Category Archives: ರವಿ ಕೃಷ್ಣಾರೆಡ್ಡಿ

ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಗೆ ಜಾಮೀನು

– ರವಿ ಕೃಷ್ಣಾರೆಡ್ಡಿ

ಅಂತೂ ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಯವರಿಗೆ ನೆನ್ನೆ ಜಾಮೀನು ಸಿಕ್ಕಿತು. ಕ್ಷುಲ್ಲಕ ಒತ್ತಡಗಳಿಗೆ ತಲೆಬಾಗದ ನ್ಯಾಯಪ್ರಜ್ಞೆಯ ಮುಖ್ಯಮಂತ್ರಿ ಇದ್ದಿದ್ದರೆ ಈ ಇಡೀ ಪ್ರಸಂಗವೇ ಅನಗತ್ಯವಾಗಿತ್ತು. ಕೊನೆಗೂ ಹೋ‌ಮ್‌ಸ್ಟೇಯಲ್ಲಿ ದಾಳಿಗೊಳಗಾದ ವ್ಯಕ್ತಿಯೇ ಬಂದು ಹೈಕೋರ್ಟ್‌ನಲ್ಲಿ ನವೀನ್ ಪರವಾಗಿ ಮಾತನಾಡಿದ ಕಾರಣಕ್ಕಾಗಿ ಜಾಮೀನು ಸಿಕ್ಕಿತು. ನವೀನ್ ವಿರುದ್ದದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಇದು ಎಂದಾದರೂ ಕೋರ್ಟ್‌ನ ಛೀಮಾರಿಗೆ ಒಳಗಾಗಿ ಬಿದ್ದು ಹೋಗುವ ಕೇಸೇ ಆಗಿತ್ತು. ಆದರೂ ಕೆಲವು ದುಷ್ಟ ಮತ್ತು ಪ್ರಜಾಪ್ರಭುತ್ವ ವಿರೋಧಿ ಮತಾಂಧ ನೀಚರ ಕುತಂತ್ರದ ಫಲವಾಗಿ, ಪೋಲಿಸರ ಕಾರ್ಯದಲ್ಲಿ ಅನಗತ್ಯ ಹಸ್ತಕ್ಷೇಪ ಮತ್ತು ಪ್ರಭಾವದಿಂದಾಗಿ ಒಬ್ಬ ನಿರಪರಾಧಿ ಜೈಲಿನಲ್ಲಿರುವಂತಾಗಿದ್ದು ಪ್ರಜ್ಞಾವಂತರಿಗೆಲ್ಲ ಗೊತ್ತಿರುವುದೆ. ಅದು ಈ ನಾಡಿನ ಮುಖ್ಯಮಂತ್ರಿಗೂ ತಿಳಿದಿದೆ. ಅಷ್ಟಾದರೂ, ಸಂಪುಟವೇ ತೀರ್ಮಾನ ತೆಗೆದುಕೊಂಡಿದ್ದರೂ, ಅದಕ್ಕೆ ನಾಮಕಾವಸ್ಥೆ ಸಹಿ ಮಾಡದೆ ಕುಳಿತು, ಅಮಾಯಕರು ಮತ್ತು ನಿರಪರಾಧಿಗಳು ಹೈಕೋರ್ಟ್‌ನ ಮೆಟ್ಟಿಲು ಹತ್ತುವಂತೆ ಮಾಡಿದ ಈ ಮುಖ್ಯಮಂತ್ರಿಯ ಬಗ್ಗೆ ಯಾವ ರೀತಿಯ ಗೌರವ ತೋರುವುದೋ ನನಗಂತೂ ತಿಳಿಯುತ್ತಿಲ್ಲ. ಇಡೀ ಪ್ರಸಂಗವೇ ನಮ್ಮಲ್ಲಿನ ಅನೇಕರಿಗೆ ಅಸಹಾಯಕತೆ, ಆಕ್ರೋಶ, ತಿರಸ್ಕಾರ ಹುಟ್ಟಿಸಿದ ಪ್ರಸಂಗ.

ಹೈಕೋರ್ಟ್‌ನ ಜಾಮೀನು ವಿಚಾರದಲ್ಲಿ ಪ್ರಮುಖವಾಗಿ ಇಬ್ಬರು ಅಭಿನಂದನಾರ್ಹರು: ವಕೀಲ ನಿತಿನ್ ಮತ್ತು ಮಂಗಳೂರಿನ ವಿಜಯ್‌ಕುಮಾರ್. ಇನ್ನೂ ಅನೇಕ ಜನ ಈ ಇಡೀ ಪ್ರಕ್ರಿಯೆಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಸಾಂಘಿಕ ಪ್ರಯತ್ನ ಇಲ್ಲದಿದ್ದರೆ ಬಹುಶಃ ಈ ಸರ್ಕಾರ ವಜಾಗೊಳ್ಳುವ ತನಕ ಇಷ್ಟು ಮಾತ್ರದ ಬೆಳವಣಿಗೆಗೆ ಕಾಯಬೇಕಿತ್ತೇನೊ.

ಅಂದ ಹಾಗೆ, ಬಹುಶಃ ನಾಳೆ ಅಥವ ನಾಡಿದ್ದು ನವೀನ್ ಜೈಲಿನಿಂದ ಹೊರಬರಬಹುದು. ಹೈಕೋರ್ಟ್‌ನ ಆದೇಶದ ಪ್ರತಿ ಇಂದು ದೊರೆತರೆ ಮತ್ತು ಬಾಂಡ್ ನಾಳೆಗೆ ಸಿದ್ದವಾದರೆ, ನವೀನ್ ನಾಳೆ ಬಿಡುಗಡೆ ಆಗಬಹುದು. ಸಣ್ಣಪುಟ್ಟ ವಿಳಂಬವಾದರೂ ಈಗ ಮೊದಲಿನಂತೆ ಅನಿಶ್ಛಿತತೆ ಇಲ್ಲ. ನವೀನ್ ಈ ವಾರದಲ್ಲಿ ಜೈಲಿನಿಂದ ಹೊರಬರುವುದು ನಿಶ್ಚಿತ. ಮತ್ತು ಇಂದಲ್ಲ ನಾಳೆ ಸಂಪುಟದ ನಿರ್ಧಾರಕ್ಕೆ ಸಹಿಯೂ ಬಿದ್ದು ಆರೋಪ ಪಟ್ಟಿಯಿಂದ ನವೀನ್ ಹೆಸರು ಕೈಬಿಡುವುದೂ ನಿಶ್ಚಿತ. ಆದರೆ, ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳುವುದು ಹೇಗೆ ಎನ್ನುವುದೆ ಮುಂದಿನ ದಿನಗಳಲ್ಲಿಯ ಸವಾಲಿನ ಪ್ರಶ್ನೆ.

