ಬಳ್ಳಾರಿ ಹಿನ್ನೆಲೆಯಲ್ಲಿ ಉ-ಚಿ ಚುನಾವಣೆ ಅವಲೋಕನ – ಪ್ರಗತಿಪರರಿಗೊಂದು ಪಾಠ?


-ಬಿ. ಶ್ರೀಪಾದ ಭಟ್


 
ಇತ್ತ ಮುಂಬೈ ಕರ್ನಾಟಕಕ್ಕೂ ಸೇರದ ಅತ್ತ ಹೈದರಾಬಾದ್ ಕರ್ನಾಟಕಕ್ಕೂ ಸೇರದ ಟಿಪಿಕಲ್ ಬಯಲುಸೀಮೆ ಬರಡು ಪ್ರದೇಶದ ಬಳ್ಳಾರಿ ಜಿಲ್ಲೆಗೆ ಕರ್ನಾಟಕದ ಇತರೇ ಜಿಲ್ಲೆಗಳಂತೆ ತನ್ನದೇ ಆದ ಒಂದು ಅಸ್ಮಿತೆಯಾಗಲಿ, ಸಾಂಸ್ಕೃತಿಕ ಪರಂಪರೆಯಾಗಲಿ ಇಲ್ಲ. ಇದು ತನ್ನದೇ 7 ತಾಲೂಕುಗಳಾದ ಸಿರುಗುಪ್ಪ, ಹೊಸಪೇಟೆ, ಕೂಡ್ಲಿಗಿ, ಬಳ್ಳಾರಿ ಗ್ರಾಮಾಂತರ, ಹೂವಿನ ಹಡಗಲಿ, ಹಗರಿಬೊಮ್ಮನ ಹಳ್ಳಿ, ಸೊಂಡೂರು (ಸಿರುಗುಪ್ಪ ಹಾಗು ಬಳ್ಳಾರಿ ಗ್ರಾಮಾಂತರ ಹೊರತುಪಡಿಸಿ) ಇವುಗಳೊಂದಿಗೂ ಸಾಮಾಜಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಯಾವುದೇ ರೀತಿಯ ಸಾಮ್ಯತೆಯನ್ನು ಹೊಂದಿಲ್ಲ. ಈ ಜಿಲ್ಲೆ ಹೆಚ್ಚೂ ಕಡಿಮೆ ಕಳೆದ 2 ದಶಕಗಳಿಂದ ಆಂಧ್ರದ ರಾಯಲಸೀಮದ ಜಮೀನ್ದಾರಿ ವ್ಯಕ್ತಿತ್ವವನ್ನೂ, ಫ಼್ಯೂಡಲಿಸಂನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅದನ್ನೂ ಸಂಪೂರ್ಣವಾಗಿ ಹೊತ್ತುಕೊಂಡಿಲ್ಲ ಅಥವಾ ಒಳಗೊಂಡಿಲ್ಲ. ಈ ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶ ಈ ರೀತಿಯಾಗಿ ತೆಲುಗುಮಯವಾಗದಂತೆ ತೊಡರುಗಾಲಿಡುತ್ತಿರುವುದು ಅಲ್ಲಿನ ಕನ್ನಡದ ಜನತೆಯಿಂದ. ಆದರೆ ಈಗ ಇವರೂ ಅಲ್ಪಸಂಖ್ಯಾತರಾಗಿದ್ದಾರೆ. ಗಣಿಚೋರರಾದ ರೆಡ್ಡಿಗಳ ದೆಸೆಯಿಂದ ಕಳೆದ ಹತ್ತು ವರ್ಷಗಳಲ್ಲಿ ಇಡೀ ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ತೆಲುಗು ಭಾಷೆಯನ್ನು ಆಡು ಮಾತನ್ನಾಗಿಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಒಂದು ಕಾಲದಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದ ಅಲ್ಲಿನ ನಟರಾಜ ಹಾಗೂ ಉಮಾ ಚಿತ್ರಮಂದಿರಗಳು ಇಂದು ತೆಲಗು ಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿವೆ. ಅಲ್ಲಿನ ತಾಲೂಕ ಕಛೇರಿಗಳಲ್ಲಾಗಲಿ, ಡಿಸಿ ಆಫೀಸಿನಲ್ಲಾಗಲಿ, ನಗರಸಭೆಗಳಲ್ಲಾಗಲಿ ಎಲ್ಲಾ ವಿಭಾಗಳಲ್ಲಿಯೂ ವಿಜೃಂಭಿಸುತ್ತಿರುವುದು ತೆಲುಗು ಭಾಷೆ. ಕೇವಲ ಆಡಳಿತದಲ್ಲಿನ ವ್ಯವಹಾರ ಮಾತ್ರ ಕನ್ನಡದಲ್ಲಿದೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಇಲ್ಲಿನ ರಾಜಕೀಯವನ್ನು, ಶಾಸಕ ಕ್ಷೇತ್ರವನ್ನು ತನ್ನ ಹಿಡಿತದಲ್ಲಿರಿಸಿಕೊಂಡಿತ್ತು. ಆ ಹಿಡಿತ ಊಳಿಗಮಾನ್ಯದ, ಫ಼ೂಡಲಿಸಂನ ಕಪಿಮುಷ್ಟಿಯಾಗಿತ್ತು. ಅಲ್ಲಿ ಅಬಿವೃದ್ದಿ ಎನ್ನುವುದು ಮರೀಚಿಕೆಯಾಗಿತ್ತು. ಅಲ್ಲಿ ವಿಜೃಂಭಿಸುತ್ತಿದ್ದುದು ಕೇವಲ ಗೂಂಡಾಗಿರಿ ಮಾತ್ರ. ಜನತೆಯಲ್ಲಿ ಕೂಡ ಯಾವುದು ಜೀವಂತ ಸ್ಥಿತಿ, ಯಾವುದು ಸತ್ತಂತಹ ವ್ಯವಸ್ಥೆ ಎನ್ನುವ ಜಿಜ್ನಾಸೆ ಕೂಡ ಇರಲಿಲ್ಲ. ಇವರಲ್ಲಿ ಗೊಂದಲಗಳೇ ಇರಲಿಲ್ಲ. ಅವರಲ್ಲಿ ರಾಜಕೀಯ ಪ್ರಜ್ನೆಯಾಗಲಿ, ಮಹತ್ವಾಕಾಂಕ್ಷೆಯಾಗಲಿ ಮೈಗೂಡಿರಲೇ ಇಲ್ಲ. ಹೀಗಾಗಿ ಇಲ್ಲಿ ನಡೆದ ಸಮಾಜವಾದಿ, ಎಡಪಂಥೀಯ ಪ್ರಗತಿಪರ ಹೋರಾಟಗಳು ಸಾಮೂಹಿಕ ಜನ ಬೆಂಬಲವಿಲ್ಲದೆ ಸೊರಗಿದವು. ಈ ಪ್ರಗತಿಪರ ಹೋರಾಟಗಳು ದಾಸನ್ ಸಾಲೋಮನ್ ,ಶಾಂತರುದ್ರಪ್ಪ, ಸಿರಿಗೆರೆ ಬಸವರಾಜ್, ಅರವಿಂದ ಮಲೆಬೆನ್ನೂರು, ಶಾರದಮ್ಮ ಮಲೆಬೆನ್ನೂರುರಂತಹವರ ಆದರ್ಶದ, ಪ್ರಾಮಾಣಿಕತೆಯ, ಸಿದ್ಧಾಂತ ಆಧಾರಿತ ಹೋರಾಟದ ವ್ಯಕ್ತಿಗತ ನೆಲೆಯನ್ನು ಮಾತ್ರ ನೆಚ್ಚಿಕೊಂಡಿದ್ದವು. ಸಿರಿಗೆರೆ ಬಸವರಾಜು ಅವರು ಎಂಬತ್ತರ ದಶಕದಲ್ಲಿ ಆಗಿನ ಶಾಸಕರಾಗಿದ್ದ ಮುಂಡ್ಲೂರು ರಾಮಪ್ಪ ಹಾಗೂ ಬಸವರಾಜೇಶ್ವರಿಯವರ ವಿರುದ್ಧ ತಮ್ಮ ಏಕಾಂಗಿ ಹೋರಾಟವನ್ನು ನಡೆಸಿದ್ದರು. ಮುಂಡ್ಲೂರು ರಾಮಪ್ಪನವರದು ತೋಳ್ಬಲದ ದಬ್ಬಾಳಿಕೆಯ, ಫ಼ೂಡಲಿಸಂನ ರಾಜಕೀಯವಾದರೆ ( ಇವರ ತಮ್ಮ ರೈಲ್ವೆ ಬಾಬು ಆ ಕಾಲಕ್ಕೆ ಕುಖ್ಯಾತ ರೌಡಿಯಾಗಿದ್ದ) ಸಿರಿಗೆರೆ ಬಸವರಾಜು ಅವರದು ಪ್ರವಾಹದ ವಿರುದ್ಧದ ಅತ್ಯಂತ ಏಕಾಂಗಿ ಹೋರಾಟವಾಗಿತ್ತು. ಸಿರಿಗೆರೆ ಬಸವರಾಜು ಅವರ ಈ ಗೂಂಡಾಗಿರಿಯ ವಿರುದ್ಧದ ಬೀದಿ ಹೋರಾಟಕ್ಕೆ ಕೆಳವರ್ಗಗಳಿಂದ, ದಲಿತರಿಂದ ಅಪಾರ ಜನ ಬೆಂಬಲವಿತ್ತು. ಆದರೆ ಅಲ್ಲಿನ ಮಧ್ಯಮ ವರ್ಗ ಮಾತ್ರ ಸಿರಿಗೆರೆ ಬಸವರಾಜು ಅವರ ಪ್ರಗತಿಪರ ಹೋರಾಟಕ್ಕೆ ಸಂಪೂರ್ಣ ಅಸಡ್ಡೆಯನ್ನು, ನಿರ್ಲಕ್ಷ್ಯವನ್ನು ಪ್ರದರ್ಶಿಸಿತು. ಆದರೆ ದುರಂತವೆಂದರೆ ಬಳ್ಳಾರಿಯ ರಕ್ತಸಿಕ್ತ ರಾಜಕಾರಣಕ್ಕೆ ಬಲಿಯಾದ ಅಮಾಯಕ ಸಿರಿಗೆರೆ ಬಸವರಾಜು ಹತ್ಯೆಗೀಡಾದರು. ಅಲ್ಲಿಗೆ ಆ ಬರಡು ನೆಲದಲ್ಲಿ ಎಲ್ಲೋ ಒಂದು ಕಡೆ ಕ್ಷೀಣವಾಗಿಯಾದರೂ ಧ್ವನಿ ಹೊರಡಿಸುತ್ತಿದ್ದ ಜನಪರ, ಪ್ರಜಾಸತ್ತಾತ್ಮಕ ಹೋರಾಟದ ನೆಲೆಯೇ ಅಂತ್ಯಗೊಂಡಿತು.

