Daily Archives: June 25, 2015

ಬಾಡಿಗೆ ಮನೆ ಖಾಲಿ ಇದೆ, ಆದರೆ ಅದು ‘ಎಲ್ಲರಿಗಲ್ಲ’!!

– ಜೀವಿ.

ಮನೆ ಖಾಲಿ ಇದೆ ಎಂಬ ಬೋರ್ಡ್ ಬೀದಿ ಬೀದಿಗಳಲ್ಲಿ ನೇತಾಡುತ್ತಿವೆ. ಆದರೆ ಆದರಲ್ಲಿ ಬಹುತೇಕ ಮನೆಗಳಲ್ಲಿ ವಾಸಿಸಲು ದಲಿತರು ಅನರ್ಹರು!

ಹೌದು, ಇದು ಕಟುಸತ್ಯ. ಆದರೆ ಸುಳ್ಳು, ಈ ಪರಿಸ್ಥಿತಿ ಈಗ ಇಲ್ಲ ಎಂದು ವಾದಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ನಾನೊಬ್ಬ ದಲಿತ ಎಂದು ಹೇಳಿಕೊಂಡು ಬಾಡಿಗೆ ಮನೆ ಪಡೆಯದು ಎಷ್ಟು ಕಷ್ಟ ಎಂಬುದು ಅನುಭವಿಸಿದವರಿಗೇ ಗೊತ್ತು. ’ಎಷ್ಟೇ ಒಳ್ಳೆಯವರಾದರೂ ಹೊಲೆ-ಮಾದಿಗರಿಗೆ ಮನೆ ಕೊಡುವುದಿಲ್ಲ’ ಎಂದು ಕಡ್ಡಿ ತುಂಡಾದಂತೆ ಮಾಲೀಕರು ಹೇಳಿದಾಗ ಕಣ್ಣಲ್ಲಿ ನೀರು ತುಂಬಿಕೊಂಡರೂ, ಅವರಿಗೆ ಗೊತ್ತಾಗದಂತೆ ತಲೆ ತಗ್ಗಿಸಿ ವಾಪಸ್ ಬರದೆ ಬೇರೆ ದಾರಿ ಇಲ್ಲ.

ಸ್ವತಃ ನಾನು ಕಂಡು ಅನುಭವಿಸಿದ ಉದಾಹರಣೆ ಇಲ್ಲಿದೆ. ನಾನಾಗ ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ. ಹಾಸ್ಟೆಲ್‌ನಲ್ಲಿ ಹಾಸ್ಟೆಲ್ ಜೀವನದ ಏಳನೇ ವರ್ಷ. ನನ್ನ ಭಾವ ಸರ್ಕಾರಿ ಕಾಲೇಜಿನಲ್ಲಿ ಅಟೆಂಡರ್ ಆಗಿದ್ದಾರೆ. ಅಕ್ಕ ಮತ್ತು ಮೂರು ಮಕ್ಕಳು ಸೇರಿ ಐದು ಮಂದಿಯ ಕುಟುಂಬ. ರಿಂಗ್ ರಸ್ತೆ ಬಳಿಯ ಮನೆಯೊಂದರಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆ ಮನೆಯ ಮಾಲೀಕರು OLYMPUS DIGITAL CAMERAಕೂಡ ದಲಿತರೇ ಆಗಿದ್ದರು. ಅಡುಗೆ ಮನೆ, ಬಚ್ಚಲು ಮತ್ತು ಟಾಯ್ಲೆಟ್ ಅಟ್ಯಾಚ್ ಇರುವ ಹಾಗು ಒಂದು ಬೆಡ್ ರೂಮ್ ಕೂಡ ಇರದ ಸಣ್ಣ ಮನೆ. ಮೂರ‌್ನಾಲ್ಕು ವರ್ಷದ ಅದೇ ಮನೆಯಲ್ಲಿ ಜೀವನ ಸಾಗಿತ್ತು. ಬಾಡಿಗೆ ಹೆಚ್ಚಳದ ವಿಚಾರಕ್ಕೆ ಮಾಲೀಕರ ನಡುವೆ ಸಣ್ಣದೊಂದು ಮನಸ್ತಾಪ ಏರ್ಪಟ್ಟಿತ್ತು.

