Category Archives: ಶ್ರೀಪಾದ್ ಭಟ್

ಮೌಲ್ಯಗಳಿಲ್ಲದ ’ಮಲ್ಯ’


-ಬಿ. ಶ್ರೀಪಾದ ಭಟ್  


 

ಇವರ ಹೆಸರು “ವಿಜಯ್ ಮಲ್ಯ”. ವೃತ್ತಿಯಿಂದ ಇವರು ಹೆಂಡದ ಹಾಗೂ ನಾಗರೀಕ ವಿಮಾನಯಾನದ ಹಾಗೂ ರಾಸಾಯನಿಕ ಗೊಬ್ಬರ ತಯಾರಿಕೆಯಂತಹ ವಿಭಿನ್ನ ವೃತ್ತಿಗಳನ್ನು ನಡೆಸುತ್ತಿರುವ ನಮ್ಮ ಭಾರತ ದೇಶದ ಅತ್ಯಂತ ಪ್ರಮುಖ ಉದ್ಯಮಿ. ಬಹಿರ್ಮುಖಿ ಗುಣವುಳ್ಳ ಇವರು ಸಾರ್ವಜನಿಕವಾಗಿ ಮೋಜುಗಾರರು ಹಾಗೂ ಸೊಗಸುಗಾರರು. ಹಣ ಇವರಿಗೆ ಹುಣಿಸೇ ಬೀಜಕ್ಕೆ ಸಮ. ಸುಖದ ಲೋಲುಪ್ತತೆಯಲ್ಲಿ ಮೆರೆಯಲು ಇವರಿಗೆ ಯಾವುದೇ ಸಂಕೋಚವಿಲ್ಲ. ಎಲ್ಲವನ್ನೂ ಸಾರ್ವಜನಿಕರ ಸಮ್ಮುಖದಲ್ಲೇ ನಡೆಸುವ ವಿಜಯ್ ಮಲ್ಯ ಅವರಿಗೆ ಇದುವರೆಗೂ ತಮ್ಮ ಮೋಜುಗಾರಿಕೆಯನ್ನೂ, ದುಂದುಗಾರಿಕೆಯನ್ನೂ, ಬಂಡವಾಳಶಾಹೀ ದುರಹಂಕಾರವನ್ನೂ ಪ್ರದರ್ಶಿಸಿದಾಗ ಜನಸಾಮಾನ್ಯ ಭಾರತೀಯರು ಅನೇಕ ವೇಳೆ ಅಸಹ್ಯದಿಂದ ಮತ್ತು ಸಿನಿಕತನದಿಂದ, ಕೆಲವೊಮ್ಮೆ ಬೆರಗಿನಿಂದ, ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದರು. ಇದು ಹೆಚ್ಚೂ ಕಡಿಮೆ ವಿಜಯ್ ಮಲ್ಯನ ಖಾಸಗೀ ಸಂಬಂಧಗಳಾಗಿಯೂ ಮತ್ತು ಪೇಜ್‌ ಥ್ರೀ ಸುದ್ದಿಯ ಮಟ್ಟಕ್ಕೆ ಬಂದು ನಿಂತಿದ್ದರಿಂದ ಸಾರ್ವಜನಿಕವಾಗಿ ನೈತಿಕತೆಯ ಹಾಗೂ ಮೌಲ್ಯಗಳ ಮಾಪನದ ಪ್ರಶ್ನೆಯಾಗಿರಲಿಲ್ಲ. ಇದು ಕೇವಲ ವೈಯುಕ್ತಿಕ ಮಟ್ಟದ ಚಟಗಳಾಗಿ ಗೋಚರಿಸುತ್ತಿದ್ದವು.

ಆದರೆ ಇಂಡಿಯಾ ಜಾಗತೀಕರಣಗೊಂಡ ನಂತರ, ಸರ್ಕಾರೀ ಭ್ರಷ್ಟತೆಯ ನಿರಂತರ ಟೀಕೆಗಳು ಇದಕ್ಕೆ ಉತ್ತರವಾಗಿ ಖಾಸಗೀಕರಣದ ಹೊಸ ಹೊಸ ಆರ್ಥಿಕತೆಯ ವಾಮಮಾರ್ಗಗಳ, ಅಡ್ಡದಾರಿಗಳ ಚಟುವಟಿಕೆಗಳು ಅರ್ಥಾತ MOUಗಳು 90 ರ ದಶಕದ ಉತ್ತರಾರ್ಧದಲ್ಲಿ ಹಾಗೂ 21ನೇ ಶತಮಾನದ ಪ್ರಥಮ ದಶಕದಲ್ಲಿ ತನ್ನ ಕರಾಳ ಮುಖಗಳನ್ನು ತೆರೆದುಕೊಳ್ಳುವುದರ ಮೂಲಕ ವಿಜಯ್ ಮಲ್ಯ ತರಹದ ಪ್ಲೇಬಾಯ್ ವ್ಯಕ್ತಿತ್ವದ ಉದ್ಯಮಿಗಳಿಗೆ ತಮ್ಮ ಮೋಜಿಗೆ ಹೊಸ ರಹದಾರಿಯೇ ಸಿಕ್ಕಿದಂತಾಯಿತು. ಇವರು ಈ ಗೋಮುಖವ್ಯಾಘ್ರದ ಮುಖವಾಡದ ಕೃತ್ಯಗಳನ್ನು ಖಾಸಗೀಯಾಗಿ ನಡೆಸಿದ್ದರೆ ಇದಕ್ಕೆ ಅಂತಹ ಪ್ರಾಮುಖ್ಯತೆ ದೊರೆಯುತ್ತಿರಲಿಲ್ಲ. ಆದರೆ ಮಲ್ಯರಂತಹ ನರಿ ಬುದ್ದಿಯ ಉದ್ಯಮಿಗಳು ಕಳೆದ 15 ವರ್ಷಗಳಲ್ಲಿ ಮಾಧ್ಯಮಗಳ ಪ್ರಚಾರದ ಹಪಾಹಪಿತನವನ್ನು, ಸಿನಿಕತೆಯನ್ನು, ರೋಚಕತೆಯ ವೈಭವೀಕರಣದ ಕ್ರೌರ್ಯದ ಮುಖವಾಡಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಇಡೀ ಭಾರತಕ್ಕೆ ಮಣ್ಣು ಮುಕ್ಕಿಸಿದ್ದು ಮಾತ್ರ ಇಂದಿನ ಸುದ್ದಿ. ಅಬ್ಬರದ, ಕಿರುಚಾಟದ, ಅನೈತಿಕತೆಯ, ಜನವಿರೋಧಿ ಬಂಡವಾಳಶಾಹಿ ತತ್ವಗಳು, ನಿಯಮಗಳು ಕಳೆದ 15 ವರ್ಷಗಳಲ್ಲಿ ತನ್ನ ಮೇಲುಗೈ ಸಾಧಿಸಿದ್ದು ಇದರ ಜ್ವಲಂತ ಉದಾಹರಣೆ.

ಈ ವಿಜಯ್ ಮಲ್ಯ ಎನ್ನುವ ಉದ್ಯಮಿ ಮೋಜುಗಾರ ಮತ್ತು ಸೊಗಸುಗಾರ. ಕಳೆದ 80 ವರ್ಷಗಳಿಂದ ಖಾಸಗೀ ಉದ್ಯಮಿಗಳಾಗಿದ್ದೂ ಆ ಖಾಸಗೀಕರಣಕ್ಕೆ ಒಂದು ರೀತಿಯ ಮಾನವೀಯತೆಯನ್ನು, ಮೌಲ್ಯವನ್ನು, ಘನತೆಯನ್ನು, ಕೆಲವು ವೇಳೆ ಸಾಮಾಜಿಕ ಜವಾಬ್ದಾರಿಯನ್ನು ತಂದುಕೊಟ್ಟಂತಹ ಟಾಟಾ ಸಂಸ್ಥೆಗಳು ಸಹ ಹೆಚ್ಚೂ ಕಡಿಮೆ ಕಳೆದ ಈ 15 ವರ್ಷಗಳ ಖಾಸಗೀಕರಣದ ಅಮಾನವೀಯತೆಯ ಪಿತೂರಿಗೆ ಬಲಿಯಾದದ್ದೂ ಇಂದಿನ ದುರಂತ. ಇಂದಿನ ಆರ್ಥಿಕ ಗೋಜಲುಗಳಿಗೆ ನೇರ ಹೊಣೆಗಾರಿಕೆ ಕೇಂದ್ರ ಸರ್ಕಾರಗಳು, ತಲೆಬುಡವಿಲ್ಲದ ರಾಜ್ಯ ಸರ್ಕಾರಗಳು ಹಾಗೂ ಈ ಖಾಸಗೀಕರಣದ ದುರಂತಕ್ಕೆ ಸಕ್ಕರೆಯ ಸಿಹಿಲೇಪನ ಹಚ್ಚಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಹುಪಾಲು ಮಾಧ್ಯಮಗಳು ಹೊರಬೇಕು. ಇಂದು ಸುದ್ದಿಯಲ್ಲಿರುವ, ಬಹು ಚರ್ಚಿತ ವಿಜಯ ಮಲ್ಯ ಒಡೆತನದ ಕಿಂಗ್‌ಫಿಷರ್ ವಿಮಾನಯಾನದ ದುರ್ಗತಿಯನ್ನು ಅದು ಪ್ರಾರಂಭಗೊಂಡ 2005 ರಲ್ಲೇ ತನ್ನ ಒಡಲಲ್ಲಿ ಹೊತ್ತುಕೊಂಡು ಬಂದಿತ್ತು. ನಾಗರೀಕ ವಿಮಾನಯಾನದಲ್ಲಿ ಲವಲೇಶವೂ ಅನುಭವವಿಲ್ಲದ ಈ ವಿಜಯ್ ಮಲ್ಯ ಕೇವಲ ತನ್ನ ಮೋಜಿಗಾಗಿ ಈ ಕಿಂಗ್‌ಫಿಷರ್ ನಾಗರೀಕ ವಿಮಾನಯಾನವನ್ನು ಬಳಸಿಸಿಕೊಂಡ. ಈ ವಿಮಾನಯಾನದ ಉದ್ಯಮದ ಮೂಲಕ ಈ ಜಾಗತೀಕರಣದ ಲಾಭಕೋರತನವನ್ನು ತಾನು ಸಹ ಹೊಡೆದುಕೊಳ್ಳಬಹುದೆಂದು ಯೋಜಿಸಿದ ವಿಜಯ್ ಮಲ್ಯ ಮತ್ತು ಇದಕ್ಕೆ ಕಣ್ಣು ಮುಚ್ಚಿಕೊಂಡು ಪೋಷಿಸಿದ ಕೇಂದ್ರ ಸರ್ಕಾರ ಇಂದು ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿವೆ.

2005 ರಿಂದ ಅಂದರೆ ಶುರುವಾದ ದಿನದಿಂದ ಇಲ್ಲಿಯವೆರೆಗೂ ಈ ಕಿಂಗ್‌ಫಿಷರ್  ವಿಮಾನಯಾನ ನಷ್ಟದಲ್ಲಿತ್ತು. ಆದರೆ ಈ ವಿಜಯ್ ಮಲ್ಯರ ಸಲುವಾಗಿ ತನ್ನ ನೀತಿ ನಿಯಮಾವಳಿಗಳನ್ನು ಸಡಲಿಸಿ ಸಾರ್ವಜನಿಕರ ರೊಕ್ಕವನ್ನು ಬಳಸಿಕೊಂಡು ಈ ಒಂದು ಖಾಸಗೀ ಉದ್ಯಮ ಸಂಪೂರ್ಣ ದಿವಾಳಿಯಾಗಲು ಕೇಂದ್ರ ಸರ್ಕಾರದ ರಾಜಕೀಯ ರಂಗ ಮೂಲ ಕಾರಣಕರ್ತರು. ಇವರಿಗೆ ಸಹಕಾರ ನೀಡಿದವರು ಈ ಕಿಂಗ್‌ಫಿಷರ್ ವಿಮಾನಯಾನದ ನಾಮನಿರ್ದೇಶಿತ ನಿರ್ದೇಶಕರು, ನಾಮಕಾವಸ್ತೆಯ ಛೇರ್‍ಮನ್, ನಿಗಾ ಇಡುವಲ್ಲಿ ಸೋತಂತಹ ಷೇರು ಮಾರುಕಟ್ಟೆಯ ನಿಯಂತ್ರಣಾಧಿಕಾರಿಗಳು, ಅತ್ಯಂತ ನಷ್ಟದಲ್ಲಿ ನಡೆಯುತ್ತಿದ್ದರೂ ಸಾರ್ವಜನಿಕರ ಹಣವನ್ನು ದುರಪಯೋಗಪಡೆಸಿಕೊಂಡು, ಹಣಕಾಸಿನ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆತೂರಿದ ಈ ಒಂದು ಪ್ರಮುಖ ಸಂಸ್ಥೆಯನ್ನು ಹತೋಟಿಗೆ ತರಲಾರದೆ ಪಲಾಯನಗೈದ SEBI ಮತ್ತು ಷೇರು ಪೇಟೆಯ ಉದ್ಯಮ. ಶುರುವಾದ ದಿನದಿಂದ ಕಿಂಗ್‌ಫಿಷರ್ ವಿಮಾನಯಾನ ಆರ್ಥಿಕ ದುಸ್ಥಿತಿಯಲ್ಲಿದ್ದರೂ ಈ ಸಂಸ್ಥೆಗೆ ಸರ್ಕಾರದ ನಿಯಮಾವಳಿಗಳನ್ನೆಲ್ಲ ಅನುಸರಿಸದೆ ತನಗೆ ಬೇಕಾದ ಇಂಧನವನ್ನು ನೇರವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ ಕೇಂದ್ರದ ವಿಮಾನಯಾನ ಇಲಾಖೆಯ ವೈಫಲ್ಯಗಳು ಇಂದು ದಾಖಲೆಗೊಂಡಿವೆ. ಇಂತಹ ಸಂದರ್ಭದಲ್ಲಿ ಈ ನಷ್ಟದಲ್ಲಿರುವ ಸಂಸ್ಥೆಗೆ ಷೇರುಗಳ ಮೂಲಕ ತಮ್ಮ ಹಣ ತೊಡಗಿಸಿದಂತಹ ಭಾರತದ ನಾಗರೀಕರಿಗೆ ಇದರ ದೌರ್ಬಲ್ಯಗಳನ್ನು ಹಾಗೂ ದಿಕ್ಕೆಟ್ಟ ಹಣಕಾಸಿನ ಪರಿಸ್ಥಿತಿಯನ್ನು ತಮಗಿರುವ ಅಧಿಕಾರ ಹಾಗೂ ಜವಬ್ದಾರಿಯನ್ನು (ಇದಕ್ಕಾಗಿಯೇ ಇವರಿಗೆ ಬಲು ದೊಡ್ಡ ಸಂಬಳ ನೀಡಲಾಗುತ್ತಿದೆ) ಬಳಸಿಕೊಂಡು ಸಾರ್ವನಿಕವಾಗಿ ಹಾಗೂ ಅಧಿಕೃತವಾಗಿ ಬಹಿರಂಗಪಡಿಸಬೇಕಾಗಿದ್ದ ನಾಮನಿರ್ದೇಶಿತ ನಿರ್ದೇಶಕರು ಹಾಗೂ ಇದರ ಛೇರ್‍ಮನ್  ಆರೋಪಿ ಸ್ಥಾನದ ಮೊದಲ ಸ್ಥಾನದಲ್ಲಿದ್ದಾರೆ. ಇವರ ಈ ಕರ್ತವ್ಯಲೋಪದ ಆರೋಪಕ್ಕೆ ತನಿಖೆಯಾಗಬೇಕಾಗಿದೆ. ಏಕೆಂದರೆ ಕಿಂಗ್‌ಫಿಷರ್  ವಿಮಾನಯಾನದಲ್ಲಿ ಸಾರ್ವಜನಿಕರ ಹಣವೂ ಬಳಸಿಕೊಳ್ಳಲಾಗಿದೆ.

ಇಂದು 6500 ಕೋಟಿ ರೂಪಾಯಿಗಳಷ್ಟು ನಷ್ಟದಲ್ಲಿರುವ ಈ ಸಂಸ್ಥೆ ಪಾವತಿಸಬೇಕಾದ 7500 ಕೋಟಿ ಸಾಲದ ಮೇಲಿನ ಬಡ್ಡಿಯ ಮೊತ್ತವೇ ಸಾವಿರ ಕೋಟಿಗಳಾಗುತ್ತದೆ. ಇನ್ನು ಅಸಲು ಮೊತ್ತದ ಪಾವತಿ ಬೇರೆ ಬಾಕಿ ಇದೆ !!! ಅಲ್ಲದೆ ಸಂಬಂಧಪಟ್ಟ ಅನೇಕ ಸರ್ಕಾರಿ ಸಂಸ್ಥೆಗಳಿಗೆ, ಕೇಂದ್ರದ ವಿಮಾನ ಖಾತೆಯಡಿ ಬರುವ ವಿಮಾನ ನಿಲ್ದಾಣದ ಕಾರ್ಯಕ್ರಿಯೆಗೆ, ಇಂಧನ ಪೂರೈಸುವ ಉದ್ದಿಮೆಗಳಿಗೆ ಈ ಸಂಸ್ಥೆ ತನ್ನ ಕೋಟ್ಯಾಂತರ ಮೊತ್ತದ ಬಾಕೀ ಹಣವನ್ನು ಪಾವತಿಸಬೇಕಾಗಿದೆ. ಇವೆಲ್ಲವೂ ಸಾರ್ವಜನಿಕ ಸಂಸ್ಥೆಗಳು. ಇದಲ್ಲದೆ ಈ ವಿಜಯ್ ಮಲ್ಯ ಅವರು ಸಾರ್ವಜನಿಕರಿಂದ ವಸೂಲಿ ಮಾಡಿದ ಕೋಟ್ಯಾಂತರ ಮೊತ್ತದ ಸೇವಾ ತೆರಿಗೆಯ ಹಣವನ್ನು ಸಹ ಸರ್ಕಾರಕ್ಕೆ ಪಾವತಿಸಿಲ್ಲ !!! ನೋಡಿ ಸರ್ಕಾರಿ ಸಂಸ್ಥೆಗಳನ್ನು ದೂಷಿಸಿ ಖಾಸಗೀಕರಣದ ಅಮಲಿನಲ್ಲಿರುವ ಈ ವ್ಯವಸ್ಥೆಯ ದುರಂತದ ಅಧ್ಯಾಯಗಳು. ಮೇಲುನೋಟಕ್ಕೇ ಇಂತಹ ಸಂಸ್ಥೆಯನ್ನು BIFR ಅಧಿ ನಿಯಮದಡಿ ರೋಗಗ್ರಸ್ಥ ಸಂಸ್ಥೆಯೆಂದೇ ಪರಿಗಣಿಸಿ ಅದರ ಎಲ್ಲಾ ಸಾರ್ವಜನಿಕ ಆಸ್ಥಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆದರೆ ನಮ್ಮ ಭಾರತದಲ್ಲಿ ಇದು ಮುಟ್ಟುಗೋಲಿಗೆ ಬದಲಾಗಿ ಸಹಾಯ ಹಸ್ತದ ನೆರವಿನ ರೂಪ ತಾಳಿಕೊಳ್ಳುತ್ತದೆ. ಈ ಎಲ್ಲದಕ್ಕೂ ಕಾರಣರಾದ ವಿಜಯ್ ಮಲ್ಯ ಅನುಕಂಪೆಗೆ ಪಾತ್ರರಾಗುತ್ತಾರೆ.

ಇಲ್ಲಿ ಮಾರುಕಟ್ಟೆಯಲ್ಲಿ ಕಾವಲು ಪಡೆಗಳಂತೆ ಕಾರ್ಯನಿರ್ವಹಿಸಬೇಕಿದ್ದ ಹಾಗೂ ನಷ್ಟದಲ್ಲಿರುವಂತಹ ಉದ್ಯಮಗಳ ವ್ಯವಹಾರವನ್ನು ನಿಷ್ಪಕ್ಷಪಾತವಾಗಿ ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಾದ SEBI ಮತ್ತು ಷೇರು ಪೇಟೆಯ ಉದ್ಯಮದ ಸೋಲು ಇಡೀ ವ್ಯವಹಾರದಲ್ಲಿ ಮೂಕಪ್ರೇಕ್ಷಕರಂತೆ ನಿದ್ರಿಸಿದ್ದು ಇಲ್ಲಿ ಎರಡನೇ ತಪ್ಪಿತಸ್ಥರು. ದಿನಕ್ಕೆ ಕೇವಲ 30 ರೂಪಾಯಿಯ ವರಮಾನವಿರುವ ಭಾರತದ ಬಡವರ ಹಾಗೂ ರೈತರ ಅತ್ಯಂತ ಕ್ಷುಲ್ಲಕ ಸಾಲವನ್ನೂ ಅವರ ಸಾಮಾನುಗಳನ್ನು ಹಾರಜು ಹಾಕುವಷ್ಟರ ಮಟ್ಟಿಗೆ ಕ್ರೂರತೆಯನ್ನು, ವ್ಯವಹಾರ ಬದ್ಧತೆಯನ್ನು, ನೀತಿ ನಿಯಮಾವಳಿಗಳನ್ನು ಪ್ರದರ್ಶಿಸುವ ನಮ್ಮ ಸರ್ಕಾರಿ ಒಡೆತನದ ಬ್ಯಾಂಕುಗಳು ಕಳೆದ 7 ವರ್ಷಗಳಿಂದ ಈ ಕಿಂಗ್‌ಫಿಷರ್ ವಿಮಾನಯಾನ ಆರ್ಥಿಕ ದುಸ್ಥಿತಿಯಲ್ಲಿದ್ದರೂ ಈ ಆರ್ಥಿಕ ದುರ್ಬಳಕೆಯಲ್ಲಿ ತಮ್ಮ ಹಣ ಪೋಲಾಗಿದ್ದನ್ನು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರೂ ಸಹ ಎಚ್ಚರಗೊಳ್ಳದೆ ನಿದ್ರಿಸಿದೆ. ಇದು ಇಲ್ಲಿ ಮೂರನೇ ತಪ್ಪಿತಸ್ಥರು. ಇಲ್ಲಿ ತಮ್ಮ ಕೋಟ್ಯಾಂತರ ಹಣವನ್ನು ದುರುಪಯೋಗಪಡೆಸಿಕೊಂಡ ಈ ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡು ಅದರ ಒಡೆಯ ವಿಜಯ್ ಮಲ್ಯರ ಮೇಲೆ ಮೊಕದ್ದಮೆ ಹೂಡಬೇಕಾಗಿದ್ದ ನಮ್ಮ ಸರ್ಕಾರಿ ಬ್ಯಾಂಕುಗಳು ಬದಲಾಗಿ ಮಾಡಿದ್ದು ಮತ್ತಷ್ಟು ಕೋಟ್ಯಾಂತರ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದು. ಇದು ಬ್ರಹ್ಮಾಂಡ ಭ್ರಷ್ಟಾಚಾರ ಅಲ್ಲವೇ?

