Tag Archives: ಪತ್ರಿಕೋದ್ಯಮ

ಅಪಪ್ರಚಾರದ ಪತ್ರಿಕೋದ್ಯಮ, ನಕ್ಸಲ್ ಹಣೆಪಟ್ಟಿ ಕಟ್ಟಲು ಅತ್ಯುತ್ಸಾಹ

ಸದಾನಂದ ಕೋಟ್ಯಾನ್

ತಪ್ಪು ಮಾಡುವುದು ಮಾನವನ ಸಹಜ ಗುಣ. ಆದರೆ ನಮ್ಮ ಸಮಾಜದಲ್ಲಿ ತಪ್ಪು ಮಾಡದೇ ಇರುವವರನ್ನು ತಪ್ಪು ದಾರಿಗೆ ಎಳೆಯವ ಜನ ಕೂಡಾ ಕಡಿಮೆ ಇಲ್ಲ. ಇಂತಹ ಪಾತ್ರವನ್ನು ಉದಯವಾಣಿ ಸಮರ್ಥವಾಗಿ ನಿಭಾಯಿಸಿದೆ. ಎಲ್ಲೋ ಕಾಡಲ್ಲಿ ಹುಟ್ಟಿ ಬೆಳೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಹೊರಟ ಹುಡುಗನೊಬ್ಬನಿಗೆ ಈ ಕಾಡಲ್ಲಿ ಹುಟ್ಟಿದ್ದೇ ತಪ್ಪಾಯ್ತು ಅನ್ನಿಸುವ ಮಟ್ಟಿಗೆ ಪೊಲೀಸರಿಗಿಂತಲೂ ಉದಯವಾಣಿ ಕಾಟ ಕೊಡುತ್ತಿದೆ. ವಿನಾಕಾರಣ ಪೊಲೀಸರ ಅತಿಥಿಯಾಗಿರುವ ಕುತ್ಲೂರಿನ ವಿಠ್ಠಲ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಈತ ಹನ್ನೊಂದು ವರ್ಷದ ಮಗುವಾಗಿರುವಾಗಲೇ ನಕ್ಸಲರ ಸಮಾವೇಶದಲ್ಲಿ ಭಾಗವಸಿದ್ದ ಎಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿದೆ. ಯಾರೂ ಊಹೆ ಮಾಡಲೂ ಸಾದ್ಯವಾಗದ ಮಾಹಿತಿ ತಮಗೆ ಸಿಕ್ಕಿದೆ ಅನ್ನುವ ರೀತಿಯಲ್ಲಿ ಕತೆ ಹೇಳುವ ಈ ಪತ್ರಿಕೆಗೆ ಕನಿಷ್ಠ ಪ್ರಜ್ಞೆಯಾದರೂ ಇರಬೇಕಿತ್ತು.

ನಕ್ಸಲ್ ಬೆಂಬಲಿಗ ಎಂಬ ಆರೋಪ ಹೊರಿಸಿ ನಕ್ಸಲ್ ನಿಗ್ರಹ ದಳದ ಪೊಲೀಸರು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಪತ್ರಿಕೋಧ್ಯಮ ವಿದ್ಯಾರ್ಥಿಯನ್ನು ಬಂಧಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮವನ್ನು ಸರ್ಕಾರ ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಕುತ್ಲೂರು ಗ್ರಾಮದಲ್ಲಿ ಈಗ 22 ಮನೆಗಳಿದ್ದು, ಎಲ್ಲಾ ಕುಟುಂಬಗಳು ಮಲೆಕುಡಿಯ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ್ದು. ಕಾಡಿನೊಳಗೆ ಊರನ್ನು ಹೊಂದಿರುವ ಈ ಗ್ರಾಮದಲ್ಲಿ ಎಸ್ಎಸ್ಎಲ್‍ಸಿ ಪಾಸು ಮಾಡಿದ ಹುಡುಗನೆಂದರೆ ಅದು ವಿಠ್ಠಲ ಮಾತ್ರ. ಬಸ್ಸು ಇಳಿದು ದಟ್ಟ ಕಾಡಿನಲ್ಲಿ ಮೂರು ಗಂಟೆ ನಡೆಯಬೇಕಿರುವ ಈ ಗ್ರಾಮದ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ವಿಠ್ಠಲ ಪರಿಚಿತನಾಗಿದ್ದ. ವಿಠ್ಠಲನ ಓದುವ ಆಶೆಯನ್ನು ಅರಿತು ಮಂಗಳೂರು ನಗರಕ್ಕೆ ಕರೆದುಕೊಂಡು ಬಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋಧ್ಯಮ ವಿಭಾಗಕ್ಕೆ ಪ್ರವೇಶಾತಿಗಳನ್ನು ಮಾಡಿಸಿದ್ದೇ ಮಂಗಳೂರಿನ ಪತ್ರಕರ್ತರು. ಆನಂತರ ವಿಠ್ಠಲ ಹಿಂತಿರುಗಿ ನೋಡಿದ್ದೇ ಇಲ್ಲ. ನೂರು ಶೇಕಡಾ ಹಾಜರಾತಿಯನ್ನು ಹೊಂದಿರುವ ವಿಠ್ಠಲ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಕಳೆದ ಎರಡು ತಿಂಗಳಿನಿಂದ ಶೇಕಡಾ 80ಕ್ಕಿಂತಲೂ ಅಧಿಕ ಹಾಜರಾತಿಯನ್ನು ಹೊಂದಿದ್ದಾನೆ ಎಂದು ವಿವಿ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥೆ ಡಾ.ವಹಿದಾ ಸುಲ್ತಾನ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. (ದಾಖಲೆಗಳು ಇವೆ)

ಉಡುಪಿ ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರು ಬಿಗಿಯಾದ ನಕ್ಸಲ್ ಕೂಂಬಿಂಗ್ ನಡೆಸುತ್ತಿದ್ದರು. ಕುತ್ಲೂರು ಗ್ರಾಮಕ್ಕೂ ಎಎನ್ಎಫ್ ಸಿಬ್ಬಂದಿ ಬಂದಿದ್ದರು. ಎಲ್ಲಾ ಮಲೆಕುಡಿಯ ಕುಟುಂಬಗಳ ಮನೆಗೆ ತೆರಳಿದ ಎಎನ್ಎಫ್ ಸಿಬ್ಬಂದಿಗಳು ರಾತ್ರಿಯಾಗುತ್ತಿದ್ದಂತೆ ವಿಠ್ಠಲನ ಮನೆಯಲ್ಲಿ ಉಳಿದುಕೊಂಡರು. ಅಲ್ಲೇ ವಿಠ್ಠಲನ ತಾಯಿಯಿಂದ ಅಡುಗೆ ಮಾಡಿಸಿ ಉಂಡ ಎಎನ್ಎಫ್ ಸಿಬ್ಬಂದಿಗೆ ಅದೇನು ಅನ್ನಿಸಿತೋ ಗೊತ್ತಿಲ್ಲ, ರಾತ್ರೋ ರಾತ್ರಿ ಎದ್ದು ವಿಠ್ಠಲನ ತಂದೆ ನಿಂಗಣ್ಣ ಮಲೆಕುಡಿಯರ ವಿಚಾರಣೆಗೆ ತೊಡಗಿದರು. ನಕ್ಸಲರ ಬಗ್ಗೆ ಏನೇನೂ ಗೊತ್ತಿಲ್ಲದ ವೃದ್ದ ವಿಠ್ಠಲನ ತಂದೆಯ ಕಾಲು ಮುರಿಯುವವರೆಗೆ ಹೊಡೆದರು. ಮರುದಿನ ಮಂಗಳೂರು ಹಾಸ್ಟೆಲ್‍ನಲ್ಲಿದ್ದ ವಿಠ್ಠಲ್‍ಗೆ ವಿಷಯ ತಿಳಿದು ತಂದೆಯನ್ನು ನೋಡಲು ಮನೆಗೆ ಬಂದಾಗ ವಿಠ್ಠಲ್‍ನನ್ನೂ ಬಂಧಿಸಿ ವೇಣೂರು ಠಾಣೆಗೆ ಕರೆದೊಯ್ದರು. ತಂದೆಯ ಕಾಲು ಮುರಿದಿದ್ದನ್ನು ಪತ್ರಕರ್ತರ ಮಧ್ಯೆ ಇರುವ ಪತ್ರಿಕೋಧ್ಯಮದ ವಿದ್ಯಾರ್ಥಿ ವಿಠ್ಠಲ್ ಸುಧ್ಧಿ ಮಾಡಿಸುತ್ತಾನೆ ಎಂಬ ಮುಂದಾಲೋಚನೆಯಿಂದ ಎಎನ್ಎಫ್ ಪೊಲೀಸರು ವಿಠ್ಠಲನನ್ನು ಬಂಧಿಸಿದ್ದಾರೆ. ಮತ್ತೆ ಎಎನ್ಎಫ್ ಸಿಬ್ಬಂದಿಗಳೇ ಆತನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶುರುವಾಯಿತು ಉದಯವಾಣಿ ಟಾರ್ಚರ್