ಹೆಚ್ಚು ಕಡಿಮೆ ನಾಲ್ಕು ವರ್ಷ ಆಗಿದ್ದರಿಂದ ಬೇರೆ ಮನೆ ಹುಡುಕುವ ಆಲೋಚನೆಯನ್ನು ಭಾವ ಮಾಡಿದ್ದರು. ಹುಡುಕಾಟ ಮುಂದುವರೆದಿತ್ತು, ಎಷ್ಟೋ ದಿನಗಳ ನಂತರ ಭಾವನ ಸ್ನೇಹಿತರೊಬ್ಬರು ಪಕ್ಕದ ಬಡಾವಣೆಯಲ್ಲಿ ಮನೆಯೊಂದನ್ನು ಹುಡುಕಿಕೊಟ್ಟರು. ನಾಲ್ಕು ಮನೆಗಳು ಸಾಲಾಗಿರುವ ಹೆಂಚಿನ ಮನೆ, ಅದರಲ್ಲಿ ಒಂದು ಮಾತ್ರ ಖಾಲಿ ಇತ್ತು. ಉಳಿದ ಮೂರು ಮನೆ ಭರ್ತಿಯಾಗಿದ್ದವು. ಒಂದರಲ್ಲಿ ಮನೆ ಮಾಲೀಕರು ಕೂಡ ವಾಸವಿದ್ದರು.

ಅಕ್ಕಳನ್ನು ಕರೆದೊಯ್ದು ಮನೆ ನೋಡಿಕೊಂಡ ಬಂದ ಭಾವ, ಒಪ್ಪಂದದ ಮಾತುಕತೆಗೆ ತಮ್ಮ ಸ್ನೇಹಿತನೊಂದಿಗೆ ತೆರಳಿದರು.
’ಜಾತಿ ವಿಚಾರ ಹೇಳಿದ್ದೀಯ’ ಎಂದು ಭಾವ ತನ್ನ ಸ್ನೇಹಿತನ ಕಿವಿಯಲ್ಲಿ ಕೇಳಿದರು. ’ಓನರ್ ತುಂಬಾ ಒಳ್ಳೆಯವರು ನನಗೆ ಸಾಕಷ್ಟು ವರ್ಷದಿಂದ ಗೊತ್ತಿರುವವವರು. ಜಾತಿಬೇಧ ಮಾಡುವ ಜನ ಅಲ್ಲ ನೀನು ಸುಮ್ಮನಿರು’ ಎಂದು ಭಾವನ ಸ್ನೇಹಿತ ಹೇಳಿದವರೇ ಮಾಸಿಕ ಬಾಡಿಗೆ ಫಿಕ್ಸ್ ಮಾಡಿಸಿ ಅಡ್ವಾನ್ಸ್ ಕೊಡಿಸಿದರು.

ನಂತರದ ಭಾನುವಾರ ಮನೆ ಶಿಫ್ಟ್ ಮಾಡುವ ದಿನ ನಿಗದಿಯಾಯಿತು. ಎರಡು ದಿನ ಮುನ್ನವೇ ಗಂಟು ಮೂಟೆ ಕಟ್ಟುವ ಕೆಲಸದಲ್ಲಿ ಅಕ್ಕ ನಿರತಳಾಗಿದ್ದಳು. ಭಾನುವಾರ ಬಂದೇ ಬಿಟ್ಟಿತು, ನಾನು ಕೂಡ ಮೂವರು ಸ್ನೇಹಿತರೊಂದಿಗೆ ಹೋಗಿದ್ದೆ.
ಸಾಮಾನು-ಸರಂಜಾಮುಗಳನ್ನು ಮೂಟೆ ಕಟ್ಟಿ ಗಾಡಿಯೊಂದರಲ್ಲಿ ತುಂಬಿಕೊಂಡು ಹೊಸ ಮನೆ ತಲುಪಿದೆವು. ಅಕ್ಕ ಸಡಗರದಿಂದ ಹೊಸ ಮನೆಯಲ್ಲಿ ಹಾಲು ಉಕ್ಕಿಸುವ ಪೂಜೆ ಮಾಡಲು ಸಜ್ಜಾದಳು. ನಾಲ್ಕು ಮನೆಗೆ ಒಂದೇ ಸಂಪಿನಿಂದ(ಟ್ಯಾಂಕ್) ನೀರು ಪಡೆಯಬೇಕಿತ್ತು. ನೀರು ತಂದು ಮನೆ ತೊಳೆದು, ಸಿಂಗಾರ ಮಾಡುವ ಕೆಲಸದಲ್ಲಿ ಅಕ್ಕ ಮತ್ತು ನಾನು ನಿರತರಾದೆವು.
ನೀರು ತರಲು ಹೋದ ಸಂದರ್ಭದಲ್ಲೇ ಅಕ್ಕನಿಗೆ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮಹಿಳೆ ಪರಿಚ ಮಾಡಿಕೊಂಡರು. ’ಇದಕ್ಕೂ ಮೊದಲು ಎಲ್ಲಿ ವಾಸಿವಿದ್ದಿರಿ?, ನಿಮ್ಮ ಎಜಮಾನ್ರು ಕೆಲಸ ಏನು? ಎಂದು ಪ್ರಶ್ನೆ ಮಾಡಿದ ಆ ಮಹಿಳೆ, ಕೊನೆಯದಾಗಿ ಜಾತಿ ಕೇಳುವುದನ್ನು ಮರೆಯಲಿಲ್ಲ. ಎಲ್ಲವನ್ನು ನೇರವಾಗಿ ಉತ್ತರಿಸಿದ ಅಕ್ಕ, ಜಾತಿ ವಿಷಯ ಬಂದಾಗ ಕೊಂಚ ಮುಜುಗರದಿಂದ ಸಣ್ಣ ಧ್ವನಿಯಲ್ಲಿ ’ಎಸ್ಸಿ’ ಎಂದು ಉತ್ತರ ಕೊಟ್ಟಳು.

