Category Archives: ಶ್ರೀಪಾದ್ ಭಟ್

Percent of population living below the poverty line, over the final quarter of the 20th century.

ಮಕ್ಕಳ ಹೊಟ್ಟೆಗೆ ಹಿಟ್ಟು ಕೊಡುವುದೇ ದುರ್ಭರ


-ಬಿ. ಶ್ರೀಪಾದ್ ಭಟ್


“ಅಮೇಜಾನ್ ದಾಟಬಹುದು, ಈ ಅನುದಿನದ ಅಂತರಗಂಗೆ ದಾಟುವುದು ಹೇಗೆ”? — ಎ.ಕೆ.ರಾಮಾನುಜನ್

“ಕಳೆದ ಹಲವಾರು ವರ್ಷಗಳಿಂದ ಬಾಗಲಕೋಟೆ ಜಿಲ್ಲೆಯಾದ್ಯಾಂತ ಬಹುತೇಕ ಮಕ್ಕಳು ಅಪೌಷ್ಟಿಕತೆಯಿಂದ, ಹಸಿವಿನಿಂದ ನರಳುತ್ತಿವೆ. ಇವರ ಪೋಷಕರಿಗೆ ಉಳಿವಿಗಾಗಿ ಹೋರಾಟ ಮಾಡಬೇಕಾಗಿರುವಂತಹ ಸಂಧರ್ಭದಲ್ಲಿ ಈ ಮಕ್ಕಳ ಹೊಟ್ಟೆಗೆ ಹಿಟ್ಟು ಕೊಡುವುದೇ ದುರ್ಭರವಾಗುತ್ತಿದೆ.” – ಪ್ರಜಾವಾಣಿ ವರದಿ

“ಒರಿಸ್ಸಾದ 17 ಪಂಚಾಯ್ತಿಯನ್ನೊಳಗೊಂಡ ಕಾಶೀಪುರ ಬ್ಲಾಕ್ ನಲ್ಲಿ 704 ಹಳ್ಳಿಗಳಿವೆ, ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಅದರಲ್ಲಿ 60,000 ಜನಸಂಖ್ಯೆ ಆದಿವಾಸಿಗಳು, 21,000ರಷ್ಟು ಜನಸಂಖ್ಯೆ ದಲಿತರು. ಶೇಕಡಾ 85 ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ (BPL) ಕೆಳಗಿದ್ದಾರೆ. ಇವರಿಗೆ ಇವತ್ತಿಗೂ ಅಕ್ಕಿ ಒಂದು ಭೋಗವಸ್ತು. ಅಲ್ಲಿನ ಬಹಾದುಲ್ಕಿ ಹಳ್ಳಿಯಲ್ಲಿ ತಾಯಂದಿರು ತಮ್ಮ  ಬಹುಪಾಲು ಮಕ್ಕಳಿಗೆ ಹಸಿವನ್ನು ತಣಿಸಲು ಮಾವಿನ ತಿರುಳು, ಹುಣಿಸೇ ಬೀಜ, ಅಣಬೆ, ಗಿಡಗಳ ಎಲೆಗಳನ್ನು ಆಹಾರವಾಗಿ ಕೊಡುತ್ತಾರೆ.”  – ಡೆಕ್ಕನ್ ಹೆರಾಲ್ಡ್ ವರದಿ

“ಕುಟುಂಬ ಆರೋಗ್ಯ ಸರ್ವೇ 3, 2005-2006 ಪ್ರಕಾರ ದೇಶದ ಶೇಕಡ 50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಹಾಗೂ ಸಾಯುತ್ತಿದ್ದಾರೆ ಹಾಗೂ 2010ರ ಸರ್ವೇ ಪ್ರಕಾರ ಪ್ರತಿ ವರ್ಷ 26 ಮಿಲಿಯನ್ ಮಕ್ಕಳು ಹುಟ್ಟುತ್ತಾರೆ. ಅದರಲ್ಲಿ 1.83 ಮಿಲಿಯನ್ ಮಕ್ಕಳು ತಮ್ಮ ಐದನೇ ವಯಸ್ಸಿಗೆ ಮುಂಚೆಯೇ ಸಾವನ್ನಪ್ಪುತ್ತಾರೆ. ಇದರಲ್ಲಿ ಅರ್ಧದಷ್ಟು ಮಕ್ಕಳು ತಾವು ಹುಟ್ಟಿದ ಒಂದು ತಿಂಗಳೊಳಗೆ ಸಾವನ್ನಪ್ಪುತ್ತಾರೆ. ಇದಕ್ಕೆ ಮೂಲಭೂತ ಕಾರಣ ತಾಯಿಯ ಅಪೌಷ್ಟಿಕತೆ. ಅಲ್ಲದೆ 350 ಮಿಲಿಯನ್ ಜನ ಪ್ರತಿದಿನ ಉಪವಾಸ ಮಲುಗುತ್ತಾರೆ.” -ದೇವಿಂದರ್ ಶರ್ಮ.

“ಅಪೌಷ್ಟಿಕತೆ ಎನ್ನುವುದು ದೇಶದ ಅವಮಾನ. ಇಷ್ಟೊಂದು ಆರ್ಥಿಕ ಅಭಿವೃದ್ಧಿಯನ್ನು ಸ್ಥಾಪಿಸಿದರೂ ಬಡತನರೇಖೆಗಿಂತ ಕೆಳಗಿರುವವರ ಜನಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ.” – ಜನವರಿ 2012 ರ ಹೊಸ ವರ್ಷದಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ರವರ ಹೇಳಿಕೆ.

ಎಂತಹ ದುರಂತವಿದು. ನಿಜಕ್ಕೂ ಪ್ರಧಾನಮಂತ್ರಿಯವರ ಈ ಹೇಳಿಕೆಯೇ ಎಲ್ಲದಕ್ಕಿಂತಲೂ ದೊಡ್ಡ ಅವಮಾನ. ನಮ್ಮ ಪ್ರೀತಿಯ ಮನಮೋಹನ ಸಿಂಗ್‌ರವರು ತಾವು ಪ್ರಧಾನ ಮಂತ್ರಿಯಾಗಿ 7 ವರ್ಷಗಳ ನಂತರ ಮೊಟ್ಟಮೊದಲ ಬಾರಿಗೆ ಈ ಅಣಿಮುತ್ತುಗಳನ್ನು ಉದುರಿಸುತ್ತಾರೆ. ಕಳೆದ 20 ವರ್ಷಗಳಿಂದ ದೇಶದ ಆರ್ಥಿಕ ಪ್ರಗತಿ ಎನ್ನುವುದು ಬೆಳೆದಿದೆ ಹಾಗೂ ಬೆಳೆಯುತ್ತಿದೆ ಎನ್ನುವ Percent of population living below the poverty line, over the final quarter of the 20th century.ನಿಗೂಢ ಅಂಕೆಸಂಖ್ಯೆ ಜೊತೆಜೊತೆಗೇ ಈ ದೇಶದ ಹಸಿವೆಯೂ ಅಗಾಧಕಾರವಾಗಿ ಬೆಳೆದಿದೆ. ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿರುವ ಮಕ್ಕಳ ಸಂಖ್ಯೆಯೂ ಬೆಳೆದಿದೆ. ಬಡವರು ಹಾಗೂ ಶ್ರೀಮಂತರ ನಡುವಿನ ಕಂದಕ ದಿನೇ ದಿನೇ ದೊಡ್ದದಾಗುತ್ತಿದೆ. ಇಲ್ಲದವರಿಗೆ ಸಾಮಾಜಿಕ ಭದ್ರತೆ ಸಂಪೂರ್ಣವಾಗಿ ಸರ್ಕಾರದ ಜವಾಬ್ದಾರಿ, ಅದನ್ನೆಂದೂ ಪರಭಾರೆ ಮಾಡಕೂಡದು ಎನ್ನುವ ಕನಿಷ್ಟ ರಾಜಕೀಯ ಹಾಗೂ ಸಾಮಾಜಿಕ ಜ್ಞಾನವೂ ಇಲ್ಲದಾಗಿ ಹೋಯ್ತು ನಮ್ಮ ಕೇಂದ್ರದ ಹಾಗೂ ರಾಜ್ಯಗಳ ಪ್ರಭುತ್ವಕ್ಕೆ ಹಾಗೂ ಬಹುಮುಖ್ಯವಾಗಿ ನಮ್ಮ ಪ್ರೀತಿಯ ಮನಮೋಹನ ಸಿಂಗ್ ಜೀಗೆ. ಆದರೆ ನಮ್ಮ ಪ್ರೀತಿಯ ಮನಮೋಹನ ಸಿಂಗ್ ತಮ್ಮ 7 ವರ್ಷಗಳ ಅಧಿಕಾರದುದ್ದಕ್ಕೂ ರಾಜಕಾರಣಿಯಾಗಿ, ಮುತ್ಸದ್ದಿಯಾಗಿ ನೇರವಾಗಿ ಜನಸಂಪರ್ಕವನ್ನು ಇಟ್ಟುಕೊಳ್ಳದೆ, ತಮ್ಮ ಪಕ್ಷದೊಂದಿಗೂ,  ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಹಾಗೂ ಯೋಜನ ಆಯೋಜದ ತಜ್ಞರು ಕೊಡುವ ಅಂಕಿಸಂಖ್ಯೆಗಳನ್ನೇ ನಂಬಿ ಕತ್ತಲ ರಾಜ್ಯದಲ್ಲಿ ಮುಳುಗಿ ಅಧಿಕಾರ ನಡೆಸುತ್ತಿರುವುದರ ಫಲವಿದು.

ಕಳೆದ 20 ವರ್ಷಗಳಿಂದ ಖಾಸಗೀಕರಣ ಓಹ್ ಖಾಸಗೀಕರಣ, ಜಾಗತೀಕರಣ ಓಹ್ ಜಾಗತೀಕರಣ ಎಂದು ಈ ದೇಶದ ಪ್ರಜೆಗಳು ಹಾಗೂ ಪ್ರಭುತ್ವ ಒಕ್ಕೊರಲಿನಿಂದ ಸಂಭ್ರಮಿಸಿ ಅದನ್ನು ತಲೆ ಮೇಲೆ ಇಟ್ಟುಕೊಂಡು ಮೆರೆಸಿ ಸಾಮಾಜಿಕ ಕ್ಷೇಮಾಭಿವೃದ್ದಿ ಘಟಕಗಳಾದ ಶುದ್ಧ ಆಹಾರ, ವಸತಿ, ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಉದ್ದಿಮೆ, ಸರ್ಕಾರಿ ನಿಗಮಗಳನ್ನು ಖಾಸಗೀಕರಣದ ಅಮಲಿನಲ್ಲಿ ಸಂಪೂರ್ಣ ಮೂಲೆಗುಂಪು ಮಾಡಿದುದರ ಫಲವಿದು. ಇಲ್ಲಿನ ಜನಜೀವನ ಹಾಗೂ ಅವರ ಬದುಕಿನ ಶೈಲಿ ಹಾಗೂ ಒಟ್ಟಾರೆಯಾಗಿ ಎರಡು ಹೊತ್ತಿನ ಊಟಕ್ಕಾಗಿ ಈ ಜನರಿಗೆ ಏನೇನು ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎನ್ನುವುದರ ಯಾವುದೇ ಗಂಧ ಗಾಳಿಯಿಲ್ಲದ ಅತ್ಯಂತ ಭ್ರಷ್ಟ ಮಂತ್ರಿ ಶರದ್ ಪವಾರ್ ರಂತಹವರು ವ್ಯವಸಾಯ ಹಾಗೂ ಅಹಾರ ಪೂರೈಕೆಯ ಮಂತ್ರಿಯಾಗಿರುವುದರ ಫಲವಿದು. ಕೃಷಿ ಕೂಲಿ ರೈತ ಹಾಗೂ ನಗರದ ಬಡವರ ಬಗೆಗಿನ ಯೋಜನೆಗಳನ್ನು ಎಲ್ಲಾ ವರ್ಗಗಳ ಬಡತನ ನಿರ್ಮೂಲನೆ ಯೋಜನೆಗಳನ್ನು ರೂಪಿಸಲು ಹಾಗೂ ಜಾರಿಗೊಳಿಸುವ ಜವಾಬ್ದಾರಿಯನ್ನು ದೇಶದ ನೌಕರಶಾಹಿಗೆ ವಹಿಸಿಕೂಟ್ಟಿರುವುದರ ಫಲವಿದು. ದೇಶದ, ರಾಜ್ಯದ ಚಿಂತಕರ ಚಾವಡಿ ಹಾಗೂ ಈ ದೇಶದ ಸಾಮಾಜಿಕ ವ್ಯವಸ್ಥೆಯನ್ನು, ಅದರ ರಚನೆಗಳನ್ನು ಹಾಗೂ ಜಾತೀಯತೆ ಹಾಗೂ ಬಡತನ ಹಾಗೂ ಉಪವಾಸ ಒಂದಕ್ಕೊಂದು ಬೆಸೆದುಕೊಂಡ ಕೊಂಡಿಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕಾದ ಜಾಗದಲ್ಲಿ ತಮ್ಮ ಅರ್ಥಶಾಸ್ತ್ರದ ಅಕಡೆಮಿಕ್ ಪಾಂಡಿತ್ಯವನ್ನಾಧರಿಸಿ ಈ ಯೋಜನಾ ಆಯೋಗದ ಬುದ್ಧಿಜೀವಿಗಳು ಅತ್ಯಂತ ಅಮಾನವೀಯವಾಗಿ ಈ ದೇಶದ ಬಡತನ ರೇಖೆಯನ್ನು ನಿರ್ಧರಿಸುವುದರ ಫಲವಿದು.

ಈ ದೇಶದ ರೈತರು ಸಾಲ ಮಾಡಿ ವ್ಯವಸಾಯ ಮಾಡಬೇಕಾಗಿರುವುದು ಈ ದೇಶದ ಪಟ್ಟಣ, ನಗರವಾಸಿಗಳ ಹೊಟ್ಟೆ ತುಂಬಿಸಲು ಎನ್ನುವ ಸರ್ಕಾರದ ನೀತಿಗಳು ಹಾಗೂ ಅದಕ್ಕೆ ಪೂರಕವೆನ್ನುವಂತೆಯೇ ಸ್ವತಂತ್ರ ಬಂದು 64 ವರ್ಷಗಳ ನಂತರವೂ  ರೈತ ತಾನು ಬೆಳೆದ ಬೆಳೆಗೆ ಕನಿಷ್ಟ ಬೆಂಬಲ ಬೆಲೆಗಾಗಿ ಹೋರಾಟ ಮಾಡಬೇಕಾಗಿ ಬಂದ ದುಸ್ಥಿತಿ ನಿರ್ಮಾಣವಾಗಿರುವುದು ಈ ಪ್ರಭುಗಳೆಲ್ಲ ಸೇರಿಕೊಂಡು ದೇಶದ ಬಡಜನತೆಗೋಸ್ಕರ, ರೈತರಿಗೋಸ್ಕರ ಕಾರ್ಯನೀತಿಯನ್ನು ಅಮೂಲಾಗ್ರವಾಗಿ ರೂಪಿಸುವುದಕ್ಕೆ ಸಂಪೂರ್ಣವಾಗಿ ತಿಲಾಂಜಲಿ ಕೊಟ್ಟು ಕೇವಲ ವಿದೇಶಿ ಬಂಡವಾಳ ಹೂಡಿಕೆ ಹಾಗೂ ದೇಶದ ಉದ್ಯಮದೊಂದಿಗೆ ಇವರ ಪಾಲುದಾರಿಕೆ, ಇದಕ್ಕಾಗಿ ಅನೇಕ ರೀತಿಯ ಅವೈಜ್ಞಾನಿಕ ತೆರಿಗೆ ವಿನಾಯ್ತಿಗಳನ್ನು ಘೋಷಿಸುವುದು, ಇದಕ್ಕಾಗಿ ಜಮೀನು ವಶಪಡಿಸುಕೊಳ್ಳುವುದು ಹಾಗೂ ಇಂತಹ ಮತಿಗೆಟ್ಟ ಯೋಜನೆಗಳ ಮಟ್ಟಕ್ಕೆ ಪ್ರಭುತ್ವ ತಲುಪಿದರ ಫಲ. ಇದರಿಂದಾಗಿ ಈ ನೆಲದ ಜನ ಹಾಗೂ ಸಮುದಾಯಗಳು ಇಲ್ಲಿನ ನೀರು, ನೆಲ, ಕಾಡುಗಳ ಮೇಲೆ ಸಹಜವಾದ, ಅತ್ಯಂತ ನೈಸರ್ಗಿಕ ನ್ಯಾಯದ ತಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ಕಳೆದುಕೊಂಡವು.

20 ಅಂಶಗಳ ಕಾರ್ಯಕ್ರಮ (35 ವರ್ಷಗಳಿಂದ ಚಾಲ್ತಿಯಲ್ಲಿದೆ), ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (MGNREGA )  (7 ವರ್ಷಗಳಿಂದ ಚಾಲ್ತಿಯಲ್ಲಿದೆ), ಮಕ್ಕಳ ಸಮಗ್ರ ಅಭಿವೃದ್ದಿ ಯೋಜನೆ (ICDS) (35 ವರ್ಷಗಳಿಂದ ಚಾಲ್ತಿಯಲ್ಲಿದೆ), ಮಧ್ಯಾಹ್ನದ ಊಟದ ಯೋಜನೆ (10 ವರ್ಷಗಳಿಂದ ಚಾಲ್ತಿಯಲ್ಲಿದೆ, ಕೆಲವು ರಾಜ್ಯಗಳಲ್ಲಿ 25 ವರ್ಷಗಳಿಂದ ಚಾಲ್ತಿಯಲ್ಲಿದೆ), ಸಾರ್ವಜನಿಕ ಆಹಾರ ಪೂರೈಕೆ ಯೋಜನೆ (50 ವರ್ಷಗಳಿಂದ ಚಾಲ್ತಿಯಲ್ಲಿದೆ), ಅಂಗನವಾಡಿ ಪದ್ಧತಿ, ಬಾಲಿಕಾ ಸಂವೃದ್ಧಿ ಯೋಜನೆ, ಗ್ರಾಮೀಣ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಯೋಜನೆ, ಪುನರುತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಯೋಜನೆ, ಇಂದಿರಾ ವಿಕಾಸ ಯೋಜನೆ, ಕಿಶೋರಿ ಶಕ್ತಿ ಯೋಜನೆ, ಭಾರತ ನಿರ್ಮಾಣ ಯೋಜನೆ, ಕಾಳಿಗಾಗಿ ಕೆಲಸ ಯೋಜನೆ, ಜವಹರ ಗ್ರಾಮ ಅಭಿವೃದ್ಧಿ ಯೋಜನೆ, ಜವಹರ ರೋಜಗಾರ್ ಯೋಜನೆ, ಪ್ರಧಾನ ಮಂತ್ರಿ ರೋಜಗಾರ್ ಯೋಜನೆ, ಸಂಪೂರ್ಣ ಗ್ರಾಮೀಣ ಯೋಜನೆ, ಗ್ರಾಮೀಣ ನೈರ್ಮಲೀಕರಣ ಯೋಜನೆ, ಸ್ವಜಲಾಧಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಇನ್ನೂ ನೂರಾರು ಯೋಜನೆಗಳಿವೆ. ಇಲ್ಲಿರುವುದು ಸ್ಯಾಂಪಲ್ ಮಾತ್ರ. ಇದಲ್ಲದೆ ಪ್ರತಿ ರಾಜ್ಯಗಳ ಸ್ವಂತಂತ್ರ ಯೋಜನೆಗಳು. ಇವೆಲ್ಲ ಯೋಜನೆಗಳು ನಿಜಕ್ಕೂ ಆಮ್ ಆದ್ಮಿ ಗಾಗಿ ಸ್ವತಂತ್ರ ಭಾರತದಲ್ಲಿ ಜಾರಿಗೊಂಡ, ರೂಪಿತಗೊಂಡ ಕೆಲವು ಜನಪರ, ಜನಪ್ರಿಯ ಯೋಜನೆಗಳು. ಆದರೆ ಇದನ್ನು ಸಾಕಾರಗೊಳಿಸಲು, ಯಶಸ್ವಿಯಾಗಿ ಮುನ್ನಡಸೆಲು ಬೇಕಾದ ಶಾಸಕಾಂಗದ ರಾಜಕೀಯ ಇಚ್ಛಾಶಕ್ತಿ, ಕೆಳಮಟ್ಟದಿಂದ ಮೇಲ್ಮುಖವಾಗಿ ಸುಲಲಿತವಾಗಿ ಹರಿಯುವಂತಹ ವಿಕೇಂದ್ರಿಕರಣದ ಆಡಳಿತ ವ್ಯವಸ್ಥೆ, ಕಾರ್ಯಾಂಗದ ಕನಿಷ್ಟ ಮಟ್ಟದ ಬದ್ಧತೆ, ಕಡೆಗೆ ಈ ಯೋಜನೆಗಳನ್ನು ಅನುಷ್ಟಾನಗೊಳಿಸಲು ಶಾಸಕಾಂಗ ಹಾಗೂ ಕಾರ್ಯಾಂಗಗಳಿಂದ ಜಂಟಿಯಾಗಿ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಜಾರಿಗೊಳಿಸುವುದು, ಎಲ್ಲವೂ ಇಲ್ಲಿ ಕಾಣೆಯಾಗಿ ಈ ಎಲ್ಲಾ ಜನಪರ ಯೋಜನೆಗಳು ಎಂದಿನಂತೆ ಭ್ರಷ್ಟಾಚಾರದ ಕೂಪಗಳಾಗಿ ಪರಿವರ್ತಿತವಾಗಿಬಿಟ್ಟಿವೆ. ಸೋತಿವೆ. ಈ ಮೂಲಕ ಈ ದೇಶವೂ ಅಂತರಿಕವಾಗಿ ಸೋತಿದೆ. ಶೋಚನೀಯವಾಗಿ ಸೋತಿದೆ.

ಉದಾಹರಣೆಗೆ, ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತರಲೆತ್ನಿಸುತ್ತಿರುವ  “ಆಹಾರ ಭದ್ರತೆ ಯೋಜನೆ”   (Food Security Bill) ಎನ್ನುವ ಪ್ರಗತಿಪರ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ವರ್ಗ ಕನಿಷ್ಟ 46% ರಷ್ಟು ಗ್ರಾಮೀಣ ಜನತೆ ಹಾಗೂ 26% ರಷ್ಟು ನಗರ ಜನತೆ ಪ್ರತಿ ತಿಂಗಳು ವ್ಯಕ್ತಿಯೊಬ್ಬನಿಗೆ 3 ರೂಪಾಯಿಗೆ ಅಕ್ಕಿ, 2 ರೂಪಾಯಿಗೆ ಗೋಧಿ ಅಧಾರದಲ್ಲಿ 7 KG ಧಾನ್ಯ ಸಿಗುತ್ತದೆ. ಅಲ್ಲದೆ ಬಡತನ ರೇಖೆಗಿಂತ ಮೇಲಿರುವ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೂ 3 KG ಧಾನ್ಯ ಸಿಗುತ್ತದೆ. ಇದನ್ನು ಕೇಂದ್ರ ಸಂಪುಟ ಅನುಮೋದಿಸಿದೆ. ಆದರೆ ಈ ಹೊಸ ಕಾಯ್ದೆಯ ಸಾಧಕ ಬಾಧಕಗಳು ಒತ್ತಟ್ಟಿಗಿರಲಿ ಅದನ್ನು ಚರ್ಚಿಸಲು ಬೇರೆಯದೇ ಆದ ವೇದಿಕೆ ಬೇಕಾಗುತ್ತದೆ.  ಆದರೆ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಹಾಗೂ ಪ್ರಜೆಗಳಿಗೆ ಗೊತ್ತಿರುವ ಹಾಗೆಯೇ ಅನೇಕ ಕಂಟಕಗಳಿವೆ.