(ಆಧಾರ ಡೆಕ್ಕನ್ ಹೆರಾಲ್ಡ್ ನಲ್ಲಿನ ಲೇಖನ. ಲೇಖಕ ಎನ್.ವಿ. ಕೃಷ್ಣಕುಮಾರ) ಇಲ್ಲಿ ಈ ವಿಜಯ್ ಮಲ್ಯ ತಮ್ಮ ಹೆಂಡ ಹಾಗೂ ರಾಸಾಯನಿಕ ಗೊಬ್ಬರಗಳ ಇತರ ಉದ್ದಿಮೆಗಳಿಂದ ಹಣವನ್ನು ತಂದು ಈ ನಷ್ಟದಲ್ಲಿರುವ ವಿಮಾನಯಾನದಲ್ಲಿ ಮತ್ತೆ ತೊಡಗಿಸಬಹುದಾಗಿತ್ತು. ಆದರೆ ಹಾಗೆ ಮಾಡದೆ ಆತ್ಮವಂಚನೆಯ ಈ ಮಲ್ಯ ಮತ್ತೆ ಸಾರ್ವಜನಿಕ ಹಣಕ್ಕೆ ಕೈಚಾಚುತ್ತಾನೆ. ಇದು ದೇಶದ್ರೋಹವಲ್ಲದೇ ಮತ್ತಿನ್ನೇನು? ಇವೆಲ್ಲ ಭ್ರಹ್ಮಾಂಡ ಭ್ರಷ್ಟತೆ ತನ್ನ ಕಣ್ಣಳತೆಯಲ್ಲಿ ನಡೆದರೂ ಇದರ ವಿರುದ್ಧ ಕಾರ್ಯಪ್ರವೃತ್ತರಾಗದ ಕೇಂದ್ರದ ನಾಗರೀಕ ವಿಮಾನಯಾನ ಸಚಿವಾಲಯ ಮೂಲಭೂತ ಹೊಣೆಯನ್ನು ಹೊರಬೇಕಾಗುತ್ತದೆ. ಇಷ್ಟರಲ್ಲಾಗಲೇ ಈ ವಿಜಯ್ ಮಲ್ಯ ಹಾಗೂ ಅವರ ಒಡೆತನದ ಕಿಂಗ್‌ಫಿಷರ್ ವಿಮಾನಯಾನದ ವಿರುದ್ಧ ಕೋರ್ಟ್‌ನಲ್ಲಿ ದಾವೆಯನ್ನು ಹೂಡಿ ಮೊಕದ್ದಮೆಯನ್ನು ಚಲಾಯಿಸಬೇಕಾಗಿದ್ದ ಕೇಂದ್ರದ ಖಾತೆ ಇನ್ನೂ ಕಣ್ಣಾಮುಚ್ಚಾಲೆಯಾಡುತ್ತಿದೆ. ಇದು ಖಾಸಗೀಕರಣದ ಅಸ್ಪಷ್ಟ ಹಾಗೂ ದೂರಗಾಮಿ ಪರಿಣಾಮಗಳ ತಿಳುವಳಿಕೆಯಿಲ್ಲದೆ ಅತ್ಯಂತ ರೋಚಕತೆಯಿಂದ ಹಾಗೂ ರೋಮಾಂಚನಗೊಂಡು ವರ್ತಿಸಿದುದರ ದುರಂತ ಇದು.

ಇನ್ನೊಂದು ಬದಿಯಲ್ಲಿ ಅರುಂಧತಿ ರಾಯ್‌ರಂತಹ ಲೇಖಕಿಯರು ಖಾಸಗೀಕರಣದ ವಿರುದ್ಧದ ಉಗ್ರವಾದ ವಿರೋಧಿನೀತಿಯನ್ನು ತಲೆಗೇರಿಸಿಕೊಂಡು ಆ ಚಿಂತನೆಗಳ, ಹಳಹಳಿಕೆಗಳ ರೋಚಕತೆಗೆ ಹಾಗೂ ಈ ರೋಚಕತೆ  ತಂದುಕೊಡುವ ಜನಪ್ರಿಯತೆಗೆ ಬಲಿಯಾಗಿದ್ದಾರೆ. ಅದ್ಭುತವಾಗಿ ತಲೆದೂಗಿಸುವಂತೆ ಆಕರ್ಷಕವಾಗಿ ಬರೆಯುವ ನೈಪುಣ್ಯತೆ ಇರುವ ಅರುಂಧತಿ ರಾಯ್ ಅವರ ಪ್ರಕಾರ ಇಂದು ಆದಿವಾಸಿಗಳ ದುರಂತಕ್ಕೆ, ದೇಶದ ಸಂಪಲ್ಮೂಲಗಳ ಕಣ್ಮರೆಗೆ ಸಂಪೂರ್ಣವಾಗಿ ಖಾಸಗೀಕರಣವನ್ನು, ಖಾಸಗೀ ಒಡೆತನದ ಉದ್ದಿಮೆದಾರರನ್ನೂ ಹೊಣೆಯಾಗಿಸುತ್ತಾ ಇದಕ್ಕೆ ಪೂರಕವಾಗಿ ಮಾಧ್ಯಮಗಳು, ರಾಜಕೀಯ ಪಕ್ಷಗಳು, ಸ್ವಾಯುತ್ತ ಸಂಸ್ಥೆಗಳು, ಪರಿಸರವಾದಿಗಳು, ಖಾಸಗೀ ಸಂಸ್ಥೆಗಳು, ರಾಜಕಾರಣಿಗಳು ಹೀಗೆ ಜಗತ್ತಿನಲ್ಲಿ ಬದುಕುವ ಎಲ್ಲಾ ಜೀವಚರಗಳನ್ನು ದೂಷಿಸುತ್ತಾ ಕಡೆಗೆ ಈ ಮಾವೋವಾದಿಗಳ ಹತ್ತಿರ ಬಂದು ಸುಮ್ಮನೆ ನಿಂತು ಬಿಡುತ್ತಾರೆ. ಈ ಅರುಂಧತಿ ರಾಯ್‌ರಂತಹ ಮಾರ್ಕ್ಸ್ ವಾದಿಗಳಿಗೆ ಬಂಡವಾಳಶಾಹಿಯ ಅರ್ಥ ಹಾಗೂ ಅದರ ಸ್ವರೂಪವನ್ನು ಬಹು ಸೀಮಿತಾರ್ಥದಲ್ಲಿ ಕಂಡುಕೊಂಡುಬಿಡುವ ಚಟವೇ ಇಲ್ಲಿನ ಈ ಗೋಜಲುಗಳಿಗೆ ಹಾಗೂ ಎಡಪಂಥೀಯ ಚಿಂತನೆಗಳ ಹೆಸರಿನಲ್ಲಿ ಸುಲಭವಾಗಿ ಹಾದಿ ತಪ್ಪುವ ರೋಚಕತೆಗೆ ದಾರಿ ಮಾಡಿಕೊಡುತ್ತದೆ.

ಇವರೆಲ್ಲರ ಪ್ರಕಾರ ಬಂಡವಾಳಶಾಹಿಗಳೆಂದರೆ ಯಾವನೋ ಶ್ರೀಮಂತನೊಬ್ಬ ತನ್ನಲ್ಲಿರುವ ದುಡ್ಡಿನಿಂದ (ಅದು ಜನರ ದುಡ್ಡು) ಒಂದು ಎಕರೆ ಜಾಗವನ್ನು (ಅದು ಜನರ ಜಾಗ) ಖರೀದಿಸಿ ಅಲ್ಲಿ ಒಂದು ಕಾರ್ಖಾನೆಯನ್ನು ಕಟ್ಟಿಸಿ (ಅಲ್ಲಿ ದುಡಿಯುವ ವರ್ಗ) ಕೆಲವು ಯಂತ್ರಗಳನ್ನು ತಂದು ಅದಕ್ಕೆ ಆಪರೇಟರನ್ನು ನೇಮಿಸಿಕೊಂಡು ಕಾರ್ಖಾನೆಯನ್ನು ಪ್ರಾರಂಭಿಸಿದ ತಕ್ಷಣ ಅಲ್ಲಿ ಮಾಲೀಕ, ಕಾರ್ಮಿಕ, ಹಾಗೂ ಯಂತ್ರಗಳೆಂಬ ಒಂದು ಬೂಜ್ವ ವ್ಯವಸ್ಥೆ ನಿರ್ಮಾಣಗೊಳ್ಳುತ್ತದೆ. ಸರಿ ಇನ್ನು ಶೋಷಣೆ ಶುರು. ಇದು ಅತ್ಯಂತ ಸರಳೀಕೃತಗೊಂಡ, ನಿಂತನೀರಾದ ಕಳೆದ 50 ವರ್ಷಗಳಲ್ಲಿ ಚಲನಶೀಲತೆಯನ್ನು ಕಳೆದುಕೊಂಡ ಚಿಂತನೆಯ ಮಾದರಿ. ಇದಕ್ಕೆ ನಾವು ಯಾವುದೇ ಘನ ಪಂಡಿತರ ಚಿಂತನೆಗಳ ವಾಕ್ಯಗಳನ್ನು, ಸಂಸ್ಕೃತಿ ಚಿಂತನೆಗಳನ್ನು, ಬೌದ್ಧಿಕತೆಯ ಕಸರತ್ತುಗಳನ್ನು ಜೋಡಿಸುತ್ತಾ ಹೋದರೂ ಕಡೆಗೆ ಬಂದು ನಿಲ್ಲುವುದು ಮರಳಿ ಅಲ್ಲಿಗೆ. ಈ ಬೂಜ್ವಾ ಜಗತ್ತಿನ ಸುತ್ತಾಟದಲ್ಲಿ ಭ್ರಷ್ಟತೆ ಸೇರಿಕೊಂಡು ಮತ್ತೊಂದು ಬಗೆಯ ಕಗ್ಗಂಟನ್ನು ಹುಟ್ಟು ಹಾಕುತ್ತದೆ. ಆದರೆ ನಾವು ಹೋಟೆಲಿಗೆ ಹೋಗಿ ಅಲ್ಲಿನ ವೇಟರನಿಗೆ ಏಕವಚನದಲ್ಲಿ ಕರೆದು ತಿಂಡಿ ಆರ್ಡರ ಮಾಡುವುದೂ ಸಹ ಬೂಜ್ವ ವರ್ತನೆ, ಶೂ ಪಾಲೀಶು ಮಾಡಿಸಿಕೊಳ್ಳುವುದು ಸಹ ಬೂಜ್ವ ವರ್ತನೆ, ಕೆಲಸದ ಆಳನ್ನು ಇಟ್ಟುಕೊಳ್ಳುವುದೂ ಸಹ ಬೂಜ್ವ ವರ್ತನೆ, ಹೀಗೆ ದಿನ ನಿತ್ಯದ ನಮ್ಮ ವರ್ತನೆಗಳನ್ನು ಸಹ ಶೋಷಣೆಗೆ ಉದಾಹರಿಸಿ ಹಾಸ್ಯಾಸ್ಪದರಾಗಬಹುದು ಎಂದು ಅರುಂಧತಿ ರಾಯ್ ತರದ ಚಿಂತಕರಿಗೆ ಇಂದಿಗೂ ಅರ್ಥವಾದಂತಿಲ್ಲ.

ರೋಚಕತೆಯ ತಮ್ಮ ಎಡಪಂಥೀಯ ಚಿಂತನೆಗಳಿಗೆ ಗಾಂಧೀ, ಲೋಹಿಯಾ ಹಾಗೂ ಅಂಬೇಡ್ಕರರನ್ನು ಒಳಗೊಳ್ಳಲು ನಿರಾಕರಿಸುವ ಅರುಂಧತಿ ರಾಯ್, ಈ ತ್ರಿವಳಿ ಚಿಂತಕರನ್ನು ಒಳಗೊಳ್ಳದೆ ಇಂದಿನ ಸಾಮಾಜಿಕ ಹಾಗೂ ರಾಜಕೀಯ ದುರಂತಕ್ಕೆ ಯಾವುದೇ ಉತ್ತರ ದೊರೆಯದು ಎನ್ನುವ ವಾಸ್ತವತೆಯನ್ನು ಬೇಕೆಂತಲೇ ತಿರಸ್ಕರಿಸುತ್ತಾರೆ. ಇವರ ಪ್ರಕಾರ ಇವರೆಲ್ಲರಿಗೆ ಈಗ ಪ್ರೇಕ್ಷಕರಿಲ್ಲ. ಆದರೆ ಅರುಂಧತಿ ರಾಯ್ ತರಹದ ಚಿಂತಕರಿಗೆ ಪರಿಹಾರಗಳು ಬೇಕಿಲ್ಲ. ಕೇವಲ ರೋಮಾಂಚನಗೊಳಿಸುವ, ಅಸ್ಪಷ್ಟ ಚಿಂತನೆಗಳು, ಮಾತುಗಳು ಹಾಗೂ ಇವು ನಿರಂತರವಾಗಿ ತಂದುಕೊಡುವ ಜನಪ್ರಿಯತೆಗಳ ಮೇಲೆ ಇವರ ಕಣ್ಣು. ಅಷ್ಟೇ. ಏನಿಲ್ಲದಿದ್ದರೂ ಈ ವಿಜಯ್ ಮಲ್ಯರನ್ನು ಮೊಕದ್ದಮೆಗೆ ಒಳಪಡಿಸಿ, ಅವರ ಅವ್ಯವಹಾರಕ್ಕೆ ನ್ಯಾಯಾಂಗ ಶಿಕ್ಷೆ ಸಿಗುವವರೆಗೂ ನಾನು ವಿಮಾನಯಾನವನ್ನು ಮಾಡುವುದಿಲ್ಲ ಎನ್ನುವ ಎದೆಗಾರಿಕೆ ಬೇಕು, ಏನಿಲ್ಲದಿದ್ದರೂ ಬಹುಸಂಖ್ಯಾತ ಬಡವರಿಗೆ ಶುದ್ಧ ಕುಡಿಯುವ ನೀರು ಸಿಗುವವರೆಗೂ ನಾನು ಶುದ್ದೀಕರಿಸಿದ ನೀರನ್ನು ಕುಡಿಯುವುದಿಲ್ಲ ಎನ್ನುವ ಎದೆಗಾರಿಕೆ ಬೇಕು, ಏನಿಲ್ಲದಿದ್ದರೂ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಎರಡು ಹೊತ್ತಿನ ಊಟ ದೊರಕುವವರೆಗೂ ನಾನು ಒಂದು ಹೊತ್ತಿನ ಊಟ ಮಾಡುವುದಿಲ್ಲ ಎನ್ನುವ ಎದೆಗಾರಿಕೆ ಬೇಕು ಈ ಎದೆಗಾರಿಕೆ ಗಾಂಧೀ ಮಾರ್ಗದಿಂದ ಪಡೆಯಬಹುದು. ಆದರೆ ಅರುಂಧತಿ ರಾಯ್‌ಗೆ ಗಾಂಧೀ ಹೆಸರೇ ಅಪಥ್ಯ. ಇಲ್ಲಿ ಅರಂಧತಿ ರಾಯ್ ಒಂದು ನೆಪವಷ್ಟೇ. ಯಾವುದೇ ಜನಪರ, ಸಾಮಾಜಿಕ ನ್ಯಾಯದ ವಾಸ್ತವ ಮಾರ್ಗದ ಪರಿಹಾರಗಳಿಲ್ಲದ ಚಿಂತನೆಗಳಿಗೆ ಹಾಗೂ ಚಿಂತಕರಿಗೆ ಕೂಡ ಇದು ಅನ್ವಯಿಸುತ್ತದೆ.

ಹಿಂದೂ ಕೋಮುವಾದ ಮತ್ತದರ ಕ್ಷುದ್ರ ವಿರಾಟರೂಪ


-ಬಿ. ಶ್ರೀಪಾದ ಭಟ್


ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವವರೆಗೂ ಈ ಆರ್.ಎಸ್.ಎಸ್. ಪ್ರೇರಿತ ಚಟುವಟಿಕೆಗಳನ್ನು ನಾವೆಲ್ಲಾ ಸದಾ ಕಾಲ ಪ್ರಜ್ಞಾಪೂರ್ವಕವಾಗಿಯೇ ವಿಶ್ಲೇಷಣೆ ಹಾಗೂ ವಿಮರ್ಶೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಏಕೆಂದರೆ ಇವರ ವ್ಯಾಪ್ತಿ ಹಾಗೂ ಪರಿಣಾಮಗಳು ಯಾವಾಗಲೂ ದೀರ್ಘಕಾಲದ್ದಾಗಿರುತ್ತವೆ ಹಾಗೂ ಸಮಾಜಕ್ಕೆ ಅಪಾಯಕಾರಿಯಾಗಿರುತ್ತವೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಹಿರಿಯಣ್ಣ ಆರ್.ಎಸ್.ಎಸ್. ಕೇಶವಕೃಪದಲ್ಲಿ ತನ್ನ ಕೋಮುವಾದಿ ಹಿಂದುತ್ವದ ವೈದಿಕ ಸಿದ್ಧಾಂತಕ್ಕೆ ಅನುಗುಣವಾಗುವಂತೆ, ಸಾಧ್ಯವಾದಷ್ಟು ತನ್ನ ಶಾಖಾ ಮಠಗಳನ್ನು, ಅಂಗಸಂಸ್ಧೆಗಳನ್ನು ಸರ್ಕಾರದ ದಿನನಿತ್ಯದ ಆಡಳಿತದಲ್ಲಿ ಭಾಗಿಯಾಗುವಂತಹ ಅನೇಕ ಮಾರ್ಗಗಳನ್ನು ಹಾಗೂ ಇದನ್ನು ಕಾರ್ಯಗತಗೊಳಿಸಲು ಆಡಳಿತದ ಆಯಕಟ್ಟಿನ ಇಲಾಖೆಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಅತ್ಯಂತ ಸಂವಿಧಾನಬಾಹಿರವಾಗಿ ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳುತ್ತದೆ.

ಇಲ್ಲಿ ಆರ್.ಎಸ್.ಎಸ್. ಆರ್ಥಿಕವಾಗಿ ಅತ್ಯಂತ ಫಲವತ್ತಾದ ಇಲಾಖೆಗಳಾದ ಕಂದಾಯ, ನೀರಾವರಿ, ಲೋಕೋಪಯೋಗಿ, ವಾಣಿಜ್ಯ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ಆಯ್ಕೆ ಮಾಡಿಕೊಳ್ಳುವುದು ಗೃಹ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಸದೀಯ ವ್ಯವಹಾರ ಹೀಗೆ ಸಾಂಸ್ಕೃತಿಕ ಮಜಲುಗಳುಳ್ಳ, ಜನ ಸಂಪರ್ಕವನ್ನುಳ್ಳ ಇಲಾಖೆಗಳನ್ನು. ಈ ಇಲಾಖೆಗಳಲ್ಲಿ ಆರ್.ಎಸ್.ಎಸ್. ಒಲವುಳ್ಳವರನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳುವ ಕರಡು ನೀತಿಯನ್ನು ರೂಪಿಸುತ್ತದೆ. ಇದನ್ನು ಆರ್.ಎಸ್.ಎಸ್. ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸುತ್ತದೆ.

ತನ್ನ ಹಿಂದುತ್ವದ ಮೂಲಭೂತ ಸಿದ್ಧಾಂತಗಳನ್ನು, ಸಂಘಟನಾತ್ಮಕ ಉದ್ದೇಶಗಳನ್ನು ಜಾರಿಗೊಳಿಸಲು ವಿಭಿನ್ನವಾದ ತಂತ್ರಗಳನ್ನು ಆಯೋಜಿಸುತ್ತದೆ. ಮೇಲ್ನೋಟಕ್ಕೆ ಅತ್ಯಂತ ಸಹಜವಾಗಿ ಕಾಣುವಂತೆ, ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೂ ತನಗೂ ಅಧಿಕೃತವಾಗಿ ಯಾವುದೇ ಸಂಬಂಧವಿಲ್ಲವೆನ್ನುವಂತೆ ತನ್ನ ಕಾರ್ಯತಂತ್ರಗಳನ್ನು ರೂಪಿಸುತ್ತದೆ. ಶಿಕ್ಷಣ ಇಲಾಖೆ ಈ ಆರ್.ಎಸ್.ಎಸ್.ನ ಮೊದಲ ಆದ್ಯತೆ ಮತ್ತು ಪ್ರಮುಖ ಆಯ್ಕೆ. ಈ ಶಿಕ್ಷಣ ಇಲಾಖೆಗೆ ತನ್ನ ಸ್ವಯಂಸೇವಕನನ್ನು, ಆರ್.ಎಸ್.ಎಸ್. ಕಾರ್ಯಕರ್ತರಾಗಿ ಕೆಲಸ ಮಾಡಿದ ಹಿನ್ನೆಲೆ ಉಳ್ಳವರನ್ನು ಮಾತ್ರ ಸಚಿವರನ್ನಾಗಿ ನೇಮಿಸಿಕೊಂಡು, ಆ ಮೂಲಕ ಆರ್‍.ಎಸ್.ಎಸ್. ಸಿದ್ಧಾಂತಕ್ಕೆ ಬದ್ಧರಾದಂತಹ ಶಿಕ್ಷಕರನ್ನು, ಅಧಿಕಾರಿಗಳನ್ನು ನೇಮಿಸಿಕೊಳ್ಳುವುದು, ಈ ಮೂಲಕ ಪಠ್ಯಪುಸ್ತಕಗಳ ಕೇಸರೀಕರಣವನ್ನು ತನ್ನ ಕಣ್ಣಳತೆಯಲ್ಲಿಯೇ ಜರಗುವಂತೆ ನೋಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತದೆ. ಇಲ್ಲಿ ಎಲ್ಲಿಯೂ ಅಧಿಕೃತವಾಗಿ ಆರ್.ಎಸ್.ಎಸ್. ತಾನು ನೇರವಾಗಿ ಪಾಲುದಾರನಾಗದಂತೆ ಎಚ್ಚರವಹಿಸುತ್ತದೆ.

ಆದರೆ ತನ್ನ ಮೂಲಭೂತ ಆಶಯಗಳನ್ನು ಮಾತ್ರ ಬಿಡದೇ ನೆರವೇರಿಸಿಕೊಳ್ಳುತ್ತದೆ. ಒಮ್ಮೆ ಶಿಕ್ಷಣದಲ್ಲಿ ಕೇಸರೀಕರಣವನ್ನು ಯಶಸ್ವಿಯಾಗಿ ಸಿದ್ಧಪಡಿಸಿ ಆ ಪಠ್ಯಪುಸ್ತಕಗಳನ್ನು ಸಂಬಂಧಪಟ್ಟ ಶೈಕ್ಷಣಿಕ ವರ್ಷದಲ್ಲಿ ಬಿಡುಗಡೆಗೊಳಿಸಿದ ನಂತರ ಇದನ್ನು ಮತ್ತೆ ಹಿಂದಕ್ಕೆ ಪಡೆಯುವುದು ಅತ್ಯಂತ ದುಸ್ತರವಾದ ಕಾರ್ಯ ಎಂದು ಆರ್.ಎಸ್.ಎಸ್.ಗೆ ಚೆನ್ನಾಗಿ ಗೊತ್ತು. ಹೀಗೆ ತನ್ನ ಕೋಮುವಾದದ ಹಿಂದುತ್ವದ, ವೈದಿಕ ಅಜೆಂಡವನ್ನು ಮಾರುಕಟ್ಟೆಗೆ, ಮಕ್ಕಳ ಮನಸ್ಸಿಗೆ ತಲುಪಿಸುವ ಬೃಹತ್ ಮಹಾತ್ವಾಕಾಂಕ್ಷಿ ಯೋಜನೆ ಕೈಗೂಡಿಸಿಕೊಳ್ಳುತ್ತದೆ. ಈ ರೀತಿಯಾಗಿ ಕೇಸರೀಕರಣಗೊಂಡ ಪುಸ್ತಗಳನ್ನು ಓದಿದ ಅಮಾಯಕ ಮುಗ್ಧ ವಿದ್ಯಾರ್ಥಿಗಳನ್ನು ನಂತರ ಶಿಸ್ತುಬದ್ಧ ಸಂಘಟನೆಯ ಮೂಲಕ ತನ್ನ ಪ್ರಮುಖ ವಿದ್ಯಾರ್ಥಿ ಘಟಕವಾದ ಎಬಿವಿಪಿಯ ತೆಕ್ಕೆಗೆ ಜಾರಿಕೊಳ್ಳುವಂತೆಯೂ ಅನೇಕ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇಲ್ಲಿನ ಶಿಬಿರಗಳಲ್ಲಿ ಅಧ್ಯಯನದ ಹೆಸರಿನಲ್ಲಿ, ಸಂಘಟನೆಯ ಹೆಸರಿನಲ್ಲಿ ಬಲಪಂಥೀಯ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬೇರುಬಿಡುವಂತೆ ನೋಡಿಕೊಳ್ಳಲಾಗುತ್ತದೆ. ಇವೆಲ್ಲವೂ ಸಹ ಕಾನೂನಿನ ಚೌಕಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರಗುವಂತೆ, ಅಧಿಕೃತವಾಗಿ ಸಂಯೋಜಿಸಲಾಗುತ್ತದೆ. ಹೇಳಿ ಇಲ್ಲಿ ಹಿರಿಯಣ್ಣ ಆರ್.ಎಸ್.ಎಸ್. ಎಲ್ಲಾದರೂ ನೇರವಾಗಿ ಕಾಣಿಸಿಕೊಂಡಿದ್ದಾರೆಯೇ? ಇಲ್ಲವೇ ಇಲ್ಲ !! ಆದರೆ ತನ್ನ ಗುರಿ ಮುಟ್ಟುವ ಜಾಗಕ್ಕೆ ಮಾತ್ರ ನೇರಾವಾಗಿ ಶಿಸ್ತುಬದ್ಧವಾಗಿ ತಲುಪುತ್ತದೆ. ಇದೊಂದು ಯಶಸ್ವಿ ಕಾರ್ಯಾಚರಣೆ ಅಂದರೆ ಕೂಂಬಿಂಗ್ !!

