Daily Archives: June 1, 2015

ಮೋದಿ ಸರ್ಕಾರದ ಒಂದು ವರ್ಷದ ಆಡಳಿತ : ಸುಳ್ಳುಗಳ ವಿಜೃಂಭಣೆ ಮತ್ತು ’ಬಹುತ್ವ’, ’ಬಂಧುತ್ವ’ ತತ್ವಗಳ ನಾಶ

– ಬಿ. ಶ್ರೀಪಾದ ಭಟ್

[ಇಲ್ಲಿನ ಪರಾಮರ್ಶೆಯಲ್ಲಿ ಕಾಂಗ್ರೆಸ್ ಪರವಾದ ಯಾವುದೇ ಧೋರಣೆಗಳಿಲ್ಲ. ನಾನು ಕಾಂಗ್ರೆಸ್ ವಕ್ತಾರನೂ, ಬೆಂಬಲಿಗನೂ ಅಲ್ಲ. ಕಳೆದ ದಶಕಗಳಲ್ಲಿ ಕಾಂಗ್ರೆಸ್ ಮಾಡಲಾರದ್ದನ್ನು ಈ ಮೋದಿ ಸರ್ಕಾರ ಒಂದು ವರ್ಷದಲ್ಲಿ ಮಾಡಬೇಕೆನ್ನುವ ಹಠವೇಕೆ ಎನ್ನುವ ಆತ್ಮವಂಚನೆಯ, ವಿತಂಡವಾದದ ಪ್ರಶ್ನೆಗಳಿಗೆ ಉತ್ತರವೂ ಅಲ್ಲ. ಏಕೆಂದರೆ ಈ ಬಿಜೆಪಿ ಮತ್ತು ಮೋದಿಯ ಸರ್ವಾಧಿಕಾರದ, ಹಿಂದುತ್ವದ ವಿರುದ್ಧ ಮಾತನಾಡುವವರನ್ನೆಲ್ಲ ಕಾಂಗ್ರೆಸ್ ಎಂಜೆಂಟ್ ಎಂದು ಜರೆಯುವ ಕಾಮಾಲೆ ಮನಸ್ಸುಗಳಿಗೆ ಉತ್ತರಿಸುವ ಬಾಲಿಶತನದ ಅವಶ್ಯಕತೆ ಸಹ ಇಲ್ಲ. ಹಿಂದಿನ ಯುಪಿಎ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ಹೈಜಾಕ್ ಮಾಡಿ ತಮ್ಮದೆಂದು ಸುಳ್ಳು ಹೇಳುತ್ತಿರುವ ಮೋದಿ ಸರ್ಕಾರದ ನಿಜಸ್ವರೂಪವನ್ನು ಬರೆಯಲು ಈ ಹೋಲಿಕೆಯನ್ನು ಮಾಡಲಾಗುತ್ತಿದೆ.]

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕರು,ಕೇಂದ್ರದ ಮಂತ್ರಿಗಳು modi_bjp_conclaveಮತ್ತು ಮಥುರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳ ಕೆಲವು ಸ್ಯಾಂಪಲ್:

ಸುಳ್ಳು : ಎನ್‌ಡಿಎ ಸರ್ಕಾರದ ಮುಖ್ಯ ಯೋಜನೆ ’ಸ್ವಚ್ಛ ಭಾರತ ಆಭಿಯಾನ್’.
ಸತ್ಯ : ಯುಪಿಎ ೨ ನೇ ಸರ್ಕಾರ ಜಾರಿಗೊಳಿಸಿದ್ದ ’ನಿರ್ಮಲ್ ಭಾರತ್ ಆಭಿಯಾನ್’ ಅನ್ನು ಹೆಸರು ಬದಲಿಸಿ ’ಸ್ವಚ್ಛ ಭಾರತ್ ಆಭಿಯಾನ್’ ಎಂದು ಕರೆಯಲಾಗಿದೆ.

ಸುಳ್ಳು : ಗ್ರಾಹಕರ ಖಾತೆಗೆ ನೇರವಾಗಿ ಹಣದ ವರ್ಗಾವಣೆ (Direct Transfer of Cash) ಯ ಯೋಜನೆಯು ಮೋದಿ ನೇತೃತ್ವದ ಸರ್ಕಾರದ ಯೋಜನೆ.
ಸತ್ಯ : ಯುಪಿಎ ೨ ಸರ್ಕಾರವು ೨1 ಅಕ್ಟೋಬರ್ ೨೦೧೨ರಂದು ರಾಜಸ್ತಾನದ ದುಡು ಗ್ರಾಮದಲ್ಲಿ ಆಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ’ನೇರವಾಗಿ ಹಣದ ವರ್ಗಾವಣೆ’ (Direct Transfer of Cash) ಯೋಜನೆಯನ್ನು ಉದ್ಘಾಟಿಸಿದರು. ಈ ಹಣದ ವರ್ಗಾವಣೆಯು ವೃದ್ಧರ ಪಿಂಚಣಿ, ಅರೋಗ್ಯದ ವಿಮೆ, ಉದ್ಯೋಗ ಖಾತ್ರಿ ಯೋಜನೆ ನರೇಗಾದಂದತಹ ಯೋಜನೆಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿತ್ತು.

ಸುಳ್ಳು : ಎನ್‌ಡಿಎ ಸರ್ಕಾರದ ಆಡಳಿತದ ಕಳೆದ ಒಂದು ವರ್ಷದ (೨೦೧೪-೧೫) ವಿದ್ಯುತ್ ಉತ್ಪಾದನೆಯು ಕಳೆದ ೩೦ ವರ್ಷಗಳ ವಿದ್ಯುತ್ ಉತ್ಪಾದನೆಗೆ ಸರಿಗಟ್ಟಿದೆ.
ಸತ್ಯ : ಜಗತ್ತಿನ ಇತಿಹಾಸದಲ್ಲಿಯೇ ಯಾವುದೇ ಸರ್ಕಾರವು ೩೦ ವರ್ಷಗಳ ವಿದ್ಯುತ್ ಉತ್ಪಾದನೆಯನ್ನು ಕೇವಲ ಒಂದು ವರ್ಷದಲ್ಲಿ ಸರಿಗಟ್ಟಲು ಸಾಧ್ಯವೇ? ಯಾವುದೇ ಬೇಜವಬ್ದಾರಿ ವ್ಯಕ್ತಿ, ಹೊಣೆಗಾರಿಕೆ ಇಲ್ಲದ ವ್ಯಕ್ತಿ ಇಂತಹ ಶತಮಾನದ ಸುಳ್ಳನ್ನು ನುಡಿಯಲು ಸಾಧ್ಯ. ಆದರೆ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಬೆನ್ನನ್ನು ತಟ್ಟಿಕೊಳ್ಳುವ ಆತ್ಮರತಿಯ ಪ್ರಲಾಪ ಫಲವಾಗಿ ಇಂತಹ ಅಸಂಬದ್ಧ ಮತ್ತು ಶತಮಾನದ ಸುಳ್ಳನ್ನು ಹೇಳಿದ್ದಾರೆ.

