Category Archives: ಎಸ್.ಬಿ.ಜೋಗುರ

ಈ ಬಗೆಯ ಸಂಶೋಧನೆ, ಬರವಣಿಗೆ ಬೇಕಾಗಿದೆಯೇ..?


– ಡಾ.ಎಸ್.ಬಿ. ಜೋಗುರ


 

 

 

 

ನಮ್ಮ ಬದಿ ಯಾವುದಾದರೂ ಒಬ್ಬ ವ್ಯಕ್ತಿ ಸಂಕಲನ, ವ್ಯವಕಲನದ ಸಂದರ್ಭದಲ್ಲಿ ಲೆಕ್ಕ ತಪ್ಪಿದರೆ ಸ್ನೇಹಿತರ graduateವಲಯದಲ್ಲಿ ‘ಏನೋ ಜೋಳ ಹಾಕಿ ಸಾಲಿ ಕಲ್ತಿಯೋ..ಹೇಗೆ..?’ ಎಂದು ತಮಾಷೆ ಮಾಡುವುದು ವಾಡಿಕೆ. ಇನ್ನು ತಪ್ಪಿ ಇಂಥವರು ಶಿಕ್ಷಕರಾದರೆ ಸಾಕು, ಒಂದು ತಲೆಮಾರನ್ನೇ ಹಾಳು ಮಾಡಿ ಬೀದಿಗೆ ತಳ್ಳುತ್ತಾರೆ. ಗಾಂಧೀಜಿ ಅಂದರೆ ಯಾರು ಅನ್ನೋ ಪ್ರಶ್ನೆಗೆ ತಲೆಯಲ್ಲಿ ಹೇನು ಕಡಿಯುವಂತೆ ತಲೆ ಕೆರೆಯುತ್ತಾ ಹುಬ್ಬು ಗಂಟಿಕ್ಕಿ ನಿಲ್ಲುವ ಶಿಕ್ಷಕರು ಇದೇ ಜಾತಿಗೆ ಸೇರುತ್ತಾರೆ. ಎಲ್ಲರಿಗೂ ಎಲ್ಲಾ ತಿಳಿದಿರಬೇಕೆಂದೇನೂ ಇಲ್ಲ. ಆದರೆ ಶಿಕ್ಷಕರಾದವರಿಗೆ ಗಾಂಧಿ ಬಗ್ಗೆ ತಿಳಿದಿರಲೇಬೇಕು. ಈಚೆಗೆ ಡಾಕ್ಟರೇಟ್ ಡಿಗ್ರಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯಂತ ಅಗ್ಗವಾಗಿ ಬಿಕ್ರಿಯಾಗುತ್ತಿವೆ. ಆ ದಿಸೆಯಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆಯವರು ನಿವೃತ್ತ ಕುಲಪತಿಗಳು ಮತ್ತು ನ್ಯಾಯಮೂರ್ತಿಗಳನ್ನೊಳಗೊಂಡಂತೆ ಒಂದು ಸಭೆಯನ್ನು ಕರೆದು ಚರ್ಚಿಸಿ ಇನ್ನು ಮುಂದೆ ಮಿತಿಯನ್ನು ಮೀರಿ ಡಾಕ್ಟರೇಟ್ ಡಿಗ್ರಿಗಳನ್ನು ವಿತರಿಸದೇ ವರ್ಷಕ್ಕೆ ಒಂದು ವಿಶ್ವವಿದ್ಯಾಲಯ ಮೂರೇ ಡಾಕ್ಟರೇಟ್ ಪದವಿಗಳನ್ನು ನೀಡಬೇಕು, ಸಂಶೋಧನಾ ಅಭ್ಯರ್ಥಿಗಳ ಆಯ್ಕೆಯೂ ಅಷ್ಟೇ ಕಟ್ಟುನಿಟ್ಟಾಗಿ ನಡೆಯಬೇಕು ಎನ್ನುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಇದೊಂದು ಒಳ್ಳೆಯ ತೀರ್ಮಾನವೇ. ಆದರೆ ತಳಮೂಲದಲ್ಲಿರುವ ದೋಷಗಳನ್ನು ಸರಿಪಡಿಸದೇ ಹೀಗೆ ಬರೀ ಡಾಕ್ಟರೇಟ್ ಡಿಗ್ರಿಗಳನ್ನು ಮಾತ್ರ ಸೆನ್ಸಾರ್ ಮಾಡುವುದರಿಂದ ಗುಣಮಟ್ಟ ಸುಧಾರಣೆಯಾಗದು. ಶೈಕ್ಷಣಿಕ ವಲಯ ಅತ್ಯಂತ ಪವಿತ್ರವಾದುದು. ಇಲ್ಲಿ ಕಟ್ಟಪ್ಪಣೆಗಳಿಗಿಂತಲೂ ಮುಖ್ಯವಾಗಿ ಆತ್ಮ ಸಾಕ್ಷಿ ಜಾಗೃತವಾಗಿ ಕೆಲಸ ಮಾಡಬೇಕಿದೆ. ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಎಂಟ್ರಿ ಹೊಡೆದ ದಿನದಿಂದಲೇ ರೋಗಗ್ರಸ್ಥ ಸ್ಥಿತಿ ಅಲ್ಲಿ ಆರಂಭವಾಯಿತು. ಪರಿಣಾಮವಾಗಿ ನಿರಂತರವಾಗಿ ಸಮರ್ಥರಿಗೆ ಅನ್ಯಾಯವಾಗುತ್ತಲೇ ಇದೆ. ವೈದ್ಯಕೀಯ ಮತ್ತು ಶೈಕ್ಷಣಿಕ ವಲಯಗಳಲ್ಲಿ ಅತ್ಯಂತ ಗಟ್ಟಿ ಇರುವ ಕಾಳುಗಳಿಗೆ ಮಾತ್ರ ನೆಲೆಯಿರಬೇಕು. ಪೊಳ್ಳು ಕಾಳುಗಳು ಮತ್ತು ಖಾಲಿ ಕೊಡಗಳಿಗೆ ಇಲ್ಲಿ ಜಾಗವೇ ಇರಬಾರದು. ದುರಂತವೆಂದರೆ ಈಗೀಗ ವಿಶ್ವವಿದ್ಯಾನಿಲಯಗಳಲ್ಲಿಯ ಸಂಶೋಧನೆ, ಅಧ್ಯಯನ ಮತ್ತು ಬರವಣಿಗೆಯಲ್ಲಿ ಒಂದು ಬಗೆಯ ನಿರ್ವಾತತೆ ಆರಂಭವಾಗುತ್ತಿದೆ. ಪರಿಣಾಮವಾಗಿ ನಮಗೆ ಮೊದಲಿನಂತೆ ಸ್ಕಾಲರ್ ಗಳನ್ನು ಸೃಷ್ಟಿ ಮಾಡಲಾಗುತ್ತಿಲ್ಲ.

ಈಚೆಗೆ ಮಾಡಲಾದ ಒಂದು ಸಮೀಕ್ಷೆಯಂತೆ ವಿಶ್ವದ 200 ಶ್ರೇಷ್ಟ ವಿಶ್ವವಿದ್ಯಾನಿಲಯಗಳ ಪೈಕಿ ನಮ್ಮ ದೇಶದ ಏಕೈಕuniversitiesofIndia ವಿಶ್ವವಿದ್ಯಾಲಯವೂ ಅಲ್ಲಿಲ್ಲ. ಈಗೀಗ ಅಧ್ಯಯನ ಮತ್ತು ಬೋಧನೆಗೆ ವಿಶೇಷವಾದ ಗಮನ ಹರಿಸುತ್ತಿಲ್ಲ. ಪರಿಣಾಮವಾಗಿ ಶಿಕ್ಷಣ ಹೆಚ್ಚೆಚ್ಚು ಯಾಂತ್ರಿಕವಾಗುತ್ತಿದೆ. ಅದರ ಪರಿಣಾಮವೇ ಇಂದಿನ ವಿದ್ಯಾರ್ಥಿಗಳಲ್ಲಿ ವಿಧೇಯತೆ, ಶಿಸ್ತು, ಜ್ಞಾನದ ಹಂಬಲ ಕಡಿಮೆಯಾಗುತ್ತಿದೆ. ಆಡಳಿತದಲ್ಲಿ ಈಗ ಶಿಕ್ಷಣದ ಬಗ್ಗೆ ನಿಜವಾದ ಕಳಕಳಿ ಮತ್ತು ಕಾಳಜಿ ಇರುವವರ ಅವಶ್ಯಕತೆ ಇದೆ. ಬರೀ ಆದೇಶಗಳನ್ನು ಹೇರುವುದರಿಂದಾಗಲೀ ಇಲ್ಲವೇ ಒತ್ತಡಗಳನ್ನು ತರುವ ಮೂಲಕವಾಗಲೀ ಸುಧಾರಣೆಯಾಗುವುದಿಲ್ಲ. ಸಂಶೋಧನೆ ವಿಷಯದಲ್ಲಂತೂ ಈಗೀಗ ಕಳಪೆತನದ ಮಾತುಗಳು ಮತ್ತೆ ಮತ್ತೆ ಕೇಳಿ ಬರುತ್ತಲಿದೆ. ವರ್ತಮಾನದ ಸಂದರ್ಭದಲ್ಲಿ ಶಿಕ್ಷಣ ಅನೇಕ ಬಗೆಯ ಅದ್ವಾನಗಳಿಂದ ಸುತ್ತುವರೆದಿರುವುದಂತೂ ಹೌದು. ಮಾರುಕಟ್ಟೆಗಾಗಿ ಶಿಕ್ಷಣ ಎಂಬ ಸೂತ್ರದಡಿಯಲ್ಲಿ ಶಿಕ್ಷಣ ಮತ್ತು ಪದವಿಯನ್ನು ಒಂದು ಕಮಾಡಿಟಿಯನ್ನಾಗಿ ಮಾಡಿ ಬಿಕ್ರಿಗಿಡುವಂತೆ ರೂಪಿಸುತ್ತಿರುವ ಕ್ರಮವೇ ಸರಿಯಾದುದಲ್ಲ. ಉದ್ಯೋಗಕ್ಕಾಗಿ ಶಿಕ್ಷಣ ಎನ್ನುವುದು ಆದ್ಯತೆಯಾದಾಗ ಜ್ಞಾನಾರ್ಜನೆಯ ಕಾವು ಆರಿ ಬಿಡುತ್ತದೆ. ಅದರ ಪರಿಣಾಮವಾಗಿಯೇ ಅಧ್ಯಯನ, ಸಂಶೋಧನೆ ಮತ್ತು ಬರವಣಿಗೆಯಲ್ಲಿ ಗಟ್ಟಿತನ ಸಾಧ್ಯವಾಗುವದಿಲ್ಲ. ಹೇಗಾದರೂ ಮಾಡಿ ಏನಾದರೂ ಮಾಡಿ ಡಿಗ್ರಿ ಪಡೆದರೆ ಸಾಕು. ಅಲ್ಲಿಗೆ ಒಂದು ಉದ್ಯೋಗವೂ ಅವನಿಗಾಗಿ ಕಾದು ಕುಳಿತಿರುತ್ತದೆ.

ಉನ್ನತ ಶಿಕ್ಷಣದ ವಲಯದಲ್ಲಿ ಗುಣಾತ್ಮಕ ಶಿಕ್ಷಣದ ಮಾತುಗಳಷ್ಟೇ ವ್ಯಾಪಕವಾಗಿ ಕೇಳಿ ಬರುವfake-degree-scam-india ಇನ್ನೊಂದು ಮಾತು ಕಳಪೆ ಮಟ್ಟದ ಅಧ್ಯಯನ ಮತ್ತು ಸಂಶೋಧನೆ. ಅದರಲ್ಲಿಯೂ ಮಾನವಿಕ ವಿಜ್ಞಾನಗಳಲ್ಲಿ ಈ ಬಗೆಯ ವಸ್ತುನಿಷ್ಟ ಸಂಶೋಧನೆಯ ಕೊರತೆಯಿಂದಾಗಿ ಆಗಾಗ ಎಲ್ಲೋ ಒಂದೆಡೆ ನಡೆದ ಅಪರಾತಪರಾದಿಂದಾಗಿ ಇಡಿಯಾಗಿ ಆ ಆಪಾದನೆ ಎಲ್ಲ ಸಮಾಜವಿಜ್ಞಾನಗಳಿಗೂ ಅನ್ವಯವಾಗುತ್ತಿತ್ತು. ಆಗ ಭೌತ ವಿಜ್ಞಾನಗಳು ತಮ್ಮಲ್ಲಿ ಹಾಗಾಗಲು ಸಾಧ್ಯವೇ ಇಲ್ಲ ಎನ್ನುವ ಸಮಾಧಾನದ ನಿಟ್ಟುಸಿರು ಬಿಡುವುದಿತ್ತು. ಆದರೆ ಈಚೆಗಷ್ಟೇ ಭೌತ ವಿಜ್ಞಾನಗಳಲ್ಲಿಯೂ ಪರಿಸ್ಥಿತಿ ನೆಟ್ಟಗಿಲ್ಲ ಎನ್ನುವುದನ್ನು ಕೆಲವು ಹಸಿ ವಿಜ್ಞಾನಿಗಳ ಬರಹಗಳು ಸಾಬೀತು ಮಾಡಿವೆ. ಇಲ್ಲಿ ಮತ್ತೆ ಎಲ್ಲ ವಿಜ್ಞಾನಿಗಳಿಗೆ ಹೋಲ್ ಸೇಲಾಗಿ ನಾನು ನೆಟ್ಟಗಿಲ್ಲ ಎನ್ನುವ ಪದ ಬಳಸಲು ಒಪ್ಪುವುದಿಲ್ಲ. ಯಾಕೆಂದರೆ ನಮ್ಮ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಯಾರೋ ಒಂದಿಬ್ಬರು ಮಾಡಿರುವ ಪ್ರಮಾದಗಳನ್ನು ಇಟ್ಟುಕೊಂಡು ಸಾರ್ವತ್ರಿಕಗೊಳಿಸುವ ಮನಸ್ಥಿತಿಯೇ ಸರಿಯಲ್ಲ. 99 ಜನರು ಸರಿಯಿದ್ದು ಯಾರೋ ಒಂದಿಬ್ಬರು ಮಾಡುವ ಹೊಣೆಗೇಡಿತನಕ್ಕೆ ಇಡೀ ವ್ಯವಸ್ಥೆಯನ್ನೇ ದೂರುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕ್ರಮಗಳೇ ಮೂಲಭೂತವಾಗಿ ಸರಿಯಲ್ಲ. ಹೊಲದಲ್ಲಿರುವ ಕಳೆ ತೆಗೆಯಬೇಕೇ ಹೊರತು ಬೆಳೆಯನ್ನಲ್ಲ. ಎಲ್ಲ ಅಧ್ಯಾಪಕರನ್ನು ಗುಮಾನಿಯಿಂದ ಕಾಣುವ ಮೂಲಕ ನಮ್ಮ ಸಂತಾನಕ್ಕೆ ಎಂಥಾ ಶಿಕ್ಷಣವನ್ನು ನಾವು ನಿರೀಕ್ಷಿಸಲು ಸಾಧ್ಯ? ಪ್ರಮಾದ ಎಸಗಿದವರಿಗೆ ಮಾತ್ರ ಶಿಕ್ಷೆ ಸೀಮಿತವಾಗಬೇಕೇ ಹೊರತು ಒಟ್ಟು ವ್ಯವಸ್ಥೆಗಲ್ಲ.

