Category Archives: ದಿನೇಶ್ ಕುಮಾರ್ ಎಸ್.ಸಿ.

ಯೋಗ ಗುರು ಸುದ್ದಿಯಲ್ಲಿದ್ದಾರೆ

– ದಿನೇಶ್ ಕುಮಾರ್ ಎಸ್.ಸಿ.

ಯೋಗ ಗುರು ಸುದ್ದಿಯಲ್ಲಿದ್ದಾರೆ. ತಮ್ಮ ಆರಾಧಕರಿಂದ ಶ್ರೀ.ಶ್ರೀ… ಎಂದು ಕರೆಯಲ್ಪಡುವ ಆಧ್ಯಾತ್ಮ-ಯೋಗ ಗುರು ರವಿಶಂಕರ್ ಗುರೂಜಿ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಎಲ್‍ಟಿಟಿಇ ಜತೆ ಮಾತುಕತೆ ಮಾಡುತ್ತೇನೆ ಎಂದು ಅವರು ಒಂದಷ್ಟು ದಿನ ಸುದ್ದಿ ಮಾಡಿದ್ದರು. ಎಲ್ಲೆಲ್ಲಿ ಭಯೋತ್ಪಾದಕರು ಇದ್ದಾರೋ ಅಲ್ಲಿಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳುವುದು ಅವರ ಇತ್ತೀಚಿನ ಅಭ್ಯಾಸ. ಮೊನ್ನೆಮೊನ್ನೆಯಷ್ಟೆ ತಾಲಿಬಾನ್ ಜತೆ ಮಾತುಕತೆಗೆ ನಾನು ಸಿದ್ಧ ಎಂದು ಗುರೂಜಿ ಹೇಳಿಕೊಂಡಿದ್ದರು. ಈ ತರಹದ ಹೇಳಿಕೆಗಳೇ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹತೆಯನ್ನು ತಂದು ಕೊಡುತ್ತದೆ ಎಂದು ಹಲವರು ಭಾವಿಸಿರಬಹುದು. ರವಿಶಂಕರರೂ ಅದೇ ಆಸೆಯಲ್ಲಿ ಈ ಥರದ ಕೃಷ್ಣಸಂಧಾನದ ಲೊಳಲೊಟ್ಟೆ ಮಾತುಗಳನ್ನು ಆಡುತ್ತಿರಬಹುದು. ಆ ವಿಷಯ ಒತ್ತಟ್ಟಿಗಿರಲಿ, ಸದ್ಯಕ್ಕೆ ಅವರು ಸರ್ಕಾರಿ ಶಾಲೆಗಳನ್ನು ಕುರಿತು ನೀಡಿರುವ ಬೀಸು ಹೇಳಿಕೆಯೊಂದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ರವಿಶಂಕರರ ಹೇಳಿಕೆ ವಿರುದ್ಧ ಸಾಕಷ್ಟು ಚರ್ಚೆಗಳೂ ನಡೆದಿವೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ಸಭೆಯೊಂದರಲ್ಲಿ ರವಿಶಂಕರ ಗುರೂಜಿ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ನಕ್ಸಲೈಟ್‍ರಾಗುತ್ತಾರೆ, ಹಿಂಸಾತ್ಮಕ ಮನೋಭಾವ ರೂಢಿಸಿಕೊಳ್ಳುತ್ತಾರೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಬರಕಾಸ್ತು ಮಾಡಿ ಅವುಗಳನ್ನು ಖಾಸಗಿ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸಬೇಕು ಎಂಬುದು ರವಿಶಂಕರರ ಹೇಳಿಕೆಯ ತಾತ್ಪರ್ಯ. ಕೇಂದ್ರ ಸಚಿವರಿಂದ ಹಿಡಿದು ಸಮಾಜದ ಎಲ್ಲ ವಲಯಗಳಿಂದಲೂ ಈ ಹೇಳಿಕೆಗೆ ತೀವ್ರ ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ ರವಿಶಂಕರರು ತಮ್ಮ ಹೇಳಿಕೆಗೆ ಒಂದಷ್ಟು ಸ್ಪಷ್ಟನೆಯ ರೂಪದ ತಿದ್ದುಪಡಿಯನ್ನೂ ನೀಡಬೇಕಾಯಿತು. ಅವರ ತಿದ್ದುಪಡಿಯ ಪ್ರಕಾರ ಅವರ ಹೇಳಿಕೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ ಈ ತಿದ್ದುಪಡಿಯಾದ ಮಾತನ್ನೇ ವಿಶ್ಲೇಷಣೆಗೆ ಒಳಪಡಿಸುವುದಾದರೂ ರವಿಶಂಕರರು ಮತ್ತೂ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ.

ರವಿಶಂಕರರ ಮೂಲ ಹೇಳಿಕೆಯನ್ನು ಗಮನಿಸುವುದಾದರೆ ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಟಿಸುವ ಕಾರ್ಖಾನೆಗಳಾಗಿದ್ದರೆ ಈ ದೇಶದ ತುಂಬೆಲ್ಲ ನಕ್ಸಲೈಟ್‍ಗಳೆ ತುಂಬಿರಬೇಕಿತ್ತು. ಅಥವಾ ದೇಶವಾಸಿಗಳ ಪೈಕಿ ಶೇ.90 ರಷ್ಟು ಜನ ಹಿಂಸಾತ್ಮಕ ಮನೋಭಾವದವರೇ ಆಗಿರಬೇಕಿತ್ತು. ಯಾಕೆಂದರೆ ದೇಶದ ಶೇ.90 ರಷ್ಟು ಜನರು ಒಂದಿಲ್ಲೊಂದು ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಆಗಿರುತ್ತಾರೆ. ಇದು ಸುಳ್ಳಾದ್ದರಿಂದ ರವಿಶಂಕರರ ಹೇಳಿಕೆ ಮೂರ್ಖತನದ್ದು ಎಂದು ಶಾಲಾ ಬಾಲಕರೇ ಸುಲಭವಾಗಿ ನಿಶ್ಚಯಿಸಿಬಿಡಬಹುದು. ಇನ್ನು ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಠಿಸುತ್ತಿವೆ ಎನ್ನುವ ರವಿಶಂಕರರು ಅದಕ್ಕೆ ಆಧಾರಗಳನ್ನು ಒದಗಿಸುವ ಗೋಜಿಗೆ ಹೋಗಿಲ್ಲ. ಇದು ಒಂದು ಬಗೆಯ ಬೀಸು ಹೇಳಿಕೆಯಾದ್ದರಿಂದ ರವಿಶಂಕರರ ಇಂಗಿತ ಏನೆಂಬುದನ್ನು ನಾವೇ ಊಹಿಸಬೇಕಾಗುತ್ತದೆ. ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಠಿಸುತ್ತಿವೆ ಎನ್ನುವುದಾದರೆ ಸರ್ಕಾರಿ ಶಾಲೆಗಳ ಬಡಪಾಯಿ ಶಿಕ್ಷಕರು ಮಕ್ಕಳಿಗೆ ಹಿಂಸಾತ್ಮಕಗೊಳ್ಳುವಂಥ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದಾಗುತ್ತದೆ. ಇದು ಸಾರಾಸಗಟಾಗಿ ದೇಶದ ಲಕ್ಷಾಂತರ ಶಿಕ್ಷಕ ಸಮೂಹವನ್ನು ಅಪಮಾನಿಸುವ, ನಿಂದಿಸುವ ಹೇಳಿಕೆಯಾಗಿ ಬಿಡುತ್ತದೆ.

ರವಿಶಂಕರರ ಇದೇ ಹೇಳಿಕೆಯಲ್ಲಿ ಖಾಸಗಿ ಕ್ಷೇತ್ರದ ಗುಣಗಾನವನ್ನೂ ನಾವು ಗುರುತಿಸಬಹುದು. ಸರ್ಕಾರಿ ಅಲ್ಲದ್ದೆಲ್ಲವೂ ಅವರಿಗೆ ಶ್ರೇಷ್ಠವಾಗಿ ಕಂಡಿರಬಹುದು. ಆಧುನಿಕ ಜಗತ್ತಿನಲ್ಲಿ ಸಿರಿವಂತ ಮತ್ತು ಅತಿ ಸಿರಿವಂತ ಸಮುದಾಯದ ಸ್ವಭಾವವನ್ನೇ ರವಿಶಂಕರರು ಪ್ರದರ್ಶಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಅನಾಮತ್ತಾಗಿ ಖಾಸಗಿಯವರಿಗೆ ವಹಿಸಿಕೊಡಬೇಕು ಎಂದು ಹೇಳುವ ರವಿಶಂಕರರಿಗೆ ಖಾಸಗಿ ಕ್ಷೇತ್ರದ ಮೇಲಿರುವ ಅಪರಿಮಿತ ವಿಶ್ವಾಸ ಎದ್ದು ಕಾಣುತ್ತದೆ.

ಹೇಳಿಕೇಳಿ ರವಿಶಂಕರರು ಆಧ್ಯಾತ್ಮ ಗುರು ಎನಿಸಿಕೊಂಡವರು. ಅವರನ್ನು ಯೋಗದ ವ್ಯಾಪಾರಿ ಎಂದು ಸಹ ಅವರ ಟೀಕಾಕಾರರು ಕರೆಯುತ್ತಾರೆ. ಆಧ್ಯಾತ್ಮವನ್ನು, ಯೋಗವನ್ನು ವ್ಯಾಪಾರದ ಮಟ್ಟಕ್ಕೆ ಇಳಿಸಿದವರಿಗೆ ಶಿಕ್ಷಣವನ್ನು ವ್ಯಾಪಾರಿಗಳ ತೆಕ್ಕೆಗೆ ವಹಿಸುವ ಹಂಬಲ ಇರುವುದನ್ನು ಆಶ್ಚರ್ಯದಿಂದೇನೂ ನೋಡಬೇಕಾಗಿಲ್ಲ. ಗುರೂಜಿಯವರು ನಡೆಸುವ ಸತ್ಸಂಗಕ್ಕೂ ದುಬಾರಿ ಫೀಜು ಇರುವುದರಿಂದ ಮಕ್ಕಳ ಶಿಕ್ಷಣಕ್ಕೆ ಫೀಜು-ಡೊನೇಷನ್ನು ಇರುವುದು ಅತ್ಯಂತ ಸಹಜವೇ ಅಲ್ಲವೇ?

