Category Archives: ಜಯಪ್ರಕಾಶ್ ಶೆಟ್ಟಿ

ಕಸದ ಕರುಳುಬಳ್ಳಿಯೂ ಹೊಸಪೊರಕೆಯ ಮಡಿಯೂ

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಇತ್ತೀಚೆಗೆ ಯಾವ ಖಾಸಗಿ ಚಾನಲ್ ನೋಡಿದರೂ ಬೆನ್ನಿಕ್ಕಿ ನಡೆದುಹೋದ ಗಾಂಧೀ ಹೆಜ್ಜೆ, ಬೆಂಗಾಲಿಯ ಒಂದೆರಡು ಭಾಷಿಕ ತುಣುಕುಗಳ ಗೊಣಗಾಟ, ಕೊನೆಗೊಂದಿಷ್ಟು ಕಸಹೊಡೆದು ಕೈಗಾಡಿಯಲ್ಲಿ ತುಂಬಿಸಿ ಕಳುಹಿಸುವ ಶುದ್ಧೀಕರಣದ ದೃಶ್ಯವುಳ್ಳ ಸರ್ಕಾರಿ ಜಾಹೀರಾತು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ! ಪತ್ರಿಕೆಗಳಂತೂ ದಿನಂಪ್ರತಿ ಸ್ವಚ್ಛತೆಯ ಕಾರ್‍ಯಕ್ರಮಗಳನ್ನು ಬಿತ್ತರಿಸಿ ಪುಣ್ಯಕಟ್ಟಿಕೊಳ್ಳುತ್ತಿವೆ. ಕಸವೊಂದೇ ದೇಶದ ಸಮಸ್ಯೆ ಎನ್ನುವಂತೆ ಸೈಬರ್ ಸುಕುಮಾರ ಸುಕುಮಾರಿಯರು ಹೊಸ ಪೊರಕೆ ಹಿಡಿದು ’ನಗರದ ಬೀದಿ’ ಗುಡಿಸಿ ಕಸ ಎತ್ತಿದ ಸಾಕ್ಷಿಗಳನ್ನು ಮಾಧ್ಯಮಗಳಿಗೆ ಅಪ್‌ಲೋಡ್‌ಮಾಡಿ ದೇಶಸೇವೆಯ ಜಾಹೀರಾತು ಪಡೆದುಕೊಳ್ಳುತ್ತಿದ್ದಾರೆ. ರಾಜಕಾರಣಿಗಳೋ, ತಾರೆಯರೋ, Swach-Bharat-photo-opsಸೆಲೆಬ್ರಿಟಿಗಳೋ ಆದ ಅಸಾಮಾನ್ಯರು ಕೋಟು ತೊಟ್ಟೇ ಕಸ ಗುಡಿಸುತ್ತಿದ್ದಾರೆ! ಕೈಗವಚ ತೊಟ್ಟು, ಬಟ್ಟೆಯ ಇಸ್ತ್ರಿಕಳೆಯದ ಎಚ್ಚರದಲ್ಲಿ ಉದ್ದನೆ ಹಿಡಿಕೆಯ ಪೊರಕೆ ಹಿಡಿದು ರಸ್ತೆಬದಿಗೆ ನೆಟ್ಟಗೆನಿಂತು ಕಸಹೊಡೆಯುವ ಈ ಅಭಿನಯವಂತೂ ಮಾಧ್ಯಮ ಬಕಾಸುರರ ಹಸಿವಿಂಗಿಸುತ್ತಿದೆ. ಕೆಲವೊಂದೆಡೆ ಕಸವಿಲ್ಲದೆ ಪೇಚಿಗೆಬಿದ್ದವರು ಕಸವನ್ನೇ ಆಮದು ಮಾಡಿಕೊಂಡು, ಗುಡಿಸಿ ಮುಗಿಸಿದ್ದನ್ನೂ ಕೆಲವು ಕಳ್ಳಗಣ್ಣುಗಳು ಸಣ್ಣಗೆ ಸುದ್ದಿಮಾಡಿವೆ. ಹೀಗೆ ಈಗ ಎಲ್ಲೆಡೆ ಕಸದ ಕಾರುಬಾರು. ‘ಕೆರೆಯ ನೀರನು ಕೆರೆಗೆ ಚಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬಂತೆ ದೇಶದ ಕಸವನ್ನು ದೇಶದೊಳಕ್ಕೇ ಸುರಿದ ದೇಶಸೇವೆಯದೇ ಸುದ್ದಿ. ಈ ಜಾದೂ ನೋಡಿ ಸಹಸ್ರಮಾನಗಳಿಂದ ಕಸಹೊಡೆಯುತ್ತಿರುವ ತಾಯಂದಿರು, ಕುತ್ತಿಗೆಗೆ ಕಟ್ಟಿಕೊಂಡ ಕರಟದಲ್ಲೇ ತಮ್ಮ ಎಂಜಲು ಬಚ್ಚಿಟ್ಟುಕೊಂಡು ತಮ್ಮನ್ನು ನಿಷೇಧಿಸಿದ ಬೀದಿಯನ್ನೇ ಗುಡಿಸಿದ ಬಹಿಷ್ಕೃತರು, ತಲೆಹೆಗಲುಗಳಲ್ಲಿ ಹುಟ್ಟಿದವರ ’ತಳದ ಕೊಳಕ’ನ್ನು ತಲೆಮೇಲೆ ಹೊತ್ತು ಸಾಗಿಸಿದ ದಲಿತರು, ತಿಪ್ಪೆಗುಂಡಿಯಲ್ಲಿ ಕೊಳೆತ ಕಸವನ್ನೇ ನೆಲದ ಹಸಿವಿಂಗಿಸುವ ಗೊಬ್ಬರವೆಂದು ಸಂಭ್ರಮಿಸಿ ಹೊತ್ತು ಬದುಕಿದ ನೆಲದಮಕ್ಕಳು ಬೆರಗಾಗಿದ್ದಾರೆ! ಶತಮಾನಗಳ ಇತಿಹಾಸದಲ್ಲಿ ಸಮೂಹದ ಎದೆಯ ದಾರಿದ್ರ್ಯದಿಂದ ಅವರ ಮೈಮೇಲಿನ ಬಟ್ಟೆ, ಕೈಯಲ್ಲಿಯ ಪೊರಕೆಗಳು ಹೊಸಮೆರುಗು ಹೊಸಹೆಸರು ಕಂಡಿಲ್ಲ. ಅವರೆತ್ತಿದ ಕಸದಮೇಲೆ ದೇಶಸೇವೆಯ ಫಲಕ ಜೋತಾಡಿಲ್ಲ. ಆದರೆ ಈಗ ಶಿಕ್ಷೆಯನ್ನೇ ಕರ್ತವ್ಯವೆಂದು ಬದುಕಿದ ಈ ಕಸದ ಕರುಳುಬಳ್ಳಿಯ ಒಡನಾಡಿಗಳನ್ನೇ ಕಸದ ಜಾದೂ ಕಿಚಾಯಿಸುತ್ತಿದೆ. ಪಾಪದ ಜೋಳಿಗೆಯಲ್ಲಿ ಪುಣ್ಯದ ಪುತ್ಥಳಿಗಳ ಈ ಹೊಸಕುಣಿದಾಟ ಅವರ ಹಣೆಯೊಳಗಿನ ಹಣೆಬರಹವನ್ನೇ ತಡಕಾಡಿಕೊಳ್ಳುವಂತೆ ಮಾಡಿದೆ.

ಈ ದೇಶದಲ್ಲಿ ಯಾವಾಗಲೂ ಹೀಗೆಯೇ. ಸಾಮಾನ್ಯರನ್ನು ಬದಿಗಿರಿಸಿ ಸಾಮಾನ್ಯವು ಸುದ್ದಿಯಾಗುತ್ತದೆ. ಯಾಕೆಂದರೆ ಪಶ್ಚಿಮದಲ್ಲಿ ಆಡಮ್‌ ಸ್ಮಿತ್‌ನ ದುಡಿಮೆಯ ವಿಂಗಡಣೆಸೂತ್ರಕ್ಕೆ ಮೊದಲೇ ಇಲ್ಲಿ ಅಚ್ಚುಕಟ್ಟಾದ ಜಾತಿಸೂತ್ರ ಜಾರಿಗೊಂಡಿತ್ತು. ಸೊಂಟಕ್ಕೆ ಉಡುದಾರ ಕಟ್ಟುವ ಮೊದಲೇ ಮೆದುಳಿಗೆ ಮೆತ್ತುವ ಈ ಜಾತಿಗುರುತು, SwachhBharath_Modiಊರಬೀದಿಯ ಕಸ ಎತ್ತುವುದರಿಂದ ಹಿಡಿದು ಕಟ್ಟಿಕೊಂಡ ಬಚ್ಚಲುಗುಂಡಿಯ ಸ್ವಚ್ಚಕ್ಕೆ ಯಾರನ್ನು ಹುಡುಕುವುದೆಂಬ ಪ್ರಶ್ನೆಯನ್ನೇ ನಾಪತ್ತೆಗೊಳಿಸಿತ್ತು. ಹೀಗೆ ಹೊರಬೇಕಾದವರು ಹೊತ್ತು, ಹೊತ್ತವರ ನೆತ್ತಿಮೇಲೆ ಕೂರುವವರು ಗಡದ್ದಾಗಿ ಕೂತು ನಿದ್ರಿಸುವ ನಿರುಮ್ಮಳತೆ ಈ ಧರ್ಮಸಾಮ್ರಾಜ್ಯದ ಸತ್ಯವಾಗಿತ್ತು. ವ್ಯತ್ಯಾಸವಾದರೆ ತಾನೇ ಮತ್ತೆ ಮತ್ತೆ ಬಂದು’ ಇರಬೇಕಾದುದನ್ನು ಇರುವಂತೆಯೇ ವ್ಯವಸ್ಥೆ ಮಾಡುವುದಾಗಿ ಆ ’ಆಚಾರ್ಯ’ನೂ ಹೇಳಿಹೋಗಿದ್ದ! ಇಂತಹ ಧರ್ಮಪಾಲನೆಯಿಂದ ಕಸ-ರಸಗಳೆಲ್ಲ ಸಲ್ಲಬೇಕಾದ ಜಾಗಕ್ಕೆ ಸಂದಾಯವಾಗುತ್ತಾ ಬಂದಿವೆ. ಹಾಗಾಗಿ ಇಲ್ಲಿ ಕಸತೆಗೆಯುವುದು ಸುದ್ದಿಯಲ್ಲ. ಕಸ ತೆಗೆಯುತ್ತೇವೆ ಎನ್ನುವುದೇ ಸುದ್ದಿ. ಗುಡಿಸಬಾರದವರು ಗುಡಿಸುವುದೇ ಸುದ್ದಿ. ಅದು ನಮ್ಮ ಜನಕ್ಕೆ ಸಿಕ್ಕ ತರಬೇತಿ. ಇಲ್ಲಿ ಜನ ತಮ್ಮ ಕಷ್ಟಕ್ಕೆ ತಲೆ ಕೆಡಿಸಿಕೊಂಡವರಲ್ಲ. ರಾಜರಿಗೆ, ಮೇಲ್ಜಾತಿಗೆ ಬೆವರು ಮೂಡಿದರೆ ಜನಕ್ಕೆ ಅದು ತಮ್ಮ ಚಿಂತೆಯಾಗುತ್ತದೆ. ಉದಾಹರಣೆಗೆ ’ಹರಿಶ್ಚಂದ್ರಕಾವ್ಯ’ದಲ್ಲಿ ದಿನವೂ ತಾವು ನಡೆಯುತ್ತಿರುವುದಕ್ಕೆ ಕೊರಗದ ಜನ ವಿಶ್ವಾಮಿತ್ರನಿಗೆ ಎಲ್ಲವನ್ನೂ(ಕೊನೆಗೆ ತಮ್ಮನ್ನೂ) ಧಾರೆಯೆರೆದು ’ತನ್ನ ಸತ್ಯ’ ಉಳಿಸಿಕೊಳ್ಳಲು ಹೊರಟ ಹರಿಶ್ಚಂದ್ರ ಬರಿಗಾಲಿನಿಂದ ಹೇಗೆ ನಡೆದಾನು ಎಂದು ಚಿಂತೆಗೆ ಬೀಳುತ್ತದೆ. ’ಹೂವಿನಂತಹ ಕಾಲಿರುವ ನೀನು ಬರಿಗಾಲಿನಿಂದ ಹೇಗೆ ನಡೆಯುತ್ತೀ’ ಎನ್ನುವುದು ಅವರ ಸಂಕಟವಾಗುತ್ತದೆ. ಹಾಗಾಗಿ ರಾಜಕುಮಾರರು ಜನರ ನಡುವೆ ಬಂದರೆ, ಸಿನಿಮಾ ನಟಿಗೆ ಹೆರಿಗೆಯಾದರೆ, ನಟರು ಕೈಕುಲುಕಿದರೆ, ಯಾರೋ ಮಂತ್ರಿ, ಅಧಿಕಾರಿ ಗುದ್ದಲಿ, ಪೊರಕೆಹಿಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ನಾವು ಸಂಕಟ, ಸಂತೋಷಕ್ಕೆ ಬಿದ್ದುಬಿಡುತ್ತೇವೆ! Swach-Bharat-photosದಿನಂಪ್ರತಿ ಪೊರಕೆ, ಗುದ್ದಲಿ ಹಿಡಿದವರನ್ನು ಮರೆತು ಬಿಡುತ್ತೇವೆ. ಪುರಾಣಕಾಲದ ನಮ್ಮೀ ಪ್ರವೃತ್ತಿಗೆ ಜನಾಡಳಿತದಲ್ಲೂ ಬಿಡುಗಡೆ ಸಿಕ್ಕಿಲ್ಲ. ಹೀಗಾಗಿ ಸೊಂಟದಿಂದ ಜಾರುವಂತಿರುವ ಜೀನ್ಸ್‌ಪ್ಯಾಂಟ್, ತೆಳುವಾದ ಟೀಶರ್ಟ್ ಹಾಕಿದ ಸುಶಿಕ್ಷಿತ(?) ಟೆಕ್ಕಿಗಳು ಕೈಬಾಯಿಗಳಿಗೆ ಮುಸುಕು ಹಾಕಿಕೊಂಡು ಕಪ್ಪನೆಯ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಸ ತುಂಬಿಸುವ ಆಟವೂ ನಮಗೆ ದೇಶೋದ್ಧಾರದ ಬ್ರೇಕಿಂಗ್‌ ನ್ಯೂಸ್‌ಗಳಾಗುತ್ತವೆ. ಆದರೆ ಮ್ಯಾನ್ ಹೋಲ್‌ಗಳಲ್ಲಿ ಇಳಿದು ಯಾರೋ ಮಾಡಿದ ಹೊಲಸು ಎತ್ತುವ ಕೈಗಳು ಮುನುಷ್ಯರದ್ದೇ ಅನ್ನುವುದನ್ನು ಖಾತರಿಪಡಿಸಲು ಸಂವಿಧಾನದ ಕಲಂ ಓದಬೇಕಾಗುತ್ತದೆ!?

ಮನ ಮುಟ್ಟಿಕೊಂಡು ಮಲಮುಟ್ಟಲು ಹೇಸದ ಗಾಂಧಿ

ವರ್ತಮಾನದ ಕಸದ ಅಬ್ಬರಕ್ಕೆ ’ದೇಶದ ತಂದೆ’ ಎಂದೇ ಭಾವಿತನಾದ ಗಾಂಧಿಮುದ್ರೆಯೂ ಇದೆ. ಅದಲ್ಲದೆಯೂ ಕಸ, ಕೊಳಕು ಅಂದಾಗ ದೇವಾಲಯಕ್ಕಿಂತ ಶೌಚಾಲಯಕ್ಕೆ ಆದ್ಯತೆ ಎಂದ ಆ ಅರೆಬೆತ್ತಲೆ ಫಕೀರ ನೆನಪಾಗಿಯೇ ತೀರುತ್ತಾನೆ. ಆತನಾದರೋ ಅನಾದಿಯ ಯಾನದಲ್ಲಿ ನಮ್ಮ ನಡುವೆ ಕಾಣಿಸಿಕೊಂಡು ಇಲ್ಲವಾದವನು. ಇಲ್ಲ. ಆ ತಾತನನ್ನು ನಾವೇ ನಿವಾರಿಸಿಕೊಂಡೆವೆನ್ನಿ. ಸಾವಿಗೆ ಹೆದರದ ಈ ಫಕೀರ ಹಾಗೀಗೆಲ್ಲಾ ಸಾಯುವ ಅಸಾಮಿಯಲ್ಲ ಎಂಬುದು ಪುಕ್ಕಲು ಹಿಂಸಾವೀರರಾದ ನಮಗೆ ತಿಳಿದಿತ್ತು. ಹಾಗಾಗಿಯೇ ಆ ಬಡಕಲು ಜೀವದ ಗುಂಡಿಗೆಗೆ ಕಾಡುಪ್ರಾಣಿಗಳಿಗೆ ಗುರಿಯಿಡುವ ತುಪಾಕಿಯ ಸಿಡಿಗುಂಡನ್ನೇ ನುಗ್ಗಿಸುವ ವೀರನಿರ್ಧಾರ ಕೈಗೊಂಡು ಮುಗಿಸಿದ್ದು ಇತಿಹಾಸ. ಆದರೂ ನಮಗೆ ತಾತನನ್ನು ನೇಪಥ್ಯಕ್ಕೆ ಸರಿಸಲಾಗಿಲ್ಲ. ತಾತ ದೇಶದಾಚೆಗೂ ಬೆಳೆದು ನಿಂತುಬಿಟ್ಟಿದ್ದಾನೆ! ಹೋಗಲಿ ತಾತನ ಸಾವಿನ ಮಾತು ಯಾಕೆ? ಬದುಕಿನ ಬಗೆಗೆ ಮಾತಾಡೋಣ. ತಾತನೂ ಈ ಸ್ವಚ್ಚತೆಯ ಬಗೆಗೆ ಬಾರೀ ತಲೆ ಕೆಡಿಸಿಕೊಂಡಾತ. ಅಜ್ಜ ಯಾವುದನ್ನೇ ಆಗಲಿ ಹಚ್ಚಿಕೊಂಡ ಅಂದರೆ ಅದನ್ನು ಯಾವುದೇ ಪ್ರಚಾರವಿಲ್ಲದೆ ತಾನೇ ಮಾಡಲು ಇಳಿದು ಬಿಡುತ್ತಿದ್ದ. ಅಜ್ಜ ಅಲ್ಲವೇ? ಅವನ ವಯೋಮಾನ, ಪ್ರೀತಿ, ಕಕ್ಕುಲತೆಗಳೇ ಹಾಗೆ. ಕಕ್ಕುಲತೆಯೂ ಆತನಿಗೊಂದು ಹುಡುಕಾಟವೇ. ಯಾಕೆಂದರೆ ಆತನಿಗೆ ಬದುಕೇ ಪ್ರಯೋಗ. ಅಷ್ಟೇ ಯಾಕೆ ಕೊನೆಗೆ ಸಾವೂ ಕೂಡ ಆತನಿಗೂ, ದೇಶಕ್ಕೂ ಒಂದು ಪ್ರಯೋಗವೇ ಆಯಿತೆನ್ನಿ. ಈ ಅಜ್ಜನ ಬರಹಗಳನ್ನು ಕಲೆಹಾಕಿ ’ಸೆಲೆಕ್ಟೆಡ್ ರೈಟಿಂಗ್ಸ್ ಆಫ್ ಮಹಾತ್ಮಾಗಾಂಧಿ’ ಎನ್ನುವ ಸಂಕಲನವೊಂದನ್ನು ಹೊರತಂದ ರೋನಾಲ್ಡ್ ಡಂಕನ್, ಅಜ್ಜನ ಸಮಗ್ರವ್ಯಕ್ತಿತ್ವದೊಳಗೇ ಬೆರೆತುಹೋದ ಸ್ಚಚ್ಚತೆಯ ಕಾಳಜಿಗೊಂದು ಸಾಕ್ಷಿ ಒದಗಿಸುತ್ತಾನೆ.

