ಮೋದಿ ಬ್ರಾಂಡ್ : “ನಾನು ಯಜಮಾನ; ಯಜಮಾನಿಕೆ ಮಾಡುತ್ತಿದ್ದೇನೆ”


– ಬಿ. ಶ್ರೀಪಾದ ಭಟ್


ಗಾಂಧಿಯವರು ರಾಜಕಾರಣಿಗಳ ಮಧ್ಯೆ ಸಂತ, ಸಂತರ ನಡುವೆ ರಾಜಕಾರಣಿ – ಜಾರ್ಜ ಅರ್ವೆಲ್

ಗಾಂಧಿ ಕುರಿತಾಗಿ ಒಂದು ಕಡೆ ಅರ್ವೆಲ್ ಬರೆಯುತ್ತಾನೆ “ವಿಪರ್ಯಾಸವೆಂದರೆ 1869ರಲ್ಲಿ ಜನಿಸಿದ ಗಾಂಧಿಯು ಏಕಚಕ್ರಾಧಿಪತ್ಯದ ಸ್ವರೂಪವನ್ನು ಅದರ ಸಮಗ್ರ ಪ್ರಭಾವ ವಲಯವನ್ನು ಅರ್ಥ ಮಾಡಿಕೊಂಡಿರಲಿಲ್ಲ. ಗಾಂಧಿಗೆ ತನ್ನ ಸತ್ಯಾಗ್ರಹವನ್ನು ಬಳಸಿಕೊಂಡು ಜಗತ್ತನ್ನು ಎಚ್ಚರಗೊಳಿಸಲು ಹೋರಾಡುತ್ತಿದ್ದೇನೆ ಎಂಬ ಮುಗ್ಧ ನಂಬುಗೆಯಿತ್ತು.ಆದರೆ ಮುಕ್ತ ಸಮಾಜವಿಲ್ಲದ, ಮುಕ್ತ ಪ್ರಭುತ್ವವಿಲ್ಲದ, ಸರ್ವಾಧಿಕಾರದ ಆಡಳಿತ ಶೈಲಿ ಇರುವ ಕಡೆ ಗಾಂಧಿಯ ಸತ್ಯಾಗ್ರಹದ ಶೈಲಿಯ ಯಶಸ್ಸು ಅನುಮಾನಾಸ್ಪದವೇ. ಏಕೆಂದರೆ ಆಕ್ರಮಿತ ದೇಶದ ವಿರುದ್ಧದ ಹೋರಾಟಕ್ಕೂ ತಮ್ಮದೇ ಸರ್ಕಾರದ ಸರ್ವಾಧಿಕಾರಿ ಆಡಳಿತದ ವಿರುದ್ಧದ ಹೋರಾಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಏಕೆಂದರೆ ಕೃತಜ್ಞತೆ ಎನ್ನುವುದು ಸಹ ಅಂತರಾಷ್ಟ್ರೀಯ ರಾಜಕೀಯದ ಲಕ್ಷಣಗಳಲ್ಲೊಂದು.”

