Category Archives: ಎಮ್.ಸಿ.ಡೋಂಗ್ರೆ

ಭಾರತಕ್ಕೆ ಬೇಕಾಗಿರುವುದಾದರೂ ಏನು?

– ಎಮ್.ಸಿ.ಡೋಂಗ್ರೆ

ನಾವೀಗ ಸಂದಿಗ್ಧ ಕಾಲಘಟ್ಟದಲ್ಲಿ ನಿಂತಿದ್ದೇವೆ. 1991 ರಲ್ಲಿ ಆರಂಭಗೊಂಡ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ಬಗ್ಗೆ ಇದ್ದ ಭ್ರಮೆಗಳು ಒಂದೊಂದಾಗಿ ಕಳಚಿಬೀಳುತ್ತಿದ್ದು ಅಮೇರಿಕಾ ಹಾಗೂ ಇತರ ಬಂಡವಾಳಶಾಹೀ ರಾಷ್ಟ್ರಗಳ ಸ್ವಾರ್ಥಪರ ಸಂಚುಗಳು ಒಂದೊಂದಾಗಿ Globalizationನಮಗೆಲ್ಲರಿಗೂ ಅರಿವಾಗುತ್ತಿದೆ. ಈ ಹಿನ್ನೆಲೆಯಲ್ಲಿ 2014 ರ ಸಾರ್ವತ್ರಿಕ ಚುನಾವಣೆಯು ಬಹಳ ಪ್ರಾಮುಖ್ಯತೆಯನ್ನು ಪಡೆಯಲಿದೆ.

ದೇಶದ ಜನತೆಯ ಮುಂದೆ “ನಮ್ಮ ಮುಂದಿನ ಪ್ರಧಾನಿ ಯಾರು?” ಎಂಬ ಪ್ರಶ್ನೆಯನ್ನಿಡುವುದರ ಬದಲು “ನಮ್ಮ ಮುಂದಿನ ನೀತಿಗಳು ಏನಾಗಿರಬೇಕು?” ಎಂಬ ಪ್ರಶ್ನೆಯನ್ನಿಡುವುದು ಈಗಿನ ತುರ್ತುಸ್ಥಿತಿಯಾಗಿರುತ್ತದೆ. ಮೋದಿ ಮತ್ತು ಈಗಿನ ಕಾಂಗ್ರೆಸ್ ಇವರಿಬ್ಬರೂ ವಿಶ್ವಬ್ಯಾಂಕ್ ಪ್ರಣೀತ ನೀತಿಗಳನ್ನು ಅನುಷ್ಟಾನಗೊಳಿಸುವಲ್ಲಿ ಪರಸ್ಪರ ಪೈಪೋಟಿಯಲ್ಲಿ ನಿರತರಾಗಿದ್ದು ಇವರಲ್ಲಿ ಯಾರು ಗೆದ್ದು ಬಂದರೂ ಸಹ ಅಮೇರಿಕಾ ಅಥವಾ ಇತರ ಯುರೋಪಿಯನ್ ದೇಶಗಳಿಗೆ ಆತಂಕವಿಲ್ಲ. ಭಾರತದ ಈ ಎರಡೂ ಬಣಗಳೂ ಅಮೇರಿಕಾದ ಆಜ್ಞಾನುವರ್ತಿಗಳಾಗಿರುತ್ತಾರೆ-ಇದರಲ್ಲಿ ಯಾವ ಸಂಶಯವೂ ಇಲ್ಲ.

ಹಾಗಾದರೆ ಭಾರತಕ್ಕೆ ಬೇಕಾಗಿರುವುದಾದರೂ ಏನು? ಎಂಬುದನ್ನು ನಾವು ಯೋಚಿಸಬೇಕಾಗಿದೆಯೇ ವಿನಹ ಪಾಶ್ಚಿಮಾತ್ಯ ದೇಶಗಳ ಸಂಚಿಗೆ ಬಲಿಯಾಗಿ ಈಗಿನ ಕಾಂಗ್ರೆಸ್ ಅಥವಾ ಮೋದಿ-ಇವರಿಬ್ಬರಲ್ಲಿ ಒಬ್ಬರನ್ನು ಅಧಿಕಾರಕ್ಕೆ ತರುವ ಗಾಳಕ್ಕೆ ಬೀಳಬಾರದು. ಭಾರತಕ್ಕೆ ಬೇಕಾಗಿರುವುದಾದರೂ ಏನು? ಎಂಬುದನ್ನು ಮೊದಲು ಅರಿಯಬೇಕು.

ಮೋದಿ ಮತ್ತು ಈಗಿನ ಕಾಂಗ್ರೆಸ್ ಇವರಿಬ್ಬರೂ FDI ಯನ್ನು ಭಾರತಕ್ಕೆ ತರುವುದರಲ್ಲಿ, ಈ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುವುದರಲ್ಲಿ ನಿರತರಾಗಿದ್ದಾರೆ. ನಮ್ಮಿಂದ ಬೇರೆ ದೇಶಗಳಿಗೆ ಜ್ಞಾನದ ಹಾಗೂ ವಸ್ತುಗಳ ಮಾರಾಟವಾಗಬೇಕು. ಭಾರತದ ಸಾಮರ್ಥ್ಯದ Investment ಬೇರೆಡೆಗೆ, ಅನ್ಯರನ್ನು ಶೋಷಣೆಗೈಯ್ಯದೇ, ನಮ್ಮ ದೇಶಕ್ಕೆ ಲಾಭ ತರುವ ನಿಟ್ಟಿನಲ್ಲಿ ಆಗಬೇಕಾಗಿದೆ. ನಮಗೆ ಬೇಕಾಗಿರುವುದು ಪರ್ಯಾಯ ನೀತಿಗಳೇ ವಿನಹ ಪರ್ಯಾಯ ಪಕ್ಷಗಳಲ್ಲ!!

ಯಾವಾಗ ದೇಶದ ಜನ ಹಸಿವಿನಿಂದ ಬಳಲುವ ಪ್ರಸಂಗ ಇರುವುದಿಲ್ಲವೋ, ಯಾವಾಗ ದೇಶದಲ್ಲಿ ಜನ ವಿದ್ಯಾವಂತರಾಗಿರುತ್ತಾರೋ, ಎಲ್ಲಿ ಗಂಡು-ಹೆಣ್ಣುಗಳ ನಡುವೆ ತಾರತಮ್ಯವಿರುವುದಿಲ್ಲವೋ, ಯಾವಾಗ ದೇಶದಲ್ಲಿ ನಿರಂತರ ಉದ್ಯೋಗ ಸೃಷ್ಟಿಯಾಗುತ್ತಿರುತ್ತದೋ, ಯಾವಾಗ ದೇಶದಲ್ಲಿ ಕೋಮು ಗಲಭೆಗಳು ಇರುವುದಿಲ್ಲವೋ, ಎಲ್ಲಿ ಆರ್.ಎಸ್.ಎಸ್., ಭಜರಂಗ ದಳ ಅಥವಾ ಶ್ರೀ ರಾಮಸೇನೆಯಂತಹ ಬೇಜಬ್ದಾರೀ ಸಂಘಟನೆಗಳು ಇರುವುದಿಲ್ಲವೋ, india-poverty-hungerಎಲ್ಲಿ ಮುಸ್ಲಿಂ ಧಾರ್ಮಿಕ ಮತಾಂಧರಿಗೆ ಬೆಳೆಯಲು ಅವಕಾಶಗಳನ್ನು ತೊಡೆದುಹಾಕಲಾಗುತ್ತದೋ-ಆಗ ಮಾತ್ರ ಭಾರತ ಬೆಳೆಯಲು ಸಾಧ್ಯ.

ಭಾರತಕ್ಕೆ ಬೇಕಾಗಿರುವುದು ಏನು ಎಂಬುದನ್ನು ಅರಿಯುವ ಮೊದಲು ಈಗ ಭಾರತ ಏನಾಗಿದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ಜಾಗತಿಕ ಹಸಿವಿನ ಸೂಚ್ಯಂಕ (2008):
ಹಸಿವಿನ ಜಾಗತಿಕ ಸೂಚ್ಯಂಕ (2008)ರಲ್ಲಿ ಭಾರತದ ದಾಖಲೆ ಅತ್ಯಂತ ಚಿಂತಾಜನಕವಾಗಿದೆ. 88 ದೇಶಗಳ ಪಟ್ಟಿಯಲ್ಲಿ ಭಾರತ 66 ನೇ ಸ್ಥಾನದಲ್ಲಿದೆ. ಹಸಿವಿನ ಜಾಗತಿಕ ಸೂಚ್ಯಂಕ (2008) ರಲ್ಲಿ ಭಾರತವು 23.70% ಅಂಕಗಳನ್ನು ಪಡೆದು “ಅತಿ ಗಂಭೀರ” ಎಂಬ ಹಣೆಪಟ್ಟಿಯನ್ನು ತನ್ನದಾಗಿಸಿದೆ. ಹಸಿವಿನ ಜಾಗತಿಕ ಸೂಚ್ಯಂಕ (2012)ರಲ್ಲಿ ಭಾರತ ಪಡೆದಿರುವ ಅಂಕ 22.90% ಅಂದರೆ, ಈಗಲೂ ಅದೇ “ಹಣೆಬರಹ”.

ಭಾರತದ ಹಸಿವಿನ ಸೂಚ್ಯಂಕ (2008) ರ ಪ್ರಕಾರ (ಇದಕ್ಕಿಂತ ಈಚಿನ ಅಂಕಿ-ಅಂಶಗಳು ಇಲ್ಲ) ನಮ್ಮ ದೇಶದ 17 ರಾಜ್ಯಗಳ ಸ್ಥಿತಿ-ಗತಿಗಳನ್ನು ಗಮನಿಸೋಣ.

ರಾಜ್ಯ ಅಪೌಷ್ಟಿಕತೆಯಿಂದ ನರಳುವವರು (ಅಲ್ಲಿಯ ಜನಸಂಖ್ಯೆಯ ಶೇಕಡಾವಾರು) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ underweight ಮಕ್ಕಳ (ಶೇಕಡಾವಾರು) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವನ್ನಪ್ಪುವವರ ಶೇಕಡಾವಾರು ಸಂಖ್ಯೆ ಹಸಿವಿನ ಸೂಚ್ಯಂಕ ರ್‍ಯಾಂಕ್ ಪಟ್ಟಿಯಲ್ಲಿ ಸ್ಥಾನ
ಪಂಜಾಬ್ 11.1 24.6 5.2 13.63 1
ಕೇರಳ 28.6 22.7 1.6 17.63 2
ಆಂಧ್ರ ಪ್ರದೇಶ 19.6 32.7 6.3 19.53 3
ಅಸ್ಸಾಂ 14.6 36.4 8.5 19.83 4
ಹರಿಯಾಣ 15.1 39.7 5.2 20.00 5
ತಮಿಳುನಾಡು 29.1 30.0 3.5 20.87 6
ರಾಜಾಸ್ಥಾನ್ 14.0 40.0 8.5 20.97 7
ಪಶ್ಚಿಮ ಬಂಗಾಳ 18.5 38.5 5.9 20.97 8
ಉತ್ತರ ಪ್ರದೇಶ 14.5 42.3 9.6 22.13 9
ಮಹಾರಾಷ್ಟ್ರ 27.0 36.7 4.7 22.80 10
ಕರ್ನಾಟಕ 28.0 37.6 5.5 23.73 11
ಓರಿಸ್ಸಾ 21.4 40.9 9.1 23.80 12
ಗುಜರಾತ್ 23.3 44.7 6.1 24.70 13
ಛತ್ತೀಸ್ ಘರ್ 23.3 47.6 9.0 26.63 14
ಬಿಹಾರ್ 17.3 56.1 8.5 27.30 15
ಝಾರ್ ಖಂಡ್ 19.6 57.1 9.3 28.67 16
ಮಧ್ಯ ಪ್ರದೇಶ್ 23.4 59.8 9.4 30.87 17
ಭಾರತ 20.0 42.5 7.4 23.30

