Category Archives: ರವಿ ಕೃಷ್ಣಾರೆಡ್ಡಿ

ಲೋಕಾಯುಕ್ತ ಪೊಲೀಸರ ವರದಿ ತಿರಸ್ಕರಿಸಿದ ನ್ಯಾಯಾಲಯ

ಸ್ನೇಹಿತರೆ,

ಇಂದು ಬೆಳಗ್ಗೆ ಹನ್ನೊಂದರಿಂದ ಸಂಜೆ ಐದರವರೆಗೆ ನನ್ನ ಊರಿನಿಂದ ಆರೇಳು ಕಿ.ಮೀ. ದೂರದ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ಲೋಕಾಯುಕ್ತ ಕೋರ್ಟ್‌ನಲ್ಲಿದ್ದೆ. ನಿಮ್ಮಲ್ಲಿ ಕೆಲವರಿಗೆ ಗೊತ್ತಿರುವಂತೆ ನಾನು ಯಡ್ಡ್‌ಯೂರಪ್ಪ, ಸೋಮಣ್ಣ, ಇತರರ ಮೇಲೆ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳಿಗೆ ಸಂಬಂಧಪಟ್ಟಂತೆ ಖಾಸಗಿ ದೂರೊಂದನ್ನು ಕಳೆದ ನವೆಂಬರ್‌ನಲ್ಲಿ ದಾಖಲಿಸಿದ್ದೆ. ಅದರ ಬಗ್ಗೆ ಎರಡು-ಮೂರು ವಾರದ ಹಿಂದೆ ಲೋಕಾಯುಕ್ತ ಪೋಲಿಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಆ ವರದಿಗೆ ಸಂಬಂಧಿಸಿದಂತೆ ಇಂದು ಆದೇಶ ಇತ್ತು.

ಅಂದ ಹಾಗೆ, ಈ ಕೋರ್ಟ್‌ನಲ್ಲಿ ಕಳೆದ ಐದು ತಿಂಗಳಿನಿಂದ ಎಂತಎಂತಹ ಜನರನ್ನೆಲ್ಲಾ ನಾನು ನೋಡಿದೆ! ನ್ಯಾಯಕ್ಕಾಗಿ ಹೋರಾಡುವವರನ್ನು ಕಂಡೆ (ಇಂದು ಸಿರಗುಪ್ಪದ ಶಾಸಕ ಸೋಮಲಿಂಗಪ್ಪರ ಮೇಲೆ ದೂರು ಕೊಟ್ಟಿರುವ ಅಲ್ಲಿನ ನಿವೃತ್ತ ಲೆಕ್ಚರರ್ ಈರಣ್ಣನವರ ಭೇಟಿಯಾಯಿತು). ಕೋರ್ಟ್‌ ಒಳಗೆ ಮಾತ್ರ ತಲೆತಗ್ಗಿಸಿ ಹೊರಗೆ ಬಂದಾಕ್ಷಣ ಎದೆಉಬ್ಬಿಸಿ ನಡೆಯುವ ಲಂಚಕೋರರನ್ನು ಕಂಡೆ. ಮಾಜಿ ಸಚಿವರೊಬ್ಬರನ್ನು ಕಟೆಕಟೆಯಲ್ಲಿ ನೋಡಿದೆ. ಇಂದು ಹಾಲಿ ಶಾಸಕರೊಬ್ಬರನ್ನು (ಸಂಪಂಗಿ) ಕಟೆಕಟೆಯಲ್ಲಿ ನೋಡಿದೆ. ಕೋರ್ಟ್‌ನ ಇಂದಿನ ಆದೇಶದಂತೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಚಿವರೊಬ್ಬರು ಸಹ ಕಟೆಕಟೆ ಹತ್ತಬಹುದು. ಹೌದು, ನ್ಯಾಯಾಲಯ ತನ್ನ ಇಂದಿನ ತೀರ್ಪಿನಲ್ಲಿ ನನ್ನ ದೂರಿಗೆ ಸಂಬಂದಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್ ವರದಿಯನ್ನು ತಿರಸ್ಕರಿಸಿ, ನಾವು ಹೆಸರಿಸಿರುವ ಎಲ್ಲಾ ನಾಲ್ಕು ಆರೋಪಿಗಳು ಇದೇ ತಿಂಗಳ 30ರಂದು ಕೋರ್ಟ್‌ಗೆ ಖುದ್ದು ಹಾಜರಾಗಬೇಕೆಂದು ಆದೇಶಿಸಿ ಸಮ್ಮನ್ಸ್ ಜಾರಿ ಮಾಡಿತು. ಯಡ್ಡಯೂರಪ್ಪ, ಶ್ರೀಮತಿ ಶೈಲಜಾ ಸೋಮಣ್ಣ, ಸೋಮಣ್ಣ, ಮತ್ತು ಲಿಂಗಣ್ಣ; ಇವರು ನಾವು ದೂರಿನಲ್ಲಿ ಹೆಸರಿಸಿರುವ ಆರೋಪಿಗಳು.

ನಮ್ಮ ಮೊಕದ್ದಮೆಯ ಆದೇಶ ಆದನಂತರ ನ್ಯಾಯಾಲಯ ಇನ್ನೊಂದು ಕೇಸಿನಲ್ಲೂ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ವರದಿಯನ್ನು ತಿರಸ್ಕರಿಸಿ, ಪುನರ್‌ವಿಚಾರಣೆ ನಡೆಸಲು ಆದೇಶಿಸಿತು.  ಅದು ಚಿಕ್ಕಮಗಳೂರಿನ ಶಾಸಕ ಸಿ.ಟಿ. ರವಿಯವರ ಮೇಲೆ ಅಲ್ಲಿಯ ಸ್ಥಳೀಯರೊಬ್ಬರು ಭೂಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ದೂರು.

ಇಂದಿನಿಂದ ಲೋಕಾಯುಕ್ತ ಪೊಲೀಸರು ತಾವು ಸಲ್ಲಿಸುವ ವರದಿಗಳ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಜವಾಬ್ದಾರಿ ನಿರ್ವಹಿಸಬಹುದು ಎನ್ನಿಸುತ್ತದೆ.

