Category Archives: ನವೀನ್ ಸೂರಿಂಜೆ

Deccan Herald - Mining Payments

ಬಿ.ಎಸ್.ವೈ. ಹಫ್ತಾ ಪಟ್ಟಿ? ಬೆವರುತ್ತಿರುವ ಪತ್ರಕರ್ತರು?

– ನವೀನ್ ಸೂರಿಂಜೆ

ಗಣಿ ಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ತೀವ್ರಗೊಂಡಿರುವಂತೆಯೇ ಯಡಿಯೂರಪ್ಪ ಬೆವರುವ ಬದಲಾಗಿ ಕರ್ನಾಟಕದ ಪತ್ರಕರ್ತರಲ್ಲಿ ನಡುಕ ಶುರುವಾಗಿದೆ. ಯಡಿಯೂರಪ್ಪರಿಂದ ತಿಂಗಳ ಲೆಕ್ಕದಲ್ಲಿ ಹಫ್ತಾ ಪಡೆಯುತ್ತಿದ್ದ ಪತ್ರಕರ್ತರ ಪಟ್ಟಿ ಯಡಿಯೂರಪ್ಪ ಡೈರಿಯಿಂದ ಸಿಬಿಐಗೆ ಸಿಕ್ಕಿದೆ ಎಂಬ ಸುದ್ದಿ ಕೆಲವೊಂದು ಪತ್ರಕರ್ತರ ನಿದ್ದೆಗೆಡಿಸಿದೆ. ಪಟ್ಟಿ ಈಗಾಗಲೇ ಬಯಲಾಗಿದ್ದು, ಪತ್ರಕರ್ತರ ವಲಯದಲ್ಲಿ ಒಂದು ದೊಡ್ಡ ಸುದ್ಧಿಯೇ ಆಗಿದೆ.

Deccan Herald - Mining Payments
Mining Payments listed in Lokayukta Report: courtesy:Deccan Herald (19/08/11)

ಸಿಬಿಐಗೆ ಯಡಿಯೂರಪ್ಪ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಪಟ್ಟಿ ನಮ್ಮ ಬಳಿಯೂ ಇದೆ. ರಾಜ್ಯದ ವಿವಿದ ಜಿಲ್ಲೆಗಳ ಪತ್ರಕರ್ತರ ಹೆಸರುಗಳು ಇದರಲ್ಲಿ ನಮೂದಾಗಿದೆ. ‘ಮೇ 16 ರಂದು ಸಿಬಿಐ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ ನಗರದ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಸದಸ್ಯರ ನಿವಾಸದ ಮೇಲೆ ನಡೆಸಿದ ದಾಳಿಯ ವೇಳೆ ಮಹತ್ವದ ವಿಷಯಗಳನ್ನೊಳಗೊಂಡ ಯಡಿಯೂರಪ್ಪನವರ ಪರ್ಸನಲ್ ಡೈರಿ ಸಿಕ್ಕಿದೆ, ಅದರಲ್ಲಿ ಅವರಿಂದ ನಿಯಮಿತವಾಗಿ ಹಣ ಪಡೆಯುತ್ತಿದ್ದ ಪತ್ರಕರ್ತರ ಹೆಸರುಗಳ ಪ್ರಸ್ತಾಪವಿದೆ,’ ಎಂಬ ಸುದ್ದಿ ಪತ್ರಕರ್ತರ ವಲಯದಲ್ಲಿದೆ. ಮಂಗಳೂರಿನ ಕೆಲವೊಂದು ಪತ್ರಿಕೆಗಳು ಇದನ್ನು ಸುದ್ಧಿಯಾಗಿಯೂ ಪ್ರಕಟಿಸಿತ್ತು. ವಾಸ್ತವವಾಗಿ ಇದು ಸಿಬಿಐ ಯಡಿಯೂರಪ್ಪರಿಂದ ವಶಪಡಿಸಿಕೊಂಡ ಪಟ್ಟಿಯೇ ಅಲ್ಲ.

ಏನಿದು ಪತ್ರಕರ್ತರ ಪಟ್ಟಿ?

ಮೇ 16 ರಂದು ಯಡಿಯೂರಪ್ಪನವರ ಮನೆಯಿಂದ ಸಿಬಿಐ ಅಧಿಕಾರಿಗಳು ಪತ್ರಕರ್ತರ ಹೆಸರುಳ್ಳ ಡೈರಿಯನ್ನು ವಶಪಡಿಸಿಕೊಂಡರು ಎಂದು ಹೇಳಲಾಗುತ್ತದೆ. ಆದರೆ ನನಗೆ ಈ ಪಟ್ಟಿಯನ್ನು ಮೇ 16 ಕ್ಕೂ ಮೊದಲೇ ಬೆಂಗಳೂರಿನ ನನ್ನ ಆತ್ಮೀಯ ಪತ್ರಕರ್ತ ಮಿತ್ರ ಓದಿ ಹೇಳಿದ್ದ. ಅದೇ ಹೆಸರುಗಳುಳ್ಳ, ಅದರೆ ಕೆಲವೊಂದು ಹೆಸರುಗಳನ್ನು ಡಿಲೀಟ್ ಮಾಡಿದ ಒಂದು ಪಟ್ಟಿ ಮೇ 20 ರಂದು ನನ್ನ ಈಮೇಲ್‌ಗೆ ಬೇರೊಬ್ಬ ಪತ್ರಕರ್ತ ಮಿತ್ರ ರವಾನಿಸಿದ್ದ. ಅದೇ ಹೆಸರುಗಳು ಉಳ್ಳ ಪಟ್ಟಿ ಮೇ 16 ಕ್ಕೂ ಮೊದಲು ಬಹಿರಂಗಗೊಂಡಿತ್ತು. ಮತ್ತು ಅದು ಬಿಜೆಪಿ ಕಚೇರಿಯಿಂದ ಹೋಗುತ್ತಿದ್ದ ಹಫ್ತಾದ ಫಲಾನುಭವಿ ಪತ್ರಕರ್ತರ ಪಟ್ಟಿ ಎಂಬ ಸುದ್ಧಿ ಚಾಲ್ತಿಯಲ್ಲಿತ್ತು. ಯಾವಾಗ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ಪ್ರಾರಂಭ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿತೋ ಆಗಲೇ “ಯಡಿಯೂರಪ್ಪ ಬಳಿ ಇದ್ದ ಪತ್ರಕರ್ತರ ಹಫ್ತಾ ಫಲಾನುಭವಿಗಳ ಪಟ್ಟಿ”ಯಾಗಿ ಮಾಪರ್ಾಡಾಗಿತ್ತು. ಇಷ್ಟಕ್ಕೂ ಸಿಬಿಐಗೆ ದೊರೆತ ದಾಖಲೆಯನ್ನು ಎರಡು ಮೂರು ದಿನದಲ್ಲಿ ಬಹಿರಂಗ ಮಾಡಲು ಅಥವಾ ತುರಾತುರಿಯಲ್ಲಿ ಪತ್ರಕರ್ತರಿಗೆ ನೀಡಲು ಅದೇನು ಅನ್ವರ್ ಮಾನಿಪ್ಪಾಡಿ ಆಧ್ಯಕ್ಷತೆಯ ಆಯೋಗವೇ?

ಪತ್ರಕರ್ತರ ಪಟ್ಟಿ ನಿಜವೇ?

ಗಣಿ ಹಪ್ತಾ ಪಡೆದುಕೊಂಡಿರುವ ಪತ್ರಕರ್ತರ ಪಟ್ಟಿ ಇರುವುದು ನಿಜ. ಗಣಿ ಹಗರಣ ತನಿಖೆಯ ಲೋಕಾಯುಕ್ತ ವರದಿಯಲ್ಲೂ ಪತ್ರಕರ್ತರ ಹೆಸರು ಉಲ್ಲೇಖವಾಗಿತ್ತು. ಆನಂತರ ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಸಿಬಿಐ ಮಾಡಿದ ತನಿಖೆಯಲ್ಲಿ ಇನ್ನಷ್ಟೂ ಪತ್ರಕರ್ತರ ಹೆಸರು ಸಿಬಿಐಗೆ ಕಂಡು ಬಂದಿತ್ತು. ಇದು ಲೋಕಾಯುಕ್ತ ವರದಿಯಲ್ಲಿದ್ದ ಪತ್ರಕರ್ತರ ನಡುಕಕ್ಕೆ ಕಾರಣವಾಗಿತ್ತು. ಹಾಗೆಂದು ಪತ್ರಕರ್ತರನ್ನು ಅರೆಸ್ಟ್ ಮಾಡುತ್ತಾರೆ ಎಂದು ಅವರು ಹೆದರಿಕೊಂಡಿದ್ದಾರೆ ಎಂದರೆ ಬಾಲಿಶವಾಗುತ್ತದೆ. ಜನಾರ್ದನ ರೆಡ್ಡಿಯ ಸಿಬಿಐ ಪ್ರಕರಣಕ್ಕೂ ಯಡಿಯೂರಪ್ಪ ಸಿಬಿಐ ಪ್ರಕರಣಕ್ಕೂ ಸಂಬಂಧ ಇರುವುದರಿಂದ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪವಾದ ಹೆಸರುಗಳು ಮತ್ತು ಜನಾರ್ದನ ರೆಡ್ಡಿ ತನಿಖೆಯಲ್ಲಿ ಪ್ರಸ್ತಾಪವಾದ ಹೆಸರುಗಳು ಮತ್ತೆ ಯಡಿಯೂರಪ್ಪ ವಿರುದ್ಧದ ಸಿಬಿಐ ವರದಿಯಲ್ಲಿ ಉಲ್ಲೇಖವಾಗುವ ಸಾಧ್ಯತೆ ಇದೆ. ಇದು ಕಾನೂನು ಸಮಸ್ಯೆಗಿಂತಲೂ ಪತ್ರಕರ್ತರ ಮಾನದ ಪ್ರಶ್ನೆಯಾಗಿರುತ್ತದೆ. ಇದನ್ನು ತಪ್ಪಿಸಲೆಂದೇ ಕೆಲವೊಂದು ಪ್ರಾಮಾಣಿಕರ ಹೆಸರನ್ನೂ ಸೇರಿಸಿ  ಪಟ್ಟಿಯನ್ನು  ಯಾರೋ ಸೃಷ್ಠಿಸಿ ಪಸರಿಸಿದ್ದಾರೆ.

ಪ್ರಾಮಾಣಿಕರ ಹೆಸರೂ ಯಡ್ಡಿ ಹಫ್ತಾ ಲಿಸ್ಟ್‌ನಲ್ಲಿ:

ರಾಜ್ಯದ ಕೆಲವೊಂದು ಪ್ರಾಮಾಣಿಕ ಪತ್ರಕರ್ತರ ಹೆಸರನ್ನೂ ಈಗ ಬಹಿರಂಗಗೊಂಡ ಪಟ್ಟಿಯಲ್ಲಿ ಸೇರಿಸಲಾಗಿದೆ. ಲೋಕಾಯುಕ್ತ ವರದಿ ಮತ್ತು ಜನಾರ್ದನ ರೆಡ್ಡಿ ವಿರುದ್ಧದ ತನಿಖಾ ವರದಿಯಲ್ಲಿ ಉಲ್ಲೇಖವಾದ ಪತ್ರಕರ್ತರ ಹೆಸರಿನ ಮಧ್ಯೆ ರಾಜ್ಯದ ಸಭ್ಯ ಪತ್ರಕರ್ತರ ಹೆಸರನ್ನೂ ಸೇರಿಸಿದರೆ ಒಂದೋ “ಆ ವರದಿಯೇ ಸುಳ್ಳು” ಎಂದು ಎಲ್ಲರೂ ವರದಿಯನ್ನು ತಳ್ಳಿ ಹಾಕಬಹುದು. ಅಥವಾ “ಎಲ್ಲಾ ಪತ್ರಕರ್ತರೂ ಹಣ ಮಾಡುವವರೇ. ಅವರು ಇವರು ಅಂತ ಯಾಕೆ ಒಬ್ಬೊಬ್ಬರನ್ನು ಟಾರ್ಗೆಟ್ ಮಾಡೋದು” ಅಂತ ಸುಮ್ಮನಿರಬಹುದು. ಈ ಎರಡೂ ಸಾಧ್ಯತೆಗಳು ಭ್ರಷ್ಠ ಪತ್ರಕರ್ತರಿಗೆ ವರದಾನವಾಗಿ ಪರಿಣಮಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಾಯುಕ್ತ ಪಟ್ಟಿಯಲ್ಲಿದ್ದ ಹಪ್ತಾ ಪಡೆಯುತ್ತಿದ್ದ ಪತ್ರಕರ್ತರು ಇಂತಹುದೊಂದು ಪಟ್ಟಿಯಲ್ಲಿ ತಮ್ಮ ಹೆಸರನ್ನು ಸಭ್ಯ ಪತ್ರಕರ್ತರ ಜೊತೆ ಸೇರಿಸಿ ಪಟ್ಟಿ ಮಾಡಿರಬಹುದು ಎನ್ನಲಾಗುತ್ತಿದೆ. ಲೋಕಾಯುಕ್ತ ಹೆಸರಿಸಿದ ಮತ್ತು ಪತ್ರಿಕಾ ಲೋಕಕ್ಕೆ ಗೊತ್ತಿರುವ ಭ್ರಷ್ಠ ಪತ್ರಕರ್ತರ ಹೆಸರಗಳು ಪಟ್ಟಿಯಲ್ಲಿ ಇರುವುದರ ಜೊತೆ ಪತ್ರಿಕಾ ಕ್ಷೇತ್ರ ಗುರುತಿಸಿದಂತಹ ಕೆಲವೊಂದು ಪ್ರಾಮಾಣಿಕರ ಹೆಸರನ್ನೂ ಪಟ್ಟಿ ಮಾಡಿರುವುದರಿಂದ ಇದು ಸಿಬಿಐ ಕೈಯಲ್ಲಿರುವ ಪಟ್ಟಿ ಅಲ್ಲ ಎನ್ನಬೇಕಾಗುತ್ತದೆ ಮತ್ತು ಅದು ಅಧಿಕೃತ ಎನ್ನುವುದಕ್ಕೆ ಯಾವ ದಾಖಲೆಗಳೂ ಇಲ್ಲವಾಗಿದೆ. ರಾಜ್ಯವನ್ನು ಲೂಟಿ ಹೊಡೆದಿರುವ ಭ್ರಷ್ಠ ರಾಜಕಾರಣಿಗಳ ಜೊತೆ ಕೈ ಜೋಡಿಸಿರೋ ಭ್ರಷ್ಠ ಪತ್ರಕರ್ತರು ಬಚಾವ್ ಆಗೊದಕ್ಕೆ ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ ಎನ್ನುವುದಷ್ಟೆ ಈ ಉದಾಹರಣೆಗಳ ಮೂಲಕ ಗೊತ್ತಾಗುತ್ತದೆ.