ಗುರೂಜಿಯವರ ಇಂಥ ಹೇಳಿಕೆಗೆ ಸಮರ್ಥಕರು ಇರುವುದೂ ನಿಜ. ಮಧ್ಯಮ- ಮೇಲ್ ಮಧ್ಯಮ ಸಮುದಾಯವೂ ಇಂಥ ಸಿನಿಕ ಹಳಹಳಿಕೆಗಳನ್ನು ಆಗಾಗ ಪ್ರದರ್ಶಿಸುವುದುಂಟು. ವಿಶೇಷವೆಂದರೆ ಇವು ಸರ್ಕಾರಿ ಶಾಲೆ, ಆಸ್ಪತ್ರೆಗಳ ಲಾಭ ಪಡೆದ ವಲಯವೂ ಹೌದು. ಆದರೆ ಮಾತಿಗೆ ನಿಂತಾಗ ಇವರಿಗೆ ಖಾಸಗಿ ಕ್ಷೇತ್ರವೇ ಆಪ್ಯಾಯಮಾನವಾಗಿ ಕಾಣುತ್ತದೆ. ಸರ್ಕಾರಿ ಶಾಲೆಗಳು ನೋಡ್ರೀ, ಅಲ್ಲಿ ಶಿಕ್ಷಕರೇ ಇಲ್ಲ, ಇದ್ದರೂ ಕಟ್ಟಡ ಇರೋದಿಲ್ಲ, ಕಟ್ಟಡ ಇದ್ರೂ ಶೌಚಾಲಯ ಇಲ್ಲ. ಕಂಪ್ಯೂಟರ್ ಇಲ್ಲ. ಇಂಥವು ಇರೋದಕ್ಕಿಂತ ಅವುಗಳನ್ನು ಖಾಸಗಿಯವರಿಗೆ ಒಪ್ಪಿಸೋದು ಒಳ್ಳೇದಲ್ವೇ ಎನ್ನುವುದು ಈ ಜನರುಗಳ ತರ್ಕ. ಆದರೆ ಇದನ್ನು ಅಷ್ಟು ಸರಳೀಕರಿಸಿ ನೋಡಲಾಗುವುದಿಲ್ಲ. ದೇಶದ ನಿರ್ಗತಿಕ, ಬಡ, ಕೆಳ ಮಧ್ಯಮ ವರ್ಗದ ಬಹುಸಂಖ್ಯಾತ ಜನತೆಗೆ ಈಗಲೂ ಸರ್ಕಾರಿ ಶಾಲೆಗಳೇ ಶಿಕ್ಷಣ ಕೊಡಬಲ್ಲ ಏಕೈಕ ಸಾಧನಗಳು. ಅದಕ್ಕೆ ಹೊರತಾಗಿ ಈ ಜನವರ್ಗಕ್ಕೆ ಅನ್ಯಮಾರ್ಗವಿಲ್ಲ. ಒಂದು ಹೊತ್ತಿನ ಊಟ ಸಿಗುತ್ತದೆಂಬ ಕಾರಣಕ್ಕೆ ಎಷ್ಟೋ ಮಂದಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ ಎಂದು ಹೇಳಿದರೆ ಇವರುಗಳಿಗೆ ಅದು ಅರ್ಥವೇ ಆಗುವುದಿಲ್ಲ. ಯಾಕೆಂದರೆ ಆ ನೋವನ್ನು ಇವರು ಅನುಭವಿಸಿ ಗೊತ್ತಿರುವುದಿಲ್ಲ.

ರವಿಶಂಕರರ ಈ ಅಸಹನೆಯ ಹೇಳಿಕೆಗೆ ಕಾರಣವೇನು ಎಂದು ಹಲವರು ಚಿಂತಿತರಾಗಿರುವುದನ್ನು ನಾನು ಗಮನಿಸಿದ್ದೇನೆ. ರವಿಶಂಕರರ ಗ್ರಾಹಕರು ಬಂಡವಾಳಶಾಹಿಗಳು, ಸಿರಿವಂತರು, ಅತಿ ಶ್ರೀಮಂತರೇ, ಧಾರ್ಮಿಕ ವಲಯದ ಮೂಲಭೂತವಾದಿಗಳು ಆಗಿದ್ದಾರೆ. ಅವರುಗಳ ಹಿತಾಸಕ್ತಿಗಳನ್ನು ರಕ್ಷಿಸುವ ಹೊಣೆಯೂ ಗುರೂಜಿಯವರದ್ದಾಗಿರಬಹುದು. ಹೀಗಾಗಿ ಖಾಸಗೀಕರಣವೇ ಎಲ್ಲ ಸಮಸ್ಯೆಗಳಿಗೂ ಮದ್ದು ಎಂದು ಅವರು ಡಂಗೂರ ಹೊಡೆಯುವ ಅನಿವಾರ್ಯತೆಗೆ ಸಿಲುಕಿರಬಹುದು.

ಆದರೆ ಈ ಹೇಳಿಕೆ ದೇಶದ ಸಮಸ್ತ ಮಕ್ಕಳಿಗೂ ಶಿಕ್ಷಣವನ್ನು ನೀಡುವ ನಮ್ಮ ಸಂವಿಧಾನ ಮತ್ತು ಸರ್ಕಾರಗಳ ಹೊಣೆಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದರಿಂದ ಸಂವಿಧಾನ ವಿರೋಧಿಯೇ ಆಗಿರುತ್ತದೆ. ದೇಶದ ಎಲ್ಲ ಶಾಲೆಗಳೂ ಖಾಸಗಿಯವರ ಕೈಗೆ ಹೋದರೆ ದೇಶದ ಬಡ, ಅತಿ ಬಡವ ತನ್ನ ಮಕ್ಕಳಿಗೆ ಶಿಕ್ಷಣ ನೀಡಲಾರನಾದ್ದರಿಂದ ಇದು ಜೀವ ವಿರೋಧಿ, ಮಕ್ಕಳ ಹಕ್ಕುಗಳನ್ನು ನಿರಾಕರಿಸುವಂಥ ಹೇಳಿಕೆಯಾಗುತ್ತದೆ. ಇನ್ನು ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಹಿಂಸೆಯನ್ನು ಪ್ರಚೋದಿಸುತ್ತವೆ ಎಂಬ ಮಾತುಗಳಿಗೆ ಯಾವ ನೆಲೆಯಲ್ಲೂ ಸಮರ್ಥನೆಯಿಲ್ಲವಾದ್ದರಿಂದ ಇದು ಅತ್ಯಂತ ಅವಿವೇಕದ, ಮುಠ್ಠಾಳತನದ ಹೇಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ.

ಒಂದು ವೇಳೆ ರವಿಶಂಕರರ ತಿದ್ದುಪಡಿಯಾದ ಹೇಳಿಕೆಯನ್ನೇ ಪರಿಗಣಿಸುವುದಾದರೂ ನಕ್ಸಲೈಟ್‍ರ ವ್ಯಾಪ್ತಿಯ ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಟಿಸುತ್ತಿವೆ ಎಂಬುದು ಮತ್ತೊಂದು ಮೂರ್ಖತನದ, ಆಧಾರ ರಹಿತ ಹೇಳಿಕೆಯಾಗುತ್ತದೆ. ಆ ಸರ್ಕಾರಿ ಶಾಲೆಗಳೂ ಇಲ್ಲದಿದ್ದರೆ ನಕ್ಸಲೈಟ್‍ರ ಪ್ರಮಾಣ ಇನ್ನಷ್ಟು ಹೆಚ್ಚಿರುತ್ತಿತ್ತು ಎಂಬುದನ್ನಾದರೂ ರವಿಶಂಕರರು ಗುರುತಿಸಬಹುದಿತ್ತು.

ನೊಬೆಲ್ ಪ್ರಶಸ್ತಿಗಾಗಿ ಕೈ ಚಾಚಿ ನಿಂತಿರುವ ರವಿಶಂಕರರು ತಮ್ಮ ಜೈಪುರ ಘೋಷಣೆಯನ್ನು ಸಾರಾಸಗಟಾಗಿ ವಾಪಾಸು ಪಡೆದು ದೇಶದ ನಾಗರಿಕರ ಕ್ಷಮೆ ಕೋರುವುದು ಅವರಿಗೆ ಎಲ್ಲ ರೀತಿಯಲ್ಲೂ ಶ್ರೇಯಸ್ಕರವಾದ ಕ್ರಿಯೆ. ಇಲ್ಲವಾದಲ್ಲಿ ತನ್ನನ್ನು ತಾನು ಶಾಂತಿಯ ರಾಯಭಾರಿ ಎಂತಲೋ, ಧರ್ಮ ಪ್ರವರ್ತಕ ಎಂತಲೋ, ಗುರೂಜಿ ಎಂತಲೋ, ಶ್ರೀ ಶ್ರೀ ಎಂತಲೋ ಅಥವಾ ಇನ್ನೇನೋ ಹಾಳುಮೂಳು ವಿಶೇಷಣಗಳನ್ನು ಅಂಟಿಸಿಕೊಳ್ಳುವುದನ್ನಾದರೂ ಅವರು ಕೈಬಿಡಬೇಕಾಗುತ್ತದೆ.

ರವಿಶಂಕರರು ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ. ಅವರು ಸರ್ಕಾರಿ ಶಾಲೆಗಳು ತಮ್ಮಂಥ ಯೋಗ ವ್ಯಾಪಾರಿಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದರೆ ಅದು ಹೆಚ್ಚು ಅನಾಹುತಕಾರಿ ಹೇಳಿಕೆಯಾಗಿರುತ್ತಿತ್ತು. ಯಾಕೆಂದರೆ ನಕ್ಸಲೈಟ್‍ರಾದರೋ ಸಾಮಾಜಿಕ ಅಸಮಾನತೆ, ಶೋಷಣೆಗಳ ವಿರುದ್ಧ ಬಂಡೆದ್ದು ಅಸ್ತ್ರ ಹಿಡಿದವರು. ಆದರೆ ರವಿಶಂಕರರಂಥವರು ಊಧ್ರ್ವಮುಖಿಯಾಗಬೇಕಾದ ಸಮಾಜವನ್ನು ಹಾಳುಗೆಡಹುತ್ತ ಬರುತ್ತಾರೆ. ಇಂಥವರೇ ಇವತ್ತು ಅತಿ ಹೆಚ್ಚು ಅಪಾಯಕಾರಿ ಜನರು.

