Category Archives: ಚಿದಂಬರ ಬೈಕಂಪಾಡಿ

ಜಾತಿ ಹೆಸರಲ್ಲಿ ರಾಜಕಾರಣಿ ಉದ್ಧಾರವಾದಷ್ಟು…

-ಚಿದಂಬರ ಬೈಕಂಪಾಡಿ

ದೇಶದ ಸಮಗ್ರ ಚಿಂತನೆ, ದೇಶ ಕಟ್ಟುವ ಕಲ್ಪನೆ ಒಬ್ಬ ರಾಜಕಾರಣಿಯಿಂದ ಸಾಮಾನ್ಯ ಪ್ರಜೆ ನಿರೀಕ್ಷೆ ಮಾಡುವುದು ಅಪರಾಧವಲ್ಲ. ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಟ್ ಅಮಾಡುವಾಗ ಇದ್ದ ಕಲ್ಪನೆ ದೇಶದ ಅಖಂಡತೆ, ಐಕ್ಯತೆಯನ್ನು ಉಳಿಸಿಕೊಳ್ಳುವುದೇ ಆಗಿತ್ತು. ದೇಶ ಒಡೆಯುವ, ಜಾತಿಯ ಹೆಸರಲ್ಲಿ, ಭಾಷೆಯ ಹೆಸರಲ್ಲಿ ವಿಭಜಿಸುವ ಮೂಲ ಆಶಯವಿರಲಿಲ್ಲ. ಆದರೂ ದೇಶ ವಿಭಜನೆಯಾಯಿತು, ಅದು ಇಂದಿಗೂ ಇತಿಹಾಸದಲ್ಲಿ ಉಳಿದಿರುವ ಕಪ್ಪು ಚುಕ್ಕೆ. ಅದರಿಂದಲಾದರೂ ಪಾಠಕಲಿಯಬೇಕಿತ್ತು ರಾಜಕಾರಣಿಗಳು, ಕಲಿಯಲಿಲ್ಲ ಎನ್ನುವುದು ದುರಂತ.

ಈ ಮಾತುಗಳನ್ನು ಹೇಳಬೇಕಾದ ಅನಿವಾರ್ಯತೆಗೆ ಕಾರಣ ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಹಿನ್ನೆಲೆ. ಚುನಾವಣೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರದ್ದೇ ಆದ ಘನತೆಯಿದೆ, ಮತಕ್ಕೂ ಪಾವಿತ್ರ್ಯತೆ ಇದೆ. ಮತದಾರರಿಂದ ಆರಿಸಿ ಹೋಗುವ ಪ್ರತಿನಿಧಿಗೂ ಅಷ್ಟೇ ಘನತೆಯಿದೆ. ನಮ್ಮ ಪರವಾಗಿ ಶಾಸನ ಸಭೆಯಲ್ಲಿ ಧ್ವನಿಎತ್ತಲು, ನಮ್ಮ ಕಷ್ಟು ಸುಖಗಳನ್ನು ಪರಮೋಚ್ಛ ವೇದಿಕೆಯಲ್ಲಿ ಪ್ರತಿಪಾದಿಸಲು ಜನರು ಕೊಡುವ ಅಧಿಕಾರ. ಜನರಿಂದ, ಜನರಿಗಾಗಿ ಕೆಲಸ ಮಾಡಲು ಆಯ್ಕೆ ಮಾಡಿಕಳುಹಿಸುವ ನಮ್ಮ ಪ್ರತಿನಿಧಿ ಎನ್ನುವ ಹೆಮ್ಮೆ ಮತದಾರನಿಗೆ. ನಮ್ಮಿಂದ ಆಯ್ಕೆಯಾದ ಪ್ರತಿನಿಧಿಯ ಕರ್ತವ್ಯ ಜನರ ಹಕ್ಕನ್ನು ರಕ್ಷಿಸುವುದು, ಜನರ ಸೇವೆ ಮಾಡುವುದು. ನಾವು ಆಯ್ಕೆ ಮಾಡುವ ವ್ಯಕ್ತಿಯನ್ನು ಅವನ ಬದ್ಧತೆ, ಕರ್ತವ್ಯಶೀಲತೆ, ಜನಪರ ಕಾಳಜಿಗಳನ್ನು ಮಾನದಂಡವಾಗಿಟ್ಟುಕೊಂಡು ಮತಹಾಕಿ ಆಯ್ಕೆ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಮ.

ಜನಪ್ರತಿನಿಧಿಯಾದವರು ನಮಗೆ ಎದುರಾಗುವ ಸವಾಲುಗಳನ್ನು ನಿಭಾಯಿಸುವುದು, ಐಕ್ಯತೆ, ಸಾರ್ವಭೌಮತೆಯನ್ನು ರಕ್ಷಿಸುವುದು ಬಹುಮುಖ್ಯ. ಆದರೆ ಹಾಗೆ ಮಾಡುತ್ತಿದ್ದಾರೆಯೇ, ಮುಂದೆ ಮಾಡುತ್ತಾರೆಯೇ ಎನ್ನುವ ಅನುಮಾನಗಳು ಕಾಡುತ್ತಿವೆ. ಯಾಕೆಂದರೆ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ, ಸಮಾಜವಿದೆ. ಅಖಂಡತೆಗೆ, ಸಾರ್ವಭೌಮತೆಗೆ, ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಹೊಸ ಹೊಸ ಸವಾಲುಗಳು ಧುತ್ತನೆ ಎದುರಾಗುತ್ತಿವೆ. ಇವುಗಳನ್ನು ಎದುರಿಸುವಂಥ ಕಲ್ಪನೆ, ಚಿಂತನೆಯಿದ್ದವರನ್ನು ಆರಿಸಿಕಳುಹಿಸಬೇಕು ಎನ್ನುವ ಆಶಯಕ್ಕೇ ಭಂಗವಾಗುತ್ತಿದೆ. ನಮ್ಮ ಮುಂದಿರುವ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದೇ ಸವಾಲು ಈಗ.

ದೇಶವನ್ನು ಕಟ್ಟುವ ಬದಲು ಒಡೆಯುವ ಮನಸ್ಥಿತಿಯವರು, ಅಖಂಡತೆಯನ್ನು ಉಳಿಸುವ ಚಿಂತನೆಯ ಬದಲು ಜಾತಿ, ಭಾಷೆ ಹೆಸರಲ್ಲಿ ಒಡೆಯುವವರು ಮತಯಾಚನೆಗೆ ಮುಂದಾಗಿದ್ದಾರೆ. ನಮಗೆ ಬೇಕಾಗಿರುವುದು ದೇಶ ಒಡೆಯುವವರಲ್ಲ ಕಟ್ಟುವವರು. ಜಾತಿಯ ಹೆಸರಲ್ಲಿ ಜನರನ್ನು ವಿಭಜಿಸುವವರು ಬೇಕಾಗಿಲ್ಲ, ಜಾತ್ಯಾತೀತವಾಗಿ ಎಲ್ಲರನ್ನೂ ಒಗ್ಗಟ್ಟಿನಿಂದ ಇರುವಂತೆ ಮಾಡುವವರು ಬೇಕಾಗಿದ್ದಾರೆ.

ಜಾತಿಯೇ ಈಗಿನ ರಾಜಕಾರಣದ ನಿರ್ಣಾಯಕ ಸ್ಥಿತಿಗೆ ಬಂದಿರುವುದು ಅತ್ಯಂತ ಅಪಾಯಕಾರಿ. ಜಾತಿಯ ವಿನಾಶದ ಭಾಷಣ ಮಾಡುತ್ತಲೇ ಜಾತಿಯನ್ನು ಮುಂದಿಟ್ಟುಕೊಂಡು ಕಣಕ್ಕಿಳಿಯುವ ಅರ್ಹತೆ ಗಿಟ್ಟಿಸಿಕೊಳ್ಳುತ್ತಿರುವುದು ಭವಿಷ್ಯದಲ್ಲಿ ಎಂಥ ಸನ್ನಿವೇಶ ನಿರ್ಮಾಣವಾಗಬಹುದು ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ.

ಜಾತಿ ಮನಸ್ಥಿತಿ ಹೊರತು ರೋಗವನ್ನು ಗುರುತಿಸುವಂಥ ಮಾನದಂಡವಾಗಬಾರದು. ಸಮಾನತೆ, ಸಹಬಾಳ್ವೆ, ಸಮಪಾಲು ಎನ್ನುವ ಸಮಾಜವಾದದ ಹಿಂದಿರಬೇಕಾದ ಜಾತಿ ಈಗ ಮುಂದಿದೆ. ಸಮಾನತೆ ಹಿಂದೆ ಜಾತಿ ಮುಂದೆ ಇದು ಅಪಾಯಕಾರಿ. ಜಾತಿ ಹೆಸರಲ್ಲಿ ರಾಜಕಾರಣ ಮಾಡುವುದು ಹೇಡಿತನವೇ ಹೊರತು ವೀರತ್ವ ಖಂಡಿತಕ್ಕೂ ಅಲ್ಲ. ರಾಜಕೀಯ ಇತಿಹಾಸವನ್ನು ತಿರುವಿನೋಡಿದರೆ ಜಾತಿಯೇ ಆಧಾರವಾಗಿದ್ದರೆ ಈಗಲೂ ಸೋನಿಯಾ ಗಾಂಧಿ, ಅಡ್ವಾಣಿ ಸಹಿತ ಯಾರೇ ಆದರೂ ಗೆಲ್ಲಲು ಸಾಧ್ಯವಿಲ್ಲ. ಜಾತಿಯನ್ನು ಮಾನದಂಡವಾಗಿಟ್ಟುಕೊಂಡು ಜನ ಮತ ಹಾಕುತ್ತಿದ್ದರೆ ಚಿಕ್ಕಮಗಳೂರಲ್ಲಿ ಇಂದಿರಾ ಗಾಂಧಿ, ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಆಯ್ಕೆಯಾಗಲು ಸಾಧ್ಯವೇ ಇರಲಿಲ್ಲ.

ಈ ಕ್ಷಣದಲ್ಲೂ ಇಂಥ ಅಭ್ಯರ್ಥಿ ಇಂಥ ಜಾತಿಯವರಷ್ಟೇ ಮತ ಹಾಕಿದರೆ ಗೆದ್ದು ಬರುತ್ತಾರೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಕರ್ನಾಟಕದ 224 ಕ್ಷೇತ್ರಗಳಲ್ಲಿ ಯಾವ ಒಬ್ಬ ಅಭ್ಯರ್ಥಿಯೂ ತನ್ನ ಜಾತಿಯ ಮತಗಳಲ್ಲದೆ ಅನ್ಯ ಜಾತಿಯ ಒಂದೇ ಒಂದು ಮತವಿಲ್ಲದೆ ಆಯ್ಕೆಯಾಗುತ್ತೇನೆ ಎನ್ನುವುದು ಸಾಧ್ಯವೇ? ಇದು ವಾಸ್ತವ.

ಆದರೆ ಈಗಿನ ರಾಜಕೀಯ ವ್ಯವಸ್ಥೆಯ ಮಾನಸಿಕ ಸ್ಥಿತಿಯೇ ರೋಗಗ್ರಸ್ಥವಾಗಿದೆ. ರಾಜಕಾರಣಿಗಳು ಜಾತಿಯ ರೋಗದಿಂದ ಬಳಲುತ್ತಿದ್ದಾರೆ. ತಮ್ಮ ರೋಗವನ್ನು ಸಾಮಾನ್ಯ ಮತದಾರನಿಗೂ ವರ್ಗಾಯಿಸಿದ್ದಾರೆ. ಜಾತಿಯ ಹೆಸರಲ್ಲಿ ಟಿಕೆಟ್ ಹಂಚಿಕೆ ಮಾಡುತ್ತಿರುವುದೇ ಈ ರೋಗದ ಮೊದಲ ಲಕ್ಷಣ. ಜಾತಿಗೆ ಪ್ರಾತಿನಿಧ್ಯ ಸಿಗಬೇಕೇ ಹೊರತು ಪಾರುಪತ್ಯವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಕೊಡುವಾಗ ಜಾತಿಯೂ ಒಂದು ಅಂಶಹೊರತು ಅದೇ ನಿರ್ಣಾಯಕವಲ್ಲ.

