ರೌಡಿಗಳ ಪಟ್ಟಿಗೆ ಹೊಸಬರ ಸೇರ್ಪಡೆ!

 

– ದಿನೇಶ್ ಕುಮಾರ್ ಎಸ್. ಸಿ

“ವಕೀಲರ ರೌಡಿಸಂಗೆ ಸಿಎಂ ಹೆದರ್ತಾರೆ, ಗೃಹಮಂತ್ರಿ ನಡುಗ್ತಾರೆ, ಆದ್ರೆ ನಾವು… ಮಾಧ್ಯಮದವರು ಹೆದರೋದಿಲ್ಲ…” ಇದು ಇವತ್ತಿನ ಉದಯವಾಣಿಯ ಮುಖಪುಟದ ಶೀರ್ಷಿಕೆ. ಕನ್ನಡಪ್ರಭ “ಏನ್ ಲಾ” ಎಂಬ ಎರಡು ಅರ್ಥ ಹೊರಡಿಸುವ ಶೀರ್ಷಿಕೆ ನೀಡಿದೆ. ಈ ಶೀರ್ಷಿಕೆಗಳು ಮಾಧ್ಯಮರಂಗದ ಆತ್ಮವಿಶ್ವಾಸದಂತೆಯೂ, ಅಹಂಕಾರದಂತೆಯೂ ಏಕಕಾಲಕ್ಕೆ ಧ್ವನಿ ಹೊರಡಿಸುತ್ತದೆ. ಸಿಟಿ ಸಿವಿಲ್ ಕೋರ್ಟ್ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯಿಂದ ಕನ್ನಡ ಮಾಧ್ಯಮ ಸಮೂಹ ಕೆರಳಿ ನಿಂತಿದೆ ಎಂಬುದಂತೂ ಸ್ಪಷ್ಟ. ಕೆರಳುವುದು, ಕೆರಳಿಸುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಜಾಯಮಾನ. ಯಾಕೆಂದರೆ ಅವುಗಳ ಟಿ‍ಆರ್‌ಪಿ ಯೊಂದಿಗೆ ಈ ಕೆರಳುವಿಕೆಗೆ ಸಂಬಂಧಿಸಿದೆ. ಈ ಬಾರಿ ಪತ್ರಿಕೆಗಳೂ ಸಹ ಕೆರಳಿವೆ. ಅದಕ್ಕೆ ಕಾರಣಗಳೂ ಇವೆ.

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕೆಲ ವಕೀಲರು ನಡೆಸಿದ ಪುಂಡಾಟಿಕೆ ಅಸಹನೀಯ ಮತ್ತು ಅಸಮರ್ಥನೀಯ. ಅದು ಅಕ್ಷರಶಃ ಗೂಂಡಾಗಿರಿಯೇ ಹೌದು. ಘಟನೆಗೆ ಕಾರಣವಾಗಿರಬಹುದಾದ ಪ್ರಚೋದನೆ ಏನೇ ಆಗಿದ್ದರೂ ಇಂಥ ಪುಂಡಾಟಿಕೆ ಅನಪೇಕ್ಷಿತ ಮತ್ತು ಕಾನೂನು ಬಾಹಿರ. ಇಂಥ ಕೃತ್ಯ ಎಸಗಿದ ವಕೀಲರು ಜೈಲು ಸೇರಲು ಲಾಯಕ್ಕಾದವರು ಮಾತ್ರವಲ್ಲ, ಅವರು ಮತ್ತೆಂದೂ ಕರಿಕೋಟು ಹಾಕುವಂತಾಗಬಾರದು.

ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಕೆರಳುವಿಕೆಯೂ ಅರ್ಥ ಮಾಡಿಕೊಳ್ಳುವಂಥದ್ದು. ನ್ಯೂಸ್ ಚಾನಲ್‍ಗಳು ಎರಡು ನಿಮಿಷಗಳ ಕಾಲ ಪ್ರಸಾರವನ್ನೇ ನಿಲ್ಲಿಸಿ ಪ್ರತಿಭಟಿಸಿದವು. ದಿನವಿಡೀ ಕಪ್ಪು ಬಣ್ಣದ ಹಿನ್ನೆಲೆಯನ್ನು ಪರದೆಯ ಮೇಲೆ ಬಳಸಿದವು. ಕಪ್ಪು ಪಟ್ಟಿ ಕಟ್ಟಿಕೊಂಡೇ ಸುದ್ದಿ ಓದಲಾಯಿತು. ಒಂದು ವಾಹಿನಿಯಲ್ಲಂತೂ ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಸುದ್ದಿ ಓದಲಾಯಿತು.