ಇವು ನವೀನ್ ಸೂರಿಂಜೆ ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಗಳು:

The Hindu:
Hindu_1_19_03_13
Hindu_2_19_03_13

ವಿಜಯ ಕರ್ನಾಟಕ:
VijayKarnataka_19_03_13

ಪ್ರಜಾವಾಣಿ:
prajavani_19_03_13

ಉದಯವಾಣಿ:
udayavani_19_03_13

ಕನ್ನಡ ಪ್ರಭ:
kannadaprabha_19_03_13

ತಮ್ಮಂತೆ ಎಲ್ಲರೂ ಜಾತಿರೋಗಿಗಳಾಗಬೇಕೆಂದು ಬಯಸುವ ಜಾತಿ ಸಂಘಗಳು

– ರವಿ ಕೃಷ್ಣಾರೆಡ್ಡಿ

ಫೆಬ್ರವರಿ.24, 2013 ರಂದು ಹಾಸನದಲ್ಲಿ ಅಲ್ಲಿಯ ಜಾನಪದ ಪರಿಷತ್ತು “ಜಾನಪದ ಆಹಾರ ಮೇಳ” ಏರ್ಪಡಿಸಿದ್ದದ್ದು, ಅಲ್ಲಿ ಮಾಂಸಾಹಾರದ ತಿನಿಸುಗಳ ಮಾರಾಟಕ್ಕಿಟ್ಟದ್ದು, ಮತ್ತು ತದನಂತರದ ಕೆಲವು ವಾದವಿವಾದಗಳು ನಮ್ಮ ಓದುಗರಿಗೆ “ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!” ಲೇಖನದ ಮೂಲಕ ಗೊತ್ತಿರುವಂತಹುದೆ. ಒಂದು ಕೀಳುಮಟ್ಟದ ಅಪ್ರಪ್ರಚಾರ ಮತ್ತು ಅನೈತಿಕ ಪತ್ರಿಕೋದ್ಯಮಕ್ಕೆ ಮಾದರಿ ಈ ಘಟನೆಗಳು.

ಹಾಗೆಯೇ, ತಮಗೆ ಸಂಬಂಧಪಟ್ಟಿಲ್ಲದ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಜಾತ್ಯತೀತ ಲೇಖಕಿ “ತಮ್ಮ ಜಾತಿ-ಮತದವಳು” ಎಂಬ ಒಂದೇ ಕಾರಣಕ್ಕೆ ಅವರ ಮೇಲೆ ಹಕ್ಕುಸ್ವಾಮ್ಯ ಮಾಡಹೊರಟ ಅಲ್ಲಿಯ ಜೈನ ಸಂಘದ ವರ್ತನೆ ಅಪ್ರಬುಧ್ಹತೆಯುಳ್ಳದ್ದು ಮತ್ತದು ಖಂಡನೀಯ. ಮಾಂಸಾಹಾರದ ಬಗ್ಗೆ ತಮ್ಮ ತಕರಾರುಗಳಿದ್ದರೆ ಅದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಈ ಜೈನ ಸಂಘ ತನ್ನ ಅಭಿಪ್ರಾಯ ಪ್ರಕಟಿಸಬೇಕಿತ್ತೇ ಹೊರತು ಕೇವಲ ರೂಪ ಹಾಸನರ ಹೇಳಿಕೆಯನ್ನು ಖಂಡಿಸಿದ್ದು, ಆದಕ್ಕಾಗಿ ಖಂಡನಾ ನಿರ್ಣಯಗಳನ್ನು ಕೈಗೊಳ್ಳುವುದು, ಕ್ಷಮೆ ಕೇಳಿ, ವಿಷಾದ ವ್ಯಕ್ತಪಡಿಸಿ ಎನ್ನುವುದು ಆ ಸಂಘದಲ್ಲಿರುವ ಮತಾಂಧರ ಮನಸ್ಥಿತಿಯನ್ನು ತೋರಿಸುತ್ತದೆ.

ರೂಪ ಹಾಸನರು ಜೈನ ಸಂಘದ ಪದಾಧಿಕಾರಿಗಳೇ ಅಥವ ಜೈನ ಮತದ ಪ್ರತಿನಿಧಿಯೇ? ಅಲ್ಲವೇ ಅಲ್ಲ. ಹಾಗಾಗಿ, ಕೇವಲ ರೂಪ ಹಾಸನರ ಹೇಳಿಕೆ ಖಂಡಿಸಿ ನಿರ್ಣಯ ತೆಗೆದುಕೊಂಡ ಈ ಸಂಘ ತನ್ನ ವ್ಯಾಪ್ತಿಯನ್ನು ಮೀರಿದೆ ಮತ್ತು ಪಾಳೇಗಾರಿಕೆ ಮನೋಭಾವದಿಂದ, ಸಂಕುಚಿತ ಜಾತಿಪ್ರಜ್ಞೆಯಿಂದ ನರಳುತ್ತಿದೆ. ಹಾಗೆಯೇ, ತಾನೆಷ್ಟು ಪ್ರತಿಗಾಮಿ ಮತ್ತು ತಮ್ಮ ಪದಾಧಿಕಾರಿಗಳು ಎಷ್ಟು ದಡ್ಡರು, ಅವಿವೇಕಿಗಳು, ಎಂದು ಜಾಹೀರು ಪಡಿಸಿಕೊಂಡಿದೆ. ಈ ಜಾತಿ ಸಂಘಟನೆಗಳಲ್ಲಿ ಒಂದಿಷ್ಟಾದರೂ ಕಾಮನ್ ಸೆನ್ಸ್ ಇರುವವರು ಇರುವುದಿಲ್ಲವೇ? ಯಾರಾದರೂ ಇಂತಹ ನಿರ್ಣಯಗಳ ವಿರುದ್ಧ ಕೋರ್ಟಿಗೆ ಹೋಗಿ ಇವರ ಅಧಿಕಾರದ ಅಥವ ಅಜ್ಞಾನದ ಮಿತಿಯನ್ನು ತಿಳಿಯಪಡಿಸಬೇಕು.

