ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಗೆ ಜಾಮೀನು

– ರವಿ ಕೃಷ್ಣಾರೆಡ್ಡಿ

ಅಂತೂ ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಯವರಿಗೆ ನೆನ್ನೆ ಜಾಮೀನು ಸಿಕ್ಕಿತು. ಕ್ಷುಲ್ಲಕ ಒತ್ತಡಗಳಿಗೆ ತಲೆಬಾಗದ ನ್ಯಾಯಪ್ರಜ್ಞೆಯ ಮುಖ್ಯಮಂತ್ರಿ ಇದ್ದಿದ್ದರೆ ಈ ಇಡೀ ಪ್ರಸಂಗವೇ ಅನಗತ್ಯವಾಗಿತ್ತು. ಕೊನೆಗೂ ಹೋ‌ಮ್‌ಸ್ಟೇಯಲ್ಲಿ ದಾಳಿಗೊಳಗಾದ ವ್ಯಕ್ತಿಯೇ ಬಂದು ಹೈಕೋರ್ಟ್‌ನಲ್ಲಿ ನವೀನ್ ಪರವಾಗಿ ಮಾತನಾಡಿದ ಕಾರಣಕ್ಕಾಗಿ ಜಾಮೀನು ಸಿಕ್ಕಿತು. ನವೀನ್ ವಿರುದ್ದದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಇದು ಎಂದಾದರೂ ಕೋರ್ಟ್‌ನ ಛೀಮಾರಿಗೆ ಒಳಗಾಗಿ ಬಿದ್ದು ಹೋಗುವ ಕೇಸೇ ಆಗಿತ್ತು. ಆದರೂ ಕೆಲವು ದುಷ್ಟ ಮತ್ತು ಪ್ರಜಾಪ್ರಭುತ್ವ ವಿರೋಧಿ ಮತಾಂಧ ನೀಚರ ಕುತಂತ್ರದ ಫಲವಾಗಿ, ಪೋಲಿಸರ ಕಾರ್ಯದಲ್ಲಿ ಅನಗತ್ಯ ಹಸ್ತಕ್ಷೇಪ ಮತ್ತು ಪ್ರಭಾವದಿಂದಾಗಿ ಒಬ್ಬ ನಿರಪರಾಧಿ ಜೈಲಿನಲ್ಲಿರುವಂತಾಗಿದ್ದು ಪ್ರಜ್ಞಾವಂತರಿಗೆಲ್ಲ ಗೊತ್ತಿರುವುದೆ. ಅದು ಈ ನಾಡಿನ ಮುಖ್ಯಮಂತ್ರಿಗೂ ತಿಳಿದಿದೆ. ಅಷ್ಟಾದರೂ, ಸಂಪುಟವೇ ತೀರ್ಮಾನ ತೆಗೆದುಕೊಂಡಿದ್ದರೂ, ಅದಕ್ಕೆ ನಾಮಕಾವಸ್ಥೆ ಸಹಿ ಮಾಡದೆ ಕುಳಿತು, ಅಮಾಯಕರು ಮತ್ತು ನಿರಪರಾಧಿಗಳು ಹೈಕೋರ್ಟ್‌ನ ಮೆಟ್ಟಿಲು ಹತ್ತುವಂತೆ ಮಾಡಿದ ಈ ಮುಖ್ಯಮಂತ್ರಿಯ ಬಗ್ಗೆ ಯಾವ ರೀತಿಯ ಗೌರವ ತೋರುವುದೋ ನನಗಂತೂ ತಿಳಿಯುತ್ತಿಲ್ಲ. ಇಡೀ ಪ್ರಸಂಗವೇ ನಮ್ಮಲ್ಲಿನ ಅನೇಕರಿಗೆ ಅಸಹಾಯಕತೆ, ಆಕ್ರೋಶ, ತಿರಸ್ಕಾರ ಹುಟ್ಟಿಸಿದ ಪ್ರಸಂಗ.

ಹೈಕೋರ್ಟ್‌ನ ಜಾಮೀನು ವಿಚಾರದಲ್ಲಿ ಪ್ರಮುಖವಾಗಿ ಇಬ್ಬರು ಅಭಿನಂದನಾರ್ಹರು: ವಕೀಲ ನಿತಿನ್ ಮತ್ತು ಮಂಗಳೂರಿನ ವಿಜಯ್‌ಕುಮಾರ್. ಇನ್ನೂ ಅನೇಕ ಜನ ಈ ಇಡೀ ಪ್ರಕ್ರಿಯೆಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಸಾಂಘಿಕ ಪ್ರಯತ್ನ ಇಲ್ಲದಿದ್ದರೆ ಬಹುಶಃ ಈ ಸರ್ಕಾರ ವಜಾಗೊಳ್ಳುವ ತನಕ ಇಷ್ಟು ಮಾತ್ರದ ಬೆಳವಣಿಗೆಗೆ ಕಾಯಬೇಕಿತ್ತೇನೊ.

