ಲೈಂಗಿಕ ಜೀತ- ಅಪರಾಧಿ ಯಾರು?


– ರೂಪ ಹಾಸನ


 

“ವೇಶ್ಯಾವಾಟಿಕೆ ಇನ್ನು ಮುಂದೆ ಕಾನೂನು ಪ್ರಕಾರ ತಪ್ಪಿಲ್ಲ ಅಂತ ಮಾಡಾರಂತೆ, ಅದಕ್ಕೆ ಇನ್ನಿಲ್ಲದ ಮರ್ವಾದೆ ತಂದು ಕೊಟ್ಟಾರಂತೆ. ಹಂಗಾದ್ರೆ ಆ ದೊಡ್ಡವರ ಮನೆ ಹೆಣ್ಣುಮಕ್ಕಳನ್ನೂ ನಮ್ಮ ಈ ಕೆಲಸಕ್ಕೆ ಕಳಸ್ತಾರಂತೇನ? ನಾವೇನೋ ಇವತ್ತಲ್ಲ ನಾಳೆ ನಮ್ಮ ಈ ಕಷ್ಟ ತೀರಿ ಇದರಿಂದ ಬಿಡುಗಡೆ ಹೊಂದ್ಬಹುದು ಅಂದ್ಕಂಡಿದ್ವಿ. ಈಗ ನೋಡಿದ್ರೆ ನಾವೆಲ್ಲಾ ಇಲ್ಲೆ ಶಾಶ್ವತವಾಗಿರೋ ಹಂಗೆ ಮಾಡ್ಬಿಡ್ತಾರಾ?” ಎಂದು ‘ಅವಳು’ ಕೇಳುತ್ತಿದ್ದಳು. ಕಡು ಬಡತನದಿಂದ 15 ವರ್ಷವಾಗಿದ್ದಾಗಲೇ ಸ್ವಂತ ತಂದೆಯೇ ವೇಶ್ಯಾವಾಟಿಕೆಗೆ ನೂಕಿದ್ದ. ಅದರಿಂದ ಪಾರಾಗಿ ಹೊರಬರಲು ವಿದ್ಯಾಭ್ಯಾಸವೂ ಇಲ್ಲದೇ, ಯಾವ ವೃತ್ತಿ ಕೌಶಲವೂ ಇಲ್ಲದೇ, ಸುತ್ತಮುತ್ತ ತನಗೆ ಸಾಧ್ಯವಾಗುವಂತಾ ಕೆಲಸವನ್ನೂ ಕಾಣದೇ ಅನಿವಾರ್ಯವಾಗಿ ಲೈಂಗಿಕ ಜೀತದಲ್ಲೇ ಮುಂದುವರೆಯುವಂತೆ ಮಾಡಿರುವ ಅವಳ ಇಂತಹ ಸ್ಥಿತಿಗೆ ಯಾರನ್ನು ಶಿಕ್ಷಿಸೋಣ? 67ವರ್ಷ ಕಳೆದಿರುವ ಸ್ವತಂತ್ರ ಭಾರತದಲ್ಲಿ ಬಡತನ, ನಿರಕ್ಷರತೆ, ನಿರುದ್ಯೋಗದಂತಹ ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ಮೂಲಮಟ್ಟದಿಂದ ನಿರ್ಮೂಲನೆಗೊಳಿಸಲು ಅಸಮರ್ಥವಾದ ಸರ್ಕಾರಗಳನ್ನೇ? ಹೆಣ್ಣನ್ನು ಇಂತಹ ಲೈಂಗಿಕ ಜೀತಕ್ಕಿಳಿಸಿ ಅದರ ಯಥಾಸ್ಥಿತಿ ಮುಂದುವರಿಕೆಗೆ ಸಜ್ಜುಗೊಂಡಿರುವ ವ್ಯವಸ್ಥೆಯನ್ನೇ?

ಇದು ಮತ್ತೊಬ್ಬಳ ಕಥೆ. ಅವಳ 14 ವರ್ಷದ ಮಗಳು ನಾಪತ್ತೆಯಾಗಿದ್ದಳು. prostitution-indiaಪೊಲೀಸರಿಗೆ ದೂರನ್ನು ಕೊಟ್ಟಿದ್ದರೂ ಪತ್ತೆಯಾಗಿರಲಿಲ್ಲ. ಅವಳು “ನಾನಂತೂ ಆಕಸ್ಮಿಕವಾಗಿ ವೇಶ್ಯಾವಾಟಿಕೆಯ ಜಾಲಕ್ಕೆ ಬಿದ್ದು ನರಳುತ್ತಿದ್ದೇನೆ. ನನ್ನ ಮಗಳನ್ನ ಮಾತ್ರ ಈ ಪಾಪ ಕೂಪಕ್ಕೆ ಎಳೀಬೇಡಿ ಎಂದು ಕೈ ಮುಗಿದು ಬೇಡಿಕೊಂಡೆ. ಆದರೂ ಆ ಪಾಪಿಗಳು…..” ಎಂದು ಗೋಳಾಡುತ್ತಿದ್ದಳು. ತನ್ನ ಮಗಳು ತನ್ನಂತಾಗಬಾರದೆಂದು ಅವಳನ್ನು ಹದ್ದಿನಂತೆ ಕಾಯುತ್ತಾ ವಿದ್ಯಾಭ್ಯಾಸ ಕೊಡಿಸುತ್ತಿದ್ದರೂ ಈ ಅಮಾನುಷ ಜಾಲ ಅವಳನ್ನು ಸೆಳೆದುಕೊಂಡೇಬಿಟ್ಟಿತು. ಕೆಲ ವರ್ಷಗಳ ನಂತರ ಯಾವುದೋ ಸುಳಿವು ಸಿಕ್ಕು ದೊಡ್ಡ ನಗರದ ವೇಶ್ಯಾಗೃಹವೊಂದರಲ್ಲಿ ಅವಳು ಪತ್ತೆಯಾಗಿದ್ದಳು. ಆದರೆ ಅಷ್ಟರಲ್ಲಾಗಲೇ ತೀವ್ರ ಏಡ್ಸ್ ಪೀಡಿತಳಾಗಿದ್ದರಿಂದ ತಾಯಿಯೊಂದಿಗೆ ವಾಪಸ್ ತನ್ನ ಮನೆಗೆ ಬರಲು ಒಪ್ಪಿರಲಿಲ್ಲ. ವಿಲವಿಲ ಒದ್ದಾಡುವ ಒಂಟಿ ಬಾಳು ಈ ತಾಯಿಗೆ. ಇದು ಈ ಜಾಲಕ್ಕೆ ಬಿದ್ದಿದ್ದ ಇಂಥದೇ ಮತ್ತೊಬ್ಬ ತಾಯಿಯ ಕಥೆ. ತನ್ನಂಥ ಜೀವಿಗಳ, ಅವರ ಮಕ್ಕಳ ಒಳಿತಿಗಾಗಿ ಕೈಲಾದಮಟ್ಟಿಗೆ ಆಸರೆ ನೀಡುತ್ತಿದ್ದಾಳೆ “ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಅದು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ! ಮನಸ್ಸನ್ನ ಕೊಂದುಕೊಂಡು, ದುಡ್ಡುಕೊಟ್ಟವರೊಂದಿಗೆ, ಅವರ ಮರ್ಜಿಗೆ ತಕ್ಕಂತೆ ದಿನವೂ ಸುಖ ನೀಡಬೇಕೆಂದರೆ ಸಂತೋಷದ ಕೆಲಸನಾ? ನಾವೇನು ಯಂತ್ರಗಳ? ಮನುಷ್ಯರಲ್ಲವಾ? ಹೊಟ್ಟೆ ತುಂಬುವಷ್ಟು ದುಡಿದು ಹಣ ಸಂಪಾದಿಸಲು ಬೇರೆ ವ್ಯವಸ್ಥೆ ಮಾಡಿಕೊಟ್ಟರೆ ಬಡತನದ ಕಾರಣಕ್ಕೆ ಇಲ್ಲಿಗೆ ಬಂದಿರುವ ಅರ್ಧಕ್ಕಿಂತ ಹೆಚ್ಚಿನವರು ವೇಶ್ಯಾವಾಟಿಕೆ ಬಿಡುತ್ತಾರೆ” ಎನ್ನುತ್ತಾಳೆ.

ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಬೇಕೆ ಬೇಡವೇ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.Prostitution ಆದರೆ ನಮ್ಮ ದೇಶದಲ್ಲಿ ಒಬ್ಬ ಮಹಿಳೆ ಗೌಪ್ಯವಾಗಿ ತನ್ನ ದೇಹದ ಮೂಲಕ ಕಾಮಸುಖವನ್ನು ಹಣಕ್ಕಾಗಿ ಮಾರಾಟ ಮಾಡುವುದು ಅಪರಾಧ ಅಲ್ಲವೇ ಅಲ್ಲ! ಆದರೆ ಅದಕ್ಕೆ ಸಂಬಂಧಿಸಿದ ವಾಣಿಜ್ಯೀಕೃತ ಚಟುವಟಿಕೆಗಳಾದ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಪ್ರಚಾರ ಮಾಡುವುದು, ಮಾರಾಟಕ್ಕೆ ಅಡ್ಡದಾರಿಗಳನ್ನು ಹಿಡಿಯುವುದು, ವೇಶ್ಯಾಗೃಹಗಳನ್ನು ಸ್ಥಾಪಿಸುವುದು ಮತ್ತು ನಡೆಸುವುದು, ಹಾಗೂ ಇದಕ್ಕಾಗಿ ಮಧ್ಯಸ್ಥಿಕೆ ವ್ಯವಹಾರ ಮಾಡುವುದು, ಅಪ್ರಾಪ್ತ ಮಕ್ಕಳನ್ನು ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳುವುದು, ಯಾರನ್ನಾದರೂ ಈ ವೃತ್ತಿಗೆ ಬಲವಂತದಿಂದ ತಳ್ಳುವುದು ಹಾಗೂ ಸಲಿಂಗಕಾಮದಲ್ಲಿ ತೊಡಗುವುದು ಮಾತ್ರ ಅಪರಾಧವಾಗಿದೆ. ಈ ಅಪರಾಧಗಳು ಈಗಾಗಲೇ ಎಗ್ಗಿಲ್ಲದೇ ಎಲ್ಲ ಊರುಗಳಲ್ಲಿಯೂ ನಡೆಯುತ್ತಿರುವುದು ಒಂದು ರೀತಿ ಎಲ್ಲರಿಗೂ ಗೊತ್ತಿರುವ ಗುಟ್ಟು! ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಈ ಅಪರಾಧಕ್ಕಾಗಿ ಚಿಕ್ಕಪುಟ್ಟವರು ಸಿಕ್ಕುಬಿದ್ದು ಬಂಧನಕ್ಕೊಳಗಾಗುತ್ತಾರೆಯೇ ವಿನಃ ಹೆಚ್ಚಿನ ಬಾರಿ ಕಾನೂನು ಅನುಷ್ಟಾನಕರಿಂದ ಮಾಫಿಗಳು, ನಿರ್ಲಕ್ಷ್ಯಗಳು, ಒಳ ಒಪ್ಪಂದಗಳು, ರಾಜೀಸೂತ್ರಗಳು, ಮಧ್ಯಸ್ಥಿಕೆ, ಕಪ್ಪಕಾಣಿಕೆ ಅಥವಾ ದೇಹಸುಖ ಸಂದಾಯಗಳಿಂದಲೇ ಬಹುತೇಕ ಈ ಅಪರಾಧಗಳು ಮುಚ್ಚಿಹೋಗುತ್ತವೆ! ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ಆದರೆ ಅದನ್ನು ನಿಯಂತ್ರಿಸದಿರುವುದರಿಂದ, ಹಸಿವಿಗೆ ಒಂದು ವೃತ್ತಿ, ಒಂದು ಕೆಲಸ, ಇರಲು ಒಂದು ನೆರಳು ಇಲ್ಲದ ಈ ಸಮಾಜದಲ್ಲಿ ಹೆಣ್ಣು ಅಸಹಾಯಕ ಸ್ಥಿತಿಗೆ ತಳ್ಳಲ್ಪಟ್ಟು ಈ ರೋಗಗ್ರಸ್ತ ಸಮಾಜ ನಿರ್ಮಾಣಗೊಳ್ಳುತ್ತಿದೆ ಎಂದು ನಾವು ಮೊದಲು ಅರಿತುಕೊಳ್ಳ ಬೇಕಾಗಿದೆ. ಇಲ್ಲಿ ನಿಂತು ನಾವು ಸಮಸ್ಯೆಗೆ ಮುಖಾಮುಖಿಯಾಗಬೇಕಾಗಿದೆ. ಜತೆಗೆ ನಮ್ಮ ನ್ಯಾಯಾಸ್ಥಾನಗಳು ನೀಡಿರುವ ಯಾವುದೇ ತೀರ್ಪು ಇದನ್ನು ‘ವೃತ್ತಿ’ ಎಂದು ಪರಿಗಣಿಸಿಲ್ಲ. ಬದಲಿಗೆ ಅದನ್ನು ‘ಲೈಂಗಿಕ ಜೀತ’ವೆಂದು ಪ್ರತಿಪಾದಿಸಿವೆ! ವೇಶ್ಯಾವಾಟಿಕೆಯಲ್ಲಿ ಅನಿವಾರ್ಯವಾಗಿ ತೊಡಗುವ ಮಹಿಳೆ-ಮಕ್ಕಳ ಪರವಾಗಿಯೇ ಶಾಸನ ಮತ್ತು ಕಾನೂನುಗಳು ರೂಪಿತವಾಗಿವೆ. ಇದನ್ನು ವಾಣಿಜ್ಯೀಕರಣಗೊಳಿಸುವ ಚಟುವಟಿಕೆಯಲ್ಲಿ ತೊಡಗಿರುವ ಪುರುಷ-ಮಹಿಳೆ ಇಬ್ಬರನ್ನೂ ಅಪರಾಧಿಗಳೆಂದು ಪರಿಗಣಿಸಿದೆ. ಹಾಗಿದ್ದರೆ ದಾರಿ ತಪ್ಪಿರುವುದೆಲ್ಲಿ? ಅದನ್ನು ಪರಿಣಾಮಕಾರಿಯಾಗಿ, ಸರಿಯಾಗಿ ಮತ್ತು ಕಠಿಣವಾಗಿ ಅನುಷ್ಠಾನಗೊಳಿಸುವಲ್ಲಿ!

