Category Archives: ಜೀವನ್ ಮಂಗಳೂರು

ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು

– ಜೀವನ್ ಮಂಗಳೂರು

ಆಳ್ವಾಸ್ ವಿಶ್ವ ನುಡಿಸಿರಿ ಮತ್ತು ವಿರಾಸತ್ ಕಾರ್‍ಯಕ್ರಮಗಳನ್ನು ಯಾಕಾಗಿ ಪ್ರಗತಿಪರ ಸಾಹಿತಿಗಳು ಬಹಿಷ್ಕರಿಸಬೇಕು ಎಂದು ಮಂಗಳೂರಿನಲ್ಲಿ ಸಮಾನ ಮನಸ್ಕ ಯುವ ಚಳುವಳಿಗಾರರು, ಪತ್ರಕರ್‍ತರು, ಸಾಹಿತಿಗಳು ಅಭಿಯಾನ ನಡೆಸುತ್ತಿರುವಂತೆಯೇ ರಾಜ್ಯದ ಬಹುದೊಡ್ಡ ಚಿಂತಕರು ಎನಿಸಕೊಂಡವರು ಆಳ್ವಾಸ್ ನುಡಿಸಿರಿಗೆ ಸಾಲುಗಟ್ಟಿ ಬಂದಿದ್ದಾರೆ. abhimata-page1ಈ ಬಾರಿಯಂತೂ ಮಂಗಳೂರಿನಲ್ಲಿ ಆಳ್ವಾಸ್ ನುಡಿಸಿರಿಗೆ ಪರ್‍ಯಾಯವಾಗಿ “ಜನನುಡಿ” ಕಾರ್‍ಯಕ್ರಮ ನಡೆಸಿದ್ದು ರಾಜ್ಯದ ಪ್ರಗತಿಪರ ಮನಸ್ಸುಗಳು “ಅಭಿಮತ ಮಂಗಳೂರು” ಜೊತೆ ದನಿಗೂಡಿಸಿದ್ದರು.

ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಸಲಹೆಗಾರ ಡಾ.ಎಂ. ಮೋಹನ ಆಳ್ವ, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯ ಮುತಾಲಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ವಿಶ್ವ ನುಡಿಸಿರಿಯನ್ನು ವಿರೋಧಿಸಲು ಪ್ರಗತಿಪರರಿಗೆ ಯಾವ ಕಾರಣಗಳೂ ಬೇಕಿಲ್ಲ. ಆದರೂ ಮೋಹನ ಆಳ್ವ ನಡೆಸಿರುವ ಹಿಂದೂ ಸಮಾಜೋತ್ಸವ, ಕೋಮು ಗಲಭೆಯ ಸಂದರ್ಭದಲ್ಲಿ ಆತ ನೀಡಿರುವ ಹೇಳಿಕೆಗಳು, ಆಳ್ವಾಸ್ ನುಡಿಸಿರಿಯ ಹಿಡನ್ ಅಜೆಂಡಾಗಳನ್ನು ವರ್ತಮಾನ.ಕಾಮ್ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ), ಲಡಾಯಿ ಪ್ರಕಾಶನ, ಲಂಕೇಶ್, ಅಗ್ನಿ ಪತ್ರಿಕೆಗಳಲ್ಲಿ ವ್ಯಾಪಕ ಚರ್ಚೆ ನಡೆಸಲಾಗಿತ್ತು. ಈ ಬಾರಿಯ ಆಳ್ವಾಸ್ ನುಡಿಸಿರಿಯ ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಪ್ರೀತಿಯ ಡಾ. ಅರುಣ್ ಜೋಳದ ಕೂಡ್ಲಿಗಿ, ಡಾ.ಕೆ. ಷರೀಫಾ, ಜೆನ್ನಿ ಹೆಸರುಗಳಿದ್ದರೂ ಅವರು ಕಾರ್‍ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಮತ್ತು ಈ ಬಗೆಗಿನ ನಿಲುವನ್ನು ಅವರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಅರ್ಥವಾಗದ ಸಾಹಿತಿಗಳಿಗೆ ಅರ್ಥವಾಗಲೆಂದು ನುಡಿಸಿರಿಗೆ ಪರ್‍ಯಾಯವಾಗಿ ಮಂಗಳೂರಿನಲ್ಲಿ ಎರಡು ದಿನಗಳ “ಜನನುಡಿ” ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇಷ್ಟೆಲ್ಲಾ ಬೆಳವಣಿಗೆಯ ನಂತರವೂ ಕರ್ನಾಟಕದ ಬಂಡಾಯ ಸಾಹಿತಿ ಎಂದೇ ಖ್ಯಾತನಾಮರಾಗಿರುವ ಬರಗೂರು ರಾಮಚಂದ್ರಪ್ಪನವರು ಆಳ್ವಾಸ್ ನುಡಿಸಿರಿಯಲ್ಲಿ ಗುರುವಾರ ಡಿಸೆಂಬರ್ 19 ರಂದು ಸನ್ಮಾನ ಸ್ವೀಕರಿಸಿದ್ದಾರೆ. ಮೋಹನ ಆಳ್ವ, ಬಿ.ಎ. ವಿವೇಕ ರೈ, ಡಾ.ಡಿ. ವಿರೇಂದ್ರ ಹೆಗ್ಗಡೆಯವರು ಬರಗೂರು ರಾಮಚಂದ್ರಪ್ಪನವರನ್ನು ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಜೊತೆಗೆ ಎಸ್.ಎಲ್. ಭೈರಪ್ಪನವರನ್ನೂ ಕುಳ್ಳಿರಿಸಿಕೊಂಡು “ಜೋಡಿ ಸನ್ಮಾನ” ಮಾಡಿದ್ದಾರೆ. ಅಲ್ಲಿಗೆ ಬಂಡಾಯ “ಬಡಾಯಿ”ಯಾಯಿತು.

ಮರುದಿನ ಮಂಗಳೂರಿನ ಅಭಿಮತದ ಕಾರ್‍ಯಕರ್‍ತರು ಬರಗೂರು ರಾಮಚಂದ್ರಪ್ಪ ವಿರುದ್ದ ಮೆಸೇಜ್ ಅಭಿಯಾನ ನಡೆಸಿದರು.alva-nudisiri-baraguru-mohan-alva-veerendra-heggade-vivek-rai ಸುಮಾರು 20 ಅಧಿಕ ಯುವ ಪತ್ರಕರ್ತರು, ಚಳುವಳಿಗಾರರು, ಸಾಹಿತಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಬರಗೂರು ರಾಮಚಂದ್ರಪ್ಪಗೆ ಮೆಸೇಜ್ ಕಳುಹಿಸಲಾರಂಭಿಸಿದರು. ಬರಗೂರುಗೆ ಕಳುಹಿಸಿದ ಮೊದಲ ಮೆಸೇಜ್ ಹೀಗಿದೆ :

ಅಭಿಮತ ಸದಸ್ಯರು : “ಆರ್‌ಎಸ್‌ಎಸ್ ಸಂಘಟಕ ಮೋಹನ ಆಳ್ವ ಮತ್ತು ಧಾರ್ಮಿಕ ಸರ್ವಾಧಿಕಾರಿ, ದಲಿತ, ಮಹಿಳಾ ಶೋಷಕ, ಮಾತನಾಡುವ ದೇವರಿಂದ ಸನ್ಮಾನ ಸ್ವೀಕರಿಸಿದ ನಮ್ಮ ಪ್ರೀತಿಯ ಬರಗೂರು ಸರ್‌ಗೆ ಅಭಿನಂದನೆಗಳು.”

