
– ಡಾ.ಎನ್. ಜಗದೀಶ್ ಕೊಪ್ಪ
ನಮ್ಮ ಕರ್ನಾಟಕ ಸರ್ಕಾರದ ಘನವೆತ್ತ ಅಬಕಾರಿ ಸಚಿವರಾದ ಸಿ.ರೇಣುಕಾಚಾರ್ಯರಿಂದ, ಬಾಡಿಗೆ ಜನರ ಸಮಾವೇಶಗಳಲ್ಲಿ, ದೇವರಾಜ ಅರಸುವಿನಿಂದ ಹಿಡಿದು, ಗಾಂಧಿ, ಬುದ್ಧ, ಅಂಬೇಡ್ಕರ್ವರೆಗೆ ಹೋಲಿಕೆಯಾಗಿ, ನಂತರ ಒಮ್ಮೊಮ್ಮೆ ಒಳಗಿರುವ ಪರಮಾತ್ಮ ಹೆಚ್ಚಾದಾಗ, ಕರ್ನಾಟಕದ ಬಸವೇಶ್ವರ ಎಂದೆಲ್ಲಾ ಹಾಡಿ ಹೊಗಳಿಸಿಕೊಂಡಿದ್ದ, ಲಿಂಗಾಯತ ಸಮುದಾಯದ ಮಹಾನ್ ನಾಯಕ(?) ಯಡಿಯೂರಪ್ಪಗೆ ಸಿ.ಬಿ.ಐ. ನೇಣಿನ ಕುಣಿಕೆ ಹತ್ತಿರವಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ಸಿ.ಇ.ಸಿ. ತನ್ನ ವರದಿಯನ್ನ ಸುಪ್ರೀಮ್ ಕೋರ್ಟ್ಗೆ ಸಲ್ಲಿಸುತ್ತಿದ್ದಂತೆ, ಯಡಿಯೂರಪ್ಪನವರ ರಾಜಕೀಯದ ಅಂತಿಮ ಅಧ್ಯಾಯ ಆರಂಭಗೊಂಡಿದೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂತಹ ಅಧ್ವಾನದ, ಭ್ರಷ್ಟಾಚಾರದ ಶಿಖರದಂತಿರುವ ಮುಖ್ಯಮಂತ್ರಿಯನ್ನು ಯಾರೂ ನೋಡಿರಲಿಲ್ಲ. ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಯಾವ ಅಳುಕು ಇಲ್ಲದೆ, ಭಂಡತನದಿಂದ ಜಾತಿ ಮತ್ತು ಧರ್ಮದ ರಾಜಕೀಯ ಮಾಡಿದ ಮುಖ್ಯಮಂತ್ರಿ ಎಂದರೆ, ಅದು ಯಡಿಯೂರಪ್ಪ ಮಾತ್ರ.
ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡು ಜೈಲು ಸೇರಿದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಒಳಗಾದ ಈ ವ್ಯಕ್ತಿಗೆ ಇನ್ನಾದರೂ ಬುದ್ಧಿ ಬರಬಹುದು ಎಂದು ಜನತೆ ನಿರೀಕ್ಷಿಸಿದ್ದರು. ಆದರೆ, ಈ ಮನುಷ್ಯ ಮಾಡಿದ್ದೇನು? ಜೈಲಿನಿಂದ ಹೊರಬರುವಾಗಲೇ, ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಜೈಲು ಸೇರಿ ನಂತರ ಬಿಡುಗಡೆಗೊಂಡಂತೆ ತನ್ನ ಎರಡು ಬೆರಳು ಎತ್ತಿ ತೋರಿಸಿಕೊಂಡು ಹೊರಬಂದ ಬಗೆಯನ್ನು ಗಮನಿಸಿದ ಕರ್ನಾಟಕದ ಜನತೆ ಅಂದೇ ತೀರ್ಮಾನಿಸಿಬಿಟ್ಟಿತು, ಇದೊಂದು ಅವಿವೇಕತನದ ಪರಕಾಷ್ಟೆ ಮತ್ತು ರಿಪೇರಿಯಾಗದ ಗಿರಾಕಿ ಎಂದು.