ಲೈಂಗಿಕ ಜೀತಗಾರರಿಗೆ ತಲೆಹಿಡುಕರಿಂದ, ರೌಡಿಗಳಿಂದ, ಪೊಲೀಸರಿಂದ ದೌರ್ಜನ್ಯವಾಗುತ್ತಿದೆ ಎಂಬುದು ಒಂದು ವಾದ. ತಲೆಹಿಡುಕರನ್ನು, ರೌಡಿಗಳನ್ನು ಪೊಲೀಸರು ನಿಯಂತ್ರಿಸಬೇಕು. ಕೆಲ ಪೊಲೀಸರಿಂದಾಗುತ್ತಿರುವ ದೌರ್ಜನ್ಯವನ್ನು ಸರಿಪಡಿಸಲು ಪೊಲೀಸ್ ಇಲಾಖೆಯ ತಳ ಹಂತಕ್ಕೆ ಸರಿಯಾದ ಕಾನೂನಿನ ಅರಿವು ನೀಡಬೇಕು. ಮತ್ತು ಅವರೇ ಭ್ರಷ್ಟರಾಗಿ, ಅಧಿಕಾರವನ್ನು ದುರುಪಯೋಗಿಸಿ, ಕಳ್ಳನುಸುಳುಗಳನ್ನು ಮನ ಬಂದಂತೆ ಉಪಯೋಗಿಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಕ್ರಮವನ್ನು ಇಲಾಖೆಯ ಮೇಲಾಧಿಕಾರಿಗಳು ತೆಗೆದುಕೊಳ್ಳಬೇಕು. ಇದಲ್ಲವೇ ಆಗಬೇಕಾದದ್ದು? ಅದರ ಬದಲಿಗೆ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಮೂಲರೋಗವನ್ನು ಹಾಗೇ ಬಿಟ್ಟು ಮೇಲ್ ಜ್ವರಕ್ಕೆ ಚಿಕಿತ್ಸೆ ನೀಡಿದಂತಾಗುತ್ತದೆ!

ಈಗ ವ್ಯಾಪಕವಾಗಿ ಹಬ್ಬುತ್ತಿರುವ ಹೆಚ್ಐವಿ, ಏಡ್ಸ್ ನಂತಹ ಮಾರಕ ರೋಗಗಳು KSAPSವಾಣಿಜ್ಯೀಕೃತ ವೇಶ್ಯಾವಾಟಿಕೆಯ, ಅನೈಸರ್ಗಿಕ ಲೈಂಗಿಕತೆಯ ಬಹು ದೊಡ್ಡ ಬಳುವಳಿ. ಇದನ್ನು ಮೂಲದಲ್ಲಿ ಚಿವುಟಿ ಹಾಕದೆ ಈಗ ಸರ್ಕಾರವೇ ತನ್ನ ಅಂಗ ಸಂಸ್ಥೆಯಾದ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯ ಮೂಲಕ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಓಎನ್ ಜಿ ಓಗಳ ಸಹಕಾರದೊಂದಿಗೆ ವಿಸ್ತ್ರತಜಾಲವನ್ನು ಹೊಂದಿ, ಸಮುದಾಯ ಆಧಾರಿತ ಸಂಘಟನೆಗಳ ಮೂಲಕ, ಸಹಭಾಗಿ ಲೈಂಗಿಕ ಜೀತಗಾರರ ಮೂಲಕ ವೇಶ್ಯಾವಾಟಿಕೆಯಲ್ಲಿ ತೊಡಗಿರುವವರನ್ನು ಹುಡುಕಿ ನೋಂದಣಿ ಮಾಡಿಸಿ, ಅವರಿಗೆ ಕಾಂಡೋಮ್ ವಿತರಣೆ, ರಕ್ತ ಮತ್ತು ನಿಯಮಿತ ಆರೋಗ್ಯ ತಪಾಸಣೆ, ಆಪ್ತಸಮಾಲೋಚನೆ, ಇದಕ್ಕೆ ಸಂಬಂಧಿಸಿದ ಏಡ್ಸ್, ಹೆಚ್ಐವಿ, ಇನ್ನಿತರ ಗುಪ್ತ ರೋಗಗಳ ನಿರ್ವಹಣೆಯ ತರಬೇತಿ ಮತ್ತು ಚಿಕಿತ್ಸೆ ನೀಡುವ ಮೂಲಕ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತಾ ‘ಸುರಕ್ಷಿತ ಲೈಂಗಿಕತೆಗೆ’ ಮಾತ್ರ ಸಹಕಾರಿಯಾಗಿವೆ. ಈ ಎಲ್ಲಾ ವ್ಯವಸ್ಥೆಗಾಗಿಯೇ ಬಜೆಟ್ ನಲ್ಲಿ ಲಕ್ಷಾಂತರ ರೂಪಾಯಿಗಳ ಹಣವನ್ನೂ ಸರ್ಕಾರಗಳು ಪ್ರತ್ಯೇಕವಾಗಿ ತೆಗೆದಿರಿಸುತ್ತಿವೆ. ರೋಗಗಳ ನಿಯಂತ್ರಣದ ಹೆಸರಿನಲ್ಲಿ ಸದ್ದಿಲ್ಲದೇ ಬೇಡಿಕೆ ಮತ್ತು ಪೂರೈಕೆಗಳನ್ನೂ ನಿರ್ವಹಿಸಲಾಗುತ್ತಿದೆ! ಹೀಗೆಂದೇ ವೇಶ್ಯಾವಾಟಿಕೆಗೆ ಬೀಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ರೋಗ ನಿಯಂತ್ರಣದ ಹೆಸರಿನ ಜಾಲವೂ ವಿಸ್ತ್ರತವಾಗುತ್ತಿದೆ!