ಬರಗೂರು : “ಆಳ್ವಾಸ್ ನುಡಿಸಿರಿ ಸಮ್ಮೇಳನದ ಮೊದಲ ಅಧ್ಯಕ್ಷನಾಗಿದ್ದಂದಿನಿಂದ ಇಲ್ಲಿಯವರೆಗೆ ಒಬ್ಬನೇ ಒಬ್ಬ ಪ್ರಗತಿಪರ ಈ ಬಗ್ಗೆ ಆಕ್ಷೇಪ ಮಾಡಿಲ್ಲ. ಈ ಬಾರಿಯೂ ಹೋಗ್ಬೇಡಿ ಎಂದು ಯಾರೂ ಹೇಳಿಲ್ಲ. ಅದೂ ಬೇಡ. ನುಡಿಸಿರಿಯ ವಿರುದ್ದ ಯಾರೂ ನನಗೆ ಮಾಹಿತಿ ನೀಡಿಲ್ಲ. ನನಗೆ ಮನವರಿಕೆ ಮಾಡಿದ್ದಿದ್ದರೆ ಖಂಡಿತ ಹೋಗ್ತಿರಲಿಲ್ಲ. ಹಾಗಾಗಿ ನುಡಿಸಿರಿಯ ಮೊದಲ ಅಧ್ಯಕ್ಷ ಎಂಬ ಕಾರಣಕ್ಕೆ ಹೋದೆ. ಹಾಗಂತ ನನ್ನ ವಿಚಾರಗಳನ್ನು ಬಿಟ್ಟುಕೊಡುವುದಿಲ್ಲ. ಯಾವ ವೇದಿಕೆಯಲ್ಲಾದರೂ ನಾನು ಪ್ರತಿಪಾದಿಸೋದು ನಮ್ಮ ವಿಚಾರಗಳನ್ನೇ. ಮುಂದೆಯೂ ಇದೇ ಬದ್ಧತೆ ಇರುತ್ತದೆ. ಇಷ್ಟಾದರೂ ನಿಮ್ಮ ಮನಸ್ಸಿಗೆ ಬೇಸರ ಮಾಡಿದ ನನ್ನ ನಡೆಗೆ ತೀವ್ರವಾಗಿ ವಿಷಾಧಿಸುತ್ತೇನೆ.”

ಅಭಿಮತ : “ಪ್ರಗತಿಪರರು ಆಳ್ವ, ಹೆಗ್ಗಡೆ, ಪೇಜಾವರರ ಬಗ್ಗೆ ನಿಮಗೆ ಹೇಳಿಕೊಡಬೇಕಿತ್ತೇ? ಆಳ್ವ ಯಾರು, ಹೆಗ್ಗಡೆ ಯಾರು, ಪೇಜಾವರ ಯಾರು? ಅವರ ಕಾರ್‍ಯಕ್ರಮಗಳೇನು? ಹಿಡನ್ ಅಜೆಂಡಾಗಳೇನು ಎಂಬುದನ್ನು ಪ್ರಗತಿಪರರಿಗೆ ಪಾಠ ಮಾಡುವ ಅರ್ಹತೆ ಇರುವವರು ನೀವು ಎಂದು ನಾವಂದುಕೊಂಡಿದ್ದೆವು.”

ಬರಗೂರು : “ಪ್ರಗತಿಪರರ ನಡುವೆ ಗೊಂದಲಗಳು ಇದೆ. ದಯವಿಟ್ಟು ನನ್ನನ್ನು ಅರ್ಥ ಮಾಡಿಕೊಳ್ಳಿ. ನಾನು ಆತ್ಮಾವಲೋಕನದಿಂದ ತಿದ್ದಿಕೊಳ್ಳುವ ಸ್ವಭಾವದವನು. ಈಗ ನನಗೆ ಇಷ್ಟು ಸಾಕು. ಮುಂದೆ ಮಾತನಾಡೋಣ.”

