Category Archives: ಶ್ರೀಪಾದ್ ಭಟ್

ನಮ್ಮ ಆದರ್ಶವನ್ನೆಂದೂ ಮರೆಯಬಾರದು


-ಬಿ. ಶ್ರೀಪಾದ ಭಟ್


“ಸಂಧಾನ ಕೂಡ ಒಂದು ಅಸ್ತ್ರವಾಗಿದ್ದು ಅದನ್ನು ರಾಜಕೀಯ ಹೋರಾಟದ ಕಾಲಕ್ಕೆ ಆಗಾಗ ಬಳಸುವುದು ಅವಶ್ಯಕವಾಗುತ್ತದೆ. ಅದರಿಂದ ಒಂದು ಘೋರ ಹೋರಾಟದಿಂದ ಬಸವಳಿದ ಜನತೆಗೆ ಕೆಲ ಕಾಲ ವಿರಾಮ ಸಿಕ್ಕಂತಾಗುತ್ತದೆ. ಆದರೆ ಈ ಸರಳ ಸಂಧಾನಗಳನ್ನು ಮಾಡಿಕೊಂಡರೂ ನಾವು ನಮ್ಮ ಆದರ್ಶವನ್ನೆಂದೂ ಮರೆಯಬಾರದು. ಅದು ಯಾವತ್ತೂ ನಮ್ಮ ದೃಷ್ಟಿಯಲ್ಲಿರಬೇಕು. ನಾವು ಯಾವ ಉದ್ದೇಶಕ್ಕಾಗಿ ಹೋರಾಡುತ್ತಿದ್ದೇವೆಯೋ ಅದಕ್ಕೆ ಸಂಬಂಧಿಸಿದಂತೆ ನಮ್ಮ ವಿಚಾರಗಳು ಸ್ಪಷ್ಟವಾಗಿರಬೇಕು, ಧೃಡವಾಗಿರಬೇಕು.”  – ಭಗತ್ ಸಿಂಗ್ ( ಕೃಷ್ಣ ಸಹಾಯ್  “ಸೊಷಲಿಸ್ಟ್ ಮೂವ್‍ಮೆಂಟ್ಸ್ ಇನ್ ಇಂಡಿಯಾ”) (ನರೇಂದ್ರ ಪಾಠಕ್ ರವರ  “ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ”ದಿಂದ)

“ರಾಜಕಾರಣಿಗಳ ಎರಡು ಕಣ್ಣುಗಳು ಎರಡು ತರವಾಗಿರಬೇಕು. ಒಂದು ಶುಭ್ರ ಹಾಗೂ ಮತ್ತೊಂದು ಕೆಂಪಾಗಿರಬೇಕು. ಶುಭ್ರತೆ ಪ್ರೀತಿಯ ಸಂಕೇತವಾದರೆ ಕೆಂಪು ಕ್ರೋಧದ ಸಂಕೇತ. ಶೋಷಿತರು, ದಲಿತರು, ಉಪೇಕ್ಷಿತರ ಬಗ್ಗೆ ಪ್ರೀತಿಯನ್ನು, ಸುಲಿಗೆ ಕೋರರು, ಹತ್ಯಾಚಾರಿಗಳು ಹಾಗೂ ಶೋಷಕರ ಬಗ್ಗೆ ಕ್ರೋಧವನ್ನು ವ್ಯಕ್ತಪಡಿಸುವುದು ಅತ್ಯವಶ್ಯವಾದದ್ದು. ಆದರೆ ಈ ಕ್ರೋಧ ಅಹಿಂಸಾತ್ಮಕವಾಗಿರಬೇಕು, ಸಾತ್ವಿಕವಾಗಿರಬೇಕು.” – ರಾಮ ಮನೋಹರ ಲೋಹಿಯಾ (ಕೃಷ್ಣ ಸಹಾಯ್ “ಸೊಷಲಿಸ್ಟ್ ಮೂವ್‍ಮೆಂಟ್ಸ್ ಇನ್ ಇಂಡಿಯಾ”)  (ನರೇಂದ್ರ ಪಾಠಕ್ ರವರ “ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ”ದಿಂದ)

ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಮೇಲಿನೆರಡನ್ನೂ ಮೈಗೂಡಿಸಿಕೊಂಡ ಅಪೂರ್ವ ಸೋಷಲಿಸ್ಟ್ ರಾಜಕಾರಣಿಗಳಾಗಿದ್ದರು. ನಯೀಂ ಸುರಕೋಡ ಅನುವಾದಿಸಿರುವ  ನರೇಂದ್ರ ಪಾಠಕ್ ರವರ “ಕರ್ಪೂರಿ ಠಾಕೂರ್ ಮತ್ತು ಸಮಾಜವಾದದ” ಕೃತಿಯಿಂದ ಸಂಗ್ರಹ ಪೂರ್ಣವಾಗಿ ಆಯ್ದ ಕರ್ಪೂರಿ ಠಾಕೂರ್ ಅವರ ಜೀವನ ಚಿತ್ರಣವನ್ನು ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ.

ಭಾರತ  ರಾಷ್ಟ್ರೀಯ ಕಾಂಗ್ರೆಸ್‍ನ ಸಾಂಪ್ರದಾಯಿಕ ನಿಲುವುಗಳು, ಅಲ್ಲಿ ಬಲಪಂಥೀಯರ ಪ್ರಭಾವ ಹೆಚ್ಚುತ್ತಿದೆಯೇನೋ ಎನ್ನುವ ಅನುಮಾನ, ಹಾಗೂ ಪ್ರಮುಖವಾಗಿ ಸಮಾಜವಾದದ ಬಲು ದೊಡ್ಡ ಪ್ರಭಾವ, ಇವೆಲ್ಲದರ ಕಾರಣಕ್ಕಾಗಿ ಕಾಂಗ್ರೆಸ್‍ನೊಳಗೇ ಒಂದು ಸಮಾಜವಾದಿ ಗುಂಪನ್ನು ರಚಿಸಲು ಅಂದಿನ ತರುಣ ಸಮಾಜವಾದಿಗಳಾಗಿದ್ದ ರಾಮ ಮನೋಹರ ಲೋಹಿಯಾ, ಮಿನೂ ಮಸಾನಿ, ಅಶೋಕ ಮೆಹ್ತ, ಯೂಸುಫ಼್ ಮೆಹ್ರೋಲಿ, ಅಚ್ಯುತ್ ಪಟುವರ್ಧನ್ ರಂತಹವರು ಮುಂದಾದರು. ಇವರಿಗೆ ಅರುಣ ಅಸ್ರಫ್ ಅಲಿ, ಕಮಲಾದೇವಿ ಚಟ್ಟೋಪಾಧ್ಯಾಯ, ಎನ್.ಜಿ.ಗೋರೆ ಮುಂತಾದ ಸಂಘಟನೆಕಾರರು ಬೆಂಬವಿತ್ತಿದ್ದರು. ಇದರ ಫಲಶ್ರುತಿಯಾಗಿ 1934ರ ಅಕ್ಟೋಬರ್‌ನಲ್ಲಿ “ಕಾಂಗ್ರೆಸ್ ಸಮಾಜವಾದಿ ಪಕ್ಷ” ಸ್ಥಾಪನೆಯಾಯ್ತು. ಈ ಪಕ್ಷಕ್ಕೆ ಆಚಾರ್ಯ ನರೇಂದ್ರ ದೇವ ಅಧ್ಯಕ್ಷರಾದರೆ, ಜಯಪ್ರಕಾಶ್ ನಾರಾಯಣ್ ಕಾರ್ಯದರ್ಶಿ ಯಾದರು, ಲೋಹಿಯಾ ಅವರು ಸಂಘಟನಾ ಸದಸ್ಯರಾದರು.

ಇದಕ್ಕೆ ಹದಿಮೂರು ವರ್ಷಗಳ ಹಿಂದೆ 1921 ರ ಜನವರಿ 24 ರಂದು ಬಿಹಾರಿನ ದರ್ಭಾಂಗ  (ಈಗಿನ ಸಮುಷ್ಟಿಪುರ)  ಜಿಲ್ಲೆಯ ಪಿತೋಝಿಯಾ ಗ್ರಾಮದಲ್ಲಿ ಕ್ಷೌರಿಕ ಕುಟುಂಬದಲ್ಲಿ ಕರ್ಪೂರಿ ಠಾಕೂರ್ ಜನಿಸಿದರು. ಇವರ ಆ ಗ್ರಾಮ ಹಾಗೂ ಉತ್ತರ ಬಿಹಾರ ಅತ್ಯಂತ ಹಿಂದುಳಿದ ಪ್ರದೇಶವಾಗಿತ್ತು. ಅಲ್ಲಿ ಮಕ್ಕಳು ಹುಟ್ಟುತ್ತಲೇ ಕೆಲಸಕ್ಕೆ, ಕೂಲಿಗೆ ಕಳುಹಿಸುತ್ತಿದ್ದರು. ನಂತರ ಕರ್ಪೂರಿಯವರು ಎರಡು ದಶಕಗಳ ಕಾಲ  (1967 — 1987) ಭಾರತದ ರಾಜಕೀಯದಲ್ಲಿ ಹಿಂದುಳಿದವರ, ದಲಿತರ ಪ್ರಮುಖ ನಾಯಕರಾಗಿಯೂ, ಗಾಂಧೀಜಿ ಹಾಗೂ ಲೋಹಿಯಾರವರ ಚಿಂತನೆಗಳನ್ನು, ಸಮಾಜವಾದಿ ತತ್ವಗಳನ್ನು ರಾಜಕೀಯವಾಗಿಯೂ ಹಾಗೂ ಸಾಮಾಜಿಕವಾಗಿಯೂ ಅನುಷ್ಟಾನಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡರು. ಈ ಮೂಲಕ ಬಿಹಾರದ ನೆಲೆಯಿಂದ ರೂಪುಗೊಂಡ ಇಂಡಿಯಾದ ಒಬ್ಬ ಪ್ರಮುಖ ರಾಜಕೀಯ ನಾಯಕರಾಗಿ ಕರ್ಪೂರಿ ಠಾಕೂರ್ ಹೆಸರುಗಳಿಸಿದರು. ಕರ್ಪೂರಿ ಹುಟ್ಟಿದ ಆ 20ರ ದಶಕ ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕವಾದ ಪ್ರಮುಖ ಘಟ್ಟವಾಗಿತ್ತು. ಸೌತ್ ಆಫ್ರಿಕಾದಿಂದ ಮರಳಿದ ಗಾಂಧೀಜಿ ನೇರವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ನಂತರದ ವರ್ಷಗಳಲ್ಲಿ ಅಸಹಾಕಾರ ಚಳವಳಿಯನ್ನು ಹುಟ್ಟಿಹಾಕಿದರು. ಆ ಮೂಲಕ  ದೇಶದಾದ್ಯಂತ ಅನೇಕ ತರುಣ, ತರುಣಿಯರನ್ನು ತಮ್ಮ ಈ ಪ್ರಯೋಗಕ್ಕೆ ಆಕರ್ಷಿಸಿದರು. ಇದಕ್ಕಾಗಿ ಬಿಹಾರಿನ ಚಂಪಾರಣ್ಯವನ್ನು ತಮ್ಮ ಆರಂಭದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡರು.

ಇಂತಹ ತಲ್ಲಣಗಳ ಕಾಲ ಘಟ್ಟದಲ್ಲಿ ಅತ್ಯಂತ ಹಿಂದುಳಿದ ಕ್ಷೌರಿಕ ಕುಟುಂಬದಲ್ಲಿ ಹುಟ್ಟಿದ ಕರ್ಪೂರಿಯವರ ಬಾಲ್ಯ ಅತ್ಯಂತ ಬಡತನದಿಂದ ಕೂಡಿತ್ತು. ಅವರನ್ನು ಹತ್ತಿರದಿಂದ ಬಲ್ಲ ಕೃಷ್ಣ ನಂದನ್ ಠಾಕೂರ್‌ರವರ ಪ್ರಕಾರ “ಪರೀಕ್ಷೆಗಳಿಗೆ ಫೀಸ್ ಕಟ್ಟಲು ದುಡ್ಡಿಲ್ಲದಂತಹ ಅನೇಕ ಸಂದರ್ಭಗಳು ಕರ್ಪೂರಿಯವರ ಬಾಲ್ಯ ಜೀವನದಲ್ಲಿ ಎದುರಾಗಿದ್ದವು. ಇಂತಹ ದುರ್ಭರ ಸಂದರ್ಭಗಳಲ್ಲಿ ಅವರ ತಂದೆ ಮಾಜಿ ಮಂತ್ರಿ ಸತ್ಯನಾರಾಯಣ ಸಿಂಗ್ ಅವರಿಂದ ಸಾಲ ಪಡೆದು ಫೀಸ್ ಕಟ್ಟಿದ್ದರು.” ಅದೇ ರೀತಿ ಅವರ ದರ್ಭಾಂಗ ಕಾಲೇಜಿನ ಅಧ್ಯಾಪಕರಾದ ಪ್ರೊ.ಬಿ.ಎಂ.ಕೆ.ಸಿನ್ಹಾ ಹೇಳುವುದು “ಕರ್ಪೂರಿ ಠಾಕೂರ್ ನಿಸ್ಸಂದೇಹವಾಗಿ ಬಡವರಾಗಿದ್ದರು. ಆದರೆ ಅವರು ಸಕ್ರಿಯ ರಾಜಕೀಯದಲ್ಲಿ ತಮ್ಮ ಕಾರ್ಯಬಾಹುಳ್ಯದಿಂದಾಗಿ ಹಾಗೂ ಚಟುವಟಿಕೆಗಳನ್ನು ಹೆಚ್ಚಿಸುವುದಕ್ಕಾಗಿ ತಮ್ಮ ಬಿ.ಎ. ತೃತೀಯ ವರ್ಷದ ಓದನ್ನು ನಿಲ್ಲಿಸಿದರೇ ಹೊರತು ಬಡತನದಿಂದಲ್ಲ. ಅವರಲ್ಲಿ ನಾನು ಒಂದು ಬಗೆಯ ತಳಮಳವನ್ನು ಕಾಣುತ್ತಿದ್ದೆ. ಏನಾದರೂ ಮಾಡಲು ಅವರು ನಿರಂತರವಾಗಿ ಚಡಪಡಿಸುತ್ತಿದ್ದರು. ಸುಮಾರು ಆರು ತಿಂಗಳ ನಂತರ ಲಹೇರಿಯಾ ಸರಾಯ್ ನಿಲ್ದಾಣದಲ್ಲಿ ನಾನು ಅವರನ್ನು ನೋಡಿದೆ. ಕುರ್ತಾ, ಪೈಜಾಮ ತೊಟ್ಟಿದ್ದರು, ಆದರೆ ಬರಿಗಾಲಲ್ಲಿ ಇದ್ದರು. ‘ನೀವು ಕಾಲೇಜಿಗೆ ಬರುತ್ತಿಲ್ಲ, ಯಾಕೆ’ ಎಂದು ಅವರನ್ನು ಕೇಳಿದೆ. ‘ಸರ್, ನಾನು ರಾಜಕೀಯಕ್ಕೆ ಇಳಿದಿದ್ದೇನೆ, ಗಾಂಧೀಜಿಯ ಆಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇನ್ನೆಂದು ಕಾಲೇಜಿಗೆ ಬರಲಾರೆ,’ ಎಂದರು.”

ಕರ್ಪೂರಿ ಠಾಕೂರ್ ಅವರ ನಿಧನದ  ನಂತರ ಅವರೊಬ್ಬರ ಸಂಗಾತಿ ಕಪಿಲ್ ದೇವ್ ಹೇಳಿದ್ದು ಹೀಗೆ: “1987 ರ ನವೆಂಬರ್ ತಿಂಗಳಲ್ಲಿ ಒಂದು ದಿನ ಕರ್ಪೂರೀಜಿ ನನ್ನ ಮನೆಗೆ ಬಂದಿದ್ದರು. ಊಟ ಮುಗಿಸಿ ಹೊರಟು ನಿಂತಾಗ ಅವರು ಏಕಾಂತದಲ್ಲಿ ನನಗೆ 35 ಸಾವಿರ ರೂಪಾಯಿ ನೀಡಿ ‘ಕಪಿಲ್ ಭಾಯಿ ಇದು ನನ್ನ ಜೀವಮಾನದ ಗಳಿಕೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಿರಿ, ನನ್ನ ಹಳ್ಳಿಯಲ್ಲಿ ಒಂದು ಮನೆ ಕಟ್ಟಿಸಿರಿ.’  ಈ ಹಣದಲ್ಲಿ ಮನೆ ಕಟ್ಟುವುದಿರಲಿ ಒಂದು ಕೋಣೆಯನ್ನೂ ಕಟ್ಟಿಸುವುದು ಸಾಧ್ಯವಿರಲಿಲ್ಲ ಎಂದು ಕಪಿಲ್ ದೇವ್‍ಗೆ ಅನ್ನಿಸಿತು. ದುರದೃಷ್ಟವಶಾತ್ ಕೆಲವೇ ತಿಂಗಳುಗಳಲ್ಲಿ ಕರ್ಪೂರಿ ಠಾಕೂರ್ ನಿಧನರಾದರು. ಅವರ ನಿಧನರಾದ ನಂತರ ಈ ಹಣವನ್ನು ಅವರ ಕುಟುಂಬಕ್ಕೆ ತಲುಪಿಸಲಾಯಿತು. ಪಿತೋಝಿಯಾದಲ್ಲಿ ಅವರ ಪೂರ್ವಜರ ಮನೆ ಇಂದು ಕೂಡ ಹಾಗೆ ನಿಂತಿದೆ. ಸಾರ್ವಜನಿಕ ಬದುಕನ್ನು ಬದುಕುವ ವ್ಯಕ್ತಿ ಮನೆ ಮಾರು ಎನ್ನುವ ಮಾಯೆಯಿಂದ ದೂರವಿರಬೇಕು ಎಂದು ಸಾರಲು ಆ ಮನೆ (ಗುಡಿಸಲು) ಬಿಹಾರದಲ್ಲಿ ಇನ್ನೂ ಸೂರಿಲ್ಲದವರ ಸಂಖ್ಯೆ ಕಡಿಮೆ ಇಲ್ಲ ಎನ್ನುವುದಕ್ಕೆ ಸಂಕೇತವೂ ಆಗಿದೆ.”

ಬಹುಶಃ ಗಾಂಧೀಜಿ, ಅಂಬೇಡ್ಕರ್, ಲೋಹಿಯಾರಂತಹ ರಾಜಕೀಯ ನಾಯಕರು ಹಾಗೂ ಚಿಂತಕರ ಅತ್ಯಂತ ಕಟ್ಟಾ ಅನುಯಾಯಿಯಾಗಿದ್ದ ಕರ್ಪೂರಿಯಂತಹ ರಾಜಕೀಯ ನಾಯಕರಿಂದ ಇದು ನಿರೀಕ್ಷಿತವೇ. ಏಕೆಂದರೆ ಅವರ ಸ್ನೇಹಿತ ಲಾಡಲಿ ಮೋಹನ್ ನಿಗಂ ಅವರ ಪ್ರಕಾರ “ಕರ್ಪೂರಿ ಕೇವಲ ವ್ಯಕ್ತಿಯಾಗಿರಲಿಲ್ಲ, ಅವರ ಬಳಿ ಒಂದು ಕನಸಿತ್ತು. ಕನಸು, ಸಂಕಲ್ಪ, ಹಾಗೂ ತ್ಯಾಗ ಇವು ಮೂರೂ ಕರ್ಪೂರಿಯವರನ್ನು ರೂಪಿಸಿದ್ದವು. ಅವರು ಹಗಲು ರಾತ್ರಿ ಬಡವರನ್ನು ಕುರಿತು ಚಿಂತಿಸುತ್ತಿದ್ದರು. ಅವರು ವ್ಯಕ್ತಿಯಾಗಿರಲಿಲ್ಲ, ರಾಜಕೀಯ ಹಾಗೂ ವೈಚಾರಿಕತೆಯ, ಒಂದು ಮೌಲ್ಯದ ಸಂಕೇತವಾಗಿದ್ದರು.”

ಪತ್ರಕರ್ತ ಅರುಣ್ ರಂಜನ್ ಪ್ರಕಾರ “ಹರಿಜನರ ಮೇಲಿನ ದೌರ್ಜನ್ಯ ಕರ್ಪೂರಿಯವರ ಮನಸ್ಸನ್ನು ತಲ್ಲಣಗೊಳಿಸುತ್ತಿತ್ತು. ಇಂದು ಅವರು ಬದುಕಿದ್ದರೆ ಪ್ರಾಯಶಃ ಹಿಂದಿ ಪ್ರದೇಶದಲ್ಲಿ ಹಿಂದುಳಿದವರ ಕೂಗು ಹರಿಜನರ ಶಕ್ತಿಯೊಂದಿಗೆ ಮಿಳಿತಗೊಂಡು ಬಲಶಾಲಿಯಗುತ್ತಿತ್ತು.” ತಮ್ಮ ಕಾಲೇಜಿನ ವಿದ್ಯಾರ್ಥಿ ದಿನಗಳಲ್ಲಿ ತದ ನಂತರ ಕರ್ಪೂರಿಯವರು ಲೋಹಿಯಾ, ಜಯಪ್ರಕಾಶ್ ನಾರಾಯಣ, ರಾಹುಲ ಸಾಂಕೃತ್ಯಾಯನ್, ರಾಮಕೃಷ್ಣ ಬೇನಿಪುರಿರಂತಹ ನಾಯಕರ ಗರಡಿಯಲ್ಲಿ ಪಳಗುತ್ತಾರೆ. ಆ ಕಾಲದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲಿಗೆ ಕೂಡ ಸೇರುತ್ತಾರೆ. ನಂತರ 1947 ರಲ್ಲಿ ಸ್ಥಾಪಿಸಿದ “ಅಖಿಲ ಭಾರತೀಯ ಹಿಂದ್ ಕಿಸಾನ್ ಪಂಚಾಯತ್” ಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ತಮ್ಮ ರಾಜಕೀಯ ಹಾಗೂ ಸಾಮಾಜಿಕ ಹೋರಾಟದ ಅಧ್ಯಾಯವನ್ನು ಪ್ರಾರಂಭಿಸುತ್ತಾರೆ. ಇಲ್ಲಿ ಇವರು ರಾಜಕೀಯ ಕಾರ್ಯಕರ್ತರೂ ಹೌದು, ಸಾಮಾಜಿಕ ಕಾರ್ಯಕರ್ತರೂ ಹೌದು. 1952 ರಲ್ಲಿ ದೇಶದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ತಾಜಪುರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುವುದರ ಮೂಲಕ 1980 ರವರೆಗೆ ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. 1967 ರಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿಯಾಗಿ ತಮ್ಮ ಅಧಿಕಾರದ ರಾಜಕೀಯವನ್ನು ಆರಂಭಿಸಿದ ಕರ್ಪೂರಿ ಠಾಕೂರ್ 1969ರಲ್ಲಿ ಅಲ್ಪ ಕಾಲಾವಧಿಗೆ ಮುಖ್ಯಮಂತ್ರಿಯಾಗಿಯೂ ನಂತರ 1977 ರಿಂದ 1979 ರ ವರೆಗೆ 22  ತಿಂಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು.

ಈ 1969 ರಿಂದ 1980ರ ರಾಜಕೀಯ ಕಾಲಘಟ್ಟವನ್ನು ಕೆಲವೇ ಮಾತುಗಳಲ್ಲಿ ಬರೆದಿಡಲು ಸಾಧ್ಯವೇ ಇಲ್ಲ. ಅದೊಂದು ಅಸಾಧ್ಯ ಹಾಗೂ ಅಸಂಬದ್ಧ ತಿರುವುಗಳ ಮಹಾಕಥೆ. ಈ ಕಾಲಘಟ್ಟದಲ್ಲಿ ಕರ್ಪೂರಿ ಠಾಕೂರ್ ಅತ್ಯಂತ ಪ್ರಮುಖ ರಾಜಕಾರಣಿಯಾಗಿದ್ದರು. ಅನೇಕ ಸ್ಥಿತ್ಯಂತರಗಳಿಗೂ ಕಾರಣರಾಗಿದ್ದರು. ಪಕ್ಷಾಂತರಿಯೆಂದು ಅಪಾದನೆಗೆ ಗುರಿಯಾಗಿದ್ದರು. ಅನೇಕ ಸಂದರ್ಭಗಳಲ್ಲಿ ರಾಜಿ ಮಾಡಿಕೊಂಡಿದ್ದರು ಅದಕ್ಕಾಗಿ ಅಪಾರ ಪ್ರಮಾಣದಲ್ಲಿ ಟೀಕೆಗೆ ಗುರಿಯಾಗಿದ್ದರು. ಆದರೆ ಅವರು ರಾಜಿಯಾಗಿದ್ದು ತಮ್ಮ ಆಳದ ಧ್ಯೇಯವಾದ ಸಮಾಜವಾದದ ನೀತಿಗಳನ್ನು ಹೇಗಾದರೂ ಮಾಡಿ ಅನುಷ್ಟಾನಗೊಳಿಸಬೇಕು ಹಾಗೂ ಕಾಂಗ್ರೆಸ್ಸೇತರ ರಾಜಕೀಯ ಎನ್ನುವ ಒಂದು ಮಹಾ ಸಂಘಟನೆಗಳಿಗಾಗಿ ಮಾತ್ರ. ಇಲ್ಲಿ ವೈಯುಕ್ತಿಕ ಲಾಭದ ಅಂಶ ಲವಲೇಶವೂ ಇರಲಿಲ್ಲ. ಅದರೆ ಇವರ ಅಧಿಕಾರ ಅವಧಿಯ ಅತ್ಯಂತ ಕಪ್ಪು ಚುಕ್ಕೆ ಎಂದರೆ 1978 ರಲ್ಲಿ ಬಿಹಾರದ ಪಟ್ನಾ ಜಿಲ್ಲೆಯ ಬೆಲ್ಚಿಯಲ್ಲಿ  ಠಾಕೂರರ ತೋಳ್ಬಲ, ಸಂಕುಚಿತ ಮನೋಭಾವ, ದುರಹಂಕಾರದಿಂದ ನಡೆದ ದಲಿತರ ದಾರುಣ ಸಾಮೂಹಿಕ ಕಗ್ಗೊಲೆ.

ಇದು ಆ ರಾಜ್ಯದ ಮಧ್ಯಮ ಜಾತಿಯ ವರ್ಗಗಳು ನಡೆಸಿದ ನರಮೇಧವಾಗಿತ್ತು. ಆಗ ಹಿಂದುಳಿದವರ ನೇತಾರ ಹಾಗೂ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರ ಅಧಿಕಾರದ ಅವಧಿಯಲ್ಲಿ ಈ ಬರ್ಬರ ಕೃತ್ಯ ನಡೆದದ್ದು ಕರ್ಪೂರಿಯವರನ್ನು ಇನ್ನಿಲ್ಲದ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿಸಿತ್ತು. ಇದರ ಬಿಕ್ಕಟ್ಟಿನಿಂದ ಕರ್ಪೂರಿಯವರಿಗೆ ಹೊರ ಬರಲು ಕಡೆಯವರೆಗೂ ಸಾಧ್ಯವೇ ಅಗಲಿಲ್ಲ. ಇದರಿಂದಾದ ಮತ್ತೊಂದು ದುರಂತವೆಂದರೆ ಈ ಹಿಂದುಳಿದವರಿಗೆ ಪಾಠ ಕಲಿಸಲು ದಲಿತರ ಹಾಗೂ ಮೇಲ್ಜಾತಿಗಳ ಧೃವೀಕರಣ ನಡೆದದ್ದು. ಮತ್ತೆ ಇದಕ್ಕೆ ಬಲಿಯಾದದ್ದು ಕರ್ಪೂರಿ ಠಾಕೂರ್. ಆಗ ಈ ಧೃವೀಕರಣದ ಲಾಭ ಪಡೆದದ್ದು ಕಾಂಗ್ರೆಸ್ ಪಕ್ಷ. ತಾನು ನಂಬಿದ, ಬೆಳಿಸಿದ ಆದರ್ಶ ತತ್ವಗಳಿಗೆ ವ್ಯತಿರಿಕ್ತವಾಗಿ ನಡೆದ ಅಮಾನವೀಯ ಘಟನೆಗಳು ಹಾಗೂ ಇದಕ್ಕಾಗಿ ಕರ್ಪೂರಿ ತಲೆದಂಡ ಕೊಡಬೇಕಾಗಿರುವುದು ಇದು ಬಹುಶ ಸ್ವಾತಂತ್ರ್ಯ ಭಾರತದ ರಾಜಕೀಯದಲ್ಲಿ ಕರ್ಪೂರಿ ಠಾಕೂರರಂತಹ ದುರಂತ ರಾಜಕಾರಣಿ ಮತ್ತೊಬ್ಬರಿರಲಿಕ್ಕಿಲ್ಲವೆಂದೆನಿಸುತ್ತದೆ. ಇದರಿಂದ ಜರ್ಝರಿತಗೊಂಡ ಕರ್ಪೂರಿ ಮತ್ತೆ  ರಾಜಕೀಯವಾಗಿ ಮೇಲೇಳಲೇ ಇಲ್ಲ. ತಾವು ಅಧಿಕಾರದಲ್ಲಿದ್ದಂತಹ ಸಂದರ್ಭಗಳಲ್ಲಿ ಕರ್ಪೂರಿ ಅತ್ಯಂತ ದಕ್ಷತೆಯಿಂದ, ಪ್ರಗತಿಪರ ಕಾರ್ಯ ನೀತಿಗಳಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. 1969 ರಲ್ಲಿ ಬಿಹಾರನಲ್ಲಿ ಭೀಕರ ಬರ ಬಂದಾಗ ಅತ್ಯಂತ ಆಡಳಿತ ದಕ್ಷತೆಯ ಅನುಭವವನ್ನು, ರಾಜಕೀಯ ಇಚ್ಛಾಶಕ್ತಿಯನ್ನು ಬಳಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಕಾನೂನು ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಸಂವಿಧಾನ ಕಲ್ಪಿಸಿದ ಅವಕಾಶಗಳಿಗೆ ಅನುಗುಣವಾಗಿ ಸಾಮಾಜಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಶೋಷಿತ, ದಲಿತ ಹಾಗೂ ಉಪೇಕ್ಷಿತ ವರ್ಗಕ್ಕೆ ಹಾಗೂ ಎಲ್ಲಾ ಜಾತಿಯ ಬಡ ಮಹಿಳೆಯರಿಗೆ ಮೀಸಲಾತಿ ನೀಡುವ ಕಾರ್ಯಕ್ರಮ ಜಾರಿಗೊಳಿಸಿದ್ದರು. ಇದು ಆ ಕಾಲದಲ್ಲಿ ಕರ್ಪೂರಿ ಸೂತ್ರವೆಂದೇ ಪ್ರಸಿದ್ದಿಯಾಗಿತ್ತು .ಇದು ಆ ಕಾಲದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ಜಾತಿಗಳಿಗೆ ರಾಜಕೀಯವಾಗಿ ಮನ್ನಣೆಗಳು, ಸ್ಥಾನಗಳು ದೊರಕತೊಡಗಿದವು.

[ಮೇಲಿನದಷ್ಟು ನರೇಂದ್ರ ಪಾಠಕ್ ಬರೆದ ಸುರುಕೋಡ ಅನುವಾದಿಸಿದ ಪುಸ್ತಕದಿಂದ ಆಯ್ದ ಕರ್ಪೂರಿಯವರ ಜೀವನದ ಸಂಕ್ಷಿಪ್ತ ಸಾರಾಂಶ.]

ಆದರೆ ಕರ್ಪೂರಿ ಠಾಕೂರ್ ಅವರು ಅತ್ಯಂತ ಮಾನವೀಯ ಹಾಗೂ ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ದುರ್ಬಲ ವರ್ಗದ ಸಬಲೀಕರಣಕ್ಕಾಗಿ ಜಾರಿಗೆ ತಂದಂತಹ ಈ ಸೂತ್ರಗಳು ಅನುಷ್ಟಾನಗೊಂಡು ಅದರೆ ತನ್ನ ಮೂಲ ಧ್ಯೇಯಕ್ಕೆ ವ್ಯತಿರಿಕ್ತವಾಗಿ ಪರಿಣಾಮ ಬೀರತೊಡಗಿದವು. ಈ ಮೂಲಕ ಸಬಲೀಕರಣದ ನೆಪದಲ್ಲಿ ಬಿಹಾರ್‌ನ ಹಿಂದುಳಿದ ವರ್ಗಗಳಲ್ಲಿ ಕೆಲವು ಬಲಿಷ್ಟ ಜಾತಿಗಳು ರಾಜಕೀಯ ಹಿಂಸಾಚಾರಕ್ಕಿಳಿದಿದ್ದು ಆ ಹಿಂಸಾಚಾರಕ್ಕೆ ಬಲಿಯಾದದ್ದು ದಲಿತರಾಗಿದ್ದರು. ಅಲ್ಲಿ ಜಾತೀಯ ಉನ್ಮಾದ ಸೃಷ್ಟಿಯಾಗತೊಡಗಿತ್ತು. ತಾವು ಅತ್ಯಂತ ನಿಸ್ವಾರ್ಥದಿಂದ, ಕಷ್ಟಪಟ್ಟು ಕಟ್ಟಿದ ಹಿಂದುಳಿದ ವರ್ಗಗಳ ಚಳುವಳಿ ಈ ರೀತಿ ಇತರೇ ಹಿಂದುಳಿದವರು (OBC)  ಹಾಗೂ ಅತಿ ಹಿಂದುಳಿದವರು (MBC) ಎಂದು ಮತ್ತೊಂದು ಮಟ್ಟದಲ್ಲಿ ವಿಭಜನೆಗೊಂಡದ್ದು ಕರ್ಪೂರಿಯವರಲ್ಲಿ ಇನ್ನಿಲ್ಲದ ಗೊಂದಲಗಳನ್ನು, ಸಿನಿಕತನವನ್ನು, ಸೋಲಿನ ಮನೋಭಾವನೆಯನ್ನು ಹುಟ್ಟಿ ಹಾಕಿದವು. ಎಪ್ಪತ್ತರ ದಶಕದ ಅಂತ್ಯದ ವೇಳೆಗೆ ಬಿಹಾರನಲ್ಲಿ ಶತ್ರುವಿನ ಶತ್ರು ನಮ್ಮ ಮಿತ್ರ ಅನ್ನುವ ಅವಕಾಶವಾದಿ ತತ್ವದಡಿ ಬ್ರಾಹ್ಮಣ ಹಾಗೂ ದಲಿತರ ಧೃವೀಕರಣ ಶುರುವಾಗಿತ್ತು. ಇದರ ಕರಾಳ ಒಡಬಂಡಿಕೆಗಳು ಹಾಗೂ ಇದರ ಮೂಲಕ ಮತ್ತೆ ದಲಿತರು ನಾಶವಾಗುತಿದ್ದದ್ದು, ಹಿಂದುಳಿದ ವರ್ಗಗಳಲ್ಲಿ ಕೆಲವು ಬಲಿಷ್ಟ ಜಾತಿಗಳು ತನ್ನ ಸಾರ್ವಭೌಮತ್ವಕ್ಕಾಗಿ ತೋಳ್ಬಲದ ರಾಜಕೀಯವನ್ನು ಒಂದು ಮಾದರಿಯನ್ನಾಗಿಯೇ ಜಾರಿಗೊಳಿಸಿದ್ದು, ಇವೆಲ್ಲವೂ ಕರ್ಪೂರಿ ಠಾಕೂರ್‌ರನ್ನು ಸಂಪೂರ್ಣ ಹತಾಶೆಗೆ ಕೆಡವಿತ್ತು. ಅವರ ಅಂತ್ಯ ಅತ್ಯಂತ ದುರಂತ ಅಧ್ಯಾಯದಲ್ಲಿ ಪರ್ಯಾವಸಾನಗೊಂಡಿತು. ಇಲ್ಲಿ ಸುಸಂಬದ್ಧವಾದ ಮತ್ತು ಪೂರ್ವ ಯೋಜನೆಗಳಿಲ್ಲದೆ ಮುಗ್ಧತೆಯೇ ಮೂಲಾಧಾರವನ್ನಾಗಿ ಮಾಡಿಕೊಂಡು, ಸಮಾಜವಾದದಲ್ಲಿ ಅತಿ ನಿಷ್ಟೆಯನ್ನು ಇಟ್ಟುಕೊಂಡು ಜನನಾಯಕರಾದ, ನಿಷ್ಟಾವಂತ, ಸತ್ಯವಂತ ಸಮಾಜವಾದಿಗಳ ಬದುಕು ಹೀಗೇನೇ ಎನ್ನುವ ತೆಳು ಚಿಂತನೆಗಳು ಕೂಡ ಹುಟ್ಟಿಕೊಂಡಿತು. (ಇಂಡಿಯಾದ ಸಮಾಜವಾದವನ್ನು ಲೋಹಿಯಾರ ಮೂಲಕ ತೆರೆದಿಡುತ್ತಾ, ಆ ಮೂಲಕ ಸಮಾಜವಾದದ ಚಿಂತನೆ ಹಾಗೂ ಚಳುವಳಿಗಳ ಅನೇಕ ಮಗ್ಗುಲುಗಳನ್ನು ಕನ್ನಡದಲ್ಲಿ ಸಮಾಜವಾದಿ ಚಿಂತಕರಾದ ಡಿ.ಎಸ್.ನಾಗಭೂಷಣ, ನಟರಾಜ್ ಹುಳಿಯಾರ್ ಅವರು ಅತ್ಯಂತ ಅಳವಾದ ಅಧ್ಯಯನಗಳನ್ನು ನಡೆಸಿ ಈ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಸಂಪಾದಿಸಿದ್ದಾರೆ. ಈ ಕೃತಿಗಳು ನಿಜಕ್ಕೂ ಸಮಾಜವಾದಿ ಅಧ್ಯಯನಕ್ಕೆ ಅತ್ಯಂತ ಮೌಲಿಕ, ಸೃಜನಶೀಲ, ವೈಚಾರಿಕ ಕೃತಿಗಳು. ಅಲ್ಲದೆ ಹಸಂ ನಯೀಮ್ ಸುರುಕೋಡ ಅನುವಾದಿಸಿದ ಸಮಾಜವಾದದ ಪುಸ್ತಕಗಳು ನಿಜಕ್ಕೂ ಕೈದೀಪಗಳು). ಆದರೆ ಒಟ್ಟಾರೆಯಾಗಿ ಕರ್ಪೂರಿಯವರಿಗೆ ಸಮಾಜವಾದದ ಮಂತ್ರ ಗೊತ್ತಿತ್ತು, ಬಲು ಪರಿಪಕ್ವವಾಗಿಯೇ ಇದನ್ನು ಲೋಹಿಯಾರಿಂದ ಕಲಿತಿದ್ದರು. ಆದರೆ ಅದನ್ನು ಬಳಸುವ ಮಂತ್ರದಂಡ ಮಾತ್ರ ಆಗಾಗ್ಗೆ ಅಥವಾ ಅನೇಕ ವೇಳೆ ಕೈಕೊಡುತ್ತಿತ್ತು ಹಾಗೂ ಇವರು ಬಳಸಿದ ಮಂತ್ರದಂಡವೇ ದೋಷಪೂರಿತವಾಗಿತ್ತೇನೋ!