ವಿವಿ ವಿದ್ಯಾರ್ಥಿ ವಿಠ್ಠಲ್ ಬಗ್ಗೆ ಎಲ್ಲಾ ಪತ್ರಕರ್ತರಿಗೂ ಗೊತ್ತು. ಆತನ ಬಂಧನದ ನಂತರ ಎಲ್ಲಾ ಪತ್ರಿಕೆಗಳು ವಿಠ್ಠಲ್ ಪರವಾಗಿಯೇ ಸುದ್ಧಿ ಮಾಡಿದವು. ಪೊಲೀಸರು ವಿನಾಕಾರಣ ತಂದೆಯನ್ನು ನೋಡಲು ಹೋದ ಹಾಸ್ಟೆಲ್ ವಾಸಿ ವಿದ್ಯಾರ್ಥಿಯನ್ನು ನಕ್ಸಲ್ ಬೆಂಬಲಿಗ ಎಂದು ಹಣೆಪಟ್ಟಿ ಕಟ್ಟಿ ಆತನ ಭವಿಷ್ಯ ಹಾಳು ಮಾಡಿದರು ಎಂದೇ ಬರೆದವು. ಆದರೆ ಪ್ರಾರಂಭದಿಂದಲೂ ಉದಯವಾಣಿ ಮಾತ್ರ ಪೊಲೀಸರ ಪರವಾಗಿಯೇ ವರದಿಗಳನ್ನು ಬರೆಯಲಾರಂಭಿಸಿತು. ಜೈಲಿನಲ್ಲಿರುವ ವಿಠ್ಠಲನೇ ಹೇಳುವ ಪ್ರಕಾರ ಪೊಲೀಸ್ ಕಸ್ಟಡಿಯಲ್ಲಿದ್ದ ವಿಠ್ಠಲ್‍ಗೆ ಪೊಲೀಸರು ಕನಿಷ್ಠ ಲಾಠಿಯಿಂದಲೂ ಹೊಡೆದಿಲ್ಲವಂತೆ. ಆದರೆ ಉದಯವಾಣಿ ಮಾತ್ರ ಕೊಟ್ಟ ಹಿಂಸೆ ಎಂತಹ ಪೊಲೀಸ್ ಟಾರ್ಚರನ್ನೂ ಮೀರಿಸುವಂತದ್ದು.

ವೃದ್ಧೆ ತಾಯಿಯನ್ನೂ ಬಿಡದ ವರದಿ

ವರದಿಯ ಪ್ರಾರಂಭದಲ್ಲಿ ವಿಠ್ಠಲ್‍ನ ವೃದ್ದೆ ತಾಯಿಯನ್ನು ಟೀಕೆ ಮಾಡಿ ಬರೆಯಲಾಗಿದೆ. “ಈತನ ತಾಯಿ ಕೂಡಾ ನಕ್ಸಲರೆಂದರೆ ಯಾರು ಎಂಬುದು ನಮಗೆ ಗೊತ್ತಿಲ್ಲ ಎಂದು ಗೋಳಾಡಿದ್ದರು………'” ಎಂದಿದೆ. ವಿಠ್ಠಲನ ತಾಯಿಯನ್ನು ನೋಡಿದರೆ ಅಳು ಬರುವ ರೀತಿಯಲ್ಲಿ ಅವರಿದ್ದಾರೆ. ತಾಯಿ ಹೃದಯ ಬಲ್ಲ ಎಂತವನೂ ಈ ರೀತಿ ವೃದ್ಧ ತಾಯಿಯ ಬಗ್ಗೆ ಬರೆಯಲಾರ. (ತಾಯಿಯ ಫೋಟೋ ನೋಡಿ) ಕಾಡಿನಲ್ಲಿ ಹುಟ್ಟಿ, ಕಾಡುತ್ಪತ್ತಿ ಸಂಗ್ರಹಿಸಿ ಬೆಳೆದ ವಿಠ್ಠಲನ ತಾಯಿ ಹೊನ್ನಮ್ಮರಿಗೆ ತುಳು ಭಾಷೆ ಬಿಟ್ಟು ಬೇರೇನೂ ತಿಳಿಯದು. ಅವರು ಮಾತನಾಡಿದ್ದು ಕೇಳಬೇಕೆಂದರೆ ಅವರ ಮುಖದ ಹತ್ತಿರ ನಮ್ಮ ಕಿವಿಯನ್ನು ಕೊಂಡೊಯ್ಯಬೇಕಾಗುತ್ತದೆ. ಉದಯವಾಣಿ ವರದಿಗಾರ ಬೆಳ್ತಂಗಡಿಯಲ್ಲಿ ಆ ಅಮ್ಮನ ಬಳಿ ಮಾತನಾಡಿದ್ದೂ ಅದೇ ರೀತಿ. ಕಾಲೇಜು ದಾಖಲೆಗಳನ್ನು ಪಡೆಯಲು ಮಂಗಳೂರಿಗೆ ಕರೆ ತಂದಿದ್ದ ಈ ತಾಯಿಯನ್ನು ಮಗನನ್ನು ನೋಡಲು ಜೈಲಿಗೆ ಕರೆದುಕೊಂಡು ಬಂದರೆ “ಉಂದು ಎನ್ನ ಮಗೆ ಕಲ್ಪುನ ಶಾಲೆನಾ” (ಇದು ನನ್ನ ಮಗ ಕಲಿಯುತ್ತಿರುವ ಶಾಲೆಯ?) ಅಂತ ಕೇಳುತ್ತಾರೆ. ಇಂತವರು ಗೋಳಾಡಿ ನಾಟಕ ಮಾಡಲು ಸಾದ್ಯಾನಾ ಎಂಬ ಕನಿಷ್ಠ ಮಾನವೀಯ ಮುಖವಾದರೂ ಪತ್ರಕರ್ತರಿಗೆ ಇರಬೇಕಲ್ವೇ..

ಮಗುವಾಗಿದ್ದಾಗಲೇ ನಕ್ಸಲರ ಆಹ್ವಾನ !

ವಿಠ್ಠಲ ಮಗುವಾಗಿದ್ದಾಗಲೇ ನಕ್ಸಲರಿಂದ ಆಹ್ವಾನ ಪಡೆದಿದ್ದ ಎಂಬ ಎಕ್ಸ್‌ಕ್ಲೂಸಿವ್ ವರದಿಯನ್ನು ಉದಯವಾಣಿ ಪ್ರಕಟಿಸಿದೆ. “2001 ರಲ್ಲಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರಿನಲ್ಲಿ ನಡೆದ ನಕ್ಸಲರ ಸಮಾವೇಶದಲ್ಲಿ ವಿಠ್ಠಲ ಭಾಗವಹಿಸಿದ್ದ. ಅದೂ ನಕ್ಸಲರ ಆಹ್ವಾನದ ಮೇರೆಗೆ!” ಎಂದು ಆಶ್ಚರ್ಯ ಸೂಚನ ಚಿನ್ಹೆಯನ್ನು ಹಾಕಿದೆ. ಪೊಲೀಸ್ ಎಫ್ಐಆರ್ ಮತ್ತು ವಿವಿ ದಾಖಲೆಗಳ ಪ್ರಕಾರ ಈಗ ವಿಠ್ಠಲನಿಗೆ 23 ವರ್ಷ. 2001 ರಲ್ಲಿ ಆತನಿಗೆ 12 ವರ್ಷ ಆಗಿರಬಹುದು. ಅಂದರೆ ಆರನೇ ತರಗತಿ ವಿದ್ಯಾರ್ಥಿ ನಕ್ಸಲ್ ಸಮಾವೇಶದಲ್ಲಿ ಭಾಗವಹಿಸಿದ್ದ. ಶಾಲಾ ಬಾಲಕನೊಬ್ಬ ನಕ್ಸಲ್ ಸಮಾವೇಶದಲ್ಲಿ ಭಾಗವಹಿಸಲು ನಕ್ಸಲರು ಸಮಾವೇಶವನ್ನೇನು ಊರ ಜಾತ್ರೆಯ ಹೊರಾಂಗಣದಲ್ಲಿ ಚಪ್ಪರ ಹಾಕಿ ಮಾಡ್ತಾರಾ? ಸೈದ್ದಾಂತಿಕವಾಗಿ ಗನ್ನು ಹಿಡಿದು ವ್ಯವಸ್ಥೆಯ ವಿರುದ್ಧ (ಕೆಟ್ಟ) ಹೋರಾಟ ಮಾಡುತ್ತಿರುವ ನಕ್ಸಲರು ನೀಲಿ ಬಿಳಿ ಯೂನಿಫಾರಂ ಹಾಕಿ ಐಸ್ ಕ್ಯಾಂಡಿ ಚೀಪುವ ಶಾಲಾ ಬಾಲಕನಿಗೆ ವಿಶೇಷ ಆಹ್ವಾನ ನೀಡಲು ಅವರೇನು ತಲೆಕೆಟ್ಟವರೇ? ಸುಮಾರು 30 ರಿಂದ 40 ಮಂದಿ ಈ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ವಿಠ್ಠಲ ಮಾಹಿತಿ ನೀಡಿದ್ದಾನೆ ಮತ್ತು ಯಾರ್ಯಾರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂಬುದನ್ನೂ ಆತ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಉದಯವಾಣಿ ವರದಿಯಲ್ಲಿ ಹೇಳಲಾಗಿದೆ. ಮಾರ್ಚ್ 20 ರ ಉದಯವಾಣಿಯಲ್ಲಿ ಈ ವರದಿ ಪ್ರಕಟವಾಗಿದೆ. ಮಾರ್ಚ್ 19 ಕ್ಕೆ ವಿಠ್ಠಲನ ಪೊಲೀಸ್ ಕಸ್ಟಡಿ ಅಂತ್ಯವಾಗಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ನಕ್ಸಲರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರೆ ಪೊಲೀಸರು ನಕ್ಸಲರ ಜಾಡು ಹಿಡಿಯಲು ಆತನ ಪೊಲೀಸ್ ಕಸ್ಟಡಿ ವಿಸ್ತರಣೆಗೆ ಮನವಿ ಮಾಡಬೇಕಿತ್ತು. ಆದರೆ ನ್ಯಾಯಾಧೀಶರ ಎದುರು ಹಾಜರುಪಡಿಸಿದ ಪೊಲೀಸರು ಕಸ್ಟಡಿ ವಿಸ್ತರಣೆಗೆ ಮನವಿ ಮಾಡಲೇ ಇಲ್ಲ. ಆದ್ದರಿಂದಲೇ ಪೊಲೀಸ್ ಕಸ್ಟಡಿ ಅಂತ್ಯವಾಗಿ 19ರ ರಾತ್ರಿಯಿಂದಲೇ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಂದೆಡೆ ನಕ್ಸಲರ ಬಗ್ಗೆ ಆತನ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದೇ ಹೌದಾದಲ್ಲಿ ಅದನ್ನು ಪೊಲೀಸ್ ಮೂಲಗಳು ಎಂದು ಸಂಶಯಾಸ್ಪದವಾಗಿ ವರದಿ ಮಾಡಬೇಕಿರಲಿಲ್ಲ. ಎಸ್ಪಿಯ ಬಳಿಯೋ, ಐಜಿಪಿ ಬಳಿಯೋ ಹೇಳಿಕೆ ಪಡೆದು ಪ್ರಕಟಿಸಬಹುದಿತ್ತು. ಉದಯವಾಣಿಯ ಈ ಸುದ್ಧಿ ಮೂಲವೇ ಒಂದು ಕಟ್ಟು ಕತೆಯಷ್ಟೆ. ಪೊಲೀಸರಿಗೆ ಈತ ನಕ್ಸಲ್ ಬಗ್ಗೆ ಮಾಹಿತಿ ನೀಡಿದ್ದೂ ಹೌದೇ ಆಗಿದ್ದಲ್ಲಿ ಬೆಳ್ತಂಗಡಿ ಪೊಲೀಸರು ತಕ್ಷಣ ಆ ಎಲ್ಲಾ ಮಾಹಿತಿಯನ್ನು ಗುಪ್ತಚರ ಇಲಾಖೆ ಮತ್ತು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಪೊಲೀಸರು ಅವ್ಯಾವುದನ್ನೂ ಈವರೆಗೂ ಮಾಡಿಲ್ಲ.

