Category Archives: ರವಿ ಕೃಷ್ಣಾರೆಡ್ಡಿ

ಕರ್ನಾಟಕದ ಮುಂದಿನ ದಿನಗಳಿಗೆ ಮುನ್ನುಡಿ…

ಸ್ನೇಹಿತರೇ,

ಇನ್ನೊಂದೆರಡು ವಾರ, ಮತ್ತೆ ವರ್ತಮಾನ.ಕಾಮ್ ನಿಧಾನವಾಗಿ ಪ್ರತಿದಿನ ನಿಯತಕಾಲಿಕವಾಗುತ್ತದೆ ಎನ್ನುವ ವಿಶ್ವಾಸವಿದೆ.

ನಿಮಗೆ ಗೊತ್ತಿರುವಂತೆ, ನಾನು ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಲೋಕ್‌ಸತ್ತಾ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ. ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಇಲ್ಲಿ ಕೊನೆಯ ಗಳಿಗೆಯವರೆಗೂ ಬಿಜೆಪಿ ಅಭ್ಯರ್ಥಿ ಘೋಷಣೆ ಆಗಿರಲಿಲ್ಲ. ನಿಲ್ಲಲು ಯಾರೂ ಇಲ್ಲದಂತಹ ಪರಿಸ್ಥಿತಿ ಅಲ್ಲಿತ್ತು. ಜೆಡಿಎಸ್ ಇಲ್ಲಿ ಎಂದೂ ಲೆಕ್ಕಕ್ಕಿರಲಿಲ್ಲ, ಮತ್ತು ಅಂತಹುದರಲ್ಲಿ ಈಗ ಬಂಡಾಯ ಅಭ್ಯರ್ಥಿ ಬೇರೆ ಕಣದಲ್ಲಿದ್ದಾರೆ. ಕಾಂಗ್ರೆಸ್ ನಾವೇ ಗೆಲ್ಲುತ್ತೇವೆ ಎನ್ನುವ ಅತೀವ ವಿಶ್ವಾಸದಲ್ಲಿದೆ, ಆದರೆ, ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಸಾಧ್ಯವಾದರೆ ನಾನು ಆಯ್ಕೆಯಾಗಲಿ ಎನ್ನುವಷ್ಟು ನನ್ನ ಬಗ್ಗೆ ಮತ್ತು ನಮ್ಮ ಪಕ್ಷದ ಬಗ್ಗೆ ಪ್ರೀತಿ, ಅಭಿಮಾನ, ಗೌರವವಿದೆ.

ಸುಮಾರು ಎರಡೂವರೆ ತಿಂಗಳಿನಿಂದ ನಾವು ಪ್ರಚಾರ ಮಾಡುತ್ತಿದ್ದೇವೆ, ಇಷ್ಟೂ ದಿನಗಳ ನಮ್ಮ ಪ್ರಚಾರಕ್ಕೆ ಇಲ್ಲಿಯವರೆಗೆ ಸುಮಾರ 5+ ಲಕ್ಷ ರೂಪಾಯಿ ಖರ್ಚಾಗಿದೆ. ಅದು ಕೇವಲ ಕರಪತ್ರಗಳ ಮುದ್ರಣಕ್ಕೆ ಮತ್ತು ಹಂಚಲು ನಮ್ಮ ಕಾರ್ಯಕರ್ತರಿಗೆ ಕೊಡಲಾಗಿರುವ ಸಂಬಳದ ಖರ್ಚು, ಅಷ್ಟೇ. ಸುಮಾರು ನಾಲ್ಕು ಲಕ್ಷ ಕರಪತ್ರಗಳನ್ನು ಹಂಚಲಾಗಿದೆ. ನಾನು ಈ ಹಿಂದೆ ಬರೆದಿದ್ದೆ: ಒಳ್ಳೆಯ ಚುನಾವಣೆ ನಡೆಸಲು ಹದಿನಾರು ಲಕ್ಷ ಸಾಕು ಎಂದು. ನಾನು ಹತ್ತು ಲಕ್ಷದ ಮಿತಿಯನ್ನೂ ದಾಟುವಂತೆ ಕಾಣುತ್ತಿಲ್ಲ. ಈ ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳಿಗೆ ಅಭ್ಯರ್ಥಿಗಳು Ravi-SripadBhat-Sriharshaಸಲ್ಲಿಸಿರುವ ಖರ್ಚಿನ ಲೆಕ್ಕದ ಪ್ರಕಾರ ನಾವು ಕಾಂಗ್ರೆಸ್ ಮತ್ತು ಬಿಜೆಪಿಯವರಿಗಿಂತ ಹೆಚ್ಚು ಖರ್ಚು ಮಾಡಿದ್ದೇವೆ, ನಾಮಪತ್ರ ಸಲ್ಲಿಸಿದ ದಿನದಿಂದ (ಏಪ್ರಿಲ್ 15) ತೋರಿಸಬೇಕಾದ ಲೆಕ್ಕದ ಪ್ರಕಾರ ನಮ್ಮ ಖರ್ಚು ಮೂರು ಲಕ್ಷ ದಾಟಿದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿಯವರದು ಒಂದು ಲಕ್ಷವನ್ನೂ ದಾಟಿಲ್ಲ. ಇವರ ಲೆಕ್ಕಗಳಂತಹ ಸುಳ್ಳಿನ, ಮೋಸದ, ಅಪ್ರಾಮಾಣಿಕತೆಯ ನಡವಳಿಕೆಗಳು ನಮ್ಮಲ್ಲಿ ಆಕ್ರೋಶ ಹುಟ್ಟಿಸಬೇಕು.

ಅಂದ ಹಾಗೆ, ಇಲ್ಲಿಯವರೆಗೆ ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ನಮ್ಮ ಚುನಾವಣಾ ಪ್ರಚಾರಕ್ಕೆಂದು ರೂ 4,83,902 ಹಣ ಸಂಗ್ರಹವಾಗಿದೆ. ನನ್ನ ಕಡೆಯಿಂದ 2 ಲಕ್ಷ ಹಣ ಹಾಕಿಕೊಂಡಿದ್ದೇನೆ. ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಜನ ಈ ಪ್ರಯತ್ನಕ್ಕೆ ತಮ್ಮ ದೇಣಿಗೆ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.

ಉಳಿದಿರುವ ಈ ವಾರದ ಪ್ರಚಾರಕ್ಕೆ ಕನಿಷ್ಟ 4-5 ಲಕ್ಷ ರೂಪಾಯಿಯಾದರೂ ಬೇಕು. ಆಗ ನಾವು ಇನ್ನೂ ಪ್ರಭಾವಶಾಲಿ ಪ್ರಚಾರ ಕೈಗೊಳ್ಳಬಹುದು. ಬೆಂಬಲಿಸಬೇಕು ಎಂದು ನಿಮಗನ್ನಿಸಿದಲ್ಲಿ ದಯವಿಟ್ಟು ಮನಸ್ಸು ಮಾಡಿ ಮತ್ತು ಬೆಂಬಲಿಸಿ. ನೀವಲ್ಲದಿದ್ದರೆ ಇನ್ಯಾರು? ಈಗಲ್ಲದಿದ್ದರೆ ಇನ್ಯಾವಾಗ?