[ಸ್ನೇಹಿತರೆ,  ನವೀ‌ನ್‌ರವರು ಮೇಲೆ ಹೇಳಿರುವಂತೆ ಈ ಪಟ್ಟಿ ಪತ್ರಕರ್ತರ ವಲಯದಲ್ಲಿ ಹರಿದಾಡುತ್ತಿದೆ ಮತ್ತು ಅದೇ ಸಮಯದಲ್ಲಿ ಅದು ಸಿಬಿಐ ವಶಪಡಿಸಿಕೊಂಡ ಡೈರಿಯ ಪ್ರತಿ ಎನ್ನುವುದಕ್ಕೆ ಅಧಿಕೃತ ದಾಖಲೆ ಇಲ್ಲವಾಗಿದೆ. ಹಾಗಾಗಿ ನಾವು ಪಟ್ಟಿ ಲಭ್ಯವಿದ್ದರೂ ಅದನ್ನು ಪ್ರಕಟಿಸುವುದು ಸಮಂಜಸವಲ್ಲ. ಆದರೆ ಹೀಗೊಂದು ಪಟ್ಟಿ ಇರುವುದು ನಿಜವೇ ಆಗಿದ್ದು ಮತ್ತು ಅದು ಅಧಿಕೃತವೆಂದು ಗೊತ್ತಾಗಿದ್ದೇ ಆದರೆ ಅದನ್ನು ವರ್ತಮಾನ.ಕಾಮ್‌ನಲ್ಲಿ ಖಂಡಿತ ಪ್ರಕಟಿಸುತ್ತೇವೆ. ರಾಜಕಾರಣಿಗಳ ಭ್ರಷ್ಟತೆಗಿಂತ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರ ಭ್ರಷ್ಟತೆ ನೀಚವೂ ಸಮಾಜಕ್ಕೆ ಹೆಚ್ಚು ಹಾನಿಕಾರಿಯಾಗಿಯೂ ಸಾಗುತ್ತಿದೆ. ಮತ್ತು ಈ ಭ್ರಷ್ಟರು ಸಿಕ್ಕಿಹಾಕಿಕೊಳ್ಳುವ ಹಾಗೂ ನ್ಯಾಯಾಲಯದಲ್ಲಾಗಲಿ, ಜನತಾ ನ್ಯಾಯಾಲಯದಲ್ಲಾಗಲಿ ಶಿಕ್ಷೆಗೆ ಒಳಗಾಗುವ ಸಾಧ್ಯತೆಯೂ ಇಲ್ಲವಾಗಿದೆ. ಹೀಗಿರುವಾಗ ಮಾಧ್ಯಮದ, ಅದರಲ್ಲೂ ಕನ್ನಡ ಮಾಧ್ಯಮಲೋಕದ ಭ್ರಷ್ಟತೆಯನ್ನು ತಡೆಯಲು ನಮ್ಮ ಕೈಲಾಗುವ ಎಲ್ಲವನ್ನೂ ನಾವು ಈ ಮೂಲಕ ಮುಂದುವರೆಸುತ್ತೇವೆ. – ರವಿ ಕೃಷ್ಣಾರೆಡ್ಡಿ]

ದಕ್ಷಿಣ ಕನ್ನಡದ ದಲಿತರ ಮತ್ತು ತಳವರ್ಗದವರ ಸಮಸ್ಯೆಗಳು

– ನವೀನ್ ಸೂರಿಂಜೆ

ಕಳೆದ ಶನಿವಾರದಂದು (28/4/12) ಮಂಗಳೂರಿನ “ಪತ್ರಕರ್ತರ ಅಧ್ಯಯನ ಕೇಂದ್ರ” ಅಲ್ಲಿಯ  ಸಹೋದಯ ಸಭಾಂಗಣದಲ್ಲಿ “ತಳ ಸಮುದಾಯಗಳು ಮತ್ತು ಮಾಧ್ಯಮ ಎಂಬ ಸಂವಾದ” ಕಾರ್ಯಕ್ರಮ ಆಯೋಜಿಸಿತ್ತು. ಅದರಲ್ಲಿ ಪಾಲ್ಗೊಂಡ ದಕ್ಷಿಣ ಕನ್ನಡದ ವಿಭಿನ್ನ ತಳ ಸಮುದಾಯಗಳ ಬಹುತೇಕ ನಾಯಕರು ತಮ್ಮ ಸಮುದಾಯಗಳ ಸಮಸ್ಯೆ ಮತ್ತು ನೋವುಗಳನ್ನು ಪತ್ರಕರ್ತರ ಮುಂದೆ ಬಿಚ್ಚಿಟ್ಟರು. ಅಲ್ಲಿ ಮಾತನಾಡಿದ ಅನೇಕರು ಅವರ ಸಮುದಾಯಗಳ ಮೊದಲ ತಲೆಮಾರಿನ ವಿದ್ಯಾವಂತರು. ಹೆಚ್ಚಿನವರು ಪದವಿ ಶಿಕ್ಷಣ ಸಹ ಪಡೆಯದೆ ಇರುವಂತಹವರು. ಅವರಲ್ಲಿ ಕಾಡಿನ ಉತ್ಪನ್ನಗಳನ್ನು ಮಾರಿ ಜೀವನ ಸಾಗಿಸುವ ಮೂಲನಿವಾಸಿಗಳೇ ಹೆಚ್ಚು. ಅಲ್ಲಿ ಪಾಲ್ಗೊಂಡ ಆ ಸಮುದಾಯಗಳ ಕೆಲವು ಮುಖಂಡರಿಗೆ ಈ ರೀತಿ ತಮ್ಮ ಸಮಸ್ಯೆಗಳನ್ನು ಪತ್ರಕರ್ತರ ಮುಂದೆ ಹೇಳಿಕೊಳ್ಳಲು ಸಿಕ್ಕ ಮೊದಲ ಅವಕಾಶ ಇದು ಎನ್ನಬಹುದು. ತಮ್ಮ ಜನರ ನೋವು, ಈಗಲೂ ಇರುವ ಅಸ್ಪೃಶ್ಯತೆ, ಮೇಲ್ವರ್ಗದ ಜನರಿಗಾಗಿ ಮಾಡಬೇಕಾದ ಅತಿ ಅಮಾನವೀಯ ಕೊಳಕು ಸಂಪ್ರದಾಯಗಳು, ಶೋಷಣೆ, ಪೊಲೀಸರ ಕಾಟ, ಇವುಗಳ ಬಗ್ಗೆ ಪ್ರಸ್ತಾಪಿಸುತ್ತ ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಹಾಗೂ ಭೂಮಿಯ ಹಕ್ಕಿನ ಕುರಿತಂತೆ ಉಲ್ಲೇಖಿಸಿದರು.

ಸಭೆಯಲ್ಲಿ ಪಾಲ್ಗೊಂಡ ಮುಖಂಡರು ತಮ್ಮ ಸಮುದಾಯಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳನ್ನು ಹೀಗಿವೆ:

  • ಸಾಮಾಜಿಕವಾಗಿ ಸಾಕಷ್ಟು ಬದಲಾವಣೆಗಳ ಹೊರತಾಗಿಯೂ ನಮ್ಮ ಸಮುದಾಯದ ಬೆರಳೆಣಿಕೆಯ ಜನರು ಮಾತ್ರವೇ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಹಾಗಿದ್ದರೂ  ಭೂತ ಕಟ್ಟುವ ನಮ್ಮ ಸಮುದಾಯದವರು ದೊಡ್ಡ ವ್ಯಕ್ತಿಗಳಿಗೆ ತಲೆಬಾಗುವ ಶೋಷಣೆ ಮಾತ್ರ ಇಂದಿಗೂ ತಪ್ಪಿಲ್ಲ. ನಮ್ಮ ಜನರನ್ನು ಇಂದಿಗೂ ಇತರ ಸಮುದಾಯ ವಕ್ರದೃಷ್ಟಿಯಿಂದಲೇ ನೋಡುತ್ತಿದೆ. – ರತಿ, ಪಂಬದ ಸಮುದಾಯ.
  • ಕೆಳಸ್ತರದ ಜನರಿಗೆ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಜ್ಞಾನ, ಅರಿವನ್ನು ನೀಡಬೇಕಾಗಿದೆ. – ಜಗನ್ನಾಥ, ಪರವ ಸಮುದಾಯ.
  • ಕೊರಗ ಸಮುದಾಯದಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲ. ವರದಕ್ಷಿಣೆ, ವಿಧವೆ ಎಂಬ ಸಮಸ್ಯೆಗಳ ಜಂಜಾಟವಿಲ್ಲ. ಸಮುದಾಯದಲ್ಲಿ ಜನಸಂಖ್ಯೆ ಇಳಿಮುಖವಾಗುತ್ತಿದ್ದು, ಇಂತಹ ಸಂದರ್ಭ ಸಮುದಾಯವು ಮುಖ್ಯವಾಹಿನಿಗೆ ಸೇರಬೇಕೆನ್ನುವ ಕರೆಯು ಆತಂಕ ಸೃಷ್ಟಿಸುತ್ತಿದೆ. ಸಮುದಾಯವು ಪ್ರಾಕೃತಿಕವಾಗಿ ಬದುಕಲು ಅನುಗುಣವಾದ ವ್ಯವಸ್ಥೆ ಆಗಬೇಕಿದೆ. – ಮತ್ತಡಿ, ಕೊರಗ ಸಮುದಾಯ.
  • ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಜಾಗ ಹಲವಾರು ವರ್ಷಗಳ ಹೋರಾಟದ ಬಳಿಕವೂ ತೆರವುಗೊಳಿಸಲಾಗಿಲ್ಲ. – ಎಸ್.ಪಿ. ಆನಂದ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಸಮುದಾಯ ಬಹಳಷ್ಟು ಹಿಂದುಳಿದಿದೆ. ನಮ್ಮ ಸಮುದಾಯಕ್ಕೆ ಇನ್ನೂ ಜಾತಿ ಸರ್ಟಿಫಿಕೆಟ್ ಸಿಕ್ಕಿಲ್ಲ. – ಎಂ. ದುಶ್ಯಂತ, ಹಂಡಿ ಜೋಗಿ ಸಮುದಾಯ.
  • 600 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಸಮುದಾಯದ ಜನರಿಗೆ ಭೂಮಿ, ನಿವೇಶನದ ಹಕ್ಕು ಮಾತ್ರ ಸಿಗುತ್ತಿಲ್ಲ. – ಬಿ.ಕೆ. ಸೇಸಮಪ್ಪ ಬೆದ್ರಕಾಡು, ಬೈರ ಸಮುದಾಯ.
  • ರಾಜ್ಯದಲ್ಲಿ  ನಮ್ಮ ಸಮುದಾಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರ ಸಂಖ್ಯೆ 750 ಆಗಿದ್ದರೂ ಇಂಜಿನಿಯರ್ ಆಗಿರುವುದು ಮಾತ್ರ 53 ಮಂದಿ. – ಪದ್ಮನಾಭ ನರಿಂಗಾನ, ಬಾಕುಡ ಸಮುದಾಯ.
  • ಕಾಡಿನ ಜೀವನವನ್ನು ನಮ್ಮದಾಗಿಸಿಕೊಂಡಿರುವ ನಮ್ಮ ಸಮುದಾಯಕ್ಕೆ ನಕ್ಸಲ್ ವಿರುದ್ಧದ ಕಾರ್ಯಾಚರಣೆಯ ಹೆಸರಿನಲ್ಲಿ ಪೊಲೀಸರ ದೌರ್ಜನ್ಯವೇ ಅಧಿಕ. – ಸುಧಾಕರ, ಮಲೆಕುಡಿಯ ಸಮುದಾಯ.
  • ಮೂಲ ದ್ರಾವಿಡ ಜನಾಂಗವಾದ ನಮ್ಮ ಸಮುದಾಯ ಜಾತಿ ಪಟ್ಟಿಯಲ್ಲಿಯೇ ಇಲ್ಲ. ಇದರಿಂದಾಗಿ ನಾವು ಯಾವುದೇ ರೀತಿಯ ಸರಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. – ಚೆನ್ನಪ್ಪ ಕಕ್ಕೆಪದವು, ಮನ್ಸ ಸಮುದಾಯ.
  • ಉಳುವವನೇ ಹೊಲದೊಡೆಯ ಎಂಬ ಮಾತು  ನಮ್ಮ ಸಮಾಜಕ್ಕಿನ್ನೂ ಅನ್ವಯವಾಗಿಲ್ಲ. ಬದಲಾಗಿ ಈ ಸಮುದಾಯ ಸರಕಾರಿ ಪ್ರಾಯೋಜಿತ ದೌರ್ಜನ್ಯದಿಂದ ನಲುಗುತ್ತಿದೆ. ಅಲೆಮಾರಿ ಜನಾಂಗಗಳ ಬಗ್ಗೆ ಸಮೀಕ್ಷೆ  ನಡೆಸಿ ವ್ಯವಸ್ಥಿತವಾದ ಕಾನೂನು ಜಾರಿಗೊಳಿಸಬೇಕು. – ಭಾನುಚಂದ್ರ ಕೃಷ್ಣಾಪುರ, ಆದಿದ್ರಾವಿಡ ಸಮುದಾಯ.
  • ದ.ಕ. ಜಿಲ್ಲೆಯಲ್ಲಿ ಗೊಡ್ಡ ಸಮುದಾಯದ 152 ಕುಟುಂಬಗಳಿದ್ದು, ಏಳು ಮಂದಿ ಮಾತ್ರವೇ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಉಡುಪಿಯಲ್ಲಿ ನಾಲ್ಕು ಮಂದಿ ಎಲ್‌ಎಲ್‌ಬಿ ಹಾಗೂ ಆರು ಮಂದಿ ಸ್ನಾತಕೋತ್ತರ ಶಿಕ್ಷಣ ಪಡೆದವರು. –  ಕೃಷ್ಣಾನಂದ ಡಿ., ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ).