ಎಲ್ಲ ಸರಿ, ಇಷ್ಟೆಲ್ಲದರ ನಡುವೆ ಪತ್ರಕರ್ತರು ವೃತ್ತಿ ಧರ್ಮವನ್ನೇಕೆ ಮರೆತರು ಎಂಬ ಪ್ರಶ್ನೆಗೂ ಉತ್ತರ ಕೊಡಬೇಕಾಗುತ್ತದೆ. ನಿನ್ನೆಯಿಂದ ಫೇಸ್ ಬುಕ್‍ನಂಥ ಸಾಮಾಜಿಕ ತಾಣಗಳಲ್ಲಿ ಅಲ್ಲಲ್ಲಿ ಈ ಪ್ರಶ್ನೆಗಳು ಕೇಳಿಬರುತ್ತಿವೆ. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪತ್ರಕರ್ತರನ್ನು ಥಳಿಸಿದ ಘಟನೆಯ ನಂತರ ಮಧ್ಯಾಹ್ನದ ಸುಮಾರಿಗೆ ನಡೆದ ಲಾಠಿ ಚಾರ್ಜ್ ಮತ್ತು ಕೋರ್ಟ್ ಒಳಗೆ ನಡೆದ ಪೊಲೀಸ್ ದೌರ್ಜನ್ಯದ ಸುದ್ದಿ ಎಲ್ಲ ವಾಹಿನಿಗಳಲ್ಲೂ ನಾಪತ್ತೆಯಾಗಿದ್ದವು. ಇವತ್ತಿನ ಪತ್ರಿಕೆಗಳಲ್ಲೂ ಅದು ಕಾಣೆಯಾಗಿವೆ ಅಥವಾ ಕಾಣದಂತಾಗಿವೆ.

ದಿ ಹಿಂದೂ ಪತ್ರಿಕೆ ಮಾತ್ರ ಘಟನೆಯ ಎಲ್ಲ ಆಯಾಮಗಳನ್ನು ವಿವರಿಸುವ ಪ್ರಯತ್ನ ಮಾಡಿದೆ. (ಈ ಕೆಲಸವನ್ನು ಪ್ರಜಾವಾಣಿಯಾದರೂ ಮಾಡಬಹುದು ಎಂಬ ನನ್ನ ನಿರೀಕ್ಷೆ ಸುಳ್ಳಾಯಿತು.) ಕೆಲ ಕನ್ನಡ ಪತ್ರಿಕೆಗಳು ಸಿಟಿ ಸಿವಿಲ್ ಕೋರ್ಟ್ ನ್ಯಾಯಮೂರ್ತಿ ಬೂದಿಹಾಳ್ ಅವರ ಮೇಲೆ ವಕೀಲರೇ ದೌರ್ಜನ್ಯವೆಸಗಿದರು ಎಂದು ವರದಿ ಮಾಡಿವೆ. ಆದರೆ ನ್ಯಾಯಮೂರ್ತಿಗಳು ಲಾಠಿ ಚಾರ್ಜ್‍ನಿಂದ ಗಾಯಗೊಂಡಿದ್ದರು.

ಕೆಲ ಪತ್ರಕರ್ತರು ಮಧ್ಯಾಹ್ನದ ನಂತರ ಪೊಲೀಸರೊಂದಿಗೆ ಸೇರಿ ಪ್ರತೀಕಾರದ ದಾಳಿ ನಡೆಸಿದರು ಎಂದು ಹಿಂದೂ ವರದಿ ಮಾಡಿದೆ. ವಕೀಲರ ಮತ್ತು ನ್ಯಾಯಾಧೀಶರ ವಾಹನಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಒಡೆದುಹಾಕಲಾಯಿತು ಎಂದು ಈ ವರದಿ ಹೇಳುತ್ತದೆ. ಮಾತ್ರವಲ್ಲ, ಪೊಲೀಸರೇ ಖುದ್ದಾಗಿ ಕೆಲ ವಾಹನಗಳಿಗೆ ಬೆಂಕಿ ಹಚ್ಚಿದರು ಎಂಬುದನ್ನೂ ವರದಿ ಬಹಿರಂಗಪಡಿಸುತ್ತದೆ. (ಕೆಲ ನ್ಯಾಯವಾದಿಗಳು ಪೊಲೀಸರೇ ವಾಹನಗಳಿಗೆ ಬೆಂಕಿಹಚ್ಚುವ ವಿಡಿಯೋಗಳನ್ನು ಈಗಾಗಲೇ ಫೇಸ್ ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.) ದಿ ಹಿಂದು ಪತ್ರಿಕೆ ವರದಿ ಪ್ರಕಾರ, ವಕೀಲರ ಮೇಲೆ ದಾಳಿ ಮಾಡುತ್ತಿದ್ದ ಪತ್ರಕರ್ತರನ್ನು ತಡೆಯಲು ಹೋದ ಸಮಚಿತ್ತದ ಒಬ್ಬ ಪತ್ರಕರ್ತರ ಮೇಲೆಯೂ ಇದೇ ಪತ್ರಕರ್ತರು ಹಲ್ಲೆ ಮಾಡಿದ್ದಾರೆ.

ಸಿಟಿ ಸಿವಿಲ್ ಕೋರ್ಟ್ ಒಳಗೆ ನುಗ್ಗಿದ ಪೊಲೀಸರು ಹೊರಗೆ ನಡೆದ ಘಟನೆಗೆ ಸಂಬಂಧವೇ ಇಲ್ಲದ ವಕೀಲರ ಮೇಲೆ ಲಾಠಿ ಬೀಸಿದ್ದಾರೆ. ಕ್ಯಾಂಟೀನು, ಬಾರ್ ಅಸೋಸಿಯೇಷನ್ ಒಳಗೂ ನುಗ್ಗಿ ದಾಳಿ ಮಾಡಿದ್ದಾರೆ. ಪೀಠೋಪಕರಣಗಳನ್ನು ಒಡೆದುಹಾಕಿದ್ದಾರೆ ಆದರೆ ಎಷ್ಟು ಮಂದಿ ವಕೀಲರು ಗಾಯಗೊಂಡಿದ್ದಾರೆ? ಹೇಗೆ ಗಾಯಗೊಂಡರು? ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು? ಎಂಬೆಲ್ಲ ಪ್ರಶ್ನೆಗಳಿಗೆ ಮಾಧ್ಯಮಗಳಲ್ಲಿ ಉತ್ತರವಿಲ್ಲ.