ಹೀಗೆ ಜಾತ್ಯತೀತರ ಮೇಲೆಲ್ಲ ಅವರು ನಮ್ಮನಮ್ಮ ಜಾತಿಗೆ ಸೇರಿದವರು ಎಂದು ಭಾವಿಸಿಕೊಂಡು ಈ ಲೇಖಕರು-ಚಿಂತಕರು ನಮ್ಮಂತೆ ಕೀಳು ಜಾತಿಮನೋಭಾವನೆಯ ಕಾಯಿಲೆಗೆ ಒಳಗಾಗಿಲ್ಲ, ಅವರೂ ಈ ಕಾಯಿಲೆ ಹತ್ತಿಸಿಕೊಂಡು ಓಡಾಡಾಬೇಕು ಎಂದು ಜಾತಿ ಸಂಘಟನೆಗಳೆಲ್ಲ ಹೇಳಿಕೆ ಕೊಡುತ್ತ ಹೊರಟರೆ, ಅವರು ನಗೆಪಾಟಲಿಗೀಡಾಗುತ್ತಾರಷ್ಟೇ ಅಲ್ಲ, ಅವರೆಲ್ಲರ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಿಸುವ ಅಗತ್ಯವಿದೆ.

ಜೈನ ಸಂಘದ ಹೇಳಿಕೆಗೆ ರೂಪ ಹಾಸನರು ಪ್ರತಿಕ್ರಿಯಿಸಿ “ಜನಮಿತ್ರ”ಕ್ಕೆ ಪತ್ರ ಬರೆದಿದ್ದಾರೆ ಮತ್ತು ಅದು ಆ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜೈನ ಸಂಘದ ನಿರ್ಣಯ, ಮತ್ತು “ಜನಮಿತ್ರ”ದಲ್ಲಿ ಪ್ರಕಟಗೊಂಡ ಪತ್ರಗಳು ಇಲ್ಲಿವೆ. ಪತ್ರಿಕೆಗಳ ಮತ್ತು ಸಂಘಟನೆಗಳ ಪ್ರತಿನಿಧಿಗಳು ಜವಾಬ್ದಾರಿಯಿಂದ ಮತ್ತು ಪ್ರಗತಿಪರ ಮನೋಭಾವದಿಂದ ಕಾರ್ಯನಿರ್ವಹಿಸಲಿ ಎಂದು ಆಶಿಸೋಣ.

jain-sangh-rupa-hassan
rupa-hassan-janamitra

ನೀಚ ಪತ್ರಕರ್ತರು ಹೆಚ್ಚಾಗುತ್ತಲೇ ಇದ್ದಾರೆ

ರವಿ ಕೃಷ್ಣಾರೆಡ್ಡಿ

ಇಂದಿಗೆ ನವೀನ್ ಸೂರಿಂಜೆ ಜೈಲಿಗೆ ಹೋಗಿ ನಾಲ್ಕು ತಿಂಗಳಾಯಿತು. ಒಬ್ಬ ಅಯೋಗ್ಯ ಮತ್ತು ನ್ಯಾಯಪ್ರಜ್ಞೆ ಇಲ್ಲದ ಮುಖ್ಯಮಂತ್ರಿಯ ಕಾರಣದಿಂದಾಗಿ ಸೂರಿಂಜೆ ಇನ್ನೂ ಬಿಡುಗಡೆ ಆಗಿಲ್ಲ. ಅಮೇಧ್ಯದಲ್ಲಿ ಅಧಿಕಾರ ಮತ್ತು ದುಡ್ಡು ಸಿಕ್ಕರೂ ಅದನ್ನು ನಾಲಿಗೆಯಲ್ಲಿ ನೆಕ್ಕಿ ಬಾಚಿಕೊಳ್ಳುವವರೆಲ್ಲ ನಮ್ಮ ರಾಜಕೀಯ ನಾಯಕರಾಗಿರುವಾಗ ಬಹುಶಃ ಇದಕ್ಕಿಂತ ಬೇರೆಯದನ್ನು ನಿರೀಕ್ಷಿಸುವುದು ಅಸಮಂಜಸವೇನೊ.

