ಪಗೋ ಎಂಬ ನಿಷ್ಠ ಪತ್ರಕರ್ತರೂ, ಪ್ರಾಯೋಜಕತ್ವದ ಪ್ರಶಸ್ತಿಯೂ

-ನವೀನ್ ಸೂರಿಂಜೆ

ಕರಾವಳಿಯ ಹೆಮ್ಮೆಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣರವರ ಹೆಸರಲ್ಲಿ 2004 ರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ”ಪ ಗೋ” ಪ್ರಶಸ್ತಿ ನೀಡುತ್ತಿದೆ. ಗ್ರಾಮೀಣ ವರದಿಗಾರಿಕೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದು ಹೆಮ್ಮೆಯ ವಿಷಯವಾದರೂ ಪ್ರಶಸ್ತಿ ನೀಡಿಕೆಯಲ್ಲಿ “ಪ ಗೋ” ಅವರನ್ನು ಅವಮಾನಿಸಲಾಗುತ್ತಿದೆ.

ಪತ್ರಿಕಾಗೋಷ್ಠಿ ನಡೆಸುವೆವರು ನೀಡುವ ಕನಿಷ್ಠ ಚಹಾವನ್ನೂ ಕುಡಿಯದ ಪದ್ಯಾಣ ಗೋಪಾಲಕೃಷ್ಣರ ಹೆಸರಲ್ಲಿ ನೀಡುವ ಪ್ರಶಸ್ತಿಯ ಮೊತ್ತವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರಿಗೆ ದುಂಬಾಲು ಬಿದ್ದು ಪಡೆದುಕೊಳ್ಳಲಾಗುತ್ತಿದೆ. ಪತ್ರಕರ್ತರು ಗಿಫ್ಟ್ ತೆಗೆದುಕೊಳ್ಳುವುದನ್ನು ಕಟುವಾಗಿ ವಿರೋಧಿಸುತ್ತಿದ್ದ ಪತ್ರಕರ್ತ ಪ. ಗೋಪಾಲಕೃಷ್ಣರ ಹೆಸರಲ್ಲಿ ನೀಡುವ ಪ್ರಶಸ್ತಿಗೆ ಪ್ರಾಯೋಜಕರಿದ್ದಾರೆ ಎಂದರೆ ಪತ್ರಕರ್ತ “ಪ ಗೋ” ಅವರಿಗೆ ಮಾಡುವ ಅವಮಾನವಲ್ಲವೆ?

ಪದ್ಯಾಣ ಗೋಪಾಲಕೃಷ್ಣರವರು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಗಡಿ ಭಾಗವಾಗಿರುವ ಅಡ್ಯನಡ್ಕದಲ್ಲಿ 1928ರಲ್ಲಿ ಜನಿಸಿದರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ವಿಶ್ವಕರ್ನಾಟಕ ಎಂಬ ಪತ್ರಿಕೆಯ ಮೂಲಕ 1956ರಲ್ಲಿ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸಿದರು. ತಾನು ಪತ್ರಿಕಾ ಕ್ಷೇತ್ರ ಪ್ರವೇಶಿಸಿದಂದಿನಿಂದಲೂ ಪ ಗೋಪಾಲಕೃಷ್ಣರು ಯಾವ ರೀತಿಯಲ್ಲೂ ತಾವು ನಂಬಿದ ಸಿದ್ದಾಂತಗಳನ್ನು ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಟ್ಟವರಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಪತ್ರಿಕಾ ಸ್ನೇಹಿತರ ಒಂದು ದೊಡ್ಡ ಬಳಗವನ್ನೇ ಅವರು ಹೊಂದಿದ್ದರಂತೆ. ವಿಶ್ವ ಕರ್ನಾಟಕ ದಿನ ಪತ್ರಿಕೆಯ ನಂತರ ತಾಯಿ ನಾಡು, ಕಾಂಗ್ರೇಸ್ ಸಂದೇಶ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ “ಪ ಗೋ” ರವರು ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ನಂತರ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ಶಕ್ತಿ ಎಂಬ ಪತ್ರಿಕೆಯಲ್ಲೂ ಉಪಸಂಪಾದಕ ಮತ್ತು ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.