ಎಡವಟ್ಟು ಮಾಡಿದ ಸ್ಪಷ್ಟಣೆ

ಮಾರ್ಚ್ 20ರ ಉದಯವಾಣಿಯಲ್ಲಿ 2001 ರಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ನಕ್ಸಲ್ ಸಮಾವೇಶ ನಡೆದಿದ್ದು, ಅದರಲ್ಲಿ ವಿಠ್ಠಲ್ ಪಾಲ್ಗೊಂಡಿದ್ದ ಎಂಬ ವರದಿಯ ಬಗ್ಗೆ ಮಾರ್ಚ್ 21ರ ಆವೃತ್ತಿಯಲ್ಲಿ ಸ್ಪಷ್ಟಣೆ ನೀಡಲಾಗಿದೆ. 2011 ರ ಸಮಾವೇಶದಲ್ಲಿ ವಿಠ್ಠಲ್ ಪಾಲ್ಗೊಂಡಿದ್ದ ಎಂಬುದು ಮುದ್ರಣ ದೋಷದಿಂದಾಗಿ 2001 ಎಂದಾಗಿತ್ತು ಎಂದು ಸ್ಪಷ್ಟೀಕರಿಸಲಾಗಿದೆ. ನಕ್ಸಲ್ ವಿಷಯದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಸ್ಪೆಷಲ್ ಸ್ಟೋರಿ ಮಾಡುವವರು ಆ ವಿಷಯದ ಬಗ್ಗೆ ಆಳವಾಗಿ ಆಧ್ಯಯನ ಮಾಡಿರಬೇಕು. ಕಂಡಂತಹ ಸುದ್ದಿ ಬರೆಯಲು ವಿಶೇಷ ಅಧ್ಯಯನ ಬೇಕಿಲ್ಲ. ವಿಶೇಷ ತನಿಖಾ ವರದಿ ಬರೆಯುವಾಗ ಅಧ್ಯಯನ ಅತ್ಯಗತ್ಯ. ಮೊನ್ನೆ ಮೊನ್ನೆ ಅಂದರೆ ಇದೇ ತಿಂಗಳ 11ರಂದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಎಂಬ ಗ್ರಾಮದ ಕಾಡಿನಲ್ಲಿ ನಕ್ಸಲ್ ಸಮಾವೇಶ ನಡೆದಿತ್ತು. ಅಲ್ಲಿಗೆ ಪೊಲೀಸ್ ದಾಳಿ ನಡೆದಿದ್ದು, ಪೊಲೀಸ್ ಪೇದೆಗೆ ಗಾಯ ಆಗಿದ್ದು, ಅಪಾರ ಪ್ರಮಾಣದ ಗ್ರಾನೈಟ್, ಮದ್ದು ಗುಂಡುಗಳು, ಗನ್‍ಗಳು ಇರುವ ಹತ್ತು ಕ್ಯಾಂಪ್‍ಗಳು ಪತ್ತೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ನಕ್ಸಲ್ ವಿಚಾರಧಾರೆ ಎನ್ನುವುದು ಪಕ್ಕಾ ರಾಜಕೀಯ ವಿಷಯ. ನಕ್ಸಲರು ಸಿಪಿಐ (ಮಾವೋವಾದಿ) ಎಂಬ ನಿಷೇದಿತ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದವರಾಗಿರುತ್ತಾರೆ. ಇದು ನಿಷೇದಿತವಾದರೂ ನಕ್ಸಲರಿಗೆ ಇದೊಂದು ರಾಜಕೀಯ ಪಕ್ಷ. ಎಲ್ಲಾ ಕಮ್ಯೂನಿಸ್ಟ್ ಪಕ್ಷಗಳಂತೆಯೇ ಮಾವೋವಾದಿ ಕಮ್ಯೂನಿಸ್ಟ್ ಪಕ್ಷ ಕೂಡಾ ವಾರ್ಷಿಕ ಸಮಾವೇಶಗಳನ್ನು ನಡೆಸುತ್ತದೆ. ಅದಕ್ಕಾಗಿ ಅದು ಎಲ್ಲಾ ಕಮ್ಯೂನಿಸ್ಟ್ ಪಕ್ಷಗಳಂತೆ ವರ್ಷಕ್ಕೊಂದು ಬೇರೆ ಬೇರೆ ಜಿಲ್ಲೆಗಳನ್ನು ಆಯ್ಕೆ ಮಾಡುತ್ತದೆ. 2011 ರಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ಸಮಾವೇಶ ನಡೆಸಿದ್ದರೆ, 2012 ರಲ್ಲಿ ಮತ್ತೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆಯಲ್ಲಿ ಸಮಾವೇಶ ನಡೆಸಲು ಸಾಧ್ಯವೇ ಇಲ್ಲ. ಇದೆಲ್ಲಾ ರಾಜಕೀಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. 2011 ರಲ್ಲಿ ಕುತ್ಲೂರಿನಲ್ಲಿ ನಕ್ಸಲ್ ಸಮಾವೇಶ ನಡೆದಿದೆ ಎಂದಿಟ್ಟುಕೊಳ್ಳೋಣ. ಕುತ್ಲೂರಿನ ಇಬ್ಬರು ಯುವಕರು ನಕ್ಸಲರಾಗಿ ಎನ್‍ಕೌಂಟರ್‌ಗೆ ಗುರಿಯಾದ ನಂತರ ಮತ್ತು ಇಲ್ಲಿಯದ್ದೇ ಯುವತಿ ಸುಂದರಿ ಎಂಬಾಕೆ ನಕ್ಸಲ್ ನಾಯಕಿಯಾದ ನಂತರ ಪ್ರತೀ ದಿನ ಎಎನ್ಎಫ್‍ನ ಅಥವಾ ವೇಣೂರು ಠಾಣೆಯ ಕನಿಷ್ಠ ಒರ್ವ ಸಿಬ್ಬಂದಿ ಈ ಕಾಡಿನಲ್ಲಿ ನಿತ್ಯ ಬೀಟ್ ಮಾಡ್ತಾ ಇರ್ತಾರೆ. ಎರಡು ದಿನಕ್ಕೊಮ್ಮೆ ಐದರಿಂದ ಆರು ಎಎನ್ಎಫ್ ಪೊಲೀಸರ ತಂಡ ಇಲ್ಲಿಗೆ ಭೇಟಿ ಕೊಡುತ್ತದೆ. ಕುತ್ಲೂರಿನಲ್ಲಿ ಕಳೆದ ವರ್ಷ ಸಮಾವೇಶ ನಡೆದಿದ್ದು ಹೌದೇ ಆದಲ್ಲಿ ಕಳೆದ ವರ್ಷದ ಯಾವ ದಿನ ಯಾವ ಕಾರಣಕ್ಕಾಗಿ ಪೊಲೀಸರು ಕುತ್ಲೂರಿಗೆ ಭೇಟಿ ಕೊಟ್ಟಿಲ್ಲ ಎಂದು ಪೊಲೀಸರು ಉತ್ತರಿಸಬೇಕಾಗುತ್ತದೆ.