ರೌಡಿಗಳ ಪಟ್ಟಿಗೆ ಹೊಸಬರ ಸೇರ್ಪಡೆ!

 

– ದಿನೇಶ್ ಕುಮಾರ್ ಎಸ್. ಸಿ

“ವಕೀಲರ ರೌಡಿಸಂಗೆ ಸಿಎಂ ಹೆದರ್ತಾರೆ, ಗೃಹಮಂತ್ರಿ ನಡುಗ್ತಾರೆ, ಆದ್ರೆ ನಾವು… ಮಾಧ್ಯಮದವರು ಹೆದರೋದಿಲ್ಲ…” ಇದು ಇವತ್ತಿನ ಉದಯವಾಣಿಯ ಮುಖಪುಟದ ಶೀರ್ಷಿಕೆ. ಕನ್ನಡಪ್ರಭ “ಏನ್ ಲಾ” ಎಂಬ ಎರಡು ಅರ್ಥ ಹೊರಡಿಸುವ ಶೀರ್ಷಿಕೆ ನೀಡಿದೆ. ಈ ಶೀರ್ಷಿಕೆಗಳು ಮಾಧ್ಯಮರಂಗದ ಆತ್ಮವಿಶ್ವಾಸದಂತೆಯೂ, ಅಹಂಕಾರದಂತೆಯೂ ಏಕಕಾಲಕ್ಕೆ ಧ್ವನಿ ಹೊರಡಿಸುತ್ತದೆ. ಸಿಟಿ ಸಿವಿಲ್ ಕೋರ್ಟ್ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯಿಂದ ಕನ್ನಡ ಮಾಧ್ಯಮ ಸಮೂಹ ಕೆರಳಿ ನಿಂತಿದೆ ಎಂಬುದಂತೂ ಸ್ಪಷ್ಟ. ಕೆರಳುವುದು, ಕೆರಳಿಸುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಜಾಯಮಾನ. ಯಾಕೆಂದರೆ ಅವುಗಳ ಟಿ‍ಆರ್‌ಪಿ ಯೊಂದಿಗೆ ಈ ಕೆರಳುವಿಕೆಗೆ ಸಂಬಂಧಿಸಿದೆ. ಈ ಬಾರಿ ಪತ್ರಿಕೆಗಳೂ ಸಹ ಕೆರಳಿವೆ. ಅದಕ್ಕೆ ಕಾರಣಗಳೂ ಇವೆ.

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕೆಲ ವಕೀಲರು ನಡೆಸಿದ ಪುಂಡಾಟಿಕೆ ಅಸಹನೀಯ ಮತ್ತು ಅಸಮರ್ಥನೀಯ. ಅದು ಅಕ್ಷರಶಃ ಗೂಂಡಾಗಿರಿಯೇ ಹೌದು. ಘಟನೆಗೆ ಕಾರಣವಾಗಿರಬಹುದಾದ ಪ್ರಚೋದನೆ ಏನೇ ಆಗಿದ್ದರೂ ಇಂಥ ಪುಂಡಾಟಿಕೆ ಅನಪೇಕ್ಷಿತ ಮತ್ತು ಕಾನೂನು ಬಾಹಿರ. ಇಂಥ ಕೃತ್ಯ ಎಸಗಿದ ವಕೀಲರು ಜೈಲು ಸೇರಲು ಲಾಯಕ್ಕಾದವರು ಮಾತ್ರವಲ್ಲ, ಅವರು ಮತ್ತೆಂದೂ ಕರಿಕೋಟು ಹಾಕುವಂತಾಗಬಾರದು.

ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಕೆರಳುವಿಕೆಯೂ ಅರ್ಥ ಮಾಡಿಕೊಳ್ಳುವಂಥದ್ದು. ನ್ಯೂಸ್ ಚಾನಲ್‍ಗಳು ಎರಡು ನಿಮಿಷಗಳ ಕಾಲ ಪ್ರಸಾರವನ್ನೇ ನಿಲ್ಲಿಸಿ ಪ್ರತಿಭಟಿಸಿದವು. ದಿನವಿಡೀ ಕಪ್ಪು ಬಣ್ಣದ ಹಿನ್ನೆಲೆಯನ್ನು ಪರದೆಯ ಮೇಲೆ ಬಳಸಿದವು. ಕಪ್ಪು ಪಟ್ಟಿ ಕಟ್ಟಿಕೊಂಡೇ ಸುದ್ದಿ ಓದಲಾಯಿತು. ಒಂದು ವಾಹಿನಿಯಲ್ಲಂತೂ ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಸುದ್ದಿ ಓದಲಾಯಿತು.

ಎಲ್ಲ ಸರಿ, ಇಷ್ಟೆಲ್ಲದರ ನಡುವೆ ಪತ್ರಕರ್ತರು ವೃತ್ತಿ ಧರ್ಮವನ್ನೇಕೆ ಮರೆತರು ಎಂಬ ಪ್ರಶ್ನೆಗೂ ಉತ್ತರ ಕೊಡಬೇಕಾಗುತ್ತದೆ. ನಿನ್ನೆಯಿಂದ ಫೇಸ್ ಬುಕ್‍ನಂಥ ಸಾಮಾಜಿಕ ತಾಣಗಳಲ್ಲಿ ಅಲ್ಲಲ್ಲಿ ಈ ಪ್ರಶ್ನೆಗಳು ಕೇಳಿಬರುತ್ತಿವೆ. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪತ್ರಕರ್ತರನ್ನು ಥಳಿಸಿದ ಘಟನೆಯ ನಂತರ ಮಧ್ಯಾಹ್ನದ ಸುಮಾರಿಗೆ ನಡೆದ ಲಾಠಿ ಚಾರ್ಜ್ ಮತ್ತು ಕೋರ್ಟ್ ಒಳಗೆ ನಡೆದ ಪೊಲೀಸ್ ದೌರ್ಜನ್ಯದ ಸುದ್ದಿ ಎಲ್ಲ ವಾಹಿನಿಗಳಲ್ಲೂ ನಾಪತ್ತೆಯಾಗಿದ್ದವು. ಇವತ್ತಿನ ಪತ್ರಿಕೆಗಳಲ್ಲೂ ಅದು ಕಾಣೆಯಾಗಿವೆ ಅಥವಾ ಕಾಣದಂತಾಗಿವೆ.

ದಿ ಹಿಂದೂ ಪತ್ರಿಕೆ ಮಾತ್ರ ಘಟನೆಯ ಎಲ್ಲ ಆಯಾಮಗಳನ್ನು ವಿವರಿಸುವ ಪ್ರಯತ್ನ ಮಾಡಿದೆ. (ಈ ಕೆಲಸವನ್ನು ಪ್ರಜಾವಾಣಿಯಾದರೂ ಮಾಡಬಹುದು ಎಂಬ ನನ್ನ ನಿರೀಕ್ಷೆ ಸುಳ್ಳಾಯಿತು.) ಕೆಲ ಕನ್ನಡ ಪತ್ರಿಕೆಗಳು ಸಿಟಿ ಸಿವಿಲ್ ಕೋರ್ಟ್ ನ್ಯಾಯಮೂರ್ತಿ ಬೂದಿಹಾಳ್ ಅವರ ಮೇಲೆ ವಕೀಲರೇ ದೌರ್ಜನ್ಯವೆಸಗಿದರು ಎಂದು ವರದಿ ಮಾಡಿವೆ. ಆದರೆ ನ್ಯಾಯಮೂರ್ತಿಗಳು ಲಾಠಿ ಚಾರ್ಜ್‍ನಿಂದ ಗಾಯಗೊಂಡಿದ್ದರು.

ಕೆಲ ಪತ್ರಕರ್ತರು ಮಧ್ಯಾಹ್ನದ ನಂತರ ಪೊಲೀಸರೊಂದಿಗೆ ಸೇರಿ ಪ್ರತೀಕಾರದ ದಾಳಿ ನಡೆಸಿದರು ಎಂದು ಹಿಂದೂ ವರದಿ ಮಾಡಿದೆ. ವಕೀಲರ ಮತ್ತು ನ್ಯಾಯಾಧೀಶರ ವಾಹನಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಒಡೆದುಹಾಕಲಾಯಿತು ಎಂದು ಈ ವರದಿ ಹೇಳುತ್ತದೆ. ಮಾತ್ರವಲ್ಲ, ಪೊಲೀಸರೇ ಖುದ್ದಾಗಿ ಕೆಲ ವಾಹನಗಳಿಗೆ ಬೆಂಕಿ ಹಚ್ಚಿದರು ಎಂಬುದನ್ನೂ ವರದಿ ಬಹಿರಂಗಪಡಿಸುತ್ತದೆ. (ಕೆಲ ನ್ಯಾಯವಾದಿಗಳು ಪೊಲೀಸರೇ ವಾಹನಗಳಿಗೆ ಬೆಂಕಿಹಚ್ಚುವ ವಿಡಿಯೋಗಳನ್ನು ಈಗಾಗಲೇ ಫೇಸ್ ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.) ದಿ ಹಿಂದು ಪತ್ರಿಕೆ ವರದಿ ಪ್ರಕಾರ, ವಕೀಲರ ಮೇಲೆ ದಾಳಿ ಮಾಡುತ್ತಿದ್ದ ಪತ್ರಕರ್ತರನ್ನು ತಡೆಯಲು ಹೋದ ಸಮಚಿತ್ತದ ಒಬ್ಬ ಪತ್ರಕರ್ತರ ಮೇಲೆಯೂ ಇದೇ ಪತ್ರಕರ್ತರು ಹಲ್ಲೆ ಮಾಡಿದ್ದಾರೆ.