ಸುಳ್ಳು : ಪ್ರಾವಿಡೆಂಟ್ ಫಂಡ್‌ನ ಖಜಾನೆಯಲ್ಲಿ ಬಡ ಕಾರ್ಮಿಕರ ಸುಮಾರು ೨೭,೦೦೦ ಕೋಟಿ ಹಣ ಕೊಳೆಯುತ್ತಾ ಇತ್ತು. ಕಳೆದ ವರ್ಷ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು Unique Identity Number ನ ಮೂಲಕ ಕೆಲಸವನ್ನು ಬದಲಾಯಿಸಿದರೂ ಸಂಬಧಪಟ್ಟ ಹಣವನ್ನು ಯಾವುದೇ ಅಡೆತಡೆಯಿಲ್ಲದೆ ವರ್ಗಾಯಿಸುವ ಕಾನೂನನ್ನು ಜಾರಿಗೊಳಿಸಿತು.
ಸತ್ಯ : ಆಗಿನ ಯುಪಿಎ ೨ ಸರ್ಕಾರ ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ, ೨೪ ಮಾರ್ಚ ೨೦೧೪ರಂದು, ನೌಕರರ ಪ್ರಾವಿಡೆಂಟ್ ಫಂಡ್ (EPFO) ಇಲಾಖೆಯು ಹೊಸದಾದ Universal Account Number ಅನ್ನು ಘೋಷಿಸಿ ಅದಕ್ಕೆ ಬಳಕೆದಾರರ ಕೈಪಿಡಿ ಅನ್ನು ನೀಡಿ ಜುಲೈ ೨೦೧೪ ರಿಂದ ಆನ್‌ಲೈನ್ ವರ್ಗಾವಣೆಯನ್ನು ಆರಂಭಿಸಿತು.

ಸುಳ್ಳು : ಎನ್‌ಡಿಎ ಸರ್ಕಾರವು ರಸ್ತೆಗಳನ್ನು ನಿರ್ಮಿಸುವಲ್ಲಿ ಪರಿಣಿತಿಯನ್ನು ಸಾಧಿಸಿದೆ. ಈ ವಲಯದಲ್ಲಿ ಯುಪಿಎ ಸಂಪೂರ್ಣವಾಗಿ ವಿಫಲವಾಗಿದೆ.
ಸತ್ಯ : ಹಣಕಾಸು ಮಂತ್ರಿ ಅರುಣ್ ಜೈಟ್ಲಿ ೨೦೧೫-೧೬ರ ಮುಂಗಡ ಪತ್ರದಲ್ಲಿ ’ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಹಣ ೧೪,೦೦೦ ಕೋಟಿ ರೂ.ಗಳು. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ರಸ್ತೆಗಳ ನಿರ್ಮಾಣವನ್ನು Modi-selfieಪೂರ್ತಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಸುಮಾರು ೫೭,೦೦೦ ಕೋಟಿ ಹಣ ಬೇಕೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಆದರೆ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಕೇವಲ ಕಾಲು ಭಾಗ ಮಾತ್ರ!!!

ಇತರೆ ಉದಾಹರಣೆಗಳು :

  • ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮನಮೋಹನ್ ಸಿಂಗ್ ಅವರು 100% Finance Inclusion ಎನ್ನುವ ಯೋಜನೆಯನ್ನು ರೂಪಿಸಿ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು. ಆದರೆ ಜುಲೈ.೨೦೧೪ರ ವೇಳೆಗೆ ಶೇಕಡಾ ೫೮ ರಷ್ಟನ್ನು ಮಾತ್ರ ಸಾಧಿಸಲಾಗಿತ್ತು. ೨೦೦೧ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ೪೩.೯ ಕೋಟಿ ಬ್ಯಾಂಕ್ ಖಾತೆಗಳಿದ್ದವು. ೨೦೧೪ರಲ್ಲಿ ಯುಪಿಎ ಸರ್ಕಾರದ ಅಧಿಕಾರ ಕೊನೆಗೊಂಡಾಗ ದೇಶದಲ್ಲಿ ೭೭.೩೨ ಕೋಟಿಯಷ್ಟು ಬ್ಯಾಂಕ್ ಖಾತೆಗಳಿಗೆ ವೃದ್ಧಿಯಾಗಿತ್ತು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ ನರೇಂದ್ರ ಮೋದಿ ‘ಜನಧನ ಯೋಜನೆ’ ಎನ್ನುವ ಹೆಸರಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಯೋಜನೆಯು ಯುಪಿಎ ಸರ್ಕಾರದ ಮುಂದುವರೆದ ಯೋಜನೆ ಅದೂ ಬದಲುಗೊಂಡ ಹೆಸರಿನಲ್ಲಿ.
  • ಯುಪಿಎ ಸರ್ಕಾರ ಆರಂಭಿಸಿದ Skill India ಯೋಜನೆಯು ಮೋದಿ ಸರ್ಕಾರದಲ್ಲಿ Skill Development Mission ಆಗಿ ನಾಮ ಬದಲಾವಣೆ ಹೊಂದಿದೆ.
  • ಯುಪಿಎ ಸರ್ಕಾರದ ‘Rajiv Gandhi Mission for Clean Ganga Yojana’ ಯೋಜನೆಯು ಮೋದಿ ಸರ್ಕಾರದಲ್ಲಿ ‘Namo Gange’ ಎನ್ನುವ ಹೆಸರಿನಲ್ಲಿ ನಾಮ ಬದಲಾವಣೆ ಆಗಿದೆ.
  • ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ಪಾದನಾ ಸಾಮರ್ಥ್ಯದ ಹೆಚ್ಚಳವು ಶೇಕಡಾ ೫.೨% ರಷ್ಟಿದ್ದರೆ ಈ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಅದು ಕೇವಲ ಶೇಕಡಾ ೨.೧% ರಷ್ಟು ಮಾತ್ರ.
  • ‘ಮೇಕ್ ಇನ್ ಇಂಡಿಯಾ’ದ ಸ್ಲೋಗನ್ ಅಡಿಯಲ್ಲಿ ಕಳೆದ ಒಂದು ವರ್ಷದ ಮೋದಿ ನೇತೃತ್ವದಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ ೦.