ಮೊದಲನೆಯದಾಗಿ, ಬಡತನ ರೇಖೆಗಿಂತ ಕೆಳೆಗಿರುವ ಕುಟುಂಬಗಳನ್ನು ಗುರುತಿಸಲು ಯೋಜನಾ ಆಯೋಗ ಗೊತ್ತುಪಡಿಸಿದ ಸಾಮಾಜಿಕ ಪ್ರಜ್ನೆಯೇ ಇಲ್ಲದ ಅವೈ ಜ್ಞಾನಿಕ ಪದ್ಧತಿ. ಬಡತನದ ರೇಖೆಯನ್ನು ಒಮ್ಮೆ 20 ರೂಪಾಯಿಯನ್ನು ನಗರವಾಸಿಗಳಿಗೂ 15 ರೂಪಾಯಿಗಳನ್ನು ಗ್ರಾಮೀಣವಾಸಿಗಳಿಗೂ ಗೊತ್ತುಪಡಿಸಿ ಇದನ್ನು ಸುಪ್ರೀಂಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿದ್ದಕ್ಕಾಗಿ ಸಮಕಾಲೀನ ಬದುಕಿನ ಬಗ್ಗೆ ಗಂಧಗಾಳಿಯೂ ಇಲ್ಲದ ತನ್ನ ಈ  ಮೌಢ್ಯತನಕ್ಕೆ ಕೋರ್ಟ್ ನಿಂದ ಹಾಗೂ ದೇಶದ ಪ್ರಜ್ಞಾವಂತ ಚಿಂತಕರಿಂದ ಸತತವಾಗಿ ಛೀಮಾರಿ ಹಾಕಿಸಿಕೊಂಡ ಈ ಯೋಜನಾ ಆಯೋಗ ನಂತರ ತಿಪ್ಪೆ ಸಾರಿಸುವ ಕೆಲಸ ಮಾಡಿ ತನ್ನ ವರದಿಯನ್ನು ಪರಿಷ್ಕರಿಸಿ ನಗರವಾಸಿಗಳಿಗೆ 32 ರೂಪಾಯಿಗಳನ್ನೂ, ಗ್ರಾಮೀಣವಾಸಿಗಳಿಗೆ 26 ರೂಪಾಯಿಗಳನ್ನು ಗುರುತಿಸಿ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ, ಮಾಧ್ಯಮಗಳಲ್ಲಿ ತೀವ್ರವಾದ ಮುಖಭಂಗ ಅನುಭವಿಸಿತು. ದೇಶದ ಅತ್ಯನ್ನತ ಸಂಸ್ಥೆಗಳಲ್ಲಿರುವವರ ಈ ಸಾಮಾಜಿಕ  ಜ್ಞಾನದ ಬಗೆಗಿನ ಸಂಪೂರ್ಣ ಅಜ್ಞಾನ ಹಾಗೂ ನಿಜಕ್ಕೂ ನಮ್ಮ ದೇಶದಲ್ಲಿ ಇಂತಹ ಮೂಢರಿದ್ದಾರೆಯೇ ಎಂದು ಗಾಬರಿಯಾಗುತ್ತದೆ. ಬಡತನರೇಖೆಯನ್ನು ಗುರುತಿಸಲು ಇಷ್ಟೊಂದು ಗೊಂದಲಗಳಿರುವಾಗ ಮುಂದೆ ಈ ಹೊಸ ಅಹಾರ ಭದ್ರತೆಯ ಯೋಜನೆಗಳು ಅರ್ಹ ಕುಟುಂಬಗಳಿಗೆ ದೊರಕುವ ಸಾಧ್ಯತೆಗಳೇ ನಿಜಕ್ಕೂ ಅನುಮಾನಾಸ್ಪದ.

ಎರಡನೆಯದಾಗಿ, ದೇಶದ ವ್ಯವಸಾಯಿಕ ವಲಯದಲ್ಲಿ ಸತತವಾಗಿ ಬೇಡಿಕೆಯನ್ನು ಪೂರೈಸಲು ಬೇಕಾಗುವ ಆಹಾರ ಧಾನ್ಯಗಳ ನಿರಂತರ ಉತ್ಪಾದನಾ ಸಾಮರ್ಥ್ಯವೇ ಉಡುಗಿಹೋಗಿ ನೆಲ ಕಚ್ಚಿರುವಾಗ, ಇಂತಹ ಕಗ್ಗತ್ತಲಿನ ಸಂಧರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಾಯಲ್ಲಿ ಮಂತ್ರ ಕೈಯಲ್ಲಿ ಚೂರಿಯ ಸಿದ್ಧಾಂತವನ್ನು ಪ್ರಯೋಗಿಸಿ ರೈತರ ನೆಲವನ್ನೇ ಆಪೋಶನ ಮಾಡಿಕೊಳ್ಳುತ್ತಿರುವಂತಹ ಸಂಧರ್ಭದಲ್ಲಿ ಈ ಉತ್ಪಾದನಾ ಸಾಮರ್ಥ್ಯವನ್ನು ಅಳೆಯುವ ಮಾನದಂಡಗಳಾವುವು? ಇದಕ್ಕಂತೂ ಸಧ್ಯಕ್ಕಲ್ಲ ಮುಂದೆಯೂ ಉತ್ತರವಿಲ್ಲ.

ಮೂರನೆಯದಾಗಿ, ನಮ್ಮ ಸಂಗ್ರಹಣಾ ಸಾಮರ್ಥ್ಯದ ಮಟ್ಟವಂತೂ ಅತ್ಯಂತ ಶೋಚನಿಯವಾಗಿದೆ. ಈಗಾಗಲೇ 50 ಮಿಲಿಯನ್ ಟನ್ ನಷ್ಟು ಅಕ್ಕಿ ಹಾಗೂ ಗೋಧಿಯ ದಾಸ್ತಾನು, 29 ಮಿಲಿಯನ್ ಟನ್ ನಷ್ಟು ಕಾಳುಗಳ ದಾಸ್ತಾನು ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಗೋದಾಮುಗಳಲ್ಲಿ ಕೊಳೆಯುತ್ತಿದೆ, ಈಗಿನ ಪಡಿತರ ವಿತರಣ ವ್ಯವಸ್ಥೆಯಲ್ಲಿ ಇದರಿಂದ ಅಕ್ಕಿ ಹಾಗೂ ಗೋಧಿ ಶೇಕಡ 60 ರಷ್ಟು ಮಾತ್ರ ಬಳಸಲ್ಪಡುತ್ತವೆ. ಉಳಿದ ಶೇಕಡ 40 ರಷ್ಟು ಧವಸ ಧಾನ್ಯಗಳು ಯಾವುದೇ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗಳಿಲ್ಲದೆ ಗೋದಾಮುಗಳಲ್ಲಿ ಕೊಳೆಯುತ್ತವೆ ಇಲ್ಲವೇ ಹೆಗ್ಗಣಗಳಿಗೆ ಆಹಾರವಾಗುತ್ತವೆ. ಇದರ ಕರ್ಮಕಾಂಡದ ಬಗ್ಗೆ ಬರೆಯಲು ಪುಟಗಳೂ ಸಾಲವು.

ಕಡೆಯದಾಗಿ, ನಮ್ಮಲ್ಲಿನ ಪಡಿತರ ವಿತರಣಾ ವ್ಯವಸ್ಥೆಯ ಬಗೆಗೆ ಹೊಸದಾಗಿ ಹೇಳುವುದೇನಿದೆ. ಇಲ್ಲಿನ ಭ್ರಷ್ಟಾಚಾರ ಹಾಗೂ ಹಗಲು ದರೋಡೆ ಸಾರ್ವಜನಿಕ ಪಡಿತರ ವಿತರಣ ವ್ಯವಸ್ಥೆಯ ಪಾವಿತ್ರತೆಯನ್ನೇ ನಾಶಗೊಳಿಸಿದೆ. ಉದಾಹರಣೆಯಾಗಿ ಹೇಳುವುದಾದರೆ, ಅರ್ಥಶಾಸ್ತ್ರಜ್ಞರಾದ “ಪ್ರೇಮ್ ಶಂಕರ್ ಝಾ” ರವರು ಹೇಳಿದ ಪ್ರಕಾರ  “ಈಗಿನ ಪಡಿತರ ವ್ಯವಸ್ಥೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 35 KG ಅಕ್ಕಿ ಹಾಗೂ ಗೋಧಿ ಸಿಗುತ್ತದೆ. ಇದಕ್ಕಾಗಿ ಅವರು 70 ರೂಪಾಯಿಯನ್ನು ಖರ್ಚು ಮಾಡಬೇಕು. ಬಡವರ ಈ ನಿಸ್ಸಾಹಯಕತೆಯನ್ನು ನ್ಯಾಯಬೆಲೆಯವನು ದುರುಪಯೋಗಪಡಿಸಿಕೊಳ್ಳುತ್ತಾನೆ. ಅವರಿಗೆ 70 ರೂಪಾಯಿಗೆ 35 KG ಅಕ್ಕಿ ಹಾಗೂ ಗೋಧಿ ಕೊಡುವುದರ ಬದಲು ಹಣ ಪಡೆಯದೆ ಕೇವಲ 15 KG ಅಕ್ಕಿ ಹಾಗೂ ಗೋಧಿ ಕೊಟ್ಟು ಮಿಕ್ಕಿದ 20 KG ಯನ್ನು ಮುಕ್ತ ಮಾರುಕಟ್ಟೆಯಲ್ಲಿ ಐದು ಪಟ್ಟು ಬೆಲೆಗೆ ಮಾರಿಕೊಂಡು ಅದರ ಲಾಭವನ್ನೆಲ್ಲ ತನ್ನ ಜೇಬಿಗಿಳಿಸುತ್ತಾನೆ”.  ಇದು ಒಂದು ಉದಾಹರಣೆ ಮಾತ್ರ. ಇಂತಹವು ಬೇಕಾದಷ್ಟಿದೆ.

ಮೇಲಿನ ಯೋಜನೆ ಜಾರಿಗೊಂಡರೆ ಅದಕೆ ತಗಲುವ ಕೋಟ್ಯಾಂತರ ರೂಪಾಯಿಗಳ ಕ್ರೋಢೀಕರಣದ ಬಗೆಗಿನ ಚಿಂತನೆಗಳು ಆಗಿನಿಂದಲೂ ಅಕಡೆಮಿಕ್ ಶೈಲಿಯಿಂದ, ಅರ್ಥಶಾಸ್ತ್ರದ ಗರ್ಭಗುಡಿಗಳಿಂದ ಹೊರಬಂದಿಲ್ಲ. ಇವಕ್ಕೆ ಸಾಮಾಜಿಕ ಜ್ಞಾನದ ಸಂಪರ್ಕವಾಗಲಿ, ಇದರ ಪ್ರಾಯೋಗಿಕ ಸಾಧಕ ಬಾಧಕಗಳಾಗಲಿ ಸ್ವಲ್ಪವೂ ಅರಿವಿರುವುದಿಲ್ಲ. ಅಲ್ಲದೆ ಈ ಮೊತ್ತವನ್ನು ದೇಶದ ಬಡಜನರ ಪರವಾಗಿ ಬಳಸುವುದರ ಬಗ್ಗೆ ಎಂದಿನಂತೆ ನಮ್ಮ ಸ್ವಾರ್ಥ, ಕೊಳ್ಳುಬಾಕ ಸಂಸ್ಕೃತಿಯ  ಮಧ್ಯಮ, ಮೇಲ್ಮಧ್ಯಮ ವರ್ಗಗಳು ಹಾಗೂ ಬಹುಪಾಲು ಮಾಧ್ಯಮಗಳು ಕೆಂಡಕಾರುತ್ತಿವೆ. ಇವರ ಪ್ರಕಾರ ಈ ಮೊತ್ತ ತಮ್ಮೆಲ್ಲರ ತೆರಿಗೆ ಹಣದಿಂದ ಬಳಸಿಕೊಳ್ಳಲಾಗುತ್ತಿದೆ ಎಂದು ಉಗ್ರ ಟೀಕೆ. ತಮ್ಮ ಮಾತೃಭಾಷೆಯ ಬಗೆಗೆ ಅಪಾರ ಪ್ರೀತಿಯನ್ನಾಗಲಿ, ಇಲ್ಲಿನ ನೆಲ, ಜಲದ ಬಗೆಗಿನ ತಿಳುವಳಿಕೆಯಾಗಲಿ ಸಂಪೂರ್ಣ ಕಳೆದುಕೊಂಡಿರುವ ಇವರು ತಮ್ಮ ಸಾಮಾಜಿಕ ಅಂತಸ್ತಿನಲ್ಲಿ ಮೇಲ್ಮುಖವಾಗಿ ಚಲಿಸುತ್ತಾ ಹೊರಟಿರುವ ಈ ವರ್ಗಗಳ ಆತ್ಮವಂಚನೆ ಕೂಡ ಮೇಲ್ಮುಖವಾಗಿಯೇ ಹಬ್ಬಿಕೊಳ್ಳುತ್ತಿದೆ. ಈ ವರ್ಗಗಳು ತೀವ್ರವಾಗಿ ಪ್ರತಿಕ್ರಿಯಿಸುವುದು ತಮ್ಮ ಈ ಮೇಲ್ಮುಖದ ಬೆಳವಣಿಗೆ ಸ್ಥಗಿತಗೊಂಡಾಗ ಮಾತ್ರ. ಇನ್ನುಳಿದಂತೆ ದೇಶದ ಶೇಕಡ 70 ರಷ್ಟಿರುವ ಜನಸಂಖ್ಯೆಯ ಬದುಕು ದಶಕಗಳಿಂದ ಸತತವಾಗಿ ಕೆಳಮುಖವಾಗಿ ಜಾರುತ್ತಿದ್ದರೂ ಇವರೆಲ್ಲರ ಇದೆಲ್ಲ ನಮಗೇನು ಎನ್ನುವ ಧೋರಣೆಯ ಬಗೆಗೆ ಹೆಚ್ಚಿಗೆ ಹೇಳುವ ಅಗತ್ಯವೇ ಇಲ್ಲ.

ಈ ಮೂಲಕ  “ತಾಯಿಯ ಶಿಕ್ಷಣ, ಅವಳ ದೈಹಿಕ ಶಕ್ತಿ, ಅವಳ ಮಾನಸಿಕ ಸ್ಥಿರತೆ” ಗಳನ್ನು ಕೂಡ ನಾಶಮಾಡಲಾಗುತ್ತದೆ. ಈ ಮೂಲಕ ಮಕ್ಕಳ  “ಶಿಕ್ಷಣ, ದೈಹಿಕ ಶಕ್ತಿ, ಮಾನಸಿಕ ಸ್ಥಿರತೆ” ಗಳನ್ನು ಕೂಡ ಸಾಯಿಸಲಾಗುತ್ತದೆ.

RSS :ಬಾಲ್ಯವಿವಾಹ, ಮಡೆಸ್ನಾನ, ಮರ್ಯಾದಾ ಹತ್ಯೆ,… ಏನನ್ನುತ್ತಾರೆ?

-ಬಿ. ಶ್ರೀಪಾದ್ ಭಟ್

“ಆರ್.ಎಸ್.ಎಸ್. ಗಳ ದೇಶಭಕ್ತಿ ಮತ್ತು ಧರ್ಮ ಶ್ರದ್ಧೆ ಗಾಂಧೀಜಿಯಲ್ಲಿ ಶಂಕೆ ಮೂಡಿಸುತ್ತಿದ್ದವು. ಆರ್.ಎಸ್.ಎಸ್. ಗಳ ಈ ದೇಶ ಭಕ್ತಿ, ಧರ್ಮಶ್ರದ್ಧೆಯ ಇನ್ನೊಂದು ಮುಖವೇ ಅನ್ಯಧರ್ಮ ದ್ವೇಷ ಎಂದು ಗಾಂಧೀಜಿ ತಿಳಿದಿದ್ದರು. ಬರೀ ದೇವಾಲಯಗಳನ್ನು ಕಟ್ಟಿಸುವುವನು ಹೇಗೆ ಕಂದಾಚಾರದ, ಅಸಹನೆಯ ವ್ಯಕ್ತಿಯಾಗುತ್ತಾನೋ ಹಾಗೆಯೇ ಪರಂಪಾರಗತ ಧರ್ಮವನ್ನು ನಂಬಿದವನು ಜಾತಿಪದ್ಧತಿ ಮತ್ತು ಶೋಷಣೆಯನ್ನು ನೆಚ್ಚುತ್ತಾನೆ ಎಂದು ತಿಳಿದಿದ್ದರು. ಗಾಂಧೀಜಿಯ ಕಣ್ಣೆದುರಿಗೇ ಹಿಂದೂ ಧರ್ಮದ ರಕ್ಷಣೆಗೆಂದು ಹುಟ್ಟಿಕೊಂಡ, ಆರ್.ಎಸ್.ಎಸ್ ಮುಸ್ಲಿಂ ವಿರೋಧಿ ಗುಂಪಾಗಿ, ಸತ್ಯವನ್ನು ತಿರುಚಿ ಸುಳ್ಳುಗಳನ್ನು ನಂಬುವ ಫ಼್ಯಾಸಿಸ್ಟ್ ಗುಂಪಾಗಿ ಬೆಳೆದದ್ದು ಇತಿಹಾಸ.” — ಪಿ. ಲಂಕೇಶ್ ( ಟೀಕೆ ಟಿಪ್ಪಣಿ – 3 ನೇ ಸಂಪುಟ)

“ಬಡವರ ರಕ್ತ ಹೀರುವ ಬ್ರಾಹ್ಮಣರು ಮತ್ತು ಸಾಧುಗಳನ್ನು, ಹೆಣ್ಣು ಕುಲದ ಮೇಲೆ ದಬ್ಬಾಳಿಕೆ ನಡೆಸುವ ಮೇಲ್ಜಾತಿಯ ಪ್ರಭುತ್ವಕ್ಕೆ ಪ್ರತಿರೋಧ ತೋರಲು ಶೂದ್ರವರ್ಗ ತಲೆ ಎತ್ತಿ ನಿಲ್ಲುವುದು.” ಸ್ವಾಮಿ ವಿವೇಕಾನಂದ (“ಸಂಗ್ರಹ” ,  ಕಲ್ಕತ್ತ 1964)

“ದೇಶದಾದ್ಯಾಂತ ಕೋಮುಗಲಭೆಗಳು ಶೇಕಡ 65 ರಷ್ಟು ಇಳಿಮುಖವಾಗಿದ್ದರೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ಕೋಮುಗಲಭೆಗಳು ಶೇಕಡ 90 ರಷ್ಟು ಜಾಸ್ತಿಯಾಗಿವೆ.” ನಿವೃತ್ತ ನ್ಯಾಯಾಧೀಶ ಸಲ್ಡಾನ ( 12.1.2012 ಡೆಕ್ಕನ್ ಹೆರಾಲ್ಡ್ ವರದಿ)

70ರ ದಶಕದಲ್ಲಿ ನಾವೆಲ್ಲ ಸರ್ಕಾರಿ ಸ್ಕೂಲಿನಲ್ಲಿ ಓದುತ್ತಿದ್ದಾಗ ಆಗ ಬೆಳಗಿನ ಹೊತ್ತಿನಲ್ಲಿ ನಮಗೆ ಶಾಲೆಯ ಆಟದ ಮೈದಾನದಲ್ಲಿ ದಿನಂಪ್ರತಿ ಕಾಣುವ ಒಂದು ಸಾಮಾನ್ಯ ದೃಶ್ಯವೆಂದರೆ ಖಾಕಿ ಚೆಡ್ಡಿ ಹಾಕಿಕೊಂಡು ಕವಾಯತು ಮಾಡುತ್ತಿದ್ದ ಸಣ್ಣ ಹುಡುಗರು ಹಾಗೂ ಯುವಕರು. ಇವರೆಲ್ಲರ ಮುಖದಲ್ಲಿ ಒಂದು ರೀತಿಯ ಕಠೋರತೆ ಇರುತಿತ್ತು. ನಮಗೆ ಆಶ್ಚರ್ಯವೆಂದರೆ ಈ ಕಠೋರತೆಗೆ ವಯಸ್ಸಿನ ಭೇದವಿರಲಿಲ್ಲ. ನಾವೆಲ್ಲ ಕುತೂಹಲದಿಂದ ಅವರ ಅಕ್ಕ ಪಕ್ಕ ಸುಳಿದಾಡುತ್ತಿದ್ದಾಗಲೆಲ್ಲ ಇವರಿಗೆಲ್ಲ ಮುಖಂಡನಾದವನು ಹೇಳುತ್ತಿದ್ದ “ಅವರೇನಾದರು ಎದುರಿಗೆ ಬಂದರೆ ನೀವು ಪ್ರತಿಯಾಗಿ ಅವರನ್ನು ದೃಷ್ಟಿಸಿ ನೋಡಿ, ಸದಾ ಕಾಲ ಕೈಯಲ್ಲಿ ಒಂದು ಕೋಲನ್ನು ಇಟ್ಟಿಕೊಳ್ಳಿ, ಏನಾದರೂ ನಿಮಗೆ ಸಂಶಯವೆನಿಸಿದರೆ ಆ ಕೋಲನ್ನು ಅವರ ಮೇಲೆ ಬೀಸಲು ಹಿಂದುಮುಂದು ನೋಡಬೇಡಿ” ಎಂಬ ಮಾತುಗಳು ನಮ್ಮ ಕಿವಿಗೆ ಬಿದ್ದು ನಮಗೆಲ್ಲ ಭಯಮಿಶ್ರಿತ ಕುತೂಹಲ. ಯಾರು ಅವರೆಂದರೆ? ಏಕೆ ಅವರ ಮೇಲೆ ದಂಡವನ್ನು ಬೀಸಬೇಕು? ಇತ್ಯಾದಿಯಾಗಿ ಆಗ ಶಾಲೆ ಹುಡುಗರಾಗಿದ್ದ ನಮ್ಮಲ್ಲಿ ಗೊಂದಲಗಳಿದ್ದವು.

ಏಳೆಂಟು ವರ್ಷಗಳ ಹಿಂದೆ ಪರಿಚಯದವರೊಬ್ಬರ ಮಗನೊಬ್ಬ ಈ ಆರ್.ಎಸ್.ಎಸ್. ನವರು ನಡೆಸುತ್ತಿದ್ದ ರೆಸಿಡೆನ್ಸಿ ಶಾಲೆಯೊಂದರಲ್ಲಿ ಓದುತ್ತಿದ್ದ. ಅವನನ್ನು “ಏನಯ್ಯ ಓದುವುದನ್ನು ಬಿಟ್ಟು ಮತ್ತೇನನ್ನು ಕಲಿಯುತ್ತಿದ್ದೀಯ” ಎಂದು ಕುತೂಹಲದಿಂದಲೇ ಕೇಳಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗ ಹೇಳಿದ್ದು” ನಮಗೆಲ್ಲ ಕವಾಯತನ್ನು, ಲಾಠೀ ಬೀಸುವುದನ್ನು, ಅವರೇನಾದರು ಎದುರಿಗೆ ಬಂದರೆ ಸರಿಯಾಗಿ ಲಾಠಿ ತಿರುಗಿಸಿ ಹೇಗೆ ಬೀಸಬೇಕು ಎಂದು ಕಲಿಯುತ್ತಿದ್ದೇನೆ.”