ಈ ಎಲ್ಲಾ ಆಶಾವಾದಗಳ ಮಧ್ಯೆಯೂ ಭ್ರಮನಿರಸನ ಆಗುತ್ತಿದೆ. ಒತ್ತಡಗಳು ಹೆಚ್ಚುತ್ತಿವೆ. ಆದರೆ ಅವು ನನ್ನನ್ನು ಬಾಧಿಸವು. ಬಾಧಿಸುವ ವಿಚಾರಗಳೇ ಬೇರೆ. ಏನನ್ನು ಸಾಧಿಸುವಂತಾಗುತ್ತದೆ ಎನ್ನುವುದು ಒಂದಾದರೆ, ಇಲ್ಲಿ ಜನ ಜನಪ್ರತಿನಿಧಿಗಳ ದುರುಳತನವನ್ನು ದುರುಳತನ ಎಂದು ಕಾಣದಿರುವುದು ಇನ್ನೊಂದು. ಈ ಒಂದು ಕೇಸಿನಿಂದ ಅಥವ ಕರ್ನಾಟಕದಲ್ಲಿ ರಾಜಕಾರಣಿಗಳ ವಿರುದ್ಧ ಹಾಕಿರುವ ಮೊಕದ್ದಮೆಗಳಿಂದ ಈ ರಾಜ್ಯದಲ್ಲಿ ಪರಿವರ್ತನೆ ಆಗಿಬಿಡುತ್ತದೆ ಎನ್ನುವ ಯಾವ ಹುಚ್ಚು ಭ್ರಮೆಯೂ ನನಗಿಲ್ಲ. ಜನ ಇಲ್ಲಿ ತಮಗೆ ನೇರವಾಗಿ ಬಾಧಿಸದ ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಅವರಿಗೆ ನಮ್ಮ ರಾಜ್ಯ-ದೇಶದಲ್ಲಿಯ ದುರಾಡಳಿತ ಮತ್ತು ಭ್ರಷ್ಚಾಚಾರವೆ ನಮ್ಮ ಮತ್ತು ನಮ್ಮ ಮುಂದಿನ ಸಂತತಿಗಳನ್ನು ತೀವ್ರವಾಗಿ ಕಾಡುವ, ಬಾಧಿಸುತ್ತಿರುವ, ಬಾಧಿಸುವ ವಿಚಾರ ಎಂದು ಗೊತ್ತಾಗುತ್ತಿಲ್ಲ.

ಇವತ್ತು ಬೇರೆ ಪಕ್ಷದಲ್ಲಿರುವ ಭ್ರಷ್ಟ ನಾಳೆ ನನ್ನ ಪಕ್ಷಕ್ಕೆ ಬರುತ್ತಾನೆ ಮತ್ತು ಅದರಿಂದ ನಾಳೆ ನನಗೆ ಅಧಿಕಾರ ಸಿಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ರಾಜಕಾರಣಿಗಳಿದ್ದಾರೆ. ಮತ್ತು ಅದು ಅಂತಹ ಪಕ್ಷಗಳ ಕಾರ್ಯಕರ್ತರನ್ನು ಮತ್ತು ಜನರನ್ನು ಯಾವ ರೀತಿಯೂ ಸಂಕೋಚಕ್ಕೆ ಈಡುಮಾಡದು ಎನ್ನುವ ಸ್ಥಿತಿಗೆ ನಾವು ಮುಟ್ಟಿದ್ದೇವೆ. ನಮ್ಮ ಎಲ್ಲಾ ವೈಯಕ್ತಿಕ ಪ್ರಯತ್ನಗಳು ಬ್ರಹ್ಮರಾಕ್ಷಸ ಮತ್ತು ರಕ್ತ ಬೀಜಾಸುರರ ಸಂತತಿಯ ಸ್ಫೋಟಕ ಬೆಳವಣಿಗೆಯನ್ನು ನಿಧಾನಿಸಬಹುದು ಎನ್ನುವುದು ಬಿಟ್ಟರೆ, ಅವರ ನಿರ್ನಾಮ ಮಾಡದು.

ಅವರ ನಿರ್ನಾಮವಾಗದೆ ಅಥವ ಸಮಾಜದ ಮೇಲೆ ಆ ಸೈತಾನ ಮನಸ್ಥಿತಿಯ ಪ್ರಭಾವ ನಗಣ್ಯವಾಗದೆ ಇಲ್ಲೊಂದು ಸಹನೀಯ ಸಮಾಜ ಹುಟ್ಟದು. ಅದನ್ನು ಸಾಧ್ಯಮಾಡಿಕೊಳ್ಳುವುದು ಹೇಗೆ?

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಕಟ್ಟೆಚ್ಚರ: ನ್ಯಾಯ, ನೀತಿ, ಮೌಲ್ಯ, ಆಶಾವಾದಗಳಿಗೆ….

– ರವಿ ಕೃಷ್ಣಾರೆಡ್ಡಿ

ಸಂಪಾದಕೀಯ ಬ್ಲಾಗ್‌ನಲ್ಲಿ ಟಿ.ಕೆ. ದಯಾನಂದ್‌ರ ಪತ್ರವೊಂದು ಪ್ರಕಟವಾಗಿದೆ. ನೆನ್ನೆ ಸುವರ್ಣ ನ್ಯೂಸ್ ಚಾನಲ್‌ನಲ್ಲಿ ತುಂಬಾ ಹೊಣೇಗೇಡಿಯಾಗಿ ಆಶ್ಲೀಲ ಕಾರ್ಯಕ್ರಮವೊಂದು ಪ್ರಸಾರವಾದ ಬಗ್ಗೆ ಬರೆದ ಪತ್ರ ಅದು. ಅದರಲ್ಲಿ ಅವರು ಕೆಲವೊಂದು ವ್ಯಕ್ತಿಗಳನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. ಆದರೆ, ಇಲ್ಲಿ ವ್ಯಕ್ತಿಗಳ ವಿಮರ್ಶೆಯಿಂದ ಮತ್ತು ಅವರು ಸರಿಹೋಗುವುದರಿಂದ ಈ ಸ್ಥಿತಿಗಳೇನೂ ಬದಲಾಗುವುದಿಲ್ಲ ಎನ್ನಿಸುತ್ತದೆ. ಬದಲಾಗುವ ಹಾಗಿದ್ದರೆ ಇಷ್ಟೊತ್ತಿಗೆ ಎಂದೋ ಬದಲಾಗಬೇಕಿತ್ತು.

ಕೇವಲ ವ್ಯಕ್ತಿಗಳು ಮಾತ್ರ ಕೆಟ್ಟಿದ್ದರೆ ಅದೊಂದು ಸಹಿಸಬಹುದಾಗಿದ್ದ ವಿದ್ಯಮಾನ. ಅವರ ಗುಂಪೂ ಸಣ್ಣದಿರುತ್ತಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ಇಡೀ ವ್ಯವಸ್ಥೆ ಮತ್ತು ಸಮಾಜವೇ ಕೆಟ್ಟಿದೆ. ಆಗುತ್ತಿರುವುದು ಏನೆಂದರೆ, ತಾವು ಉಳಿಯಲು ಅಥವ ಯಶಸ್ವಿಯಾಗಲು ವ್ಯಕ್ತಿಗಳು ಯಾವ ಹಂತಕ್ಕೂ ಇಳಿಯುತ್ತಾರೆ. ಯಾರನ್ನು ಬೇಕಾದರೂ ಬಳಸಿಕೊಂಡು ಬಿಸಾಡಬಲ್ಲವರಾಗಿದ್ದಾರೆ. ತಂದೆತಾಯಿಯರ ಕಚ್ಚೆಹರುಕತನವನ್ನೂ ಬಯಲಲ್ಲಿ ಹರಡುತ್ತಾರೆ. ತಮ್ಮದೇ ಅಸಹ್ಯಗಳನ್ನು ಹೇಳಿಕೊಳ್ಳುತ್ತಾರೆ, ತಮ್ಮ ಮನೆಯ ಹೆಣ್ಣುಮಕ್ಕಳ ಮಾನವನ್ನೂ ಹರಾಜು ಹಾಕುತ್ತಾರೆ. ಸಮಸ್ಯೆ ಏನೆಂದರೆ ಇಂದಿನ ಸಮಾಜ ಅದನ್ನು ನೋಡಿಕೊಂಡು ಪೋಷಿಸುತ್ತದೆ. ನಾಲ್ಕಾರು ನಿಮಿಷ ಟಿವಿಯಲ್ಲಿ ಕಾಣಿಸಿಕೊಳ್ಳಲು ಜನ ಏನು ಬೇಕಾದರೂ ಹೇಳಲು, ಮಾಡಲು ಸಿದ್ದವಾಗಿದ್ದಾರೆ.