ಒಂದು ವಾಹಿನಿಯ ಪ್ರಕಾರ ಮೂರು ಮಂದಿ ಪೊಲೀಸ್ ಪೇದೆಗಳು ಮೃತಪಟ್ಟಿದ್ದಾರೆ, ಮತ್ತೊಂದು ಇಬ್ಬರ ಸಾವು ಎಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಸತ್ತ ಪೊಲೀಸರ ಹೆಸರುಗಳನ್ನೂ ಪ್ರಸಾರ ಮಾಡಲಾಯಿತು.! ದಿ ಹಿಂದೂ ವರದಿಯ ಪ್ರಕಾರ ಈ ಸುದ್ದಿಯನ್ನು ಸ್ಫೋಟಿಸಿದ ನಂತರ ನಗರದ ಹಲವು ವೃತ್ತಗಳಲ್ಲಿ ಕರಿಕೋಟು ಹಾಕಿಕೊಂಡು ಓಡಾಡುವವರ ಮೇಲೆ ಪೊಲೀಸರು ಲಾಠಿ ಬೀಸಿದರು! ವಕೀಲರು ಮನೆಗಳನ್ನು ತಲುಪಿಕೊಳ್ಳುವುದೇ ಕಷ್ಟವಾಯಿತು. ಸ್ವತಃ ಮುಖ್ಯಮಂತ್ರಿಗಳೇ ಘಟನೆಯಲ್ಲಿ ಯಾರೂ ಸತ್ತಿಲ್ಲ ಎಂದು ಖಚಿತಪಡಿಸಿದ ಮೇಲೂ ಒಂದು ವಾಹಿನಿ ಸುದ್ದಿವಾಚಕರು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂದೇ ಹೇಳುತ್ತಿದ್ದರು.

ಇಡೀ ಘಟನಾವಳಿಗಳನ್ನು ಗಮನಿಸಿದಾಗ ಸ್ಪಷ್ಟವಾಗಿ ಕಾಣೋದು ವಕೀಲ, ಪತ್ರಕರ್ತ ಮತ್ತು ಪೊಲೀಸು ಎಂಬ ಮೂರು ವ್ಯವಸ್ಥೆಗಳ ನಡುವಿನ ಆಂತರಿಕ ಸಂಘರ್ಷ ಮತ್ತು ಅವುಗಳು ಬೆಳೆಸಿಕೊಂಡು ಬಂದಿರುವ ಅಹಂನಿಂದಾಗಿರುವ ಅನಾಚಾರಗಳು. ವ್ಯವಸ್ಥೆಯ ಈ ಮೂರೂ ಅಂಗಗಳೂ ಬಲಶಾಲಿಯಾಗಿವೆ. ಎಲ್ಲರೂ ತಮ್ಮನ್ನು ತಾವು ಸುಪ್ರೀಂ ಎಂದು ಭಾವಿಸಿಕೊಂಡಂತಿದೆ. ಈ ಅಹಂಗಳ ನಡುವಿನ ಸಂಘರ್ಷ ಇವತ್ತು ತಾರಕಕ್ಕೇರಿದೆ.

ತಿಂಗಳ ಹಿಂದೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕ್ಲುಲ್ಲಕ ಕಾರಣಕ್ಕೆ ವಕೀಲರು ಸತತ ಏಳುಗಂಟೆಗಳ ಕಾಲ ರಸ್ತೆತಡೆ ನಡೆಸಿ ಉದ್ಧಟತನ ತೋರಿದರು. ಅದನ್ನು ಖಂಡಿಸಿ ಮಾಧ್ಯಮಗಳು ವರದಿ ಮಾಡಿದವು. ತಮ್ಮ ವಿರುದ್ಧ ಮಾಧ್ಯಮಗಳು ಬಳಸಿದ ಭಾಷೆಯಿಂದ ವ್ಯಗ್ರಗೊಂಡ ವಕೀಲ ಸಮುದಾಯದ ರಣಧೀರರು ಸೇಡಿಗಾಗಿ ಕಾತರಿಸಿದ್ದರು,. ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ವಕೀಲರ ಮೇಲೆ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಗೆ ಸಿಲುಕಿದ್ದ ಪೊಲೀಸರು ಕೂಡ ವಕೀಲರ ಮೇಲೆ ಸೇಡಿಗೆ ಕಾದಿದ್ದರು.