ಮೇಲಿನೆರೆಡು ಘಟನೆಗಳ ಅಂತರ ಸುಮಾರು 25 ರಿಂದ 27 ವರ್ಷಗಳು. ಎರಡು ತಲೆಮಾರು ಬದಲಾಗಿದೆ. ಆದರೆ ಸಂಘಟನೆ ಬದಲಾಗಿಲ್ಲ. ಆರ್.ಎಸ್.ಎಸ್. ಹಾಗೆಯೇ ಇದೆ.  ಚಿಂತನೆಗಳು ಬದಲಾಗಿಲ್ಲ. ಅಗ ಅವರೆಂದರೆ ಮುಸ್ಲಿಮರು. ಈಗಲೂ ಅವರೆಂದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು. ಇನ್ನೂ ನಾವು 20ರ ದಶಕಕ್ಕೆ ಹೋದರೂ ಕೂಡ ಅಷ್ಟೆ ಆಗ ಸಾವರ್ಕರ್ ಬರೆದ  “ಹಿಂದೂ ಅಂದರೆ ಯಾರು”?  ಎನ್ನುವ ವ್ಯಾಖ್ಯಾನದಿಂದ ಶುರುವಾದ ಇವರ ಹಿಂದೂ ಧರ್ಮದ ಮೇಲಿನ ಉಗ್ರಾಭಿಮಾನ ಹಾಗೂ ಪರಧರ್ಮದ ಬಗೆಗಿನ ಇನ್ನಿಲ್ಲದ ದ್ವೇಷದ ವಿಷವಾಹಿನಿ 80 ವರ್ಷಗಳ ನಂತರವೂ ಇಂದಿಗೂ ಹರಿಯುತ್ತಿದೆ ತಲೆಮಾರಿನಿಂದ ತಲೆಮಾರಿಗೆ. ಅಂತಹ ತೀವ್ರವಾದ ಸ್ವಾತಂತ್ರ್ಯ ಸಂಗ್ರಾಮದ ಆಂದೋಲನ ನಡುವೆಯೂ 1927 ರಲ್ಲಿ ನಾಗಪುರದಲ್ಲಿ  “ಹಿಂದೂ ಡಾಕ್ಟರ್ ಒಬ್ಬರ ಮನೆಯ ಮೇಲೆ ಯಾರೋ ಕೆಲವರು ಅಲ್ಲಾಹೋ ಅಕ್ಬರ್ ಎಂದು ಕೂಗುತ್ತಾ ಕಲ್ಲು ತೂರಾಟ ನದೆಸಿದರು” ಎಂದು ಗುಲ್ಲೆಬ್ಬಿಸಿ ಕೋಮುಗಲಭೆಯನ್ನು ಹುಟ್ಟು ಹಾಕುವುದರಿಂದ ಹಿಡಿದು 2012 ರ ಸಿಂಧಗಿಯಲ್ಲಿ ಶ್ರೀರಾಮ ಸೇನೆಯು ಪಾಕಿಸ್ತಾನ ಬಾವುಟ ಹಾರಿಸಿ ಮತ್ತೊಂದು ಕೋಮುಗಲಭೆಗಳಿಗೆ ಸಂಚು ರೂಪಿಸುವವರೆಗೂ 85 ವರ್ಷಗಳ ಇವರ ಈ ಕರ್ಮಕಾಂಡದ ಇತಿಹಾಸವಿದೆ. ತಮ್ಮ ಅನೇಕ ಚಿಂತನ ಮಂಥನ ಕಾರ್ಯಕ್ರಮಗಳಲ್ಲಿ, ಬೈಠಕ್ ಗಳಲ್ಲಿ ಇವರೆಂದೂ ಸಮಕಾಲೀನ ವಿಷಯಗಳನ್ನಾಗಲಿ, ಚಿಕಿತ್ಸಕ ದೃಷ್ಟಿಕೋನಗಳ ಸಂವಾದಗಳಾಗಲಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬಗೆಗೆ ಶಿಕ್ಷಣವಾಗಲಿ ಕಳೆದ 80 ವರ್ಷಗಳ ಆರ್.ಎಸ್.ಎಸ್. ಇತಿಹಾಸದಲ್ಲಿ ನಡೆದ ಪುರಾವೆಯೇ ಇಲ್ಲ. ಸಂಪೂರ್ಣ ಪುರುಷ ಕೇಂದ್ರಿತ ಸಂಘಟನೆಯನ್ನಾಗಿ ರೂಪಿಸಿಕೊಂಡಿರುವ ಆರ್.ಎಸ್.ಎಸ್. ಎಂದು ಪ್ರಗತಿಪರವಾಗಿ ಕ್ಷೀಣ ಧ್ವನಿಯನ್ನು ಹೊರಡಿಸುವ ಯಾವ ಅವಕಾಶವನ್ನೂ ಅದು ನೀಡಿಲ್ಲ. ಅಲ್ಲಿ ಪ್ರಶ್ನೆಗಳೇ ಇಲ್ಲ. ಇರುವುದು ಒಂದೇ ಅದು ಕೇವಲ ಹಿಂದೂಗಳನ್ನೊಳಗೊಂಡ ಆಖಂಡ ಭಾರತದ ಮಂತ್ರ ಜಪ. ಜಾತಿ ವಿನಾಶದ ಮಾತು ಬಿಡಿ ಅದು ದೂರ ಉಳಿಯಿತು, ಇಂದಿಗೂ ತಮ್ಮ ಹಿಂದೂ ಧರ್ಮದ ಅಡಿಯಲ್ಲಿ ಜರುಗುತ್ತಿರುವ ಬಾಲ್ಯ ವಿವಾಹಗಳು, ಮಡೆ ಸ್ನಾನದಂತಹ ಮೂಢ ಆಚರಣೆಯ ಬಗ್ಗೆ, ಅಂತರ್ಜಾತಿ ವಿವಾಹಿತರನ್ನು ಮರ್ಯಾದೆಯ ಹೆಸರಿನಲ್ಲಿ ಸಾಯುಸುತ್ತಿರವುದರ ಬಗೆಗೆ  ಯಾವ ಆರ್.ಎಸ್.ಎಸ್. ಸ್ವಯಂಸೇವಕರೂ, ಮುಖಂಡರೂ ಬಾಯಿಬಿಟ್ಟಿಲ್ಲ. ಟೀಕಿಸಿಲ್ಲ. ಇದು ಇವರ ಹಿಂದೂ ಧರ್ಮದ ಪುನರುತ್ಥಾನ ಪರಿ!! ಇದೇ ಜನ ಸಮಯ ಸಿಕ್ಕಾಗಲೆಲ್ಲ ಶಾಬಾನು ಪ್ರಕರಣ, ಇಸ್ಲಾಂನ ಮೌಢಾಚರಣೆಗಳು, ಅಲ್ಲಿನ ಬುರ್ಖಾ ಪದ್ಧತಿಗಳ ಬಗ್ಗೆ ಪುಂಖಾನುಪಂಖವಾಗಿ ಕೂಗುತ್ತಿರುತ್ತಾರೆ.

ಇದು ಇವರ ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೆ ಬೇರೆಯವರ ಎಲೆಯಲ್ಲಿ ನೊಣ ಓಡಿಸುವ ಶೈಲಿ. ಇದರ ಜೊತೆಗೆ  “ತಂದೆ ತಾಯಿ, ಗೌರವಿಸಿ, ಪರಂಪರೆ ಶ್ರೇಷ್ಟತೆಯನ್ನು ಮರೆಯಬೇಡಿ ಸಂಪ್ರದಾಯ ನಮ್ಮ ಬದುಕಿನ ತಳಪಾಯ” ಎನ್ನುವ ಸಿಹಿಲೇಪಿತ ಮಾತುಗಳ ಮೂಲಕ ಮುಗ್ಧ ಮೋಡಿಗೊಳಗಾದ ತಂದೆ ತಾಯಿಗಳು ಅಲ್ಲಿ ತಮ್ಮ ಮಕ್ಕಳು ಶಿಷ್ಟವಂತರಾಗಿಯೂ, ಸಹನಶೀಲರಾಗಿಯೂ ರೂಪಿತಗೊಳ್ಳುತ್ತಾರೆ ಎನ್ನುವ ಕನಸಿನೊಂದಿಗೆ ಆರ್.ಎಸ್.ಎಸ್. ಸಂಪರ್ಕಕ್ಕೆ ಬಿಡುತ್ತಾರೆ. ನಂತರ ಈ  ತಮ್ಮೆಲ್ಲ ಮೇಲಿನ ದ್ವೇಷಪೂರಿತ ಚಿಂತನೆಗಳನ್ನು ಬಹುಸಂಖ್ಯಾತ ಹಿಂದೂಗಳಲ್ಲಿ ಸದಾಕಾಲ ತುಂಬಿರುವಂತೆ ಮಾಡಲು ಇವರು ಬಳಸಿಕೊಳ್ಳುವುದು ಕಡಲಾಚೆಯಿಂದ ಬಂದ ಮೊಘಲರ ಆಕ್ರಮಣ. ಇದು ಕೇವಲ ರಾಜ್ಯ ವಿಸ್ತರಣೆ, ಅಧಿಕಾರ ಕಬಳಿಕೆಯ ಭಾಗವಾಗಿದ್ದ  ಈ ಯುದ್ದಗಳನ್ನು ಅಸಹಿಷ್ಣತೆ ಹಾಗೂ ಮುಸ್ಲಿಂ ದ್ವೇಷದ ಚಿಂತನೆಗಳನ್ನಾಗಿ ರೂಪಿಸಿರುವುದರಿಂದ ಶುರುವಾಗಿ ನಂತರ ದೇಶಾಭಿಮಾನದ ಹೆಸರಿನಲ್ಲಿ ಪಾಕಿಸ್ತಾನವನ್ನು ನೆಪ ಮಾಡಿಕೊಂಡು ಎರಡು ಧರ್ಮಗಳ ಮಧ್ಯೆ ಹುಟ್ಟು ಹಾಕಿದ ಕಂದಕಗಳು, ಕೊನೆಗೆ ಗುಜರಾತ್ ನಲ್ಲಿ ಮುಸ್ಲಿಂರ ಹತ್ಯಾಕಾಂಡಕ್ಕೆ ತಲುಪಿ ಇದರ ರೂವಾರಿ ನರೇಂದ್ರ ಮೋದಿ “ಮಿಯ್ಯಾ ಮುಶ್ರಾಫ್, ಮೇಡಮ್ ಮೇರಿಅಮ್, ಮೈಖೆಲ್ ಲಿಂಗ್ಡೋ” ಎಂದು ಅತ್ಯಂತ ಕ್ರೂರವಾಗಿ ಮಾತನಾಡುವಷ್ಟರ ಮಟ್ಟಿಗೆ ಬಂದು ತಲುಪಿದೆ.

ಈ ಆರ್.ಎಸ್.ಎಸ್. ಗುಂಪಿಗೆ ಈ ಮುಸ್ಲಿಂದ್ವೇಷದ ಮೂಲಭೂತ ಕಾರಣ ಇವರಿಗೆ ತಮ್ಮ ಹಿಂದೂ ಧರ್ಮದ ಮೇಲಿರುವ ಅತ್ಯಂತ ಅಪಾಯಕಾರಿಯಾದ, ಆತಂಕಕಾರಿಯಾದ, ಜೀವವಿರೋಧಿಯಾದ ಅತ್ಯುಗ್ರ ಅಭಿಮಾನ. ಈ ಸದರಿ ಧರ್ಮದಲ್ಲಿ ಅಂತರ್ಗತವಾಗಿರುವ ಜಾತೀಯತೆಯ ಕ್ರೌರ್ಯದ ಬಗ್ಗೆ, ತಳ ಸಮುದಾಯಗಳ ಶೋಷಣೆಯ ಬಗ್ಗೆ ಈ ಆರ್.ಎಸ್.ಎಸ್. ನವರಿಗೆ ಇರುವ ಅಪಾರ ನಂಬುಗೆ. ಪುರೋಹಿತಶಾಹಿಗಳ ಅಮಾನವೀಯ ಚಿಂತನೆಗಳ ಬಗ್ಗೆ ಇನ್ನಿಲ್ಲದ ಭಕ್ತಿ. ಸಾರ್ವಜನಿಕ ಜೀವನದಲ್ಲಿ ಧಾರ್ಮಿಕತೆಯನ್ನು ಬಳಸುವುದಕ್ಕೆ ಇನ್ನಿಲ್ಲದ ಉತ್ಸಾಹ, ಆವೇಶಗಳನ್ನು ತೋರುವ ಆರೆಸಸ್ ಅದಕ್ಕಾಗಿ ಅವರು ಆಶ್ರಯಿಸುವುದು ವೇದ,ಪುರಾಣಗಳನ್ನು, ಅಲ್ಲಿಂದ ಅವರು ಹೆಕ್ಕಿಕೊಳ್ಳುವುದು ಮನುವಾದಿ, ಸನಾತನ ಧರ್ಮದ ಹುಸಿ ಶ್ರೇಷ್ಟತೆಯನ್ನು ಸಾರುವ ಅಮಾನವೀಯ ವೈದಿಕ ಚಿಂತನೆಗಳನ್ನು. ಭ್ರಾಹ್ಮಣ ಮಠಗಳನ್ನು. ಆದರೆ  ತಮ್ಮ ಜೀವನವನ್ನೇ ಪ್ರಯೋಗವನ್ನಾಗಿ ಮಾಡಿಕೊಂಡು ಧಾರ್ಮಿಕತೆಯನ್ನು ಬಳಸಿ ಅಧ್ಯಾತ್ಮದ ವಿವಿಧ ಮಜಲುಗಳನ್ನು, ಅದೇ ಅಧ್ಯಾತ್ಮವನ್ನು ಬಳಸಿ ಸತ್ಯದ ವಿವಿಧ ಮುಖಗಳನ್ನು ನಿರಂತರವಾಗಿ ಶೋಧಿಸಿದ “ರಾಮಕೃಷ್ಣ ಪರಮಹಂಸ”ರನ್ನು ಆರ್.ಎಸ್.ಎಸ್. ನವರು ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಏಕೆಂದರೆ ಪ್ರತಿಯೊಂದು ಚಿಂತನೆಗಳೂ ಸತ್ಯಶೋಧನೆಗೊಳಪಡಲೇಬೇಕು, ನಿಕಷನಕ್ಕೆ, ಪ್ರಯೋಗಗಳಿಗೆ ಒಳಪಟ್ಟು ಆ ಪ್ರಯೋಗದಲ್ಲಿ ಬೆಂದು ಹೊರಬಂದಂತಹ ತತ್ವಮೀಮಾಂಸೆಯನ್ನು ಮಾತ್ರ ರಾಮಕೃಷ್ಣ ಪರಮಹಂಸರು ಒಪ್ಪಿಕೊಳ್ಳುತ್ತಿದ್ದರು. ಇದಕ್ಕಾಗಿಯೇ ಅಲ್ಲವೆ ಅನೇಕ ಪ್ರಯೋಗಗಳ ನಂತರ ಪರಮಹಂಸರು ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಗಳನ್ನು ಕೂಡ ಆಚರಿಸುತ್ತಿದ್ದರು. ಇವರು ಹೇಳುತ್ತಿದ್ದುದು ಎಲ್ಲಾ ದೇವರು ಒಂದೇ. ಇದೆಲ್ಲ ಆರೆಸಸ್ ನವರಿಗೆ ಅರಗಿಸಿಕೊಳ್ಳಲೂ ಸಾಧ್ಯವಾಗದು. ಇವರು ಪರಮಹಂಸರ ಈ ಸಂಕೀರ್ಣತೆಯ ಆಧ್ಯಾತ್ಮವನ್ನು ಮುಟ್ಟದೆ ಪರಮಹಂಸರ ಪ್ರಿಯ ಶಿಷ್ಯರಾದ ವಿವೇಕಾನಂದರನ್ನು ಗಟ್ಟಿಯಾಗಿ ಹಿಡಿದುಕೊಂಡರು. ವಿವೇಕಾನಂದರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಸರ್ವಧರ್ಮ ಸಮಾನತೆ, ಭ್ರಾತೃತ್ವ ಮನೋಧರ್ಮಕ್ಕೆ ಸಂಘಪರಿವಾರದವರು ಸಂಪೂರ್ಣ ತಿಲಾಂಜಲಿಯನ್ನು ಕೊಟ್ಟು, ವಿವೇಕಾನಂದರು ಪ್ರತಿಪಾದಿಸಿದ ನ್ಯಾಯ,ನೀತಿಗಳನ್ನೊಳಗೊಂಡ, ಮಾನವೀಯತೆಯ ದೇಶಪ್ರೇಮವನ್ನು ಅತ್ಯಂತ ಋಣಾತ್ಮವಾಗಿ ಬಳಸಿಕೊಂಡು ವಿವೇಕಾನಂದರ ಜೀವಪರ ಚಿಂತನೆಗಳನ್ನೇ ಅಪಮೌಲ್ಯಗೊಳಸಿದರು. ಇಂದು ಬಲಪಂಥೀಯರು ಮಾನವತಾವಾದಿ ವಿವೇಕಾನಂದರನ್ನು ತಮಗೆ ಬೇಕಾದ ಹಾಗೆ ಒಗ್ಗಿಸಿಕೊಂಡ ರೀತಿನೀತಿಗಳೇ ಖಂಡನೆಗೆ, ತಿರಸ್ಕಾರಕ್ಕೆ ಅರ್ಹವಾದವುಗಳು. ಕಳೆದ ಅನೇಕ ದಶಕಗಳಿಂದ ಪ್ರಗತಿಪರ ಚಿಂತಕರು ಇದನ್ನು ಸಾಕ್ಷಿ ಸಮೇತ ಹೇಳುತ್ತಾ ಬಂದಿದ್ದಾರೆ.

ಆದರೆ ಬದಲಾದ ಕಾಲಘಟ್ಟದಲ್ಲಿ, ದೇಶ ಸ್ವಂತಂತ್ರಗೊಂಡನಂತರ ನೆಹರೂ ಹಾಗೂ ಅಂಬೇಡ್ಕರ್ ರವರು ಭಾರತ ದೇಶವನ್ನು ಜಾತ್ಯಾತೀತ, ಸೆಕ್ಯುಲರ್ ರಾಷ್ಟ್ರವನ್ನಾಗಿಯೂ, ಇಲ್ಲಿ ಸರ್ವಧರ್ಮಗಳಿಗೆ ಸಮಾನ ಅವಕಾಶವನ್ನು ನೀಡಿ ಸಂವಿಧಾನವೇ ಈ ದೇಶದ ಅಧಿಕೃತ ಕಾನೂನನ್ನಾಗಿಯೂ, ಇದಕ್ಕೆ ಸದಾಕಾಲ ಕಾವಲಾಗಿ ನ್ಯಾಯಾಂಗ ಹಾಗೂ ಶಾಸಕಾಂಗ ಇರುವಂತೆ ಶಾಸನವನ್ನು ರೂಪಿಸಿ ಭಾರತವನ್ನು ಒಂದು ಮಾದರಿ ಗಣತಂತ್ರ ದೇಶವನ್ನಾಗಿಯೂ ರೂಪಿಸಿಬಿಟ್ಟರು. ಇದು 50ರ ದಶಕದಲ್ಲಿ  ಆರ್.ಎಸ್.ಎಸ್. ಮುಂದಾಳುಗಳಿಗೆ ಇನ್ನಿಲ್ಲದ ಅಘಾತವನ್ನುಂಟುಮಾಡಿತ್ತು. ಅತ್ಯಂತ ಕುತೂಹಲದ ವಿಷಯವೆಂದರೆ ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೂ ನಡೆದ ಕೋಮುಗಲಭೆಗಳಲ್ಲಿ ಆರ್.ಎಸ್.ಎಸ್. ಎಂದೂ ಮುಂಚೂಣಿಯಲ್ಲಿ ಇರಲೇ ಇಲ್ಲ ಹಾಗೂ ಇರುತ್ತಲೂ ಇಲ್ಲ!. ತನ್ನನ್ನು ತಾನು ಸಾಂಸ್ಕ್ರತಿಕ ಸಂಘಟನೆಯಾಗಿ ಮಾತ್ರ ಐಡೆಂಟಿಟಿ ಉಳಿಸಿಕೊಂಡು ತನ್ನ ಎಲ್ಲ ಮೇಲಿನ ಕರ್ಮಠ ಚಿಂತನೆಗಳಿಗೆ,  ಬೌದ್ಧಿಕ  ಪ್ರಚಾರಕ್ಕಾಗಿ ತನ್ನ ಶಾಖಾ ಮಠಗಳನ್ನು ಬಳಸಿಕೊಂಡು ಈ ಅಸಹಿಷ್ಣುತೆಯ ಕರ್ಮಠ ಚಿಂತನೆಗಳನ್ನು ಬಹಿರಂಗವಾಗಿ ವ್ಯವಸ್ಥೆಯಲ್ಲಿ ಪ್ರಯೋಗಿಸಲು ಹಾಗೂ ತಮ್ಮ ಈ ಹಿಂಸಾತ್ಮಕ ಕಾರ್ಯಸಾಧನೆಗಾಗಿ ಇದು ಬಳಸಿಕೊಂಡಿದ್ದು ಶೂದ್ರ ಹಾಗು ಹಿಂದುಳಿದ ಸಮುದಾಯಗಳನ್ನ. ಇದಕ್ಕೆ ಸಾಕ್ಷಿಯಾಗಿ ಸ್ವತಂತ್ರ ಭಾರತದಲ್ಲಿ ಕಳೆದ 64 ವರ್ಷಗಳಲ್ಲಿ ನಡೆದ ಕೋಮುಗಲಭೆಗಳಲ್ಲಿ, ದೊಂಬಿಗಳಲ್ಲಿ ಆರ್.ಎಸ್.ಎಸ್. ಗೆ ಸೇರಿದ ಯಾವುದೇ ಸಂಘ ಪ್ರಚಾರಕನೂ, ಸ್ವಯಂಸೇವಕನೂ ಹಾಗೂ ಸದಸ್ಯನೂ ಆರೋಪಿಯಾಗಿಲ್ಲ ಹಾಗೂ ಯಾವುದೇ ರೀತಿಯ ನ್ಯಾಯಾಂಗ ವಿಚಾರಣೆಗೂ ಒಳಗಾಗಿಲ್ಲ. ಆದರೆ ಇವರ ಬೂಟಾಟಿಕೆಯ, ತಮ್ಮ ಕಾರ್ಯ ಸಾಧನೆಗಾಗಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕುತಂತ್ರಕ್ಕೆ ಬಲಿಯಾದದ್ದು  ಹಿಂದುಳಿದ, ದಲಿತ ಸಮುದಾಯ. ಇವರನ್ನು ತಮ್ಮ ಮಾತೃ ಸಂಘಟನೆ ಭ್ರಾಹ್ಮಣಶಾಹೀ ವ್ಯಕ್ತಿತ್ವದ ಆರ್.ಎಸ್.ಎಸ್. ಒಳಗೆ ಕೂಡ ಬಿಟ್ಟುಕೊಳ್ಳದೆ ಇವರಿಗೋಸ್ಕರ ವಿ.ಎಚ್.ಪಿ., ಬಜರಂಗದಳಗಳನ್ನು ಹುಟ್ಟಿಹಾಕಿ ಇವರ ಈ  ಸಂಘಟನೆಗೆ ಸೇರಿದ ಅಮಾಯಕ ಹಿಂದುಳಿದ ಸಮುದಾಯದ ಹುಡುಗರೆಲ್ಲ ಕಳೆದ 40 ವರ್ಷಗಳಿಂದ ಕೋಮು ಗಲಭೆಗಳಲ್ಲಿ, ನ್ಯಾಯಾಂಗ ವಿಚಾರಣೆಗಳಲ್ಲಿ ಸಿಲುಕಿಕೊಂಡು ನಾಶವಾಗಿದ್ದಾರೆ, ಜೀವ ತೆತ್ತಿದ್ದಾರೆ.

ಇಷ್ಟೆಲ್ಲ ಚರ್ವಿತ ಚರ್ವಣ ವಿಷಯಗಳನ್ನು ಅನಿವಾರ್ಯವಾಗಿ ಈಗಲೂ ವಿಧಿ ಇಲ್ಲದೆ ಪದೇ ಪದೇ ಹೇಳಲೇಬೇಕಾಗಿದೆ. ಏಕೆಂದರೆ:

ಮೊದಲನೆಯದಾಗಿ ಇತ್ತೀಚೆಗೆ ಕಾನೂನಿನ ಕುಣಿಕೆ ಬಲವಾಗುತ್ತಿರುವುದನ್ನು ಗಮನಿಸಿರುವ ಸಂಘ ಪರಿವಾರಕ್ಕೆ, ತಮ್ಮ ಎಂದಿನ ಪರಧರ್ಮ ಅಸಹಿಷ್ಣುತೆಯ, ಅಲ್ಪಸಂಖ್ಯಾತ ದ್ವೇಷದ ಮಾಮೂಲಿ ರಾಗಗಳು ಎಂದಿನ ಪ್ರತಿಫಲವನ್ನು ತಂದುಕೊಡುತ್ತಿಲ್ಲ ಎನ್ನುವುದು ಮನವರಿಕೆಯಾಗತೊಡಗಿದೆ. ತಮ್ಮ ಹಳೇ ಚಾಳಿಯನ್ನು ನೇರವಾಗಿಯೇ ಮುಂದುವರಿಸಿದರೆ ನ್ಯಾಯಾಲಯದ ಕಟಕಟೆ ಹತ್ತುವ ಸಾಧ್ಯತೆಗಳು ಹಿಂದೆಂದಿಗಿಂತಲೂ ಈಗ ಜಾಸ್ತಿ ಎನ್ನುವ ಜ್ನಾನೋದಯ, ಸಾವಿರಾರು ಸುಳ್ಳುಗಳನ್ನು ಹೇಳಿ ತಾವು ಅತ್ಯಂತ ಜತನದಿಂದ ಬೆಳೆಸಿದ ಮಧ್ಯಮವರ್ಗ ಹಾಗು ಅವರ ಮೃದು ಬಲಪಂಥೀಯ ನಿಲುವುಗಳು ಹಾಗೂ ಒಂದು ರೀತಿಯಲ್ಲಿ ಧರ್ಮವನ್ನು ಅಫೀಮಿನಂತೆ ಬಳಸಿ ದೇಶದ ಉದ್ದಗಲಕ್ಕೂ ಹಬ್ಬಿದ್ದ ಅದರ ಅಮಲು ಕ್ರಮೇಣ ಕ್ಷೀಣವಾಗುತ್ತಿದೆಯೇನೋ ಎನ್ನುವ ಆತಂಕ ಈ ಸಂಘ ಪರಿವಾರದ ಯಜಮಾನನಿಗೆ. ಆ ಕಾರಣಕ್ಕಾಗಿಯೇ ಇದನ್ನು ಮುಂಚಿನಂತೆ ನೇರವಾಗಿ ಹಾಡುತ್ತಿಲ್ಲ. ಬದಲಾಗಿ ತಮ್ಮ ಎಂದಿನ ಕುಖ್ಯಾತ ಗುಪ್ತ ಕಾರ್ಯಸೂಚಿಗಳಿಗೆ ಮೊರೆ ಹೋಗಿದ್ದಾರೆ. ಕೆಲವು ಉದಾಹರಣೆಗಳು:

1. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತಮ್ಮ ಕೆಲವು ಅಂಗ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದೂ ಧರ್ಮದ ಮೇಲರಿಯಮೆಯನ್ನು ಸಾರುವ ಪುಸ್ತಕಗಳನ್ನು ವಿತರಿಸಿ ವಿಧ್ಯಾರ್ಥಿಗಳನ್ನು ತಮ್ಮ ಜಾಲಕ್ಕೆ ಬಗ್ಗಿಸುವುದು. ವಿಶ್ವೇಶ್ವರ ಹೆಗಡೆ ಕಾಗೇರಿಯಂತಹ ಪರಮ ಆರ್.ಎಸ್.ಎಸ್. ಸ್ವಯಂಸೇವಕರು ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳುವಂತೆ (ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕಟ್ಟಾ ಆರ್.ಎಸ್.ಎಸ್. ಮುರುಳಿ ಮನೋಹರ ಜೋಶಿಯವರು ಶಿಕ್ಷಣ ಮಂತ್ರಿಯಾಗಿದ್ದರು) ನೋಡಿಕೊಂಡು ಈ ಕಾಗೇರಿಯಂತಹ ಸ್ವಯಂಸೇವಕರ ಕೈಯಲ್ಲಿ ಪದೇ ಪದೇ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತೇವೆ ಎನ್ನುವ ಹೇಳಿಕೆ ಕೊಡಿಸುವುದು, ಶಾಲೆಗಳಲ್ಲಿ ಯೋಗಭ್ಯಾಸವನ್ನು ಪಠ್ಯವನ್ನಾಗಿ ಅಳವಡಿಸಬೇಕೆಂದು ಪದೇ ಪದೇ ರಾಗ ಹಾಡಿಸುವುದು, ಭಗವದ್ಗೀತೆಯ ಅಭಿಯಾನ ಎನ್ನುವ ಮರೆ ಮೋಸದ ಮೂಲಕ ತಮ್ಮ ಪರಧರ್ಮ ದ್ವೇಷದ, ಪುರೋಹಿತಶಾಹಿ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವುದು. ನಂತರ ಸದಾನಂದ ಗೌಡರಂತಹ   ದುರ್ಬಲ ಮುಖ್ಯಮಂತ್ರಿಯ ಮೂಲಕ ಭಗವದ್ಗೀತೆಯ ಪಾಠವನ್ನು ಸರ್ಕಾರೀ ಶಾಲೆಗಳಲ್ಲಿ ಅಳವಡಿಸುತ್ತೇವೆ ಎಂದು ಹೇಳಿಸಿ ಅದರ ಪರಿಣಾಮಗಳನ್ನು ಕಾದು ನೋಡುವುದು, ಹಾಗೂ ಆ ಮೂಲಕ ಒಂದು ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವುದು. ನಂತರ ತಮ್ಮ ರಾಷ್ಟ್ರೋತ್ಥಾನ ಪರಿಷತ್ತಿನ ಮೂಲಕ  “ತಮ್ಮ ಅಖಂಡ ಹಿಂದೂ ಧರ್ಮವನ್ನು”  ಸಾರುವ ಪುಸ್ತಕಗಳನ್ನು ಪಠ್ಯಪುಸ್ತಕಗಳನ್ನಾಗಿ ರೂಪಿಸುವುದು. ಆದರೆ ವೈಚಾರಿಕವಾಗಿ ಅತ್ಯಂತ ಗಟ್ಟಿಯಾಗಿರುವ ಕರ್ನಾಟಕದಂತಹ ನೆಲದಲ್ಲಿ ಇವರ ಈ ಗುಪ್ತ ಕಾರ್ಯಾಚರಣೆಗೆ ಅವಕಾಶವೇ ದೊರೆತಿಲ್ಲ ಹಾಗೂ ಇಲ್ಲಿನ ಪ್ರಗತಿಪರ ಸಂಘಟನೆಗಳು ಅದಕ್ಕೆ ಮುಂದೆಯೂ ಅವಕಾಶ ಕೊಡುವ ಸಾಧ್ಯತೆಗಳೂ ಕಡಿಮೆ. ಇಷ್ಟರ ಮಟ್ಟಿಗೆ ನಮ್ಮ ರಾಜ್ಯ ಇವರ ವಿಷಮಯವಾದ ರೀತಿನೀತಿಗಳಿಂದ ಮುಕ್ತವಾಗಿದೆ.