ಯಾವುದೇ ಸಂದರ್ಭದಲ್ಲಿಯೂ ಅಧಿಕಾರದಲ್ಲಿರುವ ಪಕ್ಷವೊಂದು ಪರಾಭವಗೊಂಡು ಬದಲೀ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಸಹಜವಾಗಿಯೇ ಹಿಂದಿನ ಸರ್ಕಾರದ ಕೆಲವು ಜನಪ್ರಿಯ ಜನ ಕಲ್ಯಾಣ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತದೆ. ಇದು ಹೊಸದೇನಲ್ಲ. SwachhBharath_Modiಹೊಸ ಸರ್ಕಾರವು ತನ್ನ ಪಕ್ಷದ ಗೌರವಾನ್ವಿತ, ಜನಪ್ರಿಯ ನಾಯಕರ ಹೆಸರಿನಲ್ಲಿ ಈ ಯೋಜನೆಗಳನ್ನು ಮರು ನಾಮಕರಣ ಮಾಡುತ್ತದೆ. ಇದನ್ನು ಒಪ್ಪಿಕೊಳ್ಳಲಾಗದಿದ್ದರೂ ಸಹ ಹೊಸದೇನಲ್ಲ. ಆದರೆ ಈ ಸದರಿ ಮೋದಿ ಸರ್ಕಾರವು ಕಳೆದ ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತದ ಜನಕಲ್ಯಾಣ ಯೋಜನೆಗಳನ್ನು ಹೈಜಾಕ್ ಮಾಡಿ ನಾಮ ಬದಲೀಕರಣ ಮಾಡಿ ಅದು ತನ್ನ ಕಳೆದ ಒಂದು ವರ್ಷದ ಸಾಧನೆ ಎಂದು ಅಸಹ್ಯಕರವಾಗಿ ಪ್ರಚಾರ ಮಾಡಿಕೊಳ್ಳುತ್ತಿರುವುದು ಇತಿಹಾಸದಲ್ಲಿಯೇ ಪ್ರಥಮ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಇಂತಹ ಲಜ್ಜಗೇಡಿ, ಅಪ್ರಬುದ್ಧ ವರ್ತನೆಗಳಿಗೆ ಪರ್ಯಾಯ ಉದಾಹರಣೆಗಳೇ ಇಲ್ಲ. ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಿಂದಿನ ಯುಪಿಎ ಸರ್ಕಾರದ ಕ್ಷಮತೆ ಏನು, ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಿದೆ ಎನ್ನುವ ಕನಿಷ್ಟ ರಾಜಕೀಯ ಪ್ರಶ್ನೆಗಳನ್ನು ಕೇಳುವ ಅವಕಾಶಗಳನ್ನು ಕೈಬಿಟ್ಟ ಈ ಮೋದಿ ಸರ್ಕಾರ ತನ್ನ ಸುಳ್ಳುಗಳನ್ನು ಪ್ರಚಾರ ಮಾಡಲು ಈ ಮೇಲಿನ ಹೈಜಾಕ್ ಮಾದರಿಯ ಕೆಳಮಟ್ಟದ ತಂತ್ರಗಳನ್ನು ಅನುಸರಿಸುತ್ತಿದೆ. ತನ್ನ ಹಿಂದಿನ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ತನ್ನದೆಂದು ಹೇಳಿಕೊಂಡು ಇಂದು ಪ್ರಜ್ಞಾವಂತರ ಎದುರು ನಗೆಪಾಟಿಲಿಗೀಡಾಗಿರುವ ಈ ಮೋದಿಯವರಲ್ಲಿ ಆಧುನಿಕ ಪ್ರಜ್ಞೆಯ ಕೊರತೆ, ಪ್ರಜಾಪ್ರಭುತ್ವದ ಸ್ವರೂಪದ ಕುರಿತಾದ ಕನಿಷ್ಟ ತಿಳುವಳಿಕೆಗಳ ಕೊರತೆ ಮತ್ತು ಮುಖ್ಯವಾಗಿ ‘ಎಲ್ಲರ ವಿಕಾಸ ಎಲ್ಲರ ಜೊತೆಗೆ’ ಎನ್ನುವ ಸ್ಲೋಗನ್‌ನ ಆಶಯದ ಕುರಿತಾಗಿ ಇರುವ ದಿವ್ಯ ನಿರ್ಲಕ್ಷ ಇಂದು ಒಂದು ವರ್ಷದ ಈ ಎನ್‌ಡಿಎ ಸರ್ಕಾರವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ.