ಪರಪ್ಪನ ಅಗ್ರಹಾರದ ಜೈಲು ಪಾಲಾಗುತಿದ್ದಂತೆ, ಇಲ್ಲಸಲ್ಲದ ರೋಗದ ನೆಪದಲ್ಲಿ ಜಯದೇವ ಆಸ್ಪತ್ರೆ, ನಂತರ ಬೆಡ್ಶೀಟ್ ಮರೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸೇರಿ ನಾಟಕವಾಡಿದ ಇದೇ ಯಡಿಯೂರಪ್ಪ, ಬಿಡುಗಡೆಯ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ, ಇಡೀ ದೇಶ ಮತ್ತು ರಾಜ್ಯವನ್ನು ಹುಚ್ಚುನಾಯಿ ಕಡಿದ ವ್ಯಕ್ತಿಯಂತೆ ತಿರುಗುವುದನ್ನು ಗಮನಿಸಿದರೆ, ಈ ವ್ಯಕ್ತಿಯ ಆಕಾಂಕ್ಷೆ, ಅಧಿಕಾರದ ಲಾಲಸೆ ಯಾವ ಮಟ್ಟದಲ್ಲಿದೆ ಎಂಬುದನ್ನ ನೀವೇ ಊಹಿಸಬಹುದು.
ಅಧಿಕಾರದ ಚುಕ್ಕಾಣಿ ಹಿಡಿದ ಯಾವುದೇ ನಾಯಕನ ಸುತ್ತ ಒಳ್ಳೆಯ ಅಧಿಕಾರಿಗಳ ವರ್ಗ, ಅಥವಾ ಸಹೋದ್ಯೋಗಿಗಳು ಇರಬೇಕು. ಆದರೆ, ಯಡಿಯೂರಪ್ಪನವರ ಬಳಿ ಇದ್ದವರ ಪಟ್ಟಿಯನ್ನ ಒಮ್ಮೆ ಹಾಗೇ ಗಮನಿಸಿ ನೋಡಿ, ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ಯಮಣ್ಯ ನಾಯ್ಡು, ಹರತಾಳು ಹಾಲಪ್ಪ, ಲಕ್ಷಣ ಸವಡಿ, ಸಿ.ಸಿ.ಪಾಟೀಲ್, ಕೃಷ್ಣ ಪಾಲೇಮರ್, ಜನಾರ್ಧನ ರೆಡ್ಡಿ,… ಇವರುಗಳ ಪುರಾಣವನ್ನು ನಿಮಗೆ ಬಿಡಿಸಿ ಹೇಳಬೇಕಿಲ್ಲ. ಹೋಗಲಿ ಒಳ್ಳೆಯ ರಾಜಕೀಯ ಸಲಹೆಗಾರರು ಇದ್ದರೆ? ಅದೂ ಇಲ್ಲ. ಯಡ್ಡಿಯ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಿ.ಜೆ. ಪುಟ್ಟಸ್ವಾಮಿ ಎಂಬ ಆಸಾಮಿ ತನ್ನ ಹುದ್ದೆಯ ಜವಾಬ್ದಾರಿಯನ್ನು ಮರೆತು ಯಡಿಯೂರಪ್ಪನ ಪರವಾಗಿ ದೇವೇಗೌಡರ ಕುಟುಂಬದ ವಿರುದ್ಧ ಬೊಗಳುವ ನಾಯಿಯಾಗಿ ಕೆಲಸ ಮಾಡಿದ್ದೇ ಹೆಚ್ಚು. ಈತನ ಪುರಾಣ ಕೂಡ ರೋಚಕವಾದುದು, ಜೊತೆಗೆ ಅದೊಂದು ದೊಡ್ಡ ಅಧ್ಯಾಯ.