ಮತ್ತು ಇಂತಹ ಜನರ ಅವಿವೇಕತನವನ್ನು ಶೋಷಿಸಿ ತಾವು ತಮ್ಮ ರಂಗದಲ್ಲಿ ಉಳಿಯಲು ನಮ್ಮ ಮಾಧ್ಯಮ ಮಂದಿ ಯಾವೊಂದು ಮೌಲ್ಯ, ನೀತಿ, ನಾಚಿಕೆ, ಸಂಕೋಚ, ಇಲ್ಲದೆ ಸಿದ್ಧವಾಗಿದ್ದಾರೆ.

ಕಳೆದ ಒಂದೂವರೆ ದಶಕದಿಂದೀಚೆಗೆ ಕಾಣಿಸಿಕೊಂಡ ಪರಮಸ್ವಾರ್ಥಿ ಪತ್ರಕರ್ತ-ಬರಹಗಾರರ ಗುಂಪೊಂದು ತಮ್ಮ ಉಳಿವಿಗಾಗಿ ಏನೆಲ್ಲ ಮಾಡಲೂ ಸಿದ್ದವಾಗಿದ್ಡಾರೆ. ಮತ್ತು ಅವರು ಯಶಸ್ವಿಯೂ ಆಗಿದ್ದಾರೆ. ನ್ಯಾಯ-ನೀತಿ-ಧರ್ಮದ ಬಗ್ಗೆ ಸುರರ ಮಕ್ಕಳಂತೆ ಬರೆಯುವ ಈ ಜನ ಅದಕ್ಕೆ ವಿರುದ್ಧವಾದ ವ್ಯಭಿಚಾರದಲ್ಲೂ ತೊಡಗಿಕೊಂಡಿದ್ದಾರೆ. ಅದು ಕೇವಲ ಹೊಟ್ಟೆಪಾಡಿಗಾಗಿಯಷ್ಟೇ ನಡೆಸುವ ಅಕ್ಷರವ್ಯಭಿಚಾರ ಮಾತ್ರವಲ್ಲ. ಇವರು ರಾಜಕಾರಣಿಗಳ ದಲ್ಲಾಳಿಗಳಾಗಿದ್ದಾರೆ. ರಿಯಲ್‌ಎಸ್ಟೇಟ್ ಏಜೆಂಟರಾಗಿದ್ದಾರೆ. ಗಣಿ ಮಾಫಿಯಾದವರಿಂದ ಪಾಲು ತೆಗೆದುಕೊಂಡಿದ್ದಾರೆ. ತಮಗೊಂದು ತಮ್ಮವರಿಗೊಂದು ಎಂದು ಸರ್ಕಾರಿ ಸೈಟು ಹೊಡೆದುಕೊಳ್ಳುತ್ತಾರೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಧಿಕಾರಸ್ಥರನ್ನು ಮತ್ತು ತಮ್ಮ ಕ್ಲೈಂಟ್‌ಗಳನ್ನು ಶಾಮೀಲು ಮಾಡುತ್ತಾರೆ. ಬೇಕಾದವರ ಪರ, ಬೇಡದವರ ವಿರುದ್ಧ ಜನಾಭಿಪ್ರಾಯ ರೂಪಿಸಬಲ್ಲವರಾಗಿದ್ದಾರೆ. ಭ್ರಷ್ಟಾಚಾರಗಳನ್ನು ದುಡ್ಡು ತೆಗೆದುಕೊಂಡು ಮುಚ್ಚಿ ಹಾಕುತ್ತಾರೆ. ಸುಳ್ಳು ಆರೋಪಗಳನ್ನೂ ಸಾಬೀತು ಮಾಡುತ್ತಾರೆ. ಕಾಮಾತುರರಿಗೆ ವೇಶ್ಯಾಗೃಹಗಳ ವಿಳಾಸ ಮತ್ತು ನಂಬರ್‌ಗಳನ್ನು ತಮ್ಮ ಟಿವಿ ಮತ್ತು ಪತ್ರಿಕೆಗಳಲ್ಲಿ ರೋಚಕವಾಗಿ ಒದಗಿಸುತ್ತಾರೆ. Deccan Herald - Mining Paymentsತಮ್ಮ ಬಳಿಗೆ ಬರುವ ಗಂಡು-ಹೆಣ್ಣುಗಳನ್ನು ಬಳಸಿಕೊಳ್ಳುತ್ತಾರೆ. ಇನ್ನೊಬ್ಬರಿಗೆ ಬಳಸಿಕೊಳ್ಳಲು ಕಳುಹಿಸಿಕೊಡುವಷ್ಟು ಉದಾರತೆ ಮೆರೆಯುತ್ತಾರೆ. ಪೋಲಿಸರ ಪಟ್ಟಿಯಲ್ಲಿ ಇವರಿರುತ್ತಾರೆ. ಇವರ ಪಟ್ಟಿಯಲ್ಲಿ ಪೋಲಿಸರಿರುತ್ತಾರೆ.

ಇವರು ಎಂದೆಂದೂ ತಮ್ಮ ಅಪರಾಧಗಳಿಗೆ ಶಿಕ್ಷೆಗೊಳಗಾಗುವುದಿಲ್ಲ. ಕಾಣಿಸಿಕೊಳ್ಳಬೇಕಾದ ಸಮಯದಲ್ಲಿ ಧರ್ಮಧುರಂಧರರಂತೆ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಫಲಾನುಭವಿಗಳ ಮೊದಲ ಸಾಲಿನಲ್ಲಿ ಇವರಿದ್ದಾರೆ. ವ್ಯವಸ್ಥೆಯನ್ನು ಕೆಡಿಸಿದ್ದಾರೆ, ಇಲ್ಲವೇ ಕೆಟ್ಟ ವ್ಯವಸ್ಥೆಯಲ್ಲಿ ಏಳಿಗೆ ಕಂಡಿದ್ದಾರೆ.

ಇದು ನಮ್ಮ ಸಮಾಜಕ್ಕೇನೂ ಗೊತ್ತಿಲ್ಲದೆ ಇಲ್ಲ. ಇದೇ ಜನ ಬೀದಿಗೆ ಬಂದರೆ ಇವರಿಗೆ ಜೈಕಾರ ಹಾಕುವುದಕ್ಕೂ ಹಿಂದುಮುಂದು ನೋಡದಷ್ಟು ವಿವೇಚನಾಹೀನರೂ, ಸಮಯಸಾಧಕರೂ ಆಗಿದ್ದಾರೆ ಜನ. ಅವಕಾಶ ಸಿಕ್ಕರೆ ಇದೇ ಜನಗಳ ತಪ್ಪನ್ನು ತಾವೂ ಮಾಡಲು ಸಿದ್ಧರಾಗಿದ್ದಾರೆ. ಇವನಲ್ಲದಿದ್ದರೆ ಇನ್ನೊಬ್ಬ ಮಾಡಲು ಕಾಯುತ್ತಿದ್ದಾನೆ. ಮಾಡಲು ಸಿದ್ಧವಿಲ್ಲದವರು ಇಂದಿನ ವರ್ತಮಾನದಲ್ಲಿ ಅಪ್ರಸ್ತುತರಾಗುತ್ತ ಸೋಲುತ್ತ ಹೋಗುತ್ತಿದ್ದಾರೆ.