ಹಿಂದುಳಿದವರ ಸಬಲೀಕರಣ, ರಾಜಕೀಯವಾಗಿ ಅಧಿಕಾರವನ್ನು ಪಡೆದುಕೊಳ್ಳುವುದರ ಬಗೆಗೆ ಹಾಗೂ ಹಾವನೂರು ವರದಿಯನ್ನು ಜಾರಿಗೊಳಸಿದ್ದು, ಉಳುವವನೇ ಹೊಲದೊಡೆಯನೆಂಬ ಅತ್ಯಂತ ಪ್ರಗತಿಪರ ಕಾಯ್ದೆಯನ್ನು ಜಾರಿಗೆ ತಂದದ್ದು, ಇವೆಲ್ಲವನ್ನು ದೇವರಾಜ್ ಅರಸು ತಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಹಿಂಸೆ ಹಾಗೂ ಪ್ರತಿ ಹಿಂಸೆ ಇಲ್ಲದೇ ತಮ್ಮ ರಾಜಕೀಯ ಚಾಣಾಕ್ಷತೆ, ಇಚ್ಛಾಶಕ್ತಿಯನ್ನು ಬಳಸಿ ಅನುಷ್ಟಾನಗೊಳಿಸಿದರು. ಆದರೆ ಇದೇ ಮಾದರಿ ಹಾಗೂ ಕ್ಷಮತೆ ಕರ್ಪೂರಿ ಠಾಕೂರರಿಗೆ ಏಕೆ ಸಾಧ್ಯವಾಗದೇ ಹೋಯ್ತು ಎಂದು ಈ ದೇಶದ ರಾಜಕೀಯ ಪಂಡಿತರು ಹಾಗೂ ಚಿಂತಕರು ಕರ್ಪೂರಿ ಅವರನ್ನು ದೇವರಾಜ ಅರಸರೊಂದಿಗೆ ಹೋಲಿಸಿ ವಿಶ್ಲೇಷಿಸುತ್ತಾರೆ. ಆದರೆ ಈ ಮಾದರಿಯ ಕಪ್ಪು ಬಿಳುಪಿನ  ವಿಶ್ಲೇಷಣೆ ನಿಜಕ್ಕೂ ಅಪೂರ್ಣವೆನಿಸುತ್ತದೆ. ಅಲ್ಲದೆ ಅನೇಕ ಸಂದರ್ಭಗಳಲ್ಲಿ ಅಮಾನವೀಯವೆನಿಸುತ್ತದೆ. ಏಕೆಂದರೆ ಅರಸು ಅವರಿಗೆ ಇದ್ದ ಅನೇಕ ಸವಲತ್ತುಗಳು ಕರ್ಪೂರಿ ಅವರಿಗೆ ಇರಲಿಲ್ಲ. ಮೊದಲನೇಯದಾಗಿ ರಾಜಕೀಯ ಪಕ್ಷ. ಆ ಕಾಲದಲ್ಲಿ ಕಾಂಗ್ರೆಸ್ ನಂತಹ ಬಲಿಷ್ಟ ರಾಷ್ಟ್ರೀಯ ಪಕ್ಷ ಅರಸರ ಬೆಂಬಲಕ್ಕಿತ್ತು. ಅವರಿಗೆ ಬಹುಮತವಿತ್ತು. ಈ ಸೌಕರ್ಯ ಕರ್ಪೂರಿ ಠಾಕೂರರಿಗೆ ಇರಲೇ ಇಲ್ಲ. ಇಲ್ಲಿ ಕರ್ಪೂರಿ ನೆಚ್ಚಿದ್ದು ಕೇವಲ ತಮ್ಮ ಆಳದ ಸಮಾಜವಾದದ ಅನುಭವ, ಸಾಮಾಜಿಕ ನ್ಯಾಯದ ಪರ ಒಲವು ಹಾಗೂ ಪ್ರೌಢಿಮೆ, ರಾಜಕೀಯ ಬಲಾಬಲ ಹಾಗೂ ತಮ್ಮ ಹಿಂದಿರುವ ರಾಜಕೀಯ ಕಾರ್ಯಕರ್ತರ ಸಂಖ್ಯೆ. ಇಲ್ಲಿ ಕರ್ಪೂರಿಯವರು ತಮ್ಮದಲ್ಲದ ತಪ್ಪಿಗೂ ದಯನೀಯವಾಗಿ ಸೋಲುತ್ತಾರೆ. ತಲೆದಂಡ ನೀಡಬೇಕಾಗುತ್ತದೆ. ಇನ್ನೊಂದು ಅತ್ಯಂತ ಪ್ರಮುಖ ಸಂಗತಿಯೆಂದರೆ ಕರ್ನಾಟಕದ ರಾಜಕೀಯ ನೆಲೆಗಳು ಹಾಗೂ ಜಾತಿಗಳ ಸಂರಚನೆಗೂ ಉತ್ತರ ಭಾರತದ ಅದರಲ್ಲೂ ಬಿಹಾರಿನಂತಹ ರಾಜ್ಯಗಳಲ್ಲಿನ ರಾಜಕೀಯ ಇತಿಹಾಸ ಹಾಗೂ ಜಾತಿಗಳ ಸಂರಚನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಕರ್ನಾಟಕದಲ್ಲಿನ ಪ್ರಗತಿಪರ ಹೋರಾಟ, ಬ್ರಾಹ್ಮಣೇತರ ಚಳುವಳಿಗಳಿಗೆ ಶತಮಾನ ಕಾಲದಷ್ಟು ಇತಿಹಾಸವಿದೆ.

1900 ರಲ್ಲಿ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಶುರುವಾದ ಪ್ರಗತಿಪರ ಆಡಳಿತಾತ್ಮಕ ಯೋಜನೆಗಳು ಹಾಗೂ ಅವುಗಳ ಅನುಷ್ಟಾನ ಹಾಗೂ ಇಂದಿಗೆ 110 ವರ್ಷಗಳಷ್ಟು ಹಿಂದೆಯೇ ಹಿಂದುಳಿದವರ ಪರವಾದ ಮೀಸಲಾತಿ ಕರ್ನಾಟಕದಲ್ಲಿ ಕರಡು ನೀತಿಯನ್ನು ರೂಪಿಸಲಾಗಿತ್ತು. ಇಂತಹ ಅನೇಕ ಸಾಂಸ್ಕೃತಿಕ, ಮೀಸಲಾತಿ ಪರ ಚಳುವಳಿಗಳಿಂದ, ಶಾಂತವೇರಿ ಗೋಪಾಲ ಗೌಡರ ಹಾಗೂ ಅವರ ಸಮಾಜವಾದಿ ಗೆಳೆಯರ (ಲೇಖಕ ‘ಪೀರ್ ಬಾಷ’ ಬರೆದ ಕರ್ನಾಟಕ  ಸಮಾಜವಾದಿಗಳ ಸಂದರ್ಶನ ಆಧಾರಿತ ಪುಸ್ತಕ ಇದರ ಬಗ್ಗೆ ಅತ್ಯುತ್ತಮ ಒಳನೋಟಗಳನ್ನು ನೀಡುತ್ತದೆ. ಇದು ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.) ನಿಸ್ವಾರ್ಥ ಜನಪರ ಹೋರಾಟಗಳಿಂದ, ಎಂ.ಡಿ.ನಂಜುಂಡ ಸ್ವಾಮಿಯವರ ನೇತೃತ್ವದಲ್ಲಿನ ಸಮಾಜವಾದಿ ಹೋರಾಟಗಳಿಂದ, ಪ್ರಗತಿಪರ ಸಾಹಿತಿಗಳು, ಚಿಂತಕರಿಂದ ಕೂಡಿದ್ದ ಅರವತ್ತು, ಎಪ್ಪತ್ತರ ದಶಕದ ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಹಿತ್ಯಕ ಪರಿಸರಗಳು ಅರಸರಂತಹ ರಾಜಕಾರಣಿಗಳಿಗೆ ಸಾಮಾಜಿಕ ನ್ಯಾಯದ ಪರವಾಗಿ ಪ್ರಯೋಗ ನಡೆಸಲು ಇಲ್ಲಿನ ನೆಲವನ್ನು ಸಂಪೂರ್ಣವಾಗಿ ಹದಗೊಳಿಸಿದ್ದವು. ಇದು ಸಾಮಾಜಿಕ ನ್ಯಾಯಕ್ಕಾಗಿ ಪರಿಪಕ್ವ ವಾತಾವರಣವನ್ನೇ ನಿರ್ಮಿಸಿತ್ತು. ಆಗ ರಾಜಕೀಯ ಇಚ್ಛಾಶಕ್ತಿ, ಎಲ್ಲವನ್ನೂ ಸರಿದೂಗಿಸಬಲ್ಲ ಸಧೃಡ ನಾಯಕತ್ವ, ಹಾಗೂ ನಾಯಕನಲ್ಲಿ ಆಳದ ಕಳಕಳಿಯ ಅವಶ್ಯಕತೆ ಬೇಕಾಗಿತ್ತು. ಇದನ್ನು ದೇವರಾಜು ಅರಸು ಅವರು ಹಿಂದುಳಿದ ವರ್ಗಗಳನ್ನು ಮೇಲೆತ್ತುವುದಕ್ಕೆ ಸಂಪೂರ್ಣವಾಗಿ ಬಳಸಿಕೊಂಡರು. ಅಲ್ಲದೆ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪರವರಂತಹ ಕಾಂಗ್ರೆಸ್ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷಕ್ಕೆ ಅನೇಕ ರೀತಿಯ ಪ್ರಾಮಾಣಿಕತೆಯ, ದಕ್ಷ ಆಡಳಿತದ ಹೆಸರನ್ನೂ ತಂದಿತ್ತಿದ್ದರು. ಆದರೆ ಬಿಹಾರ ರಾಜ್ಯದ ಸಾಮಾಜಿಕ ಸ್ಥಿಗತಿಗಳು, ಅಲ್ಲಿನ ಪ್ರಗತಿಪರ ಹೋರಾಟದ ಇತಿಹಾಸಗಳು ಎಲ್ಲಿಯೂ ಕರ್ನಾಟಕಕ್ಕೆ ಸರಿಗಟ್ಟುವುದೇ ಇಲ್ಲ. ಇದಕ್ಕಾಗಿ ಮತ್ತೊಂದು ಬಗೆಯ ಚಿಂತನೆ ಹಾಗೂ ವಿಸ್ತಾರವಾದ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ. ಆದರೆ ಕಡೆಯದಾಗಿ 80 ದಶಕದ ಆರಂಭದಲ್ಲಿ  ದೇವರಾಜು ಅರಸು ಹಾಗೂ ಕರ್ಪೂರಿ ಠಾಕೂರ್ ಇಬ್ಬರೂ ಹಿಂದುಳಿದ ನಾಯಕರು ತಾವು ನಂಬಿದ ತಮ್ಮ ಪಕ್ಷ ತಮ್ಮನ್ನು ಅನಾಮತ್ತಾಗಿ ಹಾಗೂ ಅಮಾನವೀಯವಾಗಿ ಕೈ ಬಿಟ್ಟಿದ್ದರ ಪರಿಣಾಮವಾಗಿ, ತಮ್ಮ  ಹಿಂಬಾಲಕರು ಹಾಗೂ ತಾವು ರಾಜಕೀಯವಾಗಿ ಬೆಳಸಿದ ಹಿಂದುಳಿದ ನಾಯಕರು ತಾವು ಅತಂತ್ರರಾದಂತಹ ಸಂದರ್ಭದಲ್ಲಿ ತಮಗೆ ಕೈಕೊಟ್ಟಿದ್ದರ ಪರಿಣಾಮವಾಗಿ ಹಾಗೂ ಅಂದಿನ ಬದಲಾದ ರಾಜಕೀಯ ಸಂದರ್ಭದಲ್ಲಿ  ಎಲ್ಲಿಯೂ ಸಲ್ಲದವರಾಗಿ, ತಮ್ಮದಲ್ಲದ ತಪ್ಪಿಗೆ ರಾಜಕೀಯವಾಗಿ ನಗಣ್ಯವಾಗಿ ಎಂಬತ್ತರ ದಶಕದ ಆರಂಭದ ವೇಳೆಗೆ ಸಂಪೂರ್ಣವಾಗಿ ಏಕಾಂಗಿಗಳಾದರು, ಅಸಹಾಯಕರಾಗಿದ್ದರು, ದುರಂತ ನಾಯಕರ ಹಣೆಪಟ್ಟಿ ಹೊತ್ತಿದ್ದರು.

ಅತಿ ಹಿಂದುಳಿದ ಜಾತಿಗಳಿಂದ ಬಂದ ಕರ್ಪೂರಿ ಹಾಗೂ ದೇವರಾಜ್ ಅರಸ್ ತಮ್ಮ ಸಕ್ರಿಯ ರಾಜಕಾರಣದುದ್ದಕ್ಕೂ ಜನನಾಯಕರಾಗಿ ಹೊರಹೊಮ್ಮಿದರೇ ಹೊರತಾಗಿ ಎಲ್ಲಿಯೂ ಜಾತಿ ನಾಯಕರಾಗಲಿಲ್ಲ. ಯಾವುದೇ ಜಾತಿಯ ಮುಖಂಡರಾಗಲಿಲ್ಲ. ಬದಲಾಗಿ ಇವರ ಕಾಲದಲ್ಲಿ ಬಲಿಷ್ಟ ಜಾತಿಗಳ ಅಹಮ್, ದುರಹಂಕಾರಗಳು ತೆರೆಮರೆಗೆ ಸರಿದು ಅನೇಕ ಬಗೆಯ ಹಿಂದುಳಿದ ಜಾತಿಗಳು ಪ್ರಾಮುಖ್ಯತೆ ಪಡೆದು ವರ್ಗಗಳಾಗಿ ಪರಿವರ್ತನೆಗೊಂಡು ವ್ಯವಸ್ಥೆಯಲ್ಲಿ ತಮ್ಮದೇ ಆದ ಒಂದು ನೆಲೆ ಹಾಗೂ ಬೆಲೆಯನ್ನು ಕಂಡುಕೊಂಡವು. ಇದರ ಫಲವಾಗಿಯೇ ಮಹತ್ವಾಕಾಂಕ್ಷಿ ರಾಜಕಾರಣಿಯೊಬ್ಬನಿಗೆ ತನ್ನಲ್ಲಿನ ಅನೇಕ ದೌರ್ಬಲ್ಯಗಳ ನಡುವೆಯೂ ಜಾತ್ಯಾತೀತನಾಗಿ ಜನನಾಯಕರಾಗಿ ರಾಜಕೀಯವಾಗಿ ಮನ್ನಣೆಗಳಿಸುವುದು ಅರವತ್ತರ ದಶಕದ ಅಂತ್ಯದಲ್ಲಿ, ಎಪ್ಪತ್ತರ ದಶಕ, ಎಂಬತ್ತರ ದಶಕದ ಮಧ್ಯದವರೆಗೂ ಒಂದು ಮಾನದಂಡವಾಗಿಬಿಟ್ಟಿತು. ಆಗ ರಾಜಕಾರಣಿಗಳ ಜಾತೀಯತೆ ಬಹಿರಂಗವಾಗಿ ಚರ್ಚಿತವಾಗುತ್ತಿದ್ದುದು ಅವರು ಭ್ರಷ್ಟಾಚಾರದ ಹಗರಣಗಳಲ್ಲಿ ಸಿಕ್ಕಿಕೊಂಡಾಗ, ತಮ್ಮ ಜಾತಿಯ ಶಾಸಕ ಅಥವಾ ಮಂತ್ರಿಯನ್ನು ಹಿಡಿದು ಸರ್ಕಾರಿ ಉದ್ಯೋಗಗಳನ್ನು, ಬಿಸಿನೆಸ್ ಪರ್ಮಿಟ್ ಪಡೆದುಕೊಳ್ಳುವಾಗ ಮತ್ತು ಚುನಾವಣೆಗಳ ಸಂದರ್ಭಗಳಲ್ಲಿ ಮಾತ್ರವೇ ಹೊರತು ಜಾತಿಯೊಂದರ ಪ್ರಶ್ನಾತೀತ, ಪ್ರಭಾವಶಾಲಿ ರಾಜಕಾರಣಿ ಎನ್ನುವ ಒಂದು ಸರ್ವಕಾಲಿಕ ಶಾಶ್ವತ ರಾಜಕೀಯ ವಾತಾವರಣವೇ ಇರಲಿಲ್ಲ. ಇದೆಲ್ಲ ಬದಲಾದದ್ದು ವಿ.ಪಿ.ಸಿಂಗ್ ಸಂಘ ಪರಿವಾರದ ಕೋಮುವಾದಿ ರಾಜಕೀಯವನ್ನು ಹತ್ತಿಕ್ಕಲು ಅತ್ಯಂತ ಮುಗ್ಧತೆಯಿಂದ, ಪ್ರಾಮಾಣಿಕತೆಯಿಂದ, ಯಾವುದೇ ಸಿದ್ಧತೆಗಳಿಲ್ಲದೆಯೇ ತಂದಂತಹ ಮಂಡಲ್ ವರದಿಯ ನಂತರ. ಇದರ ಬಗ್ಗೆ ಅನೇಕ ರೀತಿಯ ಚರ್ಚೆಗಳಾಗಿವೆ. ಆದರೆ ಇಂದು ನಮ್ಮ ಕರ್ನಾಟಕದ ದುರಂತವೆಂದರೆ  ಈ ಜಾತ್ಯಾತೀತೆಯ ಅತ್ಯಂತ ಸೂಕ್ಷ್ಮ ನೇಯ್ಗೆಯನ್ನು ಕರ್ನಾಟಕದ ರಾಜಕೀಯದಲ್ಲಿ ಧ್ವಂಸಗೊಳಿಸಿದ ಕುಖ್ಯಾತಿ ಈ  ಈ ಯಡಿಯೂರಪ್ಪನವರಂತಹ ಅತ್ಯಂತ ಹಾಸ್ಯಾಸ್ಪದ, ಭ್ರಷ್ಟ ರಾಜಕಾರಣಿಗಳದ್ದು  ಹಾಗೂ ಇದಕ್ಕೆ ಅಷ್ಟೇ ಜವಾಬ್ದಾರರು ಈ ಕುಕೃತ್ಯಕ್ಕೆ ಬೆಂಬಲ ನೀಡಿದ ಬಿಜೆಪಿ ಹಾಗೂ ಆರ್.ಎಸ್.ಎಸ್. ನವರದ್ದು. ಬಹುಪಾಲು ಮಠಗಳಿಗೆ ಜನರ ರೊಕ್ಕವನ್ನು, ಸರ್ಕಾರದ ಹಣವನ್ನು ಕಾನೂನು ಬಾಹಿರವಾಗಿ ಬೇಕಾ ಬಿಟ್ಟಿಯಾಗಿ ಹಂಚಿ ಬ್ಲಾಕ್‍ಮೇಲ್ ತಂತ್ರದ ಮೂಲಕ ಮಠಗಳನ್ನು ಹಾಗೂ ಮಠಾಧಿ ಪತಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾ ಪ್ರಜಾಪ್ರಭುತ್ವದ ಮೂಲ ನೀತಿಗಳನ್ನೇ ಧ್ವಸಂ ಗೊಳಿಸಿಬಿಟ್ಟರು ಈ ಯಡಿಯೂರಪ್ಪನವರು. ಸ್ವಜನ ಪಕ್ಷ ಪಾತವೆನ್ನುವುದು, ಸ್ವಜಾತಿಯ ನಾಯಕನೆನ್ನುವುದರ ಬಗೆಗಿನ ವ್ಯಾಮೋಹ ಇಂದು ಕರ್ನಾಟಕ ರಾಜಕೀಯದಲ್ಲಿ ಹಾಗೂ ಸಮಾಜದಲ್ಲಿ ಒಂದು ಪ್ರಚ್ಛನ್ನ ಸ್ವೇಚ್ಛಾಚ್ಚಾರ ತೆವಲಾಗಿ ನಿರ್ಮಿಸಿ ಬಿಟ್ಟಿದ್ದಾರೆ ಈ ಯಡಿಯೂರಪ್ಪ ಹಾಗೂ ಬಿಜೆಪಿ. ಇಲ್ಲದಿದ್ದರೆ ಈ ನಿರಾಣಿ, ಈ ರೇಣುಕಾಚಾರ್ಯ, ಈ ಗೋಪಾಲಕೃಷ್ಣ, ಈ ಹರೀಶ, ಈ ಬೊಮ್ಮಾಯಿ,  ಇತ್ಯಾದಿಗಳು ಇಷ್ಟೊಂದು ಅನಾಚಾರ, ಸ್ವೇಚ್ಛಾಚಾರದ, ಬೇಜಾವಬ್ದಾರಿಯ, ಸ್ವಚ್ಛಂದ ಜಾತೀವಾದದ ಪ್ರವೃತ್ತಿಗಳನ್ನು ಬಹಿರಂಗವಾಗಿ ನಡೆದುಕೊಳ್ಳುತ್ತಿರುವುದಕ್ಕೆ ಕಾರಣ ಜನನಾಯಕನಾಗುವ ಮೂಲಕ ರಾಜಕಾರಣಿ ಎನ್ನುವ ತತ್ವ ಹೆಚ್ಚೂ ಕಡಿಮೆ ಕಣ್ಮರೆಯಾಗಿ ಜಾತಿ ನಾಯಕನಾಗಿ ರಾಜಕಾರಣಿ ಎನ್ನುವ ಸಿದ್ಧಾಂತ ಇಲ್ಲಿ ತಳವೂರಿಬಿಟ್ಟಿರುವುದು ಹಾಗೂ ಸರ್ಕಾರದ ರೊಕ್ಕವನ್ನು ಪಡೆದಂತಹ  ಮಠಗಳು ಜಾತಿ ಆಧಾರದ ಮೇಲೆ ಇವರನ್ನು ಬೆಂಬಲಿಸುತ್ತವೆ!

ಅದಕ್ಕೇ ಇವರು ಉಪ ಚುನಾವಣೆಗಳಲ್ಲಿ ಜನ ನಮ್ಮನ್ನು ಗೆಲ್ಲಿಸುತ್ತಿಲ್ಲವೇ, ನನ್ನನ್ನು ನಾಯಕನನ್ನಾಗಿ ಮಾಡಿ ನಿಮಗೆ 150 ಸೀಟು ಗೆಲ್ಲಿಸುತ್ತೇನೆ ಎಂದು ಅತ್ಯಂತ ದುರಹಂಕಾರದಿಂದ ನಮ್ಮ ರಾಜ್ಯದ ಜನತೆಯ ಆತ್ಮ ಸಾಕ್ಷಿಯನ್ನೇ ಪ್ರಶ್ನಿಸುತ್ತಿದ್ದಾರೆ ಹಾಗೂ ಈ ರಾಜ್ಯದ ಜನತೆಯ ನೈತಿಕತೆಯ ಮೂಲ ಬೇರನ್ನು ಹೆಚ್ಚೂ ಕಡಿಮೆ ವಿಷಗೊಳಿಸಿದ್ದಾರೆ ಈ ಯಡಿಯೂರಪ್ಪ ಹಾಗೂ ಬಿಜೆಪಿ. ಇದು ನಿಜಕ್ಕೂ ನಮ್ಮೆಲ್ಲರಿಗೆ ಅವಮಾನವೇ ಸರಿ. ಅಲ್ಲದೆ ಇದೇ ಯಡಿಯೂರಪ್ಪನವರು  ಕರ್ನಾಟಕದ ಸಕಲ ವೀರಶೈವ ಜಾತಿಗೆ ಏಕಮೇದ್ವೇತೀಯ ವಾರಸುದಾರ ಹಾಗೂ ನಾಯಕ ಎನ್ನುವ ಠೇಂಕಾರದ ಜೊತೆಗೆ ತಮ್ಮ ಹುಟ್ಟು ಹಬ್ಬದಂದು ಹಿಂದುಳಿದ ವರ್ಗಗಳ ನಾಯಕನಾಗಲು ಹೊರಟಿದ್ದಾರೆ!! ಇವರ ಬಫೂನ್ ಗಿರಿಗೆ, ಅಧ್ವಾನಗಳಿಗೆ ಮತ್ತೆ ನಾವೆಲ್ಲ ಸಾಕ್ಷಿಯಾಗಬೇಕಾಗಿದೆ!!!  ಈ ಕಾಂಗ್ರೆಸ್‍ನ0ತಹ ಆತ್ಮಸಾಕ್ಷಿಯನ್ನೇ ಕಳೆದುಕೊಂಡಂತಹ, ಸಂಪೂರ್ಣವಾಗಿ ಸೋತ, ದಿಕ್ಕು ದೆಸೆಯಿಲ್ಲದ, ನೆಲಕಚ್ಚಿದ ವಿರೋಧ ಪಕ್ಷವಿರುವಾಗ ಕರ್ನಾಟಕಕ್ಕೆ ಮತ್ತೆ ಮತ್ತೆ ಪ್ರಾಥಮಿಕವಾಗಿ, ತುರ್ತಾಗಿ ಬೇಕಾಗಿರುವುದು ಕರ್ಪೂರಿ ಠಾಕೂರ್ ಅವರ ಸಮಾಜವಾದದ ಆದರ್ಶ ಮತ್ತು ದಣಿವರಿಯದ ಹೋರಾಟದ, ಪ್ರಾಮಾಣಿಕತೆಯ ರಾಜಕಾರಣದ ಮಾದರಿ (ಅನೇಕ ಮಿತಿಗಳ ನಡುವೆಯೂ). ನಂತರವಷ್ಟೇ ನಾವು ಗಾಂಧಿ, ಲೋಹಿಯಾ, ಅಂಬೇಡ್ಕರ್ ಅವರನ್ನು ಮುಟ್ಟಲು ಸಾಧ್ಯ.

ಇದೆಲ್ಲದರ ಈ ಅವಾಂತಕಾರಿ, ಗೊಂದಲಗಳ ರಾಜಕೀಯದ ಮಧ್ಯೆ, ಇಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ 2012 ರ ಸಂವತ್ಸರದಲ್ಲಿ ಅತ್ಯಂತ ಭ್ರಷ್ಟ, ಹಾಗೂ ಸಂಪೂರ್ಣವಾಗಿ ಹಾದಿ ತಪ್ಪಿದ ಶ್ರೀರಾಮುಲು ಎನ್ನುವ ಅವಕಾಶವಾದಿ ನಾಯಕ ತಾನೊಬ್ಬ ಹಿಂದುಳಿದ ವರ್ಗಗಳ ನಾಯಕನಾಗಲು ಹೊರಟಿದ್ದಾರೆ. ಅಮಾಯಕತೆಯ ನಟನೆಯನ್ನು ಮಾಡುತ್ತಿದ್ದಾರೆ. ಮಳ್ಳಿ ತರಹದ ವರ್ತನೆಯನ್ನು ತೋರಿಸುತ್ತಿದ್ದಾರೆ. ಅದಕ್ಕಾಗಿ ಇಷ್ಟರಲ್ಲೇ ಹಿಂದುಳಿದವರ ಬಡವರ ಪಕ್ಷ ಸ್ಥಾಪಿಸುತ್ತೇನೆ ಎಂದು ಪದೇ ಪದೇ ಹೆದರಿಸುತ್ತಿದ್ದಾರೆ. ಈ ಶ್ರೀರಾಮುಲು ಎನ್ನುವ ಹಿಂದುಳಿದ ನಾಯಕ ಯಾವುದೇ ಸಿದ್ಧಾಂತದ ಹಿನ್ನೆಲೆ ಇಲ್ಲದಂತಹ ನಾಯಕ. ಇವರ ಸಿದ್ಧಾಂತವೆಂದರೆ ಒಂದೇ ಅದು ತೋಳ್ಬಲದ ರಾಜಕೀಯ, ಹಣವನ್ನು ಚೆಲ್ಲಿಯೇ ಅಧಿಕಾರವನ್ನು ಗಳಿಸಬೇಕು ಎನ್ನುವ ಏಕಸೂತ್ರದ, ಆತ್ಮದ್ರೋಹದ, ಅವಕಾಶವಾದಿ ರಾಜಕೀಯ. ಅಕ್ರಮವಾಗಿ, ಭ್ರಷ್ಟ ತನದಿಂದ ಸಂಪಾದಿಸಿದ ರೊಕ್ಕವನ್ನು ಮುಗ್ಧ ಜನಗಳಿಗೆ ಭಿಕ್ಷೆಯಂತೆ ಪುಡಿಗಾಸನ್ನು ನೀಡಿ ಅವರನ್ನು ತನ್ನ ಹಂಗಿನರಮನೆಯೊಳಗೆ ಬಂಧಿಸಿರುವುದು ಇಡೀ ಬಳ್ಳಾರಿ ಜಿಲ್ಲೆಯಾದ್ಯಾಂತ ಕಣ್ಣಿಗೆ ರಾಚುತ್ತದೆ. ನಾನು ಹಾಗೂ ನನ್ನ ಸ್ನೇಹಿತರು ಅಲ್ಲಿನ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ನಿರಂತರವಾಗಿ ತಿರುಗಿದಾಗ ಇದು ನಮಗೆ ಸ್ಪಷ್ಟವಾಗಿ ಗೊತ್ತಾಯಿತು. ಇದನ್ನೇ ನಮ್ಮ ಕೆಲ ಪತ್ರಕರ್ತರು ಇದು ಶ್ರೀರಾಮುಲು ಅವರ ಜನಪ್ರಿಯತೆ ಎಂದು ಇನ್ನಿಲ್ಲದೆ ಬಡಬಡಿಸುತ್ತಿದ್ದಾರೆ. ಇದು ಆತ್ಮವಂಚನೆಯಲ್ಲದೆ ಮತ್ತಿನ್ನೇನಲ್ಲ. ಇದನ್ನು ಅರ್ಥೈಸಲು ಅಂತಹ ಸಂಶೋಧನೆಗಳೇನು ಬೇಕಾಗಿಲ್ಲ. ಅಲ್ಲದೆ ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ಹಣವನ್ನು ಚೆಲ್ಲಲ್ಲು ರೆಡ್ಡಿ ಸೋದರರೊಂದಿಗೆ  ಕೈಜೋಡೀಸಿ ರಾಜ್ಯದ, ಬಳ್ಳಾರಿ ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡಿದ ರೊಕ್ಕ ಇದ್ದೇ ಇದೆಯಲ್ಲ!! ಇವರಿಗೆ ಯಾವುದೇ ಪಕ್ಷದ ಸಿದ್ಧಾಂತಗಳೂ ಕೇವಲ ಅಧಿಕಾರ ಗ್ರಹಣಕ್ಕಾಗಿ ಮಾತ್ರ. ಯಾವುದೇ ಆದರ್ಶಗಳಿಲ್ಲದ, ಸಿದ್ಧಾಂತಗಳಿಲ್ಲದ ಶ್ರೀರಾಮುಲು ಅವರಂತಹ ರಾಜಕಾರಣಿಯಿಂದ ಇಂತಹ ನಡೆಗಳು ಸಾಮಾನ್ಯವೆನ್ನಬಹುದು, ಆದರೆ ಇಲ್ಲಿನ ದುರಂತವೆಂದರೆ ಇಂತಹ ಭ್ರಷ್ಟ ಶ್ರೀರಾಮುಲು ಅವರಿಗೆ ದೇವರಾಜ್ ಅರಸರ ವೇಷವನ್ನು ತೊಡಿಸುವಂತೆ ಇನ್ನಿಲ್ಲದ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕೆ ಬಳಸಿಕೊಳ್ಳಲಾಗುತ್ತಿರುವುದು ವಾಲ್ಮೀಕಿ ಜನಾಂಗವನ್ನು. ಇದಕ್ಕಿಂತಲೂ ದುರಂತ ಬೇರೊಂದಿಲ್ಲವೆನಿಸುತ್ತದೆ. ನೂರು ಸುಳ್ಳುಗಳನ್ನು ಪದೇ ಪದೇ ಹೇಳಿ ಅದನ್ನು ಸತ್ಯವೆನ್ನುವಂತೆ ಭ್ರಮೆ ಮೂಡಿಸುವ ಇಂತಹ ಒಂದು ದುಷ್‍ಕೃತ್ಯ ನಿಜಕ್ಕೂ ಖಂಡನೀಯ. ಇದೆಲ್ಲವನ್ನೂ ಮತ್ತೆ ಮತ್ತೆ ಏತಕ್ಕೆ ಹೇಳ ಬೇಕಾಗಿದೆಯೆಂದರೆ ಎಲ್ಲವೂ ನೆಲಕಚ್ಚಿದಂತಹ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಈ ಭ್ರಷ್ಟ ನಾಯಕ ಶ್ರೀರಾಮುಲು ತನ್ನಲ್ಲಿರುವ ಎಲ್ಲಾ ಅಸ್ತ್ರಗಳನ್ನೂ ಬಳಸುತ್ತಿದ್ದಾರೆ. ತಾವೊಬ್ಬ ಅಮಾಯಕರಂತೆಯೂ, ಒಬ್ಬಂಟಿಯಂತೆಯೂ ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸದ್ಯಕ್ಕೆ ಈ ಶ್ರೀರಾಮುಲುಗಿರುವ ಪ್ರಬಲ ಅಸ್ತ್ರವೆಂದರೆ ಅಹಿಂದ ಸಂಘಟನೆ. ಈ ನಾಯಕ ಇಂದು ಅಕ್ಷರಶಹ ತಬ್ಬಲಿಯಾಗಿರುವ, ದಿಕ್ಕಿಲ್ಲದ, ಅನಾಯಕತ್ವದ ಈ ಅಹಿಂದ ಸಂಘಟನೆಗೆ ತನ್ನ ನಾಯಕತ್ವದ ಸ್ಪರ್ಶ ನೀಡುವುದರ ಮೂಲಕ ಅದನ್ನು ಮತ್ತೆ ಪುನುರುಜ್ಜೀವನಗೊಳಿಸುವ ಒಂದಂಶದ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ನಮ್ಮಲ್ಲಿನ ಕೆಲವು  ಸಂಘಟನೆಗಳನ್ನು ಆಪೋಶನ ತೆಗೆದುಕೊಳ್ಳುವ ಸೂಚನೆಗಳು ಗೋಚರಿಸುತ್ತಿವೆ. ಆದರೆ ಈ ಶ್ರೀರಾಮುಲುವಿನ ಈ ಕುಟಿಲತೆಗೆ, ಗುಪ್ತ ಕಾರ್ಯಾಚರಣೆಗೆ ನಮ್ಮಲ್ಲಿನ ಈ ಕೆಲವು ಸಂಘಟನೆಗಳು ಬಲಿಯಾಗುತ್ತವೆಯೇ? ಎಲ್ಲಕ್ಕೂ ಕಾಲವೇ ಉತ್ತರ ನೀಡಬೇಕು.