ಕಳೆದ ವರ್ಷದ ಲೋಕಸಭೆಯ ಚುನಾವಣೆಯಲ್ಲಿ ಕ್ಯಾಪಿಟಲಿಸ್ಟ್, ಮಧ್ಯಮವರ್ಗ, ಯುವ ಜನತೆ ಮೋದಿಯ ‘ಅಚ್ಛೇ ದಿನ್’ ಸ್ಲೋಗನ್ ಕುರಿತಾಗಿ ಮಾರುಹೋಗಿ ಸಂಪೂರ್ಣವಾಗಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಅಧಿಕಾರದಲ್ಲಿ ಕೂಡಿಸಿದ್ದರು. ಇಲ್ಲಿನ ಪ್ರಜ್ಞಾವಂತರು ಲಿಬರಲ್ ಮೋದಿಯ ವ್ಯಕ್ತಿತ್ವದ ಕುರಿತಾಗಿ ಅನುಮಾನಗಳನ್ನು ಇಟ್ಟುಕೊಂಡೇ ಕಡೆಗೆ ಈ ದೇಶದ ಪ್ರಜಾಪ್ರಭುತ್ವ, ಸಾಮಾಜಿಕ, ಸಾಂಸ್ಕೃತಿಕ ವೈವಿದ್ಯತೆ ಮತ್ತು ಮುಖ್ಯವಾಗಿ ಸಂವಿಧಾನದ ಆಶಯಗಳು ಈ ಮೋದಿಯ ಅಹಂಕಾರದ ವ್ಯಕ್ತಿತ್ವವನ್ನು, ಸರ್ವಾಧಿಕಾರಿ ಗುಣಗಳನ್ನು ನಿಯಂತ್ರಿಸುತ್ತದೆ ಎಂದು ನಂಬಿದ್ದರು. ಆದರೆ ಒಂದು ವರ್ಷದ modi_amit_shahನಂತರ ದೇಶದ ಪ್ರಧಾನಮಂತ್ರಿಯಾಗಿ ಮೋದಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಯಾವುದೇ ಪಾಠಗಳನ್ನು ಕಲಿಯಲು ಸೋತಿದ್ದಾರೆ. ಅವರ ಸರ್ವಾಧಿಕಾರದ ವ್ಯಕ್ತಿತ್ವ, ಠೇಂಕಾರದ ನಡುವಳಿಕೆಗಳು ಮತ್ತಷ್ಟು ಬಲಗೊಂಡಿವೆ. ಮೋದಿಯ ನೇತೃತ್ವದಲ್ಲಿ ೨೦೦೨ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಂ ಹತ್ಯಾಕಾಂಡದ ಪ್ರಶ್ನೆಗಳನ್ನೆತ್ತಿಕೊಂಡು ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇಂದು ಮೋದಿ ಒಬ್ಬ ಸ್ವತಂತ್ರ, ಒತ್ತಡರಹಿತ, ಪಕ್ಷದ ಕಟ್ಟುಪಾಡುಗಳಿಲ್ಲದ ನಾಯಕನಾಗಿ ಬೆಳೆದು ನಿಂತಿದ್ದಾರೆ. ಇಂದು ಪ್ರಧಾನಮಂತ್ರಿ ಕಾರ್ಯಾಲಯವು ಅತ್ಯಂತ ಬಲಿಷ್ಟ ಮತ್ತು ಪ್ರಭಾವಶಾಲಿ ಮುಖ್ಯ ಕಛೇರಿಯಾಗಿದೆ

ಉದಾಹರಣೆಗೆ ಈ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವರ್ಷದ ಅವಧಿಯಲ್ಲಿ ತಾವು ಸದಸ್ಯರಾಗಿರುವ ಭಾರತದ ಸಂಸತ್ತಿನಲ್ಲಿ ಕೆಲವೇ ಗಂಟೆಗಳಷ್ಟು ಪಾಲ್ಗೊಂಡು ವಿದೇಶಿ ಸಂಸತ್ತುಗಳಲ್ಲಿ ಅಧಿಕ ಸಮಯದಲ್ಲಿ ಭಾಗವಹಿಸಿದ್ದಾರೆ.

ಸಂವಿಧಾನಬದ್ಧ ಸಂಸ್ಥೆಗಳಾದ ಮುಖ್ಯ ಮಾಹಿತಿ ಕಮಿಷನರ್ (CIC) ಗೆ ಕಳೆದ ಒಂಬತ್ತು ತಿಂಗಳುಗಳಿಂದ ಅಂದರೆ ಸೆಪ್ಪೆಂಬರ್ ೨೦೧೪ರಿಂದ ಮುಖ್ಯಸ್ಥರನ್ನು ನೇಮಿಸಿಲ್ಲ. ಇದೇ ಸಂಸ್ಥೆಯಲ್ಲಿ ೩ ಮಾಹಿತಿ ಕಮಿಷನರ್ ಹುದ್ದೆಗಳೂ ಖಾಲಿ ಇವೆ. ಭ್ರಷ್ಟಾಚಾರ ನಿಗ್ರಹಣ ಸಂಸ್ಥೆ ಮುಖ್ಯ ಜಾಗೃತ ಕಮಿಷನರ್ (CVC) ಗೆ ಕಳೆದ ಒಂಬತ್ತು ತಿಂಗಳುಗಳಿಂದ ಅಂದರೆ ಸೆಪ್ಪೆಂಬರ್ ೨೦೧೪ರಿಂದ ಮುಖ್ಯಸ್ಥರನ್ನು ನೇಮಿಸಿಲ್ಲ. ಈ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಿಸಲು ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಸಮಿತಿಯ ಸಭೆಯನ್ನು ಕಳೆದ ಒಂದು ವರ್ಷದಲ್ಲಿ ಕೇವಲ ಎರಡು ಬಾರಿ ನಡೆಸಲಾಗಿದೆ, ಅದೂ ಔಪಚಾರಿಕವಾಗಿ. ಇದು ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಮೋದಿಯವರ ಜವಬ್ದಾರಿಯುತ ನಡೆಗಳ ಮಾದರಿ!!