ಸಿಟಿ ಸಿವಿಲ್ ಕೋರ್ಟ್ ಒಳಗೆ ನುಗ್ಗಿದ ಪೊಲೀಸರು ಹೊರಗೆ ನಡೆದ ಘಟನೆಗೆ ಸಂಬಂಧವೇ ಇಲ್ಲದ ವಕೀಲರ ಮೇಲೆ ಲಾಠಿ ಬೀಸಿದ್ದಾರೆ. ಕ್ಯಾಂಟೀನು, ಬಾರ್ ಅಸೋಸಿಯೇಷನ್ ಒಳಗೂ ನುಗ್ಗಿ ದಾಳಿ ಮಾಡಿದ್ದಾರೆ. ಪೀಠೋಪಕರಣಗಳನ್ನು ಒಡೆದುಹಾಕಿದ್ದಾರೆ ಆದರೆ ಎಷ್ಟು ಮಂದಿ ವಕೀಲರು ಗಾಯಗೊಂಡಿದ್ದಾರೆ? ಹೇಗೆ ಗಾಯಗೊಂಡರು? ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು? ಎಂಬೆಲ್ಲ ಪ್ರಶ್ನೆಗಳಿಗೆ ಮಾಧ್ಯಮಗಳಲ್ಲಿ ಉತ್ತರವಿಲ್ಲ.

ಒಂದು ವಾಹಿನಿಯ ಪ್ರಕಾರ ಮೂರು ಮಂದಿ ಪೊಲೀಸ್ ಪೇದೆಗಳು ಮೃತಪಟ್ಟಿದ್ದಾರೆ, ಮತ್ತೊಂದು ಇಬ್ಬರ ಸಾವು ಎಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಸತ್ತ ಪೊಲೀಸರ ಹೆಸರುಗಳನ್ನೂ ಪ್ರಸಾರ ಮಾಡಲಾಯಿತು.! ದಿ ಹಿಂದೂ ವರದಿಯ ಪ್ರಕಾರ ಈ ಸುದ್ದಿಯನ್ನು ಸ್ಫೋಟಿಸಿದ ನಂತರ ನಗರದ ಹಲವು ವೃತ್ತಗಳಲ್ಲಿ ಕರಿಕೋಟು ಹಾಕಿಕೊಂಡು ಓಡಾಡುವವರ ಮೇಲೆ ಪೊಲೀಸರು ಲಾಠಿ ಬೀಸಿದರು! ವಕೀಲರು ಮನೆಗಳನ್ನು ತಲುಪಿಕೊಳ್ಳುವುದೇ ಕಷ್ಟವಾಯಿತು. ಸ್ವತಃ ಮುಖ್ಯಮಂತ್ರಿಗಳೇ ಘಟನೆಯಲ್ಲಿ ಯಾರೂ ಸತ್ತಿಲ್ಲ ಎಂದು ಖಚಿತಪಡಿಸಿದ ಮೇಲೂ ಒಂದು ವಾಹಿನಿ ಸುದ್ದಿವಾಚಕರು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂದೇ ಹೇಳುತ್ತಿದ್ದರು.

ಇಡೀ ಘಟನಾವಳಿಗಳನ್ನು ಗಮನಿಸಿದಾಗ ಸ್ಪಷ್ಟವಾಗಿ ಕಾಣೋದು ವಕೀಲ, ಪತ್ರಕರ್ತ ಮತ್ತು ಪೊಲೀಸು ಎಂಬ ಮೂರು ವ್ಯವಸ್ಥೆಗಳ ನಡುವಿನ ಆಂತರಿಕ ಸಂಘರ್ಷ ಮತ್ತು ಅವುಗಳು ಬೆಳೆಸಿಕೊಂಡು ಬಂದಿರುವ ಅಹಂನಿಂದಾಗಿರುವ ಅನಾಚಾರಗಳು. ವ್ಯವಸ್ಥೆಯ ಈ ಮೂರೂ ಅಂಗಗಳೂ ಬಲಶಾಲಿಯಾಗಿವೆ. ಎಲ್ಲರೂ ತಮ್ಮನ್ನು ತಾವು ಸುಪ್ರೀಂ ಎಂದು ಭಾವಿಸಿಕೊಂಡಂತಿದೆ. ಈ ಅಹಂಗಳ ನಡುವಿನ ಸಂಘರ್ಷ ಇವತ್ತು ತಾರಕಕ್ಕೇರಿದೆ.

ತಿಂಗಳ ಹಿಂದೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕ್ಲುಲ್ಲಕ ಕಾರಣಕ್ಕೆ ವಕೀಲರು ಸತತ ಏಳುಗಂಟೆಗಳ ಕಾಲ ರಸ್ತೆತಡೆ ನಡೆಸಿ ಉದ್ಧಟತನ ತೋರಿದರು. ಅದನ್ನು ಖಂಡಿಸಿ ಮಾಧ್ಯಮಗಳು ವರದಿ ಮಾಡಿದವು. ತಮ್ಮ ವಿರುದ್ಧ ಮಾಧ್ಯಮಗಳು ಬಳಸಿದ ಭಾಷೆಯಿಂದ ವ್ಯಗ್ರಗೊಂಡ ವಕೀಲ ಸಮುದಾಯದ ರಣಧೀರರು ಸೇಡಿಗಾಗಿ ಕಾತರಿಸಿದ್ದರು,. ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ವಕೀಲರ ಮೇಲೆ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಗೆ ಸಿಲುಕಿದ್ದ ಪೊಲೀಸರು ಕೂಡ ವಕೀಲರ ಮೇಲೆ ಸೇಡಿಗೆ ಕಾದಿದ್ದರು.

ಮಾಧ್ಯಮ ವರದಿಗಳ ಪ್ರಕಾರವೇ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿನ್ನೆ ಪತ್ರಕರ್ತರ ಮೇಲೆ ದಾಳಿ ನಡೆಯುವಾಗ ಪೊಲೀಸರು ಸುಮ್ಮನಿದ್ದರು, ಕೆಲವರಂತೂ ನಗುತ್ತಾ ನಿಂತಿದ್ದರು! ಅದಾದ ಅರ್ಧಗಂಟೆಗೆ ಇದ್ದಕ್ಕಿದ್ದಂತೆ ಪೊಲೀಸರಿಗೆ ಪೌರುಷ ಬಂದಿದ್ದು ಹೇಗೆ? ಹೈಕೊರ್ಟ್‍ನ ನಾಲ್ವರು ನ್ಯಾಯಮೂರ್ತಿ‍ಗಳು ಕೋರ್ಟ್ ಪ್ರವೇಶಿಸಿ, ಒಳಗಿದ್ದ ಪೊಲೀಸರನ್ನು ಹೊರಗೆ ಕರೆಸಿಕೊಳ್ಳುವಂತೆ ಗೃಹಸಚಿವ, ಡಿಜಿಪಿ, ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದರೂ ಅದನ್ನು ಲೆಕ್ಕಿಸದೇ ಕೋರ್ಟ್ ಒಳಗೇ ಲಾಠಿ ಚಾರ್ಜ್ ಮಾಡಿದ್ದು ಏಕೆ?

ವಕೀಲರಿಗೆ ಮಾಧ್ಯಮಗಳ ಮೇಲೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಪೊಲೀಸರಿಗೆ ವಕೀಲರ ಮೇಲೆ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಮಾಧ್ಯಮಗಳಿಗೂ ವಕೀಲರ ಮೇಲೆ ಅಸಹನೆ ಕುದಿಯುತ್ತಿತ್ತು, ಅವರೂ ಸೇಡು ತೀರಿಸಿಕೊಂಡಿದ್ದಾರೆ. ಇದು ಇಲ್ಲಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ.

ಚಿತ್ರ: ಪೊಲೀಸರ ಲಾಟಿ ಏಟಿಗೆ ಗಾಯಗೊಂಡ ವಕೀಲ.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ

-ದಿನೇಶ್ ಕುಮಾರ್ ಎಸ್.ಸಿ.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ಎಂಬ ವಿಷಯದ ಕುರಿತು ವಿಚಾರಸಂಕಿರಣದಲ್ಲಿ ಭಾಗವಹಿಸುತ್ತಿದ್ದೇನೆ ಎಂದಾಗ ನನ್ನ ಕವಿಮಿತ್ರರೊಬ್ಬರು ಹೇಳಿದ್ದು, ವಿದ್ಯುನ್ಮಾನ ಮಾಧ್ಯಮ ಎಂಬುದೇ ಈ ಯುಗದ ಅತಿ ದೊಡ್ಡ ಮೂಢನಂಬಿಕೆ ಎಂದು. ಹಲವರಿಗೆ ಒಪ್ಪಿಕೊಳ್ಳುವುದಕ್ಕೆ ತುಸು ಕಷ್ಟವಾದರೂ ಮೀಡಿಯಾ ಅನ್ನೋದೇ ಒಂದು ದೊಡ್ಡ ಮೌಢ್ಯವಾಗಿರುವುದು ಸತ್ಯದ ಮಾತು. ಈ ಮಾತನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಮೀಡಿಯಾದಲ್ಲಿ ಮೌಢ್ಯ ಎಂಬ ವಿಷಯ ಇವತ್ತಿನ ಚರ್ಚೆಯ ವಿಷಯವಾಗಿರುವುದರಿಂದ ಮೀಡಿಯಾ ಎಂಬ ಮೌಢ್ಯ ಎಂಬ ವಿಶಾಲ ವ್ಯಾಪ್ತಿಯ ವಿಷಯವನ್ನು ಸದ್ಯಕ್ಕೆ ಕೈಬಿಡುತ್ತಿದ್ದೇನೆ.