ಹೆಣ್ಣು ಮತ್ತು ಗಂಡು ಎನ್ನುವುದೇ ಎರಡು ಜಾತಿಯೆನ್ನುವ ರಾಜಕಾರಣಿಗಳ ಸಾಮಾಜಿಕ ನ್ಯಾಯದ ಭಾಷಣ ಅನುಷ್ಠಾನವಾಗಿದೆಯೇ? 224 ಕ್ಷೇತ್ರಗಳಲ್ಲಿ ಸರಿಸುಮಾರು 122 ಕ್ಷೇತ್ರಗಳನ್ನು ಯಾವ ರಾಜಕೀಯ ಪಕ್ಷ ಮಹಿಳೆಯರಿಗೆ ಬಿಟ್ಟುಕೊಟ್ಟಿದೆ? ಹಾಗೆ ಬಿಟ್ಟು ಕೊಟ್ಟು ಸಾಮಾಜಿಕ ನ್ಯಾಯ ಹೇಳುವ ಮಾನಸಿಕ ಸ್ಥಿತಿ ಯಾವ ಪಕ್ಷಕ್ಕಿದೆ?

ಜಾತಿಯನ್ನು ಅದೆಷ್ಟು ವೈಭವೀಕರಿಸಿ ಟಿಕೆಟ್ ಹಂಚಲಾಗುತ್ತಿದೆಯೆಂದರೆ ಅನ್ಯಜಾತಿಯವರ ಬೆಂಬಲವೇ ಅನಗತ್ಯ ಎನ್ನುವಂಥ ಉದ್ಧಟತನ ಎನ್ನುವಷ್ಟರಮಟ್ಟಿಗೆ. ಕ್ಷೇತ್ರವಾರು ಜಾತಿಯ ಮತದಾರರ ಅಂಕೆ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡುವ ಸೂತ್ರವೇ ಅಪಾಯಕಾರಿ.

ಇಷ್ಟಕ್ಕೂ ಜಾತಿ ಆಧಾರದಲ್ಲಿ ಆಯ್ಕೆಯಾಗಿ ಹೋದ ಯಾವ ರಾಜಕಾರಣಿ ತನ್ನ ಜಾತಿಯನ್ನು ಉದ್ಧಾರ ಮಾಡಿದ್ದಾನೆ ಎನ್ನುವ ಮಾಹಿತಿಯಿದ್ದರೆ ಮುಕ್ತವಾಗಿ ಹಂಚಿಕೊಳ್ಳಿ. ಜಾತಿಯ ಹೆಸರಲ್ಲಿ ರಾಜಕಾರಣಿ ಉದ್ಧಾರವಾದಷ್ಟು ಪ್ರಮಾಣದಲ್ಲಿ ಅವನ ಜಾತಿ ಉದ್ಧಾರವಾಗಿಲ್ಲ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಜನಸಮೂಹವನ್ನು ಇಡಿಯಾಗಿ ನೋಡಿಕೊಂಡು ರಾಜಕಾರಣ ಮಾಡಿದವರು ಈಗಲೂ ಜನಮಾನಸದಲ್ಲಿ ಉಳಿದಿದ್ದಾರೆ. ಜಾತಿ ಹೆಸರಲ್ಲಿ ರಾಜಕಾರಣ ಮಾಡಲು ಹೋಗಿ ಕಸದಬುಟ್ಟಿಗೆ ಸೇರಿದವರೇ ಬಹಳ ಮಂದಿ.

ಯಾವುದೇ ಕಾರಣಕ್ಕೂ ಜಾತಿಯನ್ನು ನಿರಾಕರಿಸಲು ಸಾಧ್ಯವಿಲ್ಲ, ಆದರೆ ಅದನ್ನೇ ಸಮಾನತೆಯನ್ನು ಪ್ರತಿಪಾದಿಸುವ ವ್ಯವಸ್ಥೆಯಲ್ಲಿ ಆರಾಧಿಸಲು ಸಾಧ್ಯವಿಲ್ಲ, ಬಾರದು ಕೂಡಾ. ಜಾತಿ ವೈಯಕ್ತಿಕವಾಗಿ ಆ ವ್ಯಕ್ತಿಯ ಖಾಸಗಿತನ. ಖಾಸಗಿತನವೆಂಬುದು ಬೀದಿಯಲ್ಲಿ ಹರಾಜಾಗಬಾರದು. ಒಕ್ಕೂಟ ವ್ಯವಸ್ಥೆಯ ಮೂಲ ಅಡಿಪಾಯಕ್ಕೇ ಅಪಾಯಕಾರಿಯಾಗಿ ಜಾತಿರಾಜಕಾರಣ ಬಿಂಬಿತವಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಚರ್ಚೆಯಾಗಬೇಕಿದೆ. ಜಾತಿಗಳ ನಡುವೆ ವೈಷಮ್ಯ ಬೆಳೆಯಲು ಇದಕ್ಕಿಂತ ಬೇರೆ ಕಾರಣಬೇಕೇ? ಜಾತಿಯ ಬಲವಿಲ್ಲದಿದ್ದರೆ ರಾಜಕಾರಣ ಮಾಡಲು ಸಾಧ್ಯವಿಲ್ಲ ಎನ್ನುವ ಮಾನಸಿಕ ಸ್ಥಿತಿಯೇ ಪ್ರಶ್ನಾರ್ಹ.

ಮತದಾರನ ಮುಂದೆ ಪ್ರಣಾಳಿಕೆಗಳೆಂಬ ಭ್ರಮೆಗಳು

-ಚಿದಂಬರ ಬೈಕಂಪಾಡಿ

ಕರ್ನಾಟಕ ವಿಧಾನ ಸಭೆಯಲ್ಲಿ ಅಧಿಕಾರ ಪ್ರತಿಷ್ಠಾಪನೆಗೆ ರಾಜಕೀಯ ಪಕ್ಷಗಳು ಅದೆಷ್ಟು ಉತ್ಸಾಹದಲ್ಲಿವೆ ಅಂದರೆ ತಮ್ಮನ್ನು ಜನ ಎಲ್ಲಿ ಕಡೆಗಣಿಸುವರೋ ಎನ್ನುವ ಆತಂಕ ಮಡುಗಟ್ಟಿದೆ. ಅಂಥ ಆತಂಕದಲ್ಲೂ ತಮ್ಮದೇ ಗೆಲುವು ಎನ್ನುವ ವಿಶ್ವಾಸವನ್ನು ಬಿಂಬಿಸುವುದರಲ್ಲೂ ಹಿಂದೆ ಬಿದ್ದಿಲ್ಲ. ಎಲ್ಲರೂ ಗೆಲ್ಲುವವರೇ, ಎಲ್ಲ ಪಕ್ಷಗಳು ಅಧಿಕಾರ ತಮಗೇ ಎನ್ನುವ ಮಾತುಗಳನ್ನಾಡುತ್ತಿವೆ. ಅಧಿಕಾರ ಯಾರ ಕೈಗೆ ಕೊಡುತ್ತಾನೆ ಮತದಾರ ಎನ್ನುವುದು ಮಾತ್ರ ಮೇ 8 ಕ್ಕೆ ಗೊತ್ತಾಗುವುದು. ಮತದಾರನ ಮನವೊಲಿಸಲು ಈಗ ಮಾಡುತ್ತಿರುವುದೆಲ್ಲವೂ ಬರೇ ಕಸರತ್ತು.

ಚುನಾವಣೆ ಕಾಲದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವುದು ರಾಜಕೀಯ ಪಕ್ಷಗಳಿಗೆ ನಿಜಕ್ಕೂ ಪ್ರಸವ ವೇದನೆಯಷ್ಟೇ ಸುಖ ಮತ್ತು ಯಾತನೆ. ಒಂದಷ್ಟು ಮಂದಿಗೆ ಪ್ರನಾಳಿಕೆ ಸಿದ್ಧಪಡಿಸಲು ಪಕ್ಷಗಳು ಕೆಲಸ ಕೊಡುತ್ತವೆ. ಇಂಥ ಪ್ರಣಾಳಿಕೆ ಸಿದ್ಧಪಡಿಸಲು ಬೇಕಾಗಿರುವುದು ಬುದ್ಧಿವಂತಿಕೆ, ದೂರದೃಷ್ಟಿ, ಸಮಾಜಮುಖಿ ಚಿಂತನೆ ಇತ್ಯಾದಿ ಇತ್ಯಾದಿ. ಪ್ರಣಾಳಿಕೆ ಕೇವಲ ಘೋಷಣೆಗಳಾಗಿರಬಾರದು, ಅವು ಆ ಪಕ್ಷದ ಮುಖವಾಣಿಯಂತಿರಬೇಕು. ಸಾಮಾನ್ಯವಾಗಿ ಮೇಧಾವಿಗಳನ್ನು ಪ್ರಣಾಳಿಕೆ ಸಿದ್ಧಪಡಿಸುವ ಕೆಲಸಕ್ಕೆ ತೊಡಗಿಸುತ್ತಿದ್ದ ಕಾಲವೊಂದಿತ್ತು. ಪ್ರಣಾಳಿಕೆಯಲ್ಲಿ ಮಾಡಿದ ಘೋಷಣೆ ಅನುಷ್ಠಾನಕ್ಕೆ ಬರಬೇಕು ಎನ್ನುವ ಬದ್ಧತೆಯೂ ಇತ್ತು.

ಈಗ ಪ್ರಣಾಳಿಕೆ ಸಿದ್ಧಪಡಿಸಲು ಮೇಧಾವಿಗಳೂ ಬೇಕಾಗಿಲ್ಲ, ಅವುಗಳನ್ನು ಅನುಷ್ಠಾನಕ್ಕೆ ತರಬೇಕೆನ್ನುವ ಬದ್ಧತೆಯೂ ಅನಿವಾರ್ಯವಲ್ಲ. ಯಾಕೆಂದರೆ ಬದ್ಧತೆ ಎನ್ನುವುದೇ ಅಣಕ. jds-manifestoಬದ್ಧತೆಯಿದ್ದವನು ಈಗಿನ ರಾಜಕೀಯಕ್ಕೆ ನಾಲಾಯಕ್ ಎಂದುಕೊಂಡರೂ ತಪ್ಪಲ್ಲ. ರಾಜಕೀಯ ಪಕ್ಷಗಳು ಅಂದರೆ ರೆಡಿಮೇಡ್ ಬಟ್ಟೆ ಅಂಗಡಿಗಳಿದ್ದಂತೆ. ಯಾವಾಗ ಬೇಕಾದರೂ ಅಂಗಡಿಗೆ ಬಂದು ತಮಗೆ ಬೇಕಾದ ಉಡುಗೆಗಳನ್ನು ಖರೀದಿಸ ಬಹುದು. ಅಲ್ಲಿರುವ ಬಟ್ಟೆಗಳು ಯಾರಿಗಾದರೂ ಫಿಟ್ ಆಗಿಬಿಡುತ್ತವೆ. ಹಾಗೆಯೇ ಯಾವ ಪಕ್ಷದಿಂದಲಾದರೂ ಸರಿ, ಯಾವ ಕ್ಷಣದಲ್ಲಿ ಬಂದರೂ ಸರಿ ಸ್ವಾಗತಾರ್ಹ. ಇಂಥ ಕಾಲಘಟ್ಟದಲ್ಲಿ ನಿಂತಿರುವ ನಾವು ಯಾವ ಬದ್ಧತೆಯನ್ನು ನಿರೀಕ್ಷೆ ಮಾಡಬೇಕು, ಯಾರಿಂದ ನಿರೀಕ್ಷೆ ಮಾಡಬೇಕು, ಎನ್ನುವುದೇ ಪ್ರಶ್ನೆ.