ದೇಣಿಗೆ ಕೊಟ್ಟವರ ಮತ್ತು ಹೇಗೆ ಕೊಡಬೇಕು ಎನ್ನುವ ವಿವರಗಳು ಈ ಪುಟದಲ್ಲಿವೆ: http://wp.me/P3aJQl-h

ನಮ್ಮಲ್ಲಿ ಅನೇಕ ಜನ ಸಭೆಗಳಲ್ಲಿ ಮತ್ತು ಖಾಸಗಿ ಚರ್ಚೆಗಳಲ್ಲಿ ಆದರ್ಶ, ನ್ಯಾಯ, ನೀತಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಕ್ರಿಯೆಯ ಸಂದರ್ಭ ಬಂದಾಗ ಆಷಾಢಭೂತಿಗಳಾಗುತ್ತಾರೆ. ನನಗೆ ಗೊತ್ತಿರುವ ಜನರಲ್ಲಿ ಹತ್ತಕ್ಕು ಒಬ್ಬರು ಧನಸಹಾಯ ಮಾಡಿದ್ದರೂ ನಮ್ಮ ಹಣ ಸಂಗ್ರಹ ಹತ್ತು ಲಕ್ಷ ಮೀರಬೇಕಿತ್ತು. ಪ್ರಚಾರಕ್ಕೆ ಬರುತ್ತೇವೆ ಎಂದವರೆಲ್ಲ ಬಂದಿದ್ದರೆ ಇಷ್ಟೊತ್ತಿಗೆ ಈ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿತ್ತು. ವಿಚಾರ ಗೊತ್ತಿರುವವರಿಗೆ ನಾನು ಪದೇಪದೇ ನೆನಪಿಸುವುದಿಲ್ಲ ಮತ್ತು ಕೇಳುವುದಿಲ್ಲ. ಮಾಡಬೇಕು ಎನ್ನುವುದು ಅವರ ಮನದಾಳದಿಂದ ಬರಬೇಕು, ಬಲವಂತದಿಂದಾಗಲಿ, ಮುಲಾಜಿಗಾಗಲಿ ಅಲ್ಲ.

ನನಗೆ ನಾನು ಏನು ಮಾಡುತ್ತಿದ್ದೇನೆ ಮತ್ತು ಏಕೆ ಮಾಡುತ್ತಿದ್ದೇನೆ ಎನ್ನುವುದು ಸ್ಪಷ್ಟವಾಗಿರುವುದರಿಂದ ಬಹಳ ಆತ್ಮತೃಪ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಈ ಒಂದು ತಿಂಗಳಿನಷ್ಟು ದೈಹಿಕ ಶ್ರಮ ಹಿಂದೆಂದೂ ಹಾಕಿರಲಿಲ್ಲ. ಆದರೆ ಹುಮ್ಮಸ್ಸು ಮತ್ತು ಸಂತೋಷ ಇಮ್ಮಡಿಗೊಳ್ಳುತ್ತಲೇ ಇದೆ. ಕರ್ನಾಟಕದ ಮುಂದಿನ ದಿನಗಳ ಚುನಾವಣಾ ಪದ್ದತಿ ಹೇಗಿರಬೇಕು ಎನ್ನುವುದಕ್ಕೆ ಈ ಚುನಾವಣೆ ಮುನ್ನುಡಿ ಬರೆಯುತ್ತದೆ ಎನ್ನುವ ವಿಶ್ವಾಸವಿದೆ.

ಆದರೆ, ಈ ಚುನಾವಣೆ ಮತ್ತದೇ ಭ್ರಷ್ಟ, ಅಸಮರ್ಥ, ಅನೀತಿಯ ರಾಜಕಾರಣಿಗಳನ್ನೇ ವಿಧಾನಸಭೆಗೆ ಕಳುಹಿಸುತ್ತದೆ ಮತ್ತು ಕರ್ನಾಟಕದ ಮುಂದಿನ ನಾಲ್ಕೈದು ವರ್ಷಗಳು ಹಿಂದಿನ ನಾಲ್ಕೈದು ವರ್ಷಗಳಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಅದಕ್ಕೆ ನಮ್ಮ ಪ್ರಜ್ಞಾವಂತರ (?) ನಿಷ್ಕ್ರಿಯತೆ, ಸಣ್ಣತನ, ನಿರಾಶಾವಾದಗಳೇ ಕಾರಣವಾಗಬಹುದೇ ಹೊರತು ಬೇರೆ ಅಲ್ಲ. ಒಳ್ಳೆಯ, ಸಮರ್ಥ, ಪ್ರಜ್ಞಾವಂತ ಜನ ರಾಜಕೀಯಕ್ಕೆ ಬರುವುದಕ್ಕೆ ಮತ್ತು ಬೆವರು ಹರಿಸುವುದಕ್ಕೆ (ತಮಗಾಗಿ ಅನ್ನುವುದಕ್ಕಿಂತ ತಾವು ನಂಬಿದ ಸಾರ್ವಕಾಲಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ) ಇದು ಸೂಕ್ತ ಸಮಯವೂ ಆಗುತ್ತದೆ.

ಅಂದ ಹಾಗೆ, ನಮ್ಮ ಪ್ರಚಾರದ ಫೋಟೊಗಳು ಮತ್ತಿತರ ವಿವರಗಳು ನನ್ನ ವೆಬ್‍‌ಸೈಟ್‌ನಲ್ಲಿವೆ: www.ravikrishnareddy.com

ನಮಸ್ಕಾರ,
ರವಿ…

“ಪ್ರಾಥಮಿಕ ಚುನಾವಣೆ”ಗಳ ಮೂಲಕ ಅಭ್ಯರ್ಥಿಗಳನ್ನು ಆರಿಸಿ…

– ರವಿ ಕೃಷ್ಣಾರೆಡ್ಡಿ

ವಾರದಿಂದೀಚೆಗೆ ನಡೆಯುತ್ತಿರುವ ಕರ್ನಾಟಕದ ಮೂರೂ ಪ್ರಮುಖ ಪಕ್ಷಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ತೀರಾ ನಾಚಿಕೆಗೇಡಿನ ಸಂಗತಿಯಾಗಿ ಹೋಗಿದೆ. ಇದು ಅಪಾರ ಭ್ರಷ್ಟತೆ, ಸ್ವಜನಪಕ್ಷಪಾತ, ಮತ್ತು ಗುಲಾಮಗಿರಿಯ ಮುಂದುವರಿಕೆ ಮಾತ್ರವಲ್ಲದೆ, ಅಪ್ರಜಾಸತ್ತಾತ್ಮಕ ಕೂಡ. ಬಹಳ ಸರಳವಾದ ಅಭ್ಯರ್ಥಿ ಆಯ್ಕೆಯನ್ನು ತಮ್ಮ ಸ್ವಾರ್ಥಕ್ಕಾಗಿ ತೀರಾ ಕಗ್ಗಂಟಾಗಿಸಿಕೊಂಡು ರಾಜಕೀಯ ಪಕ್ಷಗಳು ನಿರ್ವಹಿಸುತ್ತಿರುವ ಈ ರೀತಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯಲ್ಲಿ ಅವು ಮೌಲ್ಯ ಮತ್ತು ಸಿದ್ಧಾಂತಗಳಿಗೆ ಯಾವುದೇ ಬೆಲೆಯನ್ನು ನೀಡುತ್ತಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತದೆ.