ಅಂದ ಹಾಗೆ, ಬಹುಶಃ ನಾಳೆ ಅಥವ ನಾಡಿದ್ದು ನವೀನ್ ಜೈಲಿನಿಂದ ಹೊರಬರಬಹುದು. ಹೈಕೋರ್ಟ್‌ನ ಆದೇಶದ ಪ್ರತಿ ಇಂದು ದೊರೆತರೆ ಮತ್ತು ಬಾಂಡ್ ನಾಳೆಗೆ ಸಿದ್ದವಾದರೆ, ನವೀನ್ ನಾಳೆ ಬಿಡುಗಡೆ ಆಗಬಹುದು. ಸಣ್ಣಪುಟ್ಟ ವಿಳಂಬವಾದರೂ ಈಗ ಮೊದಲಿನಂತೆ ಅನಿಶ್ಛಿತತೆ ಇಲ್ಲ. ನವೀನ್ ಈ ವಾರದಲ್ಲಿ ಜೈಲಿನಿಂದ ಹೊರಬರುವುದು ನಿಶ್ಚಿತ. ಮತ್ತು ಇಂದಲ್ಲ ನಾಳೆ ಸಂಪುಟದ ನಿರ್ಧಾರಕ್ಕೆ ಸಹಿಯೂ ಬಿದ್ದು ಆರೋಪ ಪಟ್ಟಿಯಿಂದ ನವೀನ್ ಹೆಸರು ಕೈಬಿಡುವುದೂ ನಿಶ್ಚಿತ. ಆದರೆ, ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳುವುದು ಹೇಗೆ ಎನ್ನುವುದೆ ಮುಂದಿನ ದಿನಗಳಲ್ಲಿಯ ಸವಾಲಿನ ಪ್ರಶ್ನೆ.

ಇವು ನವೀನ್ ಸೂರಿಂಜೆ ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಗಳು:

The Hindu:
Hindu_1_19_03_13
Hindu_2_19_03_13

ವಿಜಯ ಕರ್ನಾಟಕ:
VijayKarnataka_19_03_13

ಪ್ರಜಾವಾಣಿ:
prajavani_19_03_13

ಉದಯವಾಣಿ:
udayavani_19_03_13

ಕನ್ನಡ ಪ್ರಭ:
kannadaprabha_19_03_13

One thought on “ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಗೆ ಜಾಮೀನು

  1. Ananda Prasad

    ನವೀನ ಸೂರಿಂಜೆಯವರನ್ನು ದುರುದ್ಧೇಶದಿಂದ ಬಂಧಿಸಿ ಜೈಲಿಗೆ ಹಾಕಿರುವ ಕಾರಣ ಪರಿಹಾರವಾಗಿ ೧೦ ಲಕ್ಷ ರೂಪಾಯಿ ಹಾಗೂ ಪೊಲೀಸರು ದುರುದ್ಧೇಶದಿಂದ ದುಷ್ಟ ಮತಾಂಧರೊಂದಿಗೆ ಶಾಮೀಲಾಗಿ ನಿರಪರಾಧಿಯನ್ನು ಜೈಲಿಗೆ ಹಾಕಿದ ಘೋರ, ಅಮಾನವೀಯ, ಅನಾಗರಿಕ ಪಾತಕಕ್ಕೆ ಶಿಕ್ಷೆಯಾಗಿ ಘಟನೆಯಲ್ಲಿ ಶಾಮೀಲಾದ ಎಲ್ಲ ಪೋಲೀಸರನ್ನು ಸೇವೆಯಿಂದ ಶಾಶ್ವತವಾಗಿ ವಜಾಗೊಳಿಸಬೇಕಾದ ಅಗತ್ಯ ಇದೆ ಹಾಗೂ ಪರಿಹಾರದ ಹಣವನ್ನು ಪೊಲೀಸರಿಂದ ವಸೂಲುಮಾಡಿ ಸಂತ್ರಸ್ತ ಸೂರಿಂಜೆಯವರಿಗೆ ನೀಡುವಂತೆ ಆದರೆ ನ್ಯಾಯ ಸಿಗುತ್ತದೆ ಹಾಗೂ ದುಷ್ಟರ ತಾಳಕ್ಕೆ ತಕ್ಕಂತೆ ಕುಣಿಯುವ ಪೊಲೀಸರಿಗೆ ಎಚ್ಚರಿಕೆ ಕೊಟ್ಟಂತೆ ಆಗುತ್ತದೆ. ಈ ಸಾರ್ವಜನಿಕ ವಲಯದಿಂದ ಒತ್ತಡ ಹಾಗೂ ಹಕ್ಕೊತ್ತಾಯ ನಡೆಯಬೇಕಾದ ಅಗತ್ಯ ಇದೆ.

    Reply

Leave a Reply

Your email address will not be published. Required fields are marked *