ಹಾಗೆಯೇ, ಕಾರ್ಯಕ್ರಮದಲ್ಲಿ ಸಮಾಜ ಪರಿವರ್ತನಾ ವೇದಿಕೆಯ ಡೀಕಯ್ಯ, ದಸಂಸ (ಭೀಮವಾದ) ಮುಖಂಡ ಪಿ. ಕೇಶವ ಹಾಗೂ ಇನ್ನಿತರರು ಸಹ ದಲಿತರ ಸಮಸ್ಯೆ ಮತ್ತು ಜಾತಿಪದ್ದತಿಯ ಬಗ್ಗೆ ಮಾತನಾಡಿದರು.

ಇದಾದ ನಂತರ ಮಾತನಾಡಿದ ಲೇಖಕ ರವಿ ಕೃಷ್ಣಾರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಸಮುದಾಯವನ್ನು ಕಾಡುತ್ತಿರುವ ಭೂಮಿ ಹಕ್ಕು ಸಮಸ್ಯೆಯನ್ನು ವಿವಿಧ ದಲಿತ ಸಮುದಾಯಗಳ ನಾಯಕರು ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ “ಚಳವಳಿಗಾರರ ಜವಾಬ್ಧಾರಿಗಳು ಮತ್ತು ಮಾಧ್ಯಮದ ಪಾತ್ರ”ದ ಬಗ್ಗೆ ಮಾತನಾಡಿದ ಅವರು,  ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಅರಣ್ಯ ಭೂಮಿಗಳು ಲಭ್ಯವಿದ್ದು, ಅರ್ಹ ದಲಿತರಿಗೆ ಅವುಗಳನ್ನು ಹಂಚುವಲ್ಲಿ ದಲಿತ ನಾಯಕರು ಪ್ರಮುಖವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು. ಶಿಕ್ಷಣದ ಸಮಸ್ಯೆಯು ಕೂಡಾ ತಳ ಮಟ್ಟದ ಹಲವಾರು ಸಮುದಾಯಗಳನ್ನು ಕಾಡುತ್ತಿದ್ದು, ಶಿಕ್ಷಣವಿಲ್ಲದ, ಉದ್ಯೋಗವಿಲ್ಲದ ದಲಿತ ಸಮುದಾಯಗಳ ವಯಸ್ಕ ಜನರಿಗೆ ದಲಿತ ಮೀಸಲಾತಿಯಿಂದ ಪ್ರಯೋಜನವಾಗದು, ಅಂತಹ ಜನರಿಗೆ ಕೃಷಿ ಭೂಮಿ ಹಂಚಿಕೆಯಿಂದ ಮಾತ್ರ ಸ್ವಾವಲಂಬನೆ ಮತ್ತು ಘನತೆ ದೊರಕಿಸಲು ಸಾಧ್ಯ ಎಂದರು. ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಲು, ಗೌರವ ಪಡೆದುಕೊಳ್ಳಲು ಸಾಧ್ಯ ಎಂಬ ನಿಟ್ಟಿನಲ್ಲಿ ದಲಿತರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಜಾಗೃತವಾಗುವ ಜೊತೆಗೆ ಅರ್ಥಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದು ಇಂದಿನ ಅತ್ಯಗತ್ಯ ಎಂದು ರವಿ ಕೃಷ್ಣಾರೆಡ್ಡಿ ಅಭಿಪ್ರಾಯಿಸಿದರು. ಹಾಗೆಯೇ, ದಲಿತ ಸಮುದಾಯಗಳ ಬಗ್ಗೆ ಪ್ರತಿದಿನವೂ ಬೆಳಕು ಚೆಲ್ಲುವಂತಹ ಲೇಖನಗಳನ್ನು ಪ್ರಕಟಿಸುತ್ತ, ಅವರ ಸ್ಥಿತಿಗತಿಗಳ ಬಗ್ಗೆ ಸಮಾಜದ ಜವಾಬ್ದಾರಿಯನ್ನು ನೆನಪಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡಬೇಕೆಂದು ವಿನಂತಿಸಿದರು.

“ತಳ ಸಮುದಾಯಗಳ ಇತಿಹಾಸ ಮತ್ತು ಅಭಿವೃದ್ಧಿ ಹಿನ್ನೆಡೆ ಕಾರಣಗಳು” ಎಂಬ ವಿಷಯದಲ್ಲಿ ಮಾತನಾಡಿದ ಮಂಗಳೂರು ವಿವಿಯ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಉದಯ ಬಾರ್ಕೂರು, ತುಳುನಾಡಿನ ಇತಿಹಾಸವನ್ನು ಅವಲೋಕನ ಮಾಡಿದರೆ ಎಲ್ಲಿಯೂ ತಳವರ್ಗದ ಸಮಸ್ಯೆಗಳ ಬಗ್ಗೆ ಕಂಡುಬರುವುದಿಲ್ಲ, ಜೀತ ಪದ್ಧತಿ, ಸಂಸ್ಕೃತಿಯ ಬಗ್ಗೆ ಉಲ್ಲೇಖವೇ ಇಲ್ಲ, ಇದರಿಂದಾಗಿ ತಳಮಟ್ಟದ ಸಮಸ್ಯೆಗಳು ತಳಮಟ್ಟದಲ್ಲಿಯೇ ಉಳಿದು ಹೋಗಿದೆ, ಇದಕ್ಕೆ ಕಾರಣ ತುಳುನಾಡಿನ ಇತಿಹಾಸವನ್ನು ಬರೆದವರಿಗೆ ದಾಖಲೆಗಳನ್ನು ಕಲೆಹಾಕುವ ಮನಸ್ಥಿತಿ ಇಲ್ಲದಿರುವುದು, ಎಂದು ಬೇಸರಿಸಿದರು. ಆದರೆ ತುಳುನಾಡಿನ ಗುಲಾಮಗಿರಿಯ ಕುರಿತು “ಈಸ್ಟ್ ಇಂಡಿಯಾ ಸ್ಲೇವರಿ” ಎಂಬ ಸಂಪುಟದಲ್ಲಿ ಬಹಳಷ್ಟು ದಾಖಲೆ, ಮಾಹಿತಿಗಳಿವೆ. ಆದರೆ ತುಳುನಾಡಿನ ಇತಿಹಾಸಕಾರರು ಅದನ್ನು ತಿರುಚುವ ಅಥವಾ ಮರೆಮಾಚುವ ಕೆಲಸ ಮಾಡಿದ್ದಾರೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದರು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಸೇರಿದಂತೆ ಸಮಾಜವು ತಳ ಸಮುದಾಯಗಳ ಇತಿಹಾಸವನ್ನು ಅಧ್ಯಯನ ಮಾಡುವ ಜೊತೆಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಕೆಲಸವನ್ನು  ಮಾಡಬೇಕಾಗಿದೆ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ದಲಿತರಿಗೆ ಸಿಗಬೇಕಾದ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ಸೇರಿದಂತೆ ಅವರ ಭೂಮಿಯ ಹಕ್ಕನ್ನು ಒದಗಿಸುವ ಬಗ್ಗೆ ನಾಯಕರು ಸೇರಿದಂತೆ ತಳ ಮಟ್ಟದ ಕಾರ್ಯಕರ್ತರಿಂದ ಪ್ರಾಮಾಣಿಕವಾದ ಕೆಲಸ ಆಗಬೇಕು ಎಂದರು.

ಸಂವಿಧಾನ ಶಿಲ್ಪಿಗೆ 121 ವರ್ಷವಾದರೂ ದಲಿತರಿಗೆ ಭೂಮಿ ದೊರೆತಿಲ್ಲ

-ನವೀನ್ ಸೂರಿಂಜೆ

“ಈ ದೇಶದಲ್ಲಿ ಬೇಕಾದಷ್ಟು ಮಹಾತ್ಮರು ಹುಟ್ಟಿದ್ದಾರೆ. ಹುಟ್ಟುತ್ತಾರೆ. ಆದರೆ ದಲಿತರು ದಲಿತರಾಗಿಯೇ ಸಾಯುತ್ತಾರೆ,” ಎಂದು ಅಂಬೇಡ್ಕರ್ ಹೇಳಿದ್ದರು. ಈ ಮಾತು ಸ್ವತಃ ಅಂಬೇಡ್ಕರ್‌ಗೂ ಅನ್ವಯಿಸುವಂತಹ ಸ್ಥಿತಿ ಈಗಲೂ ಭಾರತದಲ್ಲಿದೆ. ಅಂಬೇಡ್ಕರ್ ಎಂಬ ಮಹಾತ್ಮ ಹುಟ್ಟಿ 121 ವರ್ಷವಾದರೂ ದಲಿತರು ದಲಿತರಾಗಿಯೇ ಸಾಯುತ್ತಿದ್ದಾರೆ.

“ಸ್ವಾತಂತ್ರ್ಯದ ಒತ್ತಡದಲ್ಲಿ ಬ್ರಿಟಿಷರು ತಕ್ಷಣವೇ ಭಾರತವನ್ನು ಬಿಟ್ಟು ಹೋದರೆ ಆ ಸಮಾಜದಲ್ಲಿ ನನ್ನ ಜನಕ್ಕೆ ಭೂಮಿ ಮಾತ್ರ ಅಲ್ಲ ನೀರೂ ಸಿಗುವುದಿಲ್ಲ,” ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ “ವಾಟ್ ಕಾಂಗ್ರೆಸ್ ಆ್ಯಂಡ್ ಗಾಂಧಿ ಹ್ಯಾವ್ ಡನ್ ಟು ದ ಅನ್‍ಟಚೆಬಲ್ಸ್” ಎಂಬ ಪುಸ್ತಕದಲ್ಲಿ ಉಲೇಖಿಸಿದ್ದ ಮಾತು ಅವರ 121 ನೇ ಜನ್ಮದಿನಾಚರಣೆ ಸಂದರ್ಭದಲ್ಲೂ ಅವರದ್ದೇ ಸಂವಿಧಾನವನ್ನು ಒಪ್ಪಿಕೊಂಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇನ್ನೂ ನಿಜವಾಗಿಯೇ ಉಳಿದಿದೆ. ದೇಶದಾದ್ಯಂತ ದಲಿತರು ಈಗಲೂ ಭೂರಹಿತರಾಗಿಯೇ ಇದ್ದರೂ ಲಜ್ಜೆಗೆಟ್ಟ ಸರ್ಕಾರಗಳು ಯಾವುದೇ ರೀತಿಯಲ್ಲೂ ತಪ್ಪಿತಸ್ಥರಲ್ಲದಂತೆ ಅಂಬೇಡ್ಕರ್ ದಿನಾಚರಣೆಯನ್ನು ದೊಡ್ಡದ್ದಾಗಿ ಆಚರಿಸಿದೆ.

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಎಪ್ರಿಲ್ 14 ರಂದು ಅಂಬೇಡ್ಕರ್ ಫೋಟೋ ಇಟ್ಟು ಅಂಬೇಡ್ಕರ್ ಭಜನೆ(!) ಮಾಡಿದ್ದಾರೆ. ಕೆಲವೊಂದು ಕಡೆ ನಾಸ್ತಿಕ ಅಂಬೇಡ್ಕರ್ ಫೋಟೋದ ಹಣೆಗೆ ತಿಲಕವಿಟ್ಟು, ಆರತಿ ಎತ್ತಿ ಪೂಜೆ ಸಲ್ಲಿಸಿದರು. ಅಕ್ಷರಶಃ ರಾಜ್ಯದ ಎಲ್ಲಾ ಕಡೆ ಅಂಬೇಡ್ಕರ್‌ಗೆ ಅವಮಾನ ಮಾಡಲಾಗಿತ್ತು. ಆದರೆ ಗಮನ ಸೆಳೆದಿದ್ದು ಬಂಟ್ವಾಳ ತಾಲೂಕು ಪಂಚಾಯತ್‍ನಲ್ಲಿ ನಡೆದ ಸರ್ಕಾರದ ಅಂಬೇಡ್ಕರ್ ದಿನಾಚರಣೆಯಲ್ಲಿ ದಲಿತರೇ ಅಂಬೇಡ್ಕರ್ ಜಯಂತಿಗೆ ತಡೆ ಒಡ್ಡಿ, ಅಂಬೇಡ್ಕರ್ ಭಾವ ಚಿತ್ರದ ಹಣೆಗೆ ಹಚ್ಚಲಾಗಿದ್ದ ತಿಲಕ ಒರೆಸಿ ಫೋಟೋವನ್ನು ವಶಪಡಿಸಿಕೊಳ್ಳುವ ಮೂಲಕ ಅಂಬೇಡ್ಕರ್‌ಗೆ ಸಣ್ಣದೊಂದು ನಮನ ಸಲ್ಲಿಸಿದ್ದು. ವಶಪಡಿಸಿಕೊಂಡ ಫೋಟೋವನ್ನು ರಸ್ತೆಯ ಮಧ್ಯೆ ಇಟ್ಟು ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಿಜವಾಗಿಯೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ದಲಿತನ ಹುಟ್ಟು ಹಬ್ಬವನ್ನು ದಲಿತರು ಕ್ರಾಂತಿಯುತವಾಗಿ ಆಚರಿಸಿದರು. ದಲಿತರ ಈ ಕೋಪ ವೇದಿಕೆಯಲ್ಲಿದ್ದ ಶಾಸಕರ ಸಹಿತ ಜನಪ್ರತಿನಿಧಿಗಳ ಅಸಹನೆಗೆ ಈಡಾಯಿತು. ಇಷ್ಟಕ್ಕೂ ದಲಿತರಿಗೆ ಕೋಪ ಬಂದಿದ್ದಾದರೂ ಏತಕ್ಕೆ ಎಂದು ಒಂದು ಕ್ಷಣವೂ ಅವರೂ ಯೋಚಿಸಿಲ್ಲ.