ತನ್ನ ಶಾಖಾ ಮಠಗಳಾದ ವಿದ್ಯಾಭಾರತಿ (ದೇಶಾದ್ಯಾಂತ 28000 ಶಾಲೆಗಳನ್ನು 32,50,000 ವಿದ್ಯಾರ್ಥಿಗಳನ್ನು ಹೊಂದಿದೆ) ಸೇವಾ ಭಾರತಿ, ಏಕಲ ವಿದ್ಯಾಲಯ (ದೇಶಾದ್ಯಾಂತ 35000 ಹಳ್ಳಿಗಳಲ್ಲಿ 1000000 ವಿದ್ಯಾರ್ಥಿಗಳು) ಸರಸ್ವತಿ ಬಾಲ ಮಂದಿರ, ಗೀತ ಮಂದಿರ, ಭಾರತೀಯ ವಿದ್ಯಾನಿಕೇತನಗಳಂತಹ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಂಸ್ಥೆಗಳ ಮೂಲಕ ಇಂಡಿಯಾದ ರಾಷ್ಟ್ರೀಯತೆಯನ್ನು ತಮ್ಮ ಮೂಲಭೂತವಾದದ ಹಿಂದೂ ರಾಷ್ಟ್ರೀಯತೆಯೊಂದಿಗೆ ಸಮೀಕರಿಸಿಕೊಳ್ಳುವ ಹಪಾಹಪಿತನ, ಅತಿ ಭಾವುಕತೆಯ ಹುಸಿ ರಾಷ್ಟ್ರೀಯತೆ ಹಾಗೂ ಅಂಧ ಧಾರ್ಮಿಕತೆಯ ಹೆಸರಿನಲ್ಲಿ ಅಖಂಡ ಹಿಂದುತ್ವದ ಪ್ರತಿಪಾದನೆ, ವೇದ ಹಾಗೂ ಉಪನಿಷತ್‍ಗಳ ನಿರಂತರ ಭೋಧನೆ, ವರ್ಣಾಶ್ರಮದ ಪ್ರಾಮುಖ್ಯತೆ, ಸನಾತನ ಪರಂಪರೆಯನ್ನು ಉಳಿಸಿಕೊಳ್ಳುವ ರೂಪುರೇಷೆಗಳು ಹಾಗೂ ಬಹುಸಂಖ್ಯಾತ ಅವೈದಿಕತೆಯ ಈ ನೆಲ ಸಂಸ್ಕೃತಿಯ ನಾಶವನ್ನು, ಅಲ್ಪಸಂಖ್ಯಾತರ ತುಚ್ಛೀಕರಣಗಳಂತಹ ಅತ್ಯಂತ ಜೀವವಿರೋಧಿ ಹಾಗೂ ಅಮಾನವೀಯ ಪಠ್ಯಗಳನ್ನು ನಿರಂತರವಾಗಿ ಬೋಧಿಸುವುದು ಆರ್.ಎಸ್.ಎಸ್.ನವರ ಪ್ರಮುಖ ಕಾರ್ಯತಂತ್ರ.

ಇದಕ್ಕಾಗಿ ತನ್ನ ರಾಷ್ಟ್ರೋತ್ಥಾನ ಪ್ರಕಾಶನದ ಮೂಲಕ ಸಂಸ್ಕೃತಿ ಜ್ಞಾನಪರೀಕ್ಷೆ ಹಾಗೂ ಸಂಸ್ಕೃತಿ ಜ್ಞಾನ ಪ್ರಶ್ನೋತ್ತರಗಳು ಎನ್ನುವ ಟಿಪ್ಪಣಿಗಳಡಿಯ ಜೀವವಿರೋಧಿ, ಪುರೋಹಿತಶಾಹಿ ಪುಸ್ತಕಗಳನ್ನು ಆಯಕಟ್ಟಿನ ಸ್ಥಳಗಳಿಗೆ, ಎಲ್ಲಾ ವಿದ್ಯಾಸಂಸ್ಥೆಗಳಿಗೆ ಮತ್ತು ಪ್ರಮುಖವಾಗಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ರಚನಸಮಿತಿಗೆ (ಇಲ್ಲಿ ಆಗಲೇ ಆರ್.ಎಸ್.ಎಸ್. ತನ್ನ ಗುಂಪಿನ ಶಿಕ್ಷಣ ಸಚಿವರ ಮೂಲಕ ಸಂಘ ಪರಿವಾರದ ಹಿನ್ನೆಲೆಯುಳ್ಳ ಶಿಕ್ಷಣ ತಜ್ಞರನ್ನು ಸದಸ್ಯರು ಹಾಗೂ ಅಧ್ಯಕ್ಷರನ್ನಾಗಿ ಆರಿಸಿರುತ್ತದೆ.) ತಲಪುವಂತೆ ಅಚ್ಚುಕಟ್ಟಾಗಿ ಆಯೋಜಿಸುತ್ತದೆ. ಈ ಆರ್.ಎಸ್.ಎಸ್. ಮೇಲ್ವಿಚಾರಣೆಯಲ್ಲಿ, ಅಖಂಡ ಹಿಂದುತ್ವದ ತತ್ವದಡಿಯಲ್ಲಿ ರೂಪಿತವಾದ ಪಠ್ಯ ಪುಸ್ತಕಗಳಲ್ಲಿ ದುರುದ್ದೇಶಪೂರಿತ, ಹಸೀ ಸುಳ್ಳುಗಳನ್ನು ಪಠ್ಯಗಳೆಂದು ತುಂಬಿರುವುದಕ್ಕೆ ಕೆಲವು ಉದಾಹರಣೆಗಳು.

1. 9ನೇ ಸೆಪ್ಟೆಂಬರ್ 2009 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತು “ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಹಾಗೂ ಗ್ರಂಥಾಲಯಗಳು ರಾಷ್ಟ್ರೋತ್ಥಾನ ಪರಿಷತ್ ಪ್ರಕಟಿಸಿರುವ ಸುಮಾರು 300 ಪುಸ್ತಕಗಳನ್ನು ಕಡ್ಡಾಯವಾಗಿ ಖರೀದಿಸಬೇಕು. ಇದಕ್ಕಾಗಿ ತಗಲುವ ವೆಚ್ಚವನ್ನು ಶಾಸಕರ ಸ್ಥಿರನಿಧಿಯಲ್ಲಿ ಅಭಿವೃದ್ಧಿ ವೆಚ್ಚಕ್ಕಾಗಿ ಇರುವ ಹಣವನ್ನು ಬಳಸಿಕೊಳ್ಳಬೇಕು. ಇದಕ್ಕಾಗಿ ತಗಲುವ ಅಂದಾಜು ವೆಚ್ಚ 17 ಕೋಟಿ.  – ಕೆನರಾ ಟೈಮ್ಸ್.

2. ಕೇಂದ್ರದಲ್ಲಿ NDA ಸರ್ಕಾರ ಆಡಳಿತವಿದ್ದಾಗ ಶಿಕ್ಷಣ ಮಂತ್ರಿಯಾಗಿದ್ದ ಆರ್.ಎಸ್.ಎಸ್. ಸ್ವಯಂಸೇವಕರಾದ ಮುರಳೀ ಮನೋಹರ ಜೋಷಿಯವರು UGC ಮೂಲಕ NCERT ಪಠ್ಯಕ್ರಮದಲ್ಲಿ ಮೂಢನಂಬಿಕೆಗಳ ಅಗರವಾದಂತಹ  “ಜ್ಯೋತಿಷ್ಯಾಸ್ತ್ರ, ವೇದ ಪಾಠಗಳು, ಪುರೋಹಿತ ಕಾರ್ಯಗಳು, ವೇದ ಗಣಿತ ಶಾಸ್ತ್ರ”ಗಳನ್ನು ಸೇರಿಸಲಾಯಿತು. ನಂತರ ತೀವ್ರ ಪ್ರತಿರೋಧದ ನಡುವೆ ಇದನ್ನು ತಡೆಹಿಡಿಯಲಾಯಿತು. ಈಗಲೂ ಕೂಡ ಇದು ಆರ್.ಎಸ್.ಎಸ್.ನ ಅತ್ಯಂತ ಅಚ್ಚುಮೆಚ್ಚಿನ, ಜೀವಕ್ಕೆ ಹತ್ತಿರವಾದ ಪಠ್ಯಗಳು. ದೇಶ, ಕಾಲ, ಜಗತ್ತು ಆಧುನಿಕತೆಗೆ ತೆರೆದುಕೊಂಡು ಎಷ್ಟೇ ಮುಂದಕ್ಕೆ ಓಡುತ್ತಿರಲಿ ತಮ್ಮದು ಮಾತ್ರ ಧಾರ್ಮಿಕತೆ, ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ ತಮ್ಮ ಪ್ರೀತಿಯ ಭಾರತ ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ಶಿಲಾಯುಗಕ್ಕೆ ಮರಳಿ ಕೊಂಡೊಯ್ಯುವ ಪ್ರಣಾಳಿಕೆ ಈ ಆರ್.ಎಸ್.ಎಸ್.ನದು.

3.  A.D. 1528 – A.D.1914 ರ ಮಧ್ಯದಲ್ಲಿ ರಾಮ ಜನ್ಮಭೂಮಿಯನ್ನು 77 ಸಲ ಅತಿಕ್ರಮಣ ಮಾಡಲಾಗಿದೆ, ಇದನ್ನು ಪ್ರತಿರೋಧಿಸಿ 3.5 ಲಕ್ಷ ಮುಗ್ಧ ಭಕ್ತರು ತಮ್ಮ ಪ್ರಾಣ ತ್ಯಾಗ ಮಾಡಿದರು. ಅಲ್ಲದೆ ನವೆಂಬರ್ 2, 1990 ರಂದು ಹಿಂದೂ ಭಕ್ತರು ರಾಮ ಜನ್ಮಭೂಮಿಗೆ ತೆರಳಿ ಅಲ್ಲಿನ ಬಾಬ್ರಿ ಮಸೀದಿಯನ್ನು ಕೆಡವಲು ಹೋದಾಗ ಪೋಲೀಸರ ಗುಂಡೇಟಿಗೆ ಬಲಿಯಾದರು. ಅಂದಿನಿಂದ ಆ ದಿನವನ್ನು ಭಾರತದ ಇತಿಹಾಸದಲ್ಲಿ ಕಪ್ಪು ಶುಕ್ರವಾರವನ್ನಾಗಿ ಆಚರಿಸಲಾಗುತ್ತಿದೆ.

4. 2006 ರಲ್ಲಿ ಬಿಜೆಪಿಯ ಸಹಭಾಗಿತ್ವದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಮಂತ್ರಿಯಾಗಿದ್ದ ಬಿಜೆಪಿಯ ಡಿ.ಎಚ್.ಶಂಕರಮೂರ್ತಿಯವರು ಟಿಪ್ಪು ಸುಲ್ತಾನ್ ಕುರಿತಾಗಿ ಪಠ್ಯ ಪುಸ್ತಕದಲ್ಲಿರುವ ಎಲ್ಲಾ ವಿಷಯಗಳನ್ನು ತೆಗೆದು ಹಾಕಬೇಕೆಂದು ಕರೆಕೊಟ್ಟಿದ್ದರು. ಈ ಸಂಘ ಪರಿವಾರದ ಶಂಕರಮೂರ್ತಿಯವರ ಪ್ರಕಾರ ಟಿಪ್ಪು ಹಿಂದೂ ವಿರೋಧಿ ಹಾಗೂ ಕನ್ನಡ ವಿರೋಧಿ. ಇವನನ್ನು ಓದಿಕೊಂಡರೆ ವಿದ್ಯಾರ್ಥಿಗಳು ಹಾದಿ ತಪ್ಪುತ್ತಾರೆ.

5. ಗುಜರಾತ್‍ನ ಹತ್ತನೇ ತರಗತಿಯ ಸಮಾಜ ವಿಜ್ಞಾನದ ಪಠ್ಯ ಪುಸ್ತಕದಲ್ಲಿ “ದೇಶದ ಕಂಟಕಗಳು ಹಾಗೂ ಅದಕ್ಕೆ ಪರಿಹಾರಗಳು” ಎನ್ನುವ ತಲೆ ಬರಹದಡಿ “ಅಲ್ಪಸಂಖ್ಯಾತರು ಅತ್ಯಂತ ದೊಡ್ಡ ಕಂಟಕರು. ನಂತರದ ಕಂಟಕರು ದಲಿತರು ಹಾಗೂ ಆದಿವಾಸಿಗಳು. ಮುಸ್ಲಿಂರು ಹಾಗೂ ಕ್ರಿಶ್ಚಿಯನ್ನರು ಪರಕೀಯರು,” ಎಂದು ಬರೆಯಲಾಗಿದೆ. ಇದಕ್ಕೆ ತೀವ್ರ ವಿರೋಧ ಎದುರಾದಾಗ ಸರ್ಕಾರ ಈ ವಿವಾದಿತ ಭಾಗಗಳನ್ನು ತೆಗೆಯಲಾಗಿದೆ ಎಂದು ಹೇಳಿತು. ಆದರೂ ಇಂದಿಗೂ ಆ ರಾಜ್ಯದ ಅನೇಕ ಭಾಗಗಳಲ್ಲಿ ಈ ಸಂಗತಿಗಳನ್ನು ಉದಾಹರಿಸುತ್ತಾರೆ. ಅಲ್ಲಿನ ಸೆಕೆಂಡರಿ ಶಾಲೆಗಳಲ್ಲಿ ನರೇಂದ್ರ ಮೋದಿಯ ಜೀವನವನ್ನು ಅಧ್ಯಯನಕ್ಕಾಗಿ ಸೇರಿಸಲಾಗಿದೆ. ( ಕೃಪೆ :ಫ್ರಂಟ್ ಲೈನ್ 25.2. 2012)

6. ನರೇಂದ್ರ ಮೋದಿಯ ಆಡಳಿತದ ಗುಜರಾತ್‍ನಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಹಿಟ್ಲರ್ ಹಾಗೂ ನಾಝೀಗಳನ್ನು ವೈಭವೀಕರಿಸುತ್ತಾ ಈ ರೀತಿ ಬರೆಯಲಾಗಿದೆ: “ಹಿಟ್ಲರ್ ಅತ್ಯಂತ ಉಗ್ರವಾದವನ್ನು ಪ್ರತಿಪಾದಿಸಿದ ಈ ಮೂಲಕ ಜರ್ಮನಿಯನ್ನು ಮೇಲ್ಮಟ್ಟದ ರಾಷ್ಟ್ರೀಯತೆಯೆಡೆಗೆ ಕೊಂಡೊಯ್ದ.”

7. ಮಧ್ಯ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಭಗವದ್ಗೀತೆಯನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಲು ಅನೇಕ ಕುತಂತ್ರಗಳನ್ನು ಮಾಡಲಾಗುತ್ತಿದೆ. ಮೊದಲು ಪುರೋಹಿತಶಾಹಿ ಧಾರ್ಮಿಕ ಮಠಗಳಿಂದ ಗೀತ ಅಭಿಯಾನ ಎನ್ನುವ ಹೆಸರಿನಡಿಯಲ್ಲಿ ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಿ ನಂತರ ಪಠ್ಯಗಳ ಮುಖಾಂತರ ಅವರಲ್ಲಿ ವೈದಿಕತೆಯ ಸನಾತನ ವಿಚಾರಗಳನ್ನು ತುಂಬುವ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತದೆ. ಇದನ್ನು ಮುಖ್ಯಮಂತ್ರಿ (ಆರ್.ಎಸ್.ಎಸ್. ಸ್ವಯಂಸೇವಕರಾದ ಸದಾನಂದ ಗೌಡ) ಶಿಕ್ಷಣ ಮಂತ್ರಿ (ಆರ್.ಎಸ್.ಎಸ್. ಸ್ವಯಂಸೇವಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ) ಪ್ರಮುಖ ಆದ್ಯತೆಯನ್ನಾಗಿ ಕೈಗೆತ್ತಿಕೊಳ್ಳುತ್ತಾರೆ. ನಮ್ಮಲ್ಲಿ ಕರ್ನಾಟಕದ 5ನೇ ಹಾಗೂ 8ನೇ ತರಗತಿಯ ಪಠ್ಯ ಪುಸ್ತಕಗಳನ್ನು ಕೇಸರೀಕರಣಗೊಳಿಸುವ ಕಾರ್ಯತಂತ್ರಗಳನ್ನು ಚಿಂತಕ ಹಾಗೂ ವಕೀಲರಾದ ಸಿ.ಎಸ್.ದ್ವಾರಕಾನಾಥ್ ಅವರು ವಿವರವಾಗಿ ಬಯಲುಗೊಳಿಸಿದ್ದಾರೆ. ಅವರು ಪ್ರಚುರ ಪಡಿಸಿದ ವಿಷಯಗಳು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುತ್ತವೆ.

8. ಶಿಕ್ಷಣ ಮಂತ್ರಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪದೇ ಪದೇ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತಿರುತ್ತಾರೆ. ಅಮೂಲಾಗ್ರ ಬದಲಾವಣೆ ಅಂದರೆ ಅಖಂಡ ಹಿಂದುತ್ವದ ಪ್ರತಿಪಾದನೆ ಎಂದರ್ಥ. ಈ ಅಖಂಡ ಹಿಂದುತ್ವದ ಪ್ರತಿಪಾದನೆಯಲ್ಲಿ ಮತ್ತೆ ವರ್ಣಾಶ್ರಮ ಪದ್ಧತಿಯನ್ನು, ವೈದಿಕ ಆಚರಣೆಗಳನ್ನು ವೈಭವೀಕರಿಸುವ ಚಿಂತನೆಗಳನ್ನು ಪಠ್ಯಕ್ರಮವನ್ನಾಗಿ ರೂಪಿಸಲಾಗುತ್ತದೆ. ಆ ಮೂಲಕ ಈ ನೆಲದ ಅವೈದಿಕ ಸಂಸ್ಕೃತಿಯನ್ನು, ದಲಿತರ ಜಾಗೃತ ಪ್ರಜ್ಞೆಯನ್ನೇ ಅಲ್ಲಗೆಳೆಯುಲಾಗುತ್ತದೆ ಹಾಗೂ ನಿಧಾನವಾಗಿ ನಾಶಪಡಿಸಲಾಗುತ್ತದೆ.

ರಾಮಾಯಣ ಕೃತಿಯನ್ನು ತಾನೊಬ್ಬನೇ ಗುತ್ತಿಗೆ ಹಿಡಿದವನಂತೆ, ಅದರ ವ್ಯಾಖ್ಯಾನವನ್ನು ತಾವು ಮಾತ್ರ ಮಾಡಬೇಕು ಎನ್ನುವಂತೆ ವರ್ತಿಸುವ ಆರ್.ಎಸ್.ಎಸ್. ಈ ಕೃತಿಯನ್ನು ವೈಚಾರಿಕವಾಗಿ, ವಿಶ್ಲೇಷಣಾತ್ಮಕವಾಗಿ ಸೆಮಿನಾರ್ ಗಳಲ್ಲಿ, ಕಮ್ಮಟಗಳಲ್ಲಿ ಚರ್ಚೆಗಳನ್ನು ನಡೆಸಿದಾಗ, ಇದರ ಕುರಿತಾದ ವೈಚಾರಿಕ ಚಿಂತನೆಗಳ ಲೇಖನವನ್ನು ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಲ್ಲಿ ಅಧ್ಯಯನಕ್ಕಾಗಿ ಅಳವಡಿಸಿದಾಗ ತನ್ನ ಅಂಗ ಪಕ್ಷಗಳಾದ ವಿಎಚ್‍ಪಿ ಮತ್ತು ಎಬಿವಿಪಿ ಮೂಲಕ ವಿರೋಧಿ ಧೋರಣೆಯನ್ನು ವ್ಯಕ್ತಪಡಿಸುತ್ತದೆ. ಪ್ರತಿಭಟನೆಗಳನ್ನು, ಲೇಖಕರ ಚಾರಿತ್ರ್ಯವಧೆಯನ್ನೂ ನಡೆಸಲಾಗುತ್ತದೆ. ಇದು ಅತ್ಯಂತ ಕೀಳು ಮಟ್ಟದಲ್ಲಿ ನಡೆಯುವಂತೆ ಮೇಲ್ವಿಚಾರಣೆ ನಡೆಸುವುದು ಆರ್.ಎಸ್.ಎಸ್.

ಎ.ಕೆ. ರಾಮಾನುಜಂ ಅವರ “ಮುನ್ನೂರು ರಾಮಾಯಣಗಳು” ಎನ್ನುವ ಪ್ರಬಂಧವನ್ನು 2008 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಇತಿಹಾಸದ ಪಠ್ಯವಾಗಿ ಆಯ್ಕೆ ಮಾಡಲಾಯಿತು. ಅದನ್ನು ಪಠ್ಯಕ್ರಮವನ್ನಾಗಿಯೂ ಅಳವಡಿಸಲಾಯಿತು. ಆದರೆ ಈ ಆರ್.ಎಸ್.ಎಸ್.ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಪೋಲೀಸರ, ಅಧಿಕಾರಿಗಳ ಸಮ್ಮುಖದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲೇ ದಾಳಿಯನ್ನು ನಡೆಸಿ ತನ್ನ ಗೂಂಡಾ ವರ್ತನೆಯನ್ನು ತೋರಿಸಿತು. ಇವರಿಗೆ ರಾಮಾಯಣವನ್ನು ತಮ್ಮ ಮೂಗಿನ ನೇರಕ್ಕೆ ಮಾತ್ರ ಬರೆಯಬೇಕು ಅಷ್ಟೇ. ಇದು ಪ್ರಜಾಪ್ರಭುತ್ವದಲ್ಲಿ ಆರ್.ಎಸ್.ಎಸ್.ತನ್ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯನ್ನು ಬಳಸಿಕೊಂಡು ನಡೆಸುತ್ತಿರುವ ದೌರ್ಜನ್ಯದ ಮಾದರಿ. ಪ್ರೊಫೆಸರ್ ವಿನೋಜ್ ಅಬ್ರಹಂ Centre for Development Studies (CDS), ತಿರುವನಂತಪುರಂ ಅವರು ಹೇಳಿದ್ದು.  “ಎ.ಕೆ. ರಾಮಾನುಜಂ ಅವರ” ಮುನ್ನೂರು ರಾಮಾಯಣಗಳು” ಪ್ರಬಂಧದ ಮೇಲೆ ನಡೆದ ಹಲ್ಲೆ ನಿಜಕ್ಕೂ ಚಿಂತೆಗೀಡುಮಾಡಿದೆ. ಜನ ಸಾಮಾನ್ಯರ ನಂಬುಗೆಯೊಳಗೇ ನಡೆಸುವ ಬಹುಮುಖೀ ಚಿಂತನೆಯನ್ನು ನಾಶಪಡಿಸಲಾಗಿದೆ. ಸಂವಿಧಾನದ ಮೂಲ ಆಶಯವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಹಕ್ಕನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುತ್ತಿದೆ.”