ಹಾಗಾದರೆ ಇಂಥವರಿಂದ ನೀವು ನಿರೀಕ್ಷೆ ಮಾಡುವ ಪ್ರಣಾಳಿಕೆ ಹೇಗಿರಬಹುದು? ಈಗಿನ ಕಾಲಕ್ಕೆ ಅದು ಸೂಟ್ ಆಗುವುದೇ ಮುಖ್ಯ ಹೊರತು ಬೇರೆ ಎಲ್ಲವೂ ಗೌಣ.

ಪ್ರಣಾಳಿಕೆಯ ಈಗಿನ ಉದ್ದೇಶ ಜನರನ್ನು ತಮ್ಮತ್ತ ಸೆಳೆಯುವುದು. ಯಾವುದನ್ನು ಘೋಷಣೆ ಮಾಡಿದರೆ ಜನ ಸುಲಭವಾಗಿ ನಂಬುತ್ತಾರೆ ಎನ್ನುವುದು ಮತ್ತು ಅದು ಅತೀ ಹೆಚ್ಚು ಜನಾಕರ್ಷಣೆಯಾಗಿರಬೇಕು. ಜನಾಕರ್ಷಣೆಯ ಕೇಂದ್ರ ಬಿಂದು ಪ್ರಣಾಳಿಕೆ ಅಂದುಕೊಂಡಿರುವುದೇ ಮೂರ್ಖತನ. ಜನರು ಅಷ್ಟರಮಟ್ಟಿಗೆ ವಿವೇಚನಾಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆಂದು ರಾಜಕೀಯ ಪಕ್ಷಗಳು ಭಾವಿಸಿರಬೇಕು ಎನ್ನದೇ ವಿಧಿಯಿಲ್ಲ.

ಈಗ ರಾಜಕೀಯ ಪಕ್ಷಗಳು ಹೊರತಂದಿರುವ ಪ್ರಣಾಳಿಕೆಯನ್ನು ಗಮನಿಸಿದರೆ ಗೋಚರವಾಗುವ ಸೂಕ್ಷ್ಮ ಅಂಶಗಳು ಜಾತಿ, ಧರ್ಮ, ವೃತ್ತಿ ಇವುಗಳನ್ನು ಕೇಂದ್ರೀಕರಿಸಿದವು. ಜಾತೀವಾರು ಅಂಕೆ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಸೆಳೆಯಲು ಒಂದಷ್ಟು ಆ ಜನಸಮುದಾಯದ ದೌರ್ಬಲ್ಯವನ್ನು ಹೆಕ್ಕಿ ತೆಗೆದು ತೋರಿಸುವುದು. ಇಂಥ ವೃತ್ತಿಯವರಿಗೆ ಇಂಥ ಲಾಭ ಕೊಡುತ್ತೇವೆ, ಸವಲತ್ತು ಒದಗಿಸುತ್ತೇವೆ ಎನ್ನುವುದು ಆಮಿಷವೇ ಹೊರತು ಬೇರೆ ಅಲ್ಲ.

ಹೊಟ್ಟೆತುಂಬಿಸಿಕೊಳ್ಳುವುದಕ್ಕೆ ಬೇಕಾಗುವಷ್ಟು ಧವಸ, ಧಾನ್ಯ. ಸೋಮಾರಿತನ ಹೋಗಲಾಡಿಸುವುದಕ್ಕೆ ಅಗತ್ಯವಿದ್ದಷ್ಟು ಕೆಲಸ, ತೀರಿಸಲು ಸಾಧ್ಯವಿದ್ದಷ್ಟೇ ಸಾಲ. ಇರಲು ಸೂರು, ಕುಡಿಯಲು ಶುದ್ಧವಾದ ನೀರು, ಶಿಕ್ಷಣ ಕೊಡುವ ಬದ್ಧತೆಯ ಭರವಸೆಗಳನ್ನು ಯಾವ ಪಕ್ಷವೂ ಕೊಡುವುದಿಲ್ಲ. ಲಕ್ಷ ಕೋಟಿ ಬಜೆಟ್ ಮಂಡಿಸಿದರೆ ಹಳ್ಳಿಯ ಸಾಮಾನ್ಯ ರೈತನ ಆರ್ಥಿಕ ಸಾಮರ್ಥ್ಯ ವೃದ್ಧಿಸುತ್ತದೆಯೇ? ವರ್ಷಕ್ಕೆ ಲಕ್ಷ ಲಕ್ಷ ಉದ್ಯೋಗ ಸೃಷ್ಟಿ ಎನ್ನುವುದು ಅದೆಷ್ಟು ಹಸಿ ಹಸಿ ಸುಳ್ಳು ?

ಇಷ್ಟಕ್ಕೂ ಜನ ಪ್ರಣಾಳಿಕೆಯನ್ನು ನಂಬಿ ತಮ್ಮನ್ನು ಅಧಿಕಾರಕ್ಕೆ ತರುತ್ತಾರೆ ಎಂದು ರಾಜಕೀಯ ಪಕ್ಷಗಳು ಭಾವಿಸಿರುವುದೇ ತಪ್ಪು. ಪ್ರಣಾಳಿಕೆಯನ್ನು ಜನ ಸೀರಿಯಸ್ಸಾಗಿ ಸ್ವೀಕರಿಸಿದ್ದರೆ ಈ ದೇಶದ ಚಿತ್ರಣವೇ ಎಂದೋ ಬದಲಾಗಿಬಿಡುತ್ತಿತ್ತು. ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನೂ ಅಧಿಕಾರಕ್ಕೆ ಬಂದಿದ್ದ ರಾಜಕೀಯ ಪಕ್ಷಗಳು ಈಡೇರಿಸಿದ್ದರೆ ಈಗ ಪ್ರಣಾಳಿಕೆ ಸಿದ್ಧಪಡಿಸುವುದಕ್ಕೂ ರಾಜಕೀಯ ಪಕ್ಷಗಳು ಪರದಾಡಬೇಕಾಗುತ್ತಿತ್ತು. ಈಗ ವಿಷಯಗಳಿಗೆ, ಸಮಸ್ಯೆಗಳಿಗೆ ಬರಗಾಲವಿಲ್ಲ ಎನ್ನುವುದರಿಂದ ಯಾವುದನ್ನು ಬಿಂಬಿಸಬೇಕು ಎನ್ನುವುದೇ ಪ್ರಣಾಳಿಕೆ ಸಿದ್ಧಪಡಿಸುವವರಿಗೆ ಪ್ರಯಾಸ.

ನಿಜಕ್ಕೂ ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹೊರಹಾಕಿರುವ ಪ್ರಣಾಳಿಕೆಯಲ್ಲಿ ವಾಸ್ತವಿಕತೆಗಿಂತಲೂ ಭ್ರಮಾತ್ಮಕ ಅಂಶಗಳಿಗೇ ಹೆಚ್ಚಿನ ಒತ್ತು ಕೊಟ್ಟಿವೆ. ಇದರಲ್ಲಿ ಎಲ್ಲ ಪಕ್ಷಗಳೂ ಸಮಾನ ಮನಸ್ಥಿತಿಯವು.

ಪಾಲಿಕೆ ಕ್ಯಾಂಟಿನ್‌ಗಳಲ್ಲಿ 1 ರೂಪಾಯಿಗೆ ಇಡ್ಲಿ, ರಾಗಿ ಮುದ್ದೆ, ರೊಟ್ಟಿ, 5 ರೂಪಾಯಿಗೆ ಅನ್ನ ಸಾಂಬಾರ್ ಘೋಷಣೆ ಮಾಡಲಾಗಿದೆ. kjp_bsy_manifestoರಾಜ್ಯದಲ್ಲಿ ಏಳು ನಗರ ಪಾಲಿಕೆಗಳಿವೆ. ಈ ಕ್ಯಾಂಟಿನ್‌ಗಳಲ್ಲಿ ಮಾತ್ರ ಅಗ್ಗದ ದರದಲ್ಲಿ ಊಟ, ತಿಂಡಿ. ನಗರಸಭೆ, ಪುರಸಭೆ, ಜಿಲ್ಲಾಪಂಚಾಯತ್, ತಾಲೂಕ ಪಂಚಾಯತ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ ಕಚೇರಿ ಹೀಗೆ ಉಳಿದ ಸರ್ಕಾರಿ ಕಚೇರಿ ಕ್ಯಾಂಟೀನ್‌ಗಳಿಗೂ ವಿಸ್ತರಿಸಿದ್ದರೆ ಆಗುತ್ತಿರಲಿಲ್ಲವೇ ಎಂದು ಕೇಳಿದರೆ ತಪ್ಪೇ? ಪ್ರಣಾಳಿಕೆಗಳೆಲ್ಲವೂ ಪಾರದರ್ಶಕವಲ್ಲ, ಅವುಗಳ ಹಿಂದೆ ಹಿಡನ್ ಅಜೆಂಡಾ ಇರುತ್ತದೆ. ಇದಕ್ಕೆ ಈ ಚುನಾವಣೆಯಲ್ಲಿ ಹೊರಬಿದ್ದಿರುವ ಪ್ರಣಾಳಿಕೆಗಳೂ ಹೊರತಲ್ಲ.

ಈ ಕಾರಣಕ್ಕಾಗಿಯೇ ಜನ ಪ್ರಣಾಳಿಕೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ, ಪರಿಗಣಿಸುವ ಅಗತ್ಯವೂ ಇಲ್ಲ. ಇದು ಸ್ವತ: ರಾಜಕೀಯ ಪಕ್ಷಗಳಿಗೂ ಗೊತ್ತಿದೆ. ಇಂದಿರಾ ಗಾಂಧಿ ಅವರ ಗರೀಬಿ ಹಠಾವೋ, ರೋಟಿ ಕಪಡಾ, ಮಖಾನ್ ಅತ್ಯಂತ ಜನಪ್ರಿಯ ಸ್ಲೋಗನ್‌ಗಳಾಗಿದ್ದವು. ಇದೇ ಹೆಸರಲ್ಲಿ ಸಿನಿಮಾಗಳೂ ಬಂದವು. ಹಿಂದೆ ರಾಜಕೀಯದವರನ್ನು ಸಿನಿಮಾದವರು ಅನುಸರಿಸುತ್ತಿದ್ದರು. ಈಗ ಸಿನಿಮಾದವರನ್ನು ರಾಜಕೀಯದವರು ಅನುಸರಿಸುತ್ತಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಮಗ್ಗುಲು ಬದಲಿಸುವಷ್ಟೇ ಸಲೀಸಾಗಿ ಪಕ್ಷ ಬದಲಿಸುತ್ತಾರೆ. ಇದನ್ನು ಜನ ಒಪ್ಪಿಕೊಳ್ಳಬೇಕು ಎನ್ನುವ ನಿರೀಕ್ಷೆಯೂ ಅವರದ್ದಾಗಿರುತ್ತದೆ ಎನ್ನುವುದೇ ತಮಾಷೆ.

ಇಂಥ ತಮಾಷೆಗಳ ಭಾಗ ಚುನಾವಣಾ ಪ್ರಣಾಳಿಕೆಗಳು ಎನ್ನುವುದೇ ದುರಂತ. ಮತದಾರನ ಆಯ್ಕೆಗೂ, ಪ್ರಣಾಳಿಕೆಗೂ ಏನೂ ಸಂಬಂಧವಿರದು ಎನ್ನುವ ವಾಸ್ತವವನ್ನು ಮರೆಯುವಂತಿಲ್ಲ.

ಜನ ಬುದ್ಧಿವಂತರೋ, ರಾಜಕಾರಣಿಗಳು ಬುದ್ಧಿವಂತರೋ?