2.  ಎಂದಿನಂತೆ ಹಳೇ ಬಾಣವಾದ ಗೋಹತ್ಯೆ ನಿಷೇಧವನ್ನು ಇನ್ನಿಲ್ಲದಂತೆ ಉಗ್ರವಾಗಿ ಪ್ರತಿಪಾದಿಸುತ್ತ,(ಈಶ್ವರಪ್ಪರಂತಹ ಹುಂಬ ಶೂದ್ರರ ಮುಖಾಂತರ ಯಾರಾದರೂ ವಿರೋಧಿಸಿದರೆ ನಾಲಿಗೆ ಸೀಳಲಾಗುತ್ತದೆ ಎಂದು ಫತ್ವ ಹೊರಡಿಸುವುದು)  ಇದು ಸಮಾಜದ ಜೀವನ್ಮರಣದ ಪ್ರಶ್ನೆಯನ್ನಾಗಿಸಿ ಇನ್ನಿಲ್ಲದ ವಿಷಮಯ ವಾತಾವರಣ ನಿರ್ಮಿಸುವುದು.

3. ಮತಾಂತರದ ಬಗೆಗಿನ ಉದ್ವೇಗ, ಭಯವನ್ನು ಹುಟ್ಟಿಹಾಕಿ ಈ ಸಿಂಡ್ರೋಮ್ ಜನರಲ್ಲಿ ಸದಾಕಾಲ ನೆಲೆ ನಿಲ್ಲುವಂತೆ ಅನೇಕ ಪುಕಾರುಗಳನ್ನು ಹಬ್ಬಿಸುತ್ತಾ ನಂತರ ಅಲ್ಪ ಸಂಖ್ಯಾತರ ಮೇಲೆ ತಮ್ಮ ಅಂಗ ಸಂಸ್ಥೆಗಳ ಮೂಲಕ ದಬ್ಬಾಳಿಕೆಗಳನ್ನು ಕಾಲಕಾಲಕ್ಕೆ ನಡೆಸುತ್ತಾ ಬರುವುದು ಹಾಗೂ ಈ ಪ್ರಕ್ರಿಯೆ ನಿರಂತರವಾಗಿರುವಂತೆ ನೋಡಿಕೊಳ್ಳುವುದು.

4. ಬಲಪಂಥೀಯ ಪತ್ರಕರ್ತರ ಮೂಲಕ ಯಶಸ್ವಿಯಾಗಿ ಮಾಧ್ಯಮಗಳ ಮೂಲಕ ಹಿಂದೂಗಳ, ಹಿಂದೂ ಧರ್ಮದ ಶ್ರೇಷ್ಟತೆಯ ಹಸೀ ಹಸೀ ಸುಳ್ಳುಗಳನ್ನು ಬಿಟ್ಟೂ ಬಿಡದೆ ಕೂಗುಮಾರಿಯ ರೀತಿಯಲ್ಲಿ ಪುಂಖಾನುಪುಂಖವಾಗಿ ಬರೆಸುತ್ತಾ ಇಲ್ಲಿ ಈ ದೇಶ  ಬದುಕಿರುವುದೇ ಒಂದು ಪವಾಡದಿಂದ ಎನ್ನುವ ಭ್ರಮೆಗಳನ್ನು ಹುಟ್ಟಿಸುವುದು.

ಮೇಲಿನ ಎಲ್ಲಾ ಉದಾಹರಣೆಗಳ ಮೂಲಕ ತಮ್ಮ ಪ್ರೈಜ್ ಕ್ಯಾಚ್ ಆದಂತಹ ಮಧ್ಯಮವರ್ಗ, ಮೇಲ್ಮಧ್ಯಮವರ್ಗ, ಮೇಲ್ಜಾತಿಗಳು, ವರ್ತಕರು ಹೀಗೆ ತಮ್ಮ ಸಹಜ ಅಭಿಮಾನಿಗಳನ್ನು ಮತ್ತೆ ಟ್ರ್ಯಾಪ್ ಮಾಡುವುದು. ಆ ಮೂಲಕ ಬಿಜೆಪಿಗೆ ಮತ್ತೆ ಅಧಿಕಾರದ ಗದ್ದುಗೆಗೆ ಕುಳ್ಳಿರಿಸುವುದು.

ಇಷ್ಟೆಲ್ಲ ಪ್ರತಿಗಾಮಿ ನೀತಿಗಳನ್ನುಳ್ಳ ಆರ್.ಎಸ್.ಎಸ್. ನವರು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಂವಿಧಾನ ಬಾಹಿರವಾದ ಅಧಿಕಾರವನ್ನು ಬಳಸುತ್ತಾರೆ, ಅವರು ತಮ್ಮ ಕೇಶವಕೃಪ, ಗರ್ಭಗುಡಿಗೆ ಜನರಿಂದ, ಜನರಿಗಾಗಿ ಆಯ್ಕೆಗೊಂಡ ಶಾಸಕರನ್ನ, ಮಂತ್ರಿಗಳನ್ನ,ಮುಖ್ಯಮಂತ್ರಿಗಳನ್ನ ಕರೆಸಿಕೊಂಡು ಶಿಷ್ಯಂದಿರಂತೆ ಇವರನ್ನು ನಡೆಸಿಕೊಳ್ಳುತ್ತಾ, ಅನೇಕ ರೀತಿಯ ಸರ್ಕಾರಿ ನಿರ್ಧಾರಗಳಲ್ಲಿ ಹಸ್ತಕ್ಷೇಪಗೊಳಿಸುತ್ತಾ ಪ್ರಜಾಪ್ರಭುತ್ವದ ಮೂಲ ನೀತಿಗಳನ್ನೇ ನಿರ್ನಾಮ ಮಾಡುತ್ತಾರೆ. ನಮ್ಮ ಕರ್ನಾಟಕದಲ್ಲಿ ಈಗ ಕಳೆದ ಕೆಲವು ವರ್ಷಗಳಿಂದ ಅದರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಆರ್.ಎಸ್.ಎಸ್. ಹಲವಾರು ಬಾರಿ ಕಿಂಗ್ ಮೇಕರ್ ಪಾತ್ರ ವಹಿಸುತ್ತಿರುವುದೂ, ಅನೇಕ ವೇಳೆ ಆಡಳಿತದಲ್ಲಿ ತನ್ನ ಹಸ್ತಕ್ಷೇಪವನ್ನು ನಡೆಸುತ್ತಾ ಆ ಮೂಲಕ ತನ್ನ ಪ್ರಭಾವ ಬಳಸಿಕೊಂಡು ತನ್ನ ಅಂಗ ಸಂಸ್ಥೆಗಳು ನಡೆಸುತ್ತಿರುವ ಕೋಮುವಾದಿ ಶಿಕ್ಷಣಕ್ಕೆ ಭರಪೂರು ಅನುದಾನವನ್ನು ಪಡೆದುಕೊಳ್ಳುತ್ತಾ, ಕಳೆದ 3 ವರ್ಷಗಳಲ್ಲಿ ಈ ಭ್ರಷ್ಟ ಬಿಜೆಪಿ ಸರ್ಕಾರ ಸದಾಕಾಲ ಒಂದಿಲ್ಲೊಂದು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಾಗ ತಾನು ಸಂಧಾನಕಾರನಾಗಿಯೂ  ಭಾಗವಹಿಸುತ್ತಾ ತನ್ನ ಸುತ್ತ ಒಂದು ಪ್ರಭಾವಳಿಯನ್ನು ನಿರ್ಮಿಸಿಕೊಂಡಿರುವುದೂ, ಯಾವ ಯಾವ ಶಾಸಕರು ಮಂತ್ರಿಯಾಗಬೇಕೆಂದು ಅವಶ್ಯಕತೆ ಇದ್ದರೆ ಹೇಳುತ್ತೇನೆ ಎನ್ನುವಂತಹ ಪ್ರಭಾವಳಿಗಳ ಮೂಲಕ ತನ್ನ ಕೇಶವ ಕೃಪದಲ್ಲಿ ಆಡಳಿತದ ರೀತಿನೀತಿಗಳನ್ನು ರೂಪಿಸುತ್ತದೆ. ಈ ಮೂಲಕ ಬಿಜೆಪಿ ಸರ್ಕಾರದ, ಮಂತ್ರಿಮಂಡಲದ ಎಲ್ಲಾ ನಿರ್ಣಯಗಳೂ ತನ್ನ ಕಣ್ಣಳತೆಯಲ್ಲಿ ಜರಗುವ ಒಂದು ಸ್ವಾರ್ಥ ವ್ಯವಸ್ಥೆಯನ್ನು,ತನ್ನ ಸುತ್ತಲೂ ಇನ್ನಿಲ್ಲದ ಪ್ರಭಾವಳಿಯನ್ನು ನಿರ್ಮಿಸಿಕೊಳ್ಳುತ್ತದೆ. ಇವರು ಈ ಮೂಲಕ ಸಂವಿಧಾನದಡಿಯಲ್ಲಿ  ಆಯ್ಕೆಗೊಂಡ ಒಂದು ಪ್ರಜಾಸತ್ತಾತ್ಮಕ ಸರ್ಕಾರವನ್ನು ತಮ್ಮ ಕಿರುಬೆರಳಿನಲ್ಲಿ ಕುಣಿಸುತ್ತ ತಮ್ಮ ಸಂವಿಧಾನ ವಿರೋಧಿ ಧೋರಣೆಯನ್ನು ಯಶಸ್ವಿಯಾಗಿ ನಡೆಸಿಕೊಳ್ಳುತ್ತಾರೆ.

ಅತ್ಯಂತ ಖಂಡನಾರ್ಹವಾದ ಇಂತಹ ನಡುವಳಿಕೆಗಳು ಸಂವಿಧಾನದ ಆಶಯಗಳನ್ನೇ ನಾಶಗೊಳಿಸುತ್ತವೆ. ಇದರ ದುರಂತ ಅಧ್ಯಾಯವೇ ತಾವು ರಾಜ್ಯದ ಎಲ್ಲಾ ಜಾತಿಯ, ಎಲ್ಲಾ ಧರ್ಮದ ಜನರಿಂದ ಆಯ್ಕೆಯಾಗಿದ್ದರಿಂದ, ತಾವೂ ಉತ್ತರಿಸಬೇಕಾಗಿದ್ದರೆ ಪ್ರಜೆಗಳಿಗೆ ಮಾತ್ರ, ತಾವು ತಮ್ಮ ಭಿನ್ನಪ್ರಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳಬೇಕಾಗಿರುವುದು ಅಧಿಕಾರದಲ್ಲಿರುವ ತಮ್ಮ ಪಕ್ಷದ ಮಿತಿಯೊಳಗೆ ಎನ್ನುವ ಪ್ರಜಾಪ್ರಭುತ್ವದ ಮೂಲ ಮಂತ್ರಕ್ಕೆ ಸಂಪೂರ್ಣ ತಿಲಾಂಜಲಿಯಿಟ್ಟು  ಈ ಬಿಜೆಪಿ ಶಾಸಕರು ಹಾಗು ಮಂತ್ರಿಗಳು ಹಾಗೂ  ಮುಖ್ಯಮಂತ್ರಿಗಳು ಸೀನಿದ್ದಕ್ಕೂ, ಕೆಮ್ಮಿದ್ದಕ್ಕೆಲ್ಲ ಆರ್.ಎಸ್.ಎಸ್. ಕೇಶವಕೃಪಕ್ಕೆ ಎಡೆತಾಕುತ್ತಿರುವುದನ್ನು ನಾವೆಲ್ಲ ತೀವ್ರವಾಗಿ ವಿರೋಧಿಸಲೇಬೇಕಾಗುತ್ತದೆ. ಇವರೆಲ್ಲರ ಈ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಯನ್ನು ಪ್ರಶ್ನಿಸಿಲೇಬೇಕಾಗಿದೆ.

ಸಾಕ್ರೆಟೀಸನಿಗೇ ಸಚ್ಚಾರಿತ್ರ್ಯ ಗೊತ್ತಿಲ್ಲವೆಂದಮೇಲೆ ನಮಗಿನ್ಯಾತಕ್ಕೆ ಅದು!

-ಬಿ. ಶ್ರೀಪಾದ್ ಭಟ್

“The world is a dangerous place not because of those who do evil, but because of those who look on and do nothing.” -Albert Einstein.

“ಕೆಟ್ಟದ್ದನ್ನು, ಕೆಟ್ಟವರನ್ನು ಹುಡುಕಲು ಹೊರಟ ನನಗೆ ಕೆಟ್ಟದ್ದು, ಕೆಟ್ಟವರಾರೂ ಸಿಗಲಿಲ್ಲ, ನನ್ನ ಮನಸ್ಸನ್ನೇ ಬಿಚ್ಚಿಕೊಂಡಾಗ ನನಗಿಂತಾ ಕೆಟ್ಟವರು ಯಾರೂ ಇರಲಿಲ್ಲ.” -ಸಂತ ಕಬೀರ್.

ಮೆನೊ: ಪ್ರಿಯ ಸಾಕ್ರೆಟೀಸ್, ಸಚ್ಚಾರಿತ್ರ್ಯವನ್ನು ಬೋಧಿಸಲು ಸಾಧ್ಯವೆ? ಅಥವ ಬೋಧನೆಯ ಮೂಲಕವಲ್ಲದೆ ಆಚರಣೆಯ ಮೂಲಕ ಅದನ್ನು ಸಾಧಿಸಬಹುದೇ? ಇಲ್ಲವೆ ಮನುಷ್ಯ ಇವೆರಡರಿಂದಲೂ ಅಲ್ಲದೆ ನಿಸರ್ಗದಿಂದಲೇ ಅದನ್ನು ಪಡೆಯಬೇಕೆ ಎಂಬುದನ್ನು ನನಗೆ ತಿಳಿಸುತ್ತೀಯ?
ಸಾಕ್ರೆಟೀಸ್: ಸಚ್ಚಾರಿತ್ರ್ಯವನ್ನು ಬೋಧಿಸಬಹುದೇ ಇಲ್ಲವೆ ಎಂದು ನಾನು ಬಲ್ಲೆ ಎಂಬುದು ನಿನಗರಿವಾದರೆ ನೀನು ಖುಷಿಪಡಬಹುದು…. ಆದರೆ ಸಚ್ಚಾರಿತ್ರ್ಯವನ್ನು ಬೋಧಿಸಬಹುದೇ ಇಲ್ಲವೆ ಎಂಬುದು ನನಗೆ ಈವರೆಗೆ ತಿಳಿಯದು, ಮಾತ್ರವಲ್ಲ ಸಚ್ಚಾರಿತ್ರ್ಯವೆಂದರೇನು ಎಂಬುದೇ ಅರಿಯದು.
-ಕೇಶವ ಮಳಗಿ ಸಂಪಾದಿತ “ಸಂಕಥನ” ಪುಸ್ತಕದಿಂದ.

“ಆ ಓಲಗ ಯಾರ ಸಾವನ್ನು, ನೋವನ್ನು, ಅನ್ಯಾಯವನ್ನು, ಯಾವ ಮಾಯವಾದ ಕನಸು, ಕ್ರಿಯಾಶೀಲತೆಯನ್ನು, ಯಾವ ಭ್ರಷ್ಟತೆ, ಹುಂಬುತನವನ್ನು, ಯಾವ ದ್ವೀಪವನ್ನು, ಸ್ವಾರ್ಥದ ಪರಿಣಾಮವನ್ನು ಸೂಚಿಸುತ್ತದೆ ? ಕೋಟ್ಯಾಂತರ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಬಂದ ರಾಜಕಾರಣಿ ತನ್ನ ಗೆಲುವಿನ ಬಗ್ಗೆ ಹೆಮ್ಮೆ ಪಡುತ್ತಾನೆ. ಆತ ತನ್ನ ಹಣದಿಂದ ಬಿತ್ತಿದ ವಿಷಬೀಜ ಅವನಿಗೆ ಕಾಣಿಸುವುದೇ ಇಲ್ಲ. ಆದರೆ ಆತ ತನ್ನ ಗೆಲುವನ್ನು ಸೋಲು ಎಂದು ತಿಳಿಯುವ ಕಾಲ ದೂರ ಇರುವುದಿಲ್ಲ. ಆತನ ವಿಷಬೀಜದಿಂದ ಬೆಳೆದ ಕಪ್ಪು ವ್ಯಕ್ತಿಗಳು, ಕರಾಳ ಕೀಟಗಳು ಅತನನ್ನು ಬೆನ್ನಟ್ಟತೊಡಗುತ್ತವೆ, ವಿಚಿತ್ರ ಸದ್ದುಗಳನ್ನು ಮಾಡತೊಡಗುತ್ತವೆ, ತನ್ನ ಸುತ್ತ ಅನ್ಯಾಯವನ್ನು ಬೆಳೆಸತೊಡಗುತ್ತವೆ.”
– ಪಿ.ಲಂಕೇಶ್ ( 1985ರಲ್ಲಿ ಬರೆದ ಒಂದು ಅದ್ಭುತ ಟೀಕೆ ಟಿಪ್ಪಣಿ)

ಈ ಯಡಿಯೂರಪ್ಪ ಹಾಗೂ ಸಂಘಪರಿವಾರದವರು ನಿಜಕ್ಕೂ ಸಾಕ್ರೆಟೀಸನನ್ನು ಖುಣಾತ್ಮಕವಾಗಿ ಅರ್ಥಮಾಡಿಕೊಂಡಂತಿದೆ. ಅಲ್ಲವೇ ಮತ್ತೆ !! ಸಾಕ್ರೆಟೀಸನಿಗೇ ಸಚ್ಚಾರಿತ್ರ್ಯ ಗೊತ್ತಿಲ್ಲವೆಂದಮೇಲೆ ನಮಗಿನ್ಯಾತಕ್ಕೆ ಅದು!!! ಎಂದು ತಲೆ ಹಾರಿಸುತ್ತಾ ಈ ರಾಜ್ಯದ ರಾಜಕೀಯವನ್ನು, ಸಾಮಾಜಿಕತೆಯನ್ನು ನೈತಿಕವಾಗಿ ಸಂಪೂರ್ಣವಾಗಿ ನೆಲಕಚ್ಚಿಸಿದ್ದರೂ ಏನೂ ಆಗಿಲ್ಲವೆಂಬಂತೆ, ಮುಖದ ಮೇಲೆ ಉಗುಳು ಹನಿಗಳು ಬಿದ್ದರೂ ಅದು ಮಳೆ ಹನಿಗಳೆಂದು, ಹಾಗೆಯೇ ಜನರನ್ನು ನಂಬಿಸುತ್ತಾ, ಇನ್ನು ನಮ್ಮ ಬಹುಪಾಲು ಮಾಧ್ಯಮಗಳು ಕಬೀರನಂತೆ ಹುಡುಕಲೂ, ಚಿಂತಿಸಲೂ ಹೊರಡದೆ ಸಮಾಜದಲ್ಲಿನ ಕೆಟ್ಟದನ್ನು ಕೇವಲ ರೋಚಕತೆಗಾಗಿ ಮುಖಪುಟದಲ್ಲಿ ಅಚ್ಚುಹಾಕಿ ತಮ್ಮ ಮನಸ್ಸುಗಳನ್ನು ಮಾತ್ರ (ಲಂಕೇಶ್ ರವರು ಸದಾಕಾಲ ತಮ್ಮೊಳಗೆ ಜೀವಂತವಾಗಿಟ್ಟುಕೊಂಡಿದ್ದ ಆತ್ಮದ ಸೊಲ್ಲನ್ನು) ಬಿಚ್ಚಲು ನಿರಾಕರಿಸಿ ತಮ್ಮನ್ನು ತಾವು “moral police” ಎಂಬಂತೆ ಭ್ರಮಿಸುತ್ತಾ ಮಿಂಚುತ್ತಿದ್ದಾರೆ.

ಇನ್ನು ಪ್ರಜ್ಞಾವಂತರಾದ ನಾವೆಲ್ಲ ವ್ಯವಸ್ಥೆಯಲ್ಲಿನ ಕೊಳಕುಗಳನ್ನು, ಮೌಡ್ಯವನ್ನು, ರಾಜಕೀಯ ಅಧಃಪತನವನ್ನೂ ನೋಡುತ್ತ ಅದಕ್ಕೆ ಪ್ರತಿಕ್ರಿಯೆಯಾಗಿ, ಪ್ರತಿಭಟನಾತ್ಮಕವಾಗಿ ಯಾವುದೇ ಕ್ರಿಯಾತ್ಮಕ, ವೈಚಾರಿಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೆ ಈ ದುರಂತದ ಸರಣಿಗಳಿಗೆ ನಮ್ಮ ಪಾಲನ್ನೂ ಸೇರಿಸುತ್ತಿದ್ದೇವೆ. ಆದರೆ ಸಂಘಪರಿವಾರದ “ಅವರಿಗೆ” ಸರಿಯಾಗಿ ಪಾಠಕಲಿಸುತ್ತೇವೆ ಎನ್ನುವ ಒಂದಂಶದ ಕಾರ್ಯಕ್ರಮದ ಸುಳಿಯಿಂದ ಆತ್ಮಹೀನರಾದ ನಮ್ಮ ಬಹುಪಾಲು ವಿದ್ಯಾವಂತರು ಇನ್ನೂ ಹೊರಬಂದಿಲ್ಲ. ಈ ವಿದ್ಯಾವಂತರು ಭೈರಪ್ಪನವರಂತಹ, ವೈದಿಕಶಾಹಿ, ಜೀವವಿರೋಧಿ ಲೇಖಕರನ್ನು ಇಂದಿಗೂ ಆದರ್ಶವನ್ನಾಗಿ ಮಾಡಿಕೊಂಡಿರುವುದು, ಸರ್ಕಾರಗಳ ಸಾಮಾಜಿಕ ನಾಶದ ದೈತ್ಯ ಯೋಜನೆಗಳ ಬಗ್ಗೆ ವಿವೇಚನೆ ಇಲ್ಲದ ಕುರುಡು ಪ್ರೀತಿ, ಇತ್ತೀಚೆಗೆ ರಾಜ್ಯದ ಮಾನ ಕಳೆದ ಮಡೆಸ್ನಾನದಂತಹ ಅಮಾನವೀಯ ಅಚರಣೆಯ ಬಗ್ಗೆ ಈ ಜನ ತೋರಿಸಿದ ದಿವ್ಯ ನಿರ್ಲಕ್ಷ್ಯ, ಯಾವುದೇ ರೀತಿಯ ಪ್ರಗತಿಪರ ಚಳುವಳಿಗಳ ಬಗೆಗಿನ ಇವರ ಮಹಾನ್ ಅಸ್ಪೃಶ್ಯತೆ. ಸದ್ಯಕ್ಕೆ ಈ ವಿದ್ಯಾವಂತರು ಬಹಳ ಕಾತುರದಿಂದ ಕಾಯುತ್ತಿರುವುದು ಈ ವರ್ಷದ ಬಜೆಟ್ ಗಾಗಿ. ಅಲ್ಲಿ ಎಷ್ಟು ವರಮಾನ ತೆರಿಗೆ ವಿನಾಯ್ತಿ ಸಿಗಬಹುದು, ತಮ್ಮ ಕೊಳ್ಳುಬಾಕುತನಕ್ಕೆ ಪೂರಕವಾಗಿ ಇನ್ನೇನೇನು ಹೊಸ ಘೋಷಣೆಗಳು ಸಿಗಬಹುದು!! ಆದರೆ ತಮ್ಮ ಈ ಕೊಳ್ಳುಬಾಕುತನವನ್ನು, ವಾಕರಿಕೆಯ ಶ್ರೀಮಂತಿಕೆಯನ್ನು ಸಾಧ್ಯವಾಗಿಸುವ ರಾಜಕೀಯ, ಚುನಾವಣೆ ಮಾತ್ರ ಇವರಿಗೆ ಅಲರ್ಜಿ ಹಾಗೂ ಹೇಸಿಗೆ.