ಆದರೆ ಒಂದಂತೂ ಸ್ಪಷ್ಟ. ಮುಂದಿನ ತಲೆಮಾರಿಗೆ ನಾವೆಲ್ಲ ನಿರ್ಮಿಸಬೇಕಾದ ವೇದಿಕೆ ಹಾಗೂ ಒಂದು ಸಹನಶೀಲ, ಸೆಕ್ಯುಲರ್ ವ್ಯವಸ್ಥೆ ಇದಂತೂ ಖಂಡಿತ ಅಲ್ಲ. ಯಾವುದೇ ಕಾರಣಕ್ಕಾಗಿಯಾಗಲೀ ನಮ್ಮ ರಾಜ್ಯದ ಈ ಸಂವೇದನಾಶೀಲ, ಪ್ರಗತಿಪರ ಚಿಂತನೆ, ಸಾಮಾಜಿಕ ಬದುಕು, ಸಂಘಟನೆ ಹಾಗೂ ರಾಜಕಾರಣ ನಮ್ಮ ರಾಜ್ಯದ ಸಂಪನ್ಮೂಲವನ್ನು ಕೊಳ್ಳೆ ಹೊಡೆದ ರೆಡ್ಡಿಗಳ ಸಂಗಾತಿಯಾಗಿದ್ದ ಈ ಶ್ರೀರಾಮುಲುನಂತಹ ರಾಜಕಾರಣಿಗೆ ಎಂದೂ ಬಲಿಯಾಗಲಾರೆವೆಂಬ ಎಚ್ಚರಿಕೆ, ಆತ್ಮಸಾಕ್ಷಿಯನ್ನು ತಮ್ಮೊಳಗೆ ಸದಾ ಜೀವಂತವಾಗಿಟ್ಟು ಕೊಳ್ಳಬೇಕಾಗಿದೆ. ಈ ಮೂಲಕ ಶ್ರೀರಾಮುಲು ತೋಡಿದ ಖೆಡ್ಡಾಗೆ ಆಗಲೇ ಬಂದು ಬೀಳುತ್ತಿರುವ ಅಸಹಾಯಕ ಹಿಂದುಳಿದ ವರ್ಗಗಳನ್ನು, ಅಮಾಯಕ ತರುಣರನ್ನೂ ಇದರಿಂದ ಪಾರುಮಾಡಬೇಕಾದ ಜವಬ್ದಾರಿಯೂ ಕನ್ನಡದ ಪ್ರಜ್ಞಾವಂತರ ಮೇಲಿದೆ. ಈಗಾಗಲೇ ಹಿಂದುಳಿದ ವರ್ಗಗಳ ಅಮಾಯಕ ತರುಣರು ಕೇಸರಿ ಪಡೆಗೆ ಬಲಿಯಾಗಿ ತಮ್ಮ ಜೀವನವನ್ನು ನಾಶಪಡಿಸಿಕೊಂಡಿದ್ದಾಗಿದೆ. ಇನ್ನು ಶ್ರೀರಾಮುಲು ಇದಕ್ಕೆ ತಮ್ಮ ಕೈ ಜೋಡಿಸಿದರೆ ಕೇಸರಿಕರಣಗೊಂಡ ಈ ಹಿಂದುಳಿದ ವರ್ಗಗಳ ಅಮಾಯಕರಿಗೆ ಮುಂದಿನ ಭವಿಷ್ಯವೇ ಅತಂತ್ರವಾಗುತ್ತದೆ. ಇಲ್ಲಿ ನಮಗೆ ಗಾಂಧಿ, ಲೋಹಿಯಾ, ಅಂಬೇಡ್ಕರ್ ರವರಂತಹ ಜೊತೆ ಜೊತೆಗೆ ಕನಿಷ್ಟ ಕರ್ಪೂರಿ ಠಾಕೂರರವರ ಸಮಾಜವಾದಿ ಜೀವನ ಹಾಗೂ ಸಮಾಜವಾದದ ನೆಲೆಗಟ್ಟಿನ ರಾಜಕೀಯ, ಸಾಮಾಜಿಕ ಹೋರಾಟಗಳು, ಆರವತ್ತರ, ಎಪ್ಪತ್ತರ ದಶಕದ ಅವರ ಅಸಹಾಯಕತೆಗಳು, ಅವರ ಅತ್ಯಂತ ಸರಳ ಜೀವನ ಶೈಲಿ, ನಮ್ಮಲ್ಲರಿಗೆ ಮುಂದಿನ ನಡೆಗಳ ಬಗೆಗೆ ದಾರಿ ತೋರಬೇಕಲ್ಲವೇ, ಇಂತಹ ಸಂದರ್ಭದಲ್ಲಿಯೇ  ಏನಿಲ್ಲದ್ದಿದ್ದರೂ ಶ್ರೀರಾಮುಲುವಿನ ನೆಪದಲ್ಲಿ ಈ  ಧೀಮಂತ ನಾಯಕರಾದ ದೇವರಾಜ್ ಅರಸ್  ಹೆಸರು ಕೆಡುವುದಕ್ಕಿಂತ ಮೊದಲು ಹಿಂದುಳಿದವರ ನಾಯಕತ್ವದ ನಿಜವಾದ ಮಾದರಿ (ಅನೇಕ ಮಿತಿಗಳ ನಡುವೆಯೂ) ಈ ದೇವರಾಜ ಅರಸ್ ಹಾಗೂ ಕರ್ಪೂರಿ ಠಾಕೂರ್ ಅವರದ್ದು, ಅವರ ಶೈಲಿಯದ್ದು ಎಂದು ನಾವು ವಿವರವಾಗಿ  ಮತ್ತೆ ಮತ್ತೆ ಮಾತನಾಡಬೇಕಲ್ಲವೇ, ಕನಿಷ್ಟ ಈ ಮೂಲಕವಾದರೂ ದೇವರಾಜ್ ಅರಸ್ ಹಾಗೂ ಕರ್ಪೂರಿ ಠಾಕೂರರ ರಾಜಕೀಯ ಮಾದರಿಗಳನ್ನು, ಸಾಮಾಜಿಕ ನ್ಯಾಯದ ನಿಜದ ಕಳಕಳಿಗಳನ್ನು, ಅದಕ್ಕಾಗಿ ಅವರ ತ್ಯಾಗವನ್ನೂ ಇಂದಿನ ತಲೆಮಾರಿನ ಮುಂದಿಡುವ ಜವಾಬ್ದಾರಿ ನಮ್ಮಂತಹವರ ಮೇಲಿದೆಯಲ್ಲವೇ? ಈ ಪ್ರಕ್ರಿಯೆಯಲ್ಲಿ ಈ ಬಿಜೆಪಿಯ ಸಂಪೂರ್ಣ ದಿವಾಳಿಖೋರತನದ, ಭ್ರಷ್ಟ ರಾಜಕಾರಣದ ವಿರುದ್ಧ ಕೊಂಚವಾದರೂ ಬೆಳಕು ದೊರಕಬಹುದಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ, ಪಾಟ್ನಾಡೈಲಿ)

ಮಾಧ್ಯಮಗಳ ಮೇಲೊಂದು ಟಿಪ್ಪಣಿ


-ಬಿ. ಶ್ರೀಪಾದ ಭಟ್  


“ಮೌಲ್ಯಗಳು ಹಾಗೂ ನೈತಿಕತೆ ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಕೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು.” -ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ಜಾಗತೀಕರಣಗೊಂಡು ಇಪ್ಪತ್ತು ವರ್ಷಗಳ ನಂತರದ ಇಂದಿನ ಸಂದರ್ಭದಲ್ಲಿ ದೇಶದಲ್ಲಿನ ಅನೇಕ ವಲಯಗಳಂತೆ ಪತ್ರಿಕೋದ್ಯಮವೆನ್ನುವುದು ಸಹ ತನ್ನ ಹಿಂದಿನ ರೂಪದಲ್ಲಿ ಉಳಿದಿಲ್ಲ. ಇಂದು ಮಾರುಕಟ್ಟೆ ಆಧಾರಿತ ಆರ್ಥಿಕ ಸ್ಥಿತಿಯಲ್ಲಿ  ಜಾಗತೀಕರಣದ ಮೂಲ ಮಂತ್ರವಾದ, ಸಂಪಾದನೆ ಹಾಗೂ ಸಂಪಾದನೆ ಮತ್ತಷ್ಟು ಸಂಪಾದನೆ ಎನ್ನುವ ಸಿದ್ಧಾಂತವನ್ನು ಇಂದು ತನ್ನದಾಗಿಸಿಕೊಂಡಿರುವ ಪತ್ರಿಕೋದ್ಯಮವೂ ಕೂಡ ಒಂದು ಮಾರ್ಕೆಟಿಂಗ್ ವ್ಯವಸ್ಥೆಯಾಗಿ ಬೆಳೆದುಬಿಟ್ಟಿದೆ. ಇದರ ಫಲವೇ ಮುಕ್ತ ಆರ್ಥಿಕತೆ ಹೇಳುವಂತೆ ವ್ಯವಸ್ಥೆಯಲ್ಲಿ ನೀನು ನಿರಂತರವಾಗಿ ಬದುಕಿ ಉಳಿಯಬೇಕೆನ್ನವುದಾದರೆ ನಿನ್ನ ಉತ್ಪಾದನೆಗಳನ್ನು ಮಾರುಕಟ್ಟೆಗೆ ತಳ್ಳುತ್ತಲೇ ಇರಬೇಕು, ಈ ತಳ್ಳುವಿಕೆ ನಿರಂತರವಾಗಿರಬೇಕು. ಬಹುಪಾಲು ದೃಶ್ಯ ಮಾಧ್ಯಮಗಳು ಈ ಮುಕ್ತ ಆರ್ಥಿಕ ನೀತಿಯ ತಳ್ಳುವಿಕೆಯನ್ನು ತಮ್ಮ ಪತ್ರಿಕೋದ್ಯಮದ ಮೂಲ ಮಂತ್ರ,ತಿರುಳನ್ನಾಗಿಸಿಕೊಂಡಿವೆ.

ಈ ರೀತಿಯಾಗಿ ಬದುಕಿ ಉಳಿಯುವುದಕ್ಕಾಗಿ ತನ್ನನ್ನು ತಾನು ವ್ಯವಸ್ಥೆಯಲ್ಲಿ ತಳ್ಳುವ ಪ್ರಕ್ರಿಯಲ್ಲಿ ಈ ಬಹುಪಾಲು ಮಾಧ್ಯಮಗಳು ಪತ್ರಿಕೋದ್ಯಮದ ಮೂಲಭೂತ ಸಿದ್ಧಾಂತಗಳು, ನೈತಿಕ ಪಾಠಗಳು, ವೈಯುಕ್ತಿಕ ಪರಿಶುದ್ಧತೆ ಮುಂತಾದವುಗಳನ್ನೆಲ್ಲವನ್ನೂ ಕೂಡ ಹಳ್ಳಕ್ಕೆ ತಳ್ಳಿ ಬಿಟ್ಟಿವೆ. ಈಗ ಮಾಧ್ಯಮವೆನ್ನುವುದು ಒಂದು ಪ್ಯಾಕೇಜ್ ಆಗಿ ಪರಿವರ್ತಿತಗೊಂಡಿದೆ. ಇಲ್ಲಿ ಮಾಲೀಕನ ವ್ಯವಹಾರಿಕ ಬದ್ಧತೆಗಳು ಹಾಗೂ ಅವನ ಉದ್ಯೋಗಿಯಾದ ಸಂಪಾದಕನೊಬ್ಬನ ಸಾಂಸ್ಕೃತಿಕ, ಸಾಮಾಜಿಕ ಬದ್ಧತೆಗಳ ನಡುವಿನ ಲಕ್ಷ್ಮಣ ರೇಖೆ ಅಳಿಸಿಹೋಗಿದೆ. ಈ ಪ್ಯಾಕೇಜ್ ಪದ್ಧತಿಯ ಪ್ರಕಾರ  ಪ್ರತಿಯೊಂದು ದೃಶ್ಯ ಮಾಧ್ಯಮಗಳು ಒಪ್ಪಿಸುವ ಗಿಣಿ ಪಾಠವೆಂದರೆ, ‘ಮೊದಲನೆಯದಾಗಿ ನಾವು ಜನರಿಗೆ ಏನು ಬೇಕು, ಅದರಲ್ಲೂ ಜನ ಸಾಮಾನ್ಯರಿಗೆ ಏನು ಬೇಕೋ, ಅದರಲ್ಲೂ ಜನಸಾಮಾನ್ಯರ ನಂಬಿಕೆಗಳು ಏನಿವೆಯೋ, ಅವನ್ನು ನಾವು ಅತ್ಯಂತ ನಿಯಮಬದ್ಧವಾಗಿ, ಕರಾರುವಕ್ಕಾಗಿ, ಕ್ರಮಬದ್ಧವಾಗಿ ಮರಳಿ ಜನರಿಗೆ ತಲುಪಿಸುತ್ತೇವೆ.’

ಇಲ್ಲಿ ಭಾರತದಂತಹ ದೇಶದಲ್ಲಿ ಇಲ್ಲಿನ ಜನರ ನಂಬಿಕೆಗಳನ್ನು, ಅವರ ಬೇಕು ಬೇಡಗಳನ್ನು ಋಣಾತ್ಮವಾಗಿ ಗ್ರಹಿಸಿರುವುದರ ಫಲವೇ ಇಂದು ದೃಶ್ಯ ಮಾಧ್ಯಮಗಳಲ್ಲಿ ಯಾವುದೇ ಹಿಂಜರಿಕೆ, ಅನುಮಾನಗಳು ಹಾಗೂ ನಾಚಿಕೆ ಇಲ್ಲದೆ ಮೂಢನಂಬಿಕೆಗಳನ್ನಾಧರಿಸಿದ ಹತ್ತಾರು ಕಾರ್ಯಕ್ರಮಗಳು ದಿನವಿಡೀ ಬಿತ್ತರಗೊಳ್ಳುತ್ತಿರುತ್ತವೆ. ಏಕೆಂದರೆ ಇವು ಜನರಿಗೆ ಬೇಕಲ್ಲವೇ! ಅವರು ಇದನ್ನು ನಂಬುತ್ತಾರಲ್ಲಾ! ಆದರೆ ಈ ಮೂಢನಂಬಿಕೆ ಆಧಾರಿತ ಕಾರ್ಯಕ್ರಮಗಳು ಸಮಾಜವನ್ನು ದಿಕ್ಕು ತಪ್ಪಿಸಿ ಅಮಾಯಕ, ಮುಗ್ಧ ವೀಕ್ಷಕರನ್ನು ಗೊಂದಲಗೊಳಿಸಿ ಅವರನ್ನು ಇನ್ನಷ್ಟು ಕತ್ತಲಲ್ಲಿ ಕೊಳೆಯುವಂತೆ ಮಾಡುತ್ತಿರುವ ಬಗ್ಗೆ ಈ ದೃಶ್ಯ ಮಾಧ್ಯಮಗಳಿಗೆ ಕೊಂಚವೂ ಕೀಳರಿಮೆ ಇಲ್ಲ. ಇದು ಯಾರ ಆಸ್ತಿ ನಿಮ್ಮ ಆಸ್ತಿ ಎಂದು ಹೇಳಿಕೊಂಡು ಬರುವ ಖಾಸಗಿ ಚಾನಲ್‌ಗಳ ಉದ್ದೇಶ ಕೂಡ ಅಷ್ಟೇ. ಜನರಿಂದ ಹಾಗೂ ಜನರಿಗಾಗಿ ಎನ್ನುತ್ತಾ ಜನರನ್ನು ಹಾದಿ ತಪ್ಪಿಸುವುದು. ಸತ್ಯ ದರ್ಶನದ ಹೆಸರಿನಲ್ಲಿ ಚರ್ಚೆಗಳು, ಚೆಕ್‌ಬಂದಿಗಳು ನಡೆಸುವ ವೇದಿಕೆಗಳನ್ನು ನ್ಯಾಯಾಲಯವಾಗಿ ಮಾರ್ಪಡಿಸಿ ಅಲ್ಲಿ ತಾವೊಬ್ಬ ನ್ಯಾಯಾದೀಶನಂತೆಯೂ, ಇಲ್ಲಿನ ಎಲ್ಲಾ ರೋಗಗಳಿಗೆ ತಾನೊಬ್ಬನೇ ಸರ್ವಮುದ್ದು ನೀಡುವ ವೈದ್ಯನೆಂಬಂತೆ ವರ್ತಿಸುತ್ತಾ ಆಳದಲ್ಲಿ ಇವರೊಬ್ಬ ಜಾಹೀರಾತಿನ ರೂಪದರ್ಶಿಗಳಷ್ಟೇ ಎನ್ನುವ ನಿಜವನ್ನು ಮರೆಮಾಚುತ್ತಾರೆ. ಇಲ್ಲಿರುವುದು ಅನುಕೂಲಸಿಂಧು, ಅವಕಾಶವಾದಿ ಪತ್ರಿಕೋದ್ಯಮ. ಇಲ್ಲಿ ಮಾಧ್ಯಮವೆನ್ನುವುದು ಒಂದು ಪ್ರಾಡಕ್ಟ್. ಇದನ್ನು ಅತ್ಯಂತ ಕೊಳಕಾಗಿ ಉತ್ಪಾದಿಸಿ ವ್ಯಾವಹಾರಿಕವಾಗಿ ಸದಾ ಲಾಭದ ಆಧಾರದ ಮೇಲೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿ ಸರಿ ತಪ್ಪುಗಳ ಜಿಜ್ನಾಸೆಯೇ ಬರುವುದಿಲ್ಲ ಹಾಗು ಕಾಡುವುದಿಲ್ಲ. ಇಲ್ಲಿ ದೃಶ್ಯ ಮಾಧ್ಯಮವೆನ್ನುವುದು ಒಂದು ಕಂಪನಿಯಾಗಿ ಮಾರ್ಪಟ್ಟ ಬಳಿಕ ಅಲ್ಲಿ ನೈತಿಕತೆ ಅಥವಾ ಅನೈತಿಕತೆಯ ಪ್ರಶ್ನೆಯೇ ಇರುವುದಿಲ್ಲ.

ಇಲ್ಲಿರುವುದು ಒಂದೇ ಮಂತ್ರ. ಅದು ಲಾಭ ಮತ್ತು ಟಿಅರ್‌ಪಿ. ಅದಕ್ಕಾಗಿ ಇಲ್ಲಿ ನಿಮಿಷಕ್ಕೊಮ್ಮೆ ತಿರಸ್ಕಾರಯೋಗ್ಯವಾದ ಬ್ರೇಕಿಂಗ್ ಸುದ್ದಿ ಬಿತ್ತರಗೊಳ್ಳಲೇ ಬೇಕು, ಇಲ್ಲಿ ಕೆಲವರ ಚಾರಿತ್ಯವಧೆ ನಡೆಯುತ್ತಿರಲೇಬೇಕು, ನಿರ್ಭಯ ಪತ್ರಿಕೋದ್ಯಮದ ಹೆಸರಿನಲ್ಲಿ ಹಸೀ ಹಸೀ ಸುಳ್ಳುಗಳನ್ನು ಬೊಗಳುತ್ತಿರಬೇಕು, ರೋಮಾಂಚಕ ಪತ್ರಿಕೋದ್ಯಮದ ಲಜ್ಜೆಗೇಡಿತನ ಎಲ್ಲೆಲ್ಲೂ ರಾಚುತ್ತಿರಬೇಕು. ಇವೆಲ್ಲ ಇಂದು ದೃಶ್ಯ ಮಾಧ್ಯಮಗಳ ದಿನನಿತ್ಯದ ವಹಿವಾಟಾಗಿದೆ. ಏಕೆಂದರೆ ಇವೆಲ್ಲಾ ಮಾರ್ಕೆಟ್ ವ್ಯವಸ್ಥೆಯ ಆಕಾಂಕ್ಷೆಗಳಿಗೆ ಬದ್ಧತೆಗೊಳಪಟ್ಟಿರುತ್ತವೆ. ಇದು ಪ್ಯಾಕೇಜ್ ನಿಯಮ. ಈ ನೆಲದ ಭಾವನೆಗಳಿಗೆ ಅತ್ಯಂತ ಅಸೂಕ್ಷವಾಗಿ ಸ್ಪಂದಿಸುವ ಈ ದೃಶ್ಯ ಮಾಧ್ಯಮದ ಪತ್ರಕರ್ತರು ಪ್ರಚಲಿತ ವಿದ್ಯಾಮಾನಗಳಿಗೆ ತಾವೇ ಸ್ವತಹ ಬ್ರಾಂಡ್ ಆಗಿಬಿಡುತ್ತಾರೆ ಹೊರತಾಗಿ ಅದರ ಆಳಕ್ಕಿಳಿದು ಸತ್ಯಾಸತ್ಯತೆಗಳನ್ನು ಬಗೆದು ನೋಡುವುದಿಲ್ಲ. ಇಲ್ಲಿನ ಪತ್ರಕರ್ತರು ತಮ್ಮ ಚಾನಲ್ ಜನಪ್ರಿಯಗೊಳ್ಳುತ್ತಿದೆ, ತಾವೊಬ್ಬ ಜನಪ್ರಿಯ ಪತ್ರಕರ್ತ, ಎನ್ನುವ ಭ್ರಮೆಗೆ ಬಲಿಯಾದ ಕ್ಷಣದಿಂದ ಆತ ತನ್ನ ಜೊತೆ ಜೊತೆಗೆ ಗಣರಾಜ್ಯದ ಆದರ್ಶಗಳನ್ನು ಕೂಡ ಮಣ್ಣುಪಾಲು ಮಾಡುತ್ತಾನೆ. ಆಗ ಎಲ್ಲರನ್ನೂ ಆತ ಸಂಬೋಧಿಸುವುದು ಹೊಲಸು ಭಾಷೆಯಿಂದ, ಏಕವಚನದಿಂದ, ತಿರಸ್ಕಾರದಿಂದ, ಆಕ್ಷೇಪಣೆಗಳಿಂದ.

ಅತ್ಯಂತ ಲಾಭದಾಯಕವಾದ ಮಾಧ್ಯಮವಾಗಿರುವುದರಿಂದಲೇ ಇಂದು ದೃಶ್ಯ ಮಾಧ್ಯಮಗಳಲ್ಲಿ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸುವುದರ ಬಗೆಗೆ ದಿನನಿತ್ಯ ಕಾರ್ಯಕ್ರಮಗಳಿರುತ್ತವೆ. ಆದರೆ ಹಸಿವಿನ ಬಗೆಗೆ, ಅಪೌಷ್ಟಿಕತೆ ಬಗೆಗೆ ಚರ್ಚಿಸಲು ತಮ್ಮ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಯಾವುದೇ ಬಗೆಯ SLOT ದೊರೆಯುವುದಿಲ್ಲ! ಅಸ್ಪೃಶ್ಯರ ಮಾನವ ಹಕ್ಕುಗಳು ಪದೇ ಪದೇ ಹಲ್ಲೆಗೊಳಗಾದಾಗ ,ಅಲ್ಪಸಂಖ್ಯಾತರು ದಿನನಿತ್ಯದ ಅವಮಾನಗಳಿಗೆ ತುತ್ತಾಗುತ್ತಿದ್ದಾಗ, ಬಲಿಷ್ಟ ಜಾತಿಯ ಧನದಾಸೆಗೆ ದಲಿತನೊಬ್ಬನ ನರಬಲಿ ನಡೆದಾಗ, ಇದಕ್ಕೆ ಸಂಬಂಧಪಟ್ಟ ವರದಿಗಳಿಗೆ, ಚರ್ಚೆಗಳಿಗೆ ದಿನನಿತ್ಯದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸ್ಥಾನವೇ ಇರುವುದಿಲ್ಲ. ಆದರೆ ಕ್ರೈಂ ಸ್ಟೋರಿಗಳು, ಭೀಭತ್ಸ ವರದಿಗಳು, ಜನ್ಮಾಂತರದ ಬೊಗಳೆಗಳು ಪ್ರತಿದಿನ ಪ್ರಸಾರಗೊಳ್ಳುತ್ತಿರುತ್ತವೆ. ಏಕೆಂದರೆ ಇದು ಪ್ಯಾಕೇಜ್ ನಿಯಮ. ಮುಕ್ತ ಮಾರುಕಟ್ಟೆ ಇದನ್ನು ರೂಪಿಸಿದೆ.

ಇಲ್ಲಿ ಗಂಭೀರ, ವಿಚಾರಶೀಲ, ವೈಚಾರಿಕ, ನೈತಿಕತೆಯ ಪತ್ರಿಕೋದ್ಯಮವೆನ್ನುವುದು ( ದೃಶ್ಯ ಮಾಧ್ಯಮ) ತೀರಿಕೊಂಡು ಗೋರಿ ಸೇರಿದೆ.

ಕೊಲಂಬಿಯಾ ದೇಶದ ಪ್ರಖ್ಯಾತ ಲೇಖಕ “ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್” ಸುಮಾರು 2004-05 ರಲ್ಲಿ ಸೆಮಿನಾರ್ ಒಂದರಲ್ಲಿ ಮಂಡಿಸಿದ ಪ್ರಬಂಧವನ್ನು ನಾವು ಮತ್ತೊಮ್ಮೆ ಓದಲೇಬೇಕು. ಪತ್ರಿಕೋದ್ಯಮದ ಬಗ್ಗೆ ಸ್ವತಃ ಪತ್ರಕರ್ತರಾಗಿದ್ದ ಮಾರ್ಕೆಜ್‌ನ ಚಿಂತನೆಗಳನ್ನು ಇಲ್ಲಿ ಸಂಗ್ರಹವಾಗಿ ಹಾಗು ಸಂಕ್ಷಿಪ್ತವಾಗಿ ಅನುವಾದಿಸಲಾಗಿದೆ.

“50 ವರ್ಷಗಳ ಹಿಂದೆ ಪತ್ರಿಕೋದ್ಯಮದ ಶಾಲೆಗಳು ವ್ಯಾವಹಾರಿಕವಾಗಿ ಆಕರ್ಷಕವಾಗಿರಲಿಲ್ಲ. ಪತ್ರಿಕೋದ್ಯಮದ ಕಸುಬನ್ನು ನಾವೆಲ್ಲಾ ಸುದ್ದಿಮನೆಗಳಲ್ಲಿ, ಮುದ್ರಣಾಲಯಗಳಲ್ಲಿ, ಟೀ ಅಂಗಡಿಗಳಲ್ಲಿ ಕಲಿಯುತ್ತಿದ್ದೆವು. ಇಲ್ಲಿ ನಮಗೆ ಸರಿಯಾದ ಮೂಲಭೂತ ತರಬೇತಿಯನ್ನು ನೀಡಲಾಗುತ್ತಿತ್ತು, ಇದು ಒಂದು ಸೌಹಾರ್ದಯುತ, ಜೀವಂತ, ಲವಲವಿಕೆಯ ವಾತಾವರಣದಲ್ಲಿ ನಡೆಯುತ್ತಿತ್ತು. ಆ ಕಾಲದಲ್ಲಿ ಪತ್ರಿಕೋದ್ಯಮವೆನ್ನುವುದನ್ನು ಸುದ್ದಿ, ಸಂಪಾದಕೀಯ, ವರ್ತಮಾನ ಹಾಗೂ ಭವಿಷ್ಯದ ವಿಶ್ಲೇಷಣೆಗಳು, ಈ ರೀತಿಯಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತಿತ್ತು. ಈ ಮೂರೂ ವಿಭಾಗಗಳಲ್ಲಿ ಸಂಪಾದಕೀಯಕ್ಕೆ ಅತ್ಯಂತ ಘನತೆ ಮತ್ತು ಹೆಚ್ಚು ಒತ್ತು ನೀಡಲಾಗುತ್ತಿತ್ತು. ಈ ಪತ್ರಿಕೋದ್ಯಮವನ್ನು ಪ್ರವೇಶಿಸಲು ಸಾಂಸ್ಕೃತಿಕ ಅರಿವು ಹಾಗೂ ಅದರ ಹಿನ್ನೆಲೆಗಳ ಬಗೆಗಿನ ತಿಳುವಳಿಕೆ ಅತ್ಯಂತ ಅವಶ್ಯಕವಾಗಿತ್ತು. ಇದನ್ನು ಅಲ್ಲಿನ ವಾತಾವರಣದಲ್ಲಿ ಕಲಿಸಿಕೊಡುತ್ತಿದ್ದರು. ನಿರಂತರ ಓದುವಿಕೆ ಕೂಡ ಪೂರಕ ಅಗತ್ಯವಾಗಿತ್ತು. ಆದರೆ ಇಂದು ಪತ್ರಿಕೋದ್ಯಮದಲ್ಲಿ ಅಕಡೆಮಿಕ್‌ನ, ಚಿಂತನೆಗಳ ಪರಿಣಿತಿಯ ಕೊರತೆಯನ್ನು ನೀಗಿಸುವುದಕ್ಕಾಗಿಯೇ ಪತ್ರಿಕೋದ್ಯಮದ ಶಾಲೆಗಳನ್ನು ತೆರೆಯಲಾಯಿತು. ಇಲ್ಲಿ ಪತ್ರಿಕೋದ್ಯಮಕ್ಕೆ ಬೇಕಾಗುವ ಪೂರಕ ವಿಷಯಗಳನ್ನು ಹೇಳಿಕೊಡುತ್ತಾರೆ, ಆದರೆ ಪತ್ರಿಕೋದ್ಯಮದ ಬಗೆಗೆ ಹೇಳಿಕೊಡುವುದು ಬಹಳ ಕಡಿಮೆ. ಇಲ್ಲಿ ಮಾನವೀಯ ಅಂಶಗಳಿಗೆ ಹೆಚ್ಚು ಸಮಯವನ್ನು ಮೀಸಲಿಡವುದರ ಬದಲಾಗಿ ಮಹಾತ್ವಾಕಾಂಕ್ಷೆ ಹಾಗೂ ಜಡತೆಗೆ ಹೆಚ್ಚು ಒತ್ತು ಕೊಡುತ್ತಾರೆ.

“ಈ ಶಾಲೆಗಳಲ್ಲಿ ಸಂಶೋಧನೆಯನ್ನುವುದು ಹೆಚ್ಚುವರಿ ವಿಷಯವನ್ನಾಗಿ ಕಲಿಸದೆ ಪತ್ರಿಕೋದ್ಯಮದ ಒಂದು ಭಾಗವಾಗಿ ಕಲಿಸಬೇಕು. ಅತ್ಯಂತ ಮುಖ್ಯವಾದದ್ದು ಮೌಲ್ಯಗಳು ಹಾಗೂ ನೈತಿಕತೆ. ಅವು ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಹೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು. ಇದನ್ನು ನವ ಪೀಳಿಗೆಯ ಪತ್ರಕರ್ತರು ಮನದಟ್ಟು ಮಾಡಿಕೊಳ್ಳಬೇಕು. ಆದರೆ ಇಂದು ಪತ್ರಿಕೋದ್ಯಮ ಶಾಲೆಗಳಲ್ಲಿ ಕಲಿತು ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳು ಅತ್ಯಂತ ಅಸಹಜವಾದ ಅಪಾರ ನಿರೀಕ್ಷೆಗಳನ್ನು ಹೊತ್ತಿರುತ್ತಾರೆ. ಇವರಿಗೆ ವಾಸ್ತವದ ಪರಿಚಯವಾಗಲಿ ಅಥವಾ ಅದರೊಂದಿಗಿನ ನಂಟಾಗಲಿ ಇರುವುದಿಲ್ಲ. ಸ್ವಹಿತಾಸಕ್ತಿಯನ್ನು,ತಮ್ಮ ಭವಿಷ್ಯದ ಆತಂಕಗಳನ್ನು ತಲೆಯಲ್ಲಿ ತುಂಬಿಕೊಂಡಿರುವ ಈ ಪದವೀಧರರು ತಾವು ಪತ್ರಕರ್ತರಾಗಿ ಕಾರ್ಯ ನಿರ್ವಹಿಸುವಾಗ ಕ್ರಿಯಾಶೀಲತೆ ಹಾಗೂ ಅನುಭವಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟಿರುತ್ತಾರೆ. ಇಂದಿನ ಉದಯೋನ್ಮುಖ ಪತ್ರಕರ್ತರು ಮಂತ್ರಿಗಳ, ಅಧಿಕಾರಿಗಳ ಸುಪರ್ದಿಯಲ್ಲಿರುವ ಗುಪ್ತ ದಾಖಲೆಗಳನ್ನು ಅಮೂಲಾಗ್ರವಾಗಿ ಓದುವುದರಲ್ಲಿ, ಸಂದರ್ಶನದ ವೇಳೆಯಲ್ಲಿ ಆತ್ಮೀಯತೆಯಿಂದ ಹೇಳಿದ ಮಾತುಗಳನ್ನು ಸಂಬಂಧಪಟ್ಟ ವ್ಯಕ್ತಿಗೆ ತಿಳಿಸದೆ ಅದನ್ನು ಮುದ್ರಿಸುವುದರಲ್ಲಿ ಅತ್ಯಂತ ಉತ್ಸುಕತೆ ತೋರುತ್ತಾರೆ ಹಾಗೂ ಆ ರೀತಿ ನಡೆದುಕೊಳ್ಳುವುದರ ಬಗೆಗೆ ಹೆಮ್ಮೆಯನ್ನು ವ್ಯಕ್ತ ಪಡಿಸುತ್ತಾರೆ. “ಆಫ಼್ ದಿ ರೆಕಾರ್ಡ್” ಎಂದು ಹೇಳಿದ್ದರೂ ಅದನ್ನು ಅತ್ಯಂತ ರೋಮಾಂಚಕ ಸುದ್ದಿಯನ್ನಾಗಿ ಪ್ರಚಾರ ಮಾಡುವುದರಲ್ಲಿ ಇವರಿಗೆ ಅಪಾರ ಆಸಕ್ತಿ. ಇಲ್ಲಿ ದುಖಕರ ಸಂಗತಿಯೆಂದರೆ ಈ ಎಲ್ಲಾ ತರಹದ ಅನೈತಿಕ ನಡಾವಳಿಗಳನ್ನು ಈ ಉದಯೋನ್ಮುಖ ಪತ್ರಕರ್ತರು ಅತ್ಯಂತ ಸಹಜವಾಗಿಯೇ ಸ್ವೀಕರಿಸುತ್ತಾರೆ ಹಾಗೂ ಇದನ್ನು ತಮ್ಮ ಪ್ರಜ್ಞೆಯೊಳಗೆ ಬೇರು ಬಿಡುವಂತೆ ನೋಡಿಕೊಳ್ಳುತ್ತಾರೆ. ಅತ್ಯುತ್ತಮ ಸುದ್ದಿಯನ್ನು ಮೊದಲು ಪ್ರಕಟಿಸುವುದಕ್ಕಿಂತಲೂ ಮುಖ್ಯವಾದದ್ದು ಅದನ್ನು ಅಷ್ಟೇ ಉತ್ತಮವಾಗಿ ಮಂಡಿಸಬೇಕು ಎನ್ನುವುದನ್ನು ಮರೆಯುತ್ತಾರೆ. ವ್ಯವಸ್ಥೆಯಲ್ಲಿ ಅಡಕವಾಗಿರುವ ಘಟನೆಗಳನ್ನು, ಸುದ್ದಿಗಳನ್ನು, ತನಿಖಾ ವರದಿಗಳನ್ನು ಪ್ರಕಟಿಸುವಾಗ ಮೊದಲು ಜಾಗಕ್ಕೆ ತೆರಳಿ, ಅಮೂಲಗ್ರವಾಗಿ ಸಂಶೋಧಿಸಿ ನಂತರ ಈ ವರದಿಗಳನ್ನು ವ್ಯಾಕರಣದ ತಪ್ಪಿಲ್ಲದೆ ಬರೆಯುವುದಕ್ಕೆ ಅಪಾರವಾದ ಜ್ಞಾನ, ಸಂಯಮ, ವೇಳೆ, ಮತ್ತಷ್ಟು ಸಂಶೋಧನೆಯನ್ನು ಮಾಡುವ ಹುಮ್ಮಸ್ಸು, ಬರೆಯುವ ಕಸಬುದಾರಿಕೆ, ಎಲ್ಲವೂ ಒಂದೇ ಕಡೆ ಅಡಕಗೊಂಡಿರಬೇಕು. ವರದಿಯೆನ್ನುವುದು ನಡೆದ ಒಂದು ಘಟನೆಯನ್ನು ಅತ್ಯಂತ ಕೂಲಂಕುಷವಾಗಿ, ಪಕ್ಷಪಾತವಿಲ್ಲದೆ, ಆದಷ್ಟು ಸತ್ಯಕ್ಕೆ ಹತ್ತಿರವಾಗಿ ಪುನರ್‌ನಿರ್ಮಾಣ ಮಾಡುವ ಕಲೆ ಎನ್ನುವುದನ್ನು ಇವರು ಮರೆಯುತ್ತಾರೆ.