ಸಿರಿಗೆರೆ ಪನ್ನರಾಜು ಅವರು ಸಿರಿಗೆರೆ ಬಸವರಾಜು ಅವರ ಸಹೋದರ. ಇಂತಹ ಅತ್ಯಂತ ನಿರಾಶದಾಯಕ ಹಿನ್ನೆಲೆಯ ಬಳ್ಳಾರಿಯಲ್ಲಿ 1989ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಮಂಡ್ಲೂರು ರಾಮಪ್ಪ ಹಾಗೂ ಪಕ್ಷೇತರ ಭಾಸ್ಕರನಾಯ್ಡು ( ಮಟ್ಕ ದೊರೆ) ಅವರ ವಿರುದ್ಧ ಪ್ರಗತಿಪರ ಹೋರಾಟಗಾರಾದ ಸಿರಿಗೆರೆ ಪನ್ನರಾಜು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಪನ್ನರಾಜು ಅವರಿಗೆ ಅಣ್ಣ ಸಿರಿಗೆರೆ ಬಸವರಾಜು ಅವರ ಜನಪ್ರಿಯತೆಯ ದೊಡ್ಡ ಅಲೆಯೇ ಆಶಾಕಿರಣ ಹಾಗೂ ನಂಬುಗೆಯ ತೇಲು ದೋಣಿ. ಆಗ ವಿದ್ಯಾರ್ಥಿಗಳಾಗಿದ್ದ ನಾವೆಲ್ಲ ವಿ,ಪಿ,ಸಿಂಗ್‌ರವರ ಜನಪ್ರಿಯತೆಯ ಪ್ರಭಾವಳಿಯಲ್ಲಿ ಸಿಲುಕಿಕೊಂಡು ಮೊಟ್ಟಮೊದಲ ಬಾರಿಗೆ  ಚುನಾವಣಾ ರಾಜಕೀಯದಲ್ಲಿ ಭಾಗವಹಿಸಿ ಸಿರಿಗೆರೆ ಪನ್ನರಾಜು ಪರವಾಗಿ ಚುನಾವಣ ಕಣದಲ್ಲಿ ಸಂಪೂರ್ಣ ಪ್ರಚಾರಕ್ಕೆ ತೊಡಗಿಕೊಂಡಿದ್ದೆವು. ಇದು ನಮ್ಮೆಲ್ಲರ ಮೊಟ್ಟ ಮೊದಲ ಬಹಿರಂಗ ಚುನಾವಣ ಪ್ರಯೋಗವಾಗಿತ್ತು. ಬಸವರಾಜು ಅವರ ಜನಪರ ಹೋರಾಟದ, ಕೆಳಮಧ್ಯಮ ವರ್ಗದ ಹಿನ್ನೆಲೆ, ಸರಳತೆಯಿಂದಾಗಿ ಸಹೋದರ ಪನ್ನರಾಜುರವರ ಜನಪ್ರಿಯತೆ ತೀವ್ರವಾಗುತ್ತಿತ್ತು. ನಾವೆಲ್ಲ ಸತತವಾಗಿ 15 ದಿನಗಳ ಕಾಲ ಸಂಪೂರ್ಣವಾಗಿ ನಮ್ಮನ್ನೆಲ್ಲ ಪನ್ನರಾಜು ಪರವಾಗಿ  ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆವು. ಆದರೆ ಆಗ ಮಂಡ್ಲೂರು ರಾಮಪ್ಪನವರ ಹಣ ಬಲ ಹಾಗೂ ಚುನಾವಣ ರಣತಂತ್ರಗಳ ಎದುರು ಜನಪ್ರಿಯರಾಗಿದ್ದರೂ ಪನ್ನರಾಜು ಸೋಲಬೇಕಾಯಿತು. ತನ್ನ ಹಣಬಲ ಹಾಗೂ ತೋಳ್ಬಲದಿಂದ ಮುಂಡ್ಲೂರು ರಾಮಪ್ಪ ಗೆದ್ದುಬಿಟ್ಟರು. ನಮಗೆಲ್ಲ ಆಗ ಈ ಶಕ್ತಿ ರಾಜಕಾರಣ ಹಾಗೂ ಹುಂಡಾ ರಾಜಕಾರಣದ ಹತ್ತಿರದ ಎಳ್ಳಷ್ಟೂ ಪರಿಚಯವಿಲ್ಲದ ಕಾರಣ ಜನಪ್ರಿಯತೆಯಿದ್ದೂ, ಅಪಾರ ಜನಬೆಂಬಲ, ವಿದ್ಯಾರ್ಥಿಗಳ ಬೆಂಬಲವಿದ್ದೂ ಪನ್ನರಾಜು ಅವರ ಸೋಲಿನ ಫಲಿತಾಂಶದಿಂದ ನಾವೆಲ್ಲ ತೀವ್ರ ನಿರಾಶೆಗೆ ಒಳಗಾಗಿದ್ದೆವು.