– ಚಿದಂಬರ ಬೈಕಂಪಾಡಿ


 

ಜನ ಬುದ್ಧಿವಂತರೋ, ರಾಜಕಾರಣಿಗಳು ಬುದ್ಧಿವಂತರೋ ?- ಇಂಥ ಪ್ರಶ್ನೆ ಕೇಳುವ ಅನಿವಾರ್ಯತೆಗೂ ಕಾರಣವಿದೆ. ಮತಹಾಕುವ ಜನ ಬಾಯಿಬಿಟ್ಟು ಇಂಥದ್ದೇ ಪಕ್ಷಕ್ಕೆ ಎಂದಾಗಲೀ, ಈ ಅಭ್ಯರ್ಥಿಗೆ ಅಂತಾಗಲೀ ನಿರ್ದಿಷ್ಟವಾಗಿ ಹೇಳುವುದಿಲ್ಲ. ಯಾರು ಕೇಳಿದರೂ ನಿಮ್ಮ ಪಕ್ಷಕ್ಕೇ ನಮ್ಮ ಮತ ಅಂತಲೋ, ನಿಮಗೇ ನಮ್ಮವರ ಮತವೆಂದೋ ಹೇಳುತ್ತಾರೆ. ಆದರೆ ಅವರ ಆಯ್ಕೆ ಯಾವುದಾದರೂ ಒಂದು ಆಗಿರುತ್ತದೆ.

ಹಾಗೆಯೇ ರಾಜಕಾರಣಿಗಳು ಅಪ್ಪಿ ತಪ್ಪಿ ಜನರ ಸಮಸ್ಯೆಗಳನ್ನು ಆಧರಿಸಿ ಮತ ಕೇಳುವುದಿಲ್ಲ. ತಮ್ಮ ಪಕ್ಷ, ತಮ್ಮ ನಾಯಕರ ವರ್ಚಸ್ಸು, ಅವರ ಸಾಧನೆಯನ್ನು ಹೇಳಿಕೊಂಡು ಮತಯಾಚನೆ ಮಾಡುತ್ತಾರೆ.

ಜನರು ತಮ್ಮ ಮತ ಯಾರಿಗೆ ಎಂದು ಗುಟ್ಟು ಬಿಡದಿರುವುದಕ್ಕೆ ತನ್ನ ಮತದ ಪಾವಿತ್ರ್ಯತೆ ಉಳಿಸಿಕೊಳ್ಳುವುದು. ಆದರೆ ರಾಜಕಾರಣಿಗಳು ಜನರ ಸಮಸ್ಯೆಗಳ ಹಿನ್ನೆಲೆಯಲ್ಲಿ ಮತ ಕೇಳದಿರುವುದಕ್ಕೆ ಅವುಗಳನ್ನು ನಿವಾರಿಸಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟವಾದ ಅರಿವಿನಿಂದ. ಜನರಿಗೆ ಬೇಕಾಗಿರುವವರು ತಮ್ಮ ಸಮಸ್ಯೆಗಳಿಗೆ ಕಿವಿಯಾಗುವವರು, voteತಮಗೆ ಧ್ವನಿಯಾಗುವವರು. ಕಿವಿಯಾಗದವರು, ಧ್ವನಿಯಾಗದವರು ಕೇವಲ ಭಾಷಣ ಮಾಡಿಯೇ ರಾಜಕಾರಣದಲ್ಲಿ ಚಲಾವಣೆಯಲ್ಲಿರುತ್ತಾರೆ. ಆದರೆ ಇಂಥವರನ್ನು ಜನ ಒಂದಲ್ಲಾ ಒಂದು ಸಲ ಗುರುತಿಸಿ ಮನೆಗೆ ಕಳುಹಿಸುತ್ತಾರೆ. ಅಂಥ ಎಚ್ಚರಿಕೆ ಸಂದೇಶ ಚುನಾವಣೆಯ ಮೂಲಕ ರವಾನೆಯಾದಾಗ ಮಾತ್ರ ಜನ ನಿರೀಕ್ಷೆ ಮಾಡಲು ಅವಕಾಶವಾಗುತ್ತದೆ.

ರಾಜ್ಯದ 224 ಕ್ಷೇತ್ರಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ಜನ ನಿರ್ಧರಿಸುವ ಮುನ್ನವೇ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ಯಾರು ಮುಖ್ಯಮಂತ್ರಿಯಾಗುತ್ತಾರೆಂದು ಮಾಧ್ಯಮಗಳು ಭವಿಷ್ಯ ನುಡಿದಿವೆ. ಚುನಾವಣೆಗೂ ಮುನ್ನವೇ ಬರುತ್ತಿರುವ ಇಂಥ ಜನಮತವನ್ನು ರಾಜಕೀಯ ಪಕ್ಷಗಳು ಯಾವರೀತಿ ಸ್ವೀಕರಿಸುತ್ತಿವೆ ಎನ್ನುವುದೂ ಮುಖ್ಯ.

ಜನಮತ ತಮ್ಮ ಪರವಾಗಿ ಬಂದಿದ್ದರೆ ಖುಷಿ ಪಡುತ್ತಾರೆ, ವಿರುದ್ಧವಾಗಿ ಬಂದಿದ್ದರೆ ಕೆಂಡಕಾರುತ್ತಾರೆ. ಮತದಾರನ ಮನದಾಳವನ್ನು ಮಾಧ್ಯಗಳು ಅರ್ಥಮಾಡಿಕೊಂಡಿರುವುದಾಗಿ ಹೇಳುತ್ತಿರುವುದು ಅದು ಆ ಮಾಧ್ಯಮಗಳ ವೈಯಕ್ತಿಕವಾದ ನಿಲುವು ಮತ್ತು ಅದು ನಿಜವಾದ ಜನಮತಕ್ಕೆ ಹತ್ತಿರವಿರಬಹುದು, ಇಲ್ಲದೆಯೂ ಇರಬಹುದು.
ರಾಜಕೀಯದಲ್ಲಿ ಟ್ರೆಂಡ್ ಎನ್ನುವ ಪದ ಬಹಳಷ್ಟು ಬಳಕೆಯಲ್ಲಿದೆ. ಟ್ರೆಂಡ್ ಶಾಶ್ವತವಲ್ಲ. ಕ್ಷಣ ಕ್ಷಣಕ್ಕೆ ಬದಲಾವಣೆಯಾಗುತ್ತಿರುತ್ತದೆ. ಒಂದು ದಿನದಲ್ಲಿ ಒಂದು ಪಕ್ಷ ಅಥವಾ ಅಭ್ಯರ್ಥಿಯ ಪರ ಜನರಿಗಿರುವ ಒಲವು ಮತ್ತೊಂದು ದಿನದಲ್ಲೂ ಹಾಗೆಯೇ ಇರುವುದಿಲ್ಲ. ಏರಿಳಿತವಾಗಬಹುದು, ಏರಿಕೆಯೇ ಹೆಚ್ಚಾಗಿರಬಹುದು, ಇಳಿಕೆಯೇ ಅತಿಯಾಗಿರಬಹುದು. ಈ ಟ್ರೆಂಡ್ ಶಾಶ್ವತವಲ್ಲದ ಕಾರಣ ಅದನ್ನೇ ಪೂರ್ಣವಾಗಿ ನಂಬುವಂತಿಲ್ಲ.

ಈಗಿನ ರಾಜಕಾರಣದಲ್ಲಿ ಟ್ರೆಂಡ್‌ಗಳ ಹಾವಳಿ ಹೆಚ್ಚಾಗಿದೆ. ಇದನ್ನು ನಂಬಿಯೇ ವಾಸ್ತವವನ್ನು ಮರೆತು ಭ್ರಮೆಗೆ ಒಳಗಾಗುತ್ತಾರೆ. INDIA-ELECTIONಈ ಭ್ರಮೆಗಳ ಭರಾಟೆ ರಾಜಕಾರಣಿಗಳು ಮೈಮರೆಯುವಂತೆ ಮಾಡುತ್ತಿವೆ ಎನ್ನುವುದನ್ನು ಮರೆಯುವಂತಿಲ್ಲ. ಚುನಾವಣಾ ಪೂರ್ವ ಸಮೀಕ್ಷೆ ನಿರ್ದಿಷ್ಟವಾಗಿ ಒಂದು ಪಕ್ಷದ ಪರವಾಗಿ ಬಂದಿದ್ದರೂ ಅದು ಪ್ರೀಮೆಚೂರ್.

ನಿರ್ದಿಷ್ಟವಾಗಿ ಗೆಲ್ಲುವ, ಅಧಿಕಾರಕ್ಕೇರುವ ಪಕ್ಷವನ್ನು ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವನ್ನು ಮಾನದಂಡವಾಗಿಟ್ಟುಕೊಂಡು ಆ ದಿನ ಊಹಿಸಿದ್ದಾಗಿನ ಸ್ಥಿತಿ ಟಿಕೆಟ್ ಹಂಚಿಕೆ ಕಾಲಕ್ಕೆ ಬದಲಾಗಿದೆ. ಅಭ್ಯರ್ಥಿಗಳು ಕಣಕ್ಕಿಳಿಯುವ ತವಕದಲ್ಲಿರುವ ಈ ಹಂತದಲ್ಲಿ ಕಾಣುತ್ತಿರುವ ಟ್ರೆಂಡ್ ಆಧರಿಸಿ ಏನನ್ನೂ ಹೇಳುವಂತಿಲ್ಲ. ಯಾವುದೇ ಪಕ್ಷ ಗೆಲುವನ್ನು ಬಯಸುವುದು ತಪ್ಪಲ್ಲ. ಸ್ಪರ್ಧೆ ಮಾಡುವುದು ಗೆಲ್ಲಬೇಕು ಎನ್ನುವ ಉದ್ದೇಶದಿಂದಲೇ ಆದರೂ ಮತದಾರರು ಮನಸ್ಸು ಮಾಡಬೇಕು. ಮತದಾರನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುವುದಾದರೆ ಅವನ ಮುಂದಿರುವ ಆಯ್ಕೆಯ ಮಾನದಂಡಗಳೇ ಬೇರೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣಗಳನ್ನು ಬದಿಗಿಟ್ಟು ತನ್ನ ಆಯ್ಕೆ ಏನೆಂದು ನಿರ್ಧರಿಸಲು ಮತದಾರ ತಿಣುಕಾಡುತ್ತಿದ್ದಾನೆ. ಅವನ ಆಶೋತ್ತರಗಳಿಗೆ ಸ್ಪಂದಿಸುವ ಅಭ್ಯರ್ಥಿಯನ್ನು ಕಣದಲ್ಲಿದ್ದವರ ಪೈಕಿ ಅನಿವಾರ್ಯವಾಗಿ ಆಯ್ಕೆ ಮಾಡಬೇಕಾಗಿದೆ. ಅಂಥ ಮುಖಗಳು ಇನ್ನಷ್ಟೇ ಅನಾವರಣವಾಗಬೇಕಿದೆ. vote-participate-democracyಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮೇಲೆ ಜನ ಒಲವು ತೋರಿಸಿರುವುದು ನಿಜವಾದರೂ ಆ ಒಲವಿನ ಹಿಂದೆ ತೀರಾ ಖಾಸಗಿತನವಿತ್ತು. ತನ್ನ ಪರಿಸರವನ್ನು ಗಮನದಲ್ಲಿಟ್ಟುಕೊಂಡೇ ಮತಚಲಾಯಿಸಿದ್ದ. ಆದರೆ ವಿಧಾನ ಸಭೆಯಲ್ಲಿ ಅಂಥ ಸ್ಥಿತಿ ಇಲ್ಲ. ಪಕ್ಷ, ಜಾತಿ, ಅಭ್ಯರ್ಥಿಯ ಪ್ರಭಾವಗಳೂ ಮುಖ್ಯವಾಗುತ್ತವೆ. ಬಿಜೆಪಿ, ಕೆಜೆಪಿ, ಜೆಡಿಎಸ್, ಕಾಂಗ್ರೆಸ್, ಬಿಎಸ್‌ಆರ್, ಈ ಐದೂ ಪಕ್ಷಗಳು ತಮ್ಮ ತಮ್ಮ ಅಜೆಂಡಾವನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತವೆ. ಎಲ್ಲಾ ಪಕ್ಷಗಳಲ್ಲೂ ಬಂಡಾಯವಿದೆ, ಜೊತೆಗೆ ಪಕ್ಷೇತರರ ಸ್ಪರ್ಧೆಯೂ ಇದೆ. ಏಕಗಂಟಿನಲ್ಲಿ ಮತಗಳು ಯಾವ ಪಕ್ಷಕ್ಕೂ ಬೀಳುವುದಿಲ್ಲ. ಯಾಕೆಂದರೆ ಅವರ ಮುಂದೆ ಆಯ್ಕೆಗೆ ಹಲವು ಮುಖಗಳಿವೆ. ಜಾತಿ, ಧರ್ಮ, ಭಾಷೆ, ಹಣ, ಪಕ್ಷ ಇವುಗಳ ಆಧಾರದಲ್ಲಿ ಹಂಚಿಕೆಯಾಗುತ್ತವೆ. ಹೀಗಾಗಬಾರದು ಎನ್ನುವುದು ನಿರೀಕ್ಷೆಯಾದರೂ ಹಾಗೆ ಆಗುವುದು ಈಗಿನ ರಾಜಕೀಯದ ಅನಿವಾರ್ಯತೆ, ಪರಿಸ್ಥಿತಿಯ ಒತ್ತಡ. ಮತದಾರನ ಕಣ್ಣಮುಂದಿರುವ ಅಭ್ಯರ್ಥಿಗೆ ಗೆಲುವು ಅನಿವಾರ್ಯವಾದರೂ ಅವನಿಗೆ ಎಲ್ಲರೂ ಅನಿವಾರ್ಯವಲ್ಲ.