ಮನೆಯೊಳಗೆ ಬಂದೊಡನೆ ಭಾವನ ಬಳಿ ವಿಷಯ ಹೇಳಿದಳು. ’ನೀನೇನು ಸುಳ್ಳು ಹೇಳಿಲ್ಲ ತಾನೇ, ಒಂದು ಬಾರಿ ಜಾತಿ ಸುಳ್ಳು ಹೇಳಿದರೆ, ಅದನ್ನು ಮರೆಮಾಚಲು ನೂರು ಸುಳ್ಳು ಹೇಳಬೇಕಾಗುತ್ತದೆ’ ಎಂದು ಭಾವ ಎಚ್ಚರಿಸಿದರು. ಅದಕ್ಕೆ ಅಕ್ಕ, ಇಲ್ಲ ನಾನು ನಿಜ ಹೇಳಿದ್ದೀನಿ ಎಂದಳು.

ಅಕ್ಕ ಸ್ಟವ್ ಹಚ್ಚಿ, ಹಾಲು ಉಕ್ಕಿಸಿ ಸಕ್ಕರೆ ಬೆರೆಸಿ ಎಲ್ಲರಿಗು ಕೊಟ್ಟಳು. ಹಾಲು ಕುಡಿದ ನಂತರ ವಸ್ತುಗಳನ್ನು ಜೋಡಿಸಲು ನಾನು ಮrentತ್ತು ನನ್ನ ಸ್ನೇಹಿತರು ತಯಾರಾದೆವು. ಅಷ್ಟರಲ್ಲಿ ಮನೆಯ ಮಾಲೀಕರ ಪತ್ನಿ ಒಳ ಬಂದಳು.

ಸ್ವಲ್ಪ ತಡಿಯಪ್ಪ, ಚೀಲಗಳನ್ನು ಬಿಚ್ಚಬೇಡ ಎಂದು ಆಜ್ಞೆ ಮಾಡಿದರು. ನಾನು ಭಾವನ ಮುಖ ನೋಡಿದೆ. ’ಯಾಕೆ ಮೇಡಂ, ಏನಾಯ್ತು’ ಎಂದು ಭಾವ ಗೌರವದಿಂದಲೇ ಪ್ರಶ್ನೆ ಮಾಡಿದರು. ಅದಕ್ಕೆ ದರ್ಪದಿಂದ ಉತ್ತರ ನೀಡಿದ ಮನೆಯ ಮಾಲೀಕನ ಪತ್ನಿ, ’ನಿಮಗೆ ಈ ಮನೆ ಕೊಡಲ್ಲ, ಬೇರೆ ಮನೆ ನೋಡ್ಕೊಳ್ಳಿ, ನೀವು ಹೊಲೆರಂತೆ’ ಎಂದು ಮರು ಪ್ರಶ್ನೆ ಮಾಡಿದರು.
ಹೌದು, ಎಂದು ಉತ್ತರ ನೀಡಿ ಸಮಾಜಾಯಿಷಿ ನೀಡಲು ಭಾವ ಪ್ರಯತ್ನ ಮಾಡಿದರು. ಅದಕ್ಕೆ ಅವಕಾಶ ನೀಡದ ಆಕೆ ’ಅಲ್ಲರಿ ಮನೆ ಬಾಡಿಗೆಗೆ ಪಡೆಯುವ ಮುನ್ನ ಜಾತಿ ವಿಷಯ ಹೇಳಬೇಕು ಅಂತ ಗೊತ್ತಾಗಲ್ವ?, ಸುಳ್ಳು ಹೇಳಿಕೊಂಡು ಮನೆ ಸೇರಿಕೊಳ್ತೀರಲ್ಲ, ನಾಚಿಕೆ ಆಗಲ್ವಾ? ಎಂದು ಗಧರಿಸಿದರು. ಮಾಡಬಾರದ ಅಪರಾಧ ಮಾಡಿಬಿಟ್ಟಿದ್ದೇವೆ ಎಂಬಂತೆ ಬಾಯಿಗೆ ಬಂದಂತೆ ನಿಂದಿಸಿಬಿಟ್ಟಳು.