ಸಮಸ್ಯೆ ಇಷ್ಟೇ ಅಲ್ಲ. ಇದು ಇಂದು ಕೆಲವರಿಗೆ ಅಥವ ಕೆಲವೊಂದು ಗುಂಪಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಜೊತೆ ಇರುವವನೆ, ನಮ್ಮ ಸಮಾನಮನಸ್ಕನೇ, ಅವಕಾಶ ಸಿಕ್ಕಾಗ ಮೇಲೆ ಹೇಳಿದ ಜನರ ರೀತಿಯೇ “ಉಳಿವಿಗಾಗಿ” ಬದಲಾಗುತ್ತಿದ್ದಾನೆ. ಅಂತಹ ಸಮಯದಲ್ಲಿ ನಮ್ಮ ವಿವೇಚನೆಗಳೂ ಸೋಲುತ್ತಿವೆ. ಸ್ನೇಹವನ್ನು ಬಿಡಲಾಗದವರಾಗಿ ಒಳ್ಳೆಯವರು ಆತ್ಮದ್ರೋಹವನ್ನೂ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿ ಯಾರನ್ನು ಹೇಗೆ ಎದುರಿಸೋಣ? ಸೈತಾನ ಮನಸ್ಸುಗಳ ಮೇಲೆ ಅಧಿಪತ್ಯ ಸಾಧಿಸಿಬಿಟ್ಟಿದ್ದಾನೆ, ಮತ್ತು ಪ್ರತಿಕ್ಷಣವೂ ಅವನಿಗೆ ಹೊಸಮನಸ್ಸುಗಳು ಸಿಗುತ್ತಲೇ ಇವೆ.

ಹಾಗಾಗಿ, ಇಲ್ಲಿ ವ್ಯಕ್ತಿಯೊಬ್ಬ ತೊಲಗಿದಾಗ ಅಥವ ಬದಲಾದಾಗ ಎಲ್ಲವೂ ಬದಲಾಗಿಬಿಡುವ ಸಾಧ್ಯತೆ ಇಲ್ಲವೇ ಇಲ್ಲ. ವ್ಯವಸ್ಥೆಯನ್ನು ಹೇಗೆ ಬೇಕಾದರೂ, ಎಷ್ಟು ಬೇಕಾದರೂ ದುರುಪಯೋಗಪಡಿಸಿಕೊಳ್ಳುವ ಕಲೆ ಮತ್ತು ಅದನ್ನು ದಕ್ಕಿಸಿಕೊಳ್ಳುವ ತಾಕತ್ತು ದುರುಳರಿಗಿದೆ. ಇದೊಂದು ರಕ್ತಬೀಜಾಸುರ ಸಂತತಿ. ಅವು ತಾವೇತಾವಾಗಿ ನಶಿಸುವುದಿಲ್ಲ. ಅದಕ್ಕೊಂದು ನಿರ್ಣಾಯಕ ಗಳಿಗೆ ಬರಬೇಕು. ಮತ್ತು ಅದು ಹತ್ತಿರದಲ್ಲೆಲ್ಲೂ ಇರುವ ಹಾಗೆ ಕಾಣಿಸುವುದಿಲ್ಲ.

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ,
ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ,
ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲಸಂಗಮದೇವ.
– ಬಸವಣ್ಣ

ಇಂತಹ ಸಂದರ್ಭದಲ್ಲೂ ಒಡ್ದಬಹುದಾದ ದೊಡ್ಡ ಪ್ರತಿರೋಧವೆಂದರೆ ನಾವು ಕ್ರಿಯಾಶೀಲರಾಗಿರುವುದು. ಅಂತಹವರಿಗೆಲ್ಲ ನಮನಗಳು.

ಖಾನ್ ಅಕ್ಯಾಡೆಮಿಯಲ್ಲಿ ಕಲಿಯುತ್ತಿರುವ ಕಿರಿಹಿರಿಯರು

– ರವಿ ಕೃಷ್ಣಾರೆಡ್ಡಿ

ಈ ಸಲ್ಮಾನ್ ಖಾನ್ (ಸ್ಯಾಲ್ ಖಾನ್) ಅಮೆರಿಕದಲ್ಲಿ ಬಂಗಾಳಿ ದಂಪತಿಗಳಿಗೆ ಹುಟ್ಟಿದವನು. ತಾಯಿ ಕೊಲ್ಕತ್ತದವಳು, ಅಪ್ಪ ಬಾಂಗ್ಲಾ ದೇಶಿ. ಇಂದು ಅಮೆರಿಕ ಮತ್ತು ಭಾರತವೂ ಸೇರಿದಂತೆ ಲಕ್ಷಾಂತರ ಶಾಲಾ ಮಕ್ಕಳಿಗೆ, ಅಧ್ಯಾಪಕರಿಗೆ, ಮತ್ತು ನನ್ನಂತಹ ವಯಸ್ಕರಿಗೂ ಈತ ಕಲಿಸುವ ಮೇಷ್ಟ್ರು. ಈತನ ಶಾಲೆಯ ಹೆಸರು “ಖಾನ್ ಆಕ್ಯಾಡೆಮಿ”.

ಹೆಚ್ಚಿಗೆ ಬರೆಯಲು ಹೋಗುವುದಿಲ್ಲ. ಖಾನ್‌ನ ಹಿನ್ನೆಲೆ, ಅಕ್ಯಾಡೆಮಿಯ ಆರಂಭ, ಆತ ಮಾಡುತ್ತಿದ್ದ ಮತ್ತು ಮಾಡುತ್ತಿರುವ ಕೆಲಸ, ಆತನ ಬೆನ್ನಿಗೆ ನಿಂತವರು, ಪ್ರತಿದಿನವೂ ಆತನಿಂದ ಪ್ರಾಥಮಿಕ ಹಂತದ ಶಿಕ್ಷಣದಿಂದ ಕ್ಲಿಷ್ಟ ಮತ್ತು ಗಹನ ವಿಷಯಗಳ ಬಗ್ಗೆ ಕುರಿತು ಪಾಠ ಕಲಿಯುತ್ತಿರುವ ಪ್ರಪಂಚದಾದ್ಯಂತದ ಲಕ್ಷಾಂತರ, ಕೋಟ್ಯಾಂತರ ಜನರ ಬಗ್ಗೆ ಈ ಕೆಳಗಿನ CBS – 60 Minutes ವಿಡಿಯೋ ಹೇಳುತ್ತದೆ:

ಇದು ಖಾನ್ ಅಕ್ಯಾಡೆಮಿಯ ವಿಕಿಪೀಡಿಯ ಕೊಂಡಿ: http://en.wikipedia.org/wiki/Khan_Academy

www.khanacademy.org ಖಾನ್ ಅಕ್ಯಾಡೆಮಿಯ ವೆಬ್‌ಸೈಟ್.