ಮಾಧ್ಯಮ ವರದಿಗಳ ಪ್ರಕಾರವೇ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿನ್ನೆ ಪತ್ರಕರ್ತರ ಮೇಲೆ ದಾಳಿ ನಡೆಯುವಾಗ ಪೊಲೀಸರು ಸುಮ್ಮನಿದ್ದರು, ಕೆಲವರಂತೂ ನಗುತ್ತಾ ನಿಂತಿದ್ದರು! ಅದಾದ ಅರ್ಧಗಂಟೆಗೆ ಇದ್ದಕ್ಕಿದ್ದಂತೆ ಪೊಲೀಸರಿಗೆ ಪೌರುಷ ಬಂದಿದ್ದು ಹೇಗೆ? ಹೈಕೊರ್ಟ್‍ನ ನಾಲ್ವರು ನ್ಯಾಯಮೂರ್ತಿ‍ಗಳು ಕೋರ್ಟ್ ಪ್ರವೇಶಿಸಿ, ಒಳಗಿದ್ದ ಪೊಲೀಸರನ್ನು ಹೊರಗೆ ಕರೆಸಿಕೊಳ್ಳುವಂತೆ ಗೃಹಸಚಿವ, ಡಿಜಿಪಿ, ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದರೂ ಅದನ್ನು ಲೆಕ್ಕಿಸದೇ ಕೋರ್ಟ್ ಒಳಗೇ ಲಾಠಿ ಚಾರ್ಜ್ ಮಾಡಿದ್ದು ಏಕೆ?

ವಕೀಲರಿಗೆ ಮಾಧ್ಯಮಗಳ ಮೇಲೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಪೊಲೀಸರಿಗೆ ವಕೀಲರ ಮೇಲೆ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಮಾಧ್ಯಮಗಳಿಗೂ ವಕೀಲರ ಮೇಲೆ ಅಸಹನೆ ಕುದಿಯುತ್ತಿತ್ತು, ಅವರೂ ಸೇಡು ತೀರಿಸಿಕೊಂಡಿದ್ದಾರೆ. ಇದು ಇಲ್ಲಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ.

ಚಿತ್ರ: ಪೊಲೀಸರ ಲಾಟಿ ಏಟಿಗೆ ಗಾಯಗೊಂಡ ವಕೀಲ.

11 thoughts on “ರೌಡಿಗಳ ಪಟ್ಟಿಗೆ ಹೊಸಬರ ಸೇರ್ಪಡೆ!

  1. ವಿಶ್ವಾರಾಧ್ಯ ಸತ್ಯಂಪೇಟೆ

    ನಿಜ. ತಾವು ಭಾವಿಸಿದಂತೆ ಅಹಂ’ ಈ ಎಲ್ಲಾ ಬೆಳವಣಿಗೆಗೆ ಮೂಲ ಕಾರಣ. ಬಹುಶಃ ಇದು ಹೀಗೆ ಬೆಳೆಯುತ್ತ ಹೋದರೆ ರಾಜಕಾರಣಿಗಳಿಗೆ ಮಜಾ. ಇದುವರೆಗೆ ಜನ ಸಾಮಾನ್ಯ ನಂಬಿಕೆ ಇಟ್ಟುಕೊಂಡಿರುವುದು ನ್ಯಾಯಾಂಗ ಹಾಗೂ ಪತ್ರಿಕಾರಂಗದ ಮೇಲೆ. ಇವರಿಬ್ಬರೆ ಹೀಗೆ ಕಚ್ಚಾಟದಲ್ಲಿ ತೊಡಗಿದರೆ ಹೇಗೆ ? ತಕ್ಷಣ ಸರಕಾರ ನ್ಯಾಯಾಂಗ ತನಿಖೆಯ ಬದಲು ಅಂಗೈ ಹುಣ್ಣಿಗೆ ಕನ್ನಡಿ ಏಕೆ ಬೇಕು ? ಎಂಬ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು. ಕರಿಕೋಟು ತೊಟ್ಟು ಗುಂಡಾ ಗರ್ದಿಯಲ್ಲಿ ತೊಡಗಿದ ವಕೀಲರನ್ನು ಶಿಕ್ಷಿಸಬೇಕು.

    Reply
  2. ರವಿ ಕುಮಾರ

    ವಕೀಲರು ಮಾಡಿದ ಹಲ್ಲೆ ಎಷ್ಟು ಖಂಡನೀಯವೋ, ಪೋಲೀಸರ ಹಾಗೂ ಮಾಧ್ಯಮದವರ ಜಂಟಿ ಹಲ್ಲೆಯೂ ಕೂಡಾ ಅಷ್ಟೆ ಖಂಡನೀಯ, ಘಟನೆ ನಡೆದ ನಂತರ ಕಂಡಕಂಡಲ್ಲಿ ವಕೀಲರ ಮೇಲೆ ಹಲ್ಲೆ ಮಾಡಿದ ಪೊಲೀಸರ ದುಷ್ಟತನದ ಕುರಿತು ಯಾವ ಮಾಧ್ಯಮವೂ ಪ್ರಸಾರ ಮಾಡದೇ ಇದ್ದುದು ಇದೊಂದು ಪೂರ್ವ ನಿಯೋಜಿತ ಸಂಚು ಎನ್ನುವ ಅನುಮಾನ ಮೂಡುತ್ತದೆ. ಒಟ್ಟಾರೆ ಘಟನೆಗೆ ಕಾರಣರಾದ ಎಲ್ಲರಲ್ಲೂ ( ವಕೀಲರು, ಮಾಧ್ಯಮ ಹಾಗೂ ಪೊಲೀಸರು) ತೀವ್ರ ವಿಚಾರಣೆ ಒಳಪಡಿಸಬೇಕಾದ ಅಗತ್ಯವಿದ್ದು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು, ಮಾಧ್ಯಮಗಳು ಕೂಡಾ ತಮ್ಮ ಹೊಣೆ ಹಾಗೂ ಇತಿ ಮಿತಿಯೊಳಗೆ ಕೆಲಸ ಮಾಡಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಇತಿ ಮಿತಿಗಳು ಅವಶ್ಯಕ ಅಲ್ಲವೇ??