ಮನೆ ಮಾಲೀಕನ ಪತ್ನಿಯ ಈ ಆಕ್ರೋಶದಿಂದ ತತ್ತಿಸಿಸಿ ಹೋದ ಭಾವ ಅಪರಾಧಿಯಂತೆ ತಲೆ ತಗ್ಗಿಸಿದರು. ಅಕ್ಕನ ಕಣ್ಣಲ್ಲಿ ಅದಾಗಲೇ ನೀರು ಧಾರಾಕಾರವಾಗಿ ಹರಿದಿತ್ತು.
’ಮೊದಲೇ ಜಾತಿ ವಿಷಯ ಹೇಳಬೇಕು ತಾನೇ? ಈಗ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಬೇರೆ ಮನೆ ನೋಡಿಕೊಳ್ಳಿ, ಇಲ್ಲಿ ಜಾಗ ಇಲ್ಲ’ ಎಂದು ಮುಲಾಜಿಲ್ಲದೆ ಹೇಳಿ ಹೋದಳು. ಅಕ್ಕ ಬಿಕ್ಕಿ-ಬಿಕ್ಕಿ ಅಳಲಾರಂಭಿಸಿದಳು, ಆಗ ತಾನೆ ಹಾಲು ಕುಡಿದು ನಿಂತಿದ್ದ ನಾನು ಹಾಗು ನನ್ನ ಸ್ನೇಹಿತರ ಕಣ್ಣುಗಳಲ್ಲೂ ನೀರು ತುಂಬಿಕೊಂಡವು.

ಮುಂದೆ ಏನು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಅಷ್ಟೆರಲ್ಲಿ ಆ ಮಹಿಳೆ ಮತ್ತೆ ಬಂದವಳೆ ಅಡ್ವಾನ್ಸ್ ಹಣ ವಾಪಸ್ ಕೊಟ್ಟಳು. ’ಮೇಡಂ ಯಜಮಾನ್ರು ಮನೆಲಿ ಇಲ್ವಾ’ ಎಂದು ಭಾವ ಕೇಳಿದರು, ’ಇದ್ದಾರೆ ಅವರೇ ಅಡ್ವಾನ್ಸ್ ವಾಪಸ್ ಕೊಟ್ಟಿರೊದು. ಅವರಿಗೆ ಹೇಳಲು ಮುಜುಗರವಂತೆ, ಅದಕ್ಕೆ ನಾನೇ ಹೇಳ್ತಿದ್ದೀನಿ. ಅವರ ಒಪ್ಪಿದರೂ, ನಾನು ಒಪ್ಪುವುದಿಲ್ಲ. ನಾಲ್ಕು ಮನೆಗೆ ಕುಡಿಯುವ ನೀರಿಗೆ ಒಂದೇ ಒಂದು ಟ್ಯಾಂಕ್ ಇದೆ. ನಿಮ್ಮ ಮನೆ ಬಿಂದಿಗೆ ಹಾಕಿ ನೀರು ಮಗೆದುಕೊಂಡ ಟ್ಯಾಂಕ್‌ನಲ್ಲೇ ನಾವೂ ನೀರು ತಗೊಳೊಕೆ ಆಗುತ್ತಾ?’ ಎಂದು ಪ್ರಶ್ನೆ ಮಾಡಿದರು. ಬಾಡಿಗೆ ಇರುವವರು ಕೂಡ ಒಪ್ಪುವುದಿಲ್ಲ. ಈಗಲೇ ಖಾಲಿ ಮಾಡಿ ಎಂದುಬಿಟ್ಟಳು.’ ಇದರಿಂದಾಗಿ ಮನೆಯ ಮಾಲೀಕರೊಂದಿಗೆ ಮಾತನಾಡಬಹುದು ಎಂದುಕೊಂಡಿದ್ದ ಭಾವನ ಭರವಸೆ ಇಂಗಿ ಹೋಯಿತು. ’ಒಂದು ವಾರ ಕಾಲಾವಕಾಶ ಕೊಡಿ ಬೇರೆ ಮನೆ ನೋಡಿಕೊಳ್ಳುತ್ತೇವೆ’ ಎಂದು ಭಾವ ಅಂಗಲಾಚಿದರು. ಆದಕ್ಕೂ ಸಮ್ಮತಿಸದ ಮಹಿಳೆ, ’ಈಗಲೇ ಜಾಗ ಖಾಲಿ ಮಾಡಬೇಕು’ ಎಂದು ಆಜ್ಞೆ ಮಾಡಿಬಿಟ್ಟಳು.

