ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಲ್ಲವೇ?


– ಚಿದಂಬರ ಬೈಕಂಪಾಡಿ


 

ರಾಜಕಾರಣದಲ್ಲಿ ಮಹಿಳೆಯ ಪಾತ್ರ ಇರಬೇಕೇ?, ಇರಬೇಕಾದರೆ ಎಷ್ಟರ ಪ್ರಮಾಣದಲ್ಲಿರಬೇಕು?, ಮನೆ, ಕುಟುಂಬ, ಪತಿ, ಮಕ್ಕಳ ಯೋಗಕ್ಷೇಮ ನೋಡಿಕೊಂಡು ಸಂಸಾರ ಮುನ್ನಡೆಸುವುದಕ್ಕೇ ಮಹಿಳೆ ಸೀಮಿತವಾಗಬೇಕೇ? ಎನ್ನುವ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿವೆ. ಇಂಥ ಚರ್ಚೆಗಳಿಂದ ಸಾಮಾಜಿಕವಾಗಿ ಮಹಿಳೆಯ ಸ್ಥಾನ ಮಾನ ನಿರ್ಧಾರವಾಗುತ್ತದೆ ಎಂದೇನೂ ಭಾವಿಸಬೇಕಾಗಿಲ್ಲ. ಅಕಾಡೆಮಿಕ್ ಆಗಿ ನಡೆಯುವಂಥ ಚರ್ಚೆಗಳು, ವಿಚಾರ ಸಂಕಿರಣಗಳು ನೀಡಿರುವ ಅಭಿಪ್ರಾಯಗಳು ಅಕಾಡೆಮಿಕ್ ವ್ಯಾಪ್ತಿಗಷ್ಟೇ ಸೀಮಿತವಾಗಿವೆ ಹೊರತು ಅವು ಕಾರ್ಯರೂಪಕ್ಕೆ ಬಂದಿಲ್ಲ.

ಪುರುಷ ಪ್ರಧಾನ ಸಮಾಜ ಮಹಿಳೆಯನ್ನು ತನಗೆ ಸರಿಸಮಾನವಾಗಿ ಗುರುತಿಸಲು ಬಯಸುವುದಿಲ್ಲ ಎನ್ನುವ ಆರೋಪವನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ. ಮಹಿಳೆಯನ್ನು ಶೋಷಣೆ ಮಾಡುತ್ತಲೇ ಪುರುಷ ಪ್ರಧಾನ ಸಮಾಜ ಬಂದಿದೆ ಎನ್ನುವುದನ್ನು ನಿರಾಕರಿಸುವಂತೆಯೂ ಇಲ್ಲ. ಆದರೆ ಈಕ್ಷಣದಲ್ಲೂ ಮಹಿಳೆ ರಾಜಕೀಯವಾಗಿ ತನಗೆ ಸಿಗಬೇಕಾದ ಸ್ಥಾನಮಾನ, ಹಕ್ಕನ್ನು ಪಡೆಯುವುದಕ್ಕೆ ಮನಸ್ಸು ಮಾಡಿಲ್ಲ. ಇದು ಆಕೆಯ ದೌರ್ಬಲ್ಯವೆಂದು ಸುಲಭವಾಗಿ ಹೇಳಿಬಿಡಬಹುದು, ಆದರೆ ವಾಸ್ತವ ಬೇರೆಯೇ ಇದೆ.

ಕರ್ನಾಟಕದ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಿವೆ? ಎನ್ನುವ ಪ್ರಶ್ನೆಗೆ ಈಗ ಉತ್ತರವಿಲ್ಲ, women-gp-membersಮುಂದಿನ ಚುನಾವಣೆ ಕಾಲಕ್ಕೆ ಉತ್ತರ ಸಿಗಬಹುದೇನೋ?. ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯ ನೀಡುವ ವಚನ ಕೊಡುತ್ತವೆ. ಆದರೆ ಮಹಿಳೆಯನ್ನು ಹೊರತು ಪಡಿಸಿ ಎನ್ನುವುದಿಲ್ಲ, ಬದಲಾಗಿ ಮಹಿಳೆಯನ್ನೂ ಗಮನದಲ್ಲಿಟ್ಟುಕೊಂಡೇ ವ್ಯಾಖ್ಯಾನ ನೀಡುತ್ತವೆ. ಯಾಕೆಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ ಎನ್ನುವುದು ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಗೊತ್ತಿದೆ. ಅವರೂ ಚುನಾವಣೆಯ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎನ್ನುವ ಅರಿವಿದೆ.

ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಒಟ್ಟು ಸುಮಾರು 4.18 ಕೋಟಿ ಮತದಾರರಿದ್ದು ಇವರಲ್ಲಿ 2.13 ಕೋಟಿ ಪುರುಷರು ಹಾಗೂ 2.4 ಕೋಟಿ ಮಹಿಳೆಯರು ಎನ್ನುವ ಮಾಹಿತಿ. ಮತದಾರರ ಬಲಾಬಲದ ಆಧಾರವಾಗಿಟ್ಟುಕೊಂಡರೆ ಶೇ.50 ರಷ್ಟು ಸ್ಥಾನಗಳನ್ನು ರಾಜಕೀಯ ಪಕ್ಷಗಳು ಮಹಿಳೆಯರಿಗೆ ಕೊಡಲೇ ಬೇಕು. ಹಿಂದೆಯೂ ಕೊಟ್ಟಿಲ್ಲ, ಈಗ ಕೊಡುವುದೂ ಇಲ್ಲ, ಆದರೆ ಮುಂದೆ ಕೊಡುವ ಅನಿವಾರ್ಯತೆ ಬರಬಹುದು.

ಹಾಗೆಯೇ ರಾಜ್ಯದ ರಾಜಕೀಯದ ಚಿತ್ರಣವನ್ನು ಸ್ಥೂಲವಾಗಿ ಗಮನಿಸಿದರೆ 224 ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಮಹಿಳೆಯರೇ ಪ್ರಬಲರು ಹಾಗೂ ಅವರೇ ನಿರ್ಣಾಯಕರು. ಕನಿಷ್ಠ 20 ಕ್ಷೇತ್ರಗಳಲ್ಲಿ ಮಹಿಳೆಯರೇ ಗೆಲ್ಲುವುದು ನಿಶ್ಚಿತ. ಇಂಥ ಪ್ರಬಲ ಸ್ತ್ರೀಶಕ್ತಿಯನ್ನು ಇಷ್ಟು ಕಾಲ ರಾಜಕೀಯದಲ್ಲಿ ಪುರುಷರು ಹೇಗೆ ನಿಭಾಯಿಸುತ್ತಾ ಬಂದಿದ್ದಾರೆ ಎನ್ನುವುದು ಅವರ ಚಾಣಾಕ್ಷತೆಗೆ ಸಾಕ್ಷಿ. ಆದರೆ ಇನ್ನು ಮುಂದೆ ಇಂಥ ಚಾಣಾಕ್ಷತೆಗೆ ಅವಕಾಶ ಕಡಿಮೆ. ಯಾಕೆಂದರೆ ಈಗ ಮಹಿಳೆಯರೂ ತಮ್ಮ ಹಕ್ಕು ಏನೆಂಬುದನ್ನು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇಂದಿರಾ ಗಾಂಧಿ ಎಂದು ಹಣ್ಣು ಹಣ್ಣು ಮುದುಕಿ ಹೇಳಿಬಿಡಬಹುದು. ವಾಸ್ತವವೆಂದರೆ ಮತ್ತೆ ಪಂಚಾಯತ್ ರಾಜ್ ವ್ಯವಸ್ಥೆಗೆ ಮಹಿಳೆಯರು ಚಿರಋಣಿಯಾಗಿರಲೇಬೇಕು. ರಾಮಕೃಷ್ಣ ಹೆಗಡೆ, ಅಬ್ದುಲ್ ನಜೀರ್ ಸಾಬ್, ಎಂ.ಪಿ.ಪ್ರಕಾಶ್ ಕರ್ನಾಟಕದ ಮಟ್ಟಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಮಹಿಳೆಯರ ಸಕ್ರಿಯ ರಾಜಕಾರಣಕ್ಕೆ ಕಾರಣೀಕರ್ತರು. ರಾಜೀವ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೆಚ್ಚು ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿದ್ದರಿಂದ ಮಹಿಳೆ ಕೂಡಾ ರಾಜಕೀಯದಲ್ಲಿ ತನ್ನ ಛಾಪು ಮೂಡಿಸುವ ಹಂತಕ್ಕೆ ಬಂದಿದ್ದಾಳೆ.