“ಈ ಟೇಪ್ ರಿಕಾರ್ಡರ್ ಬರುವುದಕ್ಕಿಂತ ಮೊದಲು ಪತ್ರಿಕೋದ್ಯಮದಲ್ಲಿ ನಾವು ಬಳಸುತ್ತಿದ್ದ ಪರಿಕರಗಳೆಂದರೆ ಒಂದು ನೋಟ್ ಬುಕ್, ಪಕ್ಷಪಾತವಿಲ್ಲದ ನಮ್ಮ ಜೋಡಿ ಕಿವಿಗಳು, ಹಾಗು ಹೊಂದಾಣಿಕೆ ಮಾಡಿಕೊಳ್ಳದ ನಮ್ಮ ಪ್ರಾಮಾಣಿಕತೆ. ಕ್ಯಾಸೆಟ್ ಎನ್ನುವುದು ಎಂದಿಗೂ ವ್ಯಕ್ತಿಯೊಬ್ಬನ ನೆನಪಿನ ಶಕ್ತಿಯ ಬದಲೀ ಸಾಧನವಲ್ಲ. ಅದೊಂದು ಉಪಕರಣ ಅಷ್ಟೇ. ಈ ರೆಕಾರ್ಡರ್ ಎನ್ನುವುದು ಕೇಳಿಸಿಕೊಳ್ಳುತ್ತದೆ ಆದರೆ ಮನನ ಮಾಡಿಕೊಳ್ಳುವುದಿಲ್ಲ ಎನ್ನುವ ಸತ್ಯವನ್ನು ನಮ್ಮ ಇಂದಿನ ತಲೆಮಾರಿನ ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಪತ್ರಕರ್ತರು ರೆಕಾರ್ಡರ್ ಅನ್ನು ಕೇವಲ ಸಾಕ್ಷಿಯಾಗಿ ಬಳಸಿಕೊಳ್ಳಬೇಕು. ಏಕೆಂದರೆ ಕಡೆಗೂ ಉಪಯೋಗಿಸಬೇಕಾಗಿರುವುದು ನ್ಯಾಯದ ಪಕ್ಷಪಾತವಿರುವಂತಹ ಮನಸ್ಸಿನ ತರಬೇತಿಯನ್ನು ಮಾತ್ರ. ಅದರೆ ಇಲ್ಲಿ ಪತ್ರಿಕೋದ್ಯಮದ ತರಬೇತಿ ವಿಷಯಗಳನ್ನು ಕಾಲಕಾಲಕ್ಕೆ ತಕ್ಕ ಹಾಗೆ ಅಂದಿನ ಪ್ರಸ್ತುತತೆಗೆ ಅನುವಾಗುವಂತೆ ಸೂಕ್ತ ಬದಲಾವಣೆಗಳಿಗೆ ಒಳಪಡಿಸುತ್ತಾ, ಇದನ್ನು ಕಲಿಸುವುದಕ್ಕಾಗಿ ಸದಾಕಾಲ ಹೊಸ ಹೊಸ ಪರಿಕರಗಳನ್ನು ಹುಡುಕಿಕೊಳ್ಳಬೇಕು. ಆದರೆ ನಾವು ಹಳೇ ಕಾಲದ ಕೇಳುವ ಹಾಗೂ ಕಲಿಯುವ ಪದ್ಧತಿಯನ್ನು ನವೀಕರಿಸುತ್ತಿದ್ದೇವೆ. ಇದರಿಂದ ಏನೂ ಉಪಯೋಗವಾಗುವುದಿಲ್ಲ.

ಸತ್ಯದೊಂದಿಗೆ ಸದಾ ಮುಖಾಮುಖಿಯಾಗುತ್ತಲೇ ಮಾನವೀಯತೆಯನ್ನು ಈ ಪತ್ರಿಕೋದ್ಯಮವೆನ್ನುವ ಅನುಶಕ್ತಿಯೊಂದಿಗೆ ಮಿಳಿತಗೊಳಿಸಬೇಕಾಗುತ್ತದೆ. ಯಾವನು ಇದನ್ನು ತನ್ನ ವ್ಯಕ್ತಿತ್ವದೊಳಗೆ ರಕ್ತಗತ ಮಾಡಿಕೊಂಡಿರುವುದಿಲ್ಲವೋ ಅವನು ಇದರ ಮಾಂತ್ರಿಕತೆಯನ್ನೂ ಕೂಡ ಗ್ರಹಿಸಲಾರ. ಇದರ ಅನುಭವದ ತೆಕ್ಕೆಗೆ ಒಳಪಡದವನು ಕೇವಲ ರೋಮಾಂಚಕ ವರದಿಗಳಿಗೆ, ಈ ವರದಿಗಳು ತಂದುಕೊಡುವ ಹುಸಿ ರೋಚಕತೆಗೆ ಬಲಿಯಾಗುತ್ತಾನೆ. ಆ ಮೂಲಕ ತನಗರಿವಿಲ್ಲದೆಯೇ ಅನೈತಿಕತೆಯ ಆಳಕ್ಕೆ ಕುಸಿದಿರುತ್ತಾನೆ.”

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ಜ್ಯೋತಿಬಾ ಪುಲೆಯವರ ಚಿಂತನೆಗಳ ಪ್ರಸ್ತುತತೆ


-ಬಿ. ಶ್ರೀಪಾದ್ ಭಟ್


 

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಈ ಸಂಘಪರಿವಾರ ತನ್ನ ಕೇಸರಿ ಧ್ವಜ ಹಾರಿಸಿದಂತಹ ರಾಜ್ಯವೆನ್ನುವ ಅಪಖ್ಯಾತಿಗೆ ಒಳಗಾಗಿದ್ದ ನಮ್ಮ ಕರ್ನಾಟಕ ಈಗ ಮತ್ತೆ ಇದೇ ಸಂಘ ಪರಿವಾರ ತನ್ನ ನೀಲಿ ಧ್ವಜವನ್ನು ಹಾರಿಸಿದ ರಾಜ್ಯವೆನ್ನುವ ಅಪಖ್ಯಾತಿಗೆ ಒಳಗಾದ ದುರಂತ ಕೂಡ ಈ ರಾಜ್ಯದ್ದು. ರೇಣುಕಾಚಾರ್ಯ, ಹಾಲಪ್ಪ, ಈಗ ಸವದಿ, ಸಿ.ಸಿ.ಪಾಟೀಲ, ಕೃಷ್ಣ ಪಾಲೇಮಾರ್‌ಗಳು ಮೊಟ್ಟ ಮೊದಲ ಬಾರಿಗೆ ಮಂತ್ರಿಗಳಾಗಿದ್ದಂತಹವರು. ಇವರೆಲ್ಲ ನಮ್ಮ ಶಿಕಾರಿಪುರ ಶಾಸಕರ ಹಿಂಬಾಲಕರು!!! ಆದರೆ ಈ ಬಿಜೆಪಿಯ ಹಿರಿಯಣ್ಣ ಆರ್.ಎಸ್.ಎಸ್.ನದೂ ಕೂಡಾ ಅತ್ಯಂತ ಕಸಬುದಾರಿಕೆಯ ನಡೆಗಳೇ. ತನ್ನ ಕೇಸರೀಕರಣ ಅಜೆಂಡಾವನ್ನು ಬೆಳೆಸಲು, ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಕೋಮುವಾದಿ ಅಜೆಂಡಾವನ್ನು ತುಂಬಲು, ತನ್ನ ಶಾಖಾ ಮಠಗಳನ್ನು ವಿಸ್ತರಿಸಲು ಇದೇ ಬಿಜೆಪಿ ಸರ್ಕಾರ ತನ್ನ, ತನ್ನ ಬಳಗದ ಸರ್ಕಾರವಾಗುತ್ತದೆ. ಆದರೆ ಇದೇ ಬಿಜೆಪಿ ಸರ್ಕಾರ ಹಗರಣಗಳ ಮೇಲೆ ಹಗರಣಗಳಲ್ಲಿ ಸಿಲಿಕಿಕೊಂಡಾಗ ಇದೇ ಆರ್.ಎಸ್.ಎಸ್ .ಕೈ ತೊಳೆದುಕೊಂಡು ಅದು ಪಕ್ಷದ ಅಂತರಿಕ ವಿಚಾರ ಎಂದು ಬೂಸಿ ಬಿಡುತ್ತದೆ. ಇದನ್ನು ನಂಬಲು ಕನ್ನಡದ ಜನತೆ ಎಲ್ಲಾ ಶುದ್ಧ ಹುಂಬರೂ, ಮುಗ್ಧರೂ, ಮತಿಹೀನರೂ, ಸಿನಿಕರೂ ಆಗಿರಬೇಕು. ಇವೆಲ್ಲದರ ಮಧ್ಯೆ ಸಂಘ ಪರಿವಾದವರು ಆರ್.ಎಸ್.ಎಸ್. ನೇತೃತ್ವದಲ್ಲಿ ನಮ್ಮ ಶಿಕ್ಷಣದಲ್ಲಿ ಅಖಂಡ ಹಿಂದೂತ್ವದ ಕೋಮುವಾದಿ ಚಿಂತನೆಗಳನ್ನು, ಅನಾದಿ ಕಾಲದಿಂದಲೂ ಬಿತ್ತುತ್ತಾ ಬಂದಂತಹ ತನ್ನ ಪರಧರ್ಮದ ದ್ವೇಷದ ವಿಚಾರಗಳನ್ನು ಮಾಧ್ಯಮಿಕ ಹಾಗೂ ಹೈಸ್ಕೂಲ್ ಶಿಕ್ಷಣದಲ್ಲಿ ತಂದಿರುವ ರೀತಿ ನಿಜಕ್ಕೂ ಖಂಡನಾರ್ಹ. ಇದನ್ನು ಇವರು ಆರ್. ಎಸ್. ಎಸ್. ಕಣ್ಣಳತೆಯಲ್ಲಿ ನಡೆಸಿದ್ದಾರೆ.

ಇದು ಇಂದು ಎಂದಿನಂತೆ ಗುಪ್ತ ಕಾರ್ಯಸೂಚಿಯಾಗಿ ಉಳಿದಿಲ್ಲ. ಈ ಬಾರಿ ಬಹಿರಂಗವಾಗಿಯೇ ಇಂತಹ ಜೀವವಿರೋಧಿ, ಕೋಮುವಾದೀ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇದಕ್ಕೆ ಮೂಲಭೂತ ಕಾರಣಗಳೆಂದರೆ ನಮ್ಮ ಪ್ರಜ್ಞಾವಂತರ ಮೌನ ಹಾಗೂ ನಿರ್ಲಕ್ಷ್ಯ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿರುವುದು. ಸ್ವಾತಂತ್ರ ನಂತರ ಸುಮಾರು 45 ವರ್ಷಗಳಷ್ಟು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ನಿರಂತರ ರಾಜಕೀಯದಲ್ಲಿ ಇಷ್ಟು ಬೇಗ ನಿಸ್ಸಾಹಯಕರಾಗಿ ದಣಿದವರಂತೆ ಬೇಜವ್ದಾರಿಯಿಂದ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಹತಾಶೆಯ ದಿನಗಳನ್ನು ಸೂಚಿಸುತ್ತವೆ. ಇವರಿಗೆ ವಿರೋಧ ಪಕ್ಷವೆಂದರೇನೆ ಅಪಥ್ಯವೆನ್ನುವಂತೆ ವರ್ತಿಸುತ್ತಿರುವುದು ಪ್ರಜಾಪ್ರಭುತ್ವದ ದೊಡ್ಡ ಸೋಲು. ಇದರಿಂದಾಗಿಯೇ ಇಂದು ಆರ್.ಎಸ್.ಎಸ್. ನವರಿಗೆ ತಮ್ಮ ಹಿಂದುತ್ವದ ಅಜೆಂಡವನ್ನು ಹುಟ್ಟು ಹಾಕಲು ಮೊದಲಿನ ಹಾಗೆ ಒಳಗೊಳಗೆ ಭಯ, ಆತಂಕವಾಗಲಿ ಇಲ್ಲ, ಯಾವ ಗುಪ್ತ ಕಾರ್ಯಸೂಚಿಗಳಿಲ್ಲ. ಎಲ್ಲವೂ ಬಹಿರಂಗವಾದ, ನಿರ್ಭಯ ನಡಾವಳಿಗಳೇ !!!!

ಇಂತಹ ಸಂದರ್ಭದಲ್ಲಿ ನಾವು ಮಹಾತ್ಮ ಜ್ಯೋತಿಬಾ ಪುಲೆಯವರ ಕ್ರಾಂತಿಕಾರೀ ಪ್ರಗತಿಪರ ಚಿಂತನೆಗಳನ್ನು, ಶಿಕ್ಷಣದ ಬಗೆಗಿನ ಅವರ ಚಿಂತನೆಗಳು ಹಾಗೂ ಸಾಧನೆಗಳನ್ನು ನೆನೆಯುವುದು ಹಾಗೂ ಅದನ್ನೂ ನಿಜಕ್ಕೂ ಈ ಕಾಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದೂ ಅತ್ಯಂತ ಪ್ರಸ್ತುತವಾಗಿದೆ. ಏಕೆಂದರೆ ಮಹಾತ್ಮ ಪುಲೆಯವರು ಕೇವಲ ಬೋಧಕರಾಗಿರಲಿಲ್ಲ, ಕೇವಲ ಅಕಡೆಮಿಕ್ ಚಿಂತಕರಾಗಿರಲಿಲ್ಲ, ಸಾರ್ವಜನಿಕವಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು, ಸ್ವತಹ ಮಾಡಿ ತೋರಿಸಿದವರು. ಇದು ನಮ್ಮೆಲ್ಲರಿಗೆ ಮಾದರಿಯಾಗಬೇಕು. ಮಹಾರಾಷ್ಟ್ರದ ಸತಾರ ಜಿಲ್ಲೆಯ ಲಾಲ್ ಗುಣಿ ಗ್ರಾಮದಲ್ಲಿ ಹುಟ್ಟಿದ ಮಹಾತ್ಮ “ಜ್ಯೋತಿಬಾ ಪುಲೆ” ಹತ್ತೊಂಬತ್ತನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು. ತಳಸಮುದಾಯಗಳ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹ ದೊಡ್ಡ ಸಂತ. ಇವರು 28.2.1828 ರಲ್ಲಿ ಜನಿಸಿದರು. ಓದಿದ್ದು ಮಾಧ್ಯಮಿಕ ಶಾಲೆಯವರೆಗೆ ಮಾತ್ರ. ಇವರ ಜೀವನ ಚರಿತ್ರೆಯ ಪ್ರಮುಖ ಅಂಶಗಳನ್ನು Leftword books, Delhi ಪ್ರಕಾಶನದಿಂದ ಪ್ರಕಟಿಸಲಾದ ” ಜಿ.ಪಿ.ದೇಶಪಾಂಡೆ” ಬರೆದ ಹಾಗೂ ಸಂಪಾದಿಸಿದ ” Selected Writings of Jyotiba Phule ” ಎನ್ನುವ ಪುಸ್ತಕದಿಂದ ಸಂಗ್ರಹರೂಪವಾಗಿ ಇಲ್ಲಿ ಅನುವಾದಿಸಿಲಾಗಿದೆ. .

ಪುಲೆಯವರು 1847ರಲ್ಲಿ Thomas Pains ಬರೆದ The rights of man ಎನ್ನುವ ಕೃತಿಯಿಂದ ಪ್ರಭಾವಿತರಾದರು. 1848ರಲ್ಲಿ ಪುಲೆಯವರು ಶೂದ್ರಾತಿಶೂದ್ರ ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದರು. ಸ್ವತ ತಾವೂ ಹಾಗೂ ತಮ್ಮ ಪತ್ನಿ ಸಾವಿತ್ರಿಬಾಯೀ ಪುಲೆಯವರು ಇದನ್ನು ನಡೆಸುತ್ತಿದ್ದರು. ಆದರೆ ಆ ಕಾಲದ ಕಟ್ಟುನಿಟ್ಟಿನ ಸಮಾಜ ಸಂಪ್ರದಾಯಗಳಿಗೆ ಭಯಬೀತರಾಗಿದ್ದ ಅವರ ತಂದೆ ಗೋವಿಂದರಾವ್ ಪುಲೆ ಅವರು ಇದರಿಂದ ಬಲು ಅಸಮಧಾನಗೊಂಡರು. ಆದರೆ ಜ್ಯೋತಿಬಾ ಪುಲೆಯವರು ತಮ್ಮ ಆದರ್ಶವನ್ನು ಬಿಟ್ಟುಕೊಡದೆ ಅಸ್ಪೃಶ್ಯರಿಗೋಸ್ಕರ ಪತ್ನಿಯೊಂದಿಗೆ ತಮ್ಮ ತಂದೆಯ ಮನೆಯನ್ನೇ ತೊರೆದರು. 1851 ರಲ್ಲಿ ಎಲ್ಲ ಜಾತಿಯ ಹೆಣ್ಣುಮಕ್ಕಳಿಗೋಸ್ಕರ ಶಾಲೆಯನ್ನು ಆರಂಭಿಸಿದರು. 1855 ರಲ್ಲಿ ಕೆಲಸ ಮಾಡುವ ಅನಕ್ಷರಸ್ಥರಿಗಾಗಿ ಸಂಜೆ ಶಾಲೆಯನ್ನು ಆರಂಭಿಸಿದರು. ಇವರ ಈ ಕ್ರಾಂತಿಕಾರಿ ಧೋರಣೆಗಳಿಗೆ ಆ ಕಾಲದ ಸಂಪ್ರದಾಯಸ್ಥ ಗುಂಪುಗಳಿಂದ 1856ರಲ್ಲಿ ಜೀವದ ಮೇಲೆ ಹಲ್ಲೆಯ ಪ್ರಯತ್ನ ಕೂಡ ನಡೆಯಿತು. ಆದರೆ ಪುಲೆ ಹಾಗೂ ಅವರ ಪತ್ನಿ ಸಾವಿತ್ರಿ ಬಾಯಿಯವರು ಇದಕ್ಕೆಲ್ಲ ಎದೆಗುಂದಲಿಲ್ಲ. ಅದೇ ವರ್ಷ ತಮ್ಮ ಮನೆಯಲ್ಲಿನ ಕುಡಿಯುವ ನೀರಿನ ತೊಟ್ಟಿಯನ್ನು ಅಸ್ಪೃಶ್ಯರಿಗಾಗಿ ತೆರೆದುಕೊಟ್ಟರು. ಇದು ಆ ಕಾಲಕ್ಕಿರಲಿ ಈ ಕಾಲಕ್ಕೂ ಅತ್ಯಂತ ಕ್ರಾಂತಿಕಾರಿ ನಡೆಯೆನ್ನಬಹುದು. 1860ರಲ್ಲಿ ವಿಧವಾ ವಿವಾಹ ಆಂದೋಲನವನ್ನು ಹುಟ್ಟು ಹಾಕಿದರು. 24.9.1873ರಲ್ಲಿ ಸತ್ಯ ಶೋದಕ ಸಮಾಜವನ್ನು ಸ್ಥಾಪಿಸಿದರು. ಆ ಮೂಲಕ ಶೂದ್ರಾತಿಶೂದ್ರರನ್ನು ಅಕ್ಷರ ದಾಸೋಹದ ಮೂಲಕ ಕತ್ತೆಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಕಾರ್ಯಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. 1876 – 1882 ರ ಅವಧಿಯಲ್ಲಿ ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಸದಸ್ಯರಾಗಿದ್ದರು. ಆ ಕಾಲಘಟ್ಟದಲ್ಲಿ ಪಾನ ನಿಷೇಧದ ವಿರುದ್ಧ, ಬಾಲ್ಯ ವಿವಾಹದ ವಿರುದ್ಧ ಹೋರಾಡಿದ್ದರು. ಆ ಕಾಲದ ಇತರೇ ಸಮಾಜ ಸುಧಾರಣ ಆಂದೋಲನಗಳು ಮೇಲ್ಜಾತಿಯಲ್ಲಿನ ಕಂದಾಚಾರಗಳ ವಿರುದ್ಧ ಹೋರಾಡಿದರೆ ಜ್ಯೋತಿಬಾ ಪುಲೆಯವರು ಈ ಹೋರಾಟವನ್ನು ಕೆಳಜಾತಿಗಳ ಸಮಾಜೋದ್ಧಾರಕ್ಕೆ ವಿಸ್ತರಿಸಿದರು. Total inclusive policy ಯನ್ನು ಮೊಟ್ಟ ಮೊದಲ ಬಾರಿಗೆ ಚಿಂತಿಸಿದವರು ಜ್ಯೋತಿಬಾ ಪುಲೆಯವರು.

150 ವರ್ಷಗಳ ಹಿಂದೆ ಪುಲೆಯವರು ಇಲ್ಲಿನ ಜಾತೀಯತೆಯನ್ನು ವಿಶ್ಲೇಷಿಸುವಾಗ ಹಿಂದುತ್ವವಾದಕ್ಕಿಂತಲೂ “ಬ್ರಾಹ್ಮಣವಾದಕ್ಕೆ” ಹೆಚ್ಚು ಒತ್ತು ನೀಡುತ್ತಾರೆ. ಇವರ ಪ್ರಕಾರ ಹಿಂದುತ್ವವೆನ್ನುವುದು ವೇದಗಳು, ಮನುಸ್ಮೃತಿ ಎನ್ನುವ ಎರಡು ಕೃತಿಗಳಿಂದ, ಚಿಂತನೆಗಳಿಂದ ರೂಪುಗೊಂಡಿದೆ. ಈ ಕೃತಿಗಳು ಬ್ರಾಹ್ಮಣವಾದದಿಂದ ಬರೆಯಲ್ಪಟ್ಟವು. ಈ ಮೂಲಕ ತಮ್ಮ ಸಾರ್ವಭೌಮತ್ವವನ್ನು ಸಮಾಜದಲ್ಲಿ ಪ್ರತಿಷ್ಟಾಪಿಸಿದವು. ಬ್ರಾಹ್ಮಣಿಕೆಯ ಈ ಶ್ರೇಷ್ಟತೆಯ ಯಜಮಾನಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಪುಲೆಯವರು ಈ ಕೃತಿಗಳ ಏಕಸ್ವಾಮತೆಯನ್ನೂ ಕೂಡ ತಿರಸ್ಕರಿಸಿದರು. ಅಂದರೆ ಈ ಪುರೋಹಿತಶಾಹಿ ಕೃತಿಗಳನ್ನು ಪರಿಷ್ಕರಿಸಿ ಇವಕ್ಕೆ ಮಾನವೀಯತೆಯ ಸ್ಪರ್ಶ ನೀಡಬೇಕೆನ್ನುವ ಉದಾರವಾದದ ಚಿಂತನೆಯನ್ನೂ ಪುಲೆ ಪ್ರತಿಪಾದಿಸಲಿಲ್ಲ. ಬದಲಾಗಿ ಪುಲೆಯವರು ಪ್ರತಿಪಾದಿಸಿದ್ದು ಈ ಬ್ರಾಹ್ಮಣೀಕೃತ ಪ್ರೇರೇಪಿತ ಎಲ್ಲ ಶೈಕ್ಷಣಿಕ, ಸಾಮಾಜಿಕ ಪುಸ್ತಕಗಳನ್ನೂ ನಿಷೇದಿಸಬೇಕೆಂಬುದನ್ನು. ಪುಲೆಯವರು ಭಗವಂತನ ಅವತಾರಗಳ ಬಗೆಗಿನ ಸಿದ್ಧಾಂತಗಳನ್ನು ಕಟುವಾಗಿ ಟೀಕಿಸುತ್ತಾರೆ. ಶೂದ್ರಾತಿಶೂದ್ರ ನೆಲೆಗಟ್ಟಿನಲ್ಲಿ ಈ ಬ್ರಾಹ್ಮಣತ್ವ ಅಧಾರಿತ ಚರಿತ್ರೆಯನ್ನು ಅಲ್ಲಗೆಳೆಯುತ್ತಾ ಅದನ್ನು ತಿರಸ್ಕರಿಸಿ ಚರಿತ್ರೆಯನ್ನು ತಳಸಮುದಾಯಗಳ ಮೂಲಕ ಪುನರಚಿಸುವುದಕ್ಕೆ ಕರೆಕೊಡುತ್ತಾರೆ. ಇದಕ್ಕೆ ಸ್ವತಹ ತಾವೇ ಮುಂದು ನಿಂತು ಪ್ರಾಯೋಗತ್ಮಕವಾಗಿ ಚಾಲನೆ ನೀಡುತ್ತಾರೆ. ತಮ್ಮ ಚಿಂತನೆಗಳಲ್ಲಿ ಜಾತೀಯತೆಗಿಂತಲೂ ವರ್ಣಾಶ್ರಮತೆಗೆ ಪ್ರಾಧಾನತೆಯನ್ನು ನೀಡುತ್ತ ಆ ಮೂಲಕ Dichotomous Structure ಅನ್ನು ಸೃಷ್ಟಿಸುತ್ತಾ ಇಲ್ಲಿ ಬ್ರಾಹ್ಮಣತ್ವ ಹಾಗೂ ಶೂದ್ರಾತಿಶೂದ್ರರೆನ್ನುವ ಎರಡು ಧೃವಗಳ ಸಮಾಜದ ಪರಿಕಲ್ಪನೆಯನ್ನು ಬಳಸುತ್ತಾರೆ. ಹಿಂದೂ ಧರ್ಮದ ಉಸಿರುಗಟ್ಟುವ ವಾತಾವರಣದಿಂದ ಪಾರಾಗಲು ತಳಸಮುದಾಯದವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವುದನ್ನು ಪುಲೆ ಸಮರ್ಥಿಸುತ್ತಾರೆ. ಮತಾತಂರವೆನ್ನುವುದು ಮೂಲಭೂತ ಹಕ್ಕು ಎನ್ನುವುದನ್ನು ಮೊಟ್ಟಮೊದಲು ಪ್ರತಿಪಾದಿಸಿದವರು ಪುಲೆಯವರು. ಇಲ್ಲಿ ಅವರು ಕ್ರಿಶ್ಚಿಯಾನಿಟಿ ಧರ್ಮದ ಶ್ರೇಷ್ಟತೆಗಿಂತ ಹಿಂದೂ ಧರ್ಮದ ಅಸ್ಪೃಶ್ಯತೆಗೆ ಹೆಚ್ಚು ಒತ್ತು ನೀಡುತ್ತಾರೆ. ಚಿತ್ಪಾವಣ ಭ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಪಂಡಿತ ರಮಾಬಾಯಿಯವರು ಕ್ರ್ಶಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಈ ನೆಲೆಗಟ್ಟಿನಲ್ಲಿ ಸಮರ್ಥಿಸುತ್ತಾರೆ. ಅನೇಕ ಬಾರಿ ಪುಲೆಯವರ ಬ್ರಾಹ್ಮಣತ್ವದ ಕಟುಟೀಕೆ ಅವರ ಹಿಂಬಾಲಕರಿಗೂ, ಶಿಷ್ಯಂದಿರಿಗೂ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ತಮ್ಮ ಕಾಲದ ಇತರ ಸಮಾಜ ಸುಧಾಕರಿಗಿಂತ ಪುಲೆಯವರು ಭಿನ್ನವಾಗಿರುವುದಕ್ಕೆ ಕಾರಣ ಅವರು ಶೂದ್ರಾತಿಶೂದ್ರರ ಜೀವನೋದ್ಧಾರಕ್ಕಾಗಿ ಕ್ರಾಂತಿಕಾರಕ ಬದಲಾವಣೆಗಳ ಹರಿಕಾರರಾಗಿದ್ದರು.

1881 ಲಾರ್ಡ್ ರಿಪ್ಪನ್ ಎನ್ನುವ ವೈಸರಾಯ್ “ವಿಲಿಯನ್ ಹಂಟರ್” ನೇತೃತ್ವದಲ್ಲಿ Education commission ಒಂದನ್ನು ಸ್ಥಾಪಿಸುತ್ತಾರೆ. ಇದನ್ನು “ಹಂಟರ್ ಶಿಕ್ಷಣ ಸಮಿತಿ” ಎಂದು ಕರೆಯಲಾಗುತ್ತದೆ. ಇದಕ್ಕೆ ಜ್ಯೋತಿಬಾ ಪುಲೆಯವರನ್ನು ತಮ್ಮ ಚಿಂತನೆಗಳನ್ನು, ಸಂಶೋಧನೆಗಳನ್ನು ಮಂಡಿಸಲು ಕೋರಲಾಯಿತು. ಈ ಕಮಿಷನ್ ಮುಂದೆ ಪುಲೆಯವರು ಮಂಡಿಸಿದ ಅತ್ಯಂತ ವಿಚಾರಪೂರ್ಣ ಹಾಗೂ ಕ್ರಾಂತಿಕಾರಿ ನಿಲುವುಗಳನ್ನು, ಚಿಂತನೆಗಳನ್ನು ಹಂಟರ್ ಒಪ್ಪಲಿಲ್ಲ. ಅಲ್ಲದೆ ಇದನ್ನು ತಮ್ಮ ಕಮಿಷನ್‌ನಲ್ಲಿ ಸೇರಿಸಲಿಲ್ಲ. ಇದರಲ್ಲಿ ಆಶ್ಚರ್ಯವೇನಿರಲಿಲ್ಲ. ಏಕೆಂದರೆ 130 ವರ್ಷಗಳ ಹಿಂದೆ ಶಿಕ್ಷಣದ ಸುಧಾರಣೆಗಾಗಿ ಕೇವಲ ಉದಾರವಾದದ, ಮನ ಪರಿವರ್ತನೆಯ ತಿರುಳನ್ನು ನೆಚ್ಚದೆ ಅಮೂಲಾಗ್ರ ಬದಲಾವಣೆಯನ್ನು ಪ್ರತಿಪಾದಿಸಿದ ಪುಲೆಯವರ ಆದರ್ಶಗಳು ಅಂದಿನ ಬ್ರಿಟಿಷ್ ಸರ್ಕಾರಕ್ಕಾಗಲಿ, ಹಂಟರ್‌ಗಾಗಲಿ ಅರ್ಥವಾಗಿವುರುವ ಸಾಧ್ಯತೆಗಳೇ ಕಡಿಮೆ. ಇದರಿಂದ ಬೇಸತ್ತ ಪುಲೆಯವರು ಈ ಹಂಟರ್ ಕಮಿಷನ್ ಒಂದು ವ್ಯರ್ಥ ಕಾಲಹರಣವೆಂದು ಕಿಡಿಕಾರಿದ್ದರು. ಇವು ಪ್ರಾಥಮಿಕ ಶಿಕ್ಷಣದ ನೀತಿಗಾಗಿ ಪುಲೆಯವರು ಪ್ರತಿಪಾದಿಸಿದ, ಚಿಂತಿಸಿದ, ಇದನ್ನು ತಾವು ನಡೆಸುವ ಶಾಲೆಗಳಲ್ಲಿ ಯಸಸ್ವಿಯಾಗಿ ಜಾರಿಗೆ ತಂದ, ಮತ್ತು ಹಂಟರ್ ಕಮಿಷನ್ ಮುಂದಿಟ್ಟಂತಹ ಪ್ರಮುಖ ವಿಚಾರಗಳು . (1880 ರಲ್ಲಿ)

  1. 1. ಇಂದಿನ ಶಿಕ್ಷಣ ( 1880 ರಲ್ಲಿ ) ಇಲಾಖೆಯು ಬ್ರಾಹ್ಮಣರ, ಇಂಗ್ಲೀಷರ ಅಧಿಪತ್ಯದಲ್ಲಿದೆ. ಇಲ್ಲಿ ಕೆಳಜಾತಿಯ ಮಕ್ಕಳಿಗೆ ಪ್ರವೇಶವೇ ಇಲ್ಲ. ಆದರೆ ಬ್ರಿಟಿಷ ಸರ್ಕಾರದ ಆದಾಯದ ಮೂಲ ಇರುವುದು ರೈತರಿಂದ, ಕೂಲಿಕಾರರ ಬೆವರಿನ ದುಡಿಮೆಯಿಂದ. ಮೇಲ್ವರ್ಗಗಳ ಸಮಾಜದಿಂದ ಸರ್ಕಾರದ ಆದಾಯಕ್ಕೆ ಬರುತ್ತಿರುವ ಕಾಣಿಕೆ ಅತ್ಯಲ್ಪ. ಇದು ಅತ್ಯಂತ ನಾಚಿಕೆಗೇಡಿನ ವಿಷಯ. ಶಿಕ್ಷಣವನ್ನು ಇಂದಿನ ಅಧೋಗತಿಗೆ ಇಳಿಸಿದ್ದಕ್ಕೆ ಸರ್ಕಾರವನ್ನೇ ದೂರಬೇಕು. ಈ ದೇಶದ ಬಹುಸಂಖ್ಯಾತ ಶೂದ್ರರ ಹಾಗೂ ಅತಿ ಹಿಂದುಳಿದವರನ್ನು ಸರ್ಕಾರವೇ ತನ್ನ ತೆಕ್ಕೆಯೊಳಗೆ ತೆಗೆದುಕೊಂಡು ಅವರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿ ಇಡೀ ಶಿಕ್ಷಣ ಇಲಾಖೆಯನ್ನು ಬ್ರಾಹ್ಮಣರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಬೇಕು.
  2. ಹಿಂದೆಂದಿಗಿಂತಲೂ ಈಗ ಪ್ರಾಥಮಿಕ ಶಾಲೆಗಳು ಹೆಚ್ಚಿವೆ. ಆದರೆ ಅವು ಬಹು ಸಂಖ್ಯಾತರನ್ನು ಒಳಗೊಂಡಿಲ್ಲ. ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚುವರಿ CESS ಅನ್ನು ಪಡೆಯುತ್ತದೆ. ಆದರೆ ಬಹುಸಂಖ್ಯಾತರ ಶಿಕ್ಷಣಕ್ಕಾಗಿ ಯಾವುದೇ ಖರ್ಚನ್ನು ಮಾಡುತ್ತಿಲ್ಲ. ಇಲ್ಲಿನ ಪ್ರಾಂತದಲ್ಲಿ ಸುಮಾರು ಹತ್ತು ಲಕ್ಷದಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಇವರೆಲ್ಲ ಸರ್ಕಾರದ ಮೇಲೆ ಅವಲಂಬಿತರು. ಆದರೆ ಸರ್ಕಾರ ಇವರ ಬಗ್ಗೆ ಕುರುಡಾಗಿ ವರ್ತಿಸುತ್ತಿದೆ. ನನ್ನ ಪ್ರಕಾರ ಬಹುಸಂಖ್ಯಾತ ಜಾತಿಯ ಮಕ್ಕಳಿಗೆ 12 ನೇ ವರ್ಷದವರೆಗೂ ಪ್ರಾಥಮಿಕ ಶಿಕ್ಷಣವನ್ನು ಕಡ್ದಾಯಗೊಳಿಸಬೇಕು .ಅದೂ ಉಚಿತವಾಗಿ. ಹಳ್ಳಿಗಳಲ್ಲಿ ಬಡತನದಿಂದಾಗಿ ಮಕ್ಕಳು ಶಾಲೆಗೆ ಬರುತ್ತಿಲ್ಲ. ಬಹುಪಾಲು ಮಕ್ಕಳು ಒಕ್ಕಲುತನ, ಕೂಲಿಕೆಲಸಕ್ಕೆ, ದನಕಾಯುವುದಕ್ಕೆ ಹೋಗುತ್ತಾರೆ. ಇವರನ್ನು ಶಾಲೆಗೆ ಕರೆತರಲು ಸರ್ಕಾರ ಸ್ಕಾಲರ್‌ಷಿಪ್ ಯೋಜನೆಯನ್ನು ಜಾರಿಗೆ ತರಬೇಕು. ಚುರುಕಾಗಿ ಓದುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಬಹುಮಾನಗಳನ್ನು ಕೊಡಬೇಕು. ಇದು ಆ ಮಕ್ಕಳಿಗೆ ಓದನ್ನು ಮುಂದುವರೆಸಲು ಉತ್ತೇಜನ ಸಿಗುತ್ತದೆ. ಆದರೆ ನಮ್ಮ ದೇಶದಲ್ಲಿ ಜಾತಿ ಕಾರಣಕ್ಕಾಗಿ ಮುಮರು, ಮಹರ್, ಮಾಂಗ್ ಜಾತಿಗೆ ಸೇರಿದ ಅಸ್ಪೃಶ್ಯರನ್ನು ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ಮೇಲ್ಜಾತಿ ಮಕ್ಕಳ ಜೊತೆಗೆ ಕೂರಿಸುತ್ತಿಲ್ಲ. ಅಲ್ಲದೆ ಮೇಲ್ಜಾತಿಯ ಶಿಕ್ಷಕರು ಈ ಅಸ್ಪೃಶ್ಯ ಮಕ್ಕಳನ್ನು ಮುಟ್ಟುತ್ತಿಲ್ಲ. ಅಲ್ಲದೆ ಈ ಮಕ್ಕಳನ್ನು ಬೋಧನೇತರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಹೀಗಾಗಿ ಸರ್ಕಾರ ತುರ್ತಾಗಿ ಅಸ್ಪೃಶ್ಯ ಮಕ್ಕಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕು.
  3. ಶಿಕ್ಷಕರ ಸಂಬಳವನ್ನು ಈಗಿನ ರೂಪಾಯಿ 10ರಿಂದ ರೂಪಾಯಿ 12ಕ್ಕೆ ಹಾಗೂ ರೂಪಾಯಿ 15ಕ್ಕೆ ಏರಿಸಬೇಕು. ಶಿಕ್ಷಕರನ್ನು ಆರಿಸುವಾಗಲೂ ರೈತರ, ಕೂಲಿಕಾರ್ಮಿಕರ ವಲಯದಿಂದ ಆರಿಸಬೇಕು. ಆಗ ಶಿಕ್ಷಕರು ಎಲ್ಲಾ ಜಾತಿಯ ಮಕ್ಕಳೊಂದಿಗೆ ಬೆರೆಯುತ್ತಾರೆ ಅಲ್ಲದೆ ಬಹುಸಂಖ್ಯಾತ ಮಕ್ಕಳ ಮೂಲಭೂತ ಅವಶ್ಯಕತೆಗಳನ್ನು ಅರಿತವರಾಗಿರುತ್ತಾರೆ ಹಾಗೂ ಈ ಅವಶ್ಯಕತೆಗಳಿಗೆ ತುರ್ತಾಗಿ ಸ್ಪಂದಿಸುತ್ತಾರೆ. ಆದರೆ ಬ್ರಾಹ್ಮಣ ಶಿಕ್ಷಕರು ಹಾಗಲ್ಲ. ಇವರು ಮಕ್ಕಳನ್ನು ಮುಟ್ಟುವುದೂ ಇಲ್ಲ.
  4. ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣದ ಜೊತೆಗೆ ವ್ಯವಸಾಯ, ನೈರ್ಮಲೀಕರಣದ ಬಗೆಗೆ ಪ್ರಾಥಮಿಕ ಅಂಶಗಳನ್ನು ಅಳವಡಿಸಬೇಕು. ಈ ಶಿಕ್ಷಕರನ್ನು ಗ್ರಾಮದ ಗ್ರಾಮ ಲೆಕ್ಕಿಗರ ಜೊತೆಗೆ, ತಹಶೀಲ್ದಾರರ ಜೊತೆಗೆ, ಪೋಸ್ಟ್ ಮಾಸ್ಟರ್ ಜೊತೆಗೆ ದಿನದ ಕೆಲಕಾಲ ಬೆರೆಯುವಂತೆ ಮಾಡಬೇಕು. ಈ ಮೂಲಕ ಶಿಕ್ಷಕರಿಗೆ ಸಮಾಜದ ಇತರೇ ಸ್ತರಗಳ ಬಗೆಗೆ ಜ್ಞಾನ ಪ್ರಾಪ್ತವಾಗುತ್ತದೆ ಹಾಗೂ ಆ ಗ್ರಾಮದಲ್ಲಿ ಒಂದು ಬಗೆಯ ಅಧಿಕಾರವೂ ದೊರೆಯುತ್ತದೆ. ಉತ್ತಮ ಫಲಿತಾಂಶಗಳನ್ನು ತಂದಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆ ಬಹುಮಾನಗಳನ್ನು, ಅವರ ಸಂಬಳದಲ್ಲಿ ಉತ್ತಮ ಏರಿಕೆಯನ್ನು ಕೊಡಬೇಕು. ಇದು ಅವರಿಗೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬೋಧಿಸಲು ಉತ್ತೇಜನ ದೊರೆಯುತ್ತದೆ.
  5. ಮಕ್ಕಳು ಪಠ್ಯಪುಸ್ತಕಗಳನ್ನು ಓದುವುದರ ಜೊತೆಜೊತೆಗೆ ಬಾಲಭೋದಿ, ಮಾತೃಭಾಷೆ, accounts, grammar, ಭೂಗೋಳ, ಇತಿಹಾಸ, ವ್ಯವಸಾಯ, ನೀತಿ ತತ್ವದ ಪಾಠಗಳು, ನೈರ್ಮಲೀಕರಣಗಳನ್ನು ಬೋಧಿಸಬೇಕು. ದ್ವಿಭಾಷಾ ಮಾಧ್ಯಮ ( ಮಾತೃಭಾಷೆ, ಇಂಗ್ಲೀಷ್) ವನ್ನು ಜಾರಿಗೆ ತರಬೇಕು.
  6. ಶಿಕ್ಷಣಾಧಿಕಾರಿಗಳು ಈಗಿನ ಸಂಪ್ರದಾಯದಂತೆ ವರ್ಷಕ್ಕೊಮ್ಮೆ ಶಾಲೆಗೆ ಭೇಟಿ ಕೊಡುವುದನ್ನು ಬದಲಿಸಿ ಮೂರು ತಿಂಗಳಿಗೊಮ್ಮೆ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ಗುಣ ಮಟ್ಟವನ್ನು, ಸೌಲಭ್ಯಗಳನ್ನು ಪರಿಶೀಲಿಸಬೇಕು. ಈ ಶಿಕ್ಷಣಾಧಿಕಾರಿಗಳು ಶಾಲಾ ವೇಳೆಯ ಹೊರತಾಗಿಯೂ ಬೇರೆ ವೇಳೆಯಲ್ಲಿ ಭೇಟಿ ಕೊಟ್ಟು ಪಠ್ಯೇತರ ಚಟುವಟಿಕೆಗಳನ್ನೂ ಪರಿಶೀಲಿಸಬೇಕು. ಶಿಕ್ಷಕರ ಹಾಗೂ ಬಡ ವಿದ್ಯಾರ್ಥಿಗಳ ವಸತಿ ಸೌಕರ್ಯ, ಓದಲಿಕ್ಕೆ ಅನುಕೂಲಕರವಾದ ನೈರ್ಮಲೀಕರಣದ ವ್ಯವಸ್ಥೆ ಕೂಡ ಶಿಕ್ಷಣಾಧಿಕಾರಿಗಳಿಗೆ ವಹಿಸಬೇಕು. ಇದರಿಂದ ಅವರ ಜವಾಬ್ದಾರಿಯ ವ್ಯಾಪ್ತಿ ಹೆಚ್ಚಾಗುತ್ತದೆ.
  7.  ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರಾಥಮಿಕ ಶಿಕ್ಷಣಕ್ಕಾಗಿ ಗ್ರಾಮದ, ಮುನ್ಸಿಪಾಲಿಟಿಯ ಆದಾಯದ ಅರ್ಧದಷ್ಟು ಹಣವನ್ನು ಮೀಸಲಿಡಬೇಕು. ಮುನ್ಸಿಪಾಲಿಟಿ ವ್ಯಾಪ್ತಿಯೊಳಗೆ ಬರುವ ಪಟ್ಟಣಗಳಲ್ಲಿ Grant in aid ಪದ್ಧತಿಯನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಕ್ಕೆ ನೀಡಬೇಕು.
  8.  ಕನಿಷ್ಠ ಆರನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಮಾಡಿದವರನ್ನು, ಕಾಲೇಜು ವಿದ್ಯಾಭ್ಯಾಸ ಮಾಡಿದವರನ್ನು ಶಿಕ್ಷಕರಾಗಿ ಆರಿಸಬೇಕು. ಬೇಕಿದ್ದರೆ ಸಮಾಜದ ವಿವಿಧ ಇಲಾಖೆಗಳಿಂದಲೂ ಸಮರ್ಥರನ್ನು ಶಿಕ್ಷಕರಾಗಿ ಪ್ರಯೋಗಾತ್ಮಕವಾಗಿ ಆರಿಸಬೇಕು.