ಅಕ್ಕ ಜೋರಾಗಿಯೇ ಅಳುವುದಕ್ಕೆ ಶುರು ಮಾಡಿದಳು. ಅಳು ಬಂದರೂ ನುಂಗಿಕೊಂಡ ಭಾವ ಮತ್ತು ನಾನು ಸಮಾಧಾನಪಡಿಸಿದೆವು. ಈಗ ಖಾಲಿ ಮಾಡಿಕೊಂಡು ಬಂದಿರುವ ಮನೆಗೆ ಮತ್ತೆ ವಾಪಸ್ ಹೋಗುವುದು ಅಸಾಧ್ಯದ ಮಾತು. ಮುಂದೇನು ಮಾಡಬೇಕು ಎಂಬುದು ತಿಳಿಯಲಿಲ್ಲ. ಓನರ್ ತುಂಬಾ ಒಳ್ಳೆಯವರು ಎಂದು ಹೇಳಿದ್ದ ಸ್ನೇಹಿತನನ್ನು ನೆನೆದು ಭಾವ ಶಪಿಸಿದರು.

ಆ ತನಕ ಸುಮ್ಮನಿದ್ದ ನನ್ನ ಸ್ನೇಹಿತರು, ’ಅಕ್ಕ ಅಳೋದು ನಿಲ್ಲಿಸಿ, ಬೇರೆ ಮನೆ ಹುಡುಕೊಣ’ ಎಂದು ಸಮಾಧಾನ ಮಾಡಿದರು. ಭಾವನದೆ ಒಂದು ಸೈಕಲ್ ಇತ್ತು. ಅದನ್ನು ಹತ್ತಿ ಹಾಸ್ಟೆಲ್‌ಗೆ ಹೋದ ಸ್ನೇಹಿತನೊಬ್ಬ, ನಾಲ್ಕೈದು ಮಂದಿ ಗೆಳೆಯರಿಗೆ ನಡೆದ ವಿಷಯ ತಿಳಿಸಿದ. ಮತ್ತೆ ಐದು ಮಂದಿಯನ್ನು ಹಾಸ್ಟೆಲ್‌ನಿಂದ ಕರೆತಂದ.
ಎಲ್ಲರು ಬೀದಿ-ಬೀದಿ ಸುತ್ತಿ ಮನೆಗಾಗಿ ಹುಡುಕಾಟ ಶುರು ಮಾಡಿದೆವು. ಹೋಗುವ ಮುನ್ನ ಭಾವ ’ಜಾತಿ ವಿಷಯ ಮೊದಲೇ ಹೇಳಬೇಕು’ ಎಂದು ಸೂಚನೆ ನೀಡಿದ್ದರು.