ಇಲ್ಲಿಯವರೆಗೆ ಭೌತ ವಿಜ್ಞಾನಿಗಳು ಮಾಡುವ ಪ್ರಯೋಗಗಳು, ಪರಿಶೀಲನೆಗಳು, ಬರಹಗಳು indian science labsವಸ್ತು ನಿಷ್ಟವಾಗಿರುತ್ತವೆ; ಕೊನೆಯ ಪಕ್ಷ ಸಮಾಜವಿಜ್ಞಾನಗಳಿಗಿಂತಲೂ ಅಲ್ಲಿ ಖಚಿತತೆ ಹೆಚ್ಚು ಎಂದು ನಂಬಿಕೊಂಡು ಬರಲಾಗಿತ್ತು. ಆದರೆ ಈಚೆಗೆ ಅಲ್ಲೂ ಕೂಡಾ ಅರಾಮ ಖುರ್ಚಿಯ ತತ್ವಜ್ಞಾನ ನುಸುಳುತ್ತಿದೆ ಎನ್ನುವುದರ ಕುರಿತು ‘ದ ಹಿಂದು’ ಪತ್ರಿಕೆ ದಿನಾಂಕ 17-7-2014 ರಂದು ಒಂದು ವಿವರವಾದ ಲೇಖನವನ್ನೇ ಪ್ರಕಟಿಸಿದೆ. ಭೌತ ವಿಜ್ಞಾನಗಳ ವಲಯದಲ್ಲಿಯೂ ಈಗೀಗ ಅಧ್ಯಯನ, ಸಂಶೋಧನೆ ಹೇಗೆ ಕಳಪೆ ಮಟ್ಟವನ್ನು ತಲುಪಿದೆ ಎನ್ನುವದನ್ನು ಬಹಿರಂಗಪಡಿಸಿತ್ತು. ಚಂಡಿಗಢದ IMTEC [ Institute of Microbial Technology] ಎಂಬ ಸಂಸ್ಥೆಯಲಿ ಕೆಲಸ ಮಾಡುವ ಒಂದಿಬ್ಬರು ವಿಜ್ಞಾನಿಗಳು ಅಂತರರಾಷ್ಟ್ರೀಯ ಮಟ್ಟದ ಜರ್ನಲ್ ಒಂದರಲ್ಲಿ ತಮ್ಮ ಕಳಪೆ ಬರಹಗಳ ಮೂಲಕ ಘನವಂತ ಪಾಂಡಿತ್ಯವನ್ನು ಮೆರೆದು ಇಡೀ ದೇಶದ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ. ಸಮಾಜವಿಜ್ಞಾನಗಳಲ್ಲಿ ಈ ಬಗೆಯ ಮಾತುಗಳಿದ್ದವು. ಅಲ್ಲಿ ಯಾರದೋ ಥೀಸಿಸ್ ನ್ನು ಇನ್ನೊಬ್ಬ ಕಾಪಿ ಹೊಡೆಯುವದು, ಒಂದೇ ತಿಂಗಳಲ್ಲಿ ಹತ್ತಾರು ಲೇಖನಗಳನ್ನು ಪ್ರಕಟಿಸಿ ಪ್ರಮೋಶನ್ ಪಡೆಯುವುದು ಇವೆಲ್ಲಾ ಇದ್ದವು. ಆದರೆ ಭೌತ ವಿಜ್ಞಾನಗಳಲ್ಲಿಯೂ ಅದೇ ಸ್ಥಿತಿಯಾದರೆ ವಿಜ್ಞಾನವನ್ನು ತತ್ವಜ್ಞಾನದ ಗದ್ದುಗೆಯ ಮೇಲೆ ಕುಳ್ಳರಿಸುವುದು ಸರಿಯೇನೋ ಎನಿಸುತ್ತದೆ.

ಈ ಚಂಡಿಗಡದ ಸೋ ಕಾಲ್ಡ್ ಸೈಂಟಿಸ್ಟ್ ಗಳು ‘PLos One’ ಎಂಬ ಜರ್ನಲ್ ನಲ್ಲಿ ಕಳೆದ ವರ್ಷ ಪ್ರಕಟಿಸಿದ ಮೂರು ಲೇಖನಗಳು ತಳ ಬುಡವಿಲ್ಲದವುಗಳಾಗಿದ್ದು, ಅವುಗಳನ್ನು ನಾವು ಸಮರ್ಥಿಸುತ್ತಿಲ್ಲ ಎಂದು ಆ ಪತ್ರಿಕೆ ಜುಲೈ ತಿಂಗಳ 9 ನೇ ತಾರೀಕಿನ ಸಂಚಿಕೆಯಲ್ಲಿ ಪ್ರಕಟಿಸಿದೆ. ಅದೇ ರೀತಿಯಲ್ಲಿ ಇವರು ಇತರೇ ಬೇರೆ ಬೇರೆ ಜರ್ನಲ್ ಗಳಲ್ಲಿ ಪ್ರಕಟಿಸಿರುವ ಲೇಖನಗಳೂ ಅಷ್ಟೆ ಕಳಪೆಯಿಂದ ಕೂಡಿದ್ದು ಅಲ್ಲಿ ಪ್ರಕಟವಾದ ನಾಲ್ಕು ಲೇಖನಗಳು ಕೂಡಾ ಬೋಗಸ್ ಎಂದು ಸಾಬೀತಾಗಿದೆ. ಅಂದರೆ ಒಟ್ಟಾರೆ ಈ ವಿಜ್ಞಾನಿಗಳು ಪ್ರಕಟಿಸಿರುವ ಏಳು ಲೇಖನಗಳು ಅರಾಮ ಖುರ್ಚಿಯ ತತ್ವಜ್ಞಾನದ ಅಡಿಯಲ್ಲಿ ರೂಪಗೊಂಡವುಗಳು ಎಂದು ಸಾಬೀತಾಗಿದ್ದು ಆ ಎಲ್ಲugc ಲೇಖನಗಳನ್ನು ಆ ಜರ್ನಲ್ ಗಳು ತಿರಸ್ಕರಿಸುತ್ತಿವೆ. ಕಾರಣ ಅಲ್ಲಿಯ ಅಂಕಿ ಅಂಶಗಳು ಮತ್ತು ಮಾಹಿತಿ ನಿಖರತೆಯಿಂದ ಕೂಡಿಲ್ಲ ಎನ್ನುವದಾಗಿದೆ. ಭೌತ ವಿಜ್ಞಾನಗಳಲ್ಲಿಯೂ ಹೀಗೆ ಊಹೆ, ತರ್ಕ ನುಸುಳಲು ಆರಂಭವಾಗಿರುವದು ಒಂದು ದೊಡ್ಡ ವಿಪರ್ಯಾಸ! ಸಾಮಾನ್ಯವಾಗಿ ಈ ಬಗೆಯ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಮುನ್ನ ಒಂದು ಪರಾಮರ್ಶಕ ಮಂಡಳಿ ಇದ್ದೇ ಇರುತ್ತದೆ. ಇಲ್ಲಿ ಮಾತ್ರ ಅವರೂ ಸರಿಯಾಗಿ ಕಾರ್ಯ ನಿರ್ವಹಿಸಿದಂತೆ ತೋರುವದಿಲ್ಲ. ಇನ್ನೊಂದು ದೊಡ್ಡ ವಿಪರ್ಯಾಸವೆಂದರೆ ಈ IMTEC ಸಂಸ್ಥೆ ಪ್ರತಿಷ್ಟಿತ CSIR [Council of scientific and Industrial Research] ನ ಅಂಗ ಸಂಸ್ಥೆ. ವಸ್ತು ನಿಷ್ಟ ಅಧ್ಯಯನ ಮತ್ತು ಸಂಶೋಧನೆಗೆಂದೇ ಹುಟ್ಟಿಕೊಂಡ ಸಂಸ್ಥೆಯಲ್ಲಿ ಈ ಬಗೆಯ ಅರಾಮ ಖುರ್ಚಿಯ ತತ್ವಜ್ಞಾನಿಗಳು ತಲೆ ಎತ್ತುತ್ತಿರುವದು ದುರಂತವೇ ಸರಿ. ಒಂದೇ ವರ್ಷದಲ್ಲಿ ಹದಿನೈದಕ್ಕಿಂತಲೂ ಹೆಚ್ಚಿನ ಸಂಶೋಧನಾ ಲೇಖನಗಳನ್ನು ಬರೆಯುವ, ಅಪಾರವಾಗಿ ಸಂಶೋಧನೆ ಮಾಡುವ ಈ ಬಗೆಯ ವಿಜ್ಞಾನಿಗಳು ಏನನ್ನೂ ಮಾಡದಿರುವದೇ ಒಳಿತು ಎನಿಸುತ್ತದೆ. ಇನ್ನು ಕೆಲವು ಜರ್ನಲ್ ಗಳು ದುಡ್ಡು ಪಡೆದು ಲೇಖನಗಳನ್ನು ಪ್ರಕಟಿಸುತ್ತವೆ. ಅಂಥಾ ಜರ್ನಲ್ ಗಳು ಲೇಖನಗಳನ್ನು ಸರಿಯಾಗಿ ಪರಾಮರ್ಶಿಸಲು ಸಾಧ್ಯವೇ ಇಲ್ಲ. ಒಟ್ಟಾರೆ ಹೇಗಾದರೂ ಮಾಡಿ ಪ್ರಮೋಶನ್ ಪಡೆಯುವ, ಏನಾದರೂ ಮಾಡಿ ಸಂಶೋಧನೆ ಮಾಡಬೇಕೆನ್ನುವ ಅಡ್ಡ ದಾರಿಗಳು ಕೇವಲ ಅವನ ಕಾಲದ ಶಿಕ್ಷಣವನ್ನು ಮಾತ್ರ ಕಳಪೆಯಾಗಿಸದೇ ಅವನಿಗಿಂತಲೂ ಸಮರ್ಥರಿರುವವರ ಹಕ್ಕುಗಳನ್ನು ಕಸಿದು ಮುಂಬರುವ ಒಟ್ಟು ಶೈಕ್ಷಣಿಕ ಪರಿಸರವನ್ನೇ ಹಾಳುಗೆಡವುತ್ತದೆ. ಈಗೀಗ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ, ಬೋಧನೆ, ಸಂಶೋಧನೆಯ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಅದಕ್ಕೆ ಕಾರಣ ಈ ದಿಶೆಯಲ್ಲಿ ಸರಿಯಾದ ಆಲೋಚನೆ ಮತ್ತು ತೀರ್ಮಾನಗಳೇ ನಮ್ಮಲ್ಲಿಲ್ಲ. ನಮ್ಮ ದೇಶದ ಶೈಕ್ಷಣಿಕ ಪರಿಸರಕ್ಕೆ ಪಕ್ಕಾ ಅಕಾಡೆಮಿಕ್ ಕಾಳಜಿ ಇರುವ ತಜ್ಞರ ಅಗತ್ಯ ಎಂದಿಗಿಂತಲೂ ಈಗ ಹೆಚ್ಚಿಗಿದೆ.

ಬೆಂಗಳೂರೆಂಬ ಆತ್ಮಹತ್ಯೆ ನಗರ..!