ಡಂಕನ್ ಹೇಳಿರುವುದು ಗಾಂಧಿಯೊಂದಿಗೆ ಭಾಗವಹಿಸಿದ ಹಳ್ಳಿಯೊಂದರ ಸ್ವಚ್ಛತೆಯ ಅಭಿಯಾನದ ಕಥೆ. ಡಂಕನ್‌ಗೆ ಭಾರತದ ಮತ್ತೊಂದು ರೂಪವನ್ನೇ ಗಾಂಧಿ ತೋರಿದ್ದು ಈ ಹಳ್ಳಿಯಲ್ಲೇ. ಅದಾದರೋ ದಟ್ಟ ದಾರಿದ್ರ್ಯದ ಕುಗ್ರಾಮ. ಗಾಂಧೀಜಿ ಹೇಳುವಂತೆ ಅದು ತಾಜ್‌ಮಹಲಿನ ಸೌಂದರ್ಯವನ್ನರಸಿ ಬರುವವರು ಎಂದೂ ನೋಡಬಯಸದ ಭಾರತ. ಬಡ್ಡಿಯ ದಂದೆಕೋರರ ಕೈಗೆ ಸಿಕ್ಕಿ ಮುಂದಿನ ಮೂರು ಪೀಳಿಗೆ ತನಕ ಒತ್ತೆಯಾಳುಗಳಾಗಿರುವವರ ಭಾರತ. ಬಿತ್ತಿ ಬೆಳೆದುದೆಲ್ಲವೂ ಸಾಲನೀಡುವವರ, 200px-MKGandhi[1]ತೆರಿಗೆ ವಸೂಲಿಕಾರರ ಕೈವಶವಾಗುವುದನ್ನು ಕಾಣುತ್ತಾ ಬದುಕುತ್ತಿರುವ ಮಿಲಿಯಾಂತರ ಜನರ ಪ್ರತಿನಿಧಿಯಾದ ಭಾರತ. ಹೀಗೆ ಕರುಣೆತುಂಬಿದ ತಾಯ್ತನದಲ್ಲಿ ಆ ಗ್ರಾಮಬದುಕಿನ ಧಾರುಣತೆಯನ್ನು ಗಾಂಧಿ ಪರಿಚಯಿಸುತ್ತಿರುವ ಹೊತ್ತಲ್ಲಿಯೇ ನಡೆದ ಘಟನೆಯೊಂದು ಡಂಕನ್ ಪುಸ್ತಕದಲ್ಲಿದೆ. ಅಲ್ಲಿರುವ ಮಾಹಿತಿಯಂತೆ ಆ ಜೋಪಡಿಗಳಿಗೆಲ್ಲಾ ಇದ್ದುದು ಒಂದೇ ಬಾವಿ. ಅಂದು ಈ ಬಾವಿ ಪಕ್ಕದಲ್ಲೇ ನಾಲ್ಕೈದುಮಂದಿ ಕುಕ್ಕರುಗಾಲಲ್ಲಿ ಕೂತು ಬೆಳಗಿನ ದೇಹಬಾಧೆ ತೀರಿಸಿಕೊಳ್ಳುತ್ತಿದ್ದರು. ಅದಕ್ಕಿಂತ ಮುಂಚಿತವಾಗಿ ಹಾಗೆ ಮಾಡಿಟ್ಟುಹೋದವರ ಸಾಕ್ಷಿಗಳೂ ಅಲ್ಲಿದ್ದುವು. ಈ ದೃಶ್ಯದ ಎದುರಿಗೆ ನಿಂತ ಗಾಂಧಿ ಡಂಕನ್‌ಗೆ ಮಾಮೂಲಿ ಗಾಂಧೀ ಎನಿಸಲಿಲ್ಲ. ಅದನ್ನು ಡಂಕನ್ ಮಾತಿನಲ್ಲಿಯೇ ಹೇಳುವುದಾರೆ, “ಗಾಂಧೀಜಿ ಮಾತಿಲ್ಲದೆ ನಿಂತಿದ್ದರು. ಅವರ ಮುಖದಲ್ಲಿ ಅತೀವ ನಿರಾಸೆ, ಅನುಕಂಪ, ಯಾತನೆ. ಅವರು ಆ ಜನರಿಗೆ ಆರೋಗ್ಯಶಾಸ್ತ್ರದ ಬಗ್ಗೆ, ನೈರ್ಮಲ್ಯದ ಬಗ್ಗೆ ಲೆಕ್ಚರ್ ಕೊಡಲಿಲ್ಲ. ಈ ಜನರ ಹೀನಸ್ಥಿತಿಗೆ ತಾವೊಬ್ಬರೇ ಕಾರಣರೇನೋ ಎನ್ನುವಂತೆ ನಿಂತಿದ್ದವರು ಕೂಡಲೇ ಕೈಹಾಕಿದ್ದು ಇಂದು ನಾವು ನೀವು ಅಸಹ್ಯಪಡುವಂಥ ಕೆಲಸಕ್ಕೆ. ಅವರು ಆ ಹಳ್ಳಿಗರು ವಿಸರ್ಜಿಸಿದ್ದ ಮಲವನ್ನು ತಮ್ಮ ಕೈಯಿಂದಲೇ ತುಸು ದೂರ ಸರಿಸಿ ಮಣ್ಣಿನಿಂದ ಮುಚ್ಚಿದರು” (ಎಸ್. ದಿವಾಕರ, ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ದಿನಾಂಕ:೨೬/೧/೨೦೧೪.ಪು.೨). ಹೀಗೆ ಇದ್ದಕ್ಕಿದ್ದಂತೆ ಗಾಂಧಿ ಕಾರ್ಯಾಚರಣೆಗೆ ಇಳಿದಿದ್ದರು! ಮಹಾತ್ಮರೇ ತೊಡಗಿಕೊಂಡದ್ದನ್ನು ನೋಡಿದ ಡಂಕನ್ ತಾನು ತೊಡಗಿಕೊಂಡ. ಜೊತೆಗಿದ್ದ ಮಿಕ್ಕವರೂ ಸೇರಿಕೊಂಡರು. ಮೂರು ದಿನಗಳ ತನಕ ದೂರದಿಂದಲೇ ನೋಡುತ್ತಿದ್ದ ಹಳ್ಳಿಗರೂ ಸೇರಿಕೊಳ್ಳುವ ಮೂಲಕ ನಾಲ್ಕನೆಯ ದಿನಕ್ಕೆ ಇಡಿಯ ಊರೇ ಭಾಗವಹಿಸುವಂತಾಯ್ತು. ಇದನ್ನು ಕುರಿತು, “ಗಾಂಧೀಜಿಯ ನಿಸ್ವಾರ್ಥ ಸೇವೆ ಒಂದು ಶತಮಾನ ಕಾಲದಲ್ಲಿ ಒತ್ತಾಯವಾಗಲೀ, ಬೋಧನೆಯಾಗಲೀ ಸಾಧಿಸಲಾಗದ್ದನ್ನು ಒಂದು ಕ್ಷಣದಲ್ಲಿ ಸಾಧಿಸಿಬಿಟ್ಟಿತ್ತು” (ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ದಿನಾಂಕ: ೨೬-೧-೧೪, ಪು.೨) ಎಂದು ಬರೆಯುತ್ತಾನೆ ಡಂಕನ್. ಯಾರನ್ನೂ ಕರೆಯದೆ ಯಾವ ಘೋಷಣೆಯನ್ನೂ ಮಾಡದೆ ಗಾಂಧೀ ಪಾಪಕ್ಕೆ ಪ್ರಾಯಶ್ಚಿತ್ತವನ್ನಷ್ಟೇ ಮಾಡಿಕೊಂಡಿದ್ದರು. ಅಲ್ಲಿ ಅಧಿಕಾರವಾಣಿ ಇರಲಿಲ್ಲ. ತಾಯ್ತನದ ಕೊರಗಿತ್ತು. ಗ್ರಾಮ ಬದುಕನ್ನು ಸರಿಪಡಿಸುವ ಆ ಕಾಯಕದಲ್ಲಿ ಭಾರತವನ್ನು ಕುರಿತ ಗ್ರಹಿಕೆಯ ಸ್ಪಷ್ಟತೆಯೂ ಇತ್ತು. ಅದು ಪ್ರವಾಸಿಗಳನ್ನು, ವ್ಯಾಪಾರಿ ದರೋಡೆಕೋರರನ್ನು ಆಕರ್ಷಿಸುವ ವರಸೆಯಾಗಿರಲಿಲ್ಲ. ಕಸ ಅಲ್ಲಿ ಜಾಹೀರಾತಿನ ಸರಕೂ ಅಲ್ಲ. ಅಲ್ಲಿ ಮಡಿಭಾವದ ಜೀವವಿರೋಧಿತನವನ್ನು ದಾಟಿ ಪಾಪದ ಹೊಣೆಹೊತ್ತವನ ಒಳಸಂಕಟವಷ್ಟೇ ಇತ್ತು.

ಗೋರಖ ತಿಪ್ಪೆಸ್ವಾಮಿಯರೂ, ಕತ್ತಲೆಯಲ್ಲಿ ಕರುಳು ತೊಳೆದ ಕನಕನೂ

ಕಸ, ತಿಪ್ಪೆ, ಹೊಲಸುಗಳ ನಿರೂಪಣೆಗೆ ಬೇರೆ ಮುಖಗಳೂ ಇವೆ. ಅವು ಕೇವಲ ಶಬ್ದಗಳಲ್ಲ. ಅಲ್ಲೊಂದು ಮಡಿವಾದಿ ತಾತ್ವಿಕತೆಯ ಒಡನಾಟ ಮತ್ತು ಜಗಳ ಇದೆ. ಎಲ್ಲಿ ಕಸ ಅಶುದ್ಧವೋ ಅಲ್ಲಿ ಕಸದ ಜೊತೆಗಿರುವ ಬೆವರಿನ ಜಗತ್ತು ಅಶುದ್ಧವೆನಿಸಿಕೊಳ್ಳುತ್ತದೆ. ಶುಚಿಯಾದ ಪರ್‍ಯಾಯವು ಶ್ರೇಷ್ಠರ ಹಕ್ಕಾಗುತ್ತದೆ. ಹೀಗೆ ಮಡಿಮೈಲಿಗೆಯ ಅತಿರೇಕದಲ್ಲಿ ಮಾಲಿನ್ಯದ ಕಣ್ಣೋಟಕ್ಕೆ ಗುರಿಯಾಗುವ ದೊಡ್ಡ ಸಮೂವು ಹೊರಗಿಡುವ ರಾಜಕಾರಣದಲ್ಲಿ ಬಯಲಿಗೆ ತಳ್ಳಲ್ಪಡುತ್ತದೆ. ಆದರೆ ಜನ ಹಾಗೂ ಜನರೇ ಕಟ್ಟಿಕೊಂಡ ನಡೆಕಾರ ಪರಂಪರೆಗಳು ಮಡಿವಾದದ ಅಪವಿತ್ರ ಸಂಕೇತವನ್ನು ಪವಿತ್ರೀಕರಿಸುವ ಮೂಲಕವೇ ಭಗ್ನಗೊಳಿಸಿವೆ. ರಾಜಪ್ರಭುತ್ವ ಮತ್ತು ಜಾತಿಪ್ರಭುತ್ವಗಳ ತಂತ್ರಗಳನ್ನು ಧಿಕ್ಕರಿಸಿವೆ. ಆ ಧಿಕ್ಕಾರದ ಭಾಗವಾಗಿಯೇ ಅಲ್ಲಿ ಕಸ, ತಿಪ್ಪೆಗುಂಡಿಗಳು ತ್ಯಾಜ್ಯವಾಗದೆ ಸೃಜನಶೀಲ ನೆಲೆಯೆನಿಸಿವೆ. ರೋಗಿಷ್ಟಮಡಿಗೆ ಎದುರಾಗಿ ಕಟ್ಟಿಕೊಂಡ ಸಾಂಸ್ಕೃತಿಕ ಪ್ರತಿರೋಧದ ಭಾಗವಾಗಿಯೇ ಈ ಜನಪಂಥಗಳ ಸಾಂಸ್ಕೃತಿಕನಾಯಕರುಗಳ ಹುಟ್ಟು, ಹೆಸರು ಮತ್ತು ಬದುಕುಗಳು ತಿಪ್ಪೆಯೊಂದಿಗೆ ಬೆಸೆದುಕೊಂಡಿವೆ. ಉದಾಹರಣೆಗೆ ಜನಸಮೂಹದ ಸಾಂಸ್ಕೃತಿಕನಾಯಕ ನಾಯಕನಹಟ್ಟಿಯ ತಿಪ್ಪೆಸ್ವಾಮಿಯ ಹೆಸರಲ್ಲೇ ತಿಪ್ಪೆ ಇದ್ದರೆ, ಗೋರಖನಾಥನ ಹುಟ್ಟೇ ಗೊಬ್ಬರದ ಗುಂಡಿಯಲ್ಲಂತೆ. ಇನ್ನು ಮಂಟೇದಲ್ಲಮನಲ್ಲಿ ’ಲಿಂಗ’ವೇ ಸಾವಿರವರ್ಷ ಚರ್ಮ ಹದಮಾಡಿದ ತೊಪ್ಪೆಗುಂಡಿಗೆ ಬಿದ್ದು ಪವಿತ್ರವಾಗುತ್ತದೆ! ತಿಪ್ಪೆ ತೊಪ್ಪೆಗಳು ಅಶುದ್ಧವೆಂಬ ಭಾವನೆಯೇ ಇರದ ನಡೆಕಾರ ಪರಂಪರೆಯ ದೊಡ್ಡಿವೆಂಕಟಗಿರಿಯಂತೂ ಯಾವುದಾದರೂ ತಿಪ್ಪೆಗುಂಡಿಯಲ್ಲೇ ಹಾಯಾಗಿ ನಿದ್ರಿಸುತ್ತಿದ್ದನಂತೆ. ಹೀಗೆ ಅವರು ನೆಲೆಸಿದ, ಅವರ ಲಿಂಗಗಳು ಮಿಂದೆದ್ದ ಈ ತಿಪ್ಪೆ-ತೊಪ್ಪೆಗಳು ನೆಲದ ಪಾಲಿಗೆ ಬಾರವಾಗದ ಗೊಬ್ಬರವೂ ಹೌದು. ಹಾಗಾಗಿಯೇ ಜನಪದ ಮನಸ್ಸು “ಕಸವು ಹೊಡೆದಾ ಕೈ ಕಸ್ತೂರಿ ನಾತವೂ ಬಸವಣ್ಣ ನಿನ್ನ ಸೆಗಣಿಯ ಬಳಿದ ಕೈ ಎಸಳ ಯಾಲಕ್ಕೀ ಗೊನಿನಾತ” ಎಂದೇ ಅದನ್ನು ವಾಸನೆ ಎನ್ನದೆ ಪರಿಮಳದ ಸರಕೆಂದಿದೆ. ಆದರೆ ಅಪವಿತ್ರವಾದುದನ್ನೇ ಪವಿತ್ರೀಕರಿಸುವ ಈ ಜನಪಂಥಗಳೊಳಗಿನ ಪರಿಶುದ್ಧತೆಯ ತಹತಹವೂ ತೀವ್ರತರವಾದುದು. ಈ ಶುದ್ಧತೆಯ ತಹತಹದಲ್ಲೂ ನೆಲದ ನಂಟಿಲ್ಲದ ಮಡಿವಾದಿ ಕೃತಕತೆಯ ಅಣಕವಿತ್ತು. ತಿಪ್ಪೆಯನ್ನು ಹಂಗಿಸಿ ದುಡಿಮೆಯ ಜಗತ್ತನ್ನು ಅಪಮಾನಿಸಿದ ಮಡಿತನಕ್ಕೆ ಎದುರಾಗಿ ತಮಗೆ ತಾವೇ ಪ್ರಾಮಾಣಿಕರಾಗುವ ಮಡಿ ಇತ್ತು. ಲೋಕದ ಕಸವನ್ನು ನೆಲದ ಗೊಬ್ಬರವಾಗಿ ಕಂಡ ಈ ನಡೆಕಾರರು ಒಡಲ ಕಸವನ್ನು ಲೋಕದ ಕೇಡಾಗಿಯೇ ಕಂಡವರು. ಹೀಗಾಗಿ ಒಡಲು ತುಂಬಿಕೊಂಡ ಪಾಪ ತೊಳೆಯದೆ ಬಹಿರಂಗದಲ್ಲಿ ಪೊರಕೆ ಹಿಡಿದು ಕಸರತ್ತು ಮಾಡುವುದು ಅವುಗಳಿಗೆ ಅಸಾಧ್ಯವಿತ್ತು.