ಯಾವುದೇ ರಾಜಕೀಯ ಪಕ್ಷ ಯಾರೊಬ್ಬರ ಸ್ವತ್ತೂ ಅಲ್ಲ. ಅದು ಆ ಪಕ್ಷದ ಸದಸ್ಯರಿಗೆ ಸೇರಿದ್ದು ಮತ್ತು ಅದರ ನಾಯಕರು ಆ ಸದಸ್ಯರ ಚುನಾಯಿತ ಪ್ರತಿನಿಧಿಗಳು ಮಾತ್ರ. ಆದರೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವದ ಯಾವೊಂದೂ ನಿಯಮಗಳನ್ನು ಪಾಲಿಸುತ್ತಿಲ್ಲ. ದುರದೃಷ್ಟಕರ ಸಂಗತಿ ಏನೆಂದರೆ, ಆ ಪಕ್ಷಗಳ ಅನೇಕ ಮೊದಲ ಸಾಲಿನ ನಾಯಕರಿಗೆ ಯಾವುದೇ ಸೈದ್ದಾಂತಿಕೆ ಹಿನ್ನೆಲೆ ಇಲ್ಲ. ಓದುವ ಅಭ್ಯಾಸವೇ ಇಲ್ಲದ, ಜನಪರ ಚಿಂತನೆಗಳೇ ಇಲ್ಲದ, ಹಣದ ಥೈಲಿ ಮತ್ತು ಚಮಚಾಗಿರಿಯಂತಹ ಅನೈಸರ್ಗಿಕ ಮಾರ್ಗಗಳ ಮೂಲಕ ನಾಯಕರಾಗಿರುವ ಇವರಿಗೆ “ನೈಜ ಪ್ರಜಾಪ್ರಭುತ್ವ” ಮತ್ತು “ಆಂತರಿಕ ಪ್ರಜಾಪ್ರಭುತ್ವ” ಎಂಬ ಪದಪುಂಜಗಳು ಅರ್ಥವಾಗುವುದಾದರೂ ಹೇಗೆ?

ಈ ಪಕ್ಷಗಳು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದೇ ಆದಲ್ಲಿ ಟಿಕೆಟ್ ಹಂಚಿಕೆ ಎಂಬ ವಿಷಯ ತಲೆನೋವಿನ ಅಥವ ಲಾಭ-ನಷ್ಟಗಳ ಸಂಗತಿಯೇ ಅಲ್ಲ. ಅದು ಸ್ಥಳೀಯ ಮಟ್ಟಗಳಲ್ಲಿಯೇ ನಿರ್ಧಾರವಾಗುವಂತಹುದು. ಪ್ರಜಾಪ್ರಭುತ್ವ ಪ್ರಬುದ್ಧತೆಯನ್ನು ಪಡೆದುಕೊಂಡಿರುವ ಅನೇಕ ದೇಶಗಳಲ್ಲಿ ಇದು ನಿಭಾಯಿಸಲ್ಪಡುವುದೇ ಹೀಗೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿರುವ ಆಯಾ ಪಕ್ಷದ ಪ್ರಾಥಮಿಕ ಸದಸ್ಯರೇ ತಮ್ಮ ಕ್ಷೇತ್ರದ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಮತ್ತು ಗೌರವ ಹೊಂದಿರುತ್ತಾರೆ. ಒಂದು ಪಕ್ಷದ ಅಭ್ಯರ್ಥಿಯಾಗಿ ನಿಲ್ಲಬೇಕೆನ್ನುವ ಮನುಷ್ಯ ತನ್ನ ಕ್ಷೇತ್ರದ ತನ್ನ ಪಕ್ಷದ ಸದಸ್ಯರ ಮತ್ತು ಕಾರ್ಯಕರ್ತರ ಗೌರವ ಮತ್ತು ಬೆಂಬಲ ಗಳಿಸುವುದು ಮುಖ್ಯವೇ ಹೊರತು ಆತನ ಹಣ ಮತ್ತು ಪ್ರಭಾವ ಆ ಪಕ್ಷದ ನಾಯಕರನ್ನು ಹೇಗೆ ಮುಟ್ಟುತ್ತದೆ ಎನ್ನುವುದು ಅಲ್ಲ. ವಿಕೇಂದ್ರಿಕರಣ ಎನ್ನುವುದು ರಾಜಕೀಯ ಪಕ್ಷಗಳೂ ಪಾಲಿಸಬೇಕಾದ ನಿಯಮ.

ದುರದೃಷ್ಟವಷಾತ್,  ನಮ್ಮ ರಾಜ್ಯದ ಮೂರೂ ಪ್ರಮುಖ ಪಕ್ಷಗಳಲ್ಲಿ ಇಂತಹ ಅಭ್ಯಾಸವೇ ಇಲ್ಲ. DBChandregowdaಜನಬೆಂಬಲ ಪಡೆದಿರುವ ರಾಜಕಾರಣಿಗಳೂ ಸಹ ಕೊನೆಯ ದಿನದ ತನಕ ತಮ್ಮ ಪಕ್ಷದ ’ಬಿ-ಫಾರ್ಮ್’ ಕೈಗೆ ಸಿಗುತ್ತದೆಯೋ ಅಥವ ಕೈ ತಪ್ಪುತ್ತದೆಯೋ ಎನ್ನುವ ಭಯಾತಂಕಗಳಲ್ಲಿಯೇ ಇರುತ್ತಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರದ ಅತಿ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌ನ ಉದಾಹರಣೆಗಳನ್ನೇ ತೆಗೆದುಕೊಳ್ಳುವುದಾದರೆ, ಶೃಂಗೇರಿ ಕ್ಷೇತ್ರಕ್ಕೆ ಸ್ಪರ್ಧಿಸಬೇಕು ಎಂದುಕೊಂಡಿದ್ದ ಮಾಜಿ ಸ್ಫೀಕರ್ ಡಿ.ಬಿ.ಚಂದ್ರೇಗೌಡರಿಗೆ ಕೊನೆಯ ಗಳಿಗೆಯವರೆಗೂ “ಆಟ” ಆಡಿಸಿ ಕೊಡಲಾಯಿತು. ಪ್ರಚಾರಕ್ಕೆ ಬಳಸಬೇಕಾದ ಅಮೂಲ್ಯ ಸಮಯವನ್ನು ಇಂತಹ ಕ್ಷುಲ್ಲಕ ವಿಚಾರಗಳಿಗಾಗಿ ಅಲ್ಲಿನ ಅಭ್ಯರ್ಥಿ ಹಾಳುಮಾಡಿಕೊಳ್ಳಬೇಕಾಯಿತು. ಅದೇ ರೀತಿ ದಾವಣಗೆರೆ-ಉತ್ತರ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಗೆ ನೀಡಿದ್ದ ಬಿ=ಫಾರ್ಮ್ ಅನ್ನು ಅಲ್ಲಿಯ ಒತ್ತಡಗಳಿಂದಾಗಿ ಶಾಮನೂರು ಶಿವಶಂಕರಪ್ಪನವರ ಮಗ ಮಲ್ಲಿಕಾರ್ಜುನರ ಹೆಸರಿಗೆ ಕೈಯ್ಯಲ್ಲಿ ಅಳಿಸಿ-ತಿದ್ದಿ ಬರೆದ ಕಾರಣ ಆ ಬಿ-ಫಾರ್ಮ್ ತಿರಸ್ಕೃತವಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದಂತಾಗಿತ್ತು. ಶೃಂಗೇರಿಯಲ್ಲಿ ಸೋಲುಂಡ ಡಿ.ಬಿ.ಚಂದ್ರೇಗೌಡರು ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಿಗುವುದಕ್ಕಿಂತ “ಹೆಚ್ಚಿನ” ಗೌರವ ಬಿಜೆಪಿಯಲ್ಲಿ ಸಿಗುತ್ತದೆ ಎಂದು ಆ ಪಕ್ಷ ಸೇರಿಕೊಂಡರು.