ಕರ್ನಾಟಕದಲ್ಲಿ ಸದ್ಯ 2.50ಲಕ್ಷಕ್ಕೂ ಅಧಿಕ ಹೆಚ್ಐವಿ ಪೀಡಿತರಿದ್ದಾರೆ. 1998-2013ರವರೆಗೆ 29000 ರೋಗಿಗಳೂ ಮೃತಪಟ್ಟಿದ್ದಾರೆ! ಸೋಂಕಿನ ವ್ಯಾಪಕತೆ, ಪೀಡಿತರು ಮತ್ತು ಜನಸಂಖ್ಯೆಯ ದೃಷ್ಟಿಯಿಂದ ದೇಶದಲ್ಲೇ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ! ಕರ್ನಾಟಕದಲ್ಲಿ ಇದೇ ನವೆಂಬರ್ 2012ರವರೆಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ತೀವ್ರ ಅಪಾಯದ ಗುಂಪಿನಲ್ಲಿ ನೋಂದಣಿಯಾದ ಲೈಂಗಿಕ ಜೀತಗಾರ್ತಿಯರು 79169. ಸಲಿಂಗಕಾಮಿ ಪುರುಷ ಲೈಂಗಿಕ ಜೀತಗಾರರ ಸಂಖ್ಯೆ 25244. ಲೈಂಗಿಕ ಜೀತಗಾರ್ತಿಯರಲ್ಲಿ ಹೆಚ್ಚಿನವರು ತಳಸಮುದಾಯದವರು ಮತ್ತು ಹಿಂದುಳಿದ ಜಾತಿ-ಮತ, ವರ್ಗದವರೆಂಬುದು ಅಧ್ಯಯನದಿಂದ ತಿಳಿಯುತ್ತದೆ. ಅದಕ್ಕೆ ಉದಾಹರಣೆಯಾಗಿ ಒಂದು ಜಿಲ್ಲೆಯ ಅಂಕಿಅಂಶವನ್ನು ನೋಡುವುದಾದರೆ, 2791 ಲೈಂಗಿಕ ಜೀತಗಾರ್ತಿಯರಲ್ಲಿ 599-ಪರಿಶಿಷ್ಟ ಜಾತಿ, 698-ಪರಿಶಿಷ್ಟ ವರ್ಗ, 799-ಹಿಂದುಳಿದ ಜಾತಿ, 696- ಇತರರು [ಇತರರಲ್ಲಿ ಅಲ್ಪಸಂಖ್ಯಾತ ಕೋಮಿನವರೇ ಅಧಿಕ]. ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಎಲ್ಲಾ ಜಿಲ್ಲೆಗಳಲ್ಲೂ ಇರಬಹುದು. ಆರ್ಥಿಕ, ಸಾಮಾಜಿಕವಾಗಿ ಅಂಚಿಗೆ ಒತ್ತರಿಸಲ್ಪಟ್ಟಿರುವ ಹೆಣ್ಣುಮಕ್ಕಳು ಈ ಪ್ರಮಾಣದಲ್ಲಿ ಲೈಂಗಿಕ ಜೀತಕ್ಕೆ ಬಿದ್ದಿರುವುದಕ್ಕೆ ಕಾರಣ ನಮ್ಮ ಸರ್ಕಾರಗಳು ಈ ಹೆಣ್ಣುಮಕ್ಕಳಿಗೆ ಆರ್ಥಿಕ ಭದ್ರತೆಯಿರುವ ಸೂಕ್ತ ಉದ್ಯೋಗವನ್ನು ಇದುವರೆಗೆ ಕೊಟ್ಟೇ ಇಲ್ಲದಿರುವುದು. ಬದಲಿಗೆ ಲೈಂಗಿಕ ಜೀತವನ್ನೇ ಶಾಶ್ವತ ಉದ್ಯೋಗವಾಗಿ ಅವರಿಗೆ ದಯಪಾಲಿಸುತ್ತಿದೆ! ಅಪರಾಧ ಯಾರದ್ದು? ಸರ್ಕಾರದ ಬಳಿ ಇಷ್ಟೆಲ್ಲಾ ಅಪರಾಧೀಕರಣಗಳ ದಾಖಲೆಗಳಿದ್ದಾಗಲೂ ನಿಯಂತ್ರಣವೇಕೆ ಸಾಧ್ಯವಾಗುತ್ತಿಲ್ಲ?

ನೋಂದಣಿಯಾಗುವ ಹೆಚ್ಚಿನವರು ಸಹಜವಾಗಿಯೇ ‘ಸುರಕ್ಷಿತ ಲೈಂಗಿಕತೆಗೆ’ ಅನುಕೂಲ ಮತ್ತು ಅರಿವು ಇಲ್ಲದ, ಬಡತನದ ಕಾರಣಕ್ಕಾಗಿಯೇ ಈ ದಂಧೆಯಲ್ಲಿ ಮುಳುಗಿರುವವರು. ನಮ್ಮ ಕಾಳಜಿ ಇರಬೇಕಾದ್ದೂ ಬಡತನ, ಅನಕ್ಷರತೆ, ನಿರುದ್ಯೋಗ, ಪ್ರೀತಿ-ಕೆಲಸದ ಆಕರ್ಷಣೆಯಿಂದ ಮೋಸಕ್ಕೆ ಒಳಗಾಗಿ, ಇನ್ನಿತರೇ ದಾರುಣ ಕೌಟುಂಬಿಕ ಸಾಮಾಜಿಕ ಕಾರಣಕ್ಕೆ ಅಂಚಿಗೆ ಒತ್ತರಿಸಲ್ಪಟ್ಟು ವೇಶ್ಯಾವಾಟಿಕೆಯೆಂಬ ಜಾಲದೊಳಗೆ ಬಿದ್ದಿರುವ, ಬೀಳುತ್ತಿರುವ ಮಕ್ಕಳು ಮತ್ತು ಮಹಿಳೆಯರ ಕುರಿತಾದದ್ದು ಮಾತ್ರವೇ ಆಗಿದ್ದಾಗ ಈ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿ ಆರ್ಥಿಕ-ಸಾಮಾಜಿಕ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅದು ಬಿಟ್ಟು ವಾಣಿಜ್ಯೀಕೃತ ಲೈಂಗಿಕ ಚಟುವಟಿಕೆಗೆ ಸರ್ಕಾರದಿಂದ ಕಾನೂನಾತ್ಮಕ ಪರವಾನಗಿ ನೀಡಿದರೆ ಇವರೆಲ್ಲಾ ಶಾಶ್ವತವಾಗಿ ಈ ಲೈಂಗಿಕಜೀತದ ನರಕಕ್ಕೆ ಎಸೆಯಲ್ಪಡುತ್ತಾರೆ!