ಆದರೆ ಇದಕ್ಕಿಂತ ದುರಂತ ಬಳ್ಳಾರಿಗೆ ಹಾಗು ಅಲ್ಲಿನ ಜನತೆಗೆ ಮುಂದೆ ಕಾದಿದ್ದು ವಿಧಿಯ ಕಠೋರ ವಿಪರ್ಯಾಸ.ನಂತರ ನಡೆದದ್ದು ಸಂಪೂರ್ಣ ದುರಂತ ಕಥೆ. ಬಳ್ಳಾರಿಯ ಜನತೆ ಬೆಂಕಿಯಿಂದ ಬಿಡಿಸಿಕೊಳ್ಳಲು ಮುಳ್ಳೂರು ರಾಮಪ್ಪನವರ ತೆಕ್ಕೆಯಿಂದ ಹೊರಬಂದು ಗಣಿಚೋರರಾದ ರೆಡ್ಡಿಗಳು, ಭ್ರಷ್ಟ ರಾಜಕಾರಣಿ ಶ್ರೀರಾಮುಲು ಎನ್ನುವ ಕುದಿವ ಲಾವರಸದ ಪ್ರಪಾತಕ್ಕೆ ಬಿದ್ದು ಸಂಪೂರ್ಣವಾಗಿ ನಲುಗಿ ಹೋದರು. ಅಲ್ಲದೆ ಅಲ್ಲಿನ ಜನತೆ ತಮ್ಮ ಈ ವಿವೇಚನಾರಹಿತ ನಿರ್ಧಾರಗಳಿಂದ ಇಡೀ ಜಿಲ್ಲೆಯನ್ನೇ ಹಾಳುಗೆಡುವಲು ಪರೋಕ್ಷವಾಗಿ ಕಾರಣರಾದರು. ದುರಂತವೆಂದರೆ  ಇಡೀ ಈ ರೆಡ್ಡಿಗಳ, ಶ್ರೀರಾಮುಲು ಅವರ ಅನೈತಿಕ, ಭ್ರಷ್ಟ ರಾಜಕಾರಣಕ್ಕೆ ಬಲಿಯಾಗುತ್ತಿರುವುದು ಅಮಾಯಕರಾದ ಹಿಂದುಳಿದ ವರ್ಗಗಳ ಜನಾಂಗ. ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿಗಿಂತಲೂ ಇಂದಿನ ಇವರ ವರ್ತಮಾನ ಹಾಗು ಭವಿಷ್ಯ ಭೀಕರವಾಗಿದೆ. ಈಗ ಒಬ್ಬ ತರ್ಕರಹಿತ ಸಿದ್ದಾಂತರಹಿತ ರಾಜಕಾರಣಿಯಾದ ಶ್ರೀರಾಮುಲುರವರ ಹುಂಬತನದ ,ಭ್ರಷ್ಟ, ಗೊತ್ತು ಗುರಿಯಿಲ್ಲದ ಬೌದ್ಧಿಕ ದಿವಾಳಿತನದ ಸ್ಥಿತಿಯಿಂದಾಗಿ ಇಡೀ ಬಳ್ಳಾರಿ ಜಿಲ್ಲೆ ಮತ್ತೆ ಅತಂತ್ರ ಸ್ಥಿತಿಯಲ್ಲಿದೆ. ತಾನು ರೆಡ್ಡಿಗಳೊಂದಿಗೆ ಜೊತೆಗೂಡಿ ಅಕ್ರಮವಾಗಿ ಸಂಪಾದಿಸಿದ ಭ್ರಷ್ಟ ದುಡ್ಡಿನಿಂದ ಜನರಿಗೆ ಬೇಕಾಬಿಟ್ಟಿಯಾಗಿ ಹಂಚಿ ಅಮಾಯಕ ಜನರನ್ನು ತಮ್ಮ ಹಂಗಿನರಮನೆಯೊಳಗಿರಿಸಿಕೊಂಡಿದ್ದಾರೆ ಈ ಶ್ರೀರಾಮುಲು.

