Category Archives: ರವಿ ಕೃಷ್ಣಾರೆಡ್ಡಿ

ಲಕ್ಷ್ಮಣ್ ಸವದಿ ಶಾಸಕ ಸ್ಥಾನ ವಜಾ ಮಾಡಿದ ವಿಧಾನಸಭೆ

ಬೆಂಗಳೂರು, 8-2-12:
ನೆನ್ನೆ ಶಾಸನ ಸಭೆಯ ಕಲಾಪಗಳು ನಡೆಯುತ್ತಿದ್ದ ವೇಳೆ ಸದನದಲ್ಲಿ ಹಾಜರಿದ್ದರೂ ಅದರ ಕಲಾಪದಲ್ಲಿ ಪಾಲ್ಗೊಳ್ಳದೆ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಲನಚಿತ್ರವೊಂದನ್ನು ನೋಡುತ್ತಿದ್ದ ಮಾಜಿ ಸಚಿವ ಲಕ್ಷ್ಮಣ್ ಸವದಿಯವರನ್ನು ಇಂದು ವಿಧಾನಸಭೆ ಅವಿರೋಧವಾಗಿ ವಿಧಾನಸಭಾ ಸದಸ್ಯತ್ವದಿಂದ ವಜಾ ಮಾಡಿತು. ಇಂದು ಬೆಳಿಗ್ಗೆ ತಾನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸವದಿಯವರನ್ನು ಶಾಸಕ ಸ್ಥಾನದಿಂದಲೂ ವಜ ಮಾಡುವ ಮೂಲಕ ವಿಧಾನಸಭೆ ಮುಂದಕ್ಕೆ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಮತ್ತು ಶಾಸಕರಾಗುವವರು ಸದನದ ಘನತೆ ಮತ್ತು ಜನಪ್ರತಿನಿಧಿಗಳ ಗೌರವವನ್ನೂ ಎತ್ತಿಹಿಡಿಯಬೇಕು ಎನ್ನುವ ಸಂದೇಶವನ್ನು ಕಳುಹಿಸಿತು.

ಇಂದು ಬೆಳಿಗ್ಗೆ ಆರಂಭವಾದ ವಿಧಾನಸಭಾ ಕಲಾಪದಲ್ಲಿ ಮೊದಲು ಪ್ರಸ್ತಾಪವಾಗಿದ್ದೇ ಈ ವಿಚಾರ. ಇಂದು ಬೆಳ್ಳಂಬೆಳಗ್ಗೆಯೇ ಲಕ್ಷ್ಮಣ ಸವದಿಯವರೂ ಸೇರಿ ಮೂವರು ಸಚಿವರು ತಮ್ಮ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ವಿಷಯದ ಮೇಲೆ ಚರ್ಚೆ ಆರಂಭಿಸಿದ ಸದನ ಸುಮಾರು ಮೂರು ಗಂಟೆಗಳ ಕಾಲ ಹಲವಾರು ಸದಸ್ಯರ ಅತ್ಯುತ್ತಮ, ಪ್ರಬುದ್ಧ ಭಾಷಣಗಳಿಗೆ ಸಾಕ್ಷಿಯಾಯಿತು. ಮೊದಲಿಗೆ ಮಾತನಾಡಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ಸ್ವಾತಂತ್ರ್ಯಾನಂತರ ದೇಶ ಅಳವಡಿಸಿಕೊಂಡ ಸಂವಿಧಾನ, ಪ್ರಜಾಪ್ರಭುತ್ವ, ಅದರಲ್ಲಿ ಶಾಸಕಾಂಗದ ಮಹತ್ವ, ಜನಪ್ರತಿನಿಧಿಗಳಾದವರು ತೋರಬೇಕಾದ ಘನತೆ, ತಮ್ಮ ನಡವಳಿಕೆಗಳ ಮೂಲಕ ಸಮಾಜಕ್ಕೆ ಆದರ್ಶವಾಗಿ ನಿಲ್ಲಬೇಕಾದ ಅನಿವಾರ್ಯತೆ, ಮುಂತಾದುವುಗಳನ್ನು ಪ್ರಸ್ತಾಪಿಸಿ ಲಕ್ಷಣ ಸವದಿಯಂತಹವರ ನಡವಳಿಕೆಯನ್ನು ಯಾವ ಕಾರಣಕ್ಕೆ ಸಹಿಸಬಾರದು ಎನ್ನುವುದನ್ನು ಪರಿಣಾಮಕಾರಿಯಾಗಿ ಮಂಡಿಸಿದರು. ಅವರ ಮಾತಿನುದ್ದಕ್ಕೂ ಸದನದ ಪ್ರತಿಯೊಬ್ಬ ಶಾಸಕರೂ ಹಾಜರಿದ್ದು (ಲಕ್ಷ್ಮಣ ಸವದಿಯವರನ್ನು ಹೊರತುಪಡಿಸಿ) ಸಿದ್ಧರಾಮಯ್ಯನವರ ಮಾತುಗಳನ್ನು ಗಂಭಿರತೆಯಿಂದ ಕೇಳಿದರು.

ನಂತರ ಮಾತನಾಡಿದ ವಿರೋಧಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರರವರು, ತಾನು ನೆನ್ನೆ ತಾನೆ ಈ ಬಾರಿಯ ಶಾಸನ ಸಭೆಯ ಸದಸ್ಯನಾಗಿ ಯಾಕಾಗಿ ಆದೆನೊ ಎನ್ನುವ ಆವಮಾನದಲ್ಲಿ ಬೇಸರದಲ್ಲಿ ಕಳೆದೆ; ಆದರೆ ಇಂದು ಸದನದ ಸದಸ್ಯರ ನಡವಳಿಕೆ ಮತ್ತು ಅವರ ಬದಲಾದ ವರ್ತನೆ ನೋಡಿ ತಮಗೆ ಮತ್ತೊಮ್ಮೆ ಮನುಷ್ಯನ ಒಳ್ಳೆಯತನದ ಮೇಲೆ ನಂಬಿಕೆ ಬಂದಿದೆ ಎಂದು ಹೇಳಿ, ಇಂತಹ ಘಟನೆ ಮುಂದೆಂದೂ ನಡೆಯದ ರೀತಿಯಲ್ಲಿ ಸದನದ ಸದಸ್ಯರಿಗಷ್ಟೇ ಅಲ್ಲ, ಎಲ್ಲಾ ಜನಪ್ರತಿನಿಧಿಗಳಿಗೂ ಶಿಷ್ಟಾಚಾರದ ಪಠ್ಯವನ್ನು ರೂಪಿಸಿ ಅದನ್ನು ಕಡ್ಡಾಯವಾಗಿ ಅವರು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ನಾಳೆ ಇದೇ ವಿಷಯದ ಬಗ್ಗೆ ತಾವು ನಿಯಮಾವಳಿ ಪರಿಷ್ಕರಣೆಯ ಬಗ್ಗೆ ವಿಷಯ ಮಂಡಿಸುವುದಾಗಿ ಹೇಳಿದರು.

ಆದರೆ ಇವರಿಬ್ಬರಷ್ಟೇ ಅಲ್ಲದ ಜೆಡಿಎಸ್ ಮತ್ತು ಬಿಜೆಪಿಯ ಸದಸ್ಯರು ಸಹ ಮೇಲಿನವರು ಹೇಳಿದ ಮಾತುಗಳಿಗೆ ತಮ್ಮ ಬೆಂಬಲ ಸೂಚಿಸಿ ಮಾತನಾಡಿದರು. ಆಡಳಿತ ಪಕ್ಷವಾದ ಬಿಜೆಪಿಯ ಅನೇಕ ಶಾಸಕರು ತಮ್ಮ ಸಹಶಾಸಕನ ವರ್ತನೆಯಿಂದ ತೀವ್ರ ಜಿಗುಪ್ಸೆ, ಅವಮಾನ, ಬೇಸರ ವ್ಯಕ್ತಪಡಿಸಿದ್ದೇ ಅಲ್ಲದೆ ಈ ವಿಷಯವಾಗಿ ರಾಜ್ಯದ ಜನತೆಯ ಕ್ಷಮೆಯಾಚಿಸಿದರು. ತಮ್ಮ ಮನೆಯನ್ನು ಶುದ್ಧಗೊಳಿಸುವ ಕಾರ್ಯ ಇಂದಿನಿಂದಲೇ ಆರಂಭವಾಗಿದೆ ಎಂದು ಹೇಳಿದರು. 2005 ಡಿಸೆಂಬರ್ 23 ರಂದು ದೇಶದ ಸಂಸತ್ತು 11 ಜನ ಸಂಸತ್ ಸದಸ್ಯರನ್ನು ಅವರ ಅನೀತಿಯುತ ನಡವಳಿಕೆಗಾಗಿ ವಜಾಗೊಳಿಸಿದ್ದನ್ನು ಅನೇಕ ಸದಸ್ಯರು ಪ್ರಸ್ತಾಪಿಸಿ, ಕರ್ನಾಟಕದ ಶಾಸನಸಭೆಯನ್ನು ಸ್ವಚ್ಚಗೊಳಿಸುವ ಕಾರ್ಯ ಆರಂಭವಾಗಬೇಕಿದೆ ಎಂದು ಪ್ರತಿಪಾದಿಸಿದರು.