1959 ಸುಮಾರಿಗೆ ಬೆಂಗಳೂರು ಬಿಟ್ಟು ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಪ ಗೋಪಾಲಕೃಷ್ಣರು ನವ ಭಾರತ ಎಂಬ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. ನಂತರ ಕನ್ನಡವಾಣಿ ಎಂಬ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಎಲ್ಲರಿಗೂ ಗೊತ್ತಿರುವಂತೆ ಅಂದಿನ ಪತ್ರಿಕೋಧ್ಯಮ ಕ್ಷೇತ್ರಕ್ಕೂ ಇಂದಿನ ಪತ್ರಿಕೋಧ್ಯಮ ಕ್ಷೇತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಲ್ಯಾಪ್‌ಟಾಪ್, ಫ್ಲ್ಯಾಟುಗಳನ್ನೇ ಪತ್ರಕರ್ತರಿಗೆ ಗಿಫ್ಟ್ ಆಗಿ ನೀಡುತ್ತಿದ್ದರೆ, ಹಿಂದೆಲ್ಲಾ ಪೆನ್ನು ಮತ್ತು ಪೇಪರ್ ಪ್ಯಾಡನ್ನು ಗಿಫ್ಟ್ ಆಗಿ ನೀಡಲಾಗುತ್ತಿತ್ತು. ಪೆನ್ನು ಮತ್ತು ಪೇಪರ್ ಪ್ಯಾಡನ್ನು ಗಿಫ್ಟ್ ಆಗಿ ನೀಡುತ್ತಿದ್ದ ಪತ್ರಿಕಾಗೋಷ್ಠಿ ಎಂದರೆ ಅದೊಂದು ಐಶಾರಾಮಿ ಪತ್ರಿಕಾಗೋಷ್ಠಿ ಎಂದೇ ಅಂದಿನ ಕಾಲದಲ್ಲಿ ಬಿಂಬಿತವಾಗುತ್ತಿತ್ತು.

ಪ. ಗೋಪಾಲಕೃಷ್ಣರು ಪತ್ರಿಕಾಗೋಷ್ಠಿಯಲ್ಲಿ ನೀಡುವ ಪೆನ್ನು ಪೇಪರಿನ ಗಿಫ್ಟು ಕೂಡಾ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಪ್ರೆಸ್ ಮೀಟ್ ಪ್ರಾಯೋಜಕರು ನೀಡುವ ಚಹಾ ತಿಂಡಿಯನ್ನೂ ಮುಟ್ಟುತ್ತಿರಲಿಲ್ಲವಂತೆ. ಪ. ಗೋಪಾಲಕೃಷ್ಣರು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಸಾಲಿನಲ್ಲಿ ಕುಳಿತಿದ್ದಾರೆ ಎಂದರೆ ರಾಜಕಾರಣಿಗಳು ತಂದಿದ್ದ ಗಿಫ್ಟನ್ನು ಮರಳಿ ಕೊಂಡೊಯ್ದ ದಿನಗಳೂ ಇದೆಯೆಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ. ಅಂತಹ “ಪ ಗೋ” ಹೆಸರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 2004 ರಿಂದ ಪ ಗೋ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಪ್ರಾಯೋಜಕರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು. ಪ್ರೆಸ್ ಮೀಟ್ ಪ್ರಾಯೋಜಕರಿಂದ ಕನಿಷ್ಠ ಚಹಾವನ್ನು ಪಡೆಯದ ಪ ಗೋಪಾಲ ಕೃಷ್ಣರ ಹೆಸರಲ್ಲಿ ನೀಡುವ “ಪ ಗೋ” ಪ್ರಶಸ್ತಿಗೆ ಖಾಸಗಿ ಪ್ರಾಯೋಜಕತ್ವ ಪಡೆದಿರುವುದು ವಿಪರ್ಯಾಸ.