ಪಕ್ಷಕ್ಕೆ ಗೆದ್ದು ಅಧಿಕಾರಕ್ಕೇರುವುದೇ ಮುಖ್ಯಹೊರತು ಇಂಥವರೇ ಗೆಲ್ಲಬೇಕೆಂಬ ಸ್ವಾರ್ಥವಿಲ್ಲ. ಆದರೆ ನಾಯಕರಿಗೆ ತಮ್ಮದೇ ಆದ ಹಿಡನ್ ಅಜೆಂಡಾಗಳಿರುತ್ತವೆ. ತನ್ನ ಬೆಂಬಲಿಗರು ಗೆದ್ದು ಬರಬೇಕು ಎನ್ನುವ ಸ್ವಾರ್ಥ ಹೆಡೆಯೆತ್ತಿರುತ್ತದೆ. ಈ ಕಾರಣದಿಂದಲೇ ಪಕ್ಷಗಳಲ್ಲಿ ನಾಯಕರೊಳಗೇ ಆಂತರಿಕವಾದ ಲೆಕ್ಕಾಚಾರಗಳಿರುತ್ತವೆ. ಕೆಲವು ಆಯಕಟ್ಟಿನ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎನ್ನುವ ಅರಿವಿದ್ದೇ ಕಣಕ್ಕಿಳಿಸುವ ತಂತ್ರಗಾರಿಕೆಯೂ ಈಗಿನ ರಾಜಕೀಯದ ಒಳಸುಳಿ.

ಇಂಥ ತಾಜಾಸ್ಥಿತಿ ರಾಜಕೀಯದಲ್ಲಿರುವುದರಿಂದಲೇ ಮತದಾರ ಯಾರನ್ನು ಬೆಂಬಲಿಸುತ್ತಾನೆ ಎನ್ನುವುದು ಇನ್ನೂ ಅನಿಶ್ಚಿತ. ಟಿಕೆಟ್ ಹಂಚಿಕೆಯ ನಂತರದ ರಾಜಕೀಯ ಸ್ಥಿತಿ ನಿರ್ಣಾಯಕ ಪಾತ್ರವಹಿಸುತ್ತದೆ. ಈ ಚುನಾವಣೆಯಲ್ಲೂ ಬಂಡಾಯ ಈಗಿನ ಟ್ರೆಂಡ್. ಅದು ಹುಟ್ಟುಹಾಕುವ ಅಲೆಗಳು ಪೂರ್ವನಿರ್ಧಾರಿತ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತದೆ. ಹೀಗಾಗುವುದು ರಾಜಕೀಯ ಪಕ್ಷಗಳ ನಾಯಕರುಗಳ ಸ್ವಯಂಕೃತ ಅಪರಾಧ ಹೊರತು ಮತದಾರ ಕೊಡುವ ತೀರ್ಮಾನವಲ್ಲ. ಮತದಾರನ ಇಂಗಿತವನ್ನು ಅರ್ಥಮಾಡಿಕೊಳ್ಳದ ರಾಜಕೀಯ ಪಕ್ಷ, ನಾಯಕರು ಸೋಲಿಗೆ ಕಾರಣರಾಗುತ್ತಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ಬಂದಿರುವ ಪಕ್ಷೇತರರ ಸಂಖ್ಯೆ ಈ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿಕ್ಸೂಚಿಯ ಟ್ರೆಂಡ್. ಬಂಡಾಯ ಎದ್ದಷ್ಟೂ ಅಪಾಯ ಆ ಪಕ್ಷಕ್ಕೆ. ಇದು ರಾಜಕೀಯ ಪಕ್ಷಗಳ ನಾಯಕರುಗಳಿಗೂ ಗೊತ್ತಿದೆ. ಆದರೂ ಜಾಣಕುರುಡುತನ ಪ್ರದರ್ಶಿಸುವುದು ಅವರ ಚತುರತೆಯಲ್ಲ.

ಕುರಿಮಂದೆಯ ಹಿಂದೆ-ಮುಂದೆ ಎಂಥವರಿರಬೇಕು ?


– ಚಿದಂಬರ ಬೈಕಂಪಾಡಿ


 

ರಾಜಕಾರಣಿಗಳ ಹಿಂದೆ ಮತದಾರರೆಲ್ಲಾ ಕುರಿಮಂದೆ ಎನ್ನುವ ಮೂಲಕ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ತಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದಾರೆ. ಕಾಟ್ಜು ಅವರ ಹೇಳಿಕೆಯಿಂದ ಎರಡು ರೀತಿಯ ಪರಿಣಾಮ ಗುರುತಿಸಬಹುದು. ಹೀಗೆ ಹೇಳಿದ್ದು ಸರಿಯಲ್ಲ, ಮತದಾರರಿಗೆ ಅವಮಾನ ಎನ್ನುವುದು ಮತ್ತು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, ಕಟುಸತ್ಯವನ್ನೇ ಹೇಳಿದ್ದಾರೆ ಎನ್ನುವುದು. ಇಂಥ ಚರ್ಚೆಗೆ ಕಾರಣವಾಗುವ ಅಂಶ ಹೇಳಿಕೆ ಕೊಟ್ಟ ವ್ಯಕ್ತಿಯ ಸ್ಥಾನಮಾನ.JUDGE MARKANDEY KATJU_1 ಇದೇ ಹೇಳಿಕೆಯನ್ನು ದಾರಿಹೋಕ ಹೇಳಿದ್ದರೆ ಅಥವಾ ಹೊಲದಲ್ಲಿ ಉಳುವ ರೈತ ಆಡಿದ್ದರೆ, ಹೊತ್ತು ಕಳೆಯುವುದಕ್ಕಾಗಿ ಹರಳಿಕಟ್ಟೆಯ ಮೇಲೆ ಕುಳಿತು ಹರಟೆ ಹೊಡೆಯುವ ಮಂದಿ ಹೇಳಿದ್ದರೆ ಇಷ್ಟೊಂದು ಮಹತ್ವ ಪಡೆಯುತ್ತಿರಲಿಲ್ಲ. ಆದ್ದರಿಂದ ಕಾಟ್ಜು ಅವರು ಹೇಳಿರುವ ಈ ಮಾತುಗಳನ್ನು ಈ ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಕನಿಷ್ಟ ಒಂದಿಬ್ಬರಾದರೂ ಹಿಂದೆ ಹೇಳಿರುತ್ತಾರೆ, ಈಗಲೂ ಅದನ್ನೇ ಹೇಳುತ್ತಾರೆ. ಆದರೆ ಅವರ ಹೇಳಿಕೆಗೆ ಮನ್ನಣೆ ಸಿಗುವುದಿಲ್ಲ. ಕಾಟ್ಜು ಹೇಳಿರುವುದರಿಂದ ಮಾತ್ರ ಸುದ್ದಿಯಾಗಿದೆ, ಚರ್ಚೆಯಾಗುತ್ತಿದೆ ಹೊರತು ಇದೇ ಮಾತನ್ನು ಸಾಮಾನ್ಯ ಜನ ಹೇಳಿದ್ದರೆ ಮಾಧ್ಯಮಗಳಿಗೆ ಅದು ಸುದ್ದಿಯೂ ಅಲ್ಲ, ಮನ್ನಣೆಯೂ ಸಿಗುತ್ತಿರಲಿಲ್ಲ. ದಿನದ ಮಟ್ಟಿಗೆ ಮಾಧ್ಯಮಗಳಿಗೆ ಹೆಡ್‌ಲೈನ್ ಸುದ್ದಿ. ಈ ಹೇಳಿಕೆಯ ಮುಂದುವರಿದ ಭಾಗವಾಗಿ ಇನ್ನು ಯಾರೇ ಹೇಳಿದರೂ ಆ ವ್ಯಕ್ತಿಯ ಸ್ಥಾನ ಮಾನ ಆಧರಿಸಿ ಮಾಧ್ಯಮಗಳಲ್ಲಿ ಸ್ಥಾನ ಸಿಗಬಹುದೇ ಹೊರತು ಇದಕ್ಕಿಂತ ಹೆಚ್ಚೇನೂ ಆಗುವುದಿಲ್ಲ.

ಈಗ ಜಾತಿ, ಧರ್ಮದ ಹಿನ್ನೆಲೆಯಲ್ಲಿ ಮತದಾರರು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ. ಇದನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಅಭ್ಯರ್ಥಿಯ ಆಯ್ಕೆಗೆ ಮಾನದಂಡಗಳಲ್ಲಿ ಅವನ ಜಾತಿ, ಧರ್ಮ ಮುಖ್ಯವಾಗಿರುತ್ತವೆ. ಇಂಥ ಜಾತಿಗೆ ಇಂತಿಷ್ಟು ಸ್ಥಾನ ಕೊಡಬೇಕು ಎನ್ನುವುದು ರಾಜಕೀಯ ಪಕ್ಷಗಳ ಆಶಯಾವಾಗಿದ್ದರೆ ತಮ್ಮ ಜಾತಿಯ ಜನಸಂಖ್ಯಾಬಲದ ಆಧಾರದಲ್ಲಿ ಇಂತಿಷ್ಟು ಸ್ಥಾನಗಳು ಸಿಗಲೇ ಬೇಕು ಎನ್ನುವ ಹಕ್ಕೊತ್ತಾಯಗಳನ್ನು ಬಹಿರಂಗವಾಗಿಯೇ ಮಾಡುತ್ತಿಲ್ಲವೇ? ಹಾಗೊಂದು ವೇಳೆ ಸ್ಥಾನಗಳನ್ನು ಕೊಡದಿದ್ದರೆ ಬಂಡಾಯವೇಳುತ್ತಿಲ್ಲವೇ? ಜಾತಿಯ ಆಧಾರದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಚುನಾವಣೆಗೆ ಸ್ಪರ್ಧಿಸಿದಾಗ ಜನ ಮತಹಾಕುವಾಗ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ ಎನ್ನಲಾಗದು. ಆದರೆ ಅವರ ಕಣ್ಣಮುಂದಿರುವ ವಿಭಿನ್ನ ಜಾತಿಗಳ ಅಭ್ಯರ್ಥಿಗಳ ಪೈಕಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಆ ಆಯ್ಕೆ ಜಾತಿಯ, ಧರ್ಮದ ಆಧಾರದಲ್ಲಿ ಜನ ಮಾಡುತ್ತಾರೆ ಎನ್ನಲಾಗದು. ಮತ ಹಾಕಲೇ ಬೇಕಾದ ಅನಿವಾರ್ಯತೆಯಲ್ಲಿ ಮತದಾರರು ಕುರಿಮಂದೆಯಾಗುತ್ತಾರೆ. ಆದ್ದರಿಂದ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತಿ, ಧರ್ಮದ ಮಾನದಂಡ ಬಳಸದೇ ಕಣಕ್ಕಿಳಿಸುವುದು ಸಾಧ್ಯವೇ? ಜಾತಿ ಮತ್ತು ಧರ್ಮವನ್ನು ಬಿಟ್ಟು ಆತನ ಸಮಾಜ ಸೇವೆ, ಅವನಿಗಿರುವ ಬದ್ಧತೆ, ಕಳಕಳಿ, ಸೈದ್ಧಾಂತಿಕ ಹಿನ್ನೆಲೆ ಇವುಗಳನ್ನು ಮಾನದಂಡವಾಗಿಟ್ಟುಕೊಂಡು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಂಥ ವ್ಯವಸ್ಥೆ ಜಾರಿಗೆ ತರುವುದು ಸುಲಭ ಸಾಧ್ಯವೇ?