ಎಲೆಕ್ಟ್ರಾನಿಕ್ ಮಾಧ್ಯಮವೆಂಬುದು ಆಧುನಿಕ ವಿಜ್ಞಾನ ತಂತ್ರಜ್ಞಾನದ ವಿಶಿಷ್ಠ ಕೊಡುಗೆ. ಆದರೆ ಅದು ಮೌಢ್ಯವನ್ನು ಬಿತ್ತರಿಸಲು ಬಳಕೆಯಾಗುತ್ತಿದೆ ಎಂಬುದೇ ಒಂದು ವ್ಯಂಗ್ಯ. ಅಗ್ಗದ ಜನಪ್ರಿಯತೆಗಾಗಿ ಅವುಗಳಿಗೆ ಅಂಧಶ್ರದ್ಧೆಗಳು ಬೇಕು, ಸೆಕ್ಸ್ ಮತ್ತು ಕ್ರೈಂಗಳು ಬೇಕು. ಮೂವರು ಸಚಿವರು ಬ್ಲೂ ಫಿಲ್ಮ್ ನೋಡಿದ್ದನ್ನು ಈ ಚಾನಲ್‌ಗಳು ಬಹಿರಂಗಪಡಿಸಿ ಅವರ ಸಚಿವ ಸ್ಥಾನ ಕಳೆದವು. ಆದರೆ ಅದೇ ಸಮಯದಲ್ಲಿ ಕರ್ನಾಟಕದ ಜನತೆಗೆ ಬ್ಲೂ ಫಿಲ್ಮ್ ತೋರಿಸಿದವು, ಮಸುಕು ಕೂಡ ಮಾಡದೆ. ಎಲೆಕ್ಟ್ರಾನಿಕ್ ಮಾಧ್ಯಮ ಉತ್ತರದಾಯಿತ್ವವನ್ನು ಕಳೆದುಕೊಂಡಿದೆ. ಉತ್ತರದಾಯಿತ್ವ ಇಲ್ಲದ ಮಾಧ್ಯಮ ಯಾವತ್ತಿಗೂ ವಿನಾಶಕಾರಿಯಾಗಿರುತ್ತದೆ ಮಾತ್ರವಲ್ಲ, ಸಮಾಜದ್ರೋಹದ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿರುತ್ತದೆ. ನಮ್ಮ ಚಾನಲ್‌ಗಳು ಈಗ ಆ ಕೆಲಸವನ್ನು ಮಾಡುತ್ತಿವೆ.

ಈ ತರಹದ ಗೋಷ್ಠಿಗಳಿಗೆ ಸಾಧಾರಣವಾಗಿ ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ಬರುವುದು ಕಡಿಮೆ. ಬಂದರೂ ಇಲ್ಲಿನ ಚರ್ಚೆಯ ವಿಷಯಗಳು ಆ ಚಾನಲ್‌ಗಳಲ್ಲಿ ಪ್ರಸಾರವಾಗುವುದಿಲ್ಲ. ಹೀಗಾಗಿ ಇಲ್ಲಿ ಮಾತನಾಡುವ ವಿಷಯಗಳು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅದಕ್ಕೆ ಕಾರಣಗಳೂ ಇವೆ. ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ತಾವು ಮೌಢ್ಯವನ್ನು ಹರಡುತ್ತಿದ್ದೇವೆ ಎಂಬ ವಿಷಯ ಚೆನ್ನಾಗಿಯೇ ಗೊತ್ತು. ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸವನ್ನು ಅವು ಮಾಡುತ್ತಿವೆ. ಹೀಗಾಗಿ ಯಾವ ಸಲಹೆ-ಸೂಚನೆ-ನಿರ್ದೇಶನಗಳೂ ಅವುಗಳಿಗೆ ಬೇಕಾಗಿಲ್ಲ. ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ನಿದ್ದೆಯ ನಾಟಕವಾಡುತ್ತಿರುವವರನ್ನು ಅಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳು ತಾವೂ ಅಂಧಶ್ರದ್ಧೆಗೆ ಬಿದ್ದು ಜ್ಯೋತಿಷ್ಯದಂಥ ಕಾರ್ಯಕ್ರಮಗಳನ್ನು ವಿಜೃಂಭಿಸುವ ಕೆಲಸ ಮಾಡುತ್ತಿಲ್ಲ. ಚಾನಲ್‌ನಲ್ಲಿ ಮಾತನಾಡುವ ಜ್ಯೋತಿಷಿಗಳು ಹೇಳುವ ಮಾತುಗಳನ್ನು ಚಾನಲ್ ನವರೇ ನಂಬುವುದಿಲ್ಲ, ಅನುಸರಿಸುವುದಿಲ್ಲ. ಈ ಮೀಡಿಯಾ ಜನರಿಗೆ ತಮ್ಮದು ಮುಠ್ಠಾಳ, ಮನೆಹಾಳ ಕಾರ್ಯಕ್ರಮಗಳು ಎಂಬುದು ಚೆನ್ನಾಗಿಯೇ ಗೊತ್ತು.

ಎಲೆಕ್ಟ್ರಾನಿಕ್ ಮಾಧ್ಯಮಗಳು ಹಲವು ಬಗೆಯ ಮೌಢ್ಯಗಳನ್ನು ಪ್ರಸಾರ ಮಾಡುತ್ತಿವೆ. ಪ್ರಸಾರ ಮಾಡುತ್ತಿವೆ ಎಂಬ ಶಬ್ದಕ್ಕಿಂತ ಮಾರಾಟ ಮಾಡುತ್ತಿವೆ ಎಂಬ ಶಬ್ದವನ್ನು ಬಳಸಲು ಬಯಸುತ್ತೇನೆ. ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಪ್ರತಿ ಕಾರ್ಯಕ್ರಮವೂ ಮಾರಾಟದ ಸರಕು. ಜ್ಯೋತಿಷ್ಯ, ಪುನರ್ಜನ್ಮ, ಬಾನಾಮತಿ, ಸಂಖ್ಯಾಶಾಸ್ತ್ರ, ವಾಸ್ತು ಶಾಸ್ತ್ರ, ಮಾಟ-ಮಂತ್ರ ಇತ್ಯಾದಿಗಳೆಲ್ಲವೂ ಬಹುಬೇಗ ಸೇಲ್ ಆಗುವ ವಸ್ತುಗಳು. ಜನರಿಗೆ ಅಂತೀಂದ್ರಿಯವಾದದ್ದೆಲ್ಲ ಕುತೂಹಲ ಹುಟ್ಟಿಸುತ್ತವೆ. ಯಾವುದಕ್ಕೆ ವೈಜ್ಞಾನಿಕ ತರ್ಕ ವಿಶ್ಲೇಷಣೆಗಳು ಬಹುಬೇಗ ತಲೆಗೆ ಹೊಳೆಯುತ್ತವೋ ಅಂಥವು ಜನರಿಗೆ ಬೇಕಾಗಿಲ್ಲ. ಹೀಗಾಗಿ ತಮ್ಮ ಬುದ್ಧಿಗೆ ನಿಲುಕದ್ದನ್ನೆಲ್ಲ ಜನರು ಆಶ್ಚರ್ಯದಿಂದ ನೋಡುತ್ತಾರೆ. ಮತ್ತು ಅದಕ್ಕೆ ತಲೆಕೊಡುತ್ತಾರೆ. ಇದು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸ್ಪಷ್ಟವಾಗಿ ಗೊತ್ತಿರುವ ವಿಷಯ. ಹೀಗಾಗಿ ಅವು ಒಂದಾದ ಮೇಲೊಂದರಂತೆ ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ.

ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡುವ ನನ್ನ ಗೆಳೆಯನೊಬ್ಬ ಇದನ್ನು ಚೆನ್ನಾಗಿ ವಿಶ್ಲೇಷಣೆ ಮಾಡುತ್ತಾನೆ. ಅವನ ದೃಷ್ಟಿಯಲ್ಲಿ ಅವನೊಬ್ಬ ಪತ್ರಕರ್ತನಲ್ಲ. ಒಬ್ಬ ಬಿಜಿನೆಸ್ ಮ್ಯಾನ್, ಅವನ ಜತೆ ಕೆಲಸ ಮಾಡುವ ಸಹ ಪತ್ರಕರ್ತರು ಸೇಲ್ಸ್ ಮನ್‌ಗಳು. ಜನ ಏನನ್ನು ನೋಡುತ್ತಾರೆ ಎಂಬುದಷ್ಟೇ ಅವರಿಗೆ ಮುಖ್ಯ. ಜನರಿಗೆ ಏನನ್ನು ಕೊಡಬೇಕು ಎಂಬುದು ಮುಖ್ಯವಲ್ಲ. ಒಂದು ವೇಳೆ ಜನರಿಗೆ ನಿಜವಾಗಿಯೂ ಕೊಡಬೇಕಾಗಿದ್ದನ್ನು ಕೊಟ್ಟರೆ ಅವರು ಸ್ಪರ್ಧೆಯಲ್ಲಿ ಉಳಿಯುವುದಿಲ್ಲ. ಹೀಗಾಗಿ ನಾವು ಜನ ನೋಡುವುದನ್ನಷ್ಟೆ ಕೊಡುತ್ತೇವೆ ಎನ್ನುತ್ತಾನೆ ಆತ. ಹೀಗಾಗಿ ಜ್ಯೋತಿಷ್ಯ, ಮಾಟ-ಮಂತ್ರ, ಸೆಕ್ಸ್, ಕ್ರಿಕೆಟ್ ಇಂಥವುಗಳೇ ಚಾನಲ್‌ಗಳಿಗೆ ಆದ್ಯತೆಯ ವಿಷಯ. ಅವುಗಳನ್ನು ಬಿಟ್ಟು ಇವು ಬದುಕಲಾರಂತೆ ಆಗಿಹೋಗಿವೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡ ತರುವಾಯ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಹೇಳಿದ್ದು ಇದನ್ನೇ. ಅವರಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು ತೀವ್ರ ಅಸಮಾಧಾನವಿತ್ತು. ಚಾನಲ್‌ಗಳು ಅಂಧಶ್ರದ್ಧೆಗಳನ್ನು ಹರಡುತ್ತಿವೆ. ಇವುಗಳಿಗೆ ಲಗಾಮು ಹಾಕಲೇಬೇಕು ಎಂಬ ಮಾತುಗಳನ್ನು ಅವರು ಆಡಿದರು. ಖಟ್ಜು ಕೆಲವು ದೇಶಮಟ್ಟದ ಹಿಂದಿ ಚಾನಲ್‌ಗಳನ್ನು ನೋಡಿ ಈ ಅಭಿಪ್ರಾಯ ಹೇಳಿರಬಹುದು. ಒಂದು ವೇಳೆ ಅವರು ನಮ್ಮ ಕನ್ನಡ ಚಾನಲ್‌ಗಳನ್ನು ನೋಡಿದ್ದರೆ, ಅದರಲ್ಲೂ ನರೇಂದ್ರ ಬಾಬು ಶರ್ಮನಂಥವನ ಮಾತುಗಳನ್ನು ಒಂದು ಹತ್ತು ನಿಮಿಷ ಕೇಳಿದ್ದರೆ ಅವರ ಎದೆ ಒಡೆದುಹೋಗುತ್ತಿತ್ತೇನೋ?