ಮುನ್ನೂರು ರಾಮಾಯಣದ ವಿರೋಧದ ಬೆನ್ನಲ್ಲೇ 25 ಫೆಬ್ರವರಿ 2008 ರಂದು ಸಂಘಪರಿವಾರ ವಿದ್ಯಾಲಯದ ಆವರಣದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಯಿತು. ಈ ಸಂಘ ಪರಿವಾರದವರು ತಮ್ಮೊಂದಿಗೆ ದೃಶ್ಯ ಮಾಧ್ಯಮದವರನ್ನೂ ಕರೆದುಕೊಂಡು ಬಂದು ಇತಿಹಾಸ ವಿಭಾಗದ ಮುಖ್ಯಸ್ಥರಾದ ಎಸ್.ಝ್. ಜಾಫ಼್ರಿಯವರ ಮೇಲೆ ಹಲ್ಲೆ ನಡೆಸಿ ಅಲ್ಲಿನ ಪೀಠೋಪಕರಣಗಳನ್ನು, ಧ್ವನಿವರ್ಧಕಗಳನ್ನು ಧ್ವಂಸಗೊಳಿಸಿ, ಪುಸ್ತಕಗಳನ್ನು ಹರಿದುಹಾಕಿದರು. ಈ ದುಷ್ಕೃತ್ಯಕ್ಕೆ ಪೋಲೀಸಿನವರು ಸಹ ಮೂಕ ಪ್ರೇಕ್ಷರಾಗಿದ್ದರು. ಆಗ ಅಲ್ಲಿನ ಬೇರೆ ವಿಭಾಗದ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು –   ಅಮರ್ ಫರೂಕಿ, ಪೀಪಲ್ಸ್ ಡೆಮಾಕ್ರಸಿ ಚಿಂತಕ ಖಲೀದ್ ಅಖ್ಥರ್ ಅವರ ಮಾತುಗಳಲ್ಲೇ ಹೇಳುವುದಾದರೆ ಎ.ಕೆ. ರಾಮಾನುಜಂ ಅವರ “ಮುನ್ನೂರು ರಾಮಾಯಣಗಳು, 5 ಉದಾಹರಣೆಗಳು ೩ ಚಿಂತನೆಗಳು” ಪ್ರಬಂಧವನ್ನು ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಇತಿಹಾಸದ ಪಠ್ಯವಾಗಿ ಆಯ್ಕೆಯಾದಾಗ, ಈ ಹಿಂದೂ ಮಹಾಕಾವ್ಯವನ್ನು ಅತ್ಯಂತ ಆಳವಾಗಿ, ವಿಸ್ತಾರವಾಗಿ, ಬಹುಮುಖೀ ನೆಲೆಯ ತೌಲನಿಕ ಅಧ್ಯಯನ ಮಾಡುವುದರ ಮೂಲಕ ಆ ಮಹಾಕಾವ್ಯಕ್ಕೆ ಅತ್ಯಂತ ನ್ಯಾಯ ಒದಗಿಸಿಕೊಡಲಾಗುತ್ತದೆ ಎಂದು ಈ ಆರ್.ಎಸ್.ಎಸ್. ಹಾಗೂ ಎಬಿವಿಪಿಯವರು ಸಂತೋಷಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಇಲ್ಲಿನ ಪ್ರಬಂಧ ಈ ಮಹಾಕಾವ್ಯವನ್ನು ವಿವರವಾಗಿ ಹೇಳುವುದರ ಮೂಲಕ ಇಲ್ಲಿನ ಚಲನಶೀಲತೆಯನ್ನು, ವೈವಿಧ್ಯತೆಯನ್ನು, ಈ ದೇಶದ ರಾಮನನ್ನು ಜಗತ್ತಿಗೇ ಪ್ರಚುರಪಡಿಸಲಾಗುತ್ತದೆ ಎನ್ನುವ ವಿಷಯವೇ ಈ ಬಲಪಂಥೀಯರಿಗೆ ಹೆಮ್ಮೆಯನ್ನುಂಟು ಮಾಡಬೇಕಾಗಿತ್ತು. ಆದರೆ ಸಮಾನ ನಾಗರಿಕ ಸಂಹಿತೆ, ಏಕರೂಪಿ ಭಾರತ, ಏಕರೂಪಿ ಸಂಸ್ಕೃತಿ, ಈಗ ಏಕರೂಪಿ ರಾಮಾಯಣ ಈ ಎಂದೆಂದಿಗೂ ಬಗ್ಗಿಸಲಾಗದ ದೃಷ್ಟಿಕೋನದಲ್ಲಿ ನಮ್ಮ ಜೀವಪರವಾದ ಬಹುರೂಪಿ, ವೈವಿಧ್ಯತೆಗಳ ಚಿಂತನೆಗಳು ಒಂದಾಗುವುದೇ ಇಲ್ಲ ಎನ್ನುವುದು ಜಗಜ್ಜಾಹೀರಾಗಿದೆ.

ಶ್ರೇಷ್ಠ ಚರಿತ್ರೆಗಾರ್ತಿ ಹಾಗೂ ಚಿಂತಕಿ ರೊಮಿಲಾ ಥಾಪರ್ ( 1999 ರಲ್ಲಿ) “ನಾನು 35 ವರ್ಷಗಳ ಹಿಂದೆ NCERT ಗಾಗಿ 6 ಮತ್ತು 7ನೇ ತರಗತಿಗಳಿಗೆ ಒಂದು ಪುಸ್ತಕವನ್ನು ಬರೆದಿದ್ದೆ. ಅದರಲ್ಲಿ ಒಂದು ಸಣ್ಣ ಪರಿಚ್ಛೇದದಲ್ಲಿ ನಾನು ಮಹಮದ್ ಘಜನಿಯ ಬಗ್ಗೆ ಬರೆಯುತ್ತಾ “ಅವನು ಮೂರ್ತಿ ಭಂಜಕನಾಗಿದ್ದ, ಭಾರತ ದೇಶದ ದೇವಾಲಯಗಳ ಮೇಲೆ ದಾಳಿ ನಡೆಸಿ ಅಲ್ಲಿ ಹುದುಗಿದ್ದ ಐಶ್ವರ್ಯವನ್ನು ಲೂಟಿ ಮಾಡಿ ಮರಳಿ ತನ್ನ ದೇಶವಾದ ಘಜನಿಗೆ ತೆಗೆದುಕೊಂಡು ಹೋಗಿ ಅಲ್ಲಿ ಮಧ್ಯ ಏಷ್ಯಾದ ಒಂದು ಸಾಮ್ರಾಜ್ಯವನ್ನು ಸ್ಥಾಪಿಸಿ ಅದರೊಳಗೆ ಸೇನೆಯನ್ನು, ವಿದ್ಯಾಲಯವನ್ನು, ಗ್ರಂಥಾಲಯಗಳನ್ನು ನಿರ್ಮಿಸಿದ” ಎಂದು ಬರೆದೆ. ಇದು ಕೋಮುವಾದಿ ಇತಿಹಾಸಕಾರರನ್ನು ಕೆರಳಿಸಿತು. ಈ ಕೋಮುವಾದಿಗಳು “ಘಜನಿ ಮೂರ್ತಿ ಭಂಜಕನಾಗಿದ್ದ, ಇಲ್ಲಿನ ದೇವಾಲಯದ ಸಂಪತ್ತನ್ನು ಲೂಟಿ ಮಾಡಿದ ಎನ್ನುವ ಸಂಗತಿಗಳನ್ನು ಹಾಗೇ ಇರಲಿ ಆದರೆ ಅವನು ಈ ಸಂಪತ್ತಿನಿಂದ ಸಾಮ್ರಾಜ್ಯವನ್ನು ಸ್ಥಾಪಿಸಿದ, ವಿದ್ಯಾಲಯಗಳನ್ನು, ಗ್ರಂಥಾಲಯಗಳನ್ನು ನಿರ್ಮಿಸಿದ ಎನ್ನುವುದನ್ನು ನಿಮ್ಮ ಟಿಪ್ಪಣಿಯಿಂದ ಕಿತ್ತುಹಾಕಿ” ಎಂದು ನನಗೆ ತಾಕೀತು ಮಾಡಿದರು. ಇದು ಈ ಬಲಪಂಥೀಯ ಇತಿಹಾಸಕಾರರ ಅತ್ಯಂತ selective ಆದ ಚರಿತ್ರೆಯ ದೃಷ್ಟಿಕೋನ. ಇದೇ ಮಾತನ್ನು ಔರಂಗಜೇಬನ ಬಗೆಗೂ ಹೇಳಬಹುದು. ಈ ಕೋಮುವಾದಿಗಳು ಬಯಸುವುದು ಈ ಔರಂಗಜೇಬನ ಅನೇಕ ಕೆಟ್ಟ ಗುಣಗಳನ್ನು ಬರೆಯಬೇಕು. ಆದರೆ ಇದೇ ಔರಂಗಜೇಬ ಬ್ರಾಹ್ಮಣರಿಗೆ, ದೇವಸ್ಥಾನಗಳಿಗೆ ಅನುದಾನವನ್ನು, ಹಣವನ್ನು ನೀಡಿದ್ದನ್ನು ಮಾತ್ರ ಬರೆಯಬೇಡಿ. So it’s a highly selective history. ನಮಗೆಲ್ಲಾ ಗೊತ್ತಿರುವಂತೆ ಒಂದು ಘಟ್ಟದವರೆಗೂ ಇತಿಹಾಸ selective ಆಗಿರುತ್ತದೆ. ಏಕೆಂದರೆ ದಿನನಿತ್ಯದಲ್ಲಿ, ಪ್ರತಿ ಕ್ಷಣದಲ್ಲಿ ನಡೆದ ಘಟನೆಗಳನ್ನು ಯಾರಿಗೂ ಮಾಹಿತಿ ಇರುವುದಿಲ್ಲ, ಆದರೆ ಸಿದ್ಧಾಂತಗಳೇ selective ಆಗಿ ಹೋದರೆ ಇತಿಹಾಸ ಛಿದ್ರಗೊಳ್ಳುತ್ತದೆ. The problem with communal history writing is that not only is it being extremely selective about facts but the interpretation is also from a deliberately partisan point”.   ಹೀಗೆ ಮುಂದುವರೆದು ರೊಮಿಲಾ ಥಾಪರ್ ಹೇಳುವುದು “1920 ರಲ್ಲಿ ಹಿಂದುತ್ವ ಸಿದ್ಧಾಂತವನ್ನು ಹುಟ್ಟುಹಾಕಲಾಯಿತು. ಆದರೆ ಈ ಸಿದ್ಧಾಂತ 50ರ ದಶಕದವರೆಗೂ ಎಲ್ಲಿಯೂ ಬಹಿರಂಗವಾಗಿ ವಿಜೃಂಬಿಸುತ್ತಿರಲಿಲ್ಲ. ಆದರೆ ಕಳೆದ 20, 30 ವರ್ಷಗಳಲ್ಲಿ ಈ ಹಿಂದುತ್ವ ಸಿದ್ಧಾಂತ ಸಮಾಜದ ಎಲ್ಲಾ ವ್ಯವಸ್ಥೆಯೊಳಗೆ ತೂರಿಕೊಳ್ಳುತ್ತ ಪತ್ರಿಕೆಗಳು, ಶಾಲೆಗಳು, ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಲ್ಲಿ ಸೇರಿಕೊಂಡಿದೆ. ಈ ಮೂಲಕ ಕೋಮುವಾದಿ ಇತಿಹಾಸ ಬರವಣಿಗೆಗೆ ಹಿಂದೂ – ಮುಸ್ಲಿಂ ಘರ್ಷಣೆ ಅತ್ಯಂತ ಮುಖ್ಯ ಪಠ್ಯವಾಗಿಬಿಟ್ಟಿದೆ.”

ಇತ್ತೀಚೆಗೆ ಬರೋಡ ವಿಶ್ವವಿದ್ಯಾಲಯದಲ್ಲಿ ಹಿಂದೂ ದೇವರು ಹಾಗೂ ದೇವತೆಗಳ ಚಿತ್ರಕಲಾ ಪ್ರದರ್ಶನದ ಮೇಲೆ ದಾಳಿ ನಡೆಸಿ ಅಲ್ಲಿನ ಚಿತ್ರಗಳನ್ನು ಧ್ವಂಸಗೊಳಿಸಲಾಯಿತು. ರಾಜಕೀಯ, ಸಾಂಸ್ಕೃತಿಕ. ಬೌದ್ಧಿಕ ವಲಯಗಳಲ್ಲಿ ತಮ್ಮ ಕೋಮುವಾದದ ದೃಷ್ಟಿಕೋನದೊಳಗೆ ದಕ್ಕುವ ಚಿಂತನೆಗಳನ್ನು ಮಾತ್ರ ಪ್ರತಿಪಾದಿಸುತ್ತಾ ಈ ಏಕರೂಪಿ ಜೀವವಿರೋಧಿ ದೃಷ್ಠಿಕೋನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎನ್ನುವ ಸರ್ವಾಧಿಕಾರದ ಧೋರಣೆ ಈ ಆರ್.ಎಸ್.ಎಸ್. ಹಾಗೂ ಇದರ ಅಂಗ ಸಂಸ್ಥೆಗಳದ್ದು. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಲೋಕದ ಮೇಲೆ ಈ ಎಬಿವಿಪಿಗಳ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತದೆ. ಈ ಮೂಲಕ ನಾಗರಿಕ ಸಮಾಜ ಕುಬ್ಜಗೊಳ್ಳುತ್ತಿದೆ. ಇವೆಲ್ಲಕ್ಕಿಂತಲೂ ದೊಡ್ಡ ದುರಂತವೆಂದರೆ ಕಾಂಗ್ರೆಸ್ ಅಧಿಕಾರವಿರುವ ಕಾಲಘಟ್ಟದಲ್ಲಿ ಈ ಸಂಘಪರಿವಾರದ ದಾಳಿ ಎದುರಿಸಲಾರದೆ ಎಂ.ಎಫ್.ಹುಸೇನ್ ದೇಶಭ್ರಷ್ಟರಾಗಿ ತಿರುಗಬೇಕಾಯಿತು. ಈ ಕಾಂಗ್ರೆಸ್ ಅಧಿಕಾರವಿರುವ ಮಹರಾಷ್ಟ್ರದಲ್ಲಿ 2004 ರಲ್ಲಿ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇಸ್ಟಿಟ್ಯೂಟ್ ಮೇಲೆ ಸಂಘ ಪರಿವಾರದಿಂದ ದಾಳಿ ನಡೆಯಿತು. ಇಲ್ಲೂ ಕಾಂಗ್ರೆಸ್ ಅಸಹಾಯಕ ಮೂಕ ಪ್ರೇಕ್ಷಕ. ಈ ಕಾಂಗ್ರೆಸ್ ತಾನೂ ನೈತಿಕವಾಗಿ ಭ್ರಷ್ಟನಾಗುವುದರ ಮೂಲಕ ಇಡೀ ದೇಶವನ್ನು ಸಹ ಅನೈತಿಕತೆಗೆ ತಳ್ಳಿದೆ.

ಇಷ್ಟೆಲ್ಲ ಕರಾಳ ಹಿನ್ನೆಲೆಯನ್ನುಳ್ಳ ಆರ್.ಎಸ್.ಎಸ್. ಪ್ರೇರಿತ ಏಕರೂಪಿ, ವೈದಿಕ ಸಂಸ್ಕೃತಿ ರಕ್ಷಣೆಯ ದುಷ್ಟಕಣ್ಣು ಈಗ ಕನ್ನಡದ ಸಂವೇದನಶೀಲ ಲೇಖಕಿ ಸಬೀಹಾ ಭೂಮೀಗೌಡ ಅವರ ಲೇಖನ “ಕೋಮುವಾದಿ ಮತ್ತು ಮಹಿಳೆ” ಎನ್ನುವ ವೈಚಾರಿಕ ಲೇಖನದ ಮೇಲೆ ಬಿದ್ದಿದೆ. ಎಂದಿನಂತೆ ಈ ಸಂಸ್ಕೃತಿ ಭಕ್ಷಕರಾದ ಎಬಿವಿಪಿಗಳು ಈ ಲೇಖನದ ವಿರುದ್ಧ ಪ್ರತಿಭಟಿಸಿದ್ದಾರೆ. ಸಬೀಹ ಅವರು “ಈ ಲೇಖನ ಕೋಮುಗಲಭೆಗಳು ಸಂಭವಿಸಿದಾಗ ಮಹಿಳೆ ಅನುಭವಿಸುವ ನೋವು, ಈ ಕೋಮು ಗಲಭೆಗಳಿಗೆ ಮಹಿಳೆ ಮಾತ್ರ ತುತ್ತಾಗುವ ಅತ್ಯಂತ ಕ್ರೂರ ಪ್ರಕ್ರಿಯೆಯನ್ನು ಉದಾಹರಣೆ ಸಮೇತ ವಿವರಿಸಿದ್ದೇನೆ” ಎಂದು ಅತ್ಯಂತ ವಿವರವಾಗಿ, ಸಹನಶೀಲರಾಗಿ, ಆಧಾರ ಸಮೇತ ಸ್ಪಷ್ಟಪಡಿಸಿದರು. ಆದರೆ ಸೈರಣೆ ಎನ್ನುವ ಪದದ ಅರ್ಥವೇ ಗೊತ್ತಿಲ್ಲದ ಈ ಸಂಘಪರಿವಾರಕ್ಕೆ ಮತ್ತೇ ಅದೇ ಹಳೇ ಹೆಳವಂಡ. ಈ ಲೇಖನ ತಮ್ಮ ಚಿಂತನೆಯ ಮೂಗಿನ ನೇರಕ್ಕಿಲ್ಲ !!! ಮತ್ತೇ ನೀವು ಏನನ್ನಾದರೂ ಬರೆದರೂ ಅದು ಹಿಂದೂ ಸಂಸ್ಕೃತಿಯನ್ನು ವೈಭವೀಕರಣವನ್ನು ಒಳಗೊಳ್ಳಲೇಬೇಕು. ಒಂದು ವೇಳೆ ಈ ಹಿಂದೂ ಸಂಸ್ಕೃತಿಯ ಅವಗುಣಗಳ ಬಗೆಗೆ ಬರೆದರೆ ಅವರದರ ಬಗ್ಗೆ ಅಂದರೆ ಮುಸ್ಲಿಂರ ಕಂದಾಚಾರಗಳ ಬಗ್ಗೆ ಯಾಕೆ ಬರೆದಿಲ್ಲ ಈ ರೀತಿಯ ಕ್ಯಾತೆ ಈ  ಸಂಘಪರಿವಾರದ್ದು. ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದರೂ ಅವರ ಎಲೆಯಲ್ಲಿ ನೊಣ ಓಡಿಸುವ ಇವರ ಚಾಳಿ ಇಂದಿಗೂ ಕಡಿಮೆಯಾಗಿಲ್ಲ. ಒಟ್ಟಿನಲ್ಲಿ ಇದೇ ರೀತಿ ಮುಂದುವರೆದರೆ ನಾವೆಲ್ಲ ನಮ್ಮ ಪುಸ್ತಕಗಳ ಪ್ರತಿಯೊಂದನ್ನು ಸೆನ್ಸಾರ್‍‌ಗಾಗಿ ಕೇಶವ ಕೃಪಕ್ಕೆ ಕೊಡಬೇಕಾಗಿ ಬರುವ ದಿನಗಳು ದೂರವೇನಿಲ್ಲ. ಇಲ್ಲಿ ಪ್ರತಿಯೊಂದು ಪ್ರಗತಿಪರವಾದ, ವೈಚಾರಿಕ, ಕ್ರಿಯಾತ್ಮಕವಾದ ಸಾಂಸ್ಕೃತಿಕ ಚಿಂತನೆಗಳಿಗೆ, ಹೋರಾಟಗಳಿಗೆ  ಸಂಘ ಪರಿವಾರ ಕ್ಯಾತೆ ತೆಗೆಯುತ್ತಾ, ಪ್ರಜ್ಞಾವಂತರ ಮೇಲೆ ಮಾನಸಿಕ ಹಾಗೂ ದೈಹಿಕ ಹಲ್ಲೆ ನಡೆಸುತ್ತಾ ರಾಜ್ಯದೆಲ್ಲಡೆ ಅಶಾಂತಿಯನ್ನು ಹರಡುತ್ತಿದ್ದರೆ ನಾವೆಲ್ಲ ವಿಚಿತ್ರ ರೀತಿಯ ವಿಸ್ಮೃತಿಯಲ್ಲಿ ಮೈಮರತಿದ್ದೇವೆ. ಏಕೆಂದರೆ ನಮ್ಮ ಬುದ್ಧಿಜೀವಿಗಳಿಗೆ, ಸಾಹಿತಿಗಳಿಗೆ ಇನ್ನೂ ಇದರ ಅಪಾಯಕಾರಿ ಪರಿಣಾಮಗಳು ಅರ್ಥವಾದಂತಿಲ್ಲ. ಮೊನ್ನೆ ಡೋಂಗಿ ಗುರು ರವಿಶಂಕರ್ ಅತ್ಯಂತ ಹೀನಾಯವಾಗಿ ಸರ್ಕಾರಿ ಶಾಲೆಗಳ ಬಗೆಗೆ ಅವಮಾನಕರವಾಗಿ ಮಾತನಾಡಿದಾಗಲೂ ಸಹ ಅಷ್ಟೆ ಬುದ್ಧಿಜೀವಿಗಳೆಲ್ಲ ಜಾಣ ಕಿವುಡುತನವನ್ನು, ಮರೆಮೋಸವನ್ನು ಪ್ರದರ್ಶಿಸಿದರು. ಈ ಡೋಂಗಿ ಗುರು ಸಂವಿಧಾನಕ್ಕೆ ಅಪಚಾರವೆಸಗುವ ಹಾಗೆ ಸರ್ಕಾರಿ ಶಾಲೆಗಳ ಬಗೆಗೆ ದುರಹಂಕಾರದ, ಬೇಜವಬ್ದಾರಿ ಹೇಳಿಕೆ ಕೊಟ್ಟರೂ ಈ ರವಿಶಂಕರ್ ಗುರೂಜಿಯನ್ನು Prosecution ಮಾಡುವರಿಲ್ಲ. ಎರಡೂ ಘಟನೆಗಳಲ್ಲಿ ಮತ್ತೆ SFI ಗೆಳೆಯರು ಮಾತ್ರ ಪ್ರತಿಭಟಿಸಿದರು. ಪ್ರಗತಿಪರ ವಿದ್ಯಾರ್ಥಿ ವೇದಿಕೆ ಇದರ ಕುರಿತಾಗಿ ಒಂದು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತು. ಆದರೆ ಇದು ಸಹ ಸಾಂಕೇತಿಕವಾಗುತ್ತಿದೆ.