ಇದೆಲ್ಲವೂ ಶ್ರೀರಾಮುಲು ಅವರನ್ನು ಬೆಂಬಲಿಸುತ್ತಿರುವ ನಮ್ಮ ಕೆಲವು ಸಂಘಟನೆಗಳಿಗೆ, ಪ್ರಗತಿಪರ ಪತ್ರಕರ್ತರಿಗೆ ಗೊತ್ತಿಲ್ಲವೇ? ಗೊತ್ತಿದೆ! ಆದರೆ ಏತಕ್ಕೆ ಇಂತಹ ಅತ್ಮಹತ್ಯಾತ್ಮಕ ನಿಲುವು? ಇವರೆಲ್ಲಾ ಕಳೆದ 50 ವರ್ಷಗಳ ಬಳ್ಳಾರಿಯ ರಾಜಕೀಯ, ಸಾಮಾಜಿಕ ಹಿನ್ನೆಲೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಈ ಶ್ರೀರಾಮುಲು ಅವರ ಆಡೊಂಬಲವೇ ಬಳ್ಳಾರಿ. ಏಕೆಂದರೆ ಶ್ರೀರಾಮುಲು ಇಂದು ಪ್ರದರ್ಶಿಸುತ್ತಿರುವ ಅಮಾಯಕತ್ವ ಬಲು ದೊಡ್ಡ ನಟನೆ. ಗಣಿ ಲೂಟಿಯ, ಲೂಟಿಗೆ ಸಂಪೂರ್ಣವಾಗಿ ಸಹಕರಿಸಿದ ಪಾಪದ ಕೊಡದಿಂದ ಆಪರೇಷನ್ ಕಮಲವೆನ್ನುವ ಅತ್ಯಂತ ಹೇಯ ರಾಜಕೀಯ ಸಿದ್ಧಾಂತದಿಂದ ಕರ್ನಾಟಕ ರಾಜಕಾರಣವನ್ನು ಸಂಪೂರ್ಣ ಕುಲಗೆಡಿಸಿದ ಅಪಾದನೆಗಳಿಂದ ಹಾಗೂ ಬಳ್ಳಾರಿ ಜಿಲ್ಲೆಯನ್ನು ಒಂದು ಜೀತದ ಹಟ್ಟಿಯನ್ನಾಗಿ ಮಾಡಿದ ರೆಡ್ಡಿಗಳಿಗೆ ಸಂಪೂರ್ಣ ಹೆಗಲುಕೊಟ್ಟು ಸಹಕರಿಸಿದ ಶ್ರೀರಾಮುಲು ಎನ್ನುವ ಸಿದ್ಧಾಂತರಹಿತ, ಭ್ರಷ್ಟ ರಾಜಕಾರಣಿಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸಲೇ ಬಾರದು. ಹಿಂದೊಮ್ಮೆ ಇಂತಹ ಗತಿಗೆಟ್ಟ ರಾಜಕೀಯದ ವಿರುದ್ಧ ದನಿಯೆತ್ತಿದ ಸಿರಿಗೆರೆ ಬಸವರಾಜು ಅವರು ಬಳ್ಳಾರಿಯ ಫ಼್ಯೂಡಲಿಸಂನ ವಿರುದ್ಧ ಏಕಾಂಗಿ ಹೋರಾಟ ನಡೆಸಿದ್ದರು. ಇದೇ ಮಾದರಿಯ ಏಕಾಂಗಿ ಹೋರಾಟ ರಾಜ್ಯದ ಇತರೇ ಜಿಲ್ಲೆಗಳಲ್ಲಿ ಕೂಡ ಕಾಣಬಹುದು. ಈ ಏಕಾಂಗಿ ಹೋರಾಟದ ಮಾರ್ಗ ಎಂದೂ ಕಳಂಕಿತಗೊಳ್ಳದ, ಪ್ರಾಮಾಣಿಕ, ನಿಸ್ವಾರ್ಥ ಮಾರ್ಗ. ಇದು ಅನ್ಯಾಯದ ವಿರುದ್ಧದ ನಿರಂತರ ಹೋರಾಟ. ಪ್ರೊ.ಎಂ.ಡಿ.ಎನ್ ರವರ ಮಾರ್ಗವೂ ಇದೇ. ಲೋಹಿಯಾ ಮಾರ್ಗವೂ ಇದೇ. ಈ ಮಾರ್ಗವನ್ನು ನಾವು ಕೂಡ ಕೈಗೆತ್ತಿಕೊಳ್ಳಬೇಕು.

ಇಂದು ಸೆಮಿನಾರಗಳಲ್ಲಿ,ವಿಚಾರ ಸಂಕಿರಣಗಳಲ್ಲಿ ಮೈಮರೆತು ಆನಂದಿಸುತ್ತಿರುವ ಕನ್ನಡದ ಬುದ್ಧಿಜೀವಿಗಳು,ಪ್ರಗತಿಪರ ಚಿಂತಕರು ಇವುಗಳ ರೋಚಕತೆಯಿಂದ ಹೊರಬರಬೇಕಿದೆ. ಏಕೆಂದರೆ ಇಲ್ಲಿನ ಬಿಜೆಪಿಯ ಭ್ರಷ್ಟ ರಾಜಕಾರಣದ, ಕೋಮುವಾದದ ವಿರುದ್ಧ ನಿರಂತರ ಹೋರಾಟದ ಮಾತಿರಲಿ, ಸಂತೋಷ ಹೆಗ್ಡೆಯವರು ನಿರ್ಗಮಿಸಿದ ನಂತರ ಲೋಕಾಯುಕ್ತ ಸಂಸ್ಥೆಯ ಕಾರ್ಯ ವೈಖರಿಗಳು ಅತ್ಯಂತ ಅನುಮಾನಾಸ್ಪದವಾಗಿರುವುದು ನಮ್ಮ ಬುದ್ದಿಜೀವಿಗಳಿಗೆ ಕಾಣುತ್ತಿಲ್ಲವೇ? ಪ್ರಮುಖ ರಾಜಕಾರಣಿಗಳ ವಿರುದ್ಧದ ಕೇಸುಗಳಲ್ಲಿ ಲೋಕಾಯುಕ್ತ ಪೋಲೀಸರು ಅತ್ಯಂತ ತ್ವರಿತಗತಿಯಲ್ಲಿ ತಮ್ಮ ತನಿಖೆಯನ್ನು ಪೂರ್ಣಗೊಳಿಸಿ, ಕಳಂಕಿತರ ವಿರುದ್ಧ ಯಾವುದೇ ದೋಷಾರೋಪ ಪಟ್ಟಿಯನ್ನು ಸಲ್ಲಿಸದೇ ಬಿಜೆಪಿಯ ಆಪಾದಿತ ಎಲ್ಲ ಭ್ರಷ್ಟ ಮಂತ್ರಿಗಳನ್ನು ನಿರ್ದೋಷಿಗಳೆಂದು ಅತ್ಯಂತ ಅನುಮಾನಾಸ್ಪದವಾಗಿ ರಿಪೋರ್ಟ್ ನೀಡುತ್ತಿರುವುದು ನಮ್ಮ ಬುದ್ಧಿಜೀವಿಗಳಿಗೆ ಗೋಚರಿಸುತ್ತಿಲ್ಲವೇ? ಈ ಘಟನೆಗಳು ನಮ್ಮಲ್ಲಿ ತಲ್ಲಣಗೊಳಿಸುತ್ತಿಲ್ಲವೇ? ಎಲ್ಲಿ ಹೋಯಿತು ಇವರೆಲ್ಲರ ಆತ್ಮಸಾಕ್ಷಿ? ನಮಗೆಲ್ಲ ಇಷ್ಟು ಬೇಗನೇ ಸಿನಿಕತನ ಬಂದಿತೇ?