ಅರ್ವೆಲ್ ನ ಮೇಲಿನ ಮಾತುಗಳು ಒಂದು ಕಾಲಕ್ಕೆ ನಮ್ಮನ್ನು ತೀವ್ರ ಚಿಂತನೆಗೆ ಹಚ್ಚಿದ್ದವು. ಅನೇಕ ಬಾರಿ ಇದು ಅತಿಯಾಯ್ತೇನೋ ಎಂದೆನಿಸುತ್ತಿತ್ತು. 200px-MKGandhi[1]ಆದರೆ ಅಂಬೇಡ್ಕರ್ ಅವರೊಂದಿಗೆ ಗಾಂಧಿಯವರ ಸಂವಾದ, ಚರ್ಚೆ, ಜಗಳಗಳನ್ನು ಅಧ್ಯಯನ ಮಾಡಿದಾಗ ಅದು ನಿಜವೇನೂ ಅನ್ನಿಸುತ್ತಿತ್ತು. ಏಕೆಂದರೆ ಇಂಡಿಯಾದ ಜಾತಿ ಪದ್ಧತಿಯನ್ನು, ಇಲ್ಲಿನ ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯದಿಂದ ತಳ ಸಮುದಾಯಗಳ ಬಿಡುಗಡೆಗೆ ಗಾಂಧಿ ಮಾರ್ಗದಲ್ಲಿ ಉತ್ತರವೇ ಇರಲಿಲ್ಲ. ಅಂಬೇಡ್ಕರ್ ಅವರ ಹೋರಾಟ ಮತ್ತು ಚಿಂತನೆಗಳು ಮಾತ್ರ ಇದರ ವಿಮೋಚನೆಗೆ ಇರುವ ಮಹತ್ವದ ಮತ್ತು ಉಳಿದಿರುವ ಒಂದೇ ದಾರಿ ಎನ್ನವುದು ಇಂದು ಇಪ್ಪತ್ತೊಂದನೇ ಶತಮಾನದಲ್ಲಿ ನಮಗೆಲ್ಲ ಮತ್ತೆ ಮತ್ತೆ ಖಾತರಿಯಾಗುತ್ತಿದೆ. ಆದರೆ ಗಾಂಧಿ ಮಹಾನ್ ಪ್ರಜಾಪ್ರಭುತ್ವವಾದಿಯಾಗಿದ್ದರು. ಸದಾಕಾಲ ತಮ್ಮ ಮನಸ್ಸನ್ನು ತೆರೆದಿಟ್ಟುಕೊಳ್ಳುತ್ತಿದ್ದ ಗಾಂಧಿ ಅಂಬೇಡ್ಕರ್ ಅವರೊಂದಿಗಿನ ದಶಕಗಳ ಕಾಲ ನಡೆಸಿದ ಸಂವಾದಗಳಿಂದ ಜಾತಿ ಪದ್ಧತಿಯ ಕುರಿತಾದ ತಮ್ಮ ಸನಾತನ ನಿಲುವುಗಳಿಂದ ಕೊಂಚ ಕೊಂಚವಾಗಿ ಬಿಡುಗಡೆಗೊಂಡು ಮತ್ತಷ್ಟು ಸುಧಾರಿಸಿಕೊಳ್ಳುತ್ತಲೇ ಸಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಅರ್ವೆಲ್ ನ ಮೇಲಿನ ಮಾತುಗಳನ್ನು ಗಮನಿಸಿದಾಗ ಮುಕ್ತ ಸಮಾಜವಿಲ್ಲದ, ಮುಕ್ತ ಪ್ರಭುತ್ವವಿಲ್ಲದ, ಸರ್ವಾಧಿಕಾರದ ಆಡಳಿತ ಶೈಲಿ ಇರುವ ಕಡೆ ಗಾಂಧಿಯ ಸತ್ಯಾಗ್ರಹದ ಶೈಲಿ ಎಲ್ಲಿ ಮುಟ್ಟುತ್ತದೆ ಎಂದರೆ ನರೇಂದ್ರ ಮೋದಿಯಂತಹ ಪ್ರಜಾಪ್ರಭುತ್ವ ವಿರೋಧಿಯ ಕೈಯಲ್ಲೂ ಸರಾಗವಾಗಿ ಬಳಕೆಗೊಳ್ಳಲ್ಪಡುತ್ತದೆ. ಗಾಂಧಿಯ ಹುಟ್ಟಿದ ದಿನವನ್ನೂ ಹೈಜಾಕ್ ಮಾಡಿರುವ ಮೋದಿ ಅದನ್ನು ಸ್ಚಚ್ಛತಾ ಆಂದೋಲನದ ದಿನವನ್ನಾಗಿ ಪರಿವರ್ತಿಸಿದ್ದಾರೆ. ಇಂದು ಇಡೀ ದೇಶದ ವಿದ್ಯಾವಂತ ವರ್ಗ ಗಾಂಧಿಯನ್ನು ಮರೆತು ಮೋದಿಯ ಹೆಸರಿನಲ್ಲಿ ಈ ಸಂಪೂರ್ಣ ಮರೆಮೋಸದ, ಹುಸಿಯಾದ ಸ್ವಚ್ಛತಾ ಅಂದೋಲನದಲ್ಲಿ ತೊಡಗಿದೆ.