ಇದೇ ಸಮಯದಲ್ಲಿ ರಾಜ್ಯದ ಪತ್ರಕರ್ತರ ಸಂಘಟನೆಗಳೂ ಮಾಡಬೇಕಾದಷ್ಟು ಮಾಡಲೇ ಇಲ್ಲ. naveen-soorinjeನಾಯಕತ್ವ ತೆಗೆದುಕೊಳ್ಳುವುದಕ್ಕೆ ಸಿದ್ದರಿಲ್ಲದವರೇ ಅಲ್ಲಿ ತುಂಬಿಕೊಂಡಿರುವಾಗ ಇನ್ನೇನನ್ನು ನಿರೀಕ್ಷಿಸಬಹುದು? ಹಾಗೆಂದು ಇವರ್ಯಾರಿಗೂ ಅಧಿಕಾರ ಇಲ್ಲವೆಂದಾಗಲಿ, ಸಂಪರ್ಕಜಾಲ ಇಲ್ಲವೆಂದಾಗಲಿ ಅಲ್ಲ. ಈ ಸಂಘಟನೆಗಳ ಅಧಿಕಾರ ಸ್ಥಾನದಲ್ಲಿರುವ ಬಹುತೇಕರು ಬಹಳ ಶಕ್ತಿಶಾಲಿಗಳು, ನೇರವಾಗಿ ಒಬ್ಬ ಮಂತ್ರಿ ಅಥವ ಮುಖ್ಯಮಂತ್ರಿಯ ಬಳಿಗೆ ಹೋಗಿ ತಮಗೆ ಬೇಕಾದ ಕೆಲಸ ಮಾಡಿಸಿಕೊಂಡು ಬರುವವರು. ಆದರೆ, ತಮ್ಮವನೇ ಆದ ಒಬ್ಬ ಪತ್ರಕರ್ತ ನಿರಪರಾಧಿಯಾಗಿದ್ದರೂ ಜೈಲಿನಲ್ಲಿ ಕೊಳೆಯುತ್ತಿರುವಾಗ, ಆತನ ಮೇಲಿನ ಸುಳ್ಳು ಆರೋಪಗಳನ್ನು ಕ್ಯಾಬಿನೆಟ್ ಕೈಬಿಡುವ ನಿರ್ಧಾರ ಮಾಡಿದ ಮೇಲೂ ಮುಖ್ಯಮಂತ್ರಿ ಅದಕ್ಕೆ ನಾಮಕಾವಸ್ಥೆ ಸಹಿ ಮಾಡುವುದನ್ನು ಮಾಡದೇ ಇರುವಾಗ ಈ ಸಂಘಟನೆಗಳಿಗೆ ಮುಖ್ಯಮಂತ್ರಿಯ ಮೇಲೆ ಒತ್ತಡ ತರಲಾಗುವುದಿಲ್ಲ ಎಂದರೆ, ಅದು ಅವರಿಗೆ ಬೇಕಾಗಿಲ್ಲ ಎಂದೇ ಅರ್ಥ. ನಮ್ಮ ಸಮಾಜದಲ್ಲಿ ರಾಜಕೀಯ ಕ್ಷೇತ್ರ ಮಾತ್ರವೇ ಕೆಟ್ಟಿಲ್ಲ. ಸಮಾಜದ ಪ್ರತಿಯೊಂದು ವಿಭಾಗದಲ್ಲೂ ಅರ್ಬುದ ರೋಗ ಒಳಗಿನಿಂದಲೇ ಕೊಲ್ಲುತ್ತಿದೆ.

ಹಾಸನದ “ದಿ ಹಿಂದೂ” ಪತ್ರಿಕೆಯ ವರದಿಗಾರರಾದ ಸತೀಶ ಜಿ.ಟಿ. ನನಗೆ ವೈಯಕ್ತಿವಾಗಿಯೂ ಪರಿಚಿತರು. ಸಾಮಾಜಿಕ ಕಳಕಳಿಯುಳ್ಳ ಪ್ರಾಮಾಣಿಕ ಮತ್ತು ಆದರ್ಶವಾದಿ ಪತ್ರಕರ್ತ. ಈ ಹಿಂದೆ ಅವರು ಡೆಕ್ಕನ್ ಹೆರಾಲ್ಡ್‌ನಲ್ಲಿದ್ದಾಗ ಬಿಡಿಎದ ಅಕ್ರಮ ಜಿ-ಕೆಟಗರಿ ಸೈಟುಗಳ ಬಗ್ಗೆ, ಮನೆ-ಸೈಟು ಇರುವ ಶಾಸಕ-ಸಂಸದರೆಲ್ಲ ನಮಗೆ ಬೆಂಗಳೂರಿನಲ್ಲಿ ಮನೆ-ಸೈಟಿಗೆ ಗತಿ ಇಲ್ಲ ಎಂದು ಅಕ್ರಮ ಅಫಿಡವಿಟ್ ಸಲ್ಲಿಸಿ ನಾಲ್ಕೈದು ಕೋಟಿ ರೂಪಾಯಿ ಬೆಲೆಯ ಸೈಟುಗಳನ್ನು ಏಳೆಂಟು ಲಕ್ಷಗಳಿಗೆ ಹೊಡೆದುಕೊಂಡಿದ್ದರ ಬಗ್ಗೆ ವಿಸ್ತೃತವಾಗಿ ವರದಿ ಮಾಡಿದ್ದರು. ನಾಲ್ಕು ವರ್ಷದ ಹಿಂದೆ ಉತ್ತರ ಕರ್ನಾಟಕದಲ್ಲಿ ಅಸಾಮಾನ್ಯವಾದ ಮಳೆ ಬಂದು ಪ್ರವಾಹ ಉಕ್ಕೇರಿ ಜನರ ಬದುಕುಗಳು ನೆರೆಯಲ್ಲಿ ಕೊಚ್ಚಿ ಹೋದಾಗ ಅದರ ಬಗ್ಗೆ ವಾರಗಟ್ಟಲೆ ಪ್ರವಾಸ ಮಾಡಿ ವರದಿ ಮಾಡಿದ್ದರು. ಈಗ ಸುಮಾರು ಎರಡು ವರ್ಷಗಳಿಂದ ಈ ಪ್ರತಿಭಾವಂತ ಪತ್ರಕರ್ತ ಹಾಸನದಲ್ಲಿದ್ದಾರೆ. ಇಂತಹ ಒಬ್ಬ ಪತ್ರಕರ್ತ ತಮ್ಮ ನಡುವೆ ಇರುವುದೇ ಒಂದು ಹೆಮ್ಮೆ ಎಂದು ಭಾವಿಸದ ಅಲ್ಲಿನ ಪತ್ರಕರ್ತರ ಸಂಘ ಮತ್ತು ಅದರ ಅಧ್ಯಕ್ಷರು ಸತೀಶ್ ತಮ್ಮ ವಿರುದ್ದ ಸಕಾರಣವಾಗಿ ನೀಡಿದ ದೂರಿನ ಕಾರಣಕ್ಕೆ ವೈಯಕ್ತಿಕ ದ್ವೇಷದಿಂದ ಸಂಘವನ್ನು ದುರುಪಯೋಗಪಡಿಸಿಕೊಂಡು ನೋಟಿಸ್ ಕೊಡುತ್ತಾರೆ. ಸತ್ಯ ಹೇಳಿದ್ದಕ್ಕೆ ಬೇಷರತ್ತಾಗಿ ಕ್ಷಮೆ ಕೇಳಬೇಕು ಎನ್ನುತ್ತಾರೆ. Satish_GTಒಬ್ಬ ಪತ್ರಕರ್ತನಿಗೆ ಪತ್ರಿಕಾಗೋಷ್ಟಿಗೆ ಬರಬೇಡಿ ಎನ್ನುವ ಅಹಂಕಾರ ಮತ್ತು ದರ್ಪ ತೋರಿಸುತ್ತಾರೆ. ಬಹಿಷ್ಕಾರದ ಮಾತನ್ನಾಡುತ್ತಾರೆ. ಇವರೆಂತಹ ಪತ್ರಕರ್ತರು? ಈ ಮನೋಭಾವವೊಂದೇ ಸಾಕು ಈ ಅಧ್ಯಕ್ಷೆ ಪ್ಯಾಕೇಜ್-ನ್ಯೂಸ್, ಪೇಯ್ಡ್ ನ್ಯೂಸ್‌ನಲ್ಲಿ ಮುಂದಿದ್ದಾರೆ ಎಂದು ಭಾವಿಸಿಕೊಳ್ಳಲು. ಅಷ್ಟೇ ಅಲ್ಲ, ಇವರಿಗೆ ಕನಿಷ್ಟ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡಾಗ ಅದನ್ನು ಮತ್ತಷ್ಟು ಬಯಲುಗೊಳಿಸಿಕೊಳ್ಳದೇ ಪಶ್ಚಾತ್ತಾಪದ ಮೂಲಕವೇ ಸರಿಪಡಿಸಿಕೊಳ್ಳೋಣ ಎನ್ನುವ ಜ್ಞಾನವಿಲ್ಲದ ಮತಿಹೀನರೆಲ್ಲ ಸಂಘಗಳ ಮುಖ್ಯಸ್ಥರಾಗಿಬಿಡುತ್ತಾರೆ, ಪದಾಧಿಕಾರಿಗಳಾಗಿಬಿಡುತ್ತಾರೆ.