– ಡಾ.ಎಸ್.ಬಿ. ಜೋಗುರ


ಬದುಕನ್ನು ಗ್ರಹಿಸುವ, ಸ್ವೀಕರಿಸುವ ರೀತಿಯಲ್ಲಿಯೇ ಬಾಳಿನ ಸಾರ್ಥಕತೆ ಮತ್ತು ನಿರರ್ಥಕತೆಗಳು ನಿರ್ಣಯವಾಗುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರ suicide_5ತಂದೊಡ್ಡುವ ಅನೇಕ ಬಗೆಯ ಧಾವಂತಗಳ ನಡುವೆಯೂ ನಾವು ನೆಮ್ಮದಿಯಿಂದ ಬದುಕಿ ಉಳಿಯಬೇಕು ಎಂತಾದರೆ ಭೌತಿಕತೆಯ ಮೋಹವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಭೌತಿಕತೆಯ ಸಹವಾಸದ ದಟ್ಟ ನೆರಳು ನಿಮ್ಮನ್ನು ಅಷ್ಟು ಸರಳವಾಗಿ ನೆಮ್ಮದಿಯಿಂದ ಇರಲು ಬಿಡುವದಿಲ್ಲ. ನೀವು ಓಡಿದರೆ ಹಿಂಬಾಲಿಸುವ, ಹಿಂಬಾಲಿಸಿದರೆ ಓಡುವ ಮೂಲಕ ಅದು ಸದಾ ನೀವು ಮೋಹದಲ್ಲಿ ಮಥಿಸುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಬುದ್ಧನ ‘ಆಸೆಯೇ ದು:ಖಕ್ಕೆ ಮೂಲ ಎನ್ನುವ ಮಾತು ಹೆಚ್ಚು ಇಷ್ಟವಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಮನುಷ್ಯ ಅನೇಕ ಬಗೆಯ ಒತ್ತಡ ಮತ್ತು ಸಂವೇದನಾ ಶೂನ್ಯವಾದ, ಹೀನವಾದ ಬದುಕು ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಅವನು ಇಲ್ಲವೇ ಅವಳು ಬಾಲ್ಯವನ್ನು ಅನುಭವಿಸದೇ ಬೆಳೆದು, ಭಯಂಕರವಾಗಿ ಓದಿ ಅಂಕ ಗಳಿಸಿ, ಉದ್ಯೊಗ ಗಿಟ್ಟಿಸಿಕೊಂಡರೂ ನೆಮ್ಮದಿಯ ಜೀವನ ಸಾಧ್ಯವಾಗುತ್ತಿಲ್ಲ. ಅವರ ಅರ್ಧ ಬದುಕು ಕೇವಲ ಅಂಕಗಳಿಸುವದರಲ್ಲಿಯೇ ಕಳೆದು ಹೋದರೆ ಇನ್ನರ್ಧ ಅವರು ಕೆಲಸ ಮಾಡುವ ಕಚೇರಿಯ ನಿರೀಕ್ಷೆಗೆ ತಕ್ಕಂತೆ ನೌಕರಿ ನಿರ್ವಹಿಸುವದರಲ್ಲಿ ಕಳೆದುಹೋಗುತ್ತದೆ. ಜಾಬ್ ಸ್ಯಾಟಿಸ್ ಫ್ಯಾಕ್ಷನ್ ಕಿಂತಲೂ ನಮ್ಮಲ್ಲಿ ಈಗೀಗ ಜೋಬು ಸ್ಯಾಟಿಸ್ ಫ್ಯಾಕ್ಷನ್ ಮುಖ್ಯವಾಗುತ್ತಿದೆ.

ಪ್ರಾಥಮಿಕ ಹಂತದಲ್ಲಿಯೆ ಅತ್ಯಂತ ಮಹತ್ವಾಕಾಂಕ್ಷಿ ಸಂತಾನವನ್ನು ರೂಪಿಸುವ ನಾವು ಮುಂದುವರೆದsuicide_4 ರಾಷ್ಟ್ರಗಳಿಗಿಂತಲೂ ವಿಭಿನ್ನವಾಗಿ ಮಕ್ಕಳನ್ನು ಪರಿಗಣಿಸುತ್ತಿಲ್ಲ. ಇದರ ಪರಿಣಾಮವಾಗಿ ಹೈಸ್ಕೂಲ್ ಮುಗಿಯುತ್ತಿರುವಂತೆ ಜೀವನ ನೀರಸವೆನಿಸುತ್ತಿದೆ. ಈ ಮುಂಚೆ ನಾವು ಎಂದೂ ಆರು ಮತ್ತು ಏಳನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವದನ್ನು ಕೇಳಿರಲಿಲ್ಲ. ಆದರೆ ಈಗ ತೀರಾ ಚಿಲ್ಲರೆ ಕಾರಣಗಳಿಗಾಗಿಯೂ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಅಷ್ಟಕ್ಕೂ ಒಬ್ಬ ವ್ಯಕ್ತಿ ತನ್ನನ್ನು ತಾನು ಕೊಂದುಕೊಳ್ಳುವ ಕ್ರಿಯೆ ಸ್ವಾಭಾವಿಕವಾದುದಂತೂ ಅಲ್ಲ. ನಿಸರ್ಗದ ಯಾವ ಜೀವಿಗಳು ಕೂಡಾ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವದಿಲ್ಲ. ಹುಟ್ಟು ಆಕಸ್ಮಿಕ ಸಾವು ಖಚಿತ. ಆದರೆ ತಾನಾಗಿಯೇ ತನ್ನನ್ನು ಕೊಂದುಕೊಳ್ಳುವ ಕ್ರಿಯೆ ಮಾತ್ರ ಅತ್ಯಂತ ಅಸಹಜವಾದುದು. ಎಲ್ಲ ಜೀವಿಗಳು ಬದುಕಿ ಉಳಿಯಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತವೆ. ತೀರಾ ವಯಸ್ಸಾಗಿ ಹಣ್ಣು ಹಣ್ಣಾಗಿ ಜೀವಜಾಲದ ದೇಟು ಕಳಚುವದರಲ್ಲಿದ್ದ ಮುಪ್ಪಾನು ಮುಪ್ಪು ಮುದುಕರು ಕೂಡಾ ತಮ್ಮನ್ನು ’ಮಣಿಪಾಲಕ್ಕೆ ಕರೆದುಕೊಂಡು ಹೋಗಿ..ಮಿರಜಗೆ ಕರೆದೊಯ್ಯಿರಿ’ ಎಂದು ಹಲಬುವವರ ನಡುವೆ ಹೀಗೆ ತೀರಾ ಚಿಕ್ಕ ವಯಸ್ಸಿನಲ್ಲಿ ಕಾರಣವೇ ಅಲ್ಲದ ಕಾರಣವನ್ನು ಮುಂದೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಎಳೆಯ ಜೀವಗಳನ್ನು ಕಂಡಾಗ ತೀರಾ ಬೇಸರವೆನಿಸುತ್ತದೆ.

ಯಾವುದೇ ಜೀವಿ ತನ್ನಷ್ಟಕ್ಕೆ ತಾನೇ ಸಾಯಲು ಬಯಸುವುದಿಲ್ಲ. ಒಂದೊಮ್ಮೆ ತನ್ನ ಜೀವಕ್ಕೆ ಇತರ ಜೀವಿಗಳಿಂದ ಗಂಡಾಂತರವಿದೆ ಎನಿಸಿದಾಗ ಮಾತ್ರ ಆಕ್ರಮಣ ಮಾಡುತ್ತವೆ. ಮನುಷ್ಯ ಜೀವಿ ಮಾತ್ರ ಎದುರಾದ ಸಂದಿಗ್ದಗಳಿಗೆ ಪರಿಹಾರ ಕಾಣದೇ ಸೋತೆ ಎನಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈಗೀಗ ಮನುಷ್ಯ ಪ್ರತಿಯೊಂದನ್ನೂ ಹೋಲಿಕೆ ಮಾಡುವ ಮೂಲಕವೇ ಸಮಾಧಾನ ಪಡುವುದು ಇಲ್ಲವೇ ಕಷ್ಟಪಡುವ ಮಾನಸಿಕ ಸ್ಥಿತಿಯನ್ನು ಅನುಭವಿಸುತ್ತಾನೆ. ಹಾಗೆ ಹೋಲಿಕೆ ಮಾಡುವಾಗಲೂ ಇತ್ಯಾತ್ಮಕವಾಗಿರುವದನ್ನು ಗಮನಿಸದೇ ನೇತ್ಯಾತ್ಮಕವಾಗಿರುವ ಸಂಗತಿಗಳನ್ನೇ ಹೆಚ್ಚಾಗಿ ಪರಿಗಣಿಸುವುದರ ಪರಿಣಾಮವಾಗಿ ಮನಸ್ಸು ಹುತ್ತಗಟ್ಟತೊಡುತ್ತದೆ. ನಿರಾಸೆಯೇ ಸುತ್ತಲೂ ಆವರಿಸಿಕೊಂಡು ಬಿಡುತ್ತದೆ. ಯಾವುದರಲ್ಲಿಯೂ ಮನಸ್ಸು ಖುಷಿ ಪಡುವ ಸ್ಥಿತಿಯಲ್ಲಿರುವುದಿಲ್ಲ. ಅದು ಒಂದು ಸೀಮಿತ ಗಳಿಗೆಯವರೆಗೆ ಉಳಿದರೆ ಸರಿ. ಆದರೆ ಹಾಗಾಗುವುದಿಲ್ಲ. ಗಾಢವಾದ ಕರಾಳ ಛಾಯೆ ಮನಸ್ಸನ್ನು ಆವರಿಸಿಕೊಂಡು ಬಿಡುತ್ತದೆ. ಅದೇ ಧ್ಯಾನ, ಅದೇ ಗುಂಗು ತೀವ್ರವಾಗಿ ಕಾಡಿದಾಗ ವ್ಯಕ್ತಿಯಲ್ಲಿ ಬೇರು ಕಿತ್ತಿದ ಭಾವನೆ ಬಲಿಯತೊಡಗುತ್ತದೆ. ಆತ್ಮಹತ್ಯೆ ಎನ್ನುವುದು ಆ ಒಂದು ಗಳಿಗೆಗೆ ಮಾತ್ರ ಸೀಮಿತವಾಗಿರುತ್ತದೆ. ಆ ಗಳಿಗೆಯನ್ನು ದಾಟಿದರೆ ಆ ವ್ಯಕ್ತಿ ಮತ್ತೆಂದೂ ಆತ್ಮಹತ್ಯೆ ಮಾಡಿಕೊಳ್ಳಲಾರ. ಇನ್ನು ಅವನು ಮತ್ತೆ ಮತ್ತೆ ಆ ಯತ್ನ ಮಾಡಿರುವನೆಂದಾದರೆ ಅದೊಂಥರಾ ವಿಕ್ಷಿಪ್ತ ಖಯಾಲಿ.

ಮಹಾನಗರಗಳಲ್ಲಿ ವ್ಯಾಪಕವಾಗಿರುವ ಈ ಪೀಡೆ ಈಗೀಗ ಗ್ರಾಮೀಣ ಪರಿಸರವನ್ನು ಬಾಧಿಸತೊಡಗಿದೆ. ಇನ್ನು ನಗರಗಳಂತೂ ಅಕ್ಷರಶ: ನೆಮ್ಮದಿಯstress-1 ಬದುಕಿನ ಹರಣಕ್ಕೆ ಕಾರಣವಾಗುತ್ತಿವೆ. ಆ ಬಗೆಗೆ ಅನೇಕ ಅಧ್ಯಯನಗಳೂ ನಡೆದಿವೆ. ಚೆನೈನಂತಹ ನಗರಗಳಲ್ಲಿ 27 ಪ್ರತಿಶತದಷ್ಟು ಜನರು ಮಾನಸಿಕ ಕಿರಿಕಿರಿಗೆ ಒಳಗಾಗಿ ಬದುಕುತ್ತಿದ್ದಾರೆ. ಭೌತಿಕ ಪ್ರಧಾನ ಬದುಕಿನ ನಡುವೆ ಮನುಷ್ಯನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕುರುಡು ಕಾಂಚಾಣದ ಕಾಲಿಗೆ ಸಿಲುಕಿ ಜಜ್ಜಿ ಹೋಗುತ್ತಿರುವ ಮನುಷ್ಯ ಭಾವಶೂನ್ಯ ಮನ:ಸ್ಥಿತಿಯನ್ನು ಅನುಭವಿಸುತ್ತಿದ್ದಾನೆ. ಆಪ್ತವಾಗಿ ಮಾತನಾಡಿಸುವ, ಸಮಸ್ಯೆಗಳನ್ನು ಎದೆಗೆ ಹಚ್ಚಿಕೊಂಡು ಆಲಿಸುವವರ ಕೊರತೆ ದೊಡ್ಡ ಪ್ರಮಾಣದಲ್ಲಿ ಕಾಡತೊಡಗಿದೆ. ಇಂದು ಮಹಾನಗರಗಳಲ್ಲಿ ಆತ್ಮಹತ್ಯೆಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಪೂನಾ, ಬೆಂಗಳೂರಿನಂತಹ ನಗರಗಳು ಆತ್ಮಹತ್ಯಾ ನಗರಗಳಾಗಿ ಗುರುತಿಸಿಕೊಳ್ಳುತ್ತಿವೆ.