ಪ್ರಜಾಪ್ರಭುತ್ವವನ್ನು ಒಪ್ಪುವ ಯಾವುದೇ ವ್ಯಕ್ತಿ ನಿಷೇದಿತ ನಕ್ಸಲ್ ಚಳವಳಿಯನ್ನು ಒಪ್ಪುವಂತೆಯೇ ಇಲ್ಲ. ಹಾಗೆಂದು ಕಾಡಿನ ಮೂಲ ನಿವಾಸಿಗಳು ನಕ್ಸಲರ ಜೊತೆ ಸಂಪರ್ಕದಲ್ಲಿದ್ದರೆ ಅದು ಮೂಲ ನಿವಾಸಿಗಳ ತಪ್ಪಲ್ಲ. ವಿದ್ಯುತ್, ದೂರವಾಣಿ, ರಸ್ತೆ ಸಂಪರ್ಕಗಳೇ ಇಲ್ಲದ ದಟ್ಟ ಕಾಡಲ್ಲಿ ವಾಸಿಸೋ ಮಲೆಕುಡಿಯರ ಮನೆಗೆ ನಕ್ಸಲರು ಬಂದೂಕು ಹಿಡಿದುಕೊಂಡು ಬಂದು ಅನ್ನ ನೀರು ಕೇಳಿದರೆ ಕೊಡದೇ ಇರಲು ಬದುಕೇನು ಸಿನೇಮಾ ಕಥೆಯಲ್ಲ. ನಕ್ಸಲರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ನಕ್ಸಲರ ಉಪಟಳ. ನೀಡದೇ ಇದ್ದರೆ ಪೊಲೀಸರ ಕಿರುಕುಳ. ಪೊಲೀಸರು ಮತ್ತು ವ್ಯವಸ್ಥೆ ಮಲೆಕುಡಿಯರ ಬಗ್ಗೆ ಹೊಂದಿರೋ ನಿಲುವುಗಳು ಮತ್ತು ಮಾಡೋ ದೌರ್ಜನ್ಯಗಳೇ ನಕ್ಸಲರು ಮಲೆಕುಡಿಯ ಮೇಲೆ ಪ್ರಭಾವ ಬೀರಲು ಬಳಸೋ ಅಸ್ತ್ರಗಳು. ಅಂತದ್ದರಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದುಕೊಂಡ ವಿಠ್ಠಲ್‍ನಂತಹ ಯುವಕರನ್ನು ಎಎನ್ಎಫ್‍ನವರು ಬಂಧಿಸಿ ಕಿರುಕುಳ ನೀಡಿದಾಗ ಪೊಲೀಸರದ್ದೇ ಸರಿ ಎಂದು ಪೊಲೀಸರ ಪರ ವಹಿಸಿದರೆ ಅದು ನಕ್ಸಲ್ ಪರವಾಗಿರುತ್ತದೆ ಎಂಬುದು ನಮಗೆ ಗೊತ್ತಿರಬೇಕು

ತನ್ನ #*$% ತೋರಿಸುತ್ತಿರುವ ಈ “ವರದಿಗಾರ” ಯಾರು?

-ಶಿವರಾಮ್

ಈ ವೀಡಿಯೋ ಒಮ್ಮೆ ನೋಡಿ, ನಿಮ್ಮೊಳಗೆ ಅಸಹ್ಯ ಹುಟ್ಟುತ್ತದೆ. ಪತ್ರಕರ್ತರಾಗಿದ್ದಲ್ಲಿ ತಲೆತಗ್ಗಿಸಬೇಕೆನಿಸುತ್ತದೆ. ಸುದ್ದಿ ವಾಹಿನಿಯ ಲೋಗೋವನ್ನು ಬಲಗೈಯಲ್ಲಿ ಹಿಡಿದು ವರದಿಗಾರನೊಬ್ಬ ವಕೀಲ ವೃಂದಕ್ಕೆ ತನ್ನ  #*$%ವನ್ನು ತೋರಿಸಲು ಯತ್ನಿಸುತ್ತಿರುವ ತೀರಾ ಮುಜುಗರ ಹುಟ್ಟಿಸುವ ದೃಶ್ಯವಿದು. ಈ ದೃಶ್ಯವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವ ವಕೀಲರ ಪ್ರಕಾರ, ಮಾರ್ಚ್ ಎರಡರಂದು ಕೋರ್ಟ್ ಆವರಣದಲ್ಲಿ ನಡೆದ ಘಟನೆಗಳಿಗೆ ಇದು ಮೂಲ ಕಾರಣ.

ಈ ಅಸಹ್ಯಕರ ದೃಶ್ಯದಲ್ಲಿ ಹಿಂದುಗಡೆ ಅನೇಕ ಕೆಮರಾಗಳಿವೆ, ಮತ್ತು ಅವು ಸುಸ್ಥಿತಿಯಲ್ಲಿವೆ. ಅದರರ್ಥ ಈ ದೃಶ್ಯದ ನಂತರವಷ್ಟೆ ಪರ್ತಕರ್ತರ ಮೇಲೆ ಹಲ್ಲೆಗಳಾದವು. ‘ಅಲ್ಲಿ ಪತ್ರಕರ್ತರ ಮೇಲೆ ನಡೆದದ್ದು ಅಪ್ರಚೋದಿತ ಹಲ್ಲೆ’ ಎಂದು ಪದೇ ಪದೇ ಹೇಳುತ್ತಿರುವ ದೃಶ್ಯ ಮಾಧ್ಯಮಗಳ ವರದಿಗಾರರು, ಸಂಪಾದಕರು ಈಗಲಾದರೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಪ್ರತಿ ದಿನ ಪತ್ರಕರ್ತರ ಮೇಲೆ ದಾಳಿ ಮಾಡಿದ ವಕೀಲರ ಮುಖಗಳನ್ನು ತೋರಿಸಿ, ‘ಇವರನ್ನು ಇನ್ನೂ ಏಕೆ ಬಂಧಿಸಿಲ್ಲ?’ ಎಂದು ಪ್ರಶ್ನೆ ಕೇಳುವ ಸುದ್ದಿ ವಾಹಿನಿಗಳ ಸಂಪಾದಕರೆ, ಈ ದೃಶ್ಯದಲ್ಲಿರುವ ವರದಿಗಾರ ಮತ್ತು ಅವನ ಜೊತೆಯಲ್ಲಿರುವವರು ಯಾರು? ಅವರನ್ನು ಗುರುತಿಸಲು ನಿಮಗೇಕೆ ಸಾಧ್ಯವಾಗಿಲ್ಲ? “ವಕೀಲರ ಸಂಘ ‘ಗೂಂಡಾ ವಕೀಲರನ್ನು’ ಗುರುತಿಸಲಿ, ಅವರನ್ನು ಶಿಕ್ಷಿಸಲಿ,” ಎಂದು ಕೇಳುವ ಸುದ್ದಿ ವಾಹಿನಿಯವರು, ನಿಮ್ಮೊಳಗಿರುವ ಇಂಥವರನ್ನು (ಗೂಂಡಾ ಎನ್ನಬೇಕೊ, ಪುಂಡ ಎನ್ನಬೇಕೋ ತಿಳಿಯುತ್ತಿಲ್ಲ) ನೀವೇಕೆ ಸರಿದಾರಿಗೆ ತರುವುದಿಲ್ಲ?

ಸರಕಾರ ಈ ಘಟನೆ ಬಗ್ಗೆ ಆರ್.ಕೆ. ದತ್ತಾ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದೆ. ತನಿಖೆ ವೇಳೆ ಇಂತಹ ವೀಡಿಯೋಗಳನ್ನೂ ಪರಿಶೀಲಿಸಬಹುದು.

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ‘ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.

ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.

ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.

ರೌಡಿಗಳ ಪಟ್ಟಿಗೆ ಹೊಸಬರ ಸೇರ್ಪಡೆ!

 

– ದಿನೇಶ್ ಕುಮಾರ್ ಎಸ್. ಸಿ

“ವಕೀಲರ ರೌಡಿಸಂಗೆ ಸಿಎಂ ಹೆದರ್ತಾರೆ, ಗೃಹಮಂತ್ರಿ ನಡುಗ್ತಾರೆ, ಆದ್ರೆ ನಾವು… ಮಾಧ್ಯಮದವರು ಹೆದರೋದಿಲ್ಲ…” ಇದು ಇವತ್ತಿನ ಉದಯವಾಣಿಯ ಮುಖಪುಟದ ಶೀರ್ಷಿಕೆ. ಕನ್ನಡಪ್ರಭ “ಏನ್ ಲಾ” ಎಂಬ ಎರಡು ಅರ್ಥ ಹೊರಡಿಸುವ ಶೀರ್ಷಿಕೆ ನೀಡಿದೆ. ಈ ಶೀರ್ಷಿಕೆಗಳು ಮಾಧ್ಯಮರಂಗದ ಆತ್ಮವಿಶ್ವಾಸದಂತೆಯೂ, ಅಹಂಕಾರದಂತೆಯೂ ಏಕಕಾಲಕ್ಕೆ ಧ್ವನಿ ಹೊರಡಿಸುತ್ತದೆ. ಸಿಟಿ ಸಿವಿಲ್ ಕೋರ್ಟ್ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯಿಂದ ಕನ್ನಡ ಮಾಧ್ಯಮ ಸಮೂಹ ಕೆರಳಿ ನಿಂತಿದೆ ಎಂಬುದಂತೂ ಸ್ಪಷ್ಟ. ಕೆರಳುವುದು, ಕೆರಳಿಸುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಜಾಯಮಾನ. ಯಾಕೆಂದರೆ ಅವುಗಳ ಟಿ‍ಆರ್‌ಪಿ ಯೊಂದಿಗೆ ಈ ಕೆರಳುವಿಕೆಗೆ ಸಂಬಂಧಿಸಿದೆ. ಈ ಬಾರಿ ಪತ್ರಿಕೆಗಳೂ ಸಹ ಕೆರಳಿವೆ. ಅದಕ್ಕೆ ಕಾರಣಗಳೂ ಇವೆ.

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕೆಲ ವಕೀಲರು ನಡೆಸಿದ ಪುಂಡಾಟಿಕೆ ಅಸಹನೀಯ ಮತ್ತು ಅಸಮರ್ಥನೀಯ. ಅದು ಅಕ್ಷರಶಃ ಗೂಂಡಾಗಿರಿಯೇ ಹೌದು. ಘಟನೆಗೆ ಕಾರಣವಾಗಿರಬಹುದಾದ ಪ್ರಚೋದನೆ ಏನೇ ಆಗಿದ್ದರೂ ಇಂಥ ಪುಂಡಾಟಿಕೆ ಅನಪೇಕ್ಷಿತ ಮತ್ತು ಕಾನೂನು ಬಾಹಿರ. ಇಂಥ ಕೃತ್ಯ ಎಸಗಿದ ವಕೀಲರು ಜೈಲು ಸೇರಲು ಲಾಯಕ್ಕಾದವರು ಮಾತ್ರವಲ್ಲ, ಅವರು ಮತ್ತೆಂದೂ ಕರಿಕೋಟು ಹಾಕುವಂತಾಗಬಾರದು.

ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಕೆರಳುವಿಕೆಯೂ ಅರ್ಥ ಮಾಡಿಕೊಳ್ಳುವಂಥದ್ದು. ನ್ಯೂಸ್ ಚಾನಲ್‍ಗಳು ಎರಡು ನಿಮಿಷಗಳ ಕಾಲ ಪ್ರಸಾರವನ್ನೇ ನಿಲ್ಲಿಸಿ ಪ್ರತಿಭಟಿಸಿದವು. ದಿನವಿಡೀ ಕಪ್ಪು ಬಣ್ಣದ ಹಿನ್ನೆಲೆಯನ್ನು ಪರದೆಯ ಮೇಲೆ ಬಳಸಿದವು. ಕಪ್ಪು ಪಟ್ಟಿ ಕಟ್ಟಿಕೊಂಡೇ ಸುದ್ದಿ ಓದಲಾಯಿತು. ಒಂದು ವಾಹಿನಿಯಲ್ಲಂತೂ ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಸುದ್ದಿ ಓದಲಾಯಿತು.

ಎಲ್ಲ ಸರಿ, ಇಷ್ಟೆಲ್ಲದರ ನಡುವೆ ಪತ್ರಕರ್ತರು ವೃತ್ತಿ ಧರ್ಮವನ್ನೇಕೆ ಮರೆತರು ಎಂಬ ಪ್ರಶ್ನೆಗೂ ಉತ್ತರ ಕೊಡಬೇಕಾಗುತ್ತದೆ. ನಿನ್ನೆಯಿಂದ ಫೇಸ್ ಬುಕ್‍ನಂಥ ಸಾಮಾಜಿಕ ತಾಣಗಳಲ್ಲಿ ಅಲ್ಲಲ್ಲಿ ಈ ಪ್ರಶ್ನೆಗಳು ಕೇಳಿಬರುತ್ತಿವೆ. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪತ್ರಕರ್ತರನ್ನು ಥಳಿಸಿದ ಘಟನೆಯ ನಂತರ ಮಧ್ಯಾಹ್ನದ ಸುಮಾರಿಗೆ ನಡೆದ ಲಾಠಿ ಚಾರ್ಜ್ ಮತ್ತು ಕೋರ್ಟ್ ಒಳಗೆ ನಡೆದ ಪೊಲೀಸ್ ದೌರ್ಜನ್ಯದ ಸುದ್ದಿ ಎಲ್ಲ ವಾಹಿನಿಗಳಲ್ಲೂ ನಾಪತ್ತೆಯಾಗಿದ್ದವು. ಇವತ್ತಿನ ಪತ್ರಿಕೆಗಳಲ್ಲೂ ಅದು ಕಾಣೆಯಾಗಿವೆ ಅಥವಾ ಕಾಣದಂತಾಗಿವೆ.

ದಿ ಹಿಂದೂ ಪತ್ರಿಕೆ ಮಾತ್ರ ಘಟನೆಯ ಎಲ್ಲ ಆಯಾಮಗಳನ್ನು ವಿವರಿಸುವ ಪ್ರಯತ್ನ ಮಾಡಿದೆ. (ಈ ಕೆಲಸವನ್ನು ಪ್ರಜಾವಾಣಿಯಾದರೂ ಮಾಡಬಹುದು ಎಂಬ ನನ್ನ ನಿರೀಕ್ಷೆ ಸುಳ್ಳಾಯಿತು.) ಕೆಲ ಕನ್ನಡ ಪತ್ರಿಕೆಗಳು ಸಿಟಿ ಸಿವಿಲ್ ಕೋರ್ಟ್ ನ್ಯಾಯಮೂರ್ತಿ ಬೂದಿಹಾಳ್ ಅವರ ಮೇಲೆ ವಕೀಲರೇ ದೌರ್ಜನ್ಯವೆಸಗಿದರು ಎಂದು ವರದಿ ಮಾಡಿವೆ. ಆದರೆ ನ್ಯಾಯಮೂರ್ತಿಗಳು ಲಾಠಿ ಚಾರ್ಜ್‍ನಿಂದ ಗಾಯಗೊಂಡಿದ್ದರು.

ಕೆಲ ಪತ್ರಕರ್ತರು ಮಧ್ಯಾಹ್ನದ ನಂತರ ಪೊಲೀಸರೊಂದಿಗೆ ಸೇರಿ ಪ್ರತೀಕಾರದ ದಾಳಿ ನಡೆಸಿದರು ಎಂದು ಹಿಂದೂ ವರದಿ ಮಾಡಿದೆ. ವಕೀಲರ ಮತ್ತು ನ್ಯಾಯಾಧೀಶರ ವಾಹನಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಒಡೆದುಹಾಕಲಾಯಿತು ಎಂದು ಈ ವರದಿ ಹೇಳುತ್ತದೆ. ಮಾತ್ರವಲ್ಲ, ಪೊಲೀಸರೇ ಖುದ್ದಾಗಿ ಕೆಲ ವಾಹನಗಳಿಗೆ ಬೆಂಕಿ ಹಚ್ಚಿದರು ಎಂಬುದನ್ನೂ ವರದಿ ಬಹಿರಂಗಪಡಿಸುತ್ತದೆ. (ಕೆಲ ನ್ಯಾಯವಾದಿಗಳು ಪೊಲೀಸರೇ ವಾಹನಗಳಿಗೆ ಬೆಂಕಿಹಚ್ಚುವ ವಿಡಿಯೋಗಳನ್ನು ಈಗಾಗಲೇ ಫೇಸ್ ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.) ದಿ ಹಿಂದು ಪತ್ರಿಕೆ ವರದಿ ಪ್ರಕಾರ, ವಕೀಲರ ಮೇಲೆ ದಾಳಿ ಮಾಡುತ್ತಿದ್ದ ಪತ್ರಕರ್ತರನ್ನು ತಡೆಯಲು ಹೋದ ಸಮಚಿತ್ತದ ಒಬ್ಬ ಪತ್ರಕರ್ತರ ಮೇಲೆಯೂ ಇದೇ ಪತ್ರಕರ್ತರು ಹಲ್ಲೆ ಮಾಡಿದ್ದಾರೆ.

ಸಿಟಿ ಸಿವಿಲ್ ಕೋರ್ಟ್ ಒಳಗೆ ನುಗ್ಗಿದ ಪೊಲೀಸರು ಹೊರಗೆ ನಡೆದ ಘಟನೆಗೆ ಸಂಬಂಧವೇ ಇಲ್ಲದ ವಕೀಲರ ಮೇಲೆ ಲಾಠಿ ಬೀಸಿದ್ದಾರೆ. ಕ್ಯಾಂಟೀನು, ಬಾರ್ ಅಸೋಸಿಯೇಷನ್ ಒಳಗೂ ನುಗ್ಗಿ ದಾಳಿ ಮಾಡಿದ್ದಾರೆ. ಪೀಠೋಪಕರಣಗಳನ್ನು ಒಡೆದುಹಾಕಿದ್ದಾರೆ ಆದರೆ ಎಷ್ಟು ಮಂದಿ ವಕೀಲರು ಗಾಯಗೊಂಡಿದ್ದಾರೆ? ಹೇಗೆ ಗಾಯಗೊಂಡರು? ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು? ಎಂಬೆಲ್ಲ ಪ್ರಶ್ನೆಗಳಿಗೆ ಮಾಧ್ಯಮಗಳಲ್ಲಿ ಉತ್ತರವಿಲ್ಲ.

ಒಂದು ವಾಹಿನಿಯ ಪ್ರಕಾರ ಮೂರು ಮಂದಿ ಪೊಲೀಸ್ ಪೇದೆಗಳು ಮೃತಪಟ್ಟಿದ್ದಾರೆ, ಮತ್ತೊಂದು ಇಬ್ಬರ ಸಾವು ಎಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಸತ್ತ ಪೊಲೀಸರ ಹೆಸರುಗಳನ್ನೂ ಪ್ರಸಾರ ಮಾಡಲಾಯಿತು.! ದಿ ಹಿಂದೂ ವರದಿಯ ಪ್ರಕಾರ ಈ ಸುದ್ದಿಯನ್ನು ಸ್ಫೋಟಿಸಿದ ನಂತರ ನಗರದ ಹಲವು ವೃತ್ತಗಳಲ್ಲಿ ಕರಿಕೋಟು ಹಾಕಿಕೊಂಡು ಓಡಾಡುವವರ ಮೇಲೆ ಪೊಲೀಸರು ಲಾಠಿ ಬೀಸಿದರು! ವಕೀಲರು ಮನೆಗಳನ್ನು ತಲುಪಿಕೊಳ್ಳುವುದೇ ಕಷ್ಟವಾಯಿತು. ಸ್ವತಃ ಮುಖ್ಯಮಂತ್ರಿಗಳೇ ಘಟನೆಯಲ್ಲಿ ಯಾರೂ ಸತ್ತಿಲ್ಲ ಎಂದು ಖಚಿತಪಡಿಸಿದ ಮೇಲೂ ಒಂದು ವಾಹಿನಿ ಸುದ್ದಿವಾಚಕರು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂದೇ ಹೇಳುತ್ತಿದ್ದರು.