ಸಾಮಾಜಿಕ ನ್ಯಾಯದಾನ ನಿರ್ಧಾರದ ಮಾನದಂಡ ಯಾವುದು? ಜಾತಿಯನ್ನು ಹೊರತು ಪಡಿಸಿ ಸಾಮಾಜಿಕ ನ್ಯಾಯದಾನದ ಮಾನದಂಡವಿದ್ದರೆ, ಕೇವಲ ಆರ್ಥಿಕ ಶಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಸಾಮಾಜಿಕ ನ್ಯಾಯದಾನ ಮಾಡುವ ವ್ಯವಸ್ಥೆಯಿದ್ದಿದ್ದರೆ ಬೇರೆಯೇ ಮಾತು. ಈಗ ಯಾವುದೇ ಹಂತದಲ್ಲೂ ಜಾತಿ ಮತ್ತು ಧರ್ಮವನ್ನು ಪಕ್ಕದಲ್ಲಿಟ್ಟುಕೊಂಡೇ ಸಾಮಾಜಿಕ ನ್ಯಾಯದಾನದ ವ್ಯಾಖ್ಯಾಯನ ಕೊಡುತ್ತಿರುವುದರಿಂದ ಬೇರ್ಪಡಿಸುವುದು ಹೇಗೆ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ನಡೆಯುತ್ತಿರುವ ಆಯ್ಕೆಯ ಮೂಲವನ್ನೇ ಪ್ರಶ್ನಿಸಿರುವ ಕಾಟ್ಜು ತಾವು ಅಂಥವರನ್ನು ಆಯ್ಕೆ ಮಾಡಲು ಮತ ಚಲಾಯಿಸುವುದಿಲ್ಲವೆಂದಿದ್ದಾರೆ. ಎಲ್ಲರೂ ಹೀಗೆಯೇ ಯೋಚಿಸಿದರೆ ನಿಜಕ್ಕೂ ಬದಲಾವಣೆ ನಿಶ್ಚಿತ. ಹೀಗೆ ಯೋಚಿಸುವ ಸಾಮರ್ಥ್ಯವನ್ನು ಈಗ ಅವರೇ ಹೇಳಿರುವಂಥ ಶೇ.90ರಷ್ಟು ಮಂದಿ ಮತದಾರರು ಹೊಂದಿದ್ದಾರೆಯೇ? karnataka_womenಕನಿಷ್ಠ ಹೀಗೆ ಯೋಚಿಸುವ ಮಂದಿಯಾದರೂ ಚುನಾವಣಾ ಕಣಕ್ಕೆ ಇಳಿಯುತ್ತಾರೆಯೇ? ಅಂಥವರನ್ನೇ ರಾಜಕೀಯ ಪಕ್ಷಗಳು ಕಣಕ್ಕಿಳಿಸುತ್ತವೆಯೇ? ಹೆಣ್ಣೊಬ್ಬಳು ಅಕ್ಷರ ಕಲಿತರೆ ಆಕೆ ಒಂದು ಶಾಲೆಗೆ ಸಮಾನ. ಯಾಕೆಂದರೆ ಆಕೆ ಆ ಮನೆಯ ಇತರರಿಗೂ ಕಲಿಸುತ್ತಾಳೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅದೆಂಥಾ ಅದ್ಭುತವಾದ ಕಲ್ಪನೆ? ಈ ಕಲ್ಪನೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳಾಗಿದ್ದರೂ ಇನ್ನೂ ಕಲ್ಪನೆಯಾಗಿಯೇ ಉಳಿದಿದೆ ಅನ್ನಿಸುತ್ತಿಲ್ಲವೇ? ಕಲಿತ ಹೆಣ್ಣು ಮಕ್ಕಳು ತಮ್ಮ ನೆಯಲ್ಲಿ ಈಗ ಮಕ್ಕಳಿಗೆ ಕಲಿಸುತ್ತಾರೆಯೇ? ಬಾಲವಾಡಿ, ಅಂಗನವಾಡಿ, ಕಿಂಡರ್ ಗಾರ್ಡನ್, ಮನೆ ಪಾಠ, ಟ್ಯೂಷನ್, ವ್ಯಕ್ತಿತ್ವ ವಿಕಸನ ಹೀಗೆ ಏನೇನೋ ತೆರೆದುಕೊಂಡಿವೆಯಲ್ಲಾ ಅವುಗಳಿಗೆ ಮೊರೆಹೋಗಿ ನಮ್ಮ ಹೆಣ್ಣು ಮಕ್ಕಳು ಜವಾಬ್ದಾರಿ ನಿಭಾಯಿಸುತ್ತಿಲ್ಲ ಅನ್ನಿಸುತ್ತಿಲ್ಲವೇ?

ಇಷ್ಟಕ್ಕೂ ಓದು ಬರಹದ ಅನಿವಾರ್ಯತೆಗೆ ಒಳಗಾಗಿರುವವರು ಯಾರು? ಕುರಿ ಮೇಯಿಸುವ ಕರಿಯ, ಕೂಲಿ ಮಾಡುವ ಬಸ್ಯ, ಈರವ್ವ, ಹೊಲ ಉಳುವ ಅಣ್ಣಪ್ಪ ಇಂಥವರೇ ಈ ದೇಶದಲ್ಲಿ ಶೇ.70 ಮಂದಿಯಿದ್ದಾರೆ. ಅವರಿಗೆ ಶಾಲೆ, ಮೇಸ್ಟ್ರು, ಪುಸ್ತಕ ಹೇಗೆ ಗೊತ್ತಿರಬೇಕು? ಊರಿಗೆ ಶಾಲೆ ಬೇಕು, ಕುಡಿಯಲು ನೀರು ಬೇಕು, ರಸ್ತೆ, ವಿದ್ಯುತ್ ವ್ಯವಸ್ಥೆ ಬೇಕೇ ಬೇಕೆಂದು ಹಕ್ಕಿನಿಂದ ಕೇಳುವವರು ಎಷ್ಟು ಮಂದಿಯಿದ್ದಾರೆ ಈ ದೇಶದಲ್ಲಿ? ಅವರು ಕೇಳುವುದಿಲ್ಲ, ಆದರೆ ಈ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎನ್ನುವ ಕಾಳಜಿಯಿದ್ದವರು ಅವರ ಪ್ರತಿನಿಧಿಗಳಾಗಿ ಆರಿಸಿಹೋಗಿದ್ದರೆ ಅವರಾದರೂ ಮಾಡಬೇಕಿತ್ತಲ್ಲಾ? ಹಾಗಾದರೆ ಆರು ದಶಕಗಳಲ್ಲಿ ಅವರು ಆರಿಸಿಕಳುಹಿಸಿದವರು ಏನು ಮಾಡಿದರು? ಅವರೇ ಅಲ್ಲವೇ ಮತ್ತೆ ನಾಳೆಯೂ ಆಯ್ಕೆಯಾಗಲು ತುದಿಗಾಲಲ್ಲಿ ನಿಂತವರು ಅಥವಾ ಅವರ ಮಗ, ಮಗಳು, ಅಳಿಯ, ರಕ್ತ ಸಂಬಂಧಿ, ಇಲ್ಲವೇ ಅವರ ಜಾತಿಯವರು, ಧರ್ಮದವರು.

ಬಯಲು ಶೌಚಾಲಯ ನಿರ್ಮೂಲನೆಗೆ ಶೌಚಾಲಯ ನಿರ್ಮಿಸಲು ಮನಸ್ಸು ಮಾಡದವರು ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ adivasi-militant-women-maoist-naxalite-kishenji-kishanji1ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತಾರಲ್ಲಾ ಅವರು ಸಾಮಾನ್ಯರೇ? ಅವರನ್ನು ಪ್ರಶ್ನೆ ಮಾಡುವ ಸಾಮರ್ಥ್ಯವಾದರೂ ಅಲ್ಲಿನ ಜನರಿಗಿದೆಯೇ? ಹಾಗೊಂದು ವೇಳೆ ಪ್ರಶ್ನೆ ಮಾಡಿದವರನ್ನು ಸುಮ್ಮನೆ ಬಿಡುವರೇ? ಪಡಿತರ ಅಂಗಡಿಗಳಿಲ್ಲದಿದ್ದರೂ ಸಾರಾಯಿ ಅಂಗಡಿಗಳಿವೆಯಲ್ಲವೇ? ಇದನ್ನು ಯಾಕೆಂದು ಕೇಳುತ್ತಾರೆಯೇ?

ಕಾಟ್ಜು ಅವರು ಮತಚಲಾಯಿಸುವ ಶೇ.90 ಮಂದಿಯಲ್ಲಿ ತಾವೂ ಒಬ್ಬರಾಗಲು ಬಯಸುವುದಿಲ್ಲವೆಂದಿದ್ದಾರೆ. ಅವರು ಅವರಲ್ಲಿ ಒಬ್ಬರಾಗಬಾರದು ನಿಜ. ಆದರೆ ಅಷ್ಟೂ ಮಂದಿಯೂ ಕುರಿಮಂದೆಯೆನ್ನಲಾಗದು. ಬಹುಪಾಲು ಎನ್ನುವುದನ್ನು ಒಪ್ಪುವುದು ಅಪರಾಧವಲ್ಲ. ಚುನಾವಣೆಯಲ್ಲಿ ಕೆಲಸ ಮಾಡುವುದೆಂದರೆ ಕೂಲಿ ಮಾಡಿದಂತೆ. ನಿರ್ದಿಷ್ಟ ಕೆಲಸಕ್ಕೆ ನಿರ್ದಿಷ್ಟ ಸಂಬಳ. ಐದುವರ್ಷಕ್ಕೊಮ್ಮೆ ಬರುವ ಇಂಥ ದಿನಗಳನ್ನು ಕಾತುರದಿಂದ ಕಾಯುವವರಿರುತ್ತಾರೆ. ಅವರಿಗೆ ಈ ಅವಧಿ ಸುಗ್ಗಿಯಂತೆ.