ಬೆಂಗಳೂರಿನಲ್ಲಿರುವ ಸಹಾಯಿ ಎನ್ನುವ ಸ್ವಯಂ ಸೇವಾ ಸಂಸ್ಥೆಯೊಂದು ಸೆಪ್ಟಂಬರ್ 2012 ರಿಂದ ಫೆಬ್ರುವರಿ 2014 ರವರೆಗೆ 1100 ಆತ್ಮಹತ್ಯೆ ಪ್ರಕರಣಗಳು ಜರುಗಿದ ಬಗ್ಗೆ ವರದಿ ಮಾಡಿದೆ. ಇದರಲ್ಲಿ 580 ರಷ್ಟು ಮಹಿಳೆಯರಿದ್ದರೆ 475 ಪುರುಷರಿದ್ದಾರೆ. ಅತ್ಯಂತ ವಿಷಾದದ ಸಂಗತಿ ಎಂದರೆ ಇದರಲ್ಲಿ 55 ಜನರು 18 ವರ್ಷ ವಯೋಮಿತಿಯಲ್ಲಿದ್ದವರಿದ್ದಾರೆ. ಅನೇಕ ಯುವಕರು ಅದೇ ದೈನಂದಿನ ಏಕತಾನತೆಗೆ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಕಲಿಯುವಾಗಲೇ ಅಪಾರವಾದ ಒತ್ತಡ ಮತ್ತು ಬರೀ ಓದು ಓದು ಎನ್ನುವ ಪಾಲಕರ ಒತ್ತಾಸೆಯ ನಡುವೆ ಜೀವನವೇ ನೀರಸವೆನಿಸಿ ಪೂರ್ಣವಿರಾಮ ಇಟ್ಟವರೂ ಇದ್ದಾರೆ.

ಜೂನ್ 2014 ಬೆಂಗಳೂರು ಆತ್ಮಾಹತ್ಯಾ ನಗರ ಎನ್ನುವದನ್ನು ಮತ್ತೆ ಮತ್ತೆ ಸಾಬೀತು ಮಾಡುವಂತಿತ್ತು. ಜೂನ 13 ಮತ್ತು 14 ಎರಡೇ ದಿನದಲ್ಲಿ ಸುಮಾರು 10 stress-2ಆತ್ಮಹತ್ಯಾ ಪ್ರಕರಣಗಳು ದಾಖಲಾಗಿದೆ. ಬೆಂಗಳೂರಲ್ಲಿ ಕಳೆದ 2005 ರ ನಂತರ ಆತ್ಮಹತ್ಯಾ ಪ್ರಮಾಣ ಏರುತ್ತಲೇ ನಡೆದಿದೆ. ರಾಷ್ಟ್ರೀಯ ಅಪರಾಧಿ ದಾಖಲೆ ವಿಭಾಗದ ಪ್ರಕಾರ 2013 ರಲ್ಲಿ ಬೆಂಗಳೂರು ಆತ್ಮಹತ್ಯೆಯ ವಿಷಯದಲ್ಲಿ ನಂ 1 ಸ್ಥಾನದಲ್ಲಿದೆ. ಬೆಂಗಳೂರಲ್ಲಿ ಆ ವರ್ಷ ಅತ್ಮಹತ್ಯೆಯ ಪ್ರಮಾಣ 23.9 ಪ್ರತಿಶತದಷ್ಟಿದ್ದರೆ, ದೆಹಲಿಯಲ್ಲಿ ಆ ಪ್ರಮಾಣ ಕೇವಲ 10.7ಪ್ರತಿಶತವಿದೆ. ಮುಂಬೈ ನಗರದಲ್ಲಿ 7.2 ಪ್ರತಿಶತವಿದ್ದರೆ, ಕೋಲ್ಕತ್ತಾದಲ್ಲಿ ಆ ಪ್ರಮಾಣ ತಿರುವು ಮುರುವಾಗಿದೆ ಅಂದರೆ 2.7 ಪ್ರತಿಶತ. 2008 ರ ಸಂದರ್ಭದಲ್ಲಂತೂ ಬೆಂಗಳೂರು ಆತ್ಮಹತ್ಯೆಯ ವಿಷಯದಲ್ಲಿ ಶಿಖರವನ್ನೇ ತಲುಪಿದೆ. ಆ ವರ್ಷ 42.8 ಪ್ರತಿಶತ ಆತ್ಮಹತ್ಯೆ ದಾಖಲಾಗಿದೆ. ಕಳೆದ ವರ್ಷ ಬೆಂಗಳೂರಲ್ಲಿ 2033 ಆತ್ಮಹತ್ಯೆಗಳು ಜರುಗಿದರೆ, ಚೆನೈನಲ್ಲಿ ಆ ಪ್ರಮಾಣ 2183 ರಷ್ಟಿತ್ತು. ಬಹುಷ: ಬೆಂಗಳೂರಲ್ಲಿ ಆ ಪ್ರಮಾಣದಲ್ಲಿ ಆತ್ಮಹತ್ಯೆ ಜರುಗಲು ಕಾರಣ ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ಹೆಚ್ಚು ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತಿರುವುದೇ ಅದಕ್ಕೆ ಕಾರಣ ಎನ್ನಲಾಗಿದೆ. ಇನ್ನು ಈ ಮಾಹಿತಿ ತಂತ್ರಜ್ಞಾನದ ವಲಯದಲ್ಲಿರುವ ಉದ್ಯೋಗಗಳಿಗೆ ಮನುಷ್ಯರಂತಿರುವ ರೋಬೋಗಳು ಬೇಕಿದೆ. ಅಪ್ಪಟ ಯಾಂತ್ರಿಕವಾಗಿ, ಭಾವಶೂನ್ಯರಾಗಿ ದುಡಿಯುವವರಿರಬೇಕು. ಇಲ್ಲಿ ಸಂವೇದನೆಗಳಿಗೆ ಜಾಗವೇ ಇಲ್ಲ. ಪರಸ್ಪರ ಸುಖ ದು:ಖಗಳನ್ನು ಎದೆಗೆ ಹಚ್ಚಿಕೊಂಡು ಆಲಿಸುವವರು ಸಿಗುವುದೇ ಅಪರೂಪ ಎಲ್ಲರೂ ಅವರವರ ಒತ್ತಡಗಳಲ್ಲಿ ಸಿಲುಕಿ ನಲಗುವಂತಾದಾಗ ಮನಸಿನ ನೆಮ್ಮದಿ ಸಾಧ್ಯವಾಗುವದಾದರೂ ಹೇಗೆ?

ಡರ್ಖಹೀಂ ಎನ್ನುವ ಫ್ರಾನ್ಸ್ ದೇಶದ ಸಮಾಜಶಾಸ್ತ್ರಜ್ಞ 1897 ರ ಸಂದರ್ಭದಲ್ಲಿ ಆತ್ಮಹತ್ಯೆಯನ್ನು ಅಧ್ಯಯನ ಮಾಡಿ ಅದನ್ನು ಇಡಿಯಾಗಿ ಮೂರು ಪ್ರಕಾರಗಳಲ್ಲಿ ವಿಂಗಡಣೆ ಮಾಡಿದ್ದಾನೆ. ಒಂದನೆಯದು ಸಮೂಹಪ್ರೇರಿತ ಆತ್ಮಹತ್ಯೆ, ಎರಡನೆಯದು ಸ್ವಯಂ ಪ್ರೇರಿತ ಆತ್ಮಹತ್ಯೆ, ಮೂರನೆಯದು ನಿಯಮರಾಹಿತ್ಯತೆಯ ಆತ್ಮಹತ್ಯೆ. ಮೊದಲ ಮತ್ತು ಮೂರನೇಯ ಪ್ರಕಾರಗಳಲ್ಲಿ ವ್ಯಕ್ತಿಗಿಂತಲೂ ಸಾಮೂಹಿಕ ಸಂಗತಿಗಳು ಮುಖ್ಯವಾಗಿರುತ್ತವೆ. ಎರಡನೆಯದರಲ್ಲಿ ಮಾತ್ರ ವ್ಯಕ್ತಿಯ ಅಹಂ ಭಾವ ಕೆಲಸ ಮಾಡುತ್ತದೆ. ಆ ಅಹಂಗೆ ತೀವ್ರವಾದ ಪೆಟ್ಟು ಬಿದ್ದದ್ದೇ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮೂರನೇಯ ಪ್ರಕಾರದ ಆತ್ಮಹತ್ಯೆಯಲ್ಲಿ ಸಾಮಾಜಿಕ ಅವ್ಯವಸ್ಥೆ ಇಲ್ಲವೇ ನಿಯಾಮರಾಹಿತ್ಯತೆಯ ಸ್ಥಿತಿ ಆತ್ಮಹತ್ಯೆಗೆ ಕಾರಣವಾಗುತ್ತದೆ. ಡರ್ಖಹೀಮ್ ರಂಥಾ ಚಿಂತಕರು ಆತ್ಮಹತ್ಯೆಗೆ ವ್ಯಕ್ತಿಗತ ಕಾರಣಗಳಿಗಿಂತಲೂ ಸಾಮಾಜಿಕ ಕಾರಣಗಳೇ ನಿರ್ಣಾಯಕ ಎಂದಿದ್ದಾರೆ.

ಒತ್ತಡವೇ ಒಡನಾಟವಾದ ಬದುಕು


– ಡಾ.ಎಸ್.ಬಿ. ಜೋಗುರ


ಮನುಷ್ಯ ಮಿಕ್ಕ ಎಲ್ಲ ಪ್ರಾಣಿಗಳಿಗಿಂತಲೂ ನೆಮ್ಮದಿಯಿಂದ ಬದುಕಲೆಬೇಕು. ಯಾಕೆಂದರೆ ಸಾಂಸ್ಕೃತಿಕ ಪರಿಸರದ ಪ್ರಜ್ಞೆ ಮತ್ತು ಅದರ ರೂಪಧಾರಣೆಯ ಶಕ್ತಿ ಇದ್ದದ್ದು ಕೇವಲ ಮನುಷ್ಯನಿಗೆ ಮಾತ್ರ. ಹಾಗಿರುವಾಗಲೂ ಮನುಷ್ಯನ ಸಹವಾಸದಲ್ಲಿರುವ ಸಾಂಸ್ಕೃತಿಕ ಅಪವರ್ತನೆ ಅಪಾರವಾಗಿದೆ. ಮಾನವನ ಸಾಮಾಜಿಕ ಬದುಕಿನ ವಿಕಾಸದ ಸಂಕೀರ್ಣತೆ ಮನುಷ್ಯನನ್ನು ಮತ್ತಷ್ಟು ಸಂಘರ್ಷಗಳಲ್ಲಿ ನೂಕಲು ಕಾರಣವಾಯಿತು. ಪ್ರಾಚೀನ ಕಾಲದ ಸಾಮಾಜಿಕ ಜೀವನದಲ್ಲಿಯ ನೆಮ್ಮದಿ ಮಧ್ಯಯುಗದ ಕಾಲಕ್ಕೆ ಅದೇ ಪ್ರಮಾಣದಲ್ಲಿ ಉಳಿಯಲಿಲ್ಲ. ಆಧುನಿಕ ಸಂದರ್ಭದಲ್ಲಿ ಅದರಲ್ಲೂ ಜಾಗತೀಕರಣದ ಪ್ರಕ್ರಿಯೆಯ ಸಹವಾಸದಲ್ಲಿ ಮನುಷ್ಯ ಒಂದು ಕಮಾಡಿಟಿಗಿಂತಲೂ ಯಾವುದೇ ರೀತಿಯಿಂದ ಭಿನ್ನವಾಗಿಲ್ಲ. ಜಾಹಿರಾತಿನ ಜಗತ್ತು ಮನುಷ್ಯನನ್ನು ಡಿಸ್ಕೌಂಟ್ ಲೋಕಕ್ಕೆ ತಳ್ಳುವ ಮೂಲಕ ಅವನಲ್ಲಿ ಇನ್ನೂ ಕೊಳ್ಳಬೇಕು ಎನ್ನುವ ಹಪಾಹಪಿತನವನ್ನು ಹುಟ್ಟು ಹಾಕಿದ್ದಲ್ಲದೇ ಅದೇ ವೇಗದಲ್ಲಿ ಅವನಲ್ಲಿಯ ಸಂವೇದನೆಗಳನ್ನು ಪರೋಕ್ಷವಾಗಿ ಕೊಲ್ಲುವ ಕ್ರಿಯೆಯೂ ಆರಂಭವಾಯಿತು. ಅಂತಿಮವಾಗಿ ಆಧುನಿಕ ವಿದ್ಯಮಾನಗಳು ಮನುಷ್ಯನನ್ನು ಕಮಾಡಿಟಿಯ ಸ್ಥಾನದಲ್ಲಿ ನಿಲ್ಲಿಸಿಬಿಟ್ಟವು. ಅದರ ಪರಿಣಾಮವೇ ಮನುಷ್ಯನ ಈಗಿನ ಉದ್ವೇಗದ ಬದುಕು.