ಇದೆಲ್ಲವನ್ನೂ ಸರಿಪಡಿಸುವ ಇಚ್ಚೆ ನಮ್ಮ ನಡುವೆಯ ಸಭ್ಯ ರಾಜಕಾರಣಿಗಳಿಗೂ ಇದ್ದಂತಿಲ್ಲ. VRSudarshanತಮಗೆ ಟಿಕೆಟ್ ನೀಡಲಾಗುತ್ತಿಲ್ಲ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ರಾಜ್ಯದ ಸಭ್ಯ ರಾಜಕಾರಣಿಗಳಲ್ಲಿ ಒಬ್ಬರಾದ ಕಾಂಗ್ರೆಸ್‌ನ ವಿ.ಆರ್.ಸುದರ್ಶನ್‌ರವರು ತಮ್ಮ ವರಿಷ್ಟರಿಗೆ ಪತ್ರ ಬರೆದಿದ್ದರು. ಅದರಲ್ಲಿ ಅಡ್ದ-ಮತದಾನ ಮಾಡಿ ಪಕ್ಷವಿರೋಧಿ ಚಟುವಟಿಕೆ ಮಾಡಿದವರಿಗೆಲ್ಲ ಟಿಕೆಟ್ ನೀಡಿ, ಆ ಬಗ್ಗೆ ಪಕ್ಷಕ್ಕೆ ಪ್ರಾಮಾಣಿಕ ವರದಿ ನೀಡಿದ ತಮಗೇ ಟಿಕೆಟ್ ನಿರಾಕರಿಸಲಾಗುತ್ತಿದೆ, ಇದು ಸರಿಯಲ್ಲ ಎಂದು ದೂರಿದ್ದರು.  ಆದರೆ, ಸುದರ್ಶನ್‌ರವರು ಇದಕ್ಕಿಂತ ಪ್ರಮುಖ ವಿಷಯವಾದ ಟಿಕೆಟ್ ಹಂಚಿಕೆಯ ವಿಧಾನವನ್ನೇ ಪ್ರಶ್ನಿಸಿ, ತಮ್ಮ ಪಕ್ಷದಲ್ಲಿ “ಪ್ರಾಥಮಿಕ ಚುನಾವಣೆ”ಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನ ಅನುಸರಿಸಬೇಕೆಂದು ಪ್ರಬಲವಾಗಿ ಆಗ್ರಹಿಸಿದ್ದರೆ ಅದು ದೀರ್ಘಕಾಲೀನವಾದ ಸಕಾರಾತ್ಮಕ ಪರಿಣಾಮ ಬೀರುತ್ತಿತ್ತು. ಇಂತಹವರೇ ವಿಸ್ಮೃತಿಯಲ್ಲಿ ಮುಳುಗಿ ತಮ್ಮ ಒಂದು ಟಿಕೆಟ್‌ಗೆ ಬಡಿದಾಡುವಂತಾಗಿಬಿಟ್ಟರೆ ಅದು ಈ ರಾಜಕೀಯ ಪಕ್ಷಗಳ ಸಂಸ್ಕೃತಿ ಮತ್ತು ಅಪ್ರಸ್ತುತತೆಯನ್ನು ತೋರಿಸುತ್ತದೆ.

ರಾಜಕಾರಣ ಮಾಡಬೇಕಿರುವುದು ವ್ಯಕ್ತಿಯೊಬ್ಬನ ತೆವಲಿಗಾಗಲಿ ಅಥವ ಸ್ವಾರ್ಥಕ್ಕಾಗಲಿ ಅಲ್ಲ. ಜನರಿಗಾಗಿ, ಸಮುದಾಯದ ಹಿತಕ್ಕಾಗಿ, ಸಮಾಜ ಕಟ್ಟುವುದಕ್ಕಾಗಿ ರಾಜಕಾರಣ ಮಾಡಬೇಕಿದೆ. ಆದರೆ ಈ ವಿಷಯ ಈಗಿನ ದಡ್ದ ಮತ್ತು ಅಹಂಕಾರಿ ರಾಜಕೀಯ ನಾಯಕರಿಗೆ ಬೇಕಿಲ್ಲ. ಬೇಸರದ ಸಂಗತಿ ಏನೆಂದರೆ ಇದು ರಾಜಕೀಯ ಪಕ್ಷಗಳ ಪೋಷಕರಾದ ಆ ಪಕ್ಷಗಳ ಸದಸ್ಯರಿಗೂ ಗೊತ್ತಿರುವುದಿಲ್ಲ. ಆದರೆ ಇದೆಲ್ಲವನ್ನೂ ಅರಿಯುವ ಮತ್ತು ಆಗ್ರಹಿಸುವ ಜವಾಬ್ದಾರಿ ನಾಡಿನ ಪ್ರಜ್ಞಾವಂತರ ಮತ್ತು ಮತದಾರರ ಮೇಲಿದೆ.

ತೇಜಸ್ವಿ ನೆನಪಿನಲ್ಲಿ : ಜೀವಂತ ರೋಲ್ ಮಾಡೆಲ್ ಇನ್ನಿಲ್ಲ…

[ಇದು “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯ ಏಪ್ರಿಲ್ 20, 2007 ರ ಸಂಚಿಕೆಯ ನನ್ನ ಅಂಕಣಕ್ಕೆ ಬರೆದ ಲೇಖನ. ಇಂದಿಗೆ ತೇಜಸ್ವಿಯವರು ಮರಣ ಹೊಂದಿ (5/4/2007) ಆರು ವರ್ಷಗಳಾದವು.  ಆ ನೆನಪಿಗೆ ಈ ಲೇಖನ ಇಲ್ಲಿ ಪ್ರಕಟಿಸುತ್ತಿದ್ದೇನೆ. ರವಿ]

– ರವಿ ಕೃಷ್ಣಾರೆಡ್ಡಿ

ಪತ್ರಿಕೆಯ ಕೆಲಸಕ್ಕೆಂದು ಎರಡು ವಾರದ ಹಿಂದೆ ಅಮೇರಿಕಾದಿಂದ ಬೆಂಗಳೂರಿಗೆ ವಿಮಾನ ಹತ್ತಿದಾಗ ದಾರಿ ಓದಿಗೆಂದು ನನ್ನ ಕೈಯ್ಯಲ್ಲಿದ್ದ ಪುಸ್ತಕ ನಾನು ಈ ಹಿಂದೆಯೆ ಓದಿದ್ದ ‘ಕರ್ವಾಲೊ’. ಆ ಸುದೀರ್ಘ ವಿಮಾನ ಪ್ರಯಾಣದಲ್ಲಿ ನಿದ್ದೆಯಿಂದ ಎಚ್ಚೆತ್ತಾಗಲೆಲ್ಲ 23 ನೆ ಮುದ್ರಣದ ಕರ್ವಾಲೊ ಕೈಯಲ್ಲಿರುತ್ತಿತ್ತು. ಬೆಂಗಳೂರಿಗೆ ಬಂದು ಮೂರು ದಿನ ಮಂಡ್ಯ-ಮೈಸೂರು-ಮಂಗಳೂರು-ಶಿವಮೊಗ್ಗ ಇಲ್ಲೆಲ್ಲ ಸುತ್ತಾಡಿಕೊಂಡು ಬಂದ ಮೇಲೆ ಕಳೆದ ವಾರದ ಲೇಖನ ಬರೆಯಲು ಕುಳಿತಾಗ ಅದರಲ್ಲಿ ತೇಜಸ್ವಿಯವರೂ ಕಾಣಿಸಿಕೊಂಡಿದ್ದರು. ಅದರ ಪುಟವಿನ್ಯಾಸ ಮಾಡುವಾಗ ನಮ್ಮ ವಿನ್ಯಾಸಕಾರ ವೀರೇಶ್ ತೇಜಸ್ವಿಯವರ ಅದ್ಭುತವಾದ ಚಿತ್ರವೊಂದನ್ನು ಅಲ್ಲಿ ಅಳವಡಿಸಿದ್ದರು. ಇವೆಲ್ಲ ಕಾಕತಾಳೀಯವೊ ಏನೊ ಗೊತ್ತಾಗುತ್ತಿಲ್ಲ. ಅದರೆ, ತೇಜಸ್ವಿ ನಮಗೆಲ್ಲ ಹೇಗೆ ಪ್ರಸ್ತುತವಾಗಿದ್ದರು ಎಂಬುದನ್ನು ಇದು ತೋರಿಸುತ್ತದೆ.