ಈ ಎಲ್ಲಾ ಅಂಶಗಳನ್ನು ಅಂಗೈಯ್ಯಲ್ಲಿಟ್ಟುಕೊಂಡು ವಿಶ್ಲೇಷಿಸಿದರೆ ಮಾರ್ಕಂಡೇಯ ಕಾಟ್ಜು ಹೊರಹಾಕಿರುವ ಅಸಮಾಧಾನ ಸರಿಯಾದುದೇ, ಆದರೆ ಅದಕ್ಕೆ ಹೊಣೆ ಯಾರು ಎನ್ನುವುದು ಪ್ರಶ್ನೆಯಾಗಿ ಉಳಿದುಬಿಡುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದ ಶಾಸಕಾಂಗ ತನಗೆ ತಾನೇ ನೀತಿಸಂಹಿತೆ ಹಾಕಿಕೊಳ್ಳಬೇಕು. ವಿಧಾನ ಸೌಧ ಪ್ರವೇಶಿಸುವವರು ಹೇಗಿರಬೇಕೆಂದು ಮಾನದಂಡವೇ ಇಲ್ಲದಿದ್ದರೆ ಮತಹಾಕುವ ಮಂದಿ ಅನಿವಾರ್ಯವಾಗಿ ಅವರೊಳಗೇ ಆಯ್ಕೆ ಮಾಡಬೇಕಾಗುತ್ತದೆ. ಅಭ್ಯರ್ಥಿಗಳಾಗುವವರಿಗೆ ಸರಿಯಾದ ಮಾನದಂಡ ಫಿಕ್ಸ್ ಆಗಬೇಕು. ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವೇ?vote ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಸ್ಪರ್ಧೆಗೆ ಅವಕಾಶವಿಲ್ಲ ಎನ್ನುವುದನ್ನು ಮತ್ತಷ್ಟು ವಿವರವಾಗಿ ಚರ್ಚಿಸಿ ಈಗ ಇರುವ ವ್ಯಾಖ್ಯಾನವನ್ನು ಮರುಪರಿಶೀಲಿಸಿದರೆ ಶೇ.50 ರಷ್ಟು ತಿಳಿಯಾಗುತ್ತದೆ. ಕ್ರಿಮಿನಲ್ ಎನ್ನುವುದು ಕಾರ್ಯತ:, ಆದರೆ ಮಾನಸಿಕವಾಗಿ ಕ್ರಿಮಿನಲ್ ಆಗಿರುವುದು ತುಂಬಾ ಅಪಾಯಕಾರಿ. ಆದ್ದರಿಂದ ಕಾಟ್ಜು ಅವರ ಹೇಳಿಕೆ ಹೊಸ ಸಂಚಲನ ಮೂಡಿಸಿದೆ. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ನಿರ್ಮೂಲನೆ ಕನಸಿನ ಮಾತು ಎಂದಿದ್ದಾರೆ, ಅಲ್ಲಗಳೆಯುವಂತಿಲ್ಲ. ಒಬ್ಬ ಗಾಂಧಿಯ ನಂತರ ಹಲವು ಮಂದಿಯನ್ನು ಗಾಂಧಿ ಹೆಸರಿನಿಂದ ಗುರುತಿಸುವುದು ಸಾಧ್ಯವಾಯಿತೇ ಹೊರತು ಅವರಲ್ಲಿ ಗಾಂಧಿಯನ್ನು ಕಾಣಲಾಗಲಿಲ್ಲ. ಹಾಗೆಯೇ ಒಬ್ಬ ಅಣ್ಣಾ ಇಡೀ ದೇಶದ ಕಣ್ಣಾಗಲಾರ, ಧ್ವನಿಯಾಗಬಹುದು. ಆ ಧ್ವನಿಗೆ ಕಿವಿಯಾಗುವವರು, ಕೇಳಿದ್ದನ್ನು ಪ್ರತಿಧ್ವನಿಸುವವರು ಬೇಕಾಗಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಲ್ಲವೇ?


– ಚಿದಂಬರ ಬೈಕಂಪಾಡಿ


 

ರಾಜಕಾರಣದಲ್ಲಿ ಮಹಿಳೆಯ ಪಾತ್ರ ಇರಬೇಕೇ?, ಇರಬೇಕಾದರೆ ಎಷ್ಟರ ಪ್ರಮಾಣದಲ್ಲಿರಬೇಕು?, ಮನೆ, ಕುಟುಂಬ, ಪತಿ, ಮಕ್ಕಳ ಯೋಗಕ್ಷೇಮ ನೋಡಿಕೊಂಡು ಸಂಸಾರ ಮುನ್ನಡೆಸುವುದಕ್ಕೇ ಮಹಿಳೆ ಸೀಮಿತವಾಗಬೇಕೇ? ಎನ್ನುವ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿವೆ. ಇಂಥ ಚರ್ಚೆಗಳಿಂದ ಸಾಮಾಜಿಕವಾಗಿ ಮಹಿಳೆಯ ಸ್ಥಾನ ಮಾನ ನಿರ್ಧಾರವಾಗುತ್ತದೆ ಎಂದೇನೂ ಭಾವಿಸಬೇಕಾಗಿಲ್ಲ. ಅಕಾಡೆಮಿಕ್ ಆಗಿ ನಡೆಯುವಂಥ ಚರ್ಚೆಗಳು, ವಿಚಾರ ಸಂಕಿರಣಗಳು ನೀಡಿರುವ ಅಭಿಪ್ರಾಯಗಳು ಅಕಾಡೆಮಿಕ್ ವ್ಯಾಪ್ತಿಗಷ್ಟೇ ಸೀಮಿತವಾಗಿವೆ ಹೊರತು ಅವು ಕಾರ್ಯರೂಪಕ್ಕೆ ಬಂದಿಲ್ಲ.

ಪುರುಷ ಪ್ರಧಾನ ಸಮಾಜ ಮಹಿಳೆಯನ್ನು ತನಗೆ ಸರಿಸಮಾನವಾಗಿ ಗುರುತಿಸಲು ಬಯಸುವುದಿಲ್ಲ ಎನ್ನುವ ಆರೋಪವನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ. ಮಹಿಳೆಯನ್ನು ಶೋಷಣೆ ಮಾಡುತ್ತಲೇ ಪುರುಷ ಪ್ರಧಾನ ಸಮಾಜ ಬಂದಿದೆ ಎನ್ನುವುದನ್ನು ನಿರಾಕರಿಸುವಂತೆಯೂ ಇಲ್ಲ. ಆದರೆ ಈಕ್ಷಣದಲ್ಲೂ ಮಹಿಳೆ ರಾಜಕೀಯವಾಗಿ ತನಗೆ ಸಿಗಬೇಕಾದ ಸ್ಥಾನಮಾನ, ಹಕ್ಕನ್ನು ಪಡೆಯುವುದಕ್ಕೆ ಮನಸ್ಸು ಮಾಡಿಲ್ಲ. ಇದು ಆಕೆಯ ದೌರ್ಬಲ್ಯವೆಂದು ಸುಲಭವಾಗಿ ಹೇಳಿಬಿಡಬಹುದು, ಆದರೆ ವಾಸ್ತವ ಬೇರೆಯೇ ಇದೆ.

ಕರ್ನಾಟಕದ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಿವೆ? ಎನ್ನುವ ಪ್ರಶ್ನೆಗೆ ಈಗ ಉತ್ತರವಿಲ್ಲ, women-gp-membersಮುಂದಿನ ಚುನಾವಣೆ ಕಾಲಕ್ಕೆ ಉತ್ತರ ಸಿಗಬಹುದೇನೋ?. ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯ ನೀಡುವ ವಚನ ಕೊಡುತ್ತವೆ. ಆದರೆ ಮಹಿಳೆಯನ್ನು ಹೊರತು ಪಡಿಸಿ ಎನ್ನುವುದಿಲ್ಲ, ಬದಲಾಗಿ ಮಹಿಳೆಯನ್ನೂ ಗಮನದಲ್ಲಿಟ್ಟುಕೊಂಡೇ ವ್ಯಾಖ್ಯಾನ ನೀಡುತ್ತವೆ. ಯಾಕೆಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ ಎನ್ನುವುದು ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಗೊತ್ತಿದೆ. ಅವರೂ ಚುನಾವಣೆಯ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎನ್ನುವ ಅರಿವಿದೆ.

ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಒಟ್ಟು ಸುಮಾರು 4.18 ಕೋಟಿ ಮತದಾರರಿದ್ದು ಇವರಲ್ಲಿ 2.13 ಕೋಟಿ ಪುರುಷರು ಹಾಗೂ 2.4 ಕೋಟಿ ಮಹಿಳೆಯರು ಎನ್ನುವ ಮಾಹಿತಿ. ಮತದಾರರ ಬಲಾಬಲದ ಆಧಾರವಾಗಿಟ್ಟುಕೊಂಡರೆ ಶೇ.50 ರಷ್ಟು ಸ್ಥಾನಗಳನ್ನು ರಾಜಕೀಯ ಪಕ್ಷಗಳು ಮಹಿಳೆಯರಿಗೆ ಕೊಡಲೇ ಬೇಕು. ಹಿಂದೆಯೂ ಕೊಟ್ಟಿಲ್ಲ, ಈಗ ಕೊಡುವುದೂ ಇಲ್ಲ, ಆದರೆ ಮುಂದೆ ಕೊಡುವ ಅನಿವಾರ್ಯತೆ ಬರಬಹುದು.

ಹಾಗೆಯೇ ರಾಜ್ಯದ ರಾಜಕೀಯದ ಚಿತ್ರಣವನ್ನು ಸ್ಥೂಲವಾಗಿ ಗಮನಿಸಿದರೆ 224 ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಮಹಿಳೆಯರೇ ಪ್ರಬಲರು ಹಾಗೂ ಅವರೇ ನಿರ್ಣಾಯಕರು. ಕನಿಷ್ಠ 20 ಕ್ಷೇತ್ರಗಳಲ್ಲಿ ಮಹಿಳೆಯರೇ ಗೆಲ್ಲುವುದು ನಿಶ್ಚಿತ. ಇಂಥ ಪ್ರಬಲ ಸ್ತ್ರೀಶಕ್ತಿಯನ್ನು ಇಷ್ಟು ಕಾಲ ರಾಜಕೀಯದಲ್ಲಿ ಪುರುಷರು ಹೇಗೆ ನಿಭಾಯಿಸುತ್ತಾ ಬಂದಿದ್ದಾರೆ ಎನ್ನುವುದು ಅವರ ಚಾಣಾಕ್ಷತೆಗೆ ಸಾಕ್ಷಿ. ಆದರೆ ಇನ್ನು ಮುಂದೆ ಇಂಥ ಚಾಣಾಕ್ಷತೆಗೆ ಅವಕಾಶ ಕಡಿಮೆ. ಯಾಕೆಂದರೆ ಈಗ ಮಹಿಳೆಯರೂ ತಮ್ಮ ಹಕ್ಕು ಏನೆಂಬುದನ್ನು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇಂದಿರಾ ಗಾಂಧಿ ಎಂದು ಹಣ್ಣು ಹಣ್ಣು ಮುದುಕಿ ಹೇಳಿಬಿಡಬಹುದು. ವಾಸ್ತವವೆಂದರೆ ಮತ್ತೆ ಪಂಚಾಯತ್ ರಾಜ್ ವ್ಯವಸ್ಥೆಗೆ ಮಹಿಳೆಯರು ಚಿರಋಣಿಯಾಗಿರಲೇಬೇಕು. ರಾಮಕೃಷ್ಣ ಹೆಗಡೆ, ಅಬ್ದುಲ್ ನಜೀರ್ ಸಾಬ್, ಎಂ.ಪಿ.ಪ್ರಕಾಶ್ ಕರ್ನಾಟಕದ ಮಟ್ಟಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಮಹಿಳೆಯರ ಸಕ್ರಿಯ ರಾಜಕಾರಣಕ್ಕೆ ಕಾರಣೀಕರ್ತರು. ರಾಜೀವ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೆಚ್ಚು ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿದ್ದರಿಂದ ಮಹಿಳೆ ಕೂಡಾ ರಾಜಕೀಯದಲ್ಲಿ ತನ್ನ ಛಾಪು ಮೂಡಿಸುವ ಹಂತಕ್ಕೆ ಬಂದಿದ್ದಾಳೆ.