ಇದೇ ವಿದ್ಯಾವಂತರಿಂದ ಹಣ ಹಾಗೂ ಹೆಂಡಕ್ಕಾಗಿ ತಮ್ಮನ್ನು ಮಾರಿಕೊಳ್ಳುತ್ತಾರೆ ಎಂದು ಸದಾ ಜರಿತಕ್ಕೆ, ಮೂದಲಿಕೆಗೆ ಬಲಿಯಾಗುವ ನಮ್ಮ ರಾಜ್ಯದ ಬಡ, ಹಿಂದುಳಿದ, ಅನಕ್ಷರಸ್ತ ಜನತೆ ಈ ವಿದ್ಯಾವಂತರಿಗೆ ಈ ಎಲ್ಲ ಅನುಕೂಲಗಳನ್ನು ತಂದುಕೊಡುವ ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಚುನಾವಣೆಗಳಲ್ಲಿ ಅತ್ಯಂತ ಮುಗ್ಧತೆಯಿಂದ ಬಾಗವಹಿಸಿ, ತಾವು ಮಾತ್ರ ಅನುದಿನ ಸಂಕಷ್ಟಗಳಲ್ಲಿ ಮುಳುಗಿ ಕಣ್ಮರೆಯಾಗುತ್ತಾರೆ. ಈ ವಿದ್ಯಾವಂತರಾಗಲೇ ಆ ಅಮಾಯಕ, ಸರಳ, ಮುಗ್ಧ ಅಣ್ಣಾ ಹಜಾರೆಯವರನ್ನು ಎತ್ತಿ ಕಸದ ಬುಟ್ಟಿಗೆ ಹಾಕಿಯಾಯ್ತು !!!

ದೃಶ್ಯ 1 :
ಜನವರಿ 7ರಂದು ಬೆಂಗಳೂರಿನಲ್ಲಿ ಜರುಗಿದ ವೈದಿಕವರ್ಗದ ಅತ್ಯಂತ ಮೂಢ ಆಚರಣೆ ಮಡೆಸ್ನಾನದ ವಿರುದ್ಧದ ಬ್ರಾಹ್ಮಣೇತರ ಮಠಾಧೀಶರ ಸಮಾವೇಶಕ್ಕೆ ನಾನೂ ಭಾಗವಹಿಸಿದ್ದೆ. ನಿಜಕ್ಕೂ ಆಲ್ಲಿನ ಬಹುಪಾಲು ಸ್ವಾಮಿಜೀಗಳಲ್ಲಿ, ಅವರ ಚಿಂತನೆಗಳಲ್ಲಿ ನನಗೆ ಮೊಟ್ಟಮೊದಲ ಬಾರಿಗೆ ಜೀವಂತಿಕೆ ಕಾಣಿಸುತಿತ್ತು. ಈ ಪುರೋಹಿತಶಾಹಿಗಳ ಕುಟಿಲತೆಯ ವಿರುದ್ಧ ಸಾಣೇಹಳ್ಳಿ ಸ್ವಾಮಿಗಳ ಆಕ್ರೋಶ ನನ್ನಲ್ಲಿ ಮೊಟ್ಟಮೊದಬಾರಿಗೆ ಇವರ ಬಗ್ಗೆ ಅಭಿಮಾನ ಮೂಡಿಸಿದ್ದು ನಿಜ. ಹೌದು 80ರ ದಶಕದಲ್ಲಿ ಕಾಲೇಜಿನಲ್ಲಿದ್ದ ನಾವೆಲ್ಲ ವೈಚಾರಿಕತೆಯ, ಎಡಪಂಥೀಯ ಚಿಂತನೆಗಳ ಅತ್ಯುತ್ಸಾಹದ ಹಿನ್ನೆಲೆಯಲ್ಲಿ ನಮ್ಮ ಜನರಲ್ಲಿನ ಜಾತೀಯತೆಯನ್ನು, ಮೌಢ್ಯತೆಯನ್ನು ಬೇರು ಸಮೇತ ಕಿತ್ತು ಹಾಕುವುದು ಹೇಗೆ, ಅದಕ್ಕಾಗಿ ಯಾವ ರೀತಿ ಹೋರಾಟ ನಡೆಸಬೇಕು ಎಂದು ಆಗ ಪ್ರಗತಿರಂಗದ ಸಭೆಯೊಂದರಲ್ಲಿ ಭಾಗವಹಿಸಲು ಬಂದಿದ್ದ ತೇಜಸ್ವಿ ಅವರನ್ನು ಅತ್ಯಂತ ಮುಗ್ಧತೆಯಿಂದ ಕೇಳಿದಾಗ ಅವರು “ರೀ ಅವಕ್ಕೆಲ್ಲ ನಾವು ನೀವೆಲ್ಲ ಏನೂ ಮಾಡಲಿಕ್ಕೆ ಆಗಲ್ಲ ಕಣ್ರೀ ಸುಮ್ಮನೆ ನಿಮ್ಮ ವೇಳೆ ವ್ಯರ್ಥ ಮಾಡಬೇಡ್ರಿ, ಮಠಾಧೀಶರುಗಳು ಮಾತ್ರ ಇವನ್ನೆಲ್ಲ ಕಿತ್ತೊಗೆಯುವ ಸಾಧ್ಯತೆಯುಳ್ಳವರು,” ಎಂದು ಹೇಳಿ ನಮ್ಮಲ್ಲಿ ದಂಗು ಬಡಿಸಿದ್ದರು.

ನಮ್ಮಲ್ಲಿನ ಬಂಡಾಯಕ್ಕೆ ಇವರ ಸಮಾಜವಾದಿ ವ್ಯಕ್ತಿತ್ವವೇ ಕಾರಣ ಎಂದುಕೊಂಡಿದ್ದ ನಮಗೆಲ್ಲ ಆಗ ಇವರು ಈ ರೀತಿ ಹೇಳಿದ್ದು, ನಾವೆಲ್ಲ ಹತಾಶೆಗೊಂಡದ್ದು, ಇದಕ್ಕೆ ಪೂರಕವೆನ್ನುವಂತೆ ಆಗ ಪ್ರಗತಿರಂಗದ ಸಭೆಗಳಲ್ಲಿ ಸೇರುತ್ತಿದ್ದ ಕೇವಲ 30 ರಿಂದ 50 ರಷ್ಟು ಜನರು ಇವೆಲ್ಲ ಸೇರಿ ನಮ್ಮಲ್ಲಿ ಇನ್ನಿಲ್ಲದ ನಿರಾಶೆಯನ್ನು, ರೇಜಿಗೆಯನ್ನು ಮೂಡಿಸುತ್ತಿದ್ದವು. ನಂತರ ವರ್ಷಗಳು ಕಳೆದ ಹಾಗೆ ಬಂಡಾಯದ ತೀವ್ರತೆ ನಮ್ಮಿಂದ ಇಳಿಯುತ್ತ ಹೋದ ಹಾಗೆ ತೇಜಸ್ವಿಯವರ ಅನುಭವದ ಮಾತುಗಳ ಜೀವಾಮೃತ ನಮಗೆ ಮನದಟ್ಟಾಗತೊಡಗಿತು. ಇಂದಿನ ಈ ಬ್ರಾಹ್ಮಣೇತರ ಸ್ವಾಮಿಗಳ ನಡೆಗಳು 25 ವರ್ಷಗಳ ಹಿಂದಿನ ತೇಜಸ್ವಿಯವರ ಚಿಂತನೆಯನ್ನು ಸಾಕಾರಗೊಳಿಸುವಂತಿತ್ತು. ನಾವೆಲ್ಲ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಹಾಗೂ ಈ ಸ್ವಾಮಿಗಳ ಈ ವೈಚಾರಿಕ ಧೋರಣೆ ಎಲ್ಲಿಯವರೆಗೆ ?

ತಮ್ಮ ಭ್ರಷ್ಟ ಅಧಿಕಾರ ಅವಧಿಯಲ್ಲಿ ರಾಜ್ಯದ ಮಠಗಳಿಗೆ ಜನತೆಯ ರೊಕ್ಕವನ್ನು ಬೇಕಾಬಿಟ್ಟಿಯಾಗಿ ಹಂಚಿ ಈ ಮಠದ ಸ್ವಾಮಿಗಳೆಲ್ಲ ನನ್ನ ಜೇಬಿನೊಳಗಿದ್ದಾರೆ ಹೀಗಾಗಿ ಈ ರಾಜ್ಯ ನನ್ನ ಮುಷ್ಟಿಯೊಳಗೆ ಎನ್ನುವ ದುರಹಂಕಾರದದಿಂದ ಹೆಜ್ಜೆ, ಹೆಜ್ಜೆಗೂ ತಪ್ಪು, ಆನೀತಿ ಹೆಜ್ಜೆಗಳನ್ನಿಡುತ್ತಿರುವ ಯಡಿಯೂರಪ್ಪ, ಈ ಕಾರಣಕ್ಕೆ ಹಾಗೂ ಕೇವಲ ಜಾತೀಯತೆಯಿಂದ ಯಡಿಯೂರಪ್ಪನವರನ್ನು ಬೆಂಬಲಿಸಿದ ಬಹುಪಾಲು ಮಠಗಳು ಹಾಗೂ ಅವುಗಳ ಆರ್ಥಿಕ ಮತ್ತು ಬೌದ್ಧಿಕ ಭ್ರಷ್ಟತೆ, ಮಾತು ಮಾತಿಗೆಲ್ಲ ಜನ ನನ್ನ ಹಿಂದೆ ಇದ್ದಾರೆ ಎಂದು ಯಡಿಯೂರಪ್ಪ ಹೂಂಕರಿಸಿದಾಗಲೆಲ್ಲ ಆ ಜನ ಮತ್ತ್ಯಾರು ಅಲ್ಲ ಲಿಂಗಾಯತರು ಎನ್ನುವ ಅಪಾದನೆಗೆ ಇಂಬು ಕೊಡುವಂತೆ ಯಡಿಯೂರಪ್ಪನವರಲ್ಲಿ ಇನ್ನಿಲ್ಲದ ಹುಂಬ ಆತ್ಮವಿಶ್ವಾಸಕ್ಕೆ ಕಾರಣವಾಗಿರುವ ಲಿಂಗಾಯಿತರು, ಇವರು ತಮ್ಮ ಈ ಅನಾಹುತಕಾರಿ, ಜಾತೀವಾದಿ ಧೋರಣೆ ಎಂತಹ ಅಸಮರ್ಥ, ಸಂಪೂರ್ಣ ಹಾದಿ ತಪ್ಪಿದ ನಾಯಕನನ್ನು ಸೃಷ್ಟಿಸಿದೆಯಲ್ಲ ಎನ್ನುವ ತೀವ್ರವಾದ ವಿಷಾದದ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾರೆಯೇ? ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆಯೇ? ಇಂತಹ ವಿಷಮಯ ಪರಿಸ್ಥಿಯಲ್ಲಿ ಈ ವಿರಕ್ತ ಮಠಗಳ ಪ್ರಗತಿಪರ ಧೋರಣೆಗಳು ತಮ್ಮ ನಿಷ್ಟ ಅನುಯಾಯಿಗಳಾದ ಅಮಾಯಕ ಲಿಂಗಾಯಿತರಿಗೆ ನಿಜಕ್ಕೂ ಹೊಸ ಚಿಂತನೆಗಳನ್ನು ತುಂಬಿಸುತ್ತವೆಯೇ, ಹಾಗೂ ಇನ್ನು ಮುಂದಾದರೂ ಇವರೆಲ್ಲ ಈ ಯಡಿಯೂರಪ್ಪ ಹಾಗು ಮಠಗಳ ಜಂಟಿ ಭ್ರಷ್ಟಾಚಾರಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೆ ? ಇದು ಆರಂಭ ಮಾತ್ರ. ನಾವು ಸಿನಿಕರಾಗುವ ಅಗತ್ಯವಿಲ್ಲವೆನಿಸುತ್ತಿತ್ತು ಈ ಸಮಾವೇಶದಿಂದ ಮರಳುವಾಗ.

ದೃಶ್ಯ 2 :
ಬಿಜಾಪುರದ ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ವಿಷಯವಾಗಿ ಆ ಊರು ಅತ್ಯಂತ ಪ್ರಕ್ಷುಬ್ದವಾಗಿ ಇನ್ನೇನು ಸ್ಫೋಟಿಸಲು ತಯಾರಾಗಿತ್ತು. ನಮ್ಮ ಮಧ್ಯಮವರ್ಗಗಳ ವಿದ್ಯಾವಂತರು ನೋಡಿ ನಾವು ಹೇಳಲಿಲ್ಲವೇ ಎನ್ನುವ ತಮ್ಮ ಎಂದಿನ ಸ್ವಾರ್ಥ ಮುಖಭಾವದಿಂದ ಸೂಡೋ ಸೆಕ್ಯುಲರ್ ಗಳ ಮೇಲೆ ಇನ್ನೇನು ಮುಗಿಬೀಳಬೇಕು ಎನ್ನುವಷ್ಟರಲ್ಲಿ, ಈ ಘಟನೆಯನ್ನು ಅತ್ಯಂತ ರೋಚಕವಾಗಿ ಮುಖಪುಟದಲ್ಲಿ, ಬ್ರೇಕಿಂಗ್ ನ್ಯೂಸ್ನಲ್ಲಿ ಐದು ನಿಮಿಷಕ್ಕೊಮ್ಮೆ ಬಿತ್ತರಿಸುತ್ತಾ ಮುಂದಿನ ದಿನಗಳಲ್ಲಿ ಅದು ತಂದುಕೊಡುವ ರೋಚಕತೆಯನ್ನು ನೆನೆದು ಸಂಪೂರ್ಣ ಖುಷಿಯಲ್ಲಿದ್ದ ಕೆಲವು ಪತ್ರಿಕಾ ಮಾಧ್ಯಮಗಳು ಹಾಗೂ ಬಹುಪಾಲು ದೃಶ್ಯ ಮಾಧ್ಯಮಗಳು. ಅಷ್ಟರಲ್ಲೇ ಈ ಪ್ರಕರಣ ಅತ್ಯಂತ ವಿಚಿತ್ರ ತಿರುವು ಪಡೆದುಕೊಂಡು ಇದೆಲ್ಲ ಸಂಘಪರಿವಾರದ ಅಂಗ ಸಂಸ್ಥೆಯಾದ “ಶ್ರೀರಾಮ ಸೇನೆಯ” ಕೈವಾಡವೆಂದು ಪೋಲೀಸರ ಪ್ರಥಮ ತನಿಖೆಯಿಂದ ಬಯಲಾಗುತ್ತಲೇ ಈ ಸತ್ಯಸಂಗತಿಯನ್ನು ಸಣ್ಣ ಸುದ್ದಿಯನ್ನಾಗಿ ಎಲ್ಲೋ 4ನೇ ಅಥವಾ 5ನೇ ಪುಟದಲ್ಲಿ ಹಾಕಿದ ನಮ್ಮ ಬಹುಪಾಲು ಮಾಧ್ಯಮಗಳ, ಇಂತಹ ಘೋರ ಪಾತಕ ವಿಷಯವನ್ನು ಎಂದೂ ಮುಖ್ಯ ವೇದಿಕೆಗಳಲ್ಲಿ ಚರ್ಚಿಸದ ದೃಶ್ಯ ಮಾಧ್ಯಮಗಳ ಆತ್ಮವಂಚನೆ, ಬಹುಸಂಖ್ಯಾತ ಹಿಂದೂಗಳ ರಕ್ಷಕರು ಎಂದು ಅಬ್ಬರಿಸುವ ಶ್ರೀರಾಮ ಸೇನೆಯ ಈ ಸಮಾಜಘಾತುಕ, ವೈಷಮ್ಯದ, ದೇಶದ್ರೋಹಿ ಕೃತ್ಯದ ಬಗ್ಗೆ ತುಟಿ ಬಿಚ್ಚದ ನಮ್ಮ ಮಧ್ಯಮವರ್ಗದ ಕ್ಯಾಂಡಲ್ ವೀರರ ಆತ್ಮವಂಚನೆ.

ಇನ್ನು ಪ್ರಮುಖ ವಿರೋಧ ಪಕ್ಷವಾದ, ಸೋ ಕಾಲ್ಡ್ ಸೆಕ್ಯುಲರ್ ಕಾಂಗ್ರೆಸ್ ವತಿಯಿಂದ ಸಣ್ಣ ಪ್ರಮಾಣದ ಗೊಣಗುವಿಕೆಯೂ ಕೂಡ ಇಲ್ಲದ ಒಂದು ಹೆಳವಂಡ ಸ್ಥಿತಿ, ಇದು ಉತ್ತಮ ಪ್ರಜಾಪ್ರಭುತ್ವ ಎಂದರೆ ಒಂದು ಲೊಳಲೊಟ್ಟೆಯೇ ಎನ್ನುವ ನೀತಿಯನ್ನು ಮತ್ತೆ ಮತ್ತೆ ಬಯಲಾಗಿಸುತ್ತಿದೆ. ಇನ್ನು ಇಲ್ಲಿ ಬಿಜೆಪಿ ಆಡಳಿತವಿರುವುದರಿಂದ, ಎಂದಿನಂತೆ ಶಾಸಕಾಂಗ, ಕಾರ್ಯಾಂಗದ ಒಬ್ಬರಿಗೊಬ್ಬರು ಮಿಲಾಕತ್ತಾಗಿರುವುದರಿಂದ ಈ ಶ್ರೀರಾಮ ಸೇನೆಯ ದೇಶದ್ರೋಹದ ಘಾತಕ ಕೃತ್ಯದ ನಿಷ್ಪಕ್ಷಪಾತ ತನಿಖೆ ನ್ಯಾಯದ ತಾರ್ಕಿಕ ಅಂತ್ಯಕ್ಕೆ ಮುಟ್ಟುವ ಸಾಧ್ಯತೆಗಳೂ ತುಂಬಾ ಕಡಿಮೆಯೇ.

ಅಷ್ಟಕ್ಕೂ ಯಾರಿಗೆ ಬೇಕು ಸತ್ಯದ ಅನಾವರಣ !!! ಸದ್ಯಕ್ಕೆ ಏನಿದ್ದರು ರಾಜ್ಯದ ಅಧಿಕಾರ ನನಗೆ ಸಿಕ್ಕ ಹಾಗೂ ನಿರಂತರವಾಗಿ ಸಿಗಬೇಕಾದ ಜಹಗೀರು ಎನ್ನುವ ಮಾನಸಿಕ ಅಸ್ವಸ್ಥತೆಯ ಸಿಂಡ್ರೋಮಿನಿಂದ ನರಳುತ್ತಿರುವ ಯಡಿಯೂರಪ್ಪನವರ ಆತ್ಮಹತ್ಯಾತ್ಮಕ ನಡೆಗಳನ್ನು ಸದಾಕಾಲ ಬಿತ್ತರಿಸುವುದಷ್ಟೇ ನಮ್ಮ ಮಾಧ್ಯಮಗಳ ಸದ್ಯದ ಕಾಯಕವಾಗಿದೆ. ನೀನನಗಿದ್ದರೆ ನಾನಿನಗೆ ಎನ್ನುವ ಅವಕಾಶವಾದಿ ಧೋರಣೆ. ಇಲ್ಲಿ, ಲಂಕೇಶರ ಗುಣಮುಖ ನಾಟಕದ ನಾದಿರ್ ನ ಮಾತುಗಳು “ಹಿಂದೂಸ್ತಾನಕ್ಕೆ ಬಂದ ಮೇಲೆ ಚಿಕ್ಕ ಪ್ರಶ್ನೆಗಳೂ ಇಲ್ಲಿ ಪರ್ವತದಂತೆ, ನದಿಗಳಂತೆ… ಕಡೆಗೆ ಮಂಜಿನಂತೆ ಆಗಿ ಪ್ರಶ್ನೆಯೇ ಇಲ್ಲ ಅನಿಸಿಬಿಡ್ತವೆ. ಸುಳ್ಳು ನಿಜದಂತೆ, ನಿಜ ಸುಳ್ಳಿನಂತೆ ಆಗ್ತದೆ, ಇಲ್ಲಿ ಮಾತನಾಡಿದರೆ ಪ್ರತಿಧ್ವನಿಗಳು ಮಾತ್ರ ಬರುತ್ತದೆ, ಸತ್ಯದ ಹೆಸರಿನಲ್ಲಿ ಸುಳ್ಳು ಕುತಂತ್ರಗಳು ಮಾತ್ರ ಹೊಮ್ಮುತ್ತವೆ.” ಹಾಗೂ ಅಲಾವಿಖಾನ್‌ನ “ಭೂಮಿಯನ್ನು ಮರೆಯುವ ಮನುಷ್ಯ, ಎಷ್ಟು ಮದರಾಸಗಳು, ಎಷ್ಟು ಬೃಹತ್ ಗ್ರಂಥಗಳು, ಎಷ್ಟು ಶೋಧನೆಗಳು, ಎಷ್ಟು ಜನ ಸಂತರು ಬಂದರೂ ಮನುಷ್ಯ ಏಕೆ ಹೀಗೆ ಭೀಕರ ವ್ಯಸನಗಳಲ್ಲಿ, ಅಜ್ಞಾನದಲ್ಲಿ ಸಿಕ್ಕಿಕೊಂಡಿದ್ದಾನೆ,” ಎನ್ನುವ ಮಾರ್ಮಿಕ ಮಾತುಗಳು ಎಲ್ಲಾ ಕಾಲಕ್ಕೂ ಕೈದೀಪಗಳು ಹಾಗೂ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತವೆ.

ದೃಶ್ಯ 3:
ಎಂದಿನಂತೆ ಸಂಕ್ರಾಂತಿಯ ನಂತರ ತನ್ನ ಪಥ ಬದಲಿಸುವ ಸೂರ್ಯ ಹಾಗೂ ಭೂತಾಯಿಗೆ ಬಲಿ ಬೇಕು. ಇದೇ ವೇಳೆಗೆ ನಮ್ಮ ರಾಜ್ಯಕ್ಕೆ ಶ್ರೀರಾಮುಲು ಅವರ “ಬಡವರ ಹಿಂದುಳಿದವರ ಪಕ್ಷ” ಉದಯವಾಗುತ್ತಲಿದೆ. ಈ ಮರೀಚಿಕೆಗೆ, ಖೆಡ್ಡಾಗೆ ಬಲಿಯಾಗಲು ಅಮಾಯಕ ಹಿಂದುಳಿದ ವರ್ಗಗಳ ಜನತೆ, ರುದ್ರರು, ಉಜ್ಜರು ರಾಜ್ಯದಲ್ಲಿ ತಮಗೆ ಗೊತ್ತಿಲ್ಲದೆಯೇ ತಯಾರಾಗಿರುವುದು ಶ್ರೀರಾಮುಲುರಂತಹ ರಾಜಕಾರಣಿಗಳಲ್ಲಿ ಇನ್ನಿಲ್ಲದ ಉತ್ಸಾಹವನ್ನು ಹುಟ್ಟಿಹಾಕಿದಂತಿದೆ. ಅಲ್ಲದೆ ನಮ್ಮ ಯಡಿಯೂರಪ್ಪನವರೂ ಬದಲಾಗುತ್ತಿದ್ದಾರಂತೆ ಸಂಕ್ರಾಂತಿಯ ನಂತರ. ಇವರನ್ನೆಲ್ಲ ಬದಲಾಯಿಸಿ ಹೊಸ ಗಾಳಿ ಬೀಸುವಂತೆ ಮಾಡುವ ಗುರುತರ ಹೊಣೆಗಾರಿಕೆಯ ನಾವೆಲ್ಲ ನಿದ್ರಿಸುತ್ತಿದ್ದೇವೆ.

