-ಎಸ್.ಗಂಗಾಧರಯ್ಯ


ಗಾಂಧಿ ಜಯಂತಿ ಪ್ರಯುಕ್ತ ವರ್ತಮಾನ ಬಳಗ ಆಯೋಜಿಸಿದ್ದ ಕಥಾ ಸ್ಪರ್ಧೆಗೆ ಬಂದಿದ್ದ ನಲವತ್ತು ಕಥೆಗಳನ್ನು ಓದಲು ನಾನು ತೆಗೆದುಕೊಂಡಿದ್ದು ಬರೋಬ್ಬರಿ ಎರಡು ತಿಂಗಳು.katha-sprade-2014-223x300 ಈ ಹೊತ್ತಿನಲ್ಲಿ ನನಗೆ ಸ್ಪಷ್ಟವಾಗಿದ್ದು- ಖುಷಿಗೆ ಕಥೆಯೊಂದನ್ನು ಓದುವುದಕ್ಕೂ, ವಿಮರ್ಶೆಗಾಗಿ ಕಥೆಯೊಂದನ್ನು ಓದುವುದಕ್ಕೂ, ಇಲ್ಲಾ ಯಾವ ದೃಷ್ಟಿಯಲ್ಲಿ ಇದು ಹೆಚ್ಚು ಪರಿಣಾಮಕಾರಿ ಅಥವಾ ಅದು ಕಥೆಯಾಗಿದೆಯೋ ಇಲ್ಲವೋ ಅನ್ನುವುದನ್ನು ಗುರುತಿಸುದಕ್ಕೂ ಇರಬಹುದಾದ ಹಾಗೂ ಇರಲೇಬೇಕಾದ ಎಚ್ಚರ. ಎಂದೂ ಇಂಥ ಇಕ್ಕಟಿಗೆ ಸಿಲುಕದಿದ್ದ ನಾನು ಅಥವಾ ಇಂಥದ್ದೊಂದು ಶಿಸ್ತಿನ ಓದಿಗೆ ಒಳಪಡಿಸಿಕೊಳ್ಳದಿದ್ದ ನಾನು ಇಲ್ಲಿನ ಅನೇಕ ಕಥೆಗಳನ್ನು ಎರಡು, ಮೂರು ಸರ್ತಿ ಓದಿದ್ದು ಒಂದು ಕಡೆಗಿದ್ದರೆ, ಕೆಲವು ಕಥೆಗಳು ಪ್ರತೀ ಓದಿನಲ್ಲೂ ಬೇರ ಬೇರೆ ರೀತಿಯಲ್ಲಿ ಓದಿಸಿಕೊಳ್ಳತೊಡಗಿದ್ದು ಹಾಗೂ ಕಥೆಯೊಂದಕ್ಕೆ ಇರಬಹುದಾದ ಸಾಧ್ಯತೆಗಳನ್ನು ಹೇಳುತ್ತಲೇ ಅದು ಓದುಗನಾದ ನನ್ನೊಳಗೆ ವಿಸ್ತರಿಸಿಕೊಳ್ಳುತ್ತಾ ಹೋಗುವ ಅಚ್ಚರಿಯ ಪರಿ ಮತ್ತೊಂದು ಕಡೆಗಿತ್ತು. ಭಾವ, ಬುದ್ಧಿಗಳು ಒಂದಾಗಿ ಮೇಳೈಸಿದೊಡೆ ಏನಾಗ ಬಹುದೋ ಅದೆಲ್ಲಾ ಇಲ್ಲಿ ಘಟಿಸಿದೆ. ಹಾಗಾಗಿ ಈ ಅಷ್ಟೂ ಕಥೆಗಳನ್ನು ಓದುವಂಥ ಹೊತ್ತಲ್ಲಿ ಅವು ಉಂಟುಮಾಡಿರುವ ತೀವ್ರತೆ, ಪರಿಣಾಮ ಹಾಗೂ ಹೊಸ ಲೋಕ, ಹೊಸ ಪರಿಭಾಷೆಗಳ ಹಿನ್ನೆಲೆಯೇ ನನ್ನ ಆಯ್ಕೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ ಅನ್ನುವುದನ್ನು ಹೇಳುತ್ತಲೇ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ಕಥೆಗಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಮೊದಲ ಬಹುಮಾನ ಪಡೆದ ಕಥೆ ‘ಕಾಲ ವ್ಯಾಧಿ’, ಕಾಲವೇ ವ್ಯಾಧಿಯಾಗುವ, ಅದೇ ಮುಂದೊಂದು ದಿನ ಅದೇ ವ್ಯಾಧಿಗೆ ಮದ್ದಾಗುವ ವಿಶೇಷ ಲೋಕವೊಂದನ್ನು ಅನಾವರಣಗೊಳಿಸುತ್ತದೆ. ಹರಿಯುವ ಕಾಲದೊಂದಿಗೆ ದೇಗುವ ಬದುಕು, ಅದರೊಳಗಿನ ಪ್ರೇಮ, ಕಾಮ, ನೆನಪು, ಕನಸು, ವಾಸ್ತವಗಳ ನಡುವೆ ತುಯ್ದಾಡುತ್ತಾ ಏಕ ಕಾಲಕ್ಕೆ ಮನಸ್ಸಿನ ಖಾಯಿಲೆಯಂತೆಯೂ, ದೇಹದ ಖಾಯಿಲೆಯಂತೆಯೂ ಭಾಸವಾಗುತ್ತಾ ತನ್ನ ಕೇಂದ್ರ ಬಿಂದುವನ್ನು ಪ್ರೇಮದ ಸುತ್ತಲೇ ಸುತ್ತಿಸಿದರೂ, ನಿರೂಪಕನ ಹೊಂಗೆ ತೋಪಿನ ನೆನಪಿನೊಂದಿಗೆ ಮತ್ತೊಂದು ಆಯಾಮದಿಂದಲೂ ತನ್ನನ್ನು ಓದುವಂತೆ ನೋಡಿಕೊಳ್ಳುವ ಪರಿಯಲ್ಲಿ ಇದರ ಸಾರ್ಥಕತೆ ಇದೆ.