ದಾಸನಾಗಿ ಮಡಿವಾದಿಗಳ ನಡುವಿದ್ದ ಕನಕನಿಗೆ ಸಂಬಂಧಿಸಿದಂತೆ ಈ ಅಂತರಂಗದ ಮಡಿಯನ್ನು ಕಥಿಸುವ ಸುಂದರವಾದ ಐತಿಹ್ಯವೊಂದಿದೆ. ಮಡಿಯ ಜಂಜಾಟಕ್ಕೆ ಎದುರಾಗಿ ಲೋಕದ ಸತ್ಯವನ್ನಿಟ್ಟು ತೂಗಿದ ಕನಕನ ಬಗೆಗೆ ಜನ ಕಟ್ಟಿಕೊಂಡ ಐತಿಹ್ಯವೊಂದರ ಮೇರೆಗೆ ಆತ ಪ್ರತಿದಿನ ಊರಮೇಲೆ ಹೋಗುತ್ತಿದ್ದವನು ಕತ್ತಲೆಯ ಹೊತ್ತಿಗೆ ಯಾವುದೋ ಒಂದು ಗೊತ್ತಾದ ನಿರ್ಜನಪ್ರದೇಶವನ್ನು ತಲುಪುತ್ತಿದ್ದ. ಜನಕ್ಕೆ ಸರಿರಾತ್ರಿ ಹೊತ್ತು ಕನಕ ಅಲ್ಲಿ ಏನು ಮಾಡುತ್ತಿರಬಹುದೆಂಬ ಕುತೂಹಲ. ನೋಡಿಯೇ ಬಿಡೋಣ ಎಂದು ತಲಾಷೆಗೆ ಇಳಿದವರು ಕಂಡದ್ದು ಕನಕನ ಅಸಾಧ್ಯ ಮಡಿ! ಅದೇನೆಂದರೆ ಸರಿರಾತ್ರಿಯ ಕತ್ತಲೆಗೆ ಊರೆಲ್ಲ ಮಲಗಿದ ಮೇಲೆ ಬಂದ ಕನಕ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ತನ್ನ ಹೊಟ್ಟೆಯೊಳಗಿನ ಕರುಳನ್ನೆಲ್ಲಾ ಹೊರಗೆ ಹಾಕಿ ತೊಳೆಯಲು ತೊಡಗಿದ. ಎಲ್ಲಾ ತೊಳೆದಾದ ಮೇಲೆ ಮತ್ತೆ ಒಳಕ್ಕೆ ಹಾಕಿಕೊಂಡು ಏನೂ ಆಗಿಲ್ಲವೆಂಬಂತೆ ಹೊರಟುಬಿಟ್ಟ! ಇಷ್ಟೇ. ಆದರೆ ವಿಚಿತ್ರವಾದ ಈ ಐತಿಹ್ಯದಲ್ಲಿ ಸಂದೇಶಗಳಿವೆ. ಸ್ವಚ್ಛಮಾಡಿಕೊಳ್ಳಬೇಕಾದುದು ನಮ್ಮ ನಮ್ಮ ಒಡಲು ಮತ್ತು ನಮ್ಮ ನಮ್ಮ ಸಮಾಜವನ್ನೇ ಎಂಬ ಸರಳಸತ್ಯವಿದೆ. ವ್ಯಕ್ತಿ ಮತ್ತು ಸಮಾಜ ತನ್ನ ಕರುಳಿಗೆ ಮೆತ್ತಿಕೊಂಡ ಕೊಳೆ ತೊಳಕೊಳ್ಳದೆ ಊರು ತೊಳೆಯುವ ಮಾತಿಗೆ ಅರ್ಥವೂ ಇಲ್ಲ ಎಂಬುದಿದೆ. ನಾವು ಆಚರಿಸುವ ಅಸೃಶ್ಯತೆ, ಜಾತಿ ಪದ್ಧತಿ, ಮಡಿ-ಮೈಲಿಗೆ, ಮೌಢ್ಯ, ಅನಾಚಾರ, ಅಧಿಕಾರಕ್ಕಾಗಿ ಕಂಡುಕೊಂಡ ಒಳದಾರಿಗಳು, ಇನ್ನಾರದೋ ಬದುಕನ್ನೇ ನಾಶಮಾಡಿದ್ದೂ.. ಹೀಗೆ ಬೆಳೆಯುತ್ತಲೇ ಹೋಗುವ ಕಿಲುಬನ್ನು ಹಾಗೆಯೇ ಉಳಿಸಿ ಹೊರಗೆ ಶುದ್ಧವಾಗುವುದು ಆತ್ಮವಂಚನೆಯ ಮಡಿಯಷ್ಟೇ. ತಳಮೂಲದ ಕನಕನಿಗೆ ಮೈತೊಳೆಯುವ ಕರ್ಮಠಮಡಿಗಿಂತ ಕರುಳುತೊಳೆದುಕೊಳ್ಳುವ ನೆಲಮೂಲದ ಸಹಜತೆ ಮುಖ್ಯವಾಗಿತ್ತು. ಯಾಕೆಂದರೆ ಆತ ಬಂದುದು ಬೆವರ ಲೋಕದಿಂದಲ್ಲವೆ?

ಗಾಂಧಿ ಅಸ್ಪೃಶ್ಯತೆಯನ್ನು ಪಾಪ ಎಂದರು. ಅಂಬೇಡ್ಕರ್ ಇದರ ಒಳಹೊರಗನ್ನೆಲ್ಲಾ ತನ್ನ ತೀಕ್ಷ್ಣತರ್ಕದ ಮೂಲಕ ತೆರೆದಿಟ್ಟರು. Manual-scavengingಈ ಕಳಂಕವನ್ನು ಮರೆತು ಸ್ವಚ್ಛತೆಯ ಬಗೆಗೆ ಗಾಂಧಿ ಹೇಳಿದ ಮಾತಿನ ಮೇಲುಹೊದಿಕೆಯನ್ನಷ್ಟೇ ಬಳಸಿದರೆ ಗಾಂಧಿಯನ್ನೇ ನಾಪತ್ತೆ ಮಾಡಿದಂತಾಗುತ್ತದೆ. ಇನ್ನು ಗಾಂಧೀ ಕಲ್ಪನೆಯ ಸ್ವಚ್ಛಭಾರತ ಗ್ರಾಮಭಾರತವೂ ಹೌದು. ಆದರೆ ನಾವು ತೆರೆದುಕೊಂಡಿರುವುದು ಮುಕ್ತಮಾರುಕಟ್ಟೆಗೆ. ಕರೆಯುತ್ತಿರುವುದು ನಗರವೆಂಬ ಆಧುನಿಕ ನರಕನಿರ್ಮಾಣದ ಹಣದ ಥೈಲಿಕಾರರನ್ನು. ನಿರ್ಮಿಸಲು ಹೊರಟಿರುವುದು ಸ್ಮಾರ್ಟ್‌ಸಿಟಿಗಳನ್ನು. ಹಾಗಾಗಿ ನಗರವನ್ನೇ ಗುಡಿಸಿ ಒರೆಸುತ್ತಿರುವ ನಮಗೆ ನಾವು ಕಟ್ಟುವ ಭಾರತದ ಕುರಿತ ಸ್ಪಷ್ಟತೆ ಇದೆಯೇ ಎಂಬುದನ್ನೂ ಕೇಳಿಕೊಳ್ಳಬೇಕಿದೆ. ಇನ್ನು ಶತಮಾನಗಳಿಂದ ಊರಹೊಲಸು ಬಳಿದು ನಮ್ಮ ಉಸಿರು ಸರಾಗಗೊಳಿಸಿದವರು ಹೇಗಿದ್ದಾರೆ? ನ್ಯಾಯ ಕೇಳುವುದಕ್ಕೂ (ಸವಣೂರಿನ ಭಂಗಿ ಕಾರ್ಮಿಕರು)ಮೈಮೇಲೆ ಮಲಸುರಿದುಕೊಳ್ಳುವ ಅವರ ವರ್ತಮಾನದ ಬದುಕಿಗೆ ನಾವೇನು ಮಾಡಿದ್ದೇವೆ? ಈ ಕುರಿತ ಆತ್ಮವಂಚನೆಯಿಲ್ಲದ ತರ್ಕವೂ ನಮಗೆ ಬೇಕಿದೆ. ಆಗ ನಾವು ತೆಗೆಯುವ ಕಸವೂ ಕಸ್ತೂರಿ ನಾತವನ್ನು ಬೀರೀತು.

ಗಾಂಧಿ ಸಾವು ಮತ್ತು ಬೇಂದ್ರೆ ಕವನ

– ಜಯಪ್ರಕಾಶ್ ಶೆಟ್ಟಿ

ಇದು ‘ಸಂಭವಾಮಿ ಯುಗೇಯುಗೇ..’ ಎಂದು ನಂಬಿಸುತ್ತಲೇ ಬಂದ ದೇಶ. ಯಾವ ಯಾವುದೋ ಹೊಸಹೊಸ ಹರಿಕಾರರು, ಅವತಾರಪುರುಷರು, ಏನೇನನ್ನೋ ಮಾರುವವರು, ಕೊಳ್ಳುವವರು, ಬಿಡುಗಡೆಯ ಭಾಗ್ಯದಾತರುಗಳನ್ನು ಎದುರಿಗಿಟ್ಟು ಮತ್ತದೇ ಯುಗ ಯುಗದ ಅವತಾರದ ಕಥನಗಳನ್ನು ಪಠಿಸುತ್ತಲೇ ಬರುತ್ತಿರುವ ದೇಶವೂ ಹೌದು. ಆದರೆ ಏನೆಲ್ಲಾ ಕಸರತ್ತುಗಳ ನಡುವೆಯೂ ದೇಶದ ನರನಾಡಿಗಳಲ್ಲಿ ಬೆರೆತುಹೋದ ಗಾಂಧಿ ಮತ್ತು ಅಂಬೇಡ್ಕರ್ ಎಂಬೆರಡು ಹೆಸರುಗಳನ್ನು ಪ್ರಾಯಶಃ ಇನ್ನೂ ಕೆಲಕಾಲದವರೆಗೆ ಅಳಿಸಿ ಹಾಕಲಾಗದು. ಪ್ರಕಾಶಿಸುವ ಭಾರತದ ಕೋರೈಸುವ ಬೆಳಕಾಗಲೀ, ಗೆಲ್ಲಬೇಕಾದ ಭಾರತದ ಆರ್ಭಟವಾಗಲೀ ಗಾಂಧಿ ಮತ್ತು ಅಂಬೇಡ್ಕರರನ್ನು ನಾಪತ್ತೆ ಮಾಡುವಷ್ಟು ಎಂದಿಗೂ ಸಶಕ್ತವಲ್ಲ. ಆದರೆ ಇವರುಗಳಲ್ಲೊಬ್ಬರಾದ ಗಾಂಧಿಯನ್ನು ಈ ದೇಶದ ಕೆಟ್ಟಮನಸ್ಸೊಂದು “ಬಲಿ” ಪಡೆಯಿತು. gandhi_dead_bodyಅದು ಒಬ್ಬ ವ್ಯಕ್ತಿ ಮಾಡಿದ ಕೊಲೆಯಲ್ಲ. ಅಸಹನೆಯ ಮನೋಧರ್ಮವೊಂದರ ಹಿಂಸೆ. ಆದರೆ ಅದರ ಹೊಣೆ ಅಷ್ಟಕ್ಕೇ ಸೀಮಿತವಲ್ಲ. ಮೌನಸಮ್ಮತಿ ನೀಡುತ್ತಲೇ ಬಂದ “ಸಜ್ಜನಿಕೆಯ” ಭಾರತೀಯರೆಲ್ಲರೂ ಅದರ ಹೊಣೆಗಾರರು. ಅದು ನಾವೇ ಮಾಡಿದ ಕೊಲೆ. ಹೀಗಾಗಿ ಪ್ರತೀವರ್ಷದ ಫೆಬ್ರವರಿಗೆ ಕಾಲಿಡುತ್ತಿದ್ದಂತೆಯೇ, ಉತ್ತರಾಯಣದ ಆದಿಯಲ್ಲಿನ ಈ ನರಳಾಟದಿಂದ ನಮಗೆ ಬಿಡುಗಡೆಯಿಲ್ಲ. ದೇಶಸಮಸ್ತವೂ ತಲೆತಗ್ಗಿಸಬೇಕಾದ ಈ “ಪಾಪದಹೂರಣ” ನಮಗೆ ಅಂಟಿ ಕೂತಿರುವ ಬಿಡುಗಡೆಯೇ ಇಲ್ಲದ “ಹತ್ಯೆಯಕೆಸರು”. ರಾಷ್ಟ್ರಪಿತನನ್ನು ಗುಂಡಿಟ್ಟುಕೊಂದ ಕೊಲೆಯ ಕಪ್ಪುಕಲೆಯನ್ನು ಹೀಗೆ ಬೆತ್ತಲಾಗಿ ಒಪ್ಪಿಕೊಳ್ಳಲೇಬೇಕಾದುದರಿಂದ “ಗಾಂಧೀ ಸಾವಿನ” ಈ ನೋವಿನಿಂದ ಯಾರಿಗೂ ಮುಕ್ತಿ ಇಲ್ಲದಾಗಿದೆ.

ದೇಶಸ್ಮೃತಿಯ ಭಾಗವೇ ಆಗಿಹೋದ ಆ ಅರೆಬೆತ್ತಲೆಯ ಫಕೀರನ ಕೊಲೆ, ಯಾವ ಗಂಗೆಯಲ್ಲಿಯೂ ತೊಳೆದು ತೀರದ ಪಾಪ. ಇದಕ್ಕೂ ಸಿಹಿ ಹಂಚಿ ಸಂಭ್ರಮಿಸಿದವರಿದ್ದರೆಂಬುದು ಕೇಳಬಾರದ ಮಾತು. ಅದು ಬೇರೆ ಸಂಗತಿ. ಆದರೆ “ರಕ್ತ-ಮಾಂಸ ಸಹಿತವಾಗಿ ಇಂತಹದ್ದೊಂದು ಜೀವ ಲೋಕದಲ್ಲಿ ಓಡಾಡಿಕೊಂಡಿತ್ತೇ?” ಎಂಬುದು ಈ ಜೀವದ ಕುರಿತು ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟಿನ್ ತೆಗೆದ ಉದ್ಗಾರ. ಆದರೆ ಆ ಜೀವವೂ ನರಳಿ ನೆಲಕ್ಕುರುಳಿದ್ದು, “ಹೇ ರಾಮ್” ಎಂಬ ಸೊಲ್ಲಿನೊಂದಿಗೇ. ಅದು “ದೇವರೇ, ಕ್ಷಮೆ ಮಾಡು, ಕೊಲೆಗಡುಕರಾರೇ ಇರಲಿ; ಸರ್ವೇಜನರು ಸುಖವಾಗಿರಲಿ ಎಂದು ರಾಮನಲಿ ಮೊರೆಯಿಟ್ಟು” (ಔದುಂಬರಗಾಥೆ,ಸಂ-1,ಪು.446) ಪ್ರಾಣಬಿಟ್ಟಿತ್ತು. ವಿಚಿತ್ರವೆಂದರೆ ಕೊಂದವನ ಹೆಸರಲ್ಲಿಯೂ ರಾಮನೇ ಅಂಟಿಕೊಂಡಿತ್ತು! Gandhi's Funeralಅವನೂ ರಾಮನೇ! ಕೊಲೆಗಾರ ನಾಥೂರಾಮ. ಸ್ವತಂತ್ರಭಾರತದ ಮೊತ್ತಮೊದಲ ಭಯೋತ್ಪಾದಕ. ಮೊಟ್ಟೆ ಮಾಂಸವನ್ನೂ ತಿನ್ನದ ಶುದ್ಧ ಶಾಖಾಹಾರಿ! ಸಾತ್ವಿಕ ಆಹಾರದೊಳಗಿಂದಲೇ ತೂರಿಬಂದ ನೆತ್ತರ ಹಸಿಹಸಿವು. ಆದರೆ ನಾಥೂರಾಮನ ಮೂಲಕ ಸಿಡಿದ ಗುಂಡು, ಅದನ್ನು ಹೊರಚಲ್ಲಿದ ಕೋವಿಯ ನಳಿಕೆ, ಕುದುರೆಯನ್ನು ಅಮುಕಿದ ಗೋಡ್ಸೆಯ ಕೈಗಳು ಕೇವಲ ಬಹಿರಂಗಕ್ಕೊದಗಿದ ಸಾಕ್ಷಿಗಳು. ಇದು ಲೋಕಕ್ಕೇ ಗೊತ್ತಿದೆ. ಆತ ಸಾಧನ ಅಷ್ಟೇ. ಸೂತ್ರವಾದರೋ “ಹಿಂಸೆಯ ಹೆಪ್ಪು”. ಆ ಹೆಪ್ಪೇ, ಅಹಿಂಸೆಯೆಂಬ ಗೋಡೆಯ ಮೇಲೆ ಮತ್ತೆಮತ್ತೆ ಅರಳಿ ಉದುರುತ್ತಲೇ ಇರುವ ಹೊಸಚಿತ್ರಗಳ ಮೂಲಬಿಂದು. ಆ ಹೆಪ್ಪಿನ್ನೂ ಕರಗಿಲ್ಲ. ಗಟ್ಟಿಯಾಗಿಯೇ ಉಳಿದು ಚಿಗುರೊಡೆಯುತ್ತಲೇ ಇದೆ.