ಇಂದು ಕೇಸರೀಕರಣಗೊಂಡ ಜಿಲ್ಲೆ ಎಂದು ಅಪಖ್ಯಾತಿಗೊಳಗಾದ ಉಡುಪಿ ಜಿಲ್ಲೆ ಪಾರ್ಲಿಮೆಂಟರಿ ಉಪ ಚುನಾವಣೆಯಲ್ಲಿ ಬಿಜೆಪಿಯ ಕೋಮುವಾದಿ ಅಭ್ಯರ್ಥಿ ಸುನಿಲ್ ಕುಮಾರ್‌ನನ್ನು ಸೋಲಿಸಿದ್ದಾರೆ. ಜಯಪ್ರಕಾಶ್ ಹೆಗಡೆ ಗೆದ್ದಿದ್ದಾರೆ. ಇದಕ್ಕೆ ಜಯಪ್ರಕಾಶ್ ಅವರ ಉತ್ತಮ ಇಮೇಜ್ ಕಾರಣವಿರಬಹುದಾದರು ಎಲ್ಲದಿಕ್ಕಿಂತಲೂ ಬಲು ಮುಖ್ಯ ಕಾರಣ ಜನ ಕರ್ನಾಟಕವನ್ನು ಇನ್ನಿಲ್ಲದಂತೆ ಹಾಳುಗೆಡವಿದ ಭ್ರಷ್ಟ ಬಿಜೆಪಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಒಬ್ಬ ಉತ್ತಮ ಪರ್ಯಾಯ ಆಯ್ಕೆ ದೊರೆತರೆ ಜನತೆ ಈ ದಿಕ್ಕು ದೆಸೆಯಿಲ್ಲದ ಸಂಘ ಪರಿವಾರವನ್ನು ಮೂಲೆಗುಂಪು ಮಾಡಲು ಮನಸ್ಸು ಮಾಡಿರುವುದು ಉಡುಪಿಯ ಈ ಫಲಿತಾಂಶವೇ ಸಾಕ್ಷಿ. ಇದು ಜಡಗೊಂಡ ನಮ್ಮ ಬುದ್ದಿಜೀವಿಗಳಿಗೆ ಒಂದು ಮಾದರಿಯನ್ನು ತೋರಿಸಿಕೊಟ್ಟಿದೆಯಲ್ಲವೇ? ಇದನ್ನೇ ಮುಂದುವರಿಕೆಯಾಗಿ ಬೇರೆ ಜಿಲ್ಲೆಗಳ ಜನತೆಗೂ ಇದೇ ಮಾದರಿ ಉತ್ತಮ ಪರ್ಯಾಯ ಆಯ್ಕೆಯನ್ನು ರೂಪಿಸಲು ನಮ್ಮ ಪ್ರಗತಿಪರರಿಗೆ ಇರುವ ತೊಂದರೆಯಾದರೂ ಏನು? ಒಂದೇ ತೊಂದರೆ ಅದು ಇಚ್ಹಾಶಕ್ತಿಯ ಕೊರತೆ. ಒಂದೇ ತೊಂದರೆ ಅದು ಜಡತ್ವದ ತೊಂದರೆ. ಒಂದೇ ತೊಂದರೆ ಅದು ಹೋರಾಟಗಳ ಮಾದರಿಗೆ ಸಂಪೂರ್ಣವಾಗಿ ತಿಲಾಂಜಲಿಯನ್ನು ಕೊಟ್ಟಿರುವುದು. ಆದರೆ ಅನ್ಯಾಯದ ವಿರುದ್ಧದ ಹೋರಾಟ ನಿರಂತರವಾದದ್ದು. NO CEASEFIRE ಎನ್ನುವ ಮೂಲ ತತ್ವವನ್ನು ಇಷ್ಟು ಬೇಗ ಮರೆತುಹೋಗಬಾರದೆಂಬುದೇ ನಮ್ಮೆಲ್ಲರ ಕನವರಿಕೆ.

12 thoughts on “ಬಳ್ಳಾರಿ ಹಿನ್ನೆಲೆಯಲ್ಲಿ ಉ-ಚಿ ಚುನಾವಣೆ ಅವಲೋಕನ – ಪ್ರಗತಿಪರರಿಗೊಂದು ಪಾಠ?

  1. Ananda Prasad

    ಉಡುಪಿ-ಚಿಕ್ಕಮಗಳೂರು ಉಪಚುನಾವಣೆ ಫಲಿತಾಂಶದ ಬಗ್ಗೆ ಹೇಳುವುದಾದರೆ ಇಲ್ಲಿ ಬಿಜೆಪಿಯ ದುರಾಡಳಿತ, ಒಳಜಗಳ, ಅನೈತಿಕತೆ ಇತ್ಯಾದಿಗಳ ಹೊರತಾಗಿಯೂ ಮತ್ತು ಅದರ ಅಭ್ಯರ್ಥಿಯ ಕಳಂಕಿತ ವ್ಯಕ್ತಿತ್ವದ ಹೊರತಾಗಿಯೂ ಅದು ೩.೫೨,೦೦೦ ಮತಗಳನ್ನು ಪಡೆದುಕೊಂಡಿದೆ ಎಂದರೆ ಇಲ್ಲಿ ಹಿಂದುತ್ವದ ವೋಟು ಬ್ಯಾಂಕು ಹಾಗೇ ಇದೆ ಎಂದು ಅರ್ಥ. ಹೆಚ್ಚು ಸಾಕ್ಷರತೆ ಹೊಂದಿರುವ ಈ ಜಿಲ್ಲೆಯಲ್ಲಿ ಇನ್ನೂ ಹಿಂದುತ್ವದ ಅಮಲು ಹೋಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಬಿಜೆಪಿಯ ಕಳಂಕಿತ ವ್ಯಕ್ತಿತ್ವದ ಅಭ್ಯರ್ಥಿಗಿಂತ ಹೆಚ್ಚು ಸಮರ್ಥ ಅಭ್ಯರ್ಥಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ೭೨,೦೦೦ ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು. ಬಿಜೆಪಿಯ ದುರಾಡಳಿತ, ಒಳಜಗಳ, ಅನೈತಿಕ ರಾಜಕೀಯ ಇವುಗಳನ್ನು ಮತದಾರರು ಪರಿಗಣಿಸಿದ್ದಿದ್ದರೆ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಬರಬೇಕಾಗಿತ್ತು.

    ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ ಬಿಜೆಪಿ ಸರ್ಕಾರದ ಲಜ್ಜೆಗೇಡಿತನವನ್ನು ಕರ್ನಾಟಕದ ಸಾರಸ್ವತ ಲೋಕ ಮೂಕಪ್ರೇಕ್ಷಕನಾಗಿ ನೋಡುತ್ತಿರುವುದು ನಮ್ಮ ಕಾಲದ ದುರಂತ. ಮೂರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಇದ್ದರೂ ಯಾವೊಬ್ಬರೂ ಇದರ ಬಗ್ಗೆ ಧ್ವನಿಯೆತ್ತಿಲ್ಲ ಎಂದರೆ ನಮ್ಮ ನ್ಯಾಯ ಅನ್ಯಾಯದ ಸಮಷ್ಟಿ ಪ್ರಜ್ಞೆ ಸತ್ತು ಹೋಗಿದೆಯೆಂದೇ ಕಾಣುತ್ತದೆ. ಅನ್ಯಾಯಗಳನ್ನು ಪ್ರತಿಭಟಿಸುವಲ್ಲಿ ಸಾರಸ್ವತ ಲೋಕದ ಬುದ್ಧಿಜೀವಿಗಳು ಯಾವಾಗಲೂ ಮುಂದಿರಬೇಕು. ಇಂಥವುಗಳನ್ನು ಬುದ್ಧಿಜೀವಿಗಳು ಸಹಿಸಿಕೊಂಡು ಕೂತಿರುವುದು ವಿಷಾದನೀಯ.

    Reply
  2. prasad raxidi

    ಬಿಜೆಪಿ ಗಳಿಸಿದ ಮತಗಳನ್ನೆಲ್ಲ ಹಿಂದುತ್ವದ ಮತಗಳೆಂದು ಪರಿಗಣಿಸಬಾರದು, ಕೇವಲ ಒಟ್ಟು ಮತಗಳಲ್ಲಿ ಅದು ಒಂದು ಭಾಗವಷ್ಟೇ ಆಗಿದೆ, ಉಳಿದ ಮತಗಳು ಸ್ವಾತಂತ್ರ್ಯದ ನಂತರದ ಕಾಂಗ್ರೆಸಿನ (ಮತ್ತು ಇತರ ಪಕ್ಷಗಳಕೂಡಾ) ಅವಕಾಶವಾದಿ ರಾಜಕಾರಣದ ಫಲ. ಜನರಿಗೆ ಬಿಜೆಪಿಗಿಂತ ಪಕ್ಷವಾಗಿ ಕಾಂಗ್ರೆಸ್ ಭಿನ್ನವಾಗೇನೂ ಕಾಣುತ್ತಿಲ್ಲ (ಚುನಾವಣೆ ಸಮಯದಲ್ಲಿ ಉ-ಚಿ ಎರಡೂ ಜಿಲ್ಲೆಗಳ ಮತದಾರರಲ್ಲೂ ಇದು ವ್ಯಕ್ತವಾಗುತ್ತಿತ್ತು.)ಭ್ರಷ್ಟಾಚಾರದ ವಿಚಾರದಲ್ಲಂತೂ ಇಲ್ಲವೇ ಇಲ್ಲ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗಡೆಯವರ ವ್ಯಕ್ತಿತ್ವ ಗೆಲುವಿಗೆ ಅನುಕೂಲವಾಯಿತು. ಇನ್ನು ಸಾರಸ್ವತ ಲೋಕದ ಬುದ್ಧಿಜೀವಿಗಳ ಎಡೆಬಿಡಂಗಿತನದಿಂದ,ಅವರೇನೇ ಹೇಳಿದರೂ- ಸಾಮಾನ್ಯ ಮತದಾರರು ಅವರನ್ನು ಗಂಬೀರವಾಗಿ ಪರಿಗಣಿಸುತ್ತಿಲ್ಲ.

    Reply
    1. Ananda Prasad

      ಉ-ಚಿ ಉಪಚುನಾವಣೆಯಲ್ಲಿ ಈಗಲೂ ಹಿಂದುತ್ವದ ಮತಗಳು ಕೆಲಸ ಮಾಡಿರುವಂತೆ ಕಾಣುತ್ತದೆ. ಇಲ್ಲದೆ ಹೋದರೆ ಬಿಜೆಪಿ ಅಭ್ಯರ್ಥಿ ೩.೫೨,೦೦೦ ಮತಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಜೆಡಿಎಸ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಕ್ಕಲಿಗ ಮತಗಳನ್ನು ಒಡೆದಿದೆ. ಇಲ್ಲದೆ ಹೋದರೆ ಬಿಜೆಪಿ ಗೆಲ್ಲುವ ಸನಿಹ ಬರುತ್ತಿತ್ತು ಅಥವಾ ಗೆಲ್ಲುವ ಸಾಧ್ಯತೆಯೂ ಇದ್ದಿರುವಂತೆ ಚುನಾವಣಾ ಫಲಿತಾಂಶವನ್ನು ನೋಡಿದಾಗ ಅನಿಸುತ್ತದೆ. ಜೆಡಿಎಸ್ ನಿಂದ ನಿಂತವರು ಒಕ್ಕಲಿಗ ಅಭ್ಯರ್ಥಿ ಆದುದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳು ಪ್ರಾಪ್ತವಾಗಿವೆ. ಆ ಮತಗಳೆಲ್ಲ ಒಕ್ಕಲಿಗರದ್ದು ಎನಿಸುತ್ತದೆ. ಜೆಡಿಎಸ್ ಅಭ್ಯರ್ಥಿಗೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮತ ಲಭ್ಯವಾಗಿಲ್ಲ.
      ಕ್ಷೇತ್ರವಾರು ಮತ ಪ್ರಮಾಣ ಹೀಗಿದೆ.