ಯಾವ ನೋಂದಣಿ ಪ್ರಕ್ರಿಯೆಯೊಳಗೂ ‘ದಾಖಲಾಗದೇ’ ಹೊರಗುಳಿದವರ ಸಂಖ್ಯೆ sex-sellsಇದರ ಎರಡರಷ್ಟೋ ಮೂರರಷ್ಟೋ! ಜತೆಗೆ, ಕಾಲ್ ಗರ್ಲ್ಗಳು, ಹೈಟೆಕ್ ವೇಶ್ಯಾವಾಟಿಕೆ, ವ್ಯಾಪಾರಿಕರಣದ ಲೇಬಲ್ ಇಲ್ಲದ ‘ಸಭ್ಯ-ನಾಗರಿಕ’ ವ್ಯಭಿಚಾರವೂ ಸೇರುತ್ತದೆ. ಶೋಕಿಗಾಗಿ, ಮೋಜಿಗಾಗಿ, ವೈಭವೋಪೇತ ಜೀವನದ ಆಕರ್ಷಣೆಗಾಗಿ, ಸುಲಭದ ಹಣ ಗಳಿಕೆಗಾಗಿ, ವೈಯಕ್ತಿಕ ಸಂತೋಷಕ್ಕಾಗಿ ಇವರು ತಾವಾಗಿಯೇ ಇದನ್ನು ಆಯ್ದುಕೊಳ್ಳುತ್ತಿದ್ದಾರೆ. ಸಭ್ಯ ಸಂಬಂಧಗಳ ಸೋಗಿನಲ್ಲಿಯೇ ವೇಶ್ಯಾಗೃಹಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿದ್ದು, ವೇಶ್ಯಾವಾಟಿಕೆ ವ್ಯಾಪಕವಾಗಿ ಹಬ್ಬುತ್ತಿದೆ. ಜಾಗತೀಕರಣವೆಂಬ ಮಾರುಕಟ್ಟೆ ಕೇಂದ್ರಿತ ಅಭಿವೃದ್ಧಿ ಹೆಣ್ಣಿನ ದೇಹವನ್ನು ಮಾಧ್ಯಮದ ಮೂಲಕ ಸರಕಾಗಿ ವಿಜೃಂಭಿಸುವ ಜೊತೆಗೆ ಲೈಂಗಿಕತೆಯನ್ನು ವಿಕೃತವಾಗಿ ಪ್ರಚೋದಿಸಲಾರಂಭಿಸಿದ ನಂತರ ಈ ಜಾಲಕ್ಕೆ ತಳ್ಳಲ್ಪಡುವವರ ಮತ್ತು ತಾವಾಗೆಯೇ ವೇಶ್ಯಾವಾಟಿಕೆಯನ್ನು ಆಯ್ದುಕೊಳ್ಳುವವರ ಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿದೆ. ವಾಣಿಜ್ಯೀಕೃತ ವೇಶ್ಯಾವಾಟಿಕೆ ಮತ್ತು ಕಾಮಪ್ರಚೋದಕಗಳ ದೊಡ್ಡ ಮಾಫಿಯಾವೇ ಯಾರ ಅಂಕೆಯೂ ಇಲ್ಲದೇ ಬೆಳೆದು ನಿಂತಿರುವಾಗ ಕಡಿವಾಣ ಹಾಕಬೇಕಾದ್ದು ಯಾರಿಗೆ?

2010ರ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವರದಿಯಂತೆ ಆವರೆಗೆ 30ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದರು. ಈಗದರ ಸಂಖ್ಯೆ ದುಪ್ಪಟ್ಟಾಗಿರುವ ಸಾಧ್ಯತೆಗಳಿವೆ! ಆದರೆ ವಿಶ್ವಸಂಸ್ಥೆಯ ‘ಮಾನವಹಕ್ಕುಗಳ ವಾಚ್’ನ ವರದಿಯಂತೆ ಇದುವರೆಗೆ ಭಾರತದ ಸುಮಾರು 150ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ದೇಶ-ವಿದೇಶಗಳಲ್ಲಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ! ಇದರಲ್ಲಿ 40%ಗಿಂತ ಹೆಚ್ಚಿನವರು ಅಪ್ರಾಪ್ತ ಹೆಣ್ಣುಮಕ್ಕಳೇ! ಊರಿನ ಗಲ್ಲಿಗಳಲ್ಲಿ ಬಿಕರಿಯಾಗುತ್ತಿರುವ ನಮ್ಮ ಮಕ್ಕಳನ್ನು ರಕ್ಷಿಸುವವರಾರು? ಆ ಅಸಹಾಯಕ ಮಕ್ಕಳ ಸಂಕಟದ ಮೊರೆ ಏಕೆ ಯಾರ ಕಿವಿಗೂ ಬೀಳುತ್ತಿಲ್ಲ? ಮಾನವಹಕ್ಕುಗಳ ಬಗೆಗೆ ಗಂಟಲು ಹರಿಯುವಂತೆ ಬೊಬ್ಬೆ ಹೊಡೆಯಲಾಗುತ್ತಿದೆ. ಹೆಣ್ಣು ಈ ಹಕ್ಕುಗಳ ವ್ಯಾಪ್ತಿಯಲ್ಲಿ ಬರುವುದೇ ಇಲ್ಲವೇ?- ನಾವು ಸಂಕಟದಿಂದ ಕೇಳಬೇಕಾಗಿದೆ.

ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದೆಂದರೆ ವೇಶ್ಯಾಗೃಹಗಳು, ತಲೆಹಿಡುಕರು ಮತ್ತು ಮಧ್ಯವರ್ತಿಗಳಿಗೆ ಸರ್ಕಾರದಿಂದ ಮುಕ್ತ ಲೈಸೆನ್ಸ್ ಸಿಕ್ಕು ಈಗ ಗೋಪ್ಯವಾಗಿ ನಡೆಯುತ್ತಿರುವ ಚಟುವಟಿಕೆಗಳೆಲ್ಲಾ ಬಹಿರಂಗವಾಗಿಯೇ ನಮ್ಮ ಸುತ್ತಮುತ್ತಲೇ, ರಾಜಾರೋಷವಾಗಿಯೇ ನಡೆಯುವುದರ ಜೊತೆಗೆ ವಾಣೀಜ್ಯೀಕೃತ ಲೈಂಗಿಕ ಚಟುವಟಿಕೆಗೆ ಕೆಂಪು ಹಾಸನ್ನು ಹಾಸಿ ಈ ಕೂಪದೊಳಗೆ ಮೋಸದಿಂದ ಮತ್ತು ಅನೈತಿಕತೆಯಿಂದ ಮಹಿಳೆ ಮತ್ತು ಮಕ್ಕಳನ್ನು ಬಲವಂತದಿಂದ ತಳ್ಳುವ, ಮತ್ತು ಹೆಣ್ಣುಮಕ್ಕಳ ಅಕ್ರಮ ಸಾಗಾಟದ ಸಾಧ್ಯತೆಗಳು ವಿಪರೀತ ಹೆಚ್ಚಾಗುತ್ತವೆ. ಏಡ್ಸ್ ನಂತಹ ಮಾರಕ ರೋಗ ಹದ್ದು ಮೀರಿ ವ್ಯಾಪಿಸುವ ಸಾಧ್ಯತೆಗಳೂ ಹೆಚ್ಚಬಹುದು. ಯುವಸಮೂಹದ ಮೇಲೆ ಅದರ ಕೆಟ್ಟ ಪ್ರಭಾವವೂ ಆಗುತ್ತದೆ. ಮರ್ಯಾದೆಗಂಜಿ ನೋಂದಣಿ ಮಾಡಿಕೊಳ್ಳದೇ ಉಳಿಯುವ ಹೆಚ್ಚಿನವರು ಅಕ್ರಮ ವ್ಯವಹಾರವನ್ನು ಮುಂದುವರೆಸಬಹುದು. ಇದರಿಂದುಂಟಾಗುವ ಅಪರಾಧಗಳ ನಿಯಂತ್ರಣಕ್ಕಾಗಿಯೇ ಪ್ರತ್ಯೇಕ ಪೊಲೀಸ್ ಠಾಣೆಗಳನ್ನೂ ಸ್ಥಾಪಿಸಬೇಕಾಗುತ್ತದೆ! ಬಡ ಮತ್ತು ಅತಿ ಹೆಚ್ಚಿನ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ, ನಮ್ಮ ಸಂಕೀರ್ಣ ಭ್ರಷ್ಟ ವ್ಯವಸ್ಥೆಯಲ್ಲಿ, ಅನೇಕ ನುಸುಳುಗಳಿರುವ ಸಾಧ್ಯತೆಗಳು ಹೆಚ್ಚಿರುವ ಸಂದರ್ಭದಲ್ಲಿ ಇದನ್ನು ಕಾನೂನುಬದ್ಧಗೊಳಿಸುವುದೆಂದರೆ ಗಲ್ಲಿಯ ಮಾರಿಯನ್ನು ಮನೆಯೊಳಗೆ ಬಿಟ್ಟುಕೊಂಡಂತೆಯೇ ಸರಿ!

ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದ ಬೇರೆ ದೇಶಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಹೇಗಿದೆ? ಈ ಕುರಿತೂ ವಿಸ್ತ್ರತ ಅಧ್ಯಯನಗಳಾಗಬೇಕಿದೆ. ನೆದರ್ಲ್ಯಾಂಡ್, ಜರ್ಮನಿ, ನ್ಯೂಜಿಲೆಂಡ್ ನಂತಹ ದೇಶಗಳಲ್ಲಿ ಹೆಣ್ಣುಮಕ್ಕಳ ಅಕ್ರಮ ಸಾಗಾಣಿಕೆ ಮತ್ತು ಮಾರಾಟ ಹೆಚ್ಚಿರುವುದನ್ನು ಅಧ್ಯಯನಗಳು ದಾಖಲಿಸಿವೆ. “ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸುವುದೆಂದರೆ ಅದನ್ನು ಪ್ರೋತ್ಸಾಹಿಸಿದಂತಲ್ಲ” ಎಂದು ನಾವೆಷ್ಟೇ ಹೇಳಿದರೂ ಜಾಗತೀಕರಣದ ವಿಕೃತಿಗಳು, ಸೆಕ್ಸ್ ಟೂರಿಸಂ ಇಂದು ಬಹಳಷ್ಟು ದೇಶಗಳ ಹೆಚ್ಚಿನ ಆದಾಯ ಮೂಲವಾಗಿರುವುದರಿಂದ ಹೆಣ್ಣನ್ನು ಭೋಗದವಸ್ತುವೆಂದೂ, ಸರಕೆಂದೂ ಭಾವಿಸಿ ಅವಳಿಗೆ ಸಂಬಂಧಿಸಿದ ಅಪಾಯಗಳನ್ನು ನಿರ್ಲಕ್ಷಿಸಿ ಸರ್ಕಾರಗಳೇ ನಡೆಸುವ ವೇಶ್ಯಾವಾಟಿಕೆಯಾಗಿ ಪರಿಣಮಿಸಿಬಿಡುತ್ತವೆ!

ಭಾರತದಲ್ಲೂ ವೇಶ್ಯಾವಾಟಿಕೆಯನ್ನು ವಿಸ್ತ್ರತವಾಗಿ ಬೆಳೆಸುವ, sex workerಮಧ್ಯಸ್ಥಿಕೆ ಮಾಡುವ ಉದ್ದೇಶದಿಂದಲೇ ಹುಟ್ಟಿಕೊಂಡಿರುವ ಕೆಲ ಸಾಂಸ್ಥಿಕ ವ್ಯವಸ್ಥೆಗಳು, ಲೈಂಗಿಕ ಜೀತವನ್ನೇ ‘ವೃತ್ತಿ’ ಎಂದೂ, ಇವರನ್ನು ಲೈಂಗಿಕ ಕಾರ್ಮಿಕರೆಂದೂ, ಸಮಾಜ ಒಪ್ಪಿತವೆಂಬಂತೆ ಬಿಂಬಿಸುತ್ತಿವೆ. ಇದೇ ಸಂಸ್ಥೆಯವರೋ, ಲೈಂಗಿಕ ಜೀತಗಾರರೋ, ಮಧ್ಯವರ್ತಿಗಳೋ ತಮ್ಮ ಮಕ್ಕಳಿಗೆ ಮಾತ್ರ ಈ ‘ಘನವಾದ’ ವೃತ್ತಿ ಬೇಡವೆನ್ನುತ್ತಾರೆ! ಹಾಗಿದ್ದರೆ ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವುದಲ್ಲವೇ ಲೈಂಗಿಕ ಜೀತವೆಂಬುದು? ಲೈಂಗಿಕಜೀತವನ್ನು ಕಾನೂನುಬದ್ಧಗೊಳಿಸಿ ಅವರನ್ನು ಮುಖ್ಯವಾಹಿನಿಗೆ ತರಬೇಕೆಂದು ಯೋಚಿಸುತ್ತಿರುವವರು ಅವರ ಪುನರ್ವಸತಿಗಾಗಲಿ, ಅವರ ಆರ್ಥಿಕ-ಸಾಮಾಜಿಕ ಜೀವನ ಸುಧಾರಣೆಗಾಗಲಿ ಏಕೆ ಯೋಚಿಸುತ್ತಿಲ್ಲ? ದೇವದಾಸಿ, ಜೋಗಿಣಿ, ಬಸವಿ ಪದ್ಧತಿ, ಮಾನವಹಕ್ಕುಗಳ ಉಲ್ಲಂಘನೆಯೆಂದು ಅದನ್ನು ನಿರ್ಬಂಧಿಸಿ ಪುನರ್ವಸತಿ ಮಾಡಲಾಗುತ್ತಿದೆ. ಅದೇ ಪಿಡುಗಿನ ಮುಂದುವರಿಕೆಯಂತಿರುವ ಇದಕ್ಕೂ, ಅದೇ ನೀತಿ ಅನ್ವಯಿಸಬೇಕು.

ದಶಕಗಳಿಂದ ವೇಶ್ಯಾವಾಟಿಕೆ ಕುರಿತು ನಮ್ಮ ನ್ಯಾಯಪೀಠಗಳು ನೀಡಿದ ತೀರ್ಪುಗಳೆಲ್ಲವೂ, “ಬಾಲೆಯರು, ಹೆಣ್ಣುಮಕ್ಕಳನ್ನು ಈ ರೀತಿಯ ಜೀತಕ್ಕೆ ಬಲವಂತದಿಂದಲೋ, ಪ್ರಚೋದಿಸಿಯೋ, ಆರ್ಥಿಕ ಸಂಕಷ್ಟದ ಕಾರಣಕ್ಕೋ ತಳ್ಳುವ ಮೂಲಕ ಅವರನ್ನು ನಿರಂತರ ಅತ್ಯಾಚಾರಕ್ಕೆ Supreme Courtಗುರಿಮಾಡಿದಂತಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗದು” ಎನ್ನುತ್ತಾ ಕೆಲವು ಮಾರ್ಗದರ್ಶಿ ಸೂತ್ರಗಳನ್ನೂ ಕೊಟ್ಟಿತ್ತು. ಅವು-