ಅಂದರೆ ಪಂಜಾಬ್ ರಾಜ್ಯವು ಭಾರತದ ರಾಜ್ಯಗಳ ಪೈಕಿ ಸ್ವಲ್ಪ ಉತ್ತಮ ಬೆಳವಣಿಗೆಯನ್ನು ಹೊಂದಿದೆ ಹಾಗೂ ಮಧ್ಯ ಪ್ರದೇಶದ ಸ್ಥಿತಿ ಅತ್ಯಂತ ಹೀನವಾಗಿದೆ. ಜಾಗತಿಕ ಮಟ್ಟದಲ್ಲಿ ಇಥಿಯೋಪಿಯಾಗೆ ಮಧ್ಯಪ್ರದೇಶದ ಸ್ಥಿತಿ ಇದೆ. ನಿಕಾರಾಗುವ ಹಾಗೂ ಘಾನಾಗಳ ಸಾಲಿಗೆ ಪಂಜಾಬ್, ಕೇರಳ, ಆಂಧ್ರ ಹಾಗೂ ಅಸ್ಸಾಂ ಸೇರಿದರೆ, ಉಳಿದ ರಾಜ್ಯಗಳ ಪರಿಸ್ಥಿತಿ “ಅತಿ ಗಂಭೀರ” (Alarming) ಸ್ಥಿತಿಯಲ್ಲಿದೆ.

ಒಂದು ರಾಜ್ಯದ ಅಭಿವೃದ್ಧೀ ದರ ಹೆಚ್ಚಾಗಿದೆ ಎಂದಾಕ್ಷಣ ಅಲ್ಲಿಯ ಜನರಿಗೆ ಸಂಪತ್ತಿನ ಹಂಚಿಕೆಯು ಸಮರ್ಪಕವಾಗಿದೆ ಎಂದಾಗುವುದಿಲ್ಲ. ಅಥವಾ ಒಂದು ರಾಜ್ಯವು ಅತಿ ಹೆಚ್ಚಿನ FDI ಯನ್ನು ತನ್ನದಾಗಿಸಿದೆ (ಉದಾ: ಮಹಾರಾಷ್ಟ್ರ) ಎಂದಾಕ್ಷಣ ಅಲ್ಲಿಯ ಜನ ಹಸಿವು ಇತ್ಯಾದಿಗಳಿಂದ ಮುಕ್ತರಾಗಿರುತ್ತಾರೆ ಎನ್ನುವುದೂ ಸಹ ಸರಿಯಲ್ಲ.
ಅಂದರೆ ಸಂಪತ್ತನ್ನು ಸರಿಯಾಗಿ, ಎಲ್ಲರಿಗೂ ಸಮನಾಗಿ ಹಂಚುವ ನೀತಿಯನ್ನು ಜಾರೀ ತರುವ ನೀತಿಯುಳ್ಳವರು ನಮಗೆ ಬೇಕಾಗಿದ್ದಾರೆಯೇ ವಿನಹ ಬರೀ “ಅಭಿವೃದ್ಧಿ ದರ”ಗಳ ಲೆಕ್ಕಾಚಾರದ ಮಂಕುಬೂದಿಯನ್ನು ಎರಚುವವರಲ್ಲ.

ಭ್ರಷ್ಟಾಚಾರದ ನಿಗ್ರಹ:

ಜಾಗತಿಕ ಮಟ್ಟದ Corruption Perception Index (2012) ರ ಪಟ್ಟಿಯಲ್ಲಿ 178 ದೇಶಗಳ ನಡುವೆ ಭಾರತಕ್ಕೆ 94ನೇ ಸ್ಥಾನ. corruption-india-democracyಅಂದರೆ ಅತ್ಯಂತ ಭ್ರಷ್ಟ ದೇಶಗಳಲ್ಲಿ ಭಾರತವೂ ಸಹ ಒಂದು. 1998 ರಲ್ಲಿ 66 ನೇ ಸ್ಥಾನ, 2000 ನೇ ಇಸವಿಯಲ್ಲಿ 69 ನೇ ಸ್ಥಾನ, 2004 ರಲ್ಲಿ 90 ನೇ ಸ್ಥಾನ, 2008 ರಲ್ಲಿ 85 ನೇ ಸ್ಥಾನ!!.
ಅನೈತಿಕತೆಗೆ, ಕಪ್ಪುಹಣದ ವೃದ್ಧಿಗೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗೆ ಭ್ರಷ್ಟಾಚಾರವೂ ಸಹ ಒಂದು ಕಾರಣ. ವ್ಯಕ್ತಿಗತ ಭ್ರಷ್ಟಾಚಾರಗಳು ಹಾಗೂ ರಾಜಕೀಯ ಭ್ರಷ್ಟಾಚಾರ ಇವೆರಡನ್ನೂ ನಿಯಂತ್ರಣದಲ್ಲಿಡಬಲ್ಲ ಪರ್ಯಾಯ ರಾಜಕೀಯ ನಾಯಕತ್ವದ ಅವಶ್ಯಕತೆ ನಮಗೆ ಬಹಳವಿದೆ.

ಭ್ರಷ್ಟಾಚಾರ = ಅವಕಾಶಗಳು-ತಡೆಗಳು.
ಸರಿಯಾದ ತಡೆಗಳಿಲ್ಲದಿದ್ದಲ್ಲಿ ಭ್ರಷ್ಟಾಚಾರವು ಮಿತಿ ಮೀರುವುದು ಸಹಜ.

  • ಆರ್ಥಿಕ ಸಂಕಷ್ಟ ಅಥವಾ ಅನಿಶ್ಚಿತತೆಯಲ್ಲಿ ತೊಳಲುವ ಪ್ರಜೆಗಳು ಭ್ರಷ್ಟಾಚಾರದ ಕುಕೃತ್ಯದಲ್ಲಿ ತೊಡಗುತ್ತಾರೆ. ಗುಮಾಸ್ತರು, ಪೋಲೀಸರು, ನ್ಯಾಯಾಧೀಶರು, ಸರ್ಕಾರೀ ಡಾಕ್ಟರುಗಳು, ರಾಜಕೀಯ ವ್ಯಕ್ತಿಗಳು ಆರ್ಥಿಕವಾಗಿ ಒಳ್ಳೆಯ ಮಟ್ಟದಲ್ಲಿದ್ದಲ್ಲಿ ಅವರು ಭ್ರಷ್ಟಾಚಾರದಲ್ಲಿ ತೊಡಗುವುದು ಎಷ್ಟೋ ಕಮ್ಮಿಯಾಗುತ್ತದೆ. ಹೀಗಾಗಿ ಇವರೆಲ್ಲರಿಗೆ ಅತ್ಯಾಕರ್ಷಕ ವೇತನವನ್ನು ನೀಡುವುದು ಬಹಳ ಮುಖ್ಯವಾಗಿದೆ.
  • ಚುನಾವಣೆಗಳ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಹೊರುವುದು ಬಹಳ ಉತ್ತಮವಾದ ನಡೆಯಾಗಿರುತ್ತದೆ. ಒಂದು ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದಲ್ಲಿ ನಿಗದಿಪಡಿಸಿದ ಮಾನದಂಡಗಳಿಗನುಸಾರವಾಗಿ ಅಭಿವೃದ್ಧೀ ಕೆಲಸಗಳು ಜಾರಿಯಾದ್ದಲ್ಲಿ ಅಲ್ಲಿಯ ವಿಧಾಸಸಭಾ ಸದಸ್ಯನಿಗೆ ಹಾಗೂ ಲೋಕಸಭಾ ಸದಸ್ಯನಿಗೆ ಪ್ರೋತ್ಸಾಹ-ಧನವನ್ನು ಕೊಡುವ ವ್ಯವಸ್ಥೆಯನ್ನು ತರಬೇಕು.
  • ಯಾವ, ಯಾವ ಇಲಾಖೆ/ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಅನುಮಾನಗಳು, ಆರೋಪಗಳು ಅಥವಾ ಅನಿಸಿಕೆಗಳು ಇರುತ್ತವೆಯೋ ಅಂತಹ ಇಲಾಖೆ ಅಥವಾ ಕ್ಷೇತ್ರಗಳ ಕುರಿತು ಅಧ್ಯಯನ ತಂಡಗಳನ್ನು, ಆಡಿಟ್ ಸಂಸ್ಥೆಗಳನ್ನು ಅಗಿಂದಾಗ್ಗೆ ಕಳುಹಿಸಿ ವಾಸ್ತವಗಳನ್ನು ಗೊತ್ತುಪಡಿಸಿಕೊಳ್ಳುವುದು ಆಗಬೇಕು ಅಲ್ಲದೇ ಸ್ವಯಂ-ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಇಂತಹ ಇಲಾಖೆ/ಕ್ಷೇತಗಳ ಕುರಿತು ಆಗುತ್ತಿರುವ ಬದಲಾವಣೆಗಳ ಬಗ್ಗೆ ಪ್ರಚಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.
  • ಸಾಧ್ಯವಾದೆಡೆಯಲ್ಲೆಲ್ಲ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ (E-governance) ಕೆಲಸಗಳು ಆಗುವಂತೇ ವ್ಯವಸ್ಥೆಯನ್ನು ತರಬೇಕು.

1991 ರ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣವನ್ನು ಒಳಗೊಂಡ ಹೊಸ ಆರ್ಥಿಕ ನೀತಿಯ ನಂತರ ದೇಶದಲ್ಲಿ ಭ್ರಷ್ಟಾಚಾರವು ಎಲ್ಲೆ ಮೀರಿರುವುದನ್ನು ನೋಡಬಹುದು. ಬಹುರಾಷ್ಟ್ರೀಯ ಕಂಪೆನಿಗಳು ಎಷ್ಟು ಕೋಟಿ ಹಣವನ್ನು ಬೇಕಾದರೂ ನೀಡಲು ತಯಾರಾಗಿರುವುದೇ ಮುಖ್ಯ ಕಾರಣ.

ಸಾರ್ವಜನಿಕ ಕ್ಷೇತ್ರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಸಿ, ಭ್ರಷ್ಟಾಚಾರದ ವಿರುದ್ಧ ಸಮರ್ಪಕ ತಡೆಗಳನ್ನು ನಿರ್ಮಿಸಿ, ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವೆದೇ ನಮ್ಮ ಮುಂದಿರುವ ಮಾರ್ಗ.

ತನ್ನ ರಾಜ್ಯದಲ್ಲಿ ಅನೇಕ ವರ್ಷಗಳಿಂದ “ಲೋಕಾಯುಕ್ತ”ರನ್ನು ನೇಮಿಸದ, ಕರ್ನಾಟಕದ “ಕಳಂಕಿತ” ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರನ್ನು ಅಧಿಕಾರ-ಲಾಲಸೆಯಿಂದ ಪುನಹ ಪಕ್ಷಕ್ಕೆ ಸೇರಿಸಿಕೊಳ್ಳಲು ಹಿಂಜರಿಯದ ಹಾಗೂ ರಾಜ್ಯಯಂತ್ರವನ್ನು ಒಂದು ವರ್ಗದ ಜನರನ್ನು ಕೊಲೆ ಮಾಡಲು ಉಪಯೋಗಿಸಿದ ಮಾನ್ಯ ನರೇಂದ್ರ ಮೋದಿಯಿಂದ ಇದೆಲ್ಲವನ್ನು ಅಪೇಕ್ಷಿಸುವುದು ಒಂದು ದುಸ್ಸಾಹಸವೇ ಸರಿ.