ಫ್ರೊ. ಬಲವೇರ್ ಅರೋರರು, “ನೆಹ್ರೂವಿಯನ್ ಸಿದ್ಧಾಂತದ ಕಡೆಯ ಕಟ್ಟಡದಂತಿದ್ದ ‘ಯೋಜನಾ ಆಯೋಗ’ವನ್ನು ರದ್ದುಗೊಳಿಸಿ ಅದರ ಬದಲಿಗೆ ನೀತಿ ಆಯೋಗವನ್ನು ಸ್ಥಾಪಿಸಿ ಇತಿಹಾಸದ ತಪ್ಪುಗಳನ್ನು ಸರಿಪಡಿಸುವ ನಾಯಕನೆಂದು ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ಛಾಪುಗೊಳ್ಳಬೇಕೆಂದು Modiಬಯಸುವ ಈ ಮೋದಿ ತಾನು ಇತಿಹಾಸದ ಈ ತಪ್ಪುಗಳನ್ನು ಸರಿಪಡಿಸುವುದರ ಮೂಲಕ ಈ ದೇಶಕ್ಕೆ ಒಂದು ಘನತೆಯನ್ನು ತಂದುಕೊಡುತ್ತೇನೆ ಎಂದೇ ನಂಬಿದ್ದಾರೆ. ತಮ್ಮ ಭಾಷಣದಲ್ಲಿ ಸಹಕಾರಿ ಫೆಡರಲಿಸಂ ಕುರಿತಾಗಿ ಮಾತನಾಡಿರುವ ಮೋದಿಯವರಿಗೆ ಅದರ ಕುರಿತಾದ ಬದ್ಧತೆಗಳು ಸಹ ಇನ್ನೂ ಪ್ರಕಟಗೊಂಡಂತಿಲ್ಲ. ಆದರೆ ಅಧಿಕಾರ ಮತ್ತು ಜವಬ್ದಾರಿಗಳನ್ನು ಮೂರು ಸ್ತರಗಳಲ್ಲಿ ಹಂಚಿಕೊಳ್ಳುವುದು ಈ ರಾಜ್ಯಗಳ ಸಹಕಾರಿ ಫೆಡರಲಿಸಂನ ಮುಖ್ಯ ಲಕ್ಷಣಗಳಲ್ಲೊಂದು. ಇದರಲ್ಲಿ ಜನರ ಆದೇಶದ ಮೂಲಕ ಆಯ್ಕೆಯಾಗುವ ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಅಧಿಕಾರವನ್ನು ಗೌರವಿಸುವುದು ಅತ್ಯಂತ ಪ್ರಮುಖ ಸಹಕಾರಿ ಫೆಡರಲಿಸಂನ ತತ್ವಗಳಲ್ಲೊಂದು. ಅದರಲ್ಲೂ ವಿರೋಧ ಪಕ್ಷಗಳ ಸರ್ಕಾರಗಳು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಕೇಂದ್ರ ಸರ್ಕಾರವು ಮತ್ತಷ್ಟು ಜಾಗರೂಕತೆಯಿಂದ, ಈ ಸಹಕಾರಿ ಫೆಡರಲಿಸಂನ ನೀತಿಗೆ ಬದ್ಧವಾಗಿರಬೇಕಾಗುತ್ತದೆ. ಸಂಶಯಾತೀತರಾಗಿ ವರ್ತಿಸಬೇಕಾಗುತ್ತದೆ. ರಾಜ್ಯಗಳ ಈ ಸಹಕಾರಿ ಫೆಡರಲಿಸಂ ನೀತಿಯು ಕೇಂದ್ರವು ರಾಜ್ಯಗಳೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವ ರಾಜಕೀಯ ಇಚ್ಚಾಶಕ್ತಿಯನ್ನು ನಿರೀಕ್ಷಿಸುತ್ತದೆ” ಎಂದು ಬರೆಯುತ್ತಾರೆ.

ಪ್ರಜಾಪ್ರಭುತ್ವದ ಕುರಿತಾಗಿ, ರಾಜ್ಯಗಳ ಜೊತೆ ಸಹಕಾರಿ ಫೆಡರಲಿಸಂ ಕುರಿತಾಗಿ ನಿರರ್ಗಳವಾಗಿ ಮಾತನಾಡುವ ಬಿಜೆಪಿ ವಕ್ತಾರರು ಮತ್ತು ಮೋದಿ ಮೊನ್ನೆಯವರೆಗೂ ರಾಜ್ಯಗಳ ಸ್ವಾಯತ್ತತೆಯ ಪರವಾಗಿ ವಾದಿಸುತ್ತಿದ್ದರು. ರಾಜ್ಯಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದರ ಕುರಿತಂತೆ ಇವರಲ್ಲಿ ಒಮ್ಮತವಿದ್ದಂತಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಗುಣಲಕ್ಷಣಗಳು ಕಣ್ಮರೆಯಾಗಿವೆ.

೨೦೧೪ರಲ್ಲಿ ದೆಹಲಿ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವು ನಂತರದ ದಿನಗಳಲ್ಲಿ ಅನೇಕ ಬಿಕ್ಕಟ್ಟುಗಳಿಗೆ ಬಲಿಯಾಗಬೇಕಾಯ್ತು. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಜೊತೆ ಅಧಿಕಾರ ಹಂಚಿಕೆಯ ಕುರಿತಾಗಿ ಬೀದಿ ಕಾಳಗಕ್ಕೆ ಇಳಿದಿದ್ದಾರೆ. ಈ ಲೆಫ್ಟಿನೆಂಟ್ ಗವರ್ನರ್ ಜಂಗ್ ಅವರ ಅಧಿಕಾರಶಾಹಿ ಧೋರಣೆಗಳು, ತೀರ್ಮಾನಗಳು, ನೇಮಕಾತಿಗಳು ಅವರು ಕೇಂದ್ರದ ಏಜೆಂಟರಂತೆ ವರ್ತಿಸುತ್ತಿರುವುದಕ್ಕೆ ಸಾಕ್ಷಿಯಂತಿವೆ. ಆದರೆ ಈ ಎಲ್ಲಾ ಗೊಂದಲಗಳ ಮಧ್ಯೆ ಈ ತನ್ನ ವಿರೋಧ ಪಕ್ಷ ಆಮ್ ಆದ್ಮಿ ಪಕ್ಷ ಮತ್ತು ಗವರ್ನರ್ ನಡುವಿನ ದೆಹಲಿಯ ತಿಕ್ಕಾಟಕ್ಕೆ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ ತನ್ನ ವಿವರಣೆಯನ್ನು ನೀಡುತ್ತಾ ಮೇ modi-kejriwal೨೧, ೨೦೧೫ರಂದು ಕೇಂದ್ರ ಗೃಹ ಇಲಾಖೆಯಿಂದ ಒಂದು ನೋಟಿಫಿಕೇಶನ್ ಪ್ರಕಟವಾಯಿತು. ಅದರ ಸಂಕ್ಷಿಪ್ತ ವಿವರಗಳು ಹೀಗಿವೆ: “ದೆಹಲಿಯ ಸೇವೆಗಳ ಜವಾಬ್ದಾರಿಯು ಲೆಫ್ಟಿನೆಂಟ್ ಗವರ್ನರ್ ಅವರ ಸುಪರ್ದಿಗೆ ಬರುತ್ತವೆ. Sub-clause (a) of clause (3) of Article 239AA ನಲ್ಲಿ ನಮೂದಿಸಿರುವ ರಾಜ್ಯಗಳ ಪಟ್ಟಿ ಮತ್ತು ಅದಕ್ಕೆ ಸಂಬಂಧಿಸಿದ ಸಂಗತಿಗಳು ಕೇಂದ್ರಾಡಳಿತ ರಾಜ್ಯಗಳಿಗೂ ಅನ್ವಯವಾಗುತ್ತವೆ. ರಾಷ್ಟ್ರದ ರಾಜಧಾನಿ ಪ್ರಾಂತವಾದ ದೆಹಲಿ ತನ್ನದೇ ಆದ ರಾಜ್ಯ ಮಟ್ಟದ ಸಾರ್ವಜನಿಕ ಸೇವಾ ವಲಯಗಳನ್ನು ಹೊಂದಿಲ್ಲ. ಎಲ್ಲಿ ಶಾಸಕಾಂಗದ ಅಧಿಕಾರವಿಲ್ಲವೋ ಅಲ್ಲಿ ಕಾರ್ಯಾಂಗದ ಅಧಿಕಾರವೂ ಇಲ್ಲವೆಂದು ಇಲ್ಲಿ ಸ್ಪಷ್ಟವಾಗುತ್ತದೆ. Entries 1, 2, & 18 ಅನುಸಾರ ರಾಜ್ಯಗಳ ಪಟ್ಟಿಯಲ್ಲಿ ಸಾರ್ವಜನಿಕ ಪ್ರಕಟಣೆ, ಪೋಲೀಸ್, ಭೂಮಿ ಮತ್ತು ಸೇವಾ ಕ್ಷೇತ್ರಗಳು ಕೇಂದ್ರಾಡಳಿತ ರಾಜ್ಯವಾದ ದೆಹಲಿಯ ಶಾಸಕಾಂಗದ ಅಧಿಕಾರದ ಪರಿಧಿಯೊಳಗೆ ಬರುವುದಿಲ್ಲ ಮತ್ತು ಈ ಕೇಂದ್ರಾಡಳಿತ ರಾಜ್ಯವಾದ ದೆಹಲಿಯ ಸರ್ಕಾರಕ್ಕೆ ಎಕ್ಸಿಕ್ಯೂಟಿವ್ ಅಧಿಕಾರಗಳು ಇರುವುದಿಲ್ಲ ಮತ್ತು ಈ ವಿಶೇಷ ಅಧಿಕಾರಗಳು ರಾಷ್ಟ್ರಪತಿ ಅಥವಾ ಅವರ ಪ್ರತಿನಿಧಿಯಾದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇರುತ್ತವೆ. ರಾಷ್ಟ್ರದ ರಾಜಧಾನಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮುಂದಿನ ಸೂಚನೆಗಳು ದೊರಕುವವರೆಗೂ ಸಾರ್ವಜನಿಕ ಪ್ರಕಟಣೆಗಳು, ಸೇವಾ ಕ್ಷೇತ್ರ, ಪೋಲಿಸ್, ಮತ್ತು ಭೂಮಿಗೆ ಸಂಬಂಧಪಟ್ಟಂತೆ ಅವರು ತಮ್ಮ ಅಧಿಕಾರವನ್ನು ಬಳಸಿಕೊಳ್ಳಬಹುದು ಮತ್ತು ಕೇಂದ್ರ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸಬಹುದು.”