ಅರ್ವೆಲ್ “ಗಾಂಧಿಯವರ ‘ಮೋಸಗಾರರು ಕಡೆಗೆ ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುತ್ತಾರೆ’ ಎನ್ನುವ ಸರಳೀಕೃತYoung_Ambedkar ಗ್ರಹಿಕೆ ಯಾವುದೇ ದೂರಗಾಮಿ ಪರಿಣಾಮಗಳನ್ನು, ಸಂಚಲನಗಳನ್ನು ಉಂಟುಮಾಡದಿರುವುದಕ್ಕಾಗಿ ಗಾಂಧೀಯ ಈ ತತ್ವಗಳು ಈ ಮೇಲ್ವರ್ಗಕ್ಕೆ ಅಪ್ಯಾಯಮಾನವಾಗಿದ್ದವು” ಎಂದು ಹೇಳುತ್ತಾನೆ.ಇದು ಸತ್ಯ. ಗಾಂಧಿಯವರ ಪ್ರಾಮಾಣಿಕ, ಸತ್ಯನಿಷ್ಠತೆ ಎಲ್ಲವನ್ನೂ ಕೈ ಬಿಟ್ಟ ಇಂಡಿಯಾದ ಫ್ಯಾಸಿಸ್ಟರು ಮತ್ತು ಮತೀಯವಾದಿಗಳು ಮತ್ತು ಅವರೊಂದಿಗೆ ಕೈಜೋಡಿಸಿರುವ ಇಲ್ಲಿನ ವಿದ್ಯಾವಂತ ವರ್ಗ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಗಾಂಧಿಯನ್ನು ಬಳಸಿಕೊಳ್ಳುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಗಾಂಧಿಯವರ 150ನೇ ಜನ್ಮದಿನಾಚರಣೆ ವರ್ಷ 2019ರ ವೇಳೆಗೆ ಹೆಚ್ಚೂ ಕಡಿಮೆ ಗಾಂಧಿಯನ್ನೇ ಅಪ್ರಸ್ತುತಗೊಳಿಸುವ ಒಂದು ಬೃಹತ್ ಯೋಜನೆಯ ಮೊದಲ ಹಂತವೇ ಮೋದಿಯ ಈ ಸ್ವಚ್ಛತಾ ಆಂದೋಲನ. ಅಂಬೇಡ್ಕರ್ ವಾದಿ ನಿಮ್ಗಾಡೆಯವರು ಗಾಂಧಿಯವರ ಕುರಿತಾಗಿ “ಮೇಲುಕೀಳಿನ ವರ್ಣಾಶ್ರಮವು ನಿಜವೆನ್ನುವುದಾದರೆ ನಾನು ಅಸ್ಪೃಶ್ಯನಾಗಿ ಸಾಯಲು ಬಯಸುತ್ತೇನೆ ಎಂದು ಹೇಳಿದ ಮಹಾತ್ಮ ಗಾಂಧಿಯವರು ಅಪಾರ ಧೈರ್ಯಸ್ಥರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಜಾತೀಯತೆಯನ್ನು ವಿರೋಧಿಸುತ್ತಿದ್ದ ಗಾಂಧಿಯವರು ಅದೇ ಶ್ರೇಣೀಕೃತ ಜಾತಿ ಪದ್ಧತಿಯ ಮೇಲೆ ಕಟ್ಟಲ್ಪಟ್ಟ ವರ್ಣಾಶ್ರಮವನ್ನು ಸಮರ್ಥಿಸುತ್ತಿದ್ದರು. ಬಾಬಾಸಾಹೇಬರು ಪ್ರತಿಪಾದಿಸಿದ ರಾಜಕೀಯ ಹಕ್ಕುಗಳನ್ನು ಸಾಧಿಸುವುದರ ಮೂಲಕ ಅಸ್ಪೃಶ್ಯರು ವರ್ಣಾಶ್ರಮದ ಸಂಕೋಲೆಗಳಿಂದ ವಿಮೋಚನೆಯನ್ನು ಪಡೆಯಬೇಕು ಎಂಬ ಮಾನವೀಯ ತತ್ವಕ್ಕೆ ವಿರುದ್ಧವಾಗಿ ವ್ಯಕ್ತಿಗತವಾದ ವೈಯುಕ್ತಿಕ ಸುಧಾರಣೆಯ ಮೂಲಕ ಜಾತೀಯತೆಯನ್ನು ಅಳಿಸಿ ಹಾಕಬೇಕೆಂಬ ಗಾಂಧಿಯವರ ಚಿಂತನೆ ಬಾಲಿಶವಾಗಿತ್ತು. ವಾರ್ಧಾದ ಆಶ್ರಮದಲ್ಲಿ ಬ್ರಾಹ್ಮಣನೊಬ್ಬನ ಕೈಯಲ್ಲಿ ಕಸಗುಡಿಸುವ ಮೂಲಕ ಕೆಳಜಾತಿಯವರಿಗೆ ನೋಡಿ ನಿಮ್ಮ ಕಸ ಗುಡಿಸುವ ಕೆಲಸವೂ ಶ್ರೇಷ್ಠವಾದದ್ದು ಎಂದು ಗಾಂಧಿ ಹೇಳುತ್ತಾರೆ. ಆ ಮೂಲಕ ಪರೋಕ್ಷವಾಗಿ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಾರೆ. ಆದರೆ ಬಾಬಾ ಸಾಹೇಬರು ಪ್ರತಿಪಾದಿಸುವುದು ಕಸಗುಡಿಸುವವನು ಆ ಕಾಯಕದಿಂದ ಮೇಲಕ್ಕೇರಿ ಶ್ರೇಣೀಕೃತ ವ್ಯವಸ್ಥೆಯ ಮೆಟ್ಟಿಲುಗಳ ಮೇಲಕ್ಕೇರುತ್ತ ಅತ್ಯತ್ತಮವಾದ ಹುದ್ದೆಯನ್ನು ಅಲಂಕರಿಸಬೇಕೆಂಬುದಾಗಿತ್ತು. ಇದು ಗಾಂಧಿಯವರಿಗೆ ಅರ್ಥವಾಗಲೇ ಇಲ್ಲ” ಎಂದು ಬರೆಯುತ್ತಾರೆ.