2008 -2011 ರ ಮೂರು ವರ್ಷಗಳ ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ, ಹಿಂದುಳಿದವರ ಮೇಲೆ ಸಂಘ ಪರಿವಾರ ನಡೆಸಿದ ಹಲ್ಲೆಗಳು ಅರ್ಥಾತ್ “ಅಲ್ಪಸಂಖ್ಯಾತ ಆಯೋಗದ ವರದಿ”  (ಆಧಾರ ; 25.2.2012 ತೆಹೆಲ್ಕ ಇಂಗ್ಲಿಷ್ ವಾರ ಪತ್ರಿಕೆ)

  • 19.8.2008: ರೈತರಾದ ಸದಾನಂದ ಪೂಜಾರಿ ಉಡುಪಿಯಲ್ಲಿ ಹತ್ಯೆಗೀಡಾದರು.
  • 7.8.2008 : ರೂಪಶ್ರೀ ಮತ್ತು ವಿಕಾರ್ ಅಹಮದ್ ಇಬ್ಬರ ಮೇಲೆ ವಿಟ್ಲದಲ್ಲಿ ಹಲ್ಲೆ ನಡೆಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದರು. ಮಂಗಳೂರಿನಲ್ಲಿ ದೀಪ ಹಾಗೂ ಅಬ್ದುಲ್‍ವಾಹಿದ್ ಅವರನ್ನು ಬಸ್ಸಿನಿಂದ ಎಳೆದು ಹಲ್ಲೆ ನಡೆಸಿದರು.
  • 15.12.2008: 24 ಮುಸ್ಲಿಂ ಯುವಕರು ಭಟ್ಕಳಕ್ಕೆ ಪಿಕ್ನಿಕ್‍ಗೆ ಹೋದಾಗ ನೂರಾರು ಕಾರ್ಯಕರ್ತರು ಈ ಮುಸ್ಲಿಂ ಗುಂಪಿನ ಮೇಲೆ ಹಲ್ಲೆ ನಡೆಸಿದರು. ಈ ಹಲ್ಲೆಯಲ್ಲಿ ಒಬ್ಬನು ಸಾವಿಗೀಡಾದ.
  • 24.1.2009: ಮಂಗಳೂರು ಪಬ್‍ನಲ್ಲಿ ಮಹಿಳೆಯರ ಮೇಲೆ ಹಲ್ಲೆ.
  • 16.8.2009: ಬಂಟ್ವಾಳದ ಬಳಿಯ ಮದರಾಸದಲ್ಲಿ ಹಂದಿಯ ಮಾಂಸವನ್ನು ಎಸೆದರು.
  • 3.11.2009: ಉಪ್ಪಿನಂಗಡಿಯ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಹಿಂದು ಮುಸ್ಲಿಂ ನಡುವೆ ಘರ್ಷಣೆ.
  • 19.11.2009: ಹಿಂದು ಹುಡುಗಿಗೆ ಪತ್ರ ಬರೆದ ಆರೋಪದ ಮೇಲೆ ಮಂಗಳೂರಿನ ಇಬ್ಬರು ಮುಸ್ಲಿಂ ಯುವಕರ ಮೇಲೆ ಹಲ್ಲೆ.
  • 25.1.2010 : ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚರ್ಚ್ ಮೇಲೆ ಧಾಳಿ ಹಾಗೂ ಮೇರಿ ಪ್ರತಿಮೆ ಧ್ವಂಸ.
  • 5.1.2011: ಗಲಭೆಕೋರರು ಮಂಗಳೂರಿನ ಪೋಲೀಸ್ ಸ್ಟೇಷನ್‍ಗೆ ದಾಳಿ.
  • 1.2.2011: ಬಂಟ್ವಾಳ ಪಟ್ಟಣದ ಅಭಿವೃದ್ದಿ ಛೇರ್ಮನ್ ಆದ ಗೋವಿಂದ ಪ್ರಭು ಅವರನ್ನು ಅವಮಾನಿಸಿದರು ಎಂದು ಪುತ್ತೂರು ಎ.ಎಸ್.ಪಿ ಅಮಿತ್ ಸಿಂಗ್ ಮೇಲೆ ಕೆಂಗಣ್ಣು. ಸುಮಾರು 200 ಜನ MP ನಳಿನ್ ಕುಮಾರ್ ಕಟೀಲ್ ಮತ್ತು MLA  ಮಲ್ಲಿಕ ಪ್ರಸಾದ್ ನೇತೃತ್ವದಲ್ಲಿ  ಎ.ಎಸ್.ಪಿ ಅಮಿತ್ ಸಿಂಗ್ ಮನೆಯನ್ನು ಕಬ್ಜಾ ಮಾಡಿದರು. ಕಡೆಗೆ ಪೋಲೀಸ್ ಅಧಿಕಾರಿಯನ್ನೇ ವರ್ಗಾವಣೆ ಮಾಡಲಾಯಿತು. 16.3.2011: ಕಾರ್ ಮೆಕ್ಯಾನಿಕ್ ಆಗಿದ್ದ ಬದೃದ್ದೀನ್ ಅನ್ನು ಹಿಂದು ಹುಡುಗಿಯನ್ನು ಪ್ರೇಮಿಸುತ್ತಿರುವ ಅಪಾದನೆಯ ಮೇಲೆ ಕೊಲೆ ಮಾಡಲಾಯಿತು. ವಿಚಾರಣೆಯ ವೇಳೆ ಹುಡುಗಿಯ ತಂದೆಯನ್ನು ಬಂಧಿಸಲಾಯಿತು.
  • 23.3.2011: ತನ್ನ ಗಂಡ ಮಹಮದ್ ಅಲಿ ಹಾಗೂ ಮಗ ಜಾವೆದ್ ಅಲಿ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಉಲ್ಲಾಳದ ಮೈಮೂನ ತನಿಖೆಗಾಗಿ ಸರ್ಕಾರವನ್ನು ಕೋರಿದ್ದಳು.
  •  26.2.2011: ಕಡಬದ ಜ್ಯೂಸ್ ಅಂಗಡಿಯ ಬಳಿ ಮುಸ್ಲಿಂ ಹುಡುಗ ಹಾಗೂ ಹಿಂದು ಹುಡುಗಿಯ ಮೇಲೆ ಹಲ್ಲೆ ನಡೆಸಿದರು.
  • 8.7.2011: ಜಾನುವಾರು ಸಾಗಣಿಕೆ ಆಪಾದನೆಯ ಮೇಲೆ ಪೆರಲ್‍ನ ನಿತ್ಯಾನಂದ ಅವರ ಮೇಲೆ ಹಲ್ಲೆ.
  • 18.7.2011 : ನಾಲ್ಕು ಮಕ್ಕಳ ತಾಯಿಯಾದ ಮಂಗಳೂರಿನ ಬುಶ್ರ ಅನ್ನು ಬಲವಂತವಾಗಿ ಹಿಂದು ಧರ್ಮಕ್ಕೆ ಮತಾಂತರಗೊಳಿಸಲಾಯಿತು.
  • 30.10.2011: ಸಂಘಪರಿವಾರದ ಮುಖವಾಣಿ “ಹೊಸ ದಿಗಂತ” ಪತ್ರಿಕೆಗೆ ರಾಜ್ಯ ಮಟ್ಟದ ಪತ್ರಿಕೆಯ ಸ್ಥಾನವನ್ನು ಸರ್ಕಾರದಿಂದ ನೀಡಲಾಯಿತು.
  •  26.12.2011: ಸಕಲೇಶಪುರದ ಆಸಿಫ್ ತಾನು ಪ್ರೇಮಿಸಿದ ಹಿಂದು ಹುಡುಗಿಯೊಂದಿಗೆ ಬೆಂಗಳೂರಿಗೆ ಓಡಿ ಬಂದಿದ್ದ. ಇವರಿಬ್ಬರನ್ನು ಹುಡುಕಿ ಅಪಹರಣ ಹಾಗೂ ಅತ್ಯಾಚಾರದ ಅಪಾದನೆಯ ಮೇಲೆ ಆಸಿಫ್ ಅನ್ನು ಬಂಧಿಸಲಾಯಿತು.
  • 28.12.2011:  ಮಂಗಳೂರಿನ ಹೆಬ್ರಾನ್ ದೇವರ ಚರ್ಚ್ ಮೇಲೆ ದಾಳಿ ಕಟ್ಟಡವನ್ನು ಧ್ವಂಸಗೊಳಿಸಲು ಯತ್ನ .

ವಾಗ್ವಾದಗಳೂ, ಹೋರಾಟಗಳೂ ಗರ್ಭಪಾತಗೊಂಡಂತಹ ಸಂದರ್ಭದಲ್ಲಿ…


-ಬಿ. ಶ್ರೀಪಾದ ಭಟ್


 

ನಿಡುಮಾಮಿಡಿ ಮಠದ ಹಿಂದಿನ ಸ್ವಾಮಿಗಳಾದ ಜ.ಚ.ನಿ. ಅವರು ಬಸವಣ್ಣನವರ “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಾ”, “ಇವನಾರವ ಇವನಾರವ ಎನ್ನದಿರು ಇವ ನಮ್ಮವ ಇವ ನಮ್ಮವ ಎನ್ನಯ್ಯ” ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟವರು. ವೈದಿಕರ ಪುರೋಹಿತಶಾಹಿ ತತ್ವಗಳಿಂದ ಹೊರ ಬಂದ ಜ.ಚ.ನಿ. ಅವರು ಇಲ್ಲಿ ಜ್ಞಾನವನ್ನು ಸಕಲ ಜೀವ ರಾಶಿಗಳಿಗೂ ನೀಡಬೇಕೆನ್ನುವ ಜೀವಪರ ತತ್ವಕ್ಕೆ ಇಂಬು ಕೊಟ್ಟರು. ಆ ಮೂಲಕ ನಿಡುಮಾಮಿಡಿ ಮಠವನ್ನು ಪ್ರಗತಿಪರ ಕ್ಷೇತ್ರವನ್ನಾಗಿರಿಸಿದರು. ಬಸವಣ್ಣನ ಕಾಯಕ ತತ್ವದಲ್ಲಿ ಅಪಾರ ನಂಬುಗೆ ಇಟ್ಟು ಅದೇ ರೀತಿ ನುಡಿದಂತೆ ನಡೆದವರು. (ಜ.ಚ.ನಿ. ಸ್ವಾಮಿಗಳ ಬಗ್ಗೆ ಮಾತನಾಡುವಾಗ ನನಗೆ ಮಲ್ಲಾಡಿಹಳ್ಳಿಯ ಗುರುಗಳಾದ “ತಿರುಕ” ನೆನಪಾಗುತ್ತಾರೆ. ಇವರೂ ಸಹ ಕಾಯಕ ತತ್ವವಾದಿ. ಸಣ್ಣವನಿದ್ದಾಗಿನಿಂದಲೂ ಇವರನ್ನು ನಾನು ಹತ್ತಿರದಿಂದ ನೋಡಿದ್ದೆ.)

ನಂತರ ಬಂದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಯವರು ತಮ್ಮ ಗುರುಗಳ ನೀತಿಗಳನ್ನೇ ಮುಂದುವರೆಸುತ್ತಾ ಪ್ರಗತಿಪರ ಧೋರಣೆಗಳಿಗೆ, ಜಾತ್ಯಾತೀತ ನಿಲುವಿಗೆ ಸದಾ ಬದ್ಧರಾಗಿರುತ್ತಾ ನಿಡುಮಾಮಿಡಿ ಮಠವನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದರು. ಕಳೆದ 25 ವರ್ಷಗಳಲ್ಲಿ ಕರ್ನಾಟಕದ ಹಿಂದುಳಿದ ವರ್ಗಗಳ, ದಲಿತರ ಆತಂಕಗಳು, ತಲ್ಲಣಗಳು ಹಾಗೂ ಅವಶ್ಯಕತೆಗಳನ್ನು ತಳ ಮಟ್ಟದಲ್ಲಿ ಅರಿತಿದ್ದ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ಅದಕ್ಕೆ ಸ್ಪಂದಿಸಿದ್ದೂ ಕೂಡ ಅನನ್ಯವಾಗಿತ್ತು. ಎಲ್ಲರಿಗೂ ಅಂದರೆ ಜನಸಾಮಾನ್ಯರಿಗೂ ಹಾಗೂ ಇತರ ಶೂದ್ರ ಮಠದ ಸ್ವಾಮಿಗಳಿಗೂ ಮಾದರಿಯಾಗಿತ್ತು.

ಇಂದು ರಾಜ್ಯದ ಬ್ರಾಹ್ಮಣ ಹಾಗೂ ಲಿಂಗಾಯಿತ ಜಾತಿಯ ಬಹುಪಾಲು ಮಠಗಳು ಹಾಗೂ ಅದರ ಸ್ವಾಮಿಗಳು ಪ್ರತಿಪಾದಿಸುತ್ತಿರುವ ಸ್ವಚ್ಛಂದ, ನಿರ್ಲಜ್ಜ ಕೀಳು ಮಟ್ಟದ ಜಾತೀಯತೆ, ಭೋದಿಸುತ್ತಿರುವ ಧಾರ್ಮಿಕ, ಮೂಢಕಂದಾಚಾರಗಳು, ಬೆಳೆಸುತ್ತಿರುವ ಅನೈತಿಕ ಪರಂಪರೆ, ಕುಗ್ಗಿಸುತ್ತಿರುವ ಮೌಲ್ಯಗಳು ಸರ್ವರಿಗೂ ಗೊತ್ತಿರುವಂತಹದ್ದು. ನಮ್ಮ ಮೂಲಭೂತ ಚಿಂತನೆಗಳಾದ ವೈದಿಕತೆ ಹಾಗೂ ಪುರೋಹಿತಶಾಹಿಯನ್ನೇ, ಅಲ್ಪಸಂಖ್ಯಾತರ ತುಚ್ಛೀಕರಣವನ್ನೇ ಸಂಘ ಪರಿವಾರ ಕೂಡ ಎತ್ತಿ ಹಿಡಿಯುತ್ತದೆ ಎನ್ನುವಂತೆ ವರ್ತಿಸುವ ಬಹುಪಾಲು ಬ್ರಾಹ್ಮಣ ಮಠಗಳು, ಯಡಿಯೂರಪ್ಪ ತಮ್ಮ ಜಾತಿಯವನು ಹಾಗೂ ಜನರ ಹಣವನ್ನು ತಮಗೆಲ್ಲ ಸಂವಿಧಾನ ಬಾಹಿರವಾಗಿ ಬಿಟ್ಟಿಯಾಗಿ ಕೊಟ್ಟಿದ್ದಾರೆ ಎನ್ನುವ ಅನೈತಿಕ, ಭ್ರಷ್ಟಾಚಾರದ ಹಂಗಿನಲ್ಲಿ ರಾಜ್ಯದ ಬಹುಪಾಲು ಲಿಂಗಾಯತ ಮಠದ ಸ್ವಾಮಿಗಳು ಎಲ್ಲಾ ಆದರ್ಶಗಳು, ಮೌಲ್ಯಗಳನ್ನು ಗಾಳಿಗೆ ತೂರಿ ಕಡು ಭ್ರಷ್ಟಚಾರದ ಅಪಾದನೆಯನ್ನು ಹೊತ್ತಿರುವ ಕಳಂಕಿತ ಯಡಿಯೂರಪ್ಪರವರನ್ನು ನಿರ್ಲಜ್ಜವಾಗಿ ಬೆಂಬಲಿಸುತ್ತಿರುವುದೂ ಕನ್ನಡಿಗರಿಗೆಲ್ಲರಿಗೂ ದಿನನಿತ್ಯದ ಸುದ್ದಿಯಾಗಿ ಹಳಸಲಾಗಿದೆ. (ಬರು ಬರುತ್ತಾ ಜನತೆ ಇದನ್ನು ಅಯ್ಯೋ ಮಾಮೂಲಿ ಬಿಡಿ ಹೊಸತೇನಿದೆ ಎನ್ನುವ ಹಂತಕ್ಕೆ ತಲುಪುವ ಅಪಾಯವಿದೆ.)

ಜನತೆ ಈಗ ಇವರನ್ನೆಲ್ಲಾ ಸಾರ್ವಜನಿಕವಾಗಿ ಬಹಿಷ್ಕರಿಸಬೇಕು. ಈಗ ಉಳಿದಿರುವುದು ಇದೊಂದೇ ಮಾರ್ಗ. ಆದರೆ ಗಂಟೆ ಕಟ್ಟುವವರಾರು? ಈ ಸ್ವಾಮಿಗಳ ಸಾಲಿನಲ್ಲಿ ಶತಾಯುಷಿಯಾಗಿರುವ ಸೋಕಾಲ್ಡ್ ನಡೆದಾಡುವ ದೇವರು ಸೇರಿಕೊಂಡಿರುವುದಕ್ಕೆ ನಮಗೆಲ್ಲಾ ಅಂತಹ ಆಶ್ಚರ್ಯವಿರಲಿಲ್ಲ. ಇದನ್ನು ನಾವೆಲ್ಲಾ ಎಂದೋ ನಿರೀಕ್ಷಿಸಿದ್ದೆವು. ಆದರೆ ಈ ಸಾಲಿನಲ್ಲಿ ನಮ್ಮ ಪ್ರೀತಿಯ ಮುರುಘಾಮಠದ ಶರಣರು ಸೇರಿಕೊಂಡಿದ್ದು ನಿಜಕ್ಕೂ ಕನ್ನಡದ ಪ್ರಜ್ಞಾವಂತರಿಗೆ ಅಘಾತವನ್ನುಂಟು ಮಾಡಿತ್ತು. ಕೇವಲ ಚಿಂತನೆಗಳಲ್ಲಿ, ವಿಚಾರಸಂಕಿರಣಗಳಲ್ಲಿ, ಚರ್ಚೆಗಳಲ್ಲಿ ಪ್ರತಿಪಾದಿಸುತ್ತಿದ್ದ ವಿಷಯಗಳನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನದಲ್ಲಿಯೂ ಹರಸಾಹಸ ಪಡುತ್ತಿದ್ದ, ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ಯಶಸ್ಸನ್ನೂ ಕಂಡ ಮುರುಘಾಮಠದ ಶರಣರು ಸಾಮೂಹಿಕ ಸರಳ ವಿವಾಹಗಳನ್ನು ರಾಹು ಕಾಲದಲ್ಲಿ ನಡೆಸಿ, ಅಂತರ್ಜಾತೀಯ ವಿವಾಹಗಳನ್ನು ಮನಪೂರ್ವಕವಾಗಿ ಪ್ರೋತ್ಸಾಹಿಸುತ್ತಾ, ನಿಜದ ಹೋರಾಟಗಾರರನ್ನು, ಪ್ರಾಮಾಣಿಕ ಪ್ರಗತಿಪರ ಚಿಂತಕರನ್ನು ಗುರುತಿಸಿ ಅವರಿಗೆ ಬಸವಶ್ರೀ ಪ್ರಶಸ್ತಿಯ ಮೂಲಕ ಗೌರವಿಸುತ್ತಿದ್ದರು, ಉಪಮಠಗಳಿಗೆ ದಲಿತರನ್ನು ಸ್ವಾಮಿಗಳಾಗಿ ನೇಮಿಸುವ ಕ್ರಾಂತಿಕಾರಿ ಪರಿಪಾಠಗಳ ಮೂಲಕ ಕನ್ನಡ ನಾಡಿಗೆ ಜೀವಂತ ಮಾದರಿಯಾಗಿದ್ದರು, ಪ್ರಗತಿಪರ ಹೋರಾಟಗಾರರಿಗೆ, ಚಿಂತಕರಿಗೆ ಆಪ್ತ ಸ್ನೇಹಿತರಂತಿದ್ದರು, ಹಿತಚಿಂತಕರಾಗಿದ್ದರು. ಸಮಾಜದಲ್ಲಿ ನಿಜಕ್ಕೂ ಒಂದು ಧನಾತ್ಮಕ ಘಟ್ಟವನ್ನು ತಲುಪಿ ನಮ್ಮನ್ನೆಲ್ಲ ನೀವೂ ಕೂಡ ಕೇವಲ ಮಾತನಾಡುವುದನ್ನು ಬಿಟ್ಟು ಚಿಂತನೆಗಳನ್ನು ಕಾರ್ಯಗತಗೊಳಿಸುತ್ತಾ ಆ ಘಟ್ಟಕ್ಕೆ ಬಂದು ತಲುಪಿ ಎನ್ನುವಷ್ಟರ ಮಟ್ಟಿಗೆ ಎಲ್ಲಾ ತಲೆಮಾರಿಗೆ ಆದರ್ಶಪ್ರಾಯರಾಗಿದ್ದರು.

ಇಂತಹ ಜೀವಪರ ಮುರುಘಾಮಠದ ಸ್ವಾಮಿಗಳು “ಪಾಯಸ ತಿಂದಾಗ ಹೆಸರು ಕೆಡಸಿಕೊಳ್ಳಲಿಲ್ಲ, ಆದರೆ ನೊಣವನ್ನು ನೆಕ್ಕಿ ಸಿಕ್ಕಿ ಹಾಕಿಕೊಂಡ” ಎನ್ನುವ ಗಾದೆ ಮಾತಿನಂತೆ ಯಡಿಯೂರಪ್ಪನವರ ಅನಗತ್ಯ ಹೊಗಳಿಕೆಯ ಮೂಲಕ ಕಳೆದ 15 ವರ್ಷಗಳ ತಮ್ಮ ಮಾದರಿ ಬದುಕಿಗೆ ಕಪ್ಪು ಹಚ್ಚಿಕೊಂಡರು. ತೀರಾ ನೋವಿನ ಸಂಗತಿ ಎಂದರೆ 15 ವರ್ಷಗಳು ಪ್ರಗತಿಪರರಾಗಿ, ಜಾತ್ಯಾತೀತರಾಗಿ ನಿರಂತರವಾಗಿ ಜೀವಿಸುವುದಕ್ಕೇ ತುಂಬಾ ದೀರ್ಘವಾಯಿತೇ? ಹೌದೆನ್ನುವುದಾದರೆ ಮುಂದಿನ ದಿನಗಳನ್ನು ನೆನಸಿಕೊಂಡು ಮೈನಡುಗುತ್ತದೆ. ಇಂದು ಸಂಘಟನೆಗಳು ವಿಘಟನೆಗೊಂಡು ಸೃಜನಶೀಲ ಸಂವಾದಗಳು, ವಾಗ್ವಾದಗಳೂ ಹಾಗೂ ಎಲ್ಲಾ ಹೋರಾಟಗಳೂ ಸ್ಥಗಿತಗೊಂಡಂತಹ, ಗರ್ಭಪಾತಗೊಂಡಂತಹ ಇಂದಿನ ದಿನಗಳಲ್ಲಿ ನಾವೇನಾದರೂ ಪ್ರತಿಭಟನೆಯನ್ನಾಗಲಿ, ಸರಣಿ ಅಥವಾ ಸಾಂಕೇತಿಕವಾಗಿ ಒಂದು ದಿನದ ನಿರಶನವನ್ನಾಗಲಿ ಮಾಡುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಈ ಬೀದಿ ಹೋರಾಟಗಳಿಗೆ, ನಿರಶನಗಳಿಗೆ ಸಾಮಾನ್ಯ ಜನಬೆಂಬಲಗಳಿಸಿಕೊಳ್ಳುವುದರಿಂದ ಹಿಡಿದು ಅವರನ್ನು ಬೀದಿಗೆ ಕರೆತರುವಷ್ಟರಲ್ಲಿ ಅರ್ಧ ಆಯಸ್ಸು ಕಳೆದಿರುತ್ತದೆ. ಇನ್ನು ಈ ಮಟ್ಟದ ಜಾತಿಹೀನ, ಕ್ರಿಯಾತ್ಮಕ ಚಳವಳಿಗಳಿಗೆ, ಧಾರ್ಮಿಕತೆಯ ಬೆಂಬಲವಿಲ್ಲದ ಚಳವಳಿಗಳಿಗೆ ಪ್ರಭುತ್ವವಂತೂ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ನಮ್ಮ ಕಡೆಗೆ ತಿರುಗೀ ಸಹ ನೋಡುವುದಿಲ್ಲ. ನಾವೆಲ್ಲಾ ಅಂತೂ ನಾವು ಕೂಡ ಬೀದಿಗಿಳಿದೆವು ಎಂದು ಇತಿಹಾಸವಾಗುವಷ್ಟಕ್ಕೆ ತೃಪ್ತಿ ಪಡಬೇಕಾಗಿದೆ. ಆದರೆ ಅನೇಕ ವೇಳೆ ಇದು ಅರಣ್ಯರೋದನವಾಗುತ್ತದೆ. ಇದು ಇಂದಿನ ಕಟು ವಾಸ್ತವ. ಮಾತಿಗೂ ಕೃತಿಗೂ ಸಾಗರದಷ್ಟು ಅಂತರವಿದೆ.

ಇತ್ತೀಚೆಗೆ ಢೋಂಗಿ ಗುರು ರವಿಶಂಕರ್ ಸರ್ಕಾರಿ ಶಾಲೆಗಳನ್ನು ನಕ್ಸಲೀಯರನ್ನು ತಯಾರಿಸುವ ಕೇಂದ್ರ ಎನ್ನುವ ದೇಶದ್ರೋಹಿ ಹೇಳಿಕೆ ಕೊಟ್ಟಾಗ ನಮ್ಮ ಅನೇಕ ಪ್ರಜ್ಞಾವಂತರಲ್ಲಿ ಇದು ತಳಮಳವನ್ನಾಗಲಿ, ಕ್ರೋಧವನ್ನಾಗಿ ಹುಟ್ಟುಹಾಕಲೇ ಇಲ್ಲ. ಕಡೆಗೆ SFI ನ ಗೆಳೆಯರು ಕೆಲವು ಜಿಲ್ಲಾ ಕೇಂದ್ರಗಳಲ್ಲಿ ರವಿಶಂಕರ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಬೇಕಾಯಿತು.

ಇಷ್ಟೆಲ್ಲ ಪೀಠಿಕೆ ಏಕೆಂದರೆ ನಿಡುಮಾಮಿಡಿ ಮಠದ ಸ್ವಾಮಿಗಳಾದ ವೀರಭದ್ರ ಚೆನ್ನಮಲ್ಲ ಸ್ವಾಮಿಗಳ ನೇತೃತ್ವದಲ್ಲಿ ಸುಮಾರು 30 ಹಿಂದುಳಿದ, ದಲಿತ ಮಠಗಳ ಸ್ವಾಮಿಗಳು ಹಾಗೂ ಗದುಗಿನ ತೋಂಟದಾರ್ಯ ಸ್ವಾಮಿಗಳು ಮತ್ತು ಪ್ರಗತಿಪರ ಚಿಂತಕರು ಹಾಗೂ ದಲಿತ ಸಂಘಟನೆಗಳು ಮಡೆಸ್ನಾನ ಹಾಗೂ ಪಂಕ್ತಿಭೇದ ನೀಷೇಧದ ವಿರುದ್ದ ನಿರಶನ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ನಾವೆಲ್ಲಾ ಕೂಡ ಇದರಲ್ಲಿ ಪಾಲ್ಗೊಂಡಿದ್ದೆವು. ವಿಶೇಷವೇನೆಂದರೆ ಅಲ್ಲಿ ಭಾಷಣ ಮಾಡಿದ ಬಹುಪಾಲು ಸ್ವಾಮಿಗಳು ಅತ್ಯಂತ ಕ್ರಾಂತಿಕಾರಿಯಾಗಿ ಮಾತನಾಡಿದ್ದು. ನಿಜಗುಣ ಸ್ವಾಮಿಗಳು, ಬಸವಲಿಂಗ ಪಟ್ಟದೇವರು ಸ್ವಾಮಿಗಳು ಪ್ರತಿ ನುಡಿಗೂ ಬಸವಣ್ಣನ ಕ್ರಾಂತಿಕಾರೀ ವಚನಗಳನ್ನು ಬಳಸಿಕೊಳ್ಳುತ್ತ ವರ್ಣಾಶ್ರಮ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತಿರುವ ಮೇಲ್ಜಾತಿ ಮಠಗಳನ್ನು, ಪೇಜಾವರ ಸ್ವಾಮಿಗಳ ಜಾತೀಯತೆಯನ್ನು ಕಟುವಾಗಿ ಟೀಕಿಸಿದರು. ಜಾತಿರಹಿತ ಸಮಾಜ ಕಟ್ಟುವುದು ನಮ್ಮ ಮುಂದಿನ ಗುರಿ ಎಂದು ಘೋಷಿಸಿಯೇ ಬಿಟ್ಟರು. ಇವರು ಜಾತಿವಾದದ ವಿರುದ್ಧ, ಶೋಷಣೆಯ ವಿರುದ್ಧ, ಇಂದಿನ ಲಿಂಗಾಯತ ಸ್ವಾಮಿಗಳ ನಡತೆಗಳ ವಿರುದ್ಧ ಗುಡುಗಿದ್ದು ನಮ್ಮಲ್ಲಿ ಇನ್ನಿಲ್ಲದ ಅತ್ಯಂತ ಅಚ್ಚರಿ ಹಾಗೂ ಆಶಾವಾದ ಮೂಡಿಸಿತ್ತು. ಅಲ್ಲದೆ ಸ್ವತಃ ಮುಖ್ಯಮಂತ್ರಿಗಳೇ ಬಂದು ಮಡೆಸ್ನಾನ ಹಾಗೂ ಪಂಕ್ತಿಭೇಧ ನಿಷೇದಿಸುತ್ತೇವೆ ಎಂದು ಹೇಳಿಕೆ ಕೊಡದಿದ್ದರೆ ಸಂಜೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ನಿಡುಮಾಮಿಡಿ ಸ್ವಾಮಿಗಳು ಗುಡುಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸಂಜೆ ಪ್ರತಿಭಟನೆಯ ಸ್ಥಳವಾದ ಸ್ವಾತಂತ್ರ್ಯ ಉದ್ಯಾನಕ್ಕೆ ಸ್ವತಃ ಸದಾನಂದ ಗೌಡರೇ ಬಂದು ಇನ್ನೆರೆಡು ತಿಂಗಳೊಳಗೆ ಮಡೆಸ್ನಾನ ನಿಷೇಧಕ್ಕೆ ಸದನದೊಳಗೆ ವಿಧೇಯಕವನ್ನು ತಂದು ಈ ನೀಷೇಧ ಪ್ರಕ್ರಿಯೆಗೆ ಚಾಲನೆ ಕೋಡುತ್ತೇವೆ ಎಂದು ಒಪ್ಪಿಕೊಂಡರು.