ವಿದೇಶಾಂಗ ನೀತಿ :

ಭಾರತವು ತನ್ನ “ಅಲಿಪ್ತ ನೀತಿ”ಗೆ ಹೆಸರುವಾಸಿಯಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ಯಾಯಗಳನ್ನು ವಿರೋಧಿಸುವ ನೈತಿಕತೆಯನ್ನು ಭಾರತವು ಬೆಳೆಸಿಕೊಂಡು ಬಂದಿತ್ತು. ಈ ದೇಶ ಕಂಡ ಅತ್ಯುತ್ತಮ ಪ್ರಧಾನಿ ಶ್ರೀ ನೆಹರೂರವರ ಮುತ್ಸದ್ದೀತನದ ಪರಿಣಾಮವೇ ನಮ್ಮ ವಿದೇಶಾಂಗ ನೀತಿಯಾಗಿತ್ತು. ಸೋವಿಯತ್ ಯೂನಿಯನ್ನಿನ ಪತನಾನಂತರ “ಭಾರತದ ಅಲಿಪ್ತ ನೀತಿ”ಯು ತನ್ನ ಕೊನೆಯನ್ನು ಕಂಡಿರುತ್ತದೆ.

ಈಗ ಭಾರತದ ವಿದೇಶಾಂಗ ನೀತಿಯ ಪ್ರಮುಖ ಗುರಿಯು ತನ್ನ ಸುತ್ತಮುತ್ತಲಿನ ದೇಶಗಳೊಡನೆ ಪರಸ್ಪರ ವಿಶ್ವಾಸ ಮತ್ತು ಸ್ನೇಹದ ಸಂಬಂಧಗಳನ್ನು ಬೆಳೆಸಿ ಮುಂದುವರಿಸುವುದು ಹಾಗೂ ಅಮೇರಿಕಾ ಮತ್ತು ಇತರ ಯುರೋಪಿಯನ್ ದೇಶಗಳಿಂದ ಭಾರತಕ್ಕೆ ಉಪಯೋಗವಾಗುವ ರೀತಿಯಲ್ಲಿ Nehruಸಂಬಂಧಗಳನ್ನು ಜೋಡಿಸುವುದು ಇವು ಬಹಳ ಪ್ರಮುಖವಾದದ್ದಾಗಿದೆ.

ಈ ಹಿನ್ನೆಲೆಯಲ್ಲಿ ತನ್ನ ನೆರೆಯ ಪಾಕಿಸ್ತಾನ್ ಅಥವಾ ಚೀನದಿಂದ ಎಷ್ಟೇ provocation ಗಳು ಬಂದರೂ ಸಂಯಮವನ್ನು ಭಾರತವು ಕಾಪಾಡಿಕೊಂಡು ಬಂದಿದೆ. ಈಗಿನ ವಿದೇಶಾಂಗ ನೀತಿಯು ಭವಿಷ್ಯದಲ್ಲಿ ಭಾರತಕ್ಕೆ ಅತ್ಯಂತ ಉಪಯೋಗಕ್ಕೆ ಬರುವುದರಲ್ಲಿ ಸಂಶಯವಿಲ್ಲ.

ಭಾರತವು ಅತ್ಯಂತ ನಾಜೂಕಿನ ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ಯುದ್ಧಕ್ಕೆ ತಳ್ಳಲು ಅನೇಕ ಶಕ್ತಿಗಳು ಪ್ರಯತ್ನಪಡುತ್ತಿವೆ. ಅತ್ಯಂತ ತಾಳ್ಮೆಯನ್ನು ಪ್ರದರ್ಶಿಸುವ ಕಾಲ ಇದಾಗಿದ್ದು,ಭಾರತವು ಈ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ದಾಟಬಲ್ಲದು-ಈಗಿನ ನಾಯಕತ್ವದ ಚಿಂತನೆಗಳು ಮುಂದುವರಿದರೆ ಮಾತ್ರ ಇದು ಸಾಧ್ಯ.

ಮಾಜಿ ಪ್ರಧಾನಿ ವಾಜಪೇಯೀಯವರು ಇದನ್ನೆಲ್ಲ ಅರ್ಥಮಾಡಿಕೊಂಡಿದ್ದರು ಹಾಗೂ ಆಗ ವಾಜಪೇಯಿಯವರು ಹೇಳಿದಂತೆ ಆರ್.ಎಸ್.ಎಸ್. ಕೇಳುತ್ತಿತ್ತು (ಎನ್.ಡಿ.ಎ.ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ಸಂಘ ಪರಿವಾರವು “ಸ್ವದೇಶೀ ಜಾಗರಣ ಮಂಚ್‌”ನ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ತ್ಯಜಿಸಿ ವಿದೇಶೀ ವಸ್ತುಗಳನ್ನು ಹಾಗೂ ವಿದೇಶೀ ಬಂಡವಾಳವನ್ನು ವಿರೋಧಿಸುವುದನ್ನು ಕೈಬಿಟ್ಟಿದ್ದು ಒಂದು ದೊಡ್ಡ ಉದಾಹರಣೆ.) ಆದರೆ ಈಗ ಮೋದಿಯು ಆರ್.ಎಸ್.ಎಸ್ ನ್ನು ಮೀರಿ ನಡೆವಷ್ಟು ಸಮರ್ಥರೇನು?

ಪಂಚಸೂತ್ರಗಳು :

ಈ ಮುಂದೆ ಹೇಳಿರುವ ಪಂಚಸೂತ್ರಗಳು ಮುಂಬರುವ “ಪರ್ಯಾಯ ನೀತಿ”ಗಳ ಅವಿಭಾಜ್ಯ ಅಂಗವಾಗಿದ್ದಲ್ಲಿ ಮಾತ್ರ ಹೊಸ ಭಾರತವನ್ನು ನೋಡಬಹುದು.

  1. ಆಹಾರ ಭದ್ರತಾ ಕಾಯ್ದೆಯನ್ನು ಕೇವಲ ಬಿ.ಪಿ.ಎಲ್.ಕಾರ್ಡುದಾರರಿಗೆ ಮಾತ್ರ ಸೀಮಿತಗೊಳಿಸದೆ ದೇಶದ ಎಲ್ಲ ಜನವಿಭಾಗಕ್ಕೂ ವಿಸ್ತರಿಸುವುದು ಹಾಗೂ ಅದರಲ್ಲಿ ಪರಿಷ್ಕರಣವನ್ನು ಅಳವಡಿಸುವುದು. ಖಾಸಗೀ ಕ್ಷೇತ್ರದಲ್ಲೂ ಸಹ ಮೀಸಲಾತಿಯನ್ನು ಕಡ್ಡಾಯಗೊಳಿಸುವುದು.
  2. ದೇಶದಲ್ಲಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಜನಸಂಖ್ಯೆಯ ಕೇವಲ ಶೇಕಡಾ 3 ಮಾತ್ರ. ನಮ್ಮಲ್ಲಿ ಮಿಲಿಯಾಧಿಪತಿ ಹಾಗೂ ಕೋಟ್ಯಾಧಿಪತಿಗಳಿಂದ ಅತಿಹೆಚ್ಚು ಎಂದರೆ ಅವರ ಆದಾಯದ ಕೇವಲ 30%ನ್ನು ಮಾತ್ರ ತೆರಿಗೆಯನ್ನು ಸರ್ಕಾರವು ಸಂಗ್ರಹಿಸುತ್ತಿದ್ದು, ಇದನ್ನು ಬ್ರಿಟನ್, ಸ್ಪೈನ್,ಸ್ವೀಡನ್ ಇತ್ಯಾದಿ ದೇಶಗಳಲ್ಲಿರುವಂತೆ 50%ಗೆ ಏರಿಸುವುದು.
  3. ಮೂಲಭೂತ ಸೌಕರ್ಯಗಳನ್ನು ವೃದ್ಧಿಸುವಲ್ಲಿ ಆದ್ಯತೆ ನೀಡುವುದು. ಈ ಕಾರ್ಯವನ್ನು ಖಾಸಗೀಯವರಿಗೆ ವಹಿಸದೇ ಸರ್ಕಾರವೇ ಕೈಗೆತ್ತಿಕೊಳ್ಳುವುದು.
  4. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಜೊತೆ-ಜೊತೆಯಲ್ಲೇ ನಗರ ಪ್ರದೇಶಗಳ ಬದಲು ಗ್ರಾಮಗಳಲ್ಲಿ ಉದ್ಯೋಗ ನಿರ್ಮಾಣದ ವಿಕೇಂದ್ರೀಕರಣ ಯೋಜನೆಗಳನ್ನು ಹಮ್ಮಿಕೊಳ್ಳುವುದು ತನ್ಮೂಲಕ ಗ್ರಾಮಗಳಲ್ಲೂ ಕೊಳ್ಳುವ ಶಕ್ತಿಯನ್ನು ವೃಧ್ಧಿಸುವುದು
  5. ವಸತಿ ಸೌಕರ್ಯವನ್ನು ಆದ್ಯತೆ ಮೇರೆಗೆ ವಿಸ್ತರಿಸುವುದು .

ಮೋದಿ ಮತ್ತವರ ಆನ್‌ಲೈನ್ ಭಕ್ತರ ಬಗ್ಗೆ ಅನಗತ್ಯ ಭಯ ಬೇಡ…


– ರವಿ ಕೃಷ್ಣಾರೆಡ್ದಿ


 

ಕಳೆದ ಎರಡು ದಿನಗಳಿಂದ ವರ್ತಮಾನ,ಕಾಮ್‌ನಲ್ಲಿ ನಡೆಯುತ್ತಿರುವ ಚರ್ಚೆ ಮತ್ತದರ ಸ್ವರೂಪ ನೋಡಿದರೆ ಕರ್ನಾಟಕದ ಮಟ್ಟಿಗಂತೂ ಮೋದಿಯವರ ಆನ್‌ಲೈನ್ ಭಕ್ತರ ಬಗ್ಗೆ ಮತ್ತವರ ಪ್ರಚಾರ ಭರಾಟೆಯ ಬಗ್ಗೆ ಪ್ರಜಾಪ್ರಭುತ್ವವಾದಿಗಳು ಮತ್ತು ಜಾತ್ಯತೀತವಾದಿಗಳು ಭಯಪಡುವುದು ಅನವಶ್ಯಕ ಎನ್ನಿಸುತ್ತದೆ.