ಇಂದು ಈ ನರೇಂದ್ರ ಮೋದಿಯ ಈ ಸ್ವಚ್ಛತಾ ಅಂದೋಲನವನ್ನು ಸಹ ನಾವೂ ಈ ಹಿನ್ನೆಲೆಯಲ್ಲಿಯೇ ಅರಿಯಬೇಕಾಗಿದೆ. Manual_scavanging11-300x196[2]ಇಲ್ಲಿ ಜಾಡಮಾಲಿಗಳಿಗೆ, ಈ ಮಲ ಸ್ವಚ್ಛಗೊಳಿಸುವ ತಳ ಸಮುದಾಯಗಳಿಗೆ, ಪೌರ ಕಾರ್ಮಿಕರಿಗೆ ಈ ಅಮಾನವೀಯ ವೃತ್ತಿಯಿಂದ ವಿಮೋಚನೆ ಕೊಡಿಸಬೇಕೆನ್ನುವುದು ಈ ಸೋ ಕಾಲ್ಡ್ ಪ್ರಧಾನ ಮಂತ್ರಿಯ ಮೊದಲ ಆದ್ಯತೆಯಾಗಬೇಕಿತ್ತು. ಈ ಬಿಡುಗಡೆಯ ಕಾರ್ಯಸೂಚಿಯು ಸ್ವಚ್ಛತಾ ಆಂದೋಲನದ ಮೊದಲ ಕೆಲಸವಾಗಬೇಕಿತ್ತು. ತಳ ಸಮುದಾಯಗಳ ಬದುಕಿಗೆ ಘನತೆ ತಂದುಕೊಟ್ಟು ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲಕ್ಕೇರಲು ಅವಕಾಶಗಳನ್ನು ಕಲ್ಪಿಸಕೊಡಬೇಕೆನ್ನುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದ್ದ ನರೇಂದ್ರ ಮೋದಿಗೆ ಅಂಬೇಡ್ಕರ್ ಅವರ ಚಿಂತನೆಗಳ ಆಳವೇ ಅರಿವಿಲ್ಲ. ಅಥವಾ ಅರಿವಾದರೆ ತಮ್ಮ ಸಂಘ ಪರಿವಾರದ ಸನಾತನವಾದಕ್ಕೆ ತಿಲಾಂಜಲಿ ಕೊಡಬೇಕಾಗುವ ಸಾಧ್ಯತೆಗಳನ್ನು ಮನಗಂಡ ಮೋದಿ ಅಂಬೇಡ್ಕರ್ ಅವರನ್ನು ಮುಟ್ಟದೆ ಕಡೆಗೆ ಆಶ್ರಯಿಸಿದ್ದು ಗಾಂಧಿಯವರನ್ನು. ಆದರೆ ತಮ್ಮ ವೈಯುಕ್ತಿಕ ಜೀವನದಲ್ಲಿ ತಮ್ಮ ಪ್ರತಿಯೊಂದು ನಡೆಗೂ ನೈತಿಕ ಗೆರೆಯನ್ನು ಎಳೆದುಕೊಳ್ಳುತ್ತಿದ್ದ ಗಾಂಧಿ, ಹಿಂದೂಮುಸ್ಲಿಂರ ನಡುವಿನ ಸೌಹಾರ್ದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹ ನಿಜದ ಗಾಂಧಿ ಮೋದಿ ಮತ್ತವರ ಪಟಾಲಂಗೆ ಬೇಕಾಗಿಲ್ಲ. ಸಬರಮತಿ ಆಶ್ರಮವನ್ನು ಸ್ವತಃ ತಾವೇ ಸ್ವಚ್ಛಗೊಳಿಸುತ್ತಿದ್ದ ಗಾಂಧಿ ಎನ್ನುವ ಒಂದು ತೆಳುವಾದ ಕ್ಯಾರಿಕೇಚರ್ ಅನ್ನು ಮಾತ್ರ ಹೆಕ್ಕಿಕೊಂಡು ಅದನ್ನು ಇಪ್ಪತ್ತೊಂದನೇ ಶತಮಾನದಲ್ಲಿ ಮೋದಿ ಬ್ರಾಂಡ್ ನ ಮೂಲಕ ಪ್ರಯೋಗಿಸುತ್ತಿದೆ ಆಧುನಿಕ ಇಂಡಿಯಾ.

ತನ್ನ ಜನಪ್ರಿಯತೆ ಕುಸಿಯುತ್ತಿದೆ ಎಂದು ಅರಿವಾದ ಕ್ಷಣ ಕೋಮುವಾದಕ್ಕೆ ಮೊರೆ ಹೋಗಿ ನೂರಾರು ಮುಗ್ಧ ಜನರ ಸಾವಿಗೆ ಕಾರಣವಾಗುವ ಈ ಮತೀಯವಾದಿಗಳು modi-clean-indiaಇಂದು ದ್ವೇಷ, ತಿರಸ್ಕಾರಗಳ ವಿರುದ್ಧ ಹೋರಾಡಿದ ಸೆಕ್ಯುಲರ್ ಗಾಂಧಿಯವರನ್ನು ಹೈಜಾಕ್ ಮಾಡಿಕೊಂಡು 2019ರ ವೇಳೆಗೆ ಬಾಪುವನ್ನು ಎಲ್ಲಿಗೆ ತಂದು ಮುಟ್ಟಿಸಬಹುದು ಎಂದು ನೆನೆದು ಆತಂಕವಾಗುತ್ತಿದೆ. ಈ ಸ್ವಚ್ಛತಾ ಆಂದೋಲನವೆನ್ನವುದು ಗುಪ್ತ ಕಾರ್ಯಸೂಚಿಯೊಂದನ್ನು ಪ್ರಯೋಗಾತ್ಮವಾಗಿ ಜಾರಿಗೊಳಿಸುವ ಅಜೆಂಡಾ. ಈ ಅಜೆಂಡಾಗಳನ್ನು ಅಳವಡಿಸಿಕೊಳ್ಳುವ ತಂತ್ರವಾಗಿಯೇ ಮೋದಿ ಬ್ರಾಂಡ್ ಅನ್ನು ತೇಲಿ ಬಿಡಲಾಗುತ್ತಿದೆ. ಮೋದಿಯ ಅಮೇರಿಕ ಭೇಟಿಯನ್ನು ಅತ್ಯಂತ ಜನಪ್ರಿಯವಾಗಿಸಲು ಮೊದಲು ಅಮೇರಿಕಾದಲ್ಲಿನ ಸಂಘ ಪರಿವಾರದ ಎಲ್ಲಾ ಅಂಗ ಸಂಸ್ಥೆಗಳು ಅತ್ಯಂತ ಕರಾರುವಕ್ಕಾಗಿ ಕ್ಷಿಪ್ರಗತಿಯಲ್ಲಿ ಕಾರ್ಯಪ್ರವೃತ್ತರಾಗಿ, ಅನಿವಾಸಿ ಭಾರತೀಯರನ್ನು ಸಂಘಟಿಸಿ ಅಲ್ಲಿ ಮೋದಿ ಬ್ರಾಂಡ್ ಅನ್ನು ಹುಟ್ಟಿ ಹಾಕಿದರು. ಇಂಡಿಯಾದ ಪ್ರಧಾನಮಂತ್ರಿಯೊಬ್ಬನ ವಿದೇಶಿ ಭೇಟಿ ಕೇವಲ ರಾಜತಾಂತ್ರಿಕ ಕಾರಣಗಳಿಗೆ, ರಾಜಕೀಯ ಸಂಬಂಧಗಳ ಕುರಿತಾದ ದ್ವಿಪಕ್ಷೀಯ ಮಾತುಕತೆಗೆ ಸುದ್ದಿಯಾಗಬೇಕಿತ್ತು. ಆದರೆ ಇದೆಲ್ಲವೂ ನೇಪಥ್ಯಕ್ಕೆ ಸರಿದು ಅಲ್ಲಿನ ಸಂಘ ಪರಿವಾರದ ತತ್ವಬದ್ಧ ಸಂಸ್ಥೆಗಳು ಇಂಡಿಯಾವೆಂದರೆ ಅದು ಮೋದಿ ಬ್ರಾಂಡ್ ಮಾತ್ರ ಎನ್ನುವ ಮರೀಚಿಕೆಯನ್ನು ಹುಟ್ಟು ಹಾಕಲು ಯಶಸ್ವಿಯಾದವು. ಇದು ಆರೆಸಸ್ ಅನ್ನೂ ದಂಗುಬಡಿಸಿದಂತಿದೆ. ಅದರ ಬೆನ್ನಲ್ಲೇ ಇಂಡಿಯಾದಲ್ಲಿ ಗಾಂಧಿ ಹುಟ್ಟಿದ ದಿನದಂದೇ ಬಾಪುವನ್ನು ಅಪ್ರಸ್ತುಗೊಳಿಸುತ್ತ ಮೋದಿ ಬ್ರಾಂಡ್ ಅನ್ನು ಪ್ರಸ್ತುಗೊಳಿಸುವ ಅಜೆಂಡಾವನ್ನು 2014 ಅಕ್ಟೋಬರ್ 2 ರಿಂದ ಪ್ರಾರಂಭವಾಗಿದೆ.