ಇವೆಲ್ಲವೂ ಹೊಸ ವಿಚಾರಗಳೇನಲ್ಲ. ರಾಜಕೀಯ ಪಕ್ಷಗಳು ಮಹಿಳೆಯರ ಪ್ರಾಬಲ್ಯವನ್ನು ಅರಿತಿದ್ದರೂ ಆಕೆಯನ್ನು ಬದಿಗೆ ಸರಿಸುವಲ್ಲಿ ತಮ್ಮ ಸಾಮರ್ಥ್ಯ ಮೆರೆದು ಬಚಾವ್ ಆಗಿದ್ದಾರೆ ಎನ್ನದೇ ವಿಧಿಯಿಲ್ಲ. ಈಗ ಆಕೆಗೂ ಅವಕಾಶ ಸಿಗುವಂಥ ಕಾಲ ಕೂಡಿ ಬಂದಿದೆ ಎನ್ನಿಸುತ್ತಿದೆ. shobha-yeddyurappaದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸೈದ್ಧಾಂತಿಕವಾಗಿ ಮಹಿಳೆಗೆ ಹೆಚ್ಚು ಗೌರವ ಕೊಡುವುದನ್ನು ಉಲ್ಲೇಖಿಸುತ್ತದೆ, ನಿಜ. ಆದರೆ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರೂ ಶೋಭಾ ಕರಂದ್ಲಾಜೆ ಅವರನ್ನು ಹೊರತು ಪಡಿಸಿದರೆ ಬೇರೆ ಯಾವ ಮಹಿಳೆಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಹಿಂದೆ ಅಧಿಕಾರ ನಡೆಸಿದಂಥ ಕಾಂಗ್ರೆಸ್, ಜೆಡಿಎಸ್ ಆಡಳಿತದಲ್ಲೂ ಬೆರಳೆಣಿಕೆಯಷ್ಟು ಮಂದಿ ಮಹಿಳೆಯರು ಮಾತ್ರ ಸಚಿವರಾಗಿದ್ದರು. ಯಾಕೆ ಮಹಿಳೆಯರು ಹಕ್ಕೊತ್ತಾಯ ಮಾಡಲಿಲ್ಲ ಎನ್ನುವುದು ಕೇವಲ ಪ್ರಶ್ನೆಯಲ್ಲ ಆಕೆ ಅದೆಂಥ ಸಹನಶೀಲೆ ಎನ್ನುವ ಅಚ್ಚರಿ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಪರೂಪಕ್ಕೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನಿಸುತ್ತಿರುವುದು ಕಾಂಗ್ರೆಸ್ ನಾಯಕರು 100 ಮಂದಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಆಕೆಯ ಕೈಗಿತ್ತಾಗ ಅದನ್ನು ನೋಡಿ ಕೆಂಡಾಮಂಡಲವಾಗಿರುವುದಕ್ಕೆ. ಸೋನಿಯಾ ಗಾಂಧಿ ಅವರನ್ನು ರಾಜಕೀಯವಾಗಿ ನೋಡಿ ಈ ದೇಶದ ಯಾವ ಹೆಣ್ಣು ಮಗಳೂ ಆಕೆಯನ್ನು ಬೆಂಬಲಿಸಬೇಕಾಗಿಲ್ಲ, ಬದಲಾಗಿ ಅವರು ಎತ್ತಿದ ಮೂಲಭೂತ ಪ್ರಶ್ನೆಯನ್ನು ಗಮನಿಸಬೇಕು.