ಕೇಂದ್ರ ಸರ್ಕಾರದ ಗೃಹ ಇಲಾಖೆಯ ಮೇಲಿನ ನೋಟಿಫಿಕೇಶನ್‌ನ ಉದ್ದೇಶ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮುಖಾಂತರ ಚುನಾಯಿತ ಸರ್ಕಾರದ ಮೇಲೆ ಹಿಡಿತವನ್ನು ಸಾಧಿಸುವುದು. ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಲದಲ್ಲಿ ಮಾತನಾಡುತ್ತ ರಾಜ್ಯಗಳ ಸಹಕಾರಿ ಫೆಡರಲಿಸಂ ಅವಶ್ಯಕತೆಯ ಕುರಿತಾಗಿ ಮಾತನಾಡಿದ್ದ ಮೋದಿ ಇಂದು ದೆಹಲಿಯ ಕೇಜ್ರಿವಾಲ್ ಸರ್ಕಾರದ ಸಂವಿಧಾನಬದ್ಧ ಹಕ್ಕುಗಳನ್ನು ಕತ್ತರಿಸುತ್ತಿರುವುದು ಮೋದಿ ಸರ್ಕಾರದ ಸರ್ವಾಧಿಕಾರದ ನೀತಿಯಲ್ಲದೆ ಮತ್ತೇನಿಲ್ಲ.

ಆದರೆ ೨೬,ಮೇ,೨೦೧೫ ರಂದು ದೆಹಲಿ ಹೈಕೋರ್ಟ್, “ಲೆಫ್ಟಿನೆಂಟ್ ಗವರ್ನರ್ ಅವರು ಮಂತ್ರಿಮಂಡಲದ ಸಲಹೆ ಮತ್ತು ಸಹಕಾರದೊಂದಿಗೆ ಕಾರ್ಯ ನಿರ್ವಹಿಸಬೇಕು ಮತ್ತು ಜನರ ತೀರ್ಪನ್ನು ಲೆಫ್ಟಿನೆಂಟ್ ಗವರ್ನರ್ ಗೌರವಿಸಬೇಕು ಮತ್ತು ಶಾಸಕಾಂಗದ ಅಸೆಂಬ್ಲಿಯ ಪರಿಧಿಯೊಳಗೆ ಕಾರ್ಯ ನಿರ್ವಹಿಸಬೇಕು” ಎನ್ನುವ ಮಹತ್ವದ ತೀರ್ಪನ್ನು ನೀಡಿದೆ. ಹೈಕೋರ್ಟ್ ತೀರ್ಪಿನಿಂದ ಮುಖಭಂಗ ಅನುಭವಿಸಿರುವ ಕೇಂದ್ರ ಸರ್ಕಾರ ಹೈಕೋರ್ಟಿನ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಆದರೆ ಸುಪ್ರೀಂ ಕೋರ್ಟ ಸಹ ಇದಕ್ಕೆ ಸ್ಟೇ ನೀಡಲು ನಿರಾಕರಿಸಿದೆ.