ಪ.ಗೋ ಪ್ರಶಸ್ತಿಯನ್ನು ನೀಡಲು ಪತ್ರಕರ್ತರ ಸಂಘ 2004 ರಿಂದ ಆರಂಭ ಮಾಡಿತ್ತು. ಆಗ ಪ್ರಶಸ್ತಿ ಪ್ರಮಾಣ ಪತ್ರದ ಜೊತೆ 2,500 ರೂಪಾಯಿ ಪ್ರಶಸ್ತಿ ಮೊತ್ತವನ್ನು ನೀಡಲಾಗುತ್ತಿತ್ತು. ಪ್ರಾರಂಭದಿಂದಲೂ ಪ್ರಶಸ್ತಿ ಮೊತ್ತದ ಪ್ರಾಯೋಜಕರು ವೀರೇಂದ್ರ ಹೆಗ್ಗಡೆಯವರೇ ಆಗಿದ್ದರು. 2009 ರಿಂದ ಪ್ರಶಸ್ತಿ ಮೊತ್ತ 5000 ರೂಪಾಯಿಗೆ ಏರಿಕೆಯಾಗಿದೆ. ವಿಪರ್ಯಾಸ ಎಂದರೆ 2008 ಆಗಸ್ಟ್ 16 ರಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನಿವಾಸಕ್ಕೆ ತೆರಳಿ ಪ್ರಶಸ್ತಿ ಮೊತ್ತವನ್ನು ಏರಿಕೆ ಮಾಡುವಂತೆ ಬಿನ್ನವಿಸಿದ್ದು ! ಪತ್ರಕರ್ತರ ಮನವಿಯನ್ನು ಸ್ವೀಕರಿಸಿದ ವೀರೇಂದ್ರ ಹೆಗ್ಗಡೆಯವರು ಅದೇ ವರ್ಷದಿಂದಲೇ ಪ್ರಶಸ್ತಿ ಮೊತ್ತವನ್ನು ಐದು ಸಾವಿರಕ್ಕೆ ಏರಿಸೋ ಭರವಸೆ ನೀಡಿದ್ದರು. ಅದನ್ನು ಅಂದಿನ ಪದಾಧಿಕಾರಿಗಳ ಸಮಿತಿ ಫೋಟೋ ಸಮೇತ ಪತ್ರಿಕಾ ಪ್ರಕಟಣೆ ನೀಡಿ, ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿತ್ತು.