    Reply
  3. Ananda Prasad

    ನಿನ್ನೆ ನಡೆದ ಘಟನೆಯ ಬಗ್ಗೆ ನೋಡಿದಾಗ ಪ್ರಕರಣ ಆರಂಭವಾದದ್ದು ವಕೀಲರ ಗೂಂಡಾಗಿರಿಯ ವರ್ತನೆಯಿಂದ ಎಂಬುದು ಸ್ಪಷ್ಟವಾಗುತ್ತದೆ. ನಂತರ ಮಾನವ ಸಹಜ ಪ್ರತಿಕ್ರಿಯೆ ಹಾಗೂ ಆಕ್ರೋಶದಿಂದ ಮಾಧ್ಯಮದ ಮಂದಿ ಹಾಗೂ ಪೊಲೀಸರೂ ತಿರುಗೇಟು ನೀಡಲು ತೊಡಗಿದಂತೆ ಕಾಣುತ್ತದೆ. ವಕೀಲರು ವಾದ ಮಾಡಿ ದಾರಿ ತಪ್ಪಿಸುವುದರಲ್ಲಿ ನಿಸ್ಸೀಮರಾದದ್ದರಿಂದ ಸಮರ್ಪಕ ಸಾಕ್ಷ್ಯ ಇದ್ದರಷ್ಟೇ ವಕೀಲರ ಹೇಳಿಕೆಗಳನ್ನು ನಂಬಬಹುದು. ನ್ಯಾಯಮೂರ್ತಿ ಬೂದಿಹಾಳರ ಮೇಲೆ ಹಲ್ಲೆ ಮಾಡಿದ್ದು ವಕೀಲರೋ ಅಲ್ಲ ಪೊಲೀಸರು ಲಾಠಿಚಾರ್ಜ್ ಮಾಡಿದ್ದೋ ಎಂಬ ಬಗ್ಗೆ ವಿರೋಧಾಭಾಸದ ವರದಿಗಳಿವೆ. ಈ ಕುರಿತ ಸತ್ಯವನ್ನು ನ್ಯಾಯಾಧೀಶ ಬೂದಿಹಾಳರೆ ಹೇಳಬೇಕು. ನೂರು ವಕೀಲರಲ್ಲಿ ೫೦ ವಕೀಲರು ಸುಳ್ಳುಗಾರರಾಗಿರುವುದರಿಂದ (ಈ ಲೆಕ್ಕ ಹೇಗೆ ಎಂದರೆ ಪ್ರತಿ ಕೇಸಿನಲ್ಲಿ ವಾದಿಸುವ ವಾದಿ ಹಾಗೂ ಪ್ರತಿವಾದಿ ಇವರಲ್ಲಿ ಒಬ್ಬ ಮಾತ್ರವೇ ಸತ್ಯದ ಪರವಾಗಿ ವಾದಿಸಲು ಸಾಧ್ಯ) ವಕೀಲರ ಮಾತು ನಂಬಿಕೆಗೆ ಅರ್ಹವಾಗುವುದಿಲ್ಲ. ಹೀಗಾಗಿ ವಕೀಲರ ಸಮರ್ಥನೆಗಳಿಗೆ ಜನಮನ್ನಣೆ ಸಿಕೀತು ಎಂದು ನನಗನಿಸುವುದಿಲ್ಲ.

    Reply
  4. ದಿನೇಶ್ ಕುಮಾರ್ ಎಸ್.ಸಿ

    ಆನಂದ್ ಪ್ರಸಾದ್ ರವರೇ, ಈ ಲೇಖನ ಬರೆದಿರುವ ನಾನು ವಕೀಲನಲ್ಲ, ಹದಿನೇಳು ವರ್ಷಗಳಿಂದ ಪತ್ರಿಕಾ ವೃತ್ತಿಯನ್ನೇ ಮಾಡಿಕೊಂಡು ಬಂದಿದ್ದೇನೆ. ವಕೀಲರನ್ನೂ ಕೋಟ್ ಮಾಡಿಯೂ ಈ ಲೇಖನ ಬರೆದಿಲ್ಲ. ನೀವು ಹೇಳಿದಂತೆಯೇ ಈ ಪ್ರಕರಣ ಆರಂಭಗೊಂಡಿರುವುದು ಕೆಲ ಬೆರಳೆಣಿಕೆಯ ವಕೀಲರ ಗೂಂಡಾಗಿರಿಯಿಂದಲೇ ಎಂಬುದು ನಿಜ. ನಂತರದ ಬೆಳವಣಿಗೆಗಳಲ್ಲಿ ಏನೇನಾಯ್ತು ಎಂಬುದೂ ಸಹ ಸಾರ್ವಜನಿಕವಾಗಿ ಬಹಿರಂಗವಾಗಬೇಕು. ಮೇಲಿರುವ ವಿಡಿಯೋದಲ್ಲಿ ಕಂಡುಬಂದಿರುವಂತೆ, ವಾಹನಗಳಿಗೆ ಬೆಂಕಿ ಹಚ್ಚುವಂಥ ಅಗತ್ಯ ಪೊಲೀಸರಿಗೇನಿತ್ತು? ದಿ ಹಿಂದೂ ನಲ್ಲಿ ವರದಿಯಾದಂತೆ ಯಾಕೆ ಕೆಲ ಪತ್ರಕರ್ತರೂ ಸಹ ಪ್ರತಿದಾಳಿ ನಡೆಸಿದರು? ಇದನ್ನು ತಡೆಯಲು ಹೋದ ಒಬ್ಬ ಪತ್ರಕರ್ತನನ್ನು ಇತರರು ಥಳಿಸಿದ್ದಾರೆ. ಗೂಂಡಾಗಳಿಗೆ ಗೂಂಡಾಗಳಂತೆಯೇ ಉತ್ತರಿಸಬೇಕೇ? ಇದು ನನ್ನ ಪ್ರಶ್ನೆ. ವಕೀಲರು ಸುಳ್ಳು ಹೇಳುತ್ತಿದ್ದಾರೆ ಎಂದೇ ಭಾವಿಸೋಣ, ಮೂವರು ಪೊಲೀಸರು ಸತ್ತುಹೋಗಿದ್ದಾರೆ ಎಂದು ಚಾನಲ್ ಗಳು ಬಿತ್ತರಿಸಿದವಲ್ಲವೇ? ಈ ಹಸಿಸುಳ್ಳಿಗೆ ಏನಂತೀರಿ?