ಇದು ನಿಜಕ್ಕೂ ಪ್ರಗತಿಪರ ಚಳವಳಿಗಳ ಜಯ. ಒಂದು ವೇಳೆ ಇದು ಜಾರಿಗೊಂಡರೆ ಅದರ ಯಶಸ್ಸು ನಿಡುಮಾಮಿಡಿ ಸ್ವಾಮಿಗಳಿಗೆ ಸಲ್ಲುತ್ತದೆ. ಕಳೆದ ನಾಲ್ಕು ತಿಂಗಳಿಂದ ಇದನ್ನು ನಿರಂತರವಾಗಿ ಸಂವಾದದ ರೂಪದಲ್ಲಿ ಜೀವಂತವಾಗಿಟ್ಟದ್ದು ನಿಡುಮಾಮಿಡಿ ಸ್ವಾಮಿಗಳು.

ಅಂತಿಮವಾಗಿ ಇದು ಏನನ್ನು ಸೂಚಿಸುತ್ತದೆ? ಜನಸಾಮಾನ್ಯರ, ಬಡವರ, ದಲಿತರ ಅಳಲುಗಳನ್ನು, ಮೂಲಭೂತ ಹಕ್ಕುಗಳ ಪರವಾದ, ಶೋಷಣೆಗಳ ವಿರುದ್ಧದ ಅಹಿಂಸಾತ್ಮಕ ಹೋರಾಟವನ್ನು ನಡೆಸಬೇಕಾದರೆ, ಈ ಅಹಿಂಸಾತ್ಮಕ ಹೋರಾಟಕ್ಕೆ ಪ್ರಭುತ್ವವನ್ನು ಬಗ್ಗುವಂತೆ ತರಬೇಕಾದರೆ, ಸ್ವಃತಹ ಮುಖ್ಯಮಂತ್ರಿಗಳೇ ನಿರಶನ ಸ್ಥಳಕ್ಕೆ ಕರೆಸುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾದ ಅಹಿಂಸಾತ್ಮಕ ಚಳವಳಿಯನ್ನು ಕಟ್ಟಬೇಕೆಂದರೆ ಅದು ಇಂದು ಮಠಗಳ ಕೈಯಲ್ಲಿ ಮಾತ್ರ ಸಾಧ್ಯ ಎಂಬುದು ಇಂದು ಸಂಪೂರ್ಣವಾಗಿ ಸಾಬೀತಾಗುತ್ತಿದೆ. ಈ ಸ್ವಾಮಿಗಳಿಗೆ ಮಾತ್ರ ಮುಖ್ಯಮಂತ್ರಿಗಳನ್ನು ತಾವಿದ್ದ ಸ್ಥಳಕ್ಕೆ ಓಡೋಡಿ ಬರುವಂತೆ ಮಾಡುವ ತಾಕತ್ತಿದೆ ಎಂದು ಪುರಾವೆ ಸಹಿತ ಸಾಬೀತಾಗಿದೆ (ಇದು ಅತಿರೇಕವೆಂದು ಗೊತ್ತಿದೆ).

ಅಂದು ಚಿಂತಕ ಕೆ. ಮರಳುಸಿದ್ಧಪ್ಪನವರು ಕೂಡ ಹೇಳಿದ್ದು “ಕೇವಲ ಮಡೆಸ್ನಾನ ನಿಷೇಧ ಮಾತ್ರವಲ್ಲದೆ ಇನ್ನಿತರ ಅನಿಷ್ಟಗಳಾದ ಅಂತರ್ಜಾತೀಯ ವಿವಾಹಿತರ ಬರ್ಬರ ಹತ್ಯೆಗಳು, ಸರ್ಕಾರದ ಭ್ರಷ್ಟಾಚಾರ ಹಾಗೂ ಕೋಮುವಾದ ಇವುಗಳೆಲ್ಲದರ ವಿರುದ್ಧ ನೀವು ಅಂದರೆ ಪ್ರಗತಿಪರ ಸ್ವಾಮಿಗಳು ಮುಂಚೂಣಿಯಲ್ಲಿದ್ದರೆ ನಾವೆಲ್ಲ ಅಂದರೆ ಪ್ರಗತಿಪರ ಹೋರಾಟಗಾರರು ಹಾಗೂ ಚಿಂತಕರು ನಿಮ್ಮ ಹಿಂದೆ ಇರುತ್ತೇವೆ”. ಅಂದರೆ ಇಂದು ದಲಿತ, ಪ್ರಗತಿಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಮೇಲ್ಕಾಣಿಸಿದ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಸಬೇಕು, ಇದು ಬಿಟ್ಟರೆ ಬೇರೆ ದಾರಿಯೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಇಂದಿನ ಹೋರಾಟ ತನ್ನ ದಿಕ್ಕನ್ನು ಗುರುತಿಸಿಕೊಂಡಿದೆಯೇ? ಇದನ್ನು ಅತ್ಯಂತ ಹುಷಾರಾಗಿ ಜವಬ್ದಾರಿಯಿಂದ ಹಾಗೂ ಪ್ರಜ್ಞಾಪೂರಕವಾಗಿ ಕೇಳಿಕೊಳ್ಳುತ್ತಿದ್ದೇನೆ. (ಇದು ಅತಿರೇಕವೆಂದು ಗೊತ್ತಿದೆ).

ಅಲ್ಲದೆ ಇಂದಿನ ಪ್ರತಿಭಟನೆಯಲ್ಲಿ ಕಂಡುಬಂದ ಮತ್ತೊಂದು ವಿಶೇಷವೆಂದರೆ ವಿಭಜನೆಗೊಂಡ ಮೂರು ಪ್ರಮುಖ ದಲಿತ ಸಂಘಟನೆಯ ಸಂಚಾಲಕರು ಇಂದಿನ ಸಮಾನ ವೇದಿಕೆಯಲ್ಲಿ ಭಾಗವಹಿಸಿದ್ದು. ಇದು ನನ್ನ ಕೆಲವು ದಲಿತ ಸಂಚಾಲಕ ಗೆಳೆಯರಲ್ಲಿ ಅತ್ಯಂತ ಭಾವಾವೇಶವನ್ನು ಉಂಟು ಮಾಡಿತು.

ಆದರೆ ನಮ್ಮೆಲ್ಲರ ಸಾಕ್ಷೀಪ್ರಜ್ಞೆಯಾಗಿದ್ದ ಲಂಕೇಶ್ ಈ ಅತಿರೇಕದ, ಪ್ರಗತಿಪರ ಸ್ವಾಮೀಜಿಗಳ ಬಗ್ಗೆ ಕಟುವಾದ ಗುಮಾನಿಯ ಎಚ್ಚರಿಕೆಯನ್ನು, ಸದಾಕಾಲ ತಮ್ಮಲ್ಲಿ ಪ್ರಜ್ವಲವಾಗಿ ಇರುವಂತೆ ಚಿಂತಿಸುತ್ತಿದ್ದರು. ಅದನ್ನು ತಮ್ಮ ಅತ್ಯುತ್ತಮ ಗ್ರಹಿಕೆಯ ಮೂಲಕ ನಮಗೂ ತಲುಪಿಸುತ್ತಿದ್ದರು. ನಮ್ಮ ಪ್ರಜ್ಞೆಯ ಆಳದಲ್ಲಿ, ನಮ್ಮ ಚಿಂತನೆಗಳ ಅಂಬೆಗಾಲಿನಲ್ಲಿ ಈ ಭಾವಾವೇಶದಲ್ಲಿ ಆ ಮೇಲ್ಕಾಣಿಸಿದ ಲಂಕೇಶ್ ಪ್ರಜ್ಞೆ ನಮ್ಮಲ್ಲಿದ್ದರೆ ಮಾತ್ರ ನಾವೆಲ್ಲ ಬಚಾವ್. ಇಲ್ಲವೆಂದರೆ ನಾವೆಲ್ಲ ಕುರಿಗಳಂತೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಏಕೆಂದರೆ ಧರ್ಮ ಅರ್ಥಾತ್ ಧಾರ್ಮಿಕತೆ ಮತ್ತು ಆಧ್ಯಾತ್ಮಿಕದ ಮಧ್ಯೆ ಸಾಕಷ್ಟು ಅಂತರವಿದೆ. ಅನೇಕ ಭಿನ್ನತೆಗಳಿವೆ. ಆಧುನಿಕ ಭಾರತದಲ್ಲಿ ಇದನ್ನು ಮೊಟ್ಟಮೊದಲು ಅರ್ಥ ಮಾಡಿಕೊಂಡವರು ರಾಮಕೃಷ್ಣ ಪರಮಹಂಸರು. ಪರಮಹಂಸರು ಆಧ್ಯಾತ್ಮವನ್ನು ಧಾರ್ಮಿಕತೆಯಿಂದ ಬಿಡುಗಡೆಗೊಳಿಸಿ ದೈವತ್ವಕ್ಕೆ ಕೊಂಡೈಯ್ದಿದ್ದರು. ಈ ನಿಟ್ಟಿನಲ್ಲಿ ಪರಮಹಂಸರು ನಡೆಸಿದ ಪ್ರಯೋಗಗಳು ನಮ್ಮೆಲ್ಲರ ಊಹೆಗಳನ್ನೂ ಮೀರಿದ್ದು. ಆದರೆ ಕಡೆಗೆ ಆಧುನಿಕ ಭಾರತದ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ಗುರುವೆಂದರೆ ಅವರು ರಾಮಕೃಷ್ಣ ಪರಮಹಂಸರು. ಆದರೆ ಪರಮಹಂಸರ ಈ ಮಾರ್ಗ ಅತ್ಯಂತ ಕ್ಲಿಷ್ಟಕರವಾದದ್ದು. ಅದಕ್ಕೆಂದೇ ಇದನ್ನು ಸರಳಗೊಳಿಸಲು ವಿವೇಕಾನಂದರನ್ನು ತರಬೇತುಗೊಳಿಸಿದರು. ಆದರೆ ಇಂದು ವಿವೇಕಾನಂದರಿಗೆ ಬಂದೊದಗಿದ ಗತಿ ಎಲ್ಲರಿಗೂ ಗೊತ್ತು. ಸಂಘ ಪರಿವಾರ ವಿವೇಕಾನಂದರನ್ನು ಮರಳಿ ಧಾರ್ಮಿಕ ವ್ಯಕ್ತಿಯನ್ನಾಗಿ ಸ್ವಾಮಿಯ ಪಟ್ಟಕೊಟ್ಟು ಕೂರಿಸಿದೆ.

ಇದಕ್ಕೆ ಮೂಲಭೂತ ಕಾರಣ ಧರ್ಮದ ಹಾಗೂ ಆಧ್ಯಾತ್ಮದ ಬಗ್ಗೆ ನಮ್ಮ ಮಠಗಳಲ್ಲಿರುವ ಅತ್ಯಂತ ಸೀಮಿತ ಗ್ರಹಿಕೆ. ಇದು ಅತ್ಯಂತ ಸರಳೀಕೃತಗೊಂಡ ಮಾದರಿ. ನೀನು ಈಶ್ವರನಲ್ಲಿ ನಂಬಿಕೆ ಇಡು ಅವನು ಮರಳಿ ನಿನಗೆ ಒಳ್ಳೆಯದನ್ನು ಮಾಡುತ್ತಾನೆ ಎನ್ನುವಂತಹ ಅತ್ಯಂತ ಸರಳೀಕೃತ ಚಿಂತನೆ ಕಾಲಕ್ರಮೇಣ ಜಡವಾಗುತ್ತದೆ.

ಆದರೆ ಇಂದು ಅತ್ಯಂತ ಜಾತ್ಯಾತೀತರಾಗಿ ಕಾಯಕವನ್ನೇ ನೆಚ್ಚೋಣ ಮತ್ತೇನನ್ನು ಅಲ್ಲ ಎಂದು ಹೇಳುತ್ತಿರುವ ಮೇಲಿನ ಸ್ವಾಮಿಗಳು ಈ ಧರ್ಮ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಈ ಅಪಾಯ ಪ್ರಗತಿಪರ ಸ್ವಾಮಿಗಳಿಗೂ ತಪ್ಪಿದ್ದಲ್ಲ. ಏಕೆಂದರೆ ಬಹಿರಂಗವಾಗಿ ಎಷ್ಟೇ ಪ್ರಗತಿಪರವಾಗಿ, ಜಾತ್ಯಾತೀತರಾಗಿ ಘೋಷಿಸಿಕೊಂಡರೂ ಸ್ಥಾವರಗೊಂಡ ಅವರ ಮಠಗಳು ಅವರನ್ನು ಈ ನಿಟ್ಟಿನಲ್ಲಿ ಮುನ್ನಡೆಯಲು ಬಿಡುತ್ತವೆಯೇ? ಒಂದು ವೇಳೆ ಆಯ್ಕೆಯ ಪ್ರಶ್ನೆ ಬಂದಾಗ ಇವರೆಲ್ಲ ತಮ್ಮ ಚಿಂತನೆಗಳಿಗೆ ತೊಡರುಗಾಲಾಗುವ ಮೌಢ್ಯದ ಜಾತೀವಾದದ ತಮ್ಮ ಮಠಗಳನ್ನು ಧಿಕ್ಕರಿಸುವಷ್ಟು ಎದೆಗಾರಿಕೆ ಹಾಗೂ ಸಮಯಪ್ರಜ್ಞೆ ಹೊಂದಿರುತ್ತಾರೆಯೇ? ಇವು ಮೂಲಭೂತ ಪ್ರಶ್ನೆಗಳು.

ಇಂತಹ ಸಂದಿಗ್ಧತೆಯ ಬಗ್ಗೆ ತೊಂಬತ್ತರ ದಶಕದಲ್ಲಿ ಶೂದ್ರ ಏರ್ಪಡಿಸಿದ್ದ “ಧರ್ಮ ಸಂವಾದ” ವಿಚಾರ ಸಂಕಿರಣದಲ್ಲಿ ಖ್ಯಾತ ಚಿಂತಕ ದಿವಂಗತ ಡಿ.ಆರ್. ನಾಗರಾಜ್ ಬಹು ಮಾರ್ಮಿಕವಾಗಿ ಈ ಕೆಳಗಿನಂತೆ ಹೇಳಿದ್ದರು:

“ದೇವಾಲಯಗಳು ಅಧಿಕಾರದ ಅಟ್ಟಹಾಸಗಳಾದಾಗ ಅವನ್ನು ನಿರಾಕರಿಸಿ ಮಾನವನನ್ನು ಎತ್ತಿ ಹಿಡಿಯಲಾಯಿತು. ಗುರು ಮಠಗಳು ಗಾಢಾಂದಕಾರದ ಗವಿಗಳಾದಾಗ ಅವನ್ನು ಅಪಾಯಕಾರಿ ಬಿಲಗಳೆಂದು ಕರೆಯಲಾಯಿತು. ಎಲ್ಲ ಧರ್ಮಗಳಿಗೂ ಉಜ್ವಲ ಪ್ರಾರಂಭ ಇರುತ್ತವೆ. ಕ್ರಮೇಣ ಕೊಳೆಯುವುದು ಧರ್ಮಗಳ ಶರೀರ ಗುಣ. ತಮ್ಮ ಪ್ರಾರಂಭದ ಉಜ್ವಲತೆಗೆ ಮರಳಲು ಆಗಾಗ ಆ ಧರ್ಮದ ಪರಿಭಾಷೆಯಲ್ಲಿ ನಂಬಿಕೆ ಇರುವ ಮಂದಿ ತೀವ್ರವಾಗಿ ಪ್ರಯತ್ನಿಸುತ್ತಾರೆ. ಉಜ್ವಲ ಪ್ರಾರಂಭದ ನಂತರ ಕೊಳೆಯುವುದು ಹೇಗೆ ಧರ್ಮಗಳ ಮೂಲ ಗುಣವೋ ಹಾಗೆಯೇ ಶುದ್ದೀಕರಣದ ಹಂಬಲ ಕೂಡಾ. ಈ ಶುದ್ದೀಕರಣದ ಹಂಬಲ ಕೆಲವೊಮ್ಮೆ ಸುಧಾರಣೆಗೆ, ಕೆಲವೊಮ್ಮೆ ಅಪಾಯಕಾರಿಯಾದ ಮೂಲಭೂತವಾದಕ್ಕೇ ಎಡೆ ಮಾಡುತ್ತದೆ. ಅದಕ್ಕಾಗಿಯೇ ಧರ್ಮಗಳ ಚಾರಿತ್ರಿಕ ನಿರಂತರತೆಯ ಬಗ್ಗೆ ಹುಚ್ಚು ವ್ಯಾಮೋಹ ಬಿಡಬೇಕಾಗುತ್ತದೆ. ಧರ್ಮದ ಉಜ್ವಲ ಪ್ರಾರಂಭ ಅಥವಾ ಕೇಂದ್ರದರ್ಶನಗಳ ಅಂತರಂಗೀಕರಣ ನಡೆದಾಗ ಧರ್ಮಕ್ಕೆ ಬೇರೆಯೇ ಅರ್ಥ ಬಂದು ಬಿಡುತ್ತದೆ.”

ಡಿ.ಆರ್. ನಾಗರಾಜ್ ಅವರ ಈ ಮಾತುಗಳನ್ನು ನಮ್ಮ ಪ್ರಗತಿಪರ ಸ್ವಾಮಿಗಳು ಮನನ ಮಾಡಿಕೊಂಡರೆ ನಿಜಕ್ಕೂ ನಮಗೆಲ್ಲ ಮುಂದೆ ಒಳ್ಳೆಯ ದಿನಗಳು ಕಾದಿವೆ ಎಂದರ್ಥ. ಏಕೆಂದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆಯ ನಡೆಯುವ ಅನೇಕ ಸಾಧ್ಯತೆಗಳಿವೆ. ಇಲ್ಲವೆಂದರೂ ಮುಂದಿನ ವರ್ಷದಲ್ಲಿ ಚುನಾವಣೆ ನಡೆಯಲೇಬೇಕು. ಅಂದರೆ ಇನ್ನೂ ಕೇವಲ ಎಂಟು ತಿಂಗಳು ಮಾತ್ರ. ಆಗ ನಾವು ಬೇಕಾದರೆ ಕರ್ನಾಟಕದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಕೋಮುವಾದಿ, ಭ್ರಷ್ಟ ಅಭ್ಯರ್ಥಿಗಳ ವಿರುದ್ಧ ಪ್ರಗತಿಪರ ಸ್ವಾಮಿಗಳನ್ನೇ ಅಭ್ಯರ್ಥಿಗಳನ್ನಾಗಿ ನಿಲ್ಲಲು ಒತ್ತಾಯಿಸಬಹುದು. ಆಗ ಪರ್ಯಾಯ ಪರಿಕಲ್ಪನೆಗೆ ಇಲ್ಲಿಂದ ಒಂದು ಚಾಲನೆ ಸಿಗಬಹುದೇ? ಏಕೆಂದರೆ ಈಗ ಬದಲಾವಣೆಗೆ ಹದಗೊಂಡಿರುವ ಕರ್ನಾಟಕಕ್ಕೆ “ರಾಜೀವ, ರಾಚೂತಪ್ಪ, ಸಿದ್ಧಲಿಂಗಯ್ಯ, ಜಿ.ಕೆ. ವೆಂಕಟೇಶ್ Combinationನ “ಬಂಗಾರದ ಮನುಷ್ಯ” ತಂಡ ಬೇಕಾಗಿದೆ.

ಬಳ್ಳಾರಿ ಹಿನ್ನೆಲೆಯಲ್ಲಿ ಉ-ಚಿ ಚುನಾವಣೆ ಅವಲೋಕನ – ಪ್ರಗತಿಪರರಿಗೊಂದು ಪಾಠ?