ಕರ್ನಾಟಕದ ಯುವಜನತೆ ಎಲ್ಲಾ ತರಹದ ಮೌಢ್ಯ, ಶೋಷಣೆ, ಜಾತಿವಾದ ಹಾಗು ಕೋಮುವಾದಗಳನ್ನು ನಿವಾರಿಸಿಕೊಂಡು, ವಿಜ್ಞಾನದೀವಿಗೆಯನ್ನು ಹಿಡಿದು kuvempuನಿರಂಕುಶಮತಿಗಳಾಗಬೇಕೆಂದು ಸಂದೇಶ ನೀಡಿದ ಕುವೆಂಪುರವರ ಬಗ್ಗೆ ತೇಜಸ್ವಿಯವರು “ಅಣ್ಣನ ನೆನಪು” ವಿನಲ್ಲಿ ಹೀಗೆ ಬರೆಯುತ್ತಾರೆ: “(ಅಣ್ಣ) ಮಂತ್ರವನ್ನೇನೋ ಹೇಳಿದರು, ಆದರೆ ಅದನ್ನು ಕಾರ್ಯಗತಗೊಳಿಸುವ ತಂತ್ರದ ಬಗ್ಗೆ ಯೋಚಿಸಿರಲೇ ಇಲ್ಲ.

ಕಳೆದ ನಾಲ್ಕೈದು ವರ್ಷಗಳಿಂದ, ಈ ಮೇಲಿನ ವಾಕ್ಯದ ಕುರಿತು ಚಿಂತಿಸಿದಷ್ಟು ಬಹುಶಃ ನಾನು ಇನ್ಯಾವುದೆ ವಾಕ್ಯ ಅಥವ ಪದವನ್ನು ಕುರಿತು ಚಿಂತಿಸಿಲ್ಲ. ಭಾರತದ ಸಮಾಜದಲ್ಲಿ ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೋಮುವಾದ, ಅಸಮಾನತೆ, ಶೋಷಣೆ; ಹೀನಾಯವಾಗಿ ಹೋಗುತ್ತಿರುವ ರಾಜಕಾರಣ ಮತ್ತು ಇಲ್ಲವಾಗುತ್ತಿರುವ ರಾಜಕೀಯ-ಸಾಂಸ್ಕೃತಿಕ ನಾಯಕತ್ವ; ಇನ್ನಿಲ್ಲದ ವೇಗದಲ್ಲಿ ಬೆಳೆಯುತ್ತಿರುವ ಮತಪ್ರೇಮವೇ ದೇಶಪ್ರೇಮ ಎಂಬ ಉನ್ಮಾದ; ಇಂತಹ ಪ್ರತಿಯೊಂದನ್ನು ಯೋಚಿಸಿದಾಗಲೂ ನನಗೆ ಕುವೆಂಪು ಮತ್ತು ತೇಜಸ್ವಿ ನೆನಪಾಗುತ್ತಾರೆ. ಮಂತ್ರದಿಂದ ತಂತ್ರದತ್ತ ಹೋಗುವುದು ಹೇಗೆ ಎಂಬ ಆಲೋಚನೆ ಆವರಿಸುತ್ತದೆ.

ಅದು 2004 ರ ಜನವರಿ ತಿಂಗಳು. ಕರ್ನಾಟಕದಲ್ಲಿ ನಾಡಗೀತೆಯ ವಿವಾದ ಭುಗಿಲೆದ್ದಿತ್ತು. ತೇಜಸ್ವಿಯವರು ಕೆಲವು ಸೈದ್ಧಾಂತಿಕ ಕಾರಣಗಳಿಗಾಗಿ ನಾಡಗೀತೆಯ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದಾಗ ಅವರ ಮೇಲೆ ಪ್ರತ್ಯಕ್ಷವಾಗಿ ಮತ್ತು ಕುವೆಂಪುರವರ ವಿರುದ್ಧ ಪರೋಕ್ಷವಾಗಿ ಮಾಧ್ಯಮಗಳಲ್ಲಿ ಜಾತಿವಾದಿಗಳು ಮುಗಿಬಿದ್ದರು. ಅಮೇರಿಕದಲ್ಲಿದ್ದ ನಾನು ಆ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಗಳನ್ನು ಗಮನಿಸುತ್ತಿದ್ದೆ. ಇಂಟರ್‌ನೆಟ್‌ನಲ್ಲಂತೂ ಅಸಹ್ಯ-ಹೇಸಿಗೆ ಹುಟ್ಟಿಸುವಷ್ಟು ಜಾತಿವಾದ ಮತ್ತು ಅಸಹಿಷ್ಣುತೆ. ಆಗ ನನಗೆ ಅನ್ನಿಸಿದ್ದು, tejasviಕನ್ನಡದ ಇಂಟರ್‌ನೆಟ್ ಓದುಗರಿಗೆ ಕುವೆಂಪುರವರ ವಿಚಾರಗಳೇ ಗೊತ್ತಿಲ್ಲ, ಎಂದು. ಇದರ ಜೊತೆಜೊತೆಗೆ, 12 ನೆ ಶತಮಾನದಲ್ಲಿಯೇ ವೈಚಾರಿಕ ಕ್ರಾಂತಿ ಮಾಡಿದ ವಚನ ಸಾಹಿತ್ಯವನ್ನು ಯಾವೊಬ್ಬ ಶ್ರೀಮಂತ ಲಿಂಗಾಯತ ಮಠವಾಗಲಿ, ಸಂಘಸಂಸ್ಥೆಗಳಾಗಲಿ ಇಂಟರ್‌ನೆಟ್‌ನಲ್ಲಿ ಹಾಕಿಲ್ಲ ಎಂಬ ನೋವೂ ಕಾಡುತ್ತಿತ್ತು. ಹಾಗೆ ಹುಟ್ಟಿದ್ದು vicharamanatapa.net. ಆ ವೆಬ್‌ಸೈಟಿನಲ್ಲಿ ಕುವೆಂಪುರವರ “ವಿಚಾರಕ್ರಾಂತಿಗೆ ಆಹ್ವಾನ” ದಿಂದ ಕೆಲವು ಲೇಖನಗಳನ್ನು ಹಾಕಲು ತೇಜಸ್ವಿಯವರ ಅನುಮತಿಗಾಗಿ ಪ್ರಯತ್ನಿಸಬೇಕು ಎಂದುಕೊಂಡಾಗ ನೆನಪಿಗೆ ಬಂದಾತ ನನ್ನ ಇಂಜಿನಿಯರಿಂಗ್ ಸಹಪಾಠಿ ಸೋಮಶೇಖರ. ತೇಜಸ್ವಿಯವರ ಮಗಳು ಈಶಾನ್ಯೆ ಬೆಂಗಳೂರಿನ ಐಟಿ ಕಂಪನಿಯಲ್ಲಿ ಈತನ ಸಹೋದ್ಯೋಗಿ. ಆತನಿಗೆ ಹೇಳಿ ತೇಜಸ್ವಿಯವರ ಮೂಡಿಗೆರೆಯ ನಂಬರ್ ತರಿಸಿಕೊಂಡೆ. ಇಲ್ಲಿಯೇ ಇರುವ ಇನ್ನೊಬ್ಬ ಹಿರಿಯ ಗೆಳೆಯ ಮೃತ್ಯುಂಜಯ ಹರ್ತಿಕೋಟೆಯವರು ಈ ವಿಚಾರವಾಗಿ ಒಮ್ಮೆ ತೇಜಸ್ವಿಯವರ ಬಳಿ ಮಾತನಾಡಿಯಾದ ಮೇಲೆ ನಾನು ತೇಜಸ್ವಿಯವರಿಗೆ ಕರೆ ಮಾಡಿ ಅವರ ಅನುಮತಿ ಕೋರಿದೆ. “ಇಡೀ ಪುಸ್ತಕ ಬೇಡ್ರಿ. ಅದರಲ್ಲಿ ನಿಮಗೆ ಸೂಕ್ತ ಅನ್ನಿಸಿದ ಎರಡು-ಮೂರು ಲೇಖನ ಹಾಕಿಕೊಳ್ರಿ,” ಎಂದರು. ಮುಂದಿನ ಎರಡು ವಾರಗಳು ನಾನು ಮತ್ತು ನನ್ನ ಹೆಂಡತಿ ಪಟ್ಟಾಗಿ ಕುಳಿತು ಕುವೆಂಪುರವರು ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದಲ್ಲಿ ಮಾಡಿದ “ವಿಚಾರ ಕ್ರಾಂತಿಗೆ ಆಹ್ವಾನ” ಮತ್ತು 1974 ರಲ್ಲಿ ಮೈಸೂರಿನ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದಲ್ಲಿ ಮಾಡಿದ “ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ!” ಲೇಖನಗಳನ್ನು ಕಂಪ್ಯೂಟರ್‌ನಲ್ಲಿ ಟೈಪು ಮಾಡಿ, ವೆಬ್‌ಸೈಟಿಗೆ ಏರಿಸಿದೆವು.