ಯಾಕೆ ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸುವ ಹೆಣ್ಣು ಮಕ್ಕಳಿಲ್ಲವೇ? ಎನ್ನುವ ಸೋನಿಯಾ ತಮ್ಮ ಪಕ್ಷದ ರಾಜ್ಯದ ಮುಖಂಡರಿಗೆ ಕೇಳಿದ ಪ್ರಶ್ನೆಯನ್ನು ಇಡೀ ದೇಶದ ರಾಜಕೀಯ ಪಕ್ಷಗಳ ನಿರ್ಣಾಯಕ ನಾಯಕರನ್ನು ಮಹಿಳೆಯರು ಕೇಳುವುದೇ ಹೆಚ್ಚು ಸೂಕ್ತ. ಖಂಡಿತಕ್ಕೂ ಕರ್ನಾಟಕದ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರಿಂದ ಇಂಥ ಪ್ರಶ್ನೆಯನ್ನು ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ. ಯಾಕೆಂದರೆ ಸೋನಿಯಾ ಗಾಂಧಿಯರಿಗೆ ಸಿಗುವ ಫೀಡ್ ಬ್ಯಾಕ್ ಅಷ್ಟೊಂದು ಡೀಪ್ ಥಿಂಕಿಂಗ್‌ಗಳಲ್ಲ. ಆ ಸಂದರ್ಭಕ್ಕೆ, ತಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಫೀಡ್ ಮಾಡುವ ಜನರಿದ್ದಾರೆ, ಅವರ ಸುತ್ತಲೂ ಇರುವವರು ಥಿಂಕ್‌ಟ್ಯಾಂಕ್‌ಗಳಲ್ಲ, ಸೋನಿಯಾ ಅವರಿಗೂ ಇಲ್ಲಿಯ ತನಕ ಅಂಥ ಮೇಧಾವಿಗಳು ತನ್ನ ಇಕ್ಕೆಲಗಳಲ್ಲಿ ಇರಬೇಕೆನಿಸಿರಲಿಲ್ಲ. ಆದರೆ ಈಗ ಅವರೂ ರಾಜಕೀಯದಲ್ಲಿ ಪಕ್ವವಾಗುತ್ತಿದ್ದಾರೆ.

ಒಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಕ್ಷೇತ್ರದಿಂದ ಮಹಿಳೆಯರು ಸ್ಪರ್ಧಿಸಲಿ, ಅಂದರೆ ಜಿಲ್ಲೆಗೆ ಒಬ್ಬರು ಮಹಿಳಾ ಅಭ್ಯರ್ಥಿಗೆ ಸ್ಥಾನ ಕಲ್ಪಿಸಬೇಕು, ಪರಿಷ್ಕರಿಸಿದ ಪಟ್ಟಿಯನ್ನು ತನ್ನಿ ಎಂದು ಹೇಳಿ ಸಭೆಯನ್ನು ಬರ್ಖಾಸ್ತು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಸಿದ್ಧಪಡಿಸಿದ್ದ ಮೊದಲ ಕಂತಿನ 100 ಜನ ಅಭ್ಯರ್ಥಿಗಳ ಪಟ್ಟಿಯಲ್ಲಿ ತೇರದಾಳ ಕ್ಷೇತ್ರದಿಂದ ಚಿತ್ರ ನಟಿ ಉಮಾಶ್ರೀ ಅವರನ್ನು ಮಾತ್ರ ನಿರ್ಧರಿಸಿದ್ದರು, ಉಳಿದ 99 ಕ್ಷೇತ್ರಗಳೂ ಪುರುಷರೇ ವಶಪಡಿಸಿಕೊಂಡಿದ್ದರು.

ಈಗ ಸೋನಿಯಾ ಅವರ ಆಶಯದಂತೆ ಕಾಂಗ್ರೆಸ್ ನಾಯಕರು ಕನಿಷ್ಠ 28 ರಿಂದ 30 ವಿಧಾನಸಭಾ ಕ್ಷೇತ್ರಗಳಿಗೆ ಮಹಿಳೆಯರನ್ನು ಕಣಕ್ಕಿಳಿಸಬೇಕಾಗಿದೆ. karnataka_womenಖಂಡಿತಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಮಾಡಲು ಮಹಿಳೆಯರಿಗೆ ಕೊರತೆಯಿಲ್ಲ, ಸಂಪನ್ಮೂಲದ ಸಮಸ್ಯೆಯೂ ಇಲ್ಲ, ತಾವು ಕಣಕ್ಕಿಳಿಯುವುದಿಲ್ಲವೆಂದು ರಣಹೇಡಿ ಮಹಿಳೆಯರೂ ಯಾರೂ ಇಲ್ಲ. ನಾಯಕರನ್ನು ಕಾಡುತ್ತಿರುವ ಚಿಂತೆ ಸೋನಿಯಾ ಅವರ ಸೂಚನೆಯಂತೆ ಪಟ್ಟಿ ಪರಿಷ್ಕರಿಸಿ 29 ಸ್ಥಾನಗಳನ್ನು ಮಹಿಳೆಯರಿಗೆ ಬಿಟ್ಟುಕೊಟ್ಟರೆ ತಮ್ಮ ಬೆಂಬಲಿಗ ಪುರುಷರ ಕಾಟ ತಡೆದುಕೊಳ್ಳುವುದು ಹೇಗೆ? ಎನ್ನುವುದು. ತುಸು ಎಡವಟ್ಟಾದರೂ ತಮ್ಮ ವಿರುದ್ಧವೇ ಬಂಡಾಯವೆದ್ದರೆ ನಿಭಾಯಿಸುವುದು ಸುಲಭವಲ್ಲ ಎನ್ನುವ ಚಿಂತೆ. ಆದರೆ ಕಾಂಗ್ರೆಸ್ ನಾಯಕರು ಸಕಾರಣವಿಲ್ಲದೆ ತಮ್ಮ ಅಧಿನಾಯಕಿಯ ಸೂಚನೆಯನ್ನು ನಿರಾಕರಿಸುವಂತಿಲ್ಲ. ಕನಿಷ್ಠ 20 ಸ್ಥಾನಗಳನ್ನಾದರೂ ಮಹಿಳೆಯರಿಗೆ ತ್ಯಾಗ ಮಾಡಲೇಬೇಕು. ಆದರೆ ಅದು ತ್ಯಾಗವಲ್ಲ, ಮಹಿಳೆಯರ ಹಕ್ಕು.