ಅಭಿಮತ : “456 ಮಹಿಳೆಯರ ರಕ್ತ ಕುಡಿದ ಮಾತನಾಡುವ ದೇವರ ಜೊತೆ ವೇದಿಕೆ ಹಂಚಿಕೊಂಡಿದ್ದೇ ಅಲ್ಲದೆ ಅವರಿಂದ ಸನ್ಮಾನ ಸ್ವೀಕರಿಸಿದವರ ಜೊತೆ ಮುಂದೆ ಮಾತನಾಡಲು ಏನಿದೆ ಸಾರ್ ? ಎನಿವೇ… ಥ್ಯಾಂಕ್ಯೂ ಸರ್..”

ಬರಗೂರು :: “ಪ್ರಗತಿಪರರ ನಡುವೆ ಗೊಂದಲಗಳು ಇದೆ. ದಯವಿಟ್ಟು ನನ್ನನ್ನು ಅರ್ಥ ಮಾಡಿಕೊಳ್ಳಿ. ನಾನು ಆತ್ಮಾವಲೋಕನದಿಂದ ತಿದ್ದಿಕೊಳ್ಳುವ ಸ್ವಭಾವದವನು. ಈಗ ನನಗೆ ಇಷ್ಟು ಸಾಕು. ಮುಂದೆ ಮಾತನಾಡೋಣ.” (ಮತ್ತೆ ಅದೇ ಮೆಸೇಜು.)

ಅಭಿಮತ : “ನಿಮಗೆ ಹೊದಿಸಿದ ಶಾಲನ್ನು ಡ್ರೈ-ವಾಶ್ ಗೆ ಕೊಡಿ ಸರ್. ಅದರಲ್ಲಿ ಮಹಿಳೆಯರ ಮತ್ತು ದಲಿತರ ರಕ್ತದ ಕಲೆಗಳಿವೆ ಸರ್.”

ಕೊನೇ ಮೆಸೇಜ್‌ಗೆ ಬರಗೂರು ರಾಮಚಂದ್ರಪ್ಪ ಉತ್ತರ ನೀಡಿಲ್ಲ. ಉತ್ತರವಾಗಿ ಶುಕ್ರವಾರ ನುಡಿಸಿರಿಯಲ್ಲಿ alva-nudisiri-baraguru-bhairappaಪಾಲ್ಗೊಳ್ಳಬೇಕಿದ್ದ “ಸಮಾಜ” ಎಂಬ ವಿಚಾರಗೋಷ್ಠಿಗೆ ಗೈರು ಹಾಜರಾಗಿ ಬೆಂಗಳೂರು ಬಸ್ಸು ಹಿಡಿದರು. ಪ್ರಜಾವಾಣಿ ಜೊತೆ ಮಾತನಾಡುತ್ತಾ ರಾಮಚಂದ್ರಪ್ಪ ಹೀಗೆ ಹೇಳುತ್ತಾರೆ “ ಆಳ್ವಾಸ್ ನುಡಿಸಿರಿಯಲ್ಲಿ ಕೋಟಿಗಟ್ಟಲೆ ಸಂಪತ್ತಿನ ವೈಭವೀಕರಣವೇ ಮನಸ್ಸಿಗೆ ತೀರಾ ಕಿರಿಕಿರಿ ಉಂಟು ಮಾಡಿದೆ. ಸಂಪತ್ತಿನ ವಿಜೃಂಭಣೆಯಿಂದ ವಿವೇಕ ನಾಶವಾಗಿ ವಿಕಾರತೆಯೇ ಮುನ್ನಲೆಗೆ ಬರುತ್ತದೆ. ಆದುದರಿಂದ ನಾನು ಉಪನ್ಯಾಸ ಕಾರ್‍ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ನಾನು ನುಡಿಸಿರಿಯ ಮೊದಲನೇ ಅಧ್ಯಕ್ಷ ಎನ್ನುವ ನೆಲೆಯಲ್ಲಿ ಭಾಗವಹಿಸಿದ್ದೆ. ಆದರೆ ಇಲ್ಲಿ ಜನಪರ ವಿಚಾರಗಳಿಗೆ ಮನ್ನಣೆ ಇಲ್ಲ. ಮೊದಲ ಅಧ್ಯಕ್ಷ ಎನ್ನುವ ನೆಲೆಯಲ್ಲಿ ಮಾತನಾಡಲು ಅವಕಾಶ ನೀಡಿದ್ದರೆ ಇದನ್ನೇ ಹೇಳುತ್ತಿದೆ. ಇಷ್ಟು ವರ್ಷದ ನುಡಿಸಿರಿಯಲ್ಲಿ ವಿರೇಂದ್ರ ಹೆಗ್ಗಡೆಯಂತವರು ಸಭೆಯಲ್ಲಿ ಕುಳಿತು ಕಾರ್‍ಯಕ್ರಮ ವೀಕ್ಷಿಸುತ್ತಿದ್ದರು. ಈ ಬಾರಿ ಸೌಜನ್ಯ ಪ್ರಕರಣ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರೂ ಅವರ ಭಾಗವಹಿಸುವಿಕೆಯನ್ನು ಅತಿಯಾಗಿ ಮಾಡಲಾಗಿದೆ. ಮಾತಿಗೆ ಅವಕಾಶ ಸಿಕ್ಕಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದೆ,” ಎಂದಿದ್ದಾರೆ.