ಇನ್ನು ಈ ಹಾಸನದ ಪತ್ರಕರ್ತರ ಸಂಘದ ಉಳಿದ ಪದಾಧಿಕಾರಿಗಳಾದರೂ ಎಂತಹವರು? ಅವರೂ ತಮ್ಮ ಅಧ್ಯಕ್ಷೆಯ ಅಭಿಪ್ರಾಯವನ್ನು ಅನುಮೋದಿಸುವವರೇ ಆದರೆ, ಅವರೂ ನಾಚಿಕೆಪಟ್ಟುಕೊಳ್ಳಬೇಕು. ಹಾಗೆಯೇ, ಆ ಸಂಘದ ಸದಸ್ಯರು ಕಟು ಪ್ರತಿಭಟನೆಯ ಮೂಲಕ ಸಂಘದ ಅಯೋಗ್ಯ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಂದ ರಾಜೀನಾಮೆ ಕೊಡಿಸಿ ತಮ್ಮ ಪ್ರಾಮಾಣಿಕತೆ, ವೃತ್ತಿಪರತೆ, ನ್ಯಾಯಪರತೆಯನ್ನು ನಿರೂಪಿಸಬೇಕು. ಆ ಜವಾಬ್ದಾರಿ ಅಲ್ಲಿಯ ಸಂಘದ ಸದಸ್ಯರ ಮೇಲೆಯೇ ಇದೆ.

ಇನ್ನು, ವಿಷುಯಲ್ ಮೀಡಿಯಾದ ಪತ್ರಕರ್ತರ ಬಗ್ಗೆ. ನಮ್ಮ ಭಾಷೆಯ ಅನೇಕ ಟಿವಿ ನಿರೂಪಕರು ಅಹಂಕಾರಿಗಳು, ಅಜ್ಞಾನಿಗಳು, ಭ್ರಷ್ಟರು. ಇದು ಬಹುತೇಕರಿಗೆ ಗೊತ್ತಿರುವ ವಿಚಾರವೇ. ಆದರೆ ಇದಿಷ್ಟೇ ಅಲ್ಲ. ಇವರಲ್ಲಿ ಕೆಲವರು ಕೊಲೆ ಮಾಡಿಸಲು ಸುಪಾರಿ ಕೊಡುವಂತಹ ಕ್ರಿಮಿನಲ್‌ಗಳೂ ಇದ್ದಾರೆ. ಈ ವಿಚಾರ ನೆನ್ನೆಯ “ದಿ ಹಿಂದೂ” ಪತ್ರಿಕೆಯಲ್ಲಿ ಬಂದಿದೆ. ಅವರು ಆ ವ್ಯಕ್ತಿಯ ಹೆಸರು ಮತ್ತು ಆತ ಕೆಲಸ ಮಾಡುತ್ತಿದ್ದ ಚಾನಲ್‌ನ ಬಗ್ಗೆ ಹೇಳಿಲ್ಲ. ಆದರೆ ಈ ವಿಷಯ ಬಹುಶಃ ಕನ್ನಡದ ಯಾವುದೇ ಪತ್ರಿಕೆಯಲ್ಲಿ ಬಂದ ಹಾಗೆ ಕಾಣುವುದಿಲ್ಲ. ನಮ್ಮ ಕನ್ನಡ ಪತ್ರಿಕೆಗಳಿಗೆ ಏಕಿಷ್ಟು ಭಯವೋ ಅರ್ಥವಾಗುತ್ತಿಲ್ಲ.