    Reply
    1. Ananda Prasad

      ವಕೀಲರು ಮಾಧ್ಯಮದ ಮಂದಿಯ ಮೇಲೆ ಹಲ್ಲೆ ನಡೆಸುವ ಸೂಚನೆ ಪೊಲೀಸರಿಗೆ ಮೊದಲೇ ತಿಳಿದಿತ್ತು ಎಂದು ಈಗ ತಿಳಿದುಬರುತ್ತಿದೆ. ಈ ಮೊದಲೇ ವಕೀಲರೊಬ್ಬರು ತಮ್ಮ ಲೇಖನದಲ್ಲಿ ತಿಳಿಸಿದಂತೆ ಕೆಲವು ವಕೀಲರು ಮಾಧ್ಯಮದ ಮಂದಿಗೆ ಕೋರ್ಟ್ ಆವರಣದೊಳಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ ಎಂಬುದನ್ನು ನೋಡಿದರೆ ಈ ಘಟನೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿತ್ತು. ಮಾಧ್ಯಮದ ಮೇಲೆ ಹಲ್ಲೆ ಮಾಡಿದ ವಕೀಲರನ್ನು ಆ ಕ್ಷಣದಲ್ಲೇ ಬಂಧಿಸಿದ್ದರೆ ಘಟನೆ ಈ ರೀತಿ ಬೆಳೆಯುತ್ತಿರಲಿಲ್ಲ. ಇಲ್ಲಿ ಆಡಳಿತದ ವೈಫಲ್ಯ ಎದ್ದು ಕಾಣುತ್ತದೆ. ಮಾಧ್ಯಮದ ಮಂದಿಯನ್ನು ಕೋರ್ಟಿನ ಆವರಣದೊಳಗೆ ಬಾರದಂತೆ ತಡೆಯುವ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಕೀಲರಿಗೆ ಇಲ್ಲ. ಕೋರ್ಟಿನಲ್ಲಿ ಏನು ನಡೆಯುತ್ತದೆ ಅದೂ ಪ್ರಮುಖ ಪ್ರಕರಣಗಳ ವಿಚಾರದಲ್ಲಿ ಎಂಬುದನ್ನು ತಿಳಿಸುವ ಜವಾಬ್ದಾರಿ ಮಾಧ್ಯಮಗಳಿಗೆ ಇದೆ. ಅದನ್ನೇ ವಕೀಲರು ತಡೆಯುವುದು ಸಮಂಜಸವಲ್ಲ. ಮಾಧ್ಯಮದ ಮೇಲೆ ನಡೆದ ಹಲ್ಲೆ ಜನರ ಮೇಲೆ ನಡೆದ ಹಲ್ಲೆಯೂ ಹೌದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಕಿದ ಸವಾಲೂ ಹೌದು. ಹೀಗಾಗಿ ಒಬ್ಬ ಸಾಮಾನ್ಯ ನಾಗರಿಕನಾಗಿ ನಾನು ಅದನ್ನು ವಿರೋಧಿಸುತ್ತೇನೆ. ವಕೀಲರು ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ ಇಂಥ ಘಟನೆಯೇ ನಡೆಯುತ್ತಿರಲಿಲ್ಲ.