ದಲಿತರಿಗೆ ಕೋಪ ಬಂದಿದ್ದಾದರೂ ಏತಕ್ಕೆ?

ಕರ್ನಾಟಕ ಭೂ ಮಂಜೂರಾತಿ ಅಧಿನಿಯಮ 1969 ರಂತೆ ಕೃಷಿ ಭೂಮಿ ರಹಿತ ದಲಿತರಿಗೆ ಐದು ಎಕರೆ ಕೃಷಿ ಭೂಮಿ ನೀಡಬೇಕು. ಆದರೆ ರಾಜ್ಯದಲ್ಲಿ ಈ ಭೂಮಿಯ ಸೌಲಭ್ಯವನ್ನು ಪಡೆಯಬೇಕಾದರೆ ಕುಟುಂಬದ ವಾರ್ಷಿಕ ಆದಾಯ 8000 ರೂಪಾಯಿ ಒಳಗಿರಬೇಕಿದೆ. ಈ ವಾರ್ಷಿಕ ಆದಾಯವನ್ನು ಕನಿಷ್ಠ 25,000 ರೂಗಳಿಗೆ ಏರಿಕೆ ಮಾಡಬೇಕು ಎಂದು ಕಳೆದ ಹಲವಾರು ವರ್ಷಗಳಿಂದ ದಲಿತ ಸಂಘಟನೆಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ದಲಿತರ ಅಸಮಾಧಾನಕ್ಕೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದರೂ ವಾರ್ಷಿಕ ಆದಾಯ ಎಂಟು ಸಾವಿರ ದಾಟುತ್ತದೆ. ತಿಂಗಳಿಗೆ 667 ರೂಪಾಯಿ ಸಂಪಾದನೆ ಮಾಡೋ ಕುಟುಂಬವೊಂದು ಬದುಕಲು ಸಾಧ್ಯವಾ ಎಂಬ ಕನಿಷ್ಠ ಜ್ಞಾನವೂ ಸರ್ಕಾರಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ದಲಿತ ಕುಟುಂಬಕ್ಕೆ ಭೂಮಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ವಾರ್ಷಿಕ ಆದಾಯ ಮಿತಿಯನ್ನು ಕನಿಷ್ಠ 25 ಸಾವಿರ ರೂಪಾಯಿಗಳಿಗಾದರೂ ಏರಿಸಿ ಎಂಬುದು ದಲಿತರ ಅಳಲು. ಅದನ್ನು ಖುದ್ದು ಸದಾನಂದ ಗೌಡರಿಗೇ ಬೇಡಿಕೆ ಸಲ್ಲಿಸಿದ್ದರು. ಆದರೆ ಗೌಡರು ಮಾಡಲಾಗಲ್ಲ ಎಂದು ಕಡತವನ್ನು ಮೂಲೆಗೆಸೆದಿದ್ದರು. ನಂತರ ಬಂಟ್ವಾಳ ಶಾಸಕರಿಗೆ ಈ ಬಗ್ಗೆ ದಲಿತರು ಮನವಿ ಮಾಡಿದ್ದರು.

ಬಂಟ್ವಾಳ ಶಾಸಕ ಬಿ. ರಮಾನಾಥ ರೈಯವರು ಇತ್ತೀಚೆಗೆ ವಿಧಾನಸಭೆಯ ಅಧಿವೇಶನದಲ್ಲಿ ದಲಿತರು ಭೂಮಿ ಪಡೆಯಲು ಈ ವಾರ್ಷಿಕ ಆದಾಯ ಮಿತಿಯನ್ನು ಏರಿಕೆ ಮಾಡಬೇಕು ಎಂದು ಕೇಳಿದ್ದರು. ಸಮಾಜದಲ್ಲಿ ಪ್ರತಿಯೊಬ್ಬ ಭೂಮಿರಹಿತ ದಲಿತ ಕುಟುಂಬಗಳಿಗೂ ಕೃಷಿ ಭೂಮಿ ದೊರೆತರೆ ದಲಿತರು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿಯಲಿದ್ದಾರೆ ಎಂದು ಅವರು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಸದನದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಮಾತ್ರ ಅದು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ದಲಿತರ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಇದು ದಲಿತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್‌ರವರ 121ನೇ ಜನ್ಮ ದಿನವನ್ನು ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಚರಿಸಲು ತಡೆಯೊಡ್ಡಿದ ದಲಿತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾತ್ರವಲ್ಲದೆ ಅಂಬೇಡ್ಕರ್‌ರವರ ಭಾವಚಿತ್ರವನ್ನು ಪಂಚಾಯತ್ ಕಚೇರಿ ವೇದಿಕೆಯಿಂದ ಹೊರತಂದು ರಸ್ತೆಯಲ್ಲಿಟ್ಟು ಜನ್ಮದಿನವನ್ನು ಆಚರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. “ದಲಿತರಿಗೆ ಕೃಷಿ ಭೂಮಿ ದೊರೆತರೆ ದಲಿತರು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮೇಲೇರಲು ಮೆಟ್ಟಿಲು ಸಿಕ್ಕಂತಾಗುತ್ತದೆ” ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಆದರೆ ಅಂಬೇಡ್ಕರ್ ಆಶಯಕ್ಕೇ ವಿರುದ್ಧವಾಗಿರುವ ಮಂದಿ ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ ಎಂದರೂ ದಲಿತರಿಗೆ ಸಿಟ್ಟು ಬಂದಿಲ್ಲವೆಂದರೆ, ಇಲ್ಲಿ ಏನಾಗಿದೆ?.

ಕೋಪ ಬರದೇ ಇರುತ್ತಾ?

1931 ಆಗಸ್ಟ್ 16 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಮಹಾತ್ಮಾ ಗಾಂಧಿಯನ್ನು ಭೇಟಿ ಮಾಡುತ್ತಾರೆ. “ಗಾಂಧೀಜಿ.. ನೀವು ನನಗೆ ಮಾತೃಭೂಮಿ ಇದೆ ಅನ್ನುತ್ತೀರಿ. ನಾನು ಇದನ್ನು ಮಾತೃಭೂಮಿ ಎಂದು ಹೇಗೆ ಒಪ್ಪಿಕೊಳ್ಳಲಿ. ಯಾವ ನೆಲದಲ್ಲಿ ದನಗಳಿಗೆ, ಹಂದಿಗಳಿಗೆ, ಕೋಳಿಗಳಿಗೆ ಸಿಗುವಷ್ಟು ಭೂಮಿ ನನ್ನ ಜನಗಳಿಗೆ ಸಿಗುವುದಿಲ್ಲವೋ ಅಂತಹ ನೆಲವನ್ನು ನನ್ನದೆಂದು ಹೇಗೆ ಕರೆದುಕೊಳ್ಳಲಿ. ಸ್ವಾಭಿಮಾನ ಹೊಂದಿರುವ ಯಾವನೇ ಅಸ್ಪ್ರಶ್ಯ ಈ ದೇಶ ನನ್ನದೆಂದು ಹೇಳಲು ಸಾಧ್ಯವಿಲ್ಲ” ಎನ್ನುತ್ತಾರೆ. ಅಂಬೇಡ್ಕರ್‌ರವರು ಈ ಮಾತಿಗೆ ಇನ್ನೂ ಸಾವು ಬಂದಿಲ್ಲ.

ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ಗೋಶಾಲೆ ಮಾಡುತ್ತೇನೆ ಅಂದಾಗ ಆ ಸ್ವಾಮಿ ಕೇಳದೇನೇ ಸರ್ಕಾರ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಸ್ವಾಮಿ ಹೆಸರಿಗೆ ಬರೆಸಿಕೊಡಲು ಮುಂದಾಗುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಜಮೀನ್ದಾರಿ ಗುತ್ತಿನ ಮನೆತನದ ಮಂದಿ ಕೋಣಗಳನ್ನು ಓಡಿಸೋ ಕಂಬಳ ಕ್ರೀಡೆಗೆ ಅನಾಮತ್ತು ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಡಲಾಗುತ್ತದೆ. ಪಿಲಿಕುಳದಲ್ಲಿ ಖಾಸಗಿ ಭೂಮಿಯನ್ನು ಅಧಿಸೂಚನೆಗೊಳಿಸಿ ಕಂಬಳಕ್ಕಾಗಿ ಗದ್ದೆ ನಿರ್ಮಾಣ ಮಾಡಲಾಗಿದೆ. ಮುಜರಾಯಿ ದೇವಸ್ಥಾನದಲ್ಲಿ ಕೋಳಿ ಅಂಕದ ಕೋಳಿ ಕಟ್ಟಲೆಂದೇ ಸರ್ಕಾರಿ ಸ್ಥಳವನ್ನು ಬಳಕೆ ಮಾಡಲಾಗುತ್ತದೆ. ಆದರೆ ದಲಿತರಿಗೆ ಮಾತ್ರ ಹಂಚಲು ಭೂಮಿಯಿಲ್ಲ. ಹೆಚ್ಚೆಚ್ಚು ಅಂದರೆ ಐದು ಸೆಂಟ್ಸ್‌ಗಳ ಕಾಲನಿಯನ್ನು ಸರ್ಕಾರ ದಯಪಾಲಿಸಬಹುದು. ಗೋಶಾಲೆಗೆ, ಕಂಬಳ ಗದ್ದೆಗೆ ಭೂಮಿ ನೀಡಲು  ಕೃಷಿ ಭೂಮಿಯನ್ನು ಬಳಕೆ ಮಾಡಲಾಗುತ್ತದೆ. ದಲಿತರಿಗೆ ಕೃಷಿ ಭೂಮಿ ನೀಡಬೇಕಾದರೆ ವಾರ್ಷಿಕ ಆದಾಯ ಎಂಟು ಸಾವಿರಕ್ಕಿಂತ ಕಡಿಮೆ ಇರಬೇಕು. ಅಂದರೆ ಸ್ಪಷ್ಟವಾಗಿ “ದಲಿತರಿಗೆ ಕೃಷಿ ಭೂಮಿ ನೀಡುವುದಿಲ್ಲ” ಎಂದರ್ಥ.

ತಪ್ಪಿತಸ್ಥರಿಗೆ ಶಿಕ್ಷೆ ಏನು?

ಯಾವಾನೋ ಒಬ್ಬ ಮುಸಲ್ಮಾನ ರಾಜ, ಬಾಬರನೋ ಇನ್ನಾರೋ ಮಾಡಿದ ತಪ್ಪಿಗೆ ದೇಶದ ಮುಸ್ಲಿಮರಿಗೆ ಇಂದಿಗೂ ಶಿಕ್ಷೆ ಕೊಡುವ ಕ್ರಿಯೆಗೆ ವ್ಯವಸ್ಥಿತಿ ಕಾರ್ಯತಂತ್ರಗಳು ನಡೆಯುತ್ತದೆ. ಯಾರೋ ನಾಲ್ಕು ಮಂದಿ ಭಯೋತ್ಪಾದಕರು ಮುಸ್ಲೀಮರಾಗಿದ್ದರು ಎಂಬ ಕಾರಣಕ್ಕಾಗಿ ಇಡೀ ಮುಸ್ಲಿಂ ಸಮುದಾಯವನ್ನೇ ಅದಕ್ಕೆ ಹೊಣೆ ಮಾಡಲಾಗುತ್ತದೆ. ಯಾವಾನೋ ಒಬ್ಬ ಮುಸಲ್ಮಾನ ಯಾವುದೋ ಕಾಲದಲ್ಲಿ ದೇವಸ್ಥಾನವನ್ನು ಮಸೀದಿಯಾಗಿಸಿದ ಎಂದು ಈಗಲೂ ಮುಸ್ಲಿಮರ ರಕ್ತಪಾತ ಮಾಡಲಾಗುತ್ತದೆ. ಅದರೆ ಈ ದೇಶದ 60 ಕೋಟಿ ಶೂದ್ರ ಸಮುದಾಯಕ್ಕೆ ಶತಶತಮಾನಗಳಿಗೆ ಅಕ್ಷರ ವಂಚಿಸಿದ, ಮೂವತ್ತು ಕೋಟಿ ದಲಿತ ಸಮುದಾಯಕ್ಕೆ ಭೂಮಿ ಮತ್ತು ಅಕ್ಷರ ಎರಡನ್ನೂ ವಂಚಿಸಿದ ಒಂದು ಧಾರ್ಮಿಕ ವ್ಯವಸ್ಥೆಯನ್ನು ಪ್ರತಿಪಾದಿಸೋ ಜನರಿಗೆ ಯಾವ ಶಿಕ್ಷೆ ಕೊಡಲು ಸಾಧ್ಯವಿದೆ? ಅವರಿಗೆ ಶಿಕ್ಷೆ ಕೊಡಬೇಕು ಎಂಬುದು ಕಾಳಜಿಯೂ ಅಲ್ಲ. ಉದ್ದೇಶವೂ ಅಲ್ಲ. ಆದರೆ ಈ ದೇಶದಲ್ಲಿ ಒಂದು ಆತ್ಮಾವಲೋಕನ ಆಗಬೇಕಿದೆ. ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಪ್ರಾಯಶ್ಚಿತ್ತ ಪಟ್ಟುಕೊಂಡು ತಿದ್ದುವಂತಹ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. ಭೂರಹಿತರಿಗೆ ಭೂಮಿ ನೀಡುವ, ಶಿಕ್ಷಣರಹಿತರಿಗೆ ಶಿಕ್ಷಣ ನೀಡುವ ಬಗ್ಗೆ ವ್ಯವಸ್ಥೆಗಳು ಸಕ್ರಿಯಗೊಳ್ಳಬೇಕಿದೆ. ಶೇಕಾಡ 96 ರಷ್ಟು ಪರಿಶಿಷ್ಟ ಜಾತಿಯವರಿಗೆ ಈ ರಾಜ್ಯದಲ್ಲಿ ಕೃಷಿ ಭೂಮಿ ಇಲ್ಲ. ದಲಿತರಿಗೆ ಕೃಷಿ ಭೂಮಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಯಲ್ಲಿ ಸೇರಿಸುವ ಕೆಲಸ ಮಾಡಬೇಕಿದೆ.