ಅಕ್ಟೋಬರ್ 06 1976 ರಂದು ಸ್ಥಾಪನೆಗೊಂಡ ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿದ್ದ ಪ ಗೋ ರವರ ಹೆಸರಲ್ಲಿ ನೀಡಲಾಗುತ್ತಿರುವ “ಗ್ರಾಮೀಣ ವರದಿಗಾರಿಕೆಯ ಪ್ರಶಸ್ತಿ” ಮೊತ್ತಕ್ಕೆ ಪತ್ರಕರ್ತರ ಸಂಘಕ್ಕೆ ಪ್ರಾಯೋಜಕರನ್ನು ಹುಡುಕುವ ಅನಿವಾರ್ಯತೆಯೇನೂ ಇರಲಿಲ್ಲ. ಪತ್ರಕರ್ತರ ಸಂಘದ ಅಡಿಯಲ್ಲೇ ಇರುವ ಪ್ರೆಸ್‌ಕ್ಲಬ್ಬಿನಲ್ಲಿ ಬೇಕಾದಷ್ಟು ದುಡ್ಡಿದೆ. 1976 ರಂದು ಪ್ರಾರಂಭವಾದ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಈಗ ಅತ್ಯಂತ ಶ್ರೀಮಂತ ಸಂಘಗಳಲ್ಲಿ ಒಂದು. ಸಂಘದ ಕಟ್ಟಡಕ್ಕೆ ಅಪಾರ ರಾಜಕಾರಣಿಗಳು ಲಕ್ಷ ಲಕ್ಷವನ್ನೇ ಸುರಿದಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಜನಾರ್ದನ ಪೂಜಾರಿಯವರಂತೂ ಜಿಲ್ಲೆಯಲ್ಲಿ ಬೇರೆ ಯಾವ ಸಮಸ್ಯೆಯೂ ಇಲ್ಲದೆ ಎಂಪಿ ಅನುದಾನ ಕೊಳೆಯುತ್ತಿದೆ ಎಂದು ಭಾಸವಾಗುವ ರೀತಿಯಲ್ಲಿ ಅನುದಾನ ನೀಡಿದ್ದಾರೆ. ಶಾಸಕರು, ಸಂಸದರು, ಮುಖ್ಯಮಂತ್ರಿಗಳು ಸಂಘದ ಕಟ್ಟಡಕ್ಕೆ ನೀಡಿದ ಅನುದಾನದ ಲೆಕ್ಕ ನೋಡಿದರೆ ತಲೆ ತಿರುಗಬಹುದು. ಅದೆಲ್ಲಾ ಇರಲಿ. ಇಲ್ಲಿರುವ ಪ್ರೆಸ್‌ಕ್ಲಬ್ಬಿನಲ್ಲಿ ದಿನಕ್ಕೆ ಐದು ಪ್ರೆಸ್ ಮೀಟ್ ನಡೆಸಲು ಅವಕಾಶ ಇದೆ. ಏನಿಲ್ಲವೆಂದರೂ ದಿನಾ ಸರಾಸರಿ ಮೂರರಿಂದ ನಾಲ್ಕು ಪ್ರೆಸ್ ಮೀಟ್‌ಗೆ ಕೊರತೆ ಇಲ್ಲ. ನಾಗಮಂಡಲ, ಬ್ರಹ್ಮಕಲಶ, ಕೋಲ, ನೇಮದಿಂದ ಹಿಡಿದು ಪ್ರತಿಭಟನೆಗಳವರೆಗೆ ಮಂಗಳೂರಿನಲ್ಲಿ ಕಾರ್ಯಕ್ರಮಗಳಿಗೆ ಕೊರತೆ ಇಲ್ಲದಿರುವಾಗ ಪತ್ರಿಕಾಗೋಷ್ಠಿಗೆ ಕೊರತೆ ಬರಲು ಸಾಧ್ಯವಿಲ್ಲ. ನಾಗಮಂಡಲವಿರಲಿ, ಬ್ರಹ್ಮಕಲಶವಿರಲಿ, ದಲಿತ ಮಲದ ಗುಂಡಿಗೆ ಬಿದ್ದ ಬಗೆಗಿನ ಪತ್ರಿಕಾಗೋಷ್ಠಿಯೇ ಇರಲಿ, ಒಂದು ಸಾವಿರ ರೂಪಾಯಿಯನ್ನು ಪ್ರೆಸ್‌ಕ್ಲಬ್ಬಿಗೆ ನೀಡಿ ರಶೀದಿ ಮಾಡಿಕೊಳ್ಳಲೇ ಬೇಕು. ಪ್ರತೀ ಪ್ರೆಸ್ ಮೀಟ್‌ಗೆ ಒಂದು ಸಾವಿರ ರೂಪಾಯಿಯಂತೆ ಪ್ರೆಸ್‌ಕ್ಲಬ್ಬಿನ ತಿಂಗಳ-ವಾರ್ಷಿಕ ಆದಾಯ ಎಷ್ಟು ಎಂಬುದನ್ನು ಲೆಕ್ಕ ಹಾಕಿ. ಇಷ್ಟೊಂದು ಆದಾಯ ಇರುವ ಪತ್ರಕರ್ತರ ಸಂಘ “ಪ ಗೋ” ಪ್ರಶಸ್ತಿಯ ಐದು ಸಾವಿರಕ್ಕೆ ಪ್ರಾಯೋಜಕರಿಗೆ ದಂಬಾಲು ಬಿದ್ದು ಪ ಗೋ ರವರಿಗೆ ಅವಮಾನ ಮಾಡುವುದು ಎಷ್ಟು ಸರಿ ಎಂಬುದನ್ನು ಕಾರ್ಯನಿರತ ಪತ್ರಕರ್ತರ ಸಂಘ ಆಲೋಚಿಸಬೇಕು.