ಇಡೀ ಘಟನಾವಳಿಗಳನ್ನು ಗಮನಿಸಿದಾಗ ಸ್ಪಷ್ಟವಾಗಿ ಕಾಣೋದು ವಕೀಲ, ಪತ್ರಕರ್ತ ಮತ್ತು ಪೊಲೀಸು ಎಂಬ ಮೂರು ವ್ಯವಸ್ಥೆಗಳ ನಡುವಿನ ಆಂತರಿಕ ಸಂಘರ್ಷ ಮತ್ತು ಅವುಗಳು ಬೆಳೆಸಿಕೊಂಡು ಬಂದಿರುವ ಅಹಂನಿಂದಾಗಿರುವ ಅನಾಚಾರಗಳು. ವ್ಯವಸ್ಥೆಯ ಈ ಮೂರೂ ಅಂಗಗಳೂ ಬಲಶಾಲಿಯಾಗಿವೆ. ಎಲ್ಲರೂ ತಮ್ಮನ್ನು ತಾವು ಸುಪ್ರೀಂ ಎಂದು ಭಾವಿಸಿಕೊಂಡಂತಿದೆ. ಈ ಅಹಂಗಳ ನಡುವಿನ ಸಂಘರ್ಷ ಇವತ್ತು ತಾರಕಕ್ಕೇರಿದೆ.

ತಿಂಗಳ ಹಿಂದೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕ್ಲುಲ್ಲಕ ಕಾರಣಕ್ಕೆ ವಕೀಲರು ಸತತ ಏಳುಗಂಟೆಗಳ ಕಾಲ ರಸ್ತೆತಡೆ ನಡೆಸಿ ಉದ್ಧಟತನ ತೋರಿದರು. ಅದನ್ನು ಖಂಡಿಸಿ ಮಾಧ್ಯಮಗಳು ವರದಿ ಮಾಡಿದವು. ತಮ್ಮ ವಿರುದ್ಧ ಮಾಧ್ಯಮಗಳು ಬಳಸಿದ ಭಾಷೆಯಿಂದ ವ್ಯಗ್ರಗೊಂಡ ವಕೀಲ ಸಮುದಾಯದ ರಣಧೀರರು ಸೇಡಿಗಾಗಿ ಕಾತರಿಸಿದ್ದರು,. ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ವಕೀಲರ ಮೇಲೆ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಗೆ ಸಿಲುಕಿದ್ದ ಪೊಲೀಸರು ಕೂಡ ವಕೀಲರ ಮೇಲೆ ಸೇಡಿಗೆ ಕಾದಿದ್ದರು.

ಮಾಧ್ಯಮ ವರದಿಗಳ ಪ್ರಕಾರವೇ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿನ್ನೆ ಪತ್ರಕರ್ತರ ಮೇಲೆ ದಾಳಿ ನಡೆಯುವಾಗ ಪೊಲೀಸರು ಸುಮ್ಮನಿದ್ದರು, ಕೆಲವರಂತೂ ನಗುತ್ತಾ ನಿಂತಿದ್ದರು! ಅದಾದ ಅರ್ಧಗಂಟೆಗೆ ಇದ್ದಕ್ಕಿದ್ದಂತೆ ಪೊಲೀಸರಿಗೆ ಪೌರುಷ ಬಂದಿದ್ದು ಹೇಗೆ? ಹೈಕೊರ್ಟ್‍ನ ನಾಲ್ವರು ನ್ಯಾಯಮೂರ್ತಿ‍ಗಳು ಕೋರ್ಟ್ ಪ್ರವೇಶಿಸಿ, ಒಳಗಿದ್ದ ಪೊಲೀಸರನ್ನು ಹೊರಗೆ ಕರೆಸಿಕೊಳ್ಳುವಂತೆ ಗೃಹಸಚಿವ, ಡಿಜಿಪಿ, ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದರೂ ಅದನ್ನು ಲೆಕ್ಕಿಸದೇ ಕೋರ್ಟ್ ಒಳಗೇ ಲಾಠಿ ಚಾರ್ಜ್ ಮಾಡಿದ್ದು ಏಕೆ?

ವಕೀಲರಿಗೆ ಮಾಧ್ಯಮಗಳ ಮೇಲೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಪೊಲೀಸರಿಗೆ ವಕೀಲರ ಮೇಲೆ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಮಾಧ್ಯಮಗಳಿಗೂ ವಕೀಲರ ಮೇಲೆ ಅಸಹನೆ ಕುದಿಯುತ್ತಿತ್ತು, ಅವರೂ ಸೇಡು ತೀರಿಸಿಕೊಂಡಿದ್ದಾರೆ. ಇದು ಇಲ್ಲಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ.

ಚಿತ್ರ: ಪೊಲೀಸರ ಲಾಟಿ ಏಟಿಗೆ ಗಾಯಗೊಂಡ ವಕೀಲ.

ಮಾಧ್ಯಮಗಳ ಸುದ್ದಿಬಾಕತನ ಮತ್ತು ವಕೀಲರ ವಿರೋಧ


– ಸೂರ್ಯ ಮುಕುಂದರಾಜ್

B.A., LL.B.


 

ಶುಕ್ರವಾರದ (2/3/12) ಬೆಳಿಗ್ಗೆ ದೃಶ್ಯಮಾಧ್ಯಮದ ಮಂದಿ ರಾಜ್ಯದ ಜನತೆಯಲ್ಲಿ ಇನ್ನಿಲ್ಲದಂತೆ ಕುತೂಹಲ ಕೆರಳಿಸಿ ರೋಚಕ ಸುದ್ದಿ ನೀಡಿ ತಮ್ಮ ಬೆನ್ನನ್ನು ತಾವೇ exclusive ಎಂದು ತಟ್ಟಿಕೊಳ್ಳುವ ತವಕದಲ್ಲಿದ್ದರು. ಜನಾರ್ದನ ರೆಡ್ಡಿ ಎಂಬ ಅಂತರರಾಷ್ಟ್ರೀಯ ಗಣಿಕಳ್ಳನ ಮುಖವನ್ನು ರಾಜ್ಯದ ಜನತೆಗೆ ಇನ್ನಿಲ್ಲದಂತೆ ತೋರಿಸುವ ಆತುರದಲ್ಲಿ 24×7 ಸುದ್ದಿವಾಹಿನಿಗಳ ಕ್ಯಾಮೆರಾಗಳು ಸನ್ನದ್ಧವಾಗಿ ನಿಂತಿದ್ದವು. ವಾರ್ತಾವಾಚಕ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ತನ್ನ ಪ್ರತಿನಿಧಿಗೆ ಕೇಳುತ್ತಿದ್ದ, ಅವನ ಪ್ರಶ್ನೆಗಳು ರೆಡ್ಡಿಯನ್ನು ಕರೆತಂದ ಬಸ್‌ಗೆ ಏಸಿ ಇದೆಯಾ, ರೆಡ್ಡಿ ಸ್ನಾನ ಮಾಡಿದ್ರಾ, ತಿಂಡಿ ಏನು ಕೊಟ್ಟಿದ್ದಾರೆ, ಇತ್ಯಾದಿ ಇತ್ಯಾದಿ. ರೆಡ್ಡಿಗೆ ತಂದಿಟ್ಟ ಖಾರಾಬಾತ್, ಇಡ್ಲಿಯನ್ನು ಬ್ರೇಕಿಂಗ್ ಸುದ್ದಿಯಾಗಿ ಬಿತ್ತರಸಿ ಈ ದೃಶ್ಯಾವಳಿ ನಮ್ಮ ಟೀವಿಯಲ್ಲಿ ಮಾತ್ರವೆಂಬ ಸೀಲನ್ನು ಹೆಮ್ಮೆಯಿಂದ ಹೊಡೆದುಕೊಂಡವು. ಹಲಸೂರು ಗೇಟ್ ಠಾಣೆಯಿಂದ ಹೊರಟ ರೆಡ್ಡಿಯಿದ್ದ ಪೊಲೀಸ್ ವಾಹನದ ಬೆನ್ನತ್ತಿದ ಮಾಧ್ಯಮಗಳು ಸಿವಿಲ್ ಕೋರ್ಟ್ ಸಮುಚ್ಛಯದಲ್ಲಿರುವ ಸಿ.ಬಿ.ಐ. ನ್ಯಾಯಾಲಯದವರೆಗೂ ತಮ್ಮ ಪ್ರತಿನಿಧಿಗಳನ್ನು ನಿಲ್ಲಿಸಿದ್ದರು. ಬಹುಶಃ ರೆಡ್ಡಿಯ ಮುಖವನ್ನು ಜನತೆಗೆ ತೋರಿಸುವ ತವಕದಲ್ಲಿ ಕೆಲವು ತಿಂಗಳ ಹಿಂದೆ ವಕೀಲರನ್ನು ಗೂಂಡಾಗಳೆಂದು ಕರೆದು ದ್ವೇಷ ಕಟ್ಟಿಕೊಂಡದ್ದನ್ನು ಮರೆತು ಸಿವಿಲ್ ಕೋರ್ಟ್ ಆವರಣದೊಳಗೆ ಕಾಲಿಟ್ಟ ಮಾಧ್ಯಮಗಳಿಂದಾಗಿ ಒಂದು ಕರಾಳ ಘಟನೆ ಸಂಭವಿಸಿತು.