      ಪೊಲೀಸರು ಬೆಂಕಿ ಹಚ್ಚಿದ್ದರೆ ಅದಕ್ಕೆ ನನ್ನ ಸಮರ್ಥನೆ ಇಲ್ಲ ಅಥವಾ ಮಾಧ್ಯಮದ ಮಂದಿ ವಕೀಲರ ಮೇಲೆ ಪ್ರತಿ ಹಲ್ಲೆ ಮಾಡಿದ್ದರೂ ಅದಕ್ಕೆ ನನ್ನ ಸಮರ್ಥನೆ ಇಲ್ಲ. ಇದು ಮಾನವ ಸಹಜ ಪ್ರತಿಕ್ರಿಯೆ ಹಾಗೂ ಆಕ್ರೋಶ ಉಕ್ಕಿದಾಗ ಸಂಭವಿಸುವಂಥದ್ದು. ಇಂಥ ಪ್ರತಿಕ್ರಿಯೆಯಿಂದಲೇ ಕೋಮು ಗಲಭೆಗಳು ಸಂಭವಿಸುವಾದ ನೂರಾರು ಜನ ಪ್ರಾಣ ಕಳೆದುಕೊಳ್ಳುವುದು. ಇಂಥ ಯಾವ ಹಿಂಸೆಗಳಿಗೂ ನನ್ನ ಸಮರ್ಥನೆ ಇಲ್ಲ. ಇಂಥ ಹಿಂಸೆಗಳನ್ನು ಆರಂಭದಲ್ಲಿಯೇ ನಿಯಂತ್ರಿಸುವುದರಿಂದ ಹೆಚ್ಚಿನ ಅನಾಹುತಗಳನ್ನು ತಡೆಯುವುದು ಸಾಧ್ಯವಿದೆ. ಅದನ್ನು ಮಾಡಬೇಕಾಗಿರುವುದು ಪೊಲೀಸರು ಹಾಗೂ ಆಡಳಿತ. ನಾನೂ ಕೂಡ ಓರ್ವ ಪತ್ರಕರ್ತನೂ ಅಲ್ಲ, ವಕೀಲನೂ ಅಲ್ಲ. ಮಾಧ್ಯಮಗಳು ಎರಡು ಜನ ಪೊಲೀಸರು ಸತ್ತಿದ್ದಾರೆ, ಮೂರು ಜನ ಸತ್ತಿದ್ದಾರೆ ಎಂದು ಹೇಳಿರುವುದನ್ನು ನಾನೂ ಗಮನಿಸಿದ್ದೇನೆ. ಹೀಗ್ಯಾಕೆ ಹೇಳಿದ್ದಾರೋ ಅವರೇ ಹೇಳಬೇಕು.

      Reply
  5. Malathesha

    ನಮ್ಮ ವ್ಯವಸ್ಥೆಯಲ್ಲಿ ಈ ಮೂವರ ಪಾತ್ರ ಮಹತ್ವದ್ದು….ಆದರೆ ನೆನ್ನೆಯ ಘಟನೆ ಇವರುಗಳ ‘ಮಹತ್ವ’ ಎಷ್ಟೆಂದು ತೋರಿದೆ…!!

    Reply
  6. ಪ್ರಸಾದ್

    ದಿನೇಶ್ ಕುಮಾರ್ ಅವರೇ ತುಂಬಾ ಚೆನ್ನಾಗಿ ಬರೆದಿದ್ದಿರ, ಇವತ್ತಿನ ಕುಲಗೆಟ್ಟು ಹೋಗಿರುವ ಮಧ್ಯಮ ರಂಗ ನಿಮ್ಮನ್ತವರಿಂದ ಬದುಕಿದೆ ಅನಿಸ್ತ ಇದೆ.. ನಿನ್ನೆ elctronic ಮೀಡಿಯದಲ್ಲಿ ಬಳಸಿದ ಶಬ್ದಗಳು ನಿಜವಾಗಿಯೂ ಇವರು ವಿದ್ಯಾವಂತರೇ ಅನುಮಾನ ಬರುತ್ತಿದೆ.. ನಿನ್ನೆ ಒಂದು ಚಾನೆಲ್ನಲ್ಲಿ ಛಾಯಾಗ್ರಾಹಕನಿಗೆ ಬರ್ಬರವಾಗಿ ಹೊಡೆಯಿತ್ತುರುದನ್ನು ತೋರಿಸಿ ಇವನು “ನಮ್ಮ ಛಾಯಾಗ್ರಾಹಕ” ಅಂತ ರೆಡ್ ಸರ್ಕಲ್ ಹಾಕಿಬಿಟ್ಟು ತೋರಿಸ್ತಾ ಇದ್ರೂ.. ಅವ್ರಿಗೆ ನಿಜವಾಗಿ ಜನಪರ ಕಾಳಜಿ ಇದ್ದಿದ್ರೆ ರೆಕಾರ್ಡ್ ಮಾಡೋದು ಬಿಟ್ಟು ಆ ಅಮಯಕನನ್ನು ರಕ್ಷಿಸ್ತಿದ್ರು.. ಅದರಲ್ಲೂ TRP ಬಗ್ಗೆ ಚಿಂತಿಸಿದ್ದಾರೆ.. ಈಗಿನ ಕರ್ನಾಟಕ ಪರಿಸ್ತಿತಿ ನೋಡಿದ್ರೆ electronic ಮೀಡಿಯಾದವರು virtual government ನಡಿಸ್ತಿದರೆ..