ಊಟದ ಸಮಯವನ್ನೂ ಮೀರಿ ನಡೆದ ಕಲಾಪ ಕೊನೆಗೆ ಲಕ್ಷ್ಮಣ ಸವದಿಯವರನ್ನು “ಅನೀತಿ ಮತ್ತು ಶಾಸಕ ಸ್ಥಾನಕ್ಕೆ ತಕ್ಕುದಲ್ಲದ ನಡವಳಿಕೆ ( “unethical and unbecoming” of Members of Legislative Assembly)” ಎಂದು ಘೋಷಿಸಿ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡುವ ಪ್ರಸ್ತಾಪವನ್ನು ಅವಿರೋಧವಾಗಿ ಅಂಗೀಕರಿಸಿತು. ಸಿ.ಸಿ. ಪಾಟೀಲ್ ಮತ್ತು ಪಾಲೇಮಾರ್‌ರವರಿಗೆ ಸದನದ ಘನತೆಯನ್ನಷ್ಟೆ ಅಲ್ಲದೆ ತಮ್ಮ ವೈಯಕ್ತಿಕ ಗೌರವ ಮತ್ತು ಘನತೆಯನ್ನೂ ಕಾಪಾಡಿಕೊಳ್ಳಬೇಕೆಂಬ ಸೂಚನೆ ನೀಡಲಾಯಿತು.

ಇಷ್ಟೇ ಅಲ್ಲ:
ರಾಜ್ಯದ ಇಂದಿನ ವಿಧಾನಸಭೆಯ ಘಟನೆಗಳನ್ನು ನೋಡಿದರೆ ವಿಷಯ ಇಲ್ಲಿಗೇ ಮುಕ್ತಾಯವಾಗುವುದಿಲ್ಲ ಎನ್ನುವ ಸೂಚನೆಗಳು ಕಾಣಿಸುತ್ತಿವೆ. ಕಳೆದ ವಾರ ತಾನೆ ಸುಪ್ರೀಮ್‌ಕೋರ್ಟ್‌ನಿಂದ ತೀವ್ರ ವಿಮರ್ಶೆಗೆ ಒಳಗಾಗಿರುವ ಸ್ಪೀಕರ್ ಬೋಪಯ್ಯನವರು ಈ ಇಡೀ ವಿದ್ಯಮಾನದಿಂದ ತೀವ್ರ ನೊಂದಿದ್ದು ತಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ತದನಂತರ ಕೂಡಲೆ ರಾಜೀನಾಮೆ ನೀಡಲು ಚಿಂತಿಸುತ್ತಿರುವುದಾಗಿ ಅನಧಿಕೃತ ಮೂಲಗಳು ತಿಳಿಸಿವೆ. 11 ಬಿಜೆಪಿ ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ ವಿಷಯದಲ್ಲಿ ರಾಜಕೀಯ ಒತ್ತಡಗಳಿಗೆ ಒಳಗಾಗಿ ಅನ್ಯಾಯದ ತೀರ್ಮಾನದ ಕೈಗೊಂಡಿದ್ದು ಅವರನ್ನು ತೀವ್ರವಾಗಿ ಬಾಧಿಸುತ್ತಿದೆ ಎಂದು ಹೇಳಲಾಗಿದೆ. ದೇಶದ ಪರಮೋಚ್ಚ ನ್ಯಾಯಾಲದಿಂದ ಈ ರೀತಿ ವಿಮರ್ಶೆಗೊಳಗಾದ ರಾಜ್ಯದ ಪ್ರಥಮ ಸ್ಪೀಕರ್ ಎಂಬ ಅವಮಾನ ಅವರನ್ನು ನಿತ್ಯವೂ ಕಾಡುತ್ತಿದ್ದು ಅವರು ಈಗಾಗಲೆ ರಾಜೀನಾಮೆಗೆ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ, ಹೋಗುವ ಮೊದಲು ತಮ್ಮ ಕಾಲದಲ್ಲಿ ಜನಪ್ರತಿನಿಧಿಗಳ ಘನತೆ ಮತ್ತು ಗೌರವಕ್ಕೆ ಅವಮರ್ಯಾದೆ ಉಂಟುಮಾಡಿದ ತಮ್ಮ ಸದನದ ಸದಸ್ಯರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿರ್ಗಮಿಸುವುದಾಗಿ ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಾಳೆ ಇನ್ನೂ ಹಲವು ಶಾಸಕರು ಸದನದ ಸದಸ್ಯತ್ವದಿಂದ ಅನರ್ಹರಾಗುವ ಸಾಧ್ಯತೆಗಳಿವೆ. ಲಂಚ ತೆಗೆದುಕೊಳ್ಳುತ್ತಿರುವಾಗ ಲೋಕಾಯುಕ್ತ ಪೋಲಿಸರ ಕೈಗೆ ಸಿಕ್ಕುಬಿದ್ದಿದ್ದ ಕೆ.ಎಜಿ.ಎಫ್. ಶಾಸಕ ಸಂಪಗಿ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಹರತಾಳು ಹಾಲಪ್ಪ, ಖಚಿತವಾಗಿ ಅನರ್ಹವಾಗಲಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಈ ಎಲ್ಲದಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರದಲ್ಲಿ ತೊಡಗಿ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಪಾತ್ರವನ್ನೇ ಹೀನಾಯಗೊಳಿಸಿದ ಇನ್ನೂ ಹಲವು ಶಾಸಕರನ್ನು ಮತ್ತು ಮಂತ್ರಿಗಳನ್ನು ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಚಿಂತನೆಗಳು ವಿಧಾನಸಭೆಯ ಕಾರಿಡಾರ್‌ಗಳಲ್ಲಿ ಇಂದು ಹರಿದಾಡುತ್ತಿದ್ದವು. ಈಗಾಗಲೆ ಲೋಕಾಯುಕ್ತದಲ್ಲಿ ಪ್ರಕರಣವಿರುವವರ ಜೊತೆಗೆ ವಿವಿಧ ಮಾಧ್ಯಮಗಳಲ್ಲಿ ಬಯಲಾಗಿರುವ ಪ್ರಕರಣಗಳ ಆಧಾರದ ಮೇಲೆ ಶಾಸಕರ ಒಂದು ಪಟ್ಟಿ ಸಿದ್ದಪಡಿಸಿ, ತಮ್ಮ ಆದಾಯಮೂಲಗಳಿಗಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ಎಲ್ಲಾ ಶಾಸಕರನ್ನು ಅನರ್ಹಗೊಳಿಸುವುದಷ್ಟೇ ಅಲ್ಲದೆ, ಅಂತಹವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಕ್ರಮ ಜರುಗಿಸುವ ಬಗ್ಗೆಯೂ ಚಿಂತನೆಗಳು ಆರಂಭವಾಗಿವೆ. ಮಾಜಿ ಮುಖ್ಯಮಂತ್ರಿ,  ಹಲವಾರು ಹಾಲಿ-ಮಾಜಿ ಸಚಿವರೂ ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಮೇಲ್ಪಟ್ಟು ಶಾಸಕರು ಈ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

ತಮ್ಮ ಈ ಕಾರ್ಯುದ ಮೂಲಕ ಕರ್ನಾಟಕದಲ್ಲಿ ಕುಸಿದಿರುವ ಸಾರ್ವಜನಿಕ ಜೀವನದ ಮೌಲ್ಯಗಳನ್ನು ಮತ್ತೆ ಪುನರ್‌ಸ್ಥಾಪಿಸುವುದಷ್ಟೇ ಅಲ್ಲದೆ ಜನರಲ್ಲೂ ಈ ಮೌಲ್ಯಗಳನ್ನು ಪ್ರಸ್ತುತಗೊಳಿಸುವ ನಿಟ್ಟಿನಲ್ಲಿ ತಮ್ಮ ಉಳಿದ ಶಾಸಕ ಸ್ಥಾನದ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹಲವಾರು ಶಾಸಕರು ಇಂದು ವಿಧಾನಸೌಧದ ಮೊಗಸಾಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು.