ಇಲ್ಲಿಯವರೆಗೂ ಬಹುಪಾಲು ಜನ ಅಂದುಕೊಳ್ಳುತ್ತಿದ್ದೇನೆಂದರೆ, ಅಂತರ್ಜಾಲದಲ್ಲೆಲ್ಲ ಮೋದಿಯ ಭಕ್ತರೇ ತುಂಬಿಕೊಂಡಿದ್ದಾರೆ, ಮೋದಿಯೇ ನಮ್ಮೆಲ್ಲಾ ಕಷ್ಟಗಳನ್ನು ತೊಡೆಯಲು ಬರುತ್ತಿರುವ ಪವಾಡಪುರುಷ, ಮತ್ತು ಬಲಿಷ್ಟ ದೇಶವನ್ನು ಕಟ್ಟಲು ಅವರಿಂದ ಮಾತ್ರ ಸಾಧ್ಯ ಎಂದೆಲ್ಲಾ ಗಟ್ಟಿಯಾದ ಜನಾಭಿಪ್ರಾಯ ರೂಪಿಸುತ್ತಿದ್ದಾರೆ ಎಂದು. ಆದರೆ, ಈ ಗುಂಪಿನಿಂದ ಯಾವ ರೀತಿಯ ಜನಾಭಿಪ್ರಾಯ ರೂಪಿಸಲು ಸಾಧ್ಯವಿದೆ ಮತ್ತು ಇವರ ಮಾತುಗಳನ್ನು ಒಪ್ಪದ ಜನ ಹೇಗೆ ಯೋಚನೆ ಮಾಡುತ್ತಾರೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆನ್‌ಲೈನ್ ಭಕ್ತರು ಮಾತ್ರ ಮತದಾರರಲ್ಲ, ಮತ್ತು ಆನ್‌ಲೈನ್‌ ಆಗಿರುವವರೆಲ್ಲ ಮೋದಿ ಜಪ ಮಾಡುವವವರಲ್ಲ.

ನೆನ್ನೆ ವರ್ತಮಾನ.ಕಾ‌ನಲ್ಲಿ ಎಮ್.ಸಿ.ಡೋಂಗ್ರೆಯವರ “ಮೋದಿಯ ಸುಳ್ಳುಗಳಿಗೆ ದೇಶದ ಜನ ಮರುಳಾಗದಿರಲಿ” ಲೇಖನ ಪ್ರಕಟವಾಯಿತು. ಆ ಲೇಖನದಲ್ಲಿ ಅನೇಕ ಅಂಕಿಅಂಶಗಳಿದ್ದವು. ಕೆಲವನ್ನು ಎಷ್ಟೇ ನಿರಾಕರಿಸಿದರೂ ಮೋದಿಯ ಪರ ಕೆಲಸ ಮಾಡುವ ಅಂಕಿಅಂಶಗಳೂ ಅದರಲ್ಲಿ ಸ್ಥೂಲವಾಗಿ ಇದೆ. ಆದರೆ ಆ ಲೇಖನದ ಒಟ್ಟಾರೆ ಧ್ವನಿ ಗುಜರಾತಿನ ಅಭಿವೃದ್ಧಿಯ ಬಗ್ಗೆ ಪ್ರಶ್ನೆಗಳನ್ನೆತ್ತಿರುವುದೇ ಅಲ್ಲದೆ, ಅಲ್ಲಿ ಆಗಿರಬಹುದಾದ ಅಭಿವೃದ್ಧಿ ಕಾರ್ಯಗಳಿಗೆ modiಮೋದಿಯೊಬ್ಬರೇ ಕಾರಣಪುರುಷ ಅಲ್ಲ ಎನ್ನುವುದನ್ನು ತಿಳಿಸುತ್ತದೆ. ಮೋದಿಯನ್ನು ತಾರ್ಕಿಕವಾಗಿ ಮತ್ತು ಮಾಹಿತಿಯುಕ್ತವಾಗಿ ವ್ಯತಿರೇಕಿಸುವುದೇ ಮುಖ್ಯವಾಗಿರುವ ಆ ಲೇಖನ ವರ್ತಮಾನ.ಕಾಮ್ ಮಟ್ಟಿಗೆ ಅಂತರ್ಜಾಲದಲ್ಲಿ ವೈರಲ್ ಆಗಿ ಪ್ರಸರಿಸಿದಂತಹ ಲೇಖನ. ಸಾವಿರಾರು ಜನ ಆ ಲೇಖನವನ್ನು ಓದಿರುವುದೇ ಅಲ್ಲದೆ, ಸಾಕಷ್ಟು ಕಡೆ ಅದನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಅದನ್ನು ಹಂಚಿಕೊಂಡಿರುವವರ ಮತ್ತು ಲೈಕ್ ಮಾಡಿದವರ ಸಂಖ್ಯೆಯೇ ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿ 800 ದಾಟಿದೆ. ಮತ್ತು ಹೀಗೆ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿರುವವರಲ್ಲಿ ಯಾರೊಬ್ಬರೂ ಮೋದಿಯ ಭಕ್ತರಾಗಿರುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಇಂತಹುದೊಂದು ದೊಡ್ದ ಗುಂಪು ನಿಶ್ಯಬ್ದವಾಗಿ ಇದೆ ಎನ್ನುವುದೇ ಅನೇಕ ವಿಷಯಗಳನ್ನು ಹೇಳುತ್ತದೆ.

ಈ ಲೇಖನ ಪ್ರಕಟವಾಗುವ ಹಿಂದಿನ ದಿನ ನಾನು ಬರೆದಿದ್ದ “ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು” ಪ್ರಕಟವಾಗಿತ್ತು. ಅಂಕಿಅಂಶಗಳಿಲ್ಲದ ಆ ಲೇಖನ ಮೋದಿಯಂತಹ ಕಿಂಚಿತ್ತೂ ಪ್ರಾಯಶ್ಛಿತ್ತ ಮನೋಭಾವವಿಲ್ಲದ ವ್ಯಕ್ತಿ ಮತ್ತು ಯಡ್ಡಯೂರಪ್ಪನಂತಹ ಭ್ರಷ್ಟಚಾರಿಯೊಡನೆ ರಾಜಿ ಮಾಡಿಕೊಂಡಾದರೂ ಸರಿ ಅಧಿಕಾರ ಹಿಡಿಯುವ ನೀತಿಯ ಹಿಂದೆ ಇದ್ದಿರಬಹುದಾದ ಲಾಲಸೆ ಮತ್ತು ನೀತಿರಾಹಿತ್ಯದ ಬಗ್ಗೆ ಚರ್ಚಿಸಿತ್ತು. ಇದನ್ನು ನಾನು ಹೇಳಬಯಸಿದ್ದೇಕೆಂದರೆ ಕೇಂದ್ರದಲ್ಲಿಯ ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತ ಮತ್ತು ಅದರ ಬಗ್ಗೆ ಸಕಾರಣಗಳಿಗಾಗಿಯೇ ಕೋಪೋದ್ರಿಕ್ತರಾಗಿರುವ ಒಂದು ಗುಂಪು ಮೋದಿ ಭ್ರಷ್ಟಾಚಾರಿಯಲ್ಲ ಎಂದುಕೊಂಡು ಅವರನ್ನು ಬೆಂಬಲಿಸುತ್ತಿರುವುದು ಅರ್ಥಹೀನ ಎನ್ನುವ ಕಾರಣಕ್ಕೆ. ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಬಿಜೆಪಿ ಉತ್ತಮ ಎಂದುಕೊಂಡಿರುವವರು ಮುಗ್ಧರು ಇಲ್ಲವೇ ಅಜ್ಞಾನಿಗಳು. ಆದರೆ ಹೊಸದೇನನ್ನೂ ಹೇಳದೆ, ಇತಿಹಾಸದಲ್ಲಿ ನಾವು ಹೇಗೆ ದಾಖಲಾಗಬೇಕು ಎನ್ನುವ ಬಗ್ಗೆ ಈ ತಲೆಮಾರು ಎಚ್ಚರ ವಹಿಸಬೇಕು ಎಂದು ಹೇಳಿದ್ದ ನನ್ನ ಆ ಲೇಖನ ಮೇಲಿನ ಲೇಖನದಷ್ಟಲ್ಲದಿದ್ದರೂ ನನ್ನ ಊಹೆಗೂ ಮೀರಿ ಅಂತರ್ಜಾಲದಲ್ಲಿ ಹರಡಿದೆ.

ಮತ್ತೆ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುವ ಲೇಖನಗಳ ವ್ಯಾಪ್ತಿ ದೊಡ್ದದಿದೆ. ಇದು ಕೇವಲ ಅಂತರ್ಜಾಲಕ್ಕೆ ಸೀಮಿತವಾಗಿಲ್ಲ. ರಾಜ್ಯದ ಅನೇಕ ಕಡೆಯ ಸ್ಥಳೀಯ ಆದರೆ ಪ್ರಭಾವಶಾಲಿಯಾಗಿರುವ ಅನೇಕ ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು ಇಲ್ಲಿ ಪ್ರಕಟವಾಗುವ ಲೇಖನಗಳನ್ನು ಪ್ರಕಟಿಸುತ್ತವೆ. ರಾಜ್ಯದ ಯಾವಯಾವುದೋ ಮೂಲೆಗಳಿಂದ ಆಗಾಗ ಪರಿಚಿತರು ಫೋನ್ ಮಾಡಿ ’ಇಂದು ಆ ಲೇಖನ ಇಂತಿಂಥ ಪತ್ರಿಕೆಯಲ್ಲಿ ಬಂದಿದೆ’ ಎನ್ನುತ್ತಾರೆ. ಮೋದಿಯ ಬಗ್ಗೆ ಇಲ್ಲಿ ಪ್ರಕಟವಾದ ಲೇಖನಗಳೂ ಸಹ ಮುದ್ರಿತ ರೂಪದಲ್ಲಿ ಸಹಸ್ರಾರು ಓದುಗರನ್ನು ಮುಟ್ಟಿವೆ.

ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂತರ್ಜಾಲ ಕೇವಲ ಮೋದಿಯ ಭಕ್ತರಿಂದ ತುಂಬಿತುಳುಕಾಡುತ್ತಿಲ್ಲ. ಮತ್ತು ಮೋದಿಯನ್ನು ವಿರೋಧಿಸುವವರೆಲ್ಲ ಕಾಂಗ್ರೆಸ್‌ನ ನೀತಿಗಳನ್ನು ಮತ್ತು ಭ್ರಷ್ಟಾಚಾರವನ್ನು ಒಪ್ಪಿಕೊಂಡವರಾಗಲಿ, ವಿರೋಧಿಸದೇ ಉಳಿದವರಾಗಲಿ ಅಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗಿರುವ rahul_priyanka_soniaವಂಶಪಾರಂಪರ್ಯ ಹಿಡಿತ ಹಾಗೂ ಅನಿಯಂತ್ರಿತ ಭ್ರಷ್ಟಾಚಾರದಿಂದ ಮುಳುಗಿರುವ ಕಾಂಗ್ರೆಸ್‌ ಪಕ್ಷವನ್ನು ಮತ್ತು ಜನಾಂಗಭೇದ ಪ್ರತಿಪಾದಿಸುವ, ಕಂದಾಚಾರ ಮತ್ತು ಸುಳ್ಳುಗಳ ಮೂಲಕ ಜನರನ್ನು ಉದ್ರೇಕಿಸುವ, ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್‌ಗೆ ಯಾವ ರೀತಿಯಲ್ಲಿಯೂ ಕಡಿಮೆಯಿಲ್ಲದ ಬಿಜೆಪಿ ಪಕ್ಷಗಳೆರಡನ್ನೂ ತ್ಯಜಿಸಿ ಇನ್ನೊಂದು ಪರ್ಯಾಯವನ್ನು ಕಟ್ಟುವ ಅಗತ್ಯ ದೇಶದ ಜನರ ಮುಂದಿದೆ. ಮತ್ತು ಅದಕ್ಕೆ ಸಮಯವೂ ಬಂದಿದೆ. ಪ್ರಜ್ಞಾವಂತ ಜನ ಅದನ್ನು ಪ್ರತಿಪಾದಿಸಬೇಕಿದೆ. ಮೋದಿಯನ್ನು ವಿರೋಧಿಸುವ ಒಂದೇ ಕಾರಣಕ್ಕೆ ಕಾಂಗ್ರೆಸ್ ಅನ್ನು ಬೆಂಬಲಿಸುವುದು ಅಪ್ರಬುಧ್ಹತೆಯಷ್ಟೇ ಅಲ್ಲ, ಅಪ್ರಾಮಾಣಿಕತೆಯೂ ಸಹ.