ನಾವೆಲ್ಲಾ ಪ ಗೋ ರವರನ್ನು ಆದರ್ಶವಾಗಿರಿಸಿಕೊಂಡು ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಇರಲು ಬಯಸುವವರು. ರಾತ್ರಿ ಗುಂಡು ತುಂಡು ಪಾರ್ಟಿ, ಬೆಲೆಬಾಳುವ ಗಿಫ್ಟ್, ಗಿಫ್ಟ್ ಓಚರ್‌ಗಳ ಭರಾಟೆಯಲ್ಲಿ ಪತ್ರಕರ್ತರು ಪತ್ರಿಕಾ ಕ್ಷೇತ್ರವನ್ನು ಹಾಳುಗೆಡವುತ್ತಿದ್ದಾರೆ. ಪ ಗೋ ಪ್ರಶಸ್ತಿಯನ್ನು ಕೊಡುವಂತಹ ಸಂಧರ್ಭದಲ್ಲಿ ಈಗಿನ ಪತ್ರಕರ್ತರಿಗೆ ಪ ಗೋ ಆದರ್ಶಗಳ ಬಗ್ಗೆ ಹೇಳಬೇಕಿದೆ. ದೊಡ್ಡ ದೊಡ್ಡ ಆದರ್ಶಗಳನ್ನು ಅಲ್ಲದಿದ್ದರೂ ಕನಿಷ್ಠ ಗಿಫ್ಟ್, ಗಿಫ್ಟ್ ಓಚರ್, ಗುಂಡು ತುಂಡು ಪಾರ್ಟಿಗಳನ್ನು ತಿರಸ್ಕರಿಸುವಂತೆ ಕಾರ್ಯನಿರತ ಪತ್ರಕರ್ತ ಸಂಘ ಹೇಳಬೇಕಿದೆ. ಆದರೆ ಆ ರೀತಿ ಹೇಳುವಾಗ ನಮಗೂ ನೈತಿಕತೆ ಬೇಕಾಗುತ್ತದೆ. ಆ ಹಿನ್ನಲೆಯಲ್ಲಿ ಮುಂದಿನ ವರ್ಷದಿಂದ “ಪ ಗೋ ಪ್ರಶಸ್ತಿ”ಗೆ ಪ್ರಾಯೋಜಕತ್ವ ಪಡೆಯದೆ ಪ್ರಶಸ್ತಿ ವಿತರಿಸಬೇಕು. ಇಲ್ಲದೇ ಇದ್ದಲ್ಲಿ ಉತ್ತಮ ಪತ್ರಕರ್ತರು ಅಂತಹ ಪ್ರಶಸ್ತಿಯನ್ನು ತಿರಸ್ಕರಿಸಬೇಕು. ಆಗ ನಿಜವಾಗಿಯೂ ಪ ಗೋ ಪ್ರಶಸ್ತಿಗೆ ಬೆಲೆ ಬರುತ್ತದೆ ಎಂಬುದು ನಮ್ಮಂತಹ ಕಿರಿಯ ಪತ್ರಕರ್ತರ ಮನವಿ.

ಪದ್ಯಾಣ ಗೋಪಾಲಕೃಷ್ಣ ವಿವರ

ಹುಟ್ಟೂರು: ದ. ಕ. ಜಿಲ್ಲೆ ಕಾಸರಗೋಡು ಗಡಿ ಅಡ್ಯನಡ್ಕ
ಹುಟ್ಟಿದ ದಿನ: 1928
ಬೆಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದು: 1956
ಮಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದು: 1959
ಕರ್ತವ್ಯ ನಿರ್ವಹಿಸಿದ ಪತ್ರಿಕೆಗಳು: ವಿಶ್ವ ಕರ್ನಾಟಕ , ತಾಯಿ ನಾಡು, ಕಾಂಗ್ರೇಸ್ ಸಂದೇಶ, ಸಂಯುಕ್ತ ಕರ್ನಾಟಕ, ಶಕ್ತಿ, ನವಭಾರತ, ಕನ್ನಡ ವಾಣಿ, ಇಂಡಿಯನ್ ಎಕ್ಸ್ಪ್ರೆಸ್, ಕನ್ನಡ ಪ್ರಭ, ಟೈಮ್ಸ್ ಆಫ್ ಡೆಕ್ಕನ್, ಟೈಮ್ಸ್ ಆಫ್ ಇಂಡಿಯಾ.
ಸ್ವಂತ ಪತ್ರಿಕೆ: 1963-1964 – ವಾರ್ತಾಲೋಕ ಪತ್ರಿಕೆ
ನಿವೃತ್ತಿ: 1994
ಕಾದಂಬರಿಗಳು: ಬೆಳ್ಳಿ ಸೆರಗು, ಗನ್ ಬೋ ಸ್ಟ್ರೀಟ್, ಓ ಸಿ 67
ನಿಧನ: 1997

3 thoughts on “ಪಗೋ ಎಂಬ ನಿಷ್ಠ ಪತ್ರಕರ್ತರೂ, ಪ್ರಾಯೋಜಕತ್ವದ ಪ್ರಶಸ್ತಿಯೂ

  1. Dinesh Amin Mattu

    ಮಂಗಳೂರಿನಲ್ಲಿ ವೃತ್ತಿಜೀವನ ಪ್ರಾರಂಭಿಸಿದ್ದ ದಿನಗಳಲ್ಲಿ ನನಗೆ ಮಾರ್ಗದರ್ಶಕರಾಗಿದ್ದವರು ಪದ್ಯಾಣ ಗೋಪಾಲಕೃಷ್ಣರು. ತನ್ನ ನೇರ-ನಿಷ್ಠುರ ನಡವಳಿಕೆ ಮತ್ತು ವೃತ್ತಿ ಪರಿಣತಿಯಿಂದ ನನ್ನಂತಹ ಕಿರಿಯರ ಗೌರವ ಗಳಿಸಿದವರು. ನಮ್ಮಿಂದ ಸಾಧ್ಯ ಇದ್ದರೆ ಇಂತಹ ಹಿರಿಯ ಚೇತನಗಳಿಗೆ ಗೌರವ ಸಲ್ಲಿಸಬೇಕು, ಇಲ್ಲದಿದ್ದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಬೇಕು.
    ದಿನೇಶ್ ಅಮಿನ್ ಮಟ್ಟು