(ಹೀಗೊಂದು ಆಶಯ.)


– ರವಿ ಕೃಷ್ಣಾರೆಡ್ಡಿ    


ಭೂಮಿ ಹುಟ್ಟಿದ್ದು ಹೇಗೆ – DVD ಪಡೆದುಕೊಳ್ಳುವುದು ಹೇಗೆ?


– ರವಿ ಕೃಷ್ಣಾರೆಡ್ಡಿ


ಸ್ನೇಹಿತರೆ,

ನೆನ್ನೆ ಈ ಸಾಕ್ಷ್ಯಚಿತ್ರದ ಬಗ್ಗೆ ಬರೆದಾಗಿನಿಂದ ಹಲವರು ಇದರ ಡಿವಿಡಿ ಪಡೆದುಕೊಳ್ಳುವುದು ಹೇಗೆ ಎಂದು ಫೋನಿನಲ್ಲಿ ಮತ್ತು ಕಾಮೆಂಟ್ ವಿಭಾಗಲ್ಲಿಯೂ ಕೇಳಿದ್ದಾರೆ. ಹೀಗೆ ಮಾಡಬಹುದು: ನೀವು ಬೆಂಗಳೂರಿನಲ್ಲಿ ಇದ್ದರೆ ಮತ್ತು ಕೆಳಗಿನ ವಿಳಾಸಕ್ಕೆ ಬರಬಹುದಾದರೆ ಫೋನ್ ಮಾಡಿ ಬಂದು ತೆಗೆದುಕೊಂಡು ಹೋಗಬಹುದು. ಆಗದೆ ಇದ್ದಲ್ಲಿ ಈ ಕೆಳಗಿನ ವಿಳಾಸಕ್ಕೆ “Ravi Krishna Reddy” ಹೆಸರಿಗೆ ಎಂ.ಒ./ಚೆಕ್/ಡಿಡಿ (ರೂ. 250) ಕಳುಹಿಸಿದರೆ ನಿಮಗೆ ಆದಷ್ಟು ಬೇಗ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮನಿ ಆರ್ಡರ್ ಮಾಡಿದರೆ ಸ್ಪಷ್ಟವಾಗಿ ನಿಮ್ಮ ವಿಳಾಸ ಮತ್ತು ಫೋನ್ ಸಂಖ್ಯೆ ಬರೆಯಿರಿ. ಚೆಕ್ ಅಥವ ಡಿಡಿ ಕಳುಹಿಸಿದರೆ ಒಂದು ಕಾಗದಲ್ಲಿ ನಿಮ್ಮ ಹೆಸರು, ವಿಳಾಸ, ಮತ್ತು ಫೋನ್ ಸಂಖ್ಯೆ ಬರೆದು ಪೋಸ್ಟ್ ಮಾಡಿ.

ವಿಳಾಸ:
ರವಿ ಕೃಷ್ಣಾರೆಡ್ಡಿ
೨೨೨, B೪, ತುಂಗಭದ್ರ,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ,
ಬೆಂಗಳೂರು – ೫೬೦೦೪೭
ಪೋ: ೯೬೮೬೦-೮೦೦೦೫

ಭೂಮಿ ಹುಟ್ಟಿದ್ದು ಹೇಗೆ? ಕನ್ನಡ ಸಾಕ್ಷ್ಯಚಿತ್ರ


– ರವಿ ಕೃಷ್ಣಾರೆಡ್ಡಿ


ಸ್ನೇಹಿತರೆ,

ಇಂದು ಕರ್ನಾಟಕದ ಮನೆಮನೆಯ ಒಳಗೆ ಜ್ಯೋತಿಷಿಗಳು, ಮಂತ್ರವಾದಿಗಳು, ಪೂಜಾರಿಗಳು, ಗ್ರಹ-ನಕ್ಷತ್ರಗಳ ಸುಳ್ಳು ಆಧಾರದ ಮೇಲೆ ಭವಿಷ್ಯ ಹೇಳುವವರು, ವಾಮಾಚಾರಿಗಳು, ಮೂಢರು, ದಡ್ಡರು ಟಿವಿ ಎನ್ನುವ ಪೆಟ್ಟಿಗೆಯ ಮೂಲಕ ಬೆಳ್ಳಂಬೆಳಗ್ಗೆಯ ಬಂದು ಕೂರುತ್ತಿದ್ದಾರೆ. ಕ್ರಮೇಣ ಜನರಲ್ಲಿ ಮೂಢನಂಬಿಕೆ ಹೆಚ್ಚುತ್ತಲೇ ಹೋಗುತ್ತಿದೆ.

ತಮ್ಮ ಮಕ್ಕಳು ಇಂಜಿನಿಯರ್-ಡಾಕ್ಟರ್ ಆಗಬೇಕೆಂದು ಬಯಸುವ ಅಕ್ಷರಸ್ಠರು ಸಹ ಯಾವುದೇ ರೀತಿಯ ವೈಜ್ಞಾನಿಕ ತಿಳಿವಳಿಕೆಗೆ ತೆರೆದುಕೊಳ್ಳದೆ ವಿಶೇಷ ಪೂಜೆ, ವ್ರತ, ಯಜ್ಞ-ಯಾಗಾದಿಗಳಲ್ಲಿ, ವಾಮಾಚಾರದಲ್ಲಿ ತಮ್ಮ ಅವಕಾಶ-ಯಶಸ್ಸುಗಳನ್ನು ಹುಡುಕುತ್ತಿದ್ದಾರೆ. ಹರಕೆ ಹೊತ್ತುಕೊಳ್ಳುವುದು, ಸ್ವಲ್ಪ ದುಡ್ಡು ಬರುವಷ್ಟರಲ್ಲಿ ದೂರದ ದೇವಸ್ಥಾನಗಳಿಗೆ ಹೋಗುವುದು, ಅಸಹ್ಯ ಎನ್ನಿಸುವ ರೀತಿಯಲ್ಲಿ ಕಾಣಿಕೆ ಕೊಡುವುದು ಹೆಚ್ಚಾಗುತ್ತಿದೆ.

ಇವೆಲ್ಲವಕ್ಕೂ ಕ್ಯಾಟಲಿಸ್ಟ್ ರೀತಿಯಲ್ಲಿ ನಮ್ಮ ದೃಶ್ಯ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿವೆ.

ಇದನ್ನು ಎದುರಿಸುವುದು ಹೇಗೆ. ಯಾವ ಕಡೆಯಿಂದ ಎನ್ನುವುದು ನನ್ನನ್ನು ಬಹಳ ದಿನದಿಂದ ಕಾಡುತ್ತಿತ್ತು.

ಈ ಹಿನ್ನೆಲೆಯಲ್ಲಿ಼ ನಾನು ಅಮೆರಿಕದಿಂದ ಬಂದ ನಂತರ ವರ್ಷದ ಹಿಂದೆ ಕಡಿಮೆ ಖರ್ಚಿನಲ್ಲಿ ನಮ್ಮ ಬ್ರಹ್ಮಾಂಡ, ಸೂರ್ಯ, ಭೂಮಿ, ಚಂದ್ರ ರೂಪುಗೊಂಡ ಬಗ್ಗೆ ಮತ್ತು ಕಳೆದ ಕೋಟ್ಯಾಂತರ ವರ್ಷಗಳಲ್ಲಿ ಭೂಮಿ ಮತ್ತು ಇಲ್ಲಿಯ ಜೀವಗಳು ರೂಪುಗೊಂಡ ಬಗ್ಗೆ ಒಂದು ಕನ್ನಡ ಡಾಕ್ಯುಮೆಂಟರಿ ಮಾಡಬೇಕೆಂದು ತೀರ್ಮಾನಿಸಿದೆ. ಇದಕ್ಕೆ ಗೆಳೆಯರಾದ ಕುಮಾರ್, ಈಶ್ವರ್, ಶ್ರೀಮಂತ್, ಮತ್ತಿತರರು ಸಹಕರಿಸಿದರು. ಸುಮಾರು 15 ರಿಂದ 20 ಸಾವಿರ ಖರ್ಚು ಬಂತು.