ಕಳೆದ ಎರಡು-ಮೂರು ಸಹಸ್ರ ವರ್ಷಗಳಲ್ಲಿ ಎಂತೆಂತಹವರನ್ನೋ ಈ ದೇಶ ಸಹಿಸಿಕೊಂಡಿದೆ. ಹೊರಗಿನವರ ದಾಳಿ, ಒಳಗಿನವರ ಸಂಕುಚಿತತೆ, ಇಲ್ಲಿಗೆ ಕಾಲಿಟ್ಟು ಇಲ್ಲಿಯೇ ಒಂದಾಗಿಹೋದ ಅನೇಕ ಜನಾಂಗಗಳು, ಸತ್ಯ ಮತ್ತು ನ್ಯಾಯದ ಪ್ರತಿಪಾದನೆಗೆ ಹುಟ್ಟಿಕೊಂಡ ಅನೇಕ ಸಾಂಸ್ಕೃತಿಕ ಹೋರಾಟಗಳು, ಕವಿಗಳು, ದಾರ್ಶನಿಕರು, ಬುದ್ಧ-ಬಸವ-ಗಾಂಧಿಯಂತಹ ಕಾಲಾತೀತರು; ಹೀಗೇ ವಿಶ್ವದಲ್ಲಿಯೇ ಅನನ್ಯವಾದ ಪರಂಪರೆ ಈ ದೇಶಕ್ಕಿದೆ. ಪ್ರಜಾಪ್ರಭುತ್ವದ ಪ್ರಸರಿಕೆ ಹಾಗೂ ನಮ್ಮ ಸಂವಿಧಾನ ಇಂದಿರಾ ಗಾಂಧಿಯೇ ಆಗಲಿ ಮೋದಿಯೇ ಆಗಲಿ, ಯಾವೊಬ್ಬ ಸರ್ವಾಧಿಕಾರಿಯೂ ಈ ದೇಶದ ಭವಿಷ್ಯವನ್ನು ತಮಗನ್ನಿಸಿದ ಹಾಗೆ ಬದಲಾಯಿಸಲಾಗದ ಕಟ್ಟುಪಾಡುಗಳನ್ನು ನಿರ್ಮಿಸಿವೆ. ಇಡೀ ವಿಶ್ವವೇ ಸಹಿಷ್ಣುತೆಯೆಡೆಗೆ, ದೇವರ ವಿಷಯದಲ್ಲಿ ನಾಸ್ತಿಕತೆ ಮತ್ತು ಅನಾಸಕ್ತಿಯಿಂದ ಕೂಡಿದ ಮತಾತೀತತೆಯೆಡೆಗೆ, ವಿಶ್ವಮಾನವತೆಯೆಡೆಗೆ ಹೊರಟಿರುವಾಗ, ಆ ನಿಸರ್ಗ ಶಕ್ತಿಗೆ ಎದುರಾಗಿ ಬರುವ ಕ್ಷುಲ್ಲಕ ವ್ಯಕ್ತಿಗಳನ್ನು ಈ ದೇಶ ಮತ್ತು ವಿಶ್ವ ನುಂಗಿ ಅರಗಿಸಿಕೊಳ್ಳಲಿದೆ. ಮೋದಿ ಯಾಕಾಗಿ ಪ್ರಧಾನಿಯಾಗಬಾರದು ಎನ್ನುವುದು ನ್ಯಾಯ ಮತ್ತು ಸತ್ಯದ ಕಾರಣಗಳಿಗಾಗಿ ಇರಬೇಕು. ಆದರೆ ಅದು ಮೋದಿ ಪ್ರಧಾನಿಯಾಗಿಬಿಟ್ಟರೆ ಅಯ್ಯೋ ಎನ್ನುವ ಭಯದಿಂದ ಹುಟ್ಟುವುದಾಗಿರಬಾರದು. ಭಯಭೀತರು ಅಂತಹ ಸಂದರ್ಭ ಬಂದುಬಿಟ್ಟರೆ ಶರಣಾಗುತ್ತಾರೆ ಇಲ್ಲವೇ ಭಯದಿಂದಲೇ ಸಾಯುತ್ತಾರೆ. ಸತ್ಯ ಮತ್ತು ನ್ಯಾಯದ ಕಾರಣಕ್ಕೆ ಎದುರಿಸುವವರು ಎಂತಹ ಸಂದರ್ಭದಲ್ಲೂ ಧೃತಿಗೆಡದೆ ಹೋರಾಡುತ್ತಾರೆ. ಈ ಗುಂಪಿನಲ್ಲಿ ನಾವು ಯಾರು ಎನ್ನುವುದಷ್ಟೆ ಮುಖ್ಯ.

ಮೋದಿಯ ಸುಳ್ಳುಗಳಿಗೆ ದೇಶದ ಜನತೆ ಮರುಳಾಗದಿರಲಿ

– ಎಮ್.ಸಿ.ಡೋಂಗ್ರೆ

2014 ರ ನಂತರದ ಭಾರತಕ್ಕೆ ಈಗಿನ ಗುಜರಾತಿನ ಮುಖ್ಯಮಂತ್ರಿಯಾಗಿರುವ ಶ್ರೀ ನರೇಂದ್ರ ಮೋದಿಯವರೇ ಸರಿಯಾದ ನಾಯಕನೆಂದೂ, ಹಾಗೂ ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತವು ಅತ್ಯುನ್ನತವಾದ ಸರ್ವಾಂಗೀಣ ಏಳಿಗೆಯನ್ನು (ಗುಜರಾತ್ ಮಾದರಿಯಲ್ಲಿ) ಹೊಂದುವುದು ಶತಸ್ಸಿದ್ದ ಎಂದೂ ಬಿಂಬಿಸಲಾಗುತ್ತಿದೆ. ದೇಶದ ನಗರ ಕೇಂದ್ರದ ಯುವಜನರು ಮೋದಿಯ ಪ್ರಭಾವಕ್ಕೆ ಒಳಗಾಗುವಂತೆ ಮಾಡುವಲ್ಲಿಯೂ ಸಹ ಸ್ವಲ್ಪ ಮಟ್ಟಿನ ಯಶಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನೂ ಸಹ ನೋಡಬಹುದಾಗಿದೆ. ಮೋದಿಯನ್ನು “ಅಭಿವೃದ್ಧಿಯ ಹರಿಕಾರ”ನೆಂದು ಬಿಂಬಿಸಲಾಗುತ್ತಿದ್ದೆಯೇ ವಿನಹ, ಅವರ ರಾಜಕೀಯ ಹಾಗೂ ವೈಚಾರಿಕ ಹಿನ್ನೆಲೆಯನ್ನು ಮರೆಮಾಚಲಾಗುತ್ತಿದೆ. ಮೋದಿಯ ಹೆಸರಿನ ಮೇಲೆ ಬಿ.ಜೆ.ಪಿ.ಗೆ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತಿದೆಯೇ ವಿನಹ, ಬಿ.ಜೆ.ಪಿ.ಯಿಂದ ಮೋದಿಗೆ ಅಲ್ಲ ಎಂಬುದನ್ನು ಗಮನಿಸಬೇಕು.

ನಗರ ಕೇಂದ್ರದ ಮಧ್ಯಮ ವರ್ಗಕ್ಕೆ ಸೇರಿರುವ ಅನೇಕ ಮಂದಿ ಯುವಕರು, ಶ್ರೀಮಂತ ವರ್ಗದ ಅನೇಕ ಮಂದಿ, Narendra_Modiಮೋದಿಯ ನಾಯಕತ್ವದ ಅಗತ್ಯ ದೇಶಕ್ಕೆ ಬಹಳವಿದೆಯೆಂದು ಹೇಳಲಾರಂಭಿಸಿದ್ದಾರೆ. ಈಗಿನ ನಮ್ಮ ಪ್ರಧಾನಿಯನ್ನು ಒಬ್ಬ “ಜೋಕರ್”ನಂತೆ ಸುಶಿಕ್ಷಿತರ ಮನಸ್ಸಿನಲ್ಲಿ ಮೂಡಿಸುವಲ್ಲಿ ಸಂಘ ಪರಿವಾರ ಸ್ವಲ್ಪ ಸಫಲತೆಯನ್ನು ಕಂಡುಕೊಂಡಿದೆ. ಮೊನ್ನೆಯ ಒಂದು ಸಂದರ್ಶನದಲ್ಲಿ ಬಿ.ಜೆ.ಪಿ.ಯ ನಾಯಕರಲ್ಲೊಬ್ಬರಾಗಿರುವ ಶ್ರೀ ಅರುಣ್ ಶೌರಿಯವರು ಮಾನ್ಯ ಮನಮೋಹನ ಸಿಂಗ್‌ರವರನ್ನು “ಒಬ್ಬ ಬೇಜವಾಬ್ದಾರಿ ಪ್ರಧಾನ ಮಂತ್ರಿ”ಯೆಂದೇ ನೇರವಾಗಿ ಪ್ರತಿಪಾದಿಸಿಯೂ ಆಗಿದೆ.

ಎಡಪಕ್ಷಗಳು ಹಾಗೂ ಕಾಂಗ್ರೆಸ್ ಇವೆರಡೂ ಪಕ್ಷಗಳು ಮೋದಿಯನ್ನು ಒಬ್ಬ “ಕೋಮುವಾದಿ” ಎಂದು ಬಿಂಬಿಸುವಲ್ಲಿ ಮಗ್ನವಾಗಿದ್ದಾವೆಯೇ ವಿನಹ, ಮೋದಿಯ ಕುರಿತು “ಅಭಿವೃದ್ಧಿಯ ಹರಿಕಾರ” ಎಂಬ ಇಮೇಜಿನ ಹಿಂದಿರುವ ಸುಳ್ಳುಗಳನ್ನು ಬಯಲಿಗೆಳೆಯುವಲ್ಲಿ ಸೋಲುತ್ತಿವೆ.

ಗುಜರಾತಿನಲ್ಲಿ ಎಂತಹ ಅಭಿವೃದ್ಧಿಗಳಾಗಿವೆ, ಅದರಲ್ಲಿ ಮೋದಿಯ ಪಾತ್ರ ಅಥವಾ ಕಾಣಿಕೆಯಾದರೂ ಎಷ್ಟು ಎಂಬುದರ ಕುರಿತು ನೈಜ ಚಿತ್ರಣವನ್ನು ಎಲ್ಲಿಯವರೆಗೆ ನಾವು ಜನಮನದಲ್ಲಿ ಮನದಟ್ಟು ಮಾಡುವುದಿಲ್ಲವೋ ಅಲ್ಲಿಯವರೆಗೆ ಮೋದಿಯ ಕುರಿತು ಕುತೂಹಲ, ಮತ್ತು ಮೆಚ್ಚುಗೆ ಇದ್ದೇ ಇರುತ್ತದೆ. ಮೋದಿ ಕೋಮುವಾದಿಯೋ ಅಥವಾ ಅಲ್ಲವೋ ಎಂಬುದು ಜನರಿಗೆ ಈಗ ಮುಖ್ಯವಾದ ಅಂಶವೇ ಅಲ್ಲ. ಜನಸಾಮಾನ್ಯರು ತಮ್ಮ ನಾಯಕನಲ್ಲಿ ಚತುರ ಮಾತುಗಾರಿಕೆಯನ್ನು, ಸ್ಪಷ್ಟವಾಗಿ ಬಾಯಿಬಿಟ್ಟು ಹೇಳುವ ವ್ಯಕ್ತಿತ್ವವನ್ನು, ಹಾಗೂ ಆತ್ಮವಿಶ್ವಾಸದ ಲಕ್ಷಣಗಳನ್ನು ನೋಡಬಯಸುತ್ತಾರೆ.