ಕನ್ನಡದಲ್ಲಿ ಗಾಂಧೀ ಕುರಿತ ತೀವ್ರಾನುಭವಕ್ಕೆ ತುತ್ತಾದವರಲ್ಲಿ ವರಕವಿ ಬೇಂದ್ರೆಯವರೊಬ್ಬರು. ಹಿಂಸೆಯ ಮಾಸದ ವಿಕರಾಳ ಚಿತ್ರವಾಗುಳಿದ ಗಾಂಧೀ ಸಾವನ್ನೇ ಕೇಂದ್ರೀಕರಿಸಿ ಬೇಂದ್ರೆಯವರ ಸುಮಾರು ಹದಿನೆಂಟು ಕವಿತೆಗಳಿವೆ. ಅವು ಆ ಕಾಲದ ಕನ್ನಡಕವಿತೆಗಳಲ್ಲಿ ಕಾಣಸಿಗದ ತಾತ್ವಿಕ ಖಚಿತತೆಯೊಂದಿಗೆ ಗಾಂಧೀ ಸಾವನ್ನು ಮುಖಾಮುಖಿಯಾಗುತ್ತವೆ. ಗಾಂಧಿ ಕೊಲೆಯನ್ನು ತಮ್ಮ ವಿಜಯವೆಂದೇ ಭಾವಿಸಿ ಇಂದಿಗೂ ಒಳಗೊಳಗೇ ಗುಟ್ಟಾಗಿ ಸಂಭ್ರಮಿಸುತ್ತಿರುವ ನೀಚ ಮನಸ್ಸುಗಳನ್ನು ತೀಕ್ಷ್ಣವಾಗಿ ಇರಿಯುತ್ತವೆ. ಬೇಂದ್ರೆ ಈ ಕೊಲೆಯನ್ನು ಒಂದು ಘಟನೆಯಂದಷ್ಟೇ ನೋಡಿಲ್ಲ. ಅವರ ಪಾಲಿಗೆ ಅದೊಂದು ವಿದ್ಯಮಾನ. ಗುಂಡು ಹಾರಿಸಿದ ಕೈಗಿಂತ ಮಿಗಿಲಾಗಿ ಅವರು ಎದುರಾಗುವುದು ಆಯುಧವಾಗಿಸಿಕೊಂಡ ಮನಸ್ಸುಗಳನ್ನು. ಅವರ ಕವನಗಳಲ್ಲಿರುವುದು ಆ ಮನಸ್ಸುಗಳ ನಿರಂತರ ಸೋಲಿನ ಗೇಲಿಯ ಚಿತ್ರ.. ಸತ್ತೂ ಸಶಕ್ತವಾದ ಗಾಂಧಿ. DRBendreಪ್ರಸ್ತುತ ಲೇಖನವು “ಪೂತಾತ್ಮ-ಹೂತಾತ್ಮ-ಹುತಾತ್ಮ-ಮಹಾತ್ಮ” ಕವನದ ವಿವರಗಳನ್ನು ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತ ಚರ್ಚೆಗೊಡ್ಡಿದೆ.

ರಾಷ್ಟ್ರೀಯ ಹೋರಾಟದ ಉರುಬಿನ ಕಾಲವೇ ಕನ್ನಡ ನವೋದಯದ ಕಾಲವೂ ಹೌದು. ಆಧುನಿಕ ಕನ್ನಡಕಾವ್ಯದ ಈ ಯುಗ ಗಾಂಧೀಯುಗದ ಜೊತೆಗೇ ಆರಂಭಗೊಂಡಿತ್ತು. ಇದರಿಂದಾಗಿ ಈ ಯುಗ ಗಾಂಧಿ ಕುರಿತು ಪ್ರತಿಕ್ರಿಯಿಸಲೇಬೇಕಾದ ಒತ್ತಡವನ್ನು ಅನುಭವಿಸಿತು. 20ನೇ ಶತಮಾನದ ಆರಂಭದ ದಶಕಗಳಲ್ಲಿ ಬದುಕಿದ ಕವಿಯೊಬ್ಬನಿಗೆ ಗಾಂಧಿಯೊಂದಿಗಿನ ಮುಖಾಮುಖಿ ಎಂಬುದು ತಪ್ಪಿಸಿಕೊಳ್ಳಲಾಗದ ವಾಸ್ತವ ಎನಿಸಿತು. ಆದರೆ ಹೀಗೆ ಗಾಂಧಿಯನ್ನು ಆವಾಹಿಸಿಕೊಳ್ಳುವಲ್ಲಿ ಅಲ್ಲಿ ಮೈತಳೆದುದು ಏಕಾಕಾರಿ ಮಾದರಿಯ ಗಾಂಧಿ ಅಲ್ಲ ಎಂಬುದನ್ನೂ ಮರೆಯಲಾಗದು. ಜೊತೆಗೆ ಗಾಂಧೀಜಿ ಅಲ್ಲಿ ಕೇವಲ ಒಬ್ಬ ವ್ಯಕ್ತಿಯಾಗದೆ, ಭಾರತದ ರಾಷ್ಟ್ರೀಯತೆಯನ್ನು ವಿವರಿಸಿಕೊಳ್ಳಲಾದ ಮಾದರಿಯೊಂದರ ಪ್ರತಿನಿಧಿಯಾಗಿಯೇ ದಾಖಲಾಗುತ್ತಾರೆ. ಹೀಗೆ ಒಂದು ಶಕ್ತಿಯಂತೆ ದೇಶದ ಮನಸ್ಸನ್ನು ಆವರಿಸಿಕೊಂಡಿದ್ದ ಕಾಲದಲ್ಲೇ ಹಠಾತ್ತಾಗಿ ಗಾಂಧೀಕೊಲೆ ಸಂಭವಿಸಿತ್ತು. ಅವರು ಕೊಲೆಗಡುಕನ ಗುಂಡಿಗೆ ಬಲಿಯಾಗಿ ಸಾಯಬಾರದ ಸಾವು ಸತ್ತಿದ್ದರು. “ಬೆಳಗುಜಾವಕೆ ಬಿದಿರು ಸಿಳ್ಳುಹಾಕಿದ ಹಾಗೆ” ಬಂದ ಈ ದುರಂತ ಸಾವಿನ ಸುದ್ದಿ ಆಧುನಿಕ ಕನ್ನಡಕಾವ್ಯವನ್ನು ವಿಶೇಷವಾಗಿ ಬಾಧಿಸಿತ್ತು. ಇದು ನವೋದಯ ಕಾಲದ ಕನ್ನಡ ಕಾವ್ಯದಲ್ಲಿ ದಾಖಲಾದ ಘಟನೆಗಳಲ್ಲಿಯೇ ಅತಿಮುಖ್ಯ ಘಟನೆ ಎನಿಸಿತು.

ಗಾಂಧಿಯನ್ನು ಒಪ್ಪಿಕೊಳ್ಳುವುದೆಂದರೆ ಮತೀಯವಾದಿ, ಅಸಹಿಷ್ಣುತೆಯ ಮಾದರಿಯ ರಾಷ್ಟ್ರೀಯತೆಯ ನಿರಾಕರಣವೂ ಹೌದು. ಯಾಕೆಂದರೆ ರಾಷ್ಟ್ರೀಯತೆಯ ಪರಿಭಾಷೆಯನ್ನು ಗಾಂಧಿ ವಿವರಿಸಿಕೊಂಡ ಬಗೆಗೂ, ರಾಷ್ಟ್ರೀಯ ಹೋರಾಟದ ಇತರ ಮುಂಚೂಣಿ ನಾಯಕರು ವಿವರಿಸಿಕೊಂಡ ಬಗೆಗೂ ಮೂಲಭೂತ ವ್ಯತ್ಯಾಸವೊಂದಿದೆ. gandhiಈ ಎರಡು ಕವಲುಗಳು ಭಾರತದ ರಾಷ್ಟ್ರೀಯತೆಯನ್ನು ಮರುಸಂಘಟಿಸಿಕೊಳ್ಳುವಲ್ಲಿ, ಗತ ಅಥವಾ ಮಧ್ಯಯುಗೀನ ಭಾರತವನ್ನು ವಿವರಿಸಿಕೊಂಡ ಕ್ರಮದಲ್ಲಿ ಅಗಾಧ ವ್ಯತ್ಯಾಸವಿದೆ. ಡಿ.ಆರ್.ನಾಗರಾಜ ಅವರು ಗುರುತಿಸುವಂತೆ, ಈ “ಪರಕೀಯ ಸಾಮ್ರಾಜ್ಯದ ಗರ್ಭದಲ್ಲಿದ್ದವರಿಗೆ ತಮ್ಮ ಗತಕಾಲದ ‘ಸಾಮ್ರಾಜ್ಯ’ದ ಬಗೆಗೆ ತೀವ್ರ ಹಂಬಲ, ಭಾರತೀಯ ರಾಷ್ಟ್ರೀಯವಾದಿಗಳಲ್ಲಿ ಗಾಂಧಿ ಒಬ್ಬರಿಗೆ ಬಿಟ್ಟರೆ ಇನ್ನುಳಿದವರಿಗೆ ಬಲಿಷ್ಠ ಸಾಮ್ರಾಜ್ಯ ರಾಷ್ಟ್ರೀಯತೆಯ ಹುಚ್ಚು” (ಡಿ.ಆರ್.ನಾಗರಾಜ, ಸಾಹಿತ್ಯ ಕಥನ, ಪು.257). ಮತೀಯ ನೆಲೆಯಲ್ಲಿ ಭಾರತದ ರಾಷ್ಟ್ರೀಯತೆಯನ್ನು ವಿವರಿಸಿಕೊಂಡ ಗುಂಪು ಗತವನ್ನು ವೀರ್‍ಯವತ್ತಾದ ಕ್ಷಾತ್ರ ಮಾದರಿಯಲ್ಲಿ ವಿವರಿಸಿಕೊಂಡಿತು. ಅದು ಹೆಣ್ಣಿಗನಲ್ಲದ ವೀರಭಾರತವನ್ನು ಸಂಘಟಿಸಿಕೊಂಡಿತು. ಅಹಿಂಸೆ ಈ ಪಥಕ್ಕೆ ಕ್ಲೈಬ್ಯದ ಮಾದರಿಯಾಗಿ ಕಂಡಿತ್ತು, ಹೇಡಿತನದ ಲಕ್ಷಣವಾಗಿತ್ತು. ದೇಶದ ಬಹುಸಂಖ್ಯಾತರ ವಕ್ತಾರನಂತೆ ಮಾತನಾಡುವ, ಸಾಂಸ್ಕೃತಿಕ ರಾಷ್ಟ್ರೀಯತೆಯೆಂದು ಕರೆಯಲಾಗುವ ಇದನ್ನು ತಿಲಕ್‌ ಮಾದರಿಯ ರಾಷ್ಟ್ರೀಯತೆ ಎಂದೇ ಗುರುತಿಸಲಾಗುತ್ತದೆ. ವೀರಭಾರತವನ್ನು ಸಂಘಟಿಸಿಕೊಳ್ಳಬಯಸುವ ಈ ಮತೀಯನೆಲೆಯ ರಾಷ್ಟ್ರೀಯತೆ ಸಹಜವಾಗಿ ಹಿಂಸಾಮಾದರಿಯದು. ಈ ಹಿಂಸಾ ಮಾದರಿಗೆ ಪ್ರತಿಯಾಗಿ ಗಾಂಧಿಯದು ಅಹಿಂಸೆ ಮತ್ತು ಒಳಗೊಳ್ಳುವ ಮಾದರಿಯ ರಾಷ್ಟ್ರೀಯತೆಯಾಗಿತ್ತು.

ಗಾಂಧಿ ಮಾದರಿಗೆ ಬಲಕ್ಕಿಂತ ಸಾಮರಸ್ಯ, ಆಯ್ಕೆ ಮತ್ತು ಪ್ರತ್ಯೇಕತೆಗಿಂತ ಸಹಬಾಳ್ವೆಯ ಒಡಬದುಕು ಮುಖ್ಯವಾಗಿತ್ತು. ಭಾರತದ ಸಂಕರಶೀಲ ಸಾಂಸ್ಕೃತಿಕ ಸಂದರ್ಭದ ಸಹಜ ಸಾಹಚರ್‍ಯ ಹೊಂದಿದ್ದ ಈ ಮಾದರಿ ಬಲಿಷ್ಠ ಸಾಮ್ರಾಜ್ಯದ ಹುಚ್ಚಿನಿಂದ ತನ್ನನ್ನು ದೂರವಿರಿಸಿಕೊಂಡಿತ್ತು. ತಿಲಕ್‌ ಮಾದರಿಯಲ್ಲಿ ಮಧ್ಯಕಾಲೀನ ಚರಿತ್ರೆಯ ವಲಸೆಯ ಮೂಲಕ ಕೋಮುವಾರು ವಿಂಗಡಣೆಯಲ್ಲಿ ರೂಪುಪಡೆದ ‘ಸ್ವ’ ಮತ್ತು ‘ಅನ್ಯ’ವೆಂಬ ಸಮುದಾಯ ವಿಘಟನೆಯ ಶಕ್ತಿಗಳು ಸಕ್ರಿಯವಾಗಿದ್ದವು. ಅಲ್ಲಿ ಮತೀಯ ಅಂತಃಕಲಹವನ್ನು ಹುಟ್ಟುಹಾಕುವ ಅಪಾಯವಿತ್ತು. ಆದರೆ ಗಾಂಧೀಜಿ ಉಪವಾಸಗಳ ಮೂಲಕ ಅವುಗಳನ್ನು ಮೆಟ್ಟಿನಿಂತವರು. ಈ ಮಾದರಿಗಳು ಒಂದನ್ನೊಂದು ಅನುಸರಿಸಲಿಲ್ಲ, ಒಂದನ್ನೊಂದು ಆಂತರಿಕವಾವಾಗಿ ವಿರೋಧಿಸಿದುವು. ಹೀಗೆ ಭಾರತದ ರಾಷ್ಟ್ರೀಯ ಹೋರಾಟಕ್ಕೆ ಕೋಮುವಾದ ಮತ್ತು ಗಾಂಧಿವಾದದ ನಡುವಿನ ಸಂಘರ್ಷದ ಆಂತರಿಕ ಆಯಾಮವಿದೆ. ಈ ಸಂಘರ್ಷದ ಹೇತುವಾದ ಕ್ಷಾತ್ರದ ಹುಚ್ಚೇ ಆತ್ಯಂತಿಕವಾಗಿ ಗಾಂಧಿಯನ್ನು ಬಲಿಪಡೆದಿತ್ತು.

ಪ್ರಸ್ತುತ ಚರ್ಚಿಸಲಾಗಿರುವ ಬೇಂದ್ರೆಯವರ ಈ ಕವನವು ಮರಣೋತ್ತರವಾಗಿ ಗಾಂಧೀಜಿಯನ್ನು ಆವಾಹಿಸಿಕೊಳ್ಳುತ್ತದೆ. ಮಹಾತ್ಮನನ್ನು ನೆನೆಯುತ್ತಲೇ, ಗಾಂಧಿಯನ್ನು ತಾತ್ವಿಕವಾಗಿ ವಿರೋಧಿಸಿದ ರಾಷ್ಟ್ರೀಯತೆಯ ಅನ್ಯಧಾರೆಯ ಜೊತೆಗಿನ ಮುಖಾಮುಖಿಯಲ್ಲಿ ವಿಶಿಷ್ಟವಾಗುತ್ತದೆ. ಸಾವಿನ ನೋವಿನಲ್ಲೂ, “ಅಹಿಂಸೆ ಎಂಬುದು ಗೋಡೆ ಹಿಂಸೆ ಎಂಬುದು ಚಿತ್ರ” da.ra.bendreಎನ್ನುವ ಮೂಲಕ ಗಾಂಧೀಯತೆಯ ಯಶವನ್ನು ಭಿನ್ನನೆಲೆಯಲ್ಲಿ ದಾಖಲಿಸುತ್ತದೆ. ಮರಣಿಸಿದ ಗಾಂಧಿಯನ್ನು ಜೀವಂತ ಗಾಂಧಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ವಿವರಿಸಿಕೊಳ್ಳುವ ಅವರ “ಶೃದ್ಧಾಂಜಲಿ” ಕವನವಂತೂ ಗಾಂಧೀ ತರುವಾಯ ದೇಶ ಕತ್ತಲೆಯಲ್ಲಿ ಮುಳುಗಿತೆಂಬ ರಾಷ್ಟ್ರನಾಯಕರುಗಳ ನೈರಾಶ್ಯಕ್ಕೆ ಪ್ರತಿಕ್ರಿಯೆಯಂತೆಯೇ ಇದೆ. ಗೋವಿಂದ ಪೈ ಅವರಲ್ಲಿರುವ ‘ಮಹಾತ್ಮ ನೀನು ಇನ್ನೂ ಒಂದಿಷ್ಟು ಕಾಲ ಬದುಕಬೇಕಿತ್ತೆ’ನ್ನುವ ಶೂನ್ಯತೆ, ನಿರ್ವಾತದ ದನಿ ಬೇಂದ್ರೆಯವರಲ್ಲಿಲ್ಲ. ಅದರ ಬದಲಿಗೆ ಉದಾರವಾದಿ ನಿಲುವಿನಲ್ಲಿ ತಿಲಕ ಮಾದರಿಯ ರಾಷ್ಟ್ರೀಯತೆಯನ್ನು ಧಿಕ್ಕರಿಸುವ ಬೇಂದ್ರೆಯವರ ಕವನಗಳು, ಕೋಮುವಾದದ ಖಚಿತ ವಿರೋಧದಲ್ಲಿ ಗಾಂಧೀಜಿಯ ಸಂಕರಶೀಲ ರಾಷ್ಟ್ರೀಯತೆಯ ಪರವಾಗಿ ನಿಲ್ಲುತ್ತವೆ. ಅಲ್ಲಿ ಗಾಂಧಿ ಎನ್ನುವುದು ವ್ಯಕ್ತಿಯಾಗದೆ ಒಂದು ತತ್ವವಾಗುತ್ತದೆ. ಕೊಲೆಯ ಆಪಾದನೆ ವ್ಯಕ್ತಿಯ ನೆಲೆಗೆ ಸೀಮಿತಗೊಳ್ಳದೆ, ಒಂದು ವಿದ್ಯಮಾನವಾಗಿ ಗಣಿತವಾಗುತ್ತದೆ. ಅವರ “ಮಹಾತ್ಮಾ” ಕವನವಾದರೋ, “ಕೊಂದರೋ ಲೋಕಕಾಶೀರ್ವಾದ ಪ್ರಾರ್ಥಿಸುವ ಸಮಯಕ್ಕೆ” ಎಂದೆನ್ನುವ ಮೂಲಕ ಅದನ್ನೊಂದು ಕಾಲವಲ್ಲದ ಕಾಲದಲ್ಲಿ ನಡೆದ ಕೂಟವೊಂದರ ಕಾರ್‍ಯಾಚರಣೆಯೆಂದೇ ಪರಿಗಣಿಸುತ್ತದೆ. ಹಾಗಾಗಿ ಪೈ ಅವರಲ್ಲಿರುವ ಆಪಾದಿತರಪರ ಸಹಾನುಭೂತಿ ಬೇಂದ್ರೆ ಅವರಲ್ಲಿಲ್ಲ.