ಭೂಮಿಯಿಂದ ಯಾಕೆ ವಂಚಿಸಲಾಯಿತು? ವಂಚಿಸಲಾಗುತ್ತಿದೆ?

ಶತಶತಮಾನಗಳಿಂದಲೂ ದಲಿತರನ್ನು ಭೂಮಿಯಿಂದ ವಂಚಿಸಲಾಗುತ್ತಿದೆ. ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದು ಇಷ್ಟು ಕಾಲ ಕಳೆದರೂ ಇನ್ನೂ ದಲಿತರಿಗೆ ಭೂಮಿ ದೊರೆತಿಲ್ಲ. ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿ ಬಂದಿದ್ದರಿಂದ ಕೆಲವೊಂದು ಜನಾಂಗದ ಶೂದ್ರರು ಭೂಮಿ ಪಡೆದುಕೊಂಡರು. ಆ ಕಾಯ್ದೆಯಿಂದ ಭೂಮಿ ಪಡೆದುಕೊಂಡ ದಲಿತರೆಷ್ಟು ಎಂದು ಕೇಳಿದರೇ, ದಲಿತರು ಕನಿಷ್ಠ ಉಳುವವರೂ ಆಗಿರಲಿಲ್ಲ. ಭೂಮಿ ದೊರೆಯುವ ಸಾಧ್ಯತೆಯೇ ಇರಲಿಲ್ಲ. ಈ ದೇಶದ ಮೂಲ ನಿವಾಸಿಗಳಾದ ದಲಿತರನ್ನು ಭೂಮಿಯಿಂದ ವಂಚಿಸುವುದರ ಹಿಂದೆ ಅಸ್ಪ್ರಶ್ಯತೆಯನ್ನು ಜಾರಿಯಲ್ಲಿಡುವ ಗುಪ್ತ ಅಜೆಂಡಾವಿದೆ. ಒಂದಂತೂ ಸ್ಪಷ್ಟ. ಅಸ್ಪ್ರಶ್ಯತೆ ಮತ್ತು ಜಾತೀಯತೆ ಎನ್ನುವುದು ಬ್ರಾಹ್ಮಣಿಕೆಯ ಜೀವಾಳ. ಅದಿಲ್ಲದೆ ಬ್ರಾಹ್ಮಣ/ವೈದಿಕ ಧರ್ಮ ಬದುಕುವುದಿಲ್ಲ. 30 ಕೋಟಿ ಇರುವ ದಲಿತ ಸಮುದಾಯವನ್ನು ಅಕ್ಷರದಿಂದ ಮತ್ತು ಭೂಮಿಯಿಂದ ವಂಚಿಸಿದಂತಹ ಪಾಪವನ್ನು ವೈದಿಕ ಆಚಾರ-ವಿಚಾರಗಳು ಮಾಡಿವೆ. ಆ ಮೂಲಕ ಅಸ್ಪ್ರಶ್ಯತೆಯನ್ನು ಜಾರಿಯಲ್ಲಿಡಲಾಗುತ್ತದೆ. ಈ ದೇಶದಲ್ಲಿ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಸಂಸ್ಕೃತಿ ಹೆಸರಿನಲ್ಲಿ , ಪರಂಪರೆ ಹೆಸರಿನಲ್ಲಿ ಅಸ್ಪ್ರಶ್ಯರ ಮೇಲೆ ನಿರಂತರ ದೌರ್ಜನ್ಯಗಳು, ದಬ್ಬಾಳಿಕೆಗಳು, ಆತ್ಯಾಚಾರಗಳನ್ನು ನಡೆಸಲಾಗಿದೆ. ಅದಕ್ಕೆ ಅಂಬೇಡ್ಕರ್ ಹೇಳುತ್ತಾರೆ. “ಅಕ್ಷರ ಮತ್ತು ಭೂಮಿಯನ್ನು ನನ್ನ ಜನಗಳಿಂದ ವಂಚಿಸಿದ ಧರ್ಮವು ಈ ನೆಲವನ್ನು ಅಸ್ಪ್ರಶ್ಯನೊಬ್ಬ ತನ್ನದೆಂದು ಹೇಳಿಕೊಳ್ಳಲು ಸಾದ್ಯವಿಲ್ಲದಂತೆ ಮಾಡಿದೆ. ಒಂದು ವೇಳೆ ನನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನನ್ನ ಕಾರ್ಯಚಟುವಟಿಕೆಯಿಂದ ಈ ದೇಶಕ್ಕೆ ತೊಂದರೆಯಾದರೆ ಅದಕ್ಕೆ ನೀವು ಕಾರಣರಾಗುತ್ತೀರಿ. ನಾನಲ್ಲ. ಒಂದು ವೇಳೆ ನನ್ನ ಕಾರ್ಯಚಟುವಟಿಕೆಯಿಂದ ಈ ದೇಶಕ್ಕೆ ಒಳ್ಳೆಯದಾದರೆ, ಅದು ನನ್ನ ಅಂತಃಸಾಕ್ಷಿಯಿಂದಲೇ ಹೊರತು ಬೇರೇನೂ ಅಲ್ಲ. ನಿಮ್ಮ ನೆಲದ ಮೇಲಿರುವ ಅಥವಾ ಧರ್ಮದ ಮೇಲಿರುವ ಪ್ರೀತಿಯಿಂದ ಅಲ್ಲ” ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಅಂಬೇಡ್ಕರ್ ಜಯಂತಿಗೆ ಬಂಟ್ವಾಳದಲ್ಲಿ ದಲಿತರು ತಡೆಯೊಡ್ಡಿದ್ದೇ ನಿಜವಾದ ಅಂಬೇಡ್ಕರ್ ಜಯಂತಿ ಎಂದು ಕಂಡಿದೆ. ವೇದಿಕೆಯಲ್ಲಿ ಸರ್ವಾಲಂಕೃತಗೊಂಡಿದ್ದ ಅಂಬೇಡ್ಕರ್ ಫೋಟೋವನ್ನು ರಸ್ತೆಗೆ ತಂದು ಅಂಬೇಡ್ಕರ್ ದಿನಾಚರಣೆ ಮಾಡಿದ್ದು ಅರ್ಥಪೂರ್ಣವಾಗಿಯೇ ಕಾಣುತ್ತದೆ. ಎಲ್ಲಾ ದಲಿತರಿಗೆ ಅವರ ಹಕ್ಕಿನ ಕೃಷಿಭೂಮಿ ದೊರೆತಾಗ ಮಾತ್ರ ಅಂಬೇಡ್ಕರ್ ಜಯಂತಿಗೊಂದು ಅರ್ಥ ಬರುತ್ತದೆ. ಅತ್ತ ಕಡೆ ಧರ್ಮದಲ್ಲೂ ಇಲ್ಲ. ಇತ್ತ ಕಡೆ ಬದುಕಲು ಕನಿಷ್ಠ ಭೂಮಿಯೂ ಇಲ್ಲ ಎಂಬ ಪಾಡು ದಲಿತರದ್ದು. ಹಿಂದೂ ಧರ್ಮ ಎಂದರೆ ಅಲ್ಲಿ ದಲಿತರು ಎಂಜಲು ತಿನ್ನುತ್ತಿರಬೇಕು. ಅಂಬೇಡ್ಕರ್ ಮಾಡಿದಂತೆ ಬೌದ್ಧ ಧರ್ಮಕ್ಕೆ ಹೋದರೆ ಅಲ್ಲಿದ್ದವರು ಈಗ ನವ ಬೌದ್ಧರಾಗಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಹೋದರೆ ಅಲ್ಲಿ ದಲಿತರು ದಲಿತ ಕ್ರಿಶ್ಚಿಯನ್ನರಾಗುತ್ತಾರೆ! ದಲಿತರು ಯಾವುದನ್ನು ತನ್ನದೆಂದು ಅಪ್ಪಿಕೊಳ್ಳಲಿ? ಕ್ರಿಶ್ಚಿಯಾನಿಟಿಯಲ್ಲಿ ಜಾತಿ ಇಲ್ಲ. ಆದರೆ ದಲಿತ ಕ್ರಿಶ್ಚಿಯನ್ ಎಲ್ಲಿಂದ ಆಯಿತು? ಕ್ರಿಶ್ಚಿಯನ್ನರಲ್ಲಿ ದಲಿತ ಕ್ರಿಶ್ಚಿಯನ್ನರು ಇರುವುದೇ ಆದರೆ ಬ್ರಾಹ್ಮಣ ಕ್ರಿಶ್ಚಿಯನ್ ಎಂಬ ಮತ್ತೊಂದು ಜಾತಿಯೂ ಇರಬೇಕಲ್ಲವೇ? ಅದೆಲ್ಲಾ ಸಾಯಲಿ, ಧರ್ಮಗಳ ಪರಂಪರೆಯೇ ಅಂತದ್ದು, ನಮ್ಮದೇ ಹಕ್ಕಿನ ಕೃಷಿಭೂಮಿ ಕೊಡಿ, ಎಂದಷ್ಟೇ ದಲಿತರು ಕೇಳುತ್ತಿದ್ದಾರೆ.

ಪಗೋ ಎಂಬ ನಿಷ್ಠ ಪತ್ರಕರ್ತರೂ, ಪ್ರಾಯೋಜಕತ್ವದ ಪ್ರಶಸ್ತಿಯೂ

-ನವೀನ್ ಸೂರಿಂಜೆ

ಕರಾವಳಿಯ ಹೆಮ್ಮೆಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣರವರ ಹೆಸರಲ್ಲಿ 2004 ರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ”ಪ ಗೋ” ಪ್ರಶಸ್ತಿ ನೀಡುತ್ತಿದೆ. ಗ್ರಾಮೀಣ ವರದಿಗಾರಿಕೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದು ಹೆಮ್ಮೆಯ ವಿಷಯವಾದರೂ ಪ್ರಶಸ್ತಿ ನೀಡಿಕೆಯಲ್ಲಿ “ಪ ಗೋ” ಅವರನ್ನು ಅವಮಾನಿಸಲಾಗುತ್ತಿದೆ.

ಪತ್ರಿಕಾಗೋಷ್ಠಿ ನಡೆಸುವೆವರು ನೀಡುವ ಕನಿಷ್ಠ ಚಹಾವನ್ನೂ ಕುಡಿಯದ ಪದ್ಯಾಣ ಗೋಪಾಲಕೃಷ್ಣರ ಹೆಸರಲ್ಲಿ ನೀಡುವ ಪ್ರಶಸ್ತಿಯ ಮೊತ್ತವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರಿಗೆ ದುಂಬಾಲು ಬಿದ್ದು ಪಡೆದುಕೊಳ್ಳಲಾಗುತ್ತಿದೆ. ಪತ್ರಕರ್ತರು ಗಿಫ್ಟ್ ತೆಗೆದುಕೊಳ್ಳುವುದನ್ನು ಕಟುವಾಗಿ ವಿರೋಧಿಸುತ್ತಿದ್ದ ಪತ್ರಕರ್ತ ಪ. ಗೋಪಾಲಕೃಷ್ಣರ ಹೆಸರಲ್ಲಿ ನೀಡುವ ಪ್ರಶಸ್ತಿಗೆ ಪ್ರಾಯೋಜಕರಿದ್ದಾರೆ ಎಂದರೆ ಪತ್ರಕರ್ತ “ಪ ಗೋ” ಅವರಿಗೆ ಮಾಡುವ ಅವಮಾನವಲ್ಲವೆ?