ಆರ್ಥಿಕ ಉದಾರೀಕರಣ, ಜಾಗತೀಕರಣದ ಪರಿಣಾಮವಾಗಿ ದೇಶದಲ್ಲಿಂದು ಎಲೆಕ್ಟ್ರಾನಿಕ್ ಮಾಧ್ಯಮ ಬೆಳೆದು ನಿಂತಿದೆ. ಈಗ ಅದು ಲಂಗು ಲಗಾಮಿಲ್ಲದ ಕುದುರೆ. ನಮ್ಮ ಪತ್ರಿಕಾ ಮಾಧ್ಯಮಕ್ಕೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ ಅವುಗಳ ರಚನೆ, ದೃಷ್ಟಿಯಲ್ಲೇ ಮೂಲಭೂತವಾದ ವ್ಯತ್ಯಾಸವಿದೆ. ಪತ್ರಿಕಾ ಮಾಧ್ಯಮ ಭಾರತದ ಮಟ್ಟಿಗೆ ಬೆಳೆಯಲು ಶುರುವಾಗಿದ್ದು ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ. ಆ ಕಾಲದಲ್ಲಿ ಪತ್ರಿಕಾ ಮಾಧ್ಯಮಗಳ ಧೋರಣೆ ಹೇಗಿತ್ತೆಂದರೆ ಅದು ಒಂದು ಆದರ್ಶದ ಕ್ಷೇತ್ರವಾಗಿತ್ತು. ಅದೂ ಕೂಡ ಚಳವಳಿಯ ಭಾಗವಾಗಿಯೇ ಕೆಲಸ ಮಾಡುತ್ತಿತ್ತು.

ಇವತ್ತಿಗೂ ನೀವು ಪತ್ರಿಕೆಗಳನ್ನು, ಅದರಲ್ಲೂ ವಿಶೇಷವಾಗಿ ದಿನಪತ್ರಿಕೆಗಳನ್ನು ನೋಡಿ. ಅವುಗಳು ಸಾಮಾಜಿಕ ಕಳಕಳಿ ಅವುಗಳಿಗೆ ಸ್ಥಾಯಿಯಾದ ಉದ್ದೇಶಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಕೆಲವು ರಾಜಕೀಯ ಪಕ್ಷಗಳ, ವ್ಯಕ್ತಿಗಳ, ಸಂಘಟನೆಗಳ ತುತ್ತೂರಿಯಾಗಿದ್ದರೂ ಅಲ್ಲಿ ಜನಪರವಾದ ಸುದ್ದಿಗಳಿಗೆ ಮಹತ್ವ ಇದ್ದೇ ಇರುತ್ತದೆ. ಯಾವುದೋ ಹಳ್ಳಿಯ ಏನೋ ಸಮಸ್ಯೆಯನ್ನು ಒಬ್ಬ ಓದುಗ ವಾಚಕರ ವಾಣಿಯಲ್ಲಿ ಬರೆಯಬಲ್ಲ, ಆ ಸುದ್ದಿ ಇತರ ಓದುಗರಿಗೆ ಅಪ್ರಸ್ತುತವಾಗಿದ್ದರೂ ಕೂಡ.

ಅದಕ್ಕಿಂತ ಹೆಚ್ಚಾಗಿ ವೃತ್ತ ಪತ್ರಿಕೆಗಳ ಪತ್ರಕರ್ತರನ್ನು ಆ ಪತ್ರಿಕೆಗಳ ಮಾಲೀಕ ನನಗೆ ಸೇಲ್ ಆಗುವ ಸುದ್ದಿಯನ್ನೇ ಬರೆಯಬೇಕು ಎಂದು ಎಂದೂ ಸಹ ಕೈಹಿಡಿದು ಬರೆಸಲು ಹೋಗುವುದಿಲ್ಲ. ಅಷ್ಟು ಸ್ವಾತಂತ್ರ್ಯವನ್ನು ಈ ಪತ್ರಕರ್ತರು ಅನುಭವಿಸುತ್ತಿದ್ದಾರೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ವರದಿಗಾರ ಸೇಲ್ ಆಗುವ ಸುದ್ದಿಯನ್ನೇ ಕೊಡಬೇಕು. ಕೊಡದೇ ಇದ್ದರೆ ಸಂಪಾದಕ ಸ್ಥಾನಗಳಲ್ಲಿರುವವರು ತಲೆ ತಿನ್ನಲು ಶುರು ಮಾಡಿರುತ್ತಾನೆ. ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕುವ ವರದಿಗಾರ ತನ್ನ ಇಚ್ಛೆಗೆ ವಿರುದ್ಧವಾಗಿ ಜನಪ್ರಿಯ ಸುದ್ದಿಗಳ ಬೆನ್ನುಹತ್ತುತ್ತಾನೆ.

ಹೀಗಾಗಿ ಯಾವುದೋ ಒಂದು ಕಾಲೇಜಿನ ಮುಂಭಾಗ ಯಾರೋ ಒಂದು ನಿಂಬೆಹಣ್ಣು, ಕುಂಕುಮದ ಪೊಟ್ಟಣ, ಸಣ್ಣ ಬೊಂಬೆ ಇಟ್ಟು ಹೋಗಿದ್ದರೆ ಚಾನಲ್ ವರದಿಗಾರ ಎಲ್ಲವನ್ನೂ ಬಿಟ್ಟು ಓಬಿವ್ಯಾನ್ ತಂದು ಅದರ ಕವರೇಜ್ ಗೆ ನಿಂತುಬಿಡುತ್ತಾನೆ. ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲೆಂದೇ ಮಾಟ ಮಾಡಿಸಿದ್ದಾನೆ ಎಂದು ಓತಪ್ರೋತ ಕಥೆ ಕಟ್ಟುತ್ತಾನೆ. ಚಾನಲ್ ಗಳಲ್ಲಿ ಗಂಟೆಗಟ್ಟಲೆ ಪ್ಯಾನಲ್ ಚರ್ಚೆ ಶುರುವಾಗಿಬಿಡುತ್ತದೆ. ಅಲ್ಲಿ ಕೆಲವು ಚಿತ್ರವಿಚಿತ್ರ ವೇಷದ ಜ್ಯೋತಿಷಿಗಳು, ಮಾಟಗಾರರು, ಕಾಳಿ ಉಪಾಸಕರೆಂದು ಹೇಳಿಕೊಳ್ಳುವ ಆಂಟಿ ಮಾಟಗಾರರು (ವೈರಸ್ ಗಳಿಗೆ ಆಂಟಿವೈರಸ್ ಗಳಿದ್ದಂತೆ ಈ ಆಂಟಿ ಮಾಟಗಾರರು, ಇವರೂ ಕೂಡ ಒಂದು ಥರದ ವೈರಸ್ಸುಗಳೇ) ಬಂದು ಕುಳಿತುಬಿಡುತ್ತಾರೆ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತೇವೆಂಬ ಕಾರಣಕ್ಕೆ ಕ್ಯಾಮೆರಾ ಮುಂದೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಚಾನಲ್‌ಗಳ ಹೊಟ್ಟೆ ತುಂಬುತ್ತದೆ.

ನಿತ್ಯ ಬೆಳಿಗ್ಗೆ ನೀವು ಟಿವಿ ಆನ್ ಮಾಡಿ ನೋಡಿ. ಎಲ್ಲ ಚಾನಲ್ ಗಳಲ್ಲೂ ವಿಚಿತ್ರ ಪೋಷಾಕುಗಳನ್ನು ಧರಿಸಿ, ವಿಚಿತ್ರ ರೀತಿಯಲ್ಲಿ ಸಜ್ಜುಗೊಳಿಸಿದ ಸ್ಟುಡಿಯೋದಲ್ಲಿ ಜ್ಯೋತಿಷಿಗಳು ಹಾಜರಾಗಿರುತ್ತಾರೆ. ಕೆಲವು ಜ್ಯೋತಿಷಿಗಳೋ ತಮ್ಮನ್ನು ತಾವು ಗರ್ಭಗುಡಿಯಲ್ಲಿ ಕುಳಿತುಕೊಂಡ ಹಾಗೆ ಸ್ಟುಡಿಯೋ ಅಲಂಕಾರ ಮಾಡಿಸಿಕೊಂಡಿರುತ್ತಾರೆ. ತಮ್ಮ ತಲೆಯ ಹಿಂದೆ ಡ್ಯೂಪ್ಲಿಕೇಟ್ ಪ್ರಭಾವಳಿಗಳ ಸಮೇತ ಆಸೀನರಾಗಿ ಜ್ಯೋತಿಷ್ಯ ಶುರುಮಾಡುತ್ತಾರೆ. sಸಾಧಾರಣವಾಗಿ ಕನ್ನಡ ಚಾನಲ್‌ಗಳಲ್ಲಿ ಈ ಜ್ಯೋತಿಷಿಗಳು ಲ್ಯಾಪ್ ಟಾಪ್ ನಲ್ಲಿ ಜ್ಯೋತಿಷ್ಯದ ಒಂದು ರೆಡಿಮೇಡ್ ಸಾಫ್ಟ್ ವೇರ್ ಹಾಕಿಕೊಂಡು ಕೂತಿರುತ್ತಾರೆ. ಒಬ್ಬ ನಿರೂಪಕಿ ಜತೆಗೆ ಕುಳಿತಿರುತ್ತಾಳೆ. ಆಕೆಯೇ ದೂರವಾಣಿ ಕರೆಗಳನ್ನು ಸ್ವೀಕರಿಸಿ ವೀಕ್ಷಕನ/ವೀಕ್ಷಕಳ ಜನ್ಮದಿನಾಂಕ ಪಡೆಯುತ್ತಾಳೆ, ಅವಳು ಅವನ ಜತೆ ಮಾತನಾಡುತ್ತಿರುವಾಗ ಜ್ಯೋತಿಷಿ ಲ್ಯಾಪ್ ಟಾಪ್‌ನಲ್ಲಿ ಜನ್ಮದಿನಾಂಕ ಎಂಟ್ರಿ ಮಾಡಿ, ಗುರು, ಶನಿ, ರಾಹು ಎಲ್ಲರೂ ಯಾವ್ಯಾವ ಮನೆಯಲ್ಲಿದ್ದಾರೆ ಎಂಬುದನ್ನು ಗಮನಿಸಿ ತನ್ನ ಜಡ್ಜ್‌ಮೆಂಟ್ ಕೊಡೋದಕ್ಕೆ ಶುರು ಮಾಡುತ್ತಾನೆ.