 1. ವೇಶ್ಯಾವಾಟಿಕೆಯ ನಿಯಂತ್ರಣ ಮತ್ತು ನಿರ್ಮೂಲನೆಗೆ ಬೇರೆಯದೇ ಆದ ಸಮಿತಿಯೊಂದನ್ನು ನೇಮಿಸಬೇಕು.ಇದರಲ್ಲಿ ಸಮಾಜಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಸಮಾಜವಿಜ್ಞಾನಿಗಳು, ಅಪರಾಧಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು, ಮಹಿಳಾ ಸಂಘಟನೆಯ ಮುಖ್ಯಸ್ಥರು, ಮಕ್ಕಳ ಕಲ್ಯಾಣ ಸಮಿತಿ, ಸಾಮಾಜಿಕ ಸ್ವಯಂಸೇವಾ ಸಂಘಟನೆಗಳ ಮುಖ್ಯಸ್ಥರು ಮುಂತಾದ ಪ್ರಮುಖರು ಇರಬೇಕು.
 2. ಈ ಸಮಿತಿ ನೀಡುವ ಎಲ್ಲಾ ಶಿಫಾರಸ್ಸುಗಳನ್ನೂ ಚಾಚೂತಪ್ಪದೇ ಅನುಷ್ಠಾನಗೊಳಿಸಬೇಕು.
 3. ಬಡತನ, ನಿರುದ್ಯೋಗದ ಕಾರಣಕ್ಕೆ ಅನಿವಾರ್ಯವಾಗಿ ವೇಶ್ಯಾವಾಟಿಕೆಗಿಳಿಯುತ್ತಿರುವವರಿಗಾಗಿ ಪರಿಣಾಮಕಾರಿ ಪುನರ್ವಸತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಈ ಕೆಲಸದಿಂದ ದೊರೆಯುತ್ತಿದ್ದಕ್ಕಿಂತಾ ಹೆಚ್ಚಿನ ಆರ್ಥಿಕ ಅನುಕೂಲಕ್ಕೆ ಯೋಜನೆಗಳನ್ನು ರೂಪಿಸಬೇಕು.
 4. ಈ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿ ಅದರ ನಿಗ್ರಹಕ್ಕೆ, ತಲೆಹಿಡುಕರ, ಮಧ್ಯವರ್ತಿಗಳ, ವೇಶ್ಯಾಗೃಹಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಅನುಷ್ಠಾನದ ಎಲ್ಲಾ ಅಧಿಕಾರಶಾಹಿಯೂ ತಕ್ಷಣದ ಮತ್ತು ಸಶಕ್ತ ಕ್ರಮಗಳನ್ನು ಕೈಗೊಳ್ಳಬೇಕು.
 5. ಮಕ್ಕಳನ್ನು ಮತ್ತು ಅಪ್ರಾಪ್ತರನ್ನು ಬಳಸಿಕೊಳ್ಳುವ ವೇಶ್ಯಾವಾಟಿಕೆ ಸಂಪೂರ್ಣ ನಿರ್ಮೂಲನೆಯಾಗಬೇಕು.
 6. ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಈ ಲೈಂಗಿಕಜೀತದ ಸುಳಿಗೆ ಸಿಕ್ಕ ಅಪ್ರಾಪ್ತ ಮಕ್ಕಳನ್ನು ರಕ್ಷಿಸಿ, ಅವರಿಗೆ ಆರೈಕೆ, ಪೋಷಣೆ, ರಕ್ಷಣೆ, ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಲೈಂಗಿಕ ಜೀತಗಾರ್ತಿಯರ ಮಕ್ಕಳು ಈ ಕೂಪಕ್ಕೆ ಬೀಳದಂತೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
 7. ಸಾಕಷ್ಟು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಅಲ್ಲಿ ವೈದ್ಯರು, ಮನೋವೈದ್ಯರು, ಸಾಮಾಜಿಕ ಕಾರ್ಯಕರ್ತರು ಇವರೊಂದಿಗೆ ಒಡನಾಡಬೇಕು.
 8. ಈ ಸಂಬಂಧ ಇರುವ ಕಾನೂನು, ವೇಶ್ಯಾವಾಟಿಕೆಯ ಅಪರಾಧೀಕರಣವನ್ನು ನಿರೂಪಿಸಲು ಸಾಕ್ಷೀಕರಿಸಲು ಶಕ್ತವಾಗಿಲ್ಲದಿದ್ದರೆ ಅದಕ್ಕೆ ತಿದ್ದುಪಡಿ ತರಬೇಕು. ಅವಶ್ಯಕವೆನಿಸಿದರೆ ಹೊಸ ಕಾನೂನು ರೂಪಿಸಬೇಕು.
 9. ಜೋಗಿಣಿ, ದೇವದಾಸಿ, ಬಸವಿ ಪದ್ಧತಿಗಳ ಬೇರುಮಟ್ಟದ ನಿರ್ಮೂಲನೆಗೆ ಕ್ರಮಕೈಗೊಳ್ಳಬೇಕು.

ಈ ಮಾರ್ಗದರ್ಶಿ ಸೂತ್ರಗಳು ದಶಕಗಳಿಂದ ಅನುಷ್ಠಾನಗೊಳ್ಳದೇ, ನಿರ್ಲಕ್ಷ್ಯಕ್ಕೊಳಗಾಗಿ ಕಡತದಲ್ಲೇ ಕುಳಿತಿವೆ! ಸರ್ಕಾರಗಳು ಪುನರ್ವಸತಿಗಾಗಿ ‘ಉಜ್ವಲಾ’ ‘ಸ್ವಾಧಾರ’ದಂತಾ ಕೆಲವು ಯೋಜನೆಗಳನ್ನೇನೋ ಹಾಕಿಕೊಂಡಿತು. ಆದರೆ ಸರಿಯಾದ ಅನುಷ್ಠಾನವಾಗಲೇ ಇಲ್ಲ. ವೇಶ್ಯಾವಾಟಿಕೆಯ ಸಮಸ್ಯೆಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸರ್ಕಾರಗಳು ಮುಂದೆ ಬರಲಿಲ್ಲ. ಇದರ ಪೂರ್ಣ ಆಳ ಅಧ್ಯಯನ ಮಾಡಿ ಯಾವ ರೀತಿಯ ಕಾನೂನನ್ನೂ ಮತ್ತು ಪುನರ್ವಸತಿಗಳನ್ನು ಪರಿಣಾಮಕಾರಿಯಾಗಿ ಮಾಡಬೇಕೆಂದು ಮುಂದಾಲೋಚಿಸಲಿಲ್ಲ. ಕರ್ನಾಟಕದಲ್ಲೂ ಅವರಿಗೆ ಕೌಶಲ್ಯ ತರಬೇತಿ ನೀಡಿ, ವ್ಯಾಪಾರಕ್ಕಾಗಿ 20,000 ಸಾಲನೀಡುವ ಯೋಜನೆ ಇತ್ತೀಚೆಗೆ ರೂಪುಗೊಂಡಿದೆ. ಆದರೆ ಅದೂ ಪರಿಣಾಮಕಾರಿಯಲ್ಲವಾದ್ದರಿಂದ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ.