ಈ ಹಕ್ಕನ್ನು ಪ್ರತಿಯೊಂದು ರಾಜಕೀಯ ಪಕ್ಷವೂ ಮಹಿಳೆಯರಿಗೆ ಕೊಡಲೇ ಬೇಕಾದ ಅನಿವಾರ್ಯತೆಯನ್ನು ಸೋನಿಯಾ ಗಾಂಧಿ ತಂದಿಟ್ಟಿದ್ದಾರೆ. ರಾಜಕೀಯವಾಗಿ ಇಂದಿರಾ ಗಾಂಧಿ ಮಹಿಳೆಯರನ್ನು ಬಳಸಿಕೊಳ್ಳುವ ಚಾಕಚಕ್ಯತೆಯನ್ನು ನಂತರದ ನಾಯಕರು ಮುಂದುವರಿಸಲಿಲ್ಲ. ಅನಕ್ಷರಸ್ಥೆಗೂ ಆ ಕಾಲದಲ್ಲಿ ಇಂದಿರಮ್ಮ ಯಾರೆಂದು ಗೊತ್ತಿತ್ತು. Gandhisonia05052007[2]ಮಹಿಳೆಯರ ಜನಮಾನಸದಲ್ಲಿ ಅಷ್ಟೊಂದು ಗಾಢ ಪ್ರಭಾವವನ್ನು ಇಂದಿರಾ ಗಾಂಧಿ ಬೀರಿದ್ದರು. ಈಗ ಸೋನಿಯಾ ಉರುಳಿಸಿರುವ ರಾಜಕೀಯ ದಾಳ ಮಹಿಳೆಯರ ಸ್ವಾಭಿಮಾನವನ್ನು ಜಾಗೃತಗೊಳಿಸಿದೆ, ಅವರ ಸಾಮರ್ಥ್ಯವನ್ನು ಗುರುತಿಸುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಂತಾಗಿದೆ. ಸೋನಿಯಾ ಗಾಂಧಿ ಅವರ ಈ ಹೆಜ್ಜೆ ರಾಜಕೀಯದಲ್ಲಿ ಮಹತ್ತರ. ಹಾಗೆಯೇ ಮಹಿಳೆಯರ ಶಕ್ತಿ ಪ್ರದರ್ಶನಕ್ಕೆ ಉಳಿದ ರಾಜಕೀಯ ಪಕ್ಷಗಳೂ ವೇದಿಕೆ ಕಲ್ಪಿಸಿಕೊಡುವಂಥ ಅನಿವಾರ್ಯತೆಗೆ ಈಡಾಗಿವೆ. ಸಾಮಾಜಿಕ ನ್ಯಾಯ ಮಹಿಳೆಯನ್ನು ಭಾಷಣದಲ್ಲಿ ಗುರುತಿಸಿ ಅಲ್ಲ, ಕಾರ್ಯದಲ್ಲೂ ಎನ್ನುವುದು ನೀತಿಪಾಠ.

One thought on “ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಲ್ಲವೇ?

  1. ತುಳುವ

    while i agree that more women should enter in politics, we also should think about a mechanism to check power misuse of women politicians husbands/guardians as its happening big time..

    Reply

Leave a Reply

Your email address will not be published. Required fields are marked *