ಈ ಉದ್ವೇಗ ಎನ್ನುವುದು ಈಗಂತೂ ಎಲ್ಲ ವಯೋಮಾನದ ಸ್ತರಗಳನ್ನು ಬಾಧಿಸತೊಡಗಿದೆ. stress-1ಇಂಗ್ಲಂಡನ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯ ಆಡಿ ನಲಿಯುವ ವಯೋಮಾನದಲ್ಲಿರುವ ಯುವಕರನ್ನು ಆಧರಿಸಿ ಒಂದು ಅಧ್ಯಯನ ಕೈಗೊಂಡು, ಆ ಮೂಲಕ ಒಂದು ಮಹತ್ತರವಾದ ವರದಿಯನ್ನು ಹೊರಹಾಕಿದೆ. ಇಂದಿನ ಯುವಕರಲ್ಲಿ ಮೂರು ಗುಣಗಳು ವ್ಯಾಪಕವಾಗಿ ಕಂಡು ಬರುತ್ತಿವೆ. ಒಂದನೆಯದು ಸುಳ್ಳು ಹೇಳುವುದು, ಎರಡನೆಯದು ಕಳ್ಳತನ, ಮೂರನೆಯದು ಅವಿಧೇಯತೆಯ ಗುಣ ಎಂದು ಆ ವರದಿ ಹೇಳುತ್ತದೆ. ಕಳೆದ ತಿಂಗಳಲ್ಲಿ ನೇಚರ್ ಎಂಬ ಪತ್ರಿಕೆಯೊಂದು ಮನುಷ್ಯ ಅಪಾರ ಜನಜಂಗುಳಿಯ ನಡುವೆಯೂ ಏಕಾಂಗಿಯಾಗಿ ಬದುಕುತ್ತಿದ್ದಾನೆ ಎಂದು ಅಭಿಪ್ರಾಯ ಪಟ್ಟಿದೆ. ಆಲ್ಬರ್ಟ್ ಕಾಮು ಹೇಳಿದ್ದ ‘ಮನುಷ್ಯ ಭವಿಷ್ಯದಲ್ಲಿ ನಡುಗಡ್ದೆಯಂತೆ ಬದುಕುತ್ತಾನೆ’ ಎಂಬ ಮಾತು ಈಗ ಸತ್ಯವಾಗಿದೆ. ಮಹಾನಗರಗಳ ರಸ್ತೆಯಲ್ಲಿ ಮೈಗೆ ಮೈ ತಾಕಿಸಿ ಅಪಾರ ಜನ ದಟ್ಟಣೆಯ ನಡುವೆ ಅಲೆದರೂ ಎಲ್ಲರೂ ಆಪರಿಚಿತರಾಗಿಯೇ ಬದುಕುವ ರೀತಿ ಮಾತ್ರ ಕಟು ವಾಸ್ತವ.

ಇತ್ತೀಚಿನ ದಿನಗಳಲ್ಲಿ ಮನುಷ್ಯ ನೆಮ್ಮದಿಯನ್ನು ಕಳೆದುಕೊಂಡವನಾಗಿ ಜರ್ಜರಿತನಾಗಿದ್ದಾನೆ. ಈಚೆಗೆ ನಮ್ಮ ದೇಶದ ಐ.ಸಿ.ಎಮ್.ಆರ್ ಸಂಸ್ಥೆ ಎಂಟು ಪ್ರಮುಖ ರಾಜ್ಯಗಳನ್ನಿಟ್ಟುಕೊಂಡು stress-2ಸುಮಾರು 16607 ವ್ಯಕ್ತಿಗಳನ್ನು ಸಮೀಕ್ಷ್ಶಿಸಿ ಕಂಡುಕೊಂಡ ಸತ್ಯ ಏನೆಂದರೆ ತಮಿಳುನಾಡಿನಲ್ಲಿ ಅತಿ ಹೆಚ್ಚು ಹೈಪರ್ ಟೆನ್ಸನ್ ಇರುವ ಸ್ಥಿತಿ ಬಹಿರಂಗವಾಗಿರುವದಿದೆ. ಸುಮಾರು 27.6 ಪ್ರತಿಶತ ಜನ ಉದ್ವೇಗಕ್ಕೆ ಒಳಗಾಗಿದ್ದಾರೆ. ನಂತರ ಚಂಡಿಗಡದಲ್ಲಿ 25.8 ಪ್ರತಿಶತ, ಮಹಾರಾಷ್ಟ್ರ 25 ಪ್ರತಿಶತ. ಒಟ್ಟಾರೆಯಾಗಿ ಈ ಬಗೆಯ ತೀವ್ರ ಮಾನಸಿಕ ಒತ್ತಡ ಹೆಚ್ಚಾಗಿ ಇರುವಂತದ್ದು ನಗರ ಪ್ರದೇಶಗಳಲ್ಲಿ. ಹಾಗೆಯೇ ಮಹಿಳೆ ಮತ್ತು ಪುರುಷರನ್ನು ಹೋಲಿಕೆ ಮಾಡಿ ಮಾತನಾಡುವದಾದರೆ ಪುರುಷರಲ್ಲಿ ಆ ಪ್ರಮಾಣ ಇನ್ನಷ್ಟು ಹೆಚ್ಚಿಗಿದೆ. ಈ ಬಗೆಯ ತೀವ್ರ ಒತ್ತಡವನ್ನು ನಿಯಂತ್ರಿಸದಿದ್ದರೆ ಮೆದುಳು, ಕಣ್ಣು, ಹೃದಯದ ಮೇಲೆಯೂ ಕೆಟ್ಟ ಪರಿಣಾಮ ಉಂಟಾಗುತ್ತದೆ. ಜೊತೆಗೆ ಕಿಡ್ನಿ, ರಕ್ತನಾಳಗಳ ಮೇಲೆಯೂ ಮಾರಕ ಪರಿಣಾಮಗಳಾಗುತ್ತವೆ. ಅರ್ಥಿಕ ಬೆಳವಣಿಗೆ ಮತ್ತು ತೀವ್ರ ನಗರೀಕರಣದ ಪರಿಣಾಮವಾಗಿ ಈ ಬಗೆಯ ಒತ್ತಡ ಇಲ್ಲವೇ ಮಾನಸಿಕ ಖಿನ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮನುಷ್ಯನಿಗೆ ಎಲ್ಲ ಬಗೆಯ ಸಾಧಕ ಬಾಧಕಗಳ ಅರಿವಿರುವಾಗಲೂ ಒತ್ತಡದ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅನೇಕ ಬಗೆಯ ಸಮಸ್ಯೆಗಳು ಮನುಷ್ಯನನ್ನು ಮುತ್ತಿಕೊಂಡಿವೆ. ಕೆಲವು ಸಮಸ್ಯೆಗಳಿಗೆ ಸ್ವತ: ಅವನೇ ಕಾರಣನಾಗಿರುವದೂ ಇದೆ. ಆ ಬಗೆಯ ಸಮಸ್ಯೆಗಳಿಗಾದರೂ stress-3ಪರಿಹಾರ ಅವನಿಂದ ಸಾಧ್ಯವಿದೆ. ಮನುಷ್ಯ ತನ್ನಂತೆಯೇ ಇರುವ ಇನ್ನೊಬ್ಬನನ್ನು ಸಹಿಸದ ವಕ್ರ ದೃಷ್ಟಿಯನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಓಶೊ ಒಂದು ಕಡೆ ಹೀಗೆ ಹೇಳುತ್ತಾರೆ. ಒಂದು ನಾವೆಯಲ್ಲಿ ಸಾಗುವಾತ ಎದುರು ಬದಿಯಲ್ಲಿ ಬರುವ ಇನ್ನೊಂದು ನಾವೆಗೆ ಡಿಕ್ಕಿ ಹೊಡೆಯುತ್ತಾನೆ. ತಕ್ಷಣವೇ ಎದ್ದು ಆ ನಾವೆಯಲ್ಲಿದ್ದವನಿಗೆ ಬೈಯಲು ನೋಡುತ್ತಾನೆ. ಆದರೆ ಆ ನಾವೆಯಲ್ಲಿ ಯಾರೂ ಇರುವದಿಲ್ಲ ಎನ್ನುವದನ್ನು ಗಮನಿಸಿ ಸುಮ್ಮನಾಗುತ್ತಾನೆ. ಅದೇ ಒಂದೊಮ್ಮೆ ಆ ನಾವೆಯಲ್ಲಿ ಇನ್ನೊಬ್ಬನಿದ್ದರೆ ದೊಡ್ಡ ಸಂಘರ್ಷವೇ ಜರಗುತ್ತಿತ್ತು. ಈತ ಮನುಷ್ಯನಿಲ್ಲದ ನಾವೆಯೊಂದು ಡಿಕ್ಕಿ ಹೊಡೆದರೆ ಸಹಿಸುತ್ತಾನೆ. ಆದರೆ ಮನುಷ್ಯನಿರುವ ನಾವೆಯನ್ನಲ್ಲ. ನಮ್ಮ ತೀವ್ರವಾದ ಬದುಕು, ಸಂಕೀರ್ಣ ಸಾಮಾಜಿಕ ಜೀವನ, ತೀಕ್ಶ್ಣವಾದ ಕಾರ್ಯ ವಿಧಾನ, ನಮ್ಮ ಅಪರಿಮಿತ ಬೇಡಿಕೆ ಮುಂತಾದವುಗಳು ಮನುಷ್ಯನನ್ನು ಹೀಗೆ ಹೈಪರ್ ಟೆನ್ಶನ್ ಸುಳಿಗೆ ನೂಕುತ್ತಿದೆ. ಹಾಗಾಗುವ ಮುನ್ನ ಜಾಗೃತರಾಗಿ ಒತ್ತಡಗಳಿಂದ ಹೊರಗುಳಿಯುವ ಬಗೆಯನ್ನು ಯೋಚಿಸಿ..ನೆಮ್ಮದಿಯ ಬದುಕನ್ನು ಅರಿಸಿಕೊಳ್ಳಿ.