2004 ರ ಜುಲೈನಲ್ಲಿ ತೇಜಸ್ವಿಯವರು ಮತ್ತೊಂದು ಚರ್ಚೆಗೆ ದಾರಿ ಮಾಡಿಕೊಟ್ಟರು. ಅದು ಕಂಪ್ಯೂಟರ್‌ನಲ್ಲಿ ಕನ್ನಡ ಅಳವಡಿಕೆಗೆ ಸಂಬಂಧಿಸಿದಂತೆ. ಇದಕ್ಕೆ ಮಹತ್ತರ ತಿರುವು ಬಂದಿದ್ದು ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ತೇಜಸ್ವಿಯರ ಸಂದರ್ಶನ ಮಾಡಿದ ಮೇಲೆ. ಅದನ್ನು ಓದಿದ ಕೂಡಲೆ ನಾನು ನಾಗೇಶ ಹೆಗಡೆಯವರಿಗೆ ಫೋನ್ ಮಾಡಿ ಈ ಚರ್ಚೆಯನ್ನು ಸರ್ಕಾರದ ಎಮ್ಮೆ ಚರ್ಮಕ್ಕೆ ಚುರುಕು ಮುಟ್ಟುವ ತನಕ ಮುಂದುವರೆಸಬೇಕೆಂದು ಕೋರಿಕೊಂಡೆ. ಪ್ರಜಾವಾಣಿಯ ವಾಚಕರ ವಾಣಿಗೆ ಪತ್ರವನ್ನೂ ಬರೆದೆ. ಅದರ ಮುಂದಿನ ವರ್ಷ ಬೆಂಗಳೂರಿಗೆ ಬಂದಿದ್ದಾಗ ‘ಅಗ್ನಿ’ ವಾರಪತ್ರಿಕೆಯ ಪತ್ರಕರ್ತ ಮಿತ್ರ ಮಂಜುನಾಥ ಅದ್ದೆಯವರೊಡನೆ ‘ಆದರೆ ತೇಜಸ್ವಿಯವರನ್ನು ನೋಡಿ ಬರಬೇಕು,’ ಎಂದು ಪ್ರಸ್ತಾಪಿಸಿದ್ದೆ. ತೇಜಸ್ವಿಯವರ ಮನೆಯಲ್ಲಿ ಆಗಾಗ ಇದ್ದು ಬರುತ್ತಿದ್ದ ಅದ್ದೆ ಕೂಡಲೆ ತೇಜಸ್ವಿಯವರಿಗೆ ಫೋನ್ ಮಾಡಿದರು. ಆದರೆ ಅಂದು ತೇಜಸ್ವಿಯವರು ಮನೆಯಲ್ಲಿರಲಿಲ್ಲ. ಆ ವರ್ಷ ಅವರನ್ನು ನೋಡದೆ ವಾಪಸು ಬರಬೇಕಾಯಿತು.

ಕಳೆದ ವರ್ಷ “ವಿಕ್ರಾಂತ ಕರ್ನಾಟಕ” ಪ್ರಾರಂಭಿಸಲು ನಾನು ಬೆಂಗಳೂರಿಗೆ ಬಂದಿದ್ದಾಗ ತೇಜಸ್ವಿಯವರು ಆರೋಗ್ಯ ಸರಿಯಿಲ್ಲದೆ ಬೆಂಗಳೂರಿನಲ್ಲಿಯೆ ಇದ್ದರು. ಆ ಸಮಯದಲ್ಲಿ ಜಯಂತ ಕಾಯ್ಕಿಣಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದು ಗಾಂಧಿಬಜಾರಿನಲ್ಲಿತ್ತು. ನಾನು ಮತ್ತು ಆಗಿನ ನಮ್ಮ ಸಂಪಾದಕರಾಗಿದ್ದ ಸತ್ಯಮೂರ್ತಿಯವರು ಅಲ್ಲಿಗೆ ಹೋಗಿದ್ದೆವು. ಎಲ್ಲರಿಗೂ ಆಶ್ಚರ್ಯವಾಗುವಂತೆ ತೇಜಸ್ವಿಯವರು ಆ ಸಮಾರಂಭಕ್ಕೆ ಬಂದುಬಿಟ್ಟರು. ಇನ್ನೂ 68 ವರ್ಷದ ತೇಜಸ್ವಿ ಅಂದು ಬಹಳ ನಿತ್ರಾಣವಾಗಿ, ವಯಸ್ಸಿಗಿಂತ ಹಿರಿಯರಾದಂತೆ ಕಂಡರು. ಕಾರ್ಯಕ್ರಮ ಮುಗಿದ ಮೇಲೆ ಹೋಗಿ ಪರಿಚಯ ಮಾಡಿಕೊಂಡೆ. ಹೆಚ್ಚಿಗೆ ಮಾತನಾಡುವ ಪರಿಸ್ಥಿತಿ ಅಲ್ಲಿರಲಿಲ್ಲ.