ಈ ಕವನ ಆರಂಭವಾಗುವುದೇ “ಓ ಮಹಾತ್ಮ! ಶತಸಾಂವತ್ಸರಿಕಕ್ಕೆ ಸತ್ಯ ವರದಿ ಮಾಡೋಣ” ಎಂದು. ಮಹಾತ್ಮನಿಲ್ಲದ ಜಗತ್ತಿನಿಂದ ಮಹಾತ್ಮನಿಗೆ ವರದಿಯೊಪ್ಪಿಸುವ ಮಾದರಿಯಲ್ಲಿ. ಗಾಂಧೀತತ್ವಗಳಿಗೆ ಬೆನ್ನುಹಾಕಿ ನಡೆಯುತ್ತಿರುವ ಭಾರತದ ಪರದೇಶಿಸ್ಥಿತಿ ಹಾಗೂ gandhi-art“ಪಶುಯಜ್ಞ ಅಡಗಿ, ನರಯಜ್ಞ ದಿನದ ಪಾಕ”ವಾದ ಹಿಂಸೆಯ ವಿಸ್ತರಣೆಗೆ ಹೇಸಿ. ಆದರೆ ಈ ನೈರಾಶ್ಯವೇ ಕವನದ ಸ್ಥಾಯಿ ಅಲ್ಲ. ಯಾಕೆಂದರೆ ಅಲ್ಲಿಯ ನಿರೂಪಣೆ ಮುಂಬರಿಯುವುದು “ನಿನಗೆ ಗೊತ್ತಿಲ್ಲದ್ದೇನು? ನಿನ್ನ ಕಣ್ಣಿಗೆ ಇವೆಲ್ಲಾ ಬಿದ್ದಿಲ್ಲಾ-ಎಂದಲ್ಲಾ” ಎಂದು, ನಮ್ಮ ನಡುವೆಯೇ ಇರುವ ಗಾಂಧೀಜಿಗೆ ಮಾಡುವ ವರದಿಯಾಗಿ. ಇಲ್ಲಿ ಗಾಂಧಿ ಒಂದು ತಾತ್ವಿಕತೆಯಾಗಿ, ನಮ್ಮೊಳಗಿನ ನಾವಾಗುತ್ತದೆ. ನಮ್ಮೊಳ:ಗಿನ ತಿಳುವಳಿಕೆಯಾಗುತ್ತದೆ. ಗಾಂಧಿ ಬಿತ್ತಿದ ಅರಿವಿನ ಬೆಳಕನ್ನು ಪ್ರಸ್ತಾಪಿಸಿ, “ಬೆಂಕಿ ಬೇರೆ! ಬೆಳಕು ಬೇರೆ! ಬಣ್ಣ ಬೇರೆ! ಬಿಡಿಬಿಡಿಸಿ, ತಿಳಿತಿಳಿಸಿ ಹೇಳಿದ ಮಹಾತ್ಮ” ಎಂದು ಕೃತಜ್ಞತೆ ಸೂಚಿಸುವ ಕವನ, ನಮ್ಮೊಳಗಡೆಯೇ ಉಳಿದು ಹೋದ ಗಾಂಧಿಗೆ ನಾವೇ ಸಲ್ಲಿಸುವ ವರದಿಯಾಗುತ್ತದೆ. ಈ ನೆನಕೆ ಒಂದು ಕಡೆಯಿಂದ ಗುರುವಿನಂತೆ ಎಚ್ಚರವನ್ನು ಬೋಧಿಸಿದ ಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತದೆ. ಇನ್ನೊಂದು ಕಡೆಯಿಂದ ಗಾಂಧಿ ಬಿತ್ತಿದ ಅರಿವಿನಲ್ಲಿರುವ ಗೊಂದಲವಿಲ್ಲದ ಖಚಿತತೆಯ ಹೂರಣವನ್ನು ದಾಖಲಿಸುತ್ತದೆ.

ಗಾಂಧೀ ಕೊಲೆಯನ್ನು ಆ ಹೊತ್ತಿನ ಅಗತ್ಯವೆಂದವರೂ, ಎನ್ನುತ್ತಿರುವವರೂ ಇಂದಿಗೂ ಇದ್ದಾರೆ. ಆ ಸಮರ್ಥನೆಯ ಭಾಗವಾಗಿ ಒದಗಿಬಂದದ್ದು ಅಖಂಡ ಭಾರತದ ವಿಭಜನೆಯ ನೆಪ. ಆದರೆ ಕವನ ಆ ಸಮರ್ಥನೆಯನ್ನೇ ಕೆಣಕಿ ಲೇವಡಿ ಮಾಡುವಂತೆ, “ಪಾಲಿನ ನ್ಯಾಯ ಇನ್ನೂ ತೀರಿಯೇ ಇಲ್ಲ” ಎನ್ನುತ್ತದೆ. ಹೀಗೆ ಕೊಲೆಯ ಘೋಷಿತ ಕಾರಣವನ್ನು ನಿರಾಕರಿಸಿ, ಅದನ್ನೊಂದು ಸುದೀರ್ಘ ಕಾರ್‍ಯಾಚರಣೆಯ ಭಾಗವೆಂದೇ ಸೂಚಿಸುತ್ತದೆ. ಬೇಂದ್ರೆಯವರ ಕವನದಲ್ಲಿ ಭಾರತ ವಿಭಜನೆಯ ಕಾರಣದೊಂದಿಗೆ Mahatma-Gandhiಗಾಂಧೀ ಕೊಲೆಯನ್ನು ವಿವರಿಸಿಕೊಳ್ಳುವ ಯತ್ನವಿಲ್ಲ. ಹಾಗೆಯೇ ಅದು ಯಾವುದೋ ಒಂದು ಕಾಲದ ಉರುಬಿನ ಫಲಿತವೆಂಬ ಪರಿಭಾವನೆಯೂ ಇಲ್ಲ. ಅಲ್ಲಿರುವುದು ಅಹಿಂಸೆಯ ಗೋಡೆಯನ್ನೆ ಬಳಸಿ ಬರೆಯುತ್ತಾ ಬಂದ ಕೊಲೆಯ ಈ ’ಚಿತ್ರ’ಗಳಿಗೆ ಶತಮಾನಗಳ ಇತಿಹಾಸವಿದೆ ಎಂಬ ಅರಿವು. ಹಾಗಾಗಿಯೇ ಗೋವಿಂದ ಪೈ ಅವರಂತೆ ಬೇಂದ್ರೆಗೆ ಅದೊಂದು ವ್ಯಕ್ತಿಗತ ಮಟ್ಟದ ಹತ್ಯಾಯತ್ನವಲ್ಲ. ಅವರಲ್ಲಿ ಅದು ಭಿನ್ನ ಬಗೆಯ ಅಲೋಚನೆಗಳ ಸಂಘರ್ಷ. ಹಿಂಸೆ-ಅಹಿಂಸೆಗಳ ಮುಖಾಮುಖಿ. ಅಹಿಂಸೆಯ ಸ್ಥಿರಭಿತ್ತಿಯಲ್ಲಿ ಮಾನವವಿಕೃತಿ ಬಿಡಿಸಿದ ಹಿಂಸೆ ಎಂಬ ಕೃತಕಚಿತ್ರ. ಆ ಕಾರ್‍ಯಾಚರಣೆ ಇನ್ನೂ ನಿಂತಿಲ್ಲ ಎಂಬಂತೆ ಅವರಲ್ಲಿ ಹಿಂಸೆ-ಅಹಿಂಸೆಗಳು ಅವಳಿ ವೈರುಧ್ಯಗಳಾಗಿ ಎದುರು-ಬದುರು ನಿಲ್ಲುತ್ತವೆ. ಆದರೆ ಅಷ್ಟೇ ರಾಜಕೀಯ ಖಚಿತತೆಯೊಂದಿಗೆ ಹಿಂಸೆಯ ವಿಜಯದ ನಿರಾಕರಣೆಯೂ ಅವರಲ್ಲಿದೆ. ಅಹಿಂಸೆಯ ಎದುರು ಯುದ್ಧ ಹೂಡುವ ಹಿಂಸೆಗೆ ಪ್ರತೀಬಾರಿಯೂ ನೆತ್ತರು ಸಿಗಬಹುದಲ್ಲದೆ, ಜಯವಲ್ಲ ಎಂಬ ಖಚಿತ ಸಂದೇಶ ರವಾನಿಸುವಂತೆ, “ಹೊತ್ತಿಸಿದ ಬೆಂಕಿ ಹೊತ್ತಿಸದವನನ್ನೂ ನೆಕ್ಕುವುದು, ಹೊತ್ತಿಸಿದವರನ್ನೂ ಮುಕ್ಕುವುದು” ಎಂದು ಅವರು ಕೋಮುವಾದಿ ಅಸಹಿಷ್ಣುತೆಯ ರಾಜಕಾರಣದ ವಿನಾಶಮುಖೀ ಗುಣವನ್ನು ದಾಖಲಿಸುತ್ತಾರೆ. ವಿಶ್ವದ ವಿನಾಶ ನಾಯಕರುಗಳಾದ ಹಿಟ್ಲರ್, ಮುಸೋಲಿನಿಯರುಗಳ ಲೋಕನಾಶ ಮತ್ತು ಸ್ವನಾಶಗಳೆರಡನ್ನೂ ಒಟ್ಟೊಟ್ಟಿಗೇ ಧ್ವನಿಸುತ್ತಾರೆ.

ಈ ಕವನವು ಗಾಂಧೀವಿರೋಧಿ ಸ್ವಘೋಷಿತ ದೇಶಪ್ರೇಮಿ ರಾಷ್ಟ್ರೀಯವಾದಿಗಳ ಪೊಳ್ಳುತನವನ್ನು ಎಳೆ ಎಳೆಯಾಗಿ ಬಯಲಿಗಿಡುತ್ತದೆ. “ಅಹಿಂಸೆಯ ಹಚ್ಚಿದಬಣ್ಣ ಉದುರಿ, ಹಿಂಸೆಯ ಉಗ್ರರೂಪ ಉರಿದೇಳುವ” ಅದರ ನಯವಂಚಕತೆಯನ್ನು ವಿವರವಾಗಿ ಬಿಡಿಸಿಡುತ್ತದೆ. ಪಂಜು ಹೊತ್ತಿಸಿ ಹಿಲ್ಲಾಲು ಹಿಡಿದವರೂ ಅಹಿಂಸೆ, ಶಾಂತಿ ಮಂತ್ರವನ್ನು ಪಠಿಸುವ ವಿಸಂಗತಿಯನ್ನು ಎದುರಿಗಿಡುತ್ತದೆ. ಕೋಮುವಾದಿ ರಾಜಕಾರಣದ ವಿರುದ್ಧದ ನಿರ್ಣಾಯಕ ಪ್ರತಿದಾಳಿಯ ಭಾಗವಾಗಿ, “ಹೇಳಿದ್ದು-ಅಹಿಂಸಾ-ಪುರಾಣ ತಿಂದದ್ದು ಹಿಂಸೆಯ ಯಮ-ಬದನೆಕಾಯಿ” ಎಂದು ನಡೆಗೂ- ನುಡಿಗೂ ಸಂಬಂಧವಿರದ ಬಿರುಕನ್ನು ತೋರುತ್ತದೆ. ಜೀವದಯೆಯ ಉಪನ್ಯಾಸ ನೀಡುತ್ತಲೇ ಕೊಲೆಯ ಕಲೆಯಲ್ಲಿ ಪಳಗಿರುವ ಅದರ ಸಂಸ್ಕೃತಿ ಪ್ರೀತಿಯನ್ನು, “ಹೂವಿಗೆ ಬೇಗೆ ಹಚ್ಚಿದರು, ಅದರ ಸೌಂದರ್‍ಯ ಮೆಚ್ಚಿದರು, ಸಂಸ್ಕೃತಿ ಜಂಭ ಕೊಚ್ಚಿದರು” ಎಂದು ಸ್ಪಷ್ಟವಾಗಿಯೇ ವ್ಯಾಖ್ಯಾನಕ್ಕೊಳಪಡಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆ ಗುಂಪನ್ನು ಹಿಂಸಾಭಕ್ತರೆಂದೇ ಹೆಸರಿಸುತ್ತದೆ. ಗಾಂಧಿಯನ್ನು ಕುರಿತ ಅವರ “ಮಹಾತ್ಮಾ” ಕವನವಾದರೋ, ಈ ಕೊಲೆಗಡುಕ ಮಂದಿಯನ್ನು “ಮುಗಿದ ಕೈಗಳಲಿ ಮುಚ್ಚಿದ ದೊಣ್ಣಿ!”, “ರೇಸಿಮೆಯ ತೊಟ್ಟವರು, ಬಂಗಾರ ಇಟ್ಟವರು, ಬೆರಳಾಡಿಸಿದಲ್ಲಲ್ಲಿ ’ವಂದೇ ಮಾತರಂ’ ಗೀತ” ಎಂದು ನಿಖರವಾಗಿ ವಿವರಿಸಿಕೊಡುತ್ತದೆ. ಗಾಂಧಿಯನ್ನು ಇಲ್ಲವಾಗಿಸಿದ ಈ ಅವಿವೇಕಿ ಗುಂಪನ್ನು “ಆ ಜನ ದನ, ತಾಯಿ” ಎಂಬ ಸೊಲ್ಲಂತೂ “ಮಹಾತ್ಮ” ಕವನದುದ್ದಕ್ಕೂ ಪಲ್ಲವಿಯಂತೆ ಅನುರಣಿಸುತ್ತದೆ.

ಚಾರಿತ್ರಿಕವಾಗಿ ಗಾಂಧೀಜಿಯ ರಾಜಕೀಯ ಪ್ರವೇಶ ಕಾಂಗ್ರೆಸಿನೊಳಗಿನ ಹಿಂದೂ ಮೂಲಭೂತವಾದಿ ಶಕ್ತಿಗಳಿಗೊಂದು ಹಿನ್ನಡೆಯೇ. 200px-MKGandhi[1]ಕೋಮುವಾದವು ನಿರೂಪಿಸಿದ ಧರ್ಮಾಧಾರಿತ ರಾಷ್ಟ್ರೀಯತೆಗೆ ಪ್ರತಿಯಾಗಿ ಗಾಂಧಿ ಎಲ್ಲ ಮತೀಯರನ್ನು ಸಮಾನವಾಗಿ ಒಳಗೊಳ್ಳುವ ಚಿಂತನೆಗಾಗಿ ತಮ್ಮ ಜೀವಿತವನ್ನೇ ಪಣಕ್ಕಿಟ್ಟವರು. ಆದರೆ ಮುಸ್ಲಿಂ ಮೂಲಭೂತವಾದವೂ ಇಷ್ಟೇ ಅಪಾಯಕಾರಿಯಾಗಿ ಬೆಳೆದು, ಅಸಹಾಯಕತೆಯ ಕಟ್ಟಕಡೆಯಲ್ಲಿ ಗಾಂಧಿ ದೇಶವಿಭಜನೆಗೆ ಸಮ್ಮತಿಸಬೇಕಾಗಿ ಬಂದುದು ಚಾರಿತ್ರಿಕ ಸತ್ಯ. ‘ಭಾರತದ ವಿಭಜನೆಯಲ್ಲಿ ನಾನೂ ಪಾಲುಗಾರನೆಂದು ಜನ ಹೇಳದಿದ್ದರೆ ಸಾಕು’ (ಬೊಳುವಾರು ಮಹಮ್ಮದ್ ಕುಂಞಿ, ಪಾಪು ಗಾಂಧಿ ಆದ ಕಥೆ,ಪು.173)ಎಂದು ಸಂಕಟಪಟ್ಟ ಗಾಂಧೀ ಕೈಮೀರಿ ವಿಭಜನೆ ಸಂಭವಿಸಿತ್ತು. ಅದು ಗಾಂಧೀ ಕನಸಿನ “ಸಾಮರಸ್ಯ ಪರಂಪರೆ”ಗೆ ಕೊಟ್ಟ ದೊಡ್ಡ ಏಟಾಗಿತ್ತು. ಗಾಂಧಿಯನ್ನು ಖಳನಾಯಕನಂತೆ ಬಿಂಬಿಸಲು ಒದಗಿದ ಕಾರಣವಾಗಿತ್ತು. ಮತೀಯವಾದಿ ರಾಷ್ಟ್ರೀಯತೆಯ ಪ್ರಸರಣಕ್ಕೆ ಒದಗಿದ ನೀರು ಗೊಬ್ಬರವಾಗಿತ್ತು. ವಿಭಜನೆಯನ್ನೇ ಬಯಸಿದ್ದ ವಿಭಜಕವಾದಿಗಳು ಹೇಳುತ್ತಲೇ ಬಂದ ತೋರಿಕೆಯ ಅಖಂಡ ಭಾರತವು ಗಾಂಧಿ ಪಾಲಿಗೆ ಬರಿಯ ಭೂಖಂಡವಾಗಿರಲಿಲ್ಲ. ಅದು ಮನುಷ್ಯರ ನಡುವಿನ ಸಾಮರಸ್ಯವನ್ನು ಉಳಿಸಿಕೊಡಬಲ್ಲ ಸೌಹಾರ್ದತೆಯ ಮನುಷ್ಯ ಸಂಬಂಧವಾಗಿತ್ತು. ಈ ಸೌಹಾರ್ದತೆಯನ್ನು ವಿರೋಧಿಸಿಕೊಂಡೇ ಬಂದ ಮತೀಯವಾದ ಗಾಂಧಿಯನ್ನೇನೋ ಬಲಿಪಡೆಯಿತು. ಆದರೆ ಅದಕ್ಕೆ ಗಾಂಧೀವಾದವನ್ನು ಬಲಿಪಡೆಯಲಾಗಿಲ್ಲ. ಇದು ಬೇಂದ್ರೆ ಕವನದ ಕೇಂದ್ರಧ್ವನಿಯೂ ಹೌದು.

ನಾಗಬಂಧದ ಬಂಧನ: ನಂಬಿಕೆ ಮತ್ತು ಕೇಳಿಕೊಳ್ಳಬೇಕಾದ ಪ್ರಶ್ನೆಗಳು

– ಜಯಪ್ರಕಾಶ್ ಶೆಟ್ಟಿ ಹೆಚ್

ಇತ್ತೀಚೆಗೆ ಕರ್ನಾಟಕ ಸರ್ಕಾರ ಆಹ್ವಾನಿಸಿದ ಮೂಢನಂಬಿಕೆ ನಿಷೇಧದ ಕರಡಿನ ಕುರಿತು ಕೆಲವು ಕನ್ನಡ ಪತ್ರಿಕೆಗಳು ಮತ್ತು ಸಾಂಪ್ರದಾಯಿಕ ಮನಸ್ಸುಗಳು ಮಿತಿಮೀರಿ ಬೆಂಕಿಯುಗುಳಿದುವು. ಹಾಗೆಯೇ ಕಳೆದ ಕೆಲವು ವರ್ಷಗಳಿಂದ ಸುದ್ದಿಯಾಗುತ್ತಿರುವ ಎಂಜಲ ಎಲೆಯ ಮೇಲಿನ ಹೊರಳಾಟವನ್ನು ಈ ಮನಸ್ಸುಗಳು ಮತ್ತೆ ನಂಬಿಕೆಯ ಹೆಸರಿನಲ್ಲಿ ವೈಜ್ಞಾನಿಕ ಸತ್ಯವೆಂಬಂತೆಯೂ ವಿಶೇಷವಾಗಿ ಮೈಮೇಲೆ ಎಳೆದುಕೊಂಡು ಸಮರ್ಥಿಸಿಕೊಂಡವು. ಈ ಎರಡೂ ಸಂಗತಿಗಳು ಬೇರೆ ಬೇರೆಯಾದ ಬಿಡಿಸಂಗತಿಗಳಲ್ಲ. ಹೀಗೆ ಬೆಚ್ಚಿಬಿದ್ದಂತೆ ಪ್ರತಿಕ್ರಿಯಿಸಿದ ಮನಸ್ಸುಗಳೆದುರು ಕರಾವಳಿಯ ಅತಿಪ್ರಾಚೀನ ಆರಾಧನಾ ಮಾದರಿಯ ಕಿರುಪರಿಚಯದೊಂದಿಗೆ, ಆ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಪ್ರಶ್ನೆಗಳನ್ನಿಡಬಯಸುತ್ತೇನೆ.