ಈತ ಮಂಡ್ಯ ಜಿಲ್ಲೆ ಮದ್ದೂರು ತಾಲೋಕಿನ ಪ್ರಮುಖ ಹೋಬಳಿ ಕೇಂದ್ರವಾದ ನನ್ನೂರಾದ ಕೊಪ್ಪ ಗ್ರಾಮದಿಂದ ಐದು ಕಿ.ಮಿ. ದೂರವಿರುವ ಬೆಕ್ಕಳಲೆ ಗ್ರಾಮದವನು. ಮಂಡ್ಯ ಹಾಗೂ ತುಮಕೂರು ಜಿಲ್ಲೆಯನ್ನು ಬೇರ್ಪಡಿಸುವ ಶಿಂಷಾ ನದಿ ತೀರದ ಕಟ್ಟಕಡೆಯ ಆ ಗ್ರಾಮದಿಂದ ಬಂದ ಈ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದು, 1966ರಲ್ಲಿ ಬೆಂಗಳೂರಿನ ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ ( ಈಗಿನ ಬಿ.ಡಿ.ಎ.) ನಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆಗೆ ಸೇರಿದವನು. 1976ರಲ್ಲಿ ತಾನೇ ನಾಯಕನಾಗಿ ನಟಿಸಿ, ನಿರ್ಮಿಸಿದ ಕನ್ನಡ ಚಿತ್ರವೊಂದರ ಮೂಲಕ ಬರೋಬ್ಬರಿ 36 ಲಕ್ಷ ಕಳೆದುಕೊಂಡವನು (ಜಯಂತಿ ಈ ಚಿತ್ರದ ನಾಯಕಿ). ನಿವೃತ್ತಿಯ ದಿನ ಹತ್ತಿರವಾಗುತಿದ್ದಂತೆ ತನ್ನ ಗಾಣಿಗ ಜಾತಿಸಮುದಾಯವನ್ನು ರಾಜ್ಯಾದ್ಯಂತ ಸಂಘಟಿಸಿ, ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣರ ಬೆಂಬಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಎಂ.ಎಲ್.ಸಿ. ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷನಾಗಿ ಅಧಿಕಾರದ ರುಚಿ ಕಂಡವನು. ಹತ್ತು ವರ್ಷದ ಹಿಂದೆ ಬೃಹತ್ ಉದ್ದಿಮೆದಾರನಾಗಲು ಹೊರಟು, ಮೈಸೂರಿನ ವಿಮಾನ ನಿಲ್ದಾಣದ ಎದುರು (ನಂಜನಗೂಡು ರಸ್ತೆಯ ಮಂಡಕಳ್ಳಿ ಬಳಿ) ಪ್ಲಾಸ್ಟಿಕ್ ಚೀಲ ತಯಾರಿಸುವ ಫ್ಯಾಕ್ಟರಿ ತೆಗೆದು ಮುಚ್ಚಿದವನು ( ಬಿ.ಜೆ.ಪಿ. ಸ್ಯಾಕ್ಸ್ ಪ್ರೈ ಲಿಮಿಟೆಡ್). ಇದಕ್ಕಾಗಿ ಕೆ.ಎಸ್.ಎಫ್.ಸಿ.ಯಿಂದ ಮಾಡಿದ ಸಾಲ ಒಂದೂವರೆ ಕೋಟಿ ರೂಪಾಯಿಗೂ ಅಧಿಕ. ಈಗ ಅಂದಾಜು ಮೂರು ಕೋಟಿ ರೂ ದಾಟಿರಬಹುದು. ಸಾಲ ತೀರಿಸಲಾಗದೇ, ಯಡಿಯೂರಪ್ಪನ ಮೊರೆ ಹೊಕ್ಕ ಈತ ಸುದ್ದಿಗೋಷ್ಟಿಯಲ್ಲಿ ಸತ್ಯ ಹರಿಶ್ಚಂದ್ರನ ತುಂಡಿನಂತೆ ಮಾತನಾಡುವುದನ್ನು ನೀವೆಲ್ಲಾ ಗಮನಿಸಿದ್ದೀರಿ.
