕಾದ ಮಹತ್ತರವಾದ ಕೆಲಸವೊಂದು ಹಾಗೇ ಉಳಿದುಹೋಯಿತು. ಪರೋಕ್ಷವಾಗಿ ಈ ಬಗೆಯ ಬಲಿಷ್ಟ ಲೋಕಪಾಲ ಮಸೂದೆ ಬಹುತೇಕ ರಾಜಕಾರಣಿಗಳಿಗೆ ಬೇಕಾಗದಿರುವಂತೆ, ಭ್ರಷ್ಟ ಅಧಿಕಾರಿ ಸಮೂಹಕ್ಕೂ ಬೇಕಾಗಿಲ್ಲ. ಇನ್ನು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ ಜನಸಾಮಾನ್ಯ ಮಾತ್ರ ತನ್ನ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ಎಂದಿನಂತೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾ ಹಾಯಾಗಿದ್ದಾನೆ. ಮತ್ತೆ ಅಣ್ಣಾ ಒಂದೊಮ್ಮೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕರೆ ನೀಡಿದರೆ ಭ್ರಷ್ಟಾಚಾರ ವಿಷಯದಲ್ಲಿ ಅಪಾರ ಪ್ರಮಾಣದಲ್ಲಿ ಮಾತಾಡಿ, ಆ ಬಗ್ಗೆ  ಕೇಳಿ ಯಥಾಸ್ಥಿತಿಯನ್ನೇ ಅನುಭವಿಸುವಂತಾದ ಜನ ಅದೇ ಮೊದಲಿನ ಪ್ರಮಾಣದಲ್ಲಿ ಅಣ್ಣಾಗೆ ಸಾಥ್ ನೀಡುತ್ತಾರೆಂದು ನನಗನಿಸದು.

ರಾಮಕೃಷ್ಣ ಹೆಗ್ಡೆಯ ನುಡಿಗಳು ಮತ್ತು ಯಡಿಯೂರಪ್ಪನ ನಡೆಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಇದು 2003ರ ಡಿಸೆಂಬರ್ ತಿಂಗಳ ಒಂದು ಘಟನೆ. ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಸುಧಾ ಮೂರ್ತಿಯವರ ಪ್ರವಾಸಕಥನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರ ನಿರಾಕರಣೆ ಚಳುವಳಿ ಕುರಿತ ಎರಡು ಕೃತಿಗಳನ್ನು ಪ್ರಕಟಿಸಿ, ಬಿಡುಗಡೆಗಾಗಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರನ್ನು ಆಹ್ವಾನಿಸಿತ್ತು. ಅಂದಿನ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ಹಾವಳಿ ಈಗಿನ ಹಾಗೆ ಇರಲಿಲ್ಲ. ನಾಲ್ಕು ದಿನಪತ್ರಿಕೆ ಹಾಗೂ ಎರಡು ಚಾನಲ್‌ಗಳು ಮಾತ್ರ ಇದ್ದವು.

ಸಂಜೆ 6 ಗಂಟೆಗೆ ಪತ್ರಿಕೆಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾವು ಆರು ಮಂದಿ ಪತ್ರಕರ್ತರು ಸುಮಾರು 5:30ರ ವೇಳೆಗೆ ಕಾರ್ಯಕ್ರಮಕ್ಕೆ ಹಾಜರಾದಾಗ ಪತ್ರಿಕೆಯ ಟ್ರಸ್ಟ್ ಅಧ್ಯಕ್ಷರ ಕಚೇರಿಯಲ್ಲಿ ಲಘು ಉಪಹಾರ ಏರ್ಪಡಿಸಲಾಗಿತ್ತು. ಆ ವೇಳೆಗಾಗಲೇ ಆಗಮಿಸಿದ್ದ ರಾಮಕೃಷ್ಣ ಹೆಗ್ಡೆ ನಮ್ಮೊಂದಿಗೆ ತಿಂಡಿ ತಿನ್ನುತ್ತಾ ಇದ್ದಕ್ಕಿದ್ದಂತೆ ತಮ್ಮ ಒಂದು ಬಾಲ್ಯದ ಅನುಭವವನ್ನು ನಮ್ಮ ಮುಂದೆ ಬಿಚ್ಚಿಟ್ಟರು. ಅವರ ಮಾತಿನ ಲಹರಿ ಹೀಗಿತ್ತು:

ನನಗಾಗ ಕೇವಲ ಆರು ಅಥವಾ ಏಳು ವರ್ಷವಿರಬಹುದು. ಸಿದ್ದಾಪುರದ ಗದ್ದೆಯ ನಡುವೆ ಇದ್ದ ನಮ್ಮ ಮನೆ ಆ ಕಾಲಕ್ಕೆ ಬ್ರಿಟೀಷರ ವಿರುದ್ಧ ಹೋರಾಡುತಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದು ರೀತಿಯಲ್ಲಿ ತಂಗುದಾಣವಾಗಿತ್ತು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಗಡಿಭಾಗದಲ್ಲಿದ್ದ ನಮ್ಮ ಮನೆ ಸ್ವಾತಂತ್ರ್ಯ ಹೋರಾಟಗಾರರು ಪೋಲಿಸರಿಂದ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳವಾಗಿತ್ತು.

ಶಿವಮೊಗ್ಗ ಪೋಲಿಸರಿಂದ ತಪ್ಪಿಸಿಕೊಳ್ಳಲು ಬೇಲಿ ನೆಗೆದು ನಮ್ಮ ಮನೆಗೆ ಬಂದರೆ ಹಿಡಿಯುವಂತಿರಲಿಲ್ಲ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆ ಪೋಲಿಸರು ಬಂದರೆ ಸಲೀಸಾಗಿ ಬೇಲಿ ನೆಗೆದು ಶಿವಮೊಗ್ಗ ಗಡಿಪ್ರದೇಶಕ್ಕೆ ತೆರಳಬಹುದಾಗಿತ್ತು. ಮೂಲತಃ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನನ್ನ ತಂದೆ ಮಹಾಬಲೇಶ್ವರ ಹೆಗಡೆ ಯಾರೇ ನಮ್ಮ ಮನೆಗೆ ಬಂದರೂ ಜಾತಿ ಧರ್ಮ ಬೇಧವಿಲ್ಲದೆ ಆತಿಥ್ಯ ನೀಡುತಿದ್ದರು. ನನ್ನ ತಾಯಿ ಸರಸ್ವತಿ ಹೆಗಡೆ ಕೂಡ ಅಕ್ಷರಶಃ ಅನ್ನಪೂರ್ಣೆಯಂತೆ ನಡೆದುಕೊಳ್ಳುತಿದ್ದರು.

ನಮ್ಮ ಮನೆ ಬ್ರಿಟೀಷರಿಗೆ ತಲೆನೋವಾದ ಕಾರಣ ಸರ್ಕಾರ ಗದ್ದೆಯ ಬಯಲಿನಲ್ಲಿ ಇದ್ದ ನಮ್ಮ ಮನೆಯನ್ನು ಧ್ವಂಸ ಮಾಡುವಂತೆ ಪೋಲಿಸರಿಗೆ ಆದೇಶ ಜಾರಿ ಮಾಡಿತು. ಒಂದು ಬೆಳಗಿನ ಜಾವ ಮನೆಗೆ ಬಂದ ಪೋಲಿಸರು ನಮ್ಮ ಹೆಂಚಿನ ಮನೆ, ಅದರೊಳಗೆ ಅತಿಥಿಗಳಿಗಾಗಿ ನಿರ್ಮಿಸಿದ್ದ ಅಟ್ಟ, ಪಾತ್ರೆ, ದಿನಸಿ ಸಾಮಾನುಗಳನ್ನು ನಾಶ ಮಾಡಿ ಹೊರಟು ಹೋಯಿತು.