ಸಂಜೆ 5 ಗಂಟೆಯಾದರೂ ಖಾಲಿ ಇರುವ ಒಂದು ಮನೆಯೂ ಸಿಗಲಿಲ್ಲ. ಎಲ್ಲರು ಒಬ್ಬೊಬ್ಬರಾಗಿ ವಾಪಸ್ ಬಂದು ನಿಂತಿವು. ಇನ್ನು ಒಂದಿಬ್ಬರು ಮಾತ್ರ ಬರಬೇಕಿತ್ತು. ಅವರು ಕೂಡ ಪೇಚು ಮೋರೆಯಲ್ಲೇ ಬಂದರು. ಅದರಲ್ಲೊಬ್ಬ ಪಕ್ಕದ ಬೀದಿಯಲ್ಲಿ ಹಾಳು ಮನೆಯಂತಿರುವ ಸಣ್ಣದೊಂದು ಶೆಡ್ ಇದೆ ಎಂದು ಹೇಳಿದ.

ನಾನು ಮತ್ತು ಉಳಿದ ಸ್ನೇಹಿತರು ಹೋಗಿ ನೋಡಿದೆವು. ನಾಲ್ಕೈದು ವರ್ಷದಿಂದ ಆ ಶೆಡ್‌ನಂತ ಮನೆಯಲ್ಲಿ ಯಾರು ವಾಸ ಮಾಡಿರಲಿಲ್ಲ. ಪಾಳು ಬಿದ್ದಂತೆ ಇತ್ತು. ಮನೆ ನೋಡಿದ ಭಾವ, ಬೇರೆ ದಾರಿ ಇಲ್ಲ. ಸದ್ಯಕ್ಕೆ ಇದೇ ಮನೆಯಲ್ಲಿ ಇರೋಣ ಎಂದು ನಿರ್ಧಾರ ಮಾಡಿದರು. ವಿಧಿ ಇಲ್ಲದೆ ಅಕ್ಕ ಕೂಡ ಇಪ್ಪಿಕೊಂಡಳು. ಮೇಲ್ಜಾತಿಯವರ ಕೊಟ್ಟಿಗೆಯಲ್ಲಿ ಉಂಡು-ಮಲಗಿ ಅಭ್ಯಾಸ ಇದ್ದ ಕಾರಣದಿಂದ ಈ ಮನೆಯಲ್ಲಿ ವಾಸ ಮಾಡುವುದು ಅಷ್ಟೇನು ಕಷ್ಟ ಎನ್ನಿಸಲಿಲ್ಲ.

ಓನರ್ ಜೊತೆ ಮಾತನಾಡಿದೆವು, ಯಾವ ಜಾತಿಗಾದ್ರು ಕೊಡುತ್ತೇವೆ. ಆದರೆ, ಆ ಮನೆ ವಾಸ ಮಾಡಲು ಯೋಗ್ಯವಾಗಿಲ್ಲ ಬೇಡ ಎಂದರು. ಆದರೂ ಪರವಾಗಿಲ್ಲ, ಸದ್ಯದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ ಮನವೊಲಿಸಿದೆವು. ಬೇರೆ ಮನೆ ಸಿಗುವ ತನಕ ಮಾತ್ರ ಇರುತ್ತೇವೆ, ಅವಕಾಶ ಮಾಡಿಕೊಡಿ ಎಂದು ಭಾವ ಮನವಿ ಮಾಡಿದರು.

’ಅಡ್ವಾನ್ಸ್ ಏನು ಬೇಡ, ಈ ಮನೆಯನ್ನು ಬಾಡಿಗೆಗೆ ಕೊಡುವ ಆಲೋಚನೆ ಇರಲಿಲ್ಲ. ಪಾಪ ತೊಂದರೆಲಿ ಇದ್ದೀರಿ ನಿಮಗೆ ಬೇರೆ ಮನೆ ಸಿಗುವ ತನಕ ಇಲ್ಲೇ ಇರಿ, ಒಂದಿಷ್ಟು ಬಾಡಿಗೆ ಅಂತ ಕೊಡಿ ಸಾಕು’ ಎಂದು ಮಾಲೀಕರು ಒಪ್ಪಿಗೆ ಸೂಚಿಸಿದರು. ಬೀದಿಯಲ್ಲಿ ಬಿದ್ದಿದ್ದಾಗ ಮನೆ ಕೊಟ್ಟ ಮಾಲೀಕರಿಗೆ ಎಲ್ಲರು ಕೃತಜ್ಞತೆ ಸಲ್ಲಿಸಿದೆವು. ಬಂದಿದ್ದ ಎಲ್ಲಾ ಸ್ನೇಹಿತರು ಸೇರಿ ಸಾಮಾನು-ಸರಂಜಾಮು ಹೊತ್ತು ತಂದೆವು. ಎಲ್ಲರು ಸೇರಿ ಪುಟ್ಟ ಮನೆಯನ್ನು ಕ್ಲೀನ್ ಮಾಡಿದೆವು. ಅಕ್ಕ ಮತ್ತೊಮ್ಮೆ ಹಾಲು ಉಕ್ಕಿಸುವ ಪೂಜೆ ಮಾಡಿದಳು. ಬಂದಿದ್ದ ಎಲ್ಲ ಸ್ನೇಹಿತರಿಗೂ ಪಾಯಿಸ ಮಾಡಿ ಊಟಕ್ಕೆ ಬಡಿಸಿದಳು.