“ಹಸಿವಿನಿಂದ, ಬಡತನದಿಂದ ಸಾಯುವ ಪ್ರತಿಯೊಬ್ಬ ವ್ಯಕ್ತಿಯೊಬ್ಬನ ಸಾವು ದೇಶದ ಆತ್ಮಗೌರವದ, modi_ambani_tata_kamathಘನತೆಯ ಸಾವು” ಎಂದು ನಂಬಿದ್ದ ಬಾಪು “ಇಲ್ಲಿನ ಪ್ರತಿಯೊಂದು ಅವಿಷ್ಕಾರಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪದಿದ್ದರೆ ಆ ಅವಿಷ್ಕಾರವೇ ವ್ಯರ್ಥ” ಎಂದು ಹೇಳುತ್ತಿದ್ದರು. ಆದರೆ ಗಾಂದಿಯನ್ನು ಮುಟ್ಟದ ಮೋದಿ ಲಕ್ಷಾಂತರ ಬಡವರನ್ನು ಸುಲಿಯುವ ಶ್ರೀಮಂತರ, ಖಾಸಗೀಕರಣದ, ಕಾರ್ಪೋರೇಟ್ ಸಾರ್ವಭೌಮತ್ವಕ್ಕಾಗಿ ಯಾವುದೇ ರೀತಿಯ ಕ್ರೌರ್ಯವನ್ನು ಸಹಿಸಿಕೊಳ್ಳುವಂತೆ ಇಂಡಿಯಾವನ್ನು ಮಾನಸಿಕವಾಗಿ ತಯಾರು ಮಾಡುತ್ತಿರುವ ಮೋದಿ ಗುಲಾಮಗಿರಿ ದಿಕ್ಕಿಗೆ ಇಲ್ಲಿನ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ರೂಪಿಸುತ್ತಿದ್ದಾರೆ. ಮೋದಿಯ ಶ್ರೀಮಂತರ ಪರವಾದ ಅಪ್ತವಾದ ಕನಸು ಮತ್ತು ಸಂಘ ಪರಿವಾರದ ‘ಮುಸ್ಲಿಂರು, ಕ್ರೈಸ್ತರು, (ತಳ ಸಮುದಾಯಗಳು, ಆದಿವಾಸಿಗಳು) ನಮ್ಮ ಶತೃಗಳು’ ಎನ್ನುವ ಇಂಡಿಯಾ ಎರಡನ್ನೂ ಒಂದೇ ಏಟಿನಲ್ಲಿ ಸಾಧಿಸುವಂತೆ ಇಂದಿನ ಮೋದಿ ಬ್ರಾಂಡ್ ಅನ್ನು ರೂಪಿಸಲಾಗುತ್ತಿದೆ. “ನಾನು ಯಜಮಾನ; ಯಜಮಾನಿಕೆ ಮಾಡುತ್ತಿದ್ದೇನ” ಇದು ಈ ಮೋದಿ ಬ್ರಾಂಡ್ ನ ಸ್ವರೂಪ