ನನ್ನ ಅಪ್ಪ, ಅಮ್ಮ, ನಾನು, ನನ್ನ ಸಹೋದರ ಎಲ್ಲರೂ ಬಯಲಿಗೆ ಬಿದ್ದೆವು. ದೃತಿಗೆಡೆದ ನನ್ನಪ್ಪ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಸಿದ್ದಾಪುರದ ಸಂತೆಗೆ ಹೋಗಿ ಒಂದಿಷ್ಟು ಮಡಕೆಗಳನ್ನು ಕೊಂಡು ತಂದರು. ನಾವು ಸಂತೆಯಿಂದ ಬರುವ ವೇಳೆಗೆ ನಮ್ಮೂರಿನ ಸುತ್ತ ಮುತ್ತಲಿನ ಜನ ಅಕ್ಕಿ, ಬೇಳೆ, ಉಪ್ಪು, ಮೆಣಸಿನಕಾಯಿ, ಸಾಂಬಾರ್ ಪುಡಿ ಹೀಗೆ ಹಲವು ವಸ್ತುಗಳನ್ನು ಅಮ್ಮನ ಬಳಿ ಕೊಟ್ಟು ಹೋಗಿದ್ದರು. ಆ ದಿನ ನನ್ನಮ್ಮ ಬಯಲಿನಲ್ಲಿ ಕಲ್ಲುಗಳನ್ನು ಇಟ್ಟು ಅಡುಗೆ ಮಾಡಿ ನಮಗೆ ಬಡಿಸಿದಳು. ಆದಿನ ನಾನು ನನ್ನ ಕುಟುಂಬ ತಿಂದ ಅನ್ನ, ಬೇಳೆ ಅಥವಾ ಉಪ್ಪು ಯಾರ ಮನೆಯದು, ಯಾರ ಜಾತಿಯದು, ಯಾವ ಧರ್ಮದ್ದೆಂದು ನಾವ್ಯಾರು ಕೇಳಲಿಲ್ಲ. ಎಲ್ಲಾ ಧರ್ಮದ, ಎಲ್ಲ ಜಾತಿಯ ಋಣ ನನ್ನ ರಕ್ತದಲ್ಲಿ ಹರಿಯುತ್ತಿದೆ. ಹಾಗಾಗಿ ನಾನು ಇವುಗಳ ಬಗ್ಗೆ ಎಂದೂ ವಕಾಲತ್ತು ವಹಿಸಲಾರೆ.

ಅತ್ಯಂತ ತಾಳ್ಮೆಯಿಂದ ಯಾವುದೇ ಭಾವೋದ್ರೇಕವಿಲ್ಲದೆ, ತಣ್ಣನೆಯ ದನಿಯಲ್ಲಿ ಅವರು ಮಾತನಾಡುತ್ತಿದ್ದಾಗ ಅವರ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿದ್ದ ನೀರು ಅವರ ಕುರುಚಲು ಗಡ್ಡದಲ್ಲಿ ಲೀನವಾಗುತಿತ್ತು. ಅವರ ಮಾತುಗಳನ್ನು ಕೇಳುತ್ತಿದ್ದ ನಮ್ಮ ಕಣ್ಣುಗಳು ಸಹ ಒದ್ದೆಯಾಗಿದ್ದವು.

ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿಯ ಕುರ್ಚಿ ಬಿಟ್ಟು ಬೇರೆಲ್ಲೂ ನನ್ನ ಅಂಡು ಸ್ಥಳವೂರಲಾರದು ಎಂಬಂತೆ ವರ್ತಿಸುತ್ತ ಹಲವು ಅವತಾರಗಳನ್ನು ತಾಳುತ್ತಿರುವ ಯಡಿಯೂರಪ್ಪ ಎಂಬ ಅವಿವೇಕಿ ಮತ್ತು ಜಾತಿಯ ಹೆಸರಿನಲ್ಲಿ ಅವನ ಭಟ್ಟಂಗಿಗಳು ಮತ್ತು ಚೇಲಾಗಳು ಕರ್ನಾಟಕದಲ್ಲಿ ನಡೆಸುತ್ತಿರುವ ರಾಜಕೀಯ ವರಸೆ ನೋಡಿ ಏಕೋ ಏನೋ ರಾಮಕೃಷ್ಣ ಹೆಗ್ಡೆ ನೆನಪಾದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ‘ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.

ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.

ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.