ಇವು ಜ್ಯೋತಿಬಾ ಪುಲೆಯವರು ಶಿಕ್ಷಣದ ಹಾಗೂ ಸಮಾಜದ ಉನ್ನತೀಕರಣಕ್ಕಾಗಿ ಚಿಂತಿಸಿದ ಕೆಲವು ಪ್ರಮುಖ ಅಂಶಗಳು. ಮೇಲ್ಕಾಣಿಸಿದ ಪುಸ್ತಕದಿಂದ ಸಂಗ್ರಹವಾಗಿ ಆರಿಸಿದ್ದು. ಇದನ್ನು ಅವರು 130 ವರ್ಷಗಳಷ್ಟು ಹಿಂದೆಯೇ ಪ್ರತಿಪಾದಿಸಿದ್ದರು. ಇಂದಿನ ವ್ಯವಸ್ಥೆಯಲ್ಲಿ, ಶಿಕ್ಷಣದ ವ್ಯವಸ್ಥೆಯಲ್ಲಿ ಪುಲೆಯವರು ಹೇಳಿದ ಬಹುಪಾಲು ವಿಚಾರಗಳು ದೈಹಿಕವಾಗಿ ಅಂದರೆ ಬಾಹ್ಯವಾಗಿ ಅನುಷ್ಟಾನಗೊಂಡರೂ ಮಾನಸಿಕವಾಗಿ ಇಂದಿಗೂ 130 ವರ್ಷಗಳಷ್ಟು ಹಿಂದೆ ಇದೆ. ಅಸ್ಪೃಶ್ಯತೆ ಈಗಲೂ ಚಾಲ್ತಿಯಲ್ಲಿದೆ. ಈಗಲೂ ಹಳ್ಳಿಗಾಡಿನ ಬಡಮಕ್ಕಳು ತಮ್ಮ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುತ್ತಾರೆ. ಈಗಲೂ ಶಿಕ್ಷಕರ ಗುಣಮಟ್ಟ ಮೇಲೇರಿಲ್ಲ. ಅವರ ತರಬೇತಿಯ ಪರಿಕರಗಳೂ, ಹಾಗೂ ಅದರ content ಇಂದಿಗೂ ಓಬಿರಾಯನ ಕಾಲದ್ದಾಗಿದೆ. ಹಾಗೆಯೇ ನೌಕರಶಾಹಿ ಸಹ. ಇನ್ನು ರಾಜಕಾರಣಿಗಳ ಬಗ್ಗೆ ಹೇಳುವುದಕ್ಕೆ ಏನೂ ಉಳಿದಿಲ್ಲ. 150 ವರ್ಷಗಳ ಹಿಂದೆಯೇ ಪುಲೆಯವರು ಇದನ್ನು ಮನಗಂಡೇ ಉದಾರವಾದದ ನೀತಿಯನ್ನು ತಿರಸ್ಕರಿಸಿ ಅಮೂಲಾಗ್ರ ಬದಲಾವಣೆಗಳನ್ನು ಅನುಷ್ಟಾನಗೊಳಿಸಲು ತೀವ್ರವಾಗಿ ಕಾರ್ಯತತ್ಪರರಾಗಿದ್ದರು. ಆದರೆ ಇಂದು ಕೂಡ ನಾವೆಲ್ಲ ಚಿಂತಿಸುತ್ತಿರುವುದು ಸುಧಾರಣಾವಾದದ ನೆಲೆಗಟ್ಟಿನಲ್ಲಿ. ಇದು ದುರಂತವಲ್ಲದೆ ಮತ್ತಿನ್ನೇನು. ನಾವು ಕೇವಲ ಅಕಡೆಮಿಕ್ ಚೌಕಟ್ಟನ್ನು ಮೀರಿ ಹೊರಬಂದು ವಾಸ್ತವಕ್ಕೆ ಮುಖಾಮುಖಿಯಾದರೆ ಮಾತ್ರ ಏನಾದರೂ ಬದಲಾವಣೆ ಗೋಚರಿಸಲು ಸಾಧ್ಯ. ಚಿಂತನೆಗಳನ್ನು ಕೇವಲ ಬೋಧನೆಗಳ ಮಟ್ಟಕ್ಕೆ, ಸೆಮಿನಾರ್‌ಗಳ ಮಟ್ಟಕ್ಕೆ ನಿಲ್ಲಿಸದೆ ಸ್ವತಹ ಸಮಾಜದಲ್ಲಿ ಅವನ್ನು ಪ್ರಯೋಗಕ್ಕೆ ಅಳಪಡಿಸಿದಾಗ ಅವುಗಳ ಪ್ರಭಾವ, ಮಿತಿಗಳು ಗೋಚರಿಸುತ್ತವೆ. ಇದನ್ನು ಪುಲೆಯವರು 150 ವರ್ಷಗಳ ಹಿಂದೆ ಸ್ವತಹ ತಾವೇ ಮಾಡಿ ತೋರಿಸಿದ್ದರು. ನಾವೂ ಕೂಡ ಇದನ್ನೇ ಅನುಸರಿದೆ ಬೇರೆ ದಾರಿಯೇ ಇಲ್ಲ. ಏಕೆಂದರೆ ಅಂಬೇಡ್ಕರ್ ಸಹ ಅನುಸರಿಸಿದ್ದು ಪುಲೆ ಮಾದರಿಯನ್ನೇ. ಆದರೆ ಇಂದು ಜಾತೀಯತೆ, ಅಸ್ಪೃಶ್ಯತೆ ಎನ್ನುವುದು ಕೇವಲ ಬ್ರಾಹ್ಮಣತ್ವದ ಕೈಯಲ್ಲಿ ಉಳಿದಿಲ್ಲ. ಇಂದು ಮಧ್ಯಮ ಶೂದ್ರ ಜಾತಿಗಳೂ ಕೂಡ ತಮ್ಮ ಜಾತೀಯತೆಗಳ ಕರಾಳ ಸ್ವರೂಪಗಳನ್ನು, ಅತ್ಯಾಚಾರಗಳನ್ನು ಅತ್ಯಂತ ಅಮಾನವೀಯವಾಗಿ ವ್ಯವಸ್ಥೆಯಲ್ಲಿ ಜಾರಿಗೊಳಿಸುತ್ತಿದ್ದಾರೆ.

ಇದೆಲ್ಲರ ಪ್ರತಿರೂಪವನ್ನು, ಶೂದ್ರ ಜಾತಿಗಳ ದಬ್ಬಾಳಿಕೆಗಳ ವಿರುದ್ಧವಾಗಿ ದಲಿತರು ಬ್ರಾಹ್ಮಣರೊಂದಿಗೆ ಧೃವೀಕರಣಗೊಳ್ಳುತ್ತಿರುವುದನ್ನು ಇಂದಿನ ಉತ್ತರ ಪ್ರದೇಶದ ಚುನಾವಣಾ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಈ ಅಸಂಗತ ಜೋಡಿಯ ಸಾಧ್ಯತೆಗಳನ್ನು ಕಾನ್ಸೀರಾಮ್ ಅವರು ತೊಂಬತ್ತರ ದಶಕದಲ್ಲಿ ಚಾಲ್ತಿಗೆ ತಂದರು. 2004 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮಾಯಾವತಿ ಅದನ್ನು ಯಶಸ್ವಿಯಾಗಿ ಪ್ರಯೋಗಿಸಿ ಅಧಿಕಾರವನ್ನೂ ಪಡೆದರು. ಈ ಬಾರಿ ಇದರ ಭವಿಷ್ಯವನ್ನು ಚುನಾವಣ ಫಲಿತಾಂಶಗಳೇ ನಿರ್ಧರಿಸುತ್ತವೆ. ಆದರೆ ಈ ದ್ವಿಜ ಹಾಗೂ ದಲಿತ ಹೊಂದಾಣಿಕೆ ಸಹ ಕೇವಲ ವ್ಯಾವಹಾರಿಕ, ಅಧಿಕಾರ ಗ್ರಹಣಕ್ಕೆ ಮಾತ್ರ ಸಂಬಂಧಪಟ್ಟಿದೆ. ಶತ್ರುವಿನ ಶತ್ರು ನಮ್ಮ ಮಿತ್ರ ಎನ್ನುವ ಹಳೇ ಗಾದೆ ಮಾತಿನ ತತ್ವದಡಿ ಈ ಕೂಡುವಿಕೆ ಜಾರಿಗೊಂಡಿದೆ. ಕಡೆಗೂ ಬಲಿಪಶುಗಳು ತಳಸಮುದಾಯಗಳೇ. ಪುಲೆ ಶೂದ್ರಾತಿಶೂದ್ರರ ಬಗ್ಗೆ ಮಾತನಾಡಿದಾಗಲೂ ಅವರು ಇಂದಿನ ಪರಿಸ್ಥಿಯನ್ನು 150 ವರ್ಷಗಳ ಹಿಂದೆ ಕಲ್ಪಿಸಿರಲೂ ಇಲ್ಲ. ಇದರ ಪರಿಕಲ್ಪನೆ ಕೂಡ ಬಹುಶ ಅವರಿಗೆ ಇರಲಾರದು.

ತೀವ್ರವಾದ ಬದಲಾವಣೆಯ ಹರಿಕಾರರಾಗಿದ್ದ, ಬ್ರಾಹ್ಮಣೀಕರಣದ ಕಟು ವಿರೋಧಿಯಾಗಿದ್ದ, ಆದರೆ ಭಕ್ತಿ ಪಂಥದಿಂದ ಪ್ರಭಾವಗೊಂಡಿದ್ದ, ಚರ್ಚೆಗಳ, ಸಿದ್ಧಾಂತಗಳ ಗಂಗೋತ್ರಿಯಾಗಿದ್ದ, ಹತ್ತೊಂಬತ್ತನೇ ಶತಮಾನದ ಬಲು ದೊಡ್ಡ ಸಮಾಜ ಸುಧಾರಕ ಜ್ಯೋತಿಬಾ ಪುಲೆಯವರು.

ಒಂದು ಕೆಂಪು ಸಂಜೆ

“ಒಂದು ಕೆಂಪು ಸಂಜೆ”

ಕಿಶೋರಿ ಚರಣ್ ದಾಸ
ಅನುವಾದ: ಬಿ. ಶ್ರೀಪಾದ್ ಭಟ್

[ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದ ಕಿಶೋರಿ ಚರಣ್ ದಾಸ ಒರಿಯಾದಲ್ಲಿ ನವ್ಯ ಲೇಖಕರೆಂದೇ ಪ್ರಸಿದ್ದಿಯಾಗಿದ್ದರು. ಅವರ ಕತೆಗಳು ನವ್ಯದ ಅಭಿವ್ಯಕ್ತಿಯನ್ನು ಮೈಗೂಡಿಸಿಕೊಂಡಿದ್ದರೂ ಅವರ ಕತೆಗಳ ಹೂರಣ, ಗ್ರಹಿಕೆಗಳು ಮಾತ್ರ ಸಾಮಾಜಿಕತೆಯನ್ನು, ಅದರ ಅಸಹಾಯಕತೆಯನ್ನು, ತಳಮಳವನ್ನೂ ಒಳಗೊಂಡಿತ್ತು. ನಾನು ಇಲ್ಲಿ ಅನುವಾದಿಸಿದ 1970 ರಲ್ಲಿ ಬರೆದ  “ಒಂದು ಕೆಂಪು ಸಂಜೆ”  ಕಥೆ ಮಧ್ಯಮ, ಮೇಲ್ಮಧ್ಯಮ ವರ್ಗಗಳ ಸ್ವಾರ್ಥ, ಆತ್ಮವಂಚನೆಯ ಮನೋಭಾವನೆಯನ್ನು ಬಯಲಾಗಿಸುತ್ತದೆ. 42 ವರ್ಷಗಳ ನಂತರವೂ ಈ ಕಥೆ ತನ್ನ ಅನನ್ಯತೆಯಿಂದ ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಇದಕ್ಕಾಗಿಯೇ ಇದನ್ನು ಮರು ಓದಿದಾಗ ಅನುವಾದಿಸಬೇಕೆನಿಸಿತು. – ಬಿ. ಶ್ರೀಪಾದ್ ಭಟ್]


“ದಯವಿಟ್ಟು ನನಗಾಗಿ ಕಾಯುತ್ತೀಯ ತಾನೆ?”
“ಖಂಡಿತ, ನಿಧಾನವಾಗಿ ಬಾ. ಅವಸರವೇನಿಲ್ಲ”

ಮತ್ತೇನಿಲ್ಲ, ನನ್ನ ಬಲಗಾಲಿನ ಶೂ ಒಳಗೆ ಮೊಳೆಯೋ, ಕಲ್ಲೋ ಸಿಕ್ಕಿಕೊಂಡು ನನ್ನ ಕಾಲಿನ ಹೆಬ್ಬೆರಳನ್ನು ಒತ್ತುತ್ತಿದೆ. ಅದನ್ನು ವಿವರವಾಗಿ ನೋಡಲೂ ನನಗೆ ವ್ಯವಧಾನವಿಲ್ಲ. ನಾನು ಸದ್ಯಕ್ಕೆ ದತ್ತ ಅವರನ್ನು ಕೂಡಿಕೊಳ್ಳಬೇಕು. ಅವರು ಪರವಾಗಿಲ್ಲ ನಿಧಾನಕ್ಕೆ ಬನ್ನಿ ಎನ್ನುತ್ತಿದ್ದರೂ ನನಗಾಗಿ ಕಾಯದೆ ತಾವು ಮಾತ್ರ ದಾಪುಗಾಲಲ್ಲಿ ಅತ್ಯಂತ ವೇಗವಾಗಿ ನಡೆಯುತ್ತಿದ್ದರು. ನಾನು ಅವರನ್ನು ನನ್ನ ದೃಷ್ಟಿಯಳತೆಯಲ್ಲಿ ಇರಿಸಿಕೊಂಡು ನನ್ನಿಂದ ಕಣ್ಮರೆಯಾಗದಂತೆ ಆಗಾಗ ಅವರನ್ನು ಕೂಗಿ ಕರೆಯುತ್ತಾ ನನ್ನ ಕಣ್ಣಳತೆಯಲ್ಲೇ ಇರುವಂತೆ ನೋಡಿಕೊಳ್ಳುತ್ತಿದ್ದೆ. ನಾನು ಅವರ ಹತ್ತಿರ ಹೋದಾಗಲೆಲ್ಲ ಅತ್ಯಂತ ನಿರ್ಭಾವುಕದಿಂದ ನನ್ನೆಡೆ ನೋಡುತ್ತಾ, “ನನ್ನನ್ನು ಕ್ಷಮಿಸಿ. ನನ್ನ ಕಾರನ್ನು ಆ ಬದಿಯ ಮೂಲೆಯ, ಡ್ರೈ ಕ್ಲೀನರ್ ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ್ದೇನೆ. ನಾವು  ಅಲ್ಲಿಗೆ ತಲುಪಬೇಕಾಗಿದೆ’  ಎಂದು ಹೇಳಿದರು. ಅದರಲ್ಲಿ ನನಗೆ ನನ್ನ ನಡಿಗೆಯನ್ನು ತೀವ್ರಗೊಳಿಸಲು ಸೂಚನೆಯಿತ್ತು.

ನಾನು ಅವನ ಯಾವುದೇ ರೀತಿಯ ತೋರಿಕೆಯ ಸಭ್ಯ ನಡುವಳಿಕೆಗಳಿಗೆ ಅಷ್ಟೊಂದು ಗಮನ ಕೊಡಲಿಲ್ಲ. ಏಕೆಂದರೆ ಇವನೂ ಕೂಡ ತನ್ನ ಈ ವರ್ಗಗಳ ಜನರಂತೆಯೇ ಎಂದು ನನಗೆ ಗೊತ್ತಿತ್ತು. ನಾನು ಅವನನ್ನು ಹಿಂಬಾಲಿಸುತ್ತಿರುವುದಕ್ಕೆ ಮೂಲಭೂತ ಕಾರಣ ಈ ದತ್ತ ಎನ್ನುವವನು ಈ ಕ್ರಾಂತಿಕಾರಿ ನಗರ ಕಲ್ಕತ್ತಕ್ಕೆ ಸೇರಿದವನಾಗಿದ್ದಕ್ಕಾಗಿ ಹಾಗೂ ಇಲ್ಲಿಗೆ ನಾನು ಹೊಸಬನಾಗಿದ್ದಕ್ಕಾಗಿ. ಇವನ ಈ ಕಲ್ಕತ್ತ ನಗರದೊಂದಿಗಿನ ಚಿರಪರಿಚತೆಯೇ ನನಗೆ ತನ್ನಿಷ್ಟ ಬಂದಂತೆ ಮಾರ್ಗದರ್ಶನ ಮಾಡುವ ಅರ್ಹತೆಯನ್ನು ದೊರಕಿಸಿತ್ತು. ಆದರೆ ಇವೆಲ್ಲದರ ಮಧ್ಯೆ ನನ್ನ ಬಲಗಾಲಿನ ಶೂ ನನಗೆ ತೊಂದರೆ ಕೊಡುತ್ತಲೇ ಇತ್ತು. ನಗರದ ಅಂಗಡಿ, ಮುಂಗಟ್ಟುಗಳು ತಮ್ಮ ದೈನಂದಿನ ವ್ಯವಹಾರವನ್ನು ಮಾಡದೆ ಮುಚ್ಚಿದ್ದವು. ಇದು ಒಂದು ಸಣ್ಣ ಕ್ರಾಂತಿಗಾಗಿ ತೆರಬೇಕಾದ ಬೆಲೆಯೇನೊ. ಆದರೆ ಇದೇ ಕಾರಣಕ್ಕಾಗಿ ಬೀದಿ ಬದಿಯ ಸಣ್ಣ ಸಣ್ಣ ವಸ್ತುಗಳನ್ನು ವ್ಯಾಪಾರ ಮಾಡುವ ಬಡವರು ಕೂಡ ಈ ಸಣ್ಣ ಕ್ರಾಂತಿಗಾಗಿ ಅಲ್ಲಿಂದ ಕಣ್ಮರೆಯಾಗಿದ್ದು ಮಾತ್ರ ನನ್ನಲ್ಲಿ ಆಕ್ರೋಶವನ್ನುಂಟು ಮಾಡಿತ್ತು. ಆದರೆ ಆ ಗಲಭೆಪೀಡಿತ ರಸ್ತೆಯ ಮಧ್ಯದಲ್ಲಿ ಕೇವಲ ಒಂದು ಬೀದಿ ನಾಯಿ ಮಾತ್ರ ಸ್ವಾತಂತ್ರದ್ಯೋತಕವಾಗಿ ಬಾಲವನ್ನು ಅಲ್ಲಾಡಿಸುತ್ತಾ ನಿಂತಿತ್ತು. ಸಹಜವಾಗಿಯೇ ಈ ಪ್ರಮುಖ ನಗರದಲ್ಲಿ ಮನುಷ್ಯರಿಗೆ ಬದುಕುವ ಹಕ್ಕನ್ನು ಕಲ್ಪಿಸಲಾಗಿತ್ತು. ಆದರೆ ಅವರು ನಿಜವಾದ ಅರ್ಥದಲ್ಲಿ ಬದುಕಿದ್ದರೇ?  ಅಲ್ಲಿ ಬೀದಿ ದೀಪಕಂಬದ ಹಿಂದೆ ಕಾಣಿಸುತ್ತಿರುವ ಮನುಷ್ಯನಾರು? ಅವನು ತನ್ನ ಕಳಚಿಬೀಳುತ್ತಿರುವ ಲುಂಗಿಯನ್ನು ಮರೆತು ಕೈಯ್ಯಲ್ಲಿ ಕಲ್ಲನ್ನು ಹಿಡಿದು ನಿಂತಿದ್ದಾನೆಯೇ? ಆ ತರಹ ಕಾಣಿಸುತ್ತಿದೆ?  ಅಂದರೆ ಈ ನಿರ್ಜನ ನಗರ ಒಂದು ದೊಡ್ಡ ಕ್ರಾಂತಿಗಾಗಿ ತಯಾರಾಗುತ್ತಿರುವುದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿ ಹೋಯ್ತು. ಇಲ್ಲಿ ಕಳಚಿ ಬೀಳುತ್ತಿರುವ ಲುಂಗಿಯುಟ್ಟ ಒಬ್ಬ ವ್ಯಕ್ತಿ, ಅಲ್ಲಿ ಮೊಣಕಾಲು ಮಟ್ಟಕ್ಕೆ ಧೋತಿಯುಟ್ಟ ವ್ಯಕ್ತಿ ದಾಳಿ ನಡೆಸಲು ತಯಾರಾಗಿದ್ದರು. ಅವರು ಶೋಷಕರ ಪ್ರತಿನಿಧಿಯಂತಿದ್ದ ಪೋಲೀಸ್ ನವನ ಮೇಲೆ ದಾಳಿ ನಡೆಸಿ ನಂತರ ಜನಜಂಗುಳಿಯಲ್ಲಿ ಕರಗಿ ಹೋಗುವ ತಯಾರಿಯಲ್ಲಿದ್ದಂತಿತ್ತು. ನಾನು ಈ ಸಾಮಾನ್ಯ ಜನರ ನಿಸ್ವಾರ್ಥ, ಸಮರ್ಪಣಾ ಮನೋಭಾವದ ಕ್ರಾಂತಿಗೆ ಮೆಚ್ಚಿಕೊಳ್ಳುತ್ತಿರುವಂತೆಯೇ ಈ ಕ್ರಾಂತಿಯ ಆಗಮನವನ್ನು ಸೂಚಿಸುವಂತೆ ಒಂದು ದೊಡ್ಡ ಶಬ್ದ ನನ್ನ ಕಿವಿಗಪ್ಪಳಿಸಿತು,  ಜೊತೆ ಜೊತೆಗೇ ದೂರದಿಂದ ಚೀರಾಟದ, ಹೆಜ್ಜೆಯ ದಡಬಡ ಶಬ್ದ ಕೂಡ ಕೇಳಿಸಲಾರಂಬಿಸಿತು. ನಾನೂ ಕೂಡಲೇ ಓಡಿದೆ.

ಆಗ ದತ್ತ ಅಪಾದಮಸ್ತಕವಾಗಿ ನನ್ನನ್ನು ಪರೀಕ್ಷಿಸುತ್ತಾ ನನ್ನ ಕಣ್ಣಲ್ಲಿ ಕಣ್ಣಿಟ್ಟು ಆಳದ ಆ ದೊಡ್ದ ಶಬ್ದದ ಧ್ವನಿಯಂತೆಯೇ ಹೇಳಿದ  “ನೀನು ಈ ರೀತಿ ಓಡಿದರೆ ಪೋಲೀಸರ ಕೋಲು ನಿನ್ನನ್ನು ಹಿಂಬಾಲಿಸುತ್ತದೆ, ಅಥವಾ ಬೇಕಿದ್ದರೆ ಬಂದೂಕು ಸಹ.”  “ನೀನೊಬ್ಬ ಬಂಡವಾಳಶಾಹಿ, ಬೂರ್ಜ್ವ ವರ್ಗಗಳ ಪ್ರತಿನಿಧಿ, ದುಡಿಯುವ ವರ್ಗಗಳ ಶೋಷಕ,” ಎಂದು ನನ್ನೊಳಗೆ ನಾನು ಗೊಣಗಿಕೊಂಡೆ, ಅಷ್ಟರಲ್ಲಿ ಮತ್ತೊಂದು ದೊಡ್ಡ ಶಬ್ದ, ಮತ್ತೆ ಮನುಷ್ಯರ ಚೀರಾಟದ ಧ್ವನಿಗಳು ನನ್ನ ಕಿವಿಗಪ್ಪಳಿಸಿತು. ನಾನು ಒಂದು ದೊಡ್ಡ ಗಲಭೆಯಲ್ಲಿ ಸಿಲುಕಿಕೊಂಡಿರುವುದು ಖಾತ್ರಿಯಾಯ್ತು. ಆದರೆ ನಾನು ಭಯದಿಂದ ಕಂಪಿಸಲಿಲ್ಲ. ನನ್ನ ಧೀರೋಧಾತ್ತ ನಡವಳಿಕೆಯನ್ನು ತೋರಿಸಲು ಈ ಸಂದರ್ಭಕ್ಕಾಗಿ ಎದುರು ನೋಡುತ್ತ. ಆದರೆ ಚೀರಾಟ ದೊಡ್ಡದಾಗ ತೊಡಗಿತು. ಜನರ ಓಡುತ್ತಿರುವ ಹೆಜ್ಜೆಯ ಸಪ್ಪಳದೊಂದಿಗೆ ಕುದುರೆಗಳ ಖರಪುಟ ಸದ್ದು ಮಿಳಿತವಾಗತೊಡಗಿತ್ತು. ಹೊಗೆ ಕೇವಲ ವಾಸನೆಯಾಗಿರದೆ ಕಣ್ಣಿಗೆ ಕಾಣತೊಡಗಿತ್ತು. ಈ ಹೊಗೆ ನನ್ನ ಕಣ್ಣನ್ನು, ಕಿವಿಯನ್ನು, ಶ್ವಾಸಕೋಶವನ್ನು ಆವರಿಸಿಕೊಳ್ಳತೊಡಗಿತು. ನಾನು ಕೆಮ್ಮುತ್ತಾ ದಾರಿಯಲ್ಲಿ ಬಿದ್ದ ಬುಟ್ಟಿಯೊಂದಕ್ಕೆ ಅಡ್ಡಗಾಲು ಹಾಕಿ ಎಡವಿ ದತ್ತನ ಕೈ ಹಿಡಿದುಕೊಂಡೆ. ಅದರೆ ಇದರರ್ಥ ನಾನು ಭಯಗೊಂಡಿದ್ದೇನೆಂತಲ್ಲ. ಅಥವಾ ಸ್ವಲ್ಪ ಹೊತ್ತಿನ ಮುಂಚೆ ನಾನು ಓಡಲೆತ್ನಿಸಿದ್ದು ಭಯದಿಂದಲ್ಲ.  ಬದಲಾಗಿ ನಿಜ ಹೇಳಬೇಕೆಂದರೆ ನನ್ನೊಳಗೆ ಉದ್ವೇಗವಿತ್ತು.  ಈ ಗಲಭೆಯ  ಸಂದರ್ಭದಲ್ಲಿ ಏನನ್ನಾದರೂ ಮಾಡಬೇಕೆನ್ನುವ ಹುಮ್ಮಸ್ಸಿತ್ತು. ಕ್ರಾಂತಿಗಾಗಿ ಕನಿಷ್ಟ ಒಂದು ಚಪ್ಪಲಿಯನ್ನು ತೂರುವುದರ ಮೂಲಕವಾದರು.

ಆ ಹೊಗೆಯಲ್ಲಿ ಕೆಲವು ಜನರನ್ನು ಪೋಲೀಸರು ಆಟ್ಟಿಸಿಕೊಂಡು ಹೋಗುತ್ತಿರುವುದು ಕಾಣಿಸಿತು. ನಾನು ಪೋಲೀಸರತ್ತ ಉಗುಳಿದೆ. ನಾನು ಪೋಲಿಸರ ವಿರುದ್ಧ ಉಗುಳಿದ್ದನ್ನು ದತ್ತ ನೋಡಬೇಕೆಂಬುದು ನನ್ನ ಅಭಿಲಾಷೆಯಾಗಿತ್ತು. ಅವನಿಗೆ ಈ ಬಂಡವಾಳಶಾಹಿಗಳ ವಿರುದ್ಧದ ನನ್ನೊಳಗಿನ ಆಕ್ರೋಶ ಅರಿವಾಗಬೇಕೆಂಬುದು ನನ್ನ ಆಸೆ. ಅದರೆ ಅವನು ಇದ್ಯಾವುದನ್ನು ಗಮನಿಸದೆ ಯಂತ್ರದಂತೆ ನೆಟ್ಟಗೆ ನಡೆಯುತ್ತಿದ್ದ. ಅವನ ನೇರವಾದ, ಗೊಂದಲವಿಲ್ಲದ ಈ ನಡಿಗೆ ಯಾವುದೋ ಸೆಮಿನಾರ್ ನ  ಭಾಷಣಕ್ಕೆ ಹೋಗುವಂತಿತ್ತು. ನನಗೆ ಅಸಹ್ಯವೆನಿಸಿತು.  ನಾನು ತಿರುವಿನ ಬಳಿ ಸಾಗುತ್ತಿದ್ದಂತೆಯೇ ಗಲಭೆ ನಮ್ಮೆಲ್ಲರ ಕೈಮೀರಿದಂತಿತ್ತು. ಹಠಾತ್ತಾಗಿ ಬೀದಿಯ ಮದ್ಯೆ, ಮನೆ, ಅಂಗಡಿಗಳ ಮೇಲೆ ಎಲ್ಲೆಲ್ಲಿಯೂ ಜನರು ಕಾಣಿಸಕೊಳ್ಳತೊಡಗಿದರು. ನಾನು ಈ ಜನಸಮೂಹದಲ್ಲಿ, ಈ ಸಮೂಹ ಸನ್ನಿಯಲ್ಲಿ ಸಿಕ್ಕಿಕೊಂಡಿರುವುದು ಖಾತ್ರಿಯಾಯಿತು. ನನ್ನ ಅಸಹಾಯಕತೆಯನ್ನು ಹಳಿದುಕೊಂಡೆ. ನಾನು ಉತ್ತೇಜನಕ್ಕಾಗಿ ರೋಧಿಸತೊಡಗಿದೆ. ನಾನು ಈ ಜನ ಸಮೂಹವನ್ನು ಪ್ರಚೋದಿಸುತ್ತಾ, ಅದರ ನಾಯಕತ್ವ ವಹಿಸಿಕೊಳ್ಳಲು ಬಯಸಿದ್ದೆ…. ಆದರೆ ಈ ಜನ ಸಮೂಹ ನನ್ನನ್ನು ನೆಲದ ಮೇಲೆ ಕಾಲಿಡದಂತೆ ತಳ್ಳತೊಡಗಿತು. ನಾನು ಹರಸಾಹಸ ಮಾಡಿ ದತ್ತನಿಗೆ ಅಂಟಿಕೊಂಡು ಇಲ್ಲ ನಾನು ಈ ರೀತಿಯ ಅಸಹಾಯಕ ಮನುಷ್ಯನಲ್ಲ ! ನನಗೆ ಈ ಶೋಷಣೆ ವಿರುದ್ದ ಹೋರಾಟಕ್ಕೆ ಒಂದು ಅಸ್ತ್ರವನ್ನು ಕೊಡಿ !! ಒಂದು ಬಾಂಬನ್ನು ಕೊಡಿ!! ಇಲ್ಲವೇ ನಿಮ್ಮ ಕಾರೊಳಗೆ ತೂರಿಕೊಳ್ಳಲು ಬಿಟ್ಟುಬಿಡಿ !! ಇಲ್ಲಿ ಏನನ್ನೂ ಮಾಡಲಿಕ್ಕಾಗದ ಅವಮಾನಕ್ಕಿಂತ ನಿಮ್ಮ ಕಾರಲ್ಲಿ ತೂರಿಕೊಳ್ಳುವುದು ಉತ್ತಮವೆಂದು ನನಗನ್ನಿಸುತ್ತಿದೆ!!! ಹೌದು ಮಿ.ದತ್ತರ ಬಳಿ ಈ ರೀತಿಯ ಒಂದು ಹುಚ್ಚು ಹುಚ್ಚಾದ ಮೌನ ಕೋರಿಕೆಯನ್ನು ಮಾಡಿದೆ.