45 ನಿಮಿಷಗಳ ಈ ಡಾಕ್ಯುಮೆಂಟರಿಯ ಬಹುತೇಕ ಕೆಲಸ ಮುಗಿದು ಸುಮಾರು ಐದಾರು ತಿಂಗಳಾಯಿತು. ಹತ್ತಾರು ಜನ ಸ್ನೇಹಿತರಿಗೆ ಪರಿಚಿತರಿಗೆ ನೋಡಿ ಅಭಿಪ್ರಾಯ ಹೇಳಲು ಕೊಟ್ಟಿದ್ದೆ. ಸ್ನೇಹಿತರೊಬ್ಬರು ತಾವು ಕೆಲಸ ಮಾಡುವ ವಿಜಯನಗರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೋಸ್ಕರ ಇದರ ಪ್ರದರ್ಶನ ಇಟ್ಟಿದ್ದರು. ಯುವ ವಿದ್ಯಾರ್ಥಿಗಳ ಅಂದಿನ ಪ್ರತಿಕ್ರಿಯೆ ನೋಡಿ ಇದೊಂದು ಸಾರ್ಥಕ ಪ್ರಯತ್ನ ಎಂದು ಅನ್ನಿಸಿತ್ತು.

ಈ ಸಾಕ್ಷ್ಯಚಿತ್ರದ ಪ್ರದರ್ಶನ ಇಟ್ಟು ಇದನ್ನು ಬಿಡುಗಡೆ ಮಾಡಬೇಕು ಎನ್ನಿಸಿತ್ತು. ಆದರೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಹಲವೆ ಜನ ಬಂದು ನೋಡಿದರೆ ಅದು ಒಂದು ರೀತಿಯ ಅನೈತಿಕ ವೆಚ್ಚ ಎನ್ನಿಸಿ ಸುಮ್ಮನಾದೆ. ಬದಲಿಗೆ ಇದನ್ನು ಹೆಚ್ಚು ಜನ ನೋಡಲಿ ಎಂದು ಯೂಟ್ಯೂಬ್‌ಗೆ ಸೇರಿಸಿದ್ದೇನೆ. (ಡಿವಿಡಿಯಲ್ಲಿಯ ಚಿತ್ರ-ದೃಶ್ಯದ ಗುಣಮಟ್ಟ ಇನ್ನೂ ಚೆನ್ನಾಗಿದೆ. ಇಲ್ಲಿ ಅಂತರ್ಜಾಲಕ್ಕಾಗಿ 240 ಪಿಕ್ಸೆಲ್‌ಗಳಿಗೆ ಸೀಮಿತಗೊಳಿಸಲಾಗಿದೆ.)

ಇದೊಂದು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ ಸಾಕ್ಷ್ಯಚಿತ್ರ. ಯಾವುದೇ ಹಣಕಾಸಿನ ಲಾಭವನ್ನು ನಾನು ಇಲ್ಲಿ ಅಪೇಕ್ಷಿಸುತ್ತಿಲ್ಲ. ಯಾವುದೇ ಕಾಪಿರೈಟ್ಸ್ ಇಲ್ಲ. ಇದರ ಡಿವಿಡಿ ಪಡೆದುಕೊಂಡು ಯಾರು ಎಷ್ಟು ಕಾಪಿ ಮಾಡಿಯಾದರೂ ಹಂಚಬಹುದು.

ನಿಮ್ಮಲ್ಲಿ ಯಾರಿಗಾದರೂ ಈ ಸಾಕ್ಷ್ಯಚಿತ್ರದ ಡಿವಿಡಿ ಬೇಕಾದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ಬೆಲೆ ಕೇವಲ 25 ರೂಪಾಯಿ. (ಒಂದು ಖಾಲಿ ಡಿವಿಡಿಯ ಬೆಲೆಯೆ 12 ರಿಂದ 25 ಇರುತ್ತದೆ.) ಆದರೆ ಒಂದು ಡಿವಿಡಿ ಬರ್ನ್ ಮಾಡಲು ಸಾಕಷ್ಟು ಸಮಯ ಮತ್ತು ಶ್ರಮ ಹಿಡಿಸುವುದರಿಂದ ನೀವು ಕನಿಷ್ಟ ಹತ್ತು ಕೊಳ್ಳಬೇಕಾಗುತ್ತದೆ. ಅಂದರೆ 250 ರೂಪಾಯಿ ಕೊಟ್ಟರೆ ನಿಮಗೆ ಹತ್ತು ಡಿವಿಡಿಗಳು ಸಿಗುತ್ತವೆ. ಇವುಗಳನ್ನು ನೀವು ನಿಮ್ಮ ಸ್ನೇಹಿತರಿಗೆ, ನೆಂಟರಿಗೆ, ನೀವು ಓದಿದ ಶಾಲಾಕಾಲೇಜುಗಳಿಗೆ ಉಡುಗೊರೆಯಾಗಿ ಕೊಡಬಹುದು. ಈ ಡಾಕ್ಯುಮೆಂಟರಿಯನ್ನು ಒಮ್ಮೆ ನೋಡಿದರೆ ಇದನ್ನು ಯಾರು ನೋಡಬೇಕು ಎನ್ನುವ ಕಲ್ಪನೆ ನಿಮಗಾಗುತ್ತದೆ ಎನ್ನುವ ನಂಬಿಕೆ ನನ್ನದು.

ಮೊದಲೆ ಹೇಳಿದಂತೆ ಇದು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ ಪ್ರಯತ್ನ. ಇನ್ನೂ ಹಲವು ವೈಜ್ಞಾನಿಕ ಮತ್ತು ವೈಚಾರಿಕ ವಿಷಯಗಳ ಬಗ್ಗೆ ಇಂತಹುದೇ ಇನ್ನೂ ಕೆಲವು ಪ್ರಯತ್ನ ಮಾಡಬೇಕೆಂಬ ಆಲೋಚನೆಗಳಿವೆ. ನಿಮ್ಮಲ್ಲಿ ಯಾರಿಗಾದರೂ ಇಂತಹ ಪ್ರಯತ್ನದಲ್ಲಿ ಪಾಲ್ಗೊಳ್ಳಬೇಕೆಂಬ ಇಚ್ಚೆಯಿದ್ದಲ್ಲಿ ಮತ್ತು ನಿಮಗೆ ಸ್ಚ್ರಿಪ್ಟ್ ಬರೆಯುವ, ಅಥವ ವಿಡಿಯೊ ಎಡಿಟಿಂಗ್ ಮಾಡುವ ಅನುಭವವಿದ್ದಲ್ಲಿ ದಯವಿಟ್ಟು ಸಂಪರ್ಕಿಸಿ. (ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಕೆಲಸಗಳಲ್ಲಿ ತೊಡಗಿಕೊಳ್ಳುವ ಮನಸ್ಸಿರುವ volunteers ಮಾತ್ರ. ಉದ್ಯೋಗಾಕಾಂಕ್ಷಿಗಳಲ್ಲ.)

ದೂರವಾಣಿ: ೯೬೮೬೦-೮೦೦೦೫

 

ಸಿ.ಟಿ.ರವಿಯವರ ಮೇಲಿನ ಭೂಹಗರಣದ ಆರೋಪ ಮತ್ತು ಸಂಬಂಧಿಸಿದ ದಾಖಲೆಗಳು…


– ರವಿ ಕೃಷ್ಣಾರೆಡ್ಡಿ


ಬಹುಶಃ ಕರ್ನಾಟಕದ ಯಾವೊಬ್ಬ ಜನಪ್ರತಿನಿಧಿಯ ಬಗ್ಗೆಯೂ ನಾವು ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳಬಹುದಾದ ರೀತಿ ಕಾಣುತ್ತಿಲ್ಲ. ಇದೊಂದು ಅನ್ಯಾಯ, ಅನೀತಿ, ಸ್ವಚ್ಚಂದ ಭ್ರಷ್ಟಾಚಾರದ ಕಾಲ. ಭ್ರಷ್ಟರೇ ಭ್ರಷ್ಟಾಚಾರದ ಆರೋಪ ಹೊರಿಸುವುದೂ ಅಸಹಜವೇನಲ್ಲ. ಕೆಲವರು ಅತಿ ನಾಜೂಕಾಗಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ ಮಾಡಿದರೆ ಮತ್ತೆ ಬಹುಪಾಲು ಜನ ರಾಜಾರೋಷವಾಗಿಯೇ ಮಾಡಿದ್ದಾರೆ.