      ವಿಧಾನಸಭೆ ಕ್ಷೇತ್ರವಾರು ಜಯಪ್ರಕಾಶ್ ಹೆಗಡೆ ಭೊಜೇಗೌಡ ಸುನಿಲ್ ಕುಮಾರ್
      ಕುಂದಾಪುರ 63,550 2108 54,438
      ಉಡುಪಿ 63,237 1546 51,824
      ಕಾಪು 50,450 2872 45,171
      ಕಾರ್ಕಳ 52,567 2295 53,879
      ಶೃಂಗೇರಿ 47,496 10,315 41,743
      ಮೂಡಿಗೆರೆ 40,949 14,882 32,136
      ಚಿಕ್ಕಮಗಳೂರು 39,705 23,864 41,827
      ತರೀಕೆರೆ 40,759 14,198 31,978
      ಒಟ್ಟು 3,98,723 72,080 35,2999

      Reply
      1. prasad raxidi

        ನಾನು ಹೇಳುತ್ತಿರುವುದು ಬಿಜೆಪಿ ಮತಗಳನ್ನೆಲ್ಲ ಹಿಂದುತ್ವದ ಮತಗಳೆಂದು ಭಾವಿಸಬಾರದು ಎಂದು,ಮತ್ತು ಸಾಮಾನ್ಯ ಮತದಾರ ಜಾತಿಯ ಮೇಲೆಯೇ ಒಗ್ಗಟ್ಟಾಗುತ್ತಾನೆ ಎನ್ನುವುದು,ನಾವು ಅಂದುಕೊಂಡಷ್ಟು(ಅದೃಷ್ಟವಶಾತ್) ನಿಜವಲ್ಲ.(77ನೇ ಇಸವಿಯಿಂದ ಇಂದಿನವರೆಗಿನ ಹಲವಾರು ಪಾರ್ಲಿಮೆಂಟ್,ನಿಂದ ಪಂಚಾಯತ್ವರೆಗಿನ ಎಲ್ಲ ಚುನಾವಣೆಗಳನ್ನು ಸಕ್ರಿಯವಾಗಿ ಎದುರಿಸುತ್ತಿರುವ ಗೆಳೆಯರ ಬಳಗದ ಸದಸ್ಯನಾಗಿ ಹೇಳುತ್ತಿದ್ದೇನೆ)

        Reply
        1. Ananda Prasad

          ಬಿಜೆಪಿ ಮತಗಳೆಲ್ಲ ಹಿಂದುತ್ವದ ಮತಗಳಲ್ಲ ಎಂಬುದು ನಿಜ ಆದರೆ ಬಿಜೆಪಿ ಭಾರೀ ಅಭಿವೃದ್ಧಿ ಕೆಲಸ ಮಾಡಿರದ ಕೆಲವು ಕ್ಷೇತ್ರಗಳಲ್ಲಿ ಪದೇ ಪದೇ ಗೆಲ್ಲುತ್ತಿರುವುದು ಹಿಂದುತ್ವದ ಮತಗಳ ಕಾರಣದಿಂದಲೇ ಆಗಿರುವಂತೆ ಕಾಣುತ್ತದೆ. ಇದು ಎಲ್ಲೆಡೆಯೂ ನಡೆಯುವುದಿಲ್ಲ. ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮಾತ್ರ ನಡೆಯುತ್ತದೆ ಮುಖ್ಯವಾಗಿ ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡ ಹಾಗೂ ಉಡುಪಿ ಪ್ರದೇಶದಲ್ಲಿ ಮಾತ್ರ. ಇದಕ್ಕೆ ಕಾರಣ ಸಂಘ ಪರಿವಾರದ ಕೆಲವು ಹಿಂದುತ್ವದ ವೋಟನ್ನು ಕಾಯ್ದುಕೊಂಡು ಬರುವ ತಂತ್ರಗಳು. ಅಭ್ಯರ್ಥಿಯ ಸಜ್ಜನಿಕೆ ನೋಡಿ ಗೆಲ್ಲಿಸುವುದಾದರೆ ಕಳೆದ ಬಾರಿ ಜಯಪ್ರಕಾಶ್ ಹೆಗ್ಡೆ ಉ-ಚಿ ಲೋಕಸಭೆ ಕ್ಷೇತ್ರದಲ್ಲಿ ನಿಂತಾಗಲೇ ಗೆಲ್ಲಬೇಕಾಗಿತ್ತು ಆದರೆ ಅವರು ಸೋತಿದ್ದರು. ಆ ಸೋಲಿಗೆ ಚಿಕ್ಕಮಗಳೂರಿನ ಒಕ್ಕಲಿಗ ಮತಗಳು ಕಳೆದ ಸಲದ ಬಿಜೆಪಿ ಅಭ್ಯರ್ಥಿ ಒಕ್ಕಲಿಗ ಸದಾನಂದ ಗೌಡರಿಗೆ ಬಿದ್ದಿರುವ ಕಾರಣದಿಂದ ಆಗಿರುವ ಸಂಭವ ಇದೆ.

          Reply
  3. Srini

    It is sheer non-sense to brand all BJP votes as Hindutva votes. I myself has voted for BJP – not because for their Hindi ideology. It was MP election and i am sending a representative to Delhi – not to bangalore. All UPA scams played a major role in me inclining towards BJP for MP election.

    Reply
    1. Ananda Prasad

      ನಾನು ಯಾವುದೆ ಪಕ್ಷಕ್ಕೆ ಸೇರಿದವನೂ ಅಲ್ಲ ಅಥವಾ ಯಾವ ಪಕ್ಷದ ಪರ ವಹಿಸುವವನೂ ಅಲ್ಲ. ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಹಗರಣಗಳಲ್ಲಿ ಮುಳುಗಿರುವುದು ನಿಜ, ಹೀಗಿದ್ದರೂ ಈಗ ಇರುವ ಮಟ್ಟದಲ್ಲಾದರೂ ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿದೆ. ಬಿಜೆಪಿ ಸಂಪೂರ್ಣ ಬಹುಮತದಲ್ಲಿ ಎಲ್ಲಿಯಾದರೂ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿ ಸ್ವರೂಪದ ಆಡಳಿತ ರೂಪುಗೊಳ್ಳುವ ಸಂಭನೀಯತೆ ಎದ್ದು ಕಾಣುತ್ತದೆ. ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ, ಸಂಘ ಪರಿವಾರದ ನಿಲುವುಗಳೇ ಅದರ ಸಂವಿಧಾನ. ಸಂಘದ ನಿಲುವುಗಳು ಹಿಂದಿದ್ದ ರಾಜಪ್ರಭುತ್ವ ಹಾಗೂ ಪುರೋಹಿತಶಾಹೀ ವ್ಯವಸ್ಥೆಯ ಪುನರುತ್ಥಾನದ ಪರವಾಗಿವೆ. ದೇಶದ ಖನಿಜ ಸಂಪತ್ತನ್ನು ಅಕ್ರಮವಾಗಿ ಪರದೇಶಗಳಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿಹಾಕಿ ರಾಜಕೀಯ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ ದೇಶದ್ರೋಹಿ ರೆಡ್ಡಿ ಸಹೋದರರು ಜೈಲಿಗೆ ಹೋದರೂ ಇಂದೂ ಅವರು ಬಿಜೆಪಿ ಸದಸ್ಯರೇ. ಅವರನ್ನು ಇಂದಿಗೂ ಪಕ್ಷದಿಂದ ಹೊರಹಾಕಿದ್ದು ಕಂಡು ಬರುವುದಿಲ್ಲ. ಹಲವು ಭ್ರಷ್ಟಾಚಾರದ ಆಪಾದನೆ ಹೊತ್ತು ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಮತ್ತು ಮೇಲ್ನೋಟಕ್ಕೆ ಪರಮ ಭ್ರಷ್ಟ ರಾಜಕೀಯವಾದ ಅಪರೇಷನ್ ಕಮಲ ನಡೆಸಿ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿದ ಹಾಗೂ ಭೀಕರ ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ಒಬ್ಬ ಮಾಜಿ ಮುಖ್ಯ ಮಂತ್ರಿಯನ್ನು ಇಂದಿನವರೆಗೂ ಪಕ್ಷದಿಂದ ಹೊರಗೆ ಹಾಕಲಾರದ ದುರ್ಬಲ ಬಿಜೆಪಿ ಹೇಗೆ ದೇಶವನ್ನು ಮುನ್ನಡೆಸುತ್ತದೆ ಹಾಗೂ ಭರವಸೆಯ ರಾಜಕೀಯ ಪಕ್ಷವಾದೀತು?