ಕೇವಲ ಲಾಭ ನಷ್ಟದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚುನಾಯಿತ ಆಮ್ ಆದ್ಮಿ ಪಕ್ಷದ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇಂದು ಆಮ್ ಆದ್ಮಿ ಪಕ್ಷ ಪಕ್ಷದ ಪ್ರಜಾಪ್ರಭುತ್ವದ ಹಕ್ಕುಗಳನ್ನು, ಸ್ವಾತಂತ್ರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಸರ್ಕಾರದ ಈ ಸರ್ವಾಧಿಕಾರದ ಧೋರಣೆಗಳಿಗೆ ಮುಂದಿನ ದಿನಗಳಲ್ಲಿ ಇತರೇ ಪ್ರಾಂತೀಯ ಸರ್ಕಾರಗಳು ಬಲಿಯಾಗುವುದನ್ನು ನಾವು ಸಂದೇಹಿಸುವಂತಿಲ್ಲ.

ಚೆನ್ನೈನಲ್ಲಿರುವ ಐಐಟಿ-ಮದ್ರಾಸ್‌ನ ವಿದ್ಯಾರ್ಥಿ ಅಸೋಸಿಯೇಶನ್‌ನ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಅನ್ನು ನಿಷೇಧಗೊಳಿಸಿ ಅಲ್ಲಿನ ಆಡಳಿತ ಮಂಡಳಿ ನೋಟೀಸ್ ನೀಡಿದೆ. (ದ ಹಿಂದೂ, ಮೇ ೨೯,೨೦೧೫). ಇದಕ್ಕೆ ಈ ಆಡಳಿತ ಮಂಡಳಿ ನೀಡಿರುವ ಕಾರಣ ಯಾವುದೋ periyar-ambedkarಅನಾಮಧೇಯ ದೂರನ್ನು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಲಾಗಿದೆ. ಈ ದೂರಿನಲ್ಲಿ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಮೋದಿಯವರ ಆಡಳಿತವನ್ನು ಟೀಕಿಸುವಂತಹ ಕರಪತ್ರವನ್ನು ಹಂಚಿ ದ್ವೇಷದ ಭಾವನೆಯನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಲಾಗಿದೆ.’ಅದಕ್ಕಾಗಿ ಈ ನಿಷೇಧ. ಈ ನಿಷೇಧವನ್ನು ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿ ಸ್ಮೃತಿ ಇರಾನಿ ಸಮರ್ಥಿಸಿಕೊಂಡಿದ್ದಾರೆ. ಆದರೆ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್‌’ನ ವತಿಯಿಂದ ಮೋದಿ ಸರ್ಕಾರದ ಅರ್ಥಿಕ ಮತ್ತು ಸಾಂಸ್ಕೃತಿಕ ನೀತಿಗಳನ್ನು ಟೀಕಿಸಲಾಗಿತ್ತು. ಎಲ್ಲಿಯೂ ವ್ಯಕ್ತಿಗತ ತೇಜೋವಧೆಗೆ ನಡೆದಿರಲಿಲ್ಲ. ಆದರೆ ಈ ವಿದ್ಯಾರ್ಥಿ ಒಕ್ಕೂಟವನ್ನು ನಿಷೇಧಿಸಲಾಗಿದೆ.’ಈ ಮೂಲಕ ’ಕೇಂದ್ರ ಸರ್ಕಾರದ ಮತ್ತು ಮೋದಿಯವರ ನೀತಿಗಳ ಕುರಿತು ಚರ್ಚಿಸುವವರನ್ನು, ಟೀಕಿಸುವವರನ್ನು ನಿಷೇಧಿಸುತ್ತೇವೆ’ ಎನ್ನುವ ಸರಳವಾದ ಆದರೆ ಬ್ರೂಟಲ್ ಆದ ಸಂದೇಶವನ್ನು ಭಾರತೀಯರಿಗೆ ರವಾನಿಸಿದ್ದಾರೆ. ಆದರೆ ಶತಮಾನಗಳ ಕಾಲದಿಂದಲೂ ವಿದ್ಯಾಲಯಗಳು, ವಿಶ್ವವಿದ್ಯಾಲಯಗಳು ರಾಜಕೀಯ, ಸಾಂಸ್ಕೃತಿ ಚರ್ಚೆ, ಸಂವಾದ, ಟೀಕೆಗಳಿಗೆ ವೇದಿಕೆಯಾಗಿದ್ದವು ಎನ್ನುವ ಸರಳ ಇತಿಹಾಸದ ಜ್ಞಾನ ಈ ಸ್ಮೃತಿ ಇರಾನಿಯವರಿಗೆ ಇಲ್ಲದಿರುವುದು ಈ ದೇಶದ ಶಿಕ್ಷಣ ರಂಗದ ಬುರೇ ದಿನ್‌ಗಳಿಗೆ ಸಾಕ್ಷಿ.

ಇದಕ್ಕೂ ಹಿಂದೆ ಜೂನ್ ೨೦೧೪ರಂದು ಕೇರಳದ ಗುರುವಾಯೂರಿನ ಕೃಷ್ಣ ಕಾಲೇಜಿನ ೯ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಈ ವಿದ್ಯಾರ್ಥಿಗಳು ಕ್ರಾಸ್‌ವರ್ಡ ಪದಬಂಧವನ್ನು ಬರೆಯುವ ಸಂದರ್ಭದಲ್ಲಿ ಮೋದಿಯವರನ್ನು ಹೀಗೆಳೆಯುವಂತಹ ಭಾಷೆ ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಮೋದಿ ಸರ್ಕಾರ ಭಾರತೀಯರಿಗೆ ಭರವಸೆ ನೀಡಿದ್ದ ಅಚ್ಛೇ ದಿನ್‌ಗಳೆಂದರೆ ಈ ಮಾದರಿಯದ್ದೇ?? ಇದು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಫ್ಯಾಸಿಸಂ ಧೋರಣೆಯ ಲೇಟೆಸ್ಟ್ ಉದಾಹರಣೆ.