ಹಾಗಿದ್ದಲ್ಲಿ ಮೋದಿಯ ನಾಯಕತ್ವದಲ್ಲಿ ಗುಜರಾತಿನ ಸಾಧನೆಗಳಾದರೂ ಏನು? ಎಂಬುದನ್ನು ಅವಲೋಕಿಸುವುದು ಬಹಳ ಅಗತ್ಯವೆನಿಸುತ್ತದೆ.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-1 : ಬಿ.ಜೆ.ಪಿ.ಯ ಆಳ್ವಿಕೆಯಲ್ಲಿ :

ಗುಜರಾತ್ ರಾಜ್ಯವನ್ನು ಬಿ.ಜೆ.ಪಿ.ಯು 1998-99 ರಿಂದ (ಅಂದರೆ ಸುಮಾರು 15 ವರ್ಷಗಳಿಂದ) ಆಳುತ್ತ ಬಂದಿದೆ. ಇದರಲ್ಲಿ ಮೋದಿಯ ಆಳ್ವಿಕೆ ಆರಂಭವಾದದ್ದು 10, 2001 ರಿಂದ.

19998-99 ರಿಂದ 2001-02 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ.ಯ ಶ್ರೀ ಕೇಶುಭಾಯ್ ಪಟೇಲರಿದ್ದರು. ಆಗ ಗುಜರಾತ್ ರಾಜ್ಯದ ವಾರ್ಷಿಕ ಅಭಿವೃದ್ಧಿ ದರ 7.5% ಇತ್ತು. ಭಾರತದ ಅಭಿವೃದ್ಧಿ ದರ 10.7 % ಇತ್ತು. ಅಂದರೆ ಬಿ.ಜೆ.ಪಿ.ಯು ಅಧಿಕಾರಕ್ಕೆ ಬಂದಾಕ್ಷಣ ಮಹತ್ತರವಾದ ಪವಾಡಗಳೇನೂ ಗುಜರಾತಿನಲ್ಲಿ ನಡೆಯಲಿಲ್ಲ ಎನ್ನುವುದನ್ನು ತಿಳಿಯಬಹುದು.

ಮೋದಿಯ ಆಡಳಿತ ಅವಧಿ ಆರಂಭಗೊಂಡಿದ್ದು 2002-03 ನೇ ಇಸವಿಯಿಂದ. ಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧಿ ದರ gujarath16.25 %. ಭಾರತದ ವಾರ್ಷಿಕ ಅಭಿವೃದ್ಧೀ ದರ 14%. ಭಾರತದ ಈ ಒಟ್ಟು ಅಭಿವೃದ್ಧೀ ದರವನ್ನು ಲೆಖ್ಖ ಹಾಕುವಾಗ ಅದರಲ್ಲಿ ಗುಜರಾತಿನಂತಹ ಉತ್ತಮ ಅಭಿವೃದ್ಧಿ ಹೊಂದಿರುವ ರಾಜ್ಯಗಳೂ ಸೇರಿರುತ್ತವೆ ಹಾಗೂ ಕಳಪೆ ಪ್ರದರ್ಶನ ನೀಡುವ ರಾಜ್ಯಗಳೂ ಸೇರಿರುತ್ತವೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯವು ಭಾರತಕ್ಕಿಂತ ಅಭಿವೃದ್ಧೀ ದರದಲ್ಲಿ ಕೇವಲ 2..25% ಹೆಚ್ಚಿನ ಅಭಿವೃದ್ದಿ ದರವನ್ನು ತೋರಿಸುತ್ತಿರುವುದು ದೊಡ್ಡ ಮಾತೇನಲ್ಲ.

ಇಲ್ಲಿ ನೀಡಿರುವ ಅಂಕಿ-ಅಂಶಗಳ ಕುರಿತು ಒಂದು ಮಾತು.

  1. ಇಲ್ಲಿಯ ಅಂಕಿ-ಅಂಶಗಳು ಭಾರತದ ರಿಸರ್ವ್ ಬ್ಯಾಂಕ್ ಪ್ರತಿ ವರ್ಷ ಹೊರತರುವ “Handbook of Statistics of Indian Economy”ಎಂಬ ಕಿರುಹೊತ್ತಿಗೆಯ ಆಧರಿಸಿ ನೀಡಲಾಗಿದೆ.
  2. ಅಭಿವೃದ್ಧೀ ದರವನ್ನು ಹೇಳುವಾಗ “ಸಾಮಾನ್ಯ ಸರಾಸರಿ”ಯನ್ನು ತೆಗುಕೊಳ್ಳಲಾಗಿದೆ.
  3. ರಾಜ್ಯದ ಅಭಿವೃದ್ಧಿ ದರವನ್ನು ಹೇಳುವಾಗ “Net State Domestic Product at Factor Cost” ನಲ್ಲಿ ಹೇಳಲಾಗಿದೆ. Factor Cost ನ್ನು ಯಾಕೆ ತೆಗೆದುಕೊಂಡಿದ್ದೇವೆ ಎಂದರೆ ಆಗ ಎಲ್ಲ ಲೆಕ್ಕಾಚಾರದ ಮೇಲೆ ಬೆಲೆ ಏರಿಕೆಯ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವ ಪ್ರಯಾಸದ ಕೆಲಸ ತಪ್ಪುತ್ತದೆ ಎಂಬ ಕಾರಣಕ್ಕೆ. Net State Domestic Product ಅಂದರೆ ಒಂದು ರಾಜ್ಯದ ಒಂದು ವರ್ಷದ ಜಿ.ಡಿ.ಪಿ. ಮೈನಸ್ ಆ ರಾಜ್ಯದ ನಿವೇಶನ, ವಾಹನಗಳು, ಯಂತ್ರೋಪಕರಣಗಳು ಇತ್ಯಾದಿ Capital Goods ಗಳಲ್ಲಿ ಆದ “ಡೆಪ್ರಿಷಿಯೇಷನ್”.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-2 : ಬಿ.ಜೆ.ಪಿ.ಯೇತರ ಪಕ್ಷಗಳ ಆಳ್ವಿಕೆಯಲ್ಲಿ :

  1. 1998-99 ರ ಮೊದಲು ಗುಜರಾತನ್ನು ಕಾಂಗ್ರೆಸ್ ಸರ್ಕಾರವೇ ಅನೇಕ ವರ್ಷಗಳಿಂದ ಅಭಿವೃದ್ಧಿ ಪಡೆಸುತ್ತ ಬಂದಿದೆ. ಗುಜರಾತಿನ ಈಗಿನ ಆರ್ಥಿಕ ಅಭಿವೃದ್ಧಿಗೆ ಭದ್ರವಾದ ಬುನಾದಿಯನ್ನು ಹಾಕಿದ್ದೇ ಅಲ್ಲಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವೆಂಬುದನ್ನು ನಾವು ಮರೆಯಬಾರದು. (1994-95 ರಿಂದ 1998-99 ರವರೆಗೆ ಗುಜರಾತಿನಲ್ಲಿ ರಾಜಕೀಯ ಅಸ್ಥಿರತೆಯಿತ್ತು. ಅನೇಕ ಮಂದಿ ಮುಖ್ಯಮಂತ್ರಿಗಳು ಈ ಅವಧಿಯಲ್ಲಿ ಆಗಿ ಹೋಗಿದ್ದು, ಈ ಒಂದು ಕಾಲಘಟ್ಟವನ್ನು ನಮ್ಮ ಅಧ್ಯಯನದಿಂದ ಹೊರಗಿಡುತ್ತಿದ್ದೇವೆ.)
  2. 1990-91 ರಿಂದ 1993-94 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಶ್ರೀ ಚಿಮನ್ ಭಾಯಿ ಪಟೇಲರಿದ್ದರು. Reliance-Gujarathಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧೀ ದರ 16.75 % ಇತ್ತು!!. ಅಂದರೆ ಮೋದಿಯ ಕಾಲದಲ್ಲಿರುವ ಅಭಿವೃದ್ಧೀ ದರಕ್ಕಿಂತಲೂ ಹೆಚ್ಚು!!.
  3. 1980-81 ರಿಂದ 1989-90 ರ ಅವಧಿಯಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ಸಿನ ಮಾನ್ಯ ಮಾಧವಸಿಂಗ್ ಸೋಳಂಕಿ. ಇವರ ಆಳ್ವಿಕೆಯಲ್ಲಿ ಗುಜರಾತ್ ವಾರ್ಷಕ್ಕೆ 14.8 % ವೇಗದಲ್ಲಿ ಬೆಳೆಯುತ್ತಿತ್ತ್ತು. ಆರ್ಥಿಕ ಉದಾರೀಕರಣ, ಜಾಗತೀಕರಣಗಳ ಕಲ್ಪನೆಯೇ ಇಲ್ಲದಿದ್ದ ಕಾಲ ಅದಾಗಿತ್ತು. ಆಂತಹ ಕಾಲಘಟ್ಟದಲ್ಲೇ ಶೇಕಡಾ 14.8 ರ ದರದಲ್ಲಿ ಅಭಿವೃದ್ಧಿ ಗುಜರಾತಿನಲ್ಲಿ ಆಗಿತ್ತು ಎಂದಾದಲ್ಲಿ ಮೋದಿಯ ಈಗಿನ 16.25% ಅಭಿವೃದ್ಧಿ ದರ ಬಡಾಯೀ ಕೊಚ್ಚಿಕೊಳ್ಳುವುದಕ್ಕೆ ಯೋಗ್ಯವಲ್ಲ. ಮೋದಿಯವರು ತನ್ನ ಮೊದಲು ಇದ್ದ ಅಭಿವೃದ್ಧೀ ದರವು ಕೆಳಗಿಳಿಯದಿರುವಂತೆ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಮಾತ್ರ ಖಂಡಿತವಾಗಿಯೂ ಎಲ್ಲರೂ ಒಪ್ಪಿಕೊಳ್ಳುವ ವಿಚಾರವಾಗಿದೆ.

ಮೋದಿಯ ಆಗಮನದ ಮೊದಲೇ:

ಗುಜರಾತ್ ಮೊದಲಿನಿಂದಲೂ ನಮ್ಮ ದೇಶದ ಬಹು ದೊಡ್ಡ ವ್ಯಾಪಾರ ಕೇಂದ್ರ. ಹರಪ್ಪ-ಮೊಹೆಂಜೋದಾರೋ ನಾಗರಿಕತೆಯ ಕಾಲದಿಂದಲೂ ಸಹ ಗುಜರಾತ್ ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿದೆ. ಸಂಪದ್ಭರಿತ ರಾಜ್ಯಗಳ ತುಲನೆಯಲ್ಲಿ 1985 ರಿಂದಲೇ ಗುಜರಾತ್ 3 ನೇ ಸ್ಥಾನದಲ್ಲಿದೆ.