ಕರ್ನಾಟಕದ ನಾಲ್ಕು ರಾಜಕಾರಣಿ ಬಣಗಳು

ಬಿ.ಶ್ರೀಪಾದ್ ಭಟ್

ಬಣ 1 :

60 ಹಾಗೂ 70 ರ ದಶಕದಲ್ಲಿ ತಮ್ಮರಾಜಕಾರಣ ಶುರು ಮಾಡಿದ ನಜೀರ ಸಾಬ್, ಕೆ.ಹೆಚ್.ರಂಗನಾಥ್, ಬಿ.ಎಲ್.ಗೌಡ, ಕೆಂಪೀರೆಗೌಡ, ಸಂಗಮೇಶ್ವರ ಸರ್ದಾರ, ಎ.ಲಕ್ಷ್ಮೀಸಾಗರ್, ಕಲ್ಲಣನವರ್, ಬಂಡೀ ಸಿದ್ದೇಗೌಡ, ವೈ.ಕೆ.ರಾಮಯ್ಯ  (ಇಲ್ಲಿ ಇನ್ನೂ ಅನೇಕ ಹೆಸರುಗಳನ್ನು ಸೇರಿಸಬಹುದು. ಇದು ಕೇವಲ ಉದಾಹರಣೆಗೆ) ರಂತಹ ಕರ್ನಾಟಕದ ರಾಜಕಾರಣಿಗಳು 80 ಹಾಗೂ 90ರ ದಶಕದ ಮಧ್ಯಭಾಗದವರೆಗೂ ರಾಜ್ಯದ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು.

ಇವರಲ್ಲಿ ಕೆಲವರು ಕಾಂಗ್ರೆಸ್‌ನವರಾಗಿದ್ದರೆ, ಕೆಲವರು ಜನತಾ ಪಕ್ಷಕ್ಕೆ ಸೇರಿದ್ದರು. ಈ ವಿಭಿನ್ನ ಪಕ್ಷದ ಭಿನ್ನತೆ ಹೊರತುಪಡಿಸಿ ಇವರಲ್ಲಿ ಅನೇಕ ಸಾಮ್ಯತೆಗಳಿದ್ದವು. ಮೊದಲನೆಯದಾಗಿ ಇವರೆಲ್ಲ ಶೂದ್ರ, ಹಿಂದುಳಿದ, ದಲಿತ, ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರು, ಸಂಕೋಚದ ವ್ಯಕ್ತಿತ್ವವುಳ್ಳವರು, ಆಕರ್ಷಕ ಮಾತುಗಾರರಾಗಿರಲಿಲ್ಲ, ರಾಜಕಾರಣಿಗಳಾಗಿದ್ದರೂ ಎಂದೂ ವೇದಿಕೆ ಮೇಲೆ ಅಸಂಖ್ಯ ಜನರನ್ನು ಮೋಡಿ ಮಾಡುವ ಭಾಷಣಕಾರರಾಗಿರಲಿಲ್ಲ, ರಾಜಕೀಯದಲ್ಲೂ ಎಂದೂ ಆರಕ್ಕೇರದ ಇವರು ಮಾನವತಾವಾದಿಗಳಾಗಿದ್ದರು, ಅನೇಕರು ಉತ್ತಮ, ದಕ್ಷ ಆಡಳಿತಗಾರರಾಗಿದ್ದರು, ಬಡಜನತೆಯ ಪರವಾಗಿ ಇವರ ಹೃದಯ ಪ್ರಾಮಾಣಿಕವಾಗಿ ಮಿಡಿಯುತ್ತಿತ್ತು.

ಇವರಲ್ಲಿ ಬಹುತೇಕರು ಆಷಾಡಭೂತಿತನದ, ಮೋಸದ ರಾಜಕಾರಣ ಕಂಡರೆ ಕೆಂಡಾಮಂಡಲವಾಗುತ್ತಿದ್ದರು. ಈ ಕಾರಣಕ್ಕೆ ಕೆಲವು ಬಾರಿ ವಿವಾದಕ್ಕೆ ಕಾರಣರಾಗಿದ್ದರು. ಆದರೆ ತಾವು ಸಚಿವರಾಗಿದ್ದ ಕಾಲದುದ್ದಕ್ಕೂ ಜನಪರ ಕೆಲಸಗಳನ್ನು ಮಾಡಿದ್ದರು. ಈ ಮೂಲಕ ತಮ್ಮ ಪ್ರೀತಿಯ ನಾಯಕರಾದ ಅರಸು, ಹೆಗಡೆಯವರಿಗೆ ಹೆಸರನ್ನು ತಂದುಕೊಟ್ಟಿದ್ದರು. ಇವರು ಎಂದೂ ಜಾತೀಯತೆ ಮಾಡಲಿಲ್ಲ, ಜಾತಿ ರಾಜಕಾರಣದಿಂದ ದೂರವಿದ್ದರು, ಗುಂಪುಗಳನ್ನು, ಹಿಂಬಾಲಕರನ್ನು, ಪುಢಾರಿಗಳನ್ನು ಕಟ್ಟಲಿಲ್ಲ ಹಾಗೂ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ತಮ್ಮ ಸುಧೀರ್ಘ ರಾಜಕೀಯ ಜೀವನದಲ್ಲಿ ವಿಫುಲ ಅವಕಾಶಗಳಿದ್ದರೂ ಎಂದೂ ರಾಜಕೀಯವಾಗಿ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಇದರಿಂದಾಗಿಯೇ  ಯಾವುದೇ ಹಿಂದುಳಿದ ಜಾತಿಗಳ ಒಕ್ಕೂಟಗಳನ್ನು ಕಟ್ಟಲ್ಲಿಲ್ಲ. ಚಳುವಳಿ ಆಧಾರಿತ ಹೋರಾಟಗಳು ಇವರ ಪಾಲಿಗೆ ಒಗ್ಗುತ್ತಿರಲ್ಲಿಲ್ಲ. ಹಾಗಾಗಿಯೇ ಯಾವುದೇ ಜನ, ಜಾತಿ, ವರ್ಗ ಸಮುದಾಯದೊಂದಿಗೂ ಇವರ ಐಡೆಂಟಿಟಿ ಇರಲಿಲ್ಲ. ಕೇವಲ ವ್ಯಕ್ತಿಗತ ಪರಿಶುದ್ಧ, ಸರಳ ರಾಜಕಾರಣವೇ ಇವರ ಬಂಡವಾಳ.

ಇವರ ಈ ಎಲ್ಲ ಗುಣಗಳು ರಾಜಕೀಯ ಜೀವನದಲ್ಲಿ ಇವರನ್ನು ಭ್ರಷ್ಟಾಚಾರದ ಕಳಂಕದಿಂದ ಮುಕ್ತಿಗೊಳಿಸಿತ್ತು. ಆದರೆ ಇವೆಲ್ಲಕ್ಕಿಂತಲೂ ಇವರ ದೊಡ್ಡ ಸಾಧನೆ  ತಮ್ಮ ನಂಬಿದ ಆದರ್ಶಗಳನ್ನು ಬಿಟ್ಟುಕೊಡದೆ ಯಾವ ಆಮಿಷೆಗಳಿಗೆ ಬಲಿಯಾಗದೆ ಅತ್ಯಂತ ಬಿಕ್ಕಟ್ಟಿನ ಸಂಧರ್ಭದಲ್ಲೂ, ಅನೇಕ ಒತ್ತಡಗಳಿದ್ದರೂ ಕುಂಟುಂಬ ರಾಜಕಾ  ರಣವನ್ನು ಮಾಡಲೇ ಇಲ್ಲ. ಸ್ವಜನ ಪಕ್ಷಪಾತವೆನ್ನುವ ಹೊಲಸನ್ನು ಇವರೆಂದೂ ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಇದರ ಫಲವಾಗಿಯೇ ಇವತ್ತಿಗೂ ಇವರ ಮಕ್ಕಳು, ಬಂಧುವರ್ಗದವರಾರು ರಾಜಕೀಯದಲ್ಲಿಲ್ಲ. ಇದು ಅಂತಿಂಥ ಸಾಧನೆ ಏನಲ್ಲ. ಇದಕ್ಕಾಗಿ ಕರ್ನಾಟಕದ ಜನತೆ ಇವರಿಗೆ ಸದಾ ಕೃತಜ್ಞತೆಯನ್ನು ಸೂಚಿಸುತ್ತದೆ.

ಎರಡು ಬಾರಿ, ಮೂರು ಬಾರಿ ಗೆದ್ದು ಬಂದರೂ ತಮ್ಮ ರಾಜಕೀಯ ಕ್ಷೇತ್ರವನ್ನು ಎಂದೂ ಮೂಗಿನ ಮೇಲೆ ಬೆರಳಿಡುವಷ್ಟು ಬೆಳೆಸುವ, ಅಭಿವೃದ್ದಿಗೊಳಿಸುವ ಯಾವ ಕಾರ್ಯಕ್ರಮಗಳನ್ನೂ ಇವರು ಹಾಕಿಕೊಳ್ಳಲಿಲ್ಲ, ಹೀಗಾಗಿ ಇವರ ಅಧಿಕಾರದ ಅವಧಿಯಲ್ಲಿ ಇವರ ಶಾಸಕ ಸ್ಥಾನದ ಕ್ಷೇತ್ರಗಳು  ಎಂದೂ ಅಭೂತಪೂರ್ವ ಎನ್ನುವ ಮಟ್ಟದಲ್ಲಿ ಅಭಿವೃದ್ಧಿ ಹೊಂದಲೇ ಇಲ್ಲ. ಇದಕ್ಕೆ ಮೂಲಭೂತ ಕಾರಣ ಇವರು ಸದಾಕಾಲ ಪೊರೆಯುವ ಜನಸಂಪರ್ಕದ ಕೊರತೆಯನ್ನು ಎದುರಿಸಿದ್ದು, ಹಾಗೂ ಎಂದಿಗೂ 24 ಗಂಟೆಗಳಲ್ಲದಿದ್ದರೂ ಕನಿಷ್ಟ 12 ಗಂಟೆಗಳ ಬಿಡುವಿಲ್ಲದ ರಾಜಕಾರಣ ಮಾಡುವ ಜಾಯಮಾನವೇ ಇವರದಾಗಿರಲಿಲ್ಲ. ಇವರು ಅತ್ಯಂತ ಜನಪ್ರಿಯರಾಗಿದ್ದರೂ ನಿಜವಾದ ಅರ್ಥದ ಜನನಾಯಕರಾಗಿರಲಿಲ್ಲವಾಗಿದ್ದರಿಂದ ವ್ಯವಸ್ಥೆಯೊಂದಿಗೆ ಸದಾಕಾಲವಲ್ಲದಿದ್ದರೂ ಅವಶ್ಯಕತೆ ಬಿದ್ದಾಗಲೆಲ್ಲ ಜಿದ್ದಾಜಿದ್ದಿ ನಡೆಸುವ ರಾಜಕೀಯ ಎದೆಗಾರಿಕೆ ಇವರಲ್ಲಿರಲ್ಲ. ರಾಜಕೀಯ ಬಿಕ್ಕಟ್ಟಿನ ಸಂಧರ್ಭಗಳಲ್ಲಿ (ಕಾಂಗ್ರೆಸ್ ಹೋಳಾದಾಗ, ತುರ್ತು ಪರಿಸ್ಥಿತಿ, ತಮ್ಮ ನಾಯಕ ಅರಸು ಅವರು ಕಾಂಗ್ರೆಸ್ ನಿಂದ ಹೊರ ಬಂದು ತಬ್ಬಲಿಯಾದಾಗ, ಜನತಾ ಪಕ್ಷ ವಿಘಟನೆಗಳ ಸರಮಾಲೆಯಲ್ಲಿ ಸಿಲುಕಿಕೊಂಡಾಗ, ರಾಮಕೃಷ್ಣ ಹೆಗಡೆ ಸ್ವಜನ ಪಕ್ಷಪಾತದ, ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದಾಗ) ಇವರೆಂದೂ ದಿಟ್ಟತನವನ್ನು ಪ್ರದರ್ಶಿಸಲಿಲ್ಲ. ಒಂದು ರೀತಿಯಲ್ಲಿ ಜಾಣ ಮೌನವನ್ನು ಆಶ್ರಯಸಿದ್ದರು. ಈ ಜಾಣ ಮೌನ ಆ ಕಾಲದಲ್ಲಿ  ಪ್ರಶ್ನಾರ್ಹ ಎನಿಸಿತ್ತು.

ಅನೇಕ ಸಾಮಾಜಿಕ ಸ್ಥಿತ್ಯಂತರಗಳು, ಜಾತೀಯ ದೌರ್ಜನ್ಯಗಳು ತಮ್ಮ ಕಾಲಘಟ್ಟದಲ್ಲಿ ನಡೆದಾಗಲೂ ಇವರು ವ್ಯಕ್ತಪಡಿಸಿದ ಅಸಹಾಯಕತೆ, ನಿರ್ಲಕ್ಷ್ಯತೆ ಕೂಡ ಪ್ರಶ್ನಾರ್ಹವೇ ಆಗಿತ್ತು. ರಾಜಕೀಯ ಇಚ್ಛಾಶಕ್ತಿಯನ್ನು ಸಂಪೂರ್ಣವಾಗಿ, ಅತ್ಯಂತ ದಿಟ್ಟತನದಿಂದ ಪ್ರಯೋಗಿಸಿದಾಗ ಮಾತ್ರ ಒಬ್ಬ ಜನನಾಯಕ ಮತ್ತೊಂದು ಅರ್ಥಪೂರ್ಣ ತಲೆಮಾರನ್ನು ಹುಟ್ಟಿಹಾಕಲು ಸಾಧ್ಯ ಎನ್ನುವ ರಾಜಕೀಯದ ಮೂಲ ಮಂತ್ರ ಈ ಬಣಕ್ಕೆ ಅರ್ಥವಾಗಿರಲಿಲ್ಲವೋ ಅಥವಾ ಎಂದಿನಂತೆ ನಮಗ್ಯಾತಕ್ಕೆ ಇದೆಲ್ಲ ಎನ್ನುವ ಧೋರಣೆಯೋ, ಕೊನೆಗೂ ಇವರಿಗೆ ರಾಜಕೀಯ, ಸಾಮಾಜಿಕ ಸಂಕೀರ್ಣತೆ, ಸ್ಥಿತ್ಯಂತರಗಳು, ಕಾಲ ಕಾಲಕ್ಕೆ ಬದಲಾಗುತ್ತಿರುವ ವಸ್ತುನಿಷ್ಟತೆ ಅರ್ಥವಾದಂತಿರಲಿಲ್ಲ. ಆದರೆ ರಾಜಕಾರಣಿ ಏನೆಲ್ಲ ಅದ್ಭುತ ಕಾರ್ಯಗಳನ್ನು, ಹೊಸ ಸಮಾಜವನ್ನು ಕಟ್ಟಲಿಕ್ಕಾಗುವಷ್ಟು, ಜೀವಪರ ಚಲನಶೀಲತೆಯನ್ನು ತರವಷ್ಟು ಧೀಮಂತ ನಾಯಕ ಆಗಿರಬೇಕು ಎನ್ನುವ ಸರ್ವಕಾಲದ ಆದರ್ಶದ ಅಪೇಕ್ಷಣೆಯೇ ಇಂದು ಕನಸಿನ ಗಂಟಾಗಿರುವ ಸಂಧರ್ಭದಲ್ಲಿ ಅಸಹಾಯಕನೂ, ನೀಚನೂ ಅಗದೆ ಕನಿಷ್ಟ ಇವರಷ್ಟಾದರೂ ಪ್ರಾಮಾಣಿಕವಾಗಿ ದುಡಿದು, ಬಾಳಿ ಬದುಕಬೇಕು ಎಂದು ಇಂದಿನ ತಲೆಮಾರಿಗೆ, ಮುಂದಿನ ತಲೆಮಾರಿಗೆ ಇವರನ್ನು ಮಾದರಿಯಾಗಿ ನಾವು ಅತ್ಯಂತ ಹೃತ್ಪೂರ್ವಕವಾಗಿ ಹೇಳಬಹುದು.

 

ಬಣ 2  :

ಮೇಲಿನ ಬಣಕ್ಕೆ ಹೋಲಿಸಿದರೆ ಸಂಪೂರ್ಣ ತದ್ವಿರುದ್ಧ ವ್ಯಕ್ತಿತ್ವದ, ರಾಜಕಾರಣಿಗಳು ದೇವೇಗೌಡ ಹಾಗೂ ದಿವಂಗತ ಎಸ್.ಬಂಗಾರಪ್ಪ. ರಾಜಕೀಯವಾಗಿ ಅತ್ಯಂತ ಮಹಾತ್ವಾಕಾಂಕ್ಷಿಗಳಾಗಿದ್ದ ಇವರಿಬ್ಬರೂ ಶೂದ್ರರ, ಹಿಂದುಳಿದ ವರ್ಗಗಳ ಪ್ರಶ್ನಾತೀತ ನೇತಾರರೆನಿಸಿಕೊಂಡವರು.

ಇವರು ಹಳ್ಳಿ ಮೂಲದ ಜಿಗುಟುತನದ, ಸರಳತೆ, ಆಷಾಢಭೂತಿತನವನ್ನು, ಪುಢಾರಿಗಿರಿಯನ್ನು ಕಂಡರೆ ಸದಾ ಸಿಡಿದೇಳುವ ಗುಣ, ಉಳುವವರ ಬಗೆಗೆ ಸದಾಕಾಲ ಚಿಂತಿಸುವ ಮನಸ್ಸು, ಯಾವುದಕ್ಕೂ ಬಗ್ಗದ ಆತ್ಮ ವಿಶ್ವಾಸ ಹಾಗೂ ಈ ನೆಲದ. ಈ ಮಣ್ಣಿನ ವ್ಯಕ್ತಿತ್ವವನ್ನು ಹೊಂದಿದ್ದರು. 80ರ ದಶಕದಲ್ಲಿ ಅತ್ಯಂತ ಸಮರ್ಥ ನಾಯಕರಾಗಿ ಹೊರಹೊಮ್ಮಿದ ದೇವೇಗೌಡರು ಅಂದಿಗೂ ಇಂದಿಗೂ ಅತ್ಯುತ್ತಮ ನೀರಾವರಿ ತಜ್ಞರೆಂದು ಪ್ರಖ್ಯಾತಿಯಾದವರು.  ರಾಜ್ಯದ ಪ್ರತಿಯೊಂದು ಜಿಲ್ಲೆಗಳ ವೈಶಿಷ್ಟ್ಯಗಳನ್ನು ಸ್ಪಷ್ಟವಾಗಿ ಅರಿತಿದ್ದ ದೇವೇಗೌಡರು ಹಾಗೂ ಇದೇ ಮಾದರಿಯ ಮತ್ತೊಬ್ಬ ಧೀಮಂತ ನಾಯಕರಾಗಿದ್ದ ದಿವಂಗತ ಎಸ್.ಬಂಗಾರಪ್ಪ ಹಿಂದುಳಿದ ವರ್ಗಗಳಲ್ಲಿ ಸದಾ ಪ್ರಜ್ವಲಿಸುವ ಸ್ವಾಭಿಮಾನದ ಕಿಚ್ಚನ್ನು ತಂದುಕೊಟ್ಟಿದ್ದು ಸಾಮಾನ್ಯ ಸಂಗತಿಯೇನಲ್ಲ.

ತಮ್ಮ ಹಳ್ಳಿಯ ಮುಗ್ಧ, ಪ್ರಾಮಾಣಿಕ ವ್ಯಕ್ತಿತ್ವವನ್ನು ದೇವೇಗೌಡರು ದಣಿವರಿಯದ ನಿರಂತರ ಜನಸಂಪರ್ಕದ ರಾಜಕಾರಣದ ಮೂಲಕವೂ ಬಂಗಾರಪ್ಪನವರು ಸಮಾಜವಾದಿ ಹಿನ್ನೆಲೆಯಿಂದ, ಶಾಂತವೇರಿ ಗೋಪಾಲ ಗೌಡರ ನಾಯಕತ್ವದಿಂದ ಪಡೆದುಕೊಂಡಿದ್ದರು. ಸಕಾರಣವಾಗಿಯೆ ಇವರಿಗೆ ತಾವು ಈ ರಾಜ್ಯದ ಮುಖ್ಯಮಂತ್ರಿಯಾಗಲು ಅರ್ಹರೂ ಎನ್ನುವ ಆತ್ಮವಿಶ್ವಾಸ ಹಾಗೂ ಇದು ಫಲಿಸುವ ಕಾಲವೂ ಕೂಡಿ ಬಂದಾಗ ಆಗ ಚಲಾವಣೆಯಲ್ಲೇ ಇಲ್ಲದ ರಾಮಕೃಷ್ಣ ಹೆಗಡೆ ಎನ್ನುವ ಬೋರ್ಡ್ ರೂಂ ರಾಜಕಾರಣಿ ಹಿಂಬಾಗಿಲಿನಿಂದ ಪ್ರವೇಶಿಸಿ ಮುಖ್ಯಮಂತ್ರಿ ಗದ್ದುಗೆಗೇರಿ ತಮ್ಮ ಕುಟಿಲ ನೀತಿಯ ಮೂಲಕ ಇವರಿಬ್ಬರಿಗೂ ಚೆಳ್ಳೆಹಣ್ಣು ತಿನ್ನಿಸಿದ್ದರು.

ಇವರಿಬ್ಬರನ್ನು 80ರ ದಶಕದುದ್ದಕ್ಕೂ ಕಾಡಿದ ಕನ್ನಡ ಮಾಧ್ಯಮಗಳ ಜಾತೀಯತೆ ಹಾಗೂ ಧೂರ್ತತನವಂತೂ ಕಣ್ಣಿಗೆ ರಾಚುವಷ್ಟು ಪ್ರಖರವಾಗಿತ್ತು. ( ಆ ದಶಕಗಳಲ್ಲಿ ಹೆಗಡೆಯವರೊಂದಿಗೆ ಸತತವಾಗಿ ಗುರುತಿಸಿಕೊಂಡ,) ಅವರನ್ನು ಸದಾ ಬೆಂಬಲಿಸಿ ಈ ಶೂದ್ರ, ಹಿಂದುಳಿದ ರಾಜಕಾರಣಿಗಳ ಬಗ್ಗೆ ಅಸಡ್ಡೆ ತೋರಿದ ನಮ್ಮ ಪ್ರೀತಿಯ, ಹೆಮ್ಮೆಯ ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಈಗ ಬಂಗಾರಪ್ಪನವರು ತೀರಿಕೊಂಡನಂತರ ವಿಚಿತ್ರ ರೀತಿಯಲ್ಲಿ ರಾಗ ಬದಲಿಸಿ ಹಾಡುತ್ತಿರುವುದು ನಮ್ಮಂತಹವರಲ್ಲಿ ಬೆರಗನ್ನು, ಹತಾಶೆಯನ್ನು ಮೂಡಿಸಿದೆ.

ಆಗ ಲಂಕೇಶ್ ಪತ್ರಿಕೆ, ಮುಂಗಾರು,  ಪ್ರಜಾವಾಣಿಯಂತಹ ಪತ್ರಿಕೆಗಳನ್ನು ಹೊರತು ಪಡಿಸಿ ಮಿಕ್ಕೆಲ್ಲ ಮಾಧ್ಯಮಗಳು ಬೆನ್ನೆಲುಬಿಲ್ಲದ, ಕುತಂತ್ರ ರಾಜಕಾರಣಿ ಹೆಗಡೆಯವರನ್ನು ಅಟ್ಟದ ಮೇಲೆ ಕೂರಿಸಿ ಜನಗಳ ಮಧ್ಯದಿಂದ ರಾಜಕೀಯವನ್ನು ಮಾಡಿ ಜನನಾಯಕರೆನಿಸಿಕೊಂಡ ಇವರಿಬ್ಬರನ್ನೂ ಪದೇ ಪದೇ ಗೇಲಿಗೊಳಿಸುತ್ತ, ಹಂಗಿಸುತ್ತ ಹೆಗಡೆ ಒಬ್ಬ ವಿನಯವಂತ ರಾಜಕಾರಣಿಯಂತೆಯೂ, ಇವರು ಸೀನಿದರೆ ಅಕ್ಕರೆಯಿಂದ ಕೊಡೆ ಹಿಡಿದು, ದೇವೇಗೌಡ ಹಾಗೂ ಎಸ್.ಬಂಗಾರಪ್ಪ ಕೇವಲ ತಂಟೆಕೋರರಂತೆಯೂ, ಇವರಿಬ್ಬರೂ ಇಲ್ಲಿನ ಬರ ಪೀಡಿತ ಹಳ್ಳಿಗಳ ಬಗ್ಗೆ, ನೀರಾವರಿಯ ಅಗತ್ಯತೆಯ ಬಗ್ಗೆ ತಮ್ಮೆಲ್ಲ ಅನುಭವವನ್ನು ಬಳಸಿ ಮಾತನಾಡತೊಡಗಿದಾಗ ಇದೇ ಮಾಧ್ಯಮಗಳು ಇದನ್ನು ಬಂಡಾಯವೆನ್ನುವಂತೆಯೂ ಯಶಸ್ವಿಯಾಗಿ ಬಿಂಬಿಸಿದ್ದು ಇವರಿಬ್ಬರ ಆತ್ಮಪ್ರತಿಷ್ಠೆಗೆ ದೊಡ್ಡ ಬರೆಯನ್ನೇ ಎಳೆಯಿತು.