ಮೊದಲನೆಯದಾಗಿ ಬರಗೂರು ರಾಮಚಂದ್ರಪ್ಪನವರು ಕನ್ನಡದ ಸಾಕ್ಷಿಪ್ರಜ್ಞೆಯಂತಿರುವವರು. ಅವರಿಗೆ ಕನ್ನಡ ಭಾಷೆ ಓದಲು ಬರೆಯಲು ಬರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಆಳ್ವಾಸ್ ನುಡಿಸಿರಿಯ ಆಮಂತ್ರಣ ಪತ್ರಿಕೆಯಲ್ಲಿ ಡಾ.ಡಿ. ವಿರೇಂದ್ರ ಹೆಗ್ಗಡೆಯವರ ಹೆಸರು ಮಾತ್ರವಲ್ಲ ಫೋಟೋ ಕೂಡಾ ಅಚ್ಚಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಸಾಹಿತ್ಯ-ನಾಡು-ನುಡಿಗಿಂತಲೂ ವಿರೇಂದ್ರ ಹೆಗ್ಗಡೆಯನ್ನು ವೈಭವೀಕರಿಸಲಾಗಿದೆ. ಸ್ವಾಗತ ಸಮಿತಿಯ ಗೌರವ ಮಾರ್ಗದರ್ಶಕರು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಎಂದಿದೆ. ವೀರೇಂದ್ರ ಹೆಗ್ಗಡೆ ಪತ್ನಿ ಹೇಮಾವತಿ ಹೆಗ್ಗಡೆ ಹೆಸರು ಒಂದು ಉಪನ್ಯಾಸದಲ್ಲಿದೆ. ಎಲ್ಲೆಲ್ಲಿ ವೇದಿಕೆಯಲ್ಲಿ ಜಾಗ ಇದೆಯೋ ಅಲ್ಲಲ್ಲಿ ವೀರೇಂದ್ರ ಹೆಗ್ಗಡೆಯ ತಮ್ಮಂದಿರಾದ ಹರ್ಷೇಂದ್ರ ಹೆಗ್ಗಡೆ, ಸುರೇಂದ್ರ ಹೆಗ್ಗಡೆಯ ಹೆಸರನ್ನು ತೂರಿಸಿ ತೂರಿಸಿ ಹಾಕಲಾಗಿದೆ. ಹೆಗ್ಗಡೆಯ ಇಡೀ ಫ್ಯಾಮಿಲಿ ಈ ಕಾರ್‍ಯಕ್ರಮದಲ್ಲಿ ಇನ್ವಾಲ್ವ್ ಆಗಿರುವುದು ಎಂತಹ ಮೂರ್ಖನಿಗೂ ಅರ್ಥ ಆಗುವಂತದ್ದು. “ನನಗೆ ಗೊತ್ತಿರಲಿಲ್ಲ. ಹೇಳಬೇಕಿತ್ತು” ಎಂದೆಲ್ಲಾ ಹೇಳುವುದನ್ನು ನಂಬಲಾಗುವುದಿಲ್ಲ. ಏನೇ ಆಗಲಿ. ಫಲ ಪುಷ್ಪ ತಾಂಬೂಲ, ಶಾಲು, ನಗದಿನ ಜೊತೆ ಸನ್ಮಾನ ಸ್ವೀಕರಿಸಿ ಉಪನ್ಯಾಸ ನೀಡದ ಬರಗೂರು ಬಂಡಾಯಕ್ಕೆ ಅಭಿನಂದನೆಗಳು.