ನನಗೆ ಗೊತ್ತಾದ ಹಾಗೆ ಆ ಕ್ರಿಮಿನಲ್ ಪತ್ರಕರ್ತನ ಕ್ರೌರ್ಯದ ಕೈಗಳು ಬಹಳ ಉದ್ದವಿವೆ. ಆತನಿಗೆ ಮಾಜಿ ಮುಖ್ಯಮಂತ್ರಿ, ಹಾಲಿ ಮಂತ್ರಿಗಳೆಲ್ಲ ಆಪ್ತರಂತೆ. ಈತನ ಅಪ್ಪನಿಗೆ ಈ ಪತ್ರಕರ್ತ ತಮ್ಮ ಚೇಲಾ ಎಂಬ ಕಾರಣಕ್ಕೆ, ತನ್ನ ಜಾತಿಯವ ಎನ್ನುವ ಕಾರಣಕ್ಕೆ ಮಾಜಿ hindu_tv_anchor_060313ಮುಖ್ಯಮಂತ್ರಿ ಜಿ-ಕೆಟಗರಿ ಸೈಟು ಕೊಟ್ಟು ಪುರಸ್ಕರಿಸಿದ್ದಾರಂತೆ. ಇಲ್ಲೆಲ್ಲ ನಾನು “ಅಂತೆ” ಎಂದು ಬರೆಯುತ್ತಿದ್ದರೂ ಇವೆಲ್ಲ ಅಂತೆಕಂತೆಗಳೇನೂ ಅಲ್ಲ. ಇಂತಹ ಕ್ರಿಮಿನಲ್ ಪತ್ರಕರ್ತ ನಮ್ಮ ರಾಜ್ಯದ ನಂಬರ್ ಒನ್ ಚಾನಲ್‌ನಲ್ಲಿ ಮುಖ್ಯ ನಿರೂಪಕನಾಗಿ ಕಾಣಿಸಿಕೊಳ್ಳುತ್ತಾನೆ ಎಂದರೆ ಅದು ನಮ್ಮ ಮಾಧ್ಯಮಲೋಕದ ಅಧೋಗತಿಗೆ ಸಾಕ್ಷಿ. ಈತ ಇಷ್ಟರಲ್ಲೇ ಸೆರೆ ಆಗಬಹುದು ಎನ್ನುತ್ತವೆ ಮೂಲಗಳು. ಆದರೆ ಆತ ಬಚಾವಾಗಲೂಬಹುದು, ಅಷ್ಟು ಪ್ರಭಾವಶಾಲಿ ಎನ್ನುತ್ತಾರೆ ನನಗೆ ತಿಳಿದವರು.

ನಮ್ಮ ರಾಜಕೀಯ ಕ್ಷೇತ್ರದ ಬಹುಶಃ ಇನ್ನೊಂದು ಐದು-ಹತ್ತು ವರ್ಷಗಳಲ್ಲಿ ಶುದ್ಧವಾಗಬಹುದು ಎನ್ನುವ ನಂಬಿಕೆ ನನಗಿದೆ. ಆದರೆ, ರಾಜ್ಯದ ಮಾಧ್ಯಮಲೋಕ ಶುದ್ದವಾಗುತ್ತದೆ ಎನ್ನುವ ನಂಬಿಕೆ ಇಲ್ಲ. ಬಹುಶಃ ಇಲ್ಲಿಯೇ ವರ್ತಮಾನ.ಕಾಮ್‌ನ ಹೆಚ್ಚುವರಿ ಜವಾಬ್ದಾರಿ ಇದೆ ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಲೋಕದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ನಮ್ಮಷ್ಟು ಕನ್ನಡಿ ಹಿಡಿದವರು ಯಾರೂ ಇರಲಿಕ್ಕಿಲ್ಲ. ಪ್ರಾಮಾಣಿಕ ಪತ್ರಕರ್ತರು ಸಾಂಘಿಕವಾಗಿ ಈ ಕೆಲಸಕ್ಕೆ ಕೈಜೋಡಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನೀಚ ಪತ್ರಕರ್ತರನ್ನು ವ್ಯವಸ್ಥೆಯಿಂದ ನಿವಾರಿಸಿಕೊಳ್ಳುವ ಅನಿವಾರ್ಯತೆ ಈ ಸಮಾಜಕ್ಕೆ ಸೃಷ್ಟಿಯಾಗಿದೆ.

ಯಡಿಯೂರಪ್ಪ ಮತ್ತು ನಿರಾಣಿಯ ತಪ್ಪು ಕಂಡುಹಿಡಿದ ಲೋಕಾಯುಕ್ತ ಪೋಲಿಸರು…

– ರವಿ ಕೃಷ್ಣಾರೆಡ್ಡಿ

ಅಕ್ಟೋಬರ್  18, 2011 ರಂದು ವರ್ತಮಾನ.ಕಾಮ್‌ನಲ್ಲಿ “ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…” ವರದಿ ದಾಖಲೆಗಳ ಸಮೇತ ಪ್ರಕಟವಾಗಿತ್ತು. ಆಗ ಈ ಕೇಸು ಲೋಕಾಯುಕ್ತ ನ್ಯಾಯಾಲಯದಲ್ಲಿತ್ತು ಮತ್ತು ಲೋಕಾಯುಕ್ತ ಪೋಲಿಸರು ತನಿಖೆ ನಡೆಸುತ್ತಿದ್ದರು. ಎಷ್ಟೋ ತಿಂಗಳಗಳ ನಂತರ, ಬಹುಶಃ ವರ್ಷದ ನಂತರ, ನಮ್ಮ ಘನ, ದಕ್ಷ ಲೋಕಾಯುಕ್ತ ಪೋಲಿಸರು ಈ ಕೇಸಿನಲ್ಲಿ ಸತ್ಯಾಂಶ ಇಲ್ಲ ಎಂದು ನವೆಂಬರ್ 13, 2012 ರಂದು ನ್ಯಾಯಾಲಯಕ್ಕೆ ’ಬಿ’ ರಿಪೋರ್ಟ್ ಸಲ್ಲಿಸಿದರು. DC-bsy-nirani-lokayukta_141112ನ್ಯಾಯಾಲಯ ಅದನ್ನು ತಿರಸ್ಕರಿಸಿ ಮತ್ತೊಮ್ಮೆ ತನಿಖೆಗೆ ಆದೇಶಿಸಿತು.

ಮತ್ತೆ ತಿಂಗಳುಗಳಾದ ಮೇಲೆ, ನೆನ್ನೆ, ನಮ್ಮ ದಕ್ಷ ಮತ್ತು ನಿಷ್ಪಕ್ಷಪಾತಿ ಲೋಕಾಯುಕ್ತ ಪೋಲಿಸರು ಲೊಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಎರಡನೆ ವರದಿ ಸಲ್ಲಿಸಿದ್ದಾರೆ. ಈ ಬಾರಿ ಯಡಿಯೂರಪ್ಪ ಮತು  ಸಚಿವ ಮುರುಗೇಶ್ ನಿರಾಣಿಯ ವಿರುದ್ಧದ ಆರೋಪದಲ್ಲಿ ನಿಜಾಂಶ ಇದೆ ಎಂದಿದ್ದಾರೆ. ನ್ಯಾಯಾಲಯದ ಅಭಿಪ್ರಾಯ ಇನ್ನೂ ಪ್ರಕಟವಾಗಿಲ್ಲ.