ಲಂಕೇಶ: ಅಳಿದ ಮೇಲೂ ಉಳಿದ ಪ್ರತಿಭೆ


– ಡಾ.ಎಸ್.ಬಿ. ಜೋಗುರ


ಲಂಕೇಶ ಆ ಹೆಸರೇ ಹಾಗೆ.. ಎರಡು ದಶಕಗಳ ಕಾಲ ಕನ್ನಡ ನಾಡಿನ ಮನ:ಸ್ಥಿತಿಯನ್ನು ಜಾಗೃತವಾಗಿಡುವಷ್ಟು ಶಕ್ತಿ ಚೈತನ್ಯವನ್ನು ಅಂತರ್ಗತಗೊಳಿಸಿಕೊಂಡ ಹೆಸರದು. ತನ್ನ ಹೆಸರಿನ ಪತ್ರಿಕೆಯೊಂದು ತನ್ನ ನಂತರವೂ ಇಷ್ಟು ಗಾಢವಾದ, ಅನೂಹ್ಯವಾದ ಪ್ರಭಾವವನ್ನು ಹೊಂದಿರಬಲ್ಲದು ಎನ್ನುವುದನ್ನು ಲಂಕೇಶ ಅರಿತಿದ್ದರೋ.. ಇಲ್ಲವೋ ಆ ಮಾತು ಬೇರೆ. ಇಂದಿಗೂ ಮಾಧ್ಯಮ ಜಗತ್ತಿನ ವಿಪರ್ಯಾಸಗಳನ್ನು ಕುರಿತು ಚರ್ಚಿಸುವಾಗ ಇಲ್ಲವೇ ಅಲ್ಲಿಯ ವಸ್ತುನಿಷ್ಟತೆ ಮತ್ತು ಖಚಿತತೆಯ ಬಗ್ಗೆ ಮಾತನಾಡುವಾಗ ಲಂಕೇಶರು ನೆನಪಾಗದೇ ಇರಲಾರರು. ಕೆಲವರು ಬದುಕಿರುವಾಗಲೇ ಸತ್ತಿರುತ್ತಾರೆ, ಮತ್ತೆ ಕೆಲವರು ಸತ್ತ ಮೇಲೆ ಬದುಕಿರುತ್ತಾರೆ ಆದರೆ ಬದುಕಿರುವಾಗಲೂ ಮತ್ತು ಸತ್ತ ಮೇಲೆಯೂ ಜೀವಂತವಾಗಿರುವ ಕೆಲವೇ ಕೆಲವರಲ್ಲಿ ಲಂಕೇಶರೂ ಒಬ್ಬರು. ನನ್ನ ಪ್ರಕಾರ ಲಂಕೇಶರು ಕರ್ನಾಟಕದ ಖುಶ್ವಂತಸಿಂಗ್ ಎನ್ನುವಲ್ಲಿ ಎರಡು ಮಾತಿಲ್ಲ. ಬದುಕನ್ನು ತನ್ನಿಷ್ಟದಂತೆಯೇ ಬದುಕಿದ ಅಪರೂಪದ ವ್ಯಕ್ತಿ. ತಾನು ಇಂದ್ರ.. ಚಂದ್ರ.. ಎಂದು ಬಡಾಯಿ ಕೊಚ್ಚಿಕೊಳ್ಳುವ ಜಾಯಮಾನವೇ ಅವರಲ್ಲಿ ಇರಲಿಲ್ಲ. ಹಾಗಾಗಿದ್ದರೆ ಹುಳಿ ಮಾವಿನ ಮರ ದಂತಹ ಅಪರೂಪದ ಆತ್ಮಕತೆಯೊಂದು ಹೊರಬರುತ್ತಿರಲಿಲ್ಲ. ತಮ್ಮ ಊರಾದ ಕೊನಗವಳ್ಳಿಯಲ್ಲಿ ಅವರ ಬಾಲ್ಯದಲ್ಲಿ ಊರಿನ ಕೆಲವು ಹಿರಿಯರು lankeshಈರಿ ಎನ್ನುವ ಓರ್ವ ಯುವತಿಯನ್ನು ಆಕೆ ನೀರಿಗೆ ಹೊರಟಾಗ ಹಾಗೇ ಚುಡಾಯಿಸುತ್ತಿದ್ದುದಿತ್ತು. ಅದರಲ್ಲಿ ಅವರ ತಂದೆಯವರೂ ಒಬ್ಬರು ಎನ್ನುವದನ್ನು ದಾಖಲಿಸಿರುವ ಲಂಕೇಶರು, ಅವರ ಮಗ ಇಂದ್ರಜಿತ್ ಹಿಂದೊಮ್ಮೆ ಬೆಂಗಳೂರಲ್ಲಿ ಒಂದು ಸಣ್ಣ ಅಪಘಾತದಲ್ಲಿ ಸಿಲುಕಿ ಲಂಕೇಶರ ಹೆಸರನ್ನು ಬಳಸಿ ಪಾರಾಗಿ ಬಂದಿರುವದಿತ್ತು. ಆಗ ಮೇಸ್ಟ್ರು ಇನ್ನೊಮ್ಮೆ ಇಂಥಾ ಕೆಲಸ ಮಾಡಿ ನನ್ನ ಹೆಸರನ್ನು ಎಲ್ಲೂ ಬಳಸತಕ್ಕದ್ದಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದ ಲಂಕೇಶರು ಎಂದೂ ತಾನೊಂದು ಪತ್ರಿಕೆಯ ಸಂಪಾದಕ ಎಂದು ರಿಯಾಯತಿ ಪಡೆದವರಲ್ಲ. ಅತ್ಯಂತ ತತ್ವ, ನಿಷ್ಟೆಯ ಮೂಲಕ ಎರಡು ದಶಕಗಳಷ್ಟು ಕಾಲ ಯಾವುದೇ ಜಾಹೀರಾತುಗಳಿಲ್ಲದೆಯೂ ಲಂಕೇಶರು ಪತ್ರಿಕೆಯನ್ನು ನಡೆಸಿರುವದಿತ್ತು. ಅದು ಕೇವಲ ಪತ್ರಿಕೆಯಾಗಿರಲಿಲ್ಲ. ನಾಡಿನ ಪ್ರಜ್ಞಾವಂತ ಮನಸುಗಳ ಮೂರ್ತ ರೂಪವಾಗಿ ಪ್ರತಿವಾರವೂ ಓದುಗರ ಕೈ ಸೇರುತ್ತಿತ್ತು. ಪತ್ರಿಕೆಯ ದರವನ್ನು ತೀರಾ ಅಪರೂಪಕ್ಕೆ ಹೆಚ್ಚಿಸುವ ಪ್ರಮೇಯ ಬಂದಾಗ ಅದನ್ನು ನೇರವಾಗಿ ಹೆಚ್ಚಿಸಿ ಪತ್ರಿಕೆಯನ್ನು ಮಾರುಕಟ್ಟೆಗೆ ಬಿಡದೆ ಆ ದರ ಹೆಚ್ಚಿಸುವ ಅನಿವಾರ್ಯತೆ ಯಾಕೆ ಬಂತು..? ಹೊಟೆಲನಲ್ಲಿ ಒಂದು ಪ್ಲೇಟ್ ಇಡ್ಲಿ ಒಂದು ಚಹಾ ದರ ಎಷ್ಟಿದೆ ಎನ್ನುವದನ್ನೆಲ್ಲಾ ಅತ್ಯಂತ ವಸ್ತುನಿಷ್ಟವಾಗಿ ವಿವರಿಸಿ ಒಂದು ರೂಪಾಯಿನೋ.. ಎರಡು ರೂಪಾಯಿನೋ ಹೆಚ್ಚಿಸುತ್ತಿದ್ದರು. ತೀರಾ ಸಾಮಾನ್ಯ ಬರವಣಿಗೆ ಎನ್ನುವುದು ಕೂಡಾ ಲಂಕೇಶ ಪತ್ರಿಕೆಯ ಸಹವಾಸಕ್ಕೆ ಬಂದದ್ದೇ ಅಗಾಧವಾದ ಪ್ರಚುರತೆಯನ್ನು ಪಡೆಯುತ್ತಿತ್ತು. ಲಂಕೇಶ ಪತ್ರಿಕೆಗೆ ಬರೆಯುವದೇ ಒಂದು ಹೆಮ್ಮೆ ಎನ್ನುವ ದಿನಮಾನಗಳಿದ್ದವು. ನಮ್ಮ ನಡುವೆಯೇ ಸಾಕಷ್ಟು ಪತ್ರಿಕಾ ಸಂಪಾದಕರುಗಳಿದ್ದಾರೆ ಇವರು ಇದ್ದರೂ ಇಲ್ಲದಿದ್ದರೂ ಏನೂ ಫ಼ರಕ್ ಬೀಳುವದಿಲ್ಲ ಎನ್ನುವಂತೆ ಇವರು ಬದುಕಿದವರು. ಲಂಕೇಶ ಹಾಗಿರಲಿಲ್ಲ. ಸರಿ ಇದ್ದದ್ದನ್ನು ಸರಿ ಎಂದು ಹೇಳುವ, ತಪ್ಪನ್ನು ತಪ್ಪು ಎಂದು ಹೇಳುವ ಧಾಡಸೀತನ ಲಂಕೇಶರಲ್ಲಿತ್ತು. ಓದುಗರನ್ನು ಹೊರತುಪಡಿಸಿ ಯಾರನ್ನೋ ಓಲೈಸಬೇಕು ಎನ್ನುವ ಕಾರಣಕ್ಕೆ ಲಂಕೇಶ ಎಂದೂ ಬರವಣಿಗೆಯನ್ನು ಮಾಡಲಿಲ್ಲ. ತನ್ನ ಓದುಗರು ಇಷ್ಟ ಪಡುತ್ತಾರೆ ಎನ್ನುವ ಕಾರಣಕ್ಕಾಗಿ ಕೆಲವೊಮ್ಮೆ ತಮ್ಮ ಖಾಸಗಿ ಬದುಕಿನ ಬಗ್ಗೆ ಬರೆದುಕೊಂಡಿರಬಹುದೇ ಹೊರತು ತಮ್ಮ ಬಗ್ಗೆ ಕೊಚ್ಚಿ ಕೊಂಡದ್ದು ಇಲ್ಲ.

ಲಂಕೇಶ ಮೂಲತ: ಅಧ್ಯಾಪಕರಾಗಿದ್ದವರು. ಅಪಾರವಾದ ಓದು, ವ್ಯಾಪಕವಾದ ಬರವಣಿಗೆಯ ಮೂಲಕ ಅವರು ಗುರುತಿಸಿಕೊಂಡಿದ್ದರೂ ಉತ್ತಮ ಬೋಧಕರಾಗಿ ಲಂಕೇಶ ವಿದ್ಯಾರ್ಥಿಗಳ ವಲಯದಲ್ಲಿ ಗಮನ ಸೆಳೆಯಲಿಲ್ಲ. ಆದರೆ ಒಬ್ಬ ನಾಟಕಕಾರರಾಗಿ, ಕವಿಯಾಗಿ, ಕ್ರೀಡಾ ಪ್ರೇಮಿಯಾಗಿ, ಚಿತ್ರ ನಿರ್ದೇಶಕನಾಗಿ [ನಟನಾಗಿ ಎನ್ನದಿದ್ದರೆ ಲಂಕೇಶರು ಕೋಪಿಸಿಕೊಳ್ಳಬಹುದೇನೋ..] ಹಾಗೆಯೇ ಒಬ್ಬ ವಿಮರ್ಶಕನಾಗಿ, ಕಾದಂಬರಿಕಾರರಾಗಿ, ಕತೆಗಾರರಾಗಿ, ಪತ್ರಿಕಾ ಸಂಪದಾಕರಾಗಿ ಹೀಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಆಸಕ್ತಿಯಿದ್ದ ಲಂಕೇಶರು ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಅವರು ಒಂದೆರಡು ಪೆಗ್ ಹಾಕಿ ಚರ್ಚೆಗೆ ಕುಳಿತರೆ ಅತ್ಯಂತ ಗಹನವಾದ ವಿಚಾರಗಳು ಬಿಚ್ಚಿಕೊಳ್ಳುತ್ತಿದ್ದವು. ಅವರು ಮತ್ತು ಡಿ.ಆರ್.ನಾಗರಾಜ ಜೊತೆಗಿನ ಸಹವಾಸವನ್ನು ಕುರಿತು ನಟರಾಜ ಹುಳಿಯಾರ ಈಚೆಗಷ್ಟೆ “ಇಂತಿ ನಮಸ್ಕಾರಗಳು” ಎನ್ನುವ ಕೃತಿಯನ್ನು ಹೊರತಂದಿರುವದಿದೆ. ಲಂಕೇಶರು ತಮ್ಮ ಅಪ್ರತಿಮವಾದ ಪ್ರತಿಭೆಯ ಮೂಲಕ ನಾಡಿನ ಬಹುತೇಕರಿಗೆ ಮೇಸ್ಟ್ರಾಗಿದ್ದಾರೆ. ಇದು ಬಹಳ ಮುಖ್ಯ. ಇವತ್ತು ಡಾಕ್ಟರೇಟ್ ಡಿಗ್ರಿ ಮಾಡಿಕೊಂಡು ಮೂರು ದಶಕ ಅಧ್ಯಾಪಕನೆಂದು ಪಾಠ ಮಾಡಿzವರನ್ನೇ ಅವರ ವಿದ್ಯಾರ್ಥಿಗಳು ಪ್ರೀತಿಯಿಂದ ನಮ್ಮ ಮೇಷ್ಟ್ರು ಎಂದು ಕರೆಯುವದಿಲ್ಲ ಹೀಗಿರಬೇಕಾದರೆ ಲಂಕೇಶರನ್ನು ಇಂದಿಗೂ ಅವರ ವಿಚಾರಧಾರೆಗಳನ್ನು ಒಪ್ಪಿಕೊಂಡವರೆಲ್ಲಾ ಮೇಷ್ಟ್ರೆಂದೇ ಕರೆಯುವದಿದೆ. ಅವರ ಪತ್ರಿಕೆ ಬರೀ ಪತ್ರಿಕೆಯಾಗಿರಲಿಲ್ಲ ಎನ್ನುವುದನ್ನು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಮಾತುಗಳಲ್ಲಿ ಹೇಳುವದಾದರೆ ಒಂದು ಕಾಲವಿತ್ತು ಇಡೀ ರಾಜ್ಯದಲ್ಲಿ ಪ್ರಜ್ಞಾವಂತ ಮನಸುಗಳನ್ನು ರೂಪಿಸುವ ಮತ್ತು ನಿರ್ದೇಶಿಸುವ ಲಂಕೇಶ ಪತ್ರಿಕೆ ಎನ್ನುವುದೊಂದಿತ್ತು ಇಂಥಾ ಸಂದರ್ಭಗಳಲ್ಲಿ ಅದು ಅತ್ಯಂತ ವಸ್ತು ನಿಷ್ಟವಾಗಿ ತನ್ನ ಅಭಿಪ್ರಾಯಗಳನ್ನು ಹೊರಹಾಕುವುದು ಮಾತ್ರವಲ್ಲದೇ ಏನಾಗಬೇಕು ಎನ್ನುವುದನ್ನು ಖಡಾಖಂಡಿತವಾಗಿ ಹೇಳುತ್ತಿತ್ತು. ಈಗ ಅಂಥಾ ಯಾವುದೇ ಪತ್ರಿಕೆಗಳು ನಮ್ಮಲ್ಲಿ ಆ ರೀತಿಯ ಖಂಡಿತವಾದವನ್ನು ಹುಟ್ಟುಹಾಕುವಷ್ಟು ಪರಿಣಾಮಕಾರಿಯಾಗಿ ಉಳಿದಿಲ್ಲ. ಅದನ್ನೇ ಪೂರ್ಣಚಂದ್ರ ತೇಜಸ್ವಿಯವರು, “ಲಂಕೇಶ ಆ ಪೇಪರನ್ನು ಹೇಗೆ ಕ್ರಿಯೇಟ್ ಮಾಡಿದರೆಂದರೆyou can throw anything.it will digest. ಹೀಗೆ ಒಟ್ಟು human situation DV develop ಆಗ್ತಾ ಬಂತು. You see every writer will have his own concept of audience. ಸಡನ್ನಾಗಿ ಯಾರಾರೋ ಸೈಕಲ್ ಶಾಪಿನವರು, ಬೀಡಿ ಅಂಗಡಿಯವರು ನನ್ನ ಕತೇನ ಓದೋಕೆ ಶುರು ಮಾಡಿದರು. ಅಂಥವರೆಲ್ಲ ನನ್ನ ಕತೆ ಓದುತ್ತಾರೆ ಅನ್ನೋದೇ ಮುಖ್ಯ ಅಂತಲ್ಲ. But psychologically there was a shift of audience. ಹೀಗೆ ಒಂದರಿಂದ ಇನ್ನೊಂದಕ್ಕೆ ಶಿಫ಼್ಟಾದ್ದರಿಂದ ಹೊಸ ಛಾಲೆಂಜಗಳು ಎದುರಾದವು. ಅಲ್ಲ್ಲಿಯತನಕ ಸಭೆಗಳು ಸೆಮಿನಾರ್ ಗಳಲ್ಲೇ ಇದ್ದ ಆಡಿಯನ್ಸ್ ಕಲ್ಪನೆ ಬದಲಾಯ್ತು” [ಹೊಸ ವಿಚಾರಗಳು-ಪು-೭೩೬] ಹೀಗೆ ಲಂಕೇಶ ಮತ್ತು ಅವರ ಹೆಸರಿನ ಪತ್ರಿಕೆ ಈ ನಾಡಿಗೆ ಅಗಾಧವಾದ ಕೊಡುಗೆಯನ್ನು ನೀಡಿವೆ. ನನ್ನಂಥ ಅನೇಕರಿಗೆ ಆಗಾಗ ನಿಜವಾಗಿಯೂ ಲಂಕೇಶರು ಜ್ಞಾನಪೀಠಕ್ಕೆ ಅರ್ಹರಿದ್ದರಲ್ಲ..! ಎಂದು ಅನಿಸಿರುವದಿದೆ. ಆದರೆ ಅದಾವ ಮಾನದಂಡವೋ ಕಾಣೆ ಅವರನ್ನು ಈ ಪ್ರಶಸ್ತಿಯಿಂದ ವಂಚಿಸಿತು. ಯಾವುದೇ ಪ್ರಶಸ್ತಿ ಇರಲಿ ಅವುಗಳ ಗೌರವ ಹೆಚ್ಚಬೇಕಾದರೆ ಇಂಥವರಿಗೇ ಸಿಗಬೇಕು.