ಆದರೆ ಆಧುನಿಕ ನಾಗರಿಕತೆಯೆಂದರೆ ಕೊಳ್ಳುಬಾಕ ಜೀವನ ಮತ್ತು ಈ ಬಗೆಯ ಅಪಾಯಕಾರಿ, ಹುಸಿಯಾದ ಬ್ರಾಂಡ್ ಗಳನ್ನು ಆರಾಧಿಸುವ ಇಲ್ಲಿನ gujarat_violence_1ವಿದ್ಯಾವಂತ ವರ್ಗ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಇಷ್ಟೊಂದು ಸರಳೀಕರಿಸುವಷ್ಟು ಅವಿದ್ಯಾವಂತರು, ಮೌಢ್ಯರಾಗಿದ್ದಾರೆಯೇ? ಆಗಿದ್ದಾರೆ. ಏಕೆಂದರೆ ಆಗಲೇ ಕಳೆದ ಐವತ್ತು ವರ್ಷಗಳಲ್ಲಿ ಇಂಡಿಯಾದ ವಿದ್ಯಾವಂತ ವರ್ಗ ಅತ್ತ ಅಂಬೇಡ್ಕರ್ ಅವರನ್ನೂ ಮುಟ್ಟಲಿಲ್ಲ, ಅಪ್ಪಿಕೊಳ್ಳಲಿಲ್ಲ. ಮತ್ತೊಂದು ಕಡೆ ಗಾಂಧಿಯನ್ನು ಒಪ್ಪಿಕೊಂಡು ಕಳೆದ ಐವತ್ತು ವರ್ಷಗಳಲ್ಲಿ ಬಾಪುವನ್ನು ನಿರಂತರವಾಗಿ ಹಾಸ್ಯಾಸ್ಪದ ವಸ್ತುವನ್ನಾಗಿರಿಸಿದ್ದಾರೆ. ಇಂದು ಹಾಸ್ಯಾಸ್ಪದಗೊಂಡ ಬಾಪುವನ್ನು ಹೈಜಾಕ್ ಮಾಡುವುದು ಈ ಮತೀಯವಾದಿಗಳಿಗೆ ಅತ್ಯಂತ ಸುಲುಭದ ಕೆಲಸ. ಈ ಬಗೆಯ ಹುಸಿಯಾದ, ಅಪಾಯಕಾರಿಯಾದ ಬ್ರಾಂಡ್ ಗಳ ಮೂಲಕ ಈ ಅಪ್ರಬುದ್ಧ ರಾಜಕೀಯ ಮಾದರಿಗಳು ಮತ್ತೇನಲ್ಲದೆ ಸ್ವಾತಂತ್ರ, ಕ್ರಿಯಾಶೀಲತೆ, ದಿಟ್ಟತೆಗಳಿಲ್ಲದ ಆಯುಧಗಳನ್ನು ಸೃಷ್ಟಿಸುತ್ತಿವೆ. ರಹಮತ್ ತರೀಕೇರೆ ಅವರು “ಈ ಆಯುಧಗಳ ಕೆಲಸವೇ ತನ್ನನ್ನು ಧಾರಣ ಮಾಡಿದವರ ಇಷ್ಟಾನಿಷ್ಟ ಪೂರೈಸುವುದು. ಆಯುಧದಾರಿಗಳು ಅವನ್ನು ಮನುಷ್ಯರ ತಲೆ ಕಡಿಯಲು ಬಳಸಬಹುದು. ಗಿಡ ಟೊಂಗೆ ಕಡಿಯಲು ಅಥವಾ ಮುಳ್ಳುಗಿಡವನ್ನು ತೆಗೆಯಲು ಬಳಸಬಹುದು.” ಎಂದು ಬರೆಯುತ್ತಾರೆ. ಈಗ ಸದ್ಯಕ್ಕೆ ಆಯುಧಗಳನ್ನು ಬಳಸಿಕೊಂಡು ಸ್ವಚ್ಛತಾ ಆಂದೋಲನವನ್ನು ರೂಪಿಸುತ್ತಿದೆ ಈ ಮೋದಿ ಬ್ರಾಂಡ್. ಒಮ್ಮೆ ತಮ್ಮ ಜನಪ್ರಿಯತೆ ಕುಸಿಯತೊಡಗಿದಾಗ ಇಲ್ಲಿನ ಮತೀಯವಾದಿಗಳು ಇದೇ ಆಯುಧಗಳನ್ನು ಬಳಸಿಕೊಂಡು ಬೀದಿಗಳಲ್ಲಿ ಹತ್ಯಾಕಾಂಡಗಳನ್ನು ಸಹ ರೂಪಿಸಬಲ್ಲರು ಎಂದು ಕಳೆದ ಎಂಬತ್ತು ವರ್ಷಗಳ ಇಂಡಿಯಾದ ಕೋಮುವಾದ ಇತಿಹಾಸವೇ ಸಾಕ್ಷಿ. ಆಗಲೂ ಸಹ ರಕ್ತಸಿಕ್ತದ ಇಂಡಿಯಾದ ಬೀದಿಗಳನ್ನು ಇದೇ ಸ್ವಚ್ಛತಾ ಆಂದೋಲನದ ಮೂಲಕ ಶುಚಿಗೊಳಿಸತ್ತಾರೇನೋ ಈ ವಿದ್ಯಾವಂತ ವರ್ಗ !!