ಸಾಧಾರಣವಾಗಿ ಈ ಜ್ಯೋತಿಷಿಗಳು ದುರಹಂಕಾರಿಗಳು. ಅವರು ಮಾತನಾಡುವ ಶೈಲಿಯನ್ನು ಸರಿಯಾಗಿ ಗಮನಿಸಿ. ತಾವು ಏನನ್ನು ಹೇಳುತ್ತಿದ್ದೇವೋ ಅದೇ ಸತ್ಯ ಎಂಬ ಉಡಾಫೆ ಅವರುಗಳದ್ದು. ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಅವರ ಬಳಿ ಪರಿಹಾರವಿದೆ. ಚಿತ್ರ ವಿಚಿತ್ರವಾದ ಪರಿಹಾರಗಳನ್ನು ಅವರು ನೀಡುತ್ತಾರೆ. ತುಪ್ಪದ ದೀಪ ಹಚ್ಚಿ ಎನ್ನುವುದರಿಂದ ಹಿಡಿದು, ಆ ದೇವಸ್ಥಾನದಲ್ಲಿ ಅಭಿಷೇಕ ಮಾಡಿ, ಈ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ, ಮನೆ ಸುತ್ತ ಎಳ್ಳು ಚೆಲ್ಲಿ, ಬಿಳಿ ಬಟ್ಟೆ ಹಾಕ್ಕೊಳ್ಳಿ, ಶನಿವಾರ ಮನೆಯಿಂದ ಹೊರಗೆ ಹೋಗಬೇಡಿ, ಬೀದಿ ನಾಯಿಗೆ ಊಟ ಹಾಕಿ ಎನ್ನುವವರೆಗೆ ಈ ಪರಿಹಾರಗಳಿರುತ್ತವೆ. ಒಬ್ಬ ಜ್ಯೋತಿಷಿ ಕಳೆದ ವರ್ಷ ಫೆಬ್ರವರಿಯಲ್ಲಿ ಜಗತ್ತು ಪ್ರಳಯವಾದಂತೆ ತಡೆಯಲು ದೇವಸ್ಥಾನಗಳಲ್ಲಿ ಐದು ವಿಧವಿಧದ ಎಣ್ಣೆಗಳನ್ನು ಬಳಸಿ ದೀಪ ಹಚ್ಚಿ ಎಂದು ಕರೆ ನೀಡಿದ್ದ. ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಅಂದು ನೂಕುನುಗ್ಗಲು.

ಜ್ಯೋತಿಷ್ಯ ಸಾಕಾಗದೇ ಹೋದಾಗ ಚಾನಲ್‌ಗಳು ಪುನರ್ಜನ್ಮ ಕುರಿತು ಕಾರ್ಯಕ್ರಮ ಮಾಡುತ್ತವೆ. ವ್ಯಕ್ತಿಯೊಬ್ಬನಿಗೆ ಪ್ರಜ್ಞೆ ತಪ್ಪಿಸಿ, ಅರೆ ಪ್ರಜ್ಞಾವಸ್ಥೆಯಲ್ಲಿ ಅವನ ಪುನರ್ಜನ್ಮದ ಕಥೆ ಕೇಳುವುದು ಈ ಕಾರ್ಯಕ್ರಮದ ತಂತ್ರ. ಇದೂ ಸಹ ಸ್ಕ್ರಿಪ್ಟೆಡ್ ಕಾರ್ಯಕ್ರಮ. ಸತ್ತ ಕೆಲವೇ ದಿವಸಕ್ಕೆ ಚಾನಲ್ ಒಂದರಲ್ಲಿ ಸಾಯಿಬಾಬಾ ಬಂದು ಮಾತನಾಡಿದ್ದೂ ಸಹ ಹೀಗೆಯೇ.

ಇನ್ನೊಂದು ಗಮನಿಸಬೇಕಾದ ಅಂಶವೊಂದಿದೆ. ಜ್ಯೋತಿಷ್ಯ, ಮಾಟ ಮಂತ್ರ ಇನ್ನಿತ್ಯಾದಿ ಅಂಧಶ್ರದ್ಧೆಗಳ ವಿರುದ್ಧ ಸುದ್ದಿ ಮಾಡಿದರೂ, ಕಾರ್ಯಕ್ರಮ ಮಾಡಿದರೂ ಜನರು ನೋಡುತ್ತಾರೆ. ಹಿಂದೆ ಕ್ರೈಂ ಡೈರಿ, ಕ್ರೈಂಡ ಸ್ಟೋರಿ ಥರಹದ ಕಾರ್ಯಕ್ರಮಗಳಲ್ಲಿ ಬ್ಲೇಡ್ ಬಾಬಾಗಳು, ಡೋಂಗಿ ಸ್ವಾಮಿಗಳು, ಸುಳ್ಳು ದೇವರನ್ನು ಆವಾಹನೆ ಮಾಡಿಕೊಳ್ಳುವವರ ವಿರುದ್ಧ ಕಾರ್ಯಕ್ರಮಗಳು ಬರುತ್ತಿದ್ದವು. ಇತ್ತೀಚಿಗೆ ಹುಲಿಕಲ್ ನಟರಾಜ್ ಅವರ ಪವಾಡ ಬಯಲು ಕಾರ್ಯಕ್ರಮಗಳೂ ಸಹ ಜನಪ್ರಿಯವಾಗಿದ್ದವು. ಆದರೆ ಚಾನಲ್ ಗಳಿಗೆ ಹೊಟ್ಟೆ ತುಂಬಿಸುವಷ್ಟು ಇವು ಶಕ್ತವಾಗಿಲ್ಲ. ಹೀಗಾಗಿ ಅವು ಹೀಗೂ ಉಂಟೆ ಥರದ ಕಾರ್ಯಕ್ರಮಗಳನ್ನು ವರ್ಷಗಟ್ಟಲೆ ಪ್ರಸಾರ ಮಾಡುತ್ತವೆ.

ಜ್ಯೋತಿಷ್ಯ ಈಗ ಕವಲೊಡೆದು ಹೆಮ್ಮರವಾಗಿ ಬೆಳೆದಿದೆ. ಜ್ಯೋತಿಷಿಗಳಿಗೆ ವಾಸ್ತು ತಜ್ಞರು, ಸಂಖ್ಯಾ ತಜ್ಞರು, ಮಂತ್ರವಾದಿಗಳು ಪೈಪೋಟಿ ನೀಡುತ್ತಿದ್ದಾರೆ. ಹಿಂದೆ ಜ್ಯೋತಿಷಿಗಳನ್ನು ಸ್ಟುಡಿಯೋ ಚರ್ಚೆಗೆ ಕರೆದರೆ ಜತೆಯಲ್ಲಿ ಪ್ರತಿವಾದ ಮಾಡಲು ಒಬ್ಬ ವಿಜ್ಞಾನಿಯನ್ನೋ, ವಿಜ್ಞಾನ ಬರಹಗರಾರನ್ನೋ ಕಾಟಚಾರಕ್ಕಾದರೂ ಕರೆಯುತ್ತಿದ್ದರು. ಈಗ ಇವರುಗಳದ್ದೇ ದರ್ಬಾರು. ಕೆಲವು ಜ್ಯೋತಿಷಿಗಳನ್ನು ಕಿರುತೆರೆಯ ಮೇಲೆ ನೊಡುವುದಕ್ಕೆ ಭಯವಾಗುತ್ತದೆ. ಹಾಗಿರುತ್ತದೆ ಅವರ ವೇಷಭೂಷಣ. ಈ ಜ್ಯೋತಿಷಿಗಳೇ ಈಗ ಚಾನಲ್‌ಗಳಿಗೆ ಹಣ ತರುವ ಏಜೆಂಟರಾಗಿದ್ದಾರೆ.

ಅಂಧಶ್ರದ್ಧೆಗಳನ್ನು ಹರಡುವ ಚಾನಲ್‌ಗಳ ಮುಖ್ಯಸ್ಥರನ್ನೆಲ್ಲ ಒಮ್ಮೆ ಕರೆಸಿ ಅವರೊಂದಿಗೆ ಮಾತನಾಡಿ ನೋಡಿ. ಎಲ್ಲರೂ ಒಂದೇ ಉತ್ತರ ನೀಡುತ್ತಾರೆ. ಟಿಆರ್‌ಪಿಗಾಗಿ ನಾವು ಇದನ್ನೆಲ್ಲ ಮಾಡುತ್ತೇವೆ ಎಂಬುದು ಅವರು ಸೋಗು. ತಾವು ಮಾಡುತ್ತಿರುವುದು ಸರಿಯಲ್ಲ ಎಂಬುದನ್ನು ಅವರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಟಿಆರ್‌ಪಿ ಕಪಿಮುಷ್ಠಿಯಲ್ಲಿ ನಾವೆಲ್ಲ ಸಿಕ್ಕಿಬಿದ್ದಿದ್ದೇವೆ ಎಂದು ಅವರು ತಮ್ಮ ಅಸಹಾಯಕತೆ ತೋರ್ಪಡಿಸಿಕೊಳ್ಳುತ್ತಾರೆ.