ಮಾಧ್ಯಮ ಮಿತ್ರರು ಇದನ್ನು ತಮ್ಮ ಪತ್ರಿಕೆ ಮತ್ತು ದೃಶ್ಯಮಾಧ್ಯಮಗಳಲ್ಲಿ ಇದರ ಬಗ್ಗೆ ಬರೆಯುವುದು ಈಗ ಸಕಾಲ. ಮಕ್ಕಳಿಗೆ ಇನ್ನೇನು ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗಲಿದೆ. ಅವಕಾಶ ಮತ್ತು ಸೌಲಭ್ಯ ಇರುವ ಮಕ್ಕಳು ಕಂಪ್ಯೂಟರ್ ಮುಂದೆ ಕುಳಿತು ರಜೆಯಲ್ಲಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಈ ವೆಬ್‌ಸೈಟ್‌ನಲ್ಲಿ ಸುಮಾರು 3000ಕ್ಕಿಂತ ಹೆಚ್ಚಿನ ವಿಡಿಯೋಗಳಿವೆ. ಆದರಲ್ಲಿ ಸುಮಾರು ಮುಕ್ಕಾಲು ಪಾಲಿಗಿಂತ ಹೆಚ್ಚಿನವು ನಮ್ಮ ಮಕ್ಕಳಿಗೂ ಸೂಕ್ತವಾದವುಗಳೆ.

ಅಂದ ಹಾಗೆ, ಖಾನ್ ಅಕ್ಯಾಡೆಮಿ ಇದನ್ನು ಇಂಗ್ಲಿಷ್ ಮಾತ್ರವಲ್ಲದೆ ಬೇರೆ ಭಾಷೆಗಳಿಗೂ ಭಾಷಾಂತರಿಸುವ ಕೆಲಸ ಮಾಡುತ್ತಿದೆ. ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಶಿಕ್ಷಣ ಇಲಾಖೆಗಳು ಇದರತ್ತ ಒಮ್ಮೆ ಗಮನಹರಿಸುವುದು ಸೂಕ್ತ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ತಮಾನದಲ್ಲಿ ಇದಕ್ಕಿಂತ ಒಳ್ಳೆಯ ಯೋಜನೆ ಸಿಗುವುದು ಅಪರೂಪ. ಆದರೆ ಮೂರ್ಖರಿಗೆ ಹೇಳುವವರು ಯಾರು? ಆಧುನಿಕ ಪ್ರಪಂಚದ ಅಆಇಈಗಳೇ ಗೊತ್ತಿಲ್ಲದವರಿಂದ ಏನನ್ನು ನಿರೀಕ್ಷಿಸುವುದೂ ಸಾಧುವಲ್ಲ.

ಇದು ಖಾನ್ ಸೂರ್ಯ ಮತ್ತು ಭೂಮಿಯ ಗಾತ್ರ ಮತ್ತು ದೂರದ ಕುರಿತು ಮಾಡುತ್ತಿರುವ ಪಾಠ:

ಇದು ಗುಣಾಕಾರದ ಪ್ರಾಥಮಿಕ ಪಾಠ:

ಈ ಪಾಠದಲ್ಲಿ ಸಲ್ಮಾನ್ ಖಾನ್ ಬಂಡವಾಳವಾದ ಮತ್ತು ಸಮಾಜವಾದದ ಬಗ್ಗೆ ಮಾತನಾಡುತ್ತಾನೆ:

ಇದು ಹೃದಯ ಸಂಬಂಧಿ ಕಾಯಿಲೆ ಮತ್ತು ಹೃದಯಾಘಾತಕ್ಕೆ ಸಂಬಂಧಿಸಿದ ಪಾಠ:

ಇದು ಖಾನ್ ಕಳೆದ ವರ್ಷ ಟೆಡ್‌ನಲ್ಲಿ ಮಾತನಾಡಿದ್ದ ವಿಡಿಯೋ:

ಚರಕ – ಭೀಮನಕೋಣೆಯಲ್ಲೊಂದು “ದೇಸಿ” ಕ್ರಾಂತಿ


– ರವಿ ಕೃಷ್ಣಾರೆಡ್ಡಿ


 

ಸಾಗರದ ಬಳಿಯ ಹೆಗ್ಗೋಡು ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಪರಿಚಿತವಾದ ಸ್ಥಳವೇ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿಯೇ ಸದ್ದಿಲ್ಲದೆ ಸಾಮಾಜಿಕ ಕ್ರಾಂತಿಯೊಂದು ಜರುಗುತ್ತಿದೆ. ಅದು “ಚರಕ” ಸಂಸ್ಥೆಯ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ರೂಪದಲ್ಲಿ.

ಹಿರಿಯ ರಂಗಕರ್ಮಿ, ಲೇಖಕ, ನಾಟಕಕಾರ ಪ್ರಸನ್ನರ ಪ್ರಯತ್ನ ಇದು. ಹತ್ತಿಯ ನೂಲಿಗೆ ಬಣ್ಣ ಹಾಕಿ ಖಾದಿ ಬಟ್ಟೆ ನೇಯುವುದರಿಂದ ಹಿಡಿದು ವಿವಿಧ ದಿರಿಸುಗಳನ್ನು ಹೊಲಿದು ಮಾರುಕಟ್ಟೆಗೆ ತಲುಪಿಸುವ ತನಕ “ಚರಕ” ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಮೂರ್ನಾಲ್ಕು ಕಡೆ ಅದು ತನ್ನದೇ ಆದ “ದೇಸಿ” ಹೆಸರಿನ ಅಂಗಡಿಗಳ ಮೂಲಕ ಈ ರೆಡಿಮೇಡ್ ದಿರಿಸುಗಳನ್ನು ಮಾರಾಟ ಮಾಡುತ್ತದೆ.

ವಾರ್ಷಿಕ ಒಂದು ಕೋಟಿ ಆದಾಯವಿರುವ ಈ “ಚರಕ” ಸಹಕಾರ ಸಂಘ ನಡೆಯುತ್ತಿರುವುದೆಲ್ಲ ಅಲ್ಲಿ ಕೆಲಸ ಮಾಡುವ ಸ್ಥಳೀಯ ಹೆಣ್ಣು ಮಕ್ಕಳ ಆಡಳಿತ ಮಂಡಳಿಯಿಂದಲೆ. ಅಲ್ಲಿ ಕೆಲಸ ಮಾಡುವ ಯಾರು ಬೇಕಾದರೂ ಆಡಳಿತ ಮಂಡಳಿಯ ಸದಸ್ಯರಾಗಬಹುದು. ಅವರನ್ನು ಆಯ್ಕೆ ಮಾಡುವುದು ಪ್ರಜಾಸತ್ತಾತ್ಮಕವಾಗಿ; ಅಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳೆ ತಮ್ಮಲ್ಲಿಯ ಹಲವರನ್ನು ಅಧ್ಯಕ್ಷೆ, ಕಾರ್ಯದರ್ಶಿ, ಇತ್ಯಾದಿಯಾಗಿ ಆರಿಸಿಕೊಳ್ಳುತ್ತಾರೆ.