  1. ಗುಜರಾತಿನಲ್ಲಿ ಒಟ್ಟು 18028 ಹಳ್ಳಿಗಳಿದ್ದು ಅವುಗಳಲ್ಲಿ 17940 ಹಳ್ಳಿಗಳು 1991 ರಲ್ಲೇ ಸಂಪೂರ್ಣವಾಗಿ ವಿದ್ಯುತ್ ಶಕ್ತಿಯನ್ನು ಪಡೆದಿದ್ದವು.
  2. ಗುಜರಾತಿನ ರಸ್ತೆಗಳಲ್ಲಿ 85% ರಸ್ತೆಗಳು ಮೋದಿ ಬರುವುದಕ್ಕಿಂತಲೂ ಮೊದಲೇ ಸಿಮೆಂಟ್ ರಸ್ತೆಗಳಾಗಿದ್ದವು.
  3. ಪ್ರಪಂಚದ ಅತಿ ದೊಡ್ಡ ಹಡಗುಗಳನ್ನು ಒಡೆಯುವ ಯಾರ್ಡ್, ಅಂಬಾನಿಯವರ ಜಾಮ್ ನಗರದ ಕಚ್ಚಾ ತೈಲ ಶುದ್ಧೀಕರಣ ಫ಼ಾಕ್ಟರಿ ಇವೆಲ್ಲ ಮೋದಿ ಬರುವ ಮೊದಲೇ ಗುಜರಾತಿನಲ್ಲಿ ಅಸ್ತಿತ್ವದಲ್ಲಿದ್ದವು.
  4. ಭಾರತಕ್ಕೆ ಬೇಕಾಗಿರುವ ತೈಲೋತ್ಪನ್ನಗಳಲ್ಲಿ 45% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿತ್ತು.
  5. ಭಾರತದ ಹಡಗುಗಳ ಮೂಲಕ ನಡೆಯುವ ಸರಕು-ಸಾಗಣೆಯ 18% ಗುಜರಾತಿನಿಂದ ಮೋದಿ ಬರುವ ಮೊದಲೇ ನಡೆಯುತ್ತಿತ್ತು.
  6. ನಮ್ಮ ದೇಶಕ್ಕೆ ಬೇಕಾದ ಕಚ್ಚಾ ತೈಲದ 23% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  7. ನಮಗೆ ಬೇಕಾಗಿರುವ ನೈಸರ್ಗಿಕ ಅನಿಲದಲ್ಲಿ 30% ಅನಿಲ ಗುಜರಾತಿನಿಂದ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  8. ನಮ್ಮ ದೇಶಕ್ಕೆ ಅಗತ್ಯವಾಗಿರುವ ಔಷಧಿಗಳಲ್ಲಿ 26% ಔಷಧಿಗಳೂ, 78% ಉಪ್ಪು ಹಾಗೂ 98% ಸೋಡಾ ಆಷ್ ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿದ್ದವು.

ಮೋದಿಯ ಗುಜರಾತ್ v/s ಬೇರೆ ಕೆಲವು ರಾಜ್ಯಗಳು :

2002-03 ರಿಂದ ಮೋದಿಯವರ ಆಡಳಿತ ಗುಜರಾತಿನಲ್ಲಿ ನಡೆಯುತ್ತಿದ್ದು ಗುಜರಾತ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು ದೇಶದ ಬೇರೆ ಯಾವ ರಾಜ್ಯಗಳೂ ಈ ರೀತಿಯ ಅಭಿವೃದ್ಧಿಯನ್ನು ಸಾಧಿಸುತ್ತಿಲ್ಲ ಇದಕ್ಕೆಲ್ಲ ಮಾನ್ಯ ಮೋದಿಯವರ “ಸಮರ್ಥ ನಾಯಕತ್ವ”ವೇ ಕಾರಣ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಗುಜರಾತ್ ರಾಜ್ಯದಷ್ಟೆ ಪ್ರಮಾಣದಲ್ಲಿ(ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು) ಬೇರೆ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅವುಗಳ ಕಡೆಗೆ ಒಂದು ಸಲ ನಮ್ಮ ಗಮನವನ್ನು ನೀಡೋಣ.

  1. ಮಹಾರಾಷ್ಟ್ರ ರಾಜ್ಯ: ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 15.5%.
    • ( ಅ) ಮಹಾರಾಷ್ಟ್ರದ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 54 ಪಟ್ಟು ಹೆಚ್ಚಾಗಿದೆ.
    • (ಆ) ಗುಜರಾತಿನ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 56 ಪಟ್ಟು ಹೆಚ್ಚಾಗಿದೆ.

    ಇದನ್ನು ಗಮನಿಸಿದಾಗ ಮಹಾರಾಷ್ಟ ರಾಜ್ಯದ ಸಾಧನೆಗಳು ಗುಜರಾತಿನ ಸಾಧನೆಗೆ ಬಹಳ ಸಮೀಪದಲ್ಲೇ ಇದೆ.

  2. ಹರಿಯಾಣಾ ರಾಜ್ಯ : 04/2005 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 18%
  3. ಆಂಧ್ರಪ್ರದೇಶ ರಾಜ್ಯ: 05/2004 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 16%
  4. ಇನ್ನು ಜಿ.ಡಿ.ಪಿ.ಯ ಲೆಕ್ಕ ಹಾಕಿದಾಗ ಇಡೀ ದೇಶದಲ್ಲಿ ಗುಜರಾತ್ ಐದನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಮತ್ತು ತಮಿಳುನಾಡಿನ ನಂತರ ಗುಜರಾತ್ ಬರುತ್ತದೆ.
  5. ಪ್ರತಿ ವ್ಯಕ್ತಿಯ ವಾರ್ಷಿಕ ತಲಾ ಆದಾಯವನ್ನು ಲೆಕ್ಕ ಹಾಕಿದರೆ, ಹರ್ಯಾಣಾದಲ್ಲಿ ರೂ. 78781/-, ಮಹಾರಾಷ್ಟ್ರದಲ್ಲಿ ರೂ. 74072/- ಆದರೆ ಗುಜರಾತಿನಲ್ಲಿ ರೂ. 63961/-.

ಮೋದಿಯ ಆಳ್ವಿಕೆಯಲ್ಲಿ ಈಗಿನ ಗುಜರಾತ್ :

ಸುಮಾರು 12 ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಮಾನ್ಯ ನರೇಂದ್ರ ಮೋದಿಯವರ ಸಾಧನೆಗಳಾದರೂ ಏನು? ಜನಸಾಮಾನ್ಯರಿಗೆ ಉಪಯೋಗವಾಗುವ ಕಾರ್ಯಗಳಾದರೂ ಯಾವುವು? ಎಂಬಿತ್ಯಾದಿಗಳನ್ನು ತಿಳಿಯುವ ಮೊದಲು ಗುಜರಾತಿನ ಈಗಿನ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸುವುದು ಒಳ್ಳೆಯದು.

  1. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಗುಜರಾತ್ 10 ನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಕೇರಳ ರಾಜ್ಯಕ್ಕೆ.
  2. 5 ವರ್ಷಕ್ಕೂ ಕಮ್ಮಿ ವಯಸ್ಸಿನ ಮಕ್ಕಳ ಸಂಖ್ಯೆಯಲ್ಲಿ 44.6% ಮಕ್ಕಳು ಸತ್ವಯುತ ಆಹಾರವಿಲ್ಲದೇ ಗುಜರಾತಿನಲ್ಲಿ ನರಳುತ್ತಿದ್ದಾವೆ.
  3. ಗುಜರಾತಿನ ಮಕ್ಕಳಲ್ಲಿ 70% ಮಕ್ಕಳು ಅನಿಮಿಯಾದಿಂದ ಬಳಲುತ್ತಿದ್ದಾರೆ.
  4. ಎನ್.ಆರ್.ಇ.ಜಿ.ಎಸ್. ಸ್ಕೀಂನ ಅಡಿಯಲ್ಲಿ ಬೇರೆ ರಾಜ್ಯದಲ್ಲಿ ಕೊಡುವ ದಿನಗೂಲಿಯ ಅರ್ಧದಷ್ಟು ಮಾತ್ರ ದಿನಗೂಲಿಯನ್ನು ಗುಜರಾತ್ ಸರ್ಕಾರ ಕೊಡುತ್ತಿದೆ.
  5. ಸುಶಿಕ್ಷಿತ ಮಹಿಳೆಯರಲ್ಲಿ ಕೇವಲ 2.04% ಮಹಿಳೆಯರು ಮಾತ್ರ ಸರ್ಕಾರಿ ಹಾಗೂ ಅರೆ ಸರ್ಕಾರೀ ಉದ್ಯೋಗದಲ್ಲಿದ್ದಾರೆ.
  6. ಗುಜರಾತಿನಲ್ಲಿ ಅತೀ ಕಡಿಮೆ ಕೂಲಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿದ್ದು, ಅದರಲ್ಲೂ ಮಹಿಳಾ ಕಾರ್ಮಿಕರಿಗೆ ಸಿಗುವ ಸಂಬಳ ಬಹಳ ನಿಕೃಷ್ಟವಾಗಿರುತ್ತದೆ.
  7. ಸಂಘಟಿತ ಕಾರ್ಮಿಕರಲ್ಲಿ ಉದ್ಯೋಗದ ಬೆಳವಣಿಗೆಯ ಪ್ರಮಾಣ ಅತಿ ಕಡಿಮೆಯಾಗಿದೆ. ವರ್ಷಕ್ಕೆ ಸಂಘಟಿತ ಕ್ಷೇತ್ರದಲ್ಲಿ ಕೇವಲ 0.50% ಉದ್ಯೋಗದಲ್ಲಿ ಹೆಚ್ಚಳವನ್ನು ಕಾಣಬಹುದು. ಅಂದರೆ ಈ ವರ್ಷ 1000 ಜನ ಕೆಲಸದಲ್ಲಿದ್ದರೆ, ಮುಂದಿನ ವರ್ಷದಲ್ಲಿ ಅವರ ಸಂಖ್ಯೆ ಕೇವಲ 1005 !
  8. ಮೋದಿಯವರ ಗುಜರಾತಿನಲ್ಲಿ ಬಡವರೆಂದರೆ ಯಾರೂ ಎಂಬುದನ್ನು ನಿರ್ಧರಿಸಲು ಇರುವ ಮಾನದಂಡವೇ ಬೇರೆ!!. ನಗರ ಪ್ರದೇಶದಲ್ಲಿ ಯಾರ ಮಾಸಿಕ ಆದಾಯ 540/- ರೂಪಾಯಿ ದಾಟುವುದಿಲ್ಲವೋ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ modi-GIMಯಾರ ಮಾಸಿಕ ಆದಾಯ ರೂಪಾಯಿ 361/- ದಾಟುವುದಿಲ್ಲವೋ ಅವರು ಮಾತ್ರ ಬಡವರು. ಅವರಿಗೆ ಮಾತ್ರ BPL.ಕಾರ್ಡ್‌ನ್ನು ನೀಡಲಾಗುವುದು!!.
  9. ಪ್ರತಿ ವರ್ಷ ಅಂತಾರಾಷ್ಟ್ರೀಯ ಉದ್ಯಮಪತಿಗಳನ್ನು ಗುಜರಾತಿಗೆ ಕರೆಯಿಸಿ “ಗ್ಲೋಬಲ್ ಮೀಟ್” ಮಾಡಿ, ಅನೇಕ ಉದ್ದಿಮೆಗಳಿಗೆ ಅಲ್ಲಿ ಸಹಿಹಾಕುವ ಕೆಲಸ ಗುಜರಾತಿನಲ್ಲಿ ನಡೆಸುತ್ತ ಬರಲಾಗಿದೆ. ಆದರೆ ಅವುಗಳಲ್ಲಿ ಕೇವಲ 20% ಮಾತ್ರ ಇಲ್ಲಿಯವರೆಗೆ ಅನುಷ್ಠಾನಗೊಂಡಿವೆ.
  10. ನಮ್ಮ ದೇಶಕ್ಕೆ ಇಲ್ಲಿಯವರೆಗೆ ಹರಿದುಬಂದಿರುವ FDI ನಲ್ಲಿ ಕೇವಲ 5% ಮಾತ್ರ ಗುಜರಾತಿಗೆ ತರಿಸುವಲ್ಲಿ ಮೋದೀಯ ಮೋಡಿ ಕೆಲಸಮಾಡಿದೆ. ತಮಿಳುನಾಡು ಮತ್ತು ಕರ್ನಾಟಕವು ಸದ್ದಿಲ್ಲದೆ ತಲಾ 6% ಈ.FDI ನ್ನು ತಮ್ಮದಾಗಿಸಿದ್ದರೆ, ಮಹಾರಾಷ್ಟ್ರಾದವರು 35% ತಮ್ಮೆಡೆಗೆ ಸೆಳೆದಿದ್ದಾರೆ.