ಎರಡು ವಾರದ ಹಿಂದೆ ನಮ್ಮ ಪತ್ರಿಕೆಯ ಮಲ್ಲನಗೌಡರು ಮತ್ತು ನಾನು ಕಾರ್ಕಳದಿಂದ ಶಿವಮೊಗ್ಗಕ್ಕೆ ಹೋಗುವಾಗ ಮೂಡಿಗೆರೆಯ ಮೇಲೆ ಹೋಗಿದ್ದರೆ ಚೆನ್ನಿತ್ತುTejaswi.-PHOTO :M.A.SRIRAM  - Tejaswi.-PHOTO :M.A.SRIRAM ಎಂದು ಅನೇಕ ಸಲ ಮಾತಾಡಿಕೊಂಡೆವು. ಶಿವಮೊಗ್ಗಾದಲ್ಲಿ ಹಿರಿಯ ಲೇಖಕ ಡಿ.ಎಸ್. ನಾಗಭೂಷಣ್‌ರ ಜೊತೆ ಮಾತನಾಡುತ್ತ, ತೇಜಸ್ವಿಯವರನ್ನು ನೋಡದೆ ಬಂದೆವು ಎಂದು ಹಲುಬಿದ್ದೆವು. ನಾಗಭೂಷಣ್ ಅವರು, ‘ಮುಂದಿನ ವಾರ ನಾನು ಮೂಡಿಗೆರೆಗೆ ಹೋಗುತ್ತಿದ್ದೇನೆ,’ ಎಂದರು. ಅವರು ಮೂಡಿಗೆರೆಗೆ ಹೋಗಿದ್ದನ್ನು ನಾನು ಟೀವಿಯಲ್ಲಿ ನೋಡಿದೆ. ಅದು ಅವರು ತೇಜಸ್ವಿಯವರ ಪಾರ್ಥಿವ ಶರೀರದ ಮುಂದೆ ನಿಂತಿದ್ದ ದೃಶ್ಯ. ಎಲ್ಲರದೂ ತಡವಾಗಿತ್ತು.

ಶುಕ್ರವಾರ ತೇಜಸ್ವಿಯವರ ಶವಸಂಸ್ಕಾರ. ನಾನು ಅಮೇರಿಕಕ್ಕೆ ಹೊರಡಬೇಕಿದ್ದದ್ದು ಶನಿವಾರ. ವಾಪಸು ಹೊರಡಲು ಮಾಡಿಕೊಳ್ಳಬೇಕಿದ್ದ ಯಾವುದೇ ತಯ್ಯಾರಿ ಇನ್ನೂ ಮಾಡಿಕೊಂಡಿರಲಿಲ್ಲ. ಆದರೂ ಅದ್ದೆಗೆ, ನಾನೂ ನಿಮ್ಮ ಜೊತೆ ಮೂಡಿಗೆರೆಗೆ ಬರುತ್ತೇನೆ ಎಂದು ತಿಳಿಸಿ ಕೊನೆಯ ಕ್ಷಣದಲ್ಲಿ ಹಿಂದೆಗೆದೆ. ಆ ವಿಷಾದ ಜೀವನ ಪರ್ಯಂತ ಬೆನ್ನಿಗಿರುತ್ತದೆ.

ಹೀಗೆ ಕಳೆದ ನಾಲ್ಕೈದು ವರ್ಷಗಳಿಂದ ನನ್ನ ಜೀವಂತ Role Model ಆಗಿದ್ದ, Conviction ಮೂಡಿಸುತ್ತಿದ್ದ ಮನೆಯ ಹಿರಿಯ ಇನ್ನಿಲ್ಲ. ಕಾನನದ ನಡುವಿನಿಂದ ನನ್ನ ಪೀಳಿಗೆಗೆ ಮೌನವಾಗಿ ಮಾರ್ಗದರ್ಶನ ಮಾಡುತ್ತಿದ್ದ ಋಷಿ ಇನ್ನಿಲ್ಲ. ಸಮಾಜ ಸುಧಾರಣೆಯ ಮಂತ್ರ ಮತ್ತು ತಂತ್ರಗಳ ಕುರಿತು ಮಾತನಾಡುತ್ತಿದ್ದ ಮಾಯಾಲೋಕದ ವಾಸ್ತವಜೀವಿ ಇನ್ನಿಲ್ಲ. ಕೊನೆಯ ಗುರು ಮತ್ತು ಹಿರಿಯನನ್ನು ಕಳೆದುಕೊಂಡ ತಬ್ಬಲಿಗಳು ನಾವೆಲ್ಲ.

ಕಾಮೆಂಟ್ ಮಾಡುವವರ ಗಮನಕ್ಕೆ, ಮತ್ತೊಮ್ಮೆ…

ಸ್ನೇಹಿತರೇ,

ಇತ್ತೀಚೆಗೆ ಆನಂದ ಪ್ರಸಾದರ “ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?” ಲೇಖನಕ್ಕೆ ಬಂದ ಪ್ರತಿಕ್ರಿಯೆಗೆ ಪೂರಕವಾಗಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಆದರೆ ಅವು ಯಾವುವೂ ಬಹುಶಃ ಪ್ರಕಟವಾಗಿಲ್ಲ. ಅದಕ್ಕೆ ಕಾರಣ, ಪ್ರತಿಕ್ರಿಯಿಸಿದವರ ಹೆಸರು ಮತ್ತ್ ಇಮೇಲ್ ವಿಳಾಸಗಳು ನಮ್ಮ ವೆಬ್‌ಸೈಟ್‌ನ ಬ್ಲಾಕ್ಡ್ ಲಿಸ್ಟ್‌ನಲ್ಲಿರುವುದು.

ನನಗೆ ಮತ್ತು ವರ್ತಮಾನ.ಕಾಮ್‌ಗೆ ಓದುಗರ ಪ್ರತಿಕ್ರಿಯೆಗಳನ್ನು ಅಲ್ಲಲ್ಲಿ ಎಡಿಟ್ ಮಾಡಿ ಅಪ್ರೂವ್ ಮಾಡುವುದರಲ್ಲಿ ನಂಬಿಕೆ ಇಲ್ಲ. courtesy-announcementಪ್ರಕಟವಾದರೆ ಸಂಪೂರ್ಣವಾಗಿ ಪ್ರಕಟವಾಗಬೇಕು, ಇಲ್ಲವಾದಲ್ಲಿ ಇಲ್ಲ. ಈ ನೀತಿಯಿಂದಾಗಿ ಒಂದೇ ಒಂದು ಕೆಟ್ಟ ಅಭಿರುಚಿಯ ಪದ ಇದ್ದರೂ ಅಂತಹ ಕಾಮೆಂಟ್‌ಗಳು ಪ್ರಕಟವಾಗಿಲ್ಲ. ಕೆಲವು ಬಾರಿ ಕಾಮೆಂಟ್ ಎಷ್ಟೇ ಒಳ್ಳೆಯದಿದ್ದರೂ ಒಂದೇ ಒಂದು ಪದದ ಕಾರಣಗಳಿಂದ ಅದನ್ನು ಡಿಲೀಟ್ ಮಾಡಲಾಗಿದೆ. ಇದನ್ನು ನಮ್ಮಲ್ಲಿಯ ಲೇಖನಗಳಿಗೆ ಪ್ರತಿಕ್ರಿಯಿಸುವವರು ಗಮನಿಸಬೇಕು.

ಹಾಗೆಯೇ, ಕೆಲವು ಜನ ಪದೇಪದೇ ವೈಯಕ್ತಿಕ ದಾಳಿ ಮಾಡುವ ಪ್ರತಿಕ್ರಿಯೆಗಳನ್ನು, ಕೆಟ್ಟ ಭಾಷೆಯಲ್ಲಿ ಬೆರೆದಿರುತ್ತಾರೆ. ಅಂತಹ ಮೂರ್ನಾಲ್ಕು ಹೆಸರುಗಳು ನಮ್ಮ ಸಿಸ್ಟಮ್‌ನ ಬ್ಲಾಕ್ಡ್ ಲಿಸ್ಟ್‌ನಲ್ಲಿದ್ದು ಆ ಲಿಸ್ಟ್‌ನಲಿರುವವರು ಮಾಡುವ ಕಾಮೆಂಟ್‌ಗಳು ತನ್ನಂತಾನೆ ತಡೆಹಿಡಿಯಲ್ಪಡುತ್ತವೆ ಮತ್ತು ತನ್ನಂತಾನೆ ಟ್ರ್ಯಾಷ್‌ಗೆ ಹೋಗುತ್ತದೆ.