-ಬಿ. ಶ್ರೀಪಾದ ಭಟ್


 
ಇತ್ತ ಮುಂಬೈ ಕರ್ನಾಟಕಕ್ಕೂ ಸೇರದ ಅತ್ತ ಹೈದರಾಬಾದ್ ಕರ್ನಾಟಕಕ್ಕೂ ಸೇರದ ಟಿಪಿಕಲ್ ಬಯಲುಸೀಮೆ ಬರಡು ಪ್ರದೇಶದ ಬಳ್ಳಾರಿ ಜಿಲ್ಲೆಗೆ ಕರ್ನಾಟಕದ ಇತರೇ ಜಿಲ್ಲೆಗಳಂತೆ ತನ್ನದೇ ಆದ ಒಂದು ಅಸ್ಮಿತೆಯಾಗಲಿ, ಸಾಂಸ್ಕೃತಿಕ ಪರಂಪರೆಯಾಗಲಿ ಇಲ್ಲ. ಇದು ತನ್ನದೇ 7 ತಾಲೂಕುಗಳಾದ ಸಿರುಗುಪ್ಪ, ಹೊಸಪೇಟೆ, ಕೂಡ್ಲಿಗಿ, ಬಳ್ಳಾರಿ ಗ್ರಾಮಾಂತರ, ಹೂವಿನ ಹಡಗಲಿ, ಹಗರಿಬೊಮ್ಮನ ಹಳ್ಳಿ, ಸೊಂಡೂರು (ಸಿರುಗುಪ್ಪ ಹಾಗು ಬಳ್ಳಾರಿ ಗ್ರಾಮಾಂತರ ಹೊರತುಪಡಿಸಿ) ಇವುಗಳೊಂದಿಗೂ ಸಾಮಾಜಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಯಾವುದೇ ರೀತಿಯ ಸಾಮ್ಯತೆಯನ್ನು ಹೊಂದಿಲ್ಲ. ಈ ಜಿಲ್ಲೆ ಹೆಚ್ಚೂ ಕಡಿಮೆ ಕಳೆದ 2 ದಶಕಗಳಿಂದ ಆಂಧ್ರದ ರಾಯಲಸೀಮದ ಜಮೀನ್ದಾರಿ ವ್ಯಕ್ತಿತ್ವವನ್ನೂ, ಫ಼್ಯೂಡಲಿಸಂನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅದನ್ನೂ ಸಂಪೂರ್ಣವಾಗಿ ಹೊತ್ತುಕೊಂಡಿಲ್ಲ ಅಥವಾ ಒಳಗೊಂಡಿಲ್ಲ. ಈ ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶ ಈ ರೀತಿಯಾಗಿ ತೆಲುಗುಮಯವಾಗದಂತೆ ತೊಡರುಗಾಲಿಡುತ್ತಿರುವುದು ಅಲ್ಲಿನ ಕನ್ನಡದ ಜನತೆಯಿಂದ. ಆದರೆ ಈಗ ಇವರೂ ಅಲ್ಪಸಂಖ್ಯಾತರಾಗಿದ್ದಾರೆ. ಗಣಿಚೋರರಾದ ರೆಡ್ಡಿಗಳ ದೆಸೆಯಿಂದ ಕಳೆದ ಹತ್ತು ವರ್ಷಗಳಲ್ಲಿ ಇಡೀ ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ತೆಲುಗು ಭಾಷೆಯನ್ನು ಆಡು ಮಾತನ್ನಾಗಿಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಒಂದು ಕಾಲದಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದ ಅಲ್ಲಿನ ನಟರಾಜ ಹಾಗೂ ಉಮಾ ಚಿತ್ರಮಂದಿರಗಳು ಇಂದು ತೆಲಗು ಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿವೆ. ಅಲ್ಲಿನ ತಾಲೂಕ ಕಛೇರಿಗಳಲ್ಲಾಗಲಿ, ಡಿಸಿ ಆಫೀಸಿನಲ್ಲಾಗಲಿ, ನಗರಸಭೆಗಳಲ್ಲಾಗಲಿ ಎಲ್ಲಾ ವಿಭಾಗಳಲ್ಲಿಯೂ ವಿಜೃಂಭಿಸುತ್ತಿರುವುದು ತೆಲುಗು ಭಾಷೆ. ಕೇವಲ ಆಡಳಿತದಲ್ಲಿನ ವ್ಯವಹಾರ ಮಾತ್ರ ಕನ್ನಡದಲ್ಲಿದೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಇಲ್ಲಿನ ರಾಜಕೀಯವನ್ನು, ಶಾಸಕ ಕ್ಷೇತ್ರವನ್ನು ತನ್ನ ಹಿಡಿತದಲ್ಲಿರಿಸಿಕೊಂಡಿತ್ತು. ಆ ಹಿಡಿತ ಊಳಿಗಮಾನ್ಯದ, ಫ಼ೂಡಲಿಸಂನ ಕಪಿಮುಷ್ಟಿಯಾಗಿತ್ತು. ಅಲ್ಲಿ ಅಬಿವೃದ್ದಿ ಎನ್ನುವುದು ಮರೀಚಿಕೆಯಾಗಿತ್ತು. ಅಲ್ಲಿ ವಿಜೃಂಭಿಸುತ್ತಿದ್ದುದು ಕೇವಲ ಗೂಂಡಾಗಿರಿ ಮಾತ್ರ. ಜನತೆಯಲ್ಲಿ ಕೂಡ ಯಾವುದು ಜೀವಂತ ಸ್ಥಿತಿ, ಯಾವುದು ಸತ್ತಂತಹ ವ್ಯವಸ್ಥೆ ಎನ್ನುವ ಜಿಜ್ನಾಸೆ ಕೂಡ ಇರಲಿಲ್ಲ. ಇವರಲ್ಲಿ ಗೊಂದಲಗಳೇ ಇರಲಿಲ್ಲ. ಅವರಲ್ಲಿ ರಾಜಕೀಯ ಪ್ರಜ್ನೆಯಾಗಲಿ, ಮಹತ್ವಾಕಾಂಕ್ಷೆಯಾಗಲಿ ಮೈಗೂಡಿರಲೇ ಇಲ್ಲ. ಹೀಗಾಗಿ ಇಲ್ಲಿ ನಡೆದ ಸಮಾಜವಾದಿ, ಎಡಪಂಥೀಯ ಪ್ರಗತಿಪರ ಹೋರಾಟಗಳು ಸಾಮೂಹಿಕ ಜನ ಬೆಂಬಲವಿಲ್ಲದೆ ಸೊರಗಿದವು. ಈ ಪ್ರಗತಿಪರ ಹೋರಾಟಗಳು ದಾಸನ್ ಸಾಲೋಮನ್ ,ಶಾಂತರುದ್ರಪ್ಪ, ಸಿರಿಗೆರೆ ಬಸವರಾಜ್, ಅರವಿಂದ ಮಲೆಬೆನ್ನೂರು, ಶಾರದಮ್ಮ ಮಲೆಬೆನ್ನೂರುರಂತಹವರ ಆದರ್ಶದ, ಪ್ರಾಮಾಣಿಕತೆಯ, ಸಿದ್ಧಾಂತ ಆಧಾರಿತ ಹೋರಾಟದ ವ್ಯಕ್ತಿಗತ ನೆಲೆಯನ್ನು ಮಾತ್ರ ನೆಚ್ಚಿಕೊಂಡಿದ್ದವು. ಸಿರಿಗೆರೆ ಬಸವರಾಜು ಅವರು ಎಂಬತ್ತರ ದಶಕದಲ್ಲಿ ಆಗಿನ ಶಾಸಕರಾಗಿದ್ದ ಮುಂಡ್ಲೂರು ರಾಮಪ್ಪ ಹಾಗೂ ಬಸವರಾಜೇಶ್ವರಿಯವರ ವಿರುದ್ಧ ತಮ್ಮ ಏಕಾಂಗಿ ಹೋರಾಟವನ್ನು ನಡೆಸಿದ್ದರು. ಮುಂಡ್ಲೂರು ರಾಮಪ್ಪನವರದು ತೋಳ್ಬಲದ ದಬ್ಬಾಳಿಕೆಯ, ಫ಼ೂಡಲಿಸಂನ ರಾಜಕೀಯವಾದರೆ ( ಇವರ ತಮ್ಮ ರೈಲ್ವೆ ಬಾಬು ಆ ಕಾಲಕ್ಕೆ ಕುಖ್ಯಾತ ರೌಡಿಯಾಗಿದ್ದ) ಸಿರಿಗೆರೆ ಬಸವರಾಜು ಅವರದು ಪ್ರವಾಹದ ವಿರುದ್ಧದ ಅತ್ಯಂತ ಏಕಾಂಗಿ ಹೋರಾಟವಾಗಿತ್ತು. ಸಿರಿಗೆರೆ ಬಸವರಾಜು ಅವರ ಈ ಗೂಂಡಾಗಿರಿಯ ವಿರುದ್ಧದ ಬೀದಿ ಹೋರಾಟಕ್ಕೆ ಕೆಳವರ್ಗಗಳಿಂದ, ದಲಿತರಿಂದ ಅಪಾರ ಜನ ಬೆಂಬಲವಿತ್ತು. ಆದರೆ ಅಲ್ಲಿನ ಮಧ್ಯಮ ವರ್ಗ ಮಾತ್ರ ಸಿರಿಗೆರೆ ಬಸವರಾಜು ಅವರ ಪ್ರಗತಿಪರ ಹೋರಾಟಕ್ಕೆ ಸಂಪೂರ್ಣ ಅಸಡ್ಡೆಯನ್ನು, ನಿರ್ಲಕ್ಷ್ಯವನ್ನು ಪ್ರದರ್ಶಿಸಿತು. ಆದರೆ ದುರಂತವೆಂದರೆ ಬಳ್ಳಾರಿಯ ರಕ್ತಸಿಕ್ತ ರಾಜಕಾರಣಕ್ಕೆ ಬಲಿಯಾದ ಅಮಾಯಕ ಸಿರಿಗೆರೆ ಬಸವರಾಜು ಹತ್ಯೆಗೀಡಾದರು. ಅಲ್ಲಿಗೆ ಆ ಬರಡು ನೆಲದಲ್ಲಿ ಎಲ್ಲೋ ಒಂದು ಕಡೆ ಕ್ಷೀಣವಾಗಿಯಾದರೂ ಧ್ವನಿ ಹೊರಡಿಸುತ್ತಿದ್ದ ಜನಪರ, ಪ್ರಜಾಸತ್ತಾತ್ಮಕ ಹೋರಾಟದ ನೆಲೆಯೇ ಅಂತ್ಯಗೊಂಡಿತು.

ಸಿರಿಗೆರೆ ಪನ್ನರಾಜು ಅವರು ಸಿರಿಗೆರೆ ಬಸವರಾಜು ಅವರ ಸಹೋದರ. ಇಂತಹ ಅತ್ಯಂತ ನಿರಾಶದಾಯಕ ಹಿನ್ನೆಲೆಯ ಬಳ್ಳಾರಿಯಲ್ಲಿ 1989ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಮಂಡ್ಲೂರು ರಾಮಪ್ಪ ಹಾಗೂ ಪಕ್ಷೇತರ ಭಾಸ್ಕರನಾಯ್ಡು ( ಮಟ್ಕ ದೊರೆ) ಅವರ ವಿರುದ್ಧ ಪ್ರಗತಿಪರ ಹೋರಾಟಗಾರಾದ ಸಿರಿಗೆರೆ ಪನ್ನರಾಜು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಪನ್ನರಾಜು ಅವರಿಗೆ ಅಣ್ಣ ಸಿರಿಗೆರೆ ಬಸವರಾಜು ಅವರ ಜನಪ್ರಿಯತೆಯ ದೊಡ್ಡ ಅಲೆಯೇ ಆಶಾಕಿರಣ ಹಾಗೂ ನಂಬುಗೆಯ ತೇಲು ದೋಣಿ. ಆಗ ವಿದ್ಯಾರ್ಥಿಗಳಾಗಿದ್ದ ನಾವೆಲ್ಲ ವಿ,ಪಿ,ಸಿಂಗ್‌ರವರ ಜನಪ್ರಿಯತೆಯ ಪ್ರಭಾವಳಿಯಲ್ಲಿ ಸಿಲುಕಿಕೊಂಡು ಮೊಟ್ಟಮೊದಲ ಬಾರಿಗೆ  ಚುನಾವಣಾ ರಾಜಕೀಯದಲ್ಲಿ ಭಾಗವಹಿಸಿ ಸಿರಿಗೆರೆ ಪನ್ನರಾಜು ಪರವಾಗಿ ಚುನಾವಣ ಕಣದಲ್ಲಿ ಸಂಪೂರ್ಣ ಪ್ರಚಾರಕ್ಕೆ ತೊಡಗಿಕೊಂಡಿದ್ದೆವು. ಇದು ನಮ್ಮೆಲ್ಲರ ಮೊಟ್ಟ ಮೊದಲ ಬಹಿರಂಗ ಚುನಾವಣ ಪ್ರಯೋಗವಾಗಿತ್ತು. ಬಸವರಾಜು ಅವರ ಜನಪರ ಹೋರಾಟದ, ಕೆಳಮಧ್ಯಮ ವರ್ಗದ ಹಿನ್ನೆಲೆ, ಸರಳತೆಯಿಂದಾಗಿ ಸಹೋದರ ಪನ್ನರಾಜುರವರ ಜನಪ್ರಿಯತೆ ತೀವ್ರವಾಗುತ್ತಿತ್ತು. ನಾವೆಲ್ಲ ಸತತವಾಗಿ 15 ದಿನಗಳ ಕಾಲ ಸಂಪೂರ್ಣವಾಗಿ ನಮ್ಮನ್ನೆಲ್ಲ ಪನ್ನರಾಜು ಪರವಾಗಿ  ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆವು. ಆದರೆ ಆಗ ಮಂಡ್ಲೂರು ರಾಮಪ್ಪನವರ ಹಣ ಬಲ ಹಾಗೂ ಚುನಾವಣ ರಣತಂತ್ರಗಳ ಎದುರು ಜನಪ್ರಿಯರಾಗಿದ್ದರೂ ಪನ್ನರಾಜು ಸೋಲಬೇಕಾಯಿತು. ತನ್ನ ಹಣಬಲ ಹಾಗೂ ತೋಳ್ಬಲದಿಂದ ಮುಂಡ್ಲೂರು ರಾಮಪ್ಪ ಗೆದ್ದುಬಿಟ್ಟರು. ನಮಗೆಲ್ಲ ಆಗ ಈ ಶಕ್ತಿ ರಾಜಕಾರಣ ಹಾಗೂ ಹುಂಡಾ ರಾಜಕಾರಣದ ಹತ್ತಿರದ ಎಳ್ಳಷ್ಟೂ ಪರಿಚಯವಿಲ್ಲದ ಕಾರಣ ಜನಪ್ರಿಯತೆಯಿದ್ದೂ, ಅಪಾರ ಜನಬೆಂಬಲ, ವಿದ್ಯಾರ್ಥಿಗಳ ಬೆಂಬಲವಿದ್ದೂ ಪನ್ನರಾಜು ಅವರ ಸೋಲಿನ ಫಲಿತಾಂಶದಿಂದ ನಾವೆಲ್ಲ ತೀವ್ರ ನಿರಾಶೆಗೆ ಒಳಗಾಗಿದ್ದೆವು.

ಆದರೆ ಇದಕ್ಕಿಂತ ದುರಂತ ಬಳ್ಳಾರಿಗೆ ಹಾಗು ಅಲ್ಲಿನ ಜನತೆಗೆ ಮುಂದೆ ಕಾದಿದ್ದು ವಿಧಿಯ ಕಠೋರ ವಿಪರ್ಯಾಸ.ನಂತರ ನಡೆದದ್ದು ಸಂಪೂರ್ಣ ದುರಂತ ಕಥೆ. ಬಳ್ಳಾರಿಯ ಜನತೆ ಬೆಂಕಿಯಿಂದ ಬಿಡಿಸಿಕೊಳ್ಳಲು ಮುಳ್ಳೂರು ರಾಮಪ್ಪನವರ ತೆಕ್ಕೆಯಿಂದ ಹೊರಬಂದು ಗಣಿಚೋರರಾದ ರೆಡ್ಡಿಗಳು, ಭ್ರಷ್ಟ ರಾಜಕಾರಣಿ ಶ್ರೀರಾಮುಲು ಎನ್ನುವ ಕುದಿವ ಲಾವರಸದ ಪ್ರಪಾತಕ್ಕೆ ಬಿದ್ದು ಸಂಪೂರ್ಣವಾಗಿ ನಲುಗಿ ಹೋದರು. ಅಲ್ಲದೆ ಅಲ್ಲಿನ ಜನತೆ ತಮ್ಮ ಈ ವಿವೇಚನಾರಹಿತ ನಿರ್ಧಾರಗಳಿಂದ ಇಡೀ ಜಿಲ್ಲೆಯನ್ನೇ ಹಾಳುಗೆಡುವಲು ಪರೋಕ್ಷವಾಗಿ ಕಾರಣರಾದರು. ದುರಂತವೆಂದರೆ  ಇಡೀ ಈ ರೆಡ್ಡಿಗಳ, ಶ್ರೀರಾಮುಲು ಅವರ ಅನೈತಿಕ, ಭ್ರಷ್ಟ ರಾಜಕಾರಣಕ್ಕೆ ಬಲಿಯಾಗುತ್ತಿರುವುದು ಅಮಾಯಕರಾದ ಹಿಂದುಳಿದ ವರ್ಗಗಳ ಜನಾಂಗ. ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿಗಿಂತಲೂ ಇಂದಿನ ಇವರ ವರ್ತಮಾನ ಹಾಗು ಭವಿಷ್ಯ ಭೀಕರವಾಗಿದೆ. ಈಗ ಒಬ್ಬ ತರ್ಕರಹಿತ ಸಿದ್ದಾಂತರಹಿತ ರಾಜಕಾರಣಿಯಾದ ಶ್ರೀರಾಮುಲುರವರ ಹುಂಬತನದ ,ಭ್ರಷ್ಟ, ಗೊತ್ತು ಗುರಿಯಿಲ್ಲದ ಬೌದ್ಧಿಕ ದಿವಾಳಿತನದ ಸ್ಥಿತಿಯಿಂದಾಗಿ ಇಡೀ ಬಳ್ಳಾರಿ ಜಿಲ್ಲೆ ಮತ್ತೆ ಅತಂತ್ರ ಸ್ಥಿತಿಯಲ್ಲಿದೆ. ತಾನು ರೆಡ್ಡಿಗಳೊಂದಿಗೆ ಜೊತೆಗೂಡಿ ಅಕ್ರಮವಾಗಿ ಸಂಪಾದಿಸಿದ ಭ್ರಷ್ಟ ದುಡ್ಡಿನಿಂದ ಜನರಿಗೆ ಬೇಕಾಬಿಟ್ಟಿಯಾಗಿ ಹಂಚಿ ಅಮಾಯಕ ಜನರನ್ನು ತಮ್ಮ ಹಂಗಿನರಮನೆಯೊಳಗಿರಿಸಿಕೊಂಡಿದ್ದಾರೆ ಈ ಶ್ರೀರಾಮುಲು.

ಇದೆಲ್ಲವೂ ಶ್ರೀರಾಮುಲು ಅವರನ್ನು ಬೆಂಬಲಿಸುತ್ತಿರುವ ನಮ್ಮ ಕೆಲವು ಸಂಘಟನೆಗಳಿಗೆ, ಪ್ರಗತಿಪರ ಪತ್ರಕರ್ತರಿಗೆ ಗೊತ್ತಿಲ್ಲವೇ? ಗೊತ್ತಿದೆ! ಆದರೆ ಏತಕ್ಕೆ ಇಂತಹ ಅತ್ಮಹತ್ಯಾತ್ಮಕ ನಿಲುವು? ಇವರೆಲ್ಲಾ ಕಳೆದ 50 ವರ್ಷಗಳ ಬಳ್ಳಾರಿಯ ರಾಜಕೀಯ, ಸಾಮಾಜಿಕ ಹಿನ್ನೆಲೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಈ ಶ್ರೀರಾಮುಲು ಅವರ ಆಡೊಂಬಲವೇ ಬಳ್ಳಾರಿ. ಏಕೆಂದರೆ ಶ್ರೀರಾಮುಲು ಇಂದು ಪ್ರದರ್ಶಿಸುತ್ತಿರುವ ಅಮಾಯಕತ್ವ ಬಲು ದೊಡ್ಡ ನಟನೆ. ಗಣಿ ಲೂಟಿಯ, ಲೂಟಿಗೆ ಸಂಪೂರ್ಣವಾಗಿ ಸಹಕರಿಸಿದ ಪಾಪದ ಕೊಡದಿಂದ ಆಪರೇಷನ್ ಕಮಲವೆನ್ನುವ ಅತ್ಯಂತ ಹೇಯ ರಾಜಕೀಯ ಸಿದ್ಧಾಂತದಿಂದ ಕರ್ನಾಟಕ ರಾಜಕಾರಣವನ್ನು ಸಂಪೂರ್ಣ ಕುಲಗೆಡಿಸಿದ ಅಪಾದನೆಗಳಿಂದ ಹಾಗೂ ಬಳ್ಳಾರಿ ಜಿಲ್ಲೆಯನ್ನು ಒಂದು ಜೀತದ ಹಟ್ಟಿಯನ್ನಾಗಿ ಮಾಡಿದ ರೆಡ್ಡಿಗಳಿಗೆ ಸಂಪೂರ್ಣ ಹೆಗಲುಕೊಟ್ಟು ಸಹಕರಿಸಿದ ಶ್ರೀರಾಮುಲು ಎನ್ನುವ ಸಿದ್ಧಾಂತರಹಿತ, ಭ್ರಷ್ಟ ರಾಜಕಾರಣಿಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸಲೇ ಬಾರದು. ಹಿಂದೊಮ್ಮೆ ಇಂತಹ ಗತಿಗೆಟ್ಟ ರಾಜಕೀಯದ ವಿರುದ್ಧ ದನಿಯೆತ್ತಿದ ಸಿರಿಗೆರೆ ಬಸವರಾಜು ಅವರು ಬಳ್ಳಾರಿಯ ಫ಼್ಯೂಡಲಿಸಂನ ವಿರುದ್ಧ ಏಕಾಂಗಿ ಹೋರಾಟ ನಡೆಸಿದ್ದರು. ಇದೇ ಮಾದರಿಯ ಏಕಾಂಗಿ ಹೋರಾಟ ರಾಜ್ಯದ ಇತರೇ ಜಿಲ್ಲೆಗಳಲ್ಲಿ ಕೂಡ ಕಾಣಬಹುದು. ಈ ಏಕಾಂಗಿ ಹೋರಾಟದ ಮಾರ್ಗ ಎಂದೂ ಕಳಂಕಿತಗೊಳ್ಳದ, ಪ್ರಾಮಾಣಿಕ, ನಿಸ್ವಾರ್ಥ ಮಾರ್ಗ. ಇದು ಅನ್ಯಾಯದ ವಿರುದ್ಧದ ನಿರಂತರ ಹೋರಾಟ. ಪ್ರೊ.ಎಂ.ಡಿ.ಎನ್ ರವರ ಮಾರ್ಗವೂ ಇದೇ. ಲೋಹಿಯಾ ಮಾರ್ಗವೂ ಇದೇ. ಈ ಮಾರ್ಗವನ್ನು ನಾವು ಕೂಡ ಕೈಗೆತ್ತಿಕೊಳ್ಳಬೇಕು.

ಇಂದು ಸೆಮಿನಾರಗಳಲ್ಲಿ,ವಿಚಾರ ಸಂಕಿರಣಗಳಲ್ಲಿ ಮೈಮರೆತು ಆನಂದಿಸುತ್ತಿರುವ ಕನ್ನಡದ ಬುದ್ಧಿಜೀವಿಗಳು,ಪ್ರಗತಿಪರ ಚಿಂತಕರು ಇವುಗಳ ರೋಚಕತೆಯಿಂದ ಹೊರಬರಬೇಕಿದೆ. ಏಕೆಂದರೆ ಇಲ್ಲಿನ ಬಿಜೆಪಿಯ ಭ್ರಷ್ಟ ರಾಜಕಾರಣದ, ಕೋಮುವಾದದ ವಿರುದ್ಧ ನಿರಂತರ ಹೋರಾಟದ ಮಾತಿರಲಿ, ಸಂತೋಷ ಹೆಗ್ಡೆಯವರು ನಿರ್ಗಮಿಸಿದ ನಂತರ ಲೋಕಾಯುಕ್ತ ಸಂಸ್ಥೆಯ ಕಾರ್ಯ ವೈಖರಿಗಳು ಅತ್ಯಂತ ಅನುಮಾನಾಸ್ಪದವಾಗಿರುವುದು ನಮ್ಮ ಬುದ್ದಿಜೀವಿಗಳಿಗೆ ಕಾಣುತ್ತಿಲ್ಲವೇ? ಪ್ರಮುಖ ರಾಜಕಾರಣಿಗಳ ವಿರುದ್ಧದ ಕೇಸುಗಳಲ್ಲಿ ಲೋಕಾಯುಕ್ತ ಪೋಲೀಸರು ಅತ್ಯಂತ ತ್ವರಿತಗತಿಯಲ್ಲಿ ತಮ್ಮ ತನಿಖೆಯನ್ನು ಪೂರ್ಣಗೊಳಿಸಿ, ಕಳಂಕಿತರ ವಿರುದ್ಧ ಯಾವುದೇ ದೋಷಾರೋಪ ಪಟ್ಟಿಯನ್ನು ಸಲ್ಲಿಸದೇ ಬಿಜೆಪಿಯ ಆಪಾದಿತ ಎಲ್ಲ ಭ್ರಷ್ಟ ಮಂತ್ರಿಗಳನ್ನು ನಿರ್ದೋಷಿಗಳೆಂದು ಅತ್ಯಂತ ಅನುಮಾನಾಸ್ಪದವಾಗಿ ರಿಪೋರ್ಟ್ ನೀಡುತ್ತಿರುವುದು ನಮ್ಮ ಬುದ್ಧಿಜೀವಿಗಳಿಗೆ ಗೋಚರಿಸುತ್ತಿಲ್ಲವೇ? ಈ ಘಟನೆಗಳು ನಮ್ಮಲ್ಲಿ ತಲ್ಲಣಗೊಳಿಸುತ್ತಿಲ್ಲವೇ? ಎಲ್ಲಿ ಹೋಯಿತು ಇವರೆಲ್ಲರ ಆತ್ಮಸಾಕ್ಷಿ? ನಮಗೆಲ್ಲ ಇಷ್ಟು ಬೇಗನೇ ಸಿನಿಕತನ ಬಂದಿತೇ?