ಪದ್ಯಾಣ ಗೋಪಾಲಕೃಷ್ಣರವರು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಗಡಿ ಭಾಗವಾಗಿರುವ ಅಡ್ಯನಡ್ಕದಲ್ಲಿ 1928ರಲ್ಲಿ ಜನಿಸಿದರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ವಿಶ್ವಕರ್ನಾಟಕ ಎಂಬ ಪತ್ರಿಕೆಯ ಮೂಲಕ 1956ರಲ್ಲಿ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸಿದರು. ತಾನು ಪತ್ರಿಕಾ ಕ್ಷೇತ್ರ ಪ್ರವೇಶಿಸಿದಂದಿನಿಂದಲೂ ಪ ಗೋಪಾಲಕೃಷ್ಣರು ಯಾವ ರೀತಿಯಲ್ಲೂ ತಾವು ನಂಬಿದ ಸಿದ್ದಾಂತಗಳನ್ನು ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಟ್ಟವರಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಪತ್ರಿಕಾ ಸ್ನೇಹಿತರ ಒಂದು ದೊಡ್ಡ ಬಳಗವನ್ನೇ ಅವರು ಹೊಂದಿದ್ದರಂತೆ. ವಿಶ್ವ ಕರ್ನಾಟಕ ದಿನ ಪತ್ರಿಕೆಯ ನಂತರ ತಾಯಿ ನಾಡು, ಕಾಂಗ್ರೇಸ್ ಸಂದೇಶ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ “ಪ ಗೋ” ರವರು ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ನಂತರ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ಶಕ್ತಿ ಎಂಬ ಪತ್ರಿಕೆಯಲ್ಲೂ ಉಪಸಂಪಾದಕ ಮತ್ತು ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.

1959 ಸುಮಾರಿಗೆ ಬೆಂಗಳೂರು ಬಿಟ್ಟು ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಪ ಗೋಪಾಲಕೃಷ್ಣರು ನವ ಭಾರತ ಎಂಬ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. ನಂತರ ಕನ್ನಡವಾಣಿ ಎಂಬ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಎಲ್ಲರಿಗೂ ಗೊತ್ತಿರುವಂತೆ ಅಂದಿನ ಪತ್ರಿಕೋಧ್ಯಮ ಕ್ಷೇತ್ರಕ್ಕೂ ಇಂದಿನ ಪತ್ರಿಕೋಧ್ಯಮ ಕ್ಷೇತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಲ್ಯಾಪ್‌ಟಾಪ್, ಫ್ಲ್ಯಾಟುಗಳನ್ನೇ ಪತ್ರಕರ್ತರಿಗೆ ಗಿಫ್ಟ್ ಆಗಿ ನೀಡುತ್ತಿದ್ದರೆ, ಹಿಂದೆಲ್ಲಾ ಪೆನ್ನು ಮತ್ತು ಪೇಪರ್ ಪ್ಯಾಡನ್ನು ಗಿಫ್ಟ್ ಆಗಿ ನೀಡಲಾಗುತ್ತಿತ್ತು. ಪೆನ್ನು ಮತ್ತು ಪೇಪರ್ ಪ್ಯಾಡನ್ನು ಗಿಫ್ಟ್ ಆಗಿ ನೀಡುತ್ತಿದ್ದ ಪತ್ರಿಕಾಗೋಷ್ಠಿ ಎಂದರೆ ಅದೊಂದು ಐಶಾರಾಮಿ ಪತ್ರಿಕಾಗೋಷ್ಠಿ ಎಂದೇ ಅಂದಿನ ಕಾಲದಲ್ಲಿ ಬಿಂಬಿತವಾಗುತ್ತಿತ್ತು.

ಪ. ಗೋಪಾಲಕೃಷ್ಣರು ಪತ್ರಿಕಾಗೋಷ್ಠಿಯಲ್ಲಿ ನೀಡುವ ಪೆನ್ನು ಪೇಪರಿನ ಗಿಫ್ಟು ಕೂಡಾ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಪ್ರೆಸ್ ಮೀಟ್ ಪ್ರಾಯೋಜಕರು ನೀಡುವ ಚಹಾ ತಿಂಡಿಯನ್ನೂ ಮುಟ್ಟುತ್ತಿರಲಿಲ್ಲವಂತೆ. ಪ. ಗೋಪಾಲಕೃಷ್ಣರು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಸಾಲಿನಲ್ಲಿ ಕುಳಿತಿದ್ದಾರೆ ಎಂದರೆ ರಾಜಕಾರಣಿಗಳು ತಂದಿದ್ದ ಗಿಫ್ಟನ್ನು ಮರಳಿ ಕೊಂಡೊಯ್ದ ದಿನಗಳೂ ಇದೆಯೆಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ. ಅಂತಹ “ಪ ಗೋ” ಹೆಸರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 2004 ರಿಂದ ಪ ಗೋ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಪ್ರಾಯೋಜಕರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು. ಪ್ರೆಸ್ ಮೀಟ್ ಪ್ರಾಯೋಜಕರಿಂದ ಕನಿಷ್ಠ ಚಹಾವನ್ನು ಪಡೆಯದ ಪ ಗೋಪಾಲ ಕೃಷ್ಣರ ಹೆಸರಲ್ಲಿ ನೀಡುವ “ಪ ಗೋ” ಪ್ರಶಸ್ತಿಗೆ ಖಾಸಗಿ ಪ್ರಾಯೋಜಕತ್ವ ಪಡೆದಿರುವುದು ವಿಪರ್ಯಾಸ.

ಪ.ಗೋ ಪ್ರಶಸ್ತಿಯನ್ನು ನೀಡಲು ಪತ್ರಕರ್ತರ ಸಂಘ 2004 ರಿಂದ ಆರಂಭ ಮಾಡಿತ್ತು. ಆಗ ಪ್ರಶಸ್ತಿ ಪ್ರಮಾಣ ಪತ್ರದ ಜೊತೆ 2,500 ರೂಪಾಯಿ ಪ್ರಶಸ್ತಿ ಮೊತ್ತವನ್ನು ನೀಡಲಾಗುತ್ತಿತ್ತು. ಪ್ರಾರಂಭದಿಂದಲೂ ಪ್ರಶಸ್ತಿ ಮೊತ್ತದ ಪ್ರಾಯೋಜಕರು ವೀರೇಂದ್ರ ಹೆಗ್ಗಡೆಯವರೇ ಆಗಿದ್ದರು. 2009 ರಿಂದ ಪ್ರಶಸ್ತಿ ಮೊತ್ತ 5000 ರೂಪಾಯಿಗೆ ಏರಿಕೆಯಾಗಿದೆ. ವಿಪರ್ಯಾಸ ಎಂದರೆ 2008 ಆಗಸ್ಟ್ 16 ರಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನಿವಾಸಕ್ಕೆ ತೆರಳಿ ಪ್ರಶಸ್ತಿ ಮೊತ್ತವನ್ನು ಏರಿಕೆ ಮಾಡುವಂತೆ ಬಿನ್ನವಿಸಿದ್ದು ! ಪತ್ರಕರ್ತರ ಮನವಿಯನ್ನು ಸ್ವೀಕರಿಸಿದ ವೀರೇಂದ್ರ ಹೆಗ್ಗಡೆಯವರು ಅದೇ ವರ್ಷದಿಂದಲೇ ಪ್ರಶಸ್ತಿ ಮೊತ್ತವನ್ನು ಐದು ಸಾವಿರಕ್ಕೆ ಏರಿಸೋ ಭರವಸೆ ನೀಡಿದ್ದರು. ಅದನ್ನು ಅಂದಿನ ಪದಾಧಿಕಾರಿಗಳ ಸಮಿತಿ ಫೋಟೋ ಸಮೇತ ಪತ್ರಿಕಾ ಪ್ರಕಟಣೆ ನೀಡಿ, ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿತ್ತು.

ಅಕ್ಟೋಬರ್ 06 1976 ರಂದು ಸ್ಥಾಪನೆಗೊಂಡ ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿದ್ದ ಪ ಗೋ ರವರ ಹೆಸರಲ್ಲಿ ನೀಡಲಾಗುತ್ತಿರುವ “ಗ್ರಾಮೀಣ ವರದಿಗಾರಿಕೆಯ ಪ್ರಶಸ್ತಿ” ಮೊತ್ತಕ್ಕೆ ಪತ್ರಕರ್ತರ ಸಂಘಕ್ಕೆ ಪ್ರಾಯೋಜಕರನ್ನು ಹುಡುಕುವ ಅನಿವಾರ್ಯತೆಯೇನೂ ಇರಲಿಲ್ಲ. ಪತ್ರಕರ್ತರ ಸಂಘದ ಅಡಿಯಲ್ಲೇ ಇರುವ ಪ್ರೆಸ್‌ಕ್ಲಬ್ಬಿನಲ್ಲಿ ಬೇಕಾದಷ್ಟು ದುಡ್ಡಿದೆ. 1976 ರಂದು ಪ್ರಾರಂಭವಾದ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಈಗ ಅತ್ಯಂತ ಶ್ರೀಮಂತ ಸಂಘಗಳಲ್ಲಿ ಒಂದು. ಸಂಘದ ಕಟ್ಟಡಕ್ಕೆ ಅಪಾರ ರಾಜಕಾರಣಿಗಳು ಲಕ್ಷ ಲಕ್ಷವನ್ನೇ ಸುರಿದಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಜನಾರ್ದನ ಪೂಜಾರಿಯವರಂತೂ ಜಿಲ್ಲೆಯಲ್ಲಿ ಬೇರೆ ಯಾವ ಸಮಸ್ಯೆಯೂ ಇಲ್ಲದೆ ಎಂಪಿ ಅನುದಾನ ಕೊಳೆಯುತ್ತಿದೆ ಎಂದು ಭಾಸವಾಗುವ ರೀತಿಯಲ್ಲಿ ಅನುದಾನ ನೀಡಿದ್ದಾರೆ. ಶಾಸಕರು, ಸಂಸದರು, ಮುಖ್ಯಮಂತ್ರಿಗಳು ಸಂಘದ ಕಟ್ಟಡಕ್ಕೆ ನೀಡಿದ ಅನುದಾನದ ಲೆಕ್ಕ ನೋಡಿದರೆ ತಲೆ ತಿರುಗಬಹುದು. ಅದೆಲ್ಲಾ ಇರಲಿ. ಇಲ್ಲಿರುವ ಪ್ರೆಸ್‌ಕ್ಲಬ್ಬಿನಲ್ಲಿ ದಿನಕ್ಕೆ ಐದು ಪ್ರೆಸ್ ಮೀಟ್ ನಡೆಸಲು ಅವಕಾಶ ಇದೆ. ಏನಿಲ್ಲವೆಂದರೂ ದಿನಾ ಸರಾಸರಿ ಮೂರರಿಂದ ನಾಲ್ಕು ಪ್ರೆಸ್ ಮೀಟ್‌ಗೆ ಕೊರತೆ ಇಲ್ಲ. ನಾಗಮಂಡಲ, ಬ್ರಹ್ಮಕಲಶ, ಕೋಲ, ನೇಮದಿಂದ ಹಿಡಿದು ಪ್ರತಿಭಟನೆಗಳವರೆಗೆ ಮಂಗಳೂರಿನಲ್ಲಿ ಕಾರ್ಯಕ್ರಮಗಳಿಗೆ ಕೊರತೆ ಇಲ್ಲದಿರುವಾಗ ಪತ್ರಿಕಾಗೋಷ್ಠಿಗೆ ಕೊರತೆ ಬರಲು ಸಾಧ್ಯವಿಲ್ಲ. ನಾಗಮಂಡಲವಿರಲಿ, ಬ್ರಹ್ಮಕಲಶವಿರಲಿ, ದಲಿತ ಮಲದ ಗುಂಡಿಗೆ ಬಿದ್ದ ಬಗೆಗಿನ ಪತ್ರಿಕಾಗೋಷ್ಠಿಯೇ ಇರಲಿ, ಒಂದು ಸಾವಿರ ರೂಪಾಯಿಯನ್ನು ಪ್ರೆಸ್‌ಕ್ಲಬ್ಬಿಗೆ ನೀಡಿ ರಶೀದಿ ಮಾಡಿಕೊಳ್ಳಲೇ ಬೇಕು. ಪ್ರತೀ ಪ್ರೆಸ್ ಮೀಟ್‌ಗೆ ಒಂದು ಸಾವಿರ ರೂಪಾಯಿಯಂತೆ ಪ್ರೆಸ್‌ಕ್ಲಬ್ಬಿನ ತಿಂಗಳ-ವಾರ್ಷಿಕ ಆದಾಯ ಎಷ್ಟು ಎಂಬುದನ್ನು ಲೆಕ್ಕ ಹಾಕಿ. ಇಷ್ಟೊಂದು ಆದಾಯ ಇರುವ ಪತ್ರಕರ್ತರ ಸಂಘ “ಪ ಗೋ” ಪ್ರಶಸ್ತಿಯ ಐದು ಸಾವಿರಕ್ಕೆ ಪ್ರಾಯೋಜಕರಿಗೆ ದಂಬಾಲು ಬಿದ್ದು ಪ ಗೋ ರವರಿಗೆ ಅವಮಾನ ಮಾಡುವುದು ಎಷ್ಟು ಸರಿ ಎಂಬುದನ್ನು ಕಾರ್ಯನಿರತ ಪತ್ರಕರ್ತರ ಸಂಘ ಆಲೋಚಿಸಬೇಕು.