4 thoughts on “ಮೋದಿ ಬ್ರಾಂಡ್ : “ನಾನು ಯಜಮಾನ; ಯಜಮಾನಿಕೆ ಮಾಡುತ್ತಿದ್ದೇನೆ”

  1. M A Sriranga

    ಬಿ ಶ್ರೀಪಾದ ಭಟ್ ಅವರಿಗೆ— ಎಲ್ಲ ಕೆಲಸಗಳಲ್ಲೂ ಹುಳುಕನ್ನು ಕಂಡುಹಿಡಿಯುವ ತಮ್ಮ ಬರವಣಿಗೆಗಳಿಗೆ ಇದು ಮತ್ತೊಂದು ಸೇರ್ಪಡೆ. ನಿಮ್ಮಂತಹ ಬುದ್ಧಿಜೀವಿಗಳಿಗೆ ಪ್ರತಿವರ್ಷ ಅಕ್ಟೋಬರ್ ೨ರಂದು ಗಾಂಧಿ ಅವರು ಸತ್ಯಾಗ್ರಹದ ಮೂಲಕ ಬಲಿಷ್ಠ ಬ್ರಿಟಿಷ್ ಸಾಮ್ರಾಜ್ಯವನ್ನು ಹೇಗೆ ಮಣಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಮಂತ್ರಿಗಳು,ರಾಜಕಾರಣಿಗಳು ,ಸ್ಕೂಲಿನಲ್ಲಿ ಉಪಾಧ್ಯಾಯರು ಹೇಳಿ ನಂತರ ಮನೆಗೆ ಹೋಗಿ holiday enjoy ಮಾಡಿದ್ದರೆ ಸಾಕಾಗಿತ್ತು. ಜತೆಗೆ ಅವರ ಅಪಾರವಾದ ಬರಹಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ,ಪರಿಸರಕ್ಕಾಗಿ ಏನು ಬರೆದಿದ್ದರೊ ಅದು ಇಡೀ ಪ್ರಪಂಚಕ್ಕೆ ಈಗಲೂ ಹೇಗೆ ಪ್ರಸ್ತುತ ಎಂದು ಬುದ್ಧಿಜೀವಿಗಳು,ಗಾಂಧಿವಾದಿಗಳು ಗೋಷ್ಠಿ ನಡೆಸಿ ಇನ್ನೊಂದು ವರ್ಷ ಗಾಂಧಿಯವರನ್ನು ಮರೆತಿದ್ದರೂ ನಡೆಯುತ್ತಿತ್ತು. ಸ್ವಾತಂತ್ರ್ಯಾ ನಂತರದ ಆರು ದಶಕಗಳ ಕಾಲ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಿದ್ದೂ ಇದನ್ನೇ ತಾನೇ? ಆದರೆ ಇಂದಿಗೂ ಭಾರತದ ಬೀದಿಗಳು ಕೊಳೆಯಿಂದ ನಾರಿ ಗಬ್ಬೆನ್ನುತ್ತಿವೆ. ಭಾರತದಲ್ಲಿ ಪ್ರತಿ ಮನೆಗೆ ,ಶಾಲೆಗೆ ,ಕಾಲೇಜಿಗೆ ಅತಿ ಅವಶ್ಯವಾದ ಶೌಚಾಲಯವನ್ನೂ ಕಲ್ಪಿಸಲೂ ನಮ್ಮ ಸರ್ಕಾರಗಳಿಗೆ ಇದುವರೆಗೆ ಸಾಧ್ಯವಾಗಿಲ್ಲ. ಅದನ್ನು ಮಾಡೋಣ ಬನ್ನಿ ಎಂದು ಹೇಳಿದರೆ ಅದು ತಮಗೆ ಏಕೆ ಅಸಮಾಧಾನವೋ ತಿಳಿಯದು. ವಿದ್ಯಾವಂತರಾದ ಕಾಲೇಜು,ವಿ ವಿ ಗಳ ಪ್ರಾಧ್ಯಾಪಕರುಗಳು ಗಾಂಧೀ ವಾದದ ಬಗ್ಗೆ ಪುಸ್ತಕ ಬರೆದು ಪಿ ಎಚ್ ಡಿ ಪಡೆದು ತಮ್ಮ ಸಂಬಳ ಸವಲತ್ತುಗಳಲ್ಲಿ ಮೇಲ್ಮೆ ಪಡೆದರೆ ತಮಗೆ ಆಕ್ಷೇಪವಿಲ್ಲ. ಆದರೆ ಅವರುಗಳನ್ನು ಸೇರಿಸಿಕೊಂಡು ಗಾಂಧಿಯವರು ಸ್ವಚ್ಚತೆಗೆ ಕೊಡುತ್ತಿದ್ದ ಒಂದು ಸಣ್ಣ ಕಾರ್ಯಕ್ರಮವನ್ನು ಪ್ರಾರಂಭಿಸಿದರೆ ಅದು ತಮಗೆ ‘ಸರ್ವಾಧಿಕಾರಿತನ’, ‘ಗಾಂಧಿವಾದದ,ತತ್ವಗಳ ಹೈ ಜಾಕ್ ‘ ಅನಿಸುತ್ತದೆ !!. ಎಲ್ಲಾ ವಿಷಯಗಳಲ್ಲೂ ಯಾವುದೋ ಒಂದು ‘ಹುನ್ನಾರ’ವನ್ನು ಹುಡುಕುವುದೇ ನಮ್ಮ ನಿತ್ಯದ ಕೆಲಸವಾಗಬಾರದು. ಅದು ನಮ್ಮ ಸೃಜನಶೀಲತೆಗೆ, ಪರಸ್ಪರ ಮಾನವ ಪ್ರೇಮಕ್ಕೆ ಕುಂದು.