ಮಾಧ್ಯಮಗಳು ಇಂತಹ ಪರಿಸ್ಥಿತಿಗೆ ಮುಖಾಮುಖಿಯಾಗಲು ಕಾರಣ ತಮ್ಮ ಸೋಗಲಾಡಿತನದ ವರ್ತನೆಯೆಂದು ಮರೆಯಬಾರದು. ಸುದ್ದಿಗೆ ರೋಚಕತೆ ತುಂಬಿ ಜನರ ಮನಸ್ಸಲ್ಲಿ ಗೊಂದಲ ಬಿತ್ತುವ ಕೆಲಸಗಳನ್ನು ಟಿವಿ ಮಾಧ್ಯಮಗಳು ಮಾಡುತ್ತಿಲ್ಲವೆ? ಯಾವುದೇ ವಿಚಾರವನ್ನು ಸುದ್ದಿ ಮಾಡುವಾಗ ತಾವು ತೋರಿಸಿದ ಸುದ್ದಿಯೇ ನೈಜವಾದದ್ದು ಎನ್ನುತ್ತಾರೆ. ಮದುವೆ ಮನೆಗಳಿಗೆ ಹುಡುಗಿಯ ತವರುಮನೆ ಕಡೆಯವರನ್ನು ಕಟ್ಟಿಕೊಂಡು ನುಗ್ಗಿ ಗೂಸಾ ಕೊಡಿಸಿ ಮಜಾ ತೆಗೆದು ಕೊಳ್ಳುವ ಮಾಧ್ಯಮಗಳ ಸುದ್ದಿದಾಹಕ್ಕೆ ಬಲಿಯಾದವರೆಷ್ಟು ಜನ? ಒಂದು ಸುದ್ದಿಯನ್ನು ಜಡ್ಜ್‌ಮೆಂಟ್ ನೀಡುವ ನ್ಯಾಯಾಧೀಶರಂತೆ ತೀರ್ಪು ನೀಡುವ ಕಾರ್ಯವನ್ನು ಇಂದಿನ ಚಾನಲ್‌ಗಳ ನಿರೂಪಕರು ಮಾಡುತ್ತಿದ್ದಾರೆ.

ಜನವರಿ ತಿಂಗಳಲ್ಲಿ ನಡೆದ ಒಂದು ಸಣ್ಣ ಘಟನೆ ಈ ಮಟ್ಟದ ಪ್ರಭಾವ ಬೀರಲು ಕಾರಣವಾ ಎಂಬ ಪ್ರಶ್ನೆಯೇಳಬಹುದು. ಅದೊಂದೆ ಘಟನೆ ಮಾಧ್ಯಮ ಮತ್ತು ವಕೀಲರ ನಡುವಿನ ಕದನಕ್ಕೆ ಕಾರಣವಲ್ಲ. ನಟ ದರ್ಶನ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇಂತಹದೇ ಸುದ್ದಿಬಾಕ ಹಪಹಪಿಯಲ್ಲಿ ತಮ್ಮ ದಂಡಿನೊಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣಕ್ಕೆವು ಕಾಲಿಟ್ಟಿವೆ. ದರ್ಶನ್ ವಿಚಾರಣೆಯ ನಂತರ ಪರಪ್ಪನ ಅಗ್ರಹಾರಕ್ಕೆ ಕರೊದಯ್ಯಲು ಹೊರಟ ವಾಹನದ ಹಿಂದೆ ಹೋಗಲು ತವಕಿಸುತ್ತಿದ್ದ ಸಮಯ ಚಾನಲ್‌ನ ವಾಹನ ಚಾಲಕ ವಕೀಲರೊಬ್ಬರ ಕಾಲಿನ ಮೇಲೆ ವಾಹನ ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದ ವಕೀಲರಿಗೆ ದಬಾಯಿಸಿದ್ದಾರೆ. ಅಂದು ಖಾಸಗಿ ಚಾನಲ್‌ನ ವರದಿಗಾರರ ದರ್ಪ ಪ್ರದರ್ಶನಕ್ಕೆ ಅಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನ ವಕೀಲರು ತಿರುಗಿಬಿದ್ದಿದ್ದಾರೆ. ನಿಮಗೆ ಸುದ್ದಿ ಬೇಕಿದ್ದರೆ ಕೋರ್ಟ್‌ನ ಹೊರಗೆ ಚಿತ್ರೀಕರಿಸಿ, ಇಲ್ಲಿ ವಾತಾವರಣ ಕದಡಬೇಡಿಯೆಂದು ಮಾಧ್ಯಮಗಳ ಪ್ರವೇಶವನ್ನು ಅಂದಿನಿಂದ ತಡೆದಿದ್ದಾರೆ. ಒಂದು ಸಣ್ಣ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದ ಮಾಧ್ಯಮಗಳಿಗೆ ಮೃಷ್ಟಾನ್ನ ಭೋಜನ ಸಿಕ್ಕಂತೆ ಜನವರಿ ತಿಂಗಳ ವಕೀಲರ 7ಗಂಟೆ ರಸ್ತೆ ತಡೆ ಪ್ರಕರಣ ಸಂಭವಿಸಿತು. ವಕೀಲರಿಂದ ಆ ದಿನ ಸಾವಿರಾರು ಜನರು ಪರದಾಡಬೇಕಾಯಿತು ನಿಜ. ಆದರೆ ಆ ಘಟನೆಗೆ ಕಾರಣವಾದ ವಕೀಲನೊಬ್ಬನ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಧರಣಿ ನಡೆಸಿದ ವಕೀಲರನ್ನೇ ಗೂಂಡಾಗಳಂತೆ ಮಾಧ್ಯಮಗಳು ಚಿತ್ರಿಸಿದವು. ಪೊಲೀಸ್ ಕಮೀಶನರ್ ಮಿರ್ಜಿ ಘಟನೆ 12.30 ಕ್ಕೆ ಆರಂಭವಾದ ಬಗ್ಗೆ ತಿಳಿದರೂ ಸಂಜೆ 5ಕ್ಕೆ ಬಂದಿದ್ದಾರೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿದ್ದೆ ಆಗಿದ್ದರೆ ಅಂದೇಕೆ ಒಬ್ಬ ಹಲ್ಲೆ ನಡೆಸಿದ ಪೊಲೀಸ್ ಪೇದೆಯ ಮೇಲೆ ಕ್ರಮ ಕೈಗೊಳ್ಳಲುಇಷ್ಟು ಹೊತ್ತು ಬೇಕಾಯಿತೆ ಎಂದೇಕೆ ಮಾಧ್ಯಮಗಳು ಗೃಹ ಸಚಿವರನ್ನು ಅಂದು ಕೇಳಲಿಲ್ಲ?.

ವಕೀಲರನ್ನು ಜನರ ಕಣ್ಣಲ್ಲಿ ವಿಲನ್‌ಗಳಂತೆ ಚಿತ್ರಿಸಿದ ಮಾಧ್ಯಮಗಳು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿವೆಯೇ? ಭ್ರಷ್ಟ ರಾಜಕಾರಣಿಗಳಿಂದ ಎಂಜಲು ಕಾಸಿಗಾಗಿ ಸೈಟಿಗಾಗಿ ಕೈಯೊಡ್ಡಿ ಸುದ್ದಿ ಬರೆಯುವ ಪತ್ರಕರ್ತರೆಲ್ಲಿ, ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡು ಜೈಲಿಗಟ್ಟಿದ ವಕೀಲರೆಲ್ಲಿ? ಎಷ್ಟೋ ಘಟನೆಗಳನ್ನು ಸೃಷ್ಟಿಸಿ, ತಿರುಚಿ ತೋರಿಸುವ ಸುದ್ದಿಮಾಧ್ಯಮಗಳಲ್ಲಿ ಪ್ರಾಮಾಣಿಕತೆಯ ಲವಲೇಶವೂ ಇಲ್ಲದಂತಾಗಿದೆ. ಖಾಸಗಿ ವಿಚಾರಗಳನ್ನು ಸಾರ್ವಜನಿಕಗೊಳಿಸಿ ಮಾನಹಾನಿ ಮಾಡುವ ಮಾಧ್ಯಮಗಳಿಂದ ಜವಾಬ್ದಾರಿಯುತ ಪತ್ರಿಕೋದ್ಯಮ ನಿರೀಕ್ಷಸಲು ಸಾಧ್ಯವೇ? ಶುಕ್ರವಾರದ ಘಟನೆಯನ್ನು ವೈಭವೀಕರಿಸಿ ಪ್ರಜಾಪ್ರಭುತ್ವದ ಮೇಲಿನ ಹಲ್ಲೆಯೆಂದು ಜನರ ಮುಂದೆ ದುಃಖ ತೋಡಿಕೊಳ್ಳುತ್ತಿರುವ ಮಾಧ್ಯಮಗಳು ಪೊಲೀಸರೊಂದಿಗೆ ಸೇರಿ ಕೆ.ಆರ್. ವೃತ್ತದಲ್ಲಿ ಒಬ್ಬೊಬ್ಬ ವಕೀಲರನ್ನೇ ಇಟ್ಟಾಡಿಸಿಕೊಂಡು ಹೊಡೆದದ್ದನ್ನೇಕೆ ಬಿತ್ತರಿಸಲಿಲ್ಲ? ಸಾಮಾನ್ಯ ಜನರಿಗೆ ಪೊಲೀಸರಿಂದ ದೌರ್ಜನ್ಯವಾದರೆ ನೆನಪಾಗುವುದು ಮಾಧ್ಯಮಗಳಲ್ಲ, ವಕೀಲರು ಅವರ ಕಣ್ಣಿಗೆ ಮೊದಲು ಕಾಣಿಸುವುದು. ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಹೆದರುವ ಎಷ್ಟೋ ಜನರಿಗೆ ವಕೀಲರಿದ್ದರೆ ಎಂತಹದ್ದೋ ಒಂದು ಧೈರ್ಯ. ಖಾಕಿಧಾರಿಗಳ ದರ್ಪ ವಕೀಲರ ಮುಂದೆ ನಡೆಯುವುದಿಲ್ಲ. ಅವಕಾಶವಾದಿ ಪೊಲೀಸರು ಪಾಟಿ ಸವಾಲಿನ ಸೋಲಿಗೊಳಗಾರುತಾರೆ. ವಕೀಲರೆಂದರೆ ಅವರಲ್ಲಿ ಎಂತಹದ್ದೋ ಒಂದು ಸಣ್ಣ ಕಂಪನವಿದೆ. ಇಂತಹ ಪೊಲೀಸರು ಮಾಧ್ಯಮದವರೊಂದಿಗೆ ಸೇರಿ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳನ್ನು ವಕೀಲರಿಗೆ ಒಡೆಯಿರಿ ನಾವಿದ್ದೇವೆಂದು ಉಬ್ಬಿಸಿ ಕಲ್ಲಲ್ಲಿ ಹೊಡೆಸಿದ್ದನ್ನೇಕೆ ನೇರ, ದಿಟ್ಟತನವಿರುವ ಸುದ್ದಿವಾಹಿನಿಗಳು ಬಿತ್ತರಿಸಲಿಲ್ಲ?