ಅಷ್ಟಕ್ಕೂ ಟಿಆರ್ ಪಿ ಎಂಬುದೇ ಮಹಾಮೋಸದ ಪ್ರಕ್ರಿಯೆ. ಅದು ನಿಜವಾದ ನೋಡುಗರ ಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಟಿಆರ್‌ಪಿಯನ್ನು ನಿರ್ಧರಿಸುವ ಸಂಸ್ಥೆ ರಾಜ್ಯದ ಪ್ರಮುಖ ನಗರಗಳಲ್ಲಿ ಆಯ್ದ ಕೆಲವು ಟಿವಿ ವೀಕ್ಷಕರ ಮನೆಗಳಲ್ಲಿ ತಮ್ಮ ಉಪಕರಣಗಳನ್ನು ಜೋಡಿಸಿರುತ್ತಾರೆ. ಅವರು ಯಾವ ಚಾನಲ್ ನ ಯಾವ ಕಾರ್ಯಕ್ರಮ ನೋಡುತ್ತಾರೆ ಎಂಬುದರ ಆಧಾರದ ಮೇಲೆ ಟಿಆರ್‌ಪಿ ಮತ್ತು ಜಿಆರ್‌ಪಿಗಳು ನಿರ್ಧಾರವಾಗುತ್ತವೆ. ಟಿಆರ್ ಪಿಯನ್ನು ಆಧರಿಸಿ ಜಾಹೀರಾತು ಸಂಸ್ಥೆಗಳು ಜಾಹೀರಾತು ನೀಡುತ್ತವೆ. ಜಾಹೀರಾತು ಇಲ್ಲದೇ ಇದ್ದರೆ ಚಾನಲ್‌ಗಳು ಬದುಕುವುದಿಲ್ಲ. ಹೀಗಾಗಿ ಅವುಗಳಿಗೆ ಟಿಆರ್‌ಪಿ ಬೇಕೇಬೇಕು.

ಟಿಆರ್ ಪಿ ಮೆಷಿನ್ನುಗಳು ಪಟ್ಟಣಗಳಲ್ಲಿ ಇರುವುದಿಲ್ಲ, ಹಳ್ಳಿಗಳಲ್ಲಿ ಇರುವುದಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶದ ಜನರ ಇಷ್ಟಾನಿಷ್ಟಗಳು ಮೆಷಿನ್ನುಗಳಲ್ಲಿ ಲೆಕ್ಕ ಆಗೋದೇ ಇಲ್ಲ. ಹಾಗೆ ನೋಡಿದರೆ ಆಧುನೀಕರಣದ ಭರಾಟೆಯಲ್ಲಿ ಗ್ರಾಮೀಣ ಜನರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವವರಾದರೂ ಯಾರು? ಟಿಆರ್‌ಪಿ ಮೆಷಿನ್ನುಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಯಾಕೆ ಇಡುವುದಿಲ್ಲವೆಂಬ ಪ್ರಶ್ನೆಗೆ ಉತ್ತರವೂ ಆಘಾತಕಾರಿಯಾಗಿಯೇ ಇದೆ. ಗ್ರಾಮೀಣ ಜನರು ಜಾಹೀರಾತುದಾರರ ಗ್ರಾಹಕರಲ್ಲವಾದ್ದರಿಂದ ಹಳ್ಳಿಗಳ ಜನರ ಅಭಿರುಚಿ, ಇಷ್ಟಗಳನ್ನು ಅವರು ಲೆಕ್ಕ ಹಾಕುವುದಿಲ್ಲವಂತೆ.

ಇಂಥ ಸನ್ನಿವೇಶದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮೌಢ್ಯವನ್ನು ಬಿತ್ತುವ ಕೆಲಸವನ್ನು ನಿಲ್ಲಿಸುವುದಾದರೂ ಹೇಗೆ? ಇದು ಯಾರ ಹೊಣೆಗಾರಿಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ ಈ ಸಮಸ್ಯೆಗೆ ಇದುವರೆಗೆ ಯಾರೂ ಸಹ ಮುಖಾಮುಖಿಯಾಗಿ ನಿಂತು ಪರಿಹಾರಕ್ಕೆ ಯತ್ನಿಸದೇ ಇರುವುದೇ ದೊಡ್ಡ ಸಮಸ್ಯೆಯಾಗಿದೆ.

ಸಾಮಾಜಿಕ ಸಂಘಟನೆಗಳು ಇಂಥ ಅಂಧಶ್ರದ್ಧೆಗಳ ವಿರುದ್ಧ ಮಾತನಾಡುತ್ತವೆ, ಆದರೆ ಚಾನಲ್ ಗಳ ಮುಂದೆ ನಿಂತು ಇದನ್ನು ಹೇಳಲು ಯತ್ನಿಸಿದ ಉದಾಹರಣೆಗಳು ಕಡಿಮೆ. ಸುದ್ದಿಮಾಧ್ಯಮಗಳನ್ನು ಎದುರುಹಾಕಿಕೊಳ್ಳಲು ಸಂಘಟನೆಗಳು ಹಿಂದೆಮುಂದೆ ನೋಡುತ್ತವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಧ್ವನಿಗಳು ಮೊಳಗಿದರೂ ಅವು ಹಾಗೆಯೇ ತಣ್ಣಗಾಗುತ್ತವೆ.

ಇಂಥ ಸಂದರ್ಭದಲ್ಲಿ ಕ್ರಿಯಾಶೀಲ ಪಾತ್ರ ವಹಿಸಬಹುದಾಗಿರುವುದು ಮೀಡಿಯಾದ ಬಹುಮುಖ್ಯ ಭಾಗವಾಗಿರುವ ಪತ್ರಿಕಾರಂಗ. ಎಲೆಕ್ಟ್ರಾನಿಕ್ ಮಾಧ್ಯಮಗಳ ಇಂಥ ಹೊಣೆಗೇಡಿತನದ ವಿರುದ್ಧ ಮಾತನಾಡಬಹುದಾಗಿರುವುದು ಪತ್ರಿಕೆಗಳು. ಆದರೆ ನೋವಿನ ಸಂಗತಿಯೆಂದರೆ ಈ ಪತ್ರಿಕೆಗಳು ಕೂಡ ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಭಾವಳಿಗೆ ಒಳಗಾಗಿ ಜ್ಯೋತಿಷ್ಯ ಸಂಬಂಧಿ ಲೇಖನಗಳನ್ನು ದಿನೇದಿನೇ ಹೆಚ್ಚು ಮಾಡುತ್ತಲೇ ಇವೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜ್ಯೋತಿಷ್ಯಕ್ಕಾಗಿಯೇ ವಾರಕ್ಕೊಂದು ವಿಶೇಷ ಪುರವಣಿಯನ್ನು ನೀಡುತ್ತಿವೆ. ಯಾವ ನೈತಿಕ ಧೈರ್ಯದಿಂದ ಇವುಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಮಾತನಾಡಬಲ್ಲವು? ಒಂದು ಮಾಧ್ಯಮದ ತಪ್ಪುಗಳನ್ನು ಇನ್ನೊಂದು ಮಾಧ್ಯಮದವರು ಬರೆಯಬಾರದು ಎಂಬ ಅಲಿಖಿತ ನಿಯಮವೊಂದು ಕನ್ನಡ ಮಾಧ್ಯಮರಂಗದಲ್ಲಿ ಜಾರಿಯಲ್ಲಿದೆ. ಇದು ಇನ್ನೊಂದು ಬಗೆಯ ಮೌಢ್ಯ. ಇವರು ಪರಸ್ಪರ ಕೆಸರು ಎರಚಿಕೊಂಡು ಹೊಡೆದಾಡಲಿ ಎಂದು ಯಾರೂ ಬಯಸುತ್ತಿಲ್ಲ. ಆದರೆ ಒಂದು ಮಾಧ್ಯಮ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವಾಗ ಇನ್ನೊಂದು ಮಾಧ್ಯಮ ಸುಮ್ಮನೇ ಕುಳಿತುಕೊಳ್ಳುವುದು ಆತ್ಮವಂಚನೆಯಲ್ಲವೇ?

ಈ ಆತ್ಮವಂಚನೆಯ ವಿರುದ್ಧ ಕರ್ನಾಟಕದ ಜನರು ಜಾಗೃತರಾಗಬೇಕಿದೆ. ಅದಕ್ಕೂ ಮುನ್ನ ವೈಜ್ಞಾನಿಕ ಮನೋಭಾವವಿರುವ ಎಲ್ಲರೂ ಸಂಘಟಿತರಾಗಬೇಕಿದೆ. ಕರ್ನಾಟಕ ವಿಜ್ಞಾನ್ ಪರಿಷತ್‌ನಂಥ ಸಂಘಟನೆಗಳು ಈ ಚಾನಲ್‌ಗಳ ಮುಖ್ಯಸ್ಥರೊಂದಿಗೆ ಮಾತನಾಡಬೇಕಿದೆ, ಒತ್ತಡ ಹೇರಬೇಕಿದೆ. ಚಾನಲ್‌ಗಳು ಸರಿಪಡಿಸಲಾಗದ ತಪ್ಪು ಮಾಡಿದಾಗ ಅವುಗಳ ವಿರುದ್ಧ ಪ್ರತಿಭಟಿಸಬೇಕಿದೆ. ಮೀಡಿಯಾಗಳು ಹರಡುವ ಅಂಧಶ್ರದ್ಧೆಯ ವಿರುದ್ಧ ದೂರು ನೀಡುವಂಥ ಧೈರ್ಯ ಮತ್ತು ಬದ್ಧತೆಯನ್ನು ನಾವು ನೀವೆಲ್ಲರೂ ಸೇರಿ ಪ್ರದರ್ಶಿಸಬೇಕಿದೆ.

(ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಪರಿಷತ್ತು, ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ ಬೆಂಗಳೂರಿನ ಕಿಮ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ೫ನೇ ರಾಜ್ಯಮಟ್ಟದ ವಿಜ್ಞಾನ ಸಾಹಿತಿಗಳ ಸಮಾವೇಶದ ಎರಡನೇ ದಿನ (ಫೆಬ್ರವರಿ ೧೨) ನಡೆದ ವಿದ್ಯುನ್ಮಾನ ಮಾಧ್ಯಮದಲ್ಲಿ ಮೂಢನಂಬಿಕೆ ವಿಷಯ ಕುರಿತ ಗೋಷ್ಠಿಯಲ್ಲಿ ಮಂಡಿಸಿದ ಭಾಷಣ.

ಉಪಸ್ಥಿತರು: ಅಧ್ಯಕ್ಷತೆ: ಜಿ. ರಾಮಕೃಷ್ಣ, ಸಂಪಾದಕರು, ಹೊಸತು ಪತ್ರಿಕೆ

ಸಹ ವಿಷಯ ಮಂಡಕರು: ಡಾ. ನಾ.ಸೋಮೇಶ್ವರ ಹಾಗು ಬಿ.ಎಸ್.ಸೊಪ್ಪಿನ