ಲೋಕಾಯುಕ್ತ ಪೋಲಿಸರಿಗೆ ಈಗ ಯಾವ ಹೊಸ ವಿವರಗಳು ಸಿಕ್ಕವು ಗೊತ್ತಿಲ್ಲ. ಆದರೆ, ಲೋಕಾಯುಕ್ತ ಪೋಲಿಸರು ಹಾಕುತ್ತಿದ್ದ ಮತ್ತು ಹಾಕುತ್ತಿರುವ ’ಬಿ’ ರಿಪೋರ್ಟ್‌ಗಳು ಎಷ್ಟು ಅಸಂಬದ್ಧ ಎಂದು ಇದರಿಂದ ಗೊತ್ತಾಗುತ್ತದೆ. ರಾಜಕೀಯ ಹಸ್ತಕ್ಷೇಪದಿಂದ ಲೋಕಾಯುಕ್ತ ಸಂಸ್ಥೆಯನ್ನು ಮುಕ್ತಗೊಳಿಸಿ ಅದನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡದಿದ್ದರೆ ಆ ಸಂಸ್ಥೆ ಪೋಲಿಸ್ ಇಲಾಖೆಯ ಹೆಚ್ಚುವರಿ ಅಂಗ ಮಾತ್ರವಾಗಿರುತ್ತದೆ.

ಇನ್ನು ಫ್ರಾಡ್‌ಗಳೆಲ್ಲ ಈ ರಾಜ್ಯದಲ್ಲಿ ಮಂತ್ರಿಗಳಾಗಿ ಮುಂದುವರೆಯುತ್ತಲೇ ಇದ್ದಾರೆ. ಲೊಕಾಯುಕ್ತ ಪೋಲಿಸರು ಸರಿಯಾಗಿ ತನಿಖೆ ನಡೆಸಿ ಶೀಘ್ರಗತಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಅನುವು ಮಾಡಿಕೊಟ್ಟರೆ ನಮ್ಮ ಅನೇಕ ಭ್ರಷ್ಟ ರಾಜಕಾರಣಿಗಳು ಜೈಲಿನಲ್ಲಿದ್ದು ನಮ್ಮ ರಾಜಕೀಯ ಕ್ಷೇತ್ರ ಅಷ್ಟು ಮಾತ್ರಕ್ಕಾದರೂ ಶುದ್ದವಾಗಿರುತ್ತಿತ್ತು. ಆದರೆ,  ಕೊತ್ವಾಲನೂ ಕಳ್ಳರೊಂದಿಗೆ ಶಾಮೀಲಾಗಿರುವಾಗ ಅಥವ ಮಂತ್ರಿಯೇ ಕಳ್ಳನಾಗಿರುವಾಗ ಅವನ ಕೆಳಗಿರುವ ಕೊತ್ವಾಲ ತಾನೆ ಏನು ಮಾಡುತ್ತಾನೆ? ಲೊಕಾಯುಕ್ತ ಸಂಸ್ಥೆಯ ಸ್ವಾಯತ್ತತೆಗಾಗಿ ನಮ್ಮ ರಾಜಕೀಯ ಪಕ್ಷಗಳನ್ನು ಜನರು ಒತ್ತಾಯಿಸಬೇಕಿದೆ.

ವಿಜಯ ಕರ್ನಾಟಕ:

bsy-nirani-pasha

The Hindu:

thehindu-bsy-nirani-lokayukta

 

ನವೀನ್ ಸೂರಿಂಜೆ : ಮುಖ್ಯಮಂತ್ರಿಗಳಿಗೊಂದು ಪತ್ರ…

– ರವಿ ಕೃಷ್ಣಾರೆಡ್ಡಿ

ಸ್ನೇಹಿತರೆ,

ರಾಜ್ಯ ಸರ್ಕಾರದ ಸಚಿವ-ಸಂಪುಟ ನವೀನ್ ಸೂರಿಂಜೆಯವರೆ ಮೇಲಿನ ಆಪಾದನೆಗಳನ್ನು ಕೈಬಿಡಲು ತೀರ್ಮಾನಿಸಿ ಇಂದಿಗೆ ಸರಿಯಾಗಿ ನಾಲ್ಕು ವಾರವಾಯಿತು. ಅದಾದ ನಂತರ ಮಾನ್ಯ ಮುಖ್ಯಮಂತ್ರಿಗಳು ನ್ಯಾಯಪ್ರಜ್ಞೆಯಿಂದ ವರ್ತಿಸಿದ್ದರೆ ಇಷ್ಟೊತ್ತಿಗೆ ನವೀನ್ ಸೂರಿಂಜೆ ಎಂದೋ ಬಿಡುಗಡೆ ಆಗಬೇಕಿತ್ತು. ಸಚಿವ ಸಂಪುಟದ ನಿರ್ಧಾರಗಳ ಮೇಲೆ ಮುಖ್ಯಮಂತ್ರಿ ಸಹಿ ಹಾಕುವ ಕ್ರಮ ಒಂದಿದೆ. ಅದು ಕೇವಲ ಶಿಷ್ಟಾಚಾರ. ಸಂಪುಟ ಸಭೆ ಆದ ದಿನವೇ ಅಥವ ಮಾರನೆಯ ದಿನವೇ ಮುಖ್ಯಮಂತ್ರಿ ಸಹಿ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಶಿಷ್ಟಾಚಾರದಂತೆ ನಾಲ್ಕು ವಾರಗಳ ಹಿಂದೆ (31-01-13) ಆದ ಸಂಪುಟ ಸಭೆ ತೀರ್ಮಾನಗಳ ಮೇಲೆ ಮುಖ್ಯಮಂತ್ರಿ ಮಾರನೆಯ ದಿನ ಸಹಿ ಹಾಕಿದರು. ಆದರೆ ನವೀನ್ ಸೂರಿಂಜೆ ವಿಷಯದ ಮೇಲಿನ ನಿರ್ಧಾರದ ಕಡತಕ್ಕೆ ಸಹಿ ಹಾಕದೆ ಹಾಗೆಯೇ ಉಳಿಸಿಕೊಂಡರು. ಇಂತಹುದೊಂದು ಘಟನೆ ಬಹುಶ: ಇಲ್ಲಿಯವರೆಗಿನ ಯಾವೊಂದು ಸಚಿವ ಸಂಪುಟದ ತೀರ್ಮಾನದ ವಿಷಯಕ್ಕೂ ಆಗಿಲ್ಲ. ಇದೊಂದು ಕೆಟ್ಟ ಪರಂಪರೆ.