ನನಗೆ ಈ ದತ್ತನ ಜಾಣತನದ ಬಗೆಗೆ ಮೆಚ್ಚುಗೆಯಾಯ್ತು. ಇಷ್ಟೊಂದು ಗಲಭೆ, ಕಲ್ಲು ತೂರಾಟ, ಬೆಚ್ಚಿಬೀಳಿಸುವ ಶಬ್ದಗಳ ನಡುವೆಯೂ ಇವನು ಚಾಣಾಕ್ಷತನದಿಂದ ನನ್ನನ್ನು ಈ ಗಲಭೆಪೀಡಿತ ರಸ್ತೆಯಿಂದ ಪಾರುಮಾಡಿಸಿ ಅಲ್ಲಿ ಮೂಲೆಯಲ್ಲಿದ್ದ ತನ್ನ ಕಾರ್‌ನ ಬಳಿಗೆ ಕರೆದೊಯ್ದಿದ್ದ. ಆ ಅತ್ಯಂತ ದೊಡ್ಡ ಮಿರಮಿರ ಮಿಂಚುವ ಕಪ್ಪು ಕಾರು ನೋಡಿದ ತಕ್ಷಣ ನನಗೆ ಒಂದು ರೀತಿಯಲ್ಲಿ ಅದು ಅತಿ ಘೋರವೆನಿಸಿತು. ಹಾಗೂ ಈ ದತ್ತನ ಶ್ರೀಮಂತ ಪ್ರದರ್ಶನಕ್ಕೆ ಹೀಯಾಳಿಸಬೇಕೆನಿಸಿತು. ನೀನು ಇಂದಿನ ಈ ಗಲಭೆ, ಸಾವು ನೋವಿನ ದಿನದಂದೂ ಕೂಡ ಸೂಟ್ ಹಾಗೂ ಟೈ ಅನ್ನು ಧರಿಸಿ, ಇದರ ಜೊತೆಗೆ ಇಂತಹ ಐಷಾರಾಮಿ ಕಾರನ್ನು ಇಟ್ಟುಕೊಂಡು ಶ್ರೀಮಂತಿಕೆಯಿಂದ ಓಡಾಡುತ್ತಿರುವುದು ಈ ಗಲಭೆಯಿಂದ ತೊಂದರೆಗೊಳಗಾದ ಸಾವಿರಾರು ಜನರನ್ನು ಅವಮಾನ ಮಾಡಿದಂತಾಗಲಿಲ್ಲವೇ ಎಂದು ಕೇಳಬೇಕೆನಿಸಿತು. ಅಲ್ಲಿ ಅ ರಸ್ತೆಯ ಅಂಚಿನಲ್ಲಿ ಒಂದು ಗಾಡಿ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತಿತ್ತು. ಆದರೆ ದತ್ತ ಇದನ್ನು ಕಡೆಗಣಿಸಿ ಕಾರನ್ನೇರಿದ. ಅವನ ಜೊತೆಗೆ ನಾನೂ ಕಾರೊಳಗೆ ತೂರಿಕೊಂಡೆ ಆರಾಮಾಗಿ!

(ಈ ಬಾರಿ ನನ್ನಲ್ಲಿ ಅಂತಹ ಗೊಂದಲಗಳಿದ್ದಂತಿರಲಿಲ್ಲ.)  ಚಲಿಸುವ ಕಾರಿನೊಳಗೆ ನನ್ನನ್ನು ನಾನು ಹಿಂಬದಿಯ ಕನ್ನಡಿಯೊಳಗೆ ನೋಡಿಕೊಂಡೆ. ಅಲ್ಲಿನ ಪ್ರತಿಬಿಂಬ ನನಗೆ ಧೈರ್ಯವನ್ನು ಕೊಡುತ್ತಿತ್ತು. ಅದೇ ಪರಿಚಿತ ಗುಳಿಬಿದ್ದ ಕೆನ್ನೆಗಳು, ಉಬ್ಬಿದ ಹಣೆ, ಆತಂಕದ ಕಣ್ಣುಗಳು. ಅಥವಾ ಅದೇ ಉಪೇಂದ್ರ ದಾಸ್‌ನ ಕ್ರಾಂತಿಕಾರಿ ಚಹರೆ. ಒಂದು ಕಾಲದಲ್ಲಿ ಹಳ್ಳಿಯ ಶಾಲೆಯಲ್ಲಿ ಇಂಗ್ಲೀಷನ್ನು ಭೋದಿಸುತ್ತಿದ್ದ ಈ ಉಪೇಂದ್ರ ದಾಸ್ ಈಗ ಕಲ್ಕತ್ತದ ಸರ್ಕಾರಿ ಕಛೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತ. ನನ್ನ ಈ ಚಹರೆಯನ್ನು ಎಣ್ಣೆ ಮುಖದ ಕಾರೊಳಗಿನ ನನ್ನ ಸಂಗಾತಿಯೊಂದಿಗೆ ಯಾರಾದರೂ ಹೋಲಿಸಿ ಗೊಂದಲಗೊಂಡರೆ??  ಒಂದು ವೇಳೆ ಹೋಲಿಸಿದರೂ ಅವರಿಗೆ ವ್ಯತ್ಯಾಸಗಳು ಗೊತ್ತಾಗುತ್ತವೆ. ಏಕೆಂದರೆ ನಾನು ಅಲ್ಲಿ ಬೀದಿಗಳಲ್ಲಿ ಗಲಭೆಯಲ್ಲಿ ಹೋರಾಡುತ್ತಿರುವ ಸಾವಿರಾರು ಜನರೊಂದಿಗೆ ಬಾಯಲ್ಲಿ ಹೇಳಲಾರದ ಹೃದಯದ ಮೌನ ಭಾಷೆಯನ್ನು ಬಳಸಿ ಮಾತನಾಡಿದ್ದೇನೆ.

“ಕಾಮ್ರೇಡ್ಸ್, ನಾನು ಇವನೊಂದಿಗೆ ಇರುವುದು ತಾತ್ಕಾಲಿಕ ಮಾತ್ರ. ನಾನು ಎಂದಿಗೂ ನಿಮ್ಮವನೇ.  ಇವನೊಂದಿನ ಈ ತಾತ್ಕಾಲಿಕ ಐಷಾರಾಮಿ ಸ್ನೇಹ ನಿಮ್ಮೊಂದಿಗಿನ ಸಂಬಂಧವನ್ನು ಕಡಿದು ಹಾಕಲಾರದು !! ನನ್ನ ಪ್ರಿಯ ಕಾಮ್ರೇಡ್ ಸ್ನೇಹಿತರೇ, ನಾನು ಸಧ್ಯಕ್ಕೆ ಸ್ಥಗಿತಗೊಂಡಿದ್ದೇನೆ!!  ಆದರೂ ನಾನು ನಿಮ್ಮೊಂದಿಗಿದ್ದೇನೆ!!  ಕ್ರಾಂತಿ ಚಿರಾಯುವಾಗಲಿ!!!” ಅತ್ಯಂತ ಸುಖಮಯವಾಗಿ ಈ ವಿದೇಶಿ ಕಾರು ಚಲಿಸುತ್ತಿರುವಾಗಲೂ ಕೂಡ ನನ್ನಲ್ಲಿ ಅನೇಕ ಪ್ರಶ್ನೆಗಳೇಳುತ್ತಿದ್ದವು.   “ನಾವು ಸಾಗುತ್ತಿರುವ ರಸ್ತೆ ಗಲಭೆಗ್ರಸ್ತ ರಸ್ತೆಗೆ ಸಮಾನಂತರದಲ್ಲಿದೆ. ಯಾರಿಗೆ ಗೊತ್ತು ಇಲ್ಲಿಯೂ ಕೂಡ ಲುಂಗಿಯನ್ನು ಧರಿಸಿದ ಯುವಕರು ಕೈಯಲ್ಲಿ ಕಲ್ಲು ಹಿಡಿದು ಮರದ, ಕಟ್ಟಡದ ಮರೆಯಲ್ಲಿ ನಿಂತಿದ್ದರೆ ? ನಮ್ಮ ಸುರಕ್ಷತೆಯ ಬಗೆಗೆ ಯಾವ ಗ್ಯಾರಂಟಿ ?  ಇಲ್ಲಿ ನಮ್ಮ ಅಂದರೆ ಈ ಬೂರ್ಜ್ವ ದತ್ತನ ಸುರಕ್ಷತೆ ಹೇಗೆ ಎಂದರ್ಥ.” ಹೀಗೆ ಪ್ರಯಾಣ ಮುಂದುವರಿಯುತ್ತಿದ್ದಾಗ ದಾರಿಯಲ್ಲಿ ಗುಡಿಸಲುಗಳು, ಬಡತನವನ್ನು ಹೊದ್ದುಕೊಂಡು ನಿಂತಿದ್ದ ಅರೆಬೆತ್ತಲಿನ ಸಣ್ಣ ಹುಡುಗರು, ಟೀ ಅಂಗಡಿ, ಅದಕ್ಕೆ ನೇತುಬಿದ್ದ ಒಣಗಿದ ಬಾಳೆ ಹಣ್ಣು, ಟೀ ಪೊಟ್ಟಣಗಳು ಕಣ್ಣಿಗೆ ಬಿದ್ದವು. ಒಂದು ರೀತಿಯಲ್ಲಿ ಮಂಕು ಕವಿದ ನೀರವತೆ! ಈ ಮಧ್ಯೆ ಅಂಬುಲೆನ್ಸ್ ನಮ್ಮನ್ನು ದಾಟಿ ಮುಂದೆ ಚಲಿಸಿದ್ದನ್ನು ಬಿಟ್ಟರೆ ಸಧ್ಯಕ್ಕೆ ಅಂತಹ ವಿಶೇಷವಾದುದ್ದೇನು ಕಾಣಿಸಲಿಲ್ಲ. ಅಂದರೆ ನಾವು ಗಲಭೆಪೀಡಿತ ಪ್ರದೇಶವನ್ನು ದಾಟಿದ್ದೇವೆಂದಾಯ್ತು. ದಾರಿ ಮುಂದೆ ಸಾಗಿದಂತೆ ಇಲ್ಲಿ ಯಾವುದೇ ಹೊಗೆ ಕಾಣಿಸುತ್ತಿರಲಿಲ್ಲ. ಅದರ ಬದಲಿಗೆ ಆಕಳುಗಳು, ಬಾತುಕೋಳಿಗಳು ಕಣ್ಣಿಗೆ ಬಿದ್ದವು. ಹಸಿರು ಕಣ್ಣಿಗೆ ಮುದಗೊಳಿಸುತ್ತಿದೆ. ಆದರೆ ನನ್ನೊಳಗಿನ ಅಂತರಾತ್ಮ ನನ್ನನ್ನು ಕೆಣಕುತ್ತಿದ್ದ.  “ಉಪೇಂದ್ರ ದಾಸ್, ನೀನು ಆ ಚಳುವಳಿಯಲ್ಲಿ ಭಾಗವಹಿಸದೆ ತಪ್ಪು ಮಾಡಲಿಲ್ಲವೇ?  ಈ ಬೂರ್ಜ್ವ ಕ್ರಿಮಿಯ ಜೊತೆ ಸೇರಿ ನಿನ್ನನ್ನು ನೀನು ಈ ಗಲಭೆಯಿಂದ ರಕ್ಷಿಸಿಕೊಂಡೆಯಲ್ಲವೇ?  ಇಲ್ಲಿ ಗೆದ್ದದ್ದು ಆ ಬೂರ್ಜ್ವ ದತ್ತ !!  ಇವನು ಬಲಶಾಲಿಯಾದಂತಹ ಆನೆ ಇರುವೆಗಿಂತಲೂ ಶಕ್ತಿಶಾಲಿ ಎಂದು ಸಾಬೀತುಪಡಿಸಿಬಿಟ್ಟ. ಈ ಎಲ್ಲ ಪ್ರಶ್ನೆಗಳನ್ನು ಆ ಗಲಭೆಗ್ರಸ್ತ ಜನ ನಿನ್ನನ್ನು ಕೇಳುತ್ತಾರೆ.”

ನಾನು ಆಪಾದನೆ ಮುಕ್ತಗೊಳ್ಳುವ ಭರವಸೆಯಿದ್ದರೂ ನನಗೆ ಸುಸ್ತಾಗತೊಡಗಿತು. “ಆ ಬಾತು ಕೋಳಿಗಳನ್ನು ನೋಡಿದಾಗ ಆ ಬಾತು ಕೋಳಿಯಂತಹ ಕತ್ತಿನ ನನ್ನ ಜೊತೆಗಾರನ ಕತ್ತನ್ನು ತಿರುಚಲು ನನಗೆ ಮನಸ್ಸಾಗಿತ್ತೆಂದು ನಾನು ಆ ಹೋರಾಟಗಾರರಿಗೆ ಹೇಗೆ ಹೇಳಲಿ?” ಈ ಸುಖಕರ ಪ್ರಯಾಣ ಕ್ಷಣಿಕವಾಗಿತ್ತು. ಒಂದು ಕಲ್ಲು ಎಲ್ಲಿಂದಲೋ ತೂರಿ ಬಂದು ನಾವು ಕುಳಿತಿದ್ದ ವಿದೇಶಿ ಕಾರಿಗೆ ಬಡಿಯಿತು. ಮತ್ತೊಂದು ಕಲ್ಲು ನಾನು ಕುಳಿತ ಸೀಟಿನ ಬಾಗಿಲಿಗೆ ಬಂದಪ್ಪಳಿಸಿತು. ನಮ್ಮ ಕಣ್ಣೆದುರಿಗೆ ಈ ಕೃತ್ಯವನ್ನು ಎಸುಗಿದ ವ್ಯಕ್ತಿ ಗೋಚರಿಸತೊಡಗಿದ. ಆದರೆ ಇವನು ಲುಂಗಿ ಅಥವಾ ಧೋತಿಯನ್ನು ಉಟ್ಟಿರಲಿಲ್ಲ. ಬದಲಿಗೆ ಇವನ ಕಣ್ಣಲ್ಲಿ ಮೃಗದ ಬೇಟೆಯ ಛಾಯೆಯಿತ್ತು. ಅಲ್ಲಿ ಅಪಾರವಾದ ಸಿಟ್ಟಿತ್ತು. ನಾನು ನಡುಗಲಾರಂಬಿಸಿದೆ. ಆದರೆ ಜೊತೆಗಾರ ದತ್ತ ಇದರಿಂದ ವಿಚಲಿತನಾಗದೆ ತಣ್ಣಗೆ ಕಾರು ಓಡಿಸುತ್ತಿದ್ದ. ಇವನ ಕೆನ್ನೆ, ತುಟಿ ಹಾಗೂ ಕಣ್ಣುಗಳಲ್ಲಿ ಒಂದು ರೀತಿಯ ವಿಚಿತ್ರವಾದ ತಣ್ಣಗಿನ ಧೃಡತೆಯಿತ್ತು. ಇವನಲ್ಲಿ ಈ ಹಲ್ಲೆಗಾರನನ್ನು ಮುಗಿಸುವಂತಹ ಯೋಜನೆಯಿದ್ದಂತಿತ್ತು. ಆದರೆ ಕಲ್ಲುಗಳ ಮೇಲೆ ಕಲ್ಲುಗಳು ಇದೇ ರೀತಿ ಬಂದು ಈ ಕಾರಿನ ಮೇಲೆ, ಇವನ ಮೇಲೆ ಅಪ್ಪಳಿಸಲಿ, ಈ ಬೂರ್ಜ್ವ ದತ್ತ ಅಪಾರವಾಗಿ ನರಳಿ ಮಂಡಿಯೂರಿ ಪ್ರಾಣಭಿಕ್ಷೆ ಬೇಡುವಂತಾಗಲಿ ಎಂದು ನಾನು ಮೌನವಾಗಿ ಪ್ರಾರ್ಥಿಸುತ್ತಿದ್ದೆ. ಅಷ್ಟರಲ್ಲಿ ಮತ್ತೊಂದು ದೊಡ್ಡ ಕಲ್ಲು ನೇರವಾಗಿ ಬಂದು ಕಾರಿನ ಮುಂಬದಿಯ ಗಾಜಿಗೆ ಬಂದಪ್ಪಳಿಸಿತು.  ಗಾಜು ಸಂಪೂರ್ಣವಾಗಿ ಬಿರುಕು ಬಿಟ್ಟುಕೊಂಡರೂ ಛಿದ್ರ ಛಿದ್ರವಾಗಲಿಲ್ಲ. ಈ ದತ್ತ  “ಈ ಗಲಭೆಕೋರರಿಗೆ ಈ ಗಾಜು ಒಡೆಯಲಾರದಂತೆ ಪುಲ್ ಪ್ರೂಫ್ ಆಗಿದೆ ಎಂದು ಗೊತ್ತಿಲ್ಲ,”  ಎಂದು ಗೊಣಗುತ್ತಿದ್ದುದು ಕಿವಿಗೆ ಬಿತ್ತು.  ಎಂತಹ ಅವಮಾನ!!  ಅಷ್ಟರಲ್ಲಿ ಆ ಹಲ್ಲೆಗಾರ ಕೈಯಲ್ಲಿ ದುಂಡನೆಯ ಲೋಹವನ್ನು ಹಿಡಿದುಕೊಂಡು ನೇರವಾಗಿ ನಮ್ಮ ಕಾರಿನ ಮುಂಭಾಗಕ್ಕೇ ಬಂದು ನಿಂತ.  ಅದು ಬಾಂಬ್!!!  ಆದರೆ ಕಿರುಚಿಕೊಳ್ಳಲೂ ಸಮಯವಿಲ್ಲ!!  ಅರೆ ನಿಲ್ಲು ನಿಲ್ಲು ನಾನೂ ಕೂಡ ನಿನ್ನ ಜೊತೆಗಿದ್ದೇನೆ, ಈ ಬಾಂಬ್ ಏತಕ್ಕೆ??  ಇದು ಹೇಡಿತನದ ಕೃತ್ಯ ಎಂದು ಕಿರುಚಲಾರಂಬಿಸಿದೆ. ಅಷ್ಟರಲ್ಲಿ ದತ್ತ ಹಾವಿನಂತೆ ಬುಸುಗುಡುತ್ತಾ ಮೆಲ್ಲಗೆ ಸರಿಯಲಾರಂಭಿಸಿದ.

ಅಷ್ಟರಲ್ಲಿ ಒಬ್ಬ ಪೋಲೀಸ್ ಬಂದೂಕಿನೊಂದಿಗೆ ಬರುತ್ತಿರುವುದು,  ರಸ್ತೆಯಲ್ಲಿ ರಕ್ತ ಚೆಲ್ಲಿದ್ದು ಎಲ್ಲವೂ ನನಗೆ ಮುಸುಕಾಗಿ ಕಾಣಲಾರಂಬಿಸಿತು.  ಆಗಲೇ ನಾನು ಎಚ್ಚರ ತಪ್ಪಿ ಕೆಳಗೆ ಬಿದ್ದಿದ್ದೆ. ನಾನು ಎಚ್ಚರಗೊಂಡಾಗ ಒಂದು ಮುರುಕು ಗ್ಯಾರೇಜಿನಲ್ಲಿ ಬಿದ್ದಿರುವುದು ಗೊತ್ತಾಯಿತು. ಜೊತೆಗಾರ ದತ್ತ ಜೋರಾಗಿ ಉಸಿರಾಡುತ್ತಿರುವುದು ಕಿವಿಗೆ ಬೀಳುತ್ತಿತ್ತು. ಜೊತೆಗೆ ಅಲ್ಲಿ ಒಬ್ಬ ಸರ್ದಾರ್‌ಜಿ ಇದ್ದ. ಬಹುಶ ಆ ಗ್ಯಾರೇಜಿನ ಮಾಲೀಕನಿರಬಹುದು. ಈ ಸರ್ದಾರ್‌ಜಿ ನನ್ನನ್ನು ಉದ್ದೇಶಿಸಿ ಹೇಳತೊಡಗಿದ,  “ನೀನು ನಿಜಕ್ಕೂ ಅದೃಷ್ಟಶಾಲಿ, ನೀನು ಅವನಂತೆ ಸಾಯಲಿಲ್ಲ … ” ಎಂದು ಅರ್ಧದಲ್ಲೇ ಮಾತು ನಿಲ್ಲಿಸಿ ದತ್ತನೆಡೆಗೆ ನೋಡಿದ.  ಅವರಿಬ್ಬರ ನಡುವೆ ಅಲ್ಲೇನೋ ಕಣ್ಣುಗಳ ಮೂಲಕ ಸಂಭಾಷಣೆ ನಡೆದಂತಾಯ್ತು. ಇದಕ್ಕೆ ಅಷ್ಟು ಗಮನ ಕೊಡದೆ ನಾನು ನಡೆಯಿರಿ ಇಲ್ಲಿಂದ ಹೊರಡೋಣ ಎಂದೆ.  ಆಗ ದತ್ತ ನನ್ನ ಭುಜದ ಸುತ್ತ ಕೈ ಹಾಕಿ ಸಂಕ್ಷಿಪ್ತವಾಗಿ ಹೇಳಿದ  “ನನ್ನ ಕಾರು ಹಾಳಾಗಿದೆ,  ನನ್ನ ನಾದಿನಿಯ ಮನೆಗೆ ನಡೆದೇ ಹೋಗೋಣ, ಈ ಸರ್ದಾರ್‌ಜಿಯ ಸಹಕಾರದಿಂದ ನಿನ್ನ ಪ್ರಾಣ ಉಳಿಯಿತು.”  ಸರ್ದಾರ್‌ಜಿ ನಿಮ್ಮಿಂದಲೂ ಸಹ ಎಂದು ದತ್ತನಿಗೆ ಹೇಳಿದ. ಒಟ್ಟಿನಲ್ಲಿ ಇವರಿಬ್ಬರೂ ನನ್ನನ್ನು ಉಳಿಸಿದರೆಂದಾಯ್ತು.  (ಸಾಯಿಸಿದ್ದು ಯಾರನ್ನ??)  ಆ ಸಂಜೆ ಕತ್ತಲಿನ ದಾರಿಯನ್ನು ನಾವು ನಡೆದು ದತ್ತನ ನಾದಿನಿ ಅನುರಾಧ ಅವರ ಮನೆ ತಲುಪಿದೆವು. ಅವರ ಮನೆಯ ಸೋಫಾದಲ್ಲಿ ನಾನು ನಿಶ್ಯಕ್ತನಾಗಿ ಕುಸಿದು ಕುಳಿತೆ. ದೊಡ್ಡದಾದ ಕಣ್ಣುಗಳನ್ನು ಹೊಂದಿದ್ದ ದತ್ತನ ನಾದಿನಿ ಅನುರಾಧ ತೆಳ್ಳಗೆ ಎತ್ತರವಿದ್ದಳು. ಪಟ ಪಟನೆ ಮಾತನಾಡುತ್ತಿದ್ದಳು. ಅವಳ ಮಾತಿನಲ್ಲಿ ಸ್ತ್ರೀವಾದದ ಛಾಯೆ ಇಣುಕುತ್ತಿತ್ತು. ಅವಳು ನೀಡಿದ ಕಾಫಿಯನ್ನು ಕುಡಿಯುತ್ತಾ ಅನುರಾಧಳನ್ನು ಗಮನಿಸಿದಾಗ ಅವಳು ಒಂದು ರೀತಿಯಲ್ಲಿ ಉತ್ಸಾಹದ ಬುಗ್ಗೆಯಂತೆಯೂ ಮಗದೊಮ್ಮೆ ನನ್ನ ನಾದಿನಿಯಂತೆಯೂ ಮತ್ತೊಮ್ಮೆ ಅಪ್ತ ಸ್ನೇಹಿತಳಂತೆಯೂ ಗೋಚರಿಸುತ್ತಿದ್ದಳು. ಪರಿಚಯವಾದ ಕೆಲವೇ ಕ್ಷಣಗಳಲ್ಲಿ ನನ್ನೊಂದಿಗೆ ಬೆರೆತು ಮಾತನಾಡುವ ರೀತಿ ನನ್ನಲ್ಲಿ ಇನ್ನಿಲ್ಲದ ಉತ್ಸಾಹವನ್ನು ಹುಟ್ಟಿಹಾಕಿದಂತಿತ್ತು.

ಆ ಮನೆಯನ್ನೊಮ್ಮೆ ಕಣ್ಣಾಡಿಸಿದಾಗ ಅಲ್ಲಿ ಇಕೆಬಾನದ ಹೂವುಗಳು, ವ್ಯಾನ್‌ಗೋವನ ಪೇಂಟಿಂಗಳೂ, ಮೊಘಲರ, ಟಾಲ್‌ಸ್ಟಾಯ್, ಠ್ಯಾಗೂರ್ ರವರ ಭಾವಚಿತ್ರಗಳೂ ಕಣ್ಣಿಗೆ ಬಿದ್ದವು. ಅಂದರೆ ಈ ಅನುರಾಧ ನನಗಿಂತಲೂ ಬುದ್ಧಿಜೀವಿಯೇ??  ಹಿಂದೊಮ್ಮೆ ನಮ್ಮಿಬ್ಬರ ಪ್ರಥಮ ಭೇಟಿಯ ಸಂದರ್ಭದಲ್ಲಿ ದತ್ತನಿಗೆ ನಾನು ಇಂಗ್ಲೀಷ್ ಕ್ಲಾಸಿಕ್ ನಾಟಕದ ಪುಸ್ತಕವೊಂದನ್ನು ತೋರಿಸಿ ಅದನ್ನು ಓದಲು ಶಿಫಾರಸ್ಸನ್ನು ಮಾಡಿದ್ದೆ.  ಆ ಪುಸ್ತಕವನ್ನು ಈಗ ಅವನ ನಾದಿನಿ ಅನುರಾಧಳ ಮನೆಯಲ್ಲಿ ನೋಡಿದೆ. ಇದನ್ನು ಆ ದತ್ತ ಇವಳಿಗೆ ಉಡುಗೊರೆಯಾಗಿ ಕೊಟ್ಟನೆ??  ಅಷ್ಟರಲ್ಲಿ ದತ್ತ ನನಗೆ ಮತ್ತಷ್ಟು ಉಪಚಾರ ಮಾಡತೊಡಗಿದ. ಈ ಮಧ್ಯೆ ದತ್ತ ಹಾಗೂ ಅನುರಾಧಾ ಅವರ ನಡುವೆ ಸರಸದ ಸಂಭಾಷಣೆಗಳು ವಿನಿಮಯವಾಗುತ್ತಿದ್ದವು. ಅಲ್ಲಿ ಸಾಹಿತ್ಯವಿತ್ತು, ಚರಿತ್ರೆಯಿತ್ತು. ಈ ದತ್ತನಿಗೆ ಈ ಸ್ಥಿಥಪ್ರಜ್ಞಾತೆ ಹೇಗೆ ಸಾಧ್ಯವಾಯಿತು??  ಇದರ ಮಧ್ಯೆ ನನಗೆ ದತ್ತನನ್ನು ಕೇಳಬೇಕೆನಿಸಿದ  “ಆ ಹಲ್ಲೆಕೋರನನ್ನು ಕೊಂದಿದ್ದು ನೀನೋ ಅಥವಾ ಪೋಲೀಸನೋ??  ನನಗೆ ನಿಜಕ್ಕೂ ಆಗಿದ್ದೇನು??  ಈ ಮಧ್ಯೆ ಆ ಸರ್ದಾರ್ಜಿ ಎಲ್ಲಿಂದ ಬಂದ ??” ಎನ್ನುವ ಪ್ರಶ್ನೆಗಳು ನನ್ನೊಳಗೇ ಉಳಿದವು. ಒಂದು ವೇಳೆ ಕೇಳಿದರೆ ಪ್ರತ್ಯುತ್ತರವಾಗಿ ದತ್ತ ಇದನ್ನೆಲ್ಲಾ ಕೇಳಲು ಹಾಗೂ ಹೇಳಲು ಇದು ಸಂದರ್ಭವಲ್ಲ ಎಂದರೆ ಏನು ಮಾಡುವುದು?. ಇಷ್ಟರಲ್ಲಾಗಲೇ ಕಾಫಿ ತಣ್ಣಗಾಗುತ್ತಿತ್ತು. ಅತಿಥೇಯಳು ಕೊಂಚ ದುಗುಡದಲ್ಲಿದ್ದಂತಿತ್ತು. ನನ್ನೊಳಗಿನ ಅಂತರಾತ್ಮ ಮತ್ತೆ ನನ್ನನ್ನು ಕೆಣಕತೊಡಗಿದ. “ದತ್ತ ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವನೇ?? ನಿನಗಿಂತಲೂ ಅವನು ಅನುಭವಸ್ಥ.  ನೀನಿನ್ನೂ ಎಳಸು.” ನನ್ನಲ್ಲಿ ಗೋಜಲಾಗತೊಡಗಿತು. ಆ ಗಲಭೆಪೀಡಿತ ರಸ್ತೆಗಳು, ಯಾವ ಬಾಂಬ್ ಗೂ ಒಡೆಯದ ಕಾರಿನ ಗಾಜು, ರಕ್ಷಣೆಗಾಗಿ ಮೊರೆಯಿಡುತ್ತಿರುವ ಹತ್ಯೆಗೊಳಗಾದ ಜನ, ಈ ಸುಂದರ ಮನೆ, ಇಲ್ಲಿನ ಕವಿಗಳ, ಚಿತ್ರಕಾರರ ಭಾವಚಿತ್ರಗಳು, ಮನಮೋಹಕ ಅನುರಾಧ … ಅಷ್ಟರಲ್ಲಿ ನನ್ನ ಗಮನ ತೆರೆದ ಕಿಟಿಕಿಯೆಡೆಗೆ ಹರಿಯಿತು. ಹೊರಗಡೆಯಿಂದ ಗಲಭೆಯ ಸದ್ದಿಗೆ ಕಾತರಿಸಿದೆ. ಆದರೆ ಎಲ್ಲವೂ ನಿಶ್ಯಬ್ದವಾದಂತಿತ್ತು. ಅಂದರೆ ಪ್ರತಿಭಟನೆಯ ಧ್ವನಿಗಳು ಸತ್ತು ಹೋದವೆ??  ಅದರ ಪ್ರತಿಧ್ವನಿಗಳೂ ಸಹ??  ಈ ದತ್ತನನ್ನು ಕೇಳಲೆ ? ಅವನ ನಾದಿನಿ ಅನುರಾಧಳನ್ನು??  ಇವೆಲ್ಲವನ್ನೂ ಮರೆತೂ ನಾನೂ ಇಲ್ಲಿನಂತೆ ಹವಾನಿಯಂತ್ರಿತ ಮನೆಯನ್ನು, ಸುಂದರ ತೋಟವನ್ನು ಹೊಂದಬೇಕೆನಿಸುತಿತ್ತು. ಏಕೆಂದರೆ ನಾನೂ ಮನುಷ್ಯನಲ್ಲವೇ !!  ನಾನು ನನ್ನ ಬದುಕಿನ ಅಂತಸ್ಥಿನಲ್ಲಿ ಮೇಲೇರಿದಾಗಲೇ ನಿಮ್ಮ ಕ್ರಾಂತಿಗೆ ನಾನು ಸಹಾಯ ಮಾಡಲು ಸಾಧ್ಯ. ನಿಮ್ಮನ್ನು ಮುನ್ನಡೆಸಲು ಸಾಧ್ಯ.  ಓಹ್ ಎಲ್ಲಾ ಗೋಜಲುಗಳು!!  ದತ್ತ ಹಾಗೂ ಅವನ ನಾದಿನಿ ಪದೇ ಪದೇ ತಮ್ಮ ಗಡಿಯಾರವನ್ನೂ ಆ ತೆರೆದ ಕಿಟಿಕಿಯನ್ನೂ ಆತುರದಿಂದ ನೋಡುತ್ತಿದ್ದರು. ನಾನು ಇದರ ಬಗ್ಗೆ ವಿಚಾರಿಸಿದಾಗ ಇವರಿಬ್ಬರೂ ಹೇಳಿದರು.

“ಅವನು ಬರುವುದು ಇಂದು ತಡವಾಗಬಹುದು. ಏಕೆಂದರೆ ಬಹಳಷ್ಟು ತಲೆಗಳನ್ನು ಎಣಿಸಬೇಕಲ್ಲವೇ?” ನನಗೆ ತಬ್ಬಿಬ್ಬಾಯಿತು. ಯಾರೀತ??  ಕುರಿಗಳ ತಲೆ ಎಣಿಸುವ ಕುರುಬನೇ?  ನನ್ನ ಗೊಂದಲವನ್ನು ಅರ್ಥ ಮಾಡಿಕೊಂಡ ದತ್ತ ಹೇಳಿದ. “ಆತನ ಹೆಸರು ನಾರಿಯನ್ ಬೋಸ್. ನನ್ನ ನಾದಿನಿ ಅನುರಾಧಾಳ ಪತಿ. ಆತ ಪೋಲೀಸ್ ವಿಶೇಷ ಪಡೆಗಾಗಿ ಕೆಲಸ ಮಾಡುತ್ತಿದ್ದಾನೆ. ನೀನು ಅವನ ಬಗೆಗೆ ಕೇಳಿರಬೇಕಲ್ಲವೇ?”  ಇಲ್ಲ ಆತನ ಹೆಸರನ್ನು ನಾನು ಕೇಳಿರಲಿಲ್ಲ. ಮುಂದೆಯೂ ತಿಳಿದುಕೊಳ್ಳುವುದೂ ಬೇಡ. ನನಗೆ ಇವರಿಬ್ಬರೂ ನನ್ನನ್ನು ಇಲ್ಲಿಂದ ಹೊರಕಳುಹಿಸಲು ಪಿತೂರಿ ನಡೆಸುತ್ತಿರುವಂತಿತ್ತು. ಮತ್ತೆ ನನ್ನಲ್ಲಿ ರಕ್ತ,  ಆ ಎದೆಯನ್ನು (ಅಥವಾ ಹೊಟ್ಟೆಯನ್ನೋ ಅಥವಾ ಗಂಟಲನ್ನೋ) ಚಿಮ್ಮಿಕೊಂಡು ಬಂದಂತಹ ರಕ್ತ ತಲೆಯಲ್ಲಿ, ಕಣ್ಣಲ್ಲಿ ಹರಿದಾಡತೊಡಗಿತು. ಮತ್ತೆ ಸ್ವಲ್ಪ ಕಾಫೀ ಬೇಕೆ ಎಂದು ಅನುರಾಧಾ ಕೇಳುತ್ತಿದ್ದುದು ದೂರದಲ್ಲೆಲ್ಲೋ ಕೇಳಿಸುತ್ತಿತ್ತು. ಅಷ್ಟರಲ್ಲಿ ದತ್ತ ನನ್ನ ಬಳಿ ಬಂದು ಅನುಕಂಪದ ಧ್ವನಿಯಲ್ಲಿ ಹೇಳತೊಡಗಿದ  “ಈಗ ಹೇಗಿದ್ದೀಯ? ನಿನಗೆ ತಡವಾಗುತ್ತಿದೆ. ಮನೆಗೆ ಹೋಗಲ್ಲವೇ?  ನೀನಿರುವುದು ಮೋಮಿಪುರದಲ್ಲವೇ? ಕೆಳಗಿನ ವೃತದ ರಸ್ತೆಯನ್ನು ಬಳಸಿ ನಂತರ ಎಡಕ್ಕೆ ತಿರುಗಿದಾಗ ಈ ರಸ್ತೆಯ ಕೊನೆ ಸಿಗುತ್ತದೆ. ಅಲ್ಲಿಂದ ನಿಧಾನವಾಗಿ ಕೆಳಗೆ ನಡೆದುಕೊಂಡು ಹೋಗು.  ಹಿಂತಿರುಗಿ ಮಾತ್ರ ನೋಡಬೇಡ.”  ಆದರೆ ನಾನು ಹೊರಡುವ ಗಡಿಬಿಡಿಯನ್ನು ತೋರಿಸಲಿಲ್ಲ. ನನ್ನಲ್ಲಿ ಒಳಗೊಳಗೇ ನಡುಕವುಂಟಾಗತೊಡಗಿತು. ಅನುರಾಧ ಮತ್ತೊಮ್ಮೆ ಬರಲು ಆಹ್ವಾನಿಸಿದಳು. ದತ್ತ ನನ್ನನ್ನು ಗೇಟಿನವರೆಗೂ ಬಿಡಲಿಕ್ಕೆ ಬಂದ. ಕೆಳಗಿನ ವೃತ್ತದ ರಸ್ತೆಯಲ್ಲಿ ಬೆಳಕು ಚೆಲ್ಲಿತ್ತು. ಅಲ್ಲಿ ಸುತ್ತಲೂ ಕಲ್ಲು, ಮುರಿದ ಗಾಜಿನ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಯಾರಾದರೂ ಬಂದು ಅವುಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಕಾಯುತ್ತಿದ್ದವು …..