ಲಂಕೇಶ ಎನ್ನುವದು ಕೇವಲ ಒಂದು ವ್ಯಕ್ತಿಯಲ್ಲ ಅದೊಂದು ಪ್ರಜ್ಞೆ. ಶೋಷಿತರ, ದಮನಿತರ, ಕೆಳಸ್ತರಗಳ ಜನರಿಗಾಗುವ ಅನ್ಯಾಯವನ್ನು ಪ್ರಶ್ನಿಸುವ ಪ್ರಜ್ಞೆ. ಹಿಂದುಳಿದ ಸಮುದಾಯಗಳ ಬಗ್ಗೆ ಅಪಾರ ಕಳಿಕಳಿಯಿದ್ದ ಲಂಕೇಶರು ತಮ್ಮ ಬದುಕಿನುದ್ದಕ್ಕೂ ಅವರ ಪರವಾಗಿಯೇ ಯೋಚಿಸಿದವರು. ಆದರೆ ಅವರ ಹೆಸರನ್ನು ಹೇಳುತ್ತಾ ಸುಖಿಸುವ, ಬೀಗುವ ಕೆಲ ಅನುಯಾಯಿಗಳಲ್ಲಿ ಲಂಕೇಶರ ವಿಚಾರಗಳು, ಧೋರಣೆಗಳು ಪ್ರಾಮಾಣಿಕವಾಗಿ ಎದೆಯ ಒಳಗೆ ಇಳಿಯಲಿಲ್ಲ. ಬರೀ ಗಂಟಲ ಮಟ್ಟಕ್ಕೆ ಬಂದು ಗಕ್ಕನೇ ನಿಂತು ಬಿಡುತ್ತವೆ. ಬಸವನ ಹೆಸರು ಬಳಸಿಕೊಂಡು ಪ್ರತಿಷ್ಟೆ ಮೆರೆಯುವವರಿಗಿಂತಾ ಇವರು ಭಿನ್ನವಾಗಿ ಕಾಣುವದಿಲ್ಲ. ನಡೆ-ನುಡಿಯ ನಡುವೆ ಅಪಾರ ಅಂತರವಿದ್ದರೂ ತತ್ವ, ಸಿದ್ಧಾಂತ, ಬದ್ಧತೆ ಎನ್ನುವ ಬೂಸಾತನ ಮಾತ್ರ ಇವರು ಬಿಡುವದಿಲ್ಲ. ಇವರು ನಿಜವಾಗಿಯೂ ಲಂಕೇಶರಂಥವರ ಪಾಲಿಗೆ ಕಳಂಕಿತರು. ಸದ್ಯದ ಸಾಹಿತ್ಯಕ ವಾತಾವರಣ ಎಷ್ಟು ಕಲುಷಿತವಾಗಿದೆಯೆಂದರೆ, ಬದ್ಧತೆ ಎನ್ನುವದು ಅಳವಡಿಕೆಗಲ್ಲ, ಹೊಟ್ಟೆ ಪಾಡಿಗೆ ಮತ್ತು ಒಣ ಹೆಸರಿಗೆ ಎನ್ನುವ ಸಾಹಿತಿಗಳು ಹೆಚ್ಚಾಗಿದ್ದಾರೆ. ಬರೆದಂತೆ ಬದುಕಬೇಕು ಎಂದು ಎಲ್ಲಿದೆ..? ಅಂತ ಕೇಳುವ ಕುಭಂಡರೂ ಇದ್ದಾರೆ. ಎಲ್ಲ ವಲಯಗಳಲ್ಲಿ ಜಾತೀಯತೆ, ಸ್ವಜನಪಕ್ಷಪಾತ, ಪ್ರಾದೇಶಿಕತೆಯ ತರತಮಗಳು ಅವಕಾಶಗಳನ್ನು ಸಮರ್ಥರಿಗೆ ಹಂಚದೇ ಅನ್ಯಾಯವೆಸಗುವ ಸಂದರ್ಭದಲ್ಲಿ ಲಂಕೇಶರು ಬದುಕಿರಬೇಕಿತ್ತು ಎನಿಸುತ್ತದೆ. ಇಂದು ಮಾಧ್ಯಮಗಳಂತೂ ಪಕ್ಕಾ ಉದ್ದಿಮೆಗಳಾಗಿಯೇ ಮಾರ್ಪಟ್ಟ ರೀತಿಗೆ ಮೇಸ್ಟ್ರು ಅದು ಹೇಗೆ ಉತ್ತರಿಸುತ್ತಿದ್ದರೋ ಗೊತ್ತಿಲ್ಲ. ಲಂಕೇಶರು ಬದುಕಿರುವಷ್ಟು ದಿನ ಬಾಯಿ ಮುಚ್ಚಿ ಕುಳಿತವರು ಅವರು ಇಲ್ಲವಾದದ್ದೇ ಕಿಸಬಾಯಿ ದಾಸರಾದದ್ದೂ ಇದೆ. ದೊಡ್ಡ ಬಂಡೆಗಲ್ಲೊಂದು ಉರುಳಿದ ಮೇಲೆ ಅದರಡಿಯಲ್ಲಿರುವ ಸಣ್ಣ ಪುಟ್ಟ ಹುಳುಗಳು ಪುಟು ಪುಟು ನೆಗೆದು ಹೊರಬರುವಂಥ ಸ್ವಾತಂತ್ರ್ಯವನ್ನು ಇವರು ಅನುಭವಿಸುತ್ತಿದ್ದಾರೆ.

ಲಂಕೇಶರಂಥಾ ಗದ್ಯ ಬರಹಗಾರರು ಕನ್ನಡ ನಾಡಿನ ಬಹುದೊಡ್ದ ಆಸ್ತಿ. ಯಾವುದನ್ನೇ ಬರೆಯಲಿ ಅದರ ಪ್ರಕಾರದ ತಾತ್ವಿಕ ಚೌಕಟ್ಟಿಗೆ ತಕ್ಕ ಹಾಗೆಯೇ ಬರೆಯುವ ಲಂಕೇಶ ಎಲ್ಲೂ ವಿಮರ್ಶೆಯನ್ನು ತುತ್ತೂರಿ ಮಾಡಿ ಊದಿದವರಲ್ಲ, ಹಾಗೆಯೇ ಸಿನೇಮಾ ವಿಮರ್ಶೆ, ಟೀಕೆ ಟಿಪ್ಪಣಿ, ಕಂಡದ್ದು ಕಂಡ ಹಾಗೆ, ಮರೆಯುವ ಮುನ್ನ ಹೀಗೆ ಯಾವುದನ್ನೇ ಬರೆದರೂ ಓದುಗರು ಖುಷಿ ಪಡುವಂತೆ ಬರೆಯುತ್ತಿದ್ದರು. ಅವರು ಕಾಟಾಚಾರಕ್ಕೆ ಬರೆದವರಲ್ಲ. ಬೋದಿಲೇರ ನಂಥ ಫ಼್ರೆಂಚ್ ಕವಿಯನ್ನು ಕನ್ನಡದ ಜನರಿಗೆ ಪರಿಚಯಿಸಿದ ರೀತಿಯೇ ಅನನ್ಯ. ಒಂದು ವಾರಪತ್ರಿಕೆಯನ್ನು ಪ್ರತಿ ಬುಧವಾರ ಸಂಜೆ ಬಸ್ ನಿಲ್ದಾಣದ ಬುಕ್ ಸ್ಟಾಲ್ ಗಳಲ್ಲಿ ನಿಂತು, ಕಾದು, ಖರೀದಿಸಿ ಕೊಂಡು ಓದುವ ಆರೋಗ್ಯಕರ ಪರಂಪರೆಯನ್ನು ಲಂಕೇಶ ಪತ್ರಿಕೆಯ ಹಾಗೆ ಮತ್ತಾವುದೂ ಬೆಳೆಸಲಿಲ್ಲ. ಈಗ ಲಂಕೇಶ ಪತ್ರಿಕೆಗಿಂತಲೂ ಹೆಚ್ಚು ಪ್ರಸರಣ ಇರುವ ವಾರಪತ್ರಿಕೆಗಳು ಇರಬಹುದು. ಮಸಾಲಾ ಸುದ್ಧಿಯನ್ನೇ ತುರುಕಿ ರೋಚಕವಾಗಿ ಬರೆದು ಓದುಗರನ್ನು ಹೊಂದಿರಬಹುದು ಆದರೆ ಕನ್ನಡ ನಾಡಿನ ಜಾಣ-ಜಾಣೆಯರನ್ನು ಸೃಷ್ಟಿಸುವ ಸೃಜನಶೀಲ ಗುಣ ಇರುವ ಪತ್ರಿಕೆಗಳು ಕಡಿಮೆ. ಇಂದು ಜಾಹೀರಾತನ್ನು ಓದಿ ಮಿಕ್ಕದ್ದನ್ನು ಓದಬೇಕೋ ಇಲ್ಲಾ ಸುದ್ದಿಯನ್ನು ಓದಿ ಜಾಹೀರಾತನ್ನು ಗಮನಿಸಬೇಕೋ ಎನ್ನುವಷ್ಟು ಪತ್ರಿಕೋದ್ಯಮ ಬದಲಾಗಿದೆ. ಲಂಕೇಶರ ಪ್ರಭಾವ ಅಷ್ಟು ಸುಲಭವಾಗಿ ಅಳಿಸಿಹಾಕುವಂಥದ್ದಲ್ಲ, ಹಾಗೆ ಮಾಡ ಹೋದರೆ ಇನ್ನಷ್ಟು ಗಟ್ಟಿಯಾಗುತ್ತ ಹೋಗುವ ಪ್ರಭಾವ. ಲಂಕೇಶ ತಮ್ಮ ಪತ್ರಿಕೆಯನ್ನು ಬೆಳೆಸುವ ಜೊತೆಗೆ ಅನೇಕ ಹೊಸ ಹೊಸ ಲೇಖಕರನ್ನೂ ಬೆಳೆಸಿದರು. ತುಸು ನಿಷ್ಟುರವಾದಿಯಾಗಿದ್ದ ಲಂಕೇಶ ಅನೇಕರನ್ನು ಮೂಗಿನ ನೇರಕ್ಕೆ ಮಾತಾಡಿ ಬೇಸರಿಸಿದ್ದೂ ಇದೆ. ಲಂಕೇಶರು ಎಲ್ಲ ವಿಷಯಗಳಲ್ಲಿ ಪರಿಪೂಣವಾದ ಮನುಷ್ಯ ಎಂದಲ್ಲ, ಅವರಲ್ಲಿಯೂ ಮನುಷ್ಯ ಸಹಜವಾದ ದೌರ್ಬಲ್ಯಗಳಿದ್ದವು ಆದರೆ ಆ ದೌರ್ಬಲ್ಯಗಳನ್ನು ಬಳಸಿ ಅವರು ಬೇರೆಯವರನ್ನು ಶೋಷಣೆ ಮಾಡಲಿಲ್ಲ. ಆ ದೌರ್ಬಲ್ಯಗಳಿಗೆ ತಮ್ಮನ್ನೇ ತಾವು ಒಗ್ಗಿಸಿಕೊಂಡರು. ಸತತ ಅಧ್ಯಯನ ಮತ್ತು ಬರವಣಿಗೆಯ ಮೂಲಕ ಕ್ರಿಯಾಶೀಲರಾಗಿರುತ್ತಿದ್ದ ಲಂಕೇಶ ಒಂದೇ ಒಂದು ವಾರವೂ ಕಳಪೆ ಪತ್ರಿಕೆಯನ್ನು ರೂಪಿಸಿದವರಲ್ಲ. ಇಂಥಾ ಲಂಕೇಶ ಅಮೂರ್ತವಾಗಿ ಅವರ ಆಲೋಚನೆಗಳನ್ನು, ಬರವಣಗೆಯನ್ನು ಇಷ್ಟ ಪಡುವ ಎಲ್ಲರೊಂದಿಗೆ ಸದಾ ಕಾಲ ಇದ್ದೇ ಇರುತ್ತಾರೆ. ಇಂಥವರು ಇಲ್ಲವಾದಾಗಲೇ ಹೆಚ್ಚೆಚ್ಚು ಮಹತ್ವ ಪಡೆಯುತ್ತಾರೆ. ಆದರೂ ಲಂಕೇಶರಂಥಾ ಚಿಂತಕರು ಅಷ್ಟು ಬೇಗ ಸಾಯಬಾರದಿತ್ತು ಎನ್ನುವ ನನ್ನ ಹಳಹಳಿಕೆ ಮತ್ತು ಬೇಸರ ಮಾತ್ರ ನಿರಂತರವಾಗಿ ಹಾಗೇ ಉಳಿದಿದೆ.