ನಾಳೆ ಡಿಸೆಂಬರ್ 22 ರಂದು ಫಕೀರ್ ಮಹಮ್ಮದ್ ಕಟ್ಪಾಡಿ, ಟಿ.ಎನ್. ಸೀತಾರಾಂ ಆಳ್ವಾಸ್ ವಿಶ್ವನುಡಿಸಿರಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಫಕೀರ್ ಮಹಮ್ಮದ್ ಕಟ್ಪಾಡಿ, ಟಿ.ಎನ್. ಸೀತಾರಾಂ ಸೇರಿದಂತೆ 16 ಮಂದಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಸುರತ್ಕಲ್‌ನ ಕೋಮುಗಲಭೆಗೆ ಕಾರಣನಾಗಿದ್ದ ರಾಜಕಾರಣಿ ಕುಂಬ್ಳೆ ಸುಂದರರಾವ್‌ಗೂ, ಆರ್‌ಎಸ್‌ಎಸ್‌‍ನ ಮುಖ್ಯ ಫೈನಾನ್ಸಿಯರ್ ದಯಾನಂದ ಪೈಗೂ ಇವರ ಜೊತೆ ಪ್ರಶಸ್ತಿ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. ಫಕೀರ್ ಮಹಮ್ಮದ್ ಕಟ್ಪಾಡಿಯವರಂತೂ ಕೋಮುವಾದದ ಬಗ್ಗೆ ದಿನಗಟ್ಟಲೆ ಮಾತನಾಡುವವರು, ಬರೆಯುವವರು. ಕೋಮುಸೌಹಾರ್ಧ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಕಟ್ಪಾಡಿಯವರು ಆಳ್ವಾಸ್ ನುಡಿಸಿರಿಗೆ ತೆರಳಬಾರದು ಎಂದು ಕೋಮುಸೌಹಾರ್ದ ವೇದಿಕೆಯ ರಾಜ್ಯ ಕಾರ್‍ಯದರ್ಶಿ ಕೆ.ಎಲ್. ಅಶೋಕ್ ಮನವಿ ಮಾಡಿದ್ದರೂ ಹೋಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಾಳೆ ಪ್ರಶಸ್ತಿ ಸ್ವೀಕರಿಸಿದರೆ “ಅಭಿಮತ ಮಂಗಳೂರು”ನ ನೂರಾರು ಯುವ ಪತ್ರಕರ್ತ, ಚಳುವಳಿಗಾರರು, ಸಾಹಿತಿ ಸದಸ್ಯರು ಫಕೀರ್ ಮಹಮ್ಮದ್ ಕಟ್ಪಾಡಿ ವಿರುದ್ಧ ನಿರ್ಣಯ ಕೈಗೊಳ್ಳುತ್ತಾರೆ….