ಈವರೆಗೆ ಯಡಿಯೂರಪ್ಪ ಮಾಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಕೇವಲ ಕರ್ನಾಟಕದಲ್ಲಿ ಮಾತ್ರ ಸುದ್ಧಿಯಾಗುತಿತ್ತು. ಈಗ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿ ರಾಷ್ಟ್ರಮಟ್ಟದ ಚರ್ಚೆಯಾಗಿ ಮಾರ್ಪಟ್ಟು ಕರ್ನಾಟಕದ ಜನತೆ ತಲೆತಗ್ಗಿಸುವಂತಾಗಿದೆ. ಇಷ್ಟೆಲ್ಲಾ ಅಪರಾಧ ಮಾಡಿಯೂ, ಯಡಿಯೂರಪ್ಪ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವ ದಾಟಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹನ್ನೆರೆಡು ವರ್ಷ ಅನ್ನ ಕಾಣದ ವ್ಯಕ್ತಿ ಭಕ್ಷಭೋಜನದ ತಟ್ಟೆಯ ಎದರು ಕುಳಿತು ತಿನ್ನುವಂತೆ, ಮುಖ್ಯಮಂತ್ರಿಯ ಗಾದಿಯಲ್ಲಿ ಕುಳಿತು, ದೇಣಿಗೆ ಹೆಸರಿನಲ್ಲಿ, ತಾನು, ತನ್ನ ಮಕ್ಕಳು, ಅಳಿಯ ಸೇರಿ ಎಂಜಲು ಕಾಸಿಗೆ ಕೈಯೊಡ್ಡಿದ ರೀತಿ ನಿಜಕ್ಕೂ ಸಾರ್ವಜನಿಕವಾಗಿ ಅಸಹ್ಯ ಮೂಡಿಸುವಂತಹದ್ದು.
ಇಡೀ ಯಡಿಯೂರಪ್ಪನವರ ಕುಟುಂಬವನ್ನು ದಾರಿ ತಪ್ಪಿಸಿದ್ದು ಮಾಲೂರಿನ ಶಾಸಕ ಕೃಷ್ಣಯ್ಯ ಶೆಟ್ಟಿ ಎಂಬಾತ. ಸದಾ ತಿರುಪತಿ ತಿಮ್ಮಪ್ಪನ ಧ್ಯಾನದಲ್ಲಿರುವ ಈತ ಕೈಯಲ್ಲಿ ಉಂಡೆನಾಮ ಹಿಡಿದು ತಿರುಗುವ ಆಸಾಮಿ. ನೀವು ಯಾಮಾರಿದರೆ, ಹಣೆಗೆ ಮಾತ್ರವಲ್ಲ, ಮುಕುಳಿಗೂ ನಾಮ ಬಳಿಯುವಲ್ಲಿ ನಿಸ್ಸೀಮ.
ತನ್ನ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ಪಡೆದರೆ ತಪ್ಪೇನು ಎಂದು ವಾದಿಸುವ ಯಡಿಯೂರಪ್ಪನವರಿಗೆ ನಮ್ಮ ಪ್ರಶ್ನೆ ಇಷ್ಟೆ: ನಲವತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು, ಶಾಸಕನಾದಾಗ, ವಿರೋಧಪಕ್ಷದ ನಾಯಕನಾದಾಗ, ಅಥವಾ ಉಪಮುಖ್ಯಮಂತ್ರಿಯಾಗಿದ್ದಾಗ ಬಾರದ ದೇಣಿಗೆ ಮುಖ್ಯಮಂತ್ರಿಯಾದಾಗ ಹೇಗೆ ಬಂತು?
ದೇಣಿಗೆ ಪಡೆದದ್ದು ಸತ್ಯವೇ ಆಗಿದ್ದರೆ, ಸುದ್ದಿ ಬಹಿರಂಗವಾಗುತಿದ್ದಂತೆ ರಾತ್ರೋರಾತ್ರಿ ಬೆಂಗಳೂರಿನ ರಾಜಮಹಲ್ ವಿಲಾಸ ಬಡಾವಣೆಯ ಮೈಸೂರು ಬ್ಯಾಂಕಿನಿಂದ 20 ಕೋಟಿ ಹಣವನ್ನು ತೆಗೆದು ಖಾತೆ ಮುಚ್ಚಿದ್ದು ಏಕೆ? ಅಕ್ರಮಗಳ ಕುರಿತು ಧಾರವಾಡದ ಎಸ್.ಆರ್. ಹಿರೇಮಠ ಸಿ.ಇ.ಸಿ.ಗೆ ದಾಖಲೆ ಸಲ್ಲಿಸುತಿದ್ದಂತೆ ಗಣಿ ಉದ್ಯಮಿ ಪ್ರವೀಣ್ ಚಂದ್ರ ಎಂಬುವರಿಂದ ಪಡೆದ ಐದು ಕೋಟಿ ದೇಣಿಗೆ ಹಣವನ್ನು ಈಗ ಸಾಲ ಎಂದು ವಾದಿಸುತ್ತಿರುವುದಾದರು ಏಕೆ?