ಇದನ್ನು ಇವರಿಬ್ಬರೂ ತಮ್ಮ ಹಳ್ಳಿತನದ ಪ್ರಾಮಾಣಿಕತೆ, ಸರ್ವರಿಗೂ ಸಮಪಾಲನ್ನು ಬಯಸುವ ಪ್ರಾಮಾಣಿಕತೆಯನ್ನು ಬಳಸಿಕೊಂಡು ಮರಳಿ ತಮ್ಮ ಜನರ ಬಳಿಗೆ ಹೋಗುವುದರ ಬದಲು, ಆ ಮೂಲಕ ಮತ್ತೆ ತಮ್ಮ ರಾಜಕೀಯದ ಬುನಾದಿಯನ್ನು ಹಂತಹಂತವಾಗಿ ಕಟ್ಟುವುದರ ಬದಲು 90ರ ದಶಕದ ಅಂತ್ಯದ ವೇಳೆಗೆ ಸಾಮಾಜಿಕ ಸ್ಪರ್ಶವನ್ನು ನಿಧಾನವಾಗಿ ಕಳೆದುಕೊಳ್ಳುತ್ತ ಒಕ್ಕಲಿಗರೆಂದರೆ ಅವರು ಎಲ್ಲಾ ಜಾತಿಗಳಲ್ಲಿರುವ ವೃತ್ತಿಪರ, ಅಮಾಯಕ, ಅಸಹಾಯಕ ರೈತರು ಎನ್ನುವ ಮೂಲಭೂತ ತತ್ವವನ್ನೇ ಮರೆತು ಅವರನ್ನು ಕೇವಲ ತಮ್ಮ ಓಟ್ ಬ್ಯಾಂಕ್ ಜಾತಿಯಾಗಿ ಕಂಡ, ಸ್ವಂತದ, ಆದರ್ಶದ ಘನತೆಯೆಂದರೆ ಒಕ್ಕಲಿಗರ, ಸ್ವಂತ ಕುಟುಂಬದ ವರ್ಚಸ್ಸು ಹಾಗೂ ಅಧಿಕಾರವೆನ್ನುವ ಮಟ್ಟಕ್ಕೆ ತಲುಪಿದ ದೇವೇಗೌಡರು, 90ರ ದಶಕದ ಅಂತ್ಯದ ವೇಳೆಗೆ ತಮ್ಮ ಮೂಲ ಪ್ರಗತಿಪರ ಗುಣವಾದ ಎಲ್ಲಾ ಜಾತಿಯ ಬಡವರ ಪರ ಸದಾ ತುಡಿಯುವ ಹಳೇ ಕಾಲದ ತಮ್ಮ ವ್ಯಕ್ತಿತ್ವವನ್ನು ಜನನಾಯಕರಾಗುವ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವ ರಾಜಕೀಯ ಮುತ್ಸದ್ದಿತನವನ್ನೇ ಕಲಿಯದೆ ಕೇವಲ ವೈಯುಕ್ತಿಕ ಛಲವನ್ನೇ ಇನ್ನಿಲ್ಲದಂತೆ ನೆಚ್ಚಿ ಇದರ ಋಣಾತ್ಮಕ ಅಂಶಗಳನ್ನೇ ತಮ್ಮ ಆತ್ಮ ಪ್ರತ್ಯಯದ ಸದಾ ಕಾಲ ದುರಂತ ನಾಯಕನ ಪೋಸಿಗೆ ಬಳಸಿಕೊಂಡು ಸೋಲಿಲ್ಲದ ಸರದಾರರೆನ್ನುವ ಘೋಷಣೆಗೆ ಬಲಿಯಾಗಿ ಸಂಪೂರ್ಣವಾಗಿ ಹಾದಿ ತಪ್ಪಿದ ದಿವಂಗತ ಎಸ್.ಬಂಗಾರಪ್ಪ.

ಇವರಿಬ್ಬರೂ ತಮಗೆ ಸಹಜವಾಗಿ ದೊರೆತ ಜನನಾಯಕರ ಜನಪ್ರಿಯತೆಯ ಧನಾತ್ಮಕ ಅಂಶಗಳಿಗೆ ತಿಲಾಂಜಲಿಯಿಟ್ಟು, ಸ್ವತಹ ಪರಿಶ್ರಮದಿಂದ ಪಡೆದ ಈ ಜನನಾಯಕ ಜನಪ್ರಿಯತೆಯನ್ನು ಯಾರೂ ಕಂಡರಿಯದಂತಹ ಕುಂಟುಂಬ, ಸ್ವಜನ ಪಕ್ಷಪಾತದ ರಾಜಕಾರಣಕ್ಕೆ ಧಾರೆಯೆರೆದು ತಮ್ಮನ್ನು ನಂಬಿದ ಪಕ್ಷ, ಅಮಾಯಕ ಹಿಂಬಾಲಕರನ್ನು ಸಂಪೂರ್ಣ ಅಧೋಗತಿಗೆ ತಂದು ನಿಲ್ಲಿಸಿ ತಮ್ಮ ಜೀವಿತದ ಸಂಧ್ಯಾಕಾಲದ ವೇಳೆಗೆ ಸಂಪೂರ್ಣ ಆಸಹಾಯಕ ಸ್ಥಿತಿಗೆ ತಲುಪಿ ನಗೆಪಾಟಲಿಗೀಡಾಗಿದ್ದು ನಿಜಕ್ಕೂ ದುಖದ ಸಂಗತಿ. ಇಷ್ಟೇ ಅಲ್ಲ ತಮ್ಮ ಹುಂಬ ಛಲವನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಯಾರಿಗೋ ಪಾಠ ಕಲಿಸುತ್ತೇವೆ ಎನ್ನುವ ಹುಸಿ ಭ್ರಮೆಯಿಂದ ಅಧಿಕಾರಕ್ಕಾಗಿ ನೇಪಥ್ಯದಲ್ಲಿ ಹೊಂಚಿಹಾಕುತ್ತಿದ್ದ ಸಂಘ ಪರಿವಾರಕ್ಕೆ ಸಮರ್ಥ ರಾಜಕೀಯ ವೇದಿಕೆಯನ್ನು ನಿರ್ಮಿಸಿಕೊಟ್ಟರು. ಇಂತಹ ಸುವರ್ಣಾವಕಾಶವನ್ನು ಈ ಸಂಘ ಪರಿವಾರ ಕನಸಿನಲ್ಲಿಯೂ ನೆನಸಿರಲಿಲ್ಲ. ಆದರೆ ಈ ಜನನಾಯಕರು ತಮ್ಮ ರಾಜಕೀಯ ನೈತಿಕತೆಯನ್ನು ಅನಗತ್ಯವಾಗಿ ಬಲಿಕೊಟ್ಟು ಬಿಜೆಪಿಗೆ ಕರ್ನಾಟಕ ಹೆಬ್ಬಾಗಿಲನ್ನು ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ತೆರೆದು ಕೊಟ್ಟರು. ಇದಕ್ಕಾಗಿ ಇವರು ತೆತ್ತ ಬೆಲೆ ಅಪಾರವಾದದ್ದು ಹಾಗೆಯೇ ಕರ್ನಾಟಕದ ಜನತೆ ಕೂಡ. ಇವರಿಬ್ಬರಿಗೆ ಮೇಲಿನ ಬಣದ ತಮ್ಮ ಸಹೋದ್ಯೋಗಿಗಳ ಋಜು ಸ್ವಭಾವ ಸ್ವಲ್ಪವಾದರೂ ದಕ್ಕಿದ್ದರೆ, ಮೇಲಿನ ಬಣದ ಏನೇ ಬಂದರು ಕುಟುಂಬ ರಾಜಕಾರಣವನ್ನು ಮಾತ್ರ ಪೋಷಿಸುವುದಿಲ್ಲ ಎನ್ನುವ ನೈತಿಕ ಛಲ ಸ್ವಲ್ಪವಾದರೂ ದಕ್ಕಿದ್ದರೆ, ಮೇಲಿನ ಬಣದ ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳದ ನೈತಿಕತೆಯ ಪಾಲು ಸ್ವಲ್ಪವಾದರೂ ದಕ್ಕಿದ್ದರೆ….

 

ಬಣ  3 :

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಂ.ಸಿ.ನಾಣಯ್ಯ, ಎಚ್.ಕೆ.ಪಾಟೀಲ, ಸಿಂಧ್ಯ, ಎಚ್.ಸಿ.ಮಹಾದೇವಪ್ಪ ಮುಂತಾದವರು. ಮೇಲಿನ ಎರಡೂ ಬಣಗಳ ವ್ಯಕ್ತಿತ್ವವನ್ನು ಅಷ್ಟಿಷ್ಟು ಪಡೆದುಕೊಂಡಂತಿರುವ ಇವರ ಬಗ್ಗೆ ಹೆಚ್ಚಿಗೆ ಹೇಳುವುದೇನಿದೆ?

ಇವರು ಸಂಘ ಪರಿವಾರದ ಕೋಮುವಾದ ರಾಜಕಾರಣಕ್ಕೆ ತಮ್ಮ ಸೆಕ್ಯುಲರ್ ವ್ಯಕ್ತಿತ್ವದ ಮೂಲಕವೇ ತಕ್ಕ ಉತ್ತರ ನೀಡಬಲ್ಲ ಛಾತಿಯುಳ್ಳವರು. ಆಡಳಿತಾತ್ಮಕವಾಗಿ ದಕ್ಷತೆಯನ್ನು, ಅಪಾರ ಅನುಭವವನ್ನು ಸಾಧಿಸಿರುವವರು. ರಾಜ್ಯದ ಹಣಕಾಸಿನ ಬಗ್ಗೆಯಾಗಲಿ, ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆಯಾಗಲೀ ಇವರು ಅಪಾರ ಜ್ಞಾನದಿಂದ ಮಾತನಾಡಬಲ್ಲರು. ಆದರೆ ಸಕ್ರಿಯ ರಾಜಕಾರಣಕ್ಕೆ ಅತ್ಯವಶ್ಯಕವಾಗಿರುವ ಸದಾಕಾಲ ಜನಸಂಪರ್ಕದ ತುರ್ತು ಅಗತ್ಯತೆ ಇವರಿಗೆ ಅಲರ್ಜಿ. ಏಕೆಂದರೆ ಇದಕ್ಕಾಗಿ ಕನಿಷ್ಟ 12 ಗಂಟೆಗಳ ರಾಜಕೀಯ ಮಾಡಬೇಕಾಗುತ್ತದೆ. ಅದು ಇವರಿಗಾಗದು. ಇವರ ಜನನಾಯಕನ ಖ್ಯಾತಿ ಮೇಲಿನ ಬಣ ಒಂದಂಕ್ಕಿಂತಲೂ ಕೊಂಚ ಜಾಸ್ತಿ ಹಾಗೂ ಮೇಲಿನ ಬಣ ಎರಡಕ್ಕಿಂತಲೂ ಕಡಿಮೆ. ಯಾವುದೇ ಕಾಲಕ್ಕೂ ಯಾರನ್ನು ಎದುರಿಸಿಯಾದರೂ ಸರಿಯೆ ನನ್ನ ಸ್ವಂತ ವ್ಯಕ್ತಿತ್ವ, ಛಲವನ್ನು ನೆಚ್ಚಿಯೇ ರಾಜಕೀಯ ಮಾಡುತ್ತೇನೆ ಹೊರತು ಇನ್ನೊಬ್ಬರ ಹಂಗಿನೊಳಗೆ ನೆಚ್ಚಿಕೊಂಡು ಮಾತ್ರ ಅಲ್ಲ ಎನ್ನುವ ರಾಜಕೀಯ ಛಲ ಮೇಲಿನ ಮೊದಲ ಬಣಕ್ಕಿಂತ ಸ್ವಲ್ಪ ಜಾಸ್ತಿ, ಎರಡನೇ ಬಣಕ್ಕಿಂತ ಕಡಿಮೆ. ಇವರ ಪ್ರಗತಿಪರ ಚಿಂತನೆಯ ಮನೋಭಾವ ಮೇಲಿನ ಎರಡೂ ಬಣಕ್ಕಿಂತಲೂ ಜಾಸ್ತಿ. ರಾಜಕೀಯದಲ್ಲಿ ಸದಾಕಾಲ ಎದುರಾಗುವ ಮುಂದೇನು ಮಾಡಬೇಕು ಎನ್ನುವ ನಿರಂತರ ಜಿಜ್ಞಾಸೆಯನ್ನು ಎದುರಿಸುವ, ನಿರ್ಧರಿಸುವ ಸ್ಪಷ್ಟತೆಯ ವಿಷಯದಲ್ಲಿ ಮೇಲಿನ ಎರಡೂ ಬಣಕ್ಕಿಂತಲೂ ಸಂಪೂರ್ಣ ಕಡಿಮೆ. ಇದು ಇವರಲ್ಲಿ ಅತ್ಯಂತ ದುರ್ಬಲ ರಾಜಕೀಯ ಇಚ್ಛಾಶಕ್ತಿಯ ಮನೋಭಾವವನ್ನು ಹುಟ್ಟಿಹಾಕಿ ಮಸಿ ಇಟ್ಟಂತೆ ಎಲ್ಲವನ್ನೂ ನುಂಗಿ ನೀರು ಕುಡಿದಿದೆ.

ಇಂದಿನ ಅತ್ಯಂತ ಹತಾಶೆಯ, ಸಂಧಿಗ್ಧ, ದಿಕ್ಕೆಟ್ಟ ಪರಿಸ್ಥಿತಿಯನ್ನು ಇವರು ತಮ್ಮ ಜಡತ್ವವನ್ನು ಕಳಚಿ ಸಂಪೂರ್ಣವಾಗಿ ಮೇಲೆದ್ದು ನಿರಂತರ ಜನಸಂಪರ್ಕದ ಮೂಲಕ ತಮ್ಮ ರಾಜಕೀಯ ಜೀವನದ ಪುನರುಜ್ಜೀವನಗೊಳಸಿಕೊಂಡರೆ ಇವರಿಗೆ ಸುವರ್ಣಾವಕಾಶ. ಆದರೆ ಕೊಟ್ಟ ಕುದುರೆಯನ್ನು ಏರಲು ನಿರಾಕರಿಸುತ್ತಾರೆ ಅಥವಾ ನಿರಾಕರಿಸಿದ್ದಾರೆ ಎನ್ನುವ ತಮ್ಮ ಮೇಲಿನ ಅಪಾದನೆಯಿಂದ ಹೊರಬರಲು ಇವರು ಪ್ರಯತ್ನಿಸಿದ ಯಾವುದೇ ನಿದರ್ಶನಗಳು ಇಲ್ಲ.

 

ಬಣ 4 :

ಕುಮಾರಸ್ವಾಮಿ, ಯಡಿಯೂರಪ್ಪ, ಶ್ರೀರಾಮುಲು ಹಾಗೂ ಮುಂತಾದವರು. ಮೊದಲಿಗೇ ಹೇಳಬಿಡಬೇಕು ಅನಾಯಾಸವಾಗಿ ಮೂರನೇ ಬಣದಲ್ಲಿರಬಹುದಾದಂತಹ ಜನಪ್ರಿಯ ರಾಜಕಾರಣಿ ಕುಮಾರಸ್ವಾಮಿ ತಮ್ಮ ಗೊಂದಲಗಳು, ಆತ್ಮಹತ್ಯಾತ್ಮಕ ನಿಲುವುಗಳು  ಮೂಲಕ ಸರ್ರನೆ ಈ ಭ್ರಷ್ಟ ನಾಲ್ಕನೇ ಬಣಕ್ಕೆ ಜಾರಿರುವುದು 21ನೇ ಶತಮಾನದ ಕರ್ನಾಟಕ ರಾಜಕೀಯದ ದುರಂತಗಳಲ್ಲೊಂದು. ಕೇವಲ ತಂತ್ರ ಹಾಗೂ ಪ್ರತಿ ತಂತ್ರಗಳನ್ನು ಹೆಣೆಯುತ್ತಾ ಎದುರಾಳಿಗಳನ್ನು ಅಡ್ಡಬೀಳಿಸುವುದೇ ಸಕ್ರಿಯ ರಾಜಕಾರಣ, ವೈಯುಕ್ತಿಕ ಭ್ರಷ್ಟಾಚಾರದ ಜೊತೆಗೆ ಸಂಪೂರ್ಣ ವ್ಯವಸ್ಧೆಯನ್ನೇ ಭ್ರಷ್ಟಾಚಾರಗೊಳಿಸಿದ ಅಪಕೀರ್ತಿ, ಕರ್ನಾಟದಲ್ಲಿ ಸದಾಕಾಲ ಅಧಿಕಾರ ಹಿಡಿಯುವುದು ನಮ್ಮ ಜನ್ಮಸಿದ್ಧ ಹಕ್ಕು ಎನ್ನುವ ಪಾಳೇಗಾರಿಕೆ ಧೋರಣೆ, ನೈತಿಕ ರಾಜಕಾರಣದ ಬಗ್ಗೆ ಇನ್ನಿಲ್ಲದಂತಹ ಅಸಡ್ಡೆ ಹಾಗೂ ತಿರಸ್ಕಾರ, ರಾಜಕೀಯದಲ್ಲಿ ನೈತಿಕತೆ ಎನ್ನುವುದೇ ಕಸದ ಬುಟ್ಟಿಗೆ ಸಮ, ಕುಂಟುಂಬ, ಸ್ವಜನ ಪಕ್ಷಪಾತ, ಜಾತಿ ರಾಜಕಾರಣವೆನ್ನುವುದು ಜನತೆಯ ಆಶೀರ್ವಾದದ ಮೂಲಕವೇ ಮಾಡುತ್ತಿದ್ದೇವೆ ಎನ್ನುವ ಹೂಂಕರಿಕೆ ಇಂತಹ ಅವಗುಣಗಳನ್ನು ಹೊಂದಿರುವ ಯಡಿಯೂರಪ್ಪ, ಶ್ರೀರಾಮುಲುರಂತಹವರ ರಾಜಕಾರಣಿಗಳು ಇವಕ್ಕೆ ಸಮವೆನ್ನುವಂತೆ ನಡೆದುಕೊಳ್ಳುತ್ತಿರುವ ಕುಮಾರಸ್ವಾಮಿ ಹಾಗೂ ಇವರ ಜೊತೆಗೆ ಸದಾಕಾಲ ಕಣ್ಣಾಮುಚ್ಚಾಲೆಯಾಟವಾಡುತ್ತ, ಅದರ ಖುಷಿಯನ್ನು ಅನುಭವಿಸುತ್ತ, ಇದನ್ನೇ ರಾಜಕಾರಣವೆನ್ನುವ ಭ್ರಮೆಯಲ್ಲಿರುವ, ಸುದ್ದಿಯಲ್ಲಿರುವ ಕುಮಾರಸ್ವಾಮಿಯವರ ರಾಜಕೀಯ ಎಲ್ಲವೂ ಬರುವ ವರ್ಷಗಳಲ್ಲಿ ಕರ್ನಾಟಕವನ್ನು ಮತ್ತಷ್ಟು ಅಂಧಕಾರಕ್ಕೆ, ಅಧೋಗತಿಗೆ ತಳ್ಳುವುದು ಗ್ಯಾರಂಟಿ. ಇವೆಲ್ಲವಕ್ಕೆ ಕಿರೀಟವಿಟ್ಟಂತೆ ಶ್ರೀರಾಮುಲು ಅವರು ಹಿಂದುಳಿದವರ ಏಳಿಗೆಗಾಗಿ ಸ್ಥಾಪಿಸುವ ಹೊಸ ಪಕ್ಷ ಆ ವರ್ಗದ ಅಮಾಯಕ ಜನತೆಯನ್ನು ಹಳ್ಳಕ್ಕೆ ಬೀಳಿಸುವುದು ಗ್ಯಾರಂಟಿ.

ಕೇವಲ ನೋಟುಗಳನ್ನು ಹಂಚುವುದೇ ಸಮಾಜಕಾರ್ಯವೆನ್ನುವುದನ್ನು ರಾಜಕೀಯ ಸಿದ್ಧಾಂತವನ್ನಾಗಿ ರೂಪಿಸಿರುವ ಶ್ರೀರಾಮುಲು ಹಾಗೂ ರೆಡ್ಡಿಯ ಬಳಗ ಬಳ್ಳಾರಿ ಭಾಗದ ಜನತೆಯನ್ನು ಕೂಡ ಇದಕ್ಕೆ ಸರಿಯಾಗಿ ಟ್ಯೂನ್ ಮಾಡಿಕೊಂಡಿರುವುದು ಹಾಗೂ ಈ ಮತಿಹೀನ ಹೊಸ ಪಕ್ಷದ ಮೂಲಕ ಇದು ಇನ್ನಷ್ಟು ಮುಂದುವರೆದು ಇನ್ನಿಲ್ಲದ ಹಂಗಿನ ಅನೈತಿಕ ಸ್ಥಿತಿಗೆ ಆ ಜಿಲ್ಲೆಯನ್ನು ಸಂಪೂರ್ಣವಾಗಿ ತಳ್ಳಿ ಇದೇ ತತ್ವವನ್ನು ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವ ಕುಟಿಲ ಯೋಜನೆಗಳಿಗೆ ಮಿಕ್ಕವರಿಬ್ಬರೂ ಅಗಲೇ ಕಣ್ಣು ಮಿಟುಕಿಸುತ್ತಿರುವ ರೀತಿ, ಈ ಬಣದ ಮೂವರೂ ಮುಂದಿನ ದಿನಗಳ ರಾಜಕೀಯದ ಕಿಂಗ್ ಮೇಕರ್ ಗಳಾಗಿ ಬಿಂಬಿತವಾಗಿರುತ್ತಿರುವುದು, ಮೂರನೇ ಬಣದ ಜನರ ನಿಷ್ಕ್ರಿಯತೆ ಎಲ್ಲವೂ ರಾಜ್ಯದ ಪ್ರಜ್ಞಾವಂತರಿಗೆ, ನೈತಿಕತೆಗೆ ದೊಡ್ಡ ಸವಾಲಾಗುತ್ತವೆ.

ಹಾಗಿದ್ದರೆ ನಾವೇನು ಮಾಡಬೇಕು?

ಉತ್ತರ ಪ್ರದೇಶದ ಮುಸ್ಲಿಮರ ಆಯ್ಕೆಗಳು…

ಚಿತ್ರಕೃಪೆ: ಗಾರ್ಡಿಯನ್

ಬಿ. ಶ್ರೀಪಾದ ಭಟ್

ಊರ ಮಧ್ಯದ ಕಣ್ಣ ಕಾಡಿನೊಳಗೆ
ಬಿದ್ದಿದ್ದಾವೆ ಐದು ಹೆಣನು
ಬಂದು ಬಂದು ಅಳುವರು-ಬಳಗ ಘನವಾದ ಕಾರಣ
ಹೆಣನೂ ಬೇಯದು, ಕಾಡೂ ನಂದದು
ಮಾಡ ಉರಿಯಿತ್ತು ಗುಹೇಶ್ವರ
— ಅಲ್ಲಮ

ಇತ್ತೀಚೆಗೆ ತೆಹಲ್ಕ ವಾರಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಉತ್ತರ ಪ್ರದೇಶದ ಮುಸ್ಲಿಂ ನಾಯಕರು, ಧರ್ಮ ಗುರುಗಳು ಕಳೆದ 60 ವರ್ಷಗಳಿಂದ ಚುನಾವಣಾ ರಾಜಕೀಯ ಲಾಭಕ್ಕಾಗಿ ರಾಜ್ಯದ ಅಮಾಯಕ, ಮುಗ್ಧ ಮುಸ್ಲಿಮರನ್ನು ಬಳಸಿಕೊಂಡು ತದನಂತರ ಉಂಡ ಬಾಳೆ ಎಲೆಯನ್ನು ಬಿಸಾಡಿದಂತೆ ಕೆಳೆಗೆಸೆಯುವ ಆ ರಾಜ್ಯದ ಪ್ರಮುಖ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಈ ಮುಸ್ಲಿಂ ನಾಯಕರ ಆಕ್ರೋಶಕ್ಕೆ ತುತ್ತಾಗಿರುವ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಹಾಗೂ ಬಹುಜನ ಸಮಾಜ ಪಾರ್ಟಿಗಳೆಂಬ ಸೋ ಕಾಲ್ಡ್ ಸೆಕ್ಯುಲರ್ ಪಕ್ಷಗಳು. ಮುಸ್ಲಿಂರ ಇಂದಿನ ಹೊಸ ಸಿಟ್ಟಿನ ಲಾಭದ ಪಾಲು ನೇರವಾಗಿ ತನ್ನ ತಟ್ಟೆಯೊಳಗೆ ಜಾರಿಬೀಳುತ್ತದೆ ಎನ್ನುವ ದುರಾಸೆಯಲ್ಲಿ ಕಾಯುತ್ತಿರುವುದು ಇದೇ ಮುಸ್ಲಿಂರ ರಾಷ್ಟ್ರೀಯತೆಯನ್ನು ಸದಾ ಕಾಲ ಒಂದಲ್ಲ ಒಂದು ರೀತಿ ಪ್ರಶ್ನಿಸಿ ಅವರನ್ನು ಅವಮಾನಿಸುತ್ತಿರುವ ಕೋಮುವಾದಿ ಸಂಘಪರಿವಾರ.