ಮತ್ತೆ “ಚರಕ” ಕೇವಲ ನೌಕರಿ ನೀಡುವ ಸಂಸ್ಥೆ ಮಾತ್ರವಲ್ಲ. ಅದೊಂದು ಸಾಂಸ್ಕೃತಿಕ ಸಂಘಟನೆ ಸಹ. ಅಲ್ಲಿ ವರ್ಷಕ್ಕೊಮ್ಮೆ ಚರಕ ಉತ್ಸವ ನಡೆಯುತ್ತದೆ. ಇದೇ ಹೆಣ್ಣುಮಕ್ಕಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ವೈಚಾರಿಕವಾಗಿ ಅವರನ್ನು ಬೆಳೆಸುವ ಪರಿಸರ ಅದು.

ಅಲ್ಲಿಗೆ ನಾನು 2009ರ ಮಾರ್ಚ್‌ನಲ್ಲಿ ಭೇಟಿ ಕೊಟ್ಟಿದ್ದೆ; ಹಿರಿಯ ಮಿತ್ರರಾದ ಡಿ.ಎಸ್.ನಾಗಭೂಷಣ್ ಮತ್ತು ಸವಿತಾ ನಾಗಭೂಷಣ್‌ರೊಂದಿಗೆ. ಅಂದು “ಚರಕ”ದ ಆ ವರ್ಷದ ಅಧ್ಯಕ್ಷೆ ಮತ್ತು ಕಾರ್ಯದರ್ಶಿಯವರೊಡನೆ ಅನೌಪಚಾರಿಕವಾಗಿ ಎಂಬಂತೆ ಮಾತನಾಡುತ್ತ ಅವರ ಮಾತುಗಳನ್ನು ವಿಡಿಯೊ ರೆಕಾರ್ಡ್ ಮಾಡಿದ್ದೆ. ಇಷ್ಟು ದಿನ ಅದನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಲು ಆಗಿರಲಿಲ್ಲ. ಇತ್ತೀಚೆಗಷ್ಟೆ ಸಾಧ್ಯವಾಯಿತು. ಈ ವಿಡಿಯೊ ಬಹುಶಃ ನಿಮಗೆ “ಚರಕ”ದ ಬಗ್ಗೆ ಒಂದಷ್ಟು ವಿಭಿನ್ನ ಮಾಹಿತಿ ನೀಡಬಹುದು ಎನ್ನಿಸುತ್ತದೆ.

ಅಂದ ಹಾಗೆ, ರಾಜ್ಯದ ವಿವಿಧ ಕಡೆ ಇರುವ “ದೇಸಿ” ಅಂಗಡಿಗಳ ವಿವರ “ಚರಕ”ದ ಈ ವೆಬ್‌ಸೈಟಿನಲ್ಲಿದೆ. ಯಾವುದೇ ರಾಸಾಯನಿಕಗಳನ್ನು ಬಳಸದೆ, ನೈಸರ್ಗಿಕವಾಗಿ ಲಭ್ಯವಿರುವ ಪದಾರ್ಥಗಳಿಂದ ಬಣ್ಣಹಾಕಿದ, ಕೈಮಗ್ಗದಲ್ಲಿ ನೇಯ್ದ ಬಟ್ಟೆಗಳು ಇವು. ಚಿಕ್ಕವರಿಗೆ, ಹೆಂಗಸರಿಗೆ, ಗಂಡಸರಿಗೆ, ಒಳ್ಳೆಯ ಡಿಸೈನ್‌ಗಳಿರುವ ಬಟ್ಟೆಗಳು ಇಲ್ಲಿ ಸಿಗುತ್ತವೆ. ಸಾಧ್ಯವಾದಲ್ಲಿ ಒಮ್ಮೆ ಈ ಅಂಗಡಿಗಳನ್ನು ಸಂದರ್ಶಿಸಿ ಇಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸಿ.

ಪ್ರಸನ್ನ, ಅವರ ಗಾಂಧೀವಾದ, ಚರಕ, ದೇಸಿ, ಇವುಗಳ ಬಗ್ಗೆ ಇಲ್ಲೊಂದು ಒಳ್ಳೆಯ ಇಂಗ್ಲಿಷ್ ಲೇಖನವಿದೆ. ಗಮನಿಸಿ.

http://charaka.in ಇದು “ಚರಕ” ಸಂಸ್ಥೆಯ ವೆಬ್‌ಸೈಟ್.

ನೀವು ಪದವೀಧರರೇ? ನಿಮ್ಮ ಜವಾಬ್ದಾರಿ ನಿರ್ವಹಿಸಿ…

ಸ್ನೇಹಿತರೆ,

ಇದನ್ನು ನಾನು ರಾಮಚಂದ್ರ ಗೌಡ ಎಂಬ ಮಾಜಿ ಸಚಿವರ ಪ್ರಸ್ತಾಪದೊಂದಿಗೆ ಆರಂಭಿಸುತ್ತೇನೆ. ಕಾಸಗಲ ಕುಂಕುಮ ಇಟ್ಟುಕೊಂಡೇ ಜನರಿಗೆ ಕಾಣಿಸುವ ಈ ಕುಂಕುಮಧಾರಿ ನಿಮಗೆ ಗೊತ್ತಿರಲೇಬೇಕು. ರೇಣುಕಾಚಾರ್ಯ ಎಂಬ ಹಾಲಿ ಮಂತ್ರಿ ಯಡ್ಡ್‌ಯೂರಪ್ಪನವರಿಗೆ ಜೊತೆಬಿಡದಂತೆ ಕಾಣಿಸಿಕೊಳ್ಳುತ್ತಿರುವುದಕ್ಕಿಂತ ಮೊದಲು ಯಡ್ಡ್‌ಯೂರಪ್ಪನವರ ಜೊತೆಗೆ ಸದಾ ಕಾಣಿಸುತ್ತಿದ್ದವರು ಇವರು. ಒಂದೂವರೆ ವರ್ಷದ ಹಿಂದಿನ ತನಕ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು.

ಪ್ರತಿ ಸರ್ಕಾರ ಬಗ್ಗೆ ಜನರಿಗೆ ಅನ್ನಿಸುತ್ತಿರುತ್ತದೆ, ‘ಇದು ಇತಿಹಾಸದಲ್ಲಿಯೇ ಕೆಟ್ಟ ಸರ್ಕಾರ,’ ಎಂದು. ಆದರೆ ಈಗಿನ ಹಾಲಿ ಬಿಜೆಪಿ ಸರ್ಕಾರದ ಬಗ್ಗೆಯಂತೂ ಆ ಮಾತನ್ನು ಪೂರ್ವಾಗ್ರಹಗಳಿಲ್ಲದೇ ಹೇಳಬಹುದು. ಇದಕ್ಕಿಂತ ಕೆಟ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಅತಿ ಭ್ರಷ್ಟ ಮುಖ್ಯಮಂತ್ರಿ ಎನ್ನಿಸಿದ್ದ ಬಂಗಾರಪ್ಪನವರೇ ಅವರು ತೀರಿಕೊಳ್ಳುವ ಹೊತ್ತಿಗೆ ದೇವಮಾನವರಾಗಿ ಕಾಣಿಸುತ್ತಿದ್ದರು. ಅದಕ್ಕೆ ಕಾರಣ ಬಂಗಾರಪ್ಪ ಭ್ರಷ್ಟಾಚಾರಿಗಳಲ್ಲ ಎಂದು ರುಜುವಾತಾಯಿತು ಎಂದಲ್ಲ. ಈ ಬಿಜೆಪಿ ಸರ್ಕಾರದ ಮುಂದೆ ಹಿಂದಿನ ದರೋಡೆಕೋರರು ಭ್ರಷ್ಟರು ದುಷ್ಟರೆಲ್ಲ ಸಂತರಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದರೆ ಅಷ್ಟೇ ಸಾಕು. ಉಳಿದದ್ದು ತಾನಾಗಿ ಅರ್ಥವಾಗಬೇಕು.