ಕರ್ನಾಟಕದ ಜನತೆಯನ್ನು ಯಡಿಯೂರಪ್ಪ ಕಿವಿಗೆ ಹೂ ಮುಡಿಯುವ ಗಿರಾಕಿಗಳು ಎಂದು ಭಾವಿಸಿದಂತಿದೆ.
ತಾನು ಹಂಚಿದ ಎಂಜಲು ಪ್ರಸಾದ ತಿಂದು, ಬಹುಪರಾಕು ಹೇಳುವ ಕೆಲವು ಮಾನಗೆಟ್ಟ ಮಠಾಧೀಶರು ಮತ್ತು ಲಿಂಗಾಯುತ ನಾಯಕರಿಂದ ಆಧುನಿಕ ಬಸವೇಶ್ವರ ಎಂದು ಹಾಡಿ ಹೊಗಳಿಸಿಕೊಳ್ಳುವ ಯಡಿಯೂರಪ್ಪ ಒಮ್ಮೆ ಗಾಲಿ ಜನಾರ್ಧನ ರೆಡ್ಡಿಯನ್ನು ನೆನಪಿಸಿಕೊಳ್ಳುವುದು ಒಳಿತು. ತಾನು ಅಪ್ಪಟ 24 ಕ್ಯಾರೆಟ್ ಚಿನ್ನ ಎಂದು ಘೋಷಿಸಿಕೊಂಡಿದ್ದ ಈ ಗಣಿಕಳ್ಳ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಾ, ತುಕ್ಕುಹಿಡಿಯುವ ಕಬ್ಬಿಣವಾಗಿದ್ದಾನೆ. ಈತನ ಅಮೇದ್ಯ ತಿಂದು ಬಳ್ಳಾರಿಯ ಬೀದಿ, ಬೀದಿಯಲ್ಲಿ ಆಧುನಿಕ ಕೃಷ್ಣದೇವರಾಯ ಎಂದು ಹಾಡಿ ಹೊಗಳಿದ ನಾಯಿ ನರಿಗಳೆಲ್ಲಾ ಈಗ ಚೆಲ್ಲಾಪಿಲ್ಲಿಯಾಗಿವೆ.
ತಾನು ಎಸಗಿರುವ ಅಕ್ಷಮ್ಯ ಅಪರಾಧಗಳಿಗೆ ಯಾವ ಯಜ್ಞವಾಗಲಿ, ದೇವರಾಗಲಿ ರಕ್ಷಣೆಗೆ ಬರಲಾರವು. ಈ ಸತ್ಯವನ್ನು ಅರಿತು, ಕಾನೂನಿನ ಮುಂದೆ ತಲೆಬಾಗಿ, ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ನಿವೃತ್ತಿಯಾಗುವುದೊಂದೇ ಈಗ ಯಡಿಯೂರಪ್ಪನವರ ಪಾಲಿಗೆ ಉಳಿದಿರುವ ಏಕೈಕ ಮಾರ್ಗ. ಅದನ್ನು ಹೊರತು ಪಡಿಸಿ, ನನ್ನ ಈ ಅವಸ್ಥೆಗೆ ವಿರೋಧ ಪಕ್ಷಗಳು ಕಾರಣ, ನನ್ನ ಪಕ್ಷದ ಹಿತಶತ್ರುಗಳು ಕಾರಣ ಎಂದು ಬೊಬ್ಬಿರಿದರೆ, ಅದನ್ನು ಜಾಣತನವೆಂದು ಕರೆಯುವುದಿಲ್ಲ. ಬದಲಿಗೆ, ಹುಚ್ಚುತನ ಎಂದು ಕರೆಯಲಾಗುತ್ತದೆ.
ಕಳೆದ ಶುಕ್ರವಾರ Central Empowered Committee ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿ ನಮ್ಮ ಓದುಗರಿಗೆ ಇಲ್ಲಿ ಲಭ್ಯವಿದೆ.