ನಾವೆಲ್ಲಾ ಪ ಗೋ ರವರನ್ನು ಆದರ್ಶವಾಗಿರಿಸಿಕೊಂಡು ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಇರಲು ಬಯಸುವವರು. ರಾತ್ರಿ ಗುಂಡು ತುಂಡು ಪಾರ್ಟಿ, ಬೆಲೆಬಾಳುವ ಗಿಫ್ಟ್, ಗಿಫ್ಟ್ ಓಚರ್‌ಗಳ ಭರಾಟೆಯಲ್ಲಿ ಪತ್ರಕರ್ತರು ಪತ್ರಿಕಾ ಕ್ಷೇತ್ರವನ್ನು ಹಾಳುಗೆಡವುತ್ತಿದ್ದಾರೆ. ಪ ಗೋ ಪ್ರಶಸ್ತಿಯನ್ನು ಕೊಡುವಂತಹ ಸಂಧರ್ಭದಲ್ಲಿ ಈಗಿನ ಪತ್ರಕರ್ತರಿಗೆ ಪ ಗೋ ಆದರ್ಶಗಳ ಬಗ್ಗೆ ಹೇಳಬೇಕಿದೆ. ದೊಡ್ಡ ದೊಡ್ಡ ಆದರ್ಶಗಳನ್ನು ಅಲ್ಲದಿದ್ದರೂ ಕನಿಷ್ಠ ಗಿಫ್ಟ್, ಗಿಫ್ಟ್ ಓಚರ್, ಗುಂಡು ತುಂಡು ಪಾರ್ಟಿಗಳನ್ನು ತಿರಸ್ಕರಿಸುವಂತೆ ಕಾರ್ಯನಿರತ ಪತ್ರಕರ್ತ ಸಂಘ ಹೇಳಬೇಕಿದೆ. ಆದರೆ ಆ ರೀತಿ ಹೇಳುವಾಗ ನಮಗೂ ನೈತಿಕತೆ ಬೇಕಾಗುತ್ತದೆ. ಆ ಹಿನ್ನಲೆಯಲ್ಲಿ ಮುಂದಿನ ವರ್ಷದಿಂದ “ಪ ಗೋ ಪ್ರಶಸ್ತಿ”ಗೆ ಪ್ರಾಯೋಜಕತ್ವ ಪಡೆಯದೆ ಪ್ರಶಸ್ತಿ ವಿತರಿಸಬೇಕು. ಇಲ್ಲದೇ ಇದ್ದಲ್ಲಿ ಉತ್ತಮ ಪತ್ರಕರ್ತರು ಅಂತಹ ಪ್ರಶಸ್ತಿಯನ್ನು ತಿರಸ್ಕರಿಸಬೇಕು. ಆಗ ನಿಜವಾಗಿಯೂ ಪ ಗೋ ಪ್ರಶಸ್ತಿಗೆ ಬೆಲೆ ಬರುತ್ತದೆ ಎಂಬುದು ನಮ್ಮಂತಹ ಕಿರಿಯ ಪತ್ರಕರ್ತರ ಮನವಿ.

ಪದ್ಯಾಣ ಗೋಪಾಲಕೃಷ್ಣ ವಿವರ

ಹುಟ್ಟೂರು: ದ. ಕ. ಜಿಲ್ಲೆ ಕಾಸರಗೋಡು ಗಡಿ ಅಡ್ಯನಡ್ಕ
ಹುಟ್ಟಿದ ದಿನ: 1928
ಬೆಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದು: 1956
ಮಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದು: 1959
ಕರ್ತವ್ಯ ನಿರ್ವಹಿಸಿದ ಪತ್ರಿಕೆಗಳು: ವಿಶ್ವ ಕರ್ನಾಟಕ , ತಾಯಿ ನಾಡು, ಕಾಂಗ್ರೇಸ್ ಸಂದೇಶ, ಸಂಯುಕ್ತ ಕರ್ನಾಟಕ, ಶಕ್ತಿ, ನವಭಾರತ, ಕನ್ನಡ ವಾಣಿ, ಇಂಡಿಯನ್ ಎಕ್ಸ್ಪ್ರೆಸ್, ಕನ್ನಡ ಪ್ರಭ, ಟೈಮ್ಸ್ ಆಫ್ ಡೆಕ್ಕನ್, ಟೈಮ್ಸ್ ಆಫ್ ಇಂಡಿಯಾ.
ಸ್ವಂತ ಪತ್ರಿಕೆ: 1963-1964 – ವಾರ್ತಾಲೋಕ ಪತ್ರಿಕೆ
ನಿವೃತ್ತಿ: 1994
ಕಾದಂಬರಿಗಳು: ಬೆಳ್ಳಿ ಸೆರಗು, ಗನ್ ಬೋ ಸ್ಟ್ರೀಟ್, ಓ ಸಿ 67
ನಿಧನ: 1997

ಕೇಳುವವರೇ ಇಲ್ಲದ ಕರಾವಳಿ

ನವೀನ್ ಸೂರಿಂಜೆ

ಕರಾವಳಿಯ ಎರಡು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳೇ ಇಲ್ಲ. ಮಂಗಳೂರಿನವರೇ ಆಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ರಾಜಕೀಯ ಗೊಂದಲಗಳ ಹಿನ್ನಲೆಯಲ್ಲಿ ಜನರ ಪಾಲಿಗೆ ಸ್ವಿಚ್ಡ್ ಆಫ್ ಆಗಿದ್ದಾರೆ. ಕೇಳುವವರೇ ಇಲ್ಲದ ಕರಾವಳಿಯಲ್ಲಿ ಇದೀಗ ಜಿಲ್ಲಾಡಳಿತ ಆಡಿದ್ದೇ ಆಟ. ಇದೇ ಸಂದರ್ಭವನ್ನು ಬಳಸಿಕೊಂಡ ಮಂಗಳೂರು ವಿಶೇಷ ಆರ್ಥಿಕ ವಲಯದಂತಹ ಸಂಸ್ಥೆಗಳು ಜಿಲ್ಲಾಡಳಿತವನ್ನು ಬಳಸಿಕೊಂಡು ಜನರ ಪ್ರತಿಭಟನೆಯನ್ನು ಹತ್ತಿಕ್ಕಿ ಬಲವಂತವಾಗಿ ಕಾಮಗಾರಿ ಆರಂಭಿಸುತ್ತಿವೆ. ಮೀನುಗಾರ ಸಾರ್ವಜನಿಕ ಆಲಿಕಾ ಸಭೆ ನಡೆಸದೆ, ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿಯನ್ನೂ ಪಡೆಯದೆ, ಮೀನುಗಾರರ ಆಕ್ಷೇಪಗಳಿಗೆ ಉತ್ತರ ನೀಡದೆ ಕಡಲಿಗೆ ವಿಷ ಉಣಿಸುವ ಪೈಪ್‍ಲೈನ್ ಅಳವಡಿಸೋ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಯಶಸ್ವಿಯಾಗಿದ್ದೇ ಆದಲ್ಲಿ ಕರಾವಳಿಯ ಸಾವಿರಾರು ಮೀನುಗಾರರ ಕುಲಕಸುಬಿಗೆ ಬರೆ ಬೀಳಲಿದ್ದು, ಕರಾವಳಿ ಕಡಲಿನ ಜೀವಚರಗಳು ನಶಿಸಿ ಕಡಲು ಬಂಜೆಯಾಗಲಿದೆ.

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಮಂಗಳೂರಿನ ಬಜಪೆ, ಕಳವಾರು, ಪೆರ್ಮುದೆ ಗ್ರಾಮಗಳ 1800 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಮಾಡಲಾಗಿದ್ದು, ಅದರಲ್ಲಿ ಒಎನ್‍ಜಿಸಿ ಸೇರಿದಂತೆ ಎರಡು ಮೂರು ಪೆಟ್ರೋಲಿಯಂ ಸಂಬಂಧಿ ಕಂಪನಿಗಳು ಅನುಷ್ಠಾನಗೊಳ್ಳಲಿವೆ. ಕೃಷಿಕರಿಂದ ಕೃಷಿ ಭೂಮಿಯನ್ನೆನೋ ಬಲವಂತದಿಂದ ಸ್ವಾಧೀನ ಮಾಡಲಾಗಿದೆ. ಇದೀಗ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಪೈಪ್‍ಲೈನ್ ಅಳವಡಿಸೋ ಕಾಮಗಾರಿ ಜನರ ವಿರೋಧದ ಮಧ್ಯೆಯೇ ಆರಂಭಗೊಂಡಿದೆ. ಜನರಿಂದ ಭಾರೀ ವಿರೋಧ ವ್ಯಕ್ತವಾಗಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ರಾಜಕೀಯ ಗೊಂದಲದ ಈ ಸಮಯವನ್ನೇ ಬಳಕೆ ಮಾಡಿಕೊಂಡು ಪುನರಾರಂಭ ಮಾಡಲಾಗುತ್ತಿದೆ.

ಏನಿದು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆ?

ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯ ಬಗ್ಗೆ ಚಿಕ್ಕದಾಗಿ ಹೇಳುವುದಾದರೆ ಇದೊಂದು ಕೇಂದ್ರ ಸರ್ಕಾರ ಪ್ರಾಯೋಜಿತ ವಿದೇಶದ ಹಿತ ಕಾಯುವ ಬಂಡವಾಳಶಾಹಿಗಳ ಯೋಜನೆ. ನೂರು ಶೇಕಡಾ ರಫ್ತು ಮಾಡುವ ಉತ್ಪನ್ನಗಳನ್ನಷ್ಟೇ ತಯಾರು ಮಾಡುವ ಈ ಯೋಜನೆಗೆ ಕೇಂದ್ರ ಸರ್ಕಾರ ನೂರು ಶೇಕಡಾ ತೆರಿಗೆ ರಿಯಾಯಿತಿಯನ್ನೂ ನೀಡಿದೆ. ಎಸ್ಇಝಡ್ ಸ್ಥಾಪನೆಗಾಗಿ ಈ ದೇಶದಲ್ಲಿ 705 ಅರ್ಜಿಗಳು ಬಂದಿದ್ದು, ತೀರಾ ನಿನ್ನೆ ಮೊನ್ನೆಯವರೆಗೂ 400 ವಿಶೇಷ ಆರ್ಥಿಕ ವಲಯಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. “ಭಾರತ ದೇಶ ಅದ್ಯಾಕೆ ಎಸ್ಇಝಡ್‍ಗಳ ಹಿಂದೆ ಬಿದ್ದಿದೆ ಎಂಬುದು ಗೊತ್ತಾಗುತ್ತಿಲ್ಲ. ಎಸ್ಇಝಡ್‍ನಿಂದ ದೇಶದ ಉದ್ದಾರ ಸಾಧ್ಯವಿಲ್ಲ” ಎಂದು ವಲ್ಡ್‌ಬ್ಯಾಂಕ್ ಸಲಹೆಗಾರ ರಾಜನ್ ಹೇಳುವುದನ್ನು ಭಾರತ ಸರ್ಕಾರ ಕೇಳಿಯೂ ಕೇಳದಂತೆ ಅನುಮತಿ ಕೊಡುತ್ತಲೇ ಇದೆ. ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆ ಮಾಡಲು ಒಎನ್‍ಜಿಸಿ ಎಂಬ ಪೆಟ್ರೋಲಿಯಂ ಆಧಾರಿತ ಕಂಪನಿಗೆ ಅನುಮತಿ ದೊರೆತು ಕರ್ನಾಟಕ ಸರ್ಕಾರದ ಶೇಕಡಾ 23ರ ಪಾಲುದಾರಿಕೆಯಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ ಅಧಿಸೂಚನೆ ಹೊರಡಿಸಲಾಯಿತು. ಒಎನ್‍ಜಿಸಿ ಕೊರಿಕೆಯಂತೆ ಅದರದ್ದೇ ಒಡೆತನದ ಎಂಆರ್‌ಪಿಎಲ್ (ಮಂಗಳೂರು ಪೆಟ್ರೋಕೆಮಿಕಲ್ ಪ್ರೈವೇಟ್ ಲಿಮಿಟೆಡ್) ವಿಸ್ತರಣೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉಪ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಕೊಡಲು ಕೆಐಎಡಿಬಿ ಮಂಗಳೂರು ತಾಲೂಕಿನ ಬಜಪೆ, ಪೆರ್ಮುದೆ, ಕಳವಾರಿನ 1800 ಎಕರೆಗೆ ಪ್ರಥಮವಾಗಿ ಅಧಿಸೂಚನೆ ಹೊರಡಿಸಿತು.

ಕಳವಾರಿನಲ್ಲಿರುವ ಜಮಿನ್ದಾರಿ ಗುತ್ತಿನ ಮನೆಗಳ ಚೇಲಾಗಿರಿಯಿಂದಾಗಿ 1800 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಅನಾಯಾಸವಾಗಿ ಕೆಐಎಡಿಬಿ ಪಡೆದುಕೊಂಡಿತು. ಎರಡನೇ ಹಂತದ ಎಸ್ಇಝಡ್‍ಗಾಗಿ ಎಕ್ಕಾರು, ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು ಗ್ರಾಮದ 2035 ಎಕರೆ ಕೃಷಿ ಭೂಮಿಯನ್ನು ಸ್ವಾಧೀನತೆಗೆ ನೋಟಿಫೈಗೊಳಿಸಿತು. ಇದರಲ್ಲಿ ಮಾತ್ರ ಎಸ್ಈಝಡ್ ಆಟ ನಡೆಯಲಿಲ್ಲ. ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ದಿನಕರ್ ಮತ್ತು ನಟೇಶ್ ಉಳ್ಳಾಲ್‍ರ ಉತ್ಸಾಹದಿಂದ ಇಡೀ ಹಳ್ಳಿಯ ರೈತರನ್ನು ಸಂಘಟಿಸಿ ಹೋರಾಟ ನಡೆಸಲಾಯಿತು. ಎಲ್ಲಾ ಧರ್ಮದ ಧರ್ಮ ಗುರುಗಳನ್ನೂ ಹೋರಾಟಕ್ಕೆ ಬಳಸಿ ಪಕ್ಕಾ ರಾಜಕೀಯ ಗಿಮಿಕ್‍ಗಳನ್ನು ಮಾಡಿ 2035 ಎಕರೆ ಪ್ರದೇಶವನ್ನು ಡಿನೋಟಿಫೈಗೊಳಿಸಲಾಯಿತು. ರೈತರ ಭೂಮಿ ಮರಳಿ ರೈತರಿಗೆ ದಕ್ಕಿತು. ಅದರ ಹಿಂದಿನ ಹೋರಾಟದ ಕತೆಗಳು ಎರಡು ವಾಕ್ಯ ಅಥವಾ ಒಂದು ಲೇಖನದಿಂದ ಹೇಳಿ ಮುಗಿಯುವಂತದ್ದಲ್ಲ. ಇದೀಗ ಮೊದಲ ಹಂತದ ಎಸ್ಇಝಡ್ ಯೋಜನೆಯ ಕಾಮಗಾರಿಗಳು ಭರದಿಂದ ಸಾಗಿವೆ. ಎಲ್ಲಾ ಕಾರ್ಮಿಕ ಹಕ್ಕುಗಳನ್ನು ಉಲ್ಲಂಘನೆ ಮಾಡಿ, ಪರಿಸರ ಕಾಯ್ದೆಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಯುತ್ತಿದೆ ಎಂಬುದು ಬೇರೆ ಮಾತು. ಅದಕ್ಕಾಗಿ ಕಳೆದ ಒಂದು ವರ್ಷದಲ್ಲಿ ಹದಿನೈದು ಮಂದಿ ಉತ್ತರ ಭಾರತದ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ.