ವೇಶ್ಯಾವಾಟಿಕೆ ಹಿಂದೆ ಇರುವ ಬೇರೆ ಬೇರೆ ಆಯಾಮಗಳನ್ನು, ಪುನರ್ವಸತಿ ಸಾಧ್ಯತೆಗಳನ್ನು, ವಿಭಿನ್ನ ಜಾತಿ-ವರ್ಗಕ್ಕೆ ಸೇರಿದ ಲೈಂಗಿಕ ಜೀತಗಾರರನ್ನೂ ವಿಸ್ತ್ರತ ಅಧ್ಯಯನಕ್ಕೊಳಪಡಿಸಿ, ಗಣತಿ ಮಾಡಿ ಪುನರ್ವಸತಿ ವಿಧಾನಗಳನ್ನು ನಿರ್ಧರಿಸಬೇಕಾಗಿದೆ. ಮತ್ತು ವಾಣಿಜ್ಯೀಕೃತ ಲೈಂಗಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ. ಖಾಸಗಿ ಒಪ್ಪಿತ ನೆಲೆಯ ಲೈಂಗಿಕ ಸುಖದ ಮಾರಾಟ ಮತ್ತು ಪುನರ್ವಸತಿಯ ಆಯ್ಕೆಯನ್ನು ಸುಪ್ರೀಂಕೋರ್ಟ್ ಮಹಿಳೆಯ ನಿರ್ಧಾರಕ್ಕೆ ಬಿಟ್ಟಿದೆ. ಅದನ್ನು ಗೌರವಿಸುತ್ತಲೇ ಮನೋವೈಜ್ಞಾನಿಕ ನೆಲೆಯ ಪ್ರಾಕೃತಿಕ ಹಾಗೂ ಜೈವಿಕ ಅಂಶಗಳನ್ನು ಆಳವಾಗಿ ಅಧ್ಯಯನ ಮಾಡಿ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ವೇಶ್ಯಾವಾಟಿಕೆಯ ನಿರ್ಬಂಧದ ನೆಲೆಯಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆ 1989, ಮಹಿಳೆಯ ವಿರುದ್ಧದ ತಾರತಮ್ಯದ ಒಡಂಬಡಿಕೆ 1979, ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆಯ ವಿರುದ್ಧದ ಒಡಂಬಡಿಕೆ 2000, ಮಹಿಳೆ ಮತ್ತು ಮಕ್ಕಳ ವೇಶ್ಯಾವಾಟಿಕೆಯ ವಿರುದ್ಧದ ಸಾರ್ಕ್ ಸಮ್ಮೇಳನದ ಒಪ್ಪಂದ, ಅಂತರಾಷ್ಟ್ರೀಯ ಕಾನೂನಾತ್ಮಕ ಒಪ್ಪಂದ, ಏಡ್ಸ್ ತಡೆ ಕುರಿತು ವಿಶ್ವ ಆರೋಗ್ಯಸಂಸ್ಥೆಯೊಂದಿಗಿನ ಒಪ್ಪಂದಗಳನ್ನು ನಮ್ಮ ಸರ್ಕಾರಗಳು ಮುಲಾಜಿಲ್ಲದೇ ಉಲ್ಲಂಘಿಸುತ್ತಾ ಬಂದಿವೆ! ಮತ್ತು ಭಾರತ ಸಂವಿಧಾನದ ಕಲಂ21 ಹೇಳುವಂತಾ ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆಯ ಮತ್ತು ಕಲಂ23ರ ಮಾನವ ದುರ್ವ್ಯವಹಾರ ಮತ್ತು ಬಲಾತ್ಕಾರದ ದುಡಿಮೆಯ ನಿಷೇಧಕ್ಕೂ, ಸಮಾನತೆಯ ಆಶಯಕ್ಕೂ ವೇಶ್ಯಾವಾಟಿಕೆ ವಿರುದ್ಧವಾಗಿದೆ!

ವೇಶ್ಯಾವಾಟಿಕೆಯನ್ನು ಸಬಲ ಕಾನೂನು ರೂಪಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ನಿಯಂತ್ರಿಸುವ ಜೊತೆಗೇ ಸೂಕ್ತ ಪುನರ್ವಸತಿಯನ್ನೂ ಮಾಡದಿದ್ದರೆ ಹೆಣ್ಣುಮಕ್ಕಳು ಇನ್ನಷ್ಟು ದಾರುಣ ಸ್ಥಿತಿಯನ್ನು ತಲುಪಿಬಿಡುತ್ತಾರೆ. ನಮ್ಮ ಸಾಮಾಜಿಕ ವ್ಯವಸ್ಥೆ ಮತ್ತಷ್ಟು ರೋಗಿಷ್ಠವಾಗುತ್ತದೆ. ಈಗಲಾದರೂ ಕಡತದಲ್ಲಿರುವ ಸುಪ್ರೀಂ ಕೋರ್ಟ್ ನಿರ್ದೇಶನಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ವೇಶ್ಯಾವಾಟಿಕೆ ನಿಗ್ರಹದ ಜವಾಬ್ದಾರಿಯನ್ನು ಸರ್ಕಾರಗಳು ವಹಿಸಿಕೊಂಡು ಅಪರಾಧಿ ಯಾರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.


ಪ್ರಜಾವಾಣಿ ದಿನಪತ್ರಿಕೆಯ ‘ಸಂಗತ’ ಅಂಕಣದಲ್ಲಿ ಸಪ್ಟೆಂಬರ್ ೩೦ ರಂದು ಪ್ರಕಟವಾದ ‘ಲೈಂಗಿಕ ಜೀತ -ಅಪರಾಧಿ ಯಾರು?’ ಎಂಬ ಲೇಖನದ ಪೂರ್ಣಪಾಠ.


2 thoughts on “ಲೈಂಗಿಕ ಜೀತ- ಅಪರಾಧಿ ಯಾರು?

 1. Ahani

  ತುಂಬಾ ಒಳ್ಳೆಯ ವಿಶ್ಲೇಷಣೆ ಮಾಡಿದ್ದೀರಿ ಮೇಡಂ. ವೇಶ್ಯೆಯರ ನೋವನ್ನು ಹತ್ತಿರದಿಂದ ಕಂಡವರು ಮಾತ್ರ ಇಂತಹ ಬರಹ ಮಾಡಲು ಸಾಧ್ಯ. ನೀವೆತ್ತಿರುವ ಪ್ರಶ್ನೆಗಳು ಕಲ್ಲು ಹೃದಯಗಳನ್ನು ಕರಗಿಸಲೆಂದು ಹಾರೈಸುವೆ.
  ಅಹನಿ

  Reply
 2. pundalik hugginavar

  ನಮಸ್ತೆ …..ತುಂಬಾ ಅದ್ಭುತವಾಗಿ ವಿಷಯವನ್ನು ವಿಶ್ಲೇಷಣೆ ಮಾಡಿದ್ದೀರಿ. ತಮಗೆ ಅಭಿನಂದನೆಗಳು. ದೇಶದ ಬಗ್ಗೆ, ಮಹಿಳೆಯರ ಬಗ್ಗೆ ನಿಜವಾದ ಕಳಕಳಿ ಉಳ್ಳವರು ಮಾತ್ರ ಯೋಚಿಸಬಹುದಾದ ವಿಷಯವನ್ನ ಮಂಡಿಸಿದ್ದೀರಿ. ನಾಡಿನ ಎಲ್ಲ ಪೂಜ್ಯನೀಯ ಸಹೋದರಿಯರ ಪರವಾಗಿ ತಮಗೆ ಮತ್ತೊಮ್ಮೆ ಧನ್ಯವಾದಗಳು.

  Reply

Leave a Reply

Your email address will not be published.