ಕಷ್ಟದಲ್ಲಿ ಆಶ್ರಯ ನೀಡಿದ ಕಾರಣಕ್ಕೆ ಅದೇ ಮನೆಯಲ್ಲಿ ಸಾಕಷ್ಟು ದಿನ ಜೀವನ ಮಾಡಿದರು. ಈಗ ಮೊದಲೇ ಜಾತಿ ತಿಳಿಸಿ ಬೇರೊಂದು ಮನೆಯಲ್ಲಿ ವಾಸವಿದ್ದಾರೆ. ಮನೆ ಹುಡುಕುವ ಸಂದರ್ಭದಲ್ಲಿ ಆ ದಿನ ನೆನಪಿಗೆ ಬರೆದ ಉಳಿಯುವುದಿಲ್ಲ. ಹಾಗಿಯೇ ಮೊದಲು ಜಾತಿ ತಿಳಿಸಿ ಮಾಲೀಕರು ಒಪ್ಪಿದರೆ ಮಾತ್ರ ಮನೆ ಕೊಡಿ ಎಂದು ಕೇಳುವುದನ್ನು ನಾನು ಮರೆಯುವುದಿಲ್ಲ.

ದಲಿತರಿಗೆ ಮೇಲ್ಜಾತಿಯವರು ಮನೆ ಸಿಗುತ್ತಿಲ್ಲ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುವುದನ್ನೂ ಸಹಿಸದೆ ’ಹಾಗದರೆ ದಲಿತರೆಲ್ಲ ಈಗ ಬೀದಿಯಲ್ಲಿದ್ದಾರಯೇ?’ ಎಂದು ಪ್ರಶ್ನೆ ಕೇಳುವ ಜನ ಇದ್ದಾರೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಎಸ್ಸಿ ಎಂಬ ಪದ ಕೇಳಿದ ಕೂಡಲೇ ಮುಖ ಸಿಂಡರಿಸಿಕೊಂಡು ನಮ್ಮನ್ನು ಅಪರಾಧಿಯಂತೆ ನೋಡುವ ಮನೆ ಮಾಲೀಕರು ಸಾಕಷ್ಟಿದ್ದಾರೆ. ಈಗ್ಗೆ ಆರು ತಿಂಗಳ ಹಿಂದೆ ನಾನು ಬಾಡಿಗೆ ಮನೆ ಬದಲಿಸುವ ಸಂದರ್ಭ ಬಂದಾಗ ಮೊದಲೆ ಜಾತಿ ಹೇಳಿದ ಕಾರಣಕ್ಕೆ ನಾಲ್ಕು ಮನೆಯ ಒಪ್ಪಂದ ಮುರಿದು ಹೋದವು. ಕೊನೆಗೂ ಸ್ವಜಾತಿಯವರದೇ ಮನೆಯಲ್ಲಿ ಬಾಡಿಗೆ ಇದ್ದೇನೆ. ಇದೇ ಕಾರಣಕ್ಕೆ ಹಲವರು ಜಾತಿ ಸುಳ್ಳು ಹೇಳಿಕೊಂಡು ಬಾಡಿಗೆ ಮನೆ ಪಡೆದು ಜೀವನ ನಡೆಸುತ್ತಿದ್ದಾರೆ. ನಿಜ ಜಾತಿ ಗೊತ್ತಾದ ನಂತರ ಮುಜುಗರ ಅನುಭವಿಸುತ್ತಿದ್ದಾರೆ. ಹಾಗಾಗಿ ದಲಿತರು ಬಾಡಿಗೆ ಮನೆ ಪಡೆಯುವುದು ಅಷ್ಟು ಸುಲಭವಲ್ಲ.

ಚಿತ್ರಗಳು: ಸಾಂದರ್ಭಿಕ