ಶಿಕ್ಷಣ ಕ್ಷೇತ್ರದ ಸಮಸ್ಯೆ ಮತ್ತು ಸವಾಲುಗಳು


-ಬಿ. ಶ್ರೀಪಾದ್ ಭಟ್


“ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಜರೂರಾಗಿ ಆಗಬೇಕಾಗಿರುವ ಸುಧಾರಣೆಯೆಂದರೆ ಮುಂದಿನ ಬದುಕಿಗೆ ವ್ಯಕ್ತಿಯನ್ನು ಸಿದ್ಧಪಡಿಸುವುದಷ್ಟೇ ಶಿಕ್ಷಣ ಎನ್ನುವ ಸಂಕುಚಿತ ಭಾವನೆಯನ್ನು ತೊಡೆದು ಹಾಕುವುದು, ಬದಲಿಗೆ ಶಿಕ್ಷಣವನ್ನು ಪರಿಪೂರ್ಣ ಬದುಕಿನ ಒಂದು ಭಾಗ ಎನ್ನುವ ಭಾವನೆಯನ್ನು ಬೆಳೆಸುವುದು.” -ಜಾನ್ ಡ್ಯೂಯಿ (ಖ್ಯಾತ ಶಿಕ್ಷಣ ತಜ್ಞ)

“1833 ರಲ್ಲಿ ಹುಟ್ಟಿದ ಡೆಪ್ಯುಟಿ ಚೆನ್ನಬಸಪ್ಪನವರು ವಿದ್ಯಾಧಿಕಾರಿಗಳಾಗಿದ್ದರು. ಈ ನಾಡಿನ ಕೊಳಕು ನೀಚತನ ಅರಿತಿದ್ದಂತಹ ವ್ಯಕ್ತಿ. ಇಲ್ಲಿ ವೈಚಾರಿಕತೆಯ ಅಗತ್ಯವನ್ನು ಅರಿತಿದ್ದ ವ್ಯಕ್ತಿ. ದೇವರನ್ನು ನಂಬಲು ನಿರಾಕರಿಸುತ್ತಿದ್ದ ಚೆನ್ನಬಸಪ್ಪ ಜಗದ್ಗುರುಗಳಿಗೆ ಸಿಂಹಸ್ವಪ್ನವಾಗಿದ್ದರು. ಮನುಷ್ಯನ ಮೂಲಭೂತ ಕೆಟ್ಟತನವನ್ನು ಅರಿತಿದ್ದ ಚೆನ್ನಬಸಪ್ಪ ಆಡಳಿತ ನಿರ್ವಹಣೆಯಲ್ಲಿನ ಎಲ್ಲ ವಿವರ, ಸೂಕ್ಮಗಳನ್ನು ತಿಳಿದು ವರ್ತಿಸುತ್ತಿದ್ದರು. 1850, 1860 ರ ದಶಕಗಳಲ್ಲಿ ಚೆನ್ನಬಸಪ್ಪ ಹಾಗೂ ರಸಲ್ ವಿದ್ಯಾಧಿಕಾರಿಗಳಾಗಿ ಆಡಳಿತ ನಡೆಸುತ್ತಿದ್ದ 25 ವರ್ಷಗಳಲ್ಲಿ ಧಾರವಾಡದಲ್ಲಿದ್ದ 12 ಶಾಲೆಗಳು 341 ಆದವು. 1341 ಇದ್ದ ವಿದ್ಯಾರ್ಥಿಗಳು 27711 ಆದರು. ಬೆಳಗಾವಿಯ 1498 ವಿದ್ಯಾರ್ಥಿಗಳು 15819 ಆದರು. ಕನ್ನಡ ಪಠ್ಯ ಪುಸ್ತಕಗಳ ರಚನೆ, ಶಿಕ್ಷಕರ ತರಬೇತಿ, ನಿಘಂಟುಗಳ ರಚನೆ, ಭಾಷಾಂತರ ಮಾಡಿದ್ದು, ಜ್ಞಾನದ ಪುಸ್ತಕಗಳ ಪ್ರಕಟಣೆ ಇವೆಲ್ಲಕ್ಕೆ ಚೆನ್ನಬಸಪ್ಪನವರ ವ್ಯವಹಾರ ಜ್ಞಾನ, ಸ್ಪೂರ್ತಿ, ನಿಷ್ಟುರತೆ, ಮಾನವೀಯ ಧೋರಣೆ ಕೂಡ ಕಾರಣವಾಗಿದ್ದವು.” -ಪಿ.ಲಂಕೇಶ್ ( ಟೀಕೆ ಟಿಪ್ಪಣಿ ಸಂಪುಟ 1)

“ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಇಂಡಿಯಾದಲ್ಲಿ ವರ್ಷಕ್ಕೆ ಅಂದಾಜು 60,000 ಕೋಟಿ ರೂಪಾಯಿಗಳನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಸರ್ಕಾರದವತಿಯಿಂದ ಖರ್ಚು ಮಾಡಲಾಗುತ್ತದೆ.”  -ಕೇಂದ್ರ ಸರ್ಕಾರ

1968 ರಲ್ಲಿ ಬಂದ ಕೊಠಾರಿ ಆಯೋಗದಿಂದ ಹಿಡಿದು 2005ರಲ್ಲಿ ಬಂದ ಜ್ಞಾನ ಆಯೋಗದ ವರೆಗೂ ಅನೇಕ ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣ ಅಯೋಗಗಳು ರಚಿತಗೊಂಡಿವೆ. ನಮ್ಮ ರಾಜ್ಯದಲ್ಲಿ 50ರ ದಶಕದಲ್ಲಿ 22000 ಪ್ರಾಥಮಿಕ ಶಾಲೆಗಳು, 60ರ ದಶಕದಲ್ಲಿ 27000 ಪ್ರಾಥಮಿಕ ಶಾಲೆಗಳು, 70ರ ದಶಕದಲ್ಲಿ 32000 ಪ್ರಾಥಮಿಕ ಶಾಲೆಗಳು, 80ರ ದಶಕದಲ್ಲಿ 37000 ಪ್ರಾಥಮಿಕ ಶಾಲೆಗಳು, 2006ರ ವೇಳೆಗೆ 54000ಕ್ಕೆ  ಏರಿದೆ. ಶಿಕ್ಷಕರ ಸಂಖ್ಯೆ 2.5 ಲಕ್ಷದಷ್ಟಿದ್ದರೆ ವಿದ್ಯಾರ್ಥಿಗಳ ಸಂಖ್ಯೆ 8.5 ಮಿಲಿಯನ್ ಆಗಿದೆ. ಹೈಸ್ಕೂಲ್ ಸಂಖ್ಯೆ 9500 ರಷ್ಟಾಗಿದ್ದರೆ ಶಿಕ್ಷಕರ ಸಂಖ್ಯೆ 92000 ರಷ್ಟಿದ್ದರೆ ವಿದ್ಯಾರ್ಥಿಗಳ ಸಂಖ್ಯೆ 1.3 ಮಿಲಿಯನ್ ರಷ್ಟಿದೆ. 80 ದಶಕದಲ್ಲಿ ಪಾಸಾಗುವವರ ಪ್ರಮಾಣ ಶೇಕಡ 30 ರಷ್ಟಿದ್ದರೆ 2010 ರ ವೇಳೆಗೆ ಶೇಕಡ 75ಕ್ಕೆ ಏರಿದೆ. ಸಾಕ್ಷರತೆ  ಪ್ರಮಾಣ ಶೇಕಡ 67ಕ್ಕೆ ತಲುಪಿದೆ. ನಿರಂತರ ಅಭಿವೃದ್ಧಿಗಾಗಿ ಇರುವ ಕೆಲವು ಕಾರ್ಯಕ್ರಮಗಳು ಚಿಣ್ಣರ ಅಂಗಳ, ಬಾ ಮರಳಿ ಶಾಲೆಗೆ, ಕೂಲಿಯಿಂದ ಶಾಲೆಗೆ, ಬೇಡಿಯಿಂದ ಶಾಲೆಗೆ, ಮಧ್ಯಾಹ್ನದ ಬಿಸಿಯೂಟ, ಕಲಿ ನಲಿ ಇತ್ಯಾದಿ ಇತ್ಯಾದಿ. ಇವೆಲ್ಲ ಅಲ್ಲದೆ 2010 ರಲ್ಲಿ ಅತ್ಯಂತ ಘನವಾದ ಯೋಜನೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ಶಿಕ್ಷಣದ ಹಕ್ಕು” ಕಾಯ್ದೆ. ಸರ್ವರಿಗೂ ಶಿಕ್ಷಣ ಕಾಯ್ದೆ.

ಇವಿಷ್ಟೂ ಸರ್ಕಾರಗಳು ತಾವು ಶಿಕ್ಷಣ ಖಾತೆಯನ್ನು ಹಾಳುಗೆಡುವಿಲ್ಲ ಬದಲಿಗೆ ನೋಡಿ ಇಲ್ಲಿದೆ ಏರಿಕೆಯ ಪ್ರಮಾಣ ಎಂದು ಸೋಗಲಾಡಿತನದಿಂದ, ಆತ್ಮವಂಚನೆಯಿಂದ ಕೊಚ್ಚಿಕೊಳ್ಳಲು ಮೇಲಿನ ಕೆಲವು ಸ್ಯಾಂಪಲ್ ಅಂಕಿಸಂಖ್ಯೆಗಳ ಗೊಂಡಾರಣ್ಯವನ್ನು ತೋರಿಸುತ್ತಾರೆ. ಪ್ರಜ್ಞಾವಂತರು, “ಅಲ್ಲ ಮಾರಾಯ್ರೆ, ನಾವು ಮಾತನಾಡುತ್ತಿರುವುದು ಸರ್ವರಿಗೂ ಸಮಾನ ಶಿಕ್ಷಣ, ಅಂದರೆ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಅದಕ್ಕೆ ಸಾಕ್ಷಿಪ್ರಮಾಣವನ್ನು ಕೇಳುತ್ತಿದ್ದೇವೆ.” ಎಂದಾಗ ಈ ಮತಿಹೀನ ಸರ್ಕಾರಗಳಿಗೆ ತಲೆಬುಡ ಅರ್ಥವಾಗುವುದಿಲ್ಲ. ಏಕೆಂದರೆ ನಮ್ಮ ನಾಗರಿಕತೆಯ ಮೂಲಭೂತ ಹಕ್ಕಾದ ಸಾರ್ವಜನಿಕ ಶಿಕ್ಷಣ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿಯ ಇದುವರೆಗಿನ ಕೆಲವು ಅಘಾತಕಾರಿ ಅಂಕಿಅಂಶಗಳು  ಹಾಗೂ ಅದು ಕೆಳಗಿನಂತಿರುವುದರ ಬಗೆಗೆ ಸರ್ಕಾರಗಳಿಗೆ ಹಾಗೂ ಸಂಬಂಧಪಟ್ಟ ಶಿಕ್ಷಣ ಇಲಾಖೆಗಳಿಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ. ಆದರೆ ಏನೇ ಕೇಳಿದರೆ ಅವು ಹೇಳುವುದು ಅರ್ಥಾತ್ ಗಿಣಿಪಾಠ ಒಪ್ಪಿಸುವುದು ಮತ್ತೆ ಮತ್ತೆ ಮೇಲಿನ  ಅಂಕೆ ಸಂಖ್ಯೆಗಳನ್ನೇ. ಆದರೆ ಅತ್ಯಂತ ಚರ್ವಿತ ಚರ್ವಣವಾದ ಕೆಲವು ನೈಜ ಅಘಾತಕಾರಿ ಅಂಕಿಅಂಶಗಳು ಮಾತ್ರ ಈ ರಾಜ್ಯದ ಪ್ರಾಥಮಿಕ ಶಿಕ್ಷಣದ  ಕರಾಳ ಮಗ್ಗುಲನ್ನು ನಮ್ಮ ಮುಂದೆ ಬಿಚ್ಚಿಡುತ್ತವೆ.

90ರ ದಶಕದಲ್ಲಿ ಅರ್ಧದಲ್ಲೇ  ಶಿಕ್ಷಣವನ್ನು ಮೊಟಕುಗೊಳಿಸುವ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇಕಡ 37 ರಷ್ಟಿದ್ದರೆ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇಕಡಾ 47ರಷ್ಟು, ಹೈಸ್ಕೂಲಿನಲ್ಲಿ ಶೇಕಡ 59 ರಷ್ಟಿತ್ತು. ಇದರ ಪ್ರಮಾಣ ಹದಿನೈದು ವರ್ಷಗಳ ನಂತರ 2005ರ ವೇಳೆಗೆ ಅನುಕ್ರಮವಾಗಿ ಶೇಕಡ 11, ಶೇಕಡ 29 ಹಾಗೂ ಶೇಕಡ 45. ಅಂದರೆ ಸ್ವಾತಂತ್ರ ಬಂದು 64 ವರ್ಷಗಳ ನಂತರವೂ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ತಮ್ಮನ್ನು ತಾವೇ ಮಧ್ಯದಲ್ಲಿ ಮೊಟಕುಗೊಳಿಸುವ ಪ್ರಕ್ರಿಯೆ ಇನ್ನೂ ಅಬಾಧಿತವಾಗಿ ನಡೆಯುತ್ತಲೇ ಇದೆ. ಇದಕ್ಕೆ ಕಾರಣಗಳು ನೂರಾರು ಪುಟಗಳಿಷ್ಟಿವೆ. ಎಲ್ಲವೂ ಈ ಪ್ರಭುತ್ವದ ಹೊಣಗೇಡಿತನದಿಂದಾಗಿಯೇ.

ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರು ಅರ್ಥಾತ್ ಚಕ್ಕರ್ ಹಾಕುವುದರ ಪ್ರಮಾಣ ಶೇಕಡಾ 30. ಭೋದನೇತರ ಚಟುವಟಿಕೆಗಳ ಶೇಕಡಾವಾರು ಪ್ರಮಾಣ ಶೇಕಡ 47. ಪ್ರತಿ 30 ವಿದ್ಯಾರ್ಥಿಗೆ ಒಬ್ಬ ಶಿಕ್ಷಕ/ಶಿಕ್ಷಕಿಯರಿದ್ದಾರೆ. ಆದರೆ ಏಕೋಪಾಧ್ಯಾಯ ಶಾಲೆಗಳು ಶೇಕಡಾ 30 ರಷ್ಟಿವೆ. ಮೂಲಭೂತ ಸೌಲಭ್ಯಗಳನ್ನು ಪಟ್ಟಿಮಾಡಿದಾಗ ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿದ ಶಾಲೆಗಳು ಶೇಕಡ 70 ರಷ್ಟಿದ್ದರೆ ಶೌಚಾಲಯಗಳನ್ನು ಹೊಂದಿದ ಶಾಲೆಗಳು ಶೇಕಡಾ 47 ರಷ್ಟಿವೆ ಹಾಗೂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದ ಶಾಲೆಗಳ ಪ್ರಮಾಣ ಕೇವಲ ಶೇಕಡ 23. ಇನ್ನು ತರಗತಿಗಳ ಕೊರತೆಯ ಪ್ರಮಾಣ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಒಂದೇ ಕೋಣೆಯನ್ನುಳ್ಳ ಶಾಲೆಗಳ ಪ್ರಮಾಣ ಶೇಕಡಾ 20. ಪ್ರತಿ ಪ್ರಾಥಮಿಕ ಶಾಲೆಯ ಸರಾಸರಿ ಶಿಕ್ಷಕರ ಸಂಖ್ಯೆ 3 ಮಾತ್ರ. ಈ ಎಲ್ಲಾ ಸೌಲಭ್ಯಗಳು ಕನಿಷ್ಟ ಶೇಕಡಾ 100ರ ಪ್ರಮಾಣದಲ್ಲಿರಬೇಕು. ಯಾವುದೇ ಸಂದರ್ಭದಲ್ಲೂ. ಅದರೆ ಇಲ್ಲಿನ ಮಾಹಿತಿಯ ಪ್ರಕಾರ ನಮ್ಮ ರಾಜ್ಯದ ಶೋಚನೀಯ ಸ್ಥಿತಿ ಇದಕ್ಕಿಂತಲೂ ಬೇರೇನೂ ಇರಲಿಕ್ಕಿಲ್ಲ.

7 ರಿಂದ 10 ವಯಸ್ಸಿನ  ಶೇಕಡ 50 ರಷ್ಟು ಶಾಲಾ ಮಕ್ಕಳಿಗೆ ಲೆವೆಲ್ 1 ಮಟ್ಟದ ವಾಕ್ಯಗಳನ್ನೂ ಓದಲು ಬರುವುದಿಲ್ಲ, ಹಾಗೂ ಶೇಕಡಾ 72 ರಷ್ಟು ಶಾಲಾ ಮಕ್ಕಳಿಗೆ ಲೆವೆಲ್ 2 ಮಟ್ಟದ ಪದ್ಯಗಳನ್ನು ಓದಲು ಬರುವುದಿಲ್ಲ. ಇದೇ ವಯೋಮಿತಿಯೊಳಗಿನ ಶೇಕಡ 60 ರಷ್ಟು ಶಾಲಾ ಮಕ್ಕಳಿಗೆ ಕೂಡುವ ಹಾಗೂ ಕಳೆಯುವ ಲೆವೆಲ್ 1 ಮಟ್ಟದ ಗಣಿತ ಬರುವುದಿಲ್ಲ, ಶೇಕಡಾ 90  ರಷ್ಟು ಶಾಲಾ ಮಕ್ಕಳಿಗೆ ಗುಣಿಸುವ ಹಾಗೂ ಭಾಗಾಕಾರದ ಲೆವೆಲ್ 1 ಮಟ್ಟದ ಗಣಿತ ಬರುವುದಿಲ್ಲ. ಇದೇ ವಯೋಮಾನದ ವಿದ್ಯಾರ್ಥಿಗಳ ಮೂಲಭೂತ ಇಂಗ್ಲೀಷ್ ಜ್ಞಾನದ ಮಟ್ಟ ಕೇವಲ 16 ಪರ್ಸೆಂಟ್. ಯಾಕೆ ಇಂತಹ ಘನಘೋರ ಯಡವಟ್ಟಾಯ್ತು?. ಇಲ್ಲಿ ನಾವು ಕೇವಲ ಮುಗ್ಗರಿಸಲಿಲ್ಲ ಪದೇ ಪದೇ ಮುಗ್ಗರಿಸಿದ್ದೇವೆ. ಉತ್ತಮ ಸರ್ಕಾರವೆನ್ನುವುದು ಒಂದು ಲೊಳಲೊಟ್ಟೆ ಎಂದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ

ಮೊದಲನೆಯದಾಗಿ ಸ್ವಾತಂತ್ರ ಬಂದ ನಂತರ ನೆಹರೂ ಕನಸಿದ್ದು ಜಾತ್ಯಾತೀತ, ಸೆಕ್ಯುಲರ್ ರಾಷ್ಟ್ರದ ಜೊತೆಜೊತೆಗೇ ಶೈಕ್ಷಣಿಕ, ಕೈಗಾರಿಕೆಯ ಅಭಿವೃದ್ಧಿ ಹಾಗೂ ಇದರ ನಾಗಲೋಟ. ಉತ್ತಮ ಶಿಕ್ಷಣ ಆಗಿನ ಪ್ರಾಮಾಣಿಕ ಕನಸಾಗಿತ್ತು. ಸರ್ವರಿಗೂ ಶಿಕ್ಷಣ ಒಂದು ಮಂತ್ರವಾಗಿತ್ತು. ಅದಕ್ಕಾಗಿಯೇ “ಮಾನವ ಸಂಪನ್ಮೂಲ ಅಭಿವೃದ್ಧಿ” ಎನ್ನುವ ಇಲಾಖೆಯಡಿ ಶಿಕ್ಷಣ ಖಾತೆಯನ್ನು ಒಂದು ಪ್ರಮುಖ ಆದರ್ಶವನ್ನಾಗಿಯೇ ಪರಿಭಾವಿಸಿದ್ದರು. ಆಗ  ಮೌಲಾನ ಅಬ್ದುಲ್ ಕಲಾಂ ಅಜಾದರಂತಹ ಶ್ರೇಷ್ಟ ಶಿಕ್ಷಣ ತಜ್ಞ, ಬುದ್ಧಿಜೀವಿ, ಸಂಸದೀಯಪಟು ಶಿಕ್ಷಣ ಮಂತ್ರಿಗಳಾಗಿದ್ದರು. ಮೌಲಾನ ಅಜಾದರು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಗೆ ಒಂದು ಘನತೆಯನ್ನೇ ತಂದು ಕೊಟ್ಟರು. ಅಷ್ಟೇ ಅಲ್ಲ ಭವಿಷ್ಯದಲ್ಲೂ ಈ ಇಲಾಖೆಗೆ ಭದ್ರ ಅಡಿಪಾಯವನ್ನು ಹಾಕಿದರು. ನಂತರ ಬಂದ ಕೆ.ಎಲ್.ಶ್ರಿಮಾಲಿಯವರೂ ಇದೇ ದಾರಿಯಲ್ಲಿ ಸಾಗಿದ್ದರು. ಆದರೆ ನಂತರ ವರ್ಷಗಳಲ್ಲಿ ಕೇಂದ್ರದ ಈ ಶಿಕ್ಷಣ ಖಾತೆ ಸಂಪೂರ್ಣ ಅವಜ್ಞೆಗೂ, ಸಂಪೂರ್ಣ ತಿರಸ್ಕಾರಕ್ಕೂ ಒಳಗಾಯಿತು. ಉದಾಹರಣೆಗೆ ನೋಡಿ, ದೇಶದ ಸಾಮಾಜಿಕ ವ್ಯವಸ್ಥೆಯ ಪ್ರಾಥಮಿಕ ತಿಳುವಳಿಕೆ, ಹಾಗೂ ಸಮತಾವಾದದ ನೀತಿಯಡಿ ದೇಶದ, ಸಮಾಜದ ಜಮೀನ್ದಾರ ಅಥವಾ ಮೇಲ್ವರ್ಗಗಳ ಮಕ್ಕಳಿಗೂ ಹಾಗೂ ಸ್ಲಂನ, ಕೂಲಿ ಕಾರ್ಮಿಕರ, ಬಡವರ ಮಕ್ಕಳಿಗೂ ಸಮಾನ ಶಿಕ್ಷಣ ಅವಕಾಶ, ಅದಕ್ಕಾಗಿ ಅತ್ಯುತ್ತಮವಾದ ಪಠ್ಯಪುಸ್ತಕಗಳ ರಚನೆ ಇವೆಲ್ಲವನ್ನು ಆದರ್ಶಪ್ರಾಯವಾಗಿಯೇ ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡಂತಹ ಶಿಕ್ಷಣ ತಜ್ಞರು, ರಾಜಕೀಯ ಇಚ್ಛಾಶಕ್ತಿಯುಳ್ಳಂತಹ ರಾಜಕಾರಣಿಗಳು ಈ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯನ್ನು ನಡೆಸಬೇಕಾದ ಜಾಗದಲ್ಲಿ ಕಳೆದ ದಶಕಗಳಿಂದ ಬಂದು ಹೋದ ಫಕ್ರುದ್ದೀನ್ ಅಲಿ ಅಹ್ಮದ್, ಎಸ್.ಎಸ್.ರೇ, ಶಂಕರಾನಂದ (ನಮ್ಮ ರಾಜ್ಯದವರು), ಕರಣ ಸಿಂಗ್, ಎಸ್.ಬಿ.ಚವ್ಹಾಣ, ಪಿ.ವಿ. ನರಸಿಂಹರಾವ್, ಮುರಳೀ ಮನೋಹರ ಜೋಶಿ, ಅರ್ಜುನ್ ಸಿಂಗ್, ಈಗ ಕಪಿಲ್ ಸಿಬಾಲ್ ರಂತಹ ರಾಜಕಾರಣಿಗಳ ಕೈಯಲ್ಲಿ ದೇಶದ ಅತ್ಯಂತ  ಪ್ರಮುಖ ಇಲಾಖೆ ನಲುಗಿ, ಹಾದಿ ತಪ್ಪಿ ಹೋಯ್ತು. ಈ ಮೂಲಕ ಭವಿಷ್ಯದಲ್ಲಿ ಅತ್ಯುತ್ತಮ ಪ್ರಜೆಗಳನ್ನು, ಮಾನವತಾವಾದಿಗಳನ್ನು ನಿರ್ಮಿಸಬೇಕಾದಂತಹ ಮಾನವ ಸಂಪನ್ಮೂಲ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಯಿತು. ಇದೇ ಮಾತು ಕರ್ನಾಟಕದ ಮಟ್ಟಿಗೂ ಅನ್ವಯಿಸುತ್ತದೆ. ಈ ಪ್ರಾಥಮಿಕ ಶಿಕ್ಷಣದ ಉನ್ನತೀಕರಣವೇ ಈ  ಶತಮಾನದ ಅಭಿವೃದ್ಧಿಯ ಮಾನದಂಡವೆನ್ನುವ ಮಹಾತ್ವಾಕಾಂಕ್ಷೆಯ ರಾಜಕೀಯ ಇಚ್ಛಾಶಕ್ತಿಯ ಸ್ವರೂಪವನ್ನು  ಪಡೆದುಕೊಂಡು ಮುನ್ನುಗ್ಗಬೇಕಿದ್ದ ಈ ಮಾನವ ಸಂಪನ್ಮೂಲ ಅಭಿವೃದ್ಧಿ ಅರ್ಥಾತ್ ಸಾರ್ವಜನಿಕ ಶಿಕ್ಷಣ ಇಲಾಖೆ ಇಂದು ನಗಣ್ಯವಾಗಿದೆ. ಸಂಪೂರ್ಣವಾಗಿ ದಿಕ್ಕುತಪ್ಪಿ ಅನಾಥವಾಗಿದೆ. ಇವೆಲ್ಲಕ್ಕೂ ಕಳಶವಿಟ್ಟಂತೆ ಭ್ರಷ್ಟಾಚಾರದ ಕರಿನೆರಳು ಶಿಕ್ಷಣ ಇಲಾಖೆಯನ್ನೂ ಬಿಟ್ಟಿಲ್ಲ.ಅದರಲ್ಲೂ ಶಿಕ್ಷಕರ ವರ್ಗಾವಣೆ ರಾಜಕಾರಣಿಗಳಿಗೆ ಅಕ್ಷಯಪಾತ್ರೆ. ಇಲ್ಲಿನ ಭ್ರಷ್ಟತೆ ಅಳೆತೆಗೂ ಸಿಕ್ಕದು. ಅಲ್ಲದೆ ಸಂಬಂಧಪಟ್ಟ ಶಿಕ್ಷಣ ಮಂತ್ರಿಗಳೂ ಹಾಗೂ ಸಾರ್ವಜನಿಕ ಶಿಕ್ಷಣದ ಅಧಿಕಾರಿಗಳು ಪದೇ ಪದೇ ಕೊಚ್ಚಿಕೊಳ್ಳುವುದು ಮಧ್ಯಾಹ್ನದ ಬಿಸಿಯೂಟದಿಂದಾಗಿ ಶಾಲೆಗೆ ವಿದ್ಯಾರ್ಥಿಗಳು ಹೆಚ್ಚಾಗಿ ಸೇರುತ್ತಿದ್ದಾರೆ ಅಲ್ಲದೆ ಮಧ್ಯದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸುವ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು !! ಉತ್ತಮ ಭವಿಷ್ಯದಲ್ಲಿ ಆಸೆ ಇಟ್ಟು ಅದಕ್ಕಾಗಿ ಪ್ರಾಥಮಿಕ ಶಾಲೆ ಸೇರಬಯಸುತ್ತಾರೆ ಎಂದು ಈ ಜನ ಹೇಳಬೇಕಾಗಿತ್ತು. ಅದರೆ ಇವರು ತೋರಿಸಿಕೊಳ್ಳುತ್ತಿರುವುದು ತಮ್ಮ ಆತ್ಮವಂಚನೆಯನ್ನ. ಇದು ನಮ್ಮ ನಾಗರಿಕ ಸಮಾಜದ ಆತ್ಮಗೌರವಕ್ಕೇ ಧಕ್ಕೆ  ತರುವಂತಹ  ಹೇಳಿಕೆಗಳು.

ಇದೆಲ್ಲದಕ್ಕೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವ ಕೇಂದ್ರೀಯ ಆಡಳಿತ ವ್ಯವಸ್ಥೆ. ಇಲ್ಲಿ ಬೆಂಗಳೂರಿನಲ್ಲಿ ಶಿಕ್ಷಕರ ಭವನದಲ್ಲಿ ಕುಳಿತ ಅಧಿಕಾರಿಗಳು ಆಡಳಿತಾತ್ಮಕವಾಗಿ ಎಲ್ಲಾ ನಿರ್ಣಯಗಳನ್ನು ಏಕರೂಪವಾಗಿ ತೆಗೆದುಕೊಳ್ಳುತ್ತಾರೆ. ಇದು ರಾಜ್ಯದಾದ್ಯಾಂತ ಒಟ್ಟಾರೆ ಶಿಕ್ಷಣ ಸ್ವರೂಪಕ್ಕೆ ಧಕ್ಕೆ ಉಂಟು ಮಾಡುತ್ತದೆ. ಏಕೆಂದರೆ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸ್ಥಳೀಯತೆಗೆ (Local) ಬಹಳ  ಆದ್ಯತೆ ಕೊಡಬೇಕಾಗುತ್ತದೆ. ಏಕೆಂದರೆ ಶಾಲೆಗೆ ಬರುವ ವಿದ್ಯಾರ್ಥಿಗಳು ಸ್ಥಳೀಯತೆಯಿಂದಲೇ ರೂಪಿತಗೊಂಡಿರುತ್ತಾರೆ. ಇದು 6 ರಿಂದ 13 ವಯಸ್ಸಿನ ಮಕ್ಕಳನ್ನು ರೂಪಿಸಬೇಕಾದಂತಹ ಕಾಲಘಟ್ಟ. ಅತ್ಯಂತ ಸೂಕ್ಮವಾದ, ಕುಸುರಿ ಕಲೆಯ ಮಟ್ಟದ ಕಾರ್ಯದಕ್ಷತೆಯ ಅವಶ್ಯಕತೆ ಬಹಳ ಇದೆ. ಇಂತಹ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿ ಸಮುದಾಯಗಳನ್ನು ರೂಪಿಸಿ ಈ ಸಮುದಾಯಗಳನ್ನು ತಮ್ಮ ಆಡಳಿತಗಳಲ್ಲಿ ಒಳಗೊಳ್ಳುವಿಕೆಗಾಗಿ ವೇದಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಆ ಮೂಲಕ ತಮ್ಮ ಕಾರ್ಯನೀತಿಯನ್ನು ಕಾನೂನುಬದ್ಧವಾಗಿ ರೂಪಿಸಿಕೊಳ್ಳಬೇಕಾಗುತ್ತದೆ. ಇದು ಸಾಧ್ಯವಾದರೆ ಆಗ ಮಸಲ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ, ಅಥವಾ ತಾಲೂಕು ಪಂಚಾಯ್ತಿ ಮಟ್ಟದಲ್ಲಿ ಬರುವ ಶಾಲೆ ಒಂದು ವೇಳೆ ಯಾವುದೇ ರೀತಿಯ ತೊಂದರೆಗೊಳಗಾದರೂ ಅಲ್ಲಿನ ಸ್ಥಳೀಯ ಸಂಸ್ಥೆಗಳೇ ಇದನ್ನು ಸರಿಪಡಿಸಲು ಮುಂದಾಗುತ್ತವೆ. ಏಕೆಂದರೆ ಇದು ಅವರಿಗೆ ವಹಿಸಿರುವ ಜವಾಬ್ದಾರಿಯ ಜೊತೆಗೆ ಊರಿನ ಮರ್ಯಾದೆಯ ಪ್ರಶ್ನೆ ಮುಖ್ಯವಾಗುತ್ತದೆ. ಆದರೆ ಇದಕ್ಕೆ ಅಪಾರವಾದ ಶ್ರಮ, ಅಧ್ಯಯನ, ಸಮರ್ಪಣಾ ಮನೋಭಾವ ಬೇಕಾಗುತ್ತದೆ. ಆದರೆ ಬೆಂಗಳೂರಿನ ಲಾಬಿ ನಗರದಿಂದ ಹೊರಡುವ ಅಡಳಿತಾತ್ಮಕ ಏಕಪಕ್ಷೀಯ ನಿರ್ಧಾರಗಳ ತಿರುಳು, ಅದರ ಸ್ವರೂಪಗಳು ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕುಗಳು, ಗ್ರಾಮಗಳನ್ನು ಒಳಗೊಳ್ಳುವುದೇ ಇಲ್ಲ. (ಸದ್ಯಕ್ಕೆ ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳ ಬಲಿಷ್ಟ ಹಿಡಿತದಲ್ಲಿರುವ ನಮ್ಮ ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳ ಕಾರ್ಯಕ್ಷಮತೆಯನ್ನು,  ಸಾಮಾಜಿಕ ನ್ಯಾಯದ ಒಳತೋಟಿಯನ್ನು ಅಳೆಯಲು ಮತ್ತೊಂದು ಅಧ್ಯಯನವೇ ಬೇಕಾಗುತ್ತದೆ). ಇದು ಒಂದು ರೀತಿಯಲ್ಲಿ ಧ್ವಂಸ ಪ್ರವೃತ್ತಿಯದ್ದಾಗಿರುತ್ತದೆ. ಈ ಮೂಲಕ ವೈವಿಧ್ಯತೆಯನ್ನು ಒಳಗೊಳ್ಳುವ ಏಕತೆಯ ಕನಸು ಸಂಪೂರ್ಣವಾಗಿ ನಿರ್ನಾಮವಾಗುತ್ತದೆ. ಪುಟ್ಟ ವಿದ್ಯಾರ್ಥಿಗಳು ನಲುಗಿಹೋಗುತ್ತಾರೆ. ಎರಡನೇಯದಾಗಿ ಸದಾ ಕಾಲ ಜೀವಂತಿಕೆಯ, ಹುಮ್ಮಸ್ಸಿನ ಚಟುವಟಿಕೆಗಳು, ನಿರಂತರವಾಗಿ ಹೊಸದನ್ನು ಚಿಂತಿಸುವ ಮನಸ್ಸುಗಳ ಅವಶ್ಯಕತೆ ಬೇರೆ ಎಲ್ಲಾ ಇಲಾಖೆಗಿಂತಲೂ ಶಿಕ್ಷಣ ಇಲಾಖೆಗೆ ಜರೂರತ್ತಿದೆ. ಆದರೆ ನಮ್ಮಲ್ಲಿ ಅದು ಸಂಪೂರ್ಣವಾಗಿ ನಶಿಸಿಹೋಗಿದೆ. ಆದರೆ ಕೇಂದ್ರೀಕೃತ ನೌಕರ ವರ್ಗಗಳು ಸದಾ ಕಾಲ ಯಾವುದಾದರೊಂದು ಕಡತಗಳನ್ನು ಹೊತ್ತುಕೊಂಡು ಓಡಾಡುತ್ತಿರುವುದನ್ನು ನಾವೆಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆಗಳಲ್ಲಿ ನೋಡಬಹುದು. ಅವು ಮತ್ತೇನಲ್ಲದೆ ವರ್ಗಾವಣೆಗಳದ್ದೋ, ಟಿಎ, ಡಿಎಗಳದ್ದೋ, ಇಲ್ಲಾ ಸಚಿವರ ಹಾಗೂ ಶಿಕ್ಷಣಾದಿಕಾರಿಗಳ ದಿನನಿತ್ಯದ ಸಮಾರಂಭಗಳದ್ದೋ, ಇತ್ಯಾದಿ ಇಷ್ಟೇ. ಬೇರಿನ್ನೇನು ಇರುವುದೇ ಇಲ್ಲ. ಇದರಿಂದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ನೌಕರಶಾಹಿಯ ಸಂಪೂರ್ಣ ನಿಷ್ಕ್ರಿಯತೆ, ಇಲ್ಲಿ ಚಲನಶೀಲತೆಯೇ ನಿಂತು ಹೋಗಿರುವ ವ್ಯವಸ್ಥೆ, ಕೇವಲ ಕಡತಗಳ ವಿಲೇವಾರಿಯನ್ನು ಮಾಡಿಕೊಂಡಿರುವ ಇಲ್ಲಿನ ನೌಕರ ವರ್ಗದಿಂದ ಅದಕ್ಕಿಂತ ಹೆಚ್ಚಿನದನ್ನು ಆಪೇಕ್ಷಿಸುವುದೇ ಮೂರ್ಖತನವಾಗುತ್ತದೆ. ಏಕೆಂದರೆ ಇದಕ್ಕೆ ಅಪರೂಪದ ವೈಚಾರಿಕ, ಪ್ರಗತಿಪರ ರಾಜಕೀಯದ ಸ್ಪರ್ಶ ನಿರಂತರವಾಗಿ ಇರಬೇಕಾಗುತ್ತದೆ. ಆಗಲೇ ಇಲ್ಲಿನ ನೌಕರ  ಶಾಹಿ ಗುಂಪು ಉತ್ತೇಜಗೊಳ್ಳುತ್ತದೆ. ಆದರೆ ಸರ್ಕಾರಗಳಿಗೆ ಬೇಕಾಗಿರುವುದು ವೈಯುಕ್ತಿಕವಾಗಿ ಆರ್ಥಿಕ ಲಾಭ ತಂದುಕೊಡುವ ಇಲಾಖೆಗಳು ಮಾತ್ರ.ಏಕೆಂದರೆ ಇಲ್ಲಿ ತಮ್ಮ ಸಂಪನ್ಮೂಲದ ಅಭಿವೃದ್ಧಿ ತುಂಬಾ ಕಡಿಮೆ ಇರುವುದರಿಂದ ಇವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಎಂದರೆ ಇನ್ನಿಲ್ಲದ ಅಲರ್ಜಿ. ಮಲತಾಯಿ ಧೋರಣೆ.