ನನಗೆ ಇತ್ತೀಚಿನ ತನಕ ಒಬ್ಬ ಶಾಸಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಆದರೆ ಇತ್ತೀಚೆಗೆ ಗೊತ್ತಾಗಿದ್ದು ಏನೆಂದರೆ, ಅಷ್ಟೇನೂ ಆಗರ್ಭ ಶ್ರೀಮಂತರಲ್ಲದ ಆ ಶಾಸಕರೂ ತಮ್ಮ ಮನೆಗೆ ಹಣಕಾಸಿನ ಕಷ್ಟ ಹೇಳಿಕೊಂಡು ಸಹಾಯ ಕೇಳಿಕೊಂಡು ಬರುವ ಜನರಿಗೆ ಹಣಕಾಸಿನ ನೆರವು ನೀಡುತ್ತಾರಂತೆ. ಎಲ್ಲಿಂದ ಬರುತ್ತದೆ ಆ ಹಣ? ಅದು ಅವರು ಬೆವರು ಸುರಿಸಿ ತಮ್ಮ ತೋಟದಲ್ಲಿ ದುಡಿದ ಹಣವಲ್ಲ. ಅವರ ಸಂಬಳದ ಹಣವೂ ಅಲ್ಲ. ಹಾಗಾದರೆ ಅವರ ಹಣದ ಮೂಲ ಭ್ರಷ್ಟಾಚಾರವಲ್ಲದೆ ಬೇರೇನು ಇರಬಹುದು?.

ಇನ್ನು ಬೇನಾಮಿತನ. ಈ ಜನಪ್ರತಿನಿಧಿಗಳು ಮತ್ತು ಭ್ರಷ್ಟ ಅಧಿಕಾರಿಗಳು ದಾಖಲೆಗಳಲ್ಲಿ ತಮ್ಮ ಹೆಸರು ಕಾಣಿಸದಂತೆ, ಬೇನಾಮಿಗಳ ಮೂಲಕ ಆಸ್ತಿ ಕೂಡಿಟ್ಟುಕೊಳ್ಳುವುದು ಲಾಗಾಯ್ತಿನಿಂದ ನಡೆದು ಬಂದಿರುವುದೆ. ನಮ್ಮಲ್ಲಿ ಒಂದು ಉತ್ತಮ ಇನ್ವೆಸ್ಟಿಗೇಟಿವ್ ಏಜನ್ಸಿ ಇಲ್ಲದಿರುವುದರಿಂದ ಈ ಅಧಿಕಾರ ದುರುಪಯೋಗ ಮತ್ತು ಬೇನಾಮಿ ಆಸ್ತಿ ಶೇಖರಣೆ ನಿರಂತರವಾಗಿ ನಡೆಯುತ್ತಲೇ ಇದೆ. ಲೋಕಾಯುಕ್ತ…. ಆ ಸಂಸ್ಥೆ ಮತ್ತು ಅದು ಸಲ್ಲಿಸುತ್ತಿರುವ ವರದಿಗಳು, ತೆಗೆದುಕೊಳ್ಳುತ್ತಿರುವ ಸಮಯ, ಮುಖ್ಯ ಲೋಕಾಯುಕ್ತರಿಲ್ಲದೆ ನಡೆಯುತ್ತಿರುವ ಅದರ ಕಾರ್ಯ, ನಿಧಾನಗತಿ… ಇಂದು ಅದರ ವಿಶ್ವಾಸಾರ್ಹತೆಯೆ ಪ್ರಶ್ನಾರ್ಹವಾಗಿದೆ.

ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದ ಮುಂದಿನ ದಿನಗಳ ರಾಜಕೀಯ ನಾಯಕರಾಗಬಹುದಾದವರ ಮೇಲೆಯೂ ಒಳ್ಳೆಯ ಭರವಸೆ ಇಟ್ಟುಕೊಳ್ಳುವಂತಿಲ್ಲ. ಬಹಳಷ್ಟು ಜನ ರೌಡಿ, ಗೂಂಡಾಗಳಂತೆಯೇ ವರ್ತಿಸುತ್ತಾರೆ. ಅವರ ಕೋಮುವಾದದ ಸಿದ್ಧಾಂತ ಒತ್ತಟ್ಟಿಗಿದ್ದರೂ ಶಾಸಕ ಸಿ.ಟಿ.ರವಿಯಂತಹವರ ಬಗ್ಗೆ ಕನಿಷ್ಟ ಅವರ ಪ್ರಾಮಾಣಿಕತೆಯ ಬಗ್ಗೆಯಾದರೂ ನಂಬಿಕೆ ಇಟ್ಟುಕೊಳ್ಳಬಹುದಿತ್ತು. ಇಷ್ಟಕ್ಕೂ ಇವರಂತಹ ಕೋಮುವಾದಿಗಳು ಚುನಾವಣೆ ಗೆದ್ದಿದ್ದು ದುಡ್ಡಿನ ಬಲಕ್ಕಿಂತ ಹೆಚ್ಚಾಗಿ ಕೋಮುವಾದವನ್ನು, ಒಂದು ರೀತಿಯ ಅಪ್ರಾಮಾಣಿಕ ಹುಸಿರಾಷ್ಟ್ರೀಯತೆಯನ್ನು ಉದ್ದೀಪಿಸಿ. ಇವರು ಮಾತನಾಡುತ್ತಿದ್ದದ್ದು ಸ್ವಚ್ಚ, ಪ್ರಾಮಾಣಿಕ ಆಡಳಿತದ ಬಗ್ಗೆ. ದೇಶಭಕ್ತಿಯ ಬಗ್ಗೆ. ಅಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಅದೊಂದು ನಿಸ್ವಾರ್ಥ ಧ್ಯೇಯದಂತೆ ಡಂಗೂರ ಸಾರುತ್ತಿದ್ದರು. ಆದರೆ, ಇವರಂತಹವರ ಬಗ್ಗೆಯೂ ದೂರುಗಳು, ಅಪವಾದಗಳು ಬರುತ್ತವೆ ಎಂದರೆ ಈಗ ಯಾವ ವಿಧಾನಸಭಾ ಶಾಸಕ ಭ್ರಷ್ಟನಲ್ಲ ಎಂದು ಕೇಳುವಂತಾಗಿದೆ. ಉತ್ತರ ಕಷ್ಟವೇನಲ್ಲ. ಅದು ಎರಡಂಕಿ ಮುಟ್ಟುತ್ತದೆ ಎಂದು ಅನ್ನಿಸುತ್ತದೆಯೆ? ಇಷ್ಟಕ್ಕೂ ಆ ಮಹಾತ್ಮರು ಯಾರು? ನನಗಂತೂ ಯಾರೂ ನೆನಪಾಗುತ್ತಿಲ್ಲ. ನಿಮಗೆ?

ಸಿ.ಟಿ. ರವಿಯವರ ಮೇಲಿರುವ ಅಧಿಕಾರ ದುರುಪಯೋಗ ಮತ್ತು ಸ್ವಜನಪಕ್ಷಪಾತದ ಆರೋಪದ ಕತೆ ಹೀಗಿದೆ:

ಶಾಸಕರಾಗಿರುವ ಕಾರಣಕ್ಕೆ ಸಿ.ಟಿ.ರವಿ ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಹೌದು. ಆ ಕಾರಣ ಪ್ರಾಧಿಕಾರದ ನಿರ್ಧಾರಗಳಲ್ಲಿ ಅವರ ಪಾತ್ರ ದೊಡ್ಡದಿರುತ್ತದೆ. ಸುಮಾರು ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರು ಹತ್ತಿರದಲ್ಲಿಯೇ ಹೊಸದೊಂದು ಬಡವಾಣೆ ನಿರ್ಮಾಣ ಮಾಡಲೆಂದು ಹಿರೇಮಗಳೂರು ಸುತ್ತಮುತ್ತ 40 ಎಕರೆ ಭೂಮಿಯನ್ನು ಪ್ರಾಧಿಕಾರ ಗುರುತಿಸಿತ್ತು. ನಂತರ ನಲವತ್ತು ಎಕರೆ ಭೂಮಿ ಈ ಯೋಜನೆಗೆ ಸಾಲದು ಎಂಬ ಕಾರಣಕ್ಕೆ ಬೇರೆ ಕಡೆ ಹೆಚ್ಚಿನ ಜಾಗವನ್ನು ಬಡಾವಣೆಗಾಗಿ ಗುರುತಿಸಿ, ಪ್ರಸ್ತುತ ಭೂಮಿಯನ್ನು ಯೋಜನೆಯಿಂದ ಕೈಬಿಟ್ಟಿತು.