    Reply
  7. prasad raxidi

    ತಪ್ಪನ್ನು ಯಾರು ಮಾಡಿದರೂ ತಪ್ಪೇ.. ಆದರೆ “ಮಾನವ ಸಹಜ ಪ್ರತಿಕ್ರಿಯೆ ಹಾಗೂ ಆಕ್ರೋಶ”ಎನ್ನುವಂತಹ ನುಡಿಕಟ್ಟುಗಳೇ ಆತಂಕಕಾರಿಯಾದವು ಮತ್ತು ಪ್ರಜಾಪ್ರಭುತ್ವಕ್ಕೆ ವಿರೋಧಿಯಾದುದು, ವಕೀಲರ ತಪ್ಪಿಗೆ ವಿರುದ್ಧವಾಗಿ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಜವಾಬ್ದಾರಿಯುವಾಗಿ ನಡೆದುಕೊಳ್ಳಬೇಕಾಗಿರುವ ಮಾಧ್ಯಮದ ನಡೆವಳಿಕೆ ಕೂಡಾ ಸರಿಯಾದುದಲ್ಲವೆಂದೇ ನಮ್ಮಂತವರ ಭಾವನೆ, ವಕೀಲರು, ಪೋಲಿಸರು, ಹಾಗೂ ಮಾಧ್ಯಮದವರು ,ಈ ಮೂರೂ ಸಂಸ್ಥೆಗಳು ಸಮಾಜವನ್ನು ಆರೋಗ್ಯಕರವಾಗಿ ಉಳಿಸಬೇಕಾದವರು…ಇವರೆಲ್ಲರೂ ದಿಕ್ಕು ತಪ್ಪಿರುವುದು ನಮ್ಮ ಅವನತಿಗೆ ಸಾಕ್ಷಿ..

    Reply
  8. ram

    defenetly he is not a media person, if he is a media person how come he went inside the court where the media has been banned. the jurnalist might have known this defenetly

    Reply
  9. Prashanth Mirle

    Dear Anand,

    Is it right for media to enter Court premises to take a footage of a person who has come to attend a court hearing? Is it right for the Media to remain stuborn inside the court premises even when they are asked to vacate?

    I would like bring few more thing…. this is not the first instance where the so called untainted media have entered into court premises with their camera, using of cell phones inside the COURT HALLS when the proceedings are going on, the so called PAID NEWS have done so. When they are asked not to use such things the Lawyers will be defamed by potraying them to be GOONDA, HOOLIGANS, ANTI SOCIAL ELEMENTS and so on and so forth. There are many instance where the so called UNTAINTED MEDIA have blackmailed pupils from not publishing certain things for a ransom. Everyone are aware of such events.

    Reply
    1. Ananda Prasad

      ಕೋರ್ಟಿನಲ್ಲಿ ನಡೆಯುವ ವಿಚಾರಣೆಯ ದೃಶ್ಯ ಚಿತ್ರೀಕರಣ ಮಾಡಲು ಅವಕಾಶ ಕೊಡುವುದು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಎಂದು ನನ್ನ ಭಾವನೆ. ಇದರಿಂದ ಪಾರದರ್ಶಕತೆಯನ್ನು ಕಾಯ್ದುಕೊಂಡಂತೆ ಆಗುತ್ತದೆ. ಆದರೆ ಚಿತ್ರೀಕರಣದಿಂದ ವಿಚಾರಣೆಗೆ ತೊಂದರೆ ಆಗದಂತೆ ನಿಯಮ ರೂಪಿಸಬೇಕು. ನಿಯಮ ಮೀರಿ ಚಿತ್ರೀಕರಣ ನಡೆಸುವುದು ತಪ್ಪು ಎಂದು ಹೇಳಬಹುದು.

      ಮೈಸೂರ್ ಬ್ಯಾಂಕ್ ವೃತ್ತದಲ್ಲಿ ವಕೀಲರು ಸಂಘಟನೆಯ ಬಲ ಇದೆ ಎಂದು ನಡೆಸಿದ ದಿಢೀರ್ ರಸ್ತೆ ತಡೆ ಹಾಗೂ ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ ಲಕ್ಷಾಂತರ ಸಾಮಾನ್ಯ ನಾಗರಿಕರಿಗೆ ತೊಂದರೆ ಉಂಟು ಮಾಡಿದ್ದು ವಕೀಲರ ಬಗ್ಗೆ ರಾಜ್ಯದ ಜನತೆಯಲ್ಲಿ ಅಕ್ರೋಶ ಉಂಟು ಮಾಡಿದೆ. ಹೀಗಾಗಿ ಮಾಧ್ಯಮ ಏನು ಪ್ರಸಾರ ಮಾಡಿತ್ತೋ ಅದನ್ನು ಜನ ನಂಬುವಂತೆ ಆಗಿದೆ. ವಾಸ್ತವವಾಗಿ ಆ ರಸ್ತೆ ತಡೆ ನಡೆಸಬೇಕಾದ ಅಗತ್ಯ ಕಾನೂನು ಬಲ್ಲ ವಕೀಲರಿಗೆ ಇರಲಿಲ್ಲ. ಕಾನೂನಿನ ಮಾರ್ಗದಲ್ಲೇ ನ್ಯಾಯ ಪಡೆಯುವ ಅವಕಾಶ ಇತ್ತು. ಓರ್ವ ಸಾಮಾನ್ಯ ನಾಗರಿಕನಾಗಿ ವಕೀಲರು ಸಂಘಟನೆಯ ಬಲ ಇದೆ ಎಂದು ಲಕ್ಷಾಂತರ ನಾಗರಿಕರಿಗೆ ತೊಂದರೆ ನೀಡಿದ್ದು ಅಕ್ಷಮ್ಯ ಎಂದು ನನ್ನ ಅನಿಸಿಕೆ. ಇದು ನನ್ನ ಅನಿಸಿಕೆ ಮಾತ್ರವಲ್ಲ ಲಕ್ಷಾಂತರ ಜನತೆಯ ಅಭಿಪ್ರಾಯವೂ ಹೌದು.

      Reply

Leave a Reply

Your email address will not be published. Required fields are marked *