ಇಂದು ಕೇಸರೀಕರಣಗೊಂಡ ಜಿಲ್ಲೆ ಎಂದು ಅಪಖ್ಯಾತಿಗೊಳಗಾದ ಉಡುಪಿ ಜಿಲ್ಲೆ ಪಾರ್ಲಿಮೆಂಟರಿ ಉಪ ಚುನಾವಣೆಯಲ್ಲಿ ಬಿಜೆಪಿಯ ಕೋಮುವಾದಿ ಅಭ್ಯರ್ಥಿ ಸುನಿಲ್ ಕುಮಾರ್‌ನನ್ನು ಸೋಲಿಸಿದ್ದಾರೆ. ಜಯಪ್ರಕಾಶ್ ಹೆಗಡೆ ಗೆದ್ದಿದ್ದಾರೆ. ಇದಕ್ಕೆ ಜಯಪ್ರಕಾಶ್ ಅವರ ಉತ್ತಮ ಇಮೇಜ್ ಕಾರಣವಿರಬಹುದಾದರು ಎಲ್ಲದಿಕ್ಕಿಂತಲೂ ಬಲು ಮುಖ್ಯ ಕಾರಣ ಜನ ಕರ್ನಾಟಕವನ್ನು ಇನ್ನಿಲ್ಲದಂತೆ ಹಾಳುಗೆಡವಿದ ಭ್ರಷ್ಟ ಬಿಜೆಪಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಒಬ್ಬ ಉತ್ತಮ ಪರ್ಯಾಯ ಆಯ್ಕೆ ದೊರೆತರೆ ಜನತೆ ಈ ದಿಕ್ಕು ದೆಸೆಯಿಲ್ಲದ ಸಂಘ ಪರಿವಾರವನ್ನು ಮೂಲೆಗುಂಪು ಮಾಡಲು ಮನಸ್ಸು ಮಾಡಿರುವುದು ಉಡುಪಿಯ ಈ ಫಲಿತಾಂಶವೇ ಸಾಕ್ಷಿ. ಇದು ಜಡಗೊಂಡ ನಮ್ಮ ಬುದ್ದಿಜೀವಿಗಳಿಗೆ ಒಂದು ಮಾದರಿಯನ್ನು ತೋರಿಸಿಕೊಟ್ಟಿದೆಯಲ್ಲವೇ? ಇದನ್ನೇ ಮುಂದುವರಿಕೆಯಾಗಿ ಬೇರೆ ಜಿಲ್ಲೆಗಳ ಜನತೆಗೂ ಇದೇ ಮಾದರಿ ಉತ್ತಮ ಪರ್ಯಾಯ ಆಯ್ಕೆಯನ್ನು ರೂಪಿಸಲು ನಮ್ಮ ಪ್ರಗತಿಪರರಿಗೆ ಇರುವ ತೊಂದರೆಯಾದರೂ ಏನು? ಒಂದೇ ತೊಂದರೆ ಅದು ಇಚ್ಹಾಶಕ್ತಿಯ ಕೊರತೆ. ಒಂದೇ ತೊಂದರೆ ಅದು ಜಡತ್ವದ ತೊಂದರೆ. ಒಂದೇ ತೊಂದರೆ ಅದು ಹೋರಾಟಗಳ ಮಾದರಿಗೆ ಸಂಪೂರ್ಣವಾಗಿ ತಿಲಾಂಜಲಿಯನ್ನು ಕೊಟ್ಟಿರುವುದು. ಆದರೆ ಅನ್ಯಾಯದ ವಿರುದ್ಧದ ಹೋರಾಟ ನಿರಂತರವಾದದ್ದು. NO CEASEFIRE ಎನ್ನುವ ಮೂಲ ತತ್ವವನ್ನು ಇಷ್ಟು ಬೇಗ ಮರೆತುಹೋಗಬಾರದೆಂಬುದೇ ನಮ್ಮೆಲ್ಲರ ಕನವರಿಕೆ.

ರಾಹುಲ್, ಅಖಿಲೇಶ್ : ಗೆಲುವು ಕೊಡುವ ಸೌಂದರ್ಯ


-ಬಿ. ಶ್ರೀಪಾದ ಭಟ್


 

“ನೀನು ಶ್ರೇಷ್ಟನಾಗುವುದು ಮಹಾತ್ವಾಕಾಂಕ್ಷೆಯಿದ್ದಾಗ. ಅದರೆ ಅದರ ಜೊತೆಗೆ ಬರುವ ಖಾಯಿಲೆಗಳಿಂದ ಮುಕ್ತನಾದಾಗ. ಮಾಡುವ ಕೆಲಸಗಳು ಪವಿತ್ರವಾಗಿರಬೇಕೆಂದು ಅರಿವಾದಾಗ.” – ಲೇಡಿ ಮ್ಯಾಕ್ ಬೆತ್ ( ಅನು.:ರಾಮಚಂದ್ರ ದೇವ )

ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ಸೌಂದರ್ಯ ಅವನ/ಅವಳ ದೈಹಿಕ ಅಂದದ ಮೂಲಕ ಅಳೆಯುತ್ತೇವೆ. ಅಥವ ಅಳೆಯಲ್ಪಡುತ್ತದೆ. ಅವರ ಬಣ್ಣ, ಎತ್ತರ, ಕಣ್ಣು, ಮೂಗು, ತೂಕ, ಹೀಗೆ ಅನೇಕ ಸಂಗತಿಗಳು ಗಣನೆಗೆ ಒಳಪಡುತ್ತವೆ .ಈ ಬಾಹ್ಯ ಸೌಂದರ್ಯ ಹೆಚ್ಚಾಗಿ ಆಕರ್ಷಣೆಗೆ ಪರಿಗಣಿತವಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಜನಪ್ರಿಯ ವ್ಯಕ್ತಿಗಳಾದ ಅನೇಕ ಸಿನಿಮಾ ನಟ/ನಟಿಯರು, ಆಟಗಾರರು, ಅಥ್ಲೀಟ್ ಗಳು ,ರಾಜಕಾರಣಿಗಳು ಅಥವಾ ನಾವು ದಿನ ನಿತ್ಯ ಮುಖಾಮುಖಿಯಾಗುವ ವ್ಯಕ್ತಿಗಳು, ಹೀಗೆ ಈ ಬಾಹ್ಯ ಸೌಂದರ್ಯದ ಆಕರ್ಷಣೆಗೆ, ಮನಸೋಲುವಿಕೆಗೆ ಅನೇಕ ಮಜಲುಗಳಿವೆ .ಇದು ಸಹಜವಾದದ್ದು. ಇದರಲ್ಲಿ ಅಂತಹ ವಿಶೇಷವೇನಿಲ್ಲ. ಆದರೆ ವ್ಯಕ್ತಿಯೊಬ್ಬನ ದೈಹಿಕ ಸೌಂದರ್ಯವನ್ನು ಮೀರಿ, ದೈಹಿಕ ಆಕರ್ಷಣೆಯ ಕೊರತೆಯಿದ್ದರೂ, ತಮ್ಮ ಅನೇಕ ದೈಹಿಕ ನೂನ್ಯತೆಗಳ ನಡುವೆಯೂ ತನ್ನ ಕಾರ್ಯಕ್ಷೇತ್ರದಲ್ಲಿನ ಸಾಧನೆಯಿಂದ ಅವನು/ಅವಳು ಆಕರ್ಷಕವಾಗಿ ಕಂಗೊಳಿಸುವುದು ನಿಜಕ್ಕೂ ವಿಶೇಷವೆನಿಸುತ್ತದೆ.

ಇತ್ತೀಚೆಗೆ “ಪಾನ್ ಸಿಂಗ್ ಟೋಮರ್” ಎನ್ನುವ ಹಿಂದಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ ಇರ್ಫ಼ಾನ್ ಖಾನ್ ಅತ್ಯಂತ ಸಾಧಾರಣ ರೂಪಿನ ನಟ. ಹತ್ತರಲ್ಲೊಬ್ಬ. ಆದರೆ ತನ್ನ ಶ್ರೇಷ್ಟ ನಟನೆಯ ಮೂಲಕ, ಆ ಚಿತ್ರದ ಗೆಲುವಿನ ಮೂಲಕ, ಇಂದು ಆಕರ್ಷಕ ನಟನಾಗಿ ಮೇಲೇರುತ್ತಿದ್ದಾನೆ. ಇದೇ ಮಾತು ನಾಸಿರುದ್ದೀನ್ ಶಾ ಹಾಗೂ ಓಂಪುರಿ ಅವರಂತಹ ಸಾಧಾರಣ ರೂಪಿನ ಶ್ರೇಷ್ಟ ನಟರಿಗೂ ಅನ್ವಯಿಸುತ್ತದೆ. ಇದೇ ಮಾತು ಸ್ಮಿತಾ ಪಾಟೀಲ್‌ಳಂತಹ ಅದ್ಭುತ ನಟಿಗೆ ಕೂಡ ಅನ್ವಯಿಸುತ್ತದೆ. ಸುಂದರಿಯರಾದ, ಮಾದಕ ರೂಪಿನ ಶ್ರೀದೇವಿ. ಜಯಪ್ರದ ಅವರಿಗಿಂತಲೂ ಕಪ್ಪಗಿನ ಅನಾಕರ್ಷಕ ರೂಪಿನ ಸ್ಮಿತಾ ಪಾಟೀಲ್, ಶಬನ ಅಜ್ಮಿ‌ರಂತಹ ಅದ್ಭುತ ನಟಿಯರು ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಕನಸಿನ ರಾಣಿಯರಾಗಿದ್ದರು. ಇದಕ್ಕೆ ಕಾರಣ ಅವರ ಮನೋಜ್ನ ಅಭಿನಯದ ಸೌಂದರ್ಯ. ಅವರ ಬುದ್ಧಿಜೀವಿ ವ್ಯಕ್ತಿತ್ವ. ಇದೇ ಮಾತು ನಮ್ಮ ಪಿ.ಟಿ.ಉಷಾ ಎನ್ನುವ ಅದ್ಭುತ ಆಟಗಾರ್ತಿ ಬಗೆಗೂ ನಿಜ. ನೋಡಲಿಕ್ಕೆ ಕಪ್ಪಗೆ, ತೆಳ್ಳಗೆ, ಅತ್ಯಂತ ಸಾಧಾರಣ ರೂಪಿನ ಹುಡುಗಿಯಾಗಿದ್ದ ಈ ಪಿ.ಟಿ.ಉಷಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೇಟಿಕ್ಸ್‌ನಲ್ಲಿ ಗೆಲ್ಲತೊಡಗಿದಾಗ ಅವಳ ವ್ಯಕ್ತಿತ್ವವೇ ಆಕರ್ಷಕವಾಗಿ ಕಂಗೊಳಿಸತೊಡಗಿತು. ಅವಳ ಕಪ್ಪಗಿನ ಸಾಧಾರಣ ರೂಪ ನೇಪಥ್ಯಕ್ಕೆ ಸರೆಯಿತು.

ತನ್ನ ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ದೇಹದಿಂದ ಅನಾಕರ್ಷಕವಾಗಿ ಕಂಡುಬರುತ್ತಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ “ಅಖಿಲೇಶ್ ಸಿಂಗ್ ಯಾದವ್” ತಾನು ಹಗಲಿರುಳೂ ದುಡಿದು ,ಹಾದಿ ತಪ್ಪಿದ, ಸೋತಿದ್ದ ಸಮಾಜವಾದಿ ಪಕ್ಷವನ್ನು ತಳಮಟ್ಟದಿಂದ ,ಕಾರ್ಯಕರ್ತರ ಮೂಲಕ ಮರಳಿ ಅಖಾಡಕ್ಕೆ ಕರೆತಂದು 2012ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಹುಮತ ಗಳಿಸುವಂತೆ ಮಾಡಿ ಮತ್ತೆ ಅಧಿಕಾರವನ್ನು ತಂದು ಕೊಟ್ಟಿದ್ದಾನೆ. ಈ ಮೂಲಕ ಸಮಾಜವಾದಿ ಪಕ್ಷದ ಗೆಲುವಿನ ರೂವಾರಿಯಾಗಿದ್ದಾನೆ. ಇನ್ನು ಮುಂದಿನ ಒಂದು ತಿಂಗಳು ಈ ಅಖಿಲೇಶ ಯಾದವ್ ಸುದ್ದಿ ಮಾಧ್ಯಮಗಳ ಕೇಂದ್ರ ಬಿಂದು. ಈ ಅಖಿಲೇಶ್ ತನ್ನ ಈ ಸ್ವಯಾರ್ಜಿತ ಗೆಲುವಿನ ಮೂಲಕ ಸಹಜವಾಗಿಯೇ ಆಕರ್ಷಕವಾಗಿ ಕಾಣತೊಡಗಿದ್ದಾನೆ. ಮೇಲ್ಕಾಣಿಸಿದ ಆತನ ಸಾಧಾರಣ ರೂಪ ಇಂದು ಅಸಾಧಾರಣವಾಗಿಯೂ, ಸುಂದರವಾಗಿಯೂ ಕಾಣಲ್ಪಡತೊಡಗುತ್ತದೆ. ಎಲ್ಲರೂ ಈ ಅಖಿಲೇಶ್ ಯಾದವ್‌ನಲ್ಲಿ ನಾಯಕನ ರೂಪು ಕಾಣತೊಡಗಿದ್ದಾರೆ.ಇದೇ ಗೆಲುವಿನ ಗಮ್ಮತ್ತು. ಆದೇ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ದೈಹಿಕವಾಗಿ ಆಕರ್ಷಕವಾಗಿದ್ದ, ಕಣ್ಣು, ಮೂಗು, ಬಣ್ಣ, ಎತ್ತರ, ಧ್ವನಿ ಮುಂತಾದವುಗಳೆನ್ನೆಲ್ಲಾ ಸಮರೂಪವಾಗಿ ಪಡೆದಿದ್ದ, ತನ್ನ 42ರ ವಯಸ್ಸಿನಲ್ಲಿಯೂ ಅತ್ಯಂತ ಸುಂದರನಾಗಿ ಕಾಣುತ್ತಿದ್ದ ಈ ರಾಹುಲ್ ಗಾಂಧಿಯ ಡ್ರೆಸ್ ಕೋಡ್ ಕೂಡ ಅತನ ಸುಂದರ ರೂಪಿಗೆ ಮೆರುಗು ನೀಡುತ್ತಿತ್ತು. ಅತನ ಕುರುಚಲು ಗಡ್ದ ಸಹ! ಆದರೆ ಏನಾಯಿತು? ರಾಹುಲ್ ಗಾಂಧಿ ತನ್ನ ರಾಜಕೀಯ ಸ್ಥಾನಮಾನವನ್ನು,ತನ್ನ ಘನತೆಯನ್ನು ಪಣಕ್ಕಿಟ್ಟು ಹೋರಾಡಿದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ದಯನೀಯವಾಗಿ ಸೋಲನ್ನು ಅನುಭವಿಸಿ ಹೆಚ್ಚೂ ಕಡಿಮೆ ನೆಲ ಕಚ್ಚಿದೆ. ಅಲ್ಲದೆ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದೆ. ಇದರ ವಿಶ್ಲೇಷಣೆಗೆ ಬೇರೆಯೆದೇ ವೇದಿಕೆ ಬೇಕಾಗುತ್ತದೆ.ಆದರೆ ಇಂದು ಈ ತನ್ನ ಹೀನಾಯ ಸೋಲಿನ ಮೂಲಕ ಸುಂದರನಾದ ರಾಹುಲ್ ಗಾಂಧಿ ಅತ್ಯಂತ ಅನಾಕರ್ಷಕವಾಗಿ ಕಾಣತೊಡಗಿದ್ದಾನೆ. ಈ ರಾಹುಲ್ ಗಾಂಧಿ ಎನ್ನುವ ಕಾಂಗ್ರೆಸ್ ಯುವರಾಜ ರಾಜಕೀಯ ಯುದ್ಧದಲ್ಲಿ ಸೋತಂತಹ ದಿನಗಳಲ್ಲಿ ಇಂದು ಆತನ ಮನಮೋಹಕ ಬಣ್ಣ, ಹೊಳಪು, ಸುಂದರ ಕಾಯ ಯಾವುದೂ ಈತನನ್ನು ಮೇಲಕ್ಕೆತ್ತಲಾರವು. ಗೆಲುವಿಗೆ ಮಾತ್ರ ಆ ಸಾಧ್ಯತೆ ಇತ್ತು. ಇದು ಅಖಿಲೇಶ್ ಯಾದವ್ ಪಾಲಿಗೆ ನಿಜವೆಂದು ಸಾಬೀತಾಗಿದೆ. ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ಅನಾಕರ್ಷಕ ಅಖಿಲೇಶ್ ಯಾದವ್ ತನ್ನ ಗೆಲುವಿನ ಮೂಲಕ ಆಕರ್ಷಕವಾಗಿ ಎಲ್ಲರ ಕಣ್ಮಣಿಯಾಗಿ ಕಂಗೊಳಿಸುತ್ತಿದ್ದರೆ ಆಕರ್ಷಕ, ಸುಂದರ ಪುರುಷ ರಾಹುಲ್ ಗಾಂಧಿ ತನ್ನ ಹೀನಾಯ ಸೋಲಿನೊಂದಿಗೆ ಮೂಲೆಗೆ ತಳ್ಳಲ್ಪಟ್ಟಿದ್ದಾನೆ. ಅನಾಕರ್ಷಕವಾಗಿ ಕಾಣುತ್ತಿದ್ದಾನೆ. ಇದೇ ಪ್ರಾಮಾಣಿಕ ಗೆಲುವಿನ ಮನಮೋಹಕ ಆದರೆ ನಿಷ್ಟುರ ಕಠೋರ ದೃಶ್ಯಗಳು.

ಇಂದು ಯಶಸ್ಸಿನ ಅಲೆಯ ಮೇಲಿರುವ ಅಖಿಲೇಶ್ ಸಿಂಗ್ ಯಾದವ್‌ಗೆ ಮ್ಯಾಕ್ ಬೆತ್ ನಾಟಕದಲ್ಲಿ ಬ್ಯಾಂಕೋ ಹೇಳಿದ “ಹೊಸ ಗೌರವಗಳು ಅವನಿಗೆ ಸಂದಿವೆ, ಅವು ಹೊಸ ಬಟ್ಟೆಗಳಂತೆ; ದೇಹಕ್ಕೆ ಒಗ್ಗುವುದು ಉಪಯೋಗಿಸತೊಡಗಿದ ಮೇಲೆ,”ಎನ್ನುವ ಮನೋಜ್ಞ ಮಾತುಗಳು ಅರ್ಥವಾದರೆ ಎಷ್ಟು ಚೆನ್ನ! ರಾಮ ಮನೋಹರ ಲೋಹಿಯಾ ಅವರನ್ನು ಓದತೊಡಗಿದರೆ ಎಷ್ಟು ಚೆನ್ನ! ಒಂದು ವರ್ಷದ ನಂತರ ಲೋಹಿಯಾರ ಕೆಲವು ಮಾತುಗಳನ್ನು ತನ್ನ ತೊದಲು ನುಡಿಗಳಲ್ಲಿ ಹೇಳುವಂತಾದರೆ ಎಷ್ಟು ಚೆನ್ನ! ಬುಂದೇಲಖಂಡ, ಪೂರ್ವಾಂಚಲದಲ್ಲಿನ ಅನೇಕ ದಲಿತರ ಓಟುಗಳು ಈ ಬಾರಿ ಸಮಾಜವಾದಿ ಪಕ್ಷಕ್ಕೆ ಸಂದಿದ್ದರ ಹಿಂದಿನ ಸಾಮಾಜಿಕತೆ ಈ ಅಖಿಲೇಶ್ ಅರ್ಥ ಮಾಡಿಕೊಂಡರೆ, ಮುಸ್ಲಿಂರ ಓಟ್ ಬ್ಯಾಂಕ್ ಹೇಗೆ ಮತ್ತು ಏಕೆ ಸಂಘಟಿತವಾಗಿ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿತು ಎನ್ನುವುದನ್ನು ಈ ಅಖಿಲೇಶ್ ಅರಿತರೆ, ಯಾದವರು ಇಂದು ಒಂದು ಹಿಂದುಳಿದ ಜಾತಿಯಾಗಿ ಉಳಿದಿಲ್ಲ ಅದು ಒಂದು ಮಧ್ಯಮ ವರ್ಗದ, ಬಲಿಷ್ಟ ದಬ್ಬಾಳಿಕೆಯ ಜಮೀನ್ದಾರಿ ಜಾತಿಯಾಗಿ ಮೆರೆಯುತ್ತಿದೆ ಎನ್ನುವುದರ ಹಿನ್ನೆಲೆಯ ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳನ್ನು ಮನನ ಮಾಡಿಕೊಂಡರೆ, ಎಷ್ಟು ಚೆನ್ನ ಅಲ್ಲವೆ? ಇದೆಲ್ಲದಕ್ಕಿಂತ ಮುಖ್ಯವಾದದ್ದು ಅಖಿಲೇಶ್ ಸಿಂಗ್ ಯಾದವ್ ಎನ್ನುವ ಯುವ ನಾಯಕನಿಗೆ 25 ರಿಂದ 30 ರ ವಯಸ್ಸಿನ ಆಜುಬಾಜಿರುವ ಶೇಕಡ 35 ರಷ್ಟು ಯವ ಜನಾಂಗ ಇಂದು ಸಂಪೂರ್ಣವಾಗಿ ಬೆಂಬಲಿಸಿದೆ. ಈ ಯವ ಜನತೆಯ ಬೆಂಬಲವೇ ಇವತ್ತಿನ ಸಮಾಜವಾದಿ ಪಕ್ಷದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ್ದು, ಬಲು ದೊಡ್ಡ ತಿರುವು ನೀಡಿದ್ದು. ಸಹಜವಾಗಿಯೇ Generation next ಹುಡುಗನಂತಿರುವ ಯುವರಾಜ “ರಾಹುಲ್ ಗಾಂಧಿ”ಯನ್ನು ಏತಕ್ಕೆ ಕೈ ಬಿಟ್ಟು ಅಖಿಲೇಶ್ ಸಿಂಗ್ ಯಾದವ್ ನನ್ನು ಕೈ ಹಿಡಿದರು ಎನ್ನುವುದರ ಒಳ ನೋಟಗಳನ್ನು ಈ ಅಖಿಲೇಶ್ ಅರ್ಥ ಮಾಡಿಕೊಂಡ ದಿನ, ಮುಂದಿನ ಎರಡು ವರ್ಷಗಳಲ್ಲಿ ತನಗೆ ಅರ್ಥವಾದಷ್ಟನ್ನು, ದಕ್ಕಿದಷ್ಟನ್ನು ಕಾರ್ಯರೂಪಕ್ಕೆ ತರುವ ಯೋಜನೆಗಳ Blue print ಅನ್ನು ಈ ಅಖಿಲೇಶ್ ಸಿಂಗ್ ಯಾದವ್ ತಯಾರಿಸಿಕೊಂಡ ದಿನ ನಿಜಕ್ಕೂ ಉತ್ತರ ಪ್ರದೇಶದ ಭವಿಷ್ಯದ ಅರ್ಥಪೂರ್ಣ ಕನುಸುಗಳು ಸಾಕಾರಗೊಳ್ಳಬಹುದೇನೋ ಎನ್ನುವ ಅನುಮಾನಗಳ ಬೀಜ ಹುಟ್ಟಿಕೊಳ್ಳುವ ಹೊಸ ಚಿಂತನೆಗಳಿಗೆ ನಾಂದಿ ಹಾಡಿದಂತಾಗುತ್ತದೆ.

ಕಡೆಯದಾಗಿ ಈ ಅಖಿಲೇಶ್ ಸಿಂಗ್ ಯಾದವ್, “ನಾನು ಉತ್ತರ ಪ್ರದೇಶದ ಎಲ್ಲಾ ವರ್ಗಗಳ ,ಜಾತಿಗಳ ಪ್ರತಿನಿಧಿ ಆಗಿರುವವರೆಗೂ ಇಲ್ಲಿ ಇನ್ನೆಂದೂ ಗೂಂಡಾ ರಾಜ್ ತಲೆಯತ್ತಲಾರದು, ಇಲ್ಲಿ ಇನ್ನೆಂದೂ ದಲಿತರ ಹತ್ಯಾಕಾಂಡಗಳು ನಡೆಯಲಾರವು, ಸಾಚಾರ್ ಕಮಿಟಿಯನ್ನು ಜಾರಿಗೊಳಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ,” ಎಂದು ಮೊದಲು ಘೋಷಿಸಿಲೇಬೇಕು. ಏಕೆಂದರೆ ಇದು minimum requirement ಗೆದ್ದ ನಾಯಕನಿಂದ. ಏಕೆಂದರೆ “ನೇತಾಜಿ”ಗೆ ವಯಸ್ಸಾಗಿದೆ. ಅವರು ಇದನ್ನು ಹೇಳುವುದಿರಲಿ ಇಂತಹ ಮಾತುಗಳೂ ಕೂಡ ನೆನಪಿರಲಾರವು.

(ಚಿತ್ರಕೃಪೆ: ವಿಕಿಪೀಡಿಯ, ದಿ ಹಿಂದು)