ನಮ್ಮದು ರಾಜ್ಯವಾರು, ಜಿಲ್ಲಾವಾರು, ತಾಲೂಕು ಮಟ್ಟದಲ್ಲೂ ಜೀವನದ ವಿವಿಧ ರಂಗಗಳಲ್ಲಿ ವಿವಿಧ ಭಿನ್ನತೆಗಳನ್ನೊಳಗೊಂಡ, ವಿವಿಧ ಜಾತಿ, ಕೋಮುಗಳನ್ನೊಳಗೊಂಡ ಗಣರಾಜ್ಯ. ಇದು ದೇಶಕ್ಕೆ ಅನ್ವಯಿಸಿದ ಹಾಗೆಯೇ ರಾಜ್ಯಗಳಿಗೂ, ಹಾಗೆಯೇ ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು, ಗ್ರಾಮಗಳಿಗೂ ಅನ್ವಯಿಸುತ್ತದೆ. ಯಾವುದೇ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ರಚಿಸುವಾಗ ವೈವಿಧ್ಯತೆಯನ್ನೂ ಗಮನದಲ್ಲಿರಿಸಿಕೊಳ್ಳಲೇಬೇಕು. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ. ನಮ್ಯ ಪಠ್ಯ ಪುಸ್ತಕಗಳು ಏಕರೂಪಿ. ಇಲ್ಲಿನ ಪುರೋಹಿತಶಾಹಿ ಮನಸ್ಸು ಬಹುರೂಪಿಯನ್ನು ನಿರಾಕರಿಸುತ್ತದೆ.ಶಂಕರಾಚಾರ್ಯ, ರಾಮಾನುಜಾಚಾರ್ಯರ ಬಗ್ಗೆ ಪುಸ್ತಕಗಳಲ್ಲಿ ಪಾಠವಾಗಿ ಬರುತ್ತದೆ. ಆದರೆ ಅಲ್ಲಮ, ಮುಂಟೇಸ್ವಾಮಿ ಮಾಹಿತಿ ರೂಪವಾಗಿಯೂ ಬರುವುದೇ ಇಲ್ಲ. ಏಕೆಂದರೆ ಒಂದು ವೇಳೆ ಈ ಅಲ್ಲಮ, ಮುಂಟೇಸ್ವಾಮಿಯವರು ಪಠ್ಯಪುಸ್ತಕಗಳಲ್ಲಿ ಪ್ರಾಥಮಿಕ ಹಂತದಿಂದಲೇ ಸೇರಿಕೊಂಡಿದ್ದರೆ ಇಂದು ವೈದಿಕಶಾಹಿ ಪರಂಪರೆಯ ಭಗವದ್ಗೀತೆ ಅಲ್ಲಿ ಇರುತ್ತಲೇ ಇರಲಿಲ್ಲ. ಅಷ್ಟೊಂದು ವೈಚಾರಿಕ ಪ್ರಖರತೆ, ಜನಪರತೆ ಈ ಧರೆಗೆ ದೊಡ್ಡವರದು. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಟೇ ಸ್ವಾಮಿ, ಮಲೆ ಮಹದೇಶ್ವರ, ಸಿದ್ದಯ್ಯ ದೇವರುಗಳನ್ನು ತಮ್ಮ ಗರ್ಭಗುಡಿಯೊಳಗೆ ಬಿಟ್ಟು ಕೊಂಡೇ ಇಲ್ಲ. ಈ ಧರೆಗೆ ದೊಡ್ಡವರ ಬಗ್ಗೆ ವಿದ್ಯಾರ್ಥಿಗಳಿಗೆ ಗೊತ್ತಾಗುವುದು ಒಂದು ವೇಳೆ ಅವರು ತಮ್ಮ ಕಾಲೇಜು ಶಿಕ್ಷಣದಲ್ಲಿ ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡರೆ ಮಾತ್ರ. ಇಲ್ಲದಿದ್ದರೆ ಇಲ್ಲವೇ ಇಲ್ಲ. ಹೀಗಾಗಿ ಕನ್ನಡದ ಅತ್ಯಂತ ಪ್ರಗತಿಪರ ಪರಂಪರೆ, ಕೇವಲ ಅಕಡೆಮಿಕ್ ಚಿಂತನೆಗಳಲ್ಲಿ, ಸಂಶೋದನೆಗಳಲ್ಲಿ ಉಳಿದುಕೊಳ್ಳುತ್ತದೆ. ಇದು ಅತ್ಯಂತ ಮಾರಕ. ಇದು ಕೇವಲ ಒಂದು ಉದಾಹರಣೆ ಮಾತ್ರ.  ಇಲ್ಲಿ ಅಂಕೆ, ನೀತಿ ಎಚ್ಚರ ತಪ್ಪಿದರೆ ಪುಸ್ತಕಗಳು ಜಾತಿವಾದವನ್ನು, ಕೋಮುವಾದವನ್ನೂ, ಫ್ಯೂಡಲಿಸಂನ್ನೂ ತನ್ನೊಡಲೊಳಗೆ ತುಂಬಿಕೊಳ್ಳುತ್ತವೆ. ಇದು ಅನೇಕ ವೇಳೆ ರಾಜಕಾರಣಿಗಳ ಮೂಗಿನಡಿಯಲ್ಲೇ ರೂಪಿತಗೊಳುತ್ತವೆ. ಇದು ಅಂತಿಮವಾಗಿ ಬಹುಸಂಖ್ಯಾತರಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ವಿವರಿಸಲು ಮತ್ತೊಂದು ವೇದಿಕೆಯೇ ಬೇಕು.

ಕರ್ತರುಗಳಾದ ರಾಜಕಾರಣಿಗಳ ದುರಂತ ಈ ಮಟ್ಟದ್ದಾದರೆ ಕ್ರಿಯೆಗಳಾದ ಶಿಕ್ಷಕರ ಬಗ್ಗೆ ಹೇಳುವುದೇನಿಲ್ಲ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಕರ ಗುಣಮಟ್ಟದ ಬಗ್ಗೆ ಅನೇಕ ಅಪನಂಬಿಕೆಗಳು, ಆರೋಪಗಳು ಮಾಡಲ್ಪಡುತ್ತಿದೆ. ಇದು ಅನೇಕ ಸನ್ನಿವೇಶಗಳಲ್ಲಿ ಸತ್ಯವೆಂದು ಸಾಬೀತಾಗಿದೆ. ಪ್ರಾಥಮಿಕ ಶಾಲೆಯ ಶಿಕ್ಷಕರ ಗುಣಮಟ್ಟವೆಂದರೆ ಅದಕ್ಕೆ ಮೂರು ಪ್ರಮುಖ ಮಾನದಂಡಗಳಿವೆ.  ಮೊದಲನೇಯದಾಗಿ ವಿಷಯದ ಪರಿಣಿತಿ. ಇಲ್ಲಿ ಅಂತಹ ತಕರಾರು ಇರುವಂತಿಲ್ಲ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಶಿಕ್ಷಕರು ತಾವು ಕಲಿತ ವಿಷಯಗಳನ್ನು,ಅವುಗಳ ಮೇಲಿನ ಪರಿಣಿತಿಯನ್ನು ವರ್ಷಗಳ ಕಾಲ ನಿರಂತರವಾಗಿ ಅದೇ ಮಟ್ಟದಲ್ಲಿ ಉಳಿಸಿಕೊಳ್ಳುವಲ್ಲಿ ಸೋಲುತ್ತಾರೆ (sustenance). ಅಲ್ಲದೆ ಬದಲಾದ ಕಾಲಘಟ್ಟದಲ್ಲಿ ವಿಷಯಗಳ ಮೇಲಿನ ಗ್ರಹಿಕೆಗಳೂ ತನ್ನ ಮೂಲಭೂತ ಅಂಶಗಳನ್ನು ಇಟ್ಟುಕೊಂಡೂ ತಂತಾನೇ ಬದಲಾವಣೆಗಳಿಗೆ ಒಳಪಡುತ್ತಿರುತ್ತದೆ. ಇದು ಎಲ್ಲಾ ವಿಷಯಗಳಿಗೆ ಅನ್ವಯಿಸುತ್ತದೆ. ಈ ರೀತಿಯ ಗುಣಾತ್ಮಕ ಬದಲಾವಣೆಗಳಿಗೆ ನಮ್ಮ ಶಿಕ್ಷಕರು ಒಗ್ಗಿಕೊಳ್ಳುವುದೇ ಇಲ್ಲ. ಹೀಗಾಗಿ ವಿಜ್ನಾನ, ಗಣಿತ, ಸಮಾಜ ಶಾಸ್ತ್ರ ದಂತಹ ವಿಷಯಗಳ ಮೇಲಿನ ಪಠ್ಯಗಳು ಸದಾ UPDATED ಆಗುತ್ತಿರುವಂತೆಯೇ ಸಂಬಂಧಪಟ್ಟ ಶಿಕ್ಷಕರೂ ಈ ಹೊಸ ಅವಿಷ್ಕಾರಗಳನ್ನು ತಾವೂ ಅರಿತುಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿ ಹಾಗಾಗುವುದೇ ಇಲ್ಲ. ಎಲ್ಲರೂ ಬಾವಿಯೊಳಗಿನ ಕಪ್ಪೆಗಳಾಗಿಯೇ ಉಳಿದುಬಿಡುತ್ತಾರೆ ತಮಗೆ ಅರಿವಿಲ್ಲದೆಯೇ. ಇದು ಕ್ರಮೇಣ ವಿದ್ಯಾರ್ಥಿಗಳ ಜ್ಞಾನದ ಮೇಲು ಖುಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದಲ್ಲದೆ ಪ್ರತಿ ಶಾಲೆಗಳೂ ಶೇಕಡಾ 100 ರಷ್ಟು ಫಲಿತಾಂಶವನ್ನು ಕೊಡಲೇಬೇಕು ಎನ್ನುವ ಒತ್ತಡದಲ್ಲಿರುವ ಮುಖ್ಯೋಪಾಧ್ಯಯರು ಹಾಗೂ ಶಿಕ್ಷಕರು ಗುಣಮಟ್ಟವನ್ನು ಕಾಪಾಡಿಕೊಳ್ಳುವದಿಕ್ಕಿಂತಲೂ ಟಾರ್ಗೆಟ್ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ. ನನಗೆ ಪರಿಚಯವಿರುವ ಕೆಲವು ಮುಖ್ಯೋಪಾಧ್ಯಾಯರೊಂದಿಗೆ ಅನೇಕ ವೇಳೆ ಈ ವಿಷಯವನ್ನು ಕುರಿತು ಚರ್ಚಿಸಿದ್ದೇನೆ. ಆದರೆ ಅವರಿಗೂ ಯಾವುದೇ ಬಗೆಯ ಮಂತ್ರದಂಡಗಳು ಗೊತ್ತಿಲ್ಲ. ಏಕೆಂದರೆ ಸಧ್ಯಕ್ಕೆ ನಮ್ಮ ಬಹುಪಾಲು ಮುಖ್ಯೋಪಾಧ್ಯಾಯರುಗಳು ತಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ಶೇಕಡಾ 70 ರಷ್ಟು ಸಮಯವನ್ನು ಕೇವಲ ಆಡಳಿತಾತ್ಮಕ ಕೆಲಸಗಳಲ್ಲೇ ಕಳೆದು ಹೋಗುತ್ತಾರೆ. ಶಾಲೆಯ ಯಜಮಾನನ ಸ್ಥಿತಿಯೇ ಈ ಮಟ್ಟದ್ದಾದರೆ ಇನ್ನೆಲ್ಲಿಯ ಗುಣಮಟ್ಟದ  ಶಿಕ್ಷಣ. ಅದು ಗಗನ ಕುಸುಮ.

ಎರಡನೆಯದಾಗಿ ಕೆಲಸದಲ್ಲಿನ ವೃತ್ತಿಪರತೆ (Professionalism) . ಇದು ವಿದ್ಯಾರ್ಥಿಗಳ ಒಟ್ಟಾರೆ ಗುಣಮಟ್ಟವನ್ನು ನಿರ್ಧರಿಸುತ್ತದೆ. ಇದಕ್ಕೆ ನಮ್ಮ ಶಿಕ್ಷಕರ ತರಬೇತಿ ಪಠ್ಯಪುಸ್ತಕಗಳ ಗುಣಮಟ್ಟದ ಜೊತೆ ಜೊತೆಗೆ ಶಿಕ್ಷಕರ ವೈಯುಕ್ತಿಕ ತಿಳುವಳಿಕೆಗಳೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉದಾಹರಣೆಗೆ ಪ್ರತಿಯೊಬ್ಬ ಶಿಕ್ಷಕನೂ/ಶಿಕ್ಷಕಿಯೂ ತರಗತಿಯಲ್ಲಿ ಪಾಠ ಮಾಡುವಾಗ ಅಲ್ಲಿನ ವಿದ್ಯಾರ್ಥಿಗಳ ಸಾಮಾಜಿಕ, ಕೌಟುಂಬಿಕ ಹಿನ್ನೆಲೆ. ಅವರ ಪೋಷಕರ ಸಾಮಾಜಿಕ ಸ್ಥಿತಿಗತಿ ಇವೆಲ್ಲವನ್ನೂ ಗಮನದಲ್ಲಿರಿಸಿಕೊಳ್ಳಲೇಬೇಕು. ಇದಕ್ಕಾಗಿ ಇವರು ಅಪಾರ ಮಾನಸಿಕ ಸಿದ್ಧತೆ ಮಾಡಿಕೊಳ್ಳಲೇಬೇಕಾಗುತ್ತದೆ, ಕನಿಷ್ಟ ಮಟ್ಟದ ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಲೇ ಬೇಕಾಗುತ್ತದೆ ಹಾಗೂ ತಮ್ಮ ದೈನಂದಿನ ಕೆಲಸದ ಜೊತೆಗೆ   ಹೆಚ್ಚಿನ ಸಮಯವನ್ನು ಇದಕ್ಕಾಗಿಯೇ ಮೀಸಲಿರಿಸಲೇಬೇಕು. ಮೊದಲನೇ ಮಟ್ಟದ ಈ ವೃತ್ತಿಪರತೆಯನ್ನು ಸಾಧಿಸಲು ಮೊಟ್ಟಮೊದಲು ಶಿಕ್ಷಣ ತರಬೇತಿ ವಿಧಾನ, ಅದಕ್ಕೆ ಬೇಕಾದ ಪರಿಕರಗಳು ಅಮೂಲಾಗ್ರವಾಗಿ ಬದಲಾಗಲೇಬೇಕು. ಈಗಿರುವ ಅತ್ಯಂತ ದೋಷಪೂರ್ಣ, ಬಾಲಿಶ, OUTDATED ತರಬೇತಿ ಪಠ್ಯಕ್ರಮಗಳಿಂದ ವೃತ್ತಿಪರ ತರಬೇತಿ ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಈಗಿನ ಈ ತರಬೇತಿ ವ್ಯಾಸಂಗ ಕ್ರಮ  ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರೂಪಿತವಾದದ್ದು. ಇದನ್ನು ತಮ್ಮ ತರಬೇತಿ ಶಿಕ್ಷಣದ ಅಡಿಯಲ್ಲಿ ವ್ಯಾಸಂಗ ಮಾಡುವ ಶಿಕ್ಷಕರಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೋಭೂಮಿಕೆ, ಅವರ ಸಾಮಾಜಿಕ ಹಿನ್ನೆಲೆ, ಅವರು ವಾಸಿಸುವ ಗ್ರಾಮದ ಪರಿಸರ ಇವೆಲ್ಲವೂ ಮನದಟ್ಟಾಗುವ ಸಾಧ್ಯತೆಗಳೇ ಕಡಿಮೆ. ಶಿಕ್ಷಣ ವ್ಯವಸ್ಥೆಯ ಈ ಮಧ್ಯಮ ವರ್ಗದ ಪರ ಸಾರ್ವತ್ರಿಕ ಒಲವು ಗ್ರಾಮೀಣ ವಿದ್ಯಾರ್ಥಿಗಳನ್ನು ನುಂಗಿಹಾಕಿದೆ. ಈ ಎಲ್ಲಾ ದೌರ್ಬಲ್ಯಗಳನ್ನು ಮೀರಲು ಶಿಕ್ಷಕರಲ್ಲಿ ಅಪಾರವಾದ ವೈಯುಕ್ತಿಕ ಅರ್ಪಣಾ ಮನೋಭಾವ ಬೇಕಾಗುತ್ತದೆ. ಆದರೆ ದುಖದ ಸಂಗತಿಯೆಂದರೆ ಬಹುಪಾಲು ಶಿಕ್ಷಕರಲ್ಲಿ ಇದರ ಗೈರುಹಾಜರಿ ಎದ್ದು ಕಾಣುತ್ತದೆ. ಇಂದಿನ ಬಹುಪಾಲು ಶಿಕ್ಷಕರು ತಮಗೆ ಗೊತ್ತಿಲ್ಲದೆಯೇ ತಮ್ಮ ಮನಸ್ಸು ಹಾಗೂ ಮಿದುಳನ್ನು ನಗರಕೇಂದ್ರಿತವಾಗಿರಿಸಿಕೊಂಡಿದ್ದಾರೆ. ಈ ರೀತಿ ನಗರೀಕರಣಗೊಂಡ ಶಿಕ್ಷಕರು ತಮ್ಮ ಅರಿವಿಗೆ ಮೀರಿ ಕೂಪಮಂಡೂಕಗಳಾಗುತ್ತಿದ್ದಾರೆ.ಜಾತ್ಯಾತೀತತೆಯನ್ನು ಮರೆಯುತ್ತಿದ್ದಾರೆ. ಆದರೆ ಇಲ್ಲಿ ನಿರಾಶವಾದಕ್ಕೆ ಅವಕಾಶವೇ ಇಲ್ಲ. ಅಂದಿನ ಕಾಲದ ಡೆಪ್ಯುಟಿ ಚೆನ್ನಬಸಪ್ಪ, ಗಂಗಾಧರೇಶ್ವರ ಮಡಿವಾಳ, ತುರುಮುರಿಯಂತಹ ಶ್ರೇಷ್ಟ ಶಿಕ್ಷಕರ ಪರಂಪರೆಯ ಕೊಂಡಿ ನಮ್ಮ ಕಾಲದ ಕೃಷ್ಣಮೂರ್ತಿ ಬಿಳಿಗೆರೆಯವರವರೆಗೂ ಬೆಳೆದಿದೆ. ಕಳೆದ 150 ವರ್ಷಗಳಿಂದ ಈ ಕೊಂಡಿ ಕಳಚಿಕೊಂಡಿಲ್ಲ. ನಿರಂತರವಾಗಿದೆ. ಆ ಕಾಲದಿಂದ ಇಂದಿನ ಕಾಲದವರೆಗೂ ಎಲ್ಲಾ ತಲೆಮಾರಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವಮಾನದಲ್ಲಿ ಕನಿಷ್ಟವೆಂದರೂ 2 ರಿಂದ 3 ಮಾದರಿ, ನಿಸ್ವಾರ್ಥ, ಸಮರ್ಪಣಾ ಮನೋಭಾವದ ಶಿಕ್ಷಕರ ಕೆಳಗೆ ಓದಿಯೇ ಇರುತ್ತಾರೆ. ಇವರಿಂದ ರೂಪುಗೊಂಡಿರುತ್ತಾರೆ. ಈ ಮಾದರಿ ಶಿಕ್ಷಕರು ಎಲೆಮರೆಯ ಕಾಯಿಯಾಗಿ ಈಗಲೂ ಇದ್ದಾರೆ. ಆದರೆ ಈ ಶಿಕ್ಷಕರ ಸಂಖ್ಯೆ ಒಂದು ಆಂದೋಲನದ ರೂಪು ಪಡೆದಾಗ ಮಾತ್ರ ಶಾಲೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಹುಟ್ಟುವುದಕ್ಕೆ ಸಾಧ್ಯ. ಇದರ ಬಗ್ಗೆ ನಮಗಂತೂ ಆಶಾವಾದವಿದೆ.

ಮೂರನೆಯದಾಗಿ ಶೇಕಡಾ 40 ರಷ್ಟು  ಶಿಕ್ಷಕರು ತಾವು ಕೆಲಸ ಮಾಡುವ ಊರಿನಲ್ಲಿ ವಾಸಿಸುವುದಿಲ್ಲ. ಪ್ರತಿದಿನ ಕೆಲಸಕ್ಕಾಗಿ ಸರಾಸರಿ 40 ಕಿ.ಮೀ. ಪರವೂರಿಗೆ ಪ್ರಯಾಣ ಮಾಡುತ್ತಾರೆ. ಇಲ್ಲಿ ವೃತ್ತಿಪರತೆ ಕುಂಠಿತಗೊಳ್ಳುತ್ತದೆ. ವೈಯುಕ್ತಿಕ ಹಿತಾಸಕ್ತಿ ಮೇಲುಗೈ ಪಡೆದು ಕೊಳ್ಳುತ್ತದೆ. ಇದಕ್ಕೆ ಬಲಿಯಾಗುವುದು ಎಂದಿನಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಒಂದು ಶಾಶ್ವತ ಪರಿಹಾರವೇ ಇಲ್ಲ. ಇನ್ನೂ ಗೊಂದಲಗಳಿವೆ. ಇದಕ್ಕೆ ರಾಜಕಾರಣಿಗಳ ಪ್ರಾಮಾಣಿಕ ಹಸ್ತಕ್ಷೇಪ ಬೇಕಾಗುತ್ತದೆ. ಆದರೆ ಭ್ರಷ್ಟ ರಾಜಕಾರಣಿ ಇಂತಹ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡುವುದೇ ಹಣ ಗಳಿಸಲು. ಇಲ್ಲಿ ವೈದ್ಯ ಹೇಳಿದ್ದೂ ಹಾಲು ಅನ್ನ ರೋಗಿ ಬಯಸಿದ್ದೂ ಹಾಲು ಅನ್ನ ಎನ್ನುವ ವ್ಯವಸ್ಥೆ ಜಾರಿಗೊಂಡಾಗ ಇನ್ನೆಲ್ಲಿಯ ವೃತ್ತಿಪರತೆ !! ಅದು ಶಿವಾಯ ನಮ:.

ಇನ್ನು ನಮ್ಮ ಪರೀಕ್ಷಾ ಪದ್ಧತಿ. ಇದು ಗಾಯದ ಮೇಲೆ ಬರೆ ಎಳೆದಂತೆ. ಅವ್ಯವಸ್ಥೆಯ ಅಗರವಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ ಪರೀಕ್ಷಾ ಪದ್ಧತಿ, ಸಿದ್ದಪಡಿಸುವ ಪ್ರಶ್ನೆಪತ್ರಿಕೆಗಳು ಎಲ್ಲವೂ ಓಬಿರಾಯನ ಕಾಲಕ್ಕೆ ಸೇರಿದ್ದು. ಇಲ್ಲಿ ವಿದ್ಯಾರ್ಥಿಗಳು ನಿಜದ ಜ್ಞಾನಾರ್ಜನೆಯ ಬದಲು ಅದರ ಇಲಾಖೆಗಳ ಅಸಮರ್ಥತೆಯ ಒಳಸುಳಿಗೆ ಬಲಿಯಾಗಿ ಎಲ್ಲಿಯೂ ಸಲ್ಲದಂತವರಾಗುತ್ತಾರೆ.ಏಕೆಂದರೆ ಮುಂದಿನ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಗಳಿಸುವ ಅಂಕಗಳೇ ಮಾನದಂಡವನ್ನಾಗಿ ಪರಿಗಣಿಸುತ್ತಿರುವಾಗ ಇಲ್ಲಿ ವೈಯುಕ್ತಿಕ ಪ್ರತಿಭೆಯನ್ನು ಅಳೆಯುವ ಮಾನದಂಡ ಎಷ್ಟೇ ದೋಷಪೂರಿತವಾಗಿದ್ದರೂ ಇದರ ಬಲಿ ಬಡ ವಿದ್ಯಾರ್ಥಿಗಳು.

ಇಷ್ಟೆಲ್ಲಾ ಶೋಚನೀಯ ಪರಿಸ್ಥಿಯಲ್ಲಿ ನಮ್ಮ ಕೇಂದ್ರದಲ್ಲಿ ಕಪಿಲ್ ಸಿಬಲ್‌ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅವರಿಗೆ ಶತಕೋಟಿಗಳ ವ್ಯವಹಾರವುಳ್ಳ, ಗ್ಲಾಮರ್ ಇರುವ ಕಮುನಿಕೇಶನ್ಸ್  ಖಾತೆಯ ಮೇಲೆ ಅಪಾರ ಪ್ರೀತಿ ಹಾಗೂ ಗಮನ. ಇವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಏನಾದರೂ ಮಾತನಾಡಿದ್ದರೆ ಅದು ಉನ್ನತ ಶಿಕ್ಷಣದ ಬಗ್ಗೆ. IIT, IIMಗಳ ಬಗ್ಗೆ ಮಾತ್ರ. ಅವುಗಳನ್ನು ಇನ್ನಷ್ಟು ಬಲಪದಿಸುವ ಕಾರ್ಯತಂತ್ರದ ಬಗ್ಗೆ ಮಾತ್ರ. ಮತ್ತದೇ ಸಮಾಜದ ಮಧ್ಯಮ, ಮೇಲ್ಮಧ್ಯಮ ವರ್ಗಗಳ ಹಿತಾಸಕ್ತಿ.ಮುಂಬರುವ ರಾಜಕೀಯ ವ್ಯವಸ್ಥೆ ಕೂಡ ಇದರ ಬಗ್ಗೆ ಯಾವ ಬೆಳಕನ್ನು ಚೆಲ್ಲುವ ಸಾಧ್ಯತೆಗಳು ತುಂಬಾ ಕಡಿಮೆ. ಎಂದಿನಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ನಿರ್ಲಕ್ಷ ಧೋರಣೆಯಿಂದ ನಾಶವಾಗುತ್ತಿದೆ. ಅಷ್ಟು ಮಾತ್ರ ನಿಜ.  ಇನ್ನು ನಮ್ಮ ರಾಜ್ಯದ ಶಿಕ್ಷಣ ಮಂತ್ರಿ ಸಂಘಪರಿವಾರದ ಸ್ವಂಯಂಸೇವಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು. ಇವರಿಗೆ ಮೇಲಿನ ಎಲ್ಲಾ ವಿಷಯಗಳಿಗಿಂತಲೂ ತಮ್ಮ ಪೂರ್ವಾಶ್ರಮದ ಆರ್.ಎಸ್.ಎಸ್. ಚಾಳಿಯನ್ನು ಮತ್ತೆ ಮತ್ತೆ ಜಾರಿಗೆ ತರಲೆತ್ನಿಸುತ್ತಾರೆ. ಮಾತೆತ್ತಿದರೆ ಶಿಕ್ಷಣದ ಅಮೂಲಾಗ್ರ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಧ್ವನಿಯ ಮೂಲ ಬೇರಿರುವುದು ಕೇಶವ ಕೃಪದಲ್ಲಿ. ಅಮೂಲಾಗ್ರ ಬದಲಾವಣೆ ಎಂದರೆ ಅಖಂಡ ಹಿಂದೂ ರಾಜ್ಯದ  ಪರಿಕಲ್ಪನೆಯನ್ನಾಧರಿಸಿದ ಕೋಮುವಾದ ಶಿಕ್ಷಣ ನೀತಿ. ಇದಕ್ಕೆ ಪ್ರಾಥಮಿಕ ಹಂತವಾಗಿ ಶಾಲೆಗಳಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಪ್ರಸ್ತಾಪ. ಆ ಮೂಲಕ ಭವಿಷ್ಯದ ಪ್ರಜೆಗಳು ಮೂಢನಂಬಿಕೆಗಳನ್ನು ತಲೆ ಮೇಲೆ ಹೊತ್ತುಕೊಂಡು ಅನ್ಯ ಧರ್ಮಗಳನ್ನು ದ್ವೇಷಿಸುವ ನಾಗರಿಕರಾಗಿ ಹೊರಹೊಮ್ಮುತ್ತಾರೆ.

ಇದಕ್ಕೆ ತೀವ್ರ ಪ್ರತಿರೋಧ ಎದುರಾದರೆ ಬೇಕಾದರೆ ಭಗವದ್ಗೀತೆಯ ಜೊತೆಜೊತೆಗೆ ಕುರಾನ್ ಹಾಗೂ ಬೈಬಲ್ ನ ಭಾಗಗಳನ್ನೂ ಸೇರಿಸೋಣ ಎನ್ನುವ ಕೋಮುವಾದದ ಆಷಾಡಭೂತಿತನ. ಧಾರ್ಮಿಕತೆಯೆಂದರೆ ಅದು ತೀರಾ ವೈಯುಕ್ತಿಕವಾದದ್ದು, ಅದನ್ನು ಕೇವಲ ಮನೆಯೊಳಗೆ ಮಾತ್ರ ಆಚರಿಸಿಕೊಳ್ಳಬೇಕು, ಸಾರ್ವಜನಿಕವಾಗಿ, ಅಧಿಕೃತವಾಗಿ ಎಲ್ಲೂ ಭೋದಿಸಬಾರದು ಎನ್ನುವ ಎಲಿಮೆಂಟರಿ ಶಿಕ್ಷಣವನ್ನು ಈ ಹಿಂದೂ ಧರ್ಮದ ಶಿಕ್ಷಣ ಸಚಿವ ಕಾಗೇರಿಯವರಿಗೆ ಈಗ ಅತ್ಯಂತ ತುರ್ತಾಗಿ ನೀಡಬೇಕಾಗಿದೆ. ಇವರಿಗೆ ಸರ್ವ ಶಿಕ್ಷಣ ಅಭಿಯಾನದ ಪ್ರಾಥಮಿಕ ಪಾಠಕ್ಕಾಗಿ ಮತ್ತೆ ಬಾ ಮರಳಿ  ಶಿಕ್ಷಣದ ತರಬೇತಿ ಕೊಡುವುದೊಳಿತು. ಇನ್ನೇನಾಗದಿದ್ದರೂ ಶಿಕ್ಷಣದ ಕೇಸರೀಕರಣವನ್ನಾದರೂ ಚಣ ಮಟ್ಟಿಗಾದರೂ ತಪ್ಪಿಸಬಹುದು. ಇಂತಹ ದಿಕ್ಕುತಪ್ಪಿದ ಪರಿಸ್ಥಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ, ಕನ್ನಡ ಮಾಧ್ಯಮದ ಶಾಲೆಗಳು ಇಂದು ತಲುಪಿರುವ ದುರಂತ ಸ್ಥಿತಿ. ನಮ್ಮೆಲ್ಲರ ಪ್ರೀತಿಯ ಅಭಿಮಾನದ ಕನ್ನಡ ಭಾಷೆ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮೇಲಿನ ಶಿಕ್ಷಣದ ಎಲ್ಲಾ ಅಡತಡೆಗಳನ್ನು ದಾಟಿ ತನ್ನ ಐಡೆಂಟಿಟಿಯನ್ನು ಮತ್ತೆ ಪುನರ್ ಪ್ರತಿಷ್ಟಾಪಿಸಿಕೊಳ್ಳಲು ಹೊಸ ದಿಕ್ಕಿನಲ್ಲಿ ಚಿಂತನೆಗಳ ಅವಶ್ಯಕತೆ ಇದೆ. ಸರ್ಕಾರಗಳ ಅನೈತಿಕ, ಅವೈಜ್ಞಾನಿಕ ಚಿಂತನೆಗಳು, ಅಪಾರವಾದ ಆರ್ಥಿಕ ಹಾಗೂ ಬೌದ್ಧಿಕ ಭ್ರಷ್ಟತೆ, ನಮಗೆ ಯಾವುದು ಆರ್ಥಿಕವಾಗಿ ಲಾಭ ಗಳಿಸಿಕೊಡುತ್ತದೆಯೋ ಅದನ್ನು ಮಾತ್ರ ನಾವು ಹಿಂಬಾಲಿಸುತ್ತೇವೆ ಹೊರತಾಗಿ ಈ ನಮ್ಮ ನೆಲ ನಮ್ಮ ಭಾಷೆ ಎನ್ನುವ ಅಭಿಮಾನವೇ ಒಂದು ಅರ್ಥಹೀನ ಚಟುವಟಿಕೆ ಎನ್ನುವ ನಮ್ಮ ಮಧ್ಯಮ,ಮೇಲ್ಮಧ್ಯಮ ವರ್ಗಗಳ ಆತ್ಮವಂಚನೆ, ಹಾಗೂ ಈ ಅತ್ಮವಂಚನೆಯ ತಿರುಳೇ ನಮ್ಮ ಕೆಳ ಮಧ್ಯಮ, ಕೆಳ ವರ್ಗಗಳಿಗೆ ಮಾದರಿಯಾಗಿರುವುದು, ಹಾಗೂ ನಮ್ಮೆಲ್ಲರ ಮೇಲಿನ ನೈತಿಕ ಅಧಪತನವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಕನ್ನಡದಲ್ಲಿ ಶಿಕ್ಷಣ ಎನ್ನುವ ಈ ಅಸ್ಮಿತೆ ಹಾಗೂ ಐಡೆಂಟಿಟಿಯನ್ನು ಮತ್ತೆ ಬಿತ್ತಿ ಬೆಳೆಸಬಹುದು. ಇದಕ್ಕಾಗಿ ಕೃಷ್ಣಮೂರ್ತಿ ಬಿಳಿಗೆರೆರಂತಹವರ ನಿಜದ ಶಿಕ್ಷಣ ತಜ್ಞರ ಮನದಾಳದ ನೋವಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಮಾತುಗಳು ಮುಂದಿನ ದಿಕ್ಕಿಗೆ ದಾರಿದೀಪವಾಗಬಲ್ಲವು. ಈ ಮಾತುಗಳು ಪುಸ್ತಕದ, ಅಕಡೆಮಿಕ್ ಬದನೇಕಾಯಿಯಲ್ಲ, ಬದಲಿಗೆ ಸ್ವತಹ ಗ್ರಾಮೀಣ ಶಿಕ್ಷಕನಾಗಿ ಅನುಭವಿಸಿ ಕಣ್ಣಾರೆ ಕಂಡಿದ್ದರ ಫಲ. ಈ ಕಾಲಘಟ್ಟದಲ್ಲಿ ನಾವು ಅತ್ಯಂತ ಎಚ್ಚರಿಕೆಯ ನಡೆಗಳನ್ನು ಇಡಬೇಕಾಗುತ್ತದೆ. ನಮ್ಮ ಕನ್ನಡ ಮಾಧ್ಯಮದ ಶಾಲೆಗಳ ಪರವಾಗಿನ ಹೋರಾಟವನ್ನು ಮೇಲಿನ ಎಲ್ಲಾ ಅಡೆತಡೆಗಳನ್ನು ಗಮನದಲ್ಲಿರಿಸಿಕೊಂಡು ಅದನ್ನು ಆದ್ಯತೆಯ ಆಧಾರದ ಮೇಲೆ ಹಂತ ಹಂತವಾಗಿಯಾದರೂ ನಿವಾರಿಸಿಕೊಂಡು, ಸರಿದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಇದಕ್ಕಾಗಿ ನಾವೆಲ್ಲ ನಮ್ಮನ್ನು ನಾವು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಲೇಬೇಕು ಮತ್ತು ಕಡೆಗೆ ಇದನ್ನು ತಾರ್ಕಿಕ ಅಂತ್ಯಕ್ಕೆ (ಅಂದರೆ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ)  ಮುಟ್ಟಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲೇಬೇಕು. ಇದಕ್ಕಾಗಿ ಅಪಾರ ಪರಿಜ್ಞಾನ ಹಾಗೂ ರೂಪುರೇಷೆ ಇಲ್ಲದಿದ್ದರೆ ನಮ್ಮ ಬೌದ್ಧಿಕ ಬಡಿವಾರಗಳಿಗೋಸ್ಕರ ಮತ್ತೊಮ್ಮೆ ಕಂಡವರ ಮಕ್ಕಳನ್ನು ಬಾವಿಗೆ ದೂಡಿದಂತಾಗುತ್ತದೆ. ಅಲ್ಲದೆ ಕೇವಲ ಚಿಂತನೆಗಳ ರೋಚಕತೆಗೋಸ್ಕರ, ಭಾಷೆಯ ಮೇಲಿನ ಭಾವುಕತೆಗೋಸ್ಕರ ನಾವು ನಡೆದುಕೊಂಡರೆ ಅರ್ವೆಲ್ ಹೇಳಿದಂತೆ “ನಾವು ಭಯಗ್ರಸ್ತ, ವಿಶ್ವಾಸ ಘಾತುಕ, ಶೋಷಣೆಯ, ದಿನ ಕಳೆದಂತೆ ಹೆಚ್ಚು ಹೆಚ್ಚು ಕ್ರೂರ ಜಗತ್ತನ್ನು ಸೃಷ್ಟಿ ಮಾಡುತ್ತಿದ್ದೇವೆ” ಎಂದು ಆಗುತ್ತದೆ.