ಇದೆಲ್ಲ ಯಾಕಾಯಿತು, ಇದರ ಹಿಂದೆ ಯಾರಿದ್ದಾರೆ, ಇಷ್ಟಕ್ಕೂ ನಮ್ಮ ಮುಖ್ಯಮಂತ್ರಿಗಳ ಘನತೆ, ಧೀಮಂತಿಕೆ, ನಿಷ್ಟುರತೆ, ನ್ಯಾಯಪ್ರಜ್ಞೆ ಎಷ್ಟಿದೆ naveen-soorinjeಎನ್ನುವ ವಿವರಗಳಿಗೆ ನಾನು ಹೋಗುವುದಿಲ್ಲ. ಇವೆಲ್ಲವನ್ನೂ ಬದಿಗಿಟ್ಟು ನಮ್ಮ ಈ ಮುಖ್ಯಮಂತ್ರಿ ತಮಗೆ ವೈಯಕ್ತಿಕವಾಗಿ ಹೆಚ್ಚು ಅನಾನುಕೂಲವಾಗದ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ಅದು ನಮ್ಮನ್ನಾಳುವ ಜನರ ಸ್ವಾರ್ಥವನ್ನೂ, ಹೇಡಿತನವನ್ನೂ, ಅಧಿಕಾರಲೋಲುಪತೆಯನ್ನೂ, ನ್ಯಾಯಪ್ರಜ್ಞಾರಾಹಿತ್ಯವನ್ನೂ ತಿಳಿಸುತ್ತದೆ ಎಂದು ಭಾವಿಸುತ್ತೇನೆ.

ಇತ್ತೀಚಿನ ದಿನಗಳಲ್ಲಿ ಕೆಲವು ಪತ್ರಿಕೆಗಳು ಈ ವಿಷಯದ ಹಿಂದೆ ಬಿದ್ದಿದ್ದು ಫಾಲೊ-ಅಪ್ ಸ್ಟೋರಿಗಳನ್ನು ಮಾಡುತ್ತಿದ್ದಾರೆ (ದಿ ಹಿಂದು, ಡೆಕ್ಕನ್ ಕ್ರಾನಿಕಲ್). ರಾಜ್ಯದ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳೂ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಈ ಮೂಲಕ ಕೋರುತ್ತೇನೆ. ಹಾಗೆಯೇ, ನಾಡಿನ ನ್ಯೂಸ್ ಚಾನೆಲ್‌ಗಳೂ ಈ ವಿಷಯದ ಮೇಲೆ ಧ್ವನಿಯೆತ್ತಿ ತಮ್ಮ ಸಹೊದ್ಯೋಗಿಗೆ ನ್ಯಾಯ ದೊರಕಿಸಿಕೊಳ್ಳಬೇಕೆಂದೂ ವಿನಂತಿಸುತ್ತೇನೆ. ನವೀನ್ ಸೂರಿಂಜೆ ಜೈಲಿನಲ್ಲಿರುವ ಪ್ರತಿ ಕ್ಷಣವೂ ಅನ್ಯಾಯದ ವಿಸ್ತರಣೆ ಎಂದು ಪ್ರತ್ಯೇಕವಾಗಿ ಯಾರಿಗೂ ನೆನಪಿಸಬೇಕಿಲ್ಲ ಎಂದು ಭಾವಿಸುತ್ತೇನೆ.

ಇನ್ನು, ನಾನು, ನೀವು ಏನು ಮಾಡಬಹುದು? ಇಷ್ಟು ದಿನ ಕಾದದ್ದಾಯಿತು. ನೇರವಾಗಿ ಮುಖ್ಯಮಂತ್ರಿಗೇ ಪತ್ರ ಬರೆಯೋಣ, ಪೆಟಿಷನ್ ಮಾಡೋಣ. ಕೇವಲ ಅರ್ಧ ನಿಮಿಷದಲ್ಲಿ ನೀವು ಮುಖ್ಯಮಂತ್ರಿ ಕಚೇರಿಗೆ ಇಮೇಲ್ ಮಾಡಬಹುದು. ಅದಕ್ಕಾಗಿ ಈ ಪುಟದಲ್ಲಿ ಸುಲಭವಾದ ಸೌಲಭ್ಯ ಇದೆ. ಇಲ್ಲಿ ಕೆಳಗಿರುವ ಪತ್ರವನ್ನು ನೋಡಿ, ಅದಕ್ಕೆ ನಿಮ್ಮ ಸಹಮತಿಯಿದ್ದಲ್ಲಿ ನಿಮ್ಮ ಹೆಸರು, ಊರು, ಮತ್ತು ಇಮೇಲ್ ವಿಳಾಸ ನೀಡಿ “Sign Now” ಬಟನ್ ಒತ್ತಿದರೆ ಸಾಕು, ಈ ಪತ್ರ ನಿಮ್ಮ ಹೆಸರಿನಲ್ಲಿ ನೇರವಾಗಿ ಮುಖ್ಯಮಂತ್ರಿ, ಗೃಹ ಸಚಿವ, ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳ ಇಮೇಲ್ ವಿಳಾಸಕ್ಕೆ ಹೋಗುತ್ತದೆ. ನಾವು ಇಷ್ಟನ್ನಾದರೂ ಮಾಡಬಹುದಲ್ಲವೇ?

[emailpetition id=”1″]
[signaturelist id=”1″]