    Reply
    1. ಷಣ್ಮುಖ

      ಶ್ರೀಪಾದ ಭಟ್ಟರ ಚಿಂತನೆ ಯಾವುದೇ ಮತೀಯವಾದಿಯ ಚಿಂತನೆಗಿಂತ ಭಿನ್ನವಾಗಿಲ್ಲ. ಇವರೊಬ್ಬ ಸೆಕ್ಯೂಲರ್ ಮುಖವಾಡದ ಮತೀಯವಾದಿ. ಪರಮತ ಖಂಡನೆಗೆ ಬರವಣಿಗೆಯನ್ನು ಮುಡಿಪಾಗಿಟ್ಟುಕೊಂಡಿರುವ ಕಟ್ಟರ್ ಪಂಥೀ!

      Reply
  2. Naveen H

    ಶ್ರೀಪಾದ್ ಭಟ್ಟರಿಗೆ ಇದೊಂದು ಕಾಯಿಲೆ. ಅವರಿಗೆ ಯಾವದೇ ವಿಷಯ ಕೊಡಿ ಅವರು ಅದನ್ನು ಬಿಜೆಪಿ, ಆರ್ ಎಸ್ ಎಸ್, ಮೋದಿಗೆ ತಂದು ಜೋಡಿಸಿ ಹಳಿಯುವದೆ ಇವರ ಕಾಯಕ.

    ಮೋದಿ ನೆನ್ನೆ ಸ್ವಚತಾ ಅಭಿಯಾನ ನಡೆಸಿದ್ದು ಯಾವದೋ ಒಂದು ಶ್ರೀಮಂತ ಬಡಾವಣೆಯಲ್ಲಿ ಅಲ್ಲಾ ಬದಲಿಗೆ ವಾಲ್ಮೀಕಿ ಕಾಲನಿಯಲ್ಲಿ. ಅದಲ್ಲದೆ ಕಣ್ಣಿದ್ದವರು ಯಾರೇ ಆದರೂ ನೋಡಿರಬಹುದು ಮೋದಿ ಜೊತೆ ಕೈ ಜೋಡಿಸಿದ್ದು ದಿಲ್ಲಿ ಮುನಿಸಿಪಾಲ್ಟಿಯ ಸಫಾಯಿ ಕರ್ಮಚಾರಿಗಳು. ಅವರ ಜೊತೆಗೆ ಕಸ ಗುಡಿಸುತ್ತ ಅವರಿಗೆ ವನ್ದಿಸುತ್ತಿದ್ದವರು ಉನಿಫಾರಂ ತೊಟ್ಟ ದಿಲ್ಲಿಯ ಸಫಾಯಿ ಕರ್ಮಚಾರಿಗಳು. ಇದೆಲ್ಲಾ ಶ್ರೀಪಾದ್ ಭಟ್ಟರಂತ ಜನರಿಗೆ ಕಾಣಲ್ಲಾ. ಕಂಡರೂ ಅವರು ಅದನ್ನು ಗಮನಿಸಲ್ಲಾ. ಅವರ ಗಮನ ಏನಿದ್ರೂ ಇದ್ದಷ್ಟು ದಿನ ಹೇಗೆ ಒಂದು ವರ್ಗದ ಜನರನ್ನು ಎತ್ತಿ ಕಟ್ಟಬೇಕು, ಹೇಗೆ ತಮ್ಮ ವಿದ್ಯಾರ್ಥಿಗಳನ್ನು ಸದಾ ಒಂದು ವರ್ಗವನ್ನು ದ್ವೇಷಿಸುವಂತೆ ಪ್ರೇರೇಪಿಸಬೇಕು ಹಾಗೂ ಹೇಗೆ ತಾವು ಅದರಿಂದ ಬೆಳೆ ಬೇಯಿಸಿಕೊಳ್ಳಬೇಕು ಎಂಬುದೇ ಹೊರತು ಯಾರನ್ನೂ ಉದ್ಧಾರ ಮಾಡಬೇಕೆಂಬ ಸದುದ್ದೇಶ ಮಾತ್ರ ಇಲ್ಲಾ.

    ನವೀನ

    Reply
  3. WITIAN

    ಶ್ರೀಪಾದ ಭಟ್ಟರಿಗೆ “ನಾನು ಯಜಮಾನ್ತಿ ಅಲ್ಲ..ಆದರೂ ಯಜಮಾನಿಕೆ ನಡೆಸುತ್ತೇನೆ” ಎನ್ನುತ್ತಿದ್ದ ಒಬ್ಬರ ವಾದ ಹೆಚ್ಚು ಆಪ್ತವಾಗಿ, ಸಮ್ಮತವಾಗಿ ಕಾಣುತ್ತದೆ!

    Reply

Leave a Reply

Your email address will not be published. Required fields are marked *