ಕರಾವಳಿಯ ಯಾವುದೇ ಹಳ್ಳಿ ಮೂಲೆಗೆ ಹೋದರೂ ನಿಮಗೆ ಒಂದಾದರು ನಾಗಬನ ಸಿಗದ ಹಳ್ಳಿಗಳು ಇರಲಾರವೇನೋ. nagabanaಅವಿಭಕ್ತ ಕುಟುಂಬದ ಮನೆಗೊಂದರಂತೆ ಸಿಕ್ಕೇ ಸಿಗುವ ಈ ನಾಗಬನಗಳು ಮೂಲತಃ ದೇವರಕಾಡುಗಳು. ಇವುಗಳನ್ನು ಕರೆಯುತ್ತಿದ್ದುದೇ ನಾಗಬನ ಇಲ್ಲವೇ ನಾಗಬಲ್ಲೆಗಳೆಂದೇ. ದೇವರ ಹೆಸರನ್ನು ಸ್ಥಳವಾಚಕಗಳ ಮೂಲಕ ಇಲ್ಲವೇ ದಿಗ್ವಾಚಕಗಳ ಮೂಲಕ ಸೂಚಿಸುವ ಪರಿಪಾಠವಿದೆ. ಅದರಂತೆ ಧರ್ಮಸ್ಥಳವನ್ನು ನಮ್ಮೂರುಗಳಲ್ಲಿ ಮುಗ್ದವಾಗಿ ’ತೆಂಕಲಾಯ್’ ಎಂದೇ ಕರೆದಂತೆ, ನಾಗನನ್ನು ಕರೆಯುತ್ತಿದ್ದುದೇ ’ಬನದದೇವ್ರು’ ಎಂದು. ಕಾರಣಿಕ ಮತ್ತು ಸತ್ವವನ್ನಾಧರಸಿ ಅದನ್ನು ಸತ್ಯದೇವತೆ ಎಂದೂ ಕರೆಯುವ ರೂಢಿ ನಮ್ಮೂರ ಕಡೆಯಿದೆ. ಗಂಡನ ಹೆಸರೊ, ಗಂಡನ ಅಣ್ಣನ ಹೆಸರೋ ನಾಗನಿಂದ ಆರಂಭವಾಗುವಂತಿದ್ದರೆ ಅದನ್ನು ಹೇಳಬಾರದ ಸಾಮಾಜಿಕ ನಿಷೇಧಕ್ಕಾಗಿ ಪರ್‍ಯಾಯ ಕಂಡುಕೊಳ್ಳುವ ದಾರಿಯಲ್ಲಿ ನಮ್ಮೂರ ಹೆಂಗಸರು ಆ ಹೆಸರಿರುವ ಜಾಗದಲ್ಲಿ ಬನದದೇವ್ರು ಹೆಸರು ಎಂದು ಸೇರಿಸಿ ಉಪನಾಮವನ್ನು ಕೂಡಿಸುತ್ತಾರೆ. ಈ ರೂಢಿ ನಮ್ಮೂರುಗಳಲ್ಲಿ ಇಂದಿಗೂ ಇದೆ. ಹೀಗೆ ಬಲ್ಲೆಗಳೆಂದು ಕರೆಯಲ್ಪಡುತ್ತಿದ್ದ ಜಾಗಗಳಲ್ಲಿ ಹುತ್ತದ ಜೊತೆಗೆ ಬಾಗಾಳು ಇಲ್ಲವೆ ಬನ್ನೇರಳೆ ಇತ್ಯಾದಿ ಮರಗಳು ಸರ್ವೇಸಾಮಾನ್ಯ. ಅಮೂಲ್ಯವಾದ ಅನೇಕ ಗಿಡಮೂಲಿಕೆಗಳೂ ಈ ಬನಗಳಲ್ಲಿ ಲಭ್ಯವಿರುತ್ತಿದ್ದುವು. ಈ ಮರಗಳಿಗಾಗಲೀ ಆಚ್ಛಾದಿಸಿಕೊಂಡ ಬನದ ಯಾವುದೇ ಭಾಗಕ್ಕಾಗಲೀ ಕುಡುಗೋಲನ್ನೆ ಹಾಕದೇ ಆ ಬನಗಳನ್ನು ಸ್ವಚ್ಚಂಧವಾಗಿ ಬೆಳೆಯಲು ಬಿಡುತ್ತಿದ್ದರು. ಸ್ಥಳೀಯವಾಗಿ ಸಿಗುವ ಕಪ್ಪು ಬಣ್ಣದ ಶಿಲೆಯಲ್ಲಿಯೋ ಅಥವಾ ಮೆದುಜಾತಿಯ ಜಾಜಿಕಲ್ಲಿನಲ್ಲಿಯೋ ಕೆತ್ತಿದ ನಾಲ್ಕಾರು ನಾಗಮಿಥುನದ ಶಿಲ್ಪಗಳು ಹುತ್ತಕ್ಕೋ, ಪೀಠದಂತಿರುವ ನಿಸರ್ಗಸಹಜ ಕಲ್ಲಿನ ದಿಬ್ಬಕ್ಕೋ ಆತುಕೊಂಡಂತೆ ಬನದ ನೆರಳಿನಲ್ಲಿ ಮಳೆ, ಬಿಸಿಲು, ಗಾಳಿಗಳಿಗೆ ತೆರೆದೇ ಇರುತ್ತಿದ್ದುವು. ಈ ಸಹಜತೆಯನ್ನು ಸೂಚಿಸುವಂತೆ, “ನಾಗನಕಲ್ಲಿಗೆ ನಾಯಿ ಉಚ್ಚಿಹೊಯ್ಯುವುದು ಇಪ್ದೆ (ಇರುವುದೇ)” ಎಂಬ ವಾಗ್ರೂಢಿಯನ್ನು ಮಾತಿಗೊಮ್ಮೆ ಬಳಸುವುದುಂಟು.

ಮನೆಯ ಸಮೀಪವೇ ಇರುವ ಈ ಜಾಗಗಳಿಗೆ ನಾವು ಸಾಕಿದ ಕೋಳಿ, ಗಂಟಿ(ಹಸು)ಗಳು ಯಾವುದೇ ಭಿಡೆಯಿಲ್ಲದೆ ಹೋಗಿ ಮೆಂದು ಬರುತ್ತಿದ್ದುವು. ಕೋಳಿಗಳಂತೂ ಅಷ್ಟೇ ನಿರ್ಭಿಡೆಯಿಂದ ನಾಗನ ಕಲ್ಲಿನ ತಳಬುಡವನ್ನೆಲ್ಲ ಕೆದರಾಡಿ ಹುಳ ಹುಪ್ಪಡಿ ತಿಂದು ಬರುತ್ತಿದ್ದವು. nagarakalluಇದು ನಿನ್ನೆ ಮೊನ್ನೆಯವರೆಗೆ ಅನೇಕಕಡೆ ನಡೆದುಕಡೆ ಬಂದ ರೂಢಿ. ಇವುಗಳನ್ನು ಪೂಜಿಸುವ ಸರಳ ಮಾದರಿಗಳಾದ ತನುಹಾಕುವ(ಬಾಳೆಗೊನೆ ಒಪ್ಪಿಸುವ), ತಂಪು ಹಾಕುವ(ಒಂದಿಷ್ಟು ಹಾಲು, ಬಿಳಿಅಕ್ಕಿ ಅರ್ಪಿಸುವ) ಕೆಲಸಗಳಿಗೆ ವರ್ಷದ ಯಾವುದೋ ಒಂದೆರಡು ದಿನಗಳಲ್ಲಿ ಪುರೋಹಿತರು ಬರುತ್ತಿದ್ದರು. ತನುಹಾಕಿದ ಬಾಳೆಗೊನೆಯ ಬುಡದ ಚಿಪ್ಪು, ತಂಪು ಹಾಕಿದ ಅಚ್ಚೇರು ಅಕ್ಕಿಯನ್ನು ಪೂಜೆಯ ಕೂಲಿ ಎಂಬಂತೆ ಒಯ್ಯುತ್ತಿದ್ದರು. ಮನೆಗೊಂದರಂತೆ ಸಿಗುವ ಈ ನಾಗಬನಗಳಿಗೆಲ್ಲಾ ಕುಕ್ಕೆ ಸುಬ್ರಮ್ಮಣ್ಯವನ್ನೇ ಮೂಲಬನವಾಗಿ ಎಂದಿನಿಂದಲೋ ಏನೋ ನಂಬಿಕೊಂಡು ಬರಲಾಗಿದೆ. ಹಾಗಾಗಿ ಅದನ್ನು ಮೂಲಿ ಸ್ಥಳವೆಂತಲೇ ನಂಬಿಕೊಂಡು ಕರೆಯಲಾಗುತ್ತದೆ. ಅದಲ್ಲದೆ ನಾಗನಕಲ್ಲಿನ ಬುಡವನ್ನೂ ಮೂಲ ಎಂತಲೇ ಕರೆಯುವುದರಿಂದ “ಮೂಲಿ” ಎನ್ನುವುದು ಭೂಸೂಚಕವಾದ ಪದವೂ ಹೌದು. ನಾಗ ದರ್ಶನಗಳು ನಡೆದಾಗ ಮೂಲಿ ಪ್ರಸಾದ ಎಂದು ಮಣ್ಣನ್ನೆ ಕೊಡಲಾಗುತ್ತದೆ. ಈ ದರ್ಶನಗಳು ಹಲವುಕಾಲದಿಂದ ಪುರೋಹಿತ ವರ್ಗಕ್ಕೆ ಸೇರಿದವರ ಮೂಲಕವೇ ನಡೆದು ಬರುತ್ತಿದೆ. ಆದರೆ ದಲಿತರು ಆರಾಧಿಸಿಕೊಂಡು ಬರುತ್ತಿರುವ ನಾಗಾರಾಧನೆಯ ಮಾದರಿಯಾದ ಕಾಡ್ಯನಾಗನಿಗೆ ತಂಬಿಲ ಇಡುವ ಮತ್ತು ಆರಾಧಿಸುವ ಎಲ್ಲ ಕೆಲಸಗಳನ್ನು ಇಂದಿಗೂ ಅನೇಕ ಕಡೆ ದಲಿತರೇ ನಡೆಸಿಕೊಂಡು ಹೋಗುತ್ತಿದ್ದಾರೆ.

ನಾನು ಕಂಡಂತೆ ಹಣ್ಣು-ಹಾಲಿನ ಸರಳ ಮತ್ತು ಮಾಮೂಲಿ ಸೇವೆ ಸಹಜವಾಗಿ ನಡೆದುಕೊಂಡು ಹೋಗುತ್ತಿತ್ತು. ಅದಲ್ಲದೆ ನನ್ನ ಬಾಲ್ಯದದಿನಗಳಲ್ಲಿ ಕಂಡಂತೆ ವಿರಳವಾಗಿ ನಾಗದರ್ಶನವೋ, ಅತಿವಿರಳವಾಗಿ ನಾಗಮಂಡಲವೋ ನಡೆಯುತ್ತಿದ್ದುದುಂಟು. ಅದೇ ಸಂದರ್ಭದಲ್ಲಿ ಗದ್ದೆ ಬಯಲುಗಳಲ್ಲಿ ಏನಾದರೂ ಸತ್ತು ಬಿದ್ದ ಸರ್ಪ ಸಿಕ್ಕರೆ ಅವರ ಪಾಲಿಗೊಂದು ಗಂಟು(ನಿಧಿ)? ಸಿಕ್ಕಂತಯೇ ಎಂದು ಭಯ ಬೀಳುತ್ತಿದ್ದುದನ್ನೂ ಕಂಡಿದ್ದೇನೆ. ಯಾಕೆಂದರೆ ಈ ಹಾವುಗಳು ಹೇಗೇ ಸತ್ತಿರಲಿ ಅವುಗಳ ಬೊಜ್ಜ(ಸಂಸ್ಕಾರ) ಮಾಡಬೇಕಾದ ಹೊಣೆ ಹಾಗೆ ಕಂಡವರ ಮೇಲೆ ಬರುವಂತಹ ಭಯ ಅಂದೂ ಇದ್ದುದನ್ನು ನಾನು ಕಂಡವನಿದ್ದೇನೆ. ಸತ್ತು ಕೊಳೆತುಹೋದ ಹಾವಿದ್ದರೂ ಅದು ಸರ್ಪವಾಗಿದ್ದರೆ ಅದನ್ನು ಪುರೋಹಿತರ ಮೂಲಕ ಹಲಸಿನ ಕಟ್ಟಿಗೆಯಲ್ಲಿಟ್ಟು ಸುಡುವುದಲ್ಲದೆ, ಅದರ ಶ್ರಾದ್ಧವಿಧಿಯನ್ನು ಪುರೋಹಿತರ ಸಂತರ್ಪಣೆಯ ಮೂಲಕ ನಡೆಸಬೇಕಿತ್ತು. ಹೋಮ ಹವನದ ಜೊತೆಗೆ ನಿಗಧಿತ ಸಂಖ್ಯೆಯ ಬ್ರಾಹ್ಮಣರಿಗೆ ಊಟ ಹಾಕಲೇಬೇಕೆಂಬ ನಿಯಮವೂ ಚಾಲ್ತಿಯಲ್ಲಿತ್ತು. ಮನುಷ್ಯರು ಸತ್ತುಬಿದ್ದರೆ ಸಿಕ್ಕದ ಪ್ರಾಮುಖ್ಯತೆ ಸತ್ತ ಹಾವುಗಳಿಗೆ ದಕ್ಕುತ್ತಿದ್ದುದಲ್ಲದೆ, ಆ ಪ್ರಾಮುಖ್ಯತೆಯ ಲಾಭಗಳು ನಿಶ್ಚಿತವಾಗಿ ಒಂದು ಸಮುದಾಯಕ್ಕೇ ದಕ್ಕುತ್ತಿತ್ತು. ದುಬಾರಿಯೆನಿಯೂ ಇದು ಒಂದು ಮಿತಿಯಲ್ಲಿ ನಡೆದುಕೊಂಡು ಬರುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಾಗಬನಗಳು ಬನಗಳಾಗಿಯೇ ಇದ್ದುವು. ಈ ಬನಗಳ ಸ್ವರೂಪಕ್ಕೆ ಇಂದಿನಂತೆ ಅಂದು ಈ ಅಕ್ರಮಕೂಟ ಕೈಯಿಕ್ಕಿರಲಿಲ್ಲ.