ಕಾಮೆಂಟ್‌ಗಳು ಎಷ್ಟೇ ತೀಕ್ಷಣವಾಗಿದ್ದರೂ ಅವು ಇಲ್ಲಿ ಪ್ರಕಟವಾಗುತ್ತವೆ, ಆದರೆ, ಭಾಷೆ ಸಭ್ಯವಾಗಿರಲಿ. ಹಾಗೆಯೇ ಪ್ರತಿಕ್ರಿಯಿಸುತ್ತಿರುವ ಲೇಖನಕ್ಕೆ ವಸ್ತುನಿಷ್ಟವಾಗಿರಲಿ. ಇಂತಹ ಅನೇಕ ಕಾಮೆಂಟ್‌ಗಳು ಇಲ್ಲಿ ಯಾವುದೇ ಅಡೆತಡೆ ಇಲ್ಲದೆ ಪ್ರಕಟವಾಗಿವೆ.

ಮತ್ತು, ನೀವು ಮೊದಲ ಸಲ ಕಾಮೆಂಟ್ ಹಾಕುತ್ತಿದ್ದರೆ ಅದು ಅಪ್ರೂವ್ ಆಗುವ ತನಕ ಪೆಂಡಿಂಗ್‌ನಲಿರುತ್ತದೆ. ಒಮ್ಮೆ ಅಪ್ರೂವ್ ಆದಮೇಲೆ, ನೀವು ಅದೇ ಹೆಸರಿನಲ್ಲಿ ಮತ್ತು ಇಮೇಲ್‌ನಲ್ಲಿ ಕಾಮೆಂಟ್ ಮಾಡಿದರೆ ಯಾವುದೇ ನಿರ್ಬಂಧ ಇಲ್ಲದೆ ತತ್‌ಕ್ಷಣ ಪ್ರಕಟವಾಗುತ್ತದೆ. ಮೊದಲ ಬಾರಿಗೆ ಮಾತ್ರ ಅಪ್ರೂವ್ ಮಾಡುವ ತನಕ ಕಾಯಬೇಕು. ಮತ್ತು, ಅಪ್ರೂವ್ ಆದ ಮೇಲೆ ನೀವು ಪದೇಪದೇ ಕೆಟ್ಟ ಭಾಷೆಯಲ್ಲಿ ಅಥವ ಅಸಂಗತವಾಗಿ ಪ್ರತಿಕ್ರಿಯಿಸುತ್ತ ಹೋದರೆ, ಒಂದು ಇಲ್ಲ ಎರಡು ಬಾರಿ ಡಿಲೀಟ್ ಮಾಡಿ ನೋಡಲಾಗುತ್ತದೆ. ಅದೇ ರೀತಿಯೆ ಮಾಡುತ್ತಿದ್ದರೆ ಆ ಹೆಸರು ನಮ್ಮ ಬ್ಲಾಕ್ಡ್ ಲಿಸ್ಟ್‌ಗೆ ಹೋಗುತ್ತದೆ.

ಬರಹಗಾರರು ಬರೆಯುವಷ್ಟೇ ಬದ್ಧತೆಯಿಂದ ಮತ್ತು ಪ್ರಬುದ್ಧತೆಯಿಂದ ಪ್ರತಿಕ್ರಿಯಿಸುವವರೂ ಸಂವಾದಿಸಬೇಕು ಎನ್ನುವುದೇ ಈ ಎಲ್ಲದರ ಹಿಂದಿರುವ ಉದ್ದೇಶ. ಕಾಮೆಂಟ್ ಮಾಡುವವರು ಸಹಕರಿಸಬೇಕು.

ಈ ಮಾಹಿತಿಗೆ ಪೂರಕವಾಗಿ ವರ್ತಮಾನ.ಕಾಮ್‌ಗೆ ವರ್ಷ ಪೂರೈಸಿದ ಆಸುಪಾಸಿನಲ್ಲಿ ಬರೆದಿದ್ದ “ಓದುಗರ ಮತ್ತು ಕಾಮೆಂಟುದಾರರ ಗಮನಕ್ಕೆ…” ಲೇಖನವನ್ನು ಮತ್ತೊಮ್ಮೆ  ಗಮನಿಸಬೇಕೆಂದು ವಿನಂತಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಕೊನೆಗೂ ನವೀನ್ ಸೂರಿಂಜೆ ಜಾಮೀನಿನ ಮೇಲೆ ಬಿಡುಗಡೆ

– ರವಿ ಕೃಷ್ಣಾರೆಡ್ಡಿ

ರಾಜ್ಯ ಸರ್ಕಾರದ ಸಚಿವ ಸಂಪುಟ ಪತ್ರಕರ್ತ ನವೀನ್ ಸೂರಿಂಜೆಯ ಮೇಲಿನ ಆರೋಪಗಳನ್ನು ಕೈಬಿಡಲು ನಿರ್ಧರಿಸಿ ಒಂದೂವರೆ Photo Captionತಿಂಗಳಾದರೂ ನಮ್ಮ ರಾಜ್ಯದ ಘನತೆವೆತ್ತ ಅಂಜುಗುಳಿ ಮುಖ್ಯಮಂತ್ರಿ ಆ ನಿರ್ಧಾರದ ಕಡತಕ್ಕೆ ಸಹಿ ಮಾಡದ ಕಾರಣ ನವೀನ್ ಸೂರಿಂಜೆ ಆ ಪ್ರಕ್ರಿಯೆ ಅಡಿಯಲ್ಲಿ ಬಿಡುಗಡೆಯಾಗಲಿಲ್ಲ. ಕೊನೆಗೂ ಬದಲಾದ ಪರಿಸ್ಥಿತಿಯ ಅಡಿಯಲ್ಲಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲು ಹತ್ತಿ, ಕಳೆದ ಸೋಮವಾರವಷ್ಟೇ (18-03-13) ಹೈಕೋರ್ಟ್ ಜಾಮೀನು ನೀಡಿತ್ತು. ಹೈಕೋರ್ಟ್‌ನ ಆದೇಶ ಪತ್ರ ಕೈಗೆ ಸಿಗಲು ಸುಮಾರು ನಾಲ್ಕು ದಿನ ತೆಗೆದುಕೊಂಡ ಕಾರಣ ನೆನ್ನೆ ಶನಿವಾರವಷ್ಟೇ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದು  ಸೂರಿಂಜೆ ಜೈಲಿನಿಂದ ಹೊರಬಂದಿದ್ದಾರೆ, ನಗುಮುಖದಿಂದ. ಮಿಕ್ಕೆಲ್ಲ ವಿಷಯಗಳು ಏನೇ ಇರಲಿ, ಕನಿಷ್ಟ ಒಂದು ನಿಟ್ಟುಸಿರಿನ ಸಮೇತದ ನಿರಾಳದ ನಗು ಬೀರುವ ಸಮಯ ಇದು:

ಇಂದು ಕೆಲವು ಪತ್ರಿಕೆಗಳಲ್ಲಿ ಬಂದ ಸೂರಿಂಜೆ ಬಿಡುಗಡೆಯ ವರದಿಗಳು:

ವಿಜಯ ಕರ್ನಾಟಕ :
naveen-released-vijaykarnataka-24-03-13

ಉದಯವಾಣಿ :
naveen-released-udayavani-24-03-13