ಇಂತಹ ಬ್ರಹ್ಮಾಂಡ ಭ್ರಷ್ಟ ಸರ್ಕಾರದಲ್ಲೂ, ಅಪಮೌಲ್ಯ ಮತ್ತು ಅನೀತಿಗಳನ್ನೆ ಹಾಸು ಹೊದ್ದು ಉಸಿರಾಡುತ್ತಿರುವ ಈ ಸರ್ಕಾರದಲ್ಲೂ ಭ್ರಷ್ಟಾಚಾರದ ವಿಚಾರಕ್ಕೆ ಒಬ್ಬ ಮಂತ್ರಿಯ ರಾಜೀನಾಮೆ ಕೇಳಿ ಪಡೆಯಲಾಯಿತು. ಅಂದರೆ ಆ ಹಗರಣ ಇನ್ನೆಷ್ಟು ಸ್ಪಷ್ಟವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಮತ್ತು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಭ್ರಷ್ಟ ರೀತಿನೀತಿಗಳ, ನೌಕರಿ ಮಾರಾಟದ, ಹಗರಣ ಅದು. ಅದರ ರೂವಾರಿ ಈ ರಾಮಚಂದ್ರ ಗೌಡರು. ಬಿಜೆಪಿಯಂತಹ ಬಿಜೆಪಿಗೇ, ಯಡ್ಡ್‌ಯೂರಪ್ಪನಂತಹ ಯಡ್ಡ್‌ಯೂರಪ್ಪನವರಿಗೇ ಆ ಹಗರಣವನ್ನು, ರಾಮಚಂದ್ರ ಗೌಡರನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ರಾಮಚಂದ್ರ ಗೌಡರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಬೇಕಾಯಿತು. ಗೌಡರ ಸಚಿವ ಸ್ಥಾನ ಹೋಯಿತು. ಆದರೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಂಪುಟದರ್ಜೆಯ ಸ್ಥಾನಮಾನ ಸಿಕ್ಕಿತು. ಆ ಹಗರಣದ ಬಗ್ಗೆ ವಿಚಾರಣೆ ನಡೆಯಲಿಲ್ಲ. ಆರೋಪ ಸುಳ್ಳು ಎಂದು ಸಾಬೀತಾಗಲಿಲ್ಲ. ಸಚಿವ ಸ್ಥಾನ ಕಿತ್ತುಕೊಂಡು ಮತ್ತೊಂದು ಸಂಪುಟ ದರ್ಜೆ ಸ್ಥಾನಮಾನ ಕೊಟ್ಟದ್ದೇ ಶಿಕ್ಷೆ ಎಂದುಕೊಳ್ಳಬೇಕಾದ ಬುದ್ದಿವಂತಿಕೆ ಜನರದ್ದು. ಇನ್ನು, ಅವರ ಶಾಸಕ ಸ್ಥಾನಕ್ಕಂತೂ ಯಾವುದೇ ಸಮಸ್ಯೆಯಾಗಲಿಲ್ಲ.

ಅಂದ ಹಾಗೆ, ಈ ರಾಮಚಂದ್ರ ಗೌಡರು ಬೆಂಗಳೂರು ನಗರ ಮತ್ತು ಜಿಲ್ಲೆಯ ಪದವೀಧರರನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಶಾಸಕ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮ ಅಕ್ಷರಸ್ತ, ವಿದ್ಯಾವಂತ, ಘನತೆವೆತ್ತ, ಬುದ್ದಿವಂತ, ಜವಾಬ್ದಾರಿಯುತ ಪದವೀಧರರು ನೇರವಾಗಿ ಮತ್ತು ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವ ತಮ್ಮ ಪ್ರತಿನಿಧಿ.

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರು ಒಮ್ಮೆ ತಲೆತಗ್ಗಿಸಿದರೆ ಅದು ಅವರ ಒಳ್ಳೆಯತನವನ್ನು ತೋರಿಸುತ್ತದೆ.

ಆದರೆ ತಲೆತಗ್ಗಿಸಿದವರು ಮತ್ತು ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದು ಎಂದುಕೊಂಡವರಿಗೆ ಒಂದು ಅವಕಾಶ ಇನ್ನು ನಾಲ್ಕು ತಿಂಗಳಿನಲ್ಲಿ ಬರಲಿದೆ. ಇದೇ ರಾಮಚಂದ್ರ ಗೌಡರು ಬಿಜೆಪಿಯಿಂದ ಬೆಂಗಳೂರಿನ ಪದವೀಧರರಿಂದ ಪುನರಾಯ್ಕೆ ಅಗಲು ಹೊರಟಿದ್ದಾರೆ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾಗಿದ್ದರೆ ಬರಲಿರುವ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಪಾಲ್ಗೊಳ್ಳಿ ಮತ್ತು ಮತ ಚಲಾಯಿಸಿ ಎಂದು ಆಗ್ರಹಿಸಿದರೆ ಅದು ಕಠಿಣವಾದ ಅಥವ ಅಹಂಕಾರದ ಆಗ್ರಹವಲ್ಲ ಎಂದು ಭಾವಿಸುತ್ತೇನೆ.

ಅಂದ ಹಾಗೆ, ಮಿಕ್ಕ ಪಕ್ಷಗಳ ಅಭ್ಯರ್ಥಿಗಳೂ ರಾಮಚಂದ್ರ ಗೌಡರಿಗಿಂತ ಉತ್ತಮರು ಎಂದೇನೂ ನಾನು ಹೇಳುವುದಿಲ್ಲ. ಆದರೆ ಅವರು ಹೊಸಬರೇ ಆಗಿರುತ್ತಾರೆ. ಕನಿಷ್ಟ “ಅನುಮಾನದ ಲಾಭ”ವಾದರೂ (Benefit of the Doubt) ಅವರಿಗೆ ಸಿಗಬೇಕು. ಮತ್ತು ನಿಲ್ಲಲಿರುವ ಅಭ್ಯರ್ಥಿಗಳಲ್ಲಿ ಇರುವುದರಲ್ಲೇ ಉತ್ತಮರನ್ನು ಆರಿಸುವ ಜವಾಬ್ದಾರಿ ನಮ್ಮದು. ಮತ್ತು ನಾವು ಈ ಭ್ರಷ್ಟರಿಗೆ ಮತ್ತು ಅಯೋಗ್ಯರಿಗೆ ವಿರುದ್ಧವಾಗಿ ಚಲಾಯಿಸುವ ಒಂದೊಂದು ಮತಕ್ಕೂ ಅವರಿಗೆ ಬೀಳುವ ಮತಕ್ಕಿಂತ ಹೆಚ್ಚಿನ ಮೌಲ್ಯ, ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತದೆ.