ಆದರೆ ಇತ್ತೀಚೆಗಿನ ದಿನಗಳಲ್ಲಿಯ ಈ ಸ್ಥಿತಿ ಆತಂಕಕಾರಿಯಾಗಿ ಬೆಳೆಯುತ್ತಿದೆ. ನಂಬುಗೆ ಅನ್ನುವುದಕ್ಕಿಂತ ಮುಖ್ಯವಾಗಿ ಈ ಭಯವನ್ನೆ ಬಂಡವಾಳ ಮಾಡಿಕೊಂಡು ನಾಗನ ಹೆಸರಿನಲ್ಲಿ ಅನಾರೋಗ್ಯಕರವಾದ ದಂದೆಯೊಂದು ಅವ್ಯಾಹತವಾಗಿ ಊರ್ಜಿತವಾಗುತ್ತಿದೆ. ನಾಗದರ್ಶನಗಳು ನಡೆದಲ್ಲಿ nagaradhane-1ಮೂಲಿ ಸ್ಥಳದಿಂದ ಮಣ್ಣಿನ ಪ್ರಸಾದ ತೆಗೆದಷ್ಟೇ ಸುಲಭವಾಗಿ ಹೊಸ ಹರಕೆಗಳನ್ನು ಕಾಲಗರ್ಭದಿಂದ ಅಗೆದು ತೆಗೆದು ಹುಟ್ಗತಿ(ಮರೆಯಾದುದನ್ನು ನೆನಕೆ ಮಾಡುವುದು) ಕೊಡಲಾಗುತ್ತಿದೆ. ನಾಗಬನಗಳ ಜಾಗದಲ್ಲಿ ಕಾಂಕ್ರೀಟುಗೋಪುರ ನಿರ್ಮಾಣದ ಆಜ್ಞೆ ನೀಡಲಾಗುತ್ತಿದೆ. ಈ ಗೋಪುರಗಳಲ್ಲಿ ಹೊಸದಾಗಿ ಪ್ರತಿಷ್ಠಾಪನಕಾರ್‍ಯದ ನಂತರ ವರ್ಷಕ್ಕೊಂದರಂತೆ ಶುದ್ಧಕಳಶದಂತಹ ರಿನೀವಲ್ ಕಾರ್‍ಯಕ್ರಮಗಳ ಸರಣಿ ಹುಕುಂಗಳನ್ನು ಈ ಪಾತ್ರಿ ಮತ್ತು ಪುರೋಹಿತರ ಜಂಟಿಪಡೆ ಜಾರಿಗೊಳಿಸುತ್ತಿದೆ. ಆಶ್ಲೇಷಬಲಿ, ನಾಗಮಂಡಲಗಳು ನಿತ್ಯದ ಮಾತಾಗುವಷ್ಟು ಅತಿಸಂಖ್ಯೆ ಮತ್ತು ದುಬಾರಿಯಲ್ಲಿ ನಡೆಯುತ್ತಲೇ ಇವೆ. ಮುಖ್ಯವಾಗಿ ಇವು ಕುಟುಂಬಕ್ಕೆ ಸೇರಿದ ಬನಗಳಾಗಿಯೇ ಇರುವುದರಿಂದ ಮೂಲ ಅವಿಭಕ್ತ ಕುಟುಂಬದ ಉಳ್ಳವರು, ಇಲ್ಲದವರು ಎಂಬ ಭೇದವಿರದೆ ಎಲ್ಲರೂ ವಂತಿಗೆ(ವರಾಡ)ಕೊಟ್ಟು ಪಾಲ್ಗೊಳ್ಳಬೇಕಾಗುವ ಒತ್ತಡವೂ ನಿರ್ಮಾಣಗೊಳ್ಳುತ್ತಿದೆ. ಇದರಿಂದಾಗಿ ಹೀಗೆ ವರಾಡಕೊಟ್ಟು ಪಾಲ್ಗೊಳ್ಳುವ ಒತ್ತಡಕ್ಕೆ ಬಿದ್ದ ಅನೇಕ ಬಡಕುಟುಂಬಗಳು ಬಲಿಷ್ಠರ ನಡುವೆ ನಲುಗಿ ಹೋಗುವ ಪರಿಸ್ಥಿತಿ ಉಂಟಾಗುತ್ತಿದೆ. ಯಾವ ಯಾವುದೋ ಅಡ್ಡದಾರಿಯಲ್ಲಿ ಹಣಮಾಡಿದ ದಿಡೀರ್‌ಧನಿಕರು ತಮ್ಮ ಸಂಪಾದನೆಯ ಗಣಿತವನ್ನು ಈ ಮೂಲಕ ಲೋಕಕ್ಕೆ ಪ್ರದರ್ಶಿಸಲು ಅವಕಾಶವಾಗುತ್ತಿದೆ. ಈ ನೈತಿಕದಿವಾಳಿಶೂರರು ಧರ್ಮದುರಂಧರರಾಗಿ ನಾಗಮನ್ನಣೆ ಪಡೆದು, ಅನೈತಿಕವೆನ್ನುವುದು ಶುಚೀಕರಿಸಲ್ಪಟ್ಟ ನೈತಿಕನಾಣ್ಯವಾಗಿ ಚಲಾವಣೆಗೆ ಬರುತ್ತಿದೆ. ನಾಗನನ್ನು ನಂಬಿದ ನಿರ್ಗತಿಕರಿಗೆ ಸಂಕಟೋತ್ಪಾದಕರ ನುಡಿಯೆಂಜಲಿನಲ್ಲಿ ಹೊರಳುತ್ತಾ ಬದುಕಬೇಕಾದ ವಿಷಚಕ್ರ ಬಲಿಯುತ್ತಿದೆ. ವ್ಯಕ್ತಿಗೌರವ ಮರೆತು ಎಂಜಲಲ್ಲಿ ಹೊರಳಿದಷ್ಟೇ ಕನಿಷ್ಠವಾಗಿ, ತಮ್ಮ ಮಕ್ಕಳನ್ನು ಯಾರದೋ ಹೋಟೆಲು-ಮನೆಗಳಲ್ಲಿ ಒತ್ತೆಯಿಟ್ಟು ಪಡೆದ ಹಣವನ್ನು ದೈನೇಸಿಯಾಗಿ ಈ ಲೂಟಿಕೋರರ ಕೈಗಿತ್ತು, ಮತ್ತವರದೇ ಕಾಲಿಗೆ ಬೀಳಬೇಕಾದ ಸ್ಥಿತಿ ಮಡೆಸ್ನಾಕ್ಕಿಂತಲೂ ದಯನೀಯವಾಗುತ್ತಿದೆ.

ನಾಗಾರಾಧನೆ ಸಂಪ್ರದಾಯ ಮೂಲತಃ ಅವೈದಿಕನೆಲೆಯದು. ಪ್ರಾಚೀನವಾಗಿ ಅಲ್ಲಿ ಆರಾಧನೆಯ ಮುಖ್ಯಸಂಗತಿಯಾಗಿ ಬಳಕೆಯಾಗುತ್ತಿದ್ದುದು ಮಣ್ಣಿನಕಳಶಗಳು. ಶುದ್ಧನಿಸರ್ಗಾರಾಧನೆಯ ಈ ತಾಣವನ್ನು ಗುದ್ದಲಿ ಮತ್ತು ಕುಡುಗೋಲುಮುಕ್ತವಲಯವಾಗಿ ಘೋಷಿಸಿಕೊಂಡಿದ್ದರು. ನಾಗನ ಬನವನ್ನು ಸ್ವಯಂ ಕಡಿಯುವುದನ್ನು ನಿಷೇಧಿಸಿಕೊಂಡಿರುವ ಜೊತೆಗೆ ಹಾಗೊಂದು ವೇಳೆ ಇನ್ನಾರೋ ಅದನ್ನು ಕಡಿಯುತ್ತಿದ್ದರೆ ಸ್ವಯಂನಾಶವನ್ನು ಆಹ್ವಾನಿಸುವ ಆ ಮೂರ್ಖರನ್ನು ಪ್ರಶ್ನಿಸಬಾರದು ಎಂಬ ವಾಡಿಕೆಯೂ ಇದೆ. ಹಾಗೆ ಪ್ರಶ್ನಿಸಿದವನ ಮೇಲೆಯೇ ನಾಗನ ಮುನಿಸು ಬೀಳುತ್ತದೆ ಎಂಬಂತಿರುವ ಈ ನಂಬಿಕೆಯ ಆಳದಲ್ಲಿ ನಾಗಬನದ ರಕ್ಷಣೆಯ ಕುರಿತಾದ ತಿಳುವಳಿಕೆಯ ವ್ಯಾಪಕತೆಯಿದೆ. ಹೀಗೆ ಈ ಬನದ ಇರುವಿಕೆಗೆ ಯಾವುದೇ ಧಕ್ಕೆ ಒದಗದಂತೆ ನಮ್ಮ ಪೂರ್ವಿಕರು ಕಾಪಿಟ್ಟುಕೊಂಡಿದ್ದರು. ಸಹಜವಾಗಿ ಅಪೂರ್ವವಾದ ಜೇನು, ಗಿಡಮೂಲಿಕೆಗಳು ಇಲ್ಲ್ಲಿ ಲಭ್ಯವಿರುತ್ತಿದ್ದವು. ಕುಡುಗೋಲು ಹಾಕುವುದಕ್ಕೇ ನಮ್ಮ ಪೂರ್ವಿಕರು ಹಾಕಿಕೊಂಡಿದ್ದ ಸ್ವಯಂ ನಿಷೇಧದಿಂದಾಗಿ ಸಂದಣಿಸಿಕೊಂಡಿದ್ದ ನೀರಪೂರಣದ ಹುತ್ತಗಳ ಜೊತೆಗೆ ದಟ್ಟವಾದ ಬೀಳು, ಬಲ್ಲೆಗಳಿಂದ ಕೂಡಿಕೊಂಡ ಸಸ್ಯಾವಳಿಯ ಸಾಂದ್ರತೆ ಇರುತ್ತಿತ್ತು. ಯಾರೂ ಮುಟ್ಟದ ಮತ್ತು ಮುಟ್ಟದಂತೆ ಯಾರೊಬ್ಬರ ಎಚ್ಚರಿಕೆಯ ಅಗತ್ಯವೂ ಇಲ್ಲದೆ ಉಳಿದುಬಂದಿದ್ದ ಈ ಪಾರಂಪರಿಕ ರಕ್ಷಿತ ನಿಸರ್ಗತಾಣಗಳು ಇವತ್ತು ಪುನರುತ್ಥಾನದ ಹೆಸರಿನಲ್ಲಿ ಜೆಸಿಬಿ ಯಂತ್ರಗಳ ದೈತ್ಯಾಕ್ರಮಣಕ್ಕೆ ಸಿಕ್ಕಿ ಬೋಳಾಗುತ್ತಿವೆ. ಹೀಗೆ ಸಪಾಟುಗೊಂಡ ಜಾಗಗಳಲ್ಲಿ ಕಾಂಕ್ರೀಟು ಬನಗಳ ನವನಿರ್ಮಾಣಗಳು ಏಳುತ್ತಿವೆ.

ಹುತ್ತವನ್ನೇ ದೇವರೆಂದು ನಂಬಿ ಅದನ್ನೆ ನಾಗರಾಧನೆಯ ಬಹಳಮುಖ್ಯ ಸಂಕೇತವೆಂದು ಅರಾಧಿಸುತ್ತಿದ್ದ ಅದೇ ಜಾಗದಲ್ಲಿ ಹುತ್ತಗಳ ಮೂಲೋತ್ಪಾಟನೆಮಾಡಿ, ಇದರಿಂದಾದ ಹಾನಿ(ನಾಗನ ಮರಿ-ಮೊಟ್ಟೆಗಳ ನಾಶದ)ಯ ಪರಿಹಾರಕ್ಕಾಗಿ ಮತ್ತದೇ ಸರ್ಪಸಂಸ್ಕಾರವೆಂಬ ಪುರೋಹಿತಲೂಟಿಯ ಅವಕಾಶಗಳನ್ನು ನಿರ್ಮಿಸಲಾಗುತ್ತಿದೆ. ಗುದ್ದಲಿ, ಕುಡುಗೋಲುಗಳಲ್ಲದೆ ಬೆಂಕಿಯ ಪ್ರವೇಶಕ್ಕೂ ಸೀಮಿತ ಅವಕಾಶವಷ್ಟೇ ಇದ್ದ, ಜೇನುವಾಸದ ತಾಣಗಳೂ ಆಗಿದ್ದ ಈ ಬನಗಳೊಳಗೆ ಈಗ ನಿರಾಯಾಸವಾಗಿ ಹೋಮ ಹವನಾದಿ ಅಗ್ನಿಕೊಂಡದ ಜ್ವಾಲೆ ಬೆಳಗುತ್ತಿದೆ! ಜಲಪರಂಪರೆಗೆ ಸೇರಿದ ಈ ನಾಗಪರಂಪರೆ ಸಂಪೂರ್ಣವಾಗಿ ಅಗ್ನಿಪರಂಪರೆಯವರ ಹಿಡಿತಕ್ಕೆ ಸಂದು ಹೋಗಿದೆ. ಜೊತೆಗೆ ನಾಗನ ಹೆಸರಿನ ಏನೇ ಕೆಲಸ ಇದ್ದರೂ ಅಲ್ಲೊಂದು ಅನ್ನ ಸಂತರ್ಪಣೆ ಆಗಲೇಬೇಕಾದ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಅನ್ನ ಹಂಚುವ ಈ ಕಾರ್‍ಯಕ್ರಮದಲ್ಲಿಯೂ ಅಡುಗೆಯನ್ನು ನಿರ್ದಿಷ್ಟ ಸಮುದಾಯದವರೇ ಮಾಡಬೇಕೆಂಬ ನಿಯಮವಿದೆ. ಅದು ಬರಿಯ ಅನ್ನಸಂತರ್ಪಣೆಯಷ್ಟೇ ಅಲ್ಲ, ಮಡಿಯೂಟವಾಗಬೇಕೆಂಬವಾಗಬೇಕೆಂಬ ಷರತ್ತಿಗೊಳಪಟ್ಟದ್ದೂ ಹೌದು. ನಾಗನಿಂದಾಗಿ ಹೀಗೆ ಉಣ್ಣಲೇಬೇಕಾದವರು ಮತ್ತು nagaradhaneಅಡುಗೆ ಮಾಡಬೇಕಾದವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿರುವುದಷ್ಟೇ ಅಲ್ಲದೆ, ಅನ್ನ ಸಂತರ್ಪಣೆ ಮಾಡಿ ಹಸಿವಿರದವರ ಹಸಿವನ್ನು ತಣಿಸಿ! ಅವರ ಕಾಲಿಗೇ ಬೀಳಬೇಕಾದ ದುಸ್ತರ ಸ್ಥಿತಿಯಿದು. ಯಾಕೆಂದರೆ ನಾಗಪಾತ್ರ್ರಿಯ ಬಾಯಿಂದ ತಪ್ಪದೇ ಬರುವುದು “ಬ್ರಹ್ಮಕುಟುಂಬವನ್ನು ತೃಪ್ತಿಪಡಿಸುವ” ಆಜ್ಞೆಯ ನುಡಿ!. ಪುರೋಹಿತ, ಪಾತ್ರಿಯೊಂದಿಗೆ ಉಣ್ಣುವ ಮತ್ತು ಅಡಿಗೆಮಾಡುವ ಫಲಾನುಭವಿಗಳೆಲ್ಲಾ ಹೀಗೆ ಒಂದೇ ಸಮುದಾಯಕ್ಕೆ ಸೇರಿದವರಾಗಿ, ಇದೊಂದು ಧಾರ್ಮಿಕ ದಂದೆಯಾಗಿ ಮಾರ್ಪಟ್ಟಿರುವುದರ ಕುರಿತು ಕೊಡುವವರು ಗೊಣಗಿಕೊಂಡೇ ಕೊಡುತ್ತಿದ್ದಾರೆ. ಪಡೆಯುವವರು ಅಧಿಕಾಧಿಕ ಕಸಿಯುತ್ತಿದ್ದಾರೆ. ಇಲ್ಲಿ ಮೂಲಿಸ್ಥಾನದ ಮೂಲದ ನಂಬಿಕೆಗಳನ್ನು ಸಮೂಲವಾಗಿ ಕಿತ್ತು ಬಿಸಾಡಲಾಗಿದೆ.

ನಂಬಿಕೆಯನ್ನು ಪ್ರಶ್ನಿಸುವಂತಿಲ್ಲ ಎಂದು ಉರಿದೆದ್ದುಬೀಳುವ “ಸಂಸ್ಕೃತಿ” ಮತ್ತು “ನಂಬಿಗೆ”ಯ ಕಾವಲುಗಾರರು ಗಟ್ಟಿಗೊಂಡು ಸಂಘಟಿತವಾಗುತ್ತಿರುವ ಈ ಕಾಲದಲ್ಲಿ, ಮಡೆಸ್ನಾನವನ್ನು ನಂಬಿಗೆಯ ಪ್ರಶ್ನೆಯೆತ್ತಿ ಬಾಯಿಮುಚ್ಚಿಸಲು ಯತ್ನಿಸಲಾಗುತ್ತಿದೆ. ಹೊರಳಬೇಡಿ ಅಂದರೆ ತಲೆಯಮೇಲೆಯೇ ಹೊತ್ತು ತಿರುಗುತ್ತೇವೆ ಎಂದು ಹೇಳಿಸುವುದಷ್ಟೇ ಅಲ್ಲ, ಮಾಡಿಸಲಾಗುತ್ತಿದೆ. ದುರಂತವೆಂದರೆ ಆಳುವವರ ಗುಣಗಾನ ಮಾಡಬಲ್ಲಷ್ಟು ಪ್ರಮಾಣದಲ್ಲಿ ಸಾಂಸ್ಕೃತಿಕ ವಸಾಹತುಶಾಹಿ ತನ್ನ ಅಂತಿಮ ದಿಗ್ವಿಜಯವನ್ನು ಸಾಧಿಸಿಬಿಟ್ಟಿದೆ. ಇಂತಹ ಯಶಸ್ಸಿನಲ್ಲಿ ಬೀಗುತ್ತಿರುವವರ ಎದುರಿಗೆ ಒಂದಿಷ್ಟು ಪ್ರಶ್ನೆಗಳನ್ನಾದರೂ ಇಟ್ಟು ಅಲ್ಲಿಯೂ ಇದ್ದಿರಬಹುದಾದ ಆತ್ಮ, ಪಾಪ-ಪುಣ್ಯಗಳನ್ನು ಕೆದಕಿ ಅಲ್ಲಿನ ಸೋಗಲಾಡಿತನವನ್ನು ಬೆಳಕಿಗೆ ತರಬೇಕಿದೆ. ಯಾಕೆಂದರೆ ಎಂಜಲ ಮೇಲೆ ಉರುಳುವವರ ಆಳದಲ್ಲಿ ನೆಟ್ಟು ಬೆಳೆಯಿಸಿದ ಮತ್ತು ಅವರನ್ನು ಅಲ್ಲಿಂದ ಪಾರಾಗದಂತೆ ಬಂಧಿಸಿಟ್ಟಿರುವ ದಯನೀಯ ಸ್ಥಿತಿಯ ಚರಿತ್ರೆಯೇ ಈ ಉರುಳಾಟದ ಹಿಂದಿದೆ ಎಂಬುದನ್ನು ಗಮನಿಸಬೇಕು. ಅದಲ್ಲದೆ ನಂಬಿಕೆಗಳೆಂದರೆ ಗೊಂಚಲಿದ್ದ ಹಾಗೆ. ಒಂದಕ್ಕೆ ಹೇಳಿದ ಮಾತು ಇನ್ನೊಂದಕ್ಕೂ ಅನ್ವಯಿಸುತ್ತದೆ. ಈ ನಂಬಿಗೆಗಳು ಯಾವ ತೆರನಾದ ಇರುವಿಕೆ ಮತ್ತು ವಿಕಾಸವನ್ನು ತೋರಿವೆ? ಹತ್ತಿಪ್ಪತ್ತು ವರ್ಷಗಳ ಹಿಂದಿದ್ದ ನಂಬಿಗೆ ಮತ್ತು ಆಚರಣೆಯ ಆವರಣಗಳು ಇಂದು ಯಾವ ಮಾರ್ಪಾಡಿಗೆ ಒಳಗಾಗಿವೆ? ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾಗಿ ಈ ನಂಬುಗೆ ಮತ್ತು ಆಚರಣೆಗಳು ಬೀರುತ್ತಿರುವ ವಿಕೃತ ಪರಿಣಾಮಗಳೇನು? ಈ ಪ್ರಶ್ನೆ ಕರಾವಳಿಯ ಸಾಕಷ್ಟು ಜನರಲ್ಲಿ ಸಹಜವಾಗಿಯೇ ಅನುರಣಿಸುತ್ತಿದೆ. ನಿರ್ವಾತದಲ್ಲಿರುವ ಈ ಪಿಸುಮಾತುಗಳನ್ನು ಗಟ್ಟಿಯಾದ ಕೂಗಾಗಿ ಪರಿವರ್ತಿಸಬೇಕಿದೆ.