ಎರಡನೆಯ ಬಹುಮಾನ ಪಡೆದ ‘ಬೋನಿಗೆ ಬಿದ್ದವರು’, ಕಥೆಯ ಶೀರ್ಷಿಕೆಯೇ ಸಾಂಕೇತಿಕವಾಗಿದೆ.ಗಂಗಾಧರಯ್ಯಬದಲಾವಣೆಯ ಗಾಳಿಯಲ್ಲಿ, ಬದುಕಿನ ಅನಿವಾರ್ಯತೆಯಲ್ಲಿ, ಅಪ್ಪಟ ದೇಸಿ ಕಸುಬೊಂದು ಅಥವಾ ದೇಸೀ ಬದುಕೊಂದು ಪಡೆದುಕೊಳ್ಳಬಹುದಾದ ತಿರುವುಗಳನ್ನೂ ಅಸಹಾಯಕತೆಯನ್ನೂ ತನ್ನದೇ ರೀತಿಯ ವ್ಯಂಗ್ಯ, ಸೆಡವು ಮುಂತಾದ ಸಮಾಜಮುಖಿ ಪರಿಕರಗಳೊಂದಿಗೆ ಓದುಗನನ್ನು ಹೊಸದೊಂದು ಅಷ್ಟೊಂದು ಪರಿಚಿತವಲ್ಲದ ಲೋಕದೊಳಗೆ ನಡೆದಾಡಿಸುತ್ತದೆ.ಇಲ್ಲಿ ಕೆಳಸ್ತರದ ಬದುಕೊಂದು ಆಧುನಿಕತೆಯ ದೆಸೆಯಿಂದಾದ ಪಲ್ಲಟಗಳಿಂದಾಗಿ ಚಡಪಡಿಸುವ ಹಾಗೂ ಅನಿವಾರ್ಯವಾಗಿ ತಮ್ಮ ಸಾಂಪ್ರದಾಯಿಕ ಜ್ಞಾನವನ್ನು ಅವಕಾಶವಾದಿತನಕ್ಕೆ ಪರಿವರ್ತಿಸಿಕೊಳ್ಳಬೇಕಾದ ಹೊತ್ತಿನಲ್ಲಿ ಆ ಬದುಕು ತೋರುವ ಸಂಯಮ, ಸಹಕಾರಗಳೆದುರು ಆಧುನಿಕತೆ ಹಾಗೂ ಸರಕಾರದ ಯೋಜನೆಗಳು ಏದುಸಿರು ಬಿಡುತ್ತವೆ.ಇಲ್ಲಿ ಬರುವ ಸರಕಾರಿ ಯೋಜನೆಗಳು, ಅವುಗಳನ್ನು ‘ಗುಳುಂ’ಮಾಡಿಬಿಡುವ ಭ್ರಷ್ಟ ಮನಸ್ಸುಗಳಿಗೆ ಬೇಕಿರುವ ನೈತಿಕ ಚಿಕಿತ್ಸೆಯ ಆಶಯ ಹಾಗೂ ನಶಿಸಿ ಹೋಗುತ್ತಿರುವ ದೇಸೀ ಜ್ಞಾನದ ಬಗೆಗಿನ ಕಾಳಜಿ ಕಥೆಯ ಹೆಚ್ಚುಗಾರಿಕೆ.