ದೃಶ್ಯ ಮಾಧ್ಯಮಗಳು ಇಂದು ಬಳಸುವ ಭಾಷೆಯನ್ನು ಕೇಳಿದರೆ ಎಂತಹ ಕೊಳಕುತನ ಅವರಲ್ಲಿ ತುಂಬಿದೆಯೆಂಬ ಅರಿವಾಗುತ್ತದೆ. ಪಬ್ಲಿಕ್ ಟಿವಿಯ ರಂಗನಾಥ್ ಸಿವಿಲ್ ಕೋರ್ಟ್ ಏನು ವಕೀಲರ ಅಪ್ಪನ ಆಸ್ತಿಯೇ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಸುದ್ದಿಗಾಗಿ ಕೋರ್ಟ್‌ನೊಳಗೆ ನುಗ್ಗಲು ಇವರಿಗೆ ಅನುಮತಿಯಿದೆಯೇ? ಸಾರ್ವಜನಿಕರಿಗೆ ತೊಂದರೆ ನೀಡಿ ಜನಾರ್ದನ ರೆಡ್ಡಿಯ ಮುಖವನ್ನು ತೋರಿಸಿರೆಂದು ಯಾರಾದರೂ ದುಂಬಾಲು ಬಿದ್ದಿದ್ದರೆ? ಇವರ ವಾಹಿನಿಯಲ್ಲಿ ಜನಲೋಕಾಯುಕ್ತರೆಂಬ ಅಣೆಪಟ್ಟಿ ಕಟ್ಟಿಕೊಂಡು ಇವರು ನಡೆಸುವ ರೇಡುಗಳು ನ್ಯಾಯಯುತವೆ? ಮಾಧ್ಯಮವೊಂದರ ಒಡೆಯನೆಂಬ ಕಾರಣಕ್ಕೆ ಕಾನೂನು ಇವರ ಸ್ವತ್ತೇ? ಇನ್ನೊಬ್ಬ ಪತ್ರಕರ್ತ ವಿಶ್ವೇಶ್ವರ್ ಭ‌ಟ್‌ರ ಚಾನಲ್‌ನ ಭಾಷಾ ಬಳಕೆ ನಿಜಕ್ಕೂ ಬೀದಿ ಕುಡುಕನ ಪದಬಳಕೆಯಾಗಿತ್ತು. ರಾಜ್ಯದ ಗೃಹ ಸಚಿವರನ್ನೇ ಬಳೆತೊಟ್ಟಿದ್ದೀರಾ ಎಂದು ಕೇಳುವ, ಕರಿಕೋಟಿನ ಉಗ್ರರು ಎನ್ನುವ, ವಕೀಲರ ಸಂಘದ ಅಧ್ಯಕ್ಷರಿಗೆ ಕಡುಬು ತಿನ್ನುತ್ತಿದ್ದೀರಾ ಎಂದು ಹೀಗೆಳೆಯುವ ಇವರು ಮಟಮಟ ಮಧ್ಯಾಹ್ನವೇ ತೀರ್ಥಸೇವಿಸಿದ್ದರೇನೊ ಎಂದುಕೊಳ್ಳಬಹುದಲ್ಲವೇ? ಪತ್ರಕರ್ತರಿಗಿರಬೇಕಾದ ಕನಿಷ್ಟ ಜ್ಞಾನವೂ ಇವರಲ್ಲಿ ಇಲ್ಲವೆನಿಸುತ್ತದೆ. ಇವರ ಪದಬಳಕೆ ಇವರ ಮನಸ್ಸಲ್ಲಿರುವ ಕೊಳಕುತನ ಮತ್ತು ಅಪ್ರಬುದ್ಧತೆ ತೋರುತ್ತದೆ.

“ಅಗ್ನಿ” ವಾರಪತ್ರಿಕೆಯ ಮಾರ್ಚ್ 8, 2012ರ ಸಂಚಿಕೆಯಲ್ಲಿ ಸದಾನಂದ ಗಂಗನಬೀಡು ತಮ್ಮ ಲೇಖನ ‘ಭಯೋತ್ಪಾದನಾ ದಾಳಿ – ದೃಶ್ಯ ಮಾಧ್ಯಮಗಳ ಯುದ್ಧ ಸಂಭ್ರಮ”ದಲ್ಲಿ  ’26 ನವೆಂಬರ್, 2008 ರಂದು ಮುಂಬೈ ಮೇಲೆ ಆದ ಭಯೋತ್ಪಾದನೆಯ ದಾಳಿಯ ಲೈವ್ ಟೆಲಿಕಾಸ್ಟ್ ಮಾಡಲು ಮಾಧ್ಯಮಗಳು ಪೈಪೋಟಿಗಿಳಿದು ಎನ್ಎಸ್‌ಜಿ ಯೋಧರು ರೂಪಿಸುತ್ತಿದ್ದ ಯುದ್ಧತಂತ್ರ ಭಯೋತ್ಪಾದಕರಿಗೆ ತಿಳಿಯುವಂತೆ ಮಾಡಿದವು, ಇದರ ಫಲವಾಗಿ ನಮ್ಮ ರಾಜ್ಯದ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಏಳು ಯೋಧರು ಉಗ್ರರ ಗುಂಡಿಗೆ ಬಲಿಯಾಗಬೇಕಾಯಿತು. ದೇಶದ ಮಾಧ್ಯಮಗಳು ಯುದ್ಧ ಸಂಭ್ರಮದಿಂದ ಅವನತಿಯ ಅಂಚಿಗೆ ತಲುಪುತ್ತಿವೆ, ದೇಶದ ಭವಿಷ್ಯವನ್ನೂ ಗಂಡಾಂತರಕ್ಕೆ ಸಿಲುಕಿಸುತ್ತಿವೆ,’ ಎಂದು ಹೇಳುತ್ತಾರೆ. ಮತ್ತು ಮಾಧ್ಯಮಗಳ ಈ ದಾಹವನ್ನು ತಮಂಧದ ಕೇಡು ಎನ್ನುತ್ತಾರೆ.

ಹೀಗೆ ಕೇಡುಗಾಲದ ರಣಕೇಕೆಗೆ ಸದಾ ಹಪಿಹಪಿಸುವ ಮಾಧ್ಯಮಗಳು ಜಡ್ಜ್‌ಮೆಂಟಲ್ ಆಗುವುದನ್ನು ಬಿಟ್ಟು ನೈಜ ಸುದ್ದಿಯನ್ನು ನಿಸ್ಪಕ್ಷಪಾತವಾಗಿ ಜನರಿಗೆ ತೋರಿಸಲಿ. ಮಾಧ್ಯಮಗಳ ಪದಪ್ರಯೋಗ ಪ್ರಚೋದನಕಾರಿಯಾಗಿ ಇಲ್ಲದ್ದಿದ್ದರೆ ವಕೀಲ ಸಮುದಾಯ ಪ್ರಚೋದನೆಗೊಳಗಾಗುತ್ತಿರಲಿಲ್ಲ. ಮಾಧ್ಯಮಗಳ ಏಕಪಕ್ಷೀಯ ಧೋರಣೆಗೆ ಸುದ್ದಿಯಾಗಿ ನಲುಗಿದ ಎಷ್ಟೋ ಜನ ಅಮಾಯಕರ ನಿಟ್ಟುಸಿರಿಗೆ ಹೋಲಿಸಿದರೆ ಮಾಧ್ಯಮಗಳಿಗೆ ಆದ ಪರಿಸ್ಥಿತಿ ಏನೇನು ಅಲ್ಲ ಎನ್ನಬಹುದು. ವಕೀಲರನ್ನು ಕ್ರಿಮಿನಲ್‌ಗಳು, ರೌಡಿಗಳು ಎಂದೆಲ್ಲಾ ಹೇಳುವ ನೈತಿಕತೆ ಮಾಧ್ಯಮಗಳಿಗಿಲ್ಲ. ಇಂದು ಮಾಧ್ಯಮಗಳು ತೋರಿಸುತ್ತಿರುವ ಸುದ್ದಿಗಳು ಜನರ ಮನದಲ್ಲಿ ವಕೀಲರು ದುಷ್ಟರೆಂದು ಕಾಣಿಸುತ್ತಿರಬಹುದು, ಒಂದು ದಿನ ಸುದ್ದಿಯ ಬೆನ್ನತ್ತಿ ಪತ್ರಿಕಾ ಧರ್ಮವನ್ನೇ ಮರೆತ ಮಾಧ್ಯಮಗಳ ಮುಖವಾಡದ ದುಷ್ಟತನದ ಅನುಭವ ವೈಯಕ್ತಿಕವಾಗಿ ಅನುಭವಿಸಿದಾಗ ಮಾತ್ರ ಯಾರು ಸರಿಯೆಂದು ಗೊತ್ತಾಗುತ್ತದೆ. ಒಂದಷ್ಟು ಪತ್ರಕರ್ತರು ಕಾಸಿಗಾಗಿ ಸುದ್ದಿ ಪ್ರಕಟಿಸುತ್ತಾರೆಂದ ಮಾತ್ರಕ್ಕೆ ಎಲ್ಲಾ ಪತ್ರಕರ್ತರು ಕಾಸಿಗಾಗಿ ಕೈಯೊಡ್ಡುತ್ತಾರೆ ಎಂದು ಹೇಳುವುದು ನ್ಯಾಯವಲ್ಲ, ಅಲ್ಲವೇ?