ಯುವ ಕಾದಂಬರಿಕಾರ ಚಂದ್ರಹಾಸ್ ಚೌಧುರಿ ಅವರು “ಮೋದಿ ಜನಿಸಿದ ಸುಮಾರು ೧೯೫೦ರ ದಶಕದ ಸಾಂಪ್ರದಾಯಿಕ ಭಾರತವು ಪ್ರಜಾಪ್ರಭುತ್ವದ ಹಕ್ಕುಗಳು, ಸ್ವಾತಂತ್ರ ಮತ್ತು ಧಾರ್ಮಿಕ ಸ್ವಾತಂತ್ರದ ಪರಿಕಲ್ಪನೆಗಳಲ್ಲಿ ಇಂದಿನ ಭಾರತ ದೇಶದ ಸಂದರ್ಭದಲ್ಲಿ ಬಹು ದೂರ ಸಾಗಿ ಬಂದಿದೆ. ಇಂದಿನ ಯುವಜನತೆ ಅಂತರ್ಜಾತೀಯ ವಿವಾಹದ ಕಡೆಗೆ ಸಹಜವಾಗಿ ಒಲವು ತೋರಿಸುತ್ತಿದ್ದಾರೆ. ಗೇ ಹಕ್ಕುಗಳ ಪರವಾಗಿ ಹೋರಾಡುತ್ತಿದ್ದಾರೆ. ಮಹಿಳಾ ಸ್ವಾತಂತ್ರ ಮತ್ತು ವಿಮೋಚನೆಗಳ ಪರವಾಗಿ ಹೋರಾಡುತ್ತಿದ್ದಾರೆ. ಈ ಯುವಜನತೆಯ ಈ ನಡುವಳಿಕೆಗಳು ಮತ್ತು ಕ್ರಿಯಾಶೀಲತೆಯು ಮುಖ ಗಂಟಿಕ್ಕದೆ ಸಾರ್ವಜನಿಕವಾಗಿ ಮುಸ್ಲಿಂ ಹೆಸರನ್ನು ಹೇಳಲು ಅಸಮರ್ಥಗೊಂಡಿರುವ ಈ ಮೋದಿಯವರಿಗಿಂತ ತುಂಬಾ ಹೆಚ್ಚಿನ ಲಿಬರಲ್ ಆಗಿವೆ. ೪೦ ವರ್ಷಗಳಿಗಿಂತ ಕೆಳಗಿರುವ ಯುವ ಜನತೆ ಪೂರ್ವಗ್ರಹವಿಲ್ಲದೇ ಇತಿಹಾಸದಲ್ಲಿ ಸತ್ಯವನ್ನು ಹುಡುಕಾಡಲು ಬಯಸುತ್ತಿದ್ದರೆ ತನ್ನ ತಾರುಣ್ಯದ ದಿನಗಳಿಂದಲೂ ಹಿಂದೂ ಧರ್ಮದ ಪುನರುಜ್ಜೀವನದ ಅಜೆಂಡಾಗಳು ಮತ್ತು ಅದರ ಪಾವಿತ್ರತೆಯನ್ನು ಬೋಧಿಸುವ ಹಿಂದೂ ರಾಷ್ಟ್ರೀಯ ಚಳುವಳಿಗಳ ಚಿಂತನೆಗಳನ್ನು ಕಲಿತು, ಮೈಗೂಡಿಸಿಕೊಂಡಿರುವ ಈ ಮೋದಿ ಈ ಐಡಿಯಾಲಜಿಯ ಇತಿಹಾಸದ ಚಿಂತನೆಗಳ ಬಂದಿಯಾಗಿದ್ದಾರೆ ಮತ್ತು ಈ ಇತಿಹಾಸದ ಏಜೆಂಟರಾಗಿದ್ದಾರೆ. ಒಂದು ಸಾಂಪ್ರದಾಯಿಕ ಹಿಂದೂ ಬಡ ಕುಟುಂಬದಲ್ಲಿ ಜನಿಸಿದ ಮೋದಿ ಇಂದು ಅತ್ಯಂತ ಶಕ್ತಿಶಾಲಿ ನಾಯಕನಾಗಿದ್ದಾರೆ. ಆದರೆ ಇಂಡಿಯಾದ ವೈವಿಧ್ಯತೆಯನ್ನು ಒಪ್ಪಿಕೊಳ್ಳಲು ಅವರ ಮನಸ್ಸು ನಿರಾಕರಿಸುತ್ತದೆ. ಈ ಮೋದಿಯವರ ಪ್ರಧಾನ ಮಂತ್ರಿಯಾಗಿ ಒಂದು ವರ್ಷದ ಆಡಳಿತವನ್ನು ಅವಲೋಕಿಸಿದಾಗ ಇಂದಿನ ಸಂಕೀರ್ಣ ಮನಸ್ಥಿತಿಯ ಇಂಡಿಯಾಗೆ ಮೋದಿಯ ನಿಲುವುಗಳು ಮತ್ತು ಮನಸ್ಥಿತಿ ತುಂಬಾ ಹಳೆಯ ಕಾಲದ್ದು ಎಂದೆನಿಸುತ್ತದೆ. ೨೦೧೪ರಲ್ಲಿ ಯುವಜನತೆ ಸಮಗ್ರವಾಗಿ ಈ ಮೋದಿಯ ಪರ ಮತ ಚಲಾಯಿಸಿ ಅಧಿಕಾರ ತಂದುಕೊಟ್ಟರೆ ೨೦೧೯ರಲ್ಲಿ ಹೊಸದೊಂದು ಯುವಜನತೆಯ ಅಭೂತಪೂರ್ವ ಮೂವ್‌ಮೆಂಟ್‌ನ ಅಲೆ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತದೆ” ಎಂದು ವಿವರಿಸಿದ್ದಾರೆ.

“ಭಾರತದ ಪ್ರಜಾಪ್ರಭುತ್ವವು ತನ್ನ ಬಾಲ್ಯಾವಸ್ಥೆಯಿಂದ ಬೆಳೆದು ಮಾಗಬೇಕಾದರೆ “ಬಂಧುತ್ವ” (Fraternity) ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಬಂಧುತ್ವವು ಕೇಂದ್ರಸ್ಥಾನವನ್ನು ಅಲಂಕರಿಸಬೇಕು. ಒಳಗೊಳ್ಳುವಿಕೆ ಮತ್ತು ಬಹುತ್ವ ಚಿಂತನೆಗಳನ್ನು ಈ ಬಂಧುತ್ವ ಒಳಗೊಂಡಿರಬೇಕು” ಎಂದು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ ಈ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ ಒಂದು ವರ್ಷದ ಆಡಳಿತದಲ್ಲಿ ‘ಬಹುಸಂಖ್ಯಾತ ತತ್ವ’ದ ಪ್ರಚಾರ ಮತ್ತು ‘ನ್ಯಾಯಾಂಗ’ ಹಾಗೂ ‘ಶಾಸಕಾಂಗ’ಗಳ ಪ್ರಸ್ತುತತೆಯನ್ನೇ ಅಸಿಂಧುಗೊಳಿಸುವ ನೀತಿಗಳ ಮೂಲಕ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.