ಆದರೆ, ನೀವು ಪದವೀಧರರಾಗಿದ್ದರೂ ಮತ ಚಲಾಯಿಸಲು ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅದು ಬಹಳ ಸುಲಭ. ಒಂದು ಅರ್ಜಿ ತುಂಬಬೇಕು. ಅದರಲ್ಲಿ ನಿಮ್ಮ ಹೆಸರು, ವಿಳಾಸ, ನಿಮ್ಮ ಪದವಿ ಮತ್ತು ಅದನ್ನು ಪಡೆದ ವರ್ಷ, ಇಷ್ಟೇ ತುಂಬಬೇಕಿರುವುದು. (ಅರ್ಜಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.) ಇಷ್ಟು ತುಂಬಿದ ಅರ್ಜಿಯನ್ನು ನಿಮ್ಮ ಪದವಿ ಪ್ರಮಾಣ ಪತ್ರ ಮತ್ತು ನಿಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯ ಎರಡು ಪ್ರತಿಗಳೊಂದಿಗೆ (ವೋಟರ್ ಕಾರ್ಡ್/ರೇಷನ್ ಕಾರ್ಡ್/ವಿದ್ಯುತ್ ಅಥವ ಫೋನ್ ಬಿಲ್/ಬಾಡಿಗೆ ಕರಾರು ಪತ್ರ, ಇತ್ಯಾದಿಗಳಲ್ಲಿ ಯಾವುದಾದರೂ ಒಂದು) ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಕೊಟ್ಟರೆ ಮುಗಿಯಿತು. ಇದು ಅಸಾಧ್ಯವೂ ಅಲ್ಲ. ಮಾಡದೆ ಸುಮ್ಮನಿದ್ದುಬಿಡುವಷ್ಟು ಅಪ್ರಾಮಾಣಿಕರೂ ಪಲಾಯನವಾದಿಗಳೂ ನೀವಲ್ಲ. ಅಲ್ಲವೇ?

ಮತ್ತು, ಇದು ಕೇವಲ ಬೆಂಗಳೂರಿನ ಪದವೀಧರರಿಗಷ್ಟೇ ಸೀಮಿತವಲ್ಲ. ರಾಜ್ಯದ ಎಲ್ಲಾ ಪದವೀಧರರಿಗೂ ಸಂಬಂಧಿಸಿದ್ದು. ಪ್ರತಿಯೊಬ್ಬ ಪದವೀಧರನಿಗೂ ಒಬ್ಬ ವಿಧಾನಪರಿಷತ್ ಶಾಸಕನನ್ನು ಆಯ್ಕೆ ಮಾಡಿಕೊಳ್ಳುವ ಒಂದು ವೋಟ್ ಇದೆ. ಹೆಸರು ನೊಂದಾಯಿಸಿ. ಚುನಾವಣೆಯ ದಿನ ಯೋಗ್ಯರಿಗೆ ಮತ ಚಲಾಯಿಸಿ. ಈ ಅಸಂಗತ ಸಮಯದಲ್ಲಿ, ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವನೃತ್ಯ ಮಾಡುತ್ತಿರುವ ಕರ್ನಾಟಕದ ಈ ಅಸಹಾಯಕ ಪರಿಸ್ಥಿತಿಯಲ್ಲಿ ಒಂದಷ್ಟು ಯೋಗ್ಯರನ್ನು ಪ್ರಾಮಾಣಿಕರನ್ನು ಶಾಸನಸಭೆಗೆ ಕಳುಹಿಸಿ. ಹಳ್ಳಿಯ ಜನ, ಸ್ಲಮ್ಮಿನ ಜನ, ಬಡವರು, ಜಾತಿವಾದಿಗಳು, ದುಡ್ಡಿಗೆ ಮತ್ತು ಜಾತಿಗೆ ಮರುಳಾಗಿ ವೋಟ್ ಮಾಡುತ್ತಾರೆ ಅನ್ನುತ್ತೀರಲ್ಲ, ಅವರ್‍ಯಾರಿಗೂ ಅವಕಾಶ ಇಲ್ಲದ ಈ ಚುನಾವಣೆಯಲ್ಲಿ ನೀವು ಹಾಗೆ ಅಲ್ಲ ಎಂದು ನಿರೂಪಿಸಿ. ಮಾರ್ಗದರ್ಶಕರಾಗಿ. ಮುಂದಾಳುಗಳಾಗಿ. ನೀವು ಪಡೆದ ಪದವಿಗೂ ಒಂದು ಘನತೆ ಇದೆ ಎಂದು ತೋರಿಸಿ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾದರೆ, ಈ ವೆಬ್‌ಸೈಟಿನಲ್ಲಿ ನಿಮ್ಮ ತುಂಬಿದ ಅರ್ಜಿ ಮತ್ತು ಸಲ್ಲಿಸಬೇಕಾದ ಸರ್ಕಾರಿ ಕಚೇರಿ ಮತ್ತು ವಿಳಾಸ ಎಲ್ಲವೂ ಸುಲಭವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳಿ. ನಗರದ ಹೊರಗಿರುವವರಾದರೆ, ನಿಮ್ಮ ತಾಲ್ಲೂಕಿನ ತಹಸಿಲ್ದಾರ್ ಕಚೇರಿ ಅರ್ಜಿ ತಲುಪಿಸಬೇಕಾದ ಸ್ಥಳ ಎನ್ನಿಸುತ್ತದೆ. ನಿಮ್ಮ ತಹಸಿಲ್ದಾರ್ ಕಚೇರಿಗೆ ಫೋನ್ ಮಾಡಿ ತಿಳಿದುಕೊಳ್ಳಿ.  ಕೊನೆಯ ದಿನಾಂಕ ಎಂದೆಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೇಗ ಮಾಡಿ.

ಸ್ಪೈಡರ್‌ಮ್ಯಾನ್ ಸಿನೆಮಾದಲ್ಲಿ ಒಂದು ವಾಕ್ಯ ಬರುತ್ತದೆ: “With great power comes great responsibility.” ನಾವು ಪಡೆದುಕೊಳ್ಳುವ ಪದವಿಯೊಂದಿಗೆ ನಮಗೆ ಜವಾಬ್ದಾರಿಗಳೂ ಅವಕಾಶಗಳೂ ಅನುಕೂಲಗಳೂ ಬರುತ್ತವೆ. ಆ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಅನರ್ಹರು ಅಥವ ಆಗದವರು ಎಂದಾದರೆ ಆ ಪದವಿಗೂ ಅನುಕೂಲಗಳಿಗೂ ನಾವು ಅನರ್ಹರು. ಇನ್ನೊಬ್ಬರನ್ನು ದೂರುತ್ತ ಸಿನಿಕರಾಗುತ್ತ ಇರುವುದಕ್ಕಿಂತ ನಾವು ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿರೋಣ.

ಇಷ್ಟನ್ನು ಈ ಸಂದರ್ಭದಲ್ಲಿ ಕರ್ನಾಟಕದ ಪದವೀಧರರಿಂದ ಬಯಸುವುದು ತಪ್ಪೆಂದಾಗಲಿ ಅಪರಾಧವೆಂದಾಗಲಿ ನಾನು ಭಾವಿಸುತ್ತಿಲ್ಲ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