ತೆರೆದ ಕೊಳವೆ ಬಾವಿ ಮಕ್ಕಳ ಪಾಲಿಗೆ ಸಾವಿನ ಗುಂಡಿ


– ಡಾ.ಎಸ್.ಬಿ. ಜೋಗುರ


ನಮ್ಮ ಜನರೇ ಹಾಗೆ. ಅಹಿತಕರವಾದದ್ದು ನಮ್ಮ ಮನೆಯಲ್ಲಿ ಘಟಿಸಿದಾಗ ಮಾತ್ರ ನಾವು ಬಿಕ್ಕಲು ಶುರು ಮಾಡುತ್ತೇವೆ. ’ಹಾಗೆ ಆಗುತ್ತದೆ ಎಂದು ತಮಗೆ ಅನಿಸಿರಲೇ ಇಲ್ಲ.ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು’ ಎಂದು ಹೇಳುವವರಿಗೆ ಅದು ಹಾಗೆಯೇ ಯಾವುದೇ ಒಂದು ವಿಘಟನೆ ಜರುಗುವ ಮೊದಲು ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಅದು ಘಟಿಸಿದ ಮೇಲೆಯೇ ಅದರ ಪರಿಣಾಮದ ಭೀಕರತೆಯ ಅರಿವಾಗುವದು. ಕೊಳವೆ ಬಾವಿಗಳ ದುರಂತಗಳನ್ನೇ ತೆಗೆದುಕೊಳ್ಳಿ. ತೀರಾ ಇತ್ತೀಚೆಗೆ ಇಂಡಿ ತಾಲೂಕಿನ ನಾಗಠಾಣ ಗ್ರಾಮದ ಅಕ್ಷತಾ ಕೊಳವೆ ಬಾವಿಗೆ ಬಿದ್ದು ಮಣ್ಣುಪಾಲಾದ ಘಟನೆ ಇಷ್ಟು ಬೇಗ ನಮ್ಮ ಜನತೆ ಮರೆಯಬಾರದಿತ್ತು. bagalkot-timmanna-open-borewellನೆನಪಿಡಲು ಅದೇನು ಅತ್ಯಂತ ಖುಷಿ ಕೊಡುವ ಸಂಗತಿಯೇ..? ಎಂದು ನೀವು ಕೇಳಬಹುದು. ಇರಲಿಕ್ಕಿಲ್ಲ, ಆದರೆ ಹೀಗೆ ಮತ್ತೊಂದು ಅಂಥದೇ ಘಟನೆ ನಡೆಯುವದನ್ನು ತಪ್ಪಿಸುವಲ್ಲಿ ಅದನ್ನು ನೆನಪಿಡುವ ಅಗತ್ಯವಿದೆ. ಬಹುಷ: ಮೊನ್ನೆ ಬಾಗಲಕೋಟ ಜಿಲ್ಲೆಯ ಸೂಳಿಕೆರಿಯಲ್ಲಿ ತಿಮ್ಮಣ್ಣ ಎಂಬ ಪುಟ್ಟ ಬಾಲಕ ಕೊಳವೆ ಬಾವಿಗೆ ಸಿಲುಕಿ ನೀವೆಲ್ಲಾ ಬಲ್ಲಿರಿ. ಆತನ ತಂದೆ-ತಾಯಿಗಳು ಖಂಡಿತ ನಾಗಠಾಣದಲ್ಲಿ ಅಕ್ಷತಾ ಕೊಳವೆ ಬಾವಿಗೆ ಬಿದ್ದದ್ದನ್ನು ಟಿ.ವಿ.ಯಲ್ಲಿ ನೋಡಿರಲಿಕ್ಕೆ ಸಾಕು ಅಥವಾ ಯಾರಾದರೂ ಆ ಸಂದರ್ಭದಲ್ಲಿ ಆ ಕುರಿತು ಮಾತನಾಡುವದನ್ನು ಕೇಳಿರಲಿಕ್ಕೂ ಸಾಕು. ಆಗಲಾದರೂ ಇವರಿಗೆ ತಮ್ಮ ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳಿವೆ, ಹಾಗೆಯೇ ತೆರೆದ ಕೊಳವೆ ಬಾವಿಯೂ ಇದೆ ಎನ್ನುವದು ನೆನೆಪಾಗಿರಬೇಕು.ಆ ಸಂದರ್ಭದಲ್ಲಿ ಅವರು ಆ ತೆರೆದ ಕೊಳವೆ ಬಾವಿಯ ಗುಂಡಿಯನ್ನು ಮುಚ್ಚಿದರೆ ಆ ಸಮಸ್ಯೆಯೇ ಇರುತ್ತಿರಲಿಲ್ಲ. ಎಲ್ಲವೂ ಹೀಗೆಯೇ.. ಕೆಟ್ಟ ಮೇಲೆ ಬುದ್ಧಿ ಬಂದಂತೆ.

ಆಗಲೇ ಸರಕಾರ ಅನೇಕ ಬಾರಿ ಮತ್ತೆ ಮತ್ತೆ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಅಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿತ್ತು. ಹಾಗಿರುವಾಗಲೂ ಅಲ್ಲಲ್ಲಿ ಈ ಬಗೆಯ ಕೊಳವೆ ಬಾವಿ ಎಂಬ ಸಾವಿನ ಗುಂಡಿಗಳು ತೆರೆದೇ ಇವೆ. ಮಾಧ್ಯಮಗಳಂತೂ ಅಪಾರ ಪ್ರಮಾಣದಲ್ಲಿ ಆ ಬಗ್ಗೆ ಮತ್ತೆ ಮತ್ತೆ ವರದಿ ಮಾಡಿದ ಮೇಲೆಯೂ ಮತ್ತೆ ಇಂಥಾ ಗುಂಡಿಗಳು ಉಳಿದಿರುವದೇ ಬಹುದೊಡ್ಡ ವಿಪರ್ಯಾಸ. ನಾಗಠಾಣದಲ್ಲಿ ನಡೆದ ಘಟನೆಯ ಸಂದರ್ಭದಲ್ಲಿಯೇ ಪಕ್ಕದ ಗದ್ದೆಯಲ್ಲಿ ಬಾಯಿ ತೆರೆದುಕೊಂಡು ನಿಂತ ಕೊಳವೆ ಬಾವಿಯನ್ನು ಟಿ.ವಿ.ಯಲ್ಲಿ ತೋರಿಸಲಾಗುತ್ತಿತ್ತು. ಕೊಳವೆ ಬಾವಿಗಳು ಬತ್ತಿ ಹೋದ ಮೇಲೆ ಅನೇಕರಿಗೆ ಈ ತೆರೆದ ಕೊಳವೆಬಾವಿಗಳು ತಮ್ಮ ಗದ್ದೆಯಲ್ಲಿಯೂ ಇವೆ ಎನ್ನುವುದೂ ಮರೆತಂತಿರುತ್ತದೆ. ಜನರ ಸ್ಮರಣೆಗೆ ಆಯುಷ್ಯ ತೀರಾ ಕಡಿಮೆ. ಹೀಗಾಗಿ ಈ ಬಗೆಯ ಘಟನೆಗಳು ಮತ್ತೆ ಮತ್ತೆ ಮರುಕಳಿಸಿ ಅಪಾರವಾಗಿ ಹಳಹಳಿಸುವಂತೆ ಮಾಡುತ್ತವೆ. ನಮ್ಮ ಉದಾಸೀನತೆಯಿಂದ ಕೊನೆಗೂ ನಮ್ಮಲ್ಲಿ ಉಳಿದದ್ದು ಹಳಹಳಿಕೆ.. ಬೇಸರ.. ಅಸಹಾಯಕತೆ.

ಸಾಮಾನ್ಯವಾಗಿ ಕೊಳವೆ ಬಾವಿಗಳನ್ನು ಎಲ್ಲೆಲ್ಲಿ ಕೊರೆಯಿಸಲಾಗಿದೆ open-borewell-victim-timmanna-motherಎನ್ನುವ ಬಗ್ಗೆ ಸಂಬಂಧಿಸಿದ ಇಲಾಖೆಯವರಿಗೂ ಮಾಹಿತಿ ಇದ್ದೇ ಇರುತ್ತದೆ. ಆ ಬಗ್ಗೆ ದಾಖಲಾತಿಯೂ ಇರುತ್ತದೆ. ಅವುಗಳಲ್ಲಿ ಬತ್ತಿಹೋದ ಇಲ್ಲವೇ ವಿಫಲವಾದ ಕೊಳವೆ ಬಾವಿಗಳೆಷ್ಟು ಎನ್ನುವ ಬಗ್ಗೆಯೂ ಮಾಹಿತಿ ಇರುತ್ತದೆ. ಅತ್ಯಂತ ವಸ್ತುನಿಷ್ಟವಾಗಿ ಅವುಗಳನ್ನು ಸಮೀಕ್ಷಿಸಿ ಮುಚ್ಚಿಸುವ ಕ್ರಿಯೆ ತುರ್ತಾಗಿ ನಡೆಯಬೇಕು. ಎಲ್ಲವನ್ನೂ ಸರ್ಕಾರವೆ ಮಾಡಲಿ.. ಮಾಡಬೇಕು ಎನ್ನುವ ಮನ:ಸ್ಥಿತಿಯೇ ಸರಿಯಲ್ಲ. ಯಾವುದೇ ಸಾರ್ವಜನಿಕರ ಗಮನಕ್ಕೆ ಬರುವ ಇಂಥಾ ತೆರೆದ ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸ ಆಗಬೇಕು. ಇದೂ ಕೂಡಾ ಒಂದು ಮಹತ್ತರವಾದ ಸಾಮಾಜಿಕ ಹೊಣೆಗಾರಿಕೆ ಎನ್ನುವ ಹಾಗೆ ಜರುಗಬೇಕು. ಇನ್ನು ಈ ಬಗೆಯ ಕೊಳವೆ ಬಾವಿಗಳಲ್ಲಿ ಬಹುತೇಕವಾಗಿ ಸಣ್ಣ ಮಕ್ಕಳು. ತೀರಾ ಯತಾರ್ಥವಾಗಿ ಆಡುತ್ತ ಆಡುತ್ತಲೇ ಬೀಳುವದಿದೆ. ಇದು ತೀರಾ ಆಕಸ್ಮಿಕವಾದ ಘಟನೆ ಎನಿಸಿದರೂ ಇದರ ಹಿಂದೆ ನಮ್ಮ ನಿರ್ಲಕ್ಷವೂ ಇದೆ ಎನ್ನುವದನ್ನು ಮರೆಯಲಾಗದು. ತಮ್ಮ ತಮ್ಮ ಗದ್ದೆಗಳಲ್ಲಿಯೂ ಇಂಥಾ ಒಂದು ಪಾಪಕೂಪ ಇದೆ ಎನ್ನುವ ಪ್ರಜ್ಞೆಯೂ ಇರುವದಿಲ್ಲವೇ..? ಇದ್ದರೂ ಅದು ಈ ಮಟ್ಟಿಗೆ ಬಾಧಕ ಎನ್ನುವುದು ಮಾತ್ರ ತಮ್ಮದೇ ಸಂತಾನ ಅಲ್ಲಿ ಬೀಳುವವರೆಗೂ ಇವನಿಗೆ ಅನಿಸಿರಲಿಲ್ಲ bagalkot_boy_in_borewell_rescueಎನ್ನುವುದೇ ದೊಡ್ಡ ವಿಪರ್ಯಾಸ.

ನಮ್ಮ ನಮ್ಮ ನಿಯಂತ್ರಣದಲ್ಲಿರುವ ಈ ಬಗೆಯ ಅವಘಡಗಳ ಕಾರಣಗಳನ್ನು ನಾವೇ ಸರಿದೂಗಿಸಬಹುದು. ನಮಗ್ಯಾಕೆ.. ಅದರ ಉಸಾಬರಿ ಎನ್ನುವ ಗುಣ ನಮ್ಮ ಬುಡಕ್ಕೂ ಕೊಳ್ಳಿ ಇಡಬಹುದು. ಹಾಗಾಗುವ ಮುನ್ನವೆ ನಾವು ಎಚ್ಚರಗೊಳ್ಳುವುದು ಅನೇಕ ರೀತಿಯಲ್ಲಿ ಉತ್ತಮ. ಅತ್ಯಂತ ಸುಶಿಕ್ಷಿತರು ವಾಸಿಸುವ ಪ್ರದೇಶವದು. ಮಳೆಗಾಲದ ಸಂದರ್ಭ. ಅಲ್ಲೊಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬ. ಅಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಧಗಧಗನೇ ಹೊತ್ತಿ ಉರಿಯತೊಡಗಿತು. ನಮ್ಮ ಸೋಕಾಲ್ಡ್ ಎಜ್ಯುಕೆಟೆಡ್ ಯಾರೂ ಪೋನ್ ಮಾಡಿ ಅಲ್ಲಿ ಬೆಂಕಿ ತಗುಲಿದ ಬಗ್ಗೆ ಹೇಳಲು ತಯಾರಿಲ್ಲ. ಪರಿಣಾಮವಾಗಿ ಆ ಟ್ರಾನ್ಸ್‌ಫಾರ್ಮರ್ ಸುಟ್ಟೇ ಹೋಯಿತು. ಅದು ತಮ್ಮದು ಎನ್ನುವ ನಾಗರಿಕ ಪ್ರಜ್ಞೆಯೇ ಅಲ್ಲಿರಲಿಲ್ಲ. ನಮ್ಮ ಮನೆಯಲ್ಲಿ ಹಾಗೆ ಯಾವುದೇ ಒಂದಕ್ಕೆ ಬೆಂಕಿ ತಗುಲಿದ್ದರೆ..? ಹಾಗೆ ಉದಾಸೀನತೆ ಮಾಡುತ್ತೇವೆಯೇ..? ಸಾಧ್ಯವಿಲ್ಲ. ಯಾವುದೇ ಒಂದು ಅಹಿತಕರ ಘಟನೆ ಖಾಸಗಿಯಾಗಿರಲಿ, ಸಾರ್ವಜನಿಕವಾಗಿರಲಿ, ಅದನ್ನು ತಡೆಯುವಲ್ಲಿ ನಮ್ಮಿಂದಾಗುವ ಯತ್ನವನ್ನು ಮಾಡುವದರಲ್ಲಿ ಯಾವ ತಪ್ಪೂ ಕಾಣುವದಿಲ್ಲ.