ಬಂಜೆಯಾಗಲಿರುವ ಕರಾವಳಿ ಕಡಲು

ಇದೀಗ ಮೊದಲ ಹಂತದ ಎಸ್ಇಝಡ್‍ನಲ್ಲಿ ಬರುವ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಪೈಪ್‍ಲೈನ್ ಕಾಮಗಾರಿಯನ್ನು ಕಡಲ ತಡಿಯಲ್ಲಿ ಮಾಡಲಾಗುತ್ತದೆ. 1990 ರಲ್ಲಿ ಎಂಆರ್‌ಪಿಎಲ್‍ನಿಂದ ತ್ಯಾಜ್ಯ ನೀರು ವಿಸರ್ಜನಾ ಪೈಪ್‍ಲೈನ್ ಅಳವಡಿಸಲು ಮೀನುಗಾರರು ವಿರೋಧ ವ್ಯಕ್ತಪಡಿಸಿ ಕರ್ಫ್ಯೂ ಹೇರುವ ಹಂತಕ್ಕೂ ತಲುಪಿತ್ತು. ಈ ಬಾರಿ  ಎಂಆರ್‌ಪಿಎಲ್ ತ್ಯಾಜ್ಯಕ್ಕಿಂತಲೂ ಅಪಾಯಕಾರಿ ತ್ಯಾಜ್ಯವನ್ನು ಕಡಲಿಗೆ ಬಿಡುವ ಪೈಪ್‍ಲೈನ್‍ಗೆ ಮೀನುಗಾರರ ಅಂತಹ ವಿರೋಧಗಳು ಇಲ್ಲ. ಯಾಕೆಂದರೆ ಮೀನುಗಾರ ಮುಖಂಡರು ಎನಿಸಿಕೊಂಡವರ ಬಳಿ ಎಸ್ಈಝಡ್ ಈಗಾಗಲೇ ಮಾತನಾಡಿ ಸೆಟಲ್ ಮಾಡಿಕೊಂಡಿದೆ. “ತ್ಯಾಜ್ಯ ನೀರನ್ನು ಶುದ್ದೀಕರಿಸಿ ಬಿಡುತ್ತೇವೆ. ಮೀನುಗಾರಿಕೆಗೆ ಕ್ಷೀಣಿಸುವ ಯಾವುದೇ ಅಪಾಯ ಇಲ್ಲ,” ಎಂದು ಹೇಳುವ ಎಸ್ಇಝಡ್ ನಾಡದೋಣಿ ಮೀನುಗಾರರಿಗೆ ಅಧಿಕೃತವಾಗಿ ಎಸ್ಈಝಡ್ ಚೆಕ್ ಮೂಲಕ ಐವತ್ತು ಸಾವಿರ ಪರಿಹಾರ ನೀಡಿದೆ. ಈ ಪರಿಹಾರ ಫಲನುಭವಿಗಳ ಪಟ್ಟಿ ತಯಾರಿಸಿದ್ದು ಜಿಲ್ಲಾಡಳಿತವಲ್ಲ. ಬದಲಿಗೆ ಮೀನುಗಾರ ಮುಖಂಡರು. ನೈಜ ನಾಡದೋಣಿ ಮೀನುಗಾರರಿಗೆ ಪರಿಹಾರ ನೀಡದೆ ಮೀನುಗಾರ ಮುಖಂಡರಿಗೆ ಬೇಕಾದವರಿಗೆ ಪರಿಹಾರ ನೀಡಲಾಗಿದೆ. ಪರಿಹಾರವನ್ನು ಎಲ್ಲಾ ಮೀನುಗಾರರಿಗೆ ನೀಡಲು ಎಸ್ಇಝಡ್ ಸಿದ್ದವಿದ್ದರೂ ಎಲ್ಲಾ ಮೀನುಗಾರರು ಪರಿಹಾರ ಪಡೆದುಕೊಳ್ಳಲು ಸಿದ್ದರಿಲ್ಲ. ಮೀನುಗಾರಿಯನ್ನೇ ಕುಲಕಸುಬು ಮಾಡಿಕೊಂಡಿರುವವರು ಒಮ್ಮೆ ಸಿಗೋ ಐವತ್ತು ಸಾವಿರ ಪರಿಹಾರದ ಹಣದಲ್ಲಿ ಜೀವಮಾನವಿಡೀ ಬದುಕು ಸಾಗಿಸುತ್ತೇನೆ ಎಂದು ಭ್ರಮೆಪಡಲು ಮೀನುಗಾರರೇನೂ ಮೂರ್ಖರಲ್ಲ. ಎಸ್ಇಝಡ್ ಪೈಪ್‍ಲೈನ್ ಕಾಮಗಾರಿ ಮುಗಿದು ಸಮುದ್ರಕ್ಕೆ ಎಸ್ಇಝಡ್ ತ್ಯಾಜ್ಯ ನೀರನ್ನು ಬಿಟ್ಟ ಕರಾವಳಿ ಕಡಲು ಬಂಜೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಹಿನ್ನಲೆಯಲ್ಲಿ ಮೀನುಗಾರರು ಪೈಪ್‍ಲೈನ್ ವಿರೋಧಿಸುತ್ತಿದ್ದರು. 2011 ನವೆಂಬರ್‍‌ನಲ್ಲಿ ಪೈಪ್‍ಲೈನ್ ಕಾಮಗಾರಿಗೆ ಬಂದಿದ್ದ ಬಾರ್ಜ್‌ಗೆ ನೈಜ ಮೀನುಗಾರರು ವಿರೋಧ ವ್ಯಕ್ತಪಡಿಸಿದ ನಂತರ ಎಸ್ಇಝಡ್ ಇತ್ತೀಚಿನವರೆಗೆ ತೆಪ್ಪಗಿತ್ತು.

ಮಂಗಳೂರಿನವರೇ ಆಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಯಾವುದೇ ರಾಜಕೀಯ ನಾಯಕರು ಮತ್ತು ಪಕ್ಷ ಮೀನುಗಾರರನ್ನು ನಿರ್ಲಕ್ಷಿಸುವಂತಿಲ್ಲ. ಕರಾವಳಿಯಲ್ಲಿ ಬಲಿಷ್ಠ ವರ್ಗವಾಗಿರುವ ಮೀನುಗಾರರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿಕೊಂಡೇ ಬಂದಿದ್ದಾರೆ. ಮೀನುಗಾರರ ಚಿಕ್ಕ ಪ್ರತಿಭಟನೆ ಮತ್ತು ಬೇಡಿಕೆಯನ್ನೂ ಕರಾವಳಿಯಲ್ಲಿ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತದೆ. ಮೀನುಗಾರರ ಯಾವುದೇ ಸಮಸ್ಯೆಗಳಿಗೂ ಯಾವುದೇ ಪಕ್ಷಗಳು ಈವರೆಗೂ ಪರಿಹಾರ ಕಂಡುಕೊಳ್ಳದಿದ್ದರೂ ಅವರನ್ನು ಎದುರು ಹಾಕಿಕೊಳ್ಳುವುದಿಲ್ಲ. ಇದೇ ಕಾರಣಕ್ಕಾಗಿ ಪೈಪ್‍ಲೈನ್ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಆದರೆ ಮೊನ್ನೆಯಿಂದ ಪ್ರಾರಂಭವಾದ ಯಡಿಯೂರಪ್ಪರ ರೆಸಾರ್ಟ್ ವಾಸ ಮತ್ತು ಡಿ.ವಿ. ಸದಾನಂದ ಗೌಡರ ಖುರ್ಚಿಯ ಗೊಂದಲದ ಕಡೆಗೆ ಎಲ್ಲರ ಗಮನ ಹರಿಯುತ್ತಿದ್ದಂತೆ ಎಸ್ಇಝಡ್ ಮೆಲ್ಲನೆ ಎದ್ದುಕೊಂಡಿದೆ. ಮಾರ್ಚ್ 21 ಬಜೆಟ್ ಮಂಡನೆ ಮತ್ತೊಂದೆಡೆ ಉಡುಪಿ ಉಪಚುನಾವಣೆ ಫಲಿತಾಂಶ. ಇವೆಲ್ಲದರ ಮಧ್ಯೆ ರಾಜಕೀಯ ಗೊಂದಲ. ಇದೇ ಸಮಯವನ್ನು ಬಳಸಿಕೊಂಡ ಎಸ್ಈಝಡ್ ಪೈಪ್‍ಲೈನ್‍ಗಾಗಿ ಮೀನುಗಾರರ ವಿರೋಧದ ಮಧ್ಯೆಯೇ ಸುರತ್ಕಲ್ ಸಮೀಪದ ಮಲ್ಲಮಾರ್ ಕಡಲಿಗೆ ಬೃಹತ್ ಬಾರ್ಜ್ ತಂದಿದೆ. ಜನವಿರೋಧವನ್ನು ಲೆಕ್ಕಿಸದೇ ಕಾಮಗಾರಿ ನಡೆಸುತ್ತೇವೆ ಎಂದು ಪೊಲೀಸರ ಮೂಲಕ ಮೀನುಗಾರರಿಗೆ ಬೆದರಿಕೆ ಹಾಕಿದೆ.

ಕೇಳುವವರೇ ಇಲ್ಲದ ಕರಾವಳಿ

ಈಗ ಕರಾವಳಿಯನ್ನು ಕೇಳುವವರೇ ಇಲ್ಲ. ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯ ಕಳೆದ ಫೆಬ್ರವರಿಯಲ್ಲಿ ನಿಧನ ಹೊಂದಿದ್ದಾರೆ. ಅವರು ಸಚಿವರಾಗಿದ್ದಾಗಲೂ ಎಸ್ಇಝಡ್, ನಾಗಾರ್ಜುಗಳಂತಹ ಕಂಪನಿಗಳನ್ನು ಬೆಂಬಲಿಸುತ್ತಿದ್ದರು ಎಂಬುದು ಬೇರೆ ಮಾತು. ಆದರೆ ತೋರ್ಪಡಿಕೆಗಾದರೂ ಜನಪ್ರತಿನಿಧಿಯೆಂಬಂತಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್ ಬ್ಲೂ ಫಿಲಂ ಹಗರಣದಲ್ಲಿ ಸಿಲುಕಿ ಮನೆ ಸೇರಿದ್ದಾರೆ. ಮಂಗಳೂರಿನ ನಿವಾಸಿ, ಉಡುಪಿ ಲೋಕಸಭಾ ಸದಸ್ಯರಾಗಿ ಈಗ ಮುಖ್ಯಮಂತ್ರಿಯಾಗಿರುವ ಸದಾನಂದ ಗೌಡರನ್ನು ಸಂಪರ್ಕಿಸೋಣ ಎಂದರೆ ಅವರು ಶಾಸಕರ ಲೆಕ್ಕಾಚಾರದಲ್ಲೇ ಬ್ಯೂಸಿ ಆಗಿದ್ದಾರೆ. ಒಂದೆಡೆ ಎಲೆಕ್ಷನ್ ಲೆಕ್ಕಾಚಾರದ ತಲೆಬಿಸಿಯಾದರೆ ಮತ್ತೊಂದೆಡೆ ಯಡಿಯೂರಪ್ಪ ಕಾಟ, ಚೊಚ್ಚಲ ಬಜೆಟ್ ಮಂಡನೆಯ ಆತಂಕಗಳು, ಹೈಕಮಾಂಡ್‍ನಿಂದ ಬರೋ ಮಾತುಗಳ ನಿರೀಕ್ಷೆಗಳ ಮಧ್ಯೆ ಸದಾನಂದ ಗೌಡರ ತಲೆ ಹನ್ನೆರಡಾಣೆ ಆಗಿದೆ. ಈಗ ಸದಾನಂದ ಗೌಡರು ಕನಿಷ್ಠ ದೂರವಾಣಿ ಕರೆಗೂ ಸಿಗುವುದು ಕಷ್ಟ. ಒಟ್ಟಾರೆ ಕೇಳುವವರೇ ಇಲ್ಲದ ಕರಾವಳಿಯನ್ನು ಮಂಗಳೂರು ವಿಶೇಷ ಆರ್ಥಿಕ ವಲಯ ಸದ್ಬಳಕೆ ಮಾಡಿಕೊಳ್ಳುತ್ತಿದೆ.

(ಚಿತ್ರಕೃಪೆ: ಡೈಜಿವರ್ಲ್ಡ್, ಇತ್ಯಾದಿ)