    Reply
  2. P. Ramachandra

    ಪ್ರಸ್ತುತ ಬೆಂಗಳೂರಿನಲ್ಲಿ ಸಮಯ ಚಾನಲ್ ಮಖ್ಯಸ್ಥರಾಗಿರುವ , 1990ರ ದಶಕದಲ್ಲಿ ಮಂಗಳೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿದ್ದ ಶ್ರೀ. ಜಿ. ಎನ್ .ಮೋಹನ್ ಅವರು ವ್ಯಕ್ತಪಡಿಸಿದ ಉಲ್ಲೇಖ

    “ಒಬ್ಬರು ಗೋಪಾಲಕೃಷ್ಣ. ಇನ್ನೊಬ್ಬರು ನರಸಿಂಹರಾಯರು. ಪತ್ರಿಕಾಗೋಷ್ಠಿಯಲ್ಲಿ ಕುಳಿತರಂತೂ ಇಬ್ಬರೂ ಹುಲಿಗಳೇ. ಇವರಿಬ್ಬರೂ ಇದ್ದಾರೆ ಎಂದರೆ ಪತ್ರಿಕಾ ಗೋಷ್ಠಿ ನಡೆಸುವವರಿಗೂ ಆತಂಕ. ಏಕೆಂದರೆ ಸುಳ್ಳು ಮಾತನಾಡುವಂತಿಲ್ಲ. ತಪ್ಪು ಅಂಕಿ ಸಂಖ್ಯೆ ಮುಂದಿಡುವಂತಿಲ್ಲ. ತಿಂಡಿ ಕಾಫಿ ಸಹಾ ಮುಟ್ಟುವುದಿಲ್ಲ. ಗಿಫ್ಟ್ ತೆಗೆದುಕೊಳ್ಳುವ ಮಾತೇ ಇಲ್ಲ.

    ದಕ್ಷಿಣ ಕನ್ನಡ ಕಂಡ ಇಬ್ಬರು ನಿಜಕ್ಕೂ ಮಹನೀಯ ಪತ್ರಕರ್ತರು ಇವರು. ಪ ಗೋಪಾಲಕೃಷ್ಣ ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿಯಾದರೆ, ನರಸಿಂಹ ರಾಯರು ದಿ ಹಿಂದೂ ಪ್ರತಿನಿಧಿ. ‘ಪಾಕೀಟು ಪತ್ರಿಕೋದ್ಯಮ’ ದ ಜನಪ್ರಿಯವಾಗಿದ್ದ ದಿನಗಳಲ್ಲಿ ಪತ್ರಕರ್ತರ ನೀತಿ ಸಂಹಿತೆ ಉಳಿಯಲು ತಮ್ಮದೇ ಉದಾಹರಣೆಯ ಮೂಲಕ ಬಡಿದಾಡಿದವರು.”

    -ಪ.ರಾಮಚಂದ್ರ

    Reply
  3. Reddybang Manjunath Reddy

    ಇಂದಿನ ಪತ್ರಕರ್ತರಿಗೆ ಆದರ್ಶವಾಗಿರ ಪ.ಗೋಪಾಲಕೃಷ್ಣರಿಗೆ ಸರ್ಕಾರದಿಂದ ಅಥವಾ ಸ್ಥಳೀಯ ಶಾಸಕ, ಸಂಸದರಿ ನಿಧಿಯಿಂದ ಪ್ರಶಸ್ತಿ ನೀಡುವಂತಾಗಬೇಕು. ಇದರ ಹೊರತಾಗಿ ಯಾರೇ ಪ್ರಶಸ್ತಿಯ ಪ್ರಾಯೋಜಕತ್ವ ವಹಿಸಿದರೆ ಅವಮಾನವೆಂದು ಭಾವಿಸಬಾರದು

    Reply

Leave a Reply

Your email address will not be published. Required fields are marked *