ಮುಖ್ಯವಾಗಿ ನಾಗರಾಧನೆಯನ್ನು ಸಮರ್ಥಿಸುವ ವೇಳೆ ಅದನ್ನೊಂದು ವೈಜ್ಞಾನಿಕ ತಳಹದಿಯುಳ್ಳ, ನೈಸರ್ಗಿಕ ಸಮತೋಲವನ್ನು ಕಾಪಾಡಿಕೊಳ್ಳುವ ಆಲೋಚನೆಯನ್ನು ಒಳಗೊಂಡ ನಿಸರ್ಗಾರಾಧನೆಯ ಮಾದರಿ ಎಂದೇ ಪರಿಭಾವಿಸಲಾಗುತ್ತದೆ. ಕುಡುಗೋಲ ಪ್ರವೇಶಕ್ಕೇ ಸ್ವಯಂನಿಷೇಧ ಹೇರಿಕೊಂಡ ದೇವರಕಾಡುಗಳನ್ನು ನಮ್ಮ ಪ್ರಾಚೀನರು ಕಾಯ್ದಿಟ್ಟುಕೊಂಡು ಬಂದ ಅಂತರ್ಜಲದ ಮರುಪೂರಣದ ತಂತ್ರಗಾರಿಕೆ ಮತ್ತು ಔಷದೀಯ ಗಿಡಮೂಲಕೆಗಳ ಸಂರಕ್ಷಣೆಯ ನಮ್ಮ ಪಾರಂಪರಿಕ ಹೆಮ್ಮೆಯೆಂದೂ ಗುರುತಿಸಿಕೊಳ್ಳಲಾಗಿದೆ. ಸತ್ತ ಹಾವಿನ ದೇಹಭಾಗದಲ್ಲಿಯೂ ಉಳಿದುಕೊಳ್ಳಬಹುದಾದ ವಿಷ ಅದರ ದೇಹ ಕೊಳೆತ ಜಾಗದಲ್ಲಿ ಬೆಳೆಯುವ ಹುಲ್ಲು ತಿನ್ನುವ ದನಕರುಗಳಿಗೆ ವರ್ಗಾವಣೆಗೊಳ್ಳದಿರಲಿ ಎಂಬ ಕಾರಣಕ್ಕಾಗಿ ಹಾವನ್ನೂ ಸುಟ್ಟುಹಾಕುವ ರೂಢಿಯನ್ನು ಬೆಳೆಸಲಾಯಿತು ಎಂದೇ ವೈಜ್ಞಾನಿಕ ಕಾರಣವನ್ನು ಹೇಳಲಾಗಿದೆ. ಇದರ ಜೊತೆಗೆ ಪಂಥಿಕವಾಗಿ ನಾಗಕುಲಕ್ಕೆ ಸೇರಿದವರಾದ ನಮ್ಮ ಪಾಲಿಗೆ ನಾಗನ ಹೆಣನೆಂದರೆ ನಮ್ಮ ಹಿರೀಕನ ಹೆಣವೆಂಬ ಗೌರವವೂ ಇರಲಾಗಿ, ಅಲ್ಲಿ ಸಂಸ್ಕಾರ ವಿಧಿಯ ಪಾಲನೆಯಿದೆ.

ಆದರೆ ವೈಜ್ಞಾನಿಕತೆಯ ಜೊತೆಗೆ ಇವೇ ನಂಬಿಕೆ, ಶೃದ್ಧೆಯ ಕಾರಣದಿಂದ ಶತಮಾನ ಹೋಗಲಿ ದಶಮಾನದ ಹಿಂದಿನವರೆಗೆ ಕಣ್ಣೆದುರೇ ಉಳಿದುಕೊಂಡಿದ್ದ ನಿಸರ್ಗರಚನೆಗಳು ಹೀಗೆ ದಂದೆಕೋರರ ಕೈಗೆ ಸಿಕ್ಕಿ ನೆಲೆಕಳೆದುಕೊಳ್ಳುವಾಗ, ನಂಬುಗೆಯ ವಕಾಲತ್ತಿನ ಮನಸ್ಸುಗಳು ಎಚ್ಚರಾದಂತೆ ಕಂಡಿಲ್ಲ! ಈಗ ಕಟ್ಟಲಾಗುತ್ತಿರುವ ಇಸ್ಲಾಮಿಕ್‌ಶೈಲಿಗೆ ಹತ್ತಿರದ ನಾಗಗೋಪುರಗಳೆಂಬ ಕಾಂಕ್ರೀಟ್ ವಾಸ್ತುರಚನೆಯಲ್ಲಿ ನಾಗ ನೆಲೆಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಅವು ಕೇಳಿಕೊಳ್ಳುತ್ತಿಲ್ಲ. ಇದಕ್ಕೆಲ್ಲಾ ಬಳಕೆಯಾಗುತ್ತ್ತಿರುವ ಹಣದ ಮೂಲದ ಕುರಿತಾದ ಪಾವಿತ್ರ್ಯದ ಪ್ರಶ್ನೆಯೂ ಅಲ್ಲಿಲ್ಲ! ಅಡ್ಡದಾರಿಯ ಸಂಪಾದನೆ ಮಾಡಿದ ಕಳ್ಳ-ಸುಳ್ಳರ ಜೊತೆಗೆ ನಿಷ್ಪಾಪಿ ಬಡವರೂ ಈ ಹೊಸ ರೂಪಾಂತರಕ್ಕೆ ತೆರಿಗೆ ಕಟ್ಟಿ ಸೋಲುತ್ತಿರುವುದನ್ನು ಈ ನಂಬುಗೆಯ ವಕೀಲರುಗಳು ಮೌನವಾಗಿಯೇ ಸಮರ್ಥಿಸುತ್ತಾರೆ! ಯಾಕೆಂದರೆ ನಾಗನ ಸಂಸ್ಕಾರಕ್ಕೆಂದು ವಂತಿಗೆ ಕೊಡಲಾಗದವರು ಊರೆಲ್ಲ ಜೋಳಿಗೆಹಿಡಿದು ಭಿಕ್ಷೆ ಬೇಡಿದ್ದನ್ನು ನಾನು ಕಂಡಿದ್ದೇನೆ. ಈ ಭಿಕ್ಷೆಯನ್ನೂ ನಿರ್ದಯವಾಗಿ ಕಸಿಯುವುದನ್ನು ನಂಬುಗೆ ಎಂದು ಹೇಗೆ ಸಮರ್ಥಿಸಲು ಸಾಧ್ಯ? ಹೇಗಾದರೂ ಮಾಡು ನನ್ನ ಸೇವೆ ಬಾಕಿ ಇರಿಸಿಕೊಳ್ಳಬಾರದು ಎಂದು ಹುಕುಂ ಕೊಡುವ ನಾಗಪಾತ್ರಿಗಳ “ನುಡಿ” ಅನೈತಿಕತೆಯನ್ನೂ ಉತ್ತೇಜಿಸುತ್ತದೆಯಲ್ಲವೆ? ಸಂಸ್ಕೃತಿ, ನಂಬುಗೆ ಇವುಗಳ ಕಾರ್‍ಯರೂಪದ ಅನುಷ್ಠಾನಕ್ಕಿರುವಷ್ಟೇ ಪ್ರಾಮುಖ್ಯತೆ, ಅವುಗಳ ನಿಷ್ಕಳಂಕ/ಪಾರದರ್ಶಕ ಮುಂದುವರಿಕೆಗೂ ಇರಬೇಲ್ಲವೆ?

ಬೀದಿಯಲ್ಲಿ ಬಿದ್ದ ಮನುಷ್ಯರ ಹೆಣವನ್ನು ನೋಡಿಯೂ ಮುಂಬರಿದರೆ ಸೋಂಕದ ಪಾಪ, ಸತ್ತ ಸರ್ಪನ ಹೆಣಕ್ಕಷ್ಟೇ ಸೀಮಿತ ಮಾಡಿಕೊಂಡಿರುವುದರಿಂದ, ಕರಾವಳಿಯ ಸಹಕಾರಿ ಬ್ಯಾಂಕುಗಳಲ್ಲಿಯ ಸಾಲದ ದಪ್ತರುಗಳು ಎಷ್ಟು ಬೆಳೆದಿವೆ ಎಂಬುದನ್ನು ಇವರುಗಳೇನಾದರೂ ಗಮನಿಸಿದ್ದಿದೆಯೇ? ಓದುಬಿಡಿಸಿದ ಮಕ್ಕಳನ್ನು ಹೋಟೆಲು, ಅಂಗಡಿಗಳಲ್ಲಿ ಒತ್ತೆಯಿಟ್ಟು ದುಡಿಸಿದ ತಾಯ್ತಂದೆಗಳ ಗೋಳಿನ ಚೀಲದಿಂದಲೂ, ಈ ನಾಗ ಮತ್ತು ಸತ್ತನಾಗಗಳ ನೆವದ ಮೂಲಕ ಮಾಡುತ್ತಿರುವ ಲೂಟಿಯನ್ನು ನಂಬಿಕೆಯಂದಷ್ಟೇ ಭಾವಿಸಿ ತಣ್ಣಗೆ ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ? ದರ್ಶನದ ಸಾಮಾನ್ಯ ನಿಯಮದಂತೆ ದಿನವೊಂದಕ್ಕೆ ಒಂದು ದರ್ಶನ ಮುಗಿಸಿದ ಪಾತ್ರಿಯ ಮೇಲೆ ಮತ್ತೊಂದು ಆಕರ್ಷಣೆ ಆಗಬೇಕೆಂದರೆ ಮುಂದಿನ ದಿನಕ್ಕಾಗಿ ಕಾಯಬೇಕು. ಅದಕ್ಕಾಗಿ Nagapatriಆತ ಮತ್ತೊಂದು ದಿನದ ವೃತಾಚರಣೆ ಮಾಡಬೇಕು. ಇದು ದೇವರು ಬರಿಸಿಕೊಳ್ಳುವುದನ್ನು ನಂಬಿಕೊಂಡುಬಂದ ಭೂತಾರಾಧನಾ ಪರಂಪರೆಯ ನಂಬಿಕೆ. ಆದರೆ ವಾದ್ಯದ ಹಿಮ್ಮೇಳವನ್ನೂ ತಯಾರಿಸಿಕೊಂಡು ಆಧುನಿಕ ವಾಹನಸೌಲಭ್ಯದ ನೆರವಿನಿಂದ ಜಗತ್ತನ್ನು ೨೧ ಬಾರಿ ಸುತ್ತ್ತಿಬಂದವನೆಂದು ಹೇಳಲಾಗುವ ಆ ಕೊಡಲಿರಾಮನನ್ನು ನೆನಪಿಸುವಂತೆ, ಬೆಳಗಿನಿಂದ ಸಂಜೆಯತನಕ ದರ್ಶನಕ್ಕೊಂದರಂತೆ ತಲಾ 3-5 ಸಾವಿರವನ್ನು ಪೀಕುತ್ತಾ, ಉಟ್ಟ ಪಟ್ಟೆಯಲ್ಲಿಯೇ ಹತ್ತಾರು ದರ್ಶನಗಳನ್ನು ಮಾಡಬಲ್ಲ ನಾಗಪಾತ್ರಿಗಳು ಹಾಕುತ್ತಿರುವ ದುಡಿಮೆಯ ಸ್ಕೆಚ್ಚು ಈ ನಂಬುಗೆಯ ಕಾವಲುಗಾರರಿಗೆ ಯಾಕೆ ದಂದೆ ಎಂದು ಅರ್ಥವಾಗುವುದಿಲ್ಲ? ಈ ನಡುವೆ ಭಾರತದಾದ್ಯಂತ ದೇಶ ಮತ್ತು ಸಂಸ್ಕೃತಿಯನ್ನು ಅತಿಯಾಗಿ ಪ್ರೀತಿಸುವವರ ಬಾಯಲ್ಲಿ ಈಗ ಕಪ್ಪು ಹಣ-ಭೃಷ್ಟಾಚಾರದ್ದೇ ಸುದ್ದಿ. ಅದಕ್ಕೆ ಅವರೆಲ್ಲರೂ ಸ್ವಿಸ್‌ಬ್ಯಾಂಕ್ ಎನ್ನುವ ಅಗೋಚರ ಸಂಸ್ಥೆಯನ್ನೇ ತೋರುತ್ತಾರೆ. ಆದರೆ ಈ ಧಾರ್ಮಿಕತೆ ಹೆಸರಿನ ಲೂಟಿ ಆ ಭೃಷ್ಟಚಾರದ ಚಿಂತನೆಯೊಳಗೆ ಬರುವುದೇ ಇಲ್ಲ! ಕಣ್ಣೆದುರೇ ನಡೆಯುವ ತೆರಿಗೆ ಕಟ್ಟದ ಹಣದ ಸೇರಿಕೆಯನ್ನು ಯಾವ ಬಣ್ಣದ ಹಣವೆನ್ನಬೇಕೋ ತಿಳಿಯದು? ತಿಂಗಳೊಂದರ ಕನಿಷ್ಟ ಲಕ್ಷವನ್ನೂ ಮೀರಿ ದುಡಿಯುತ್ತಿರುವ ನಾಗಪಾತ್ರಿಯಾದವನ ಆದಾಯಕ್ಕೂ, ಮಾಮೂಲಿ ದೈವಪಾತ್ರಿಯ ಆದಾಯಕ್ಕೆ ಇರುವ ಅಗಾಧವಾದ ಅಂತರವನ್ನು ತುಲನೆ ಮಾಡಿದಲ್ಲಿ ಇದು ತಿಳಿದೀತು. 20-30 ವರ್ಷಗಳ ಹಿಂದೆ ನಾಗಪಾತ್ರಿಗಳಾದವರು ಹೀಗೆಯೇ ಸಿರಿವಂತರಾಗಿದ್ದರೇ? ಇದು ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಲೂಟಿಯಲ್ಲವೆ? ಅದರೊಂದಿಗೆ ಅವೇ ನಂಬಿಕೆಗಳ ಮೂಲೋತ್ಪಾಟನೆಯೂ ಹೌದಲ್ಲವೇ?

ನಂಬುಗೆಯ ಹೆಸರಿನಲ್ಲಿ ಮರೆಮಾಚಿ ನಡೆಸುತ್ತಿರುವ ಲೂಟಿ ಹಾಗೂ ಹಳೆಯದು ಹಾಗೆಯೇ ಉಳಿಯಬೇಕೆಂದು made-snanaಮಡೆಸ್ನಾನದಂತಹ ಆಯ್ದಕೆಲವನ್ನು ಉಳಿಸಿಕೊಳ್ಳಬೇಕೆಂದು ಒದ್ದಾಡುವುದೂ ಎರಡೂ ಪರಸ್ಪರ ಪೂರಕವಾದ ಕಸರತ್ತುಗಳೇ. ಉಂಡ ಎಂಜಲಲ್ಲಿ ದೇಹವನ್ನೂ, ಹುಟ್ಟುಗತಿಯ ಹೆಸರಿನ ನುಡಿಯೆಂಜಲಿನಲ್ಲಿ ಆರ್ಥಿಕವಾದ ಉರುಳಾಟವನ್ನೂ ಉತ್ಪಾದನೆ ಮಾಡಿಕೊಂಡು ಬರುವುದು ಬೇರೆ ಬೇರೆಯಾದವುಗಳಲ್ಲ. ಆ ಕಾರಣಕ್ಕಾಗಿಯೇ ನಂಬುಗೆಗಳು ಪ್ರಶ್ನಿಸಲ್ಪಟ್ಟರೆ ಸಂಸ್ಕೃತಿಯೆಂಬ ಹೆಸರಿನ ಆಕರ್ಷಕಬಟ್ಟೆಯಲ್ಲಿ ಅವಿತಿರಿಸಿಕೊಂಡ ನಾಜೂಕಾದ ಆಯುಧಗಳು ಮತ್ತು ನಿರಾತಂಕವಾಗಿ ನಡೆಸಿಕೊಂಡು ಬರಲಾಗುತ್ತಿರುವ ತಳವರ್ಗದ ಮೇಲಿನ ದಾಳಿಯ ಯೋಜನೆಗಳು ನಗ್ನವಾಗಿ ಎಲ್ಲರಿಗೂ ಕಾಣಿಸಬಹುದೆಂಬ ಭಯದಿಂದಾಗಿಯೇ ಆ ವಿವರಗಳು ಮುನ್ನೆಲೆಗೆ ಬಂದಾಗಲೆಲ್ಲಾ ಮುಗಿಬಿದ್ದು ಸಮರ್ಥನೆಗಿಳಿಯುವುದನ್ನು ಕಾಣುತ್ತಿದ್ದೇವೆ. ನಂಬುಗೆ ಮತ್ತು ಸ್ಸಂಸ್ಕೃತಿಯ ಬಗೆಗೆ ಮಾತನಾಡುವವರಿಗೆ ಇಂತಹ ಪ್ರಶ್ನೆಗಳನ್ನು ಎದುರಾಗಿ ಉತ್ತರಿಸಿಕೊಳ್ಳುವ ಅಥವಾ ಹಾಗೆ ಆಗುತ್ತಿರುವ ನಂಬುಗೆಯ ಹೆಸರಿನ ಅನಾಚಾರವನ್ನು ತಡೆಯುವ ಹೊಣೆಗಾರಿಕೆಯೂ ಇರಬೇಕು. ಶತಮಾನದ ನಂಬಿಕೆಯನ್ನು ಗೌರವಿಸಬೇಕು ಎನ್ನುವವರಿಗೆ ಹತ್ತಾರು ವರ್ಷಗಳ ಹಿಂದಿನ ಕನಿಷ್ಠ ಆರೋಗ್ಯಕರ ಸ್ಥಿತಿಯಾದರೂ ಉಳಿಯಬೇಕೆಂಬ ಎಚ್ಚರ ಇರಬೇಕು. ಆದರೆ ಹೀಗೆ ಇರಬೇಕಾದುದನ್ನು ನಿರೀಕ್ಷಿಸುವ ನಾವುಗಳಿಗೆ ಜನರ ವಿವೇಚನೆಯ ಉಸಿರನ್ನೇ ಹಿಸುಕಬಲ್ಲವರಿಂದ ಹಸಿರುಳಿಸುವ, ಜನರ ಬೆವರಿಗೆ ಬೆಲೆಕೊಡುವ ಕರ್ತವ್ಯದ ನಿರೀಕ್ಷೆ ಮಾಡುವ ನಮ್ಮ ಬೋಳೇತನದ ಕುರಿತಾದ ಎಚ್ಚರವೂ ಇರಬೇಕು ಎಂಬುದನ್ನೂ ಮರೆಯಬಾರದು.

(ಈ ಲೇಖನ ಫೆಬ್ರವರಿ ತಿಂಗಳ ಹೊಸತು ಸಂಚಿಕೆಯಲ್ಲಿ ಈ ಮುನ್ನ ಪ್ರಕಟಗೊಂಡಿರುತ್ತದೆ)