ಯೋಜನೆ ಕೈ ಬಿಟ್ಟ ನಂತರ ಆ ಜಮೀನು ಮೂಲ ಮಾಲೀಕರ ಕೈಗೆ ಸೇರಬೇಕು. ಈ ನಲವತ್ತು ಎಕರೆ ಪ್ರದೇಶದಲ್ಲಿ 32 ಎಕರೆ ಮೂಲ ಮಾಲೀಕರಿಗೆ ಸೇರಿತು. ಉಳಿದ ಎಂಟು ಎಕರೆಗಳನ್ನು ‘ವಾಟರ್ ಪಾರ್ಕ್’ ಎಂಬ ಯೋಜನೆ ನೆಪದಲ್ಲಿ ಹಾಗೆ ಉಳಿಸಿಕೊಳ್ಳಲಾಯಿತು. ಹಿರೇಮಗಳೂರಿನ ಕೆರೆ ಸುತ್ತಲ ಭೂಮಿಯನ್ನು ಅಭಿವೃದ್ಧಿ ಪಡಿಸಿ ‘ವಾಟರ್ ಪಾರ್ಕ್’ ಮಾಡುವುದು ಪ್ರಾಧಿಕಾರದ ಉದ್ದೇಶ. ಪ್ರಸ್ತುತ ಕೆರೆ ನೀರಾವರಿ ಉದ್ದೇಶಕ್ಕೆ ಉಪಯೋಗವಾಗುತ್ತಿದ್ದುದು ಗೊತ್ತಿದ್ದೂ ಪ್ರಾಧಿಕಾರ ಈ ಯೋಜನೆಗೆ ಕೈ ಹಾಕಿತು.

ಈ ಮಧ್ಯೆ ಈ ಜಮೀನಿನ ಮೂಲ ಮಾಲಿಕರೊಬ್ಬರು ತಾವು ಜಮೀನನ್ನು ಮಾರಾಟ ಮಾಡಬೇಕಿದೆ, ದಯವಿಟ್ಟು ಅನುಮತಿ ಕೊಡಿ ಎಂದು ಪ್ರಾಧಿಕಾರದಿಂದ ‘ನಿರಪೇಕ್ಷಣ ಪತ್ರ’ ಕ್ಕಾಗಿ ಮೊರೆ ಇಟ್ಟರು. ಅರ್ಜಿದಾರರಿಗೆ ಪ್ರಾಧಿಕಾರ ಉತ್ತರಿಸಿ, ಪ್ರಸ್ತುತ ಜಮೀನನ್ನು ವಾಟರ್ ಪಾರ್ಕ್‌ಗಾಗಿ ಗುರುತಿಸಲಾಗಿರುವುದರಿಂದ ಮಾರಾಟ ಮಾಡಲು ಅನುಮತಿ ಕೊಡಲಾಗುವುದಿಲ್ಲ ಎಂದಿತು.

ಅದುವರೆವಿಗೂ ಪ್ರಾಧಿಕಾರ ಹಿರೇಮಗಳೂರು ಕೆರೆಯನ್ನು ಅಭಿವೃದ್ಧಿ ಪಡಿಸಲು ಕೆರೆಯ ಮೂಲ ವಾರಸುದಾರ ಇಲಾಖೆಯಾದ ಸಣ್ಣ ನೀರಾವರಿ ಇಲಾಖೆಯಿಂದ ಹಸ್ತಾಂತರ ಮಾಡಿಕೊಳ್ಳಲು ಆಗಲಿಲ್ಲ.  ಡಿಸೆಂಬರ್ 7, 2009 ರಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಪತ್ರ ಬರೆದು ಕೆರೆ ನೀರಾವರಿ ಉಪಯೋಗಕ್ಕೆ ಅಗತ್ಯವಾಗಿರುವುದರಿಂದ ಅದನ್ನು ಹಸ್ತಾಂತರ ಮಾಡಲು ಸಾಧ್ಯವಿಲ್ಲ ಎಂದರು.

ವಿಚಿತ್ರವೆಂದರೆ, ಇಲಾಖೆಯಿಂದ ಹೀಗೆ ಉತ್ತರ ಬರುವ ಮೂರು ತಿಂಗಳ ಮೊದಲೇ ಪ್ರಸ್ತುತ ಜಮೀನು ಮೂಲ ಮಾಲೀಕರ ಖಾತೆಗಳಿಂದ ಸಿ.ಡಿ ಅನಿಲ್ ಕುಮಾರ್ ಮತ್ತಿತರರ ಹೆಸರಿಗೆ ವರ್ಗಾವಣೆ ಆಗಿತ್ತು!

ಮೂಲ ಮಾಲಿಕರು ಮಾರಾಟ ಮಾಡಲು ಅನುಮತಿ ಕೇಳಿದಾಗ ವಾಟರ್ ಪಾರ್ಕ್ ಯೋಜನೆ ನೆಪದಲ್ಲಿ ಪ್ರಾಧಿಕಾರ ನಿರಾಕರಿಸಿತ್ತು. ಹಾಗಾದರೆ ಇದು ಸಿ.ಡಿ ಅನಿಲ್ ಕುಮಾರ್ ಮತ್ತಿತರರ ಹೆಸರಿಗೆ ರಿಜಿಸ್ಟರ್ ಆಗಿದ್ದಾದರೂ ಹೇಗೆ?

ಈ ಕತೆ ಇಲ್ಲಿಗೇ ನಿಲ್ಲುವುದಿಲ್ಲ. ಹೀಗೆ ಅನಿಲ್ ಕುಮಾರ್ ಹೆಸರಿಗೆ ಜಮೀನು ನೋಂದಣಿ ಆದ ಕೆಲವೇ ತಿಂಗಳಲ್ಲಿ ಅಂದರೆ ಜೂನ್ 2010 ರ ವೇಳೆಗೆ ಶಾಸಕರ ಪತ್ನಿಗೆ ಹತ್ತಿರದ ಸಂಬಂಧಿಕರಾದ ತೇಜಸ್ವಿನಿ ಸುದರ್ಶನ್ ಹೆಸರಿಗೆ ಜಮೀನು ವರ್ಗಾವಣೆ ಆಯಿತು. ನಂತರ ಅದೇ ಜಾಗದಲ್ಲಿ ಬಡಾವಣೆ ನಿರ್ಮಾಣಗೊಂಡಿದೆ. ಅಲ್ಲಿಯ ನಿವೇಶನಗಳು ಈಗ ಲಕ್ಷಾಂತರ ರೂ ಬೆಲೆ ಬಾಳುತ್ತಿವೆ.

ಚಿಕ್ಕಮಗಳೂರಿನ ಜೆಡಿಎಸ್ ಮುಖಂಡ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯ ಎಸ್.ಎಲ್ ಭೋಜೇಗೌಡ ಈ ಪ್ರಕರಣದ ದಾಖಲೆಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿ ಇದೆಲ್ಲದರ ಹಿಂದೆ ಶಾಸಕರ ಸ್ವಜನ ಪಕ್ಷಪಾತ, ಧನದಾಹ ಎಲ್ಲವೂ ಇವೆ ಎಂದು ಆರೋಪಿಸಿದ್ದಾರೆ. ನೀರಾವರಿಗೆ ಉಪಯೋಗಕ್ಕಿರುವ ಕೆರೆಯನ್ನು ವಾಟರ್ ಪಾರ್ಕ್ ಯೋಜನೆಗೆ ಗುರುತಿಸಿದ್ದೇ ಒಂದು ಸಂಚು ಎನ್ನುವುದು ಅವರ ಆರೋಪ.

ಸರಕಾರ ಯಾವುದೇ ಕಾರಣಕ್ಕೂ ಆ ಕೆರೆಯನ್ನು ಯೋಜನೆಗೆ ಹಸ್ತಾಂತರ ಮಾಡುವುದಿಲ್ಲ ಎಂದು ಗೊತ್ತಿದ್ದೇ ಶಾಸಕರು ಆ ಯೋಜನೆಯನ್ನು ಪ್ರಸ್ತಾಪಿಸಿದರು. ಅದೇ ಕಾರಣಕ್ಕೆ ಸಣ್ಣ ನೀರಾವರಿ ಇಲಾಖೆ ಅನುಮತಿ ನಿರಾಕರಿಸುವ ಮೊದಲೇ ಶಾಸಕರ ಆಪ್ತರ ಹೆಸರಿಗೆ ನೋಂದಣಿಯಾಗಿದ್ದು ಈ ಸಂಚಿನ ಆರೋಪಕ್ಕೆ ಪುಷ್ಟಿ ಕೊಡುತ್ತದೆ. ನಂತರ ಮೂಲ ಮಾಲೀಕರಾದ ಬಡ ರೈತರನ್ನು ಹೆದರಿಸಿ, ಬೆದರಿಸಿ ಅಥವಾ ‘ಮನವೊಲಿಸಿ’ ಅವರಿಂದ ಜಮೀನಿನ ಮಾರಾಟ ಮಾಡಿಸಿದರು. ‘ಸರಕಾರ ಜಮೀನನ್ನು ಕೊಂಡರೆ ನಿಮಗೆ ಸಿಗುವುದು ಬಿಡಿಗಾಸು, ನಾವು ಜಾಸ್ತಿ ಕೊಡುತ್ತೇವೆ,’ ಎಂದು ಹೇಳಿ ರೈತರಿಂದ ಜಮೀನನ್ನು ಖರೀದಿಸಿರುವ ಸಾಧ್ಯತೆ ಇದೆ. ಅಭಿವೃದ್ಧಿ ಯೋಜನೆಗೆ ಗುರುತಿಸಲಾಗಿದ್ದ ಜಮೀನಿನ ನೋಂದಣಿ ಶಾಸಕರ ಪ್ರಭಾವದಿಂದ ಸಾಧ್ಯವಾಯಿತು ಎನ್ನುವುದು ಬೋಜೇಗೌಡರ ಇನ್ನೊಂದು ಆರೋಪ.

ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಶಾಸಕರು, ಪ್ರಾಧಿಕಾರದ ಸದಸ್ಯರಾಗಿದ್ದ ಕಾರಣ ವಾಟರ್ ಪಾರ್ಕ್ ಯೋಜನೆಯನ್ನು ಪ್ರಸ್ತಾಪ ಮಾಡಲು ಸಾಧ್ಯವಾಯಿತು. ಆ ಮೂಲಕ ಆಯಕಟ್ಟಿನ ಜಾಗವನ್ನು ಗುರುತಿಸಲು ಸಹಕಾರಿಯಾಯಿತು. ನಂತರ ತಮ್ಮ ಪ್ರಭಾವ ಬಳಸಿ ಆ ಜಮೀನನ್ನು ತಮ್ಮ ಆಪ್ತರಿಗೆ ನಂತರ ನೆಂಟರಿಗೆ ವರ್ಗಾಯಿಸಿದರು.

ದಾಖಲೆಗಳ ಪ್ರಕಾರ ಜಮೀನು ಅವರ ಹೆಸರಿನಲ್ಲಿಲ್ಲ. ಆದರೆ ಎಲ್ಲಾ ಹಂತದಲ್ಲೂ ಅವರ ಪ್ರಭಾವ ಹೆಸರು ಮಾಡಿದೆ. ದಾಖಲೆಗಳನ್ನು ಮತ್ತು ಸಂಬಂಧಗಳನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ನೋಡಿದರೆ ಅಧಿಕಾರ ದುರುಪಯೋಗ ಎದ್ದು ಕಾಣಿಸುತ್ತದೆ. ಇದನ್ನೇ ಭೋಜೇಗೌಡರು ಹೇಳುತ್ತಿರುವುದು.

ಸಿ.ಡಿ.ಅನಿಲ್‌ಕುಮಾರ್ ಮತ್ತು ಸಿ.ಟಿ. ರವಿಯವರಿಗೆ ಇರುವ ಸ್ನೇಹ ಮತ್ತು ವ್ಯವಹಾರಿಕ ಸಂಬಂಧಗಳ ಬಗ್ಗೆ. ಅವರ ಮತ್ತು ಕೊನೆಯದಾಗಿ ರಿಜಿಸ್ಟರ್ ಮಾಡಿಸಿಕೊಂಡಿರುವ ಮತ್ತು ತೇಜಸ್ವಿನಿ ಸುದರ್ಶನ್‌ರ ಆದಾಯ ಮೂಲಗಳ ಬಗ್ಗೆ, ರಿಜಿಸ್ಟರ್ ಆದ ಸಂದರ್ಭದಲ್ಲಿ ಈ ಎಲ್ಲಾ ಪಾತ್ರಧಾರಿಗಳ ಫೋನ್ ಕರೆಗಳ ಬಗ್ಗೆ, ರಿಜಿಸ್ಟರ್ ಸಮಯದಲ್ಲಿ ಆಗಿರುವ ಲೋಪಗಳ ಬಗ್ಗೆ ದಾಖಲೆಗಳನ್ನು ಕ್ರೋಢೀಕರಿಸಿಕೊಂಡು ತನಿಖಾ ಸಂಸ್ಥೆಯೊಂದು ವಿಚಾರಣೆ ನಡೆಸಿದರೆ ಇದರ ಹಿಂದಿನ ಸತ್ಯ ದಾಖಲಾಗಬಹುದು.

ಆದರೆ…

ಮೊದಲೇ ಹೇಳಿದ ಹಾಗೆ ನಮ್ಮಲ್ಲಿ ಉತ್ತಮವಾದ ಸ್ವತಂತ್ರವಾದ, suo moto ಅಧಿಕಾರವಿರುವ ತನಿಖಾ ಸಂಸ್ಥೆಗಳಿಲ್ಲ. ಅಂತಹ ಸಂಸ್ಥೆಗಳನ್ನು ಸ್ಥಾಪಿಸಲು ಕಾನೂನು ರಚಿಸಬೇಕಾದವರೆ ಇಂದು ಅಪರಾಧಿಗಳಾಗಿ ಕಾಣಿಸುತ್ತಿದ್ದಾರೆ. ನ್ಯಾಯಾಲಯಗಳಿಗೆ ಜೈಲುಗಳಿಗೆ ಅಲೆಯುತ್ತಿದ್ದಾರೆ. ಇದು ಯಾರು ಮಾಡಿದ ತಪ್ಪು?

ಇವು ಮೇಲಿನ ಹಗರಣಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಲಭ್ಯವಿರುವ ದಾಖಲೆಗಳಲ್ಲಿ ಕೆಲವು ದಾಖಲೆ ಪತ್ರಗಳು.

 

 

 

ಬೇಜವಾಬ್ದಾರಿ ಟಿವಿ ನಿರೂಪಕರು…


– ರವಿ ಕೃಷ್ಣಾರೆಡ್ಡಿ  


ನೆನ್ನೆ ರಾತ್ರಿ (30/1/12) ಸುವರ್ಣ ನ್ಯೂಸ್ 24×7 ನಲ್ಲಿ ನಿರೂಪಕ ರಂಗನಾಥ್ ಭಾರದ್ವಾಜ್ ಪಕ್ಷೇತರ ಶಾಸಕ ನರೇಂದ್ರಸ್ವಾಮಿಯವರನ್ನು ಸಂದರ್ಶಿಸುತ್ತಿದ್ದರು. ವಿಷಯ, ನೆನ್ನೆ ಸದನದಲ್ಲಿ ನಾಲ್ವರು ಪಕ್ಷೇತರ ಶಾಸಕರು ಸ್ಪೀಕರ್ ವಿರುದ್ಧ ಘೋಷಣೆ ಕೂಗಿದ್ದು.

ನಾನು ಆಗ ತಾನೆ ಟಿವಿ ಹಾಕಿದ್ದೆ. ಹಾಗಾಗಿ ಆ ಸುದ್ದಿ ನೋಡಿದ್ದೆ ಎರಡು ನಿಮಿಷ. ಆ ಎರಡು ನಿಮಿಷದಲ್ಲಿ ರಂಗನಾಥ್ ಭರದ್ವಾಜ್ ನರೇಂದ್ರಸ್ವಾಮಿಯರ ಹಿತಚಿಂತಕ, ಪೀಡಕ, ಮತ್ತು ಜನರಂಜಕ, ಕಮೀಡಿಯನ್, ಎಲ್ಲವೂ ಆಗಿಹೋದರು.

ಒಂದು ಪ್ರಶ್ನೆ, “ಇವತ್ತು ನೀವು ಮಾಡಿದ ಪ್ರತಿಭಟನೆ ಯಾರನ್ನು ಮೆಚ್ಚಿಸಲು?” ಎಂದಾಗಿತ್ತು.

ಸರಿಯಾದ ಪ್ರಶ್ನೆಯೇ. ಕರ್ನಾಟಕದ ಈ ಬಾರಿಯ ಪಕ್ಷೇತರ ಶಾಸಕರು ನಡೆದುಕೊಂಡಿರುವುದೇ ಹಾಗೆ. ಅಧಿಕಾರದ ಹಿಂದೆ ಬಿದ್ದು ಸದನದಲ್ಲಿ ಸ್ವತಂತ್ರ ಧ್ವನಿಗಳೇ ಇಲ್ಲದಂತೆ ನಡೆದುಕೊಂಡರು. ಹಾಗಾಗಿ ನೆನ್ನೆಯ ಪ್ರತಿಭಟನೆಯೂ ಯಾವುದೋ ಲಾಭಕ್ಕಾಗಿ ಅಥವ ಮುಂದಿನ ದಿನಗಳ ಅನುಕೂಲಕ್ಕಾಗಿ ಎಂದು ಭಾವಿಸಬಹುದು.