      Reply
      1. prasad raxidi

        ಆನಂದ ಅವರೆ, ನಾನು 77 ರ ಜೆ ಪಿ ಯವರಚಳುವಳಿಯಮೂಲಕ ಸಾರ್ವಜನಿಕ ಜೀವನಕ್ಕೆ ಬಂದವನು, ರೈತ, ದಲಿತ ಹಾಗೂ ಎಡಪಂಥೀಯ ಹೋರಾಟಗಳಲ್ಲಿ ಸಕ್ರಿಯವಾಗಿ ದುಡಿಯುತ್ತಬಂದವನು, ನನ್ನ ತಕರಾರು ಏನೆಂದರೆ ಕಾಂಗ್ರೆಸ್ಸಿನ ಸೆಕ್ಯುಲರ್ ವಾದವೂ ಪ್ರಾಮಾಣಿಕವಾದದ್ದಲ್ಲ, ಮತ್ತ ಅದು ನಾವೆಂದುಕೊಂಡಷ್ಟು ಪ್ರಜಾಸತ್ತಾತ್ಮಕ ಪಕ್ಷವೂ ಅಲ್ಲ. 92 ರ ನಂತರ ಬಿಜೆಪಿ ಮತ್ತು ಕಾಂಗ್ರೆಸಿನ ಆರ್ಥಿಕ ನೀತಿಯಲ್ಲೂ ಯಾವ ವೆತ್ಯಾಸವೂ ಇಲ್ಲ. ಕಾಂಗ್ರೆಸಿನ ಕೆಟ್ಟ ರಾಜಕಾರಣದಿಂದಲೇ ಬಿಜೆಪಿಯಂತಹ ಶಕ್ತಿಗಳು ಈಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ನೀವು ಬಿಜೆಪಿಯ ಬಗ್ಗೆ ಎತ್ತಿರುವ ತಕರಾರುಗಳನ್ನು ಕಾಂಗ್ರೆಸ್ ಸೇರಿದಂತೆ ನಮ್ಮ ಇತರ ಅನೇಕ ಪಕ್ಷಗಳ ಬಗೆಗಗೂ ಎತ್ತಬಹುದಾಗಿದೆ.

        Reply
        1. Ananda Prasad

          ನಿಮ್ಮ ಅಭಿಪ್ರಾಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

          Reply
  4. Srini

    For you congress looks democratic, but for me not, sir. Let there be respect. I have my own reason to vote for a particular party at particular constituency. UPA has been terrible and full of scams – so any MP election, my vote goes to BJP. And for me Congress is not secular as well… The way they invoke reservation for minority community during elections, or disturb emotions by digging up cases like Batla encounters…..That is the party which is responsible for Sikh massacre as well…so all are same at the end of the day.

    Reply
  5. Srini

    And just for me being supporting BJP, i don’t become communal. I am sorry, i have my reasons and that is my democratic right as well

    Reply
    1. Ananda Prasad

      ನಿಮ್ಮ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ. ನೀವು ಬಿಜೆಪಿಗೆ ಅಥವಾ ಯಾವುದೇ ಪಕ್ಷಕ್ಕೆ ವೋಟು ಹಾಕಿದರೂ ಮತಾಂಧತೆಯನ್ನು ಬೆಂಬಲಿಸುವುದಿಲ್ಲ ಎಂದಿರುವುದು ಸ್ವಾಗತಾರ್ಹ. ಇಂಥ ಮನೋಭಾವ ಎಲ್ಲರಲ್ಲೂ ಬರಬೇಕು. ಕಾಂಗ್ರೆಸ್ ಸಂಪೂರ್ಣ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸುವ ಪಕ್ಷ ಎಂದೇನೂ ಅಲ್ಲ. ಅದರೂ ಸ್ವಲ್ಪ ಮಟ್ಟಿಗಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿದೆ. ೨/೩ ಬಹುಮತ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಬಂದ ಉದಾಹರಣೆ ಇದೆ. ಅಂಥ ಸಮಯದಲ್ಲೂ ಅದು ಸಂವಿಧಾನದ ಕೆಲವು ಮೌಲ್ಯಗಳನ್ನು ಉಳಿಸಿದೆ. ೧೯೭೫ ರ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ತೀವ್ರ ಸರ್ವಾಧಿಕಾರಿ ಧೋರಣೆಯನ್ನು ತೋರಿಲ್ಲ. ಇದೇ ಅಭಿಪ್ರಾಯವನ್ನು ಬಿಜೆಪಿಯ ಬಗ್ಗೆ ಹೇಳುವುದು ಕಷ್ಟ. ಏಕೆಂದರೆ ಅದಕ್ಕೆ ಲೋಕಸಭೆಯಲ್ಲಿ ಇದುವರೆಗೆ ಆಡಳಿತಾತ್ಮಕ ಬಹುಮತವೂ ಸಿಕ್ಕಿಲ್ಲ. ಹೀಗಿದ್ದಾಗಲೂ ಅದು ಸಂವಿಧಾನದ ಕೆಲವು ಪ್ರಧಾನ ಅಂಶಗಳನ್ನು ತಿರುಚುವ ಗುಪ್ತ ಅಜೆಂಡಾ ಹೊಂದಿದೆ. ತನ್ನನು ಟೀಕಿಸುವುದನ್ನು ಆ ಪಕ್ಷವು ಸ್ವಲ್ಪವೂ ಸಹಿಸದಿರುವ ಉದಾಹರಣೆ ಇದೆ. ಅದಕ್ಕೆ ೨/೩ ಬಹುಮತ (ಅಂಥ ಸಂಭವನೀಯತೆ ಇಲ್ಲ) ಸಿಕ್ಕಿದರೆ ಅದು ಏನು ಮಾಡುತ್ತದೆ ಎಂದು ಊಹಿಸಲು ಆಗುವುದಿಲ್ಲ.

      Reply

Leave a Reply

Your email address will not be published. Required fields are marked *