ಮೂರನೆಯ ಬಹುಮಾನ ಪಡೆದ ಕಥೆ ‘ಚಿವುಟಿದಷ್ಟೂ ಚಿಗುರು’, ಆಧುನಿಕ ಬದುಕಿನಲ್ಲಿ ಛಿದ್ರಗೊಳ್ಳುತ್ತಿರುವ ಸಂಬಂಧಗಳು ಹಾಗೂ ಅವುಗಳು ಉಂಟು ಮಾಡಬಹುದಾದ ಪರಿಣಾಮಗಳನ್ನು ಹಿಡಿದಿಡಲೆತ್ನಿಸುತ್ತದೆ.ಸಧ್ಯದ ಸ್ಥಿತಿಯಲ್ಲಿ ಸರ್ವೇ ಸಾಮಾನ್ಯವಾಗುತ್ತಿರುವ, ಅದರಲ್ಲೂ ಮಹಾನಗರಗಳಲ್ಲಿ ಇದೊಂದು ಮಹಾ ಸಮಸ್ಯೆಯೇ ಆಗುತ್ತಿರುವಾಗ ಇದರ ವಸ್ತುವೇ ಈ ಕಥೆಗೊಂದು ಸಾರ್ವತ್ರಿಕ ಗುಣ ಒದಗಿಸಿ ಕೊಟ್ಟಿದೆ.ಕೊಂಚ ಸೆಂಟಿಮೆಂಟಲ್ ಅನಿಸಬಹುದಾಗಿದ್ದಂಥ ಹಾಗೂ ಕೊಂಚ ಯಾಮಾರಿದ್ದರೂ ಒಂದು ತೀರಾ ಸಾಮಾನ್ಯ ಕಥೆಯಾಗಿ ಬಿಡಬಹುದಾಗ್ಗಿದ್ದಂಥ ವಸ್ತುವನ್ನು ಕಥೆಗಾರರು ನೀಭಾಯಿಸಿರುವ ರೀತಿಯಿಂದಾಗಿ ಆಲೋಚನೆಗೆ ಹಚ್ಚ ಬಲ್ಲಂಥ ಕಥೆಯಾಗಿ ರೂಪುಗೊಂಡಿದೆ.

ಮೆಚ್ಚಿಗೆ ಪಡೆದ ಕಥೆಗಳಲ್ಲಿ ‘ಹೇ ರಾಮ್’ ತನ್ನ ವಿಡಂಬನಾತ್ಮಕ ಗುಣದಿಂದಾಗಿ ಪರಿಣಾಮಕಾರಿಯಾಗಿದೆ.ಗಾಂಧಿ ಜಯಂತಿಯ ಆಚರಣೆಯ ಕ್ರಮದಲ್ಲಿರುವ ಕೃತಕತೆ, ಪರಸ್ಪರ ಅಪನಂಬಿಕೆ, ತೋರಿಕೆಯ ಗುಣ, ಇಡೀ ಗಾಂಧಿ ತತ್ವಗಳನ್ನು ನಗೆಪಾಟಲಿಗೀಡು ಮಾಡುವಂಥ ವಾತಾವರಣವನ್ನು ಕಟ್ಟಿಕೊಟ್ಟಿದೆ.ಇಲ್ಲಿ ಪತ್ರೆಪ್ಪ ಎಲ್ಲಾ ಜನಸಾಮಾನ್ಯನ ಪ್ರತಿನಿಧಿಯಂತೆ ಕಾಣುತ್ತಾ, ಭ್ರಷ್ಟ ವ್ಯವಸ್ಥೆಯ ಎದುರು ಕುಸಿದು ಹೋಗುವ ಕ್ರಿಯೆಯ ಸಂಕೇತವಾಗಿದ್ದಾನೆ.

ಮತ್ತೊಂದು ಮೆಚ್ಚಿಗೆ ಪಡೆದ ‘ಇಸುಮುಳ್ಳು’ ಒಂದು ನೀಳ್ಗತೆ.ಆಡು ಭಾಷೆ ಮತ್ತು ಗ್ರಾಂಥಿಕ ಭಾಷೆಗಳನ್ನು ಬಳಸಿಕೊಂಡು ಹೇಳಲೆತ್ನಿಸುವ ಹಳ್ಳಿಯ ಕುಟುಂಬವೊಂದರ ಸಂಪ್ರದಾಯ, ನಂಬಿಕೆ, ಹಾದರ, ಅಜ್ಜ ಮೊಮ್ಮಗನ ನಡುವಿನ ಆತ್ಮೀಯ ಸಂಬಂಧದೊಂದಿಗೆ ಅಲ್ಲಿನ ಪರಿಸರವೂ ಪೂರಕವಾಗಿ ಒದಗಿ ಬಂದಿರುವುದರಿಂದ ಇದು ಕಾದಂಬರಿಯ ಭಾಗವೊಂದರಂತೆ ಓದಿಸಿಕೊಳ್ಳುತ್ತದೆ. ಮಾನವೀಯ ಸಂಬಂಧಗಳ ಸಂಕೀರ್ಣತೆಯನ್ನು ಕಥೆಯಾಗಿಸುವ ಕ್ರಮದ ತುಡಿತವೇ ಇದರ ಗಾತ್ರವನ್ನು ಸಹ್ಯಗೊಳಿಸಿದೆ.

ಇನ್ನು ಕೊನೆಯ ಮಾತು : ನನ್ನನ್ನು ಇಂಥದ್ದೊಂದು ಕಥನ ಪರಂಪರೆಗೆ ಮುಖಾಮುಖಿಯಾಗಲು ಅನುವು ಮಾಡಿಕೊಟ್ಟ ಗೆಳೆಯರಾದ ಶ್ರೀಪಾದ ಭಟ್ ಹಾಗೂ ರವಿಕೃಷ್ಣಾರೆಡ್ಡಿಯವರಿಗೆ ವಂದನೆಗಳು.

Leave a Reply

ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.