ಇವೆಲ್ಲವೂ ಹೊಸ ವಿಚಾರಗಳೇನಲ್ಲ. ರಾಜಕೀಯ ಪಕ್ಷಗಳು ಮಹಿಳೆಯರ ಪ್ರಾಬಲ್ಯವನ್ನು ಅರಿತಿದ್ದರೂ ಆಕೆಯನ್ನು ಬದಿಗೆ ಸರಿಸುವಲ್ಲಿ ತಮ್ಮ ಸಾಮರ್ಥ್ಯ ಮೆರೆದು ಬಚಾವ್ ಆಗಿದ್ದಾರೆ ಎನ್ನದೇ ವಿಧಿಯಿಲ್ಲ. ಈಗ ಆಕೆಗೂ ಅವಕಾಶ ಸಿಗುವಂಥ ಕಾಲ ಕೂಡಿ ಬಂದಿದೆ ಎನ್ನಿಸುತ್ತಿದೆ. shobha-yeddyurappaದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸೈದ್ಧಾಂತಿಕವಾಗಿ ಮಹಿಳೆಗೆ ಹೆಚ್ಚು ಗೌರವ ಕೊಡುವುದನ್ನು ಉಲ್ಲೇಖಿಸುತ್ತದೆ, ನಿಜ. ಆದರೆ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರೂ ಶೋಭಾ ಕರಂದ್ಲಾಜೆ ಅವರನ್ನು ಹೊರತು ಪಡಿಸಿದರೆ ಬೇರೆ ಯಾವ ಮಹಿಳೆಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಹಿಂದೆ ಅಧಿಕಾರ ನಡೆಸಿದಂಥ ಕಾಂಗ್ರೆಸ್, ಜೆಡಿಎಸ್ ಆಡಳಿತದಲ್ಲೂ ಬೆರಳೆಣಿಕೆಯಷ್ಟು ಮಂದಿ ಮಹಿಳೆಯರು ಮಾತ್ರ ಸಚಿವರಾಗಿದ್ದರು. ಯಾಕೆ ಮಹಿಳೆಯರು ಹಕ್ಕೊತ್ತಾಯ ಮಾಡಲಿಲ್ಲ ಎನ್ನುವುದು ಕೇವಲ ಪ್ರಶ್ನೆಯಲ್ಲ ಆಕೆ ಅದೆಂಥ ಸಹನಶೀಲೆ ಎನ್ನುವ ಅಚ್ಚರಿ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಪರೂಪಕ್ಕೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನಿಸುತ್ತಿರುವುದು ಕಾಂಗ್ರೆಸ್ ನಾಯಕರು 100 ಮಂದಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಆಕೆಯ ಕೈಗಿತ್ತಾಗ ಅದನ್ನು ನೋಡಿ ಕೆಂಡಾಮಂಡಲವಾಗಿರುವುದಕ್ಕೆ. ಸೋನಿಯಾ ಗಾಂಧಿ ಅವರನ್ನು ರಾಜಕೀಯವಾಗಿ ನೋಡಿ ಈ ದೇಶದ ಯಾವ ಹೆಣ್ಣು ಮಗಳೂ ಆಕೆಯನ್ನು ಬೆಂಬಲಿಸಬೇಕಾಗಿಲ್ಲ, ಬದಲಾಗಿ ಅವರು ಎತ್ತಿದ ಮೂಲಭೂತ ಪ್ರಶ್ನೆಯನ್ನು ಗಮನಿಸಬೇಕು.

ಯಾಕೆ ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸುವ ಹೆಣ್ಣು ಮಕ್ಕಳಿಲ್ಲವೇ? ಎನ್ನುವ ಸೋನಿಯಾ ತಮ್ಮ ಪಕ್ಷದ ರಾಜ್ಯದ ಮುಖಂಡರಿಗೆ ಕೇಳಿದ ಪ್ರಶ್ನೆಯನ್ನು ಇಡೀ ದೇಶದ ರಾಜಕೀಯ ಪಕ್ಷಗಳ ನಿರ್ಣಾಯಕ ನಾಯಕರನ್ನು ಮಹಿಳೆಯರು ಕೇಳುವುದೇ ಹೆಚ್ಚು ಸೂಕ್ತ. ಖಂಡಿತಕ್ಕೂ ಕರ್ನಾಟಕದ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರಿಂದ ಇಂಥ ಪ್ರಶ್ನೆಯನ್ನು ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ. ಯಾಕೆಂದರೆ ಸೋನಿಯಾ ಗಾಂಧಿಯರಿಗೆ ಸಿಗುವ ಫೀಡ್ ಬ್ಯಾಕ್ ಅಷ್ಟೊಂದು ಡೀಪ್ ಥಿಂಕಿಂಗ್‌ಗಳಲ್ಲ. ಆ ಸಂದರ್ಭಕ್ಕೆ, ತಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಫೀಡ್ ಮಾಡುವ ಜನರಿದ್ದಾರೆ, ಅವರ ಸುತ್ತಲೂ ಇರುವವರು ಥಿಂಕ್‌ಟ್ಯಾಂಕ್‌ಗಳಲ್ಲ, ಸೋನಿಯಾ ಅವರಿಗೂ ಇಲ್ಲಿಯ ತನಕ ಅಂಥ ಮೇಧಾವಿಗಳು ತನ್ನ ಇಕ್ಕೆಲಗಳಲ್ಲಿ ಇರಬೇಕೆನಿಸಿರಲಿಲ್ಲ. ಆದರೆ ಈಗ ಅವರೂ ರಾಜಕೀಯದಲ್ಲಿ ಪಕ್ವವಾಗುತ್ತಿದ್ದಾರೆ.

ಒಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಕ್ಷೇತ್ರದಿಂದ ಮಹಿಳೆಯರು ಸ್ಪರ್ಧಿಸಲಿ, ಅಂದರೆ ಜಿಲ್ಲೆಗೆ ಒಬ್ಬರು ಮಹಿಳಾ ಅಭ್ಯರ್ಥಿಗೆ ಸ್ಥಾನ ಕಲ್ಪಿಸಬೇಕು, ಪರಿಷ್ಕರಿಸಿದ ಪಟ್ಟಿಯನ್ನು ತನ್ನಿ ಎಂದು ಹೇಳಿ ಸಭೆಯನ್ನು ಬರ್ಖಾಸ್ತು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಸಿದ್ಧಪಡಿಸಿದ್ದ ಮೊದಲ ಕಂತಿನ 100 ಜನ ಅಭ್ಯರ್ಥಿಗಳ ಪಟ್ಟಿಯಲ್ಲಿ ತೇರದಾಳ ಕ್ಷೇತ್ರದಿಂದ ಚಿತ್ರ ನಟಿ ಉಮಾಶ್ರೀ ಅವರನ್ನು ಮಾತ್ರ ನಿರ್ಧರಿಸಿದ್ದರು, ಉಳಿದ 99 ಕ್ಷೇತ್ರಗಳೂ ಪುರುಷರೇ ವಶಪಡಿಸಿಕೊಂಡಿದ್ದರು.

ಈಗ ಸೋನಿಯಾ ಅವರ ಆಶಯದಂತೆ ಕಾಂಗ್ರೆಸ್ ನಾಯಕರು ಕನಿಷ್ಠ 28 ರಿಂದ 30 ವಿಧಾನಸಭಾ ಕ್ಷೇತ್ರಗಳಿಗೆ ಮಹಿಳೆಯರನ್ನು ಕಣಕ್ಕಿಳಿಸಬೇಕಾಗಿದೆ. karnataka_womenಖಂಡಿತಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಮಾಡಲು ಮಹಿಳೆಯರಿಗೆ ಕೊರತೆಯಿಲ್ಲ, ಸಂಪನ್ಮೂಲದ ಸಮಸ್ಯೆಯೂ ಇಲ್ಲ, ತಾವು ಕಣಕ್ಕಿಳಿಯುವುದಿಲ್ಲವೆಂದು ರಣಹೇಡಿ ಮಹಿಳೆಯರೂ ಯಾರೂ ಇಲ್ಲ. ನಾಯಕರನ್ನು ಕಾಡುತ್ತಿರುವ ಚಿಂತೆ ಸೋನಿಯಾ ಅವರ ಸೂಚನೆಯಂತೆ ಪಟ್ಟಿ ಪರಿಷ್ಕರಿಸಿ 29 ಸ್ಥಾನಗಳನ್ನು ಮಹಿಳೆಯರಿಗೆ ಬಿಟ್ಟುಕೊಟ್ಟರೆ ತಮ್ಮ ಬೆಂಬಲಿಗ ಪುರುಷರ ಕಾಟ ತಡೆದುಕೊಳ್ಳುವುದು ಹೇಗೆ? ಎನ್ನುವುದು. ತುಸು ಎಡವಟ್ಟಾದರೂ ತಮ್ಮ ವಿರುದ್ಧವೇ ಬಂಡಾಯವೆದ್ದರೆ ನಿಭಾಯಿಸುವುದು ಸುಲಭವಲ್ಲ ಎನ್ನುವ ಚಿಂತೆ. ಆದರೆ ಕಾಂಗ್ರೆಸ್ ನಾಯಕರು ಸಕಾರಣವಿಲ್ಲದೆ ತಮ್ಮ ಅಧಿನಾಯಕಿಯ ಸೂಚನೆಯನ್ನು ನಿರಾಕರಿಸುವಂತಿಲ್ಲ. ಕನಿಷ್ಠ 20 ಸ್ಥಾನಗಳನ್ನಾದರೂ ಮಹಿಳೆಯರಿಗೆ ತ್ಯಾಗ ಮಾಡಲೇಬೇಕು. ಆದರೆ ಅದು ತ್ಯಾಗವಲ್ಲ, ಮಹಿಳೆಯರ ಹಕ್ಕು.

ಈ ಹಕ್ಕನ್ನು ಪ್ರತಿಯೊಂದು ರಾಜಕೀಯ ಪಕ್ಷವೂ ಮಹಿಳೆಯರಿಗೆ ಕೊಡಲೇ ಬೇಕಾದ ಅನಿವಾರ್ಯತೆಯನ್ನು ಸೋನಿಯಾ ಗಾಂಧಿ ತಂದಿಟ್ಟಿದ್ದಾರೆ. ರಾಜಕೀಯವಾಗಿ ಇಂದಿರಾ ಗಾಂಧಿ ಮಹಿಳೆಯರನ್ನು ಬಳಸಿಕೊಳ್ಳುವ ಚಾಕಚಕ್ಯತೆಯನ್ನು ನಂತರದ ನಾಯಕರು ಮುಂದುವರಿಸಲಿಲ್ಲ. ಅನಕ್ಷರಸ್ಥೆಗೂ ಆ ಕಾಲದಲ್ಲಿ ಇಂದಿರಮ್ಮ ಯಾರೆಂದು ಗೊತ್ತಿತ್ತು. Gandhisonia05052007[2]ಮಹಿಳೆಯರ ಜನಮಾನಸದಲ್ಲಿ ಅಷ್ಟೊಂದು ಗಾಢ ಪ್ರಭಾವವನ್ನು ಇಂದಿರಾ ಗಾಂಧಿ ಬೀರಿದ್ದರು. ಈಗ ಸೋನಿಯಾ ಉರುಳಿಸಿರುವ ರಾಜಕೀಯ ದಾಳ ಮಹಿಳೆಯರ ಸ್ವಾಭಿಮಾನವನ್ನು ಜಾಗೃತಗೊಳಿಸಿದೆ, ಅವರ ಸಾಮರ್ಥ್ಯವನ್ನು ಗುರುತಿಸುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಂತಾಗಿದೆ. ಸೋನಿಯಾ ಗಾಂಧಿ ಅವರ ಈ ಹೆಜ್ಜೆ ರಾಜಕೀಯದಲ್ಲಿ ಮಹತ್ತರ. ಹಾಗೆಯೇ ಮಹಿಳೆಯರ ಶಕ್ತಿ ಪ್ರದರ್ಶನಕ್ಕೆ ಉಳಿದ ರಾಜಕೀಯ ಪಕ್ಷಗಳೂ ವೇದಿಕೆ ಕಲ್ಪಿಸಿಕೊಡುವಂಥ ಅನಿವಾರ್ಯತೆಗೆ ಈಡಾಗಿವೆ. ಸಾಮಾಜಿಕ ನ್ಯಾಯ ಮಹಿಳೆಯನ್ನು ಭಾಷಣದಲ್ಲಿ ಗುರುತಿಸಿ ಅಲ್ಲ, ಕಾರ್ಯದಲ್ಲೂ ಎನ್ನುವುದು ನೀತಿಪಾಠ.