ಕೆ.ಪಿ.ಶಶಿ ಎಂಬ ಚಿಂತಕರು ಗುಜರಾತಿನ ಅಭಿವೃದ್ಧಿಯ ಕುರಿತು ಒಂದು ಮಾತನ್ನು ಹೇಳಿದ್ದು ಅದು ಬಹಳ ಅರ್ಥಪೂರ್ಣವಾಗಿದೆ. ಅವರ ಪ್ರಕಾರ “ಮೋದಿಯವರ ಅಭಿವೃದ್ಧಿಯ ಮಾಡೆಲ್” ಆರ್.ಎಸ್.ಎಸ್.ನ ಚಡ್ಡಿಯಿದ್ದಂತೆ-ಅದು ಎಂದೂ ನೆಲವನ್ನು ಮುಟ್ಟುವುದೇ ಇಲ್ಲ!!.

ಗುಜರಾತಿನ ಕೃಷಿ :- ಸತ್ಯ ಮತ್ತು ಮಿಥ್ಯ

ನರೇಂದ್ರ ಮೋದಿಯ ಅಭಿಮಾನಿಗಳು ನರೇಂದ್ರಮೋದಿಯವರಿಂದ ಗುಜರಾತಿನ ಕೃಷಿ ಬಹಳವಾಗಿ ಬೆಳೆದಿದೆ. ಕೃಷಿಯಲ್ಲಿ ಭಾರತದ ಅಭಿವೃದ್ಧಿಗಿಂತ ಹೆಚ್ಚಿನದಾಗಿ ಅಭಿವೃದ್ಧಿ ಗುಜರಾತಿನಲ್ಲಿ ನಡೆದಿದೆ. ಇದಕ್ಕೆಲ್ಲ ಮೋದಿಯವರ ಸಮರ್ಥ ನಾಯಕತ್ವ, ಒಳನೋಟ ಇವುಗಳೇ ಕಾರಣ ಎಂದೆಲ್ಲ ಹೊಗಳಲು ಆರಂಭಿಸಿದ್ದಾರೆ.

ಮೋದಿಯೂ ಸಹ ತನ್ನ ವೆಬ್‌ಸೈಟ್‌ನಲ್ಲಿ ಹಾಗೂ ಇತರ ಕಡೆಯಲಿ ಭಾಷಣ ಮಾಡುವಾಗ ಈಗ ಭಾರತದ guj-agricultureಕೃಷಿಕ್ಷೇತ್ರದಲ್ಲಿ ನಾವೇ ನಂಬರ್ 1 ಎಂದೆಲ್ಲ ಸುಳ್ಳುಗಳನ್ನೂ ಹೇಳಿಯಾಗಿದೆ. ಭಾರತದ ಕೃಷಿ ವರ್ಷಕ್ಕೆ 4% ನಂತೆ ವೃದ್ಧಿಯಾಗುತ್ತಿದೆ, ಆದರೆ ಗುಜರಾತಿನಲ್ಲಿ ಅದು 11% ನಂತೆ ಹೆಚ್ಚಾಗುತ್ತಿದೆ ಎಂದು ಬಾಯಿಗೆ ಬಂದ ಅಂಕಿ-ಅಂಶಗಳನ್ನು ನೀಡಲಾಗುತ್ತಿದೆ.

ಕೇಂದ್ರ ಸಚಿವಾಲಯವು ಮುದ್ರಿಸಿರುವ ಭಾರತದ ಕೃಷಿಯ ಸ್ಥಿತಿ-ಗತಿ, 2012-13ರ ವರದಿಯ ಪ್ರಕಾರ ಕೃಷಿಯಲ್ಲಿ ಗುಜರಾತಿನ ಸ್ಥಾನ 8ನೇ ಸ್ಥಾನ.

2007-08 ರಿಂದ 2011-12 ರ ಅವಧಿಯಲ್ಲಿ ಗುಜರಾತಿನ ಕೃಷಿ ಅಭಿವೃದ್ಧಿಯು 4.8% ದರದಲ್ಲಿ ಪ್ರತಿವರ್ಷ ವೃದ್ಧಿಯಾಗುತ್ತಿದೆ.

ಗುಜರಾತ್ ಸರ್ಕಾರವು ಪ್ರತಿ ವರ್ಷ ತನ್ನ ಆರ್ಥಿಕ ಸ್ಥಿತಿ-ಗತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸುತ್ತದೆ. ಈ ರೀತಿ ಪ್ರಕಟಿತ ಮಾಹಿತಿಯ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರಲು ಬಯಸುತ್ತೇವೆ. ಆಗ ಮಾತ್ರ ಎಲ್ಲರಿಗೂ “ಈ ಮೋದಿ ಎನ್ನುವವ ಎಂತಹ ಸುಳ್ಳುಗಾರ” ಎಂಬುದು ಮನದಟ್ಟಾಗುತ್ತದೆ.

ವರ್ಷ ಆಹಾರಧಾನ್ಯಗಳು (ಲಕ್ಷ ಟನ್‌ಗಳಲ್ಲಿ) ಎಣ್ಣೆಕಾಳುಗಳು (ಲಕ್ಷ ಟನ್‌ಗಳಲ್ಲಿ) ಹತ್ತಿ ಬೆಳೆ(ಲಕ್ಷ ಬೇಲ್‌ಗಳಲ್ಲಿ)
1996-97 60.89 38.02 28.18
1997-98 61.13 38.65 34.17
1998-99 60.38 38.81 40.03
1999-2000 44.37 18.26 21.45
2000-01 31.84 17.37 12.82
2001-02 52.54 37.46 16.84
2002-03 43.95 18.77 18.39
2003-04 67.36 58.55 42.79
2004-05 51.53 28.99 55.40
2005-06 61.41 47.34 65.12
2006-07 61.10 28.46 87.87
2007-08 82.06 46.99 78.76
2008-09 63.45 39.32 82.75
2009-10 56.05 30.10 74.01
2010-11 100.71 51.42 98.25
2011-12 92.57 50.53 103.75

1996-97 ರಿಂದ 2004-05 ರವರೆಗೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ದರ ವಾರ್ಷಿಕ ಸರಾಸರಿ 5.65% ಇತ್ತು, ಅದೀಗ 6.47% ಆಗಿದೆ.

ಗುಜರಾತಿನ ಕೃಷಿಯಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಈ ಕೆಲವು ಕಾರಣಗಳನ್ನು ಪಟ್ಟಿಮಾಡಬಹುದು:

  1. ಸರ್ದಾರ್ ಸರೋವರ ಆಣೆಕಟ್ಟಿನಿಂದ ಗುಜರಾತಿನ ಅನೇಕ ಭಾಗಗಳಿಗೆ 2002 ರಿಂದ ನೀರು ಲಭ್ಯವಾಗಲಾರಂಭಗೊಂಡಿದ್ದು.
  2. Bt ಹತ್ತಿಯನ್ನು ಬೆಳೆಸುತ್ತಿರುವುದು
  3. ಮೈನರ್ ಇರಿಗೇಷನ್‌ಗಳ ಆಳವಡಿಕೆ
  4. ಭೂಮಿಯ ಅಂತರ್ಜಲವನ್ನು ಹೆಚ್ಚಿಸಲು ಸಾವಿರಾರು ಚೆಕ್-ಡ್ಯಾಮ್ ಗಳ ರಚನೆ
  5. ಸಣ್ಣ-ಸಣ್ಣ ಯಾಂತ್ರಿಕ ಉಪಕರಣಗಳ ಬಳಕೆ
  6. ಒಳ್ಳೆಯ ಸಾರಿಗೆ ಸೌಕರ್ಯಗಳು
  7. ನಿಯಮಿತವಾಗಿ ಹಾಗೂ ಕಡ್ಡಾಯವಾಗಿ ನಿಗದಿಪಡಿಸಿದ ಅವಧಿಗೆ 3-ಫೇಸ್ ವಿದ್ಯುತ್ ಸರಬರಾಜು

ಮುಗಿಸುವ ಮೊದಲು:

ಗುಜರಾತಿನಲ್ಲಿ ಮೋದಿ ಆಳ್ವಿಕೆಯಲ್ಲಿ ನಗರದ ಮಧ್ಯಮ ವರ್ಗದ ಜನರು ಅನೇಕ ಸೌಲಭ್ಯಗಳಿಂದ, middleclass-indiaಅಭಿವೃದ್ಧಿಯ ಫಲವನ್ನು ಆನಂದಿಸುತ್ತ ಇದ್ದಾರೆಯೇ ವಿನಹ ಅಲ್ಲಿಯ ಆದಿವಾಸಿಗಳ ಹಾಗೂ ದಲಿತರ ಸ್ಥಿತಿ-ಗತಿ ಬಹಳ ಚಿಂತಾಜನಕವಾಗಿದೆ. ಫಲವತ್ತಾದ ಭೂಮಿಯನ್ನು ಉದ್ಯಮಪತಿಗಳಿಗೆ ನೀಡುತ್ತಿರುವುದರ ವಿರುದ್ಧ ಈಗಾಗಲೇ ಗುಜರಾತಿನ ಗ್ರಾಮ-ಗ್ರಾಮಗಳಲ್ಲಿ ಸಂಘಟಿತ ರೈತರಿಂದ ಪ್ರತಿರೋಧ ಬಲಗೊಳ್ಳುತ್ತಿದೆ. ಭಾರತದ ಉದ್ಯಮಪತಿಗಳಿಗೆ ಈಗ ಮೋದಿ ಬೇಕಾಗಿದ್ದಾರೆ. ಯು.ಪಿ.ಎ. ಸರ್ಕಾರದಿಂದ ನಿರೀಕ್ಷಿತ ಅನುಕೂಲತೆಗಳು ಸುಲಭವಾಗಿ ದೊರೆಯಲಾರದು ಎಂದು ಮನಗಂಡಿರುವ ಬಂಡವಾಳಶಾಹಿಗಳು ಈಗ ಮೋದಿಯನ್ನು “ದೇಶದ ಪ್ರಧಾನಿ”ಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಮೋದಿಯ ಸುಳ್ಳುಗಳನ್ನು ಬಯಲು ಮಾಡಬೇಕು, ಮೋದಿಯ ಕೊಳಕು ಕೋಮುವಾದವನ್ನು ಹಿಮ್ಮೆಟ್ಟಿಸುವಲ್ಲಿ ಸಂಘಟಿತ ಹಾಗೂ ವೈಜ್ಞಾನಿಕ ಕಾರ್ಯತಂತ್ರಗಳನ್ನು ರೂಪಿಸಬೇಕು.