ಇದಕ್ಕೆಲ್ಲ ಉತ್ತರಿಸಬೇಕಾದ ಆ ರಾಜ್ಯದ ಮುಗ್ಧ ಮುಸ್ಲಿಂ ಪ್ರಜೆಗಳು ಮಾತ್ರ ಗೊಂದಲದ ಗೂಡಾಗಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳು ಹಾಗೂ ಚುನಾವಣಾ ಫಲಿತಾಂಶಗಳು ಮಾತ್ರ ಇದಕ್ಕೆ ಸರಿಯಾದ ಉತ್ತರ ಕೊಡಬಲ್ಲವು. ಇದಕ್ಕೆ ಉದಾಹರಣೆಯಾಗಿ ಒಂದು ಕಾಲಕ್ಕೆ ಬಿಎಸ್‌ಪಿ ಪಕ್ಷದ ಪ್ರಮುಖ ಮುಸ್ಲಿಂ ನೇತಾರರಾಗಿದ್ದ ಇಲ್ಯಾಸ್ ಅಜ್ಮಿ ಅವರು ಆ ಪಕ್ಷದಿಂದ ಹೊರ ನಡೆದು ತಮ್ಮದೇ ಸ್ವತಂತ್ರ ಪಕ್ಷ “ಆರ್.ಐ.ಪಿ”ಯನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಮುಸ್ಲಿಂರ ಹಕ್ಕುಭಾದ್ಯತೆಗಳಿಗಾಗಿ ಹೋರಾಡುವ ಮಾತಾಡುತ್ತಿದ್ದಾರೆ. ಕಳೆದ 60 ವರ್ಷಗಳಿಂದ ಮುಮಸ್ಲಿಮರನ್ನು ನಂಬಿಸಿ ಕೈಕೊಟ್ಟ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಕ್ಕೆ ಈ ಬಾರಿ ಮಣ್ಣುಮುಕ್ಕಿಸಲು ಟೊಂಕಕಟ್ಟಿ ನಿಂತಿರುವ ಇಲ್ಯಾಸ್ ಅವರು ಇದಕ್ಕಾಗಿ ಯಾವುದೇ ಸೈದ್ಧಾಂತಿಕ ತತ್ವಗಳ ಬದಲಾಗಿ ಆಸರೆ ಪಡೆದುಕೊಳ್ಳುತ್ತಿರುವುದು  ಇದೇ ಮುಸ್ಲಿಂರ ದುರ್ಗತಿಗೆ ಕಾರಣರಾದ ಸಂಘಪರಿವಾರವನ್ನು. ಈಗ ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಇಲ್ಯಾಸ್ ಅಜ್ಮಿ ಅವರು ಬಿಜೆಪಿಯ ಮುಸ್ಲಿಂ ಮುಖವಾಡವಾಗಿ ಗುರುತಿಸಲ್ಪಡುತ್ತಿದ್ದಾರೆ. ಬಿಜೆಪಿಯೊಂದಿಗೆ ವೇದಿಕೆಯನ್ನು ಕೂಡ ಹಂಚಿಕೊಂಡಿದ್ದಾರೆ.

ಇವರಷ್ಟು ನೇರವಾಗಿ ಸಂಘಪರಿವಾರದೊಂದಿಗೆ ಗುರುತಿಸಿಕೊಳ್ಳದಿದ್ದರೂ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳಿಗೆ ಮಾತ್ರ  ತಕ್ಕ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿರುವ ಇತರ ಮುಸ್ಲಿಂ ನಾಯಕರೆಂದರೆ “ಶಾಂತಿ ಪಕ್ಷ”ದ ಮಹಮ್ಮದ್ ಅಯೂಬ್, “ಐಎಮ್‌ಸಿ”ಯ ತಕೀರ್ ರಾಜ, ಹಾಗೂ ಜಾವೆದ್ ಸಿದ್ದಿಕಿ. ಇವರ ಆಳದ ಆಕ್ರೋಶ ನಿಜಕ್ಕೂ ಅರ್ಥಪೂರ್ಣ ಹಾಗೂ ಸಹಜವಾದದ್ದು. ಆದರೆ ಬೆಂಕಿಯಿಂದ ಹೊರಬರಬೇಕೆನ್ನುವ ನಿರ್ಧಾರದಿಂದ ಇವರು ಬೀಳುತ್ತಿರುವುದು ಬಾಣಲೆಗೆ ಕೂಡ ಅಲ್ಲ, ಸಂಘ ಪರಿವಾರವೆಂಬ ಕುದಿಯುವ ಲಾವಾರಸಕ್ಕೆ. ಇಲ್ಲಿ ಬಂದು ಬಿದ್ದರೆ ಚಣ ಮಾತ್ರದಲ್ಲಿ ಬೂದಿಯಾಗುವುದು ಗ್ಯಾರಂಟಿ. ಇದು ಈ ನಾಯಕರಿಗೆ ಗೊತ್ತು. ಆದರೆ ಅವರು ಪ್ರದರ್ಶಿಸುವ ಅಸಹಾಯಕತೆ ಅರ್ಥವಾಗುವಂತದ್ದಾರೂ ಅದಕ್ಕೆ ಕಂಡುಕೊಳ್ಳುವ ಪರಿಹಾರ ಮಾತ್ರ ಅತ್ಮಹತ್ಯಾತ್ಮಕವಾದದ್ದು. ವರ್ಷಗಳಷ್ಟು ಕಾಲ ಅವಮಾನಕ್ಕೆ, ಮೋಸಕ್ಕೆ ಒಳಗಾಗಿರುವ ಸಮುದಾಯವೊಂದಕ್ಕೆ ಅದರಿಂದ ಬಿಡುಗಡೆ ಪಡೆಯಬೇಕಾದರೆ ಸೈದ್ಧಾಂತಿಕವಾಗಿ, ವೈಚಾರಿಕವಾಗಿ, ಸರಿ ತಪ್ಪುಗಳನ್ನು ಅಳೆದು ಸುರಿದು ಯೋಚಿಸಿ ಅತ್ಯಂತ ನ್ಯಾಯಬದ್ಧ ದಾರಿಯಲ್ಲಿ ನಡೆಸುವ, ತಮ್ಮೊಳಗಿನ ಸಂಸ್ಕೃತಿಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ನಾಯಕತ್ವದ ತಂಡವೊಂದರ ಅವಶ್ಯಕತೆ ಸದಾಕಾಲ ಬೇಕಾಗುತ್ತದೆ. ಏಕೆಂದರೆ ಕತ್ತಲಿನ ಈ ದೂರದ ದಾರಿಯನ್ನು ಕ್ರಮಿಸುವುದು ಅತ್ಯಂತ ಕಷ್ಟಕರವಾದದ್ದಾರರೂ, ಅತ್ಯಂತ ದೀರ್ಘವಾದದ್ದಾರೂ ನಂತರ ಅದು ತಲಪುವ ಗುರಿ ಮಾತ್ರ ನಿರ್ಣಾಯಕವಾಗಿರುತ್ತದೆ, ನೆಮ್ಮದಿಯದಾಗಿರುತ್ತದೆ. ಹಾಗೂ ಅಲ್ಲಿ ಸರಾಗವಾದ ಉಸಿರಾಡುವಂತಹ, ಆತ್ಮಾಭಿಮಾನದ ವಾತಾವರಣವಿರುತ್ತದೆ. ಆದರೆ ಅಂದಿಗೂ ಹಾಗೂ ಇಂದಿಗೂ ಭಾರತ ಮುಸ್ಲಿಂ ಸಮುದಾಯಗಕ್ಕೆ ಈ ಸುಯೋಗ ಲಭ್ಯವಾಗಿಲ್ಲ.

ಪ್ರತಿಗಾಮಿ ಬ್ರಾಹ್ಮಣ್ಯದ ವೈದಿಕ ಸಿದ್ಧಾಂತವನ್ನು, ಶೂದ್ರರ ದೈಹಿಕತೆಯನ್ನೂ ಬಳಸಿಕೊಂಡು ಮುಸ್ಲಿಂರಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಒಂದಂಶದ ಕಾರ್ಯಕ್ರಮದ ಮೂಲಕ “ಏಕ್ ಧಕ್ಕ ಔರ್ ದೋ”ಎನ್ನುವ ಠೇಂಕಾರದ ಕ್ರೌರ್ಯದ ಅಮಾನುಷತೆಯನ್ನು ಬಳಸಿಕೊಂಡು ಮುಸ್ಲಿಂರ ನರಮೇಧವನ್ನು ನಡೆಸಿ, ರಾಷ್ಟ್ರೀಯತೆಯ, ಹುಸಿ ದೇಶಪ್ರೇಮದ  ಹೆಸರಿನಲ್ಲಿ ಸದಾಕಾಲ “ಅವರನ್ನು” ಅವಮಾನಕ್ಕೆ ಗುರಿಪಡಿಸುತ್ತ “ಅವರು” ಈ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ಬದುಕುವಂತಹ ಸ್ಥಿತಿ ನಿರ್ಮಾಣಗೊಳಿಸಿರುವ ಈ ಸಂಘ ಪರಿವಾರ ಅಧಿಕಾರದ ದುರಾಸೆಗೆ ಇಂದು ಯಾವುದೇ ನಾಚಿಕೆಯಿಲ್ಲದೆ ಈ ಗೊಂದಲದ ವಾತಾವರಣದ ದುರ್ಲಾಭ ಪಡೆಯುವ ಹುನ್ನಾರದಲ್ಲಿದೆ. ದಶಕಗಳ ಕಾಲ ಸದಾ ಸುಳ್ಳುಗಳನ್ನೇ ಹುಟ್ಟಿ ಹಾಕುತ್ತಾ, ಫ್ಯಾಸಿಸಂ ಮಾರ್ಗವನ್ನೇ ಬಳಸಿ ತನ್ನ ಗುಪ್ತ  ಕಾರ್ಯಸೂಚಿಗಳನ್ನು ಅನುಷ್ಟಾನಗೊಳಿಸಿಕೊಳ್ಳುತ್ತಿರುವ ಇವರ ಕುಟಿಲ ನೀತಿಗೆ ಇಂದು ಉತ್ತರ ಪ್ರದೇಶದಲ್ಲಿ ಮುಸ್ಲಿಂರು ವಿಚಿತ್ರ ರೀತಿಯಲ್ಲಿ ಬಲಿಯಾಗುತ್ತಿರುವುದು ಅತ್ಯಂತ ದುರಂತ ಸ್ಥಿತಿ. ಇದು ಮುಸ್ಲಿಂರ ಹೊರಗಿನ ಶತ್ರುಗಳು ಇವರನ್ನು ಒಂದು ಕಡೆಗೆ ಜಗ್ಗಿದರೆ ಒಳಗಿನ ಶತ್ರುಗಳಾದ ಇಸ್ಲಾಂ ಮೂಲಭೂತವಾದವು ಇವರನ್ನು ಮತ್ತೆಲ್ಲಿಗೂ ಹೋಗದಂತೆ ಕಟ್ಟಿಹಾಕಿದೆ. ಪ್ರತಿ ಹೆಜ್ಜೆಗೂ ಅಧುನಿಕತೆಯನ್ನು ,ಸಮಾನತೆಯನ್ನು ಚಿವುಟಿಹಾಕುವ ಈ ಮೂಲಭೂತವಾದಿಗಳ ಕಪಿಮುಷ್ಟಿಯಿಂದ ನಿಸ್ಸಾಹಯಕ ಮುಸ್ಲಿಂ ಸಮಾಜವನ್ನು ಬಿಡುಗಡೆಗೊಳಿಸುವ ಯಾವ ಕಾರ್ಯಕ್ರಮಗಳನ್ನು ಹಾಕಿಕೊಳ್ಳದ ಬಹುಪಾಲು ಮುಸ್ಲಿಂ ನಾಯಕರು ವಿನಾಕಾರಣವಾಗಿ ಪರಿಸ್ಥಿತಿಯನ್ನು ಕೈತಪ್ಪಿಸಿಕೊಳ್ಳುವಂತೆ ನಡೆದುಕೊಳ್ಳುತ್ತಿರುವುದು ಯಾರಿಗೆ ಲಾಭವೆನ್ನುವುದು ಸರ್ವವಿದಿತ.

ಧರ್ಮಧ ಅಧಾರದ ಮೇಲೆ ವಿಭಜನೆಗೊಂಡ ದೇಶದಲ್ಲಿ ಅಲ್ಪಸಂಖ್ಯಾತರು ಹೊರಗಿನ ಕೋಮುವಾದದ ಫ್ಯಾಸಿಸಂ ವಿರುದ್ಧವೂ, ಒಳಗಿನ ಪ್ರತಿಗಾಮಿ ಮೂಲಭೂತವಾದದ ವಿರುದ್ಧವೂ ಏಕ ಕಾಲಕ್ಕೆ ಹೋರಾಡಬೇಕಾದ ಪ್ರಸಂಗದಲ್ಲಿ ಅತ್ಯಂತ ಆಧುನಿಕ ಶಿಕ್ಷಣದ ಜರೂರತ್ತು, ಸದಾಕಾಲ ಪೊರೆಯುವ ದಿಟ್ಟತೆ ಏಕಕಾಲಕ್ಕೆ ಬೇಕಾಗುತ್ತದೆ. ಆದರೆ ಇದ್ಯಾವುದೂ ಮಾತಾಡಿದಷ್ಟೂ ಸುಲುಭವಲ್ಲ ಎನ್ನುವುದು ಭಾರತ ಸ್ವಾತಂತ್ರಗೊಂಡ 64 ವರ್ಷಗಳ ನಂತರವೂ ದೇಶದ ಉತ್ತರ ಭಾಗದಲ್ಲಿ ಕೋಮು ಗಲಭೆಗಳು, ಭಯೋತ್ಪಾದನೆ ನಡೆದರೆ ಉತ್ತರದಿಂದ ತುದಿಯಿಂದ ದಕ್ಷಿಣದ ತುದಿಯುದ್ದಕ್ಕೂ ಇಡೀ ಮುಸ್ಲಿಂ ಸಮುದಾಯ ಅನುಮಾನದ ಹಿಂಸೆಯಲ್ಲಿ ಕಣ್ತಪ್ಪಿಸಿ ಬದುಕಬೇಕಾಗಿ ಬರುವುದು ಇದಕ್ಕೆ ಸಾಕ್ಷಿ. ಇವೆಲ್ಲಕೂ ಆಶಾವಾದದಂತೆ ಹುಟ್ಟಿಕೊಂಡ ಎಡಪಂಥೀಯ ಸೆಕ್ಯುಲರ್ ಚಿಂತನೆಗಳು, ಚಳುವಳಿಗಳು ಮುಸ್ಲಿಂರಲ್ಲಿ ಕೊಂಚ ನಿರಾಳತೆಯನ್ನು, ಸ್ಥಿರತೆಯನ್ನು, ಇವ ನಮ್ಮವ ಇವ ನಮ್ಮವ ಎನ್ನುವ ಭ್ರಾತೃತ್ವವನ್ನು ತಂದು ಕೊಟ್ಟರೂ ಈ ಚಳುವಳಿಗಳ ನಾಸ್ತಿಕವಾದತ್ವ ಮತ್ತೊಂದು ರೀತಿಯಲ್ಲಿ ಬಿಕ್ಕಟ್ಟನ್ನೂ ಸೃಷ್ಟಿಸಿದ್ದು ಯಾರೂ ನಿರಾಕರಿಸುವಂತಿಲ್ಲ. ಈ ಬಿಕ್ಕಟ್ಟಿನ ದುರ್ಲಾಭ ಪಡೆದ ಸಂಘ ಪರಿವಾರ ಬಹುಪಾಲು ಹಿಂದೂಗಳಲ್ಲಿ ಎಡಪಂಥೀಯರ ಬಗ್ಗೆ ನಿರಾಕರಣೆ ಧೋರಣೆಯನ್ನು ಯಶಸ್ವಿಯಾಗಿ ಹುಟ್ಟಿ ಹಾಕಿತು. ಈ ಸಂದರ್ಭದಲ್ಲಿ ಚಿಂತಕ ಅಸ್ಗರ್ ಅಲಿ ಇಂಜಿನಿಯರ್ ಹೇಳಿದ” ಗಾಂಧೀಜಿಯವರೇನಾದರೂ ನಾಸ್ತಿಕರಾಗಿದ್ದರೆ ಈ ಸಂಘಪರಿವಾರ ಅವರನ್ನು ಸೈದ್ಧಾಂತಿಕವಾಗಿ ಎಂದೋ ಮುಗಿಸಿಬಿಡುತ್ತಿತ್ತು” ಮಾತು ಎಷ್ಟೊಂದು ಅರ್ಥಪೂರ್ಣ. ಅದಕ್ಕೆ ಇರಬೇಕು ಪ್ರಗತಿಪರ, ಎಡಪಂಥೀಯ ಪ್ರಜಾಪ್ರಭುತ್ವವಾದಿ ಚಳುವಳಿಗಳು ಪ್ರಖರವಾಗಿರುವ ದಕ್ಷಿಣದ ರಾಜ್ಯಗಳಲ್ಲಿನ ಕೋಮುಗಲಭೆಗಳ ಪ್ರಮಾಣ ಪ್ರಗತಿಪರ ಚಳವಳಿಗಳ ಕೊರತೆಯಿರುವ ಉತ್ತರ ಭಾರತಕ್ಕೆ ಹೋಲಿಸಿದರೆ  ಬಹುಪಾಲು ಕಡಿಮೆಯೆ. ಏಕೆಂದರೆ ದಕ್ಷಿಣ ರಾಜ್ಯಗಳ ಈ ಪ್ರಗತಿಪರ ಚಳುವಳಿಗಳು ಕೇವಲ ಕೋಮುವಾದವನ್ನಷ್ಟೇ ವಿರೋಧಿಸದೆ ಈ ಕೋಮುವಾದದ ಗುಪ್ತ ಕಾರ್ಯಸೂಚಿಯಾದ ಪುರೋಹಿತಶಾಹಿಯ ಪುನುರುಜ್ಜೀವೀಕರಣದ ಕುಟಿಲ ನೀತಿಗಳ ವಿರುದ್ಧವೂ ದೊಡ್ಡದಾದ ಹೋರಾಟಗಳನ್ನೇ ನಡೆಸಿದವು. ಇಲ್ಲಿನ ಚಿಂತಕರು ಸಂಘಪರಿವಾರದ ದುಷ್ಟತನದ ಬಗ್ಗೆ ಮಾತನಾಡುತ್ತಿದ್ದರೂ ಅದೇ ಕಾಲಘಟ್ಟಕ್ಕೆ ಅದು ಜೀವವಿರೋಧಿ ವೈದಿಕ ಪರಂಪರೆಯ ವಿರೋಧದ ಅಯಾಮವನ್ನೂ ಪಡೆದುಕೊಳ್ಳುತ್ತಿತ್ತು. ಆದರೆ ಉತ್ತರ ಭಾರತದ ಪರಂಪರೆಯ ಅಸ್ಮಿತೆ ದಕ್ಷಿಣಕ್ಕಿಂತಲೂ ಭಿನ್ನವಾದದ್ದು.ಅಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಅನ್ಯಧರ್ಮೀಯರೊಂದಿಗೆ ಕೊಡು ಕೊಳ್ಳುವಿಕೆಯ ಮೂಲಕ ಸಾಧಿಸಿರುವ ಸಾಮರಸ್ಯ ಅನನ್ಯವಾದದ್ದು. ಅದು ಲಕ್ನೋವಿನ ಅಲ್ಲಿನ ಅವಧ ರಾಜ್ಯದ, ಪುರಾತನ ದೆಹಲಿಯ, ಕಿಲ್ಲೆಗಳ, ಗುಂಬಸುಗಳ ಈ ವೈವಿಧ್ಯಮಯ ಪರಂಪರೆಗಳೊಂದಿಗೆ ಅಲ್ಲಿನ ಮುಸ್ಲಿಂ ಜನತೆಯ ಬದುಕು ಹಾಸುಹೊಕ್ಕಾಗಿರುವುದು, ಗುರುತಿಸಿಕೊಂಡಿರುವುದು ಹಾಗೂ ಏಕಕಾಲಕ್ಕೆ ಪರಂಪರೆಯೂ ಹಾಗೂ ಜೀವಪರವೂ ಆಗಿರುವ ಇಲ್ಲಿನ ಬದುಕು ಹಾಗು ಅದರ ವಿಶ್ಲೇಷಣೆ  ಚಿಂತನೆಯ ಮತ್ತೊಂದು ಆಯಾಮವನ್ನೇ ಬೇಡುತ್ತದೆ.

ಕೊನೆಗೂ ಉತ್ತರ ಪ್ರದೇಶದ ಮುಸ್ಲಿಂರ ನಿರ್ಣಾಯಕ ಪಾತ್ರ ಹಾಗೂ ನಿರ್ಣಯಗಳು ಇಂದು ಆ ರಾಜ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಹಿಂದೆಂಗಿಂತಲೂ ಪ್ರಮುಖ ಪಾತ್ರವಹಿಸುತ್ತಿರುವುದು ಕುತೂಹಲಕರ ಹಾಗೂ ದುರಂತ. ಏಕೆಂದರೆ ಇದರ ಫಲಿತಾಂಶಗಳಿಂದ ಬದುಕು ಹಸನಾಗುವ ಸಾಧ್ಯತೆಗಳು ಬಹಳ ಕಡಿಮೆ. ಇವೆಲ್ಲದರ ಮಧ್ಯೆ ಮನೆಗೆ ಬೆಂಕಿ ಬಿದ್ದಾಗ ಬೀಡಿ ಹಚ್ಚಿಕೊಂಡರು ಎನ್ನುವಂತೆ ಕಾಂಗ್ರೆಸ್ ಮುಸ್ಲಿಂರಿಗೆ ಒಳ ಮೀಸಲಾತಿಯನ್ನು ಘೋಷಿಸಿದೆ. ಇದು ಉತ್ತರ ಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ಬಂದಂತಹ ಕೊಡುಗೆ. ಮತ್ತೊಮ್ಮೆ ಹಳ್ಳ ಬಂತು ಹಳ್ಳ. ಕಾಂಗ್ರೆಸ್ ಪಾಠ ಕಲಿಯುವ ಕಾಲವೂ ಮುಗಿದಿದೆ. ಏಕೆಂದರೆ ಈ ಪಕ್ಷ ಪದೇ ಪದೇ ಎಡವುವದನ್ನು, ಆ ಮೂಲಕ ತಮ್ಮನ್ನು ನಂಬಿದವರನ್ನು ಕೂಡ ದಿಕ್ಕುತಪ್ಪಿಸುವುದನ್ನು, ಇಂದು ತನ್ನ ಒಂದು ನಿತ್ಯ ಪರಿಪಾಠವನ್ನಾಗಿ ಮಾಡಿಕೊಂಡಿದೆ.

ಎಂದಿನಂತೆ “ಅಲ್ಪಸಂಖ್ಯಾತರ ಹಿತರಕ್ಷಣೆಗೆ ನಾವೆಲ್ಲ ಟೊಂಕಕಟ್ಟಿ ಅರ್ಥಾತ್ ಕಟಿಬದ್ಧರಾಗಿ ನಿಂತಿದ್ದೇವೆ” ಹಾಗೂ “ಭಾರತದಲ್ಲಿನ ಮುಸ್ಲಿಂರ ಸುರಕ್ಷತೆ ಇಲ್ಲಿನ ಬಹುಸಂಖ್ಯಾತ ಹಿಂದೂಗಳೊಂದಿಗೆ ಹೊಂದಿಕೊಂಡು ಬದುಕುವುದರಲ್ಲಿದೆ” ಎನ್ನುವ ಎರಡು ದಂಡೆಗಳ ಮಧ್ಯೆ ಮುಸ್ಲಿಮರು ನಿಂತಿದ್ದಾರೆ ಎಂದಿನಂತೆ ಅಸಹಾಯಕರಾಗಿ, ಒಂಟಿಯಾಗಿ. ಈ ಸಂಧಿಗ್ಧತೆ ಅತ್ತ ದರಿ ಇತ್ತ ಪುರಿ ಎನ್ನುವ ಗಾದೆ ಮಾತನ್ನೂ ಮೀರಿಸುವಷ್ಟು ಶೋಚನೀಯವಾಗಿದೆ.