ಆದರೆ, ಒಬ್ಬ ಟಿವಿ ನಿರೂಪಕನಾಗಿ ವಿಷಯದ ಹಿನ್ನೆಲೆ ಮತ್ತು ಗಾಂಭೀರ್ಯ ಅರಿಯದೆ ಕೇಳಬಹುದಾದ ಪ್ರಶ್ನೆಯೇ ಅದು? ಸ್ಪೀಕರ್‌ಗೆ ಸುಪ್ರೀಮ್‌ಕೋರ್ಟ್ ಹಾಕಿರುವ ಛೀಮಾರಿಗೆ ಈ ಶಾಸಕರು ಪ್ರತಿಕ್ರಿಯಿಸುತ್ತಿದ್ದಾರೆ. ಅವರು ಸ್ವಾರ್ಥಿಗಳೇ ಇರಬಹುದು. ಜನಪ್ರತಿನಿಧಿಗಳಾಗಲು ವೋಟು ಗಳಿಸುವ ದೃಷ್ಟಿ ಹೊರತುಪಡಿಸಿ ಅಯೋಗ್ಯರೇ ಇರಬಹುದು. ಆದರೆ ನೆನ್ನೆಯದು ಬಹಳ ಗಂಭೀರ ವಿಷಯ. ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸಂಬಂಧಿಸಿದ್ದು. ಹಾಗಾಗಿ ಶಾಸಕರ ಆ ಪ್ರತಿಕ್ರಿಯೆಯನ್ನು ಈ ರೀತಿ ಅವಹೇಳನೆ ಅಥವ ನಗೆಪಾಟಲು ಮಾಡುವ ಮೂಲಕ ಸ್ಪೀಕರ್‌ರ ದೋಷ ಮತ್ತು ಅನ್ಯಾಯವನ್ನು ತೆಳು ಮಾಡಿ ಜನರ ಮುಂದೆ ಇಡುತ್ತಿದ್ದೇನೆ ಎನ್ನುವ ಪ್ರಜ್ಞೆ ಈ ನಿರೂಪಕರಿಗೆ ಬೇಡವೆ? ನಗುಮುಖದಿಂದ ಕೂಡಿದ್ದ ಆ ಪ್ರಶ್ನೆ ಕುಚೇಷ್ಟೆಯಿಂದ ಕೂಡಿದ್ದಷ್ಟೇ ಅಲ್ಲ, ಬೇಜವಾಬ್ದಾರಿಯದ್ದೂ ಸಹ.

ಇಷ್ಟಕ್ಕೂ ಇವರು ಸುದ್ದಿಮಾಧ್ಯಮದಲ್ಲಿ ಇದ್ದಾರೊ, ಅಥವ Late Night ಮನರಂಜನೆಯ ಉದ್ಯಮದಲ್ಲಿ ಇದ್ದಾರೊ?

ಇದಕ್ಕಿಂತ ಕೆಟ್ಟ ಪ್ರಶ್ನೆ, “ಈ ಪ್ರತಿಭಟನೆ ಮಾಡದೇ ಇದ್ದಿದ್ದರೆ ನಿಮಗೆ ಮುಂದಕ್ಕೆ ಏನಾದರೂ ಲಾಭ ಆಗುತ್ತಿತ್ತೊ ಏನೊ. ಅದೇನೋ ಹೇಳುತ್ತಾರಲ್ಲ, ಸುಮ್ಮನೆ ಇರಲಾರದೆ ಚಡ್ಡಿಯಲ್ಲಿ.. ಅದೇನೊ ಇರುವೆ ಬಿಟ್ಟುಕೊಂಡರಂತೆ, ಹಾಗೆ. ಯಾಕೆ ಮಾಡೋದಿಕ್ಕೆ ಹೋದ್ರಿ?”

ಇದು ಎಂತಹ ಅಪ್ರಬುದ್ಧ ಭಾಷೆ ನೋಡಿ. ಈ ನರೆಂದ್ರಸ್ವಾಮಿ ರಂಗನಾಥ್‌ಗೆ ಯಾವ ರೀತಿಯ ಸ್ನೇಹಿತ? ಹೀಗೆಲ್ಲ ಜನಪ್ರತಿನಿಧಿಗಳನ್ನು ಕೇವಲವಾಗಿ ಮಾತನಾಡಿಸಿದರೆ ನಮ್ಮ ಶಾಸಕಾಂಗದ ಗೌರವ ಏನು ಉಳಿಯಿತು? ನಮ್ಮ ಶಾಸಕರು ಇವತ್ತು ಇಂತಹುದನ್ನೆಲ್ಲ ಕೇಳಿಸಿಕೊಳ್ಳುವುದಕ್ಕೆ ಯೋಗ್ಯರೇ ಇರಬಹುದು. ಆದರೆ, ಒಬ್ಬ ಜವಾಬ್ದಾರಿಯುತ ಪತ್ರಕರ್ತ, ನಿರೂಪಕ, ಆಡುವ ಮಾತೇ ಇದು? ಬೀದಿಯಲ್ಲಿ ಮಾತನಾಡುವ ಸಲಿಗೆಯ ಕುಚೇಷ್ಟೆಯ ಭಾಷೆ.

ಇಬ್ಬರಿಗೂ ನಾಚಿಕೆಯಾಗಬೇಕು.

ಇಂತಹ ನಡವಳಿಕೆ ರಂಗನಾಥ್ ಭಾರದ್ವಾಜ್ ಒಬ್ಬರಿಗೇ ಸೀಮಿತವಾಗಿಲ್ಲ. ನಮ್ಮ ಅನೇಕ ಟಿವಿ ನಿರೂಪಕರು ರಾಜಕಾರಣಿಗಳ ಜೊತೆ ಅತಿಸಲಿಗೆ ಬೆಳೆಸಿಕೊಂಡು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನೇ ಕುಗ್ಗಿಸುತ್ತಿದ್ದಾರೆ. ಎಷ್ಟೋ ಸಲ ನಮ್ಮ ಪತ್ರಕರ್ತರು ರಾಜಕಾರಾಣಿಗಳಿಗಿಂತ ಹೆಚ್ಚಿಗೆ ಓದಿಕೊಂಡಿರುತ್ತಾರೆ. ಸಿದ್ಧಾಂತ, ಸಭ್ಯನಡವಳಿಕೆ, ಭಾಷಾಪ್ರಯೋಗದ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಅದ್ಯಾವುದೂ ಅವರ ನಡವಳಿಕೆ ಮತ್ತು ಭಾಷೆಯಲ್ಲಿ ಕಾಣಿಸುತ್ತಿಲ್ಲ.

ರಾಜಕಾರಣಿಗಳ ಜೊತೆ ಅತಿಸಲಿಗೆಯಿಂದ ಮತ್ತು ಅತಿ ಬೇಜವಾಬ್ದಾರಿಯಿಂದ ವರ್ತಿಸುವ ಕನ್ನಡದ ಟಿವಿ ನಿರೂಪಕರು ವಿನೋದ್ ಮೆಹ್ತಾರ ಈ ಮಾತುಗಳನ್ನು ಕೇಳಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಯ ಕೆಲವು ಪ್ರಾಥಮಿಕ ಪಾಠಗಳನ್ನಾದರೂ ಕಲಿಯಬೇಕು.

ಟಿವಿ ನಿರೂಪಕರು ಇನ್ನೊಬ್ಬರ ಘನತೆಯನ್ನು ಹೆಚ್ಚು ಮಾಡದಿದ್ದರೂ ಪರವಾಗಿಲ್ಲ, ಕನಿಷ್ಟ ತಮ್ಮ ವೃತ್ತಿಘನತೆಯನ್ನಾದರೂ ಉಳಿಸಿಕೊಳ್ಳಲಿ.

ಈಗಾಗಲೆ ಅವರ ಘನತೆ ರಾಜಕಾರಣಿಗಳ ತರಹವೇ ಭ್ರಷ್ಟಾಚಾರದ ವರದಿಗಳಲ್ಲಿ, ಮಾಧ್ಯಮ ಕುರಿತಾದ ಸೆಮಿನಾರ್‌ಗಳಲ್ಲಿ. ಟ್ಯಾಬ್ಲಾಯ್ಡುಗಳಲ್ಲಿ,  ಹಾದಿಬೀದಿಯಲ್ಲಿ, ಹರಾಜಾಗುತ್ತಿದೆ.